Wednesday, February 11, 2009

ಬರೆಯುವುದರ ಬಗ್ಗೆ ಬರೆಯುತ್ತ...

The Bodies separate, Minds overlap. But the soul is one.
-Osho

ನನಗೆ ಚಿಕ್ಕಂದಿನಲ್ಲಿ ಸಿನಿಮಾ ಹುಚ್ಚು ಬಹಳ. ಮನೆಯ ಪಕ್ಕದಲ್ಲೆ ಸಿನಿಮಾ ಟಾಕೀಸು ಇದ್ದಿದ್ದೂ ಇದಕ್ಕೆ ಕಾರಣವಿದ್ದೀತು. ಹಬ್ಬಕ್ಕೆ, ಜಾತ್ರೆಗೆ ಎಲ್ಲ ಹೋದಾಗ ಪದೇ ಪದೇ ಸಿನಿಮಾ ನೋಡುವ ಪುಟ್ಟ ಆಟಿಕೆ ಕೊಳ್ಳುತ್ತಿದ್ದೆ. ಜೊತೆಗೆ ನಾನೇ ಗೋಡೆಯ ಮೇಲೆ ಸಿನಿಮಾ ತೋರಿಸುವ ಹಲವಾರು ಪ್ರಯತ್ನವೂ ನಡೆದಿತ್ತು. ಅದಕ್ಕೆಲ್ಲ ನನಗೆ ಬೇಕಾದ ಕೆಲವು ತುಂಡು ಫಿಲಂಗಳನ್ನು ಕೊಡುತ್ತಿದ್ದವರು ಗೋಪಾಲ್ ಆಚಾರ್ ಎನ್ನುವವರು. ಅವರು ಟಾಕೀಸಿನ ಆಪರೇಟರ್ ಆಗಿದ್ದರು. ಗೋಪಾಲ್ ಆಚಾರ್ ಒಬ್ಬ ಅದ್ಭುತ ಚಿತ್ರಕಾರ ಕೂಡ ಆಗಿದ್ದರು. ಒಂದು ಷೋ ಮುಗಿದು ಇನ್ನೊಂದು ತೊಡಗುವ ಮೊದಲು ಸಿಗುವ ಅಲ್ಪ ಸ್ವಲ್ಪ ಸಮಯದಲ್ಲಿ ತಮ್ಮ ಪ್ಯಾಡನ್ನು ಹಿಡಿದು ಎಂಥೆಂಥಾ ಚಿತ್ರಗಳನ್ನು ಬಿಡಿಸುತ್ತಿದ್ದರೆಂದರೆ ನನಗೆ ಇವರ ಆಕರ್ಷಣೆ ಹೆಚ್ಚುತ್ತಲೇ ಹೋಯಿತು. ಇದೆಲ್ಲಕ್ಕಿಂತ ಮುಖ್ಯವಾದದ್ದು ಇವರ ಬರವಣಿಗೆಯ ಮಾಯಕತೆ.

ನಮ್ಮೂರಿನ ಸಿನಿಮಾ ಟಾಕೀಸಿಗೆ ಒಂದು ಹುಟ್ಟುಹಬ್ಬದ ದಿನವೂ ಅದನ್ನು ಆಚರಿಸುವ ಕ್ರಮವೂ ಇತ್ತು. ಅದು ಏಪ್ರಿಲ್ ಎಂಟು. ಆವತ್ತು ಸ್ವಲ್ಪ ಹೊಸದಾದ ಸಿನಿಮಾ ನಮ್ಮೂರಿಗೆ ಬರುತ್ತಿತ್ತು ಮಾತ್ರವಲ್ಲ ಆ ದಿನದ ಎಲ್ಲಾ ಷೋಗೂ ಪ್ರತಿ ಕ್ಲಾಸಿಗೂ ಒಂದರ ಹಾಗೆ ಮೂರು ಮೂರು ಬಹುಮಾನ ಕೂಡ ಇರುತ್ತಿತ್ತು. ಇದೆಲ್ಲಕ್ಕಿಂತ ಮಜಾ ಇರುತ್ತಿದ್ದುದು ಆವತ್ತು ಹಂಚುತ್ತಿದ್ದ ಹ್ಯಾಂಡ್‌ಬಿಲ್ಲಿನದು. ಕಳೆದ ಇಡೀ ವರ್ಷ ಅಲ್ಲಿ ಪ್ರದರ್ಶಿತವಾದ ಎಲ್ಲ ಸಿನಿಮಾ ಹೆಸರುಗಳೂ ಬರುವ ಹಾಗೆ ವಾಕ್ಯ ರಚಿಸಿ ಹೆಣೆದ ಒಂದು ಸುಂದರ ಕಥೆ ಅದರಲ್ಲಿ ಇರುತ್ತಿತ್ತು ಮತ್ತು ಅದನ್ನು ಬರೆಯುತ್ತಿದ್ದುದು ಇದೇ ಗೋಪಾಲ್ ಆಚಾರ್. ಆ ಕಥೆ ಎಷ್ಟು ಅದ್ಭುತವಾಗಿರುತ್ತಿತ್ತು ಮತ್ತು ಅದನ್ನು ಓದಲು ಎಂಥಾ ಉತ್ಸಾಹ ಜನರಲ್ಲಿ ಇರುತ್ತಿತ್ತೆಂದರೆ ಅರ್ಧ ಗಂಟೆಯ ಒಳಗೆ ಎಲ್ಲಾ ಪ್ಯಾಂಪ್ಲೆಟ್‌ಗಳೂ ಖಾಲಿಯಾಗಿ ಸಿಗದೇ ಹೋದವರು ಪರದಾಡುವಂತಾಗುತ್ತಿತ್ತು!

ಇನ್ನೂ ಕತ್ತಲಿರುವ ಮುಂಜಾನೆ ಹೊತ್ತಿನಲ್ಲಿ ಗೆಜ್ಜೆ ಸದ್ದು ಮಾಡುತ್ತ ಬರುವ ಸುಂದರ ಕನ್ಯೆ ನಂದಾ (ಟಾಕೀಸಿನ ಹೆಸರು) ಈ ನಿರೂಪಕನ ಜೊತೆ ತನ್ನೆಲ್ಲಾ ಬೆಡಗು ಬಿನ್ನಾಣದೊಂದಿಗೆ ಮನದ ನೋವು ನಲಿವು ಹಂಚಿಕೊಂಡಂತೆ ಇರುತ್ತಿದ್ದ ಈ ಕಥಾನಕ ಎಲ್ಲೂ ಅಸಂಬದ್ಧ ಎನಿಸದ ಹಾಗೆ ಸಿನಿಮಾ ಹೆಸರುಗಳನ್ನು ನೇಯ್ದುಕೊಂಡು, ಕುತೂಹಲಕರವಾಗಿ ಸಾಗುತ್ತ ಟಾಕೀಸನ್ನು ಕನಸಿನ ಕನ್ಯೆಯ ಮಟ್ಟಕ್ಕೆ ಜೀವಂತಗೊಳಿಸಿ ಬಿಡುತ್ತಿದ್ದ ಮಾಯಕ ಇವತ್ತಿಗೂ ನನ್ನನ್ನು ಅಚ್ಚರಿಗೆ ತಳ್ಳುತ್ತದೆ. ಇವತ್ತು ಆ ಟಾಕೀಸು ಕಲ್ಯಾಣಮಂದಿರವಾಗಿದೆ. ಗೋಪಾಲ್ ಆಚಾರ್ ಕೂಡ ಈಗ ಬದುಕಿಲ್ಲ. ಆದರೆ ಬರೆಯಬೇಕು, ನಾಲ್ಕು ಮಂದಿ ಬರೆಯುವವನು ಅಂತ ನನ್ನನ್ನು ಗುರುತಿಸಬೇಕು ಎಂದು ನನಗೆ ಮೊತ್ತ ಮೊದಲ ಬಾರಿ ಅನಿಸಿದ್ದರೆ ಅದಕ್ಕೆ ಈ ಮನುಷ್ಯನೇ ಕಾರಣ ಅನಿಸುತ್ತದೆ. ಮುಂದೆ ಈ ಗೋಪಾಲ್ ಆಚಾರ್ ನಾಟಕಗಳನ್ನು ಬರೆದರು, ನಿರ್ದೇಶನ ಮಾಡಿ ರಾಜ್ಯಮಟ್ಟದಲ್ಲೂ ಪ್ರಶಸ್ತಿ ಇತ್ಯಾದಿ ಪಡೆದರು, ದೂರದರ್ಶನ ಇವರ ನಾಟಕಗಳನ್ನು ಪ್ರಸಾರ ಮಾಡಿತು, ಯಕ್ಷಗಾನದಲ್ಲಿ ಹೆಸರು ಮಾಡಿದರು ಎಲ್ಲ ಸರಿಯೇ. ಆದರೆ, ಇದೆಲ್ಲಕ್ಕಿಂತ ಮುಖ್ಯವಾಗಿ ಇವರಲ್ಲಿ ಯಾರಲ್ಲೂ ಇರದ ಒಂದು ದೊಡ್ಡ ಗುಣವಿತ್ತು. ನಾವಿದ್ದುದು ಒಂದು ಸಣ್ಣ ಊರು. ಅಲ್ಲಿ ಆಗಲೂ ಈ ಮನುಷ್ಯನಿಗೆ ಸಿಗಬೇಕಾದ ಯಾವ ಅನುಕೂಲವೂ ಸಿಕ್ಕಿರಲಿಲ್ಲ. ಆದರೂ ಒಂದು ವರ್ಷ ಇವರು ಈ ಪ್ಯಾಂಪ್ಲೆಟ್ಟಿನ ಹಿಂದೆ ಕಥೆ ಬರೆಯುವ ಕೆಲಸಕ್ಕೆ ನನ್ನ ಹೆಸರು ಸೂಚಿಸಿ ತಾನು ಹಿಂದೆ ಸರಿದು ನಿಂತರು! ಹೆಚ್ಚೆಂದರೆ ನಾನಾವಾಗ ಎಸ್ಸೆಸ್ಸೆಲ್ಸಿಯಲ್ಲಿದ್ದೆನೋ ಏನೋ. ಆಗ ಅದನ್ನು ನಾನು ಬರೆದೆ ಎನ್ನುವುದು ನನ್ನ ಅಹಂಕಾರದ ಮೊತ್ತ ಮೊದಲ ಅಭಿವ್ಯಕ್ತಿ. ಆ ಹೊತ್ತಿಗೆ ನಾನು ಒಂದೆರಡು ಮಕ್ಕಳ ಕತೆಗಳನ್ನು ಬರೆದಿದ್ದೆ, ಅದು ತರಂಗದಲ್ಲಿ ಬಂದಿತ್ತು. ಅಷ್ಟಕ್ಕೇ ಇವರು ನನ್ನನ್ನು `ಕವಿಗಳು' ಎಂದು ಕರೆದು ಮಾತನಾಡಿಸುತ್ತಿದ್ದರು, ಯಾವ ಕೊಂಕಿಲ್ಲದೇ!

ಜನ ಗುರುತಿಸಬೇಕು, ಹೆಸರು ಮಾಡಬೇಕು ಎನಿಸಿ ಬರೆಯುವುದು, ಬರೆದಿದ್ದು ಪತ್ರಿಕೆಗಳಲ್ಲಿ ಬರಬೇಕು ಎಂದು ಆಸೆಪಡುವುದು, ಬಂದಾಗ ಎಲ್ಲರೂ ಅದನ್ನು ಗಮನಿಸಬೇಕು ಎಂದು ಬಯಸುವುದು, ಅದು ಗೌರವದೊಂದಿಗೆ ಅಷ್ಟಿಷ್ಟು ಹಣವನ್ನೂ ತರದಿದ್ದರೆ ಅದಕ್ಕೇನೂ ಬೆಲೆಯಿಲ್ಲ ಎನಿಸುವುದು ಎಲ್ಲ ನಿಜವಾದರೂ ಆತ್ಮ ಸಂತೋಷಕ್ಕೆ ಬರೆಯುತ್ತೇನೆ ಎಂದು ಬೊಗಳೆ ಬಿಡುವುದು, ಇದೆಲ್ಲ ಅಸ್ಮಿತೆಯ ಪ್ರಶ್ನೆ ಎನ್ನುವುದು ಹೆಚ್ಚು. ಬರೆಯುವುದು ಒಂದು ಬಗೆಯಲ್ಲಿ ಅಸಹಜ ವಿದ್ಯಮಾನ. ಅದರ ಒಂದಾನೊಂದು ಕಾರಣ ನಮ್ಮ ಅಹಂಕಾರದ ವಿಸ್ತರಣೆ ಕೂಡ. ಹಾಗೆಯೇ ಅದು ಅಪರಿಚಿತ ಓದುಗನ ಪ್ರೀತಿಯ ಯಾಚನೆ ಕೂಡ.

೧೯೮೯ರಲ್ಲಿ ನನ್ನ ಓದು ಮುಗಿದು ಕೆಲಸ ಹುಡುಕುತ್ತಿದ್ದಾಗಿನ ಒಂದು ಘಟನೆ, ಏನೇ ಆಗು, ಬರಹಗಾರ ಮಾತ್ರ ಆಗಬೇಡ ಎನ್ನುವಲ್ಲಿಗೆ ತಂದು ನಿಲ್ಲಿಸಿತು! ಪ್ರತಿಷ್ಠಿತ ಪತ್ರಿಕೆಯೊಂದರಲ್ಲಿ ಸಂಪಾದಕರ ಬಳಗದ ನಡುವೆ ಅವರ ದಿನನಿತ್ಯದ ವ್ಯವಹಾರದಲ್ಲಿ ನಾವೆಲ್ಲ ತುಂಬ ಗೌರವಿಸುವ ಸಾಹಿತಿಗಳ ಬಗ್ಗೆ ಎಂಥೆಂಥ ಮಾತುಗಳು, ತಿರಸ್ಕಾರ, ಲೇವಡಿ ಎಲ್ಲ ಇರುವುದನ್ನು ಕಂಡೆನೆಂದರೆ ನನಗೆ ಸಂಪಾದಕೀಯಗಳಲ್ಲಿ, ತಮ್ಮ ಲೇಖನಗಳಲ್ಲಿ ಈ ಸಂಪಾದಕರು, ಅವರ ಬಳಗದವರು ಎಲ್ಲ ಬರೆಯುತ್ತಿದ್ದುದು ಸುಳ್ಳೇ ಹಾಗಾದರೆ ಎನಿಸಿ ಆಘಾತವೇ ಆಯಿತು. ಹಾಗೆಂದು ಅದು ಅಂಥಿಂಥ ಪತ್ರಿಕೆಯಲ್ಲ. ಅವರು ಅಂಥಿಂಥ ಸಂಪಾದಕರಲ್ಲ. ಅತ್ತ ಲಂಕೇಶ, ಚಿತ್ತಾಲ, ತೇಜಸ್ವಿ ತರ ಬರೆಯುವ ಲೇಖಕರೇ ಬರಲಿಲ್ಲ ನಮ್ಮಲ್ಲಿ ಎಂದು ಬರೆಯುತ್ತಿದ್ದರು, ಇತ್ತ ಸಾಹಿತ್ಯದ ಹುಚ್ಚು ಹಿಡಿದವರು ಮಾತ್ರ ಇವರು ಬರೆದಿದ್ದನ್ನೆಲ್ಲ ಓದುವುದು ಎಂದು ಜರೆಯುತ್ತಿದ್ದರು! ಯಾರೋ ದೊಡ್ಡ ಕವಿಯೊಬ್ಬರ ಸಂಬಂಧಿ ಸಂಭಾವನೆಯ ವಿಷಯದಲ್ಲಿ ತಕರಾರು ತೆಗೆದರು ಎಂದು ತಮಾಷೆ ಮಾಡಿ ನಗುವುದು, ಅಯ್ಯೋ ಇಂವ ಮಹಾ ಕಿರಿಕಿರಿ ಮಾರಾಯ, ಎಲ್ಲಾದರೂ ನಾಲ್ಕಿಂಚು ಜಾಗ ಹೊಂದಿಸಿ ಹಾಕಿಬಿಡಯ್ಯಾ ಎಂದು ಜೋಕು ಮಾಡುವುದು ಎಲ್ಲ ನೋಡಿ ಸಾಹಿತಿಯಾಗುವ ಆಸೆಯೇ ಮಣ್ಣುಮುಕ್ಕಿತು!

ಮುಂದೆ ನನ್ನ ವಯಸ್ಸು ಸುಮಾರು ಮುವ್ವತ್ತರ ಅಂಚಿನಲ್ಲಿದ್ದಾಗ ನಾನು ನನ್ನ ಮೊದಲ ಕಥೆ ಬರೆದೆ, ಅದು ಉದಯವಾಣಿಯಲ್ಲಿ ಬಂತು. ಅದರ ಹಿನ್ನೆಲೆ ಹೇಳುವುದು ಈ ಲೇಖನದ ದೃಷ್ಟಿಯಿಂದ ಮುಖ್ಯವೆಂದು ತಿಳಿದಿದ್ದೇನೆ. ನನ್ನ ಸಹೋದ್ಯೋಗಿಗಳ ಜೊತೆ ಆಗಾಗ ಜೋಗಕ್ಕೆ, ಮಡಿಕೇರಿಗೆ ಎಂದೆಲ್ಲ ಟೂರು ಹೋಗುವುದಿತ್ತು. ಸುಮಾರು ಹತ್ತು ಮಂದಿ ಟಾಟಾ ಸುಮೋದಲ್ಲೋ, ಟ್ರಾಕ್ಸ್‌ನಲ್ಲೋ ಹೋಗುತ್ತಿದ್ದುದು. ಎಲ್ಲ ಅದೇ ವಯೋಮಾನದವರು, ಅವಿವಾಹಿತರೇ ಹೆಚ್ಚು. ಮೂರ್ನಾಲ್ಕು ಮಂದಿ ಹುಡುಗಿಯರೂ ಇರುತ್ತಿದ್ದರು. ಮುಸ್ಸಂಜೆ ಮರಳಿ ಬರುವ ಹಾದಿಯಲ್ಲಿ, ಕತ್ತಲು ಕವಿಯುವುದರಿಂದ ಪ್ರಯಾಣದುದ್ದಕ್ಕೂ ತುಂಬ ಬೋರಾಗುತ್ತಿತ್ತು. ಆಗ ನನ್ನ ಏಕವ್ಯಕ್ತಿ ಯಕ್ಷಗಾನ ತಾಳಮದ್ದಲೆ ಸುರುವಾಗುತ್ತಿತ್ತು. ಅಲ್ಲಿ ನಮ್ಮ ಆಫೀಸಿನ ಮಂದಿಯೇ ಪಾತ್ರಧಾರಿಗಳು. ಆಫೀಸಿನಲ್ಲಿ ಎಂದೋ ನಡೆದ ಯಾವುದೋ ಜಗಳ, ಮನಸ್ತಾಪ, ತಮಾಷೆಯ ಪ್ರಕರಣ, ಯಾರೋ ಯಾರನ್ನೋ ಸಿಕ್ಕಿಸಿ ಹಾಕಿದ್ದು, ಅಥವಾ ಹಾಗಂತ ಇವರೋ ಅವರೋ ಅಂದುಕೊಂಡಿದ್ದು, ಅವರ ಮಧ್ಯೆ ಇನ್ನೂ ಕರಗದೆ ಉಳಿದು ಹೋದ ಐಸುಗಡ್ಡೆ, ನಮ್ಮ ಬಾಸ್‌ಗಳು (ಇಬ್ಬರಿದ್ದರು, ನಮ್ಮೊಂದಿಗೆ ಬರುತ್ತಿರಲಿಲ್ಲ, ವಯಸ್ಸಾದವರು ಮತ್ತು ಸದಾ ಒಳಜಗಳದಲ್ಲಿ ನಿರತರಾಗಿದ್ದರು), ಕಸಗುಡಿಸುವ ತಮಿಳಿನ ಚೆಲ್ಲಮ್ಮ - ಇವರದೇ ಒಂದಿಲ್ಲಾ ಒಂದು ಪ್ರಸಂಗ. ಮಾತುಗಾರಿಕೆಯ ಶೈಲಿ ಮಾತ್ರ ಯಕ್ಷಗಾನದ್ದು. ಯಾರೂ ಬೇಸರ ಮಾಡಿಕೊಳ್ಳುವಂತಿಲ್ಲ, ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವಂತಿಲ್ಲ. ಇದು ಮನಸ್ಸು ತೆರೆದಿಟ್ಟು ತಮ್ಮ ಕಥೆಯನ್ನು ತಾವೇ ಕೇಳುವ ಒಂದು ಅವಕಾಶ, ನನಗೂ ಸೇರಿ! ಕೊಂಚ ಸಡಿಲಾಗಲು, ತಮ್ಮದೇ ತಪ್ಪುಗಳನ್ನು, ದುಡುಕನ್ನು ಕೊಂಚ ಲಘುವಾಗಿ ಕಾಣಲು, ಕಂಡು ನಗಲು ಒಂದು ಯತ್ನ.

ಇದು ಸಫಲವಾಯಿತು. ಒಬ್ಬಿಬ್ಬರು ಇದನ್ನೆಲ್ಲ ಇಷ್ಟು ಚೆನ್ನಾಗಿ ಮಾಡ್ತೀಯಲ್ಲ, ನೀನ್ಯಾಕೆ ಪತ್ರಿಕೆಗಳಿಗೆ ಬರೆಯಬಾರದು ಎಂದು ಉಬ್ಬಿಸಿದರು. ಆಗ ನಾನು ನನ್ನ ಡಾಯರಿ ತೆರೆದು ನೋಡಿದೆ. ಅಲ್ಲಿತ್ತು ನನ್ನ ಮೊದಲ ಕಥೆ! ನನ್ನ ಬದುಕು ನನಗೆ ನೀಡಿದ ಅನುಭವಗಳಿಂದ ನಾನು ಪಡೆದುಕೊಳ್ಳಬೇಕಾದ್ದನ್ನು, ಜೀರ್ಣಿಸಿಕೊಳ್ಳಬೇಕಾದ್ದನ್ನು ಪಡೆದುಕೊಳ್ಳಲು ಮತ್ತು ಈ ಪಚನಕ್ರಿಯೆ ಸುಸೂತ್ರ ಸಾಗಲು ಒಂದು ಮೌನ, ಧ್ಯಾನ, ಏಕಾಂತ, ಚಿಂತನೆ ಅಗತ್ಯವಿತ್ತು. ಇಲ್ಲಿ ನನ್ನನ್ನು ನಾನು ಕಾಣುವ, ಕಂಡು ಅರಿಯುವ ಉದ್ದೇಶ ಮಾತ್ರ ಇದೆ. ನನ್ನ ಬದುಕು ನನಗೆ ಕೊಡಮಾಡಿದ ಅನುಭವಗಳಿಗೆ ನನ್ನ ತಕ್ಷಣದ ಪ್ರತಿಕ್ರಿಯೆಯೇ ನಾನು. ಅದನ್ನು ವಿಶ್ಲೇಷಿಸಬಹುದು.

ಅನುಭವಗಳಾಚೆ ಏನನ್ನೂ ಕೊಡಲಾರದ ಬದುಕು ಅರ್ಥವಾಗಬೇಕೆನ್ನುವ ಹಠ ಇಂದು ನಿನ್ನೆಯದಲ್ಲ. ಯಾವುದೇ ಪೂರ್ವ ಸೂಚನೆಯಿಲ್ಲದೆ, ಮಾರ್ಗದರ್ಶನವಿಲ್ಲದೆ, ಯಾಕೆ-ಏನು ಎನ್ನುವುದೂ ತಿಳಿದಿರದೆ ತೊಡಗಿದ ಈ ಜೀವನವೆಂಬೋ ನಾಟಕದ ಗೊತ್ತು ಗುರಿಗಳ ಬಗ್ಗೆ ಅದಮ್ಯ ಕುತೂಹಲ ಸಹಜವಾದದ್ದು. ಈ ಬದುಕನ್ನು ಬದುಕಬಹುದಾದ ಅತ್ಯಂತ ಸಂಪನ್ನ ಬಗೆ ಯಾವುದು ಎಂಬ ಹುಡುಕಾಟ ಕೂಡ ಅಷ್ಟೇ ಪುರಾತನವಾದದ್ದು. ನನ್ನನ್ನು ಕೇಳಿದರೆ ಈ ಜಗತ್ತಿನ ಎಲ್ಲ ಭಾಷೆಯಲ್ಲಿ ಸೃಷ್ಠಿಯಾದ ಎಲ್ಲಾ ಸಾಹಿತ್ಯದ ಹಿಂದೆಯೂ ಇರುವ ಮೂಲಭೂತ ಶೋಧ ಇದುವೇ ಆಗಿದೆ. ಸಾಂದರ್ಭಿಕವಾಗಿ ನಮಗೆ ಬೇರೇನೋ ಎದ್ದು ಕಂಡರೂ, ಅದರ ಮೂಲದಲ್ಲಿ ಇರುವುದು ಬದುಕನ್ನು ಇನ್ನಷ್ಟು ಉತ್ತಮಗೊಳಿಸುವ ಹಾದಿಯ ನಿರಂತರ ಶೋಧವೇ.

ಡಾಯರಿಯ ಉದ್ದೇಶವೂ ಅದೇ! ಇಷ್ಟೇ, ಇಲ್ಲಿ ನನ್ನ ಓದುಗ ನಾನೇ. ಇದೆಲ್ಲವೂ ನಾನು ನನಗೇ ಬರೆದುಕೊಂಡ ಸ್ವಗತ. ಆದರೆ ವಿಚಿತ್ರ ನೋಡಿ, ನಿಮಗೆ ಇಂಥದ್ದನ್ನೇ ಓದಲು ಇನ್ನಿಲ್ಲದ ಕುತೂಹಲ! ಅದು ನನ್ನಲ್ಲೂ ಇತ್ತು. ನನ್ನದೇ ಡಾಯರಿಯನ್ನು ನಾನೇ ಇನ್ನೆಂದೋ ಓದುವಾಗ ಅದು ಯಾರದೋ ಡಾಯರಿಯಾಗಿ ಬಿಡುತ್ತಿತ್ತು, ಎಲ್ಲಾ ಅರ್ಥದಲ್ಲೂ! ಅಂದರೆ, ಇಲ್ಲೂ ಆತ್ಮವಂಚನೆ ಸಾಧ್ಯ ಅನಿಸಿದ್ದು ಮತ್ತೊಮ್ಮೆ ಅದನ್ನು ನಾನೇ ಓದಿದಾಗ. ಅಲ್ಲಿ ಅನುಭವದ ದಾಖಲಾತಿಯೇನೋ ಇತ್ತು, ಆದರೆ ಅದರ ಜೊತೆಗೇ ಸಾಧ್ಯವಿರುವ ಎಲ್ಲ ಬಡಿವಾರವೂ ಇದ್ದುದನ್ನು ಕಂಡೆ. ಕೊಂಚ ಅಹಹ ಎನ್ನುವ ಭಾಷೆಯಲ್ಲೇ ಅದೆಲ್ಲ ಮೈತಳೆದಿದ್ದು ಕಂಡೆ. ಅಗತ್ಯವಿತ್ತೆ ಇದೆಲ್ಲ ಸತ್ಯವನ್ನು ಬತ್ತಲೆಯಾಗಿ ಮುಖಾಮುಖಿಯಾಗಲು?

ಖಂಡಿತ ಅಗತ್ಯವಿತ್ತು. ರೂಪಕಗಳು ಬೇಕು, ಪ್ರತಿಮೆಗಳು ಬೇಕು, ಅವಾಸ್ತವಿಕ ವಿವರಗಳು ಬೇಕು ಅನುಭವವನ್ನು ಅಕ್ಷರಗಳಲ್ಲಿ ಹಿಡಿಯಲು, ಅದು ಅನಿವಾರ್ಯ. ಅನುಭವ ಮತ್ತೊಮ್ಮೆ ಅಕ್ಷರರೂಪಿಯಾಗಿ ಮೂಡಿದಾಗಲೂ ಮೂಲ ಅನುಭವದ ಭಾವವನ್ನೇ ನನ್ನಲ್ಲಿ ಮತ್ತೊಮ್ಮೆ ಮೂಡಿಸದೇ ಹೋದರೆ ಅದನ್ನು ಇನ್ಯಾರಲ್ಲೋ ಅದು ಹೇಗೆ ಮೂಡಿಸೀತು? ಅಲ್ಲಿಗೆ ಅನುಭವ ಅಕ್ಷರವಾಗಿದ್ದು ಸುಳ್ಳು.

ಮೌನದಲ್ಲಿ ಕಲಕಿದ ಆ `ಅದನ್ನು' ಸದ್ದಾಗಿಸಿ, ಅಕ್ಷರವಾಗಿಸಿ ನಿನಗೆ ತಲುಪಿಸುವ ಕಷ್ಟವಿದು. ತಲುಪಿಯೂ ತಲುಪದೇ ಹೋಗುವ, ತಲುಪಬೇಕಾದ್ದು ತಲುಪದೆ ಇನ್ನೇನೋ ತಲುಪುವ, ತಲುಪಿಯೂ ನಿನಗೆ ನನಗನಿಸಿದ್ದು ಅನಿಸದೇ ಹೋಗುವ, ಅನಿಸಿಯೂ ನೀನು ಕರಗದೇ ಹೋಗುವ, ಕರಗಿಯೂ ನನಗೆ ಹೇಳದೇ ನಿಲ್ಲುವ.....ಸಂಕಟಗಳಿವೆ ಬರೆದು ಎಲ್ಲವನ್ನೂ ಹೊರಗಿಕ್ಕುತ್ತೇನೆ ಎಂದು ಹೊರಡುವುದರಲ್ಲಿ.

ಆದರೆ ಈ ಅಗತ್ಯದ ಬೆನ್ನಲ್ಲೇ ಆತ್ಮವಂಚನೆಯ ನೆರಳು ಹರಡಿತ್ತಲ್ಲವೆ? ಹೌದು, ಅದೂ ನಿಜ. ಅದು ತಿಳಿದೂ ಮಾಡಿಕೊಂಡ ಆತ್ಮವಂಚನೆಯಲ್ಲ. ಅದಾಗಿದ್ದರೆ ಗುರುತಿಸುವುದು ಸುಲಭ. ಡಾಯರಿಗೆ ಅಂಥದ್ದರ ಹಂಗಿಲ್ಲ. ಇದರ ಆಳವೇ ಬೇರೆ. ಈ ಆತ್ಮವಂಚನೆ ಆತ್ಮಕ್ಕೇ ತಿಳಿಯದ ಹಾಗೆ ಭಾಷೆ ಮತ್ತು ಅದರ ಸದ್ದು ಹೂಡಿದ ಹೂಟದ್ದು! ಮಾತಿಗೆ `ಮಾತಿನ ಮೋಹ' ಮಾಡಿದ ಮೋಸ! ಸತ್ಯವನ್ನು ಕಾಣಹೊರಟವನ ಕಣ್ಣು `ನೋಟ'ಕ್ಕೆ ಮಾಡಿದ ಮೋಸ! ಹಾಗಾದರೆ ಸತ್ಯ ಎಲ್ಲಿತ್ತು? ಹೇಳಿ, `ನಿಜ'ದ ಸತ್ಯ ಎಲ್ಲಿತ್ತು? ಅದು ಗೆರೆಗಳ ನಡುವೆ ಎಲ್ಲೋ ಇದ್ದ ಹಾಗೆ, ಇಲ್ಲದ ಹಾಗೆ ಇರುತ್ತದೆ. ವ್ಯಕ್ತದಲ್ಲಿನ ಅವ್ಯಕ್ತ ಮತ್ತು ಅವ್ಯಕ್ತದಲ್ಲಿನ ವ್ಯಕ್ತದ ಹಾಗೆ! ಕಾಣಿಸಿದರೆ ನಮ್ಮ ಅದೃಷ್ಟ. ಕಾಣಿಸದಿದ್ದರೆ ಆ ಅರಿವು ನಿಮಗಲ್ಲದಿರಬಹುದು. ನಿಮಗೆ ಅದು ಆಗಲೇ ದಕ್ಕಿರಬಹುದು, ದಕ್ಕುವುದಕ್ಕೆ ಇನ್ನೂ ಕಾಲ ಕೂಡಿ ಬಂದಿರದಿರಬಹುದು!

ಆದರೆ ಕಥೆ ಬರೆಯುವಾಗ, ಅದನ್ನು ಓದುಗರ ಮುಂದೆ ಇಡುವಾಗ, ಆಯಾ ಪ್ರಕಾರದ ಶಿಸ್ತು, ಅಗತ್ಯಗಳು, ಪರಂಪರೆಯ ಅರಿವು, ಹೊಸತನದ ಹಂಬಲ, ಓದುಗರ-ಅನ್ಯರ ಪೊರೆಯುವಿಕೆ ಎಲ್ಲ ಮುಖ್ಯವಾಗಿಬಿಡುತ್ತದೆ. ಬರೇ ಒಳಗನ್ನು ಕಾಣುತ್ತ ಬಂದ ವ್ಯಾಯಾಮ ಸಾಲದಾಗುತ್ತದೆ. ಹೊರಗನ್ನು ನೋಡಬೇಕು, ಆ ಹೊರಗನ್ನು ಮತ್ತೆ ಅಕ್ಷರಗಳಲ್ಲಿ ಸೃಜಿಸಬೇಕು, ಅದಕ್ಕೆ ಸೂಕ್ಷ್ಮ ಅವಲೋಕನ ಬೇಕು, ಅವಲೋಕನದ ಸ್ಪರ್ಶ ನನ್ನ ಅಂತರಂಗಕ್ಕೆ ಇಳಿಯಬೇಕು. ವ್ಯಕ್ತಿ ವಿಶಿಷ್ಟ ಮನುಷ್ಯ ಸಂಬಂಧಗಳ ಬಗ್ಗೆ ಮಾತನಾಡುವಾಗ ತಿಳಿದೋ ತಿಳಿಯದೆಯೋ ಘಟನೆಗಳ ಮೂಲವಾದ ವಾತಾವರಣವೂ, ಅದನ್ನು ಆಗಗೊಟ್ಟ ವಸ್ತುಲೋಕದ ವಿವರಗಳೂ ಮುಖ್ಯವಾಗುತ್ತವೆ, ಕಣ್ಣೆದುರಿನ ಬದುಕು ಸವಾಲುಗಳ ಕರೆಯಾಗುತ್ತದೆ.

ಕೊನೆಗೂ ಕಣ್ಣು ಕಂಡಿದ್ದು, ಕಿವಿ ಕೇಳಿದ್ದು, ಮಾತು ಆಡಿದ್ದು, ನಾಸಿಕಕ್ಕೆ ಅಡರಿದ್ದು, ಸ್ಪರ್ಶದ ಮೂಲಕ ಮೌನ ಸಂವಹಿಸಿದ್ದು ಮತ್ತು ಆ ವಾತಾವರಣ, ಜಗತ್ತು, ಅಲ್ಲಿದ್ದ-ಇರದಿದ್ದ ಎಷ್ಟೊಂದೆಲ್ಲ ಕಾರಣ ಮನಸ್ಸಿಗಿಳಿದ ಒಂದು ದರ್ಶನಕ್ಕೆ! ಅದನ್ನು ಹೇಗಿತ್ತೋ ಹಾಗೆ ನಿನಗೆ ಕಟ್ಟಿಕೊಡಲು ನನಗೆ ಎಂದಾದರೂ ಸಾಧ್ಯವಾದೀತೆ? ಬಣ್ಣವಿಲ್ಲದ, ನೋಟವಿಲ್ಲದ, ಶಬ್ದವಿಲ್ಲದ, ಸ್ಪರ್ಶವಿಲ್ಲದ, ಪರಿಮಳವಿಲ್ಲದ, ರುಚಿಯಿಲ್ಲದ ಅಕ್ಷರಗಳಲ್ಲಿ ಅವೆಲ್ಲವನ್ನೂ ಸೃಜಿಸುವ ಛಲವಿದು. ಎಲ್ಲಿ ಸಾಧ್ಯ? ನನ್ನ ರಣರಣ ಬಿಸಿಲು ನಿನ್ನದೂ ಆಗಿದ್ದಾಗ ಸಾಧ್ಯ. ನನ್ನ ರೋಮಾಂಚನ ನಿನಗೂ ಉಂಟಾದಾಗ ಸಾಧ್ಯ. ಓದುತ್ತ ಓದುತ್ತ ಬರೆದಿದ್ದು ಹೌದು ಹೌದು ಅನಿಸುತ್ತಿದ್ದರೆ ಸಾಧ್ಯ! ಅಂದರೆ ನಾನು ಯಾವುದನ್ನು ಅಕ್ಷರಗಳಿಗೆ ಬದಲಾಯಿಸಿದೆನೋ ಅದನ್ನು ಓದುಗ ಅಕ್ಷರಗಳಿಂದ ಮತ್ತೆ ಅನುಭವಕ್ಕೆ ಬದಲಿಸಿಕೊಳ್ಳಲು ಸಾಧ್ಯವಾದಾಗ ಮಾತ್ರ. ಅಷ್ಟರಮಟ್ಟಿಗೆ ಬರಹಗಾರನ ಪಾತ್ರ ಒಂದು ಸೃಜನಶೀಲ ಸೃಷ್ಟಿಯಲ್ಲಿ ಅರ್ಧದಷ್ಟು. ಇನ್ನರ್ಧ ಓದುಗನಿಂದಲೇ ನಿಜವಾಗಬೇಕಾದ್ದು! ಇದು ಅಂಥ ಸೃಷ್ಟಿಯ ಯಶಸ್ಸಿಗೂ ಸೋಲಿಗೂ ನಿಜ. `ನಾನು' ಬರೆದೆ ಎಂಬುದು ಸುಳ್ಳು, ನೀನು ಓದಿ ದಕ್ಕಿಸಿಕೊಂಡಿದ್ದು ನಿಜ.

ನಾವು ನಮ್ಮ ಜೊತೆಯವರನ್ನು ಬೆಳೆಸುತ್ತ, ಬೆಳೆಯುವುದಕ್ಕೆ ಸಹಕರಿಸುತ್ತ ಇರುವುದು ಸಾಧ್ಯವಾಗದೇ ಹೋದರೆ ಸ್ವತಃ ನಾಶವಾಗುತ್ತೇವೆ ಎಂಬ ಮಾತಿದೆ. ಗೋಪಾಲ್ ಆಚಾರ್ ಮತ್ತೆ ನೆನಪಾಗುತ್ತಾರೆ. ಸಲಹೆಗಳು, ಟೀಕೆ - ಟಿಪ್ಪಣಿಗಳು, ಸುಮ್ಮನೇ ಸೆಳೆಯುವುದಕ್ಕೆ ಹೊಗಳುವವರು, ಇನ್ನೇನೋ ಮನಸ್ಸಲ್ಲಿಟ್ಟುಕೊಂಡು ತೆಗಳುವವರು, ಎಲ್ಲ ಎದುರಾಗುತ್ತವೆ. ಎಲ್ಲವನ್ನೂ ಎಲ್ಲಿಡಬೇಕೋ ಅಲ್ಲಿಟ್ಟು ಬೆಳೆಯುವ ಚೈತನ್ಯವನ್ನು ಉಳಿಸಿಕೊಳ್ಳುವುದು ಸುಲಭವಲ್ಲ. ಸುಲಭವಲ್ಲ ಎಂದು ಅರಿವಾಗುವ ಹೊತ್ತಿಗೆ ಹಾದಿ ಕಳೆದು ಹೋಗಿರುತ್ತದೆ. ತುಳಿಯುತ್ತ ಬಂದ ತಪ್ಪು ಹಾದಿ ಹಳತಾಗಿ ಅಭ್ಯಾಸವಾಗಿರುತ್ತದೆ. ಇದು ಬರಹಗಾರನ ದುರಂತ. ಇವನ್ನೆಲ್ಲ ಹೆಚ್ಚಿಸುವಂತೆ ಅಲ್ಲಿ ಹಣದ, ಅಹಂಕಾರದ, ಪ್ರತಿಷ್ಠೆಯ, ಪ್ರಶಸ್ತಿಯ, ಜನಮನ್ನಣೆಯ, ಮಾಧ್ಯಮಗಳ, ಹಾವೇಣಿಯಾಟದ ಆಮಿಷ! ಇಂದಿನ ಮಾರುಕಟ್ಟೆಯೇ ದೈವವೆನ್ನುವ ದಿನಗಳಲ್ಲಿ ಅಬ್ಬರದ ಪ್ರಚಾರವೇ ಯೋಗ್ಯತೆಯನ್ನು ನಿರ್ಣಯಿಸುವುದನ್ನು ಕಾಣುತ್ತಿರುವಾಗಲೂ ಸಾಹಿತಿಯ ಬಗೆಬಗೆಯ ಅವತಾರಗಳನ್ನು ಹೇಗೆ ಎದುರಾಗುತ್ತೇವೆ? ಈ ಬಗೆಯ ತಲ್ಲಣಗಳನ್ನು ಹೇಗೆ ಎದುರಿಸುತ್ತೇವೆ?

ಒಂದೇ ಉತ್ತರ ನಿಜಕ್ಕೂ ಇರುವುದು, ನಾನೇಕೆ ಬರೆಯುತ್ತೇನೆಂಬುದಕ್ಕೆ, ಬರೆಯುವ ಎಲ್ಲರ ಬಳಿ. ಮನುಷ್ಯನಾಗಲು ಎಂಬುದು. ಇದು, ಈ ಹಾದಿ, ಜಗತ್ತಿನ ಎಲ್ಲರಿಂದ ನನಗೆ ತರಬೇಕಿರುವುದು ಪ್ರೀತಿಯನ್ನು ಮತ್ತು ಪ್ರೀತಿಯನ್ನು ಮಾತ್ರ. ಪರಂತು, ಅದು ದ್ವೇಷ, ಅಸೂಯೆ, ಕಹಿ, ನಿಂದೆ, ಕಟಕಿ, ಸಣ್ಣತನ, ಕಾಲೆಳೆಯುವ ಸಾಂಸ್ಕೃತಿಕ ರಾಜಕಾರಣದ ವಾಸನೆ ತರಬಾರದು. ತಂದರೆ ಬರೆಯುವುದಾದರೂ ಹೇಗೆ? ಬರೆಯುವುದಕ್ಕೆ ಕೂಡ ಬೇಕಿರುವುದು ಬರೇ ಒಂದೇ ಒಂದು ಗುಣ. ಅದು ಪ್ರೀತಿ ಮತ್ತು ಪ್ರೀತಿಯೊಂದೇ. ಚರಾಚರಾ ಜಗತ್ತಿನ ಸಕಲರನ್ನೂ, ಸರ್ವಸ್ವವನ್ನೂ ಮಗುವಿನಂಥ ಮನಸ್ಸಿನಿಂದ ಪ್ರೀತಿಸುವುದು ಸಾಧ್ಯವಾದಾಗ ಮಾತ್ರಾ ಅತ್ಯುತ್ತಮ ಸಾಹಿತ್ಯ ಸೃಷ್ಟಿಯಾಗಲು ಸಾಧ್ಯ. ಅದು ಅಷ್ಟಿಷ್ಟು ಸಾಧ್ಯವಾಗದೇ ಹೋದರೂ ಬರೆದಿದ್ದು ಬರೇ ಬರವಣಿಗೆ, ಸಾಹಿತ್ಯವಲ್ಲ. ಕೊನೆಗೂ ನಮಗೆಲ್ಲ ಒಳ್ಳೆಯ ಮನುಷ್ಯರಾಗುವುದಕ್ಕಿಂತ ಒಳ್ಳೆಯ ಸಾಹಿತಿ ಅನಿಸಿಕೊಳ್ಳುವುದೇ ಹೆಚ್ಚಾಗಬಾರದು, ಅಲ್ಲವೆ?

( ಲೇಖನವನ್ನು ಬರೆದಿದ್ದು ಫೆಬ್ರವರಿ ೨೦೦೮ರಲ್ಲಿ. ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟವಾಗಿರುವ, ರಹಮತ್ ತರೀಕೆರೆ ಸಂಪಾದಕರಾಗಿರುವ "ಹೊಸ ತಲೆಮಾರಿನ ತಲ್ಲಣ" ಕೃತಿಗಾಗಿ ಬರೆದಿದ್ದು.ಸುಮಾರು ಮುವ್ವತ್ತೆಂಟು ಮಂದಿ ಬರಹಗಾರರ ಲೇಖನಗಳು, ಸಂಪಾದಕ ರಹಮತ್ ತರೀಕೆರೆಯವರ ಸೂಕ್ಷ್ಮ ವಿಶ್ಲೇಷಣೆಯ ಒಂದು ಸುದೀರ್ಘ ಲೇಖನ ಪುಸ್ತಕದಲ್ಲಿವೆ.)


ಹೊಸ ತಲೆಮಾರಿನ ತಲ್ಲಣ
ಸಂಪಾದಕರು: ರಹಮತ್ ತರೀಕೆರೆ
ಪ್ರಸಾರಾಂಗ
ಕನ್ನಡ ವಿಶ್ವವಿದ್ಯಾಲಯ
ಹಂಪಿ.
ಪುಟಗಳು:xii+190
ಬೆಲೆ: ಎಂಭತ್ತು ರೂಪಾಯಿ.
Post a Comment