Wednesday, February 25, 2009

ಶ್ರೀಧರ ಬಳಗಾರ ಅವರ ನಾಲ್ಕನೆಯ ಕಥಾಸಂಕಲನ ಒಂದು ಫೋಟೋದ ನೆಗೆಟಿವ್ (2008)

ಈ ಸಂಕಲನದಲ್ಲಿ ಒಟ್ಟು ಹದಿಮೂರು ಕತೆಗಳಿವೆ. ವಸ್ತು ಮತ್ತು ಆಕೃತಿಯ ದೃಷ್ಟಿಯಿಂದ ಇದುವರೆಗೆ ನಮಗಿದ್ದ ಮಾದರಿಗಳಿಂದ ಭಿನ್ನವಾಗಿ ಸಣ್ಣಕತೆಗಳ ಪರಿಕಲ್ಪನೆಗೆ ಒಂದು ಹೊಸ ಆಯಾಮವನ್ನೇ ನೀಡಿದ ಬಳಗಾರರ ಕತೆಗಳು ತಮ್ಮತನವನ್ನು ಗಟ್ಟಿಯಾಗಿ ಕಾಯ್ದುಕೊಂಡೇ ಸಾಧಿಸಿದ ಒಂದು ಹೊಸ ಮಜಲನ್ನು ನಾವಿಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಹಿಂದಿನ ಇಳೆ ಎಂಬ ಕನಸು ಸಂಕಲನದಲ್ಲೇ ಇಂಥ ಸುಳಿವುಗಳಿದ್ದರೂ ಈ ಸಂಕಲನದ ಕತೆಗಳು ಅದನ್ನು ಇನ್ನಷ್ಟು ಪುಷ್ಟೀಕರಿಸಿವೆ ಮಾತ್ರವಲ್ಲ ಈ ಹೊಸತನ ಬಳಗಾರರ ಈ ಸಂಕಲನದಲ್ಲಿ ಒಂದು ಸಮನ್ವಯದ ನೆಲೆ ಮತ್ತು ಸಂತುಲಿನ ಆಯಾಮ ದಕ್ಕಿಸಿಕೊಂಡಿರುವುದು ನಮ್ಮ ವಿಶೇಷ ಗಮನಕ್ಕೆ ಅರ್ಹವಾಗಿದೆ.

ಒಂದು ಫೋಟೋದ ನೆಗೆಟಿವ್ ಈ ಸಂಕಲನದ ಮೊದಲ ಕತೆ. ಬಳಗಾರರ ಪ್ರೀತಿಯ ಅವಿಭಕ್ತ ಕುಟುಂಬವೊಂದರ ವಿಭಜನೆಯ ನೋವು-ತಲ್ಲಣಗಳೊಂದಿಗೇ ಹೆಣೆದುಕೊಂಡಂತಿರುವ ಈ ಕತೆ ಏಕಕಾಲಕ್ಕೆ ಸರಳ ಸಹಜ ಹಳ್ಳಿಬದುಕಿನ ಹೊಸ್ತಿಲಲ್ಲಿ ಆಧುನಿಕ ಜಗತ್ತಿನ ಪ್ರವೇಶವಾಗುತ್ತಿರುವುದನ್ನು, ಆ ಪ್ರವೇಶ ಮನುಷ್ಯ-ಮನುಷ್ಯರ ನಡುವಿನ ಸಂಬಂಧಗಳನ್ನು, ಮನುಷ್ಯಮತ್ತು ಪ್ರಕೃತಿಯ ನಡುವಿನ ಸಂಬಂಧಗಳನ್ನು, ಮನುಷ್ಯ ಮತ್ತು ನಿರ್ಜೀವ ಕಾಯದೆ,ಯಂತ್ರ ಮುಂತಾದುವುಗಳೊಂದಿಗಿನ ಸಂಬಂಧಗಳನ್ನು ಹೊಸದಾಗಿ ವ್ಯಾಖ್ಯಾನಿಸತೊಡಗಿರುವುದನ್ನು ಬಹಳ ಸೂಕ್ಷ್ಮವಾಗಿ, ಒಂದು ರೂಪಕವೋ ಎಂಬಂತೆ ಚಿತ್ರಿಸುತ್ತ ಹೋಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಕಥಾನಕದ ಅಥೆಂಟಿಸಿಟಿ - ಅದರ ಎಲ್ಲ ವೈಚಿತ್ರ್ಯ ಮತ್ತು ನಾಟಕೀಯತೆಗಳೊಂದಿಗೇ, ತುಂಬ ಮಹತ್ವದ್ದು. ಬಳಗಾರರ ಕಥನಶಕ್ತಿಯ ಮಹಾನ್ ಸಾಧ್ಯತೆಗಳು ಇಂಥಲ್ಲೇ ಕಣ್ಣಿಗೆ ಕಟ್ಟುವುದು ವಿಶೇಷ. ಒಂದು ಜಲಪಾತ ತನ್ನ ಪಾಡಿಗೆ ತಾನಿದ್ದುದು ಕ್ರಮೇಣ ಮಾಧ್ಯಮಗಳ ಮೂಲಕ, ಫೋಟೋದ ಮೂಲಕ ಪ್ರವಾಸೀತಾಣವಾಗುವುದು, ಅಂಥ ಸ್ಥಳವಾಗುವುದರ ಎಲ್ಲ ಅನಿಷ್ಟಗಳನ್ನು ಹೊತ್ತು ತರುವುದು ಮತ್ತು ಇದೇ ಒಂದು ವ್ಯಾಜ್ಯಕ್ಕೆ ಕಾರಣವಾಗುವುದು ಒಂದೆಡೆ ಇರುತ್ತ ಬತ್ತಿ ಹೋಗುವ ಜಲಪಾತ ಪ್ರಕೃತಿಯೇ ಸೇಡು ತೀರಿಸಿಕೊಂಡಂತಿರುವುದು ಇನ್ನೊಂದು ಚೋದ್ಯವೆನ್ನಬೇಕು. ಈ ಬತ್ತಿ ಹೋದ ಜಲಪಾತದಂತೆಯೇ ತನ್ನೊಳಗಿನ ಚೈತನ್ಯದ ಚಿಲುಮೆಯನ್ನೂ ಬತ್ತಿಸಿಕೊಂಡು ಮೌನವಾಗುವ ವೆಂಕಟಪ್ಪನವರ ಕಾಯಿಲೆ-ಮರೆವು ಗುಣವಾಗಬೇಕೆಂದು ಅವರ ದೊಡ್ಡ ಕುಟುಂಬದ ಸದಸ್ಯರೆಲ್ಲರೂ ಬಯಸುತ್ತಿರುವುದು ಅವರ ಆಸ್ತಿಯ ಪಾಲಿನ ಸೂಕ್ತ ವಿಲೇವಾರಿಗಾಗಿ ಮಾತ್ರ ಎನ್ನುವುದು ಕಾಲದ ವಿಪರ್ಯಾಸದಂತಿದೆ. ಇಡೀ ಕಥಾನಕದ ಹಿನ್ನೆಲೆಯಲ್ಲಿ ಫೋಟೋಗ್ರಾಫರ್ ವಾಸುದೇವನಿಗೆ ಮಾತಿಲ್ಲದ ಸ್ತಬ್ಧ ಚಿತ್ರದಂತೆ ಮಲಗಿಕೊಂಡಿರುವ ವೆಂಕಟಪ್ಪನವರೇ ಒಂದು ನೆಗೆಟಿವ್‌ನಂತೆ ಕಾಣುವುದು ತುಂಬ ಧ್ವನಿಪೂರ್ಣವಾಗಿದೆ.

ಇರುವುದೆಲ್ಲವ ಬಿಟ್ಟು ಕತೆಯಲ್ಲೂ ಮನೆತನದ, ಮನೆಯ ಆಸ್ತಿಪಾಸ್ತಿಯ ಅಳಿವು ಉಳಿವಿನ ಪ್ರಶ್ನೆಯಿದ್ದರೂ ಇಲ್ಲಿಯೂ ಒಂದು ರೂಪಕವೇ ಪ್ರಧಾನ ಭೂಮಿಕೆಯನ್ನು ನಿರ್ವಹಿಸುತ್ತದೆ. ಇದನ್ನು ಗಮನಿಸಿ:

"ತುಂಗಕ್ಕ ನಾಗೊಂದಿಗೆಯ ಮೇಲೆಸೆದ ಹಾಲುದೀಪದ ಗುಡ್ಡವನ್ನು ಕೆಳಗಿಳಿಸಿದಳು. ಎರಡು ಅಡಿ ಎತ್ತರದ ಉರುಟಾದ ಪುಟ್ಟ ಕಂಬದ ಮೋಹಕ ದೀಪವಾಗಿತ್ತು ಅದು. ಹುಣಸೆ ಹಣ್ಣು ಉಜ್ಜಿ ತೊಳೆದಾಗ ಅದು ಹೊಳೆದು ಅದರ ಮೈಮೇಲಿನ ಲತೆ ಮೂಡಿತು. ವಾಣಿ ಆಂಟಿ ಮಗುವಿನೊಂದಿಗೆ ಬಂದಳು. ಮಗು ಹಾಲು ಕುಡಿಯದೆ ಸೊರಗಿತ್ತು. ದೀಪಕ್ಕೆ ಎಣ್ಣೆ ಹಾಕಿ ಬೆಳಗಿದಳು. ಮಣೆಯ ಮೇಲೆ ಕೂತು ಕಾಲು ಚಾಚಿ ಅದರ ಮೇಲೆ ಮಗುವನ್ನು ಅಂಗಾತ ಮಲಗಿಸಿದಳು. ಬೆಳದಿಂಗಳಂತೆ ತಂಪಾಗಿ, ಶಾಂತವಾಗಿ ಉರಿಯತೊಡಗಿದ ದೀಪವನ್ನು ನೋಡುತ್ತ ಮಗು ಅಳು ನಿಲ್ಲಿಸಿತು. ಬೆಳ್ಳಿಯ ಹುಟ್ಟಿನಿಂದ ಮಗುವಿನ ಬಾಯೊಳಗೆ ಹಾಲು ಸುರಿದಳು. ಮಗು ದುಂಡನೆಯ ಮುದ್ದಾದ ಕೈಕಾಲುಗಳನ್ನು ಒದೆಯುತ್ತ ಸುಖಿಸುತ್ತ ಹಾಲು ಚಪ್ಪರಿಸಿತು. ಹೊಟ್ಟೆ ತುಂಬ ತೇಗು ಬರುವವರೆಗೂ ಮಗುವಿನ ದೃಷ್ಟಿ ಹೆಡೆಯಂತೆ ತೂಗುವ ದೀಪದ ಮೇಲಿತ್ತು. ದೀಪದ ಕುಡಿಯ ಕಾಡಿಗೆ ಕರಿಯಿಂದ ದೃಷ್ಟಿ ಬೊಟ್ಟಿಟ್ಟು ದೀಪ ಆರಿಸಿದಳು. "ಹೀಗೆ ಒಂದೆರಡು ಸಲ ರೂಢಿ ಮಾಡಿಸಿದ ನಂತರ ರಂಪಾಟದ ಮಕ್ಕಳು ಸುಸೂತ್ರ ಹಾಲು ಕುಡಿಯುತ್ತವೆ. ಈ ವ್ರತವನ್ನು ನೀನಾದರೂ ಮುಂದುವರಿಸು ತಂಗಿ. ಹಾಲುದೀಪವನ್ನು ತಮ್ಮನಿಗೆ ಒಯ್ಯಲು ಬಿಡಬ್ಯಾಡ" ವಾಣಿ ಆಂಟಿ ಯಾಚಿಸಿದಳು. "ಹಾಲು ದೀಪ ಇಟ್ಟುಕೊಳ್ತೇನೆ" ತುಂಗಕ್ಕ ವಾಗ್ದಾನ ನೀಡಿದಳು."
(ಪುಟ ೩೨.)

ತಮ್ಮ ಪಟ್ಟಣದಲ್ಲಿ ನೆಲೆನಿಲ್ಲಲು ಬಯಸಿದ್ದಾನೆ. ತುಂಗಕ್ಕ ಮದುವೆಯಾಗಿ ಹೋದ ಹೆಣ್ಣುಮಗಳು. ಹಿರಿಯರ ಮನೆ-ಮನೆತನಕ್ಕೆ ಈಗ ವಾರಸುದಾರರಿಲ್ಲ. ಮನೆ-ಆಸ್ತಿಯನ್ನು ಪರರಿಗೆ ಮಾರಿಬಿಡುವ ಮಹಾ ಸಂಕಟದ ಒಂದು ಹೆಜ್ಜೆಯನ್ನು ಎತ್ತಿಟ್ಟಾಗಿದೆ. ಆ ಮನೆಯಲ್ಲಿ ಕೊನೆಯದಿನವೊಂದನ್ನು ಕಳೆಯುವುದಕ್ಕಾಗಿ ಎಲ್ಲರೂ ಒಂದಾಗಿದ್ದಾರೆ. ಈ ಸಂಕ್ರಮಣ ಘಟ್ಟದಲ್ಲಿ ಕತೆ ಇರುತ್ತ ತುಂಗಕ್ಕನ ವಿಲಕ್ಷಣ ದಾಂಪತ್ಯದ ಕಥಾನಕವೂ ತೆರೆದುಕೊಳ್ಳುತ್ತದೆ. ಒಂದರ್ಥದಲ್ಲಿ ಇಡೀ ಮನೆತನದ ಒಬ್ಬೊಬ್ಬ ಸದಸ್ಯನ/ಳ ಕತೆಯೂ ತುಂಗಕ್ಕನ ಕತೆಯೊಂದಿಗೆ ತಳುಕು ಹಾಕಿಕೊಂಡು ಹೊರಬರುತ್ತದೆ. ಆದರೆ ಇದೀಗ ಅದ್ಯಾವುದೂ ಮುಖ್ಯವಲ್ಲ. ಭೂಮಿಕೆಯಲ್ಲಿರುವುದು ಈ ಸಿಹಿ-ಕಹಿ ನೆನಪುಗಳ ಮೂರ್ತರೂಪದಂತಿರುವ ಮನೆಯನ್ನು ಮಾರುವುದು ಅಥವಾ ಉಳಿಸಿಕೊಳ್ಳುವುದು. ಎರಡೂ ಕ್ರಿಯೆಗಳಿಗೆ ಲೌಕಿಕ ಕ್ರಿಯೆಯೊಂದನ್ನು ಮೀರಿದ ಅರ್ಥವ್ಯಾಪ್ತಿಗಳಿರುವುದನ್ನು ಸೂಚಿಸುವುದಕ್ಕೆ ಮಾತ್ರ ತುಂಗಕ್ಕನ ಕಥಾನಕ. ಉಳಿದಂತೆ ಮುಖ್ಯವಾಗುವುದು ಹಾಲುದೀಪವೇ. ಮೇಲಿನ ಪರಿಚ್ಛೇದವೇ ಉಳಿದುದನ್ನು ಹೇಳುತ್ತದೆ.

ತೊಟ್ಟಿಲು ಕತೆಯಲ್ಲಿ ತೊಟ್ಟಿಲೇ ಒಂದು ರೂಪಕ. ಒಂದು ಬಗೆಯ ಉತ್ಸಾಹದ, ಸಂತಸದ ಗದ್ದಲ ತುಂಬಿಕೊಂಡಿರುವ `ಹಬ್ಬದಗುಡ್ಡೆ'ಯಲ್ಲಿ ಎಲ್ಲ ಸದ್ದಿಗೂ ಒಂದು ಲಯಕೊಡುವ ಹಾಗೆ ಕೇಳಿಸುವ ಕಂಭದ ತೊಟ್ಟಿಲು ಜೀಕುವ ಸದ್ದು ಹಳ್ಳಿಯ ಜಾತ್ರೆಗೆ ಬಂದವರೆಲ್ಲರಲ್ಲೂ ಸಂಭ್ರಮವನ್ನು ತುಂಬುತ್ತಿರುತ್ತದೆ. ಆ ಸದ್ದು, ಉತ್ಸಾಹ ಬಲ್ಲವರೇ ಬಲ್ಲರು. ಬಳಗಾರರ ಕಥೆಯಲ್ಲಿ ಈ ಜಾತ್ರೆಯ ಸಂಭ್ರಮದ ಛಾಯೆಯಲ್ಲೇ ಒಂದು ವಿಷಾದ, ವಿಷಣ್ಣತೆ ತುಂಬಿಕೊಂಡಂತಿದೆ. ಇದಕ್ಕೆ ಕಾರಣ ನಾಗರೀಕತೆಯ ನಾಗಾಲೋಟಕ್ಕೆ ಸಿಕ್ಕಿ ಊರು ಬರಿದಾಗುತ್ತಿದೆ, ಯುವಪೀಳಿಗೆ ನಗರದ ಆಕರ್ಷಣೆಗೆ ಸಿಕ್ಕಿ ಪಟ್ಟಣದಲ್ಲೇ ನೆಲೆಯೂರುತ್ತಿದೆ ಮತ್ತು ಹೀಗಾಗಿ ಊರಿನ ಹಿರಿಯ ತಲೆಗಳಿಗೆ ದಿಕ್ಕಿಲ್ಲದಂತಾಗಿದೆ ಎನ್ನುವುದು. ಊರಿನ ಮನೆಗಳಲ್ಲಿ ತೊಟ್ಟಿಲು ತೂಗುವ ಕೆಲಸವಿಲ್ಲ ಎನ್ನುವುದನ್ನೇ ಊರ ಜಾತ್ರೆಯ ತೊಟ್ಟಿಲ ಕಂಭ ಹುಗಿಯುವಲ್ಲಿಂದ ತೊಡಗಿ ಶೈಲಕ್ಕನ ಭ್ರಾಂತಿ, ಅನಂತಪ್ಪನವರ ಜೀವನಪ್ರೀತಿ ಎರಡನ್ನೂ ಒಳಗೊಂಡು ಹೇಳುತ್ತ ಕತೆ ಸಂಪನ್ನವಾಗುತ್ತದೆ.

ಸಂಲಗ್ನ ಕತೆ ಒಂದು ಕಾದಂಬರಿಯ ಹರವು ಉಳ್ಳದ್ದು. ಡ್ರೈವರ್ ಪ್ರಭಾಕರ ಮತ್ತು ದೇವಕಾರಿನ ಬದುಕಿನೊಂದಿಗೆ ಅವನಿಗಿರುವ ನಂಟು ಮತ್ತೊಮ್ಮೆ ಸಂಲಗ್ನದಲ್ಲಿ ಕೂಡಿಕೊಳ್ಳುವ ಕಥಾನಕದಂತೆ ಕಾಣುವ ಇಲ್ಲಿನ ಕತೆಯಲ್ಲಿ ಬೆಳ್ಳಜ್ಜ, ಹೆಬ್ಬಾರರು, ಭವಾನಿ, ಶಕುಂತಲೆಯ ನಾಟಕ, ಮಾರಗೌಡನ ಪ್ರಕರಣ ತೆರೆದಿಡುವ ಜಾತಿರಿವಾಜು ಎಲ್ಲ ಸೇರಿಕೊಂಡಿದೆ. ಹಾಗಿದ್ದೂ ಉಳಿದೇ ಹೋಗುವ ಕೆಲವು ಗುಟ್ಟುಗಳ ಕುರಿತು ತನ್ನದೇ ಆದ ರೀತಿಯ ಮುಗ್ಧ ಕೌತುಕವನ್ನು ಕಾಪಿಡುತ್ತ ಸಾಗುವ ಕತೆ ಸಣ್ಣಕತೆಯೊಂದರ ಇತಿಮಿತಿಗಳನ್ನು ಮೀರಿ ಚಾಚಿಕೊಂಡಿದೆ.

ಮೃಣ್ಮಯ ಕತೆ ಎರಡು ಕಾರಣಗಳಿಗಾಗಿ ಮಹತ್ವದ್ದು. ಒಂದು, ಬಹುಷಃ ಇದೇ ಮೊತ್ತ ಮೊದಲ ಬಾರಿಗೆ ಬಳಗಾರರ ಕತೆಯ ಕಥಾನಕದ ಸ್ವಲ್ಪ ಭಾಗವಾದರೂ ಉತ್ತರಕನ್ನಡದ ಹಳ್ಳಿಗಾಡನ್ನು ದಾಟಿ ಬೆಂಗಳೂರಿನಂಥ ನಗರಪ್ರದೇಶಕ್ಕೆ ವಿಸ್ತರಿಸಿರುವುದು. ಎರಡು, ಈ ಕತೆಯಲ್ಲಿ ಬಳಗಾರರು ಹೆಚ್ಚು ನೇರವಾಗಿ ಜಾಗತೀಕರಣದ ಸೆಳಹುಗಳನ್ನು ಮೀಟಿರುವುದು. ಈ ಕತೆಯ ಮೂರು ಪ್ರಧಾನ ಪಾತ್ರಗಳಲ್ಲಿ ಒಂದು ಕೇತಕಿ. ನಗರ ಜೀವನ ಈಕೆಯಲ್ಲಿ ತರಿಸಿದ ವಾಕರಿಕೆಗೆ ದೇವರಮನೆ ಕೋದಂಡನ ಗದ್ದೆಯ ಮಣ್ಣೇ ಪರಿಹಾರದಂತಿರುವುದು ಸ್ವತಃ ಬಸುರಿಯಾಗಿರುವ ಕೇತಕಿಯ ಪಾತ್ರದ ಸಾರ್ಥಕ ಪ್ರತಿಮೆಯಾಗಿ ಕತೆಯಲ್ಲಿ ಮೂಡಿರುವುದನ್ನು ಗಮನಿಸಬಹುದು. ಅದೇ ರೀತಿ ಈ ದೇವರಮನೆಯ ಕೋದಂಡ ಇನ್ನೊಂದು ಪ್ರಧಾನ ಪಾತ್ರ ಮಾತ್ರವಲ್ಲ ಒಂದರ್ಥದಲ್ಲಿ ಇನ್ನೊಂದು ಸಾರ್ಥಕ ರೂಪಕದಂಥ ಪಾತ್ರ ಕೂಡ. ಪಟ್ಟಣ ಸೇರಿಕೊಂಡ ಮೇಲೆ ತನ್ನ ನಾಲಗೆಯ ತುದಿಯಲ್ಲಿದ್ದ ಅಸಂಖ್ಯ ಹಕ್ಕಿಪಿಕ್ಕಿಗಳ, ಗಿಡಮರಗಳ ಹೆಸರುಗಳನ್ನೆಲ್ಲ ಮರೆತು ಹೋಟೆಲಿನ ತಿಂಡಿಗಳ, ಸಿನಿಮಾ ಟಾಕೀಸುಗಳ, ಸಿಟಿ ಬಸ್ಸಿನ ನಂಬರುಗಳ ಉಗ್ರಾಣದಂತಾಗಿರುವ ಚೂಡಾಮಣಿ ಈ ಕತೆಯ ಇನ್ನೊಂದು ಪ್ರಧಾನ ಪಾತ್ರ. ಈತನ ಕತೆಯೊಂದಿಗೆ ಹಳ್ಳಿಯಲ್ಲಿ ನರಕವನ್ನನುಭವಿಸುತ್ತಿರುವ ಹುಚ್ಚಿ ತಾಯಿಯ ದುರಂತ ತಳುಕು ಹಾಕಿಕೊಂಡಿದೆ. ಒಂದೆಡೆ ಸಂತನಂಥ, ಸಲಹಿ ಸಂತೈಸುವ ಮಾತೃಗುಣದ ಕೋದಂಡ, ಇನ್ನೊಂದೆಡೆ ಚೂಡಾಮಣಿಯ ಅತಂತ್ರ ಬದುಕು ಮತ್ತು ನಡುವೆ ಕೇತಕಿಯಿದ್ದಾಳೆ. ಮೃಣ್ಮಯ ಈ ಸಂಕಲನದ ಮತ್ತೊಂದು ಧ್ವನಿಪೂರ್ಣ ಸಾರ್ಥಕ ಕತೆ.

ಗಾಳಕ್ಕೆ ಬೀಳದ ಕೊಳದ ಚಂದ್ರ ಕತೆಯನ್ನು ನಾವು ತೇಜಸ್ವಿಯವರು ಚಿತ್ರಿಸುತ್ತ ಬಂದ ಒಂದು ಜಗತ್ತಿನ ಸ್ಮೃತಿಯೊಂದಿಗೆ ಗಮನಿಸಬಹುದು. ಕರ್ವಾಲೋ ಕಾದಂಬರಿಯ ಒಬ್ಬ ಮಂದಣ್ಣ, ಕರಿಯಣ್ಣ, ಎಂಕ್ಟನಾಗಲೀ, ಚಿದಂಬರ ರಹಸ್ಯದಲ್ಲಿ ಮುಂದುವರಿಯುವ ಇವೇ ಕೆಲವು ಪಾತ್ರಗಳು ಅಥವಾ ಗೋಸಾಯಿಗಳಿರಲಿ, ಮಾಯಾಲೋಕದ ಪಾತ್ರಗಳಿರಲಿ, ಪರಿಸರದ ಕತೆಗಳು ಸಂಕಲನದಲ್ಲಿ ಬರುವ ಅನೇಕ ಪಾತ್ರಗಳಿರಲಿ - ಈ ಕತೆಯ ಗೊಲ್ಲರ ಶೇಷನ ಚರ್ಯೆಗೆ ಒಂದು ಹಿನ್ನೆಲೆಯಂತೆ ನೆನಪಾಗುತ್ತವೆ, ನೆರವಾಗುತ್ತವೆ. ಆಧುನಿಕ ಜಗತ್ತಿನ ಕುತೂಹಲ ಇಂಥವರ ದೈನಂದಿನ ಸಾದಾ ಬದುಕಿನ ಲಯದ ಮೇಲೆ ತಿಳಿದೋ ತಿಳಿಯದೆಯೋ ನಡೆಸುವ ಅತಿಕ್ರಮಣ, ನಾಗರಿಕ ಜಗತ್ತಿನ ಇಂತಹುದೇ "ದಾಖಲಿಸುವ" ಅಥವಾ `ಸಂಗ್ರಹ'ದ ಹುಚ್ಚೇ ಮೂಲಕಾರಣವಾಗಿ ಏರುಪೇರಾಗುವ ಇವರ ಪರಿಸರ - ಒಂದು ಸ್ತರದ ವಿದ್ಯಮಾನಗಳಾದರೆ, ಇದನ್ನೆಲ್ಲ ರೂಪಾಯಿಗಳ ಭಾಷೆಯಲ್ಲಿ ಬದಲಾಯಿಸಿಕೊಳ್ಳಬಲ್ಲ ಜಾಣರ ಪಡೆ ನಮ್ಮ ಬದುಕನ್ನು, ಸಂಸ್ಕೃತಿಯನ್ನು ಕಲಕುವ ಇನ್ನೊಂದು ವಿದ್ಯಮಾನ ಬೇರೆಯೇ ಒಂದು ಸ್ತರದ್ದು. ಇಲ್ಲಿನ ಲಕ್ಕಣ್ಣನ ವ್ಯವಹಾರ ಚಾತುರ್ಯ ಫ್ರಾನ್ಸ್‌ನಿಂದ ಸಾಕ್ಷ್ಯಚಿತ್ರ ಮಾಡಲು ಬಂದ ಅಲೆಕ್ಸ್‌ನನ್ನು ಕಬಳಿಸುವ ವಿಧಾನದಲ್ಲಿ ಚಿತ್ರಿಸಲ್ಪಟ್ಟಿದೆ. ಗೊಲ್ಲರ ಶೇಷನ ಹಾವಾಡಿಗತನದ ಕೌಶಲ್ಯ, ಅವನ ಚಿಕಿತ್ಸಾ ಕ್ರಮದ ಕೌಶಲ್ಯ, ಅದಕ್ಕೆ ಅವನು ಉಪಯೋಗಿಸುವ ಸಸ್ಯಸಂಜೀವಿನಿಯ ರಹಸ್ಯವನ್ನು ಅರಿಯುವ `ಕೆಟ್ಟ' ಕುತೂಹಲ, ಇವುಗಳೆಲ್ಲದರ ಮೇಲೆ ವ್ಯವಹಾರ ಮತ್ತು ನಾಗರಿಕ ಹದ್ದಿನ ಕಣ್ಣುಗಳು ಬೀಳುವ ಪರಿಗೆ ಶೇಷ ಪ್ರತಿಸ್ಪಂದಿಸುವ ವಿನೂತನ ಬಗೆ ಬಳಗಾರರ ಕತೆಯಲ್ಲಿದೆ. ಸದ್ಯಕ್ಕಂತೂ ಕತೆಯ ಮಟ್ಟಿಗೆ ಈ ಕೊಳದ ಚಂದ್ರ ಗಾಳಕ್ಕೆ ಬೀಳುವುದಿಲ್ಲ ಎನ್ನುವುದು ತಾತ್ಕಾಲಿಕ ಸಮಾಧಾನದಂತೆ ಕಂಡರೂ ಕತೆ ತನ್ನ ಗುರಿ ಸಾಧಿಸಿದಂತಿದೆ.

ಅಕ್ಕ ಕೇಳವ್ವ ಈ ಸಂಕಲನದ ಒಂದು ಅತ್ಯುತ್ತಮ ಕತೆ ಮತ್ತು ಬಹುಷಃ ಬಳಗಾರರ ಕತೆಗಳಲ್ಲೇ ಹೆಚ್ಚು ಸಶಕ್ತವಾಗಿ ಪ್ರತಿಮಾವಿಧಾನವನ್ನು ಬಳಸಿಕೊಂಡ ಕತೆ. ಈ ಕತೆಯ ದಾನಪ್ಪ ಮಹಾಭ್ರಷ್ಟ. ದಾನಪ್ಪನ ದುರಾಸೆಯಿಂದಾಗಿ ಅನೇಕ ಬಡ ಕೂಲಿಕಾರ್ಮಿಕರ ಬದುಕು-ಭವಿಷ್ಯಗಳು ಕಮರಿ ಹೋಗಿವೆ. ಮುಚ್ಚಿದ ಗಿರಣಿ ಮತ್ತೆ ನಡೆಯುವಂತಾದರೆ ಮಾತ್ರ ಅವರ ಬದುಕು ಚಿಗುರಬಲ್ಲ ಸ್ಥಿತಿ. ದಾಕ್ಷಾಯಿಣಿ ಈ ದಾನಪ್ಪನ ಮಗಳು. ದಾನಪ್ಪನ ಬಡತನದ ದಿನಗಳ ಗೆಳೆಯ ಪುಟ್ಟಯ್ಯನ ಒಬ್ಬಳೇ ಮಗಳು ಅಕಾಲಿಕ ಮೃತ್ಯುವಿಗೆ ತುತ್ತಾಗಿದ್ದಾಳೆ. ಹಾಗೆ ಸತ್ತ ಉಮಾ, ದಾಕ್ಷಾಯಿಣಿಯ ಸಹಪಾಠಿ. ಕತೆಯಲ್ಲಿ ಈ ದಾಕ್ಷಾಯಿಣಿ ಅಕ್ಕಮಹಾದೇವಿಯ ಪ್ರತಿರೂಪದಂತೆ ಬೆಳೆಯುತ್ತ ಸಾಗುವ ಚಿತ್ರವಿದೆ. ಇದಕ್ಕೆ ಯೌವನದಲ್ಲಿ ಅಪಮೃತ್ಯುವಿಗೀಡಾದ ಸಹಪಾಠಿ ಉಮಾ ಕಾರಣವೆ, ತಂದೆಯ ಭ್ರಷ್ಟತನದ ಕುರಿತು ಮೂಡಿದ ಅಸಹ್ಯ ಕಾರಣವೆ, ಗಿರಣಿಯ ಬಡ ಕಾರ್ಮಿಕರ ಹತಾಶೆ ಹಿಂಸೆ-ಕ್ರೌರ್ಯಗಳತ್ತ ಹೊರಳುತ್ತಿರುವುದರ ಅರಿವು ಕಾರಣವೆ ಅಥವಾ ತಂದೆಯ ವಿರುದ್ಧ, ಇನ್ನ್ಯಾವುದೋ ಅನ್ಯಾಯದ ವಿರುದ್ಧ ಅವಳು ಗಳಿಸಿದಂತೆ ಕಂಡ ವಿಜಯದ ಕುರಿತೇ ಹುಟ್ಟಿದ ಅನಾಸಕ್ತಿ ಕಾರಣವೆ ಎಂದರೆ ಈ ಎಲ್ಲವೂ ಎನ್ನಬೇಕು, ಕತೆ ಹಾಗೆ ಒಂದು ಸಮನ್ವಯತೆಯನ್ನು ಕಾಯ್ದುಕೊಂಡಿರುವುದು ಗಮನಾರ್ಹ.

ತಿಮ್ಮಕ್ಕನ ದರ್ಶನಗಳು ಕತೆ ಕೂಡ ಆಧುನಿಕ ಜಗತ್ತಿನ ಸರ್ಕಸ್ಸುಗಳ ಕುರಿತಾಗಿಯೇ ಇದೆ. ತಿಮ್ಮಕ್ಕನ ನಂಬುಗೆಗಳಿಗೆ ವಿರುದ್ಧವಾಗಿ ಕೊಟ್ಟಿಗೆಯನ್ನು ಬರಿದುಗೊಳಿಸಿ ಹೊಸ ಜೆರ್ಸಿ ದನವನ್ನು ತಂದು ಕಟ್ಟುವ ತಿಮ್ಮಕ್ಕನ ಮಗ ಸಹದೇವನ ಯೋಜನೆಗೆ ಕುಮ್ಮಕ್ಕು ಕೊಟ್ಟವರು ಹೊಸದಾಗಿ ವರ್ಗವಾಗಿ ಬಂದ ಪಶುವೈದ್ಯ ಪಾಟಣಕರ್ ಮತ್ತು ಟಿಲ್ಲರ್ ಬಾಡಿಗೆಗೆ ಇಟ್ಟಿರುವ ಜಮೀರ. ಇವರಿಬ್ಬರಿಗೂ ಇಂಥ ಪ್ರಚೋದನೆ ನೀಡುವುದಕ್ಕೆ ಅವರವರದೇ ಆದ ಕಾರಣಗಳಿವೆ. ಆದರೆ ತನ್ನ ಇಳಿವಯಸ್ಸಿನಲ್ಲಿ ಆಡಳಿತವನ್ನು ಪೂರ್ತಿಯಾಗಿ ಮಗ ಮತ್ತು ಸೊಸೆಯ ಕೈಗೆ ಕೊಟ್ಟು ಕೂತಿರುವ ತಿಮ್ಮಕ್ಕ ಈ ವಿದ್ಯಮಾನಕ್ಕೆ ಪ್ರತಿಸ್ಪಂದಿಸುವ ಬಗೆ ಕುತೂಹಲಕರವಾಗಿದೆ.

"ಜೆರ್ಸಿಯನ್ನು ತಿಮ್ಮಕ್ಕನಿಗೆ ದೇವತೆಗಳು ವಾಸವಾಗಿರುವ ಹಸುವಿನಂತೆ ಪರಿಭಾವಿಸಲು ಸಾಧ್ಯವಾಗಿರಲೇ ಇಲ್ಲ. ಭಾರತದ ಯಾವ ಪವಿತ್ರ ನದಿಯ ಹೆಸರಿನಿಂದಲೂ ಅದನ್ನು ಕರೆಯಲು ಅವಳಿಗೆ ಮನಸ್ಸಾಗುತ್ತಿಲ್ಲ. ಗೋಮೂತ್ರ ಪಂಚಗವ್ಯದಂಥ ಪವಿತ್ರ ಪರಿಕಲ್ಪನೆಗಳು ಜೆರ್ಸಿಯ ಸಾನ್ನಿಧ್ಯದಲ್ಲಿ ನಿಲ್ಲಲಾರವು ಎಂದೆನಿಸಿತ್ತು ಅವಳಿಗೆ. ಅದರ ಸೆಗಣಿಯಿಂದ ಮನೆಯ ನೆಲವನ್ನು ಸಾರಿಸಿ ಶುಚಿಗೊಳಿಸಲು ಬಾರದೆಂದು ಅವಳ ನಂಬಿಕೆ. ಆಕಳ ಪಾದ ಸ್ಪರ್ಶಿಸಿ ನಮಸ್ಕರಿಸಲು, ಗೋಗ್ರಾಸ ಕೊಡಲು ತಿಮ್ಮಕ್ಕ ಹೋಗಲಿಲ್ಲ. ತನ್ನ ಮರಣಾನಂತರ ಹಸುವಿನ ಹೆಸರಿನ ಈ ವಿಕೃತ ಪ್ರಾಣಿಯನ್ನು ಗೋದಾನವಾಗಿ ನೀಡಿದರೆ ತಾನು ನರಕಕ್ಕೆ ಹೋಗುವುದು ಖಂಡಿತವೆಂದು ಅವಳಿಗೆ ಆತಂಕವಾಗಿತ್ತು. ಜೆರ್ಸಿಯ ಹಸಿವು, ಅದು ತಿನ್ನುವ ಆಹಾರದ ಪ್ರಮಾಣ ನೋಡಿ ತಿಮ್ಮಕ್ಕನಿಗೆ ಅಸಾಮಾನ್ಯವೆನಿಸಿ ದಿಗಿಲಾಗಿ ಹೋಗಿತ್ತು. ಮನುಷ್ಯರು ತಿನ್ನುವ ಆಹಾರವನ್ನೇ ಅದು ತುಂಬಾ ಇಷ್ಟಪಡುತ್ತಿತ್ತು. ಗಂಗಾಣಿ ಉಳಿದ ತಂಗಳನ್ನವನ್ನು ಅದಕ್ಕೆ ನೀಡುತ್ತಿದ್ದಳು. ಸಹದೇವ ಅದೊಂದು ಪ್ರಾಣಿ ಎಂಬುದನ್ನು ಮರೆತು ಮನುಷ್ಯ ವಾಚಕದಲ್ಲೇ ಸಂಬೋಧಿಸುತ್ತಿದ್ದ. ಅದರ ಸಗಣಿ ಮನುಷ್ಯರ ಅಮೇಧ್ಯದಂತೆ ಕಾಣುತ್ತಿತ್ತು. ಅದನ್ನು ತಂದು ನೆಲಸಾರಿಸಿದರಂತು ತಿಮ್ಮಕ್ಕನಿಗೆ ವಾಕರಿಕೆಯೇ ಬಂದುಬಿಡುತ್ತಿತ್ತು. ಆದರೆ ಅದೊಂದು ಸಾತ್ವಿಕ ಪಶುವೇ ಆಗಿತ್ತು. ತಿನ್ನುವ ಮತ್ತು ಹಾಲು ನೀಡುವ ವಿಷಯದಲ್ಲಿ ಅದೊಂದು ಯಂತ್ರವೇ ಆಗಿತ್ತು. "ಮುಂದೆ ಬಂದರೆ ಹಾಯದ, ಹಿಂದೆ ಹೋದರೆ ಒದೆಯದ ಅದು ನಮ್ಮ ಪುಣ್ಯಕೋಟಿಗಿಂತ ಕಡಿಮೆಯೇನಲ್ಲ" ಎಂದು ಸಹದೇವ ವಾದಿಸಿದ್ದ. ಆದರೆ ತಿಮ್ಮಕ್ಕನಿಗೆ ಅದು ಪಳಗಿಸಿದ ಕಾಡುಪಶುವಿನಂತೆ ಕಾಣುತ್ತಿತ್ತೆ ವಿನಃ ಕಾಮಧೇನುವಾಗಲ್ಲ." (ಪುಟ ೧೧೫)

ಇಂಥ ಜೆರ್ಸಿ ದನದ ಕರು ನಂದಿಯ ಅವತಾರ ಎನಿಸಿಕೊಳ್ಳುವುದು, ಗುಡಿಯಲ್ಲಿ ಎಲ್ಲಿಂದಲೋ ಬಂದು ಸೇರಿಕೊಂಡ ಬೈರಾಗಿಯೇ ಆ ನಂದಿಯ ಇನ್ನೊಂದು ರೂಪ ಎನಿಸಿಕೊಳ್ಳುವುದು, ಮಕ್ಕಳಿಲ್ಲದ ಗಂಗಾಣಿ ಈ ಬೈರಾಗಿಯ ಬಂಜೆಯರಿಗೆ ಸಂತಾನ ಕರುಣಿಸಬಲ್ಲ ಅವಧೂತತನಕ್ಕೆ ಮರುಳಾಗುವುದು, ಜೆರ್ಸಿ ದನದ ಪಾವಿತ್ರ್ಯವನ್ನೇ ಒಪ್ಪಲಾರದ ತಿಮ್ಮಕ್ಕ ಈ ಅವತಾರವನ್ನಾಗಲೀ ಬೈರಾಗಿಯ ಸಾಚಾತನವನ್ನಾಗಲೀ ನಂಬದೆ ದೂರ ಉಳಿಯುವುದು, ಕೊನೆಗೂ ಆಕೆ ಗುಡಿಗೆ ಹೋದಾಗ ಕಾಣುವ ವೃಷಭದೇವನ ಮಿಥುನ ಶಿಲ್ಪದ ನೋಟ ಮತ್ತು ಕಥೆಯ ಕೊನೆಗೆ ಅವಳು ದಿಗಿಲಿನಿಂದ ಕಾಡಿನತ್ತ ಸಾಗುವುದು - ಈ ಎಲ್ಲವೂ ಕತೆಗೆ ನೀಡಿರುವ ಮಾಯಕತೆಯ ಸ್ಪರ್ಶ ಮತ್ತು ಹಿಗ್ಗಿಸಿದ ಅರ್ಥವ್ಯಾಪ್ತಿ ವಿಶೇಷ ಗಮನಕ್ಕೆ ಅರ್ಹವಾದುದಾಗಿದೆ.

ಬಳಗಾರರ ಅನೇಕ ಕತೆಗಳಲ್ಲಿ ನಮಗೆ ಮತ್ತೆ ಮತ್ತೆ ಕಾಣಸಿಗುವ ಅಸಂಗತ ಲೋಕದ ವಿವರಗಳನ್ನು ಬಳಸಿಕೊಳ್ಳುವ ಒಂದು ಕತೆ ಮಾರಿಹೊರೆ. ನಾರ್ವೇಕರ ಮನೆತನದ ಕೊನೆಯ ಕೆಲವು ಕೊಂಡಿಗಳು ತಮ್ಮ ಬದುಕಿನ ಕೊನೆಯ ದಿನಗಳನ್ನು ಕಳೆಯಲೋ ಎಂಬಂತೆ ಅಚಾನಕ್ಕಾಗಿ ಊರಿನಲ್ಲಿ ಕಾಣಿಸಿಕೊಳ್ಳುವ ವಿದ್ಯಮಾನದೊಂದಿಗೆ ತೊಡಗುವ ಕತೆ ಅವರ ವಿಲಕ್ಷಣ ಬದುಕು, ಓಡಾಟ ಮತ್ತು ಬೇರೆಯೇ ಆದ ಒಂದು ಜಗತ್ತಿನಲ್ಲಿ ಅವರು ಜೀವಿಸುತ್ತಿರುವುದರ ಪರೋಕ್ಷ ವಿವರಗಳನ್ನು ಕೊಡುತ್ತದೆ. ಊರಿನ ಸಾಮಾನ್ಯರೊಂದಿಗೆ ಬೆರೆಯದ ಮೇಲ್ವರ್ಗದ ಎಲ್ಲ ಬಿಗುಮಾನ, ಅಸಹಜತೆಗಳನ್ನು ಪ್ರದರ್ಶಿಸುವ ಈ ಅಣ್ಣತಮ್ಮಂದಿರು ಮನೆಯ ಕಸ ಕೂಡಾ ಹೊರಹಾಕದೆ ಬದುಕುವ ಪರಿ ಇಡೀ ಊರಿನ ಅವಲಕ್ಷಣದಂತಿರುವುದನ್ನು ಮಾರಿಹೊರೆ ಎನ್ನುವ ಶಬ್ದವೇ ಹೇಳುತ್ತದೆ. ಮಾರಿ ಎಬ್ಬುವುದು, ಮಾರಿ ಓಡಿಸುವುದು ಎಂಬೆಲ್ಲ ಪದ ಪ್ರಯೋಗಗಳು ಕೂಡಾ ಇಂಥ ಅರ್ಥವನ್ನೇ ನೀಡುತ್ತವೆ. ಇಲ್ಲಿ ಮಾತ್ರ ಇದು ಸ್ವಲ್ಪ ನೋವು ಮತ್ತು ತಲ್ಲಣಗಳನ್ನು ಏಕಕಾಲಕ್ಕೆ ತನ್ನ ಒಡಲಿನಲ್ಲಿ ಹೊತ್ತಿರುವುದನ್ನು ನಾವು ಗಮನಿಸಬೇಕು. ಪುಂಡಲೀಕ ಕೊನೆಯ ದಿನಗಳಲ್ಲಿ ತಂಗಿ ಮಾಯಾ ಬಳಿ ಹಿಂದೆ ಪ್ರತಿದಿನ ಮುಸ್ಸಂಜೆ ಹೇಳುತ್ತಿದ್ದ ವಿಠೋಬನ ಭಜನೆಯನ್ನು ಹಾಡುವಂತೆ ಕೇಳಿಕೊಳ್ಳುತ್ತಾನೆ. `ಕಾಡು ಹೋಗುವ' ಪ್ರಕ್ರಿಯೆ ನಡೆಸಲು ಓದುಗನ ನಿರೀಕ್ಷೆಗೂ ವಿರುದ್ಧವಾಗಿ ಸಮ್ಮತಿಸುತ್ತಾನೆ. ಮತ್ತು ಅವನ ಕೊನೆಯ ಚಿತ್ರ, ಸಿನಿಮಾ ನಟನಾಗಲು ಬಯಸಿದ್ದ ರಜನಿ ಕೊಡುವ ಚಿತ್ರ, ಹಲವು ಸಾಧ್ಯತೆಗಳನ್ನು ಮತ್ತು ಅರ್ಥಗಳನ್ನೂ ಧ್ವನಿಸುತ್ತಿದೆ. ಊರಾಚೆ ಬಿಟ್ಟುಬಂದಿದ್ದ ಮಾರಿಹೊರೆಯನ್ನು ಎಳೆಯುತ್ತ ಅವನು ಸಮುದ್ರದತ್ತ ನಡೆದು ಹೋಗುವುದು ಮತ್ತು ರಜನಿ ಹಿಂದಿರುಗಿ ನೋಡಿದಾಗ ಅಲ್ಲಿ ಯಾರೂ ಇಲ್ಲದಿರುವುದು ಆ ಚಿತ್ರ. ಇದು ಸುಳ್ಳಲ್ಲ ಎನ್ನುವಂತೆ ಪುಂಡಲೀಕ ರಜನಿಗೆ ಕೊಟ್ಟ ಸೈಕಲ್ ಇದೆ.

ಕಾಲದ ಘಾತಕ್ಕೆ ಸಿಲುಕಿ ಒಂದು ಕುಟುಂಬ ನಾಶವಾಗುವುದನ್ನು ಮಾತ್ರ ಈ ಕತೆ ಹೇಳುತ್ತಿಲ್ಲ. ಒಂದು ಮನೆತನದ ಅವನತಿ ವರ್ತಮಾನದಲ್ಲಿ ಅಪ್ರಸ್ತುತವಾಗುವುದನ್ನು ಅದಕ್ಕಿರಬಹುದಾದ ಸಹಜ ಕಾರಣಗಳೊಂದಿಗೇ ಹೇಳುವಾಗ ಅದು ಒಂದು ಹೊರೆಯಾಗಬಹುದಾದ, ಪ್ರೇತಛಾಯೆಯನ್ನು ಹೊತ್ತು ಅಪಶಕುನವಾಗಬಹುದಾದ ಸಾಧ್ಯತೆಯನ್ನು ಬಳಗಾರರು ಮುಂದಿಟ್ಟು ಹೇಳುತ್ತಾರೆ. ಅವಿಭಕ್ತ ಕುಟುಂಬ ಪದ್ಧತಿಯ ಅವಸಾನ, ನಗರದ ಆಕರ್ಷಣೆಗೆ, ವಿದೇಶಿ ವ್ಯಾಮೋಹಕ್ಕೆ ಒಳಗಾದ ಯುವ ಪೀಳಿಗೆಯ ವಲಸೆಯಿಂದ ಹಿರಿಯ ತಲೆಮಾರು ಅತಂತ್ರವಾಗುತ್ತಿರುವುದು, ಪುಟ್ಟ ಪುಟ್ಟ ಊರುಗಳು ಯಾಂತ್ರೀಕೃತ ಜೀವನಪದ್ಧತಿಯ ಮೋಹಕ್ಕೆ ಬಲಿಬೀಳುತ್ತಿರುವುದು ಮುಂತಾದ ವಸ್ತು-ವಿಷಯಗಳು ಬಳಗಾರರಿಗೆ ಆಪ್ತ ಎನಿಸುವಾಗಲೇ ಅವರು ಇದೆಲ್ಲದರ ಇನ್ನೊಂದು ಮುಖವನ್ನು ಕೂಡ ಹೀಗೆ ಚಿತ್ರಿಸಿರುವುದು ಅರ್ಥಪೂರ್ಣವಾಗಿದೆ.

ಮುಖ್ಯಪ್ರಾಣ ಕತೆ ಕೂಡ ಅಸಂಗತವನ್ನು ಸಂಗತ ಜಗತ್ತಿನೊಂದಿಗೆ ಜೋಡಿಸುತ್ತಲೇ ಮೈತಳೆದಿದೆ. ಮಹಂತಯ್ಯ ಮತ್ತು ಜಯಕ್ಕೋರ ನಡುವಿನ ಸಂಬಂಧದ ಎಳೆ ಎಷ್ಟು ಶಿಥಿಲವೋ ಅಷ್ಟೇ ಅಸಂಗತವಾದ ಒಂದು ವಿದ್ಯಮಾನದಂತಿರುವಾಗಲೇ ಅವುಗಳಿಂದ ಭದ್ರತೆಯ ನಿರೀಕ್ಷೆಯನ್ನು ಮಾಡುವ ಜಯಕ್ಕೋರು ನಮ್ಮನ್ನು ಕಾಡುತ್ತಾರೆ. ಜಯಕ್ಕನ ನಿರೀಕ್ಷೆಯಾಗಲೀ, ಅಗತ್ಯಗಳಾಗಲೀ ಎಷ್ಟು ಮಾತ್ರಕ್ಕೂ ತಪ್ಪೆಂದು ಹೇಳಲು ಬಾರದವು. ಆದರೆ ಮಹಂತಯ್ಯ ಒಬ್ಬ ಗವಾಯಿ, ಸಂತ, ಕಲಾವಿದ ಎಲ್ಲವೂ ಆಗಿರುವ ಅಸಂಗತ ವಸ್ತು! ಗುಡಿಗಾರಗಲ್ಲಿಯೋ, ರಮಣಿಬಾಯಿಯ ಮಹಡಿಯೋ, ಲಂಬಾಣಿ ರೂಪ್ಲಿಯ ಕಾಡಿನ ಮನೆಯೋ ಯಾವುದೇ ವ್ಯತ್ಯಾಸವಿಲ್ಲದಂತಿರಬಲ್ಲ ಮನುಷ್ಯ. ಜಯಕ್ಕ ತಾನು ಬದುಕುತ್ತಿರುವ ಮಧ್ಯಮವರ್ಗದ ಒಂದು ಗಲ್ಲಿ ಅಥವಾ ಕೇರಿಯ ಆಶೋತ್ತರಗಳನ್ನು ಕೂಡ ನಿರ್ಲಕ್ಷಿಸಲಾರಳು! ದಾಂಪತ್ಯದ ಎಲ್ಲ ನಡಾವಳಿ-ರಿವಾಜು-ನಾಟಕಗಳನ್ನು ಜಯಕ್ಕ ಕೂಡಾ ಅಭಿನಯಿಸಿ ಸೈಯೆನ್ನಿಸಿಕೊಳ್ಳಬೇಕಾದ ಒತ್ತಡದಲ್ಲಿರುವಾಕೆ. ಆದರೆ ಮಹಂತಯ್ಯನೊಂದಿಗಿನ ದಾಂಪತ್ಯ ಬೇರೆಯೇ ಸ್ತರದ್ದು. ಅದಕ್ಕೆ ಮಾನಸಿಕವಾದ ಒಂದು ಸ್ತರ ಮಾತ್ರ ಇರುವಂಥದ್ದು. ಇದು ಅದೇ ಕಾರಣಕ್ಕೆ ಸೋಲುವುದು ಇಲ್ಲಿನ ವಿಪರ್ಯಾಸ. ಇದಕ್ಕೆ ಸಂವಾದಿಯಾಗಿ ಇರುವ ಚಂದ್ರಹಾಸ-ಲಂಬಾಣಿ ಹುಡುಗಿಯ ದಾಂಪತ್ಯದ ನೆರಳಲ್ಲಿ ಮತ್ತೆ ಈ ಸಂಬಂಧ ಹೇಗೆ ಕಾಣಿಸುತ್ತದೆ ಎಂಬುದು ಕತೆಗೆ ಹೊಸದೇ ಒಂದು ಒಳನೋಟವನ್ನು ನೀಡುವಂಥದ್ದು.

ಮುಳ್ಳುಬೇಲಿಯ ಮಲ್ಲಿಗೆ ಕತೆ ಕೂಡಾ ಇನ್ನೊಂದು ಅರ್ಥದಲ್ಲಿ ದಾಂಪತ್ಯ ಅಥವಾ ಗಂಡು ಹೆಣ್ಣು ಸಂಬಂಧದ ಎಲ್ಲೆಕಟ್ಟುಗಳನ್ನು ತಡಕುವಂಥದ್ದು. ಮಧ್ಯಮವರ್ಗದ ದಾಂಪತ್ಯದ ಹೊರಮುಖದ ನಡಾವಳಿಗಳು, ವಿವಾಹಬಾಹಿರ ಗಂಡುಹೆಣ್ಣು ಸಂಬಂಧಗಳಲ್ಲಿ ಕಂಡುಬರುವ ನಿರ್ಬಂಧವಿಲ್ಲದ ನಿರಾಳತನದ ಸಹಜತನ ಮತ್ತು ಮಾನಸಿಕವಾದ ಒಂದು ಪರಸ್ಪರಾವಲಂಬನದ ಸಂಬಂಧ ಮೂರನ್ನೂ ಹೇಗೆ ತುಲನಾತ್ಮಕವಾಗಿ ಮುಖ್ಯಪ್ರಾಣ ಕತೆ ಗಮನಿಸುತ್ತದೆಯೋ ಹಾಗೆಯೇ ಇಲ್ಲಿ ಭಾಮಿನಿ ಮತ್ತು ಜಕ್ಕಣರ ಪ್ರೇಮವಿದೆ. ಮರಳಿ ಬಂದ ಭಾಮಿನಿ ವಿವಾಹಿತೆ. ಜಕ್ಕಣ ಮಾತ್ರ ಇನ್ನೂ ಭಾಮಿನಿಯ ಮನೋಗಾಮಿ. ಅವನು ಕೆತ್ತುವ ಪ್ರತೀ ಶಿಲ್ಪದ ಪರಿಕಲ್ಪನೆಯಲ್ಲೂ ಅವನು ಭಾಮಿನಿಯೊಂದಿಗೆ ಸಮಾಗಮಿಸುತ್ತಿದ್ದಾನೆ. ಆದರೆ ಊರಿಗೆ ಬಂದ ಭಾಮಿನಿ ಮರಳಿ ಇವನಲ್ಲಿಗೆ ಬರುವುದಿಲ್ಲ, ಅವಳು ಆಗಲೇ ಸಾಂಗ್ಲಿಗೆ ಮರಳಿ ಹೋಗಿದ್ದಾಳೆ. ಅವಳು ಭಾರವಾದ ಹೃದಯವನ್ನು ಹೊತ್ತು ಹೋದಳೆ ಅಥವಾ ಗೃಹಿಣಿಯ ನಿರಾಳಭಾವದಲ್ಲಿ ತೃಪ್ತಳೆ - ಎಂಬುದನ್ನು ಕತೆ ಕಾಣಲು ಹೋಗುವುದಿಲ್ಲ. ಪ್ರೇಮದ ಅಥವಾ ಗಂಡು ಹೆಣ್ಣು ಸಂಬಂಧದ ಸ್ತರಗಳ ಸ್ಪರ್ಶ ಮಾತ್ರ ಕತೆಯ ಗಮ್ಯ.

ನವಿಲುದೀಪ ಒಬ್ಬ ಯುವ ಪ್ರತಿಭಾವಂತನ ವಿದೇಶ ಗಮನದ ಆತುರ-ಆಕರ್ಷಣೆಯನ್ನು ವಸ್ತುವಾಗಿಟ್ಟುಕೊಂಡ ಕತೆ. ಇಲ್ಲಿ ಬರುವ ಗಿಣಿ ಮಾರಾಟ, ನಂದಿಯಜ್ಜ, ಕಶ್ಯಪನ ಪಾತ್ರದ ನಾಟಕೀಯತೆ ಎಲ್ಲವೂ ನಿರ್ದಿಷ್ಟ ಗುರಿಯತ್ತಲೇ ಮುಖಮಾಡಿರುವುದು ಸ್ಪಷ್ಟ. ಹಾಗಾಗಿಯೇ ಕಶ್ಯಪನ ಕನಸು, ಬನವಾಸಿಯ ಚರಿತ್ರೆ, ಪಂಪನ ಕತೆ, ಕದಂಬ ಜ್ಯೋತಿಯ ಪರಿಕಲ್ಪನೆ ಎಲ್ಲವೂ ಮನಸ್ಸಿನಾಳಕ್ಕೆ ತಟ್ಟುವುದಕ್ಕಿಂತ ಹೆಚ್ಚು ಬುದ್ಧಿಗೆ ನಿಲುಕಿ ನಿಲ್ಲುತ್ತದೆ. ವಿವರಗಳಲ್ಲಿ ಮನಸೆಳೆದರೂ ವಸ್ತುವಿನ ಸುತ್ತ ಹೆಣೆದ ಕತೆಯಾಗಿಯಷ್ಟೇ ನಿಲ್ಲುತ್ತದೆ.

ಕೊನೆಗಾಲ ಕೂಡ ನಿರ್ದಿಷ್ಟ ಗಮ್ಯದತ್ತ ಚಲಿಸುವ ಉದ್ದೇಶದಿಂದಲೇ ತೊಡಗುವ ಪಯಣವಾಗಿದ್ದಾಗಲೂ ಬಳಗಾರರ ಎಂದಿನ ಕತೆಗಳಂತೆ ಆಕೃತಿ-ವಸ್ತು-ತತ್ವದ ಸಿಲೆಬಸ್ ಬಿಟ್ಟುಕೊಟ್ಟು ಬದುಕನ್ನು ಆಶ್ರಯಿಸಿ ನೆಚ್ಚುವುದರಿಂದ ಕೇವಲ ಇನ್ನೊಂದು ಕತೆಯಾಗುವ ಅಪಾಯದಿಂದ ಪಾರಾಗಿದೆ. ಇಲ್ಲಿ ಬರುವ ದೊಡ್ಡೆಯ ಮನೆತನದ ಕತೆ ಈ ಕಥಾನಕದ ಮೂಲ ಎಳೆಗೆ ಹೊಸತೇ ಆದ ಆಯಾಮಗಳನ್ನು ಜೋಡಿಸಿದೆ. ಕುಟುಂಬದ ಹಿರಿಯ, ಅಣ್ಣನ ಆಸ್ತಿಯ ದುರಾಶೆಗೆ ದೊಡ್ಡೆಯ ಗಂಡ ಬಲಿಯಾಗಿದ್ದಾನೆ. ತಾನೂ ಬಲಿಯಾಗುವುದನ್ನು ತಪ್ಪಿಸಿಕೊಳ್ಳಲು ಊರಿಗೆ ಬಂದ ಶೃಂಗೇರಿ ಸಿದ್ಧನ ಜೊತೆ ಹೋದ ಕಿರಿಯ ಮೈದುನ-ಅಗ್ಗಾಸಿ ಸಿದ್ಧ-ಬುದ್ದಣ್ಣ ಎಲ್ಲ ಆಗಿ ಅವತಾರಗಳನ್ನೆತ್ತಿದ ಕತೆ ದೊಡ್ಡೆಯ ಬದುಕಿನ ದುರಂತಗಳನ್ನು ಪಟ್ಟಿಮಾಡುತ್ತದೆ. ಸುಬ್ರಾಯ ಪುರಾಣಿಕರು ಹೀಗೆ ಇಬ್ಬರು ತಮ್ಮಂದಿರನ್ನೂ ನಿವಾರಿಸಿಕೊಂಡು ದೊಡ್ಡೆಯನ್ನು ಕ್ರಮೇಣ ಅನಾಥೆಯನ್ನಾಗಿಸಿದ ಪ್ರಕ್ರಿಯೆಯಲ್ಲಿ ಎಲ್ಲ ಹೆಂಗಸರ ಬಗೆಗಿನ ತಿರಸ್ಕಾರ, ನಿರ್ಲಕ್ಷ್ಯ ಮತ್ತು ಅವರ ಸುಖ-ದುಃಖಗಳ ಕುರಿತ ದಿವ್ಯ ಅವಜ್ಞೆಯನ್ನು ಸುವ್ಯವಸ್ಥಿತ ರೀತಿಯಲ್ಲಿ ನಡೆಸಿಕೊಂಡು ಬಂದ ಪರಂಪರೆಯ ವಿಡಂಬನೆಯನ್ನು ಬಳಗಾರರು ಸೂಕ್ಷ್ಮವಾಗಿ ಗುರುತಿಸುತ್ತಾರೆ. ಇದೆಲ್ಲದರಾಚೆ ಮುಖ್ಯವಾಗುವುದು ದೊಡ್ಡೆಯಂಥವರ ಬದುಕುವ ಹುಮ್ಮಸ್ಸು, ಜೀವನ ಪ್ರೀತಿ ಮತ್ತು ಅವರು ನಂಬಿಕೊಂಡು ಬಂದ ಮೌಲ್ಯಗಳು. ಅಷ್ಟೇ ಚಿದಂಬರ ಗೋಖಲೆಯಂಥ ಮುಗ್ಧ ಮನಸ್ಸಿನ ಹೃದಯವಂತರು ಕೂಡ ಮನಸ್ಸಿನಲ್ಲಿ ನಿಲ್ಲುತ್ತಾರೆ.

ಬಳಗಾರರ ಈ ಸಂಕಲನ ವಿನೂತನ ಬಗೆಯ ಕತೆಗಳನ್ನು ಕೊಟ್ಟಿದೆ. ಒಂದೊಂದು ಕತೆಯೂ ಹೊಸತನವನ್ನು ಹೊಂದಿದ್ದು, ವಸ್ತು-ವಿವರ ಮತ್ತು ಕಥಾನಕ ಒಂದಕ್ಕಿಂತ ಒಂದು ಕತೆಯಲ್ಲಿ ವಿಭಿನ್ನವಾಗಿದ್ದು ಓದುಗರಲ್ಲಿ ಕುತೂಹಲ ಮೂಡಿಸುವಂತಿದೆ. ಹಾಗೆಯೇ ಇಲ್ಲಿನ ಪ್ರತಿ ಕತೆಯೂ ಸಂಕೀರ್ಣವಾದ ಹಂದರವನ್ನೂ, ವಸ್ತುವನ್ನೂ ಹೊಂದಿದೆ. ಬದುಕು ಬಳಗಾರರ ಪ್ರಧಾನ ಕಾಳಜಿಯಾಗಿರುವುದರಿಂದಲೇ ಕತೆಯನ್ನು ಕಥಾನಕವಾಗಲೀ, ವಸ್ತುವಾಗಲೀ, ತಾತ್ವಿಕ ಆಯಾಮವಾಗಲೀ ಪೂರ್ತಿಯಾಗಿ ನಿರ್ದೇಶಿಸುತ್ತಿಲ್ಲ. ಬದಲಿಗೆ ಬದುಕಿನ ಸಮಗ್ರ ಚಿತ್ರಣವೇ ಕಥಾನಕವನ್ನು ಮುನ್ನೆಡೆಸುತ್ತಿದೆ. ಹಾಗಾಗಿ ಅನೇಕ ಬಾರಿ ಕತೆ ದೀರ್ಘವಾಗುತ್ತದೆ, ವಸ್ತು ಕೊಂಚ ತಿಳಿಯಾಗಿ ಹರಡಿಕೊಳ್ಳುತ್ತದೆ. ಸಣ್ಣಕತೆಗಳ ಕುರಿತ ನಮ್ಮ ನಿರೀಕ್ಷೆಯಂತೆ ಆದು ಮೊನಚಾಗಿ ಎದ್ದು ಕಾಣುವುದಿಲ್ಲ. ಆದರೆ ಈ ಸಂಕಲನದ ಕತೆಗಳು ಈ ತೊಡಕನ್ನು ಮೀರಲು ಸರ್ವಪ್ರಯತ್ನ ಮಾಡಿದಂತೆ ಕಾಣುತ್ತವೆ ಮಾತ್ರವಲ್ಲ ಈ ಪ್ರಯತ್ನದಲ್ಲಿ ಬಳಗಾರರು ಪೂರ್ತಿಯಾಗಿ ಯಶಸ್ವಿಯಾಗಿರುವುದೂ ಕಾಣುತ್ತದೆ. ಹಾಗಾಗಿಯೂ ಸಣ್ಣಕತೆಗಳ ಕುರಿತ ಅಧ್ಯಯನದ ದೃಷ್ಟಿಯಿಂದ ನೋಡಿದರೆ ಬಳಗಾರರ ಈ ಸಂಕಲನ ಬಹಳ ಮುಖ್ಯವಾದ ಒಂದು ತಿರುವನ್ನು ದಾಖಲಿಸುತ್ತಿದೆ ಎನ್ನಬೇಕು.
Post a Comment