Saturday, February 14, 2009

ಶ್ರೀಧರ ಬಳಗಾರ ಅವರ ಎರಡನೆಯ ಕಥಾ ಸಂಕಲನ ಮುಖಾಂತರ (1998)

ಶ್ರೀಧರ ಬಳಗಾರ ಅವರ ಕತೆಗಳನ್ನು ಓದುವಾಗ ಮೊದಲಿಗೆ ಗಮನ ಸೆಳೆದಿದ್ದು ನಾವು ಇದುವರೆಗೆ ಸಣ್ಣಕತೆಯ ಆಕೃತಿ, ವಸ್ತು ಮತ್ತು ತಂತ್ರಗಳ ಕುರಿತಂತೆ ನಂಬಿರುವ, ನಿರೀಕ್ಷಿಸುವ ಎಲ್ಲವನ್ನು ಪೂರ್ತಿಯಾಗಿ ನಿರಾಕರಿಸಿದಂತಿರುವ ಮತ್ತು ನಿರಾಕರಿಸುವುದರ ಮೂಲಕವೇ ಹೊಸ ಹಾದಿಯೊಂದನ್ನು ತೆರೆಯುವ ವಿಶಿಷ್ಟವಾದ ಕತೆಹೇಳುವ ಒಂದು ಕ್ರಮ. ಇದು ಬಳಗಾರರದ್ದೇ ಬಳಗಾರರಿಗೇ ವಿಶಿಷ್ಟವಾದದ್ದು.

ಮೊದಲಿಗೆ ಇವರ ನಿರ್ದಿಷ್ಟ ಕತೆಯ ವಸ್ತುವನ್ನು ಗಮನಿಸುತ್ತ ಹೋದರೆ, ಇವರ ಪ್ರತಿಯೊಂದು ನಿರ್ದಿಷ್ಟ ಕತೆಯ ಒಟ್ಟಾರೆ ಧ್ವನಿ, ಉದ್ದೇಶ ಅಥವಾ ಇವರು ಕತೆಯ ಮೂಲಕ ಹೇಳುತ್ತಿರುವುದೇನನ್ನು ಎನ್ನುವುದನ್ನು ಗಮನಿಸುತ್ತ ಹೋದರೆ, ಬಳಗಾರರ ಕತೆಗಳಿಗೆ ನಿರ್ದಿಷ್ಟ ಅಜೆಂಡಾ ಇಲ್ಲದಿರುವುದು (ನವಿಲುದೀಪ ಮತ್ತು ಕೊನೆಗಾಲ ಕತೆಗಳನ್ನು ಹೊರತುಪಡಿಸಿ) ಗಮನಕ್ಕೆ ಬರುತ್ತದೆ. ಹಾಗಾಗಿ ಈ ಕತೆಗಳು ತೊಡಗಿದಾಗಲೇ ನಮಗೆ ಈ ಕಥಾನಕದ ಆತ್ಮಗತ ಗಮ್ಯವೊಂದರ ಸುಳಿವು, ಹೊಳಹು ಸಿಗುವುದಿಲ್ಲ. ಹಾಗೆಯೇ, ಕತೆಯ ಓದು ಮುಗಿದ ಬಳಿಕವೂ ಬಳಗಾರರ ಕತೆ ಇಂಥದ್ದರ ಕುರಿತಾಗಿದೆ ಎಂದು ಸರಳಗೊಳಿಸಿ ಹೇಳುವುದು ಕಷ್ಟವಾಗುತ್ತದೆ. ಸಾಧಾರಣವಾಗಿ ಸಣ್ಣಕತೆಯೊಂದರ ಕಥಾನಕ, ವಸ್ತುವಿಗೆ ಇರುವ ಮೊನಚು ಬಳಗಾರರ ಕಥೆಗಳಲ್ಲಿ ತೀವೃವಾಗಿ ಇರುವುದು ಗಮನಕ್ಕೆ ಬರುವುದಿಲ್ಲ. ಬದಲಿಗೆ, ಕಾದಂಬರಿಯೊಂದರ ಸಾಮಾನ್ಯ ಲಕ್ಷಣವಾದ ವಿಶಾಲ ಹರಹು, ಸಮಷ್ಟಿಯನ್ನು ಒಳಗೊಂಡು ವಿಸ್ತಾರಗೊಳ್ಳುವ ತುಡಿತವೇ ಹೆಚ್ಚಾಗಿ ಕಂಡುಬರುತ್ತದೆ. ತಮ್ಮದೇ ಆದ ವಿವರಗಳಲ್ಲಿ ಮೂರ್ತಗೊಳ್ಳುವ ಒಂದು ಪುಟ್ಟ ಜಗತ್ತಿನಲ್ಲಿ ಈ ಕತೆಗಳು ಮೈತಳೆಯುವುದು ಬದುಕನ್ನು ಗಮನಿಸುವ ಬಳಗಾರರ ಗ್ರಹಿಕೆಯ ಕ್ರಮದಲ್ಲಿ. ಈ ಗ್ರಹಿಕೆಗಳು ಇನ್ನೇನು ಒಂದು ಆಕೃತಿಯ ಆಕಾರಕ್ಕೆ ಬಂತೆನ್ನುವಾಗ ಕಥಾನಕವೂ ಕೊನೆಯೆನ್ನಬಹುದಾದ ಒಂದು ನಿಲುಗಡೆಯನ್ನು ಕಂಡುಕೊಳ್ಳುತ್ತದೆ. ನಿಲ್ಲುವುದು ಕಥಾನಕ, ಬದುಕಲ್ಲ ಎಂಬ ಸ್ಪಷ್ಟ, ಪ್ರಜ್ಞಾಪೂರ್ಣ ಅರಿವಿನಲ್ಲೇ ಈ ನಿಲುಗಡೆಯ ಅರ್ಥ ಕೂಡಾ ಹೊಳೆಯಬೇಕು. ಆಗಲೇ, ಅದುವೇ ಕಥಾನಕದ ಸಾರ್ಥಕ್ಯ ಎನ್ನುವ ನಿಲುವಿನಲ್ಲಿ ಬಳಗಾರರ ಕತೆಗಳು ನಿಲ್ಲುತ್ತವೆ.

ಮುಖಾಂತರ ಕತೆಯಲ್ಲಿ ನರಸಿಂಹ ಉಪಾಧ್ಯಾಯರು, ಗಣಪಯ್ಯ, ಭಾಗೀರಥಿ, ಮಂಜುನಾಥ ಮತ್ತು ನಾಗಜ್ಜಿಯರ ವ್ಯಕ್ತಿತ್ವಗಳು ಅನಾವರಣಗೊಳ್ಳುವ ಮೂಲಕವೇ ಇಲ್ಲಿ ಕಥಾನಕ ತೆರೆದುಕೊಳ್ಳುತ್ತ ಹೋಗುತ್ತದೆ. ಬಳಗಾರರ ಹೆಚ್ಚಿನ ಕಥೆಗಳ ತಂತ್ರ ಕೂಡ ಇದೇ. ಪಾತ್ರಗಳು, ಊರು, ಜನಜೀವನದ ಮೂಲಕ ಕಥಾನಕ ಬೆಳೆಯುತ್ತದೆ, ಅರಳುತ್ತದೆ. ಒಂದು ಸಂದಿಗ್ಧವನ್ನು ಈ ಕತೆಯಲ್ಲಿ ಬಿಡಿಸುವ ಪ್ರಯತ್ನವಿದೆ. ಒಂದು ಸ್ತರದಲ್ಲಿ ಅದು ನರಸಿಂಹ ಉಪಾಧ್ಯಾಯರು ಮತ್ತು ಗಣಪಯ್ಯನ ಋಣದ ಹಂಗು ಒಡ್ಡಿದ ಸಂದಿಗ್ಧ. ಇನ್ನೊಂದು ಸ್ತರದಲ್ಲಿ ಶುದ್ಧ ಸ್ನೇಹಾಂತಃಕರಣದ ಹಂಗು ಒಡ್ಡಿದ ಸಂದಿಗ್ಧ. ಮೂಲಭೂತವಾಗಿ ಹಣ ಮತ್ತು ಮನುಷ್ಯ ಸಂಬಂಧಗಳೆರಡರ ನಡುವಿನ ಹೊಯ್ದಾಟ. ಈ ಋಣಸಂದಾಯ, ಹಂಗುಗಳ ಚುಕ್ತಾ ವ್ಯವಹಾರ ಸೂಕ್ಷ್ಮ ಮನಸ್ಸಿಗೆ ಒಂದು ಹಿಂಸೆಯಷ್ಟೇ ಆಗಬಹುದಾದ್ದು. ಈ ಹಿಂಸೆಯನ್ನು ಮೀರುವುದಕ್ಕೆ ನಮಗಿರುವ ಹಾದಿ ಯಾವುದು? ಆತ್ಮೀಯ ಮನುಷ್ಯ ಸಂಬಂಧಗಳನ್ನು ಕೂಡ ವ್ಯಾವಹಾರಿಕವಾಗಿಯೂ ಕಾಣಬೇಕಾಗುವ ಹಣಕಾಸಿನ ಮೇಲೆಯೇ ನಿಂತಿರುವ ಜಗತ್ತಿನ ಅನಿವಾರ್ಯತೆಯನ್ನು ಮನುಷ್ಯ ಮೀರುವುದಕ್ಕೆ ಯಾವಾಗ ಸಾಧ್ಯವಾಗುತ್ತದೆ? ಕಥೆ ಈ ಸಂದಿಗ್ಧವನ್ನು ಎದುರಿಸುತ್ತಲೇ ತನ್ನ ತೆಕ್ಕೆಯೊಳಕ್ಕೆ ಇನ್ನೂ ಅನೇಕ ಸಂಗತಿಗಳನ್ನು ಸೆಳೆದುಕೊಳ್ಳುವುದು ಗಮನಾರ್ಹ. ಬಳಗಾರರ ಎಲ್ಲ ಕತೆಗಳ ವಿಚಾರದಲ್ಲೂ ಇದು ಘಟಿಸುತ್ತದೆ.

ನರಸಿಂಹ ಉಪಾಧ್ಯಾಯರನ್ನು ಒಬ್ಬ ಮಹಾನ್ ಆದರ್ಶವಾದಿ, ಉದಾರಿ, ಮಾನವತಾವಾದಿ ದೇವತಾ ಪುರುಷನನ್ನಾಗಿ ಚಿತ್ರಿಸುತ್ತ ಹೋಗುವುದು ಇಲ್ಲಿ ಕಷ್ಟವಿರಲಿಲ್ಲ. ಹಾಗೆ ಮಾಡಿದ್ದರೆ ಬಳಗಾರರ ಕೆಲಸ ಸುಲಭವಿರುತ್ತಿತ್ತೋ ಏನೊ. ಬಳಗಾರರಿಗೆ ತಮ್ಮ ಕಥಾನಕಕ್ಕೆ ಯಾವುದೇ ಒಂದು ಸಿದ್ಧ ಅಜೆಂಡಾದ ಹಂಗಿಲ್ಲದಿರುವುದು ಮುಖ್ಯವಾಗುವುದು ಇಲ್ಲೇ. ಗಣಪಯ್ಯ ಕೂಡ ಹಣದ ಬಗ್ಗೆ ತಪ್ಪಿಯೂ ಯೋಚಿಸದ ಬರೇ ಮನುಷ್ಯ ಸಂಬಂಧಗಳ ಕುರಿತೇ ಭಾವುಕನಾಗಿ ತರ್ಕಿಸುವ ಭಾವಜಗತ್ತಿನ ಮಾದರಿಪುರುಷನೂ ಆಗುವುದಿಲ್ಲ ಬಳಗಾರರ ಕೈಯಲ್ಲಿ. ಭಾಗೀರಥಿ ಮತ್ತು ನಾಗಜ್ಜಿ ಈ ಎರಡು ಸಾಧ್ಯತೆಗಳ ಪರ್ಯಾಯವನ್ನು ಮೀಟುವುದು ಗಮನಿಸಬೇಕು. ಗಣಪಯ್ಯನ ಹೆಂಡತಿ ಭಾಗೀರಥಿ ಬದುಕಿಗೆ ಹಣದ ಅಗತ್ಯ ಏನು ಎಂಬುದನ್ನು ಎಲ್ಲ ಭಾವುಕ ನಿಲುವುಗಳಾಚೆ ಕೇವಲ ತರ್ಕ ಮತ್ತು ಲೆಕ್ಕಾಚಾರದಿಂದ ನೋಡಬಲ್ಲವಳು. ಅವಳ ವರ್ತನೆಗೆ ಅವಳದೆ ಆದ ಕಾರಣಗಳಿವೆ. ಹಾಗೆಯೇ ನರಸಿಂಹ ಉಪಾಧ್ಯಾಯರ ತಾಯಿ ನಾಗಜ್ಜಿಗೆ ಕೊನೆಗೂ ಮುಖ್ಯವಾಗಿ ಕಂಡಿದ್ದು ಗೋದಾನಕ್ಕೆ ಆಕಳು ಇನ್ನೂ ಸಿಕ್ಕಿಲ್ಲ ಎಂಬುದು. ಗಣಪಯ್ಯನನ್ನು ತನ್ನ ಮಗನಿಂದ ಬೇರೆಯಾಗಿ ಕಾಣಲಾರಳು ಅವಳು. ಅವಳಿಗೆ ಋಣದ, ಹಂಗಿನ ಅಂತರಗಳಿಲ್ಲ ಅವನ ಮಟ್ಟಿಗೆ. ನಲವತ್ತು ದಾಟಿದ ವಿದುರನಿಗೆ ತನ್ನ ಯೌವನವನ್ನು ಒಪ್ಪಿಸಿದ ಭಾಗೀರಥಿಯೂ, ಐದನೆಯ ವಯಸ್ಸಿನಲ್ಲಿ ಮದುವೆಯಾಗಿ ಅರ್ಧಪ್ರಾಯದಲ್ಲಿ ವಿಧವೆಯಾದ ನಾಗಜ್ಜಿಗೂ ನಡುವೆ ಒಂದು ಸೂಕ್ಷ್ಮವಾದ ಸಮಾನ ತಂತುವಿದೆ ಕಥೆಯಲ್ಲಿ.

ಬಳಗಾರರ ಲೇಖನಿಗೆ ಆತುರವಿಲ್ಲ, ದುಡುಕಿಲ್ಲ. ಅದು ಬದುಕನ್ನು ಅದರ ಸಮಗ್ರತೆಯಲ್ಲಿ ಗ್ರಹಿಸುವುದಕ್ಕೆ ತುಡಿಯುವ ಹೊತ್ತಿನಲ್ಲೇ ವಿವರಗಳ ಆಯ್ಕೆ ಮತ್ತು ಸಂಯೋಜನೆಯಲ್ಲೂ ಅನಗತ್ಯ ವಾಚಾಳಿಯಾಗದ ಸಂತುಲನೆಯನ್ನು ಕಾಯ್ದುಕೊಳ್ಳುವುದು ವಿಶೇಷ ಗಮನಕ್ಕೆ ಅರ್ಹವಾದ ಗುಣವಾಗಿದೆ. ಸಹಜತೆ ಮತ್ತು ನೈಜ ವಾಸ್ತವ ಚಿತ್ರಣ ಇವರ ಕತೆಗಾರಿಕೆಯ ವಿಶ್ವಾಸಾರ್ಹತೆಗೆ ಕಾರಣವಾದಂತೆಯೇ ಬಳಗಾರ ಚಿತ್ರಿಸುವ ಟಿಪಿಕಲ್ ಹಳ್ಳಿಗಾಡಿನ ಕಥಾಜಗತ್ತು ಓದುಗನಿಗೆ ಥಟ್ಟನೇ ಆಪ್ತವಾಗುವ ಲಯಗಾರಿಕೆಯನ್ನೂ ಹೊಂದಿದೆ. ಬಹುಷಃ ಮೃಣ್ಮಯ ಎಂಬ ಒಂದೇ ಒಂದು ಕತೆಯನ್ನು ಹೊರತು ಪಡಿಸಿದರೆ ಬಳಗಾರರ ಯಾವುದೇ ಕತೆಯ ಜಗತ್ತು ಉತ್ತರ ಕನ್ನಡದ ಹಳ್ಳಿಗಾಡನ್ನು ಬಿಟ್ಟು ಹೊರಗೆ, ಅದರಲ್ಲೂ ಬೆಂಗಳೂರಿಗೆ ವಿಸ್ತರಿಸಿದ್ದೇ ಇಲ್ಲವೇನೋ.

ಬಳಗಾರ ಕಥೆಯ ನಡೆಯನ್ನು ಮುಂದಕ್ಕೆ ಚಲಿಸುತ್ತಲೇ ತಮ್ಮ ವಿವರಗಳಲ್ಲಿ ಇಡೀ ಒಂದು ಜನಜೀವನದ ಶೈಲಿಯನ್ನು, ಪರಿಸರವನ್ನು, ಬದುಕನ್ನು ಕಟ್ಟಿಕೊಡುವುದರ ಒಂದು ಉದಾಹರಣೆ ಗಮನಿಸಿ:

"ಬಿಸಿಲಲ್ಲಿ ಡಾಂಬರು ರಸ್ತೆಗುಂಟ ಹೊಡೆದುಕೊಂಡು ಬರುತ್ತಿರುವ ಗೋವನ್ನು ಹಿಂದೆ ಬಿಟ್ಟು, ಜೋಳಿಗೆಯಲ್ಲಿ ಒಗರು ಪರಿಮಳದ ಗಿಡಮೂಲಿಕೆಯ ಸರೀಸೃಪಗಳಂತಹ ಬೇರುಗಳನ್ನು ಹಾಕಿಕೊಂಡು ಅತ್ಯಂತ ಎಚ್ಚರಿಕೆಯಿಂದ ಗ್ಲಾಸು ಹಾಕಿಸಿದ ಶನಿದೇವರ ಫೋಟೋವನ್ನು ತೊಡೆಯ ಮೇಲಿರಿಸಿಕೊಂಡು ಊರ ಬಸ್ಸಿನಲ್ಲಿ ಕುಳಿತಾಗಲೇ ಗಣಪಯ್ಯನಿಗೆ ಗೆಳೆಯನ ನಿಧನದ ವಾರ್ತೆ ಸಿಕ್ಕಿದ್ದು."

ಇದನ್ನು ಓದುವಾಗಲೇ ಡಾಂಬರು ರಸ್ತೆಯ ಬಿಸಿಲಲ್ಲಿ ಯಾರೋ ನಡೆಸಿಕೊಂಡು ಬರುತ್ತಿರುವ ಆ ಗೋವು ನಮ್ಮ ಮನಸ್ಸಿಗೆ ಬರುತ್ತದೆ. ಜೋಳಿಗೆಯ ಗಿಡಮೂಲಿಕೆಯ ಬೇರುಗಳು ಆಗಲೇ ತೀರಿ ಹೋಗಿರುವ ಉಪಾಧ್ಯಾಯರ ಚಿಕಿತ್ಸೆಗೆ ಎಂದೇ ಕೊಂಡಿದ್ದು. ಇನ್ನು ಶನಿದೇವರ ಫೋಟೋವಂತೂ ತನ್ನದೇ ಅದ ಹಿನ್ನೆಲೆಯುಳ್ಳದ್ದು. ಕಲಘಟಗಿಯಿಂದ ಊರಿಗೆ ಹೊರಟು ಬಸ್ಸಿನಲ್ಲಿ ಕುಳಿತ ಗಣಪಯ್ಯನ ಚಿತ್ರ ಇಲ್ಲಿ ಪೂರ್ತಿಯಾಗುವಾಗಲೇ ನಿಧನದ ವಾರ್ತೆ ಅವನನ್ನು ತಲುಪಿದ ಸನ್ನಿವೇಶದ ಚಿತ್ರವೂ ಇದೆ. ಇದೆಲ್ಲದರ ಆಚೆ ಗಣಪಯ್ಯ ತಲುಪಲಿರುವ ಊರಿನ ಚಿತ್ರವೂ ಸುರುವಾಗಿದೆ. ಈ ಚಿತ್ರವೇ ಇಡೀ ಕಥಾನಕದ ಚೌಕಟ್ಟಾಗಿ ಮುಂದುವರಿಯುತ್ತದೆ. ಊರಿನ ದೇವಸ್ಥಾನ, ಗದ್ದೆ, ಬಯಲು, ಮನೆಯ ಪರಿಸರ, ಸಲಿಲ ಜಲಧಾರೆ, ಗರುಡಪುರಾಣ, ಸೂತಕದ ವಾತಾವರಣ ಎಲ್ಲವೂ ಸೇರಿ ಒಂದು ಜೀವಂತ ಜಗತ್ತು ಉಸಿರಾಡತೊಡಗುತ್ತದೆ. ಈ ಎಲ್ಲದರ ನಡುವೆ ಕಥಾನಕ, ವಸ್ತು, ತಂತ್ರ, ಧ್ವನಿ ಎಲ್ಲವೂ ಗೌಣವಾಗಿ ಬಿಡುತ್ತವೆ!

ಮರವಾಗಿ ನಿಂತವನು ಕತೆಯ ಬಂಡು ಪ್ರಕೃತಿ-ಪರಿಸರ-ಕಾಡುಗಳೆಲ್ಲದರ ಪ್ರತೀಕದಂತಿದ್ದಾನೆ. ಇವನ ಬದುಕಿನ ಸಹಜ ಆದರೆ ವಿಲಕ್ಷಣ ಏರಿಳಿತಗಳು ಕೂಡ ಅವನ್ನೇ ಧ್ವನಿಸುತ್ತವೆ. ಕೊಪ್ಪದ ನ್ಯಾಮ ಬಂಡು, ಆನೆಹೊಂಡದ ನರಸಪ್ಪ, ಮ್ಯಾಂಗನೀಸ್ ಗಣಿಗಾರಿಕೆಯಿಂದ ಬೋಳಾಗುತ್ತಿರುವ ಕಾಡು, ವಿಶಿಷ್ಟವಾದ ಗಂಗೆ ಮುಂತಾದ ಪಾತ್ರಗಳು ಮನಸ್ಸಿನಲ್ಲಿ ಉಳಿಯುವಂಥ ಚಿತ್ರಣ ಬಳಗಾರರ ಕಥಾ ನಿರೂಪಣೆಯ ವೈಶಿಷ್ಟ್ಯ. ಯಲ್ಲಮ್ಮನ ಮಣೆ ಎತ್ತಿದ್ದು ತಪ್ಪಾಯಿತೇನೋ ಎಂದು ತನ್ನ ಕಾಯಿಲೆಯ ಕುರಿತು, ಜೈಲಿನ ವಾಸದ ಕುರಿತು ಪಶ್ಚಾತ್ತಾಪ ಪಡುವ ಬಂಡು, ಗಣಿಗಾರಿಕೆಯವರು ಕಟ್ಟಿಸುವ ಮಾರುತಿ ದೇವಸ್ಥಾನ ಎಲ್ಲವೂ ಕಥೆಯ ಸಾಧ್ಯತೆಗಳನ್ನು, ಜಗತ್ತನ್ನು ವಿಸ್ತರಿಸುತ್ತಲೇ ಹೋಗುತ್ತವೆ.

ಚರಿತ್ರೆ ಕತೆಯನ್ನು ಓದುವಾಗ ಕಾರಂತರ ಚೋಮನ ದುಡಿಯ ಚೋಮ ನೆನಪಾಗುತ್ತಾನೆ. ಇಲ್ಲಿ ಹುಲಿಯನಿಗೆ ಅನಾಯಾಸ ಹೊಲ ಪ್ರಾಪ್ತಿಯಾಗುತ್ತದೆ. ಆದರೆ ಅವನು ಅದನ್ನು ಉಳುವುದೆ ಇಲ್ಲ. ಅವನ ಪರಿವಾರದಲ್ಲಿ ಗದ್ದೆಯ ಯಜಮಾನನಾಗುವುದು ಎಂದರೆ ಶ್ರೀಮಂತನಾಗುವುದು ಎಂದೇ ಅರ್ಥ. ಅದೂ ಅಲ್ಲದೆ, ಕಾಗದ ಪತ್ರ, ಕಾನೂನು, ಎಂದೆಲ್ಲ ಎದ್ದರೆ ಕೂತರೆ ಸರಕಾರ, ತಾಲ್ಲೂಕು ಕಚೇರಿಯ ಒಡನಾಟ ಎಂಬ ಕಲ್ಪನೆಯೇ ಅವನನ್ನು ಅಸ್ವಸ್ಥಗೊಳಿಸುತ್ತವೆ. ಇವೆಲ್ಲ ತನ್ನ ಗುಲಾಮತನದ ವಿಚಿತ್ರ ನೆಮ್ಮದಿ, ಸುಖವನ್ನು ಹಾಳುಗೆಡಹುವುದಕ್ಕೇ ಬಂದಂತೆ ಕಾಣುವ ಅವನು ಗದ್ದೆಯ ಯಜಮಾನಿಕೆಯಿಂದ ಪಾರಾಗುವುದಕ್ಕೇ ಒದ್ದಾಡ ತೊಡಗುತ್ತಾನೆ! ಇಡೀ ಕತೆ ಸೂಕ್ಷ್ಮವಾಗಿ ಕಾಣಿಸುವುದನ್ನು ಬಳಗಾರ ಅಷ್ಟೇ ನವಿರಾಗಿ ಚಿತ್ರಿಸುತ್ತಾರೆ.

ಗಂಜಿಗದ್ದೆ ಕತೆಯಲ್ಲಿ ಅವಿಭಕ್ತ ಕುಟುಂಬವೊಂದು ಒಡೆದ ನಂತರದ ತಲ್ಲಣಗಳಿದ್ದರೂ ಬಳಗಾರರ ಎಲ್ಲ ಕತೆಗಳಂತೆಯೇ ಇದೂ ತನ್ನ ವಸ್ತು,ಕಥಾನಕದ ಚೌಕಟ್ಟನ್ನು ಮೀರಿ ಇಲ್ಲಿನ ಬದುಕು ಅದರ ಸೂಕ್ಷ್ಮ ವಿವರಗಳ ಜೊತೆಗೇ ನಿಲ್ಲುತ್ತದೆ. ಕಾದಂಬರಿಯೊಂದರ ಅಧ್ಯಾಯವನ್ನು ಓದುತ್ತಿರುವ ಅನುಭವವಾದರೆ ವಿಶೇಷವಿಲ್ಲ. ಆದಾಗ್ಯೂ ಈ ಕತೆಯಲ್ಲಿ ಎರಡು ಬಹುಮುಖ್ಯವೆನಿಸುವ ಎಳೆಗಳಿವೆ. ಒಂದು ಪರಮಯ್ಯನ ಸೋಲು ಮತ್ತು ಶಾನುಭೋಗನೊಂದಿಗೆ ಬೆಳೆಯುವ ಅವನ ಪತ್ನಿ ಗೋದಾವರಿಯ ಸಂಬಂಧ, ಎಲ್ಲದರ ಒಟ್ಟು ಪರಿಣಾಮದಂತಿರುವ ಗಂಜಿಗದ್ದೆಯ ಅವಿಭಕ್ತ ಕುಟುಂಬದ ಅವನತಿ. ಇನ್ನೊಂದು ದಮ್ಮಿನ ಹೆಂಡತಿಯೊಬ್ಬಳು ಇರುತ್ತ ತಿಮ್ಮಣ್ಣನಂಥ ನಡುವಯಸ್ಸಿನವನಿಗೆ ಗೋದಾವರಿಯ ಮಗಳು ಗಾಯತ್ರಿಯನ್ನು ಮದುವೆ ಮಾಡಿಕೊಡುತ್ತಿರುವ ಸನ್ನಿವೇಶದ ಸಂದಿಗ್ಧ. ಇದಕ್ಕೆ, ಮಗಳ ಬದುಕಿನ ತಲ್ಲಣಗಳಿಗೆ, ತಾಯಿ ಗೋದಾವರಿಯ ಚಾರಿತ್ರ್ಯ ಕೂಡ ಕಾರಣವಾಗಿರುವುದರ ವಿಪರ್ಯಾಸ. ಈ ಸಂದಿಗ್ಧಕ್ಕೆ ಗೌರಜ್ಜಿ ಮತ್ತು ಗಾಯತ್ರಿ ಸ್ಪಂದಿಸುವ ರೀತಿಯೇ ಈ ಕತೆ ಎಬ್ಬಿಸುವ ತಲ್ಲಣಗಳ ಅಂತಃಸ್ಫೂರ್ತಿಯಾಗಿದ್ದು ಅದನ್ನು ಬಳಗಾರರು ಚಿತ್ರಿಸುವ ರೀತಿ ಕೂಡ ಮೆಚ್ಚುಗೆಗೆ ಕಾರಣವಾಗುತ್ತದೆ.

ಸಮುದ್ರ ಮತ್ತು ಸಾಂತಾ ಕತೆ ಸಾಂತಾ ರೋಡ್ರಿಗಸ್‌ರ ವ್ಯಕ್ತಿತ್ವವನ್ನು ಮತ್ತು ಸಮುದ್ರ ಕಿನಾರೆಯೊಂದಿಗೆ ತಳುಕು ಹಾಕಿಕೊಂಡಿರುವ ಊರಿನ ಚರಿತ್ರೆಯನ್ನು ಅನಾವರಣಗೊಳಿಸುತ್ತ ಹೋಗುತ್ತದೆ. ಇಲ್ಲಿ ಮುಖ್ಯವಾಗಿ ರೊಡ್ರಿಗಸ್‌ರನ್ನೂ, ಸಮುದ್ರ ಕಿನಾರೆಯ ಮಂದಿಯನ್ನೂ ಅನುಮಾನದಿಂದ, ಅಸಹ್ಯದಿಂದ, ವ್ಯಾಪಾರೀ ಮನೋಭಾವದಿಂದ ಮಾತ್ರ ಕಾಣುವುದರಾಚೆ ಇರುವ ಮಾನವೀಯ ಸಾಧ್ಯತೆಯೊಂದರ ಬಳಿಗೆ ಕತೆ ಹಂತ ಹಂತವಾಗಿ ನಿರೂಪಕನನ್ನೂ ಓದುಗರನ್ನೂ ಕರೆದೊಯ್ಯುವುದು, ಈ ಕಥಾನಕದ ಹದವಾದ ಲಯದ ಪಯಣವೇ ಒಂದು ವಿಶೇಷ.

ವಿಭಕ್ತ ಕತೆಯಲ್ಲಿ ಬರುವ ಬದುಕಿರುವ ಪಾತ್ರಗಳೆಲ್ಲ ಆತ್ಮಹತ್ಯಾತ್ಮಕ ಛಾಯೆಯಿಂದ ಭೀತ, ಭ್ರಾಂತ ಪ್ರೇತಕಳೆ ಹೊತ್ತಿದ್ದರೆ ಸತ್ತು ಹೆಣವಾಗಿ ಮಲಗಿರುವ ಚೈತ್ರ ಹೆಚ್ಚು ಜೀವಂತ ಎನಿಸುವುದು ಒಂದು ವಿಲಕ್ಷಣ ಸ್ಥಾಯೀಭಾವವಾಗಿ ಕತೆಯ ಉದ್ದಕ್ಕೂ ಕಾಡುತ್ತವೆ. ಇಲ್ಲಿ ಬರುವ ಅಣ್ಣನ ಪಾತ್ರ, ಆತನ ಹಿನ್ನಲೆ, ಹೆಂಡತಿಯನ್ನು ಅವನು ನಡೆಸಿಕೊಳ್ಳುವ ರೀತಿ ಮತ್ತು ಇತರರ ಬದುಕಿನ ಮೇಲೆ ನಡೆಸುವ ದಬ್ಬಾಳಿಕೆ ಯಾವುದಕ್ಕೂ ಪ್ರತಿರೋಧವೇ ಇಲ್ಲದಂತಿರುವುದು ಮತ್ತು ಚೈತ್ರಾಳ ಆತ್ಮಹತ್ಯೆಯೇ ಇದಕ್ಕೆಲ್ಲ ಉತ್ತರದಂತಿರುವುದು ವಿಚಿತ್ರ. ಹಾಗೆಯೇ ನಿರೂಪಕನ ಹಲುಬುವಿಕೆ ಯಾವ ಘಟ್ಟದಲ್ಲೂ ಘನವಾಗದೇ ಒಂದು ಅಪಸ್ವರದ ಆಲಾಪದಂತೆಯೇ ಕೊನೆಯಾಗುವುದೂ.

ಹುಡುಕಾಟ ಕತೆ ಮತ್ತೆ ಅವಿಭಕ್ತ ಕುಟುಂಬದ ಒಡಕು, ದಾಯಾದಿ ಜಗಳ ಮತ್ತು ದ್ವೇಷವೆಂಬ ನಿರಂತವಾದ ವ್ಯಸನದ ಕುರಿತಾಗಿದೆ. ಮೂವರು ಅಣ್ಣ ತಮ್ಮಂದಿರ ನಡುವಿನ ದಾಯದಿ ಜಗಳವೊಂದು ವಂಶ ಪಾರಂಪಾರಿಕವಾದದ್ದು ಮತ್ತು ಈ ದ್ವೇಷವೆಂಬ ವ್ಯಸನ ಎಷ್ಟು ರಕ್ತಗತ ಮತ್ತು ಪ್ರಕೃತಿ ಸಹಜ ಅಂಶವೆಂದರೆ ಅದನ್ನು ಮೀರುತ್ತೇನೆಂದು ಹೊರಟಷ್ಟೂ ಅದು ಬಿಸಿಲಿನ ಜೋಡಿ ನೆರಳು ಹಿಂಬಾಲಿಸುವಂತೆ ಹಿಂದೆಯೇ ಬರುವಂಥದ್ದು ಎಂಬ ಸತ್ಯವನ್ನು ಹೇಳುತ್ತ ಶ್ರೀಧರ ಬಳಗಾರರು ಇಲ್ಲಿ ಅಸಂಖ್ಯ ಪ್ರತಿಮೆಗಳನ್ನು, ವಿಲಕ್ಷಣ ವಿದ್ಯಮಾನಗಳನ್ನು ಕತೆಯ ಒಡಲೊಳಗೆ ತರುವ ಬಗೆಯೇ ಒಂದು ಬಗೆಯ ಮ್ಯಾಜಿಕಲ್ ರಿಯಲಿಸಂನ ಛಾಯೆ ಉಳ್ಳದ್ದು. ಶಿವಯ್ಯನ ಮಂಡಲ, ಗಣೇಶಪ್ಪನ ಬೆನ್ನಿಗೆ ಬಿದ್ದ ಸರ್ಪ, ಮನೆಯ ಮಾಡಿನ ಮೇಲೆ ಕೂತ ಹದ್ದಿನಂತೆ ಕಾಣುವ ಕೋಳಿನ ಪಾರ್ಶ್ವಭಾಗದ ನೆರಳು, ಅವನ ನೆಲಮಾಳಿಗೆ ವಾಸ, ವಿಲಕ್ಷಣವೂ ಅಸಂಗತವೂ ಆದ ಗಣೇಶಪ್ಪನ ಅಪಹರಣ ಪ್ರಹಸನ ಎಲ್ಲವೂ ಬದುಕಿನ ಸಹಜ ವ್ಯಾಪಾರಗಳಲ್ಲೇ ಪಡಿಮೂಡಿಯೂ ಅಸಹಜ ವಾತಾವರಣವೊಂದರ ನಿಗೂಢತೆ ಮತ್ತು ಅಮೂರ್ತತೆಯನ್ನು ಸನ್ನಿವೇಶಕ್ಕೆ ಕಲ್ಪಿಸಬಲ್ಲ ಆಯಾಮ ಒದಗಿಸಿದೆ.

ಶಂಕ್ರಜ್ಜನ ಪಾತ್ರ ಇಡೀ ಕತೆಯ ಜೀವಾಳವಾಗಿರುವ ವಿಚ್ಛಿದ್ರಕಾರಿ ಅಂಶಗಳಿಗೆ ಒಂದು ಕೊನೆಯನ್ನು ನೀಡಿ ಈ ಪಾತ್ರಗಳಿಗೆ ಘನತೆಯನ್ನು ಕೊಡಬಹುದೆನ್ನಿಸಿದರೂ ಇಲ್ಲಿನ ಕಟು ವಾಸ್ತವ ಬದುಕಿನೆದುರು ಆದರ್ಶಮಯತೆ ಗೆಲ್ಲುವುದಿಲ್ಲ. ರಣಹದ್ದು ಮತ್ತು ಸರ್ಪ ಎರಡೂ ಬದುಕಿನ ಅನಿವಾರ್ಯ ಮತ್ತು ಸಹಜ ಜೊತೆ ಎನ್ನುವುದರೊಂದಿಗೆ ಕತೆ ಮುಗಿಯುತ್ತದೆ.

ಬೆಚ್ಚು ಕತೆ ಪುಟ್ಟ ಊರೊಂದರ ಸಡಗರ, ಗುಟ್ಟುಗಳು, ಕ್ರೌರ್ಯ, ತಿರಸ್ಕಾರ ಮತ್ತು ಅಪಮಾನಗಳನ್ನು ಅನುಪಮ ಕಲೆಗಾರಿಕೆಯೊಂದಿಗೆ ಕಟ್ಟಿಕೊಡುವ ಕತೆ. ಇಲ್ಲಿನ ಕತೆ ತುಕಾರಾಮ-ರಾಯಪ್ಪ; ತುಕಾರಾಮ-ತಮ್ಮಣ್ಣೋರು; ತುಕಾರಾಮ-ವತ್ಸಲ ಸಂಬಂಧಗಳ ವರ್ತುಲದ್ದೇ ಆದಾಗ್ಯೂ ಇಡೀ ಊರು ಈ ಎಲ್ಲ ಜಗಳ, ಅಪಮಾನ, ಸೇಡು, ಸಾಂತ್ವನಗಳಲ್ಲಿ ಒಂದಾಗಿ ತೊಡಗಿಕೊಳ್ಳುವುದೆ ಇಲ್ಲಿನ ವಿಶೇಷ. ಹೀಗೆ ಬಳಗಾರರ ಕತೆಗಳಲ್ಲಿ ಬದುಕು ಸಾಮಾಜಿಕ ಮತ್ತು ವ್ಯಕ್ತಿ ಎಂದರೆ ಕುಟುಂಬ. ತುಕಾರಾಮನ ನೋವು ಸಂಕಟಗಳು ಕೂಡ ಊರಿನವೇ ಆದ ಒಂದಿಲ್ಲಾ ಒಂದು ಚಟುವಟಿಕೆಯಲ್ಲೇ ತಮ್ಮ ಅಭಿವ್ಯಕ್ತಿಯನ್ನು ಪಡೆದು ಸಮಾಧಾನ ಕಂಡುಕೊಳ್ಳುವಂಥವು. ಒಂದು ಹಂತದ ವರೆಗೆ ಅವನು ನಿರ್ಮಿಸುವ, ಗದ್ದೆಯಲ್ಲಿ ಪಕ್ಷಿಗಳನ್ನು, ಹಂದಿ ಮುಂತಾದವನ್ನು ಬೆದರಿಸಲು ನಿಲ್ಲಿಸುವ ಬೆಚ್ಚು ಅವನ ಭಾವನೆಗೆ ಅಭಿವ್ಯಕ್ತಿ ನೀಡಿದರೂ ಆ ನಂತರದ ನೋವಿಗೆ ಅವನೇ ಬೆಚ್ಚು-ವಂತಾಗುವುದು ಮಾತ್ರ ಕತೆಗೆ ವಿಶಿಷ್ಟ ಧ್ವನಿಶಕ್ತಿ ನೀಡಿದೆ.

ಬೆಚ್ಚು ಕತೆಯ ರೀತಿಯಲ್ಲೇ ನಾಟಕ ಕತೆ ಕೂಡ ಹಳ್ಳಿಯ ಸಾಮಾನ್ಯನೊಬ್ಬನ ಅಪಮಾನ, ನೋವುಗಳನ್ನು ಕುರಿತೇ ಇದೆ. ಸಾಮಾನ್ಯ ಮನುಷ್ಯನ ಸಹಜವಾದ ಸರಳ ಬದುಕಿನ ಒಂದು ಲಯವನ್ನು ಇನ್ಯಾರೋ ಹೊರಗಿನವರು ತಮ್ಮ ಮೂಗು ತೂರಿಸಿ ಕೆಡಿಸುವುದು ಹಳ್ಳಿಬದುಕಿನ ಬಹುಸಾಮಾನ್ಯ ಅಂಶ. ನಾಟಕದಲ್ಲಿ ಪಾರ್ಟು ಮಾಡಬೇಕೆಂಬಂಥ ಸಣ್ಣಪುಟ್ಟ ಆಸೆಗಳ ಮಾಣುವಿನಂಥ ಮನುಷ್ಯರು ಅದಕ್ಕಾಗಿ ತಿಳಿದು-ತಿಳಿಯದೆ ತೆರಬೇಕಾಗುವ ಬೆಲೆಯನ್ನು ಗಮನಿಸುತ್ತಲೇ ಅದೊಂದು ಶೋಷಣೆಯೋ, ದೌರ್ಜನ್ಯವೋ ಎಂಬಂತೆ ಚಿತ್ರಿಸದೆ, ಸಹಜ ಬದುಕಿನ ಅನಿವಾರ್ಯಗಳಲ್ಲೊಂದು ಎಂಬಂತೆ ಸಾವಧಾನವಾಗಿ ಬಳಗಾರರು ಚಿತ್ರಿಸುತ್ತಾರೆ.

ಶ್ರೀಧರ ಬಳಗಾರರ ಆರಂಭದ ಎರಡೂ ಸಂಕಲನದ ಈ ಕಥೆಗಳಲ್ಲಿ ಗಂಡು-ಹೆಣ್ಣು ಸಂಬಂಧ, ದಾಂಪತ್ಯದ ವೈಫಲ್ಯ ಮತ್ತು ಅದರಲ್ಲಿ ಕಾಮದ ವಿಲಕ್ಷಣ ಪ್ರಭಾವ ಇತ್ಯಾದಿಗಳಿಗೆ ಹೆಚ್ಚಿನ ಒತ್ತು ಇದೆ ಅನಿಸುತ್ತದೆ. ಸಂಯೋಗ ಕತೆಯ ಸುಬ್ರಾಯ-ರಾಧೆಯರ ನಡುವೆ ಬರುವ ಮರ್ಕುಂಡಿ, ಹಿನ್ನೆಲೆ ಕತೆಯ ಕಾವೇರಿ-ಗಣೇಶರ ನಡುವೆ ಬರುವ ಸಲೀಂ, ಅಧೋಮುಖ ಕತೆಯ ಮಾಧವ-ದೇವಕಿಯರ ನಡುವೆ ಬರುವ ಸೂರಿಭಟ್ಟ, ಸನ್ನಿವೇಶ ಕತೆಯ ವಿಠೋಬ-ಲಕ್ಷ್ಮಿಯರ ನಡುವೆ ಬರುವ ಸೊಪ್ಪಯ್ಯ - ಹೀಗೆ ದಾಂಪತ್ಯ ಮತ್ತು ಕಾಮ ಮತ್ತೆ ಮತ್ತೆ ಬರುತ್ತದೆ. ಹಾಗೆಯೇ ಈ ದಾಂಪತ್ಯದ ಸೋಲು, ಆ ಸೋಲಿನ ಅಪಮಾನ, ಅದಕ್ಕೆ ಕಾರಣವಾದ ತಮ್ಮ ಅಸಹಾಯಕತೆಯನ್ನು ಎದುರಿಸುವ ಗಂಡು ಪಾತ್ರಗಳು ಕೂಡ ಬಳಗಾರರ ಕತೆಗಳಲ್ಲಿ ಮತ್ತೆ ಮತ್ತೆ ನಮಗೆ ಎದುರಾಗುತ್ತವೆ. ಆದರೆ ಗಮನಿಸ ಬೇಕಾದ ಅಂಶ, ಈ ಪಾತ್ರಗಳಲ್ಲಿ ಏಕತಾನತೆಯಿಲ್ಲ. ಹಾಗಾಗಿ ಈ ಪಾತ್ರಗಳು ತೆರೆದು ತೋರುವ ಒಂದು ಲೋಕ ಅಷ್ಟೇ ವೈವಿಧ್ಯಮಯವಾಗಿರುವುದನ್ನು ಗಮನಿಸಬಹುದು. ಅದು ಬಳಗಾರರ ಮೊದಲ ಸಂಕಲನದ ಸುಬ್ರಾಯನಿಂದ ತೊಡಗಿ ತೀರ ಈಚಿನ ಸಂಕಲನದ ಜಕ್ಕಣನವರೆಗೆ ಪ್ರತಿ ಕತೆಯಲ್ಲೂ ವಿಶಿಷ್ಟ, ವಿಭಿನ್ನ.

3 comments:

Anonymous said...

please send me your phone number. I am jogi
my mail id. hatwar@gmail.com

Anonymous said...

ಪ್ರತಿ ಪ್ರಮುಖ ಲೇಖಕನನ್ನೂ ನೀವು ಆಮೂಲಾಗ್ರವಾಗಿ ಓದಿ ಅರಗಿಸಿಕೊಳ್ಳುವ ಪರಿ ಚೆನ್ನಾಗಿದೆ.
-ಹರೀಶ್ ಕೇರ

ನರೇಂದ್ರ ಪೈ said...

ಇದಕ್ಕೆ ಬೇರೆ ಬೇರೆಯವರು ಕಾರಣ ಹರೀಶ್. ನೀವೂ ಸೇರಿದಂತೆ ಹಲವರು, ಹಲವು ಪುಸ್ತಕಗಳ ಓದು ರೂಪಿಸಿದ ಓದು, ಬರಹ ಇವೆಲ್ಲ.