Saturday, January 24, 2009

ಅಗ್ನಿಕಾರ್ಯ, ವಂಶವೃಕ್ಷ ಇತ್ಯಾದಿ...

ಬರುತ್ತಿರುವ ಪುಸ್ತಕಗಳನ್ನು ನೋಡಿದರೆ ಎಲ್ಲ ಬಿಟ್ಟು ಮತ್ತೆ ಕುಮಾರವ್ಯಾಸನನ್ನು ಓದುವುದೇ ಒಳ್ಳೆಯದು ಅನಿಸುತ್ತದೆ ಮಹರಾಯರೇ ಎಂದಿದ್ದರು ನನ್ನ ಪರಿಚಯದ ಒಬ್ಬರು ಪ್ರೊಫೆಸರ್. ಇವರು ತುಂಬ ಒಳ್ಳೆಯ ಓದುಗರು. ಆಗಾಗ ಬರೆದಿದ್ದು (ಅವರ ಪ್ರಕಾರ ಗೀಚಿದ್ದು) ಇದ್ದರೂ ಅದನ್ನೆಲ್ಲ ಯಾರಿಗೂ ತೋರಿಸಿದವರಲ್ಲ. ಅಂಥವರು ಒಂದು ದಿನ "ಅಗ್ನಿಕಾರ್ಯ ಓದಿದ್ರಾ, ಛೆ!" ಎಂದು ತುಟಿಯೆಲ್ಲ ಚಪ್ಪರಿಸಿ ಹೇಳಿದ ರೀತಿ ನೋಡಿಯೇ ದಂಗಾದೆ. ಇನ್ನು ಮಾತೇಕೆ, ಅಷ್ಟು ಒಳ್ಳೆಯ ಪುಸ್ತಕ ಶ್ರೀನಿವಾಸರ ಕಥಾಸಂಕಲನ `ಅಗ್ನಿಕಾರ್ಯ'.

ತುಂಬ ಹೊಗಳಿಸಿಕೊಂಡ ಪುಸ್ತಕಗಳನ್ನು ತುಸು ತಡವಾಗಿ ಓದುವ ನನ್ನ ಅಭ್ಯಾಸದಂತೆ ಇದನ್ನೂ ನಾನು ಓದಿದ್ದು ತಡವಾಗಿ. ಅಂಕಿತ ಪ್ರಕಾಶನ ಹೊರತಂದಿರುವ ನೂರ ಎಂಟು ಪುಟಗಳ ಈ ಅಚ್ಚುಕಟ್ಟಾದ ಪುಸ್ತಕದಲ್ಲಿರುವುದು ಐದೇ ಐದು ಕತೆಗಳು. ಇವುಗಳಲ್ಲಿ ಎರಡನ್ನು ಹಿಂದೆ `ದೇಶಕಾಲ'ದಲ್ಲಿ ಪ್ರಕಟವಾದಾಗಲೇ ಓದಿದ್ದೆ. ಅಲ್ಲದೆ ಹಿಂದೊಮ್ಮೆ ಈ ಪುಸ್ತಕವನ್ನು ಕೈಗೆತ್ತಿಕೊಂಡಿದ್ದಾಗ ಇಲ್ಲಿನ ಮೊದಲಿನ ಒಂದೆರಡು ಕತೆಗಳನ್ನೂ ಓದಿ ನಿಲ್ಲಿಸಿದ್ದೆ. ಈಗಷ್ಟೇ ಎಲ್ಲವನ್ನೂ ಮತ್ತೊಮ್ಮೆ ಓದಿದೆ. ಹಾಗೆ ಮತ್ತೆ ಮತ್ತೆ ಓದುವಷ್ಟು ಅವು ಚೆನ್ನಾಗಿಯೇ ಇವೆ.

ಹೊಗಳುವುದನ್ನು ಬಿಟ್ಟುಕೊಟ್ಟೇ ಏನು ಈ ಕತೆಗಳ ಆಕರ್ಷಣೆ ಎಂದು ಯೋಚಿಸುತ್ತೇನೆ. ಯಾರು ಹೊಗಳಿ ಏನಾಗಬೇಕಿದೆ ಈ ಕತೆಗಳಿಗೆ? ಹೌದು, ಶ್ರೀನಿವಾಸ ವೈದ್ಯರಿಗೆ ಒಬ್ಬ ಕತೆಗಾರ ಅನ್ನಿಸಿಕೊಳ್ಳುವ ಅಥವಾ ಇವುಗಳು ರಚನೆ, ಆಕೃತಿ ಇತ್ಯಾದಿಗಳ ಮಾನದಂಡದಿಂದ ಕತೆ ಎನ್ನಿಸಿಕೊಳ್ಳುವ ತುರ್ತಿಲ್ಲ. ಅವರ ಮೂಲಧಾಟಿ ಹರಟೆಯದ್ದು. ಲಘುವಾದ ಲಯಬದ್ಧ ಮಾತಿನದ್ದು. ಮಾತಿಗೆ ತೊಡರಿಕೊಂಡವು ಇಲ್ಲಿನ ಕೆಲವು ಕಥಾನಕಗಳು. ಅವು ನಿಮ್ಮ ನಮ್ಮ ಅಂತಃಕರಣವನ್ನು ತಟ್ಟಿ ಸ್ಫುರಿಸಿದ್ದು ವಾಸ್ತವ-ಕೌತುಕ ಬೆರೆತ ನಿರೂಪಣೆಯ ಲಯದಿಂದ. ಹಾಗೆ ಇವು ಕತೆಗಳು. ಅದ್ಭುತವೆನಿಸುವ ಕತೆಗಳು.

ತಂತ್ರವಿಲ್ಲವೆ ವೈದ್ಯರ ಕತೆಗಳ ಜೋಳಿಗೆಯಲ್ಲಿ? ಕಾರಂತರೊಮ್ಮೆ ಗುಡುಗಿದ್ದರು, ತಂತ್ರ ಗಿಂತ್ರ ಎಲ್ಲ ನನಗ್ಗೊತ್ತಿಲ್ಲ, ನನಗೆ ನನ್ನನ್ನು ತೋಡಿಕೊಳ್ಳುವುದು ಮುಖ್ಯ. ಹೇಗೆ ಹೇಳಬೇಕೆನಿಸಿತೋ ಹಾಗೆ ಹೇಳಿಕೊಂಡು ಹೋಗಿದ್ದೇನೆ...

ವೈದ್ಯರ ತಂತ್ರಗಾರಿಕೆಯ ಉಜ್ವಲ ಉದಾಹರಣೆ ಸಹಪ್ರಯಾಣ ಕತೆಯಲ್ಲಿದೆ. ಉದ್ದಕ್ಕೂ ಈ ಕತೆ ವಾಸ್ತವದ ಯಾವುದೋ ಸಣ್ಣ ಸಂಗತಿ ಭೂತಕಾಲದ ಇನ್ಯಾವುದೋ ನೆನಪನ್ನು ಕೆದಕುತ್ತ, ಅದೂ ಒಂದೇ ಕತೆಯ ನೆನಪುಗಳನ್ನು ಕೆದಕುತ್ತ, ವರ್ತಮಾನದ ದಾರದಲ್ಲಿ ಪೋಣಿಸುತ್ತ ಹೋಗುತ್ತದೆ! ಇದೇ ತಂತ್ರಗಾರಿಕೆಯನ್ನು ಹಣತೆಗಳು ಎಂಬ ಹೆಸರಿನ ಈ ಸಂಕಲನದ ಮೊದಲ ಕತೆಯಲ್ಲೂ, ಅಗ್ನಿಕಾರ್ಯ ಎಂಬ ಹೆಸರಿನ ಕೊನೆಯ ಕತೆಯಲ್ಲೂ ಕಾಣಬಹುದು.

ಹಣತೆಗಳು ಕತೆಯಲ್ಲಿ ಕೆದಕಲ್ಪಡುವ ನೆನಪುಗಳು ಒಂದೇ ಎಳೆಯ ಕಥಾನಕವನ್ನು ಕಟ್ಟಿಕೊಡುವುದಿಲ್ಲ. ಬದಲಿಗೆ ನೆನಪುಗಳನ್ನು ಕೆದಕುವ ವರ್ತಮಾನದ ಜಗತ್ತಿನ ವಿವರಗಳು ಒಂದೇ ಎಳೆಯ ವಸ್ತುಸ್ಥಿತಿಗೆ ಸೇರಿದವು. ಸಖಾರಾಮ ಬೆಳಗುವ ಬೀದಿಬದಿಯ ಚಿಮಣಿ ಎಣ್ಣಿಯ ದೀಪಗಳು, ರಾತ್ರಿ ಅಜ್ಜನೊಂದಿಗೆ ಕಂಬಳಿ ಹೊದ್ದು ಮಲಗಿದಲ್ಲಿ ಚಿಮಣಿ ಬೆಳಕಿನಲ್ಲಿ ಕಣ್ಣಿಗೆ ಬಿದ್ದ ರವಿವರ್ಮನ ಚಿತ್ರ, ಅದರಲ್ಲಿನ ಉದುರುತ್ತಿರುವ ಜಟಾಯುವಿನ ರೆಕ್ಕೆಗಳು...`ಕೆ.ಬಿ.ರೇಳೆಯವರ ಗಜಕರ್ಣದ ಮುಲಾಮನ್ನೇ ಉಪಯೋಗಿಸಿರಿ' ಎನ್ನುತ್ತ ಕನ್ನಡಕದೊಳಗಿಂದಲೇ ಮುಗುಳು ನಗುತ್ತಿದ್ದ ಗೋಡೆ ಮೇಲಿನ ಜಾಹೀರಾತಿನ ಮುದುಕ...ರಾತ್ರಿಯ ಕತ್ತಲಿನಲ್ಲಿ ಭಯ ಹುಟ್ಟಿಸುತ್ತಿದ್ದ ಭೂತ ಪ್ರೇತ ಪಿಶಾಚಾದಿಗಳನ್ನು ಓಡಿಸಬಲ್ಲ ಆತನ ವಿಚಿತ್ರ ದೈವಿಕಶಕ್ತಿ, ಯೇಶಿ ಕೊಟ್ಟ ಮುತ್ತು, ಮೊದಲ ಸಲ ಹೆಣ್ಣು ನೋಡಲು ಹೋಗಿದ್ದು, ಮದುವೆಯಾಗಿದ್ದು... ಹೀಗೆ ಭಿನ್ನ ವಿಭಿನ್ನ ನೆನಪುಗಳ ಸವಾರಿಗೆ ಕಾರಣವಾಗುವ ವರ್ತಮಾನದ ಹಣತೆಗಳಿಗೇ ಮತ್ತೆ ಮನಸ್ಸು ಮರಳುವುದಾದರೂ ಎಲ್ಲವನ್ನೂ ಏಕಸೂತ್ರದ ಧಾರೆಗೆ ತಂದು ನಿಲ್ಲಿಸುವುದು ಹಣತೆಗಳಾಗಬಲ್ಲ ಮತ್ತು ಹಣತೆಗಳಾಗಲೊಲ್ಲದ ವಿಶಿಷ್ಟ ನೆನಪುಗಳೇ.

ಸಹಪ್ರಯಾಣ ಕತೆಯಲ್ಲಿ ಮಾತ್ರ ತಂತ್ರ ನಿಚ್ಚಳವಾಗಿದೆ. ಇಲ್ಲಿ ವೈದ್ಯರಿಗೆ ಹೇಳಬೇಕಾದ ಕಥಾನಕ ಕೂಡ ಸ್ಪಷ್ಟ ಮತ್ತು ನಿರ್ದಿಷ್ಟ. ಮನಸ್ಸು-ದೇಹ ಒಂದೆಡೆ, ಗಂಡು-ಹೆಣ್ಣು ಸಂಬಂಧ ಇನ್ನೊಂದೆಡೆ ಇಟ್ಟುಕೊಂಡು ಅತ್ಯಂತ ಸೃಜನಾತ್ಮಕವಾಗಿ ವೈದ್ಯರು ಇಲ್ಲಿನ ಕಥೆಯನ್ನು ನಿರೂಪಿಸುತ್ತ ಹೋಗುತ್ತಾರೆ, ಮತ್ತೆ ಪುನಃ, ಅವೇ ನೆನಪುಗಳ ಮೂಲಕ! ರೈಲ್ವೇ ಕಂಪಾರ್ಟ್‌ಮೆಂಟ್ ಒಂದರ ಸ್ಲೀಪರಿನಲ್ಲಿ ಮಲಗಿಕೊಂಡಂತೆಯೇ ಅರೆಮಂಪರಿನಲ್ಲಿರುವ ನಿರೂಪಕ ಅಲ್ಲೇ ನಡೆಯುತ್ತಿರುವ ನವವಧೂವರರ ಪಿಸುನುಡಿಯ ಸಲ್ಲಾಪದಿಂದ ಒಂದಿಷ್ಟು, ಬಾಕಲಾ ತಗೀರಿ ಅಂತ ನಡುರಾತ್ರಿ ಒಂದು ಸಣ್ಣ ಸ್ಟೇಶನ್ನಿನಲ್ಲಿ ಅಲವತ್ತುಕೊಂಡ ಅಪರಿಚಿತ - ಅನಾಮಧೇಯ ಯಾತ್ರಿಕನಿಂದ ಒಂದಿಷ್ಟು, ರೈಲಿನಿಂದಿಳಿಯುತ್ತಿದ್ದ ಗಂಡ ಹೆಂಡತಿಗೆ ಎತ್ತಿಕೊಟ್ಟ ಟ್ರಂಕಿನಿಂದ ಒಂದಿಷ್ಟು, ಕಾಕೂ ಮತ್ತು ಹೆಂಡತಿ ಮಾಲಿ ನಡೆಸುವ ಮಾತುಕತೆಯನ್ನು ನಿದ್ದೆಯಲ್ಲಿದ್ದಂತೆ ನಟಿಸುತ್ತ ಕೇಳಿಸಿಕೊಂಡು ಇನ್ನಷ್ಟು - ನೆನಪು-ವಾಸ್ತವಗಳ ಎಳೆ ಜೋಡಿಸುತ್ತ ಸಾಗುವ ಕಥಾನಕ ಮೊದಲೇ ಹೇಳಿದಂತೆ ನಿರ್ದಿಷ್ಟ ಮತ್ತು ಸ್ಪಷ್ಟ ಗೊತ್ತು ಗುರಿ ಉಳ್ಳದ್ದು.

ಅಗ್ನಿಕಾರ್ಯ ಕತೆ ಕೂಡ ಇದೇ ತಂತ್ರವನ್ನು ಮೂಲಾಧಾರವಾಗಿ ಹೊಂದಿದೆಯಾದರೂ ಇಲ್ಲಿ ವೈದ್ಯರು ಹೊಸ ಮಜಲನ್ನು ತುಳಿದಿದ್ದಾರೆ. ಇಲ್ಲಿ ಮಾಯಕ್ಕನ ಕತೆ ಹೇಳುತ್ತ ರೈಲ್ವೇ ಬುಕ್ಕಿಂಗ್ ಹಾಲಿನಲ್ಲಿ ಅಯಾಚಿತ ಸೂತಕೀ ಮೌನಕ್ಕೆ ಕಾರಣವಾದ ಒಬ್ಬ ಅಭಿನವ ಹಿಟ್ಲರನ ದಾಂಪತ್ಯದ ಹಿನ್ನೆಲೆ ನೀಡುತ್ತಾರೆ. ಹಾಗೆ ನೀಡುತ್ತಲೇ ಮಾಯಕ್ಕನಿಗೆ ಈ ಹಿಟ್ಲರನ ಹೆಂಡತಿ ಪರಿಪ್ರೇಕ್ಷ್ಯವೇ ಅಥವಾ ಇವಳಿಗೆ ಅವಳೇ ಎಂದೂ ಹೇಳಲಾರದ ಒಂದು ವಿಶಿಷ್ಟ ಸಾತತ್ಯವನ್ನು ವೈದ್ಯರು ಇಲ್ಲಿ ಸಾಧಿಸುತ್ತಾರೆ, ಸಹಜವಾಗಿ, ಸೂಕ್ಷ್ಮವಾಗಿ. ಇದು ಇನ್ನೂ ಹೆಚ್ಚಿನ ಒಂದು ಮಜಲನ್ನು ಏರುವುದು ಬುಕ್ಕಿಂಗ್ ಹಾಲಿನಲ್ಲಿ ನೆರೆದಿದ್ದ ಆಧುನಿಕ ತಲೆಮಾರು ಇದಕ್ಕೆಲ್ಲ ಸ್ಪಂದಿಸುವ ಬಗೆಯನ್ನು ನಿರೂಪಿಸಿದ ವಿಧಾನದಲ್ಲಿ. ಆದರೆ ಅಗ್ನಿಕಾರ್ಯ ಕತೆ ಕೊನೆಯಾಗುವುದು ಈ ಹಂತದ ನಿರೂಪಣೆಯೊಂದಿಗಲ್ಲ. ಅದು ಮರಳಿ ಬರಬಹುದಾದ, ಸದ್ಯ ಬೂಬಮ್ಮನಾಗಿ ಪರಿವರ್ತಿತಳಾಗಿದ್ದಾಳೆಂದು ವದಂತಿಯಾಗಿರುವ ಮಾಯಕ್ಕನ ವಿಲಕ್ಷಣ ವಾಪಾಸಾತಿಯ ಮುಖಾಮುಖಿಗೆ ವಿಚಿತ್ರವಾಗಿ ಸಜ್ಜುಗೊಂಡ ಫಾಜಲ ಕಕ್ಕೀ, ಅಂಗಡಿ ನಾಗಪ್ಪನೂ ಸೇರಿದಂತೆ ಮನೆಮಂದಿಯ ತಲ್ಲಣದೊಂದಿಗೆ ಕೊನೆಯಾಗುತ್ತದೆ. ತಂತ್ರಗಾರಿಕೆಯಲ್ಲೇ ಈ ಕತೆ ಸಾಧಿಸಿರುವ ಪರಿಣಾಮಕಾರತ್ವ ಮಹತ್ವದ್ದು. ಈ ಕಾರಣಗಳಿಗೆಲ್ಲ ತುಂಬ ಮೆಚ್ಚುಗೆಯಾದರೂ ಈ ಕತೆ ಮಹಿಳಾ ದೌರ್ಜನ್ಯದ ಅಜೆಂಡಾ ಹೊಂದಿದಂತಿರುವುದು ಸತ್ಯ.

ಈ ಸಂಕಲನದ ರುದ್ರಪ್ರಯಾಗ ಮತ್ತು ಮತ್ತೊಂದು ಹಳೆಯ ಕತೆ ಎರಡೂ ಉಳಿದವುಗಳಿಂದ ಭಿನ್ನವಾಗಿ ನಿಲ್ಲುತ್ತವೆ. ಮತ್ತೊಂದು ಹಳೆಯ ಕತೆ ಕಾದಂಬರಿಯೊಂದರ ನಡುವಿನ ಅಧ್ಯಾಯದಂತೆ ಒಂದು ಬದುಕನ್ನು ಕುರಿತ ಚುಟುಕು ಚಿತ್ರವನ್ನು ನೀಡುತ್ತದೆ. ಇಲ್ಲಿನ ನಿರೂಪಣೆ ಹಣಮೂ ಕಾಕಾ ಮತ್ತು ರಾಣ್ಯಾ ಇಬ್ಬರ ಬದುಕನ್ನೂ ಸಾಪೇಕ್ಷ ಸಾಧ್ಯತೆ ಎಂಬಂತೆ ಜೊತೆ ಜೊತೆಯಾಗಿ ತೆರೆದಿಡುವುದಾದರೂ ವಿವರಗಳ ಬಾಹುಳ್ಯದಿಂದ ಅಂಥ ಉದ್ದೇಶದ ಮೊನಚು ಕಡಿಮೆಯಾಗಿದೆ. ಅಲ್ಲದೆ ಹಲವಾರು ಕಾರಣಗಳಿಗಾಗಿ ಅಂಥ ಒಂದು ಸಾಪೇಕ್ಷ ಸಿದ್ಧಾಂತ ಕೂಡ ಗಟ್ಟಿಯಾದ ನೆಲೆಗಟ್ಟಿಲ್ಲದಿರುವಂಥದ್ದು. ಇದು ವೈದ್ಯರಿಗೂ ಗೊತ್ತಿದೆ. ಹಾಗಾಗಿಯೇ ಇರಬಹುದು ಅವರು ಒತ್ತು ಕೊಟ್ಟು ಏನನ್ನೂ ಹೇಳದಿರಲು ನಿರ್ಧರಿಸಿದಂತಿದೆ. ವಿವರಗಳೇ ಈ ಕತೆಯ ಸೊಗಡಿಗೂ, ಆಕರ್ಷಣೆಗೂ ಕಾರಣ. ವೈದ್ಯರ ಎಲ್ಲ ಕತೆಗಳಲ್ಲೂ ಇರುವ ಬಹುದೊಡ್ಡ ಪ್ಲಸ್ ಪಾಯಿಂಟ್ ಇದೇ ಆಗಿರುವುದು ಮತ್ತು ಇದು ಎಲ್ಲರಿಗೂ ಗೊತ್ತಿರುವುದರಿಂದ ಅದನ್ನು ಮತ್ತೆ ಮತ್ತೆ ವಿವರಿಸಿ ಕಾಣಿಸಬೇಕಾದ್ದಿಲ್ಲ.

ರುದ್ರಪ್ರಯಾಗ ಕತೆ ಮಾತ್ರ ಖಾಸನೀಸರ `ತಬ್ಬಲಿಗಳು' ಕತೆಯನ್ನು ನೆನಪಿಸುವ ಬಹಳ ತೀವೃವಾದ ಅಂತಃಸ್ಸತ್ವವನ್ನು ತನ್ನ ಒಡಲಿನೊಳಗಿಟ್ಟುಕೊಂಡಿರುವ ಕತೆ. ಗುರಣ್ಣ, ಆತನನ್ನು ದತ್ತಕ ಮಾಡಿಕೊಂಡ ತಾಯಿ ಕೃಷ್ಟಕ್ಕ, ಗುರಣ್ಣನ ಒಬ್ಬನೇ ಮಗ ಮತ್ತು ಅವನ ಅಮೆರಿಕನ್ ಹೆಂಡತಿಯ ಮಗಳು `ಬಿಳೇಹಲ್ಲಿಯಂಥ' ಸೂಸಾನ್ನ ಮೂವರೂ ಜೊತೆಯಾಗಿ ಯಾತ್ರೆಗೆ ಹೊರಡುತ್ತಾರೆ. ಸೂಸಾನ್ನ ಗಂಟು ಬಿದ್ದಿರುವುದು ಕೃಷ್ಟಕ್ಕನಿಗೆ ಇಷ್ಟವಿಲ್ಲ. ಅದಕ್ಕೆ ತಕ್ಕಂತೆ ಸೂಸಾನ್ನಳ ಬಿಂದಾಸ್‌ತನ ಮತ್ತು ಕೃಷ್ಟಕ್ಕನ ಮಡಿ ಮೈಲಿಗೆಯ ಅಧ್ವಾನಗಳನ್ನೆಲ್ಲ ಯಾತ್ರೆಯ ಉದ್ದಕ್ಕೂ ಗುರಣ್ಣ ಹಾಯಬೇಕಾಗುತ್ತದೆ. ಯಾತ್ರೆಯ ಕೊನೆಯ ಹಂತದಲ್ಲಿ, ಬದರೀನಾಥದಲ್ಲಿ, ಗುರಣ್ಣ ತನ್ನ ದತ್ತಕದ ತಂದೆಗೆ ಪಿಂಡಪ್ರದಾನ ಮಾಡುವ ಸನ್ನಿವೇಶ. ಇದು ಈ ವರೆಗಿನ ಕತೆಗೆ ನೀಡುವ ಹೊಸ ತಿರುವು, ಅರ್ಥ, ಒಳನೋಟಗಳಲ್ಲೇ ಕಥೆಯ ಯಶಸ್ಸು ಕೂತಿದೆ ಎಂಬುದು ನಿಜವಾದರೂ ಇಡೀ ಕತೆಯ ಬಂಧ ಮತ್ತು ಅದರ ನಿರೂಪಣೆಯ ಕೌಶಲ್ಯ ಒಂದಿಷ್ಟಾದರೂ ಕುಂದಿದ್ದರೆ ಕತೆಯೇ ಕೆಡುತ್ತಿತ್ತು ಎನ್ನುವುದನ್ನು ಮರೆಯುವಂತಿಲ್ಲ.

ಮೊದಲೇ ಹೇಳಿದಂತೆ ಇಲ್ಲಿ ಗುರಣ್ಣ ದತ್ತಕದ ಮಗ. ಆ ದತ್ತಕದ ಮಗನ ಸಂತಾನ ಅಮೆರಿಕದಲ್ಲಿ ಅಮೆರಿಕನ್ ಹುಡುಗಿಯನ್ನು ಮದುವೆಯಾಗಿ ಪಡೆದ ಸಂತಾನ ಸೂಸಾನ್ ಎಂಬುದು ಏನಾಗಿದೆಯೋ ಅದು ಈ ವರೆಗಿನ ಯಾತ್ರೆಯಲ್ಲಿ ಎಲ್ಲರಿಗೂ ವೇದ್ಯವಾಗಿದೆ. ಗುರಣ್ಣನ ದತ್ತಕಕ್ಕೆ ಕಾರಣವಾಗಿದ್ದು ಕೃಷ್ಟಕ್ಕನ ಔದಾರ್ಯವೇನಲ್ಲ. ಅಡಿಗಿ ಮಾಡಿ ಹಾಕಲಿಕ್ಕೆ ಬಂದ ಮುಳಗುಂದದ ಸಕೇಶಿಯನ್ನು ತನ್ನ ಗಂಡ ಇಟ್ಟುಕೊಂಡದ್ದೂ ಅಲ್ಲದೆ ಅವಳ ಮಗ ಬಿಂದ್ಯಾನ್ನೇ ದತ್ತಕ ಮಾಡಿಕೊಳ್ಳುವ ವಿಚಾರ ಕೃಷ್ಟಕ್ಕನ ಮಧ್ಯಪ್ರವೇಶಕ್ಕೆ ಕಾರಣವಾದದ್ದು. ಕೃಷ್ಟಕ್ಕನ ಹಠದಿಂದ ಅವಳ ತಂಗಿಯ ಮಗ ಗುರಣ್ಣ ದತ್ತಕ ಮಗ ಆಗಿದ್ದು. ಮುಂದೆ ಕದಿಯುವ ಚಾಳಿಗೆ ಬಿದ್ದ ಬಿಂದ್ಯಾ ಒಮ್ಮೆ ತುಡುಗು ಮಾಡುವಾಗ ಕೃಷ್ಟಕ್ಕನ ಗಂಡನ ಕೈಗೆ ಸಿಕ್ಕಿಬಿದ್ದು, ಚಾಕು ಹೊರ ತೆಗೆಯುತ್ತಾನೆ. ಕೃಷ್ಟಕ್ಕನ ಗಂಡ ಹೀಗೆ ಬಿಂದ್ಯಾನ ಕೈಯಲ್ಲೇ ಸಾಯುತ್ತಾನೆ. ಗುರಣ್ಣನಿಗೆ ಈ ಎಲ್ಲ ವಿವರಗಳು ಪದೇ ಪದೇ ಕೃಷ್ಟಕ್ಕನ ಬಾಯಲ್ಲಿ ಬರುತ್ತ ನೀಡುವುದು ಅಸಾಧ್ಯ ಹಿಂಸೆಯನ್ನಷ್ಟೇ. ಇಷ್ಟರ ಮೇಲೆ ಕೌತುಕ ತೆರೆದುಕೊಳ್ಳುತ್ತದೆ. ಬದರೀನಾಥದಲ್ಲಿ ಪಿಂಡಪ್ರದಾನ ಮಾಡಿಸಲು ಬಂದ ಪುರೋಹಿತ ಬಿಂದ್ಯಾನನ್ನೇ ಹೋಲುತ್ತಾನೆನ್ನುವ ಕೃಷ್ಟಕ್ಕನ ಶಂಕೆ ಇಡೀ ಕತೆಗೆ ಹೊಸ ತಿರುವು ನೀಡುತ್ತದೆ.

ಸಂತಾನ, ಅದರ ಅಕ್ರಮ-ಸಕ್ರಮದ ಪ್ರಶ್ನೆ, ಪಿತೃಕಾರ್ಯದ ವಾರಸುದಾರಿಕೆಯ ಪ್ರಶ್ನೆಯೊಂದಿಗೇ ಇಲ್ಲಿ ಶೀಲ, ಮಡಿವಂತಿಕೆ ಮತ್ತು ಧಾರ್ಮಿಕ ಪಾವಿತ್ರ್ಯ ಎನ್ನುವುದರ ಮಿಥ್ ಒಂದು ಪ್ರಶ್ನಾರ್ಹ ನೆಲೆಗೆ ಚಾಚಿಕೊಳ್ಳುವುದು - ಸೂಸನ್‌ಳ ಉಪಸ್ಥಿತಿಯನ್ನು ಗಮನಿಸುತ್ತ, ನಿಜಕ್ಕೂ ಕುತೂಹಲಕರ. ಸದ್ಯ ಆಸ್ತಿಯ ವಾರಸುದಾರಿಕೆಯ ಪ್ರಶ್ನೆ ಮತ್ತೆ ಇಲ್ಲಿ ತೊಡರಿಕೊಳ್ಳುವುದಿಲ್ಲ ಎಂಬುದನ್ನು ಮರೆತು ನೋಡಿದರೂ ಈ ಸಂಕೀರ್ಣ ಸ್ಥಿತಿಯಲ್ಲಿ ಕತೆ ಮುಗಿಯುವುದು ಕತೆಯ ನಿರ್ವಹಣೆಯ ಅನುಪಮ ಉದಾಹರಣೆಯಾಗಿದೆ.

ಭೈರಪ್ಪನವರ `ವಂಶವೃಕ್ಷ' ನೆನಪಾಗುತ್ತದೆಯಲ್ಲವೆ? ಕಾತ್ಯಾಯಿನಿಗೆ ಮರುಮದುವೆಯಾದ ನಂತರವೂ ಸತ್ತಿರುವ ತನ್ನ ಮೊದಲ ಗಂಡನಲ್ಲಿ ಹುಟ್ಟಿದ ಮಗನ ಮೇಲೆ ಅಧಿಕಾರವಿದೆಯೆ ಎಂಬುದು ಶ್ರೀನಿವಾಸ ಶ್ರೋತ್ರಿಗಳನ್ನು ಕಾಡುವ ಧರ್ಮಸಂಕಟ; ಸತ್ತ ಮಗನ ತಂದೆಯಾಗಿ, ಇನ್ನೊಬ್ಬನೊಂದಿಗೆ ಮರು ಮದುವೆಯಾದ ಸೊಸೆಯ ಮಾವನಾಗಿ ಮತ್ತು ಬ್ರಾಹ್ಮಣ ಸಮಾಜದ ಮಾರ್ಗದರ್ಶಕ ಪುರೋಹಿತನಾಗಿ. ಅವಳು ಸತ್ತಾಗ ಅವಳ ಅಪರಕಾರ್ಯಗಳನ್ನು ತಮ್ಮಮಗನ ಮಗ ಮಾಡಲಿ ಎನ್ನುವ ಶ್ರೀನಿವಾಸ ಶ್ರೋತ್ರಿಗಳ ಇಂಗಿತಕ್ಕೆ ಸ್ವತಃ ಅವರ ಜನ್ಮರಹಸ್ಯ ಬಿಚ್ಚಿಡುವ ಒಳಸುಳಿಗಳು ಕಾರಣವಾಗುವುದು ಅಲ್ಲಿನ ಚೋದ್ಯ.

ಇಲ್ಲೇ ನೆನಪಾಗುವ ಕತೆ ಶ್ರೀಧರ ಬಳಗಾರರ `ಅಧೋಮುಖ'. ಈ ಕತೆಯಲ್ಲಿ ಮಾಧವ ಎಂಬ ಪಾತ್ರ ತೀರಿಕೊಂಡಿದೆ. ಆತನ ಶ್ರಾದ್ಧ ನಡೆಯುತ್ತಿದೆ. ಶ್ರಾದ್ಧ ನಡೆಸುತ್ತಿರುವ ಗಣಪು ಲೋಕರೂಢಿಯಲ್ಲಿ ಮಾತ್ರ ಸತ್ತಿರುವ ಮಾಧವನ ಮಗ. ವಾಸ್ತವದಲ್ಲಿ ಆತ ಪ್ರಸ್ತುತ ಶ್ರಾದ್ಧವನ್ನು ನಡೆಸಿಕೊಡಲು ಬಂದಿರುವ ಪುರೋಹಿತ ಸೂರಿಭಟ್ಟನಿಂದ ಹುಟ್ಟಿದವ! ಹೀಗೆ ಅಲ್ಲಿ ತಂದೆ ಮಗ ಜೊತೆಯಲ್ಲಿ ಕೂತು ಮಾಧವನ ಶ್ರಾದ್ಧ ಮಾಡುತ್ತಿದ್ದಾರೆ. ಈ ಶ್ರಾದ್ಧದ ನೈವೇದ್ಯಕ್ಕೆ ಪಿಂಡಾನ್ನವನ್ನು ತಯಾರಿಸಿದ ಮೃತನ ತಂಗಿ ಸರಸಿಯದ್ದು ಇನ್ನೊಂದೇ ಕತೆ!

ಈ ಕತೆಗಳು ಸನಾತನ ಧರ್ಮದ ಸಾಂಪ್ರದಾಯಿಕ ಕಟ್ಟುಪಾಡುಗಳ ಅರ್ಥವ್ಯಾಪ್ತಿಯಲ್ಲೇ ಸಂತಾನ, ಅದರ ಹಕ್ಕುಗಳು, ವಾರಸುದಾರಿಕೆ ಇತ್ಯಾದಿಗಳನ್ನಿಟ್ಟು ವರ್ತಮಾನ ಅವುಗಳಿಗೆ ಒಡ್ಡುವ ಸವಾಲುಗಳನ್ನು ಸಾಮಾಜಿಕ ಮತ್ತು ವೈಯಕ್ತಿಕ ನೆಲೆಯಲ್ಲಿ ಮುಖಾಮುಖಿಯಾಗಿಸುತ್ತವೆ. ಜಿಜ್ಞಾಸೆಯನ್ನೊಡ್ಡುತ್ತವೆ. ಇವಕ್ಕೆಲ್ಲ ಉತ್ತರಗಳು ಸರಳವಿಲ್ಲ, ಉತ್ತರವನ್ನು ಈ ಕತೆಗಳು ಅಪೇಕ್ಷಿಸುವುದೂ ಅಲ್ಲ. ಪ್ರಶ್ನೆಯೇ ಎಷ್ಟೋ ಬಾರಿ ಉತ್ತರವೂ ಆಗಿರುವುದರ ಹೊಳಹನ್ನು ಕಾಣಿಸುವುದಷ್ಟೇ ಅದರ ಕೆಲಸ. ಅದನ್ನು ಶ್ರೀನಿವಾಸ ವೈದ್ಯರ ಕತೆ ಸಮರ್ಥವಾಗಿಯೇ ಮಾಡಿದೆ.

No comments: