Friday, November 6, 2009

ಕೇಶವ ಮಳಗಿ ಕಥಾಲೋಕ: ಅಸಂಕಲಿತ ಕಥೆಗಳು:

ಸೋಮಶೇಖರ ಪರಿಣಯ- 2006
ಸೋಮಶೇಖರ ಪರಿಣಯ ಒಂದು ಬದುಕು ಎಳೆಯ ಸಸಿಯಿದ್ದಿದ್ದು ಮಾಗಿ ಹಬ್ಬುವ ಪರಿಯನ್ನೇ ಸೋಜಿಗದ ಬೆರಗಿನಿಂದ ನೋಡುವ, ಚಿತ್ರಿಸುವ ಬಗೆಯ ಕತೆ. ಇಲ್ಲಿ ಬರುವ ಪ್ರಧಾನ ಪಾತ್ರಗಳು ಕುಂದರನಾಡಿನ ಲಖನಗೌಡ ಪಾಟೀಲರ ಕೊನೆಯ ಪುತ್ರ ಸೋಮಶೇಖರ ಮತ್ತು ಮುಲಕನಾಡಿನ ಬ್ರಾಹ್ಮಣ ಕರಣಂ ಶ್ಯಾಮರಾಯರ ಏಕಮಾತ್ರ ಪುತ್ರಿ ವಸಂತಮಾಲಾ. ಇಲ್ಲಿಯೂ ಪುರುಷ ಪಾತ್ರಕ್ಕಿಂತ ಹೆಚ್ಚು ಜೀವಂತವೂ, ಬದುಕಿನ ಕಡು ವ್ಯಾಮೋಹಿಯೂ ಆದ ಪಾತ್ರ ವಸಂತಮಾಲಾಳದ್ದೇ. ಸೋಮಶೇಖರನದ್ದು ಏನಿದ್ದರೂ ಅವಳು ತೋರಿಸಿದ ಹಾದಿಯಲ್ಲಿ ನಡೆಯುವುದು ಅಷ್ಟೇ. ಆದರೆ ಈ ವಸಂತಮಾಲಾಳ ಸಾಧ್ಯತೆಗಳು ಬೆರಗು ಹುಟ್ಟಿಸುವುದು ಸುಳ್ಳಲ್ಲ. ಸೋಮಶೇಖರನ ಅಪ್ಪನ ಆಶಯವೂ, ವಸಂತಮಾಲಾಳ ವೈಯಕ್ತಿಕ ಆಶಯವೂ ಈಡೇರುವುದು ಮಾತ್ರವಲ್ಲ ಈ ದಂಪತಿಗಳು ಇನ್ನೂ ಒಂದು ಮಜಲು ಮುಂದುವರಿದು ಇಡೀ ಸಮುದಾಯವನ್ನು ಒಳಗುಗೊಂಡ ಹಸನಾದ ಬದುಕು ಬೆಳಗುತ್ತಿರುವುದು ಸ್ವತಃ ನಿರೂಪಕನ ಬೆರಗಿಗೆ ವಸ್ತುವಾಗಿದೆ.

ಹೇಮಾ ಎಸ್. ಅವರ ಈ ಮಾತುಗಳನ್ನಿಲ್ಲಿ ಗಮನಿಸಬಹುದು:
‘ನಾಯಕನ ಅನ್ವೇಷಣೆಯಲ್ಲಿ ಅವನ ಬೆನ್ನ ಹಿಂದೆ ನಿಂತು ಕಾಪಾಡುವುದು, ಹೆಣ್ಣಿನ ಚೈತನ್ಯಮಯ ಪ್ರೀತಿ. ಹೆಣ್ಣಿನ ಸೃಷ್ಟಿಸುವ ಶಕ್ತಿಯೇ, ಅವಳ ವ್ಯಕ್ತಿತ್ವವೇ ಬದುಕಿಗೆ ಹೊಸ ಶಕ್ತಿಯನ್ನು ತಂದುಕೊಡುವುದನ್ನು ಗುರುತಿಸುತ್ತಾರೆ. ಮಳಗಿಯವರ ಕತೆಗಳಲ್ಲಿನ ಸ್ತ್ರೀಲೋಕ ವಿಶಿಷ್ಟವಾದುದು. ‘ಕ್ಷಿತಿಜ’ದ ಮಂದಾಕಿನಿ, ‘ಮುಸ್ಸಂಜೆಯ ಕಥಾ ಪ್ರಸಂಗ’ದ ಆಣಿ ಬಡ್ಡಿರಂಗಮ್ಮ, ‘ದೇವಿ’ ಕತೆಯ ದೇವಿ, ‘ಮರಳಿಮಣ್ಣಿಗೆ’ಯ ಸರಸೋತಿ, ‘ಮೈಮನಗಳ ಸುಳಿಯಲ್ಲಿ’ನ ಮಂಜುಳೆಯಂತೆ ಇವರ ಪಾತ್ರಗಳು ಕೂಡ ತಮ್ಮ ಚೈತನ್ಯಮಯ ವ್ಯಕ್ತಿತ್ವಗಳಿಂದ ಸುತ್ತಲ ವ್ಯಕ್ತಿಗಳ ಬದುಕನ್ನು ಪ್ರಭಾವಿಸುತ್ತವೆ, ರೂಪಿಸುತ್ತವೆ. ‘ವೆನ್ನೆಲ ದೊರಸಾನಿ’ಯ ಜಾಲಿಬೆಂಚಿ, ‘ಅಗಮ್ಯ ಅಗೋಚರ ಅಪ್ರತಿಮ ಜೀವವೇ’ ಯ ಇಂದುಮುಖಿ ಮತ್ತು ಮೃಣಾಲಿನಿ, ‘ಧಾರಿಣಿಯ ಜತೆ ನನ್ನದೊಂದು ಕತೆ’ಯ ಧಾರಿಣಿ, ‘ನಕ್ಷತ್ರ ಯಾತ್ರಿಕರು’ವಿನ ಸಂಗೂಬಾಯಿ, ಮಾಳವ್ವ, ‘ಕೆಂಪುಮಣ್ಣಿನ ಒಕ್ಕಲು’ವಿನ ಹಶಂಬಿ, ‘ಕಡಲತೆರೆಗೆ ದಂಡೆ’ಯ ಭೀಮಕ್ಕ, ‘ನೀಲಿ ಆಕಾಶದ ಹಣ್ಣು’ವಿನ ಹೂವಿ ಇವರೆಲ್ಲ ಕೂಡ ತಮ್ಮ ಬದುಕನ್ನು ಹೋರಾಟದಲ್ಲಿ ಕಟ್ಟಿಕೊಳ್ಳುತ್ತಲೇ ತಮ್ಮ ಸಂಪರ್ಕಕ್ಕೆ ಬಂದವರ ಬದುಕಿಗೂ ಚೈತನ್ಯವನ್ನು ಧಾರೆ ಎರೆದಂತಹವರು. ಇವರ ಜೀವನ ಪ್ರೀತಿಯೇ ಅಸಾಧಾರಣವಾದುದು. ತಾಯಿಯಾಗಿ, ಪ್ರಿಯತಮೆಯಾಗಿ, ಗೆಳತಿಯಾಗಿ ಬದುಕನ್ನು ಹಸಿರಾಗಿಸುವ ಶಕ್ತಿಯಿರುವುದನ್ನು ಗುರುತಿಸಿಕೊಳ್ಳುತ್ತಾರೆ’ (‘ಸಂಚಯ’ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪತ್ರಿಕೆಯ ಸಂಚಿಕೆ ೭೪)

ಬಾರೋ ಗೀಜಗ - 2006
ಬಾರೋ ಗೀಜಗ ಕತೆಯನ್ನು ಸುನಯನ ಮತ್ತು ಧಾರಿಣಿಯ ಜತೆ ನನ್ನದೊಂದು ಕತೆಯ ಛಾಯೆಯಿಲ್ಲದೆ ಓದುವುದು ಕಷ್ಟ. ಇಲ್ಲಿನ ಮುಖ್ಯ ಸಮಸ್ಯೆ ಎಂದರೆ ತಂತ್ರ. ಮಳಗಿಯವರ ಯಾವುದೇ ಕತೆಯಲ್ಲಿ ತಂತ್ರವೇ ನಮಗೆ ಎದುರಾಗಿ ಕೂತು ಕತೆಯನ್ನು ನಡೆಸಿಕೊಡುವುದಿಲ್ಲ. ಧಾರಿಣಿಯ ಜೊತೆ ನನ್ನದೊಂದು ಕತೆಯಲ್ಲಿ ಈ ತಂತ್ರ ಕಣ್ಣಿಗೆ ಎದ್ದು ಕಾಣದ ಹಾಗೆ ಅದರ ಅನುದ್ದಿಶ್ಯವೆನಿಸುವ ಗಮ್ಯವಿದೆ. ಕತೆಯ ಎಲ್ಲಾ ತಂತ್ರವೂ ಈ ಇದನ್ನು ತಲುಪುವುದಕ್ಕೇ ಆಗಿತ್ತು ಎಂದು ಯಾವ ಹಂತದಲ್ಲೂ ನಮಗೆ ಅನಿಸುವುದಿಲ್ಲ. ಆದರೆ ಸುನಯನ ಕತೆ ಈ ಅಪಾಯದಿಂದ ಪೂರ್ತಿಯಾಗಿ ಪಾರಾಗಿಲ್ಲ ಅನಿಸುತ್ತದೆ. ಸುನಯನ ಬಂದಿದ್ದು 1990ರಲ್ಲಿ, ಧಾರಿಣಿಯ ಜತೆ (1988) ಕತೆಯ ಎರಡು ವರ್ಷಗಳ ನಂತರ. ಬಾರೋ ಗೀಜಗವಂತೂ ಈ ಎರಡೂ ಕತೆಗಳ ಸುಮಾರು ಹದಿನೈದು ವರ್ಷಗಳ ನಂತರದ್ದು ಎಂಬುದು ಗಮನಾರ್ಹ.

ಇಲ್ಲಿ ಡಿ.ಆರ್.ನಾಗರಾಜ್ ಅವರ ಟಿಪ್ಪಣಿಯೊಂದನ್ನು ಗಮನಿಸುವುದು ಅಗತ್ಯ. ಅವರು ಹೇಳುತ್ತಾರೆ, ಮಳಗಿಯವರಲ್ಲಿ ನಾವು ಕಾಣುವುದು "ಮುಗ್ಧತೆ ಮತ್ತು ಭಾವುಕತೆ ಸಂಲಗ್ನಗೊಂಡ; ಹೊಸ ಸಂಬಂಧಗಳಿಗಾಗಿ ತೀವ್ರವಾಗಿ ಹಾತೊರೆವ ಕಾರಣಕ್ಕೆ ರಾಜಕೀಕರಣಗೊಳ್ಳುವ ಪ್ರಜ್ಞೆಯ ಅಭಿವ್ಯಕ್ತಿ" ಎಂದು. ಇದನ್ನು ಸೂಕ್ಷ್ಮವಾಗಿ ಗಮನಿಸುವುದು ಮುಖ್ಯ.

ಬಾರೋ ಗೀಜಗ ಕತೆಯಲ್ಲಿ ಕತೆಯ ಪ್ರಧಾನ ಪಾತ್ರ ಪ್ರೊಫೆಸರ್ ಕದಂ ಮತ್ತು ಕತೆಯ ಇನ್ನೊಂದು ಪ್ರಧಾನ ಪಾತ್ರ ನೀಲಾಂಜನಾ ಚಟರ್ಜಿ ಭೇಟಿಯಾಗುವುದು ಒಂದು ಸರ್ಕಾರೀ ಸಾಂಸ್ಕೃತಿಕ ಉತ್ಸವದ ಸಾಹಿತ್ಯ ಗೋಷ್ಠಿಯ ನೆವದಿಂದ, ದೆಹಲಿಯಿಂದ ಹತ್ತು ಗಂಟೆಗಳ ಟ್ಯಾಕ್ಸಿ ಪ್ರಯಾಣ ಅಗತ್ಯವಿರುವ ದೂರದ ಕಣಿವೆಯೊಂದರ ನಿಸರ್ಗ ರಮಣೀಯ ತಾಣದಲ್ಲಿ, ಗಂಗಾವತರಣದ ಸಾನ್ನಿಧ್ಯದಲ್ಲಿ. ಇಲ್ಲಿನ ಮೂರು ನಾಲ್ಕು ದಿನದ ಸಖ್ಯ-ಸಾಂಗತ್ಯದಲ್ಲಿ ಇಬ್ಬರೂ ತೆರೆದುಕೊಳ್ಳುವುದು, ಮನುಷ್ಯ ಸಂಬಂಧಗಳ ಬಗ್ಗೆ ಆಪ್ತವಾಗಿ ಮಾತನಾಡಿಕೊಂಡು ಅಗಲಿಕೆಯ ಭಾರವನ್ನು ನಿಭಾಯಿಸಬಲ್ಲ ಮಟ್ಟದಲ್ಲಿ - ಅಂದರೆ ಒಂದು ಅಂತರದಲ್ಲೇ - ಆಳದ ಸಂವೇದನೆಗಳನ್ನು ಕಂಡುಕೊಳ್ಳುವುದು ಈ ಕತೆಯ ಜೀವಸತ್ವ. ಬಹಳ ಮುಖ್ಯವಾಗಿ ಇಲ್ಲಿ ನೀಲಾಂಜನ ಮತ್ತು ಕದಂಜೀಯವರ ನಡುವಿನ ಸಂಬಂಧದ ನಿಟ್ಟಿನಿಂದ ಓದುಗ ಕೆಲವೊಂದು ಸಾಧ್ಯತೆಗಳನ್ನು ಊಹಿಸುವುದಕ್ಕೆ ಸಾಧ್ಯವಿದ್ದರೂ ಅಂಥವೇ ಕೆಲವೊಂದು ಕಾರಣಗಳಿಂದ ಆ ಧೈರ್ಯ ಮಾಡಲಾರ ಎಂದು ಕೂಡ ಹೇಳಬಹುದಾಗಿದೆ! ಆದರೆ ಮುಖ್ಯವಾಗಿ, ಇದೆಲ್ಲದರ ಆಚೆ ನೀಲಾಂಜನಳ ತಂದೆಯ ಪಾತ್ರವನ್ನು ಕೆತ್ತುವುದು ಮಳಗಿಯವರಿಗೆ ಹೆಚ್ಚು ಪ್ರಿಯವಾಗಿದ್ದ ಕೆಲಸದಂತೆ ಕಾಣುತ್ತದೆ. ಅದೇ ಕಾಲಕ್ಕೆ ಅವರು ಸಂಬಂಧದ ಅನೂಹ್ಯ ಸ್ಥಿತಿಯೊಂದರ ಪರಿಪ್ರೇಕ್ಷ್ಯವನ್ನೂ ಇಲ್ಲಿ ಒದಗಿಸುತ್ತಾರೆ. ಮತ್ತು ಅದಕ್ಕೆ ನೀಲಾಂಜನಳ ಒಂದು ಕವನ ಕಾರಣವಾಗುತ್ತದೆ.

‘ಹಾಡು, ಬದುಕು ಬೇರೆ ಬೇರೆಯೆ? ಹೊರಗಿನಿಂದ ನೋಡಿದಾಗ ಹಾಡಿನ ಮಾಧುರ್ಯ, ಬದುಕಿನ ಬವಣೆ ಬೇರೆ ಬೇರೆಯಾಗಿಯೇ ಕಾಣುತ್ತವೆ. ಆದರೆ ಹಾಡಿಗೆ ಬದುಕನ್ನು ತನ್ನ ರಾಗಕ್ಕೆ ಹೊಂದಿಸಿಕೊಳ್ಳುವ ತವಕ; ಬದುಕಿಗೆ ಬವಣೆ ಮೀರಿ ಬರೀ ಹಾಡಾಗುವ ಆಶಯ ಇದ್ದೇ ಇರುತ್ತದೆ. ನಿಮ್ಮದೇ ದೇವಭೂಮಿಯ ಬೆಟ್ಟ-ನೀರಿನ ಸಂಬಂಧವನ್ನೇ ನೋಡಿ. ಬೆಟ್ಟ-ಕಣಿವೆಯ ಕಲ್ಲು ಇದ್ದಲ್ಲೆ ಸ್ಥಾವರವಾಗಿದ್ದರೂ ನೂರಾರು ವರ್ಷಗಳಿಂದ ಜಂಗಮ ಜಲದ ಸಾನ್ನಿಧ್ಯ ಪಡೆಯುತ್ತಲೇ ಬಂದಿದೆ. ಅವೆರಡರ ಸಾಂಗತ್ಯ ಆ ಕ್ಷಣದಲ್ಲಿ ನಿಜವಾಗುವಂಥದ್ದು. ಆದರೆ ಆ ಕ್ಷಣದಲ್ಲಿ ಪಡೆಯುವ ಬಗೆ ಮಾತ್ರ ನಿರಂತರವಾಗಿದೆ.’

ಇದರ ಜೊತೆಗೇ ಪಂಪನ ಕಾವ್ಯದ ನೃತ್ಯಗಾತಿ ನೀಲಾಂಜನ ಪ್ರಕರಣವೂ ಬರುತ್ತದೆ. ನೃತ್ಯಮಾಡುತ್ತ ಕಲೆಯೊಂದಿಗೆ ಒಂದಾಗಿ ನೀಗಿಕೊಂಡ ನೃತ್ಯಗಾತಿಯ ಪ್ರಕರಣ. ಮಿಲಿಂದ ‘ಮಾತು ಯಾತನೆಯ ದಿಡ್ಡಿ ಬಾಗಿಲು’ ಕತೆಯಲ್ಲಿ ಕಮ್ಯೂನಿಸ್ಟ್ ಕಛೇರಿಯಲ್ಲಿ ಆಡಿದ ಮಾತನ್ನು ಇಲ್ಲಿ ಮತ್ತೊಮ್ಮೆ ನೆನೆಯುತ್ತೇನೆ. ‘ನಿಸರ್ಗದೊಂದಿಗೆ ಮನುಷ್ಯ ನೀರಿನಷ್ಟು ಸಹಜವಾಗಿ ಬೆರೆತು ಹೋಗದಿದ್ರೆ ಅವನು ಅಪೂರ್ಣ - ನಮ್ಮ ಸಂತರು, ಅನುಭಾವಿಗಳು ಇದನ್ನೇ ಮಾಡಿದ್ದು-’ ಈ ಮನುಷ್ಯ ಮತ್ತು ನಿಸರ್ಗದ ಸಂಬಂಧವನ್ನು ಸಂಗೀತ-ಕಾವ್ಯ-ಹೆಣ್ಣು ಮತ್ತು ಸಾವುಗಳ ಉಲ್ಲೇಖದೊಂದಿಗೆ ತೊಡಗಿದ್ದು.

ಮಳಗಿಯವರ ಹೆಚ್ಚಿನ ಕತೆಗಳಲ್ಲಿ ನಡೆಯುವ ಹಾಗೆ ಇಲ್ಲಿಯೂ ನೆನಪುಗಳಲ್ಲಿ ಕಥಾನಕದ ಆಕೃತಿ ಬಿಚ್ಚಿಕೊಳ್ಳುತ್ತದೆ. ನೀಲಾಂಜನಳ ತಂದೆ ಯ ಪಾತ್ರ ಜೀವಂತಗೊಳ್ಳತೊಡಗಿದ ಹಾಗೆಯೇ ಕದಂಗೆ ಒಂದೆಡೆ ತಮ್ಮ ಮಗಳು ಈಕೆಯಲ್ಲಿ ಕಾಣಿಸತೊಡಗುತ್ತಾರೆ, ಅವಳ ತಂದೆಯ ವಿವರಗಳಲ್ಲಿ ತಾವು ಸ್ವತಃ ಆವಿರ್ಭವಿಸುತ್ತಿರುವ ಅನುಭವವಾಗುತ್ತದೆ. ಸುನಯನ ಕತೆಯಲ್ಲಿ ಚೈತ್ರನೂ ಒಮ್ಮೆ ತಾನು ಸರ್ವದಮನನೂ ಆದಂತೆ ಭಾವಿಸುತ್ತಾನಲ್ಲ, ಇದೂ ಹಾಗೆಯೇ ಅನಿಸುವುದಿಲ್ಲವೇ?

ಆದರೆ ಸಂಬಂಧಕ್ಕೆ ಹೆಸರಿನ, ಹೆಸರಿಗೆ ಸಮಾಜದ ಕಟ್ಟಳೆಗಳ, ನೀತಿ ನಿಯಮಗಳ ನಾಗರಿಕತೆಯನ್ನು ಹಚ್ಚುವ ತುರ್ತಿನಲ್ಲಿ ನಾವಿಲ್ಲದೇ ಇದ್ದರೆ ಈ ಕತೆ ಅಷ್ಟು ಸರಳವಲ್ಲದ ಇನ್ನಷ್ಟಕ್ಕೆ ನಮ್ಮನ್ನು ಒಯ್ಯಲು ಸಿದ್ಧವಿದೆ. ಸ್ಥಾವರ ಕಲ್ಲು ಬಂಡೆಗಳ ಸಾನ್ನಿಧ್ಯದಲ್ಲಿ ಹರಿಯುವ ಜಂಗಮ ನೀರಿನ ಮಧ್ಯೆ, ಬದುಕು - ಹಾಡುಗಳ ಮಧ್ಯೆ, ಸಂಗೀತ, ಕಾವ್ಯ, ಹೆಣ್ಣು ಮತ್ತು ಸಾವಿನ ಜೊತೆ ಮನುಷ್ಯ ತನ್ನ ಬದುಕಿನ ಸಂಬಂಧಕ್ಕೆ ಹೇಗೆ ಹೆಸರು ಕೊಟ್ಟುಕೊಳ್ಳುವ ಆತುರಕ್ಕೆ ಬೀಳುವುದಿಲ್ಲವೋ ಹಾಗೆ ತೆರೆದುಕೊಂಡರೆ ಕದಂ ಮತ್ತು ನೀಲಾ ಚಟರ್ಜಿಯರ ಸಾಂಗತ್ಯದ ಇನ್ನೊಂದು ಮಗ್ಗುಲು ಕೂಡಾ ನಮಗೆ ಕಾಣಿಸುತ್ತದೆ.

ಉಬ್ಬಿದೆದೆಯ ನಿಬ್ಬೆರಗಿನೆಳೆಯ ತೊಟ್ಟುಗಳೆ,
ಹಾ! ಹೂವಿನೆಸಳ ಹಳದಿ ಹೊಕ್ಕಳೆ
ಅಹಹಾ! ಏರುದಿಂಡಿನ ಸುಳಿಗಳೆ
ಬಳುಕಿನಿಳಿಜಾರು ಬೆನ್ನಹುರಿ ಬಳ್ಳಿಯೆ
ಕಣ್ಣೆ, ಕಣ್ಣ ಪಾರಣೆಯೆ
ಕೇಶ ಸುರುಳಿಯ ಸುಳಿಯಲ್ಲಿ ಸೊಕ್ಕಿ
ಕೈಗೆಟಕುವ ಕರುಳ ಸುರುಳಿಯೆ

ಊರ ಮಧ್ಯದ ಕಣ್ಣ ಕಾಡಿನೊಳಗೆ ಕತೆಯ ನಿರೂಪಕ/ನಾಯಕ ತನ್ನ ಬಾಲ್ಯದ ಸ್ಮೃತಿಗಳಿಗೆ ಮರಳಿದಾಗ ತನ್ನ ತಾಯಿ ಬಸು-ವಸುಂಧರೆಯ ಸೌಂದರ್ಯವನ್ನು ವರ್ಣಿಸುತ್ತಾನೆ. ಮಕ್ಕಳು ಆಟವಾಡುವಾಗ ಯಾರೋ ನಿನ್ನ ಹೆಂಡತಿ ಎಂದರೆ ಹುಡುಗ ಬಸು ಎನ್ನುತ್ತಿದ್ದ. ಬಸುವಿನಂತೆಯೇ ಇರುವ ಹೆಣ್ಣನ್ನು ಮದುವೆಯಾಗಬೇಕೆಂದು ಅಂದುಕೊಳ್ಳುತ್ತಿದ್ದ ಈ ಪೋರ ತನ್ನ ತಾಯಿಯನ್ನು ತಂದೆಯಂತೆಯೇ ಬಸೂ ಎಂದೇ ಕೂಗುತ್ತಿದ್ದ.

ಸುನಯನ ಕತೆಯಲ್ಲಂತೂ ಸುನಯನ-ಚೈತ್ರ ಎನ್ನುವ ಪಾತ್ರಗಳೇ ಅಮೂರ್ತವೆನಿಸುವಷ್ಟು ಈ ಸಂಬಂಧಗಳು ತಾಯಿ-ಮಗ, ಪ್ರಿಯಕರ-ಪ್ರೇಯಸಿ, ತಂದೆ-ಮಗಳು ಆಗಿಬಿಡಬಲ್ಲ ಸಾಧ್ಯತೆಗಳನ್ನೆಲ್ಲ ಹೊಂದುವುದನ್ನು ಕಾಣುತ್ತೇವೆ.

ಇಲ್ಲಿಯೇ ಹುಟ್ಟುವ ಇನ್ನೊಂದು ಜಿಜ್ಞಾಸೆಯೂ ಇದೆ. ಈ ನಾಯಕಿಪ್ರಧಾನವಾದ, ‘ಯಾರೂ ಸಂಗಡ ಬಾಹೋರಿಲ್ಲ’ ಭಾವವೇ ಪ್ರಧಾನವಾದ ಪಾತ್ರಗಳ ಚಿತ್ರಣದಲ್ಲಿ ಎದ್ದು ಕಾಣುವ ‘ರೊಮ್ಯಾಂಟಿಕ್’ ಮತ್ತು ‘ಆದರ್ಶ’ ಗಂಡು-ಹೆಣ್ಣು ಮತ್ತು ಸನ್ನಿವೇಶಗಳು ಮುಖ್ಯವಾಗಿರುವ ಕೆಲವೊಂದು ಕತೆಗಳ ಜೊತೆ ಜೊತೆಗೇ ( ಧಾರಿಣಿಯ ಜೊತೆ ನನ್ನದೊಂದು ಕತೆ, ಸುನಯನ, ಬಾರೋ ಗೀಜಗ) ಬದುಕು ಒಂದು ಕಟು ವಾಸ್ತವಿಕ ಹೋರಾಟವಾಗಿರುವ ಹೆಣ್ಣು ಪಾತ್ರಗಳೂ ಮಳಗಿಯವರ ಕಥೆಗಳಲ್ಲಿ ಇವೆ, ಮತ್ತು ಅವೇ ಹೆಚ್ಚು ಇವೆ. ಈ ಮೊದಲು ಹೇಳಿದ ಹೆಣ್ಣು ಪಾತ್ರಗಳ ಮಾದರಿತನದಲ್ಲಿರುವ ಅವಾಸ್ತವಿಕತೆ ಮತ್ತು ವ್ಯಕ್ತಿಗತ ಬದುಕಿನ ಸೀಮಿತ ಪರಿಧಿ ಒಂದೆಡೆ ಇರುತ್ತ ಬದುಕಿನ ಹೋರಾಟದಲ್ಲಿ ವ್ಯಸ್ತವಾಗಿರುವ ಹೆಣ್ಣುಗಳ ಚಿತ್ರಣದಲ್ಲಿರುವ ವಾಸ್ತವಿಕತೆ ಮತ್ತು ಸಮುದಾಯನಿಷ್ಠೆ ಇನೊಂದೆಡೆ ಇರುತ್ತ ಇವೆರಡರ ಮುಖಾಮುಖಿಯಲ್ಲಿ ಈ ವಿಭಿನ್ನ ಹೆಣ್ಣು ಪಾತ್ರಗಳು ಎಲ್ಲಿ ನಿಲ್ಲುತ್ತವೆ? ಈ ಎರಡೂ ತೀರ ವಿಭಿನ್ನ ಪಾತ್ರಗಳೇನೂ ಅಲ್ಲ, ಹಾಗೆ ತಿಳಿಯುವುದು ತಪ್ಪು. ಧಾರಿಣಿಯೇ ಹೂವಿಯೋ ಮಾಳವ್ವನೋ ಆಗಿರುತ್ತಾಳೆಂಬುದನ್ನು ಮರೆಯಬಾರದು. ಸುನಯನಳೇ ಚಂದ್ರವ್ವ ಕೂಡ ಅಥವಾ ಹಶಂಬೀ ಕೂಡ ಆಗಿರುವುದು ಸಹಜ ಮತ್ತು ಸಾಧ್ಯ ಎನ್ನುವುದನ್ನು ಮರೆಯದೇ ವಾಸ್ತವ ಮತ್ತು ರೊಮ್ಯಾಂಟಿಸೈಜಿಂಗ್ - ನಡುವಿನ ಹದ ಯಾವುದು ಮಳಗಿಯವರಲ್ಲಿ ಎಂಬ ಪ್ರಶ್ನೆ ಇದೆ. ಧಾರಿಣಿ, ಸುನಯನ, ನೀನಾ ಚಟರ್ಜಿಯರ ಮತ್ತು ಹೂವಿ, ರೇವಕ್ಕ, ಮಾಳವ್ವ, ಹಶಂಬೀ, ಅಬಚಿಯರ ಸೃಷ್ಟಿ (ಅದರ ಸಕಲೆಂಟು ವೈಭವಗಳೊಂದಿಗೇ) ಯ ಹಿಂದಿರುವ ತಾಂತ್ರಿಕ ನೇಯ್ಗೆಗಳು ಹೇಗೆ ಭಿನ್ನವಾಗಿವೆ ಮತ್ತು ಈ ಎರಡೂ ಬಗೆಯ ಹೆಣ್ಣಿನ ನಡುವಿನ ಸಾತತ್ಯ ಮಳಗಿಯವರ ಕತೆಗಳಲ್ಲಿ ಹೇಗೆ ಸಂತುಲಿತಗೊಂಡಿದೆ ಎನ್ನುವ ಅಂಶ ಮಹತ್ವದ್ದು.

"ಮುಗ್ಧತೆ ಮತ್ತು ಭಾವುಕತೆ ಸಂಲಗ್ನಗೊಂಡ; ಹೊಸ ಸಂಬಂಧಗಳಿಗಾಗಿ ತೀವ್ರವಾಗಿ ಹಾತೊರೆವ ಕಾರಣಕ್ಕೆ ರಾಜಕೀಕರಣಗೊಳ್ಳುವ ಪ್ರಜ್ಞೆಯ ಅಭಿವ್ಯಕ್ತಿ" ಎಂಬ ಡಿ.ಆರ್.ನಾಗರಾಜ್ ಅವರ ಮಾತು ಈ ನಿಟ್ಟಿನಲ್ಲಿಯೂ ಬಹಳ ಮುಖ್ಯವಾಗುತ್ತದೆ ಅಲ್ಲವೆ?

ನೀಲಿ ಆಕಾಶದ ಹಣ್ಣು - 2007
ಸೌಭಾಗ್ಯವತಿ ಕತೆಯಲ್ಲಿಯಂತೆಯೇ ಇಲ್ಲಿಯೂ ಹೂವಿಯ ದಾಂಪತ್ಯ ಹಳಿತಪ್ಪಿದೆ. ಅಲ್ಲಿ ಗಂಡ ಮರಳಿ ಬರುವವರೆಗೆ ತವರಿನತ್ತ ಕೂಡ ಹೋಗದೆ, ಯಾರ ಸಹಾಯವನ್ನೂ ಪಡೆಯದೆ ಒಂಟಿಯಾಗಿ ಕಾಯುವ ತುಂಗಭದ್ರೆಗೆ ಪ್ರತಿಯಾಗಿ ಇಲ್ಲಿ ಹೂವಿ ತನ್ನವರು ಎನ್ನುವ ಯಾರೂ ಇಲ್ಲದ ತವರಿಗೇ ಮರಳಿ ತನ್ನ ಕಾಲಮೇಲೆ ತಾನು ಸ್ವತಂತ್ರವಾಗಿ ನಿಂತು ನೆಲೆಯಾಗುತ್ತಾಳೆ. ಈ ಬಗೆಯ ಬದುಕಿನ ಹೋರಾಟಕ್ಕೂ ನಾನಾ ತರದ ತಡೆ-ತಂಟೆ ಒಡ್ಡುವ ತವರಿನವರ ಕುತಂತ್ರಗಳನ್ನು ಎದುರಿಸುತ್ತಾಳೆ. ವಿಶೇಷವಾಗಿ ಊರ ಮಾಸ್ತರರ ಸಹಿತ ಇಡೀ ಊರು ಅವಳ ಬೆನ್ನಿಗೆ ನಿಲ್ಲುವ ಚಿತ್ರ ಕೂಡ ಇಲ್ಲಿದೆ. ಇಡೀ ಊರನ್ನು ಮಳಗಿಯವರು ತಮ್ಮ ಕತೆಯ ತೆಕ್ಕೆಯ ಒಳಗೆ ಬರಮಾಡಿಕೊಳ್ಳುವ ರೀತಿಯನ್ನು ನಾವಿಲ್ಲಿ ಕಾಣಬಹುದಾಗಿದೆ. ಇದು ಮಳಗಿಯವರ ಆಶಯಗಳಿಗೆ ತಕ್ಕಂತಿರುವುದು ಇಲ್ಲಿ ಉಲ್ಲೇಖನೀಯ.

ಮಳಗಿಯವರ ಹೆಚ್ಚಿನ ಕತೆಗಳ ಲಕ್ಷಣವೆನ್ನುವಂತೆ ಇಲ್ಲಿಯೂ ವರ್ತಮಾನವೇ ಅನಿವಾರ್ಯವಾಗಿ ಭೂತವನ್ನು ಅಗೆದು ತೋರುತ್ತ ಹೋಗುತ್ತದೆ. ಕತೆ ತೊಡಗುವಲ್ಲಿಯೇ ಈ ವರ್ತಮಾನದ ಒಂದು ಸಮಸ್ಯೆಯಿದೆ. ಆದರೆ ಇಲ್ಲಿನ ಸಮಸ್ಯೆಯನ್ನಾಗಲೀ, ಅದು ತೆರೆದು ತೋರುವ ಕಥಾನಕವನ್ನಾಗಲಿ ಮೀರಿ ಇಡೀ ಊರಿನ ಒಂದು ಚಿತ್ರ, ಆ ಊರಿನ ಜೀವಂತಿಕೆಯ ಚಿತ್ರ, ಊರ ಹುಲುಮಾನವರ ಒಟ್ಟಾರೆ ನಿಲುವು-ಒಲವುಗಳ ಚಿತ್ರ ಮಳಗಿಯವರಿಗೆ ಮುಖ್ಯವಾದಂತಿದೆ.

ಒಂದೆಡೆ ಮಳಗಿಯವರು ಹೇಳುತ್ತಾರೆ, ‘ಬಹುಸಂಸ್ಕೃತಿ, ವಿವಿಧ ಉಪಭಾಷೆ, ಜಾತಿಪದ್ಧತಿ, ವಿಭಿನ್ನ ಜನಾಂಗಗಳ ಜೀವನಶೈಲಿಗಳನ್ನು ಬದಿಗಿರಿಸಿ ಶೂನ್ಯದಲ್ಲಿ ಸೃಷ್ಟಿಸುವ ಅಲಂಕಾರಿಕ ಭಾಷೆ ಮತ್ತು ಗುಣಗಳ ಸಾಹಿತ್ಯ ಮೌಲಿಕ ಮತ್ತು ಜನಪರ ಸಾಹಿತ್ಯವಾಗಲಾರದು. ........ಸಮುದಾಯಗಳ ಅತಿ ಖಾಸಗಿ ಮತ್ತು ಸಮಾಜಮುಖಿ ಬದುಕಿನ ಖುಷಿ, ಅವಮಾನ, ಯಾತನೆ, ಈ ಎಲ್ಲವುಗಳ ನಡುವೆಯೇ ಅವರು ಸಹನೆಯಿಂದ ಬದುಕನ್ನು ಕಟ್ಟಿಕೊಳ್ಳಲು ಪಡುವ ಶ್ರಮ ಹಾಗೂ ಅತ್ಯಂತ ವಿಸ್ಮಯಕಾರಿ ರೀತಿಯಲ್ಲಿ ಪ್ರಕಟಗೊಳ್ಳುವ ಅವರ ಜಾಣ್ಮೆ....ಇವು ಮತ್ತು ಇಂಥವೇ ಮಹತ್ವದ ವಿಷಯಗಳನ್ನು ಒಳಗೊಳ್ಳದ ಸಾಹಿತ್ಯವು ತಾತ್ಪೂರ್ತಿಕ ಮಾನ್ಯತೆಗಳಿಸಿದರೂ ಬಹುಕಾಲ ಉಳಿಯಲಾರದು.’(ಸುಧಾ ಯುಗಾದಿ ವಿಶೇಷಾಂಕ 2007ರ "ಸಣ್ಣಕಥೆ:ಇತ್ತೀಚಿನ ಒಲವುಗಳು" ಸಮೀಕ್ಷೆಗೆ ನೀಡಿದ ಟಿಪ್ಪಣಿಯಿಂದ)

ಹೊಳೆ ಬದಿಯ ಬೆಳಗು-2008
ಈ ಕತೆಯ ಕುರಿತು ಮಳಗಿಯವರೇ ಹೇಳುವ ಮಾತುಗಳು ಅದೇ ನಿಲುವನ್ನು ಇನ್ನಷ್ಟು ಸ್ಪಷ್ಟಗೊಳಿಸುತ್ತವೆ:

"ತೀರ ಜನಸಾಮಾನ್ಯರು ಅಂದುಕೊಳ್ಳುವವರಲ್ಲಿ ಅಡಗಿರುವ ಮಾನವೀಯ ಅಂಶವನ್ನು ಈ ಕತೆ ಸೆರೆಹಿಡಿಯಲು ಯತ್ನಿಸುತ್ತದೆ. ತಮ್ಮ ತಮ್ಮ ನೋವಿನಲ್ಲಿ ನರಳುತ್ತಿದ್ದರೂ, ಯಾವುದೇ ರೀತಿಯ ಸಂಬಂಧವಿಲ್ಲದಿದ್ದರೂ ಒಬ್ಬರಿಗೊಬ್ಬರು ಆತುಕೊಳ್ಳುವ ಪರಿ ನನಗೆ ಯಾವಾಗಲೂ ವಿಸ್ಮಯವಾಗಿ ಕಾಣುತ್ತದೆ. ಕಲ್ಲುಬಂಡೆಗಳ ಅಡೆತಡೆಗಳನ್ನು ಮೀರಿ ಹರಿಯುವುದೇ ತನ್ನ ಸಹಜ ಕಾಯಕ ಎಂಬಂತೆ ಸರಿದು ಹೋಗುವ ಇಲ್ಲಿನ ಕೃಷ್ಣಾ ನದಿಯಷ್ಟೇ ಇಲ್ಲಿನ ಪಾತ್ರಗಳು ಅಕ್ಕಪಕ್ಕದವರ ಕಡುಕಷ್ಟಗಳಿಗೆ ತಣ್ಣನೆಯ ಆಸರೆಯಾಗುತ್ತಾರೆ. ಯಾವುದೇ ತೋರಿಕೆ, ಅಪೇಕ್ಷೆ ಇಲ್ಲದ ಈ ಬಗೆಯ ಮಾನವೀಯತೆಗೆ ನಾನು ಮುಗ್ಧನಾಗಿದ್ದೇನೆ. ಪ್ರತಿನಿತ್ಯದಂತೆ ಮತ್ತೆ ಹುಟ್ಟುವ ಬೆಳಗು ಚಂದ್ರವ್ವನಿಗೆ ಬೆಡಗಾಗಿ ಕಾಣುವುದು ಈ ಬಗೆಯ ಮಾನವೀಯತೆಯಿಂದಾಗಿಯೇ. ಅವಳಿಗೆ ದೊರಕುವ ಇಂತಹ ನಿಷ್ಕಲ್ಮಶ ಪ್ರೀತಿ ಅವಳನ್ನು ದೈವಿಕದ ಎತ್ತರಕ್ಕೆ ಬೆಳೆಸುತ್ತದೆ."

ಮಳಗಿಯವರ ಹೆಚ್ಚಿನ ಕತೆಗಳಲ್ಲಿ ಹೇಗೆ ಮಡುಗಟ್ಟಿದ ನೋವಿನ ಕಥಾನಕವೊಂದು ಹರಿದು ಬರುತ್ತದೋ ಹಾಗೆಯೇ ಅಲ್ಲೊಂದು ಹರಿವ ನದಿಯ ಹಿನ್ನೆಲೆಯೂ ಇರುವುದನ್ನು ಕಾಣಬಹುದು. ಇಲ್ಲಿ ಕೃಷ್ಣೆ, ಸೌಭಾಗ್ಯವತಿ ಕತೆಯಲ್ಲಿ ಭೀಮಾತಟ, ಧಾರಿಣಿಯ ಜತೆ ನನ್ನದೊಂದು ಕತೆಯ ಹೊಂಗೆ-ಸಂಕೆಸರ ಮರಗಳೂ ಕಪ್ಪು ಬಂಡೆಗಳ ದಂಡೆಯೂ ಇರುವ ನದಿ, ಬಾರೋ ಗೀಜಗದ ಗಂಗಾವತರಣದ ತಟ. ಜಂಗಮ ನದಿ ಮತ್ತು ಸ್ಥಾವರ ತಟದ ಪರಿಕಲ್ಪನೆಯನ್ನು ಕೂಡ ಮಳಗಿಯವರ ಕತೆಗಳು ಬಳಸಿಕೊಂಡಿವೆ. ಕಡಲತೆರೆಗೆ ದಂಡೆ ಕತೆಯ ಹೆಸರು ಕೂಡ ಒಂದು ರೂಪಕಪ್ರಭೆಯ ಕತೆಗೆ ಚೌಕಟ್ಟು ಒದಗಿಸುವುದು ಹೀಗೆ.

ಹಾಗೆ ಈ ಕತೆಯ ಚೊಂಚ ಕುರುಡಿ ಮುದುಕಿ, ನಾಥಪಂಥದ ಸಾಧುಗಳ ಸಂಗ ಅರಸುತ್ತ ದೇಶ ಸುತ್ತುವ ಸನ್ಯಾಸಿ ಬಾಬಾ, ಮಾವನ ಮೇಲಿನ ಮುನಿಸಿನಿಂದ ದೇಶಾಂತರ ಹೋದ ಗಂಡನನ್ನು ಕಳೆದುಕೊಂಡು ಹುಡುಕುವುದಕ್ಕೆಂದೇ ಜಾತ್ರೆಗೆ ಬಂದ ಚಂದ್ರವ್ವ ಮತ್ತು ಭವಿಷ್ಯವನ್ನು ಕುರಿತು ಇವರೆಲ್ಲರಿಗೂ ಇರುವ ಭರವಸೆಯನ್ನೇ ತೋರುವವನಂತೆ ಕಾಣಿಸುವ ಪೋರ ದೇವೇಂದ್ರ ಎಲ್ಲರೂ ಹರಿವ ನದಿಯಿದು ಬದುಕು ಎಂಬ ತತ್ವಕ್ಕೆ ಬದ್ಧರಾದಂತೆ ಕಾಣುವ ಜೀವಿಗಳೇ. ಇವರು ಕಾಣಿಸುವ ಬದುಕಿನ ಪಾಠ ದೊಡ್ಡದು. ಕತೆ ಮಂದ್ರ ಸ್ಥಾಯಿಯಲ್ಲಿ ಉಸುರುವುದು ಈ ಘನಸತ್ಯವನ್ನು. ಕಥಾನಕ, ವ್ಯಕ್ತಿಗಳು ಮತ್ತು ಘಟನೆಗಳನ್ನು ಮೀರಿ ಮಳಗಿಯವರ ಕತೆಗಳು ಸಾಧಿಸುವ ಗಮ್ಯ ಇದು.

‘ಸಹಜೀವಿಯ ಬದುಕನ್ನು ಸಹಾನುಭೂತಿಯಿಂದ ಗ್ರಹಿಸಿ ಅದರ ನೋವನ್ನು ಇನ್ನೊಂದು ಜೀವಕ್ಕೆ ತಿಳಿಸುವ ಶ್ರೇಷ್ಠ ಉದ್ದೇಶದಿಂದ ಹೊರಟ ಕತೆಗಳ’ (ಮಾಸ್ತಿ) ಲಕ್ಷಣಗಳೆಲ್ಲವೂ ಅತ್ಯಂತ ಸಹಜವಾಗಿ ಮಳಗಿಯವರ ಕತೆಗಳಲ್ಲಿ ಮೈತಳೆದಿರುವುದನ್ನು ಕಾಣಬಹುದು. ಈ ಅನುತಾಪ-ಅನುಕಂಪದ ಕುರಿತೇ ಮಳಗಿಯವರು ತಮ್ಮ ಕಥೆಗಾರ ಕಂಡ ರೂಪಕ ಲೋಕದ ಕಥನ - ನೇರಳೆ ಮರ ಕೃತಿಯಲ್ಲಿ ಹೇಳಿರುವ ಮಾತುಗಳು ಇಲ್ಲಿ ಉಲ್ಲೇಖನೀಯ.

ನೇರಳೆ ಮರ (ಪುಟ:70-72): ತರುಣನಾಗಿದ್ದಾಗಿನಿಂದಲೂ ಅನುಕಂಪದ ವಿವಿಧ ನೆಲೆ ಅರಿಯಲು ಪ್ರಯತ್ನಿಸಿರುವೆ. ಆದರೆ ನಾನು ತುಸುವಾದರೂ ಕಲಿತಿರುವ ಕರುಣೆಯು ಬಂದಿರುವುದು ನನ್ನ ಬೌದ್ಧಿಕ ಆವಿಷ್ಕಾರದಿಂದಲ್ಲದೆ ನಿಜವಾದ ಯಾತನೆಯ ಅನುಭವದಿಂದ. ತಪ್ಪಿನಿಂದ ಹಾವನ್ನು ಹಗ್ಗವನ್ನಾಗಿ ಮಾಡಿಕೊಂಡ ವ್ಯಕ್ತಿಯ ಭಯದಂತೆ ನಾನು ನನ್ನ ದುಃಖಕ್ಕಾಗಿ ಹೆಮ್ಮೆಯನ್ನು ಪಡಲಾರೆ. ನನ್ನ ಯಾತನೆಯು ಕೇವಲ ಹಗ್ಗ ಮಾತ್ರವಾಗಿದ್ದು, ಮಹತ್ವವಿರದ, ಕೇವಲ ಶೂನ್ಯದ ಹನಿಯಾಗಿದ್ದು ಬೆಳಗಲ್ಲಿ ಕರಗಿ ಹೋಗಬೇಕಾದ ಇಬ್ಬನಿಯಾಗಿದೆ. ಆದರೆ ಅದು ಕರಗಿಲ್ಲ; ಆದ್ದರಿಂದಲೇ ಅದರ ತಾಪವನ್ನು ತಾಳದಷ್ಟು ನಾನು ಅಸಹನೀಯನಾಗಿದ್ದೇನೆ. ಪ್ರೀತಿಯಿಂದ, ಪ್ರೀತಿಗಾಗಿ ಹುಟ್ಟುತ್ತಿರುವ ನನ್ನ ಯಾತನೆಯನ್ನು ನನ್ನ ಅರಿವಿನ ಗುರು ಕಾಣುತ್ತಿಲ್ಲವೆ? ಕಂಡರೆ, ಹೇಗೆ ಆತ ಮಂದಸ್ಮಿತನಾಗಿರಲು ಹೇಗೆ ಸಾಧ್ಯ? (ಪುಟ:70-71)

"ಹಾಗೆಂದರೆ ಮಹಾಕರುಣೆಯೆನ್ನುವುದು ಜೀವರಹಿತವೆ? ಹಾಗೇನಿಲ್ಲ. ಅಲ್ಲಿ, ವಸ್ತು-ವ್ಯಕ್ತಿನಿಷ್ಠತೆಯಿಲ್ಲ. ನಾನೆಂಬುದಕ್ಕೆ ಪ್ರತ್ಯೇಕ ಅಸ್ತಿತ್ವವಿಲ್ಲ. ದುಷ್ಟನೊಬ್ಬ ಹರಿಹಾಯುತ್ತಾನೆಯೇ, ಆತನತ್ತ ಅನುಕಂಪದ ನಗೆಬೀರಿ. ಆತ ಬೆಳೆದ ಪರಿಸರ, ಅಭದ್ರತೆ, ಆತನ ದಡ್ಡತನದಿಂದಾಗಿ ಆತ ಆ ಬಗೆಯ ಬುದ್ಧಿಹೀನ ಕೃತ್ಯದಲ್ಲಿ ತೊಡಗಿದ್ದಾನೆಂದು ಭಾವಿಸಿ. ತಾಂಡವ ನೃತ್ಯ ಮಾಡುತ್ತ ನಿಮ್ಮ ನಾಶಕ್ಕೆ ಸನ್ನದ್ಧನಾಗಿ ನಿಮ್ಮ ಮೇಲೆ ಅನ್ಯಾಯದ ಹೊರೆ ಹೊರೆಸಿರುವವನತ್ತ ಪ್ರೀತಿ-ಅನುಕಂಪ ತುಂಬಿದ ನೋಟದಿಂದ ನೋಡಿ. ನಿಮ್ಮ ಕಣ್ಣಿಂದ ಧಾರಾಕಾರವಾಗಿ ಕರುಣೆ ಧುಮ್ಮಿಕ್ಕಲಿ. ದೂರಿನ ಅಲೆಯಾಗಲಿ, ಕೋಪದ ನೊರೆಯಾಗಲಿ ನಿಮ್ಮ ಮನಸ್ಸಿನಲ್ಲಿ ಏಳುವುದು ಬೇಡ." (ಪುಟ:71-72)

"ಇತಿಹಾಸವಿಲ್ಲದವರ ಬದುಕಿನ ವರ್ತಮಾನದಲ್ಲಿ ಸೃಷ್ಟಿಯಾಗುತ್ತಿರುವ ಇತಿಹಾಸ ನನ್ನನ್ನು ತೀವ್ರವಾಗಿ ಸೆಳೆಯತೊಡಗಿತು. ಅಲ್ಲಿ ಪ್ರತಿಕ್ಷಣವೂ ಹುಟ್ಟುತ್ತಿದ್ದ ನೂರಾರು ರೂಪಕಗಳು ನನ್ನೊಳಗೆ ಇಳಿಯತೊಡಗಿದವು. ಹೊರಗಿನ ಲೋಕಕ್ಕೆ ಯಕಃಶ್ಚಿತ್ತಾಗಿ ಕಾಣುವ ಸಂಗತಿಗಳು ನನಗೆ ಪುರಾಣ ಸಂಗತಿಗಳಂತೆ ಕಾಣತೊಡಗಿದವು. ಮನುಷ್ಯರು, ಅವರು ಬದುಕುವ ಸಂಕೀರ್ಣತೆಯಿಂದಾಗಿ ಅವರಲ್ಲಿ ಹುಟ್ಟುತ್ತಿರುವ ರಾಗದ್ವೇಷ, ಅವಮಾನ, ನಿರಾಕರಣೆ-ಸ್ವೀಕಾರಗಳ ವಿಸ್ಮಯ ಕಾಡತೊಡಗಿದವು." (ನೇರಳೆ ಮರ:ಪುಟ:91)

"ಈ ಇತಿಹಾಸವಿಲ್ಲದವರ ವರ್ತಮಾನಕ್ಕೆ ಭಾವುಕ ಪ್ರಪಂಚವೊಂದಿದೆ ಮತ್ತು ಅವರನ್ನು ಗ್ರಹಿಸಲು ಅದೇ ಸರಿಯಾದ ನೆಲೆಯಾಗಿದೆ ಎಂದು ತಿಳಿಯತೊಡಗಿತು. ಅಲ್ಲಿ, ಬುದ್ಧಿಯಿಂದ ಅರಿತ ಇಲ್ಲವೆನ್ನುವ ಪ್ರಜ್ಞೆಗಿಂತ (ಮತ್ತು ಅದರ ಆಧಾರದ ಮೆಲೆಯೇ ಏಕದೃಷ್ಟಿಯ ಸಾಹಿತ್ಯ ರಚಿಸುತ್ತ) ಆ ಕ್ಷಣದಲ್ಲಿ ಘಟಿಸುವ ಇರುವ ಜಗತ್ತು ಮಹತ್ವದ ಪಾತ್ರವಹಿಸುತ್ತಿತ್ತು. ಅಲ್ಲಿನ ಜೀವಂತ ಪಾತ್ರಗಳು ಆ ವರ್ತಮಾನದಲ್ಲಿ ಸುಖ ಕಾಣುವ ಪರಿ ಅಗಾಧವಾಗಿತ್ತು. ಅಲ್ಲಿ ಭಾವುಕತೆಯೇ ಅವರ ಸತ್ವವಾಗಿತ್ತು." (ನೇರಳೆ ಮರ:ಪುಟ:92)

ಗವಿಮಠದ ಪವಾಡ
ಮಳಗಿಯವರ ಕತೆಗಳಲ್ಲಿ ಮತ್ತೆ ಮತ್ತೆ ಕಂಡುಬರುವ ಕೆಲವು ವಿದ್ಯಮಾನಗಳಲ್ಲಿ ಒಂದನ್ನು ಈ ಕತೆಯ ನೆವದಲ್ಲಿ ಚರ್ಚಿಸಬಹುದು.

ಒಂದು: ಜೀವನಾನುಭವ-ಆಧ್ಯಾತ್ಮದ ತತ್ವವಾಗಿ ಪ್ರಕಟಗೊಳ್ಳುವುದು; ಮಳಗಿಯವರ ಕತೆಗಳ ಹಿರಿಯ ಜೀವಗಳು, ನೋವುಂಡವರು ಈ ಬಗೆಯ ಮಾತುಗಳನ್ನಾಡಿ ಇಡೀ ಕತೆಯನ್ನು ಆವರಿಸಿರುವ ನೋವಿನ-ದುಮ್ಮಾನದ ಧ್ವನಿಗೆ ಒಂದು ಹೊಸದೇ ಆದ ಪರಿಧಿಯನ್ನು ನಿರ್ಮಿಸುತ್ತವೆ. ಮೊದಲೇ ಹೇಳಿರುವಂತೆ ಈ ನಿಲುವಿನಲ್ಲಿ ನಿರಾಶಾವಾದವಿಲ್ಲ, ಜೀವ ವಿಮುಖಿ ಧೋರಣೆಗಳಿಲ್ಲ. ಎರಡನೆಯದು: ನೋವುಂಡ ಪಾತ್ರದ ಜೀವನ ವಿಮುಖತೆ ಕಥೆಯಲ್ಲಿ ಪ್ರಕಟಗೊಳ್ಳುವ ವಿಧಾನಗಳು - ಸಂನ್ಯಾಸವಾಗಿ, ಕಣ್ಮರೆಯಾಗುವ ವಿಧಾನವಾಗಿ, ಆತ್ಮಹತ್ಯೆಯಾಗಿ, ಸಾವಾಗಿ ಪ್ರಕಟಗೊಳ್ಳುವುದು; ಈ ಎಲ್ಲವೂ ಜಗತ್ತಿನಿಂದ ದೂರವಾಗುವ, ಜಗದ ಪರಿಧಿಯಿಂದಲೇ ಹೊರಗಾಗುವ ಕಡೆಗಿನ ಚಲನೆ. ಮನೆಬಿಟ್ಟು ಹೋಗುವ ಪಾತ್ರಗಳು, ಊರುರು ತಿರುಗುತ್ತ ಇಲ್ಲವೇ ಸಂನ್ಯಾಸವನ್ನು ಆಯ್ದುಕೊಂಡ ಪಾತ್ರಗಳು, ಆತ್ಮಹತ್ಯೆಯೋ ಆಕಸ್ಮಿಕವೋ ಆದ ಸಾವನ್ನು ಮುಟ್ಟಿ ನೀಗಿಕೊಳ್ಳುವ ಪಾತ್ರಗಳು ಮಳಗಿಯವರ ಕತೆಗಳಲ್ಲಿ ಸಾಮಾನ್ಯ. ಕಾನುಮನೆಯ ಅವ್ವಿ, ಅಗಮ್ಯದ ಇಂದುಮುಖಿ, ಕಡಲ ತೆರೆಗೆ ದಂಡೆಯ ಅನ್ಸರ್ ಮತ್ತು ಯದುಪತಿ ಕಾಕಾ, ಊರ ಮಧ್ಯದ ಕಣ್ಣಕಾಡಿನೊಳಗೆ ಕತೆಯ ಬಾಪೂ ಮತ್ತು ವಸುಂಧರೆ ಇಷ್ಟು ನಕ್ಷತ್ರಗಳಲ್ಲಿ ಯಾವುದು ನನಗೆ ಕತೆಯ ಮೋನಿದಾದಾ ಇತ್ಯಾದಿ. ನಾಲ್ಕನೆಯದು, ಮಠ ಮತ್ತು ಸಿದ್ಧಿಯ ಸಂಬಂಧ ಕತೆಗಳಲ್ಲಿ ಕಾಣಿಸಿಕೊಳ್ಳುವುದು; ಮುಖ್ಯವಾಗಿ ಅಂಗದ ಧರೆ ಕಾದಂಬರಿ, ಕಡಲತೆರೆಗೆ ದಂಡೆ ಕತೆಯ ಯದುಪತಿ ಕಾಕಾ, ಹೊಳೆ ಬದಿಯ ಬದುಕು ಕಥೆಯ ಬೋಲ್ಡಿ ಬಾಬಾ ಇಂಥ ಪಾತ್ರಗಳು. ಇನ್ನು ನಾಲ್ಕನೆಯದರ ವಿಸ್ತರಣೆಯಾಗಿ ಬರುವ ಐದನೆಯದು, ಸ್ವಾಮೀಜಿ ನಿಸ್ಸಂಗತ್ವದ ಸಾಧನೆಯಾಗಿ, ಸಮಾಧಾನಕರ ನಿಲುವಾಗಿ ಕಾಣಿಸಿಕೊಳ್ಳುವ ಹಂತಕ್ಕೆ ಬಂದಾಗಿನ ಕತೆಗಳು. ಮತ್ತೆ ಅಂಗದ ಧರೆ ಮತ್ತು ಗವಿಮಠದ ಪವಾಡ ತರಹದ ಕತೆಗಳು ಹಾಗೂ ನೇರಳೆ ಮರದಲ್ಲಿ ಉಲ್ಲೇಖಿತ ‘ಕಥೆಗಾರನ ಕನಸಿನಲ್ಲಿ ಬಂದು ಕರೆಯುವ ಅರಿವಿನ ಗುರುವಿನ ಮಾತುಗಳು’ ಈ ಬಗೆಯ ಒಂದು ನಿಲುವನ್ನು ಸಮರ್ಥಿಸುವಂತೆ ಇವೆ.

ಮಳಗಿಯವರಿಗೆ ಮಠ, ಆಧ್ಯಾತ್ಮ, ಬದುಕಿನ, ಸತ್ಯದ ಶೋಧದಲ್ಲಿ ಸೂಕ್ಷ್ಮ ಆಸಕ್ತಿಯಿರುವಂತಿದೆ. ನೇರಳೆ ಮರದಲ್ಲಿ ಉಲ್ಲೇಖಿಸಲ್ಪಟ್ಟ "ಕಥೆಗಾರನ ಕನಸಿನಲ್ಲಿ ಬಂದುಕರೆಯುವ ಅರಿವಿನ ಗುರು"ವೇ ಹೀಗೆ ಮತ್ತೆ ಮತ್ತೆ ಕಾಣಿಸಿಕೊಳ್ಳುವುದಿರಬಹುದು. ಅಂಗದ ಧರೆ ಕಾದಂಬರಿಯಲ್ಲಿ ಪೂರ್ಣಪ್ರಮಾಣದಲ್ಲೇ ಇಂಥ ವಸ್ತುವಿದ್ದರೂ ಅವರ ಅನೇಕ ಕತೆಗಳಲ್ಲಿ ಸಾಧು ಸಂತರು, ಆಧ್ಯಾತ್ಮ ಸಾಧಕರು, ಸಾಧನೆಯ ಹಾದಿಹಿಡಿದವರು ಕಾಣಸಿಗುತ್ತಾರೆ. ಹೆಚ್ಚಾಗಿ ಇವರು ಕಾವಿತೊಟ್ಟ ಸನ್ಯಾಸಿಗಳಾಗಿರದೇ ಬದುಕನ್ನು ಕಂಡ ಹಿರಿಯ ಜೀವವಾಗಿರುವುದು ಕೂಡ ಕಂಡುಬರುತ್ತದೆ. ಹಾಗಾಗಿ ಕಡಲತೆರೆಗೆ ದಂಡೆ ಕತೆಯ ಯದುಪತಿ ಕಾಕಾ, ಹೊಳೆಬದಿಯ ಬೆಳಗಿನ ಬೋಲ್ಡಿ ಬಾಬಾ, ಇಷ್ಟು ನಕ್ಷತ್ರಗಳಲ್ಲಿ ಯಾವುದು ನನಗೆ ಕತೆಯ ಮೋನಿದಾದಾಗಿಂತ ಕತೆಯ ಹಿರಿಯ ಜೀವವೇ ಹೆಚ್ಚು ವ್ಯವಧಾನಿಯಾದ, ಬದುಕು ಕಂಡು ಮಾಗಿದ ನಡೆ-ನುಡಿಗಳಲ್ಲಿ ನಮ್ಮನ್ನು ಆವರಿಸುವುದು ಕಾಣುತ್ತದೆ. ಅದು ಕೆಂಪು ಮಣ್ಣಿನ ಒಕ್ಕಲು ಕತೆಯ ದಾವೂದನೋ, ನಕ್ಷತ್ರ ಯಾತ್ರಿಕರು ಕತೆಯ ಸಂಗೂಬಾಯಿಯೋ, ಕಡಲತೆರೆಗೆ ದಂಡೆಯ ಅನ್ಸರನೋ ಆಗಿದ್ದರೆ ಅದರಲ್ಲೇನೂ ಅಚ್ಚರಿಯಿಲ್ಲ.

ಗವಿಮಠದ ಪವಾಡ ಒಂದು ಲಾಜಿಕಲ್ ಕತೆ. ಇದು ಫ್ಯಾಂಟಸಿಯನ್ನೂ ವಾಸ್ತವಕ್ಕೆ ಜೋಡಿಸುವುದರ ಮೂಲಕ ಬದುಕಿನ ಕುರಿತ ನಿತ್ಯಸತ್ಯವೊಂದನ್ನು ರೂಪಕವಾಗಿಸುವ ಕತೆ. ಮಳಗಿಯವರ ಕತೆಗಳಲ್ಲಿ ವಿಶಿಷ್ಟವೂ, ವಿಭಿನ್ನವೂ ಆಗಿ ನಿಲ್ಲುವ ಕತೆ ಕೂಡ ಹೌದು.

ಇಲ್ಲಿಯೇ ಚರ್ಚಿಸಬಹುದಾದ ಇನ್ನೊಂದು ಅಂಶ: ಸಾವು-ಮೃತ್ಯುಪ್ರಜ್ಞೆ. ಅಥವಾ ಆತ್ಮಹತ್ಯೆ, ಸಾವು, ಕಣ್ಮರೆ, ನಿರಾಕರಣ, ಆಧ್ಯಾತ್ಮ - ಮಳಗಿಯವರ ಕತೆಗಳಲ್ಲಿ ಮತ್ತೆ ಮತ್ತೆ ಬರುವುದರ ತಾಂತ್ರಿಕ ಪಾತಳಿ ಯಾವುದು ಮತ್ತು ಬದುಕಿನ ಚಿತ್ರಕ್ಕೆ ಸಂಬಂಧಿಸಿದಂತೆ ಅವುಗಳ ಪಾತ್ರವನ್ನು ಹೇಗೆ ಗುರುತಿಸಬೇಕು ಎನ್ನುವುದು. ಇವುಗಳ ವಿಭಿನ್ನ ಅಭಿವ್ಯಕ್ತಿಯ ಆಚೆ ಇದನ್ನು, ಅಂದರೆ ಕತೆಯ ಒಂದು ಘಟ್ಟದಲ್ಲಿ ಒಂದು ಸಾವು, ಒಂದು ಕಣ್ಮರೆ, ಒಂದು ವಿರಕ್ತಿಯ ಹಾದಿಯ ಕವಲೊಡೆಯುವಿಕೆ, ಕತೆಯ ಪರಿಣಾಮಕಾರತ್ವಕ್ಕೆ ಕೊಡುವ ಕೊಡುಗೆ ಕೂಡ ಒಂದಿದೆಯಲ್ಲ, ಹಾಗೆ ಅದರ ತಾಂತ್ರಿಕ ಅನಿವಾರ್ಯತೆ ಮತ್ತು ತಾಂತ್ರಿಕ ಬಳಕೆಯನ್ನು ಕುರಿತು ನೋಡಬಹುದು. ಹಾಗೆಯೇ ಇದರ ಬಳಕೆ ಒಂದು ರೂಪಕವಾಗಿ ಯಾಕೆ ಮಳಗಿಯವರಿಗೆ ಅಷ್ಟು ಆಪ್ತವಾದದ್ದು ಎನ್ನುವ ಪ್ರಶ್ನೆಯನ್ನೂ ಕೇಳಬಹುದು!

ನಕ್ಷತ್ರ ಯಾತ್ರಿಕರು ಕತೆಯಲ್ಲಿ ಮಾಳವ್ವನನ್ನು ಅವಳ ಹೆತ್ತವರು ರೈಲ್ವೇ ಸ್ಟೇಶನ್ನಿನಲ್ಲಿ ಬಿಟ್ಟು ಹೋಗುವುದು ಅಥವಾ ಅವಳು ಅಚಾನಕವಾಗಿ ರೈಲಿನಿಂದಿಳಿದು ಆಗುವ ಅನಾಹುತವನ್ನು ಗಮನಿಸಿ. ವೆನ್ನೆಲ ದೊರೆಸಾನಿಯ ಗಿಚ್ಚಲುವಿನ ಗಳಿಸಬಲ್ಲ ಬಾಳಿಸಬಲ್ಲ ಅಸಾಮರ್ಥ್ಯವನ್ನು ಗಮನಿಸಿ. ಅಗಮ್ಯ ಅಗೋಚರ ಅಪ್ರತಿಮ ಜೀವವೇ ಕತೆಯ ಇಂದುಮುಖಿಯ ತಂದೆಯ ಸಾವನ್ನು ಗಮನಿಸಿ. ಅವಳ ವಿಚ್ಛೇದನಕ್ಕೂ ಅದಕ್ಕೂ ಸಂಬಂಧವಿದ್ದಂತಿದೆ ಅಲ್ಲಿ. ಅದು ಹೋಗಲಿ, ಸ್ವತಃ ಇಂದುಮುಖಿಯ ಸಾವೇ ಕತೆಯ ತಾಂತ್ರಿಕ ಅಗತ್ಯವಾಗಿ ಏನು ಎಂದು ಗಮನಿಸಿ. ಕಾನುಮನೆಯಲ್ಲಿ ಅವ್ವಿಯ ತಾಯಿಯ ಪಲಾಯನವನ್ನು ಹಾಗೂ ಅವ್ವಿಯ ಕಣ್ಮರೆಯನ್ನು ಒಟ್ಟಾಗಿ ನೋಡಿ. ಕೆಂಪು ಮಣ್ಣಿನ ಒಕ್ಕಲು ಕತೆಯಲ್ಲಿ ಸಂಭವಿಸುವ ಕಾಶೀಮ ಮತ್ತು ದುರ್ಗಾವಲೀಯ ಸಾವು, ಸೌಭಾಗ್ಯವತಿಯಲ್ಲಿ ತುಂಗಭದ್ರೆಯ ಗಂಡನ ಕಣ್ಮರೆ ಮತ್ತು ಸಾವು, ಮಾಗಿಯಲ್ಲಿ ಹೆಪ್ಪುಗಟ್ಟಿರುವ ವಿಯೋಗ, ಅಂಥದೇ ದಟ್ಟ ಆಲಾಪವೊಂದು ಹರಿಯುತ್ತಲೇ ಇರುವ ಸುನಯನ, ಗೀಜಗನ ಗೂಡು, ಅಲ್ಲಿಯೂ ತಂದೆಯನ್ನು ಕಳೆದುಕೊಳ್ಳುವ ಸುನಯನ, ನೀನಾ ಮತ್ತು ಧಾರಿಣಿಯಲ್ಲಿ ಹಿಮಾಲಯಕ್ಕೆ ಹೋಗುವ ಕಿಶೋರ, ಕಡಲತೆರೆಗೆ ದಂಡೆಯಲ್ಲಿ ಅನ್ಸರನ ಸಾವು, ಯದುಪತಿ ಕಾಕಾನ ಕಣ್ಮರೆ, ಊರ ಮಧ್ಯದ ಕಣ್ಣಕಾಡಿನೊಳಗೆ ಕತೆಯ ಬಾಪೂ ಮತ್ತು ವಸುಂಧರೆಯ ಕಣ್ಮರೆ(ಸಾವು?), ಅರುಂಧನ ಕಣ್ಮರೆ ಮತ್ತು ಸಾವಿನ ಸುದ್ದಿ, ಇಂಥ ಸಾಲು ಸಾಲು ಉದಾಹರಣೆಗಳು ನಮಗೆ ಸಿಗುತ್ತವೆ. ಇವು ಕಥಾನಕದ ಚಲನೆಗೆ ಹೇಗೋ ಅಷ್ಟೇ ಕಥಾನಕದ ಧಾಟಿಗೆ ಅಗತ್ಯವಿದ್ದ ವಿದ್ಯಮಾನಗಳೂ ಕೂಡಾ ಆಗಿರುವುದು ಗಮನಾರ್ಹ. ಹಾಗೆ ಒಂದು ಸಾವು, ಒಂದು ಕಣ್ಮರೆ ಒಂದು ಅನಿರೀಕ್ಷಿತವಾದ ಮತ್ತು ಇದೇ ಬಗೆಯದ್ದಾದ ತಿರುವು ರೂಪಕ ಶಕ್ತಿಯನ್ನು ಪಡೆದುಕೊಳ್ಳುತ್ತದೆ,ಮಳಗಿಯವರ ಕತೆಗಳಲ್ಲಿ.

ಗುಡ್ಡದೂರಲ್ಲಿ ಒಂದು ಇರುಳು
ಈ ಕತೆ ಅಫ್ರಿಕನ್ ಕತೆಯೊಂದರ ಆಸರೆಯಲ್ಲಿ ಅರಳಿದೆ ಎಂದಿದ್ದರೂ ಮಳಗಿ ಕಥಾಲೋಕದ ಹಶಂಬಿಯನ್ನೋ ಮಾಳವ್ವನನ್ನೋ, ಹೂವಿಯನ್ನೋ ಇಲ್ಲಿಯೂ ಕಂಡಂತಾದರೆ ಅಚ್ಚರಿಯಿಲ್ಲ. ಆದರೆ ಈ ಕತೆಯಲ್ಲಿ ಯಾವತ್ತೂ ನಮಗೆ ಎದುರಾಗುವ ಮಳಗಿಯವರ ಸಮುದಾಯದ ಚಿತ್ರಣವಿಲ್ಲ, ಜನಜೀವನದ ಹಾಸುಹೊಕ್ಕಾದ ವಿವರಗಳಿಲ್ಲ. ಒಂದು ಕೋಣೆಯಲ್ಲಿ ಒಂದು ರಾತ್ರಿ ಹಗಲಾಗುವ ಮುನ್ನ ಮೆಲುಕು ಹಾಕಿದಂತಿರುವ ಕಥನದಲ್ಲಿ ವಿಶೇಷವಾದ ಸ್ಮೃತಿಗಳ ಮರುಕಳಿಕೆ ಕೂಡ ಇಲ್ಲ. ಪ್ರಸ್ತುತ ಬೆಲೆವೆಣ್ಣಾಗಿ ಬದಲಾಗಿರುವ ಹೊರಗೇರಿಯ ಹೆಸರಿಲ್ಲದ ‘ಅವಳ’ ಕತೆ ಇದೆಂದರೂ ಅದಲ್ಲ. ಆವತ್ತು ರಾತ್ರಿಗೆ ‘ಗಿರಾಕಿ’ಯಾಗಿ ಬಂದಾತನಿಗೂ ಸದ್ಯದ ಅವಳ ಅನಿವಾರ್ಯ ಪರಿಸ್ಥಿತಿಗೆ ಕಾರಣವಾದ ಗಂಡನ ಸಾವೂ ಸಂಧಿಸುವ ಒಂದು ಸೂಕ್ಷ್ಮ ಬಿಂದುವೇ ಕತೆಯ ಪ್ರಧಾನ ಅಂಶವಾದರೂ ಕತೆಯ ಬಂಧ ಈ ಬಿಂದುವನ್ನು ಮನಮುಟ್ಟಿಸುವಷ್ಟು ಸಶಕ್ತವಿಲ್ಲ ಅನಿಸುತ್ತದೆ. ಸತ್ತೇ ಹೋಗಿರಬಹುದಾದ ಮಗುವಿನ ತಣ್ಣಗಿನ ಮೈಯ ಸ್ಪರ್ಶ ಈ ಗಿರಾಕಿಗೆ ತಟ್ಟುವುದು ಇಲ್ಲಿಂದ ಬೇಗ ಪಾರಾಗಿ ಹೋಗಬೇಕು ಎನ್ನುವ ಮಟ್ಟದಲ್ಲಿ ಮಾತ್ರ. ಎರಡು ಸಾವುಗಳ ನಡುವೆ ಕಮರಿದ ಅವಳ ಬದುಕಿಗೆ ಹೊಣೆಗಾರರಿಲ್ಲದಿರುವುದೆ ಗುಡ್ಡದೂರಿನ ಇರುಳ ದುರಂತ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Thursday, November 5, 2009

ಕೇಶವ ಮಳಗಿ ಕಥಾಲೋಕ: ವೆನ್ನೆಲ ದೊರಸಾನಿ (ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ)

ವೆನ್ನೆಲ ದೊರಸಾನಿ -2001
ವೆನ್ನೆಲ ದೊರಸಾನಿ ಕತೆಯ ನಿರೂಪಣೆಯ ಒಟ್ಟು ಚೌಕಟ್ಟಿನಲ್ಲಿ ಇರುವುದು ಸತತವಾದ ಜೀವಾನುಕಂಪವೇ ಆದರೂ ಇಲ್ಲಿರುವ ಜೀವನದೃಷ್ಟಿಯಲ್ಲಿ ಸಾಕಷ್ಟು ನಿರ್ಲಿಪ್ತ ಧೋರಣೆ ಕೂಡ ಇದೆ. ಅದಕ್ಕೆ ಕಾರಣ ವೆನ್ನೆಲ ದೊರಸಾನಿ ಒಂದು ಆದರ್ಶ ಪಾತ್ರದಂತಿಲ್ಲದಿರುವುದು ಎಂದು ಭಾವಿಸಿದರೆ ಅದು ದೊಡ್ಡ ತಪ್ಪು. ಕತೆಗಾರನ ಅಂತರಂಗದಲ್ಲಿ ಈ ಹೆಣ್ಣುಮಗಳ ಬಗ್ಗೆ ಇರುವುದು ಅನುಕಂಪವೇ. ("ಕಥೆ ಬದುಕು ಎರಡೂ ದೊಡ್ಡವೇ, ಸಣ್ಣವನು ಅಂದರೆ ಕಥೆಗಾರ. ಇದ್ದದ್ದು - ಇಲ್ಲದ್ದು ಸೇರಿ ಹೇಳೋ ಅಭ್ಯಾಸ ಬಹಳ ಹಳೆಯದು. ಬಲ್ಲವರಿಗೆ ಕರುಣೆ ಇದ್ದರೆ ಆಯಿತು"). ಈ ಬಗೆಯ ಹದವಾದ ನೋಟದ ಕುರಿತು ಕೊಂಚ ಹೆಚ್ಚಿನ ಗಮನ ನೀಡಬೇಕು.

ಇಲ್ಲಿರುವ ನಿರೂಪಕ ಒಬ್ಬ ಪತ್ರಕರ್ತನ ವರಸೆಗಳಿಲ್ಲದ, ವರದಿಗಾರನಲ್ಲದ ವರದಿಗಾರ. ಕಥೆ ಹೇಳುವುದೇ ಉದ್ದೇಶವಾಗಿಲ್ಲದ, ಕಂಡದ್ದನ್ನೆಲ್ಲ ಕಥೆಯಾಗಿಸುವ ಹಪಹಪಿಗಳಿಲ್ಲದ ನಿರೂಪಕ ಪ್ರಜ್ಞೆ ಇಲ್ಲಿ ಸುಪ್ತವಾಗಿ ಕೆಲಸ ಮಾಡುತ್ತಿದೆ. ("ಇನ್ನೂ ಒಂದೆಂದರೆ ಬರಹಗಾರನೆಂದುಕೊಂಡಿರುವ ನಾನು ಮುಂದೊಂದು ದಿನ ಕಥೆ ಬರೆದು ಕಾಫಿ ಕಾಸು ಗಿಟ್ಟಿಸಬಹುದೆಂಬ ಆಸೆ ಮನಸ್ಸಿನಲ್ಲಿದ್ದರೂ ಇದ್ದೀತು!") ಆದರೆ, ಈ ಅನುಕಂಪ, ಮಳಗಿಯವರ ಎಲ್ಲಾ ಕಥೆಗಳಲ್ಲೂ ಹೆಣ್ಣು ನಡೆಸುವ ಬದುಕಿನ ಹೋರಾಟದ ಬಗ್ಗೆ ಅತೀವವಾಗಿ ಕಾಣಬರುವ ಅನುಕಂಪ, ಇಲ್ಲಿ ನಮಗೆ ಎದ್ದು ಕಾಣುವ ವಿದ್ಯಮಾನವಲ್ಲ ಎನ್ನುವುದೇ ಗಮನಾರ್ಹವಾದದ್ದು. ಇರುವುದು ಒಂದು ವಾಸ್ತವದ ಗ್ರಹಿಕೆ, ಜೀವನ ನಿರೂಪಣೆ. ಇದು ವ್ಯಕ್ತಿಯದ್ದಾಗದೇ ಇಡೀ ಊರಿನದ್ದಾಗುವುದು (ಸಮುದಾಯ ಪ್ರಜ್ಞೆ) ಕಥೆಯ ನಿರೂಪಣೆಯ ಸ್ಪಷ್ಟ ಉದ್ದೇಶ.

ಜಾಲಿಬೆಂಚಿ ಚಿನ್ನಲಕ್ಷಮ್ಮ ನಡೆಸಿದ್ದು ಅವಳ ಅಗತ್ಯವಾಗಿದ್ದ ‘ಒಂದು ಗಳಾಸು ಸರಾಬು, ಒಂದು ತುಣುಕು ಕೋಳಿ ಊಟಕ್ಕೆ’ ಆಗಿರಲಿಲ್ಲ ಎನ್ನುವುದು ಅವಳು ನಡೆದುಕೊಂಡ ರೀತಿಯಲ್ಲೇ ವ್ಯಕ್ತ. ಆದರೆ ಅಷ್ಟಕ್ಕೆ ಅದೊಂದೇ ಅನಿವಾರ್ಯ ಮಾರ್ಗವಾಗಿತ್ತೆ ಎನ್ನುವುದಕ್ಕೆ ಉತ್ತರ ಸರಳವಿಲ್ಲ. ಗಿಚ್ಚಲುವಿನ ದೃಷ್ಟಿಕೋನವೂ ಕತೆಯ ಉದ್ದಕ್ಕೂ ನೆರಳಿನಂತೆ ನಮ್ಮನ್ನು ಕಾಡುವುದು ಕತೆಯ ನಿರೂಪಣೆಯ ಸಂಯೋಜನೆಯಲ್ಲೇ ಅಂತರ್ಗತವಾಗಿದೆ. ಜಟಕಾ ಸ್ಟ್ಯಾಂಡಿನ ಯುವಕ "ತಿಂಡ್ಲೂರು ನರಸಿಮ್ಲು ಕಣ್ಣಿಗೆ ಬೀಳದೆ ಮದ್ಲು ಪರಾರ್ ಅಗ್ರೀ" ಎಂದ ಘಳಿಗೆಯಲ್ಲೇ ಲಕ್ಷಮ್ಮನ ಬಾಳಿನ ಹಾದಿ ನಿರ್ಧಾರವಾದಂತಿದೆ. ಇದಕ್ಕೆ ಲಕ್ಶ್ಮಮ್ಮನ ರಕ್ತದಲ್ಲೇ ಇದ್ದ ಸಾಹಸಮಯ ವ್ಯಕ್ತಿತ್ವವೇ ಕಾರಣವೇ ಹೊರತು ಇವಿಲ್ ಅಲ್ಲ ಎನ್ನುವುದು ನಮಗೆ ಅರ್ಥವಾದಲ್ಲಿ ನಾವು ‘ಕರುಣೆಯುಳ್ಳ ಬಲ್ಲವರಾ’ದಂತೆಯೇ! ಮುಂದೆಯೂ ಕಳ್ಳಭಟ್ಟಿಯ ಮಾರ್ಗ ಹಿಡಿಯುವಲ್ಲಿ ಅವಳಿಗೆ ಅದು ಅನಿವಾರ್ಯವಾಗಿರಲಿಲ್ಲ ಎನ್ನುವುದು ವೇದ್ಯ. ಅವಳ ಹೊಟ್ಟೆಪಾಡಿನ ಅನಿವಾರ್ಯಗಳಷ್ಟೇ ವ್ಯಕ್ತಿತ್ವದ ಅಂಶಗಳೂ ಅವಳ ಬದುಕಿನ ಹಾದಿಯನ್ನು ರೂಪಿಸಿದವು ಎನ್ನುವುದು ಸುಳ್ಳಲ್ಲ. ಆದರೆ, ಈ ತರದ ಬದುಕು ಹೆಣ್ಣುಮಗಳೊಬ್ಬಳಿಗೆ ಆಯ್ಕೆ ಆಗುವ ಸಂದಿಗ್ಧವನ್ನು ಮಳಗಿಯವರು ಮರೆಯುವುದಿಲ್ಲ. ಲಕ್ಷ್ಮಮ್ಮ ಗಿಚ್ಚಲುವಿನ ಬಳಿ ಅವನು ಏನು ಮಾಡಬಹುದಿತ್ತು ಎಂದು ಅಲವತ್ತುಕೊಳ್ಳುವಲ್ಲಿ ಇಂಥ ಹೊಳಹುಗಳಿವೆ. ಎಲ್ಲರ ಹಾದಿಯಾಗಲಾರದ ಆದರೆ ಈ ಹಾದಿಗೆ ಬಿದ್ದವರ (ಹಾದಿಯೇ ತನ್ನನ್ನು ಆಶ್ರಯಿಸಿದವರನ್ನು ನುಂಗುವ ಹಾದಿಯಿದು) ಒಂದು ಚಿತ್ರಕ್ಕೆ ಮಳಗಿಯವರು ಹೆಣ್ಣುಮಗಳನ್ನು ಆಯ್ದಿರುವುದು ಕತೆಯನ್ನು ಅತ್ಯಂತ ವಿಶಿಷ್ಟವೂ ಅನನ್ಯವೂ ಆಗುವಂತೆ ಮಾಡಿದೆ, ಕತೆಗಾರಿಕೆಯ ಉಳಿದೆಲ್ಲ ಗುಣಾತ್ಮಕ ಅಂಶಗಳನ್ನು ಮೀರಿ ಇದು ನಮ್ಮ ಗಮನಸೆಳೆಯುತ್ತದೆ.

ಅಗಮ್ಯ ಅಗೋಚರ ಅಪ್ರತಿಮ ಜೀವವೇ - 2002
ಇಂದು ಮುಖಿ ಸುರಹೊನ್ನೆಯ ಆತ್ಮಗತ ನಿರೂಪಣೆ, ನಿರೂಪಕನ ನಿರೂಪಣೆ, ಸಮೀರನ ಸ್ವಗತ - ಈ ಮೂರು ಸ್ತರಗಳಲ್ಲಿ, ಮೂರೂ ವಿಭಿನ್ನವಾದ ನೆಲೆಗಟ್ಟಿನಿಂದ ಇಲ್ಲಿ ಒಂದು ಬದುಕನ್ನು ಕಟ್ಟಿಕೊಡುವ ಪ್ರಯತ್ನವಿರುವುದು ಈ ಕತೆಯ ತಂತ್ರ ವಿಶೇಷ. ಮಳಗಿಯವರ ಕತೆಗಳಲ್ಲಿ ಒಂದು ಬಗೆಯ ಸ್ವಗತ, ಆಪ್ತಸಖನ ಆತ್ಮಾನುರೋದದ ಧ್ವನಿ, ಜೀವನ ಪರಾಮರ್ಶೆಯ ಹಿನ್ನೋಟ ಮತ್ತೆ ಮತ್ತೆ ಎದುರಾಗುವ ತಂತ್ರ. ಇಲ್ಲೆಲ್ಲ ಹೆಚ್ಚಾಗಿ ಬಳಕೆಯಾಗುವುದು ಉತ್ತಮ ಪುರುಷ ನಿರೂಪಣೆಯೇ. ಆದರೆ ಇಡೀ ಕತೆಯ ಚೌಕಟ್ಟಿನಲ್ಲಿ ಇದೊಂದು ತಂತ್ರ ಭಾಗಶಃ ಮಾತ್ರ ಬಳಕೆಯಾಗುವುದು ಇವರಲ್ಲಿನ ಒಂದು ವಿಶೇಷ.

ಈ ಕತೆಯಲ್ಲಿಯೂ ಇಂದುಮುಖಿಯ ಸಾವು ಈ ಕಥಾನಕದ ಆರಂಭದಲ್ಲೇ ಘಟಿಸಿದ್ದು ಈ ಸಾವೇ ಕಥಾನಕಕ್ಕೆ ಒಂದು ಚೌಕಟ್ಟನ್ನು ಒದಗಿಸಿರುವುದನ್ನು ಕಾಣಬಹುದು. ಆದರೆ ಸಾವು ಕೇವಲ ಬದುಕನ್ನು ಹೊರನಿಂತು ನೋಡುವ, ನೋಡಿ ಹೇಳುವ ಕೆಲಸವನ್ನು ಸುಲಭವಾಗಿಸಿದ್ದು ಬಿಟ್ಟರೆ ಅದೇ ಕತೆಯ ಗಮ್ಯವೂ ಅಲ್ಲ, ಕಥಾನಕಕ್ಕೆ ಸಾವು ಯಾವುದೇ ಬಗೆಯ ಚೌಕಟ್ಟನ್ನಿಡುವುದೂ ಇಲ್ಲಿಲ್ಲ. ಉಳಿದಂತೆ ಇಂದುಮುಖಿಯದೂ ಅವಳ ಗೆಳತಿ ಮೃಣಾಲಿನಿಯದೂ ಒಂದು ಬಗೆಯ ಹೋರಾಟವೇ. ಆದರೆ ಈ ಹೋರಾಟ ಬದುಕಿನ ನೆಲೆಕಂಡುಕೊಳ್ಳುವುದಾಗಿಲ್ಲ, ಹೊಟ್ಟೆಪಾಡಿನದೂ ಅಲ್ಲ. ಇಲ್ಲಿರುವ ಹೋರಾಟ ಅಸ್ಮಿತೆಯದು. ಬದುಕನ್ನು ಸಂಪನ್ನಗೊಳಿಸಿಕೊಳ್ಳುವುದರ ಕುರಿತಾದ್ದು ಎನ್ನುವುದು ಗಮನಾರ್ಹ. ಇಲ್ಲಿ ಇಂದುಮುಖಿ ಮತ್ತು ಮೃಣಾಲಿನಿಯರ ಜೀವನದೃಷ್ಟಿ ವಿಭಿನ್ನ, ತದ್ವಿರುದ್ಧ. ಆದರೂ ಒಂದು ಬಗೆಯ ಸಂತುಲನ-ಸಮನ್ವಯ ಇಲ್ಲಿ ನಡೆದಿರುವುದು ಕಾಣುತ್ತೇವೆ. ತಾತ್ವಿಕವಾದ ಈ ನೆಲೆಯನ್ನಲ್ಲದೆ ಕತೆ ಬೇರೆ ಕೆಲವು ಆಯಾಮಗಳಲ್ಲೂ ವಿಸ್ತರಿಸಿಕೊಳ್ಳುವುದು ಕತೆಗೆ ಹೆಚ್ಚಿದ ಆಳ ದಕ್ಕಿಸಿದೆ.

ಈ ಕತೆಯ ಸಂದರ್ಭದಲ್ಲೇ ಉಲ್ಲೇಖಿಸಬೇಕಾದ ಅಂಶವೊಂದಿದೆ. ಅದು ಕೇಶವ ಮಳಗಿಯವರಿಗೆ ತಟ್ಟನೆ ಬಂದೊದಗಿದ ಅಕ್ಷರ ವೈರಾಗ್ಯದ ಕುರಿತು. ಬರೆಯುವುದು, ಪ್ರಕಟಿಸುವುದು ಮತ್ತು ಅದಕ್ಕೆ ಓದುಗ-ವಿಮರ್ಶಕ ವರ್ಗದ ಪ್ರತಿಕ್ರಿಯೆಯನ್ನು ಕಾಯುವುದು ಬರಹಗಾರರ ಅನಿವಾರ್ಯ ಕರ್ಮವೆಂದಾದರೆ ಅದರ ಕುರಿತೇ ಬರಹಗಾರನಿಗೆ ಜುಗುಪ್ಸೆ, ಅಸಹ್ಯ, ಅಸಮಾಧಾನ ಕೂಡ ಹುಟ್ಟುವ ಘಳಿಗೆಯೊಂದು ಬಹುಷಃ ಪ್ರತಿ ಬರಹಗಾರನಿಗೂ ಎದುರಾಗುವುದೋ ಏನೋ. ಈ ಕತೆಯಲ್ಲಿ ಬರುವ ಒಂದು ಮಾತನ್ನು ಗಮನಿಸಿ:

`ಎಲ್ಲವನ್ನೂ ಬರೆದೇ ತೀರಬೇಕು ಅನ್ನೋ ಹುಂಬಗುತ್ತಿಗೆ ಯಾಕೆ? ನಿನಗೆ ಬರೆಯೋದಕ್ಕೆ ಆಗೋಲ್ಲ ಅನ್ನೋದರ ಸರಳ ಸತ್ಯ ಏನೂಂದ್ರೆ ನೀನು ಹಾಗೆ ಬದುಕುತ್ತಾ ಇದೀಯ ಅನ್ನೋದು. ಅಕ್ಷರಗಳ ಭ್ರಾಮಕ ಬದುಕಿನ ಬೆನ್ನಟ್ಟೋ ಬದಲು ಈ ಕ್ಷಣಕ್ಕೆ ಎದುರಾಗಿ ನಿಂತಿದ್ದನ್ನು ಅನುಭವಿಸೋದನ್ನು ನಿನ್ನಂಥ ಲೇಖಕರು ಕಲೀಬೇಕು’

ಇದಕ್ಕೆ ತತ್ಸಂಬಂಧಿಯೋ ಎನಿಸುವಂಥ ಮಾತುಗಳು ಕೇಶವ ಮಳಗಿಯವರ ನೇರಳೆ ಮರದಲ್ಲಿಯೂ ಇವೆ!

`ತನ್ನ ಮೆಚ್ಚಿನ ಕೆಲಸವಾದ ಹಗಲುಗನಸಿನಲ್ಲಿ ತೇಲುತ್ತಿದ್ದ ಕಥೆಗಾರನಿಗೆ ಈ ವಿಚಾರಗಳ ಏಕತಾನತೆಯಿಂದ ಏಕೋ ಕಿರಿಕಿರಿಯಾಗತೊಡಗಿತು. ಇಂಥದೆಲ್ಲ ಬರೆಯುವುದರಿಂದ ಮನಸ್ಸಿಗೆ ಮುದವೆ, ಅಕ್ಷರಲೋಕಕ್ಕೆ ಹಿತವೇ, ಈ ಬಗೆಯ ಭಾರಿ ದಾರ್ಶನಿಕ ನುಡಿಗಳು ಯಾರಿಗೆ ತಾನೇ ಮುಕ್ತಿಯನ್ನು ಕೊಡಬಲ್ಲುವು ಎಂದು ಮನಸ್ಸು ವ್ಯಗ್ರವಾಗುತ್ತದೆ. ಅಕ್ಷರಲೋಕ ಸೃಷ್ಟಿಸುವ ಹಮ್ಮಿನ ಸಂತತನ ಕಿರಿಕಿರಿ ತರುತ್ತದೆ. ತಟ್ಟನೆ ಎದ್ದವನೆ ಆವರೆಗೆ ಮನಸ್ಸಿನಲ್ಲಿ ಸೃಷ್ಟಿಸಿಕೊಂಡ ದಿನಚರಿಯ ಬಿಳಿಹಾಳೆಗಳನ್ನು ಚೂರಾಗಿ ಹರಿದೊಗೆಯುತ್ತಾನೆ. ಶಾಯಿಯ ಪೆನ್ನನ್ನು ಕಣ್ಣಿಗೆ ಕಾಣಿಸದಷ್ಟು ದೂರ ಎಸೆಯುತ್ತಾನೆ. ಇಂಥ ಸಮಯದಲ್ಲಿ ಬೇರೆಲ್ಲಕ್ಕಿಂತ ರೇನೆ ರಿಲ್ಕ್ ನಂತೆ ಸಮಾಜದ ಶುದ್ಧಗಾಳಿ ಸೇವನೆಗೆ ಹೊರಡುವುದೇ ಸೂಕ್ತವೆಂದು ಕಿಕ್ಕಿರಿದ ಮಾರುಕಟ್ಟೆಯ ಕಡೆ ಕಾಲು ಹಾಕತೊಡಗುತ್ತಾನೆ.’ (ನೇರಳೆ ಮರ, ಪುಟ:59)

ಕಾನುಮನೆ -2003
ಸತತ ಬರಗಾಲದಿಂದ ಅನಿವಾರ್ಯವಾಗಿ ಗುಳೆ ಹೊರಟು ಇನ್ನೆಲ್ಲೊ ಹೊಟ್ಟೆಪಾಡು ಕಂಡುಕೊಂಡವರ ಆಳದ ಭಾವವಲಯವನ್ನು ಎಂದಿಗೂ ಬಿಟ್ಟು ಬಂದ ಕಳ್ಳುಬಳ್ಳಿ ಸಂಬಂಧದ ನೆಲವಷ್ಟೇ ತುಂಬಲು ಸಾಧ್ಯವೆನ್ನುವ ಸೂಕ್ಷ್ಮವನ್ನು ಇನ್ನಿಲ್ಲದ ಕಾವ್ಯಮಯತೆಯಿಂದ ಇಡೀ ವಸ್ತುವನ್ನೇ ರೂಪಕವಾಗಿಸಿ ಹೇಳುವ ಕತೆ ಕಾನುಮನೆ. ಈ ಕತೆ ಮೂರು ಸ್ತರಗಳಲಿ ಹಬ್ಬುತ್ತದೆ. ಒಂದು ಅವ್ವಿ ಮತ್ತು ಪರಶ್ಯಾರ ಮುಗ್ಧ ಬೆಡಗಿನ ಲೋಕದಲ್ಲಿ. ಇವರಿಗೆ ಹಾಗೆ ನೋಡಿದರೆ ಬಿಟ್ಟು ಬಂದ ಊರಿನ ಸ್ಮೃತಿಗಳಿಲ್ಲವೆಂದೇ ಹೇಳಬಹುದು. ಅವರ ಬಾಲ್ಯ ಸರಿಯಾಗಿ ತೊಡಗಿದ್ದೇ ಕಾನುಮನೆಯಲ್ಲೆಂಬಂತೆ ಬೆಳೆಯುವ ಮೊಳಕೆಗಳು ಅವು. ಆದರೆ ಹಿರಿಯರಾದ ಗಿಚ್ಚ ಮತ್ತು ಗುನ್ನಿಯರ ಜಗತ್ತೂ ಒಂದಿದೆಯಲ್ಲ. ಅವರಿಗೆ ಎಷ್ಟೆಂದರೂ ಇಲ್ಲಿ ತಾವು ಸುರಕ್ಷಿತ ಎಂಬ ಭಾವನೆ ಬಲಗೊಳ್ಳುತ್ತಿಲ್ಲ. ಅವ್ವಿ ಮೈನೆರೆದ ಮೇಲಂತೂ ಈ ಭಯ ಅವರನ್ನು ಹಗಲಿರುಳು ಕಾಡುತ್ತದೆ. ಅದಕ್ಕಿಂತ ಮೊದಲು ಕೂಡಾ ಇಲ್ಲಿನ ಆಹಾರ ಪದ್ಧತಿ, ಮಾತು ಅವರಿಗೆ ನಮ್ಮದು ಅನಿಸುವುದು ಸಾಧ್ಯವಾಗುವುದಿಲ್ಲ. ಆದರೆ ದುಡಿದು ತಿನ್ನುವವರಿಗೆ, ಅದು ಅನಿವಾರ್ಯವಾದವರಿಗೆ ಎಲ್ಲಾದರೇನು ಎಂಬ ಭಾವವಿರುವುದು ಅಗತ್ಯ. ಇಲ್ಲೊಂದು ದ್ವಂದ್ವವಿದೆ, ಗೊಂದಲವಿದೆ. ಒಂದು ನಿಟ್ಟಿನಿಂದ ಗಿಚ್ಚ-ಗುನ್ನಿಯರ ಮನಸ್ಸಿನ ಆತಂಕ ಕೇವಲ ಭ್ರಮೆಯೆನಿಸುವಂಥಾದ್ದು. ಆದರೆ ಇನ್ನೊಂದು ನಿಟ್ಟಿನಿಂದ ವರ್ಗಾವರ್ಗಿಯ ಬದುಕಿನ ಕಟ್ಟಳೆಗಳಿಗೆ ಬದ್ಧರಲ್ಲದ, ಒಗ್ಗಿಕೊಳ್ಳಲಾರದ ಕೃಷಿಯನ್ನು ನೆಚ್ಚಿ ಬದುಕುವ ಈ ರೈತಾಪಿ ಜನಕ್ಕೆ ಮಣ್ಣೇ ತಮ್ಮ ಸರ್ವಸ್ವ. ತಮ್ಮದು ಅನಿಸುವ ನೆಲ-ಜಲ-ಜನವೇ ಎಲ್ಲವೂ ಆಗಿರುವ ವಾಸ್ತವ. ಇದೊಂದು ರೀತಿಯ ಕ್ಷೇತ್ರಪ್ರಜ್ಞೆ. ಬಲಿತ ಹಿರಿಯರಲ್ಲಿ ಅದು ಮನೋರೋಗದಂತೆ ಕಾಡುವ ವಿದ್ಯಮಾನವಾಗಬಲ್ಲುದು. ಅದು ಇಲ್ಲಿ ಚಿತ್ರಿಸಲ್ಪಟ್ಟ ಬಗೆ ಬೆರಗು ಮೂಡಿಸುವ ರೂಪಕ ಪ್ರಜ್ಞೆಯದು. ಮೂರನೆಯದು ಕೊಂಚ ಸಂಕೀರ್ಣವಾದದ್ದು. ಗಂಡ ಯಲಗೂರಿಯನ್ನು ಕಳೆದುಕೊಂಡ ಅವ್ವಿಯ ತಾಯಿ ಪುಟ್ಟ ಅವ್ವಿಯನ್ನೆ ತೊರೆದು ಇನ್ಯಾರೊಂದಿಗೋ ಹೊರಟು ಹೋದ ದಾರುಣ ನೆನಪು ಅವ್ವಿಯನ್ನು ಕಾಡುವ ಭೂತವಾಗುವುದು ಈ ಸ್ತರದಲ್ಲಿ. ಇದು, ಮೈನೆರೆಯುವುದು, ಮದುವೆ-ಮಕ್ಕಳು ಆಗುವುದು ಎಲ್ಲವೂ ಕೊನೆಗೆ ಇನ್ನೊಂದು ಅವ್ವಿಯನ್ನೇ ಸೃಷ್ಟಿಸುತ್ತದೆ, ಅವ್ವಿಯ ಅನಾಥಪ್ರಜ್ಞೆ, ಸಂಕಟ, ಅಪಮಾನಗಳನ್ನೇ ಹುಟ್ಟಿಸುತ್ತದೆ ಎನ್ನುವ ಭಾವ ಆ ಪುಟ್ಟ ಮನಸ್ಸಿನಲ್ಲಿ ನೆಟ್ಟು ಕೂರುವ ವಿದ್ಯಮಾನ. ಮಳಗಿಯವರ ಕತೆಯಲ್ಲಿ ಯಾವುದೂ ಭಾಷೆಯಲ್ಲಿ ಮೈತಳೆಯದೆ ಮುಗ್ಧ ಹುಡುಗಿಯ ಮನೋಭಿತ್ತಿಯ ಈ ಭಯ, ಆತಂಕಗಳು ಕಥಾನಕವಾಗಿ ಮೂಡುವ ಛಂದ-ಚಂದ ಎರಡನ್ನೂ ಕತೆಯೋದಿಯೇ ಸವಿಯಬೇಕು.

ಅವ್ವಿ ಕಾಣೆಯಾಗುವ ಇಡೀ ಪ್ರಸಂಗದ ವಿವರಗಳಲ್ಲಿ ಪರಕೀಯ ಪ್ರಜ್ಞೆ ಕೆಲಸ ಮಾಡುವ ವಿಧಾನ ಬೇರೆಯೇ ಸ್ತರದ್ದು. ಅವ್ವಿ ಗಿಚ್ಚ-ಗುನ್ನಿಯರ ಮಗಳಲ್ಲ. ಅವಳನ್ನು ತಾಯಿ ತನ್ನ ಪ್ರಿಯಕರನಿಗಾಗಿ ಪರಿತ್ಯಜಿಸಿ ಹೋಗಿರುವ ಅರಿವು-ಸ್ಮೃತಿ ಮಗುವಿನ ಮುಗ್ಧ ಮನಸ್ಸಿನಲ್ಲಿನ್ನೂ ಇದ್ದೇ ಇದೆ. ಇದು ಪ್ರಸ್ತುತ ಅವ್ವಿಗೆ ತಾನು ದೊಡ್ಡವಳಾಗಿರುವುದು, ಹಾಗಾಗಿ ತಾನೇನಾದರೂ ಮದುವೆಯಾದದ್ದೇ ಆದರೆ ತನಗೂ ತನ್ನವ್ವಿಗಾದಂತೆ ಮಕ್ಕಳಾಗುವುದು ಸಾಧ್ಯ ಮತ್ತು ತನ್ನದೇ ತಾಯಿಯ ಹಾಗೆ ತಾನೂ ತನ್ನ ಮಗುವಿನ ‘ಕೈಯಾಗ ನೋಟು ತುರುಕಿ, ಈಗ ಬರತೀನಿ, ಇರ್ರಿ’ ಎಂದು ಹೊಟ್ಟೆಯ ಮಕ್ಕಳನ್ನು ಬಿಟ್ಟು ಇನ್ಯಾರೊಂದಿಗೋ ಹೋಗಿಬಿಡುವುದು ಕೂಡಾ ಸಾಧ್ಯ ಎನಿಸುವುದೇ ಭಯದ ಮೂಲವಾಗಿಬಿಡುತ್ತದೆ. ಈ ಸಾಧ್ಯತೆ ಒಂದು ನಿಯಮದಂತೆ ಅವ್ವಿಯನ್ನು ಬೆದರಿಸುವುದು ಮತ್ತು ಗುಳೆ ಬಂದ ಮಂದಿಗೆ ಇದು ತಮ್ಮ ನೆಲೆಯಲ್ಲ ಎನ್ನುವ ಪ್ರಜ್ಞೆಯೇ ಬೆದರಿಸುವುದು ಒಂದು ಸ್ತರದಲ್ಲಿ ಒಂದೆ ಪಾತಳಿಗೆ ಸಲ್ಲುವಂಥ ಭಯವೆಂಬುದನ್ನು ಗಮನಿಸಿ. ಸುಪ್ತವಾಗಿ ತನ್ನ ಮಕ್ಕಳೂ ತನ್ನಂತೆಯೇ ಅನಾಥ ಕೂಸುಗಳಾಗಿ, ಇನ್ಯಾರದೋ ಅಪಹಾಸ್ಯಕ್ಕೆ-ನಿಂದೆಗೆ ಗುರಿಯಾಗುತ್ತ, ಯಾರದೋ ನೆರಳಲ್ಲಿ ತಿಂದು-ಮಾಡಿ ಬೆಳೆಯುತ್ತವೆ ಎನ್ನುವಂಥ - ಆದರೆ ಪ್ರಕಟವಾಗಿ ಸದ್ಯ ತನಗಾದ ಛಿದ್ರ ಬದುಕಿನದೇ ಅಪಸ್ವರ ಮತ್ತೊಮ್ಮೆ ಸಂಭವಿಸಲಿರುವುದರ ಕುರುಹು ಈ ದೊಡ್ಡವಳಾಗಿದ್ದು ಅನಿಸತೊಡಗಿದ್ದೇ ಅವ್ವಿ ಸುಮ್ಮನೇ ಒಂದು ಕತ್ತಲಿನ ಗವಿಯನ್ನು ಹೊಕ್ಕು ಇಲ್ಲವಾಗಿ ಬಿಡುತ್ತಾಳೆ.

‘ಭಯ ಗಾಳಿಯಂತೆ ಅವಳ ದೇಹವನ್ನು ಸುತ್ತತೊಡಗಿತು. ಸಾಂತ್ವನ ನೀಡುವ ಜೋಡಿ ಕೈಗಳು ಅವಳ ಗಲ್ಲ ಸವರಿದ್ದರೆ ಆಕೆ ಮತ್ತೆ ಅವ್ವನ ಅಕ್ಕರೆಯ ಪುಟ್ಟ ಅವ್ವಿಯಾಗುತ್ತಿದ್ದಳು. ಆದರೆ ಗುಳೆಯ ಅತಂತ್ರ ಬದುಕು ಅವಳ, ಅವಳ ಬಂಧುಗಳ ಸಹಜ ಸುಖವನ್ನು ಕಿತ್ತು ಹಾಕಿತ್ತು. ಎಲ್ಲಿಯೋ ಇದ್ದವರು, ಇರಬೇಕಾದವರು ಇನ್ನೆಲ್ಲಿಯೋ ಇದ್ದೂ ಇಲ್ಲವಾಗಿದ್ದರು.’ (ಪುಟ:50)

ಮಾತು ಯಾತನೆಯ ದಿಡ್ಡಿ ಬಾಗಿಲು-1989
ಮಾತು ಯಾತನೆಯ ದಿಡ್ಡಿ ಬಾಗಿಲು ಕತೆಯ ಮಿಲಿಂದ ಕವಿ. ಅನ್ಯಾಯವನ್ನು ಪ್ರತಿಭಟಿಸುವ ಮನೋಧರ್ಮದವನು. ಕ್ರಾಂತಿಕಾರಿಯಾಗುವುದರ ಕುರಿತು ತನ್ನದೇ ಆದ ನಿಲುವುಗಳಿರುವವನು. ಕಡಲತೆರೆಗೆ ದಂಡೆಯ ಅಚ್ಯುತನದೇ ಇನ್ನೊಂದು ರೂಪವಾಗಿ ಈ ಕತೆಯ ಮಿಲಿಂದನನ್ನು ಕಾಣಬಹುದು. ಮಿಲಿಂದ ಮತ್ತು ಅಚ್ಯುತನ ಕ್ರಾಂತಿಯ ಪರಿಕಲ್ಪನೆಯೇ ವಿಭಿನ್ನವಾದದ್ದು. ಅದನ್ನು ಅರಿತು ಮಳಗಿಯವರ ಕತೆಗಳನ್ನು ಪ್ರವೇಶಿಸುವುದು ಅಗತ್ಯ. (ವಾಸ್ತವವಾಗಿ ಕಡಲತೆರೆಗೆ ದಂಡೆ ಮತ್ತು ಮಾತು ಯಾತನೆಯ ದಿಡ್ಡಿ ಬಾಗಿಲು ಎರಡೂ ಕತೆಗಳು ಬಂದಿರುವುದು 1989ರಲ್ಲಿಯೇ. ಆದರೆ ಸಂಕಲನದಲ್ಲಿ ಕತೆಗಳು ಬರೆದ/ಪ್ರಕಟವಾದ ಕಾಲಕ್ರಮಕ್ಕನುಗುಣವಾಗಿ ಸಂಯೋಜಿಸಲ್ಪಟ್ಟಿಲ್ಲ. ಅದು ಉದ್ದೇಶಪೂರ್ವಕವೇ ಇದ್ದೀತು.)

ಪ್ರಸ್ತುತ ಗಿರಣಿಯ ಮ್ಯಾನೇಜ್‌ಮೆಂಟ್ ಜೊತೆಗೆ ಹೋರಾಟ ಸುರುವಾಗಿದೆ. ಗಂಭೀರವಾಗಿ ಗಾಯಗೊಂಡ ಯೂನಿಯನ್ ಸಕ್ರೆಟರಿ ಬಸು ಆಸ್ಪತ್ರೆಯ ಹಾದಿಯಲ್ಲಿ ಮಿಲಿಂದನಿಗೆ ಈ ಇಡೀ ಹೋರಾಟ-ಹರತಾಳದ ಮುಂದುವರಿಕೆಯ ಹೊಣೆ ವಹಿಸುವಂತೆ ಕಂಡಾಗ ಮಿಲಿಂದನಿಗೆ ಇವೆಲ್ಲ ಜಂಜಾಟ-ಲಫಡಾಗಳಾಗಿ ಕಾಣಿಸುತ್ತವೆ ಎನ್ನುವುದನ್ನು ಗಮನಿಸಬೇಕು. ಇದು ಹೇಡಿತನದ ನಿಲುವಾಗಿ ಬಂದ ಆಲೋಚನೆಯಲ್ಲ. ಹೆಚ್ಚೆಂದರೆ ಸ್ವಾರ್ಥವಿದೆ ಇಂಥ ಯೋಚನೆಯಲ್ಲಿ. ಆದರೆ ಮಿಲಿಂದನಿಗೆ ವಿವರಿಸುವುದು ತುಂಬ ಇದೆ, ಅವನ ಪರಿಕಲ್ಪನೆಯ ಕ್ರಾಂತಿ ಬೇರೆಯೇ ಇದೆ. ಅದು ಕಮ್ಯೂನಿಸ್ಟ್ ಪಾರ್ಟಿಯ ಕಚೇರಿಯಲ್ಲಿ ಹೊರಬರುತ್ತದೆ.

"ನನಗೆ ಅಷ್ಟೇ ಏಕೆ, ಪ್ರತಿಯೊಬ್ಬ ಸೂಕ್ಷ್ಮಗ್ರಾಹಿಗೂ ನನಗೆ ಗೊತ್ತಿರುವ ಹಾಗೆ ತೀವ್ರವಾಗಿ ಕಾಡೋದು ನಾಲ್ಕು. ಸಂಗೀತ, ಕಾವ್ಯ, ಹೆಣ್ಣು ಮತ್ತು ಸಾವು. ಮೊದಲಿನೆರಡು ಮನುಷ್ಯ ಸೃಷ್ಟಿಯಾದ್ರೆ ಇನ್ನೆರಡು ನಿಸರ್ಗ. ಅವು ಅವಷ್ಟಕ್ಕೆ ಅವನ್ನೇ ಸೃಷ್ಟಿಸಿಕೊಂಡಿರೋದು. ನಿಸರ್ಗದೊಂದಿಗೆ ಮನುಷ್ಯ ನೀರಿನಷ್ಟು ಸಹಜವಾಗಿ ಬೆರೆತು ಹೋಗದಿದ್ರೆ ಅವನು ಅಪೂರ್ಣ - ನಮ್ಮ ಸಂತರು, ಅನುಭಾವಿಗಳು ಇದನ್ನೇ ಮಾಡಿದ್ದು-"

ಈ ಮಾತನ್ನು ಅರ್ಧಕ್ಕೆ ತುಂಡರಿಸುವ ಹಾಗೆ ಧನಂಜಯ ಜೋರಾಗಿ ಚಪ್ಪಾಳೆ ಹೊಡೆದು ಹಾಗಾದರೆ ನೀನೇಕೆ ಕಮ್ಯೂನಿಸ್ಟ್ ಪಾರ್ಟಿ ಕಚೇರಿಗೆ ಬಂದೆ ಎಂದು ಪ್ರಶ್ನಿಸುತ್ತಾನೆ. ಕಮ್ಯೂನಿಸ್ಟ್ ಸಿದ್ಧಾಂತಗಳು ಮನುಷ್ಯನನ್ನು ಪೂರ್ಣವಾಗಿ ಕಂಡುಕೊಳ್ಳಲು ಎಲ್ಲಿ ಸೋಲುತ್ತವೆ ಮತ್ತು ಕ್ರಾಂತಿ ಯಾಕೆ ಸಾಮಾನ್ಯನಿಂದ ದೂರವೇ ಉಳಿಯುವ ವಸ್ತುವಾಗುತ್ತದೆ ಎನ್ನುವುದನ್ನು ಮಿಲಿಂದ ಕಂಡುಕೊಂಡಂತೆಯೇ ಅಚ್ಯುತನೂ ಕಂಡುಕೊಳ್ಳುತ್ತಾನೆ. ಅದು ಅಷ್ಟು ಮುಖ್ಯವಲ್ಲ. ಆದರೆ ಮಳಗಿಯವರ ಕತೆಗಳ ಹಿನ್ನೆಲೆಯಲ್ಲಿ ಡಿ.ಆರ್.ನಾಗರಾಜ್ ಹೇಳುವ ಮಾತುಗಳನ್ನು ಗಮನಿಸಿ:

"ತತ್ ಕ್ಷಣದ ಶೋಷಣೆಯ ಕಾರಣಗಳು ಇಲ್ಲದಾಗಲೂ ಮನಸ್ಸೊಂದು ಕ್ರಾಂತಿಕಾರಿಯಾಗಲು ಯಾಕೆ ಹಾತೊರೆಯುತ್ತದೆ? ಯಾಕೆ ಬಂಡಾಯವೇಳುತ್ತದೆ? ಸರಳವಾಗಿ ಹೇಳುವುದಾದರೆ, ಇನ್ನಷ್ಟು ತೀವ್ರವಾದ ಸಂಬಂಧಗಳ ಅಗತ್ಯಕ್ಕಾಗಿ."

ಇದು ಯೋಚಿಸಬೇಕಾದ, ವಿಶೇಷವಾಗಿ ಮಳಗಿಯವರ ಕಥಾನಕಗಳ ಚಲನೆಯ ಹಿನ್ನೆಲೆಯಲ್ಲಿ ಹೆಚ್ಚು ಆಳವಾಗಿ ಒರೆಹಚ್ಚಿ ಅರ್ಥೈಸಿಕೊಳ್ಳಬೇಕಾದ ಸೂಕ್ಷ್ಮ ಸಂಗತಿ.

ಇಲ್ಲಿನ ಯೂನಿಯನ್ ಸೆಕ್ರೆಟರಿ ಬಸು ಗೋವರ್ಕರ್‌ಗೆ ಮ್ಯಾನೇಜ್‌ಮೆಂಟ್ ಕಡೆಯ ಗೂಂಡಾಗಳು ಚಾಕು ಹಾಕುವ ಸನ್ನಿವೇಶವಿದೆ. ಕಡಲತೆರೆಗೆ ದಂಡೆ ಕತೆಯಲ್ಲಿ ಅನ್ಸರ್ ಕೂಡಾ ಕೊಲೆಯಾಗುವ ಬಗೆ ಇಂಥದ್ದೇ. ಈ ಕೊಲೆ ಕೂಡಾ ಮೇಲೆ ಗಮನಿಸಿದಂಥ, ಆತ್ಮಹತ್ಯೆ, ಸಾವು, ಕಣ್ಮರೆ, ಆಧ್ಯಾತ್ಮದಂಥ ನಿರಾಕರಣ ಮಾರ್ಗದ್ದೇ ಇನ್ನೊಂದು ಆವೃತ್ತಿಯೇ ಹೊರತು ಕ್ರಿಮಿನಲ್ ಕಥನದ ಹೊಳಹುಗಳೇನಿಲ್ಲ ಅದರಲ್ಲಿ ಎನ್ನುವುದು ಗಮನಿಸಬೇಕಾದ ಅಂಶ. ಡಿ.ಆರ್.ನಾಗರಾಜ್ ಅವರ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ನಾವು ಧಾರಿಣಿ, ಸುನಯನ, ಬಾರೋ ಗೀಜಗದಂಥ ಕತೆಗಳನ್ನು, ಊರ ಮಧ್ಯದ ಕಣ್ಣ ಕಾಡಿನೊಳಗೆ, ನಕ್ಷತ್ರಯಾತ್ರಿಕರು, ಹೊಳೆಬದಿಯ ಬೆಳಗು ತರದ ಕತೆಗಳನ್ನು ಪ್ರವೇಶಿಸುವುದು ಹೆಚ್ಚು ಸೂಕ್ತ. ಆಗಲೇ ಬಹುಷಃ ನಮಗೆ ಕೇಶವ ಮಳಗಿಯವರ ವಿಶಿಷ್ಟ ಪಾತ್ರಗಳು, ಅವು ತೋರುವ ಅಪಾರ ಅಕಾರಣ ಪ್ರೀತಿ ಮತ್ತು ಒರಟುತನ, ಛಲ ಮತ್ತು ನವಿರು ಅರ್ಥವಾಗಬಹುದು ಅನಿಸುತ್ತದೆ.

ಧಾರಿಣಿಯ ಜತೆ ನನ್ನದೊಂದು ಕತೆ-1988
ಇದು ಭಾವಲಹರಿಯಲ್ಲಿ ತೇಲಿ ಕೊಂಡೊಯ್ಯುವ ಕತೆ. ‘ಯಾರು ಕಳೆದ ಕನಸಿನ ಹಾಡುಗಳ ಮರಳಿ ಪಡೆದರೋ ಅವರಿಗೆ, ಅಂಥವರ ಹಾದಿಗೆ’ ಈ ಕತೆ. ಈ ಕತೆಯ ಬಗ್ಗೆ ಡಿ.ಆರ್.ನಾಗರಾಜ್ ಹೀಗೆ ಹೇಳುತ್ತಾರೆ:

"ಸರಳ ಭಾವುಕರ ಕೈಯಲ್ಲಿ ಜಾಳುಜಾಳಾದ ಸೆಂಟಿಮೆಂಟಲ್ ಆಗಬಹುದಾಗಿದ್ದ ಕಥೆಯನ್ನು ಕೇಶವ್ ತಮ್ಮ ಅನುರಕ್ತಿಯ ಸಾಂದ್ರತೆಯಿಂದ ಆಕರ್ಷಕ ಕಥೆಯನ್ನಾಗಿಸಿದ್ದಾರೆ. ಕೇಶವರ ಬಹುಪಾಲು ಕಥೆಗಳ ಮುಖ್ಯಪ್ರಾಣವಾದ ನೆನಪುಗಳನ್ನು ಕಥೆಯಲ್ಲಿ ಕೆತ್ತುವ ರೀತಿ ನನಗೆ ಪ್ರಿಯವಾದದ್ದು. ಅವುಗಳು ನಿಧನಿಧಾನಕ್ಕೆ ಒಂದು ಆಂತರಿಕ ವಿಸ್ತಾರವನ್ನೇ ನಿರ್ಮಿಸಿ ಬಿಡುತ್ತವೆ. ಬಾಲ್ಯದ ನೆನಪುಗಳು ಆಪ್ತ ವಿವರಗಳು,ನದಿ ಎಲ್ಲವೂ ಕಥೆಯಲ್ಲಿ ಜೀವದಾಯಕಗಳಾಗಿ ನಾಯಕನ ‘ಎಲಿಯನೇಷನ್’ಅನ್ನೂ ಕರಗಿಸಿಬಿಡುತ್ತದೆ."

ಈ ಕತೆಯಲ್ಲಿ ಆತ್ಮಹತ್ಯೆಯ ಗೊಂದಲದೊಂದಿಗೆ ನದಿಯ ತಟಕ್ಕೆ ಬರುವ ನಾಯಕ/ನಿರೂಪಕ ಮತ್ತು ಸುನಯನ(1990) ಕತೆಯಲ್ಲಿ ಮುಖಾಮುಖಿಯಾಗುವ ಚೈತ್ರ ಮತ್ತು ಸುನಯನ ಪಾತ್ರಗಳಿಗೆ ಇರುವ ತಾತ್ಪೂರ್ತಿಕ ಹೋಲಿಕೆಯನ್ನು ಗಮನಿಸಬೇಕು. ಸಾವು, ಆತ್ಮಹತ್ಯೆಯ ಬಯಕೆ, ದೇಶಾಂತರ ಹೊರಟು ಹೋಗುವ ಬಯಕೆ ತುಂಬಿದ ಪಾತ್ರಗಳು, ಈ ಪಾತ್ರಗಳು ಬದುಕಿನಲ್ಲಿ ಬಯಸಿದ್ದು ಸಿಗದೇ ಹೋಗುವುದು ಮತ್ತು ಬಯಸುತ್ತಿರುವುದೇ ಈ ಜಗತ್ತಿಗೆ ಸಂಬಂಧಿಸದ - ಇಲ್ಲಿ ಎಂದಿಗೂ ಸಿಗುವುದು ಸಾಧ್ಯವಿಲ್ಲದ ಸಂಗತಿಯಿರಬಹುದೆಂಬ ಪ್ರಜ್ಞೆ, ಮತ್ತು ಸಾಧಾರಣವಾಗಿ ಮಳಗಿಯವರ ಕತೆಯ ಬಹುಮುಖ್ಯ ತಿರುವಿನಲ್ಲಿ ಹೊಂಚು ಹಾಕಿ ಕೂತಿರುವುದು ಕೇವಲ ಕಥಾನಕದ ತಿರುವು/ತಂತ್ರವಾಗಿ ಅಲ್ಲ. ಅವು ರೂಪಕಗಳಾಗಿ ಒದಗಿ ಬರುವ-ಕಥಾನಕ್ಕೆ ಅಗತ್ಯವಾದ ಅಸಹಾಯಕತೆ, ಬದುಕಿನ ನಿಗೂಢತೆ, ಅಗಮ್ಯ-ಅಗೋಚರ-ಅಪ್ರತಿಮಕ್ಕೆ ಹಾಜರಿ ಹಾಕುವ, ಶೋಧಕ್ಕೆ ತೊಡಗಿಸಬಲ್ಲ ತಂತುಗಳಾಗಿ ಒದಗಿ ಬರುವ ವಿದ್ಯಮಾನಗಳು. ಹಾಗಾಗಿಯೇ ಮಳಗಿಯವರ ಕತೆಗಳನ್ನು ಅರಿಯಲು ಮುಖ್ಯವಾಗುವ ಅಂಶ. ಇದರ ಕುಡಿಯೊಂದು ಆಧ್ಯಾತ್ಮಿಕ ನೆಲೆಯಲ್ಲಿ ಸೆಲೆಯೊಡೆಯುವುದು ಕೂಡ ಅಷ್ಟೇ ಗಮನಾರ್ಹವಾದ, ಸೂಕ್ಷ್ಮವಾದ ಬೆಳವಣಿಗೆ. ಬದುಕು-ಈ ನಿರಾಕರಣ ಮತ್ತು ಅದಮ್ಯ ಜೀವನಪ್ರೀತಿಯೊಂದಿಗೆ ತುಯ್ಯುವುದನ್ನು ಕನ್ನಡದಲ್ಲಿ ಮಳಗಿಯವರಷ್ಟು ಅದ್ಭುತವಾಗಿ ಕತೆಯಾಗಿಸಿದವರಿಲ್ಲ.

ಕಡಲ ತೆರೆಗೆ ದಂಡೆ-1989
ಅತ್ಯಂತ ಸಂಕೀರ್ಣವಾದ ಮಹತ್ವದ ಕತೆಯಿದು. ಇಲ್ಲಿಯೂ ಉತ್ಪಾತ ಕತೆಯಲ್ಲಿಯಂತೆ, ಮಾತು ಯಾತನೆಯ ದಿಡ್ದಿ ಬಾಗಿಲು ಕತೆಯಲ್ಲಿಯಂತೆ ವಿಭಿನ್ನ ಲೋಕಗಳ ಸಂಘರ್ಷವೊಂದರಲ್ಲಿ ನಾಯಕ/ನಿರೂಪಕ ಸ್ಪಷ್ಟಗೊಳ್ಳಬೇಕಿದೆ. ಬದುಕುವ ಪರಿಪೂರ್ಣ ಮತ್ತು ಸಂಪನ್ನ ಹಾದಿಯ ಅನ್ವೇಷಣೆಯಲ್ಲಿ ನೋವಿಗೆ-ದಮನಕ್ಕೊಳಗಾದ ಬದುಕಿಗೆ ಅನುಕಂಪ, ಅನ್ಯಾಯಕ್ಕೆ-ಧೂರ್ತತನಕ್ಕೆ ಹೋರಾಟದ-ಕ್ರಾಂತಿಯ ಕೆಚ್ಚು, ಮನುಷ್ಯನ ಕೈಮೀರಿದ ಸಾವಿಗೆ-ಅಸಂಭಕ್ಕೆ ಸಾಂತ್ವನ-ಸ್ವೀಕೃತಿಯ ಮನೋಧರ್ಮ, ಮೂಲಕ್ಕೆ, ಸಲಹಿದ ಮಾತೃಸಂಸ್ಕೃತಿಗೆ ನಿಷ್ಠೆ, ಪೂರ್ಣತೆಗೆ ತುಡಿತ ಇವು ಎಲ್ಲವೂ ಬಾ ಇಲ್ಲಿ ಸಂಭವಿಸು ಎಂಬಂತೆ ಮಳಗಿಯವರ ಕತೆಗಳು ಒಡ್ದಿಕೊಳ್ಳುವ ರೀತಿ ಇಲ್ಲಿ ಅತ್ಯಂತ ಸಂತುಲಿತವಾಗಿ ಒಡಮೂಡಿರುವುದನ್ನು ಕಾಣಬಹುದಾಗಿದೆ.

ಅನ್ಸ್‌ರ್ ಇಲ್ಲಿನ ಒಂದು ಜಗತ್ತು. ಪರಿಪೂರ್ಣತೆಗೆ ಹತ್ತಿರವಿದ್ದೂ ಅದಾಗಲಾರದ ಜಗತ್ತು. ಅನ್ಸರ್ ಎಂದಿಗೂ ಮೂಲಕ್ಕೆ ಹಿಂದಿರುಗಲಾರ, ಸಲಹಿ ಕಾಪಾಡಿದ ಮಾತೃಸಂಸ್ಕೃತಿಯ ನೆಲೆ ಕಂಡುಕೊಳ್ಳಲಾರ. ಒಂದು ಹಂತದಲ್ಲಿ ಪ್ರೀತಿಯ ಸೆಲೆಯೊಳಗೆ ತೇಲುವ ಅನ್ಸರನನ್ನು ಅದೇ ಮುಳುಗಿಸುವುದು ಒಂದು ವಿಧದಲ್ಲಿ ಅತ್ಯಂತ ಮಾರ್ಮಿಕವಾಗಿದೆ. ಕ್ರಾಂತಿ, ಆಧ್ಯಾತ್ಮ, ಇನ್ನೊಂದು ಜೀವಿಯನ್ನು ಅರ್ಥಮಾಡಿಕೊಳ್ಳುವ ಅಪೂರ್ವ ಸಹನೆ-ಮಾನವ ಪ್ರೀತಿ ಎಲ್ಲ ಇದ್ದೂ ಅನ್ಸರ್ ಆಯ್ದುಕೊಂಡ ಹಾದಿ ಕ್ರಾಂತಿಯದ್ದು ಮತ್ತು ಅನ್ಸರ್‌ನ ಈ ಕ್ರಾಂತಿಯ ಪರಿಕಲ್ಪನೆ ಮನುಷ್ಯನನ್ನು ಅವನ ಸಂಪೂರ್ಣತೆಯ ಪರಿಕಲ್ಪನೆಯಲ್ಲಿ ಸ್ವೀಕರಿಸಬಲ್ಲ ನೆಲೆಯಿಂದ ಹೊರಟಿದ್ದಲ್ಲ. ಅಥವಾ ಸರಳವಾಗಿ ಅಲ್ಲಿ ಪ್ರೀತಿಯೆಂಬ ಸಂಗೀತ-ಕಾವ್ಯ-ಹೆಣ್ಣು ಮತ್ತು ಪ್ರೀತಿಗೆ ನೆಲೆಯೊದಗಿಸುವ ಸಾವಿನ ಪ್ರಜ್ಞೆಗೆ ಕೂಡ ಸ್ಥಳವಿಲ್ಲ. ತತ್ ಕ್ಷಣದ ಶೋಷಣೆಯ ಕಾರಣಗಳು ಇಲ್ಲದಾಗಲೂ ಇನ್ನಷ್ಟು ತೀವ್ರವಾದ ಸಂಬಂಧಗಳ ಅಗತ್ಯಕ್ಕಾಗಿ ಹುಟ್ಟಿಕೊಂಡ ಬಂಡಾಯವಲ್ಲ ಅನ್ಸರನದ್ದು. ಹಾಗಾಗಿಯೇ ಅಚ್ಯುತನಿಗೆ ಅನ್ಸರನ ಮೇಲೆ ಇರುವ ಅತಿಯಾದ, ಅಬ್ಸೆಷನ್ ಎನ್ನಬಹುದಾದ ಮೋಹ ಅಪಾಯಕಾರಿಯಾಗುವ ಹಂತದ್ದಾಗುತ್ತದೆ. ಅನ್ಸರನ ಸಾವೊಂದೇ ಅಚ್ಯುತನನ್ನು ಮತ್ತೆ ಮಿಲಿಂದನ ಪರಿಕಲ್ಪನೆಯ ಕ್ರಾಂತಿಯ ನೆಲೆಗೆ, ಪ್ರೀತಿ ಕೂಡ ಸಾಧ್ಯವಿರುವ ಕ್ರಾಂತಿಯ ನೆಲೆಗೆ ಮರಳಿಸಬಲ್ಲ ವಿದ್ಯಮಾನವಾಗುತ್ತದೆ.

ಅನ್ಸರನಷ್ಟೇ ಕೌತುಕದಿಂದ ಕೂಡಿದ ಜಗತ್ತು ಸತ್ಯಪ್ರಮೋದನದ್ದು. ಇದು ಬೂಟಾಟಿಕೆಯದ್ದು, ಸುಳ್ಳು-ವಂಚನೆ-ಸ್ವಾರ್ಥ ಎಲ್ಲವೂ ಸೇರಿದ್ದು ಎಂಬುದು ನಿಜವೇ. ಆದರೆ ಈ ಸೂಕ್ಷ್ಮ ಇವಿಲ್‍ಗಳಿಂದ ಅಚ್ಯುತ ಮುಕ್ತ ಎಂದೇನಲ್ಲ. ಒಂದು ಬಗೆಯಲ್ಲಿ ಯಾರೂ ಇದರಿಂದ ಪೂರ್ತಿಯಾಗಿ ಮುಕ್ತರಲ್ಲ. ಕಾರಣಗಳನ್ನು ನೀಡುತ್ತ ಇನ್ನಷ್ಟು ಕುಬ್ಜನಾಗುತ್ತ ಹೋಗುವ ಸತ್ಯಪ್ರಮೋದನನ್ನು ಒಳಗಿನಿಂದ ನಿರಾಕರಿಸುವುದು ಕೂಡ ಕಷ್ಟವೇ. ಆದರೆ ಅದೊಂದು ಪರ್ಯಾಯ ಆದರ್ಶ, ಅದೊಂದು ಪರ್ಯಾಯ ಮಾದರಿಯನ್ನು ಅಚ್ಯುತನಿಗೆ ನೀಡುತ್ತಿರುವುದು ಕೂಡ ನಿಜವೆಂದು ಒಪ್ಪಿಕೊಳ್ಳಬೇಕಾದ ಸತ್ಯವಾಗಿರುವುದನ್ನು ಗಮನಿಸಬಹುದು.

ಇನ್ನು ಯದುಪತಿ ಕಾಕಾ. ಭಾವವಲಯದ ನೆಲೆಯಲ್ಲಿ ಅಚ್ಯುತ ಯದುಪತಿ ಕಾಕಾರನ್ನು ಸ್ವೀಕರಿಸುವ, ನಿರೀಕ್ಷಿಸುವ, ಗೌರವಿಸುವ ವಿವರಗಳಾಚೆ ತಾರ್ಕಿಕ ನೆಲೆಗೂ ಕಾಕಾನ ಪಾತ್ರವನ್ನು ಒಯ್ಯುವುದು ಕಥಾನಕದ ಉದ್ದೇಶವೆಂದು ಪರಿಗಣಿಸದೇ ಇರುವುದು ಒಳ್ಳೆಯದು. ಕೇಶವ ಮಳಗಿಯವರ ಯಾವುದೇ ಕತೆಯೂ ಅಂತ್ಯಕ್ಕೆ ತುಡಿಯುವ ಕಥನವಲ್ಲ; ಅವರ ಯಾವುದೇ ಕತೆಯ ಅಂತ್ಯ ಸಿದ್ಧ ಮಾದರಿಯ ಸಣ್ಣಕತೆಯ ಸಾಧಾರಣ ನಿರೀಕ್ಷೆಗಳನ್ನು ತಲುಪಲು ತುಡಿಯುವುದಿಲ್ಲ ಎನ್ನುವುದನ್ನು ಗಮನಿಸಿದರೆ ಈ ಮಾತು ಒಪ್ಪಿಗೆಯಾದೀತೆಂದು ಭಾವಿಸುತ್ತೇನೆ.

ಮನೆಬಿಟ್ಟು ತೆರಳುವಾಗ ಕಾಕಾ ಹೇಳುವ ಮಾತುಗಳನ್ನು ಕೊಂಚ ವಿಶದವಾಗಿಯೇ ಚರ್ಚಿಸಬಹುದು. ‘ನಿನ್ನ ಅಬಚಿನ್ನ ದೇವರ ಹಂಗ ಪೂಜಿಸಿದೆ. ಆಕೀ ಶಕ್ತಿ ದೇವತೆ. ಸೃಷ್ಟಿ ದೇವತೆ. ನಿಸರ್ಗ ದೇವತೆ ಅನ್ನೋದು ಗೊತ್ತಿತ್ತು. ಆಕೀಗಿ ತಿರುಗಿ ಬೀಳಬಾರದಂತ ಆಕಿ ಹಂಗೇನೇ ನಡಕೊಂಡೆ. ಅವಳಿಗೆ ಹೇಳಿದ್ದನ್ನು ಮಾಡುವ, ಸೃಷ್ಟಿಸುವ ಶಕ್ತಿಯಿತ್ತು. ನನಗೆ ಆ ಶಕ್ತಿಯನ್ನು ಪೂಜಿಸುವ ಭಕ್ತಿ ಮಾತ್ರ ಇತ್ತು. ಆದರ ನನ್ನ ಭಕ್ತಿ ಅವಳನ್ನು ಒಲಿಸಲಿಲ್ಲ. ಅವಳ ಶಾಕ್ತವೆಲ್ಲ ಕರಗಿ ಶಾಂತಳಾಗಲಿ. ಸಾಧ್ಯವಾದ್ರ ಆಗ ಬರತೀನಿ--"

ರಾಮಕೃಷ್ಣ ಪರಮಹಂಸರ ಚಿತ್ರವೊಂದನ್ನು ಮನದಲ್ಲಿ ಮೂಡಿಸುವ ಈ ನೆಲೆಯ ಭಕ್ತಿ- ಕೈ ಹಿಡಿದ, ತನ್ನ ಮಗುವನ್ನು ಹೆತ್ತ ಹೆಂಡತಿಯತ್ತ ಕನ್ನಡ ಶಾಲಾ ಮಾಸ್ತರ ಯದುಪತಿ ಕಾಕಾಗೆ ಸಾಧ್ಯವಾದ ಬಗೆ ಎಂಥದ್ದು ಎನ್ನುವುದನ್ನು ಕತೆ ಹೇಳುವುದಿಲ್ಲ. ಇಲ್ಲಿನ ಯದುಪತಿ ಕಾಕಾನ ನಿರಾಕರಣ ಕೂಡಾ ವಿರೋಧದ್ದಲ್ಲ. ಅಬಚಿಯ ಶಾಕ್ತಪ್ರಭೆಯನ್ನು ಸಾಧಾರಣ ಭಕ್ತನಾದ ತಾನು ಎದುರಿಸಲಾರೆ ಎನ್ನುವ ನೆಲೆಯದ್ದು. ಆದರೆ ಅದು ಪ್ರಕಟಗೊಳ್ಳುವ ಸಂದರ್ಭ ಮಾತ್ರ ಇಹದ್ದು, ತನ್ನ-ಅಬಚಿಯ ವಿಕಲಾಂಗ ಕೂಸು ಅನುದ್ದೇಶಿತ ನಿರ್ಲಕ್ಷ್ಯದಿಂದ ಅಥವಾ ಉದ್ದೇಶಿತ ಹುನ್ನಾರದಿಂದ ಮಡಿಯುವುದೇ ಹೊರತು ಇನ್ನೇನಲ್ಲ.

ಹಾಗಾಗಿ ಇಲ್ಲಿನ ಯಾವುದೇ ಪಾತ್ರವನ್ನು, ಆ ಪಾತ್ರ ಪ್ರತಿನಿಧಿಸುವಂತೆ ಭಾಸವಾಗುವ ಜಗತ್ತನ್ನು ಪರ್ಯಾಯ ಎಂಬಂತೆ ನೋಡದೆ, ಸಾಪೇಕ್ಷ ಸಾಧ್ಯತೆಗಳೆಂಬಂತೆ ನೋಡದೆ, ಪರಸ್ಪರ ತೂಗದೆ ಬದುಕನ್ನು-ಕಥನವನ್ನು ಗ್ರಹಿಸುವುದು ಹೆಚ್ಚು ಸರಿಯಾದ ಮಾರ್ಗವಾಗುತ್ತದೆ. ಯಾಕೆಂದರೆ ಮಳಗಿಯವರು ಯಾವತ್ತೂ ನಿರ್ಧಾರಗಳೊಂದಿಗೆ ನಿಂತು ಕತೆ ಹೇಳುವುದಿಲ್ಲ,ಕತೆ ಮುಗಿಸುವುದಿಲ್ಲ ಎನ್ನುವುದರಿಂದಲೂ. ಸರಳವಾಗಿ ಇಲ್ಲಿನ ಅನ್ಸರ್ ಮತ್ತು ಯದುಪತಿ ಕಾಕಾ ಪ್ರತಿನಿಧಿಸುವ ಲೋಕಗಳು ಅಚ್ಯುತನಿಗೆ ಆಯ್ಕೆಯನ್ನೊಡುತ್ತಿವೆ ಎನ್ನುವ ದೃಷ್ಟಿಕೋನ ಆತುರದ್ದಾಗುವ ಅಪಾಯವಿದೆ. ಅವು ಪರ್ಯಾಯಗಳಲ್ಲ ಮತ್ತು ಹಾಗೆ ನೋಡಿದರೆ ನಾವು ಸತ್ಯಪ್ರಮೋದನನ್ನು ಕೂಡಾ ಈ ಆಯ್ಕೆಯ ಜಂಜಾಟದಲ್ಲಿ ಎಲ್ಲಿಯೋ ಒಂದೆಡೆ ಕೂರಿಸಬೇಕಾಗುತ್ತದೆ ಎನ್ನುವುದನ್ನೂ ಮರೆಯುವಂತಿಲ್ಲ. ಬದುಕಿನ ಸಂಕೀರ್ಣತೆಯನ್ನೂ, ಸಮೃದ್ಧಿಯನ್ನೂ ಅರಿತವರಿಗೆ ಆಯ್ಕೆಯ ಆತುರಗಳಿರುವುದಿಲ್ಲ ಎನ್ನುವುದು ಸರಿ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, November 4, 2009

ಕೇಶವ ಮಳಗಿ ಕಥಾಲೋಕ: ಮಾಗಿ ಮುವ್ವತ್ತೈದು (1998) (ಪಾವೆಂ ಕಥಾ ಪುರಸ್ಕಾರ)

ಮಳಗಿಯವರ ಕಥೆಯ ಆಕೃತಿ ಮತ್ತು ಶಿಲ್ಪದಲ್ಲಿ ನಾವು ಮೊತ್ತ ಮೊದಲಿಗೆ ಗಮನಿಸುವುದು ಅಲ್ಲಿ ಬರುವ ದಟ್ಟ ವಿವರಗಳು ನಮ್ಮಲ್ಲಿ ಜೀವಂತಗೊಳಿಸುವ ಒಂದು ಬೇರೆಯೇ ಆದ ಜಗತ್ತು. ಕಥಾನಕದ ನಿಧಾನಗತಿಯ ಚಲನೆ ಪಾತ್ರಗಳ ಮತ್ತು ಸನ್ನಿವೇಶದ ಜೀವಂತಿಕೆಗೆ ನೀಡುವ ಅಸಾಧಾರಣ ಮಹತ್ತೂ ಸೇರಿದಂತೆ ಇವರು ಒಂದು ಸಮುದಾಯವನ್ನೇ ಅದರೆಲ್ಲ ಸೂಕ್ಷ್ಮವಿವರಗಳಲ್ಲಿ ಕಟ್ಟಿಕೊಡುವ ಪರಿ. ಇದನ್ನು ನಾವು ಕಾಣುತ್ತ ಬಂದಿರುವುದು ಕಾದಂಬರಿ ಪ್ರಕಾರದಲ್ಲಿ. ಸಣ್ಣಕತೆ ಪ್ರಕಾರದ ಸಿದ್ಧ ಮಾದರಿಯೇನಿದೆ, ಅದರ ಗಾತ್ರದಲ್ಲಿ, ಸಾಧಾರಣವಾಗಿ ಪಂಚ್ ಕೊಡುವ ಅಂತ್ಯಕ್ಕಿರುವ ಮಹತ್ವದಲ್ಲಿ ಮತ್ತು ಸಣ್ಣಕತೆಯೊಂದರ ಪ್ರಧಾನ ಲಕ್ಷಣವಾದ ಬಿಗಿಯಾದ ಕಥಾನಕವೊಂದರ ಚಲನೆಯ ಗತಿ ಅಥವಾ ವೇಗದಲ್ಲಿ, ಅದನ್ನು ಮಳಗಿಯವರಲ್ಲಿ ಕಾಣುವುದು ವಿರಳ. ಹಾಗೆ "ಟಿ.ಪಿ.ಅಶೋಕರವರು ಗುರುತಿಸುವಂತೆ ಇವರಿಗೆ ಕಾದಂಬರಿಯ ಮಾಧ್ಯಮ ಹೆಚ್ಚು ಸೂಕ್ತವಾದದ್ದು ಅನಿಸುತ್ತದೆ" ಎನ್ನುವ ಎಸ್.ಹೇಮಾ ಅನಿಸಿಕೆ ಕೂಡ ಸರಿ ಅನಿಸುತ್ತದೆ. ಮಳಗಿಯವರು ಇದುವರೆಗೆ ಕುಂಕುಮ ಭೂಮಿ ಮತ್ತು ಅಂಗದ ಧರೆ ಎಂಬ ಎರಡು ಕಾದಂಬರಿಗಳನ್ನೂ ಕೊಟ್ಟಿದ್ದಾರೆ. ಒಂದರ್ಥದಲ್ಲಿ ಇವರ ಕೆಲವಾದರೂ ಕತೆಗಳನ್ನು, ಉದಾಹರಣೆಗೆ ಕೆಂಪು ಮಣ್ಣಿನ ಒಕ್ಕಲು, ನಕ್ಷತ್ರ ಯಾತ್ರಿಕರು, ಕಡಲತೆರೆಗೆ ದಂಡೆ, ಸೌಭಾಗ್ಯವತಿ - ಮುಖ್ಯವಾಗಿ ಹರಹು, ವ್ಯಾಪ್ತಿ ಮತ್ತು ಚಿತ್ರಣದ ರೀತಿಯಿಂದಲಾದದರೂ ಕಾದಂಬರಿಗೇ ಹೆಚ್ಚು ಹತ್ತಿರವಿದ್ದು ಅವನ್ನು ಕಾದಂಬರಿಯೆಂದೇ ಗ್ರಹಿಸಿದರೂ ತಪ್ಪೇನಿಲ್ಲ ಅನಿಸುತ್ತದೆ!

ಮಳಗಿಯವರ ಹೆಚ್ಚಿನ ಎಲ್ಲಾ ಪಾತ್ರಗಳಿಗೂ ತಮ್ಮ ಬಾಲ್ಯದ, ಅಲ್ಲಿರುವ ಮುದುಕ-ಮುದುಕಿಯರ ಬದುಕಿನ ಕಾಳಜಿ, ತಮ್ಮನ್ನು ಸಾಕಿ-ಸಲಹಿ-ಪೋಷಿಸಿದ ಜೀವಗಳ ಕುರಿತ ಮೋಹ ಹೆಚ್ಚು. ಪ್ರಸ್ತುತಕ್ಕಿಂತ ಈ ಮೂಲವೇ ಎಷ್ಟೋ ಕಡೆ ಮುಖ್ಯವಾಗುವುದನ್ನು ತಂತ್ರವಾಗಿ ಬೇಕಾದರೂ ನೋಡಿ, ಕಥಾನಕದ ಸಹಜ ನಡೆಯಾಗಿ ಬೇಕಾದರೂ ನೋಡಿ, ಅದು ನಿಮಗೆ ಬಿಟ್ಟಿದ್ದು. ಆದರೆ ಈ ಮೋಹ ನಿಜವಾದದ್ದು ಎನ್ನುವುದಕ್ಕೆ ಮಳಗಿಯವರ ನೇರಳೆ ಮರದ ಒಂದು ಅಧ್ಯಾಯ, ಹಳೆ ಮಂದಿಯ ಹಳಹಳಿಕೆ ಗಮನಿಸಬಹುದು.

ಭಾವುಕತೆ, ಸ್ತ್ರೀಸಂವೇದನೆಯ ಪ್ರಧಾನ ಧಾರೆ ಇವೆರಡರೊಂದಿಗೇ ಮಳಗಿಯವರಿಗೇ ವಿಶಿಷ್ಟವಾದ ಕೆಲವು ಅಂಶಗಳಿವೆ. ಅವುಗಳಲ್ಲಿ ಒಂದು, ಮಳಗಿಯವರ ಕತೆಗಳಲ್ಲಿ ನಮಗೆ ಮತ್ತೆ ಮತ್ತೆ ಎದುರಾಗುವ ಆಧ್ಯಾತ್ಮ-ಸಂನ್ಯಾಸ-ಮಠ-ಸ್ವಾಮೀಜಿ ಇತ್ಯಾದಿಗಳ ಒಂದು ತುಡಿತ. ಇನ್ನೊಂದು, ಸಾವು-ಮೃತ್ಯುಪ್ರಜ್ಞೆ ಅಥವಾ ಆತ್ಮಹತ್ಯೆ, ಕಣ್ಮರೆ, ನಿರಾಕರಣ, ಆಧ್ಯಾತ್ಮ - ಒಂದು ರೂಪಕವಾಗಿ ಕತೆಯಲ್ಲಿ ಒಡಮೂಡುವುದು. ಇದನ್ನು ನಾವು ಭೌತಿಕವಾಗಿ ಗ್ರಹಿಸಿದರೂ, ಅಮೂರ್ತ ಸ್ಥಿತಿಯೊಂದನ್ನು ಕತೆ ಮತ್ತು ಕತೆಯ ಪಾತ್ರಗಳಿಗೆ ತೊಡಿಸಿದಂತೆ ಗ್ರಹಿಸಿದರೂ ಒಟ್ಟು ಕಥಾನಕದ ದೃಷ್ಟಿಯಿಂದ ಅವು ಸಮರ್ಥವಾದ ನೋಟಕ್ಕೆ ಕಾರಣವಾಗುವುದು ನಿಜವೇ. ಆದರೂ ಈ ವಿದ್ಯಮಾನಗಳು ಮತ್ತೆ ಮತ್ತೆ ಬರುವುದರ ತಾಂತ್ರಿಕ ಪಾತಳಿ ಯಾವುದು ಮತ್ತು ಬದುಕಿನ ಚಿತ್ರಕ್ಕೆ ಸಂಬಂಧಿಸಿದಂತೆ ಅವುಗಳ ಅಂದರೆ ಮೃತ್ಯುಪ್ರಜ್ಞೆ, ನಿರಾಕರಣ, ಕಣ್ಮರೆಯಾಗಿ ಬಿಡುವುದು ಅಥವಾ ಆಧ್ಯಾತ್ಮದ ಮೊರೆ ಹೋಗುವುದು ಇತ್ಯಾದಿ ಉಂಟು ಮಾಡುವ ಪರಿಣಾಮದ ನೆಲೆಗಳು ಯಾವುವು ಎಂಬುದು ಮಳಗಿಯವರ ನಿರ್ದಿಷ್ಟ ಕತೆಗಳ ಮತ್ತು ಪಾತ್ರಗಳ ಹಿನ್ನೆಲೆಯಲ್ಲಿ ಚರ್ಚಿಸಲು ಯೋಗ್ಯವಾದ ವಿಚಾರ. ಸ್ವಗತದ ಧಾಟಿಯನ್ನು ಕತೆಯ ನಡುನಡುವೆ ಬಳಸಿಕೊಂಡು ಕತೆ ಹೇಳುವ ಮುಖೇನ ಓದುಗನೊಂದಿಗೆ ಒಂದು ಆಪ್ತ ಸಂಬಂಧವನ್ನು ಏರ್ಪಡಿಸಿಕೊಂಡು ಬಿಡುವ ಮಳಗಿಯವರ ಪಾತ್ರಗಳು ಅಪಾರ ಮಾನವೀಯ ಅನುಕಂಪ ಮತ್ತು ಸಮುದಾಯ ಪ್ರಜ್ಞೆಯನ್ನು ಹೊಂದಿರುವಂಥವು. ಅನುಕಂಪ-ಅನುತಾಪ ಈ ಪಾತ್ರಗಳ ಮೂಲಗುಣ. ಅದಕ್ಕೆ ಯಾವುದೇ ಕಾರ್ಯಕಾರಣ ಸಂಬಂಧದ ಆಧಾರಗಳಿರಬೇಕಿಲ್ಲದಿರುವುದು ಗಮನಿಸಬೇಕಾದ ಮಹತ್ವದ ಅಂಶ.

ಬರವಣಿಗೆಯ ಕುರಿತೇ ಕೇಶವ ಮಳಗಿಯವರು ಅಲ್ಲಿ ಇಲ್ಲಿ ಆಡಿದ ಈ ಕೆಳಗಿನ ಕೆಲವು ಮಾತುಗಳೂ ಅವರ ನಿಲುವುಗಳನ್ನು ಸ್ಪಷ್ಟಗೊಳಿಸುವುದರ ಜೊತೆಗೇ ಅವರು ಬರವಣಿಗೆಯನ್ನು ಎಷ್ಟು ಗಂಭೀರವಾಗಿ ಸ್ವೀಕರಿಸಿದವರು ಎಂಬುದನ್ನು ನಮಗೆ ತಿಳಿಸುವಂತಿವೆ. ಮಾತ್ರವಲ್ಲ, ಅವರ ಕಥೆಗಳಿಗೆ ಈ ಮಾತುಗಳು ಒಂದು ಪ್ರವೇಶಿಕೆಯನ್ನೂ ಒದಗಿಸುವಂತಿವೆ.

`ಅಕ್ಷರಗಳು ಬಳಸಿ ಬಳಸಿ ಅರ್ಥ ಅಳ್ಳಕವಾದ, ರಂಜಿಸಿ ಮರೆತು ಹೋಗಬಹುದಾದ, ಹುಸಿ ಭಾಷಾಚಾತುರ್ಯದಲ್ಲಿ ಮುಳುಗೇಳುವ, ಅತಿವಿಶಿಷ್ಟ ಅಸ್ತಿತ್ವವನ್ನು ನಿರೂಪಿಸಲಾರದ ಅಳುಬುರುಕು ಪ್ರೇಮಕಥೆಗಳನ್ನು, ಅವಡಸವಡ ಘಟನೆಗಳಿರುವ ಸರ್ವೇಸಾಮಾನ್ಯ ಸಂಗತಿಗಳು ಮುಕುರಿದ ಕಥೆಗಳನ್ನು ಕೊರೆಯಲೇ ಬೇಡ. ನಿಜವಾಗಿಯೂ ತಟ್ಟುವುದನ್ನು ಕಟ್ಟಲು ಅಪಾರ ತಾಳ್ಮೆ, ಮನಸ್ಸಿನೊಳಗೆಯೆ ನಡೆವ ಸಂಘರ್ಷದಲ್ಲಿ ಹುಟ್ಟುವ ಅವಮಾನವನ್ನು ತಡೆದುಕೊಳ್ಳುವ ಶಕ್ತಿ, ಅನುಭವವನ್ನು ದಾಖಲಿಸುವಾಗ ಬೇಕಾಗುವ ಪ್ರಶ್ನಾತೀತ ಅಪ್ಪಟ ಕಾಳಜಿ ಬೇಕಾಗುತ್ತದೆ. ಬರೆದಾದ ಮೇಲೆ ಇದರಿಂದ ಎಂಥದಾದರೂ ಸಿಕ್ಕೀತು ಎಂಬ ದೇಶಾವರಿತನವನ್ನು ಆಚೆ ತಳ್ಳುವ ಎದೆಗಾರಿಕೆ ಬೇಕಾಗುತ್ತದೆ.’

`ದಿನದ ಬದುಕು ನಿನಗೆಂಥ ಅನುಭವ ನೀಡುತ್ತಿದೆ, ಅದು ಕೊಟ್ಟ ಖುಶಿ-ಯಾತನೆ, ಆಸೆ, ಕಾತರತೆ ಎಂಥವು, ಸುತ್ತಮುತ್ತ ಕಾಣುತ್ತಿರುವುದರಲ್ಲಿ ಬದುಕಿನ ಎಂಥ ರೂಪಕಗಳು ಅಡಗಿವೆ, ಕನಸಿನೊಳಗೆ ಸುಳಿವ ಪ್ರತೀಕಗಳು ಏನನ್ನು ಹೇಳುತ್ತವೆ ಎಂಬುದನ್ನು ಗಮನಿಸಬೇಕು. ಇಂಥ ಬರಹ ಪರಿಶುದ್ಧ ಮನಸ್ಸುಗಳನ್ನು ತಟ್ಟಬಲ್ಲುದಾಗಿದ್ದು ಅಂಥದನ್ನು ಬರೆದಾದ ಮೇಲೆ ನಿನ್ನ ಒಳಗಿನ ಸಾಮರ್ಥ್ಯವನ್ನು ಹೆಚ್ಚಿಸುವಂತಿರುತ್ತದೆ.’ ( ನೇರಳೆ ಮರ, ಪುಟ:58)

ಇದುವರೆಗೆ ಮಳಗಿಯವರ ಮೂರು ಕಥಾಸಂಕಲನಗಳು ಹೊರಬಂದಿವೆ. ಆದರೆ ಅವುಗಳಲ್ಲಿ ಮೊದಲನೆಯ ಕಥಾಸಂಕಲನ ಕಡಲತೆರೆಗೆ ದಂಡೆಯ ಪ್ರತಿಗಳು ಸಿಗುತ್ತಿಲ್ಲವಾದರೂ ಸಾಕ್ಷಿ (1986) ಮತ್ತು ಎಲ್ಲರ ನಡುವೆ ಎಲ್ಲರ ಹಾಂಗ (1986) ಎಂಬ ಎರಡು ಕತೆಗಳನ್ನು ಬಿಟ್ಟರೆ ಉಳಿದವು ಮೂರನೆಯ ಸಂಕಲನ ವೆನ್ನೆಲದೊರಸಾನಿಯಲ್ಲಿ ಲಭ್ಯವಿವೆ.

ಕೆಂಪು ಮಣ್ಣಿನ ಒಕ್ಕಲು-1998
ಹಾಗೆ ನೋಡಿದರೆ ಇದು ಹಶಂಬಿಯೆಂಬ ಹೆಣ್ಣುಮಗಳ ಬದುಕಿನ ಹೋರಾಟದ ಕತೆ. ಕತೆಯ ಮುಕ್ಕಾಲು ಭಾಗ ಮೂರು ದಿನದ ಉರೂಸಿಗೆ ಹೋಗಿ ಬರುವ ವಿವರಗಳಲ್ಲೇ ಮುಗಿಯುತ್ತದೆ. ಹಾಗಾಗಿ ಇಲ್ಲಿನ ಕಥಾನಕದ ಚಲನೆ ಸ್ಥಗಿತವೆಂಬಷ್ಟು ನಿಧಾನಗತಿಯಲ್ಲಿದ್ದರೆ ಮುಂದಿನ ಕಾಲು ಭಾಗದಲ್ಲಿ ಬಹಳಷ್ಟು ವೇಗವಾಗಿ ಕತೆಯ ತಿರುವುಗಳು,ದುರಂತಗಳು ಸಾಲು ಸಾಲಾಗಿ ಬರುತ್ತವೆ. ಇದರಿಂದ ಕಥಾನಕಕ್ಕೆ ಯಾವುದೆ ಬಗೆಯ ತೊಡಕು ಉಂಟಾದಂತಿಲ್ಲವೆಂಬುದು ನಿಜವಾದರೂ ಕತೆಯ ಪೂರ್ವಾರ್ಧದ ವೇಗವನ್ನೇ ಉದ್ದಕ್ಕೂ ನಿರ್ವಹಿಸಿದ್ದರೆ ಒಂದು ಕಾದಂಬರಿಯ ಸೊಗಸಾದ ನಿರೂಪಣೆ ಸುಲಭ ಸಾಧ್ಯವಿತ್ತು ಅನಿಸದೇ ಇರದು.

ಈ ಕತೆಯ ಓದು ಅಮರೇಶ ನುಗಡೋಣಿಯವರ ಒಂದು ಕತೆ, ದಾರಿ ಮೂಡಿಸುವ ಹೆಜ್ಜೆಗಳು ಕತೆಯ ನೆನಪು ಮೂಡಿಸುತ್ತದೆ. ಅಲ್ಲಿನ ತಿಮ್ಮಕ್ಕ, ಅವಳ ಮಗಳು ಮಾದೇವಿ ಎದುರಾಗುವ ಸಮಸ್ಯೆಯನ್ನೇ ಇಲ್ಲಿ ಹಶಂಬೀ ಅವಳ ಮಗಳು ಶಬಾನ ವಿಚಾರದಲ್ಲಿ ಎದುರಿಸುತ್ತಾಳಾದರೂ ಹಶಂಬಿಯ ನೋವು ಬೇರೆಯೇ ಬಗೆಯದು. ಅಲ್ಲಿ ತಿಮ್ಮಕ್ಕ ತನ್ನ ಮಗಳ ಸಮಸ್ಯೆಯನ್ನು ತಾನೇ ನಿಭಾಯಿಸಿದರೆ ಇಲ್ಲಿ ಅದಕ್ಕೆ ಅವಕಾಶವಿಲ್ಲದಂತೆ ಮಗಳು ಹಶಂಬಿಯನ್ನೇ ತೊರೆದು ಹೋಗುತ್ತಾಳೆ. ಅಲ್ಲಿ ತಿಮ್ಮಕ್ಕ ಸಂಸಾರದ ಹೊಣೆಯನ್ನೆಲ್ಲ ನಿಭಾಯಿಸಿದ ಹಾಗೆ ಇಲ್ಲಿನ ಹಶಂಬಿ ನಿಭಾಯಿಸುತ್ತಾಳಾದರೂ ಅವಳಿಗೆ ಒಂಟಿತನವೇ ಸಂಗಾತಿಯಾಗುವುದು ಇಲ್ಲಿನ ವಿಧಿ. ಕೊನೆಗೂ ಗಂಡ-ಮಕ್ಕಳು ಎಲ್ಲರಿಂದಲೂ ಒಂಟಿಗೊಳ್ಳುವ ಹಶಂಬಿ ಮನುಷ್ಯ ಸಂಬಂಧಗಳಲ್ಲಿ ಕಂಡುಕೊಳ್ಳುವ ದುರಂತಗಳು, ಅವಳ ಅಂತರಂಗದ ದುಮ್ಮಾನಗಳು ಹೆಚ್ಚು ತೀವ್ರವಾದವು. ಅದಕ್ಕೆ ತಕ್ಕ ಕಥಾನಕದ ನಿರೂಪಣಾ ತಂತ್ರವೂ ಇಲ್ಲಿದೆ.

ಯಾರಿಲ್ಲಿಗೆ ಬಂದವರು ಕಳೆದಿರುಳು-1990
ಸ್ಮೃತಿಯ ಅದ್ಭುತ ಸಂಯೋಜನೆಯಿಂದಲೇ ಇಲ್ಲಿನ ಕಥಾನಕ ಮೈತಾಳುವುದು ಒಂದು ಸೋಜಿಗ. ಹಾಗೆ ನೋಡಿದರೆ ಈ ಕತೆಯಲ್ಲೂ ಕತೆಯ ಮುಮ್ಮೊಗ ಚಲನೆ-ನಡೆ ಎಂಬುದಿಲ್ಲ. ಇರುವುದೆಲ್ಲ ನೆನಪುಗಳೇ. ಬದುಕಿನ ಖುಶಿಯ, ಲಹರಿಯ, ಮಸ್ತಿಯ, ಆವೇಗದ ದಿನಗಳ ಸ್ಮೃತಿ ಇದೀಗ ಆತಂಕಕ್ಕೆ ಕಾರಣವಾದ ಒಡಲಲ್ಲಿ ರೂಪು ತಳೆಯುತ್ತಿರುವ ಒಂದು ಜೀವಕ್ಕೆ ಸ್ವಾಗತ ಕೋರುವುದೇ ಅಥವಾ ಅದರ ಹಿತಕ್ಕೂ ಸೇರಿದಂತೆ ಮಗುವನ್ನು ಹಡೆಯದಿರುವುದೇ ಎನ್ನುವ ನಿರ್ಧಾರಕ್ಕೆ ಕಾರಣವಾಗುವ ಸಂಯೋಜನೆಯನ್ನು ಕೊಂಚ ಗಮನವಿಟ್ಟು ನೋಡಬಹುದು. ಹೊಟ್ಟೆಯಲ್ಲಿರುವ ಇನ್ನೂ ರೂಪು ತಳೆಯದಿರುವ ಮಗು, ಜೊತೆಗಿರುವ ಅತ್ಯಂತ ಪ್ರೀತಿಯ ಸಂಗಾತಿ ಮತ್ತು ಈ ಬಾಲ್ಯದ ನೆನಪುಗಳು ಒಂದನ್ನೊಂದು ಹೊರತುಪಡಿಸಿ ಅಸ್ತಿತ್ವವಿಲ್ಲದ ಸಂಗತಿಗಳೇ.

ಮಳಗಿಯವರ ಹೆಚ್ಚಿನ ಎಲ್ಲ ಕತೆಗಳಲ್ಲೂ ಇರುವ ನೆನಪುಗಳ, ಭೂತದ ಮೋಹವೇ ಇಲ್ಲಿಯೂ ಗೆಲ್ಲುವುದು. ಇಲ್ಲಿನ ಮನುಷ್ಯ ಸಂಬಂಧಗಳು ಕೂಡ ಭೌತಿಕ ಅಸ್ತಿತ್ವಕ್ಕಿಂತ ಭಾವುಕ ಜಗತ್ತಿನ ಅಸ್ತಿತ್ವವನ್ನೇ ನೆಚ್ಚುವುದು ಹೆಚ್ಚು. ಹಾಗಾಗಿ ಇನ್ನೂ ಮೊಳೆಯದ ಮಗುವಿಗಿಂತ ಸಂಗಾತಿಯ ಸಾನ್ನಿಧ್ಯ, ಸಾಂಗತ್ಯ ಮತ್ತು ಸ್ನೇಹ ಹೆಚ್ಚು ಮುಖ್ಯವಾಗುತ್ತದೆ, ಮಗು ಹೊರೆಯಾಗಬಹುದಾದ ಮೂರನೆಯ ಜೀವ ಎನಿಸಿಕೊಳ್ಳುತ್ತದೆ, ಅದೂ ಆ ಮಗುವಿನ ಹುಟ್ಟಿನ ಬಗ್ಗೆ ಇರುವ ಗೊಂದಲದ ಹಿನ್ನೆಲೆಯಲ್ಲಿ. ಆದರೆ ಅವಳದನ್ನು ಹೇಳುವಾಗ ಸಂಗಾತಿಯನ್ನೆ ಹೊರೆಯೆನಿಸುತ್ತೀಯಾ ಎಂದು ಹೇಳುವುದನ್ನು ಗಮನಿಸಿ!

‘ಕಿಶೋರ, ಯಾಕೋ ನನಗೆ ಕನ್ಸೀವ್ ಆದಾಗಲೆಲ್ಲ ನಿನ್ನ ಸಂಗ ಅಸಹನೀಯವಾಗುತ್ತೆ. ನೀನು - ನಿನ್ನ ಜತೆ ಹೊರೆಯೆನಿಸುತ್ತದೆ. ನಿನ್ನ ಬಿಟ್ಟು ದೂರ ಓಡಿ ಹೋಗಬೇಕೆನಿಸುತ್ತೆ. ಆದರೆ ಅದು ಸಾಧ್ಯಾನ? ನಾನು ತುಂಬ ಬಲಹೀನಳಾಗಿ ಬಿಡ್ತೇನೆ ಆಗೆಲ್ಲ...’

ಉತ್ಪಾತ-1991
ಉತ್ಪಾತ ಕತೆಯಲ್ಲಿ ಕೂಡ ಕಡಲತೆರೆಗೆ ದಂಡೆ ಕತೆಯಲ್ಲಿಯಂತೆ ಮೂವರು ಹುಡುಗರಿದ್ದಾರೆ, ಅವರ ಮೂರು ಜಗತ್ತುಗಳಿವೆ. ಕಡಲ ತೆರೆಗೆ ದಂಡೆ ಕತೆಯಲ್ಲಿನ ಹಾಗೆ ಇಲ್ಲಿಯೂ ಒಬ್ಬ ಮುನೀರ, ಮಾಧವ ಮತ್ತು ತುಕಾರಾಮ. ಮೂವರೂ ಕದ್ದು ಮನೆಬಿಟ್ಟು ಮುಂಬಯಿಗೆ ಹೋಗಿ ರಗಡ್ ರೊಕ್ಕಾ ದುಡಿದು ತರುವ ಉದ್ದೇಶದಿಂದ ಹೊರಟವರು. ಕುಂಟ ದೇಶಪಾಂಡೆ ಮಾಸ್ತರ ಹೇಳಿದ ‘ಹಕ್ಕಿಗಳಾ’ಗಲು ಹೊರಟವರು. ಇಲ್ಲಿನ ಮುನೀರನಿಗೆ ಪತ್ರೋಳಿ ಕತೆಯ ನೇಮಕಲ್ಲಿಯ ಛಾಯೆಯಿದೆ. ಅವನಲ್ಲಿ ಸಹಜವಾಗಿಯೇ ತನಗೆ ದತ್ತವಾದ ಬದುಕಿನ ದೌರ್ಭಾಗ್ಯದ ಕುರಿತು ರೋಷವಿದೆ. ಆದರೆ ಮಾಧವನಲ್ಲಿ ಇರುವುದು ಮುನೀರನ ಭಾವವಲ್ಲ. ಅವನಿನ್ನೂ ಹಿಂದೆ ಬಿಟ್ಟು ಬಂದ ಜಗತ್ತಿನಿಂದ ಕಳಚಿಕೊಳ್ಳುವ ವಿಫಲ ಯತ್ನದಲ್ಲೇ ಇದ್ದಾನೆ. ತುಕಾರಾಮ ಇಲ್ಲಿ ಬಹುತೇಕ ಒಂದು ಮಧ್ಯಬಿಂದುವಿನಂತಿದ್ದಾನೆ. ಅವನ ಜಗತ್ತು, ನಿಲುವು, ಭಾವ ಯಾವುದೂ ಅನಾವರಣಗೊಳ್ಳುವುದಿಲ್ಲದಿರುವುದು ಕೂಡ ಒಂದು ಬಗೆಯ ಸಾಕ್ಷಿಪ್ರಜ್ಞೆಗೆ ಈ ಪಾತ್ರ ಹತ್ತಿರವಿರುವಂತಿರಲು ಕಾರಣ. ಕಾದಂಬರಿಯೊಂದರ ನಡುವಿನ ಅಧ್ಯಾಯದಂತೆ ಸುರುವಾಗಿ ಮುಗಿದು ಬಿಡುವ ಈ ಕತೆ ಇನ್ನೂ ಆಕೃತಿಯನ್ನು ಪಡೆಯದೇ ಅರ್ಧದಲ್ಲಿ ಕೈಬಿಟ್ಟ ಶಿಲ್ಪದ ಭಾವವನ್ನು ಉದ್ದೀಪಿಸುತ್ತದೆ.

ಸೌಭಾಗ್ಯವತಿ-1990
ಒಂದು ಕಾದಂಬರಿಯ ಹರಹು ಇರುವ ಈ ಕಥಾನಕ ತುಂಗಭದ್ರೆಯ ಬಾಲ್ಯ, ಯೌವನ, ಮಧ್ಯವಯಸ್ಸನ್ನು ಹಾದು ಅವಳು ಮೊಮ್ಮಗುವಿನ ಪಾಲನೆ ಪೋಷಣೆಯಲ್ಲಿ ವ್ಯಸ್ತಳಾಗುವವರೆಗೆ ಚಾಚಿಕೊಂಡಿದೆ ಮಾತ್ರವಲ್ಲ ಹೆಣ್ಣಿನ ಆಳದ ಸಲಹುವ ಗುಣಾವೇ, ತಾಯ್ತನವೇ ಇಡೀ ಕತೆಯ ಸ್ಥಾಯೀಭಾವವಾಗಿ ಚಿತ್ರಿಸಲ್ಪಟ್ಟಿದೆ. ಏಕಕಾಲಕ್ಕೆ ಮಾಸ್ತಿಯವರ ಶೇಷಮ್ಮನನ್ನೂ, ರಾಘವೇಂದ್ರ ಪಾಟೀಲರ ಮಾಯಿಯ ಮುಖಗಳು ಕತೆಯ ಮೂವರು ಅಕ್ಕತಂಗಿಯರನ್ನೂ ನೆನೆಯುವಂತೆ ಮಾಡುವ ಈ ಕಥಾನಕ ಕಾದಂಬರಿಯಾಗಬಲ್ಲ ಎಲ್ಲ ಲಕ್ಷಣಗಳನ್ನೂ ಹೊಂದಿದೆ. ದಟ್ಟ ವಿವರಗಳು, ಕಥಾನಕದ ವೇಗದ ಚಲನೆಯೇ ಗುರಿಯಾಗಲೊಲ್ಲದ ನಿರೂಪಣೆ ಮತ್ತು ಹೆಣ್ಣಿನ ಸಲಹುವ ಗುಣಕ್ಕೇ ಒಂದು ರೂಪಕವೆಂಬಂತೆ ಆಕೃತಿ ಪಡೆಯುವ ಇಲ್ಲಿನ ತಂತ್ರ ಗಮನಾರ್ಹವಾಗಿದೆ.

ಕತೆಯಲ್ಲಿ ‘ಕಡೆಗೂ ತುಂಬಭದ್ರೆಗೆ ಉಳಿದದ್ದು ಶಕುಂತಲೆಯ ಒಂಟಿತನ; ಹೃಷಿಕೇಶನಿಂದಲೂ ಪರಿಹರಿಸಲಾರದಂಥ ಸಂಕಷ್ಟ, ನೋವು, ವೇದನೆ...’ ಎನ್ನುವ ಸಾಲಿದೆ. ನೇರಳೆ ಮರ ಕೃತಿಯಲ್ಲಿ ಹೃದಯೇನ ಅಸನ್ನಿಹಿತಾ ಎನ್ನುವ ಅಧ್ಯಾಯದಲ್ಲಿ ಮಳಗಿ ಹೀಗೆ ಬರೆಯುತ್ತಾರೆ:

‘ಇವಳಿರುವುದು ಹಾಗೆಯೇ. ಕೆಲವೊಮ್ಮೆ ಮಣ್ಣ ಹೆಣ್ಣಾಗಿ ಬಾನೊಡೆಯನಿಂದ ಅನಾದಿಯಿಂದ ಅಗಲಿ ಮೂರು ಹೊತ್ತು ಸುತ್ತುವ ಪ್ರತಿಮೆಯಾಗಿ ಕವಿಯನ್ನು ಕಾಡುತ್ತಾಳೆ. ಭೂರಂಭಕೆ ಕುಳಿತ ಅಭಿಸಾರಿಕೆಯಾಗಿ ಕವಿತೆಯಲಿ ನುಸುಳುತ್ತಾಳೆ. ಕಾಲೀದಾಸ, ಬಾಣ, ಬೋದಿಲೇರನಿಂದ ಹಿಡಿದು ಮೊಪಾಸ, ಶೇಕ್ಸ್‌ಪಿಯರ್, ಲಾರೆನ್ಸ್, ಹಾರ್ಡಿ, ಪಾಸ್ತರ್‌ನಾಕ್, ದೊಸ್ತೊಯೇವಸ್ಕಿಯವರೆಗೆ ಎಲ್ಲರನ್ನೂ ಕಾಡುವುದೇ ಇವಳ ಕೆಲಸ. ಜೀನ್ ದುವಾಲ್, ಸರಸ್ಸನ್, ಟೆಸ್, ಓಲ್ಗಾ ಇವಾನ್‌ಸ್ಕಿಯಾ, ಪಾಷ, ಎಮಿಲಾ ಲೇನಿಯರ್, ಶಾಕುಂತಲೇ, ಕಾದಂಬರೀ - ಹೀಗೆ ಹೆಸರೊಂದರ ಆಸರೆ ಪಡೆದು ಕಥೆಯಲ್ಲಿ ನುಗ್ಗುವುದು; ಮೊನಾಲಿಸಾ ಹೆಸರಿನ ಮೂಲಕ ಕ್ಯಾನವಾಸಿನ ಬಣ್ಣಗಳನ್ನು ಆವರಿಸುವುದೇ ಅವಳ ಕೆಲಸ!’(ಪುಟ:26)

‘ಹೆಣ್ಣು ನನ್ನ ಬಹುತೇಕ ಕಥೆಗಳ ಮುಖ್ಯ ಪಾತ್ರಗಳಾಗಿ ಬರಲು ಏಕೈಕ ಕಾರಣವೆಂದರೆ ಅಂತಹ ನೂರಾರು ಪಾತ್ರಗಳ ಬದುಕನ್ನು ರೂಪಕಗಳ ಮೂಲಕ ನಾನು ಗ್ರಹಿಸಿರುವುದು. ಆ ಅನುಭವವನ್ನು ಭಾಷೆಯಲ್ಲಿ ಸೋಸಿ ತೆಗೆಯಲು ಯತ್ನಿಸಿರುವುದು. ಹಶಂಬಿ, ಮಾಧವಿ, ಭೀಮಕ್ಕ, ಅಬಚಿ, ದೊರಸಾನಿ, ತುಂಗಭದ್ರೆ, ಇಂದುಮುಖಿ, ಹೂವಿ, ನೀಲಾಂಜನೆ, ರೇವಕ್ಕ....ಒಂದಲ್ಲ ಒಂದು ಘಟ್ಟದಲ್ಲಿ ಯಾವುಯಾವುದೋ ರೂಪದಲ್ಲಿ ನನ್ನೊಂದಿಗೆ ಮುಖಾಮುಖಿಯಾದವರು. ಮತ್ತು ನಾನು ಆಧುನಿಕ ಪುರಾಣದ ಪ್ರತಿಮೆಗಳೆಂದು ಗ್ರಹಿಸಿರುವವರು. ನಿಂತ ನೆಲಕೂಡ ತಮ್ಮದಲ್ಲವೆಂಬ ಅರಿವಿನ ನಡುವೆಯೂ ಇವರ ವರ್ತಮಾನದ ನಡವಳಿಕೆ ಅವರ ಘನತೆಯನ್ನು ಎತ್ತಿ ಹಿಡಿದಿವೆ. ಇಂತಹ ಪಾತ್ರಗಳ ಕೃಪೆಯಿಂದಾಗಿಯೇ ನನ್ನ ಕಥೆಗಳು ಸಂಕೀರ್ಣ ಅರ್ಥವಿನ್ಯಾಸಗಳನ್ನು, ವಿವಿಧ ಆಯಾಮಗಳನ್ನು ಪಡೆಯಲು ಸಾಧ್ಯವಾಗಿದೆ.’ (ಪುಟ:94)

ಮಾಗಿ-1991
ಕೇಶವ ಮಳಗಿಯವರ ಕತೆಗಳಲ್ಲಿ ಇನ್ನೊಂದು ವಿಶೇಷವಿದೆ. ಅವರ ಹೆಚ್ಚಿನ ಎಲ್ಲ ಪಾತ್ರಗಳೂ ನೋವುಂಡ ಭೂತವನ್ನು ಹೊಂದಿರುವಂಥವು. ಆದರೆ ಆ ಪಾತ್ರಗಳಲ್ಲಿ ಅನುಭವದ ಭಾರಕ್ಕೆ ಸೋತ ಛಾಯೆಯಿಲ್ಲ. ಅಥವಾ ವರ್ತಮಾನದಲ್ಲಿ ಅವು ಹೊರೆಹೊತ್ತ ನಿಟ್ಟುಸಿರಿನಲ್ಲೇ ತಮ್ಮ ಕತೆಯನ್ನು ಕೊರೆಯುತ್ತಿಲ್ಲ. ತಮ್ಮ ಭೂತದ ಬುತ್ತಿಯನ್ನು ಈ ಪಾತ್ರಗಳು ಎಲ್ಲಿ ಮತ್ತು ಯಾಕೆ ಬಿಚ್ಚುತ್ತವೆ ಎಂದರೆ ಆ ಅನುಭವದ ದೀವಿಗೆ ಹಿಡಿದು ಮುಂದಿನ ಹಾದಿಯನ್ನು ಬೆಳಗಿಕೊಳ್ಳುವುದಕ್ಕೆ, ಮುಂದೆ ಸಾಗುವುದಕ್ಕೆಯೇ ಹೊರತು ನಿಂತಲ್ಲೇ ಹೂತು ಹೋಗುವ ನಕಾರಾತ್ಮಕ ನಿಲುವಿನಿಂದಲ್ಲ. ಈ ಪಾತ್ರಗಳು ಭವ್ಯ ಭವಿತವ್ಯಕ್ಕೆ ಮೊಗಮಾಡಿ ನಿಂತಿರುವಂಥವೇ. ಆದರೆ ಸತ್ತ ಭೂತವನೆತ್ತಿ ಹದ್ದಿನಂದದಿ ತಂದು ಎನ್ನ ಮನದಂಗಳಕೆ ಹಾಕದಿರು ನೆನಪೇ ಎಂದು ಮೊರೆಯಿಡುತ್ತಿಲ್ಲ. ಭೂತ ಈ ಪಾತ್ರಗಳಿಗೆ ಜೀರ್ಣವಾಗಿದೆ, ಅಜೀರ್ಣವಾಗಿಲ್ಲ. ಹಾಗಾಗಿ ತಮ್ಮ ಭೂತವನ್ನು ಒಂದು ಅಂತರದಿಂದ, ತಮ್ಮದಲ್ಲವೇನೋ ಎಂಬಂತೆ, ಸಾಕ್ಷೀಪ್ರಜ್ಞೆಯಿಂದಲೂ ನೋಡುವುದು, ಹೇಳುವುದು ಈ ಪಾತ್ರಗಳಿಗೀಗ ಸಾಧ್ಯವಾಗಿದೆ. ಹಾಗೆ ಸಾಧ್ಯವಾದ ಘಳಿಗೆಯಲ್ಲೇ ಮಳಗಿಯವರ ಕಥಾನಕ ತೊಡಗುವುದೂ. ಎಲ್ಲ ಕತೆಗಳಲ್ಲೂ ನೆನಪು, ಸ್ಮೃತಿಯ ಮರುಕಳಿಕೆಯಾಗಿ ಕತೆ ತೆರೆದುಕೊಳ್ಳುವುದನ್ನು ಕಾಣುತ್ತೇವೆ. ಪ್ರಸ್ತುತ ಮಾಗಿ ಕತೆ ಕೂಡ ಮನಸ್ಸು ಮಾಗಿದ ಬಳಿಕದ ನಿರೂಪಣೆಯೇ. ಹೃದಯವನ್ನು ಸದಾ ಹಿಂಡಬಲ್ಲ ನೋವೊಂದು ಇಲ್ಲಿ ಅತ್ಯಂತ ಸಂಯಮದ ಮನೋಧರ್ಮದಿಂದ ನಿರೂಪಿಸಲ್ಪಟ್ಟಿದೆ. ಪ್ರೀತಿ ಮೂಡಿಸಿದ ಜೀವ ಸದಾ ಕಾಲ ಜೊತೆಯಾಗಿರಬೇಕೆಂಬುದು ಮನುಷ್ಯ ಸಹಜ ಹಂಬಲ. ಅದು ಈಡೇರದಾಗ ಅದರ ತೀವ್ರತೆ ಹೆಚ್ಚು, ನೋವು ತೀಕ್ಷ್ಣ. ಸದಾ ತನಗೆ ದಕ್ಕದೇ ಹೋದ, ಹಂಬಲಿಸಿದರೂ ಸಿಗದೇ ಹೋದ, ನಿರಾಕರಿಸಲ್ಪಟ್ಟ ವಸ್ತುವಿನ ಮೋಹವೇ ಮನುಷ್ಯನನ್ನು ಮುಪ್ಪಿನ ತನಕ ಕಾಡುತ್ತಿರುತ್ತದೆ. ಮಾಗಿ ಕತೆಯ ನಿರೂಪಣೆ ಎಷ್ಟೇ ಸಂತುಲಿತವಾಗಿ, ಸ್ವೀಕೃತಿಯ ಮನೋಧರ್ಮವನ್ನು ಒಗ್ಗೂಡಿಸಿಕೊಂಡು ಬಂದಿದ್ದರೂ ನೋವಿನ ತಿವಿತ ನಮ್ಮನ್ನು ಕ್ಷಣಕಾಲವಾದರೂ ನಿಡುಸುಯ್ಯುವಂತೆ ಮಾಡದಿರದು.

ಊರ ಮಧ್ಯದ ಕಣ್ಣಕಾಡಿನೊಳಗೆ-1989
ಈ ಕತೆ ಒಂದು ಸಂಕೀರ್ಣ ಹಂದರವನ್ನು ಹೊಂದಿದೆ ಮಾತ್ರವಲ್ಲ ಹಲವು ಪಾತಳಿಗಳಲ್ಲಿ ಒಮ್ಮೆಗೇ ಚಾಚಿಕೊಂಡು ವೈವಿಧ್ಯಮಯ ಪ್ರಶ್ನೆಗಳೆದುರು ಓದುಗನನ್ನು ನಿಲ್ಲಿಸುತ್ತದೆ. ಆದರೆ ಹಂದರದ ಅಸಮತೋಲನದಿಂದ, ಈ ಪ್ರಶ್ನೆಗಳನ್ನು ಪರಸ್ಪರ ಬಂಧಿಸುವ ಏಕಸೂತ್ರದ ಎಳೆಯೊಂದು ಇಲ್ಲಿ ಕೊಂಚ ಅಸ್ಪಷ್ಟಗೊಂಡಿರುವ ನೆಲೆಯಲ್ಲಿ, ಈ ಪ್ರಶ್ನೆಗಳು ಓದುಗನ ಮನಸ್ಸಿನಲ್ಲಿ ಎದ್ದಷ್ಟೇ ಬೇಗ ಮರವೆಯಾಗುವ ಅಪಾಯ ಕೂಡ ಇದೆ ಎನಿಸುತ್ತದೆ.

ಕಡಲತೆರೆಗೆ ದಂಡೆ ಕತೆಯ ಯದುಪತಿ ಕಾಕಾ ತನ್ನ ವಿಕಲಾಂಗ ಮಗುವಿನ ಸಾವಿಗೆ ಪ್ರತಿಸ್ಪಂದಿಸುವ ಬಗೆಯನ್ನು ಇಲ್ಲಿನ ಬಾಪೂ ಜೊತೆ ಹೋಲಿಸಿ ನೋಡಬಹುದು. ಹಾಗೆಯೇ ಅಲ್ಲಿನ ಅಬಚಿಯದೇ ಇನ್ನೊಂದು ರೂಪಾಂತರ ಇಲ್ಲಿನ ಬಸು ಅಥವಾ ವಸುಂಧರೆ. ಅಲ್ಲಿ ವಿಕಲಾಂಗ ಮಗು ತೀರಿಕೊಂಡರೆ ಇಲ್ಲಿ ಅರುಂಧನೆಂಬ ಹಿರಿಯ ಮಗ ಕ್ರಾಂತಿಯ ಅಲೆಯಲ್ಲಿ ಕೊಚ್ಚಿ ಹೋಗುತ್ತಾನೆ. ಅವನಿದ್ದೂ ಇಲ್ಲದಂತಿದ್ದಾಗ ಕಾಡುವ, ಹಿಂಡುವ ನೋವಾಗದೆ ಇದ್ದ ಅವನ ಗೈರು ಅವನ ಸಾವಿನ ಸುದ್ದಿ ಸಿಕ್ಕಿದ ಮೇಲೆ ಅಗ್ನಿಪರೀಕ್ಷೆಯನ್ನೊಡ್ದುತ್ತದೆ. ಬರಗಾಲ ಇಬ್ಬರಿಗೂ ಮುಕ್ತಿಯನ್ನೊದಗಿಸುವಂತೆ ಬಂದಿತೆನ್ನಬೇಕು.

ನಂತರದ ಪಾತ್ರ ಚಹಾ ದುಖಾನಿನ ಬಾಬು ಭಾಯ್. ಬಾಬುಬಾಯ್ ಕಣ್ಣಿಂದ ದೂರವಾಗುವಾಗ ಆತನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ಮುಂದೆ ಆಸರೆಯಾದಾತ ರಸ್ತೆಯ ಮೇಲೆ ಬಣ್ಣದ ಚಿತ್ರ ಬಿಡಿಸಿ ಬದುಕು ನಡೆಸುತ್ತಿದ್ದ ಬನ್‌ದೇವ್. ಬನ್‌ದೇವನ ವಿಲಕ್ಷಣ ಪ್ರೇಮ ಕಥೆ, ಅದರ ದಾರುಣ ಅಂತ್ಯ ಮತ್ತು ಅವನ ಲೈಂಗಿಕತೆಯನ್ನು ದಾಟಿ ಮನಸ್ಸು ಹಿಡಿದಿಡುವ ಚಿತ್ರವೊಂದಿದೆ. ಬನ್‌ದೇವ್‌ನಿಂದ ತಪ್ಪಿಸಿಕೊಂಡ ನಿರೂಪಕ/ನಾಯಕ ಚಲಿಸುತ್ತಿರುವ ರೈಲಿನಿಂದಲೇ ತಿರುಗಿ ನೋಡಿದಾಗ ಬನ್‌ದೇವ್ ಕಂಬಕ್ಕೆ ತಲೆ ಜಜ್ಜಿಕೊಳ್ಳುತ್ತಿರುತ್ತಾನೆ. ತನ್ನ ಒಂದು ಕ್ಷಣದ ಉನ್ಮಾದ ತನಗೆ ಒಡ್ಡಿದ ನಷ್ಟವನ್ನು ಎಣಿಸಿಯೋ, ತನ್ನ ಇಡೀ ಬದುಕು ತನಗೆ ಮೋಸ ಮಾಡಿದ ಬಗೆಯನ್ನು ನೆನೆದೋ ಬನ್‌ದೇವ್ ಹಾಗೆ ಮಾಡುತ್ತಿರಬಹುದು. ಆದರೆ ಕತೆ ಅವನೊಂದಿಗೆ ನಿಲ್ಲುವುದಿಲ್ಲ. ನಂತರ ಮಲ್ಹೋತ್ರಾ ಬರುತ್ತಾರೆ. ಅವರ ಲೈಂಗಿಕ ಅಸಾಮರ್ಥ್ಯ ಮತ್ತು ಹೆಂಡತಿ ಕಾಮಿನಿಯ ಹಪಹಪಿಗಳು ಈತನ ವ್ಯಕ್ತಿತ್ವವನ್ನು ವ್ಯಾಪಿಸುವಂತೆ ಚಾಚುತ್ತವೆ. ಮಲ್ಹೋತ್ರಾರ ದಾನ-ಧರ್ಮ-ಸಾಮಾಜಿಕ ಚಟುವಟಿಕೆಗಳೆಲ್ಲ ಈ ಅಸಹಾಯಕತೆಯನ್ನು ಮುಚ್ಚಿಕೊಳ್ಳಲೋ ಎಂಬಂತಿರುವಾಗಲೇ ಕಾಮಿನಿಯ ಅಸಹಾಯಕತೆ ಇದ್ಯಾವುದರಿಂದಲೂ ಕಡಿಮೆಯಾಗುವುದಿಲ್ಲ ಎನ್ನುವ ಅರಿವು ಕೂಡ ಅವರಲ್ಲಿ ಜಾಗ್ರತವಿದೆ. ಆದರೆ ಅದನ್ನು ಸಣ್ಣದಾಗಿ ಕಾಣಿಸುವ ಪ್ರಯತ್ನವಿದೆಯೆ ಇಲ್ಲಿ? ಜಿಜ್ಞಾಸೆ. ಮುಂದೆ ಶ್ರೀವಾಸ್ತವರ ಮಗಳು ಶಮಾ ಮತ್ತು ಶ್ರೀವಾತ್ಸವರ ವ್ಯವಹಾರ ಕ್ಷೇತ್ರವನ್ನು ಕೊಟ್ಟ ಮಾತಿನಂತೆ ನೋಡಿಕೊಳ್ಳುವಲ್ಲಿ ವಿಫಲನಾದ ನಿರೂಪಕ/ನಾಯಕ.

ಹೀಗೆ ಇಲ್ಲಿ ಪರದೇಶಿಯಾದ ಹುಡುಗ ಚಿತ್ರಕಾರನಾಗಿ ಖ್ಯಾತಿಯ ಉತ್ತುಂಗವನ್ನೇರಿ ಬದುಕನ್ನು ತಿರುಗಿ ನೋಡುವ ಮುನ್ನ ಹಾದು ಬಂದ ಬದುಕುಗಳು, ಪಾತ್ರಗಳು ಹಲವು. ಒಂದೊಂದೂ ವಿಭಿನ್ನ, ವಿಶಿಷ್ಟ. ಅವು ಪ್ರತಿಪಾದಿಸುವ ಮೌಲ್ಯಗಳು, ಅವುಗಳ ಋಣಾತ್ಮಕ ಅಂಶಗಳು ಕೂಡ ಹಾಗೆಯೇ ಭಿನ್ನ ಭಿನ್ನ. ಆದರೆ ಇಷ್ಟರ ಹಿನ್ನೋಟಕ್ಕೆ ಕಾರಣವಾದ ನಿಜವಾದ ಘಟನೆ ಮಾತ್ರ ಬೇರೆಯದೇ ಇದೆ.

ನಿರೂಪಕ/ನಾಯಕ ತನ್ನನ್ನೇ ನಗರದ ಇನ್ನೊಬ್ಬ ಬಡ ಕಲಾಕಾರನಲ್ಲಿ ಕಾಣುತ್ತಿದ್ದಾನೆ. ಧಾರಾಕಾರ ಮಳೆಯ ದಿನ ಅಮ್ಮಾ ತಾಯೀ ಕವಳಾ ಎಂದು ಆರ್ತವಾಗಿ ಮೊರೆಯಿಟ್ಟ ಪುಟ್ಟ ಹುಡುಗನಲ್ಲೂ ಆತ ತನ್ನನ್ನೇ ಕಾಣುತ್ತಿದ್ದಾನೆ, ಕಂಡಿದ್ದಾನೆ. ಕಂಡೇ ಅವನ ಹೊಟ್ಟೆಗೆ ಒದ್ದಿದ್ದಾನೆ. ತನ್ನ ಅಜಾಗರೂಕತೆಯಿಂದ ಗಲಿಬಿಲಿಗೊಂಡು ಬೈದು ಹೋದ ಬೈಕ್ ಸವಾರ ಅಪಘಾತಕ್ಕೀಡಾಗಿದ್ದನ್ನು ಕಂಡಾಗ ಆಳದಲ್ಲೆಲ್ಲೋ ಖುಷಿಪಟ್ಟ ನಿರೂಪಕ/ನಾಯಕನ ಕ್ರೌರ್ಯವನ್ನು, ಸಂದಿಗ್ಧ ಬಂಡಾಯವನ್ನು, ಪತ್ರ ಬರೆದಿಟ್ಟು ಎಲ್ಲವನ್ನೂ ಬಿಟ್ಟು ಹೊರಡಲಿರುವ ನಿರಾಕರಣದ ಹಿಂದಿನ ನೆಲೆಗಳನ್ನು ಅವು ತೀರ ಸಂಕೀರ್ಣ ಮತ್ತು ಸಂಕ್ಲಿಷ್ಟವಾದರೂ ಅರ್ಥ ಮಾಡಿಕೊಳ್ಳಬೇಕಿದೆ.

ತುಳಿದಿದ್ದು ತನ್ನನ್ನೇ ಎಂಬ ನೆಲೆಯಲ್ಲಿ. ಆ ಹುಡುಗ ಸತ್ತಿರುವುದನ್ನು ಕತೆಯ ತೆಕ್ಕೆಯೊಳಗೆ ತಂದಿರುವುದು ಕೂಡ ಸಾವು ಅಲ್ಲಿ ಉದ್ದೇಶವಿತ್ತು ಎನ್ನುವುದನ್ನು ಕಾಣಿಸುವುದಕ್ಕಾಗಿಯೇ. ಸಾವು, ನಿರಾಕರಣ, ಕಣ್ಮರೆ ಮತ್ತೆ ಇಲ್ಲಿ ರೂಪಕಗಳಾಗಿವೆ. ಇವು ಓದುಗನ ಮೇಲೆ ತಟ್ಟನೇ ಒಂದು ಬಗೆಯ ಪರಿಣಾಮವನ್ನುಂಟು ಮಾಡಬಲ್ಲ ಮಹತ್ವದ ತಿರುವುಗಳೆಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಹಾಗೆಯೇ ಇವು, ಮಳಗಿಯವರ ಕತೆಗಳಲ್ಲಿ ಬಂಡಾಯದ ಲಕ್ಷಣಗಳನ್ನು ಕೂಡ ಹೊಂದಿರುವುದನ್ನು ಗಮನಿಸಬೇಕು.

ಸುನಯನ-1990
ಸುನಯನಳ ಬದುಕಿನ ದಾರುಣ ಘಟನೆಗಳನ್ನು ಸ್ವತಃ ಅವಳೇ ಚೈತ್ರನ ಎದುರು ಎಳೆ ಎಳೆಯಾಗಿ ತೆರೆದಿಡುವ ಕತೆ. ಇಲ್ಲೊಂದು ಆದರ್ಶ ರೋಮ್ಯಾಂಟಿಕ್ ಸನ್ನಿವೇಶವಿದೆ. ಅದು ಚೈತ್ರನಂಥ ಚೈತ್ರ ಮತ್ತು ಸುನಯನಾಳಂಥ ಸುನಯನ, ಸುನಯನಾ ನದಿಯಂಥ ನದಿಯ ತಟದಲ್ಲಿ ಒಬ್ಬರಿಗೊಬ್ಬರು ಮಾನಸಿಕ ಆಸರೆಯಾಗಿ ತೆರೆದುಕೊಳ್ಳುವ, ಹಂಚಿಕೊಳ್ಳುವ ಸನ್ನಿವೇಶ. ಇದೆಷ್ಟು ರಮ್ಯವಾಗಿದೆ ಎಂಬುದನ್ನು ಗಮನಿಸಿ. ಇದಕ್ಕೆ ಹಿನ್ನೆಲೆಯಾಗಿ ಇಬ್ಬರೂ ಸಾಯಲು ಹೊರಟು ಮುಖಾಮುಖಿಯಾಗುವ ಸನ್ನಿವೇಶ. ಆದರೆ ಇಡೀ ಕತೆಯನ್ನು ಓದಿದ ನಂತರ ಚೈತ್ರನಿಗೆ ಎದುರಾದ ಸಂದಿಗ್ಧ ಪರಿಸ್ಥಿತಿ, ಅದೂ ಸಾವು ಅನಿವಾರ್ಯವೆನಿಸಿದ ಪರಿಸ್ಥಿತಿ, ಏನು ಎನ್ನುವುದಕ್ಕೆ ಸಾಕಷ್ಟು ಸಮರ್ಥನೀಯ ಅಂಶಗಳು ಕತೆಯಲ್ಲಿಲ್ಲ ಅನಿಸುತ್ತದೆ. ಬದಲಿಗೆ ಅವನು ತನ್ನ ತಾಯಿಯ ಕುರಿತು ಆಡುವ ಮಾತುಗಳು, ಅವಳ ಕುರಿತು ಅವನಿಗಿರುವ ಕಾಳಜಿ, ಜವಾಬ್ದಾರಿ ಮತ್ತು ಋಣ - ಹೇಗಾದರೂ ಅವನು ಅವಳನ್ನು ಒಂಟಿಯಾಗಿ ಬಿಟ್ಟು ಬದುಕಿನಿಂದ ದೂರವಾದಾನು ಅನಿಸುವಂತೆಯೇ ಇವೆ. ಹಾಗಾಗಿ ಸಾಯಲು ತಯಾರಾಗಿ ಹೊರಟಿದ್ದ ಚೈತ್ರನದು ಸರಳವಾಗಿ ಆತ್ಮಪ್ರತ್ಯಯದ ಪ್ರೇಮದಿಂದ ತುಂಬಿದವನ ಹಳಹಳಿಕೆಯಂತೆ ಕಾಣುತ್ತದೆ.

"ವಿಚಿತ್ರವೋ ಏನೋ ನನಗೆಲ್ಲೂ ನೆಮ್ಮದಿ ಎನ್ನಿಸುವುದಿಲ್ಲ. ತೊಡಗಿಸಿಕೊಳ್ಳಲಾಗುವುದಿಲ್ಲ. ತಟ್ಟನೆ ಬೇಸರ, ನಿರಾಸಕ್ತಿ, ಏಕಾಕಿತನ. ನಾನೇ ಒಂಟಿಯಾಗಿರಬೇಕೆಂದು ಬಯಸುತ್ತೇನೆ. ಆದರೆ ಅದೂ ಬೇಸರವಾಗುತ್ತದೆ. ನಾನು ಅನಾಥ. ಏಕಾಂಗಿ ಅಲೆಮಾರಿ. ನೊಂದವನು, ದಯವಿಟ್ಟು ನನ್ನನ್ನು ಪ್ರೀತಿಸಿ ಎಂದು ಕಂಡಕಂಡವರಲ್ಲಿ ಗೋಗರೆಯಬೇಕೆನ್ನಿಸಿ ಪಿಚ್ಚೆನ್ನಿಸುತ್ತದೆ. ಆಗೀಗ ಸಾಯುವ ಯೋಚನೆ ಬರುತ್ತದೆ. ಸಾಯಲು ಹೋಗಿಯೂ ಬಿಡುತ್ತೇನೆ. ಈಗ ಕುಳಿತಿದ್ದೇವಲ್ಲಾ ಆ ಗುಡ್ಡದ ಅಂಚು, ರೈಲ್ವೇ ನಿಲ್ದಾಣ, ಲಾರಿ, ಹಾಳು ಬಾವಿ ಯಾವುದಾದರೂ ಸರಿ ಎಂದು. ಆದರೆ ಪ್ರತಿಸಲವೂ ಏನಾದರೂ ಒಂದು ಕಾರಣ ಕೊಟ್ಟುಕೊಂಡು ಮರಳುವುದರಲ್ಲಿ ಸುಖವೆನ್ನಿಸುತ್ತದೆ. ಆದರೆ ನಿಮ್ಮನ್ನು ಕಂಡಾಗ ಅನಿಸಿದ್ದೇ ಬೇರೆ. ಕ್ಷಮಿಸಿ ಬಿಡಿ ನಿಮಗಾಗಿ ಬದುಕಬೇಕೆನಿಸಿತು. ಹೇಳಿ ನಾನೆಂದದ್ದರಲ್ಲಿ ತಪ್ಪಿದೆಯೇ." (ಪುಟ 139)

ಹೀಗೆ ಇಲ್ಲಿ ಕತೆಯ ಸನ್ನಿವೇಶ, ಗಾಢ ಭಾವಗೀತೆಯಂಥ ಲಹರಿಯ ಅದರ ಒಡಲಿನಿಂದ ಒಂದು ಸಂಭಾಷಣೆಯನ್ನು ಕತ್ತರಿಸಿ ಹೊರತೆಗೆದದ್ದೇ ಈ ಮಾತುಗಳೆಲ್ಲ ನಾಟಕೀಯ ಮತ್ತು ಅವುಗಳನ್ನು ಆಡಿದ ಮನುಷ್ಯ ನಿಜವಿದ್ದಿರಲಾರ, ಪ್ರಾಮಾಣಿಕನಿರಲಾರ ಎಂದೆಲ್ಲ ಅನಿಸುವ ಸಾಧ್ಯತೆಯೇ ಹೆಚ್ಚು. ಇದು ಬಾರೋ ಗೀಜಗದಲ್ಲೂ ಸಂಭವಿಸುತ್ತದೆ. ಧಾರಿಣಿಯ ಜತೆ ನನ್ನದೊಂದು ಕತೆಯಲ್ಲೂ ಸಂಭವಿಸುತ್ತದೆ, ಸ್ವಲ್ಪ ಭಿನ್ನವಾಗಿ. ಒಂದು ಗಂಡು-ಒಂದು ಹೆಣ್ಣು, ಅದ್ಭುತ ರಮ್ಯ ಸನ್ನಿವೇಶದಲ್ಲಿ ಎದುರುಬದುರಾಗಿ, ಹೊಳೆಯ ದಂಡೆಯಲ್ಲೋ, ಹೂವಿನ ಉದ್ಯಾನದಲ್ಲೋ ಕೂತು ಸ್ವಗತದಂಥ ಮಾತುಗಳನ್ನು ಆಡಿಕೊಳ್ಳುತ್ತ ಬಿಚ್ಚಿಕೊಳ್ಳುತ್ತಾರೆ. ಕಥನ ತೊಡಗುತ್ತದೆ. ನೋವಿದೆ ಎಲ್ಲರಲ್ಲೂ, ಪ್ರೀತಿಯ ಹಂಬಲವಿದೆ. ಬದುಕು ಬಿಚ್ಚಿಕೊಳ್ಳುತ್ತದೆ. ಆದರೆ ಬಾರೋ ಗೀಜಗ ಕತೆಯಲ್ಲಿ ಇದು ಒಂದು ಹೊಸದೇ ಆದ ಮಜಲನ್ನು ತಲುಪಿರುವುದನ್ನು ಕಾಣುತ್ತೇವೆ. ಅದನ್ನು ನಿರ್ದಿಷ್ಟವಾಗಿ ಬಾರೋ ಗೀಜಗ ಕತೆಯನ್ನು ಚರ್ಚಿಸುವಾಗ ಗಮನಿಸಬಹುದು.

ಪತ್ರೋಳಿ - 1986
ಬದುಕು ಕಲಿಸುವ ಕಠಿಣ ಪಾಠಗಳಿಂದಲೇ ಕ್ರೌರ್ಯ ಸಹಜವಾಗಿ ಮೊಳೆಯುವ ಬಗೆಯನ್ನು ಹೇಳುವ ಕತೆ. ಜಯಕಾಂತನ್ ಅವರ ಸನ್ನಿವೇಶದಲ್ಲಿ ಸಿಕ್ಕವರು, ತಗಳಿ ಶಿವಶಂಕರ ಪಿಳ್ಳೆಯವರ ತೋಟಿಯ ಮಗನ ಕತೆ, ಡಾ.ಕಾರ್ಲೋಸ್ (ಅನು: ತಮಿಳ್‌ಸೆಲ್ವಿ)ಯವರ ಇವರು ಕತೆಯಾದವರು ಮುಂತಾದ ಕಾದಂಬರಿಗಳನ್ನು ನೆನಪಿಸುವ ಈ ಕತೆ ಬಡತನದ ಬವಣೆ ಮತ್ತು ಅದರ ಎದುರು ಸರಕಾರೀ ಭ್ರಷ್ಟಾಚಾರ, ಆದರ್ಶದ ಡಂಭಾಚಾರಗಳನ್ನು ಮುಖಾಮುಖಿಯಾಗಿಸುತ್ತಲೇ ಅದು ಒಂದು ಕಡೆ ಮೌಲ್ಯ-ನೈತಿಕತೆಯೊಂದಿಗೆ ರಾಜಿಯಾಗುವ ಬದುಕುವ ಹಾದಿಯನ್ನೂ ಇನ್ನೊಂದೆಡೆ ರೋಷದಿಂದ ವಿರೋಧಿಸಿ ಎದುರಿಸುವ (ಸಾಯುವ?) ಹಾದಿಯನ್ನೂ ತೆರೆಯುವುದು ಕತೆಯಲ್ಲಿದೆ. ಮಳಗಿಯವರ ಸೈದ್ಧಾಂತಿಕ ನಿಲುವುಗಳ ಆರಂಭಿಕ ನೆಲೆಗಳನ್ನು ಈ ಕತೆ ನಮಗೆ ಕಾಣಿಸುತ್ತದೆ.

ನಕ್ಷತ್ರಯಾತ್ರಿಕರು-1991
ಸೌಭಾಗ್ಯವತಿ, ನಕ್ಷತ್ರ ಯಾತ್ರಿಕರು ಮತ್ತು ಕೆಂಪುಮಣ್ಣಿನ ಒಕ್ಕಲು ಮೂರೂ ಕತೆಗಳು ಕಾದಂಬರಿಯ ಹರಹು ಉಳ್ಳ, ಇಡೀ ಬದುಕನ್ನು ಹಿಡಿದುಕೊಡುವ ವ್ಯಾಪ್ತಿಯಿರುವ ಕಥಾನಕಗಳೇ ಎಂದು ಆಗಲೇ ಹೇಳಿಯಾಗಿದೆ. ಈ ಸಂದರ್ಭದಲ್ಲೇ ಇಲ್ಲಿ ಇರುವ ಇನ್ನೊಂದು ವಿಶೇಷವನ್ನೂ ಗಮನಿಸಬೇಕು. ಸೌಭಾಗ್ಯವತಿ ಕತೆಯ ತುಂಗಭದ್ರೆ ಸೇತುಮಾಧವಾಚಾರ್ಯ ಜಹಗೀರರ ಮಗಳು. ನಕ್ಷತ್ರ ಯಾತ್ರಿಕರು ಕತೆಯ ಮಹಾಕೂಟೇಶ್ವರ ನಾಟ್ಯ ಸಂಘ ಎಂಬ ಹೆಸರಿನ ನಾಟಕದ ಕಂಪನಿಯ ನಟಿಯಾಗಿರುವ ಮಾಳವ್ವ, ಘಟಪ್ರಭಾ ತಟದ ದೇಸಾಯರ ಕಮತದವರಲ್ಲಿದ್ದವರ, ಅನುಕೂಲಸ್ತರ ಕುಟುಂಬದ ಮಗಳು. ಕೆಂಪುಮಣ್ಣಿನ ಒಕ್ಕಲು ಹಶಂಬಿಯ ಕತೆ. ಈ ಮೂರು ಕಥಾನಕಗಳು ತೋರುವ ಬದುಕಿನ ಜೀವವೈವಿಧ್ಯವನ್ನು ಗಮನಿಸಿ. ಒಂದು ಸಾಂಪ್ರದಾಯಿಕ ವೈದಿಕರ ಮನೆತನದ ಕತೆ. ಇನ್ನೊಂದು ನಾಟಕದ ನಟಿಯ ಬದುಕಿನ ಹೋರಾಟದ ಕತೆ. ಕೊನೆಯದು ಹಶಂಬಿ- ಕಾಶೀಮ, ದಾವುದ-ಸಕೀನಾ ಮತ್ತು ಮಕ್ಕಳು ದುರ್ಗಾವಲಿ, ಶಬಾನಾರ ಕತೆ.

ಹಾಗೆಯೇ ಕೇಶವ ಮಳಗಿಯವರ ಕತೆಗಳಲ್ಲಿ ಬರುವ ವಿಶಿಷ್ಟ ಸ್ತ್ರೀಪಾತ್ರವನ್ನೂ ಗಮನಿಸಬಹುದು. ಈಕೆ ಬಾಲ್ಯದಲ್ಲಿ ಮಹಾ ತುಂಟಿ. ಗಂಡುಬೀರಿ. ತುಂಟಾಟದಲ್ಲಿ ತನ್ನ ವಯಸ್ಸಿನ ಹುಡುಗರನ್ನು ಮೀರಿಸಬಲ್ಲ ಧೈರ್ಯಸ್ಥೆ. ಮರಹತ್ತುವುದು, ತುಡುಗು ಮಾಡುವುದು ಎಲ್ಲದರಲ್ಲೂ ಮುಂದು. ಯೌವನದಲ್ಲಿ ಕೂಡ ಮುಂದುವರಿಯುವ ಕೀಟಲೆ. ಮುಂದೆ ದುರಂತ. ತಂದೆಯ ಸಾವು, ಗಂಡನ ಸಾವು ಅಥವಾ ಎಳೆ ಕಂದನ ಸಾವು ಹೀಗೆ ಏನಾದರೂ. ಬದುಕಿನ ಜವಾಬ್ದಾರಿಯ ಹೊರೆ. ಕಷ್ಟ ಕೋಟಲೆಗಳ ಸರಮಾಲೆ. ದೇಹದ ಮೇಲೆ ಹದ್ದುಗಳಂತೆ ಎರಗುವವರ ಭಯ. ಎಲ್ಲವನ್ನೂ ಎದುರಿಸಿ ನಿಲ್ಲುವ ಛಲದಂಕ ಮಲ್ಲೆಯ ಬಳಿ ಹರಯದ ತುಂಟತನ ಮಾತ್ರ ಮಂಗಮಾಯ. ಇದಕ್ಕೆ ಉದಾಹರಣೆಯಾಗಿ ಯಾರಿಲ್ಲಿಗೆ ಬಂದರು ಕಳೆದಿರುಳು ಕತೆಯ ನಾಯಕಿ/ನಿರೂಪಕಿ, ಮಾಗಿ ಕತೆಯ ಶಾನುಭೋಗರ ಮಗಳು, ಸುನಯನ ಕತೆಯ ಸುನಯನ, ನಕ್ಷತ್ರಯಾತ್ರಿಕರು ಕತೆಯ ಮಾಳವ್ವ, ವೆನ್ನೆಲ ದೊರೆಸಾನಿ ಕತೆಯ ಜಾಲಿಬೆಂಚಿ ಲಕ್ಷ್ಮಮ್ಮ, ಮುಂತಾದವರೆಲ್ಲ ಸಾಲು ಸಾಲಾಗಿ ನಿಲ್ಲುತ್ತಾರೆ.

ನಕ್ಷತ್ರಯಾತ್ರಿಕರು ಕತೆಯ ಮಾಳವ್ವನದು ಇನ್ನೂ ಒಂದು ವಿಶೇಷವಿದೆ. ಅದು ಈಕೆಯ ಪ್ರೇಮದ ಪರಿ. ಬಸವಂತನ ಪ್ರೇಮಕ್ಕೆ ಮಾಳವ್ವ ಸ್ಪಂದಿಸುವ ಬಗೆಯೇ ಒಂದು ವಿಚಿತ್ರ ಬಗೆಯದು. ಎದುರಿದ್ದಾಗ ಹರಿಹಾಯುವ, ಕಣ್ಣೆದುರಿಲ್ಲದಾಗ ಹಂಬಲಿಸುವ ಈಕೆ ರೊಚ್ಚಿನ ಪ್ರೀತಿಯ ಆಳ ಅಗಲ ತಿಳಿಯುವುದು ಕಷ್ಟ. ಕೆಂಪು ಮಣ್ಣಿನ ಒಕ್ಕಲು ಕತೆಯ ಹಶಂಬಿಯ ಪ್ರೀತಿ, ಉತ್ಪಾತದ ಮುನೀರನ ಪ್ರೀತಿ, ವನ್ನೆಲ ದೊರಸಾನಿಯ ಲಕ್ಷ್ಮಮ್ಮ, ಸೋಮಶೇಖರ ಪರಿಣಯದ ವಸಂತಮಾಲಾರ ಈ ಬೆಂಕಿಯಂಥ ಪ್ರೀತಿಯ ನೆಲೆಗಳನ್ನು ಕುರಿತು ಕೂಡ ಯೋಚಿಸಬೇಕೆನಿಸುತ್ತದೆ. ಕನ್ನಡದ ಕತೆಗಳಲ್ಲಿ ಎಂಥೆಂಥಾ ವಿಶಿಷ್ಟ ವ್ಯಕ್ತಿತ್ವದ ಪಾತ್ರಗಳನ್ನು ಸೃಷ್ಟಿಸಿದ್ದಾರೆ ಕೇಶವ ಮಳಗಿಯವರು!

ಇಷ್ಟು ನಕ್ಷತ್ರಗಳಲ್ಲಿ ಯಾವುದು ನನಗೆ - 1990
ಬಿಟ್ಟು ಬಂದ ಮನೆಯನ್ನು ಮನೆಯವರನ್ನು ಮತ್ತೆ ಊರಿಗೆ ಹೋಗಿ ಕಾಣಬೇಕೆನ್ನಿಸುವ, ಕಾಣುತ್ತೇನೆನ್ನುವ ನಿರ್ಧಾರದೊಂದಿಗೆ ಸುರುವಾಗುವ ಕತೆ ಈ ಪುನರ್ಮಿಲನದ ಸಂದಿಗ್ಧಗಳ ಸುತ್ತ ಸುತ್ತುತ್ತದೆ. ಮಧುಕರನಲ್ಲಿ ಕೇವಲ ಮತ್ತು ಕೇವಲ ಕುಸುಮಳ ಸಾನ್ನಿಧ್ಯದಲ್ಲಿ ಗಟ್ಟಿಗೊಳ್ಳುವ ನಿರ್ಧಾರ ಅದು. ಇನ್ನೆಂದೂ ಈ ಮನೆಯ ಹೊಸ್ತಿಲನ್ನು ತುಳಿಯುವುದಿಲ್ಲ ಎಂದು ಮಾಡಿದ ಪ್ರತಿಜ್ಞೆಯ ಪ್ರತಿಷ್ಠೆಗಿಂತ ಸಂಬಂಧಗಳು ಮುಖ್ಯವಾಗಿ ಕಾಣುವ ಔದಾರ್ಯದ ಘಳಿಗೆ ಕಾರಣ ಅಂಥ ನಿರ್ಧಾರಕ್ಕೆ. ಅದು ಇನ್ನಷ್ಟು ಔದಾರ್ಯವನ್ನು, ಪ್ರೀತಿಯನ್ನು, ಸಂಬಂಧಗಳನ್ನು ಗಟ್ಟಿಗೊಳಿಸುವ ನಡೆಯಾಗುವುದೇ ಇಡೀ ಕತೆಯ ಗಮ್ಯ. ಈ ಪ್ರೀತಿ, ಹೃದಯದ ಔದಾರ್ಯ, ಸಂಬಂಧಗಳನ್ನು ಬೆಸೆಯುವ ಪುಣ್ಯದ ಕ್ರಿಯೆ ಇಲ್ಲಿ ನಕ್ಷತ್ರಗಳ ಮಾಲೆಯಾಗಿರುವುದು ಕೇಶವ ಮಳಗಿಯವರ ನಿರೂಪಣೆಯ, ಭಾಷೆಯ ಮತ್ತು ಪ್ರಾಮಾಣಿಕ ಸಂವೇದನೆಗಳ ದೆಸೆಯಿಂದ.

ಶಹರದಿಂದ ಮತ್ತೆ ಅವ್ವ, ಮೋನಿದಾದರನ್ನು ನೆನೆದು ಊರಿಗೆ ಮರಳುವ ಮಧುಕರನ ನಡೆಗೂ ಕಡಲತೆರೆಗೆ ದಂಡೆ ಕತೆಯ ಅಚ್ಯುತನ ಪುನರಾಗಮನಕ್ಕೂ ಒಂದೆಳೆಯ ಹೋಲಿಕೆ ಸಾಧ್ಯ. ಅದೇ ರೀತಿ ಕಡಲತೆರೆಗೆ ದಂಡೆ ಕತೆಯಲ್ಲಿ ಮರಳುವ ಯದುಪತಿ ಕಾಕಾನ ಪುನರಾಗಮನಕ್ಕೂ ಇಂಥ ಜೋಡಣೆ ಸಾಧ್ಯವಾಗಬಹುದು. ಈ ಕಣ್ಮರೆ, ಊರು ಬಿಟ್ಟು ಹೋಗುವುದು ಮತ್ತು ಎರಡನ್ನು ಆಯ್ದುಕೊಂಡವರೂ ಮರಳಿ ತಮ್ಮವರನ್ನು ಸೇರುವುದು ಮಳಗಿಯವರ ಕತೆಯಲ್ಲಿ ಮತ್ತೆ ಮತ್ತೆ ಸಂಭವಿಸುತ್ತದೆ ಎನ್ನುವುದನ್ನು ಇಲ್ಲಿ ನೆನೆಯಬಹುದು. ಇದಕ್ಕೂ ಸಾವು-ಆತ್ಮಹತ್ಯೆ-ಸಂನ್ಯಾಸ-ಆಧ್ಯಾತ್ಮಗಳಿಗೂ ಒಂದು ಸ್ತರದ ಪರಸ್ಪರ ಸಂಬಂಧವಿದೆ. ಜಗತ್ತಿಗೆ ರಾಜೀನಾಮೆ ಎಸೆದು ಬಿಡುವ ಬೇರೆ ಬೇರೆ ಮಾರ್ಗಗಳು ಇವೆಲ್ಲ, ಅಷ್ಟೆ. ಮೂಲದಲ್ಲಿ, ಭಾವದಲ್ಲಿ ಎಲ್ಲವೂ ಒಂದೇ. ಅಭಿವ್ಯಕ್ತಿ ಕ್ರಮ ಮಾತ್ರ ಬೇರೆ ಬೇರೆ. ಆದರೆ ಮಳಗಿಯವರ ಪಾತ್ರಗಳು ಒಂದಲ್ಲಾ ಒಂದು ಹಂತದಲ್ಲಿ ಹೀಗೆ ಎಸೆದು ಬಿಸುಟು ಹೋದ ಬದುಕಿಗೆ ಮತ್ತೆ ಹಿಂದಿರುಗುತ್ತವೆ ಎನ್ನುವುದೇ ಸಮಾಧಾನದ ಮತ್ತು ಅಷ್ಟೇ ಕುತೂಹಲದ ವಿದ್ಯಮಾನ!

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Monday, November 2, 2009

ಎಸ್.ದಿವಾಕರ್ ಕಥಾಜಗತ್ತು: ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ

ಈ ಸಂಕಲನದ ಎಂಟೂ ಕತೆಗಳಲ್ಲಿ ಐದು ಕತೆಗಳು ಒಂದು ಅರ್ಥದಲ್ಲಿ ಒಂದೇ ಕತೆಯನ್ನು ಹೇಳುತ್ತಿವೆ. ಬಿಳಿಯ ಹೂಗಳ ಕವಿತೆ, ಅಂತರಾಳದಲ್ಲಿ ನಿಂತ ನೀರು ಹಾಗೂ ಮುರುಗಭೂಪತಿಯ ಮಗ: ಒಂದು ಕತೆ ಮತ್ತು ಪ್ರಶ್ನೆ ಪತ್ರಿಕೆ - ಈ ಮೂರೂ ಕತೆಗಳು ತೋರುವ ಪ್ರಯೋಗಶೀಲತೆ ಮತ್ತು ಹೊಸತನವನ್ನು ಗಮನಿಸುತ್ತಲೇ ಉಳಿದ ಐದು ಕತೆಗಳಿಗೂ ಎಸ್.ದಿವಾಕರರ ಮೊದಲ ಸಂಕಲನದ ಕೆಲವು ಕತೆಗಳಿಗೂ ಇರುವ ತಾದ್ಯಾತ್ಮವನ್ನೂ ಗುರುತಿಸಬಹುದು. ಮೊದಲ ಸಂಕಲನದ ಕ್ರೌರ್ಯ ಮತ್ತು ಅನಾಥರು ಕತೆಯ ಮೂಲ ಎಳೆ ಇಲ್ಲಿಯೂ ಮುಂದುವರಿದಿದೆ ಅನಿಸಿದರೆ ಅಚ್ಚರಿಯಿಲ್ಲ. ಅಲ್ಲಿ ಬರುವ ಎಸ್.ಮೃತ್ಯುಂಜಯ ಇಲ್ಲಿಯೂ ಇಣುಕುವುದು ಸುಳ್ಳಲ್ಲ. ಆದರೆ ಈ ಸಂಕಲನದ ಕತೆಗಳು ಬೇರೆ ಬೇರೆಯಾಗಿಯೂ, ಒಟ್ಟಾಗಿಯೂ ಉಂಟು ಮಾಡುವ ಭಾವ ಗಾಢ ವಿಷಾದದ್ದು. ಈ ವಿಷಾದ ಮಾತ್ರ ಸ್ಪಷ್ಟವಾಗಿ ಇದೇ, ಇಂಥಾದ್ದೆ ಮತ್ತು ಇದಕ್ಕಾಗಿಯೇ ಎಂದು ಬೆಟ್ಟು ಮಾಡಿ ಹೇಳಲಾಗದ್ದು. ಎಸ್. ದಿವಾಕರ್ ಈ ಎಂಟೂ ಕತೆಯ ನಿರೂಪಣೆಯಲ್ಲಿ ತೋರಿರುವ ಸಂಯಮ, ವಿವರಗಳಲ್ಲಿ ಹಿಡಿದಿಟ್ಟಿರುವ ಬದುಕಿನ ಜೀವಂತಿಕೆ, ಅವರು ತಮ್ಮ ಕತೆಗಳನ್ನು ಚಿತ್ರಿಸಿರುವ ರೀತಿ ಪ್ರತಿಯೊಂದೂ ಅನನ್ಯವಾದುದು, ಅಧ್ಯಯನ ಯೋಗ್ಯವಾದದ್ದು.

ದಾರಿ ನೂರಾರುಂಟು ಬೆಳಕಿನರಮನೆಗೆ ಕತೆಯ ಮಣ್ಣಾರ್‌ಗುಡಿ ಕೋದಂಡಪಾಣಿ ಬದುಕುತ್ತಿರುವ ಮನೆ, ಆತನ ಮನಸ್ಸಿನ ಗಡಿಯಾರ ದಲ್ಲಿ ನಿಂತೇ ಹೋಗಿರುವ ಕಾಲ ಮತ್ತು ಸ್ಮೃತಿಗಳು ಒಂದಕ್ಕೊಂದು ಪೂರಕವಾಗಿವೆ. ಇಲ್ಲೊಂದು ವಿಚಿತ್ರವಿದೆ. ಎಪ್ಪತ್ತು ವರ್ಷಗಳ ಹಿಂದಿನದನ್ನು ಯಥಾವತ್ತಾಗಿ ನೆನಪಿಸಿಕೊಳ್ಳಬಲ್ಲ ಕೋದಂಡಪಾಣಿಗೆ ಅವೇ ನೆನಪುಗಳು ವರ್ತಮಾನಕ್ಕೆ ಬರಲು, ಚಾಚಿಕೊಳ್ಳಲು ಮಾತ್ರ ನಿರಾಕರಿಸುವುದು ಆ ವಿಚಿತ್ರ. ಸ್ಟಾರ್ಟ್ ಕ್ಯಾಮೆರಾ, ಕಟ್, ವೆಲ್‌ಡನ್ ಕೋತಂಡುಗಳು ಕಿವಿಯೊಳಗೆ ಗುನುಗಿದಷ್ಟು ಸದ್ಯದ ಶಬ್ದಗಳು ಕಿವಿಯನ್ನು ತಲುಪುತ್ತಿಲ್ಲ. ಆದರೂ ಇವತ್ತು ನಡೆಯಲಿಕ್ಕಿರುವ ಸಂದರ್ಶನದ ನೆನಪಿದೆ, ಮೊದಲು ಮರಗತವಲ್ಲಿಯ ಮನೆಗೆ ಮತ್ತು ನಂತರ ಚಿಕ್ಕಪ್ಪನ ಮನೆಗೆ ಹೋಗಬೇಕೆನ್ನಿಸುತ್ತದೆ ಎನ್ನುವುದನ್ನು ಗಮನಿಸಬೇಕು.

ನಮಗೆಲ್ಲರಿಗೂ ಆಪ್ತವಾದ ಒಂದು ಕಾಲಮಾನ ನಮ್ಮದೆ ಬದುಕಿನಲ್ಲಿ ಇದ್ದೇ ಇರುತ್ತದೆ. ಅದರೊಂದಿಗೆ ನಾವು ನಿಂತುಬಿಡುವುದು ಹೇಗೆ ದುರಂತಕ್ಕೆ ಕಾರಣವಾಗಬಹುದೋ ಹಾಗೆಯೇ ಅದನ್ನು ನಮ್ಮ ವರ್ತಮಾನಕ್ಕೆ ಚಾಚಿಕೊಂಡ ಬಗೆಯನ್ನು ಕೂಡ ಗುರುತಿಸಿಕೊಳ್ಳುವ, ಸಮರ್ಥಿಸಿಕೊಳ್ಳುವ ಛಾತಿಯನ್ನು ಹೊಂದಿರದೇ ಇರುವುದು ಕೂಡ ದುರಂತವೇ. ಟಿ.ಎಸ್. ಎಲಿಯೆಟ್ ಹೇಳುವ ಮಾತನ್ನು ಇಲ್ಲಿ ನೆನೆಯಬಹುದು: "Time Present and Time Past Are both perhaps present in Time Future and Time Future contained in Time Past."

ಮೂಕಿ ಚಿತ್ರಗಳ ಉಚ್ಛ್ರಾಯದ ದಿನಗಳಲ್ಲಿಯೇ ನಿಂತು ಹೋದಂತಿರುವ ಕೋದಂಡಪಾಣಿಗೆ ಜಯಮಣಿಯ ಪ್ರಶ್ನೆಗಳು ವಿಚಿತ್ರವೆನಿಸುವಂತೆಯೇ ಜಯಮಣಿಗೆ ತಾನು ಕಾಲದ ಸವಾಲನ್ನು ಎದುರಿಸುತ್ತಿರುವ ಅರಿವಾಗಿ ಬೆವರುತ್ತದೆ. ತಾನು ಬಹುವಾಗಿ ಮೆಚ್ಚಿ ಪ್ರೀತಿಸಿದ ಹುಡುಗಿ ವಿಧವೆಯಾಗಿ, ಮುದುಕಿಯಾಗಿ ಸಾಯುವ ಹಂತದಲ್ಲಿರುವಾಗಲೂ ಪ್ರೇಮಪತ್ರಗಳನ್ನು ಬರೆದು ಅವರಿವರ ಮೂಲಕ ತಲುಪಿಸುತ್ತಿದ್ದ ಕೋದಂಡಪಾಣಿಗೆ ಕೊನೆಗೂ ವಾಸ್ತವಕ್ಕೆ ಸಂಬಂಧ ಕಲ್ಪಿಸುವ ಎಳೆಯೊಂದು ಪ್ರಾಪ್ತವಾಗುವುದು ಅಮ್ಮಾಳ್ ಎರಂದುಪೋನಾರ್ ಎಂಬ ವಾರ್ತೆಯೇ ಅಗುವುದು ವಿಪರ್ಯಾಸ. ಆಗ ಕೋದಂಡಪಾಣಿ, ತಾವು ತುಂಬ ಸಮೃದ್ಧವೆಂದು ಬಗೆದಿದ್ದ ಭೂತಕಾಲ ಹೀಗೆ ಇದ್ದಕ್ಕಿದ್ದಂತೆ ಬಿಡುಬೀಸಾಗಿ ಶೂನ್ಯವಾಗುವುದನ್ನು ಕಾಣುತ್ತಾರೆ. ಈ ಶೂನ್ಯವೇ ಮುವ್ವತ್ತೊಂಭತ್ತು ವರ್ಷಗಳ ಬಳಿಕ ಮತ್ತೆ ಪೀಟರ್ಸ್ ರೋಡಿನ ಒಂದು ಮನೆಯ ಮರಗತವಲ್ಲಿಯನ್ನು ಹುಡುಕಿಕೊಂಡು ಹೊರಡುವುದು ಮತ್ತು ವರ್ತಮಾನವನ್ನು ಹೀಗೆ ಬೀದಿಯಲ್ಲಿ ಎದುರಿಸುವುದು ಅನಿವಾರ್ಯವಾಗಿಸಿದಂತಿದೆ. ಆದರೆ ಸಹಜವಾಗಿಯೇ ಈ ಭೂತ ಮತ್ತು ವರ್ತಮಾನ ಸಂಧಿಸುವ ಸಂಕ್ರಮಣ ಘಟ್ಟ ತುಂಬ ವಿಭ್ರಾಂತಮಯವಾಗಿ ಬಿಡುತ್ತದೆ. ಕಸದಲ್ಲಿ ಸಿಕ್ಕ ಬಲೂನಿನಂಥ ವಸ್ತು ಅದ್ಯಾವ ಮರೆವಿನಲ್ಲಿ ತಮ್ಮ ಕಿಸೆಯನ್ನು ಸೇರಿತೆನ್ನುವುದು ಕೂಡ ತಿಳಿಯದ ಕೋದಂಡಪಾಣಿ ಅದನ್ನೆ ತಮ್ಮ ಬಳಿ ಬಂದ ನಾಲ್ಕು ವರ್ಷದ ಹುಡುಗನಿಗೆ ತೆಗೆದುಕೊಡಲು ಮುಂದಾಗುವ ಕ್ಷಣದಲ್ಲಿ ಕಾಲ ಒಂದು ಕ್ಷಣ ಸ್ತಬ್ಧವಾದಂತಿದೆ.

ಸುಮ್ಮನೇ ಕುತೂಹಲಕ್ಕೆ ಇಲ್ಲಿ ಶ್ರೀಧರ ಬಳಗಾರ ಅವರ ಒಂದು ಫೋಟೋದ ನೆಗೆಟಿವ್ ಕತೆಯ ವೆಂಕಟಪ್ಪ ಅವರ ಮರೆವನ್ನು ನೆನೆಯಬಹುದು. ಮನೆಯ ಪಕ್ಕದ ನೀರ ಝರಿ-ಜಲಪಾತವಾಗಿ, ಅದೊಂದು ಪ್ರೇಕ್ಷಣೀಯ ಸ್ಥಳವಾಗಿ, ತೋಟದೊಳಗೆ ಇದನ್ನು ನೋಡಲೆಂದೇ ಬರುವ ಜನ ಹೆಚ್ಚಾಗಿ, ಆ ಜನರ ಉಪಟಳಗಳು, ಗಲೀಜು, ಸದ್ದುಗದ್ದಲ ಕೂಡ ಅತಿಯಾಗಿ ಕೊನೆಗೆ ಪ್ರವೇಶವನ್ನು ನಿರ್ಬಂಧಿಸುವ ವೆಂಕಟಪ್ಪನವರ ಪ್ರಯತ್ನಕ್ಕೆ ನೂರಾರು ಅಡೆತಡೆಗಳೆಲ್ಲ ಎದುರಾಗುತ್ತಲೇ ಮರೆವಿನ ಒಂದು ರೋಗ ವೆಂಕಟಪ್ಪನವರನ್ನು ಅಮರಿಕೊಳ್ಳುತ್ತದೆ. ಈ ಮರೆವನ್ನು ತಮ್ಮದೇ ಕಾರಣಗಳಿಗಾಗಿ ಒಂದು ಕ್ಷಣದ ಮಟ್ಟಿಗಾದರೂ ಹಿಮ್ಮೆಟ್ಟಿಸಲು ಪ್ರಯತ್ನಿಸುವ ಮನೆಯ ಮಂದಿ ಕೂಡ ಸ್ವಾರ್ಥಿಗಳೇ ಆಗಿರುವುದು ಅಲ್ಲಿನ ದುರಂತ.

ಈ ಕಾಲದೊಂದಿಗೆ ಹೆಜ್ಜೆ ಹಾಕದಿರಲು ಬಯಸಿಯೋ, ಬಯಸದೆಯೋ ಮನಸ್ಸು ಮಾಡಿದ ಪಾತ್ರಗಳಲ್ಲಿ ಕೋದಂಡಪಾಣಿಯೇ ಮೊದಲಿಗರಲ್ಲ. ಇಲ್ಲಿನ ಬಹುತೇಕ ಕತೆಗಳಲ್ಲಿ ಅದು ಮುರುಗಭೂಪತಿಯಾಗಿ, ಅಹಲ್ಯಾಬಾಯಿಯಾಗಿ, ರುಕ್ಮಿಣಮ್ಮನೋ ಜಾನಕಮ್ಮನೋ ಆಗಿ ಮತ್ತೆ ಮತ್ತೆ ಕಾಣಿಸಿಕೊಳ್ಳುವುದು ನಡೆದಿದೆ. ಅವು ಕೇವಲ ಪಾತ್ರಗಳಾಗಿ ಬರದೆ ಇಡೀ ಮನೆಯಾಗಿ, ಊರಿನ ಕೇಂದ್ರವಾಗಿ ಬರುವುದೂ ಇದೆ. ಬದುಕಿಗೆ ಸಂಬಂಧಿಸಿದಂತೆ ಕೆಲವೊಮ್ಮೆ ಅನಿವಾರ್ಯ,ಕೆಲವೊಮ್ಮೆ ಯಾವುದೋ ದುರಂತ ಇಂಥದ್ದಕ್ಕೆ ಕಾರಣವಿದ್ದೀತು ಅನಿಸಿದರೂ, ಇದು ಮೂಲದಲ್ಲಿ ನಾಸ್ಟಾಲ್ಜಿಯಾ ಇರಬಹುದೇನೋ ಅನಿಸಿದರೂ ನಾವಿದನ್ನು ಕತೆಯಾಗಿ ನೋಡುವ ಆಯಾಮ ಕೂಡ ಒಂದಿರುತ್ತದಲ್ಲ, ಅಲ್ಲಿ ಇದನ್ನು ಹೆಚ್ಚು ಸೂಕ್ಷ್ಮವಾಗಿ, ಸಂವೇದನೆಗಳಾಚೆ ಕೂಡ ಗಮನಿಸುವುದು ಸರಿ. ಎಸ್.ದಿವಾಕರರ ಕತೆಗಾರಿಕೆಯ ಪಟ್ಟುಗಳನ್ನು ಅರಿಯಲು ಅದು ಸಹಾಯಕವಾದೀತು.

ನಮ್ಮ ಅನೇಕ ಮುದುಕಿ ಮುದುಕರು ಕಾಲದೊಂದಿಗೆ ಹೆಜ್ಜೆ ಹಾಕುತ್ತಿಲ್ಲ ಎಂದು ನಮಗೆ ಅನಿಸುತ್ತಿದ್ದರೆ ಅದು ಅಂಥ ವಿಶೇಷವೇನಲ್ಲ. ಅನೇಕರಿಗೆ ಇವತ್ತಿನ ಆಧುನಿಕ ಉಪಕರಣಗಳ ಬಳಕೆ ಗೊತ್ತಿಲ್ಲ, ಕಲಿಯುವ ಆಸಕ್ತಿ-ಸಾಮರ್ಥ್ಯ ಇಲ್ಲ ಎಲ್ಲ ಸರಿಯೇ. ಆದರೆ ಕೆಲವರಿಗೆ ಕಂಪ್ಯೂಟರ್, ಇಂಟರ್ನೆಟ್ ಬಳಸುವುದನ್ನು ಕಲಿಯುವ ಆಸೆಯಿದೆ. ಹೊಸ ಹೊಸ ಬಗೆಯ ಮೊಬೈಲಿನ ಕುರಿತು ತಿಳಿಯುವ ಕುತೂಹಲವಿದೆ. ನಿತ್ಯವೂ ಹಾದಿಯಲ್ಲಿ ಸಿಗುವ, ಸರಿಯಾಗಿ ನಡೆಯುವುದಕ್ಕೂ ತ್ರಾಸ ಪಡುವ ವೃದ್ಧರ ಕುತೂಹಲ, ನಿರೀಕ್ಷೆಗಳನ್ನು ಗಮನಿಸಿದಾಗ ಅವರ ಜೀವನ ಪ್ರೀತಿ, ಬದುಕು ಅವರಿಗೆ ಎಷ್ಟು ಸುಂದರವಾಗಿ ಕಂಡಿರಬಹುದೆನ್ನುವ ಕಲ್ಪನೆ, ಅವರ ಬದುಕಿನ ಹಂಬಲ ಉತ್ಸಾಹ ಮೂಡಿಸುತ್ತದೆ. ಅದೇ ರೀತಿ, ಇದ್ದಾಗ ಇದ್ಧಾಂಗ ಬದುಕುವುದಕ್ಕೆ ನಿರಾಕರಿಸಿ ರಾಜೀನಾಮೆ ಎಸೆದು ಸತ್ತಂತೆ ಬದುಕುವ ನಿರ್ಧಾರಕ್ಕೆ ಬಂದ ಜೀವಗಳು ನಿಶ್ಚಿತವಾಗಿಯೂ ಋಣಾತ್ಮಕ ಧೋರಣೆಯೊಂದನ್ನು ಸ್ಫುರಿಸುತ್ತಿರುತ್ತಾರೆ. ಕಾಲನ ಯಾವ ನಿಷ್ಕರುಣಿ ಹೊಡೆತ ಇವರನ್ನು ಇಂಥ ಮನಸ್ಥಿತಿಗೆ ತಳ್ಳಿದ್ದರೂ ಅದನ್ನು ಇವರು ಮೆಟ್ಟಿ ನಿಂತು ನಗುವುದು ಸಾಧ್ಯವಾಗಿದ್ದಿದ್ದರೆ ಎಂದು ಅನಿಸಿಯೇ ಅನಿಸುತ್ತದೆ.

ಆದರೆ ಹಾಗೆ ಅನಿಸುವುದು ಸಾಕಾಗುವುದಿಲ್ಲ. ಇವರ ಬದುಕಿನ ನಿರಾಕರಣಕ್ಕೆ ತಿಳಿದೋ ತಿಳಿಯದೆಯೋ ನಾವೂ ಕಾರಣರಾಗಿರುವುದು ಸಾಧ್ಯವಿದೆ. ಮನುಷ್ಯ ಸಹಜವಾಗಿಯೇ ತನ್ನನ್ನು, ತನ್ನ ನೋವನ್ನು-ಖುಶಿಯನ್ನು ಪ್ರಕಟಪಡಿಸಲು, ತನ್ಮೂಲಕ ಒಂದಿಷ್ಟು ಮಂದಿಗೆ ತಾನು ತಲುಪಲು, ತನ್ನನ್ನು ತಾನು ಹಂಚಿಕೊಳ್ಳಲು ಬಯಸುತ್ತಾನೆ. ಆತ್ಮ-ಪರಮಾತ್ಮ ಪರಿಕಲ್ಪನೆಯನ್ನು ಬಳಸಿ ಹೇಳುವುದಾದರೆ ಈ ಭೂಮಿಯ ಮೇಲಿನ ಪ್ರತಿಯೊಂದು ಆತ್ಮವೂ ಬಿಡಿಬಿಡಿಯಾಗಿದ್ದರೆ ಅದು ಒಂದು ದೊಡ್ಡ ಲಾಡನ್ನು ಉಂಡೆಯಾಗಿ ಕಟ್ಟುವ ಮೊದಲಿನ ಸ್ಥಿತಿಯೆಂದು ತಿಳಿಯಬಹುದು. ಲಾಡಿನ ಸಿಹಿ ನಿಜಕ್ಕೂ ನಮ್ಮ ಅನುಭವಕ್ಕೆ ಬರುವುದು ಅದನ್ನು ಉಂಡೆಯಾಗಿ ಕಟ್ಟಿದಾಗಲೇ. ಹಾಗೆ ಬಿಡಿ ಬಿಡಿಯಾದ ಆತ್ಮಗಳು ಒಂದೆಡೆ ಪರಸ್ಪರ ಅನುಬಂಧದಲ್ಲಿ ಒಂದುಗೂಡಿದಾಗಲೇ ಬದುಕಿನ ರುಚಿ ಹೆಚ್ಚುವುದು, ಸ್ವಾರಸ್ಯ ಮೂಡುವುದೂ. ಹಾಗೆ ಬಿಡಿ ಬಿಡಿ ಆತ್ಮಗಳು ಸೇರಿ ‘ಪರಮ ಆತ್ಮ’ವಾಗುವುದೂ. ಈ ಅರ್ಥದಲ್ಲಿ ಈ ನಿರಾಕರಣದ ಮಾರ್ಗ ಆಯ್ದುಕೊಂಡ ಆತ್ಮಗಳು ಎಂದಿಗೂ ಬೆರೆಯಲು ಒಪ್ಪುವುದಿಲ್ಲ. ಅವು ಬಿಡಿಯಾಗಿ, ಒಂಟಿಗೊಂಡು, ಶೇಷ ಜಗತ್ತನ್ನೇ ನಿರಾಕರಿಸಿ ಒಳಸೇರಿಕೊಳ್ಳುತ್ತವೆ. ಇದು ಒಂದರ್ಥದ ನಿಜಸಾವು. ಸಾವಿಗಿಂತಲೂ ಘೋರವಾದದ್ದು, ಆತ್ಮಹತ್ಯೆಗಿಂತಲೂ ಕೊಳಕಾದ, ಹೆಚ್ಚಿನದಾದ ಹತ್ಯೆಗೆ ಸಮಾನವಾದದ್ದು. ಮತ್ತು ಇವರಿಂದ ತಿರಸ್ಕರಿಸಲ್ಪಟ್ಟ ಶೇಷ ಜಗತ್ತಿನಲ್ಲಿ ನಾವು ನೀವೆಲ್ಲ ಇದ್ದೇವೆ ಎಂಬುದನ್ನು ಕೂಡ ಮರೆಯಲಾಗದು.

ದಿವಾಕರರ ಒಬ್ಬ ಅಹಲ್ಯಾಬಾಯಿ, ಕೋದಂಡಪಾಣಿಯ ಜೀವನಕ್ರಮದ ಆಯ್ಕೆ ಏನಿದೆ ಅದರ ಹಿಂದೆ ದಾರುಣವಾದ ಕಹಿ ಇದೆ. ಈ ಜೀವನ ವಿಮಖಿಯಾದ, ಜೀವ ವಿರೋಧಿಯಾದ ಮತ್ತು ಜೀವನ ಪ್ರೀತಿ ಕಳೆದುಕೊಂಡವರ ಕತೆಯನ್ನು ಆ ಎಲ್ಲ ನಿಂತು ಹೋದ ನೀರಿನ ವಿವರಗಳಲ್ಲಿ ಹೇಳುವುದು ಕಷ್ಟ. ಇವರಿಗೆ ಬದುಕು ಅರ್ಥಹೀನವೂ ನಿರರ್ಥಕವೂ ಅನಿಸಿದ ಮೇಲೆಯೇ ಹೀಗೆ ಇದ್ದರೂ ಸತ್ತಂತೆ ಬದುಕುವುದು ಸಾಧ್ಯವಾಗಿರಬೇಕು. ಈ ಕತೆಗಳನ್ನು ಓದುತ್ತಿದ್ದಂತೆಲ್ಲ ಅಹಲ್ಯಾಬಾಯಿಯನ್ನು, ರುಕ್ಮಿಣಮ್ಮನನ್ನು ಅಥವಾ ಜಾನಕಮ್ಮನನ್ನು ಹೊರಳು ದಾರಿಯೊಂದು ಇದಿರುಗೊಳ್ಳುವುದು ಸಾಧ್ಯವೇ ಇರಲಿಲ್ಲವೆ ಎಂಬ ಹಳಹಳಿಕೆ ಇಲ್ಲಿನ ಒಂದೆರಡು ಕತೆಗಳಲ್ಲಿ ಬರುವ ನಿರೂಪಕಿಯಂತೆ ನಮಗೂ ಅನಿಸಿಯೇ ಅನಿಸುತ್ತದೆ. ಅದಕ್ಕಿಂತಲೂ ಹೆಚ್ಚಿನದ್ದೆಂದರೆ, ನಮ್ಮದೆ ಊರಿನಲ್ಲಿ, ಬೀದಿಯಲ್ಲಿ ಇಂಥ ಒಂದು ಜೀವ, ಮನೆ ಕೂಡ ಇರುವುದು ಸಾಧ್ಯವಿದೆ ಎನ್ನುವುದು. ದಿವಾಕರ್ ಅವರ ಕತೆಗಳು ನಮ್ಮನ್ನು ಅಂಥವರತ್ತ ಸ್ಪಂದಿಸುವಂತೆ ಮಾಡಿವೆ. ಒಳ್ಳೆಯ ಕತೆಯೊಂದು ಇದಕ್ಕಿಂತ ಹೆಚ್ಚಿನದೇನನ್ನು ಮಾಡಬಹುದು? ಅದು ನಮ್ಮನ್ನು ಮತ್ತು ನಮ್ಮ ಪುಟ್ಟ ಜಗತ್ತಿನ ಮಂದಿಯನ್ನು ನಮ್ಮ ಮೂಲಕವೂ ಬದುಕಿಗೆ ಆಹ್ವಾನಿಸಿದರೆ, ಬದುಕಿನ ಸವಿಯಾದ ಮುಖವನ್ನು ತೋರಿಸಿದರೆ ಸಾಕಷ್ಟಾಯಿತು!

ಕತೆಯಾಗಿ ದಿವಾಕರ್ ಅವರು ಇಲ್ಲಿ ನಿಭಾಯಿಸುವ ನಿರೂಪಣೆಯ ಕ್ರಮ ಕೂಡ ಗಮನಾರ್ಹವಾಗಿದೆ. ಅದು ಕಟು ವಾಸ್ತವದ facts ನಿರೂಪಿಸುತ್ತಲೇ ಒಬ್ಬ ಸಾಮಾನ್ಯ ನೋಡುಗನ (ಸಾಧಾರಣವಾಗಿ ಊರ ಮಂದಿ) ಲಘುಧಾಟಿ ಎರಡರ ಸಂತುಲಿತ ಪಾಕದಂತಿರುವುದರಿಂದಲೇ ಈ ಕತೆಗಳು ವಸ್ತುವಿನ ಜಡತ್ವದ ಭಾರವಿಲ್ಲದೆ ಆಕರ್ಷಕವಾಗಿವೆ. ಎಸ್. ಸುರೇಂದ್ರನಾಥರ ಕಥಾಸಂಗ್ರಹ ನಾತಲೀಲೆಯಲ್ಲಿ ನಾವು ಕಾಣುವ ಕಪ್ಪು ಹೊಗೆಹಿಡಿದ ಮನೆಯೊಳಗಿನ ಗೊಡ್ಡು ವೈದಿಕ ಕರ್ಮಠರಂತೆ ಭಾಸವಾಗುವ ಕುರುವಿನ ಗುಲಾಮ ಕತೆಯ ಸೀತಾರಾಮ ಶಾಸ್ತ್ರಿಗಳು, ನಾತಲೀಲೆಯ ಮಾರುತಿರಾವ್ ತುಕಾರಾಮ್ ಗಾಢವೇ ಅಲಿಯಾಸ್ ಹುರಗಡಲೀ ಮೇಷ್ಟ್ರು, ಮಾತು ಮಾತಿಂದೇ ಅವನ ಕೊಂದಿಹರು ಕತೆಯ ಶ್ರೀಪತಿ ತೆರಗುಂಡಿ, ಗುಪ್ತ ಸಮಾಲೋಚನೆ ಕತೆಯ ಮದನಪಲ್ಲಿ ಭವಾನಿಶಂಕರ ಬೋಧರಾಯ ಸುಬ್ರಮಣ್ಯ ಶರ್ಮ ಮತ್ತು ಅವನ ಹೆಂಡತಿ ಅನುಸೂಯ; ಅಥವಾ ಅಶೋಕ ಹೆಗಡೆಯವರ ಕಥಾಸಂಕಲನ ಒಂದು ತಗಡಿನ ಚೂರು ಕೃತಿಯ ದೂರ ಸಮುದ್ರದ ಕಾಡು ಕತೆಯ ಉಮಾಪತಿ, |ವೆಂಕಟಸುಬ್ಬಯ್ಯ ರಾಮೋಜಿ ಬಾಳಾ, ಪಿ.ಎಚ್.ಡಿ. ಮತ್ತು ಗಡಿಯಾರ ಗೋಪುರದ ಇತಿಹಾಸವು ಕತೆಯ ವೆಂಕಟಸುಬ್ಬಯ್ಯ ಮುಂತಾದ ಪಾತ್ರಗಳನ್ನು ಇಲ್ಲಿ ನೆನೆಯಬಹುದು. ಇವರುಗಳು ಅನುಸರಿಸುವ ಲಘು ವೈನೋದಿಕ ಧಾಟಿಯನ್ನು ಎಸ್.ದಿವಾಕರ್ ಪೂರ್ತಿಯಾಗಿ ಅನುಸರಿಸುವುದಿಲ್ಲವಾದರೂ ದಿವಾಕರರ ಕತೆಯ ನಿರೂಪಣೆ ಕೂಡ ವಿನೋದದ ಒಂದು ಎಳೆಯನ್ನು ಇರಿಸಿಕೊಂಡೇ ಸಾಗುತ್ತದೆ ಎಂಬುದು ಗಮನಾರ್ಹ. ಕೊನೆಯ ಎರಡು ಕತೆಗಳ ನಿರೂಪಕಿಯರಾದ ವಾರಿಜಾ ಮತ್ತು ವೈದೇಹಿಯರು ಕೂಡಾ ತಮ್ಮ ನಿರೂಪಣೆಯಲ್ಲಿನ ನವಿರು ಧಾಟಿಯಿಂದಲೇ ಇದನ್ನು ಸಾಧಿಸುತ್ತಾರೆ ಎಂಬುದು ನಿಜ.

ಬಿಳಿಯ ಹೂಗಳ ಕವಿತೆ ಕತೆ ಕೊಂಚ ಭಿನ್ನ ಧಾಟಿಯದು. ಇಲ್ಲಿನ ಪ್ರಧಾನ ಪಾತ್ರಗಳು ಮೂರು ದಂಪತಿಗಳದ್ದು. ಅವರು ರಾಮಚಂದ್ರ ಮತ್ತು ಮಾಲಿನಿ, ತಿರುವೇಂಗಡಂ ಮತ್ತು ಸುಬ್ಬುಲಕ್ಷ್ಮಿ ಹಾಗೂ ಗೇಬ್ರಿಯಲ್ ಮತ್ತು ರೋಸಿ. ಇವರಲ್ಲದೆ ಜಗದಾಂಬಾಳ್ ಎನ್ನುವ ಒಂದು ಪಾತ್ರವೂ ಇದೆ. ಸಹಜವಾಗಿಯೇ ಇಲ್ಲಿ ಒಂದು ಬಗೆಯ ಸ್ಪರ್ಧೆ, ಹೋಲಿಕೆ ಮತ್ತು ಅನುಸಂಧಾನಗಳಿಂದಾಗಿಯೇ ಹುಟ್ಟಿಕೊಳ್ಳುವ ಅನುಮಾನ-ಅಸೂಯೆ ಮತ್ತು ದ್ವೇಷ ಕೂಡ ಪಾತ್ರಗಳಾಗಿ ಮೂಡಿಕೊಳ್ಳುತ್ತವೆ. ಕುಡಿತ-ಸದಾ ಜಗಳ ಇತ್ಯಾದಿಗಳಿಂದ ತೀರ ಕೆಳಮಟ್ಟದ ಜನ ಎಂದೇ ಮಾಲಿನಿಗೂ ಅನಿಸುವ ತಿರುವೇಂಗಡಂನ ಸಂಸಾರದಲ್ಲಿಯೂ ಮಾಲಿನಿಗೆ ಬೇಕನಿಸುವ ಸಂಗತಿಗಳಿವೆ. ಅದು ಮಕ್ಕಳ ಆಸೆ. ತಮಗೆ ಮಕ್ಕಳಾಗಿಲ್ಲ ಎನ್ನುವುದೇ ರಾಮಚಂದ್ರ-ಮಾಲಿನಿಯರ ದಾಂಪತ್ಯದ ಒಂದು ಕೊರತೆ ಬೆಳೆದು ನಿಲ್ಲುವುದು,ಮುಖ್ಯವಾಗಿ ಕಾಣುವುದು ಉಳಿದೆರಡು ದಾಂಪತ್ಯಗಳ ಸನ್ನಿಧಿಯಲ್ಲೇ. ಗೇಬ್ರಿಯಲ್‌ನ ಹೆಂಡತಿಯಂತಿರುವ ರೋಸಿ ಗರ್ಭಿಣಿಯಾಗುವುದು, ತಿರುವೇಂಗಡಂನ ಪತ್ನಿ ಯಾರೊಂದಿಗೋ ಓಡಿ ಹೋಗುವುದು ಎಲ್ಲ ಮಾಲಿನಿ ರಾಮಚಂದ್ರರ ದಾಂಪತ್ಯದ ಆಂತರಿಕ ವಲಯದಲ್ಲಿಯೂ ಹುಟ್ಟಿಸುವ ಕಸಿವಿಸಿಗಳು, ಸೂಕ್ಷ್ಮವಾಗಿ ಹಣಿಕಿಕ್ಕುವ ಕೊಂಕಿನ, ಎರಡಲಗಿನ, ವ್ಯಂಗ್ಯದ ಮಾತುಗಳಲ್ಲಿ ಅವು ಹಲ್ಲುಕಿರಿಯುವುದು ಇಲ್ಲಿ ಮುಖ್ಯವಾಗುತ್ತದೆ. ಕಥೆಯ ಕೊನೆಯಲ್ಲಿ ಬರುವ ಒಂದು ನಾಟಕೀಯ ಸನ್ನಿವೇಶ ಮನುಷ್ಯನ ಒಳಮನಸ್ಸಿನ ಹುಚ್ಚಾಟಗಳು, ಅವುಗಳ ಅರಿವಿದ್ದೂ ಅವನು ಸೋಗು ಮಾಡುವ ಅವನ ನಾಗರೀಕ ವೇಷ-ಸಭ್ಯತೆಯ ನಾಟಕಗಳು, ಇವುಗಳೆದುರು ಬಾಗಿಲಲ್ಲಿ ನಿಂತ ಮಾಲಿನಿಯ ನಿಟ್ಟುಸಿರು - ಒದಗಿಸಿದ ನೋಟ ತುಂಬ ಅರ್ಥಪೂರ್ಣವಾಗಿ ಮನಸ್ಸಿಗಿಳಿಯುತ್ತದೆ.

ಈ ಕತೆಯನ್ನು ವಿವೇಕ ಶಾನಭಾಗರ ಅಂಕುರ ಸಂಕಲನದ ಲಗ್ಗೆ ಮತ್ತು ಪರಸ್ಪರ ಕತೆಗಳೊಡನೆ ಹೋಲಿಸಿ ನೋಡುವುದು ಕೂಡ ಸಾಧ್ಯವಿದೆ. ಅಲ್ಲಿಯೂ ದಾಂಪತ್ಯಕ್ಕೆ ಹೊರಗಿನ ಒಂದು ವ್ಯಕ್ತಿ ಒದಗಿಸುವ ಸವಾಲು ಇದೇ ಬಗೆಯದಾಗಿರುವುದು ಕುತೂಹಲಕರ.

ಅಂತರಾಳದಲ್ಲಿ ನಿಂತ ನೀರು ಕತೆಯ ಎಸ್ ಮೃತ್ಯುಂಜಯ ಹಿಂದಿನ ಸಂಕಲನದ ಮೃತ್ಯುಂಜಯ ಕತೆಯ ಮೃತ್ಯುಂಜಯನೇ ಇರಬಹುದೆನ್ನಿಸಿ ಅದೇ ಕತೆಯ ಮುಂದುವರಿಕೆಯೇನಾದರೂ ಇಲ್ಲಿದೆಯೇ ಅನಿಸಿದರೆ ಅಚ್ಚರಿಯಿಲ್ಲ. ಆದರೆ ಅಂಥದ್ದೇನೂ ಇಲ್ಲ. ಇಲ್ಲಿನ ಕತೆ-ಅದರ ಗಮ್ಯವೇ ತೀರ ಭಿನ್ನವಾದದ್ದು. ಆದರೆ ಈ ಕತೆಗೂ ಎಸ್.ದಿವಾಕರರ ಮೊದಲ ಸಂಕಲನದ ಎರಡನೆಯ ಭಾಗದ ಮಾಂತ್ರಿಕ ವಾಸ್ತವವಾದದ ಕತೆಗಳಿಗೂ ಸಾಮ್ಯತೆಯಿದೆ. ಇಲ್ಲಿಯೂ ಬೆಳಿಗ್ಗೆ ಹಿಂದೂ ಪತ್ರಿಕೆಯಲ್ಲಿ ಓದಿದ ಬರದ ವಾರ್ತೆಯನ್ನೇ ಮಾನಸಿಕವಾಗಿ ಹಿಂಬಾಲಿಸುವ ಮೃತ್ಯುಂಜಯ ಹೋಟೇಲ್ ರೂಮಿನ ನದಿಯ ಚಿತ್ರಪಟವೊಂದರ ಮೂಲಕವೇ ಆ ನದಿಗಿಳಿದು, ಅಲ್ಲಿದ್ದ ದೋಣಿಗೆ ಹುಟ್ಟು ಜೋಡಿಸಿ ಇನ್ನೊಂದು ತೀರಕ್ಕೆ ಹೋಗಿ ಬರದಿಂದ ಕಂಗಾಲಾದ ಹುಡುಗನೊಬ್ಬ ಇಲಿಯನ್ನು ಸುಟ್ಟು ತಿನ್ನುವುದನ್ನೂ, ಪತ್ರಕರ್ತನಂತಿರುವವನೊಬ್ಬ ಅದರ ಫೋಟೋ ತೆಗೆಯುವುದನ್ನೂ ಒಮ್ಮೆಗೇ ಕಂಡು ಕಂಗಾಲಾಗಿ ಮರಳಿ ಹೋಟೆಲಿನ ರೂಮಿಗೆ ಬರುವುದರೊಳಗೆ ನಾಲ್ಕು ದಿನಗಳಾಗಿರುತ್ತವೆ! ಮೃತ್ಯುಂಜಯ ಕತೆಯಲ್ಲೂ ಇದೇ ರೀತಿ ಆಗುತ್ತದೆ. ಅಲ್ಲಿ ಸತ್ತ ದೇಹದ ಡಿಸೆಕ್ಷನ್ ನಡೆಸುವ ಹಂತದಲ್ಲಿ ಆ ದೇಹದ ಚರಿತ್ರೆಯನ್ನು, ಕತೆಯನ್ನು ಶೋಧಿಸುವ ಸ್ವಾಮಿನಾಥನ್ ಪೋಲೀಸು-ತನಿಖೆ ಎಂದೆಲ್ಲ ತೀರ ಕೈಮೀರಿದ ಹಂತದಲ್ಲಿ ಸ್ವತಃ ಹಾಸಿಗೆಯಲ್ಲಿ ಮಲಗಿದಲ್ಲೆ ಕನವರಿಸುತ್ತಿರುವುದರ ಮೂಲಕ ಸನ್ನಿವೇಶದಿಂದಲೇ ಮುಕ್ತನಾಗುತ್ತಾನೆ! ವಾಸ್ತವ ಜಗತ್ತಿನ ದುರಂತದ ವಾರ್ತೆಯೂ ಕೂಡ ಸುಪ್ತ ಮನಸ್ಸಿನ ಸಂವೇದನೆಗಳಲ್ಲಿ ನಿಜದ ಅನುಭವವಾಗುವ, ಮನಸ್ಸು ಅದಕ್ಕೆ ಸಾಕ್ಷಿಯಾಗುವ, ಒಂದು ಬಗೆಯ ಹೊಣೆಗಾರಿಕೆ ತೋರುವ ಮನೋಲೋಕದ ಅಂತರ್ಗತ ಸಂಬಂಧ ಈ ಕತೆಯಲ್ಲೂ ಕಾಣಸಿಗುತ್ತದೆ.

ಮುರುಗಭೂಪತಿಯ ಮಗ: ಒಂದು ಕತೆ ಮತ್ತು ಪ್ರಶ್ನೆ ಪತ್ರಿಕೆ ಒಂದು ವಿನೂತನ ಬಗೆಯ ಕತೆ. ಒಂದರ್ಥದಲ್ಲಿ ಇದು ಕೂಡ ಕೆಸರಲ್ಲಿ ಕಾಲಿಟ್ಟು ಕೊನೆಗೆ ಅದರಲ್ಲೇ ಹೂತು ಹೋದವರ ಕತೆಯೇ. ಮುರುಗಭೂಪತಿಯ ಮಗ ಕೆಲಸಕ್ಕೆಂದು ಸೇರಿದ ಜಾಗ ಅಂಥದ್ದೇ. ಪೋಲೀಸು, ತನಿಖೆ, ಕೋರ್ಟು, ಕಾನೂನುಗಳ ನಡುವೆ ಪೋಲೀಸ್ ಕಮೀಷನರ್‌ಗೆ ಸಹಜವಾಗಿ ಬರಬಹುದಾದ ಸಿಟ್ಟು ಬಂದದ್ದೇ ಒಂದು ದುರಂತದ ಸರಮಾಲೆಗೆ ಕಾರಣವಾಗುವುದಾದರೆ ತಪ್ಪು ಯಾರದೆಂದು ಹೇಳುವುದು? ಈ ಕತೆಯ ಕೊನೆಯಲ್ಲಿ ಒಂದು ಪ್ರಶ್ನೆ ಪತ್ರಿಕೆಯಿದೆ. ಇಡೀ ಕತೆಯ ಸಂದಿಗ್ಧಗಳನ್ನು, ನಾವು ಬದುಕುತ್ತಿರುವ ಜಗತ್ತಿನ ಮೌಲ್ಯಗಳನ್ನು, ಮಾನವ ಸಹಜ ನೀಚತನದ ಹಂಬಲಗಳನ್ನು, ಅವನ ಸಾಚಾತನದ ತುಡಿತ ಮತ್ತು ಅದರ ನಾಟಕೀಯತೆಯನ್ನು ಈ ಕತೆಯ ಹಿನ್ನೆಲೆಯಲ್ಲಿ ಈ ಪ್ರಶ್ನಾವಳಿ ಪ್ರಶ್ನಿಸುತ್ತದೆ. ಬರಿಯ ಕತೆಯ ಓದು ಕೂಡ ನಮ್ಮ ನಿಮ್ಮಲ್ಲಿ ಹುಟ್ಟಿಸುವ ಪ್ರಶ್ನೆಗಳೇ ಇವು. ಆದರೆ ಕತೆಯೊಂದನ್ನು ಓದಿ ಅಷ್ಟೇ ಬೇಗ ಮರೆತು ಬಿಡಬಹುದಾದ ನಮ-ನಿಮಗೆ ಈ ಪ್ರಶ್ನಾವಳಿ ಕತೆಯೊಂದಿಗೆ ಇನ್ನೂ ಸ್ವಲ್ಪ ಹೆಚ್ಚು ಹೊತ್ತು ಉಳಿಯುವಂತೆಯೂ, ಆನಂತರವೂ ಪ್ರಶ್ನೆಗಳಿರುವುದರಿಂದ ಅವುಗಳ ಉತ್ತರದ ಬಗ್ಗೆ ಕೊಂಚ ತಲೆಕೆಡಿಸಿಕೊಳ್ಳುವಂತೆಯೂ ಒತ್ತಡ ಹಾಕುತ್ತದೆ.

ಇಲ್ಲಿ ಒಂದು ವಿಚಾರವನ್ನು ಸ್ವಲ್ಪ ತರ್ಕಕ್ಕೆ ಒಡ್ಡಬಹುದು. ಸುಳ್ಳು ಹೇಳುವವರಿಗೆ ಮಾತ್ರ ತರ್ಕದ ಅಗತ್ಯವಿರುತ್ತದೆ ಎಂದು ಗಿರೀಶ ಕಾರ್ನಾಡರ ಯಾವುದೋ ನಾಟಕವೊಂದರ ಪಾತ್ರ ಹೇಳುತ್ತದೆ. ಅದು ನಿಜವಿರಬಹುದು. ಆದರೆ ಇಲ್ಲಿ, ದಿವಾಕರರ ಕತೆಗಳಲ್ಲಿ ಮತ್ತೆ ಮತ್ತೆ ನಮಗೆ ಎದುರಾಗುವ ಸಂದಿಗ್ಧಗಳು ವಿಚಿತ್ರ ಬಗೆಯವು. ಈ ಸಂದಿಗ್ಧಗಳಿಗೆ ಬರೇ ಕೆಲವು ಮನುಷ್ಯರ ತಪ್ಪು ವರ್ತನೆ ಕಾರಣವಲ್ಲ. ಸನ್ನಿವೇಶ ಕೂಡ ಕಾರಣ. ಮತ್ತು, ಕೆಲವೊಮ್ಮೆ, ತಪ್ಪು ಹೆಜ್ಜೆ ಕೂಡ ಕಾರಣವಲ್ಲ, ಸರಿಯಾದ ಹೆಜ್ಜೆ ಕೂಡ ಕಾರಣ. ತಪ್ಪು ಯಾರದಿಲ್ಲಿ ವಿಧಿ ತಂದ ಬಾಳಿನಲ್ಲಿ ಎನ್ನಬಹುದಾದರೂ ತರ್ಕ ವಿಧಿಯನ್ನು ಒಪ್ಪಿಕೊಳ್ಳಲೇ ಬೇಕೆಂದಿಲ್ಲ. ಕ್ರೌರ್ಯದ ಅಲಮೇಲುವಿನ ಬದುಕನ್ನೇ ತೆಗೆದುಕೊಳ್ಳಿ, ಅಥವಾ ನೆಲೆ ಕತೆಯ ಜಯಾ, ಅನಾಥರು ಕತೆಯ ವೃದ್ಧ ದಂಪತಿಗಳು, ಮೃತ್ಯುಂಜಯ ಕತೆಯ ರಾಧಾ ....ಇವರೆಲ್ಲ ಮಾಡಿದ ತಪ್ಪಾದರೂ ಏನು? ಆದರೂ ಇವರೇಕೆ ಅನ್ಯಾಯಕ್ಕೆ, ಸಂಕಟಕ್ಕೆ, ಮನೋವೇದನೆಗೆ ಮತ್ತು ಕೆಲವೊಮ್ಮೆ ಸಾವಿಗೆ ತುತ್ತಾಗುತ್ತಾರೆ ಎಂದರೆ ಉತ್ತರವಿಲ್ಲ. ಬದುಕು ತಂದ ಅನಿವಾರ್ಯಗಳಿಗೆ, ದತ್ತಗಳಿಗೆ, ಸಂದಿಗ್ಧಗಳಿಗೆ ತಾರ್ಕಿಕ ಉತ್ತರಗಳಿಲ್ಲ. ಇದ್ದಂತೆ ಕಂಡರೂ ಅವು ಶಾಶ್ವತ ಸತ್ಯಗಳಲ್ಲ. ಹೀಗೆ ಈ ಉಸಿರುಗಟ್ಟಿಸುವ ಸಂದಿಗ್ಧ ಎಸ್.ದಿವಾಕರರ ಹೆಚ್ಚಿನ ಕತೆಗಳಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಎನ್ನುವುದು ನಿಜವಾದರೂ ಅವೇ ಆ ಕತೆಯ ಚೌಕಟ್ಟು ನಿರ್ಮಿಸುವುದಿಲ್ಲ, ಅವನ್ನು ಮೀರಿ ಅವರ ಪಾತ್ರಗಳು-ಕಥಾನಕ ಬೆಳೆಯುತ್ತವೆ ಎನ್ನುವುದು ಗಮನಿಸಬೇಕಾದ ಅಂಶ.

ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಕತೆಯ ಅಹಲ್ಯಾಬಾಯಿ ಮತ್ತು ಅವಳ ಮಗಳು ಕಮಲಾ ಕ್ರೌರ್ಯದ ಅಲಮೇಲುವಿನಂತೆಯೇ ಬಹುಕಾಲ ನಮ್ಮ ಮನಸ್ಸಿನಲ್ಲಿ ನಿಂತುಬಿಡುವುದರಲ್ಲಿ ಸಂಶಯವಿಲ್ಲ. ಈ ಕತೆಯ ಪೂರ್ವಾರ್ಧ ಊರಿನವರ ಗಮನಿಸುವಿಕೆಯ ಧಾಟಿಯನ್ನೇ ಅನುಸರಿಸಿ ನಿರೂಪಿಸಲ್ಪಟ್ಟಂತಿದೆ. ಇದೆಲ್ಲ ಹೇಗಿದೆಯೆಂದರೆ ವಿವೇಕ ಶಾನಭಾಗರ ಕಾರಣ ಕತೆಯಲ್ಲಿ ಮುಕ್ತಾಳನ್ನು ಗಮನಿಸುವ ಮಂದಿ ನೆನಪಿಗೆ ಬರುತ್ತಾರೆ. ನಿಷ್ಕಾರಣವಾಗಿ ಒಂದು ಜೀವ ಇಡೀ ಊರಿನವರ ತೀರ್ಮಾನಗಳಿಗೆ ಬದ್ಧವಾಗಿ ಬದುಕಿದಂತೆ ಕಾಣಿಸುವ ಈ ಕತೆಗಳು ನಿಜವನ್ನೇ ಹೇಳುತ್ತಿವೆ. ಸಮಾಜದ ಗಮನಿಸುವಿಕೆಯಿಂದ ಮುಕ್ತರಾಗಿ ನಗರ ಸೇರಿಕೊಂಡು ಐಡೆಂಟಿಟಿಯನ್ನು ಕಳೆದುಕೊಳ್ಳ ಬಯಸುವ ಮನುಷ್ಯನ ಸುಪ್ತ ಆಶೆಗಳಿಗೆ ಇಲ್ಲಿ ನಮಗೆ ಸಮರ್ಥನೆ ದೊರಕಿದರೆ ಅಚ್ಚರಿಯಿಲ್ಲ! ಈ ಕಾರಣಕ್ಕೆ ನಿರೂಪಕರ ಪಾತ್ರವಹಿಸುವ ಈ ಊರಿನ ಮಂದಿ ಅಹಲ್ಯಾಬಾಯಿಯ ಬಗ್ಗೆ ಕರುಣೆ ಉಕ್ಕಿಸುತ್ತಾರೆ, ಸ್ವತಃ ತಮ್ಮ ಬಗ್ಗೆ ಇರಿಸುಮುರಿಸಿನ ಭಾವವನ್ನು ಕಾಣಿಕೆಯಾಗಿ ಪಡೆದರೂ!

ಕತೆ ಅಹಲ್ಯೆ ಪುಟ್ಟ ಹುಡುಗಿಯಾದ್ದಲ್ಲಿಂದ ತೊಡಗಿ ಅವಳ ಮದುವೆ, ವೈಧವ್ಯ, ಮಗಳ ಬೆಳವಣಿಗೆ, ಆ ಮಗಳ ಕುರಿತ ಪುಕಾರು, ಅದನ್ನು ನಿಭಾಯಿಸುವುದಕ್ಕಾಗಿಯೇ ಅವಳನ್ನು ದೂರದ ಹಾಸ್ಟೆಲ್ಲಿನಲ್ಲಿಟ್ಟು ಕಲಿಸುವ ನಿರ್ಧಾರಕ್ಕೆ ಬಂದು ಕೊನೆಗೆ ಒಂಟಿಯಾಗುವ ಅಹಲ್ಯೆಯವರೆಗೂ ಮುಂದುವರಿಯುತ್ತದೆ. ಅಹಲ್ಯಾಬಾಯಿ ಸ್ವತಃ ಎದುರಿಸುವ ಬದುಕಿನ ಅನೇಕ ತಲ್ಲಣಗಳಿಗೆ ಆಯಾ ಸಂದರ್ಭಾಗಳಲ್ಲಿ ಕಲ್ಲಾಗಿಯೇ ಪ್ರತಿಕ್ರಿಯಿಸಿದ ವಿವರ ಕತೆಯಲ್ಲಿ ನಮಗೆ ಸಿಗುತ್ತದೆ. ಗಂಡನ ಸಾವು, ನಂತರ ಮಗಳ ವಿಯೋಗ ಇತ್ಯಾದಿ. ಆದರೆ ಕತ್ತಲಾದ ಮೇಲೆ ಮಣ್ಣು ಹೊತ್ತೊಯ್ಯುವುದು, ಬಸ್ಸಿನಲ್ಲಿ ತೊಟ್ಟಿಲು ಇಳಿಯುವುದು, ಊರ ಅಂಗಡಿಯಿಂದ ಗಿಲಕಿಯನ್ನು ಕೊಂಡೊಯ್ಯುವುದು ಇತ್ಯಾದಿ ವಿವರಗಳು ಹುಟ್ಟಿಸುವ ಕುತೂಹಲ ಮಾತ್ರ ಕರುಳು ಕಲಕುವ ಒಂದು ವಿದ್ಯಮಾನಕ್ಕೆ ನಮ್ಮನ್ನು ಮುಖಾಮುಖಿಯಾಗಿಸಿ ಅದುವರೆಗೂ ಅರ್ಥವಾಗದ ಅಹಲ್ಯಾಬಾಯಿಯ ಇನ್ನೊಂದು ಮುಖವನ್ನು ಏಕಾಎಕಿ ತೆರೆದಿಟ್ಟು ಓದುಗರನ್ನು ಕಂಗಾಲುಗೊಳಿಸುತ್ತದೆ ಮಾತ್ರವಲ್ಲ ವಿಚಿತ್ರ ತಲ್ಲಣಗಳನ್ನುಂಟು ಮಾಡುತ್ತದೆ. ಇದು ಒಂದು ಬಗೆಯಲ್ಲಿ ಅಲಮೇಲುವಿನ ದುರಂತವನ್ನೇ ಹೊಸದೇ ಆದ ರೀತಿಯಿಂದ ನಮ್ಮ ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ.

ಕತೆಯ ನಿರೂಪಣೆ ಒಂದು ಹಂತದ ನಂತರ ಸ್ವಲ್ಪ ಭಾಗ ಅಹಲ್ಯಾಬಾಯಿಯ ಸ್ವಗತದ ಧಾಟಿಯಲ್ಲೂ, ಉಳಿದರ್ಧ ಜನಾರ್ದನನ ಮಾತುಗಳಲ್ಲಿಯೂ ಇರುವುದು ಕೂಡ ಗಮನಾರ್ಹ. ಅಹಲ್ಯಾಬಾಯಿಗೆ ಒಂದಿಷ್ಟಾದರೂ ಮಾತಿಗೆ ಅವಕಾಶ ನೀಡಿರುವುದು ಮತ್ತು ಕಮಲೆಯ ಬದುಕಿನ ಬಗ್ಗೆ ಒಂದಿಷ್ಟಾದರೂ ಊರ ಹೊರಗಿನ ಒಡನಾಟವುಳ್ಳ ಜನಾರ್ದನ ಹೇಳಿರುವುದು ನಿಜಕ್ಕೂ ಕತೆಯ ಚೌಕಟ್ಟಿಗೆ ಅತ್ಯಂತ ಅಗತ್ಯವೇ ಆಗಿತ್ತು. ಇಲ್ಲವಾದರೆ ಕೊನೆಗೂ ಇದು ಅಹಲ್ಯಾಬಾಯಿಯ ಕುರಿತು ಊರಿನವರ ದೃಷ್ಟಿಕೋನವನ್ನಷ್ಟೇ ದಾಖಲಿಸುವ ಅಪಾಯವಿತ್ತು. ಅದು ಎಷ್ಟೆಂದರೂ ಪೂರ್ಣಚಿತ್ರವೊಂದನ್ನು ಕಟ್ಟಿಕೊಡುವುದು ಸಾಧ್ಯವಿರಲಿಲ್ಲ ಎಂಬ ಕಾರಣಕ್ಕೂ ಸರಿಯೇ.

ಅಲ್ಲೇ ಮುಂದಿನ ಕತೆ ಮುಗಿಯದಾಸೆಯ ಬಾಗಿಲು ಅಹಲ್ಯಾಬಾಯಿಯ ಕತೆಯ ಮುಂದುವರಿಕೆಯೇ ಆಗಿದೆ. ಒಂದು ವಿಧದಲ್ಲಿ ಈ ಕತೆ ಹೊಸತೇ ಆದ ಏನನ್ನೂ ಹೇಳದಿದ್ದಾಗ್ಯೂ ಇಲ್ಲಿ ಕಮಲೆಗೆ ಸಿಕ್ಕಿದ ಅಭಿವ್ಯಕ್ತಿ ಮತ್ತು ಅವಳದೇ ಕತೆ ಇದಾಗಿರುವುದು ಅಹಲ್ಯಾಬಾಯಿಯ ಗುಂಗಿನಲ್ಲೇ ಇರುವ ನಮಗೆ ಹೆಚ್ಚಿನ ಸಮಾಧಾನವನ್ನಂತೂ ನೀಡುತ್ತದೆ! ಆದರೆ ಕಾಂಪೌಂಡಿನಲ್ಲಿ ತೆರೆದ ಪುಟ್ಟ ಕಿಂಡಿ ಕಮಲೆಯ ಸ್ವಾತಂತ್ರ್ಯದ ಬಾಗಿಲಂತೆ ಕಂಡರೂ, ಅದು ಮುಗಿಯದಾಸೆಯ ಬಾಗಿಲೇ ಆಗಿರುವುದು ನಿಜವಾದರೂ ಕಮಲೆಯ ಬದುಕು ಕೂಡಾ ಹೋರಾಟ-ಸಂಘರ್ಷ ಮತ್ತು ಸತತ ಹೆಣಗಾಟಗಳದ್ದೇ ಆಗಿಬಿಡಬಹುದಾದ ಸಾಧ್ಯತೆಯಂತೆಯೂ ಕಾಣುವುದಲ್ಲವೆ?

ಮುಂದಿನ ಎರಡೂ ಕತೆಗಳು - ಹೇಗೆ ಬದುಕುವುದೋ ಯಾರಿಗೆ ಗೊತ್ತು ಮತ್ತು ನನಗೂ ನಿನಗೂ ಅಂಟಿದ ನಂಟು ಎರಡನ್ನೂ ನಮಗೆ ಹೇಳುತ್ತಿರುವಾಕೆ ಹೆಣ್ಣು. ಇದ್ದಕ್ಕಿದ್ದಂತೆ ವೈದೇಹಿಯವರ ನೆನಪು ಆವರಿಸಲು ಕಾರಣ ಬರೇ ನಮ್ಮನ್ನು ಈ ಎರಡೂ ಕತೆಗಳ ಓದು ಮುಗಿದದ್ದೇ ಅವರ ಮೊದಲ ಓದಿನ ಟಿಪ್ಪಣಿಯೊಂದು ಕಾಯುತ್ತಿರುವುದೇ ಇರಲಾರದು!

ಹೇಗೆ ಬದುಕುವುದೋ ಯಾರಿಗೆ ಗೊತ್ತು ಎಂಬ ಶೀರ್ಷಿಕೆಯನ್ನೇ ಗಮನಿಸಿದರೂ ಈ ಹಿಂದೆ ನಾವು ಗಮನಿಸಿದ ಸಂದಿಗ್ಧಗಳಿಗೆ ಹೊಣೆ ಯಾರು, ಕಾರಣ ಯಾರು ಎನ್ನುವ ಪ್ರಶ್ನೆಗಳೆದುರೇ ಮತ್ತೊಮ್ಮೆ ನಿಂತಂತೆ ಆಗುತ್ತದೆ. ಇಲ್ಲಿ ನಿರೂಪಿಸಲ್ಪಟ್ಟಿರುವ ಕತೆ ಕೂಡ ಭುವನಗಿರಿಯನ್ನೇ ತನ್ನ ಆಡೊಂಬಲವನ್ನಾಗಿರಿಸಿಕೊಂಡಿರುವಂಥದ್ದು. ಮೇಲ್ನೋಟಕ್ಕೆ ಹೀಗೇ ಕೆಲವು ಮುದುಕಿಯರ ಹಪಹಪಿಕೆಗಳ ಕಥಾನಕದಂತೆ ಕಾಣಿಸುವ ಇದನ್ನು ನಾವು ಕೊಂಚ ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ. ಇಲ್ಲಿ ಮೂರು ತಲೆಮಾರುಗಳ ಒಂದು ಸರಪಳಿ ಇದೆ. ನಿರೂಪಿಸುತ್ತಿರುವ ವಾರಿಜಾ, ಅವಳ ತಾಯಿ ಮತ್ತು ತಂದೆಯ ಅಕ್ಕ ರುಕ್ಮಿಣಮ್ಮ ಪ್ರತಿನಿಧಿಸುತ್ತಿರುವ ಮೌಲ್ಯಗಳು ಕೂಡ ಬೇರೆ ಬೇರೆ. ಎಚ್.ವೈ.ಶಾರದಾಪ್ರಸಾದರ ಮೊಮ್ಮಕ್ಕಳು ಹೇಳಿದ ಅಜ್ಜೀಕಥೆಯ ಮುದುಕಿಯನ್ನೇ ನೆನಪಿಸುವ ರುಕ್ಮಿಣಮ್ಮನ ಸ್ನಾನ, ಸಿಂಗಾರ, ಪೂಜೆಗಳಾಚೆ ಅವಳ ಮುಟ್ಟಿನ ಮತ್ತು ಸತ್ತಿರುವ ಗಂಡನ ಮೈವಾಸನೆಗಳ ಭ್ರಮೆ ವರ್ತಮಾನವನ್ನು ಚಾಚಿಕೊಂಡಿರುವುದು ಒಂದು. ಈ ಮುದುಕಿಯ ಮುಟ್ಟು ಅವಳಲ್ಲಿ ಕೊನೆಗೂ ಉಳಿದೇ ಹೋದ ಮಗುವಿನ ಆಸೆಯ ರೂಪಾಂತರ ಅನಿಸುವುದಿಲ್ಲವೇ? ಗಂಡ ಬೇರೆ ಯಾರೊಂದಿಗೋ ಸಂಪರ್ಕವಿಟ್ಟುಕೊಂಡಿರುವ ಸಂಗತಿ ತಿಳಿದಿದ್ದೆ ಅವನ ಮೈ ವಾಸನೆ ಸೂಸುತ್ತದೆ ಎಂದುಕೊಳ್ಳುವ ರುಕ್ಮಿಣಿಗೂ ಮುಂದೆ ನನಗೂ ನಿನಗೂ ಅಂಟಿದ ನಂಟು ಕತೆಯ ಜಾನಕಮ್ಮ ತನ್ನ ಪ್ರೀತಿಯ ಹುಡುಗನೊಂದಿಗೆ ಕನಸಿನಲ್ಲೇ ನಡೆಸುವ ಸಮಾಗಮದ ನಂತರ ಯೋಜನಗಂಧಿಯಾಗುವ ವಿಚಿತ್ರಕ್ಕೂ ಸಂಬಂಧವಿರುವಂತಿದೆಯಲ್ಲವೆ? ಇರಲಿ, ಚಿತ್ರಹಾರ ಕಾರ್ಯಕ್ರಮದಲ್ಲಿ ನಟಿಯರು ಅಂಡು ಅಲ್ಲಾಡಿಸಿ ಕುಣಿದಾಡುವುದನ್ನೂ ಆಕ್ಷೇಪಿಸುವ ವಾರಿಜಾಳ ತಾಯಿಯ ಭೂತಕಾಲದ ಸ್ಮೃತಿಗಳೊಂದಿಗಿನ ತಡಕಾಟ, ಸಂಘರ್ಷ ಮತ್ತು ವಿರೋಧಾಭಾಸಗಳ ಜಗತ್ತು ಇನ್ನೊಂದು. ಮದುವೆಗೆ ಮುನ್ನವೇ ಪ್ರಿಯಕರನೊಂದಿಗೆ ಓಡಾಡಿ ಸಾಹಸ ಮೆರೆದು ಈಗ ಮುದುಕಿಯ ಮುಟ್ಟಿನ ಭ್ರಮೆಯೆದುರೇ ತಾನು ಮುಟ್ಟಾಗದಿರುವುದನ್ನು ಅರಿವಿಗೆ ತಂದುಕೊಂಡು ಕಂಗಾಲಾಗುವ ವಾರಿಜಾ ಮತ್ತೊಂದು ತಲೆಮಾರನ್ನು ಪ್ರತಿನಿಧಿಸುತ್ತಿರುವಾಗಲೇ ಕತೆ ವಾರಿಜಾಗೂ ತಿಳಿದಿರದ ಕೆಲವೊಂದು ಪಾತ್ರಗಳನ್ನು (ಮುಕುಂದ) ಒಳಗೊಳ್ಳಬಹುದಾದ ಸಾಧ್ಯತೆಗಳತ್ತ ಮೊಗಮಾಡಿರುವುದನ್ನು ಕೂಡ ಗಮನಿಸಬಹುದು. ಇದೇ ಕಾಲಕ್ಕೆ ವಾರಿಜಾ ಪ್ರೀತಿಸಿದ ಮಹೇಶನ ತಾಯಿ ಕೂಡ ಸಂಪ್ರದಾಯಸ್ಥೆ, ಮಾತು ಕಡಿಮೆ, ಸಹಬಾಳ್ವೆಯ ಚಿಂತೆಯನ್ನು ಹುಟ್ಟಿಸುವ ಜೀವವಾಗಿರುವುದು ಅವಳ ಗಮನಕ್ಕೆ ಬಂದಿದೆ. ಇಲ್ಲಿ ಬದುಕುವ ಬಗೆಯ ಕುರಿತ ಗೊಂದಲದ ಮುಖಾಮುಖಿಯೊಂದು ತಲೆಮಾರುಗಳನ್ನು ಗಮನಿಸುತ್ತಲೇ ಹುಟ್ಟಿಕೊಂಡಿದೆ. ಯಾವತ್ತೂ ಇರುವ ಒಂದು ಗೊಂದಲವೇ ಇದಾದರೂ ಅದು ಹುಟ್ಟಿಕೊಳ್ಳುತ್ತಿರುವ ಸಂದರ್ಭ, ಕತೆಯ ಚೌಕಟ್ಟಿನಲ್ಲಿ ವಿಶೇಷವಾದದ್ದು.

ವಾರಿಜಾ, ನನ್ನ ಮೇಲೊಂದು ಕತೆ ಬರಿ, ಅದರಲ್ಲಿ ನನ್ನ ಮೀಸೆ ಇರಬಾರದು, ಮೊಣಕಾಲುದ್ದದ ಜಡೆ ಇರಬೇಕು ಎಂದೆಲ್ಲ ಆಸೆ ಪಡುವ ರುಕ್ಮಿಣಮ್ಮನ ಆಸೆ ಪೂರೈಕೆಗೋ ಎಂಬಂತೆ ಇಲ್ಲಿ ಜಾನಕಮ್ಮನ ಕತೆ ತೆರೆದುಕೊಳ್ಳುತ್ತಿದೆ, ಕತೆಯ ಹೆಸರು ನನಗೂ ನಿನಗೂ ಅಂಟಿದ ನಂಟು. ಜಾನಕಮ್ಮ ಕೂಡ ನಿರೂಪಕಿಯ ತಂದೆಯ ಅಕ್ಕ. ವೈದೇಹಿಯವರ ಒಂದು ಕತೆಯಲ್ಲೂ ಒಬ್ಬ ಮುದುಕಿ ನನ್ನ ಕತೆ ಬರಿ ಎಂದು ನಿರೂಪಕಿಯನ್ನು ಕೇಳಿಕೊಳ್ಳುವುದಿದೆ ಮತ್ತು ಇಲ್ಲಿನ ನಿರೂಪಕಿಯ ಹೆಸರು ಕೂಡ ವೈದೇಹಿಯೇ! ಇರಲಿ. ಅಹಲ್ಯಾಬಾಯಿಯ ಹಾಗೆ ಜಾನಕಮ್ಮ ಕೂಡಾ ಮಕ್ಕಳ ಗೊಂಬೆಗಳನ್ನು ಮಾಡುತ್ತಾಳೆ. ವ್ಯತ್ಯಾಸವಿಷ್ಟೇ, ಅಹಲ್ಯಾಬಾಯಿ ತನ್ನ ಮುದಿತನದಲ್ಲಿ ತಾನು ಕಳೆದುಕೊಂಡ ಮಗಳು ಕಮಲೆಯ ನೆನಪಿನಲ್ಲಿ, ಮಣ್ಣಿನಲ್ಲಿ ಬೊಂಬೆಗಳನ್ನು ಮಾಡುತ್ತಾಳೆ. ಜಾನಕಮ್ಮ ಬೊಂಬೆಗಳನ್ನು ಮಾಡುವುದು ಚಿಕ್ಕಂದಿನಲ್ಲಿ, ಬಟ್ಟೆಯ ತುಂಡುಗಳಿಂದ. ಅಹಲ್ಯಾಬಾಯಿ, ರುಕ್ಮಿಣಮ್ಮ, ವಾರಿಜಾಳ ಅಮ್ಮ ಎಲ್ಲರಿಗೂ ಆದಂತೆ ಕೊನೆಗಾಲದಲ್ಲಿ ಜಾನಕಮ್ಮನಿಗೂ ಭ್ರಾಂತಿ ಕವಿಯುತ್ತದೆ. ಮಂಗಳಮ್ಮನ ಕೈಯಲ್ಲಿರುವ ಬಳೆಯೊಂದು ಬಿಟ್ಟುಕೊಡುವ ಒಂದಿಷ್ಟು ಮಾತುಗಳ ಆಧಾರದಲ್ಲೇ ಹರಡಿ ಚಾಚಿಕೊಳ್ಳುವ ಜಾನಕಮ್ಮನ ಕತೆಯನ್ನು ನಾವು ನಿಜವೆಂದು ನಂಬಲೇ ಬೇಕಿಲ್ಲ. ಆದರೆ ಅಂಥ ಎಷ್ಟು ಸಣ್ಣಪುಟ್ಟ ಆಸೆಗಳು ಇಂಥ ಹಳೆಯ ಕಾಲದ ದೊಡ್ಡ ಬಂಗಲೆಯಂಥ ಮನೆಗಳಲ್ಲಿ ಕಮರಿರಬಹುದೋ ಎನ್ನುವುದನ್ನು ಯಾರೂ ಪ್ರಶ್ನಿಸಲಾರರು ಎನ್ನುವುದಂತೂ ನಿಜವೇ.

ಈ ಕತೆಯಲ್ಲಿ, ಕನಸಲ್ಲಿ ನಡೆಯುವ ಒಂದು ಸಮಾಗಮವಿದೆ. ಅಂದು ಜಾನಕಮ್ಮನ ಮೈಯಿಂದ ಪಸರಿಸುವ ಸುವಾಸನೆ ಇಡೀ ಮನೆಯನ್ನು, ಮನೆಯವರನ್ನು ಆವರಿಸಿ ಒಂಭತ್ತು ತಿಂಗಳು ಇಪ್ಪತ್ತೊಂದು ದಿನ ಕಾಲ ಹಾಗೆಯೇ ಘಮಘಮಿಸುತ್ತಿರುತ್ತದೆ. ಶ್ರೀಕೃಷ್ಣನನ್ನು ಗರ್ಭದಲ್ಲಿ ಧರಿಸಿದಾಗ ದೇವಕಿಯ ದೇಹವೂ ವಿಚಿತ್ರ ಕಾಂತಿಯಿಂದ ಪ್ರಕಾಶಮಾನವಾಗಿ ಕಂಗೊಳಿಸುತ್ತಿತ್ತಂತೆ! ಇಲ್ಲಿ ಪರಿಮಳದ ಈ ವಿವರಗಳನ್ನು ಓದುವಾಗ ಯಾರಿಗಾದರೂ ಎಸ್.ಸುರೇಂದ್ರನಾಥರ ಎನ್ನ ಭವದ ಕೇಡು ಕಾದಂಬರಿಯ ನೆನಪಾಗದಿದ್ದೀತೆ?

ಬದುಕು ನಮಗೆ ಇದ್ದಕ್ಕಿದ್ದ ಹಾಗೆ ಜೀವನ ನಾಟಕದ ರಂಗಸ್ಥಳಕ್ಕೆ ದಬ್ಬಿ ಬಿಟ್ಟಿದೆ. ಕೈಯಲ್ಲಿ ಯಾವ ಸ್ಕ್ರಿಪ್ಟ್ ಇಲ್ಲ. ರಿಹರ್ಸಲ್ ಇರಲಿಲ್ಲ. ಪ್ರಾಮ್ಟಿಂಗ್ ಕೂಡ ಎಲ್ಲರಿಗೂ ಇರುವುದಿಲ್ಲವಲ್ಲ! ಇಲ್ಲಿ ಹೇಗೆ ಬದುಕಬೇಕು ಎನ್ನುವುದಕ್ಕೆ ಮಾದರಿಗಳಿಲ್ಲ. ಇದ್ದರೂ ಅವನ್ನು ಅರಿತು ನಮಗೆ ಸರಿಯಾದುದನ್ನು ಅರಿತುಕೊಳ್ಳುವುದರಲ್ಲಿ, ಆರಿಸಿಕೊಳ್ಳುವಷ್ಟರಲ್ಲಿ ನಾಟಕದ ಬಹಳಷ್ಟು ಭಾಗ ಮುಗಿದೇ ಹೋಗಿರುತ್ತದೇನೋ! ಇಂಥ ಸಂದಿಗ್ಧದಲ್ಲಿ ಎಸ್.ದಿವಾಕರರ ಈ ಸಂಕಲನದ ಅನೇಕ ಪಾತ್ರಗಳು ಬಂಧಿಗಳಂತೆ, ಕೈ ಹಿಡಿದು ನಡೆಸೆನ್ನನು ಮುಸುಕಿದೀ ಮಬ್ಬಿನಲಿ ಎಂದು ಮೊರೆಯಿಡುತ್ತಿರುವಂತೆ ಕಾಣಿಸುತ್ತವೆ. ವಿಧಿಯೋ, ಹಣೆಬರಹವೋ, ಸ್ವಯಂಕೃತ ಅಪರಾಧವೋ ಅಹಲ್ಯಾಬಾಯಿ, ಕಮಲೆ, ಜಾನಕಮ್ಮ, ರುಕ್ಮಿಣಮ್ಮ ಮತ್ತೂ ಹಲವರ ಬದುಕು ಹೇಗೆ ಹೇಗೋ ಸಾಗಿತು, ಎಡರು ತೊಡರುಗಳ ನಡುವಿಂದ ಸಾಗಿತು. ಇವರ ಬದುಕಿನ ಒಟ್ಟು ಚಿತ್ರ ಕೊಡುವ ದರ್ಶನವಾವುದು?

ಇಲ್ಲ, ದರ್ಶನ, ಒಳನೋಟ ಯಾವುದೂ ಇಲ್ಲಿಲ್ಲ. ಇದು ಬದುಕು, ಇದು ಜೀವ, ಇದುವೆ ಜೀವನ ಅಷ್ಟೆ. ಇದನ್ನು ಇನ್ನಷ್ಟು ಹಿಂಜಬೇಕಿಲ್ಲ, ಹಿಂಜಿ ತತ್ತ್ವದ ಹೊರೆ ಹೊರಿಸುವುದು ಕೂಡ ಬೇಕಿಲ್ಲ. ಇಲ್ಲಿರುವ ದರ್ಶನವೊಂದೇ, ಹೇಗೆ ಬದುಕುವುದೋ ಯಾರಿಗೆ ಗೊತ್ತು ಎನ್ನುವ ಪ್ರಶ್ನೆ ನಿರಂತರವಾಗಿ ಹುಟ್ಟಿಸಬಲ್ಲ ದರ್ಶನ. ಯಾಕೆಂದರೆ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ, ಅಲ್ಲವೆ? ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಎನ್ನುತ್ತ ಕಥೆಯ ಕೊನೆಯಲ್ಲಿ ವೈದೇಹಿ ಕೂಡ ಇದನ್ನೇ ಹೇಳುತ್ತಾಳೆ.

ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ (ಕಥಾಸಂಕಲನ)
ಅಂಕಿತ ಪ್ರಕಾಶನ, ಬೆಂಗಳೂರು
ಪುಟಗಳು: 120
ಬೆಲೆ: ಎಪ್ಪತ್ತು ರೂಪಾಯಿಗಳು.

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, November 1, 2009

ಎಸ್.ದಿವಾಕರ್ ಕಥಾಜಗತ್ತು: ಇತಿಹಾಸ

ನಾಪತ್ತೆಯಾದ ಗ್ರಾಮಾಫೋನ್ ಮತ್ತು ಇತರ ಪ್ರಬಂಧಗಳು ಎಂಬ ಅದ್ಭುತವಾದ ಪುಸ್ತಕವೊಂದನ್ನು ಕನ್ನಡಕ್ಕೆ ಕೊಡಮಾಡಿದ ಎಸ್.ದಿವಾಕರ್ ಅನುವಾದ, ಸಂಪಾದನೆಗಳಿಂದ ಕನ್ನಡಕ್ಕೆ ನೀಡಿರುವ ಕೊಡುಗೆ ಅನುಪಮವಾದದ್ದು. ದಂತಕತೆಯಂತಾಗಿರುವ ಇವರ ಸ್ಮರಣಶಕ್ತಿ ಮತ್ತು ಓದಿನ ವಿಪುಲತೆಗೆ ಬೆರಗಾಗದವರೇ ಇಲ್ಲವೆನ್ನಬಹುದು. ಪ್ರಸ್ತುತ ಆಯ್ದ ಕತೆಗಳು ಎಂಬ ಸಂಕಲನವನ್ನು ಹೊರತು ಪಡಿಸಿ ಎರಡು ಕಥಾಸಂಕಲನಗಳನ್ನೂ ಪ್ರಕಟಿಸಿರುವ ಎಸ್.ದಿವಾಕರರ ಸಣ್ಣಕತೆಗಳ ವೈಶಿಷ್ಟ್ಯವನ್ನು ಗಮನಿಸುವುದು ಈ ಬರಹದ ಉದ್ದೇಶ.

ಇತಿಹಾಸ ಸಂಕಲನ ಮೊದಲು ಪ್ರಕಟವಾದದ್ದು 1981ರಲ್ಲಿ. ಈಗ, ಅಂದರೆ 2007ರಲ್ಲಿ ಇದರ ಎರಡನೆಯ ಆವೃತ್ತಿ ಪ್ರಕಟವಾಗಿದ್ದು ಬಹುಕಾಲದಿಂದ ನನ್ನಂಥ ಆಸಕ್ತರಿಗೆ ಅಲಭ್ಯವಾಗಿದ್ದ ಈ ಕೃತಿ ಮತ್ತೆ ಸಿಗುವಂತಾಗಿದೆ. ಈ ಸಂಕಲನದಲ್ಲಿ ಒಟ್ಟು ಒಂಭತ್ತು ಕತೆಗಳಿವೆ. ಶಾಂತಿನಾಥ ದೇಸಾಯಿಯವರ ಅಧ್ಯಯನಶೀಲ ಮುನ್ನುಡಿಯಿದೆ. ಕತೆಗಳನ್ನು ದಿವಾಕರರು ಎರಡು ವಿಭಾಗಗಳಲ್ಲಿ ವಿಂಗಡಿಸಿದ್ದಾರೆ. ಎರಡನೆಯ ವಿಭಾಗದ ನಾಲ್ಕು ಕತೆಗಳು ಫ್ಯಾಂಟಸಿ, ಮಾಯಾವಾಸ್ತವ ಅಥವಾ ಮ್ಯಾಜಿಕಲ್ ರಿಯಲಿಸಂ ತಂತ್ರವನ್ನು ಬಳಸಿಕೊಂಡಿರುವ ಕತೆಗಳು ಎನ್ನುವುದನ್ನು ಬಿಟ್ಟರೆ ಎಲ್ಲಾ ಕತೆಗಳನ್ನು ಒಟ್ಟಾಗಿಯೇ ಗಮನಿಸಬಹುದು.

ಮೊದಲ ಕತೆ, ಕ್ರೌರ್ಯ ತುಂಬ ಜನಪ್ರಿಯವಾದದ್ದು. ಇವತ್ತಿಗೂ ಎಸ್.ದಿವಾಕರರ ಕತೆಗಳ ಬಗ್ಗೆ ಬರೆಯುವ ಬರಹ, ಆಡುವ ಮಾತು ಕ್ರೌರ್ಯ ಕತೆಯ ಉಲ್ಲೇಖವಿಲ್ಲದೆ ತೊಡಗುವುದಿಲ್ಲವೇನೋ ಎಂಬಷ್ಟು ಈ ಕತೆ ಎಲ್ಲರನ್ನೂ ಸೆಳೆದಿದೆ. ಕ್ರೌರ್ಯ ಕತೆಯ ಮುಗ್ಧ ನಿರ್ಮಲ ಮನಸ್ಸಿನ ಅಲಮೇಲುವನ್ನಾಗಲೀ ದಿವಾಕರರ ಕತೆಗಳಲ್ಲಿ ನಾವು ಮತ್ತೆ ಮತ್ತೆ ಕಾಣುವ ತಮಿಳು ವೃದ್ಧ ದಂಪತಿಗಳನ್ನೋ, ವಿಧವೆಯರನ್ನೋ, ವಿಧುರರನ್ನೋ ಆಗಲಿ ಓದುಗ ಎಂದೂ ಮರೆಯುವುದು ಸಾಧ್ಯವಿಲ್ಲ. ಅಷ್ಟೇ ದಟ್ಟವಾಗಿ ಮನಸ್ಸನ್ನು ಆವರಿಸುವುದು, ದಿವಾಕರರ ಕತೆಗಳಲ್ಲಿ ವಿವರ ವಿವರವಾಗಿ ಮೈದಾಳುವ ಹಳೆಯ ಕಾಲದ ಮನೆಗಳು, ಆ ಮನೆಗಳಲ್ಲಿ ಕಾಣಸಿಗುವ ಅಪರೂಪದ ಪಳೆಯುಳಿಕೆಯಂಥ ವಸ್ತುಗಳು ಇವು ಒಟ್ಟಾಗಿ ನಮ್ಮ ಆಳದಲ್ಲಿ ಉಂಟು ಮಾಡುವ ವಿಚಿತ್ರ ತಲ್ಲಣಗಳನ್ನು ಕೂಡ.

ಕ್ರೌರ್ಯ ಕತೆಯ ಅಲಮೇಲು ಪೋಲೀಯೋ ರೋಗಕ್ಕೆ ತುತ್ತಾದ, ಹೆಣ್ಣಾಗಿ ಬೆಳೆಯಲು ಸೋತ, ಆಸೆಗಳು ತುಂಬಿ ತುಂಬಿ ಹಾಗೆಯೇ ಕರಗಿ ನೀರಾದ ಮುವ್ವತ್ತಾರರ ‘ಹುಡುಗಿ’. ಈಕೆಯ ತಂದೆ ತಾಯಿ, ಪ್ರೊಫೆಸರ್ ತಿರುಚ್ಚೆಂದೂರ್ ಶ್ರೀನಿವಾಸ ರಾಘವಾಚಾರ್ಯರು ಮತ್ತು ಅವರ ವಡಗಲೈ ಸಂಪ್ರದಾಯದಲ್ಲಿ ಅತೀವ ಭಕ್ತಿಯಿದ್ದ ಕಲ್ಯಾಣಮ್ಮ - ಇಬ್ಬರ ಗಡಿಯಾರವೂ ಕಾಲದೊಂದಿಗೆ ಹೆಜ್ಜೆ ಹಾಕಲು ಸೋತಿದ್ದೇ ಅಲಮೇಲುವಿನ ನಿಂತು ಹೋದ ನೀರಿನಂಥ ಬದುಕಿಗೆ ಒಂದು ಸ್ತಬ್ಧ ಚಿತ್ರದ ಪ್ರತಿಮೆಯನ್ನು ಒದಗಿಸಿದೆ. ಅಲಮೇಲು ನಮಗೆ ಅರ್ಥವಾಗುತ್ತಾಳೆ, ಯಾಕೆಂದರೆ ಅವಳನ್ನು ನಾವು ಇವತ್ತಿಗೂ ಅಲ್ಲಿ ಇಲ್ಲಿ ಕಂಡೇ ಇದ್ದೇವೆ. ಪ್ರೊಫೆಸರ್ ತಿರುಚ್ಚೆಂದೂರ್ ಶ್ರೀನಿವಾಸ ರಾಘವಾಚಾರ್ಯರು ಕೂಡ ನಮಗೆ ಗೊತ್ತಿರುವವರೇ. ಹೊಗೆ ಹಿಡಿದು ಕಪ್ಪಾದ ಹಳೇ ಮನೆಯ ಕತ್ತಲು ಕೋಣೆಯೊಳಗೆ ಫಳಫಳ ಹೊಳೆಯುವ ಕನ್ನಡಕದಾಚೆ ಇಂಥವರ ಜೀವಂತ ಸ್ತಬ್ಧ ಚಿತ್ರವನ್ನೂ ಕಂಡಿದ್ದೇವೆ. ಎಸ್.ದಿವಾಕರ್ ಈ ಚಿತ್ರಗಳನ್ನು ನಮಗೆ ಎಷ್ಟು ಸುಸಂಗತವಾಗಿ ಮತ್ತು ನವಿರಾಗಿ ಕಟ್ಟಿಕೊಡುತ್ತಾರೆಂದರೆ, ಉಸಿರುಗಟ್ಟಿಸುವ ಒಂದು ವಾತಾವರಣದಿಂದ ಈ ಜೀವಗಳಿಗೆ ಮುಕ್ತಿಯೊದಗಿಸುವುದು ಸಾಧ್ಯವೇ ಇಲ್ಲವೆ ಎಂಬ ತಳಮಳವೊಂದು ನಮ್ಮನ್ನು ಮತ್ತೆ ಮತ್ತೆ ಕಲಕತೊಡಗುತ್ತದೆ. ನಿಂತು ಹೋದ ಕಾಲದಂಥ ಈ ಜೀವಗಳು ನಿಂತು ಹೋದ ನಮ್ಮದೇ ಬದುಕಿನ ಯಾವು ಯಾವುದೋ ಎಳೆಗಳನ್ನು ಮತ್ತೆ ವರ್ತಮಾನಕ್ಕೆ ಜೋಡಿಸುವುದೇ ಈ ತಳಮಳಕ್ಕೆ ಕಾರಣವೆಂದರೂ ಈ ಕಥೆಗಳು ಈ ಎಲ್ಲ ತಳಮಳಗಳ ತಿಲ್ಲಾನದಿಂದ ಕಾಣಿಸುವುದೇನನ್ನು ಎಂಬುದೇ ಎಸ್.ದಿವಾಕರರ ಕತೆಗಳ ಆಕರ್ಷಣೆಯ ಕೇಂದ್ರ. ದಿವಾಕರರ ಎರಡನೆಯ ಸಂಕಲನ "ಎಲ್ಲ ಬಲ್ಲವರಿಲ್ಲ ಊರಿನಲ್ಲಿ" ಸಂಕಲನವನ್ನು ಗಮನಿಸುವಾಗ ಈ ಬಗ್ಗೆ ವಿವರವಾಗಿ ನೋಡಬಹುದು.

ಅಪಾಂಗಿತ ಜವ್ವನೆಯೊಬ್ಬಳ ಮೌನ ನೀರವ ಕ್ಷಣಗಳನ್ನು ಕತೆಗಳಲ್ಲಿ ಅದ್ಭುತವಾಗಿ ಕಟ್ಟಿಕೊಡುವ ಇನ್ನೂ ಕೆಲವು ಕತೆಗಳು ಕನ್ನಡದಲ್ಲಿ ಇವೆ. ಜಯಂತ ಕಾಯ್ಕಿಣಿಯವರ ಅಪರೂಪ, ಅನುಜಯಾ ಎಸ್.ಕುಮಟಾಕರ್ ಅವರ ಪೊಕ್ಕಿ ಮತ್ತು ಜುಂಪಾಲಾಹಿರಿಯವರ The Treatement of Beebi Haldar ಕತೆಗಳು ಇಲ್ಲಿ ಉಲ್ಲೇಖನೀಯ.

ದಿವಾಕರರ ಅಲಮೇಲು ಬದುಕಿನುದ್ದಕ್ಕೂ ಎದುರಿಸುತ್ತ ಬರುವುದು ತಿರಸ್ಕಾರವನ್ನು, ಅವಳಿಗೆ ದತ್ತವಾದ - ಅವಳೆಂದರೆ ಪ್ರೀತಿಯಿಲ್ಲದ ಒಂದು ಜಗತ್ತನ್ನು, ಅವಳತ್ತ ಎಲ್ಲ ಬಗೆಯ ನಿರ್ಲಕ್ಷ್ಯವನ್ನು. ಆದರೆ ದಿವಾಕರ್ ಇದನ್ನೆಲ್ಲ ವಿವರಗಳಲ್ಲಿ ಸೆಲೆಬ್ರೇಟ್ ಮಾಡುವುದಿಲ್ಲ ಎನ್ನುವುದು ಗಮನಾರ್ಹ. ಸಾಯುವ ಕೆಲವೇ ಕ್ಷಣಗಳ ಮೊದಲು ಅವಳ ರಕ್ತಸಿಕ್ತ ದೇಹವನ್ನು ತನ್ನ ಬತ್ತಲೆದೆಗೆ ಆಧರಿಸಿ ಹಿಡಿದು, ನೀರು, ನೀರು ತಂದು ಕೊಡಿ ಎಂದು ಆರೈಕೆ ಮಾಡುವ ಪಳನಿಚಾಮಿ ಮತ್ತು ನೀರು ಬೇಡ, ಸೋಡ ತಂದು ಕೊಡಿ ಎನ್ನುವ ಇನ್ಯಾರೋ ಅಲಮೇಲುವಿಗೆ ದೇಹ-ಜೀವ ಬೇರೆಯಾಗುವ ಆ ಕೊನೆಯ ಸಂಕಟದ ಕ್ಷಣದಲ್ಲೂ ಕೊಡುವ ವಿಚಿತ್ರ ಸುಖವಿದೆಯಲ್ಲ, ಅಲ್ಲಿಯೇ ಎಲ್ಲವೂ- ಎಲ್ಲವೂ ವೇದ್ಯವಾಗಿ ಬಿಡುತ್ತದೆ. ಕತೆಯ ಹೃದಯ-ಆತ್ಮ ಎಲ್ಲವೂ ಇರುವ ಸಂದಿಗ್ಧ ಕ್ಷಣವನ್ನು ದಿವಾಕರ್ ಹೇಗೆ ತಂದಿದ್ದಾರೆ ಭಾಷೆಯಲ್ಲಿ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬೇಕು.

ಕತೆಯ ಆರಂಭದಲ್ಲೇ ದುರಂತ ಸಂಭವಿಸಿದೆ. ಹಾಗಾಗಿ ಕತೆಗೆ ಯಾವುದೇ ಕ್ಲೈಮ್ಯಾಕ್ಸ್‌ನ ಕಡೆಗೆ ಧಾವಿಸುವ ತುರ್ತಿಲ್ಲ. ಆದರೆ ದುರಂತವನ್ನು ದುರಂತವನ್ನಾಗಿಸುವ ಹೊಣೆಗಾರಿಕೆಯಿದೆ ಮತ್ತಿದನ್ನು ಎಂಥ ದುರಂತವನ್ನಾಗಿಸುತ್ತಾರೆ ಎನ್ನುವುದರಲ್ಲಿ ಅವರು ಎದುರಿಸುವ ಸವಾಲಿದೆ. ಕತೆ ಇದನ್ನು ಸ್ವಯಂ ತಾನೇ ತಾನು ಎತ್ತಿಕೊಂಡ ಸವಾಲು. ಇದನ್ನು ಕತೆಗಾರ ನಿಭಾಯಿಸಬೇಕಿದೆ. ಎಸ್.ದಿವಾಕರರ ಕತೆಗಾರಿಕೆಯ ಎಲ್ಲ ನೈಪುಣ್ಯ ನಮಗೆ ಕಾಣಿಸುವುದು ಇಲ್ಲಿ.

ಜಯಂತರ ಕತೆಯ ನಾಯಕಿಯನ್ನು ಅವಳ ತಮ್ಮ ಫೋಟೋ ತೆಗೆಯುವುದಕ್ಕಾಗಿ ಹೊರಡಿಸುತ್ತಿದ್ದಾನೆ. ಆದರೆ ಅವಳ ಅಂಗವೈಕಲ್ಯವನ್ನು ತನ್ನ ಸ್ವ ಉದ್ಯೋಗಕ್ಕೆ ಅಗತ್ಯವಾದ ಸಾಲ ಪಡೆಯುವುದಕ್ಕೆ ಬಳಸಿಕೊಳ್ಳುತ್ತಿರುವ ತಮ್ಮನ ಉದ್ದೇಶ ಅವಳಿಗಿನ್ನೂ ಗೊತ್ತಿಲ್ಲ. ತಾಯಿಗೆ ಎಲ್ಲಿ ತನ್ನ ಮಗಳು ಫೋಟೋ ತೆಗೆಯುತ್ತಿರುವುದು ಗಂಡಿನ ಕಡೆಯವರಿಗೆ ಕೊಡುವುದಕ್ಕೇ ಎಂದು ತಿಳಿದು ಹೊಸ ಕನಸುಗಳನ್ನು ಕಟ್ಟಿಕೊಳ್ಳುತ್ತಾಳೋ ಎಂಬ ಆತಂಕ. ಆದರೆ ವರ್ಷಾ ಇದನ್ನೆಲ್ಲ ಎದುರಿಸುವ ಬಗೆ ಅನನ್ಯವಾಗಿದೆ. ಅವಳ ನಿರೀಕ್ಷೆಯ ಗುಳ್ಳೆ ಕೊನೆಗೂ ಒಡೆದಾಗ ಐಸ್ ಕ್ರೀಂ ಕೊಡಿಸೋ ಎಂದು ಚಿಕ್ಕ ಮಗುವಾಗಿ ಅವಳದನ್ನು ಎದುರಿಸುತ್ತಾಳೆ, ಮತ್ತು ನಮಗೆ ಅವಳ ನೋವಿನ ನಿಜವಾದ ಸ್ಪರ್ಶ ನೀಡುತ್ತಾಳೆ. ಜಯಂತ ಇದನ್ನು ಹೇಗೆ ಕಟ್ಟುತ್ತಾರೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇಲ್ಲಿ ವರ್ಷಾಳ ಮನದಾಳದ ಕಹಿ, ಅದನ್ನು ಇಲ್ಲವಾಗಿಸಲು ಅವಳು ಇನ್ನಿಲ್ಲದಂತೆ ಹೆಣಗುತ್ತಿರುವಾಗಲೇ ಪ್ರತಿ ಘಟನೆಯಲ್ಲೂ ಅದರ ಇರುವಿಕೆಯೇ ಮೇಲೆದ್ದು ಬರುವುದು ಜಯಂತರ ಆಯ್ದ ವಿವರಗಳಲ್ಲಿ ಚಿತ್ರಿತವಾಗುತ್ತ ಹೋಗುತ್ತದೆ. ಇಲ್ಲಿಯೂ ಮನೆಯವರೆಲ್ಲ ಅವಳ ಯೌವನವನ್ನು, ಅವಳ ವೈಕಲ್ಯವನ್ನು ಮುಚ್ಚಿಡಲು ನಡೆಸುವ ಪ್ರಯತ್ನದಲ್ಲೇ ಅವರ ಪ್ರೀತಿ, ಅವಳ ಅಪಮಾನ ಎರಡೂ ಸೇರಿದಂತೆ ಜೊತೆಜೊತೆಯಾಗಿ ಸಾಗುವುದು ಮತ್ತಿದು ಅಲ್ಲೇ ನಮ್ಮನ್ನು ಹೆಚ್ಚು ಹೆಚ್ಚು ಜೀವನ್ಮುಖಿಯಾಗಿಸುವ ರೀತಿಯಿದೆಯಲ್ಲ, ಇದೇ ಜಯಂತರ ಮಾಯಕ ನಿರೂಪಣೆಯ ಕೈಗನ್ನಡಿ. ಬೇಕೆಂದರೆ ಬೇಕೆಂದಾಗ ಜಯಂತರ ಪಾತ್ರಗಳು ತಮ್ಮ ವಯಸ್ಸು ಮರೆತು ಮಗುವಾಗಿ ತಮಾಷೆಯಲ್ಲೋ, ಕಿಡಿಗೇಡಿತನದಲ್ಲೋ ಕೊನೆಗೆ ಅಳುವಿನಲ್ಲೋ ಹಗರಾಗಬಲ್ಲ ಪಾತ್ರಗಳು. ಹಾಗೆಯೇ ಓದುಗರನ್ನು ಹಗುರಾಗಿಸಿ ನಗಿಸಿಯೂ ವಾಸ್ತವದರ್ಶನ ನೀಡಬಲ್ಲಂಥವು. ಜಯಂತರಲ್ಲಿ ಚಿಂತೆ ಬಿಡಿ, ಹೂವ ಮುಡಿದಂತೆ. ಅಥವಾ, ಚಿಂತೆ, ಬಿಡಿಹೂವ ಮುಡಿದಂತೆ!

ಅನುಜಯಾರ ಪೊಕ್ಕಿ ಕತೆ ಇಡೀ ವಿದ್ಯಮಾನವನ್ನು ಹೆಣ್ಣಿನ ಆತ್ಮಗತ ದೃಷ್ಟಿಕೋನದಿಂದ ಗಮನಿಸುತ್ತದೆ. ಇಲ್ಲಿ ಶಕೂ ಇಂಚಿಂಚೇ ಸಾಯುತ್ತಿದ್ದಾಳೆ, ಸೊರಗುವ ದೇಹ, ಉದುರುತ್ತಿರುವ ತಲೆಗೂದಲು, ನಿಶ್ಶಕ್ತಿ ಹೀಗೆ ಅವಳ ಪತನದ ವಿವರಗಳಾಚೆ ಅವಳ ಅದಮ್ಯ ಜೀವನೋತ್ಸಾಹವಿದೆ. ಅದಿನ್ನೂ ಮಿಡಿಯುತ್ತಿದೆ. ಅಂಗಡಿಯ ಹರಿಶ್ಚಂದ್ರ ಅದಕ್ಕೆ ತಿಳಿದೋ ತಿಳಿಯದೆಯೋ ನೀರೆರೆಯುವ ಬಿಂಬ. ಎಸ್.ದಿವಾಕರರ ಅಲಮೇಲು ತಾನು ಸತ್ತು ಪ್ರೀತಿಯ ಕ್ಷಣಿಕ ಮುಗುಳ್ನಗೆಗೆ ನಗುನಗುತ್ತ ತನ್ನ ಬದುಕನ್ನೇ ತೊರೆದು ಬಿಡಲು ಸಿದ್ಧಳಾದ ಹೆಣ್ಣುಮಗಳಾದರೆ ಶಕೂಗೆ ಆ ಭಾಗ್ಯವಿಲ್ಲ. ಅವಳಿಗೆ ಬದುಕಿನ ಮೊದಲ ಕಾಮನಬಿಲ್ಲನ್ನು ತೋರಿದ ಹುಡುಗನೇ ತನ್ನ ಅಂಗಡಿಯ ಒಳಗೇ ನೇಣಿಗೆ ಶರಣಾಗುತ್ತಾನೆ, ಶಕೂವಿನ ಮನೋಭಿತ್ತಿಯನ್ನು ಕತ್ತಲಿಂದ ತುಂಬುತ್ತಾನೆ. ಇಲ್ಲಿ ಹರಿಶ್ಚಂದ್ರನಿಗೆ ಶಕೂವಿನ ಅಸ್ತಿತ್ವವೇ ಇಲ್ಲದ ಒಂದು ಬದುಕಿರಲು ಸಾಧ್ಯ ಎನ್ನುವ ಅರಿವು ಕತೆ ಹೇಳುತ್ತಿರುವ ಪ್ರಜ್ಞೆಗೆ ಇದೆ, ಆದರೆ ಶಕೂಗೆ ಅದರ ಸುಳಿವಿಲ್ಲ. ಶಕೂಗೆ ಹರಿಶ್ಚಂದ್ರ ಯಾವತ್ತೋ ಹೇಳಿದ, ನಿನ್ನ ಜೊತೆ ಮಾತನಾಡುವ ಕೆಲವೇ ಕ್ಷಣಗಳೆ ನನಗೆ ನೆಮ್ಮದಿ ಕೊಡುತ್ತವೆ ಎಂಬರ್ಥದ ಮಾತುಗಳೆ ಹರಿಶ್ಚಂದ್ರನ ಪೂರ್ಣರೂಪ. ಕತೆಯ ಕೊನೆಗೆ ಅದು ಛಿದ್ರವಾಗುತ್ತದೆ. ಶಕೂನ ಬದುಕು ಇನ್ನೂ ಸವೆಯುತ್ತ ಉಳಿಯಬೇಕಿದೆ.

ಬೀಬಿ ಹಲ್ದಾರಳ ಚಿಕಿತ್ಸೆ ಕತೆಯ ನಿರೂಪಣಾ ವಿಧಾನವೆಲ್ಲವೂ ಜಯಂತರ ಕತೆಗೆ ಹೆಚ್ಚು ಹತ್ತಿರವಿದೆ. ಹಾಗೆಯೇ ಆಶಯದಲ್ಲಿ ಕೂಡ ಇದು ಜಯಂತರ ಕತೆಯನ್ನೇ ಹೋಲುವುದು ಕುತೂಹಲಕರ. ಇಲ್ಲಿರುವುದೂ ಅದಮ್ಯ ಜೀವನೋತ್ಸಾಹ ಮತ್ತು ಹಾಗಾಗಿಯೇ ದಕ್ಕಿದ ಬದುಕನ್ನು ಸಂಭ್ರಮದಿಂದ ಆಚರಿಸುವ ಮುಗ್ಧ ಮಗುವಿನ ಮನಸ್ಥಿತಿಯೇ ಇದ್ದುದರಲ್ಲಿ ಉತ್ತಮವೆಂಬ ಪ್ರಜ್ಞೆ. ಅಲಮೇಲು ಮತ್ತು ಶಕೂಗೆ ತಂದೆ ತಾಯಿ, ಅಸಡ್ದೆ ಮಾಡುವ ತಮ್ಮಂದಿರೆಲ್ಲ ಇದ್ದೂ ಇಲ್ಲದಂತಿದ್ದರೆ ಜಯಂತರ ವರ್ಷಾ ಇದ್ದುದರಲ್ಲಿ ಮೇಲು. ಅವಳಿಗೆ ಇನ್ನೂ ಮನೆ ನರಕವಾಗಿಲ್ಲ, ಅಂಥ ಭಾವನೆ ಕಾಡುತ್ತಿಲ್ಲ. ಬೀಬಿ ಹಲ್ದಾರಳ ಸ್ಥಿತಿ ಎಲ್ಲಕ್ಕಿಂತ ಕಡೆಯಾಗಿದೆ. ಚಿಕ್ಕಮ್ಮನ ಮಗ ಮತ್ತು ಅವನ ಹೆಂಡತಿಯ ಆಶ್ರಯಕ್ಕೆ ಬಿದ್ದ, ಆಗಾಗ ಮೂರ್ಛೆ ತಪ್ಪಿ ಬೀಳುವ ಮತ್ತು ರೋಗ ಇದೇ ಎಂದು ಪತ್ತೆಯಾಗದ ಜೀವ ಅವಳದ್ದು. ಬಹುಬೇಗ ಜಯಂತರ ಸೇವಂತಿ ಹೂವಿನ ಟ್ರಕ್ಕು ಕತೆಯ ದುರ್ಗಿಯಂತೆಯೇ ಅನಾಥೆ ಕೂಡ ಆಗುವ ಬೀಬಿ ಹಲ್ದಾರ್ ಸಾಯುವುದಿಲ್ಲ, ಬದುಕುತ್ತಾಳೆ. ಅದೂ ಭರವಸೆಯ ಬದುಕನ್ನೇ ಬದುಕುತ್ತಾಳೆ. ತನ್ನ ಅಂತರಂಗದ ಆಸೆಯನ್ನು ಇವಳು ಕನ್ನಡಿಯ ಮುಂದೆಯೋ, ಹಗಲುಗನಸುಗಳಲ್ಲೋ ತೇಲಿ ಬಿಡುವವಳಲ್ಲ. ಹಾಗೆ ತೇಲಿ ಬಿಡುವುದು ಕತೆಗಾರ ಬಳಸಿಕೊಂಡ ತಂತ್ರವಾಗಿ ಮೂರೂ ಕತೆಗಳಲ್ಲಿ ನಮಗೆ ಆಯಾ ಪಾತ್ರ ತೆರೆದುಕೊಳ್ಳುವ ಮಾರ್ಗವಾಗಿದ್ದರೆ ಇಲ್ಲಿ ಬೀಬಿ ಹಲ್ದಾರ್ ನೇರವಾಗಿ ಪ್ರಶ್ನೆ ಹಾಕಿ ತನಗೆ ಎಲ್ಲರಂತೆ ಬದುಕುವ, ಮದುವೆಯಾಗುವ, ಸಿಂಗರಿಸಿಕೊಳ್ಳುವ, ಮಕ್ಕಳನ್ನು ಹೆರುವ ಹಕ್ಕಿಲ್ಲವೇ ಎಂದು ಕೇಳುತ್ತಾಳೆ. ಮೇಘನಾ ಪೇಠೆ ಕತೆಯ ನಾಯಕಿಯ ಸ್ವಾಭಿಮಾನ-ನಿರೀಕ್ಷೆ ಮತ್ತು ಆತ್ಮ ನಿರೀಕ್ಷಣೆ ಕೂಡ ಇರುವವಳಂತೆ ಕಾಣುವ ಬೀಬಿ ಹಲ್ದಾರ್ ಇಲ್ಲಿ ಸ್ವತಃ ನಿರೂಪಕಿಯೇನೂ ಆಗಿಲ್ಲದಿರುವುದನ್ನೂ ಗಮನಿಸಬೇಕು. ಅವಳ ಬಗ್ಗೆ ನಮಗೆ ಸಿಗುವ ನೋಟ ನಾಲ್ಕು ಅಂತಸ್ತಿನ ಬಣ್ಣಕಾಣದ ಕಟ್ಟಡದ ಇತರ ಬಾಡಿಗೆದಾರರ ದೃಷ್ಟಿಕೋನದ್ದು. ಅವರ ಮಾನವೀಯತೆ, ಕಳಕಳಿ, ತೆಗೆದುಕೊಳ್ಳುವ ಕಾಳಜಿ ದೊಡ್ಡದು.

ಈ ಕತೆಗಳು ನಮ್ಮಿಂದ ಅನುಕಂಪವನ್ನು ನಿರೀಕ್ಷಿಸುತ್ತಿಲ್ಲ, ಹೀಗೆ ಬದುಕಿನ ಹೆಚ್ಚಿನ ಸಂಭ್ರಮಗಳೆಲ್ಲ ನಿರಾಕರಿಸಲ್ಪಟ್ಟ ಹೆಣ್ಣೊಬ್ಬಳ ಅಂತರಂಗದ ಇಣುಕುನೋಟವನ್ನು ನೀಡುವ ಸೀಮಿತ ಉದ್ದೇಶ ಕೂಡ ಈ ಕತೆಗಳಿಗಿಲ್ಲ. ಅಥವಾ ಬದುಕು ಕೆಲವರಿಗೆ ಎಷ್ಟು ದುರ್ಭರವಾಗಿದೆ ಎನ್ನುವುದಲ್ಲ. ಬದುಕು ಇವರಲ್ಲಿ ಅರಳಿಕೊಳ್ಳುವ ಬಗೆಯನ್ನು, ಅದು ಅಲಮೇಲುವಿಗಾದಂತೆ ಸಾವಿನ ಸನ್ನಿಧಿಯ ಒಂದೇ ಒಂದು ಕ್ಷಣದ್ದಿರಬಹುದು, ವರ್ಷಾಳ ಐಸ್ ಕ್ರೀಂ ಕೊಡಿಸೋ ಎಂದು ಒಮ್ಮೆಗೇ ಮಗುವಾಗಿ ಕ್ಷಣದ ಭಾರವನ್ನು ನೀಗಿಸಬಲ್ಲ ಶಕ್ತಿಯಲ್ಲಿರಬಹುದು, ಬೀಬಿ ಹಲ್ದಾರ ಚೇತರಿಸಿಕೊಳ್ಳುತ್ತ ಹೋದ ರೀತಿಯನ್ನು ನಮಗೆ ಅರುಹಿದ ಬಗೆಯಲ್ಲಿರಬಹುದು - ಕಾಣಿಸುವುದು. ಹೀಗೆ ಕಾಣಿಸುವ ಮೂಲಕವೇ ಈ ಜೀವಗಳು ಹೆಚ್ಚು ಜೀವಂತ, ಹೆಚ್ಚು ಸಶಕ್ತ, ಹೆಚ್ಚು ಪರಿಪೂರ್ಣವಾಗುವ ಬಗೆಯದು. ಕತೆಗಳು ಮೆಚ್ಚುಗೆಯಾಗುವ ಪಾತಳಿ ಕೂಡ ಇದೇ ಆಗಿರುವುದನ್ನು ಗಮನಿಸಬಹುದು.

ಅನಾಥರು ಕತೆಯ ವೃದ್ಧ ದಂಪತಿಗಳಿಗೆ ಹೆಸರಿಲ್ಲ. ನಿವೃತ್ತ ಬದುಕನ್ನು ನಗರದಲ್ಲಿ, ಎಲ್ಲ ಸೌಕರ್ಯಗಳಿರುವ ಕಡೆ ನೆಮ್ಮದಿಯಲ್ಲಿ ಕಳೆಯುವ ಒಂದು ಕನಸು ಹೊತ್ತ ಈ ದಂಪತಿಗಳು ಹಳ್ಳಿಯನ್ನು ತೊರೆದು ನಗರಕ್ಕೆ ಬರುತ್ತಾರೆ. ಕ್ರಮೇಣ ನಗರದಲ್ಲಿ ತಾವೇ ಆಯ್ದುಕೊಂಡ ಬದುಕನ್ನು ಅದು ಚೆನ್ನಾಗಿದೆ ಎಂದು ನಂಬುವುದಕ್ಕೆ ಬೇಕಾದಂತೆ ತಮ್ಮ ಮನಸ್ಸನ್ನು ಪಳಗಿಸುವ ಕೆಲಸದಲ್ಲೇ ಹೈರಾಣಾಗುವುದು ಮತ್ತು ಊರಿನಿಂದ ಬಂದ ಪೋಸ್ಟ್ ಮಾಸ್ಟರನ ಹೊಟ್ಟೆಕಿಚ್ಚಿನ ನೋಟದಲ್ಲಿ ತಮ್ಮೆಲ್ಲ ನಾಟಕದ ಸಾರ್ಥಕತೆಯ, ಸಫಲತೆಯ ಸೋಲನ್ನು ಗಮನಿಸುವುದು ಕತೆಯ ಪ್ರಮುಖ ಅಂಶ. ನಿರೂಪಣೆಯ ಸೊಗಡಿಗೆ ಅಂಥ ಮಹತ್ವವೇನಿಲ್ಲದ ಈ ಕತೆ ಹೆಚ್ಚು ನೇರವಾಗಿದೆ. ಆದರೆ ನಿರೂಪಣೆಯ ಸಂಯಮ ಮತ್ತು ವಿವರಗಳಲ್ಲಿ ನೀಡುವ ಒಟ್ಟು ಚಿತ್ರದ ಪರಿಕಲ್ಪನೆ ಮತ್ತು ತಾಂತ್ರಿಕವಾಗಿ ಪೋಸ್ಟ್ ಮಾಸ್ಟರರ ಪಾತ್ರದೊಂದಿಗಿನ ಮುಖಾಮುಖಿ ಒದಗಿಸುವ ಚೌಕಟ್ಟು ಕತೆಯ ಗಮನಾರ್ಹ ಅಂಶಗಳು. ಹೆಚ್ಚು ಒತ್ತಡವಿಲ್ಲದೆ, ಅನಿವಾರ್ಯವಾದುದನ್ನು ಬದುಕಿ, ಸ್ವೀಕರಿಸಿ ನೀಗಬೇಕು ಅರಿವಿನೊಂದಿಗೆ, ಎಲ್ಲಿದ್ದರೂ ಅಂಥ ವ್ಯತ್ಯಾಸವೇನಾಗುತ್ತಿರಲಿಲ್ಲ ಎಂಬ ವಾಸ್ತವಿಕ ನೆಲೆಯಲ್ಲಿಯೇ ವರ್ತಿಸುವ ಪಾತ್ರಗಳು ಕತೆ ಹೇಳಿಕೆಯ ರೂಪ ತಾಳದಂತೆ ಕತೆಯನ್ನು ನಿಭಾಯಿಸಲು ಸಹಕರಿಸುವುದನ್ನು ಕೂಡ ಇಲ್ಲಿ ಗಮನಿಸಬೇಕು.

ನೆಲೆ ಕತೆ ಇನ್ನೊಂದು ಬಗೆಯ ಆಯ್ಕೆಯೊಂದಿಗೆ ಒಗ್ಗಿಕೊಂಡು ಹೋಗುವ ಅನಿವಾರ್ಯದ ಸಂದಿಗ್ಧವನ್ನೇ ನವಿರಾಗಿ ಚಿತ್ರಿಸುವ ಕತೆ. ಇಲ್ಲಿಯೂ ಅನಾಥರು ಕತೆಯಂತೆಯೇ ಜಯಾ ಆಯ್ದುಕೊಂಡ ಬದುಕು, ಜೊತೆಗಾರ ಅವಳದೇ ಪ್ರಜ್ಞಾಪೂರ್ವಕ ಆಯ್ಕೆಯೇ. ಆದರೆ ಅದರ ಒಳಹೊಕ್ಕು ಅದನ್ನು ತನ್ನದಾಗಿಸಿಕೊಳ್ಳುವ ಹಂತದಲ್ಲಿ ಅವಳಿಗೆ ಪರ್ಯಾಯಗಳ ಆಕರ್ಷಣೆಯೋ ದತ್ತದ ಕುರಿತ ವಿರೋಧವೋ ತನ್ನೊಳಗೇ ಬೆಳೆಯುತ್ತ ಹೋಗುವುದನ್ನು ಕಥೆ ಪ್ರತೀಕಗಳ ಮೂಲಕ ಅತ್ಯಂತ ಸಹಜವಾಗಿ ಹಿಡಿದಿಟ್ಟಿದೆ. ಮನೆಯ ಸನಿಹದ ಕೊಳಚೆ ಪ್ರದೇಶದ ವಾಸಿಗಳ ಬದುಕು, ಸೊಳ್ಳೆ ಕಾಟ, ವಾಸನೆ ಮೊದಲು ಗಮನಕ್ಕೆ ಬರುತ್ತವೆ. ನಂತರ ಹುಚ್ಚಿನ ರೂಪದಲ್ಲಿ ಅದು ಇನ್ನಷ್ಟು ಬೆಳೆಯುತ್ತದೆ. ಕೊಳಚೆ ಪ್ರದೇಶದ ಒಬ್ಬಳು ಹುಚ್ಚಿ, ಅವಳ ಸಂಬಂಧಿ ಮನೆಗೆಲಸದವಳಾಗಿ ಬಂದು ಎಬ್ಬಿಸುವ ರಾದ್ಧಾಂತ ಮತ್ತು ಮನೆಯೊಳಗಿನ ಒಬ್ಬ ಮನೋವೈಕಲ್ಯವಿರುವ ಪುಟ್ಟ ಹುಡುಗನ ಉಪಟಳ ಎಲ್ಲವೂ ಸೇರಿ ಜಯಾಳ ಆಯ್ಕೆಯ ಬದುಕು ಒಂದು ಬಗೆಯ ಬಂಧನವೋ, ಶಿಕ್ಷೆಯೋ ತಿಳಿಯದ ಸ್ಥಿತಿ ನಿರ್ಮಾಣವಾಗುವುದು ಗಮನಕ್ಕೆ ಬರುವುದಾದರೂ ಮೇಲ್ನೋಟಕ್ಕೆ ಎಲ್ಲವೂ ವ್ಯವಸ್ಥಿತವಾಗಿಯೇ ಇರುವುದು ಕೂಡ ನಮ್ಮ ಗಮನಕ್ಕೆ ಬಂದೇ ಬರುತ್ತದೆ. ಇಲ್ಲಿ ಜಯಾಳ ಸಂವೇದನೆಗಳಲ್ಲಿ ಮಾತ್ರ ನಮಗೆ ಸನ್ನಿವೇಶದ ವಿಲಕ್ಷಣ ವೈಚಿತ್ರ್ಯಗಳ ಅನುಭವವಾಗುತ್ತದೆಯೇ ಹೊರತು ಅದೇ ಮನೆಯ ಉಳಿದ ಸದಸ್ಯರೆಲ್ಲ ಅದನ್ನು ಸಹಜವಾಗಿ ಸ್ವೀಕರಿಸಿರುವುದು, ಅದು ಅವರನ್ನು ಇನ್ನೇನೋ ಮಾಡಿರಬಹುದಾದರೂ, ಕಾಣುತ್ತೇವೆ. ತಾನು ಅತ್ಯಂತ ಭಾವುಕವಾಗಿ ಪ್ರೀತಿಸಿದ್ದ ಅದೇ ಮೋಹನನ ಪೈಶಾಚಿಕ ಕಾಮತೃಷೆಯ ಅಭಿವ್ಯಕ್ತಿ ಕೂಡ ಸನ್ನಿವೇಶದ ಪರಿಣಾಮವಿರಬಹುದು. ಜಯಾಳ ಸಂವೇದನೆಯನ್ನೇ ನೆಚ್ಚಿ ಹೋಗುವುದಾದರೆ, ಒಂದು ಸುವ್ಯವಸ್ಥಿತ, ಎಲ್ಲ ಅನುಕೂಲಗಳಿರುವ ಬದುಕು, ತೀರ ಕೆಳಸ್ಥಿತಿಯಲ್ಲಿರುವವರ ಸಾನ್ನಿಧ್ಯದಲ್ಲಿ ಅನಾರೋಗ್ಯಕರ ಅಸುಖಕ್ಕೆ, ಅಸಮಾಧಾನಕ್ಕೆ ಕಾರಣವಾಗಬಹುದಾದ್ದು ಮತ್ತು ಶೇಷ ಜಗತ್ತು ಅಂಥ ಸಂವೇದನೆಗಳಿಗೆ ಜಡವಾಗಿ, ಜಡವಾಗಿರುವುದರಿಂದಲೇ ಸಹಜವೆಂದು ನಾವು ಪರಿಕಲ್ಪಿಸುವ ಬದುಕಿಗೆ ಹೊಂದಿಕೊಂಡಿರುವುದು ಇಲ್ಲಿ ಕಾಣಬಹುದು. ಕೊಳಚೆ ಪ್ರದೇಶದ ಹುಚ್ಚನ್ನು ಪ್ರತಿನಿಧಿಸುವ ಮನೆಯೊಳಗಿನ ಮನೋವೈಕಲ್ಯದ ಬಾಲಕ ಮತ್ತು ಮೋಹನ ತಂದುಕೊಟ್ಟ ಪುನುಗು ಬೆಕ್ಕು ಈ ಸನ್ನಿವೇಶದಿಂದ ಬಿಡುಗಡೆಗೊಂಡು ಕೊಳಚೆಯ ಗುಡಿಸಲುಗಳತ್ತ ಓಡುವುದು ಹಾಗೂ ಈ ಕೊಳಚೆಯ ಕಡೆಗೆ ಜಯಾ ಉಳಿದೆಲ್ಲರಿಗಿಂತ ಹೆಚ್ಚು ಗಮನ ನೀಡುವುದು ಕತೆಯ ಚೌಕಟ್ಟಿಗೆ ಹೆಚ್ಚಿನ ಸಂಕೀರ್ಣತೆಯನ್ನು ನೀಡಿದೆ.

ಮೃತ್ಯುಂಜಯ ಕತೆಯು ಕೂಡ ಮೂಲದಲ್ಲಿ ಹೊಂದಿರುವ ಸೆಲೆ ಸಂದಿಗ್ಧವೊಂದರಲ್ಲಿ ಕಾಲಿಟ್ಟದ್ದೇ ಕೆಸರಿನಲ್ಲಿ ಕಾಲಿಟ್ಟಂತಾಗುವ ಒಂದು ವಿಲಕ್ಷಣ ಮತ್ತು ಅಷ್ಟೇ ಸಹಜವಾಗಿ ಕಾಣುವ ವಿದ್ಯಮಾನವನ್ನೇ. ವೈದ್ಯಕೀಯ ವಿದ್ಯಾರ್ಥಿಯೊಬ್ಬ ತಾನು ಸೀಳಬೇಕಾದ ಮೃತದೇಹದ ಚರಿತ್ರೆಯನ್ನು ಹಿಂಬಾಲಿಸಿ ಹೋಗುವ, ಹೋಗಿದ್ದರಿಂದಲೇ ಪೋಲೀಸು-ತನಿಖೆ ಎಂಬೆಲ್ಲ ರಾದ್ಧಾಂತಕ್ಕೆ ಸಿಲುಕಿಕೊಳ್ಳುವ ಹಂತದ ವರೆಗಿನ ಕತೆ ತೆರೆದಿಡುವುದು ಈ ಪೇಚನ್ನಲ್ಲ. ಈ ಪೇಚನ್ನು ಕತೆ ನೀಗಿಕೊಳ್ಳುವ ಬಗೆಯನ್ನು ಇಲ್ಲಿ ಗಮನಿಸಬೇಕು. ಆದರೆ ಈ ವಿದ್ಯಾರ್ಥಿಯ ಕುತೂಹಲ ತೆರೆದಿಡುವುದು ತಬರನ ಕತೆಯಂಥದೇ ಒಂದು ವ್ಯವಸ್ಥೆ ಸುವ್ಯವಸ್ಥಿತವಾಗಿ ಕೆಲವರ ಬದುಕನ್ನು ಹಾಳುಗೆಡಹುವ ಪರಿಯನ್ನು. ಈ ಪರಿ ಒಂದು ಜೇಡರಬಲೆಯಂಥದ್ದು. ಒಮ್ಮೆ ಒಂದು ಎಳೆ ಮೈಗೆ ತಗುಲಿದರೆ ಸಾಕು, ಇಡಿಯಾಗಿ ಸೆಳೆದುಕೊಳ್ಳುವಂಥ ಬಲೆ ಅದು. ಆದರೆ ಅದನ್ನು ಇಲ್ಲಿ ನೇಯ್ದಿರುವುದು ಅಧಿಕಾರಶಾಹಿಯಲ್ಲ, ಆಡಳಿತ ವ್ಯವಸ್ಥೆಯಲ್ಲ. ನಮ್ಮ ನಿಮ್ಮಂಥ ಸಾಮಾನ್ಯ ಮಂದಿಯೇ ಈ ಬಲೆಯನ್ನು ನಮಗೆ ನಾವೇ ನೇಯ್ದಿರುವುದು ನಿಜವಾದ ದುರಂತ. ಕತೆಯ ಪ್ರಧಾನ ಆಶಯ ಇದನ್ನು ಸ್ಪರ್ಶಿಸುವುದೇ ಆಗಿದೆ. ಕತೆಯ ಪ್ರಧಾನ ಪಾತ್ರ ಮೃತ್ಯುಂಜಯ, ಮೃತ್ಯುವನ್ನು ಗೆದ್ದಿರುವುದು ಸತ್ತಿದ್ದರಿಂದ. ಆದರೆ ಅವನ ಬದುಕು ನಮಗೆ ಅನಾವರಣಗೊಳ್ಳುವುದು ಅವನ ಮೃತ್ಯುವಿನ ನಂತರವೇ. ಅವನ ಪ್ರೇಮ, ಆ ಪ್ರಿಯತಮೆಯ ಬದುಕಿನ ದುರಂತ, ಅದಕ್ಕೆ ಕಾರಣನಾದ ಬುದ್ಧಿಜೀವಿ, ಸ್ಲಮ್ಮಿನ ಮೈ ಇಳಿಸುವವರು, ವೈದ್ಯರು, ಪೋಲೀಸರು, ಮೃತ್ಯುಂಜಯ ಬಾಡಿಗೆಗಿದ್ದ ಮನೆಯೊಡತಿಯ ತೀರ್ಮಾನಗಳು, ಸ್ವತಃ ರಾಧಾಳ ಮನೆಯವರ ತೀರ್ಮಾನಗಳು ಕತೆಯನ್ನು, ಕತೆಯ ಅಂತರಾಳದ ಸತ್ಯಗಳನ್ನು ಹೆಚ್ಚು ಕ್ಲಿಷ್ಟಗೊಳಿಸುತ್ತವೆ, ಸಂಕೀರ್ಣಗೊಳಿಸುತ್ತವೆ.

ಇತಿಹಾಸ ಕತೆ ಕೆಲವೊಂದು ಕಾರಣಗಳಿಗೆ ಜಿ.ಎಸ್.ಸದಾಶಿವರ ಸಿಕ್ಕು ಕತೆಯನ್ನೇ ನೆನಪಿಸುವುದು ಕುತೂಹಲಕರ. ಗಿರಿಯವರ ಗತಿ-ಸ್ಥಿತಿ ಕತೆಯನ್ನು ಕೂಡ ಇದು ನೆನಪಿಸುವುದಾದರೂ ಗತಿ-ಸ್ಥಿತಿಯ ಗಮ್ಯಕ್ಕೂ ಈ ಕತೆಯ ಗಮ್ಯಕ್ಕೂ ತುಂಬ ವ್ಯತ್ಯಾಸವಿದೆ. ಸಿಕ್ಕು ಕತೆಯ ಒಟ್ಟಾರೆ ಧ್ವನಿಗೂ ಈ ಕತೆಯ ಧ್ವನಿಗೂ ಒಂದು ಬಗೆಯ ಸಾಮ್ಯವಿದೆ.

ಮೂರೂ ಕತೆಗಳಲ್ಲಿ ಮೇಲ್ನೋಟಕ್ಕೆ ಇರುವ ವಿವರಗಳು ಅವೇ. ನಗರದಿಂದ ಪ್ರವೇಶಿಸುವ, ಆ ಹಳ್ಳಿಯಂಥ ಊರಿನ ಮಟ್ಟಿಗೆ ಸ್ವಲ್ಪ ವಿಲಕ್ಷಣವೆನ್ನಿಸುವ ವೇಷಭೂಷಣದ ಒಬ್ಬ ಯುವಕ (ಗತಿ -ಸ್ಥಿತಿಯಲ್ಲಿ ಜೋಡಿ), ಹೋಟೆಲಿನ ರೂಮು, ಮಾಣಿ, ಹೋಟೆಲಿನ ಮತ್ತು ಊರಿನ ಉಸಿರುಗಟ್ಟಿಸುವ ವಾತಾವರಣ, ಹೋಟೇಲಿನ ಭಟ್ಟರ ಅಧಿಕಪ್ರಸಂಗಿ ನಗು ಇತ್ಯಾದಿ ನಿರ್ಮಿಸುವ ಒಂದು ವಾತಾವರಣಕ್ಕೆ ಮೂರೂ ಕತೆಗಳಲ್ಲಿ ಒತ್ತು ಇದೆ. ಸಿಕ್ಕು ಕತೆಯಲ್ಲೂ ಇತಿಹಾಸ ಕತೆಯಲ್ಲೂ ಪ್ರಧಾನ ಪಾತ್ರ ಆ ಊರಿನಿಂದ ಎಂದೆಂದಿಗೂ ಪಾರಾಗಲು ಸಾಧ್ಯವೇ ಇಲ್ಲವೇನೋ ಎನ್ನುವ ಸ್ಥಿತಿಯಲ್ಲಿ ಸಿಕ್ಕಿಕೊಂಡಂತಿದ್ದಾರೆ. ಗತಿ-ಸ್ಥಿತಿಯಲ್ಲೂ ಇಂಥ ಭಾವ ಆ ಜೋಡಿಯನ್ನು ಕಾಡುವುದಿದೆ. ಆದರೆ ಗತಿ-ಸ್ಥಿತಿಯಲ್ಲಿ ಊರಿನ ಜನರ-ಸಿರಿವಂತರ ಮತ್ತು ಒಟ್ಟು ವ್ಯವಸ್ಥೆಯ ನಿಗೂಢತನಕ್ಕಿರುವ ಒತ್ತು ಕಡಿಮೆ. ಮನಸ್ಸಿನ ಸ್ಥಿತಿಯ ಬಗ್ಗೆ ಇರುವ ಒತ್ತು ಹೆಚ್ಚು. ಆದರೆ ಸಿಕ್ಕು ಮತ್ತು ಇತಿಹಾಸದ ಪಾತ್ರಗಳು, ಸನ್ನಿವೇಶಗಳು ಒಂದು ಬಗೆಯ ನಿಗೂಢತೆಯನ್ನು ಮೇಳವಿಸಿಕೊಂಡೇ ಆತಂಕವನ್ನೂ, ಸಿಕ್ಕಿಬಿದ್ದಿರುವ ಭಾವವನ್ನೂ ಉದ್ದೀಪಿಸುತ್ತಲೇ ಇರುತ್ತವೆ. ಅಲ್ಲಿ ಆತ್ಮೀಯವಾದ, ಮನುಷ್ಯರಂತೆ ಕಂಡ ಪಾತ್ರಗಳು ತಟ್ಟನೆ ಕೊಲೆಯಾಗುತ್ತವೆ! ಯಾರೋ ಒಬ್ಬ ಅಗೋಚರ ವ್ಯಕ್ತಿ ಎಲ್ಲವನ್ನೂ ನಿಯಂತ್ರಿಸುತ್ತಿರುವಂತೆ, ಅವನ ಕೃಪೆಯಿಲ್ಲದೆ ಬದುಕು ಸಾಧ್ಯವೇ ಇಲ್ಲವೆನ್ನುವಂತೆ ಊರು ನಡೆದುಕೊಳ್ಳುತ್ತಿರುತ್ತದೆ. ಆತ ಆ ಊರಿನ ದೇವರೂ-ಧೂರ್ತನೂ ಆಗಿರುವಾಗಲೇ ನಿರೂಪಕ ಅವನ ತೆಕ್ಕೆಗೆ ಬಿದ್ದಿರುತ್ತಾನೆ. ಆದರೆ ಈ ಎಲ್ಲ ಅಮೂರ್ತ ಅಬ್ಸರ್ಡ್ ತಂತ್ರಕ್ಕೆ ಹೋಲಿಸಿದರೆ ಸಿಕ್ಕು ಕತೆಗಿಂತ ದಿವಾಕರರ ಇತಿಹಾಸ ಹೆಚ್ಚು ವಾಸ್ತವವಾದಿಯಾದ ನೆಲೆಯನ್ನು ಹೊಂದಿದೆ.

ರಾಮುವಿನ ತಾತ ಹೇಳುವ ವೆಂಕನಾಯಕನ ಹೆಂಡತಿಗಾಗಿ ದಳವಾಯಿ ವೆಂಕನಾಯಕನನ್ನು ಕೊಲ್ಲಿಸಿದ ಘಟನೆ ಸದಾನಂದ ಬರೆಯಲಿರುವ ಕಾದಂಬರಿಯಲ್ಲಿ ಹೆಚ್ಚಿನ ಮಹತ್ವ ಪಡೆದಿಲ್ಲ. ಆದರೆ ತಾತ ಅದನ್ನು ನಗಣ್ಯ ವಿದ್ಯಮಾನವೆಂದು ತಿಳಿಯಲು ಸಿದ್ಧನಿಲ್ಲ. ತಾತ ಹೇಳುತ್ತಾನೆ, "ಒಂದು ಕೊಲೆಯಾದರೇನು, ಸಾವಿರ ಕೊಲೆಯಾದರೇನು......ಕೊಲೆ ಕೊಲೆಯೇ ಅಲ್ಲವೇನಪ್ಪ.......ಸತ್ಯ ಸತ್ಯವೇ ಅಲ್ಲವೇನಪ್ಪ...? ನಿಮ್ಮಿಷ್ಟ ಏನಾದರೂ ಬರೆದುಕೊಳ್ಳಿ"

ಇತಿಹಾಸದಿಂದ ವರ್ತಮಾನಕ್ಕೆ ಬಂದರೆ ಇಲ್ಲಿಯೂ ಗುರ್ರಪ್ಪ-ಸುಜಾತರ ನಡುವೆ ಕೊಲೆಯಾದ ಸುಜಾತಾಳ ಗಂಡ ಈ ಇತಿಹಾಸಕ್ಕೆ ಒಂದು ಬಗೆಯ ಪರಿಪ್ರೇಕ್ಷ್ಯವನ್ನೊಡ್ಡುತ್ತಿದ್ದಾರೆ. ಇದು ಇನ್ನೂ ಮುಂದುವರೆದು ಸ್ವತಃ ಗುರ್ರಪ್ಪನೆ ಸದಾನಂದನ ಬೇಕು-ಬೇಡಗಳನ್ನು ನೋಡಿಕೊಳ್ಳುವಂತೆ ಸುಜಾತಳನ್ನು ಆ ರಾತ್ರಿ ಏಕಾಕಿಯಾಗಿ ಬಿಟ್ಟು ಹೋಗುತ್ತಾನೆ. ಮನುಷ್ಯನ ಆಸೆ-ದುರಾಸೆಗಳು ಅವನನ್ನು ಎಂಥ ನೀಚತನಕ್ಕೂ ಇಳಿಸುವುದು ಸಹಜವೆಂದು ಒಪ್ಪಿಕೊಂಡು ಬರುವುದು - ಬರೆಯುವುದು ಸುಲಭ. ಆದರೆ ಅದರಲ್ಲಿ ಸಿಕ್ಕಿಕೊಂಡು ಒದ್ದಾಡುವುದು ಕಷ್ಟ. ಸದಾನಂದ ತನ್ನ ಕಾದಂಬರಿಯ ಹಸ್ತಪ್ರತಿಯನ್ನು ಹರಿದೊಗೆಯುತ್ತಾನೆ. ಊರು-ಊರಿನ ಇತಿಹಾಸಕ್ಕಿಂತ ಹೆಚ್ಚಾಗಿ ಅಲ್ಲಿನ ವರ್ತಮಾನವೇ ಅವನನ್ನು ಕಬಳಿಸಲು ಸಜ್ಜಾಗಿ ನಿಂತಂತೆ ಕಾಣುವಾಗಲೇ ಅಲ್ಲಿಂದ ತನಗೆ ಮುಕ್ತಿಯಿಲ್ಲವೇನೋ ಎನ್ನುವಂಥ ಭಾವವೂ ಕತೆಯಲ್ಲಿ ಮೂಡಿರುವುದನ್ನು ಗಮನಿಸಬಹುದು.

ಎರಡನೆಯ ಭಾಗದ ನಾಲ್ಕು ಕತೆಗಳು ಕೊಂಚ ವಿಭಿನ್ನ ನಿರೂಪಣೆಯ, ತಂತ್ರದ ರಚನೆಗಳು. ಮಾಂತ್ರಿಕ ವಾಸ್ತವವಾದವೆಂದು ನಾವಿಂದು ಪರಿಗಣಿಸುವ ನಮ್ಮ ಜಾನಪದ ಕತೆಗಳಲ್ಲಿ ಯಾವತ್ತಿನಿಂದಲೋ ಇದ್ದ ತಂತ್ರವನ್ನು ಈ ಕತೆಗಳು ಬಳಸಿಕೊಳ್ಳುತ್ತವೆ ಎನ್ನುವ ಮಟ್ಟಿಗೆ. ಕಾಲನೇಮಿ ಮತ್ತು ಕಣ್ಣುಗಳು ಕತೆಯಲ್ಲಿ ಒಬ್ಬ ಮಹಾಕಾಯನಾದ ರಾಕ್ಷಸ ಭೂಮಿತಾಯಿಯ ಎದೆಗೇ ಬೇರು ಬಿಟ್ಟು ಬೆಳೆದು ನಿಲ್ಲುವುದು, ಆಕಾಶದಲ್ಲಿ ಹಾರುವ ಮಂದಿ ಕಾಣಿಸಿಕೊಳ್ಳುವುದು, ಅವರಿಗೆ ಗಿಡುಗನ ಕಣ್ಣುಗಳಿರುವುದು ಮತ್ತು ಅವರ ಕೈಯಲ್ಲಿರುವ ಕಾಗದದಲ್ಲಿ ಅವರು ಭೂಮಿಯ ಮೇಲಿನ ಬದುಕನ್ನು ಸ್ವಾಧೀನ ಪಡಿಸಿಕೊಳ್ಳುವ ಉದ್ದೇಶ ಹೊಂದಿರುವುದು, ಸಾಕಷ್ಟನ್ನು ಆಗಲೇ ಸ್ವಾಧೀನ ಪಡಿಸಿಕೊಂಡಿರುವ ವಿವರಗಳಿರುವುದು - ಈ ಕತೆಯ ಸ್ಥೂಲ-ಸೂಕ್ಷ್ಮ ಅನುಭೂತಿಯನ್ನು ನಮಗೆ ನೀಡುತ್ತದೆ. ಈತ ತ್ರೇತಾಯುಗದ ಕಾಲನೇಮಿಯೇ ಇರಬೇಕು ಎನ್ನುವುದು ಕೂಡ ಒಂದು ಊಹೆ. ಆತ ನಮ್ಮ ವರ್ತಮಾನದ ಭ್ರಷ್ಟಾಚಾರವೂ ಆಗಿರುವುದು ಸಾಧ್ಯ. ಈ ಕತೆಯೊಂದಿಗೆ ಚಂದ್ರಶೇಖರ ಕಂಬಾರರ ಶಿಖರ ಸೂರ್ಯ ಕಾದಂಬರಿಯ ಕೆಲವು ವಿವರಗಳನ್ನು - ಮುಖ್ಯವಾಗಿ ಹಾರುವ ಹದ್ದಾಗಿ ಕೂರುವ ಶಿಖರಸೂರ್ಯನನ್ನು, ನೆನೆಯುವಂತಾಗುವುದು ನಿಜವೇ.

ಪ್ರಾಣದೇವರು ಕತೆ ಕೂಡ ಅಮೂರ್ತ-ಅಸಂಗತ ವಿದ್ಯಮಾನಗಳನ್ನೇ ನೆಚ್ಚಿ ಸಾಗುವ ನಿರೂಪಣೆ-ವಿವರಗಳನ್ನು ಹೊಂದಿದೆ. ಇಲ್ಲಿ ಮನುಷ್ಯರ ಹೃದಯಗಳನ್ನು ಸೇರಿಸಿ ಕಟ್ಟುವ ಮುಖ್ಯಪ್ರಾಣನ ದೇಗುಲ ಕಥಾವಸ್ತು. ಈ ಕತೆಯಲ್ಲಿ ಕೆಲವೊಂದು ಪ್ರಮುಖ ಅಂಶಗಳು ಕತೆಯ ಮೂಲ ಸೆಲೆಯನ್ನು ಒಡೆದು ತೋರುವಂತಿವೆ. ಒಂದು ಗುಡದಪ್ಪನ ಹೃದಯಕ್ಕಾಗಿ ಸ್ವಾಮಿಗಳು ಅವನ ಸಾವು ಹಾರೈಸಿ ಕಾಯುವುದು ಮತ್ತು ಕೊನೆಗೆ ಚಡಪಡಿಕೆ ತಡೆಯಲಾರದೆ ಅವನ ಕುತ್ತಿಗೆ ಹಿಸುಕುವುದು. ಎರಡನೆಯದು, ರಾತ್ರಿ ಸ್ಮಶಾನದಿಂದ ಗುಡದಪ್ಪನ ಹೆಣ ಹೊರತೆಗೆದು ಹುಡುಕಿದರೆ ಅವನ ದೇಹದೊಳಗೆ ಹೃದಯವೇ ಇಲ್ಲದಿರುವುದು! ಮೂರನೆಯದು, ಮನುಷ್ಯರ ಹೃದಯದಿಂದಲೇ ಕಟ್ಟಿದ ದೇವಸ್ಥಾನಕ್ಕೆ ಇಡುವ ಕಲಶ ಹೊಲೆಯ ಮುನಿಯನದ್ದಾಗುವುದು. ನಾಲ್ಕನೆಯ ಮತ್ತು ಕೊನೆಯ ಅಂಶ, ಈ ಹೃದಯಗಳೆಲ್ಲ ಜೀವ ತಳೆದು ತಮ್ಮ ತಮ್ಮ ಮನೆಯನ್ನು ಅರಸಿ ಹೊರಡುವುದು ಮತ್ತು ಊರ ಮಂದಿ ಅವುಗಳನ್ನು ಅಷ್ಟೇ ಸಹಜ-ಸಂಭ್ರಮಗಳಿಂದ ಸ್ವಾಗತಿಸುವುದು ನಡೆದರೂ ಮುನಿಯನ ಮನೆಯಲ್ಲಿ ಸಿಗುವ ಸ್ವಾಗತದ ವೈಪರೀತ್ಯ! ವಾಸ್ತವವಾಗಿ ವೈಪರೀತ್ಯವಿರುವುದು ಮುನಿಯನ ಮನೆಯ ಸ್ವಾಗತದಲ್ಲಿ ಅಲ್ಲ. ಕತೆಯ ಉಳಿದ ಎಲ್ಲ ವಿವರಗಳಲ್ಲಿಯೇ. ಆದರೆ ಇಡೀ ಕತೆಯ ವೈರುಧ್ಯವೇ ಈ ವೈಪ್ಯರೀತ್ಯವನ್ನು ಸಹಜವನ್ನಾಗಿಯೂ, ಸಹಜವನ್ನು ವೈಪ್ಯರೀತ್ಯವನ್ನಾಗಿಯೂ ಸಂರಚಿಸುವುದನ್ನು ಗಮನಿಸಬೇಕು. ಈ ಬಗೆಯ ಕತೆಗಳಲ್ಲಿಯೇ ಇದು ವಿಶಿಷ್ಟವಾಗುವುದು ಇದೊಂದೇ ಕಾರಣಕ್ಕಾಗಿ ಅಲ್ಲವೆನ್ನುವುದು ನಿಜವಾದರೂ, ಇಡೀ ಕತೆಯ ಸಂಯೋಜನೆಯಿಂದಲೇ ಈ ಕತೆಗೆ ದಕ್ಕಿದ ಘನತೆ ವಿಶೇಷವಾದದ್ದೇ.

ದಾರಿಯಲ್ಲಿ ಕತೆಗೆ ಸ್ಲಾವೋಮೀರ್ ಮ್ರೋಸೆಕ್ ಪ್ರೇರಣೆ ಎನ್ನಲಾಗಿದೆ. ಸಂದೇಶ ವಾಹಕರ, ಸಂದೇಶದ ಕುರಿತಾಗಿಯೇ ಇರುವ ಈ ಕತೆಯಲ್ಲಿ ಟೆಲಿಗ್ರಾಫ್ ತಂತಿಗಳು, ಕಂಬಗಳು ಇಲ್ಲ. ಮನುಷ್ಯರೇ ಶಿಸ್ತಾಗಿ ದಾರಿಯುದ್ದಕ್ಕೂ ನಿಶ್ಚಿತ ಅಂತರದಲ್ಲಿ ನಿಂತು ಒಬ್ಬರನ್ನೊಬ್ಬರು ಆಲಿಸಿ ಸಂದೇಶವನ್ನು ಒದರುತ್ತಾರೆ. ಸಂದೇಶ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೀಗೆ ಚಲಿಸುತ್ತದೆ, ಗಟ್ಟಿಯಾಗಿ-ಎಲ್ಲರಿಗೂ ಮುಟ್ಟಿಸಿಕೊಂಡು. ಅಲ್ಲದೆ, ಇವರಿಗೆಲ್ಲ ಧ್ವನಿವರ್ಧಕಗಳನ್ನೂ ನೀಡುವ ಯೋಚನೆ-ಯೋಜನೆ ಸರಕಾರಕ್ಕಿದೆ. ಹಾಗೆ ಇಲ್ಲಿ, ತಂದೆ ನಿಧನರಾಗಿದ್ದು, ಬುಧವಾಗ ಸಂಸ್ಕಾರ ನಡೆಯಲಿರುವ ಸುದ್ದಿ ನಮಗೂ ಸಿಗುತ್ತದೆ. ಯಾಕೆ ಈ ಸುದ್ದಿ ನಮಗೆ ತಲುಪಿದೆ, ಸತ್ತಿದ್ದು ಯಾರ ತಂದೆ, ನಮಗೇ ತಲುಪಬೇಕಾದ ಸುದ್ದಿಯಾಗಿದ್ದರೆ ಯಾಕೆ ಹೀಗೆ ಊರೆಲ್ಲ ಕೇಳುವಂತೆ ಕೇಳಿಸಿಕೊಂಡು ಬರುತ್ತಿದೆ, ಹಾಗೆ ಬದುಕಿನ ಸೂಕ್ಷ್ಮಗಳೆಲ್ಲ ಉದ್ಘೋಷಣೆಯಾಗುತ್ತಿರುವುದು ಸರಿಯೆ, ತಪ್ಪೆ ಎನ್ನುವ ಪ್ರಶ್ನೆಗಳ ಕುರಿತೆಲ್ಲ ನಾವು ಮೆಲ್ಲಗೆ ನಮ್ಮೊಳಗೇ ಎಂಬಂತೆ ಯೋಚಿಸಬಹುದು.

ಒಂದು ಘಟನೆ ಕತೆಯಲ್ಲಿ ವಾಸ್ತವವಾಗಿ ಇರುವುದು ಎರಡು ಘಟನೆ, ಎರಡು ಪಾತ್ರಗಳು ಮತ್ತು ಎರಡು ಊರುಗಳು. ಆದರೆ ಈ ಎರಡರ ನಡುವೆ ಎಷ್ಟೆಲ್ಲ ಕತೆಗಳು, ಘಟನೆಗಳು, ಪಾತ್ರಗಳು ಸಿಲುಕಿಕೊಂಡಂತೆ ಉಳಿದಿವೆ ಎನ್ನುವುದು ವಿಶೇಷ. ಅವಳು ಟ್ಯಾಕ್ಸಿಯಲ್ಲಿ ಕುಳಿತು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವ ಪಯಣದಲ್ಲೇ ಪ್ರಧಾನವಾಗಿ ಕಾಣುವ ಘಟನೆ, ಚಿತ್ರಾಂದಿ ಪೇಟೆಯ ಗುಡಿಸಲಗೇರಿಗೆ ಬೆಂಕಿಬಿದ್ದು ಇಡೀ ಕೇರಿಗೆ ಕೇರಿಯೇ ಸುಟ್ಟು ಕರಕಲಾದ ಕತೆ ಒಂದು. ಗುಡಿಸಲಿಗೆ ಬೆಂಕಿಬಿದ್ದಾಗ ಅರ್ಧ ಸುಟ್ಟು, ರಾತ್ರಿ ಸುರಿದ ಮಳೆಯಲ್ಲಿ ನೆನೆ ನೆನೆದು ಸತ್ತ ಬಸುರಿ ಹೆಂಗುಸಿನ ಕತೆ ಇನ್ನೊಂದು. ಕತೆಯಲ್ಲಿ ಬರುವ ಟ್ಯಾಕ್ಸಿ ಡ್ರೈವರನ ಹಣೆಯ ಕುಂಕುಮದ ಬೊಟ್ಟು, ಅವಳ ಕಡುಗೆಂಪು ಬಣ್ಣದ ವ್ಯಾನಿಟಿ ಬ್ಯಾಗು, ಮಳೆಯಿಂದಾಗಿ ಡಾಂಬರು ರಸ್ತೆಯಲ್ಲಿ ಅಲ್ಲಲ್ಲಿ ನಿಂತ ಕೆಂಪು ನೀರು, ಸುಟ್ಟು ಕರಕಲಾದ ಗುಡಿಸಲಗೇರಿಯಲ್ಲೇ ಗಳುವಿನ ಮೇಲೆ ಚಿಂದಿಚಿಂದಿಯಾಗಿ ಜೋತುಬಿದ್ದಿರುವ ಡಿ.ಎಂ.ಕೆ. ಬಾವುಟ, ಟ್ಯಾಕ್ಸಿ ಇಳಿದು ಹೋದವಳ ಪಿರ್ರೆಗಳ ಅಡಿಗೆ ಅಂಗೈಯಷ್ಟಗಲ ಕೆಂಪಗೆ ಹರಡಿಕೊಂಡಿರುವುದನ್ನು ಗಮನಿಸಿದಂತೆಯೇ ಕಾರಿನ ಹಿಂದಿನ ಸೀಟಿನಲ್ಲೂ ಕಾಣುವ ರಕ್ತದ ಹನಿಗಳು ಎಲ್ಲವೂ ಕೆಂಪು ಮತ್ತು ಬದುಕನ್ನು ಅದರ ಹಲವು ಆಯಾಮಗಳಲ್ಲಿ ಹಿಡಿಯುವುದು ಕತೆಯ ಸೂಕ್ಷ್ಮ ವಿಶೇಷ.

ಇತಿಹಾಸ (ಕಥಾಸಂಕಲನ)
ಭಾಗ್ಯಲಕ್ಷ್ಮೀ ಪ್ರಕಾಶನ
87, 3ನೆಯ ಕ್ರಾಸ್
4 ನೆಯ ಬ್ಲಾಕ್
ಬನಶಂಕರಿ 3ನೆಯ ಸ್ಟೇಜ್, 3ನೆಯ ಫೇಸ್
ಬೆಂಗಳೂರು-560 085
(ದೂರವಾಣಿ:26695715) (94480 47735)
ಪುಟಗಳು: 110
ಬೆಲೆ: ಐವತ್ತು ರೂಪಾಯಿ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ