Tuesday, March 31, 2009

ಮನಸು ಕಾರಣವಲ್ಲ...ಪಾಪ ಪುಣ್ಯಕ್ಕೆಲ್ಲ!

ಮೇಘನಾ ಪೇಠೆಯವರ ಕತೆಯನ್ನು ಕನ್ನಡದಲ್ಲಿ ಮೊದಲು ಓದಿದ್ದು ವಿವೇಕ ಶಾನಭಾಗರ ದೇಶಕಾಲದಲ್ಲಿ. 'ನಾಲ್ಕೂ ದಿಕ್ಕಿಗೆ ಕಡಲಿನ ನೀರು' ಎಂಬ ಕತೆಯನ್ನು ಚಂದ್ರಕಾಂತ ಪೋಕಳೆಯವರು ಅನುವಾದಿಸಿದ್ದರು. ಈ ಕತೆಯ ಓದು ಬೆರಗು ಹುಟ್ಟಿಸಿತ್ತು. ಆಧುನಿಕ ಜೀವನಶೈಲಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಮದುವೆಯಾಗದ ಒಂಟಿ ಹೆಣ್ಣು ಸ್ವತಃ ತಾನು ಕಾಮ-ಪ್ರೇಮ-ಕೊನೆಯಿಲ್ಲದ ಆಸೆಗಳಿಗೆ ವ್ಯತಿರಿಕ್ತವಾಗಿ ನಾಗಾಲೋಟ ಹೂಡುವ ವಯಸ್ಸು, ವಯಸ್ಸು ಹೆಚ್ಚಿದಂತೆಲ್ಲ ಬೆಳೆಯುತ್ತಲೇ ಹೋಗುವ ಆಕರ್ಷಣೆಗಳ ಜಿಜ್ಞಾಸೆಯಲ್ಲಿರುತ್ತ ಮುಖಾಮುಖಿಯಾಗುವ ಸಂದರ್ಭ ಸನ್ನಿವೇಶಗಳು ವಿಲಕ್ಷಣ ಮತ್ತು ತಲ್ಲಣಗೊಳಿಸುವಂಥವು.

ಇಲ್ಲಿನ ಸಂಘರ್ಷಗಳು ಮುಖ್ಯವಾಗಿ ನಾಲ್ಕು:
ಒಂದು, ವಿವಾಹಿತ ಹೆಂಗಸೊಬ್ಬಳ so called ವ್ಯಭಿಚಾರ ಮತ್ತು ಅದಕ್ಕೆ ಅಪಾರ್ಟ್‌ಮೆಂಟ್‌ನ so called ಸಂಭಾವಿತ ಗ್ರಹಸ್ಥರ ಪ್ರತಿರೋಧ;
ಎರಡು, ತನ್ನದೇ ವ್ಯಭಿಚಾರ ಎಂದೂ ಹೇಳಬಹುದಾದ ನಡವಳಿಕೆ ಮತ್ತು ಅವೇ ಸಂಭಾವಿತ ಗಂಡಸರ ಲೋಲುಪತೆ;
ಮೂರು, ಮೈಕೈ ತುಂಬಿಕೊಂಡ ಯೌವನಸ್ಥೆ ಸುಭದ್ರೆಯ ಸೌಂದರ್ಯದ, ಆಕರ್ಷಣೆಯ ಪ್ರಭಾವಳಿ ಮತ್ತು ಅದರ ಎದುರು ಪೇಲವಗೊಳ್ಳುವ, ವಯಸ್ಸೇರುತ್ತಿರುವ ತನ್ನ ಕೀಳಿರಿಮೆ;
ನಾಲ್ಕು, ಕೋಲಿಗೆ ಸೀರೆ ಸುತ್ತಿದಂತೆ ಕಾಣುವ ನೆರೂರ್‌ಕರನ ಹೆಂಡತಿ ವಸುಧಾಳ ಮಿತಿ ಮತ್ತು ಅವಳ ವಿಲಕ್ಷಣ ಹೊಂದಾಣಿಕೆಯ ನೀತಿಯ ಜೊತೆಜೊತೆಗೇ ಪಾಠಕನ ಹೆಂಡತಿಯನ್ನು ಬೇಟೆಯಾಡುವ ಅಪಾರ್ಟ್‌ಮೆಂಟ್‌ನ ಮರ್ಯಾದಸ್ತರ ಠರಾವಿಗೆ ಸಹಿ ಹಾಕದೆ ಅವಳು ತಳೆಯುವ ನಿಲುವು.

ಈ ನೆರೂರ್ಕರನ ಜೊತೆ ಅವನ ಹೆಂಡತಿ ವಸುಧಾಳ ಪರೋಕ್ಷ ಸಮ್ಮತಿಯಿಂದಲೇ ಮಲಗುವ ನಿರೂಪಕಿಯ ತಲ್ಲಣಗಳು ಮಾತಿಗೆ ಮೀರಿದಂಥವು. ಕತೆ ಇದನ್ನು ಮುಟ್ಟುವ ಬಗೆ ವಿನೂತನವಾಗಿದೆ ಮತ್ತು ಸುತ್ತಲಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸೂಕ್ಷ್ಮ ಆಘಾತವನ್ನು ನೀಡುವ ಬಗೆಯಲ್ಲಿದೆ. ನಿರೂಪಣೆಯಲ್ಲಿ ಲೇಖಕಿ ಪಾಠಕನ ಅವಳಿ ಮಕ್ಕಳನ್ನು ಬಳಸಿಕೊಂಡಿರುವ ಬಗೆ, ಒಂದು ತಂತ್ರವಾಗಿಯೂ, ಕಥಾನಕಕ್ಕೆ ಅದು ನೀಡುವ ಮುಗ್ಧ ವೀಕ್ಷಕನ ಕಳೆಯನ್ನೂ, ಇವುಗಳ ಒಟ್ಟಾರೆ ಪರಿಣಾಮಕಾರತ್ವವನ್ನೂ ಸೇರಿಸಿಯೇ ಗಮನಿಸಬಹುದು. ಹಾಗೆಯೇ ಮೇಘನಾ ಪೇಠೆಯವರ ಭಾಷೆಯ ಲಯದಲ್ಲೇ ಇರುವ ಒಂದು ಧಾಡಸೀತನ, ನಿರೂಪಣೆಯ ಪ್ರಾಮಾಣಿಕ ಸಂವೇದನೆಯನ್ನು ಕೂಡ.

ಬದುಕಿನ ಅನುಭವಗಳಿಗೆ ಎದೆಯೊಡ್ದಿ ನಿಂತು ಅದು ಕಲಿಸಿದ ಪಾಠಗಳನ್ನು ಕಲೆಯ ನೇಯ್ಗೆಯಲ್ಲಿ ಹೊಳೆಯಿಸುವ ಕತೆಯಿದು. ಈ ಕತೆ ಪ್ರಕಟಗೊಂಡ `ದೇಶಕಾಲ'ದ ಏಳನೆಯ (ಅಕ್ಟೋಬರ್ - ಡಿಸೆಂಬರ್ ೨೦೦೬) ಸಂಚಿಕೆಯಲ್ಲಿ ವಿವೇಕ್ ಶಾನಭಾಗ್ ಹೀಗೆ ಹೇಳುತ್ತಾರೆ:

"ಅವರ ಕತೆಗಳ ವೈಶಿಷ್ಟ್ಯವಿರುವುದು ಅವರು ಸಾವಧಾನವಾಗಿ ನಿಂತು ನೋಡುವ ಕ್ರಮದಲ್ಲಿ. ಇದಕ್ಕೆ ಹೊಂದುವಂತೆ ತಮ್ಮೆಲ್ಲ ಕತೆಗಳಿಗೂ ಅವರು ನೀಳ್ಗತೆಯ ಸ್ವರೂಪವನ್ನು ಆಯ್ದುಕೊಂಡರು....'ನಾಲ್ಕೂ ದಿಕ್ಕಿಗೆ ಕಡಲಿನ ನೀರು' ಕಥೆಯನ್ನೇ ನೋಡಿದರೆ, ಅಲ್ಲಿ ಗಂಡು ಹೆಣ್ಣಿನ ನಡುವಿನ ಸಂಬಂಧವನ್ನಾಗಲೀ, ದೈಹಿಕ ಆಕರ್ಷಣೆಯನ್ನಾಗಲೀ ಹೇಳುವಾಗ ಅವರು ಅದನ್ನು ಸುಮ್ಮನೇ ಹೇಳಿ ನಿಲ್ಲಿಸುವುದಿಲ್ಲ. ಕಸಿವಿಸಿಗೊಳಿಸುವ ವಿವರಗಳನ್ನು, ಒಪ್ಪಿತ ವ್ಯವಸ್ಥೆಯ ಬಗೆಗಿನ ಗ್ರಹೀತಗಳನ್ನು ಸತ್ಯಸಂಧತೆಯಿಂದ ನೋಡಲು ಬೇಕಾದ ಶಕ್ತಿಯನ್ನು ಅವರು ತೋರಿಸುತ್ತಾರೆ. ಅಲ್ಲಿ ದೀರ್ಘಕಾಲ ನಿಂತು ಅದರ ಆಳಕ್ಕೆ ಹೋಗುತ್ತಾರೆ. ಅದರ ವಿವಿಧ ಮಗ್ಗಲುಗಳನ್ನು ಶೋಧಿಸುತ್ತಾರೆ. ಮನುಷ್ಯನ ಪೊಳ್ಳನ್ನು, ಏಕಾಕಿತನವನ್ನು ಬಹಳ ಪರಿಣಾಮಕಾರಿಯಾಗಿ ತೋರಿಸುತ್ತಾರೆ. ಹಾಗಾಗಿಯೇ ಅವರ ಕಥೆಗಳ ಸಂರಚನೆ ತುಸು ಬೇರೆ ರೀತಿಯದು. ರಾಗದ ದೀರ್ಘ ಆಲಾಪವನ್ನು ಭರಿಸಿಕೊಳ್ಳುವ ಬಗೆಯದು."

ಮುಂದೆ ಚಂದ್ರಕಾಂತ ಪೋಕಳೆಯವರು ಅನುವಾದಿಸಿದ ಆರು ಕಥೆಗಳ ಸಂಕಲನ 'ಮೇಘನಾ ಪೇಠೆ ಕಥೆಗಳು' ಬಂತು. ಈ ಸಂಕಲನದಲ್ಲಿ ಒಟ್ಟು ಆರು ಕತೆಗಳಿವೆ. ಇಲ್ಲಿನ ಎಲ್ಲಾ ಕತೆಗಳೂ ಪ್ರಮುಖವಾಗಿ ಮನುಷ್ಯ ಸಂಬಂಧದ ಅಲ್ಪಾಯುಷಿತನವನ್ನೇ ಕುರಿತು ಹೇಳುತ್ತಿವೆ. ಗಂಡು-ಹೆಣ್ಣು ಸಂಬಂಧದ ಎಳೆಯನ್ನು ಶೋಧಿಸುವ ಕತೆಗಳು ಎನ್ನಿ, ಕಾಮ-ಪ್ರೇಮದ ಸುತ್ತ ಸುತ್ತುವ ಕತೆಗಳು ಎನ್ನಿ, ಮನುಷ್ಯನ ಆಳದ ಒಂಟಿತನವನ್ನೇ ಕುರಿತ ಕತೆಗಳೆನ್ನಿ, ಅವೆಲ್ಲವೂ ನಿಜವೇ. ಆದರೆ ಈ ಎಲ್ಲ ಅಂಶಗಳನ್ನಿಟ್ಟುಕೊಂಡೇ ಮೇಘನಾ ಪೇಠೆಯವರ ಕತೆಗಳು ಕೆದಕುವ ಸಂಬಂಧಗಳ ಕ್ಷಣಭಂಗುರ ತತ್ವವನ್ನು ಕುರಿತು ಕೊಂಚ ಯೋಚಿಸಬಹುದು.

ಒಂದು ಗಂಡಿಗೆ ಹೆಣ್ಣು ಅಥವಾ ಒಂದು ಹೆಣ್ಣಿಗೆ ಗಂಡು ಯಾಕೆಲ್ಲ ಬೇಕು ಎನ್ನುವ ಮೂಲಭೂತ ಪ್ರಶ್ನೆಗೆ ಹೋಗದೆ, `ನೀನಿರುವುದು ನಿಜವಾದರೂ| ನಿನ್ನ ಸಂಗ ಸಿಹಿಯಾದರೂ| ಏಕಾಂಗಿ ನಾನು| ಏಕಾಂಗಿ ನಾನೂ|' ಎನ್ನುವ ಲಂಕೇಶರ ಮಾತನ್ನು ಆಧ್ಯಾತ್ಮಿಕ ತತ್ವವಾಗಿಸದೆ, ಮನುಷ್ಯ ಸಂಬಂಧದ ಬಗ್ಗೆ ನೋಡುವುದು ಸಾಧ್ಯವಿದೆ. `ಅಮರ ಮಧುರ ಪ್ರೇಮ' ಪರಿಕಲ್ಪನೆಯ ಪೊಳ್ಳುತನ ಗೊತ್ತಿರುವಾಗಲೇ ಈ ಪ್ರೇಮದ ಚಿರಂತನ ಶಕ್ತಿಯ ಒಂದು ಸಾಧ್ಯತೆಯ ಕುರಿತು ಕೂಡ - ನೆಲದ ಮೇಲೇ ನಿಂತು ಮಾಡಬಹುದಾದ ಒಂದು ವಾಸ್ತವಿಕ ನೆಲೆಯ ಪರಿಕಲ್ಪನೆಯ ಕುರಿತು - ಸಾಧಾರಣವಾಗಿ ಎಲ್ಲ ಪ್ರಬುದ್ಧ ಮನುಷ್ಯರಿಗೂ ಅರಿವಿದ್ದೇ ಇದೆ. ಕೊನೆಗೂ ಮನುಷ್ಯನೆಂದರೆ ಬರೀ ಪರಿಮಳವಲ್ಲ, ಅಸಾಧ್ಯ ವಾಸನೆ ಕೂಡ. ಪ್ರಸ್ತುತ ಕತೆಗಳನ್ನು ಬರೆದ ಲೇಖಕಿ ಕೂಡ ಇದರ ಅರಿವಿಲ್ಲದವರಲ್ಲ.

ಒಂದು ಸದಾ ಕಾಲಕ್ಕೂ ಮೆಲುಕು ಹಾಕುವುದಕ್ಕೆ ಯೋಗ್ಯವಾದ ವಿಫಲ ಪ್ರೇಮದ ಹಿನ್ನೆಲೆ. ಕೆ ಸತ್ಯನಾರಾಯಣರ `ನಿಮ್ಮ ಮೊದಲ ಪ್ರೇಮದ ಕತೆ' ತರದ್ದು, ಆದರೆ ಅದರಂತೆ ಯಾವ ಅರ್ಥದಲ್ಲೂ ಯಶಸ್ವಿಯಾದದ್ದಲ್ಲ ಅಷ್ಟೆ. ಮುಂದೆ ಮದುವೆಯಾಗಿ ಕೆಲಕಾಲ ಕಳೆದ ಮೇಲೆ ಎಲ್ಲ ಫ್ಲ್ಯಾಶ್‌ಬ್ಯಾಕ್ ಸುರುವಾಗುತ್ತದೆ. ಹಿಂದಿನ ಪ್ರೇಮದ ಅರೆಬರೆ ತುಣುಕು ನೆನಪುಗಳೆಲ್ಲ ಯಾವುದೋ ಲೋಕದ ಕಲ್ಪನೆಯಂತೆ, ಕನಸಿನಂತೆ, ಕಳೆದು ಹೋದ ಸ್ವರ್ಗದಂತೆ ಕಾಣಿಸತೊಡಗುತ್ತವೆ. ಸದ್ಯದ ಕ್ಷುದ್ರ ದೈನಿಕಗಳ (ಅವಸ್ಥೆ ಕಾದಂಬರಿಯಲ್ಲಿ ಕೃಷ್ಣಪ್ಪ ಬಳಸುವ ಮಾತುಗಳು) ಒತ್ತಡಗಳಲ್ಲಿ, ಸಂಸಾರದ ನೂರೊಂದು ತಾಪತ್ರಯಗಳಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಸಾಲದಾಗುವ ನಗರ ಜೀವನದ ಜಂಜಡಗಳಲ್ಲಿ ಪ್ರೇಮದ ಗೂಡಾಗಬೇಕಿದ್ದ ಸಂಸಾರ ನಿಟ್ಟುಸಿರುಗಳ, ಹತಾಶೆಯ, ಸುಪ್ತ ದ್ವೇಷದ ಬೆಂಕಿಗೂಡಾಗುತ್ತದೆ. ಮನಸ್ಸಿಗೆ ತಂಪೆರೆಯುವ ಮಳೆಯಾಗಬಹುದಾದ ಪ್ರೀತಿ ಮಾತ್ರವೇ ಅಲ್ಲಿಂದ ಶಾಶ್ವತವಾಗಿ ಕಣ್ಮರೆಯಾದಂತೆ ಕಾಣುತ್ತದೆ.

ಅಥವಾ ಗಂಡ ಹೆಂಡಿರ ನಡುವೆ ಅನೂಹ್ಯ ಸ್ಪರ್ಧೆಯೊಂದು ಸುರುವಾಗುತ್ತದೆ. ಸ್ವಾತಂತ್ರ್ಯದ ಸ್ಪರ್ಧೆ, ವೃತ್ತಿಪರ ಖ್ಯಾತಿಯ ಸ್ಪರ್ಧೆ, ಹೆಣ್ಣುಗಳ ನಡುವಿನ ಮೋಹಕತೆಯ ಸ್ಪರ್ಧೆ ಅಥವಾ ಇಂಥಾದ್ದೇ ಇನ್ನೊಂದು. ಆದರೆ ಪ್ರಶ್ನೆ ಇದ್ಯಾವುದೂ ಅಲ್ಲ. `ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ' ಎಂಬ ಸತ್ಯದ ಅರಿವಿದ್ದೂ, ಬದುಕಿನಲ್ಲಿ ನಿತ್ಯ ನೂತನವಾದದ್ದು, ಚಿರಂತನವಾದದ್ದು ಮತ್ತು ಒಬ್ಬ ವ್ಯಕ್ತಿಯ ಅಧಿಪತ್ಯಕ್ಕೊಳಪಟ್ಟಿದ್ದು -ಈ ಮೂರೂ ಲಕ್ಷಣಗಳುಳ್ಳ ಒಂದು ವಸ್ತು ಇದ್ದಿರಲಾರದು ಎನ್ನುವ ಸತ್ಯ ಗೊತ್ತಿದ್ದೂ ಮನಸ್ಸು ತಡಕಾಡುವುದು, ಹಪಹಪಿಸುವುದು ಯಾವುದಕ್ಕೆ ಎಂದರೆ ಮತ್ತದೇ ಪ್ರೀತಿಗೆ ಎನ್ನುವ ಉತ್ತರ ಸಿಗುತ್ತದೆ! ಈ ಪ್ರೀತಿಯ ಹಸಿವು `ಅಹಂ'ನದ್ದೇ? ನಮ್ಮ ಅಹಮಿಕೆಯ ಪುಷ್ಟೀಕರಣ-ತುಷ್ಟೀಕರಣಕ್ಕೆ ನಮಗೆ ಇನ್ನೊಬ್ಬ ವ್ಯಕ್ತಿಯ ಪ್ರೀತಿ ಬೇಕೆ? ಇದು ಮನುಷ್ಯನ ಆಳದ ಇನ್‌ಸೆಕ್ಯುರ್ಡ್ ತಳಮಳದ ಶಮನಕ್ಕಾಗಿ ಬೇಕಾದ ವಸ್ತುವೆ? ಅಥವಾ ನಾವು-ನೀವು ಪರಸ್ಪರ ಒಂದೇ ದೊಡ್ಡ (ಪರಮ) ವಸ್ತು(ಆತ್ಮ)ವಿನ ತುಣುಕು-ತುಂಡು (ಜೀವಾತ್ಮ)ಗಳೆಂಬ ಸುಪ್ತ ಅರಿವೇ ಕಾರಣವಾಗಿ ಗುರುತು ಹಿಡಿಯುವ ಪ್ರಕ್ರಿಯೆಯೆ ಇದು? ಅದು ಸಿಕ್ಕಿದರೆ ಸಾಕೆ? ಅದೊಂದಿದ್ದರೆ ಎಲ್ಲವೂ ಇದ್ದಂತೆ ಎನ್ನುವ ತೃಪ್ತಿ ಇರುವುದೆ? ಇಲ್ಲವಲ್ಲ? ಇನ್ನೇನೋ ಇಲ್ಲ ಎನ್ನುವುದನ್ನು ನಾಲ್ಕೇ ದಿನದೊಳಗೆ ಕಂಡುಹಿಡಿಯಲಾಗುವುದಲ್ಲ!

ಕೊನೆಗೂ ಸಾಧ್ಯವಾಗುವುದು, ಅನಿವಾರ್ಯವಾಗಿರುವುದು ಕೂಡ ಸಹಜೀವನ, ಸಹಬಾಳ್ವೆ. ಹೊಂದಾಣಿಕೆ ಅದರ ಆಪ್ತ ಮುಖವಾಡ. ಭಿನ್ನಮತ ಅದರ ವಾಸ್ತವ ಅವಳಿ. ಪ್ರೀತಿ ಅದು ಇದ್ದಂತೆ ಕಂಡರೂ, ಇಲ್ಲದಂತೆ ಕಂಡರೂ, ಇದ್ದೇ ಇರುವುದು ಆಳದ ಸತ್ಯ. ಮೇಘನಾ ಕತೆಗಳು ನಮ್ಮನ್ನು ಇಲ್ಲಿಗೆ ತಲುಪಿಸುತ್ತವೆ. ಹಾಗಾಗಿಯೇ ಎಲ್ಲ ನಿಟ್ಟುಸಿರುಗಳಾಚೆ ಈ ಕತೆಗಳು ಕಾಣಿಸುವುದು ನಾವು ಒಪ್ಪಿಕೊಂಡ/ಒಪ್ಪಿಕೊಳ್ಳಬೇಕಾದ ಸತ್ಯವನ್ನೇ.

"In fact, I am not sceptical. I am sure, ಆರಂಭಗೊಂಡಿದ್ದೆಲ್ಲ ಮುಗಿಯುತ್ತದೆ ಅನಿರುದ್ಧಾ. ಉತ್ಪತ್ತಿ, ಸ್ಥಿತಿ ಮತ್ತು ಲಯ - ಇದು ಸೃಷ್ಟಿಯ ನಿಯಮ. ನಾನದನ್ನು ನಿರ್ಮಿಸಿದ್ದಲ್ಲ. ಕೇವಲ ಒಪ್ಪಿಕೊಂಡಿದ್ದೇನೆ." (ಪುಟ ೧೫೨)

ಮದುವೆಯಂಥದ್ದೇನೂ ಆಗದೆ ಒಟ್ಟಿಗೇ ಗಂಡ ಹೆಂಡಿರಂತೆ ಬದುಕುತ್ತ ಬಂದ ಅನಿರುದ್ಧ ಮತ್ತು ಮಿಥಿಲಾ (ಮುದ್ದಾಗಿ ಅವಳು ಅನ್ಯಾ ಎನ್ನುತ್ತಾಳೆ; ಅವನು ಮಿಥ್ಯಾ ಎನ್ನುತ್ತಾನೆ ಎನ್ನುವುದು ಬೇರೆ ಮಾತು!) ನಡುವೆ ಒಮ್ಮೆ ಈ ಅನಿರುದ್ಧ ಮದುವೆಯ ಮಾತೆತ್ತುತ್ತಾನೆ. ಅದೂ ಅವಳನ್ನು ಅವಳ ಬಾಸ್ ಚುಂಬಿಸಿದ ವಿಷಯವನ್ನು ಅವಳೇ ಅತ್ಯಂತ ಸಹಜವೆನ್ನುವಂತೆ ಹೇಳಿದ ದಿನ. ಸಂಬಂಧಕ್ಕೊಂದು ಹೆಸರು ಹಚ್ಚುವ, ದೇಹದ-ಮನಸ್ಸಿನ ಗಡಿರೇಖೆಗಳನ್ನು ಗುರುತಿಸಿ ಗೋಡೆಗಳಿರುವ ಮನೆಯನ್ನು ಕಟ್ಟಿಕೊಳ್ಳುವ ತುರ್ತು ಮೊದಲು ಅವನಿಗೆ ಕಂಡಿತು. ಸಂಬಂಧವನ್ನು ಶಾಶ್ವತವಾಗಿಸಿಕೊಳ್ಳುವ, ಅಧಿಪತ್ಯಕ್ಕೊಳಪಡಿಸಿ ಕಾಯ್ದುಕೊಳ್ಳುವ, ರಕ್ಷಿಸುವ ರೀತಿ, ಮದುವೆ! ಆ ಸಂದರ್ಭದಲ್ಲಿ ಬರುವ ಮಾತಿದು. (ಕಥೆ: ಆಸ್ಥೆ ಮತ್ತು ಚವಳಿಕಾಯಿ!)

ಆದರೆ ಸಂಬಂಧಕ್ಕೂ ಆರಂಭ ಅಂತ ಒಂದಿರುವುದರಿಂದ ಅದೂ ಒಂದಲ್ಲಾ ಒಂದು ದಿನ ಅಂತ್ಯ ಕಾಣಲೇ ಬೇಕು ಎನ್ನುವುದನ್ನು ಕೇವಲ ಒಪ್ಪಿಕೊಂಡು ಬಿಡುವ ಈಕೆಗೆ ಅದು ನೋವು ನೀಡುವ ವಿದ್ಯಮಾನ ಕೂಡ ಆಗಿರುವುದು ಸತ್ಯ.

" ಅಲ್ಲಿ ಬೇರೂರ ಬೇಕೆಂದು ಅನಿಸಲಿಲ್ಲ. ಬೇರೂರುವ ಇಚ್ಛೆ ಹಾಗೂ ಸಾಧ್ಯತೆಯನ್ನು ಹೊಸಕಿ ಹಾಕಿದೆ. ಕೊನೆಗೆ ಹೊರಡುವಾಗ ಒಂದು ಡಾಲ್ಡಾ ಡಬ್ಬಿ, ಎರಡು ದೊಡ್ಡ ಬಾಟಲು, ಎರಡು ತಟ್ಟೆಗಳು, ಹೊಗೆ ಹಿಡಿದ ರಬ್ಬರ್ ರಿಂಗ್ ಮತ್ತು ಕಿಡಕಿಗೆ ಕಟ್ಟಿದ ಹಗ್ಗ ಇಷ್ಟೇ. ಅಲ್ಲಿಟ್ಟಿದ್ದು ಇಷ್ಟೇ. ತೊರೆದ ಮನೆ ತೊರೆದ ಗಂಡನ ಹಾಗೆ ಕಾಣುತ್ತದೆ. ಗಾಯಾಳು ಮತ್ತು ಬಡಪಾಯಿ! ಆದರೆ ಯಾವುದನ್ನು ತೊರೆಯಲು, ತುಂಡಾಗಿಸಲು ಹಗಲು-ರಾತ್ರಿ ಮನಸ್ಸು ಒದ್ದಾಡುತ್ತಿದೆಯೋ, ಅದನ್ನು ತೊರೆಯುವಾಗ ಅದು ನಮ್ಮನ್ನೇ ಗಾಯಗೊಳಿಸುತ್ತದೆ." (ಕಥೆ: ನಾಲ್ಕೂ ದಿಕ್ಕಿಗೆ ಕಡಲಿನ ನೀರು)

`ಒಂದು ದಿನ `ಸ್ಟ್ರ' - ನದ್ದು' ಕತೆಯಲ್ಲೂ ಆವಿ ಮತ್ತು `ಸ್ಟ್ರ'ನ ಸ್ನೇಹವನ್ನು, ಕಾಲಿಂದಿಯ ಜೊತೆಗಿನ ಸಂಬಂಧವನ್ನು, ಬೇಬಿ ಪ್ರಿಯಂವದಾಳ ದುರಂತವನ್ನು, ಮಾಯಿ ಅಠವಲೆಯ ಪ್ರೀತಿಯನ್ನು ಕಾಣುವ ದೃಷ್ಟಿಕೋನ ಮನುಷ್ಯ ಸಂಬಂಧಗಳ ಪ್ರಾಮಾಣಿಕತೆಯ ಮತ್ತು ಚಿರಂತನತೆಯ ಕುರಿತ ನಿಶ್ಚಿತ ಅಪನಂಬುಗೆಯದೇ. ಭೌತಿಕ ಜಗತ್ತಿನ ಯಶಸ್ಸು ಮತ್ತು ಮನುಷ್ಯ ಸಂಬಂಧಗಳು ಅದರೆದುರು ನಲಿಯುವ ವಿಭಿನ್ನ ನಾಟಕಗಳನ್ನು ಕತೆ ಗಮನಿಸುತ್ತ ಹೋಗುತ್ತದೆ, ಸ್ವತಃ ಒಬ್ಬ ಯಶಸ್ವೀ ನಟನಾಗಿರುವ ನಿರೂಪಕನ ಮೂಲಕ.

`ನರಿಯ ಮದುವೆ' ಕತೆಯಲ್ಲಿ ಒಂದು ವಿಶೇಷವಿದೆ. ಈ ಕತೆ ಆರಂಭದಿಂದಲೂ ಕಟ್ಟಿದ ಮಂಜುಳಾಬಾಯಿ ಮತ್ತು ಅಶುತೋಷನ ವ್ಯಕ್ತಿತ್ವವನ್ನು ಕೊನೆಯ ಒಂದು ಸಹಜ ನಡೆ ಕೆಡವಿ ಹಾಕುತ್ತದೆ. ಆದರೆ ಹಾಗೆ ಮಾಡುವುದರ ಮೂಲಕವೇ ಅದು ಇಬ್ಬರ ವ್ಯಕ್ತಿತ್ವವನ್ನೂ ಹೊಸದಾಗಿ ಕಟ್ಟಿಕೊಡುತ್ತದೆ ಮತ್ತು ಕಟ್ಟಿಕೊಡುತ್ತ ನಮಗೆ ಹೊಸದೇ ಆದ ಒಂದು ದರ್ಶನವನ್ನು ನೀಡುತ್ತದೆ. ಪ್ರಾಣೇಶಾಚಾರ್ಯರ ನಿಷ್ಠೆಯಿಂದಲೇ ತನ್ನ ಪಾರ್ಶ್ವವಾಯು ಪೀಡಿತ ಪತಿಯ ಸೇವೆ ಮಾಡುವ, ಅಶುತೋಷನ ಬಗ್ಗೆ ಪುತ್ರವಾತ್ಸಲ್ಯವನ್ನೂ ಅನಿರ್ವಚನೀಯವಾದೊಂದು ನಿಷ್ಠೆಯನ್ನೂ ಅನುಭವಿಸುವ ಮಂಜುಳಾಬಾಯಿಗೆ ತನ್ನ ಮಗಳ ದಾಂಪತ್ಯದ ನೆಮ್ಮದಿಗೆ ತನ್ನದೇ ದೃಷ್ಟಿಯಾಗುತ್ತದೋ ಎಂಬ, ಅದನ್ನು ಕಂಡು ತನಗೆ ಅಸೂಯೆಯಾಗುತ್ತಿದೆಯೇ ಎಂಬ ಶಂಕೆಗಳಿವೆ, ಪಾಪಪ್ರಜ್ಞೆಯಿದೆ. ಅಶುತೋಷ ಚಿಕ್ಕಂದಿನಲ್ಲಿ ಹೆತ್ತ ತಾಯಿಯೇ ಅಂಗವಿಕಲ/ಮಂದಬುದ್ಧಿಯ ಮಗುವನ್ನು ಕೈಯಾರ ಕೊಲ್ಲುವ ದೃಶ್ಯಕಂಡು ಸದ್ಯಕ್ಕಂತೂ ಪ್ರತಿಯೊಂದು ಮನುಷ್ಯ ಸಂಬಂಧವೂ ಕೊಟ್ಟು-ಕೊಳ್ಳುವ ಕೇವಲ ವಿನಿಮಯದ ನೆಲೆಗಟ್ಟಿನ ಮೇಲೆಯೇ ನಿಂತಿದ್ದು ಎನ್ನುವ ನಿಶ್ಚಿತ ತತ್ವಕ್ಕೆ ಬದ್ಧನಾದವ. ಈ ನೆಲೆಯಿಂದಲೇ ಪಾಪಪ್ರಜ್ಞೆಯನ್ನು ಮೀರಲು ಅವನಿಗೆ ಸಾಧ್ಯವಾಗಿದೆ. ಮಂಜುಳಾಬಾಯಿಗೆ ಅದು ಸಾಧ್ಯವಾಗುವುದು, ಅಶುತೋಷನ ಕುರಿತ ಅವರಿಗಿದ್ದ ಭ್ರಮೆಯ ಒಂದು ಚಿತ್ರ, ಇದ್ದಕ್ಕಿದ್ದಂತೆ ಅವನು ಒಬ್ಬನೇ ನೋಡುತ್ತಿದ್ದ ಬ್ಲೂಫಿಲ್ಮ್‌ನಿಂದ ಒಡೆದು ಹೋಗುವುದರಿಂದ. ಮುಂದೆ ಅವನು ಮಂಜುಳಾಬಾಯಿಯನ್ನು ಕೂಡುವಲ್ಲಿ ಅದು ಪರಿಪೂರ್ಣವಾಗುತ್ತದೆ.

ಆದರೆ ಗಮನಿಸಬೇಕಾಗಿರುವುದು, ಈ ಒಂದು ಸಂಕ್ರಮಣದ ನಂತರ ಮಂಜುಳಾಬಾಯಿ, ಮುಟ್ಟುನಿಲ್ಲುವ ವಯಸ್ಸಾದರೂ ತಾನು ಇಷ್ಟೆಲ್ಲ ವರ್ಷಗಳಿಂದ ಸುಪ್ತವಾಗಿ ಹಪಹಪಿಸುತ್ತಿದ್ದುದು ಇದ್ದಕ್ಕಿದ್ದಂತೆ ಸಿಕ್ಕಿಯೇ ಬಿಟ್ಟಿತು ಎನ್ನುವ ಸೋಜಿಗದಲ್ಲಿ ಹೆಚ್ಚು ಹೆಚ್ಚು ಪ್ರೇಮಮಯಿಯಾದರೆ, ಸಂಬಂಧಗಳಲ್ಲಿ ಹೆಚ್ಚು ಹೆಚ್ಚು ಆಪ್ತವಾದರೆ ಇತ್ತ ಸಿಕ್ಕಿಕೊಳ್ಳಬಾರದಿದ್ದ ವರ್ತುಲವೊಂದರಲ್ಲಿ ಸಿಕ್ಕಿಕೊಂಡೆನೋ ಎನ್ನುವ ವಿಹ್ವಲತೆಯಲ್ಲಿ ಅಶುತೋಷ ಕತ್ತಲನ್ನು ಆಶ್ರಯಿಸುತ್ತಾನೆ, ಮುಖಮರೆಸುತ್ತಾನೆ. ಮನುಷ್ಯ ಸಂಬಂಧಕ್ಕೆ, ಕೊಡುವುದರ ಮೂಲಕ ಪಡೆಯುವುದನ್ನು ಹೇಳಿಕೊಡುವ ಮನುಷ್ಯ ಸಂಬಂಧಕ್ಕೆ ಹಾತೊರೆಯುವ ಮತ್ತು ಅದೇ ಕಾರಣಕ್ಕೆ (ವಿನಿಮಯದ ನೆಲೆಯ ಮನುಷ್ಯ ಸಂಬಂಧ ತತ್ವದ ಅಶುತೋಷ) ಹೆದರುವ ಎರಡು ಮನಸ್ಥಿತಿಗಳು ಇಲ್ಲಿ ಮೂಡಿರುವುದು ತೆರೆದಿಡುವ ಸಂಘರ್ಷ ಮತ್ತು ಹೊಳೆಯಿಸುವ ಸತ್ಯ ಅನನ್ಯವಾಗಿದೆ.

`ಒಬ್ಬ ನೀತಿಗೆಟ್ಟ ವೀಕ್ಷಕ' ಕತೆಯನ್ನು ನಿರೂಪಕ ಒಂದು ನಾಯಿಗೆ ಹೇಳುತ್ತಿದ್ದಾನೆ. ಸಾಧಾರಣವಾಗಿ ನಾಯಿಯನ್ನು ನಿಷ್ಠೆಯ ಪ್ರತೀಕವಾಗಿ ಕಾಣಲಾಗುತ್ತದೆ. ಇಲ್ಲಿ ಹೆಂಡತಿ ಮತ್ತು ಮಗುವನ್ನು ಬಿಟ್ಟು ಓಡಿ ಹೋಗುವ ತಾತ್ಯಾ ನಂ.1, ಪರಿತ್ಯಕ್ತ ಹೆಣ್ಣಿಗೆ ಆಸರೆಯಾಗುವ ತಾತ್ಯಾ ನಂ.2, ಹೆತ್ತವಳಲ್ಲದ ಮತ್ತು ಗಂಡ ಓಡಿ ಹೋದ ನಂತರ ಇನ್ನೊಬ್ಬನೊಂದಿಗೆ ಜೀವನ ಆರಂಭಿಸುವ ತಾಯಿ ಹಾಗೂ ತಾಯಿಯ ಪ್ರೀತಿಯನ್ನು ಧಾರೆಯೆರೆದ ಕೆಲಸದ ಹೆಂಗಸು- ದಪ್ಪ ದೇಹದ, ಮೀಸೆಯಿರುವ ಕಪ್ಪು ಬಣ್ಣದ ವಸೂ ಅತ್ತೆ ಇದ್ದಾರೆ. ಇವರ ಸಂಬಂಧಗಳು ಬಿಚ್ಚಿಕೊಳ್ಳುವ ಕತೆ ನಿರೂಪಕ ನಾಯಿಗೆ ಹೇಳುತ್ತಿರುವ ಮಾತುಗಳಲ್ಲಿ ಮೂಡುತ್ತ ಹೋಗುತ್ತದೆ. ಈ ವಸೂ ಅತ್ತೆಯೇ ನಿರೂಪಕನ ನಿಜವಾದ ಹೆತ್ತ ತಾಯಿ ಎನ್ನುವ ಸತ್ಯ ಕೊನೆಗೆ ತಿಳಿಯುವುದಾದರೂ ಸಂಬಂಧಗಳ ಸಂರಚನೆ ಅದರಿಂದೇನೂ ಇದ್ದಕ್ಕಿದ್ದಂತೆ ಬದಲಾಗಿ ಬಿಡುವುದಿಲ್ಲ. ಕೊನೆಗೂ ಇದು ಭೂತಕಾಲದ ಕತೆಯನ್ನು ಹೇಳುತ್ತಿರುವುದು, ಹಾಗಾಗಿ ಅದರ ಎಲ್ಲ ಸಾವಧಾನ ಇಲ್ಲಿದೆ. ಹಾಗೆಯೇ ಇಲ್ಲಿ ಒಂದು ಸುಂದರ ಉಪಕತೆಯಿದೆ. ನೀರಿನ ಕೊಡದಲ್ಲಿ ಚಂದ್ರನ ಬಿಂಬವನ್ನು ಹಿಡಿದ ಭ್ರಮೆಯಲ್ಲಿ ಆ ಬಿಂಬವನ್ನು ಶಾಶ್ವತವಾಗಿ ಕಾಪಿಟ್ಟುಕೊಳ್ಳುವ ಆಸೆಯಿಂದ ಬಹಳ ಎಚ್ಚರಿಕೆಯಿಂದಲೇ ನಡೆಯುತ್ತಿದ್ದ ಸುಂದರಿಯೊಬ್ಬಳು ಎಡವಿ ಬಿದ್ದು ಕೊಡ ಒಡೆದು ಹಾಕುತ್ತಾಳೆ. ಹೀಗೆ ಚಂದ್ರನ ಬಿಂಬವನ್ನು ಕಳೆದುಕೊಂಡು ಗೋಳೋ ಎಂದು ಅಳತೊಡಗುತ್ತಾಳೆ. ಅವಳಿಗೆ ಸತ್ಯದ ಅರಿವಾಗುವುದು ಮುಖ್ಯ. ಅದಕ್ಕಿಂತಲೂ ನಮಗೆ ಈ ಸತ್ಯದ ಅರಿವಾಗುವುದು ಇನ್ನೂ ಮುಖ್ಯ, ಯಾಕೆಂದರೆ ಮನುಷ್ಯ ಸಾವಿರ ಜನ್ಮ ತಳೆದರೂ ಕೆಲವೊಮ್ಮೆ ಈ ಸತ್ಯ ಸಿಗುವುದಿಲ್ಲವಂತೆ! ಬಹುಷಃ ಮನುಷ್ಯ ಸಂಬಂಧಗಳ ಕುರಿತ ಆಳವಾದ ಸತ್ಯವೊಂದು ಕೊಡದೊಳಗಿನ ಚಂದ್ರನ ಬಿಂಬದಲ್ಲೇ ಇದೆ!

`ಹದಿನೆಂಟನೇ ಒಂಟೆ' ಕತೆಯಲ್ಲೂ ಒಂದು ಸ್ವಾರಸ್ಯಕರವಾದ ವಿದ್ಯಮಾನವಿದೆ. ಇಲ್ಲಿ ಅವನು ನಾಟಕಕಾರ. ಅವಳು ಕೂಡ ನಟಿಯಾಗಿದ್ದವಳೇ, ಮುಂದೆ ನಟಿಯಾಗಿ ಖ್ಯಾತಳಾಗುವವಳೇ. ಒಮ್ಮೆ ಅವನು ರಾತ್ರಿಯಿಡೀ ನಿದ್ದೆಗೆಟ್ಟು ಒಂದು ಅಂಕ ಬರೆದು ಮುಗಿಸುತ್ತಾನೆ. ಅದ್ಭುತವಾದ ಒಂದು ಮನೋಲಾಗ್ ಇರುವ ಅಂಕವದು. ಅವಳಿಗೂ ನಸುಕಿನಲ್ಲಿ ಓದಿ ಹೇಳುತ್ತಾನೆ. ಅವಳ ಕಣ್ಣಿಂದಲೂ ದಳದಳ ಹರಿದ ನೀರು ಆ ಬರವಣಿಗೆಯ ಸಾರ್ಥಕತೆಯನ್ನು ಸಾರಿ ಹೇಳುತ್ತದೆ. ಹೀಗೆಲ್ಲ ಇರುತ್ತ ಅದನ್ನು ರಂಗದಲ್ಲಿ ಓದಲು ಆಯ್ಕೆಯಾದವಳು ಇವಳ ಪ್ರತಿಸ್ಪರ್ಧಿಯಂತಿರುವ ಹೆಣ್ಣಾಗಬೇಕೆ?! ಸುಮ್ಮನೇ ಕಲ್ಪಿಸಿ ನೋಡಿ. ಗಂಡ ಹೆಂಡಿರ ನಡುವಿನ ಒಂದು ಅತ್ಯಂತ ಆಪ್ತ ಮತ್ತು ಸೂಕ್ಷ್ಮ ಸನ್ನಿವೇಶವನ್ನು ತನ್ನ ಸವತಿಯೊಬ್ಬಳು ತನ್ನದೇ ಗಂಡನೊಂದಿಗೆ ರಂಗದಲ್ಲಿ ಅಭಿನಯಿಸುವುದೆಂದರೆ! ಮತ್ತದನ್ನು ತಾನೇ ಪ್ರೇಕ್ಷಕಿಯಾಗಿ ನೋಡುತ್ತ ಕೂರುವುದು? ಅದು, ಆ ದೃಶ್ಯ ಸರಿಯಾಗಿ ಬರದಿದ್ದರೆ ಅದನ್ನು ಟೀಕಿಸಲು ಸಾಧ್ಯವೆ? ಯಾವ ನೆಲೆಗಟ್ಟಿನಿಂದ ಅನ್ನುವುದು ಇನ್ನೊಂದೇ ಪ್ರಶ್ನೆ!


ಮೇಘನಾ ಪೇಠೆ ಕತೆಗಳು
ಅನುವಾದ : ಚಂದ್ರಕಾಂತ ಪೋಕಳೆ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ
ಅಂತರ್ಜಾಲ ತಾಣಕ್ಕೆ ಭೇಟಿ ಕೊಡಿ
ಈಮೇಲ್ ವಿಳಾಸ
ಪುಟಗಳು: 168
ಬೆಲೆ: ತೊಂಭತ್ತು ರೂಪಾಯಿ.

(ಕೃತಜ್ಞತೆ: ರೇಖಾ ಚಿತ್ರ- ಸೃಜನ್, ಕೃತಿಯಿಂದ. ಮೇಘನಾ ಪೇಠೆಯವರ ಚಿತ್ರ- `ದೇಶಕಾಲ' ಸಂಚಿಕೆಯಿಂದ.)

No comments: