Monday, March 9, 2009

ಅಂತರಂಗದಾ ಮೃದಂಗ...

ರಿಲ್ಕೆ ಹೇಳುತ್ತಾನೆ, ಏಕಾಂತ, ಏಕಾಂತವೇ ಮುಖ್ಯ ಒಬ್ಬ ಬರಹಗಾರನಿಗೆ. ಅವನು ತನ್ನೊಳಗಿನ ಏಕಾಂತದೊಂದಿಗೆ ಎಷ್ಟೆಷ್ಟು ಸುಖಿಸಬಲ್ಲನೋ ಅಷ್ಟಷ್ಟು ಹೆಚ್ಚು ಪಕ್ವಗೊಳ್ಳುತ್ತಾನೆ ಎಂಬ ಅರ್ಥದಲ್ಲಿ. ಪಮುಕ್‌ನ ಮಾತುಗಳು ಕೂಡಾ ಇದನ್ನೇ ಧ್ವನಿಸುತ್ತವೆ. ಇಸ್ತಾಂಬುಲ್‌ನಲ್ಲೇ ತನ್ನ ಜೀವನಪರ್ಯಂತ ನೆಲೆನಿಂತ ಪಮುಕ್‌ಗೆ ಒಬ್ಬ ಮನುಷ್ಯ ತನ್ನದೇ ಅನಿಸುವ ಒಂದು ನೆಲೆಗೆ ಅಂಟಿಕೊಂಡಿರುವುದರ ಮಹತ್ವದ ಬಗ್ಗೆ ತನ್ನದೇ ಆದ ನಿಲುವುಗಳಿವೆ. ಇಸ್ತಾಂಬುಲ್ ಬಿಟ್ಟು ಬೇರೆಲ್ಲೂ ಹೋಗಿ ನೆಲೆಯಾದುದಿಲ್ಲ ಎಂದ ಮಾತ್ರಕ್ಕೆ ಇಸ್ತಾಂಬುಲ್‌ನಲ್ಲಿ ತಾನು ಸಂತೃಪ್ತನೇನಲ್ಲ ಎನ್ನುತ್ತಾನೆ ಕೂಡ. ಇವನೂ ತನ್ನ ಬರವಣಿಗೆಯ ಏಕಾಂತಕ್ಕಾಗಿ ಮಾಡಿರುವುದು ಕಡಿಮೆಯೇನಲ್ಲ. ಬದುಕುವ ಜಾಗ ಮತ್ತು ಬರೆಯುವ ಜಾಗ ಒಂದೇ ಆಗಿರುವುದು ಅಷ್ಟೇನೂ ಹಿತಕಾರಿಯಲ್ಲ ಎನ್ನುವ ಪಮುಕ್ ಬರವಣಿಗೆಗಾಗಿ ಬೇರೆಯೇ ಫ್ಲ್ಯಾಟ್‌ನಲ್ಲಿ ಕೋಣೆ ಹೂಡಿಕೊಂಡು, ದಿನವೂ ಕ್ರಮಬದ್ಧವಾಗಿ ಕಚೇರಿಗೆ ಹೊರಡುವಂತೆ ಹೊರಟು, ತನ್ನ ಏಕಾಂತದ ಗುಹೆಯನ್ನು ಹೊಕ್ಕು ಬರೆಯುವ ಕಾಯಕದಲ್ಲಿ ನಿಷ್ಠೆಯಿಂದ ತೊಡಗುವ ಕ್ರಮ ಪಾಲಿಸಿಕೊಂಡು ಬಂದಿರುವ ವ್ಯಕ್ತಿ.

ಪಮುಕ್ ತಾನು ಯಾವತ್ತೂ ಬಿಲಾಂಗ್ಡ್ ಅಲ್ಲ, ಯಾವತ್ತಿದ್ದರೂ ತಾನು ಉಳಿದವರಿಂದ ಭಿನ್ನ-ಒಂಟಿ-ಒಂದಾಗಲಾರದವ ಎಂದೇ ಅಂದುಕೊಳ್ಳುತ್ತಾನೆ. ಈ ಭಾವ ನಾಶವಾದ ದಿನ ತಾನೇನೂ ಬರೆಯಲಾರೆ ಕೂಡ ಎನ್ನುವುದು ಆತನ ಒಂದು `ಅರಿವು'. ತಾನು ಈ ಜಗತ್ತಿಗೆ ಸಂದವನಲ್ಲವೇನೋ ಎಂಬ ಒಂದು ಸಂಕಟ, ತೊಳಲಾಟ ಪಮುಕ್‌ನನ್ನು ತೀವ್ರ ಅಂತರಂಗ ಶೋಧಕ್ಕೆ ತಳ್ಳಿದಂತೆ, ಏಕಾಂತದಲ್ಲಿ ಇದಕ್ಕೆಲ್ಲ ಉತ್ತರ ಕಂಡುಕೊಳ್ಳುವಂತೆ ಮಾಡಿತೆನ್ನಬೇಕು. ಹಾಗಂದ ಮಾತ್ರಕ್ಕೆ ಪಮುಕ್ ಅಂತರ್ಮುಖಿಯೇನಲ್ಲ. ಸಮಾಜಕ್ಕೆ ಮತ್ತು ಸಮಾಜವನ್ನು ಕಾಡುವ ಸಂಗತಿಗಳಿಗೆ ಬೆನ್ನು ಹಾಕಿ ತನ್ನ ಅಂತರ್ಮುಖತೆ ಮತ್ತು ಏಕಾಂತದ ಸುಖವನ್ನು ಸಾಧಿಸಿದವನೇನಲ್ಲ. ಮುವ್ವತ್ತು ಸಾವಿರ ಜನರನ್ನು ಆಹುತಿ ತೆಗೆದುಕೊಂಡ ಭೂಕಂಪದ ರುದ್ರತಾಡನದ ಕುರಿತು ಆತ ಬರೆದ ಸುದೀರ್ಘವಾದ ಎರಡು ಲೇಖನಗಳಲ್ಲಿ, ರಾಜಕೀಯ ಸ್ವರೂಪದ ಚಟುವಟಿಕೆಗಳಲ್ಲಿ ನಮಗಿದು ಅರಿವಾಗುತ್ತದೆ.

ಪಮುಕ್‌ನ Other Colors ಪುಸ್ತಕ ತುಂಬ ಮಹತ್ವದ್ದು, ಅನೇಕ ಕುತೂಹಲಕಾರಿ ವಿಷಯ, ದೃಷ್ಟಿಕೋನ ಮತ್ತು ವಿಚಾರಗಳನ್ನು ಉಳ್ಳದ್ದು. ಜಾನಪದ, ಇತಿಹಾಸ, ಚಿತ್ರಕಲೆ, ಪಾಶ್ಚಾತ್ಯ (ಪ್ರಮುಖವಾಗಿ ಫ್ರೆಂಚ್ ಮತ್ತು ಅಮೆರಿಕನ್) ಪ್ರಭಾವ, ತನ್ನ ದೇಶದ ಸಂಸ್ಕೃತಿಯ ಮೇಲಿನ ಪೂರ್ವದೇಶಗಳ ಛಾಯೆ, ಇಸ್ತಾಂಬುಲ್‌ನ ಪ್ರತಿ ಕಟ್ಟಡ, ರಸ್ತೆ, ಕಟ್ಟಡದೊಳಗಿನ ನಸು ಗತ್ತಲಿನ ಸಾಂಸಾರಿಕ ಬೇನೆ ಬವಣೆಗಳು, ಮಕ್ಕಳ ಆಟ,ಪಾಠ, ಸಮುದ್ರತೀರ, ನಾವೆಗಳ ಓಡಾಟ, ಕೋರ್ಟು ಕಚೇರಿ, ಪುಸ್ತಕಗಳು - ಹೀಗೆ ಇದೊಂದು ಸಮೃದ್ಧವಾದ ಅಭಿರುಚಿಗಳ ಸಂತುಲಿತ ಚರ್ಚೆಯನ್ನು ವಸ್ತುವಾಗುಳ್ಳ ಕೃತಿ ಎನ್ನಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ಸಹಜ ಸರಳ ನಿರೂಪಣೆಯಿಂದ ಇಲ್ಲಿನ ಪ್ರತಿಯೊಂದೂ ಬರಹಗಳು ನಮ್ಮನ್ನು ಪ್ರೀತಿಯಿಂದ ಸೆಳೆದುಕೊಳ್ಳುವಂತಿವೆ.

ಈ ಪುಸ್ತಕದಲ್ಲಿ ಒಟ್ಟು ಒಂಭತ್ತು ವಿಭಾಗಗಳಿವೆ. ಒಂದು ಸುಂದರ ಕತೆ ಮತ್ತು ನೊಬೆಲ್ ಬಹುಮಾನ ಸ್ವೀಕರಿಸಿ ಮಾಡಿದ ಬಹುಚರ್ಚಿತ ಭಾಷಣ - ನನ್ನ ತಂದೆಯ ಸೂಟ್‌ಕೇಸ್ - ಈ ಪುಸ್ತಕದಲ್ಲಿದೆ. ತಂದೆ ತನ್ನ ಕೊನೆಯ ದಿನಗಳಲ್ಲಿ ಪಮುಕ್‌ಗೆ ಈ ಸೂಟ್‌ಕೇಸ್ ತೋರಿಸಿ ಅದನ್ನು ತಾನು ಕಾಲವಾದ ನಂತರ ತೆರೆದು ನೋಡಲು ಹೇಳಿರುತ್ತಾನೆ. ಆನಂತರವೂ ಒಂದೆರಡು ವರ್ಷ ತಂದೆ ಬದುಕಿರುತ್ತಾನೆ, ಆಗಾಗ ಪಮುಕ್ ಇದ್ದಲ್ಲಿಗೆ ಭೇಟಿಯನ್ನೂ ಕೊಟ್ಟಿರುತ್ತಾನೆ. ಹಾಗೆ ಬಂದಾಗ ಅಯಾಚಿತವಾಗಿ ಇಬ್ಬರ ದೃಷ್ಟಿಯೂ ಆ ಸೂಟ್‌ಕೇಸ್ ಮೇಲೊಮ್ಮೆ ಬಿದ್ದು, ಮತ್ತೆ ಪರಸ್ಪರ ಮುಖಾಮುಖಿಯಾಗಿ ಒಂದು ಅರ್ಥಪೂರ್ಣ ಮುಗುಳ್ನಗೆಯೊಂದಿಗೆ ಇಬ್ಬರಿಗೂ ಅದೇನೋ ಹೊಳೆದು ಮುಗಿದಿರುತ್ತದೆ.

ಪಮುಕ್ ಇಂದಿಗೂ ಆ ಸೂಟ್‌ಕೇಸ್ ತೆರೆದಿಲ್ಲ. ಅದರಲ್ಲಿ ತನ್ನ ತಂದೆ ನಡೆಸಿದ ಸಾಹಿತ್ಯಿಕ ಪ್ರಯತ್ನಗಳಿವೆ ಎಂಬುದು ಪಮುಕ್‌ಗೆ ಗೊತ್ತು. ತಂದೆ ಹೊತ್ತಿರಬಹುದಾದ `ಭಾರ'ದ ಪರಿಕಲ್ಪನೆ ಪಮುಕ್‌ಗೆ ಇದೆ. ಇದನ್ನು ಮೀರಿ ತನ್ನ ತಂದೆಯನ್ನು ಒಬ್ಬ ಸಾಹಿತಿಯನ್ನಾಗಿ ನೋಡಲು ಪಮುಕ್‌ಗೆ ಇಷ್ಟವಿಲ್ಲ. ಏನು ಈ ಭಾರ ಎನ್ನುವುದರ ಬಗ್ಗೆ ಪಮುಕ್ ವಿವರಿಸುತ್ತಾನೆ.

"It is what a person creates when he shuts himself up in a room, sits down at a table and retires to a corner to express his thoughts, that is the meaning of literature."

ಇದೋ ಇಲ್ಲಿ ಮತ್ತೆ ಏಕಾಂತದ ನೆರಳು.

ಪಮುಕ್‌ನ ಒಂದು ಕತೆ ಕೂಡಾ ಈ ಪುಸ್ತಕದಲ್ಲಿದೆ. ಅದು, To Look out of the Window. ಯಾವ ದೃಷ್ಟಿಯಿಂದ ನೋಡಿದರೂ ಈ ಕತೆಗೆ ಪಮುಕ್‌ನ ಏಕಾಂತದೊಂದಿಗೆ ಮತ್ತು ಆತನ ನಿಜ ಜೀವನದೊಂದಿಗೆ ಏನೂ ಮಾಡುವುದಕ್ಕಿಲ್ಲ ಎನ್ನುವಂತಿಲ್ಲ, ಅಂಥ ಒಂದು ಅಪೂರ್ವ ಕತೆಯಿದು.

Living and Worrying ಎನ್ನುವ ಮೊದಲ ವಿಭಾಗದಲ್ಲಿ ಪಮುಕ್ ಬರೆದ ಅಂಕಣ ಬರಹಗಳಿವೆ. ಈ ಬರಹಗಳಲ್ಲೂ ಬಹಳಷ್ಟು ಬರಹಗಳು ಮೌನದ ಮೇಲೆ, ಏಕಾಂತದ ಮೇಲೆ, ಬರಹಗಾರನೊಬ್ಬನ ಆಂತರಿಕ ತುಮುಲಗಳ ಮೇಲೆ ಬರೆದವುಗಳೇ. ಒಂದು ಬಗೆಯ ತಾದ್ಯಾತ್ಮ ಮತ್ತು ಧ್ಯಾನಸ್ಥ ಸ್ಥಿತಿಯ ಮನೋಭೂಮಿಕೆಯಲ್ಲೇ ಇರುವ ಹೆಚ್ಚಿನ ಬರಹಗಳು ಸಹಜವಾಗಿಯೇ ಆಪ್ತವಾಗಬಲ್ಲ ಧಾಟಿಯಲ್ಲಿವೆ. ತಂದೆಯ ಕುರಿತು, ಪುಟ್ಟ ಮಗಳ ಕುರಿತು, ಮಳೆಗಾಳಿಗೆ ಸಿಕ್ಕಿ ನಲುಗಿದ ಸೀಗುಲ್ ಹಕ್ಕಿಯ ಕುರಿತು, ಇಸ್ತಾಂಬುಲ್‌ನ ಹಳೆಯ ಮುರುಕಲು ಅಪಾರ್ಟ್‌ಮೆಂಟುಗಳಲ್ಲಿ ಅಡಗಿ ಕುಳಿತ ರಾಶಿ ರಾಶಿ ನೆನಪುಗಳ ಕುರಿತು ಬರೆದ ಬರಹಗಳಲ್ಲದೆ ಇಸ್ತಾಂಬುಲ್‌ನ ಚಾರಿತ್ರಿಕ ಭೂಕಂಪದ ಮೇಲೆಯೇ ಬರೆದ ಎರಡು ಲೇಖನಗಳೂ ಇವೆ. ಒಂದೊಂದು ಬರಹವೂ ನಮ್ಮನ್ನು ಬಹುಕಾಲ ಒಂದು ಗುಂಗಿನಲ್ಲಿರಿಸಿ ಕಾಡಬಲ್ಲ ಕಸು ಹೊಂದಿವೆ, ಬಳಿಯಲ್ಲೇ ಕೂತು ಪಿಸುಗುಟ್ಟಿದಂತೆ ಮಾತನಾಡುವ ಆತ್ಮೀಯ ಗೆಳೆಯನೊಬ್ಬನ ಉಸಿರಿನ ಬಿಸುಪು ಹೊಂದಿವೆ.

ಅನಂತರದ್ದು Books and Reading ಎನ್ನುವ ಆಸಕ್ತಿದಾಯಕ ವಿಭಾಗ. ಇಲ್ಲಿ ಪಮುಕ್ ಹೇಳುತ್ತಾನೆ, ನಾವು ಓದಲೇ ಬೇಕಾದ ಪುಸ್ತಕಗಳು ಬಹಳ ಕಡಿಮೆಯಿವೆ. ಆದರೆ ಅವುಗಳನ್ನು ಮಾತ್ರ ಸರಿಯಾಗಿ ಓದುವುದು ತೀರ ಅಗತ್ಯ. ಉಳಿದ ಪುಸ್ತಕಗಳನ್ನು ಓದದಿದ್ದರೂ ಪರವಾಗಿಲ್ಲ. ಈ ಕೆಲವೇ ಕೆಲವು ಪುಸ್ತಕಗಳೇ ನಿಮಗೆ ಬೇಕಾದುದೆಲ್ಲವನ್ನೂ ಕೊಡಬಲ್ಲಂಥ ಪುಸ್ತಕಗಳು ಎಂದು. ರಿಲ್ಕ್ ಕೂಡಾ ಇದೇ ಅಥವಾ ಇಂಥದೇ ಮಾತನ್ನು ಹೇಳಿರುವುದು ಕುತೂಹಲಕರ. "ತೀರ ಕೆಲವೇ ಪುಸ್ತಕಗಳು, ಕೆಲವು ಅಂದರೆ ಕೆಲವು ಮಾತ್ರವೇ ಅನಿವಾರ್ಯವಾದ ಪುಸ್ತಕಗಳು ಅನ್ನಿಸುತ್ತದೆ." ಎನ್ನುತ್ತಾನೆ ರಿಲ್ಕ್. (ಪುಟ ೬, ಯುವ ಕವಿಗೆ ಬರೆದ ಪತ್ರಗಳು - ರೈನರ್ ಮಾರಿಯಾ ರಿಲ್ಕ್, ಕನ್ನಡಕ್ಕೆ ಓ. ಎಲ್. ನಾಗಭೂಷಣ ಸ್ವಾಮಿ, ಅಭಿನವ ಪ್ರಕಾಶನ)

ಟಾಲ್‌ಸ್ಟಾಯ್, ದಾಸ್ತವಸ್ತ್ಕಿ, ಥಾಮಸ್ಮನ್, ಪ್ರೌಸ್ಟ್, ವಿಕ್ಟರ್ ಹ್ಯೂಗೋ, ರಶ್ದೀ ಎಂದೆಲ್ಲ ಪಮುಕ್ ಬರೆದಿರುವ ಸುಮಾರು ಹದಿನಾರು ಬರಹಗಳಲ್ಲಿ ಪ್ರಮುಖವಾಗಿ ದಾಸ್ತವಸ್ತ್ಕಿಯ ಕುರಿತು ಬರೆದಿರುವುದು ಬಹಳ ಮಹತ್ವದ ಬರಹಗಳಾಗಿವೆ. ದಾಸ್ತವಸ್ಕಿಯ ಕಾದಂಬರಿಗಳು ಪಮುಕ್ ಮೇಲೆ ಬಹಳಷ್ಟು ಪರಿಣಾಮ ಬೀರಿದಂತೆಯೂ ಕಾಣುತ್ತದೆ.

Politics, Europe, And other problems of being oneself ವಿಭಾಗದಲ್ಲಿ ಒಬ್ಬ ಬರಹಗಾರನಾಗಿ ಅಕಾರಣ ಪಮುಕ್ ತನ್ನದೇ ದೇಶ ತುರ್ಕಿಯಲ್ಲಿ ಎದುರಿಸಿದ ಹಾಗೂ ಅನುಭವಿಸಿದ ರಾಜಸತ್ತೆಯ ವಿರೋಧದ ಕುರಿತು ಬರೆದಿದ್ದಾನೆ. ಸಾಂದರ್ಭಿಕವಾಗಿ ಕ್ರಾಂತಿ, ರಾಜಸತ್ತೆ, ಪ್ರಜೆ ಮತ್ತು ಸಾಮಾಜಿಕ ಭ್ರಾಂತಿಗಳ ಕುರಿತು ಪಮುಕ್ ಆಡಿರುವ ಮಾತುಗಳು ಇವತ್ತಿನ ಭಾರತಕ್ಕೆ ಅನ್ವಯಿಸುವಂಥ ಅನೇಕ ಅಂಶಗಳನ್ನೂ ತನ್ನಲ್ಲಿರಿಸಿಕೊಂಡಿರುವುದು ಗಮನಾರ್ಹ.

My Books are My Life ಭಾಗದಲ್ಲಿ ಪಮುಕ್ ತನ್ನ ಒಂದೊಂದೇ ಕಾದಂಬರಿಗಳು ರೂಪುಗೊಂಡ, ಬರೆಯಿಸಿಕೊಂಡ ಹಿನ್ನೆಲೆಯ ಕುರಿತು ವಿವರವಾಗಿ ಚರ್ಚಿಸಿದ್ದಾನೆ. ಇವು ಸಾಹಿತ್ಯಾಭ್ಯಾಸಿಗಳಿಗೆ, ಯುವ ಸಾಹಿತಿಗಳಿಗೆ ತುಂಬ ಉಪಯುಕ್ತವಾಗಬಲ್ಲ ವಿವರಗಳನ್ನು ಹೊಂದಿರುವುದಲ್ಲದೆ ಕುತೂಹಲಕರವಾಗಿ ಓದಿಸಿಕೊಂಡು ಹೋಗುವ ಗುಣವನ್ನೂ ಪಡೆದಿವೆ. ಸೃಜನಶೀಲ ಸೃಷ್ಟಿಕ್ರಿಯೆಯ ಹಿಂದಿನ ನಿಗೂಢಗಳ ಕುರಿತು ಕೇಳಲು, ಅವುಗಳನ್ನು ಅರಿಯಲು ಯಾವಾಗಲೂ ಸಾಹಿತ್ಯಾಸಕ್ತರಿಗೆ ಒಂದು ಬಗೆಯ ಕುತೂಹಲ ಇದ್ದೇ ಇರುತ್ತದೆ. ಇಲ್ಲಿ ಪಮುಕ್ ಯಾವುದೇ ಸೋಗಿಲ್ಲದೆ, ಬಿಂಕ ಬಡಿವಾರಗಳಿಲ್ಲದೆ, ಪ್ರಾಮಾಣಿಕವಾಗಿ ತನ್ನ ಗೆಲುವು-ಸೋಲುಗಳ ಕುರಿತು ತೋಡಿಕೊಂಡಿದ್ದಾನೆ.

Pictures and Texts ವಿಭಾಗ ತುರ್ಕಿಯ ಪಾರಂಪರಿಕ (ಈ ಪರಂಪರೆಯ ಮೂಲದ ಕುರಿತು ಚಾಲ್ತಿಯಲ್ಲಿರುವ ಕೆಲವು ಜಿಜ್ಞಾಸೆಗಳ ಚರ್ಚೆಯೂ ಸೇರಿದಂತೆ) ಚಿತ್ರಕಲೆಯ ಕೆಲವು ವಿಶಿಷ್ಟ ಗುಣಗಳತ್ತ ನಮ್ಮ ಗಮನ ಸೆಳೆಯುತ್ತಲೇ ಈ ಕುತೂಹಲ ಹೇಗೆ ತನ್ನದೇ ಒಂದು ಕಾದಂಬರಿಯ ಹುಟ್ಟಿಗೆ ಕಾರಣವಾಯಿತು ಮತ್ತು ಅದು ಹೇಗೆ ತಿರುಗಿ ತನ್ನ ಈ ಕುತೂಹಲವೇ ಒಂದು ಅಧ್ಯಯನಕ್ಕೆ ತಿರುಗಲು ಕಾರಣವಾಯಿತು ಎನ್ನುವುದನ್ನು ವಿವರಿಸುತ್ತದೆ. ತುರ್ಕಿಯ ಚಿತ್ರಕಲೆಯೊಂದಿಗೆ ತಳುಕು ಹಾಕಿಕೊಂಡಿರುವ ಜಾನಪದ ಕತೆಗಳು, ಇತಿಹಾಸ, ಪುರಾತನ ಜನಜೀವನ ಮತ್ತು ಕಲಾತ್ಮಕ ಅಭಿವ್ಯಕ್ತಿಯ ಸಂದರ್ಭದಲ್ಲಿ ಅವು ಪಡೆದಿರಬಹುದಾದ ಸಹಜ ರೂಪಾಂತರಗಳು ಎಲ್ಲವನ್ನೂ ಬೆಸೆಯುತ್ತ ಕಲೆಯನ್ನು ಆಸ್ವಾದಿಸುವ ಒಂದು ಮನೋಭೂಮಿಕೆಯನ್ನು ವಿವರಿಸುವ ಪಮುಕ್ ಈ `ನೋಡುವ' ಸಹಜ ವಿಧಾನದಿಂದಲೇ ನಮ್ಮಲ್ಲಿ ಅಚ್ಚರಿಮೂಡಿಸುವುದು ಸತ್ಯ.

ಸಂದರ್ಶನಗಳು, ಅಮೆರಿಕ ಭೇಟಿಯ ಎರಡು ಕಥನಗಳು, ಬಾಲ್ಯದ ದಟ್ಟ ವಿವರಗಳು, ತನ್ನ ಕಾದಂಬರಿಯೊಂದರ ಕರ್ಮಭೂಮಿಯಾಗಿದ್ದ ಪುಟ್ಟ ಊರೊಂದರ ಕುರಿತ ಲೇಖನ - ಒಂದೊಂದೂ ಈ ಪುಸ್ತಕದ ಓದನ್ನು ಚೇತೋಹಾರಿಯಾಗಿಸಿದೆ.

Other Colors by Orhan Pamuk
(Writings on Life, Art, Books and Cities)
Publication : Faber &
Faber

(ಪಮುಕ್ ಭಾವಚಿತ್ರ ವಿವೇಕ್ ಬೇಂದ್ರೆಯವರದ್ದು, ಕೃಪೆ ದಿ ಹಿಂದೂ ದಿನಪತ್ರಿಕೆ.)

No comments: