Wednesday, March 4, 2009

ಬಭ್ರುವಾಹನ ಎಂಬ ಇರುವೆ

ಚಿಂತಾಮಣಿ ಕೂಡ್ಲೆಕೆರೆಯವರನ್ನು ನೆನೆದಾಗಲೆಲ್ಲ ತಟ್ಟನೇ ನೆನಪಾಗುವುದು ಇವರು ಬರೆದ `ಬಭ್ರುವಾಹನ ಎಂಬ ಇರುವೆ' ಹೆಸರಿನ ಕತೆ. ಚಿಕ್ಕವನಿರುವಾಗ ಸೌಖ್ಯವಿಲ್ಲದೇ ಶಾಲೆಗೆ ಚಕ್ಕರ್ ಹಾಕಿ ಮನೆಯ ಮೂಲೆಯೊಂದರಲ್ಲಿ ದಿನವಿಡೀ ಮಲಗಿಕೊಂಡಿರುವಾಗ ಗೋಡೆಯ ಮೇಲೆ ಹರಿದಾಡುವ ಇರುವೆಗಳ ಸಾಲು, ಸಾಲು ತಪ್ಪಿದ ಒಂದೆರಡು ಇರುವೆ, ಹಾದಿಗಡ್ಡವಾಗಿ ಸ್ಕೇಲನ್ನೋ ಕಾಲನ್ನೋ ಇಟ್ಟು ಉಪದ್ರ ಕೊಟ್ಟರೂ ತನ್ನ ಹಾದಿ ಬಿಡದ ಇರುವೆ, ಏನನ್ನೋ ಅರಸಿಕೊಂಡು ಧಾವಂತದಿಂದ ಹುಡುಕುತ್ತಿರುವಂತೆ (ತಪ್ಪಿಸಿಕೊಂಡ ಮಗು ಇರುವೆಯನ್ನು?) ಓಡುವ ಒಂದೇ ಒಂದು ಒಂಟಿ ಇರುವೆ...ಗಳ ನೆನಪಿಗೂ ಈ ಕತೆಗೂ ಏನೋ ಸಂಬಂಧವಿರಬೇಕು! ಬಹುಷಃ ಎಲ್ಲ ಮಕ್ಕಳ ಬಳಿಯೂ ಇರುವೆಗಳ ಕುರಿತ ಏನಾದರೂ ನೆನಪುಗಳಿದ್ದೇ ಇವೆ! ಹಾಗೆ ಭೂತಕಾಲದ, ಬಾಲ್ಯದ, ಹರಯದ ನೆನಪುಗಳ ಲೋಕವನ್ನು ಮೀಟುವ ಕತೆಗಳು ಚಿಂತಾಮಣಿಯವರವು.

ಬಭ್ರುವಾಹನ ಎಂಬ ಇರುವೆ ಸಂಕಲನದಲ್ಲಿ ಒಟ್ಟು ಹನ್ನೆರಡು ಕತೆಗಳಿವೆ. ಈ ಸಂಕಲನ ಪ್ರಕಟವಾದದ್ದು ೧೯೯೯ರಲ್ಲಿ. ಈ ಸಂಕಲನದ ಒಂದಾನೊಂದು ಕತೆ `ಪ್ರಕೃತಿಗೊಬ್ಬ ಪುರುಷ ಬೇಕು' ಕತೆಯ ರಮಾ ಸಂಕಲನದ ಕೊನೆಯ ಕತೆ, `ಮರಳಿ ಬಂದ ಕತೆ'ಯಲ್ಲಿ ಬಂದು ಕತೆಗಾರನನ್ನು ಕಲಕುವ, ನಮ್ಮ ತಲ್ಲಣಗಳಿಗೆ ಕಾರಣವಾಗುವ ಮತ್ತು ಸ್ವತಃ ಒಂದು ಪಾತ್ರವಾಗಿ ಜೀವಂತವಾಗುವ ವಿದ್ಯಮಾನ ಕೂಡ ಇದೆ. ಒಂದು ರೀತಿಯಲ್ಲಿ ಚಿಂತಾಮಣಿಯವರ ಕತೆಗಳೆಲ್ಲವೂ, ಅಥವಾ ಅವರ ಕತೆಗಳೊಳಗಿನ ಒಂದಲ್ಲಾ ಒಂದು ಪಾತ್ರವೂ ಇಂಥ ಮರಳಿ ಬರಬಲ್ಲ ಶಕ್ತಿ ಹೊಂದಿರುವಂಥವೇ. ವಿಪರ್ಯಾಸವೆಂದರೆ ಸ್ವತಃ ಚಿಂತಾಮಣಿ ಕೂಡ್ಲೆಕೆರೆಯವರೇ ಕತೆ ಬರೆಯುವ ಉತ್ಸಾಹವನ್ನೇ ಕಳೆದುಕೊಂಡು ಸುಮ್ಮನಾಗಿರುವುದು. ಇತ್ತೀಚೆಗೆ ಮಯೂರದಲ್ಲಿ ಇವರ `ಯಾದೇವಿ' ಕತೆಯನ್ನು ಓದಿ ಎಷ್ಟು ಖುಶಿಯಾಯಿತೆಂದರೆ ನಿಜಕ್ಕೂ ಅಭಿನಂದಿಸಬೇಕಾಗಿರುವುದು ರಘುನಾಥ ಚ.ಹ.ರನ್ನೇ ಹೊರತು ಚಿಂತಾಮಣಿಯವರನ್ನಲ್ಲ ಅನಿಸಿಬಿಟ್ಟಿತು!

`ಕೆಂಬೂತದ ಗೂಡಲ್ಲಿ ಸಂಜೀವಿನಿ ಇರುವುದಂತೆ' ಎನ್ನುವ ಕತೆ ಬಾಲ್ಯದ ಒಂದು ಕನಸು-ಕಲ್ಪನೆ-ಭ್ರಮೆಗಳ ಲೋಕವನ್ನು ವಾಸ್ತವದ ದುರಂತಕ್ಕೆ ಜೋಡಿಸುತ್ತ ಆ ಬಾಲನಂಬುಗೆಗಳೇ ನಿಜವಾಗಿದ್ದರೆ ಎಷ್ಟು ಚೆನ್ನಾಗಿತ್ತು ಎನಿಸುವಲ್ಲಿ ಸಂಪನ್ನವಾಗುತ್ತದೆ. ಶ್ರೀನಿವಾಸ ವೈದ್ಯರ `ಅಗ್ನಿಕಾರ್ಯ' ಕತೆಯನ್ನು ಈ ಕತೆಯ ಜೊತೆಗಿಟ್ಟು ಓದಿದಾಗ ಸರಿಸುಮಾರು ಒಂದೇ ಬಗೆಯ ಕತೆಯನ್ನು ತೊಡಗುವಲ್ಲಿ, ಕಟ್ಟುವಲ್ಲಿ ಮತ್ತು ಒಟ್ಟಾರೆಯಾಗಿ ಅದು ಓದುಗನನ್ನು ಹೇಗೆ ತಟ್ಟಬೇಕು ಎಂದು ಪರಿಭಾವಿಸುವಲ್ಲಿ ಇಬ್ಬರು ಮಹತ್ವದ ಕತೆಗಾರರು ಭಿನ್ನ ಭಿನ್ನ ಕಾಲಘಟ್ಟದಲ್ಲಿ ತೋರಿದ ಜಾಣ್ಮೆಯನ್ನು ಗಮನಿಸಲು ಸಾಧ್ಯವಾಗುತ್ತದೆ. ಇದೊಂದು ಖುಶಿ ಕೊಡುವ ಅನುಭವ.

ತಮ್ಮ ಎಲ್ಲ ಕತೆಗಳಲ್ಲೂ ಚಿಂತಾಮಣಿಯವರ ಪುಟ್ಟ ಪುಟ್ಟ ಹೆಮ್ಮಕ್ಕಳು ತಾಯಿಯ ಮಾತೃಗುಣವನ್ನು ತೋರುತ್ತಾರೆ. ಹಸಿದ ಗೆಳೆಯನಿಗೆ ನೀಡಲು ಇವರ ಮಡಿಲಲ್ಲಿ ಸದಾ ಏನಾದರೂ ಇರುತ್ತದೆ. ಗೆಳೆಯರಾಗಿ ಜೊತೆಯಲ್ಲಿ ಓಡಾಡಿ ಬೆರೆಯುತ್ತ, ತಪ್ಪಿದಾಗ ಹಿರಿಯರ ಸ್ಥಾನದಲ್ಲಿ ನಿಂತು ಕಿವಿಹಿಂಡುತ್ತ, ಕೀಟಲೆ ಮಾಡುವಾಗ ಕಿರಿಯ ಪುಟಾಣಿ ಬೊಂಬೆಗಳಾಗುತ್ತ ಬದುಕನ್ನು ನೆನಪುಗಳಿಂದ ತುಂಬುವ ಒಬ್ಬ ವರದಾ, ಒಬ್ಬ ಉಷಾಂಬಿಕಾ, ಒಬ್ಬ ರಮಾ ನಮಗೆ ಮತ್ತೆ ಮತ್ತೆ ಸಿಗುತ್ತಾರೆ. ಸಿಕ್ಕ ಹಾಗೆಯೇ ಅವರು ಕಳೆದು ಹೋಗುತ್ತಾರೆ ಮತ್ತು ಸಾಧಾರಣವಾಗಿ ದುರಂತವನ್ನೇ ಎದುರಾಗುತ್ತಾರೆ ಎನ್ನುವುದು ಇಲ್ಲಿನ ನೋವು.

` ಕಥೆ ಕಥೆ ಕೆಳಗೆ ಬಾ' ಹೆಸರಿನ ಕತೆ ತಾಂತ್ರಿಕವಾಗಿ ಎಷ್ಟೋ ಅಷ್ಟೇ ಭಾವುಕವಾಗಿ ಕೂಡ ಮನಸೆಳೆಯುವ ಕಥೆ. ಅಪ್ಪ-ಮಗಳ ಕತೆ ಎನ್ನುವಾಗಲೇ ಇದು ಅಪ್ಪನ ಬಾಲ್ಯಕ್ಕೆ ನುಗ್ಗಿ ಅಪ್ಪನದೇ ಕತೆಯಾಗುತ್ತದೆ. ವನಜಾ ಎಂಬ ಭಾಗದಲ್ಲಿ ಕತೆ ಅಪ್ಪ-ಮಗಳನ್ನು ಬಿಟ್ಟು ತಾಯಿಯೊಬ್ಬಳ ಬಾಲ್ಯಕ್ಕೆ ಹೊರಳುತ್ತದೆ. ಕತೆಯೊಂದನ್ನು ಆಗಸದಿಂದ ಕೆಳಕ್ಕಿಳಿಸಿಕೊಳ್ಳಲು ಮಕ್ಕಳು ತೋರುವ ಅನುನಯ, ಉತ್ಸಾಹ ಎಲ್ಲೋ ನಮ್ಮ ನಮ್ಮ ಬದುಕನ್ನು ನಾವು ನಮ್ಮ ನಮ್ಮ ಕನಸು-ಕಲ್ಪನೆ-ನಿರೀಕ್ಷೆಗಳಿಗೆ ಹೊಂದಿಸಲು ಪಡುವ ಪಡಿಪಾಟಲಿನೊಂದಿಗೆ ತಳುಕುಹಾಕಿಕೊಳ್ಳುತ್ತಿದೆ ಎನ್ನುವಾಗಲೇ ಕತೆ ಮಕ್ಕಳ ಕತೆಯನ್ನೂ ತನ್ನ ಒಡಲಿನೊಳಗೆ ಹೊಂದಿಸಿಕೊಳ್ಳುತ್ತ ಅಲ್ಲಿ ಹಾರುವ ಹಕ್ಕಿಯ ರೆಕ್ಕೆಗಳನ್ನು ಮುರಿದು ತಿನ್ನುವ, ಕನಸುಗಳನ್ನು ಭಗ್ನಗೊಳಿಸುವ ರಕ್ಕಸರ ಕನಸುಗಳು ಕೂಡ ಇವೆಯೆಂಬ ಕಟು ವಾಸ್ತವಕ್ಕೆ ಇಳಿಯುವ ಹೊಸ ಸಾಧ್ಯತೆಯೊಂದನ್ನು ಪಡೆದುಕೊಳ್ಳುತ್ತದೆ. ನಿದ್ದೆ ಬರದೆ ಕಿಟಕಿಯ ಬಳಿ ನಿಂತ ವನಜಾಗೆ ಸುರಿವ ಮಳೆಯ ತಂಗಾಳಿ ಬೀಸಿದಾಗ ತಣ್ಣಗಿನ `ಅವನ' ನೆನಪಾಗುವುದು.ಮೊನ್ನೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಕಂಡವನು 'ಅವನೇ' ಇರಬಹುದೇ ಎಂದು ಯೋಚಿಸುವ ಕ್ಷಣದಲ್ಲೇ ಕಣ್ಣುಮುಚ್ಚಿ ಮಲಗಿರುವ ಗಂಡನ ಮೇಲೆ ವನಜಾಗೆ ಪ್ರೀತಿಯುಕ್ಕುತ್ತದೆ. ಇಂಥ ಪರಸ್ಪರ ವೈರುಧ್ಯವುಳ್ಳ ಭಾವತಲ್ಲಣಗಳನ್ನು ಇಷ್ಟು ಸಹಜವಾಗಿ ಕತೆಯೊಂದರಲ್ಲಿ ಭಾಷೆಯ ತೆಕ್ಕೆಯೊಳಕ್ಕೆ ತರುವುದು ಸುಲಭವಲ್ಲ. ಅದಕ್ಕೆ ಮನಸ್ಸಿನ ತರ್ಕ ಮತ್ತು ಭಾವಲೋಕದ ಸುಪ್ತ ಸಂಬಂಧದ ಸೂಕ್ಷ್ಮ ಪ್ರಜ್ಞೆ ಕತೆಗಾರನಿಗಿರಬೇಕಾಗುತ್ತದೆ. ಇಂಥ ಶಕ್ತಿಯಿದ್ದ ಚಿಂತಾಮಣಿಯವರು ಕತೆ ಬರೆಯುವುದನ್ನೇ ನಿಲ್ಲಿಸಿದರೇಕೆ ಎಂಬ ಪ್ರಶ್ನೆ ಸಂಕಲನದುದ್ದಕ್ಕೂ ಅಲ್ಲಲ್ಲಿ ಕಾಡುತ್ತಲೇ ಇರುತ್ತದೆ.

ಈ ಕತೆಯ ಅಂತ್ಯ ನೋಡಿ:
`ಯಾಕೆ ವನಜಾ, ನಿದ್ದೆ ಬರಲಿಲ್ಲವೇ?' ಎನ್ನುತ್ತ ನರಸಿಂಹ ಹೊರಬಂದ. `ನೋಡಿ, ಎಂಥಾ ಮಳೆ ಸುರೀತಿದೆ' - ವನಜಾ ಕಿಟಿಕಿಯತ್ತ ಕೈ ತೋರಿಸಿದಳು. `ಏನು ವನಜಾ, ಅಳ್ತಾ ಇದೀಯ?' ಎನ್ನುತ್ತ ನರಸಿಂಹ ಹತ್ತಿರ ಬಂದ. ಕಣ್ಣೊರೆಸಿಕೊಳ್ಳುತ್ತ ವನಜಾ `ಇಲ್ಲ' ಎಂದಳು. (ಪುಟ ೩೩)

`ಪ್ರಕೃತಿಗೊಬ್ಬ ಪುರುಷ ಬೇಕು' ಕತೆ ಮೇಲ್ನೋಟಕ್ಕೆ ಹೊಸತೇ ಆದ ಏನನ್ನೂ ಹೊಂದಿಲ್ಲ. ಮದುವೆಯಾಗದೇ ಉಳಿದ ಒಬ್ಬ ಕಥಾನಾಯಕಿ ಬಹುತೇಕ ಎಲ್ಲ ಕತೆಗಾರರಿಗೂ ಕನಿಷ್ಠ ಒಂದಾದರೂ ಕತೆಯ ಉಡುಗೊರೆಯನ್ನು ಕೊಟ್ಟಿದ್ದಾಳೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಚಿಂತಾಮಣಿ ಕೂಡ್ಲೆಕೆರೆಯವರ ಈ ಕತೆಯ ಹೆಚ್ಚುಗಾರಿಕೆಯೇನೆಂದರೆ, ಇದು ರಮಾ ಜೊತೆಗೆ ಅಷ್ಟೇ ಮುತುವರ್ಜಿಯಿಂದ ಪಾರ್ವತಕ್ಕ ಮತ್ತು ಕೃಷ್ಣ ಮಾಸ್ತರರ ಕತೆಯನ್ನೂ ಪೋಷಿಸಿರುವುದು. ಅದೂ ಅಲ್ಲದೆ ಸಂಕಲನದ ಕೊನೆಯ ಕತೆ 'ಮರಳಿ ಬಂದ ಕತೆ' ಈ ಇಡೀ ಕತೆಯ "ನೋವನ್ನು ರಮ್ಯಗೊಳಿಸುವ ಕತೆಗಾರನ ಸಾಹಿತ್ಯಿಕ ಗೀಳ"ನ್ನು ಸೂಕ್ಷ್ಮವಾಗಿ ವಿಮರ್ಶೆಗೊಡ್ಡುವುದು ಇನ್ನೊಂದು ವಿಶೇಷ. ಹೀಗೆ ಮಾಡುವುದರ ಮೂಲಕ ರಮಾ ಜೀವಂತವಾಗುವುದು ತಾಂತ್ರಿಕವಾಗಿ ಹೆಚ್ಚು ಮಹತ್ವದ ವಿಷಯವಾದರೂ, ಕತೆಯೊಂದು ಓದುಗನನ್ನು ತಲುಪುವ ಪ್ರಕ್ರಿಯೆ ಹೆಚ್ಚು ತೀವ್ರವಾಗುವುದಕ್ಕೆ ಇದು ಕಾರಣವಾಗುವ ಅಂಶವನ್ನು ಮರೆತು ನೋಡಿದರೂ ಬದುಕಿನೆದುರು ಸಾಹಿತಿಯ ಮಿತಿಗಳನ್ನು ಕಾಣಿಸುವ ಒಂದು ಕತೆಯಾಗಿ ಇದು ಹೆಚ್ಚು ಮುಖ್ಯವಾದ ಕತೆಯಾಗಿದೆ.

`ಬಭ್ರುವಾಹನ ಎಂಬ ಇರುವೆ' ಕತೆ ಮನುಷ್ಯನ ಒಳ್ಳೆಯತನದ ಕುರಿತಾಗಿ ಇಲ್ಲ ಎಂಬ ಕಾರಣಕ್ಕೇ ಇಷ್ಟವಾಗುವುದಿಲ್ಲ. ಉದ್ವೇಗದ ಒಂದು ಕ್ಷಣದಲ್ಲಿ ನಡೆಯುವ ವಿಲಕ್ಷಣ ದುರಂತ ಮನುಕುಲದ ಕತೆ ಎಂಬಂತೆ ಕಂಡಿರುವುದು ಮತ್ತು ಬರೆದಿರುವುದು ಬ್ಯಾಡ್ ಫೈಥ್ ಅನಿಸುತ್ತದೆ. ನಾವು ಬದುಕುತ್ತಿರುವ ಜಗತ್ತಿನಲ್ಲಿ ಎಷ್ಟೋ ಅನಿಷ್ಟಗಳಿವೆ. ಇಲ್ಲಿ ಕ್ರೌರ್ಯ, ಹಿಂಸೆ, ಮೋಸ, ವಂಚನೆ, ಬೆನ್ನಲ್ಲಿ ಇರಿಯುವುದು, ತಲೆಹಿಡುಕತನ ಎಲ್ಲ ಇದೆ, ನಿಜವೇ. ಹಾಗೆಯೇ ಒಳ್ಳೆಯತನ, ಔದಾರ್ಯ, ಪ್ರೀತಿ, ಸ್ನೇಹ ಕೂಡ ಇವೆ. ಒಂದು ಕತೆಯನ್ನು ಓದಿ ಮುಗಿಸಿದಾಗ ಬದುಕು ಹೆಚ್ಚು ಸಹ್ಯವಾಗಬೇಕು, ಮನಸ್ಸು ಹೆಚ್ಚು ಸ್ವಸ್ಥವಾಗಬೇಕು, ಅದರಲ್ಲಿ ಪ್ರೀತಿ ತುಂಬಿಕೊಳ್ಳಬೇಕು ಎಂದು ಬಯಸುವುದು ಈ ಕಾಲದ ಅಗತ್ಯವಾಗಿ ಕೂಡ ನನಗೆ ಮುಖ್ಯ. ಅಂಥ ದೇವತಾ ಮನುಷ್ಯರು ನಿಜಬದುಕಿನಲ್ಲಿ ನಮ್ಮೆದುರು, ನಮ್ಮ ಸುತ್ತ ಇಲ್ಲದೇ ಇರಬಹುದು. ಅಥವಾ ಇದ್ದರೂ ನಾವು ಅವರನ್ನು ಕಾಣಬಲ್ಲ, ಕಂಡರೆ ನಂಬಬಲ್ಲ ಶಕ್ತಿಯನ್ನೇ ಕಳೆದುಕೊಂಡಿರಬಹುದು. ಆದರೂ ಅಂಥವರ ಬಗ್ಗೆ ಬರೆಯುವುದು ಮುಖ್ಯ. ಸುಳ್ಳೇ ಭ್ರಮೆಯಾಗಿದ್ದರೂ ಸರಿಯೇ, ಗಾಂಧಿಯ ಬೊಚ್ಚು ಬಾಯಿಯ ಒಂದು ನಗೆ ಲೇಸು, ಹಿಟ್ಲರನ ಕುರಿತ ದಾಖಲೆಗಳಿಗಿಂತ. ಕತೆ ಖಂಡಿತವಾಗಿಯೂ ನಿಮ್ಮೊಳಗಿನ ಗೋಪಿಯನ್ನು ಸಾಯಿಸಿ ನಿಮ್ಮನ್ನು ನೀವು ಕಾಪಾಡಿಕೊಳ್ಳಿ ಎನ್ನುತ್ತದೆ, ನಿಜವೇ. ಆದರೆ ಕ್ಷಣದ ಉದ್ವೇಗದ ಮರುಕ್ಷಣದಲ್ಲೇ ಗೋಪಿ ಕೂಡ ಗೋಳಾಡಿದವನೇ. ಅವನಲ್ಲೂ ಒಳ್ಳೆಯತನವಿದೆ. ಆದರೆ ಕ್ಷಣದ ದುಡುಕು ಎಲ್ಲವನ್ನೂ ಕೆಡಿಸಿಬಿಡುತ್ತದೆ, ಮತ್ತೆ ಸರಿಪಡಿಸಲಾರದ ತಪ್ಪನ್ನು ಮಾಡಿಸುತ್ತದೆ. ಯಾವ ಕತೆಯೂ, ಬುದ್ಧಿಮಾತೂ ಇಂಥದ್ದನ್ನು ತಪ್ಪಿಸಲಾರದು; ಕತೆ ಕೂಡ.

`ರಾಯಕರ ಮಾಸ್ತರರ ಚರ್ಚಾಕೂಟ ಪ್ರಸಂಗ' ಅಷ್ಟು ವಿಶೇಷವಾದ ಕತೆಯಲ್ಲ. ಒಂದು ಬಗೆಯ ಅಣಕದೊಂದಿಗೇ ಈ ಕತೆ ತನ್ನದಾದ ಪುಟ್ಟ ಜಗತ್ತನ್ನು ಕಟ್ಟಿಕೊಂಡು ವಾಸ್ತವಕ್ಕೆ ಕನ್ನಡಿಯಾಗುತ್ತದೆ ಎನ್ನುವುದರಾಚೆ ಬೆಳೆಯುವುದಿಲ್ಲ. ಪರ ವಿರೋಧ ಎರಡೂ ಭಾಷಣಗಳನ್ನು ಒಬ್ಬನೇ ಬುದ್ಧಿವಂತ ಬರೆದುಕೊಡುವುದು, ಮಕ್ಕಳಿಗೆ ವಿಷಯದ ಕುರಿತು ತಮ್ಮದೇ ಆದ ವೈಚಾರಿಕ ನಿಲುವು ಇದ್ದರೂ ಅವರು ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಾಗಿಯೇ ಯಾರ್ಯಾರನ್ನೋ ಕಾಡಿ ಬೇಡಿ ಭಾಷಣ ಬರೆಯಿಸಿಕೊಂಡು ಗಟ್ಟು ಹಾಕುವುದು (ಉರು ಹೊಡೆಯುವುದು), ಸ್ವಾತಂತ್ರ್ಯ ಹೋರಾಟಗಾರ ಅಧ್ಯಕ್ಷರ ನಿದ್ದೆ ಮತ್ತು ಅಸಾಂದರ್ಭಿಕ ಭಾಷಣ, ಹೆಡ್‌ಮಾಸ್ತರರ ಅನ್ಯಾಸಕ್ತಿ ಎಲ್ಲವನ್ನೂ ಕತೆ ಬಹಳ ಚೆನ್ನಾಗಿ ಅವಲೋಕಿಸಿದೆಯಾದರೂ ಕತೆ ಕೂಡ್ಲೆಕೆರೆಯವರ ಇತರ ಕತೆಗಳಿಂದ ಭಿನ್ನವಾಗಿಯೇ ಉಳಿಯುತ್ತದೆ.

`ಕುರುಡನ ಕುಣಿತ' ಸಂಕಲನದ ಉತ್ತಮ ಕತೆಗಳಲ್ಲಿ ಒಂದು. ಒಂದು ಬಗೆಯಲ್ಲಿ ವ್ಯಕ್ತಿತ್ವ ಚಿತ್ರಣದಂತೆ ತೊಡಗುವ ಕತೆ ತನ್ನ ಕಥಾನಕದ ಒಡಲಿನಲ್ಲಿ ಇಡೀ ಊರಿನ ಹರಹು ಸೆಳೆದುಕೊಂಡು ಬೆಳೆಯುತ್ತದೆ. ಜಾತ್ರೆ, ಹಬ್ಬ ಹರಿದಿನಗಳಲ್ಲಿ ಊರಿನ ಸಂಭ್ರಮ ಮತ್ತು ಅದಕ್ಕೆ ಒಂದಲ್ಲಾ ಒಂದು ಬಗೆಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತ ಬರುವ ಕುರುಡು ರಾಮ ಕ್ರಮೇಣ ಆಧುನಿಕತೆಯ ಪ್ರವೇಶದೊಂದಿಗೆ ನೇಪಥ್ಯಕ್ಕೆ ಸೇರುವುದನ್ನು ಅವನ ವ್ರದ್ಧ್ಯಾಪ್ಯದ ಗೋಳುಗಳನ್ನು ಬೆಳೆಸದೆ ಹೇಳುವ ಕತೆಯಿದು. ಹಾಗಾಗಿಯೇ ಈ `ಕುರುಡು' ರಾಮನ ಕತೆ, ಸುಳ್ಳೊಂದರ ಆಧಾರ ಹಿಡಿದು ಬೆಂಗಳೂರಿಗೆ ಬಂದು ಸುಗ್ಗಿ ಕುಣಿತ ಕುಣಿಯುವ ಕುರುಡು ರಾಮನನ್ನು ವ್ಯವಸ್ಥೆಗೆ ಹಿಡಿದ ರೂಪಕವನ್ನಾಗಿಸಿ ಬಿಡುತ್ತದೆ.

"ಸ್ವಲ್ಪ ಹೊತ್ತಿನ ಬಳಿಕ ರಾಮ ನನ್ನನ್ನು ಮೆಲ್ಲಗೆ ಅಲ್ಲಿಯೇ ಸ್ವಲ್ಪ ದೂರ ಎಳೆದುಕೊಂಡು ಹೋಗಿ ಸಣ್ಣ ಧ್ವನಿಯಲ್ಲಿ "ನನ್ನ ಕುಣಿತ ಹೇಗಾಗಿತ್ತು?" ಎಂದು ಕೇಳಿದ. "ಚೆನ್ನಾಗಿತ್ತು" ಎಂದೆ. "ಯಾಕೆ ಕೇಳಿದೆ ಅಂದರೆ-ಇಂದು ದೊಡ್ಡ ದೊಡ್ಡ ಸಾಹೇಬರೆಲ್ಲ ಬಂದಿರುತ್ತಾರಂತೆ. ನಾನು ಚೆನ್ನಾಗಿ ಕುಣಿದರೆ ಸರ್ಟಿಫಿಕೇಟು ಕೊಡುತ್ತಾರಂತೆ. ಅದು ಸಿಕ್ಕರೆ ನನ್ನ ಪೆನ್ಷನ್ ಸುಲುವಾಗಿ ಪ್ರಯತ್ನಿಸುವಾ ಎಂದು ಶಶಿಧರ ಹೇಳಿದ್ದಾನೆ" ಎಂದ. ರಾಮನ ಕುರುಡು ಕಣ್ಣುಗಳು ಸಂಭ್ರಮದಿಂದ ಹೊಳೆಯುತ್ತಿದ್ದವು. ನನಗೆ ಏನು ಹೇಳಬೇಕೊ ಒಂದೂ ಅರ್ಥವಾಗಲಿಲ್ಲ. "ಆಗಲಿ ರಾಮ-ಒಳ್ಳೆಯದಾಯಿತು" ಎಂದೆ. ರಾಮನಲ್ಲಿ ಕಾಣುತ್ತಿದ್ದ ವಿಶ್ವಾಸ, ಭರವಸೆಗಳ ಅರ್ಥವನ್ನು ಹುಡುಕುವುದೂ ನೀಚತನ ಅನ್ನಿಸಿತು." (ಪುಟ ೬೫)

`ಸ್ಥಿತ್ಯಂತರ' ಗಣಪಜ್ಜ ಎಂಬ ಒಬ್ಬ ವಿಶಿಷ್ಟ ವ್ಯಕ್ತಿಯನ್ನು ಕುರಿತ ಕತೆ. ಈತನ ಅಲ್ಪತೃಪ್ತಿ, ನಿರ್ಮಮ-ನಿರ್ವಿಕಾರ ಬದುಕು ಮತ್ತು ಮಕ್ಕಳೊಡನೆ ಮಕ್ಕಳಂತೆ ಇರಬಲ್ಲ ದೊಡ್ಡತನ ಯಾವತ್ತೂ ಜಿದ್ದಾಜಿದ್ದಿನ ವ್ಯಾವಹಾರಿಕ ಬದುಕಿನಲ್ಲಿ ಮಾನ್ಯತೆ ಪಡೆಯುವುದಿಲ್ಲ ಎಂಬ ಅರಿವಿದ್ದರೂ ಅವನು ತನ್ನ ಪಾಡಿಗೆ ತಾನಿರುತ್ತಾನೆ. ಆದರೆ ಯಾವಾಗ ಈ ಶೇಷ ಜಗತ್ತು ಈತ ತನ್ನ ಪಾಡಿಗೆ ತಾನಿರುವುದನ್ನೂ ಸಹಿಸದೆ, ಒಳ್ಳೆಯತನವನ್ನು ದೌರ್ಬಲ್ಯ ಎಂದುಕೊಂಡು ಅದನ್ನೇ ದುರ್ಬಳಕೆ ಮಾಡಿಕೊಂಡು ಇವನನ್ನೆ ಮೆಟ್ಟುತ್ತದೋ ಆಗ ಗಣಪಜ್ಜ ಅದಕ್ಕೆ ಹೇಗೆ ಪ್ರತಿಸ್ಪಂದಿಸುತ್ತಾನೆ ಎಂಬುದು ಪ್ರಶ್ನೆ. ಬಂಡೆ ಎದುರಾದಾಗ ಅದನ್ನು ಕೊರೆದು ದಾರಿ ಮಾಡಿಕೊಳ್ಳುವುದನ್ನು ಬಿಟ್ಟು ಅಲ್ಲೇ ಪಕ್ಕಕ್ಕೆ ಸರಿದು ಹೊಸದಾರಿ ಹುಡುಕಿಕೊಂಡು ಮುಂದಕ್ಕೆ ಹರಿಯುವ ನದಿಯಂತೆ ಈ ಗಣಪಜ್ಜ.

ಈ ಸಂಕಲನದ ಹೆಚ್ಚಿನ ಎಲ್ಲ ಕತೆಗಳಂತೆಯೇ ಈ ಕತೆಯನ್ನೂ ಒಂದರ್ಥದಲ್ಲಿ ನಮಗೆ ನಿರೂಪಿಸುತ್ತಿರುವವರು ಮಕ್ಕಳು ಅಥವಾ ಬಾಲಪ್ರಜ್ಞೆಯೇ. ಕತೆಗಾರ ತನ್ನ ಬಾಲ್ಯದಲ್ಲಿ ಕಂಡ ಜಗತ್ತನ್ನು ಮರುನಿರ್ಮಿಸಿಕೊಳ್ಳುತ್ತಿರುವಂತೆ ಕಾಣುವ ಇಲ್ಲಿನ ಬಹುತೇಕ ಚಿತ್ರಗಳು, ವ್ಯಕ್ತಿಗಳು ಬಾಲ್ಯದಲ್ಲಿ ಕಂಡಂಥವು. ಬಾಲ್ಯದ ಜಗತ್ತನ್ನು ನಿರ್ಮಿಸಿದ ಆತ್ಮೀಯ ಪಾತ್ರಗಳ ಹಿತವಾದ ಸಾನ್ನಿಧ್ಯ, ಸ್ವಾರ್ಥವಿಲ್ಲದ ಮುಗ್ಧ ಸ್ನೇಹ, ಸ್ಪರ್ಧೆಯಲ್ಲೂ ಇಣುಕುವ ಮಕ್ಕಳಾಟಿಕೆ ಇವು ಒಂದು ಬಗೆಯಲ್ಲಿ ನಮ್ಮನ್ನು ಬೆಳೆದ ನಂತರ ಬೇರೆ ಬೇರೆ ಕಾರಣಗಳಿಗಾಗಿ ಕಾಡುತ್ತ ಉಳಿಯಬಲ್ಲವಾದರೆ, ಬಾಲ್ಯದಲ್ಲಿ ನಾವು ಕಂಡ ಬೇರೆ ಬೇರೆ ವ್ಯಕ್ತಿಗಳು ಬೆಳೆದಂತೆಲ್ಲ ಹೆಚ್ಚು ಹೆಚ್ಚು ಅರ್ಥವಾಗಿ, ಅವರ ಆಗಿನ-ಈಗಿನ ನೋವು, ಸಂಕಟಗಳಿಗೆ ಸ್ಪಂದಿಸುವ ಆದರೆ ಕಾಲನ ಎದುರು ಏನೂ ಮಾಡಲಾರದ ಒಂದು ಅಸಹಾಯಕ ಚಿತ್ರ ಇನ್ನೊಂದು ಬಗೆಯಲ್ಲಿ ಇಲ್ಲಿ ಕತೆಗಳಾಗಿ ಮೈತಳೆದಿವೆ. `ಕುರುಡನ ಕುಣಿತ' ಮತ್ತು `ಸ್ಥಿತ್ಯಂತರ' ಎರಡೂ ಈ ಬಗೆಯ ಕತೆಗಳು. ಮುಂದೆ ಬರುವ `ಶಪಿತ ಕುದುರೆ ಮತ್ತು ರಾಜಕುಮಾರ' ಕತೆ ಕೂಡ ಇದೇ ಬಗೆಯ ಇನ್ನೊಂದು ಕತೆಯೆನ್ನಬಹುದು.

`ವಸಿಷ್ಠ ಗುಹೆ' ಸಂಕಲನದ ವಿಶಿಷ್ಟ ಕತೆ. ಇಲ್ಲಿ ಬಾಲ್ಯದ ನೆನಪುಗಳ ನೆನವರಿಕೆಗಳಿಲ್ಲ. ಅಧ್ಯಾತ್ಮದ ಬೆನ್ನುಹತ್ತಿ ಹೋಗುವ ಕತೆಯಿದು. ಕತೆಯ ನಿರೂಪಕ ಅದನ್ನು ಬೆನ್ನುಹತ್ತಿದ ಬಗೆ ಒಂದು. ಕತೆಯ ಒಳಗಿನ ಕತೆಯನ್ನು ನಿರೂಪಿಸುವ ಯತಿಯೊಬ್ಬನ ಬಗೆ ಇನ್ನೊಂದೇ ಬಗೆಯದು. ಬದುಕಿನಲ್ಲಿ ಎದುರಾಗುವ ನೋವು ಒಂದು ಮಿತಿಯನ್ನು ಮೀರಿ ನಮ್ಮ ಬದುಕು-ಭವಿಷ್ಯವನ್ನು ಕಬಳಿಸುವ ಮಟ್ಟಕ್ಕೆ ಬಂದಾಗ ಕವಿಯುವ ನಿರಾಶೆಯ ಇನ್ನೊಂದು ಮುಖ ಕೂಡ ಅಧ್ಯಾತ್ಮವಿದ್ದೀತು. ಬದುಕಿನಲ್ಲಿ ನಿರಾಕರಿಸಲ್ಪಟ್ಟದ್ದರ ಕುರಿತು ಮನಸ್ಸು ತಳೆಯುವ ನಿಲುವು ಅಧ್ಯಾತ್ಮದತ್ತ ಅದನ್ನು ಹೊರಳಿಸಬಲ್ಲದು. ಇಲ್ಲಿನ ಯತಿಗೆ ಕೂಡಾ ಅಧ್ಯಾತ್ಮದ ಹಾದಿಯಲ್ಲಿ ಬಹುದೊಡ್ಡ ನಿರೀಕ್ಷೆಗಳೇನೂ ಇಲ್ಲ. ಆದರೆ ಅವರಲ್ಲಿ ಡಂಭಾಚಾರವಿಲ್ಲ, ಪ್ರದರ್ಶನಪ್ರಿಯತೆಯಿಲ್ಲ ಎಂಬುದು ಮುಖ್ಯ. ಇದು ಕೂಡ ನಿರೂಪಕನಿಗೆ ತೆರೆದಿಡುವ ನೋಟ ಹೊಸತೇ. ಕತೆ ಕೊನೆಯಾಗುವುದು "ಅಲ್ಲಿ ಯಾವುದೂ ನಾಟಕೀಯವಾಗಿ ಕಾಣುತ್ತಿರಲಿಲ್ಲ" ಎಂಬ ಮಾತಿನೊಂದಿಗೇ.

`ಶಪಿತ ಕುದುರೆ ಮತ್ತು ರಾಜಕುಮಾರ' ಕತೆ ಸೈಕಲ್ ಸರ್ಕಸ್‌ನವರ ಬದುಕಿನ ಕುರಿತಾಗಿದೆ. ಸೈಕಲ್ ಸರ್ಕಸ್ ಎನ್ನುವ ಹೆಸರಿನಲ್ಲಿ ದಶಕಗಳ ಹಿಂದೆ ಊರಿಂದೂರಿಗೆ ಸುತ್ತುತ್ತಿದ್ದ ಇಬ್ಬರು ಮೂವರ ಒಂದು ಪುಟ್ಟ ತಂಡ ದೊಂಬರಾಟದವರಂತೆಯೇ ಕೆಲವೊಂದು ಚಮತ್ಕಾರಗಳನ್ನು ಪ್ರದರ್ಶಿಸಿ ಜನರಿಂದ ಚಪ್ಪಾಳೆ-ಹಣ ಪಡೆದು ಜೀವನ ಸಾಗಿಸುತ್ತಿದ್ದುದು ಈಗ ಬಹುತೇಕ ನೆನಪಾಗಿಯಷ್ಟೇ ಉಳಿದಿದೆ. ಇವರಲ್ಲಿ ಒಬ್ಬ ಐದಾರು ದಿನಕಾಲ ನೆಲಕ್ಕೆ ಕಾಲು ಸೋಕಿಸದೆ ಸೈಕಲ್ ತುಳಿಯುತ್ತ, ಸೈಕಲ್ಲಿನಲ್ಲೇ ವಿವಿಧ ಕಸರತ್ತು ನಡೆಸುತ್ತಿದ್ದ. ಇನ್ನಿಬ್ಬರು (ಹುಡುಗ-ಹುಡುಗಿ ಪಾತ್ರದಲ್ಲಿ) ಸಿನಿಮಾ ಹಾಡುಗಳಿಗೆ ಕುಣಿಯುವುದು, ಹಾಸ್ಯಪ್ರಸಂಗಗಳನ್ನು ಅಭಿನಯಿಸುವುದು ಇತ್ಯಾದಿ ಮಾಡಿ ರಂಜಿಸುತ್ತಿದ್ದರು. ಹತ್ತಾರು ಟ್ಯೂಬ್‌ಲೈಟಿನ ಹಾಸಿನ ಮೇಲೆ ಸೈಕಲಿನಿಂದ ನೇರ ಲಾಗ ಹಾಕಿ ಬೆನ್ನಿಂದ ಅವುಗಳನ್ನು ಒಡೆಯುವುದು, ಎದೆಯ ಮೇಲೆ ಕಲ್ಲಿನ ಒರಳು ಸ್ಥಾಪಿಸಿ ಬತ್ತ ಕುಟ್ಟುವುದು, ಎದೆಯ ಮೇಲೆ ಐದಾರು ಕಲ್ಲುಗಳನ್ನಿಟ್ಟು ಪೇರಿಸಿ ಕಲ್ಲು ಒಡೆಯುವುದು, ಅವನನ್ನು ನೆಲದಡಿ ಹೊಂಡದಲ್ಲಿ ಮುಚ್ಚಿಡುವುದು ಇತ್ಯಾದಿ ಮಾಡುತ್ತಿದ್ದರು. ಸೈಕಲ್ಲಿನ ಮೇಲೆಯೇ ಸ್ನಾನ ಮಾಡುವುದು, ಪೂಜೆ ಮಾಡುವುದು, ವ್ಯಾಯಾಮ ಮಾಡುವುದು ಇತ್ಯಾದಿ ಎಲ್ಲವೂ ಹುಡುಗರಿಗೆ ಅತ್ಯಾಕರ್ಷಕ ಸಾಹಸಗಳಾಗಿ ಕಾಣುವ ವಯಸ್ಸು. ಅಲ್ಲದೆ ಆ ಕಾಲದಲ್ಲಿ ಲಭ್ಯವಿದ್ದ ಸೀಮಿತ ಮನೋರಂಜನೆಗಳ ಅವಕಾಶದಲ್ಲಿ ಈ ಸೈಕಲ್ ಸರ್ಕಸ್ ಪುಟ್ಟ ಪುಟ್ಟ ಊರುಗಳಲ್ಲಿ ಸಾಕಷ್ಟು ಜನಮನ್ನಣೆ ಪಡೆದಿತ್ತು. ಚಿಂತಾಮಣಿಯವರ ಬಭ್ರುವಾಹನ ಕತೆ ಬಾಲ್ಯದ ನಮ್ಮ ಇರುವೆಗಳೊಂದಿಗಿನ ಸಖ್ಯವನ್ನು ಮತ್ತೊಮ್ಮೆ ನೆನೆಯುವಂತೆ ಮಾಡಿದ ಹಾಗೆಯೇ ಈ ಕತೆ ಸೈಕಲ್ ಸರ್ಕಸ್‌ನ ಆಕರ್ಷಣೆ ನಮ್ಮ ತಲೆಕೆಡಿಸಿದ್ದ ದಿನಗಳನ್ನು ಮತ್ತೊಮ್ಮೆ ನೆನೆಯುವಂತೆ ಮಾಡುತ್ತದೆ. ಆದರೆ ಅಷ್ಟನ್ನೇ ಮಾಡಿ ಸುಮ್ಮನಾಗುವುದಿಲ್ಲ ಎಂಬುದು ಮುಖ್ಯ. ಬಭ್ರುವಾಹನ ಮನುಷ್ಯನ ಕೃತಘ್ನತೆಯ ಕತೆ ಹೇಳಿದರೆ ಶಪಿತ ಕುದುರೆ ಈ ಸೈಕಲ್ ಸರ್ಕಸ್‌ನ ಕೇಂದ್ರಬಿಂದು ಹರಭಜನ್ ಸಿಂಗನ ಬದುಕಿನ ಕತೆ ಹೇಳುತ್ತಿದೆ. ಅವನೊಂದಿಗೆ ತನ್ನ ಗಂಡನನ್ನೂ ಬಿಟ್ಟು ಓಡಿ ಹೋದ ಮಂಗಲಕ್ಕ ಕತೆಯ ಉತ್ತರಾರ್ಧವನ್ನು ನಮಗೆ ಕಾಣಿಸುವ ಪಾತ್ರವಾಗಿರುವುದು ಒಂದು ವಿಶೇಷ. ಮಂಗಲಕ್ಕನ ಗಂಡ ವಾಸುದೇವಣ್ಣ ತೀರಿ ಹೋಗಿರುವುದನ್ನು ನಿರೂಪಕ ಯಾಕೋ ಮಂಗಲಕ್ಕನ ಬಳಿ ಕೊನೆಗೂ ಹೇಳುವುದಿಲ್ಲ. ಆತ ಹರಭಜನನನ್ನು ಮುಖತಃ ಕಾಣುವುದಿಲ್ಲ ಕೂಡ. ಒಂದೇ ಜನ್ಮದಲ್ಲಿ ಎರಡು ಪಾತ್ರಗಳನ್ನು ನಿರ್ವಹಿಸುತ್ತಿರುವಂತೆ ಕಾಣಿಸುವ ಮಂಗಲಕ್ಕ ನಿರೂಪಕನಲ್ಲಿ ಹುಟ್ಟಿಸುವ ವಿಹ್ವಲ ಭಾವದಲ್ಲೇ ಕತೆಯ ಅಂತರಾತ್ಮವೂ ತೆರೆದುಕೊಳ್ಳುತ್ತದೆ. ಕತೆಯುದ್ದಕ್ಕೂ ಅಜ್ಜಿ ಹೇಳುವ ಸೈಕಲ್ಲಿನ, ಸೈಕಲ್ ಸರ್ಕಸ್ ರಾಜಕುಮಾರನ ಕತೆ ಈ ತಲ್ಲಣಗಳಿಗೆ ಹಿತವಾದ ಒಂದು ಹಿನ್ನೆಲೆಯನ್ನು ಒದಗಿಸಿರುವುದು ಮನಸೆಳೆಯುತ್ತದೆ.

`ಬಾಬುವಿನ ಕನಸುಗಳು' ೧೯೯೪ರಲ್ಲಿ ತಟ್ಟಿದಂತೆ ಈಗ ತಟ್ಟದಿರುವುದಕ್ಕೆ ಕಾಲ ಕಾರಣವೋ ಅಥವಾ ಈ ನಡುವಿನ ದಿನಗಳಲ್ಲಿ ಕ್ಲೀಷೆಯೆನ್ನಿಸುವಷ್ಟು ವಿಪುಲವಾಗಿ ಬಂದ ಮಕ್ಕಳ ಮುಗ್ಧತೆಯ ಮೇಲಿನ ದುರಾಕ್ರಮಣದ ಕತೆಗಳು ಕಾರಣವೋ ಹೇಳುವುದು ಕಷ್ಟ. ಜೂ ಒಂದರಲ್ಲಿ ಪ್ರಾಣಿಗಳ ಲದ್ದಿ ಬಾಚುವ ಕೆಲಸಕ್ಕೆ ಸೇರಿಕೊಂಡ ಪುಟ್ಟ ಬಾಬು ಮಾನಸಿಕವಾಗಿ ಎದುರಿಸುವ ಅಪಮಾನದ ಕ್ಷಣಗಳಲ್ಲಿ ತೋರುವ ಪ್ರತಿಭಟನೆ ಬಡವನ ಕೋಪ ದವಡೆಗೆ ಮೂಲ ಎಂಬುದರಲ್ಲೇ ಮುಗಿಯುವುದು ಇಲ್ಲಿನ ಕತೆ. ಚಿಂತಾಮಣಿಯವರ ಎಂದಿನ ಆಪ್ತಬಾಲ್ಯದ ವಿವರಗಳು, ಮಕ್ಕಳ ಮನಸ್ಸಿನ ಮುಗ್ಧ ಲೋಕದ ಚಿತ್ರ ಇಲ್ಲೂ ನಮಗೆ ಎದುರಾಗುತ್ತವೆ.

`ಕರಡಿವೇಷ' ಕತೆ ಕೂಡ ತುಷಾರದಲ್ಲಿ ಓದಿದಾಗಲೇ ತೀವ್ರವಾಗಿ ತಟ್ಟಿದ, ಮನಸ್ಸಿನಲ್ಲಿ ತಲ್ಲಣಗಳನ್ನೆಬ್ಬಿಸಿದ ಸುಂದರ ಕತೆ. ಉದ್ಯೋಗಕ್ಕಾಗಿ ಅರಸಿ ಅರಸಿ ಕೊನೆಗೆ ಬಟ್ಟೆ ಅಂಗಡಿಯ ಮುಂದೆ ಕರಡಿ, ಮೊಲದಂಥ ಪ್ರಾಣಿಗಳ ವೇಷ ಧರಿಸಿ ಓಡಾಡುವ ಕೆಲಸ ದೊರೆತವನ ಸಂದಿಗ್ಧಗಳ ಈ ಕತೆಯನ್ನು ರಘುನಾಥ ಚ.ಹ.ಅವರ `ಒಳಗೂ ಮಳೆ ಹೊರಗೂ ಮಳೆ' ಸಂಕಲನದ ಒಂದು ಕತೆಯೊಂದಿಗೆ (ಹೆಸರು ಮರೆತಿದೆ) ಹೋಲಿಸಿ ನೋಡಬಹುದಾಗಿದೆ. ಓದುಗನ ಭಾವವಲಯವನ್ನು ತಲುಪಲು, ಅಲ್ಲಿ ಕವಿಭಾವ ಪ್ರತಿಮಾ ಪುನರ್ ಸೃಷ್ಟಿ ಸಾಧಿಸಿ ಅವನ ಸಂವೇದನೆಯ ತಂತಿ ಮೀಟಲು ಇಬ್ಬರು ಪ್ರತಿಭಾವಂತ ಕತೆಗಾರರು ಹೂಡುವ ತಂತ್ರ, ಮೆರೆಯುವ ಕಥನ ಕೌಶಲಗಳನ್ನು ಅರಿಯಲು ಈ ತುಲನಾತ್ಮಕ ಓದು ಸಹಕಾರಿಯಾಗಬಲ್ಲದು.

`ಮರಳಿ ಬಂದ ಕತೆ' ಹೆಸರಿನಂತೆಯೇ ಸಂಕಲನದ `ಪ್ರಕೃತಿಗೊಬ್ಬ ಪುರುಷ ಬೇಕು' ಕತೆಯ ಹಿನ್ನೋಟ ನೀಡುವ ಕತೆ. ಒಂದು ಸಂಕಲನದಲ್ಲಿ ಹೀಗೆ ಒಂದು ಕತೆಯನ್ನು ಇನ್ನೊಂದು ಕತೆ ಪ್ರಶ್ನಿಸುವುದು, ವಿಮರ್ಶಿಸುವುದು ಮತ್ತು ಎರಡೂ ಕತೆ ಈ ತಂತ್ರದಿಂದಲೇ ಹೊಸ ಆಯಾಮಗಳನ್ನು ಪಡೆದುಕೊಳ್ಳುವುದು ಬಹುಷಃ ಈ ವರೆಗೆ ಚಿಂತಾಮಣಿಯವರೊಬ್ಬರೇ ನಡೆಸಿದ ಪ್ರಯೋಗವಿದ್ದೀತು. ಅದೇನಿದ್ದರೂ `ಪ್ರಕೃತಿಗೊಬ್ಬ ಪುರುಷ ಬೇಕು' ಕತೆಯಲ್ಲಿ ನಿರೂಪಕ ಮೌನವಾಗಿರುವ ಪಾತ್ರ ಎಂದು ನಮಗೆ ತಿಳಿಯುವುದು `ಮರಳಿ ಬಂದ ಕತೆ'ಯಲ್ಲೇ. ಹಾಗೆಯೇ ಎರಡೂ ಕತೆಗಳ ಕಾಲಘಟ್ಟದ ಅಂತರದಲ್ಲಿ ಅಘನಾಶಿನಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಈಗ ರಮಾ ಮದುವೆಯಿಲ್ಲದೆ ಉಳಿದುಬಿಟ್ಟಿರುವುದನ್ನು ಅವಳೂ ಸೇರಿದಂತೆ ಪಾರ್ವತಕ್ಕ ಮತ್ತು ಕೃಷ್ಣ ಮಾಸ್ತರರು ಕೂಡ ಮೌನವಾಗಿಯೇ ಒಪ್ಪಿಕೊಂಡಂತಿದೆ. ಒಪ್ಪಿಕೊಂಡು ಬೆಳೆದ ಪಾತ್ರವಾಗಿ ಇಲ್ಲಿ ರಮಾ ನಮಗೆ (ನಿರೂಪಕನಿಗೆ) ಮುಖಾಮುಖಿಯಾಗುತ್ತಿದ್ದಾಳೆ. ಲಂಕೇಶ್ ಕೈಯಲ್ಲಿ ಇಂಥ ಒಂದು ಪಾತ್ರ ಪಡೆದುಕೊಳ್ಳಬಹುದಾಗಿದ್ದ ರೂಪಾಂತರವನ್ನು ಕಲ್ಪಿಸುತ್ತ ಚಿಂತಾಮಣಿಯವರ ಸಂಕಲನವನ್ನು ಓದಿ ಮುಗಿಸಿದೆ.

ಚಿಂತಾಮಣಿ ಕೂಡ್ಲೆಕೆರೆಯವರು ಕವಿಯಾಗಿಯೇ ಹೆಚ್ಚು ಪರಿಚಿತರು. ನಾಲ್ಕು ಕವನ ಸಂಕಲನಗಳನ್ನು ಅವರು ಪ್ರಕಟಿಸಿದ್ದಾರೆ. ಕಥಾ ಸಂಕಲನ ಬಹುಷಃ ಇದೊಂದೇ ಇದ್ದೀತು. ಇಲ್ಲಿನ ಕತೆಗಳನ್ನು ಓದುತ್ತಿದ್ದಂತೆ ಭಾವುಕ ಮನೋವಲಯವೊಂದನ್ನು ತೀರ ಮಯಣ್ಣಗೊಳಿಸದ ನೆಲೆಯಲ್ಲಿ ಸ್ಪರ್ಶಿಸುತ್ತ, ತಂತ್ರಗಾರಿಕೆಯಲ್ಲಿ ಸಾಕಷ್ಟು ಲಾಜಿಕಲ್ ಆಗಿಯೇ ಎಚ್ಚರವಹಿಸಿದರೂ ಅದು ಎದ್ದು ಕಾಣದಂಥ ಕೌಶಲವನ್ನು ತೋರಿಸುತ್ತ ಬರೆದ ಚಿಂತಾಮಣಿಯವರು ಇನ್ನಷ್ಟು ಕತೆಗಳನ್ನು ಬರೆಯುತ್ತಲೇ ಬಂದಿದ್ದರೆ ಇವತ್ತು ಖಂಡಿತಕ್ಕೂ ಮತ್ತಷ್ಟು ಅತ್ಯುತ್ತಮವೆನ್ನಬಹುದಾದ ಕತೆಗಳನ್ನು ಕೊಟ್ಟಿರುತ್ತಿದ್ದರು. ಈಚೆಗೆ ದೇಶಕಾಲದಲ್ಲಿ ಅವರ ಕೆಲವು ಕವನಗಳನ್ನು ಓದುವುದು ಸಾಧ್ಯವಾಯಿತು. ಮಯೂರದಲ್ಲಿ ಬಹುಕಾಲದ ನಂತರ ಕತೆಯೊಂದು ಓದಲು ಸಿಕ್ಕಿತು. ಈ ಓದು ಚಿಂತಾಮಣಿಯವರು ಇನ್ನಷ್ಟು ಬರೆಯಲಿ ಎಂದು ಬಯಸುವಂತೆ ಮಾಡಿತು.
(ಚಿಂತಾಮಣಿಯವರ ಭಾವಚಿತ್ರ ಚನ್ನಕೇಶವರು ತೆಗೆದಿದ್ದು ಮಯೂರ ಮಾಸಪತ್ರಿಕೆಯಿಂದ ಪಡೆದಿದ್ದು.)

No comments: