Monday, March 23, 2009

ಉತ್ತರ ಧ್ರುವದಿಂ...ದಕ್ಷಿಣ ಧ್ರುವಕೂ...

ನೀವು ಯಾವತ್ತಾದರೂ ಕವಿತೆ ಬರೆದಿದ್ದಿರಾ ಎಂಬ ಒಂದು ಪ್ರಶ್ನೆಗೆ ಉತ್ತರಿಸುತ್ತ ಪಮುಕ್ ಹೇಳುತ್ತಾನೆ, "ಈ ಪ್ರಶ್ನೆಯನ್ನು ನನಗೆ ಆಗಾಗ ಕೇಳಲಾಗುತ್ತದೆ. ಬರೆದಿದ್ದೆ, ನನ್ನ ಹತ್ತೊಂಭತ್ತರಲ್ಲಿ ತುರ್ಕಿಯಲ್ಲಿ ಕೆಲವು ಪದ್ಯಗಳನ್ನು ಬರೆದು ಪ್ರಕಟಿಸಿದ್ದೆ. ಆದರೆ ಮುಂದೆ ಬಿಟ್ಟುಬಿಟ್ಟೆ. ನನ್ನ ಸಮಜಾಯಿಶಿ ಇದು; ಒಬ್ಬ ಕವಿ ಎಂದರೆ, ದೇವರು ಮಾತನಾಡಲು ಆರಿಸಿಕೊಂಡ ವಿಶೇಷ ವ್ಯಕ್ತಿ ಎಂಬುದು ನನಗೆ ಅರಿವಾಯಿತು. ಕವಿತೆಯೊಂದಿಗೆ ನಿಮಗೆ ಅಂಥಾ ತಾದ್ಯಾತ್ಮ ಇರಬೇಕಾಗುತ್ತದೆ. ನಾನು ಕವಿತೆ ಬರೆಯಲು ಪ್ರಯತ್ನಿಸಿದೆನಾದರೂ ದೇವರು ನನ್ನ ಜೊತೆ ಮಾತನಾಡ್ತಾ ಇಲ್ಲ ಅನ್ನೋದು ಸ್ವಲ್ಪ ಸಮಯದಲ್ಲೇ ನನಗೆ ಗೊತ್ತಾಯಿತು. ಬೇಸರವಾಯಿತಾದರೂ ನಾನು ಒಂದು ವೇಳೆ ದೇವರು ನನ್ನ ಜೊತೆ ಮಾತನಾಡ್ತಿದ್ದರೆ ಅವನು ಏನೆಲ್ಲ ಹೇಳುತ್ತಿದ್ದಿರಬಹುದು ಅನ್ನೋದನ್ನ ಕಲ್ಪಿಸತೊಡಗಿದೆ. ತುಂಬ ನಿಧಾನವಾಗಿ, ತುಂಬ ತಾದ್ಯಾತ್ಮದಿಂದ ನಾನು ಈ ಕಲ್ಪನೆಯನ್ನು ಬರವಣಿಗೆಯಲ್ಲಿ ಕೆತ್ತತೊಡಗಿದೆ. ...."

ಪ್ರಸೂನ್ ಜೋಶಿ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ಮತ್ತೊಮ್ಮೆ ಆ ಮಾತುಗಳನ್ನು ಮೆಲುಕು ಹಾಕಬಹುದು.

"ಜನಕ್ಕೆ ಹೇಳದೇ ಉಳಿದಿರುವುದರ ಜೊತೆ ಹೆಚ್ಚು ನಂಟು. ಹಾಡೊಂದನ್ನು ಬರೆಯುವಾಗ ನೀವು ಒಂದು ವೃತ್ತವನ್ನು ಪೂರ್ಣಗೊಳಿಸುತ್ತೀರಿ, ನಿಮಗೆ ಹೇಳಬೇಕಿರುವ ಎಲ್ಲವನ್ನೂ ಹೇಳುತ್ತೀರಿ. ಆದರೆ ಸೃಜನಶೀಲತೆಯ ಹೆಚ್ಚುಗಾರಿಕೆ ಎಂದರೆ ನೀವು ಬರೇ ಚುಕ್ಕಿಯನ್ನಿಟ್ಟಾಗಲೂ ಜನ ವೃತ್ತವನ್ನು ನೋಡುವುದು ಸಾಧ್ಯವಾಗಬೇಕು. ಕೇಳುಗರೂ ಭಾಗವಹಿಸುವುದಕ್ಕೆ ನೀವು ಬಿಟ್ಟಾಗ ಅವರು ಆ ಕಲ್ಪನೆಯನ್ನು ಪೂರ್ತಿಗೊಳಿಸುತ್ತಾರೆ." (ಹೇಳಿರುವುದರ ಮೂಲಕ ಹೇಳದೇ ಇರುವುದನ್ನೂ ಕಾಣಿಸುವುದು ಕಾವ್ಯ - ಜಯಂತ ಕಾಯ್ಕಿಣಿ).

"ಕೆಲವೊಮ್ಮೆ ಒಂದು ಶಬ್ದ ಪೇಪರ್ ವ್ಹೈಟ್ ಇದ್ದ ಹಾಗೆ. ಅದನ್ನು ತೆಗೆದುಬಿಟ್ಟರೆ ಎಲ್ಲವೂ ಹಾರಿ ಹೋಗುತ್ತದೆ!"

"ಗದ್ಯ ಆಲಸಿಗಳಿಗೆ. ಕಾವ್ಯ ಯಾರಿಗೆಂದರೆ ಸಮೃದ್ಧ ಪ್ರತಿಮಾಲೋಕವುಳ್ಳವರಿಗೆ. ಅದು ಬಫೆ ಇದ್ದ ಹಾಗೆ. ನೀವೇ ಹುಡುಕಿಕೊಳ್ಳಬೇಕು. ಯಾರೂ ನಿಮ್ಮ ತಟ್ಟೆಗೇ, ನಿಮಗೆ ಬೇಕಾದ್ದನ್ನೇ ತಂದು ಬಡಿಸುವವರಿಲ್ಲ ಅಲ್ಲಿ. ನೋವೆಂದರೆ ಕಾವ್ಯವನ್ನು ಆಸ್ವಾದಿಸುವ ಸಂವೇದನೆಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ."

ಯಾಕೆ ಕಾವ್ಯ, ಕವನ, ಕವಿತೆ ಎಂದೆಲ್ಲ ಮಾತನಾಡುತ್ತಿದ್ದೇನೆಂದು ಹೇಳುತ್ತೇನೆ. ನಿನ್ನೆ ಜಯಂತ ಕಾಯ್ಕಿಣಿಯವರ ಒಂದು ಹೊಸ ಕತೆಯನ್ನು ಓದಿದೆ. ಅಭಂಗ, ಅಭಿಸಾರ ಎಂದು ಹೆಸರು. ಈ ಬಾರಿಯ ಸುಧಾ ಯುಗಾದಿ ವಿಶೇಷಾಂಕದಲ್ಲಿದೆ. ಕತೆಯನ್ನು ಓದಲು ಆರಂಭಿಸಿದಾಗ ಜಯಂತ ಈ ಅಭಂಗ, ಅಭಿಸಾರ ಎಂಬೆಲ್ಲ ಮುದ್ದಾದ ಆದರೆ ಅಸಂಗತ ಹೆಸರುಗಳಿಂದ ಸಮ್ಮೋಹನಕ್ಕೆ ಸೆಳೆಯದಂತೆ ಎಚ್ಚರಿರುತ್ತ, ಸಿಂಧದುರ್ಗದ ಶಾಲೆಯಲ್ಲಿ ಬರೇ ಎರಡು ವರ್ಷ ಒಟ್ಟಿಗೆ ಕಲಿತದ್ದೇ ಯೌವನವೆಲ್ಲ ಕನವರಿಸುವಂಥ ಒಂದು ಗಾಢ ಭಾವಕ್ಕೆ ಕಾರಣವಾದೀತೆ ಎಂಬ ಅನುಮಾನಕ್ಕೆ ಒಬ್ಬ ದುಶ್ಮನ್ನನ ಭಂಗಿಯಲ್ಲಿ ಪುಷ್ಟಿಕೊಡುತ್ತ ಇದ್ದೆ. ನಡುನಡುವೆ ಬೇಂದ್ರೆಯವರ `ಭೂರಂಗಕೆ... ಅಭಿಸಾರಕೆ ಕರೆಯುತ ತಿಂಗಳು ತಿಂಗಳು ನವೆಯುತಿದೆ| ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ| ಕೋಟಿ ಕೋಟಿ ಸಲ ಹೊಸಯಿಸಿತು' ಮುಂತಾದ ಸಾಲುಗಳೆಲ್ಲ (ಅದೊಂದು ಜನಪ್ರಿಯ ಸಿನಿಮಾ ಹಾಡು ಆಗಿ ಮನಸ್ಸಲ್ಲಿ ನಿಂತಿರುವುದರಿಂದ ಎನ್ನಿ) ನೆನಪಾಗುತ್ತಿದ್ದವು. ಕತೆ ಓದಿ ಮುಗಿಸಿದಾಗ ಪೂರ್ತಿ ತಣ್ಣಗಾಗಿದ್ದೆ.

ಆದರೆ, ಈ ಕತೆಯಲ್ಲಿ ಕಥಾನಕವೇ ಇರಲಿಲ್ಲ. ಇದು ಕತೆಯೇ ಅಲ್ಲ. ಇಟ್ಸ್ ಜಸ್ಟ್ ಎ ಪೋಯೆಟ್ರಿ, ಜಸ್ಟ್ ದಟ್.

ಒಂದು ಕಾಲಕ್ಕೆ ಕವನ-ಕಾವ್ಯ ಕೂಡ ಕಥಾನಕವನ್ನೇ ನೆಚ್ಚಿಕೊಂಡು ಬರುತ್ತಿದ್ದವು. ಆದರೆ ಇವತ್ತು ಹಾಗಿಲ್ಲ. ಕಥೆ ಕೂಡ ಕವನದಂತಿರುತ್ತದೆ. ಇವತ್ತು ಒಂದು ಒಳ್ಳೆಯ ಕವನ ಓದಿದರೆ ಅದರ ಬಗ್ಗೆ ಏನೂ ಹೇಳದೆ ಸುಮ್ಮನಿರುವುದು ಅತ್ಯಂತ ಸುಖದ ಅನುಭವ ಅನಿಸುತ್ತದೆ. ಯಾಕೆಂದರೆ, ಒಂದು ಒಳ್ಳೆಯ ಕವನ ಹುಟ್ಟಿಸುವ ಅನುಭಾವ ಶಬ್ದಕ್ಕೆ ಮೀರಿದ್ದು, ವಿವರಿಸಲು ಸಾಧ್ಯವಿಲ್ಲದ್ದು. ಅದನ್ನು `ವಿಮರ್ಶಕ ಹಠ'ದಿಂದ ಶಬ್ದಸೂತಕಕ್ಕೆ ಒಳಪಡಿಸುವ ನೀಚತನ ನಾನ್ಯಾಕೆ ಮಾಡಲಿ ಅನಿಸುತ್ತದೆ. ಕತೆಯನ್ನು ಓದಿ ಮುಗಿಸಿ ಸುಮ್ಮನೇ ಕಿಟಕಿಯಾಚೆ ನೋಡುತ್ತ ಕೂತರೆ ಮಂಜಾಗುತ್ತಿದ್ದ ಕಣ್ಣುಗಳಲ್ಲಿ ಮೂಡಿದ್ದು ಪ್ಯಾಂಕೀಸ.

ಅವನು ಬಹುಷಃ ಫ್ರಾನ್ಸಿಸ್ ಇರಬೇಕು. ತೀರ ಎಳವೆಯಲ್ಲಿ, ನನಗಿನ್ನೂ ಐದು ವರ್ಷ ಕೂಡ ಆಗಿರಲಿಲ್ಲ, ಆ ವಯಸ್ಸಿನಲ್ಲಿ ಒಂದೋ ಎರಡೋ ವರ್ಷದ ಸಖ್ಯ ಅವನ ಜೊತೆ. ಫ್ರಾನ್ಸಿಸ್ ಅನ್ನಲು ನನಗೆ ಬರುತ್ತಲೇ ಇರಲಿಲ್ಲ ಆಗ. ಹಾಗಾಗಿ ಅವನು ಪ್ಯಾಂಕೀಸನಾಗಿಯೇ ನೆನಪಲ್ಲಿ ನಿಂತಿದ್ದಾನೆ. ತಂಟೆ ಹೆಚ್ಚು ಎಂದೋ, ಕಾಯುವುದಕ್ಕೆ ಯಾರೂ ಇರಲಿಲ್ಲವೆಂದೋ ನನ್ನ ಕಾಲನ್ನು ಸರವಳಿ ಕಂಡಿ(ಕಿಟಕಿ)ಗೆ ಕಟ್ಟಿದ ಒಂದು ಬಟ್ಟೆಯ ಹಗ್ಗಕ್ಕೆ ಕಟ್ಟಿ ಹಾಕಿರುತ್ತಿದ್ದರು, ಮಂಗನನ್ನು ಕಟ್ಟುವ ಹಾಗೆ. ಶಾಲೆಗೆ ಇನ್ನೂ ಸೇರಿಸಿರಲಿಲ್ಲ. ನಮ್ಮ ಮನೆಗೂ ಪ್ಯಾಂಕೀಸನ ಮನೆಗೂ ನಡುವೆ ಜನಸಂಚಾರವಿಲ್ಲದ ಒಂದು ಅಗಲವಾದ ಓಣಿಯಿತ್ತು. ಒಣ ದರಲೆಗಳು ತುಂಬಿಕೊಂಡು ಅದರಲ್ಲಿ ಏನೇನೋ ಸರಿಯುವ ಸದ್ದು ಸದಾ ಚಲಿಸುತ್ತಿರುತ್ತಿತ್ತು. ಅಲ್ಲಿ ದರೆಯ ಮೇಲೆ ನಾನಾ ಬಗೆಯ ಹೂವು, ಕಾಯಿ, ಹಕ್ಕಿ, ದುಂಬಿ, ಓತಿಕ್ಯಾತ, ಹಾವುಗಳೆಲ್ಲ ಇದ್ದವು. ನನಗೆ ಈಗಲೂ ಕೆ ಎಸ್ ನರಸಿಂಹಸ್ವಾಮಿಯವರ `ಬೇಲಿಯಲಿ ಹಾವೂ ಹರಿದಂತೆ...' ಸಾಲು ಕೇಳುವಾಗ ಮನಸ್ಸಿನಲ್ಲಿ ಮೂಡುವ ಬೇಲಿ ಅದೇ! ಪೆನ್ನಿಗೆ ಹಾಕುವ ಶಾಯಿ ಮಾಡುವ ಕಾಯಿ ಕೂಡ ಅದರಲ್ಲಿ ಇತ್ತಂತೆ. ಈ ಓಣಿಯ ಆಚೆ ಪ್ಯಾಂಕೀಸನ ಮನೆಯ ಮಣ್ಣಿನ ದರೆ. ಅವನು ನನಗಿಂತ ಒಂದೆರಡು ವರ್ಷವಾದರೂ ದೊಡ್ಡವನು ಅಂತ ಈಗ ಅನಿಸುತ್ತಿದೆ. ಅವನ ತಂಗಿ ಗ್ಲ್ಯಾಡಿ ನನ್ನ ವಯಸ್ಸಿನವಳಿರಬೇಕು. ಅವಳ ತೆಳ್ಳಗಿನ ತುಟಿಯೊಳಗಿನ ಪುಟ್ಟ ಪುಟ್ಟ ಹಲ್ಲುಗಳು ಈಗಲೂ ನಗು ಚೆಲ್ಲುತ್ತಿವೆ ಮನದಲ್ಲಿ. ಈ ಪ್ಯಾಂಕೀಸ ಸ್ವಲ್ಪ ಮುಂದೆ ಬಂದಿದ್ದ ಹೊಟ್ಟೆಯನ್ನು ಬೆತ್ತಲೆ ಬಿಟ್ಟುಕೊಂಡು ಒಂದು ಚಡ್ಡಿಯಲ್ಲಿ ಬಂದು ನಿಲ್ಲುತ್ತಿದ್ದ, ನನ್ನೊಂದಿಗೆ ಮಾತಿಗೆ. ಅದೇನು ಮಾತನಾಡಿದೆವೋ, ಎಷ್ಟು ಆಡಿದೆವೋ ಆ ದೇವರೇ ಬಲ್ಲ. ನಾವೆಲ್ಲ ಒಟ್ಟಿಗೇ ಅಮಟೆ ಕಾಯಿ ಮರದ ಎಲೆಯನ್ನು, ಅದರಲ್ಲಿ ಎಲೆ ಹಾವಿರುತ್ತದೆ ಎಂಬ ಭಯದೊಂದಿಗೇ, ಮಡಚಿ ಮಡಚಿ ತಿನ್ನುತ್ತಿದ್ದುದು ನೆನಪಿದೆ. ಬಿಮಲಿ ಕಾಯಿ ಹೆಕ್ಕುತ್ತಿದ್ದ, ಹಂಚಿಕೊಳ್ಳುತ್ತಿದ್ದ ನೆನಪಿದೆ. ನನಗೆ ಎಂಟು ವರ್ಷವಾಗುವುದಕ್ಕೂ ಮೊದಲೇ ನಾವು ಆ ಊರು ಬಿಟ್ಟು ಹೊರಟಾಗ ತುಂಬ ಕಾಡಿದ ವಿರಹ ಇವನದ್ದೇ ಆಗಿತ್ತು ಎನ್ನುವುದು ಕೂಡ ಈಗಲೂ ನೆನಪಿದೆ. ರಸ್ತೆ ಬದಿಯ ಹಲಸಿನ ಮರದ ಕೆಳಗೆ, ಹತ್ತೂವರೆಯ ಅಸಹ್ಯ ಸೆಖೆಯ ಬಿಸಿಲಿನಲ್ಲಿ ನಮ್ಮ ಮನೆಯ ಸಾಮಾನೆಲ್ಲ ಹೇಗೆ ಹೇಗೋ ಕಟ್ಟಿಸಿಕೊಂಡು ಅಸ್ತವ್ಯಸ್ತ ಬಿದ್ದಿರುತ್ತ ಮರದ ನೆರಳಲ್ಲಿ ಅವನು ಏನೋ ಚಡಪಡಿಕೆಯಲ್ಲಿ ಅಲ್ಲಿಂದಿಲ್ಲಿಗೆ ಸುತ್ತುತ್ತ ಅವನಷ್ಟಕ್ಕೇ ಅವನು, ಆಗಾಗ ಸಿಗ್ತಾ ಇರ್ತೇವೆ, ಅಲ್ಲ, ಅಷ್ಟೇನೂ ದೂರ ಅಲ್ಲ, ಅಲ್ಲ? ಎನ್ನುತ್ತಿದ್ದುದು ಈಗಲೂ ನೆನಪಿದೆ. ಆದರೆ ನಾವು ಎಂದೂ, ಎಂದೂ ಎಂದರೆ ಎಂದೂ ಮತ್ತೆ ಭೇಟಿಯಾಗಲಿಲ್ಲ. ಆದರೆ ಹಾಗೆಂದರೆ ಅದು ನಿಜವೆ?

ತುಂಬ ಹಿಂದೆ, ಅವಳ ಮದುವೆಯಾದ ಹೊಸದರಲ್ಲಿ, ಗ್ಲ್ಯಾಡಿ ನಮ್ಮ ಮನೆ ಹುಡುಕಿಕೊಂಡು ಬಂದಿದ್ದಳು. ಬಾಲ್ಯದಲ್ಲಿ ಬಳ್ಳಿಯ ಹಾಗೆ ಚೂಟಿಯಾಗಿದ್ದ ಗ್ಲ್ಯಾಡಿ ದಪ್ಪಗಾಗಿ ಬಿಟ್ಟಿದ್ದಳು. ಕಪ್ಪಾಗಿದ್ದಳು. ಒಂದು ಬಗೆಯ ಸುಸ್ತು, ಅನುಭವ-ತಾಪತ್ರಯಗಳ ಭಾರ ತರುವ ಸುಸ್ತು, ಅವಳಲ್ಲಿ ಆಗಲೇ ಬಂದು ಬಿಟ್ಟಿತ್ತು. ಆದರೆ ಅದೇ ತೆಳ್ಳಗಿನ ತುಟಿಯೊಳಗಿನ ಪುಟ್ಟ ಪುಟ್ಟ ಹಲ್ಲುಗಳ ನಗು ಮಾತ್ರ ಹಾಗೆಯೇ ಇತ್ತು. ಎಲ್ಲಿ ನೋಡಿದರೂ ಅವಳನ್ನು ನಾನು ಗ್ಲ್ಯಾಡಿ ಎಂದು ಗುರುತಿಸುತ್ತಿದ್ದೆ, ಹೌದು, ಅವಳಲ್ಲದವರು ಹಾಗೆ ನಕ್ಕರೂ ಗ್ಲ್ಯಾಡಿಯನ್ನೇ ನೆನೆಯುತ್ತಿದ್ದೆ!

ಪ್ಯಾಂಕೀಸ ನನ್ನ ಬಾಲ್ಯದ ಪುಟ್ಟ ಕವನದಂಥ ಒಬ್ಬ ಗೆಳೆಯ. ಆನಂತರದ ದಿನಗಳಲ್ಲಿ ವಿಪರೀತ ಹೊರೆಯಾಗಿ ಬಿಟ್ಟ ಈ ಬದುಕಿನಲ್ಲಿ ಆ ಗೆಳೆತನಕ್ಕೆ ಅಂಥ ಮಹತ್ವವೇನಿಲ್ಲ, ನಿಜ. ಆದರೂ ಎಲ್ಲರಿಗೂ ಇಂಥ ಒಂದು ತುಂಡು ನೆನಪು ಇದ್ದೇ ಇರುತ್ತದೆ. ಇದು ದಿನವೂ ಆಗುವ, ಕಾಡುವ ನೆನಪೇನಲ್ಲ ಮತ್ತೆ. ಆದರೆ ನಾನು ಇವನನ್ನು ನೆನೆಯುವುದು ಬಹಳ ಮುಖ್ಯ. ಮುಖ್ಯ ಯಾಕೆಂದರೆ, ಅದು ನನ್ನ ಜೀವಕ್ಕೆ ಒಳ್ಳೇದು ಅಂತ, ಅಷ್ಟೆ.

ಮತ್ತೆ ಹಾಗೆ ನೆನೆಯಬೇಕಾದ್ದು ತುಂಬ ಇದೆ. ತುಂಬ ಮಂದಿ ಇದ್ದಾರೆ. ಇನ್ನೆಂದೂ ನಾವು ಈ ದುಂಡಗಿನ ಬದುಕಿನಲ್ಲಿ ಅವರನ್ನು ನೋಡದೆಯೇ ಇರಬಹುದು. ನೋಡುವ ಮೊದಲೇ ನಾವು ಸಾಯಬಹುದು....
ಈಗಾಗಲೇ ಅವರು ಸತ್ತಿರಬಹುದು, ನಮಗೆ ಒಂದು ಮಾತೂ ತಿಳಿಸದೇ...
ನನ್ನನ್ನು ನೋಡಬೇಕೆಂದು ಅವರಿಗೆ ಅನಿಸುತ್ತಿರುವಾಗಲೇ ಎಲ್ಲವೂ, ಎಲ್ಲವೂ ಮುಗಿದು ಹೋಗಬಹುದು.
ಆದರೂ ಸಂಜೆ ಹೊತ್ತು ಹೀಗೆ ಕೂತು ಅವರನ್ನೆಲ್ಲ ಒಮ್ಮೊಮ್ಮೆ, ಅಪರೂಪಕ್ಕಾದರೂ ನೆನೆಯುವುದು ಒಳ್ಳೆಯದು. ಅದು ನಮ್ಮೊಳಗಿನ ಏನನ್ನೋ ಮತ್ತೆ ಜೀವಂತಗೊಳಿಸುವಂತಿರುತ್ತದೆ. ಅದು ಜೀವಕ್ಕೂ ಒಳ್ಳೆಯದು.

ಮೊನ್ನೆ ಮೊನ್ನೆ ಒಂದು ಪತ್ರ ಬಂತು, ಅಂಚೆಯಲ್ಲಿ. ಈಗ ಅಂಚೆಯ ಕವರು ಹೇಗಿದೆ ಎಂಬುದು ಸಹ ನನಗೆ ಗೊತ್ತಿರಲಿಲ್ಲ. ಖುಶಿಯಾಯಿತು. ಒಡೆದು ಓದಿದೆ.

"ನೀವು ಸಿಮ್ ಬದಲಿಸಿದ್ದೀರಿ ಅಲ್ವ? ನಾನೂ ಬದಲಿಸಿದ್ದೇನೆ. ತಗೊಳ್ಳಿ ನನ್ನ ನಂಬರು. ನನಗೆ ಕಾಲ್ ಮಾಡ್ತೀರಿ ಅಲ್ವ?"
ಸಂಜೆ ಫೋನ್ ಮಾಡಿದೆ.
"ಎಲ್ಲಿ ಕಾಂಟಾಕ್ಟೇ ತಪ್ಪಿ ಹೋಗುತ್ತೋ ಅಂತ ಹೆದರಿಕೆಯಾಗಿ ಬಿಟ್ಟಿತ್ತು!"

ಅಮಿತಾವ ಘೋಷ್ ಬರೆದ ಶಾಡೊ ಲೈನ್ಸ್ ಕಾದಂಬರಿಯನ್ನು ಬಹುತೇಕ ಎಲ್ಲರೂ ಓದಿಯೇ ಇರುತ್ತಾರೆ. ಅಷ್ಟು ಜನಪ್ರಿಯ ಅದು, 1989ರ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಕೃತಿ. ಅಲ್ಲಿ ನಿರೂಪಕ ತನ್ನ ಬಾಲ್ಯಕಾಲದ ಗೆಳತಿ ಇಳಾ ಜೊತೆ ಮಾತನಾಡುತ್ತ ಒಂದು ವಿಲಕ್ಷಣ ವಿದ್ಯಮಾನವನ್ನು ಗುರುತಿಸುತ್ತಾನೆ. ನಿರೂಪಕನಿಗೆ ತಮ್ಮಿಬ್ಬರ ಬಾಲ್ಯದ ಒಂದೊಂದು ಪುಟ್ಟ ಘಟನೆಯೂ, ತಾವೆಲ್ಲ ಜೊತೆಜೊತೆಯಾಗಿ ಓಡಾಡಿದ್ದು, ಆಡಿದ್ದು, ಕಿಚಾಯಿಸಿದ್ದು, ಎಲ್ಲವೂ ನೆನಪಿದೆ. ಇಳಾಳ ಅಣ್ಣ ತ್ರಿದಿಬ್ ಬೇರೆ ಬೇರೆ ಖಂಡ ಉಪಖಂಡಗಳ ಬಗ್ಗೆ ಕತೆಕಟ್ಟಿ ಹೇಳಿದ್ದು, ವಿವರಿಸಿದ್ದು ಎಲ್ಲ ನೆನಪಿದೆ. ಆದರೆ ಇಳಾಗೆ ಅವು ಯಾವುದೂ ಮುಖ್ಯ ಅನಿಸುತ್ತಿಲ್ಲ, ಅವಳ ನೆನಪೂ ಅಷ್ಟು ಗಾಢವಾಗಿಲ್ಲ. ಅವಳ ಪ್ರಶ್ನೆ, ಅದು ಹೇಗೆ ನೀನು ಅದನ್ನೆಲ್ಲ ಮರೆಯದೇ ಇದ್ದೀ ಎಂದಾದರೆ ಅವನ ಪ್ರಶ್ನೆ, ಅದು ಹೇಗೆ ನೀನು ಅದನ್ನೆಲ್ಲ ಮರೆಯುವುದು ಸಾಧ್ಯವಾಯಿತು ಎನ್ನುವುದು!

ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೆ ಯಾವ ಗಾಳಿಯೂ ಬೀಸುತ್ತಿಲ್ಲ. ವೈಜ್ಞಾನಿಕವಾಗಿ ಹಾಗೆ ಬೀಸುವುದು ಸಾಧ್ಯವೇ ಇಲ್ಲ. ಇನ್ನು ಸೂರ್ಯನ ಬಿಂಬಕೆ ಚಂದ್ರನ ಬಿಂಬ ರಂಭಿಸುವುದೋ ನಗೆಯಲ್ಲೇ ಮೀಸುವುದೋ ಹೇಗೆ ಸಾಧ್ಯ? ಎಲ್ಲ ಸುಳ್ಳು. ಆದರೆ ಒಂದು ಕಲ್ಪನೆ ನಮ್ಮ ಮನದೊಳಗೇ ಚಿಗುರೊಡೆಯುತ್ತದೆ. ನಾನು ಪ್ಯಾಂಕೀಸನನ್ನು ಭೆಟ್ಟಿಯಾಗುತ್ತೇನೆ. ಏನೋ ಮಾತನಾಡಿದಂತೆ ನಸುನಗುತ್ತೇನೆ. ಅವನೂ ತನ್ನ ಬೋಳು ಹೊಟ್ಟೆಯ ಮೇಲೆ ಕೈಯಾಡಿಸಿ ಏನೋ ಹೇಳುತ್ತಾನೆ, ನಗುತ್ತಾನೆ. ಆದರೂ ನನಗೆ ಗೊತ್ತು, ನಾವೆಂದೂ ಭೇಟಿಯಾಗುವುದು ಸಾಧ್ಯವೇ ಇಲ್ಲ ಎನ್ನುವುದು.

ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು

ಇಲ್ಲ, ಅಕ್ಷಿ ನಿಮೀಲನವಿಲ್ಲ. ಗಗನದಿ ನಕ್ಷತ್ರದ ಗಣ ಹಾರದೇ ಹಾಗೇ ಸ್ತಬ್ಧವಾಗಿ ನಿಂತಿದೆ.

ಬಿದಿಗೆಯ ಬಿಂಬಾಧರದಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ.

ಆದರೂ ಸೂರ್ಯನಿಗೂ ಚಂದ್ರನಿಗೂ ಇರುವ `ಅನಂತ ಪ್ರಣಯ'ದ ಸಂಬಂಧ ಸುಳ್ಳೆಂದು ಮನಸ್ಸು ಒಪ್ಪುವುದಿಲ್ಲ. ಉತ್ತರ ಧ್ರುವಕ್ಕೂ ದಕ್ಷಿಣ ಧ್ರುವಕ್ಕೂ ಇರುವ ಚುಂಬಕ ಶಕ್ತಿಯು ಸುಳ್ಳಲ್ಲ ಎಂಬುದು ನಮಗೆ ಅರ್ಥವಾಗುತ್ತದೆ. ಆದರೂ ಸಂಬಂಧ ಎದ್ದು ಕಾಣುವುದಿಲ, ಮಿಲನದ ಚಿಹ್ನವು ತೋರುವುದಿಲ್ಲ.

ಹೌದು, ತೋರುತ್ತಿಲ್ಲ. ಜಯಂತರ ಕತೆಯಲ್ಲೂ ಅಭಂಗನ ಅಭಿಸಾರ ಸೇರುವುದಿಲ್ಲ, ಸೂರ್ಯ ಚಂದ್ರರಂತೆಯೇ. ಆದರೆ ಸಂಬಂಧ ಇದೆ, ಅದರ ಅನುಭೂತಿ ಇಬ್ಬರಲ್ಲೂ ಇದೆ. ಮದುವೆ ಮಂಟಪದಲ್ಲಿ ಮದುಮಗನಾಗಿ ನಿಂತ ಅಭಿಸಾರ ಇದ್ದಕ್ಕಿದ್ದಂತೆ ತನ್ನನ್ನೇ ತಾನು ಮರೆತವನಂತೆ ಚೆಲ್ಲಾಪಿಲ್ಲಿಯಾಗಿ ಹಾರಿಹೋದ, ಪಣಜಿಯ ಹಳೇ ಕಾರೇರ್ ಬಸ್ಸುಗಳಲ್ಲಿ ಪಯಣಿಸಿ ಕಲೆ ಹಾಕಿಕೊಂಡಿದ್ದ ಬಣ್ಣಬಣ್ಣದ ತಿಕೇಟುಗಳನ್ನು ಅವರಿವರ ಕಾಲ ನಡುವಿಂದ, ಕಾರ್ಪೆಟ್ಟಿನ ತಾಟಿನಿಂದ ಹೆಕ್ಕತೊಡಗಿದಂತೆ ಯಾರೋ ಒಬ್ಬರು 'ಫ್ಯಾನ್ ನಿಲ್ಲಿಸೀ' ಎನ್ನುತ್ತಾರಲ್ಲ, ಅವರಿಗೆ ಮಾತ್ರ ಇದು ಬಹುಷಃ ಗೊತ್ತಿದೆ.

ಹಾಗಾಗಿಯೇ ಅಭಿಸಾರ ಪಣಜಿಗೆ ಹೋಗುತ್ತಾನೆ. ಅಲ್ಲಿ ಅಭಂಗ ಭೆಟ್ಟಿಯಾಗಬಹುದು ಅಂತೇನೂ ಅಲ್ಲ. ಅಭಂಗನ ನೆರಳು ಬಿದ್ದಿರಬಹುದಾದ ಪಣಜಿಯ ನೆಲದಲ್ಲಿ ನಿಂತರೆ, ನಿಂತು ಖಾಲಿ ಬೀದಿಯನ್ನು, ಮಾಂಡೋವಿಯಲ್ಲಿ ಸುಮ್ಮನೇ ಲಂಗರು ಬಿಟ್ಟು ನಿಂತಲ್ಲೆ ತೇಲುತ್ತಿರುವ ದೋಣಿಗಳನ್ನು, ನಿಂತಲ್ಲೆ ನಿದ್ದೆಹೋಗಿ ಓಡಾಡುತ್ತಿರುವ ಲಾಂಚುಗಳನ್ನು ಕಾಣುತ್ತಿದ್ದರೆ ಅಭಂಗನ ಸಾನ್ನಿಧ್ಯ ದಕ್ಕಿದಂತಾಗಬಹುದು ಎಂಬ ನಿರೀಕ್ಷೆಯಿಂದ.

ದೇವನೂರ ಮಹದೇವರ ಕುಸುಮಬಾಲೆ ಒಂದು ಪ್ರಸಂಗ. ಕುಸುಮಾಳ ಜೊತೆಯಲ್ಲಿ ಅನೈತಿಕ ಸಂಬಂಧ ಇರಿಸಿಕೊಂಡಿದ್ದ ಎಂಬ ಕಾರಣಕ್ಕೆ ಚೆನ್ನನ ಕೊಲೆಯಾಗಿದೆ ಎನ್ನುವ ಪುಕಾರು ಹಬ್ಬಿರುತ್ತದೆ. ಆದರೆ ಚನ್ನನ ಮುದಿ ಅಪ್ಪ ಅವ್ವ ಇದನ್ನು ಅರಿಯರು. ಅವ್ವ ಕೇಳುತ್ತಾಳೆ,

'ಯಾವ್ ರುಪ್ದಲ್ಲಾದ್ರೂ ಆಗ್ಲಿಕನಾ.....ಯಾವತ್ತಾದರೂ.....ಒಂಜಿನಾರೂ......ಬಂದಾನಾ.......?'

ಸಾಯಲು ಹೊರಟ ಮುದಿ ತಾಯಿ, ಆಗಲೇ ಸತ್ತಿರಬಹುದಾದ ತನ್ನ ಹರೆಯದ ಮಗನನ್ನು ನೆನೆದು, ಅವನೆಂದಾದರೂ ಬಂದೇ ಬಂದಾನು ಎಂಬ ಆಸೆಯಿಂದ ಆ ಹಳ್ಳಿಯ ಕೊಂಪೆಯಲ್ಲಿ, ಜೋಪಡಿಯಲ್ಲಿ ಕೂತು ಕೇಳುತ್ತಾಳೆ, ಬಂದಾನಾ?

ಅವಳಿಗಿಂತ ಮುದಿಯ, ಅಪ್ಪ ಹೇಳುತ್ತಾನೆ,
`ಬರ್ದೆ? ಸಂಬಂಜ ಅನ್ನೋದು ದೊಡ್ಡದು ಕನಾ.....!'

ನಿಜ, ಸಂಬಂಜ ಅನ್ನೋದು ದೊಡ್ಡದು!

3 comments:

ಗುರುಪ್ರಸಾದ್ ಕಾಗಿನೆಲೆ said...

ಚೆನ್ನಾಗಿದೆ. ಯಾಕೋ ಬಹಳ ಭಾವುಕರಾಗಿದ್ದೀರ.

ಗುರು.

sangeethajohnson said...

ತುಂಬಾ ಚೆನ್ನಾಗಿ ಬರೆಯುತ್ತೀರಿ... ಜಯಂತರ ಬರಹಗಳನ್ನು ಬಹಳ ಮೆಚ್ಹಿಕೊಳ್ಳುತ್ತೀರಿ ...ಇನ್ನೂ ಹೆಚ್ಹು ಕಥೆಗಳನ್ನು ಬರೆಯಲು ನಮ್ಮಂತ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಒತ್ತಾಯಿಸಬೇಕಾಗಿದೆ.
ನಿಮ್ಮ ಒದುವ ಹವ್ಯಾಸದ ಬರಹಗಳು ಪುಸ್ತಕ ಓದದೆಯೇ ಆ ಪುಸ್ತಕದ ಮಾಯಕದ ಲೋಕದೊಳಕ್ಕೆ ನಮ್ಮನ್ನು ಒಯ್ಯ್ತ್ತ್ಟ್ತ್ತವೆ. ಇನ್ನೂ
ಬರೆಯಿರಿ...
ಎಸ್. ಸಂಗೀತಾ ಜಾನ್ಸನ್, ಉಡುಪಿ

ನರೇಂದ್ರ ಪೈ said...

ಥ್ಯಾಂಕ್ಯೂ ಸಂಗೀತಾರವರೆ. ಗಾಂಧಿಬಜಾರ್ ಪತ್ರಿಕೆಯಲ್ಲಿ ಕವಿಸಮಯ ಕುರಿತ ನಿಮ್ಮ ಲೇಖನ ಓದಿದ್ದೆ. ನಿಜಕ್ಕೂ ಅದೊಂದು ಅದ್ಭುತವಾದ ಲೇಖನ. ಎಷ್ಟೊಂದು ಕವಿಗಳ, ಕವಿತೆಗಳ ಉದ್ಯಾನದಲ್ಲಿ ನಮ್ಮನ್ನು ವಿಹರಿಸುವಂತೆ ಮಾಡಿದ್ದೀರಿ.
ಜಯಂತರನ್ನು ಅವರ ಪ್ರೀತಿಯ ಸಂಪಾದಕರುಗಳು ಡೆಡ್ ಲೈನ್ ಕೊಟ್ಟು ಬರೆಯಿಸಿದರೆ ಮಾತ್ರ ಅವರು ಬರೆಯುತ್ತಾರೇನೋ ಅನಿಸುತ್ತಿದೆ. ಬರುತ್ತಿದೆಯಲ್ಲ ದೀಪಾವಳಿ, ಅವರ ಒಂದೆರಡಾದರೂ ಕತೆಗಳನ್ನು ಈ ವಿಶೇಷಾಂಕಗಳು ಹೊತ್ತು ತರಬಹುದೆಂದು ನಿರೀಕ್ಷಿಸುವ!
ನಿಮ್ಮ ಪ್ರೋತ್ಸಾಹದಾಯಕ ಮಾತುಗಳಿಗೆ ಧನ್ಯವಾದಗಳು.
-ನರೇಂದ್ರ