Saturday, March 21, 2009

ಇಡ್ಲಿಯ ಕುರಿತೇ ಧ್ಯಾನಿಸಿದ ಬದುಕು

ಸಾಧಾರಣವಾಗಿ ನಾನು ಇಂಥ ಪುಸ್ತಕಗಳನ್ನು ಓದುವುದಿಲ್ಲ. ಇಂಥ ಪುಸ್ತಕಗಳೆಂದರೆ, ಜೀವನದಲ್ಲಿ ನಾವು ಕೆಲವೊಂದು ಪುಸ್ತಕಗಳನ್ನು ಓದಿ, ಆ ಮೂಲಕ ದಕ್ಕಿದ ಜ್ಞಾನದಿಂದಲೇ ಅದ್ಭುತವಾದ ಸಾಧನೆಗಳನ್ನು ಮಾಡಬಹುದು, ಯಶಸ್ಸು, ಐಶ್ವರ್ಯ, ಕೀರ್ತಿ ಇತ್ಯಾದಿಗಳನ್ನು ಹೊಂದುವ ಬಗ್ಗೆ ಮಾರ್ಗದರ್ಶನ ಪಡೆಯಬಹುದು, ಮಾದರಿ ಯಶಸ್ವಿವ್ಯಕ್ತಿಗಳನ್ನು ಅನುಸರಿಸುವುದಕ್ಕೆ ಕಲಿಯಬಹುದು ಮತ್ತು ಮುಖ್ಯವಾಗಿ ಇವಕ್ಕೆಲ್ಲ ನಮಗೆ ತಿಳಿಯದೇ ಇರುವ ಸುಲಭದ ಅಥವಾ ಸರಳವಾದ ಶಾರ್ಟ್‌ಕಟ್‌ಗಳೇನಾದರೂ ಇದ್ದರೆ ಅವೆಲ್ಲ ಈ ಪುಸ್ತಕಗಳಲ್ಲಿ ಇರಬಹುದು ಎನ್ನುವ ಭ್ರಮೆ ಹುಟ್ಟಿಸುವ ಪುಸ್ತಕಗಳು. ಆದರೆ ನನ್ನ ಓದಿನ ಅಭಿರುಚಿಯನ್ನು ಬಲ್ಲವರೇ ಒಬ್ಬರು ಇದನ್ನು ಒಮ್ಮೆ ಓದಿ ನೋಡಿ ಎಂದು ಕೈಯಲ್ಲಿಟ್ಟ ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ ಇಂಥ ಪುಸ್ತಕವಾಗಿರಲಿಲ್ಲ.
ವಿಮರ್ಶೆ ಗಿಮರ್ಶೆ ಮಾಡದೆ ಸುಮ್ಮನೆ ನನಗೆ ಈ ಪುಸ್ತಕ ಇಷ್ಟವಾಗಿದ್ದಕ್ಕೆ ಏನು ಕಾರಣ, ನೀವೂ ಓದಿ ಎಂದು ಹೇಳುವ ಧೈರ್ಯ ಬರಲು ಏನು ಕಾರಣ ಎಂದು ಯೋಚಿಸುತ್ತ ಹೋಗುತ್ತೇನೆ.

ವಿಠ್ಠಲ ವೆಂಕಟೇಶ ಕಾಮತರ ನಿಜ ಬದುಕಿನ ಕಥಾನಕ ಇಲ್ಲಿರುವುದು. ಕಲ್ಪನೆಯಲ್ಲ, ಕಟ್ಟುಕಥೆಯಲ್ಲ. ಯಾರನ್ನೋ ಮೆಚ್ಚಿಸಲು, ತಮ್ಮನ್ನೇ ದೊಡ್ಡದಾಗಿ ಬಿಂಬಿಸಿಕೊಳ್ಳಲು ಬರೆದರು ಎನ್ನಲು ಕಾಮತರಿಗೆ ಇಂಥ ಚೀಪ್ ಮಾರ್ಗಗಳ ಅಗತ್ಯವೇ ಇಲ್ಲ. ಇಲ್ಲಿರುವುದು ಪ್ರಾಮಾಣಿಕವಾದ ಒಂದು ನಿರೂಪಣೆ. ಪ್ರೌಢ ಸಾಹಿತ್ಯಿಕ ನಿರೂಪಣೆಯ ಎದುರು ಮುಗ್ಧವೆನ್ನಿಸುವ, ಸರಳತೆ ಮತ್ತು ಪ್ರಾಮಾಣಿಕತೆಯೊಂದೇ ಆಧಾರವೆನ್ನಿಸುವ ನೇರ ನಿರೂಪಣೆಯ ಬರಹವಿದು. ಇದು ಈ ಬರಹದ ಮೂಲ ಆಕರ್ಷಣೆ.

ಎರಡನೆಯದು ಈ ವಿಠ್ಠಲ ವೆಂಕಟೇಶ ಕಾಮತ್ ನಮ್ಮೊಳಗೆ ಸೇರಿಕೊಳ್ಳುವ ಆಪ್ತ ಬಗೆ. ಗಿಮ್ಮಿಕ್ ಇಲ್ಲದ, ತನ್ನ ಸಾಧನೆಯ ಬಗ್ಗೆ ಅತೀವ ಸಂತಸ-ಖುಶಿ ಎಲ್ಲ ಇರುವ ಆದರೆ ಅಹಂಕಾರವಿಲ್ಲದ ಕಾಮತ್ ಒಬ್ಬ ಬಿಗ್ ಹೋಟೆಲಿಯರ್‌ನ ಗತ್ತು, ಗಾಂಭೀರ್ಯ, ವ್ಯಾವಹಾರಿಕ ಕುಶಲತೆ ಎಲ್ಲವನ್ನೂ ಇರಿಸಿಕೊಂಡೇ ಪ್ರಾಮಾಣಿಕವಾಗಿ ತೆರೆದುಕೊಳ್ಳುತ್ತಾರೆ ಎನ್ನುವುದು ಕೂಡ ಒಂದು ಬಗೆಯ ಹೊಸ ಅನುಭವ. ಕಾಮತರಲ್ಲಿ ಮುಚ್ಚುಮರೆಯಿಲ್ಲ ಎನ್ನುವಂತಿಲ್ಲ. ಆದರೆ ಅದು ತನ್ನ ಬಗ್ಗೆಯೇ ಮಾತನಾಡಲು ಹೊರಟ ಸಭ್ಯನೊಬ್ಬನ ಸಂಕೋಚದಂತಿದೆ. ಯಾಕೆಂದರೆ ದಾಂಪತ್ಯ, ಒಡಹುಟ್ಟು, ತಂದೆಯ ಕಟ್ಟುನಿಟ್ಟು, ತಮ್ಮದೇ ಎಡವಟ್ಟುಗಳನ್ನು ನಮ್ಮ ಮುಂದೆ ತೆರೆದಿಡುವಲ್ಲಿ ಕಾಮತರು ತುಂಬ ಆತ್ಮೀಯ ಸ್ನೇಹಿತನಂತೆ ಹೇಳಿಕೊಳ್ಳುತ್ತಾರೆ. ಬಿಸಿನೆಸ್ ಬೆಳೆಸಲು ತಾವು ನಡೆಸಿದ ಸಣ್ಣಪುಟ್ಟ ಟ್ರಿಕ್‍ಗಳನ್ನು ಪುಟ್ಟ ಮಗು ಮೊದಲ ಬಾರಿ ಆಟದಲ್ಲಿ ಗೆದ್ದು ಬಂದಾಗ ಹೇಳಿಕೊಳ್ಳುವಷ್ಟೇ ಸಂತಸ ಸಡಗರದಿಂದ ಹೇಳಿಕೊಳ್ಳುತ್ತಾರೆ. ಬಿದ್ದ ಪೆಟ್ಟುಗಳನ್ನು, ಅನುಭವಿಸಿದ ನೋವು-ಅಪಮಾನವನ್ನು ಹಲ್ಲುಕಚ್ಚಿ ನೆನೆಯುತ್ತಾರೆ. ಹಾಗೆಯೇ ಎಷ್ಟೋ ವಿಚಾರಗಳನ್ನು ಅನಗತ್ಯವೇನೋ ಎನ್ನುವಂತೆ ಹೇಳದೇ ಬಿಟ್ಟ ಅನುಭವವೂ ಆಗುತ್ತದೆ. ಒಳ್ಳೆಯ ಮನುಷ್ಯನೊಬ್ಬನ ಭೇಟಿಯನ್ನು ಮುಗಿಸಿ ಬಂದ ಮೇಲೆ ಇನ್ನೂ ಸ್ವಲ್ಪಹೊತ್ತು ಅವನೊಂದಿಗೇ ಕಳೆಯಬೇಕಿತ್ತು ಅನಿಸುವಂತಿದೆ ಇದು. ಒಳ್ಳೆಯ ಪುಸ್ತಕವೊಂದರ ಓದು ಕೂಡಾ ಹೀಗೆಯೇ ಮೆಲುಕು ಹಾಕುವ ಒಡನಾಟದಂತಿರುತ್ತದೆ.

ಕಾಮತರ ಅಚ್ಚರಿಹುಟ್ಟಿಸುವ ತಾದ್ಯಾತ್ಮವೊಂದೇ ಈ ಇಡೀ ಪುಸ್ತಕದಲ್ಲಿ ನನಗೆ ಕಂಡ ಯಶಸ್ಸಿನ ಮಂತ್ರ. ಪುಸ್ತಕದ ಹೆಸರು ನೋಡಿ, ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ. ಪುಸ್ತಕದಲ್ಲೂ ಮೊದಲ ಅಧ್ಯಾಯದಲ್ಲೇ ಕಾಮತರು ನಾಲ್ಕು `ಡಿ'ಗಳ ಬಗ್ಗೆ ಹೇಳುತ್ತಾರೆ. ಡಿಟರ್ಮಿನೇಶನ್, ಡೆಡಿಕೇಶನ್, ಡಿಸಿಪ್ಲೀನ್ ಮತ್ತು ಡೆಸ್ಟಿನಿ. ಆದರೆ ಪುಸ್ತಕವನ್ನು ಓದುವ ಯಾರಿಗಾದರೂ ಗೊತ್ತು, ಇವುಗಳೆಲ್ಲ ಬರೇ ಸದ್ದು ಹುಟ್ಟಿಸುವ ಶಬ್ದಗಳು ಎನ್ನುವ ಸತ್ಯ. ಕಾಮತರ ಬದುಕನ್ನು ಸುಮ್ಮನೇ ಸೂಕ್ಷ್ಮವಾಗಿ ಗಮನಿಸಿದರೆ ಸಾಕು, ಇದರ ಸತ್ಯ ಗೊತ್ತಾಗುತ್ತದೆ. ಕಾಮತರಿಗೆ ತನ್ನ ಹೋಟೆಲಿನ ಗಿರಾಕಿಯ ಖುಶಿ, ತೃಪ್ತಿ, ಹೆಮ್ಮೆಗಳೇ ಮುಖ್ಯವಾಗಿತ್ತು. ಕಸ್ಟಮರ್ ಎನ್ನುವ ವಿಸ್ಮಯವೇ ಅವರ ದೇವರು. ಆತನ ಸಂತೃಪ್ತಿಗಾಗಿ ಅವರು ಒದ್ದಾಡುತ್ತಿದ್ದರು. ಅಷ್ಟೇ ಅವರ ಯಶಸ್ಸಿನ ಸೂತ್ರ. ಹೇಗೆ ಒದ್ದಾಡಿದರು ಎನ್ನುವಲ್ಲಿ ಕಾಮತರ ತಾದ್ಯಾತ್ಮವನ್ನು ನೋಡಿಯೇ ದಂಗಾಗಬೇಕು ನಾವು. ಸ್ವಂತ ವ್ಯಾಪಾರ - ವ್ಯವಹಾರಕ್ಕಿಳಿಯುವ ಮನಸ್ಸಿದ್ದರೆ, ಈ ಒಂದು ಗುಣವನ್ನು ಕಲಿತರೂ ಸಾಕು, ಉಳಿದಿದ್ದೆಲ್ಲ ಬಂದೇ ಬರುತ್ತದೆ. ಉಳಿದಿದ್ದು ಅಂದರೆ ಆರ್ಕಿಡ್ ಮತ್ತು ಆತ್ಮಬಲ!

ಕಾಮತರ ಈ ಇಡೀ ಕಥಾನಕದಲ್ಲಿ ಅವರ ತಾಯಿ, ತಂದೆ, ತಮ್ಮ ಮತ್ತು ಹೆಂಡತಿ ಪ್ರಧಾನವಾಗಿ ಇದ್ದಾರೆ. ಇನ್ನುಳಿದ ಕೆಲವರು ಸಾಕಷ್ಟು ವಿವರವಾಗಿ, ಇವರಷ್ಟು ಪ್ರಾಧಾನ್ಯ ಹೊಂದಿ ಬಂದಿಲ್ಲ. ತಂದೆ ಉಗ್ರನರಸಿಂಹರಾಗಿ, ಶಿಸ್ತಿನ ಉಗ್ರ ಪ್ರತಿಪಾದಕರಾಗಿ, ಮಹಾ ವ್ಯವಹಾರಸ್ಥರಾಗಿ, ದಣಿವರಿಯದ ಶ್ರಮಜೀವಿಯಾಗಿ ಕಂಡು ಬಂದರೆ ತಾಯಿ ಅನ್ನಪೂರ್ಣೆಯಾಗಿ, ಗಂಡನ ಯಶಸ್ಸಿನ ಹಿಂದಿನ ನಿಜಶಕ್ತಿಯಾಗಿ ಬಂದಿದ್ದಾರೆ. ಹೆಂಡತಿ ಮತ್ತು ತಮ್ಮ ಪರೋಕ್ಷವಾಗಿ ನಮಗೆ ಕಾಮತರ ಮಿತಿಗಳನ್ನು ಕಾಣಿಸುತ್ತಾರೆ. ಕಾಮತರು ಕುಟುಂಬಕ್ಕೆ ಕೊಟ್ಟ ಸಮಯ ಅಷ್ಟರಲ್ಲೇ ಇದೆ. ಒಮ್ಮೆ ಕಾಮತರು ಸಿನಿಮಾ ನೋಡಲು ಹೆಂಡತಿ ಮಕ್ಕಳೊಂದಿಗೆ ಹೊರಗೆ ಹೋಗುತ್ತಾರೆ. ಇಂಥ ವಿದ್ಯಮಾನವೇ ಕಾಮತರ ಬದುಕಿನಲ್ಲಿ ಅಪೂರ್ವವಾದದ್ದು ಎನ್ನಲಡ್ಡಿಯಿಲ್ಲ. ಆದರೆ ಹಿಟ್ ಫಿಲಂ ಕಾಮತರನ್ನು ರಂಜಿಸದೇ ಬೋರು ಹೊಡೆಸುತ್ತದೆ. "ನನ್ನ ಐನೂರು ರೂಪಾಯಿ ಮುಳುಗಿತು" ಎಂದು ಕಾಮತರು ಯಾವುದೋ ಧ್ಯಾನದಲ್ಲಿ, ತಮಾಷೆಗೆ ಹೇಳುತ್ತಾರೆ. ಇದನ್ನು ಕೇಳಿದ ಕಾಮತರ ಹೆಂಡತಿಯ ಕಣ್ಣಲ್ಲಿ ನೀರಾಡುತ್ತದೆ.

ಕಾಮತರು ಇದನ್ನು ಗಮನಿಸುತ್ತಾರೆ ಮತ್ತು ಇಲ್ಲಿ ಅದನ್ನು ನಿರೂಪಿಸುತ್ತಾರೆ ಎನ್ನುವುದನ್ನು ಗಮನಿಸಿ. ಇದೇ ರೀತಿ ತಮ್ಮನೊಂದಿಗೆ ಕಾಮತರಿಗೆ ಎಂದೂ ಬಗೆಹರಿಯಲಿಲ್ಲ. ತಮ್ಮ ಅಡಿಟರ್ ಕುತಂತ್ರಿಯಂತೆ ಕುಟುಂಬ ಒಡೆದರು ಎನ್ನುವ ಕಾಮತರು ಕೊಂಚ ಕಟುವಾಗಿಯೇ ವ್ಯವಸಾಯದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಅನ್ನುವ ಪ್ರಾಣಿಗೆ ಹೆಚ್ಚು ಮಹತ್ವಕೊಡಬಾರದು, ಅದನ್ನು ಎಲ್ಲಿಡಬೇಕೋ ಅಲ್ಲೇ ಇಡಬೇಕು ಎನ್ನುವ ಅರ್ಥದ ಮಾತನ್ನಾಡುತ್ತಾರೆ. ಕಾಮತ್ ಸ್ವತಃ ಇನ್ನು ಮುಂದೆಯೂ ಬದುಕಬೇಕೆ ಬೇಡವೆ ಎಂದು ಯೋಚಿಸುವ ಮಟ್ಟಕ್ಕೆ ಮುಳುಗಿದ್ದರು ಎನ್ನುವುದನ್ನು ಮರೆಯಬಾರದು. ಆ ದಿನಗಳನ್ನು, ಆ ದಿನಗಳ ಒಂದೊಂದು ಕ್ಷಣವನ್ನೂ ಅವರು ಹೇಗೆ ಕಳೆದರು, ಎದುರಿಸಿದರು ಎನ್ನುವ ವಿವರಗಳೆಲ್ಲ ಸೂಕ್ಷ್ಮವಾಗಿಯಾದರೂ ಈ ಪುಸ್ತಕದಲ್ಲಿ ಇವೆ. ಕಾಮತ್ ತೀರ ಗತಿಯಿಲ್ಲದ ಮನೆಯಲ್ಲಿ ಹುಟ್ಟಲಿಲ್ಲ, ಬೆಳೆಯಲಿಲ್ಲ ಎನ್ನುವುದು ನಿಜ. ಕಾಮತರ ಯಶಸ್ಸಿನಲ್ಲಿ ನಿಜವಾದ ಪಾಲು ಅವರ ತಂದೆಗಿದೆ. ವಾಸ್ತವವಾಗಿ ಈ ಮಹಾನ್ ತಂದೆಯ ಶ್ರಮ, ಶಿಸ್ತು ಮತ್ತು ತ್ಯಾಗ ಸೇರಿದ್ದರಿಂದಲೇ ಇವತ್ತಿನ ವಿಠ್ಠಲ ವೆಂಕಟೇಶ ಕಾಮತ್ ಎನ್ನುವ ವ್ಯಕ್ತಿ ಏನಾಗಿದ್ದಾರೆಯೋ ಅದಾಗಿದ್ದಾರೆ ಎನ್ನುವಾಗಲೂ ಒಮ್ಮೆ ಈ ಕಾಮತರು ತೀರಾ ತಳ ಮುಟ್ಟಿ ಮೇಲೆದ್ದು ಬಂದವರು ಎನ್ನುವುದನ್ನು ಗಮನಿಸಿದರೆ ತಂದೆಯ ಪುಣ್ಯವನ್ನು ಮಗ ಅನುಭವಿಸುವಾಗಲೂ ಅದನ್ನು ಅತ್ಯಂತ ಅರ್ಹವಾಗಿ ಅನುಭವಿಸಿದ್ದಾರೆ ಅನಿಸದೇ ಇರದು. ಒಂದು ಸಂಸ್ಕಾರದ ಯಶಸ್ಸಿದು ಎನ್ನುವ ಅರ್ಥದಲ್ಲೇ ಕಾಮತರು ಇಡ್ಲಿ, ಆರ್ಕಿಡ್ ಮತ್ತು ನಾನು ಎಂದಿದ್ದ ಹೆಸರನ್ನು ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ ಎಂದು ಬದಲಾಯಿಸುತ್ತಾರೆ.

ಒಮ್ಮೆ ಎಲ್ಲವನ್ನೂ ಕಳೆದುಕೊಂಡು ಬರಿಗೈಯಾದ ಕಾಮತರು ತಮ್ಮದೇ ಬದುಕಿನ ಹಿನ್ನೋಟಕ್ಕೆ ತಿರುಗುತ್ತಾರೆ. ಕಾಮತರ ಯಶಸ್ಸಿನ ಸೂತ್ರ ತಾದ್ಯಾತ್ಮ ಎಂದೆ. ಅದು ಎಂಥ ತಾದ್ಯಾತ್ಮ? ತಮ್ಮ ಹೋಟೆಲಿಗೆ ಬಂದ ಗಿರಾಕಿಯನ್ನು ಹೇಗೆ ಖುಶಿಗೊಳಿಸುವುದು? ಹೇಗೆ ಅವನ ಮೊಗದಲ್ಲಿ ಸಂತೃಪ್ತಿಯ ನಗುವನ್ನರಳಿಸುವುದು? ಏನು ಮಾಡಿದರೆ ಈ ಗ್ರಾಹಕ ದೈವದ ಅನುಗ್ರಹ ದಕ್ಕೀತು? ರುಚಿಯಿದ್ದರೆ ಸಾಕೆ, ಶುಚಿ ಬೇಡವೆ? ಶುಚಿಯಿದ್ದರೆ ಸಾಕೆ, ಖುಶಿ ಬೇಡವೆ? ಮಕ್ಕಳು ಖುಶಿಯಾದರೆ ಹೆತ್ತವರ ಮುಖವರಳುತ್ತದೆ. ಮನೆಯೊಡತಿಗೆ ಖುಶಿಯಾದರೆ ಯಜಮಾನ ಉಬ್ಬುತ್ತಾನೆ. ಮನೋಗತವನ್ನು ಅರಿತು ಅದರಂತೆ ನಡೆದು ವ್ಯವಹಾರ ಕುದುರಿಸಿಕೊಳ್ಳುವ ಕಾಮತರ ಪ್ರಯತ್ನ ಒಂದು ಎರಡು ದಿನದ್ದಲ್ಲ. ಅದು ನಿರಂತರ. ಆದರೆ ಇದೆಲ್ಲ ಅವರನ್ನು ಎಲ್ಲಿಗೆ ತಲುಪಿಸಿತು ಎನ್ನುವುದು ಕೂಡ ಅಷ್ಟೇ ಕುತೂಹಲಕರ. ಒಂದು ದಿನ ಇದೇ ಕಾಮತರು ಹೀಗೆ ಯೋಚಿಸುತ್ತಾರೆ:

"ಇಷ್ಟು ದಿನದ ನನ್ನ ಬದುಕಿನಲ್ಲಿ ನಾನು ಪಡೆದುಕೊಂಡದ್ದಾದರೂ ಏನು? ಹಣ ಬಲವೆ? ಜನಬಲವೆ? ಕಳೆದ ಇಪ್ಪತ್ತೊಂದು ವರ್ಷಗಳಿಂದ ನಾನೊಂದು ಸಿನಿಮಾ ನೋಡಲಿಲ್ಲ. ಸಿಗರೇಟ್ ಸೇದಲಿಲ್ಲ. ಸಾರಾಯಿ ಕುಡಿಯಲಿಲ್ಲ. ಮೂರು ಹೊತ್ತೂ ಕೆಲಸ ಮಾಡಿದೆ. ನನಗದರಿಂದ ಸಿಕ್ಕಿದ್ದಾದರೂ ಏನು? ಸಾಕಿನ್ನು. ಇವತ್ತು ಎಲ್ಲ ಬಂಧನಗಳನ್ನು ಕಡಿದುಕೊಳ್ಳಬೇಕೆಂದಿದ್ದೇನೆ"

ಅದೇ ಹೊತ್ತಿಗೆ ಕಾಮತರಿಗೆ `ಅವನು' ಕಾಣಿಸಿದ. ಬದುಕಿನ ಹೊಸ ಸತ್ಯವೊಂದರ ಹೊಳಹು ಕಾಣಿಸಿದ `ಅವನ' ಕುರಿತು ಕಾಮತರ ಮಾತುಗಳನ್ನೇ ಓದಿ:

"ಜವಾನ ತಂದಿಟ್ಟ ಎಳನೀರನ್ನು ಕುಡಿಯುತ್ತ, ಕಿಟಕಿಯ ಎದುರು ಬಂದು ನಿಂತೆ. ಅತ್ತಿತ್ತ ಕಣ್ಣು ಹಾಯಿಸಿದಾಗ ಒಂದು ಕಡೆ ಮರೀನ್ ಡ್ರೈವ್ ಕಾಣಿಸುತ್ತಿತ್ತು. ಸೂರ್ಯ ಮುಳುಗುವ ಸನ್ನಾಹದಲ್ಲಿದ್ದ. ಮತ್ತೊಂದು ಕಡೆ ನನಗೆ `ಅವನು' ಕಾಣಿಸಿದ."

ಯೂಕೋ ಬ್ಯಾಂಇನ ಅತಿ ಎತ್ತರವಾದ ಕಟ್ಟಡದ ಇಪ್ಪತ್ತ್ಮೂರನೆಯ ಮಾಳಿಗೆಗೆ ಆತ ಹೊರಗಿನಿಂದ ಬಣ್ಣ ಹಚ್ಚುತ್ತಿದ್ದ, ಕಟ್ಟಡದ ಹೊರಗಿನಿಂದ ತೂಗುಬಿಡಲಾಗಿದ್ದ ನೂಲೇಣಿಯೊಂದರಲ್ಲಿ ಯಾವ ಆಧಾರವೂ ಇಲ್ಲದೇ ನಿಂತು ಅತ್ಯಂತ ತಾದ್ಯಾತ್ಮದಿಂದ ಬಣ್ಣ ಬಳಿಯುತ್ತಿದ್ದ. ಸಾವು ಅವನ ಹೆಗಲ ಮೇಲೇ ಕೂತಂತಿತ್ತು. ಆದರೂ ಕಾಯಕದಲ್ಲಿ ಇಂಥ ಶ್ರದ್ಧೆ ಯಾರಿಗಾಗಿ? ಯಾಕಾಗಿ? ಕೇವಲ ತನಗಾಗಿಯೆ? ತನ್ನನ್ನೇ ನಂಬಿಕೊಂಡಿರುವ ಇನ್ನೂ ಕೆಲವು ಹೊಟ್ಟೆಗಳಿಗಾಗಿಯೆ.....?

ಇಷ್ಟೆಲ್ಲ ಹೇಳಲು ಕಾರಣವಿದೆ. ಕಾಮತರ ಪುಸ್ತಕ ಯಾವ ರೀತಿಯಿಂದ ನೋಡಿದರೂ ನಿಮ್ಮನ್ನು ಯಶಸ್ಸಿನ ಶಿಖರಕ್ಕೊಯ್ಯುವ ಭರವಸೆ ನೀಡುವ ಪುಸ್ತಕವಲ್ಲ. ಇಲ್ಲಿರುವುದು ಕಾಮತರ ಸಾಹಸಗಾಥೆಯ ಕಥನ. ಖಂಡಿತವಾಗಿಯೂ ಇದು ಒಂದು ಜೀವನಗಾಥೆ ಎಂದೇ ಓದಬೇಕಾದ ಪುಸ್ತಕ. ಆದರೆ ಅದು ಯಶಸ್ಸಿನ ಕೆಲವಾದರೂ ಸೂತ್ರಗಳನ್ನು ಕಾಣಿಸಿದರೆ ಕಾಮತರು ಸಾರ್ಥಕತೆಯನ್ನು ಕಂಡುಕೊಳ್ಳುತ್ತಾರೆ. ಯಾಕೆಂದರೆ, ಪುಸ್ತಕದ ಆರಂಭದಲ್ಲೇ ಅವರೊಂದು ಮಾತನ್ನು ಹೇಳಿದ್ದಾರೆ:

ಮಾಡಬೇಕೆಂಬುದನ್ನು ಮಾಡಿದ್ದಾದ ಮೇಲೆಯೂ
ಮುಗಿಸಬೇಕೆಂದುಕೊಂಡಿದ್ದನ್ನು ಮುಗಿಸಿದ ನಂತರವೂ
ನೀವು ಮತ್ತೆ ಮುಂದುವರಿಯುತ್ತಲೇ ಇರಬಯಸುವುದಾದರೆ
ಓದಬಹುದಾದಂಥದ್ದನ್ನು ಬರೆಯಿರಿ
ಇಲ್ಲವೆ
ಬರೆಯಬಹುದಾದಂಥದನ್ನು ಮಾಡಿರಿ

ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ
ವಿಠ್ಠಲ ವೆಂಕಟೇಶ ಕಾಮತ್
ಕನ್ನಡಕ್ಕೆ : ಅಕ್ಷತಾ ದೇಶಪಾಂಡೆ
ಸಾಹಿತ್ಯ ಪ್ರಕಾಶನ
ಕೊಪ್ಪೀಕರ್ ಬೀದಿ
ಹುಬ್ಬಳ್ಳಿ - ೫೮೦ ೦೨೦
ಪುಟಗಳು 200, ಬೆಲೆ ನೂರು ರೂಪಾಯಿ.

No comments: