Thursday, August 27, 2009

The Thing Around Your Neck

ತನ್ನ ಇಪ್ಪತ್ತೈದನೆಯ ವಯಸ್ಸಿನಲ್ಲಿ ಪ್ರಕಟಿಸಿದ ಮೊದಲ ಕಾದಂಬರಿ Purple Hibiscusಗೆ 2007ರ Commonwealth Writer's Best First Book ಪ್ರಶಸ್ತಿ ಪಡೆದ, ಚಿನು ಅಚಿಬೆಯಿಂದ "ಪರಿಪೂರ್ಣಗೊಂಡೇ ಬಂದ" ಬರಹಗಾರ್ತಿ ಎಂದು ಹೊಗಳಿಸಿಕೊಂಡ ಚಿಮಾಮಂಡಾ ಎನ್‌ಗೋಝಿ ಅದಿಚ್ಯಿ ನೈಜೀರಿಯಾದವರು. ಅದೇ ವರ್ಷ ಇವರ Half of a Yellow Sun ಕಾದಂಬರಿಗೆ Orange Broadband Prize for Fiction ಪ್ರಶಸ್ತಿ ಬಂತು. ಮೊದಲ ಕಾದಂಬರಿ ಕೂಡ ಇದೇ ಪ್ರಶಸ್ತಿಗೆ short list ನಲ್ಲಿತ್ತು ಎಂಬುದು ಗಮನಾರ್ಹ. "ಸ್ವಲ್ಪ ವಿಚಿತ್ರ ಅನಿಸಿದರೂ ನನಗೆ ಕೆಲವೊಮ್ಮೆ ಅನಿಸುತ್ತದೆ, ನನ್ನ ಬರವಣಿಗೆ ನನ್ನನ್ನೂ ಮೀರಿದ ಒಂದು ಸಂಗತಿಯಿರಬೇಕು!" ಎನ್ನುವ ಈಕೆಯ ಹೊಸ ಕಥಾಸಂಕಲನ The Thing Around Your Neckನ್ನು ನಮ್ಮ ಸಚ್ಚಿದಾನಂದ ಹೆಗಡೆ ಮತ್ತು ಸಂದೀಪನಾಯಕರ ಕಥಾಸಂಕಲನಗಳೊಂದಿಗೇ ಗಮನಿಸುವುದು ನನಗೆ ಇಷ್ಟ.

Cell One ಕತೆಯನ್ನು ಹೇಳುತ್ತಿರುವ ನೆಲೆಯೇ ಒಂದರ್ಥದಲ್ಲಿ ವಿಲಕ್ಷಣವಾದದ್ದು. ಈಕೆ ತನ್ನ ಸಹೋದರನ ಬಗ್ಗೆ ಹೇಳುತ್ತಿದ್ದಾಳೆ. ಅವನ ವಯಸ್ಸಿನ ಊರಿನ ಇತರ ಹುಡುಗರಂತೆಯೇ ಕಳ್ಳ, ಸುಳ್ಳ, ಮಳ್ಳ ಎಲ್ಲವೂ ಆಗಿರುವ ಅವನ ಬಗ್ಗೆ ಪ್ರೀತಿ, ದ್ವೇಷ, ಚಡಪಡಿಕೆ ಎಲ್ಲ ಸೇರಿದಂತಿರುವ ಒಂದು ಭಾವ ಇಲ್ಲಿ ಮಿಡಿಯುತ್ತಿರುವಾಗಲೂ ಈ ಸಹೋದರಿ ತನ್ನ ತಾಯಿ-ತಂದೆಯರನ್ನು ಮುಂದಿಟ್ಟುಕೊಂಡು ತನ್ನ ತಮ್ಮನ ಬಗ್ಗೆ ಹೇಳುತ್ತಿದ್ದಾಳೆ. ತೀರ ಸನಿಹದ ಒಂದು ಸಂಬಂಧವನ್ನು ತಾರ್ಕಿಕ ನೆಲೆಯಿಂದ, ತನ್ನ ನೋಟ ಪ್ರೀತಿ ಮತ್ತು ಜಿದ್ದಿನಿಂದ ಪೂರ್ತಿಯಾಗಿ ಮುಕ್ತವಾಗಲಾರದೆಂಬ ಅರಿವಿದ್ದು ಗಮನಿಸುವುದು ಕಷ್ಟ. ಸಹೋದರ ತನ್ನ ಪ್ರತಿಸ್ಪರ್ಧಿ, ಕುಟುಂಬದಲ್ಲಿ ಅವನ ಸ್ಥಾನವನ್ನು ತಾನು ಗೆಲ್ಲಬೇಕು ಎಂಬ ಆಳದ ತುಡಿತಗಳನ್ನೆಲ್ಲ ಹಿಡಿತದಲ್ಲಿಟ್ಟುಕೊಂಡು ಅವನು ಬೆಳೆದು ತಾರುಣ್ಯಕ್ಕೇರಿದಂತೆಲ್ಲ ಅವನನ್ನು ಮೆಚ್ಚುತ್ತ, ಅನಿರೀಕ್ಷಿತವಾಗಿ ಕೆಳಬಿದ್ದಾಗ, ಜೈಲಿನಲ್ಲೇ ಅವನ ಕೊನೆಯಾಗಿ ಮತ್ತೆಂದೂ ಅವನು ಮನೆಗೆ ಮರಳದಿರಬಹುದು ಎಂಬ ಪರಿಸ್ಥಿತಿಯಲ್ಲಿ ಕಾಡುವ ಅನುಬಂಧದ ತಂತುಗಳನ್ನು ಕೂಡ ಗಮನಿಸುತ್ತ ಕತೆಯ ನಿರೂಪಣೆ ಸಾಗುತ್ತದೆ. ಕತೆಯ ಉದ್ದೇಶ ಈ ತರ್ಕ(ಬುದ್ಧಿ) ಮತ್ತು ಭಾವುಕತೆ(ಭಾವ)ಯ ತಾಕಲಾಟವನ್ನು ಕತೆ(ಭಾಷೆ)ಯಾಗಿ ಹಿಡಿಯುವುದಲ್ಲ. ಕೆ.ಸದಾಶಿವ ಅವರ ನಲ್ಲಿಯಲ್ಲಿ ನೀರು ಬಂತು ಕತೆಯ ತಂತ್ರ ಇದಕ್ಕೊಂದು ಉತ್ತಮ ಉದಾಹರಣೆ.

ಭಾವುಕತೆಗೆ ಸ್ಥಾನವಿಲ್ಲದ love-hate relation ದಾಯಾದಿಗಳ ನಡುವೆ, ಒಡಹುಟ್ಟು, ಸಹಪಾಠಿ, ಸಹೋದ್ಯೋಗಿ, ಸಹವರ್ತಿ, ನೆರೆಹೊರೆ ಇತ್ಯಾದಿ ಯಾರ ನಡುವೆಯೂ ಇರುವಂಥದ್ದೇ. ಒಂದು ನೆಲೆಯಲ್ಲಿ ಎಲ್ಲ ಸರಿಯಾಗಿರುವ ದಿನಗಳಲ್ಲಿ ಎಂದೂ ಭಾವಕೋಶವನ್ನು ಸೋಕದ ಹಾಗೆ ಎಚ್ಚರಿಕೆಯಿಂದ ತರ್ಕದಲ್ಲೇ ಗರ್ಕವಾಗಿರುವಂತೆ ಇರುವ ಈ ಸಂಬಂಧ ಸಾವಿನೆದುರು ಗಕ್ಕನೆ ಹೊಸ ಅರ್ಥ, ಆಯಾಮ, ರೂಪು ಪಡೆಯುವುದು ತಿರುವು. ಅಲ್ಲಿ ಸ್ಪರ್ಧೆಯೇ ಅರ್ಥಹೀನವಾಗಿ, ತರ್ಕವೇ ತರ್ಕಶೂನ್ಯವಾಗಿ ಕೇವಲ ಸಂಬಂಧದ ಭಾವಲೋಕದ ಬಾಗಿಲುಗಳು ತೆರೆದುಕೊಂಡು ಬದುಕಿನ ಸಾರ್ಥಕತೆಯ ಸಾತತ್ಯ ಯಾವುದರಲ್ಲಿದೆ ಎಂಬ ಹೊಸ ದರ್ಶನವೊಂದು ನಮಗಾಗುತ್ತದೆ. ಸಾವು-ನೋವುಗಳ ಎದುರು ಮನುಷ್ಯನ ಅಹಂ ಕರಗುತ್ತದೆ. ಅವನು ನಿಜಕ್ಕೂ ಮನುಷ್ಯನಾಗುವುದು ಇನ್ನೊಬ್ಬರ ನೋವಿಗೆ, ಸಂಕಟಕ್ಕೆ, ಕಷ್ಟಕ್ಕೆ ಮರುಗಬಲ್ಲವನಾದಾಗಲೇ.

ಮಾಸ್ತಿಯವರು ಚಿತ್ತಾಲರಿಗೆ ಬರೆದ ಪತ್ರವೊಂದರಲ್ಲಿ ಹಾಗೆ ಹೇಳಿದ್ದರಂತೆ. "ಬರವಣಿಗೆ ನನಗೆ ಮೆಚ್ಚುಗೆಯಾಗುವ ರೀತಿಯದು. ಎಂದರೆ, ಜೊತೆಯ ಜೀವದ ಜೀವನದಲ್ಲಿ ಸಹಾನುಭೂತಿಯಿಂದ ಬೆರೆತು ಅದರ ಸಂಗತಿಯನ್ನು ಬೇರೆ ಜೀವಕ್ಕೆ ತಿಳಿಸುವ ಆಸೆಯದು. ಸಾಹಿತ್ಯ ಹಲವು ರೀತಿ ಉದಿಸಬಲ್ಲುದು. ಆದರೆ ಅದು ಹೀಗೆ ಉದಯಿಸಿದಾಗ ಸಾಹಿತ್ಯವೆಂಬ ಕರ್ಮದ ಅತ್ಯುತ್ತಮ ಲಕ್ಷ್ಯವನ್ನು ಸಾಧಿಸ ಹೊರಟಿರುತ್ತದೆ ಎಂದು ನನ್ನ ತಿಳಿವಳಿಕೆ"

ಈ ಬಗೆಯ ಕತೆಗಳು ಹಲವಾರಿವೆ. ತಂತ್ರ ಹಳೆಯದು. ಹಾಗಾಗಿ ಕಟ್ಟಡದ ಶಿಲ್ಪ ಕೊಂಚ ಕೃತಕವೆನಿಸಿದರೂ ಕತೆ ಅರ್ಧದಲ್ಲೇ ಸೋಲುತ್ತದೆ. ಹಾಗಾಗಿಯೇ ಈ ಬಗೆಯ ಕತೆಯ ತಂತ್ರದ ಜೊತೆಗೇ craftsmenship ಬಹಳ ಮುಖ್ಯವಾಗುತ್ತದೆ. ವಿವರಗಳು, ಭಾಷೆ, ಮಾತನಾಡುತ್ತಿರುವ (ಕತೆ ಹೇಳುತ್ತಿರುವ) ನೆಲೆ, ಚಿತ್ರಿಸುತ್ತಿರುವ ಚಿತ್ರ ಮತ್ತು ಬಿಂಬಗಳು ಸೇರಿದಂತೆ ಕತೆಯಲ್ಲಿ ಮೈದುಂಬಿಕೊಂಡ ವಾತಾವರಣದ ಒಟ್ಟಾರೆ ಪರಿಣಾಮ -ಇವೇ ಕತೆಯನ್ನು ಸಾರ್ಥಕಗೊಳಿಸಬೇಕು.

ಇದನ್ನೆಲ್ಲ ಮೀರಿ ಈ ಇಡೀ ವಿದ್ಯಮಾನಕ್ಕಿರುವ ಸಾಮಾಜಿಕ-ರಾಜಕೀಯ ನೆಲೆಗಳನ್ನು ಸ್ಪರ್ಶಿಸುವುದು ಒಂದು ಸಣ್ಣಕತೆಯ ವ್ಯಾಪ್ತಿ-ವಿನ್ಯಾಸದಲ್ಲಿ ಬಹಳ ಕಷ್ಟವೇ. ಇಲ್ಲಿ, ಈ ಸೆಲ್ ಒನ್ ಕತೆಯಲ್ಲಿ ಚಿಮಾಮಾಂಡಾ ಎನ್‌ಗೋಝಿ ಅದಿಚ್ಯಿ ಇದನ್ನು ಸಾಧಿಸುತ್ತಾರೆ ಎಂಬುದೇ ಒಂದು ವಿಶೇಷ.

ಸೆಲ್‌ಒನ್ ಕತೆ ಸಹೋದರನ ಕುರಿತು ಒಬ್ಬ ಹೆಣ್ಣುಮಗಳು ಸ್ಪಂದಿಸುತ್ತ ಹೋಗುವ ರೀತಿಯಲ್ಲಿದೆ. ಈ ಸ್ಪಂದನ ಕ್ರಮೇಣ ಅರಳಿಕೊಳ್ಳುವ ರೀತಿಯನ್ನು ಭಾಷೆಯಲ್ಲಿ ಗುರುತಿಸುವುದು ನಿಜವಾದ ಕಷ್ಟ. ಈ ಹುಡುಗ ತುಂಟನೆಂದರೆ ತುಂಟ-ಫಟಿಂಗ ಅಂದರೆ ಫಟಿಂಗ. ಮನೆಯಲ್ಲೆ ಕದಿಯುತ್ತಾನೆ. ಆದರೆ ಅದು ಆ ಕಾಲದ, ಅವನಿದ್ದ ಊರಿನ ಪರಿಸ್ಥಿತಿಗೆ ಅನುಗುಣವಾಗಿತ್ತೇ ಹೊರತು ಅವನು ಹಾಗಿರುವುದರಲ್ಲಿ ಕೂಡ ಅಂಥ ವಿಶೇಷವೇನಿರಲಿಲ್ಲ ಎಂಬುದು ನಿರೂಪಕಿಯೂ ಆಗಿರುವ ಸಹೋದರಿಗೆ ಗೊತ್ತು. ಈ ಅನಿವಾರ್ಯತೆಗೆ ದೇಶ-ಕಾಲಗಳನ್ನಷ್ಟೇ ದೂರಬೇಕೆ, ನಾಗರಿಕ ವರ್ತನೆಯ ಹೆಸರಿನಲ್ಲಿ ಅನಪೇಕ್ಷಿತ-ಅಹಿತಕರ ವಿದ್ಯಮಾನಗಳನ್ನೆಲ್ಲ ತಮ್ಮ ತಮ್ಮಲ್ಲೆ ಮುಚ್ಚಿಟ್ಟು ಸಭ್ಯತೆಯನ್ನು ಜಾಣಕುರುಡಿನ ಶಾಪದಡಿ ನಟಿಸಿದ ಹೆತ್ತವರು-ಶಿಕ್ಷಕರು-ಪೋಷಕರುಗಳನ್ನು ದೂರಬೇಕೆ ಅಥವಾ ನಾಗರಿಕ ಬಡಾವಣೆಯ ತಮಗೆ ತಾವೇ ಮೋಸಮಾಡಿಕೊಳ್ಳುವ ನಾಗರಿಕ ಪರಂಪರೆಯ ಅಲಿಖಿತ ನಿಯಮಗಳನ್ನು ದೂರಬೇಕೆ ಎಂಬುದು ಈ ಇಡೀ ಕತೆಯಲ್ಲಿ ಕಾಡುವ ಸಾಮಾಜಿಕ ಅಂಶವಾಗಿದೆ. ಇದಕ್ಕೆ ಉತ್ತರ ಇಲ್ಲ.

ಎಲ್ಲರಿಗೂ ಪ್ರಿಯನೇ ಆಗಿದ್ದ ನಮ್ಮ ಕೃಷ್ಣನಂಥ ಈ ಹುಡುಗ ಇದ್ದಕ್ಕಿದ್ದಂತೆ ಒಮ್ಮೆ ಒಂದು ಕ್ರಿಮಿನಲ್ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಎಲ್ಲರನ್ನೂ ಕಂಗಾಲಾಗಿಸುತ್ತಾನೆ. ಅಲ್ಲಿ ಇರುವ ಒಂದು ನಿರ್ದಿಷ್ಟ ಸೆಲ್‌ನ ಹೆಸರು ಸೆಲ್‌ಒನ್. ಅರ್ಥ ಇಷ್ಟೇ, ಅಲ್ಲಿಗೆ ರವಾನಿಸಲ್ಪಟ್ಟವರು ಮರಳಿ ಬರುವ ಸಾಧ್ಯತೆಯಿಲ್ಲ. ತೀರ ಕೈಮೀರಿದ ಖೈದಿಗಳನ್ನು ಅಲ್ಲಿಗೆ ಕೊಂಡೊಯ್ದು ಹಿಂಸೆಕೊಟ್ಟು ಕೊಲ್ಲಲಾಗುತ್ತದೆ ಮತ್ತಿದನ್ನು ಕೆಲವೊಮ್ಮೆ ಇತರ ಖೈದಿಗಳಿಗೆ ನೀಡುವ ಎಚ್ಚರಿಕೆಯನ್ನಾಗಿಯೂ ಬಳಸುತ್ತಿದ್ದರು ಎನ್ನುವುದು fact. ತಂದೆ-ತಾಯಿ ಮತ್ತು ಈ ಸಹೋದರಿ ಪ್ರತಿನಿತ್ಯ ಅವನಿಗಾಗಿ ಆಹಾರ ತಯಾರಿಸಿಕೊಂಡು ಗಂಟೆಗಟ್ಟಲೆ ಕಾರಿನಲ್ಲಿ ಪ್ರಯಾಣಿಸಿ, ಜೈಲಿನ ಅಧಿಕಾರಿಗಳಿಗೆ ಯಥಾಧಿಕಾರ ಲಂಚವನ್ನೂ ನೀಡಿ ಅವನನ್ನು ಭೇಟಿಯಾಗುತ್ತಾರೆ, ಬಿಡುಗಡೆಯ ಪ್ರಯತ್ನ ಮುಂದುವರಿಸುತ್ತಾರೆ. ಆದರೆ ಅದೆಲ್ಲ ಭ್ರಷ್ಟಗೊಂಡ ಒಂದು ರಾಜಕೀಯ-ಕಾರ್ಯಾಂಗದ ವ್ಯವಸ್ಥೆಯಲ್ಲಿ ಅಷ್ಟು ಸರಳ-ಸುಲಭ ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಆದರೆ, ಇಲ್ಲಿ ಒಂದು ವಿಚಿತ್ರ ವಿದ್ಯಮಾನ ನಡೆಯುತ್ತದೆ. ಇದು ಬಹಳ ಮುಖ್ಯ. ಈ ತುಂಟ-ದುಡುಕಿನ-ತಾರುಣ್ಯ ತುಂಬಿದ ಹುಡುಗ ಜೈಲಿನಲ್ಲಿ ಪ್ರತಿನಿತ್ಯ ತಾನು ಕಂಡಿದ್ದನ್ನು ಇವರಿಗೆ ಹೇಳುತ್ತಾನೆ. ಅವನು ಅಲ್ಲಿ ಬದುಕನ್ನು ಅದರ ಮೂಲಸ್ವರೂಪದಲ್ಲಿ ಗಮನಿಸುತ್ತ, ದುರ್ಬಲ ಮತ್ತು ಬಡವರ ಅಸಹಾಯಕತೆ, ಉಳ್ಳವರ ಮತ್ತು ಅಧಿಕಾರಸ್ಥರ ಹಿಂಸೆ, ಕ್ರೌರ್ಯ, ಅಹಂಕಾರ ಮತ್ತು ನೀಚತನವನ್ನು ಕಾಣುತ್ತಾನೆ. ಒಬ್ಬ ದುರ್ಬಲ ಮುದುಕನನ್ನು ನಡೆಸಿಕೊಳ್ಳುವ ರೀತಿ ಅವನನ್ನು ಹೇಗೆ ಬದಲಿಸಿ ಬಿಡುತ್ತದೆಂದರೆ, ಸಹೋದರಿಯ ನಿರೂಪಣೆ ಅದನ್ನು ಅದ್ಭುತವಾಗಿ ಹಿಡಿದಿಟ್ಟಿರುವುದನ್ನು ಓದಿಯೇ ತಿಳಿಯಬೇಕು. ಈ ಸಹೋದರಿಯ ನೆಲೆಯನ್ನು ಮೊದಲೇ ವಿವರಿಸಿದ್ದೇನೆ. ಈ ಕತೆ ದಟ್ಟ ರಾಜಕೀಯ-ನೈತಿಕ ಮೌಲ್ಯಗಳನ್ನು ಇಲ್ಲಿ ಕಾಣುತ್ತೇವೆ.

ಈ ಸಹೋದರಿ ನೀಡುವ ಸೂಕ್ಷ್ಮ ಅದರೆ factsಅಷ್ಟೇ ಆಗಿರಬಹುದೆನ್ನಿಸುವಂಥ ವಿವರಗಳಲ್ಲೇ ಅವನ ಬಗ್ಗೆ ನಾವು ಮೃದುವಾಗುತ್ತ, ಅವನು ಅನುಭವಿಸುತ್ತಿರುವ ನರಕದ ಬಗ್ಗೆ ಅನುಕಂಪಪಡುತ್ತ, ಸ್ವತಃ ಅವನು ತನ್ನ ಸಹವಾಸಿ ಜೈಲಿನ ಖೈದಿಗಳ ಬಗ್ಗೆ ಸ್ಪಂದಿಸತೊಡಗಿದ್ದನ್ನು ಕಂಡು ಅವನ ಎಲ್ಲ ಒರಟುತನ, ಸುಳ್ಳು, ತಪ್ಪು, ದುಡುಕುಗಳನ್ನು ಕಡೆಗಾಣಿಸಿ ಮರುಕಪಡುತ್ತ ಇವನೆಂದಿಗೂ ಬಿಡುಗಡೆಯಾಗುವುದಿಲ್ಲವೇನೋ, ಇತರ ಕೆಲವು ಖೈದಿಗಳಂತೆ ಜೈಲಿನಲ್ಲೇ ಸಾಯುತ್ತಾನೇನೊ, ಈತನ ಸಹೋದರಿಯ ಅನುತಾಪಕ್ಕೆ ಕೊನೆಯೇ ಇಲ್ಲವೇನೊ ಎಂದು ಚಡಪಡಿಸತೊಡಗುತ್ತೇವೆ. ಒಂದು ಹಂತದಲ್ಲಿ ಇನ್ನು ಮುಂದೆ ತಾನು ಅವನ ಭೇಟಿಗೆ ಜೈಲಿಗೆ ಬರುವುದಿಲ್ಲ, ನೀವೂ ಹೋಗಬೇಡಿ ಎಂದು ಈ ಹುಡುಗಿ ಹಠಹಿಡಿದಂತೆಯೇ. ಮತ್ತು ಹುಡುಗ ಸೆಲ್‌ಒನ್‌ಗೆ ರವಾನೆಯಾಗುವ ಹಂತ ಕೂಡ ಇಷ್ಟೇ ತಲ್ಲಣಗಳನ್ನುಂಟುಮಾಡುವಂತಿದೆ.

ಚಿಮಾಮಾಂಡಾರ ಕಥನ ಕಲೆಯ ಸಾಮರ್ಥ್ಯವಿರುವುದು ಇಂಥಲ್ಲಿಯೇ. ಅಕ್ಕ ತಮ್ಮನ ಅಥವಾ ತಾಯಿ-ಮಗನ ಒಂದು ಭಾವಪೂರ್ಣ ಕತೆಯಷ್ಟೇ ಆಗಿಬಿಡಬಹುದಾಗಿದ್ದ ವಸ್ತುವನ್ನೇ ಈಕೆ ದುಡಿಸಿಕೊಂಡಿರುವ ಬಗೆ ಮತ್ತು ಅದಕ್ಕೆ ಒದಗಿಸಿರುವ ಪುಷ್ಟಿ ಮೆಚ್ಚುಗೆಗೆ, ಚರ್ಚೆಗೆ ಅರ್ಹವಾಗಿದೆ.

ಸಂಕಲನದ ಎರಡನೆಯ ಕತೆ Imitatioin ನೈಜೀರಿಯಾದ ಶ್ರೀಮಂತ ಬಿಸಿನೆಸ್‌ಮೆನ್ ಮದುವೆಯಾಗಿ ತಮ್ಮ ಹೆಂಡತಿ ಮಕ್ಕಳನ್ನು ಅಮೆರಿಕೆಯಲ್ಲಿರಿಸಿ ತಾವು ನೈಜೀರಿಯಾದಲ್ಲೇ, ವ್ಯವಹಾರ ನಿಮಿತ್ತ ಉಳಿದುಕೊಳ್ಳುವುದು ಒಂದು ಫ್ಯಾಶನ್ನೇ ಆಗಿಬಿಟ್ಟಿದೆ ಎನ್ನುವ ನೆಲೆಯಲ್ಲಿ ತೊಡಗುವ ಕತೆ ಕ್ರಮೇಣ ವಸ್ತುಸ್ಥಿತಿಯ ಆಳಕ್ಕಿಳಿಯುತ್ತದೆ. ವರ್ಷಕ್ಕೊಮ್ಮೆ ರಜೆಯ ಸಂಸಾರ ನಡೆಸಲು ಅಮೆರಿಕಕ್ಕೆ ಹೋಗುವ ಈ ಗಂಡಂದಿರು ವ್ಯವಹಾರಕ್ಕಾಗಿ ಹೀಗೆ ಮಾಡುತ್ತಾರೆಯೇ ಅಥವಾ ಇಂಥ ಪದ್ಧತಿಯಲ್ಲೇ ಒಂದು ವ್ಯಾವಹಾರಿಕತೆ ಇದೆಯೇ ಎಂಬುದು ಒಟ್ಟು ಸಂಬಂಧಗಳ ವಿಲಕ್ಷಣ ಬಗೆಯ ಚೋದ್ಯ. ಇದಕ್ಕಿಂತ ನಮ್ಮನ್ನು ಸೆಳೆಯುವುದು ಅದಿಚ್ಯಿಯ ನಾಯಕಿಯ ಒಂಟಿತನ ಹೆಚ್ಚಿನ ಎಲ್ಲ ಕತೆಗಳಲ್ಲೂ ಒಂದು ಸ್ಥಾಯೀಭಾವದಂತಿರುವುದು ಮತ್ತು ಭಾಷೆಯಲ್ಲಿ ಅದು ನಿಜವಾಗುವ ರೀತಿ. ಈ ಕತೆಯ ಉತ್ತರಾರ್ಧಕ್ಕೆ ಬರುವ ವರೆಗೂ ನಮಗೆ ನಾಯಕಿಯ ಮೌನಕ್ಷಣಗಳು, ಒಂಟಿತನ ಒಡೆದು ಕಾಣಿಸುತ್ತದೆಯೇ ಹೊರತು ಕಥನದ ಮುಖ್ಯ ಎಳೆಯಲ್ಲ. ಈ ಕತೆಯಲ್ಲಿ ಹೀಗೆ ಅಮೆರಿಕದಲ್ಲಿ ಇರಿಸಲ್ಪಟ್ಟ ಎರಡು ಮಕ್ಕಳ ತಾಯಾದ ಒಬ್ಬ ಪತ್ನಿ ಇದ್ದಕ್ಕಿದ್ದ ಹಾಗೆ (ಹೊಟ್ಟೆಕಿಚ್ಚಿನವಳಿರಬಹುದಾದ) ತನ್ನ ಗೆಳತಿ ನೀಡಿದ ಒಂದು ಸುದ್ದಿಯ ಜೊತೆ ಗುದ್ದಾಡುವುದರೊಂದಿಗೆ ಕತೆ ತೊಡಗುತ್ತದೆ. ನೈಜೀರಿಯಾದಲ್ಲಿ ತನ್ನ ಪತಿ ಬೇರೊಬ್ಬಳೊಂದಿಗೆ ವಿಧ್ಯುಕ್ತ ಸಂಸಾರ ಹೂಡಲು ತಯಾರಿ ನಡೆಸಿದ್ದಾನೆಂಬ ಅನುಮಾನಕ್ಕೆ ಗುರಿಯಾದದ್ದೇ ಈಕೆಯ ಇದುವರೆಗಿನ ಒಂಟಿತನಕ್ಕೆ ವಿಶೇಷ ಭಾರವೊಂದು ಪ್ರಾಪ್ತವಾಗಿ ಬಿಡುವುದು ನಮ್ಮ ಗಮನಕ್ಕೆ ಬರತೊಡಗುತ್ತದೆ.

ಆದರೆ ಎಲ್ಲವೂ ಊಹಾಪೋಹ, ಕಲ್ಪನೆ, ಭ್ರಮೆ ಮತ್ತು ಅಂತೆ-ಕಂತೆಗಳ ಜೋಡಣೆಯಲ್ಲಿ ಸ್ಪಷ್ಟವಾಗುವ ಅಥವಾ ಅಸ್ಪಷ್ಟವಾಗುವ ಮನಸ್ಸಿನ ಅನುಮಾನಗಳಷ್ಟೇ. ಇಲ್ಲಿ ಕೆಲಸದಾಕೆ - ಈಕೆಯೇ ಕೊನೆಗೆ ಆಪ್ತ ಸಖಿ ಕೂಡ ಆಗಿಬಿಡುವ ಅನಿವಾರ್ಯವೊಂದನ್ನು ಗಮನಿಸುತ್ತ - ಆಡುವ ಒಂದು ಮಾತು ಇದ್ದಕ್ಕಿದ್ದಂತೆ ಅಂತರಾಳವನ್ನು ತಡಕತೊಡಗುತ್ತದೆ. ನೈಜೀರಿಯಾದಲ್ಲಿ ಒಂಟಿಯಾಗಿರುವ ತನ್ನ ಗಂಡ ಕಡುನಿಷ್ಠೆಯ ಬ್ರಹ್ಮಚಾರಿಯಾಗಿರಲಿಕ್ಕಿಲ್ಲ ಎಂಬ ಸತ್ಯವೊಂದು ಯಾವುದೇ ಚಾಡಿಮಾತನ್ನು ಕೇಳುವ ಮೊದಲೂ ಮನಸ್ಸಿಗೆ ನಿಜಕ್ಕೂ ಗೊತ್ತಿರಲಿಲ್ಲವೇ ಎಂದು ಕೇಳುತ್ತಾಳೆ ಅವಳು. ಇವಳು ಉತ್ತರಿಸುವುದಿಲ್ಲ. ಇಂಥ ಪ್ರಶ್ನೆಗಳಿಗೆ ಬಹಿರಂಗದಲ್ಲಿ ಕೊಡುವ ಉತ್ತರಗಳಿರುವುದಿಲ್ಲ. ಅಂತರಂಗದಲ್ಲಿ ಕೇಳಿಕೊಳ್ಳಬೇಕಾದವು ಅವುಗಳು. ಅಲ್ಲಿಯೂ ಉತ್ತರವೇ ಮುಖ್ಯವೆಂದು ಹಠ ಹಿಡಿದರೆ ಸ್ವಸಮರ್ಥನೆಯ ಅಹಂ ಅಡ್ಡಬರಬಹುದಾದ ಸ್ಥಿತಿ! ಬರೇ ಪ್ರಶ್ನೆಗಳಾಗಿದ್ದರೇ ಒಳಿತು!

ಪ್ರಶ್ನೆಯಲ್ಲಿ ಮನಸ್ಸು ಬೇಯುತ್ತದೆ. ಸುಪ್ತಮನಸ್ಸಿಗೆ ಗೊತ್ತಿರುವ ಸತ್ಯವೊಂದು ಜಾಗೃತಾವಸ್ಥೆಯಲ್ಲಿ ಸಶಬ್ದವಾಗಿಯೋ, ಸಚಿತ್ರವಾಗಿಯೋ ಕಣ್ಮುಂದೆ ಪ್ರತ್ಯಕ್ಷಗೊಂಡರೆ ಅದನ್ನು ಎದುರಿಸಲು ಪ್ರಕ್ಷುಬ್ದಗೊಳ್ಳುವ, ವಿಲಕ್ಷಣವಾಗಿ ಸ್ಪಂದಿಸುವ ವೈಚಿತ್ರ್ಯವನ್ನು ಕತೆ ಸ್ವಲ್ಪದರಲ್ಲಿ ಹಾದು ಬರುತ್ತದೆ.

"ತನ್ನ ಪಾತ್ರಗಳು ಪರಿಸ್ಥಿತಿಯ ತುರ್ತಿಗೆ ಸ್ಪಂದಿಸಬೇಕೆಂದು ಬಯಸುತ್ತೇನೆ. ಪ್ರತಿಯೊಂದರ ಕುರಿತೂ ಅವು ಪ್ರಜ್ಞಾಪೂರ್ವಕ ಸ್ಪಂದಿಸಬೇಕಿಲ್ಲ. ನಾವು, ಮನುಷ್ಯರು ಇರುವುದು ಹೀಗೆಯೇ ಅಂದುಕೊಳ್ಳುತ್ತೇನೆ. ಅಲ್ಲದೆ ನನ್ನ ಓದುಗರನ್ನು, ಸ್ವತಃ ನನ್ನನ್ನು ತೀರಾ ಮನೋವಿಶ್ಲೇಷಕ ಪಾತ್ರಗಳಿಂದ ಬೋರು ಹೊಡೆಸುವುದು ಕೂಡ ನನಗಿಷ್ಟವಿಲ್ಲ"

ಚಿತ್ರವನ್ನು ನೋಡುತ್ತಿರುವಂತೆ ತಮ್ಮ ನಿರೂಪಣೆ ಒಂದು ಅಂತರದಿಂದ ಸಾಗುತ್ತಿರುತ್ತದೆ, ಪಾತ್ರದ ಒಳಹೊಕ್ಕು ವಿಶ್ಲೇಷಿಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸುತ್ತ ಚಿಮಾಮಾಂಡಾ ಹೀಗೆ ಹೇಳಿದ್ದರು. ಆದರೆ ಅವರ ಪಾತ್ರಗಳು ತಾರ್ಕಿಕ ವಿಶ್ಲೇಷಣೆಯ ವ್ಯಾಪ್ತಿಯಿಂದ ಹೊರತಾಗಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಆದರೆ ಈ ವಿಶ್ಲೇಷಣೆಯ ವಿಧಾನ ಮಾತ್ರ ಬೇರೆ, ಅದ್ವಿತೀಯ ಬಗೆಯದು. ಚಿಮಾಮಾಂಡ ಅವರ ಕತೆಗಳಿಗಿಂತ ಕಾದಂಬರಿಗಳಲ್ಲಿ ಇದು ನಮಗೆ ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತದೆ. ಒಂದು ಮೌನ, ಒಂದು ಕೊಂಕು, ಒಂದು ಪುಟ್ಟ ಆಸೆಯಲ್ಲಿ ಅವರು ಪಾತ್ರದ ಅಂತರಂಗದ ಅಮೂರ್ತ ತುಮುಲವನ್ನು ಯಶಸ್ವಿಯಾಗಿ ನಮ್ಮ ಅಂತರಂಗಕ್ಕೆ ದಾಟಿಸಿಬಿಡುತ್ತಾರೆ. ಫಿಲಾಸಫಿಯಿಲ್ಲ, ಮೊನಾಲಾಗ್ಸ್ ಇಲ್ಲ. ಹೆಚ್ಚಾಗಿ ಮುಗ್ಧ ಮನಸ್ಸಿನ ಸಣ್ಣಪುಟ್ಟ ಆಸೆಗಳೇ ಆ ವ್ಯಕ್ತಿತ್ವ ಹೇಗೆ ಯೋಚಿಸುತ್ತಿರಬಹುದೆಂಬುದನ್ನು ನಮಗೆ ಕಾಣಿಸಿರುತ್ತದೆ. ಓದುಗ ಒಂದು ಪಾತ್ರದೊಂದಿಗೆ ತನ್ನ ಅನುಸಂಧಾನ ಮಾಡಿಕೊಳ್ಳಲು ಬೇಕಾದಷ್ಟು ವಿವರಗಳನ್ನು ಕೊಟ್ಟ ಮೇಲೆ ಬಹುಷಃ ಹೆಚ್ಚಿನ ವಿಶ್ಲೇಷಣೆ ಕೂಡ ಅನಗತ್ಯ. ಅದೊಂದು ತರದ ಹೇರಿಕೆ ಕೂಡ ಆಗಬಹುದು.

ಇಲ್ಲಿ ಈ ಪಾತ್ರ, ತನ್ನ ಪತಿ ಸಂಸಾರದ ವಲಯದಿಂದ ಹೊರಹೋಗಬಹುದು, ದೂರವಾಗಿ ಬಿಡಬಹುದು ಎಂಬ ಭಯ ಕೇವಲ ಆತನ ಪ್ರೀತಿಯನ್ನು, ನಿಷ್ಠೆಯನ್ನು ಕಳೆದುಕೊಳ್ಳುವ ಭಯವಾಗಿ ಉಳಿದಿಲ್ಲ ಎಂಬ ದೊಡ್ಡ ಸತ್ಯವನ್ನು ಕೆಲಸದವಳ ಪ್ರಶ್ನೆ ಬಟಾಬಯಲು ಮಾಡಿಡುತ್ತದೆ. ಇಲ್ಲಿರುವುದು ಪಾವಿತ್ರ್ಯದ ಪರಿಕಲ್ಪನೆ ಕೂಡ ಅಲ್ಲ. ಇಲ್ಲಿ ತಳಮಳವನ್ನನುಭವಿಸುತ್ತಿರುವ ಹೆಣ್ಣುಮಗಳಿಗೆ ಅಂಥ ನಿರೀಕ್ಷೆಗಳಿರಲು ಕಾರಣವಿಲ್ಲವೆಂಬುದನ್ನು ಅವಳ ಹಿನ್ನೆಲೆಯೇ ಹೇಳುತ್ತದೆ. ಇನ್ನುಳಿದಿರುವುದು ಸೂಕ್ಷ್ಮ ವ್ಯಾವಹಾರಿಕ ಭಯ! ವಾಸ್ತವವಾಗಿ ಕತೆ, ಕೆಲಸದವಳ ಪ್ರಶ್ನೆ ಬೆಟ್ಟು ಮಾಡಿ ತೋರಿಸುತ್ತಿರುವುದು ಇದನ್ನೇ. ವ್ಯಾವಹಾರಿಕ ಮದುವೆ, ವ್ಯಾವಹಾರಿಕವಾಗಿ ಅವರು ಬೇರೆ ಬೇರೆ ಉಳಿಯುವುದು ಮತ್ತು ವ್ಯಾವಹಾರಿಕವಾಗಿಯೇ ಈಕೆ ಮತ್ತೆ ನೈಜೀರಿಯಾದ ಗಂಡನ ಮನೆಯ ಬೆಡ್‌ರೂಮಿನಲ್ಲಿ ಬೇರೊಂದು ಹೆಣ್ಣು ಮಲಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.

ಕನ್ನಡದಲ್ಲೂ ಇಂಥ ಗಂಡು ಹೆಣ್ಣು ಸಂಬಂಧ ಕಗ್ಗಂಟಾದ ಲೆಕ್ಕವಿಲ್ಲದಷ್ಟು ಕತೆಗಳು ಬಂದಿವೆ. ಮ್ಯಾಗಝೀನ್ ಕತೆಗಳಿಂದ ಹಿಡಿದು ಉತ್ತಮ craftsmenshipಹೊಂದಿದ್ದ ಮಹತ್ವಾಕಾಂಕ್ಷೆಯ ರಚನೆಗಳ ವರೆಗೆ ಈ ವಸ್ತು ಬಳಕೆಯಾಗಿದ್ದಿದೆ. ಚಿಮಾಮಾಂಡ ಅದನ್ನು ಕೇವಲ ಮನಸ್ಸಿನ ಹಳಹಳಿಕೆಯಾಗಿಯೋ, ಆತ್ಮಾನುಕಂಪದ ಭಾವುಕ ಚಿತ್ರಣವನ್ನಾಗಿಯೋ ಮಾಡಿ ಕೈತೊಳೆದುಕೊಳ್ಳುವುದಿಲ್ಲ ಎನ್ನುವುದನ್ನು ಗಮನಿಸಬೇಕು.

A Private Experience ಕೋಮು ಗಲಭೆಯ ಹಿನ್ನೆಲೆಯುಳ್ಳದ್ದು. ಸಾದತ್ ಹಸನ್ ಮಂಟೋರಾದಿಯಾಗಿ, ಭೀಷ್ಮ ಸಹಾನಿ, ಅಮೃತಾ ಪ್ರೀತಂ ಮುಂತಾದವರು ಸೇರಿ ಹಲವಾರು ಕತೆಗಾರರು ಕೋಮು, ಜಾತಿ ಅಥವಾ ಧರ್ಮದ ನಡುವೆ ನಡೆಯುವ ಸಂಘರ್ಷ ಮತ್ತು ಆ ಸಂಘರ್ಷದ ನೆರಳಲ್ಲೇ ಅರಳುವ ಮಾನವೀಯತೆಯನ್ನು ಚಿತ್ರಿಸುವ ವಸ್ತುವನ್ನಿಟ್ಟುಕೊಂಡು ಬರೆದಿದ್ದಾರೆ. ದೇಶ ವಿಭಜನೆಯಿಂದ ತೊಡಗಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ವರೆಗೆ ನಮ್ಮ ದೇಶ ಇಂಥ ಕತೆಗಳಿಗೆ ಫಲವತ್ತಾದ ವೇದಿಕೆ ಕೂಡ ಒದಗಿಸಿದೆ. ಚಿಮಾಮಾಂಡಾ ಕತೆಯಲ್ಲಿರುವ ವಿಶೇಷವೇನು ಎಂಬುದನ್ನು ಗಮನಿಸಬೇಕು.

ಇಲ್ಲಿನ ಒಂದು ಪಾತ್ರ ವಯಸ್ಕ ಹೆಂಗಸಿನದ್ದು, ಇನ್ನೊಂದು ಹರೆಯದ ಹುಡುಗಿಯದ್ದು. ಈ ಹುಡುಗಿ ತನಗೆ ಗೊತ್ತಿಲ್ಲದ್ದನ್ನೂ ಗೊತ್ತಿಲ್ಲ ಎಂದು ಹೇಳಿಕೊಳ್ಳಲಾರದ ಬಿಗುಮಾನವುಳ್ಳ ತಾರುಣ್ಯದ ಮನೋಭೂಮಿಕೆಯದ್ದಾದರೆ ಹೆಂಗಸು ಮುಗ್ಧೆ ಮತ್ತು ತನ್ನದೇ ದೈನಂದಿನ ವ್ಯವಹಾರ, ದಿನದ ಖರ್ಚುವೆಚ್ಚ, ಸಂಪಾದನೆ, ಆರೋಗ್ಯದ ಸಮಸ್ಯೆ ಇತ್ಯಾದಿಗಳಲ್ಲಿ ವ್ಯಸ್ತಳಾದ ಮಹಿಳೆ. ಈಕೆಯಲ್ಲಿ ನಾಗರಿಕ ಮಾನದಂಡದ ಸಭ್ಯತೆಯ ಹೆಸರಿನ ನಾಟಕೀಯತೆಯಿಲ್ಲ. ಈ ಇಬ್ಬರು ಅಚಾನಕವಾಗಿ ಸ್ಫೋಟಿಸಿದ ಕೋಮು ಗಲಭೆಗೆ ಬೆದರಿ ಅಂಗಡಿಯೊಂದರ ಅಟ್ಟವನ್ನೇರಿ ಅಡಗಿಕೊಂಡಲ್ಲಿ ಒಂದಾದವರೇ ಹೊರತು ಇಬ್ಬರ ಮುಖಾಮುಖಿಗೆ ಬೇರಾವುದೇ ಕಾರ್ಯಕಾರಣ ಸಂಬಂಧವಿಲ್ಲ. ಇಷ್ಟಲ್ಲದೆ ಈ ಹುಡುಗಿ ಕೇಂದ್ರವಾಗಿದ್ದುಕೊಂಡು ಇಡೀ ಪ್ರಕರಣವನ್ನು ನಮಗೆ ಕಾಣಿಸುತ್ತಿರುವುದು ಇದೆಲ್ಲ ನಡೆದ ತುಂಬ ಕಾಲದ ಬಳಿಕ. ಅದೇ ದಿನ ಇವಳೊಂದಿಗೇ ಪೇಟೆಗೆ ಬಂದಿದ್ದ ಅಕ್ಕ ಎಂದೆಂದಿಗೂ ಸಿಗದೇ ಹೋದ ತುಂಬ ಕಾಲದ ಬಳಿಕ. ಆದರೆ ವಿಚಿತ್ರ ಗಮನಿಸಿ, ಇಡೀ ಕಥಾನಕ ನಮಗೆ ಒಂದು ನೆನವರಿಕೆಯಾಗಿ ಕಾಣದೆ, ಇದೀಗ ನಡೆಯುತ್ತಿರುವುದು ಎಂಬಂತೆ ಇದೆ. ನಡುನಡುವೆ ಎಂದೂ ಸಿಗದೇ ಹೋದ, ಬಹುಷಃ ಅದೇ ದಿನ, ಇವರು ಅಲ್ಲಿ ಕುಳಿತಿದ್ದ ಹೊತ್ತಿಗಾಗಲೇ ಮೃತಳಾಗಿದ್ದ ಅಕ್ಕನ ಉಲ್ಲೇಖವಿದೆ, ಅವಳ ಕ್ರಾಂತಿಕಾರತನದ ನೆನಪುಗಳಿವೆ. ಎಲ್ಲವನ್ನೂ ಮೀರಿ ಈ ನೆನವರಿಕೆಯಾಗಲೊಲ್ಲದ ನೆನವರಿಕೆಯಲ್ಲಿ ಒಂದು ಆಳವಾದ ಮೌನವಿದೆ. ಅದು, ನಾವದನ್ನು ತಲುಪುವುದೇ ಕಷ್ಟವಾಗಬಹುದಾದಷ್ಟು ಆಳವಾಗಿದೆ.

ಈ ತಂತ್ರ, ಭೂತವನ್ನು ವರ್ತಮಾನದ ನೆಲೆಯಲ್ಲಿ ಹೇಳುತ್ತ ಭವಿಷ್ಯತ್ತಿನ ಒಂದು ಸಂಗತಿಯನ್ನು ಈ ಭೂತಕಾಲದ ವರ್ತಮಾನಕ್ಕೆ ಜೋಡಿಸಿ ವರ್ತಮಾನವನ್ನು ಅಸಂಗತಗೊಳಿಸುತ್ತ ಹೋಗುವ ತಂತ್ರ ತೀರ ಹೊಸತರದ್ದು.

ಆವತ್ತು ಅಂಗಡಿಯ ಅಟ್ಟದ ಕತ್ತಲಲ್ಲಿ ಉಸಿರು ಬಿಗಿಹಿಡಿದು ಕೂತು ಕಳೆದ ಕ್ಷಣಗಳಲ್ಲಿ, ಹಠ ಹಿಡಿದು ಬೀದಿಗಿಳಿದಿದ್ದ ಕೆಲವೇ ನಿಮಿಷಗಳಲ್ಲಿ ಕಂಡ ಅರೆಸುಟ್ಟ, ಚಿಂದಿ ಚಿಂದಿಯಾದ ಮಾನವ ದೇಹಗಳು ಹುಟ್ಟಿಸಿದ ನಡುಕದಲ್ಲಿ, ತನ್ನ ಗಾಯಕ್ಕೆ ಕಟ್ಟಿದ ಈರುಳ್ಳಿ ಮಾರುವವಳ ಸ್ಕಾರ್ಪಿನ ತುಂಡಿನಲ್ಲಿ, ಅವಳ ಹರಯದ ಮಗಳು ಹಾಲೀಮಾ ಮತ್ತು ಇವಳ ಅಕ್ಕ ಎನ್ನೆದಿ ಇಬ್ಬರ ಪರಿಸ್ಥಿತಿಯ ಕುರಿತೂ ಹೆಪ್ಪುಗಟ್ಟಿದ್ದ ಆತಂಕಕ್ಕಿರುವ ಸಾಮ್ಯತೆಯಲ್ಲಿ ಈ ಆಳ ನಮ್ಮನ್ನು ತಟ್ಟಿಯೇ ತಟ್ಟುತ್ತದೆ. ಯಾಕಂದರೆ, ಚಿಮಾಮಾಂಡಾಗಿರುವ ನಂಬಿಕೆಯಂತೆಯೇ, ಮಾತು, ವಿಶ್ಲೇಷಣೆ, ವಿವರಣೆಗಳನ್ನೆಲ್ಲ ಮೀರಿದ ಮೌನವೊಂದು ಈ ಕತೆಯಲ್ಲಿ ಅಂತರ್ಗತವಾಗಿದೆ ಮತ್ತು ಅದು ನಮ್ಮ ಅಂತರಂಗವನ್ನು ತುಂತುಂಬಿ ಕಲಕುತ್ತದೆ.

Ghosts ಕತೆ ಈ ಸಂಕಲನದ ಇನ್ನೊಂದು ಪ್ರಮುಖ ಕತೆ. ಒಂದರ್ಥದಲ್ಲಿ ಈ ಕತೆ ಇನ್ನೂ ಕೆಲವು ಕತೆಗಳಂತೆಯೇ ಚಿಮಾಮಾಂಡರ ಕಾದಂಬರಿ Half of a Yellow Sunಗೆ ನಡೆಸಿದ ಪೂರ್ವಭಾವಿ ಸಿದ್ಧತೆಯಾಗಿದೆ. ಹಾಗೆಯೇ ಈ ಕತೆ ಕೂಡ 1967ರ ಬೀಯಾಫ್ರ - ನೈಜೀರಿಯಾ ಅಂತರ್ಯುದ್ಧದ ಸುತ್ತ ಹೆಣೆದುಕೊಂಡಿದೆ. ಈ ಕತೆಯಲ್ಲಿಯೂ ಕಾಲ ಹಿಂದೆ ಮುಂದೆ ಚಲಿಸುವಲ್ಲಿ ನಿಶ್ಚಿತ ನಿಯಮವಿಲ್ಲದಿದ್ದರೂ ಈ ಕತೆಯ ತಂತ್ರ ಈ ಹಿಂದಿನ A Private Experienceನದ್ದಲ್ಲ. ಇದು ಅದಕ್ಕಿಂತಲೂ ಮಾರ್ಕ್ವೆಜ್‍ನ ಕಾದಂಬರಿಗಳಲ್ಲಿ ನಾವು ಕಾಣಬಹುದಾದ ತಂತ್ರಗಳಿಗೆ ಹೆಚ್ಚು ಹತ್ತಿರವಿದೆ. ಈ ಕತೆಗೆ ಒಂದು ಕಥಾನಕದ ಚೌಕಟ್ಟಿಗಿಂತ ಹೆಚ್ಚಿನ ವ್ಯಾಪ್ತಿಯಿರುವುದರಿಂದ ಇದು ಕಾದಂಬರಿಯೊಂದರ ಅಧ್ಯಾಯದಂತೆಯೇ ಕಂಡರೆ ಅಚ್ಚರಿಯಿಲ್ಲ. ಆಂತರಿಕ ಕ್ರಾಂತಿ ಮತ್ತು ಅದನ್ನು ದಮನಿಸುವ ಸೈನಿಕ ಕಾರ್ಯಾಚರಣೆಯ ನಡುವೆ ಸತ್ತಿರಬಹುದೆಂದು ನಂಬಲಾಗಿದ್ದ ವ್ಯಕ್ತಿಯೋರ್ವ ಇದ್ದಕ್ಕಿದ್ದಂತೆ ಕಾಣಿಸಿಕೊಂಡಂತಾಗಿ, ಹಾಗೆ ಕಾಣಿಸಿಕೊಂಡಿದ್ದು, ಮಾತನಾಡಿದ್ದು ಎಲ್ಲವೂ ಒಂದು ಭ್ರಮೆಯಿರಬಹುದೇ, ತನ್ನದೇ ಸುಪ್ತ ಮನಸ್ಸಿನ ಪಾತ್ರದೊಂದಿಗೆ ತಾನೇ ನಡೆಸಿದ ಹಳಹಳಿಕೆಯಿರಬಹುದೇ ಎಂಬಂಥ ಮ್ಲಾನ ನೆಲೆಯಲ್ಲೇ ಸಾಗುವ ಸಂಭಾಷಣೆಯಲ್ಲಿ ಈ ಕತೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಅವರಿಬ್ಬರೂ ಪರಸ್ಪರ ಹಂಚಿಕೊಳ್ಳುವ ನೆನಪುಗಳಲ್ಲಿಯೇ ಸೈನಿಕ ಕಾರ್ಯಾಚರಣೆಯ ದಿನದ ಬಾಂಬು, ಶೆಲ್ಲು ದಾಳಿ, ಕವಿದ ಹೊಗೆಯ ನಡುವೆ ಬೇಡ ಬೇಡವೆಂದರೂ ಕೇಳದೆ ಮಾಯವಾದ ಇಕೆನ್ನಾ ಒಕಾರೊ ಇದೀಗ ಎಷ್ಟೋ ವರ್ಷಗಳ ಬಳಿಕ ಕಾಣಿಸಿಕೊಂಡಿದ್ದಾನೆ. ನೆನಪುಗಳು ವರ್ತಮಾನವನ್ನು ಸಂಧಿಸುವ ಕ್ಷಣದಲ್ಲೇ ಕಥಾನಕದ ಸದ್ಯ-ಸತ್ಯ ಇರುವುದು. ಪರಸ್ಪರರ ನೆನಪುಗಳಲ್ಲಿ ಪ್ರೀತಿಪಾತ್ರರ ಸಾವಿನ ಹೊಗೆಯಿದೆ. ಕಳೆದುಕೊಂಡ ಮಕ್ಕಳ ಶವಗಳಿವೆ. ಮಣ್ಣಾದ ಅವರ ಕನಸು, ನಗು, ತೊದಲು ಮಾತುಗಳಿವೆ. ಬರ್ತ್‌ಡೇಯ ನೆನಪುಗಳು, ತಮಾಷೆಯ ಪ್ರಸಂಗಗಳಿವೆ. ಮತ್ತೆ ಎಂದಿನಂತೆಯೇ ಈ ಎಲ್ಲದರ ಆಚೆ ಸ್ಥಾಯಿಯಾಗಿ ನಿಲ್ಲುವ ಮೌನ ಮತ್ತು ಏಕಾಂತಗಳಿವೆ.

On Monday Last Week ಒಂದು ಸನ್ನಿವೇಶವೇ ಕಥಾನಕವಾಗುವ, ತಂತ್ರವೇ ಮೌನವಾಗಿ ಹೇಳದೇ ಉಳಿಸಿರುವ ಕತೆಗಳನ್ನು ಉಸುರುವ ಕತೆ. ಅಮೆರಿಕದಲ್ಲಿ "ಸೆಟ್ಲ್" ಆಗುವಲ್ಲಿ ಹಿಂದೆಬಿದ್ದ ಗಂಡನನ್ನು ತಡವಾಗಿ ಹಿಂಬಾಲಿಸಿದ ನೈಜೀರಿಯಾದ ಒಬ್ಬ ಯುವತಿ ಅಮೆರಿಕದ ಒಂದು ವಿಲಕ್ಷಣ ಸಂಸಾರದ ಮಗುವಿಗೆ ಪಾರ್ಟ್ ಟೈಂ ಬೇಬಿ ಸಿಟ್ಟರ್ ಆಗಿ ಬರುತ್ತಾಳೆ. ಮಗುವಿನ ತಾಯಿಗೆ ಮಗುವಿನ ಜೊತೆ ಸಮಯ ಕಳೆಯುವುದು, ಅದನ್ನು ನೋಡಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಯಾವುದೋ ಡೆಡ್‌ಲೈನ್ ಇರುವ ಒಂದು ಪ್ರಾಜೆಕ್ಟ್ ಮೇಲೆ ಅವಳು ವ್ಯಸ್ತಳಾಗಿದ್ದಾಳೆ. ಆರ್ಟಿಸ್ಟ್. ಮನೆಯ ತಳಭಾಗದಲ್ಲೇ ಅವಳ ಸ್ಟುಡಿಯೋ ಇದ್ದರೂ ಆಕೆ ಮೇಲ್ಭಾಗದ ಮನೆಗೆ ಭೇಟಿ ನೀಡುವುದೇ ಅಪರೂಪ. ಗಂಡ ಏನನ್ನೋ ಮುಚ್ಚಿಡುತ್ತಿರುವವನಂತೆ, ಜಗತ್ತಿನಲ್ಲಿ ತನ್ನ ಮಗುವೊಂದು ವಿಶೇಷವೆಂಬಂತೆ ವರ್ತಿಸುತ್ತಿರುತ್ತಾನೆ. ಇವರ ನಡುವೆ ಈ ಬೇಬಿಸಿಟ್ಟರ್‌ಗೂ ತನ್ನದೇ ಆದ ಸಾಂಸಾರಿಕ ಗೋಜಲುಗಳಿದ್ದೇ ಇವೆ. ವ್ಯಾವಹಾರಿಕ ಜಗತ್ತಿನಲ್ಲಿ ಯಶಸ್ವಿಯೆನಿಕೊಳ್ಳಲು ಅಮೆರಿಕದಂಥ ಅಮೆರಿಕದಲ್ಲಿ ಹಿಂದೆಬಿದ್ದ ಗಂಡ ಮತ್ತು ಸ್ಪರ್ಧೆಯೊಂದಕ್ಕೆ ಅಣಿಗೊಳಿಸಲ್ಪಡುತ್ತಿರುವ ನಾಲ್ಕರ ಮಗುವಿನ ನಡುವೆ ಎಲ್ಲರೂ ಯಾವುದರೊಂದಿಗೋ ಸ್ಪರ್ಧೆಗೆ ಬಿದ್ದ ಲಕ್ಷಣಗಳು ಕಾಣಿಸುತ್ತಿವೆ.

ಒಮ್ಮೆ ಅಪರೂಪಕ್ಕೆ ಮನೆಯೊಳಕ್ಕೆ ಬಂದ ಆರ್ಟಿಸ್ಟ್ ಈ ಬೇಬಿಸಿಟ್ಟರಳ ಸೌಂದರ್ಯಕ್ಕೆ ಮಾರು ಹೋಗಿ ತನಗೆ ನಗ್ನ ಮಾಡೆಲ್ ಆಗುವಂತೆ ಎಷ್ಟು ಆಗ್ರಹಪೂರ್ವಕ ಒತ್ತಾಯಿಸುತ್ತಾಳೆಂದರೆ, ಈಕೆ ನಿಜಕ್ಕೂ ಮನಸ್ಸು ಮಾಡಿದಾಗ ಅನಾಸಕ್ತಿ ತೋರುತ್ತಾಳೆ ಮಾತ್ರವಲ್ಲ ಮುಂದೊಮ್ಮೆ ಭೇಟಿಯಾದ ಇನ್ನೊಬ್ಬ ಟ್ಯೂಟರ‍್‌ಬಳಿ ಕೂಡ ಹುಬೇಹೂಬ್ ಇವಳ ಸೌಂದರ್ಯ ಹೊಗಳಿದ ರೀತಿಯಲ್ಲೇ ಹೊಗಳುವುದು, ಮಾಡೆಲ್ಲಿಂಗ್‌ಗೆ ಒತ್ತಾಯಿಸುವುದು ಸುರುಮಾಡುತ್ತಾಳೆ! ಕಣ್ಣಿಗೆ ಬಿದ್ದ ಎಲ್ಲ ಹೆಂಗಸರಿಗೂ ಈಕೆ ಹೀಗೆಯೇ ಕರೆ ನೀಡುತ್ತಾಳೆಯೋ, ಈಕೆಯ so called project ಎಂದೆಂದಿಗೂ ಮುಗಿಯಲಾರದ ಒಂದು ಭ್ರಮೆಯೇ ಇರಬಹುದೋ, ತನ್ನ ಮಗುವನ್ನು ಅದು ಮಗು ಎಂಬುದನ್ನೂ ಮರೆತವನಂತೆ ಕಾಳಜಿ ಮಾಡುವ ತಂದೆ ಕೂಡ ಏನನ್ನೋ ಮುಚ್ಚಿಡುತ್ತಿದ್ದಾನೆಯೋ ಎಂದೆಲ್ಲ ಅನಿಸುತ್ತಿರುವಾಗಲೇ ಗಂಡ ಕೈತಪ್ಪಬಹುದೆಂಬ ಆತಂಕದಲ್ಲಿರುವ ಬೇಬಿಸಿಟ್ಟರ್ ಆತನ ಇಚ್ಛೆಗೆ ವಿರುದ್ಧವಾಗಿ ಗರ್ಭಧರಿಸಿದ್ದಾಳೆ ಮಾತ್ರವಲ್ಲ ಅದನ್ನು ಗಂಡನಿಂದ ಮುಚ್ಚಿಟ್ಟಿದ್ದಾಳೆ ಕೂಡ. ಈ ಹಂತದಲ್ಲಿ ಈಕೆ ಒಂದು ಪುಟ್ಟ ಕುಟುಂಬ, ಅದರ ವಿಲಕ್ಷಣ ರೀತಿ, ಅದರ ಪ್ರತಿಫಲವನ್ನು ಅನುಭವಿಸುತ್ತಿರುವ ಮಗು ಮತ್ತು ತಾನು ಅದನ್ನು ನೋಡಿಕೊಳ್ಳುತ್ತಿರುವ ಚೋದ್ಯದಲ್ಲಿ ಸಿಲುಕಿದ್ದಾಳೆ. ಹಲವು ಬಗೆಯ ತಲ್ಲಣಗಳಿಗೆ ಸಿಲುಕಿದ ಈಕೆ ಮುಖಾಮುಖಿಯಾಗುವ ಸನ್ನಿವೇಶಗಳೇ ಈ ಕತೆಯನ್ನು ರೂಪಿಸಿವೆ.

Jumping Monkey Hill ಕತೆಗಾರಿಕೆಯ ಕುರಿತಾಗಿಯೇ ಇರುವ ಕತೆಯೆನ್ನಬಹುದು. ಗುಂಪುಗಾರಿಕೆ, ಪ್ರಶಸ್ತಿ-ಬಹುಮಾನಗಳ ರಾಜಕೀಯ ಮತ್ತು ಕತೆಗಾರಿಕೆಯ ಕುರಿತ Theory and Practice ಕುರಿತ ಮಿಥ್ಯೆ ಇಲ್ಲಿ ಚರ್ಚೆಗೆ ಒಳಪಡುತ್ತಿರುವ ಸಂದರ್ಭದಲ್ಲೇ ನಿಜ ಜೀವನದ ವಾಸ್ತವ ಮತ್ತು ಕಥಾನಕದಲ್ಲಿ ಬಿಂಬಿಸಲ್ಪಡುವ ವಾಸ್ತವ ಎರಡರ ತುಲನೆ ಕೂಡ ನಡೆಯುತ್ತದೆ. ಕಥಾನಕದ ಸೀಮಿತ ಚೌಕಟ್ಟಿನಲ್ಲಿ ಕಟ್ಟಿಕೊಡುವ ವಾಸ್ತವ ಕೂಡ ಒಂದು ಸುಳ್ಳೇ ಎಂಬುದನ್ನು ಒಪ್ಪಿಕೊಂಡೂ ಅದು ಹೇಗೆ ನಿಜಜೀವನದ ವಾಸ್ತವವನ್ನು ಆದಷ್ಟೂ ಸಮೃದ್ಧವಾಗಿ ಮತ್ತು ಸಾಂಕೇತಿಕವಾದ ಕ್ರೋಢೀಕೃತ ರೂಪದಲ್ಲಿ ಹಿಡಿದಿಡಲು ಪ್ರಯತ್ನಿಸುತ್ತದೆ ಎಂಬುದನ್ನು ಎಲ್ಲರೂ ಬಲ್ಲರು. ಆದರೆ ಇದೇ ಕಾರಣಕ್ಕೆ ಅದನ್ನು ವಾಸ್ತವದಿಂದ ದೂರ ಎಂದೂ ಸಾಧಿಸಲು ಸಾಧ್ಯವಿರುವುದು ಕಥಾಜಗತ್ತಿನ ಮಿತಿ.

ಇಲ್ಲಿ ಕೇಂದ್ರ ಪಾತ್ರವಾಗಿರುವ ಕತೆಗಾರ್ತಿ ತನ್ನ ತಂದೆ-ತಾಯಿಯರ ದಾಂಪತ್ಯದ ವಿರಸ-ವಿಘಟನೆಯ ಪರಿಣಾಮವನ್ನು ಬದುಕಿನಲ್ಲಿ ಒಂದು ನೆಲೆಕಾಣಬೇಕೆನ್ನುವ ತನ್ನ ತುರ್ತುಗಳೆದುರು ಎದುರಿಸುವ ಸೋಲುಗಳಲ್ಲಿ ಕಾಣುವಂತಾಗುವುದು ನೋವಿನ ವಿದ್ಯಮಾನ. ಈ ನೋವಿನ ಜೊತೆ ಜೊತೆಗೇ ಕಂಪೆನಿಗಳು ತಮ್ಮ ಮಾರ್ಕೆಟಿಂಗ್ ಟೆಕ್‌ನಿಕ್‌ಗಳಲ್ಲಿ ಕೆಲಸಕ್ಕಿರುವ ಹುಡುಗಿಯರ ಲೈಂಗಿಕ ಶೋಷಣೆಯನ್ನೂ ಸೇರಿಸಿಕೊಂಡಿರುವುದು ಮತ್ತದನ್ನು ನೌಕರಿಯ ತುರ್ತಿನಲ್ಲಿರುವವರು ಸಹಜವೆಂದು ಸ್ವೀಕರಿಸಿರುವುದನ್ನು ಕಂಡು ಬೆಚ್ಚಿಬಿದ್ದವಳು. ವಿಚಿತ್ರವೆಂದರೆ ಕಲೆ-ಸಾಹಿತ್ಯದ ವಲಯದಲ್ಲೂ ಹೆಣ್ಣನ್ನು ಮಾನ್ಯ ಮಾಡಬೇಕಿದ್ದರೆ ಅಂಥ ನಿರೀಕ್ಷೆಯನ್ನೇ ಎದುರಿಸಬೇಕಾಗುತ್ತದೆಂಬ ಸತ್ಯ ಈಕೆಗೆ ಎದುರಾಗುವುದು. ಇದೊಂದು ಸಾರ್ವತ್ರೀಕರಿಸಲಾಗದ ಅನುಭವವೇ ಇರಬಹುದು. ಆದರೆ ಅಷ್ಟಕ್ಕೇ ಅದನ್ನು ಸತ್ಯಕ್ಕೆ ದೂರವಾದದ್ದು, ಅವಾಸ್ತವಿಕವಾದದ್ದು ಎಂದು ಸಾಧಿಸಲು ಹೊರಟ ಕ್ರಿಯೆ ಕೂಡ ಈ ಲೈಂಗಿಕ ಶೋಷಕನ ಸಮರ್ಥನೆಯ ಧಾಟಿಯಲ್ಲಿರುತ್ತದೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ! ಇಲ್ಲಿ ಕಥೆ ಮತ್ತು ವಿಮರ್ಶೆ ಎರಡೂ ಹಾದಿಗೆಡುತ್ತಿವೆ.

ತಿಳಿದೋ ತಿಳಿಯದೆಯೋ ಸ್ತ್ರೀಮತವನ್ನು ಎತ್ತಿಹಿಡಿಯುವ ಇಂಥ ಕತೆಗಳು ಸ್ವತಃ ಪುರುಷಪ್ರಧಾನ ವ್ಯವಸ್ಥೆ ಎಂದು ಇವರು ತಿಳಿಯುವ-ಕಾಣುವ-ಚಿತ್ರಿಸುವ ಅದೇ ಜಗತ್ತಿನ ಪುರುಷನ ಕುರಿತು ಕೂಡಾ ಅಷ್ಟೇನೂ ಮೃದುವಾಗಿಲ್ಲ ಎಂಬುದನ್ನು ತತ್ಕಾಲಕ್ಕೆ presumed absent ಎಂದು ಸ್ವೀಕರಿಸಿದ ಆರೋಪಕ್ಕೆ ಸಿಲುಕುತ್ತಾರೆ. ಬ್ರಾಹ್ಮಣರನ್ನು ದೂರುವ ದಲಿತರು, ಕೋಮುವಾದಿಗಳನ್ನು ದೂರುವ ವಿಚಾರವಾದಿಗಳು ಮತ್ತು ಮುಸ್ಲಿಮರೆಲ್ಲ ಭಯೋತ್ಪಾದಕರೇ ಎಂಬ ಧರ್ತಿಯಲ್ಲಿ ಮಾತನಾಡುತ್ತಿರುವಂತೆ ಕಾಣುವ ಹಿಂದೂ ಮೂಲಭೂತವಾದಿಗಳು ಎಲ್ಲರೂ ಎದುರಿಸುವ ಅಪಾಯವಿದು. ಯಾರೂ ತಮ್ಮ ತಮ್ಮ ತತ್ವ-ನಂಬುಗೆ-ಆದರ್ಶದ ಇನ್ನೊಂದು ಮುಖವನ್ನು ಕಂಡೇ ಇಲ್ಲದ ಕುರುಡರಲ್ಲ. ಕತೆ ಹಿಡಿಯುವ ಅನಿವಾರ್ಯ ಧಾಟಿಯಲ್ಲೇ ಅದು ಅದರ ಮಿತಿಯ ವಲಯವನ್ನು ಹೊಕ್ಕು ಬಿಡುತ್ತದೆ.

ಇನ್ನು ವಿಮರ್ಶೆಯ ನೆಲೆಯೇ ಇಲ್ಲಿ ಶುದ್ಧವಿಲ್ಲ. ಅದು ಲಿಂಗ ಪ್ರೇರಿತ, ಧನ ಪ್ರೇರಿತ, ಸ್ಥಾನ-ಮಾನ ಪ್ರೇರಿತವಾದ ಮೇಲೆ ಅದರ ಪಾವಿತ್ರ್ಯವೇ ಹೊರಟು ಹೋಗಿದೆ. ಆದರೆ ಕತೆ ಭಾವುಕತೆಗೆ ನೀಡಿದ ಕೊಂಚ ಹೆಚ್ಚೆನಿಸಿದ ಒತ್ತಿನಿಂದ ಸೊರಗಿದೆ.

The Thing Around Your Neck ಅತ್ಯಂತ ಸಂತುಲಿತವಾಗಿ ಮೂಡಿ ಬಂದಿರುವ ಒಂದು ಅತ್ಯುತ್ತಮ ಕತೆ. ಈ ಕತೆ ಎಲ್ಲ ವಿಧದಲ್ಲೂ ತುಂಬ ಸೂಕ್ಷ್ಮವಾಗಿದೆ.

ಇಡೀ ಕತೆ ನೀನು ಈ ತರ ಕಲ್ಪಿಸಿದೆ, ನಿರೀಕ್ಷಿಸಿದೆ, ಕನಸಿದೆ ಆದರೆ ಆಗಿದ್ದು ಈ ತರ, ಆಗುತ್ತಿರುವುದು ಹೀಗೆ, ಹೀಗೆಲ್ಲ ಆಗುತ್ತಿದೆ ಎಂಬ ಧಾಟಿಯಲ್ಲಿರುವುದು ಕೂಡ ಈ ಕಥೆಯ ಇನ್ನೊಂದು ವೈಶಿಷ್ಟ್ಯ. ನನ್ನ ನೋವನ್ನು ಕಾಣುವ ಒಂದು ಅಂತರಕ್ಕಾಗಿಯೇ ನಾನು ನನ್ನಿಂದ ಹೊರನಿಂತು ನನ್ನನ್ನೇ ನೀನು ಎಂದು ಊಹಿಸುತ್ತ ಮಾತನಾಡಿದಂತಿದೆ ಈ ವಿಧಾನ. ಕೊಂಚ ಹಳಿತಪ್ಪಿದರೂ ಆತ್ಮಾನುಕಂಪವೋ, ಆತ್ಮರತಿಯೋ ಆಗಬಹುದಾದ ಅಪಾಯದ್ದು. ಆದರೆ ಕತೆ ಅದರಿಂದ ಸುಲಲಿತ ಪಾರಾಗಿದೆ.

ತೀರ ಮುಗ್ಧ ಎನ್ನಬಹುದಾದ ಒಂದು ಮನಸ್ಥಿತಿಯಲ್ಲಿ ಅಮೆರಿಕಕ್ಕೆ ಬಂದ ಈಕೆ ತನ್ನ ಅಂಕಲ್‌ನ ಅನುಚಿತ ವರ್ತನೆಗೆ ಹೇಸಿ ಅಲ್ಲಿಂದ ಹೊರಬೀಳುತ್ತಾಳೆ. ಕೆಲಸಕ್ಕೆ ಸೇರುತ್ತಾಳೆ. ಉದ್ದಕ್ಕೂ ಒಂಟಿತನ ಮತ್ತು ಮೌನ ಚಿಮಾಮಾಂಡರ ಇತರ ಕೇಂದ್ರ ಪಾತ್ರಗಳನ್ನೆಂತೋ ಅಂತೆಯೇ ಈಕೆಯನ್ನೂ ಸುತ್ತಿಕೊಳ್ಳುತ್ತದೆ.

‘ಅಮೆರಿಕವನ್ನು ಅರ್ಥಮಾಡಿಕೊಳ್ಳುವುದು ಬಹಳ ಸುಲಭ! ನೀನು ಎಷ್ಟೆಷ್ಟು ಕೊಡುತ್ತೀಯೋ ಅಷ್ಟಷ್ಟು ಹೆಚ್ಚು ಪಡೆಯುತ್ತೀ ಎನ್ನುತ್ತೆ ಅದು! ಸಾಕಷ್ಟು ಕಳೆದುಕೊಳ್ಳಬೇಕಾಗುತ್ತೆ, ನಿಜ! ಆದರೆ ನೀನು ಊಹಿಸಲಾರದಷ್ಟನ್ನು ಅದು ಕೊಡುತ್ತದೆ ನಿನಗೆ!’ ಎಂಬುದು ತತ್ವ. ಅಥವಾ ತರ್ಕ? ತನ್ನವರಿಂದ ಅನುಚಿತ ಅತ್ಯಾಚಾರವನ್ನು ಕಾಣುವಾಗಲೇ ಅಮೆರಿಕದ ಮಂದಿ, ವಿದೇಶೀಯರು ಈಕೆಗೆ ಪ್ರೀತಿ ತೋರಿಸುತ್ತಾರೆ, ಬದುಕಿನ ಪ್ರಶ್ನೆಯನ್ನು ತೀರ ಜಟಿಲವಾಗದಂತೆ ಪೊರೆಯುತ್ತಾರೆ ಕೂಡ.

ಅಮೆರಿಕಕ್ಕೆ ಹೊರಟಾಗ ಗೆಳೆಯ ಗೆಳತಿಯರು, ಬಂಧು ಬಾಂಧವರು ಕೂಡ ನಂಬಿಕೊಂಡಿದ್ದು ಒಂದು ಭವ್ಯ ಕಲ್ಪನೆ, ಕನಸು, ನಿರೀಕ್ಷೆಗಳನ್ನೇ. ಆದರೆ ಅವೆಲ್ಲ ಕೇವಲ ಭ್ರಮೆಗಳಾಗಿದ್ದವು ಎಂಬುದು ಅರಿವಾಗುತ್ತ ಬಂದಂತೆ ಈಕೆ ನೈಜೀರಿಯಾದ ತನ್ನೆಲ್ಲಾ ಗೆಳೆಯರು-ಸಂಬಂಧಿಕರಿಂದ ತಪ್ಪಿಸಿಕೊಂಡವಳಂತೆ ತನ್ನನ್ನು ತಾನು ಒಂಟಿಗೊಳಿಸಿಕೊಳ್ಳುತ್ತ ಸಾಗುತ್ತಾಳೆ. ಪರಕೀಯ ವಾತಾವರಣದ ಅಸಹನೀಯ ಮೌನ ಮತ್ತು ಒಂಟಿತನ ಇನ್ನೇನು ಅಭ್ಯಾಸವಾಗುತ್ತದೆ ಎನ್ನುವಾಗ ಸಿಕ್ಕಿದ ಅಯಾಚಿತ ಪ್ರೀತಿ. ನೀರವ ಒಂಟಿತನದಂತೆಯೇ ಪ್ರೀತಿ ಕೂಡ ಬಂಧನದಂತೆ ಕೊರಳನ್ನು ಸುತ್ತಿಕೊಳ್ಳುವ ತೆಳ್ಳನೆಯ ವಸ್ತುವಿನಂತೆ ಕಾಣುತ್ತದೆಯೆ ಈಕೆಗೆ?

ತಂದೆ ಸತ್ತ ಸಂಗತಿ ತಡವಾಗಿ ತಿಳಿಯುತ್ತದೆ. ಆಗಲೂ ತನ್ನ ತಂದೆ ಅಲ್ಲಿ ಕೊನೆಯುಸಿರಿಗೆ ಶ್ರಮಪಡುತ್ತಿದ್ದಾಗ ತಾನಿಲ್ಲಿ ಪ್ರೇಮದ ಲಹರಿಯಲ್ಲಿದ್ದೆನೆ ಎಂದು ಸಂದರ್ಭವನ್ನು ನೆನೆಯುವ ಈಕೆಗೆ ಪ್ರೀತಿ ಕೂಡ ಪೊರೆಯಲಾಗದ ಹೊರೆಯೇ. ಗ್ರೀನ್‌ಕಾರ್ಡ್‌ಗಾಗಿಯಾದರೂ ಒಂದು ವರ್ಷದೊಳಗೇ ಹಿಂದಿರುಗಬೇಕೆಂಬುದನ್ನು ನೆನಪಿಸುವ ಪ್ರಿಯಕರನಿಂದ, ಅಮೆರಿಕದಿಂದ ಕಳಚಿಕೊಂಡವಳಂತೆ ತನ್ನ ನೆಲದತ್ತ ಹೊರಡುವ ಈಕೆಕತೆ

hugged him tight for a long long moment,and then you let go...

ಎಂದು ಮುಗಿಯುತ್ತದೆ.

The American Embassy ಕತೆ ಕೂಡಾ Ghosts ಕತೆಯ ತರ ಬೀಫಾರ ಕ್ರಾಂತಿಗೆ ಸಂಬಂಧಿಸಿದ ವಸ್ತುವನ್ನೇ ಹೊಂದಿದೆ ಮಾತ್ರವಲ್ಲ ನೈಜಘಟನೆಯೊಂದನ್ನು ಆಧರಿಸಿದ್ದು. ತಮ್ಮ ಕಾದಂಬರಿ Half of a Yellow Sun ಗೆ ಸಂಬಂಧಿಸಿದಂತೆ ’ಕಾದಂಬರಿಯೊಂದು ಇತಿಹಾಸದ ಆತ್ಮಕಥೆಯಾಗುವುದಾದರೆ ತಾನು ಇತಿಹಾಸಕ್ಕೂ ಕಥಾನಕಕ್ಕೂ ಸಮಾನ ನ್ಯಾಯ ಒದಗಿಸಿದ್ದೇನೆ’ ಎನ್ನುವ ಚಿಮಾಮಾಂಡ ಇಲ್ಲಿಯೂ ಅದನ್ನೇ ಮಾಡಿರುವಂತಿದೆ. ಚಿನುವ ಅಚೀಬೆಯ The Anthills of the Savannah ದಲ್ಲಿ ಬರುವ ಪತ್ರಕರ್ತರ ಮೇಲಿನ ಪ್ರಭುತ್ವ ವಿರೋಧಿ ಆರೋಪಗಳು ಮತ್ತು ಬರ್ಬರ ಹತ್ಯೆಗಳ ಹಿನ್ನೆಲೆಯೇ ಈ ಕತೆಗೂ ಇದೆ. ಇಲ್ಲಿ ಅಂಥ ಪತ್ರಕರ್ತನೊಬ್ಬನ ಬಂಧನದ ವಾರಂಟ್ ಹೊರಡುತ್ತಿದ್ದಂತೆ ಆತ ದೇಶ ಬಿಟ್ಟು ಹೋಗಿದ್ದಾನೆ. ಪತ್ನಿ ಮತ್ತು ಪುಟ್ಟ ಮಗು ಆದಷ್ಟು ಬೇಗ ತನ್ನನ್ನು ಕೂಡಿಕೊಳ್ಳುತ್ತಾರೆ ಎನ್ನುವ ಭರವಸೆಯಿಂದ ಹೋಗಿದ್ದಾನೆ. ಆದರೆ ಮಗು ಮಿಲಿಟರಿ ಯೋಧರ ಗುಂಡಿಗೆ ಬಲಿಯಾದ ಸಂಗತಿ ಅವನಿಗಿನ್ನೂ ಗೊತ್ತಿಲ್ಲ. ಗೊತ್ತಾಗಲು ಅವನಿನ್ನೂ ಸೆರೆಯಾಗದೆ, ಕೊಲೆಯಾಗದೆ ಉಳಿದಿದ್ದರಲ್ಲವೆ! ಕಣ್ಣೆದುರೇ ರಕ್ತದೋಕುಳಿಯಾದ ಪುಟ್ಟ ಕಂದನ ಮತ್ತು ಗಂಡನ ನೆನಪುಗಳಡಿ ಛಿದ್ರಗೊಂಡ ಮನಸ್ಸೊಂದು ಅಮೆರಿಕನ್ ಎಂಬಸಿಯ ಕಛೇರಿ ಎದುರಿನ ಸಾಲಿನಲ್ಲಿ ವೀಸಾಕ್ಕಾಗಿ ನಿಂತು ಕಾಯುತ್ತಿರುವ ಸನ್ನಿವೇಶದಲ್ಲಿ ಕತೆ ತೊಡಗುತ್ತದೆ. ರಾಜಕೀಯ ಸೇಡಿಗೆ ಬಲಿಪಶುವಾಗುತ್ತಿರುವ ಬಗ್ಗೆ ಸೂಕ್ತ ಸಾಕ್ಷ್ಯ ಒದಗಿಸಿದರೆ ಮಾತ್ರ ಸಿಗಲಿರುವ ಅಮೆರಿಕದ ಆಸರೆಗಾಗಿ ಅವರಿಗೆ ತಾನು ಏನನ್ನು ಮನವರಿಕೆ ಮಾಡಬೇಕಾಗಿದೆಯೋ, ಅದಕ್ಕಾಗಿ ತಾನು ಏನೇನೆಲ್ಲ ಆಡಬೇಕಿದೆಯೋ ಅದೆಲ್ಲವೂ ಅಸಂಗತ, ಅಸಂಬದ್ಧ ಎನಿಸಿಬಿಡುವ ಒಂದು ಕ್ಷಣ ಈ ಕತೆಯ ಬಿಂದು. ಸುಳ್ಳನ್ನು ಸಾಧಿಸಬೇಕಾಗುತ್ತದೆ, ಆದರೆ ಸತ್ಯವನ್ನು ಸಾಧಿಸುವುದು ಕಷ್ಟ. ಅದೆಲ್ಲ ನಾಟಕೀಯವೆನಿಸಿಬಿಟ್ಟರೆ, ಸತ್ಯವನ್ನು ಸತ್ಯ ಎಂದು ಪ್ರಮಾಣಿಸುವುದು ಅಸಂಬದ್ಧ ಎನಿಸಿದರೆ ಅಂಥ ಕೆಲಸ ಅನಪೇಕ್ಷಿತವೂ ಅಹಿತಕರವೂ ಆಗಿಬಿಡುತ್ತದೆ. ಈ ಕತೆ ಉಳಿದೆಲ್ಲ ವಿವರಗಳಾಚೆ ತಲುಪುವ ನೆಲೆ ಇದು, ಬದುಕಿನಲ್ಲಿ ಎಲ್ಲ ಭರವಸೆಗಳೂ, ಆಶಾವಾದಗಳೂ ನಿರರ್ಥಕವೆನಿಸಿದ ಘಳಿಗೆಯ ಒಂದು ನೆಲೆ.

The Shivering ಈ ಸಂಕಲನದ ಇನ್ನೊಂದು ಅತ್ಯುತ್ತಮ ಕತೆ. ಈ ಕತೆಯಲ್ಲಿ ಮುಖ್ಯವಾಗಿ ಗಮನ ಸೆಳೆಯುವುದು ಪಾತ್ರವನ್ನು ಜೀವಂತಗೊಳಿಸಿ ನಿಲ್ಲಿಸಿರುವ ರೀತಿ. ಇಲ್ಲಿನ ಒಕಾಮಕ ಒಬ್ಬ ವಿಲಕ್ಷಣ ವ್ಯಕ್ತಿ. ಅವನ ಎದುರಿನ ಪಾತ್ರವಾದ ಚಿನೇಡುವಿನ ಪರಿಸ್ಥಿತಿಗೂ ಒಕಾಮಕನ ಪರಿಸ್ಥಿತಿಗೂ ಕೆಲವು ಸಾಮ್ಯಗಳಿವೆ. ಇಬ್ಬರೂ ಒಂದೇ ದೇಶ (ನೈಜೀರಿಯಾ)ಕ್ಕೆ ಸೇರಿದವರು, ಪ್ರೀತಿ ಪ್ರೇಮದ ವಿಚಾರದಲ್ಲಿ ಇಬ್ಬರ ನೋವೂ ಸುಮಾರಾಗಿ ಒಂದೇ ತೆರದ್ದು ಮತ್ತು ಪರಕೀಯ ದೇಶವೊಂದರಲ್ಲಿ ಅಚಾನಕವಾಗಿ ದೇಶದ ಹೆಸರಿನಲ್ಲೇ ಮುಖಾಮುಖಿಯಾದವರು. ಈ ಅಷ್ಟೇನೂ ಹಿತಕರವಲ್ಲದ ರೀತಿಯಲ್ಲಿ ತೊಡಗಿದ ಪರಿಚಯ-ಸ್ನೇಹ ಗಾಢವಾಗುವ ರೀತಿಯೇ ಇಲ್ಲಿ ಒಂದು ಕತೆಯಾಗಿದೆ. ಮತ್ತಿದು ಪ್ರೇಮ-ಕಾಮಗಳಿಲ್ಲದ ಆದರೆ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಆಪ್ತವಾದ ಅನುಬಂಧ. ಅದು ನಿಧಾನವಾಗಿ ಬೆಸೆದುಕೊಳ್ಳುವುದನ್ನು ಎಷ್ಟು ನವಿರಾಗಿ ಕಾಣಿಸಲಾಗಿದೆ ಎಂದರೆ ಇಲ್ಲಿ ಪರಸ್ಪರರ ತಪ್ಪುಗಳು, ಜಗಳ, ಮನಸ್ತಾಪ, ಜೋಕು ಎಲ್ಲವೂ ಇರಬೇಕಾದಲ್ಲಿ ಇವೆ, ಎಷ್ಟು ಬೇಕೊ ಅಷ್ಟಿವೆ ಮತ್ತು ಅಷ್ಟೂ ಸಹಜವಾಗಿ ಇವೆ. ಒಂದು ಸುಂದರ ಕತೆ.

The Arrangers of Marriage ಅಷ್ಟೇನೂ ವೈಶಿಷ್ಟ್ಯಪೂರ್ಣವಾದ ಕತೆಯೇನಲ್ಲ. ಇಲ್ಲಿರುವ ಪ್ರಧಾನ ಅಂಶ ವ್ಯಾವಹಾರಿಕ ಹೊಂದಾಣಿಕೆಯದು. ಇದನ್ನು ಸ್ವಲ್ಪ ವಿವರವಾಗಿ ಗಮನಿಸಬಹುದಾಗಿದೆ.

Imitation ಕತೆಯ ಮಡದಿ ಮಾಡಿಕೊಳ್ಳುವ ಹೊಂದಾಣಿಕೆ, On Monday Last Week ಕತೆಯ ಬೇಬಿಸಿಟ್ಟರ್ ಮಾಡಿಕೊಳ್ಳುವ ಹೊಂದಾಣಿಕೆ, The Thing Around Your Neck ಕತೆಯ ಹೊಂದಾಣಿಕೆ ಮತ್ತು The Shivering ಕತೆಯ ಹೊಂದಾಣಿಕೆಗಳು ಒಂದು ಅರ್ಥದಲ್ಲಿ ಒಂದೇ ಮೂಲದವು. ಬದುಕಿನಲ್ಲಿ ಮನುಷ್ಯ ಸಂಬಂಧಗಳು ನಿಂತ ಪಾತಳಿ ಯಾವುದು ಎಂಬುದು ಒಂದು ಕೇಳಿಕೊಳ್ಳಬೇಕಾದ ಪ್ರಶ್ನೆಯಾದಾಗಲೆಲ್ಲ ಆ ಸಂಬಂಧ ಬಿಗಡಾಯಿಸಿದೆ ಅಂತಲೇ ಅರ್ಥ. ಆದರೆ ಅಷ್ಟು ಮಾತ್ರಕ್ಕೆ ಆ ಸಂಬಂಧದ ವಲಯದಿಂದ ಹೊರಹೋಗಿ ಬಿಡುವುದು ಕೂಡ ಸಾಧ್ಯವಾಗುವುದಿಲ್ಲ. ಯಾಕೆಂದರೆ ಇಬ್ಬರ ನಡುವಿನ ಯಾವುದೇ ಸಂಬಂಧ ಕೂಡ ಸದಾ ಕಾಲಕ್ಕೂ ಕೇವಲ ಇಬ್ಬರಿಗೇ ಸಂಬಂಧಿಸಿದ ಸಂಗತಿಯಾಗಿ ಉಳಿದಿರುವುದಿಲ್ಲವಲ್ಲ. ಆದರೆ ಕೊನೆಗೆ ತಮ್ಮಿಬ್ಬರ ಸಂಬಂಧಗಳಿಗೆ ಜೋತುಬಿದ್ದ ಇನ್ನಷ್ಟು ಸಂಬಂಧಗಳಿಗಾಗಿಯಾದರೂ ಒಂದು ಸಂಬಂಧವನ್ನು ಕಾಯ್ದುಕೊಳ್ಳುವುದು ಅನಿವಾರ್ಯವಾದಾಗ ಅದು ವ್ಯಾವಹಾರಿಕ ಅಗತ್ಯವಷ್ಟೇ ಆಗಿ ಬಿಡುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಚಿಮಾಮಾಂಡರ ಹೆಚ್ಚಿನ ಕತೆಗಳ ಈ ನಿಲುವು ಒಂದು ಅನಾರೋಗ್ಯಕರ-ಅಸಂತೃಪ್ತಿಯ ಹೊಂದಾಣಿಕೆಯಾಗಿ ಮೂಡಿ ಬರುವುದಿಲ್ಲ. ಬದಲಿಗೆ ಅದು ತಾರ್ಕಿಕ ಮತ್ತು ಬೌದ್ಧಿಕ ನೆಲೆಯಲ್ಲಿ ಯಾವುದೇ ಆಯಾಮದಿಂದಲೂ ಕೆಟ್ಟದು ಅನಿಸದ, ತಪ್ಪು ಅನಿಸದ, ಆಯಾ ಪಾತ್ರ ಅದನ್ನು ತೆಗೆದುಕೊಳ್ಳುವ ರೀತಿಯಲ್ಲೇ ಅದೊಂದು ಹಿಂಸೆ ಅನಿಸದ ಹೆಮ್ಮೆಯಾಗಿ ಬಿಡುವ ಘನತೆ ಪಡೆಯುವ ರೀತಿಯಲ್ಲೇ ಬರುತ್ತದೆ.

Tomarrow is Too Far ಕತೆಯಲ್ಲಿ ಮತ್ತೆ ಅಣ್ಣ-ತಂಗಿಯರ love-hate relation ನ ಕತೆಯಿದೆ. ಸರಿಪಡಿಸಲಾಗದ ಒಂದು ಸಣ್ಣ ತಪ್ಪು ಒಂದು ಜೀವವನ್ನೇ ಬಲಿ ತೆಗೆದುಕೊಂಡ ರಕ್ತದ ಕಲೆ ಬಾಲ್ಯವನ್ನು ಕಳಂಕಿತಗೊಳಿಸಿದೆ. ಮಾತ್ರವಲ್ಲ ಅದು ಈ ಮಕ್ಕಳ ಹೆತ್ತವರನ್ನೂ ಬೇರೆಯಾಗಿಸಿದೆ. ಆದರೆ ಕತೆ ತೊಡಗುವಾಗ ಇದೆಲ್ಲವೂ ನಡೆದು ಹದಿನೆಂಟು ವರ್ಷಗಳೇ ಕಳೆದಿವೆ ಮತ್ತು ಯಾವುದನ್ನೂ ತಿರುಗಿ ಸರಿಪಡಿಸಲಾಗದ ಒಂದು ಸಂದಿಗ್ಧ ಪಾಪಪ್ರಜ್ಞೆಯ ರೂಪದಲ್ಲಿ ಹೆಮ್ಮರವಾಗಿ ಬೆಳೆದುನಿಂತಿದೆ. ಕನಸುಗಳಾಗಿ, ನೆನಪುಗಳಾಗಿ, ಈಡೇರದ ಬಯಕೆಗಳ ನೆರಳಿನಲ್ಲಿ ಈ ಪಾಪಪ್ರಜ್ಞೆ ಕೊರೆಯುತ್ತಿದೆ. ಈ ಕತೆಯ ಪಿಸುನುಡಿಗಳು ವೈಯಕ್ತಿಕಗಳ ಗಡಿದಾಟಿ ಮಹತ್ವ ಪಡೆಯುವಲ್ಲಿ ಯಶಸ್ಸು ಕಾಣುವುದಿಲ್ಲ.

ಆದರೆ, The Headstrong Historian ಕತೆ ಅತ್ಯಂತ ಸರಳ-ನೇರ ಮತ್ತು ಬಹುತೇಕ ತಂತ್ರ ರಹಿತ ನಿರೂಪಣೆಯ ಧಾಟಿಯಲ್ಲಿದ್ದು ವಿವರಗಳ ಪ್ರಾಮಾಣಿಕತೆ ಮತ್ತು ವಸ್ತುನಿಷ್ಠತೆಯಿಂದಲೇ ಗಮನಸೆಳೆಯುತ್ತದೆ. ಚಿನು ಅಚೀಬೆಯ ಇನ್ನೊಂದು ಕಾದಂಬರಿ Things Fall Apart ನ ದಟ್ಟ ಪ್ರಭಾವವನ್ನು ಈ ಕತೆಯಲ್ಲಿಯೂ ನಾವು ಗುರುತಿಸಬಹುದಾಗಿದೆ. ಇಲ್ಲಿಯೂ ಮತಾಂತರ, ಪರಂಪರೆ ಮತ್ತು ತಲೆಮಾರಿನ ಮುಂದುವರಿಕೆ ಪ್ರಮುಖ ಪ್ರಶ್ನೆಗಳಾಗಿದ್ದು ಮೂರು ತಲೆಮಾರಿನ ಒಂದು ಸಿದ್ಧ ಮಾದರಿಯ ಕತೆ ತೆರೆದುಕೊಳ್ಳುತ್ತದೆ. ತಲೆಮಾರಿನ ಅಂತರ ಮತ್ತು ನಾಗರೀಕತೆಯ ಚಲನೆ ಕೇವಲ ಏಕಮುಖ ಸಂಚಾರವಾಗಿರದೆ ಅದು ಆಗಾಗ ಹಿಮ್ಮೊಗದ ಆವೃತ್ತಿಯನ್ನೂ ಸಹಜ ಸಂಸ್ಕಾರವಾಗಿ ಹೊಂದಿರುತ್ತದೆ ಮತ್ತು ಹಾಗಾದಾಗಲೇ ಒಂದು ಸಂಸ್ಕೃತಿ ಸಮೃದ್ಧವಾಗಿರುವುದಕ್ಕೆ ಸಾಧ್ಯವಾಗುತ್ತದೆ ಎಂಬ ಹೊಸದೇನೂ ಅಲ್ಲದ ಒಂದು ತತ್ವದ ಸುತ್ತ ಹೆಣೆದ ಕತೆಯಾಗಿಯಷ್ಟೇ ಇದು ಮುಖ್ಯವಾಗುತ್ತದೆ, ಪ್ರಸ್ತುತ ದೇಶ-ಕಾಲ ಪ್ರಜ್ಞೆಯ ನೆರಳಿನಲ್ಲಿ.

ಒಟ್ಟಾರೆಯಾಗಿ ಈ ಎಲ್ಲ ಹನ್ನೆರಡು ಕತೆಗಳಲ್ಲಿ ಎದ್ದು ಕಾಣುವ ಗುಣಗಳೆಂದರೆ: ಮೊದಲನೆಯದು: ಕತೆಯನ್ನು ಹೇಳುವ ವಿಧಾನದ ಬಗ್ಗೆ ಇರುವ ವಿಶೇಷ ಎಚ್ಚರ, ಪರಿಣತಿ ಮತ್ತು ಅದಕ್ಕೆ ಸಿಕ್ಕ ವಿಶೇಷ ಪೋಷಣೆ; ಎರಡನೆಯದಾಗಿ, ಜೀವನಾನುಭವ ಮತ್ತು ಪ್ರಾಮಾಣಿಕ ನಿರೂಪಣೆಗೆ ಇರುವ ಸಹಜ ಒತ್ತು. ಮೂರನೆಯದಾಗಿ, ವಸ್ತುವನ್ನು ಬಳಸಿಕೊಂಡ ರೀತಿ. ಹಾಗೆ ನೋಡಿದರೆ ಚಿಮಾಮಾಂಡ ಎತ್ತಿಕೊಂಡ ವಸ್ತುಗಳು ತೀರ ಹೊಸದೇ ಎಂದೇನೂ ಅನಿಸುವುದಿಲ್ಲ. ಗಂಡು-ಹೆಣ್ಣು ಸಂಬಂಧವಾಗಲೀ, ಗಲಭೆಯ ಸೂಕ್ಷ್ಮ ವಸ್ತುವಾಗಲೀ, ಅಣ್ಣ-ತಂಗಿಯರ ನಡುವಿನ ಸಂಘರ್ಷಗಳಾಗಲೀ, ಒಂಟಿತನದ ಬಳಲಿಕೆಯಾಗಲಿ ತೀರ ಹೊಸದೇ ಆದ ವಸ್ತುಗಳಲ್ಲ, ಕನ್ನಡದ ದೃಷ್ಟಿಯಿಂದಲೂ, ಆಫ್ರಿಕಾದ ದೃಷ್ಟಿಯಿಂದ ಕೂಡ. ಆದರೆ, ವಿಶೇಷವಿರುವುದು ಈ ವಸ್ತುಗಳಿಗೆ ಚಿಮಾಮಾಂಡಾ ಕತೆಗಳಲ್ಲಿ ಸಿಕ್ಕಿದ ಹೊಸ ಘನತೆಯದು. ಇಲ್ಲಿ ನೋವಿಗೆ, ಸಂಕಟಕ್ಕೆ, ಒಂಟಿತನಕ್ಕೆ, ಸೋಲಿಗೆ ಗುರಿಯಾದ ಯಾವುದೇ ಪಾತ್ರವೂ, ಮುಖ್ಯವಾಗಿ ಹೆಣ್ಣೇ ಆಗಿದ್ದರೂ ಅವು ಕುಂಯಿಗುಡುತ್ತ ಮುಲುಗುವುದಿಲ್ಲ. ವೇದನೆಯಲ್ಲೇ ರಮಿಸುವುದಿಲ್ಲ, ಪಾತ್ರ ಮತ್ತು ಕತೆ ಎರಡಕ್ಕೂ ಸಲ್ಲುವ ಮಾತಿದು. Tomarrow is Too Far ಕತೆಯೊಂದನ್ನು ಹೊರತು ಪಡಿಸಿ ಬೇರೆಲ್ಲಾ ಕತೆಯ ಪಾತ್ರಗಳು ನೋವಿನೊಂದಿಗೆ ಕುಗ್ಗದೇ ಹೆಜ್ಜೆ ಇಕ್ಕುವ ದೃಢತೆಯನ್ನು ಪಡೆದ ನಂತರವೇ ನಿರೂಪಣೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಮತ್ತೆ, ಬಹಳ ಮುಖ್ಯವಾಗಿ, ಈ ಪಾತ್ರಗಳ ಈ ಘನತೆ ಪೊಳ್ಳು ಆದರ್ಶಮಯತೆಯಿಂದ ಹುಟ್ಟಿದ್ದಲ್ಲ ಎನ್ನುವುದು. ಕಥಾನಕದ ಸೊಗಸಿಗಾಗಿಯೇ ಪೀಕಿದ ತಿರುವಲ್ಲ ಎಂಬುದು. ಕೊನೆಯದಾಗಿ, ಸೃಜನಶೀಲ ಬರವಣಿಗೆಯ ಕುರಿತಾಗಿ ಲೇಖಕಿಗಿರುವ ನಿಲುವು.

ಕತೆಗಾರ್ತಿ ಇದನ್ನು Emotional Truth ಎಂದು ಕರೆಯುತ್ತಾರೆ. ಪಾರಂಪರಿಕವಾದ Show, don't Tell ಎಂಬ ಸಲಹೆಯ ಜೊತೆಗೆ ಕತೆಗಾರ್ತಿ ಇದನ್ನು ಸೇರಿಸಬಯಸುತ್ತಾರೆ. ಆದರೆ ಏನು ಈ Emotional Truth ಎಂದರೆ ವಿವರಿಸುವುದು ಕಷ್ಟ ಎಂಬುದು ಕೂಡ ಇವರಿಗೆ ಗೊತ್ತು. ಅದನ್ನು ಅನುಭವಿಸುತ್ತೇವೆ ಮತ್ತು ಅರ್ಥಮಾಡಿಕೊಳ್ಳುತ್ತೇವೆ ಆದರೆ ಇನ್ನೊಬ್ಬರಿಗೆ ವಿವರಿಸಬೇಕೆಂದರೆ ಇನ್ನಿಲ್ಲದ ತಾಪತ್ರಯ ಸುರುವಾಗುತ್ತದೆ ಎನ್ನುತ್ತಾರಿವರು. ‘....ಅದು ಪ್ರಾಮಾಣಿಕತೆ ಅಥವಾ ಸಹಜ ಸ್ಫೂರ್ತ ಎನ್ನುವುದಕ್ಕಿಂತ ಹೆಚ್ಚಿನ ಇನ್ನೇನೊ... ವಿವರಿಸುವ ಕಥಾನಕದಲ್ಲಿ ಅಲ್ಲ, ಕಾಣಿಸುವ ಕಥಾನಕದಲ್ಲಿರುವ ಒಂದು ವೈಶಿಷ್ಟ್ಯವದು. ನಾನು ಪ್ರೀತಿಸುವ, ನೆನೆಯುವ, ನಾನು ಮತ್ತೆ ಮತ್ತೆ ಓದುವ ಎಲ್ಲಾ ಕಾದಂಬರಿಗಳಲ್ಲಿ ಈ ಮಾನವೀಯ ಸಂವೇದನೆಯಿದೆ..."

ಈ Imotional Truth ಬಹುಷಃ ಎಲ್ಲ ಸೃಜನಶೀಲ ಸೃಷ್ಟಿಕ್ರಿಯೆಯ ಮೂಲಸೆಲೆ ಅನಿಸುತ್ತದೆ. ಅದನ್ನು ಕಳೆದುಕೊಂಡಾಗ ಬರೆಯುವ ಮತ್ತು ಓದುವ ಕ್ರಿಯೆ ಕೂಡ ತನ್ನ ಅರ್ಥ ಕಳೆದುಕೊಳ್ಳುತ್ತದೆ.

ಚಿಮಾಮಾಂಡಾ ಕಾದಂಬರಿಗಳಿಗೆ ಹೋಲಿಸಿದರೆ ಅಷ್ಟೇನೂ ಶ್ರೀಮಂತ ಅನಿಸದ ಈ ಸಂಕಲನ ಕೂಡ ಖಂಡಿತವಾಗಿ ಓದಬೇಕಾದ ಒಂದು ಪುಸ್ತಕ.

3 comments:

Anonymous said...
This comment has been removed by a blog administrator.
Kamalakar said...

I like your comments here, very perceptive. This is a nice blog, I have enjoyed visiting your pages.

ನರೇಂದ್ರ ಪೈ said...

Kamalakar sir, Thank you very much for your encouraging words. I am really filled with gratitude.