Tuesday, February 10, 2009

`ತಿಂಗಳು' ಬೆಳಕಿನಲ್ಲಿ ಜಿ.ಪಿ.ಬಸವರಾಜು!

ಇದಾದರೆ ಒಂದು ಸಂಭ್ರಮದ ಸುದ್ದಿ!
ಮಯೂರಕ್ಕೆ ಹೊಸ ರೂಪ, ಘನತೆ ತಂದುಕೊಟ್ಟು ಸಾಹಿತ್ಯ ಪತ್ರಿಕೆಗಳ ಉತ್ತಮಾಂಶಗಳನ್ನೆಲ್ಲ ಮೈಗೂಡಿಸಿಕೊಂಡೂ ಜನಪ್ರಿಯ ಮಾಸಿಕವೊಂದನ್ನು ನಡೆಸಿದ, ಹೊಸ ಪರಂಪರೆಯನ್ನು ಸೃಷ್ಟಿಸಿದ ಜಿ.ಪಿ.ಬಸವರಾಜು ಈಗ ಹೊಸ ಪತ್ರಿಕೆಯೊಂದರ ಕೊಡುಗೆಯೊಂದಿಗೆ ನಿಂತಿದ್ದಾರೆ. ಕನ್ನಡದಲ್ಲಿ ಸಾಹಿತ್ಯವನ್ನೇ ಜೀವಾಳವಾಗಿರಿಸಿಕೊಂಡ ಗುಣಮಟ್ಟದ ಒಳ್ಳೆಯ ಮಾಸ ಪತ್ರಿಕೆಯ ಕೊರತೆಯನ್ನು ನೀಗಿ `ಮಯೂರ'ವನ್ನು ಅನನ್ಯವಾಗಿಸಿದ ಜಿಪಿ, ಒಳ್ಳೆಯ ಸಾಹಿತ್ಯದ ಓದನ್ನು ಪ್ರತಿ ತಿಂಗಳೂ ನಮಗೆಲ್ಲ ದಕ್ಕಿಸಿದ್ದರು. ಅದು ಮಾರ್ಕೆಟ್ ಆಕರ್ಷಣೆಗಳಿಗೆ ತಕ್ಕಂತೆ ಬದಲಾಗದಂತೆ ಕೂಡ ಎಚ್ಚರವಹಿಸಿದ್ದರು. `ಮಯೂರ' ನೋಡಿದರೆ ನಮಗೆಲ್ಲ ಜಯಂತ ಕಾಯ್ಕಿಣಿಯವರ `ಭಾವನಾ' ನೆನಪಾಗುವಂತಿತ್ತು. ಇವತ್ತು ಅದನ್ನು ಕನ್ನಡದ ಪ್ರಮುಖ ಕತೆಗಾರ ರಘುನಾಥ ಚ.ಹ. ಇನ್ನೂ ಒಂದು ಮಜಲು ಮೇಲೆ ಕೊಂಡೊಯ್ಯುತ್ತಿದ್ದಾರೆಂದರೆ ಜಿಪಿ ಅದಕ್ಕೆ ಪೂರ್ವಭಾವಿಯಾಗಿ ಸೃಜಿಸಿಕೊಟ್ಟ ನೆಲೆಗಟ್ಟು ಕೂಡಾ ಕಾರಣವೆನ್ನಬಹುದು.







`ತಿಂಗಳು' ಮಾಸ ಪತ್ರಿಕೆ ಜಿ ಪಿ ಬಸವರಾಜು ಅವರ ಸಂಪಾದಕತ್ವದಲ್ಲಿ ಮೈತಳೆಯಬಹುದಾದ ಬೆರಗಿಗೆ ಈಗ ನಾವೆಲ್ಲ ಕಾಯುವಂತಾಗಿದೆ! ಇಲ್ಲಿರುವ ಚಿತ್ರಗಳಲ್ಲಿ ಒಂದು ಚಂದಾದಾರರಾಗಲು ಅಗತ್ಯವಾದ ಫಾರಂ. ಎಲ್ಲರೂ ನೂರಿಪ್ಪತ್ತು ರೂಪಾಯಿಯ ಚಂದಾ ನೀಡಿ ಜಿ.ಪಿ. ಬಸವರಾಜರ ಪತ್ರಿಕೆಯನ್ನು ಬೆಂಬಲಿಸಿದರೆ ಈ ಪತ್ರಿಕೆ `ತಿಂಗಳು' ತಿಂಗಳು ನಮ್ಮನ್ನು ಶ್ರೀಮಂತಗೊಳಿಸುವುದರಲ್ಲಿ ಅನುಮಾನವಿಲ್ಲ!

No comments: