Monday, August 17, 2009

ಸಂದೀಪ ನಾಯಕರ ಗೋಡೆಗೆ ಬರೆದ ನವಿಲು

ಸಂದೀಪ ನಾಯಕ ನನ್ನ ಮೆಚ್ಚಿನ ಕತೆಗಾರ. ಇವರು ಕೆಲವು ವರ್ಷಗಳ ಹಿಂದೆ ಒಂದು ಕವನ ಸಂಕಲನ `ಅಗಣಿತ ಚಹರೆ'(ಸಂಚಯ ಪ್ರಕಾಶನ) ಹೊರ ತಂದಿದ್ದರು. ಅಪರೂಪಕ್ಕೆಂಬಂತೆ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಂದೀಪ ನಾಯಕರ ಕತೆಗಳನ್ನು ಓದಿದಾಗ ಖುಶಿಯಾಗುತ್ತಿತ್ತು. ಇವರ ಕತೆಗಳು ನನ್ನನ್ನು ಎಂದೂ ನಿರಾಶೆಗೊಳಿಸುತ್ತಿರಲಿಲ್ಲ. ಆದರೂ ಇವರು ತಮ್ಮ ಕತೆಗಳ ಸಂಕಲನಕ್ಕಾಗಿ ನಾವೆಲ್ಲ ಕಾಯುವಂತೆ ಮಾಡಿದರು. ಸುಮಾರು ಹತ್ತು ವರ್ಷಗಳ ಅವಧಿಯಲ್ಲಿ ಇವರು ಬರೆದ ಕತೆಗಳ ಸಂಕಲನ ಗೋಡೆಗೆ ಬರೆದ ನವಿಲು.

ಅಷ್ಟು ಚೆನ್ನಾಗಿ ಕತೆಗಳನ್ನು ಕೆತ್ತಿ ಕಟೆದು ನಿಲ್ಲಿಸುತ್ತಿದ್ದ ಸಂದೀಪರ ಕತೆಗಾರಿಕೆಯ ಮೂಲ ಗುಟ್ಟೇನೆಂದು ಆವತ್ತಿನಿಂದಲೂ ಇದ್ದ ಕುತೂಹಲವನ್ನು ಸಂಕಲನ ಹಿಡಿದು ಶೋಧಿಸುವುದು, ಕಲಿಯುವುದು ಸುಲಭವಾದೀತು.

"ಆನೆ ಸಾಕಿದ ಮನೆಗೆ ಎರಡು ಹೂದಂಡೆ" ಕೆಲವೊಂದು ಕಾರಣಕ್ಕೆ ವೈಕ್ಕಂ ಮುಹಮ್ಮದ್ ಬಷೀರ್‌ರ "ನನ್ನಜ್ಜನಿಗೊಂದಾನೆಯಿತ್ತು" ಕಾದಂಬರಿಯನ್ನು ನೆನಪಿಸುತ್ತದೆ. ಅದು ಕೂಡ ಒಂದು ಕುಟುಂಬ ಸಿರಿತನದ ವೈಭವವನ್ನು ಕ್ರಮೇಣ ಕಳೆದುಕೊಂಡು ಬಡತನಕ್ಕಿಳಿಯುವುದನ್ನು ಕುಟುಂಬದ ಕೊನೆ ಕೊನೆಯ ತಲೆಮಾರಿನ ಮೂಲಕ ನಿರೂಪಿಸುವ ಕಾದಂಬರಿ. ಆದರೆ ಸಂದೀಪರ ಕತೆಯಲ್ಲಿ ಕುಟುಂಬದ ಆರ್ಥಿಕ ಪತನವೇ ಕಥಾನಕದ ಕೇಂದ್ರವಲ್ಲ. ನಿರೂಪಣೆಯ ಮಾಯಕತೆ ಮತ್ತು ಸಮಗ್ರವಾಗಿ ಕತೆಯ ಓದು ಉಂಟು ಮಾಡುವ ಒಂದು ಭಾವನಿರ್ಮಿತಿಯಲ್ಲಿನ ಕಾವ್ಯಗುಣ ಸಂದೀಪರ ಎಲ್ಲಾ ಕತೆಗಳಲ್ಲೂ ಎದ್ದು ಕಾಣುವ ಗುಣ. ಈ ಕತೆಯಲ್ಲಿಯೂ ಅದು ದಟ್ಟವಾಗಿದೆ.

ಪಾತ್ರವನ್ನು ಸಂದೀಪರು ಕಟ್ಟಿಕೊಡುತ್ತಿರುವ ರೀತಿಯನ್ನು ಗಮನಿಸಿ. ಇಲ್ಲಿ ನಿರೂಪಕನಿಗೂ ಈ ಚಿತ್ರಕ್ಕೂ ಒಂದು ನಿರ್ದಿಷ್ಟ ಅಂತರವಿದೆ. ಸಂದೀಪರಿಗೆ ಯಾವುದೇ ಕತೆಯ ಯಾವುದೇ ಒಂದು ಪಾತ್ರ ತೀರ ಆಪ್ತವಾದದ್ದು, ಸ್ವಂತದ್ದು ಎಂಬುದಿಲ್ಲ. ಮಾಸ್ತಿಯವರು ಸಾಧಿಸಿದ್ದ ಅಂತರವೇ ('ಎಲ್ಲಿಗೋ ಯಾವುದೋ ಕೆಲಸದ ನಿಮಿತ್ತ ಹೋಗಿದ್ದಾಗ ಇಂಥವರು ಸಿಕ್ಕಿದರು. ಅವರು ಇನ್ನೆಲ್ಲಿಗೋ ಹೋದಾಗ ಅಲ್ಲಿ ನೋಡಿದ್ದನ್ನು ನಮಗೆ ಆ ಸಂದರ್ಭದಲ್ಲಿ ಹೇಳಿದರು. ಅದನ್ನು ನಾನೀಗ ನಿಮಗೆ ಹೇಳಲು ಪ್ರಯತ್ನಿಸುತ್ತೇನೆ') ಇಲ್ಲಿಯೂ ಇದೆ ಅನಿಸುತ್ತದೆ. ನಮ್ಮ ಅನೇಕ ಲೇಖಕರಿಗೆ ಅವರ ಬರಹದ ಯಾವುದಾದರೂ ಒಂದು ಪಾತ್ರದೊಂದಿಗಾದರೂ ತಾದ್ಯಾತ್ಮ, ಮುಚ್ಚಿಡಲಾಗದ ಪ್ರೀತಿ ಇದ್ದೇ ಇರುತ್ತದೆ. ಅದನ್ನು ಓದುತ್ತ ನಾವು ಕೂಡ ಅನುಭವಿಸುತ್ತೇವೆ, ಇಷ್ಟ ಪಡುತ್ತೇವೆ ಕೂಡ. ಆದರೆ ಇದನ್ನು ವಿಮರ್ಶಕರು ಅಷ್ಟೇನೂ ಪುರಸ್ಕರಿಸುವುದಿಲ್ಲ. ಬರಹಗಾರನ ತಲ್ಲಣಗಳು ಪಾತ್ರದ ತಲ್ಲಣಗಳಾಗಬಾರದು, ಕಂಫರ್ಟ್ ಜೋನ್ ಬಿಟ್ಟು ಬರೆಯಬೇಕು ಎಂದೆಲ್ಲ ಹೇಳುವಾಗ ಬಹುಷಃ ಅವರು ಇದನ್ನೇ ಹೇಳುತ್ತಿರುತ್ತಾರೆ. ಸಂದೀಪ್ ಇದನ್ನು ಮೊದಲ ಸಂಕಲನದಲ್ಲೇ ಕೈವಶ ಮಾಡಿಕೊಂಡಿದ್ದಾರೆ.

ಅಮರೇಶ ನುಗಡೋಣಿಯವರು ಗಮನಿಸಿದಂತೆ ಸಂದೀಪರ ಕತೆಗಳಲ್ಲಿ "ಹಲವು ಪಾತ್ರಗಳು ಕಾಣಿಸಿಕೊಂಡರೂ ಅವುಗಳಲ್ಲಿ ಎಲ್ಲವೂ ಮುನ್ನೆಲೆಗೆ ಬರುವುದಿಲ್ಲ. ಮುಖ್ಯ ಪಾತ್ರದ ಮುಖೇನ ಕತೆ ನಿರೂಪಣೆಗೊಳ್ಳುತ್ತದೆ." ಆದರೆ ಈ ಮುಖ್ಯ ಪಾತ್ರವನ್ನು ಸಂದೀಪ್ ಅದು ಹೇಗೆ ಕಟ್ಟುತ್ತಾ ಸಾಗುತ್ತಾರೆಂದರೆ, ಅದು ಒಂದು ಬದುಕನ್ನು ಕಟ್ಟಿಕೊಡುತ್ತಿರುವ ಹಾಗೆ. ಅದನ್ನು ಮಾಡುತ್ತ ಮಾಡುತ್ತಲೇ ಸಂದೀಪ್ ಕಥಾನಕದ ಚಲನೆಯನ್ನು ಕೂಡ ಸಾಧಿಸುತ್ತಿರುತ್ತಾರೆ ಮಾತ್ರವಲ್ಲ ಆ ಪಾತ್ರವನ್ನು ಅದರ ಎಲ್ಲ `ಕಾಂಪ್ಲೆಕ್ಸ್' ಸಹಿತ ರಕ್ತ ಮಾಂಸವುಳ್ಳ ಒಂದು ಸಜೀವ ವ್ಯಕ್ತಿಯನ್ನಾಗಿ ನಮಗೆ `ಹೌದು-ಹೌದು'ಗೊಳಿಸುತ್ತಿರುತ್ತಾರೆ!

ಲಂಕೇಶ್ ಹೇಳಿದ ಮಾತದು, "ಲೇಖಕನಾದವನು ತನ್ನ ಪಾತ್ರಗಳ ವಿಚಿತ್ರ ಸುಖ ಮತ್ತು ಕಾತರ ಕೂಡಿದ ಸ್ಥಿತಿ - ಇದನ್ನು ಬೇಕಾದರೆ ಕಾಂಪ್ಲೆಕ್ಸ್ ಅನ್ನಿ - ಹಿಡಿದಿಡಲಾರದವ ಒಳ್ಳೆಯ ಸಾಹಿತಿಯಾಗಲಾರ."

ಡಾ||ಯು.ಆರ್.ಅನಂತಮೂರ್ತಿಯವರ ಇನ್ನೊಂದು ಮಾತು ಇಲ್ಲಿ ಸಾಂದರ್ಭಿಕ.

"ಹಿಂದಿನ ರಾತ್ರಿ ನಾರದರಿಂದ ಕೇಳಿಸಿಕೊಂಡ ರಾಮಾಯಣದ ಕಥೆ - ಇದು ಕವಿ ಕಟ್ಟಿದ ಕಥೆಯಲ್ಲ, ಕೇಳಿಸಿಕೊಂಡು ಪಡೆದದ್ದು ಎನ್ನುವುದು ಮುಖ್ಯ - ಕವಿಯ ತಲೆಯಲ್ಲಿ ಗುನುಗುನಿಸುತ್ತಿದೆ. ದುಃಖವನ್ನೂ, ಲಯಬದ್ಧ ಮಾತಿನ ಸುಖವನ್ನೂ ಒಟ್ಟಾಗಿ ಅನುಭವಿಸುವ ಕವಿಗೆ ಬ್ರಹ್ಮನೇ ಎದುರು ಕೂತ ಪರಿವೆಯಿಲ್ಲ. ಇದನ್ನು ಗ್ರಹಿಸಿದ ಬ್ರಹ್ಮ ಕವಿಗೆ ತಥಾಸ್ತು ಹೇಳುತ್ತಾನೆ. ವರಗಳನ್ನೂ ಕೊಡುತ್ತಾನೆ. `ರಾಮಾಯಣದಲ್ಲಿ ಒಂದು ಪಾತ್ರ ಇನ್ನೊಂದಕ್ಕೆ ಗುಟ್ಟಿನಲ್ಲಿ ಹೇಳಿದ್ದೂ, ತಾನು ತನಗೇ ಅಂದುಕೊಂಡದ್ದೂ ನಿನಗೆ ಗೊತ್ತಾಗಲಿ.' ಆದರೆ ಈ ವರ ಮಾತ್ರ ಸಾಲದು. ಕಾವ್ಯವನ್ನು ಹೊತ್ತು ಹೆರುವವರೆಲ್ಲರೂ ಪಡುವ ಬಯಕೆಯೊಂದಿದೆ.

ಇದು ಯಾವುದೆಂದು ತಾನಾಡಿಬಿಟ್ಟ ಮಾತಿಗೆ ಮರುಳಾದ ವಾಲ್ಮೀಕಿಯ ಅಂತರ್ಯವನ್ನು ಅರಿತ ಸೃಷ್ಟಿಕರ್ತನಿಗೆ ಗೊತ್ತು. ಪ್ರತಿಸೃಷ್ಟಿಯಲ್ಲಿ ತೊಡಗಿರುವ ಕವಿಗೆ ಎಲ್ಲವನ್ನೂ ಕಾಣಬಲ್ಲ ಶಕ್ತಿ ಮಾತ್ರ ಸಾಲದು. ಕವಿ ಕಂಡು ಹೇಳುವುದನ್ನು ಕೇಳಿಸಿಕೊಂಡವನಿಗೆ ಅಷ್ಟೇ ಸದ್ಯವಾಗಿ ಕಾಣಿಸಬೇಕು; ಕಂಡದ್ದು ನಿಜ ಎನ್ನಿಸಬೇಕು. ಲಿಂಗ ಮೆಚ್ಚಿ ಅಹುದು ಅಹುದು ಎನ್ನುವಂತಿರಬೇಕು. ಪರಕಾಯ ಪ್ರವೇಶದ ಒಳನೋಟಗಳ ತನ್ಮಯತೆ ತತ್ಪರತೆಗಳ ಜೊತೆಯಲ್ಲೇ ವಾಲ್ಮೀಕಿ ಈ ವಾಕ್‌ಸಿದ್ಧಿಯ - ಅಂದ ಮಾತು ತತ್ ಕ್ಷಣವೇ ನಿಜವೆನ್ನಿಸುವ - ವರವನ್ನು ಬ್ರಹ್ಮನಿಂದ ಪಡೆಯುತ್ತಾನೆ.

ಕಾವ್ಯದ ಮಾಂತ್ರಿಕತೆ ಎಂದರೆ ಇದೇ."
(ವಾಲ್ಮೀಕಿಯ ನೆವದಲ್ಲಿ (ಪುಟ ೧೯೨-೧೯೩), ಅಭಿನವ ಪ್ರಕಾಶನ)

ಈ ಕತೆಯ ನಾಗವೇಣಿಯನ್ನೇ ನೋಡಿ. ಅವಳು ಹೂವು ಕೊಡಲು ಬಂದವಳಂತೆ ಕಂಡರೂ ಸಂದೀಪ್ ಚಿತ್ರಿಸುವ ಒಂದು ಪುಟ್ಟ ಸನ್ನಿವೇಶದಲ್ಲಿ ಎರಡೇ ಪಾರಾದಲ್ಲಿ ಅವಳ ವೃತ್ತಿ, ದೈನಂದಿನ ಕೆಲಸ ಕಾರ್ಯಗಳು, ಸದ್ಯದ ಉದ್ದೇಶ, ಅದರ ಹಿನ್ನೆಲೆ, ಅದಕ್ಕೆ ಬೇಕು ಬೇಕೆಂದೇ ಹುಟ್ಟಿಕೊಳ್ಳುತ್ತಿವೆಯೋ ಎನಿಸುವಂಥ ಅಡ್ಡಿಗಳು, ಎಲ್ಲವನ್ನೂ ಹೇಳುತ್ತಿದ್ದಾರೆ. ಪರಿಸರದ ಎಲ್ಲ ವಿವರಗಳೊಂದಿಗೇ ಇದನ್ನು ಹೇಳುತ್ತಿದ್ದಾರೆ. ನಾಗವೇಣಿ, ಮುದುಕ, ಅವನ ಸೊಸೆ, ಅಡಗಿ ಕೂತಿರಬಹುದಾದ `ಅಮ್ಮ' - ಮುಂತಾದ ಪಾತ್ರಗಳನ್ನು ಇಲ್ಲಿಯೇ ತಂದಿದ್ದಾರೆ. ವಸ್ತುಲೋಕದ ವಿವರಗಳು ಎಂದು ವಿಮರ್ಶಕರು ಗುರುತಿಸುವ ಇನ್ನೆಷ್ಟೋ ವಿವರಗಳನ್ನು ಕೂಡ ನೀಡುತ್ತಾರೆ. ಎಲ್ಲೂ ಯಾವುದೂ ಅನಾವಶ್ಯಕ ಎಂದು ಅನಿಸದ ಒಂದು ಲಹರಿಯಿದೆ, ನಲ್ಮೆಯಿದೆ ನಿರೂಪಣೆಯಲ್ಲಿ. ಇದು ಸಂದೀಪರ ಸಹಜ ಶಕ್ತಿ. ಕನ್ನಡದ ಕೆಲವೇ ಅಪರೂಪದ ಕತೆಗಾರರಲ್ಲಿ ಇಂಥ ಒಂದು ಸಹಜವಾದ ಶಕ್ತಿಯನ್ನು ಗುರುತಿಸಬಹುದು. ರಾಘವೇಂದ್ರ ಪಾಟೀಲರ ವಿವರಗಳು, ಜಯಂತ ಕಾಯ್ಕಿಣಿಯವರ ವಿವರಗಳು ಮತ್ತು ಲಂಕೇಶರ ನಿರೂಪಣೆಯಲ್ಲಿ ಇದು ಇತ್ತು. ಈ ಅಪೂರ್ವವಾದ ಒಂದು ಕಾಣ್ಕೆ ಸಂದೀಪರಲ್ಲಿದೆ. ಇದು ತುಂಬ ಸಂತಸ, ಹೆಮ್ಮೆ ಹುಟ್ಟಿಸುತ್ತದೆ, ಈ ಯುವ ಕತೆಗಾರನ ಬಗ್ಗೆ.

ಈ ಕಥಾನಕದ `ಕತೆ'ಯ ಎಳೆ ತೀರ ಸಣ್ಣದು ಮತ್ತು ಸರಳವಾದದ್ದು. ನಾಗವೇಣಿಯ ಸದ್ಯದ ಕಾಳಜಿ ಮಗಳ ಮದುವೆ. ಅವಳ ದೈನಂದಿನಗಳ ವಿವರಗಳಲ್ಲೇ ನೆನಪುಗಳು, ಊರ ಚರಿತ್ರೆ, ಗಾಸಿಪ್ಪುಗಳು, ಜಾಗದ ವ್ಯವಹಾರ, ಅದರ ನಿಗೂಢ ಮರ್ಮಗಳು, ಮದುವೆಯ ಆತಂಕ ಎಲ್ಲವೂ ಒಂದಕ್ಕೊಂದು ಕೂಡಿಕೊಂಡು ನಿರುದ್ದಿಶ್ಯವಾಗಿ ಬರುತ್ತಿವೆ. ಬಂದಂತೆಯೇ ಅಷ್ಟೇ ಸಹಜವಾಗಿ ಹೋಗುತ್ತವೆ ಕೂಡ. ಮುಖ್ಯ ಮುದ್ದೆ ಮಾತ್ರ ಯಾವುದೇ ರೀತಿಯಿಂದ ಅರ್ಥಪೂರ್ಣವೆನಿಸದ ಸಾಹುಕಾರರ ಮನೆಗೆ ಹೂವು ಕೊಡುವ ಕೈಂಕರ್ಯವನ್ನು ನಿಲ್ಲಿಸುವ, `ಅಮ್ಮ' ಈ ಮನೆಗೆ ಸೊಸೆಯಾಗಿ ಬಂದಂದಿನಿಂದ ಇದುವರೆಗೂ ದಿನ ತಪ್ಪಿಸದೆ ಕೊಡುತ್ತ ಬಂದ ಎರಡು ಹೂದಂಡೆಯ ಋಣಕ್ಕಾದರೂ ಮಗಳ ಮದುವೆಯಂಥ ಸಂದರ್ಭದಲ್ಲಿ ಏನಾದರೂ ಸಹಾಯವನ್ನು ಪಡೆಯುವ-ಪಡೆಯದಿದ್ದರೂ ಆ ಬಯಕೆಯನ್ನು ದಾಖಲಿಸುವ ತುರ್ತು. ಮುಖ್ಯ ನಾಗವೇಣಿಗೆ ಇದೆಲ್ಲ ಸ್ಪಷ್ಟವಿಲ್ಲ ಎನ್ನುವುದೇ ಕತೆಯ ಸೂಕ್ಷ್ಮ. ಅವಳ ತುರ್ತು ಮಾತ್ರ ನಿಜ, ಅದೂ ಇಷ್ಟು ಸ್ಪಷ್ಟ ಮಾತುಗಳಲ್ಲಿ ಅಲ್ಲವೆಂಬುದನ್ನು ಗಮನಿಸಿ. ಆ ತುರ್ತನ್ನಾದರೂ ಕಾರ್ಯಗತಗೊಳಿಸುವುದಕ್ಕೆ ಬೇಕಾದ ನೇರ ಮಾತು, ವ್ಯಾವಹಾರಿಕವಾದ ಕಡ್ಡಿ ಮುರಿದಂತೆ ಆಡಬಲ್ಲ ಒಂದೇ ಒಂದು ಮಾತು ನಾಗವೇಣಿಯ ಕಲ್ಪನೆಯಲ್ಲೇ ಉಳಿದು ಕಾಡಬಲ್ಲದೇ ಹೊರತು ಅದು ಅವಳ ವ್ಯಕ್ತಿತ್ವದ ಛಂದಸ್ಸಿನಲ್ಲೇ ಇಲ್ಲ. ಅವಳ ಕಲ್ಪನೆಯ ನಾಗವೇಣಿ ಕೂಡ ಎರವಲು. ಅವಳೇ ಆಗಲಾರದ ನಿಷ್ಠುರತನವದು. ಇದನ್ನು ಸಂದೀಪ ಹೇಗೆ ಸಲಲಿತ ಚಿತ್ರಿಸುತ್ತಾರೆ ಎಂಬುದೇ ಒಂದು ಮಾಯಕತೆ. ತನ್ನ ಕುರಿತು ಕಿಂಚಿತ್ತೂ ಅನುತಾಪ ಹೊಂದಿರುವವರಂತೆ ಕಾಣದ ಸವೆದು ಹೋದ ಸಾಹುಕಾರಿಕೆಯ ನಿಟ್ಟುಸಿರುಗಳಲ್ಲೇ ಹೂತಂತಿರುವ ಆನೆ ಸಾಕಿದ ಮನೆಯ ಯಾರೊಡನೆಯೂ ಆಕೆ ಕಟುವಾಗಲೊಲ್ಲಳು. ಲಂಕೇಶ್ ಹೇಳುವ ಪಾತ್ರದ `ಕಾಂಪ್ಲೆಕ್ಸ್' ಸಂದೀಪರಲ್ಲಿ ಹೇಗೆ ಸಹಜವಾಗಿ ಮೈದಾಳುತ್ತದೆ ಎಂಬುದನ್ನು ಗಮನಿಸಿ.

ಕತೆಯ ಕೊನೆಯಲ್ಲಿ ಇನ್ನು ನಾಗವೇಣಿಯಿಂದ ತಲೆಮರೆಸಿಕೊಳ್ಳಲು ಸಾಧ್ಯವೇ ಇಲ್ಲ ಎನಿಸಿಬಿಟ್ಟಂತೆ ಮುದುಕಿ `ಅಮ್ಮ' , ಸಾಹುಕಾರ್ತಿ ಮನೆಯೊಳಗಿನಿಂದ ಹೊರಬರುತ್ತಾಳೆ. ನಾಗವೇಣಿಯ ಎಲ್ಲ ಹಠ, ತುರ್ತಿನ ಯಶಸ್ಸು ಇಷ್ಟೇ. ಮುಂದಿನ ಭಾಗ ಓದಿ:
"ಏನೆ ನಾಗವೇಣಿ ನಿಂತೇ ಇದ್ದಿಯಲ್ಲೇ. ಕೂತಕಂಡರೆ ಆಗೂದಿಲ್ಲೆನೆ" ಎನ್ನುತ್ತ ಅಮ್ಮನವರು ಒಳಗಿನಿಂದ ಬಂದರು.

"ನಿನ್ನ ಮಗಳ ಮದುವೆ ಬುಡಕ್ಕೆ ಬಂತಲ್ಲ. ಚಲೋ ಆಯ್ತು. ನಂಗೂ ಈಗೀಗೆ ಆರಾಮ ಇರೂದಿಲ್ಲ. ನಾನು ನಾಳೆಗೆ ಯಶೋದನ ಸಂಗ್ತಿಗೆ ಅವ್ರ ಮನೆಗೆ ಹೋಗ್ತೆ. ನಿನ್ನ ಮಗಳ ಮದ್ವಿಗೆ ಬರೂಕೆ ಆಗ್ತಿದೊ ಇಲ್ವೊ. ಅಲ್ಲೆ ಲಾಯಕ್ಕಾದ ಡಾಕ್ಟ್ರು ಇವ್ರಂತೆ. ಅಲ್ಲೇ ತೊರಸಕಣ್ತೆ. ತಿರ್‍ಗೆ ಇಲ್ಲಿಗೆ ಬರೂದು ಮಳೆಗಾಲ ಕಳ್ದ ಮೇಲೇನೊ." ಚಣ ಹೊತ್ತು ತಡೆದು ಬಣ್ಣ ಹೋದ ಸೀರೆಯ ತುದಿಗೆ ಕಟ್ಟಿದ ಗಂಟನ್ನು ಬಿಚ್ಚಿ "ತಕೊ, ನನ್ನ ಕೂಡೆ ಇರೂದೆ ಇಷ್ಟು...." ಅಂದು ಮಡಚಿದ ನೋಟುಗಳನ್ನು ಹೊರ ಕಿಡಕಿಯ ಮೇಲೆ ಇಟ್ಟರು. ಮುಂದೆ ಮಾತನಾಡಲು ಆಗದೆ ಅಷ್ಟಕ್ಕೆ ನಿಲ್ಲಿಸಿ ಯಾರೋ ಕರೆದರೆಂಬಂತೆ ಒಳಗೆ ಹೋದರು.

"ಅವರ ಕಣ್ಣಿನಲ್ಲಿ ನೀರಿತ್ತೆ, ಇನ್ನು ಮೇಲೆ ಹೂವಿನ ದಂಡೆ ತರುವುದು ಬೇಡ ಎಂಬ ಸೂಚನೆಯಿತ್ತೆ, ಅವರು ಮಗಳ ಮನೆಗೆ ಹೋದ ಮೇಲೆ ಅವನ್ನು ಕೊಡುವುದಾದರೂ ಯಾರಿಗೆ....ನಾಗವೇಣಿಗೆ ಯಾವುದನ್ನೂ, ಏನನ್ನೂ ಕೇಳಲಾಗಲಿಲ್ಲ. ಕೇಳಲು ಎದುರಿಗೆ ಅವರೂ ಇರಲಿಲ್ಲ. ಅವರ ಮಾತುಗಳನ್ನು ಕೇಳುತ್ತ ನಿಂತಿದ್ದ ಯಶೋದ ಇವಳನ್ನೆ ನೋಡುತ್ತಿದ್ದಳು. ಅಂಥ ಹೊತ್ತಿನಲ್ಲೂ ಸಾಹುಕಾರ್ತಿಯ ಅಂಚು ಹರಿದ ಸೀರೆ, ಬಣ್ಣವನ್ನೇ ಕಾಣದಿದ್ದ ಹಿಂದೊಮ್ಮೆ ಆನೆ ಸಾಕಿದ ಮನೆ....ದಮ್ಮಿನ ಮುದುಕನ ನಿಲ್ಲದ ಕೆಮ್ಮು ಅವಳನ್ನು ಆವರಿಸ ತೊಡಗಿದವು.

"ಬಾಳೆ ಎಲೆ ತುಂಡಿನಲ್ಲಿ ಕಟ್ಟಿದ ಹೂವಿನ ಕಟ್ಟು ಅವಳ ಕೈಯ ಬೆವರಿನಲ್ಲಿ ನೆನೆಯುತ್ತಿತ್ತು."

ಈ ಮಾತಿನೊಂದಿಗೆ ಕತೆ ಮುಗಿಯುತ್ತದೆ. ಇಲ್ಲಿನ ಭಾವಪೂರ್ಣ ಸನ್ನಿವೇಶ, ಕಾಲದ ಅನಿವಾರ್ಯ ಚಲನೆ ಮತ್ತು ಚಿತ್ರಕ ಶಕ್ತಿಯ ಸಂದೀಪರದೇ ಆದ ಕೆಲವು ನುಡಿಗಟ್ಟುಗಳು ಎಲ್ಲ ಒಪ್ಪಿಕೊಂಡ ನಂತರ ಉಳಿಯುವ ಕೆಲವು ಸಂಗತಿಗಳಿವೆ. ಬದುಕನ್ನು ನಾವು ಕಾಣುವ ಬಗೆ, ಅದರ ಸಂಕೀರ್ಣತೆಯನ್ನು ಗ್ರಹಿಸುವ ವಿಧಾನ, ಮನುಷ್ಯ-ಮನುಷ್ಯರ ನಡುವಿನ ಸತ್ ಜಾಗೃತಗೊಳ್ಳುವ ದಿವ್ಯವಾದ ಅನನ್ಯ ಕ್ಷಣಗಳು ಮತ್ತು ಬದುಕಿನ ಸಂದಿಗ್ಧ ಮತ್ತು ಅನಿವಾರ್ಯಗಳು ನಮಗೆ ಕಾಣಿಸುವ ದರ್ಶನ ಏನಿದೆ ಅಂಥ ಒಂದು ತಲ್ಲಣ ಈ ಕತೆಯ ಓದಿನ ನಂತರ ಅಮರಿಕೊಳ್ಳುವ ಮೌನದಲ್ಲಿ ನಮ್ಮನ್ನು ಆವರಿಸಿಕೊಳ್ಳುತ್ತದೆ. ಹರಿದ ಸೀರೆಯಂಚಿನ ಗಂಟು ಬಿಚ್ಚಿ ಮುದ್ದೆ ಮುದ್ದೆಯಾದ ನೋಟುಗಳನ್ನು ಚಾಚುವ ಮುದುಕಿ, ಪ್ರತಿಮೆಯಂತೆ ನಿಂತು ಖಾಲಿ ಮನಸ್ಸಿನಿಂದ ನೋಡುತ್ತಿರುವ ಯಶೋದ, ಆನೆ ಸಾಕಿದ ಮನೆಯ ಬಣ್ಣವಿಲ್ಲದ ಗೋಡೆಗಳು...ನಮ್ಮದೇ ಬದುಕಿನಲ್ಲೂ ಏನನ್ನೋ ಬೆಟ್ಟು ಮಾಡಿ ತೋರಿಸಬಲ್ಲ ಬಿಂಬಗಳು. ಈ ಬಿಂಬಗಳ ಮಬ್ಬು ಬೆಳಕಿನಲ್ಲಿ ಒಂದು ದಿವ್ಯವಾದ ಮೌನವಿದೆ ಮತ್ತು ಆ ಮೌನದಲ್ಲಿ ಅನಿರ್ವಚನೀಯವಾದ ತತ್ವವೊಂದು ಅಸ್ಪಷ್ಟವಾಗಿ ಹೊಳಹುತ್ತಿದೆ. ಕತೆಯ ಒಡಲಿನಲ್ಲೇ ನೋಡಿದರೂ, ಇಲ್ಲಿ ಒಂದು ದೊಡ್ಡ ಮನೆತನದ ಪತನದ ಕೊನೆಯುಸಿರು, ನಿಟ್ಟುಸಿರು, ದಮ್ಮಿನ ಏದುಸಿರು ಎಲ್ಲ ಇರುವಾಗಲೇ ಊರಿನ ಜನಪದ ತನ್ನದೇ ಆದ ಚಿಂತೆ-ನಲಿವುಗಳ ನಿತ್ಯಲಯದಲ್ಲಿ ವ್ಯಸ್ತವಾಗಿದೆ. ನಡುವೆ ನಾಗವೇಣಿಯಂಥವರ ಸುಪ್ತ ಸಂಭ್ರಮ-ತಲ್ಲಣಗಳೂ ಇವೆ. ಈ ಮೂರರ ನಡುವೆ ಓದುಗನ ಮನಸ್ಸು ಒಳ ಹಾಯ್ದು, ಹೊರಬಂದು ಮಾಡಬೇಕಿದೆ. ಈ ಪ್ರಕ್ರಿಯೆಗೆ ಒಂದು ಮನಸ್ಥಿತಿಯನ್ನು ಒಯ್ದು ಮುಟ್ಟಿಸುವುದರಲ್ಲೇ ಈ ಕತೆಯ ಯಶಸ್ಸು ಇದೆ ಮತ್ತು ಇದು ಅಚಾನಕವಾಗಿ ಸಂಭವಿಸುವ ಒಂದು ವಿದ್ಯಮಾನವಲ್ಲ. ಸಂದೀಪ ನಾಯಕರ ಜೀವನದೃಷ್ಟಿ, ಗ್ರಹಿಕೆಯ ಕ್ರಮಗಳಿಂದಲೇ ಅವರಿದನ್ನು ಪ್ರಜ್ಞಾಪೂರ್ವಕ, ಉದ್ದೇಶಪೂರ್ವಕ ಸಾಧಿಸಿದ್ದಾರೆ. ಅವರಿಗಿದು ಸಾಧ್ಯವಾಗಿರುವುದು ಅಭಿಮಾನಕ್ಕೆ ಕಾರಣವಾಗಿದೆ.

ಸಂಕಲನದ ಎರಡನೆಯ ಕತೆ `ಕರೆ' ಕೂಡ ಮೇಲಿನ ಮಾತುಗಳಿಗೆ ಭಿನ್ನವಾದ ಕತೆಯೇನಲ್ಲ. ಕರೆ ಕತೆ ಬಹುಷಃ ಸಂದೀಪರ ಪ್ರಥಮ ಪ್ರಕಟಿತ ಕತೆ. ಇದು ವಿಜಯಕರ್ನಾಟಕ-ಅಂಕಿತ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಕೂಡ ಗಳಿಸಿ ಸಾಹಿತ್ಯಜಗತ್ತಿನ ಗಮನಸೆಳೆಯಿತು. ಕತೆ ಕತೆಯ ಬಗ್ಗೆ ತೀರ್ಪುಗಾರರಲ್ಲೋರ್ವರಾದ ಜಯಂತ ಕಾಯ್ಕಿಣಿಯವರ ಟಿಪ್ಪಣಿ ಇಂತಿದೆ:

"ಸಾವು, ಬದುಕು, ಮಮತೆ, ಹಣ - ಈ ನಾಲ್ಕು ಆಯಾಮಗಳ ನಡುವೆ ಸೂಕ್ಷ್ಮವಾಗಿ ಕಂಪಿಸುವ ಕತೆ. ಈ ಕಾಲದ ಪ್ರಬಲ ರೂಪಕವಾಗಿರುವ, ವಿವರವೂ ಆಗಿರುವ ದುಡ್ಡು - ಸಾವಿನ ಸಮ್ಮುಖದಲ್ಲಿ, ಮಮತೆಯ ಹಂಬಲದಲ್ಲಿ `ಅರ್ಥ'ವನ್ನು ಕಳೆದುಕೊಳ್ಳುವ ಒಂದು ಸರಳ ಮಾನವೀಯ ಪ್ರಸಂಗ ಇಲ್ಲಿ ಚಿತ್ರವತ್ತಾಗಿ ರೂಪುಗೊಂಡಿದೆ. ಅತ್ಯಂತ ನಿಖರ ಮತ್ತು ತೀವ್ರವಾದ ಅಭಿವ್ಯಕ್ತಿಯಿಂದಾಗಿ ಕಥೆಯ ವಾತಾವರಣ ಧ್ವನಿಪೂರ್ಣವಾಗಿದೆ. ತೀರ್ಪುಗಾರಿಕೆಯಿಲ್ಲದ, ಪಕ್ಷಪಾತವಿಲ್ಲದ, ಕಥೆಯ ತಳಮಳ ನಮ್ಮ ಮನಸ್ಸನ್ನು ಕರಗಿಸಿ ವಿಶಾಲಗೊಳಿಸುವಂತಿದೆ. `ನಿನ್ನ ದುಡ್ದು ಬೇಡ, ಬಂದು ಅಣ್ಣನನ್ನು ನೋಡು' ಎಂಬ ಕಥೆಯ ಜೀವವಾಕ್ಯ - ನಮ್ಮ ಸಮಯದ ಆರ್ತ ಪ್ರಾರ್ಥನೆಯಂತಿದೆ."

ಈ ಕತೆಯ ಆರಂಭದ ಒಂದು ಪಾರಾದಲ್ಲೇ ಇಡೀ ಕತೆಯಿದೆ. ಪ್ರತಿ ವಾಕ್ಯವೂ ನಮ್ಮ ಮನಸ್ಸಿನಲ್ಲಿ ಮೂಡಿಸುವ ಪರಿಣಾಮ ಇಡೀ ಕತೆಯ ಆಶಯದತ್ತಲೇ ಮುಖಮಾಡಿದಂತಿದೆ. ಅದನ್ನು ಗಮನಿಸಿ:

"ಬರುವ ಎಲ್ಲರನ್ನೂ ಒಳಗೆ ಬಿಟ್ಟುಕೊಳ್ಳುವ ಆಸ್ಪತ್ರೆಯ ಹೊರರೋಗಿಗಳ ವಿಭಾಗ ಯಾವಾಗಲೂ ಜನರಿಂದ ಗಿಜಿಗುಡುತ್ತಿತ್ತು. ರೋಗಿಗಳಿಗಿಂತ ಅವರನ್ನು ನೋಡಲು ಬಂದವರೇ ಅಲ್ಲಿ ಹೆಚ್ಚಾಗಿ ತುಂಬಿದ್ದರು. ಜನರಲ್ ವಾರ್ಡಿನ ಮೂಲೆಯ ಹಾಸಿಗೆಯಲ್ಲಿ ಮೋನಪ್ಪ ದಿಂಬಿಗೆ ಒರಗಿ ಕೂತಿದ್ದ. ಅವನು ಬೆಳಗಿನಿಂದ ಹೆಂಡತಿ ಮಲಗಿಕೊಳ್ಳಲು ಹೇಳಿದರೂ ಕೇಳದೆ ತನ್ನ ಚಿಕ್ಕವ್ವಿಯ ಮಗ ದಯಾನಂದ ಬರಬಹುದೆಂದು ಬಾಗಿಲ ಕಡೆ ನೋಡುತ್ತ ಬಿಸಿಲು ಬಾಡಲು ಬಂದಿದ್ದರೂ ಕಣ್ಣು ಮುಚ್ಚಿರಲಿಲ್ಲ. ಆಸ್ಪತ್ರೆಯ ಮೌನವನ್ನು ಮೀರಿ ಯಾರಾದರೂ ಮಾತನಾಡಿದರೆ ಅವನೇ ಬಂದನೇನೊ ಎಂದು ಮೋನಪ್ಪ ಕಣ್ಣು ತೆರೆಯುತ್ತಿದ್ದ. ಸರಕಾರಿ ಆಸ್ಪತ್ರೆಯ ಆ ಬಣ್ಣಗೆಟ್ಟ ಕೋಣೆಯ ಮೂಲೆಯಲ್ಲಿ ಮಲಗಿದ್ದ ಅವನಿಗೆ ಇಲ್ಲಿಯವರೆಗೂ ದಯಾನಂದನಿಗೆ ತಾನಿಲ್ಲಿ ಮಲಗಿರುವುದು ತಿಳಿದಿರಲಾರದು, ಗೊತ್ತಾದರೆ ಬರದೆ ಇರುವವನಲ್ಲ, ಈ ಸುದ್ದಿ ತಿಳಿಯಲು ಏನೋ ತಡವಾಗಿದೆ ಎಂದು ಭಾಸವಾಗುತ್ತಿತ್ತು. ಹಾಗೇ ತನಗೆ ತಾನೇ ಅಂದುಕೊಳ್ಳುತ್ತ ಅದನ್ನು ಅವನೇ ಕೆಲವು ದಿನಗಳಿಂದ ನಂಬಿಕೊಂಡಿದ್ದ."

ಮುಂದೆ ಆಸ್ಪತ್ರೆಯ ಹಗಲು - ಮಧ್ಯಾಹ್ನ - ಸಂಜೆ; ಭೇಟಿಗೆ ಬರುವ ಅವರಿವರು - ದಯಾನಂದನ ಮಗಳ ಮದುವೆ, ಅದರ ಸೋಲಿನ ಸಾಂದರ್ಭಿಕ ವಿವರವಾಗಿ ಬರುವ ಸಾಲದ ನೆನಪು, ಜಾನಕಿಯ ಭೇಟಿ ನೀಡುವ ಹುಮ್ಮಸ್ಸು - ಹೀಗೆ ಕತೆ `ಕಾಯುವಿಕೆ'ಯ ಲಯಬಿಟ್ಟು ಕೊಡದೆ ವಿವರಗಳನ್ನು ತುಂಬಿಕೊಳ್ಳುತ್ತ ಹೋಗುತ್ತದೆ. ಈ ನಡೆಯಲ್ಲಿ ಅಸಹಜತೆಯಿಲ್ಲ, ಸಂಕೀರ್ಣತೆಯಿಲ್ಲ. ಅಮರೇಶ ನುಗಡೋಣಿಯವರು ಹೇಳುವಂತೆ `ಹದವಾದ ಭಾಷೆ, ಸಂಯಮದ ನಿರೂಪಣೆ'ಯೇ ಎಲ್ಲೆಲ್ಲೂ ಕಾಣುವುದು. ಆದರೆ ಈ ಪುಟ್ಟ ಕತೆ ಉಂಟು ಮಾಡುವ ಪರಿಣಾಮ ಗಮನಾರ್ಹವಾಗಿದೆ, ಅದನ್ನು ಜಯಂತ ಅತ್ಯಂತ ನಿಖರವಾಗಿ ದಾಖಲಿಸಿದ್ದಾರೆ.

ಮರೆತು ಹೋದ ಒಂದು ಸಂಬಂಧ ಕತೆಯನ್ನು ನಾವು ಅನೇಕ ಕತೆಗಾರರಲ್ಲಿ ಮತ್ತೆ ಮತ್ತೆ ಕಾಣುವ, ಓದಿದ ಕತೆಯೇ. ಆದರೆ ಸಂದೀಪರು ಇದನ್ನು ಕೇವಲ ಬಾಲ್ಯದ ನೆನಪುಗಳ, ಶರಾವತಿಯಂಥ ಒಬ್ಬ ಮಾಯಕದ ಗೊಂಬೆಯಂಥ ಹುಡುಗಿಯ ಕುರಿತ ನಾಸ್ಟಾಲ್ಜಿಯಾವಷ್ಟೇ ಅನಿಸದ ಹಾಗೆ ವೆಂಕಟಣ್ಣನನ್ನು ಮುಂದೊಡ್ಡುತ್ತಾರೆ. ಹೇಗೆ ಮುಂದೊಡ್ಡುತ್ತಾರೆಂದರೆ ಎಷ್ಟೋ ಕಾಲದ ನಂತರ ಸಿಕ್ಕ ನಿರೂಪಕನಿಂದ ಅವನು ನಿರೀಕ್ಷಿಸುವ ಮಾನವೀಯ ನೆಲೆಗಳನ್ನು ಕಾಣಿಸುವುದರ ಮೂಲಕ, ಶರಾವತಿಯ ಕುರಿತ ತೀರ ಅಸ್ಪಷ್ಟವಾದ ಅವನ ಆತಂಕಗಳನ್ನು ಕಾಣಿಸುವುದರ ಮೂಲಕ ಮತ್ತು ಬೆಂಗಳೂರು ನಗರದ ಹಾದಿಬೀದಿಯ ಭೇಟಿಯೊಂದರಲ್ಲೇ ಊರುಮನೆಯ ಸೆಳೆತಗಳನ್ನು ಜೀವಂತಗೊಳಿಸುವುದರ ಮೂಲಕ.

"ವೆಂಕಟಣ್ಣ, ಇವತ್ತಾದರೂ ನಮ್ಮ ಮನೆಗೆ ಹೋಗುವಾ. ಅಮ್ಮ ಕರೆದುಕೊಂಡು ಬರಲು ಹೇಳಿದ್ದಾಳೆ" ಅಂದೆ.

"ಇವತ್ತು ನಾನು ಶರಾವತಿಯ ಸುದ್ದಿ ತೆಗೆಯದಿದ್ದುದು, ನಿನ್ನೆ ಎಲ್ಲಿಗೆ ಹೋಗಿದ್ದೆ ಎಂದು ಕೇಳದಿದ್ದುದು ಅವನಿಗೆ ನಿರಾಳವೆನಿಸಿತ್ತು. ಅದು ಅವನ ಮುಖದಲ್ಲಿತ್ತು.

"ನಾನು ಹೇಳಿದ್ದಕ್ಕೆ ಅವನೇನೂ ಮಾತನಾಡಲಿಲ್ಲ. ತನ್ನ ಭೂದಾಖಲೆಯ ಕಾಗದವನ್ನು ಹೆಗಲಿಗೆ ತೂಗುತ್ತಿದ್ದ ಕೆಂಪು ಖಾದಿ ಚೀಲದಲ್ಲಿ ಮಡಚಿಟ್ಟು ನನ್ನ ಕೈ ಹಿಡಿದು "ತಮ್ಮಾ ನಿನ್ನೆಯಿಂದ ನೋಡುತ್ತಿದ್ದೇನೆ. ನೀನು ವೆಂಕಟಣ್ಣ, ವೆಂಕಟಣ್ಣ ಎಂದೇ ನನ್ನನ್ನು ಕರೆಯುತ್ತಿದ್ದೆ. ನೀನು ಸಣ್ಣವನಿರುವಾಗ ಹೇಳುವಂತೆ ಮಾವಾ ಎಂದೇ ಕರಿ. ಈ ಮಾವನಿಗೆ ಖುಶಿಯಾಗುತ್ತದೆ" ಎಂದ ಅವನ ಕೈ ಸೂಕ್ಷ್ಮವಾಗಿ ನಡುಗುತ್ತಿತ್ತು. ನಾನು ಮತ್ತೊಂದು ಕೈಯಿಂದ ಅವನ ಕೈಯನ್ನು ಗಟ್ಟಿಯಾಗಿ ಹಿಡಿದೆ."

ಕತೆ ಒಂದು ಘನತೆಯನ್ನು ಮೈವೆತ್ತಿಕೊಂಡು ಬೆಳೆಯುವುದು ಬರೇ ಇಂಥ ಚಿತ್ರಗಳಿಂದ, ಮಾತುಗಳಿಂದ, ಘಟನೆಗಳಿಂದ ಅಲ್ಲ. ಅಷ್ಟೇ ಆಗಿದ್ದರೆ ಅಂಥ ಅಂಶಗಳೆಲ್ಲ ಇದ್ದೂ ಯಾವುದೋ ಖ್ಯಾತ ಕತೆಗಾರರ ಪೂರ್ ಕಾಪಿಗಳಾದ ಅನೇಕ ಲೇಖಕರ ಸಾಲಿಗೇ ಸಂದೀಪರೂ ಸೇರುತ್ತಿದ್ದರು. ಈ ಚಿತ್ರಗಳು, ಮಾತುಗಳು, ಸನ್ನಿವೇಶಗಳು ಸಂದೀಪರ ಕತೆಗೆ ತೊಡಿಸಿದ ಅಲಂಕಾರಗಳಂತಿಲ್ಲ. ಅವುಗಳಿಗೆ ಒಂದು ಸುಂದರ ಕತೆಯಾಗುವ ಘನಂದಾರಿ ಉದ್ದೇಶವೇ ಇಲ್ಲ. ಪ್ರಾಮಾಣಿಕವಾದ ಸಂವೇದನೆಯಿಂದ ಒಬ್ಬ ಕತೆಗಾರ ಬರೆದಾಗ ಮಾತ್ರ ಅದು ಪ್ರಾಮಾಣಿಕವಾಗಿಯೇ ನಮ್ಮನ್ನು ತಟ್ಟುವುದು ಸಾಧ್ಯವಾಗುತ್ತದೆ. ಇದು, ಈ ಛಂದಸ್ಸು ನನ್ನ ಬದುಕಿನ ಆದ್ಯತೆಯೂ ಆಗಿದ್ದರೆ ಮಾತ್ರಾ ನಾನೂ ಅದನ್ನು ಸೃಜಿಸಬಲ್ಲೆ. ಇಲ್ಲವಾದಲ್ಲಿ ನಾನಿದನ್ನೂ ಡಯಲಾಗುಗಳ, ಸನ್ನಿವೇಶಗಳ ಮತ್ತು ಚಿತ್ರಕ ನಿರೂಪಣೆಗಳ ಪ್ರಾಡಕ್ಟ್ ಎಂದಷ್ಟೇ ಗ್ರಹಿಸುವುದು ಸಾಧ್ಯವಾಗುತ್ತದೆ. ಕನಿಷ್ಟ ಕತೆಯನ್ನು ಗ್ರಹಿಸುವುದು, ಕತೆಯ ತಾಂತ್ರಿಕ ಸಾಮಾಜಿಕ ಸಾಧ್ಯತೆಯನ್ನು ಪ್ರಶ್ನಿಸದೆ ಒಪ್ಪಿಕೊಳ್ಳುವುದು ಕೂಡ ಕಷ್ಟವಾಗುತ್ತದೆ.

ವೆಂಕಟಣ್ಣ ನನ್ನನ್ನು ಮಾವಾ ಎಂದೇ ಕರೀ ತಮ್ಮಾ ಎನ್ನುವಲ್ಲಿ ಬರೇ ಒಂದು ಹಳೆಯ ಸಂಬಂಧದ ಮರುಸ್ಥಾಪನೆಯಿಲ್ಲ. ನಿರೂಪಕ ತಾನು ವೆಂಕಟಣ್ಣನನ್ನು ಏನೆಂದು ಕರೆಯುತ್ತಿದ್ದೆನೆಂಬುದನ್ನೇ ಮರೆತ ವ್ಯಂಗ್ಯವಿಲ್ಲ. ಅಲ್ಲಿ ಅವನು ಭವಿಷ್ಯತ್ಕಾಲಕ್ಕೇ, ಬದುಕಿಗೇ ಬೇಡುವ ಭರವಸೆಯ ಬೇಡಿಕೆಯಿದೆ. ಶರಾವತಿಯ ಅನಿಶ್ಚಿತ ಬದುಕು ಅವನನ್ನು ಛಿದ್ರಗೊಳಿಸುತ್ತಿರುವ ಸಂದರ್ಭದಲ್ಲಿ ಅವನು ತುಂಬಿಕೊಳ್ಳ ಬಯಸುವ ಆತ್ಮವಿಶ್ವಾಸದ ಬೇಡಿಕೆಯಿದೆ. ಹಾಗೆಯೇ ಮತ್ತೆ ಈ ನಗರದ ನೆಲದಲ್ಲಿ "ಇವತ್ತಾದರೂ ಮನೆಗೆ ಬಾ, ಅಮ್ಮ ಕರೆತರಲು ಹೇಳಿದ್ದಾಳೆ" ಎನ್ನಬಲ್ಲ ಮನಸ್ಸುಳ್ಳ ಹುಡುಗನ ನಿರ್ಮಲ ಪ್ರೀತಿಯಲ್ಲೇ ಅವನ ಬಾಲ್ಯದ ನೆನಪುಗಳ ಹಳ್ಳಿಯ ಒಂದು ಸಮೃದ್ಧ-ಸಂತೃಪ್ತ ಕನಸಿನಂಥ ಬದುಕನ್ನು ಮತ್ತೆ ನಿಜವಾಗಿಸಲು ಬೇಕಾದ ಮನಸ್ಥಿತಿಯ ಹಂಬಲವಿದೆ. ಮತ್ತೊಮ್ಮೆ ಅದೇ ಧ್ವನಿಯಿಂದ ಮಾವಾ ಅನಿಸಿಕೊಳ್ಳುವ ಮುದುಕ ವೆಂಕಟಣ್ಣನ ಆಸೆ ಬರೇ ಒಂದು ಭಾವುಕ ಡಯಲಾಗ್ ಅಲ್ಲ.

ಇದು ಸಂದೀಪ್ ಬದುಕಿನಿಂದ ಸ್ವತಃ ಬಯಸುವ, ಬದುಕಿನಲ್ಲಿ ಆದ್ಯತೆ ನೀಡುವ, ಬದುಕನ್ನು ಸ್ವತಃ ಗ್ರಹಿಸುವ ರೀತಿ ಕೂಡ ಆಗಿರುವುದು ಅವರ ಕತೆಯ ಪ್ರಾಮಾಣಿಕತೆಗೆ, ಮಹತ್ತಿಕೆಗೆ ಕಾರಣ, ಬರೇ ಕತೆ ಹೇಳುವ craftsmenshipಗಾಗಿ ಅಲ್ಲ.

ಇಲ್ಲಿ ಬಂದೆವು ಸುಮ್ಮನೆ ಕೂಡ ಸಂದೀಪರ ಜೀವನಾಸಕ್ತಿ, ಚೈತನ್ಯದ ಮೂಲ ಸೆಲೆಗಳತ್ತ ಅವರ ಸೂಕ್ಷ್ಮಗ್ರಹಿಕೆ ಮತ್ತು ಬದುಕಿನ ವೈಚಿತ್ರ್ಯಗಳತ್ತ ನಿರಂತರ ಕುತೂಹಲಗಳನ್ನು ನಮಗೆ ಕಾಣಿಸುವ ಕತೆ. ಹಾಗೆ ನೋಡಿದರೆ ಇಲ್ಲಿ ಅಂಥ ಕಥಾನಕವೇನಿಲ್ಲ. ಸಂದೀಪರ ಬಹುತೇಕ ಎಲ್ಲಾ ಕತೆಗಳಲ್ಲೂ ಶಿಷ್ಟ ಮಾದರಿಯ ಒಂದು ಕಥಾನಕದ ಪಾರಂಪರಿಕ ನಡೆ ನಮಗೆ ಕಾಣಸಿಗುವುದಿಲ್ಲ. ಸಂದೀಪರ ಕತೆಗಳು ಒಂದು ಸ್ಥಿತಿಯನ್ನು ಕುರಿತು ಇರುವುದೇ ಹೆಚ್ಚು. ಅಲ್ಲಿಂದ ಅದು ಭೂತಕಾಲಕ್ಕೂ, ಭವಿಷ್ಯತ್ಕಾಲಕ್ಕೂ ಚಾಚಿಕೊಳ್ಳುತ್ತ ಸಂಪನ್ನಗೊಳ್ಳುತ್ತದೆ. ಹಾಗಾಗಿ ಸಂದೀಪರ ಕತೆಗಳ Climax ನ ಪರಿಕಲ್ಪನೆಯೇ ಬೇರೆ ತರದ್ದು. ಅದು ಬದುಕಿನ ಸೂಕ್ಷ್ಮಗಳತ್ತ ಸ್ಪಂದಿಸಬಲ್ಲ ಒಂದು ಮನಸ್ಥಿತಿಯನ್ನು ಉಂಟುಮಾಡುವುದರತ್ತವೇ ಕೇಂದ್ರಿತವಾದದ್ದು ಅನಿಸುತ್ತದೆ.

"ಬೇರೆಯವರ ಮನೆಗೆ ರಾತ್ರಿಹೊತ್ತು ಮಲಗಲು ಹೋಗುವುದು ಮೋಹನನಿಗೆ ಹೊಸದೇನೂ ಆಗಿರಲಿಲ್ಲ. ಎಷ್ಟೋ ಸಲ ಸೆಕೆಗೆ ಚಲೋ ಗಾಳಿ ಬೀಸುತ್ತದೆಂದು ಬೇಸಿಗೆಯಲ್ಲಿ ಗೌರಕ್ಕನ ಮನೆ ಗಾಳಿಚಿಟ್ಟೆಯ ಮೇಲೆ ಮಲಗಲು ಹೋಗುತ್ತಿದ್ದುದೂ ಉಂಟು. ಹಾಗೆ ನೋಡಿದರೆ ಮೋಹನ ಊರಿನ ಮನೆಗಳಲ್ಲಿ ಉಂದು-ಮಲಗಿ ಊರಿನವರು ಹೇಳಿದ ಕೆಲಸ ಮಾಡಿಕೊಟ್ಟು ದೊಡ್ಡವನಾದವನು."

ಈ ಮೋಹನನ ಅವ್ವಿ, ಆಚೆ ಕೇರಿಯ ಜಾಯಕ್ಕ, ಕುರುಡಿ ಸಣ್ಣಜ್ಜಿ, ಊರಿನ ಖಾಯಂ ಕಳ್ಳ ಎಂಕಣ್ಣ, ಒಂದು ರಾತ್ರಿ ಒಟ್ಟಿಗೆ ಮಲಗಲು ಯಾರನ್ನೋ ಕರೆದುಕೊಂಡು ಬರುತ್ತೇನೆ, ನೀನು ಹೊರಗೆ ಮಲಗು ಎಂದ ಪ್ರಭಾಕರ, ಮಾಣಕ್ಕ, ಜಾಯಕ್ಕನ ಅಳಿಯ ಎಲ್ಲರ ಮೂಲಕ ಚೈತನ್ಯ ಪಡೆಯುತ್ತ ಹೋಗುವ ಮೋಹನನ ವ್ಯಕ್ತಿತ್ವ ಮತ್ತು ಊರು ಈ ಕಥಾನಕದ ವಸ್ತು. ಕೊನೆಗೂ ಇದೇನು ಆಟ ಎಂಬ ಮೋಹನನ ಬೆರಗಿನಲ್ಲಿ ಮುಗಿಯುವ ಕತೆ ಓದುಗನನ್ನು ಬಿಡುವುದು ಕೂಡ ಬೆರಗಿನಲ್ಲೇ. ಇಂತಹುದೇ ಬೆರಗಿನಲ್ಲಿ ಅದ್ದಿತೆಗೆದಂತಿರುವ ಇನ್ನೆರಡು ಕತೆಗಳು ಕೂಡ ಈ ಸಂಕಲನದಲ್ಲಿವೆ. ಒಂದು, ನಿನ್ನಲ್ಲೇ ಇರಲಿ ಎನ್ನುವ ಮುಕುಂದನ ಕತೆಯಾದರೆ ಇನ್ನೊಂದು ಇಡೀ ರಾತ್ರಿ ಬೀಗ ಜಡಿದ ಮನೆ ಬಾಗಿಲ ಮುಂದೆ ಕಾಯುತ್ತ ಕಳೆದ ಜಿ.ಕೆಯ ಕತೆ. ಕಂಡಷ್ಟೆ ಆಕಾಶ ಕೂಡ `ಕಾಯುವಿಕೆ'ಯ ಸ್ಥಾಯೀಭಾವದ ಮಟ್ಟಿಗೆ ಬಾಗಿಲ ಮುಂದೆ ಕತೆಯೊಂದಿಗೇ ನಿಲ್ಲುವ ಕತೆಯಾದರೂ ಮೋಹನ ಮತ್ತು ಮುಕುಂದನ ಪಾತ್ರಗಳಿಗಿರುವ ಒಂದು ಸಾಮಾನ್ಯ ಅಂಶ ಸುಬ್ರಾಯನಲ್ಲಿರುವುದು ನಮಗೆ ಕಾಣಿಸುವುದಿಲ್ಲ.

ಉರುಳಿತೊಂದು ಮರ ಕತೆಯ ವಿವರಗಳು,ಕಥಾನಕದ ನಡೆ ಎಲ್ಲವೂ ತೀರ ನಿರೀಕ್ಷಿತ ಮಾದರಿಯಲ್ಲೇ ಸಾಗುತ್ತದೆ ಮಾತ್ರವಲ್ಲ ಸಂದೀಪರ ಕತೆಗಳಲ್ಲೇ ಇದು ಹೆಚ್ಚು ವಾಚ್ಯವೂ `ಪ್ರಕರಣ'ಕೇಂದ್ರಿತವೂ ಆದ ಕತೆ. ಅಷ್ಟಾಗಿ ವಿಶೇಷವೆನಿಸುವುದಿಲ್ಲ.

ಒಂಭತ್ತು, ಎಂಟು, ಎಂಟು... ಕತೆಯೊಂದಿಗೆ ಕನ್ನಡದ ಇನ್ನೂ ಅನೇಕ ಕತೆಗಳನ್ನು ನೆನಪಿಸಿಕೊಳ್ಳುವುದು ಸಾಧ್ಯವಿದೆ.

ಈ ಕತೆಯ ದೇವಿಯ ಅಕ್ಕ ತಾನು ಪ್ರೀತಿಸಿದವನೊಂದಿಗೆ ಯಾರಿಗೂ ತಿಳಿಸದೆ ಓಡಿಹೋಗಿದ್ದಾಳೆ. ಈ ಹಿನ್ನೆಲೆ, ಅವಳನ್ನೊಮ್ಮೆ ಕಾಣಬೇಕು-ಅವಳ ಬಗ್ಗೆ ತಿಳಿಯಬೇಕು ಎಂಬ ಸುಪ್ತ ಹಂಬಲದೊಂದಿಗೇ ಬೆಳೆದವಳು ದೇವಿ. ಈ ನಿಟ್ಟಿನಲ್ಲಿ ದೇವಿ ತೀರ ನತದೃಷ್ಟೆಯೇನಲ್ಲ. ತನ್ನ ಅಕ್ಕ ಇರುವ ಬಗ್ಗೆ, ಚೆನ್ನಾಗಿಯೇ ಇರಬಹುದೆಂಬ ಬಗ್ಗೆ ಕೆಲವಾದರೂ ಹೊಳಹುಗಳು ಅವಳಿಗೆ ಸಿಕ್ಕಿವೆ. ಅಕ್ಕ ಕೊನೆಗೂ ಸಿಗುತ್ತಾಳೋ ಇಲ್ಲವೋ ಎನ್ನುವುದನ್ನು ಕತೆಯ ಓದಿಗೇ ಬಿಟ್ಟುಕೊಟ್ಟು ಬೇರೆ ಕೆಲವು ವಿಚಾರಗಳನ್ನು ಗಮನಿಸುವ.

ಜಯಂತರ ಒಂದು ಕತೆ, ಕಣ್ಮರೆಯ ಕಾಡು, ಕೂಡ ಕಳೆದುಹೋದ (ಮನೆಬಿಟ್ಟು ಹೋದ) ತಮ್ಮ ಛೋಟೋನ ಹುಡುಕಾಟದಲ್ಲಿದೆ. ಈ ತಮ್ಮ ತನ್ನ ಉಪದ್ವಾಪಿತನದಿಂದ ಅಕ್ಕಂದಿರ ಮದುವೆ ಇತ್ಯಾದಿಗಳಿಗೆಲ್ಲ ತೊಂದರೆಯಾಗುತ್ತದೆಂಬ ತಂದೆಯ ಪಿರಿಪಿರಿ ಸಹಿಸಲಾರದೆ ಮನೆಬಿಟ್ಟವನೆಂದು ನೆನಪು. ಮುಂದೆ ಯಾವತ್ತೋ ಒಬ್ಬ ಅಕ್ಕನಿಗೆ ಅವನು ಎಲ್ಲೋ ಪಾನ್‌ಶಾಪ್ ಇಟ್ಟುಕೊಂಡು ಕೂತಿದ್ದಾನೆಂಬ ಗುಮಾನಿಯಾಗಿ ತನ್ನ ತಂಗಿಯೊಡನೆ ಆ ಜಾಗಕ್ಕೆ ಹೊರಡುತ್ತಾಳೆ. ಕತೆ ಸುರುವಾಗುವುದೇ ಈ ನಡಿಗೆಯೊಂದಿಗೆ, ನಡಿಗೆಯೊಂದಿಗೆ ಬೆರೆತ ಸೂಕ್ಷ್ಮ ಗೊಂದಲ, ಅನುಮಾನ, ತೊಡಕುಗಳ ಹಾದಿಯಲ್ಲಿ. ಅಲ್ಲಿಯೂ ತಮ್ಮ ಕೊನೆಗೂ ಸಿಕ್ಕಿದನೆ ಇಲ್ಲವೆ ಎಂಬುದು ಗೌಣ.

ಜಯಂತರ ಈಗಾಗಲೇ ಬಹುಚರ್ಚಿತ ಎನ್ನಬಹುದಾದ ನೀಳ್ಗತೆ ಚಾರ್‌ಮಿನಾರಂತೂ ಕಳೆದುಹೋದ ಪುಟ್ಟ ಪುಟ್ಟ ಪೋರರ ಭವಿಷ್ಯ ಬದುಕುಗಳನ್ನು ಕಟ್ಟಿಕೊಡುವುದಕ್ಕೇ ಪಣತೊಟ್ಟ ಕತೆ.

ಜಯಂತರ ಇನ್ನೊಂದು ಕತೆ, ಮಧುಬಾಲಾ, 2006ರ ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿದೆ, ಅಲ್ಲಿಯೂ ಒಂದು ಹುಡುಕಾಟವಿದೆ,ಹೃದಯವಿದ್ರಾವಕ ಘಟನೆಯಿದೆ. ಡ್ಯಾನ್ಸ್‌ಬಾರ್‌ನಲ್ಲಿ ಡ್ಯಾನ್ಸ್ ಮಾಡುವ ಮಧೂಗೆ ತಾನು ಅನಾಥ ಶಿಶುವಾಗಿದ್ದೆ ಎಂಬ ನೆನಪು. ಮುಂಬಾದೇವಿ ಜಾತ್ರೆಯಲ್ಲಿ ಯಾರದೋ ತಾಯಿಯನ್ನು ಹುಡುಕುತ್ತ ತನ್ನದೇ ತಾಯಿಯನ್ನು, ತನ್ನ ಹಿಂದೆ ಹಿಂದೇ ಬರುವ ಭಿಕ್ಷುಕಿಯಲ್ಲಿ ತನ್ನದೇ ತಾಯನ್ನು ಕಂಡಂತಾಗುವ ಒಂದು ಆಘಾತವದು.

"`ಕ್ಯೂಂ ಬೇಟಾ....ನಿನ್ನ ತಾಯಿ ಸಿಗಲಿಲ್ಲವೆ?' ಎಂದವಳೇ ನನ್ನ ಕೈಹಿಡಿದು `ಹಾಗಾದರೆ ನನ್ನನ್ನು ಕರಕೊಂಡು ಹೋಗ್ತೀಯಾ ನಿನ್ನ ಮನೆಗೆ?' - ಎಂದು ವಿಷಣ್ಣವಾದ ನಗೆಯಲ್ಲಿ ಯಾಚಿಸಿದಳು....."

ಮಧೂ ಇದ್ದಕ್ಕಿದ್ದಂತೆ ತನ್ನ ಠರಾವಿಕ್ ಜಾಗದಿಂದ ಕಣ್ಮರೆಯಾದಾಗ ಅವಳ ಗೆಳೆಯ, ಏಕಾಂತ ಅವಳನ್ನು ಹುಡುಕಿಕೊಂಡು ಹೊರಡುತ್ತಾನೆ. ಕ್ಯಾಸಲ್‌ರಾಕಿನಲ್ಲಿ ಟೆಡ್ದಿಬೇರ್‌ಗಳನ್ನು ಮಾರುತ್ತಿದ್ದ ಸಪೂರ ತಾಯೊಬ್ಬಳ ಬಳಿ ಅವಳ ಕಂಕುಳ ಕೂಸಿನ ಕೆನ್ನೆಯನ್ನು ತಟ್ಟಿ `ಈ ಗೊಂಬೆ ಕೊಡ್ತೀಯಾ?' ಎಂದು ಕೇಳಿ ನಗುತ್ತಾನೆ.

ಮಧುಬಾಲೆಯ ಮನಸೊಳಗಿನ ನಿಗೂಢ ನಿಲ್ದಾಣ ಕ್ಯಾಸಲ್‌ರಾಕ್‌ನಲ್ಲಿ ಮಧುವನ್ನು ಅರಸುತ್ತ ಏಕಾಂತ ಸುತ್ತುತ್ತಿರುವಂತೆ ಅಲ್ಲಿ ಅವಳು ಸಿಗದಿರಲಿ ಎಂದು, ಅಲ್ಲಿ, ಆ ಕೊನೆಯ ಬೆಂಚಿನಲ್ಲಿ ಕುಳಿತವಳು ಮಧುವಾಗದಿರಲಿ ಎಂದು ಪ್ರಾರ್ಥಿಸತೊಡಗುತ್ತಾನೆ.

"ಈ ತನಕ ಅನುಭವಿಸದೇ ಇದ್ದ ಅದ್ಭುತ ಅಲೌಕಿಕ ಪರಿಮಳವೊಂದು ಸೂಕ್ಷ್ಮವಾಗಿ ಅವನನ್ನು ಆವರಿಸಿಕೊಳ್ಳತೊಡಗಿತು. ತಡೆಯಲಾಗದೆ, ತನ್ನಷ್ಟಕ್ಕೆ, ಹೊರಡದ ದನಿಯಲ್ಲಿ.....ಮಧೂ....ಅಂದ.

ಯಾರೋ ಹಿಂದೆ ನಿಂತಿರುವಂತೆ ಸರಭರದ ಭಾಸವಾಯಿತು. ಬೆಚ್ಚಿ ಹೊರಳಿದರೆ ಗೊಂಬೆ ಮಾರುವ ಸಪೂರ ಹೆಂಗಸು ನಿಂತಿದ್ದಳು. ಕಂಕುಳಲ್ಲಿ ಕೂಸು. ಖಾಲಿಖಾಲಿ ನಿಲ್ದಾಣ. `ನಿಮಗೆ ನಿಜಕ್ಕೂ ಈ ಮಗು ಬೇಕಾ ಸಾರ್?' ಎಂದು ದಾರುಣವಾದ ಕಣ್ಣುಗಳಲ್ಲಿ, ಮಗುವನ್ನು ತುಸು ಮುಂದೆ ಮಾಡಿ ಕೇಳಿದಳು."

ಚಿತ್ತಾಲರ ಕತೆ ಕಾದಂಬರಿಗಳಲ್ಲಂತೂ ಹೀಗೆ ಕಳೆದು ಹೋದ ಮಕ್ಕಳ-ಒಡಹುಟ್ಟುಗಳ ಸಾಲು ಸಾಲು ತಲ್ಲಣಗಳು ಮಡುಗಟ್ಟಿರುತ್ತವೆ ಎಂಬುದನ್ನು ಎಲ್ಲರೂ ಬಲ್ಲರು. ಶಿಕಾರಿಯ ನಾಗಪ್ಪನಿಂದ ಹಿಡಿದು ಛೇದದ ಕರುಣಾಕರನನ್ನೂ ಸೇರಿದಂತೆ ಪುರುಷೋತ್ತಮನ ಹುಟ್ಟಿನ ಹಿನ್ನೆಲೆಯ ವರೆಗೆ ಈ ಕಳೆದುಕೊಳ್ಳುವ-ಹುಡುಕುವ ಕ್ರಿಯೆ ನಡೆದೇ ಇದೆ. ಚಿತ್ತಾಲರಲ್ಲಿ ಇದು ಒಂದು ಭೌತಿಕ ಸಂಗತಿಯಷ್ಟೇ ಆಗಿ ಉಳಿಯುವುದಿಲ್ಲ. ಮತ್ತೆ ತಾನು ಕಳೆದುಕೊಂಡ ತಮ್ಮನನ್ನೂ, ತಂಗಿಯನ್ನೂ ಹುಡುಕುವ ನಾಗಪ್ಪನ ನಿರ್ಧಾರ ಗಟ್ಟಿಗೊಳ್ಳುವ ಬದುಕಿನ ಹಂತವನ್ನು ಗಮನಿಸಿ. ಆಗ ಅವನಿಗೆ ಅವನ ಬದುಕನ್ನು ಅರ್ಥಪೂರ್ಣಗೊಳಿಸಬಲ್ಲ ಒಂದೇ ಒಂದು ಕ್ರಿಯೆ ಅದು. ಕಳೆದುಕೊಂಡಿದ್ದು ಬಾಲ್ಯದಲ್ಲಿ. ಈಗ ಅವರೇ ಎದುರಾದರೆ ನಾಗಪ್ಪನಾದರೂ ಅವರನ್ನು ಗುರುತಿಸಬಲ್ಲನೆ, ಗೊತ್ತಿಲ್ಲ ಅವನಿಗೇ! ದೊಡ್ಡ ಕಂಪೆನಿಯ ಎಕ್ಸಿಕ್ಯೂಟಿವ್ ಆಗಿದ್ದೂ ತನ್ನನ್ನು ತಾನು ರಸ್ತೆಬದಿಯ ಪೇಪರ್ ಮಾರುವ ಹುಡುಗನನ್ನಾಗಿಯೋ ರದ್ದಿಯಂಗಡಿಯವನನ್ನಾಗಿಯೋ ಕಲ್ಪಿಸಿಕೊಳ್ಳಬಲ್ಲ ನಾಗಪ್ಪ ತನ್ನ ಕಳೆದು ಹೋದ ತಂಗಿ-ತಮ್ಮ ಏನೇನೆಲ್ಲ ಆಗಿರಬಹುದು ಎಂದು ಕಲ್ಪಿಸಬಲ್ಲವನೇ, ವಾಸ್ತವವಾದಿ. ಆದರೂ ಹುಡುಕುವ ನಿರ್ಧಾರವೇ ಇಲ್ಲಿ ಮುಖ್ಯ, ಹುಡುಕಿ ತೆಗೆದನೇ ಎಂಬುದಲ್ಲ. ಹಾಗೆಯೇ ಕಳೆದುಕೊಂಡ ಭಾವ ತೀವ್ರವಾಗಿ ಕಾಡುವ ಕ್ಷಣ ಮರಳಿ ಬಂದಿದ್ದು ಮುಖ್ಯ, ಎಷ್ಟು ವರ್ಷಗಳ ಹಿಂದೆ ಕಳೆದುಕೊಂಡ ಎಂಬುದಲ್ಲ. ಅಥವಾ ಎಷ್ಟೋ ವರ್ಷಗಳ ಹಿಂದೆ ಎಂಬುದರಲ್ಲೇ ಅದರ ಮಹತ್ವ ಹೆಚ್ಚಿರುವುದು. ಚಿತ್ತಾಲರ ಇನ್ನೂ ಎಷ್ಟೋ ಪಾತ್ರಗಳು ಹಾಗೆ ಕಳೆದೇ ಹೋದವರನ್ನು ಇನ್ನೂ ಅರಸುತ್ತ ಅಲೆಯುತ್ತಿವೆಯೋ ಎಂಬಂತಿದೆ, ಅವರ ಕಥಾಪ್ರಪಂಚ.

ಸಂದೀಪರ ಕತೆಯಲ್ಲಿ ದೇವಿ ನಡೆಸುವ ಅಥವಾ ನಡೆಸಬಯಸುವ ಹುಡುಕಾಟಕ್ಕೆ ಈ ಯಾವ ತೀವ್ರತೆಯಿಲ್ಲ. ಹಾಗೆ ನೋಡಿದರೆ, ಈ ಕತೆಯಿರುವುದು ಓಡಿಹೋದ ಅಕ್ಕನ ಹುಡುಕಾಟದ ವಿದ್ಯಮಾನದಲ್ಲಿ ಅಲ್ಲ. ದೇವಿ ಸ್ವತಃ ಈ ನಗರ ಜೀವನದ ತವಕ-ತಲ್ಲಣಗಳಲ್ಲಿ ಕ್ರಮೇಣ ಕಳೆದು ಹೋಗುತ್ತಿರುವುದನ್ನು, ಅವಳಂತೆಯೇ ಇನ್ನೆಷ್ಟೋ ಪೋರಿಯರು ಹೀಗೆ `ನಗರ ಸಂಭ್ರಮದಲ್ಲಿ'ಕಳೆದು ಹೋಗುತ್ತಿರುವುದನ್ನು ಕತೆ ಗಮನಿಸುತ್ತ, ದೇವಿಯ ದೈನಂದಿನ, ಸಣ್ಣ ಪುಟ್ಟ ಮನರಂಜನೆ, ಕೀಟಲೆಯ ಮಜಾಗಳಲ್ಲೇ ಚಿತ್ರಿಸುತ್ತ ಹೋಗುವ ಅನನ್ಯ ರೀತಿಗಾಗಿಯೇ ಈ ಕತೆ ಮುಖ್ಯವಾಗುವುದು.

ಬೊಂಬೆಗೊಂದು ಸೀರೆ ಕತೆಯನ್ನು ನಮ್ಮ ಮತ್ತೋರ್ವ ಪ್ರಮುಖ ಕತೆಗಾರ ರಘುನಾಥ ಚ.ಹ.ರ ಕೆಂಡಸಂಪಿಗೆ ಕತೆಯೊಂದಿಗೆ ಗಮನಿಸಬಹುದಾಗಿದೆ. ಒಂದು ನವಿರಾದ ಪ್ರೇಮ ಯಾವತ್ತೂ ಇರಬಹುದೆ ಇರಬಹುದೆ ಎಂಬ ಅನುಮಾನಗಳಲ್ಲೆ ಹುಟ್ಟುತ್ತದೆ ಮತ್ತು ಅವನು/ಅವಳು ಮಾಡಿದ/ಮಾಡದ ಸಣ್ಣ ಪುಟ್ಟ ಕ್ರಿಯೆಗಳಲ್ಲೆಲ್ಲ ಅರ್ಥ/ಸಂದೇಶಗಳನ್ನು ಹುಡುಕಿಕೊಳ್ಳುತ್ತ ನೊಂದು-ಬೆಂದು ಸಂಪನ್ನವಾಗುತ್ತದೆ. ರಘುನಾಥರ ಕತೆಯಲ್ಲೂ ಇದು ಇಷ್ಟೇ ನವಿರಾಗಿ, ಸಂವೇದನಾಪೂರ್ಣವಾಗಿ ಘಟಿಸುತ್ತದೆ ಮತ್ತು ಸಂದೀಪರ ಕತೆಯಲ್ಲಿಯೂ ಹಾಗೆಯೇ ಆಗುತ್ತಿದೆ. ಬಹುಷಃ ನವಿರಾದ ಒಂದು ಭಗ್ನ ಪ್ರೇಮದ ಕತೆಯನ್ನು ಬರೆಯದ ಕತೆಗಾರನೇ ಇಲ್ಲವೇನೋ!

ಸಹಿ ಕತೆಯನ್ನು ಕೊಂಚ ವಿವರವಾಗಿ ಗಮನಿಸಬಹುದು. ನಾಗವೇಣಿಯಂಥದ್ದೇ ಇನ್ನೊಂದು ಪಾತ್ರ ಈ ಕತೆಯ ಭಾಗೀರಥಿ. ಮನೆ-ತೋಟ-ಆಸ್ತಿ ಎಲ್ಲವನ್ನೂ ಒಬ್ಬಳೇ ನೋಡಿಕೊಂಡು ಹೋಗುತ್ತಿರುವ ಈ ದಿಟ್ಟ ಹೆಣ್ಣುಮಗಳು ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯ ಪಾರೋತಿ-ಸರಸೋತಿಯಂಥವಳು. ಲಂಕೇಶರ ದೇವೀರಿಯಂಥವಳು. (ಅಕ್ಕ ಕಾದಂಬರಿಯ ದೇವೀರಿ ಅಲ್ಲ, ದೇವಿ ಕತೆಯ ದೇವೀರಿ.) ಈ ಭಾಗೀರಥಿಯ ಗಂಡನಿಗೆ ಇನ್ನೊಂದು ಸಂಸಾರವಿದೆ, ಮಕ್ಕಳಿವೆ. ಭಾಗೀರಥಿ ಮಾತ್ರ ಎಲ್ಲ ವಿಧದಲ್ಲೂ ಒಂಟಿ. ಗಂಡನ ಒಲವಾಗಲಿ ಬಲವಾಗಲಿ ಇಲ್ಲ. ಮಕ್ಕಳೂ ಇಲ್ಲ. ಕತೆ ತೊಡಗುವ ಹೊತ್ತಿಗೆ ಈ ಗಂಡ ತೀರಿಕೊಂಡು ಕೆಲವು ದಿನ-ತಿಂಗಳಾಗಿದೆ. ಅವನ ಮಗನೊಬ್ಬ ಈ ಭಾಗೀರಥಿಯ ಮನೆಗೆ ಬರಲಿದ್ದಾನೆ ಎನ್ನುವ ಸುದ್ದಿ ಅವಳಿಗೆ ಸಿಕ್ಕಿದೆ. ಈ ವಿಲಕ್ಷಣ ಮತ್ತು ಅಪೂರ್ವ ಭೇಟಿಯ ನಿರೀಕ್ಷೆ ಅವಳಲ್ಲಿ ಆತಂಕ, ದುಗುಡ,ಆಸೆ,ತಲ್ಲಣ ಎಲ್ಲವನ್ನೂ ಹುಟ್ಟಿಸಿದ ಒಂದು `ಕಾಯುವಿಕೆ'ಯಲ್ಲಿ ಮುಳುಗಿಸಿದೆ.

ಸಂದೀಪರ ಹೆಚ್ಚಿನ ಕತೆಗಳಲ್ಲಿ ಕಂಡು ಬರುವ `ಕಾಯುವಿಕೆ' ಇಲ್ಲಿಯೂ ಇದೆ. ಕತೆ ವರ್ತಮಾನದಲ್ಲಿ ಸಾಗುತ್ತಿರುವ `ಕಾಯುವಿಕೆ'ಯ ಹಿನ್ನೆಲೆಯನ್ನಾಗಿ ಭೂತಕಾಲಕ್ಕೆ ಚಲಿಸುತ್ತದೆ ಮತ್ತು ಪುನಃ ವರ್ತಮಾನಕ್ಕೆ ತಿರುಗಿ ಬಂದು ಮುಂದುವರಿಯುತ್ತದೆ, ಅಂದರೆ ಕೊನೆಯಾಗುತ್ತದೆ. ಕರೆ, ಆನೆ ಸಾಕಿದ ಮನೆಗೆ ಎರಡು ಹೂದಂಡೆ, ಒಂಭತ್ತು-ಎಂಟು-ಎಂಟು..., ಉರುಳಿತೊಂದು ಮರ, ಇನ್ನೊಂದೇ ಕತೆ - ಹೀಗೆ.

ಅದೇ ರೀತಿ, ಕರೆ ಕತೆಯ ಮೋನಪ್ಪನಂತೆ `ನಿನ್ನ ದುಡ್ಡು ಬೇಡ, ಅಣ್ಣನನ್ನು ಒಮ್ಮೆ ಬಂದು ಕಾಣಲು ಹೇಳು' ಎಂದಂತೆಯೇ ಇಲ್ಲಿ ಭಾಗೀರಥಿ `ನಿನ್ನ ದುಡ್ಡು ಬೇಡ, ನೀನಾದರೂ ಒಬ್ಬ ಆಗಾಗ ಇಲ್ಲಿಗೆ ಬಂದು ಹೋಗುತ್ತಿರು' ಎನ್ನುತ್ತಾಳೆ. ಎಂದ ಮೇಲೆ, `ನನ್ನ ಬಳಿ ಇರುವುದೇ ಇಷ್ಟು' ಎಂದು ಅಂಚು ಹರಿದ ಸೀರೆಯ ತುದಿಯ ಗಂಟಿನಿಂದ ಮಡಚಿದ ನೋಟುಗಳನ್ನು ಕೊಟ್ಟಿದ್ದೇ ಅಲ್ಲಿ ಕುಳಿತಿರಲಾರದೆ ಯಾರೋ ಕರೆದ ಧರ್ತಿನಲ್ಲಿ ಎದ್ದು ಹೋದಂತೆ - ಅದೇ ಶೈಲಿಯಲ್ಲಿ ಎದ್ದು ಹೋಗುತ್ತಾಳೆ.

ಇಲ್ಲಿನ ಸೂಕ್ಷ್ಮಗಳನ್ನು ಗಮನಿಸಿ. ಮೋನಪ್ಪನ ಮಾತಿನಲ್ಲಿ, ಆನೆ ಸಾಕಿದ ಮನೆಯ ಸಾಹುಕಾರ್ತಿಯ ನಡೆಯಲ್ಲಿ, ಕೈಹಿಡಿದು `ನನ್ನ ಮಾವಾ ಎಂದೇ ಕರಿ' ಎನ್ನುವ ವೆಂಕಟಣ್ಣನ ಮಾತಿನಲ್ಲಿ ಒಂದು ದೈನ್ಯವಿದೆ. ಮನುಷ್ಯನ ಸಹಜ ಅಹಂಮಿಕೆಗೆ ನಾಚಿಕೆ-ಸಂಕೋಚ ತರುವ ದೈನ್ಯವಿದು. ಪ್ರೀತಿ, ಮಾನವೀಯತೆ ಈಗೋವನ್ನು ಮೀರುವುದು, ನೀಗಿಕೊಳ್ಳುವುದು ಸಾಧ್ಯವಾದಾಗ ಮಾತ್ರ, ಮನುಷ್ಯ ನಿಜವಾಗಲೂ ಮನುಷ್ಯನಾಗುವುದು ಸಾಧ್ಯವಾದ ಘಳಿಗೆಗಳಲ್ಲಿ ಮಾತ್ರ ಈ ದೈವೀಕ ದೈನ್ಯ ಅವನಿಗೆ ಸಾಧ್ಯವಾಗುವುದೋ ಏನೊ! ಇವರಲ್ಲಿ, ಇವರ ಮಾತಿನಲ್ಲಿ ಅನುಕಂಪ ಹುಟ್ಟಿಸುವ, ಹೃದಯ ಕರಗಿಸುವ ಮಟ್ಟದ ಯಾಚನೆ ಇದೆ. ಆದರೆ ಈ ಯಾಚನೆ ಯಾತಕ್ಕಾಗಿ? `ಬಂದು ಅಣ್ಣನನ್ನ ನೋಡಲಿ', `ನೀನಾದರೂ ಆಗಾಗ ಬಂದು ಹೋಗ್ತಾ ಇರು', `ಮಾವಾ ಎಂದೇ ಕರಿ' `ಈಗ ನನ್ನಲ್ಲಿರುವುದೇ ಇಷ್ಟು' ಎಂಬ ಈ ಯಾಚನೆಗಳ ಹಿಂದಿನ ಸೂಕ್ಷ್ಮ ಯಾವುದು?

`ಮನಸ್ಸನ್ನು ಕರಗಿಸಿ ವಿಶಾಲಗೊಳಿಸುವ' `ನಮ್ಮ ಕಾಲದ (ಸಮಯದ) ಆರ್ತ ಪ್ರಾರ್ಥನೆಯಂತಿದೆ' - ಜಯಂತ ಕಾಯ್ಕಿಣಿಯವರ ಮಾತುಗಳು.

ಯಶವಂತ ಚಿತ್ತಾಲರ ಸಾಹಿತ್ಯ, ಸೃಜನಶೀಲತೆ ಮತ್ತು ನಾನು ಕೃತಿಯಲ್ಲಿ ಉಲ್ಲೇಖಿತವಾದ ಅವರದೇ
Poetic idiom, Sensibility etcಪ್ರಬಂಧದಿಂದ ಆಯ್ದ ಸಾಲುಗಳು:
"ಸಂವೇದನಾ ಶಕ್ತಿಯ ಪರಿಪಕ್ವತೆ ಸಾಹಿತ್ಯದ ಮಹತ್ವದ ಸಾಧನೆ ಎಂದು ನನ್ನ ತಿಳಿವಳಿಕೆ. ನಮ್ಮನ್ನು ನಮ್ಮ ಬೇರುಗಳವರೆಗೆ ಅಲ್ಲಾಡಿಸಿದ ಅನುಭವಗಳು ಸೃಷ್ಟ್ಯಾತ್ಮಕವಾದ ದಿವ್ಯಗಳಿಗೆಗಳಲ್ಲಿ ಮಾತಿನ ತೆಕ್ಕೆಗೆ ಒಳಪಟ್ಟು, ಅರಿವಿನ ಪಾತಳಿಯನ್ನು ಮುಟ್ಟುವಂತೆ ಮಾಡುವುದೇ ಸಾಹಿತ್ಯದ ಭಾಷೆಯ ಕಾರ್ಯ: ಈ ಮೊದಲೇ ಗೊತ್ತಿದ್ದದ್ದನ್ನು ತಿಳಿಸುವುದಲ್ಲ; ಭಾಷೆಯ ಮೂಲಕವೇ ಪ್ರಜ್ಞೆಯಾಗಿ ಮೂಡಿಸುವುದು, ನಿಜವಾಗಿಸುವುದು. ಅನುಭವದ ಜ್ಞಾತ-ಅಜ್ಞಾತ ಮಗ್ಗಲುಗಳನ್ನು, ಸುಪ್ತ - ಜಾಗೃತ ಸ್ತರಗಳನ್ನು ಜೊತೆಯಾಗಿಯೇ ಹಿಡಿಯುವಂತೆ ದುಡಿಯುವುದರಲ್ಲೇ ಸೃಷ್ಟಿಶೀಲ ಸಾಹಿತ್ಯದ ಭಾಷೆ ದಿನಬಳಕೆಯ ಭಾಷೆಯಿಂದ ಹೇಗೋ ಹಾಗೇ ಉಳಿದ ಕಲೆಗಳ ಸೃಷ್ಟಿ ಮಾಧ್ಯಮಗಳಾದ ಬಣ್ಣ, ಆಕಾರ, ನಾದ, ಹಾವ-ಭಾವ ಮೊದಲಾದವುಗಳಿಂದಲೂ ಭಿನ್ನವಾಗಿದೆ."

ಕಂಡಷ್ಟೆ ಆಕಾಶ ಕತೆ ಸಂದೀಪರ ಕತೆಗಾರಿಕೆಯಲ್ಲಿ ಏಕಕಾಲಕ್ಕೆ ಅಜೆಂಡಾ ರಹಿತ ಕಥನಕ್ರಿಯೆಯನ್ನೂ, ಕಥಾನಕವೊಂದರ ಏರಿಳಿತಗಳಿಲ್ಲದೆಯೂ ಕತೆ ಸಂಪನ್ನವಾಗಬಹುದೆಂಬುದನ್ನೂ ಕಾಣಿಸುವುದರ ಜೊತೆಗೇ `ಕಾಯುವಿಕೆ'ಯ ಸ್ಥಾಯೀಭಾವದ ಸಂಪೂರ್ಣ ಬಳಕೆಯಿದೆ. ಸುಬ್ರಾಯಣ್ಣ ಊರ ಜಾತ್ರೆಯ ರಾತ್ರಿಯೂಟಕ್ಕೆ ಮುನ್ನ ಸ್ನಾನಕ್ಕೆಂದು ಹೊರಟವನು ನಾಪತ್ತೆಯಾಗಿದ್ದಾನೆ. ಇನ್ನೇನು ಬರುತ್ತಾನೆಂದು ಎಲೆ ಹಾಕಿ ಊಟಕ್ಕೆ ಅಣಿಮಾಡಿದ ಮನೆಯವರು, ಹಸಿವಿನಿಂದ ಕಂಗಾಲಾದಂತಿರುವ ಹಬ್ಬದ ಸುಸ್ತು ಹೊತ್ತ ಊರವರು ಅಪರಾತ್ರಿಯಲ್ಲಿ ಸುಬ್ರಾಯಣ್ಣನನ್ನು ಹುಡುಕುವ ಮಹಾಕಾರ್ಯಕ್ಕಿಳಿಯುತ್ತಾರೆ. ಏನೋ ಅನಾಹುತವಾಗಿದೆ ಎಂಬ ಗ್ರಹೀತಕ್ಕೊಳಕ್ಕಾಗಿ ಬೊಬ್ಬಿಡುವ ಮನೆಯವರು, ಹಸಿದೇ ನಿದ್ದೆ ಹೋದ ಕಂದಮ್ಮಗಳು, ಎಲ್ಲ ದಿಕ್ಕುಗಳಿಗೆ ಕಲ್ಪನೆಯನ್ನು ಹರಿಬಿಟ್ಟು ಹುಡುಕುತ್ತಿರುವ ಊರ ಹಿರಿಯರು ಸೇರಿ ಕತೆ ಬೆಳೆಯುತ್ತದೆ. ದುರಂತವೊಂದರ ಛಾಯೆಯಲ್ಲೇ ನಡೆಯುವ ವ್ಯರ್ಥವಾಗಬಹುದಾದ ಈ ಅಂತ್ಯವೇ ಇಲ್ಲವೇನೋ ಎನಿಸುವ ಹುಡುಕಾಟ ಕೊನೆಗೂ ಮುಗಿಯುತ್ತದೆ. ಇಡೀ ರಾತ್ರಿ ಕತ್ತಲೆಯಲ್ಲೇ ಪಾಳುಬಾವಿಯೊಳಗೆ ಜೀವ ಕೈಯಲ್ಲಿ ಹಿಡಿದು ಆಕಾಶವನ್ನೇ (ಕಂಡಷ್ಟೇ) ಕಾಣುತ್ತ ಕ್ಷೀಣವಾಗಿ ಕೇಳುವ ಧ್ವನಿಯಲ್ಲಿ ಕರೆಯುತ್ತ ಕಳೆದ ಸುಬ್ರಾಯಣ್ಣ ಈಗ ತಮಾಷೆಗೂ ನಗಲಾರದ ಸತ್ಯಕ್ಕೆ ಮುಖಾಮುಖಿಯಾದವನಂತಿದ್ದಾನೆ. ಆದರೆ ಕತೆಯ ಒಳಗಿನವರಾಗಿ ಬಾವಿಯೊಳಗಿದ್ದ ಸುಬ್ರಾಯನಾಗಲಿ, ಅವನೆಲ್ಲಿದ್ದಾನೆಂದು ತಿಳಿಯದ ಊರವರಾಗಲಿ, ದುರಂತಕ್ಕೆ ಸಿದ್ಧರಾಗುತ್ತಿದ್ದ ಮನೆಮಂದಿಯಾಗಲಿ ತಕ್ಷಣದ ತುರ್ತಾದ ಪಾರಾಗುವುದೋ, ಹುಡುಕುವುದೋ, ರೋದಿಸುವುದೋ ಮುಂತಾದ ಕೆಲಸಗಳಲ್ಲಿ ನಿಮಗ್ನರೇ ಹೊರತು ಬೇರಾವುದೇ ತೆರನ ಮುಖಾಮುಖಿಗಳಲ್ಲಿ ಅವರು ರಮಿಸುವುದಿಲ್ಲ. ಸಾಧಾರಣವಾಗಿ ಇಂಥ ಕತೆಗಳು ಅಂಥ ಉದ್ದೇಶ, ತತ್ವಗಳನ್ನೆಲ್ಲ ಇರಿಸಿಕೊಂಡೇ ಹೊರಡುತ್ತವೆ. ಆದರೆ ಸಂದೀಪರ ಕತೆ ಅಂಥದ್ದೇನೂ ಇಲ್ಲದೆಯೆ, ಬದುಕಿನ ಬಗ್ಗೆ ನಮಗೆ ಇನ್ನೂ ತಿಳಿಯದೇ ಇರುವ, ಅರ್ಥವಾಗದೇ ಉಳಿದಿರುವ, ಇದೆಯೋ ಇಲ್ಲವೋ ಎಂದು ಇದಂಮಿತ್ಥಂ ಎಂದು ಹೇಳಲಾಗದ ಸಂಗತಿಗಳತ್ತ ಅಂತಹುದೇ ಒಂದು ಅಮೂರ್ತ ಅನೂಹ್ಯ ಮೌನವನ್ನು ಅರ್ಥಪೂರ್ಣ ಪ್ರತಿಕ್ರಿಯೆಗೊಳಿಸುವುದರೊಂದಿಗೆ ಮುಗಿಯುತ್ತದೆ. ಮೃತ್ಯುಪ್ರಜ್ಞೆ ಕೂಡಾ ಅನೇಕ ಕತೆಗಾರರಲ್ಲಿ ಢಾಳಾಗಿ ಕಾಣುವಂತೆ ಸಂದೀಪರ ಕತೆಯಲ್ಲಿ ಎದ್ದು ಕಾಣುತ್ತಿಲ್ಲ. ಆದರೆ ಸುಬ್ರಾಯಣ್ಣನಿಗೆ ಅದು ಮುಖಕ್ಕೆ ಮುಖಕೊಟ್ಟು ಮೂಗು ತಾಗಿಸಿ ಹೋಗಿದ್ದರ ಪರಿಣಾಮವಂತೂ ನಮ್ಮ ಅನುಭವಕ್ಕೂ ಬಂದೇ ಬರುತ್ತದೆ.

ಇನ್ನೊಂದೇ ಕತೆ ಕೆಲವೊಂದು ಕಾರಣಗಳಿಂದ ಗಮನಾರ್ಹವಾದದ್ದು. ಇಲ್ಲಿ ಬಾಬು ಮತ್ತು ಶಕಕ್ಕನ ಒಡನಾಟದ ದೃಶ್ಯಗಳಲ್ಲೇ ಕತೆಯ ನಿರೂಪಣೆಯಿದೆ. ಅಂದರೆ, ಬಾಬು ಸಾಕ್ಷಿಯಾಗದೇ ಇರುವ ಪ್ರಸಂಗ, ಸನ್ನಿವೇಶಗಳು ಕತೆಯ ವ್ಯಾಪ್ತಿಯೊಳಗೆ ಬರುವುದಿಲ್ಲ. ಆದರೆ ಕತೆಯ ನಿರೂಪಕ ಪ್ರಜ್ಞೆ ಬಾಬುವಿನದ್ದಲ್ಲ, ಬಾಲ್ಯದ ಮುಗ್ಧತೆಯದ್ದಲ್ಲ. ಪ್ರೌಢ ನಿರೂಪಕನೇ ಕತೆಯನ್ನು ಚಿತ್ರಿಸುತ್ತಿದ್ದಾಗ್ಯೂ, ಸಂದೀಪರು ಈ ಕತೆಯನ್ನು ಮುಗ್ಧ ಬಾಲಕನ ದೃಷ್ಟಿಕೋನದಿಂದೇನೂ ಸಂಪೂರ್ಣವಾಗಿ ಮುಕ್ತಗೊಳಿಸಿಲ್ಲ ಎಂಬುದನ್ನು ಗಮನಿಸಬೇಕು. ಆಲನಹಳ್ಳಿಯವರ `ಕಾಡು', ಡಾ|| ಯು.ಆರ್.ಅನಂತಮೂರ್ತಿಯವರ `ಘಟಶ್ರಾದ್ಧ', ಕೆ.ಸದಾಶಿವ ಅವರ `ರಾಮನ ಸವಾರಿ ಸಂತೆಗೆ ಹೋಗಿದ್ದು', ವಿವೇಕ ಶಾನಭಗರ `ಕಾರಣ', ಶ್ರೀಧರ ಬಳಗಾರರ `ದೊಡ್ಡವರ ನಡುವೆ' ಕತೆಗಳೊಂದಿಗೆ ಈ ಕತೆಯ ತಂತ್ರವನ್ನು ಹೋಲಿಸಿ ನೋಡಬಹುದಾಗಿದೆ.

ಇಲ್ಲಿ ಶಕಕ್ಕನಿಗೆ ಅಕಾಲ ವೈಧವ್ಯ ಪ್ರಾಪ್ತಿಯಾಗಿದೆ. ಅವಳು ಪುಟ್ಟ ಪುಟ್ಟ ಮಕ್ಕಳೊಡನೆ ಬೆರೆತು, ಅವರಿಗೆ ಕತೆ ಹೇಳುತ್ತ, ಅವರ ನಗು-ಖುಶಿಗಳಲ್ಲಿ ಕಾಲದ, ನೆನಪುಗಳ ಭಾರವನ್ನು ನಿಭಾಯಿಸುತ್ತಿರುವಂತಿದೆ. ವಿವೇಕ ಶಾನಭಾಗರ ಕಾರಣ ಕತೆಯ ಮುಕ್ತಾ ಕೂಡ ಇದೇ ಬಗೆಯ ಹಿನ್ನೆಲೆಯುಳ್ಳವಳು. ಆದರೆ ಅನಿಷ್ಟ ಎಂಬ ಹಣೆಪಟ್ಟಿ ಪಡೆದು ಯಾರೊಂದಿಗೂ ಬೆರೆಯಲಾರದ ಸ್ಥಿತಿಯಲ್ಲಿ ಸರಿಸುಮಾರು ಈ ಸಂಕಲನದ ಆನೆ ಸಾಕಿದವರ ಮನೆಯಂಥದೆ ಮನೆಯ ಒಂದು ಕತ್ತಲ ಕೋಣೆಯಲ್ಲಿ ಬಂಧಿಯಾದವಳು. ಸಂದೀಪರ ಕತೆಯ ಶಕಕ್ಕನಂತೆಯೇ ವಿವೇಕರ ಮುಕ್ತಾ ಕೂಡ ಮನೆಯವರೆಲ್ಲ ಯಾವುದೋ ಮದುವೆಗೆ ಹೋಗಿಬಂದ ಸಂದರ್ಭದಲ್ಲೇ ತಾನು ಹೋಗಲಾರದ ಸಂಕಟಕ್ಕೆ ಪ್ರಶ್ನೆಯ ಮೇಲೆ ಪ್ರಶ್ನೆಯನ್ನು ಹಾಕಿ ಪುಟ್ಟ ಹುಡುಗನ ಬಾಯಿಂದ ಇಡೀ ಮದುವೆಯ ಚಿತ್ರವನ್ನು ತನ್ನದಾಗಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಾಳೆ. ಸಂದೀಪರ ಶಕಕ್ಕನಂತೂ ಮದುವೆಗೆ ಹೊರಟವಳಂತೆಯೇ ಪುಟ್ಟ ಹುಡುಗನ ಎದುರು ಸೀರೆ ಆಭರಣ ತೊಟ್ಟು ಸಂಭ್ರಮಿಸುತ್ತಾಳೆ. ಘಟಶ್ರಾದ್ಧದ ಕತೆ ಹೇಳಬೇಕಿಲ್ಲ. ಆದರೆ ಇಲ್ಲಿನ ಶಕಕ್ಕ ಅನಿಷ್ಟ ಅನ್ನಿಸಿಕೊಂಡು ಕತ್ತಲಕೋಣೆ ಸೇರಿಲ್ಲ ಅಥವಾ ಕದ್ದು ಬಸುರಾಗುವ ಒಂದು ದಮನಕಾರಿ ವಾತಾವರಣದಲ್ಲೂ ಅವಳಿಲ್ಲ. ಬಾಬುವಿಗೆ ಸುಳಿವಿಲ್ಲದಿದ್ದರೂ ಅವಳ ಮರುಮದುವೆಯ ಪ್ರಯತ್ನ ನಡೆದಿದೆ. ಅವಳು ನಿನಗೊಬ್ಬನಿಗೇ ಹೇಳುತ್ತೇನೆಂದಿದ್ದ ಯಾರಿಗೂ ಹೇಳದ ಹೊಸ ಕತೆಯನ್ನು ಕೊನೆಗೂ ಹೇಳದೆ ಆ ಮಾತನ್ನು ಹಾಗೆಯೇ ಉಳಿಸಿ ಹೋಗಿದ್ದಾಳೆ, ಇನ್ನೊಂದೇ ಕತೆಯನ್ನು ಬೆನ್ನಟ್ಟಿ.

ಸಂದೀಪರು ಇಲ್ಲಿ ಒಂದು ಬದುಕು ಮತ್ತೆ ಕೊರಡು ಕೊನರಿದಂತೆ ಹಸನಾಗುವ ಚಿತ್ರವನ್ನು ನೀಡುತ್ತಿದ್ದಾರೆ. ಆನೆ ಸಾಕಿದ ಮನೆಯ ಯಶೋದಳ ಗಂಡನೂ ವರ್ಷದೊಳಗೆ ಸತ್ತ ಸಂದರ್ಭದಲ್ಲಿ ಮುಂಬಯಿಯಲ್ಲಿದ್ದ ಅವಳಿಗೂ ಇದೇ ರೀತಿ ಮದುವೆ ಮಾಡಿದ್ದನ್ನು ನಾಗವೇಣಿ ನೆನೆಯುವುದುಂಟು. ಇಲ್ಲೆಲ್ಲ ಎರಡು ಕತೆಗಳಿವೆ, ಒಂದು ಆಗಷ್ಟೇ ಮುಗಿದಿದ್ದು, ಹೇಳಬಹುದಾದ್ದು; ಮತ್ತೊಂದು ಇನ್ನೂ ಸುರುವಾಗುತ್ತಿರುವುದು, ಹೇಳುವುದೇ ಕಷ್ಟವಾದದ್ದು. ನಡುವೆ ಈ ಕತೆಗಳಿಗೆ ತಿಳಿದೋ ತಿಳಿಯದೆಯೋ ಜೋತುಬಿದ್ದ ಇನ್ನಷ್ಟು ಜೀವಗಳ ಕತೆಗಳಿವೆ. ಅವಕಾಶ ಸಿಕ್ಕಿದರೆ ಇಲ್ಲದ ಕತೆ-ಕಂತೆಗಳನ್ನು ಸೇರಿಸಿ ಮೂಲಕತೆಗೆ ಅನಪೇಕ್ಷಿತ ತಿರುವು ಪ್ರಾಪ್ತಿಯಾಗಿಸಬಲ್ಲ ಮಂದಿಯ ಕುಹಕದ ತೊಡಕೂ ಇಲ್ಲಿದೆ. ಇದನ್ನೆಲ್ಲ ಮೀರಿ ಆ ಇನ್ನೊಂದೇ ಕತೆ ತೊಡಗಬೇಕಿದೆ, ಬೆಳೆದು ಸಂಪನ್ನವಾಗಬೇಕಿದೆ. ಪುಟ್ಟ ಬಾಲಕನನ್ನು ಮುಂದಿಟ್ಟುಕೊಂಡು ಈ ಚಿಗುರುವ ಕೊರಡಿನ ಕತೆಯನ್ನು ಹೇಳಿರುವುದು ಅರ್ಥಪೂರ್ಣವಾಗಿದೆ ಕೂಡ.

ನಿನ್ನಲ್ಲೇ ಇರಲಿ ಕತೆಯಲ್ಲಿ ಕೌತುಕ, ತಮಾಷೆ, ಶಾಕ್ ಎಲ್ಲವೂ ಇದೆ. ಈ ಎಲ್ಲವೂ ಇರುವುದರಿಂದ ಅದಕ್ಕೆ ವಿಶಿಷ್ಟ ಜೀವಕಳೆ ಕೂಡ ಇದೆ. ದಿನವೂ ಕಾಣುವ ಊರಿನ ಮಂದಿಯನ್ನೇ ಬಳಸಿಕೊಂಡು ಕಾಲ್ಪನಿಕ ಕತೆಗಳನ್ನು ಕಟ್ಟಿ ಸ್ವತಃ ಅದನ್ನು ನಿಜವೆಂದು ನಂಬಿದವನ ಶೈಲಿಯಲ್ಲಿ ಜನರಿಗೆ ಹೇಳಿ ಅವರು ಸುಳ್ಳೆಂದು ಗೊತ್ತಿದ್ದೂ ಆ ಕ್ಷಣಕ್ಕೆ ಸತ್ಯವೆಂಬಂತೆ ಕೇಳುವುದಕ್ಕೆ ಇಷ್ಟಪಡುವ ಮುಕುಂದನ ಮಾಯಕದ ಕತೆಯಿದು. ಕಲ್ಪನೆ ಮತ್ತು ವಾಸ್ತವದ ನಡುವೆ ಎಲ್ಲರೂ ತುಂಬ ಬಯಸುವ ಬಿಟ್ಟಪದಗಳನ್ನು ತುಂಬುವ ಮುಕುಂದನ ಮಾಯಕದ ಸೆಳೆತ ಅಂಥಾದ್ದು. ಕತೆಯ ಆಕರ್ಷಣೆ ಕೂಡ ಈ ಮುಕುಂದ ಕಟ್ಟುವ ಸುಳ್ಳುಗಳೇ. ಈ ಸುಳ್ಳುಗಳನ್ನು, ಕಲ್ಪನೆಗಳನ್ನು ಕೇಳುವ ಮಂದಿ ಕೂಡ ಅವು ನಿಜವಾಗಿರಲಿ ಎಂದು ಬಯಸಿದ್ದರೇ ಎನಿಸುವಂತಿರುವ ಈ ಎಲ್ಲ ವಿದ್ಯಮಾನದ ಅಬ್ಸರ್ಡಿಟಿ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾದದ್ದಲ್ಲ. ಸತ್ಯ ಮತ್ತು ಸುಳ್ಳಿನ ನಡುವಿನ ಗೆರೆ ತೆಳ್ಳಗಾಗುತ್ತ ಹೋದಂತೆಲ್ಲ ಇದು ನಮ್ಮ ಅರಿವಿಗೂ ಬಂದಿರುತ್ತದೆ. ಎಷ್ಟೋ ಬಾರಿ ನಿಜವನ್ನು ಹೇಳುವ ವಿಧಾನದಲ್ಲಿಯೇ ಸತ್ಯ ಸುಳ್ಳಾಗುವ ಅಪಾಯವನ್ನೂ ಎದುರಿಸುತ್ತದೆ. ಸುಳ್ಳು ಕೂಡ ಸತ್ಯದಂತೆ ಕಾಣುವ ಸಂದರ್ಭಗಳೂ ಈ ಮಾತಿಗೆ ಹೊರತಾದುದಲ್ಲ. ಅದು ಹೇಗಿರುತ್ತದೆಂಬುದಕ್ಕೆ ಶಂಕರಣ್ಣನ ಮಾತುಗಳೇ ಸಾಕ್ಷಿ:

"ಸೀತಕ್ಕ, ಈಗ ಇಬ್ಬರನ್ನೂ ಕೂಡಿಯೇ ಹುಡುಕಿಸಬೇಕಾಯ್ತು. ಬೋಳಿಮಗ ಯಾವಾಗ ಖರೆ ಹೇಳ್ತೀಯ, ಯಾವಾಗ ಸುಳ್ಳು ಹೇಳ್ತೀಯ ಅನ್ನುವುದೇ ಗೊತ್ತಾಗುವುದಿಲ್ಲ."

ಕೊನೆಗೂ ಮುಕುಂದ ಸುರೇಖಾ ಜೊತೆಗೇ ಓಡಿಹೋಗಿರಬಹುದೆಂಬುದು ಕೂಡಾ ಮುಕುಂದನ ಮಾತುಗಳ ಮೇಲೇ ನಿಂತಿರುವ, ಸುಳ್ಳಿರಲೂ ಬಹುದಾದ ಒಂದು ಸುಂದರ-ರಮ್ಯ ಕಲ್ಪನೆ, ಊಹೆ! ಜನರ ಲೆಕ್ಕಾಚಾರದ ಹಾದಿ ತಪ್ಪಿಸಲು ಸುರೇಖಾ ಇನ್ಯಾರೊಂದಿಗೋ ಓಡಿಹೋದ ಘಳಿಗೆಯನ್ನೇ ಆರಿಸಿಕೊಂಡು ತಾನು ಊರು ಬಿಟ್ಟಿದ್ದರೂ ಆಶ್ಚರ್ಯವೇನೂ ಇಲ್ಲ ಎನಿಸುವಂಥ ಪಾತ್ರ ಮುಕುಂದನದ್ದು! ಇದನ್ನು ಯಾರಿಗೆ "ನಿಮ್ಮಲ್ಲೇ ಇರಲಿ" ಎಂದು ಬಾಯ್ಬಿಟ್ಟಿದ್ದಾನೋ ಇನ್ನೂ ಗೊತ್ತಾಗಿಲ್ಲ, ಅಷ್ಟೆ!

ಬಾಗಿಲ ಮುಂದೆ ಕತೆ ಕೂಡಾ ಇಂಥ ಒಂದು ಚೋದ್ಯವನ್ನೆ ಬಳಸಿಕೊಂಡು ಅಗಮ್ಯವಾದುದಕ್ಕೆ, ಅಗೋಚರವಾದುದಕ್ಕೆ ಕೈ ಚಾಚುವ ಕತೆ. ಈ ಕತೆಯ ನಾಯಕ ಜಿ.ಕೆ ಆಗಿರುವುದು ಕೂಡ ಧ್ವನಿಪೂರ್ಣವಾಗಿದೆ. ಬೀಗದ ಕೈಯಿಲ್ಲದೆ ಇಡೀ ರಾತ್ರಿ ಮನೆಯ ಹೊರಗೆ, ಬಾಗಿಲಿನೆದುರು ನಿದ್ದೆಯಿಲ್ಲದೆ, ಸೊಳ್ಳೆ ಮತ್ತೊಂದು ಎಂದು ಮಲಗಲಾರದೆ - ಕೂರಲಾರದೆ ಚಡಪಡಿಸುತ್ತ ಕಳೆಯುವ ವಿಕ್ಷಿಪ್ತಕ್ಕೆ ಗುರಿಯಾದ ಈ ಜಿಕೆಯ ವ್ಯಕ್ತಿತ್ವ, ಅದರ ಪೊಳ್ಳುತನ, ಹಪಾಹಪಿ, ಧಾವಂತದ ಅಧ್ವಾನಗಳೆಲ್ಲ ಈ ಅಪರಾತ್ರಿಯಲ್ಲಿ ಅರೆಮಂಪರಿನ ಕನಸು-ಭ್ರಮೆ-ಕಲ್ಪನೆಗಳಂತೆ ತೆರೆದುಕೊಳ್ಳುತ್ತಿವೆ. ಬೆಳಕು ಹರಿಯುವ ಮೊದಲೇ ದೂರ ಎಲ್ಲೋ ಹೋಗಿದ್ದ ಹೆಂಡತಿಯನ್ನು ಕಾರಣ ಕೂಡ ತಿಳಿಸದೆ ಹೊರಟು ಬರುವಂತೆ ಆಗ್ರಹಿಸುವಲ್ಲೂ ಅದೇ ಧಾವಂತ, ದುಡುಕು ಮತ್ತೆ ಅಧ್ವಾನ!

ಚಿತ್ತಾಲರ ಸೆರೆ ಕತೆ ನೆನಪಾಗುತ್ತದೆ. ಅಲ್ಲಿಯೂ `ಬರ್ಮಾಚಾರಿ ಒಡೆದೀರು' ದೇವಿಯ ಮೊಲೆಗಳನ್ನು ಕಂಡೇ ಗೊಂದಲಗೊಳ್ಳುತ್ತಾನೆ. ಇಲ್ಲಿ ಜಿಕೆಯ ತಲೆತುಂಬ ನಲವತ್ತು ದಾಟುತ್ತಿದ್ದರೂ ದೇಹದ ಯಾವ ಭಾಗವೂ ಬಿಗುವನ್ನು ಕಳೆದುಕೊಳ್ಳದ ನಾಯರ್‌ನ ಹೆಂಡತಿಯೇ ತುಂಬಿದ್ದಾಳೆ. ತನಗೆ ತಾನೇ ಸೆರೆಯಾದ ಬ್ರಹ್ಮಾಚಾರಿಯ ಅವಸ್ಥೆಯೇ ಜಿಕೆಯದ್ದು ಕೂಡ. ತಾನೇ ಪಟ್ಟಿ ಹಿಡಿದು ಮೊಳೆ ಹೊಡೆದು ಭದ್ರಪಡಿಸಿದ ಬಾಗಿಲನ್ನು ಕೊನೆಗೆ ತಾನೇ ಗರಗಸದಿಂದ ಕೊಯ್ದು ಹೊರಬರಲು ಹೊರಟ ಬರ್ಮಾಚಾರಿ ಮಂಗವನ್ನು ಕಂಡು ಗಾಭರಿಯಲ್ಲಿ ದೇವಿಯನ್ನು ತಾನೇ ಕರೆದಿದ್ದನ್ನು ಮರೆತಿದ್ದಾನೆ! ಅವಳು ಇದೀಗ ತೆರೆದುಕೊಂಡ ಬಾಗಿಲಿನಿಂದ ಒಳಬಂದ ಗಾಳಿಯ ಜೊತೆಗೇ ತನಗೆ ಮೊದಲೇ ಗೊತ್ತಿತ್ತು ಎನ್ನುತ್ತ ಒಳಬಂದು ಬಾಗಿಲು ಹಾಕಿಕೊಳ್ಳುತ್ತಾಳೆ! ಚಿತ್ತಾಲರ `ಸೆರೆ' ಕತೆ.

ಸೆರೆಯ ಬರ್ಮಾಚಾರಿ ಮರ್ಕಟ ಪೀಡೆ ಪರಿಹಾರಾರ್ಥ (ಬ್ರಹ್ಮಚಾರಿಶ್ಚ ಶತ ಮರ್ಕಟಃ) ತಾನೇ ಮೊಳೆ ಹೊಡೆದು ಜೋಡಿಸಿದ ಬಾಗಿಲೊಳಗೆ ತಾನೇ ಸೆರೆಯಾದರೆ ಸಂದೀಪರ ಕತೆಯ ಜಿಕೆ ತೆರೆದುಕೊಳ್ಳದ ಬಾಗಿಲುಗಳ ಎದುರು ಅಂಧಕಾರಮಯ ರಾತ್ರಿ ನಿದ್ದೆಯಿಲ್ಲದೆ (ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ!) ಅಕೌಂಟೆಂಟ್ ಸ್ವಾತಿ, ಕಂಪನಿ ಕೆಲಸ, ಶಂಕರನ್ ನಾಯರ್, ಅವನ ಹೆಂಡತಿಯ ದೇಹಸಿರಿ, ತನ್ನ ಹೆಂಡತಿ, ಎದ್ದು ಕಾಣುವ ಹೋರ್ಡಿಂಗ್‌ನ ಅಮಿತಾಬ್ ಬಚ್ಚನ್, ರಾತ್ರಿ ಹೊತ್ತಿನ ನೀರವದಲ್ಲಿ ಆಗೊಂದು ಈಗೊಂದು ಎಂಬಂತೆ ಕಣ್ಣಿಗೆ ಬೀಳುವ ಚಟುವಟಿಕೆಗಳು, ನಾಯಿಗಳು, ಸ್ವಾತಿ ತನ್ನ ಗಾಳಕ್ಕೆ ಬೀಳುವಳೆ, ಊರಲ್ಲಿ ಗದ್ದೆ ನೋಡಿಕೊಂಡಿರುವುದೇ ಲೇಸಿತ್ತೆ, ಪೋಲೀಸರ ಗಸ್ತು ಇತ್ಯಾದಿಗಳೆದುರು ಚಡಪಡಿಸುತ್ತಿದ್ದಾನೆ. ರಾತ್ರಿ ಕಳೆದು ಬೆಳಕು ಮೂಡುವುದೆ, ಬಾಗಿಲು ತೆರೆಯುವುದೆ? ಮತ್ತೆ ಯಾವ ಬಾಗಿಲು, ಶಂಕರನ್ ನಾಯರ್ ಮನೆಯದೊ ತನ್ನದೋ ಎಂಬ ಪ್ರಶ್ನೆಗಳಿಗೆಲ್ಲ ಉತ್ತರ ಗೋಡೆಯ ಮೇಲೆ ಬರೆದ ನವಿಲುಗಳ ಸಾವಿರ ಸಾವಿರ ಕಣ್ಣುಗಳಲ್ಲೇ!

ಈಚೆಗೆ ಓದಿದ ಒಂದು ಅತ್ಯುತ್ತಮ ಕಥಾಸಂಕಲನವಿದು.

ಛಂದ ಪುಸ್ತಕದ ಇಪ್ಪತ್ತೈದನೇ ಪುಸ್ತಕವಾಗಿ ಹೊರಬಂದ ಇದು 128 ಪುಟಗಳ ಅರವತ್ತು ರೂಪಾಯಿ ಬೆಲೆಯ ಚಂದದ ಪುಸ್ತಕ.

4 comments:

ಹರೀಶ್ ಕೇರ said...

ಹೊಸಬರ ಬಗ್ಗೆ ಇಷ್ಟೊಂದು ವಿವರವಾಗಿ, ಪ್ರತಿಯೊಂದು ವಿವರವನ್ನೂ ಶ್ರದ್ಧೆಯಿಂದ ಗಮನಿಸಿ, ಸಮಕಾಲೀನರ ಇತರ ಕತೆಗಳೊಂದಿಗೆ ತುಲನೆ ಮಾಡಿ ವಿಮರ್ಶೆ ಬರೆಯುವವರು ನೀವು ಬಿಟ್ಟರೆ ಇನ್ನೊಬ್ಬರಿಲ್ಲ ನರೇಂದ್ರ. ಸಚ್ಚಿ ಹಾಗೂ ಸಂದೀಪ ಇಬ್ಬರ ಬಗ್ಗೆ ಬರೆದ ಲೇಖನಗಳೂ ಸೊಗಸಾಗಿವೆ. ಪುಸ್ತಕ ಓದಲು ಪ್ರೇರಣೆ ಮಾತ್ರವಲ್ಲ, ವಿಸ್ತಾರವಾದ ಹಿನ್ನೆಲೆಯನ್ನೂ ಒದಗಿಸುತ್ತವೆ.
- ಹರೀಶ್ ಕೇರ

ನರೇಂದ್ರ ಪೈ said...

ಥ್ಯಾಂಕ್ಯೂ ಹರೀಶ್. ಒಂದರ್ಥದಲ್ಲಿ ಈ ಒಳ್ಳೆಯ ಪುಸ್ತಕಗಳೇ ಬರೆಸಿಕೊಳ್ಳುತ್ತಿವೆ ಅಷ್ಟೆ. ಮತ್ತೆ ನನಗಿದೆಲ್ಲ ಖುಶಿ ಕೊಡುತ್ತದೆ. ಯಾರಾದರೂ ಮಾಡಲೇ ಬೇಕಾದ್ದು, ಅಲ್ವ? ಹಿರಿಯ ವಿಮರ್ಶಕರು ಕೂಡ ಅಲ್ಲಲ್ಲಿ ಬರೆಯುತ್ತಿದ್ದಾರೆ. ಬೇರೆ ಬೇರೆಯವರು ಹೊಸ ಹೊಸ ನೋಟ ಒದಗಿಸಿದಾಗ ಇನ್ನೂ ಖುಶಿಯಾಗುತ್ತದೆ, ನನಗೂ ಕಲಿಯುವುದು ಸಾಧ್ಯವಾಗುತ್ತದೆ. ನಿಮ್ಮ ಬೆಂಬಲಕ್ಕೆ ಋಣಿ.
ನಿಮ್ಮ ನರೇಂದ್ರ.

Anonymous said...

thanks :)

Nimma postgalanna yaavattoo refer madtirtene.

kallare

ನರೇಂದ್ರ ಪೈ said...

ಧನ್ಯವಾದಗಳು ಮಹೇಶ್. ಸದ್ಯ ಪುಸ್ತಕ ಜಗತ್ತು ಅಂತ ಒಂದು ಹೊಸ ಬ್ಲಾಗ್ ಮಾಡುವ ಸಾಹಸಕ್ಕೆ ಕೈ ಹಾಕಿದ್ದೇನೆ. ದಿನವೂ ಒಂದು ಪುಸ್ತಕದೊಂದಿಗೆ ಸ್ವಲ್ಪ ಮಾಹಿತಿ (ಮುನ್ನುಡಿ-ಬ್ಲರ್ಬ್‌ಗಳಿಂದ) ಕೊಡುವುದು, ನನ್ನ ಬಳಿ ಇರುವ ಕನ್ನಡದ ಮಹತ್ವದ ಪುಸ್ತಕಗಳನ್ನು ಇಲ್ಲಿ ಕಾಣಿಸುವುದು ಉದ್ದೇಶ. (ಲಿಂಕ್ ಇದೆ ಬ್ಲಾಗ್ ನಲ್ಲಿ, ಲೈಬ್ರರಿಗೆ ಬನ್ನಿ ಹೆಸರಿನಲ್ಲಿ) ನಿಮ್ಮ ಬೆಂಬಲ ಇರಲಿ.
ನರೇಂದ್ರ.