Monday, January 19, 2009

ಮೋಕ್ಷ ಹುಡುಕುತ್ತ ಕಾಶಿಯ ಬಂಧನದಲ್ಲಿ!

ನಮ್ಮಲ್ಲಿ ಸ್ಮಶಾನ ವೈರಾಗ್ಯ ಎಂಬ ಮಾತಿದೆ. ಸಾವು, ಸ್ಮಶಾನಗಳ ಸಂಸರ್ಗದಲ್ಲಿ ಹುಟ್ಟುವ ಸ್ಥಾಯೀಯಲ್ಲದ ಒಂದು ಭಾವ ಅದು. ವಯಸ್ಸಾದಂತೆಲ್ಲ, ಬೇರೆ ಬೇರೆ ಕಾರಣಗಳಿಂದಾಗಿ ಒಂಟಿಯಾಗಿ ಬದುಕುತ್ತಿರುವವರಲ್ಲಿ ಇಂತಹುದೇ ಭಾವ ಕೊಂಚ ಸ್ಥಿರವಾಗಿಯೇ ನೆಲೆಗೊಳ್ಳುವುದಿದೆ. ಈ ಸಂಜೆಗಣ್ಣಿನ ನೋಟಕ್ಕೆ ಧರ್ಮ, ಪಾಪ, ಪುಣ್ಯ, ಪಾರಮಾರ್ಥಿಕ ಜಗತ್ತು ಎಲ್ಲ ಕಾಣುವ ಬಗೆ ಕೊಂಚ ಭಿನ್ನ.

ಕಾರಂತರು ಒಂದು ಮಾತು ಹೇಳಿದ್ದರು. "ಬದುಕಿನಲ್ಲಿ ಮನುಷ್ಯನಿಗೆ ಪರಮಾವಧಿ ತೃಪ್ತಿ ನೀಡಬಹುದಾದ್ದು ಒಂದೇ; ಅದು ತಾನು ನಡೆದ ಹಾದಿ ಸರಿಯಾದದ್ದು ಎಂಬ ಆತ್ಮವಿಶ್ವಾಸವೊಂದೇ." ವಿಷಾದಗಳಿಲ್ಲದ ಬದುಕಿನ ಬಗ್ಗೆ ಯಂಡಮೂರಿ ಕೂಡ ತಮ್ಮ ಎಂದಿನ ಶೈಲಿಯಲ್ಲಿ ಬರೆದುದಿದೆ. "ಎದುರಿನ ವ್ಯಕ್ತಿಯ ಬೇಸರವನ್ನು ನಿನ್ನ ಸಹನೆಯಿಂದ, ಕೋಪವನ್ನು ಕ್ಷಮೆಯಿಂದ, ಬಲಹೀನತೆಯನ್ನು ಪ್ರೇಮದಿಂದ, ತಪ್ಪನ್ನು ನಗುವಿನಿಂದ ಎದುರಿಸುವ ವ್ಯಕ್ತಿಗೆ ಜೀವನದಲ್ಲಿ ವಿಷಾದವೆನ್ನುವುದೇ ಇರುವುದಿಲ್ಲ". ಟಾಲ್‌ಸ್ಟಾಯ್‌ರವರ ನೀಳ್ಗತೆ "ಇವಾನ್ ಇಲಿಚ್ಯನ ಸಾವು" ನಲ್ಲಿ ಸಾವಿನ ನೆರಳಿನಲ್ಲಿರುವಾಗ ಇವಾನ್‌ಗೆ ತಾನು ಬದುಕಿ ಕಳೆದ ಬದುಕನ್ನು ಮತ್ತೊಮ್ಮೆ ಬದುಕುವ ಅವಕಾಶ ಸಿಕ್ಕಿದ್ದೇ ಆದರೆ ಹೆಚ್ಚು ಅರ್ಥಪೂರ್ಣವಾಗಿ ನಡೆದುಕೊಳ್ಳುತ್ತಿದ್ದೆ ಅನಿಸತೊಡಗುತ್ತದೆ! ಯಾರಿಗೆ ಅನಿಸುವುದಿಲ್ಲ ಹೇಳಿ!

ಎಂ.ಟಿ.ವಾಸುದೇವನ್ ನಾಯರ್ ಬರೆದ ವಾರಾಣಸಿ ಕಾದಂಬರಿ ಈ ಎಲ್ಲ ಬಗೆಯ ತುಮುಲಗಳ ದೃಷ್ಟಿಯಿಂದಲೂ ಓದಬೇಕಾದ ಕಾದಂಬರಿ. ಇಲ್ಲಿ ನೇರವಾದ ಒಂದು ಕತೆಯಿಲ್ಲ. ಹೆಚ್ಚಿನ ಘಟನೆಗಳು ನಡೆಯುವುದು ಅಥವಾ ಅವುಗಳ ನೆನಪು ಮರುಕಳಿಸುವುದು ಕಾಶಿಯಲ್ಲಿ. ಹಾಗೆಯೇ ಭಾವುಕ ಮಂದಿಯ ಮನಸ್ಸಿನಲ್ಲಿರುವ ಕಾಶಿಯ ಇನ್ನೊಂದು ಮುಖದ ಚಿತ್ರವೂ ಇಲ್ಲಿ ಅನಾವರಣಗೊಂಡಿದೆ. ಮೊದಲಿಗೆ ಹೇಳಿದ ಸ್ಮಶಾನ ವೈರಾಗ್ಯದ ಪ್ರತೀಕದಂತೆ ಕಾಶಿ, ಅಲ್ಲಿನ ಅಪರಕರ್ಮದ ಚಟುವಟಿಕೆಗಳು, ನಮ್ಮ ಮೋಕ್ಷದ ಪರಿಕಲ್ಪನೆ, ಪಾವಿತ್ರ್ಯದ ಶ್ರದ್ಧೆ, ನಂಬುಗೆಗಳ ಪ್ರತಿರೂಪದಂತಿರುವ ಗಂಗೆ ಎಲ್ಲವೂ ಇಲ್ಲೇ ಇವೆ. ಇಂಥಲ್ಲಿ ಕಾದಂಬರಿಯ ಪ್ರಧಾನ ಪಾತ್ರ ಅಥವಾ ನಿರೂಪಕ ಸುಧಾಕರನ್ ಬದುಕಿನ ವಿಶ್ಲೇಷಣೆಗೆ ತೊಡಗಿದಂತೆ ನೆನಪುಗಳಲ್ಲಿ ಕಾದಂಬರಿ ಮೈತಳೆಯುತ್ತ ಹೋಗುತ್ತದೆ. ಭೂತ ವರ್ತಮಾನಗಳ ಚಿತ್ರಗಳು ಕಾಣಿಸುವ ಪಲ್ಲಟಗಳಲ್ಲಿ ಬದುಕು ಕಣ್ಣಿಗೆ ಕಟ್ಟುತ್ತ ಹೋಗುತ್ತದೆ. ಮನುಷ್ಯ ತನ್ನ ಆಶಯ ಮತ್ತು ವಾಸ್ತವಗಳಲ್ಲಿ ಛಿದ್ರಗೊಳ್ಳುತ್ತಿರುವುದು ನಮಗೆ ಕಾಣಿಸುವುದು, ಕಾದಂಬರಿಯಲ್ಲಿ ರೂಪುತಳೆಯುವುದು ಎರಡೂ ಒಂದು ತೆರನ ಸಾಕ್ಷೀಭಾವದಲ್ಲಿ. ಹೀಗೆ ಓದುಗನನ್ನು ಕಲಕುತ್ತ, ಅವನ ಅಂತರಾತ್ಮವನ್ನು ಪ್ರಶ್ನಿಸುತ್ತ ತೆರೆದುಕೊಳ್ಳುತ್ತ ಕಾದಂಬರಿ ನಮಗೆ ನೀಡುವ ದರ್ಶನವೇನಿದೆ ಅದು, ಬಹುಕಾಲದ ಮಂಥನಕ್ಕೆ, ಚಿಂತನೆಗೆ ಯೋಗ್ಯವಾಗಿದೆ.

ಪ್ರಾಸಂಗಿಕವಾಗಿ ಈ ಕಾದಂಬರಿಯಲ್ಲಿ ಸಿಗುವ ಎರಡು ವಿಚಾರಗಳನ್ನು ಹೇಳುತ್ತೇನೆ. ಕಾಶಿಯಲ್ಲಿ ಸಾಯಲು ಬಯಸುವ, ಸಾವಿಗೆ ಹತ್ತಿರಾದವರ ಸಂಖ್ಯೆ ಹೆಚ್ಚು. ಕಾಶಿಯಲ್ಲಿ ಇಂಥವರಿಗಾಗಿಯೇ ಹದಿನೈದು ದಿನಗಳ ಕಾಲ ಮುಫತ್ತು ವಾಸ್ತವ್ಯ ಒದಗಿಸುವ ಮುಕ್ತಿಭವನಗಳಿವೆಯಂತೆ. ಹದಿನೈದು ದಿನಗಳಲ್ಲಿ ಮುಕ್ತಿ ಸಿಗುತ್ತದೆ, ಅವರ ಜಾಗಕ್ಕೆ ಬೇರೆಯವರಿಗೆ ಬರಲು ಅವಕಾಶವಾಗುತ್ತದೆ ಎಂಬ ವಿಶ್ವಾಸ. ಅದು ಕೆಲವೊಮ್ಮೆ ಕೈಕೊಡುವುದೂ ಇದೆ! ಒಮ್ಮೆ ಹೆಂಡತಿಯ ಕಿರಿಕಿರಿಯಿಂದ ಬೇಸತ್ತ ಮಗ ಗಟ್ಟಿಮುಟ್ಟಾಗಿಯೇ ಇರುವ ಮುದುಕಿ ತಾಯಿಯನ್ನು ಸುಳ್ಳೇ ಕಾಯಿಲೆ ಎಂದು ಹೇಳಿ ಇಲ್ಲಿಗೆ ಸೇರಿಸಿ ನಾಪತ್ತೆಯಾಗುತ್ತಾನೆ. ಮಗನ ಮೋಸ ಬಯಲಿಗೆ ಬರುತ್ತದೆ. ಆಕೆಯ ವಿಳಾಸ ಶೋಧಿಸಿ ಬಲವಂತವಾಗಿಯೇ ಅವಳನ್ನು ಅವಳ ಮನೆಗೆ ಟ್ರೈನು ಹತ್ತಿಸಲಾಗುತ್ತದೆ. ಆ ಸಂದರ್ಭದಲ್ಲಿ ಆಕೆ "ನನ್ನನ್ನು ಕಳಿಸಬೇಡಿ, ದಮ್ಮಯ್ಯ ಕಳಿಸಬೇಡಿ" ಎಂದು ಗೋಳಾಡುವುದು ನಮ್ಮನ್ನು ನಿದ್ದೆ ಎಚ್ಚರಗಳಲ್ಲಿ ಕಾಡಬಲ್ಲ ಸನ್ನಿವೇಶವಾಗಿಯೇ ಉಳಿದುಬಿಡುತ್ತದೆ. ಈ ಮುದುಕಿಗೆ ಎಲ್ಲಿ ಮುಕ್ತಿ, ಎಲ್ಲಿ ಮೋಕ್ಷ? ಮಗನಿಗೆ ಸೊಸೆಯ ಆಗಮನದೊಂದಿಗೆ ಬೇಡವಾದ ಈ ತಾಯಿಯ ಅತಂತ್ರ ಸ್ಥಿತಿಯ ಭಾವುಕ ಚಿತ್ರ ನಮ್ಮನ್ನು ಕಲಕುವ ನೆಲೆ ಯಾವ ಮೋಹದ್ದು, ಯಾವ ಮೋಹನ ಮುರಳಿಯ ಮಣ್ಣಿನ ಕಣ್ಣಿನ ನೋಟಕ್ಕೆ ಸಿಕ್ಕ ಬೃಂದಾವನದ್ದು?

ಅಂತಿಮ ಸಂಸ್ಕಾರಕ್ಕೆ ಬೇಕಾಗುವ ಪ್ರತಿಯೊಂದು ವಸ್ತುವಿನಿಂದ ಹಿಡಿದು, ಕೊನೆಗೆ ಬೆಂಕಿಗೆ ಕೂಡ ಹೇಗೆ ಪರದಾಡುತ್ತಾರೆಂಬ ಚಿತ್ರ ಕೂಡ ಇಲ್ಲಿ ನಮಗೆ ಸಿಗುತ್ತದೆ. ಒಂದೆಡೆ ಮುಕ್ತಿ ಕ್ಷೇತ್ರವಾದ ಕಾಶಿ ಇನ್ನೊಂದೆಡೆ ನಮ್ಮ ಎಲ್ಲ ತೀರ್ಥಕ್ಷೇತ್ರಗಳಂತೆಯೇ ವ್ಯವಹಾರದ ಕೇಂದ್ರವಾಗಿರುವುದು ವಾಸ್ತವ.

ಎಲ್ಲೋ ಒಂದು ಕಡೆ ಪ್ರಾಣೇಶಾಚಾರ್ಯರು, ಶ್ರೀನಿವಾಸ ಶ್ರೋತ್ರಿಗಳು, ಗಣೇಶ ಹೆಗಡೆ, ಪಡದಯ್ಯ, ಕಾರಂತರ ಅಳಿದ ಮೇಲೆ ಕಾದಂಬರಿಯ ಯಶವಂತ ನಮ್ಮ ನಿಮ್ಮೊಳಗೆ ಜೀವಂತವಿರುವುದನ್ನು ಇಂಥ ಕಾದಂಬರಿಗಳು ಸಾಕ್ಷೀಕರಿಸುತ್ತವೆ ಅಲ್ಲವೆ?

ಎಂ.ಟಿ.ವಿ.ಯವರ ವಾರಾಣಸಿಯಲ್ಲಿ ಇರುವುದು ಬದುಕಿನ ಮುಸ್ಸಂಜೆಯಲ್ಲಿರುವ ಒಬ್ಬನ ಅಂತರಾಳದ ತುಮುಲಗಳಲ್ಲ. ಅಥವಾ ಸಾವು, ಜನ್ಮಾಂತರ, ಪುನರ್ಜನ್ಮ, ಮುಕ್ತಿ ಅಥವಾ ಆತ್ಮದ ಬಗ್ಗೆ ಸೈದ್ಧಾಂತಿಕ ತಾತ್ವಕ ಚರ್ಚೆ, ವಿವರ ಎಲ್ಲ ಇಲ್ಲ. ಇಲ್ಲಿನ ಬಹಳ ಮುಖ್ಯವಾದ ಸಂಗತಿಗಳು ಬೇರೆಯೇ.

ಮೊದಲನೆಯದು ದಿವೋದಾಸ ಮತ್ತು ಶಿವನ ಸಂಬಂಧದ ಸಮಕಾಲೀನ ಪ್ರತಿರೂಪದಂತಿರುವ ಓಂಪ್ರಕಾಶ್ ಮತ್ತು ರಾಂಲಾಲ್‌ನ ಪಾತ್ರಗಳು ನಮಗೆ ನೀಡುವ ದರ್ಶನ. ಕಾಶಿಯ ಚಾರಿತ್ರಿಕ ಹಿನ್ನೆಲೆಯಲ್ಲಿ ಈ ಪೌರಾಣಿಕ ಮತ್ತು ಸಮಕಾಲೀನ ವಿದ್ಯಮಾನಗಳು ನೀಡುವ ದರ್ಶನ.

ಎರಡನೆಯದು, ವಜ್ರಸೇನ ಮತ್ತು ಶ್ಯಾಮರ ಗಂಡು ಹೆಣ್ಣು ಸಂಬಂಧದ ವಿಭಿನ್ನ ಮಗ್ಗುಲುಗಳಿಗೆ ಅವರ ಪುನರ್ಜನ್ಮ ಎಂದೇ ಹೇಳಲಾಗುವ ಸಿದ್ಧಾರ್ಥ ಮತ್ತು ಯಶೋಧರೆಯರ ಬದುಕು ನೀಡುವ ಅರ್ಥವ್ಯಾಪ್ತಿ. ಇದನ್ನು ಇಲ್ಲಿ ನಮಗೆ ಸಿಗುವ ಇನ್ನೆಷ್ಟೋ ಗಂಡು-ಹೆಣ್ಣು ಸಂಬಂಧಗಳ ನೆರಳಿನಲ್ಲಿ, ಮುಖ್ಯವಾಗಿ ಸುಮಿತಾ ನೆಲ್ಸನ್ ಸುಧಾಕರನನ್ನು ಗುರುತಿಸಲಾರದೆ ಹೋಗುವ ದೃಶ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ನೋಡಬಹುದು.

ಮೂರನೆಯದು ವಜ್ರಸೇನ-ಶ್ಯಾಮ ಅಥವಾ ಸಿದ್ದಾರ್ಥ-ಯಶೋಧರೆಯಂಥವೇ ಅನಿಸುವ, ಅವರ ಸಮಕಾಲೀನ ರೂಪಾಂತರದಂತಿರುವ ಸುಧಾಕರನ್ ಮತ್ತು ಶಾಂತಮೂರ್ತಿಯರ ಸಂಬಂಧ ಹಾಗೂ ಇಲ್ಲಿ ಸುಧಾಕರನ ಬಾಳಿನಲ್ಲಿ ಬೇರೆ ಬೇರೆ ಬಗೆಯಲ್ಲಿ ಬಂದು ಹೋಗುವ ಹೆಣ್ಣುಗಳಾದ ಸೌದಾಮಿನಿ, ಗೀತಾ, ಸುಮಿತಾ, ಮ್ಯಾಡಲಿನ್ ಸೇರಿ ನೀಡುವ ಒಳನೋಟ.

ನಾಲ್ಕನೆಯದು, ಸುಧಾಕರನ ಬದುಕಿನ ವಿದ್ಯಮಾನಗಳಿಗೂ ಹೊಸ ದೃಷ್ಟಿಕೋನ ನೀಡಬಲ್ಲ ಶ್ರೀನಿವಾಸನ್‌ರ ಮೃತ್ಯುಪತ್ರ.

ಐದನೆಯದು ತನಗೆ ತಾನೇ (ಬದುಕಿರುವಾಗಲೇ) ಶ್ರಾದ್ಧಕರ್ಮಗಳನ್ನಾಚರಿಸಿಕೊಳ್ಳುವಾಗಿನ ಸುಧಾಕರನ್‌ನ ಮನಸ್ಥಿತಿ, ತುಮುಲಗಳು, ದ್ವಂದ್ವಗಳು ನಮ್ಮಲ್ಲಿ ಹುಟ್ಟಿಸುವ ವಿಚ್ತಿತ್ರ ತಳಮಳ.

ಕೊನೆಯದಾಗಿ ಸುಧಾಕರನ್‌ನನ್ನೇ ಗುರುತಿದೇ ಹೋಗುವ ಸುಮಿತಾ ನೆಲ್ಸನ್ ಇಡೀ ಬದುಕಿನ ನಿರರ್ಥಕತೆ ಮತ್ತು ಅರ್ಥಹೀನತೆಗೆ ಸುಧಾಕರನ ಅಪರಕ್ರಿಯೆಯ ಹಿನ್ನೆಲೆಯಲ್ಲೇ ಒದಗಿಸುವ ಪುರಾವೆ.

ಇವು ಒಂದೊಂದೂ ನಮ್ಮನ್ನು ಹಲವು ಕಾಲ ಕಲಕುತ್ತ ಉಳಿಯುತ್ತವೆ. ಈ ಕಾದಂಬರಿಯನ್ನು ಓದಿ.ಜೊತೆಗೆ ಲಂಕೇಶ್ ಬರೆದ ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ ಲೇಖನವನ್ನೂ ಓದಿ, ಅದು ಬುದ್ಧನ ಕುರಿತಾಗಿದೆ!

ವಾರಾಣಸಿ
ಎಂ.ಟಿ.ವಾಸುದೇವನ್ ನಾಯರ್
ಕನ್ನಡಕ್ಕೆ: ಕೆ.ಎಸ್.ಕರುಣಾಕರನ್.
ನವಕರ್ನಾಟಕ ಪ್ರಕಾಶನ
ಪುಟಗಳು 208
ಬೆಲೆ: ಎಪ್ಪತ್ತೈದು ರೂಪಾಯಿ.

No comments: