Sunday, March 15, 2009

ಒಂದು ನಾಟಕ, ಮಳೆ ನಿಲ್ಲುವ ವರೆಗೆ...

ಈಗಷ್ಟೇ ಸದಾನಂದ ಸುವರ್ಣ ನಿರ್ದೇಶನದ ನಾಟಕ ಮಳೆ ನಿಲ್ಲುವ ವರೆಗೆ ನೋಡಿ ಬಂದೆ. ದಿನವೂ ಕಾಣುವ ಉದ್ಯೋಗರಂಗದ ಅವೇ ರಾಜಕಾರಣ, ಹಗ್ಗ ಜಗ್ಗಾಟ, ನನಗೆ ಸಿಗಬೇಕಾದಷ್ಟು ಮರ್ಯಾದೆ ಸಿಗಲಿಲ್ಲ, ಸಿಗಬೇಕಿದ್ದಷ್ಟು ಸಂಬಳ ಸಿಗಲಿಲ್ಲ, ಅದು ಸಿಗಲಿಲ್ಲ-ಇದು ಸಿಗಲಿಲ್ಲ ಎಂಬ ನೂರಾ ಒಂದು ಗೊಣಗಾಟಗಳು. ಕುತಂತ್ರ, ಚಾಡಿ, ಕಾಲೆಳೆವ ಆಟ, ಒಬ್ಬರ ಮೇಲೆ ಇನ್ನೊಬ್ಬರ ದೂರು. ಪಿಸುಪಿಸು-ಗುಸುಗುಸು ಗಾಸಿಪ್ ನೊಣಗಳ ಗುಂಯ್‌ಗುಡುವಿಕೆ. ಒಟ್ಟಾರೆ ವಾತಾವರಣ ಸರಿಯಿಲ್ಲ ಎನ್ನುವ ಭಾಷ್ಯ. ವಿಚಿತ್ರವೆಂದರೆ ಎಲ್ಲಿ ಹೋದರೂ ಇದೇ ಗೋಳು! ರಜೆ ಕೊಡಲಿಲ್ಲ ಎಂದು ಮೇಲಧಿಕಾರಿಗೆ ಗುಂಡಿಕ್ಕಿ ತಾನೂ ಗುಂಡಿಕ್ಕಿಕೊಂಡ ಪೋಲೀಸ್ ಪೇದೆ, ಸೆಕ್ಯುರಿಟಿ ಗಾರ್ಡ್‌ಗಳ ಬಗ್ಗೆ ಪೇಪರುಗಳಲ್ಲಿ ಓದುತ್ತೇವೆ. ಯಾರದೋ ತಪ್ಪಿಗೆ ಇನ್ಯಾರೋ ಕೆಲಸ ಕಳೆದುಕೊಂಡು ಮನೆ ಸೇರಿದ ಕತೆಯನ್ನು ಅಲ್ಲಿ ಇಲ್ಲಿ ಕೇಳುತ್ತೇವೆ. ಯಾರನ್ನು ನಂಬುವುದು, ಹೆಣ್ಣು-ಹೊನ್ನು-ಮಣ್ಣು ಕಂಡರೆ ಯಾರು ತಾನೇ ಬಾಯಿಬಿಡುವುದಿಲ್ಲ ಎಂದುಕೊಂಡು ಯಾರನ್ನೂ ಪೂರ ನಂಬದೆ, ಯಾರನ್ನೂ ಪೂರ ಅನುಮಾನಿಸದೆ ನಿಟ್ಟುಸಿರು ಬಿಡುತ್ತೇವೆ, ನಮ್ಮದೇ ಸ್ವಂತ ಅನುಭವಗಳ ಭಾರದಲ್ಲಿ. ಅಲ್ಲಿ ಇಲ್ಲಿ ಮುಖಕ್ಕೆ ರಾಜೀನಾಮೆ ಎಸೆದು ನಡೆದುಬಿಟ್ಟ ಗಂಡುಗಲಿಗಳ ಧೈರ್ಯ ನಮಗೆ ಬರದೇ ಹೋಯಿತಲ್ಲ ಎಂದು ಕೂಡಿ ಬರದೇ ಹೋದ ಕಾಲವನ್ನು ಹಳಿಯುತ್ತೇವೆ. ದಿನಗಳು ಸರಿದು ನಿವೃತ್ತಿ ಬರುತ್ತದೆ. ನಾಟಕ ನೋಡಿ ಹಿಂದಿರುಗುವಾಗ ಮನಸ್ಸಿನಲ್ಲಿ ಕಾಡುತ್ತಿದ್ದುದು ಇವೇ ಅಂಶಗಳು. ಅದೇಕೆ ಸುವರ್ಣರು ಮತ್ತದೇ ವಸ್ತುವನ್ನು ಆರಿಸಿಕೊಂಡರು, ಪತ್ತೇದಾರಿ ಶೈಲಿಯಲ್ಲಿ, ಅಂಥದೇ ಚಾಣಕ್ಷತನದಲ್ಲಿ ಮುಸುಕಿನೊಳಗಿನ ಸತ್ಯಗಳನ್ನು ಹೊರಗೆಳೆಯುವ ಅದೇ ಕೋರ್ಟು, ಸತ್ಯಗಳ ಬಗ್ಗೆ ಗೊಂದಲ ಹುಟ್ಟಿಸುವ ಅದೇ hirarchy ಸಮಸ್ಯೆ ಹುಟ್ಟಿಸುವ ಜೇಡರಬಲೆ...ಎಂದು ಯೋಚಿಸುತ್ತ ಕೂತೆ.


ಈ ನಾಟಕದ ವಸ್ತುವಿಗೆ ಒಟ್ಟು ಮೂರು ಆಯಾಮಗಳಿವೆ.

ಮೊದಲನೆಯದು, ಉದ್ಯೋಗ ರಂಗದಲ್ಲಿನ ಮೇಲು-ಕೀಳು ಸ್ತರಗಳ (levels in hirarchial system) ನಡುವೆ ಬರುವ ಜಿದ್ದಾಜಿದ್ದಿ, ಹಾವೇಣಿಯಾಟ, ಶೋಷಣೆ ಇತ್ಯಾದಿಗಳ ಒಟ್ಟು ಪರಿಣಾಮವೋ ಎಂಬಂತೆ ಸ್ಫೋಟಗೊಂಡ ಸ್ಥಿತಿಯೊಂದರ ಕೂಲಂಕುಷ ತನಿಖೆ ತೆರೆದಿಡುವ ವೃತ್ತಿರಂಗದ ಕೊಳಕು. ಸದಾನಂದ ಸುವರ್ಣರ ನಿರ್ದೇಶನದಲ್ಲೇ ತುಂಬ ಯಶಸ್ಸು ಕಂಡ ಈ ಹಿಂದಿನ ನಾಟಕ ಕೋರ್ಟ್ ಮಾರ್ಷಲ್‌ನ ವಸ್ತು ಕೂಡ ಇದೇ ಆಗಿತ್ತೆಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

ಎರಡನೆಯ ಆಯಾಮ, ವೃತ್ತಿ ಮತ್ತು ಪ್ರವೃತ್ತಿಯ ನಡುವಿನ ಬದುಕಿನ ಕುರಿತಾದದ್ದು ಮತ್ತು ಕೆಲವೊಂದು ಕಾರಣಗಳಿಗಾಗಿ ಇದೇ ಹೆಚ್ಚು ಮಹತ್ವವಾದದ್ದು ಕೂಡ. ಇಲ್ಲಿನ ನಿವೃತ್ತ ವಕೀಲರಿಗೆ ವಯೋಸಹಜವಾದ ಬಿಪಿ, ಶುಗರು, ಆರ್ತ್ರೈಟಿಸ್, ಉದರ ಸಂಬಂಧಿ ಕಾಯಿಲೆಗಳೂ ಸೇರಿದಂತೆ ಹಲವು ಹತ್ತು ಪೀಡೆಗಳಿದ್ದರೂ ಅವೆಲ್ಲವೂ ಇವರು ಸಂಜೆ ಹೊತ್ತು ಪುರುಸೊತ್ತಿನಲ್ಲಿ ಸುರುಹಚ್ಚಿಕೊಂಡ ಒಂದು ಹೊಸ ಆಟದ ನಿಮಿತ್ತವೇ ಗುಣವಾಗಿ ಬಿಡುವುದು! ಆ ಆಟವಾದರೂ ಏನು ಎಂಬುದು ತುಂಬ ಕುತೂಹಲಕರವಾದ ಕೆಲವು ಹೊಸ ಸತ್ಯಗಳತ್ತ ಬೆಟ್ಟು ಮಾಡಬಲ್ಲಂಥದ್ದು. ಅದು, ಹಳೆಯ ಪ್ರಸಿದ್ಧ ಮೊಕದ್ದಮೆಗಳನ್ನು ಮತ್ತೊಮ್ಮೆ ಕೋರ್ಟ್ ಸಹಜ ವಾತಾವರಣದಲ್ಲಿ ವಾದಿಸುವ ಆಟ! ಅಂದರೆ, ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ, ಈ ನಿವೃತ್ತ ವಕೀಲರಿಗೆ ಬಹುಷಃ ಸಾಧ್ಯವಿರುವುದು ಈ ವಾದ-ವಿವಾದ ಮಾತ್ರ. ಅದು ಮಾತ್ರ ಅವರ ಹಸಿವೆಯನ್ನು, ಆರೋಗ್ಯವನ್ನು, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದಾದ ಮಾಯಕದ ವಸ್ತು. ಇಲ್ಲಿರುವ ವಿಪರ್ಯಾಸವನ್ನು ಗಮನಿಸಿ. ಎಲ್ಲರೂ ತಮ್ಮ ವೃತ್ತಿಯಿಂದ ನಿವೃತ್ತರಾಗುತ್ತಾರೆ ಮತ್ತು ನಿವೃತ್ತ ಜೀವನದಲ್ಲಿ ಅನಿವಾರ್ಯವಾಗದ ಹೊರತು ಮತ್ತದೇ ವೃತ್ತಿಗೇ ಅಂಟಿಕೊಳ್ಳದಿರಲು ಬಯಸುತ್ತಾರೆ. ಬದುಕಿಗೆ, ಮನಸ್ಸಿಗೆ, ದೇಹಕ್ಕೆ ವಿಭಿನ್ನವಾದ ಹಲವು ಬಗೆಯ ಅಗತ್ಯಗಳಿರುತ್ತವೆ, ಆಸೆ, ಆಕಾಂಕ್ಷೆಗಳೆಲ್ಲ ಇರುತ್ತವೆ. ವೃತ್ತಿ ಕೂಡಾ ಅಂಥ ಹಲವು ಅಗತ್ಯಗಳಲ್ಲಿ ಒಂದು ಮತ್ತು ಅದು ನಮ್ಮ ಬದುಕಿನ ಅತಿ ದೊಡ್ಡ ಭಾಗವನ್ನು ನಾವು ಬಯಸಿದರೂ ಬಯಸದಿದ್ದರೂ ಕಬಳಿಸಿ ಉಳಿದ ಅಗತ್ಯಗಳತ್ತ ನಮ್ಮ ಗಮನ ಹರಿಸಲು ಆಗದಂತೆ ಮಾಡುತ್ತಿರುತ್ತದೆ ಎನ್ನುವುದು ಸಾಧಾರಣವಾಗಿ ಎಲ್ಲರ ಅನುಭವ. ಹಾಗಾಗಿ, ಅವಕಾಶ ಸಿಕ್ಕರೆ ವೃತ್ತಿಯಿಂದ ಹೊರತಾದ ಏನನ್ನಾದರೂ ಮಾಡಲು ಮನುಷ್ಯ ಹಾತೊರೆಯುತ್ತಾನೆ ಎಂಬುದು ನಮ್ಮಂಥ ಸಾಧಾರಣ ಮಂದಿಯ ತಿಳುವಳಿಕೆ. ಆದರೆ ಇಲ್ಲಿನ ವಕೀಲರ ಸ್ವಂತ ಅನುಭವ ಬೇರೇನನ್ನೋ ಹೇಳುತ್ತಿದೆ. ಅಂಥಾ ವೈಶಿಷ್ಟ್ಯಪೂರ್ಣವಾದ ಇವರ ವೃತ್ತಿಯತ್ತಲೇ ಸ್ವಲ್ಪ ಗಮನಹರಿಸಿ ನೋಡಬಹುದು.

ವಕೀಲರಿಗೆ ಕೊನೆಗೂ ತಮ್ಮ ಕಕ್ಷಿದಾರ ಗೆಲ್ಲುವುದು ಮುಖ್ಯ. ತಮ್ಮ ಕಕ್ಷಿದಾರ ಗೆದ್ದರೆ ನ್ಯಾಯ ಗೆದ್ದಂತೆ ಎಂಬುದು ಅವರ ತಿಳುವಳಿಕೆ. ಸೋತ ನ್ಯಾಯವಾದಿಯೂ ಅನ್ಯಾಯದ ಪರವಾಗಿಯೇನೂ ನಿಂತಿರುವುದಿಲ್ಲ. ಆದರೆ `ತನ್ನ' ನ್ಯಾಯವನ್ನು ನ್ಯಾಯ ಎಂದು ಸಾಧಿಸಲು ಸೋತಿರುತ್ತಾನೆ ಅಷ್ಟೆ. ಅವರು `ತಮ್ಮ' ನ್ಯಾಯ ಗೆಲ್ಲುವುದಕ್ಕಾಗಿಯೇ ವಾದ ಮಾಡುತ್ತಾರೆ, ಕಾನೂನಿನ ಕಟ್ಟಲೆ, ನಿಯಮ, ಅದರಡಿಯ ಇನ್ನಷ್ಟು ಅವಕಾಶ-ವಿಧಿ ವಿಧಾನಗಳನ್ನು, ಹಿಂದೆ ನ್ಯಾಯಾಧೀಶರು ನೀಡಿದ ತೀರ್ಪುಗಳನ್ನು ತಮಗೆ ಅನುಕೂಲವಾಗುವಂತಿದ್ದರೆ ಮಾತ್ರ ಬಳಸಿಕೊಂಡು ಅಕ್ಷರಶಃ ಹೋರಾಡುತ್ತಾರೆ. ಈ ಒಂದು ವಕಾಲತ್ತೇ ಮುಖ್ಯವಾಗಿ ಕೇಸು ಗೆಲ್ಲುವುದು ಸೋಲುವುದು ಎಷ್ಟು ರೋಚಕ, ಜನಪ್ರಿಯ ವಿದ್ಯಮಾನ ಎಂಬುದನ್ನು ನಾವೆಲ್ಲ ಟೀವಿ ಧಾರಾವಾಹಿಗಳಿಂದಲೂ, ಕ್ರೈಂ ನ್ಯೂಸ್‌ನಂಥ ಕಾರ್ಯಕ್ರಮಗಳಿಂದಲೂ ಬಲ್ಲೆವು. ಹಾಗೆಯೇ, ಈ ಎಲ್ಲ ರೋಚಕತೆ, ಜನಪ್ರಿಯತೆ ಮತ್ತು ಜಾಣತನದ ಸ್ಪರ್ಧೆಯ ಆಚೆ ಇದೆಲ್ಲದರ ನಿರರ್ಥಕತೆ ಕೂಡಾ ಇರುವುದನ್ನು ಕೆಲವರಾದರೂ ಗಮನಿಸಿರುತ್ತೀರಿ, ದುರದೃಷ್ಟವಶಾತ್ ಸ್ವತಃ ಅನುಭವಿಸಿದ್ದರೂ ಆಶ್ಚರ್ಯವಿಲ್ಲ. ಅಷ್ಟಲ್ಲದೆ ಕೋರ್ಟಿನಲ್ಲಿ ಗೆದ್ದವನು ಸೋತ, ಸೋತವನು ಸತ್ತ ಎಂಬ ಮಾತು ಹುಟ್ಟಿರಲಿಕ್ಕಿಲ್ಲ ಅಲ್ಲವೇ? ಇಲ್ಲಿ ಕೊನೆಗೂ ಸತ್ಯಕ್ಕೆ, ನ್ಯಾಯಕ್ಕೆ, ತಪ್ಪು-ಅಪರಾಧಗಳಿಗೆ ಏನರ್ಥ ಎನ್ನುವುದು ಒಂದು ಯಕ್ಷಪ್ರಶ್ನೆಯಾಗಿಯೇ ಉಳಿಯುವುದು ಹೆಚ್ಚು. ಅದು ಹಾಗಿರಲಿ.

ನಿವೃತ್ತಿಯ ನಂತರವೂ ಇದನ್ನೇ ಮಾಡುವುದು ಇವರಿಗೆ ಅನಿವಾರ್ಯವಾಗಿರುವುದನ್ನು ಕೊಂಚ ಗಮನಿಸಿ. ಇದು ಗುಮಾಸ್ತನೊಬ್ಬನ ವರ್ಕೋಃಲಿಕ್ ಖಯಾಲಿಗೆ ಸಮಾನವಾದ ಕಾಯಿಲೆಯೇ ಹೊರತು ಇನ್ನೇನಲ್ಲ. ಇದೇ ಬದುಕಿನ ಸಹಜ ಗುಣವಲ್ಲ. ಈ ನಿವೃತ್ತ ವಕೀಲರನ್ನು ಬಿಟ್ಟರೆ ಬೇರಾವುದೇ ಜೀವಂತ ಪ್ರಾಣಿ ಇಂಥ ಆಟದಲ್ಲಿ ಆರೋಗ್ಯದ ಸೂತ್ರವನ್ನು ಕಂಡುಕೊಳ್ಳಲಾರದು. ಇದು ಗುಮಾಸ್ತನೊಬ್ಬ ನಿವೃತ್ತನಾದ ಮೇಲೂ ರಾತ್ರಿ ಹತ್ತು ಹನ್ನೊಂದರ ತನಕ ಲೆಕ್ಕಪತ್ರ ಬರೆಯುತ್ತಾ ಅಥವಾ ಹಳೆಯ ಲೆಜ್ಜರಿನ ನಕಲು ಬರೆಯುತ್ತಾ ಕುಳಿತಂತೆ; ನಿವೃತ್ತ ಡ್ರೈವರನೊಬ್ಬ ಸುಮ್ಮನೇ ಸ್ಟೇರಿಂಗ್ ವ್ಹೀಲ್ ತಿರುಗಿಸುತ್ತ ದಿನವಿಡೀ ಕಳೆದಂತೆ. ಹಾಗೆ ಮಾಡುವುದರಿಂದ ಅವರ ಆರೋಗ್ಯ ಕುದುರುತ್ತಿದೆ ಎಂದ ಮಾತ್ರಕ್ಕೇ ಅದು ಆರೋಗ್ಯಕರ ಚಟುವಟಿಕೆಯಾಗುವುದಿಲ್ಲ. ಅಂಥವರಿಗೆ ವೃತ್ತಿಯಾಚೆ ಬದುಕಿಲ್ಲ ಎನ್ನುವುದು ಸರಳವಾದ ಸಂಗತಿಯೂ ಅಲ್ಲ. ಇದೊಂದು ದುರಂತ. ಆದರೆ ಮೇಲ್ನೋಟಕ್ಕೆ, ನಾಟಕದ ಆರಂಭಿಕ ಹಂತದಲ್ಲಿ, ಈ ನಿವೃತ್ತ ಪಬ್ಲಿಕ್ ಪ್ರಾಸಿಕ್ಯೂಟರ್, ಸುಪ್ರಸಿದ್ಧ ಡಿಫೆನ್ಸ್ ಲಾಯರ್ ಮತ್ತು ನಿವೃತ್ತ ಸೆಶೆನ್ಸ್ ಜಡ್ಜ್ ಸಾಹೇಬರು ಸೇರಿಕೊಂಡು ಗುಡ್ಡದ ಒಂಟಿ ಬಂಗಲೆಯಲ್ಲಿ ಸುರುಹಚ್ಚಿಕೊಂಡಿರುವ ಆಟ ಮತ್ತು ಅದರಿಂದಲೇ ತಮ್ಮ ಆರೋಗ್ಯ-ಯೌವನಗಳನ್ನು ಹಿಂದಿರುಗಿ ಪಡೆದಿರುವುದು ಒಂಥರಾ ಆರೋಗ್ಯಕರ ವಿದ್ಯಮಾನವೇ ಇರಬಹುದೆನ್ನುವ ಪೂರ್ವಾಗ್ರಹ, ಮೂಢನಂಬಿಕೆ ಪ್ರೇಕ್ಷಕರಿಗೂ ಬಂದುಬಿಡುತ್ತದೆ. ಇದರ ವ್ಯಂಗ್ಯ ನಮಗೆ ಕೊನೆಯ ಅಂಕದ ತನಕ ತಟ್ಟುವುದಿಲ್ಲ ಎನ್ನುವುದು ಗಮನಾರ್ಹ. ಆದರೆ ಈ ವ್ಯಂಗ್ಯವನ್ನು ಯಾವ ಹಂತದಲ್ಲಿ ಪ್ರೇಕ್ಷಕನಿಗೆ ದಾಟಿಸಬೇಕೋ ಅದೇ ಹಂತದಲ್ಲಿ ದಾಟಿಸದೇ ಹೋದರೆ ಇಡೀ ನಾಟಕ ಹಳಿತಪ್ಪಿದಂತಾಗುತ್ತದೆ ಎನ್ನುವುದನ್ನೂ ಇಲ್ಲಿ ಗಮನಿಸಬೇಕು. ಕೋರ್ಟ್ ಕಲಾಪದ ಮನಮೋಹಕ ಪತ್ತೇದಾರಿತನದತ್ತಲೇ ಕಥನ ಕುತೂಹಲಿ ಪ್ರೇಕ್ಷಕ ಕೇಂದ್ರೀಕೃತನಾಗುವುದನ್ನು ಸ್ವಲ್ಪ ಪ್ರಯತ್ನಪೂರ್ವಕ ತಪ್ಪಿಸುವ ಅಗತ್ಯವಿತ್ತೇನೊ ಎಂದೂ ಅನಿಸುತ್ತದೆ.

ಮೂರನೆಯ ಆಯಾಮ, ಬದುಕಿನಲ್ಲಿ ಮುಂದೆ ಬರುವುದು, ಸಾಧಿಸುವುದು ಎಂಬುದಕ್ಕೆಲ್ಲ ಇರುವ ಸ್ವಚ್ಛ ಅರ್ಥ ಮತ್ತು ಕಪಟ ಅರ್ಥಗಳ ನಡುವಿನ ತೆಳುವಾದ ಪರದೆಯನ್ನೇ ಕುರಿತದ್ದು. ಇದು ದುಡ್ಡು ಮಾಡುವುದು ಮತ್ತು ಗಳಿಸುವುದು ಎನ್ನುವುದಕ್ಕಿರುವ ವ್ಯತ್ಯಾಸದಷ್ಟೇ ಸೂಕ್ಷ್ಮ. ಮೊನ್ನೆ ಮೊನ್ನೆಯ ತನಕ ಒಬ್ಬ ಎಳೇ ಸಾಫ್ಟ್‌ವೇರ್ ಪಟು ತಿಂಗಳಾ ಎಪ್ಪತ್ತೈದು ಸಾವಿರ ಎಣಿಸುತ್ತಾನೆ ಎಂದು ಕೇಳಿದಾಗ ನಮ್ಮ ವೈದ್ಯರು, ಇಂಜಿನಿಯರುಗಳು, ವಕೀಲರು, ಚಾರ್ಟರ್ಡ್ ಎಕೌಂಟೆಂಟುಗಳು ಸಪ್ಪೆ ಮುಖಮಾಡಿಕೊಂಡಿದ್ದರು. ಕಾಲ್‌ಸೆಂಟರ್‌ಗಳಲ್ಲಿನ, ಬಿಪಿಒಗಳಲ್ಲಿನ ಸಂಬಳ ಕೇಳಿ ನಮ್ಮ ಹಳೇ ಗುಮಾಸ್ತರು ಸೀಲಿಂಗ್ ಫ್ಯಾನ್ ನೋಡಿ ಲೊಚಗುಟ್ಟಿದ್ದರು. ಆನ್‌ಲೈನ್ ಶೇರ್ ಬ್ರೋಕಿಂಗ್ ಮಾಡಿ ಚುರುಕಿನಲ್ಲಿ ಐನೂರೋ ಸಾವಿರವೋ ಗಳಿಸಿ ಆ ದಿನಕ್ಕೆ ಕಂಪ್ಯೂಟರ್ ಆಫ್ ಮಾಡಿ ಕಿಟಕಿಯ ಹೊರಗೆ ಸಾಲು ನಿಂತ ರಿಕ್ಷಾಗಳತ್ತ ನೋಡುತ್ತ ನಿಂತವರಿದ್ದರು. ಮಾಡೆಲ್ ಆಗ್ತೇನೆ, ಟೀವಿ ಯಾಂಕರ್ ಆಗ್ತೇನೆ ಎನ್ನುವ ಹೆಣ್ಣುಮಕ್ಕಳನ್ನು ಕಂಡು ಸಿಇಟಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವ ಹೆತ್ತವರು ಕಂಗಾಲಾಗಿದ್ದಾರೆ. ಹಣ ಮಾಡುವುದಕ್ಕೆ ನೂರು ದಾರಿಗಳಿದ್ದರೆ ಅದಕ್ಕೆಲ್ಲ ಬೇಕಾದ ಮನಸ್ಥಿತಿಗೆ ಒಂದೇ ದಾರಿ ಇರುವಂತಿದೆ. ಅದು ಈ ನಾಟಕದ ಸೇಲ್ಸ್‌ಮ್ಯಾನ್‌ಗಿದೆ. ಆ ದಾರಿಯಲ್ಲಿ ಸಾಗಲು ಕೆಲವರಿಗೆ ಷಂಡತನ, ಕೆಲವರಿಗೆ ಅಭಾವ ವೈರಾಗ್ಯ ಮತ್ತು ಕೆಲವರಿಗೆ ಗೊತ್ತೇ ಇಲ್ಲ ಎನ್ನುವ ನೆಮ್ಮದಿ. ಈ ತೊಡಕು ಈ ನಾಟಕದ ಸೇಲ್ಸ್‌ಮ್ಯಾನ್‌ಗಿಲ್ಲ. ಈ ನಾಟಕದ ಸೇಲ್ಸ್‌ಮ್ಯಾನ್‌ಗೆ ಬದುಕಿನಲ್ಲಿ ಮೇಲೆ ಬರಬೇಕೆನ್ನುವ ಅದಮ್ಯ ಉತ್ಸಾಹವಿದೆ, ಮಹತ್ವಾಕಾಂಕ್ಷೆಯಿದೆ, ಅಂಥದ್ದಕ್ಕೆ ಬೇಕಾದ ಪ್ರತಿಭೆಯಿದೆ. ಆದರೆ ಅದಕ್ಕೆಲ್ಲ ಮೇಲಧಿಕಾರಿ ಒಂದು ತೊಡಕು. ಮನೆಯಲ್ಲಿನ ಮಡದಿಯ ಬಗ್ಗೆ ಸ್ವಲ್ಪ ಅನುಮಾನ ಇರುವುದರಿಂದ ಅವಳು ಇನ್ನೊಂದು ಬಗೆಯ ತೊಡಕು. ಮೇಲಧಿಕಾರಿಗೆ ಸ್ವತಃ ಆತನ ಹೆಂಡತಿಯ ಮೂಲಕವೇ ಪರೋಕ್ಷವಾಗಿ ಈತ ಒಂದು ಏಟು ಕೊಡುತ್ತಾನೆ. ವಾಸ್ತವದಲ್ಲಿ ಅದು ಏಟಿಗೆ ಕೊಟ್ಟ ತಿರುಗೇಟೋ, ಇವನದೇ ಮಹತ್ವಾಕಾಂಕ್ಷೆಯ ಹಪಹಪಿಕೆಯ ಮೂಲ ಏಟೋ ಯಾರೂ ಇದಂ ಇತ್ಥಂ ಹೇಳಲಾರರು. ಬದುಕೆಂದರೆ ಹಾಗೇ ಅಲ್ಲವೆ ಮತ್ತೆ! ಆದರೆ ವಿಪರ್ಯಾಸವೆಂದರೆ ಈ ಪ್ರಶ್ನೆಯೇ ಕೊಟ್ಟ ಏಟಿನ ಪರಿಣಾಮಕ್ಕೆ ಕೊಡಬೇಕಾದ ಶಿಕ್ಷೆಯ ಪರಿಮಾಣವನ್ನು ನಿರ್ಧರಿಸುವಲ್ಲಿ ಬಹುಮುಖ್ಯ ಮತ್ತು ನಿರ್ಣಾಯಕ ಅಂಶವಾಗಿರುವುದು! ಮತ್ತು ಹಾಗೆ ಆಗಿರುವುದಾದರೂ ಎಲ್ಲಿ? ವಾದ ಮಾಡುವ, ಮಾಡಿ ತಮ್ಮ ಕಕ್ಷಿದಾರನನ್ನು ಗೆಲ್ಲಿಸುವ ತೆವಲು ಹತ್ತಿದ ನಿವೃತ್ತ ವಕೀಲರ ಆಟದ `ಕೋರ್ಟಿ'ನಲ್ಲಿ! ನ್ಯಾಯದ ಕುರಿತಾದ, ಸತ್ಯದ ಕುರಿತಾದ, ಸಮಪಾಲು-ಸಮಬಾಳು ಮುಂತಾದ ಚಂದದ ನುಡಿಗಳ ಕುರಿತಾದ ಸ್ಲೋಗನ್ನುಗಳೆಲ್ಲ ಒಂದೆಡೆ ಇರುತ್ತ ಕಟು ವಾಸ್ತವದ ಕತ್ತು ಹಿಚುಕುವ ಸ್ಪರ್ಧೆಯೊಂದೇ ಈ ಕ್ಷಣದ ಸತ್ಯವಾಗಿರುವ ಜಗತ್ತಿನಲ್ಲಿ ನಡೆಯುತ್ತಿರುವ ಶೋಷಣೆ, ಜಿದ್ದಾಜಿದ್ದಿ, ಹಾವೇಣಿಯಾಟದ ಹೊಯ್‌ಕೈಯಾಟ ಇನ್ನೊಂದೆಡೆ ಇರುತ್ತ, ಅಸಂಗತ ಆಟದ ಕೋರ್ಟಿನಲ್ಲಿ, ಈ ನಾಟಕ, ತಣ್ಣಗೆ ಅಪರಾಧದ ಹೊಸ ವ್ಯಾಖ್ಯಾನವನ್ನು ಕೇಳುತ್ತಿರುವುದು ನಾಟಕದ ಮೂರನೆಯ ಮತ್ತು ಬಹುಮುಖ್ಯ ಆಯಾಮವಾಗಿದೆ.

ನಾಟಕದ ನಿಜವಾದ ಗಮ್ಯವಿರುವುದು, ಅದು ಪ್ರೇಕ್ಷಕನನ್ನು ಹಿಡಿದು ಅಲ್ಲಾಡಿಸಬೇಕಿರುವುದು ಕೊನೆಯ ಅಂಕದಲ್ಲಿ. ಅದು ಪುಟ್ಟದಾಗಿದೆ. ಇಲ್ಲಿ ಈ ಆಟದ ಕೋರ್ಟಿಗೆ ಸೇಲ್ಸ್‌ಮನ್‌ನ ಪತ್ನಿಯ ಪ್ರವೇಶವಾಗುತ್ತದೆ. ಹೆಚ್ಚೇನೂ ಶ್ರಮವಿಲ್ಲದೆ ಅವಳು ಎಲ್ಲವನ್ನೂ ತಿಳಿದುಕೊಳ್ಳುತ್ತಾಳೆ ಮಾತ್ರವಲ್ಲ ನೇರವಾಗಿ ನೀವೆಲ್ಲ ವಕೀಲರೋ, ನ್ಯಾಯಾಧೀಶರೋ ಅಲ್ಲ, ಅದೆಲ್ಲವೂ ಸುಳ್ಳು, ನೀವು ಕೊಲೆಗಡುಕರು ಎಂದು ಸಹಜವಾಗಿಯೇ ಗುರುತಿಸುತ್ತಾಳೆ! ಆರೋಗ್ಯದ, ನಿರಪಯಕಾರಿಯಾದ ಒಂದು ಹವ್ಯಾಸವಾಗಿಯೋ, ವಯೋವೃದ್ಧರ-ಮಾಗಿದ ಮನಸ್ಸುಗಳ ಶೋಧನೆಯಾಗಿಯೋ ಕಾಣುತ್ತಿದ್ದುದರ ವಿಪರ್ಯಾಸ ತೆರೆದುಕೊಳ್ಳುವುದೇ ಬೇರೆ ರೀತಿಯಲ್ಲಿ. ಸೇಲ್ಸ್‌ಮನ್‌ಗೆ ಗಲ್ಲು ಶಿಕ್ಷೆ ವಿಧಿಸುವುದು ಈ ನಕಲಿ ಕೋರ್ಟಿನ ಸಾಧನೆಯೆ ಅಥವಾ ನಮ್ಮ ನ್ಯಾಯಾಂಗದ ಅಣಕವೇ ಎನ್ನುವ ಪ್ರಶ್ನೆ ಇದೆ. ಅದು ಇರುವಾಗಲೇ, ಈ ಗಲ್ಲು ಶಿಕ್ಷೆ ವಿಧಿಸಿದ ರೀತಿಯೋ ಅದನ್ನು ಎಕ್ಸಿಕ್ಯೂಟ್ ಮಾಡಿದ ವಿಧಾನವೋ ಕೊಲೆಯ ಅರ್ಥವ್ಯಾಪ್ತಿಯಲ್ಲಿ ಬರುವುದಿಲ್ಲವೇ ಎನ್ನುವ ಹೊಸ ಪ್ರಶ್ನೆಯೊಂದು ಇಲ್ಲಿ ಹುಟ್ಟಿಕೊಂಡಿದೆ ಮಾತ್ರವಲ್ಲ, ಈ ಹೊಸ ಪ್ರಶ್ನೆಯನ್ನು ಎತ್ತಿರುವ ಜೀವಿಯ ಪ್ರಾಣವೇ ಸದ್ಯ ಅಪಾಯದಲ್ಲಿದೆ!

ಇದಿಷ್ಟು ನಾಟಕದ ವಸ್ತು-ವಿಷಯದ ಬಗ್ಗೆ ಆಯಿತು. ರಂಗಪ್ರಸ್ತುತಿ ಈ ಪ್ರಶ್ನೆಗಳನ್ನು ನಾಟಕ ನೋಡುತ್ತಿದ್ದ ಕಾಲದಲ್ಲೇ ಪ್ರೇಕ್ಷಕನಲ್ಲಿ ಎತ್ತುವಂತಿತ್ತೆ ಎಂದರೆ ಇಲ್ಲ ಎನ್ನಬೇಕು. ಕೋರ್ಟ್ ಮಾರ್ಷಲ್ ನಾಟಕವನ್ನು ಅಭಿನಯಿಸಿದ ತಂಡವೇ ಈ ನಾಟಕವನ್ನೂ ಅಭಿನಯಿಸಿದೆ ಮಾತ್ರವಲ್ಲ ಎಲ್ಲ ನಟರೂ ಪ್ರಬುದ್ಧರು, ರಂಗಭೂಮಿಯಲ್ಲಿ ಹೆಸರು ಮಾಡಿರುವ ಪರಿಣತರು. ಇಡೀ ನಾಟಕ ನಡೆಯುವುದು ಒಂದೇ ಸ್ಥಳದಲ್ಲಾದ್ದರಿಂದ ಹೆಚ್ಚಿನ ಬದಲಾವಣೆಗಳ ಅಗತ್ಯವಿಲ್ಲದ ಮತ್ತು ಇದ್ದುದರಲ್ಲಿ ಸುಸಜ್ಜಿತವಾದ ರಂಗಸಜ್ಜಿಕೆಯನ್ನೇ ಬಳಸಿಕೊಂಡಿದ್ದರು. ಬೆಳಕಿನ ವಿನ್ಯಾಸ ವಿಶೇಷವಾಗಿ ಗಮನಕ್ಕೆ ಬರದಿದ್ದರೂ ಅಚ್ಚುಕಟ್ಟಾಗಿಯೇ ಇತ್ತು. ಇಡೀ ನಾಟಕಕ್ಕಿದ್ದ ಮಳೆ-ಗುಡುಗಿನ ಹಿನ್ನೆಲೆಯನ್ನಂತೂ ಎಲ್ಲೂ ಕಿರಿಕಿರಿಯೆನ್ನಿಸದ ಹಾಗೆ, ಒಂದು ನಯವಾದ ಲಯದೊಂದಿಗೆ ನಿರ್ವಹಿಸಿದ್ದು ನಿಜಕ್ಕೂ ಮೆಚ್ಚುಗೆಗೆ ಅರ್ಹವಾಗಿತ್ತು. ಗೋಪಿನಾಥ್ ಭಟ್ಟರನ್ನು ಬಿಟ್ಟರೆ ವಿಶೇಷವಾದ, ಸವಾಲೊಡ್ಡುವ ರಂಗಚಲನೆ ಬೇರಾವ ಪಾತ್ರಗಳಿಗೂ ಇರಲಿಲ್ಲವಾದರೂ ಈ ವಿಚಾರದಲ್ಲೂ ನಾಟಕಕ್ಕೆ ಪೂರ್ಣ ಅಂಕಗಳೇ ಸಿಗುತ್ತವೆ. ಸ್ಪಷ್ಟ ಉಚ್ಚಾರ, ತಪ್ಪಿಲ್ಲದ ಸಂಭಾಷಣೆ, ಎಲ್ಲೂ ಅಧ್ವಾನವೆನಿಸದ ಹಾಗೆ ಮಾತಿನ ಕಂಟಿನ್ಯೂಯಿಟಿಯ ನಿಭಾವಣೆ ಎಲ್ಲವೂ ಸರಿಯೇ. ಆದರೆ ನಾಟಕದ ಮೂಲಭೂತ ಪ್ರಶ್ನೆಗಳು ಎಲ್ಲ ರಂಜನೆಯ ಜೊತೆಗೇ ಪ್ರೇಕ್ಷಕನಲ್ಲಿ ಆ ಕ್ಷಣದಲ್ಲೇ ಜಾಗೃತಗೊಳ್ಳಬೇಕು. ಅವುಗಳ ಕುರಿತು ಆಮೇಲೆ ಆತ ಎರಡು ಮೂರು ದಿನ ಮನದಲ್ಲೇ ತರ್ಕಿಸುತ್ತಾನೆ, ಅದು ಬೇರೆ. ಆದರೆ ಅಂಥ ಆಳವಾದ ತರ್ಕಕ್ಕೆ ಬೇಕಾದ ಕೆಲವು ಬೀಜಗಳನ್ನಾದರೂ ನಾಟಕ ರಂಗಪ್ರಸ್ತುತಿಯ ಕ್ಷಣದಲ್ಲೇ ಮುಹೂರ್ತ ನೋಡಿ ಊರಿಬಿಡಬೇಕು. ನಾಟಕದ ನಿಜವಾದ ಯಶಸ್ಸು ಇರುವುದೇ ಇಲ್ಲಿ. ಸದ್ಯದ ಪ್ರದರ್ಶನ ಇನ್ನೂ ಆ ಹದ ಮೈಗೂಡಿಸಿಕೊಂಡಿಲ್ಲ ಅನಿಸುತ್ತದೆ. ಆದರೆ, ನಾಟಕದ ಕೊನೆಯ ಅಂಕ ಕೊಂಚ ಗಲಿಬಿಲಿಯಲ್ಲಿ ತೊಡಗಿ ಇದ್ದಕ್ಕಿದ್ದಂತೆ ಮುಗಿದಂತೆ ಕಂಡಿದ್ದು ಈ ಪ್ರದರ್ಶನ ಹುಟ್ಟಿಸಿದ ಗೊಂದಲಕ್ಕೆ ಕಾರಣವಾಯಿತು ಎನ್ನುವುದು ನಿಜವಾದರೂ ಒಟ್ಟಾರೆಯಾಗಿ ನಾಟಕ ಒಂದು ಪರಿಣಾಮಕಾರಿ ಪ್ರದರ್ಶನವಾಗುವಲ್ಲಿ ಸೋಲಲು ಅಭಿನಯ, ರಂಗಸಜ್ಜಿಕೆ, ಬೆಳಕು, ಧ್ವನಿ,ರಂಗಚಲನೆ, ಭಾಷೆ ಯಾವುದೂ ಕಾರಣವಲ್ಲ.

ನಾಟಕದ ಟೆಕ್ಸ್ಟ್‌ನ್ನು ರಂಗಪ್ರಸ್ತುತಿಗೆ ಹೊಂದಿಸಿಕೊಳ್ಳುವಲ್ಲೇ ಈ ದೋಷ ಉಳಿದಿರುವಂತೆ ಕಾಣುತ್ತದೆ. ಅಲ್ಲದೆ, ನಾಟಕದ ಪರಿಣಾಮಕಾರತ್ವದ ಬಿಂದುಗಳು ಇಂಥಲ್ಲೇ ಎಂದು ಗುರುತಿಸಿಕೊಳ್ಳುವಲ್ಲಿ ತಾಲೀಮು ಸೋತಂತೆಯೂ ಅನಿಸುತ್ತದೆ. ಒಮ್ಮೊಮ್ಮೆ ಈ ನಾಟಕ ಇನ್ನೊಂದು ಕೋರ್ಟ್ ಮಾರ್ಷಲ್ ಅಷ್ಟೇ ಎಂಬ ನಿಶ್ಚಯಭಾವ ರಂಗತಂಡದಲ್ಲೇ ಇದ್ದಿತ್ತೇ ಎಂದೂ ಅನಿಸುತ್ತದೆ. ಒಂದು ಉತ್ತಮ ನಾಟಕ, ತನ್ನ ತಾಲೀಮಿನ ವಿವಿಧ ಹಂತದಲ್ಲೇ, ನಟರು-ನಿರ್ದೇಶಕರು ಅದರಲ್ಲಿ ಹೆಚ್ಚೆಚ್ಚು ಮುಳುಗಿದಂತೆಲ್ಲ ತನ್ನ ಪ್ರಸ್ತುತಿ ಬಿಟ್ಟುಕೊಡಬಹುದಾದ ಹೊಸಹೊಸ ಅರ್ಥಗಳನ್ನು ನಟರಿಗೆ, ನಿರ್ದೇಶಕರಿಗೆ ಕಾಣಿಸುತ್ತ ಹೋಗುತ್ತದೆ. ಕೆಲವೊಮ್ಮೆ ಇದನ್ನು ಕನಿಷ್ಠಪಕ್ಷ ಪ್ರಯೋಗಗಳ ಸಂಖ್ಯೆ ಹೆಚ್ಚಿದಂತೆಲ್ಲ ಕಂಡುಕೊಳ್ಳುತ್ತ ಹೋಗುತ್ತಾರೆ. ಹಾಗಾಗದೇ ಹೋದಲ್ಲಿ ಪ್ರೇಕ್ಷಕನಿಗೆ ಸದಾನಂದ ಸುವರ್ಣರು ಕೋರ್ಟ್ ಮಾರ್ಷಲ್ ನಾಟಕವನ್ನೇ ಹೊಸ ಬಾಟಲಿಯಲ್ಲಿ ತುಂಬಿಸಿ ಕೊಟ್ಟಂತೆ ಕಂಡರೆ ಅದರಲ್ಲಿ ಅಂಥ ಅಚ್ಚರಿಯೇನಿಲ್ಲ. ಮೂಲನಾಟಕದ ಹೆಸರು ಡೆಡ್ಲಿ ಗೇಮ್. ಈ ಗೇಮ್ ಎನ್ನುವುದು ಬದುಕನ್ನು, ವೃತ್ತಿಯನ್ನು, ಕೋರ್ಟನ್ನು ಕೂಡ ತನ್ನ ತೆಕ್ಕೆಗೆ ಸೆಳೆದುಕೊಳ್ಳಬಲ್ಲ ಶಬ್ದ. ಅದು ಹಾಗಿದ್ದರೆ ಚೆನ್ನ. ಆದರೆ ಮಳೆ ನಿಲ್ಲುವ ವರೆಗೆ ಇನ್ನೊಂದು ಕೋರ್ಟ್ ಮಾರ್ಷಲ್ ಅಷ್ಟೇ ಅಲ್ಲ ಎನ್ನುವುದನ್ನು ಈ ತಂಡ ಪ್ರೇಕ್ಷಕರಿಗೆ ಮನವರಿಕೆ ಮಾಡಿಕೊಡಬೇಕಾದ ಜವಾಬ್ದಾರಿ ಹೊಂದಿದೆ.
(ಮಳೆ ನಿಲ್ಲುವ ವರೆಗೆ ನಾಟಕದ ಪ್ರಥಮ ಪ್ರದರ್ಶನ ಮಂಗಳೂರಿನ ಪುರಭವನದಲ್ಲಿ ದಿನಾಂಕ 11/03/2009ರ ಸಂಜೆ ಆರೂವರೆಗೆ ನಡೆಯಿತು.)

2 comments:

ಹರಿಜೋಗಿ said...

ಪೈಯವರೇ,
ನಾಟಕವನ್ನು ಬಹಳ ಚೆನ್ನಾಗಿ ವಿಮರ್ಶಿಸಿದ್ದೀರಿ. ನನಗೂ ಈ ನಾಟಕ ’ಕೋರ್ಟ್ ಮಾರ್ಶಲ್ ’ನ ಮಟ್ಟದಲ್ಲಿ ಬಂದಿಲ್ಲ ಎಂದು ಅನಿಸಿದೆ. ಸುವರ್ಣರು ಹೇಳಿದಂತೆ ನಾಟಕ ಪ್ರದರ್ಶನದಿಂದ ಪ್ರದರ್ಶನಕ್ಕೆ ಸುಧಾರಣೆ ಕಾಣಲು ಸಾಧ್ಯವಿದೆಯಾದರೂ ಕಥಾವಸ್ತು ತುಂಬ ಗಟ್ಟಿಯದು ಎಂದು ಎಣಿಸುವುದಿಲ್ಲ. ಮಲ್ಲೂರ್ ರ ಅಭಿನಯ ’ಉರುಳು’ವಿಗೆ ಸಾಟಿಯಾಗಿಲ್ಲ. ಉಳ್ಳಾಲ್ ಗೆ ಬಹಳ ಸೀಮಿತ ಅವಕಾಶ. ಭಟ್ ಮಿಂಚಿದ್ದಾರೆ.

ನರೇಂದ್ರ ಪೈ said...

ಪ್ರತಿಕ್ರಿಯೆಗೆ ಧನ್ಯವಾದಗಳು ಹರಿಜೋಗಿಯವರೆ. ನಿಮ್ಮ ಮಾತು ಸರಿ. ಆದರೂ ಈ ಪ್ರಯೋಗ ಕೊಂಚ ಭಿನ್ನವಾಗಿ ಬಂದಿದ್ದರೆ ನಾಟಕದ ಆಶಯ ಇನ್ನೂ ಹೆಚ್ಚು ಸ್ಫುಟವಾಗುವುದು ಸಾಧ್ಯವಿತ್ತು ಅನಿಸುತ್ತದೆ. ಸುವರ್ಣರು ಈ ಪ್ರಯೋಗದ ಬಗ್ಗೆ ಒಂದು ಚರ್ಚೆಯನ್ನು ಅನೌಪಚಾರಿಕವಾಗಿ ನಟವರ್ಗ ಮತ್ತು ಕೆಲವು ಆಸಕ್ತ ಪ್ರೇಕ್ಷಕರ ನಡುವೆ ಆಯೋಜಿಸಿದ್ದರೆ ಅದರಿಂದ ಒಳ್ಳೆಯ ಕೆಲವು ಬೆಳವಣಿಗೆ ಸಾಧ್ಯವಿತ್ತು. ನೀನಾಸಂ ಹಿಂದೆ ಇಂಥದ್ದನ್ನು ಉಡುಪಿಯಂಥ ಕಡೆಗಳಲ್ಲಿ ಮಾಡುತ್ತಿತ್ತು.

ನಾಟಕಕಾರನಿಗೆ ತಾನು ಈ ನಾಟಕದ ಮೂಲಕ ಹೇಳ ಹೊರಟಿದ್ದೇನು ಎನ್ನುವುದು ಸ್ಪಷ್ಟವಿತ್ತು. ಭಾರೀ ಗಾಳಿ ಮಳೆಯ ಅಸಹಜ ರಾತ್ರಿ, ಅಸಹಜವಾಗಿ ಜಗತ್ತಿನಿಂದಲೇ ಬೇರೆಯಾಗಿ ನಿಂತ ಗುಡ್ಡದ ಮೇಲಿನ ಒಂಟಿ ಬಂಗಲೆಯಲ್ಲಿ ನಡೆಯುವ ಈ ಪ್ರಕ್ರಿಯೆಯನ್ನು ಗಮನಿಸಿದರೆ ಹಾಗೆ ಅನಿಸುತ್ತದೆ. ರಂಗಸಾಧ್ಯತೆಗಳಂತೂ ತುಂಬ ಇದ್ದವು. ಉದಾಹರಣೆಗೆ, ಈ ನಾಟಕವನ್ನು ಕಣ್ಣು ಕುಕ್ಕುವ ಬೆಳಕಿನಲ್ಲಿ ಮಾಡದೆ ಕ್ಯಾಂಡ್ಲ್ ಅಥವಾ ದೀಪಗಳ ಮಂದ ಬೆಳಕಿನಲ್ಲಿ ಮಾಡಬಹುದಿತ್ತು ಮತ್ತು ಸಾಂದರ್ಭಿಕವಾಗಿ ಈ ಮನೆಯ ಎಲ್ಲ ಪಾತ್ರಗಳು ಸೇಲ್ಸ್‌ಮನ್‌ಗೆ ಪ್ರೇತಗಳಂತೆ ಕಂಡ ಭ್ರಮೆಯನ್ನು ಹುಟ್ಟಿಸಬಹುದಿತ್ತು. ನಾಟಕ ಈ ಸಾಧ್ಯತೆಯನ್ನು ಪೂರ್ತಿಯಾಗಿ ತೆಗೆದು ಹಾಕುತ್ತಿಲ್ಲ ಎನ್ನುವುದನ್ನು ಗಮನಿಸಿ. ಸುವರ್ಣರು ತೀರಾ ರಿಜಿಡ್ ಆದ ಒಂದು ರಂಗಸಜ್ಜಿಕೆಯನ್ನು ಮಾಡಿಕೊಂಡು ಬಿಡುತ್ತಾರೆ. ಅದು ಅನಿವಾರ್ಯವೇನಲ್ಲ. ತುಂಬ ಫ್ಲೆಕ್ಸಿಬಲ್ ಆದ ಸೆಟ್ಟಿಂಗ್‌ಗಳೇ ಹೆಚ್ಚು ಅನುಕೂಲಕರ. ಇಡೀ ನಾಟಕದಲ್ಲಿ ಒಂದೂ ಹಾಡು, ನೃತ್ಯವಿಲ್ಲ; ರಿಜಿಡ್ ಆದ ಸೆಟ್ಟಿಂಗ್‌ನಿಂದಾಗಿ ಅಂಥದ್ದನ್ನು ಮಾಡುವುದಕ್ಕೆ ಬೇಕಾದ ಸ್ಥಳವೂ ಇಲ್ಲ. ಈ ನಾಟಕದುದ್ದಕ್ಕೂ ಒಂದು ಪುಟ್ಟ ಗುಂಪು ಒಂದು ಬೇಟೆಯ ಹಾಡನ್ನು ಅಭಿನಯಿಸಿದ್ದರೆ ರಂಜನೆಯೊಂದಿಗೆ ನಾಟಕಕ್ಕೆ ಹೊಸ ಆಯಾಮವನ್ನು ಕೊಡುವುದು ಸಾಧ್ಯವಿತ್ತು. ನನಗಂತೂ ಬೇಂದ್ರೆಯವರ ನಾದಲೀಲೆ ಕವನ ಈ ನಾಟಕಕ್ಕೆ ತುಂಬ ಹೊಂದುತ್ತದೆ ಅನಿಸಿತ್ತು. ಈ ನಾಟಕದಲ್ಲಿ ಬೇಟೆಗಾರ ಒಮ್ಮೆ ವಿಧಿಯಂತೆಯೂ ಒಮ್ಮೆ ಕೃಷ್ಣನಂತೆಯೂ ಒಮ್ಮೆ ಯಮನಂತೆಯೂ ಕಾಣಿಸಿಕೊಳ್ಳುತ್ತಾನೆ. ಇಡೀ ಹಾಡು ಕೋಲಾಟದ ಹಾಡಿನಂತೆಯೇ ಇದೆ. ಇದನ್ನೆಲ್ಲ ಹೀಗೇ ಸುಮ್ಮನೆ ಉದಾಹರಣೆಗೆ ಹೇಳುತ್ತಿದ್ದೇನೆ, ಹೀಗೇ ಸರಿ ಅಂತ ಅಲ್ಲ. ಒಂದು ನಾಟಕದ ಒಟ್ಟಾರೆ ಧ್ವನಿಗಾಗಿ ಮಾಡಿಕೊಳ್ಳುವ ಸೂಕ್ತ ಬದಲಾವಣೆಗಳಿಂದ ನಾಟಕಕಾರನಿಗೆ ಅನ್ಯಾಯವೇನೂ ಮಾಡಿದಂತಾಗುವುದಿಲ್ಲ. ಆದರೆ ಈ ಪ್ರಯೋಗ ಸಿನಿಮೀಯ ಮಾದರಿಗೇ ಹೆಚ್ಚು ಒತ್ತು ಕೊಟ್ಟಂತಿತ್ತು ಎನ್ನುವುದು ಬೇಸರ.