Saturday, April 11, 2009

ಮರೆಯುವ ಮುನ್ನ

ತೊಂಭತ್ತರ ದಶಕದ ಸುಮಾರಿಗೆ ಹೊಸ ತಲೆಮಾರಿನ ಅನೇಕ ಸಾಹಿತ್ಯಾಸಕ್ತರಿಗೆ ಲಂಕೇಶರ ಟೀಕೆ ಟಿಪ್ಪಣಿ ಮತ್ತು ಮರೆಯುವ ಮುನ್ನ ಪ್ರತಿವಾರದ ಸೆಳೆತವಾಗಿತ್ತು. ಚೆನ್ನಾಗಿ ಬರೆಯುವುದಕ್ಕೆ ಈ ಓದು ಒಂದು ಬಗೆಯ ಸ್ಫೂರ್ತಿಯಾಗಿತ್ತು. ಲಂಕೇಶ್ ಬರವಣಿಗೆಯಲ್ಲಿ ಭಾವನೆಗಳನ್ನು ಮೀಟಬಲ್ಲ ಒಂದು ಆಪ್ತಧಾಟಿಯ ಜೊತೆಗೇ ಅಷ್ಟೇನೂ ಆಪ್ತವಲ್ಲದ್ದನ್ನು ಕೂಡ ಹಿತವಾಗುವಂತೆ ಹೇಳಬಲ್ಲ ಪ್ರೀತಿ ಇರುತ್ತಿತ್ತು. ಅವರ ಭಾಷೆಯ ಮಾಯಕತೆ ನಮ್ಮನ್ನೆಲ್ಲ ಸೆಳೆಯುತ್ತಿದ್ದಾಗಲೇ ಅವರು ಅದನ್ನು ನಿರಾಕರಿಸುತ್ತಿದ್ದರು. ಚಂದವಾಗಿ ಮಾತನಾಡುವುದು, ಕಸುಬುದಾರಿಕೆಯ ಬರವಣಿಗೆ ಅವರಿಗೆ ಹಿಡಿಸುತ್ತಿರಲಿಲ್ಲ. ಅದೇ ಸಮಯಕ್ಕೆ ಅವರು ಸಾಹಿತ್ಯ, ಕ್ರೀಡೆ, ರಾಜಕೀಯ, ಸಾಮಾನ್ಯ ಜನ, ಪ್ರೇಮ, ಸಿನಿಮಾ, ನಟಿಯರು, ನಾಯಕರು, ಕಾಮ, ಕೃಷಿ, ವ್ಯಾಪಾರ, ನೀರಾವರಿ, ಧರ್ಮ, ವಿದೇಶೀಯರು ಎಂದು ಯಾವುದರ ಕುರಿತು ಬರೆಯತೊಡಗಿದರೂ ಬೋರಾಗುತ್ತಿರಲಿಲ್ಲ ಮಾತ್ರವಲ್ಲ ಅದರಲ್ಲಿ ಏನಾದರೂ ಹೊಸತು, ನಮಗೆ ತಿಳಿಯದ್ದು ಇದ್ದೇ ಇರುತ್ತಿತ್ತು. ಅದು ಬರೇ ಭಾಷಾಡಂಬರವೋ, ಪಾಂಡಿತ್ಯ ಪ್ರದರ್ಶನವೋ, ಸ್ವಪ್ರತಿಷ್ಠೆಯೋ ಆಗಿ ಮುಗಿಯುತ್ತಿರಲಿಲ್ಲ. ಇದು ನಮಗೆಲ್ಲ ಒಂದು ವಿಸ್ಮಯ ಮತ್ತು ಅವರ ಅಪಾರ ಓದು ಮತ್ತು ತಿಳುವಳಿಕೆಯ ಕುರಿತು ಹೊಟ್ಟೆಕಿಚ್ಚು ಕೂಡ ಹುಟ್ಟಿಸುತ್ತಿತ್ತು.

ಈಗ ಅವರ ಟೀಕೆ ಟಿಪ್ಪಣಿ ಮೂರು ಸಂಪುಟಗಳಲ್ಲಿ ಲಭ್ಯವಿದೆ. ಹೊಸದಾಗಿ ಮರೆಯುವ ಮುನ್ನ ಒಂದು ಸಂಪುಟ ಹೊರಬಂದಿದೆ. ಬಂಜಗೆರೆ ಜಯಪ್ರಕಾಶ್ ಈ ಬಗೆಯ ಬರಹಗಳ ಮೋಡಿ ಮತ್ತು ಮಹತ್ವದ ಬಗ್ಗೆ ವಿಶ್ಲೇಷಣಾತ್ಮಕವಾದ ಒಂದು ಒಳ್ಳೆಯ ಪ್ರವೇಶಿಕೆಯನ್ನೂ ಈ ಕೃತಿಯಲ್ಲಿ ನೀಡಿದ್ದಾರೆ.

ಈ ಮರೆಯುವ ಮುನ್ನ ಹೆಸರಿನ ಅಂಕಣದ ಶೈಲಿ, ಚೌಕಟ್ಟು ವಿಚಿತ್ರವಾದದ್ದು. ಹಾಗೆ ನೋಡಿದರೆ ಇದಕ್ಕೆ ಚೌಕಟ್ಟೇ ಇರಲಿಲ್ಲ. ಎಲ್ಲವೂ ಚುಟುಕಾಗಿ, ಪುಟ್ಟ ಟಿಪ್ಪಣಿಯಂತೆ ಇರುತ್ತಿದ್ದುದು ಇದರ ವಿಶೇಷ ಆಕರ್ಷಣೆ. ಎಲ್ಲಿಂದಲೋ ಇದ್ದಕ್ಕಿದ್ದಂತೆ ಆರಂಭಗೊಂಡು ಕುತೂಹಲಕರವಾಗಿ ಮುಂದುವರಿಯುತ್ತಿದ್ದ ಈ ಪುಟ್ಟ ಪುಟ್ಟ ಟಿಪ್ಪಣಿಗಳಲ್ಲಿ ರಂಜನೆ, ಬೋಧನೆ, ಪ್ರಚೋದನೆ ಎಲ್ಲವೂ ಇರುತ್ತಿತ್ತು. ಅದಕ್ಕಿಂತ ಮುಖ್ಯವಾಗಿ ಅದು ಮೇಲೆ ಹೇಳಿದ ಎಲ್ಲಾ ರಂಗಗಳ, ವಿದ್ಯಮಾನಗಳ, ವಿಚಾರಗಳ ಒಂದು ಸರಳ ಚಾವಡಿಯಾಗಿತ್ತು. ಅಲ್ಲಿ ಗಹನವಾದದ್ದು, ಕ್ಲಿಷ್ಟವಾದದ್ದು ಇರಲೇ ಇಲ್ಲವೆಂದಲ್ಲ. ಅಂಥದ್ದನ್ನು ಸುಮ್ಮನೇ ಪ್ರಚೋದಿಸಿ ಸುಮ್ಮನಾಗುತ್ತಿದ್ದ ಬರಹಗಳೇ ಹೆಚ್ಚು.

ಒಳ್ಳೆಯ ಒಂದು ಪುಸ್ತಕದ ಬಗ್ಗೆ, ನಾಟಕ, ಸಿನಿಮಾ, ದೇಶ, ಜನರ ಬಗ್ಗೆ ಲಂಕೇಶ್ ಬರೆಯುತ್ತಿದ್ದುದರಿಂದ ಅವುಗಳನ್ನೆಲ್ಲ ಸ್ವತಃ ತಿಳಿದುಕೊಳ್ಳಲಾರದ ನನ್ನಂಥವರಿಗೆ ಲಂಕೇಶ್ ಒಂದು ಸೋರ್ಸ್ ಆಗಿಬಿಟ್ಟಿದ್ದರು. ಇದು ನಮಗೇ ತಿಳಿಯದಂತೆ ನಮ್ಮ ಅಭಿರುಚಿಯನ್ನು, ಆಸಕ್ತಿ, ಕುತೂಹಲವನ್ನು ಬೆಳೆಸಿತು. ತೇಜಸ್ವಿ ನಮಗೆ ಆಗ ಓದಲು ಸಿಗುತ್ತಿದ್ದುದೇ ಲಂಕೇಶ್ ಪತ್ರಿಕೆಯಲ್ಲಿ ಎನ್ನುವುದು ಕೂಡ ಒಂದು ಮಹತ್ವದ ಅಂಶವಾಗಿತ್ತು. ನನಗೀಗಲೂ ನೆನಪಿರುವಂತೆ ನಾನು ಒಮ್ಮೆ ತೇಜಸ್ವಿಯವರ ಕೃತಿಗಳ ಕುರಿತು, ಅವುಗಳ ಲಭ್ಯತೆ ಕುರಿತು ಕೇಳಿ ಬರೆದ ಪತ್ರಕ್ಕೆ ವಿವರವಾದ ಉತ್ತರ ಕೂಡ ಲಂಕೇಶರ ಕಚೇರಿಯಿಂದ ಬಂದಿತ್ತು. ಇಂಥದ್ದನ್ನೆಲ್ಲ ಇವತ್ತು ಯಾವುದೇ ಸಂಪಾದಕರಿಂದ ನಿರೀಕ್ಷಿಸುವಂತಿಲ್ಲ ಎನ್ನುವುದು ನಿಜ.

ಪ್ರಸ್ತುತ ಪುಸ್ತಕದಲ್ಲಿ ಹೊಸದೇನಿಲ್ಲ. ಲಂಕೇಶರನ್ನು ಮೆಚ್ಚಿಕೊಂಡವರೆಲ್ಲ ಖಂಡಿತವಾಗಿ ಓದಿಯೇ ಇರುವ ಅವೇ ಟಿಪ್ಪಣಿಗಳು ಇಲ್ಲಿ ಇರುವುದು. ಆದರೆ, ಆ ಮಾರ್ದವದ, ಅಭಿರುಚಿಯ, ಮರೆಯಬಾರದ ಟಿಪ್ಪಣಿಗಳನ್ನು ನೆನೆದು ಲಂಕೇಶ್ ಬದುಕಿರಬೇಕಿತ್ತು ಎಂದು ಹಳಹಳಿಸುವ ಮನಸ್ಸುಗಳಿಗೆ ಈ ಪುಸ್ತಕ ಬಹಳ ಮಹತ್ವದ್ದು, ಸಂಗ್ರಾಹ್ಯವಾದದ್ದು, ಮತ್ತೆ ಮತ್ತೆ ಓದಲು ಬೇಕೆನಿಸುವಂಥದ್ದು. ಅಲ್ಲಿಂದ ಆಯ್ದ ಕೆಲವು ಸಾಲುಗಳು...

"ಆದರೆ ಸಾಹಿತ್ಯದಲ್ಲಿ ಸದಾ ಮುಳುಗಿರುವವರು ನಿಜವಾದ ಬಿಸಿಲು, ಗಾಳಿ, ನೆರಳು, ಹೂ, ಚಿಗುರುಗಳನ್ನು ತಾವೇ ಗಮನಿಸದೆ ಇರುವ ಅಪಾಯವಿದೆ. ಪುಸ್ತಕ ಕೀಟ ಕೂಡ ಅಂತರ್ಮುಖಿ. ಹೀಗೆ ಬರೆಯುತ್ತಿರುವ ಈ ಶುಕ್ರವಾರ ಮಧ್ಯಾಹ್ನ ಬಿಸಿಲು ಮುನಿಸಿಕೊಂಡು ಮೋಡದ ಮರೆಗೆ ಹೋಗಿದೆ." (ಪುಟ 3)

"ಎಂದೂ ಗೊಣಗದ ಮೌನಿಯಾದ ಮರ."(ಪುಟ 11)

"ಹುಡುಗಿ ಚೆನ್ನಾಗಿ ಮಾತಾಡ್ತಾಳೆ ಸಾರ್. ಇವತ್ತು ಮೂಡ್ ಇರಲಿಲ್ಲ ಅಂತ ಕಾಣುತ್ತೆ. ಆಕೆ ಮೊನ್ನೆ ತಾನೇ ಕಾಲೇಜಿನಲ್ಲಿ ಡಿಬೇಟರ್ ಆಗಿದ್ಲು..." ಅಂದ ಒಬ್ಬ.
ನಮ್ಮಲ್ಲಿ ಮಾತು ಹೇಗೆ ಕಲೆಯಾಗಿಯೇ ಉಳಿಯುತ್ತದೆ! "(ಪುಟ 13)

"ಹಾಗೆಯೇ ಸಾಹಿತ್ಯ ಕೃತಿ ಕೂಡ. ಕವಿ ತನ್ನ ಖಾಸಗಿ ಅಳಲಿನಿಂದ ಮಾತ್ರ ಬರೆದ ಕವನ ಬಡವಾಗಿರುತ್ತದೆ; ಅವನಂಥ ಎಲ್ಲ ವ್ಯಕ್ತಿಗಳ ಒಂದು ಜನಾಂಗದಿಂದ ಬಂದ ಕವನ ತೀವ್ರವೂ ಗಾಢವೂ ಆಗಿರುತ್ತದೆ. ನಾಟಕವೂ ಅಷ್ಟೇ." (ಪುಟ 80)

"ಬೊಮ್ಮಾಯಿ, ಜತ್ತಿ, ದೇವೇಗೌಡ, ವೀರೇಂದ್ರ ಪಾಟೀಲ ಮುಂತಾದವರು ಈ ರಾಜ್ಯಕ್ಕಾಗಿ ಹಗಲಿರುಳೂ ಬೆವರು ಸುರಿಸಿ ಎಲ್ಲರೂ ನಿಟ್ಟುಸಿರಿಡುವಂತೆ ಮಾಡಿದ್ದರೂ ನೀರು ಕೊಟ್ಟ ನಜೀರರನ್ನು ಹೊಗಳುವುದನ್ನು ಅವರು ಹೇಗೆ ಸಹಿಸಿಯಾರು?" (ಪುಟ 119)

"ನನ್ನ ಪಾಲಿಗಂತೂ ಭಾಷಣ ಕಲೆಯಲ್ಲ, ಕಸುಬಲ್ಲ; ಆದಷ್ಟೂ ಪ್ರಯತ್ನಿಸಿ ಅಂತರಂಗಕ್ಕೆ ಮಾತಾಡುವುದು, ಜನರು ಮತ್ತು ನಾನು ಯೋಚಿಸಿದ್ದನ್ನು ಮತ್ತೊಮ್ಮೆ ಹೆಣೆಯುವುದು, ಕಲೆಯಿಂದ ಮೆಚ್ಚಿಸುವುದು ನನ್ನ ಉದ್ದೇಶವಲ್ಲ. ಅನ್ನಿಸಿಕೆಯನ್ನು ಹಂಚಿಕೊಳ್ಳುವುದು ನನ್ನ ಖುಷಿ." (ಪುಟ 122)

"ಇವರೇ (ರಾಮಚಂದ್ರ ಶರ್ಮ) ಭಾಷಾಂತರಿಸಿದ ರೊಬರ್ಟೋ ಹುವರೋಸ್ ಎಂಬ ಕವಿಯ ಸಾಲು (ಈತ ಅರ್ಜೆಂಟೀನಾ ಕವಿ) ಮತ್ತೆ ಮತ್ತೆ ನೆನಪಾಗುತ್ತಿದೆ.
ಮೌನ ಒಂದು ಗುಡಿ,
ಅಲ್ಲೇಕೆ ದೇವರು?
- ಈ ಮಾತು ಎಷ್ಟು ಚೆನ್ನಾಗಿದೆ! ದೇವರಿಗಾಗಿ ತಪಸ್ಸು ಮಾಡುವವನ ಕ್ರಿಯೆಯಲ್ಲೇ ದೈವತ್ವವಿರಬೇಕು - ಮೌನ ಮತ್ತು ಏಕಾಗ್ರತೆ ಆ ಶಕ್ತಿ ಪಡೆದಿದೆ, ಅಲ್ಲವೆ? " (ಪುಟ 125)

"1988 ನನ್ನ ಅನೇಕ ಗೆಳೆಯರನ್ನು ಕರೆದುಕೊಂಡು ಚರಿತ್ರೆ ಸೇರುತ್ತಿದೆ; ಗೆಳೆಯರು ಸಾಯುವುದು ಅಂದರೆ ನಾನು ಹೆಚ್ಚು ಏಕಾಂಗಿಯಾಗುತ್ತಿದ್ದೇನೆ ಎಂದು ಅರ್ಥ; ಅಥವಾ ನನ್ನ ಬಾಗಿಲ ಮೇಲೆ ಕೂಡ ಸಾವು ತಟ್ಟುವ ಸಾಧ್ಯತೆ ಕಾಣುತ್ತಿದೆ. ಅಂದರೆ ಬದುಕುವ ಕ್ಷಣಗಳ ತ್ವರೆ, ಸೊಗಡು ಹೆಚ್ಚುತ್ತದೆ. ಬದುಕಿನ ಸಂಕ್ಷಿಪ್ತತೆ ಕೂಡ ಇದರಿಂದ ಗೊತ್ತಾಗುತ್ತದೆ." (ಪುಟ 153)

"ಒಳ್ಳೆಯ ಕಾವ್ಯ ಕಂಡೊಡನೆ ‘ಓಹ್!’ ಅನ್ನಿಸುವಂತೆ ಈ ಅಂತರ್ವಾಣಿ ಕೇಳಿದಾಗ ಚಕಿತಗೊಳ್ಳುತ್ತೇವೆ. ಅಂತರ್ವಾಣಿಯಲ್ಲದೆ ಕೇವಲ ನುಡಿಯುವ ಹುಮ್ಮಸ್ಸಿನಿಂದ ಬಂದದ್ದು ಮಾತು, ಅದು ಕೇವಲ ಮಾರ್ಗದರ್ಶನ. ಸ್ಫೂರ್ತಿಯಿಂದ ಬಂದ ಅಂತರ್ವಾಣಿಗೆ ಮಾಂತ್ರಿಕತೆ ಇರುತ್ತದೆ." (ಪುಟ 166)

"ನಮ್ಮ ತೇಜಸ್ವಿ ಹೇಳಿದರು, "ಪ್ರಗತಿರಂಗದ ಸಭೆಗಳನ್ನು ಬಸ್‌ಸ್ಟ್ಯಾಂಡ್, ಬಜಾರ್‌ಗಳಲ್ಲಿ ಇಟ್ಟುಕೊಳ್ಳುವ ಬದಲು ಯಾವುದಾದರೂ ಹಾಲ್ ಅಥವಾ ಕೋಣೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು."

ನಾನು ಯೋಚಿಸಿದೆ. ನಮ್ಮ ಬಹುಪಾಲು ಸಮಾಜವಾದಿಗಳು, ಬುದ್ಧಿಜೀವಿಗಳು ಬೆವರಿನ ವಾಸನೆಗೆ ಹಿಮ್ಮೆಟ್ಟುತ್ತಾರೆ. ಚರ್ಚೆ, ವಿವಾದ, ವಿಶ್ಲೇಷಣೆಗಳನ್ನು ಮೆಚ್ಚುತ್ತಾರೆ. ಆದರೆ ರಾಜಕೀಯವೆಲ್ಲ ಬರಡಾದದ್ದು ಈ ಹಾಲ್ ಮತ್ತು ಕೋಣೆಗಳಲ್ಲಿ. ಹರಕಲು ಅಂಗಿಯ ಬೀದಿಯ ಮನುಷ್ಯನನ್ನು ಪುಢಾರಿಗಳ ಭಾಷಣಕ್ಕೆ ಬಿಟ್ಟು ನಾವು ನಮ್ಮ ಮಿದುಳಿನ ವ್ಯಾಯಾಮದಲ್ಲಿ ನಿರತರಾಗಬಾರದು. ಬೀದಿಯ ಮನುಷ್ಯ ನಮ್ಮ ಭಾಷಣದ ಶೈಲಿ, ನುಡಿಕಟ್ಟನ್ನು ಬದಲಿಸುತ್ತಾನೆ; ಅತ್ಯಂತ ಗಾಢ ವಿಷಯಗಳನ್ನು ಮನನಾಟುವಂತೆ ಹೇಳುವುದನ್ನು ಈತ ನಮಗೆ ಕಲಿಸುತ್ತಾನೆ. ಇದು ನಮ್ಮ ವ್ಯಕ್ತಿತ್ವದ ಸಮತೋಲನಕ್ಕೆ ಕೂಡ ಮುಖ್ಯ. ಅಲ್ಲದೆ ಮನುಷ್ಯರೆನ್ನಿಸಿಕೊಂಡ ಎಲ್ಲರಿಗೂ ಸಮಾನವಾದ ಲಹರಿಗಳಿವೆ, ನೋವು ನಲಿವುಗಳಿವೆ; ಜನಸಾಮಾನ್ಯ ನಮ್ಮತ್ತ ಕೈಚಾಚಿ ನಾವು ಆತನತ್ತ ಬಗ್ಗಿದರೆ ದಕ್ಕುವುದು ಬೆವರಿನ ವಾಸನೆ ಮಾತ್ರವಲ್ಲ, ಚಿತ್ರವಿಚಿತ್ರ ಕಾಣ್ಕೆ ನಮ್ಮದೂ ಅವನದೂ ಆಗುತ್ತದೆ." (ಪುಟ 167)

"ಹೊಗಳುಭಟ್ಟರು, ವ್ಯಕ್ತಿಪೂಜೆಗೆ ಒಲಿಯುವವರು, ಶ್ರೀರಾಮನಂಥವರು ದೇವರೋ ಮನುಷ್ಯನೋ ಎಂದು ಕೂಡ ಸ್ಪಷ್ಟವಿಲ್ಲದವರು, ತನಗಿಂತ ಮೇಲಿನ ಸ್ಥಾನದಲ್ಲಿರುವವರೆಲ್ಲ ಪ್ರತ್ಯಕ್ಷ ದೇವತೆ ಎಂದು ನಡುಬಗ್ಗಿಸುವವರು - ಅಲೆಗ್ಸಾಂಡರನನ್ನು ದೇವರೆಂದು ಕರೆದು ದಿಕ್ಕು ತಪ್ಪಿಸಿದ್ದು ಎಲ್ಲರಿಗೆ ಎಂಥ ಪಾಠ!" (ಪುಟ 190)

"ಕಾನೂನಿನ ಪ್ರಕಾರ ಪ್ರಾಮಾಣಿಕವಾಗಿದ್ದೇನೆ ಎನ್ನುವ ಪ್ರತಿಯೊಬ್ಬ ರಾಜಕಾರಣಿಯೂ ದುಷ್ಟನಾಗಿರುತ್ತಾನೆ." (ಪುಟ 191)

ಮರೆಯುವ ಮುನ್ನ
ಲಂಕೇಶ್ ಪ್ರಕಾಶನ
ನಂ.9, ಪೂರ್ವ ಆಂಜನೇಯ ಗುಡಿ ರಸ್ತೆ
ಬಸವನಗುಡಿ, ಬೆಂಗಳೂರು-560004
ದೂರವಾಣಿ: 26676427
ಪುಟಗಳು: 14+215
ಬೆಲೆ: ರೂಪಾಯಿ ನೂರ ಐವತ್ತು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, April 5, 2009

ವ್ಯಾಸಪಥ ಮತ್ತು ಜನಪಥ

ಈಚೆಗೆ, ಅಂದರೆ ಮಾರ್ಚ್ ಇಪ್ಪತ್ತೆರಡರ ಭಾನುವಾರ ಪುತ್ತೂರಿನಲ್ಲಿ ವ್ಯಾಸರ ಒಂದು ಕಥಾಸಂಕಲನ, `ತಪ್ತ' ಬಿಡುಗಡೆಯಾಯಿತು. ತುಷಾರ ಸಂಪಾದಕರಾಗಿ ಕನ್ನಡ ಕಥಾ ಸಾಹಿತ್ಯಕ್ಕೆ ಅದರ ಮ್ಯಾಗಝೀನ್ ಸ್ವರೂಪದಲ್ಲೇ ಹೊಸ ಹರಹು, ರೂಪ, ಪ್ರಯೋಗಶೀಲತೆ ಮತ್ತು ಸೆಳಹು ದೊರಕಿಸಿಕೊಟ್ಟವರು ಈಶ್ವರಯ್ಯ. ವ್ಯಾಸರಿಗೆ ಸಂಬಂಧ ಕೂಡ. ಈ ಪುಸ್ತಕ ಬಿಡುಗಡೆ ಮಾಡಿದವರು ಈಶ್ವರಯ್ಯನವರೇ. ತುಷಾರದ ಜವಾಬ್ದಾರಿ ವಹಿಸಿಕೊಳ್ಳುವ ಸಂದರ್ಭದಲ್ಲಿ ವ್ಯಾಸರಿಂದ ತಿಂಗಳಿಗೊಂದು ಕತೆಯ ವಾಗ್ದಾನ ಕೂಡ ಪಡೆದಿದ್ದರಂತೆ. ಅದೇ ರೀತಿ ತುಷಾರದಲ್ಲಿ ವ್ಯಾಸರು ಆಗಾಗ ಕಾಣಿಸಿಕೊಳ್ಳುತ್ತಿದ್ದರು. ವ್ಯಾಸರನ್ನು ನಾವೆಲ್ಲ ಓದಿದ್ದು ಅಲ್ಲಿಯೇ. ಅಲ್ಲದೆ ಅವರ ಕಥಾಸಂಕಲನ ಎಂಬುದಾದರೂ ಎಲ್ಲಿತ್ತು? ಕಳೆದ ಭಾನುವಾರ ವ್ಯಾಸರ ಮಗ `ತಪ್ತ'ದ ಪ್ರತಿಯನ್ನು ಕೊಡಲು ಮನೆಗೇ ಬಂದಿದ್ದರು. ಮತ್ತೆ ವ್ಯಾಸರ ಕತೆಗಳ ಸ್ವರೂಪ, ವಸ್ತು, ಔಚಿತ್ಯಗಳ ಬಗ್ಗೆ ಕೂಡ ಮಾತು-ಚರ್ಚೆ ನಡೆಯಿತು. ವ್ಯಾಸರ ಕತೆಗಳ ಬಗ್ಗೆ ಹೋದ ವರ್ಷ ಕಸ್ತೂರಿ ಮಾಸಪತ್ರಿಕೆಯ ಸಂಪಾದಕರಾದ ಶ್ರೀ ಅರುಣ ನಾರಾಯಣರು ಲೀಖನವೊಂದನ್ನು ಕೇಳಿದಾಗ ಬರೆದ ಬರಹ ಇಲ್ಲಿದೆ. ಇದು ಡಿಸೆಂಬರ್ ತಿಂಗಳ ಕಸ್ತೂರಿಯಲ್ಲಿ ಅಚ್ಚಾಗಿತ್ತು.

ವ್ಯಾಸರ ಕತೆಗಳನ್ನು ಓದಿದ ಬಹುಮಂದಿ ಅವರ ಕಥೆಗಳೆಲ್ಲ ಸದಾ ನೋವು, ವಿಷಾದ ತುಂಬಿದಂತಿರುತ್ತವೆ, ವಿಲಕ್ಷಣ ಮನೋವ್ಯಾಪಾರವನ್ನು ಕುರಿತಂತೆ ಇರುತ್ತವೆ, ವಿಕ್ಷಿಪ್ತ ಮನಸ್ಸುಗಳ ಒಂದು ಲೋಕ ಇಲ್ಲಿ ತೆರೆದುಕೊಳ್ಳುತ್ತದೆ ಎಂದೆಲ್ಲ ಬಗೆಬಗೆಯಾಗಿ ಹೇಳುತ್ತಾರೆ. ಅದೆಲ್ಲ ನಿಜ. ಆದರೆ ಅಂಥ ಒಂದು ವಿಲಕ್ಷಣ ಜಗತ್ತನ್ನೇ ವ್ಯಾಸರು ತಮ್ಮ ಕತೆಗಳಿಗಾಗಿ ಯಾಕೆ ಆಯುತ್ತಿದ್ದರು ಎಂಬುದನ್ನು ನಾವು ಅರ್ಥಮಾಡಿಕೊಳ್ಳಲು ಹೊರಟರೆ ಅದು ನಮ್ಮನ್ನು ವ್ಯಾಸರ ಜೀವನದೃಷ್ಟಿ, ಅವರ ಚಿಂತನೆಯ ಆಳ ಮತ್ತು ಅವರ ಬದುಕಿನ ತಪಸ್ಸು -ಇವುಗಳಿಗೆ ಮುಖಾಮುಖಿಯಾಗಿ ನಿಲ್ಲಿಸುತ್ತದೆ.

ಒಬ್ಬ ಕತೆಗಾರನ ಕತೆಗಳು, ಆತ ಸೃಷ್ಟಿಸುವ ಪಾತ್ರಗಳು, ಕತೆಗಾರನಿಗೇ ವಿಶಿಷ್ಟವಾದ ಒಂದು ಜಗತ್ತು ಕತೆಗಾರನ ಕುರಿತೂ ನಮಗೆ ಅಷ್ಟಿಷ್ಟು ಮಾಹಿತಿಯನ್ನು ನೀಡುತ್ತಿರುತ್ತವೆ. ಆತ ಪದೇ ಪದೇ ಬಳಸುವ ಭೌಗೋಳಿಕ ಪರಿಸರ ಆತ ಇಲ್ಲಿಯವನೇ ಇರಬೇಕು ಎನಿಸುವಂತೆ, ಆತ ಪದೇ ಪದೇ ನೀಡುವ ವೃತ್ತಿರಂಗದ ವಿವರಗಳು ಆತ ಇಂಥ ನೌಕರಿಯಲ್ಲೇ ಇದ್ದಿರಬಹುದು ಎನಿಸುವಂತೆ, ಆತನ ಹಿನ್ನೆಲೆ, ಬದುಕುತ್ತಿರುವ ಪರಿಸರ-ಪರಿಸ್ಥಿತಿಗಳ ಕಡೆಗೆ ಅಸ್ಪಷ್ಟವಾದ ಕೆಲವು ಚಿತ್ರಗಳನ್ನು ನಮ್ಮ ಮನಸ್ಸಿನಲ್ಲಿ ಮೂಡಿಸುತ್ತದೆ. ಆದರೆ ಇದು ಸತ್ಯವಾಗಿರಬೇಕಾದ ಅಗತ್ಯವಿಲ್ಲ ಎಂಬುದು ಕೂಡ ನಮಗೆ ತಿಳಿದಿರುತ್ತದೆ. ಹಾಗೆಯೇ ಆತ ಸೃಜಿಸುವ ಪಾತ್ರಗಳ ಮನೋಧರ್ಮ, ವ್ಯಕ್ತಿತ್ವ, ಬದುಕು ಕೂಡ ಕತೆಗಾರನ ವ್ಯಕ್ತಿತ್ವದ ಕುರಿತು ಬೇರೆಯೇ ಆದ ಒಂದು ಕಲ್ಪನೆಗೆ ಕಾರಣವಾಗುವುದು ಕೂಡ ಸತ್ಯ. ಆದಾಗ್ಯೂ ಕತೆಗಾರನ ಬದುಕು ಮತ್ತು ಬರವಣಿಗೆಯ ನಡುವಿನ ತಂತುಗಳನ್ನು ಅರ್ಥಮಾಡಿಕೊಳ್ಳಲು ಹೊರಟರೆ ಅದು ನಮ್ಮನ್ನು ವಿಸ್ಮಯಕಾರಕ ದರ್ಶನವೊಂದರತ್ತ ಕರೆದೊಯ್ಯಬಹುದು. ವ್ಯಾಸರ ಮಟ್ಟಿಗೆ ಈ ಮಾತು ದಿಟ. ವ್ಯಾಸರ ಪಾತ್ರಗಳು, ಆ ಪಾತ್ರಗಳ ವ್ಯಕ್ತಿತ್ವ ಮತ್ತು ಮನೋಧರ್ಮ ಹಾಗೂ ಪರೋಕ್ಷವಾಗಿ ಆ ಪಾತ್ರಗಳ ಸಮಗ್ರ ಬದುಕನ್ನು ನಾವು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಂತೆಲ್ಲ ಇದು ಹೆಚ್ಚು ಹೆಚ್ಚು ಸ್ಫುಟಗೊಳ್ಳುತ್ತದೆ.

ಇಲ್ಲಿ ಎರಡು ಬಗೆಯ ಸೂಕ್ಷ್ಮಗಳಿವೆ. ಒಂದು, ನಮ್ಮ ಜೀವಿತಾವಧಿಯಲ್ಲಿ ನಮಗೆ ಎಂದಾದರೂ ಒಬ್ಬ ವ್ಯಕ್ತಿಯನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಾಗಿದೆಯೆ ಎಂಬ ಪ್ರಶ್ನೆ. ಇದರ ಅವಳಿ ಪ್ರಶ್ನೆ, ನಮಗೆ ನಾವೇ ಎಂದಾದರೂ ಪೂರ್ತಿಯಾಗಿ ಅರ್ಥವಾಗಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯವೆ ಎಂಬುದು. ಸ್ವತಃ ನಮಗೇ ನಮ್ಮ ವ್ಯಕ್ತಿತ್ವದ ಅಗೋಚರ ಸಾಧ್ಯತೆಯೊಂದು ಸದಾ ಮುಸುಕಿನಲ್ಲಿ ಮರೆಯಾಗಿದ್ದು ವಿಚಿತ್ರ ಸಂದಿಗ್ಧದ ಪರಿಸ್ಥಿತಿಯೊಂದರಲ್ಲಿ ಇದ್ದಕ್ಕಿದ್ದಂತೆ ಅನಾವರಣಗೊಂಡು ಅಚ್ಚರಿ ಹುಟ್ಟಿಸುವುದಿಲ್ಲವೆ. ಈ ಬಗೆಯ ಅಚ್ಚರಿಗೆ ಕೊನೆಯುಂಟೆ? ಅಷ್ಟರ ಮಟ್ಟಿಗೆ ಮನುಷ್ಯ ಒಂದು ಅನಂತ ಸಾಧ್ಯತೆಗಳಿರುವ, ರಾಕ್ಷಸನ ನೀಚತನವೂ ದೇವತೆಗಳ ಔನ್ನತ್ಯವೂ ಏಕಕಾಲಕ್ಕೆ ಸಾಧ್ಯವಿರುವ ಒಂದು ಸ್ಥಿತಿಯಷ್ಟೇ. ನಾನು ಇಂಥವ ಎಂದು ನಾವು ಹೇಳಿಕೊಳ್ಳುವುದೆಲ್ಲ ಹಾಗೆ ಆಗಬೇಕೆನ್ನುವ ನಮ್ಮ ಆಸೆಯನ್ನು ಸೂಚಿಸುತ್ತದೆಯೇ ಹೊರತು ನಾವು ಈಗಾಗಲೇ ಆಗಿರುವ ಸ್ಥಿತಿಯನ್ನಂತೂ ಅಲ್ಲ.

ಎರಡನೆಯ ಸೂಕ್ಷ್ಮ ಮೊದಲಿನದ್ದರ ಮುಂದುವರಿಕೆಯಾಗಿದೆ. ಪುರಾತನ ಕಾಲದಿಂದಲೂ ಮನುಷ್ಯ ಈ ಬದುಕನ್ನು, ಇಲ್ಲಿನ ಮನುಷ್ಯನನ್ನು, ಆತ ಹೊತ್ತಿರುವ ಮನಸ್ಸನ್ನು ಮತ್ತು ತನ್ಮೂಲಕ ತನ್ನನ್ನೆ ತಾನು ಅರ್ಥಮಾಡಿಕೊಳ್ಳಲು ಹಂಬಲಿಸುತ್ತ ಬಂದಿದ್ದಾನೆ. ಜಗತ್ತಿನ ಯಾವುದೇ ಸಾಹಿತ್ಯ ಕೃತಿಯನ್ನು ತೆಗೆದುಕೊಂಡರೂ ಅದು ಮೂಲಭೂತವಾಗಿ ಶೋಧಿಸುವುದು ಒಂದನ್ನೇ. ಇಲ್ಲಿ ನಾವು ಬದುಕ ಬಹುದಾದ ಅತ್ಯಂತ ಶ್ರೇಷ್ಠವಾದ ವಿಧಾನವೊಂದು ಇದ್ದದ್ದೇಯಾದಲ್ಲಿ ಅದು ಯಾವುದು ಎಂಬ ಶೋಧ. ಮುಂದೆ ಅದನ್ನು ನಾವು ಆಧ್ಯಾತ್ಮ, ತತ್ತ್ವಶಾಸ್ತ್ರ, ದರ್ಶನಶಾಸ್ತ್ರ, ಉಪನಿಷತ್ತು ಎಂದೆಲ್ಲ ಕರೆದಿರಬಹುದು. ಮತ್ತೆ ಮತ್ತೆ ವಿವರಿಸಲ್ಪಟ್ಟ ರಾಮಾಯಣ, ಭಾರತ, ಭಾಗವತದಿಂದ ಹಿಡಿದು ದೇವನೂರ ಮಹದೇವರ ಕತೆ-ಕಾದಂಬರಿಗಳವರೆಗೂ ಮನುಷ್ಯನನ್ನು ಅರ್ಥಮಾಡಿಕೊಳ್ಳುವ, ಮನಸ್ಸನ್ನು ಅರಿಯುವ, ತನ್ಮೂಲಕ ಬದುಕನ್ನು ಅರ್ಥಮಾಡಿಕೊಳ್ಳುವ, ಎಲ್ಲದರ ಮುಖೇನ ತನ್ನನ್ನು ತಾನು ಅರಿಯುವ ಯತ್ನವೇ ನಡೆದಿದೆ. ಸಾಹಿತ್ಯದ ರಚನೆ ಹೀಗೆ ಆಗಿದೆ, ಅದರ ಓದು ಕೂಡ ಇಂಥ ಉದ್ದೇಶದಿಂದಲೇ ನಡೆಯುತ್ತಿದೆ, ಅರಿತು ಅಥವಾ ಅರಿಯದೆಯೆ.

ಬರಹಗಾರನೊಬ್ಬ ಬರವಣಿಗೆಯನ್ನು ತನ್ನ ಮನಸ್ಸಿನಲ್ಲಿ ಮತ್ತೆ ಮತ್ತೆ ಎದ್ದೇಳುವ ಬದುಕಿನ ಮೂಲಭೂತ ಪ್ರಶ್ನೆಗಳನ್ನು ಎದುರಿಸಲು ಬಳಸಿಕೊಳ್ಳುತ್ತಾನೆ. ಮೊದಲಿಗೆ ಎಲ್ಲರಂತೆ ಒಬ್ಬ ಸಾಮಾನ್ಯ ಓದುಗನಾಗಿ ಮತ್ತು ಆನಂತರ ಸ್ವತಃ ಒಬ್ಬ ಬರಹಗಾರನಾಗಿ. ತನ್ನ ಬದುಕು, ತಾನು ಕಂಡ, ಕೇಳಿದ, ಸ್ವತಃ ಅನುಭವಿಸಿದ ಮತ್ತು ತನಗೆ ಗಾಢವಾಗಿ ತಟ್ಟಿದ ಸಂಗತಿಗಳ ಆಧಾರದ ಮೇಲೆ ಅವುಗಳನ್ನು ತನ್ನ ಕಲ್ಪನೆಯಲ್ಲಿ ಇನ್ನಷ್ಟು ಹಿಗ್ಗಿಸಿ, ಕುಗ್ಗಿಸಿ, ಬದಲಿಸಿ, ಇನ್ಯಾವುದರೊಂದಿಗೋ ಬೆರೆಸಿ ತನ್ನ ಅರಿವಿನ ಆಳ-ಅಗಲಗಳನ್ನು ವಿಸ್ತರಿಸಿಕೊಳ್ಳುತ್ತಲೇ ಸಾಗುವ ಪ್ರಕ್ರಿಯೆ ಅದು. ಸೃಜನಶೀಲ ಬರವಣಿಗೆ ವಾಸ್ತವ ಕಲ್ಪನೆಗಳ ಒಂದು ಹದವಾದ ಸಂಗಮದಿಂದ ಬಹಳಷ್ಟನ್ನು ಸಾಧಿಸುವ ಕಸುವುಳ್ಳದ್ದು.

ನಾನು ಯಾರು, ನನ್ನ ಹುಟ್ಟು ಇಲ್ಲೇಕೆ ಆಗಿದೆ, ಬದುಕು ಎಂದರೆ ಏನು, ಯಾಕೆ ಬದುಕಬೇಕು, ಹೇಗೆ ಬದುಕಬೇಕು, ಹುಟ್ಟುವಾಗಲೇ ಕೆಲವರಲ್ಲಿ ಕೆಲವು ವಿಶೇಷ ಅರ್ಹತೆಗಳಿರುತ್ತವಲ್ಲ, ಅವು ಎಲ್ಲಿಂದ ಬಂದವು, ಜೀನ್ಸ್ ಎಂದು ವಿಜ್ಞಾನ ವಿವರಿಸುವುದಕ್ಕೂ ಪುನರ್ಜನ್ಮ ಎಂದು ಇನ್ನು ಕೆಲವರು ಹೇಳುತ್ತಿರುವುದಕ್ಕೂ ಸಂಬಂಧವಿದೆಯೆ, ಇವೆರಡೂ ಸಂಧಿಸುವ ಬಿಂದುವೊಂದು ಇದ್ದಿರಬಹುದೆ, ಸಾವು ಅಂದರೆ ಏನು, ಸತ್ತನಂತರ ಏನಾದರೂ ಇದೆಯೆ ಅಥವಾ ಬರೀ ಮಣ್ಣು-ಬೂದಿಯೇ ಈ ದೇಹದ ಅಂತ್ಯವೆ, ದೇಹಕ್ಕೂ ಮನಸ್ಸಿಗೂ ಪ್ರತ್ಯಪ್ರತ್ಯೇಕ ಅಸ್ತಿತ್ವವಿದೆಯೆ ಅಥವಾ ಇವು ಒಂದರ ಹೊರತು ಇನ್ನೊಂದು ಇಲ್ಲವೆ, ಹಾಗಿದ್ದರೆ ಮಲಗಿದ್ದಾಗ ದೇಹದ ಪ್ರಜ್ಞೆ ತಕ್ಕ ಮಟ್ಟಿಗಾದರೂ ಮರವೆಯಾಗುತ್ತದಲ್ಲ, ಮರವೆಯಾಗಿದ್ದೂ ಒಂದು ಅಸ್ತಿತ್ವ ಕನಸು, ಕಲ್ಪನೆ, ಭ್ರಮೆ ಇತ್ಯಾದಿಗಳಲ್ಲಿ ಕ್ರಿಯಾಶೀಲವಾಗಿರುತ್ತದಲ್ಲ, ಅದೇನು? ಬದುಕಿನುದ್ದಕ್ಕೂ ಕಲಿತ ವಿದ್ಯೆ, ಗಳಿಸಿದ ಜ್ಞಾನ ಸಾವಿನೊಂದಿಗೆ ಕೊನೆಯಾಗಬೇಕೆ, ಬದುಕು ಅನುಭವಗಳ ಮೊತ್ತವಾದರೆ ಈ ಅನುಭವಗಳಿಂದ ಮನುಷ್ಯ ಮಾಗುತ್ತಾ ಹೋಗುವ ವ್ಯಾಯಾಮದ ಉದ್ದೇಶವೇನು, ಯಾರಿಗೆ ಏನಾಗಬೇಕಿದೆ ಇದೆಲ್ಲದರಿಂದ, ಮನುಷ್ಯ ಸಂಬಂಧಗಳು ಯಾಕೆ ಇಷ್ಟು ತೊಡಕಿನದ್ದಾಗಿ ಕಾಡುವ ಸಂಗತಿಯಾಗಬೇಕು, ಯಾಕೆ ಮನಸ್ಸಿಗೆ ಕೆಲವರು ಇಷ್ಟ, ಕೆಲವರು ಅನಿಷ್ಟ ಮತ್ತು ಕೆಲವರು ಕಷ್ಟವಾಗುತ್ತಾರೆ .....ಇತ್ಯಾದಿ ಪ್ರಶ್ನೆಗಳಿವು.

ಎಲ್ಲ ಬರಹಗಾರರಲ್ಲೂ ಇವೇ ಪ್ರಶ್ನೆಗಳು ಏಳಬೇಕೆಂದಿಲ್ಲ. ನಮ್ಮ ಕಣ್ಣುಗಳು ದಿನವೂ ನೋಡುವ ಜಗತ್ತು ನೀಡುವ ನೋಟ ಸಾಂಸಾರಿಕವೋ ಸಾಮಾಜಿಕವೋ ಆಗಿ ಮುಖ್ಯವಾದದ್ದು. ಹಾಗೆಯೇ ನಮ್ಮ ಅಂತಃಚಕ್ಷುಗಳಿಗೆ ಮಾತ್ರವೇ ಕಾಣುವ ಮನೋಲೋಕದ ಅಮೂರ್ತ ಹೊಯ್ದಾಟಗಳು ವ್ಯಕ್ತಿಯ ಮಾಗುವಿಕೆಯ ಹಾದಿಯಲ್ಲಿ ಮುಖ್ಯವಾದವು. ವ್ಯಾಸರ ಪ್ರಧಾನ ಕಾಳಜಿ ಇದ್ದಿದ್ದು ಎರಡನೆಯದರತ್ತ. ಮನುಷ್ಯ-ಮನಸ್ಸು-ಬದುಕು ಎಂಬ ನೆಲೆಯಲ್ಲಿ ಮನುಷ್ಯ ಸಂಬಂಧಗಳು ಅವರಿಗೆ ಕುತೂಹಲಕರ ಅನಿಸುತ್ತದೆ. ಮನುಷ್ಯ ಸಂಬಂಧಗಳು ಎಂದಾಗ ಗಂಡು ಹೆಣ್ಣು ಸಂಬಂಧ ಮತ್ತು ಕಾಮ-ಪ್ರೇಮದ ಸಂಬಂಧಗಳು ಸಹಜವಾಗಿಯೇ ಪ್ರಧಾನವಾಗುತ್ತವೆ.

ಅವರು ಬರೆದ ಒಂದು ಪತ್ರದಲ್ಲಿನ ಮಾತುಗಳನ್ನು ಗಮನಿಸಿದರೆ ಮನುಷ್ಯನ, ಮನಸ್ಸಿನ, ಭಾವನೆಗಳ ಕುರಿತ ಅವರ ಕುತೂಹಲ, ಆಸಕ್ತಿ ಅರ್ಥವಾಗುತ್ತದೆ.

"ನಿಮ್ಮ ಪತ್ರ ಅನಿರೀಕ್ಷಿತವಾಗಿತ್ತು ಮತ್ತು ಸಂತೋಷಕೊಟ್ಟಿತು. ಸುಮ್ಮನೇ ನಾಳೆ ಏನು ಬರೆಯಲಿ? ಎಂಬ `ಉಷಾಕಿರಣ'ದ ಕಾಲಂನ ಯೋಚನೆಯಲ್ಲಿ ಮತ್ತು ಮಧ್ಯೆ ಮಧ್ಯೆ ಹುಚ್ಚು ಹೊಳೆಯಾಗಿ ಬರುವ ಆಸೆ, ನಿರಾಶೆ, ಇತ್ಯಾದಿ ಭಾವಗಳ ಒತ್ತಡದಲ್ಲಿ ಕವನ, ಕತೆ, ಹೀಗೆಲ್ಲಾ ಮನಸ್ಸಿನಲ್ಲೇ ಶಬ್ದ ಕಟ್ಟುವುದರಲ್ಲಿ ಸಮಯ ಜಾರುತ್ತಿರುತ್ತಿತ್ತು. ಜೊತೆಗೆ ತೋಟದ ಕೆಲಸ ಆರಂಭವಾಗಿ ವಿಪರೀತ ಕಿರಿಕಿರಿಯಾಗುತ್ತಿತ್ತು. ನಿಮ್ಮ ಪತ್ರದ ಜೊತೆ ತುಂಬಾ ಹೊತ್ತು `ಕಳೆದೆ'....

"ಅಸಲಿಗೆ ಕತೆಗಳು ಮಾಡಬಹುದಾದದ್ದೆಂಬ ಉದ್ದೇಶವೇ ಕತೆಗಳಿಗಿರಬಾರದು. ಕತೆ ಒಂದು ಮನಸ್ಸಿನ ಕುರಿತಾಗಿ ಹೇಳುತ್ತಿರಬೇಕು. ಅಂಥಾ ಮನಸ್ಸುಗಳು ವರ್ತಮಾನದ ವಿವಿಧ ಒತ್ತಡಗಳಿಂದ ನಿತ್ಯನೂತನವಾಗಿ ಕಟ್ಟಲ್ಪಡುತ್ತವೆ. ಹೀಗೆ ಕಟ್ಟಲ್ಪಟ್ಟ ಮನಸ್ಸುಗಳೇ ಮನುಷ್ಯರಾಗಿರುತ್ತಾರೆ. ಇಂತಹಾ ಮನುಷ್ಯರು ಯಾವ ಕಾಲದಲ್ಲೂ ಹೊಚ್ಚ ಹೊಸದಾಗಿ `ಉದ್ಭವಿಸುತ್ತಿರುತ್ತಾರೆ'. ಅತ್ಯಂತ ಜನನಿಬಿಡ ಪೇಟೆ-ಶಹರಗಳಲ್ಲೂ ವಿಪುಲ-ವಿವಿಧ ಮನುಷ್ಯರಿರುತ್ತಾರೆ. ಅವರೊಳಗೆ ಆಶ್ಚರ್ಯಗಳಿರುತ್ತವೆ. ಬೀದಿಯಲ್ಲಿ ಒಂದೇ ಕಡೆ ಚಲಿಸುವ ಜನ ಸಮೂಹ ಒಂದೇ ಕಡೆಗೆ ಹೋಗುತ್ತಿರುವುದಲ್ಲ. ಹಾಗೆ ಶಬ್ದಗಳಲ್ಲಿ ಸವಾರಿ ಮಾಡುವ ಭಾವಗಳು ಯಾವತ್ತೂ ಒಂದೇ ಆಗಿರುವುದಿಲ್ಲ. ಓದುಗ `ಕತೆ'ಯನ್ನು ಕಟ್ಟಬೇಕು. ಅದಕ್ಕೆ ಬೇಕಾದ ಒಡಕು ಅಂಚುಗಳನ್ನು ಕತೆಗಾರ ಬಿಟ್ಟಿರಬೇಕು.....

"ಮಲ್ಲಿಗೆಯಲ್ಲಿ, ಅದಕ್ಕೂ ಹಿಂದೆ `ಪ್ರಪಂಚ'ದಲ್ಲಿ `ಜನಪ್ರಗತಿ'ಯಲ್ಲಿ ನಾಲ್ಕು ನಾಲ್ಕೂವರೆ ದಶಕಗಳಿಗಿಂತಲೂ ಹಿಂದಿನಿಂದ ನನ್ನ ಕತೆಗಳು ಪ್ರಕಟವಾಗುತ್ತಿದ್ದವು. ಕತೆಗಳೆಲ್ಲಾ ಚೌಕಟ್ಟಿಲ್ಲದ ಕತೆಗಳೇ. ಅವೆಲ್ಲಾ ಪೂರ್ತಿಯಾಗಿ ಆಕಾರ ಕಳೆದುಕೊಂಡ ಭಾವವಿಕಾರಗಳೇ ಆಗಿದ್ದವು. ಯಾವ ಓದುಗನೂ ಅದರೊಳಗೆ ಎಲ್ಲೆಂದರೆ ಅಲ್ಲಿಂದ ಪ್ರವೇಶ ಪಡೆಯಬಹುದಾಗಿತ್ತು....

"ಮನುಷ್ಯನಿಗೆ ಅಂತಹಾ ಹೇಳಿಕೊಳ್ಳುವಂತಹಾ ಗುರಿ-ಉದ್ದೇಶಗಳಿರುವುದಿಲ್ಲ. ಆತ ಭಾವಜೀವಿಯಾಗಿರುತ್ತಾನೆ, ಭ್ರಮಾಜೀವಿಯಾಗಿರುತ್ತಾನೆ. ಮನುಷ್ಯ ಜಗತ್ತು ಇವುಗಳಿಂದಲೇ ನಿರ್ಮಾಣವಾಗಿದೆ. ಆಗುತ್ತಲೂ ಇರುತ್ತದೆ....

"ಚೆನ್ನಾಗಿದ್ದೀರಾ....? ಮನಸ್ಸು....?"

ಈ ಆಯ್ದ ಸಾಲುಗಳಲ್ಲಿ ವ್ಯಾಸರಿಗೂ ಮನಸ್ಸು-ಭಾವನೆ-ಭ್ರಮೆಗಳಿಗೂ ಎಂಥ ನಂಟು ಎಂಬುದನ್ನು ಕಂಡುಕೊಳ್ಳಬಹುದಾಗಿದೆ. ನಮ್ಮದೇ ಬದುಕಿನ ಒಂದು ಇಡೀ ದಿನದ ಘಟನಾವಳಿಗಳನ್ನು ಕಣ್ಮುಂದೆ ತಂದುಕೊಂಡು ನಾವು ಭಿನ್ನ ಭಿನ್ನ ವ್ಯಕ್ತಿಗಳೆದುರು, ಘಟನೆಗಳೆದುರು ವಿಭಿನ್ನವಾಗಿ ವರ್ತಿಸುತ್ತ ದಿನ ಕಳೆದುದನ್ನು ಸಾಕ್ಷೀಪ್ರಜ್ಞೆಯಿಂದ ಗಮನಿಸುತ್ತ, ಗಮನಿಸಿದ್ದನ್ನು ದಾಖಲಿಸುತ್ತ ಬಂದರೆ ಒಂದು ಹಂತದಲ್ಲಿ ವ್ಯಕ್ತಿ ಮುಖ್ಯವಲ್ಲ, ಘಟನೆಗಳು ಮುಖ್ಯವಲ್ಲ ಆದರೆ ಎರಡೂ ಸೇರಿ `ಕಾಣಿಸಿದ' ಸತ್ಯ ಮಾತ್ರ ಸದಾ ಕಾಲಕ್ಕೂ ಸಲ್ಲುವ ಸಂಗತಿಯಾಗಿ ಮುಖ್ಯ ಎನ್ನುವುದರ ಅರಿವಾಗುತ್ತದೆ. ಇದು ನಮಗೆ ಬದುಕನ್ನು ಅರಿಯುವ ಒಂದು ಸಾಧನವಾಗುತ್ತದೆ. ಕ್ರಮೇಣ ಇಲ್ಲಿನ ಪ್ರತಿಯೊಂದು ವಸ್ತು, ಪಶು,ಪಕ್ಷಿ,ಪ್ರಾಣಿಯಾದಿಯಾಗಿ ಇಡೀ ಪ್ರಕೃತಿ ಕ್ಷಣಕ್ಷಣಕ್ಕೂ ನೀಡುತ್ತಿರುವ ಸಂದೇಶಗಳು, ಕಲಿಸುತ್ತಿರುವ ಜೀವನದ ಪಾಠಗಳು, ಕಾಣಿಸುತ್ತಿರುವ ಸತ್ಯದ ಹೊಳಹುಗಳು ಶಬ್ದದೊಳಗಣ ನಿಶ್ಶಬ್ದದಂತೆ, ನೋಟದಾಚೆಯ ದೃಶ್ಯದಂತೆ, ಮೌನದಾಳದ ಪಿಸುನುಡಿಗಳಂತೆ ಸ್ಪರ್ಶಕ್ಕೆ ಸಿಗತೊಡಗುತ್ತವೆ. ವ್ಯಾಸರ ಜಗತ್ತು ಅಲ್ಲಿಂದ ತನ್ನ ನಿರ್ಮಿತಿಗೆ ಬೇಕಾದ ಕಲ್ಲು,ಮಣ್ಣು, ಇಟ್ಟಿಗೆಗಳನ್ನು, ಸಾರ-ಸತ್ವ, ನೀರು, ಗೊಬ್ಬರಗಳನ್ನು ಪಡೆದುಕೊಂಡಿತ್ತೆಂದರೆ ಅತಿಶಯೋಕ್ತಿಯಲ್ಲ. ಆದರೆ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ವ್ಯಾಸರು ಬದುಕಿ ಬಾಳಿದ ಪರಿಸರವೆಂತೋ ಅವರ ಏಕಾಂತವನ್ನು, ಮೌನವನ್ನು ಹಂಬಲಿಸುವ ಮನಸ್ಥಿತಿ ಕೂಡ ಇದಕ್ಕೆ ಪೂರಕವಾಗಿದ್ದರಿಂದ ಬಹುಷಃ ಇದೆಲ್ಲ ಅವರಿಗೆ ಕಾಣಿಸುವುದು ಸಾಧ್ಯವಾಗಿರಬೇಕು.

ವ್ಯಾಸರು ಬದುಕಿದ್ದ ಪರಿಸರ ನಗರ, ಊರುಗಳಿಂದ ಸಾಕಷ್ಟು ದೂರದಲ್ಲಿದ್ದ, ಯಾವುದೇ ಗದ್ದಲ, ಗೌಜಿಗಳಿಗೆ ಆಸ್ಪದವಿಲ್ಲದ ಸ್ಥಳ. ವ್ಯಕ್ತಿಗತವಾಗಿ ವ್ಯಾಸರು ಎಂದೂ ಈ ಸ್ಥಳ, ಪರಿಸರವನ್ನು ಬಿಟ್ಟು ನಗರವಾಸಿಯಾಗುವ ಮೋಹಕ್ಕೆ ಒಳಗಾದವರಲ್ಲ. ತನಗೇನು ಬೇಕಿತ್ತೋ ಅದೆಲ್ಲವೂ ಇಲ್ಲೇ ಸಿಗುತ್ತಿತ್ತು, ಚಿಕ್ಕಂದಿನಿಂದಲೂ. ಹಾಗಿರುತ್ತ ತನಗೆಂದೂ ನಗರದ ಆಕರ್ಷಣೆ ಇರಲಿಲ್ಲ ಎನ್ನುತ್ತಿದ್ದರು ವ್ಯಾಸರು. ಅಲ್ಲದೆ ಅವರಿಗೆ ಸಭೆ, ಸಮಾರಂಭ, ಹುಸಿ ಸಂಭ್ರಮದ ಗದ್ದಲವೆಂದರೆ ಸೇರುತ್ತಿರಲಿಲ್ಲ. ಕಾಸರಗೋಡಿನಿಂದ ಒಂದಿಷ್ಟು ಉತ್ತರಕ್ಕೆ ಮಧೂರು ಕ್ಷೇತ್ರಕ್ಕೆ ಹೊರಳುವ ಪೂರ್ವದ ಮಾರ್ಗದಲ್ಲಿ ಸುಮಾರು ಒಂಭತ್ತು ಹತ್ತು ಕಿಲೊಮೀಟರ್ ಒಳಗಿನ ರಾಮದಾಸನಗರದಲ್ಲಿ ಅವರ ಮನೆ `ಕೃಪಾ' ಇದ್ದಿದ್ದು. ಅತ್ಯಂತ ಪ್ರಶಾಂತ ವಾತಾವರಣ. ಹಳೆಯ ಕಾಲದ ವಿಶಾಲವಾದ ಮನೆ. ವ್ಯಾಸರು ಬರೆಯಲು ಕೂರುತ್ತಿದ್ದ ವೃತ್ತಾಕಾರದ ವಿಶಾಲ ಮೇಜಿನ ಪಾರ್ಶ್ವದಲ್ಲಿ ಒಂದು ಇಣುಕುನೋಟಕ್ಕೋ ಎಂಬಂತೆ ಹೊರಗಿನ ಪ್ರಕೃತಿಗೆ ತೆರೆದಿತ್ತು ಆ ಮನೆ. ಅಂಗಳ, ಪುಟ್ಟ ತುಲಸೀಕಟ್ಟೆ, ಸುರಿಯುತ್ತಿದ್ದ ಮಳೆಗೆ ಪಕ್ಕದಲ್ಲಿದ್ದ ಪಾಗಾರದ ಮೇಲೆ ಚಿಗುರಿಕೊಂಡ ಹಸುರಿನ ಚಿತ್ತಾರ ಬಿಡಿಸಿದಂತಿದ್ದ ಪಾಮಾಚಿಗಿಡಗಳು. ವರ್ಷದ ಮುನ್ನೂರೈವತ್ತು ದಿನಗಳೂ ಮೋಡ ಮುಸುಕಿದಂತಿರುತ್ತಿದ್ದ ಮನೆಯದು. ಇಲ್ಲಿ ಸುಖೀ ಮನುಷ್ಯ ವ್ಯಾಸ ಕೂತು ಬರೆಯುತ್ತಿದ್ದರು, ಮನಸ್ಸಿನ ಗಣಿಗಾರಿಕೆಗಿಳಿದ ಕಲೆಗಾರನಂತೆ ಆಳದಾಳಕ್ಕೆ ಇಳಿದು ಸದಾ ಹೊಸದನ್ನು ಮೊಗೆಮೊಗೆದು ತರುತ್ತಿದ್ದರು.

ಈ ಹಳೆಯ ವಿಶಾಲ ಮನೆಯ ನೆಲದುದ್ದಕ್ಕೂ, ಗೋಡೆಗಳೆತ್ತರಕ್ಕೂ, ಕತ್ತಲು ಬೆಳಕಿನ ನೆರಳಿನಾಟದಾಳದಲ್ಲೂ ವ್ಯಾಸರ ಕೈಹಿಡಿದು ನಡೆಸಬಲ್ಲ ಸಶಕ್ತ ಸ್ಮೃತಿಗಳಿದ್ದವು. ಏನು ಈ ಸ್ಮೃತಿಗಳು, ಹೇಗೆ ಇವು ಬದುಕಿನ ಕುರಿತ ನಿಮ್ಮ ನಿಲುವನ್ನೇ ರೂಪಿಸಬಲ್ಲ ತಾಕತ್ತು ಹೊಂದಿದ್ದವು ಎಂಬುದನ್ನು ಅರಿಯಬೇಕಾದರೆ ಇಂಥ ಮನೆಗಳನ್ನು ಹೊಕ್ಕು, ಇದ್ದು ಅರಿಯಬೇಕಾಗುತ್ತದೆ. ಇಂದಿನ ಹೊಸತಲೆಮಾರಿನ, ನಗರಗಳಲ್ಲಿ, ಫ್ಲ್ಯಾಟುಗಳಲ್ಲಿ ಕೂತು ತಮ್ಮ ಬಾಲ್ಯದ ನೆನವರಿಕೆಗಳಲ್ಲಿ ಅಷ್ಟಿಷ್ಟು ನೆನಪುಗಳನ್ನು ಬಾಚಿಕೊಂಡು ಸಂಪನ್ನರಾಗಬಯಸುವ ಬರಹಗಾರರಿಗೂ ವ್ಯಾಸರಿಗೂ ಇದ್ದ ಬಹಳ ಮುಖ್ಯ ವ್ಯತ್ಯಾಸವಿದು.

"ಹೆಣ ಅಲ್ಲೇ ಇತ್ತು, ಕಾಡಿನ ಮಧ್ಯ. ಮಳೆ ಮಾತ್ರ ಯಾವತ್ತೂ ಇಲ್ಲದಷ್ಟು ರಭಸದಿಂದ, ಸತತವಾಗಿ ಸುರಿಯುತ್ತಲೇ ಇತ್ತು. ದೇಹದಿಂದ ರಕ್ತವೆಲ್ಲವೂ ಸೋರಿ ಹೋಗಿ ಕಡಿದು ಹಾಕಿದಲ್ಲೆಲ್ಲ ತೊಳೆದಿಟ್ಟ ಹಾಗೆ ಬಿಳೀ ಬಿಳೀ ಆಗಿತ್ತು. ನಾವು ಕಾರಿನಲ್ಲಿ ಕುಳಿತು ದೇಹವನ್ನು, ಮಳೆಯನ್ನು ಕಾಯುತ್ತಿದ್ದೆವು. ಓ ಅಷ್ಟು ದೂರದಲ್ಲಿ, ಮರದ ಕೆಳಗೆ ಇಬ್ಬರು ಪೋಲೀಸರು ಬೀಡಿ ಸೇದುತ್ತ ಕುಳಿತು, ನಿಂತು ಕಾಯುತ್ತಿದ್ದರು.... "

ವ್ಯಾಸರು ಕಾರನ್ನು ನಿಧಾನವಾಗಿ ಡ್ರೈವ್ ಮಾಡುತ್ತ ಅದನ್ನು ಯಾವುದೇ ಉದ್ವೇಗ, ಭಾವುಕತೆ ಇಲ್ಲದ ನೀರವದಿಂದೆಂಬಂತೆ ನಮಗೆ ವಿವರಿಸಿದ್ದರು.

ವ್ಯಾಸರ ತಂದೆ ಭಾರೀ ಜಮೀನ್ದಾರರಾಗಿದ್ದರು. ಕೇರಳದ ಕಮ್ಯೂನಿಸಂನ ಹೆಸರಿನಲ್ಲಿ ಅವರನ್ನು ಅವರದೇ ಕಾಡಿನಲ್ಲಿ ಹಲವರು ಸೇರಿ ಕಡಿದು ಚೆಲ್ಲಿದ್ದರು. ವ್ಯಾಸರು ಆಗಿನ್ನೂ ಹುಡುಗ. ಇದು ವ್ಯಾಸರ ಹಸಿಹಸಿ ಮನಸ್ಸಿನ ಮೇಲೆ ತುಂಬ ಪರಿಣಾಮ ಬೀರಿರಬಹುದು ಎಂಬ ಮಾತೇನೋ ಸರಿಯೇ. ಆದರೆ ವ್ಯಾಸರು ಅವೇ ನೆನಪು, ಆಘಾತ, ನೋವುಗಳೊಂದಿಗೆ ನಿಂತುಬಿಟ್ಟವರಲ್ಲ. ಇಂಥ ಇನ್ನೆಷ್ಟೋ ನೋವು, ಸಂಕಟಗಳು ಅವರನ್ನು ಬದುಕಿನುದ್ದಕ್ಕೂ ಹಿಂಡಿರಬಹುದು. ಬಡತನವಲ್ಲದಿದ್ದರೂ ಮನಸ್ಸಿನ ಆಸೆ, ನಿರೀಕ್ಷೆ, ಕನಸುಗಳೇ ಮನುಷ್ಯನ ಕೊರತೆಗಳಿಗೆ ಕೊರತೆಯಿಲ್ಲದಂತೆ ನೋಡಿಕೊಳ್ಳುವುದಿಲ್ಲವೆ, ಹಾಗೆ. ಆದರೆ ಆವರು ಅವನ್ನೆಲ್ಲ ಜೀರ್ಣಿಸಿಕೊಳ್ಳುತ್ತ ಸಾಗಿದವರು, ಜೀರ್ಣಿಸಿಕೊಂಡು ಬದುಕನ್ನು ಅರಿಯಲು, ತಾನು ಅರಿತಿದ್ದನ್ನು ಇತರರಿಗೆ ತಿಳಿಸಲು ಹಾತೊರೆದವರು. ವ್ಯಾಸರು ಈ ಇಡೀ ಬದುಕನ್ನು ಬೇರೆಯೇ ಸ್ತರದಲ್ಲಿ, ಇಂಥ ನೋವು, ಆಘಾತ, ಸಂಕಟಗಳನ್ನು ಮೀರಿದ ವ್ಯಾಪ್ತಿಯಲ್ಲಿ ಬಾಚಿಕೊಳ್ಳಲು ಕೈಚಾಚಿದವರು ಎಂಬುದರಲ್ಲಿ ಎರಡು ಮಾತಿಲ್ಲ.

ಅಲ್ಲದೆ, ನೋವು ನಮಗೆ ಕಲಿಸುವಷ್ಟು ಪಾಠಗಳನ್ನು, ನೀಡುವ ಒಳನೋಟಗಳನ್ನು ಸಂತೋಷದ ವಿದ್ಯಮಾನಗಳು ಕೊಡುವುದಿಲ್ಲ. ವ್ಯಾಸರಂತೂ ನೋವೇ ಎಲ್ಲ ಕಲಾಭಿವ್ಯಕ್ತಿಯ ಮೂಲದಲ್ಲಿರುವುದು ಎಂದೇ ಹೇಳುತ್ತಿದ್ದವರು. ನೋವು ಬದುಕಿಗೆ ಒಂದು ನಿಲುಗಡೆಯ ನೋಟವನ್ನು, ನಿಧಾನಗತಿಯ ಓಟವನ್ನು ಕರುಣಿಸುತ್ತದೆ. ಹಾಗಾಗಿಯೇ ಹೆಚ್ಚಿನ ಎಲ್ಲ ಹಿನ್ನೋಟಗಳು ಘಟಿಸುವುದು ನೋವಿನ ಕಹಿಯೊಂದಿಗೆ. ಸಿಹಿಯಾದ ಅನುಭವಗಳೇನಿದ್ದರೂ ಭವಿಷ್ಯದ ಕಡೆಗೇ ಮೊಗಮಾಡಿರುತ್ತವೆ. ವ್ಯಾಸರು ಮನಸ್ಸಿನ ವ್ಯಾಪಾರಗಳನ್ನು ಕುರಿತು, ಮನಸ್ಸಿನ ಒತ್ತಡ ಅವನ ಬಾಹ್ಯ ವರ್ತನೆಯ ಮೇಲೆ ಉಂಟುಮಾಡುವ ಪರಿಣಾಮವನ್ನು ಕುರಿತು ಧೇನಿಸಿದವರು. ಹಾಗಾಗಿಯೇ ಅವರ ಸಂಪರ್ಕದಲ್ಲಿದ್ದ ಮಂದಿಯಂತೆಯೇ ಕಲ್ಪನಾಲೋಕದ ಹಲವು ಮಂದಿಯ ನೋವನ್ನು ಕೂಡ ಆವಾಹಿಸಿಕೊಂಡವರು ವ್ಯಾಸ. ಒಂದು ಹಂತದಲ್ಲಿ ತನ್ನ ನೋವು, ಪರರ ನೋವು ಎಂಬ ವಿಗಂಡನೆಯಿಂದಲೇ ಮುಕ್ತರಾದವರು ಅವರು.

ಒಬ್ಬ ಸೃಜನಶೀಲ ಲೇಖಕ ಎಷ್ಟು ಆಳವಾಗಿ ಇನ್ನೊಂದು ಮನಸ್ಸಿನ ಮೂಲೆ ಮೂಲೆಯನ್ನೂ ತಡಕಬಲ್ಲ, ಅಲ್ಲಿನ ಮೌನ ಭಾವಗಳಿಗೆ ಭಾಷೆಯ ಕಸು ತುಂಬಿ ಒಂದು ಅರ್ಥವನ್ನು ಕರುಣಿಸಬಲ್ಲ ಮತ್ತು ದೂರ-ಸಮೀಪಗಳ ನಡುವಿನ ಅಂತರವನ್ನು ಕರಗಿಸಿ ಬದುಕಿನ ಪ್ರತಿಯೊಂದು ಅನುಭವದ ಕಾಣ್ಕೆಯನ್ನು ಕಣ್ಣಿಗೆ ಹೊಡೆದು ಕಾಣಿಸಬಲ್ಲ ಎಂಬುದಕ್ಕೆ ವ್ಯಾಸರ ಕತೆಗಳು ಸಾಕ್ಷಿಯಂತಿವೆ.

ಒಮ್ಮೆ ವ್ಯಾಸರು ಬಲ್ಲ ಒಬ್ಬ ಹಿರಿಯ ವ್ಯಕ್ತಿ ಊರ ಕೆರೆಯಲ್ಲಿ ಮುಳುಗಿ ಜೀವ ನೀಗಿದರು. ಅವರ ದೇಹವನ್ನು ಮೇಲೆತ್ತಿದಾಗ ದೇಹದೊಂದಿಗಿದ್ದ ಒಂದು ಕಟ್ಟು ಕಂಡಿತಂತೆ. ಬಿಚ್ಚಿ ನೋಡಿದರೆ ಅವರು ಓದುತ್ತಿದ್ದ ಗೀತೆಯ ಪುಸ್ತಕ, ಇತರ ಕೆಲವು ಆಧ್ಯಾತ್ಮಿಕ ಪುಸ್ತಕಗಳ ಜೊತೆ ವ್ಯಾಸರ `ಸ್ನಾನ' ಕೃತಿ ಇತ್ತಂತೆ! ಪುಸ್ತಕದ ತುಂಬ ಅಲ್ಲಲ್ಲಿ ಪೆನ್ನಿನಿಂದ ಅಡಿಗೆರೆ ಎಳೆದ ಸಾಲುಗಳು. ಎಲ್ಲವೂ ಈಗ ಕೆರೆಯ ನೀರಲ್ಲಿ ತೋಯ್ದು ತಣ್ಣಗಾದ ದೇಹದೊಂದಿಗೇ ಕರಗಿ ಹೋದ ದೃಶ್ಯ ವ್ಯಾಸರನ್ನು ಅಲ್ಲಾಡಿಸಿತು. ಈ ತಲ್ಲಣಗಳನ್ನು ಅವರು ನಮ್ಮೊಂದಿಗೆ ಹಂಚಿಕೊಳ್ಳುವಾಗಲೂ ಹೊಸದಾಗಿ ಅನುಭವಿಸುತ್ತಿದ್ದಂತಿತ್ತು. `ಸ್ನಾನ' ಕೃತಿಯ ಒಂದು ನೀಳ್ಗತೆಯಲ್ಲಿ ಈ ಪ್ರಾಯೋಪವೇಶದ ಛಾಯೆಯಿದೆ. ಅದೇ ಈ ವ್ಯಕ್ತಿಯನ್ನು ಆತ್ಮಹತ್ಯೆಯಂಥ ನಿರ್ಧಾರಕ್ಕೆ ಪ್ರೇರೇಪಿಸಿತೆ ಎಂಬುದು ವ್ಯಾಸರ ಆಳದ ಅಳಲಾಗಿತ್ತು.

ವ್ಯಾಸರು ಬರೆಯುತ್ತಾರೆ, "ಅನ್ನಾಭಾವ, ಪ್ರೇಮಾಭಾವ, ಉಪೇಕ್ಷಿತಭಾವ, ಶೋಷಿತಭಾವ ಇತ್ಯಾದಿಗಳಿಂದ ನೋಯುತ್ತಿರುವುದು ಅದಕ್ಕೆ ಪ್ರತ್ಯಾಘಾತ ನೀಡುತ್ತಿರುವುದು ಮನುಷ್ಯ ಮನಸ್ಸೇ. ದಲಿತವಾಗುತ್ತಿರುವುದು, ಶ್ರೀಮಂತವಾಗುತ್ತಿರುವುದು ಮನುಷ್ಯ ಮನಸ್ಸೇ. ಮನಸ್ಸಿನ ಚಟುವಟಿಕೆಯೇ ಚಿತ್ರವಾಗಿ, ಸಂಗೀತವಾಗಿ, ನಾಟ್ಯವಾಗಿ, ಸಾಹಿತ್ಯವಾಗಿ, ಚರಿತ್ರೆಯಾಗಿ ಹೊರಬರುತ್ತದೆ. ಮನಸ್ಸಿಗೆ ಜಾತಿ, ನೀತಿಯ ಭೇದವಿಲ್ಲ. ಲಿಂಗ ಭೇದವಿಲ್ಲ. ಪ್ರಕೃತಿಯೂ ಪುರುಷನೂ ಅದೇ. ಹೀಗಾಗಿ ಮನಸ್ಸಿನ ಚಟುವಟಿಕೆಗಳಿಗೆ ಎಷ್ಟು ಮುಖಗಳಿವೆಯೋ ಅಷ್ಟು ಮುಖಗಳಲ್ಲಿ `ಕಲೆ' ಪ್ರಕಟವಾಗಬೇಕಾಗಿದೆ."

ಆದರೆ ಇಲ್ಲೊಂದು ಅಪಾಯವಿದೆ. ಮನಸ್ಸನ್ನು, ಅದರ ಅಲ್ಲೋಲ ಕಲ್ಲೋಲಗಳನ್ನು ಎಷ್ಟು ಹಿಂಜಬಹುದು? ಇದು ಒಂದು ಬಗೆಯಲ್ಲಿ ನೀರಿನ ಆಕೃತಿಯನ್ನು ಹಿಡಿಯಲು ಪ್ರಯತ್ನಿಸಿದಂತೆಯೇ. ತಟ್ಟೆಗೆ ಹಾಕಿದರೆ ಹರಡಿಕೊಳ್ಳುವ, ಲೋಟಕ್ಕೆ ಹಾಕಿದರೆ ಮೇಲೇರುವ ನೀರಿನಂಥ ಮನಸ್ಸನ್ನು, ಅದರ ನಡೆಯನ್ನು ಹೀಗೇ ಎಂದು ವಿಶ್ಲೇಷಿಸುವುದು ಕೂಡ ಒಂದು ಭ್ರಮೆಯೇ. ವಿಶ್ಲೇಷಣೆಯೇ ಮನಸ್ಸಾಗಿತ್ತೆ ಅಥವಾ ಮನಸ್ಸು ಅಂಥ ವಿಶ್ಲೇಷಣೆಯ ಮೋಹಕ್ಕೆ ಬಿತ್ತೆ ಎನ್ನುವುದರ ಅರಿವು ಮೂಡುವ ಮುನ್ನ ಕೆಲವು ಮಿಥ್ಯೆಗಳನ್ನು ಸತ್ಯವೆಂದು ಭ್ರಮಿಸಿದ ತಪ್ಪು ಸಂಭವಿಸಿರಬಹುದಲ್ಲವೆ? ಹಾಗೆಯೇ ಭಾಷೆಯೊಂದರ ಹಂಗಿಲ್ಲದ ಮನಸ್ಸಿನ ಭಾವನೆಗಳನ್ನು ಹೀಗೆ ಅನಿವಾರ್ಯವಾಗಿ ಭಾಷೆಯಲ್ಲಿ ಹಿಡಿಯುವ ಸಂದರ್ಭದಲ್ಲಿ ಸಿದ್ಧ ಭಾಷೆಯೊಂದರ ನುಡಿಕಟ್ಟುಗಳು, ಮತ್ತೆ ಮತ್ತೆ ಬಳಕೆಯಾದ ಅವೇ ಪರಿಕಲ್ಪನೆಗಳು ಕೂಡ ಹಾದಿತಪ್ಪಿಸುವಂಥವು. ಬಹಳ ಎಚ್ಚರದಿಂದ ತನ್ನ ಭಾವಕ್ಕೆ ಸಮನಾದ ಅರ್ಥವ್ಯಾಪ್ತಿಯನ್ನು ನೀಡಬಲ್ಲ ಹೊಸದೇ ಆದ ಒಂದು ಶೈಲಿ, ಭಾಷೆ ಮತ್ತು ವಿಧಾನವನ್ನು ಇಲ್ಲಿ ರೂಪಿಸಿಕೊಳ್ಳಬೇಕಾಗಿಯೂ ಬರಬಹುದು ಮತ್ತು ಇಂಥದ್ದಕ್ಕೆ ಓದುಗ ಹೊಸದಾಗಿ ಸ್ಪಂದಿಸುವ ನೆಲೆಗಳನ್ನು ಕೂಡ ಕಲ್ಪಿಸಿಕೊಳ್ಳಬೇಕಾಗಬಹುದು. ಮೇಲಾಗಿ ಆಳಕ್ಕಿಳಿದಂತೆ ಕೆಸರು ಕೊಚ್ಚೆಗಳೆದ್ದು ಗೊಂದಲಗಳೇ ಹೆಚ್ಚುವ ಹಾದಿಯಿದು. ಸರಳ ರೇಖೆಯಂಥ ಬದುಕನ್ನು ಬದುಕುತ್ತ, ಶಿಕ್ಷಣ, ಉದ್ಯೋಗ, ಮದುವೆ, ಮನೆ, ಮಕ್ಕಳು, ವೃದ್ಧಾಪ್ಯ ಎಂದು ಜೀವನವನ್ನು ಸವೆಸಿದವರಿಗೆ ಇಲ್ಲಿ ಹೀಗೆ ಮೊಗೆದವರು, ಮೊಗೆಯುತ್ತ ಬದುಕಿದವರು ಬರೆದಿದ್ದೆಲ್ಲ ವಿಕ್ಷಿಪ್ತ ಜಗತ್ತಿನ, ವಿಲಕ್ಷಣ ಬದುಕಿನ ವಿವರಗಳಾಗಿ ಕಂಡರೆ ಅಚ್ಚರಿಯಿಲ್ಲ. ಸ್ವಲ್ಪಮಟ್ಟಿಗೆ ಅದರಲ್ಲಿ ಸತ್ಯ ಕೂಡಾ ಇದೆ. ಆದರೆ ಇಲ್ಲಿ ನಾವು ಮರೆಯಬಾರದ ಒಂದು ಸಂಗತಿಯೂ ಇದೆ.

ಸ್ವತಃ ಬದುಕಿನ, ಮನಸ್ಸಿನ, ಮನುಷ್ಯನ ಆಳಾಂತರಾಳಕ್ಕಿಳಿದು ವಿಷಯ ಶೋಧನೆಗಿಳಿಯಬಲ್ಲ ಘನಮನಸ್ಸಿಗೆ ಈ ವಿವರಗಳನ್ನು ಬರೆಯುವಾಗ ಓದುವ ಮನಸ್ಸು ಹೇಗೆ ಗ್ರಹಿಸಬಹುದೆಂಬ ಕುರಿತು ಅರಿವಿರುವುದಿಲ್ಲ ಎಂದು ಭಾವಿಸಬಾರದು. ಹೇಗೆ ಮನೋಲೋಕದ ವಿದ್ಯಮಾನಗಳ ಗ್ರಹಿಕೆ ಕೊನೆಗೂ ಗ್ರಹಿಸುತ್ತಿರುವ ವ್ಯಕ್ತಿಯ ವ್ಯಕ್ತಿಗತ ಮಿತಿಗಳಿಂದ ಕೂಡಿರುವುದು ನಿಜವೋ ಹಾಗೆಯೇ ಈ ಗ್ರಹಿಕೆಗಳನ್ನು ಹೇಳುವಾತನ ವೈಯಕ್ತಿಕ ಬದುಕು ಈ ಗ್ರಹಿಕೆಗಳಿಗೆ ಹೇಗೆ ಪ್ರೇರಕವಾಗಿರಬಹುದೆಂಬ ಊಹೆ ಕೂಡ ಕೇಳುವಾತನಲ್ಲಿ ಮೂಡುವುದು ಸಹಜ. ವ್ಯಾಸರನ್ನು ಚೆನ್ನಾಗಿ ಬಲ್ಲ ವ್ಯಕ್ತಿಯೊಬ್ಬರು ಇತ್ತೀಚೆಗೆ ತಮ್ಮದೇ ಅನುಮಾನ ಮತ್ತು ತಮ್ಮದೇ ಉತ್ತರ ಕೊಟ್ಟುಕೊಂಡು "ಇಂಥಾ ಒಂದು ಅನ್ಯೋನ್ಯ ಕುಟುಂಬ, ಸದಾ ಹೆಂಡತಿ, ಮಕ್ಕಳು, ಮೊಮ್ಮಕ್ಕಳು ಎಂದು ಹಾತೊರೆಯುವ ಮನಸ್ಸು, ಎಲ್ಲಿಗೆ ಹೋಗುವುದಿದ್ದರೂ ಈ ಪರಿವಾರ ಸಮೇತ ಹೊರಡುವ ಪ್ರೇಮಸ್ವರೂಪಿ ವ್ಯಕ್ತಿ, ಹಾಗಿದ್ದೂ ಇದಕ್ಕೆಲ್ಲ ತೀರ ವೈರುಧ್ಯಮಯ ಎಂಬಂತೆ ಇವರ ಕತೆಗಳಲ್ಲಿ ಮಾತ್ರ ಯಾಕೆ ಸದಾ ವಿಯೋಗ, ವಿಷಾದ, ಯಾವುದೋ ನೋವಿನ ಆಲಾಪ? ಏನಿರಬಹುದು ಇದಕ್ಕೆ ಕಾರಣ?" ಎಂದು ಗೊಂದಲಗೊಂಡು ಕೂತರು.

ಒಮ್ಮೆ ವ್ಯಾಸರ ಕತೆಯ ಕುರಿತಾಗಿ ಬಂದ ಒಂದು ಟೀಕೆಯ ಮಾತು ಅವರು ಕೆಲವಾರು ವರ್ಷಗಳ ಕಾಲ ಬರೆಯುವುದನ್ನೇ ನಿಲ್ಲಿಸುವಂತೆ ಮಾಡಿತು ಎಂಬ ಸಂಗತಿ ಹೆಚ್ಚಿನವರಿಗೆ ಗೊತ್ತಿರಲಾರದು. ಅಡಿಗರ `ನಮ್ಮ ಸದಾಶಿವ' ಎನ್ನುವ ಒಂದು ಕವನದಲ್ಲಿ ಕತೆಗಾರ ಕೆ.ಸದಾಶಿವರ ಬಗ್ಗೆ ಬರೆದ ಕೆಲವು ಸಾಲುಗಳು ಹೀಗಿವೆ:

ಕಥೆ ಬರೆದನಂತೆ - ಕತೆಯೇನು ಮಣ್ಣು - ತನ್ನೆದೆಯ
ಖಂಡ ಖಂಡ ಕತ್ತರಿಸಿ ಕಿತ್ತು ಹಿಡಿದು ಹಿಂಡಿ ಹಿಂಡಿ
ಭಟ್ಟಿಯಿಳಿಸಿದ ತೊಟ್ಟು ತೊಟ್ಟು;
ನಾಗಾಲೋಟದಲ್ಲು ಅಲ್ಲಲ್ಲಿ ತಡೆತಡೆದು ಕೆತ್ತಿರುವ ತಳದ ಗುಟ್ಟು.

ವ್ಯಾಸರಿಗೂ ಸಲ್ಲುವ ಮಾತುಗಳಿವು. ಕತೆಗಾರ ಬರೆದುದನ್ನು ಓದುಗ ಗ್ರಹಿಸುವುದಕ್ಕೂ ಕತೆಗಾರನಲ್ಲಿರುವಂಥ ಜೀವನಾನುಭವ, ಮಾಗುವಿಕೆ, ಸಂವೇದನಾಶೀಲತೆ ಕೆಲಮಟ್ಟಿಗೆ ಓದುಗನಲ್ಲೂ ಇರಬೇಕಾಗುತ್ತದೆ. ಹಾಗಿಲ್ಲದೇ ಹೋದಲ್ಲಿ ಕತೆಗಾರನ ಜಗತ್ತಿಗೂ ಓದುಗನ ಜಗತ್ತಿಗೂ ನಡುವೆ ಕಂದಕಗಳೇರ್ಪಡುತ್ತವೆ, ಮಿಡಿಯುವ ತಂತುಗಳು ಮಾಯವಾಗುತ್ತವೆ. ಕನ್ನಡದ ಕೆಲವು ಲೇಖಕರ ಮಟ್ಟಿಗೆ ಕೆಲವು ಓದುಗರು ಹಾಗೆ ಉಳಿದು ಹೋಗಿದ್ದರೆ ಅದರಲ್ಲೇನೂ ಅಚ್ಚರಿಯಿಲ್ಲ. ಆದರೆ ವ್ಯಾಸರು ತೀರ ಅಪರಿಚಿತರಾಗಿ ಉಳಿಯಲಿಲ್ಲ ಎಂಬುದು ನಿಜವಾದರೂ ಅವರ ಕತೆಗಳು ಎಲ್ಲರನ್ನೂ ತಲುಪಿಲ್ಲ ಎಂಬುದು ಕೂಡ ಸತ್ಯವೇ. ಆದರೆ ಇದು ವ್ಯಾಸರ ಸೋಲಾಗಲೀ ಅವರ ಕತೆಗಳ ಸೋಲಾಗಲೀ ಅಲ್ಲವೆಂಬುದು ಕೂಡ ಸತ್ಯ. ಅವರ ಕತೆಗಳು ತಲುಪಲೇಬೇಕಾದ ವಿಶಿಷ್ಟ ಮನಸ್ಸುಗಳು ಹೇಗೆ ಇದ್ದೇ ಇದ್ದವೋ ಹಾಗೆಯೇ ಈ ಕತೆಗಳಿಗಾಗಿ ಹಾತೊರೆಯುವ ಮನಸ್ಸುಗಳು ಕೂಡಾ ಎಲ್ಲೆಡೆ ಇದ್ದೇ ಇವೆ. ಅಷ್ಟರಮಟ್ಟಿಗೆ ವ್ಯಾಸರ ಕತೆಗಳು ನಿತ್ಯ ಸತ್ಯವಾಗಿ ನಮ್ಮೊಡನೆ ಇರುತ್ತವೆ, ಉಸಿರಾಡುತ್ತಿರುತ್ತವೆ. ಆದರೆ ಇನ್ನಷ್ಟು ಬರೆಯಬಹುದಾಗಿದ್ದ ವ್ಯಾಸರನ್ನು ಮಾತ್ರ ನಿಜಕ್ಕೂ ನಾವು ಕಳೆದುಕೊಂಡಿದ್ದೇವೆ. ಇದು ವಿಷಾದ, ಇದು ನೋವು.

`ತಪ್ತ' ಎಂ ವ್ಯಾಸರ ಆಯ್ದ ಹನ್ನೆರಡು ಕಥೆಗಳ ಸಂಕಲನ.
ಕರ್ನಾಟಕ ಸಂಘ, `ಅನುರಾಗ', ಶ್ರೀ ರಾಧಾಕೃಷ್ಣ ಮಂದಿರ ರಸ್ತೆ, ಪುತ್ತೂರು-574201
ದೂರವಾಣಿ:08251-232240
ಪುಟಗಳು :viii+152
ಬೆಲೆ: ನೂರ ನಲವತ್ತೈದು ರೂಪಾಯಿ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ