Friday, May 29, 2009

ನೆಳಲು ಬೆಳಕಿನಾಟ

ದಕ್ಷಪ್ರಜಾಪತಿ ತನ್ನ ಒಬ್ಬಳು ಮಗಳನ್ನು ಸೂರ್ಯದೇವನಿಗೆ ಮದುವೆ ಮಾಡಿಕೊಟ್ಟಿದ್ದನಂತೆ. ಸಂಜ್ಞಾದೇವಿ ಎಂದು ಅವಳ ಹೆಸರು. ಈ ಸಂಜ್ಞಾದೇವಿಯ ಮಗ ಯಮಧರ್ಮರಾಯ. ಇನ್ನೊಬ್ಬ ಮನು. ಸಂಜ್ಞಾದೇವಿಗೆ ಸೂರ್ಯನ ಪ್ರಖರ ತಾಪವನ್ನು ಸಹಿಸಲಿಕ್ಕಾಗದೆ, ಅವಳು ತನ್ನನ್ನೇ ಹೋಲುವ ಒಬ್ಬಳನ್ನು ಸೃಷ್ಟಿಸಿ (ಕ್ಲೋನಿಂಗ್?) ಅವಳಿಗೆ ಛಾಯಾ ಎಂದು ನಾಮಕರಣವನ್ನೂ ಮಾಡಿ ತಾನು ತಣ್ಣಗೆ ತವರಿಗೆ ಹೋಗಿ ಕೂತಳಂತೆ. ಇಪ್ಪತ್ತನಾಲ್ಕು ಗಂಟೆಯೂ ಕ್ಷಣಕಾಲ ಬಿಡುವಿಲ್ಲದೆ ದುಡಿಯುವ ಗಂಡನ ಗಮನಕ್ಕೇ ಬಂದಿರಲಾರದು ಇದೆಲ್ಲ. ಛಾಯಾದೇವಿಯಲ್ಲಿ ಶನಿಯ ಜನ್ಮವಾಗುತ್ತದೆ. ಆಗ ಮಾತ್ರ ಸವತಿ ಮಾತ್ಸರ್ಯದಿಂದ ಒಮ್ಮೆಗೇ ಜಾಗೃತಳಾದ ಸಂಜ್ಞಾದೇವಿ ಜಗಳಕ್ಕೆ ಬಂದಳಂತೆ. ಹಾಗಾಗಿ ಯಮನಿಗೆ ಸತ್ತವರ ಜಗತ್ತು ಕಾಯುವ ಮತ್ತು ಶನಿಗೆ ಸದಾ ಮಂದಿಗೆ ಪೀಡೆ ಕೊಡುವ ಕೆಲಸ ಗಂಟು ಬೀಳುತ್ತದೆ, ತಾಯಂದಿರು ಪರಸ್ಪರರ ಮಕ್ಕಳಿಗೆ ಹಾಕಿದ ಶಾಪದ ಫಲವಾಗಿ! ಸಂಜ್ಞೆ ಮತ್ತು ಛಾಯೆಯ ನಡುವೆ ಮಾತ್ಸರ್ಯದ ಮಾಯೆ!

ನೆರಳು ಬೀಳಬೇಕಾದರೆ ಎರಡು ಸಂಗತಿಗಳಿರಲೇ ಬೇಕು. ಒಂದು ಬೆಳಕು, ಇನ್ನೊಂದು ಅದಕ್ಕೆದುರಾಗಿ ಒಂದು ಸಂಜ್ಞೆ. ಅಂದರೆ ಛಾಯೆ, ಇಲ್ಲದಿದ್ದರೆ ಇಲ್ಲ. ಹಾಗಾಗಿಯೇ ಓಶೋ ಹೇಳುತ್ತಾರೆ, ಕತ್ತಲೆ ಎನ್ನುವುದೊಂದು ಇಲ್ಲವೇ ಇಲ್ಲ. ಇರುವುದೆಲ್ಲಾ ಬೆಳಕು ಮತ್ತು ಬೆಳಕಿನ ಗೈರು! ನೀವು ಬೆಳಕು ತನ್ನಿ, ಆಗ ಕತ್ತಲೆ ಇರುವುದು ಸಾಧ್ಯವೇ ಇಲ್ಲ; ಬೆಳಕನ್ನು ಅತ್ತ ಒಯ್ಯಿರಿ, ಅಗೋ ಅದೇ ಕತ್ತಲೆ! ಕತ್ತಲೆ ಬರುವುದಿಲ್ಲ, ಬೆಳಕು ಹೋಗುವುದೇ ಕತ್ತಲೆ. ಕತ್ತಲೆ ಹೋಗುವುದೂ ಇಲ್ಲ. ಬೆಳಕು ಬರುವುದೇ ಕತ್ತಲೆ ಹೋದಂತೆ ಕಾಣಲು ಕಾರಣ.

ಅಮಿತಾವ ಘೋಷರ ಈ ಕಾದಂಬರಿ, ದ ಶಾಡೋ ಲೈನ್ಸ್ ಮನಗಾಣಿಸುತ್ತಿರುವ ಕತ್ತಲೆ-ಬೆಳಕು-ನೆರಳಿನ ವಿನ್ಯಾಸ ಅಮೂರ್ತ ಜಗತ್ತಿಗೆ ಸೇರಿದ್ದು. ಅದು ದೇಶ-ಕಾಲಗಳ ಮೇಲೆ ಮನುಷ್ಯ ಎಳೆದಾಡಿರುವ ಕಲ್ಪಿತ ರೇಖೆಗಳ ಬಗ್ಗೆ ಹೇಳುತ್ತಿದೆ.

ಅಕ್ಷಾಂಶ-ರೇಖಾಂಶಗಳಂತೆಯೇ ಈ ಭೂಗೋಳವನ್ನು ಖಂಡ-ದೇಶಗಳಾಗಿ ವಿಂಗಡಿಸಿಕೊಂಡಿರುವುದು ಮನುಷ್ಯ. ಭೂಮಿಯ ಮೇಲೆ ಗೆರೆಗಳನ್ನು, ಗಡಿಗಳನ್ನು ಗುರುತಿಸಿ ಇದು ನನ್ನದು-ಅದು ನಿನ್ನದು ಎನ್ನುವಾಗ ಇಂಥವೇ ಮೂರು ವಿಭಿನ್ನ ಸಂದರ್ಭಗಳಲ್ಲಿ ನಗುವ ದೇವರು ನಗುತ್ತಾನಂತೆ! ಹಾಗೆಯೇ ಕಾಲವನ್ನು ಹಗಲು-ರಾತ್ರಿಗಳನ್ನಾಗಿ, ದಿನವನ್ನು ಇಪ್ಪತ್ತನಾಲ್ಕು ಗಂಟೆಗಳೆಂದು, ಗಂಟೆಗೆ ಅರವತ್ತು ನಿಮಿಷಗಳೆಂದು, ನಿಮಿಷಕ್ಕೆ ಅರವತ್ತು ಸೆಕೆಂಡುಗಳೆಂದು ಸೆಕೆಂಡುಗಳನ್ನು ನ್ಯಾನೋಗಳಾಗಿ ವಿಭಜಿಸಿಕೊಂಡಿರುವುದು ಮನುಷ್ಯ. ಮುನ್ನೂರ ಅರವತ್ತೈದು(ಅರವತ್ತಾರು) ದಿನಗಳ ವರ್ಷ- ಏಳುದಿನಗಳ ವಾರ-ಮುವ್ವತ್ತು-ಮುವ್ವತ್ತೊಂದು ದಿನಗಳ ತಿಂಗಳು ಎಲ್ಲ ಕಪೋಲ ಕಲ್ಪಿತ. ಆದರೆ ನಮ್ಮ ದೈನಂದಿನಗಳೆಲ್ಲ ಇವನ್ನು ಎಷ್ಟೊಂದು ಗಂಭೀರವಾಗಿ ಪರಿಗಣಿಸಿ ನಡೆಯುತ್ತಿದೆ! ನಾವು ಅಕ್ಷರಶಃ ಕಾಲದ ಅಡಿಯಾಳುಗಳು! ಕಾಲ ಆಳುತ್ತಿದೆ ನಮ್ಮನ್ನು. ನಮ್ಮ ಬಳಿ ಯಾವುದಕ್ಕೂ ಸಮಯವಿಲ್ಲ ಈಗ.

ಸಾಹಿತ್ಯದ ಮಾತು ಕೂಡ ಒಂದು ನೆರಳಿನ ತರವೇ. ಸಂಚಾರೀ ಭಾವದಂತೆ, ಕ್ಷಣಭಂಗುರ ಲಹರಿಗಳಂತೆ. ಅಮೃತಾಪ್ರೀತಂ ತಮ್ಮ ಆತ್ಮಚರಿತ್ರೆಯ ಎರಡನೆಯ ಭಾಗಕ್ಕೆ ನುಡಿಯ ನೆರಳು ಎಂದೇ ಹೆಸರಿಟ್ಟಿದ್ದಾರೆ. (ನುಡಿಯ ನೆರಳು - ಅನುವಾದ ಡಾಶೈಲಜಾ ಉಡಚಣ, ಶೈಲಜಾ ಪ್ರಕಾಶನ, 1-891/4, "ಚೇತನ", ಓವರ್ ಬಿಡ್ಜ್ ಹತ್ತಿರ, ಜೇವರ್ಗಿ ಕಾಲೋನಿ, ಗುಲಬರ್ಗಾ- 585102. ಪುಟಗಳು: iv+112, ಬೆಲೆ: ಎಂಭತ್ತು ರೂಪಾಯಿ.) ನುಡಿಯ ನೆರಳು! ಎಷ್ಟು ಅರ್ಥಪೂರ್ಣ ಮಾತು! ಈ ಇಡೀ ಪುಸ್ತಕ ಒಂದು ಕಾವ್ಯದಂತಿದೆ. ಎಲ್ಲೂ ಘಟನೆಗಳು, ವ್ಯಕ್ತಿಗಳು ಮತ್ತು ವಿಷಯ ಮುಖ್ಯವಾಗಿ ಎದ್ದು ಕಾಣುತ್ತಿಲ್ಲ. ಕವಿಯ ಮನೋಭೂಮಿಕೆಯ ಅಮೂರ್ತ ಭಾವ ಜಗತ್ತೊಂದು ಅಕ್ಷರಗಳಲ್ಲಿ ತನ್ನ ಹೊಳಹು ಚೆಲ್ಲುತ್ತಿದೆ ಇಲ್ಲಿ. ಅಮೃತಾರ ಬದುಕಿನ ನೋವು-ನಲಿವುಗಳ ಅರಿವಿರುವವರಿಗೆ, ನನಸಿಗೆ ದಕ್ಕದೇ ಹೋದ, ಎಂದೂ ಮನಸ್ಸನ್ನಾಳದ ವ್ಯರ್ಥ ಕನಸುಗಳ ಕಲರವ ಈ ಅಕ್ಷರಗಳ ಸಾಲು ಸಾಲುಗಳಲ್ಲಿ ಕಾಣದಿರದು. ಹಾಗೆ ನೋಡಿದರೆ ಪ್ರತಿಯೊಂದು ನುಡಿಯೂ ಅನುಭವದ ಸೂರ್ಯನಿಗೆ ಅಡ್ಡಲಾಗಿ ಹಿಡಿದ ಒಂದು ಸಂಜ್ಞೆಯೇ. ಭಾವ ಅದರ ಛಾಯೆಯೇ! ಯಾವ ಕೋನದಿಂದ ಈ ನುಡಿಯನ್ನು ನಮ್ಮ ಅನುಭವದ ಆಯಾಮಕ್ಕನುಗುಣವಾಗಿ ನಾವು ಹಿಡಿದಿಟ್ಟುಕೊಳ್ಳುತ್ತೇವೋ ಹಾಗೆ ಅದರ ನೆರಳು ನಮ್ಮ ಮೇಲೆ ಚೆಲ್ಲುತ್ತದೆ....

ಈ ಕಾದಂಬರಿಯಲ್ಲಿ ಅಮಿತಾವ್ ಘೋಷ್ ಕಾಲವನ್ನು ಮೀರುವ ಬಗೆ ಅನನ್ಯವಾಗಿದೆ. ಈ ಕಾದಂಬರಿಯ ಮೊದಲ ವಾಕ್ಯದಲ್ಲೇ ಈ ವಿಶಿಷ್ಟ ನೇಯ್ಗೆಯ ಹೊಳಹುಗಳೆಲ್ಲ ಇರುವಂತಿದೆ ನೋಡಿ:

"In 1939, thirteen years before I was born, my father's aunt, Mayadevi, went to England with her husband and her son, Tridib."

ಇಡೀ ಕಾದಂಬರಿಯಲ್ಲಿ ಲೇಖಕ ಕಾಲದ ಎಲ್ಲೆಕಟ್ಟುಗಳನ್ನು ಇದೇ ರೀತಿಯಲ್ಲಿ ಮೀರುತ್ತ ಸಾಗುತ್ತಾನೆ. ಲಂಡನ್ನಿನಲ್ಲಿ ಇಳಾ ಜೊತೆ ಓಡಾಡುತ್ತ ನೆನಪಿಸಿಕೊಳ್ಳುವ, ಕಲ್ಕತ್ತದಲ್ಲಿ ಕಳೆದ ಬಾಲ್ಯದ ಯಾವುದೋ ಒಂದು ನೆನಪು ಇಡೀ ಘಟನೆಯಾಗಿ, ಅಲ್ಲಿನ ಪಾತ್ರಗಳ ವಿವರವಾದ ಚಿತ್ರಣವಾಗಿ, ಅದೇ ಒಂದು ಕಥಾನಕವಾಗಿ ಕಾದಂಬರಿಯ ಮೈತುಂಬಿಕೊಳ್ಳುತ್ತ ಮತ್ತೆ ವರ್ತಮಾನಕ್ಕೆ ಕೊಂಡಿ ಜೀಕುತ್ತ ಸಾಗುತ್ತದೆ. ಕಾಲ ಹೇಗೆ ಕಾದಂಬರಿಕಾರನ ಅಡಿಯಾಳಾಗಿದೆಯೋ ಹಾಗೆಯೇ ಇಲ್ಲಿ ಸತ್ತವರು ಮತ್ತೆ ಘಟನೆಗಳಾಗಿ, ಕಥಾನಕಗಳಲ್ಲಿ ವಿವರಗಳಲ್ಲಿ ಜೀವಂತವಾಗುತ್ತಾರೆ! ಒಮ್ಮೆ ಕಾಲ ನಿಮ್ಮ ಕಾಲ ಕೆಳಗೆ ಬಿತ್ತೆಂದರೆ ಮತ್ತೆಲ್ಲ ಮಾರ್ಕ್ವೆಜ್‌ನ ನೂರು ವರ್ಷದ ಏಕಾಂತದಲ್ಲಿ ನಡೆಯುವ ಹಾಗೆ ಸಾವು ಕೂಡ ಜೀವಂತವಾಗಿ ನಿಮ್ಮ ಅಡಿಯಾಳಾಗಿ ಬಿಡುತ್ತದೆ! ಉದಾಹರಣೆಗೆ ಕಾದಂಬರಿಯ ಮೊದಲ ವಾಕ್ಯದಲ್ಲೇ ನಮಗೆ ಪರಿಚಯಿಸಲ್ಪಟ್ಟ ಈ ತ್ರಿದಿಬ್ ಪ್ರಸ್ತುತ ದುರ್ಮರಣ ಹೊಂದಿರುವ ಒಂದು ಪಾತ್ರ! ಇದು ನಮಗೆ ತಿಳಿಯುವ ಮೊದಲೂ ನಂತರವೂ ಕಥಾನಕ ಅವನನ್ನು ಜೀವಂತವಾಗಿರಿಸಿಕೊಂಡೇ ಸಾಗುತ್ತದೆ ಎಂಬುದನ್ನು ಗಮನಿಸಬೇಕು. ಹಾಗಾಗಿ ಇಲ್ಲಿ ತ್ರಿದಿಬ್‌ನ ಸಾವು ಒಂದು ಸಸ್ಪೆನ್ಸ್ ಅಲ್ಲ. ಅದು ಕೇವಲ ಸಂವೇದಿ ಸೂಚ್ಯಂಕ!

ಕಲ್ಕತ್ತದಲ್ಲಿ ಕೂತು ತ್ರಿದಿಬ್‌ ಜೊತೆ ಕಳೆದ ಬಾಲ್ಯ, ಕಾಲದ ಕುರಿತು ಹೇಳುವಾಗಲೂ ಅದು ಅಜ್ಜಿ, ಆ ಮನೆಯ ಪರಿಸರ, ಆವತ್ತಿನ ಕಲ್ಕತ್ತ, ಅಲ್ಲಿನ ಅಂಗಡಿಗಳು, ರಸ್ತೆ, ಮಳೆ, ಜನ ಎಲ್ಲವನ್ನೂ ಕುರಿತು ಹೇಳುವಂತೆಯೇ ಕಲ್ಕತ್ತದಲ್ಲಿ ಕುಳಿತ ಒಬ್ಬ ಸೂಕ್ಷ್ಮ ಮನಸ್ಸಿನ ಹುಡುಗನ ಮನಸ್ಸಿನಲ್ಲಿ ಬೆಳೆಯುತ್ತಿರುವ ಇಳಾ ಪಾತ್ರದ ಕುರಿತು ಕೂಡ ಹೇಳುತ್ತಿದೆ, ಆದರೆ ನುಡಿಯ ನೆರಳಿನೋಪಾದಿಯಲ್ಲಿ! ಇಳಾ ಪಾತ್ರವನ್ನು ಬಿಟ್ಟು ತ್ರಿದಿಬ್ ಇರಲು ಸಾಧ್ಯವಿಲ್ಲ. ಅಜ್ಜಿ ಇರಲು ಸಾಧ್ಯವಿಲ್ಲ. ನಿರೂಪಕನೇ ಇರುವುದು ಸಾಧ್ಯವಿಲ್ಲ. ಈ ಜೀವಂತ ವ್ಯಕ್ತಿಗಳ ನಡುವಿನ ಕಾಲಾತೀತ, ದೇಶಾತೀತ ಅಂತರ್ ಸಂಬಂಧದ ಬಗ್ಗೆ ಕೊಂಚ ಧೇನಿಸಿ ನೋಡಬೇಕು. ಕಾದಂಬರಿಯ ಅದೇ ಮೊದಲ ವಾಕ್ಯದಲ್ಲೇ ಈ ಸಂಬಂಧದ ಒಂದು ಜಾಲದ ಹೊಳಹು ಕೂಡ ಇರುವುದನ್ನು ಗಮನಿಸಿ. ಇಲ್ಲಿ ನಿರೂಪಕನ ಜೊತೆ ತಂದೆ, ತಂದೆಯ ಚಿಕ್ಕಮ್ಮ ಮಾಯಾದೇವಿ, ಅವಳ ಗಂಡ, ಮಗ ತ್ರಿದಿಬ್ ಇದ್ದಾರೆ. ಕಾಲ 1939ರಿಂದ ವರ್ತಮಾನಕ್ಕೆ ಜೀಕುತ್ತಿರುವಂತೆಯೇ ದೇಶ ಕೂಡ ಜೋಕಾಲಿಯಾಡಿದೆ.

ತ್ರಿದಿಬ್ ಮತ್ತು ಮೇ ( ಮಾಯಾದೇವಿ (ಸಂಜ್ಞಾ-ಛಾಯಾ-ಮಾಯಾ) ಎಂಬ ಹೆಸರಿನಂತೆಯೇ ಈ ಮೇ ಎಂಬ ಹೆಸರೂ ಕುತೂಹಲ ಹುಟ್ಟಿಸುತ್ತದೆ. May or May Not!) ಜೊತೆಗಿನ ಒಂದು ವಿಲಕ್ಷಣ ಪ್ರೇಮ ಪ್ರಸಂಗವಿದೆ ಇಲ್ಲಿ. ಈ ಪ್ರೇಮ ಪ್ರಸಂಗ ಅದು ಹೇಗೋ ಇಳಾ ಮತ್ತು ನಿರೂಪಕನ, ಇಳಾ ಮತ್ತು ನಿಕ್ ಜೊತೆಗಿನ ಪ್ರೇಮಕ್ಕೂ ತಳುಕು ಹಾಕಿಕೊಂಡಿದೆ. ಬಾಲ್ಯ-ತಾರುಣ್ಯ-ಯೌವನಗಳಲ್ಲಿ ಈ ನಿಕ್ ನಿರೂಪಕನ ಮನಸ್ಸಿನಲ್ಲಿ ಹೇಗೆ ಬೇರೂರಿ ಬೆಳೆಯುತ್ತಾನೆಂದರೆ ಇಳಾ ಜೊತೆ ಸೆಲ್ಲರ್‌ನಲ್ಲಿ ಆಡಿದ ಆಟ ಕೂಡ ಬದುಕಿನ ಗಂಭೀರ ತಿರುವುಗಳ ಜೊತೆ ಏನೋ ಸಂಬಂಧ ಹೊಂದಿರಬಹುದೇ ಎಂಬ ಅನುಮಾನ ಓದುಗನಿಗೂ ಆವರಿಸುವ ಹಾಗೆ! ಇನ್ನುಳಿದ ಕನಸುಗಳ, ಭ್ರಾಂತಿಗಳ, ನಾಸ್ಟಾಲ್ಜಿಯಾಗಳ ಬಗ್ಗೆ ವಿಶೇಷವಾಗಿ ಹೇಳಲೇ ಬೇಕಾದುದಿಲ್ಲ. ಎಲ್ಲೋ, ಯಾವತ್ತೋ ಏನೋ ನಡೆದಿರುವುದರೊಂದಿಗೆ ಇವತ್ತು ಇಲ್ಲಿ ಈಗ ನಡೆಯುತ್ತಿರುವುದಕ್ಕೆ ನಮಗೆ ಇನ್ನೂ ವಿವರಿಸಲು ಸಾಧ್ಯವಾಗಿಲ್ಲದ ಏನೋ ಒಂದು ಸಂಬಂಧ ಇರಬಹುದೇ ಎನ್ನುವ ತಲ್ಲಣಗಳನ್ನು ಕಾದಂಬರಿ ಹುಟ್ಟಿಸುತ್ತದೆ. ನಮ್ಮಲ್ಲಿ ಯಶವಂತ ಚಿತ್ತಾಲ ಕತೆ-ಕಾದಂಬರಿಗಳಲ್ಲಿ ಇಂಥ ಒಂದು ಅಂತರ್ ಸಂಬಂಧದ ಪರಿಕಲ್ಪನೆ ಮತ್ತು ಅದರಲ್ಲಿರುವ ಗಾಢ ನಂಬುಗೆ ಕಾರ್ಯಾಚರಿಸುತ್ತಿರುವುದನ್ನು ಕಾಣಬಹುದು. ಕುಮುಟೆಯ ಹನೇಹಳ್ಳಿಯಲ್ಲಿ ನಡೆಯುವ ಸಾಂತಯ್ಯಾ ಬಾಪ್ಪಾನ ಆತ್ಮಹತ್ಯೆಗೂ ಮುಸ್ಸಂಜೆ ಹೊತ್ತು ಹಿತ್ತಲಲ್ಲಿ ಹೆಡೆ ತೋರಿಸಿದ ಹಳದಿ ನಾಗರಹಾವಿನ ಗೋಧಿ ಬಣ್ಣದ ಮೈಯ ಹೊಳಪಿಗೂ ಮುಂಬಯಿ ಶಹರದ ಯಾವುದೋ ಒಂದು ಫ್ಯಾಟ್‍ನಲ್ಲಿ ಇದೀಗ ನಡೆಯುತ್ತಿರುವ ಒಂದು ವಿಲಕ್ಷಣ ಘಟನೆಗೂ ಇರುವ ಸಂಬಂಧವನ್ನು ಕಾಣಲು ವಿಶಿಷ್ಟ ಅಂತಃಚಕ್ಷುಗಳ ಅಗತ್ಯವಿದೆ. ಮೇಲ್ನೋಟಕ್ಕೆ ಎಲ್ಲ ಲಘುವಾಗಿ ಕಾಣಬಹುದಾದ ಒಂದು ಆಳವಾದ ತರ್ಕ ಇಲ್ಲಿ ಕೆಲಸ ಮಾಡುತ್ತಿರುತ್ತದೆ ಮತ್ತು ಇದು ಅರ್ಥವಾಗಲು ಅತ್ಯಂತ ಸೂಕ್ಷ್ಮ ಗ್ರಹಿಕೆ ಮತ್ತು ಜೀವನ ದೃಷ್ಟಿ ಬೇಕಾಗುತ್ತದೆ.

ಅಜ್ಜಿ, ಅವಳ ಶಿಸ್ತು, ನಂಬುಗೆ, ಧ್ಯೇಯಗಳು, ಅವಳ ಶಾಲೆ, ಅಲ್ಲಿನ ಸೆಂಡಪ್ಪು, ಅವಳ ನಿವೃತ್ತ ಜೀವನದ ಘಳಿಗೆಗಳು, ಅವಳ ಡಿಪ್ರೆಶನ್, ಅವಳ ಅಬ್ಸೆಶನ್ ಎಲ್ಲವೂ ಸೇರಿ ಆ ಎಲ್ಲ ವಿವರಗಳಲ್ಲಿ ಇಳಾ, ತ್ರಿದಿಬ್ ಮತ್ತು ಮಾಯಾದೇವಿ ಪಾತ್ರಗಳಂತೆಯೇ ನಮ್ಮನ್ನು ಆವರಿಸುತ್ತದೆ. ‘ಮನೆ’ ಎಂಬ ಪರಿಕಲ್ಪನೆಯ ಕುರಿತ ಈ ಅಜ್ಜಿಯ ಗ್ರಹಿಕೆಗಳು ಮನೋಜ್ಞವಾಗಿವೆ. ಹಾಗೆಯೇ ತನ್ನ ಮಗ-ಮಗಳ ಕುರಿತ ಅವಳದೇ ಅರ್ಥೈಸುವಿಕೆ. ತನ್ನ ಚಿನ್ನದ ಸರವನ್ನು ಗಂಡ ಸತ್ತರೂ ತೆಗೆಯದ ಈ ಅಜ್ಜಿಯ ಮನದಾಳದಲ್ಲಿ ಸುಪ್ತವಾಗಿರುವ ಕ್ರಾಂತಿಯ ಬಯಕೆ, ಕ್ರಾಂತಿಕಾರಿ ಸಹಪಾಠಿಯ ಕುರಿತು ಆಕೆಗಿದ್ದ ಮೋಹ ಕುತೂಹಲಕರ. ಈಕೆ ತನ್ನ ಚಿಕ್ಕಪ್ಪನನ್ನು ಢಾಕಾದಿಂದ ಭಾರತಕ್ಕೆ ತಂದು ಆತ ಇಲ್ಲಿ ಸ್ವತಂತ್ರವಾಗಿ ಸಾಯುವಂತಾಗಬೇಕೆಂದು ಬಯಸುವ ಹೊತ್ತಿನಲ್ಲೇ ಮನುಷ್ಯ ತನ್ನ ಸುತ್ತ ನಿರ್ಮಿಸಿಕೊಂಡಿರುವ ಗಡಿರೇಖೆಗಳ ನೆರಳುಗಳ ಜಾಲ ಮನಸ್ಸಿಗೆ ನಿಲುಕುವುದಿಲ್ಲ. ಅದೇ ರೀತಿ ನಿರೂಪಕ ಎಂದೂ ಇಳಾಳಂಥ ‘ಸೂಳೆ’ಯನ್ನು ಮದುವೆಯಾಗಬಾರದೆಂದು ಮರಣಶಯ್ಯೆಯಲ್ಲೂ ತಂತ್ರ ಹೂಡುವ ಅಜ್ಜಿಗೆ ದೇಶ-ಕಾಲ ಮೀರಿ ಬೆಳೆದುನಿಂತ ಭಾವದ ಆಳ ಕೂಡ ನಿಲುಕುವುದಿಲ್ಲ. ದುರಂತವೆಂದರೆ ಅದು ನಿಲುಕಬೇಕಾದ ಯಾರಿಗೂ ನಿಲುಕುವುದಿಲ್ಲ ಎಂಬುದೇ.

1962ರ ಚೀನಾದೊಂದಿಗಿನ ಯುದ್ಧಕ್ಕಿಂತ ದೇಶದೊಳಗೇ, ಜನಸಾಮಾನ್ಯರ ದೈನಂದಿನವನ್ನು ಸಾವಿನ ಹೊಸ್ತಿಲಿಗೆ ನೂಕುವ ಆಂತರಿಕ ಗಲಭೆಗಳೇ ಹೆಚ್ಚು ರಿಲವಂಟ್ ದೇಶದ ಸಾಮಾನ್ಯನಿಗೆ ಎನ್ನುವ ನಿರೂಪಕನ ವಾದ ತ್ರಿದಿಬ್‌ನ ಸಾವು ಮತ್ತು ತನ್ನ ದಾಯಾದಿ ಚಿಕ್ಕಪ್ಪನನ್ನು ಕೊನೆಗಾಲದಲ್ಲಾದರೂ ಪರಕೀಯರಿಂದಲೇ ಸುತ್ತುವರಿದ ಪರಿಸರದಿಂದ ತನ್ನ ಮನೆಗೆ ಕರೆತರಬೇಕೆನ್ನುವ ಅಜ್ಜಿಯ ಅರ್ಥವಿಲ್ಲದ ಧ್ಯೇಯದೊಂದಿಗೆ ನೋಡಿದಾಗ ಅದೆಲ್ಲ ಕಾಣುವ ಬಗೆಯೇ ಬೇರೆ. ಗಡಿ ರೇಖೆಗಳು ದೇಶ-ದೇಶಗಳ ನಡುವೆ ಮಾತ್ರ ಇರುವುದಲ್ಲ, ಅವು ಮನುಷ್ಯ- ಮನುಷ್ಯರ ನಡುವೆಯೇ ಗೀರುಗಳನ್ನೆಳೆದಿದೆ, ಗೋಡೆಗಳನ್ನೆಬ್ಬಿಸಿದೆ. ಎಬ್ಬಿಸುತ್ತಲೇ ಇದೆ.

ಕಾದಂಬರಿ ಏನನ್ನೂ ಇದೇ ಇದುವೇ ಎಂದು ಹೇಳುತ್ತಿಲ್ಲ. ನೆತ್ತಿಯ ಮೇಲೆ ಅನೇಕ ಬಗೆಯ ನೆರಳುಗಳು ಹರಿದಾಡುತ್ತಿರುವ ಅನುಭವದ ಅಡಿಯಲ್ಲಿ ಅರಳಿದ, ಬೆಳೆದ, ನರಳಿದ ಮತ್ತು ಮುದುಡಿದ ಬದುಕನ್ನು ತೆರೆದಿಡುವ ಈ ಕಾದಂಬರಿಯ ನೆರಳು ನಮ್ಮನ್ನು ಬಹುಕಾಲ ಆವರಿಸುವುದಂತೂ ಸತ್ಯ.

ಚಿತ್ರ ಕೃಪೆ: ದಿ ಹಿಂದೂ ಪತ್ರಿಕೆಯ ಲಿಟರರಿ ರಿವ್ಯೂ ವಿಭಾಗ. ಫೋಟೋ: ಶ್ರೀ ವಿ.ಸುದೆರ್ಶನ್ ಮತ್ತು ಶ್ರೀ ಕೆ. ಮುರಲಿ ಕುಮಾರ್.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ