Saturday, January 31, 2009

ಕಾಫಿನಾಡಿನ ಕಿತ್ತಳೆ - ತಾಜಾ ಮತ್ತು ಸ್ವಾದಿಷ್ಟ!

ಮೊದಮೊದಲು ಸ್ವಲ್ಪ ಅಸುಖವನ್ನುಂಟು ಮಾಡಿದ ಬರವಣಿಗೆಯ ಶೈಲಿ ಬರಬರುತ್ತ ಎಷ್ಟು ಆಪ್ತವಾಗುತ್ತ ಹೋಯಿತೆಂದರೆ, ಪುಸ್ತಕ ಮುಗಿದದ್ದೇ ಅಯ್ಯೊ, ಮುಗಿದೇ ಹೋಯಿತೆ ಎಂದು ಪರಿತಪಿಸುವಂತೆ ಮಾಡಿತು! ಇದು ಗಿರಿಮನೆ ಶ್ಯಾಮರಾವ್ ಅವರ ಕಾಫಿನಾಡಿನ ಕಿತ್ತಳೆ ಓದಿದ ಅನುಭವ. ತೇಜಸ್ವಿಯವರನ್ನು ನೆನಪಿಸುವ ಲೋಕ. ಲಾರಾ ಇಂಗಲ್ಸ್ ವೈಲ್ಡರಳ ಪುಸ್ತಕಗಳ ಸರಣಿ ನೀಡುವ ಬದುಕಿನ ಚಿತ್ರವನ್ನು ಹೋಲುವ ಅನುಭವ. ಇನ್ನೂರು ಪುಟಗಳ ಈ ಪುಟ್ಟ ಪುಸ್ತಕದ ಹದಿನಾಲ್ಕೂ ಅಧ್ಯಾಯಗಳು ತೆರೆದಿಡುವ ಅನುಭವ ಕಥನ ಅಷ್ಟೇ ರೋಚಕ, ಆಪ್ತ ಮತ್ತು ನಮ್ಮ ಭಾವಸ್ತರವನ್ನೂ ವೈಚಾರಿಕತೆಯನ್ನೂ ಜೊತೆಯಾಗಿ ಮೀಟಿ ಸುಪ್ತ ಮನಸ್ಸಿನ ಸಂವೇದನೆಗಳ ಕದಗಳನ್ನು ತೆರೆಯುವಂಥದ್ದು.

ಚಿಂಟಿಯ ಪುನರ್ಜನ್ಮದ ಕತೆ, ಇನ್ಯಾರಿಂದಲೋ ತಿಳಿದು ಬರುವ ಅವಳ ಗೆಳತಿಯರಲ್ಲೊಬ್ಬಳ ಒಂದು ಕಥೆ, ಊರು ಸೇರಿಕೊಂಡು ಬುದ್ಧಿವಂತರಿಗೆಲ್ಲ ಆತಂಕ ಹುಟ್ಟಿಸಿದ ಮೊಸಳೆ ಪ್ರಕರಣ, ಅದರೊಳಗೇ ತಳುಕು ಹಾಕಿಕೊಂಡಂತಿರುವ ಪೆದ್ದ ಬುಡ್ಡನ ಮದುವೆಯ ಕತೆ, ರಾತ್ರಿಹೊತ್ತು ಮನೆಯೊಳಗೆ ಸೇರಿಕೊಂಡ ಹಾವಿನ ಕಣ್ಣಾಮುಚ್ಚಾಲೆಯಾಟ, ಕಾಡಿನದ್ದಲ್ಲದೆ ಬೇರೆಯವರ ಸ್ವಂತ ಜಾಗದಲ್ಲಿರುವ ಮರಗಳನ್ನೂ ಕದ್ದು ಕಡಿಯುವ ಭಂಡ ಐತಪ್ಪ, ಭಟ್ಟಿ ವಿಕ್ರಮರು, ದೆವ್ವಗಳಾಗಿ ಕಾಡುವ ನಿಶಾಚರಿಗಳು, ಹೇಗಾದರೂ ಮಾಡಿ ಟೊಪ್ಪಿ ಹಾಕಲು ಹವಣಿಸುವ ಹಳ್ಳಿಯ ಮುಗ್ಧ `ಜಾಣ'ರು, ಜೇನಿನ `ಹೊಳೆ'ಯಲ್ಲಿ ತೇಲುವ ಮಂಜ! ....ಒಂದೆರಡಲ್ಲ, ಒಂದಕ್ಕಿಂತ ಒಂದು ವಿವರಗಳಲ್ಲಿ, ಅದರ ನಿರೂಪಣೆಯ ಅಕೃತ್ರಿಮ ಮುಗ್ಧತೆಯಲ್ಲಿ ನಿರ್ಮಿಸುವ ಜಗತ್ತು ನಮ್ಮನ್ನು ಬಹುಕಾಲ ಆವರಿಸಿಕೊಂಡೇ ಇರುತ್ತದೆ. ಪುಸ್ತಕ ಓದಿ ಮುಗಿಸಿದ ಮೇಲೂ ಅವೇ ಪಾತ್ರಗಳು, ಅದೇ ಊರು, ಕಾಫಿಯ - ಕಿತ್ತಳೆಯ ತೋಟ, ಕಾಡು ಮನಸ್ಸನ್ನು ಮುತ್ತಿಕೊಂಡೇ ಇರುವಂತಾಗುತ್ತದೆ. ಇನ್ನಷ್ಟು ಕಥನಗಳಿದ್ದರೆ ಓದುತ್ತಿರಬಹುದಿತ್ತಲ್ಲಾ ಅನಿಸತೊಡಗುತ್ತದೆ.

ಹಾಗೆ ಬರೆದಿದ್ದರೆ ಒಂದು ಅದ್ಭುತ ಕತೆಯಾಗಿ ಬಿಡಬಹುದಿದ್ದ ತಿಮ್ಮನ ಒಂದು ಪ್ರಕರಣ ಇಲ್ಲಿದೆ. ಗಿರಿಮನೆ ಶ್ಯಾಮರಾವ್ ಅದನ್ನು ಯಾವುದೇ ತಂತ್ರಗಾರಿಕೆಯಿಲ್ಲದ ಸರಳ ನೇರ ನಿರೂಪಣೆಯಲ್ಲಿ ನಮ್ಮೆದುರು ಬಿಚ್ಚಿಡುತ್ತಾರೆ. ಈ ನಿರೂಪಣೆಯ ಓದು ನಮ್ಮಲ್ಲಿ ಮೀಟುವ ಭಾವನಾತ್ಮಕ ನೆಲೆಯನ್ನು ಗಮನಿಸಬೇಕು. ಒಬ್ಬ ಪರಿಣಿತ ಕಥೆಗಾರ ಇಂಥವೇ ಕತೆಗಳಲ್ಲಿ ತನ್ನ ಕಥನ ಕೌಶಲದಿಂದ, ತನ್ನ ವಿವರಗಳಿಂದ ಭಾವಸ್ತರದಲ್ಲಿ ಸೃಜಿಸುವ ಒಂದು ಬಗೆಯ ತಲ್ಲಣದ ಜೊತೆ ಇದನ್ನು ಸುಮ್ಮನೆ ಹೀಗೇ ಕುತೂಹಲಕ್ಕೆ ಹೋಲಿಸಿ ನೋಡಬಹುದು. ಹಳ್ಳಿ ಬದುಕಿನ, ಬಾಲ್ಯಕಾಲದ ನಾಸ್ಟಾಲ್ಜಿಯಾವನ್ನೇ ಬಂಡವಾಳ ಮಾಡಿಕೊಂಡು ತೀರ ಕೃತಕವಾಗಿ ಕಾಣಿಸುವ ಕತೆಗಳನ್ನೂ ಗಿರಿಮನೆ ಶ್ಯಾಮರಾಯರ ನಿರೂಪಣೆಯ ನಿರಾಳತನದ ಜೊತೆ ಹೋಲಿಸಿ ನೋಡಬಹುದು. ನವ್ಯದ ಅತಿಗಳಿಂದ ರೋಸಿದ ತೇಜಸ್ವಿ ಆಯ್ದ ಕಥನ ಮಾರ್ಗದ ಕರಡು ಮಾದರಿಯೊಂದು ನಮಗೆ ಇಲ್ಲಿ ಕಾಣಿಸಿದರೆ ಅಚ್ಚರಿಯಿಲ್ಲ.

ಲಕ್ಷ್ಮೀ ಎಂಬ ಒಂದು ತೀರಾ ಸಾಧು ದನದ ಕತೆ, ಮಾವುತನನ್ನು ಸೊಂಡಿಲೆತ್ತಿ ಎಸೆದ ಆನೆ ಮತ್ತು ಮೀನು ಬ್ಯಾರಿಯ ಹೋರಿ ವ್ಯಾಪಾರ - ಮುಂತಾಗಿ ಇಲ್ಲಿ ಹಳ್ಳಿಯ ಜನಜೀವನದ ಜೊತೆಜೊತೆಗೇ ಕೆರೆಯ ಮೀನುಗಳು, ಅಗೋಚರ ನಂಟಿನ ನಾಯಿ, ಮನೆಯ ಸದಸ್ಯರಂತಿರುವ ದನಕರುಗಳು, ಹೋರಿ, ಈ ಬದುಕಿನ ಅನಿವಾರ್ಯ ಸಂಗಾತಿಗಳಾದ ಹಾವುಗಳು, ಹೋರಾಟ ನಿಪುಣ ಮುಂಗುಸಿ ಮುಂತಾದ ಪಶು-ಪ್ರಾಣಿಸಂಕುಲದ ಒಡನಾಟದ ಕತೆಗಳು; ಕಾಫಿ, ಕಿತ್ತಳೆ, ಏಲಕ್ಕಿ, ಮರಕೆಸುವಿನ ಸೊಪ್ಪು, ಉಪ್ಪಿನಕಾಯಿಗೆ ಬೇಕಾದ ಮಿಡಿ ಮಾವು, ಖಾರದ ಮಾದರಿಯಾದ ಗಾಂಧಾರಿ ಮೆಣಸು ಮತ್ತು ಸೆಂಡಿಗೆ, ಹಲವು ಕತೆಗಳ ಹಲಸಿನ ಹಣ್ಣು -ಮುಂತಾದ ಸಸ್ಯಸಂಕುಲ ಮತ್ತು ತಿನಿಸುಗಳ ಸುತ್ತ ತೆರೆದುಕೊಳ್ಳುವ ಕಥಾನಕಗಳು; ವಿವಿಧ ಋತುಗಳಿಗನುಸಾರವಾಗಿ ಬಗೆಬಗೆಯಾಗಿ ಮನಸೂರೆಗೊಳ್ಳುವ ಸೌಂದರ್ಯದ ಅಧಿದೇವತೆ ಪ್ರಕೃತಿಯ ಸುಂದರ ವಿವರಗಳು ಸೇರಿದ ಪರಿಸರ ವರ್ಣನೆ, ದೂರದ ಬೆಟ್ಟ ನುಣ್ಣಗೆ ಎಂಬಂತಿರುವ ಈ ಎಲ್ಲ ಹಿತಾನುಭವದಾಚೆಯ ವಾಸ್ತವ ಬದುಕಿನ ಕಷ್ಟ, ನಷ್ಟ, ನೋವು, ದುಮ್ಮಾನಗಳ ನಡುವಿನ ಹೋರಾಟಗಳು ಎಲ್ಲವೂ ಹಿತ ಮಿತವಾಗಿ ಸೇರಿವೆ. ಸೇರಿ ಈ ಕೃತಿಯ ಮಹತ್ವವನ್ನು ಬಹಳ ಉನ್ನತಕ್ಕೇರಿಸಿವೆ. ಹಿರಿಯರೂ, ಬೆಳೆಯುತ್ತಿರುವ ಮಕ್ಕಳೂ ಓದಿ ಆಸ್ವಾದಿಸಬಹುದಾದ ಅಚ್ಚುಕಟ್ಟಾದ ಪುಸ್ತಕವಿದು. ವೆಂಕಟ್ ಮೋಂಟಡ್ಕ ಅವರ ರೇಖಾ ಚಿತ್ರಗಳಂತೂ ಅದ್ಭುತವಾಗಿವೆ, ಕಥನವನ್ನು ಕಣ್ಣಿಗೆ ಕಟ್ಟುವಂತೆ ಮಾಡಿವೆ.

ಕಾಫಿನಾಡಿನ ಕಿತ್ತಳೆ
ಗಿರಿಮನೆ ಶ್ಯಾಮರಾವ್
ನವಕರ್ನಾಟಕ ಪ್ರಕಾಶನ
ಅಂತರ್ಜಾಲ ತಾಣಕ್ಕೆ ಭೇಟಿ ಕೊಡಿ
ಪುಟಗಳು: 200, ಬೆಲೆ: ರೂಪಾಯಿ ನೂರಹತ್ತು.

2 comments:

Harish kera said...

ಈ ಪುಸ್ತಕ ತುಂಬ ಚೆನ್ನಾಗಿದೆ. ಸುಧಾದಲ್ಲಿ ಧಾರಾವಾಹಿಯಾಗಿ ಬರುತ್ತಿದ್ದಾಗಲೇ ಓದಿದ್ದೆ. ಈಗ ಮತ್ತೆ ಓದುವ ಆಸೆಯಾಗಿ, ತೆಗೆದುಕೊಂಡಿದ್ದೇನೆ. ಒರಿಜಿನಲ್ ಬರಹಗಾರರು ನಮಗೆ ತಿಳಿಯದ ಯಾವ್ಯಾವುದೋ ಮೂಲೆಗಳಿಂದ ಅದ್ಹೇಗೆ ದಿಢೀರ್ ಅಂತ ಎದ್ದು ಬರುತ್ತಾರೆ ಅಲ್ಲವೆ ? ಶ್ರೀನಿವಾಸ ವೈದ್ಯರಂತೆಯೇ ಗಿರಿಮನೆ ಕೂಡ.
- ಹರೀಶ್ ಕೇರ

ನರೇಂದ್ರ ಪೈ said...

ನಿಜ ಹರೀಶ್. ಅದೇ ತರ ಮಾಧ್ಯಮಗಳಿಗೆ ಸುಲಭ ಲಭ್ಯರಾದವರು ಮತ್ತು ಮಾಧ್ಯಮಗಳನ್ನು ಸುಲಭ ಲಭ್ಯ ಮಾಡಿಕೊಂಡವರು - ಈ ಎರಡೂ ಪಂಗಡಗಳಾಚೆ ನಿಂತವರ ಪ್ರತಿಭೆ ಕೂಡ ಎಷ್ಟೋ ಬಾರಿ ಬೆಳಕಿಗೆ ಬರುವುದೇ ಇಲ್ಲ. ವಿಶೇಷತಃ ನಮ್ಮ ಯಕ್ಷಗಾನ ಕಲಾವಿದರ ಬಗ್ಗೆ ನನಗೆ ಮತ್ತೆ ಮತ್ತೆ ಈ ತರ ಅನಿಸುತ್ತದೆ.