Saturday, April 11, 2009

ಮರೆಯುವ ಮುನ್ನ

ತೊಂಭತ್ತರ ದಶಕದ ಸುಮಾರಿಗೆ ಹೊಸ ತಲೆಮಾರಿನ ಅನೇಕ ಸಾಹಿತ್ಯಾಸಕ್ತರಿಗೆ ಲಂಕೇಶರ ಟೀಕೆ ಟಿಪ್ಪಣಿ ಮತ್ತು ಮರೆಯುವ ಮುನ್ನ ಪ್ರತಿವಾರದ ಸೆಳೆತವಾಗಿತ್ತು. ಚೆನ್ನಾಗಿ ಬರೆಯುವುದಕ್ಕೆ ಈ ಓದು ಒಂದು ಬಗೆಯ ಸ್ಫೂರ್ತಿಯಾಗಿತ್ತು. ಲಂಕೇಶ್ ಬರವಣಿಗೆಯಲ್ಲಿ ಭಾವನೆಗಳನ್ನು ಮೀಟಬಲ್ಲ ಒಂದು ಆಪ್ತಧಾಟಿಯ ಜೊತೆಗೇ ಅಷ್ಟೇನೂ ಆಪ್ತವಲ್ಲದ್ದನ್ನು ಕೂಡ ಹಿತವಾಗುವಂತೆ ಹೇಳಬಲ್ಲ ಪ್ರೀತಿ ಇರುತ್ತಿತ್ತು. ಅವರ ಭಾಷೆಯ ಮಾಯಕತೆ ನಮ್ಮನ್ನೆಲ್ಲ ಸೆಳೆಯುತ್ತಿದ್ದಾಗಲೇ ಅವರು ಅದನ್ನು ನಿರಾಕರಿಸುತ್ತಿದ್ದರು. ಚಂದವಾಗಿ ಮಾತನಾಡುವುದು, ಕಸುಬುದಾರಿಕೆಯ ಬರವಣಿಗೆ ಅವರಿಗೆ ಹಿಡಿಸುತ್ತಿರಲಿಲ್ಲ. ಅದೇ ಸಮಯಕ್ಕೆ ಅವರು ಸಾಹಿತ್ಯ, ಕ್ರೀಡೆ, ರಾಜಕೀಯ, ಸಾಮಾನ್ಯ ಜನ, ಪ್ರೇಮ, ಸಿನಿಮಾ, ನಟಿಯರು, ನಾಯಕರು, ಕಾಮ, ಕೃಷಿ, ವ್ಯಾಪಾರ, ನೀರಾವರಿ, ಧರ್ಮ, ವಿದೇಶೀಯರು ಎಂದು ಯಾವುದರ ಕುರಿತು ಬರೆಯತೊಡಗಿದರೂ ಬೋರಾಗುತ್ತಿರಲಿಲ್ಲ ಮಾತ್ರವಲ್ಲ ಅದರಲ್ಲಿ ಏನಾದರೂ ಹೊಸತು, ನಮಗೆ ತಿಳಿಯದ್ದು ಇದ್ದೇ ಇರುತ್ತಿತ್ತು. ಅದು ಬರೇ ಭಾಷಾಡಂಬರವೋ, ಪಾಂಡಿತ್ಯ ಪ್ರದರ್ಶನವೋ, ಸ್ವಪ್ರತಿಷ್ಠೆಯೋ ಆಗಿ ಮುಗಿಯುತ್ತಿರಲಿಲ್ಲ. ಇದು ನಮಗೆಲ್ಲ ಒಂದು ವಿಸ್ಮಯ ಮತ್ತು ಅವರ ಅಪಾರ ಓದು ಮತ್ತು ತಿಳುವಳಿಕೆಯ ಕುರಿತು ಹೊಟ್ಟೆಕಿಚ್ಚು ಕೂಡ ಹುಟ್ಟಿಸುತ್ತಿತ್ತು.

ಈಗ ಅವರ ಟೀಕೆ ಟಿಪ್ಪಣಿ ಮೂರು ಸಂಪುಟಗಳಲ್ಲಿ ಲಭ್ಯವಿದೆ. ಹೊಸದಾಗಿ ಮರೆಯುವ ಮುನ್ನ ಒಂದು ಸಂಪುಟ ಹೊರಬಂದಿದೆ. ಬಂಜಗೆರೆ ಜಯಪ್ರಕಾಶ್ ಈ ಬಗೆಯ ಬರಹಗಳ ಮೋಡಿ ಮತ್ತು ಮಹತ್ವದ ಬಗ್ಗೆ ವಿಶ್ಲೇಷಣಾತ್ಮಕವಾದ ಒಂದು ಒಳ್ಳೆಯ ಪ್ರವೇಶಿಕೆಯನ್ನೂ ಈ ಕೃತಿಯಲ್ಲಿ ನೀಡಿದ್ದಾರೆ.

ಈ ಮರೆಯುವ ಮುನ್ನ ಹೆಸರಿನ ಅಂಕಣದ ಶೈಲಿ, ಚೌಕಟ್ಟು ವಿಚಿತ್ರವಾದದ್ದು. ಹಾಗೆ ನೋಡಿದರೆ ಇದಕ್ಕೆ ಚೌಕಟ್ಟೇ ಇರಲಿಲ್ಲ. ಎಲ್ಲವೂ ಚುಟುಕಾಗಿ, ಪುಟ್ಟ ಟಿಪ್ಪಣಿಯಂತೆ ಇರುತ್ತಿದ್ದುದು ಇದರ ವಿಶೇಷ ಆಕರ್ಷಣೆ. ಎಲ್ಲಿಂದಲೋ ಇದ್ದಕ್ಕಿದ್ದಂತೆ ಆರಂಭಗೊಂಡು ಕುತೂಹಲಕರವಾಗಿ ಮುಂದುವರಿಯುತ್ತಿದ್ದ ಈ ಪುಟ್ಟ ಪುಟ್ಟ ಟಿಪ್ಪಣಿಗಳಲ್ಲಿ ರಂಜನೆ, ಬೋಧನೆ, ಪ್ರಚೋದನೆ ಎಲ್ಲವೂ ಇರುತ್ತಿತ್ತು. ಅದಕ್ಕಿಂತ ಮುಖ್ಯವಾಗಿ ಅದು ಮೇಲೆ ಹೇಳಿದ ಎಲ್ಲಾ ರಂಗಗಳ, ವಿದ್ಯಮಾನಗಳ, ವಿಚಾರಗಳ ಒಂದು ಸರಳ ಚಾವಡಿಯಾಗಿತ್ತು. ಅಲ್ಲಿ ಗಹನವಾದದ್ದು, ಕ್ಲಿಷ್ಟವಾದದ್ದು ಇರಲೇ ಇಲ್ಲವೆಂದಲ್ಲ. ಅಂಥದ್ದನ್ನು ಸುಮ್ಮನೇ ಪ್ರಚೋದಿಸಿ ಸುಮ್ಮನಾಗುತ್ತಿದ್ದ ಬರಹಗಳೇ ಹೆಚ್ಚು.

ಒಳ್ಳೆಯ ಒಂದು ಪುಸ್ತಕದ ಬಗ್ಗೆ, ನಾಟಕ, ಸಿನಿಮಾ, ದೇಶ, ಜನರ ಬಗ್ಗೆ ಲಂಕೇಶ್ ಬರೆಯುತ್ತಿದ್ದುದರಿಂದ ಅವುಗಳನ್ನೆಲ್ಲ ಸ್ವತಃ ತಿಳಿದುಕೊಳ್ಳಲಾರದ ನನ್ನಂಥವರಿಗೆ ಲಂಕೇಶ್ ಒಂದು ಸೋರ್ಸ್ ಆಗಿಬಿಟ್ಟಿದ್ದರು. ಇದು ನಮಗೇ ತಿಳಿಯದಂತೆ ನಮ್ಮ ಅಭಿರುಚಿಯನ್ನು, ಆಸಕ್ತಿ, ಕುತೂಹಲವನ್ನು ಬೆಳೆಸಿತು. ತೇಜಸ್ವಿ ನಮಗೆ ಆಗ ಓದಲು ಸಿಗುತ್ತಿದ್ದುದೇ ಲಂಕೇಶ್ ಪತ್ರಿಕೆಯಲ್ಲಿ ಎನ್ನುವುದು ಕೂಡ ಒಂದು ಮಹತ್ವದ ಅಂಶವಾಗಿತ್ತು. ನನಗೀಗಲೂ ನೆನಪಿರುವಂತೆ ನಾನು ಒಮ್ಮೆ ತೇಜಸ್ವಿಯವರ ಕೃತಿಗಳ ಕುರಿತು, ಅವುಗಳ ಲಭ್ಯತೆ ಕುರಿತು ಕೇಳಿ ಬರೆದ ಪತ್ರಕ್ಕೆ ವಿವರವಾದ ಉತ್ತರ ಕೂಡ ಲಂಕೇಶರ ಕಚೇರಿಯಿಂದ ಬಂದಿತ್ತು. ಇಂಥದ್ದನ್ನೆಲ್ಲ ಇವತ್ತು ಯಾವುದೇ ಸಂಪಾದಕರಿಂದ ನಿರೀಕ್ಷಿಸುವಂತಿಲ್ಲ ಎನ್ನುವುದು ನಿಜ.

ಪ್ರಸ್ತುತ ಪುಸ್ತಕದಲ್ಲಿ ಹೊಸದೇನಿಲ್ಲ. ಲಂಕೇಶರನ್ನು ಮೆಚ್ಚಿಕೊಂಡವರೆಲ್ಲ ಖಂಡಿತವಾಗಿ ಓದಿಯೇ ಇರುವ ಅವೇ ಟಿಪ್ಪಣಿಗಳು ಇಲ್ಲಿ ಇರುವುದು. ಆದರೆ, ಆ ಮಾರ್ದವದ, ಅಭಿರುಚಿಯ, ಮರೆಯಬಾರದ ಟಿಪ್ಪಣಿಗಳನ್ನು ನೆನೆದು ಲಂಕೇಶ್ ಬದುಕಿರಬೇಕಿತ್ತು ಎಂದು ಹಳಹಳಿಸುವ ಮನಸ್ಸುಗಳಿಗೆ ಈ ಪುಸ್ತಕ ಬಹಳ ಮಹತ್ವದ್ದು, ಸಂಗ್ರಾಹ್ಯವಾದದ್ದು, ಮತ್ತೆ ಮತ್ತೆ ಓದಲು ಬೇಕೆನಿಸುವಂಥದ್ದು. ಅಲ್ಲಿಂದ ಆಯ್ದ ಕೆಲವು ಸಾಲುಗಳು...

"ಆದರೆ ಸಾಹಿತ್ಯದಲ್ಲಿ ಸದಾ ಮುಳುಗಿರುವವರು ನಿಜವಾದ ಬಿಸಿಲು, ಗಾಳಿ, ನೆರಳು, ಹೂ, ಚಿಗುರುಗಳನ್ನು ತಾವೇ ಗಮನಿಸದೆ ಇರುವ ಅಪಾಯವಿದೆ. ಪುಸ್ತಕ ಕೀಟ ಕೂಡ ಅಂತರ್ಮುಖಿ. ಹೀಗೆ ಬರೆಯುತ್ತಿರುವ ಈ ಶುಕ್ರವಾರ ಮಧ್ಯಾಹ್ನ ಬಿಸಿಲು ಮುನಿಸಿಕೊಂಡು ಮೋಡದ ಮರೆಗೆ ಹೋಗಿದೆ." (ಪುಟ 3)

"ಎಂದೂ ಗೊಣಗದ ಮೌನಿಯಾದ ಮರ."(ಪುಟ 11)

"ಹುಡುಗಿ ಚೆನ್ನಾಗಿ ಮಾತಾಡ್ತಾಳೆ ಸಾರ್. ಇವತ್ತು ಮೂಡ್ ಇರಲಿಲ್ಲ ಅಂತ ಕಾಣುತ್ತೆ. ಆಕೆ ಮೊನ್ನೆ ತಾನೇ ಕಾಲೇಜಿನಲ್ಲಿ ಡಿಬೇಟರ್ ಆಗಿದ್ಲು..." ಅಂದ ಒಬ್ಬ.
ನಮ್ಮಲ್ಲಿ ಮಾತು ಹೇಗೆ ಕಲೆಯಾಗಿಯೇ ಉಳಿಯುತ್ತದೆ! "(ಪುಟ 13)

"ಹಾಗೆಯೇ ಸಾಹಿತ್ಯ ಕೃತಿ ಕೂಡ. ಕವಿ ತನ್ನ ಖಾಸಗಿ ಅಳಲಿನಿಂದ ಮಾತ್ರ ಬರೆದ ಕವನ ಬಡವಾಗಿರುತ್ತದೆ; ಅವನಂಥ ಎಲ್ಲ ವ್ಯಕ್ತಿಗಳ ಒಂದು ಜನಾಂಗದಿಂದ ಬಂದ ಕವನ ತೀವ್ರವೂ ಗಾಢವೂ ಆಗಿರುತ್ತದೆ. ನಾಟಕವೂ ಅಷ್ಟೇ." (ಪುಟ 80)

"ಬೊಮ್ಮಾಯಿ, ಜತ್ತಿ, ದೇವೇಗೌಡ, ವೀರೇಂದ್ರ ಪಾಟೀಲ ಮುಂತಾದವರು ಈ ರಾಜ್ಯಕ್ಕಾಗಿ ಹಗಲಿರುಳೂ ಬೆವರು ಸುರಿಸಿ ಎಲ್ಲರೂ ನಿಟ್ಟುಸಿರಿಡುವಂತೆ ಮಾಡಿದ್ದರೂ ನೀರು ಕೊಟ್ಟ ನಜೀರರನ್ನು ಹೊಗಳುವುದನ್ನು ಅವರು ಹೇಗೆ ಸಹಿಸಿಯಾರು?" (ಪುಟ 119)

"ನನ್ನ ಪಾಲಿಗಂತೂ ಭಾಷಣ ಕಲೆಯಲ್ಲ, ಕಸುಬಲ್ಲ; ಆದಷ್ಟೂ ಪ್ರಯತ್ನಿಸಿ ಅಂತರಂಗಕ್ಕೆ ಮಾತಾಡುವುದು, ಜನರು ಮತ್ತು ನಾನು ಯೋಚಿಸಿದ್ದನ್ನು ಮತ್ತೊಮ್ಮೆ ಹೆಣೆಯುವುದು, ಕಲೆಯಿಂದ ಮೆಚ್ಚಿಸುವುದು ನನ್ನ ಉದ್ದೇಶವಲ್ಲ. ಅನ್ನಿಸಿಕೆಯನ್ನು ಹಂಚಿಕೊಳ್ಳುವುದು ನನ್ನ ಖುಷಿ." (ಪುಟ 122)

"ಇವರೇ (ರಾಮಚಂದ್ರ ಶರ್ಮ) ಭಾಷಾಂತರಿಸಿದ ರೊಬರ್ಟೋ ಹುವರೋಸ್ ಎಂಬ ಕವಿಯ ಸಾಲು (ಈತ ಅರ್ಜೆಂಟೀನಾ ಕವಿ) ಮತ್ತೆ ಮತ್ತೆ ನೆನಪಾಗುತ್ತಿದೆ.
ಮೌನ ಒಂದು ಗುಡಿ,
ಅಲ್ಲೇಕೆ ದೇವರು?
- ಈ ಮಾತು ಎಷ್ಟು ಚೆನ್ನಾಗಿದೆ! ದೇವರಿಗಾಗಿ ತಪಸ್ಸು ಮಾಡುವವನ ಕ್ರಿಯೆಯಲ್ಲೇ ದೈವತ್ವವಿರಬೇಕು - ಮೌನ ಮತ್ತು ಏಕಾಗ್ರತೆ ಆ ಶಕ್ತಿ ಪಡೆದಿದೆ, ಅಲ್ಲವೆ? " (ಪುಟ 125)

"1988 ನನ್ನ ಅನೇಕ ಗೆಳೆಯರನ್ನು ಕರೆದುಕೊಂಡು ಚರಿತ್ರೆ ಸೇರುತ್ತಿದೆ; ಗೆಳೆಯರು ಸಾಯುವುದು ಅಂದರೆ ನಾನು ಹೆಚ್ಚು ಏಕಾಂಗಿಯಾಗುತ್ತಿದ್ದೇನೆ ಎಂದು ಅರ್ಥ; ಅಥವಾ ನನ್ನ ಬಾಗಿಲ ಮೇಲೆ ಕೂಡ ಸಾವು ತಟ್ಟುವ ಸಾಧ್ಯತೆ ಕಾಣುತ್ತಿದೆ. ಅಂದರೆ ಬದುಕುವ ಕ್ಷಣಗಳ ತ್ವರೆ, ಸೊಗಡು ಹೆಚ್ಚುತ್ತದೆ. ಬದುಕಿನ ಸಂಕ್ಷಿಪ್ತತೆ ಕೂಡ ಇದರಿಂದ ಗೊತ್ತಾಗುತ್ತದೆ." (ಪುಟ 153)

"ಒಳ್ಳೆಯ ಕಾವ್ಯ ಕಂಡೊಡನೆ ‘ಓಹ್!’ ಅನ್ನಿಸುವಂತೆ ಈ ಅಂತರ್ವಾಣಿ ಕೇಳಿದಾಗ ಚಕಿತಗೊಳ್ಳುತ್ತೇವೆ. ಅಂತರ್ವಾಣಿಯಲ್ಲದೆ ಕೇವಲ ನುಡಿಯುವ ಹುಮ್ಮಸ್ಸಿನಿಂದ ಬಂದದ್ದು ಮಾತು, ಅದು ಕೇವಲ ಮಾರ್ಗದರ್ಶನ. ಸ್ಫೂರ್ತಿಯಿಂದ ಬಂದ ಅಂತರ್ವಾಣಿಗೆ ಮಾಂತ್ರಿಕತೆ ಇರುತ್ತದೆ." (ಪುಟ 166)

"ನಮ್ಮ ತೇಜಸ್ವಿ ಹೇಳಿದರು, "ಪ್ರಗತಿರಂಗದ ಸಭೆಗಳನ್ನು ಬಸ್‌ಸ್ಟ್ಯಾಂಡ್, ಬಜಾರ್‌ಗಳಲ್ಲಿ ಇಟ್ಟುಕೊಳ್ಳುವ ಬದಲು ಯಾವುದಾದರೂ ಹಾಲ್ ಅಥವಾ ಕೋಣೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು."

ನಾನು ಯೋಚಿಸಿದೆ. ನಮ್ಮ ಬಹುಪಾಲು ಸಮಾಜವಾದಿಗಳು, ಬುದ್ಧಿಜೀವಿಗಳು ಬೆವರಿನ ವಾಸನೆಗೆ ಹಿಮ್ಮೆಟ್ಟುತ್ತಾರೆ. ಚರ್ಚೆ, ವಿವಾದ, ವಿಶ್ಲೇಷಣೆಗಳನ್ನು ಮೆಚ್ಚುತ್ತಾರೆ. ಆದರೆ ರಾಜಕೀಯವೆಲ್ಲ ಬರಡಾದದ್ದು ಈ ಹಾಲ್ ಮತ್ತು ಕೋಣೆಗಳಲ್ಲಿ. ಹರಕಲು ಅಂಗಿಯ ಬೀದಿಯ ಮನುಷ್ಯನನ್ನು ಪುಢಾರಿಗಳ ಭಾಷಣಕ್ಕೆ ಬಿಟ್ಟು ನಾವು ನಮ್ಮ ಮಿದುಳಿನ ವ್ಯಾಯಾಮದಲ್ಲಿ ನಿರತರಾಗಬಾರದು. ಬೀದಿಯ ಮನುಷ್ಯ ನಮ್ಮ ಭಾಷಣದ ಶೈಲಿ, ನುಡಿಕಟ್ಟನ್ನು ಬದಲಿಸುತ್ತಾನೆ; ಅತ್ಯಂತ ಗಾಢ ವಿಷಯಗಳನ್ನು ಮನನಾಟುವಂತೆ ಹೇಳುವುದನ್ನು ಈತ ನಮಗೆ ಕಲಿಸುತ್ತಾನೆ. ಇದು ನಮ್ಮ ವ್ಯಕ್ತಿತ್ವದ ಸಮತೋಲನಕ್ಕೆ ಕೂಡ ಮುಖ್ಯ. ಅಲ್ಲದೆ ಮನುಷ್ಯರೆನ್ನಿಸಿಕೊಂಡ ಎಲ್ಲರಿಗೂ ಸಮಾನವಾದ ಲಹರಿಗಳಿವೆ, ನೋವು ನಲಿವುಗಳಿವೆ; ಜನಸಾಮಾನ್ಯ ನಮ್ಮತ್ತ ಕೈಚಾಚಿ ನಾವು ಆತನತ್ತ ಬಗ್ಗಿದರೆ ದಕ್ಕುವುದು ಬೆವರಿನ ವಾಸನೆ ಮಾತ್ರವಲ್ಲ, ಚಿತ್ರವಿಚಿತ್ರ ಕಾಣ್ಕೆ ನಮ್ಮದೂ ಅವನದೂ ಆಗುತ್ತದೆ." (ಪುಟ 167)

"ಹೊಗಳುಭಟ್ಟರು, ವ್ಯಕ್ತಿಪೂಜೆಗೆ ಒಲಿಯುವವರು, ಶ್ರೀರಾಮನಂಥವರು ದೇವರೋ ಮನುಷ್ಯನೋ ಎಂದು ಕೂಡ ಸ್ಪಷ್ಟವಿಲ್ಲದವರು, ತನಗಿಂತ ಮೇಲಿನ ಸ್ಥಾನದಲ್ಲಿರುವವರೆಲ್ಲ ಪ್ರತ್ಯಕ್ಷ ದೇವತೆ ಎಂದು ನಡುಬಗ್ಗಿಸುವವರು - ಅಲೆಗ್ಸಾಂಡರನನ್ನು ದೇವರೆಂದು ಕರೆದು ದಿಕ್ಕು ತಪ್ಪಿಸಿದ್ದು ಎಲ್ಲರಿಗೆ ಎಂಥ ಪಾಠ!" (ಪುಟ 190)

"ಕಾನೂನಿನ ಪ್ರಕಾರ ಪ್ರಾಮಾಣಿಕವಾಗಿದ್ದೇನೆ ಎನ್ನುವ ಪ್ರತಿಯೊಬ್ಬ ರಾಜಕಾರಣಿಯೂ ದುಷ್ಟನಾಗಿರುತ್ತಾನೆ." (ಪುಟ 191)

ಮರೆಯುವ ಮುನ್ನ
ಲಂಕೇಶ್ ಪ್ರಕಾಶನ
ನಂ.9, ಪೂರ್ವ ಆಂಜನೇಯ ಗುಡಿ ರಸ್ತೆ
ಬಸವನಗುಡಿ, ಬೆಂಗಳೂರು-560004
ದೂರವಾಣಿ: 26676427
ಪುಟಗಳು: 14+215
ಬೆಲೆ: ರೂಪಾಯಿ ನೂರ ಐವತ್ತು.

4 comments:

Sandeep Nayak said...

ನರೇಂದ್ರ,

ನೀವು ಲಂಕೇಶರ 'ಮರೆಯುವ ಮುನ್ನ' ಬಗ್ಗೆ ಬರೆದದ್ದು ಓದಿದೆ. ನೀವು ಅಂದಂತೆ ಲಂಕೇಶರ ಬರವಣಿಗೆಯ ಮಾಂತ್ರಿಕತೆಯನ್ನು ಅವು ತೋರುತ್ತವೆ. ಆದರೆ, ಅವರ ಎಲ್ಲ ಟಿಪ್ಪಣಿಗಳನ್ನು ಒಂದೆಡೆ ಸಂಗ್ರಹಿಸುವ ಅಗತ್ಯ ಇಲ್ಲವೆಂದು ಕಾಣುತ್ತದೆ. ಇಲ್ಲಿನ ಕೆಲವು ಟಿಪ್ಪಣಿಗಳನ್ನು ಬಿಡಬಹುದಿತ್ತು. 'ನೀಲು' ಕವಿತೆಗಳಲ್ಲೂ ಇದು ಆಗಿದೆ. ಒಬ್ಬ ಲೇಖಕ ತನ್ನ ಜೀವಮಾನದಲ್ಲಿ ತನ್ನ ಬರಹಗಳನ್ನು ಪ್ರಕಟಿಸದೇ ಬಿಟ್ಟಿರುವುದಕ್ಕೆ ಕಾರಣವಿಲ್ಲದೇ ಇರಲಾರದು. ಲಂಕೇಶರು ತಮ್ಮ ಜೀವಿತದ ಕಾಲದಲ್ಲಿ ಈ ಬರಹಗಳನ್ನು ಮರುಪ್ರಕಟಿಸಿಲ್ಲ ಎಂಬುದನ್ನು ಮರೆಯದಿರೋಣ. ಅವರ ಆಯ್ದ ಟಿಪ್ಪಣಿಗಳನ್ನು ಮಾತ್ರ ಪ್ರಕಟಿಸಿದರೆ ಮಾತ್ರ ಸಾಕಿತ್ತೇನೊ.
-ಸಂದೀಪ

ನರೇಂದ್ರ ಪೈ said...

ಪ್ರೀತಿಯ ಸಂದೀಪ್,
ನಿಮ್ಮ ಪ್ರತಿಕ್ರಿಯೆ ನೋಡಿ ತುಂಬ ಸಂತೋಷವಾಯಿತು. (‘ಕರೆ’ ಕತೆಯ ಸಂದೀಪರೇ ನೀವು ಅಂತ ನಂಬಿದ್ದೇನೆ!) ಎಷ್ಟು ಬಾರಿ ನಾನು ನಿಮ್ಮ ಒಂದೊಂದು ಕತೆಯ ಬಗ್ಗೆಯೂ (ಸಿಕ್ಕಿದ್ದೇ ಕೆಲವು; ಕರೆ, ಸುಧಾ ವಿಶೇಷಾಂಕದಲ್ಲಿ ಬಂದ ಮರ ಕಡಿಯುವ ಹಿನ್ನೆಲೆಯ ಕತೆ, ವಿಜಯ ಕರ್ನಾಟಕದಲ್ಲಿ ಬಂದ ಮನೆ ಕಾಯುವುದಕ್ಕೆ ಒಪ್ಪಿಕೊಂಡು ತೆಂಗಿನ ಕಾಯಿ ಕಳುವಾದ ಘಟನೆಯ ಒಂದು ಕತೆ, ದೇಶಕಾಲದಲ್ಲಿ ಬಂದ ಹೂವಿನ ದಂಡೆಯ ಕತೆ - ಹೀಗೆ) ನನ್ನ ಗೆಳೆಯರ ಜೊತೆಗೆಲ್ಲ ಹರಟಿದ್ದೆನೆಂದಿಲ್ಲ. ನನ್ನ ಇಷ್ಟದ ಕತೆಗಾರ, ಕವಿ ನೀವು. ನಿಮ್ಮ ಅಗಣಿತ ಚಹರೆ ಸಂಕಲನದ ಬಗ್ಗೆ ಒಂದು ಲೇಖನ ಕೂಡ ತಯಾರು ಮಾಡಿದ್ದೆ. ಸದ್ಯವೇ ನಿಮ್ಮ ಕಥಾಸಂಕಲನ ಛಂದ ಬಹುಮಾನದ ಪ್ರಭಾವಳಿಯೊಂದಿಗೆ ಬರಲಿದೆ ಎನ್ನುವುದೇ ಸದ್ಯದ ನನ್ನ ಖುಶಿ ಮತ್ತು ನಿರೀಕ್ಷೆ. ಅದು ನಿಮಗೆ ಯಾವತ್ತೋ ಸಿಗಬೇಕಿದ್ದ ಮನ್ನಣೆ.
ಲಂಕೇಶ್ ಟಿಪ್ಪಣಿಗಳ ಬಗ್ಗೆ ನೀವು ಹೇಳಿದ್ದು ಸರಿಯೇ. ನನಗೆ ವೈಯಕ್ತಿಕವಾಗಿ ಲಂಕೇಶ್ ಬರಹಗಳ ಬಗ್ಗೆಯೇ ಒಂಥರಾ ಮೋಹ ಇತ್ತು. ಅದು ನನ್ನ ಬರವಣಿಗೆಯನ್ನು, ಎಷ್ಟೇ ಬಾಲಿಶ ಸ್ಥರದಲ್ಲಾದರೂ ಇರಲಿ, ಉತ್ತೇಜಿಸಿತ್ತು ಎನ್ನುವುದು ನಿಜ. ಪ್ರಸ್ತುತ ಲಂಕೇಶರ ಟಿಪ್ಪಣಿಗಳನ್ನು ಬೇರೆ ಬೇರೆ ಬ್ಯಾನರ್ ಅಡಿ (ಲಂಕೇಶ್ ಮತ್ತು ಸಿನಿಮಾ, ಲಂಕೇಶ್ ಮತ್ತು ಪತ್ರಕರ್ತ ಇತ್ಯಾದಿ) ತರುತ್ತಿರುವುದಂತೂ ಶುದ್ಧ ವ್ಯಾಪಾರೀ ದೃಷ್ಟಿಯ ಕೆಲಸ ಎನ್ನುವುದರಲ್ಲಿ ಅನುಮಾನವಿಲ್ಲ. ಎಲ್ಲಕ್ಕಿಂತ ಕೆಟ್ಟದ್ದೆಂದರೆ ಅಚ್ಚಿನ ದೋಷಗಳು, ಇಂಡೆಕ್ಸ್ ಇಲ್ಲದಿರುವುದು, ಪುಟಕ್ಕೆ ತಲೆಬರಹಗಳೇ ಇಲ್ಲದಿರುವುದು ಇತ್ಯಾದಿ. ಲಂಕೇಶ್ ಇವನ್ನೆಲ್ಲ ಪುಸ್ತಕ ರೂಪದಲ್ಲಿ ತರುವುದರಲ್ಲಿ ತಮಗಿರುವ ಹಿಂಜರಿಕೆಯ ಬಗ್ಗೆ ಕೂಡ ಅವರಿದ್ದಾಗಲೇ ಬಂದ ಟೀಕೆ-ಟಿಪ್ಪಣಿಯಲ್ಲಿ ಹೇಳಿಕೊಂಡಿದ್ದರು. ನಿಮ್ಮ ಮಾತುಗಳು ಅವರ ಸ್ವಂತ ಅನ್ನಿಸಿಕೆಗೆ ಪೂರಕವಾಗಿಯೇ ಇವೆ.
ಒಳ್ಳೊಳ್ಳೆಯ ಕತೆಗಳನ್ನು ಕೊಡಿ ಸಂದೀಪ್, ನೀವು ಸ್ವಲ್ಪ ಹೆಚ್ಚೇ ನಿಧಾನ-ಬರೆಯುವುದರಲ್ಲಿ ಅನಿಸುವುದರಿಂದ ಹೇಳುತ್ತಿದ್ದೇನೆ.
ನಿಮ್ಮ ಅಭಿಮಾನಿ,
ನರೇಂದ್ರ.

MD said...

ನರೇಂದ್ರ ಸರ್,
ಲಂಕೇಶರನ್ನು ನಾನು ಒದಲು ಆರಂಭಿಸಿದ್ದು ಅವರು ಗತಿಸಿದ ನಂತರ. ಹೀಗಾಗಿ ಇಂಟರನೆಟ್ ನಲ್ಲಾಗಲಿ, ಪತ್ರಿಕೆಗಳಲ್ಲಾಗಲಿ ಲಂಕೇಶರ ಬಗ್ಗೆ, ಅವರ ಬರಹಗಳ ಬಗ್ಗೆ ನನಗೆ ಮಾಹಿತಿ ದೊರೆತಾಗಲೆಲ್ಲ ಉತ್ಸುಕನಾಗುತ್ತೇನೆ. ಹೀಗೆಯೇ ಅವರ ಪುಸ್ತಕಗಳ, ಸಂಗ್ರಹಗಳ ಪರಿಚಯವೂ ಆಗುತ್ತದೆ.
ಇನ್ನೆರಡು ಸಂಗ್ರಹಯೋಗ್ಯ ಪುಸ್ತಕಗಳ ಬಗ್ಗೆ ಹಾಗೂ ಲಂಕೇಶರ ಸಾಹಿತ್ಯದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾಗದಗಳು.
--ಎಮ್.ಡಿ

ನರೇಂದ್ರ ಪೈ said...

ಆತ್ಮೀಯ ಎಂ.ಡಿ,
ಲಂಕೇಶ್‌ ಬರಹಗಳನ್ನು ಓದಿದಾಗಲೆಲ್ಲ ನಾನು ಸ್ಫೂರ್ತಿ ಪಡೆದಿದ್ದೇನೆ. ಅವರ ಭಾಷೆ, ಅದರ ರಿದಂ ನನಗೆ ಇಷ್ಟ. ಅವರ ಕತೆಗಳು ನನಗೆ ಒಳ್ಳೆಯ ‘ಮಾದರಿ ಕತೆಗಳು’ ಅನಿಸಿದ್ದವು. ಕೊಂಚ ಅವಸರ, ಧಾವಂತ ಇದೆ ನಿಜ, still, ಅವುಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯ, ಅಂಥ ಕಸು ಎರಡೂ ಲಂಕೇಶ್ ಸಾಹಿತ್ಯಕ್ಕಿದೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.