Monday, January 12, 2009

ಒಂದು ಸಂಕೀರ್ತನದಂತೆ...

ಇದೊಂದು ವಿಶಿಷ್ಟ ಪುಸ್ತಕ; ಇದರ ಕೃರ್ತ ಒಬ್ಬ ವ್ಯಕ್ತಿಯೇ ಇರಬಹುದಾದರೂ ಬೇರೆ ಬೇರೆ ಕಾರಣಕ್ಕೆ ನಾಲ್ವರನ್ನು ಒಳಗೊಂಡು ರೂಪಿತವಾದ ಕೃತಿಯಿದು ಎಂಬ ನೆಲೆಯಲ್ಲಿ.

ದಸ್ತಯೇವ್‌ಸ್ಕಿ ತನ್ನ `ದ ಗ್ಯಾಂಬ್ಲರ್' ಕಾದಂಬರಿಯನ್ನು ಕರಾರಿನಂತೆ ನಿರ್ದಿಷ್ಟ ಅವಧಿಯೊಳಗೆ ಬರೆದುಕೊಡಬೇಕಿತ್ತು. ಸಮಯವಿರಲಿಲ್ಲ. ದಸ್ತಯೇವ್‌ಸ್ಕಿಗೆ ಇದಕ್ಕಾಗಿ ಒಬ್ಬ ಶೀಘ್ರಲಿಪಿ ಬಲ್ಲ ವ್ಯಕ್ತಿ ಅನಿವಾರ್ಯವಾಗಿ ಬೇಕಾಗಿದ್ದ. ಆಗ ಸಿಕ್ಕಿದವಳು ಅನ್ನಗ್ರಿಗರಿನ್ ಸ್ನಿಟ್‌ಕಿನ್. ಸ್ಟೆನೊ ಕೆಲಸಕ್ಕೆ ಬಂದ ಅನ್ನಾ ಮುಂದೆ ದಸ್ತಯೇವ್‌ಸ್ಕಿಯಲ್ಲಿ ಅನುರಕ್ತಳಾಗಿ ಆತನ ಕೈಹಿಡಿಯುತ್ತಾಳೆ. ಮುಂದೆ `ಅನ್ನಳ ನೆನಪುಗಳು' ಎಂಬ ಹೆಸರಿನಲ್ಲಿ ಆಕೆ ಬರೆದ ಒಂದು ಕೃತಿಯನ್ನು ಆಧಾರವಾಗಿಟ್ಟುಕೊಂಡು ಮಲಯಾಳಂನಲ್ಲಿ ಶ್ರೀಪೆರುಂಬಡವಂ ಶ್ರೀಧರನ್ ಬರೆದ ಈ "ಒಂದು ಸಂಕೀರ್ತನದಂತೆ" ಎಂಬ ಕೃತಿ ಇದುವರೆಗೆ ಇಪ್ಪತ್ತು ಬಾರಿ ಪುನರ್ ಮುದ್ರಣಗೊಂಡಿದೆ. ಅರವತ್ತು ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದ ದಾಖಲೆ ಈ ಕೃತಿಯದ್ದು. ಇದನ್ನು ಈಗ ಕನ್ನಡಕ್ಕೆ ತಂದಿದ್ದಾರೆ ಎಂ.ಎಸ್.ಲಕ್ಷ್ಮಣಾಚಾರ್. ಹಾಗೆಯೂ ಇದೊಂದು ವಿಶಿಷ್ಟ ಕೃತಿ.

ಇಲ್ಲಿ ನಮಗೆ ಪ್ರಧಾನವಾಗಿ ಕಾಣಿಸುವುದು ದಸ್ತಯೇವ್‌ಸ್ಕಿ ಎಂಬುದು ನಿಜವಾದರೂ ಎಂ.ಎಸ್.ಲಕ್ಷ್ಮಣಾಚಾರ್ ಅವರ ಅನುವಾದ, ಶ್ರೀಧರನ್ ಅವರ ಮಲಯಾಳಂ ಕೃತಿ, ಅದಕ್ಕೆ ಆಧಾರವಾಗಿರುವ ಅನ್ನಾಳ ಪುಸ್ತಕ ಮತ್ತು ಈ ಕೃತಿಯಲ್ಲಿ ನಿರೂಪಿಸಲ್ಪಟ್ಟ ದಸ್ತಯೇವ್‌ಸ್ಕಿ, ಆತನ ವ್ಯಕ್ತಿತ್ವ, ಅನ್ನಾ ಜೊತೆ ಸುರುವಾದ ವಿಲಕ್ಷಣ ಸಂಬಂಧದ ಹಂತಹಂತವಾದ ಬೆಳವಣಿಗೆ ಯಾವುದೂ ಒಂದನ್ನು ಬಿಟ್ಟು ಒಂದಿಲ್ಲ ಎನ್ನುವಂತೆ ನಮ್ಮನ್ನು ಆವರಿಸುತ್ತದೆ.

ಇಲ್ಲಿ ಚಿತ್ರಿಸಲ್ಪಟ್ಟ ದಸ್ತಯೇವ್‌ಸ್ಕಿಯ ವ್ಯಕ್ತಿತ್ವದ ವಿಲಕ್ಷಣ, ವಿಕ್ಷಿಪ್ತ ಬಗೆಯನ್ನೇ ಕುರಿತು ಸ್ವಲ್ಪ ಯೋಚಿಸಬಹುದು. ಮಾಡದ ತಪ್ಪಿಗೆ ಶಿಕ್ಷೆ, ಜೈಲು, ಮತ್ತೆ ಮತ್ತೆ ಕಾಡಿದ ಪ್ರೇಮಭಂಗ, ಕಿತ್ತು ತಿನ್ನುವ ಬಡತನ ಮತ್ತು ಆರ್ಥಿಕ ಸೋಲು, ಅಣ್ಣ, ತಾಯಿ, ಪತ್ನಿ ಎಂದು ಸಾಲು ಸಾಲಾಗಿ ಬೆನ್ನುಹತ್ತಿದ ಸಾವು, ಅಪಸ್ಮಾರ ಕಾಯಿಲೆ...ಜೂಜಿನ ಸೆಳೆತ. ಇಷ್ಟು ಒಬ್ಬ ಸೂಕ್ಷ್ಮ ಸಂವೇದಿ ಮನುಷ್ಯನನ್ನು ಏನು ಮಾಡಬಹುದು? ಈತ ನಮಗೆ ಆತ್ಮರತಿಯಲ್ಲಿ ಮುಳುಗಿದವನಂತೆ, ವಿವೇಚನೆ ಕಳೆದುಕೊಂಡವನಂತೆ, ಹುಚ್ಚನಂತೆ ಕಾಣಿಸುವುದು ಸಹಜವಾಗಿ ಮತ್ತು ಸರಳವಾಗಿ ಸಾಧ್ಯ. ಆದರೆ ಈ ಸ್ಥಿತಿಯನ್ನು ಸ್ವಲ್ಪ ಗಮನವಿಟ್ಟು ನೋಡುವುದು ಉಚಿತ.

ದಸ್ತಯೇವ್‌ಸ್ಕಿ ಸೃಷ್ಟಿಸಿದ ಪಾತ್ರಗಳೆಲ್ಲ ನೋವು, ಸಂಕಟ, ಅಪಮಾನ, ಸೋಲು ಎದುರಿಸುವ ಪಾತ್ರಗಳೇ. ನಿರಾಶೆ, ಹತಾಶೆ, ಋಣಾತ್ಮಕ ಧೋರಣೆ ಅವುಗಳ ಕಥಾನಕಗಳಲ್ಲಿ ತುಂಬಿರುವುದು ಸಾಧ್ಯ. (ರಾದುಗ ಪ್ರಕಾಶನದ "ಫ್ಯೋದರ್ ದಸ್ತಯೇವ್ಸ್ಕಿ ನೀಳ್ಗತೆಗಳು" ಕೃತಿ ದಾಸ್ತವ್‌ಸ್ಕಿ ಬದುಕು ಬರಹ ಕುರಿತ ವಿವರವಾದ ಒಂದು ಪರಿಚಯವನ್ನು ನೀಡುತ್ತದೆ.) ಹಲವರು ದಸ್ತಯೇವ್‌ಸ್ಕಿಯಲ್ಲಿ ಇದೇಕೆ ಹೀಗೆ ಎಂದು ಕೇಳುತ್ತಾರೆ ಕೂಡ. ಅನ್ನಾ ಒಂದರ್ಥದಲ್ಲಿ ದಸ್ತಯೇವ್‌ಸ್ಕಿಯನ್ನು ಹತ್ತಿರದಿಂದ ಬಲ್ಲವಳು. ದಸ್ತಯೇವ್‌ಸ್ಕಿಯ ಕುರಿತ ಗೌರವ ಅಭಿಮಾನ ಅವಳಿಗೆ ತಂದೆಯ ಮುಖೇನ ಬಳುವಳಿಯಾಗಿ ಬಂದದ್ದು. ಅವಳ ತಂದೆ, ತಾಯಿ, ತಮ್ಮ ಮತ್ತು ಸ್ವತಃ ಅನ್ನಾ ಕೂಡ ದಸ್ತಯೇವ್‌ಸ್ಕಿಯನ್ನು ಭೇಟಿಯಾಗುವ ಹೊತ್ತಿಗಾಗಲೇ ಆತನ ಎಲ್ಲ ಕೃತಿಗಳನ್ನು ಓದಿದವರು. ಅನ್ನಾ ಆನಂತರವೂ ಅವುಗಳನ್ನು ಮತ್ತೆ ಮತ್ತೆ ಓದುತ್ತಾಳೆ, ಅವುಗಳಲ್ಲಿನ ಪಾತ್ರಗಳ ಕುರಿತು ಅವನ ಜೊತೆ ಚರ್ಚಿಸುತ್ತಾಳೆ. ಈ ಎಲ್ಲ ಪ್ರಕ್ರಿಯೆಯಲ್ಲಿ ನಮಗೆ ದಸ್ತಯೇವ್‌ಸ್ಕಿ ಹೆಚ್ಚು ಹೆಚ್ಚು ನಿಕಟವಾಗಿ ಅರ್ಥವಾಗುತ್ತ ಹೋಗುವುದು ನಿಜವಾದರೂ ಈ ಅರ್ಥವಂತಿಕೆ ಇಲ್ಲಿ ಕೇವಲ ಒಂದು ಕಥಾನಕದ ಪಾತ್ರವಾಗಿರುವ ದಸ್ತಯೇವ್‌ಸ್ಕಿಯನ್ನು, ಅನ್ನಾಳನ್ನು, ಶ್ರೀಧರನ್ ಅವರನ್ನು ಮತ್ತು ಕೊನೆಗೆ ಲಕ್ಷ್ಮಣಾಚಾರರನ್ನು ಹಾದು ಬಂದಿರುವಂಥದ್ದು ಎಂಬುದನ್ನು ಮರೆಯುವಂತಿಲ್ಲ. ದಸ್ತಯೇವ್‌ಸ್ಕಿ ಬದುಕಿದ್ದ ಕಾಲದಲ್ಲೇ ಆತನ ವರ್ತಮಾನ ಮತ್ತು ಆತನ ಬದುಕಿನ ವಾಸ್ತವ - ಆತನ ಬದುಕನ್ನು ಒಂದು ಹೋರಾಟವಾಗಿಸಿದ್ದ ದಿನಗಳಲ್ಲಿ ಸಮಾಜದ ಕಣ್ಣುಗಳಿಗೆ ದಸ್ತಯೇವ್‌ಸ್ಕಿ ಏನಾಗಿದ್ದ, ಅನ್ನಾ ಏನಾಗಿದ್ದಳು ಎಂಬುದೆಲ್ಲ ಕೃತಿಯಲ್ಲಿ ಯಥಾವತ್ ಬಂದಿರುತ್ತದೆ ಎನ್ನುವ ಭ್ರಮೆಗೆ ನಾವು ಬೀಳಬೇಕಿಲ್ಲ. ಅನ್ನಾ ನೆನಪುಗಳನ್ನು ದಾಖಲಿದ್ದು ಆನಂತರದಲ್ಲಿ. ಇವತ್ತು ದಸ್ತಯೇವ್‌ಸ್ಕಿಯ ಸಾಹಿತ್ಯ ನಮಗೆ ಕಾಣಿಸುವ ರೀತಿಯಲ್ಲೇ ಅದು ಆವತ್ತೂ ಕಾಣಿಸಿರಲಿಲ್ಲ ಎಂಬುದು ವಾಸ್ತವವಾಗಿಯೂ ಸಾಹಿತ್ಯದ ಒಂದು ರೂಪಕವಾಗಿಯೂ ನಾವು ನೆನಪಿಡಬೇಕಾದ ಬಹುಮುಖ್ಯ ಅಂಶ.

ಹಾಗೆಯೇ ಇಲ್ಲಿ ಶ್ರೀಧರನ್‌ಗೆ ಅನ್ನಾ ಮತ್ತು ದಸ್ತಯೇವ್‌ಸ್ಕಿ ಎರಡೂ ಪಾತ್ರಗಳ ಜಂಟಿ ಕಥಾನಕವೇ ಮುಖ್ಯವಾಗಿರುವ ಸಾಧ್ಯತೆಯಿದೆ. ದಸ್ತಯೇವ್‌ಸ್ಕಿಯನ್ನು ಅರ್ಥಮಾಡಿಕೊಳ್ಳುವ ಅನ್ನಾಳ ಪ್ರಯತ್ನವೇನಿದ್ದರೂ ಶ್ರೀಧರನ್‌ಗೆ ಒಂದು ಕಥಾನಕದ ಅಗತ್ಯ. ಆದರೆ ಅನ್ನಾಗೆ ಅದು ಬದುಕಿನ ಪ್ರಶ್ನೆಯಾಗಿತ್ತು, ಪುಸ್ತಕ ಬರೆಯುವಾಗಲಲ್ಲ, ಅದಕ್ಕೂ ಮೊದಲು, ದಸ್ತಯೇವ್‌ಸ್ಕಿಯಂಥವನನ್ನು ಬಾಳಸಂಗಾತಿಯಾಗಿ ಸ್ವೀಕರಿಸುವ ಹೊತ್ತಿಗೆ. ಈ ಕೃತಿಯಲ್ಲಿ ಅದು ನಿಚ್ಚಳವಾಗಿಯೇ ಬಂದಿದೆ. ಆದರೆ ಸ್ವತಃ ದಸ್ತಯೇವ್‌ಸ್ಕಿ ತನ್ನ ಕೃತಿಗಳ ಕುರಿತು, ಅಲ್ಲಿನ ಪಾತ್ರಗಳ ಕುರಿತು ಹೇಳುತ್ತ ತನ್ನ ಕುರಿತೇ ಹೇಳಿಕೊಳ್ಳುವಾಗ ನಮಗೆ ಈ ದಸ್ತಯೇವ್‌ಸ್ಕಿ ಎಂಬ ಪಾತ್ರದ ಕುರಿತು ವಿಭಿನ್ನ ಭಾವನೆಗಳು ಮೂಡಿಬರುವುದು ಸಾಧ್ಯವಿದೆ. ಕೆಲವೊಂದು ಸೂಕ್ಷ್ಮಘಟ್ಟಗಳಲ್ಲಿ ಅನ್ನಾ ದಸ್ತಯೇವ್‌ಸ್ಕಿಯನ್ನು ಕೆಲವು ಕೆಣಕುವ ಪ್ರಶ್ನೆಗಳಿಂದ ಈ ಆತ್ಮರತಿಯ ವಿರುದ್ಧ ಎಚ್ಚರಿಸುತ್ತಾಳೆಂಬುದನ್ನು ನಾವು ಶ್ರೀಧರನ್ ಅವರ ಕೃತಿಯಲ್ಲಿ ಗಮನಿಸಬಹುದು, ಅಷ್ಟೆ.

ಮತ್ತೆ ಮತ್ತೆ ಹೆಣ್ಣಿನ ಪ್ರೇಮಕ್ಕೆ ಒಳಗಾಗುವುದು, ಅದನ್ನು ಸ್ವಯಂಕೃತ ತಪ್ಪುಗಳಿಂದಲೋ, ಆಯಾ ಹೆಣ್ಣಿನ ದೋಷಗಳಿಂದಲೋ, ವಿಧಿಯಾಟದಿಂದಲೋ ಕಳೆದುಕೊಂಡು ಮರುಗುವುದು ದಸ್ತಯೇವ್‌ಸ್ಕಿಯಂಥ ಒಬ್ಬ ಸಾಹಿತಿಗೆ ಅನುಭವವನ್ನು ಬೆನ್ನಟ್ಟಿಕೊಂಡು ಹೋಗುವ ಒಂದು ಅನಿವಾರ್ಯ ಅಗತ್ಯವೇ ಆಗಿದ್ದರೂ ಇರಬಹುದು. ಇದನ್ನೇ ಆತನ ಜೂಜಿನ ಹುಚ್ಚಿನ ಕುರಿತಾಗಿಯೂ ಹೇಳಬಹುದು. ಖಿನ್ನತೆಯಿಂದ ಪಾರಾಗುವ ಎಸ್ಕೇಪಿಸಂನ ಹಲವು ಮುಖವಾಡಗಳಲ್ಲಿ - ವಿಪರೀತ ಖರ್ಚುಮಾಡುವುದು, ಸಾಲವನ್ನೆತ್ತುತ್ತ ಹೋಗುವುದು, ಕದಿಯುವುದು, ಜೂಜಾಡುವುದು, ವಿಪರೀತ ಅಧ್ಯಾತ್ಮದ ಆಚರಣೆಗಿಳಿಯುವುದು ಇತ್ಯಾದಿ ಕಾಣಿಸಿಕೊಳ್ಳುವುದು ಅಸಹಜವೇನಲ್ಲ. ದಸ್ತಯೇವ್‌ಸ್ಕಿ ಇವುಗಳಲ್ಲಿ ಕೆಲವನ್ನು ಯಾತಕ್ಕಾದರೂ ಮಾಡಿರಲಿ, ಅವು ಅವನ ಸೂಕ್ಷ್ಮ ಆತ್ಮನಿರೀಕ್ಷಕ ಸಾಕ್ಷಿಪ್ರಜ್ಞೆಯ ಮೂಸೆಯಲ್ಲಿ ಮರುಸೃಷ್ಟಿಗೊಂಡು ಸಾಹಿತ್ಯದ ಮೂಲಕ ಬದುಕನ್ನು ಕಾಣಿಸಬಲ್ಲ ಸರಕಾಗಿ ಮಾರ್ಪಾಟಾಗಿದ್ದು ಮಾತ್ರ ನಿಜವೇ! ಈ ಕೃತಿ ಒಂದು ನೆಲೆಯಲ್ಲಿ ದಸ್ತಯೇವ್‌ಸ್ಕಿಯ ಅತಾರ್ಕಿಕ ವರ್ತನೆಯನ್ನು ಇದೇ ನೆಲೆಯಲ್ಲಿ ಗುರುತಿಸುವ ಸೂಕ್ಷ್ಮ ಪ್ರದರ್ಶಿಸುತ್ತದೆ ಎಂಬುದು ಮಹತ್ವದ ಅಂಶ.

ಆದರೆ, ಒಬ್ಬ ಸಾಹಿತಿಗೆ ಇದು, ಹೀಗೆ ತನ್ನನ್ನು ತಾನು ತೆರೆದಿಡುವುದು - ಅನಿವಾರ್ಯವೇನಲ್ಲ ಮತ್ತೆ. ತನ್ನನ್ನು ತಾನು ಮಾಧ್ಯಮದಿಂದ ಅಡಗಿಸಿಕೊಳ್ಳಲು ಒಬ್ಬ ಸಾಹಿತಿಗೂ ಮಾರ್ಗಗಳಿರುತ್ತವೆ. ಆದರೆ ಅದರ ಮೊರೆಹೋಗದೆ ತನ್ನನ್ನು ತಾನು ನಗ್ನವಾಗಿ ನೋಡಿಕೊಳ್ಳುವ, ನೋಡಿಕೊಳ್ಳುವುದರ ಮೂಲಕ ಹೊಂದಿದ ಅರಿವನ್ನು ಇಡೀ ಜಗತ್ತಿಗೆ ತೆರೆದಿಡುವ ಒಂದು ತುಡಿತ ಒಬ್ಬ ಸಾಹಿತಿಗೆ ಇದ್ದರೆ ಅದು ಅದಮ್ಯ ಮಾನವಪ್ರೀತಿ ಮತ್ತು ಜೀವನಪ್ರೀತಿಯಿಂದ ಮಾತ್ರ ಸಾಧ್ಯವಾಗಬಲ್ಲ ವಿದ್ಯಮಾನ. ಸತ್ಯವನ್ನು ಎದುರಿಸುವ ಕೆಚ್ಚೆದೆ ಮತ್ತು ಘನವಾದ ನೈತಿಕ ಪ್ರಜ್ಞೆಯೊಂದಿಗೆ ಇಹದ ಮೋಹವನ್ನು ಮೀರಿದ ಒಂದು ವಿಶಾಲ ಮನೋಭಾವ ಇಂಥ ಪ್ರಕ್ರಿಯೆಯ ಹಿಂದಿರಬೇಕಾಗುತ್ತದೆ ಕೂಡ. ಅಡಿಗರು `ನಮ್ಮ ಸದಾಶಿವ' ಎನ್ನುವ ಕವನದಲ್ಲಿ ಕತೆಗಾರ ಸದಾಶಿವರ ಬಗ್ಗೆ ಹೀಗೆ ಬರೆಯುತ್ತಾರೆ:

ಕಥೆ ಬರೆದನಂತೆ - ಕತೆಯೇನು ಮಣ್ಣು - ತನ್ನೆದೆಯ
ಖಂಡ ಖಂಡ ಕತ್ತರಿಸಿ ಕಿತ್ತು ಹಿಡಿದು ಹಿಂಡಿ ಹಿಂಡಿ
ಭಟ್ಟಿಯಿಳಿಸಿದ ತೊಟ್ಟು ತೊಟ್ಟು;
ನಾಗಾಲೋಟದಲ್ಲು ಅಲ್ಲಲ್ಲಿ ತಡೆತಡೆದು ಕೆತ್ತಿರುವ ತಳದ ಗುಟ್ಟು.

ಈ ಪರಿಯ ದುಸ್ಸಾಹಸಕ್ಕೆ ಸಾಹಿತಿ ಯಾಕೆ ಇಳಿಯುತ್ತಾನೆ, ಅಂಥ ಘನಕಾರ್ಯಕ್ಕೆ ಆತನಿಗಿರುವ ಪ್ರಚೋದನೆಗಳೇನು ಎಂಬ ಬಗ್ಗೆ ನಾವು ಸಾಮಾನ್ಯ ಓದುಗರು ಬಿಡಿ, ವಿಮರ್ಶಕರು ಕೂಡ ಹೆಚ್ಚಿಗೆ ತಲೆಕೆಡಿಸಿಕೊಂಡಂತಿಲ್ಲ. ಹೆಚ್ಚೆಂದರೆ ಇದು ಲೇಖಕನ ವಿಕ್ಷಿಪ್ತ ಮನಸ್ಥಿತಿಯನ್ನು ತೋರಿಸುತ್ತದೆ ಎಂಬ ಸರಳ ತೀರ್ಪು ಮಾತ್ರ ಇದಕ್ಕೆ ಸಿಗುವ ಪರಿಹಾರ!

ಅನ್ನಾ ಮತ್ತು ದಸ್ತಯೇವ್‌ಸ್ಕಿ ಸಂಬಂಧ ಒಂದು ಸಂಕೀರ್ತನವಾಗುವುದು ಈ ವಿಪರ್ಯಾಸವನ್ನು ಮೀರಿ ನೋಡುವುದು ನಮಗೆ ಸಾಧ್ಯವಾದಾಗ ಎನ್ನುವ ಕಾರಣಕ್ಕೇ ಈ ಕೃತಿ ಮಹತ್ವದ್ದು.

ವಸಂತ ಪ್ರಕಾಶನ, ನಂ.360, 10 `ಬಿ' ಮೈನ್, 3ನೆಯ ಬ್ಲಾಕ್, ಜಯನಗರ, ಬೆಂಗಳೂರು- 560011
ದೂರವಾಣಿ: 22443996,22287876
ಪುಟಗಳು: iv+172
ಬೆಲೆ : ರೂಪಾಯಿ 90.2 comments:

ಯಜ್ಞೇಶ್ (yajnesh) said...

ಮಾಹಿತಿಗಾಗಿ ಧನ್ಯವಾದಗಳು. ನೀವು ವಿಮರ್ಶಿಸಿದ ಬಹಳಷ್ಟು ಪುಸ್ತಕಗಳನ್ನು ಓದಿದ್ದೇನೆ ಮತ್ತು ಓದುತ್ತಿದ್ದೇನೆ. ನಿಮ್ಮ ವಿಮರ್ಶನಾತ್ಮಕ ಬರಹ ಇಷ್ಟವಾಯಿತು.

ಆಜ್ನೇಯ ಅವರು ಬರೆದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಂಗಾಳಿ ಕಥೆ "ನದೀ ಕೆ ದ್ವೀಪ್ ಕನ್ನಡದಲ್ಲಿ ಭಾಷಾಂತಗೊಂಡಿದೆ. ನದೀ ದ್ವೀಪಗಳು ಅಂತ ಹೆಸರು. ನನಗೆ ದಿವಂಗತ ಚಿ. ಶ್ರೀನಿವಾಸರಾಜು (ರಾಜು ಮೇಷ್ಟ್ರು) ಕೊಟ್ಟಿದ್ದರು. ನನಗೆ ತುಂಬಾ ಹಿಡಿಸಿತು. ನಿಮಗೆ ಬಿಡುವಾದಾಗ ಓದಿ.

ನರೇಂದ್ರ ಪೈ said...

ಥ್ಯಾಂಕ್ಯೂ ಯಜ್ಞೇಶ್, ಒಳ್ಳೆಯ ಪುಸ್ತಕದ ಬಗ್ಗೆ ತಿಳಿಸಿದ್ದೀರಿ, ನಿಜಕ್ಕೂ ಖುಶಿಯಾಯಿತು. ಖಂಡಿತ ಈ ಪುಸ್ತಕವನ್ನು ಹುಡುಕಿ ಓದುತ್ತೇನೆ. ಮುಂದೆಯೂ ನೀವು ಓದಿದ ಒಳ್ಳೊಳ್ಳೆಯ ಪುಸ್ತಕಗಳ ಬಗ್ಗೆ ನನಗೆ ತಿಳಿಸುತ್ತಿರಿ.