Wednesday, February 18, 2009

ಶ್ರೀಧರ ಬಳಗಾರ ಅವರ ಮೂರನೆಯ ಕಥಾಸಂಕಲನ ಇಳೆ ಎಂಬ ಕನಸು (2003)

ಇಳೆ ಎಂಬ ಕನಸು ಸಂಕಲನದಲ್ಲಿ ಒಟ್ಟು ಹನ್ನೆರಡು ಕತೆಗಳಿವೆ. ಮೇಲ್ನೋಟಕ್ಕೆ ಈ ಕತೆಗಳು ಪರಿಸರ (ಸುದಾಮ,ಆಕಾಶರಾಯ,ಜೀವಮೂಲದ ಬೇರು), ಸಹಜೀವನ (ಅಮೃತಪಡಿ, ಶಕುನದ ಹಕ್ಕಿ,ಮಹಾಮನೆ), ವ್ಯಾಪಾರೀಕರಣವಾಗುತ್ತಿರುವ ಧರ್ಮ (ಮಮ್ಮಿ), ಅನಾಥವಾಗುತ್ತಿರುವ ಹಿರಿಯ ತಲೆಮಾರು (ಅಂತಃಪಟ, ಇಳೆ ಎಂಬ ಕನಸು, ಪಂಚಮಿಯ ಅಜ್ಜಿ), ಮಾನವೀಯ ಸಂಬಂಧಗಳನ್ನು ಮೀರಿ ಮುಖ್ಯವಾಗುತ್ತಿರುವ ಹಣ (ಕೆಳಗಿನವರು) ಮುಂತಾದ ನಿರ್ದಿಷ್ಟ ಗುರಿಯೊಂದನ್ನು, ತಾತ್ವಿಕ ಆಯಾಮವೊಂದನ್ನು ಇರಿಸಿಕೊಂಡೇ ಬರೆದ ಕತೆಗಳೆನ್ನಿಸಿದರೂ ಇವು ಭಿನ್ನವಾಗಿಯೇ ನಿಲ್ಲುವುದನ್ನು ಗಮನಿಸಬೇಕು. ಬಳಗಾರರ ಹಿಂದಿನ ಸಂಕಲನಗಳಲ್ಲಿ ಇರದಿದ್ದ ಒಂದು `ಸಣ್ಣಕತೆಯ ವಸ್ತು' ಈ ಕತೆಗಳಲ್ಲಿ ಮೈತಾಳಿರುವುದಕ್ಕೆ ಹಲವು ಕಾರಣಗಳಿರಲು ಸಾಧ್ಯ. ನಮ್ಮ ವಿಮರ್ಶಕರು, ಹಿರಿಯರು ಸಾಧಾರಣವಾಗಿ ಒಬ್ಬ ಬರಹಗಾರನ ಕತೆಗಳಲ್ಲಿ ಇಲ್ಲದ ಸಂಗತಿಗಳತ್ತವೇ ಹೆಚ್ಚು ಗಮನಹರಿಸುವುದು, ಸಲಹೆ ನೀಡುವುದು ಮಾಡುತ್ತಿರುತ್ತಾರೆ. ಬಳಗಾರರ ಕತೆಗಳ ಕುರಿತೂ ಅಂಥ ಸಲಹೆಗಳು ಬಂದಿರಬಹುದು ಎನ್ನುವುದು ಒಂದು. ಇನ್ನೊಂದು, ಬಳಗಾರರು ತಮ್ಮ ಮೂರನೆಯ ಕಥಾಸಂಕಲನದ ಹೊತ್ತಿಗಾದರೂ ತಮ್ಮ ಕತೆಗಳ ಮೂಲಕ ಹೇಳ ಹೊರಟಿರುವುದರ ಬಗ್ಗೆ ಹೆಚ್ಚು ಸ್ಪಷ್ಟವಾಗುವುದು, ತಮ್ಮ ಕಥಾನಕಗಳಿಗೆ ಅವುಗಳ ಆಪ್ತ ಮತ್ತು ಸುಪುಷ್ಟ ವಿವರಗಳಾಚೆ, ಅಷ್ಟನ್ನು ಮೀರಿದ ಒಂದು ಗಮ್ಯವಿದೆ ಎಂಬುದನ್ನು ಮನಗಾಣಿಸುವುದು ಅಗತ್ಯವೂ ಆಗಿತ್ತೆನ್ನಬೇಕು.

ಏನಿದ್ದರೂ ಸ್ವಲ್ಪ ಮಟ್ಟಿಗೆ ಈ ಸಂಕಲನದ ಕತೆಗಳು ಅವರ ಹಿಂದಿನ ಎರಡೂ ಸಂಕಲನಗಳ ಛಾಯೆಯಿಂದ ಹೊರಬಂದಂತೆ ಕಾಣುತ್ತವೆ. ಸ್ವಲ್ಪ ಮಟ್ಟಿಗೆ ಯಾಕೆಂದರೆ, ಬಳಗಾರರ ಎಂದಿನ ಸಮಷ್ಠಿ ಪ್ರಜ್ಞೆ ಇಲ್ಲಿನ ಕತೆಗಳಲ್ಲೂ ಕೆಲಸ ಮಾಡಿರುವುದರಿಂದ. ಅವರು ಕಟ್ಟಿಕೊಡುವ ಊರೊಂದರ ಬದುಕು-ಬವಣೆಯ ಚಿತ್ರ ಅವರ ಕಥಾನಕದ ಸೀಮಿತ ಪರಿಧಿಯನ್ನು ಕಥಾನಕದ ವಸ್ತುವಿನ ಅಥವಾ ಕಥಾನಕದ ಕೇಂದ್ರದ ಯಾವುದೇ ಹಂಗಿಲ್ಲದೆ ವಿಸ್ತರಿಸುವುದು ಇಲ್ಲಿಯೂ ಕಂಡುಬರುತ್ತದೆ. ಸುದಾಮ, ಅಂತಃಪಟ, ಮಹಾಮನೆ, ಕೆಳಗಿನವರು, ಪಂಚಮಿಯ ಅಜ್ಜಿ, ಜೀವಮೂಲದ ಬೇರು ಕತೆಗಳು ಒಳಗೊಂಡಿರುವ ಜಗತ್ತು ಅಸಾಧಾರಣ ವೈವಿಧ್ಯತೆಯಿಂದಲೂ, ಜೀವಂತಿಕೆಯಿಂದಲೂ ಮೂಡಿಬಂದಿರುವುದನ್ನು ಗಮನಿಸಿದರೆ ಈ ಮಾತು ಹೆಚ್ಚು ಸ್ಪಷ್ಟವಾಗುತ್ತದೆ. ಬಳಗಾರರು ಅತ್ಯಂತ ಸಂಯಮದಿಂದ ತಮ್ಮ ಹಿಂದಿನ ಎರಡೂ ಸಂಕಲನಗಳ ಮಿತಿ ಎಂದು ಹೇಳಬಹುದಾದ ಮಜಲನ್ನು ದಾಟಿದ್ದಾರೆ ಮತ್ತು ಹಾಗೆ ದಾಟುವಾಗ ತಮ್ಮತನದ ಎಲ್ಲ ಸಾಧ್ಯತೆಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಇದೊಂದು ಕಷ್ಟಸಾಧ್ಯವಾದ ಸಂತುಲನೆ. ಶ್ರೀಧರ ಬಳಗಾರ ಅದನ್ನು ಆಗಗೊಟ್ಟಿರುವುದನ್ನು ನಾವು ಅವರ ಈ ಸಂಕಲನದಲ್ಲೇ ಗುರುತಿಸಬಹುದಾಗಿದ್ದು ಈ ಕಾರಣಕ್ಕೇ ಇದು ಬಹಳ ಮಹತ್ವದ ಸಂಕಲನವಾಗಿದೆ.

ತಮ್ಮದೇ ಹಿಂದಿನ ಎರಡು ಸಂಕಲನಗಳಿಂದ ಭಿನ್ನ ಧಾಟಿ ಹಿಡಿದಿರುವ ಬಳಗಾರರ ಈ ಬಹುಮುಖ್ಯ ಘಟ್ಟದಲ್ಲಿ ಮುನ್ನುಡಿಯಲ್ಲಿ ಜಿ.ರಾಜಶೇಖರ ಅವರ ಮಾತುಗಳು ಗಮನಾರ್ಹವಾಗಿವೆ. "ಸಿದ್ಧಾಂತಿಗಳು, ವಿವಿಧ ಪಕ್ಷ ಪಂಥಗಳವರು, ರಾಷ್ಟ್ರೀಯವಾದಿಗಳು, ಅಭಿವೃದ್ಧಿವಾದಿಗಳು, ಪರಿಸರವಾದಿಗಳು, ಎಲ್ಲರೂ ಈಗ ಲೇಖಕರನ್ನು ತಿದ್ದಿ ಸರಿದಾರಿಗೆ ಹಚ್ಚುವ ಯತ್ನದಲ್ಲಿ ತೊಡಗಿದ್ದಾರೆ. ಬಳಗಾರ ಇಂಥವರನ್ನು ಹತ್ತಿರ ಬಿಟ್ಟುಕೊಳ್ಳಬಾರದು." ಎನ್ನುತ್ತಾರೆ ಕನ್ನಡದ ಪ್ರಮುಖ ವಿಮರ್ಶಕ ಜಿ.ರಾಜಶೇಖರ. ಶ್ರೀಧರ ಬಳಗಾರ ಇಂಥ ಮಿತಿಗಳನ್ನು ಮೀರಿ ಬರೆಯುತ್ತಿರುವುದು ಅವರ ಹೊಸ ಸಂಕಲನ ಒಂದು ಫೋಟೋದ ನೆಗೆಟಿವ್ ಸಾಬೀತು ಪಡಿಸಿದೆ. ಹಾಗಾಗಿಯೂ ಈ ಸಂಕಲನದ ಕತೆಗಳು ಒಂದು ಸಂಕ್ರಮಣ ಘಟ್ಟವನ್ನು ದಾಖಲಿಸುತ್ತವೆ ಮತ್ತು ಅದೇ ಕಾರಣಕ್ಕಾಗಿ ಸಾಹಿತ್ಯದ ವಿದ್ಯಾರ್ಥಿಗಳಿಗೆ ತುಂಬ ಕುತೂಹಲಕರವಾದ ಸವಾಲುಗಳನ್ನು ಒಡ್ಡುತ್ತದೆ.

ಇಲ್ಲಿನ ಸುದಾಮ ಕತೆ ಆಪ್ತವಾಗುವುದು, ಇಷ್ಟವಾಗುವುದು ಸುದಾಮನ ಪಾತ್ರ-ವ್ಯಕ್ತಿತ್ವ ಚಿತ್ರಣದಲ್ಲಿ ಬಳಗಾರ ತೋರಿಸುವ ಕೌಶಲ್ಯಕ್ಕಾಗಿ. ಸದಾಶಿವನಿಗೆ ಸುದಾಮನ ಕುರಿತು ಇರುವ ನೆನಪುಗಳಿಂದಲೇ ಈ ಪಾತ್ರ ರಕ್ತ ಮಾಂಸಗಳಿಂದ ತುಂಬಿಕೊಂಡು ಬೆಳೆಯುತ್ತದೆ. ಈ ವ್ಯಕ್ತಿಯ ಕುರಿತು ಇರುವ ಗಡೀಪಾರಿನ, ನಿಗೂಢವಾದ ಆರೋಪಗಳ, ವದಂತಿಗಳ ಅಸ್ಪಷ್ಟ ವಿವರಗಳಲ್ಲೇ ಕುತೂಹಲ ಮೂಡಿಸುತ್ತ ಅಮೂರ್ತವಾಗುತ್ತ ಸಾಗುತ್ತದೆ. ಮುಂದೆ ಮುಖಾಮುಖಿಯಾಗುವ ಸನ್ನಿವೇಶದ ನಾಟಕೀಯತೆಯೂ ಸೇರಿದಂತೆ ಕತೆ ಮಿಡಿಯುವುದು ತನ್ನ ಪರಿಸರ ಕಾಳಜಿಗಾಗಿಯೇ ಇರಬಹುದೆ ಅನ್ನಿಸುವಾಗಲೂ ಈ ಕತೆ ಮನಸ್ಸಿನಲ್ಲುಳಿಯುವುದು ಈ ಪಾತ್ರ ನಮ್ಮ ಮನಸ್ಸಿನಲ್ಲಿ ಪಡೆಯುವ ಒಂದು ಜೀವಂತಿಕೆಯಿಂದಲೇ. ಬಳಗಾರರ ಕಥಾನಕದ ಮಹತ್ಸಾಧನೆಯಿರುವುದು ಇಲ್ಲಿಯೇ.

ಅಮೃತಪಡಿ ಕವಲೆತ್ತಿನ ಭೋಜಪ್ಪನ ಪಾತ್ರ ಕೂಡ ಸುದಾಮನ ನೆಲೆಯಲ್ಲೇ ಸಾಗುವುದಾದರೂ ಸುದಾಮ ಮತ್ತು ಅಮೃತಪಡಿ ಎರಡೂ ಕತೆಗಳನ್ನಿಟ್ಟುಕೊಂಡು ನೋಡಿದರೆ, ಇಲ್ಲಿ ಬರುವ ಕೇಡನ್ನು ಸೂಚಿಸುವ ಚಂದ್ರನ ಕೊಡೆ, ಸಮುದಾಯಕ್ಕೆ ಸಲ್ಲುವ ಪಡಿಯಕ್ಕಿಯ ಘನತೆ ಮತ್ತು ಹೂವಿನ ಹಬ್ಬದ ಪರಿಕಲ್ಪನೆಯ ಹಿಂದಿರುವ ಮನಸ್ಸನ್ನು ಮೃದುಗೊಳಿಸುವ ಒಂದು ಕಂಪು, ಬಳಗಾರರ ಎಂದಿನ ಸಮಷ್ಠಿಪ್ರಜ್ಞೆಯ ವಿವರಗಳು ಎಲ್ಲದರಾಚೆಗೂ ಕತೆಯಾಗಲೀ, ಕವಲೆತ್ತಿನ ಭೋಜಪ್ಪನಾಗಲೀ ಗಾಢವಾಗಿ ನಮ್ಮನ್ನು ತಟ್ಟುವುದಿಲ್ಲ ಎಂಬ ವಿಚಾರ ಗಮನಕ್ಕೆ ಬರುತ್ತದೆ. ಈ ಕತೆಯ ಅಜೆಂಡಾ ಹೆಚ್ಚು ಮುಖ್ಯವಾದ್ದರಿಂದ ಹೀಗಾಗಿರಬಹುದೆ ಎಂಬುದು ಕೇವಲ ಒಂದು ಅನುಮಾನ ಅಷ್ಟೆ. ಕವಲೆತ್ತಿನ ಭೋಜಪ್ಪ ಒಂದು ಆದರ್ಶವಾಗಿ, ಮಾದರಿಯಾಗಿ ಮೆಚ್ಚುಗೆ ಪಡೆದಾಗ್ಯೂ ಪಾತ್ರ ನಾಟಕೀಯತೆಯನ್ನು ನೀಗಿಕೊಂಡು ಜೀವಂತವಾಗುವುದಿಲ್ಲ - ಶ್ರೀಧರ ಬಳಗಾರರದೇ ಬೇರೆ ಪಾತ್ರಗಳಂತೆ ಎಂದು ಸೇರಿಸಬೇಕು.

ಮಮ್ಮಿ ಕತೆ ಹೆಚ್ಚು ವಿಶಾಲವ್ಯಾಪ್ತಿಯ ಸಂಕೀರ್ಣ ವಸ್ತುವನ್ನು ಹೊಂದಿರುವ ಕತೆ. ಮೇಲ್ನೋಟಕ್ಕೆ ಹಳ್ಳಿಯೊಂದರ ವಿಚಿತ್ರ ಪದ್ಧತಿಯ ಚಿತ್ರಣವಷ್ಟೇ ಎನಿಸುವಂತಿರುವ ಈ ಕತೆ ಅಷ್ಟೇ ಅಲ್ಲದಿರುವುದು ಮತ್ತು ತನ್ನ ಹೇಳದೇ ಉಳಿದ ಸಂಗತಿಗಳಿಂದಾಗಿಯೇ ಕಾಡಬಲ್ಲ ಅಂತಃಶ್ಶಕ್ತಿಯನ್ನು ಹೊಂದಿರುವುದು ಕತೆಯ ಯಶಸ್ಸಿಗೆ ಕಾರಣವೆನ್ನಬೇಕು. ಮೊದಲಿಗೇ ದೇವಸ್ಥಾನದ ಒಂದು ವಿಲಕ್ಷಣ ಪದ್ಧತಿಯ ಹಿಂದೆ ಸನಾತನ ಪರಂಪರೆಯ ನಿಗೂಢತೆಗಿಂತ ವ್ಯಾಪಾರೀ ಪರಂಪರೆಯ ನಿಗೂಢತೆ ಬೆರೆತಿರುವುದು ಆತಂಕವನ್ನು ಹುಟ್ಟಿಸುತ್ತದೆ. ಇದಕ್ಕೆ ಬಲಿಯಾಗುತ್ತಿರುವುದು ಕಾಮಾಕ್ಷಿ ಮತ್ತು ರಸೂಲರ ಇನ್ನೂ ಮೊಳೆತಿರದ ಆದರೆ ಹೃದಯಗಳಿಗಷ್ಟೇ ಸ್ಪಷ್ಟವಿರುವ ಒಂದು ಎಳೆಪ್ರೇಮದ ಕುಡಿ ಎನ್ನುವುದಂತೂ ಇನ್ನೂ ಹೆಚ್ಚಿನ ತಲ್ಲಣಗಳಿಗೆ ಕಾರಣವಾಗುತ್ತದೆ. ತಿಂಗಳಾನುಗಟ್ಟಲೆ ಒಂಟಿಮನೆಯ ವಾಸ, ಅದರ ಹಿಂದಿರುವ ಅಗೋಚರ ಕೈಗಳ, ಶಕ್ತಿಗಳ ಒತ್ತಡ ಕತೆಯಲ್ಲಿ ಎಲ್ಲೂ ವಾಚ್ಯವಾಗುವುದಿಲ್ಲ ಎನ್ನುವುದನ್ನು ವಿಶೇಷವಾಗಿ ಗಮನಿಸಬೇಕು. ಕಗ್ಗತ್ತಲಲ್ಲಿ ದೇವಿಯ ಗರ್ಭಗುಡಿಯಲ್ಲಿ ಒಂದು ರಾತ್ರಿ ಒಂಟಿಯಾಗಿ, ನಗ್ನವಾಗಿ ಕಳೆಯಬೇಕು, ದೇವಿ ಸಾಕ್ಷಾತ್ ಬಂದು ಊರವರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾಳೆ ಎನ್ನುವುದರ ಹಿಂದಿರುವ ಕಾಣದ ಕೈಗಳ, ಮನಸ್ಸುಗಳ, ದೇಹಗಳ ವಿಕೃತಿಯ ಬಗ್ಗೆ ಕತೆ ಏನನ್ನೂ ಹೇಳುವುದಿಲ್ಲ. ಇಡೀ ಕತೆಯಲ್ಲಿ ಆ ನಂಬುಗೆಯ ಬಗ್ಗೆ ಕೂಡ ಒಂದೇ ಒಂದು ಮಾತು ಕತೆಗಾರನ ದೃಷ್ಟಿಕೋನದಿಂದ ದಾಖಲಾಗುವುದಿಲ್ಲ. ಮರುದಿನ ಬೆಳಿಗ್ಗೆ ಕಾಮಾಕ್ಷಿ ಊರಮಂದಿಗೆ ಕಾಣಿಸಿಕೊಂಡ ಬಗೆ ಮತ್ತು ಅವಳ ಅಪ್ಪನ ಶ್ರದ್ಧೆ ಅವನಿಗೆ ಕೊಟ್ಟಿದ್ದೇನು ಎಂಬಲ್ಲೇ ಕತೆಯ ತಿರುಳು ತೆರೆಯುವುದಾದರೂ ಹೇಳಿದ ರೀತಿಗಾಗಿಯಷ್ಟೇ ಈ ಕತೆ ಮುಖ್ಯ. ಮತ್ತೆ ಪುನಃ ಯಾಕೆಂದರೆ, ಕತೆ ಇಲ್ಲಿ ಕೇವಲ ಒಂದು ವರ್ಗದ ಜನರ ನಂಬುಗೆ ಮತ್ತು ಧರ್ಮದ ವ್ಯಾಪಾರೀಕರಣವನ್ನು ಕುರಿತು ಹೇಳುತ್ತಿದೆ ಎನಿಸುವಾಗಲೂ ಅದು ಅದನ್ನು ಮೀರಿ ರೋಗಗ್ರಸ್ತ ಸಮಾಜದ ಇನ್ನೂ ಹಲವು ಮುಖಗಳತ್ತ ತಣ್ಣಗೆ ತೆರೆದುಕೊಳ್ಳುತ್ತದೆ ಮತ್ತು ಅದನ್ನು ಸಾಧ್ಯವಾಗಿಸಿದ್ದು ಈ ನಿರೂಪಣೆಯ ಹದ ಎನ್ನುವ ಕಾರಣಕ್ಕೆ.

ಅಂತಃಪಟ ಕತೆ ತನ್ನೆಲ್ಲ ಮಾಯಕ ವಿವರಗಳ ಜೀವಂತಿಕೆಯ ಒಂದು ವಾತಾವರಣವನ್ನು ಕಟ್ಟಿಕೊಡುವುದರಾಚೆಗೂ `ಹೇಳಹೊರಟಿರುವುದರ' ಬಗ್ಗೆ ವಾಚ್ಯವಾಗಿರುವುದು ತನ್ನ `ಉದ್ದೇಶ'ದ ಬಗ್ಗೆ ವಿಶೇಷತಃ ಜಾಗ್ರತವಾಗಿದ್ದುದರಿಂದಲೇ ಅನಿಸುತ್ತದೆ. ಮೊದಲ ಎರಡೂ ಸಂಕಲನಗಳಲ್ಲಿ ಯಾವುದೇ ಒಂದು ಕತೆಯನ್ನು ಈ ಕತೆ ಇಂಥಾದ್ದರ ಕುರಿತಾಗಿದೆ ಎಂದು ಹೇಳಲು ಬರದ ಹಾಗೆ ಇಡೀ ಬದುಕನ್ನು ಒಳಗೊಂಡು ಬರುವುದೇ ಬಳಗಾರರ ಶೈಲಿಯಾಗಿತ್ತು. ಆದರೆ ಇಲ್ಲಿ ಬಳಗಾರರು ತಮ್ಮ ವೈಶಿಷ್ಟ್ಯವನ್ನು ಬಿಟ್ಟುಕೊಟ್ಟಿಲ್ಲವಾದರೂ ಕತೆಗಳಿಗೆ ಹೆಚ್ಚಿನ ಮೊನಚು, ವಸ್ತುವಿಗೆ ಹೆಚ್ಚಿನ ಪೋಷಣೆ ನೀಡುವುದರ ಕಡೆ ಹೆಚ್ಚಿನ ಗಮನ ನೀಡಿರುವುದು ಎದ್ದು ಕಾಣುತ್ತದೆ. ವಿಮರ್ಶಕರಿಗೆ ಮತ್ತು ಕಥಾನಕದ ಮಹತ್ವದ ಕುರಿತು ಹೆಚ್ಚು ಗಮನ ಹರಿಸುವವರಿಗೆ ಈ ಕತೆ ಅಚ್ಚುಮೆಚ್ಚಿನದಾಗುವ ಸಾಧ್ಯತೆಯಿದೆ.

ಶಕುನದ ಹಕ್ಕಿ ಒಂದು ರೂಪಕದಂತಿರುವ ಕತೆ. ಈ ಕತೆಯಲ್ಲಿ ಅತೀಂದ್ರಿಯ ಅನುಭವಗಳು, ಅತಿಮಾನವ ಶಕ್ತಿಗಳು, ಕಲ್ಪನೆ, ಭ್ರಮೆ ಎಲ್ಲವೂ ಸೇರಿ, ಸೇರಿಯೂ ವಾಸ್ತವದ ನೆಲೆಗಟ್ಟಿನಿಂದಲೇ ಅವೆಲ್ಲವನ್ನೂ ಹೇಳುವ ಆಯಾಮ ಇದೆ. ಹಾಲಕ್ಕಿಸಿದ್ಧನ ಮಾತಿನಂತೆ ಶಕುನದ ಒಡಪು ಬಿಡಿಸಲು ಸ್ಮಶಾನಕ್ಕೆ ಶಕುನದ ಹಕ್ಕಿಯನ್ನು ಹಿಂಬಾಲಿಸಿಕೊಂಡು ಹೋಗುವಷ್ಟರ ಮಟ್ಟಿಗೆ ಇದೆಂಥಾ ಭ್ರಾಂತಿ ಎನಿಸುತ್ತದಾದರೂ ಚಂದ್ರಪ್ಪನಿಗೆ ತಗಲುವ ಮಹಾಹಸಿವಿನ ಭ್ರಮೆ ವಾಸ್ತವವಾಗಿ ಗಾಭರಿ ಹುಟ್ಟಿಸುವ ವಿದ್ಯಮಾನವೇ ಆಗಿರುವುದು ನಿಜ, ಭ್ರಾಂತಿಯಲ್ಲ. ಇದಕ್ಕೂ ಊರಿಗೆ ಬಂದಿರುವ ಬರಕ್ಕೂ ನಿಂತು ಹೋದ ದೇವಿಯ ಉತ್ಸವಕ್ಕೂ ಸಂಬಂಧ ಇರುವುದು ಕೂಡ ಸರಿಯೇ, ಕಥಾನಕದ ತಂತ್ರದಾಚೆಗೂ. ಆದರೆ ಊರೇ ಕಲ್ಪಿಸಿದ ಹಾಗೆ ಬಲಿಕೋಣ (ಅದನ್ನು ಹಾಗೆ ಕರೆಯುವುದು ಕೂಡಾ ಸುಮ್ಮನೇ ಗುರುತಿಗಾಗಿಯೇ ಹೊರತು ಅದನ್ನೇನೂ ಬಲಿಕೊಡುವ ಇರಾದೆ ಊರಿನವರಿಗೆ ಇರುವುದಿಲ್ಲ) ತಪ್ಪಿಸಿಕೊಂಡಿರುವುದಕ್ಕೂ ಇವೆಲ್ಲಕ್ಕೂ ಸಂಬಂಧವೇನಿಲ್ಲ. ವಾಸ್ತವಕ್ಕೆ ಅದು ಬಲಿಗಾಗಿರುವ ಕೋಣವೇ ಅಲ್ಲ. ಆದರೂ ಚಂದ್ರಪ್ಪನ ಕಾಯಿಲೆಯ ಮದ್ದು ಮತ್ತು ಕೋಣ ಎರಡೂ ಒಟ್ಟಿಗೇ ಪತ್ತೆಯಾಗುವುದು ಒಂದು ಪುಟ್ಟ ತಮಾಷೆಯಂತಿದ್ದರೂ ಕತೆ ಘನವಾಗಿ ಮನಸ್ಸಿಗೆ ಹಿಡಿಸುತ್ತದೆ.

ಇಳೆ ಎಂಬ ಕನಸು ಈ ಸಂಕಲನದ ಹೆಸರಿನ ಕತೆ ಕೂಡಾ. ಅಲ್ಲದೆ ಸಂಕಲನ ಕೂಡ ಜನಕಜ್ಜನಂಥವರ ನೋವು ಮತ್ತು ಸ್ವಾಭಿಮಾನಕ್ಕೆ ಅರ್ಪಿತವಾಗಿದೆ. ಆದರೆ ಈ ಜನಕಜ್ಜನ ನೋವು-ಸ್ವಾಭಿಮಾನಕ್ಕಿಂತ, ಈತನ ಸ್ಥಾನಭ್ರಷ್ಟತೆ ಮತ್ತು ಕಣ್ಮರೆಗಿಂತ ಬಳಗಾರರ ಸನ್ನಿವೇಶ ಕತೆಯ ವಿಠೋಬನ ನೋವು, ಅಪಮಾನ ಸಣ್ಣದಲ್ಲ. ಸುದಾಮ ಕತೆಯ ಜೀರುಂಡೆಯ ಅಳು ಕೂಡ ಧ್ವನಿಸುವುದು ಇದನ್ನೇ. ಸುದಾಮನ ಸ್ಥಾನಭ್ರಷ್ಟತೆ ಮತ್ತು ಕಣ್ಮರೆ ಕೂಡ ಇಷ್ಟೇ ಆಳವಾದದ್ದು, ಕೆಡುಕಿನದ್ದು. ಆದರೆ ಸ್ವತಃ ಬಳಗಾರರು ಸೃಜಿಸಿದ ಸುದಾಮನ ಎದುರು, ವಿಠೋಬನ ಎದುರು ಜನಕಜ್ಜ ಯಾಕೋ ಪೇಲವ ಎನಿಸುತ್ತದೆ. ಆದರೆ ಮುಖ್ಯವೆನಿಸುವುದು, ಮೆಚ್ಚುಗೆಗೆ ಕಾರಣವಾಗುವುದು,ಇಂಥ ಒಂದು, ಬಹುಷಃ ಆಗಲೇ ಕ್ಲೀಷೆಯಾಗಿ ಬಿಟ್ಟಿರುವ ಮುಳುಗಡೆಯ ಗೋಳುಗಳನ್ನೇ ಮತ್ತೆ ಮತ್ತೆ ಹೇಳುವ ಕತೆಯನ್ನು ಹೇಳುವಾಗಲೂ ಬಳಗಾರರು ನಮಗೆ ನೀಡುವ ವಿವರಗಳಲ್ಲಿ, ಒಂದು ವಾತಾವರಣವನ್ನು ಅದರ ಎಲ್ಲ ಗುಣ-ಶಬ್ದ-ವಾಸನೆ-ಬಿಸಿಲು-ನೆರಳುಗಳಲ್ಲಿ ಜೀವಂತಗೊಳಿಸುವ ತಮ್ಮ ಶ್ರದ್ಧೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲವಲ್ಲ, ಆಲಸ್ಯ-ಅನ್ಯಮನಸ್ಕತೆ ತೋರುವುದಿಲ್ಲವಲ್ಲ ಎಂಬುದೇ. ಜನಕಜ್ಜನಿಗೆ ತನ್ನ ಗಣದ ದೈವಗಳ ಬಗ್ಗೆ, ಮಾರುತಿಯ ಬಗ್ಗೆ, ಪುನರ್ವಸತಿ ಕೇಂದ್ರದಲ್ಲಿ ತನ್ನದೇ ಮಂದಿಯ ವಿಲಕ್ಷಣ ಬದುಕಿನ ಬಗ್ಗೆ ಅನಿಸುವುದೇನೇ ಇರಲಿ, ಆತನ ಒಂದು ಚಿತ್ರ ಓದುಗನ ಮನದಲ್ಲಿ ಜೀವಂತವಾಗಿ ನಿಲ್ಲುವ ಪ್ರಕ್ರಿಯೆಯೇನಿದೆ, ಅದು ಬಳಗಾರರ ಕತೆಗಳಲ್ಲಿ ಘಟಿಸುವ ಮಾಯಕ ಅಧ್ಯಯನ ಯೋಗ್ಯವಾದದ್ದು ಮತ್ತು ಬಳಗಾರರಿಗೆ ಅತ್ಯಂತ ಸಹಜವಾದದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ.

ಕಾಡಿನಲ್ಲೊಂದು ಟ್ವಿಂಕಲ್ ಸ್ಟಾರ್ ಕತೆಯ ಹೆಚ್ಚಿನ ಭಾಗ ನಿಗೂಢ - ಅಮೂರ್ತ ತಂತ್ರಗಳಿಂದಲೇ ಕೂಡಿದೆ. ಸುಮಾರಾಗಿ ಇದೇ ಕತೆಯ ಈ ಬಗೆಯ ವಿವರಗಳು ಬಳಗಾರರ ಕೇತಕಿಯ ಬನ ಕಾದಂಬರಿಯಲ್ಲೂ ಕಾಣಿಸಿಕೊಳ್ಳುವುದರಿಂದ ಇದ್ದರೂ ಇರಬಹುದು, ಈ ಕತೆ ಕೂಡ ಕಾದಂಬರಿಯ ಒಂದಾನೊಂದು ಅಧ್ಯಾಯದ ಕೆಲವು ಪುಟಗಳಂತೆ ಬಿಡಿಯಾಗಿಯೇ ಉಳಿದು ಬಿಡುತ್ತದೆ.

ಮಹಾಮನೆ ಕತೆಯ ಮೋಚಿ ಯಾಕೋ ಭಾರತೀಸುತರ ಕತೆಯ ಮೋಚಿಯನ್ನು ನೆನೆಯುವಂತೆ ಮಾಡುತ್ತಾನೆ. ಈ ಸಂಕಲನದಲ್ಲಿ ತನ್ನ ವ್ಯಾಪ್ತಿಯಿಂದ ಮೆಚ್ಚುಗೆಯಾಗುವ ಕತೆಗಳಲ್ಲಿ ಮಹಾಮನೆ ಕೂಡ ಒಂದು. ಈ ಕತೆಯ ಫೌಜಿಯಾಗಲು ಬಂದ ಗುಲಾಮನ ಹಿಂದೆಯೂ ಹೃದಯ ಹಿಂಡುವ ಕತೆಯಿದೆ. ಆದರೆ ಅದನ್ನು ನಮಗೆ ಕತೆಗಾರ ಕಾಣಿಸುವುದು ಹಾದಿಮನಿ ಎಂಬ ಹೆಸರಿನ ಮೋಚಿಯ ಕತೆಯ ಮೂಲಕವೇ ಎನ್ನುವುದರಲ್ಲೇ ಒಂದು ವಿಶಿಷ್ಟತೆ ಇದೆ. ಹಾದಿಮನಿ! ಹೌದು, ಹಾದಿಯೇ ಮನೆಯಾದವರ ಕತೆ ಕೂಡ ಇದು, ಮಹಾಮನೆ! ಬಳಗಾರರ ಕೈಯಲ್ಲಿ ಒಬ್ಬೊಬ್ಬ ವ್ಯಕ್ತಿಯೂ ಒಂದೊಂದು ಸಂಸಾರವಾಗುತ್ತ, ಸಂಸಾರವೆಂಬುದು ಊರುಕೇರಿಯಾಗುತ್ತ, ತನ್ನ ಬಾಹುಗಳಲ್ಲಿ ಎಲ್ಲವನ್ನೂ ಸೆಳೆದುಕೊಳ್ಳುತ್ತ ಕತೆ ಮೈತಳೆದು ಬರುತ್ತದೆ. ಬಳಗಾರರ ಯಾವುದೇ ಕತೆಯನ್ನು ಕೈಗೆತ್ತಿಕೊಂಡರೂ ಈ ಮಾತು ಅನುಭವಕ್ಕೆ ಬರುತ್ತದೆ. ಒಬ್ಬ ಕತೆಗಾರರಾಗಿ ಬಳಗಾರರು ಪ್ರಯತ್ನದಿಂದ ರೂಢಿಸಿಕೊಂಡ ಕೌಶಲವಲ್ಲ ಇದು. ಇದು ಅವರಿಗೆ ಸಹಜವಾದ ರೀತಿ. ಈ ವಿವರಗಳು ಜೀವಂತಗೊಳಿಸುವ ಒಂದು ಪುಟ್ಟ ಜಗತ್ತಿನಲ್ಲಿ ಇಲ್ಲಿನ ಕಥಾನಕಗಳು ಮೈತಳೆಯುವುದು ಬದುಕನ್ನು ಗ್ರಹಿಸುವ ಬಳಗಾರರ ಗ್ರಹಿಕೆಯ ಕ್ರಮದಲ್ಲಿ, ಅದೇ ವಿನ್ಯಾಸದಲ್ಲಿ.

ಕೆಳಗಿನವರು ಕತೆಯ ಹೆಸರಿನಲ್ಲಿರುವ ಸಮುದಾಯದ ಪರಿಕಲ್ಪನೆಯಂತೆಯೇ ಕತೆ ಒಂದು ಸಮುದಾಯದ ಕತೆಯನ್ನೇ ಹೇಳುತ್ತಿದೆ. ಅದರಲ್ಲಿ ಪುಟ್ಟಯ್ಯನಂಥವರ ಶೋಷಣೆಯಾಗಲೀ, ಹೊಟ್ಟೆಪಾಡಿಗಾಗಿ ಪೀಟರನ ವೇಷ ಧರಿಸುವ ಪೇದ್ರುವಿನ ಬಲಿಯಾಗಲೀ ವಿಶೇಷ ಅನಿಸುವ ವಿದ್ಯಮಾನಗಳೇನೂ ಅಲ್ಲ. ಆದರೆ, ಕೆಳಗಿನವರಾಗಿದ್ದ ಕಾಲದಲ್ಲೇ ಒಬ್ಬ ಸ್ವಾಭಿಮಾನಿ, ಸ್ವಾವಲಂಬಿ, ಸ್ವತಂತ್ರ ಮನೋವೃತ್ತಿಯವನಾಗಿದ್ದ ಪೇದ್ರು ಕ್ರಮೇಣ ಮರಗಳ್ಳತನದ ವೃತ್ತಿಗೆ ಶರಣಾಗಿ ತನ್ನದಾಗಿದ್ದ ವ್ಯಕ್ತಿತ್ವದ ಜೊತೆಗೇ ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ಹೆಂಡತಿಯನ್ನು ಕೂಡ ಕಳೆದುಕೊಳ್ಳುವುದರ ಚಿತ್ರವೇನಿದೆ, ಅದನ್ನು ಬಳಗಾರರು ಸೂಕ್ಷ್ಮವಾಗಿ ನಿರ್ವಹಿಸಿದ ಬಗೆಯೇನಿದೆ, ಅದು ಅಚ್ಚುಕಟ್ಟಾಗಿದೆ.

ಪಂಚಮಿಯ ಅಜ್ಜಿ ಅತ್ಯಂತ ಭಾವುಕಸ್ತರದಲ್ಲಿ ತಟ್ಟುವ, ಆಪ್ತವಾಗುವ ಮತ್ತು ಅವೇ ಕಾರಣಗಳಿಗಾಗಿ ಓದುಗರನ್ನು ಆಳವಾಗಿ ಕಲಕುವ ಒಂದು ಉತ್ತಮ ಕತೆ. ಬಳಗಾರರ ಎರಡನೆಯ ಸಂಕಲನದ ಗಂಜಿಗದ್ದೆ ಕಥೆಯ ಗೌರಜ್ಜಿ ಮತ್ತು ನಾಲ್ಕನೆಯ ಕಥಾಸಂಕಲನದಲ್ಲಿನ ಕತೆ ಕೊನೆಗಾಲದ ದೊಡ್ಡೆಯ ಗಾಢ ಛಾಯೆಯಿದ್ದಾಗಲೂ ಪಂಚಮಿಯ ಅಜ್ಜಿಯ ಕೊನೆಗಾಲದ ನೋವು, ಪುಟ್ಟಣ್ಣನ ಅನುಚಿತ ಕಾರ್ಯವೇ ಅದಕ್ಕೆ ಮೂಲ ಕಾರಣವಿದ್ದಾಗ್ಯೂ ಅವನ ಅನಿವಾರ್ಯತೆ ಅದೇನಿತ್ತೋ ತಿಳಿಯದ್ದರಿಂದ ಅವನನ್ನು ದೂಷಿಸುವುದಕ್ಕೂ ಆಗದ ಒಂದು ನೆಲೆಯಲ್ಲೇ ನಮ್ಮನ್ನು ವಿಚಿತ್ರವಾಗಿ ಹಿಂಡುತ್ತ ಉಳಿಯುವುದು ಕತೆಗೆ ಒಂದು ವಿಶಿಷ್ಟ ಶಕ್ತಿಯನ್ನು ಕೊಡಮಾಡಿದೆ. ಕತೆಯ ಓದು ತುಂಬ ಕಾಲ ಬದುಕು, ಅದರ ಕುರಿತ ತಲೆಮಾರಿನಿಂದ ತಲೆಮಾರಿಗೆ ಬದಲಾಗುತ್ತ ಬಂದಿರುವ ಪರಿಕಲ್ಪನೆಗಳು, ಎಲ್ಲವೂ ವಿಭಿನ್ನ ಭ್ರಮೆಗಳಷ್ಟೇ ಆಗಿರಬಹುದಾದ ದುರಂತದಾಚೆಗೂ ಕಾಡುವ ಮುಗ್ಧ ಮೋಹದ ಬಗ್ಗೆ ಹೃದಯ ಕಲಕುವಂತೆ ಮಾಡುತ್ತದೆ. ಈ ಮುಗ್ಧ ಮೋಹ ಯಾರನ್ನೂ ಬಿಟ್ಟಿಲ್ಲ. ಯಾವತ್ತೂ ಅದಕ್ಕೆ ಅರ್ಥ, ಕಾರ್ಯಕಾರಣ ಸಂಬಂಧ, ವಿವರಿಸಲಾಗುವ ತರ್ಕ ಯಾವುದೂ ಇರುವುದಿಲ್ಲ. ಆದರೆ ಅದು ಜೀವನದಲ್ಲಿ ಬೇರೆಲ್ಲದಕ್ಕಿಂತಲೂ ಪ್ರಮುಖ ಸ್ಥಾನ ಪಡಿದಿರುತ್ತದೆ. ಜೀವನದ ಕೊನೆಗಾಲದಲ್ಲಿ ಅಂಥ ಮುಗ್ಧ ಮೋಹಕ್ಕೆ ಬೀಳುವ ಪೆಟ್ಟು ಮನುಷ್ಯನನ್ನು ಜೀವದಿಂದಿರುವಾಗಲೇ ಕೊಲ್ಲುವಷ್ಟು ಆಳವಾದ ನೋವು. ಇಲ್ಲಿ ಗೌರಜ್ಜಿಯಂಥ ಜೀವನಪ್ರೀತಿಯ ಗೌರಜ್ಜಿಯ ಪಾತ್ರ ಇಂಥಾ ಒಂದು ನೋವಿಗೆ ತುತ್ತಾಗುವುದನ್ನು ಕಂಡು ಮನಸ್ಸು ವಿಹ್ವಲವಾಗಿ ಹೊರಳಾಡಿ ಬಿಡುತ್ತದೆ. ಈ ಕತೆಯನ್ನು ಓದಿದ ಮೇಲೆ ಬಹಳಷ್ಟು ಹೊತ್ತು ಇನ್ನೇನೂ ಮಾಡಲಾಗದೆ ಸುಮ್ಮನೇ ಕೂತು ನಿಡುಸುಯ್ಯುವಂತಾಗುತ್ತದೆ.

ಎಂ.ಕೆ.ಬಿ ಎಂಬ ಅತ್ಯಂತ ವಾಸ್ತವ ಜಗತ್ತಿನ ಜೀವಂತ ಪಾತ್ರವೊಂದು ಇದ್ದಕ್ಕಿದ್ದಂತೆ ಆಕಾಶರಾಯನಂತೆ ಮಿನುಗುತ್ತಿರುವ ನಕ್ಷತ್ರಗಳ ಆಕಾಶವನ್ನು ಹೊಕ್ಕು ನಡೆದು ಬಿಡುವ ಹಂತದಲ್ಲಿ ತಾನೂ, ತನ್ಮೂಲಕ ಕತೆಯೂ ಒಂದು ರೂಪಕವಾಗಿ ಬಿಡುವ ಚೋದ್ಯವುಳ್ಳ ಸುಂದರ ಕತೆ ಆಕಾಶರಾಯ. ಎಂಕೆಬಿಯ ತಂದೆಯ ಕಾಲದಲ್ಲಿ ನಡೆದ ಪಲ್ಲಟಗಳು ಎಂಕೆಬಿಯ ಕಾಲದಲ್ಲಿ, ಅದೂ ಅವನ ಮುಪ್ಪಿನ ಕಾಲದಲ್ಲಿ ತಿರುವುಮುರುವಾಗಿ ಮತ್ತೆ ಪರಂಪರೆ, ಸಹಜ ಬದುಕು, ದೇಸೀಮೂಲ ಮುಖ್ಯವಾಗುವ ಹಿಮ್ಮೊಗವಲ್ಲದ ಆದರೆ ಮೇಲ್ನೋಟಕ್ಕೆ ಹಿಮ್ಮೊಗ ಚಲನೆ ಎಂದು ಕಾಣಿಸಬಹುದಾದ ಚಲನೆ ಆಗಲೇ ಮರಿ ಪುಡಾರಿಯಾಗಿರುವ ಪನ್ನಗನಿಗೆ ಅರ್ಥವಾಗುವಂಥದ್ದಲ್ಲ. ಅಷ್ಟೇಕೆ ಹೆಚ್ಚಿನ ವಿದ್ಯಾವಂತರಿಗೂ ಅರ್ಥವಾಗುವುದಿಲ್ಲ. ನಮ್ಮ ಅಭಿವೃದ್ಧಿಯ ಪರಿಕಲ್ಪನೆಗಳೇ ಹಾಗಿವೆ. ಅನಂತಮೂರ್ತಿಯವರು ಒಮ್ಮೆ ಇದನ್ನೇ ಕುರಿತು ಹೇಳಿದ್ದರು. ಅವರು ಕಾರಂತರ ಕಾದಂಬರಿ ಮರಳಿ ಮಣ್ಣಿಗೆ ರಾಮ ಐತಾಳ, ಸರಸೋತಿ-ಪಾರ್ವತಿಯರನ್ನೆಲ್ಲ ಉದಾಹರಿಸುತ್ತ ಕನಿಷ್ಠ ಅವಶ್ಯಕತೆಗಳೊಂದಿಗೆ ಸುಖವಾಗಿರಬಲ್ಲ ಮನುಷ್ಯ ನಮ್ಮ ವ್ಯಾಖ್ಯಾನದಲ್ಲಿ ಬಡವನಲ್ಲ ಎಂದಿದ್ದರು. ಹೊಲಗದ್ದೆಗಳಲ್ಲಿ ಗಂಡಸರಂತೆ ದುಡಿದು, ಉಪ್ಪಿನಕಾಯಿ ಹಾಕುವುದಕ್ಕೆ ಮಿಡಿ ಮಾವಿಗಾಗಿ ಮೈಲುಗಟ್ಟಲೆ ಬಿಸಿಲಿನಲ್ಲಿ ನಡೆದು, ಮಳೆಗಾಲಕ್ಕೆ ಮುನ್ನ ಹಪ್ಪಳ ಸೆಂಡಿಗೆ ಎಂದು ಹೈರಾಣಾಗಿ, ಬೇಸಿಗೆಯಲ್ಲಿ ತೋಟಕ್ಕೆ ನೀರು ಮೊಗೆದು ರಟ್ಟೆ ಸೋತರೂ ಅಂಥ ಘನ ಘೋರ ಕಷ್ಟದ್ದೆನಿಸುವ ಬದುಕನ್ನು ನಿಭಾಯಿಸುವ ಸರಸೋತಿ-ಪಾರ್ವತಿಯರು ಸ್ವತಃ ಅದನ್ನು ಕಷ್ಟ ಎಂದರಲ್ಲ. ಹಾಗಾದರೆ ಹೀಗೆ `ಸುಖ'ವಾಗಿ ಬದುಕುತ್ತಿರುವುದರ ಹಿಂದೆ ಯಾವ ನೆಮ್ಮದಿ ಅವರನ್ನು ಪೊರೆಯುತ್ತಿರುವುದು ಎನ್ನುವುದರ ಬಗ್ಗೆ ನಾವು ಯೋಚಿಸಬೇಕಿದೆ. ಹೊಟ್ಟೆಗೆ ಆಹಾರ, ಮಕ್ಕಳಿಗೆ ವಿದ್ಯಾಭ್ಯಾಸ ನಮ್ಮ ಅಭಿವೃದ್ಧಿಯ ಪ್ರಾಥಮಿಕ ಕಾಳಜಿಯಾಗಿಲ್ಲದೇ ಇರುವಾಗ ಅದನ್ನು ಬೆಂಬಲಿಸುವುದು ಕಷ್ಟವಾಗುತ್ತದೆ. ಮಾರುಕಟ್ಟೆಯೇ ಗುರಿ, ಉದ್ದೇಶವಾಗಿರುವ ಅಮೆರಿಕದ ಟ್ರೂಮನ್ ಪಾಲಿಸಿಯ ಫಲಶ್ರುತಿಯಾಗಿರುವ ಪ್ರಸ್ತುತ ಅಭಿವೃದ್ಧಿಯ ಪರಿಕಲ್ಪನೆಗಳನ್ನು ಕತೆ ಅತ್ಯಂತ ಸೂಚ್ಯವಾಗಿ ಮತ್ತು ಅಷ್ಟೇ ಅರ್ಥಪೂರ್ಣವಾಗಿ ತಿರಸ್ಕರಿಸುತ್ತದೆ.

ಜೀವಮೂಲದ ಬೇರು ಕೂಡಾ ಈ ಸಂಕಲನದ ಇನ್ನೊಂದು ಉತ್ತಮ ಮತ್ತು ಬಹುಮುಖ್ಯ ಕತೆ. ಕಥಾನಕದ ಸಂಕೀರ್ಣ ಹಂದರವೇ ಅದನ್ನು ಯಾವುದೇ ಅಜೆಂಡಾದ ಮುಖವಾಣಿಯಾಗದಂತೆ ರಕ್ಷಿಸಿದೆ ಎನ್ನಬೇಕು. ಎಲ್ಲೋ ಪರಿಸರದ ಪ್ರಶ್ನೆಯೊಂದಿಗೆ ಇದು ತಳುಕು ಹಾಕಿಕೊಂಡಿದೆ ಎನಿಸುವಾಗಲೂ ಅಷ್ಟೇ ಅಲ್ಲ ಎನ್ನುವುದು ಸತ್ಯ. ಆದರೆ ಉಳಿದಂತೆ ಕತೆಯ ಅಂತಹ ಭಾಗಗಳೇನಿವೆ ಅವು ಏನನ್ನೂ ನಿರ್ದಿಷ್ಟವಾಗಿ ಹೇಳುವುದಿಲ್ಲ ಎನ್ನುವುದು ಕೂಡ ಸತ್ಯ. ಸಣ್ಣಕತೆಯ ಸವಾಲುಗಳನ್ನು ನಾವಿಲ್ಲಿ ನಿಚ್ಚಳವಾಗಿಯೇ ಎದುರಿಸುತ್ತೇವೆ. ಅನಿತಾ ಆಗಿದ್ದಿರಬಹುದಾದ ಒಬ್ಬ ಹೆಣ್ಣುಮಗಳು ಗೋಕರ್ಣದ ಸಮುದ್ರ ಕಿನಾರೆಯಲ್ಲಿ `ನಾನು ಯಾರೆಂದು ನನಗೆ ಅರ್ಥವಾಗಬೇಕು, ನನಗೆ ನನ್ನ ತಂದೆಯನ್ನು ಹುಡುಕಿಕೊಡಿ' ಎಂದು ಬಿಳಿರಟ್ಟಿನ ಫಲಕ ಹಿಡಿದು ಓಡಾಡುವ ಚಿತ್ರದೊಂದಿಗೆ ಮುಗಿಯುವ ಈ ಕತೆ ಪರಿಸರದ ಪ್ರಶ್ನೆಯಾಚೆಗೂ ನಮ್ಮ ತಲ್ಲಣಗಳಿಗೆ ಕಾರಣವಾಗುವುದು ನಿಜ. ಮಾಧವನ್‌ರ ಸಂಸಾರದ, ದಾಂಪತ್ಯದ ಸೋಲು, ಅವರ ಹತಾಶೆ, ಯಾವುದೋ ಒಂದು ಬೇರಿನ ಮೇಲಿನ ಅವರ ಅವಲಂಬನೆ ಮತ್ತು ಅದು ಗಣಿಗಾರಿಕೆ ಇತ್ಯಾದಿ ಅಭಿವೃದ್ಧಿಪರ ಕಾರಣಗಳಿಂದಾಗಿ ಸಿಗದೆ ಅವರಿಗೆ ಹಿಡಿಯುವ ಹುಚ್ಚು ಇದು ಒಂದು ನೆಲೆ. ಅನಾಥವಾಗಿದ್ದ ಕೂಸನ್ನು ಅವರು ಸಾಕಿ, ಬೆಳೆಸಿ ವಿದ್ಯಾಭ್ಯಾಸ ಕೊಡಿಸಿ ನೋಡಿಕೊಂಡರೂ ಆಕೆ ತನ್ನ ಅಸ್ಮಿತೆಯನ್ನೋ, ತಂದೆ ಯಾರು ಎಂಬ ಐಡೆಂಟಿಟಿಯನ್ನೋ ಹುಡುಕಿ ಅಲೆದಾಡುವುದು - ಈ ಜಗತ್ತಿನೊಂದಿಗೆ ಅರ್ಥಪೂರ್ಣ ತಾರ್ಕಿಕ ಸಂಬಂಧದ ಪರಿಧಿಯಿಂದಲೇ ಹೊರಗಾಗಿರುವ ಭ್ರಮಿತ ಮಾಧವನ್ನರ ಹಿನ್ನೆಲೆಯಲ್ಲಿ ಕಾಣುವ ಬಗೆ ಬೇರೆಯೇ ಇದೆ. ಭಯ ಹುಟ್ಟಿಸಬಲ್ಲ ದಟ್ಟ ಕಾಡಿನಲ್ಲಿ ಒಂಟಿಯಾಗಿ ನಟ್ಟಿರುಳು ಕಳೆಯುವುದರ ಮೂಲಕವೇ ತನಗೆ ತಾನು ಅರ್ಥವಾಗಬೇಕೆಂದು ಹೊರಟ ಮಾಧವನ್ ಮನಸ್ಸಿನ ಭಿತ್ತಿಯಲ್ಲಿರುತ್ತ ಅವರ ಮನಸ್ಸಿನ ಶಾಂತಿಗೆ ಕಾರಣವಾಗಬಹುದಾಗಿದ್ದ ಯಾವುದೋ ಒಂದು ಬೇರು, ಗೋಕರ್ಣದ ಆತ್ಮಲಿಂಗದ ಬೇರು, ಅನಿತಾಳ ಪ್ರಶ್ನೆಗಳ ಬೇರು, ಮಾಧವನ್ನರ ಮಾನಸಿಕ ಸ್ಥಿತಿಯ ಬೇರು ಈ ಕತೆಯಲ್ಲಿ ಪ್ರಶ್ನೆಗಳಾಗಿ ಕಾಡುವುದು ಗಮನಾರ್ಹವಾಗಿದೆ.

ಬಳಗಾರರು ಈ ಸಂಕಲನದ ಮಮ್ಮಿ, ಶಕುನದ ಹಕ್ಕಿ ಮತ್ತು ಈ ಜೀವಮೂಲದ ಬೇರು ಕತೆಗಳಲ್ಲಿ ಯಾವುದಕ್ಕೆ ಕೈಚಾಚಿದ್ದಾರೋ ಅಲ್ಲಿ ಅವರ ಸಾಧ್ಯತೆಗಳು ಅನಂತವಾಗಿವೆ ಎಂದೂ ಅನಿಸುತ್ತದೆ.

No comments: