Sunday, February 8, 2009

ಶ್ರೀಧರ ಬಳಗಾರರ ಮೊದಲ ಕಥಾಸಂಕಲನ ಅಧೋಮುಖ (1995)

ಅಧೋಮುಖ ಸಂಕಲನದಲ್ಲಿ ಒಟ್ಟು ಎಂಟು ಕಥೆಗಳಿವೆ. ಈ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಕೂಡಾ ಸಂದಿದೆ. ಇಲ್ಲಿನ ಕಥೆಗಳ ನಿರೂಪಣೆಯಲ್ಲಿ ನಮಗೆ ಕಾಣುವ ಮುಖ್ಯ ಅಂಶವೆಂದರೆ ಬಳಗಾರರಿಗೆ ಕಥಾನಕದ ಚಲನೆಗಿಂತ ಕಥಾನಕದ ಪಾತ್ರಗಳು, ಆ ಪಾತ್ರಗಳ ಮತ್ತು ಪರಿಸರದ ಜನಜೀವನದ ಸೂಕ್ಷ್ಮ ಚಲನೆ, ಅವರ ದೈನಂದಿನ, ಅವರು ಬದುಕುತ್ತಿರುವ ಜಗತ್ತಿನ ಚಿತ್ರ ಹೆಚ್ಚು ಮುಖ್ಯವೆನಿಸುವುದು. ಇವುಗಳ ಮೂಲಕವೇ ಅವರು ಕಥಾನಕವನ್ನೂ ಮುನ್ನೆಡೆಸುತ್ತ ಒಂದು ಕಥೆಯನ್ನು ಕಟ್ಟಿಕೊಡುತ್ತಾರೆ. ಇಲ್ಲಿನ ಅವರ ದೃಷ್ಟಿ ಕೂಡ ಸಮಷ್ಟಿಯದ್ದು, ವ್ಯಕ್ತಿಗತವನ್ನು ಸಾಮಾಜಿಕವಾಗಿ ಕಾಣುವಂಥದ್ದು.

ಒಂದು ಅವಿಭಕ್ತ ಕುಟುಂಬದ ಒಡೆಯುವಿಕೆ ಸಮಾಜದಲ್ಲಿ ಹುಟ್ಟಿಸಬಲ್ಲ ತಲ್ಲಣಗಳನ್ನು ಶ್ರೀಧರ ಬಳಗಾರ ಸಮರ್ಥವಾಗಿ ತಮ್ಮ ಕಥೆಗಳಲ್ಲಿ ಕಾಣಿಸುತ್ತ ಬಂದಿದ್ದಾರೆ. ಎಷ್ಟೋ ಸಾರಿ ಇದು ಕೇವಲ ಆಸ್ತಿಯ ಹಿಸ್ಸೆ ಮಾತ್ರ ಆಗಿರುವುದಿಲ್ಲ. ಕುಟುಂಬವೊಂದರ ನೋವು, ನಲಿವು, ಗುಟ್ಟು, ಸಂಬಂಧಗಳು, ನಿರ್ಬಂಧಗಳ ಸಂಕೋಲೆ, ಸ್ವಾತಂತ್ರ್ಯದ ಅಭೀಪ್ಸೆ ಎಲ್ಲವೂ ಇದರಲ್ಲಿ ಅಡಗಿದೆ. ಹಾಗಾಗಿಯೇ ಇದು ಕೇವಲ ಒಂದು ಕುಟುಂಬದ issue ಆಗಿ ಉಳಿಯುವುದೇ ಸಾಧ್ಯವಿಲ್ಲ. ಇಷ್ಟಲ್ಲದೇ ಈ ಬಗೆಯ ಜನಜೀವನಕ್ಕೆ ತನ್ನ ಸುತ್ತಲಿನ ಸಮಾಜದ ಎಲ್ಲವೂ, ಪರಿಸರದ ಎಲ್ಲವೂ, ಅಂದರೆ ಉದಾಹರಣೆಗೆ ಅಲ್ಲಿನ ಪ್ರಾಣಿಗಳು, ಸಸ್ಯಸಂಕುಲ, ಕಾಡು, ಮಳೆ, ಗದ್ದೆ, ಕೊಯಿಲು, ಅಡಕೆ ಕೃಷಿ, ಅಂಗಡಿ, ಹೋಟೆಲು, ದೇವಸ್ಥಾನ, ರಸ್ತೆ, ರೇಡಿಯೋ, ಫೋನು, ನಾಗರೀಕತೆ ಎಲ್ಲವುದರ ಜೊತೆ ಒಂದು ಬಗೆಯ ಸರಪಳಿಯಂಥ ಜೊತೆಗಾರಿಕೆ, ಸಂತುಲನ ಇರುವುದನ್ನು ಶ್ರೀಧರ ಬಳಗಾರ ಗುರುತಿಸುತ್ತಾರೆ. ಇಲ್ಲಿ ನಾವು ಶ್ರೀಧರ ಬಳಗಾರರ ಸೂಕ್ಷ್ಮ ಅವಲೋಕನವನ್ನು ಮತ್ತು ಬದುಕನ್ನು ಭಾಷೆಯಲ್ಲಿ ಅಷ್ಟೇ ಸಮಗ್ರವಾಗಿ ಕಟ್ಟಿಕೊಡಬಲ್ಲ ಕೃತುಶಕ್ತಿಯನ್ನು ಗಮನಿಸಬೇಕು. ಬಳಗಾರರು ಗುರುತಿಸುವ ಈ ಕೊಂಡಿ ಒಂದು ಕಡೆ ಕಳಚಿದರೆ ಇಡಿ ಸರಪಳಿಯೇ ದುರ್ಬಲವಾಗುವಂಥದ್ದು, ತುಂಬ ಸೂಕ್ಷ್ಮವಾದದ್ದು. ಇದನ್ನು ಕೂಡಾ ಬಳಗಾರ ಅಷ್ಟೇ ಸೂಕ್ಷ್ಮವಾಗಿ ಗ್ರಹಿಸುತ್ತಾರೆ ಮಾತ್ರವಲ್ಲ ಕಥಾನಕದ ಒಟ್ಟಂದದಲ್ಲೇ ತಮ್ಮ ಕತೆಗಳಲ್ಲಿ ತರುತ್ತಾರೆ.

ಶ್ರೀಧರ ಬಳಗಾರರ ಆರಂಭದ ಕಥೆಗಳಲ್ಲಿ ಗಂಡು ಹೆಣ್ಣು ಸಂಬಂಧ, ದಾಂಪತ್ಯ, ಕಾಮದ ವಿಲಕ್ಷಣ ಪ್ರಭಾವ ಇತ್ಯಾದಿ ಹೆಚ್ಚಾಗಿಯೇ ಇರುವುದನ್ನು ಕಾಣಬಹುದು. ಇಲ್ಲಿನ ಸಂಯೋಗ ಕತೆಯಲ್ಲಿ ಸುಬ್ರಾಯ-ರಾಧೆಯ ನಡುವೆ ಬರುವ ಮರ್ಕುಂಡಿ, ಹಿನ್ನೆಲೆಯ ಕತೆಯ ಕಾವೇರಿ-ಗಣೇಶರ ಮದುವೆ ಮತ್ತು ಸಲೀಂ ಜೊತೆ ಅವಳು ಓಡಿ ಹೋಗುವುದು, ಅಧೋಮುಖ ಕತೆಯ ಮಾಧವ-ದೇವಕಿಯರ ನಡುವೆ ಬರುವ ಸೂರಿಭಟ್ಟ, ಸರಸಿ ಮತ್ತು ಮಾಲಿಂಗರ ಸಂಬಂಧ, ದೊಡ್ಡವರ ನಡುವೆ ಕತೆಯ ಮಾಸ್ತರ ಮತ್ತು ಸಾವಿತ್ರಿ, ಸನ್ನಿವೇಶದ ವಿಠೋಬ-ಲಕ್ಷ್ಮಿಯರ ನಡುವಿನ ಸೊಪ್ಪಯ್ಯ ಹೀಗೆ ಕಾಮ ಇಲ್ಲಿನ ಕೆಲವಾದರೂ ಮನುಷ್ಯ ಸಂಬಂಧಗಳ ನಡುವೆ ಒಂದು ಪ್ರಮುಖ ಸ್ಥಾನ ಪಡೆದಿದೆ. ಆದರೆ ಯಾವುದೇ ಕತೆಯಲ್ಲಿ ಅದಷ್ಟೇ ಮುಖ್ಯವಾಗುವುದು ಅಥವಾ ಅದೇ ಪ್ರಧಾನ ಧಾರೆಯಾಗಿರುವುದು ಕಂಡುಬರುವುದಿಲ್ಲ. ಇದಕ್ಕೆ ಮತ್ತೆ ಬಳಗಾರರು ಬದುಕನ್ನು ಅದರ ಸಮಗ್ರತೆಯಲ್ಲೆ ತಮ್ಮ ಕತೆಯಲ್ಲಿ ತರಲು ಪ್ರಯತ್ನಿಸುವುದೇ ಕಾರಣವಿದ್ದೀತು.

ಕನಸುಗಳನ್ನು ಮತ್ತು ಅತೀಂದ್ರಿಯ ನಂಬುಗೆಗಳನ್ನು ಶ್ರೀಧರ ಬಳಗಾರ ತಮ್ಮ ಕತೆಗಳಲ್ಲಿ ಬಳಸಿಕೊಳ್ಳುವ ದೇಸೀಯ ಮಾದರಿ ಕೂಡ ಇನ್ನೊಂದು ಗಮನಸೆಳೆಯುವ ಅಂಶ. ಇದು ದೇಸೀಯ ಮಾದರಿ ಯಾಕೆಂದರೆ ಮೂರು ಕಾರಣಗಳಿಗಾಗಿ. ಒಂದು, ಎಲ್ಲೂ ಬಳಗಾರರು ಇದನ್ನು ತಾಂತ್ರಿಕ ಕಾರಣಗಳಿಗಾಗಿಯಷ್ಟೇ ತಮ್ಮ ಕತೆಗಳಲ್ಲಿ ತರುವುದಿಲ್ಲ ಎನ್ನುವ ಅಂಶ. ಮತ್ತು ಎರಡನೆಯದಾಗಿ, ಅಂಥ ವಿವರಗಳು ಕತೆಗೆ ನೇರವಾಗಿ ಅಗತ್ಯವಿಲ್ಲದಿದ್ದಾಗ್ಯೂ ಒಂದು ಪಾತ್ರದ ಒಟ್ಟು ವ್ಯಕ್ತಿತ್ವದ ಚಿತ್ರಣಕ್ಕೆ ಅಗತ್ಯವೆಂದಾದಲ್ಲಿ ಅವೆಲ್ಲವೂ ಸಹಜವಾಗಿ ಬರುವ(ಬರಲೇ ಬೇಕಾದ) ವಿವರಗಳಾಗಿ ಅಲ್ಲಿ ಬಂದೇ ಬರುತ್ತವೆ ಎಂಬುದರಿಂದ. ಬಳಗಾರರ ಕಥೆಗಳಲ್ಲಿ ಕೆಲವು ಕಡೆ ಕಥೆಯ ವಸ್ತು ಅಥವಾ ತತ್ವ ತನ್ನ ಮೊನಚು ಕಳೆದುಕೊಳ್ಳುವುದಕ್ಕೂ ಇದೇ ಕಾರಣವಾಗಿರಬಹುದಾದರೂ ಬಳಗಾರರ ಮೂಲ ಕಾಳಜಿ ಒಂದು ಸಿದ್ಧ ಮಾದರಿಯ `ಆರಂಭ-ಗುರುತ್ವ ಮತ್ತು ಅಂತ್ಯ'ಗಳನ್ನು ಗುರುತಿಸ ಬಹುದಾದ ಆಕೃತಿ ಪ್ರಧಾನ ಕಥಾನಕವಲ್ಲ. ಬದುಕನ್ನು ಸಮಗ್ರವಾಗಿ ಕಾಣುತ್ತ ಹೋಗುವುದೇ ಅವರಿಗೆ ಹೆಚ್ಚು ಮುಖ್ಯ ಅನಿಸಿರಬೇಕು. ಸಾಧಾರಣವಾಗಿ ಈ ಮನೋಧರ್ಮ ಕಾದಂಬರಿ ರಚನೆಗೆ ಹೆಚ್ಚು ಒಗ್ಗುವಂಥದ್ದಾದರೂ ಸಣ್ಣಕತೆಯ ನೆಲೆಯಲ್ಲಿ ಬಳಗಾರ ಅದನ್ನು ಯಶಸ್ವಿಯಾಗಿಯೇ ಬಳಸಿಕೊಂಡಿರುವುದು ಕುತೂಹಲಕರ. ಇನ್ನು ಮೂರನೆಯದಾಗಿ, ಒಂದು ಪ್ರತಿಮಾ ವಿಧಾನವಾಗಿಯೋ ಅಥವಾ ವಿಶೇಷವಾದ ಒಳನೋಟವೊಂದನ್ನು ತೆರೆಯುವ ಉದ್ದೇಶದಿಂದಲೋ ಬಳಗಾರ ಕನಸುಗಳ, ಅತೀಂದ್ರಿಯ ನಂಬುಗೆಗಳ ವಿವರಗಳನ್ನು ಕತೆಗೆ ತೊಡಿಸಿದಂತಿಲ್ಲದಿರುವುದು. ಹೀಗಾಗಿ ಬಳಗಾರರದು ಶುದ್ಧ ದೇಸೀ ಮಾದರಿಯ ತಂತ್ರವಾಗಿದೆ.

ತಲೆಮಾರು ಕತೆ ಒಂದು ನಿಟ್ಟಿನಲ್ಲಿ ಅಪ್ಪ ಮಗನ ನಡುವಿನ ಸಂಘರ್ಷದ ಕುರಿತಾಗಿದೆ. ಇದು ಆಸ್ತಿ, ವ್ಯಕ್ತಿತ್ವ ಮತ್ತು ಬದುಕಿನ ನಿಲುವುಗಳ ವಿಚಾರದಲ್ಲಿ ಬರುವ ಸಂಘರ್ಷ. ಇನ್ನೊಂದು ನೆಲೆಯಲ್ಲಿ ಈ ಕತೆಯ ಸಂಘರ್ಷ ತಂದೆ ಮಗನ ಅಸ್ಮಿತೆಯ ಪ್ರಶ್ನೆ ಕೂಡ ಆಗಿದೆ. ತಂದೆ ಮಗನ ಇಬ್ಬರ ನೆಲೆಯಿಂದಲೂ ಸಾವಿನೆದುರು ಈ ಸಂಘರ್ಷ ತನ್ನ ಅರ್ಥ ಕಂಡುಕೊಳ್ಳುವುದನ್ನು ಕತೆಯಲ್ಲಿ ಕಾಣಿಸುವುದು ಶ್ರೀಧರ ಬಳಗಾರರ ಉದ್ದೇಶ. ತಂದೆ-ಮಗನ ಮುಖಾಮುಖಿಯನ್ನು ತೆರೆದಿಡುವ ಜಯಂತರ `ತೆರೆದಷ್ಟೇ ಬಾಗಿಲು', ಅಶೋಕ ಹೆಗಡೆಯವರ `ಹೊಳೆದದ್ದೆ ತಾರೆ', `ಉಳಿದದ್ದೆ ದಾರಿ' ಮುಂತಾದ ಕಥೆಗಳು ಇಲ್ಲಿ ನೆನಪಾಗುತ್ತವೆ. ಸಂದೀಪ ನಾಯಕರ ಕಥೆ `ಕರೆ' -ಮರಣಶಯ್ಯೆಯಲ್ಲಿರುವ ಒಬ್ಬ ವ್ಯಕ್ತಿ ತನ್ನ ದಾಯಾದಿಯೊಬ್ಬನನ್ನು ಕಾಣಲು ಬಯಸಿ ಒದ್ದಾಡುವಾಗಲೂ ಹಳೆಯ ಸಾಲವೊಂದು ಅಡ್ಡಿಯಾಗುವುದು - ಮೃತ್ಯುಪ್ರಜ್ಞೆ ಮತ್ತು ಮಾನವೀಯ ಸಂಬಂಧ ಎರಡನ್ನೂ ನಿಕಷಃಕ್ಕೊಡಿರುವುದನ್ನು ಕೂಡ ಇಲ್ಲಿ ನೆನೆಯಬಹುದು.

ಸಂಯೋಗ ಕತೆಯ ಸುಬ್ರಾಯ ಒಂದು ವಿಶಿಷ್ಟ ಪಾತ್ರ. ಅಪಮಾನ, ಸೋಲು ಅಥವಾ ಅಸಹಾಯಕತೆಯನ್ನು ಸಹಜವೆಂದು ಸ್ವೀಕರಿಸಿ ಅದಕ್ಕೆ ವಿಲಕ್ಷಣ ರೀತಿಯ ಮೌನದಿಂದ ಸ್ಪಂದಿಸುವ ಸುಬ್ರಾಯನಂಥ ಪಾತ್ರಗಳು ಶ್ರೀಧರ ಬಳಗಾರರ ಕತೆಗಳಲ್ಲಿ ಮತ್ತೆ ಮತ್ತೆ ಎದುರಾಗುತ್ತವೆ. ಲೈಂಗಿಕ ಸಾಮರ್ಥ್ಯದ ಪರೀಕ್ಷೆಯಲ್ಲಿ ಇವರು ಸೋತಿದ್ದಾರೆ. ಅದಕ್ಕೆ ನಿದರ್ಶನವೆಂಬಂತೆ ಇವರ ಪತ್ನಿಯರು ಒಂದೋ ಅನ್ಯರಲ್ಲಿ ಸಂಬಂಧ ಬೆಳೆಸಿದ್ದಾರೆ ಅಥವಾ ಓಡಿ ಹೋಗಿದ್ದಾರೆ. ಗಂಡನನ್ನು ಕಸದಂತೆ ಕಾಣುತ್ತಾರೆ. ಎಲ್ಲ ಸರಿ. ಆದರೆ ಇವರು ಊರಿನಲ್ಲಿ ಹೋರಿಗಳ ಬೀಜ ಒಡೆಯುವುದು ಮತ್ತು ಅಂಥ ಎತ್ತುಗಳನ್ನು ಕೆಲಸಕ್ಕೆ ಬಳಸುವುದು ಎಷ್ಟು ಸಹಜವೋ ಅಷ್ಟೇ ಸಹಜ ತಮ್ಮ ಬದುಕು ಎಂಬಂತೆ ಅದನ್ನು ಸ್ವೀಕರಿಸಿಕೊಂಡು ಬದುಕುತ್ತಿರುವವರು. ಅದರಲ್ಲೂ ಇಲ್ಲಿನ ಸುಬ್ರಾಯ ರಾಧೆಯ ನೆಲೆಯಿಂದ ಎಲ್ಲವನ್ನೂ ಗಮನಿಸಬಲ್ಲ ಸಾಧ್ಯತೆಯನ್ನು ಹೊಂದಿರುವುದು ಅಚ್ಚರಿಯನ್ನೂ ಹುಟ್ಟಿಸುತ್ತದೆ. ಸನ್ನಿವೇಶದ ವಿಠೋಬ ಕೂಡ ಲಕ್ಷ್ಮಿಯನ್ನು, ಸೊಪ್ಪಯ್ಯನನ್ನು ಕಾಣುವ ನೆಲೆ ಇಂಥದೇ ಎಂಬುದು ಗಮನಾರ್ಹ.

ಹಿನ್ನೆಲೆ ಕತೆಯ ಕಥಾನಕವನ್ನು ಅಮೃತಾಪ್ರೀತಂರ ಪಿಂಜರ್ ಕಾದಂಬರಿಯೊಂದಿಗೆ ಹೋಲಿಸಿ ನೋಡಬೇಕೆನಿಸುತ್ತದೆ. ಇಲ್ಲಿನ ಕಾವೇರಿಗೆ ಪಿಂಜರ್ ಕಾದಂಬರಿಯ ನಾಯಕಿಯ ನೋವುಗಳಿರುವಂತಿಲ್ಲ. ಆದರೆ ಕಾವೇರಿಯೂ ತನ್ನ ತಾಯಿಯನ್ನು ಒಮ್ಮೆ ಕಂಡು ಮಾತನಾಡಲು ಬಯಸುತ್ತಿದ್ದಾಳೆ. ಆದರೆ ಅವಳಿಗೆ ಇಲ್ಲಿನ ನಿರೂಪಕನೂ ಸೇರಿದಂತೆ ಯಾರದೂ ಸಹಾನುಭೂತಿಯಾಗಲೀ, ಸಾಂತ್ವನವಾಗಲೀ ಸಿಗುವಂತಿಲ್ಲದಿರುವುದು ವಿಚಿತ್ರವಾಗಿದೆ. ಅವರ ವಂಶದ ಪರಂಪರೆಯೇ ಹಾಗಲ್ಲವೆ ಎನ್ನುವ ನಿರೂಪಕನ ತಾಯಿಯ ಮಾತುಗಳು ಮತ್ತು ಕಾವೇರಿಯ ವರ್ತನೆಗೆ ಅವಳ ಹಿನ್ನೆಲೆಯೇ ಸಮರ್ಥನೆ ಎಂಬಂತೆ ನಿರೂಪಣೆಯೂ ಇರುವುದು ಈ ಮಾತನ್ನು ಪುಷ್ಟೀಕರಿಸುತ್ತದೆ.

ಅಡವಿ ಕತೆ ನಿಜಕ್ಕೂ ಹೊಸತನ ಮತ್ತು ವಿಶಿಷ್ಟತೆಯಿಂದ ಗಮನ ಸೆಳೆಯುತ್ತದೆ. ಅಡವಿಯ ಪಾತ್ರ ಚಿತ್ರಣದಲ್ಲೇ ಆ ಪಾತ್ರದ ಬಂಡಾಯ ಗುಣ, ಬದುಕಿನ ಕುರಿತ ನಿಲುವು, ಛಲ ಮತ್ತು ಸ್ವಾತಂತ್ರ್ಯದ ಹಂಬಲ ಸೇರಿಕೊಂಡು ಬಂದಿವೆ. ಪಾತ್ರವೇ ಕಥಾನಕವಾಗಿರುವ ಕೌತುಕ ಇದು. ತಾಯಿಯ ಕಾಯಿಲೆ ವಾಸಿಯಾಗುವುದಕ್ಕಾಗಿ ಹೇಳಿಕೊಂಡ ಹರಕೆ ತಾಯಿಯನ್ನು ಕಾಪಾಡಿತು ಎನ್ನುವುದು ಒಂದು. ಅದರ ದುರ್ಲಾಭ ಪಡೆಯುತ್ತಿರುವ ಆಚಾರ್ಯರಿಗೆ ಒಂದರ್ಥದಲ್ಲಿ ಅವನನ್ನು ತಮ್ಮಲ್ಲೆ ದಾಸ್ಯಕ್ಕಿರಿಸಿಕೊಂಡಿರುವುದೇ ತಮ್ಮ ಹಾಸಿಗೆ ಹಿಡಿದ ಸ್ಥಿತಿಗೆ ಕಾರಣವಿರಬಹುದೇ ಎನ್ನುವ ಪಾಪಪ್ರಜ್ಞೆ ಕಾಡುವುದು ಇನ್ನೊಂದು. ಇಲ್ಲೇ ಅಡವಿ ತಾನು ಹರಕೆ ತೀರಿಸದಿರುವುದಕ್ಕೆ ಶಿಕ್ಷೆಯಾಗುತ್ತಿರುವುದು ತನಗಲ್ಲ, ತನ್ನ ಬಗ್ಗೆ ಅಂಥ ಹರಕೆ ಹೊರಲು ತಾಯಿಯನ್ನು ಪ್ರೇರೇಪಿಸಿದ ಆಚಾರ್ಯರಿಗೆ ಅನಿಸುವುದು ಕತೆಯ ಇನ್ನೊಂದು ಆಯಾಮ. ಇಲ್ಲಿ ಬೆಕ್ಕಿನ ಸಂಸಾರದ, ಕನಸುಗಳ ವಿವರಗಳೂ ಇವೆ. ಆದಾಗ್ಯೂ ಕತೆ ಮೆಚ್ಚುಗೆಯಾಗುವುದು ಅಡವಿಯ ಪಾತ್ರದ ವಿಶಿಷ್ಟತೆಗಾಗಿಯೇ.

ಅಧೋಮುಖ ಕತೆ ಒಂದು ರೀತಿಯಲ್ಲಿ ಸಂಯೋಗ ಕತೆಯ ಇನ್ನೊಂದು ಆವೃತ್ತಿಯಂತಿದೆ. ಕತೆಯ ಕೊನೆಯಲ್ಲಿ ಬರುವ ಒಂದು ಪರಿಚ್ಛೇದ "ಒಂದು ಲೆಕ್ಕದಲ್ಲಿ ತಂದೆ ಮಗನಾಗುವ ಸೂರಿಭಟ್ಟರು ಮತ್ತು ಗಣಪು ಕೂಡಿ ಹೆಸರಿಗೆ ಮಾತ್ರಾ ತಂದೆಯಾದ ಮಾಧವನ ಶ್ರಾದ್ಧವನ್ನು ಮಾಡುತ್ತಾರೆ. ಪಿತೃಗಳಿಗೆ ನೈವೇದ್ಯ ಮಾಡುವ ಪಿಂಡಾನ್ನವನ್ನು ಶೀಲಗೆಟ್ಟ ಸರಸಿ ಮಾಡಿದ್ದಾಳೆ" ಎನ್ನುವ ಮಾತು ಈ ಕತೆಯ ಎಲ್ಲವನ್ನೂ ವಾಚ್ಯಗೊಳಿಸುವುದನ್ನು ಬಿಟ್ಟರೆ ಕತೆ ತನ್ನ ವಿವರಗಳಲ್ಲಿ ಎಲ್ಲವನ್ನೂ ಕ್ರಮೇಣ ಬಿಚ್ಚಿಡುತ್ತ ತೆರೆದುಕೊಳ್ಳುವ ರೀತಿ ಮನಸೆಳೆಯುವಂತಿದೆ.

ಆಕ್ರಮಣ ಕತೆಯೇ ಮುಂದೆ ಕೇತಕಿಯ ಬನ ಕಾದಂಬರಿಗೆ ಪ್ರೇರಣೆಯಾದಂತಿದೆ. ಕತೆಯ ಪ್ರಧಾನ ಧಾರೆ ಕೌಟುಂಬಿಕ ಕಲಹ, ಆಸ್ತಿಯೇ ಮೂಲವಾದ ಜಿದ್ದು ಅನಿಸಿದರೂ ಎಲ್ಲೋ ಒಂದು ಕಡೆ ಅದೆಲ್ಲ ಕೊನೆಯಾದರೆ ಒಳ್ಳೆಯದು ಎನ್ನುವ ಜೀವನದೃಷ್ಟಿ ಮೂಡುವ ಬೆಳವಣಿಗೆಯೊಂದು ಇಲ್ಲಿನ ಕಥಾನಕದಲ್ಲಿ ಕಂಡುಬರುವ ವಿಧಾನ ತುಂಬ ಪ್ರಬುದ್ಧವಾದದ್ದು. ಇದೇ ಕತೆಯ ಯಶಸ್ಸಿಗೆ ಕಾರಣವೆನಿಸುತ್ತದೆ. ಒಂದರ್ಥದಲ್ಲಿ ಸತೀಶ ತಾನು ಕಲಿಯಬೇಕು, ಕಲಿತು ದೊಡ್ಡ ಮನುಷ್ಯನಾಗಿ ಚಂದ್ರಪ್ಪ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಬೇಕು ಎಂದೇ ವಿದ್ಯೆಯ ಬೆನ್ನುಹತ್ತಿದವ. ಆದರೆ ಆ ವಿದ್ಯೆ ಅವನಲ್ಲಿ ತಮಸ್ಸನ್ನು ಕಳೆದು ಸತ್ ಅನ್ನು ಜಾಗೃತಗೊಳಿಸುವುದು ಕಥಾನಕದ ಒಡಲಿನಲ್ಲಿ ಮೈತಳೆದ ಪರಿ ಚೆನ್ನಾಗಿದೆ.

ದೊಡ್ಡವರ ನಡುವೆ ಕತೆ ಕಟ್ಟಿಕೊಡುವ ಒಂದು ಜಗತ್ತೇ ಇಲ್ಲಿನ ಕಥಾನಕಕ್ಕಿಂತ ಸುಂದರವಾಗಿರುವುದು ಗಮನಾರ್ಹ. ಬಾಲ್ಯದ ಅಷ್ಟೇನೂ ಮುಗ್ಧವಲ್ಲದ ವಯಸ್ಸಿನ ಪ್ರಜ್ಞೆಯಲ್ಲಿ ನಿರೂಪಿತವಾಗಿರುವ ಈ ಕತೆಯಲ್ಲಿ ಮಾಸ್ತರ ಮತ್ತು ಸಾವಿತ್ರಿಯ ಸಂಬಂಧಕ್ಕಿಂತ ಮೂವರು ಅಕ್ಕಂದಿರ ಹರೆಯದ ಆಸೆ, ಕನಸು, ನಿರೀಕ್ಷೆಗಳು ಅವರನ್ನು ಆಡಿಸುವ ಬಗೆ ಎಷ್ಟು ಸೂಕ್ಷ್ಮವಾಗಿ, ನವಿರಾಗಿ ಬಂದಿದೆ ಎಂದರೆ ಕತೆಯ ಬಗ್ಗೆ ನಮಗೇ ಅರಿವಾಗದ ಒಂದು ಮೋಹ ಹುಟ್ಟಿಕೊಂಡು ಬಿಡುತ್ತದೆ!

ಸನ್ನಿವೇಶ ಕಥೆಯಲ್ಲಿ ಸೂಕ್ಷ್ಮವಾಗಿ ಒಂದು ತುಲನಾತ್ಮಕ ವಿಶ್ಲೇಷಣೆ ನಡೆದಿದೆ. ಗುಣಿಮಾಸ್ತರ ಯಾವುದೋ ಒಂದು ಸ್ತರದಲ್ಲಿ ವಿಠೋಬ, ಅವನ ಬದುಕು, ಅವನ ಸಂಸಾರ, ಅದರ ವೈಫಲ್ಯ ಇತ್ಯಾದಿಗಳಲ್ಲೂ, ಇಡೀ ಊರಿನಲ್ಲಾಗುತ್ತಿರುವ ಬದಲಾವಣೆಯ ಸಂಚಲನಗಳೆಲ್ಲವೂ ಸೇರಿ ಜನರಲ್ಲಿ ಅವರ ಸ್ವಭಾವದಲ್ಲಿ ಹುಟ್ಟಿಸಿದ ಪರಿವರ್ತನೆಯಲ್ಲೂ ತಮ್ಮದೇ ಸಂಸಾರ, ವ್ಯಕ್ತಿತ್ವ, ಬದುಕಿನ ತುಲನೆ ನಡೆಸುತ್ತಿರುವಂತಿದೆ. ಅದಕ್ಕೆ ಸರಿಯಾಗಿ ಅವರು ವ್ಯವಸ್ಥೆಯದೇ ಭಾಗವಾಗಿರುವುದು, ಅವರಿಗಿಂತ ಅವರ ಮಡದಿ ಬಹುಬೇಗ ವ್ಯವಸ್ಥೆಯೊಳಗೆ ಸೇರಿಹೋದಂತಿರುವುದು ಗಮನಾರ್ಹವಾಗಿದೆ. ನಾಯಿ ಕೂಡ ತನ್ನ ನಿಯತ್ತನ್ನು ಬದಲಿಸುವ ಮಟ್ಟಕ್ಕೆ ಬದಲಾಗಿದೆ ಎನ್ನುವಲ್ಲಿ ವಿಠೋಬನ ಸಹಜ ಸರಳ ಬದುಕಿನ ಶೈಲಿಯನ್ನು ಮೆಚ್ಚಿಕೊಳ್ಳುವ ಮಾಸ್ತರರಿಗೆ ಮೂಕಪ್ರಾಣಿಯೊಂದರ ಸಹಜ ಸ್ವಭಾವದಲ್ಲಿನ ಈ ಬದಲಾವಣೆ ವಿಠೋಬನ ವ್ಯಕ್ತಿತ್ವಕ್ಕೆ ಸಂದದ್ದಿರಬಹುದೆಂಬ ಸತ್ಯ ದಕ್ಕದೇ ಹೋಗುವುದು ಮಾತ್ರ ವಿಪರ್ಯಾಸದಂತಿದೆ.

ಸಂಕಲನದ ಕತೆಗಳು ಇಷ್ಟವಾಗುವುದು ಅವುಗಳ ಜೀವನ ಪ್ರೀತಿಗಾಗಿ, ಸಹಜತೆಗಾಗಿ ಮತ್ತು ಮುಖ್ಯವಾಗಿ ಬಳಗಾರರು ಈ ಕತೆಗಳನ್ನು ಕಟ್ಟಿಕೊಡುವಲ್ಲಿ ಸದಾ ಮಿಡಿಯುವ ಅವರ ಅನನ್ಯ ಸಮಷ್ಟಿ ಪ್ರಜ್ಞೆ ಪ್ರತಿಯೊಂದು ಕತೆಯಲ್ಲೂ ಒಡಮೂಡಿ ಬಂದಿರುವ ಬೆರಗಿಗಾಗಿ.

1 comment:

Meera said...

ಆತ್ಮೀಯ ನರೇಂದ್ರ, ಓದುವ ಹವ್ಯಾಸದಲ್ಲಿನ ನಿಮ್ಮ ಲೇಖನಗಳು ನಿಜಕ್ಕೂ ಓದಿಗೆ ಪ್ರೇರಣೆ ನೀಡಿದೆ. ನಾನು ಓದಿದ್ದು ತುಂಬಾ ಕಡಿಮೆ, ಇನ್ನು ಮೇಲೆ ಸಾಧ್ಯವಾದಷ್ಟು ಓದಬೇಕು ಎಂದುಕೊಂಡಿದ್ದೇನೆ.