Friday, November 6, 2009

ಕೇಶವ ಮಳಗಿ ಕಥಾಲೋಕ: ಅಸಂಕಲಿತ ಕಥೆಗಳು:

ಸೋಮಶೇಖರ ಪರಿಣಯ- 2006
ಸೋಮಶೇಖರ ಪರಿಣಯ ಒಂದು ಬದುಕು ಎಳೆಯ ಸಸಿಯಿದ್ದಿದ್ದು ಮಾಗಿ ಹಬ್ಬುವ ಪರಿಯನ್ನೇ ಸೋಜಿಗದ ಬೆರಗಿನಿಂದ ನೋಡುವ, ಚಿತ್ರಿಸುವ ಬಗೆಯ ಕತೆ. ಇಲ್ಲಿ ಬರುವ ಪ್ರಧಾನ ಪಾತ್ರಗಳು ಕುಂದರನಾಡಿನ ಲಖನಗೌಡ ಪಾಟೀಲರ ಕೊನೆಯ ಪುತ್ರ ಸೋಮಶೇಖರ ಮತ್ತು ಮುಲಕನಾಡಿನ ಬ್ರಾಹ್ಮಣ ಕರಣಂ ಶ್ಯಾಮರಾಯರ ಏಕಮಾತ್ರ ಪುತ್ರಿ ವಸಂತಮಾಲಾ. ಇಲ್ಲಿಯೂ ಪುರುಷ ಪಾತ್ರಕ್ಕಿಂತ ಹೆಚ್ಚು ಜೀವಂತವೂ, ಬದುಕಿನ ಕಡು ವ್ಯಾಮೋಹಿಯೂ ಆದ ಪಾತ್ರ ವಸಂತಮಾಲಾಳದ್ದೇ. ಸೋಮಶೇಖರನದ್ದು ಏನಿದ್ದರೂ ಅವಳು ತೋರಿಸಿದ ಹಾದಿಯಲ್ಲಿ ನಡೆಯುವುದು ಅಷ್ಟೇ. ಆದರೆ ಈ ವಸಂತಮಾಲಾಳ ಸಾಧ್ಯತೆಗಳು ಬೆರಗು ಹುಟ್ಟಿಸುವುದು ಸುಳ್ಳಲ್ಲ. ಸೋಮಶೇಖರನ ಅಪ್ಪನ ಆಶಯವೂ, ವಸಂತಮಾಲಾಳ ವೈಯಕ್ತಿಕ ಆಶಯವೂ ಈಡೇರುವುದು ಮಾತ್ರವಲ್ಲ ಈ ದಂಪತಿಗಳು ಇನ್ನೂ ಒಂದು ಮಜಲು ಮುಂದುವರಿದು ಇಡೀ ಸಮುದಾಯವನ್ನು ಒಳಗುಗೊಂಡ ಹಸನಾದ ಬದುಕು ಬೆಳಗುತ್ತಿರುವುದು ಸ್ವತಃ ನಿರೂಪಕನ ಬೆರಗಿಗೆ ವಸ್ತುವಾಗಿದೆ.

ಹೇಮಾ ಎಸ್. ಅವರ ಈ ಮಾತುಗಳನ್ನಿಲ್ಲಿ ಗಮನಿಸಬಹುದು:
‘ನಾಯಕನ ಅನ್ವೇಷಣೆಯಲ್ಲಿ ಅವನ ಬೆನ್ನ ಹಿಂದೆ ನಿಂತು ಕಾಪಾಡುವುದು, ಹೆಣ್ಣಿನ ಚೈತನ್ಯಮಯ ಪ್ರೀತಿ. ಹೆಣ್ಣಿನ ಸೃಷ್ಟಿಸುವ ಶಕ್ತಿಯೇ, ಅವಳ ವ್ಯಕ್ತಿತ್ವವೇ ಬದುಕಿಗೆ ಹೊಸ ಶಕ್ತಿಯನ್ನು ತಂದುಕೊಡುವುದನ್ನು ಗುರುತಿಸುತ್ತಾರೆ. ಮಳಗಿಯವರ ಕತೆಗಳಲ್ಲಿನ ಸ್ತ್ರೀಲೋಕ ವಿಶಿಷ್ಟವಾದುದು. ‘ಕ್ಷಿತಿಜ’ದ ಮಂದಾಕಿನಿ, ‘ಮುಸ್ಸಂಜೆಯ ಕಥಾ ಪ್ರಸಂಗ’ದ ಆಣಿ ಬಡ್ಡಿರಂಗಮ್ಮ, ‘ದೇವಿ’ ಕತೆಯ ದೇವಿ, ‘ಮರಳಿಮಣ್ಣಿಗೆ’ಯ ಸರಸೋತಿ, ‘ಮೈಮನಗಳ ಸುಳಿಯಲ್ಲಿ’ನ ಮಂಜುಳೆಯಂತೆ ಇವರ ಪಾತ್ರಗಳು ಕೂಡ ತಮ್ಮ ಚೈತನ್ಯಮಯ ವ್ಯಕ್ತಿತ್ವಗಳಿಂದ ಸುತ್ತಲ ವ್ಯಕ್ತಿಗಳ ಬದುಕನ್ನು ಪ್ರಭಾವಿಸುತ್ತವೆ, ರೂಪಿಸುತ್ತವೆ. ‘ವೆನ್ನೆಲ ದೊರಸಾನಿ’ಯ ಜಾಲಿಬೆಂಚಿ, ‘ಅಗಮ್ಯ ಅಗೋಚರ ಅಪ್ರತಿಮ ಜೀವವೇ’ ಯ ಇಂದುಮುಖಿ ಮತ್ತು ಮೃಣಾಲಿನಿ, ‘ಧಾರಿಣಿಯ ಜತೆ ನನ್ನದೊಂದು ಕತೆ’ಯ ಧಾರಿಣಿ, ‘ನಕ್ಷತ್ರ ಯಾತ್ರಿಕರು’ವಿನ ಸಂಗೂಬಾಯಿ, ಮಾಳವ್ವ, ‘ಕೆಂಪುಮಣ್ಣಿನ ಒಕ್ಕಲು’ವಿನ ಹಶಂಬಿ, ‘ಕಡಲತೆರೆಗೆ ದಂಡೆ’ಯ ಭೀಮಕ್ಕ, ‘ನೀಲಿ ಆಕಾಶದ ಹಣ್ಣು’ವಿನ ಹೂವಿ ಇವರೆಲ್ಲ ಕೂಡ ತಮ್ಮ ಬದುಕನ್ನು ಹೋರಾಟದಲ್ಲಿ ಕಟ್ಟಿಕೊಳ್ಳುತ್ತಲೇ ತಮ್ಮ ಸಂಪರ್ಕಕ್ಕೆ ಬಂದವರ ಬದುಕಿಗೂ ಚೈತನ್ಯವನ್ನು ಧಾರೆ ಎರೆದಂತಹವರು. ಇವರ ಜೀವನ ಪ್ರೀತಿಯೇ ಅಸಾಧಾರಣವಾದುದು. ತಾಯಿಯಾಗಿ, ಪ್ರಿಯತಮೆಯಾಗಿ, ಗೆಳತಿಯಾಗಿ ಬದುಕನ್ನು ಹಸಿರಾಗಿಸುವ ಶಕ್ತಿಯಿರುವುದನ್ನು ಗುರುತಿಸಿಕೊಳ್ಳುತ್ತಾರೆ’ (‘ಸಂಚಯ’ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪತ್ರಿಕೆಯ ಸಂಚಿಕೆ ೭೪)

ಬಾರೋ ಗೀಜಗ - 2006
ಬಾರೋ ಗೀಜಗ ಕತೆಯನ್ನು ಸುನಯನ ಮತ್ತು ಧಾರಿಣಿಯ ಜತೆ ನನ್ನದೊಂದು ಕತೆಯ ಛಾಯೆಯಿಲ್ಲದೆ ಓದುವುದು ಕಷ್ಟ. ಇಲ್ಲಿನ ಮುಖ್ಯ ಸಮಸ್ಯೆ ಎಂದರೆ ತಂತ್ರ. ಮಳಗಿಯವರ ಯಾವುದೇ ಕತೆಯಲ್ಲಿ ತಂತ್ರವೇ ನಮಗೆ ಎದುರಾಗಿ ಕೂತು ಕತೆಯನ್ನು ನಡೆಸಿಕೊಡುವುದಿಲ್ಲ. ಧಾರಿಣಿಯ ಜೊತೆ ನನ್ನದೊಂದು ಕತೆಯಲ್ಲಿ ಈ ತಂತ್ರ ಕಣ್ಣಿಗೆ ಎದ್ದು ಕಾಣದ ಹಾಗೆ ಅದರ ಅನುದ್ದಿಶ್ಯವೆನಿಸುವ ಗಮ್ಯವಿದೆ. ಕತೆಯ ಎಲ್ಲಾ ತಂತ್ರವೂ ಈ ಇದನ್ನು ತಲುಪುವುದಕ್ಕೇ ಆಗಿತ್ತು ಎಂದು ಯಾವ ಹಂತದಲ್ಲೂ ನಮಗೆ ಅನಿಸುವುದಿಲ್ಲ. ಆದರೆ ಸುನಯನ ಕತೆ ಈ ಅಪಾಯದಿಂದ ಪೂರ್ತಿಯಾಗಿ ಪಾರಾಗಿಲ್ಲ ಅನಿಸುತ್ತದೆ. ಸುನಯನ ಬಂದಿದ್ದು 1990ರಲ್ಲಿ, ಧಾರಿಣಿಯ ಜತೆ (1988) ಕತೆಯ ಎರಡು ವರ್ಷಗಳ ನಂತರ. ಬಾರೋ ಗೀಜಗವಂತೂ ಈ ಎರಡೂ ಕತೆಗಳ ಸುಮಾರು ಹದಿನೈದು ವರ್ಷಗಳ ನಂತರದ್ದು ಎಂಬುದು ಗಮನಾರ್ಹ.

ಇಲ್ಲಿ ಡಿ.ಆರ್.ನಾಗರಾಜ್ ಅವರ ಟಿಪ್ಪಣಿಯೊಂದನ್ನು ಗಮನಿಸುವುದು ಅಗತ್ಯ. ಅವರು ಹೇಳುತ್ತಾರೆ, ಮಳಗಿಯವರಲ್ಲಿ ನಾವು ಕಾಣುವುದು "ಮುಗ್ಧತೆ ಮತ್ತು ಭಾವುಕತೆ ಸಂಲಗ್ನಗೊಂಡ; ಹೊಸ ಸಂಬಂಧಗಳಿಗಾಗಿ ತೀವ್ರವಾಗಿ ಹಾತೊರೆವ ಕಾರಣಕ್ಕೆ ರಾಜಕೀಕರಣಗೊಳ್ಳುವ ಪ್ರಜ್ಞೆಯ ಅಭಿವ್ಯಕ್ತಿ" ಎಂದು. ಇದನ್ನು ಸೂಕ್ಷ್ಮವಾಗಿ ಗಮನಿಸುವುದು ಮುಖ್ಯ.

ಬಾರೋ ಗೀಜಗ ಕತೆಯಲ್ಲಿ ಕತೆಯ ಪ್ರಧಾನ ಪಾತ್ರ ಪ್ರೊಫೆಸರ್ ಕದಂ ಮತ್ತು ಕತೆಯ ಇನ್ನೊಂದು ಪ್ರಧಾನ ಪಾತ್ರ ನೀಲಾಂಜನಾ ಚಟರ್ಜಿ ಭೇಟಿಯಾಗುವುದು ಒಂದು ಸರ್ಕಾರೀ ಸಾಂಸ್ಕೃತಿಕ ಉತ್ಸವದ ಸಾಹಿತ್ಯ ಗೋಷ್ಠಿಯ ನೆವದಿಂದ, ದೆಹಲಿಯಿಂದ ಹತ್ತು ಗಂಟೆಗಳ ಟ್ಯಾಕ್ಸಿ ಪ್ರಯಾಣ ಅಗತ್ಯವಿರುವ ದೂರದ ಕಣಿವೆಯೊಂದರ ನಿಸರ್ಗ ರಮಣೀಯ ತಾಣದಲ್ಲಿ, ಗಂಗಾವತರಣದ ಸಾನ್ನಿಧ್ಯದಲ್ಲಿ. ಇಲ್ಲಿನ ಮೂರು ನಾಲ್ಕು ದಿನದ ಸಖ್ಯ-ಸಾಂಗತ್ಯದಲ್ಲಿ ಇಬ್ಬರೂ ತೆರೆದುಕೊಳ್ಳುವುದು, ಮನುಷ್ಯ ಸಂಬಂಧಗಳ ಬಗ್ಗೆ ಆಪ್ತವಾಗಿ ಮಾತನಾಡಿಕೊಂಡು ಅಗಲಿಕೆಯ ಭಾರವನ್ನು ನಿಭಾಯಿಸಬಲ್ಲ ಮಟ್ಟದಲ್ಲಿ - ಅಂದರೆ ಒಂದು ಅಂತರದಲ್ಲೇ - ಆಳದ ಸಂವೇದನೆಗಳನ್ನು ಕಂಡುಕೊಳ್ಳುವುದು ಈ ಕತೆಯ ಜೀವಸತ್ವ. ಬಹಳ ಮುಖ್ಯವಾಗಿ ಇಲ್ಲಿ ನೀಲಾಂಜನ ಮತ್ತು ಕದಂಜೀಯವರ ನಡುವಿನ ಸಂಬಂಧದ ನಿಟ್ಟಿನಿಂದ ಓದುಗ ಕೆಲವೊಂದು ಸಾಧ್ಯತೆಗಳನ್ನು ಊಹಿಸುವುದಕ್ಕೆ ಸಾಧ್ಯವಿದ್ದರೂ ಅಂಥವೇ ಕೆಲವೊಂದು ಕಾರಣಗಳಿಂದ ಆ ಧೈರ್ಯ ಮಾಡಲಾರ ಎಂದು ಕೂಡ ಹೇಳಬಹುದಾಗಿದೆ! ಆದರೆ ಮುಖ್ಯವಾಗಿ, ಇದೆಲ್ಲದರ ಆಚೆ ನೀಲಾಂಜನಳ ತಂದೆಯ ಪಾತ್ರವನ್ನು ಕೆತ್ತುವುದು ಮಳಗಿಯವರಿಗೆ ಹೆಚ್ಚು ಪ್ರಿಯವಾಗಿದ್ದ ಕೆಲಸದಂತೆ ಕಾಣುತ್ತದೆ. ಅದೇ ಕಾಲಕ್ಕೆ ಅವರು ಸಂಬಂಧದ ಅನೂಹ್ಯ ಸ್ಥಿತಿಯೊಂದರ ಪರಿಪ್ರೇಕ್ಷ್ಯವನ್ನೂ ಇಲ್ಲಿ ಒದಗಿಸುತ್ತಾರೆ. ಮತ್ತು ಅದಕ್ಕೆ ನೀಲಾಂಜನಳ ಒಂದು ಕವನ ಕಾರಣವಾಗುತ್ತದೆ.

‘ಹಾಡು, ಬದುಕು ಬೇರೆ ಬೇರೆಯೆ? ಹೊರಗಿನಿಂದ ನೋಡಿದಾಗ ಹಾಡಿನ ಮಾಧುರ್ಯ, ಬದುಕಿನ ಬವಣೆ ಬೇರೆ ಬೇರೆಯಾಗಿಯೇ ಕಾಣುತ್ತವೆ. ಆದರೆ ಹಾಡಿಗೆ ಬದುಕನ್ನು ತನ್ನ ರಾಗಕ್ಕೆ ಹೊಂದಿಸಿಕೊಳ್ಳುವ ತವಕ; ಬದುಕಿಗೆ ಬವಣೆ ಮೀರಿ ಬರೀ ಹಾಡಾಗುವ ಆಶಯ ಇದ್ದೇ ಇರುತ್ತದೆ. ನಿಮ್ಮದೇ ದೇವಭೂಮಿಯ ಬೆಟ್ಟ-ನೀರಿನ ಸಂಬಂಧವನ್ನೇ ನೋಡಿ. ಬೆಟ್ಟ-ಕಣಿವೆಯ ಕಲ್ಲು ಇದ್ದಲ್ಲೆ ಸ್ಥಾವರವಾಗಿದ್ದರೂ ನೂರಾರು ವರ್ಷಗಳಿಂದ ಜಂಗಮ ಜಲದ ಸಾನ್ನಿಧ್ಯ ಪಡೆಯುತ್ತಲೇ ಬಂದಿದೆ. ಅವೆರಡರ ಸಾಂಗತ್ಯ ಆ ಕ್ಷಣದಲ್ಲಿ ನಿಜವಾಗುವಂಥದ್ದು. ಆದರೆ ಆ ಕ್ಷಣದಲ್ಲಿ ಪಡೆಯುವ ಬಗೆ ಮಾತ್ರ ನಿರಂತರವಾಗಿದೆ.’

ಇದರ ಜೊತೆಗೇ ಪಂಪನ ಕಾವ್ಯದ ನೃತ್ಯಗಾತಿ ನೀಲಾಂಜನ ಪ್ರಕರಣವೂ ಬರುತ್ತದೆ. ನೃತ್ಯಮಾಡುತ್ತ ಕಲೆಯೊಂದಿಗೆ ಒಂದಾಗಿ ನೀಗಿಕೊಂಡ ನೃತ್ಯಗಾತಿಯ ಪ್ರಕರಣ. ಮಿಲಿಂದ ‘ಮಾತು ಯಾತನೆಯ ದಿಡ್ಡಿ ಬಾಗಿಲು’ ಕತೆಯಲ್ಲಿ ಕಮ್ಯೂನಿಸ್ಟ್ ಕಛೇರಿಯಲ್ಲಿ ಆಡಿದ ಮಾತನ್ನು ಇಲ್ಲಿ ಮತ್ತೊಮ್ಮೆ ನೆನೆಯುತ್ತೇನೆ. ‘ನಿಸರ್ಗದೊಂದಿಗೆ ಮನುಷ್ಯ ನೀರಿನಷ್ಟು ಸಹಜವಾಗಿ ಬೆರೆತು ಹೋಗದಿದ್ರೆ ಅವನು ಅಪೂರ್ಣ - ನಮ್ಮ ಸಂತರು, ಅನುಭಾವಿಗಳು ಇದನ್ನೇ ಮಾಡಿದ್ದು-’ ಈ ಮನುಷ್ಯ ಮತ್ತು ನಿಸರ್ಗದ ಸಂಬಂಧವನ್ನು ಸಂಗೀತ-ಕಾವ್ಯ-ಹೆಣ್ಣು ಮತ್ತು ಸಾವುಗಳ ಉಲ್ಲೇಖದೊಂದಿಗೆ ತೊಡಗಿದ್ದು.

ಮಳಗಿಯವರ ಹೆಚ್ಚಿನ ಕತೆಗಳಲ್ಲಿ ನಡೆಯುವ ಹಾಗೆ ಇಲ್ಲಿಯೂ ನೆನಪುಗಳಲ್ಲಿ ಕಥಾನಕದ ಆಕೃತಿ ಬಿಚ್ಚಿಕೊಳ್ಳುತ್ತದೆ. ನೀಲಾಂಜನಳ ತಂದೆ ಯ ಪಾತ್ರ ಜೀವಂತಗೊಳ್ಳತೊಡಗಿದ ಹಾಗೆಯೇ ಕದಂಗೆ ಒಂದೆಡೆ ತಮ್ಮ ಮಗಳು ಈಕೆಯಲ್ಲಿ ಕಾಣಿಸತೊಡಗುತ್ತಾರೆ, ಅವಳ ತಂದೆಯ ವಿವರಗಳಲ್ಲಿ ತಾವು ಸ್ವತಃ ಆವಿರ್ಭವಿಸುತ್ತಿರುವ ಅನುಭವವಾಗುತ್ತದೆ. ಸುನಯನ ಕತೆಯಲ್ಲಿ ಚೈತ್ರನೂ ಒಮ್ಮೆ ತಾನು ಸರ್ವದಮನನೂ ಆದಂತೆ ಭಾವಿಸುತ್ತಾನಲ್ಲ, ಇದೂ ಹಾಗೆಯೇ ಅನಿಸುವುದಿಲ್ಲವೇ?

ಆದರೆ ಸಂಬಂಧಕ್ಕೆ ಹೆಸರಿನ, ಹೆಸರಿಗೆ ಸಮಾಜದ ಕಟ್ಟಳೆಗಳ, ನೀತಿ ನಿಯಮಗಳ ನಾಗರಿಕತೆಯನ್ನು ಹಚ್ಚುವ ತುರ್ತಿನಲ್ಲಿ ನಾವಿಲ್ಲದೇ ಇದ್ದರೆ ಈ ಕತೆ ಅಷ್ಟು ಸರಳವಲ್ಲದ ಇನ್ನಷ್ಟಕ್ಕೆ ನಮ್ಮನ್ನು ಒಯ್ಯಲು ಸಿದ್ಧವಿದೆ. ಸ್ಥಾವರ ಕಲ್ಲು ಬಂಡೆಗಳ ಸಾನ್ನಿಧ್ಯದಲ್ಲಿ ಹರಿಯುವ ಜಂಗಮ ನೀರಿನ ಮಧ್ಯೆ, ಬದುಕು - ಹಾಡುಗಳ ಮಧ್ಯೆ, ಸಂಗೀತ, ಕಾವ್ಯ, ಹೆಣ್ಣು ಮತ್ತು ಸಾವಿನ ಜೊತೆ ಮನುಷ್ಯ ತನ್ನ ಬದುಕಿನ ಸಂಬಂಧಕ್ಕೆ ಹೇಗೆ ಹೆಸರು ಕೊಟ್ಟುಕೊಳ್ಳುವ ಆತುರಕ್ಕೆ ಬೀಳುವುದಿಲ್ಲವೋ ಹಾಗೆ ತೆರೆದುಕೊಂಡರೆ ಕದಂ ಮತ್ತು ನೀಲಾ ಚಟರ್ಜಿಯರ ಸಾಂಗತ್ಯದ ಇನ್ನೊಂದು ಮಗ್ಗುಲು ಕೂಡಾ ನಮಗೆ ಕಾಣಿಸುತ್ತದೆ.

ಉಬ್ಬಿದೆದೆಯ ನಿಬ್ಬೆರಗಿನೆಳೆಯ ತೊಟ್ಟುಗಳೆ,
ಹಾ! ಹೂವಿನೆಸಳ ಹಳದಿ ಹೊಕ್ಕಳೆ
ಅಹಹಾ! ಏರುದಿಂಡಿನ ಸುಳಿಗಳೆ
ಬಳುಕಿನಿಳಿಜಾರು ಬೆನ್ನಹುರಿ ಬಳ್ಳಿಯೆ
ಕಣ್ಣೆ, ಕಣ್ಣ ಪಾರಣೆಯೆ
ಕೇಶ ಸುರುಳಿಯ ಸುಳಿಯಲ್ಲಿ ಸೊಕ್ಕಿ
ಕೈಗೆಟಕುವ ಕರುಳ ಸುರುಳಿಯೆ

ಊರ ಮಧ್ಯದ ಕಣ್ಣ ಕಾಡಿನೊಳಗೆ ಕತೆಯ ನಿರೂಪಕ/ನಾಯಕ ತನ್ನ ಬಾಲ್ಯದ ಸ್ಮೃತಿಗಳಿಗೆ ಮರಳಿದಾಗ ತನ್ನ ತಾಯಿ ಬಸು-ವಸುಂಧರೆಯ ಸೌಂದರ್ಯವನ್ನು ವರ್ಣಿಸುತ್ತಾನೆ. ಮಕ್ಕಳು ಆಟವಾಡುವಾಗ ಯಾರೋ ನಿನ್ನ ಹೆಂಡತಿ ಎಂದರೆ ಹುಡುಗ ಬಸು ಎನ್ನುತ್ತಿದ್ದ. ಬಸುವಿನಂತೆಯೇ ಇರುವ ಹೆಣ್ಣನ್ನು ಮದುವೆಯಾಗಬೇಕೆಂದು ಅಂದುಕೊಳ್ಳುತ್ತಿದ್ದ ಈ ಪೋರ ತನ್ನ ತಾಯಿಯನ್ನು ತಂದೆಯಂತೆಯೇ ಬಸೂ ಎಂದೇ ಕೂಗುತ್ತಿದ್ದ.

ಸುನಯನ ಕತೆಯಲ್ಲಂತೂ ಸುನಯನ-ಚೈತ್ರ ಎನ್ನುವ ಪಾತ್ರಗಳೇ ಅಮೂರ್ತವೆನಿಸುವಷ್ಟು ಈ ಸಂಬಂಧಗಳು ತಾಯಿ-ಮಗ, ಪ್ರಿಯಕರ-ಪ್ರೇಯಸಿ, ತಂದೆ-ಮಗಳು ಆಗಿಬಿಡಬಲ್ಲ ಸಾಧ್ಯತೆಗಳನ್ನೆಲ್ಲ ಹೊಂದುವುದನ್ನು ಕಾಣುತ್ತೇವೆ.

ಇಲ್ಲಿಯೇ ಹುಟ್ಟುವ ಇನ್ನೊಂದು ಜಿಜ್ಞಾಸೆಯೂ ಇದೆ. ಈ ನಾಯಕಿಪ್ರಧಾನವಾದ, ‘ಯಾರೂ ಸಂಗಡ ಬಾಹೋರಿಲ್ಲ’ ಭಾವವೇ ಪ್ರಧಾನವಾದ ಪಾತ್ರಗಳ ಚಿತ್ರಣದಲ್ಲಿ ಎದ್ದು ಕಾಣುವ ‘ರೊಮ್ಯಾಂಟಿಕ್’ ಮತ್ತು ‘ಆದರ್ಶ’ ಗಂಡು-ಹೆಣ್ಣು ಮತ್ತು ಸನ್ನಿವೇಶಗಳು ಮುಖ್ಯವಾಗಿರುವ ಕೆಲವೊಂದು ಕತೆಗಳ ಜೊತೆ ಜೊತೆಗೇ ( ಧಾರಿಣಿಯ ಜೊತೆ ನನ್ನದೊಂದು ಕತೆ, ಸುನಯನ, ಬಾರೋ ಗೀಜಗ) ಬದುಕು ಒಂದು ಕಟು ವಾಸ್ತವಿಕ ಹೋರಾಟವಾಗಿರುವ ಹೆಣ್ಣು ಪಾತ್ರಗಳೂ ಮಳಗಿಯವರ ಕಥೆಗಳಲ್ಲಿ ಇವೆ, ಮತ್ತು ಅವೇ ಹೆಚ್ಚು ಇವೆ. ಈ ಮೊದಲು ಹೇಳಿದ ಹೆಣ್ಣು ಪಾತ್ರಗಳ ಮಾದರಿತನದಲ್ಲಿರುವ ಅವಾಸ್ತವಿಕತೆ ಮತ್ತು ವ್ಯಕ್ತಿಗತ ಬದುಕಿನ ಸೀಮಿತ ಪರಿಧಿ ಒಂದೆಡೆ ಇರುತ್ತ ಬದುಕಿನ ಹೋರಾಟದಲ್ಲಿ ವ್ಯಸ್ತವಾಗಿರುವ ಹೆಣ್ಣುಗಳ ಚಿತ್ರಣದಲ್ಲಿರುವ ವಾಸ್ತವಿಕತೆ ಮತ್ತು ಸಮುದಾಯನಿಷ್ಠೆ ಇನೊಂದೆಡೆ ಇರುತ್ತ ಇವೆರಡರ ಮುಖಾಮುಖಿಯಲ್ಲಿ ಈ ವಿಭಿನ್ನ ಹೆಣ್ಣು ಪಾತ್ರಗಳು ಎಲ್ಲಿ ನಿಲ್ಲುತ್ತವೆ? ಈ ಎರಡೂ ತೀರ ವಿಭಿನ್ನ ಪಾತ್ರಗಳೇನೂ ಅಲ್ಲ, ಹಾಗೆ ತಿಳಿಯುವುದು ತಪ್ಪು. ಧಾರಿಣಿಯೇ ಹೂವಿಯೋ ಮಾಳವ್ವನೋ ಆಗಿರುತ್ತಾಳೆಂಬುದನ್ನು ಮರೆಯಬಾರದು. ಸುನಯನಳೇ ಚಂದ್ರವ್ವ ಕೂಡ ಅಥವಾ ಹಶಂಬೀ ಕೂಡ ಆಗಿರುವುದು ಸಹಜ ಮತ್ತು ಸಾಧ್ಯ ಎನ್ನುವುದನ್ನು ಮರೆಯದೇ ವಾಸ್ತವ ಮತ್ತು ರೊಮ್ಯಾಂಟಿಸೈಜಿಂಗ್ - ನಡುವಿನ ಹದ ಯಾವುದು ಮಳಗಿಯವರಲ್ಲಿ ಎಂಬ ಪ್ರಶ್ನೆ ಇದೆ. ಧಾರಿಣಿ, ಸುನಯನ, ನೀನಾ ಚಟರ್ಜಿಯರ ಮತ್ತು ಹೂವಿ, ರೇವಕ್ಕ, ಮಾಳವ್ವ, ಹಶಂಬೀ, ಅಬಚಿಯರ ಸೃಷ್ಟಿ (ಅದರ ಸಕಲೆಂಟು ವೈಭವಗಳೊಂದಿಗೇ) ಯ ಹಿಂದಿರುವ ತಾಂತ್ರಿಕ ನೇಯ್ಗೆಗಳು ಹೇಗೆ ಭಿನ್ನವಾಗಿವೆ ಮತ್ತು ಈ ಎರಡೂ ಬಗೆಯ ಹೆಣ್ಣಿನ ನಡುವಿನ ಸಾತತ್ಯ ಮಳಗಿಯವರ ಕತೆಗಳಲ್ಲಿ ಹೇಗೆ ಸಂತುಲಿತಗೊಂಡಿದೆ ಎನ್ನುವ ಅಂಶ ಮಹತ್ವದ್ದು.

"ಮುಗ್ಧತೆ ಮತ್ತು ಭಾವುಕತೆ ಸಂಲಗ್ನಗೊಂಡ; ಹೊಸ ಸಂಬಂಧಗಳಿಗಾಗಿ ತೀವ್ರವಾಗಿ ಹಾತೊರೆವ ಕಾರಣಕ್ಕೆ ರಾಜಕೀಕರಣಗೊಳ್ಳುವ ಪ್ರಜ್ಞೆಯ ಅಭಿವ್ಯಕ್ತಿ" ಎಂಬ ಡಿ.ಆರ್.ನಾಗರಾಜ್ ಅವರ ಮಾತು ಈ ನಿಟ್ಟಿನಲ್ಲಿಯೂ ಬಹಳ ಮುಖ್ಯವಾಗುತ್ತದೆ ಅಲ್ಲವೆ?

ನೀಲಿ ಆಕಾಶದ ಹಣ್ಣು - 2007
ಸೌಭಾಗ್ಯವತಿ ಕತೆಯಲ್ಲಿಯಂತೆಯೇ ಇಲ್ಲಿಯೂ ಹೂವಿಯ ದಾಂಪತ್ಯ ಹಳಿತಪ್ಪಿದೆ. ಅಲ್ಲಿ ಗಂಡ ಮರಳಿ ಬರುವವರೆಗೆ ತವರಿನತ್ತ ಕೂಡ ಹೋಗದೆ, ಯಾರ ಸಹಾಯವನ್ನೂ ಪಡೆಯದೆ ಒಂಟಿಯಾಗಿ ಕಾಯುವ ತುಂಗಭದ್ರೆಗೆ ಪ್ರತಿಯಾಗಿ ಇಲ್ಲಿ ಹೂವಿ ತನ್ನವರು ಎನ್ನುವ ಯಾರೂ ಇಲ್ಲದ ತವರಿಗೇ ಮರಳಿ ತನ್ನ ಕಾಲಮೇಲೆ ತಾನು ಸ್ವತಂತ್ರವಾಗಿ ನಿಂತು ನೆಲೆಯಾಗುತ್ತಾಳೆ. ಈ ಬಗೆಯ ಬದುಕಿನ ಹೋರಾಟಕ್ಕೂ ನಾನಾ ತರದ ತಡೆ-ತಂಟೆ ಒಡ್ಡುವ ತವರಿನವರ ಕುತಂತ್ರಗಳನ್ನು ಎದುರಿಸುತ್ತಾಳೆ. ವಿಶೇಷವಾಗಿ ಊರ ಮಾಸ್ತರರ ಸಹಿತ ಇಡೀ ಊರು ಅವಳ ಬೆನ್ನಿಗೆ ನಿಲ್ಲುವ ಚಿತ್ರ ಕೂಡ ಇಲ್ಲಿದೆ. ಇಡೀ ಊರನ್ನು ಮಳಗಿಯವರು ತಮ್ಮ ಕತೆಯ ತೆಕ್ಕೆಯ ಒಳಗೆ ಬರಮಾಡಿಕೊಳ್ಳುವ ರೀತಿಯನ್ನು ನಾವಿಲ್ಲಿ ಕಾಣಬಹುದಾಗಿದೆ. ಇದು ಮಳಗಿಯವರ ಆಶಯಗಳಿಗೆ ತಕ್ಕಂತಿರುವುದು ಇಲ್ಲಿ ಉಲ್ಲೇಖನೀಯ.

ಮಳಗಿಯವರ ಹೆಚ್ಚಿನ ಕತೆಗಳ ಲಕ್ಷಣವೆನ್ನುವಂತೆ ಇಲ್ಲಿಯೂ ವರ್ತಮಾನವೇ ಅನಿವಾರ್ಯವಾಗಿ ಭೂತವನ್ನು ಅಗೆದು ತೋರುತ್ತ ಹೋಗುತ್ತದೆ. ಕತೆ ತೊಡಗುವಲ್ಲಿಯೇ ಈ ವರ್ತಮಾನದ ಒಂದು ಸಮಸ್ಯೆಯಿದೆ. ಆದರೆ ಇಲ್ಲಿನ ಸಮಸ್ಯೆಯನ್ನಾಗಲೀ, ಅದು ತೆರೆದು ತೋರುವ ಕಥಾನಕವನ್ನಾಗಲಿ ಮೀರಿ ಇಡೀ ಊರಿನ ಒಂದು ಚಿತ್ರ, ಆ ಊರಿನ ಜೀವಂತಿಕೆಯ ಚಿತ್ರ, ಊರ ಹುಲುಮಾನವರ ಒಟ್ಟಾರೆ ನಿಲುವು-ಒಲವುಗಳ ಚಿತ್ರ ಮಳಗಿಯವರಿಗೆ ಮುಖ್ಯವಾದಂತಿದೆ.

ಒಂದೆಡೆ ಮಳಗಿಯವರು ಹೇಳುತ್ತಾರೆ, ‘ಬಹುಸಂಸ್ಕೃತಿ, ವಿವಿಧ ಉಪಭಾಷೆ, ಜಾತಿಪದ್ಧತಿ, ವಿಭಿನ್ನ ಜನಾಂಗಗಳ ಜೀವನಶೈಲಿಗಳನ್ನು ಬದಿಗಿರಿಸಿ ಶೂನ್ಯದಲ್ಲಿ ಸೃಷ್ಟಿಸುವ ಅಲಂಕಾರಿಕ ಭಾಷೆ ಮತ್ತು ಗುಣಗಳ ಸಾಹಿತ್ಯ ಮೌಲಿಕ ಮತ್ತು ಜನಪರ ಸಾಹಿತ್ಯವಾಗಲಾರದು. ........ಸಮುದಾಯಗಳ ಅತಿ ಖಾಸಗಿ ಮತ್ತು ಸಮಾಜಮುಖಿ ಬದುಕಿನ ಖುಷಿ, ಅವಮಾನ, ಯಾತನೆ, ಈ ಎಲ್ಲವುಗಳ ನಡುವೆಯೇ ಅವರು ಸಹನೆಯಿಂದ ಬದುಕನ್ನು ಕಟ್ಟಿಕೊಳ್ಳಲು ಪಡುವ ಶ್ರಮ ಹಾಗೂ ಅತ್ಯಂತ ವಿಸ್ಮಯಕಾರಿ ರೀತಿಯಲ್ಲಿ ಪ್ರಕಟಗೊಳ್ಳುವ ಅವರ ಜಾಣ್ಮೆ....ಇವು ಮತ್ತು ಇಂಥವೇ ಮಹತ್ವದ ವಿಷಯಗಳನ್ನು ಒಳಗೊಳ್ಳದ ಸಾಹಿತ್ಯವು ತಾತ್ಪೂರ್ತಿಕ ಮಾನ್ಯತೆಗಳಿಸಿದರೂ ಬಹುಕಾಲ ಉಳಿಯಲಾರದು.’(ಸುಧಾ ಯುಗಾದಿ ವಿಶೇಷಾಂಕ 2007ರ "ಸಣ್ಣಕಥೆ:ಇತ್ತೀಚಿನ ಒಲವುಗಳು" ಸಮೀಕ್ಷೆಗೆ ನೀಡಿದ ಟಿಪ್ಪಣಿಯಿಂದ)

ಹೊಳೆ ಬದಿಯ ಬೆಳಗು-2008
ಈ ಕತೆಯ ಕುರಿತು ಮಳಗಿಯವರೇ ಹೇಳುವ ಮಾತುಗಳು ಅದೇ ನಿಲುವನ್ನು ಇನ್ನಷ್ಟು ಸ್ಪಷ್ಟಗೊಳಿಸುತ್ತವೆ:

"ತೀರ ಜನಸಾಮಾನ್ಯರು ಅಂದುಕೊಳ್ಳುವವರಲ್ಲಿ ಅಡಗಿರುವ ಮಾನವೀಯ ಅಂಶವನ್ನು ಈ ಕತೆ ಸೆರೆಹಿಡಿಯಲು ಯತ್ನಿಸುತ್ತದೆ. ತಮ್ಮ ತಮ್ಮ ನೋವಿನಲ್ಲಿ ನರಳುತ್ತಿದ್ದರೂ, ಯಾವುದೇ ರೀತಿಯ ಸಂಬಂಧವಿಲ್ಲದಿದ್ದರೂ ಒಬ್ಬರಿಗೊಬ್ಬರು ಆತುಕೊಳ್ಳುವ ಪರಿ ನನಗೆ ಯಾವಾಗಲೂ ವಿಸ್ಮಯವಾಗಿ ಕಾಣುತ್ತದೆ. ಕಲ್ಲುಬಂಡೆಗಳ ಅಡೆತಡೆಗಳನ್ನು ಮೀರಿ ಹರಿಯುವುದೇ ತನ್ನ ಸಹಜ ಕಾಯಕ ಎಂಬಂತೆ ಸರಿದು ಹೋಗುವ ಇಲ್ಲಿನ ಕೃಷ್ಣಾ ನದಿಯಷ್ಟೇ ಇಲ್ಲಿನ ಪಾತ್ರಗಳು ಅಕ್ಕಪಕ್ಕದವರ ಕಡುಕಷ್ಟಗಳಿಗೆ ತಣ್ಣನೆಯ ಆಸರೆಯಾಗುತ್ತಾರೆ. ಯಾವುದೇ ತೋರಿಕೆ, ಅಪೇಕ್ಷೆ ಇಲ್ಲದ ಈ ಬಗೆಯ ಮಾನವೀಯತೆಗೆ ನಾನು ಮುಗ್ಧನಾಗಿದ್ದೇನೆ. ಪ್ರತಿನಿತ್ಯದಂತೆ ಮತ್ತೆ ಹುಟ್ಟುವ ಬೆಳಗು ಚಂದ್ರವ್ವನಿಗೆ ಬೆಡಗಾಗಿ ಕಾಣುವುದು ಈ ಬಗೆಯ ಮಾನವೀಯತೆಯಿಂದಾಗಿಯೇ. ಅವಳಿಗೆ ದೊರಕುವ ಇಂತಹ ನಿಷ್ಕಲ್ಮಶ ಪ್ರೀತಿ ಅವಳನ್ನು ದೈವಿಕದ ಎತ್ತರಕ್ಕೆ ಬೆಳೆಸುತ್ತದೆ."

ಮಳಗಿಯವರ ಹೆಚ್ಚಿನ ಕತೆಗಳಲ್ಲಿ ಹೇಗೆ ಮಡುಗಟ್ಟಿದ ನೋವಿನ ಕಥಾನಕವೊಂದು ಹರಿದು ಬರುತ್ತದೋ ಹಾಗೆಯೇ ಅಲ್ಲೊಂದು ಹರಿವ ನದಿಯ ಹಿನ್ನೆಲೆಯೂ ಇರುವುದನ್ನು ಕಾಣಬಹುದು. ಇಲ್ಲಿ ಕೃಷ್ಣೆ, ಸೌಭಾಗ್ಯವತಿ ಕತೆಯಲ್ಲಿ ಭೀಮಾತಟ, ಧಾರಿಣಿಯ ಜತೆ ನನ್ನದೊಂದು ಕತೆಯ ಹೊಂಗೆ-ಸಂಕೆಸರ ಮರಗಳೂ ಕಪ್ಪು ಬಂಡೆಗಳ ದಂಡೆಯೂ ಇರುವ ನದಿ, ಬಾರೋ ಗೀಜಗದ ಗಂಗಾವತರಣದ ತಟ. ಜಂಗಮ ನದಿ ಮತ್ತು ಸ್ಥಾವರ ತಟದ ಪರಿಕಲ್ಪನೆಯನ್ನು ಕೂಡ ಮಳಗಿಯವರ ಕತೆಗಳು ಬಳಸಿಕೊಂಡಿವೆ. ಕಡಲತೆರೆಗೆ ದಂಡೆ ಕತೆಯ ಹೆಸರು ಕೂಡ ಒಂದು ರೂಪಕಪ್ರಭೆಯ ಕತೆಗೆ ಚೌಕಟ್ಟು ಒದಗಿಸುವುದು ಹೀಗೆ.

ಹಾಗೆ ಈ ಕತೆಯ ಚೊಂಚ ಕುರುಡಿ ಮುದುಕಿ, ನಾಥಪಂಥದ ಸಾಧುಗಳ ಸಂಗ ಅರಸುತ್ತ ದೇಶ ಸುತ್ತುವ ಸನ್ಯಾಸಿ ಬಾಬಾ, ಮಾವನ ಮೇಲಿನ ಮುನಿಸಿನಿಂದ ದೇಶಾಂತರ ಹೋದ ಗಂಡನನ್ನು ಕಳೆದುಕೊಂಡು ಹುಡುಕುವುದಕ್ಕೆಂದೇ ಜಾತ್ರೆಗೆ ಬಂದ ಚಂದ್ರವ್ವ ಮತ್ತು ಭವಿಷ್ಯವನ್ನು ಕುರಿತು ಇವರೆಲ್ಲರಿಗೂ ಇರುವ ಭರವಸೆಯನ್ನೇ ತೋರುವವನಂತೆ ಕಾಣಿಸುವ ಪೋರ ದೇವೇಂದ್ರ ಎಲ್ಲರೂ ಹರಿವ ನದಿಯಿದು ಬದುಕು ಎಂಬ ತತ್ವಕ್ಕೆ ಬದ್ಧರಾದಂತೆ ಕಾಣುವ ಜೀವಿಗಳೇ. ಇವರು ಕಾಣಿಸುವ ಬದುಕಿನ ಪಾಠ ದೊಡ್ಡದು. ಕತೆ ಮಂದ್ರ ಸ್ಥಾಯಿಯಲ್ಲಿ ಉಸುರುವುದು ಈ ಘನಸತ್ಯವನ್ನು. ಕಥಾನಕ, ವ್ಯಕ್ತಿಗಳು ಮತ್ತು ಘಟನೆಗಳನ್ನು ಮೀರಿ ಮಳಗಿಯವರ ಕತೆಗಳು ಸಾಧಿಸುವ ಗಮ್ಯ ಇದು.

‘ಸಹಜೀವಿಯ ಬದುಕನ್ನು ಸಹಾನುಭೂತಿಯಿಂದ ಗ್ರಹಿಸಿ ಅದರ ನೋವನ್ನು ಇನ್ನೊಂದು ಜೀವಕ್ಕೆ ತಿಳಿಸುವ ಶ್ರೇಷ್ಠ ಉದ್ದೇಶದಿಂದ ಹೊರಟ ಕತೆಗಳ’ (ಮಾಸ್ತಿ) ಲಕ್ಷಣಗಳೆಲ್ಲವೂ ಅತ್ಯಂತ ಸಹಜವಾಗಿ ಮಳಗಿಯವರ ಕತೆಗಳಲ್ಲಿ ಮೈತಳೆದಿರುವುದನ್ನು ಕಾಣಬಹುದು. ಈ ಅನುತಾಪ-ಅನುಕಂಪದ ಕುರಿತೇ ಮಳಗಿಯವರು ತಮ್ಮ ಕಥೆಗಾರ ಕಂಡ ರೂಪಕ ಲೋಕದ ಕಥನ - ನೇರಳೆ ಮರ ಕೃತಿಯಲ್ಲಿ ಹೇಳಿರುವ ಮಾತುಗಳು ಇಲ್ಲಿ ಉಲ್ಲೇಖನೀಯ.

ನೇರಳೆ ಮರ (ಪುಟ:70-72): ತರುಣನಾಗಿದ್ದಾಗಿನಿಂದಲೂ ಅನುಕಂಪದ ವಿವಿಧ ನೆಲೆ ಅರಿಯಲು ಪ್ರಯತ್ನಿಸಿರುವೆ. ಆದರೆ ನಾನು ತುಸುವಾದರೂ ಕಲಿತಿರುವ ಕರುಣೆಯು ಬಂದಿರುವುದು ನನ್ನ ಬೌದ್ಧಿಕ ಆವಿಷ್ಕಾರದಿಂದಲ್ಲದೆ ನಿಜವಾದ ಯಾತನೆಯ ಅನುಭವದಿಂದ. ತಪ್ಪಿನಿಂದ ಹಾವನ್ನು ಹಗ್ಗವನ್ನಾಗಿ ಮಾಡಿಕೊಂಡ ವ್ಯಕ್ತಿಯ ಭಯದಂತೆ ನಾನು ನನ್ನ ದುಃಖಕ್ಕಾಗಿ ಹೆಮ್ಮೆಯನ್ನು ಪಡಲಾರೆ. ನನ್ನ ಯಾತನೆಯು ಕೇವಲ ಹಗ್ಗ ಮಾತ್ರವಾಗಿದ್ದು, ಮಹತ್ವವಿರದ, ಕೇವಲ ಶೂನ್ಯದ ಹನಿಯಾಗಿದ್ದು ಬೆಳಗಲ್ಲಿ ಕರಗಿ ಹೋಗಬೇಕಾದ ಇಬ್ಬನಿಯಾಗಿದೆ. ಆದರೆ ಅದು ಕರಗಿಲ್ಲ; ಆದ್ದರಿಂದಲೇ ಅದರ ತಾಪವನ್ನು ತಾಳದಷ್ಟು ನಾನು ಅಸಹನೀಯನಾಗಿದ್ದೇನೆ. ಪ್ರೀತಿಯಿಂದ, ಪ್ರೀತಿಗಾಗಿ ಹುಟ್ಟುತ್ತಿರುವ ನನ್ನ ಯಾತನೆಯನ್ನು ನನ್ನ ಅರಿವಿನ ಗುರು ಕಾಣುತ್ತಿಲ್ಲವೆ? ಕಂಡರೆ, ಹೇಗೆ ಆತ ಮಂದಸ್ಮಿತನಾಗಿರಲು ಹೇಗೆ ಸಾಧ್ಯ? (ಪುಟ:70-71)

"ಹಾಗೆಂದರೆ ಮಹಾಕರುಣೆಯೆನ್ನುವುದು ಜೀವರಹಿತವೆ? ಹಾಗೇನಿಲ್ಲ. ಅಲ್ಲಿ, ವಸ್ತು-ವ್ಯಕ್ತಿನಿಷ್ಠತೆಯಿಲ್ಲ. ನಾನೆಂಬುದಕ್ಕೆ ಪ್ರತ್ಯೇಕ ಅಸ್ತಿತ್ವವಿಲ್ಲ. ದುಷ್ಟನೊಬ್ಬ ಹರಿಹಾಯುತ್ತಾನೆಯೇ, ಆತನತ್ತ ಅನುಕಂಪದ ನಗೆಬೀರಿ. ಆತ ಬೆಳೆದ ಪರಿಸರ, ಅಭದ್ರತೆ, ಆತನ ದಡ್ಡತನದಿಂದಾಗಿ ಆತ ಆ ಬಗೆಯ ಬುದ್ಧಿಹೀನ ಕೃತ್ಯದಲ್ಲಿ ತೊಡಗಿದ್ದಾನೆಂದು ಭಾವಿಸಿ. ತಾಂಡವ ನೃತ್ಯ ಮಾಡುತ್ತ ನಿಮ್ಮ ನಾಶಕ್ಕೆ ಸನ್ನದ್ಧನಾಗಿ ನಿಮ್ಮ ಮೇಲೆ ಅನ್ಯಾಯದ ಹೊರೆ ಹೊರೆಸಿರುವವನತ್ತ ಪ್ರೀತಿ-ಅನುಕಂಪ ತುಂಬಿದ ನೋಟದಿಂದ ನೋಡಿ. ನಿಮ್ಮ ಕಣ್ಣಿಂದ ಧಾರಾಕಾರವಾಗಿ ಕರುಣೆ ಧುಮ್ಮಿಕ್ಕಲಿ. ದೂರಿನ ಅಲೆಯಾಗಲಿ, ಕೋಪದ ನೊರೆಯಾಗಲಿ ನಿಮ್ಮ ಮನಸ್ಸಿನಲ್ಲಿ ಏಳುವುದು ಬೇಡ." (ಪುಟ:71-72)

"ಇತಿಹಾಸವಿಲ್ಲದವರ ಬದುಕಿನ ವರ್ತಮಾನದಲ್ಲಿ ಸೃಷ್ಟಿಯಾಗುತ್ತಿರುವ ಇತಿಹಾಸ ನನ್ನನ್ನು ತೀವ್ರವಾಗಿ ಸೆಳೆಯತೊಡಗಿತು. ಅಲ್ಲಿ ಪ್ರತಿಕ್ಷಣವೂ ಹುಟ್ಟುತ್ತಿದ್ದ ನೂರಾರು ರೂಪಕಗಳು ನನ್ನೊಳಗೆ ಇಳಿಯತೊಡಗಿದವು. ಹೊರಗಿನ ಲೋಕಕ್ಕೆ ಯಕಃಶ್ಚಿತ್ತಾಗಿ ಕಾಣುವ ಸಂಗತಿಗಳು ನನಗೆ ಪುರಾಣ ಸಂಗತಿಗಳಂತೆ ಕಾಣತೊಡಗಿದವು. ಮನುಷ್ಯರು, ಅವರು ಬದುಕುವ ಸಂಕೀರ್ಣತೆಯಿಂದಾಗಿ ಅವರಲ್ಲಿ ಹುಟ್ಟುತ್ತಿರುವ ರಾಗದ್ವೇಷ, ಅವಮಾನ, ನಿರಾಕರಣೆ-ಸ್ವೀಕಾರಗಳ ವಿಸ್ಮಯ ಕಾಡತೊಡಗಿದವು." (ನೇರಳೆ ಮರ:ಪುಟ:91)

"ಈ ಇತಿಹಾಸವಿಲ್ಲದವರ ವರ್ತಮಾನಕ್ಕೆ ಭಾವುಕ ಪ್ರಪಂಚವೊಂದಿದೆ ಮತ್ತು ಅವರನ್ನು ಗ್ರಹಿಸಲು ಅದೇ ಸರಿಯಾದ ನೆಲೆಯಾಗಿದೆ ಎಂದು ತಿಳಿಯತೊಡಗಿತು. ಅಲ್ಲಿ, ಬುದ್ಧಿಯಿಂದ ಅರಿತ ಇಲ್ಲವೆನ್ನುವ ಪ್ರಜ್ಞೆಗಿಂತ (ಮತ್ತು ಅದರ ಆಧಾರದ ಮೆಲೆಯೇ ಏಕದೃಷ್ಟಿಯ ಸಾಹಿತ್ಯ ರಚಿಸುತ್ತ) ಆ ಕ್ಷಣದಲ್ಲಿ ಘಟಿಸುವ ಇರುವ ಜಗತ್ತು ಮಹತ್ವದ ಪಾತ್ರವಹಿಸುತ್ತಿತ್ತು. ಅಲ್ಲಿನ ಜೀವಂತ ಪಾತ್ರಗಳು ಆ ವರ್ತಮಾನದಲ್ಲಿ ಸುಖ ಕಾಣುವ ಪರಿ ಅಗಾಧವಾಗಿತ್ತು. ಅಲ್ಲಿ ಭಾವುಕತೆಯೇ ಅವರ ಸತ್ವವಾಗಿತ್ತು." (ನೇರಳೆ ಮರ:ಪುಟ:92)

ಗವಿಮಠದ ಪವಾಡ
ಮಳಗಿಯವರ ಕತೆಗಳಲ್ಲಿ ಮತ್ತೆ ಮತ್ತೆ ಕಂಡುಬರುವ ಕೆಲವು ವಿದ್ಯಮಾನಗಳಲ್ಲಿ ಒಂದನ್ನು ಈ ಕತೆಯ ನೆವದಲ್ಲಿ ಚರ್ಚಿಸಬಹುದು.

ಒಂದು: ಜೀವನಾನುಭವ-ಆಧ್ಯಾತ್ಮದ ತತ್ವವಾಗಿ ಪ್ರಕಟಗೊಳ್ಳುವುದು; ಮಳಗಿಯವರ ಕತೆಗಳ ಹಿರಿಯ ಜೀವಗಳು, ನೋವುಂಡವರು ಈ ಬಗೆಯ ಮಾತುಗಳನ್ನಾಡಿ ಇಡೀ ಕತೆಯನ್ನು ಆವರಿಸಿರುವ ನೋವಿನ-ದುಮ್ಮಾನದ ಧ್ವನಿಗೆ ಒಂದು ಹೊಸದೇ ಆದ ಪರಿಧಿಯನ್ನು ನಿರ್ಮಿಸುತ್ತವೆ. ಮೊದಲೇ ಹೇಳಿರುವಂತೆ ಈ ನಿಲುವಿನಲ್ಲಿ ನಿರಾಶಾವಾದವಿಲ್ಲ, ಜೀವ ವಿಮುಖಿ ಧೋರಣೆಗಳಿಲ್ಲ. ಎರಡನೆಯದು: ನೋವುಂಡ ಪಾತ್ರದ ಜೀವನ ವಿಮುಖತೆ ಕಥೆಯಲ್ಲಿ ಪ್ರಕಟಗೊಳ್ಳುವ ವಿಧಾನಗಳು - ಸಂನ್ಯಾಸವಾಗಿ, ಕಣ್ಮರೆಯಾಗುವ ವಿಧಾನವಾಗಿ, ಆತ್ಮಹತ್ಯೆಯಾಗಿ, ಸಾವಾಗಿ ಪ್ರಕಟಗೊಳ್ಳುವುದು; ಈ ಎಲ್ಲವೂ ಜಗತ್ತಿನಿಂದ ದೂರವಾಗುವ, ಜಗದ ಪರಿಧಿಯಿಂದಲೇ ಹೊರಗಾಗುವ ಕಡೆಗಿನ ಚಲನೆ. ಮನೆಬಿಟ್ಟು ಹೋಗುವ ಪಾತ್ರಗಳು, ಊರುರು ತಿರುಗುತ್ತ ಇಲ್ಲವೇ ಸಂನ್ಯಾಸವನ್ನು ಆಯ್ದುಕೊಂಡ ಪಾತ್ರಗಳು, ಆತ್ಮಹತ್ಯೆಯೋ ಆಕಸ್ಮಿಕವೋ ಆದ ಸಾವನ್ನು ಮುಟ್ಟಿ ನೀಗಿಕೊಳ್ಳುವ ಪಾತ್ರಗಳು ಮಳಗಿಯವರ ಕತೆಗಳಲ್ಲಿ ಸಾಮಾನ್ಯ. ಕಾನುಮನೆಯ ಅವ್ವಿ, ಅಗಮ್ಯದ ಇಂದುಮುಖಿ, ಕಡಲ ತೆರೆಗೆ ದಂಡೆಯ ಅನ್ಸರ್ ಮತ್ತು ಯದುಪತಿ ಕಾಕಾ, ಊರ ಮಧ್ಯದ ಕಣ್ಣಕಾಡಿನೊಳಗೆ ಕತೆಯ ಬಾಪೂ ಮತ್ತು ವಸುಂಧರೆ ಇಷ್ಟು ನಕ್ಷತ್ರಗಳಲ್ಲಿ ಯಾವುದು ನನಗೆ ಕತೆಯ ಮೋನಿದಾದಾ ಇತ್ಯಾದಿ. ನಾಲ್ಕನೆಯದು, ಮಠ ಮತ್ತು ಸಿದ್ಧಿಯ ಸಂಬಂಧ ಕತೆಗಳಲ್ಲಿ ಕಾಣಿಸಿಕೊಳ್ಳುವುದು; ಮುಖ್ಯವಾಗಿ ಅಂಗದ ಧರೆ ಕಾದಂಬರಿ, ಕಡಲತೆರೆಗೆ ದಂಡೆ ಕತೆಯ ಯದುಪತಿ ಕಾಕಾ, ಹೊಳೆ ಬದಿಯ ಬದುಕು ಕಥೆಯ ಬೋಲ್ಡಿ ಬಾಬಾ ಇಂಥ ಪಾತ್ರಗಳು. ಇನ್ನು ನಾಲ್ಕನೆಯದರ ವಿಸ್ತರಣೆಯಾಗಿ ಬರುವ ಐದನೆಯದು, ಸ್ವಾಮೀಜಿ ನಿಸ್ಸಂಗತ್ವದ ಸಾಧನೆಯಾಗಿ, ಸಮಾಧಾನಕರ ನಿಲುವಾಗಿ ಕಾಣಿಸಿಕೊಳ್ಳುವ ಹಂತಕ್ಕೆ ಬಂದಾಗಿನ ಕತೆಗಳು. ಮತ್ತೆ ಅಂಗದ ಧರೆ ಮತ್ತು ಗವಿಮಠದ ಪವಾಡ ತರಹದ ಕತೆಗಳು ಹಾಗೂ ನೇರಳೆ ಮರದಲ್ಲಿ ಉಲ್ಲೇಖಿತ ‘ಕಥೆಗಾರನ ಕನಸಿನಲ್ಲಿ ಬಂದು ಕರೆಯುವ ಅರಿವಿನ ಗುರುವಿನ ಮಾತುಗಳು’ ಈ ಬಗೆಯ ಒಂದು ನಿಲುವನ್ನು ಸಮರ್ಥಿಸುವಂತೆ ಇವೆ.

ಮಳಗಿಯವರಿಗೆ ಮಠ, ಆಧ್ಯಾತ್ಮ, ಬದುಕಿನ, ಸತ್ಯದ ಶೋಧದಲ್ಲಿ ಸೂಕ್ಷ್ಮ ಆಸಕ್ತಿಯಿರುವಂತಿದೆ. ನೇರಳೆ ಮರದಲ್ಲಿ ಉಲ್ಲೇಖಿಸಲ್ಪಟ್ಟ "ಕಥೆಗಾರನ ಕನಸಿನಲ್ಲಿ ಬಂದುಕರೆಯುವ ಅರಿವಿನ ಗುರು"ವೇ ಹೀಗೆ ಮತ್ತೆ ಮತ್ತೆ ಕಾಣಿಸಿಕೊಳ್ಳುವುದಿರಬಹುದು. ಅಂಗದ ಧರೆ ಕಾದಂಬರಿಯಲ್ಲಿ ಪೂರ್ಣಪ್ರಮಾಣದಲ್ಲೇ ಇಂಥ ವಸ್ತುವಿದ್ದರೂ ಅವರ ಅನೇಕ ಕತೆಗಳಲ್ಲಿ ಸಾಧು ಸಂತರು, ಆಧ್ಯಾತ್ಮ ಸಾಧಕರು, ಸಾಧನೆಯ ಹಾದಿಹಿಡಿದವರು ಕಾಣಸಿಗುತ್ತಾರೆ. ಹೆಚ್ಚಾಗಿ ಇವರು ಕಾವಿತೊಟ್ಟ ಸನ್ಯಾಸಿಗಳಾಗಿರದೇ ಬದುಕನ್ನು ಕಂಡ ಹಿರಿಯ ಜೀವವಾಗಿರುವುದು ಕೂಡ ಕಂಡುಬರುತ್ತದೆ. ಹಾಗಾಗಿ ಕಡಲತೆರೆಗೆ ದಂಡೆ ಕತೆಯ ಯದುಪತಿ ಕಾಕಾ, ಹೊಳೆಬದಿಯ ಬೆಳಗಿನ ಬೋಲ್ಡಿ ಬಾಬಾ, ಇಷ್ಟು ನಕ್ಷತ್ರಗಳಲ್ಲಿ ಯಾವುದು ನನಗೆ ಕತೆಯ ಮೋನಿದಾದಾಗಿಂತ ಕತೆಯ ಹಿರಿಯ ಜೀವವೇ ಹೆಚ್ಚು ವ್ಯವಧಾನಿಯಾದ, ಬದುಕು ಕಂಡು ಮಾಗಿದ ನಡೆ-ನುಡಿಗಳಲ್ಲಿ ನಮ್ಮನ್ನು ಆವರಿಸುವುದು ಕಾಣುತ್ತದೆ. ಅದು ಕೆಂಪು ಮಣ್ಣಿನ ಒಕ್ಕಲು ಕತೆಯ ದಾವೂದನೋ, ನಕ್ಷತ್ರ ಯಾತ್ರಿಕರು ಕತೆಯ ಸಂಗೂಬಾಯಿಯೋ, ಕಡಲತೆರೆಗೆ ದಂಡೆಯ ಅನ್ಸರನೋ ಆಗಿದ್ದರೆ ಅದರಲ್ಲೇನೂ ಅಚ್ಚರಿಯಿಲ್ಲ.

ಗವಿಮಠದ ಪವಾಡ ಒಂದು ಲಾಜಿಕಲ್ ಕತೆ. ಇದು ಫ್ಯಾಂಟಸಿಯನ್ನೂ ವಾಸ್ತವಕ್ಕೆ ಜೋಡಿಸುವುದರ ಮೂಲಕ ಬದುಕಿನ ಕುರಿತ ನಿತ್ಯಸತ್ಯವೊಂದನ್ನು ರೂಪಕವಾಗಿಸುವ ಕತೆ. ಮಳಗಿಯವರ ಕತೆಗಳಲ್ಲಿ ವಿಶಿಷ್ಟವೂ, ವಿಭಿನ್ನವೂ ಆಗಿ ನಿಲ್ಲುವ ಕತೆ ಕೂಡ ಹೌದು.

ಇಲ್ಲಿಯೇ ಚರ್ಚಿಸಬಹುದಾದ ಇನ್ನೊಂದು ಅಂಶ: ಸಾವು-ಮೃತ್ಯುಪ್ರಜ್ಞೆ. ಅಥವಾ ಆತ್ಮಹತ್ಯೆ, ಸಾವು, ಕಣ್ಮರೆ, ನಿರಾಕರಣ, ಆಧ್ಯಾತ್ಮ - ಮಳಗಿಯವರ ಕತೆಗಳಲ್ಲಿ ಮತ್ತೆ ಮತ್ತೆ ಬರುವುದರ ತಾಂತ್ರಿಕ ಪಾತಳಿ ಯಾವುದು ಮತ್ತು ಬದುಕಿನ ಚಿತ್ರಕ್ಕೆ ಸಂಬಂಧಿಸಿದಂತೆ ಅವುಗಳ ಪಾತ್ರವನ್ನು ಹೇಗೆ ಗುರುತಿಸಬೇಕು ಎನ್ನುವುದು. ಇವುಗಳ ವಿಭಿನ್ನ ಅಭಿವ್ಯಕ್ತಿಯ ಆಚೆ ಇದನ್ನು, ಅಂದರೆ ಕತೆಯ ಒಂದು ಘಟ್ಟದಲ್ಲಿ ಒಂದು ಸಾವು, ಒಂದು ಕಣ್ಮರೆ, ಒಂದು ವಿರಕ್ತಿಯ ಹಾದಿಯ ಕವಲೊಡೆಯುವಿಕೆ, ಕತೆಯ ಪರಿಣಾಮಕಾರತ್ವಕ್ಕೆ ಕೊಡುವ ಕೊಡುಗೆ ಕೂಡ ಒಂದಿದೆಯಲ್ಲ, ಹಾಗೆ ಅದರ ತಾಂತ್ರಿಕ ಅನಿವಾರ್ಯತೆ ಮತ್ತು ತಾಂತ್ರಿಕ ಬಳಕೆಯನ್ನು ಕುರಿತು ನೋಡಬಹುದು. ಹಾಗೆಯೇ ಇದರ ಬಳಕೆ ಒಂದು ರೂಪಕವಾಗಿ ಯಾಕೆ ಮಳಗಿಯವರಿಗೆ ಅಷ್ಟು ಆಪ್ತವಾದದ್ದು ಎನ್ನುವ ಪ್ರಶ್ನೆಯನ್ನೂ ಕೇಳಬಹುದು!

ನಕ್ಷತ್ರ ಯಾತ್ರಿಕರು ಕತೆಯಲ್ಲಿ ಮಾಳವ್ವನನ್ನು ಅವಳ ಹೆತ್ತವರು ರೈಲ್ವೇ ಸ್ಟೇಶನ್ನಿನಲ್ಲಿ ಬಿಟ್ಟು ಹೋಗುವುದು ಅಥವಾ ಅವಳು ಅಚಾನಕವಾಗಿ ರೈಲಿನಿಂದಿಳಿದು ಆಗುವ ಅನಾಹುತವನ್ನು ಗಮನಿಸಿ. ವೆನ್ನೆಲ ದೊರೆಸಾನಿಯ ಗಿಚ್ಚಲುವಿನ ಗಳಿಸಬಲ್ಲ ಬಾಳಿಸಬಲ್ಲ ಅಸಾಮರ್ಥ್ಯವನ್ನು ಗಮನಿಸಿ. ಅಗಮ್ಯ ಅಗೋಚರ ಅಪ್ರತಿಮ ಜೀವವೇ ಕತೆಯ ಇಂದುಮುಖಿಯ ತಂದೆಯ ಸಾವನ್ನು ಗಮನಿಸಿ. ಅವಳ ವಿಚ್ಛೇದನಕ್ಕೂ ಅದಕ್ಕೂ ಸಂಬಂಧವಿದ್ದಂತಿದೆ ಅಲ್ಲಿ. ಅದು ಹೋಗಲಿ, ಸ್ವತಃ ಇಂದುಮುಖಿಯ ಸಾವೇ ಕತೆಯ ತಾಂತ್ರಿಕ ಅಗತ್ಯವಾಗಿ ಏನು ಎಂದು ಗಮನಿಸಿ. ಕಾನುಮನೆಯಲ್ಲಿ ಅವ್ವಿಯ ತಾಯಿಯ ಪಲಾಯನವನ್ನು ಹಾಗೂ ಅವ್ವಿಯ ಕಣ್ಮರೆಯನ್ನು ಒಟ್ಟಾಗಿ ನೋಡಿ. ಕೆಂಪು ಮಣ್ಣಿನ ಒಕ್ಕಲು ಕತೆಯಲ್ಲಿ ಸಂಭವಿಸುವ ಕಾಶೀಮ ಮತ್ತು ದುರ್ಗಾವಲೀಯ ಸಾವು, ಸೌಭಾಗ್ಯವತಿಯಲ್ಲಿ ತುಂಗಭದ್ರೆಯ ಗಂಡನ ಕಣ್ಮರೆ ಮತ್ತು ಸಾವು, ಮಾಗಿಯಲ್ಲಿ ಹೆಪ್ಪುಗಟ್ಟಿರುವ ವಿಯೋಗ, ಅಂಥದೇ ದಟ್ಟ ಆಲಾಪವೊಂದು ಹರಿಯುತ್ತಲೇ ಇರುವ ಸುನಯನ, ಗೀಜಗನ ಗೂಡು, ಅಲ್ಲಿಯೂ ತಂದೆಯನ್ನು ಕಳೆದುಕೊಳ್ಳುವ ಸುನಯನ, ನೀನಾ ಮತ್ತು ಧಾರಿಣಿಯಲ್ಲಿ ಹಿಮಾಲಯಕ್ಕೆ ಹೋಗುವ ಕಿಶೋರ, ಕಡಲತೆರೆಗೆ ದಂಡೆಯಲ್ಲಿ ಅನ್ಸರನ ಸಾವು, ಯದುಪತಿ ಕಾಕಾನ ಕಣ್ಮರೆ, ಊರ ಮಧ್ಯದ ಕಣ್ಣಕಾಡಿನೊಳಗೆ ಕತೆಯ ಬಾಪೂ ಮತ್ತು ವಸುಂಧರೆಯ ಕಣ್ಮರೆ(ಸಾವು?), ಅರುಂಧನ ಕಣ್ಮರೆ ಮತ್ತು ಸಾವಿನ ಸುದ್ದಿ, ಇಂಥ ಸಾಲು ಸಾಲು ಉದಾಹರಣೆಗಳು ನಮಗೆ ಸಿಗುತ್ತವೆ. ಇವು ಕಥಾನಕದ ಚಲನೆಗೆ ಹೇಗೋ ಅಷ್ಟೇ ಕಥಾನಕದ ಧಾಟಿಗೆ ಅಗತ್ಯವಿದ್ದ ವಿದ್ಯಮಾನಗಳೂ ಕೂಡಾ ಆಗಿರುವುದು ಗಮನಾರ್ಹ. ಹಾಗೆ ಒಂದು ಸಾವು, ಒಂದು ಕಣ್ಮರೆ ಒಂದು ಅನಿರೀಕ್ಷಿತವಾದ ಮತ್ತು ಇದೇ ಬಗೆಯದ್ದಾದ ತಿರುವು ರೂಪಕ ಶಕ್ತಿಯನ್ನು ಪಡೆದುಕೊಳ್ಳುತ್ತದೆ,ಮಳಗಿಯವರ ಕತೆಗಳಲ್ಲಿ.

ಗುಡ್ಡದೂರಲ್ಲಿ ಒಂದು ಇರುಳು
ಈ ಕತೆ ಅಫ್ರಿಕನ್ ಕತೆಯೊಂದರ ಆಸರೆಯಲ್ಲಿ ಅರಳಿದೆ ಎಂದಿದ್ದರೂ ಮಳಗಿ ಕಥಾಲೋಕದ ಹಶಂಬಿಯನ್ನೋ ಮಾಳವ್ವನನ್ನೋ, ಹೂವಿಯನ್ನೋ ಇಲ್ಲಿಯೂ ಕಂಡಂತಾದರೆ ಅಚ್ಚರಿಯಿಲ್ಲ. ಆದರೆ ಈ ಕತೆಯಲ್ಲಿ ಯಾವತ್ತೂ ನಮಗೆ ಎದುರಾಗುವ ಮಳಗಿಯವರ ಸಮುದಾಯದ ಚಿತ್ರಣವಿಲ್ಲ, ಜನಜೀವನದ ಹಾಸುಹೊಕ್ಕಾದ ವಿವರಗಳಿಲ್ಲ. ಒಂದು ಕೋಣೆಯಲ್ಲಿ ಒಂದು ರಾತ್ರಿ ಹಗಲಾಗುವ ಮುನ್ನ ಮೆಲುಕು ಹಾಕಿದಂತಿರುವ ಕಥನದಲ್ಲಿ ವಿಶೇಷವಾದ ಸ್ಮೃತಿಗಳ ಮರುಕಳಿಕೆ ಕೂಡ ಇಲ್ಲ. ಪ್ರಸ್ತುತ ಬೆಲೆವೆಣ್ಣಾಗಿ ಬದಲಾಗಿರುವ ಹೊರಗೇರಿಯ ಹೆಸರಿಲ್ಲದ ‘ಅವಳ’ ಕತೆ ಇದೆಂದರೂ ಅದಲ್ಲ. ಆವತ್ತು ರಾತ್ರಿಗೆ ‘ಗಿರಾಕಿ’ಯಾಗಿ ಬಂದಾತನಿಗೂ ಸದ್ಯದ ಅವಳ ಅನಿವಾರ್ಯ ಪರಿಸ್ಥಿತಿಗೆ ಕಾರಣವಾದ ಗಂಡನ ಸಾವೂ ಸಂಧಿಸುವ ಒಂದು ಸೂಕ್ಷ್ಮ ಬಿಂದುವೇ ಕತೆಯ ಪ್ರಧಾನ ಅಂಶವಾದರೂ ಕತೆಯ ಬಂಧ ಈ ಬಿಂದುವನ್ನು ಮನಮುಟ್ಟಿಸುವಷ್ಟು ಸಶಕ್ತವಿಲ್ಲ ಅನಿಸುತ್ತದೆ. ಸತ್ತೇ ಹೋಗಿರಬಹುದಾದ ಮಗುವಿನ ತಣ್ಣಗಿನ ಮೈಯ ಸ್ಪರ್ಶ ಈ ಗಿರಾಕಿಗೆ ತಟ್ಟುವುದು ಇಲ್ಲಿಂದ ಬೇಗ ಪಾರಾಗಿ ಹೋಗಬೇಕು ಎನ್ನುವ ಮಟ್ಟದಲ್ಲಿ ಮಾತ್ರ. ಎರಡು ಸಾವುಗಳ ನಡುವೆ ಕಮರಿದ ಅವಳ ಬದುಕಿಗೆ ಹೊಣೆಗಾರರಿಲ್ಲದಿರುವುದೆ ಗುಡ್ಡದೂರಿನ ಇರುಳ ದುರಂತ.

9 comments:

Hemanth said...

Interesting, I got this blog’s info in Vijaya Karnataka. Thanks for providing the details abt the books and authors.
Rgds,
Hemanth

ನರೇಂದ್ರ ಪೈ said...

ಆತ್ಮೀಯ ಹೇಮಂತ್,
ಧನ್ಯವಾದಗಳು. ಪುಸ್ತಕ ಜಗತ್ತು ಎಂಬ ಒಂದು ಹೊಸ ಬ್ಲಾಗ್ ಸುರುಮಾಡಿದ್ದೇನೆ, ಲಿಂಕ್ ಇದೇ ಬ್ಲಾಗಿನಲ್ಲಿ ‘ಲೈಬ್ರರಿಗೆ ಬನ್ನಿ’ ಎನ್ನುವಲ್ಲಿದೆ. ದಯವಿಟ್ಟು ಗಮನಿಸಬೇಕಾಗಿ ಕೋರಿಕೆ.
ವಂದನೆಗಳೊಂದಿಗೆ,
ನರೇಂದ್ರ.

Hemanth said...

ಥ್ಯಾಂಕ್ಸ್ ಸರ್, ನಿಮ್ಮ ಪುಸ್ತಕ ಜಗತ್ತು ಅದ್ಭುತ ವಾಗಿದೆ.ಕನ್ನಡದ ಶ್ರೇಷ್ಟ ಬರಹಗಾರರ ಪುಸ್ತಕಗಳ ಪರಿಚಯವಿದೆ.ಲೈಬ್ರರಿಗೆ ಬನ್ನಿ ಎನ್ನುವ ಟೈಟಲ್ ಒಪ್ಪುವಂತಹುದು. ನಿಮ್ಮ ಈ ಪುಸ್ತಕ ಜಗತ್ತಿನಲ್ಲಿ ಎಸ್.ಎಲ್.ಭೈರಪ್ಪರವರ ಪುಸ್ತಕಗಳಿಗೆ ಜಾಗವಿಲ್ವ?
ವಂದನೆಗಳು,
ಹೇಮಂತ್.

ನರೇಂದ್ರ ಪೈ said...

ಆತ್ಮೀಯ ಹೇಮಂತ್,
ಎಸ್.ಎಲ್.ಭೈರಪ್ಪನವರ ಸರಿ ಸುಮಾರು ಎಲ್ಲ ಕೃತಿಗಳೂ ನನ್ನಲ್ಲಿವೆ, ಅವುಗಳನ್ನು ಖಂಡಿತಾ ಇಲ್ಲಿ ಕಾಣಿಸಲಾಗುತ್ತದೆ. ಆದರೆ ನನ್ನ ಮಿತಿಯಲ್ಲಿ ನಾನಿದನ್ನು ಮಾಡುತ್ತಿರುವುದರಿಂದ ಅನೇಕ ಘಟಾನುಘಟಿ ಲೇಖಕರ ಕೃತಿಗಳು ನನ್ನಲ್ಲಿಲ್ಲದೇ ಇಲ್ಲಿಯೂ ಕಾಣದಿರುವ ಅಪಾಯ ಇದ್ದೇ ಇದೆ. ಇದು ಬರೀ ನನ್ನ ಲೈಬ್ರರಿ, ಅದು ಅದರ ಮಿತಿ. ಮುಂದೆ ಯಾರಾದರೂ ಪುಸ್ತಕಗಳ ವೆಬ್ ಸೈಟ್ ಮಾಡಲು ಮುಂದಾದರೆ ಅದಕ್ಕೆ ಇದೊಂದು ಪುಟ್ಟ ನಾಂದಿಯಾದೀತು ಎನ್ನುವುದು ಆಸೆ.
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ನರೇಂದ್ರ.

Hemanth said...

ಥಾಂಕ್ಸ್....ಉಲ್ಲಂಘನೆ ಮತ್ತು ಇತರೆ ಕಥೆಗಳು ಪುಸ್ತಕದ ಮುಖಪುಟದಲ್ಲಿರುವ ಚಿತ್ರವೇ ಒಂಥರ ವಿಚಿತ್ರವಾಗಿ ಸೆಳೆಯುತ್ತದೆ.ಓದಲೇಬೇಕೆಂಬ ಕೂತುಹಲ ಹುಟ್ಟಿಸುತ್ತದೆ.ನಿಮ್ಮ ಹಳೆಯ ಲೇಖ್ಹನಗಳನ್ನು ಓದುತ್ತಿದ್ದೇನೆ ಸಮಯಾನೇ ಸಾಕಗ್ತ ಇಲ್ಲ ಇನ್ನೂ ಓದೋಕೆ ಬಹಳಷ್ಟಿವೆ ಆದರೂ ನಿಮ್ಮ ಮುಂದಿನ ಲೇಖನದ ಬಗ್ಗೆ ಕೂತುಹಲದಿಂದ್ದೇನೆ ಆದಷ್ಟು ಬೇಗ ಪ್ರಕಟಿಸಿ.

ವಂದನೆಗಳು,
ಹೇಮಂತ್.

Hemanth said...

ಥಾಂಕ್ಸ್....ಉಲ್ಲಂಘನೆ ಮತ್ತು ಇತರೆ ಕಥೆಗಳು ಪುಸ್ತಕದ ಮುಖಪುಟದಲ್ಲಿರುವ ಚಿತ್ರವೇ ಒಂಥರ ವಿಚಿತ್ರವಾಗಿ ಸೆಳೆಯುತ್ತದೆ.ಓದಲೇಬೇಕೆಂಬ ಕೂತುಹಲ ಹುಟ್ಟಿಸುತ್ತದೆ.ನಿಮ್ಮ ಹಳೆಯ ಲೇಖ್ಹನಗಳನ್ನು ಓದುತ್ತಿದ್ದೇನೆ ಸಮಯಾನೇ ಸಾಕಗ್ತ ಇಲ್ಲ ಇನ್ನೂ ಓದೋಕೆ ಬಹಳಷ್ಟಿವೆ ಆದರೂ ನಿಮ್ಮ ಮುಂದಿನ ಲೇಖನದ ಬಗ್ಗೆ ಕೂತುಹಲದಿಂದ್ದೇನೆ ಆದಷ್ಟು ಬೇಗ ಪ್ರಕಟಿಸಿ.

ವಂದನೆಗಳು,
ಹೇಮಂತ್.

ನರೇಂದ್ರ ಪೈ said...

ಆತ್ಮೀಯ ಹೇಮಂತ್,
ನಿಮ್ಮ ಆಸಕ್ತಿ ನಿಜಕ್ಕೂ ಉತ್ಸಾಹದಾಯಕವಾಗಿದೆ. ಖಂಡಿತ ಬರೆಯಲು ಪ್ರಯತ್ನಿಸುತ್ತೇನೆ. ನನ್ನ ಬರಹಗಳಿಗಿಂತ, ಮೂಲ ಪುಸ್ತಕವನ್ನೇ ಓದುವುದು ಸಾಧ್ಯವಾದಲ್ಲಿ ಅದು ನಿಮ್ಮನ್ನು ಇನ್ನೂ ಹೆಚ್ಚು ಶ್ರೀಮಂತಗೊಳಿಸುತ್ತದೆ, ಸಾರ್ಥಕ ಭಾವ ತರುತ್ತದೆ. ನನಗೂ ಒಮ್ಮೊಮ್ಮೆ ನಾನು ಓದಿದ ಕೃತಿಯ ಬಗ್ಗೆ ಬರೆದು ಅದನ್ನು upload ಮಾಡುವುದಕ್ಕಿಂತ ಅದೇ ಸಮಯಾವಕಾಶದಲ್ಲಿ ಸುಮ್ಮನೇ ಓದುವುದು ಹೆಚ್ಚು ಆಕರ್ಷಕವಾಗಿ ಕಾಣುವುದಿದೆ! ಸಮಯ ತುಂಬ ಸೀಮಿತವಿದೆ, ಒಳ್ಳೊಳ್ಳೆ ಪುಸ್ತಕಗಳನ್ನ ಓದಿ!
ಧನ್ಯವಾದಗಳೊಂದಿಗೆ,
ನರೇಂದ್ರ

ಕಂಡಕ್ಟರ್ ಕಟ್ಟಿಮನಿ 45E said...

ಸರ್ ನಾನು ಕಟ್ಟಿಮನಿ ಅಂತ BMTC ಬಸ್ ಕಂಡಕ್ಟರ್ 45E Routನಲ್ಲಿ ಕೆಲ್ಸ ಮಾಡ್ತಿನಿ. ನಿಮ್ಮ ಬ್ಲಾಗ್ ಕುರಿತು ವಿಜಯ ಕರ್ನಟಕದಲ್ಲಿ ಓದಿದೆ. ನಿಮ್ಮ ಬ್ಲಾಗ್ ನ ಎಲ್ಲಾ ಅಂಕಣಗಳನ್ನು ಓದಿಲ್ಲ.ಕೆಲವನ್ನು ಓದಿರುವೆ. ಎಸ್ ದಿವಾಕರ್ ನನ್ನ ಇಷ್ಟದ ಕತೆಗಾರ. ಅವರ ಕುರಿತು ಬರೆದದ್ದು ತುಂಬಾ ಚೆನ್ನಾಗಿದೆ.. ಇನ್ನು ಮುಂದೆ ಖಾಯಂ ಓದುಗ.
ಕಂಡಕ್ಟರ್ ಕಟ್ಟಿಮನಿ 45E

ನರೇಂದ್ರ ಪೈ said...

ಕಟ್ಟೀಮನಿಯವರೆ, ನಿಮಗೆ ತುಂಬ ಧನ್ಯವಾದಗಳು, ಪ್ರತಿಕ್ರಿಯೆ ದಾಖಲಿಸಿದ್ದಕ್ಕೆ. ನಿಜ ಹೇಳಬೇಕೆಂದರೆ, ನಿಮ್ಮ ವೃತ್ತಿಯಲ್ಲಿ ಅಷ್ಟೆಲ್ಲ ದೈಹಿಕ ಶ್ರಮ, ವಿಶ್ರಾಂತಿಗೆ ಹೊತ್ತು ಗೊತ್ತಿಲ್ಲದಿರುವುದು ಎಲ್ಲ ಇದ್ದರೂ ನೀವು ಓದುವ ಹವ್ಯಾಸವನ್ನೂ ಉಳಿಸಿಕೊಂಡಿರುವಿರಲ್ಲ, ಅದಕ್ಕೆ ನಿಮಗೆ ಶರಣು ಹೇಳಬೇಕು, ನನ್ನಂಥ ಕೂತು ದುಡಿಯುವ (ತಿನ್ನುವ) ವರ್ಗ. ನಿಮ್ಮ ಪ್ರತಿಕ್ರಿಯೆ ಓದಿ ನನಗೆ ರೋಮಾಂಚನವಾಯಿತು ಕಟ್ಟೀಮನಿಯವರೆ. ನನ್ನ ಲೇಖನಗಳಿಗಿಂತ ಸಾಧ್ಯವಾದಷ್ಟು ಒಳ್ಳೆಯ ಪುಸ್ತಕಗಳನ್ನೇ ಓದಿ. ಒಳ್ಳೆಯ ಕೃತಿಗಳ ಬಗ್ಗೆ ಮಾಹಿತಿಗಾಗಿ ನನ್ನ ಬ್ಲಾಗನ್ನೂ ಗಮನಿಸಬಹುದು ನೀವು. ಇದೇ ಮುಖ್ಯವಲ್ಲ. ಒಳ್ಳೊಳ್ಳೆ ಪುಸ್ತಕಗಳನ್ನು ಓದಿ ಮತ್ತು ಸಾಧ್ಯವಾದಾಗ ಆಸಕ್ತ ಇತರರಿಗೂ ಆ ಕುರಿತು ಹೇಳಿ. ಮಂಗಳೂರಿನಲ್ಲಿರುವ ನಾನು ಬೆಂಗಳೂರಿಗೆ ಬಂದಾಗ ನಿಮ್ಮನ್ನು ಭೇಟಿಯಾಗುವುದು ಸಾಧ್ಯವಾದರೆ ಖುಶಿಪಡುತ್ತೇನೆ. ಮತ್ತೊಮ್ಮೆ ಧನ್ಯವಾದಗಳೊಂದಿಗೆ,
ನಿಮ್ಮ
ನರೇಂದ್ರ.