Tuesday, December 29, 2009

ಇಲ್ಲದ ದೇವರು ಮತ್ತು ಇರುವ ದೇವರು

ಚಿಮಾಮಾಂಡಾ ಎನ್ ಗೋಝಿ ಅದಿಚ್ಯಿಯವರದೇ ಇನ್ನೊಂದು ಕಾದಂಬರಿಯ ಬಗ್ಗೆ ನಿಮ್ಮ ಜೊತೆ ಎರಡು ಮಾತು. The Purple Hibiscus ಒಂದು ಕಾದಂಬರಿಯಾಗಿ ಕೊಡುವ ಅನುಭವದ ದೃಷ್ಟಿಯಿಂದ ಅಷ್ಟೇನೂ ಮಹತ್ವದ ಕೃತಿ ಅನಿಸುವುದಿಲ್ಲ. ಆದರೆ ಈ ಕಾದಂಬರಿಯ ಓದು ನಮ್ಮಲ್ಲಿ ಹುಟ್ಟಿಸುವ ಕೆಲವು ಜಿಜ್ಞಾಸೆಗಳು ಮಹತ್ವದ್ದು ಅನಿಸುತ್ತದೆ. ಕೆಲವೊಂದು ನಂಬುಗೆಗಳಿಗೆ, ಭ್ರಮೆಗಳಿಗೆ ಮುಗ್ಧವಾಗಿಯೋ, ಮಾನಸಿಕ ದೌರ್ಬಲ್ಯದಿಂದಲೋ ತನ್ನನ್ನೇ ತಾನು ಮಾರಿಕೊಂಡು ಮುಂದೆ ತನಗೆ ತಾನೇ ಮೋಸ ಮಾಡಿಕೊಳ್ಳುವ ಮನುಷ್ಯನೊಬ್ಬ ಹೇಗೆ ತನ್ನ ಹತ್ತಿರದವರೆಲ್ಲರಿಗೂ ಅಪಾಯಕಾರಿಯಾಗಬಲ್ಲ ಎನ್ನುವ ಒಂದು ಅಂಶದ ಜೊತೆ ಜೊತೆಗೇ ಇನ್ನೂ ಕೆಲವು ಅಂಶಗಳತ್ತ ಈ ಕಾದಂಬರಿ ನಮ್ಮ ಗಮನ ಹರಿಯುವಂತೆ ಮಾಡುವುದರಿಂದ ಇದರ ಓದಿನ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಇದು ಒಬ್ಬ ಹದಿನೈದು ಹದಿನಾರರ ಹುಡುಗಿಯ ಆತ್ಮನಿವೇದಕ ಶೈಲಿಯಲ್ಲಿರುವ ಕಾದಂಬರಿ. ಮೂಲತಃ ನೈಜೀರಿಯಾದ ಆಫ್ರಿಕನ್ ಬುಡಕಟ್ಟಿಗೆ ಸೇರಿದ ಈ ಹುಡುಗಿಯ ತಂದೆ ಮತಾಂತರಗೊಂಡಿರುವ ಕಟ್ಟಾ ಕ್ಯಾಥಲಿಕ್ ಕ್ರಿಶ್ಚಿಯನ್. ಈ ಕಟ್ಟಾ ಧಾರ್ಮಿಕರ ಉಪಟಳಗಳು, ತಿಕ್ಕಲುತನಗಳು ನಮಗೆ ಪರಿಚಯವಾಗುವ ಬಗೆಯೇ ಒಂದು ಚೋದ್ಯ. ವಿಭಿನ್ನ ಮನೋಧರ್ಮದವರಿಗೆ ವಿಭಿನ್ನವಾಗಿ ಕಾಣುವ ಇಂಥವರ ವ್ಯಕ್ತಿತ್ವ ಚಿತ್ರಣದಲ್ಲಿ ಈ ಕಾದಂಬರಿಯ ಕಲಾತ್ಮಕ ನೇಯ್ಗೆ ಮೆಚ್ಚುಗೆ ಹುಟ್ಟಿಸುವಂತಿದೆ. ಭೂತ-ದೈವಗಳನ್ನು ನಂಬುವ ಮನೆತನದಿಂದಲೇ ಬಂದಿರುವ ಈತ ಈಗ ಅವಕ್ಕೆಲ್ಲ ಬೆನ್ನು ಹಾಕಿ ಪಾಶ್ಚಾತ್ಯ ಸಂಸ್ಕೃತಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಿರುವುದು ಮಾತ್ರವಲ್ಲ ತನ್ನ ಹೆಂಡತಿ ಮಕ್ಕಳನ್ನು ಕೂಡ ಅದೇ ಹಾದಿಯಲ್ಲಿ ಕೊಂಡೊಯ್ಯುತ್ತಿದ್ದಾನೆ. ಈತನ ತಂದೆ ಇನ್ನೂ ದೈವ-ಸ್ಪಿರಿಟ್‌ಗಳನ್ನು ನಂಬುವ, ಈ ಮಗನ ದ್ರಷ್ಟಿಯಲ್ಲಿ ಒಬ್ಬ ಹಿದನ್ ಅನಿಸಿಕೊಂಡಿರುವ ಮುದಿಯ. ಈ ಮುದಿಯಾಗಿ ಸಾಯಲು ಬಿದ್ದಿರುವ ಬಡ ತಂದೆಯನ್ನೇ ಆತ ಕ್ರಿಶ್ಚಿಯನ್ನಾಗಿ ಕನ್ವರ್ಟ್ ಆಗಿಲ್ಲ ಎಂಬ ಒಂದೇ ಕಾರಣಕ್ಕೆ ತನ್ನ ಮನೆಯ ಕಾಂಪೌಂಡಿನ ಒಳಗೆ ಕಾಲಿಡಲು ಬಿಡದ ಮಗ ಭಾರೀ ಸಿರಿವಂತ. ಹಲವಾರು ಫ್ಯಾಕ್ಟರಿಗಳ, ಬಂಗಲೆ, ಕಾರುಗಳ ಒಡೆಯ.

ಈ ಸಿರಿವಂತ ತನ್ನ ಮಕ್ಕಳನ್ನು ಅತ್ಯಂತ ಶಿಸ್ತಿನಿಂದ ಮತ್ತು ಕರ್ಮಠ ಧಾರ್ಮಿಕ ರೀತಿನೀತಿಯಲ್ಲಿ ಬೆಳೆಸಿರುತ್ತಾನೆ. ಈತ ನಿಷ್ಠುರವಾದ Puritan concept ಗೆ ತನ್ನನ್ನು ತಾನು surrender ಮಾಡಿಕೊಂಡವನು. ಮಡಿ-ಮೈಲಿಗೆ, ಪಾಪ-ಪುಣ್ಯ, ಸ್ವರ್ಗ-ನರಕ ಇವುಗಳ ಕುರಿತಂತೆ ತನ್ನದೇ ಆದ ಪ್ರಾಮಾಣಿಕವೂ ಅಚಲವೂ ಆದ ನಂಬುಗೆ ಇರುವ ಈತ ತನ್ನ ಮಕ್ಕಳನ್ನೂ ಅದೇ ಹಾದಿಯಲ್ಲಿ ಬೆಳೆಸಿದ್ದಾನೆ. ತನ್ನ ಮಕ್ಕಳು ಕ್ಲಾಸಿನಲ್ಲಿ ಪ್ರತಿ ಬಾರಿ ಮೊದಲಿಗರಾಗಿಯೇ ಬರಬೇಕು, ಸಮಯಕ್ಕೆ ಸರಿಯಾಗಿ ತಾನು ಪೆನ್ಸಿಲಿನಿಂದ ಗುರುತಿಸಿದ ಶೆಡ್ಯೂಲ್ ಪ್ರಕಾರ ಆಯಾ ಕೆಲಸ ಮಾಡಬೇಕು, ಎಲ್ಲಿಯೂ ಯಾವುದೂ ಕೆಲವೇ ಕ್ಷಣಗಳಷ್ಟು ಆಚೀಚೆಯಾಗುವಂತಿಲ್ಲ ಇತ್ಯಾದಿ. ಪ್ರತಿ ತಪ್ಪಿಗೂ ವಿಲಕ್ಷಣವಾದ, ಕ್ರೂರವಾದ ಶಿಕ್ಷೆಗಳನ್ನು ನೀಡುವ, ನಂತರ ಅದಕ್ಕಾಗಿ ತಾನೇ ಪರಿತಪಿಸಿ ಅಳುವ, ದೇವರ ಕೆಲಸಗಳನ್ನೆಲ್ಲ ತಾನೇ ವಹಿಸಿಕೊಂಡವನಂತೆ ವರ್ತಿಸುವ ಈತನನ್ನು ನಾವು ಒಬ್ಬ ಮಾನಸಿಕ ರೋಗಿ ಎಂದು ಸುಲಭವಾಗಿ ತೀರ್ಮಾನಿಸಿ ಬಿಡಬಹುದು. ಅದು ಸರಳ. ಆದರೆ ನಿಮಗೆ ಗೊತ್ತು, ನಮಗೆ ಇಂಥ ಒಬ್ಬ ಅಪ್ಪನೋ ಅಜ್ಜನೋ ಮಾವನೋ ಇದ್ದರೆ, ಅಂಥವರೊಂದಿಗೆ ಬದುಕುವುದು, ದಿನದಿನದ ಕ್ಷಣ ಕ್ಷಣಗಳನ್ನು ಕಳೆಯುವುದು ಅಷ್ಟು ಸರಳವಾಗಿರುವುದಿಲ್ಲ. ಇದನ್ನು ನಾವು ಕೊಂಚ ಸಹಾನುಭೂತಿಯಿಂದ ಕಂಡು ಗ್ರಹಿಸುವ ಅಗತ್ಯವಿದೆ. ಅಪ್ಪನನ್ನು ಅತ್ಯಂತ ಪ್ರೀತಿಸುವ ಮಗಳೇ ಇಲ್ಲಿ ನಿರೂಪಕಿಯಾಗಿರುವುದರ ದೊಡ್ಡ ಲಾಭ ಎಂದರೆ ಇದೇ. ತನ್ನ ಕೃತಿಯ ಎಲ್ಲಾ ಪಾತ್ರಗಳನ್ನೂ ಒಬ್ಬ ಸೃಜನಶೀಲ ಲೇಖಕ ಪ್ರೀತಿ-ಸಹಾನುಭೂತಿಯಿಂದಲೇ ಕಾಣಬೇಕು, ಚಿತ್ರಿಸಬೇಕು ಎಂಬ ಅನನ್ಯ ಪ್ರಜ್ಞೆ ಲೇಖಕಿಗಿರುವುದರಿಂದ ಇಲ್ಲಿ ಸರಳವಾಗಿ ಒಬ್ಬ ಖಳನಾಯಕ ಅನಿಸಿ ಬಿಡಬಹುದಾಗಿದ್ದ ಯುಜೆನೆ ಹಾಗಾಗದೆ ನಮ್ಮನ್ನು ಕಾಡುವುದು ಸಾಧ್ಯವಾಗಿದೆ.

ತೇಜಸ್ವಿಯವರ ‘ಸ್ವರೂಪ’ ಕತೆಯಲ್ಲಿ ಈರಪ್ಪ ಎಂಬ ಹೆಸರಿನ ಒಂದು ಪಾತ್ರದ ಬಗ್ಗೆ ಶ್ರೀನಿವಾಸ ಹೇಮಂತನಿಗೆ ವಿವರಿಸುತ್ತಾನೆ. ಅದೂ ಕಾಡಿನಲ್ಲಿ ಹಂದಿ ಶಿಕಾರಿಗೆ ಅಡಗಿ ಕೂತಲ್ಲಿ ಹೇಮಂತ ಒಂದು ಮರದ ಬುಡಕ್ಕೆ ಉಗಿದ ಸಂದರ್ಭದಲ್ಲಿ. ಅದು ಭೂತದ ಮರವಂತೆ! ಈ ಭೂತ-ದೈವಗಳ ನಂಬಿಕೆಯ ಕುರಿತಂತೆಯೇ ಶ್ರೀನಿವಾಸ ಈ ಈರಪ್ಪನ ಕತೆ ಹೇಳುತ್ತಾನೆ. ಮಹಾ ಜಿಪುಣನೆಂದು ಹೆಸರು ಮಾಡಿದ್ದ ಈ ಈರಪ್ಪ ಭೂತ ಶಿಳ್ಳು ಹೊಡೆಯುತ್ತಿರುವುದರಿಂದ ಎರಡು ಕುರಿಗಳ ಬಲಿ ಕೊಡುವುದು ಅಗತ್ಯ ಎಂದು ಶ್ರೀನಿವಾಸನಿಗೆ ಹಿತವಚನ ಹೇಳಲು ಬಂದಾಗ ಶ್ರೀನಿವಾಸ ಆತನ ಉದ್ದೇಶವನ್ನೇ ಅನುಮಾನದಿಂದ ಕಂಡು ನಗುತ್ತಾನೆ. ಊರವರನ್ನು, ಕೆಲಸಗಾರರನ್ನು ಹೆದರಿಸಲು ಈ ಕ್ಯಾಪಿಟಲಿಸ್ಟ್ ಭೂತಗಳು ಬೇಕಾಗುತ್ತವೆ ಎಂದೂ ಯೋಚಿಸುತ್ತಾನೆ. ಆದರೆ ಊರಿಗೆ ದಾಕು ಹಾಕಿಸಲು ಬಂದವರ ಎದುರು ಅವರ ಬಲಾತ್ಕಾರಕ್ಕೆ ಮಣಿದು ಈರಪ್ಪನೂ ತನ್ನ ಅಂಗಿಯ ತೋಳನ್ನು ಮಡಚಿದಾಗ ಶ್ರೀನಿವಾಸ ದಂಗಾಗುತ್ತಾನೆ.

"ಅವರು ತೋಳಿಗೆ ನಾನಾ ತರದ ಇಪ್ಪತ್ತು ತಾಯಿತಗಳನ್ನು ಕಟ್ಟಿಕೊಂಡಿದ್ದರು. ಆ ದಾರಗಳು ಎಷ್ಟೊಂದು ಹಿಂದೆ ಕಟ್ಟಿದ್ದವೋ ಏನೋ! ಚರ್ಮ ಹರಿದು ಮಾಂಸ ಗೋಚರವಾಗುತ್ತಿತ್ತು ಅನೇಕ ಕಡೆ. ನಾನು ಅದನ್ನು ನೋಡಿದ್ದನ್ನು ಈರಪ್ಪನವರು ನೋಡಲಿಲ್ಲ. ಕ್ರಮೇಣ ಕ್ರಮೇಣ ಆ ಬಗ್ಗೆ ಆಲೋಚಿಸಿದಂತೆ ಅವರ ಚಿತ್ತಸ್ಥಿತಿ ನಿಧಾನಕ್ಕೆ ಅರ್ಥವಾಗುತ್ತಾ ಬಂದಿತು. ಅವರ ನಂಬಿಕೆ ಬಟ್ಟೆಯ ಒಳಗೆ ಅಂತರಾಳದಲ್ಲಿ, ಕುಳಿತಾಗ ಎದ್ದಾಗ ಕೊರೆಯುವ ದಾರದ ನೋವನ್ನು ಸಹಿಸುವ ನಿಷ್ಠೆಯಾದಾಗ ಅದನ್ನು ಹೇಗೆ ಲೇವಡಿ ಮಾಡಲಿ?"

ಸಿಬಿ ಕಟ್ಟಿಸಿಕೊಂಡು ಹಗ್ಗಕ್ಕೆ ಜೋತು ಬೀಳುವವರು, ಬೆತ್ತಲೆ ಸೇವೆ ಮಾಡುವವರು, ಎಂಜಲೆಲೆಯ ಮೇಲೆ ಮಡೆಸ್ನಾನ (ಉರುಳಾಡುವುದು) ಮಾಡುವವರು, ನಗ್ನ ಲೆಗ್‌ಬಾಬಾನ ಎದುರು ಕ್ಯೂ ನಿಂತು ಲಾತ ಹೊಡೆಸಿಕೊಳ್ಳುವವರು - ಇವರನ್ನೆಲ್ಲ ಕಂಡು ತುಟಿಯಂಚಿನಲ್ಲಿ ನಗುವುದು ಟೀವಿ ಎದುರು ಕುಳಿತಾಗಲಷ್ಟೇ ಸರಳ, ಸುಲಭ ಇದ್ದೀತೆ?

ಒಮ್ಮೆ ಬೆಳಗ್ಗಿನ ಮಾಸ್‌ಗೆ ಹೊರಟಾಗಲೇ ಮುಟ್ಟಾಗುವ, ಅದರಿಂದಾಗಿ ವಿಪರೀತ ಹೊಟ್ಟೆನೋವಿಗೆ ತುತ್ತಾಗುವ ಈ ಪುಟ್ಟ ಹುಡುಗಿ ಕಾಂಬಿಲಿಗೆ (ನಿರೂಪಕಿ) ತಾಯಿ ಹಾಲಿನಲ್ಲಿ ಕಾರ್ನ್ ಫ್ಲೇಕ್ಸ್ ತಿನ್ನಲು ಕೊಡುತ್ತಾಳೆ, ತಂದೆ ಅಷ್ಟರಲ್ಲಿ ಬರಲಿಕ್ಕಿಲ್ಲ ಎನ್ನುವ ನಂಬುಗೆಯಿಂದ. ನೋವು ಬೇರೆ ಸಹಿಸಲಿಕ್ಕಾಗುತ್ತಿಲ್ಲ. ಅವಳು ತೆಗೆದುಕೊಳ್ಳಬೇಕಾದ ಮಾತ್ರೆಗಳನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವಂತಿಲ್ಲ ಎಂಬ ಕಾರಣಕ್ಕೆ. ಆದರೆ ಅಷ್ಟರಲ್ಲಿ ಅಪ್ಪ ಬಂದೇ ಬಿಡುತ್ತಾನೆ, ಎಲ್ಲರೂ ಸಿಕ್ಕಿಬೀಳುತ್ತಾರೆ. ಕಾಂಬಿಲಿಗೆ, ತಂಗಿಯನ್ನು ಕಾಪಾಡಲು ಸುಳ್ಳು ಹೇಳಿದ ಅಣ್ಣನಿಗೆ, ತಾಯಿಗೆ ಕೂಡ ಕಟು ಶಿಕ್ಷೆ, ಬೆಲ್ಟ್ ತೆಗೆದು ಬಾರಿಸುತ್ತಾನೆ. ಮಾಸ್‌ಗೆ ಒಂದು ಗಂಟೆ ಮುನ್ನ ಏನೂ ತಿನ್ನಬಾರದು ಎನ್ನುವುದು ಕಟ್ಟಳೆ. ತಿಂದಿದ್ದು ದೈವ ದ್ರೋಹ. ಅನಾನುಕೂಲವಾದರೂ ಎರಡನೆಯ ಮಾಸ್‌ಗೆ ಹೋಗುತ್ತಾರೆ, ಧರಿಸಿದ ಬಟ್ಟೆಯ ಒಳಗೆ ಬಾಸುಂಡೆ ಬಾತು ಉರಿಯುತ್ತಿದ್ದರೂ. ಇನ್ನೊಮ್ಮೆ ಮಗನ ಬೆರಳು ಹೇಗೆ ಜಜ್ಜಿರುತ್ತಾನೆಂದರೆ ಜೀವನಪೂರ್ತಿ ಅದು ಜೀವವಿಲ್ಲದ ಒಂದು ಅಂಗವಾಗಿ ನೇಲುತ್ತ ಉಳಿಯುತ್ತದೆ. ಅವರಿವರು ಕೇಳಿದಾಗ ಹೇಗಾಯ್ತು ಎಂದು ಹೇಳುವುದಕ್ಕೂ ಆಗದ ಹಾಗೆ! ಕ್ಲಾಸಿನಲ್ಲಿ ಫಸ್ಟ್ ಬರಲಿಲ್ಲ ಎನ್ನುವುದು ಈ ಶಿಕ್ಷೆಗೆ ಕಾರಣ. ಮುಂದೆ ಬರೆಯಲು ಬೇಕೆಂಬ ಕಾರಣಕ್ಕೆ ಬಲಗೈಗೆ ವಿನಾಯಿತಿ ಕೊಟ್ಟು ಎಡಗೈಯ ಬೆರಳನ್ನು ಜಜ್ಜಿರುತ್ತಾನೆ ಅಷ್ಟೆ. ಮಗಳನ್ನು ಒಮ್ಮೆ ಬಾತ್ ಟಬ್‌ನಲ್ಲಿ ನಿಲ್ಲಿಸಿ ಕುದಿಯುವ ನೀರು ಸುರಿದು ಎರಡೂ ಕಾಲುಗಳಿಗೆ ವಾರಗಟ್ಟಲೆ ಬ್ಯಾಂಡೇಜ್ ಬಿಗಿಯುವಂತಾಗುತ್ತದೆ. ಇಂಥದ್ದೇ ಶಿಕ್ಷೆ ಮಗನಿಗೂ ಆಗುತ್ತದೆ. ಈತ ತಣ್ಣಗೇ ಪ್ರಶ್ನೆಗಳನ್ನು ಕೇಳುತ್ತ, ತಪ್ಪಿತಸ್ಥ ಮಗುವಿನ ಬಾಯಲ್ಲೇ ತನ್ನ ತಪ್ಪುಗಳನ್ನು ಹೇಳಿಸುತ್ತ ಶಿಕ್ಷಿಸುವ ವಿಧಾನವೇ ನಮ್ಮ ಉಸಿರುಗಟ್ಟಿಸುವಂತಿದೆ. ಆ ಕ್ಷಣಗಳಲ್ಲಿ ಮಗುವು ಅಪ್ಪ ಏನನ್ನು ಮಾಡಲಿದ್ದಾನೊ ಗೊತ್ತಾಗದೆ ಕಂಗಾಲಾಗಿ ಬಟ್ಟೆಯೊಳಗೇ ಉಚ್ಚೆ ಹೊಯ್ದುಕೊಳ್ಳುವ ಸ್ಥಿತಿ ಇದೆಯಲ್ಲ, ನಮ್ಮ ವೈರಿಗೂ ಬೇಡ. ಇನ್ನೊಮ್ಮೆ ಆರು ವಾರಗಳ ಗರ್ಭಿಣಿ ಹೆಂಡತಿಯ ಹೊಟ್ಟೆಗೆ ಮರದ ಸ್ಟೂಲಿನಿಂದ ಹೊಡೆದು ರಕ್ತಪಾತ ನಿಲ್ಲದೆ ಆಕೆ ಸಾಯುವ ಸ್ಥಿತಿ ತಲುಪುತ್ತಾಳೆ. ಮುಂದೆ ಎಂದೋ ಇದನ್ನು ಹೇಳುವಾಗ ಮಗುವನ್ನು ಬದುಕಿಸುವುದು ಸಾಧ್ಯವಾಗಲಿಲ್ಲ ಎಂದು ಕಣ್ಣೀರಿಡುವ ತಾಯಿ ನಮ್ಮೆದುರಿಗಿದ್ದಾಳೆ. ಮಗಳು ಕಾಂಬಿಲಿ ಕೂಡ ಒಮ್ಮೆ ಶೂಸು, ಬೆಲ್ಟಿನ ಪ್ರಹಾರ ತಡೆಯಲಾಗದೆ ಸಾವಿನ ಕದ ತಟ್ಟಿ ಈಚೆ ಬರುತ್ತಾಳೆ, ಈತನ ಶಿಕ್ಷೆಯ ತೀವ್ರತೆಯಿಂದ. ಇದು ಕೇವಲ, ಇವನಿಗೇ ಜನ್ಮಕೊಟ್ಟ ತಂದೆಯ ಜೊತೆ ಒಂದೇ ಸೂರಿನಡಿ ಇದ್ದುದಕ್ಕಾಗಿ, ಆ ತಂದೆಯ ಒಂದು ಚಿತ್ರವನ್ನು ತನ್ನ ಬಳಿ ಇರಿಸಿಕೊಂಡಿದ್ದಕ್ಕಾಗಿ! ತಂದೆ ಕ್ರಿಶ್ಚಿಯನ್ ಆಗಲೊಲ್ಲದ ಮೂರ್ತಿಪೂಜಕ ಅನಾಗರಿಕ ಹಿದನ್ ಅಲ್ಲವೆ! ಅಂಥವರ ನೆರಳಿನಲ್ಲಿರುವುದು ಕೂಡ ಮಹಾಪಾಪ. ಪರಿಶುದ್ಧರಾಗಲು ಶಿಕ್ಷೆ ಹಾದಿ. ಅದನ್ನು ನಿಯೋಜಿಸುವ ಪವಿತ್ರ ಕರ್ತವ್ಯ ಈತನಿಗೆ ವಹಿಸಲಾಗಿದೆ! ಆದರೆ, ಪ್ರತಿ ಶಿಕ್ಷೆಯ ಪ್ರಹಸನದ ನಂತರವೂ ಈತ ಸ್ವತಃ ಅಸುಖಿ. ತನ್ನ ವಿಧಿಗಾಗಿ, ತನ್ನ ಕೃತ್ಯದ ಕ್ರೂರ ಮುಖಕ್ಕಾಗಿ ವ್ಯಥಿಸುವ ಈ ನಿತ್ಯ ದುಃಖಿಗೆ ತಾನು ಮಾಡುತ್ತಿರುವುದು ಏಸುವಿನ ಪ್ರೀತಿಗಾಗಿಯೇ ಎಂಬ ಭ್ರಮೆ!
ಇಷ್ಟೆಲ್ಲ ಇದ್ದೂ ಇದು ಕೇವಲ ಈತನ ಒಂದು ಮುಖ.
ಇನ್ನೊಂದು ಮುಖವಿದೆ. ಅದು, ಕೆಲವು ಚರ್ಚುಗಳು ಈತನ ಹಣಕಾಸಿನ ನೆರವಿನಿಂದಲೇ ನಡೆಯುತ್ತಿರುತ್ತವೆ. ನೂರಾರು ಬಡ ಮಕ್ಕಳಿಗೆ ಶಿಕ್ಷಣ-ವಸತಿ-ಆಹಾರದ ವ್ಯವಸ್ಥೆಯನ್ನು ಈತನೇ ಸ್ವತಃ ಮಾಡಿರುತ್ತಾನೆ. ದೇಶದ ಒಳಿತಿಗಾಗಿ ಪ್ರಭುತ್ವವನ್ನೇ ಎದುರು ಹಾಕಿಕೊಂಡು ಪತ್ರಿಕೆಯೊಂದನ್ನು ನಡೆಸುತ್ತಿರುವ ಈತ ಎಂದೂ ಲಂಚ ನೀಡದೆ, ನೀತಿಯನ್ನು(?) ಮೀರದೆ ಇರುವ ವ್ಯಕ್ತಿ. ಈತನ ಹಳ್ಳಿಯಲ್ಲಿ ಎಲ್ಲರೂ ಈತನನ್ನು ಆರಾಧಿಸುತ್ತಿದ್ದಾರೆ, ಬಡಬಗ್ಗರಿಗೆ ಅಷ್ಟೊಂದು ಸಹಾಯ ಈತ ಮಾಡಿದ್ದಾನೆ. ಆದರೆ ಅನ್ನಕ್ಕಿಲ್ಲದೆ ಸಾಯುತ್ತಿರುವ ಮುದಿ ತಂದೆಗೆ ಕನ್ವರ್ಟ್ ಆದಲ್ಲಿ ಮಾತ್ರ ಸಹಾಯ ಎಂದು ವಿಧಿಸಿರುತ್ತಾನೆ. ಪ್ರಾಮಾಣಿಕವಾಗಿ ಈತ ಧರ್ಮಭೀರುವೇ. ತಾನು ಏನು ಮಾಡುತ್ತಿದ್ದಾನೆಯೋ ಅದನ್ನು ದೇವರ ಪರವಾಗಿಯೇ ಮಾಡುತ್ತಿದ್ದೇನೆಂದೂ, ಯಾರನ್ನು ಶಿಕ್ಷಿಸುತ್ತಿದ್ದೇನೊ ಅವರ ಒಳಿತಿಗಾಗಿಯೇ ಅದನ್ನು ಮಾಡುತ್ತಿದ್ದೇನೆಂದೂ ಪ್ರಾಮಾಣಿಕವಾಗಿಯೇ ನಂಬಿರುವ ವ್ಯಕ್ತಿ ಈತ. ಹಾಗಾಗಿ ಈತನದು ಪಾಪಪ್ರಜ್ಞೆಯಿಂದ ಮುಕ್ತವಾದ ಮನಸ್ಥಿತಿಯೇ. ಆದರೂ ಈತನಿಗೆ ತನ್ನ ಹೆಂಡತಿ, ತನ್ನ ಮಕ್ಕಳು ಎಂಬ ವಿಪರೀತವಾದ ಮೋಹವಿದೆ. ದೂರವಿರುವಾಗ ಈ ಮಕ್ಕಳಿಗಾಗಿ ಹಂಬಲಿಸುತ್ತಾನೆ. ಪ್ರತಿಬಾರಿಯೂ ಶಿಕ್ಷೆಯ ತೀವ್ರತೆ ಅತಿರೇಕಕ್ಕಿಳಿದು ಮಕ್ಕಳನ್ನು ಆಸ್ಪತ್ರೆಗೆ ಸಾಗಿಸುವಾಗಲೂ, ಅವರ ಶುಶ್ರೂಷೆಯಲ್ಲಿಯೂ ಈತ ಅತ್ಯಂತ ಪ್ರೀತಿಯ ಅಪ್ಪನೇ. ಮಕ್ಕಳ ಪ್ರೀತಿ ಕೂಡ ಈತನ ಕ್ರೌರ್ಯದೆದುರು ಕರಗುವುದಕ್ಕೆ ಕಷ್ಟವೆನಿಸುವಷ್ಟು ಒಳ್ಳೆಯ ಅಪ್ಪ! ಆದರೆ ಒಳ್ಳೆಯ ಮಗನಲ್ಲ.

ಈತನ ತಂಗಿ ವೈಚಾರಿಕವಾಗಿ ಮಧ್ಯಮ ನೆಲೆಯಲ್ಲಿರುವಾಕೆ. ತಾನು ಅಣ್ಣನಂತೆಯೇ ಕ್ರಿಶ್ಚಿಯನ್ ಆಗಿದ್ದೂ ತನ್ನ ತಂದೆಯ ನಂಬಿಕೆ, ಶ್ರದ್ಧೆಯನ್ನು ಸಹಿಸುವ, ಅವನನ್ನು ಪ್ರೀತಿಸುವ, ಆತನ ಈ ಕೊನೆಗಾಲದ ಬೇಕು ಬೇಡಗಳಿಗೆ ಒದಗುವ ಈಕೆ ಯೂನಿವರ್ಸಿಟಿಯಲ್ಲಿ ದುಡಿಯುತ್ತಿರುವ ಪ್ರಾಧ್ಯಾಪಕಿ. ಅತ್ತ ಅಣ್ಣನ ಜೊತೆಗೂ ಇತ್ತ ಅಪ್ಪನ ಜೊತೆಗೂ ತನ್ನ ಸಂಬಂಧವನ್ನು ಒಂದು ವಿಲಕ್ಷಣ ಬಿಂದುವಿನಲ್ಲಿ ಸರಿದೂಗಿಸಿಕೊಂಡು ಹೋಗುತ್ತಿರುವ ಈಕೆ ಆಂತರಿಕವಾಗಿಯೂ ಹೊರಗೂ ಮಹಾ ಸಂಘರ್ಷಗಳಲ್ಲಿ ನಲುಗುತ್ತಿರುವಾಕೆ. ಗಂಡನನ್ನು ಅಪಘಾತವೊಂದರಲ್ಲಿ ಕಳೆದುಕೊಂಡು, ಗಂಡನನ್ನು ತಿಂದು ಹಾಕಿದವಳು ಎಂಬ ಆರೋಪಕ್ಕೆ ಸಹಜವಾಗಿಯೇ ತುತ್ತಾಗಿ, ಮೂವರು ಮಕ್ಕಳನ್ನು ಬಡತನ ಮತ್ತು ಹಲವು ಬಗೆಯ ಅನಾನುಕೂಲಗಳ ನಡುವೆಯೇ ನಿಭಾಯಿಸಿಕೊಂಡಿರುವಾಕೆ. ಸ್ವಾಭಿಮಾನಿ, ಹಠವಾದಿ ಮತ್ತು ಅವಕಾಶವಾದಿಯಾಗಲೊಲ್ಲದ ಹೆಂಗಸು. ನಿರೂಪಕಿಯ ವಯಸ್ಸಿನವರೇ ಆದ ಇವಳ ಮಕ್ಕಳು ಅಮಕಾ, ಒಬಿಯೋರಾ ಮತ್ತು ಪುಟ್ಟ ಚಿಮಾ ಬೆಳೆದ ಮುಕ್ತ ವಾತಾವರಣವೇ ನಿರೂಪಕಿ- ಬಾಲಕಿಯ ಮನಸ್ಸಿನ ಆರೋಗ್ಯಪೂರ್ಣ ಅರಳುವಿಕೆಗೆ ನೆರವಾಗುವುದು ಕಾದಂಬರಿಯ ಬೆಳವಣಿಗೆಯ ನಡೆ. ಆ ಚಿತ್ರಗಳೆಲ್ಲ ಆಪ್ತವಾಗಿವೆ, ಅತ್ಯಂತ ಸಹಜವಾಗಿವೆ.

ಇದನ್ನೇ ಸ್ವಲ್ಪ ಬೇರೆ ತರ ನೋಡಿ. ಸ್ವತಃ ನಾವು ಗಂಡಸರು-ಹುಡುಗರು ನಮ್ಮ ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಕೊಡುವ ಸ್ವಾತಂತ್ರ್ಯ ಅಷ್ಟರಲ್ಲೇ ಇದೆ. ಕಾಲಿಗೆ ಗೆಜ್ಜೆ ಕಟ್ಟುವುದಕ್ಕೆ, ಜೀನ್ಸ್-ಟೀ ಶರ್ಟ್ ಹಾಕುವುದಕ್ಕೆ, ಹಣೆಗೆ ಬಿಂದಿ ಇಡದೇ ಇರುವುದಕ್ಕೆ, ಲಿಪ್‌ಸ್ಟಿಕ್ ಹಚ್ಚುವುದಕ್ಕೆ, ಹುಡುಗರೊಂದಿಗೆ ಟೂರು-ಪಿಕ್‌ನಿಕ್‌ಗಳಿಗೆ ಹೋಗುವುದಕ್ಕೆ, ಕೊನೆಗೆ ಮೊಬೈಲ್ ಹಿಡಿದು ಕಿಸಿ ಕಿಸಿ ನಗುತ್ತ ಮುಸಿ ಮುಸಿ ಮಾತನಾಡುವುದಕ್ಕೆ, ಇಪ್ಪತ್ತನಾಲ್ಕು ಗಂಟೆಯೂ ಅದರಲ್ಲಿ ಏನೋ ಒತ್ತುತ್ತ ಇರುವುದಕ್ಕೆ, ಟೀವಿ ನೋಡುವುದಕ್ಕೆ ಒಬ್ಬ ಅಪ್ಪನಾಗಿ, ಅಣ್ಣನಾಗಿ, ತಮ್ಮನಾಗಿಯೂ ಗುಟ್ಟಿನಲ್ಲಿ ನಮ್ಮ ಅಷ್ಟಿಷ್ಟು ವಿರೋಧವಿದೆ! ನಾವು ಕೂಡ ಅವರಿವರಿಗೆ ನಾಲ್ಕು ಗೋಡೆಯ ನಡುವೆ ಅದು ಮಾಡಬಾರದು, ಇದು ಮಾಡಬಾರದು ಎಂದೆಲ್ಲ ಕಟ್ಟುಕಟ್ಟಳೆ ಮಾಡುವವರೇ. ಅಷ್ಟರ ಮಟ್ಟಿಗೆ ಇವತ್ತಿನ ವಿಪರೀತದ ದಿನಗಳಲ್ಲಿ, ಎಗ್ಗಿಲ್ಲದೆ ನಡೆದುಕೊಳ್ಳುವ ಹುಡುಗ-ಹುಡುಗಿಯರಿಗೆ ‘ಕೊಂಚ’ ಲಂಗು-ಲಗಾಮು ಇರಬೇಕೆನ್ನುವ ವಿಚಾರಧಾರೆ ಇರುವವರಿಗೆ ಇದೆಲ್ಲ ಸರಿಯಲ್ಲವೆ ಅನಿಸುತ್ತಿರುತ್ತದೆ. ಆದರೆ ಈ ನಿಯಮಗಳನ್ನು ಯಾರಾದರೂ ತಪ್ಪಿ ನಡೆದುಕೊಂಡಾಗ, ಚಾಲೆಂಜ್ ಮಾಡಿದಾಗ, ವಿರೋಧಿಸಿದಾಗ, ಅಂಥ ಸನ್ನಿವೇಶದಲ್ಲಿ ಆಕೆಯ ತಂದೆ-ಅಣ್ಣ-ಕೆಲವೊಮ್ಮೆ ತಮ್ಮಂದಿರಲ್ಲಿ ಕೂಡ ತಮ್ಮ ಗಂಡು ‘ಇಗೋ’ ಸೈತಾನನಂತೆ ಎದ್ದು ಕೂರುತ್ತದೆ. ದೈಹಿಕ ಶಿಕ್ಷೆ ಕೊಡುವ ಮಟ್ಟಕ್ಕೆ ಎಷ್ಟೋ ನಾಗರಿಕ-ಸಭ್ಯ ಗ್ರಹಸ್ಥರೇ, ಹೊರಗೆ ನೀವು ಹಾಗೆಂದು ಹೇಳಿದರೆ ನಂಬಲಿಕ್ಕಿಲ್ಲ, ಅಂಥವರೇ, ಮುಂದಾಗುತ್ತಾರೆ.

ಮತ್ತೆ, ಖಂಡಿತ ಇವರು ತಮ್ಮ ಪ್ರೀತಿಪಾತ್ರರ ಮೇಲೆಯೇ ತಾವು ಗೈದಂಥ ತಮ್ಮದೇ ಹೇಯ ಕೃತ್ಯಗಳಿಗಾಗಿ ಮರುಗುತ್ತಾರೆ, ಸುಪ್ತವಾಗಿ ಅಳುತ್ತಾರೆ ಮತ್ತು ಕ್ಷಮೆಗೆ ಪ್ರಾರ್ಥಿಸುತ್ತಾರೆ. ಅಷ್ಟೆಲ್ಲ ಮಾಡಿ ತಾವು ಮಾಡುತ್ತಿರುವುದು ಅವರದೇ ಒಳ್ಳೆಯದಕ್ಕಾಗಿ ಎಂದು ಸಮರ್ಥಿಸಿಕೊಂಡು ಮತ್ತೆಯೂ ಅದನ್ನೇ ಮಾಡುತ್ತಾರೆ! ಅದು ಹೇಗಿರುತ್ತದೆಂದರೆ ಮೇಲ್ನೋಟಕ್ಕೆ ಯಾರಿಗಾದರೂ ಹೌದಲ್ಲವೆ ಮತ್ತೆ ಎನ್ನುವಂತಿರುತ್ತದೆ ಅದು. ಇನ್ನೇನು, ಮನೆಯ ಹೆಣ್ಣುಮಕ್ಕಳನ್ನು ಇಚ್ಛಾನುವರ್ತಿ ವರ್ತಿಸಲು ಬಿಟ್ಟುಬಿಡಬೇಕಿತ್ತೆ, ಹಾಗೆ ಮಾಡಿದರೆ ನಾಳೆ ಯಾರ ಬದುಕು ಹಾಳಾಗುವುದು ಎನ್ನುವ ಅರಿವಿದೆಯೆ ನಿಮಗೆ ಎಂದು ಕೇಳಿದರೆ ಅದೇ ನಿಟ್ಟಿನ ಉತ್ತರ ಕಷ್ಟ. ಇವಕ್ಕೆಲ್ಲ ಬೇರೆ ಬೇರೆ ಆಯಾಮಗಳಿವೆ. ಕೊನೆಗೂ ನಾಳೆ ಏನಾಗುತ್ತದೋ ಯಾರಿಗೆ ಗೊತ್ತು! ಸ್ವಲ್ಪ ಸರಳೀಕರಿಸಿ ಹೇಳುವುದಾದರೆ ನಮ್ಮ ಭಜರಂಗದಳ ಪಬ್‌ ಮೇಲೆ ಮಾಡಿದ ದಾಳಿಯನ್ನು ಇದೇ ಧಾಟಿಯಲ್ಲಿ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದು ನಿಮಗೆ ನೆನಪಿರಬಹುದು! ಅನೇಕರಿಗೆ ಈ ದಾಳಿ ಆ ನಿಟ್ಟಿನಿಂದ ಸರಿಯಾಗಿಯೇ ಇದೆ ಅನಿಸಿತ್ತು ಕೂಡ. ಅದಕ್ಕಿರುವ ಬೇರೆ ಬೇರೆ ಆಯಾಮಗಳನ್ನು ಮರೆತುಬಿಟ್ಟು ಹೇಳುತ್ತಿದ್ದೇನೆ ಇದನ್ನು. ಹೆಂಗಸರ ಸಂಘಟನೆಗಳಿಗೆ ಹೆದರಿ ಮಾಧ್ಯಮದವರ ಎದುರು ಮಹಾ ವಿಶಾಲಮನಸ್ಸಿನವರಂತೆ ಸ್ತ್ರೀಸ್ವಾತಂತ್ರ್ಯದ ಬಗ್ಗೆ ಮಾತನಾಡಿದವರೆಲ್ಲ ಮನೆಯ ಹೆಣ್ಣುಮಕ್ಕಳನ್ನು ಹಾಗೆಯೇ ನಡೆಸಿಕೊಂಡಿದ್ದರೆ ಅದು ಬೇರೆ ಮಾತು. ಬಿಡಿ ಅದನ್ನು.

ದೇವರ ತತ್ವವನ್ನು, ಆತನನ್ನು ಮನುಷ್ಯ ಯಾಕೆ ನಿರ್ಮಿಸಿಕೊಂಡ ಎನ್ನುವುದನ್ನು, ಮಾನವೀಯತೆಯ ಕೆಲವು ಸರಳ ಸತ್ಯಗಳನ್ನು ಮರೆತ ಈತ ಒಂದು ಪ್ರಾತಿನಿಧಿಕ ಪಾತ್ರ, ಅಷ್ಟೆ. ಇಂಥವರು ಎಲ್ಲ ಧರ್ಮಗಳಲ್ಲೂ ಇದ್ದಾರೆ. ನೈತಿಕವಾದದ್ದು, ಔದಾರ್ಯಪೂರ್ಣವಾದದ್ದು, ತನ್ನಂತೆಯೇ ಇತರರು ಎಂದು ಭಾವಿಸುವಂಥದ್ದು - ಇವೆಲ್ಲವೂ ದೈವಿಕವಾದದ್ದು. ಆದರ್ಶವಾಗಿ ಅಲ್ಲ, ನಮ್ಮ ದೈನಂದಿನದಲ್ಲಿ ನಮಗೆ ನಡೆಸುವುದು ಸಾಧ್ಯವಾಗುತ್ತದಾದರೆ. ಯಾವುದು ಸರಿ ಯಾವುದು ತಪ್ಪು ಎನ್ನುವ ಬಗ್ಗೆಯಾಗಲೀ, ಪಾಲಿಸಬೇಕಾದ ಆದರ್ಶಗಳ ಕುರಿತಾಗಲೀ ಯಾರಿಗೂ ಯಾರ ಉಪದೇಶವೂ ಅಗತ್ಯವಿಲ್ಲದ ಒಂದು ಯುಗವಿದು. ಭಾರತದಲ್ಲಂತೂ ತೀರಾ ಅಗ್ಗವಾಗಿ ಸಿಗುವುದೆಂದರೆ ಅದೇ, ಮತ್ತು ಅದೊಂದೇ! ಆದರೆ ಒಂದು ಪುಟ್ಟ ಮನೆಯಲ್ಲೇ ಕೆಲವೊಮ್ಮೆ ನಾವು ಅಪರಿಚಿತರಂತೆ, ಒಬ್ಬರನ್ನು ಒಬ್ಬರು ಆಳುವುದಕ್ಕೇ ಬಂದವರಂತೆ, ಸರ್ವಾಧಿಕಾರಿಯಂತೆ ಹಿಂಸೃಕರಾಗಿ ವರ್ತಿಸುತ್ತೇವೆ. ಅದು ಅನಿವಾರ್ಯವಾಗಿರುತ್ತದೆ ಎಂದು ನಂಬುತ್ತೇವೆ ಕೂಡ. ಯುಜೆನೆ ನಮಗೆ ತೀರ ದೂರದವನಲ್ಲ, ನಾವೇ ಅವನಾಗಿರುವ ಸಾಧ್ಯತೆ ತೀರ ದೂರದ್ದಲ್ಲ.

ಈ ಪುಟ್ಟ ಬಾಲಕಿ ತನ್ನ ತಂದೆಯನ್ನು ಎಷ್ಟೊಂದು ಪ್ರೀತಿಸುತ್ತಾಳೆ ಮತ್ತು ಕೊನೆ ತನಕ ಅವನ ತತ್ವ-ಆದರ್ಶಗಳು ಸರಿಯಿರಬಹುದೆಂದು ನಂಬುತ್ತಾಳೆಂದರೆ ಮೊದ ಮೊದಲು ಅಂಥ ಅಚಲವಾದ ತನ್ನದೇ ನಂಬುಗೆಗಳಿಂದ ಹೊರಬರುವುದಕ್ಕೇ ಇವಳಿಗೆ ಕಷ್ಟವಾಗುತ್ತದೆ. ಸದಾ ಒಬ್ಬನ ಆಶ್ರಿತ ವ್ಯಕ್ತಿತ್ವವೇ ಆಗಿ ಉಳಿಯುವುದನ್ನು, ಮಾನಸಿಕ ಪರಾವಲಂಬಿತ್ವವನ್ನು ಬಯಸುವ ದುರ್ಬಲ ವ್ಯಕ್ತಿತ್ವದ ಹಂಬಲು ಇದು. ಒಂದು ಹಂತದಲ್ಲಿ ಈ ಕರ್ಮಠ ಅಪ್ಪನ ಇನ್ನೊಂದು ತುದಿಯಂತೆ ಕಾಣುವ ಅತ್ತೆಯ ಉಡಾಫೆ ಮತ್ತು ಸ್ವಚ್ಛಂದ ಈ ಮುಗ್ಧ ಹುಡುಗಿಯ ಪರಿಸ್ಥಿತಿಯ ಸರಿಯಾದ ಅರಿವಿಲ್ಲದೇ ಇನ್ನೂ ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿಸುತ್ತದೇನೋ ಎಂಬ ಆತಂಕ ಓದುಗನನ್ನೇ ಕಾಡಿದರೆ ಅಚ್ಚರಿಯಿಲ್ಲ. ಆದರೆ ಹಾಗೇನೂ ಆಗುವುದಿಲ್ಲ ಅಥವಾ ಆದರೂ ಅದರ ಒಟ್ಟಾರೆ ಪರಿಣಾಮ ಒಳ್ಳೆಯದೇ ಆಗುತ್ತದೆ. ಕಿಷ್ಕಿಂಧೆಯಂಥ ಅತ್ತೆಯ ಮನೆಯಲ್ಲಿ, ಯಾವೊಂದು ಅನುಕೂಲಗಳೂ ಇಲ್ಲದೆ, ತನ್ನದೇ ವಯಸ್ಸಿನ ಕಸಿನ್ ಅಮಾಕಳ ಚುಚ್ಚುಮಾತು, ಅಣಕಗಳ ಮಧ್ಯೆ ಓಡಿ ಹೋಗುವ ಅನಿಸುವ ಹಾಗಿರುತ್ತದೆ ಮೊದಮೊದಲು. ಆದರೆ ಅತ್ತೆ ಇಫೆಕಾಳ ಉಡಾಫೆ, ಧೈರ್ಯ, ಫಾದರ್ ಅಮಾದಿಯ ಮೆದುಮಾತಿನ ಮೋಹಕತೆ ಎಲ್ಲವೂ ನಿಧನಿಧಾನವಾಗಿ ಇವಳ ಜಗತ್ತನ್ನು ವಿಸ್ತರಿಸಿದಂತೆ, ದೇವರು-ಮಾನವೀಯತೆ, ಪಾವಿತ್ರ್ಯ- ಪ್ರಕೃತಿ, ಆದರ್ಶ-ಸ್ವಭಾವಗಳ ವೈರುಧ್ಯದ ವಿರಾಟ್ ದರ್ಶನ ಇವಳಿಗೆ ಸಿಗುತ್ತ ಹೋದಂತೆ, ಸಪ್ಪೆಯೆನಿಸುವ ಸಿರಿತನದ ಎದುರು ಬಡತನದ ಜೀವಂತಿಕೆಯೇ ಇವಳಿಗೆ ಆಪ್ಯಾಯಮಾನವಾಗುತ್ತ ಹೋದಂತೆ, ತನ್ನ ಅಪ್ಪ ನೀಡುವ ಅಮಾನವೀಯ ಶಿಕ್ಷೆಯ ತೀವ್ರತೆ ಮತ್ತು ಅದರ ಒಟ್ಟಾರೆ ಅಸಹಜತೆಯ ಅರಿವು ಹುಟ್ಟಿ ಆ ಅಪ್ಪನ ಬಗ್ಗೆ ಸ್ವಲ್ಪವಾದರೂ ವಿಮರ್ಶಕ ದೃಷ್ಟಿಯ ನೋಟ ಬೀರುವುದು ಸಾಧ್ಯವಾಗುತ್ತದೆ. ಇದಕ್ಕಾಗಿಯೇ ಇಲ್ಲಿ ಬಂದಿರುವ ಯೂನಿವರ್ಸಿಟಿ ಕ್ಯಾಂಪಸ್ಸಿನ ಸಾಮಾನ್ಯ ವರ್ಗದ ದೈನಂದಿನ ಜೀವನದ ನವಿರಾದ ನಿರೂಪಣೆ ಮನಸೆಳೆಯುತ್ತದೆ. ಕಾಂಬಿಲಿಯ ಬದುಕಿನಲ್ಲಿ ಅವಳು ಇಲ್ಲಿನ ಯೂನಿವರ್ಸಿಟಿ ಕ್ಯಾಂಪಸ್ಸಿನಲ್ಲಿ ಕಳೆದ ಕೆಲವೇ ದಿನಗಳಿಗೆ ಇರುವ ಮಹತ್ವ ಬಹಳ ಹೆಚ್ಚು. ಅವಳು ಮುಂದೆಯೂ ಅಲ್ಲಿಗೆ, ತನ್ನ ನೆನಪುಗಳಿಗೆ ಸಂಬಂಧಿಸಿದ ಯಾರೂ ಅಲ್ಲಿ ಇಲ್ಲದಿದ್ದಾಗಲೂ ಭೇಟಿ ಕೊಡುವುದನ್ನು ಮುಂದುವರಿಸುವುದೇ ನಮಗಿದನ್ನು ತಿಳಿಸುತ್ತದೆ. ಮುಖ್ಯವಾಗಿ ಅಲ್ಲಿನ ಚಿಕ್ಕಪುಟ್ಟ ಮಕ್ಕಳ ಬದುಕಿನ ಸಂಭ್ರಮವೇ ಕಾಂಬಿಲಿಯ ಮನಸ್ಥಿತಿಗೆ ಒಂದು ಚಿಕಿತ್ಸೆಯಂತೆ ಕೆಲಸ ಮಾಡುತ್ತದೆ.

ಸರಿ ಸುಮಾರು ಇವಳದೇ ವಯೋಮಾನದ ಈಕೆಯ ಅಣ್ಣ ಜಾಜಾಗೆ ಅದು ಹೇಗೆ ಸಾಧ್ಯವಾಗುತ್ತದೆ ಎನ್ನುವ ಕುರಿತಾಗಲೀ, ಇಂಥವನ ಜೊತೆ ತಾಯಿ ಅದು ಹೇಗೆ ಅಷ್ಟು ಕಾಲ ದಾಂಪತ್ಯ ನಡೆಸಿದಳೆನ್ನುವ ಕುರಿತಾಗಲೀ, ಅದೇ ಮೂಲದಿಂದ ಬಂದ ತನ್ನ ಅತ್ತೆಗೆ ಹೇಗೆ ಈ ಅಣ್ಣನ ನಿರ್ಬಂಧಗಳ ಜಗತ್ತಿನಿಂದ ಪಾರಾಗಿ ಸ್ವತಂತ್ರ ವ್ಯಕ್ತಿತ್ವವೊಂದನ್ನು ಹೊಂದುವುದು ಸಾಧ್ಯವಾಯಿತೆನ್ನುವ ಕುರಿತಾಗಲೀ, ನಿಜಕ್ಕೂ ಈ ಕರ್ಮಠ ಧರ್ಮನಿಷ್ಠನಿಗೆ ತನ್ನ ವ್ಯಕ್ತಿತ್ವದೊಳಗಿನವೇ ಆದ ದ್ವಂದ್ವಗಳಿರಲಿಲ್ಲವೇ ಎನ್ನುವ ಕುರಿತಾಗಲೀ ಕಾದಂಬರಿ ಕಣ್ಣಲ್ಲಿ ಕಣ್ಣಿಟ್ಟು ಕಾಣುವುದಿಲ್ಲ. ಇದು ಕೆಲಮಟ್ಟಿಗೆ ಕಾದಂಬರಿಯ ತಂತ್ರದ ಮಿತಿ. ಆದರೆ ಅಂಥ ನಿಟ್ಟಿನಲ್ಲಿ ನಾವು ಯೋಚಿಸುವಂತೆ ಮಾಡುವಲ್ಲಿ ಕಾದಂಬರಿಯ ಮೌನ ನಮ್ಮನ್ನು ಪ್ರೇರೇಪಿಸಬಹುದು! ಕಾದಂಬರಿಯ ಕೊನೆಯ ಭಾಗದ ಅಚಾನಕವಾದ ತಿರುವುಗಳು ಬಹುಷಃ ಅಂಥ ಉದ್ದೇಶವನ್ನೇ ಹೊಂದಿರುವಂತೆ ಕಾಣುತ್ತವೆ.

ನಿರೂಪಕಿ ಕಾಂಬಿಲಿ ಮತ್ತು ಇವಳ ಕಸಿನ್ ಅಮಾಕಾರ ಸಂಬಂಧ ನಮ್ಮ ಗಮನ ಸೆಳೆಯುವ ಇನ್ನೊಂದು ವಿದ್ಯಮಾನ. ಒಬ್ಬ ವ್ಯಕ್ತಿಯನ್ನು ನಾವು ನಮ್ಮದೇ ಪೂರ್ವಾಗ್ರಹಗಳಲ್ಲಿ ಕಟ್ಟಿಕೊಂಡು ಆತನೊಂದಿಗೆ ವರ್ತಿಸುತ್ತೇವೆ. ಬ್ರಾಹ್ಮಣರು ಹೀಗೆ, ಕೊಂಕಣರು ಹೀಗೆ, ಮುಸ್ಲಿಮರು ಹಾಗೆಯೇ, ಹೆಂಗಸರೇ ಹಾಗೆ ಎಂಬ ಪೂರ್ವಾಗ್ರಹಗಳೂ ಈ ತರದವೇ. ಅಂಥ ಪೂರ್ವಗ್ರಹೀತ ವ್ಯಕ್ತಿತ್ವಕ್ಕೂ ಆತ ನಿಜಕ್ಕೂ ಏನಾಗಿದ್ದಾನೋ ಅದಕ್ಕೂ ಇರುವ ವ್ಯತ್ಯಸವನ್ನು ಎಷ್ಟೋ ಬಾರಿ ನಮ್ಮ ಕಣ್ಣು - ಮನಸ್ಸು ಗ್ರಹಿಸಲು ನಿರಾಕರಿಸುತ್ತದೆ. ನಮ್ಮ ಗ್ರಹಿಕೆಗಳ ಮೇಲಿನ ಮೋಹವಿದು. ಇಲ್ಲಿ ಅಮಾಕಾ ಅದನ್ನು ಮೀರುವುದು ಗಮನಾರ್ಹ ಬೆಳವಣಿಗೆಯೇ. ಕಡು ಬಡತನ, ಶ್ರಮದ ಬದುಕು ಮತ್ತು ವಯೋಸಹಜವಾದ ಆಸೆ ಆಕಾಂಕ್ಷೆಗಳೆಲ್ಲ ಇರುವ ಪ್ರಬುದ್ಧ ಅಮಾಕಾಗೆ ಮೊದಲು ಈ ಆಗರ್ಭ ಸಿರಿವಂತೆ, ಮೊದ್ದುಮಣಿ, ಸುಂದರಿ ಕಾಂಬಿಲಿ ಒಬ್ಬ ಪ್ರತಿಸ್ಪರ್ಧಿಯಂತೆ, ಶ್ರೀಮಂತ ವೈರಿಯಂತೆ ಕಾಣುತ್ತಾಳೆ. ತುಸು ಮಟ್ಟಿಗೆ ಎಲ್ಲ ಸಿರಿವಂತರು ಬಡವರಿಗೆ ಶೋಷಕರಂತೆ, ಕೆಟ್ಟವರಂತೆ ಕಾಣುತ್ತಾರಲ್ಲ, ಹಾಗೆಯೇ ಅಮಾಕಗೂ ಕಾಣುತ್ತಾಳೆ ಎಂಬುದು ನಿಜ. ಆದರೆ ಕಾಂಬಿಲಿ ಮುಗ್ಧೆ ಮತ್ತು ಅಮಾಕಾಳ ಮಾನದಂಡಗಳಲ್ಲಿ ಪೆದ್ದು ಎಂಬುದು ನಿಜವಾದರೂ ಅಹಂಕಾರಿಯಲ್ಲ, ಸಿರಿವಂತಿಕೆಯ ಹಮ್ಮು-ಬಿಮ್ಮು ಉಳ್ಳವಳಲ್ಲ ಎನ್ನುವುದು ಅಮಾಕಾಗೂ ಅರ್ಥವಾಗುವುದಕ್ಕೆ ಕೆಲ ಸಮಯ ಹಿಡಿಯುತ್ತದೆ. ಅಷ್ಟು ಕಾಲ ಅಮಾಕಾಳ ನಿಂದೆ, ಅಪಹಾಸ್ಯ, ಚುಚ್ಚುಮಾತು ಕಾಂಬಿಲಿಯ ಕಣ್ಣೀರಿಗೆ ಕಾರಣವಾಗುತ್ತ ಓದುಗನನ್ನು ಕೂಡ ಹಿಂಸಿಸುತ್ತದೆ. ಅತ್ತ ಹೋದರೆ ಅಪ್ಪನ ಹಿಂಸೆ, ಜೈಲುವಾಸದಂಥ ಬದುಕು, ಇತ್ತ ಬಂದರೆ ಈ ಅಮಾಕಾಳ ಚುಚ್ಚು ಮಾತುಗಳು ಕೊಡುವ ಹಿಂಸೆ. ಇದು, ಈ ಪರಿಸ್ಥಿತಿ ತಿಳಿಯಾಗುತ್ತದೆ ಮತ್ತು ಅಮಾಕಾಗೂ, ಕಾಂಬಿಲಿಗೂ ಬದುಕು ತನ್ನ ನಿಜವರ್ಣದಲ್ಲಿ ತೆರೆದುಕೊಂಡು ಇಬ್ಬರೂ ಸಹಜವಾಗುತ್ತಾರೆ, ಆತ್ಮೀಯರಾಗುತ್ತಾರೆ.

ರಾಜಕೀಯ ಸಂಚುಗಳು, ಭ್ರಷ್ಟ ಆಡಳಿತ ಮತ್ತು ಕ್ರಾಂತಿಯ ಹುನ್ನಾರಗಳ ನಡುವೆಯೇ ಮನೆಯೊಳಗಿನ ಈ ಧಾರ್ಮಿಕ ಕರ್ಮಠತನದ ಪರಿಣಾಮಗಳು ನಮಗೆ ಕಾಣಿಸುತ್ತವೆ. ಸಿರಿತನ, ಶಿಸ್ತು, ಧರ್ಮ ಇವು ನಿರ್ಮಿಸಿದ ಒಂದು ಜೈಲಿನಿಂದ ಹೊರಬಿದ್ದಿದ್ದೇ ಕ್ರಮೇಣ ಹೊಸ ಹೊಸ ಮಾನವೀಯ ಸಂಬಂಧಗಳ ಬೆಸುಗೆಯಾಗಿ, ಪ್ರೇಮದ ಹೊಸ ಸಾಧ್ಯತೆಗಳಾಗಿ, ಮನುಷ್ಯ ಸಂಬಂಧಗಳ ಕೊಂಡಿಗಳು ಬೆಸೆಯುತ್ತಾ, ಹಾಗೆ ಬೆಸೆದಂತೆಲ್ಲ ಮನಸ್ಸು ಸ್ವತಂತ್ರಗೊಂಡು ಅರಳುತ್ತಾ ಹೋಗುತ್ತದೆ. ಆದರೆ ಅದೇ ಬದುಕಲ್ಲ ಎನ್ನುವ ಒಂದು ಅರಿವಿದೆ ಇಲ್ಲಿ. ಹಾಗಾಗಿಯೇ, ಬೆನ್ನಲ್ಲೇ ಬರುವ ವಿಯೋಗ, ಕೊಲೆ, ದೇಶಾಂತರ, ಜೈಲು ಮುಂತಾದ ವಿಘಟನೆಯ ಸಾಲೂ ಇಲ್ಲಿದೆ. ಈ ಎಲ್ಲದರ ಮೂಲಕ ಬದುಕು ಹಾಯುತ್ತಾ ಪರಿಪಕ್ವಗೊಳ್ಳುವ ಕಥಾನಕವಿದು, ಒಂದು ಅರ್ಥದಲ್ಲಿ. ಆರಂಭದಲ್ಲೇ ಹೇಳಿದಂತೆ ಕಾದಂಬರಿಯಾಗಿ ಅಷ್ಟೇನೂ ತೃಪ್ತಿ ನೀಡದಿದ್ದರೂ ಗುಂಗು ಹಿಡಿಸಬಲ್ಲ ಆತ್ಮೀಯ ಸ್ಪರ್ಶವೊಂದು ಇಲ್ಲಿದ್ದೇ ಇದೆ. ಹಾಗೆಯೇ ಇಲ್ಲಿ ಕಂಡು ಬರುವ, ಬೆಚ್ಚಿ ಬೀಳಿಸುವ ವೈರುಧ್ಯಗಳಿರುವ ಕೆಲವೊಂದು ಮನಸ್ಸುಗಳು ನಮ್ಮನ್ನು ಕೆಲಕಾಲವಾದರೂ ಆವರಿಸಿ ಚಿಂತನೆಗೆ ಕಾರಣವಾಗುತ್ತವೆ.

ಕಾದಂಬರಿಯ ಒಂದು ತಾಂತ್ರಿಕ ಮಿತಿಯ ಕುರಿತು ಇನ್ನೂ ಸ್ವಲ್ಪ ಕೊರೆಯುವುದಿದೆ, with your permission!

ಇಲ್ಲಿ ಒಂದು ಪಾತ್ರ ಆತ್ಮನಿವೇದಕ ನಿಟ್ಟಿನಿಂದ ಇಡೀ ವಿದ್ಯಮಾನವನ್ನು ಗಮನಿಸಿ ನಿರೂಪಿಸುವುದರಿಂದ ಮತ್ತು ಈ ನಿರೂಪಕ ಪಾತ್ರ ಹದಿನೈದು-ಹದಿನಾರರ ವಯಸ್ಸಿನ, ವಿಲಕ್ಷಣ ವಾತಾವರಣವೊಂದರಲ್ಲಿ ಬೆಳೆದ ಮುಗ್ಧ ಹುಡುಗಿ ಕೂಡ ಆಗಿರುವುದರಿಂದ ಇಲ್ಲಿ ನಾವು ಮುಖಾಮುಖಿಯಾಗುವ ಹೆಚ್ಚಿನ ಪಾತ್ರಗಳು ಸ್ಕೆಚಿ ಎನ್ನುವಂತಿವೆ. ಇದಕ್ಕೆ ಇಲ್ಲಿ ನಿರೂಪಿಸಲ್ಪಡುತ್ತಿರುವ ವ್ಯಕ್ತಿತ್ವಗಳ ಸಂಕೀರ್ಣ ಮಾನಸಿಕ ಸ್ಥಿತಿ ಕೂಡ ಒಂದು ಕಾರಣ. ಹಾಗಾಗಿ, ವ್ಯಕ್ತಿತ್ವದ ಅಪೂರ್ಣ ಚಿತ್ರವೊಂದನ್ನು ಮಾತ್ರ ಭಾಷೆಯಲ್ಲಿ ಕಟ್ಟಿಕೊಡುವ ಇಲ್ಲಿನ ನಿರೂಪಣೆ ಅದರ ಪರಿಪೂರ್ಣತೆಗೆ ಅಗತ್ಯವಿರುವ ಇನ್ನುಳಿದ ವಿವರಗಳಿಗೆ ಕೆಲವು ಹೊಳಹುಗಳನ್ನಷ್ಟೇ ನೀಡುವ ತಂತ್ರವನ್ನು ನೆಚ್ಚುತ್ತದೆ. ಕಥಾನಕದ ಮತ್ತು ಇಲ್ಲಿನ ಪಾತ್ರಗಳ ವ್ಯಕ್ತಿತ್ವದಲ್ಲೇ ಅಂತರ್ಗತವಾಗಿರುವ ವೈರುಧ್ಯಗಳನ್ನು ಗಮನಿಸುವಾಗ ಈ ತಂತ್ರ ಅಷ್ಟಾಗಿ ಫಲಿಸದ ಅನುಭವವಾಗುತ್ತದೆ. ಆಲನಹಳ್ಳಿಯವರ ಕಾಡು ಕಾದಂಬರಿಯ ಕಿಟ್ಟಿಯಾಗಲೀ, ಘಟಶ್ರಾದ್ಧದ ಪುಟ್ಟ ನಾಣಿಯಾಗಲೀ ಬದುಕುತ್ತಿರುವ ಬದುಕಿನಲ್ಲಿ, ಅವು ಓದುಗನಿಗೆ ಮುಖಾಮುಖಿಯಾಗಿಸುವ ಪಾತ್ರಪ್ರಪಂಚದಲ್ಲಿ ಕೆಲವು ಗಂಡು-ಹೆಣ್ಣು ಸಂಬಂಧಗಳ ಒಂದು ನೇಯ್ಗೆ ಒಡ್ಡುವ ಸಂಘರ್ಷಗಳೇ ಮುಖ್ಯವಾಗಿವೆ. ಅಲ್ಲಿ ಅದಕ್ಕೆ ತಕ್ಕ ಕೆಲವು ಸಾಂಸಾರಿಕ - ಭಾವನಾತ್ಮಕ ಒಪ್ಪಂದಗಳಿವೆ. ಅಲ್ಲದೆ ಈ ಕಾದಂಬರಿಯಲ್ಲಿ ನಾವು ಕಾಣುವ ಸನ್ನಿವೇಶಗಳಲ್ಲಿ ಮತ್ತು ಪಾತ್ರಗಳಲ್ಲಿ ಇರುವ ಸಂಕೀರ್ಣ ವೈರುಧ್ಯಗಳು ಕೂಡ ಅಲ್ಲಿ ಇಲ್ಲ. ಯಾಕೆಂದರೆ, ಕಾಡು ಮತ್ತು ಘಟಶ್ರಾದ್ಧ - ಎರಡೂ ಕೃತಿಗಳ ಮೂಲ ಎಳೆ ಲೈಂಗಿಕ ವಿದ್ಯಮಾನದ ಸುತ್ತ, ಗಂಡು-ಹೆಣ್ಣು ಸಂಬಂಧದ ಸುತ್ತ ಇರುತ್ತ, ಬಾಲ್ಯದ ಮುಗ್ಧ ಗ್ರಹಿಕೆ ನಮಗೆ ಒಡ್ಡುವ ಅಮೂರ್ತ ಚಿತ್ರಗಳು ಓದುಗನ ಕಲ್ಪನೆಗೆ ಬೇಕಾಗುವಷ್ಟು ವಿವರಗಳನ್ನು ಒದಗಿಸುವುದು ಅಲ್ಲಿ ಸುಲಭವಾಗುತ್ತದೆ. ಆದರೆ ಇಲ್ಲಿ ಅಂಥ ಅನುಕೂಲವೇನಿಲ್ಲ ಮತ್ತು ಇಲ್ಲಿನ ವಿಲಕ್ಷಣ ಸನ್ನಿವೇಶಗಳಾಗಲೀ ವೈರುಧ್ಯ ಪ್ರಧಾನ ಮಾನಸಿಕ ಪಾತಳಿಯ ಪಾತ್ರಗಳಾಗಲೀ ತೀರ ಸಹಜವಾದ ಬಗೆಯವೋ, ನಾವು ದಿನನಿತ್ಯ ನೋಡುವ ಬಗೆಯವೋ - ಅಲ್ಲ. (ಕಾದಂಬರಿ ಕೆಲವೊಂದು ಸಂಘರ್ಷಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಣುತ್ತಿಲ್ಲ ಎಂದು ಬರೆದ ಪಾರಾ ಗಮನಿಸಿ) ಹಾಗಾಗಿ ಇಲ್ಲಿ ಲೇಖಕಿ ಎದುರಿಸುತ್ತಿರುವ ಸವಾಲು ಹೆಚ್ಚು ಕ್ಲಿಷ್ಟಕರವಾದದ್ದು ಮತ್ತು ತಾನು ಆಯ್ದುಕೊಳ್ಳುತ್ತಿರುವ ಆತ್ಮನಿರೂಪಣೆಯ ತಂತ್ರ ಒಡ್ಡುವ ಸವಾಲುಗಳು ಅದರ ಕೆಲವು ಅನುಕೂಲತೆಗಳೊಂದಿಗೇ, ಒಟ್ಟಾರೆಯಾಗಿ ಕೃತಿ ನೀಡಬೇಕಾದ ಅನುಭವಕ್ಕೆ ಪೂರಕವೇ ಅಥವಾ ಮಾರಕವೇ ಎಂದು ನಿರ್ಧರಿಸುವಲ್ಲಿ ಇರುವ ಸವಾಲು ಎರಡೂ ದೊಡ್ಡವು. ಈ ವಿಚಾರ ನಮ್ಮ ಮನಸ್ಸಿನಲ್ಲಿದ್ದರೆ ಒಳ್ಳೆಯದು ಅನಿಸುತ್ತದೆ.

ಈ ಇತಿಮಿತಿಗಳಲ್ಲಿ ಚಿತ್ರಿತವಾದ ಕಾದಂಬರಿಗೆ ತಾಂತ್ರಿಕವಾದ ಇನ್ನೂ ಕೆಲವು ತೊಡಕುಗಳಿವೆ. ಕತೆಯನ್ನು ಗಮನಿಸಿದರೆ, ಒಂದು ವ್ಯಕ್ತಿತ್ವವನ್ನು ಕಟ್ಟಿಕೊಡುವ ಬೇರೆ ಬೇರೆ ಹಂತಗಳು ಎಷ್ಟು ಸೂಕ್ಷ್ಮ ಮತ್ತು ಮುಖ್ಯ ಎನ್ನುವುದು ನಮ್ಮ ಅರಿವಿಗೆ ಬರುತ್ತದೆ. ಒಂದೇ ವ್ಯಕ್ತಿತ್ವದ ವೈರುಧ್ಯಗಳನ್ನು ಹೇಳುವಾಗ ಅವುಗಳಲ್ಲಿ ಯಾವುದರ ಚಿತ್ರವನ್ನು ನೀವು ಮೊದಲು ಕಟ್ಟಿ ಕೊಡುತ್ತೀರಿ ಎನ್ನುವುದು ಬಹಳ ಮುಖ್ಯವಾಗುತ್ತದೆ. ಇಲ್ಲಿ ಒಮ್ಮೆ ಮಾಡಿಕೊಂಡ ಆಯ್ಕೆಯಿಂದ ಹಿಂದಕ್ಕೆ ಬರುವ ಮಾತೇ ಇಲ್ಲದಿರುತ್ತ ವೈರುಧ್ಯವನ್ನು ಸಂದರ್ಭ-ಸನ್ನಿವೇಶಗಳ ಕಾಣ್ಕೆಯಾಗಿಸದೆ ವ್ಯಕ್ತಿತ್ವದ್ದೇ ಭಾಗವನ್ನಾಗಿಸಿ ಆ ವ್ಯಕ್ತಿಯನ್ನು ಕಟ್ಟಿಕೊಡುವುದು ಅಷ್ಟು ಸುಲಭವಲ್ಲ.

ಈ ಎಲ್ಲ ಕಾರಣಗಳಿಂದ ಇರಬಹುದೇನೊ, ಇಲ್ಲಿನ ಪಾತ್ರಗಳು ರಕ್ತ ಮಾಂಸ ಸಹಿತ ಜೀವಂತ ವ್ಯಕ್ತಿಗಳಾಗಿ ನಮ್ಮನ್ನು ಕಾಡುವುದಕ್ಕೆ ಇನ್ನೂ ಹೆಚ್ಚಿನ, ಸುಪುಷ್ಟವಾದ ಚಿತ್ರಣ ಇದ್ದಿದ್ದರೆ ಚೆನ್ನಿತ್ತು ಎಂದು ನಮ್ಮ ಮನಸ್ಸು ಬಯಸುತ್ತದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, December 16, 2009

ಮನುಷ್ಯ ಸಂಬಂಧಗಳ ಯುದ್ಧ ಮತ್ತು ಶಾಂತಿ

ಚಿಮಾಮಾಂಡಾ ಎನ್‌ಗೋಝಿ ಅದಿಚ್ಯೆಯ ಕಾದಂಬರಿ Half of a Yellow Sun ಬಗ್ಗೆ.

ಕೆಲವೊಮ್ಮೆ ಇದೆಲ್ಲ ವಿಚಿತ್ರವಾಗಿ ಕಾಣಿಸುತ್ತದೆ. ಹೆಚ್ಚು ಕಡಿಮೆ ಅರವತ್ತರಿಂದ ತೊಂಭತ್ತು ವರ್ಷ ಬದುಕಬಹುದಾದ ಮನುಷ್ಯ ನಲವತ್ತಕ್ಕೆಲ್ಲ ನಾನು-ನನ್ನದು ಎಂಬ ವ್ಯಾಮೋಹದಿಂದ ತಪ್ಪಿಸಿಕೊಳ್ಳಲಾಗದ ಹಂತಕ್ಕೆ ತಲುಪುತ್ತಾನೆ. ನನ್ನ ಹೆಂಡತಿ, ನನ್ನ ಮಕ್ಕಳು, ನನ್ನ ಮನೆ, ನನ್ನ ಕಾರು ಇತ್ಯಾದಿ. ಮೋಹ ಎನ್ನುತ್ತೇವೆ ಇದನ್ನು. ಅಷ್ಟು ಉನ್ನತ ಸ್ಥಾನವಿಲ್ಲ ಇದಕ್ಕೆ. ಶಾಶ್ವತವಾದ ನೆಮ್ಮದಿಗಾಗಿ ನಿಮ್ಮದನ್ನೆಲ್ಲವನ್ನೂ ದಾನ ಮಾಡಿ, ಇಲ್ಲಿ ಬಂದು ತಣ್ಣಗೆ ಕೂತು ಧ್ಯಾನ ಮಾಡಿ ಎಂದು ದೊಡ್ಡ ದೊಡ್ಡ ಬೋರ್ಡು ಹಾಕಿಕೊಂಡು ಕುಳಿತ ಕಾವಿಧಾರಿಗಳು, ಸಂತರು ಇಂಥವರನ್ನು ಗೊಂದಲಕ್ಕೆ ತಳ್ಳುತ್ತಿರುತ್ತಾರೆ. ಮತ್ತೆ ಅಂಥವರ ಹಿಂದೆ ಹೋದವರನ್ನು ಬಿಡಿ, ಅವರಿಗೆ ಶಾಶ್ವತ ಶಾಂತಿಯಿರಲಿ!

ಇನ್ನೊಂದು ನೆಲೆಯಲ್ಲಿ ನನ್ನ ದೇಶ, ನನ್ನ ಭಾಷೆ, ನನ್ನ ಜನ, ನನ್ನ ಜಾತಿ-ಧರ್ಮದವರು ಇತ್ಯಾದಿ ಎಲ್ಲ ಇದೆ. ದೇಶ ಪ್ರೇಮ, ಅಭಿಮಾನ ಎಂದೆಲ್ಲ ಕರೆಯಿಸಿಕೊಳ್ಳುವ ಇದಕ್ಕೆ ಸ್ವಲ್ಪ ಉನ್ನತ ಸ್ಥಾನಮಾನ ಇದೆ.

ಆದರೆ ಹೊರಗೆ ನಿಂತು ನೋಡಿದರೆ ಸರಳವಾಗಿ ನಮ್ಮ ದೇಶ, ಭಾಷೆ, ಜಾತಿ-ಧರ್ಮ ಎಲ್ಲವೂ ಒಂದು ಆಕಸ್ಮಿಕವಷ್ಟೇ. ಯಾವುದನ್ನೂ ನಾವು ಹುಟ್ಟುವ ಮೊದಲೇ application ಹಾಕಿ, allot ಮಾಡಿಸಿಕೊಂಡಿದ್ದಲ್ಲ. ಆದರೂ ಇಂಥದ್ದಕ್ಕೆಲ್ಲ ಜನ್ಮ ಜನ್ಮಾಂತರದ ಪೂರ್ವಾರ್ಜಿತ ಪಾಪಕರ್ಮಗಳೂ, ಪುಣ್ಯಕಾರ್ಯಗಳೂ ಕಾರಣವಾಗಿದ್ದು ಪಿತ್ರಾರ್ಜಿತ ಸಂಪನ್ಮೂಲಗಳ ಕಾರ್ಯ-ಕಾರಣ ಸಂಬಂಧ ಇದ್ದೇ ಇದೆ ಎನ್ನುವ ವಾದವಿದೆ, ಇರಲಿ.

ಚಿತೆಯ ಮೇಲಿಟ್ಟ ಜಡ ಶರೀರ ಬೆಂಕಿ ಹಚ್ಚಿದ್ದೇ ಕೊಬ್ಬೆಲ್ಲ ಉರಿದು ಅಸಹ್ಯ ತಲೆ ಬುರುಡೆ, ಅಸ್ಥಿಗಳೆಲ್ಲ ಕಾಣಿಸತೊಡಗುತ್ತದೆ. ಅದಕ್ಕೆ ನರೇಂದ್ರ ಪೈ ಎಂಬ identity ಕೂಡ ಇರುವುದಿಲ್ಲ. ಮತ್ತೆ ಇನ್ನೂ ಸ್ವಲ್ಪ ಹೊತ್ತಿನಲ್ಲಿ ಅದೂ ಬೂದಿಯಾಗಿ ಮಳೆಗೆ ಕೊಚ್ಚೆಯಾಗಿ ಅಲ್ಲೆಲ್ಲ ದೊಡ್ಡ-ಸಣ್ಣ ಹುಳು ಹುಪ್ಪಟೆಗಳು ಹರಿದಾಡಿ ಒಳ್ಳೆಯ ಗೊಬ್ಬರವಾಗಿ ಫಲವತ್ತಾದ ಸಸಿ-ಹುಲ್ಲು ಹುಟ್ಟುವುದು ಸಾಧ್ಯವಿದೆ, ಹೆಚ್ಚೆಂದರೆ. ಜನ್ಮಾಂತರದ ಕನಸು, ನಮ್ಮ ಸಮಾಧಾನಕ್ಕೆ ಬೇಕಿದ್ದರೆ ಕಟ್ಟಿಕೊಳ್ಳಬಹುದು ಎನ್ನುವುದು ನಿಜ.

ಕೋಮು-ಭಾಷೆ-ದೇಶಗಳ ನಡುವಿನ ದ್ವೇಷ, ಯುದ್ಧ ಮತ್ತು ಹಿಂಸೆಯ ಹಿನ್ನೆಲೆಯಲ್ಲಿ ಮನುಷ್ಯ ಸಂಬಂಧಗಳು, ಪ್ರೀತಿ, ಕಾಮ, ಹಣ-ಆಸ್ತಿ, ಹಸಿವು, ಸಣ್ಣತನ, ಔದಾರ್ಯ ಮತ್ತು ಮನುಷ್ಯತನದ ಮಾಗುವಿಕೆಯನ್ನು ಕುರಿತು ಯೋಚಿಸುವಂತೆ ಮಾಡಿದ್ದು ಈ ಕಾದಂಬರಿ, Half of a Yellow Sun.

ಇಡೀ ಕಾದಂಬರಿಯ ನಿರೂಪಣಾ ತಂತ್ರ, ಈ ಕಥಾನಕದ ಹಿಂದಿರುವ ವಾಸ್ತವದ ಕುರಿತು ಕಾದಂಬರಿಕಾರ್ತಿ ನಡೆಸಿರುವ ಸಂಶೋಧನೆ, ಈ ಕಾದಂಬರಿಯ ಭಾಷೆ ಮತ್ತು ಶೈಲಿಗಳ ಸೊಗಸು - ಪ್ರತಿಯೊಂದನ್ನು ಹೊಗಳಬಹುದು. ಹಲವಾರು ಪ್ರಶಸ್ತಿ, ಬಹುಮಾನಗಳನ್ನು ಗಿಟ್ಟಿಸಿಕೊಂಡು ಸರ್ವಮಾನ್ಯವಾಗಿ ಹೊಗಳಿಸಿಕೊಂಡಿರುವ ಈ ಕಾದಂಬರಿಗೆ ಅದೆಲ್ಲದರ ಹಂಗೇನೂ ಇಲ್ಲ. ಹಾಗಾಗಿ ಅದ್ಯಾವುದೂ ಅಷ್ಟು ಮುಖ್ಯವಲ್ಲ. ಯುದ್ಧ, ಅದರ ಕ್ರೂರ ಮುಖ, ಹಿಂಸೆ, ಅತ್ಯಾಚಾರ, ಅಧಿಕಾರಶಾಹಿ- ಪೋಲೀಸ್ ಮತ್ತು ಸೈನ್ಯದ ಭ್ರಷ್ಟಾಚಾರ ಮತ್ತು ಅದು ಸೃಷ್ಟಿಸುವ ಹಸಿವು, ವಿಕಾರ, ರೋಗ ಮತ್ತು ಬರದ ವಿನಾಶಕಾರಿ ಚಿತ್ರಣದ ನೈಜತೆಯ ಬಗ್ಗೆ ಕೂಡ ಈ ಕಾದಂಬರಿಯ ನೆವದಲ್ಲಿ ಕೊರೆಯಬಹುದು. ಅದೆಲ್ಲ ಬೇಡ.

ಇಡೀ ಕಾದಂಬರಿಯಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಇನ್ನೂ ಮುವ್ವತ್ತರ ಆಸುಪಾಸಿನಲ್ಲಿರುವಾಗಲೇ ಈಕೆ ಸೃಷ್ಟಿಸಿದ ಈ ವಿಶಿಷ್ಟ ಕಾದಂಬರಿಯ ಮಾನವೀಯ ಅಂಶಗಳು. ಈಕೆಯಲ್ಲಿ ಸಶಕ್ತವಾಗಿರುವ ಸೂಕ್ಷ್ಮವಾದ ಬದುಕಿನ ಕುರಿತ ಗ್ರಹಿಕೆಗಳು. ಭಾಷೆಯಲ್ಲಿ ಬದುಕನ್ನು ಅದರ ದೈನಂದಿನಗಳ ಮೂಲಕ ಹಿಡಿದುಕೊಡುವ ಕಲೆಗಾರಿಕೆಯನ್ನು, ಜೀವನ ಎಂಬ ಗಾಥೆಯನ್ನು ವಿವರಗಳಲ್ಲಿ ಕಟ್ಟುವ ಕಲೆಗಾರಿಕೆಯನ್ನು, ಪಾತ್ರಗಳೆಂಬ ಸಜೀವವನ್ನು ಹೌದು ಗೊಳಿಸುವ ಕಲೆಗಾರಿಕೆಯನ್ನು ಕಂಡು ಎಂಥವರೂ ಬೆರಗಾಗಬೇಕು. ಬದುಕಿನಿಂದ ಒಬ್ಬ ಲೇಖಕ ತನ್ನ ಕೃತಿಯನ್ನು ಕಟ್ಟುವ ಹಂತದಲ್ಲಿ ಆತ ಒಬ್ಬ ಕುಸುರಿ ಕಾರ್ಮಿಕ ಎಂದಿಟ್ಟುಕೊಂಡರೆ, ಅದರ ವೃತ್ತಿಪರ ನೈಪುಣ್ಯವೇನೆಂಬುದರ ಬಗ್ಗೆ ಇದನ್ನೆಲ್ಲ ಗಮನಿಸುತ್ತ ಹೋದರೆ, ಈ ಕಾದಂಬರಿಕಾರ್ತಿ ತನ್ನ ಉದ್ದೇಶಕ್ಕೆ ಆರಿಸಿಕೊಳ್ಳುವ ಘಟನೆಗಳು, ವಿವರಗಳು, ಸಂಗತಿಗಳು ಮತ್ತು ಅವುಗಳನ್ನು ಸಂಯೋಜಿಸಿರುವ ರೀತಿ ಅಧ್ಯಯನಕ್ಕೆ ಯೋಗ್ಯವಾಗಿವೆ.

ಒಬ್ಬ ಸಾಮಾನ್ಯ ಓದುಗನಾಗಿ ಈ ಕಾದಂಬರಿಯ ಓದು ನಮ್ಮಲ್ಲಿ ಹುಟ್ಟಿಸುವ ತಲ್ಲಣಗಳನ್ನು ಇಲ್ಲಿ ಹಂಚಿಕೊಳ್ಳಬಹುದು.

ಈ ಕಾದಂಬರಿಯ ಹಲವು ಪ್ರಧಾನ ಪಾತ್ರಗಳಲ್ಲಿ ಒಂದಾದ ಉಗ್ವು ಬುಡಕಟ್ಟಿಗೆ ಸೇರಿದವನು. ಶಿಷ್ಟ ಸುಶಿಕ್ಷಿತ ಕರಿಯ ಜನಾಂಗ ಕೂಡಾ ಇವರನ್ನು ಎರಡನೆಯ ದರ್ಜೆಯ ಪ್ರಜೆಗಳಂತೆ ನಡೆಸಿಕೊಂಡಿತ್ತು. ಇವರು ನಾಗರೀಕತೆಯಿಂದ ಒಂದು ನಿರ್ದಿಷ್ಟ ಅಂತರದಲ್ಲೇ ತಮ್ಮ ಜೀವನ ನಡೆಸುತ್ತ ಬಂದವರು. ಇವನು ಯೂನಿವರ್ಸಿಟಿ ಪ್ರೊಫೆಸರ್ ಒಡೆನಿಗ್ಬು ಮನೆಗೆ ಮನೆಗೆಲಸದವನಾಗಿ ಬಂದ ಹೊಸತರಲ್ಲಿ ಅನುಭವಿಸುವ, ಅವನಿಗೇ ವಿಶಿಷ್ಟವಾದ ಹಲವು ತಲ್ಲಣಗಳಲ್ಲೇ ನಮಗೆ ಈ ಕಾದಂಬರಿಯ ಸೂಕ್ಷ್ಮ ಗ್ರಹಿಕೆಗಳು, ಮಾನವ ಪ್ರೀತಿ, ಜೀವನ ಪ್ರೀತಿಯ ಪರಿಚಯವಾಗುತ್ತದೆ.

ತನ್ನನ್ನು ಸಾಹ್ ಸಾಹ್ ಎಂದು ಕರೆಯುವ ಅಗತ್ಯವಿಲ್ಲ, ಹೆಸರಿನಿಂದಲೇ ಕರಿ ಎನ್ನುವ ಮಾಸ್ಟರ್ ಸಹಬಾಳ್ವೆ-ಸಮಾನತೆಗಳ ಆದರ್ಶವನ್ನಿರಿಸಿಕೊಂಡಿರುವಾತ. ಉಗ್ವುವನ್ನು My Good Man ಎಂದು ಬಾಯ್ತುಂಬಿ ಕರೆಯುವ ಈ ಒಡೆನಿಗ್ಬು ಸರಳ ಮನಸ್ಸಿನ ಕ್ರಾಂತಿಕಾರಿ ಮನೋಧರ್ಮದ ಯುವಕ. ಆಗಿನ್ನೂ ಅವಿವಾಹಿತನಾಗಿರುವ ಈತನ ಮನೆಯಲ್ಲಿ ಪ್ರತಿಸಂಜೆ ಯೂನಿವರ್ಸಿಟಿಯ ಕೆಲವು ಪ್ರಾಧ್ಯಾಪಕರು ಸೇರಿ ಪಟ್ಟಾಂಗ ಹೊಡೆಯುತ್ತಾರೆ. ಇದು ಒಂದು ಬದುಕಿನ ಜೀವಂತಿಕೆಯ ಪ್ರತೀಕವಾಗಿ ಇವರ ಬದುಕು ಏನೆಲ್ಲ ಏರು-ಪೇರುಗಳನ್ನು ಕಂಡು ಮುಗ್ಗರಿಸಿ ಚಿಂದಿ ಚದುರಿದರೂ ಆಗಾಗ ನೆನಪಿಸಿಕೊಳ್ಳುವ ವಿದ್ಯಮಾನವಾಗಿಯೇ ಯುಳಿಯುವುದನ್ನು ಗಮನಿಸಬಹುದು. ಚರ್ಚೆ, ವಾದ, ತಮಷೆ, ಖಾನಾ-ಪಾನ ಎಲ್ಲವೂ ಸೇರಿದ ಚಿಂತನೆ, ಕವಿತೆ, ರಾಜಕೀಯ ಎಲ್ಲವೂ ಸೇರಿದ ಮಾತುಕತೆ ನಡೆಯುವ ಈ ವಾತಾವರಣವನ್ನು ಇದು ಸೃಷ್ಟಿಸಿದೆ. ಇಂಥಲ್ಲಿ ಮಾತ್ರ ಉಗ್ವುನಂಥವರು ನಿಧಾನವಾಗಿಯಾದರೂ ಚಿಗುರುವುದು, ಅರಳುವುದು ಸಾಧ್ಯವಿದೆ.

ಈ ಆರಂಭದ ದಿನಗಳಲ್ಲಿ ಉಗ್ವು ಒಮ್ಮೆ ತನ್ನ ಮಾಸ್ಟರನ ಸಾಕ್ಸ್‌ಗೂ ಇಸ್ತ್ರಿ ಹಾಕುವ ಉಮೇದಿಯಲ್ಲಿ ಅದನ್ನು ಸುಟ್ಟು ಹಾಕುತ್ತಾನೆ. ಇದು ಅವನಲ್ಲಿ ವಿಪರೀತ ಉದ್ವೇಗ, ಆತಂಕ, ಭಯ ಎಲ್ಲವನ್ನೂ ಹುಟ್ಟಿಸಿ ತನ್ನ ಕೆಲಸವೇ ಹೋಗುತ್ತದೆ, ಸಾಹ್ ತನ್ನನ್ನು ಎಂದಿಗೂ ಕ್ಷಮಿಸಲಿಕ್ಕಿಲ್ಲ ಎಂದೆಲ್ಲ ಹೆದರುತ್ತಾನೆ. ಕಾಲೇಜಿಗೆ ಹೋಗುವ ಯಜಮಾನನ ಗಡಿಬಿಡಿ ಉಗ್ವುಗೆ ತನ್ನ ಮೇಲಿನ ಸಿಟ್ಟೋ, ತಿರಸ್ಕಾರವೊ ಅರ್ಥವಾಗದೆ ತೊಳಲಾಡುತ್ತಾನೆ. ಕೊನೆಗೆ ಅವನಿಗೆ ಅರಿಗ್ಬೆ ಎಂಬ ಸೊಪ್ಪಿನ ನೆನಪಾಗುತ್ತದೆ. ಸಿಟ್ಟಿನಿಂದ ವ್ಯಗ್ರಗೊಂಡ ಮನುಷ್ಯನ ಹೃದಯವನ್ನು ಮೃದುಗೊಳಿಸುವ ‘ಶಕ್ತಿ’ ಇರುವ ಆ ಸೊಪ್ಪಿಗಾಗಿ ಹಿತ್ತಲು, ಹಾದಿ ಬೀದಿ ಎಲ್ಲ ಸುತ್ತಿ ಕೊನೆಗೂ ಅದನ್ನು ತಂದು ಅಕ್ಕಿ ತೊಳೆದು ಅದರ ಪಳದಿ ಮಾಡಿಟ್ಟು ಮನಸ್ಸಿನಲ್ಲೇ ಬೇಡಿಕೊಳ್ಳುತ್ತಾನೆ. ಆ ಸಾಕ್ಸ್‌ಗಾಗಿ ಎಕ್ಸ್‌ಟ್ರಾ ದುಡಿಯುತ್ತೇನೆ, ಅದರ ಬೆಲೆ ಕೊಡುತ್ತೇನೆ, ಹೊಸ ಜೋಡಿ ಸಾಕ್ಸ್ ತಂದುಕೊಡುತ್ತೇನೆ, ಕೆಲಸದಿಂದ ಮಾತ್ರ ತೆಗೆಯಬೇಡಿ ಸಾಹ್! ಆ ಕ್ಷಣಕ್ಕೆ ಉಗ್ವುಗೆ ಅದೇ ಮುಖ್ಯ, ಅದೇ ಜೀವನ!

ಸಾಕ್ಸ್ ಸುಟ್ಟು ಕೆಲಸವನ್ನೂ ಮಾಸ್ಟರನ ಔದಾರ್ಯವನ್ನೂ ಕಳೆದುಕೊಳ್ಳುವ ವಿಚಿತ್ರ ತಲ್ಲಣಕ್ಕೆ ಉಗ್ವು ಒಳಗಾದಂತೆಯೇ ಇಲ್ಲಿನ ಪ್ರತಿ ಪಾತ್ರವೂ ಒಂದಲ್ಲ ಒಂದು ಘಟ್ಟದಲ್ಲಿ ಸಂಬಂಧಗಳ ತಿಕ್ಕಾಟಕ್ಕೆ, ಯಾವುದನ್ನು ಕಳೆದುಕೊಳ್ಳಬಾರದೆಂದು ಅಂತರ್ಯ ಹೇಳುತ್ತಿರುತ್ತದೋ ಅದನ್ನು ಕಳೆದುಕೊಳ್ಳುವ ಭೀತಿಗೆ, ಆತಂಕಕ್ಕೆ, ಅನಿವಾರ್ಯಕ್ಕೆ, ಒಳಗಾಗುತ್ತಾರೆ. ತಮ್ಮ ತಮ್ಮ ಸಂಬಂಧಗಳು ನಿಂತ ನೆಲೆಯನ್ನೇ ಪ್ರಶ್ನಿಸುವ ಘಟನೆಗಳು, ಆಕಸ್ಮಿಕಗಳು ಅವರ ಬದುಕನ್ನು, ಬದುಕುವ ಶಕ್ತಿಯನ್ನು ಸವಾಲಿಗೊಡ್ಡುತ್ತವೆ. ಕಾಲಾಂತರದಲ್ಲಿ ನಗಣ್ಯವಾಗಬಹುದಾದ ಈ ಪ್ರಶ್ನೆಗಳು, ವಿದ್ಯಮಾನಗಳು ಆ ಕ್ಷಣಕ್ಕೆ ಅಷ್ಟೇ ತುರ್ತಿನವು, ಮಹತ್ವದವು. ಅದು ಅವಳಿ ಸಹೋದರಿಯರಾದ ಓಲಾನಾ-ಕೈನೀನೆಯರ ನಡುವಿನ ಲವ್-ಹೇಟ್ ಸಂಬಂಧವಿರಬಹುದು, ಓಲಾನಾ-ಒಡೆನಿಗ್ಬು ನಡುವಿನ ಪ್ರೇಮ-ಪ್ರೀತಿ-ಪ್ರಣಯದ ಸಂಬಂಧವಿರಬಹುದು, ಓಲಾನಾ ಮತ್ತು ಒಡೆನಿಗ್ಬು ತಾಯಿಯ ನಡುವಿನ ಶೀತಲ-ಪ್ರತ್ಯಕ್ಷ ಸಮರದ ಸಂಬಂಧವಿರಬಹುದು, ರಿಚರ್ಡ್-ಒಡೆನಿಗ್ಬು ನಡುವಿನ ಪತಿ-ಪತ್ನಿ ಔರ್ ವೋ ವಿದ್ಯಮಾನ ಹುಟ್ಟಿಸುವ ಸಂಬಂಧವೇ ಇರಬಹುದು, ರಿಚರ್ಡ್-ಕೈನೀನೆ ನಡುವಿನ ವಿಲಕ್ಷಣ ಪ್ರೇಮದ ಸಂಬಂಧವಿರಬಹುದು, ರಿಚರ್ಡ್-ಸೂಸಾನ್ ಸಂಬಂಧವಿರಬಹುದು, ಓಲಾನಾ- ‘ಫ್ಲ್ಯಾಶ್ ಬ್ಯಾಕ್‌ನ ಹೀರೋ’ ಮಹಮ್ಮದ್‌ರ ಸಂಬಂಧ ಇರಬಹುದು. ಈ ಎಲ್ಲ ಸಂಬಂಧಗಳು ಮುಖ್ಯವಾದ ಸಂಬಂಧಗಳೇ, ಆಳವಾದ ಸಂವೇದನೆಗಳಿರುವ ಸಂಬಂಧಗಳೇ ಎನ್ನುವುದು ಬಹಳ ಮುಖ್ಯ. ಆದರೆ ಇವು ಮುಖಾಮುಖಿಯಾಗುವ ಅಹಿತಕರ, ಅಸ್ಪಷ್ಟ ಮತ್ತು ಅಯಾಚಿತ ಘಟನೆಗಳು ಕೂಡ ಅಷ್ಟೇ ಮಹತ್ವದ್ದಾಗಿರುತ್ತ ಅವನ್ನು ಲೆಟ್ ಗೋ ಎಂದು ಬಿಟ್ಟುಬಿಡುವಂತಿಲ್ಲದಿರುವುದೂ ಮುಖ್ಯವೇ. ಆದರೆ ಈ ಅಗ್ನಿಕುಂಡವನ್ನು ಸಂಬಂಧದ ನಿರಂತರತೆ, ಸಂವೇದನೆಗಳ ಸೂಕ್ಷ್ಮ ಆಳ ಹಾಯುವುದು ಬಹಳ ಬಹಳ ಮುಖ್ಯವಾದದ್ದು. ಹಾಗಾಗಿಯೇ ಈ ತಲ್ಲಣಗಳು ಸೂಕ್ಷ್ಮವಾಗಿ ನಮ್ಮನ್ನು ಕಾಡುತ್ತವೆ, ನಮ್ಮಲ್ಲೂ ತಲ್ಲಣಗಳನ್ನುಂಟು ಮಾಡುತ್ತವೆ ಮತ್ತು ಕಾದಂಬರಿಯ ಹರಹು ಸಾಕಷ್ಟು ಸುದೀರ್ಘ ಕಾಲಮಾನವನ್ನು ವ್ಯಾಪಿಸಿರುವುದರಿಂದಲೂ ಕಾಲಾಂತರದಲ್ಲಿ ಈ ತಲ್ಲಣಗಳನ್ನು ಬದುಕು ನಿರ್ವಹಿಸುವ ಒಂದು ವಿಶಿಷ್ಟ ಚಿತ್ರ ನಮಗೆ ದೊರೆತು ಬದುಕಿನ ಹೊಸ ಸತ್ಯಗಳನ್ನು, ಒಳನೋಟಗಳನ್ನು ಕಾಣಿಸಿ ನಮ್ಮ ಬದುಕನ್ನೂ ಸಂಪನ್ನಗೊಳಿಸುತ್ತವೆ. ಸಾಹಿತ್ಯ ಬಹುಷಃ ಮಾಡಬಹುದಾದ ಅತ್ಯುನ್ನತ ಉಪಕಾರ ಇದೇ.

ಸಾಹಿತ್ಯ ಕೃತಿಯಾಗಿ ಮುಖ್ಯವಾಗುವುದು ಈ ಕಾದಂಬರಿ ಈ ತಲ್ಲಣಗಳನ್ನು ಬದುಕಿನ ಪಲ್ಲಟಗಳೊಂದಿಗೇ ಸಮಾನಾಂತರವಾಗಿ ಹಿಡಿದಿಡುವ ಬಗೆಯಿಂದ. ಅವಳಿಗಳಾದ ಓಲಾನಾ ಮತ್ತು ಕೈನೀನೆಯರ ನಡುವೆ ಈರ್ಷ್ಯೆ, ಜಿದ್ದು, ಪ್ರೀತಿ ಎಲ್ಲವೂ ಇದೆ. ಈ ಸಂಬಂಧ ತನ್ನ ಆಂತರ್ಯದಲ್ಲಿ ಅತ್ಯಂತ ಆಳವಾದ ಸಂವೇದನೆಗಳುಳ್ಳದ್ದೇ. ತೀರ ನಾಜೂಕಿನದ್ದಾದ ಈ ಸಹೋದರಿಯರ ಸಂಬಂಧಕ್ಕೆ ಎರಡು ಸ್ತರದ ಸತ್ಯಗಳಿವೆ. ಒಂದು ಬಿಟ್ಟಿರಲಾರದ ಎರಡು ದೇಹ, ಒಂದೇ ಪ್ರಾಣ ಎನ್ನುವಷ್ಟು ಆಳವಾದ (ಅವರು ಅವಳಿಗಳಿರುವುದು ಇಲ್ಲಿ ಪ್ರತಿಮೆಯಾಗಿಬಿಡುತ್ತದೆ!) ಸಂಬಂಧ ಇರುವುದರ ಸತ್ಯ. ಇನ್ನೊಂದು ಬಾಹ್ಯವಾದ, ಪ್ರೀತಿ-ದ್ವೇಷ ಎರಡೂ ಇರುವ ಬದುಕಿನ ಸವಾಲು ಗಳ ಎದುರು ನಿಲ್ಲುವ ಬಹಳ ತೊಡಕಿನ ಸತ್ಯ. ಈ ಎರಡು ಸತ್ಯಗಳ ಎರಡು ಸ್ತರದ ಸಂಬಂಧ ಕಾದಂಬರಿಯ ಉದ್ದಕ್ಕೂ ಆತಂಕ ಮತ್ತು ಕೌತುಕ ಹುಟ್ಟಿಸುತ್ತ ಸಾಗುತ್ತದೆ. ಓಲಾನಾ ಸುಂದರಿ. ಎಂಥವರನ್ನೂ ಸೆಳೆಯಬಲ್ಲ ಸೌಂದರ್ಯ ಮತ್ತು ಸ್ನಿಗ್ಧ ಮುಖಭಾವ ಅವಳದ್ದು. ವಿದ್ಯೆ, ನಾಜೂಕುತನ ಎಲ್ಲವೂ ಇರುವ ಅವಳು ಮೇಲ್ನೋಟಕ್ಕೆ ಕೈನೀನೆಯಿಂದ ಎಲ್ಲದರಲ್ಲೂ ಒಂದಿಂಚು ಮುಂದೆಯೇ ಇರುವಂತೆ ಕಾಣುವುದು ಸಹಜ ಮತ್ತು ಸತ್ಯ. ಇದು ಕೈನೀನೆಗೂ ಗೊತ್ತು. ಕೈನೀನೆ ಕಪ್ಪು, ಚಪ್ಪಟೆ ಎದೆಯವಳು, ಎತ್ತರ ಮತ್ತು ಗಂಡಸಿನ ಹಾಗೆ. ಆಕರ್ಷಣೆ ಅವಳ ಬಗ್ಗೆಯೂ ಇದೆ, ಸುತ್ತಲಿನ ಜನರಲ್ಲಿ. ಆದರೆ ಅದು ಓಲಾನಾ ಉಪಸ್ಥಿತಿಯಲ್ಲಿ ಮಂಕಾಗಿದೆಯೇನೊ. ಚುಂಬಕವಲ್ಲ ಅದು. ಹಾಗಾಗಿ ಇವರ ಶ್ರೀಮಂತ ಅಪ್ಪ ತನಗೆ ಬೇಕಾದ ಕಾಂಟ್ರಾಕ್ಟುಗಳಿಗೆ ಸರಕಾರೀ ಯಂತ್ರದ, ಮಂತ್ರಿವರ್ಯರ ಮರ್ಜಿ ಹಿಡಿಯುವುದಕ್ಕೆ ಮಗಳ ಸೌಂದರ್ಯವನ್ನು ಕೂಡ ಬಳಸಿಕೊಳ್ಳುವ ಸಂದರ್ಭ, ಅನಿವಾರ್ಯತೆ ಒದಗಿದಾಗಲೆಲ್ಲ ಓಲಾನಾ ಕೊಂಚ ಉದಾರಿಯಾಗಿರಬೇಕೆಂದು ನಿರೀಕ್ಷಿಸುತ್ತಾನೆ, ಕೈನೀನೆಯಲ್ಲ. ಆಗ ಕೈನೀನೆಗೆ ಹೊಟ್ಟೆಯುರಿಯುತ್ತದೆ, ಓಲಾನಾಗೆ ಮೈಯುರಿಯುತ್ತದೆ. ಆಸ್ತಿಯ ಮಾತು ಬಂದಾಗಲೂ ಇದೇ ರೀತಿ. ಹಾಗಾಗಿಯೇ ಓಲಾನಾ ಆಯ್ದುಕೊಂಡಿದ್ದು ಆರ್ಥಿಕವಾಗಿ ಫಲವತ್ತಾದ ಮನುಷ್ಯನಲ್ಲದ ‘ರೆವಲ್ಯೂಷನರಿ ಆದರ್ಶವಾದಿ’ ಪ್ರೊಫೆಸರ್ ಒಡೆನಿಗ್ಬುವನ್ನು. ಕೈನೀನೆ ಕಟುವಾದ ನೇರಮಾತಿನವಳು. ಆದರೆ ಸತ್ಯವನ್ನು ನುಡಿಯುತ್ತಾಳೆ. ಕೃತ್ರಿಮ-ನಾಟಕ ಅವಳ ದಾರಿಯಲ್ಲಿ ಸಾಧ್ಯವಿಲ್ಲ. ಅದು ಅವಳ ದೊಡ್ಡತನ ಮತ್ತು ದಡ್ಡತನ ಕೂಡಾ. ದುರಂತವೂ ಆಗುವುದು ವಿಧಿಯ ವ್ಯಂಗ್ಯ.

ಒಂದು ಮಡಿವಂತಿಕೆಯ ಸಾಂಪ್ರದಾಯಿಕ ನೆಲೆಯಲ್ಲಿ ಹೆಂಡತಿ, ಪ್ರಿಯತಮೆ ಇರುತ್ತ ಬೇರೊಂದು ಹೆಣ್ಣಿನೊಂದಿಗೆ ಮಲಗುವುದು ನಿಷ್ಠೆಯನ್ನು ಮುರಿದಂತೆ ಎಂದು ತಿಳಿಯುವಲ್ಲಿ ಓಲಾನಾ ಮತ್ತು ಕೈನೀನೆ ನಡುವೆ ಇರುವ ಸಮಾನ ಮನಸ್ಕತೆ ಮತ್ತು ವೈರುಧ್ಯ ಕುತೂಹಲಕರ. ‘ಅವನ ಕಪಾಳಕ್ಕೊಂದು ಬಿಗಿದು ಕೇಳು, ಆಗ ಸತ್ಯ ಬರುತ್ತದೆ’ ಎನ್ನುವ ಕೈನೀನೆ ಅಚ್ಚರಿ ಹುಟ್ಟಿಸುವಾಗಲೇ, ಓಲಾನಾಳಂಥವಳಿಗೆ ಮಾತ್ರ ಅನ್ವಯಿಸುವಂತೆ ಕಾಣುವ ಅವಳ ಈ ನಿಲುವು ಸ್ವಂತಕ್ಕೆ ಅಷ್ಟು ನಿಷ್ಠುರವಾಗಿರುವಂತೆ ಕಾಣುವುದಿಲ್ಲ. ಇಲ್ಲಿ ಅವಳಿಗೆ ಪ್ರೇಮ-ಪ್ರೀತಿ-ಕಾಮದ ವಿಚಾರಗಳಲ್ಲಿ ತನ್ನ ಅವಳಿ ಓಲಾನಾ ಬಗ್ಗೆ ಇರುವ ಗೌರವವೇ ಕಾಣುತ್ತಿದೆ. ಒಂದೇ ಒಂದು ಸಲ ಮತ್ತು ದೈಹಿಕವನ್ನು ಮೀರಿದ್ದು ಅದರಲ್ಲೇನೂ ಇರಲಿಲ್ಲ ಎನ್ನುವ ಸಂಗತಿಗಳೇ ಮುಖ್ಯವಾಗುವುದನ್ನು ಗಮನಿಸಿದರೆ ಓಲಾನಾ ಮತ್ತು ಒಡೆನಿಗ್ಬು ಇಬ್ಬರೂ ಮಾಡಿದ ‘ಹಾದರ’ವನ್ನು ಕ್ಷಮಿಸಬಲ್ಲವರು. ಆದರೆ ಕೈನೀನೆಯ ನಿಲುವು ಇದನ್ನೆಲ್ಲ ಮೀರಿದ್ದು. ತನ್ನವನಾದ ಮತ್ತು ಇನ್ನೂ ತನಗೆ ಬೇಕಾದವನೇ ಆಗಿರುವ ರಿಚರ್ಡ್ ಯಾರ ಜೊತೆ ಮಲಗಿದ್ದರೂ ಸಹಿಸಬಲ್ಲ ಮತ್ತು ಕ್ಷಮಿಸಬಲ್ಲ ಕೈನೀನೆ ಅವನು ಓಲಾನಾ ಜೊತೆ ಮಲಗಿದ್ದಕ್ಕೆ ಶಿಕ್ಷೆಯನ್ನೇ ನೀಡುವವಳು, ಕ್ಷಮೆಗೆ ಮೀರಿದ್ದು ಅದು ಅವಳಿಗೆ! ಇದು ರಿಚರ್ಡ್ - ಓಲಾನಾ ಸಂಬಂಧಕ್ಕಿಂತಲೂ ಕೈನೀನೆ-ಓಲಾನಾ ಸಂಬಂಧದ ಮೇಲೆಯೇ ನಿಂತಿರುವುದನ್ನು ಗಮನಿಸಿ. ಹುಟ್ಟಾ ಆಫ್ರಿಕನ್ ಅಲ್ಲದ ಬ್ರಿಟಿಷ್ ಪ್ರಜೆ ರಿಚರ್ಡ್‌ನ ನಿಲುವು ಇನ್ನೂ ಕುತೂಹಲಕರ. ಕೈನೀನೆ ಇಹವನ್ನು ತೊರೆದ ಮೇಲೂ ಅವನು ಮಧು - ಕೈನೀನೆ ಸಂಬಂಧವನ್ನು ಕೆದಕುವವನು. ಮಧು ಮೇಲೆಯೇ ಕೈ ಮಾಡುವವನು. ಆದರೆ ಅದು ಬರೇ ಸಂಬಂಧ ಇದ್ದುದಕ್ಕಾಗಿ ಅಲ್ಲ. ಈ ನೋವು ಇಲ್ಲಿ ಹೇಳಿದ ಎಲ್ಲದಕ್ಕಿಂತ ಹೆಚ್ಚು ಆಳವಾದದ್ದು. ಅದರಲ್ಲಿ ದ್ರೋಹ-ವಂಚನೆ ಮತ್ತು ಪ್ರೀತಿಯಲ್ಲೂ ಬರೇ ಪಡೆದುಕೊಂಡು (ದೋಚಿ) ಹಿಂದಕ್ಕೆ ನೀಡಬೇಕಾದಷ್ಟನ್ನು ನೀಡದೇ ಮಾಡುವ ಮೋಸದ ಅರಿವು ಹುಟ್ಟಿಸಿದ ನೋವಿದೆ. ಕೈನೀನೆಗೆ ಮಧುವಿನಿಂದಾದ ಅನ್ಯಾಯದ ಅರಿವು ಹುಟ್ಟಿಸಿದ ನೋವಿದು. ಈ ನೋವು ಉದ್ದೀಪಿಸಿದ ಹಲ್ಲೆ ಅದು. ಆದರೆ ಅಲ್ಲಿಯೂ ಕೈನೀನೆಯಂತೆ ಮತ್ತೆ ಪೆಟ್ಟು ತಿನ್ನುವುದು ರಿಚರ್ಡನೇ ಎನ್ನುವುದು ಕ್ರೂರ ಸತ್ಯ. ಒಡೆನಿಗ್ಬು ರಿಚರ್ಡ್ ಮನೆಗೆ ಹೋಗಿ ಕೂಗಾಡಿ ಬರುವುದನ್ನು ಕೂಡ ಈ ಹಿನ್ನೆಲೆಯಲ್ಲಿ ನೋಡಬಹುದು. ಮುಂದೆ ಸ್ವತಃ ಒಡೆನಿಗ್ಬು ಓಲಾನ ಬಳಿ ಹೇಳುತ್ತಾನೆ, ಸಿಟ್ಟು ಇದ್ದಿದ್ದು ಓಲಾನಾ ಮೇಲೇನೆ. ಆದರೆ ಅದು ವ್ಯಕ್ತವಾದದ್ದು ರಿಚರ್ಡ್ ಮೇಲೆ! ಪ್ರೀತಿಯೇ!!

ಇದೆಲ್ಲದರಾಚೆ ಇಲ್ಲಿ ಒಡೆನಿಗ್ಬುವಿನ ತಾಯಿ ಓಲಾನಾ ಇಲ್ಲದಾಗ ಅಮಲಾ ಎಂಬ ಒಬ್ಬ ಅಸಹಾಯಕ ಹಳ್ಳಿ ಹೆಣ್ಣನ್ನು ಬಳಸಿಕೊಂಡು ತನ್ನ ಮಗನನ್ನು ಹಾದಿ ತಪ್ಪಿಸಲು ಯತ್ನಿಸುವುದು, ಓಲಾನಾ ಬಂಜೆ, ತನ್ನ ಮಗನ ಸಂತಾನವನ್ನು ಹೊರಲಾರದವಳು ಎಂಬುದನ್ನು ಸಾಧಿಸಿ ತೋರಿಸುವುದಕ್ಕಾಗಿಯೇ ಮತ್ತು ಹಾಗೆ ಸಾಧಿಸಿಯೇ ಮಗನನ್ನು ಅವಳ ಮಾಯಕ ಸೆಳೆತದಿಂದ ತಪ್ಪಿಸಿ ಮುಕ್ತನನ್ನಾಗಿಸಬೇಕೆಂದು ಪ್ರಯತ್ನಿಸುವುದು ವಿಲಕ್ಷಣವಾಗಿದೆ. ಮಾಟ-ಮಂತ್ರ-ಮದ್ದು-ಹೆಣ್ಣು ಎಲ್ಲವನ್ನೂ ಬಳಸುವ ಆ ತಾಯಿಯ ದುಷ್ಟ ಹುನ್ನಾರದ ಆಳದಲ್ಲಿ ಕೂಡ ಕೆಲಸ ಮಾಡುತ್ತಿರುವುದು ಮಗನ ಮೇಲಿನ ಅತಿಯಾದ ಪ್ರೀತಿಯೇ. ಆದರೆ ಇದು ಓಲಾನಾಗೂ, ಒಡೆನಿಗ್ಬುವಿಗೂ ತಟ್ಟುವುದು ಆಕೆಯ ಸಾವಿನ ವಿಲಕ್ಷಣ ವಿದ್ಯಮಾನದಲ್ಲಿ. ಅಮಲಾ ಬಸುರಿಯಾಗಿ ಆ ಮಗು ಒಂದು ಸಮಸ್ಯೆಯಾದಾಗ, ಅಥವಾ ಅಲ್ಲಿಯ ವರೆಗೂ ಆ ತಾಯಿ ಒಬ್ಬ ದುಷ್ಟ ಖಳನಾಯಕಿಯೇ! ಹಾಗೆ ಈ ಹುನ್ನಾರದಿಂದ ತಕ್ಷಣಕ್ಕೆ ಓಲಾನಾಳ ಸಂವೇದನೆಗಳಿಗಾದ ದೊಡ್ಡ ಪೆಟ್ಟಿನ ರೂಪದಲ್ಲಿ ನಮ್ಮನ್ನು ತಟ್ಟುತ್ತದೆ. ಓಲಾನ ತನ್ನ ಪ್ರಿಯಕರನ ಸಡಿಲ ನೈತಿಕ ನಿಷ್ಠೆಯಿಂದ ಕಂಗೆಟ್ಟು ಮನೆಬಿಟ್ಟು ಹೋಗುತ್ತಾಳೆ, ಬೇರೆಯೇ ನಿಲ್ಲುತ್ತಾಳೆ. ಇದು ಆ ತಾಯಿಯ ಯಶಸ್ಸೋ, ಒಡೆನಿಗ್ಬುವಿನ ದುರಂತವೋ, ಮನೆಯವರೆಲ್ಲರ ವಿರೋಧದ ನಡುವೆಯೂ ಇಂಥವನ ಹಿಂದೆ ಬಂದ ಓಲಾನಾಳ ಸೋಲೋ ಅಥವಾ ಎಲ್ಲವೂ.

ಮುಂದೆ ಓಲಾನಾ ಏನು ಮಾಡುತ್ತಾಳೆ ಎನ್ನುವುದು ಬಹು ಸೂಕ್ಷ್ಮವಾದ ವಿದ್ಯಮಾನ. ಅವಳ ಮನಸ್ಸು ಛಿದ್ರಗೊಂಡು ಒಂಥರಾ ಟ್ರಾನ್ಸ್‌ನಲ್ಲಿರುವಂತೆ ಬದುಕುವ ಓಲಾನಾ ಮಾಡಿದ್ದು ಉದ್ದೇಶಪೂರ್ವಕವಾದ ನಡೆಯೇ ಅಲ್ಲ. ಆದರೆ ಅದನ್ನೆಲ್ಲ ನಮ್ಮ ನಿಮ್ಮ ದೈನಂದಿನ ಬದುಕಿನ ನಿಷ್ಠುರತೆ ಕೇಳುವುದಿಲ್ಲ. ಹಾದರವನ್ನು ಹಾದರ ಎಂದೂ, ಪತನವನ್ನು ಪತನವೆಂದೂ ಅದು ದಾಖಲಿಸುವಂತೆ ಸಾಗುತ್ತಿರುತ್ತದೆ. ಸಂಬಂಧದ ಬದ್ಧತೆ-ನಿಷ್ಠೆ ಅಥವಾ ಅದರ ಜವಾಬ್ದಾರಿತನಕ್ಕೆ ಒಡೆನಿಗ್ಬು ನೀಡಿದ ಏಟಿಗೆ ಓಲಾನಾ ಪ್ರತಿಯೇಟು ನೀಡಿಯೇ ಬದುಕಿನ ಕ್ಷಣಭಂಗುರ ಸತ್ಯಗಳನ್ನು, ಅಯಾಚಿತಕ್ಕೆ ಮನುಷ್ಯ ಬಲಿಯಾಗುವ ಚೋದ್ಯವನ್ನು ಅರಿತುಕೊಳ್ಳುತ್ತಾಳೆಯೋ, ಅಥವಾ ಸುಪ್ತವಾಗಿ ಪ್ರತಿಯೇಟು ನೀಡಲು ಹೊರಟಿದ್ದೇ ಅವಳಲ್ಲಿ ಪಾಪಪ್ರಜ್ಞೆಯನ್ನು ಹುಟ್ಟಿಸಿ ಒಡೆನಿಗ್ಬುವನ್ನು ಕ್ಷಮಿಸುವ ಅಥವಾ ಶಿಕ್ಷಿಸುವ ಮೇಲಂತಸ್ತನ್ನು ಬಿಟ್ಟುಕೊಟ್ಟು ಅವನೊಂದಿಗೆ ಒಂದು ಸಮಾನ ಪಾತಳಿಯಲ್ಲಿ ನಿಲ್ಲುವ ಸ್ಥಿತಿಯನ್ನು ಅವಳು ಪಡೆದುಕೊಳ್ಳುತ್ತಾಳೋ ಅಥವಾ ಈ ಎರಡೂ ಸತ್ಯವಾಗಿರದೆ ಬರಿದೇ ಓಲಾನಾಗೆ ಒಡೆನಿಗ್ಬು ಮತ್ತು ಒಡೆನಿಗ್ಬುವಿಗೆ ಓಲಾನಾ ಅನಿವಾರ್ಯವಾಗಿರುವುದರ ಅನುಭವವಾಗುತ್ತದೆಯೋ ಎಂದರೆ ಮೂರೂ ಸಾಧ್ಯತೆಗಳು ಇಲ್ಲಿ ತೆರೆದೇ ಇವೆ!

ತನ್ನನ್ನು ಪ್ರತಿಸ್ಪರ್ಧಿ ಎಂದು ಪರಿಗಣಿಸುವ ಸಹೋದರಿ ಕೈನೀನೆಯ ಪ್ರಿಯಕರ ರಿಚರ್ಡ್ ಜೊತೆ ಮಲಗಿದ್ದು ಒಂದು ಯೋಜಿತ ಕ್ರಿಯೆಯಲ್ಲ ಎನ್ನುವುದು ಸ್ವತಃ ರಿಚರ್ಡ್‌ಗೇ ಗೊತ್ತು. ಆ ಹೊತ್ತಿಗೆ ಯಾವನೇ ಗಂಡಸು ಆಗಿದ್ದರೂ ಆಗುತ್ತಿತ್ತು ಎನ್ನುವ ಅವನ ಯೋಚನೆ ಸರಿಯಾಗಿಯೇ ಇದೆ. ಮತ್ತು, ಹಾಗೆ ಮಾಡಿ ಒಡೆನಿಗ್ಬುವನ್ನು ಅಥವಾ ಕೈನೀನೆಯನ್ನು ಗಾಯಗೊಳಿಸ ಬೇಕೆಂಬ ಉದ್ದೇಶ ಕೂಡ ಓಲಾನಾಗೆ ಇದ್ದಿರಲಿಲ್ಲ ಎನ್ನುವುದು ಸತ್ಯ. ಯಾಕೆಂದರೆ, ಮೊದಲಿಗೆ ಅವಳಿದನ್ನು ಎಲ್ಲರಿಂದಲೂ, ಒಡೆನಿಗ್ಬುವಿನಿಂದಲೂ, ಮುಚ್ಚಿಡಲು ಯತ್ನಿಸುತ್ತಾಳೆ. ಆದರೆ ಒಡೆನಿಗ್ಬು ಮತ್ತು ಅವಳು ಒಂದಾದ ಮೇಲೆ ಅವಳೇ ಒಡೆನಿಗ್ಬುವಿನ ಬಳಿ ಇದನ್ನು ಹೇಳುತ್ತಾಳೆ! ಇಲ್ಲಿ ಒಂದು ಸಂಬಂಧ ಸುಳ್ಳುಗಳ ಮೇಲೆ ನಿಲ್ಲುವುದು ಹೇಗೆ ಅಸಾಧ್ಯ ಎನ್ನುವುದರ ಅರಿವಿದ್ದವರಿಗಷ್ಟೇ ಅರ್ಥವಾಗುವ ಸತ್ಯಗಳಿವೆ. ಆದರೆ ಕೈನೀನೆಯಿಂದ ಇದನ್ನು ಸದಾ ಕಾಲಕ್ಕೂ ಮುಚ್ಚಿಡಬೇಕೆಂದು ಬಯಸುವ ಓಲಾನಾಗೆ ಅದು ಸಾಧ್ಯವಾಗುವುದಿಲ್ಲ. ಯಾಕೆ ಸಾಧ್ಯವಾಗುವುದಿಲ್ಲ ಎಂದರೆ ಓಲಾನಾ ತರವೇ ರಿಚರ್ಡ್ ಕೈನೀನೆಯ ಬಳಿ ಸುಳ್ಳು ಹೇಳಲಾರ ಎನ್ನುವುದರಿಂದಲೇ. ಈ ಎಲ್ಲ ಪ್ರಕ್ರಿಯೆಗಳೂ ಸೂಕ್ಷ್ಮ ಮತ್ತು ಸುಪ್ತ ಮನಸ್ಸಿನ ತಲ್ಲಣದ ಪದರ ಪದರಗಳನ್ನೂ ಸ್ಪರ್ಶಿಸುವಂಥವು. ಕಾದಂಬರಿ ಇವನ್ನೆಲ್ಲ ಹಿಡಿದಿಡುವ ಪರಿ ಕೂಡಾ ಅಷ್ಟೇ ನವಿರು ನವಿರಾಗಿದೆ.

ಕೈನೀನೆಯ ಸಿಟ್ಟು, ಅಸಹಾಯಕತೆ, ಓಲಾನಾಳಂಥ ಸಹೋದರಿ ಆಜನ್ಮ ಸಾಧಿಸಿದ ಮೇಲ್ಗೈ ಕೊನೆಗೆ ತನ್ನ ಪ್ರಿಯಕರ ರಿಚರ್ಡ್‌ನನ್ನೂ ಕೆಲವೇ ಕ್ಷಣಗಳಿಗಾದರೂ ವಶವರ್ತಿಯನ್ನಾಗಿಸಿಕೊಳ್ಳುವವರೆಗೂ ಚಾಚಿಕೊಂಡಿದ್ದನ್ನು ಜೀರ್ಣಿಸಿಕೊಳ್ಳಲಾಗದೆ ಹುಟ್ಟುವ ಭಾವ - ಇವೆಲ್ಲ ಮಾತಿಗೆ ನಿಲುಕದ್ದು. ಅವಳ ಸೋಲಿನ ಭಾವ ಅವಳನ್ನು ಜೀವಂತ ಹಿಂಡುವ ಬಗೆ ಗಮನಿಸಬೇಕು. ಅವಳು ರಿಚರ್ಡನ ತಪ್ಪಿಗೆ ಕ್ಷಮೆ ನೀಡುವ ಕ್ಷಮಯಾಧರಿತ್ರಿಯಂತೂ ಅಲ್ಲ. ಶಿಕ್ಷೆ ನೀಡುವವಳು ಅವಳು. ಆದರೆ ಯಾವ ಶಿಕ್ಷೆಯೂ ಅವಳಿಗಾದ ಗಾಯವನ್ನು ಮಾಯಿಸಬಹುದಾದ ಶಕ್ತಿ ಪಡೆದಿಲ್ಲ. ಮುಂದೆ ಅವಳು ಯುದ್ಧ ನಿರಾಶ್ರಿತರಿಗಾಗಿಯೇ ನಡೆಸುವ ಕ್ಯಾಂಪಿನಲ್ಲಿ ಪಾದ್ರಿಯೊಬ್ಬ ಅಸಹಾಯ-ಅಪ್ರಾಪ್ತ ಬಾಲೆಯರನ್ನು ಪಡಿತರ ನೀಡುವ ಮೊದಲು ತನ್ನ ಕಾಮುಕ ತೃಷೆ ಹಿಂಗಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾನೆ ಎಂಬುದು ಬಯಲಾದಾಗಲೂ ಕೈನೀನೆ ಶಿಕ್ಷೆ ನೀಡುತ್ತಾಳೆ. ಆದರೆ ಅವಳ ಕಣ್ಣೀರಿಗೆ ಅದು ಯಾವ ರೀತಿಯಲ್ಲೂ ಶಮನ ನೀಡುವುದಿಲ್ಲ. ಹೊಟ್ಟೆಗಿಲ್ಲದೆ ಅರೆ ಬಲಿತ ಪೈರನ್ನೇ ಕದಿಯುವ ಸಿಪಾಯಿಯೊಬ್ಬನನ್ನು ಕ್ಯಾಂಪಿನ ಮಂದಿ ಹಿಡಿದು ಥಳಿಸುವಾಗ ಕೈನೀನೆ ಅವನನ್ನು ರಕ್ಷಿಸುತ್ತಾಳೆ. ದವಸವನ್ನೊ ಹಿಟ್ಟನ್ನೋ ಕೊಟ್ಟು ಕಳಿಸುತ್ತಾಳೆ. ಆದರೂ ಅಳುತ್ತಿರುತ್ತಾಳೆ. ಅವಳಿಗೆ ದಾಳಿ ನಡೆಸುತ್ತಿರುವವರು ವೈರಿಗಳೆಂದೋ, ದೇಶೀಯರದ್ದೆ ಸಣ್ಣತನ-ಭ್ರಷ್ಟಾಚಾರ, ಮೋಸ ಕ್ಷಮಾರ್ಹವೆಂದೋ, ಜನರೆಲ್ಲ ಹುಳುಗಳಂತೆ ಸಾಯುತ್ತಿರುವಾಗ ‘ಹೇಗಾದರೂ’ ತಪ್ಪಿಸಿಕೊಂಡು ಬದುಕಬೇಕೆಂದೋ ಅನಿಸುವುದಿಲ್ಲ. ನಾವು ಸ್ವತಂತ್ರರಾಗುತ್ತೇವೆ, ಈ ಯುದ್ಧವನ್ನು ಗೆಲ್ಲುತ್ತೇವೆ, cause ಗಾಗಿ ತ್ಯಾಗ ಮಾಡಬೇಕು ಎಂಬುದೆಲ್ಲ ಸೋಗಲಾಡಿತನದಂತೆ ಕಾಣುತ್ತದೆ. ಈ ಪಾತ್ರವೇ ವಾಸ್ತವವಾಗಿ ಕಾದಂಬರಿ ಮುಗಿದ ಮೇಲೆ ನಮ್ಮನ್ನು ಬಹುಕಾಲ ಕಾಡುತ್ತ ಉಳಿಯುವುದು. ಅದು ಆರಂಭದಲ್ಲಿ ಆಪ್ತವಾಗುವ ಉಗ್ವು, ಒಡೆನಿಗ್ಬು ಅಲ್ಲ. ಪ್ರಿಯವಾಗಿ ಬಿಡುವ ಸುಂದರಿ ಓಲಾನಾ ಅಲ್ಲ. ಪೇಲವ ಪಾತ್ರವಾದರೂ ಏನೋ ಆಪ್ತ ಭಾವ ಮೂಡಿಸುವ ರಿಚರ್ಡ್ ಅಲ್ಲ. ಕೈನೀನೆ. ಈ ಬರಹದ ಆರಂಭದಲ್ಲಿ ಹೇಳಿದ ‘ನಾನು’ ಮತ್ತು ‘ಸಾವು’ ಕುರಿತ ಯೋಚನೆಗಳನ್ನು ಉದ್ದೀಪಿಸುವುದು ಈ ಕೈನೀನೆಯೇ. ಅವಳದ್ದೇನಿದ್ದರೂ ಕ್ರಿಯೆ. ಮಾತುಗಾರಿಕೆಯಲ್ಲ. ತತ್‌ಕ್ಷಣದ ಮಾತು-ಕ್ರಿಯೆ ಅವಳ ಶೈಲಿ. ಅಂದರೆ ಅದು ಅಗತ್ಯವನ್ನು ಪೂರೈಸುವುದಕ್ಕಾಗಿ ಅಷ್ಟೆ. ತಾನು ಅಸಾಮಾನ್ಯೆ ಎಂಬ ಭ್ರಮೆಯಿಲ್ಲ. ತನ್ನ ಪ್ರಾಣ ಅಮೂಲ್ಯ ಎಂಬ ವ್ಯಾಮೋಹ ಕೂಡ ಅವಳಿಗಿಲ್ಲ - ಇರುವೆಗಳಂತೆ ಮಂದಿ ಸಾಯುತ್ತಿರುವ ಹೊತ್ತಿನಲ್ಲಿ ಅಂಥ ವ್ಯಾಮೋಹಕ್ಕೆ ಅರ್ಥವಿಲ್ಲ ಎನ್ನುವುದು ಅವಳ ನಿಲುವು. ಅವಳು ಬದುಕಿನ ಸವಾಲಿಗೆ ಸಿದ್ಧ; ಸಾವಿನ ಅನಿವಾರ್ಯಕ್ಕೆ ಬದ್ಧ.

ಒಮ್ಮೆ ಉಗ್ವು, ಇನ್ನೊಮ್ಮೆ ಒಡೆನಿಗ್ಬು, ಮತ್ತೆ ಓಲಾನಾ, ಇನ್ನೆಲ್ಲೊ ಕೈನೀನೆ, ಅಲ್ಲಿ ರಿಚರ್ಡ್, ಇಲ್ಲಿ ಇನ್ಯಾರೋ ಮುಖ್ಯವಾಗಿ ಬಿಡುವ ಈ ಕಾದಂಬರಿಯ ಓಟದಲ್ಲಿ ಪ್ರತೀ ಪಾತ್ರಕ್ಕೂ ಸಿಕ್ಕ ಪೋಷಣೆ, ನಿರ್ವಹಿಸಿದ ಸಂತುಲಿತ ರೀತಿ ನಿಜಕ್ಕೂ ಅದ್ಭುತವಾಗಿದೆ.

ಒಡೆನಿಗ್ಬುವನ್ನೇ ನೋಡಿ. ಈತನ ಕ್ರಾಂತಿಕಾರಕ ನಿಲುವು, ಆದರ್ಶ, ಸಮಾಜ ಸೇವೆ, ತ್ಯಾಗ, ಓಲಾನಾ ಮೇಲಿನ ಎಣೆಯಿಲ್ಲದ ಪ್ರೀತಿ ಎಲ್ಲವೂ ಒಂದೆಡೆ ಇರುತ್ತ ವೈರುಧ್ಯಗಳಿಗೆ ಕೊರತೆಯಿಲ್ಲದ ಪಾತ್ರವಿದು. ಅಮಲಾ ಜೊತೆ ಅಮಲಿನಲ್ಲಿ ನಡೆದ ಅಚಾತುರ್ಯ ಬದುಕಿಗೆ ಕೊಟ್ಟ ಏಟಿನಿಂದ ಪೂರ್ತಿಯಾಗಿ ಚೇತರಿಸಿಕೊಳ್ಳುವ ಕೊದಲೇ ಅಲೀಸಳ ಜಾಲಕ್ಕೆ ಜಾರುತ್ತಾನೆ. ಅದೂ ಎಂಥ ದರಿದ್ರ ಕ್ಷಣದಲ್ಲಿ!

ಹೊಟ್ಟೆ ಬಟ್ಟೆಗಿಲ್ಲದ, ಸರಿಯಾದ ಸೂರಿಲ್ಲದ ಕೊಂಪೆಯಲ್ಲಿ ಯುದ್ಧ ನಿರಾಶ್ರಿತರ ನಡುವೆ ಯುದ್ಧ ನಿಲ್ಲುವುದನ್ನೊ, ಗೆಲುವನ್ನೊ ಸ್ಪಷ್ಟವಿಲ್ಲದ ಹಾಗೆ ಸದ್ಯದ ನರಕಯಾತನೆಯ ‘ಕೊನೆ’ಯನ್ನು ನಿರೀಕ್ಷಿಸುತ್ತಾ ಬದುಕುವಾಗ ಆದರ್ಶಗಳೆಲ್ಲ ಮಣ್ಣುತಿನ್ನುವ ಹಂತವದು. ಆದರೂ ಒಡೆನಿಗ್ಬುವಿನ ರಕ್ತದಲ್ಲಿ ಅದಿದೆ. ಅವನು ಕೊನೆಗೂ ಪ್ರೊಫೆಸರ್ ಇಝೆಕಾನನ್ನು ಕಂಡು ತನ್ನ ಸ್ಥಿತಿಯನ್ನು ಉತ್ತಮ ಪಡಿಸುವಂತೆ ಬೇಡಿಕೊಳ್ಳುವುದಕ್ಕೆ ಒಪ್ಪುವುದಿಲ್ಲ. ಮಂದಿ ಹೊಟ್ಟೆಗೆ ಬಟ್ಟೆಗೆ ಇಲ್ಲದೆ ರೋಗದಿಂದ ಸಾಯುತ್ತಿರುವಾಗ ಈ ಪ್ರೊಫೆಸರ್ ಮತ್ತು ಅವನ ಪತ್ನಿ ಬದುಕುತ್ತಿರುವ ರೀತಿ ಎಂಥವರಲ್ಲೂ ಅಸಹ್ಯ ಹುಟ್ಟಿಸಬೇಕು. ಆದರೆ ಒಡೆನಿಗ್ಬುಗೆ ಅದು ಗೊತ್ತಿದೆ. ಸ್ವದೇಶಿ ಸೈನಿಕರೂ, ಆಹಾರ ವಿತರಕರೂ ವೈರಿಗಳಂತೆ, ಭ್ರಷ್ಟರಂತೆ, ಕ್ರೂರಿಗಳಂತೆ ವರ್ತಿಸುತ್ತಿದ್ದಾರೆ. ಕೈಗೆ ಸಿಕ್ಕುವ ಅಲ್ಪಸ್ವಲ್ಪ ಹಣವನ್ನೂ ಹೆಂಡತಿ, ಪುಟ್ಟ ಮಗು ಮತ್ತು ಕೆಲಸದ ಉಗ್ಬು ಎಲ್ಲರ ಜವಾಬ್ದಾರಿ ಇರುವಾಗಲೂ ಕೀಳ್ದರ್ಜೆಯ ಮದ್ಯಕ್ಕೆ ಸುರಿಯುತ್ತಿದ್ದಾನೆ ಅವನು. ಬದುಕು ಭರವಸೆಯನ್ನೇ ಕಸಿದುಕೊಂಡಿರುವ ಮನೋಸ್ಥಿತಿಯಲ್ಲಿದ್ದಾನವನು. ಗಡಂಗಿನಲ್ಲಿ ಅವನಿಗೆ ಸಾಲ ಬೇರೆ ಇದೆ! ಎಲ್ಲರೂ ಮೂಳೆ ಚಕ್ಕಳಗಳಾಗಿ ನೀರು ಕುಡಿದು ದಿನತಳ್ಳುತ್ತಿರುವಾಗಲೇ ತನ್ನ ತಾಯಿಯ ದೇಹವನ್ನು ಸರಿಯಾಗಿ ದಫನ ಮಾಡುವುದಕ್ಕೆ ಕೂಡ ತನ್ನಿಂದಾಗಲಿಲ್ಲ, ತಾಯಿಗೆ ತಕ್ಕ ಮಗನಾಗುವುದು ತನಗಾಗಲಿಲ್ಲ, ಅವಳಿಗೆ ಸಲ್ಲಬೇಕಾದುದನ್ನೂ ಸಲ್ಲಿಸಲಿಲ್ಲ ಎಂದೆಲ್ಲ ಕೊರಗುತ್ತ ಮನೋವೇದನೆ ಅನುಭವಿಸುವ ಒಡೆನಿಗ್ಬು ಅದನ್ನು ಪ್ರದರ್ಶಿಸುವುದು ಓಲಾನಾ ಮೇಲಿನ ಒಂದು ಬಗೆಯ ತಿರಸ್ಕಾರವಾಗಿ! ಅದು ತಾಯಿಯ ಆಸೆಯಾಗಿತ್ತಲ್ಲವೆ! ಈ ಸ್ಥಿತಿಯಲ್ಲಿ ಅವನದೊಂದು ಹಾದರ, ಈ ಸಂಸಾರದ್ದೊಂದು ವೈಮನಸ್ಸು.

ಓಲಾನಾ-ಒಡೆನಿಗ್ಬು ನಡುವಿನ ಸಂಬಂಧ, ಪ್ರೀತಿ-ಭಾವುಕ ಅವಲಂಬನೆ, ಒಬ್ಬರಿಗೊಬ್ಬರ ಅನಿವಾರ್ಯತೆ ಹಾದು ಹೋಗುವ ಅಗ್ನಿಪರೀಕ್ಷೆಗಳಲ್ಲಿ ನಮಗೆ ಮನುಷ್ಯ ಏನೆಂದು ಅರ್ಥವಾಗಬೇಕಿದೆ. ಪ್ರೀತಿ ಏನೆಂದು ಅರ್ಥವಾಗಬೇಕಿದೆ. ಅವನ ಬದುಕು ಹೇಗೆ ಒಂದು ಸಮುದಾಯದೊಂದಿಗೆ ಬೆರೆದು ಬೆಳೆಯುತ್ತದೆ, ಅರಳುತ್ತದೆ, ಉಳಿಯುತ್ತದೆ ಅಥವಾ ಅಳಿಯುತ್ತದೆ ಎಂಬುದು ಕಾಣಬೇಕಿದೆ. ಕಾದಂಬರಿಯ ಒಂದಾನೊಂದು ಮಹತ್ವದ ಮೌಲ್ಯ ಈ ಸ್ತರದ್ದು.

ಸೈನಿಕ ಕ್ಯಾಂಪಿನ ಒಂದು ಪುಟ್ಟ ವಿಜಯೋತ್ಸವದ ರಾತ್ರಿ ಒಂದು ವೈನ್‌ಬಾರಿನಲ್ಲಿ ಉಗ್ವು ಮತ್ತು ಅವನ ಸೈನಿಕ ಗೆಳೆಯರು ಬಾರ್ ಹುಡುಗಿಯ ಒಣ ದೇಹದ ಮೇಲೆ ನಡೆಸುವ ಅಮಾನುಷವೂ, ಅಸಹ್ಯವೂ ಆದ ಅತ್ಯಾಚಾರ ಕೂಡ ಈ ಬಗೆಯ ತಲ್ಲಣಗಳನ್ನೇ ನಮ್ಮೆದೆಯಲ್ಲಿ ಹುಟ್ಟಿಸುತ್ತದೆ. ಎಂಥ ಉದಾರಿಯೂ ಎಷ್ಟು ನೀಚನೂ ಆಗಬಲ್ಲ ಒಂದು ಸಾಧ್ಯತೆಯನ್ನು ತನ್ನಲ್ಲೇ ಇರಿಸಿಕೊಂಡಿರುವ ಮನುಷ್ಯ ಎಂದು ಲಂಕೇಶ್ ಹೇಳುತ್ತಿದ್ದ ಮಾತು ಇಲ್ಲಿಯೂ ನೆನಪಾಗುತ್ತದೆ. ಉಗ್ವುವನ್ನು ಅವನ ಶೇಷಾಯುಷ್ಯ ಪೂರ್ತಿ ಕಾಡುತ್ತಲೇ ಉಳಿಯುವ ಆ ಹುಡುಗಿಯ ಮುಖಭಾವದಲ್ಲಿದ್ದ ತಣ್ಣಗಿನ ದ್ವೇಷ ತುಂಬಿದ ತಿರಸ್ಕಾರ ಬಹಳ ಧ್ವನಿಪೂರ್ಣ. ಅದರಾಚೆ ಏನು ಮಾಡಿದ್ದರೂ ಅವಳ ಹೆಣ ಬೀಳುತ್ತದೆ. ತನ್ನದೇ ಪ್ರೇಯಸಿ ಒಬ್ಬ ಸೈನಿಕ ಅಧಿಕಾರಿಯ ದೇಹದ ಹಸಿವಿಗೆ ಆಗಾಗ ನೈವೇದ್ಯವಾಗುತ್ತಿರುವುದನ್ನು ಜೀರ್ಣಿಸಿಕೊಳ್ಳಲಾಗದೇ ಒದ್ದಾಡುವ ಉಗ್ವು ಇದೀಗ ತಾನೇ ನಡೆಸಿದ ರಾಕ್ಷಸೀ ಪಿಪಾಸೆಯ ಕ್ರಿಯೆಯನ್ನು ಕ್ಷಮೆಗೆ ಒಡ್ಡಿಕೊಂಡು ಆರ್ತನಾಗಿ ನಿಲ್ಲುವ ಪರಿ ಗಮನಾರ್ಹವಾಗಿದೆ. ಅವನು ಆವತ್ತು ತನ್ನ ಗಂಡಸುತನಕ್ಕೆ ಬಂದ ಸವಾಲನ್ನು ಸ್ವೀಕರಿಸಿ ನಡೆಸಿದ ದೌರ್ಜನ್ಯವನ್ನು ತಾನು ತನ್ನ ಪ್ರಿಯತಮೆಯ ಮೇಲೆಯೇ ನಡೆಸಿದಂತೆ ಕಲ್ಪಿಸುತ್ತಾನೆ. ಯಾಕೆಂದರೆ, ಅವನಿಗೆ ಎಷ್ಟೇ ಪ್ರಯತ್ನ ಪಟ್ಟರೂ ಆ ಬಾರ್ ಹುಡುಗಿಯ ಮುಖ ಚಹರೆ ನೆನಪಾಗುತ್ತಿಲ್ಲ. ನೆನಪಿಸಿಕೊಂಡಾಗಲೆಲ್ಲ ಕಾಣುವ ಮುಖ ಪ್ರಿಯತಮೆಯದ್ದು. ಆದರೆ ಆ ಮುಖಭಾವ ಮಾತ್ರ ಅವನಲ್ಲಿ ಅಚ್ಚೊತ್ತಿ ನಿಂತಿದೆ. ತಿರಸ್ಕಾರ ಮಿಶ್ರಿತ ದ್ವೇಷ! ಹಾಗಾಗಿ ಈಗ ಕ್ಷಮಿಸಬಲ್ಲವಳು ಮತ್ತು ಕ್ಷಮಿಸಿ ಅವನನ್ನು ಮತ್ತೆ ಮನುಷ್ಯತ್ವಕ್ಕೆ ಅರ್ಹನನ್ನಾಗಿಸಬಲ್ಲವಳು ಅವಳು ಮಾತ್ರ. (ಇನ್ನೊಂದು ಕೈನೀನೆಯ ಕೈಗೆ ಸಿಕ್ಕುವುದು ಕೂಡ ಸಾಧ್ಯತೆಯಾಗಿ ಉಗ್ವುವಿಗೆ ಗೊತ್ತು, ಪಾದ್ರಿ ಕೈನೀನೆ ಕೈಯಲ್ಲಿ ಕಪಾಳಕ್ಕೆ ತಿಂದು ಬಹಿಷ್ಕೃತನಾಗಿದ್ದನ್ನು ಅವನು ಕಂಡಿದ್ದಾನೆ.) ಆದರೆ ಇಲ್ಲಿನ ಕಠೋರ ವಾಸ್ತವವೆಂದರೆ, ಉಗ್ವುವಿಗೇ ಗೊತ್ತಿಲ್ಲ, ಅವನ ಪ್ರೇಯಸಿ ಅವರೆಲ್ಲ ಆ ಊರನ್ನು ಬಿಟ್ಟದಿನ ನಡೆದ ಬಾಂಬ್ ದಾಳಿಯಲ್ಲೇ ಸುಟ್ಟು ಹೋಗಿದ್ದ ಸತ್ಯ. ರಿಚರ್ಡ್ ಅದನ್ನು ಉಗ್ವುವಿಗೆ ಹೇಳದಿರಲು ನಿರ್ಧರಿಸಿದ್ದಾನೆ. ಕೆಲವೊಂದು ತಪ್ಪುಗಳಿಗೆ ಶಿಕ್ಷೆ ಇರುವುದಿಲ್ಲ. ಇನ್ನು ಕೆಲವೊಂದಕ್ಕೆ ಶಿಕ್ಷೆ ನೀಡಿದರೂ ತಪ್ಪಿನ ಪರಿಣಾಮ ಶಮನಗೊಳ್ಳುವುದಿಲ್ಲ.

ಅಮಲಾಗೆ ತನ್ನ ಗಂಡನಿಂದ ಹುಟ್ಟಿದ ಮಗುವನ್ನು ಎಣೆಯಿಲ್ಲದ ಪ್ರೀತಿಯಿಂದ ಸಲಹುವ ಓಲಾನಾ, ತನ್ನ ತಾಯಿಯ ಸಾವಿಗೆ ತಾನೇ ಕರಗಿ ಕೃಶನಾಗುತ್ತ ಕಳೆದು ಹೋದಂತಿರುವ ಒಡೆನಿಗ್ಬು ಬೇರೆಯೇ ವ್ಯಕ್ತಿಗಳಾಗಿ ನಮ್ಮನ್ನು ಕಾಡುತ್ತಾರೆ. ತಾಯಿಯ ಸಾವು ಈ ದಂಪತಿಗಳ ನಡುವೆ ನಿಲ್ಲುವುದು ವಿಚಿತ್ರವೂ ವಿಲಕ್ಷಣವೂ ಆಗಿದ್ದು ಕೆಲವು ಅರ್ಥಪೂರ್ಣ ಆಯಾಮಗಳನ್ನು ಕೂಡ ಹೊಂದಿದೆ. ಅಲೀಸ್ ಜೊತೆಗಿನ ಒಡೆನಿಗ್ಬುವಿನ ಎರಡನೆಯ ಹಾದರಕ್ಕೆ ಕೂಡಾ ಈ ಮಾತೃ ವಿಯೋಗದ ಸ್ಪರ್ಶವಿದೆ. ಮೊದಲನೆಯದನ್ನು ಆಯೋಜಿಸಿದ್ದೇ ಆ ತಾಯಿಯಲ್ಲವೆ.

‘ಹೊರಗಿನ’ ಒಂದು ಪಾತ್ರ ತನ್ನ ಕಾದಂಬರಿಗೆ ಬಹಳ ಮುಖ್ಯವಾಗಿತ್ತೆಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಕಾದಂಬರಿಕಾರ್ತಿ ಬ್ರಿಟನ್ನಿನ ರಿಚರ್ಡ್‌ನನ್ನು ಸೃಜಿಸಿರುವ ರೀತಿಗೆ ಕಾರಣವನ್ನೂ ಹೇಳಿದ್ದಾರೆ. ಈತ ಸೆಮಿ ಆಫ್ರಿಕನ್. ಇಗ್ಬು ಭಾಷೆಯನ್ನೂ ಕಲಿತು ಅಲ್ಲಿನವನೇ ಆಗುವುದಕ್ಕೆ ತನ್ನಿಂದಾದ ಎಲ್ಲ ಪ್ರಾಮಾಣಿಕ ಪ್ರಯತ್ನವನ್ನೂ ಮಾಡುವ ಈತನ ಕಣ್ಣುಗಳಿಂದ ವಸ್ತು ಸ್ಥಿತಿಯನ್ನು ಜಗತ್ತಿಗೆ ಕಾಣಿಸುವ ಉದ್ದೇಶ ಕಾದಂಬರಿಯ ಆಂತರಿಕ ಮತ್ತು ಬಾಹ್ಯ ಹಂದರದಲ್ಲಿದೆ. ನೈಜೀರಿಯಾ ಮತ್ತು ಬಿಯಾಫ್ರ ನಡುವಿನ ಅಸಮಬಲದ ಯುದ್ಧ ಮತ್ತು ಒಳಗಿನ ಸಮಸ್ಯೆಗಳು, ಜಗತ್ತಿನ ಬಲಿಷ್ಠ ರಾಷ್ಟ್ರಗಳು ಸತ್ಯ ಅರಿತುಕೊಳ್ಳದೇ ಅಥವಾ ಅರಿಯದ ನಾಟಕವಾಡಿ ಎಣ್ಣೆಗಾಗಿ ಆಡಿದ ಹೂಟ, ಈ ಪುಟ್ಟ ನಾಡಿನ ಮೇಲೆ ನಡೆದ ಹತ್ಯಾಕಾಂಡ, ಬಾಂಬ್ ದಾಳಿ ಎಲ್ಲವನ್ನೂ ರಿಚರ್ಡ್ ಹೇಗೆ ಕಾಣುತ್ತಾನೆ ಎಂಬುದು ಒಡೆನಿಗ್ಬು, ಓಲಾನ, ಕೈನೀನೆಯರ ದೃಷ್ಟಿಗಿಂತ ಹೆಚ್ಚು ಪೂರ್ವಾಗ್ರಹ ಮುಕ್ತ ಮತ್ತು ಸತ್ಯಕ್ಕೆ ಹತ್ತಿರವಿರುವುದು ಸಾಧ್ಯ ಎಂಬುದಕ್ಕಿಂತಲೂ ಶೇಷ ಜಗತ್ತು ಅದನ್ನು ಒಪ್ಪಿಕೊಳ್ಳುವುದಕ್ಕೆ ಕಷ್ಟಪಡಲಾರದು ಎಂಬ ಕಾರಣಕ್ಕೇ ಮುಖ್ಯ. ರಿಚರ್ಡ್ ತಾನು ಮನಸಾ ದ್ವೇಷಿಸುವ ಮಧು ಮತ್ತು ಅವನ ಹಿಂದಿರುವ ಆಡಳಿತ ಯಂತ್ರ ಯುದ್ಧ ಕಾಲದಲ್ಲಿ ತನ್ನನ್ನು ಇದೇ ಉದ್ದೇಶಕ್ಕೆ ಬಳಸಿಕೊಳ್ಳಲು ಬಯಸಿದಾಗ ಮೊದಲು ನಿರಾಕರಿಸುತ್ತಾನೆ. ಆದರೆ ಅದಕ್ಕಿರುವ ಬೇರೆ ಆಯಾಮಗಳನ್ನೂ, ಅಗತ್ಯಗಳನ್ನೂ ಅರಿತಾಗ ತನ್ನ ಖುಶಿಗಾಗಿಯೇ ಒಪ್ಪಿಕೊಳ್ಳುತ್ತಾನೆ. ಒಡೆನಿಗ್ಬು-ಓಲಾನಾ ನಡುವಿನ ಗಾಢ ಸಂಬಂಧಕ್ಕೆ ಯಾವ ರೀತಿಯಲ್ಲೂ ಕಡಿಮೆಯಿಲ್ಲದ ರಿಚರ್ಡ್-ಕೈನೀನೆ ಸಂಬಂಧ ಕೂಡಾ ಹಲವು ಇತಿಮಿತಿಗಳಿಗೆ ಹೊಂದಿಕೊಳ್ಳಬೇಕಾದ, ಅನಿವಾರ್ಯಗಳಿಗೆ ಒಗ್ಗಿಕೊಳ್ಳಬೇಕಾದ ಸಂದಿಗ್ಧಗಳಿಗೆ ಸಿಕ್ಕಿ ಹಾಕಿಕೊಂಡಿರುವಂಥದ್ದು. ಕೈನೀನೆಯ ಒರಟುತನ, ವ್ಯಕ್ತಿತ್ವ, ಅನಾಕರ್ಷಕ ಸೆಳೆತಗಳು ಹಾಸುಗೆಯಲ್ಲಿ ರಿಚರ್ಡನನ್ನು ಸೋಲಿಸಿರುವುದು, ಮಧು ಎಂಬ ನೆರಳು ಸದಾ ಕಾಡುತ್ತಿರುವುದು ಇತ್ಯಾದಿ ಇತ್ಯಾದಿ. ಆದರೆ ರಿಚರ್ಡ್ ಕೊಂಚ ಪೇಲವವಾಗಿ ಮೂಡಿದರೂ ಇಡೀ ಕಾದಂಬರಿಗೆ ಅವನ ಪಾತ್ರ ಒದಗಿಸಿದ ಪರಿಪ್ರೇಕ್ಷ್ಯಕ್ಕೆ ಅದರದ್ದೇ ಆದ ಮಹತ್ವವಿರುವುದು ನಿಜ.

ನೈಜೀರಿಯಾ - ಬಯಾಫ್ರ ನಡುವೆ ನಡೆದಿರುವುದು ಈಗ ಇತಿಹಾಸ. ಇಡೀ ಅರವತ್ತರ ದಶಕವನ್ನು ಹಿಡಿದಿಡಲು ತನ್ನ ಬಾಹುಗಳನ್ನು ಚಾಚುವ ಈ ಕಾದಂಬರಿ ಆ ಕಾಲದ ಕ್ರಾಂತಿ-ಯುದ್ಧ-ನಿರಾಶ್ರಿತರ ನೋವು,ಸಂಕಟಗಳನ್ನು ಬಿಂಬಿಸಿ ಈಗಾಗಲೇ ಆಫ್ರಿಕನ್ ಸಾಹಿತ್ಯದಲ್ಲಿ ಬಂದಿರುವ ಅನೇಕ ಕಾದಂಬರಿಗಳ ಸಾಲಿನಲ್ಲಿ ಎಲ್ಲಿ ನಿಲ್ಲುತ್ತದೋ ಹೇಳುವುದು ನನ್ನಂಥವನಿಗೆ ಕಷ್ಟ. ಆದರೆ ಕಾದಂಬರಿಕಾರ್ತಿ ಇದನ್ನು ಸಂಶೋಧನೆಯ ಶಿಸ್ತು-ಶ್ರದ್ಧೆಗಳಿಂದ ಕಲಾಕೃತಿಯನ್ನಾಗಿ ಕಟೆದಿರಿಸಿರುವುದು ಸತ್ಯ. 1977ರಲ್ಲಿ ಜನಿಸಿದ ಚಿಮಾಮಾಂಡ ಅದಿಚ್ಯೆ ಎನ್‌ಗೋಝಿ ಈ ಕೃತಿಯನ್ನು 2007ರಲ್ಲಿ, ಅಂದರೆ ಮುವ್ವತ್ತರ ಹರಯದಲ್ಲಿ ಬರೆದಿದ್ದರೆಂಬುದು ಗಮನಾರ್ಹ. ಹಾಗಾಗಿಯೇ ಚರಿತ್ರೆ, ಇತಿಹಾಸ, ಯುದ್ಧ, ಪ್ರತ್ಯಕ್ಷದರ್ಶಿ ಘಟನೆಗಳು - ಈ ಎಲ್ಲದರಾಚೆ ಈಕೆ ಸೃಷ್ಟಿಸಿದ ಸಾಮಾನ್ಯ ಮನುಷ್ಯರು, ಅವರ ಜೀವಂತಿಕೆ ಮತ್ತು ಇಡೀ ಕೃತಿ ಮನಸ್ಸಿನಲ್ಲಿ ಉಳಿಸಿಬಿಡುವ ಒಂದು ಜಗತ್ತು - ಕೃತಿಯ ಯಶಸ್ಸಿನ ಮಾನದಂಡದಂತೆ ಕಾಣುತ್ತದೆ.

ಕನ್ನಡ ಸಾಹಿತ್ಯದ ದಿಗ್ಗಜರು ಸೃಜಿಸಿದ ಸಾಮಾನ್ಯ ಮನುಷ್ಯರನ್ನು ಮನಸ್ಸಿನಲ್ಲೆ ನೆನೆಯುತ್ತ ಹೋದರೆ ಚಿತ್ತಾಲರ ಸಾಮಾನ್ಯ ಮನುಷ್ಯ, ಜಯಂತ ಕಾಯ್ಕಿಣಿಯವರ ಸಾಮಾನ್ಯ ಮನುಷ್ಯ, ರಾಘವೇಂದ್ರ ಪಾಟೀಲರ ಸಾಮಾನ್ಯ ಮನುಷ್ಯ, ತೇಜಸ್ವಿಯವರ ಸಾಮಾನ್ಯ ಮನುಷ್ಯ - ಹೀಗೆ. ಮತ್ತು ನಾವೂ ನೀವೂ ದಿನ ನಿತ್ಯ ಕಾಣುತ್ತಿರುವ, ಆಡುತ್ತಿರುವ ಸಾಮಾನ್ಯ ಮನುಷ್ಯರನ್ನು ಗಮನಿಸಿದರೆ ಸಾಹಿತ್ಯದಿಂದ ಬದುಕು ಏನನ್ನು ನಿರೀಕ್ಷಿಸುತ್ತದೆ, ಸಾಹಿತ್ಯ ಬದುಕನ್ನು ಸಂಪನ್ನ ಗೊಳಿಸಲು ಅದು ಬದುಕಿನಿಂದ ಪಡೆದುದನ್ನು ಬದುಕಿಗೆ ಮರಳಿಸಿ ಕೊಡಬೇಕಾದುದೇನು ಎಂದೆಲ್ಲ ಯೋಚಿಸಿದರೆ ಹೊಸ ತಲೆಮಾರಿನ ಸಾಹಿತ್ಯದ ‘ಜೀವಂತಿಕೆ’, ಬದುಕು, ಜೀವನ ಎಲ್ಲವೂ ಕ್ಲೀಷೆಯಂತೆ ಕಾಣಿಸುತ್ತದೆ. ಬಾಲ್ಯದ ಸ್ಮೃತಿಗಳಲ್ಲಿ, ಅವೇ ಅವೇ ಶಬ್ದಗಳಲ್ಲಿ, ಗಂಡು-ಹೆಣ್ಣುಗಳಲ್ಲಿ ಇನ್ನೂ ಇನ್ನೂ ಹೊರಳಾಡುತ್ತಿರುವಂತೆ ಕಾಣುವ ಈ ಸಾಹಿತ್ಯ ದಿಕ್ಕು ದೆಸೆಗಳನ್ನು ಇನ್ನಷ್ಟೇ ಕಂಡುಕೊಳ್ಳಬೇಕಾಗಿದೆ ಅನಿಸುವಾಗಲೇ ಅದೇ ಪೀಳಿಗೆಯ ಪ್ರತಿಭೆಯೊಂದು ಸೃಜಿಸಿರುವ ಕೃತಿ ಕಣ್ಣು ಕುಕ್ಕುವಂತಿರುವುದು, ಆ ದೇಶದ ಇತಿಹಾಸ-ಚರಿತ್ರೆಗಳ ಹೊರತಾಗಿಯೂ, ಬದುಕು-ಜೀವನ-ಸಂವೇದನೆಗಳ ಗ್ರಹಿಕೆಯ ಮತ್ತು ಅವುಗಳ ಸೃಜನಶೀಲ ಅಭಿವ್ಯಕ್ತಿಯ ನೆಲೆಗಳಿಗಾಗಿ ಮುಖ್ಯವಾಗುತ್ತದೆ.

Half of a Yellow Sun ಚಿಮಾಮಾಂಡ ಎನ್‌ಗೋಝಿ ಅದಿಚ್ಯೆಯವರ ಎರಡನೆಯ ಕಾದಂಬರಿ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ