Monday, November 2, 2009

ಎಸ್.ದಿವಾಕರ್ ಕಥಾಜಗತ್ತು: ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ

ಈ ಸಂಕಲನದ ಎಂಟೂ ಕತೆಗಳಲ್ಲಿ ಐದು ಕತೆಗಳು ಒಂದು ಅರ್ಥದಲ್ಲಿ ಒಂದೇ ಕತೆಯನ್ನು ಹೇಳುತ್ತಿವೆ. ಬಿಳಿಯ ಹೂಗಳ ಕವಿತೆ, ಅಂತರಾಳದಲ್ಲಿ ನಿಂತ ನೀರು ಹಾಗೂ ಮುರುಗಭೂಪತಿಯ ಮಗ: ಒಂದು ಕತೆ ಮತ್ತು ಪ್ರಶ್ನೆ ಪತ್ರಿಕೆ - ಈ ಮೂರೂ ಕತೆಗಳು ತೋರುವ ಪ್ರಯೋಗಶೀಲತೆ ಮತ್ತು ಹೊಸತನವನ್ನು ಗಮನಿಸುತ್ತಲೇ ಉಳಿದ ಐದು ಕತೆಗಳಿಗೂ ಎಸ್.ದಿವಾಕರರ ಮೊದಲ ಸಂಕಲನದ ಕೆಲವು ಕತೆಗಳಿಗೂ ಇರುವ ತಾದ್ಯಾತ್ಮವನ್ನೂ ಗುರುತಿಸಬಹುದು. ಮೊದಲ ಸಂಕಲನದ ಕ್ರೌರ್ಯ ಮತ್ತು ಅನಾಥರು ಕತೆಯ ಮೂಲ ಎಳೆ ಇಲ್ಲಿಯೂ ಮುಂದುವರಿದಿದೆ ಅನಿಸಿದರೆ ಅಚ್ಚರಿಯಿಲ್ಲ. ಅಲ್ಲಿ ಬರುವ ಎಸ್.ಮೃತ್ಯುಂಜಯ ಇಲ್ಲಿಯೂ ಇಣುಕುವುದು ಸುಳ್ಳಲ್ಲ. ಆದರೆ ಈ ಸಂಕಲನದ ಕತೆಗಳು ಬೇರೆ ಬೇರೆಯಾಗಿಯೂ, ಒಟ್ಟಾಗಿಯೂ ಉಂಟು ಮಾಡುವ ಭಾವ ಗಾಢ ವಿಷಾದದ್ದು. ಈ ವಿಷಾದ ಮಾತ್ರ ಸ್ಪಷ್ಟವಾಗಿ ಇದೇ, ಇಂಥಾದ್ದೆ ಮತ್ತು ಇದಕ್ಕಾಗಿಯೇ ಎಂದು ಬೆಟ್ಟು ಮಾಡಿ ಹೇಳಲಾಗದ್ದು. ಎಸ್. ದಿವಾಕರ್ ಈ ಎಂಟೂ ಕತೆಯ ನಿರೂಪಣೆಯಲ್ಲಿ ತೋರಿರುವ ಸಂಯಮ, ವಿವರಗಳಲ್ಲಿ ಹಿಡಿದಿಟ್ಟಿರುವ ಬದುಕಿನ ಜೀವಂತಿಕೆ, ಅವರು ತಮ್ಮ ಕತೆಗಳನ್ನು ಚಿತ್ರಿಸಿರುವ ರೀತಿ ಪ್ರತಿಯೊಂದೂ ಅನನ್ಯವಾದುದು, ಅಧ್ಯಯನ ಯೋಗ್ಯವಾದದ್ದು.

ದಾರಿ ನೂರಾರುಂಟು ಬೆಳಕಿನರಮನೆಗೆ ಕತೆಯ ಮಣ್ಣಾರ್‌ಗುಡಿ ಕೋದಂಡಪಾಣಿ ಬದುಕುತ್ತಿರುವ ಮನೆ, ಆತನ ಮನಸ್ಸಿನ ಗಡಿಯಾರ ದಲ್ಲಿ ನಿಂತೇ ಹೋಗಿರುವ ಕಾಲ ಮತ್ತು ಸ್ಮೃತಿಗಳು ಒಂದಕ್ಕೊಂದು ಪೂರಕವಾಗಿವೆ. ಇಲ್ಲೊಂದು ವಿಚಿತ್ರವಿದೆ. ಎಪ್ಪತ್ತು ವರ್ಷಗಳ ಹಿಂದಿನದನ್ನು ಯಥಾವತ್ತಾಗಿ ನೆನಪಿಸಿಕೊಳ್ಳಬಲ್ಲ ಕೋದಂಡಪಾಣಿಗೆ ಅವೇ ನೆನಪುಗಳು ವರ್ತಮಾನಕ್ಕೆ ಬರಲು, ಚಾಚಿಕೊಳ್ಳಲು ಮಾತ್ರ ನಿರಾಕರಿಸುವುದು ಆ ವಿಚಿತ್ರ. ಸ್ಟಾರ್ಟ್ ಕ್ಯಾಮೆರಾ, ಕಟ್, ವೆಲ್‌ಡನ್ ಕೋತಂಡುಗಳು ಕಿವಿಯೊಳಗೆ ಗುನುಗಿದಷ್ಟು ಸದ್ಯದ ಶಬ್ದಗಳು ಕಿವಿಯನ್ನು ತಲುಪುತ್ತಿಲ್ಲ. ಆದರೂ ಇವತ್ತು ನಡೆಯಲಿಕ್ಕಿರುವ ಸಂದರ್ಶನದ ನೆನಪಿದೆ, ಮೊದಲು ಮರಗತವಲ್ಲಿಯ ಮನೆಗೆ ಮತ್ತು ನಂತರ ಚಿಕ್ಕಪ್ಪನ ಮನೆಗೆ ಹೋಗಬೇಕೆನ್ನಿಸುತ್ತದೆ ಎನ್ನುವುದನ್ನು ಗಮನಿಸಬೇಕು.

ನಮಗೆಲ್ಲರಿಗೂ ಆಪ್ತವಾದ ಒಂದು ಕಾಲಮಾನ ನಮ್ಮದೆ ಬದುಕಿನಲ್ಲಿ ಇದ್ದೇ ಇರುತ್ತದೆ. ಅದರೊಂದಿಗೆ ನಾವು ನಿಂತುಬಿಡುವುದು ಹೇಗೆ ದುರಂತಕ್ಕೆ ಕಾರಣವಾಗಬಹುದೋ ಹಾಗೆಯೇ ಅದನ್ನು ನಮ್ಮ ವರ್ತಮಾನಕ್ಕೆ ಚಾಚಿಕೊಂಡ ಬಗೆಯನ್ನು ಕೂಡ ಗುರುತಿಸಿಕೊಳ್ಳುವ, ಸಮರ್ಥಿಸಿಕೊಳ್ಳುವ ಛಾತಿಯನ್ನು ಹೊಂದಿರದೇ ಇರುವುದು ಕೂಡ ದುರಂತವೇ. ಟಿ.ಎಸ್. ಎಲಿಯೆಟ್ ಹೇಳುವ ಮಾತನ್ನು ಇಲ್ಲಿ ನೆನೆಯಬಹುದು: "Time Present and Time Past Are both perhaps present in Time Future and Time Future contained in Time Past."

ಮೂಕಿ ಚಿತ್ರಗಳ ಉಚ್ಛ್ರಾಯದ ದಿನಗಳಲ್ಲಿಯೇ ನಿಂತು ಹೋದಂತಿರುವ ಕೋದಂಡಪಾಣಿಗೆ ಜಯಮಣಿಯ ಪ್ರಶ್ನೆಗಳು ವಿಚಿತ್ರವೆನಿಸುವಂತೆಯೇ ಜಯಮಣಿಗೆ ತಾನು ಕಾಲದ ಸವಾಲನ್ನು ಎದುರಿಸುತ್ತಿರುವ ಅರಿವಾಗಿ ಬೆವರುತ್ತದೆ. ತಾನು ಬಹುವಾಗಿ ಮೆಚ್ಚಿ ಪ್ರೀತಿಸಿದ ಹುಡುಗಿ ವಿಧವೆಯಾಗಿ, ಮುದುಕಿಯಾಗಿ ಸಾಯುವ ಹಂತದಲ್ಲಿರುವಾಗಲೂ ಪ್ರೇಮಪತ್ರಗಳನ್ನು ಬರೆದು ಅವರಿವರ ಮೂಲಕ ತಲುಪಿಸುತ್ತಿದ್ದ ಕೋದಂಡಪಾಣಿಗೆ ಕೊನೆಗೂ ವಾಸ್ತವಕ್ಕೆ ಸಂಬಂಧ ಕಲ್ಪಿಸುವ ಎಳೆಯೊಂದು ಪ್ರಾಪ್ತವಾಗುವುದು ಅಮ್ಮಾಳ್ ಎರಂದುಪೋನಾರ್ ಎಂಬ ವಾರ್ತೆಯೇ ಅಗುವುದು ವಿಪರ್ಯಾಸ. ಆಗ ಕೋದಂಡಪಾಣಿ, ತಾವು ತುಂಬ ಸಮೃದ್ಧವೆಂದು ಬಗೆದಿದ್ದ ಭೂತಕಾಲ ಹೀಗೆ ಇದ್ದಕ್ಕಿದ್ದಂತೆ ಬಿಡುಬೀಸಾಗಿ ಶೂನ್ಯವಾಗುವುದನ್ನು ಕಾಣುತ್ತಾರೆ. ಈ ಶೂನ್ಯವೇ ಮುವ್ವತ್ತೊಂಭತ್ತು ವರ್ಷಗಳ ಬಳಿಕ ಮತ್ತೆ ಪೀಟರ್ಸ್ ರೋಡಿನ ಒಂದು ಮನೆಯ ಮರಗತವಲ್ಲಿಯನ್ನು ಹುಡುಕಿಕೊಂಡು ಹೊರಡುವುದು ಮತ್ತು ವರ್ತಮಾನವನ್ನು ಹೀಗೆ ಬೀದಿಯಲ್ಲಿ ಎದುರಿಸುವುದು ಅನಿವಾರ್ಯವಾಗಿಸಿದಂತಿದೆ. ಆದರೆ ಸಹಜವಾಗಿಯೇ ಈ ಭೂತ ಮತ್ತು ವರ್ತಮಾನ ಸಂಧಿಸುವ ಸಂಕ್ರಮಣ ಘಟ್ಟ ತುಂಬ ವಿಭ್ರಾಂತಮಯವಾಗಿ ಬಿಡುತ್ತದೆ. ಕಸದಲ್ಲಿ ಸಿಕ್ಕ ಬಲೂನಿನಂಥ ವಸ್ತು ಅದ್ಯಾವ ಮರೆವಿನಲ್ಲಿ ತಮ್ಮ ಕಿಸೆಯನ್ನು ಸೇರಿತೆನ್ನುವುದು ಕೂಡ ತಿಳಿಯದ ಕೋದಂಡಪಾಣಿ ಅದನ್ನೆ ತಮ್ಮ ಬಳಿ ಬಂದ ನಾಲ್ಕು ವರ್ಷದ ಹುಡುಗನಿಗೆ ತೆಗೆದುಕೊಡಲು ಮುಂದಾಗುವ ಕ್ಷಣದಲ್ಲಿ ಕಾಲ ಒಂದು ಕ್ಷಣ ಸ್ತಬ್ಧವಾದಂತಿದೆ.

ಸುಮ್ಮನೇ ಕುತೂಹಲಕ್ಕೆ ಇಲ್ಲಿ ಶ್ರೀಧರ ಬಳಗಾರ ಅವರ ಒಂದು ಫೋಟೋದ ನೆಗೆಟಿವ್ ಕತೆಯ ವೆಂಕಟಪ್ಪ ಅವರ ಮರೆವನ್ನು ನೆನೆಯಬಹುದು. ಮನೆಯ ಪಕ್ಕದ ನೀರ ಝರಿ-ಜಲಪಾತವಾಗಿ, ಅದೊಂದು ಪ್ರೇಕ್ಷಣೀಯ ಸ್ಥಳವಾಗಿ, ತೋಟದೊಳಗೆ ಇದನ್ನು ನೋಡಲೆಂದೇ ಬರುವ ಜನ ಹೆಚ್ಚಾಗಿ, ಆ ಜನರ ಉಪಟಳಗಳು, ಗಲೀಜು, ಸದ್ದುಗದ್ದಲ ಕೂಡ ಅತಿಯಾಗಿ ಕೊನೆಗೆ ಪ್ರವೇಶವನ್ನು ನಿರ್ಬಂಧಿಸುವ ವೆಂಕಟಪ್ಪನವರ ಪ್ರಯತ್ನಕ್ಕೆ ನೂರಾರು ಅಡೆತಡೆಗಳೆಲ್ಲ ಎದುರಾಗುತ್ತಲೇ ಮರೆವಿನ ಒಂದು ರೋಗ ವೆಂಕಟಪ್ಪನವರನ್ನು ಅಮರಿಕೊಳ್ಳುತ್ತದೆ. ಈ ಮರೆವನ್ನು ತಮ್ಮದೇ ಕಾರಣಗಳಿಗಾಗಿ ಒಂದು ಕ್ಷಣದ ಮಟ್ಟಿಗಾದರೂ ಹಿಮ್ಮೆಟ್ಟಿಸಲು ಪ್ರಯತ್ನಿಸುವ ಮನೆಯ ಮಂದಿ ಕೂಡ ಸ್ವಾರ್ಥಿಗಳೇ ಆಗಿರುವುದು ಅಲ್ಲಿನ ದುರಂತ.

ಈ ಕಾಲದೊಂದಿಗೆ ಹೆಜ್ಜೆ ಹಾಕದಿರಲು ಬಯಸಿಯೋ, ಬಯಸದೆಯೋ ಮನಸ್ಸು ಮಾಡಿದ ಪಾತ್ರಗಳಲ್ಲಿ ಕೋದಂಡಪಾಣಿಯೇ ಮೊದಲಿಗರಲ್ಲ. ಇಲ್ಲಿನ ಬಹುತೇಕ ಕತೆಗಳಲ್ಲಿ ಅದು ಮುರುಗಭೂಪತಿಯಾಗಿ, ಅಹಲ್ಯಾಬಾಯಿಯಾಗಿ, ರುಕ್ಮಿಣಮ್ಮನೋ ಜಾನಕಮ್ಮನೋ ಆಗಿ ಮತ್ತೆ ಮತ್ತೆ ಕಾಣಿಸಿಕೊಳ್ಳುವುದು ನಡೆದಿದೆ. ಅವು ಕೇವಲ ಪಾತ್ರಗಳಾಗಿ ಬರದೆ ಇಡೀ ಮನೆಯಾಗಿ, ಊರಿನ ಕೇಂದ್ರವಾಗಿ ಬರುವುದೂ ಇದೆ. ಬದುಕಿಗೆ ಸಂಬಂಧಿಸಿದಂತೆ ಕೆಲವೊಮ್ಮೆ ಅನಿವಾರ್ಯ,ಕೆಲವೊಮ್ಮೆ ಯಾವುದೋ ದುರಂತ ಇಂಥದ್ದಕ್ಕೆ ಕಾರಣವಿದ್ದೀತು ಅನಿಸಿದರೂ, ಇದು ಮೂಲದಲ್ಲಿ ನಾಸ್ಟಾಲ್ಜಿಯಾ ಇರಬಹುದೇನೋ ಅನಿಸಿದರೂ ನಾವಿದನ್ನು ಕತೆಯಾಗಿ ನೋಡುವ ಆಯಾಮ ಕೂಡ ಒಂದಿರುತ್ತದಲ್ಲ, ಅಲ್ಲಿ ಇದನ್ನು ಹೆಚ್ಚು ಸೂಕ್ಷ್ಮವಾಗಿ, ಸಂವೇದನೆಗಳಾಚೆ ಕೂಡ ಗಮನಿಸುವುದು ಸರಿ. ಎಸ್.ದಿವಾಕರರ ಕತೆಗಾರಿಕೆಯ ಪಟ್ಟುಗಳನ್ನು ಅರಿಯಲು ಅದು ಸಹಾಯಕವಾದೀತು.

ನಮ್ಮ ಅನೇಕ ಮುದುಕಿ ಮುದುಕರು ಕಾಲದೊಂದಿಗೆ ಹೆಜ್ಜೆ ಹಾಕುತ್ತಿಲ್ಲ ಎಂದು ನಮಗೆ ಅನಿಸುತ್ತಿದ್ದರೆ ಅದು ಅಂಥ ವಿಶೇಷವೇನಲ್ಲ. ಅನೇಕರಿಗೆ ಇವತ್ತಿನ ಆಧುನಿಕ ಉಪಕರಣಗಳ ಬಳಕೆ ಗೊತ್ತಿಲ್ಲ, ಕಲಿಯುವ ಆಸಕ್ತಿ-ಸಾಮರ್ಥ್ಯ ಇಲ್ಲ ಎಲ್ಲ ಸರಿಯೇ. ಆದರೆ ಕೆಲವರಿಗೆ ಕಂಪ್ಯೂಟರ್, ಇಂಟರ್ನೆಟ್ ಬಳಸುವುದನ್ನು ಕಲಿಯುವ ಆಸೆಯಿದೆ. ಹೊಸ ಹೊಸ ಬಗೆಯ ಮೊಬೈಲಿನ ಕುರಿತು ತಿಳಿಯುವ ಕುತೂಹಲವಿದೆ. ನಿತ್ಯವೂ ಹಾದಿಯಲ್ಲಿ ಸಿಗುವ, ಸರಿಯಾಗಿ ನಡೆಯುವುದಕ್ಕೂ ತ್ರಾಸ ಪಡುವ ವೃದ್ಧರ ಕುತೂಹಲ, ನಿರೀಕ್ಷೆಗಳನ್ನು ಗಮನಿಸಿದಾಗ ಅವರ ಜೀವನ ಪ್ರೀತಿ, ಬದುಕು ಅವರಿಗೆ ಎಷ್ಟು ಸುಂದರವಾಗಿ ಕಂಡಿರಬಹುದೆನ್ನುವ ಕಲ್ಪನೆ, ಅವರ ಬದುಕಿನ ಹಂಬಲ ಉತ್ಸಾಹ ಮೂಡಿಸುತ್ತದೆ. ಅದೇ ರೀತಿ, ಇದ್ದಾಗ ಇದ್ಧಾಂಗ ಬದುಕುವುದಕ್ಕೆ ನಿರಾಕರಿಸಿ ರಾಜೀನಾಮೆ ಎಸೆದು ಸತ್ತಂತೆ ಬದುಕುವ ನಿರ್ಧಾರಕ್ಕೆ ಬಂದ ಜೀವಗಳು ನಿಶ್ಚಿತವಾಗಿಯೂ ಋಣಾತ್ಮಕ ಧೋರಣೆಯೊಂದನ್ನು ಸ್ಫುರಿಸುತ್ತಿರುತ್ತಾರೆ. ಕಾಲನ ಯಾವ ನಿಷ್ಕರುಣಿ ಹೊಡೆತ ಇವರನ್ನು ಇಂಥ ಮನಸ್ಥಿತಿಗೆ ತಳ್ಳಿದ್ದರೂ ಅದನ್ನು ಇವರು ಮೆಟ್ಟಿ ನಿಂತು ನಗುವುದು ಸಾಧ್ಯವಾಗಿದ್ದಿದ್ದರೆ ಎಂದು ಅನಿಸಿಯೇ ಅನಿಸುತ್ತದೆ.

ಆದರೆ ಹಾಗೆ ಅನಿಸುವುದು ಸಾಕಾಗುವುದಿಲ್ಲ. ಇವರ ಬದುಕಿನ ನಿರಾಕರಣಕ್ಕೆ ತಿಳಿದೋ ತಿಳಿಯದೆಯೋ ನಾವೂ ಕಾರಣರಾಗಿರುವುದು ಸಾಧ್ಯವಿದೆ. ಮನುಷ್ಯ ಸಹಜವಾಗಿಯೇ ತನ್ನನ್ನು, ತನ್ನ ನೋವನ್ನು-ಖುಶಿಯನ್ನು ಪ್ರಕಟಪಡಿಸಲು, ತನ್ಮೂಲಕ ಒಂದಿಷ್ಟು ಮಂದಿಗೆ ತಾನು ತಲುಪಲು, ತನ್ನನ್ನು ತಾನು ಹಂಚಿಕೊಳ್ಳಲು ಬಯಸುತ್ತಾನೆ. ಆತ್ಮ-ಪರಮಾತ್ಮ ಪರಿಕಲ್ಪನೆಯನ್ನು ಬಳಸಿ ಹೇಳುವುದಾದರೆ ಈ ಭೂಮಿಯ ಮೇಲಿನ ಪ್ರತಿಯೊಂದು ಆತ್ಮವೂ ಬಿಡಿಬಿಡಿಯಾಗಿದ್ದರೆ ಅದು ಒಂದು ದೊಡ್ಡ ಲಾಡನ್ನು ಉಂಡೆಯಾಗಿ ಕಟ್ಟುವ ಮೊದಲಿನ ಸ್ಥಿತಿಯೆಂದು ತಿಳಿಯಬಹುದು. ಲಾಡಿನ ಸಿಹಿ ನಿಜಕ್ಕೂ ನಮ್ಮ ಅನುಭವಕ್ಕೆ ಬರುವುದು ಅದನ್ನು ಉಂಡೆಯಾಗಿ ಕಟ್ಟಿದಾಗಲೇ. ಹಾಗೆ ಬಿಡಿ ಬಿಡಿಯಾದ ಆತ್ಮಗಳು ಒಂದೆಡೆ ಪರಸ್ಪರ ಅನುಬಂಧದಲ್ಲಿ ಒಂದುಗೂಡಿದಾಗಲೇ ಬದುಕಿನ ರುಚಿ ಹೆಚ್ಚುವುದು, ಸ್ವಾರಸ್ಯ ಮೂಡುವುದೂ. ಹಾಗೆ ಬಿಡಿ ಬಿಡಿ ಆತ್ಮಗಳು ಸೇರಿ ‘ಪರಮ ಆತ್ಮ’ವಾಗುವುದೂ. ಈ ಅರ್ಥದಲ್ಲಿ ಈ ನಿರಾಕರಣದ ಮಾರ್ಗ ಆಯ್ದುಕೊಂಡ ಆತ್ಮಗಳು ಎಂದಿಗೂ ಬೆರೆಯಲು ಒಪ್ಪುವುದಿಲ್ಲ. ಅವು ಬಿಡಿಯಾಗಿ, ಒಂಟಿಗೊಂಡು, ಶೇಷ ಜಗತ್ತನ್ನೇ ನಿರಾಕರಿಸಿ ಒಳಸೇರಿಕೊಳ್ಳುತ್ತವೆ. ಇದು ಒಂದರ್ಥದ ನಿಜಸಾವು. ಸಾವಿಗಿಂತಲೂ ಘೋರವಾದದ್ದು, ಆತ್ಮಹತ್ಯೆಗಿಂತಲೂ ಕೊಳಕಾದ, ಹೆಚ್ಚಿನದಾದ ಹತ್ಯೆಗೆ ಸಮಾನವಾದದ್ದು. ಮತ್ತು ಇವರಿಂದ ತಿರಸ್ಕರಿಸಲ್ಪಟ್ಟ ಶೇಷ ಜಗತ್ತಿನಲ್ಲಿ ನಾವು ನೀವೆಲ್ಲ ಇದ್ದೇವೆ ಎಂಬುದನ್ನು ಕೂಡ ಮರೆಯಲಾಗದು.

ದಿವಾಕರರ ಒಬ್ಬ ಅಹಲ್ಯಾಬಾಯಿ, ಕೋದಂಡಪಾಣಿಯ ಜೀವನಕ್ರಮದ ಆಯ್ಕೆ ಏನಿದೆ ಅದರ ಹಿಂದೆ ದಾರುಣವಾದ ಕಹಿ ಇದೆ. ಈ ಜೀವನ ವಿಮಖಿಯಾದ, ಜೀವ ವಿರೋಧಿಯಾದ ಮತ್ತು ಜೀವನ ಪ್ರೀತಿ ಕಳೆದುಕೊಂಡವರ ಕತೆಯನ್ನು ಆ ಎಲ್ಲ ನಿಂತು ಹೋದ ನೀರಿನ ವಿವರಗಳಲ್ಲಿ ಹೇಳುವುದು ಕಷ್ಟ. ಇವರಿಗೆ ಬದುಕು ಅರ್ಥಹೀನವೂ ನಿರರ್ಥಕವೂ ಅನಿಸಿದ ಮೇಲೆಯೇ ಹೀಗೆ ಇದ್ದರೂ ಸತ್ತಂತೆ ಬದುಕುವುದು ಸಾಧ್ಯವಾಗಿರಬೇಕು. ಈ ಕತೆಗಳನ್ನು ಓದುತ್ತಿದ್ದಂತೆಲ್ಲ ಅಹಲ್ಯಾಬಾಯಿಯನ್ನು, ರುಕ್ಮಿಣಮ್ಮನನ್ನು ಅಥವಾ ಜಾನಕಮ್ಮನನ್ನು ಹೊರಳು ದಾರಿಯೊಂದು ಇದಿರುಗೊಳ್ಳುವುದು ಸಾಧ್ಯವೇ ಇರಲಿಲ್ಲವೆ ಎಂಬ ಹಳಹಳಿಕೆ ಇಲ್ಲಿನ ಒಂದೆರಡು ಕತೆಗಳಲ್ಲಿ ಬರುವ ನಿರೂಪಕಿಯಂತೆ ನಮಗೂ ಅನಿಸಿಯೇ ಅನಿಸುತ್ತದೆ. ಅದಕ್ಕಿಂತಲೂ ಹೆಚ್ಚಿನದ್ದೆಂದರೆ, ನಮ್ಮದೆ ಊರಿನಲ್ಲಿ, ಬೀದಿಯಲ್ಲಿ ಇಂಥ ಒಂದು ಜೀವ, ಮನೆ ಕೂಡ ಇರುವುದು ಸಾಧ್ಯವಿದೆ ಎನ್ನುವುದು. ದಿವಾಕರ್ ಅವರ ಕತೆಗಳು ನಮ್ಮನ್ನು ಅಂಥವರತ್ತ ಸ್ಪಂದಿಸುವಂತೆ ಮಾಡಿವೆ. ಒಳ್ಳೆಯ ಕತೆಯೊಂದು ಇದಕ್ಕಿಂತ ಹೆಚ್ಚಿನದೇನನ್ನು ಮಾಡಬಹುದು? ಅದು ನಮ್ಮನ್ನು ಮತ್ತು ನಮ್ಮ ಪುಟ್ಟ ಜಗತ್ತಿನ ಮಂದಿಯನ್ನು ನಮ್ಮ ಮೂಲಕವೂ ಬದುಕಿಗೆ ಆಹ್ವಾನಿಸಿದರೆ, ಬದುಕಿನ ಸವಿಯಾದ ಮುಖವನ್ನು ತೋರಿಸಿದರೆ ಸಾಕಷ್ಟಾಯಿತು!

ಕತೆಯಾಗಿ ದಿವಾಕರ್ ಅವರು ಇಲ್ಲಿ ನಿಭಾಯಿಸುವ ನಿರೂಪಣೆಯ ಕ್ರಮ ಕೂಡ ಗಮನಾರ್ಹವಾಗಿದೆ. ಅದು ಕಟು ವಾಸ್ತವದ facts ನಿರೂಪಿಸುತ್ತಲೇ ಒಬ್ಬ ಸಾಮಾನ್ಯ ನೋಡುಗನ (ಸಾಧಾರಣವಾಗಿ ಊರ ಮಂದಿ) ಲಘುಧಾಟಿ ಎರಡರ ಸಂತುಲಿತ ಪಾಕದಂತಿರುವುದರಿಂದಲೇ ಈ ಕತೆಗಳು ವಸ್ತುವಿನ ಜಡತ್ವದ ಭಾರವಿಲ್ಲದೆ ಆಕರ್ಷಕವಾಗಿವೆ. ಎಸ್. ಸುರೇಂದ್ರನಾಥರ ಕಥಾಸಂಗ್ರಹ ನಾತಲೀಲೆಯಲ್ಲಿ ನಾವು ಕಾಣುವ ಕಪ್ಪು ಹೊಗೆಹಿಡಿದ ಮನೆಯೊಳಗಿನ ಗೊಡ್ಡು ವೈದಿಕ ಕರ್ಮಠರಂತೆ ಭಾಸವಾಗುವ ಕುರುವಿನ ಗುಲಾಮ ಕತೆಯ ಸೀತಾರಾಮ ಶಾಸ್ತ್ರಿಗಳು, ನಾತಲೀಲೆಯ ಮಾರುತಿರಾವ್ ತುಕಾರಾಮ್ ಗಾಢವೇ ಅಲಿಯಾಸ್ ಹುರಗಡಲೀ ಮೇಷ್ಟ್ರು, ಮಾತು ಮಾತಿಂದೇ ಅವನ ಕೊಂದಿಹರು ಕತೆಯ ಶ್ರೀಪತಿ ತೆರಗುಂಡಿ, ಗುಪ್ತ ಸಮಾಲೋಚನೆ ಕತೆಯ ಮದನಪಲ್ಲಿ ಭವಾನಿಶಂಕರ ಬೋಧರಾಯ ಸುಬ್ರಮಣ್ಯ ಶರ್ಮ ಮತ್ತು ಅವನ ಹೆಂಡತಿ ಅನುಸೂಯ; ಅಥವಾ ಅಶೋಕ ಹೆಗಡೆಯವರ ಕಥಾಸಂಕಲನ ಒಂದು ತಗಡಿನ ಚೂರು ಕೃತಿಯ ದೂರ ಸಮುದ್ರದ ಕಾಡು ಕತೆಯ ಉಮಾಪತಿ, |ವೆಂಕಟಸುಬ್ಬಯ್ಯ ರಾಮೋಜಿ ಬಾಳಾ, ಪಿ.ಎಚ್.ಡಿ. ಮತ್ತು ಗಡಿಯಾರ ಗೋಪುರದ ಇತಿಹಾಸವು ಕತೆಯ ವೆಂಕಟಸುಬ್ಬಯ್ಯ ಮುಂತಾದ ಪಾತ್ರಗಳನ್ನು ಇಲ್ಲಿ ನೆನೆಯಬಹುದು. ಇವರುಗಳು ಅನುಸರಿಸುವ ಲಘು ವೈನೋದಿಕ ಧಾಟಿಯನ್ನು ಎಸ್.ದಿವಾಕರ್ ಪೂರ್ತಿಯಾಗಿ ಅನುಸರಿಸುವುದಿಲ್ಲವಾದರೂ ದಿವಾಕರರ ಕತೆಯ ನಿರೂಪಣೆ ಕೂಡ ವಿನೋದದ ಒಂದು ಎಳೆಯನ್ನು ಇರಿಸಿಕೊಂಡೇ ಸಾಗುತ್ತದೆ ಎಂಬುದು ಗಮನಾರ್ಹ. ಕೊನೆಯ ಎರಡು ಕತೆಗಳ ನಿರೂಪಕಿಯರಾದ ವಾರಿಜಾ ಮತ್ತು ವೈದೇಹಿಯರು ಕೂಡಾ ತಮ್ಮ ನಿರೂಪಣೆಯಲ್ಲಿನ ನವಿರು ಧಾಟಿಯಿಂದಲೇ ಇದನ್ನು ಸಾಧಿಸುತ್ತಾರೆ ಎಂಬುದು ನಿಜ.

ಬಿಳಿಯ ಹೂಗಳ ಕವಿತೆ ಕತೆ ಕೊಂಚ ಭಿನ್ನ ಧಾಟಿಯದು. ಇಲ್ಲಿನ ಪ್ರಧಾನ ಪಾತ್ರಗಳು ಮೂರು ದಂಪತಿಗಳದ್ದು. ಅವರು ರಾಮಚಂದ್ರ ಮತ್ತು ಮಾಲಿನಿ, ತಿರುವೇಂಗಡಂ ಮತ್ತು ಸುಬ್ಬುಲಕ್ಷ್ಮಿ ಹಾಗೂ ಗೇಬ್ರಿಯಲ್ ಮತ್ತು ರೋಸಿ. ಇವರಲ್ಲದೆ ಜಗದಾಂಬಾಳ್ ಎನ್ನುವ ಒಂದು ಪಾತ್ರವೂ ಇದೆ. ಸಹಜವಾಗಿಯೇ ಇಲ್ಲಿ ಒಂದು ಬಗೆಯ ಸ್ಪರ್ಧೆ, ಹೋಲಿಕೆ ಮತ್ತು ಅನುಸಂಧಾನಗಳಿಂದಾಗಿಯೇ ಹುಟ್ಟಿಕೊಳ್ಳುವ ಅನುಮಾನ-ಅಸೂಯೆ ಮತ್ತು ದ್ವೇಷ ಕೂಡ ಪಾತ್ರಗಳಾಗಿ ಮೂಡಿಕೊಳ್ಳುತ್ತವೆ. ಕುಡಿತ-ಸದಾ ಜಗಳ ಇತ್ಯಾದಿಗಳಿಂದ ತೀರ ಕೆಳಮಟ್ಟದ ಜನ ಎಂದೇ ಮಾಲಿನಿಗೂ ಅನಿಸುವ ತಿರುವೇಂಗಡಂನ ಸಂಸಾರದಲ್ಲಿಯೂ ಮಾಲಿನಿಗೆ ಬೇಕನಿಸುವ ಸಂಗತಿಗಳಿವೆ. ಅದು ಮಕ್ಕಳ ಆಸೆ. ತಮಗೆ ಮಕ್ಕಳಾಗಿಲ್ಲ ಎನ್ನುವುದೇ ರಾಮಚಂದ್ರ-ಮಾಲಿನಿಯರ ದಾಂಪತ್ಯದ ಒಂದು ಕೊರತೆ ಬೆಳೆದು ನಿಲ್ಲುವುದು,ಮುಖ್ಯವಾಗಿ ಕಾಣುವುದು ಉಳಿದೆರಡು ದಾಂಪತ್ಯಗಳ ಸನ್ನಿಧಿಯಲ್ಲೇ. ಗೇಬ್ರಿಯಲ್‌ನ ಹೆಂಡತಿಯಂತಿರುವ ರೋಸಿ ಗರ್ಭಿಣಿಯಾಗುವುದು, ತಿರುವೇಂಗಡಂನ ಪತ್ನಿ ಯಾರೊಂದಿಗೋ ಓಡಿ ಹೋಗುವುದು ಎಲ್ಲ ಮಾಲಿನಿ ರಾಮಚಂದ್ರರ ದಾಂಪತ್ಯದ ಆಂತರಿಕ ವಲಯದಲ್ಲಿಯೂ ಹುಟ್ಟಿಸುವ ಕಸಿವಿಸಿಗಳು, ಸೂಕ್ಷ್ಮವಾಗಿ ಹಣಿಕಿಕ್ಕುವ ಕೊಂಕಿನ, ಎರಡಲಗಿನ, ವ್ಯಂಗ್ಯದ ಮಾತುಗಳಲ್ಲಿ ಅವು ಹಲ್ಲುಕಿರಿಯುವುದು ಇಲ್ಲಿ ಮುಖ್ಯವಾಗುತ್ತದೆ. ಕಥೆಯ ಕೊನೆಯಲ್ಲಿ ಬರುವ ಒಂದು ನಾಟಕೀಯ ಸನ್ನಿವೇಶ ಮನುಷ್ಯನ ಒಳಮನಸ್ಸಿನ ಹುಚ್ಚಾಟಗಳು, ಅವುಗಳ ಅರಿವಿದ್ದೂ ಅವನು ಸೋಗು ಮಾಡುವ ಅವನ ನಾಗರೀಕ ವೇಷ-ಸಭ್ಯತೆಯ ನಾಟಕಗಳು, ಇವುಗಳೆದುರು ಬಾಗಿಲಲ್ಲಿ ನಿಂತ ಮಾಲಿನಿಯ ನಿಟ್ಟುಸಿರು - ಒದಗಿಸಿದ ನೋಟ ತುಂಬ ಅರ್ಥಪೂರ್ಣವಾಗಿ ಮನಸ್ಸಿಗಿಳಿಯುತ್ತದೆ.

ಈ ಕತೆಯನ್ನು ವಿವೇಕ ಶಾನಭಾಗರ ಅಂಕುರ ಸಂಕಲನದ ಲಗ್ಗೆ ಮತ್ತು ಪರಸ್ಪರ ಕತೆಗಳೊಡನೆ ಹೋಲಿಸಿ ನೋಡುವುದು ಕೂಡ ಸಾಧ್ಯವಿದೆ. ಅಲ್ಲಿಯೂ ದಾಂಪತ್ಯಕ್ಕೆ ಹೊರಗಿನ ಒಂದು ವ್ಯಕ್ತಿ ಒದಗಿಸುವ ಸವಾಲು ಇದೇ ಬಗೆಯದಾಗಿರುವುದು ಕುತೂಹಲಕರ.

ಅಂತರಾಳದಲ್ಲಿ ನಿಂತ ನೀರು ಕತೆಯ ಎಸ್ ಮೃತ್ಯುಂಜಯ ಹಿಂದಿನ ಸಂಕಲನದ ಮೃತ್ಯುಂಜಯ ಕತೆಯ ಮೃತ್ಯುಂಜಯನೇ ಇರಬಹುದೆನ್ನಿಸಿ ಅದೇ ಕತೆಯ ಮುಂದುವರಿಕೆಯೇನಾದರೂ ಇಲ್ಲಿದೆಯೇ ಅನಿಸಿದರೆ ಅಚ್ಚರಿಯಿಲ್ಲ. ಆದರೆ ಅಂಥದ್ದೇನೂ ಇಲ್ಲ. ಇಲ್ಲಿನ ಕತೆ-ಅದರ ಗಮ್ಯವೇ ತೀರ ಭಿನ್ನವಾದದ್ದು. ಆದರೆ ಈ ಕತೆಗೂ ಎಸ್.ದಿವಾಕರರ ಮೊದಲ ಸಂಕಲನದ ಎರಡನೆಯ ಭಾಗದ ಮಾಂತ್ರಿಕ ವಾಸ್ತವವಾದದ ಕತೆಗಳಿಗೂ ಸಾಮ್ಯತೆಯಿದೆ. ಇಲ್ಲಿಯೂ ಬೆಳಿಗ್ಗೆ ಹಿಂದೂ ಪತ್ರಿಕೆಯಲ್ಲಿ ಓದಿದ ಬರದ ವಾರ್ತೆಯನ್ನೇ ಮಾನಸಿಕವಾಗಿ ಹಿಂಬಾಲಿಸುವ ಮೃತ್ಯುಂಜಯ ಹೋಟೇಲ್ ರೂಮಿನ ನದಿಯ ಚಿತ್ರಪಟವೊಂದರ ಮೂಲಕವೇ ಆ ನದಿಗಿಳಿದು, ಅಲ್ಲಿದ್ದ ದೋಣಿಗೆ ಹುಟ್ಟು ಜೋಡಿಸಿ ಇನ್ನೊಂದು ತೀರಕ್ಕೆ ಹೋಗಿ ಬರದಿಂದ ಕಂಗಾಲಾದ ಹುಡುಗನೊಬ್ಬ ಇಲಿಯನ್ನು ಸುಟ್ಟು ತಿನ್ನುವುದನ್ನೂ, ಪತ್ರಕರ್ತನಂತಿರುವವನೊಬ್ಬ ಅದರ ಫೋಟೋ ತೆಗೆಯುವುದನ್ನೂ ಒಮ್ಮೆಗೇ ಕಂಡು ಕಂಗಾಲಾಗಿ ಮರಳಿ ಹೋಟೆಲಿನ ರೂಮಿಗೆ ಬರುವುದರೊಳಗೆ ನಾಲ್ಕು ದಿನಗಳಾಗಿರುತ್ತವೆ! ಮೃತ್ಯುಂಜಯ ಕತೆಯಲ್ಲೂ ಇದೇ ರೀತಿ ಆಗುತ್ತದೆ. ಅಲ್ಲಿ ಸತ್ತ ದೇಹದ ಡಿಸೆಕ್ಷನ್ ನಡೆಸುವ ಹಂತದಲ್ಲಿ ಆ ದೇಹದ ಚರಿತ್ರೆಯನ್ನು, ಕತೆಯನ್ನು ಶೋಧಿಸುವ ಸ್ವಾಮಿನಾಥನ್ ಪೋಲೀಸು-ತನಿಖೆ ಎಂದೆಲ್ಲ ತೀರ ಕೈಮೀರಿದ ಹಂತದಲ್ಲಿ ಸ್ವತಃ ಹಾಸಿಗೆಯಲ್ಲಿ ಮಲಗಿದಲ್ಲೆ ಕನವರಿಸುತ್ತಿರುವುದರ ಮೂಲಕ ಸನ್ನಿವೇಶದಿಂದಲೇ ಮುಕ್ತನಾಗುತ್ತಾನೆ! ವಾಸ್ತವ ಜಗತ್ತಿನ ದುರಂತದ ವಾರ್ತೆಯೂ ಕೂಡ ಸುಪ್ತ ಮನಸ್ಸಿನ ಸಂವೇದನೆಗಳಲ್ಲಿ ನಿಜದ ಅನುಭವವಾಗುವ, ಮನಸ್ಸು ಅದಕ್ಕೆ ಸಾಕ್ಷಿಯಾಗುವ, ಒಂದು ಬಗೆಯ ಹೊಣೆಗಾರಿಕೆ ತೋರುವ ಮನೋಲೋಕದ ಅಂತರ್ಗತ ಸಂಬಂಧ ಈ ಕತೆಯಲ್ಲೂ ಕಾಣಸಿಗುತ್ತದೆ.

ಮುರುಗಭೂಪತಿಯ ಮಗ: ಒಂದು ಕತೆ ಮತ್ತು ಪ್ರಶ್ನೆ ಪತ್ರಿಕೆ ಒಂದು ವಿನೂತನ ಬಗೆಯ ಕತೆ. ಒಂದರ್ಥದಲ್ಲಿ ಇದು ಕೂಡ ಕೆಸರಲ್ಲಿ ಕಾಲಿಟ್ಟು ಕೊನೆಗೆ ಅದರಲ್ಲೇ ಹೂತು ಹೋದವರ ಕತೆಯೇ. ಮುರುಗಭೂಪತಿಯ ಮಗ ಕೆಲಸಕ್ಕೆಂದು ಸೇರಿದ ಜಾಗ ಅಂಥದ್ದೇ. ಪೋಲೀಸು, ತನಿಖೆ, ಕೋರ್ಟು, ಕಾನೂನುಗಳ ನಡುವೆ ಪೋಲೀಸ್ ಕಮೀಷನರ್‌ಗೆ ಸಹಜವಾಗಿ ಬರಬಹುದಾದ ಸಿಟ್ಟು ಬಂದದ್ದೇ ಒಂದು ದುರಂತದ ಸರಮಾಲೆಗೆ ಕಾರಣವಾಗುವುದಾದರೆ ತಪ್ಪು ಯಾರದೆಂದು ಹೇಳುವುದು? ಈ ಕತೆಯ ಕೊನೆಯಲ್ಲಿ ಒಂದು ಪ್ರಶ್ನೆ ಪತ್ರಿಕೆಯಿದೆ. ಇಡೀ ಕತೆಯ ಸಂದಿಗ್ಧಗಳನ್ನು, ನಾವು ಬದುಕುತ್ತಿರುವ ಜಗತ್ತಿನ ಮೌಲ್ಯಗಳನ್ನು, ಮಾನವ ಸಹಜ ನೀಚತನದ ಹಂಬಲಗಳನ್ನು, ಅವನ ಸಾಚಾತನದ ತುಡಿತ ಮತ್ತು ಅದರ ನಾಟಕೀಯತೆಯನ್ನು ಈ ಕತೆಯ ಹಿನ್ನೆಲೆಯಲ್ಲಿ ಈ ಪ್ರಶ್ನಾವಳಿ ಪ್ರಶ್ನಿಸುತ್ತದೆ. ಬರಿಯ ಕತೆಯ ಓದು ಕೂಡ ನಮ್ಮ ನಿಮ್ಮಲ್ಲಿ ಹುಟ್ಟಿಸುವ ಪ್ರಶ್ನೆಗಳೇ ಇವು. ಆದರೆ ಕತೆಯೊಂದನ್ನು ಓದಿ ಅಷ್ಟೇ ಬೇಗ ಮರೆತು ಬಿಡಬಹುದಾದ ನಮ-ನಿಮಗೆ ಈ ಪ್ರಶ್ನಾವಳಿ ಕತೆಯೊಂದಿಗೆ ಇನ್ನೂ ಸ್ವಲ್ಪ ಹೆಚ್ಚು ಹೊತ್ತು ಉಳಿಯುವಂತೆಯೂ, ಆನಂತರವೂ ಪ್ರಶ್ನೆಗಳಿರುವುದರಿಂದ ಅವುಗಳ ಉತ್ತರದ ಬಗ್ಗೆ ಕೊಂಚ ತಲೆಕೆಡಿಸಿಕೊಳ್ಳುವಂತೆಯೂ ಒತ್ತಡ ಹಾಕುತ್ತದೆ.

ಇಲ್ಲಿ ಒಂದು ವಿಚಾರವನ್ನು ಸ್ವಲ್ಪ ತರ್ಕಕ್ಕೆ ಒಡ್ಡಬಹುದು. ಸುಳ್ಳು ಹೇಳುವವರಿಗೆ ಮಾತ್ರ ತರ್ಕದ ಅಗತ್ಯವಿರುತ್ತದೆ ಎಂದು ಗಿರೀಶ ಕಾರ್ನಾಡರ ಯಾವುದೋ ನಾಟಕವೊಂದರ ಪಾತ್ರ ಹೇಳುತ್ತದೆ. ಅದು ನಿಜವಿರಬಹುದು. ಆದರೆ ಇಲ್ಲಿ, ದಿವಾಕರರ ಕತೆಗಳಲ್ಲಿ ಮತ್ತೆ ಮತ್ತೆ ನಮಗೆ ಎದುರಾಗುವ ಸಂದಿಗ್ಧಗಳು ವಿಚಿತ್ರ ಬಗೆಯವು. ಈ ಸಂದಿಗ್ಧಗಳಿಗೆ ಬರೇ ಕೆಲವು ಮನುಷ್ಯರ ತಪ್ಪು ವರ್ತನೆ ಕಾರಣವಲ್ಲ. ಸನ್ನಿವೇಶ ಕೂಡ ಕಾರಣ. ಮತ್ತು, ಕೆಲವೊಮ್ಮೆ, ತಪ್ಪು ಹೆಜ್ಜೆ ಕೂಡ ಕಾರಣವಲ್ಲ, ಸರಿಯಾದ ಹೆಜ್ಜೆ ಕೂಡ ಕಾರಣ. ತಪ್ಪು ಯಾರದಿಲ್ಲಿ ವಿಧಿ ತಂದ ಬಾಳಿನಲ್ಲಿ ಎನ್ನಬಹುದಾದರೂ ತರ್ಕ ವಿಧಿಯನ್ನು ಒಪ್ಪಿಕೊಳ್ಳಲೇ ಬೇಕೆಂದಿಲ್ಲ. ಕ್ರೌರ್ಯದ ಅಲಮೇಲುವಿನ ಬದುಕನ್ನೇ ತೆಗೆದುಕೊಳ್ಳಿ, ಅಥವಾ ನೆಲೆ ಕತೆಯ ಜಯಾ, ಅನಾಥರು ಕತೆಯ ವೃದ್ಧ ದಂಪತಿಗಳು, ಮೃತ್ಯುಂಜಯ ಕತೆಯ ರಾಧಾ ....ಇವರೆಲ್ಲ ಮಾಡಿದ ತಪ್ಪಾದರೂ ಏನು? ಆದರೂ ಇವರೇಕೆ ಅನ್ಯಾಯಕ್ಕೆ, ಸಂಕಟಕ್ಕೆ, ಮನೋವೇದನೆಗೆ ಮತ್ತು ಕೆಲವೊಮ್ಮೆ ಸಾವಿಗೆ ತುತ್ತಾಗುತ್ತಾರೆ ಎಂದರೆ ಉತ್ತರವಿಲ್ಲ. ಬದುಕು ತಂದ ಅನಿವಾರ್ಯಗಳಿಗೆ, ದತ್ತಗಳಿಗೆ, ಸಂದಿಗ್ಧಗಳಿಗೆ ತಾರ್ಕಿಕ ಉತ್ತರಗಳಿಲ್ಲ. ಇದ್ದಂತೆ ಕಂಡರೂ ಅವು ಶಾಶ್ವತ ಸತ್ಯಗಳಲ್ಲ. ಹೀಗೆ ಈ ಉಸಿರುಗಟ್ಟಿಸುವ ಸಂದಿಗ್ಧ ಎಸ್.ದಿವಾಕರರ ಹೆಚ್ಚಿನ ಕತೆಗಳಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಎನ್ನುವುದು ನಿಜವಾದರೂ ಅವೇ ಆ ಕತೆಯ ಚೌಕಟ್ಟು ನಿರ್ಮಿಸುವುದಿಲ್ಲ, ಅವನ್ನು ಮೀರಿ ಅವರ ಪಾತ್ರಗಳು-ಕಥಾನಕ ಬೆಳೆಯುತ್ತವೆ ಎನ್ನುವುದು ಗಮನಿಸಬೇಕಾದ ಅಂಶ.

ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಕತೆಯ ಅಹಲ್ಯಾಬಾಯಿ ಮತ್ತು ಅವಳ ಮಗಳು ಕಮಲಾ ಕ್ರೌರ್ಯದ ಅಲಮೇಲುವಿನಂತೆಯೇ ಬಹುಕಾಲ ನಮ್ಮ ಮನಸ್ಸಿನಲ್ಲಿ ನಿಂತುಬಿಡುವುದರಲ್ಲಿ ಸಂಶಯವಿಲ್ಲ. ಈ ಕತೆಯ ಪೂರ್ವಾರ್ಧ ಊರಿನವರ ಗಮನಿಸುವಿಕೆಯ ಧಾಟಿಯನ್ನೇ ಅನುಸರಿಸಿ ನಿರೂಪಿಸಲ್ಪಟ್ಟಂತಿದೆ. ಇದೆಲ್ಲ ಹೇಗಿದೆಯೆಂದರೆ ವಿವೇಕ ಶಾನಭಾಗರ ಕಾರಣ ಕತೆಯಲ್ಲಿ ಮುಕ್ತಾಳನ್ನು ಗಮನಿಸುವ ಮಂದಿ ನೆನಪಿಗೆ ಬರುತ್ತಾರೆ. ನಿಷ್ಕಾರಣವಾಗಿ ಒಂದು ಜೀವ ಇಡೀ ಊರಿನವರ ತೀರ್ಮಾನಗಳಿಗೆ ಬದ್ಧವಾಗಿ ಬದುಕಿದಂತೆ ಕಾಣಿಸುವ ಈ ಕತೆಗಳು ನಿಜವನ್ನೇ ಹೇಳುತ್ತಿವೆ. ಸಮಾಜದ ಗಮನಿಸುವಿಕೆಯಿಂದ ಮುಕ್ತರಾಗಿ ನಗರ ಸೇರಿಕೊಂಡು ಐಡೆಂಟಿಟಿಯನ್ನು ಕಳೆದುಕೊಳ್ಳ ಬಯಸುವ ಮನುಷ್ಯನ ಸುಪ್ತ ಆಶೆಗಳಿಗೆ ಇಲ್ಲಿ ನಮಗೆ ಸಮರ್ಥನೆ ದೊರಕಿದರೆ ಅಚ್ಚರಿಯಿಲ್ಲ! ಈ ಕಾರಣಕ್ಕೆ ನಿರೂಪಕರ ಪಾತ್ರವಹಿಸುವ ಈ ಊರಿನ ಮಂದಿ ಅಹಲ್ಯಾಬಾಯಿಯ ಬಗ್ಗೆ ಕರುಣೆ ಉಕ್ಕಿಸುತ್ತಾರೆ, ಸ್ವತಃ ತಮ್ಮ ಬಗ್ಗೆ ಇರಿಸುಮುರಿಸಿನ ಭಾವವನ್ನು ಕಾಣಿಕೆಯಾಗಿ ಪಡೆದರೂ!

ಕತೆ ಅಹಲ್ಯೆ ಪುಟ್ಟ ಹುಡುಗಿಯಾದ್ದಲ್ಲಿಂದ ತೊಡಗಿ ಅವಳ ಮದುವೆ, ವೈಧವ್ಯ, ಮಗಳ ಬೆಳವಣಿಗೆ, ಆ ಮಗಳ ಕುರಿತ ಪುಕಾರು, ಅದನ್ನು ನಿಭಾಯಿಸುವುದಕ್ಕಾಗಿಯೇ ಅವಳನ್ನು ದೂರದ ಹಾಸ್ಟೆಲ್ಲಿನಲ್ಲಿಟ್ಟು ಕಲಿಸುವ ನಿರ್ಧಾರಕ್ಕೆ ಬಂದು ಕೊನೆಗೆ ಒಂಟಿಯಾಗುವ ಅಹಲ್ಯೆಯವರೆಗೂ ಮುಂದುವರಿಯುತ್ತದೆ. ಅಹಲ್ಯಾಬಾಯಿ ಸ್ವತಃ ಎದುರಿಸುವ ಬದುಕಿನ ಅನೇಕ ತಲ್ಲಣಗಳಿಗೆ ಆಯಾ ಸಂದರ್ಭಾಗಳಲ್ಲಿ ಕಲ್ಲಾಗಿಯೇ ಪ್ರತಿಕ್ರಿಯಿಸಿದ ವಿವರ ಕತೆಯಲ್ಲಿ ನಮಗೆ ಸಿಗುತ್ತದೆ. ಗಂಡನ ಸಾವು, ನಂತರ ಮಗಳ ವಿಯೋಗ ಇತ್ಯಾದಿ. ಆದರೆ ಕತ್ತಲಾದ ಮೇಲೆ ಮಣ್ಣು ಹೊತ್ತೊಯ್ಯುವುದು, ಬಸ್ಸಿನಲ್ಲಿ ತೊಟ್ಟಿಲು ಇಳಿಯುವುದು, ಊರ ಅಂಗಡಿಯಿಂದ ಗಿಲಕಿಯನ್ನು ಕೊಂಡೊಯ್ಯುವುದು ಇತ್ಯಾದಿ ವಿವರಗಳು ಹುಟ್ಟಿಸುವ ಕುತೂಹಲ ಮಾತ್ರ ಕರುಳು ಕಲಕುವ ಒಂದು ವಿದ್ಯಮಾನಕ್ಕೆ ನಮ್ಮನ್ನು ಮುಖಾಮುಖಿಯಾಗಿಸಿ ಅದುವರೆಗೂ ಅರ್ಥವಾಗದ ಅಹಲ್ಯಾಬಾಯಿಯ ಇನ್ನೊಂದು ಮುಖವನ್ನು ಏಕಾಎಕಿ ತೆರೆದಿಟ್ಟು ಓದುಗರನ್ನು ಕಂಗಾಲುಗೊಳಿಸುತ್ತದೆ ಮಾತ್ರವಲ್ಲ ವಿಚಿತ್ರ ತಲ್ಲಣಗಳನ್ನುಂಟು ಮಾಡುತ್ತದೆ. ಇದು ಒಂದು ಬಗೆಯಲ್ಲಿ ಅಲಮೇಲುವಿನ ದುರಂತವನ್ನೇ ಹೊಸದೇ ಆದ ರೀತಿಯಿಂದ ನಮ್ಮ ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ.

ಕತೆಯ ನಿರೂಪಣೆ ಒಂದು ಹಂತದ ನಂತರ ಸ್ವಲ್ಪ ಭಾಗ ಅಹಲ್ಯಾಬಾಯಿಯ ಸ್ವಗತದ ಧಾಟಿಯಲ್ಲೂ, ಉಳಿದರ್ಧ ಜನಾರ್ದನನ ಮಾತುಗಳಲ್ಲಿಯೂ ಇರುವುದು ಕೂಡ ಗಮನಾರ್ಹ. ಅಹಲ್ಯಾಬಾಯಿಗೆ ಒಂದಿಷ್ಟಾದರೂ ಮಾತಿಗೆ ಅವಕಾಶ ನೀಡಿರುವುದು ಮತ್ತು ಕಮಲೆಯ ಬದುಕಿನ ಬಗ್ಗೆ ಒಂದಿಷ್ಟಾದರೂ ಊರ ಹೊರಗಿನ ಒಡನಾಟವುಳ್ಳ ಜನಾರ್ದನ ಹೇಳಿರುವುದು ನಿಜಕ್ಕೂ ಕತೆಯ ಚೌಕಟ್ಟಿಗೆ ಅತ್ಯಂತ ಅಗತ್ಯವೇ ಆಗಿತ್ತು. ಇಲ್ಲವಾದರೆ ಕೊನೆಗೂ ಇದು ಅಹಲ್ಯಾಬಾಯಿಯ ಕುರಿತು ಊರಿನವರ ದೃಷ್ಟಿಕೋನವನ್ನಷ್ಟೇ ದಾಖಲಿಸುವ ಅಪಾಯವಿತ್ತು. ಅದು ಎಷ್ಟೆಂದರೂ ಪೂರ್ಣಚಿತ್ರವೊಂದನ್ನು ಕಟ್ಟಿಕೊಡುವುದು ಸಾಧ್ಯವಿರಲಿಲ್ಲ ಎಂಬ ಕಾರಣಕ್ಕೂ ಸರಿಯೇ.

ಅಲ್ಲೇ ಮುಂದಿನ ಕತೆ ಮುಗಿಯದಾಸೆಯ ಬಾಗಿಲು ಅಹಲ್ಯಾಬಾಯಿಯ ಕತೆಯ ಮುಂದುವರಿಕೆಯೇ ಆಗಿದೆ. ಒಂದು ವಿಧದಲ್ಲಿ ಈ ಕತೆ ಹೊಸತೇ ಆದ ಏನನ್ನೂ ಹೇಳದಿದ್ದಾಗ್ಯೂ ಇಲ್ಲಿ ಕಮಲೆಗೆ ಸಿಕ್ಕಿದ ಅಭಿವ್ಯಕ್ತಿ ಮತ್ತು ಅವಳದೇ ಕತೆ ಇದಾಗಿರುವುದು ಅಹಲ್ಯಾಬಾಯಿಯ ಗುಂಗಿನಲ್ಲೇ ಇರುವ ನಮಗೆ ಹೆಚ್ಚಿನ ಸಮಾಧಾನವನ್ನಂತೂ ನೀಡುತ್ತದೆ! ಆದರೆ ಕಾಂಪೌಂಡಿನಲ್ಲಿ ತೆರೆದ ಪುಟ್ಟ ಕಿಂಡಿ ಕಮಲೆಯ ಸ್ವಾತಂತ್ರ್ಯದ ಬಾಗಿಲಂತೆ ಕಂಡರೂ, ಅದು ಮುಗಿಯದಾಸೆಯ ಬಾಗಿಲೇ ಆಗಿರುವುದು ನಿಜವಾದರೂ ಕಮಲೆಯ ಬದುಕು ಕೂಡಾ ಹೋರಾಟ-ಸಂಘರ್ಷ ಮತ್ತು ಸತತ ಹೆಣಗಾಟಗಳದ್ದೇ ಆಗಿಬಿಡಬಹುದಾದ ಸಾಧ್ಯತೆಯಂತೆಯೂ ಕಾಣುವುದಲ್ಲವೆ?

ಮುಂದಿನ ಎರಡೂ ಕತೆಗಳು - ಹೇಗೆ ಬದುಕುವುದೋ ಯಾರಿಗೆ ಗೊತ್ತು ಮತ್ತು ನನಗೂ ನಿನಗೂ ಅಂಟಿದ ನಂಟು ಎರಡನ್ನೂ ನಮಗೆ ಹೇಳುತ್ತಿರುವಾಕೆ ಹೆಣ್ಣು. ಇದ್ದಕ್ಕಿದ್ದಂತೆ ವೈದೇಹಿಯವರ ನೆನಪು ಆವರಿಸಲು ಕಾರಣ ಬರೇ ನಮ್ಮನ್ನು ಈ ಎರಡೂ ಕತೆಗಳ ಓದು ಮುಗಿದದ್ದೇ ಅವರ ಮೊದಲ ಓದಿನ ಟಿಪ್ಪಣಿಯೊಂದು ಕಾಯುತ್ತಿರುವುದೇ ಇರಲಾರದು!

ಹೇಗೆ ಬದುಕುವುದೋ ಯಾರಿಗೆ ಗೊತ್ತು ಎಂಬ ಶೀರ್ಷಿಕೆಯನ್ನೇ ಗಮನಿಸಿದರೂ ಈ ಹಿಂದೆ ನಾವು ಗಮನಿಸಿದ ಸಂದಿಗ್ಧಗಳಿಗೆ ಹೊಣೆ ಯಾರು, ಕಾರಣ ಯಾರು ಎನ್ನುವ ಪ್ರಶ್ನೆಗಳೆದುರೇ ಮತ್ತೊಮ್ಮೆ ನಿಂತಂತೆ ಆಗುತ್ತದೆ. ಇಲ್ಲಿ ನಿರೂಪಿಸಲ್ಪಟ್ಟಿರುವ ಕತೆ ಕೂಡ ಭುವನಗಿರಿಯನ್ನೇ ತನ್ನ ಆಡೊಂಬಲವನ್ನಾಗಿರಿಸಿಕೊಂಡಿರುವಂಥದ್ದು. ಮೇಲ್ನೋಟಕ್ಕೆ ಹೀಗೇ ಕೆಲವು ಮುದುಕಿಯರ ಹಪಹಪಿಕೆಗಳ ಕಥಾನಕದಂತೆ ಕಾಣಿಸುವ ಇದನ್ನು ನಾವು ಕೊಂಚ ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ. ಇಲ್ಲಿ ಮೂರು ತಲೆಮಾರುಗಳ ಒಂದು ಸರಪಳಿ ಇದೆ. ನಿರೂಪಿಸುತ್ತಿರುವ ವಾರಿಜಾ, ಅವಳ ತಾಯಿ ಮತ್ತು ತಂದೆಯ ಅಕ್ಕ ರುಕ್ಮಿಣಮ್ಮ ಪ್ರತಿನಿಧಿಸುತ್ತಿರುವ ಮೌಲ್ಯಗಳು ಕೂಡ ಬೇರೆ ಬೇರೆ. ಎಚ್.ವೈ.ಶಾರದಾಪ್ರಸಾದರ ಮೊಮ್ಮಕ್ಕಳು ಹೇಳಿದ ಅಜ್ಜೀಕಥೆಯ ಮುದುಕಿಯನ್ನೇ ನೆನಪಿಸುವ ರುಕ್ಮಿಣಮ್ಮನ ಸ್ನಾನ, ಸಿಂಗಾರ, ಪೂಜೆಗಳಾಚೆ ಅವಳ ಮುಟ್ಟಿನ ಮತ್ತು ಸತ್ತಿರುವ ಗಂಡನ ಮೈವಾಸನೆಗಳ ಭ್ರಮೆ ವರ್ತಮಾನವನ್ನು ಚಾಚಿಕೊಂಡಿರುವುದು ಒಂದು. ಈ ಮುದುಕಿಯ ಮುಟ್ಟು ಅವಳಲ್ಲಿ ಕೊನೆಗೂ ಉಳಿದೇ ಹೋದ ಮಗುವಿನ ಆಸೆಯ ರೂಪಾಂತರ ಅನಿಸುವುದಿಲ್ಲವೇ? ಗಂಡ ಬೇರೆ ಯಾರೊಂದಿಗೋ ಸಂಪರ್ಕವಿಟ್ಟುಕೊಂಡಿರುವ ಸಂಗತಿ ತಿಳಿದಿದ್ದೆ ಅವನ ಮೈ ವಾಸನೆ ಸೂಸುತ್ತದೆ ಎಂದುಕೊಳ್ಳುವ ರುಕ್ಮಿಣಿಗೂ ಮುಂದೆ ನನಗೂ ನಿನಗೂ ಅಂಟಿದ ನಂಟು ಕತೆಯ ಜಾನಕಮ್ಮ ತನ್ನ ಪ್ರೀತಿಯ ಹುಡುಗನೊಂದಿಗೆ ಕನಸಿನಲ್ಲೇ ನಡೆಸುವ ಸಮಾಗಮದ ನಂತರ ಯೋಜನಗಂಧಿಯಾಗುವ ವಿಚಿತ್ರಕ್ಕೂ ಸಂಬಂಧವಿರುವಂತಿದೆಯಲ್ಲವೆ? ಇರಲಿ, ಚಿತ್ರಹಾರ ಕಾರ್ಯಕ್ರಮದಲ್ಲಿ ನಟಿಯರು ಅಂಡು ಅಲ್ಲಾಡಿಸಿ ಕುಣಿದಾಡುವುದನ್ನೂ ಆಕ್ಷೇಪಿಸುವ ವಾರಿಜಾಳ ತಾಯಿಯ ಭೂತಕಾಲದ ಸ್ಮೃತಿಗಳೊಂದಿಗಿನ ತಡಕಾಟ, ಸಂಘರ್ಷ ಮತ್ತು ವಿರೋಧಾಭಾಸಗಳ ಜಗತ್ತು ಇನ್ನೊಂದು. ಮದುವೆಗೆ ಮುನ್ನವೇ ಪ್ರಿಯಕರನೊಂದಿಗೆ ಓಡಾಡಿ ಸಾಹಸ ಮೆರೆದು ಈಗ ಮುದುಕಿಯ ಮುಟ್ಟಿನ ಭ್ರಮೆಯೆದುರೇ ತಾನು ಮುಟ್ಟಾಗದಿರುವುದನ್ನು ಅರಿವಿಗೆ ತಂದುಕೊಂಡು ಕಂಗಾಲಾಗುವ ವಾರಿಜಾ ಮತ್ತೊಂದು ತಲೆಮಾರನ್ನು ಪ್ರತಿನಿಧಿಸುತ್ತಿರುವಾಗಲೇ ಕತೆ ವಾರಿಜಾಗೂ ತಿಳಿದಿರದ ಕೆಲವೊಂದು ಪಾತ್ರಗಳನ್ನು (ಮುಕುಂದ) ಒಳಗೊಳ್ಳಬಹುದಾದ ಸಾಧ್ಯತೆಗಳತ್ತ ಮೊಗಮಾಡಿರುವುದನ್ನು ಕೂಡ ಗಮನಿಸಬಹುದು. ಇದೇ ಕಾಲಕ್ಕೆ ವಾರಿಜಾ ಪ್ರೀತಿಸಿದ ಮಹೇಶನ ತಾಯಿ ಕೂಡ ಸಂಪ್ರದಾಯಸ್ಥೆ, ಮಾತು ಕಡಿಮೆ, ಸಹಬಾಳ್ವೆಯ ಚಿಂತೆಯನ್ನು ಹುಟ್ಟಿಸುವ ಜೀವವಾಗಿರುವುದು ಅವಳ ಗಮನಕ್ಕೆ ಬಂದಿದೆ. ಇಲ್ಲಿ ಬದುಕುವ ಬಗೆಯ ಕುರಿತ ಗೊಂದಲದ ಮುಖಾಮುಖಿಯೊಂದು ತಲೆಮಾರುಗಳನ್ನು ಗಮನಿಸುತ್ತಲೇ ಹುಟ್ಟಿಕೊಂಡಿದೆ. ಯಾವತ್ತೂ ಇರುವ ಒಂದು ಗೊಂದಲವೇ ಇದಾದರೂ ಅದು ಹುಟ್ಟಿಕೊಳ್ಳುತ್ತಿರುವ ಸಂದರ್ಭ, ಕತೆಯ ಚೌಕಟ್ಟಿನಲ್ಲಿ ವಿಶೇಷವಾದದ್ದು.

ವಾರಿಜಾ, ನನ್ನ ಮೇಲೊಂದು ಕತೆ ಬರಿ, ಅದರಲ್ಲಿ ನನ್ನ ಮೀಸೆ ಇರಬಾರದು, ಮೊಣಕಾಲುದ್ದದ ಜಡೆ ಇರಬೇಕು ಎಂದೆಲ್ಲ ಆಸೆ ಪಡುವ ರುಕ್ಮಿಣಮ್ಮನ ಆಸೆ ಪೂರೈಕೆಗೋ ಎಂಬಂತೆ ಇಲ್ಲಿ ಜಾನಕಮ್ಮನ ಕತೆ ತೆರೆದುಕೊಳ್ಳುತ್ತಿದೆ, ಕತೆಯ ಹೆಸರು ನನಗೂ ನಿನಗೂ ಅಂಟಿದ ನಂಟು. ಜಾನಕಮ್ಮ ಕೂಡ ನಿರೂಪಕಿಯ ತಂದೆಯ ಅಕ್ಕ. ವೈದೇಹಿಯವರ ಒಂದು ಕತೆಯಲ್ಲೂ ಒಬ್ಬ ಮುದುಕಿ ನನ್ನ ಕತೆ ಬರಿ ಎಂದು ನಿರೂಪಕಿಯನ್ನು ಕೇಳಿಕೊಳ್ಳುವುದಿದೆ ಮತ್ತು ಇಲ್ಲಿನ ನಿರೂಪಕಿಯ ಹೆಸರು ಕೂಡ ವೈದೇಹಿಯೇ! ಇರಲಿ. ಅಹಲ್ಯಾಬಾಯಿಯ ಹಾಗೆ ಜಾನಕಮ್ಮ ಕೂಡಾ ಮಕ್ಕಳ ಗೊಂಬೆಗಳನ್ನು ಮಾಡುತ್ತಾಳೆ. ವ್ಯತ್ಯಾಸವಿಷ್ಟೇ, ಅಹಲ್ಯಾಬಾಯಿ ತನ್ನ ಮುದಿತನದಲ್ಲಿ ತಾನು ಕಳೆದುಕೊಂಡ ಮಗಳು ಕಮಲೆಯ ನೆನಪಿನಲ್ಲಿ, ಮಣ್ಣಿನಲ್ಲಿ ಬೊಂಬೆಗಳನ್ನು ಮಾಡುತ್ತಾಳೆ. ಜಾನಕಮ್ಮ ಬೊಂಬೆಗಳನ್ನು ಮಾಡುವುದು ಚಿಕ್ಕಂದಿನಲ್ಲಿ, ಬಟ್ಟೆಯ ತುಂಡುಗಳಿಂದ. ಅಹಲ್ಯಾಬಾಯಿ, ರುಕ್ಮಿಣಮ್ಮ, ವಾರಿಜಾಳ ಅಮ್ಮ ಎಲ್ಲರಿಗೂ ಆದಂತೆ ಕೊನೆಗಾಲದಲ್ಲಿ ಜಾನಕಮ್ಮನಿಗೂ ಭ್ರಾಂತಿ ಕವಿಯುತ್ತದೆ. ಮಂಗಳಮ್ಮನ ಕೈಯಲ್ಲಿರುವ ಬಳೆಯೊಂದು ಬಿಟ್ಟುಕೊಡುವ ಒಂದಿಷ್ಟು ಮಾತುಗಳ ಆಧಾರದಲ್ಲೇ ಹರಡಿ ಚಾಚಿಕೊಳ್ಳುವ ಜಾನಕಮ್ಮನ ಕತೆಯನ್ನು ನಾವು ನಿಜವೆಂದು ನಂಬಲೇ ಬೇಕಿಲ್ಲ. ಆದರೆ ಅಂಥ ಎಷ್ಟು ಸಣ್ಣಪುಟ್ಟ ಆಸೆಗಳು ಇಂಥ ಹಳೆಯ ಕಾಲದ ದೊಡ್ಡ ಬಂಗಲೆಯಂಥ ಮನೆಗಳಲ್ಲಿ ಕಮರಿರಬಹುದೋ ಎನ್ನುವುದನ್ನು ಯಾರೂ ಪ್ರಶ್ನಿಸಲಾರರು ಎನ್ನುವುದಂತೂ ನಿಜವೇ.

ಈ ಕತೆಯಲ್ಲಿ, ಕನಸಲ್ಲಿ ನಡೆಯುವ ಒಂದು ಸಮಾಗಮವಿದೆ. ಅಂದು ಜಾನಕಮ್ಮನ ಮೈಯಿಂದ ಪಸರಿಸುವ ಸುವಾಸನೆ ಇಡೀ ಮನೆಯನ್ನು, ಮನೆಯವರನ್ನು ಆವರಿಸಿ ಒಂಭತ್ತು ತಿಂಗಳು ಇಪ್ಪತ್ತೊಂದು ದಿನ ಕಾಲ ಹಾಗೆಯೇ ಘಮಘಮಿಸುತ್ತಿರುತ್ತದೆ. ಶ್ರೀಕೃಷ್ಣನನ್ನು ಗರ್ಭದಲ್ಲಿ ಧರಿಸಿದಾಗ ದೇವಕಿಯ ದೇಹವೂ ವಿಚಿತ್ರ ಕಾಂತಿಯಿಂದ ಪ್ರಕಾಶಮಾನವಾಗಿ ಕಂಗೊಳಿಸುತ್ತಿತ್ತಂತೆ! ಇಲ್ಲಿ ಪರಿಮಳದ ಈ ವಿವರಗಳನ್ನು ಓದುವಾಗ ಯಾರಿಗಾದರೂ ಎಸ್.ಸುರೇಂದ್ರನಾಥರ ಎನ್ನ ಭವದ ಕೇಡು ಕಾದಂಬರಿಯ ನೆನಪಾಗದಿದ್ದೀತೆ?

ಬದುಕು ನಮಗೆ ಇದ್ದಕ್ಕಿದ್ದ ಹಾಗೆ ಜೀವನ ನಾಟಕದ ರಂಗಸ್ಥಳಕ್ಕೆ ದಬ್ಬಿ ಬಿಟ್ಟಿದೆ. ಕೈಯಲ್ಲಿ ಯಾವ ಸ್ಕ್ರಿಪ್ಟ್ ಇಲ್ಲ. ರಿಹರ್ಸಲ್ ಇರಲಿಲ್ಲ. ಪ್ರಾಮ್ಟಿಂಗ್ ಕೂಡ ಎಲ್ಲರಿಗೂ ಇರುವುದಿಲ್ಲವಲ್ಲ! ಇಲ್ಲಿ ಹೇಗೆ ಬದುಕಬೇಕು ಎನ್ನುವುದಕ್ಕೆ ಮಾದರಿಗಳಿಲ್ಲ. ಇದ್ದರೂ ಅವನ್ನು ಅರಿತು ನಮಗೆ ಸರಿಯಾದುದನ್ನು ಅರಿತುಕೊಳ್ಳುವುದರಲ್ಲಿ, ಆರಿಸಿಕೊಳ್ಳುವಷ್ಟರಲ್ಲಿ ನಾಟಕದ ಬಹಳಷ್ಟು ಭಾಗ ಮುಗಿದೇ ಹೋಗಿರುತ್ತದೇನೋ! ಇಂಥ ಸಂದಿಗ್ಧದಲ್ಲಿ ಎಸ್.ದಿವಾಕರರ ಈ ಸಂಕಲನದ ಅನೇಕ ಪಾತ್ರಗಳು ಬಂಧಿಗಳಂತೆ, ಕೈ ಹಿಡಿದು ನಡೆಸೆನ್ನನು ಮುಸುಕಿದೀ ಮಬ್ಬಿನಲಿ ಎಂದು ಮೊರೆಯಿಡುತ್ತಿರುವಂತೆ ಕಾಣಿಸುತ್ತವೆ. ವಿಧಿಯೋ, ಹಣೆಬರಹವೋ, ಸ್ವಯಂಕೃತ ಅಪರಾಧವೋ ಅಹಲ್ಯಾಬಾಯಿ, ಕಮಲೆ, ಜಾನಕಮ್ಮ, ರುಕ್ಮಿಣಮ್ಮ ಮತ್ತೂ ಹಲವರ ಬದುಕು ಹೇಗೆ ಹೇಗೋ ಸಾಗಿತು, ಎಡರು ತೊಡರುಗಳ ನಡುವಿಂದ ಸಾಗಿತು. ಇವರ ಬದುಕಿನ ಒಟ್ಟು ಚಿತ್ರ ಕೊಡುವ ದರ್ಶನವಾವುದು?

ಇಲ್ಲ, ದರ್ಶನ, ಒಳನೋಟ ಯಾವುದೂ ಇಲ್ಲಿಲ್ಲ. ಇದು ಬದುಕು, ಇದು ಜೀವ, ಇದುವೆ ಜೀವನ ಅಷ್ಟೆ. ಇದನ್ನು ಇನ್ನಷ್ಟು ಹಿಂಜಬೇಕಿಲ್ಲ, ಹಿಂಜಿ ತತ್ತ್ವದ ಹೊರೆ ಹೊರಿಸುವುದು ಕೂಡ ಬೇಕಿಲ್ಲ. ಇಲ್ಲಿರುವ ದರ್ಶನವೊಂದೇ, ಹೇಗೆ ಬದುಕುವುದೋ ಯಾರಿಗೆ ಗೊತ್ತು ಎನ್ನುವ ಪ್ರಶ್ನೆ ನಿರಂತರವಾಗಿ ಹುಟ್ಟಿಸಬಲ್ಲ ದರ್ಶನ. ಯಾಕೆಂದರೆ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ, ಅಲ್ಲವೆ? ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಎನ್ನುತ್ತ ಕಥೆಯ ಕೊನೆಯಲ್ಲಿ ವೈದೇಹಿ ಕೂಡ ಇದನ್ನೇ ಹೇಳುತ್ತಾಳೆ.

ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ (ಕಥಾಸಂಕಲನ)
ಅಂಕಿತ ಪ್ರಕಾಶನ, ಬೆಂಗಳೂರು
ಪುಟಗಳು: 120
ಬೆಲೆ: ಎಪ್ಪತ್ತು ರೂಪಾಯಿಗಳು.

No comments: