Monday, August 10, 2009

ಸಚ್ಚಿದಾನಂದ ಹೆಗಡೆಯವರ ಕಾರಂತಜ್ಜನಿಗೊಂದು ಪತ್ರ

ಈಚೆಗೆ ನೈಜೀರಿಯಾದ ಚಿಮಾಮಾಂಡಾ ಎನ್‌ಗೋಝಿ ಅದಿಚ್ಯಿ, ಸಚ್ಚಿದಾನಂದ ಹೆಗಡೆ ಮತ್ತು ಸಂದೀಪ ನಾಯಕರ ಕಥಾಸಂಕಲನಗಳನ್ನು ಓದಿದೆ. ಮೂವರೂ ಎಂಭತ್ತರ ದಶಕದ ಪ್ರತಿಭೆಗಳು, ನವಯುವಕರು, ಅದ್ಭುತ ಕತೆಗಾರರು. ಒಂದು ಕತೆ ಯಾಕೆ ಇಷ್ಟವಾಗುತ್ತದೆ? ಯಾಕೆ ಮತ್ತು ಹೇಗೆ ಅದು ಮನಸ್ಸಿನಲ್ಲಿ ನಿಲ್ಲುತ್ತದೆ? ನಿಂತು ಇನ್ಯಾವತ್ತೋ ಒಂದು ಕಾಡುವ ಬಿಂಬವಾಗಿ ನೆನಪಾಗುತ್ತ ಉಳಿಯುತ್ತದೆ? ಯಾಕೆ ಅದು ಮನಸ್ಸಿಗೆ ತಟ್ಟುತ್ತದೆ ಮತ್ತು ಹೇಗೆ ಎಂದೆಲ್ಲ ಯೋಚಿಸುತ್ತ ಕೂರುತ್ತೇನೆ.

ನಮ್ಮ ಜೀವನಾನುಭವ ನಮ್ಮದೇ ಜೀವನದ ಆದ್ಯತೆಗಳಿಗನುಗುಣವಾಗಿ ಮುಖ್ಯ-ಅಮುಖ್ಯ ಎಂದೆಲ್ಲ ವಿಂಗಡಿಸಬಹುದಾದ ರೀತಿ ಇರುತ್ತವೆ. ಕೆಲವು ಅನುಭವಗಳನ್ನು ನಾವು ಮರೆಯುವುದೇ ಸಾಧ್ಯವಿಲ್ಲ ಮತ್ತು ಕೆಲವನ್ನು ಬಹು ಬೇಗ ಮರೆತು ಬಿಡುತ್ತೇವೆ. ಮರೆಯದೇ ಇರುವುದಕ್ಕೆ ಕಾರಣಗಳಿರುವಂತೆಯೇ ಮರೆತಿದ್ದಕ್ಕೆ ಕೂಡ ಕಾರಣಗಳಿರಬಹುದು ಮತ್ತು ಈ ಕಾರಣ, ಸಂದರ್ಭ ಇತ್ಯಾದಿ ನೆವನಗಳಿಲ್ಲದಿದ್ದಲ್ಲಿ ಮರೆತಿರುವುದರಲ್ಲಿ ಮುಖ್ಯವಾದವು ಇದ್ದವು ಅನಿಸಬಹುದು ಮತ್ತು ಹಾಗೆಯೆ ಮರೆಯದೇ ಇರುವುದರಲ್ಲಿ ಕೆಲವು ನಿಜಕ್ಕೂ ಮರೆತುಬಿಡುವುದಕ್ಕೆ ಅರ್ಹವಾದವು ಅನಿಸಬಹುದು. ನಮ್ಮ ನಮ್ಮ ಜೀವನಶೈಲಿ, ಮನಸ್ಸಿನ ಅಗತ್ಯ-ಮೋಹ ಇತ್ಯಾದಿಗಳಿಗನುಗುಣವಾಗಿ ನಮ್ಮದೊಂದು ಆದ್ಯತೆ-ನಿರ್ಲಕ್ಷ್ಯ ಈ ಜೀವನಾನುಭವಗಳತ್ತ ಇರುತ್ತದೆ. ನಮ್ಮ ಸಂವೇದನೆ-ಸ್ಪಂದನ ಬದುಕಿನ ಎಲ್ಲಾದಕ್ಕೂ ಒಂದೇ ತರ ಆಗಿರುವುದಿಲ್ಲ ಎನ್ನುವಲ್ಲೇ ಈ ಆದ್ಯತೆಗಳೆಲ್ಲ ಒಡೆದು ಕಾಣುತ್ತವೆ. ಗಂಡು-ಹೆಣ್ಣು ಸಂಬಂಧ, ಲೈಂಗಿಕತೆ, ಸಾಮಾಜಿಕ ಅನ್ಯಾಯ, ಆರ್ಥಿಕ ಅಸಮತೋಲನ, ರಾಜಕೀಯ ಬಿಕ್ಕಟ್ಟು, ಚಾರಿತ್ರಿಕ ಸತ್ಯಗಳು, ಪುರಾಣ-ಜಾನಪದ-ದಂತಕತೆಗಳ ನಿಗೂಢತೆ, ಆಧ್ಯಾತ್ಮದ ಅಮೂರ್ತಲೋಕ - ಹೀಗೆ ದೇಶ-ಕಾಲ ಮೀರಿ ನಮ್ಮ ಸಂವೇದನೆಗಳನ್ನು ಮೀಟುವ ವಸ್ತು-ವಿಷಯಗಳಲ್ಲಿ ಕೆಲವೇ ಕೆಲವಕ್ಕೆ ಮಹತ್ವ ಸಿಗುತ್ತದೆ, ಅದು ಕಾಲ ಕಾಲಕ್ಕೆ ಬದಲಾದರೂ. ಜೀವನಾನುಭವ, ಓದು ಮತ್ತು ಗಮನಿಸುವಿಕೆ ಕತೆಗಾರನ ಬದುಕನ್ನು ಗ್ರಹಿಸುವ ನೆಲೆಗಳನ್ನು ಸುಪುಷ್ಟಗೊಳಿಸುತ್ತ ಹೋದಂತೆಲ್ಲ ಬದಲಾವಣೆ ತನ್ನಿಂತಾನೇ ಘಟಿಸುತ್ತದೆ. ಬರೇ comfort zone ಬಿಟ್ಟು ಬರೆಯಬೇಕೆಂಬ ಹಠದಿಂದಲ್ಲ. ಒಬ್ಬ ಕತೆಗಾರ ಬರೆಯಬಹುದಾದ ಕತೆಗಳು ಮೊತ್ತ ಮೊದಲಿಗೆ ಈ ಆದ್ಯತೆಗಳನ್ನೇ ಅವಲಂಬಿಸಿರುತ್ತವೆ. ಅವು ಓದುಗನಿಗೂ, ಸ್ವತಃ ಕತೆಗಾರನಿಗೂ ಬದುಕಿನ ಆದ್ಯತೆಗಳನ್ನು ಒಡೆದು ತೋರುತ್ತವೆ ಕೂಡಾ.

ನನ್ನ ಜೀವನಾನುಭವದಲ್ಲಿ ಮುಖ್ಯ ಅನಿಸಿದ್ದನ್ನು ನಾನು ನಿಮಗೆ ಕತೆಯಾಗಿ ಹೇಳಲು ಹೊರಟಾಗ ಅದನ್ನು ಆಕರ್ಷಕವಾಗಿ ಹೇಳಬೇಕು, ರಂಜಿಸಬೇಕು. ಎರಡನೆಯದಾಗಿ, ನನಗೆ ತಟ್ಟಿದ್ದು ಅದೇ ತೀವ್ರತೆಯಲ್ಲಿ ನಿಮ್ಮನ್ನೂ ತಟ್ಟಬೇಕಾದರೆ ಅಗತ್ಯವಾದ ಪರಿಕರಗಳನ್ನು ನಿರ್ಮಿಸಿಕೊಳ್ಳಬೇಕು. ಹೇಗೆ ಹೇಳಿದರೆ ಹೆಚ್ಚು ಪರಿಣಾಮಕಾರಿ, ಆಕರ್ಷಕ, ರಂಜನೀಯ ಆಗಬಹುದೆಂದು ಯೋಚಿಸಿ ಹಾಗೆ ಹೇಳಬೇಕು. ಆದರೆ ಅದು ಆಗಲೂ ಅದು ಅಸಹಜ-ಸರ್ಕಸ್ಸು ಎಲ್ಲ ಆಗದೆ, ‘ಮೊಳೆಗಳು ಕಾಣದ ಕುರ್ಚಿ’ಯಾಗಬೇಕು. bad carpentryಯಾಗಬಾರದು!

ಇಷ್ಟಿದ್ದೂ ಒಂದು ಕತೆ ಓದುಗನಿಗೆ ಆಪ್ತವಾಗಬೇಕು, ಇಷ್ಟವಾಗಬೇಕು, ಬಹುಕಾಲ ಅವನ ಮನಸ್ಸಿನಲ್ಲಿ ನಿಲ್ಲಬೇಕು, ಪರಿಣಾಮ ಬೀರಬೇಕು, ಕಾಡಬೇಕು ಎಂದೇನೂ ನಿಯಮ ಇಲ್ಲ!

ಸಚ್ಚಿದಾನಂದ ಹೆಗಡೆ ಈ ಕುರಿತೆಲ್ಲ ಯೋಚಿಸುವ, ಬರೆಯುವ ಪ್ರಕ್ರಿಯೆಯ ಕುರಿತೇ ಚಿಂತನೆ ನಡೆಸುವ, ಚರ್ಚಿಸುವ ಯುವ ಕತೆಗಾರ. ಇವರ ಕಾರಂತಜ್ಜನಿಗೊಂದು ಪತ್ರ ಕಥಾಸಂಕಲನದ ಕತೆಗಳನ್ನು ಓದುವಾಗ ಮೇಲ್ನೋಟಕ್ಕೆ ನಮಗೆ ಅವೆಲ್ಲ ಕಾಣಿಸದಿದ್ದರೂ ಸೂಕ್ಷ್ಮವಾಗಿ ಗಮನಿಸಿದರೆ ಈ ಅಂಶಗಳ ಕುರಿತು ಪ್ರಜ್ಞಾಪೂರ್ವಕವಾದ ಒಂದು ಎಚ್ಚರ ಈ ಕತೆಗಾರರಲ್ಲಿರುವುದು ತಿಳಿಯುತ್ತದೆ. ಹೊಸ ಕತೆಗಾರರಲ್ಲಿ ಸಚ್ಚಿದಾನಂದ ಹೆಗಡೆ (1976) ಮುಖ್ಯವಾಗುವುದು ಇದೇ ಕಾರಣಕ್ಕೆ.

ವಿವರಗಳಲ್ಲಿ ತಾನು ಕಟ್ಟುವ ಜಗತ್ತನ್ನು ಜೀವಂತಗೊಳಿಸುತ್ತ, ಭಾವಜಗತ್ತಿನ ವಿದ್ಯಮಾನಗಳಿಂದ ಮನುಷ್ಯನ ‘ಸತ್’ ಮೀಟಿ ಆಪ್ತವಾಗುತ್ತಲೇ ತನ್ನ ಕತೆಗೆ ಈ ಎರಡನ್ನೂ ಮೀರಿದ ಒಂದು ತಾತ್ವಿಕತೆಯನ್ನೂ ತುಂಬ ಕಲಾತ್ಮಕವಾಗಿ ಮತ್ತು ಕಥಾನಕದ ಅಂತರಂಗದಿಂದಲೇ - ಅಂತಃಸ್ಪೂರ್ತ ಎನ್ನುತ್ತಾರಲ್ಲ - ಹಾಗೆ ದಕ್ಕಿಸಬಲ್ಲ ಕತೆಗಾರ ಸಚ್ಚಿದಾನಂದ ಹೆಗಡೆ. ಈ ಮೂರನ್ನೂ ಜೊತೆ ಜೊತೆಯಾಗಿ ಸಾಧಿಸುವುದು ಸುಲಭವಲ್ಲ. ಅದು ಒಂಥರಾ ಕತೆಗಾರನ ಅದೃಷ್ಟವಿದ್ದಂತೆ. ಅನೇಕ ವೇಳೆ ಮಹತ್ವಾಕಾಂಕ್ಷೆಯೇ ಕತೆಯನ್ನು ಸೋಲಿಸುತ್ತದೆ. ಇನ್ನು ಕೆಲವೊಮ್ಮೆ ಅಜೆಂಡಾ ಕತೆಗಳು ಬಹುಮಾನಗಳನ್ನು ಗೆದ್ದರೂ ಮನಸ್ಸು ಗೆಲ್ಲುವುದಿಲ್ಲ, ಮನಸ್ಸಿಗಿಳಿಯುವುದಿಲ್ಲ. ಬಹಳಷ್ಟು ಕತೆಗಾರರು ವಿವರ ಮತ್ತು ಭಾವನಿರ್ಮಿತಿಯಾಚೆ ಕತೆಗೆ ಬೇರೆಯೇ ಒಂದು ಕೇಂದ್ರ ಸೃಜಿಸುವ ಗೋಜಿಗೆ ಹೋಗುವುದಿಲ್ಲ. ಸಚ್ಚಿದಾನಂದರಿಗೆ ಈ ಧೈರ್ಯವಿದೆ ಮಾತ್ರವಲ್ಲ ಅದಕ್ಕೆ ಬೇಕಾದ ಕಲೆಗಾರಿಕೆ, ಹದದ ಎಚ್ಚರ ಮತ್ತು ಈ ಪ್ರಕ್ರಿಯೆಯ ಮಿತಿಗಳ ಅರಿವಿದೆ.

ಈಗ ಈ ಸಂಕಲನದ ಒಂದೊಂದೆ ಕತೆಗಳನ್ನು ಕೊಂಚ ವಿವರವಾಗಿ ಗಮನಿಸಬಹುದು.

ಪದ್ಧತಿ ಕತೆ ಮಾಲಿಂಗ ಭಟ್ಟರ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಿದೆ. ಇನ್ನೊಂದು ಬಗೆಯಲ್ಲಿ ಮಾಲಿಂಗ ಭಟ್ಟ-ಭವಾನಕ್ಕನ ದಾಂಪತ್ಯವನ್ನು ಇದು ಚಿತ್ರಿಸುತ್ತಿದೆ. ಇದಕ್ಕೆ ಮಾಲಿಂಗ ಭಟ್ಟರ ಮಗ ಶ್ರೀಕಾಂತ - ಅವನ ಹೆಂಡತಿಯ ದಾಂಪತ್ಯದ ಪರಿಪ್ರೇಕ್ಷ್ಯವನ್ನು ಕೂಡ ಒಡ್ಡಲಾಗಿದೆ. ಕತೆಯನ್ನು ಈ ದಂಪತಿಗಳ ಮೂಲಕವೇ ತೊಡಗುವ ಮತ್ತು ಮಾಲಿಂಗ ಭಟ್ಟರ ಕಥಾವಳಿಗೆ ಈ ನಿಟ್ಟಿನಿಂದ ಮುಖಾಮುಖಿಯಾಗುವ ಹೂರಣ ಒಂದು ಇರುವುದರಿಂದ. ಹಾಗೆಯೇ, ಮಾಲಿಂಗ ಭಟ್ಟರ ತಾಯಿ ಯಂಕಜ್ಜಿ ಮತ್ತು ಆಕೆಯ ಸಾಧುಪ್ರಾಣಿಯಂಥ ಗಂಡ, ಭೋಳೇತನದ ಶಂಭಟ್ಟರ ದಾಂಪತ್ಯದ ಸಾಪೇಕ್ಷ ಕೂಡ ಇದೆ. ಹೀಗೆ ಮೂರು ತಲೆಮಾರುಗಳ ಕಾಲ-ದೇಶ ನಿರ್ಮಿತ ಸಂದಿಗ್ಧಗಳಲ್ಲಿ ಸೃಷ್ಟಿಯಾಗುವ ಒಬ್ಬ ಶಂಭಟ್ಟ, ಒಬ್ಬ ಮಾಲಿಂಗ ಭಟ್ಟ ಮತ್ತು ಶ್ರೀಕಾಂತ-ರನ್ನು ಕತೆ ಗಮನಿಸುತ್ತದೆ. ಈ ಗಮನಿಸುವಿಕೆ ಶ್ರೀಕಾಂತ ‘ಭಟ್ಟ’ ಆಗುವ ಆಧುನಿಕ ಪ್ರಕ್ರಿಯೆಯಲ್ಲಿ ಸಂಪನ್ನಗೊಂಡಿದೆ.

ಆದರೆ ಕತೆಯ ಪ್ರಾಥಮಿಕ ಕೇಂದ್ರ ಮಾಲಿಂಗ ಭಟ್ಟರ ವ್ಯಕ್ತಿತ್ವದ ಚಿತ್ರವೇ. ಈ ಪಾತ್ರ ಸಚ್ಚಿದಾನಂದರ ವಿವರಗಳಲ್ಲಿ ಜೀವಂತಗೊಳ್ಳುತ್ತ - ನಿಜವಾಗುತ್ತ ಹೋಗುತ್ತದೆ. ಈ ಮಾಲಿಂಗ ಭಟ್ಟ ನಿಜವಾದಂತೆಲ್ಲ ಅಷ್ಟಾಗಿ ಪೋಷಣೆಯನ್ನು ಪಡೆಯದ ಪಾತ್ರವಾದರೂ, ಮತ್ತು-ಹಾಗಿರುವುದರಿಂದಲೇ, ಭವಾನಕ್ಕ ನಮ್ಮ ಮನಸ್ಸಿನಲ್ಲಿ ಹೆಚ್ಚು ಹೆಚ್ಚು ಜಾಗ ಪಡೆಯುತ್ತ ಹೋಗುತ್ತಾಳೆ. ಇದೇ ರೀತಿ ಯಂಕಜ್ಜಿಯ ನಿಲುವು ನಮಗೆ ಶಂಭಟ್ಟನ ಭೋಳೇತನದ ಹಿನ್ನೆಲೆಯಲ್ಲಿ ಹೆಚ್ಚು ಗಟ್ಟಿಯಾದದ್ದು ಎಂದು ಅನಿಸುವುದೂ. ಆದರೆ ಶ್ರೀಕಾಂತನಲ್ಲಿ, ಪದ್ಧತಿಯ ಕುರಿತು ಪ್ರಶ್ನಿಸುವ ಹೆಂಡತಿಯಿಂದಾಗಲೀ, ಹೆಂಡತಿಯ ಕುರಿತು ಏನೋ ಸ್ವಲ್ಪ ವಿವರಗಳನ್ನು ಹಿಡಿದಿಟ್ಟುಕೊಳ್ಳುವ ಅವನ ಶೈಲಿಯಿಂದಾಗಲೀ ಯಾವುದೇ ಬಗೆಯ ಮಹತ್ವದ ತಾಕಲಾಟಗಳು ಕಾಣಿಸಿಕೊಳ್ಳುವುದಿಲ್ಲ. ಆಧುನಿಕ ಮನಸ್ಸುಗಳು ನಗರದ ಪರಿಸರದಲ್ಲಿ ಪದ್ಧತಿಗಳಿಗೆ ಪ್ರತಿಸ್ಪಂದಿಸುವ ಈ ಪರಿಯಲ್ಲಿ ಕತೆ ತನ್ನ ಚೌಕಟ್ಟು-ಅರ್ಥ-ಮಹತ್ವ ಎಲ್ಲವನ್ನೂ ಪಡೆಯುವುದು ಕತೆಗಾರಿಕೆಯ ಅದೃಷ್ಟವಾಗಿದೆ.

ಇದೇ ಮಾತನ್ನು ಸಂಕಲನದ ಎರಡನೆಯ ಕತೆ, ದೊಂಬರಾಟಕ್ಕೆ ಹೇಳುವುದು ಸಾಧ್ಯವಿಲ್ಲ. ಈ ಕತೆಯಲ್ಲಿ ಸಚ್ಚಿದಾನಂದ ಹೆಗಡೆ ಬದುಕನ್ನು ನೋಡುವ ರೀತಿ, ಅವರ ಗ್ರಹಿಕೆಯ ಕ್ರಮ, ಬದುಕಿನಲ್ಲಿ ಅವರದಾದ ಆದ್ಯತೆಗಳು, ಅವರ ತಮಾಷೆ, ತರ್ಕ, ಎಲ್ಲವೂ ನಮಗೆ ಕಾಣುತ್ತಿದೆಯಾದರೂ ಎಲ್ಲವೂ ಒಂದು ರೀತಿ ನುಗ್ಗಿಸಿದ ಹಾಗೆ ಬಂದಿವೆ. ಈ ಕತೆಗೆ ಒಂದೇ ಎಳೆಯ ಕೇಂದ್ರ ಸೂತ್ರವಿಲ್ಲದಿರುವುದು ಕೊನೆಗೂ ಅದೃಷ್ಟ ಅಷ್ಟಾಗಿ ಒಲಿಯದಿರಲು ಕಾರಣವಾಗಿದೆ ಅನಿಸುತ್ತದೆ.

ಮೊದಲಿಗೆ ಕತೆ ಸುಮ್ಮನೇ ಸೌತ್ ಎಂಡ್ ಸರ್ಕಲ್ಲಿನ ನಸುಕನ್ನು ಗಮನಿಸುತ್ತದೆ. ಈ ಗಮನಿಸುವಿಕೆಯ ವಿವರಗಳು, ಅದರ ಧ್ವನಿ, ಅಲ್ಲಿನ ಮಾಧುರ್ಯ ದೊಂಬರಾಟದವಳ ಪ್ರದರ್ಶನದ ವಿವರಗಳಿಗೆ ಮುಂದುವರಿದಂತೆಲ್ಲ ‘ಮೂರನೆಯವನ’ ವರದಿಯ ಧಾಟಿಗೆ ಹೊರಳಿಕೊಳ್ಳುತ್ತದೆ ಮಾತ್ರವಲ್ಲ ಫೋಟೋಗ್ರಾಫರ್-ಪತ್ರಿಕೆ-ವಾಚಕರ ವಾಣಿ- ಪ್ರವರಗಳಿಗೆ ಬರುವ ಹೊತ್ತಿಗೆ ವ್ಯಂಗ್ಯ-ವೈನೋದಿಕ-ವಿಡಂಬನೆಯ ಧಾಟಿ ಪಡೆದುಕೊಳ್ಳುತ್ತದೆ. ಇದು ನಮ್ಮ ಪ್ರಗತಿಶೀಲ ಸಾಹಿತಿಗಳು ಸಾಕಷ್ಟು ಮಾಡಿರುವುದೇ. ಕ್ರಮೇಣ ಕತೆ ಮಾಧ್ಯಮಗಳ ಮೇಲೇ ಕೂತಂತೆ ಭಾಸವಾಗುತ್ತದೆ ಮತ್ತು ಈ ಹಂತದಲ್ಲಿ ಈಗಾಗಲೇ ಗೊತ್ತಿರುವುದರಾಚೆಯ ಏನನ್ನೂ ಹೇಳದ, ಪ್ರತಿನಿತ್ಯ ನಾವು ಗಮನಿಸುತ್ತ, ಅಸಾಧ್ಯ ಚಡಪಡಿಕೆಯಿಂದ ಸಹಿಸುತ್ತಿರುವ ಮಾಧ್ಯಮದವರ ಹೊಲಸು ವ್ಯಾಪಾರವನ್ನೆ ತೆರೆದಿಡುವುದರಲ್ಲಿ ಕೇಂದ್ರೀಕೃತವಾದಂತೆ ಕಾಣುತ್ತದೆ. ಸುದರ್ಶನಜೀ ಭಾಷಣ, ವಾಚಕರ ವಾಣಿ, ಟೀವಿ ಮಾಧ್ಯಮದವರ ಕಾರ್ಯಕ್ರಮಗಳ ನಂತರ ಕತೆ ಮತ್ತೆ ದೊಂಬರಾಟದವಳ ವೈಯಕ್ತಿಕ ಬದುಕಿನ ವಿವರಗಳಿಗೆ ಬರುತ್ತದೆ. ಈ ಹಂತದಲ್ಲಿ ಕತೆಗಾರಿಕೆಯ ಧಾಟಿಯೂ ಮತ್ತೊಮ್ಮೆ ಬದಲಾಗುತ್ತದೆ. ಇಲ್ಲಿ ಮೂರನೆಯವನ ನಿರ್ಲಿಪ್ತ ಧಾಟಿಯೂ ಇಲ್ಲ, ವಿಡಂಬನಾತ್ಮಕ ಧಾಟಿಯೂ ಇಲ್ಲ. ದೊಂಬರಾಟದವಳ ಬದುಕಿನ ಸೂಕ್ಷ್ಮಚಿತ್ರಣಕ್ಕೆ ಕತೆ ತೊಡಗಿದೆ. ಆದರೆ ಹಿಂದಿನ ಎರಡು ಬಗೆಯ ನಿರೂಪಣೆಯ ಹ್ಯಾಂಗೋವರ್ ಕತೆಗಾರಿಕೆಯಲ್ಲೂ ಓದುಗನಲ್ಲೂ ಸಹಜವಾಗಿಯೇ ಉಳಿದು ಬಿಡುವುದರಿಂದ ಈ ಕಾಮ-ಪ್ರೇಮ-ಹಸಿವು-ನೋವು-ಸಂಕಟಗಳ ಸುತ್ತ ಇರುವ ಬಾಣಂತನದ ವಿವರಗಳಿಗೆ, ಸಹಾಯಕ್ಕೆ ಒದಗುವ ಮುದುಕಿಯ ಅಂತಃಕರಣದ ಅನುಭೂತಿಗೆ ಬೇಕಾದ ಲಯ ಸಿದ್ಧಿಸುವುದಿಲ್ಲ. ಈ ಸ್ತರದಲ್ಲಿ ಒಮ್ಮೆ ನಿರಂಜನರ ಪ್ರಸಿದ್ಧ ಕತೆ ‘ಕೊನೆಯ ಗಿರಾಕಿ’ ಕೂಡ ನಮ್ಮನ್ನು ಕಾಡತೊಡಗಿದರೆ ಅಚ್ಚರಿಯಿಲ್ಲ.

ಕತೆ ಮತ್ತೆ ಸೌತ್ ಎಂಡ್ ಸರ್ಕಲ್‌ನ ವಿವರಗಳಿಗೆ ಬರುವಾಗ, ಸೂರ್ಯನಾರಾಯಣ ಉಪಾಧ್ಯರ ಮನೆಗೆಲಸದವಳಾಗಿ ದೊಂಬರಾಟದವಳು ತಯಾರಾಗುವ ಹೊತ್ತಿಗೆ ಇಂಥ ಒಂದು ಲಯ ಕಾಣಸಿಗುತ್ತದೆ. ಬಹುಷಃ ಅದಕ್ಕೆ ಮುದುಕ-ಮುದುಕಿ-ಪುಟ್ಟ ಹುಡುಗಿ ಎಲ್ಲವೂ ಕಾರಣವಿರಬಹುದು. ಆದರೆ ಈ ಲಯ ಕೂಡಾ ಕತೆಯನ್ನು ಎತ್ತುವುದಕ್ಕೆ ಸಾಧ್ಯವಾಗಿಲ್ಲ. ಹಾಯ್ದು ಬಂದ ವಿವರ-ವಸ್ತು-ತತ್ವ ಎಲ್ಲದರಲ್ಲೂ ಸಾಮಾನ್ಯವಾದ ಒಂದು ಎಳೆ ಇಲ್ಲಿ ಸ್ಫುಟವಾಗಿಲ್ಲದಿರುವುದರಿಂದ.

ಕಾರಂತಜ್ಜನಿಗೊಂದು ಪತ್ರ ಈ ಸಂಕಲನದ ಮೂರನೆಯ ಕತೆ. ಈ ಕತೆಯನ್ನಾಧರಿಸಿ ಚಲನಚಿತ್ರ ಕೂಡ ತಯಾರಾಗಿದೆ. ಇಡೀ ಕತೆಯಲ್ಲಿ ಒಂದು ನಿರುದ್ದಿಶ್ಯದ ನಿರೂಪಣೆ ಮತ್ತು ಪ್ರಾಮಾಣಿಕತೆ ಇದೆ, ತಾಜಾತನವಿದೆ. ಬಾಲ್ಯವನ್ನು ನೆಚ್ಚಿದರೂ ಅದರ ಉದ್ದೇಶ ಭಾವಕೋಶವನ್ನು ಮೀಟುವುದಲ್ಲ. ನಿರೂಪಣೆಯ ನೆಲೆ ಕೂಡ ಬಾಲ್ಯದ ಮುಗ್ಧತೆಯನ್ನು ಬಳಸಿಕೊಂಡಿಲ್ಲ. ಇಲ್ಲಿ ಎರಡು ಸ್ಥಳಾಂತರದ ಪರಿಸ್ಥಿತಿಗಳಿವೆ. ಎರಡನೆಯದೇ ಮೊದಲಿನದ್ದರ ನೆನವರಿಕೆಗೆ ಕಾರಣವಾಗಿರುವುದು ಇಲ್ಲಿನ ತಂತ್ರವಾಗಿದ್ದು ಅದು ಈ ಹಿನ್ನೋಟಕ್ಕೆ ಭಾವುಕ ನೆಲೆಯಿಂದ ಮುಕ್ತಿ ನೀಡಿದೆ ಎನ್ನುವುದು ಗಮನಾರ್ಹ. ಆದರೆ ಕತೆಯಲ್ಲಿ ಭಾವಕೋಶವನ್ನು ಮೀಟುವ ಸಂಗತಿಗಳಿಲ್ಲ ಎಂದಲ್ಲ. ಅಜ್ಜಿ ನೆನಪಿಸುವ ಗಂಗೆಯ ಔದಾರ್ಯ ಮತ್ತು ಬಣ್ಣ ಬದಲಿಸಿದ ತೊಪ್ಪಲ ಕೇರಿ ಗದ್ದೆಗಳನ್ನು ನೋಡುತ್ತ ನಿಂತ ರಾಘವನ ಮನಸ್ಸಿನಲ್ಲಿ ‘ಗಂಗೆ ಅಲ್ಲೆಲ್ಲಾದರೂ ಹುಲ್ಲು ಮೇಯುತ್ತಿದೆಯೋ ನೋಡು’ ಎಂದು ಅಜ್ಜಿ ಹೇಳಿದ ಮಾತುಗಳೇ ಇರುವುದು ಮಾತಿಗೆ ಮೀರಿದ ಬಗೆಯಲ್ಲಿ ನಮ್ಮನ್ನು ಮೃದುಗೊಳಿಸಬಲ್ಲ ವಿವರಗಳೇ.

ಮೊದಲನೆಯ ಸ್ಥಳಾಂತರ ನಡೆದಾಗ ಪ್ರೀತಿಯ ಊರು, ಮನೆ, ಶಾಲೆ-ಗೆಳೆಯರು ಎಲ್ಲ(ರ)ವನ್ನೂ ತೊರೆದು ಊರು ಬಿಡಲು ಸಂಕಟಪಟ್ಟ, ಸಂಕಟದ ಪರಿಹಾರಕ್ಕಾಗಿ ಕಾರಂತಜ್ಜನಿಗೆ ಪತ್ರ ಬರೆದ, ಸಮುದ್ರ ಕೊರೆತದಿಂದ ಊರನ್ನು ಪಾರು ಮಾಡುವ ಮತ್ತು ಹಾಗೆ ಮಾಡಿ ಅದೇ ಊರಲ್ಲಿ ನೆಲೆನಿಲ್ಲುವ ಕನಸು ಕಂಡ, ಛಲವಿದ್ದ ಪುಟಾಣಿ ರಾಘವ, ಈಗ, ಅಂದರೆ ಎರಡನೆಯ ಸ್ಥಳಾಂತರ ಅನಿವಾರ್ಯವಾಗಿರುವ ಸಂದರ್ಭದಲ್ಲಿ ಇಲ್ಲ. ಅವನು ಎಲ್ಲಿದ್ದಾನೆಂಬುದೇ ಯಾರಿಗೂ ಗೊತ್ತಿಲ್ಲ. ಆದರೆ ಕಾರಂತಜ್ಜನ ಪತ್ರದ ಒಂದು ವಾಕ್ಯ, ಅಜ್ಜಿಯ ಧೈರ್ಯದ ಒಂದು ಮಾತು ನಮಗೆ ರಾಘವನ ಕುರಿತು ನೀಡುವ ಭರವಸೆ ಇಡೀ ಕತೆಯ ಹಿನ್ನೋಟದ ತಂತ್ರಕ್ಕೆ ಹೊಸದೇ ಹೊಳಪು, ಅರ್ಥ ಮತ್ತು ಘನತೆ ನೀಡಿಬಿಡುತ್ತವೆ.

ಒಳ್ಳೆಯ ದೇವರು ಸಿಕ್ಕಿದ್ದರೆ ಈ ಸಂಕಲನದ ಮಹತ್ವದ ಕತೆಗಳಲ್ಲಿ ಒಂದು. ಮತಾಂತರದ ಪ್ರಶ್ನೆ ಮಾಧ್ಯಮಗಳಲ್ಲಿ ರಾಡಿಯೆಬ್ಬಿಸುತ್ತಿದ್ದ ದಿನಗಳಲ್ಲೇ ಧಾರ್ಮಿಕ ಮೊಗವಾಡ ಹೊತ್ತ ಒಂದು ಸಂಗತಿಯನ್ನು ಆರ್ಥಿಕ ಮತ್ತು ಪಾರಮಾರ್ಥಿಕ ನೆಲೆಗಳ ಅನಿವಾರ್ಯವನ್ನಾಗಿ ಮಾತ್ರ ಕಾಣುವ ಈ ಕತೆ ನಿಜಕ್ಕೂ ಚೇತೋಹಾರಿಯಾದ ರೀತಿಯಲ್ಲಿ ಬಂತು. ಸೃಜನಶೀಲ ಕೃತಿಯೊಂದು ಯಾವಾಗಲೂ ಮನಸ್ಸನ್ನು ಅರಳಿಸುತ್ತದೆ, ಕೆರಳಿಸುವುದಿಲ್ಲ, ದಣಿಸುವುದಿಲ್ಲ. ಅದು ಬದುಕನ್ನು ನೋಡುವ, ನೋಡ ಬಹುದಾದ ಹೊಸತೇ ಆದ ವಿಧಾನವನ್ನು ನಮಗೆ ಕಾಣಿಸುತ್ತದೆ ಮತ್ತು ಹಾಗೆ ಮಾಡಿ ನಮ್ಮನ್ನು ಬೆಳೆಸುತ್ತದೆ. ಸಚ್ಚಿದಾನಂದರ ಈ ಕತೆ ಅದಕ್ಕೆ ಸಾಕ್ಷಿಯಂತಿದೆ.

ಈ ಕತೆಯ ದಾಮೋದರ ಆರಂಭದಿಂದಲೂ ಒಂದು ಬಗೆಯ ಅನುಕಂಪಕ್ಕೆ ಭಾಜನನಾಗುತ್ತ ಹೋಗುತ್ತಾನೆ. ಹೈಸ್ಕೂಲಿನಲ್ಲಿ ಶಿಕ್ಷಕರಿಗೇ ‘ಇವರೇನು ಕಲಿಸ್ತಾರೆ, ಸಾಮಾನು’ ಎನ್ನುವ "ಪ್ರಬುದ್ಧತೆ" ಹೊಂದಿರುವ ಹುಡುಗರನ್ನು ನಾವೂ ಸಹಪಾಠಿಗಳಾಗಿ ಕಂಡಿರುತ್ತೇವೆ. ಇಂಥವ ಈ ದಾಮು. ಇವನು ಹತ್ತನೆಯ ತರಗತಿಯ ಕನ್ನಡ ವಿಷಯದಲ್ಲಿ ಫೇಲಾಗಿ ಇಂಗ್ಲೀಷಿನಲ್ಲಿ ಪಾಸಾಗಿದ್ದನ್ನು ಮಾರೂಕೇರಿ ಬಹಳ ಆಶ್ಚರ್ಯದಿಂದ ಕಾಣುತ್ತದೆ. ಆದರೆ ಊರಿನವರ ತಮಾಷೆ, ಹಂಗಿಸುವಿಕೆಗೆ ದಾಮು ತೆರೆದುಕೊಳ್ಳುವುದೇ ಇಲ್ಲ. ಮುದುಡುತ್ತಾ ಹೋಗುತ್ತಾನೆ ಮತ್ತು ಅವನ ಅರಳುವಿಕೆಗೆ ಇಡೀ ಊರೇ ವಿರೋಧವಾಗಿದೆ ಎನ್ನುವ ಭಾವನೆಯನ್ನು ಬೆಳೆಸಿಕೊಳ್ಳುತ್ತಾನೆ. ಆಗ ಅವನಿಗೆ ಒದಗಿ ಬರುವುದು ಒಂದು ಹೊಸ ಧರ್ಮ ಎನ್ನುವುದೇ ದಾಮುವಿನ ಮಾನಸಿಕ ಗೊಂದಲ, ದ್ವಂದ್ವ, ಎಡಬಿಡಂಗಿತನಗಳ ಸೂಚನೆಯಾಗುವುದು ಮಾತ್ರ ದುರಂತ. ಯಾಕೆಂದರೆ, ಬಹುಷಃ ಧರ್ಮದ ಬದಲಾವಣೆ ತನಗೆ ಅನುಕೂಲಕರವಾಗಿದೆ ಎಂಬ ಕಾರಣಕ್ಕೇ (ಕಾರಣಕ್ಕೂ) ಊರು ಅದನ್ನು ವಿರೋಧಿಸುತ್ತಿದೆ ಎಂದುಕೊಳ್ಳುವ ದಾಮುವಿನ ಧರ್ಮಾಂತರಕ್ಕೆ ಒಂದು ಬಗೆಯಲ್ಲಿ ಊರವರ ವಿರುದ್ಧ ಹೋಗಬೇಕೆಂಬ ಗ್ರಹೀತ ಕೂಡ ಕಾರಣವಾಗಿದೆ. ಆದರೆ ಈ ವಿರೋಧಕ್ಕಾಗಿ ವಿರೋಧ, ಲಾಭಕ್ಕಾಗಿ ಬದಲಾವಣೆ ದಾಮುವನ್ನು ಎಲ್ಲಿಗೂ ತಲುಪಿಸಲಾರದ ಅಪವ್ಯಯಗಳಾಗಿ ಬಿಡುವುದು ಕೇವಲ ದಾಮುವಿನ ದುರಂತ ಅಲ್ಲ ಎನ್ನುವುದನ್ನು ನಾವು ಗಮನಿಸಬೇಕಾಗಿದೆ.

ಹದಿನೈದು ಹದಿನಾರರ ತಾರುಣ್ಯ-ಯೌವನಗಳ ನಡುವೆ ತುಯ್ಯುತ್ತಿರುವ ಮನಸ್ಸಿಗೆ ತನ್ನ ಸುತ್ತಲಿನ ಸಮಾಜದ ಗಮನಿಸುವಿಕೆ, ಸ್ವೀಕೃತಿ, ಅಸ್ತಿತ್ವದ ಹಿತವಾದ ಸ್ಥಾಪನೆ ಬಹುಮುಖ್ಯ ವಿದ್ಯಮಾನ. ದಾಮುವಿಗೆ ಇಂಥ ಸೂಕ್ಷ್ಮ ಸಂದಿಗ್ಧದ ಸ್ಥಿತಿಯಲ್ಲಿ ಬೀಳುವ ಪೆಟ್ಟು ವ್ಯಕ್ತಿಗತವಾಗಿರದೆ ಒಂದು ಸನ್ನಿವೇಶದ ದುರಂತವೇ ಆಗಿದೆ. ಹಗಲಿಡೀ ಮಲಗಿ ಕತ್ತಲಾದ ಬಳಿಕ ಮನೆಯಿಂದ ಹೊರಬರುವ ದಾಮುವನ್ನು ನಾವು ಅರ್ಥಮಾಡಿಕೊಳ್ಳಬಹುದು. ಧರ್ಮಪ್ರಚಾರಕರ ಅಗತ್ಯಕ್ಕೆ ದಾಮು ಸಿಲುಕುತ್ತಾನೆ. ಆರ್ಥಿಕ ಬೆಂಬಲ, ನೌಕರಿ ತನ್ನನ್ನು ಕೈಹಿಡಿದು ಮೇಲೆತ್ತ ಬಹುದಾದರೆ, ಸಮಾಜ ತನ್ನ ಅಸ್ತಿತ್ವವನ್ನು ಹೊಸದಾಗಿ ಸ್ವೀಕರಿಸುವುದಾದರೆ ಹೊಸ ಊರು, ಹೊಸ ಧರ್ಮ, ಹೊಸ ಬದುಕು ಯಾಕಾಗಬಾರದು?

ನಿಜವಾದ ಸಮಸ್ಯೆ ಆನಂತರದ್ದು. "ಹಳೇ ಧರ್ಮವನ್ನು ಆಚರಿಸದೇ ಮರೆತಿದ್ದೇನೆ, ಹೊಸ ಧರ್ಮವನ್ನು ಆಚರಿಸಲು ನಂಬಿಕೆ ಸಾಕಾಗುತ್ತಿಲ್ಲ. ನನ್ನ ಜೀವನದುದ್ದಕ್ಕೂ ಒಳ್ಳೆಯ ದೇವರೇ ಸಿಗಲಿಲ್ಲ. ಅದಕ್ಕೂ ನಸೀಬು ಬೇಕು" ಎನ್ನುವ ದಾಮುವಿನ ಮಾತುಗಳಲ್ಲಿ ದೇವರು-ಧರ್ಮಗಳನ್ನು ಮೀರಿದ ಸತ್ಯ ಅಡಗಿದೆ. ದಾಮುವಿಗೆ ಸಿಗದೇ ಹೋಗಿದ್ದು ದೇವರಲ್ಲ. ಪ್ರೀತಿ, ಮಾನವೀಯತೆ ಮತ್ತು ಸಹಬಾಳ್ವೆಗೆ ಪೂರಕವಾಗುವಂತೆ ಅವನೊಂದಿಗೆ ವ್ಯವಹರಿಸಬಲ್ಲ ಅಂತಃಕರಣದ ಮನುಷ್ಯರು. ನಾವು ನಿರಾಕರಿಸಿದ್ದು ದಾಮುವಿಗೆ ದೇವರನ್ನು; ನಮ್ಮೊಳಗಿನ ದೇವರನ್ನು. ಇನ್ಯಾವುದೋ ದೇವರನ್ನಲ್ಲ. great story!

ಟಪ್ಪರ್ ವೇರ್ ಕತೆ ಅಂಥ ವಿಶೇಷವಾದ ಕತೆ ಅನಿಸುವುದಿಲ್ಲ. ಆಧುನಿಕತೆ ತಂದೊಡ್ಡುವ ಪಲ್ಲಟವನ್ನು ದಾಖಲಿಸುವ, ಚಂದದ ನಿರೂಪಣೆಯಿಂದ ದಾಖಲಿಸುವ ಇಂಥ ಸಾಕಷ್ಟು ಕತೆಗಳು ನಮ್ಮಲ್ಲಿ ಈಗಾಗಲೇ ಬಂದಿವೆ. ಅಂಥದ್ದರ ಸಾಲಿಗೆ ಇದೂ ಸೇರಿಕೊಳ್ಳುತ್ತದೆ.

ನೀವೂ ದಾರ ಕಟ್ಟಿ ಕತೆ ಸಾಕಷ್ಟು ವ್ಯವಧಾನದ ಪೋಷಣೆ ಸಿಗದೇ ವಾಚ್ಯವಾಗಿಯೇ ಉಳಿಯುತ್ತದೆ. ಮೊಹಮ್ಮದನ ಭಾಷಣದಂಥ ಮಾತುಗಾರಿಕೆ ಅದರ ಅರ್ಥಪೂರ್ಣತೆಯಿಂದ ಮನಸೆಳೆದರೂ ಕತೆಗಾರಿಕೆಯ ದೃಷ್ಟಿಯಿಂದ ಸ್ವಲ್ಪ ಭಾರವಾಗಿಯೇ ಇದೆ. ಐತಿಹಾಸಿಕ ಫತೇಪುರಸಿಕ್ರಿಯ ಕೋಟೆ, ಚಿಸ್ತಿಯ ಸಮಾಧಿ ಇತ್ಯಾದಿಗಳ ಒಂದು ವಾತಾವರಣದಲ್ಲಿ ಮೆಲ್ಲನೆ ಅರಳಿದಂತೆ ತೆರೆದುಕೊಳ್ಳುವ ಈ ಕತೆಗೆ ಇನ್ನೂ ಹೆಚ್ಚಿನದನ್ನು ಸಾಧಿಸಬಹುದಾದ ಕಸುವಿತ್ತು ಎಂದೇ ಅನಿಸುತ್ತದೆ.

ಕೆಲವೊಂದು ಸಾಮ್ಯತೆಗಳಿಗಾಗಿ ಪ್ರಹ್ಲಾದ ಅಗಸನಕಟ್ಟೆಯವರ ತಾಜ್‌ಮಹಲ್ ಕತೆಯನ್ನು ಇಲ್ಲಿ ಗಮನಿಸಬಹುದು. ತಾಜ್‌ಮಹಲ್ ಕತೆಯ ಬಗ್ಗೆ ವಿವೇಕ್ ಶಾನಭಾಗ ಹೇಳಿರುವ ಮಾತುಗಳನ್ನು ನೋಡಿ:


"ಇಲ್ಲಿ ತಾಜಮಹಲದಂಥ ಒಂದು ಜನಪ್ರಿಯ ಸ್ಮಾರಕ ಕ್ಲೀಷೆಯಾಗದ ಹಾಗೆ ರೂಪಕವಾಗಿದೆ. ನಮ್ಮ ನಮ್ಮ ಮನಸ್ಸಿನಲ್ಲಿ ಈ ಸ್ಮಾರಕ ಹುಟ್ಟಿಸುವ ಅಸ್ಪಷ್ಟ ಭಾವನೆಗಳನ್ನೇ ಉಪಯೋಗಿಸಿಕೊಂಡು ಸಂಸಾರದ, ಸಂಬಂಧಗಳ ಒಳಸುಳಿಗಳನ್ನು ಅತ್ಯಂತ ನವಿರಾಗಿ, ಎಲ್ಲಿಯೂ ಇದು ಹೀಗೆಯೇ ಇರಬೇಕೆಂಬ ಹಟವಿಲ್ಲದೇ ಪ್ರಬುದ್ಧವಾಗಿ ನಿರ್ವಹಿಸಿದ್ದಾರೆ. ಮೇಲ್ನೋಟಕ್ಕೆ ಮುಖ್ಯವಸ್ತುವಿನಿಂದ ಹೊರತಾಗಿ ಕಂಡರೂ ಎರಡನೇ ಭಾಗ ಕತೆಗೆ ಹೊಸ ಅರ್ಥಗಳನ್ನೂ ಗ್ರಹಿಕೆಗೆ ಹೊಸ ಕೇಂದ್ರಗಳನ್ನೂ ಕೊಡುತ್ತದೆ. ಕತೆಗಾರನಿಗೆ ಉಂಟಾಗದ ಭಾವೋದ್ವೇಗ ಮತ್ತು ಹೊರಡದ ಉದ್ಗಾರಗಳು ತಾಜಮಹಲಿನ ಸಾಧಾರಣ ಪ್ರತಿಕೃತಿಯನ್ನು ಕಂಡಾಗ ಅವನ ಸ್ನೇಹಿತನಿಂದ ಹೊರಡುತ್ತವೆ. ಈ ಸ್ನೇಹಿತನಿಗೆ ತಾಜಮಹಲಿನಲ್ಲಾಗಲೀ, ಅದರ ವಾಸ್ತುಶಿಲ್ಪದ ಬಗ್ಗೆಯಾಗಲೀ ಅಥವಾ ಅದು ಬಿಂಬಿಸುವ ಬೇರೆ ಯಾವುದರಲ್ಲಿಯೂ ಆಸಕ್ತಿಯಿಲ್ಲ. ಬದಲಿಗೆ ಅದರ ಪ್ರತಿಕೃತಿಯಲ್ಲಿ ಮಾತ್ರ ಆಸಕ್ತಿಯಿದೆ. ತಾಜಮಹಲ್ ಒಂದು ಸ್ಮಾರಕವಾಗಿರುವಂತೆಯೇ ರೂಪಕವೂ, ಕಲಾಕೃತಿಯೂ ಆಗಿದೆ. ಇವೆಲ್ಲವುಗಳ ನಡುವಿನ ಸಂಬಂಧವನ್ನು ಜೀವನದಲ್ಲಿ ಇವು ಹಾಸುಹೊಕ್ಕಾಗಿ ಹೋಗುವ ರೀತಿಯನ್ನು ಮತ್ತು ಅದರ ಪ್ರಾಮುಖ್ಯತೆಯನ್ನು ಈ ಕತೆ ಅತ್ಯಂತ ಸುಂದರವಾಗಿ ಹೇಳುತ್ತದೆ. ಎರಡು ಜೀವಿಗಳ ನಡುವಿನ ಪ್ರೇಮ, ವಿವಾಹ, ಪರಸ್ಪರ ಬದ್ಧತೆ ಮತ್ತು ಅದೆಲ್ಲ ಸ್ಮಾರಕವಾಗಿ ಉಳಿಯುವುದೇ ಆದಲ್ಲಿ ಹೇಗೆ ಮತ್ತು ಯಾರಲ್ಲಿ ಎಂಬಿತ್ಯಾದಿ ಮಗ್ಗಲುಗಳನ್ನೂ ಶೋಧಿಸುತ್ತದೆ." (ತಾಜಮಹಲ್, ತೀರ್ಪುಗಾರರ ಟಿಪ್ಪಣಿ.)

ಆದರೆ ಸಚ್ಚಿದಾನಂದರ ನೀವೂ ದಾರ ಕಟ್ಟಿ ಕತೆ ಮತ್ತು ಪ್ರಹ್ಲಾದ ಅಗಸನಕಟ್ಟೆಯವರ ತಾಜಮಹಲ್ ಕತೆ ಎರಡರ ಅನುಭೂತಿಯೂ ಒಂದೇ ಆಗಿರಬೇಕೆಂದಿಲ್ಲ. ಅಂಥ ನಿರೀಕ್ಷೆ ತಪ್ಪು. ನೀವೂ ದಾರ ಕಟ್ಟಿ ಕತೆ ಪುರಾಣ, ದಂತಕತೆ, ಐತಿಹಾಸಿಕ ಸತ್ಯ ಮತ್ತು ಚರಿತ್ರೆಯ ಯಾವತ್ತೂ ನಿಷ್ಠೆಯನ್ನು ಮೀರಿ ಕೂಡ ನಾವು ಪ್ರಸ್ತುತದಲ್ಲಿ ಅವುಗಳನ್ನು ಹೇಗಿವೆಯೋ ಹಾಗೆ ಸ್ವೀಕರಿಸಬಹುದು ಮತ್ತು ಅದೇ ನೆಲೆಯಲ್ಲಿ ಮನುಷ್ಯನ ಸತ್ ಜಾಗೃತಗೊಳಿಸುವುದಕ್ಕೆ ಬೇಕಾದ ಪುಷ್ಟಿಯನ್ನು ದಕ್ಕಿಸಿಕೊಳ್ಳಬಹುದು ಎಂಬ ಔನ್ನತ್ಯದತ್ತ ಸಾಗಿದೆ. ಈ ದೃಷ್ಟಿಕೋನ ಕೂಡ ಸಮಕಾಲೀನ ಮನಸ್ಥಿತಿಗೆ ತುಂಬ ಚೇತೋಹಾರಿ ಮತ್ತು ಆರೋಗ್ಯಪೂರ್ಣ ನಿಲುವಿನಿಂದ ಕೂಡಿರುವುದು ಕತೆಯ ಬಗ್ಗೆ ಅಪಾರ ಮೆಚ್ಚುಗೆ ಮೂಡಿಸುತ್ತದೆ.

ಅನ್ವೇಷಣೆ ಕತೆಯ ನಿರೂಪಣಾ ವಿಧಾನ, ಸಂಯಮ ಮತ್ತು ಹದಗಾರಿಕೆ ಮೆಚ್ಚುಗೆ ಹುಟ್ಟಿಸುವಂತಿದೆ. ವಸ್ತು ಹೊಸದೇನಲ್ಲ. ಕೆ. ಸತ್ಯನಾರಾಯಣರ ಸನ್ನಿಧಾನ (1997) ಕಾದಂಬರಿಯ ಒಂದು ಅಧ್ಯಾಯ, ‘ಲಿಂಗಾಯತರ ಸ್ವಯಂವರ’ ಸರಿ ಸುಮಾರು ಇದೇ ಧಾಟಿ ಹೊಂದಿರುವುದನ್ನು ಇಲ್ಲಿ ಗಮನಿಸಬಹುದು. ಸಚ್ಚಿದಾನಂದ ಹೆಗಡೆಯವರ ಕತೆಯಲ್ಲಿ ಅರುಂಧತಿ, ಪ್ರಭಾಕರ ಹೆಬ್ಬಾರ ಮತ್ತು ಗಣಪತಿ ಹೆಗಡೆಯ ಪಾತ್ರ ಕಟ್ಟಿರುವ ರೀತಿಯಲ್ಲಿ ವಿಶೇಷವಿದೆ. ಈ ಮೂರೂ ಪಾತ್ರಗಳ ಬಗ್ಗೆ ಕತೆ ದಟ್ಟವಾದ ವಿವರಗಳನ್ನೇನೂ ನೀಡುವುದಿಲ್ಲ. ಇಲ್ಲಿ ಹೇಳಿರುವುದಕ್ಕಿಂತ ಹೇಳದೇ ಉಳಿಸಿರುವ ವಿವರಗಳೇ ಹೊಂಚು ಹಾಕಿ ಕೂತಂತೆ ಕೂತಿವೆ ಮತ್ತು ಅವು ಈ ಪಾತ್ರಗಳ ಕುರಿತ ಓದುಗನ ಕುತೂಹಲವನ್ನು ಸಂವೇದನೆಯನ್ನಾಗಿ ಪರಿವರ್ತಿಸಬಲ್ಲ ಶಕ್ತಿಯನ್ನು ಪಡೆದಿವೆ.

ಕೆ.ವಿ.ಅಕ್ಷರ ಅವರ ಹೊಸ ನಾಟಕ ‘ಸ್ವಯಂವರ ಲೋಕ’ ಕೂಡ ಇದೇ ಜಾಡಿನಲ್ಲಿ ಹೊರಟು ಹೊಸತೇ ಒಂದು ಸ್ತರವನ್ನು ತಲುಪುವ ಪ್ರಯೋಗ ಎಂಬುದನ್ನು ಇಲ್ಲಿ ನೆನೆಯಬಹುದು.

ಕೊನೆಯ ದಿನ ಈ ಸಂಕಲನದ ಕೊನೆಯ ಕತೆ ಕೂಡ. ಸಾಧಾರಣವಾಗಿ ಸಚ್ಚಿದಾನಂದ ಹೆಗಡೆಯವರು ತಮ್ಮ ಎಲ್ಲ ಕತೆಗಳಲ್ಲೂ ಮಾಡುವಂತೆ ಈ ಕತೆಯಲ್ಲೂ ಮುಖ್ಯ ಪಾತ್ರ-ಮುಖ್ಯ ವಿದ್ಯಮಾನಕ್ಕೆ ಸಂವಾದಿಯಾದ ಇನ್ನೊಂದು ಪಾತ್ರ, ಇನ್ನೊಂದು ವಿದ್ಯಮಾನವನ್ನು ಇಲ್ಲಿಯೂ ತರುತ್ತಾರೆ. ಈ ಕತೆಯ ಮುಖ್ಯಪಾತ್ರ ವಾಸುದೇವ ಮತ್ತು ಅವನ ಕಂಪೆನಿ ಬದಲಿಸುವ ನಿರ್ಧಾರ ಅವನಲ್ಲಿ ಹುಟ್ಟಿಸುವ ಬಗೆಬಗೆಯ ತಲ್ಲಣಗಳಿಗೆ ಸಂವಾದಿಯಾಗಿ ಕಾಂತನಿದ್ದಾನೆ, ಅವನ ಸ್ವಂತ ಉದ್ಯಮದ ಕನಸು ನನಸಾಗುವ ಮಹಾ ಆತಂಕ ಹುಟ್ಟಿಕೊಂಡಿದೆ. ಇಲ್ಲಿ ವಾಸುದೇವನ software ಜಗತ್ತು, project complete ಮಾಡುವ ಒತ್ತಡಗಳು, ಪ್ರತಿಸ್ಪರ್ಧಿ ಕಂಪೆನಿ, ವ್ಯಾವಹಾರಿಕ ಅವಲಂಬನೆಯೇ ಅನಿವಾರ್ಯವಾಗಿಸಿದ ವ್ಯಾವಹಾರಿಕ ಸಂಬಂಧಗಳು, ಒಬ್ಬರನ್ನೊಬ್ಬರು ಹಣಿಯುವ ಅವಕಾಶಕ್ಕಾಗಿಯೇ ಕಾಯುವ - ತಂತ್ರ ಹೂಡುವ ಸ್ಪರ್ಧೆ ಇತ್ಯಾದಿಗಳೆಲ್ಲ ಇದ್ದರೆ ಕಾಂತನ ಜಗತ್ತೇ ಬೇರೆ. ಅಲ್ಲೂ ಸ್ಪರ್ಧೆಯಿದೆ, ಅಡ್ಡಗಾಲಿಕ್ಕುವ ತಂತ್ರಗಾರಿಕೆಯಿದೆ, ಒತ್ತಡವಿದೆ. ಆದರೆ ಕಾಂತನಲ್ಲಿ ಒಂದು ಬಗೆಯ ಸಂಭ್ರಮವೂ ಇದೆ! ಅದು ವಾಸುದೇವನಲ್ಲಿ ಇಲ್ಲ. ಕವರು ಬಂದಿದೆ ಎನ್ನುವ ಹೆಂಡತಿಯ ಮಾತಿಗೆ ಈಗಲೇ ಒಡೆದು ಏನು ಬಂದಿದೆ ಎಂದು ನೋಡು ಎನ್ನುವ ವಾಸುದೇವನ ಮಾತಿನಲ್ಲಿ ಆತಂಕ, ಭಯ, ಒತ್ತಡದ ಪಾಲೇ ಹೆಚ್ಚಿದೆ. ಹೆಂಡತಿ ಕೊಡುವ ಉತ್ತರ ಅವನ ಬದುಕು-ಭವಿಷ್ಯದ ಕೊನೆಯೂ ಆರಂಭವೂ ಆಗಬಹುದಾದ ಮಿಲಿಯನ್ ಡಾಲರ್ ಪ್ರಶ್ನೆ ಎಂಬಂತಿದೆ, ಅವನ ಸ್ಥಿತಿ. ಇವೆಲ್ಲವುಗಳಡಿಯಲ್ಲಿ ಮಾನವೀಯ ಸಂಬಂಧಗಳು ನಲುಗುವುದನ್ನು, ಕಾಂತನ ಪಾತ್ರ ಮತ್ತು ನಿರೂಪಕನೊಂದಿಗಿನ ಅವನ ತುಣುಕು ಸಂಬಂಧದ ಹೊರತಾಗಿಯೂ ಕತೆ ಸೂಕ್ಷ್ಮವಾಗಿ ಹೇಳುತ್ತದೆ.

ಕೆರೆಮನೆ ಮಹಾಬಲ ಹೆಗಡೆಯವರ ಜೀವನ ಚರಿತ್ರೆ ‘ಮಹಾಬಲ’ ಹೊರತರುವಲ್ಲಿಯೂ ಸಚ್ಚಿದಾನಂದ ಹೆಗಡೆಯವರು ಪ್ರಧಾನ ಪಾತ್ರವಹಿಸಿದ್ದರೆಂಬುದು ಇಲ್ಲಿ ಉಲ್ಲೇಖನೀಯ. ಬರೆಯುವುದನ್ನು ಸಾಕಷ್ಟು ಗಂಭೀರವಾಗಿ ತೆಗೆದುಕೊಂಡಿರುವ ಸಚ್ಚಿದಾನಂದ ಹೆಗಡೆಯವರಿಂದ ಕನ್ನಡಕ್ಕೆ ಮಹತ್ವದ ಕೃತಿಗಳು ಲಭಿಸುವುದು ನಿಶ್ಚಯ.

(ಕಳೆದ ಐದು ವರ್ಷಗಳಿಂದ ಪ್ರಕಾಶಿಸುತ್ತಿರುವ ಕತೆಗಾರ ವಸುಧೇಂದ್ರರ ಛಂದ ಪ್ರಕಾಶನದ ಇಪ್ಪತ್ತನಾಲ್ಕನೇ ಕೃತಿ, ಪುಟಗಳು 114, ಬೆಲೆ ಅರವತ್ತು ರೂಪಾಯಿ.)

2 comments:

ಚಿನ್ಮಯ said...

An exellent analysis of Mr. Hegde's Stories.

-Chinmaya.

ನರೇಂದ್ರ ಪೈ said...

ಥ್ಯಾಂಕ್ಯೂ ಸರ್. ದಯವಿಟ್ಟು ಸಂದೀಪ ನಾಯಕರ ಕುರಿತು ಬರಲಿರುವ ಲೇಖನವನ್ನೂ ಓದಬೇಕೆಂದು ಕೇಳಿಕೊಳ್ಳುತ್ತೇನೆ.
ಮತ್ತೊಮ್ಮೆ ಧನ್ಯವಾದಗಳೊಂದಿಗೆ,
ನರೇಂದ್ರ