Wednesday, November 4, 2009

ಕೇಶವ ಮಳಗಿ ಕಥಾಲೋಕ: ಮಾಗಿ ಮುವ್ವತ್ತೈದು (1998) (ಪಾವೆಂ ಕಥಾ ಪುರಸ್ಕಾರ)

ಮಳಗಿಯವರ ಕಥೆಯ ಆಕೃತಿ ಮತ್ತು ಶಿಲ್ಪದಲ್ಲಿ ನಾವು ಮೊತ್ತ ಮೊದಲಿಗೆ ಗಮನಿಸುವುದು ಅಲ್ಲಿ ಬರುವ ದಟ್ಟ ವಿವರಗಳು ನಮ್ಮಲ್ಲಿ ಜೀವಂತಗೊಳಿಸುವ ಒಂದು ಬೇರೆಯೇ ಆದ ಜಗತ್ತು. ಕಥಾನಕದ ನಿಧಾನಗತಿಯ ಚಲನೆ ಪಾತ್ರಗಳ ಮತ್ತು ಸನ್ನಿವೇಶದ ಜೀವಂತಿಕೆಗೆ ನೀಡುವ ಅಸಾಧಾರಣ ಮಹತ್ತೂ ಸೇರಿದಂತೆ ಇವರು ಒಂದು ಸಮುದಾಯವನ್ನೇ ಅದರೆಲ್ಲ ಸೂಕ್ಷ್ಮವಿವರಗಳಲ್ಲಿ ಕಟ್ಟಿಕೊಡುವ ಪರಿ. ಇದನ್ನು ನಾವು ಕಾಣುತ್ತ ಬಂದಿರುವುದು ಕಾದಂಬರಿ ಪ್ರಕಾರದಲ್ಲಿ. ಸಣ್ಣಕತೆ ಪ್ರಕಾರದ ಸಿದ್ಧ ಮಾದರಿಯೇನಿದೆ, ಅದರ ಗಾತ್ರದಲ್ಲಿ, ಸಾಧಾರಣವಾಗಿ ಪಂಚ್ ಕೊಡುವ ಅಂತ್ಯಕ್ಕಿರುವ ಮಹತ್ವದಲ್ಲಿ ಮತ್ತು ಸಣ್ಣಕತೆಯೊಂದರ ಪ್ರಧಾನ ಲಕ್ಷಣವಾದ ಬಿಗಿಯಾದ ಕಥಾನಕವೊಂದರ ಚಲನೆಯ ಗತಿ ಅಥವಾ ವೇಗದಲ್ಲಿ, ಅದನ್ನು ಮಳಗಿಯವರಲ್ಲಿ ಕಾಣುವುದು ವಿರಳ. ಹಾಗೆ "ಟಿ.ಪಿ.ಅಶೋಕರವರು ಗುರುತಿಸುವಂತೆ ಇವರಿಗೆ ಕಾದಂಬರಿಯ ಮಾಧ್ಯಮ ಹೆಚ್ಚು ಸೂಕ್ತವಾದದ್ದು ಅನಿಸುತ್ತದೆ" ಎನ್ನುವ ಎಸ್.ಹೇಮಾ ಅನಿಸಿಕೆ ಕೂಡ ಸರಿ ಅನಿಸುತ್ತದೆ. ಮಳಗಿಯವರು ಇದುವರೆಗೆ ಕುಂಕುಮ ಭೂಮಿ ಮತ್ತು ಅಂಗದ ಧರೆ ಎಂಬ ಎರಡು ಕಾದಂಬರಿಗಳನ್ನೂ ಕೊಟ್ಟಿದ್ದಾರೆ. ಒಂದರ್ಥದಲ್ಲಿ ಇವರ ಕೆಲವಾದರೂ ಕತೆಗಳನ್ನು, ಉದಾಹರಣೆಗೆ ಕೆಂಪು ಮಣ್ಣಿನ ಒಕ್ಕಲು, ನಕ್ಷತ್ರ ಯಾತ್ರಿಕರು, ಕಡಲತೆರೆಗೆ ದಂಡೆ, ಸೌಭಾಗ್ಯವತಿ - ಮುಖ್ಯವಾಗಿ ಹರಹು, ವ್ಯಾಪ್ತಿ ಮತ್ತು ಚಿತ್ರಣದ ರೀತಿಯಿಂದಲಾದದರೂ ಕಾದಂಬರಿಗೇ ಹೆಚ್ಚು ಹತ್ತಿರವಿದ್ದು ಅವನ್ನು ಕಾದಂಬರಿಯೆಂದೇ ಗ್ರಹಿಸಿದರೂ ತಪ್ಪೇನಿಲ್ಲ ಅನಿಸುತ್ತದೆ!

ಮಳಗಿಯವರ ಹೆಚ್ಚಿನ ಎಲ್ಲಾ ಪಾತ್ರಗಳಿಗೂ ತಮ್ಮ ಬಾಲ್ಯದ, ಅಲ್ಲಿರುವ ಮುದುಕ-ಮುದುಕಿಯರ ಬದುಕಿನ ಕಾಳಜಿ, ತಮ್ಮನ್ನು ಸಾಕಿ-ಸಲಹಿ-ಪೋಷಿಸಿದ ಜೀವಗಳ ಕುರಿತ ಮೋಹ ಹೆಚ್ಚು. ಪ್ರಸ್ತುತಕ್ಕಿಂತ ಈ ಮೂಲವೇ ಎಷ್ಟೋ ಕಡೆ ಮುಖ್ಯವಾಗುವುದನ್ನು ತಂತ್ರವಾಗಿ ಬೇಕಾದರೂ ನೋಡಿ, ಕಥಾನಕದ ಸಹಜ ನಡೆಯಾಗಿ ಬೇಕಾದರೂ ನೋಡಿ, ಅದು ನಿಮಗೆ ಬಿಟ್ಟಿದ್ದು. ಆದರೆ ಈ ಮೋಹ ನಿಜವಾದದ್ದು ಎನ್ನುವುದಕ್ಕೆ ಮಳಗಿಯವರ ನೇರಳೆ ಮರದ ಒಂದು ಅಧ್ಯಾಯ, ಹಳೆ ಮಂದಿಯ ಹಳಹಳಿಕೆ ಗಮನಿಸಬಹುದು.

ಭಾವುಕತೆ, ಸ್ತ್ರೀಸಂವೇದನೆಯ ಪ್ರಧಾನ ಧಾರೆ ಇವೆರಡರೊಂದಿಗೇ ಮಳಗಿಯವರಿಗೇ ವಿಶಿಷ್ಟವಾದ ಕೆಲವು ಅಂಶಗಳಿವೆ. ಅವುಗಳಲ್ಲಿ ಒಂದು, ಮಳಗಿಯವರ ಕತೆಗಳಲ್ಲಿ ನಮಗೆ ಮತ್ತೆ ಮತ್ತೆ ಎದುರಾಗುವ ಆಧ್ಯಾತ್ಮ-ಸಂನ್ಯಾಸ-ಮಠ-ಸ್ವಾಮೀಜಿ ಇತ್ಯಾದಿಗಳ ಒಂದು ತುಡಿತ. ಇನ್ನೊಂದು, ಸಾವು-ಮೃತ್ಯುಪ್ರಜ್ಞೆ ಅಥವಾ ಆತ್ಮಹತ್ಯೆ, ಕಣ್ಮರೆ, ನಿರಾಕರಣ, ಆಧ್ಯಾತ್ಮ - ಒಂದು ರೂಪಕವಾಗಿ ಕತೆಯಲ್ಲಿ ಒಡಮೂಡುವುದು. ಇದನ್ನು ನಾವು ಭೌತಿಕವಾಗಿ ಗ್ರಹಿಸಿದರೂ, ಅಮೂರ್ತ ಸ್ಥಿತಿಯೊಂದನ್ನು ಕತೆ ಮತ್ತು ಕತೆಯ ಪಾತ್ರಗಳಿಗೆ ತೊಡಿಸಿದಂತೆ ಗ್ರಹಿಸಿದರೂ ಒಟ್ಟು ಕಥಾನಕದ ದೃಷ್ಟಿಯಿಂದ ಅವು ಸಮರ್ಥವಾದ ನೋಟಕ್ಕೆ ಕಾರಣವಾಗುವುದು ನಿಜವೇ. ಆದರೂ ಈ ವಿದ್ಯಮಾನಗಳು ಮತ್ತೆ ಮತ್ತೆ ಬರುವುದರ ತಾಂತ್ರಿಕ ಪಾತಳಿ ಯಾವುದು ಮತ್ತು ಬದುಕಿನ ಚಿತ್ರಕ್ಕೆ ಸಂಬಂಧಿಸಿದಂತೆ ಅವುಗಳ ಅಂದರೆ ಮೃತ್ಯುಪ್ರಜ್ಞೆ, ನಿರಾಕರಣ, ಕಣ್ಮರೆಯಾಗಿ ಬಿಡುವುದು ಅಥವಾ ಆಧ್ಯಾತ್ಮದ ಮೊರೆ ಹೋಗುವುದು ಇತ್ಯಾದಿ ಉಂಟು ಮಾಡುವ ಪರಿಣಾಮದ ನೆಲೆಗಳು ಯಾವುವು ಎಂಬುದು ಮಳಗಿಯವರ ನಿರ್ದಿಷ್ಟ ಕತೆಗಳ ಮತ್ತು ಪಾತ್ರಗಳ ಹಿನ್ನೆಲೆಯಲ್ಲಿ ಚರ್ಚಿಸಲು ಯೋಗ್ಯವಾದ ವಿಚಾರ. ಸ್ವಗತದ ಧಾಟಿಯನ್ನು ಕತೆಯ ನಡುನಡುವೆ ಬಳಸಿಕೊಂಡು ಕತೆ ಹೇಳುವ ಮುಖೇನ ಓದುಗನೊಂದಿಗೆ ಒಂದು ಆಪ್ತ ಸಂಬಂಧವನ್ನು ಏರ್ಪಡಿಸಿಕೊಂಡು ಬಿಡುವ ಮಳಗಿಯವರ ಪಾತ್ರಗಳು ಅಪಾರ ಮಾನವೀಯ ಅನುಕಂಪ ಮತ್ತು ಸಮುದಾಯ ಪ್ರಜ್ಞೆಯನ್ನು ಹೊಂದಿರುವಂಥವು. ಅನುಕಂಪ-ಅನುತಾಪ ಈ ಪಾತ್ರಗಳ ಮೂಲಗುಣ. ಅದಕ್ಕೆ ಯಾವುದೇ ಕಾರ್ಯಕಾರಣ ಸಂಬಂಧದ ಆಧಾರಗಳಿರಬೇಕಿಲ್ಲದಿರುವುದು ಗಮನಿಸಬೇಕಾದ ಮಹತ್ವದ ಅಂಶ.

ಬರವಣಿಗೆಯ ಕುರಿತೇ ಕೇಶವ ಮಳಗಿಯವರು ಅಲ್ಲಿ ಇಲ್ಲಿ ಆಡಿದ ಈ ಕೆಳಗಿನ ಕೆಲವು ಮಾತುಗಳೂ ಅವರ ನಿಲುವುಗಳನ್ನು ಸ್ಪಷ್ಟಗೊಳಿಸುವುದರ ಜೊತೆಗೇ ಅವರು ಬರವಣಿಗೆಯನ್ನು ಎಷ್ಟು ಗಂಭೀರವಾಗಿ ಸ್ವೀಕರಿಸಿದವರು ಎಂಬುದನ್ನು ನಮಗೆ ತಿಳಿಸುವಂತಿವೆ. ಮಾತ್ರವಲ್ಲ, ಅವರ ಕಥೆಗಳಿಗೆ ಈ ಮಾತುಗಳು ಒಂದು ಪ್ರವೇಶಿಕೆಯನ್ನೂ ಒದಗಿಸುವಂತಿವೆ.

`ಅಕ್ಷರಗಳು ಬಳಸಿ ಬಳಸಿ ಅರ್ಥ ಅಳ್ಳಕವಾದ, ರಂಜಿಸಿ ಮರೆತು ಹೋಗಬಹುದಾದ, ಹುಸಿ ಭಾಷಾಚಾತುರ್ಯದಲ್ಲಿ ಮುಳುಗೇಳುವ, ಅತಿವಿಶಿಷ್ಟ ಅಸ್ತಿತ್ವವನ್ನು ನಿರೂಪಿಸಲಾರದ ಅಳುಬುರುಕು ಪ್ರೇಮಕಥೆಗಳನ್ನು, ಅವಡಸವಡ ಘಟನೆಗಳಿರುವ ಸರ್ವೇಸಾಮಾನ್ಯ ಸಂಗತಿಗಳು ಮುಕುರಿದ ಕಥೆಗಳನ್ನು ಕೊರೆಯಲೇ ಬೇಡ. ನಿಜವಾಗಿಯೂ ತಟ್ಟುವುದನ್ನು ಕಟ್ಟಲು ಅಪಾರ ತಾಳ್ಮೆ, ಮನಸ್ಸಿನೊಳಗೆಯೆ ನಡೆವ ಸಂಘರ್ಷದಲ್ಲಿ ಹುಟ್ಟುವ ಅವಮಾನವನ್ನು ತಡೆದುಕೊಳ್ಳುವ ಶಕ್ತಿ, ಅನುಭವವನ್ನು ದಾಖಲಿಸುವಾಗ ಬೇಕಾಗುವ ಪ್ರಶ್ನಾತೀತ ಅಪ್ಪಟ ಕಾಳಜಿ ಬೇಕಾಗುತ್ತದೆ. ಬರೆದಾದ ಮೇಲೆ ಇದರಿಂದ ಎಂಥದಾದರೂ ಸಿಕ್ಕೀತು ಎಂಬ ದೇಶಾವರಿತನವನ್ನು ಆಚೆ ತಳ್ಳುವ ಎದೆಗಾರಿಕೆ ಬೇಕಾಗುತ್ತದೆ.’

`ದಿನದ ಬದುಕು ನಿನಗೆಂಥ ಅನುಭವ ನೀಡುತ್ತಿದೆ, ಅದು ಕೊಟ್ಟ ಖುಶಿ-ಯಾತನೆ, ಆಸೆ, ಕಾತರತೆ ಎಂಥವು, ಸುತ್ತಮುತ್ತ ಕಾಣುತ್ತಿರುವುದರಲ್ಲಿ ಬದುಕಿನ ಎಂಥ ರೂಪಕಗಳು ಅಡಗಿವೆ, ಕನಸಿನೊಳಗೆ ಸುಳಿವ ಪ್ರತೀಕಗಳು ಏನನ್ನು ಹೇಳುತ್ತವೆ ಎಂಬುದನ್ನು ಗಮನಿಸಬೇಕು. ಇಂಥ ಬರಹ ಪರಿಶುದ್ಧ ಮನಸ್ಸುಗಳನ್ನು ತಟ್ಟಬಲ್ಲುದಾಗಿದ್ದು ಅಂಥದನ್ನು ಬರೆದಾದ ಮೇಲೆ ನಿನ್ನ ಒಳಗಿನ ಸಾಮರ್ಥ್ಯವನ್ನು ಹೆಚ್ಚಿಸುವಂತಿರುತ್ತದೆ.’ ( ನೇರಳೆ ಮರ, ಪುಟ:58)

ಇದುವರೆಗೆ ಮಳಗಿಯವರ ಮೂರು ಕಥಾಸಂಕಲನಗಳು ಹೊರಬಂದಿವೆ. ಆದರೆ ಅವುಗಳಲ್ಲಿ ಮೊದಲನೆಯ ಕಥಾಸಂಕಲನ ಕಡಲತೆರೆಗೆ ದಂಡೆಯ ಪ್ರತಿಗಳು ಸಿಗುತ್ತಿಲ್ಲವಾದರೂ ಸಾಕ್ಷಿ (1986) ಮತ್ತು ಎಲ್ಲರ ನಡುವೆ ಎಲ್ಲರ ಹಾಂಗ (1986) ಎಂಬ ಎರಡು ಕತೆಗಳನ್ನು ಬಿಟ್ಟರೆ ಉಳಿದವು ಮೂರನೆಯ ಸಂಕಲನ ವೆನ್ನೆಲದೊರಸಾನಿಯಲ್ಲಿ ಲಭ್ಯವಿವೆ.

ಕೆಂಪು ಮಣ್ಣಿನ ಒಕ್ಕಲು-1998
ಹಾಗೆ ನೋಡಿದರೆ ಇದು ಹಶಂಬಿಯೆಂಬ ಹೆಣ್ಣುಮಗಳ ಬದುಕಿನ ಹೋರಾಟದ ಕತೆ. ಕತೆಯ ಮುಕ್ಕಾಲು ಭಾಗ ಮೂರು ದಿನದ ಉರೂಸಿಗೆ ಹೋಗಿ ಬರುವ ವಿವರಗಳಲ್ಲೇ ಮುಗಿಯುತ್ತದೆ. ಹಾಗಾಗಿ ಇಲ್ಲಿನ ಕಥಾನಕದ ಚಲನೆ ಸ್ಥಗಿತವೆಂಬಷ್ಟು ನಿಧಾನಗತಿಯಲ್ಲಿದ್ದರೆ ಮುಂದಿನ ಕಾಲು ಭಾಗದಲ್ಲಿ ಬಹಳಷ್ಟು ವೇಗವಾಗಿ ಕತೆಯ ತಿರುವುಗಳು,ದುರಂತಗಳು ಸಾಲು ಸಾಲಾಗಿ ಬರುತ್ತವೆ. ಇದರಿಂದ ಕಥಾನಕಕ್ಕೆ ಯಾವುದೆ ಬಗೆಯ ತೊಡಕು ಉಂಟಾದಂತಿಲ್ಲವೆಂಬುದು ನಿಜವಾದರೂ ಕತೆಯ ಪೂರ್ವಾರ್ಧದ ವೇಗವನ್ನೇ ಉದ್ದಕ್ಕೂ ನಿರ್ವಹಿಸಿದ್ದರೆ ಒಂದು ಕಾದಂಬರಿಯ ಸೊಗಸಾದ ನಿರೂಪಣೆ ಸುಲಭ ಸಾಧ್ಯವಿತ್ತು ಅನಿಸದೇ ಇರದು.

ಈ ಕತೆಯ ಓದು ಅಮರೇಶ ನುಗಡೋಣಿಯವರ ಒಂದು ಕತೆ, ದಾರಿ ಮೂಡಿಸುವ ಹೆಜ್ಜೆಗಳು ಕತೆಯ ನೆನಪು ಮೂಡಿಸುತ್ತದೆ. ಅಲ್ಲಿನ ತಿಮ್ಮಕ್ಕ, ಅವಳ ಮಗಳು ಮಾದೇವಿ ಎದುರಾಗುವ ಸಮಸ್ಯೆಯನ್ನೇ ಇಲ್ಲಿ ಹಶಂಬೀ ಅವಳ ಮಗಳು ಶಬಾನ ವಿಚಾರದಲ್ಲಿ ಎದುರಿಸುತ್ತಾಳಾದರೂ ಹಶಂಬಿಯ ನೋವು ಬೇರೆಯೇ ಬಗೆಯದು. ಅಲ್ಲಿ ತಿಮ್ಮಕ್ಕ ತನ್ನ ಮಗಳ ಸಮಸ್ಯೆಯನ್ನು ತಾನೇ ನಿಭಾಯಿಸಿದರೆ ಇಲ್ಲಿ ಅದಕ್ಕೆ ಅವಕಾಶವಿಲ್ಲದಂತೆ ಮಗಳು ಹಶಂಬಿಯನ್ನೇ ತೊರೆದು ಹೋಗುತ್ತಾಳೆ. ಅಲ್ಲಿ ತಿಮ್ಮಕ್ಕ ಸಂಸಾರದ ಹೊಣೆಯನ್ನೆಲ್ಲ ನಿಭಾಯಿಸಿದ ಹಾಗೆ ಇಲ್ಲಿನ ಹಶಂಬಿ ನಿಭಾಯಿಸುತ್ತಾಳಾದರೂ ಅವಳಿಗೆ ಒಂಟಿತನವೇ ಸಂಗಾತಿಯಾಗುವುದು ಇಲ್ಲಿನ ವಿಧಿ. ಕೊನೆಗೂ ಗಂಡ-ಮಕ್ಕಳು ಎಲ್ಲರಿಂದಲೂ ಒಂಟಿಗೊಳ್ಳುವ ಹಶಂಬಿ ಮನುಷ್ಯ ಸಂಬಂಧಗಳಲ್ಲಿ ಕಂಡುಕೊಳ್ಳುವ ದುರಂತಗಳು, ಅವಳ ಅಂತರಂಗದ ದುಮ್ಮಾನಗಳು ಹೆಚ್ಚು ತೀವ್ರವಾದವು. ಅದಕ್ಕೆ ತಕ್ಕ ಕಥಾನಕದ ನಿರೂಪಣಾ ತಂತ್ರವೂ ಇಲ್ಲಿದೆ.

ಯಾರಿಲ್ಲಿಗೆ ಬಂದವರು ಕಳೆದಿರುಳು-1990
ಸ್ಮೃತಿಯ ಅದ್ಭುತ ಸಂಯೋಜನೆಯಿಂದಲೇ ಇಲ್ಲಿನ ಕಥಾನಕ ಮೈತಾಳುವುದು ಒಂದು ಸೋಜಿಗ. ಹಾಗೆ ನೋಡಿದರೆ ಈ ಕತೆಯಲ್ಲೂ ಕತೆಯ ಮುಮ್ಮೊಗ ಚಲನೆ-ನಡೆ ಎಂಬುದಿಲ್ಲ. ಇರುವುದೆಲ್ಲ ನೆನಪುಗಳೇ. ಬದುಕಿನ ಖುಶಿಯ, ಲಹರಿಯ, ಮಸ್ತಿಯ, ಆವೇಗದ ದಿನಗಳ ಸ್ಮೃತಿ ಇದೀಗ ಆತಂಕಕ್ಕೆ ಕಾರಣವಾದ ಒಡಲಲ್ಲಿ ರೂಪು ತಳೆಯುತ್ತಿರುವ ಒಂದು ಜೀವಕ್ಕೆ ಸ್ವಾಗತ ಕೋರುವುದೇ ಅಥವಾ ಅದರ ಹಿತಕ್ಕೂ ಸೇರಿದಂತೆ ಮಗುವನ್ನು ಹಡೆಯದಿರುವುದೇ ಎನ್ನುವ ನಿರ್ಧಾರಕ್ಕೆ ಕಾರಣವಾಗುವ ಸಂಯೋಜನೆಯನ್ನು ಕೊಂಚ ಗಮನವಿಟ್ಟು ನೋಡಬಹುದು. ಹೊಟ್ಟೆಯಲ್ಲಿರುವ ಇನ್ನೂ ರೂಪು ತಳೆಯದಿರುವ ಮಗು, ಜೊತೆಗಿರುವ ಅತ್ಯಂತ ಪ್ರೀತಿಯ ಸಂಗಾತಿ ಮತ್ತು ಈ ಬಾಲ್ಯದ ನೆನಪುಗಳು ಒಂದನ್ನೊಂದು ಹೊರತುಪಡಿಸಿ ಅಸ್ತಿತ್ವವಿಲ್ಲದ ಸಂಗತಿಗಳೇ.

ಮಳಗಿಯವರ ಹೆಚ್ಚಿನ ಎಲ್ಲ ಕತೆಗಳಲ್ಲೂ ಇರುವ ನೆನಪುಗಳ, ಭೂತದ ಮೋಹವೇ ಇಲ್ಲಿಯೂ ಗೆಲ್ಲುವುದು. ಇಲ್ಲಿನ ಮನುಷ್ಯ ಸಂಬಂಧಗಳು ಕೂಡ ಭೌತಿಕ ಅಸ್ತಿತ್ವಕ್ಕಿಂತ ಭಾವುಕ ಜಗತ್ತಿನ ಅಸ್ತಿತ್ವವನ್ನೇ ನೆಚ್ಚುವುದು ಹೆಚ್ಚು. ಹಾಗಾಗಿ ಇನ್ನೂ ಮೊಳೆಯದ ಮಗುವಿಗಿಂತ ಸಂಗಾತಿಯ ಸಾನ್ನಿಧ್ಯ, ಸಾಂಗತ್ಯ ಮತ್ತು ಸ್ನೇಹ ಹೆಚ್ಚು ಮುಖ್ಯವಾಗುತ್ತದೆ, ಮಗು ಹೊರೆಯಾಗಬಹುದಾದ ಮೂರನೆಯ ಜೀವ ಎನಿಸಿಕೊಳ್ಳುತ್ತದೆ, ಅದೂ ಆ ಮಗುವಿನ ಹುಟ್ಟಿನ ಬಗ್ಗೆ ಇರುವ ಗೊಂದಲದ ಹಿನ್ನೆಲೆಯಲ್ಲಿ. ಆದರೆ ಅವಳದನ್ನು ಹೇಳುವಾಗ ಸಂಗಾತಿಯನ್ನೆ ಹೊರೆಯೆನಿಸುತ್ತೀಯಾ ಎಂದು ಹೇಳುವುದನ್ನು ಗಮನಿಸಿ!

‘ಕಿಶೋರ, ಯಾಕೋ ನನಗೆ ಕನ್ಸೀವ್ ಆದಾಗಲೆಲ್ಲ ನಿನ್ನ ಸಂಗ ಅಸಹನೀಯವಾಗುತ್ತೆ. ನೀನು - ನಿನ್ನ ಜತೆ ಹೊರೆಯೆನಿಸುತ್ತದೆ. ನಿನ್ನ ಬಿಟ್ಟು ದೂರ ಓಡಿ ಹೋಗಬೇಕೆನಿಸುತ್ತೆ. ಆದರೆ ಅದು ಸಾಧ್ಯಾನ? ನಾನು ತುಂಬ ಬಲಹೀನಳಾಗಿ ಬಿಡ್ತೇನೆ ಆಗೆಲ್ಲ...’

ಉತ್ಪಾತ-1991
ಉತ್ಪಾತ ಕತೆಯಲ್ಲಿ ಕೂಡ ಕಡಲತೆರೆಗೆ ದಂಡೆ ಕತೆಯಲ್ಲಿಯಂತೆ ಮೂವರು ಹುಡುಗರಿದ್ದಾರೆ, ಅವರ ಮೂರು ಜಗತ್ತುಗಳಿವೆ. ಕಡಲ ತೆರೆಗೆ ದಂಡೆ ಕತೆಯಲ್ಲಿನ ಹಾಗೆ ಇಲ್ಲಿಯೂ ಒಬ್ಬ ಮುನೀರ, ಮಾಧವ ಮತ್ತು ತುಕಾರಾಮ. ಮೂವರೂ ಕದ್ದು ಮನೆಬಿಟ್ಟು ಮುಂಬಯಿಗೆ ಹೋಗಿ ರಗಡ್ ರೊಕ್ಕಾ ದುಡಿದು ತರುವ ಉದ್ದೇಶದಿಂದ ಹೊರಟವರು. ಕುಂಟ ದೇಶಪಾಂಡೆ ಮಾಸ್ತರ ಹೇಳಿದ ‘ಹಕ್ಕಿಗಳಾ’ಗಲು ಹೊರಟವರು. ಇಲ್ಲಿನ ಮುನೀರನಿಗೆ ಪತ್ರೋಳಿ ಕತೆಯ ನೇಮಕಲ್ಲಿಯ ಛಾಯೆಯಿದೆ. ಅವನಲ್ಲಿ ಸಹಜವಾಗಿಯೇ ತನಗೆ ದತ್ತವಾದ ಬದುಕಿನ ದೌರ್ಭಾಗ್ಯದ ಕುರಿತು ರೋಷವಿದೆ. ಆದರೆ ಮಾಧವನಲ್ಲಿ ಇರುವುದು ಮುನೀರನ ಭಾವವಲ್ಲ. ಅವನಿನ್ನೂ ಹಿಂದೆ ಬಿಟ್ಟು ಬಂದ ಜಗತ್ತಿನಿಂದ ಕಳಚಿಕೊಳ್ಳುವ ವಿಫಲ ಯತ್ನದಲ್ಲೇ ಇದ್ದಾನೆ. ತುಕಾರಾಮ ಇಲ್ಲಿ ಬಹುತೇಕ ಒಂದು ಮಧ್ಯಬಿಂದುವಿನಂತಿದ್ದಾನೆ. ಅವನ ಜಗತ್ತು, ನಿಲುವು, ಭಾವ ಯಾವುದೂ ಅನಾವರಣಗೊಳ್ಳುವುದಿಲ್ಲದಿರುವುದು ಕೂಡ ಒಂದು ಬಗೆಯ ಸಾಕ್ಷಿಪ್ರಜ್ಞೆಗೆ ಈ ಪಾತ್ರ ಹತ್ತಿರವಿರುವಂತಿರಲು ಕಾರಣ. ಕಾದಂಬರಿಯೊಂದರ ನಡುವಿನ ಅಧ್ಯಾಯದಂತೆ ಸುರುವಾಗಿ ಮುಗಿದು ಬಿಡುವ ಈ ಕತೆ ಇನ್ನೂ ಆಕೃತಿಯನ್ನು ಪಡೆಯದೇ ಅರ್ಧದಲ್ಲಿ ಕೈಬಿಟ್ಟ ಶಿಲ್ಪದ ಭಾವವನ್ನು ಉದ್ದೀಪಿಸುತ್ತದೆ.

ಸೌಭಾಗ್ಯವತಿ-1990
ಒಂದು ಕಾದಂಬರಿಯ ಹರಹು ಇರುವ ಈ ಕಥಾನಕ ತುಂಗಭದ್ರೆಯ ಬಾಲ್ಯ, ಯೌವನ, ಮಧ್ಯವಯಸ್ಸನ್ನು ಹಾದು ಅವಳು ಮೊಮ್ಮಗುವಿನ ಪಾಲನೆ ಪೋಷಣೆಯಲ್ಲಿ ವ್ಯಸ್ತಳಾಗುವವರೆಗೆ ಚಾಚಿಕೊಂಡಿದೆ ಮಾತ್ರವಲ್ಲ ಹೆಣ್ಣಿನ ಆಳದ ಸಲಹುವ ಗುಣಾವೇ, ತಾಯ್ತನವೇ ಇಡೀ ಕತೆಯ ಸ್ಥಾಯೀಭಾವವಾಗಿ ಚಿತ್ರಿಸಲ್ಪಟ್ಟಿದೆ. ಏಕಕಾಲಕ್ಕೆ ಮಾಸ್ತಿಯವರ ಶೇಷಮ್ಮನನ್ನೂ, ರಾಘವೇಂದ್ರ ಪಾಟೀಲರ ಮಾಯಿಯ ಮುಖಗಳು ಕತೆಯ ಮೂವರು ಅಕ್ಕತಂಗಿಯರನ್ನೂ ನೆನೆಯುವಂತೆ ಮಾಡುವ ಈ ಕಥಾನಕ ಕಾದಂಬರಿಯಾಗಬಲ್ಲ ಎಲ್ಲ ಲಕ್ಷಣಗಳನ್ನೂ ಹೊಂದಿದೆ. ದಟ್ಟ ವಿವರಗಳು, ಕಥಾನಕದ ವೇಗದ ಚಲನೆಯೇ ಗುರಿಯಾಗಲೊಲ್ಲದ ನಿರೂಪಣೆ ಮತ್ತು ಹೆಣ್ಣಿನ ಸಲಹುವ ಗುಣಕ್ಕೇ ಒಂದು ರೂಪಕವೆಂಬಂತೆ ಆಕೃತಿ ಪಡೆಯುವ ಇಲ್ಲಿನ ತಂತ್ರ ಗಮನಾರ್ಹವಾಗಿದೆ.

ಕತೆಯಲ್ಲಿ ‘ಕಡೆಗೂ ತುಂಬಭದ್ರೆಗೆ ಉಳಿದದ್ದು ಶಕುಂತಲೆಯ ಒಂಟಿತನ; ಹೃಷಿಕೇಶನಿಂದಲೂ ಪರಿಹರಿಸಲಾರದಂಥ ಸಂಕಷ್ಟ, ನೋವು, ವೇದನೆ...’ ಎನ್ನುವ ಸಾಲಿದೆ. ನೇರಳೆ ಮರ ಕೃತಿಯಲ್ಲಿ ಹೃದಯೇನ ಅಸನ್ನಿಹಿತಾ ಎನ್ನುವ ಅಧ್ಯಾಯದಲ್ಲಿ ಮಳಗಿ ಹೀಗೆ ಬರೆಯುತ್ತಾರೆ:

‘ಇವಳಿರುವುದು ಹಾಗೆಯೇ. ಕೆಲವೊಮ್ಮೆ ಮಣ್ಣ ಹೆಣ್ಣಾಗಿ ಬಾನೊಡೆಯನಿಂದ ಅನಾದಿಯಿಂದ ಅಗಲಿ ಮೂರು ಹೊತ್ತು ಸುತ್ತುವ ಪ್ರತಿಮೆಯಾಗಿ ಕವಿಯನ್ನು ಕಾಡುತ್ತಾಳೆ. ಭೂರಂಭಕೆ ಕುಳಿತ ಅಭಿಸಾರಿಕೆಯಾಗಿ ಕವಿತೆಯಲಿ ನುಸುಳುತ್ತಾಳೆ. ಕಾಲೀದಾಸ, ಬಾಣ, ಬೋದಿಲೇರನಿಂದ ಹಿಡಿದು ಮೊಪಾಸ, ಶೇಕ್ಸ್‌ಪಿಯರ್, ಲಾರೆನ್ಸ್, ಹಾರ್ಡಿ, ಪಾಸ್ತರ್‌ನಾಕ್, ದೊಸ್ತೊಯೇವಸ್ಕಿಯವರೆಗೆ ಎಲ್ಲರನ್ನೂ ಕಾಡುವುದೇ ಇವಳ ಕೆಲಸ. ಜೀನ್ ದುವಾಲ್, ಸರಸ್ಸನ್, ಟೆಸ್, ಓಲ್ಗಾ ಇವಾನ್‌ಸ್ಕಿಯಾ, ಪಾಷ, ಎಮಿಲಾ ಲೇನಿಯರ್, ಶಾಕುಂತಲೇ, ಕಾದಂಬರೀ - ಹೀಗೆ ಹೆಸರೊಂದರ ಆಸರೆ ಪಡೆದು ಕಥೆಯಲ್ಲಿ ನುಗ್ಗುವುದು; ಮೊನಾಲಿಸಾ ಹೆಸರಿನ ಮೂಲಕ ಕ್ಯಾನವಾಸಿನ ಬಣ್ಣಗಳನ್ನು ಆವರಿಸುವುದೇ ಅವಳ ಕೆಲಸ!’(ಪುಟ:26)

‘ಹೆಣ್ಣು ನನ್ನ ಬಹುತೇಕ ಕಥೆಗಳ ಮುಖ್ಯ ಪಾತ್ರಗಳಾಗಿ ಬರಲು ಏಕೈಕ ಕಾರಣವೆಂದರೆ ಅಂತಹ ನೂರಾರು ಪಾತ್ರಗಳ ಬದುಕನ್ನು ರೂಪಕಗಳ ಮೂಲಕ ನಾನು ಗ್ರಹಿಸಿರುವುದು. ಆ ಅನುಭವವನ್ನು ಭಾಷೆಯಲ್ಲಿ ಸೋಸಿ ತೆಗೆಯಲು ಯತ್ನಿಸಿರುವುದು. ಹಶಂಬಿ, ಮಾಧವಿ, ಭೀಮಕ್ಕ, ಅಬಚಿ, ದೊರಸಾನಿ, ತುಂಗಭದ್ರೆ, ಇಂದುಮುಖಿ, ಹೂವಿ, ನೀಲಾಂಜನೆ, ರೇವಕ್ಕ....ಒಂದಲ್ಲ ಒಂದು ಘಟ್ಟದಲ್ಲಿ ಯಾವುಯಾವುದೋ ರೂಪದಲ್ಲಿ ನನ್ನೊಂದಿಗೆ ಮುಖಾಮುಖಿಯಾದವರು. ಮತ್ತು ನಾನು ಆಧುನಿಕ ಪುರಾಣದ ಪ್ರತಿಮೆಗಳೆಂದು ಗ್ರಹಿಸಿರುವವರು. ನಿಂತ ನೆಲಕೂಡ ತಮ್ಮದಲ್ಲವೆಂಬ ಅರಿವಿನ ನಡುವೆಯೂ ಇವರ ವರ್ತಮಾನದ ನಡವಳಿಕೆ ಅವರ ಘನತೆಯನ್ನು ಎತ್ತಿ ಹಿಡಿದಿವೆ. ಇಂತಹ ಪಾತ್ರಗಳ ಕೃಪೆಯಿಂದಾಗಿಯೇ ನನ್ನ ಕಥೆಗಳು ಸಂಕೀರ್ಣ ಅರ್ಥವಿನ್ಯಾಸಗಳನ್ನು, ವಿವಿಧ ಆಯಾಮಗಳನ್ನು ಪಡೆಯಲು ಸಾಧ್ಯವಾಗಿದೆ.’ (ಪುಟ:94)

ಮಾಗಿ-1991
ಕೇಶವ ಮಳಗಿಯವರ ಕತೆಗಳಲ್ಲಿ ಇನ್ನೊಂದು ವಿಶೇಷವಿದೆ. ಅವರ ಹೆಚ್ಚಿನ ಎಲ್ಲ ಪಾತ್ರಗಳೂ ನೋವುಂಡ ಭೂತವನ್ನು ಹೊಂದಿರುವಂಥವು. ಆದರೆ ಆ ಪಾತ್ರಗಳಲ್ಲಿ ಅನುಭವದ ಭಾರಕ್ಕೆ ಸೋತ ಛಾಯೆಯಿಲ್ಲ. ಅಥವಾ ವರ್ತಮಾನದಲ್ಲಿ ಅವು ಹೊರೆಹೊತ್ತ ನಿಟ್ಟುಸಿರಿನಲ್ಲೇ ತಮ್ಮ ಕತೆಯನ್ನು ಕೊರೆಯುತ್ತಿಲ್ಲ. ತಮ್ಮ ಭೂತದ ಬುತ್ತಿಯನ್ನು ಈ ಪಾತ್ರಗಳು ಎಲ್ಲಿ ಮತ್ತು ಯಾಕೆ ಬಿಚ್ಚುತ್ತವೆ ಎಂದರೆ ಆ ಅನುಭವದ ದೀವಿಗೆ ಹಿಡಿದು ಮುಂದಿನ ಹಾದಿಯನ್ನು ಬೆಳಗಿಕೊಳ್ಳುವುದಕ್ಕೆ, ಮುಂದೆ ಸಾಗುವುದಕ್ಕೆಯೇ ಹೊರತು ನಿಂತಲ್ಲೇ ಹೂತು ಹೋಗುವ ನಕಾರಾತ್ಮಕ ನಿಲುವಿನಿಂದಲ್ಲ. ಈ ಪಾತ್ರಗಳು ಭವ್ಯ ಭವಿತವ್ಯಕ್ಕೆ ಮೊಗಮಾಡಿ ನಿಂತಿರುವಂಥವೇ. ಆದರೆ ಸತ್ತ ಭೂತವನೆತ್ತಿ ಹದ್ದಿನಂದದಿ ತಂದು ಎನ್ನ ಮನದಂಗಳಕೆ ಹಾಕದಿರು ನೆನಪೇ ಎಂದು ಮೊರೆಯಿಡುತ್ತಿಲ್ಲ. ಭೂತ ಈ ಪಾತ್ರಗಳಿಗೆ ಜೀರ್ಣವಾಗಿದೆ, ಅಜೀರ್ಣವಾಗಿಲ್ಲ. ಹಾಗಾಗಿ ತಮ್ಮ ಭೂತವನ್ನು ಒಂದು ಅಂತರದಿಂದ, ತಮ್ಮದಲ್ಲವೇನೋ ಎಂಬಂತೆ, ಸಾಕ್ಷೀಪ್ರಜ್ಞೆಯಿಂದಲೂ ನೋಡುವುದು, ಹೇಳುವುದು ಈ ಪಾತ್ರಗಳಿಗೀಗ ಸಾಧ್ಯವಾಗಿದೆ. ಹಾಗೆ ಸಾಧ್ಯವಾದ ಘಳಿಗೆಯಲ್ಲೇ ಮಳಗಿಯವರ ಕಥಾನಕ ತೊಡಗುವುದೂ. ಎಲ್ಲ ಕತೆಗಳಲ್ಲೂ ನೆನಪು, ಸ್ಮೃತಿಯ ಮರುಕಳಿಕೆಯಾಗಿ ಕತೆ ತೆರೆದುಕೊಳ್ಳುವುದನ್ನು ಕಾಣುತ್ತೇವೆ. ಪ್ರಸ್ತುತ ಮಾಗಿ ಕತೆ ಕೂಡ ಮನಸ್ಸು ಮಾಗಿದ ಬಳಿಕದ ನಿರೂಪಣೆಯೇ. ಹೃದಯವನ್ನು ಸದಾ ಹಿಂಡಬಲ್ಲ ನೋವೊಂದು ಇಲ್ಲಿ ಅತ್ಯಂತ ಸಂಯಮದ ಮನೋಧರ್ಮದಿಂದ ನಿರೂಪಿಸಲ್ಪಟ್ಟಿದೆ. ಪ್ರೀತಿ ಮೂಡಿಸಿದ ಜೀವ ಸದಾ ಕಾಲ ಜೊತೆಯಾಗಿರಬೇಕೆಂಬುದು ಮನುಷ್ಯ ಸಹಜ ಹಂಬಲ. ಅದು ಈಡೇರದಾಗ ಅದರ ತೀವ್ರತೆ ಹೆಚ್ಚು, ನೋವು ತೀಕ್ಷ್ಣ. ಸದಾ ತನಗೆ ದಕ್ಕದೇ ಹೋದ, ಹಂಬಲಿಸಿದರೂ ಸಿಗದೇ ಹೋದ, ನಿರಾಕರಿಸಲ್ಪಟ್ಟ ವಸ್ತುವಿನ ಮೋಹವೇ ಮನುಷ್ಯನನ್ನು ಮುಪ್ಪಿನ ತನಕ ಕಾಡುತ್ತಿರುತ್ತದೆ. ಮಾಗಿ ಕತೆಯ ನಿರೂಪಣೆ ಎಷ್ಟೇ ಸಂತುಲಿತವಾಗಿ, ಸ್ವೀಕೃತಿಯ ಮನೋಧರ್ಮವನ್ನು ಒಗ್ಗೂಡಿಸಿಕೊಂಡು ಬಂದಿದ್ದರೂ ನೋವಿನ ತಿವಿತ ನಮ್ಮನ್ನು ಕ್ಷಣಕಾಲವಾದರೂ ನಿಡುಸುಯ್ಯುವಂತೆ ಮಾಡದಿರದು.

ಊರ ಮಧ್ಯದ ಕಣ್ಣಕಾಡಿನೊಳಗೆ-1989
ಈ ಕತೆ ಒಂದು ಸಂಕೀರ್ಣ ಹಂದರವನ್ನು ಹೊಂದಿದೆ ಮಾತ್ರವಲ್ಲ ಹಲವು ಪಾತಳಿಗಳಲ್ಲಿ ಒಮ್ಮೆಗೇ ಚಾಚಿಕೊಂಡು ವೈವಿಧ್ಯಮಯ ಪ್ರಶ್ನೆಗಳೆದುರು ಓದುಗನನ್ನು ನಿಲ್ಲಿಸುತ್ತದೆ. ಆದರೆ ಹಂದರದ ಅಸಮತೋಲನದಿಂದ, ಈ ಪ್ರಶ್ನೆಗಳನ್ನು ಪರಸ್ಪರ ಬಂಧಿಸುವ ಏಕಸೂತ್ರದ ಎಳೆಯೊಂದು ಇಲ್ಲಿ ಕೊಂಚ ಅಸ್ಪಷ್ಟಗೊಂಡಿರುವ ನೆಲೆಯಲ್ಲಿ, ಈ ಪ್ರಶ್ನೆಗಳು ಓದುಗನ ಮನಸ್ಸಿನಲ್ಲಿ ಎದ್ದಷ್ಟೇ ಬೇಗ ಮರವೆಯಾಗುವ ಅಪಾಯ ಕೂಡ ಇದೆ ಎನಿಸುತ್ತದೆ.

ಕಡಲತೆರೆಗೆ ದಂಡೆ ಕತೆಯ ಯದುಪತಿ ಕಾಕಾ ತನ್ನ ವಿಕಲಾಂಗ ಮಗುವಿನ ಸಾವಿಗೆ ಪ್ರತಿಸ್ಪಂದಿಸುವ ಬಗೆಯನ್ನು ಇಲ್ಲಿನ ಬಾಪೂ ಜೊತೆ ಹೋಲಿಸಿ ನೋಡಬಹುದು. ಹಾಗೆಯೇ ಅಲ್ಲಿನ ಅಬಚಿಯದೇ ಇನ್ನೊಂದು ರೂಪಾಂತರ ಇಲ್ಲಿನ ಬಸು ಅಥವಾ ವಸುಂಧರೆ. ಅಲ್ಲಿ ವಿಕಲಾಂಗ ಮಗು ತೀರಿಕೊಂಡರೆ ಇಲ್ಲಿ ಅರುಂಧನೆಂಬ ಹಿರಿಯ ಮಗ ಕ್ರಾಂತಿಯ ಅಲೆಯಲ್ಲಿ ಕೊಚ್ಚಿ ಹೋಗುತ್ತಾನೆ. ಅವನಿದ್ದೂ ಇಲ್ಲದಂತಿದ್ದಾಗ ಕಾಡುವ, ಹಿಂಡುವ ನೋವಾಗದೆ ಇದ್ದ ಅವನ ಗೈರು ಅವನ ಸಾವಿನ ಸುದ್ದಿ ಸಿಕ್ಕಿದ ಮೇಲೆ ಅಗ್ನಿಪರೀಕ್ಷೆಯನ್ನೊಡ್ದುತ್ತದೆ. ಬರಗಾಲ ಇಬ್ಬರಿಗೂ ಮುಕ್ತಿಯನ್ನೊದಗಿಸುವಂತೆ ಬಂದಿತೆನ್ನಬೇಕು.

ನಂತರದ ಪಾತ್ರ ಚಹಾ ದುಖಾನಿನ ಬಾಬು ಭಾಯ್. ಬಾಬುಬಾಯ್ ಕಣ್ಣಿಂದ ದೂರವಾಗುವಾಗ ಆತನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ಮುಂದೆ ಆಸರೆಯಾದಾತ ರಸ್ತೆಯ ಮೇಲೆ ಬಣ್ಣದ ಚಿತ್ರ ಬಿಡಿಸಿ ಬದುಕು ನಡೆಸುತ್ತಿದ್ದ ಬನ್‌ದೇವ್. ಬನ್‌ದೇವನ ವಿಲಕ್ಷಣ ಪ್ರೇಮ ಕಥೆ, ಅದರ ದಾರುಣ ಅಂತ್ಯ ಮತ್ತು ಅವನ ಲೈಂಗಿಕತೆಯನ್ನು ದಾಟಿ ಮನಸ್ಸು ಹಿಡಿದಿಡುವ ಚಿತ್ರವೊಂದಿದೆ. ಬನ್‌ದೇವ್‌ನಿಂದ ತಪ್ಪಿಸಿಕೊಂಡ ನಿರೂಪಕ/ನಾಯಕ ಚಲಿಸುತ್ತಿರುವ ರೈಲಿನಿಂದಲೇ ತಿರುಗಿ ನೋಡಿದಾಗ ಬನ್‌ದೇವ್ ಕಂಬಕ್ಕೆ ತಲೆ ಜಜ್ಜಿಕೊಳ್ಳುತ್ತಿರುತ್ತಾನೆ. ತನ್ನ ಒಂದು ಕ್ಷಣದ ಉನ್ಮಾದ ತನಗೆ ಒಡ್ಡಿದ ನಷ್ಟವನ್ನು ಎಣಿಸಿಯೋ, ತನ್ನ ಇಡೀ ಬದುಕು ತನಗೆ ಮೋಸ ಮಾಡಿದ ಬಗೆಯನ್ನು ನೆನೆದೋ ಬನ್‌ದೇವ್ ಹಾಗೆ ಮಾಡುತ್ತಿರಬಹುದು. ಆದರೆ ಕತೆ ಅವನೊಂದಿಗೆ ನಿಲ್ಲುವುದಿಲ್ಲ. ನಂತರ ಮಲ್ಹೋತ್ರಾ ಬರುತ್ತಾರೆ. ಅವರ ಲೈಂಗಿಕ ಅಸಾಮರ್ಥ್ಯ ಮತ್ತು ಹೆಂಡತಿ ಕಾಮಿನಿಯ ಹಪಹಪಿಗಳು ಈತನ ವ್ಯಕ್ತಿತ್ವವನ್ನು ವ್ಯಾಪಿಸುವಂತೆ ಚಾಚುತ್ತವೆ. ಮಲ್ಹೋತ್ರಾರ ದಾನ-ಧರ್ಮ-ಸಾಮಾಜಿಕ ಚಟುವಟಿಕೆಗಳೆಲ್ಲ ಈ ಅಸಹಾಯಕತೆಯನ್ನು ಮುಚ್ಚಿಕೊಳ್ಳಲೋ ಎಂಬಂತಿರುವಾಗಲೇ ಕಾಮಿನಿಯ ಅಸಹಾಯಕತೆ ಇದ್ಯಾವುದರಿಂದಲೂ ಕಡಿಮೆಯಾಗುವುದಿಲ್ಲ ಎನ್ನುವ ಅರಿವು ಕೂಡ ಅವರಲ್ಲಿ ಜಾಗ್ರತವಿದೆ. ಆದರೆ ಅದನ್ನು ಸಣ್ಣದಾಗಿ ಕಾಣಿಸುವ ಪ್ರಯತ್ನವಿದೆಯೆ ಇಲ್ಲಿ? ಜಿಜ್ಞಾಸೆ. ಮುಂದೆ ಶ್ರೀವಾಸ್ತವರ ಮಗಳು ಶಮಾ ಮತ್ತು ಶ್ರೀವಾತ್ಸವರ ವ್ಯವಹಾರ ಕ್ಷೇತ್ರವನ್ನು ಕೊಟ್ಟ ಮಾತಿನಂತೆ ನೋಡಿಕೊಳ್ಳುವಲ್ಲಿ ವಿಫಲನಾದ ನಿರೂಪಕ/ನಾಯಕ.

ಹೀಗೆ ಇಲ್ಲಿ ಪರದೇಶಿಯಾದ ಹುಡುಗ ಚಿತ್ರಕಾರನಾಗಿ ಖ್ಯಾತಿಯ ಉತ್ತುಂಗವನ್ನೇರಿ ಬದುಕನ್ನು ತಿರುಗಿ ನೋಡುವ ಮುನ್ನ ಹಾದು ಬಂದ ಬದುಕುಗಳು, ಪಾತ್ರಗಳು ಹಲವು. ಒಂದೊಂದೂ ವಿಭಿನ್ನ, ವಿಶಿಷ್ಟ. ಅವು ಪ್ರತಿಪಾದಿಸುವ ಮೌಲ್ಯಗಳು, ಅವುಗಳ ಋಣಾತ್ಮಕ ಅಂಶಗಳು ಕೂಡ ಹಾಗೆಯೇ ಭಿನ್ನ ಭಿನ್ನ. ಆದರೆ ಇಷ್ಟರ ಹಿನ್ನೋಟಕ್ಕೆ ಕಾರಣವಾದ ನಿಜವಾದ ಘಟನೆ ಮಾತ್ರ ಬೇರೆಯದೇ ಇದೆ.

ನಿರೂಪಕ/ನಾಯಕ ತನ್ನನ್ನೇ ನಗರದ ಇನ್ನೊಬ್ಬ ಬಡ ಕಲಾಕಾರನಲ್ಲಿ ಕಾಣುತ್ತಿದ್ದಾನೆ. ಧಾರಾಕಾರ ಮಳೆಯ ದಿನ ಅಮ್ಮಾ ತಾಯೀ ಕವಳಾ ಎಂದು ಆರ್ತವಾಗಿ ಮೊರೆಯಿಟ್ಟ ಪುಟ್ಟ ಹುಡುಗನಲ್ಲೂ ಆತ ತನ್ನನ್ನೇ ಕಾಣುತ್ತಿದ್ದಾನೆ, ಕಂಡಿದ್ದಾನೆ. ಕಂಡೇ ಅವನ ಹೊಟ್ಟೆಗೆ ಒದ್ದಿದ್ದಾನೆ. ತನ್ನ ಅಜಾಗರೂಕತೆಯಿಂದ ಗಲಿಬಿಲಿಗೊಂಡು ಬೈದು ಹೋದ ಬೈಕ್ ಸವಾರ ಅಪಘಾತಕ್ಕೀಡಾಗಿದ್ದನ್ನು ಕಂಡಾಗ ಆಳದಲ್ಲೆಲ್ಲೋ ಖುಷಿಪಟ್ಟ ನಿರೂಪಕ/ನಾಯಕನ ಕ್ರೌರ್ಯವನ್ನು, ಸಂದಿಗ್ಧ ಬಂಡಾಯವನ್ನು, ಪತ್ರ ಬರೆದಿಟ್ಟು ಎಲ್ಲವನ್ನೂ ಬಿಟ್ಟು ಹೊರಡಲಿರುವ ನಿರಾಕರಣದ ಹಿಂದಿನ ನೆಲೆಗಳನ್ನು ಅವು ತೀರ ಸಂಕೀರ್ಣ ಮತ್ತು ಸಂಕ್ಲಿಷ್ಟವಾದರೂ ಅರ್ಥ ಮಾಡಿಕೊಳ್ಳಬೇಕಿದೆ.

ತುಳಿದಿದ್ದು ತನ್ನನ್ನೇ ಎಂಬ ನೆಲೆಯಲ್ಲಿ. ಆ ಹುಡುಗ ಸತ್ತಿರುವುದನ್ನು ಕತೆಯ ತೆಕ್ಕೆಯೊಳಗೆ ತಂದಿರುವುದು ಕೂಡ ಸಾವು ಅಲ್ಲಿ ಉದ್ದೇಶವಿತ್ತು ಎನ್ನುವುದನ್ನು ಕಾಣಿಸುವುದಕ್ಕಾಗಿಯೇ. ಸಾವು, ನಿರಾಕರಣ, ಕಣ್ಮರೆ ಮತ್ತೆ ಇಲ್ಲಿ ರೂಪಕಗಳಾಗಿವೆ. ಇವು ಓದುಗನ ಮೇಲೆ ತಟ್ಟನೇ ಒಂದು ಬಗೆಯ ಪರಿಣಾಮವನ್ನುಂಟು ಮಾಡಬಲ್ಲ ಮಹತ್ವದ ತಿರುವುಗಳೆಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಹಾಗೆಯೇ ಇವು, ಮಳಗಿಯವರ ಕತೆಗಳಲ್ಲಿ ಬಂಡಾಯದ ಲಕ್ಷಣಗಳನ್ನು ಕೂಡ ಹೊಂದಿರುವುದನ್ನು ಗಮನಿಸಬೇಕು.

ಸುನಯನ-1990
ಸುನಯನಳ ಬದುಕಿನ ದಾರುಣ ಘಟನೆಗಳನ್ನು ಸ್ವತಃ ಅವಳೇ ಚೈತ್ರನ ಎದುರು ಎಳೆ ಎಳೆಯಾಗಿ ತೆರೆದಿಡುವ ಕತೆ. ಇಲ್ಲೊಂದು ಆದರ್ಶ ರೋಮ್ಯಾಂಟಿಕ್ ಸನ್ನಿವೇಶವಿದೆ. ಅದು ಚೈತ್ರನಂಥ ಚೈತ್ರ ಮತ್ತು ಸುನಯನಾಳಂಥ ಸುನಯನ, ಸುನಯನಾ ನದಿಯಂಥ ನದಿಯ ತಟದಲ್ಲಿ ಒಬ್ಬರಿಗೊಬ್ಬರು ಮಾನಸಿಕ ಆಸರೆಯಾಗಿ ತೆರೆದುಕೊಳ್ಳುವ, ಹಂಚಿಕೊಳ್ಳುವ ಸನ್ನಿವೇಶ. ಇದೆಷ್ಟು ರಮ್ಯವಾಗಿದೆ ಎಂಬುದನ್ನು ಗಮನಿಸಿ. ಇದಕ್ಕೆ ಹಿನ್ನೆಲೆಯಾಗಿ ಇಬ್ಬರೂ ಸಾಯಲು ಹೊರಟು ಮುಖಾಮುಖಿಯಾಗುವ ಸನ್ನಿವೇಶ. ಆದರೆ ಇಡೀ ಕತೆಯನ್ನು ಓದಿದ ನಂತರ ಚೈತ್ರನಿಗೆ ಎದುರಾದ ಸಂದಿಗ್ಧ ಪರಿಸ್ಥಿತಿ, ಅದೂ ಸಾವು ಅನಿವಾರ್ಯವೆನಿಸಿದ ಪರಿಸ್ಥಿತಿ, ಏನು ಎನ್ನುವುದಕ್ಕೆ ಸಾಕಷ್ಟು ಸಮರ್ಥನೀಯ ಅಂಶಗಳು ಕತೆಯಲ್ಲಿಲ್ಲ ಅನಿಸುತ್ತದೆ. ಬದಲಿಗೆ ಅವನು ತನ್ನ ತಾಯಿಯ ಕುರಿತು ಆಡುವ ಮಾತುಗಳು, ಅವಳ ಕುರಿತು ಅವನಿಗಿರುವ ಕಾಳಜಿ, ಜವಾಬ್ದಾರಿ ಮತ್ತು ಋಣ - ಹೇಗಾದರೂ ಅವನು ಅವಳನ್ನು ಒಂಟಿಯಾಗಿ ಬಿಟ್ಟು ಬದುಕಿನಿಂದ ದೂರವಾದಾನು ಅನಿಸುವಂತೆಯೇ ಇವೆ. ಹಾಗಾಗಿ ಸಾಯಲು ತಯಾರಾಗಿ ಹೊರಟಿದ್ದ ಚೈತ್ರನದು ಸರಳವಾಗಿ ಆತ್ಮಪ್ರತ್ಯಯದ ಪ್ರೇಮದಿಂದ ತುಂಬಿದವನ ಹಳಹಳಿಕೆಯಂತೆ ಕಾಣುತ್ತದೆ.

"ವಿಚಿತ್ರವೋ ಏನೋ ನನಗೆಲ್ಲೂ ನೆಮ್ಮದಿ ಎನ್ನಿಸುವುದಿಲ್ಲ. ತೊಡಗಿಸಿಕೊಳ್ಳಲಾಗುವುದಿಲ್ಲ. ತಟ್ಟನೆ ಬೇಸರ, ನಿರಾಸಕ್ತಿ, ಏಕಾಕಿತನ. ನಾನೇ ಒಂಟಿಯಾಗಿರಬೇಕೆಂದು ಬಯಸುತ್ತೇನೆ. ಆದರೆ ಅದೂ ಬೇಸರವಾಗುತ್ತದೆ. ನಾನು ಅನಾಥ. ಏಕಾಂಗಿ ಅಲೆಮಾರಿ. ನೊಂದವನು, ದಯವಿಟ್ಟು ನನ್ನನ್ನು ಪ್ರೀತಿಸಿ ಎಂದು ಕಂಡಕಂಡವರಲ್ಲಿ ಗೋಗರೆಯಬೇಕೆನ್ನಿಸಿ ಪಿಚ್ಚೆನ್ನಿಸುತ್ತದೆ. ಆಗೀಗ ಸಾಯುವ ಯೋಚನೆ ಬರುತ್ತದೆ. ಸಾಯಲು ಹೋಗಿಯೂ ಬಿಡುತ್ತೇನೆ. ಈಗ ಕುಳಿತಿದ್ದೇವಲ್ಲಾ ಆ ಗುಡ್ಡದ ಅಂಚು, ರೈಲ್ವೇ ನಿಲ್ದಾಣ, ಲಾರಿ, ಹಾಳು ಬಾವಿ ಯಾವುದಾದರೂ ಸರಿ ಎಂದು. ಆದರೆ ಪ್ರತಿಸಲವೂ ಏನಾದರೂ ಒಂದು ಕಾರಣ ಕೊಟ್ಟುಕೊಂಡು ಮರಳುವುದರಲ್ಲಿ ಸುಖವೆನ್ನಿಸುತ್ತದೆ. ಆದರೆ ನಿಮ್ಮನ್ನು ಕಂಡಾಗ ಅನಿಸಿದ್ದೇ ಬೇರೆ. ಕ್ಷಮಿಸಿ ಬಿಡಿ ನಿಮಗಾಗಿ ಬದುಕಬೇಕೆನಿಸಿತು. ಹೇಳಿ ನಾನೆಂದದ್ದರಲ್ಲಿ ತಪ್ಪಿದೆಯೇ." (ಪುಟ 139)

ಹೀಗೆ ಇಲ್ಲಿ ಕತೆಯ ಸನ್ನಿವೇಶ, ಗಾಢ ಭಾವಗೀತೆಯಂಥ ಲಹರಿಯ ಅದರ ಒಡಲಿನಿಂದ ಒಂದು ಸಂಭಾಷಣೆಯನ್ನು ಕತ್ತರಿಸಿ ಹೊರತೆಗೆದದ್ದೇ ಈ ಮಾತುಗಳೆಲ್ಲ ನಾಟಕೀಯ ಮತ್ತು ಅವುಗಳನ್ನು ಆಡಿದ ಮನುಷ್ಯ ನಿಜವಿದ್ದಿರಲಾರ, ಪ್ರಾಮಾಣಿಕನಿರಲಾರ ಎಂದೆಲ್ಲ ಅನಿಸುವ ಸಾಧ್ಯತೆಯೇ ಹೆಚ್ಚು. ಇದು ಬಾರೋ ಗೀಜಗದಲ್ಲೂ ಸಂಭವಿಸುತ್ತದೆ. ಧಾರಿಣಿಯ ಜತೆ ನನ್ನದೊಂದು ಕತೆಯಲ್ಲೂ ಸಂಭವಿಸುತ್ತದೆ, ಸ್ವಲ್ಪ ಭಿನ್ನವಾಗಿ. ಒಂದು ಗಂಡು-ಒಂದು ಹೆಣ್ಣು, ಅದ್ಭುತ ರಮ್ಯ ಸನ್ನಿವೇಶದಲ್ಲಿ ಎದುರುಬದುರಾಗಿ, ಹೊಳೆಯ ದಂಡೆಯಲ್ಲೋ, ಹೂವಿನ ಉದ್ಯಾನದಲ್ಲೋ ಕೂತು ಸ್ವಗತದಂಥ ಮಾತುಗಳನ್ನು ಆಡಿಕೊಳ್ಳುತ್ತ ಬಿಚ್ಚಿಕೊಳ್ಳುತ್ತಾರೆ. ಕಥನ ತೊಡಗುತ್ತದೆ. ನೋವಿದೆ ಎಲ್ಲರಲ್ಲೂ, ಪ್ರೀತಿಯ ಹಂಬಲವಿದೆ. ಬದುಕು ಬಿಚ್ಚಿಕೊಳ್ಳುತ್ತದೆ. ಆದರೆ ಬಾರೋ ಗೀಜಗ ಕತೆಯಲ್ಲಿ ಇದು ಒಂದು ಹೊಸದೇ ಆದ ಮಜಲನ್ನು ತಲುಪಿರುವುದನ್ನು ಕಾಣುತ್ತೇವೆ. ಅದನ್ನು ನಿರ್ದಿಷ್ಟವಾಗಿ ಬಾರೋ ಗೀಜಗ ಕತೆಯನ್ನು ಚರ್ಚಿಸುವಾಗ ಗಮನಿಸಬಹುದು.

ಪತ್ರೋಳಿ - 1986
ಬದುಕು ಕಲಿಸುವ ಕಠಿಣ ಪಾಠಗಳಿಂದಲೇ ಕ್ರೌರ್ಯ ಸಹಜವಾಗಿ ಮೊಳೆಯುವ ಬಗೆಯನ್ನು ಹೇಳುವ ಕತೆ. ಜಯಕಾಂತನ್ ಅವರ ಸನ್ನಿವೇಶದಲ್ಲಿ ಸಿಕ್ಕವರು, ತಗಳಿ ಶಿವಶಂಕರ ಪಿಳ್ಳೆಯವರ ತೋಟಿಯ ಮಗನ ಕತೆ, ಡಾ.ಕಾರ್ಲೋಸ್ (ಅನು: ತಮಿಳ್‌ಸೆಲ್ವಿ)ಯವರ ಇವರು ಕತೆಯಾದವರು ಮುಂತಾದ ಕಾದಂಬರಿಗಳನ್ನು ನೆನಪಿಸುವ ಈ ಕತೆ ಬಡತನದ ಬವಣೆ ಮತ್ತು ಅದರ ಎದುರು ಸರಕಾರೀ ಭ್ರಷ್ಟಾಚಾರ, ಆದರ್ಶದ ಡಂಭಾಚಾರಗಳನ್ನು ಮುಖಾಮುಖಿಯಾಗಿಸುತ್ತಲೇ ಅದು ಒಂದು ಕಡೆ ಮೌಲ್ಯ-ನೈತಿಕತೆಯೊಂದಿಗೆ ರಾಜಿಯಾಗುವ ಬದುಕುವ ಹಾದಿಯನ್ನೂ ಇನ್ನೊಂದೆಡೆ ರೋಷದಿಂದ ವಿರೋಧಿಸಿ ಎದುರಿಸುವ (ಸಾಯುವ?) ಹಾದಿಯನ್ನೂ ತೆರೆಯುವುದು ಕತೆಯಲ್ಲಿದೆ. ಮಳಗಿಯವರ ಸೈದ್ಧಾಂತಿಕ ನಿಲುವುಗಳ ಆರಂಭಿಕ ನೆಲೆಗಳನ್ನು ಈ ಕತೆ ನಮಗೆ ಕಾಣಿಸುತ್ತದೆ.

ನಕ್ಷತ್ರಯಾತ್ರಿಕರು-1991
ಸೌಭಾಗ್ಯವತಿ, ನಕ್ಷತ್ರ ಯಾತ್ರಿಕರು ಮತ್ತು ಕೆಂಪುಮಣ್ಣಿನ ಒಕ್ಕಲು ಮೂರೂ ಕತೆಗಳು ಕಾದಂಬರಿಯ ಹರಹು ಉಳ್ಳ, ಇಡೀ ಬದುಕನ್ನು ಹಿಡಿದುಕೊಡುವ ವ್ಯಾಪ್ತಿಯಿರುವ ಕಥಾನಕಗಳೇ ಎಂದು ಆಗಲೇ ಹೇಳಿಯಾಗಿದೆ. ಈ ಸಂದರ್ಭದಲ್ಲೇ ಇಲ್ಲಿ ಇರುವ ಇನ್ನೊಂದು ವಿಶೇಷವನ್ನೂ ಗಮನಿಸಬೇಕು. ಸೌಭಾಗ್ಯವತಿ ಕತೆಯ ತುಂಗಭದ್ರೆ ಸೇತುಮಾಧವಾಚಾರ್ಯ ಜಹಗೀರರ ಮಗಳು. ನಕ್ಷತ್ರ ಯಾತ್ರಿಕರು ಕತೆಯ ಮಹಾಕೂಟೇಶ್ವರ ನಾಟ್ಯ ಸಂಘ ಎಂಬ ಹೆಸರಿನ ನಾಟಕದ ಕಂಪನಿಯ ನಟಿಯಾಗಿರುವ ಮಾಳವ್ವ, ಘಟಪ್ರಭಾ ತಟದ ದೇಸಾಯರ ಕಮತದವರಲ್ಲಿದ್ದವರ, ಅನುಕೂಲಸ್ತರ ಕುಟುಂಬದ ಮಗಳು. ಕೆಂಪುಮಣ್ಣಿನ ಒಕ್ಕಲು ಹಶಂಬಿಯ ಕತೆ. ಈ ಮೂರು ಕಥಾನಕಗಳು ತೋರುವ ಬದುಕಿನ ಜೀವವೈವಿಧ್ಯವನ್ನು ಗಮನಿಸಿ. ಒಂದು ಸಾಂಪ್ರದಾಯಿಕ ವೈದಿಕರ ಮನೆತನದ ಕತೆ. ಇನ್ನೊಂದು ನಾಟಕದ ನಟಿಯ ಬದುಕಿನ ಹೋರಾಟದ ಕತೆ. ಕೊನೆಯದು ಹಶಂಬಿ- ಕಾಶೀಮ, ದಾವುದ-ಸಕೀನಾ ಮತ್ತು ಮಕ್ಕಳು ದುರ್ಗಾವಲಿ, ಶಬಾನಾರ ಕತೆ.

ಹಾಗೆಯೇ ಕೇಶವ ಮಳಗಿಯವರ ಕತೆಗಳಲ್ಲಿ ಬರುವ ವಿಶಿಷ್ಟ ಸ್ತ್ರೀಪಾತ್ರವನ್ನೂ ಗಮನಿಸಬಹುದು. ಈಕೆ ಬಾಲ್ಯದಲ್ಲಿ ಮಹಾ ತುಂಟಿ. ಗಂಡುಬೀರಿ. ತುಂಟಾಟದಲ್ಲಿ ತನ್ನ ವಯಸ್ಸಿನ ಹುಡುಗರನ್ನು ಮೀರಿಸಬಲ್ಲ ಧೈರ್ಯಸ್ಥೆ. ಮರಹತ್ತುವುದು, ತುಡುಗು ಮಾಡುವುದು ಎಲ್ಲದರಲ್ಲೂ ಮುಂದು. ಯೌವನದಲ್ಲಿ ಕೂಡ ಮುಂದುವರಿಯುವ ಕೀಟಲೆ. ಮುಂದೆ ದುರಂತ. ತಂದೆಯ ಸಾವು, ಗಂಡನ ಸಾವು ಅಥವಾ ಎಳೆ ಕಂದನ ಸಾವು ಹೀಗೆ ಏನಾದರೂ. ಬದುಕಿನ ಜವಾಬ್ದಾರಿಯ ಹೊರೆ. ಕಷ್ಟ ಕೋಟಲೆಗಳ ಸರಮಾಲೆ. ದೇಹದ ಮೇಲೆ ಹದ್ದುಗಳಂತೆ ಎರಗುವವರ ಭಯ. ಎಲ್ಲವನ್ನೂ ಎದುರಿಸಿ ನಿಲ್ಲುವ ಛಲದಂಕ ಮಲ್ಲೆಯ ಬಳಿ ಹರಯದ ತುಂಟತನ ಮಾತ್ರ ಮಂಗಮಾಯ. ಇದಕ್ಕೆ ಉದಾಹರಣೆಯಾಗಿ ಯಾರಿಲ್ಲಿಗೆ ಬಂದರು ಕಳೆದಿರುಳು ಕತೆಯ ನಾಯಕಿ/ನಿರೂಪಕಿ, ಮಾಗಿ ಕತೆಯ ಶಾನುಭೋಗರ ಮಗಳು, ಸುನಯನ ಕತೆಯ ಸುನಯನ, ನಕ್ಷತ್ರಯಾತ್ರಿಕರು ಕತೆಯ ಮಾಳವ್ವ, ವೆನ್ನೆಲ ದೊರೆಸಾನಿ ಕತೆಯ ಜಾಲಿಬೆಂಚಿ ಲಕ್ಷ್ಮಮ್ಮ, ಮುಂತಾದವರೆಲ್ಲ ಸಾಲು ಸಾಲಾಗಿ ನಿಲ್ಲುತ್ತಾರೆ.

ನಕ್ಷತ್ರಯಾತ್ರಿಕರು ಕತೆಯ ಮಾಳವ್ವನದು ಇನ್ನೂ ಒಂದು ವಿಶೇಷವಿದೆ. ಅದು ಈಕೆಯ ಪ್ರೇಮದ ಪರಿ. ಬಸವಂತನ ಪ್ರೇಮಕ್ಕೆ ಮಾಳವ್ವ ಸ್ಪಂದಿಸುವ ಬಗೆಯೇ ಒಂದು ವಿಚಿತ್ರ ಬಗೆಯದು. ಎದುರಿದ್ದಾಗ ಹರಿಹಾಯುವ, ಕಣ್ಣೆದುರಿಲ್ಲದಾಗ ಹಂಬಲಿಸುವ ಈಕೆ ರೊಚ್ಚಿನ ಪ್ರೀತಿಯ ಆಳ ಅಗಲ ತಿಳಿಯುವುದು ಕಷ್ಟ. ಕೆಂಪು ಮಣ್ಣಿನ ಒಕ್ಕಲು ಕತೆಯ ಹಶಂಬಿಯ ಪ್ರೀತಿ, ಉತ್ಪಾತದ ಮುನೀರನ ಪ್ರೀತಿ, ವನ್ನೆಲ ದೊರಸಾನಿಯ ಲಕ್ಷ್ಮಮ್ಮ, ಸೋಮಶೇಖರ ಪರಿಣಯದ ವಸಂತಮಾಲಾರ ಈ ಬೆಂಕಿಯಂಥ ಪ್ರೀತಿಯ ನೆಲೆಗಳನ್ನು ಕುರಿತು ಕೂಡ ಯೋಚಿಸಬೇಕೆನಿಸುತ್ತದೆ. ಕನ್ನಡದ ಕತೆಗಳಲ್ಲಿ ಎಂಥೆಂಥಾ ವಿಶಿಷ್ಟ ವ್ಯಕ್ತಿತ್ವದ ಪಾತ್ರಗಳನ್ನು ಸೃಷ್ಟಿಸಿದ್ದಾರೆ ಕೇಶವ ಮಳಗಿಯವರು!

ಇಷ್ಟು ನಕ್ಷತ್ರಗಳಲ್ಲಿ ಯಾವುದು ನನಗೆ - 1990
ಬಿಟ್ಟು ಬಂದ ಮನೆಯನ್ನು ಮನೆಯವರನ್ನು ಮತ್ತೆ ಊರಿಗೆ ಹೋಗಿ ಕಾಣಬೇಕೆನ್ನಿಸುವ, ಕಾಣುತ್ತೇನೆನ್ನುವ ನಿರ್ಧಾರದೊಂದಿಗೆ ಸುರುವಾಗುವ ಕತೆ ಈ ಪುನರ್ಮಿಲನದ ಸಂದಿಗ್ಧಗಳ ಸುತ್ತ ಸುತ್ತುತ್ತದೆ. ಮಧುಕರನಲ್ಲಿ ಕೇವಲ ಮತ್ತು ಕೇವಲ ಕುಸುಮಳ ಸಾನ್ನಿಧ್ಯದಲ್ಲಿ ಗಟ್ಟಿಗೊಳ್ಳುವ ನಿರ್ಧಾರ ಅದು. ಇನ್ನೆಂದೂ ಈ ಮನೆಯ ಹೊಸ್ತಿಲನ್ನು ತುಳಿಯುವುದಿಲ್ಲ ಎಂದು ಮಾಡಿದ ಪ್ರತಿಜ್ಞೆಯ ಪ್ರತಿಷ್ಠೆಗಿಂತ ಸಂಬಂಧಗಳು ಮುಖ್ಯವಾಗಿ ಕಾಣುವ ಔದಾರ್ಯದ ಘಳಿಗೆ ಕಾರಣ ಅಂಥ ನಿರ್ಧಾರಕ್ಕೆ. ಅದು ಇನ್ನಷ್ಟು ಔದಾರ್ಯವನ್ನು, ಪ್ರೀತಿಯನ್ನು, ಸಂಬಂಧಗಳನ್ನು ಗಟ್ಟಿಗೊಳಿಸುವ ನಡೆಯಾಗುವುದೇ ಇಡೀ ಕತೆಯ ಗಮ್ಯ. ಈ ಪ್ರೀತಿ, ಹೃದಯದ ಔದಾರ್ಯ, ಸಂಬಂಧಗಳನ್ನು ಬೆಸೆಯುವ ಪುಣ್ಯದ ಕ್ರಿಯೆ ಇಲ್ಲಿ ನಕ್ಷತ್ರಗಳ ಮಾಲೆಯಾಗಿರುವುದು ಕೇಶವ ಮಳಗಿಯವರ ನಿರೂಪಣೆಯ, ಭಾಷೆಯ ಮತ್ತು ಪ್ರಾಮಾಣಿಕ ಸಂವೇದನೆಗಳ ದೆಸೆಯಿಂದ.

ಶಹರದಿಂದ ಮತ್ತೆ ಅವ್ವ, ಮೋನಿದಾದರನ್ನು ನೆನೆದು ಊರಿಗೆ ಮರಳುವ ಮಧುಕರನ ನಡೆಗೂ ಕಡಲತೆರೆಗೆ ದಂಡೆ ಕತೆಯ ಅಚ್ಯುತನ ಪುನರಾಗಮನಕ್ಕೂ ಒಂದೆಳೆಯ ಹೋಲಿಕೆ ಸಾಧ್ಯ. ಅದೇ ರೀತಿ ಕಡಲತೆರೆಗೆ ದಂಡೆ ಕತೆಯಲ್ಲಿ ಮರಳುವ ಯದುಪತಿ ಕಾಕಾನ ಪುನರಾಗಮನಕ್ಕೂ ಇಂಥ ಜೋಡಣೆ ಸಾಧ್ಯವಾಗಬಹುದು. ಈ ಕಣ್ಮರೆ, ಊರು ಬಿಟ್ಟು ಹೋಗುವುದು ಮತ್ತು ಎರಡನ್ನು ಆಯ್ದುಕೊಂಡವರೂ ಮರಳಿ ತಮ್ಮವರನ್ನು ಸೇರುವುದು ಮಳಗಿಯವರ ಕತೆಯಲ್ಲಿ ಮತ್ತೆ ಮತ್ತೆ ಸಂಭವಿಸುತ್ತದೆ ಎನ್ನುವುದನ್ನು ಇಲ್ಲಿ ನೆನೆಯಬಹುದು. ಇದಕ್ಕೂ ಸಾವು-ಆತ್ಮಹತ್ಯೆ-ಸಂನ್ಯಾಸ-ಆಧ್ಯಾತ್ಮಗಳಿಗೂ ಒಂದು ಸ್ತರದ ಪರಸ್ಪರ ಸಂಬಂಧವಿದೆ. ಜಗತ್ತಿಗೆ ರಾಜೀನಾಮೆ ಎಸೆದು ಬಿಡುವ ಬೇರೆ ಬೇರೆ ಮಾರ್ಗಗಳು ಇವೆಲ್ಲ, ಅಷ್ಟೆ. ಮೂಲದಲ್ಲಿ, ಭಾವದಲ್ಲಿ ಎಲ್ಲವೂ ಒಂದೇ. ಅಭಿವ್ಯಕ್ತಿ ಕ್ರಮ ಮಾತ್ರ ಬೇರೆ ಬೇರೆ. ಆದರೆ ಮಳಗಿಯವರ ಪಾತ್ರಗಳು ಒಂದಲ್ಲಾ ಒಂದು ಹಂತದಲ್ಲಿ ಹೀಗೆ ಎಸೆದು ಬಿಸುಟು ಹೋದ ಬದುಕಿಗೆ ಮತ್ತೆ ಹಿಂದಿರುಗುತ್ತವೆ ಎನ್ನುವುದೇ ಸಮಾಧಾನದ ಮತ್ತು ಅಷ್ಟೇ ಕುತೂಹಲದ ವಿದ್ಯಮಾನ!

No comments: