Wednesday, July 8, 2009

ಸಂಥಿಂಗ್ ಟು ಟೆಲ್ ಯು!

ಕಾಮ-ಪ್ರೇಮ-ಸ್ನೇಹ-ಕೊಲೆ-ಪಾಪಪ್ರಜ್ಞೆ-ಹೊಟ್ಟೆಪಾಡು ಮತ್ತು ನಾಗರಿಕ ಜಗತ್ತಿನ ಮನುಷ್ಯ, ಅವನ ಮನಶ್ಶಾಸ್ತ್ರ!

ಕಾದಂಬರಿ ನಿಜಕ್ಕೂ ಕಿರಿಕಿರಿ ಹುಟ್ಟಿಸುತ್ತಿತ್ತು. ಇದನ್ನು ಒಂದೇ ಪಟ್ಟಿನಲ್ಲಿ ಹಿಡಿದು ಓದಿ ಮುಗಿಸುವುದು ಕಷ್ಟ, ಸಾಧ್ಯವಾಗಲಿಲ್ಲ. ಆದರೆ ಅದೇನೂ ಒಂದು ಸಮಸ್ಯೆಯಾಗಲಿಲ್ಲ, ಪ್ರತಿಬಾರಿ ಓದುವಾಗ recap ಬೇಕಾಗಲಿಲ್ಲ ಕೂಡ. ಯಾಕೆಂದರೆ, ಅದು ಅಧ್ಯಾಯ ಅಧ್ಯಾಯಗಳಲ್ಲೂ ಮುಂದಿನ ಅಧ್ಯಾಯಗಳ ಹಂಗಿಲ್ಲದೆ, ಒಟ್ಟು ಕಥಾನಕದ ಸಮಗ್ರ ಗ್ರಹಿಕೆಯ ಹಂಗಿಲ್ಲದೆ ಓದುಗನನ್ನು ಕಾಡಬಲ್ಲದು, ಹಿಂಸಿಸಬಲ್ಲದು, ಕಲಕಬಲ್ಲದು. Something to tell you, ಕಾದಂಬರಿಯ ಹೆಸರು, ಹನೀಫ್ ಕುರೇಶಿಯ ಕಾದಂಬರಿ.

ಇದು ಹೇಗೆ ಕಾಡಿತೆಂದರೆ, ಕೆಲವೊಮ್ಮೆ ಮನಶ್ಶಾಂತಿ ಕಳೆದುಕೊಂಡಿದ್ದಕ್ಕೆ, ಸಿಡುಕತೊಡಗಿದ್ದಕ್ಕೆಲ್ಲ ಕಾದಂಬರಿಯ ಓದೇ ಕಾರಣವಿದ್ದೀತೆಂದು ಭಾವಿಸಿ, ಇದನ್ನು ಕೈಬಿಟ್ಟು ಶಾಂತಾರಾಮ ಸೋಮಯಾಜಿಯವರ ಕುರುಡ-ಕುರುಡಿ ಕಾದಂಬರಿ ಓದತೊಡಗಿದೆ. ಅದು ನಿಜ. ಕಾದಂಬರಿ ತೀರ ಅಂತರಂಗಕ್ಕೆ ಕೈಹಾಕಿ ತಳ ಹುಡುಕಿ ತಡಕಾಡುವಷ್ಟು ಗಾಢವಾದ ವಸ್ತುವನ್ನೇ ಹೊಂದಿದೆ. ಅದು ಹೀಗೆ:


ನನಗೆ ಸಂಭಾವಿತ ವ್ಯಕ್ತಿಯಾಗಿ ಕಾಣಿಸಿಕೊಳ್ಳಲು ಆಶೆ. ನನ್ನ ಕಪಟತನದ ಬಗ್ಗೆ ನನಗೆ ಗೊತ್ತು. ನಿಮ್ಮ ಜೊತೆ ವ್ಯವಹರಿಸುವಾಗ ಅದನ್ನೆಲ್ಲ ಮರೆಯುವುದು ಅಗತ್ಯವೆಂತಲೂ ಗೊತ್ತು. ಆದರೂ ಅದು ಆಗಾಗ, ನಾನು ಕನ್ನಡಿಯನ್ನೇ ನೋಡಿದಾಗ ಅಲ್ಲಿ ನನ್ನದೇ ಪ್ರತಿಬಿಂಬ ಕಾಣಿಸಿಕೊಳ್ಳುವಂತೆ ಅದು ನೆನಪಾದಾಗಲೆಲ್ಲ ಹಿಂಸೆ ಅನುಭವಿಸುತ್ತೇನೆ. ಯಾರೋ ನೆನಪಿಸಿದರೆ, ಅದಕ್ಕೊಂದು ಸಾಕ್ಷಿ ಹೇಳಿದರೆ, ಅದನ್ನೇ ಎತ್ತಿ ಆಡಿ ಪ್ರಚಾರ ಮಾಡಿದರೆ ನರಕ ಅನುಭವಿಸುತ್ತೇನೆ. ಅದರ ನೆನಪನ್ನು ಕೂಡ ಎಷ್ಟು supress ಮಾಡುತ್ತೇನೆಂದರೆ ಕೊನೆಗೆ ನಾನೇ ಅದನ್ನೆಲ್ಲ ಸುಳ್ಳಿರಬಹುದೆಂದು, ನನ್ನ ಸಂಭಾವಿತತನವೇ ಸತ್ಯವಿರಬಹುದೆಂದು ನಂಬತೊಡಗುತ್ತೇನೆ. ಸ್ವಸ್ಥ! ಮತ್ತೆ, ಹೇಳಬೇಕೆಂದರೆ ನಾನು ಅಷ್ಟೇನೂ ಕೆಟ್ಟವನೇನಲ್ಲ ಮತ್ತೆ!

ಆದರೆ ಹೀಗೆಲ್ಲ ಯೋಚಿಸುವುದರಿಂದ ಇನ್ನೂ ಕೆಡುಕಿನದ್ದು ಸಂಭವಿಸುತ್ತದೆ. ಕ್ರಮೇಣ ನಾನು ನನ್ನ - ನನಗೆ ತಿಳಿದೇ ಇರುವ ಕಪಟತನಕ್ಕೆ ಮುಖಾಮುಖಿಯಾಗುವುದು ಕೂಡ ಅಸಂಭವವಾಗಿ ಬಿಡುತ್ತದೆ. ಇದು ದುರಂತವಿರಬಹುದು. ಅಥವಾ ನಾಗರಿಕ ಮನುಷ್ಯ ಆರೋಗ್ಯಪೂರ್ಣವಾಗಿ ಬದುಕಬೇಕಾದ ಅನಿವಾರ್ಯ ಕರ್ಮವಿರಬಹುದು. ಪಾಪಪ್ರಜ್ಞೆಯಿಲ್ಲದ ಮನುಷ್ಯ ನವನಾಗರೀಕ ಕಾಲದ ಅನಿವಾರ್ಯ ಸೃಷ್ಟಿಯಿದ್ದರೂ ಇರಬಹುದು.

ಕಪಟತನ ಎಂಬ ಒಂದೇ ಶಬ್ದ ಹಾಕಿದ್ದೇನೆ. ತೀರ ಗ್ರೇಟ್ ಅನಿಸಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ. ಅಲ್ಲಿ ಸಣ್ಣತನ, ಕ್ರೌರ್ಯ, ನೀಚತನ, ಸ್ವಾರ್ಥ ಇತ್ಯಾದಿ - fits well. ಆದರೆ ಹಾಗೆ well fitting ಅನಿಸುವ ಇನ್ನೂ ಕೆಲವನ್ನು ಒಮ್ಮೆಗೇ ಹಾಕಿದರೆ ತೂಕ ತಪ್ಪುತ್ತದೆ. ನಿನ್ನ ಆತ್ಮನಿರೀಕ್ಷಣಾ ಚಟ ಸ್ವಲ್ಪ ಅತಿಯಾಯಿತು, ಯಾರು ತಾನೇ ಪೂರ್ತಿ ಸಭ್ಯರಿದ್ದಾರೆ ಎಂದೆಲ್ಲ ನನ್ನೆದುರಿಗಾದರೂ ಸಮಾಧಾನ ಹೇಳುವುದಕ್ಕೆ ನಿಮಗೆ ಒಂದು ಅವಕಾಶ ಸಿಗುತ್ತದೆ. ಅದೆಲ್ಲ ಬೇಡ. ಆದರೆ ಸರಳವಾಗಿ ಇದು guilt. ಹೇಸಿಗೆ,guilt ಎಂದರೆ. ಮತ್ತೆ ಅದು self pity ಯತ್ತ ನಮ್ಮನ್ನು ಕೊಂಡೊಯ್ಯುತ್ತದೆ. guilt ಏನು ಹೇಳುತ್ತದೆಂದರೆ, I am not OK, you are OK. I am not OK, you are OK ಎನ್ನುವುದು ಮನೋರೋಗದ ಲಕ್ಷಣ. Inferiority ಎಂಬುದು Superiority ಯಷ್ಟೇ ಅಥವಾ ಸ್ವಲ್ಪ ಹೆಚ್ಚೇ ಕೆಟ್ಟದ್ದು. Something to tell you ಕಾದಂಬರಿ ತೆರೆದು ಕೊಳ್ಳುವುದು ಒಬ್ಬ ಮನೋರೋಗ ಚಿಕಿತ್ಸಕನ ಮೂಲಕವೇ.

ಕಾದಂಬರಿ ಮೊದಲಾಗುವುದು ಮಾತುಗಳಿಂದ:

Secrets are my currency. I deal in them for a living. The secrets of desire, of what people really want, and of what they fear the most. The secrets of why love is difficult, sex complicated, living painful and death so close and yet placed far away. Why are pleasure and punishment closely related? How do our bodies speak? Why do we make ourselves ill? Why do you want to fail? Why is pleasure hard to bear?


ಒಂದು ಬಗೆಯಲ್ಲಿ ಇದು ಕಾದಂಬರಿಯ ಕಥಾನಕದ ತಿರುಳನ್ನು ಹಿಡಿದುಕೊಟ್ಟಂತಿದೆ.


ಆದರೆ ಇದೇ ನಿಜವಲ್ಲ. ಅಥವಾ ಪೂರ್ತಿ ನಿಜವಲ್ಲ. ದೀಪಕ್ ಚೋಪ್ರಾ ತಮ್ಮ ಪುಸ್ತಕ The Seven Spiritual Laws of Success ನಲ್ಲಿ ಹೇಳುತ್ತಾರೆ, ಇಲ್ಲಿ ಎಲ್ಲವೂ ಸರಿಯಾಗಿದೆ. ಎಲ್ಲವೂ ಅತ್ಯಂತ ಸಂತುಲಿತವಾಗಿ, ಹೇಗೆ ನಡೆಯಬೇಕೋ, ಹಾಗೆ ನಡೆಯುತ್ತಿದೆ. ಅದನ್ನು ಹಾಗಾಗಬಾರದಿತ್ತು. ಹೀಗಾಗ ಬೇಕಿತ್ತು ಎಂದೆಲ್ಲ ನೋಡುವುದನ್ನು ಬಿಟ್ಟು ಬಿಡಿ. ವಸ್ತುಸ್ಥಿತಿಯನ್ನು ಸ್ವೀಕರಿಸಿ-ಅದು ಹೇಗಿದೆಯೋ ಹಾಗೆಯೇ ಸ್ವೀಕರಿಸಿ. ಹೌದು ಅನಿಸುತ್ತದೆ. ಮತ್ತೆ ನನ್ನ guilt? ನನ್ನ ಆತ್ಮ ನಿರೀಕ್ಷಣೆ?

ಒಂದು ಕಡೆ ಕಾದಂಬರಿಯ ಒಂದು ಪಾತ್ರ ಹೆನ್ರಿ ಹೇಳುತ್ತಾನೆ, ಅಂತಸ್ತು ಏರಿದಂತೆ, ಮನುಷ್ಯ ಪ್ರಸಿದ್ಧನಾದಂತೆ ಸಾರ್ವಜನಿಕ ಬದುಕೇ ವೈಯಕ್ತಿಕ ಬದುಕೂ ಆಗಿ ಮನುಷ್ಯ ತಾನು ಕೇವಲ ತನ್ನೊಂದಿಗೆ ಇರುವ ಬಗೆಯನ್ನೇ ಮರೆತುಬಿಡುತ್ತಾನೆ ಮತ್ತು ಸಾರ್ವಜನಿಕವಾಗಿ ವರ್ತಿಸುವಂತೆಯೇ ತನ್ನೊಂದಿಗೂ ವರ್ತಿಸುತ್ತಾನೆ! ಈಚೆಗೆ ಬಂದ ಸಿನಿಮಾ Luck by Chance ನೆನಪಾಗುವುದಿಲ್ಲವೆ?

ನನ್ನ guiltನ್ನು ಅದಕ್ಕಾಗಿ ಕುಗ್ಗಿ ಹೋಗದೆ, ಅದನ್ನು ಹೇಳಿಕೊಂಡಿದ್ದರಿಂದಲೋ, ಅದಕ್ಕಿದ್ದ ಸಾಕ್ಷ್ಯ ನಾಶವಾಗಿದ್ದರಿಂದಲೋ, ತಾನದರಿಂದ ಮುಕ್ತನಾದೆ ಎಂಬ ಹೊಸ ಭ್ರಮೆಗೆ ಮಾರಿಕೊಳ್ಳದೆ, ಅದರಿಂದ ಹೆದರಿ ಓಡಿ ಹೋಗದೆ, ಕೊನೆಗೆ ಅದನ್ನು ಘನವಾದ ಪಾತಳಿಯೊಂದರಲ್ಲಿ ಸಹಜ-ಅನಿವಾರ್ಯ ಇತ್ಯಾದಿ ವಿಧಿಲಿಖಿತದ ಹೆಸರಿನಲ್ಲಿಯೂ ಸ್ವೀಕರಿಸದೆ ಕಾದಂಬರಿ ಇಂಥ guiltನ್ನು ಮುಖಾಮುಖಿಯಾಗುತ್ತದೆ.

ಕೀರ್ತಿನಾಥ ಕುರ್ತಕೋಟಿಯವರು ಗಿರೀಶ್ ಕಾರ್ನಾಡರಯಯಾತಿನಾಟಕದ ಮುನ್ನುಡಿಯಲ್ಲಿ ಹೇಳುತ್ತಾರೆ:
"ಯಯಾತಿಯ ಅಮರತ್ವದ ಆಕಾಂಕ್ಷೆ, ದೇವಯಾನಿಯ ಪ್ರೀತಿಯ ಹಂಬಲ, ಶರ್ಮಿಷ್ಠೆಯ ಮನುಷ್ಯತ್ವದ ಆಶೆ, ಪುರುವಿನ ವ್ಯಕ್ತಿತ್ವದ ಶೋಧ ಇವೆಲ್ಲ ತಾತ್ವಿಕ ಕಾಮನೆಗಳಾಗಿವೆ. ಆದರೆ ಅವೇ ಕಾಮನೆಗಳು ದುರ್ಬಲತೆಗಳಾಗಿ ಕಾಡುವುದು ಮನುಷ್ಯತ್ವದ ದುರ್ದೈವವಾಗಿದೆ."

ಮನುಷ್ಯನ ತಾತ್ವಿಕ ಕಾಮನೆ, ಅದು ಯಯಾತಿಯದ್ದೋ ಪುರುವಿನದ್ದೋ ಎರಡನ್ನೂ ಒಂದೇ ತಕ್ಕಡಿಯಲ್ಲಿಡುವ ಕುರ್ತಕೋಟಿಯವರು ತಾತ್ವಿಕ ಕಾಮನೆಗಳೇ ಮನುಷ್ಯನ ದೌರ್ಬಲ್ಯವಾಗಿ ಕಾಡುವುದು ಮನುಷ್ಯತ್ವದ ದುರ್ದೈವ ಎಂದು ತಿಳಿಯುತ್ತಾರೆ. ನಾಟಕದ ದುರ್ಬಲ ಪಾತ್ರಗಳ ಸೋಲನ್ನು ಮನುಕುಲಕ್ಕೇ ಆರೋಪಿಸುವುದು ಸರಿಯೆ? ಇದೇ ನಾಟಕದಲ್ಲಿ ಶರ್ಮಿಷ್ಠೆ ಸಾಕಷ್ಟು ನೇರವಾಗಿಯೇ ಯಯಾತಿಗೆ ಹೇಳುವ ಮಾತು ಗಮನಿಸಿ, "ಮನುಷ್ಯನ ಅಸ್ತಿತ್ವ ಅವನ ಮನುಷ್ಯತ್ವದಲ್ಲಿಲ್ಲ, ಅದರ ಅಭಾವದಲ್ಲಿದೆ"!

ಆದರೆಯಯಾತಿಯಲ್ಲಿರುವುದು guilt ಅಲ್ಲ. ಇವತ್ತು ಅದನ್ನು ಮನುಷ್ಯನಿಗೆ ಆರೋಪಿಸಿ ನಾವು guilt ಅನುಭವಿಸಬಹುದು, ಅಷ್ಟೆ! ಅತಿ ಲೋಲುಪತೆ ಮತ್ತು ಲೈಂಗಿಕತೆಯನ್ನು ತಾತ್ವಿಕ ಕಾಮನೆ ಎನ್ನುವುದು ಕಷ್ಟ! ಲೈಂಗಿಕತೆಗೆ ಪ್ರಸ್ತುತ ಕಾದಂಬರಿಯಲ್ಲೂ ಮಹತ್ವವಿದೆ. ಕಾದಂಬರಿಯಲ್ಲಿ guilt ಒಂದು ಪ್ರಧಾನ ಭೂಮಿಕೆ, ಬೇರೆ ಬೇರೆ ವಿಧದಲ್ಲಿ. ಆದರೆ ಯಾರೂ ಅದನ್ನು ತೀವ್ರವಾಗಿ ಅನುಭವಿಸುತ್ತಿಲ್ಲ ಎನ್ನುವುದು ನಿಜ. ಆದರೆ, ಅದೇ ಸಮಯಕ್ಕೆ, ಒಂದೆರಡು ಪಾತ್ರಗಳ ಹೊರತು ಯಾರೂ ಅದರಿಂದ ಓಡಿ ಹೋಗುತ್ತಿಲ್ಲ ಕೂಡ.

"ಪರಿಸ್ಥಿತಿಯಿಂದ ಓಡಿದರೂ ಮನಸ್ಸಿನಿಂದ ಓಡಲಿಕ್ಕಾಗುವುದಿಲ್ಲ ದೇವೀ!" (ಮತ್ತೆ ಯಯಾತಿ)

ಕಾದಂಬರಿಯ ನಿರೂಪಕ ಜಮಾಲ್ ಗೆಳೆಯ ಹೆನ್ರಿ ದಿನವೊಂದು ಮುಗಿಯುತ್ತಿರುವಾಗ ದಿನವೂ ಬರೆಯುತ್ತಿದ್ದನಂತೆ, "Thank God, nothing to be ashamed of. But this year I've done no work at all."

ಕಾದಂಬರಿಯಲ್ಲಿ ಒಬ್ಬ ನಾಟಕಕಾರನಾದ ಹೆನ್ರಿ ಹೇಳುತ್ತಿರುವುದು, ಅನುಭವಿಸುತ್ತಿರುವುದು ಸೃಜನಶೀಲ ನಿಷ್ಕ್ರಿಯತೆಯ ಕುರಿತಾದ guilt. ಆದರೆ ಅಷ್ಟೇ ಆಗಬೇಕಾಗಿಲ್ಲ. ನಾಚಿಕೆ ಪಟ್ಟುಕೊಳ್ಳುವುದೇ ಆದರೆ ಎಷ್ಟೊಂದು ಸಂಗತಿಗಳಿಲ್ಲ, ಮಾಡಿರುವುದು ಮತ್ತು ಮಾಡಬೇಕಾದಾಗ ಮಾಡದೇ ಬಿಟ್ಟಿರುವುದು! Even silence amounts to...

ಕಾದಂಬರಿಯಾಗಿ ಇದು, ಇದನ್ನು ಓದುವಾಗಲೂ ಓದಿ ಮುಗಿಸಿದ ನಂತರವೂ ನಮ್ಮೊಳಗೆ ಬೆಳೆಯತೊಡಗುತ್ತದೆ. ಸೋಜಿಗಕ್ಕಾಗಿಯೇ ಕಾದಂಬರಿ ಮುಖ್ಯವಾಗುತ್ತದೆ. ಎಲ್ಲ ಒಳ್ಳೆಯ ಬರವಣಿಗೆಯೂ ಬಹುಷಃ ಲಕ್ಷಣವನ್ನು ಪಡೆದಿರುತ್ತದೆ. ಆಳವಾದ ಜ್ಞಾನ, ವೈಚಾರಿಕತೆ, ವಿಷಯ ಸಂಗ್ರಹ ಎಲ್ಲ ಇರುವ ಕಾದಂಬರಿಕಾರರು ಹಲವರಿದ್ದಾರೆ. Knowledge ಎಂಬುದೇನು ಯಾರಪ್ಪನ ಮನೆಯ ಸ್ವತ್ತೂ ಅಲ್ಲ. ಯಾರೂ ಗಳಿಸಬಹುದಾದ ಅಕ್ಷಯ ನಿಧಿಯೇ ಅದು. ಆದರೆ ಅದನ್ನು apply ಮಾಡುವಲ್ಲಿ ಬರಹಗಾರರು ತಡವಿದ್ದು ಎಡವಿದ್ದು ಮುಖ್ಯವಾಗುತ್ತದೆ, ಕೊನೆಗೂ.

ಸಾಧಾರಣವಾಗಿ ನಾವು ಕಾಣುವುದು ಬರಹಗಾರ ತನ್ನದೇ ಆದ ಒಂದು Concept ಇಟ್ಟುಕೊಂಡು ಅದರ ಪ್ರತಿಪಾದನೆಗೆ ತನ್ನ ಜ್ಞಾನವನ್ನು ಬಳಸಿಕೊಳ್ಳುವುದು. ಇಲ್ಲೆಲ್ಲ ಬರಹಗಾರನದ್ದೇ ಆದ ಒಂದು ಪೂರ್ವ ನಿರ್ಧಾರಿತ ಅಂತಿಮ ತೀರ್ಪು ನಮಗೆ ಸಿಗುತ್ತದೆ ಮತ್ತು ಅಂಥ ಕಾದಂಬರಿ ಅದರ ಓದಿನೊಂದಿಗೇ ಅಥವಾ ಅಂಥ ಹೊಳಹು ಸಿಕ್ಕಿದ್ದೇ ಅರ್ಧದಲ್ಲೇ(!) ಮುಗಿಯುತ್ತದೆ. ಕಾದಂಬರಿಯ ಘನತೆ ಇರುವುದು ಇಲ್ಲಿ ಅಂಥ ಒಂದು concept ಇಲ್ಲದಿರುವುದರಲ್ಲಿ. ನಿಶ್ಚಿತವಾಗಿಯೂ ಒಂದು ಕಥಾನಕ, ಅದಕ್ಕೆ ತಕ್ಕ ತಂತ್ರ, ದೀಪಕ್ ಚೋಪ್ರಾ ಹೇಳುವಂಥ ಒಂದು ಸಂತುಲನದ ಆಶ್ರಯ ಎಲ್ಲ ಕಾದಂಬರಿಯಲ್ಲಿದೆ. ಇಲ್ಲವಾದಲ್ಲಿ ಬಹುಷಃ ಚೂರಿಯನ್ನು ಕಂಡೇ ಹೃದಯಾಘಾತವಾಗುವ ಒಂದು ವಿಲಕ್ಷಣ ವಿದ್ಯಮಾನ ನಾಟಕೀಯ ರೀತಿಯಲ್ಲಿ ಪುನರಾವರ್ತಿ ಘಟಿಸುವ ಅಗತ್ಯವೇನೂ ಇದ್ದಿರಲಿಲ್ಲ. ಅದೇ ರೀತಿ ಕಾದಂಬರಿ ತಾನು ಗಮನಿಸಬೇಕೆಂದಿರುವುದನ್ನು ಮನುಷ್ಯನ ಲೈಂಗಿಕ ಪ್ರವೃತ್ತಿಗೆ ತಳುಕು ಹಾಕಿಕೊಂಡೇ ನೋಡುವ ಚಾಳಿ (ಇದು ಪ್ರಾಯ್ಡ್ ಪ್ರೇರಿತವೆ?) ಇರಿಸಿಕೊಂಡಿರುವುದು. ಇದು ಹನೀಫ್ ಕುರೇಶಿಯ ಕಾದಂಬರಿಯ ಕಥಾನಕವನ್ನು ಕಟ್ಟುವ ವಿನ್ಯಾಸದ ಮೇಲೂ ಕೆಟ್ಟ ಪರಿಣಾಮ ಬೀರಿದಂತಿದೆ. ಸ್ವತಃ ಒಬ್ಬ ನಾಟಕಕಾರರಾದ ಹನೀಫ್ ಕುರೇಶಿ ಇಲ್ಲಿ ಮೇಲಿಂದ ಮೇಲೆ ವೈವಿಧ್ಯಮಯವಾದ ಲೈಂಗಿಕ ಅಭಿವ್ಯಕ್ತಿ ಮತ್ತು ಸಾಧ್ಯತೆಗಳನ್ನು ಕಾಣಿಸುವುದರತ್ತ ಎಷ್ಟು ಆದ್ಯತೆ ನೀಡುತ್ತಾರೆಂದರೆ ಮತ್ತೆ ಮತ್ತೆ ನಾಟಕದ ಸಾಲು ಸಾಲು ದೃಶ್ಯಾವಳಿಗಳ ನೆನಪು ಬರತೊಡಗಿದರೆ ಅಚ್ಚರಿಯೇನಿಲ್ಲ.

ಆದರೂ ಕಾದಂಬರಿ ಕೆಲವೊಂದು ಪ್ರಶ್ನೆಗಳನ್ನು (ಆರಂಭದಲ್ಲೇ ಹೇಳಲಾದವುಗಳನ್ನೂ ಸೇರಿ) ಪ್ರಶ್ನೆಗಳನ್ನಾಗಿಯೇ ಉಳಿಸಿಕೊಳ್ಳುವ ಸಂಯಮ ತೋರಿದೆ. ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳುವುದಕ್ಕಿಂತ ಆಗಾಗ ಪ್ರಶ್ನೆಗಳಿಗೆ ಮುಖಾಮುಖಿಯಾಗುವುದೇ, ಉತ್ತರಗಳ - ಸನ್ನಿವೇಶ, ಕಾಲ, ದೇಶ, ಮನಸ್ಥಿತಿಗಳಿಗನುಗುಣವಾಗಿ ದಕ್ಕುವ - ಉತ್ತರಗಳ ಅನುಭೂತಿ ಹೊಂದುವುದೇ ಹೆಚ್ಚು ಮಹತ್ವದ್ದು. ಮತ್ತು, ವಿಭಿನ್ನ ಉತ್ತರಗಳ ನಡುವಿನ ತಾಕಲಾಟ, ಸಂದಿಗ್ಧ ಮತ್ತು infinity ಯನ್ನು ಕಂಡುಕೊಳ್ಳುವುದು ಕೂಡ ಒಂದು ಬಗೆಯ ಬಿಡುಗಡೆಯೇ, ಪ್ರಶ್ನೆಗಳಿಂದ. ತರದ ಬಿಡುಗಡೆಯ pursuit ಕಾದಂಬರಿಯಲ್ಲಿದೆ.

ಬ್ಲರ್ಬ್ನಿಂದ ಉದ್ಧರಿಸಿರುವ ಮಾತುಗಳನ್ನು ಗಮನಿಸಿ:

With unfailing deftness of touch Kureishi has created a memorable cast of recognisable individuals, all of whom wrestle with their own limits as human beings, haunted by the past until they find it within themselves to forgive themselves, most of all.

ವಾಹ್! ನಮ್ಮನ್ನು ನಾವು ಕೊನೆಗೂ ಕ್ಷಮಿಸಿಕೊಳ್ಳಲು ಸಾಧ್ಯವಾಗುವುದು! ಬಗೆಯ, ಐವಾನ್ ಇಲಿಚ್ಯನ ಮಾದರಿಯಲ್ಲಿ ಇಡೀ ಬದುಕಿನ ಪುನರಾವಲೋಕನ ನಮ್ಮ ಕನ್ನಡದ ಅನೇಕ ಕಾದಂಬರಿಗಳಲ್ಲೂ ನಡೆದಿದೆ. ಆದರೆ ಅಲ್ಲಿ ಸಾವಿನ ನೆರಳು ಮತ್ತು ಭೂತದ ಪರಾಮರ್ಶೆ ನಡೆಯುತ್ತದೆ. ಕಾರಂತರ ಅಳಿದಮೇಲೆ ಕಾದಂಬರಿಯಲ್ಲಿ ಯಶವಂತರಾಯ, ಕುಸುಮಾಕರ ದೇವರಗೆಣ್ಣೂರರ ನಿರಿಂದ್ರಿಯದಲ್ಲಿ ರೊಳ್ಳಿ, ಯಶವಂತ ಚಿತ್ತಾಲರ ಶಿಕಾರಿಯ ನಾಗಪ್ಪ ಕೂಡ, ಸ್ವಲ್ಪಮಟ್ಟಿಗೆ ಸಂದು ಹೋದ ಇಡೀ ಬದುಕನ್ನು ನಿಕಷಃಕ್ಕೆ ಒಡ್ಡುತ್ತಾರೆ, ಸ್ವತಃ ಅಥವಾ ನಿರೂಪಕನ ಮೂಲಕ, ಎನ್ನಬಹುದು. ಸಾವಿನ ನೆರಳು ಕಾದಂಬರಿಯಲ್ಲೂ ಹಾಯ್ದು ಹೋಗುತ್ತದೆಯಾದರೂ ಇದು ಹಿಂದಿರುಗಿ ನೋಡುವ ಕಥನವಲ್ಲ. ಕಥನ ವರ್ತಮಾನದಿಂದ ಮುಂದಕ್ಕೆ ಚಲಿಸುತ್ತದೆ ಮತ್ತು ಚಲಿಸುತ್ತಲೇ guilt ಮತ್ತು ಬದುಕನ್ನು ಸಂಭಾಳಿಸುತ್ತ ಹೋಗುತ್ತದೆ.

ಮನುಷ್ಯ ಸಂಬಂಧಗಳನ್ನು ಶೋಧಿಸುವ ಮುಖಾಂತರ ಯಾತ್ರೆ ನಡೆಯುತ್ತದೆ.
ತಂದೆ-ತಾಯಿ ನಡುವಿನ ಸಂಬಂಧ
ತಂದೆ ಮಕ್ಕಳು ಹಾಗೂ ತಾಯಿ ಮಕ್ಕಳ ನಡುವಿನ ಸಂಬಂಧ
ಗಂಡ-ಹೆಂಡತಿ ನಡುವಿನ ಸಂಬಂಧ
ಗಂಡ-ಮಗ/ಮಗಳು; ಹೆಂಡತಿ-ಮಗ/ಮಗಳು
ಗಂಡ ಮತ್ತು ಅವನ ವಿವಾಹೇತರ ಸಂಬಂಧಗಳು- ತತ್ಕಾಲೀನ ಮತ್ತು ದೀರ್ಘಕಾಲೀನ ಸೇರಿ
ಹೆಂಡತಿಯ ಅಂಥವೇ ಸಂಬಂಧಗಳು
ಒಡಹುಟ್ಟು ಮತ್ತು ಅವರ ನಡುವಿನ ಜಗಳ-ಪ್ರೀತಿಯ ತಾಕಲಾಟಗಳು
ಸ್ನೇಹ ಮತ್ತು ಅದರ ನೆರಳಿನ ಇತಿ ಮಿತಿಗಳು
-ಇಷ್ಟನ್ನು ಇರಿಸಿಕೊಂಡು ನಡೆಯುವ ಶೋಧ ಬಾಲ್ಯ-ತಾರುಣ್ಯ-ಯೌವನಗಳನ್ನು ದಾಟಿ ನಡುವಯಸ್ಸಿನಾಚೆ ಮುಪ್ಪು-ಸಾವಿನ ನೆರಳಿನಡಿಯೂ ಸಾಗುತ್ತದೆ. ಕಾಮ-ಪ್ರೇಮ-ಸ್ನೇಹ ಮೂರೂ ನೆಲೆಯಲ್ಲಿ ಗಂಡು-ಗಂಡು ಮತ್ತು ಹೆಣ್ಣು-ಹೆಣ್ಣು ಜೀವಗಳನ್ನೂ ಸೇರಿಸಿಕೊಂಡು (ವಿಶೇಷತಃ ಕಾಮಕ್ಕೂ) ಶೋಧ ಸಾಗುತ್ತದೆ. ಕಾಮವಂತೂ ದೇಹದ, ಮನಸ್ಸಿನ ಹಸಿವೆಯಾಗಿ, ಕೇವಲ ಹೊತ್ತು ಕಳೆಯುವ ಮನರಂಜನೆಯಾಗಿ, ಬದುಕಿನ ಅನಿವಾರ್ಯ ಅಗತ್ಯವಾಗಿ ಪ್ರಧಾನ ಭೂಮಿಕೆಯಲ್ಲಿದೆ. ಪಾಕಿಸ್ತಾನ, ಯುರೋಪು, ಅಮೆರಿಕ - ಹೀಗೆ ಸರಿಸುಮಾರು ವಿಶ್ವವನ್ನೇ ತನ್ನ ಭೂಮಿಕೆಯನ್ನಾಗಿರಿಸಿಕೊಂಡು ಸಾಗುವ ಕಾದಂಬರಿ ಒಂದರ್ಥದಲ್ಲಿ ಹಿರಣ್ಯ ಕಶ್ಯಪುವಿನ ವರದ ಡಿಫಿನಿಶನ್ನನ್ನ ನೆನಪಿಸುವಂತೆ ಹಲವು ನಿಟ್ಟಿನಿಂದ ಮನುಷ್ಯ ಸಂಬಂಧವನ್ನು ಪರಾಮರ್ಶಿಸುತ್ತದಾದರೂ ಅದರ ಪ್ರಧಾನ ಪಾತಳಿ ಲೈಂಗಿಕ ನೆಲೆಗಟ್ಟಿನದ್ದೇ.

ವಿವೇಕ ಶಾನಭಾಗರ ಆರಂಭಿಕ ಕತೆಗಳಲ್ಲೊಂದಾದಬಂದಾವೋ ಬಾರವೋ’ (ಅಂಕುರ ಸಂಕಲನ) ದಲ್ಲಿನ ಅಸಾಧ್ಯ ಪಾತ್ರ, ನಾಯಕ ಹೇಳುವ ಮಾತುಗಳನ್ನು ಇಲ್ಲಿ ನೆನೆಯುತ್ತೇನೆ. ಆತ ಹೇಳುತ್ತಾನೆ, "ಕಾಮವನ್ನು ನಾವು ಎದುರಿಸಿ ನಿರ್ವಹಿಸುತ್ತೇವಲ್ಲ, ಅದೇ ಬದುಕನ್ನು ನಾವು ಪ್ರವೇಶಿಸುವ ಮತ್ತು ಎದುರಿಸುವ ರೀತಿಯೂ ಆಗಿರುತ್ತದೇನೋ ಎಂದು ಇತ್ತೀಚೆಗೆ ನನಗನ್ನಿಸತೊಡಗಿದೆ". ಕಾದಂಬರಿಯಂತೂ ವಾದವನ್ನೇ ಗಟ್ಟಿಯಾಗಿ ಅವುಚಿ ಹಿಡಿದಂತಿದೆ!

ಕಾದಂಬರಿಯ ಹರವು ಮನವರಿಕೆ ಮಾಡಿಕೊಡುವುದಕ್ಕಾಗಿ ಬ್ಲರ್ಬ್ನಿಂದಲೇ ಆಯ್ದ ಇನ್ನೊಂದು ಮಾತು:
"The book brilliantly captures that decades (70's) sense of sexual freedom and the exhileration of the drug culture as well as the violent struggle between the forces of labour and capital."

ಇಷ್ಟಲ್ಲದೆ ಅಮೆರಿಕ ಮತ್ತು ಬ್ರಿಟನ್ ಸೇರಿ ಇರಾಕ್ ಮುಂತಾದ ಕಡೆ ಮಾಡಿದ ಶಾಂತಿ ಸ್ಥಾಪನೆಯ ಘನಕಾರ್ಯ ಯಾವೆಲ್ಲ ರೀತಿ ಬ್ರಿಟನ್ನಿನ ಮೆಟ್ರೊಗಳಲ್ಲಿ, ಬಸ್ಸು-ಟ್ರೈನುಗಳಲ್ಲಿ ಸ್ಫೋಟಿಸುವ ಬಾಂಬುಗಳಾಗಿ ಪ್ರತಿಧ್ವನಿಸಿತು, ಬ್ರಿಟನ್ನಿನ ಅಮಾಯಕರ ಬಲಿ ತೆಗೆದು ಕೊಂಡಿತು ಎನ್ನುವುದರ ಜೊತೆಜೊತೆಗೇ ಅವೇ ಬಾಂಬುಗಳು ಕಾರಣವಾಗಿ ಅಲ್ಲಿ ಮುಸ್ಲಿಂ ಜನಾಂಗ ಎದುರಿಸಿದ ಅಪನಂಬಿಕೆ-ಅಪಮಾನಗಳ ಕುರಿತೂ ಕಾದಂಬರಿ ಮಾತನಾಡುತ್ತದೆ. ಇಸಂಗಳ ಕೊನೆ, ಸಾಮಾಜಿಕ ಕಳಕಳಿಯ ಚಳವಳಿಗಳು ಧಾರ್ಮಿಕ ಮೂಲಭೂತವಾದದ ಪರ ಅಥವಾ ವಿರುದ್ಧವಾಗಿ ಹೊಂದಿದ ರೂಪಾಂತರ ಇತ್ಯಾದಿಗಳೂ ಕಾದಂಬರಿಯ ಕಥಾನಕ ಸಾಗುವ ಲೋಕದ ಅನಿವಾರ್ಯ ಭಾಗಗಳಾಗಿ ನಮಗೆ ಎದುರಾಗುತ್ತವೆ. ಅಷ್ಟರಮಟ್ಟಿಗೆ ಕಾದಂಬರಿ ತನ್ನದೇ ಆದ ಜಗತ್ತನ್ನು ಕೂಡ ಕಟ್ಟಿಕೊಡುತ್ತದೆ.

Something to Tell You ಕೊನೆಗೂ ಏನು Something ಎನ್ನುವುದನ್ನು ಹೇಳದೆಯೇ ಮುಗಿದು ಬಿಡುತ್ತದೆ ಎನ್ನುವ ಒಂದು ವಿಮರ್ಶೆಯನ್ನೂ ಓದಿದೆ. ಅದು ಕೂಡ ಒಂದರ್ಥದಲ್ಲಿ ನಿಜ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ