Monday, December 13, 2010

ಕೆ.ಸತ್ಯನಾರಾಯಣರ ಹೊಸ ಕಥಾಸಂಕಲನ : ರಾಚನಿಕ ಮತ್ತು ನಿರಚನಾ ನೆಲೆಯ ಸಮಸ್ಯೆಗಳು

‘ನಕ್ಸಲ್ ವರಸೆ’ ನಮ್ಮ ಹಿರಿಯ ಕತೆಗಾರ ಕೆ. ಸತ್ಯನಾರಾಯಣರ ಹೊಸ ಕಥಾಸಂಕಲನ. ಎಂಟು ಹೊಸ ಮತ್ತು ಒಂದು ಹಳೆಯ ಕತೆಗಳಿರುವ ಈ ಸಂಕಲನ ಹಲವು ಕಾರಣಗಳಿಗಾಗಿ ಮಹತ್ವ ಪಡೆದಿದೆ.

ಮೊದಲನೆಯದಾಗಿ ಸಾಹಿತ್ಯವನ್ನು ಅದರ ಸೃಜನಶೀಲ ನೆಲೆಯಿಂದಲೂ ಅಸಾಹಿತ್ಯಿಕ ನೆಲೆಯಿಂದಲೂ ಒರೆಹಚ್ಚಿ ನೋಡಬಲ್ಲ ಸಾಹಿತಿ-ಚಿಂತಕ ಮತ್ತು ಸಾಮಾಜಿಕ ನೆಲೆಯ ಹೋರಾಟಗಳಲ್ಲಿ ಸರಿಸಮನಾಗಿ ತೊಡಗಿಕೊಂಡಿರುವ ಕೆ.ಫಣಿರಾಜ್ ಇಲ್ಲಿ ಕೆ.ಸತ್ಯನಾರಾಯಣರ ಸಾಹಿತ್ಯಿಕ ಕಾಳಜಿಗಳನ್ನೂ, ಬದುಕಿನ ಕುರಿತ ಅವರ ಕುತೂಹಲ ಮತ್ತು ತಾತ್ತ್ವಿಕ ನಿಲುವುಗಳನ್ನೂ ವಿಮರ್ಶಿಸಿ ಬರೆದಿರುವ ವಿಸ್ತೃತವಾದ ಮುನ್ನುಡಿ.

ಎರಡನೆಯದು, ಇಲ್ಲಿನ ಕಥೆಗಳು ಸುತ್ತಿಕ್ಕುವ ನಕ್ಸಲ್, ಕಮ್ಯುನಿಸಂ, ದೇವರು, ದಲಿತರು, ಶ್ರದ್ಧೆ ಮತ್ತು ನಂಬಿಕೆ, ರಾಜಕೀಯಗಳಂಥ ಹೊಸ ತಲೆಮಾರಿನ ಕತೆಗಾರರು ಮರೆತಂತಿರುವ; ಆದರೆ, ತಾತ್ತ್ವಿಕ ನಿಲುವೇ ಮಂಚೂಣಿಯಲ್ಲಿಲ್ಲದ - ಬದುಕು ಮತ್ತು ಸಾಮಾನ್ಯನ ದೈನಂದಿನಗಳೇ ಪ್ರಧಾನ ಕಾಳಜಿಯಾಗಿರುವ ವೈಶಿಷ್ಟ್ಯವನ್ನು ಹೊಂದಿರುವುದು.

ಮೂರನೆಯದು, ಇಲ್ಲಿನ ಹೆಚ್ಚಿನ ಕತೆಗಳು ಕೆ. ಸತ್ಯನಾರಾಯಣರ ಎಂದಿನ ಶೈಲಿ ಒಂದು ಹೊರಳುದಾರಿಯಲ್ಲಿರುವುದನ್ನು ಸ್ಪಷ್ಟಪಡಿಸುತ್ತಿರುವುದು.

ನಾಲ್ಕನೆಯದು ಮತ್ತು ಪ್ರಸ್ತುತ ಬರಹಕ್ಕೆ ಮುಖ್ಯ ಪ್ರೇರಣೆಯಾಗಿರುವುದು, ಸತ್ಯನಾರಾಯಣರ ಕತೆ - ಕಾದಂಬರಿಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸಲ್ಪಟ್ಟು ಜಿಜ್ಞಾಸೆಗೊಳಪಡುತ್ತಿರುವ, ಸಾಹಿತ್ಯವನ್ನು ರಾಚನಿಕವಾಗಿಯೂ ನಿರಚನಾ ಮಾಧ್ಯಮವಾಗಿಯೂ ಕಾಣುತ್ತ ಸೂಕ್ಷ್ಮಸಂವೇದಿ ಬರಹಗಾರನೊಬ್ಬ ಎದುರಿಸುವ ಬಿಕ್ಕಟ್ಟುಗಳನ್ನು ಕುರಿತೇ ಇಲ್ಲಿನ ಕೆಲವು ಕತೆಗಳು ಪ್ರೇರಿಸುತ್ತಿರುವ ಚಿಂತನಾಕ್ರಮ.

ಈ ಸಂಕಲನ ಮಹತ್ವದ್ದು ಎನ್ನಲು ಐದನೆಯ ಕಾರಣವೂ ಒಂದಿದೆ. ಇವತ್ತು ಚಿತ್ತಾಲ, ಅನಂತಮೂರ್ತಿಯವರಂಥ ಹಿರಿಯರು, ರಾಘವೇಂದ್ರ ಪಾಟೀಲ, ಜಯಂತ್ ಕಾಯ್ಕಿಣಿ, ವಿವೇಕ ಶಾನಭಾಗರಂಥ ಪ್ರಬುದ್ಧ ಕತೆಗಾರರು, ಪ್ರಹ್ಲಾದ ಅಗಸನಕಟ್ಟೆ, ಶ್ರೀಧರ ಬಳಗಾರ, ವಸುಧೇಂದ್ರ ಮೊದಲಾದ ನಿನ್ನೆ ಮೊನ್ನೆಯಷ್ಟೇ ಹೊಸ ತಲೆಮಾರಿನವರು ಎಂದು ಕರೆಸಿಕೊಳ್ಳುತ್ತಿದ್ದ ಸಮರ್ಥ ಕತೆಗಾರರು ಮತ್ತು ಮುವ್ವತ್ತರ ಆಸುಪಾಸಿನ ವಯೋಮಾನದ ಅದ್ಭುತ ಪ್ರತಿಭೆಯ ಹಲವು ಹೊಸ ಕತೆಗಾರರೂ ಏಕಕಾಲಕ್ಕೆ ಬರೆಯುತ್ತಿದ್ದಾರೆ. ಈ ಕಾಲಘಟ್ಟದಲ್ಲಿ ಕೆ.ಸತ್ಯನಾರಾಯಣರಂಥ ಕಳೆದ ಮೂರು ದಶಕಗಳಿಂದಲೂ ಬರೆಯುತ್ತ ಬಂದಿರುವ ಒಬ್ಬ ಕತೆಗಾರ ತೋರುತ್ತಿರುವ ಜೀವನಪ್ರೀತಿ, ಪ್ರಯೋಗಶೀಲತೆ ಮತ್ತು ಕಥನ ಕಲೆಯ ಕುರಿತಾದ ಜಿಜ್ಞಾಸೆ - ಮಹತ್ವದ್ದಾಗಿದೆ.

"ಎಷ್ಟೆಲ್ಲ ಕತೆ ಬರೆದರೂ ತಿಳಿಯುವುದೇ ಇಲ್ಲ. ಕತೆಯೆಂದು ನಾನು ಭಾಚಿಸಿ ಬರೆಯಲು ಕುಳಿತಾಗ, ಹಾಗೆ ಬರೆಯುತ್ತಾ ಹೋಗುವಾಗ ಹೊಳೆದದ್ದು, ನಡೆದದ್ದು ಎಲ್ಲವನ್ನೂ ಕತೆಯೊಳಗೆ ತರಬೇಕೋ ಬೇಡವೋ? ಹಾಗೆ ನಡೆದದ್ದು ಹೊಳೆದದ್ದನ್ನೆಲ್ಲ ಕತೆಯೊಳಗೆ ಸೇರಿಸುತ್ತಾ ಹೋದರೆ ಕತೆಯ ಕೇಂದ್ರದ ಗತಿ, ಧ್ವನಿ, ಸಾವಯವ ಶಿಲ್ಪದ ಗತಿ ಏನಾಗಬೇಡ? ರೂಪಕದ ಗುಣ ತೆಳುವಾಗುವುದಿಲ್ಲವೇ! ಈ ಪ್ರಶ್ನೆಗಳೆಲ್ಲಾ ಸರಿ. ಆದರೆ ಕತೆ ಬರೆಯುವಾಗಿನ ಸಮಯದಲ್ಲಿ ನಮಗೆ ಒದಗುವ ಘಟನೆಗಳು, ಎದುರಾಗುವ ವ್ಯಕ್ತಿಗಳೇಕೆ ಬರೆಯುತ್ತಿರುವ ಒಂದೇ ಒಂದು ಕತೆಯನ್ನು ಮನ್ನಿಸುತ್ತಾರೆ, ಹೇಳಿ? ಈ ಗೊಂದಲದಲ್ಲೇ ಕತೆಯೊಂದಕ್ಕೆ ಹೊಳಹು ಹಾಕುತ್ತಾ ಬರೆಯುತ್ತಿದ್ದ ಕಾಲಾವಧಿಯಲ್ಲಿ ನಡೆದದ್ದನ್ನು ನಿಮಗೆ ಒಪ್ಪಿಸಿಬಿಡುತ್ತೇನೆ. ಇದೆಲ್ಲ ಒಂದೇ ಕತೆಯೇ ಅಲ್ಲವೇ, ಒಂದೇ ಕತೆ ಮಾತ್ರವಾಗಬೇಕೆ ಎಂಬುದು ನಿಮ್ಮ ತೀರ್ಮಾನಕ್ಕೆ ಬಿಟ್ಟಿದ್ದು, ಈ ತೀರ್ಮಾನವನ್ನು ನಿಮಗೆ ಬಿಟ್ಟಿರುವುದರಿಂದಲೇ ಕತೆಗೆಂದು ಇಟ್ಟುಕೊಂಡಿದ್ದ ಶೀರ್ಷಿಕೆ ‘ಬಿಹಾರದ ಸಿಟ್ಟು ಮತ್ತು ಗುಂತೂರಿನ ಕಾರ’ವನ್ನು ಕೂಡ ಕೈಬಿಟ್ಟಿದ್ದೇನೆ. ಬನ್ನಿ, ನೋಡುವ, ಏನಾಗುತ್ತದೆ."
(‘ಇದೆಲ್ಲ ಒಂದೇ ಕತೆಯೇ?’ ಕತೆ ಆರಂಭವಾಗುವ ಪರಿ)

".....ನನ್ನ ಸ್ವಭಾವಕ್ಕೆ ಅನುಗುಣವಾಗಿ ಕತೆ ಕೇಳಿದ ತಕ್ಷಣವೇ ಬರೆದು ಅಚ್ಚಿಗೆ ಕಳಿಸಬೇಕಾಗಿತ್ತು. ಈ ಕತೆಯ ವಿಷಯದಲ್ಲಿ ಹಾಗಾಗಲಿಲ್ಲ. ಏಕೆಂದರೆ ಈ ಕತೆಯನ್ನು ಕೊನೆ ಮಾಡೋದು ಹೇಗೆ? ಕತೆಯ ಶಿಲ್ಪ, ಅಚ್ಚುಕಟ್ಟಿನ ಅನುಕೂಲಕ್ಕೆಂದು ಕತೆಗೊಂದು ಮುಕ್ತಾಯ ಕಲ್ಪಿಸಿದರೆ ಕತೆ ಮುಗಿದೇ ಇಲ್ಲ, ಕತೆ ಮುಗಿಯುವುದೇ ಬೇಡ ಎಂದು ಕಾದು ಕುಳಿತಿರುವ ಹಿರಿಯ ಜೀವಗಳ ಕತೆ ಏನಾಗಬೇಡ. ಅದೂ ಅಲ್ಲದೆ ಆ ಹಿರಿಯ ಜೀವಗಳು ಕತೆಗೆ ಬಯಸುವ ಮುಕ್ತಾಯವನ್ನು ಕತೆಯಲ್ಲಿ ಬರೆದುಬಿಡಬಹುದಾದರೂ ನಿಜ ಜೀವನದಲ್ಲಿ ಸಾಧ್ಯ ಮಾಡಿಕೊಡುವುದಾದರೂ ಹೇಗೆ?

.......

"ಕಥನ ಕಲೆಯ ಬಗ್ಗೆ ನಡೆಯುತ್ತಲೇ ಇರುವ ವಿಚಾರ ಸಂಕಿರಣಗಳಲ್ಲಿ ಸಿಕ್ಕಾಗಲೆಲ್ಲ ಮೊಪಾಸಾ, ಮಾಸ್ತಿ, ಮಾರ್ಕ್ವೆಜ್ ಅಂತವರ ಕತೆಗಳ ಬಗ್ಗೆಯೆಲ್ಲ ಚರ್ಚಿಸುತ್ತಲೇ ಇರುತ್ತೇವೆ. ಆದರೆ ಅದೇಕೋ ಅಪ್ಪಿ ತಪ್ಪಿ ಕೂಡ ಭಟ್ಟರೇ ಕಳಿಸಿದ್ದ ಬಾಲಗಣಪತಿಯವರ ಕತೆ ಬಗ್ಗೆ ಇಬ್ಬರೂ ಪ್ರಸ್ತಾಪಿಸಲು ಹೋಗುವುದೇ ಇಲ್ಲ, ನೋಡಿ."
( ‘ಭಟ್ಟರು ಕಳಿಸಿದ ಕತೆ’ಯ ಕೊನೆಯ ಭಾಗ)

ಈ ಸಂಕಲನ ಮಹತ್ವದ್ದು ಎನ್ನಲು ಐದನೆಯ ಕಾರಣವೂ ಒಂದಿದೆ. ಇವತ್ತು ಚಿತ್ತಾಲ, ಅನಂತಮೂರ್ತಿಯವರಂಥ ಹಿರಿಯರು, ರಾಘವೇಂದ್ರ ಪಾಟೀಲ, ಜಯಂತ್ ಕಾಯ್ಕಿಣಿ, ವಿವೇಕ ಶಾನಭಾಗರಂಥ ಪ್ರಬುದ್ಧ ಕತೆಗಾರರು, ಪ್ರಹ್ಲಾದ ಅಗಸನಕಟ್ಟೆ, ಶ್ರೀಧರ ಬಳಗಾರ, ವಸುಧೇಂದ್ರ ಮೊದಲಾದ ನಿನ್ನೆ ಮೊನ್ನೆಯಷ್ಟೇ ಹೊಸ ತಲೆಮಾರಿನವರು ಎಂದು ಕರೆಸಿಕೊಳ್ಳುತ್ತಿದ್ದ ಸಮರ್ಥ ಕತೆಗಾರರು ಮತ್ತು ಮುವ್ವತ್ತರ ಆಸುಪಾಸಿನ ವಯೋಮಾನದ ಅದ್ಭುತ ಪ್ರತಿಭೆಯ ಹಲವು ಹೊಸ ಕತೆಗಾರರೂ ಏಕಕಾಲಕ್ಕೆ ಬರೆಯುತ್ತಿದ್ದಾರೆ. ಈ ಕಾಲಘಟ್ಟದಲ್ಲಿ ಕೆ.ಸತ್ಯನಾರಾಯಣರಂಥ ಕಳೆದ ಮೂರು ದಶಕಗಳಿಂದಲೂ ಬರೆಯುತ್ತ ಬಂದಿರುವ ಒಬ್ಬ ಕತೆಗಾರ ತೋರುತ್ತಿರುವ ಜೀವನಪ್ರೀತಿ, ಪ್ರಯೋಗಶೀಲತೆ ಮತ್ತು ಕಥನ ಕಲೆಯ ಕುರಿತಾದ ಜಿಜ್ಞಾಸೆ - ಮಹತ್ವದ್ದಾಗಿದೆ.

‘ನಕ್ಸಲ್ ವರಸೆ’ ಕತೆಯ ಪ್ರಧಾನ ಗುಣ, ಒಂದು ಕಥಾನಕವಾಗಿ ಇದನ್ನೆಲ್ಲ ಹೇಳಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದನ್ನು ಅತ್ಯಂತ ಕುತೂಹಲಕರ ಕಥನವನ್ನಾಗಿಸಿರುವುದು. ನಕ್ಸಲ್ ಅಥವಾ ಅಂಥ ಯಾವುದೇ ಸಾಮಾಜಿಕ ಬದಲಾವಣೆಯನ್ನು ಬಯಸಿ ನಡೆಯುತ್ತಿರುವ ಕ್ರಾಂತಿಯ ಆಂತರಿಕ ಪಲ್ಲಟಗಳನ್ನು ಕಾಲ-ದೇಶ ಪರಿಮಿತಿಯಲ್ಲಾದರೂ (ಮುಖ್ಯವಾಗಿ ಆಂಧ್ರಕ್ಕೆ ಮತ್ತು ಎರಡು ತಲೆಮಾರಿಗೆ) ಗುರುತಿಸುವುದು, ಅದರ ಎಲ್ಲ ಆಯಾಮಗಳಲ್ಲಿ ಗುರುತಿಸುವುದು ಸುಲಭದ ಸವಾಲೇನೂ ಅಲ್ಲ. ಇದನ್ನು ಕೆ. ಸತ್ಯನಾರಾಯಣ ತಮ್ಮ ಕತೆ ‘ನಕ್ಸಲ್ ವರಸೆ’ಯಲ್ಲಿ ಅತ್ಯಂತ ಸಂಯಮದಿಂದ ಸಾಧಿಸಿದ್ದಾರೆ. ಸಾಧಾರಣವಾಗಿ ಸತ್ಯನಾರಾಯಣ ಅವರು ತಂತ್ರಕ್ಕೆ ಹೆಚ್ಚು ಮಹತ್ವವನ್ನು ನೀಡದವರಾದರೂ, ತಾಂತ್ರಿಕವಾಗಿ ಮಹತ್ವದ್ದೆನಿಸುವ ಜಾಣ್ಮೆಯೊಂದಿಗೆ ಇದನ್ನು ಅವರಿಲ್ಲಿ ನಿಭಾಯಿಸಿರುವುದು ಅವರೊಳಗಿನ ಕಥೆಗಾರ ಪ್ರಯೋಗಶೀಲತೆಯೊಂದಿಗೆ ಸಮಕಾಲೀನ ಕಥನ ಕೌಶಲಗಳಿಗೆ ಸದಾ ತೆರೆದುಕೊಂಡೇ ಇದ್ದಾನೆನ್ನುವುದಕ್ಕೆ ಸಾಕ್ಷಿಯಂತಿದೆ. ಈ ಸಂಕಲನದ ಪ್ರಮುಖ ವೈಶಿಷ್ಟ್ಯವೇ ಇದೆಂದರೂ ತಪ್ಪಾಗಲಾರದು.

ವಿ.ಎಸ್.ನೈಪಾಲರು ಕೊಂಡಪಲ್ಲಿ ಶ್ರೀನಿವಾಸಯ್ಯನ ಜೀವನವನ್ನು ಹಿನ್ನೆಲೆಯಾಗಿಟ್ಟುಕೊಂಡು ಬರೆದ ಕಾದಂಬರಿಯನ್ನು ನಾನು ಓದಿಲ್ಲ. ಆದರೂ ನೈಪಾಲ್ ಭಾರತದ ಬಗ್ಗೆ ಹೊಂದಿರುವ ನಿಲುವು ಮತ್ತು ಅನಿವಾಸಿಯಾಗಿರುವ ಅವರಿಗೆ ಭಾರತದ ಕುರಿತು ಇರುವ ಸ್ಥೂಲ ಗ್ರಹಿಕೆ ವಾಸ್ತವದಿಂದ ಬಹಳಷ್ಟು ದೂರವಾದದ್ದು ಎನ್ನುವ ಸಾಮಾನ್ಯ ಅಭಿಪ್ರಾಯದ ಬಗ್ಗೆ ಗೊತ್ತು. ಇಲ್ಲಿ ಈ ಕತೆ ವಿಭಿನ್ನ ಮನುಷ್ಯರು ಬದುಕನ್ನು ಮತ್ತು ತಮ್ಮ ಬದುಕಿನಲ್ಲಿ ಎದುರಾಗುವ ಮನುಷ್ಯರನ್ನು ತಮ್ಮ ತಮ್ಮ ಆದ್ಯತೆಗಳಿಗನುಗುಣವಾಗಿ ಗ್ರಹಿಸುವ ಒಂದು ವಿಧಾನವನ್ನು ಸೂಚ್ಯವಾಗಿ ಕಾಣಿಸುತ್ತ ಹೋಗಿದೆ. ಅದು ಸುಬ್ಬುನಾಯಿಡುವಿನಿಂದಲೇ ತೊಡಗುತ್ತದೆ. ಪ್ರಸನ್ನ ಚೌಧುರಿಯನ್ನು ಭೇಟಿಯಾಗುವ ಒಂದು ಸಹಜ ತುಡಿತವನ್ನು ಕೂಡ ತನ್ನ ಕಛೇರಿಯ ಮಂದಿಯೊಂದಿಗೆ ಸಮರ್ಥಿಸಿಕೊಳ್ಳುವುದು ಅಥವಾ ಅವರಿಗೂ ಅದು ಸಹಜವೆನ್ನಿಸುವಂತೆ ಮನವರಿಕೆ ಮಾಡುವುದು ಸ್ವತಃ ನಿರೂಪಕನಿಗೇ ಕಷ್ಟದ ಮತ್ತು ಮುಜುಗರದ ಕೆಲಸವಾಗಿ ಬಿಟ್ಟಿದೆ. ಹಾಗೆಯೇ ಸುಬ್ಬುನಾಯಿಡು ಎಸ್ ಸಿಗಳ ಕಾಲೇಜು-ಹಾಸ್ಟೆಲು ಮುಚ್ಚಿಸಿಬಿಟ್ಟರೆ ಇವರ ‘ಹಾವಳಿ’ ಮತ್ತು ಕಮ್ಯೂನಿಸ್ಟ್‌ರ ‘ಕಿತಾಪತಿ’ ನಿಲ್ಲುತ್ತದೆ ಎನ್ನುವ ಮಾತಿಗೆ ಪ್ರತಿಕ್ರಿಯಿಸುವುದು ಕೂಡಾ. ಇಲ್ಲಿ ನಿರೂಪಕ ಯಾವುದರ ಪರವಾಗಿಯೋ ಅಥವಾ ವಿರುದ್ಧವಾಗಿಯೋ ಇರುವುದರಿಂದ ಹುಟ್ಟುವ ಮುಜುಗರ, ಕಷ್ಟ ಅಲ್ಲ ಇದು. ನಿರೂಪಕ ಸದಾ ಕಾಲ ಒಂದು ಮಾತಿನ ಮರ್ಮವನ್ನು ಅರಸುತ್ತಾ ಹೊರಡುವ ಲಹರಿಯ ಮನೋಭಾವವನ್ನು ತೋರುವುದರ ಅರ್ಥವೇ ಒಂದು ಸಂಗತಿಗಿರುವ ಒಂದಕ್ಕಿಂತ ಹೆಚ್ಚಿನ ಮುಖಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವೇ ಆಗಿದೆ. ಇಡೀ ಕತೆ ಕೂಡಾ ಅಂಥ ಒಂದು openness ಹೊಂದಿರುವುದನ್ನು ಕಾಣುತ್ತೇವೆ. ಇದರಿಂದಾಗಿಯೇ ಈ ಕತೆ ನಕ್ಸಲ್ ಚಳುವಳಿಯ ವೈಫಲ್ಯದ ಕಡೆಗೇ ಹೆಚ್ಚು ಗಮನಕೊಡುತ್ತಿದೆ ಎನಿಸಬಹುದಾದ ಒಂದು ಆರೋಪದಿಂದ ಮುಕ್ತವಾಗುತ್ತದೆ ಕೂಡ. ಈ ರೀತಿಯ ಸೂಕ್ಷ್ಮ ವಿಷಯಗಳ ಬಗ್ಗೆ ಬರೆಯುವಾಗ ಕತೆಗಾರ ಸಂಯಮವನ್ನು ಕಾಪಾಡಿಕೊಂಡು ಬರುವುದು ಕಷ್ಟ. ಸ್ವತಃ ಬರಹಗಾರ ಬದುಕನ್ನು ನೋಡುವ ದೃಷ್ಟಿ ಮತ್ತು ಆತನ ಜೀವನದೃಷ್ಟಿ (ಸಾಮಾನ್ಯ ಬದುಕಿನಲ್ಲಿ (ಸಾಹಿತ್ಯಕ್ಕೇ ವಿಶಿಷ್ಟವಾಗಿ ಅಲ್ಲ) ಬರಹಗಾರನ ಆದ್ಯತೆಗಳು) ಎರಡರ ಪ್ರಾಮಾಣಿಕತೆಯನ್ನು ಒರೆಗೆ ಹಚ್ಚುವ ವಸ್ತುವಿದು. ಕತೆಯ ಪ್ರಾರಂಭದಲ್ಲೇ ಬರುವ ನೈಪಾಲ್ ಉಲ್ಲೇಖ, ಮುಂದೆ ನೈಪಾಲ್ ಈ ಸ್ಥಳಕ್ಕೆಲ್ಲ ಬಂದು ಸುತ್ತಾಡಿ ಗ್ರಹಿಸುವ ಪರಿ (ಸುಡು ಬಿಸಿಲು-ಧೂಳು, ಲಂಟಾನಾ ಜಿಗ್ಗಿನ ನಡುವೆ ಕಾಡಿನಲ್ಲಿ ಸುದೀರ್ಘ ನಡಿಗೆ ನೈಪಾಲ್ ಮನಸ್ಥಿತಿಯ ಮೇಲೆ ಮಾಡಿರಬಹುದಾದ ಪರಿಣಾಮ, ಆತನ ಸಿನಿಕತನವನ್ನು ಉತ್ತೇಜಿಸಿರಬಹುದಾದ ಸುಸ್ತು ಕಾರಣವಾಗಿ ಅನುಕಂಪ, ಅಸಹಾಯಕ ಅಥವಾ ವಿಷಾದದ ನೆಲೆಯಿಂದ ಇದನ್ನೆಲ್ಲ ಕಾಣಲಾರದೇ ಹೋದ - ಸೃಜನಶೀಲ ಸೃಷ್ಟಿಕ್ರಿಯೆಗೆ ಮಾರಕವಾದ ಮನಸ್ಥಿತಿಯೊಂದು ಉದ್ಭವಿಸಿರಬಹುದಾದ ವಿದ್ಯಮಾನವನ್ನು ಇಲ್ಲಿ ಅನುಮಾನಿಸಲಾಗಿದೆ ಎಂಬುದನ್ನು ಗಮನಿಸಬೇಕು) ಮತ್ತು ಅದಕ್ಕೂ ಮತ್ತು ಅದು ಹುಟ್ಟಿಸಿದ ಕಾದಂಬರಿಗೂ ಪ್ರಸನ್ನ ಚೌಧುರಿ ಸಹಿತ ಮಂದಿ ಪ್ರತಿಕ್ರಿಯಿಸುವ ಬಗೆ ಹಾಗೂ ಪ್ರಸ್ತುತ ಕತೆಯ (‘ನಕ್ಸಲ್ ವರಸೆ’)ಕಥಾನಕದ ನಿರೂಪಣಾ ತಂತ್ರ ಇವು ಒಂದಕ್ಕೊಂದು ಸಂಬಂಧ ಹೊಂದಿವೆ. ಅಂದರೆ, ಇದು ನಮ್ಮ ಗ್ರಹಿಕೆಯ ಕ್ರಮದ ಕುರಿತ ಕತೆ ಕೂಡ ಆಗಿರುವುದನ್ನು ಇಲ್ಲಿ ಗಮನಿಸುವುದು ಮುಖ್ಯವಾಗುತ್ತದೆ.

ಇಡೀ ಕತೆಯನ್ನು ಆವರಿಸಿಕೊಳ್ಳುವ ಪ್ರಸನ್ನ ಚೌಧರಿ ಒಂದು ವಿಲಕ್ಷಣದ್ದೆನ್ನಬಹುದಾದ, ವಿಕ್ಷಿಪ್ತವೆಂತಲೂ ಬ್ರಾಂಡ್ ಮಾಡಬಹುದಾದ ಆದರೆ ಸಾಕಷ್ಟು ಪ್ರಾಮಾಣಿಕವಾಗಿ ತನ್ನ ತಿಕ್ಕಲು ಅಥವಾ ಐಲುತನವನ್ನೆಲ್ಲ ಬಿಚ್ಚಿಟ್ಟ ಪಾತ್ರ. ಈ ಕಾರಣಕ್ಕೂ ಇಂಥ ಪಾತ್ರವನ್ನು ತನ್ನ ಗಾಂಭೀರ್ಯದ ಚೌಕಟ್ಟಿನೊಳಗೇ ಇರಿಸಿ ಕಟ್ಟುವುದು ಕಷ್ಟದ ಕೆಲಸ. ಅದನ್ನು ಕೆ.ಸತ್ಯನಾರಾಯಣರು ಅತ್ಯಂತ ಸಮರ್ಥವಾಗಿ ಮತ್ತು ಸಂಯಮದಿಂದ ನಿಭಾಯಿಸಿರುವುದು ಅಚ್ಚರಿಯನ್ನೂ ಮೆಚ್ಚುಗೆಯನ್ನೂ ಹುಟ್ಟಿಸುತ್ತದೆ. ಈ ಪಾತ್ರದ contraversy ಒಂದೆರಡಲ್ಲ. ಆದರೆ ಅವುಗಳಲ್ಲೇ ಒಂದು ಬಗೆಯ ಹೊಂದಾಣಿಕೆ ಕೂಡ ಇದೆ. ಇದು ಅಭ್ಯಾಸದಿಂದ ಮೈಗೂಡಿಸಿಕೊಂಡಿದ್ದಿರಬಹುದು ಅಥವಾ ತನ್ನದೇ ಬದುಕಿನ ಆತ್ಮನಿರೀಕ್ಷಣೆಯ ಕ್ಷಣಗಳಿಂದ ತಾನೇ ಪಲಾಯನ ಮಾಡಿರುವ ಅನ್ಯಮನಸ್ಕ indulgence ನಿಂದಲೂ ಸಿದ್ಧಿಸಿದ ನಿರ್ಲಿಪ್ತಿಯಿರಬಹುದು. ಅದು ಸಾಧ್ಯ ಮನುಷ್ಯನಿಗೆ ಅನ್ನುವುದಕ್ಕಿಂತ ಅದನ್ನು ಕತೆಯಲ್ಲಿ ಚಿತ್ರಿಸುವುದು ಕಷ್ಟ ಎನ್ನುವುದು ನಮ್ಮ ಗಮನಕ್ಕೆ ಮುಖ್ಯವೆನಿಸುವ ಸಂಗತಿ.

ಪ್ರಸನ್ನ ಚೌಧುರಿಯ gross ವ್ಯಕ್ತಿತ್ವವನ್ನು ಬಿಟ್ಟು ಆತನನ್ನು ದಿಗಂಬರ ವ್ಯಕ್ತಿ (ಕೆ.ಸತ್ಯನಾರಾಯಣರ ಲೇಖನ - ‘ಬರಹಗಾರನ ತಲ್ಲಣ, ಆತಂಕಗಳು’ ಗಮನಿಸಿ: ಶೂದ್ರ ಪ್ರಕಾಶನ.)ಯನ್ನಾಗಿ ನೋಡುವಾಗಲೂ ಆತನಲ್ಲಿರುವ ದುಗುಡ, ಆತಂಕ, ಬಹಿರಂಗದಲ್ಲಿ ಒಪ್ಪಿಕೊಳ್ಳಲಾಗದ ಆದರೆ ಸುಪ್ತ ಮನಸ್ಸು ಒಪ್ಪಿಕೊಂಡಿರುವ ಸೋಲಿನ ಸೂಕ್ಷ್ಮ ಅರಿವು ಹುಟ್ಟಿಸಿದ ಒಂದು ತರದ ಹತಾಶೆ ಎಲ್ಲವೂ ಮುಖ್ಯ. ಈ ಹತಾಶೆ ಹೊರಟೇ ಹೋದ ರೈಲಿನಲ್ಲಿ, ಕೊಂಡಪಲ್ಲಿಯ ಹೋಟೆಲ್ ರೂಮನ್ನು ತೋರಿಸಲು ಹೋಗಿ ಆದ ಮುಖಭಂಗವಲ್ಲದ ಮುಖಭಂಗದಂಥ ಪ್ರಸಂಗದಲ್ಲಿ, ರಾತ್ರಿ ನಿದ್ದೆಬರದೆ ಹೊರಬಂದು ನಿಂತಾಗ ಕಂಡಂತಾಗುವ ಕೊಂಡಪಲ್ಲಿ ಮತ್ತು ಭಾಸ್ಕರ ಇಬ್ಬರೂ ಕೈಕೈ ಹಿಡಿದು ನಕ್ಷತ್ರಗಳ ನಡುವೆ ಹೋಗುತ್ತಿರುವಂತೆ ಕಾಣುವ ಚಿತ್ತಭಿತ್ತಿಯಲ್ಲಿ, ಡೇನಿಯಲ್‍ರ ಪಾರ್ಥಿವ ಶರೀರದ ಮೂಲಕವೂ ಸ್ಫೂರ್ತಿಪಡೆಯಲೆತ್ನಿಸುವ ಹತಾಶ ಪ್ರಯತ್ನದಲ್ಲಿ ಕಣ್ಣಿಗೆ ಹೊಡೆಯುವುದಿಲ್ಲ, ಆತ್ಮಕ್ಕೆ ತಟ್ಟುತ್ತದೆ. ಮನುಷ್ಯನಿಗೆ ಭವಿಷ್ಯದಲ್ಲಿ ನಂಬಿಕೆಯಿರಬೇಕೇಕೆ ಎನ್ನುವ ಪ್ರಶ್ನೆಗೆ ಚೌಧುರಿ ಕೊಟ್ಟುಕೊಳ್ಳುವ ಉತ್ತರದಲ್ಲಿ ಕೂಡ ತತ್ವ, ಆದರ್ಶ, ಬದ್ಧತೆಗಳ ಪ್ರಶ್ನೆ ಎದ್ದು ಕಾಣುತ್ತದೆ ಎನ್ನುವ ದೃಷ್ಟಿಯಿಂದ ಇದು ಬಹಳ ಮುಖ್ಯ.

ಈ ಭವಿಷ್ಯವನ್ನು ಕಾಣುವ ಕ್ರಮದ ಬಗ್ಗೆ ಮತ್ತೆ ಉಲ್ಲೇಖ ಬರುವುದು ರೆಡ್ದಿಯ ರಕ್ತ ಅವನ ಹೆಂಡತಿಯ ರಕ್ತದೊಂದಿಗೆ ಸೇರಿ ಹೂವಿನ ರಾಶಿಯ ಕಡೆಗೆ ಹರಿಯುತ್ತಿರುವಾಗ. ‘ರಕ್ತ-ಹೆಂಡತಿ ಮತ್ತು ಹೂವು’ ಪದಗಳು ಕಟ್ಟಿಕೊಡುವ ಆರ್ದ್ರ ಚಿತ್ರ ಕೂಡ, ಆ ರೆಡ್ಡಿ ಎಂಥವನೇ ಇರಲಿ, ಕೊಂಚ ವಿಲಕ್ಷಣವಾಗಿದೆ, ಸಂದರ್ಭಕ್ಕೆ. ರಕ್ತ ಹೆಪ್ಪುಗಟ್ಟುವ ಮುನ್ನ ಅದರಲ್ಲಿ ಕಣ್ಣಿಟ್ಟು ಕಂಡರೆ ಭವಿಷ್ಯ ಕಾಣುತ್ತದೆ ಎನ್ನುವ ನಂಬಿಕೆ, ಹೆಪ್ಪುಗಟ್ಟಿದ ಮೇಲೆ ಕಾಣುವುದಿಲ್ಲ, ರೆಡ್ಡಿಯಂಥವರು ಇಲ್ಲದ ಒಂದು ನೆಮ್ಮದಿಯ ಜಗತ್ತು ಅಲ್ಲಿ ಮಾತ್ರ ಕಾಣಲು ಸಾಧ್ಯ, ಆದರೆ ರಕ್ತ ಹರಿಯುತ್ತಲೇ ಇರಬೇಕಾಗುತ್ತದೆ ಎನ್ನುವುದು - ಎಲ್ಲವೂ ತತ್ತ್ವನಿಷ್ಠವಾದ ನಂಬಿಕೆಯೇ ಅಲ್ಲವೆ. ಇಂಥ ನಂಬಿಕೆಗೆ ತತ್ತ್ವ ನೆಲೆಯನ್ನೊದಗಿಸುವ ವಸ್ತು, ಬರೇ ಮಾನವೀಯತೆಯಲ್ಲ. ಆದರೆ ಇಲ್ಲೇ ಇರುವ ‘ಅರಿವು’, ಮನುಷ್ಯನಿಗೆ ಕ್ರಮೇಣ ಎಲ್ಲದರಲ್ಲೂ ಆಸಕ್ತಿ ಕಳೆದುಹೋಗುತ್ತದೆ ಎನ್ನುವುದು; ಎಲ್ಲ ಇರುವಂತೆಯೇ ಸರಿಯಾಗಿಯೇ ಇದೆಯಲ್ಲ, ಇರಬೇಕಿರುವುದು ಹೀಗೆಯೇ ಅಲ್ಲವೆ ಎಂದೆಲ್ಲ ಅನಿಸುವುದು ಕೂಡ ಈ ಜಗತ್ತಿನ ನಿಯಮ ಎನ್ನುವ ಅರಿವು. ಇದು ಹೆಪ್ಪುಗಟ್ಟುವ ಪ್ರಕ್ರಿಯೆಗೇನೆ, ಅದಕ್ಕೆ ಮಾತ್ರವೇ ಸಂಬಂಧಿಸಿದ್ದಲ್ಲ ಮತ್ತೆ ಎನ್ನುವುದನ್ನು ಕೂಡ ಗಮನಿಸಬೇಕು. ಇದು ತತ್ತ್ವರಾಹಿತ್ಯದ ಸ್ಥಿತಿಯೊಂದು ಕೊಡುವ ಜಡ್ಡುತನವಲ್ಲವೆ! ಬರೇ ಮಾನವೀಯ ಅನುಕಂಪ, ಸಂವೇದನೆ ಮನುಷ್ಯನನ್ನು, ಅವನ ಕ್ರಿಯಾಶೀಲತೆಯನ್ನು ಕಾಪಿಟ್ಟೀತೆ? ಎಷ್ಟುಕಾಲ?

ಆದರೆ ಇದಕ್ಕೆ ಡೇನಿಯಲ್ ಸೂಚಿಸುವ ಪರಿಹಾರ ವಿಚಿತ್ರವಾಗಿದೆ ಮತ್ತು ಈ ಬಗೆಯ ಪರಿಹಾರ, ಭ್ರಮೆ-ಭ್ರಾಂತಿ-ಕನಸು-ನಾಟಕ-ದುಗುಡ ಎಲ್ಲವೂ ಸೇರಿಕೊಂಡ ಒಂದು ವ್ಯಕ್ತಿತ್ವದ ಮನಸ್ಥಿತಿಗೆ ತೀರಾ ಸಹಜವಾಗಿದೆ. ಮನುಷ್ಯ ನೂರೈವತ್ತು-ನೂರ ಎಪ್ಪತ್ತೈದು ವರ್ಷ ಬದುಕುವುದು ಸಾಧ್ಯವಾದರೆ ಮನುಷ್ಯನ ಸ್ಫೂರ್ತಿ, ಉತ್ಸಾಹ, hope ಇನ್ನೂ ದೀರ್ಘ ಕಾಲ ಉಳಿದು ಬರಬಹುದು, ಅದರಿಂದ ಕ್ರಾಂತಿ ಚಿರಂತನವಾಗಬಹುದು ಎಂಬ ಆಸೆ! ಈ ಆಸೆ ಆಗಲೇ ಸತ್ತು ಪೆಟ್ಟಿಗೆ ಸೇರಿಕೊಂಡವನೊಬ್ಬನಿಂದ ಪ್ರಕಟವಾಗುವುದು ಬಹುಸೂಕ್ತವಾಗಿದೆ.

"...He can get him abadoned by history but why should he get him abandoned in the realm of dreams and stars also..." ಎನ್ನುವಲ್ಲಿ contraversyನೂ ಇದೆ, ಸೋಲನ್ನು ಒಪ್ಪಿಕೊಂಡೂ ಆ ಸೋಲಿನಲ್ಲಿ ಸಾಧಿಸಿರುವುದರ ತೃಪ್ತಿಕೂಡ ಇರುವುದರ ಸೂಚನೆಯಿದೆ ಮತ್ತು ಅಷ್ಟೇ ಹುಂಬತನದ ಛಾಯೆಯೂ ಇದೆ ಎನ್ನುವುದು ಕತೆಯ ಆತ್ಮವಾಗಿದೆ. Still, ಇದನ್ನೆಲ್ಲ ಮೀರಿ ನಮ್ಮ ಅರಿವು, ಗ್ರಹಿಕೆಗಳನ್ನು ತಟ್ಟಾಡಿಸಬಹುದಾದ ಇನ್ನೇನೋ ಸತ್ಯ ಕೂಡ, ಇನ್ನೊಂದೇ ಮುಖ ಕೂಡ ಇದಕ್ಕೆಲ್ಲ ಇರಬಹುದೆನ್ನುವ ಒಂದು ಪ್ರಜ್ಞೆ ಕತೆಗಾರನಿಗಿದೆ. ಅದು ಶಾರದಾ ಪ್ರಸನ್ನರ ಪತ್ರದ ಹೊಳಹುಗಳಲ್ಲಿ ನಮಗೆ ನಿಚ್ಚಳವಾಗುತ್ತದೆ. ಡಾ|| ಯು.ಆರ್. ಅನಂತಮೂರ್ತಿಯವರು ಒಮ್ಮೆ ಕೆ.ಸತ್ಯನಾರಾಯಣರ ಬಗ್ಗೆ he is truth seeker to the core ಎಂದಿದ್ದರು. ಇಲ್ಲಿ ಮತ್ತೆ ಮತ್ತೆ ಅದು ನೆನಪಾಗುತ್ತದೆ.

ನನಗೆ ತುಂಬ ಇಷ್ಟವಾದ ಇನ್ನೊಂದು ಅಂಶದ ಬಗ್ಗೆ ಕೂಡ ಹೇಳಬೇಕು. ಅದು, ಕನಸು-ಭ್ರಮೆ-ಅತೀಂದ್ರಿಯ ಸಂಗತಿಗಳೆಲ್ಲ ಕೆ.ಸತ್ಯನಾರಾಯಣರ ಈಚಿನ ಕತೆಗಳಲ್ಲಿ ಹೊಸದಾಗಿ ಕಾಣಿಸಿಕೊಳ್ಳತೊಡಗಿರುವುದರ ಕುರಿತು. ಕೆ.ಸತ್ಯನಾರಾಯಣರ ಹಿಂದಿನ ಯಾವುದೇ ಕತೆಗಳಲ್ಲಿ ಇಂಥ ವಿವರಗಳನ್ನು ಏಕತ್ರ ಈ ಪರಿಯಲ್ಲಿ ಕಂಡ ನೆನಪಿಲ್ಲ. ಇಲ್ಲಿನ ‘ದೇವರು ಮತ್ತು ಮಾಧವ ಮೆನನ್’, ‘(ನನ್ನ ಕತೆಗೆ) ಇನ್ನೊಬ್ಬ ವೇಶ್ಯೆಯ ಪ್ರಶಸ್ತಿ’, ‘ಕಮ್ಯುನಿಸ್ಟ್ ರಾಮಭಟ್ಟರ ಜೋಯಿಸ ಪ್ರೀತಿ’, ‘ಮೊದಲ ಅ-ದಲಿತ ಕಥೆ’ ಕತೆಯಲ್ಲಿ ಕೂಡ ಈ ತರದ ವಿವರಗಳಿಗೆ ಕೆ.ಸತ್ಯನಾರಾಯಣರು ತೆರೆದುಕೊಂಡಿರುವುದನ್ನು ಗಮನಿಸಬಹುದು. ಬದುಕಿನಲ್ಲಿ ಭ್ರಮೆಯ ಹಾಗೆ ಕಾಣುವ ಸಂಗತಿಗಳು, ಭ್ರಾಂತಿಗಳು, ಕನಸು, ವಿವಶತೆ ಎಲ್ಲ ಇದ್ದೇ ಇವೆ. ಅತೀಂದ್ರಿಯವೆನಿಸುವ ಸಹಜಗಳು ಕೂಡ ಇವೆ. ಇವನ್ನೆಲ್ಲ ವೈಚಾರಿಕ-ಬೌದ್ಧಿಕ ನೆಲೆಗೆ ಕುಂದಾಗುತ್ತದೆ, ವಾಸ್ತವವಿದೂರ ವಿವರಗಳಾಗಿ ನಿಲ್ಲುತ್ತವೆ ಎನ್ನುವ ಮನೋಭಾವದಿಂದ ಕತೆಗಾರ ತನ್ನ ವೈಯಕ್ತಿಕ ತಾತ್ವಿಕತೆಯನ್ನೇ ಮುಂದಿಟ್ಟುಕೊಂಡು ದೂರವಿಡುವುದು ಅಹಂಕಾರವಾಗುವುದಿಲ್ಲವೇ. ಕಾರಂತರ ಕಾದಂಬರಿಗಳಲ್ಲಿ ಕೂಡ ಭೂತ-ಪ್ರೇತಗಳು, ಪ್ರಾಣಿಗಳು ಮಾತನಾಡುವುದಿದೆ! ಅಷ್ಟರ ಮಟ್ಟಿಗೆ ಕತೆ, ಕಥಾನಕವಾಗಿ ಎಲ್ಲ ಬಗೆಯ ಅಭಿವ್ಯಕ್ತಿ ತಂತ್ರಗಳಿಗೆ ತೆರೆದುಕೊಂಡಿದ್ದರೇ ಚಂದ. ಈ ನಿಟ್ಟಿನಿಂದಲೂ ಇಲ್ಲಿನ ಕತೆಗಳು ಕೆ.ಸತ್ಯನಾರಾಯಣರ ಕತೆಗಳಲ್ಲಿ ತಂತ್ರ ವಿಶೇಷವಾದ ಬಳಕೆಗೆ ಬರುತ್ತಿರುವುದನ್ನು ಕಾಣಿಸುತ್ತಿವೆ.

ಇದನ್ನೆಲ್ಲ ಈಗಲೂ ತಾಂತ್ರಿಕ ಜಾಣ್ಮೆಯ ಕುಸುರಿ ಕೆಲಸವೋ ಶಿಲ್ಪವೋ ಅಲ್ಲ ಎಂದು ವಾದಿಸಬಹುದು. ಕಥಾನಕ ಕತೆಗಾರನನ್ನು ತಟ್ಟಿದ್ದು, ತಲುಪಿದ್ದು ಹೀಗೆಯೇ ಇದ್ದರೂ ಇರಬಹುದು. ಆದರೆ ಸಾಹಿತ್ಯದ ವಿದ್ಯಾರ್ಥಿಯಾಗಿ ಈ ಬಗೆಯ ಕಟ್ಟಡವನ್ನು ತಾಂತ್ರಿಕ ಜಾಣ್ಮೆಯನ್ನಾಗಿಯೂ ಕಾಣಬಹುದು, ಕಾಣಬೇಕಾಗುತ್ತದೆ.

ಸಾಹಿತ್ಯ ನಮ್ಮ ಬದುಕನ್ನು ಅರಳಿಸುತ್ತಲೇ ಮತ್ತೆ ಮತ್ತೆ ಅದನ್ನ ಶ್ರೀಮಂತಗೊಳಿಸುತ್ತಲೇ ಇರಬಲ್ಲುದೆಂಬ ಕಾರಣಕ್ಕೇ ಅಲ್ಲವೆ ನಮಗೆ ಅದೆಂದರೆ ಇಷ್ಟೆಲ್ಲ ಪ್ರೀತಿ? ಆದರೆ ಎಲ್ಲ ಬರಹಗಳೂ ಹಾಗೆ ಇರುವುದಿಲ್ಲ ಎನ್ನುವುದರಿಂದ ಯಾವುದು ಒಳ್ಳೆಯದು, ಯಾವುದು ಸಾಧಾರಣ ಎಂಬುದೆಲ್ಲ ತೀರ್ಮಾನವಾಗುತ್ತದೆ.

ಕೆ.ಸತ್ಯನಾರಾಯಣರ ಎಲ್ಲಾ ಬರಹಗಳಲ್ಲೂ, ಒಮ್ಮೆ ಅನಂತಮೂರ್ತಿಯವಏ ಹೇಳಿದ ಹಾಗೆ, ಸತ್ಯದ ಶೋಧವೇ ನಡೆದಿರುತ್ತದೆ ಎನ್ನುವುದು ಒಂದು ಮುಖ್ಯ ಅಂಶ. ಇನ್ನೊಂದು, ಕೆ.ಸತ್ಯನಾರಾಯಣರ ಎಲ್ಲಾ ಬರಹದಲ್ಲೂ ಇರುವ, ಎದ್ದು ಕಾಣುವ ಪ್ರಾಮಾಣಿಕತೆ. ಇದು ಇಲ್ಲಿ ಬಹಳ ಮುಖ್ಯ. ಇವತ್ತು ಸಾಹಿತ್ಯ ಸೃಷ್ಟಿಯ ಹಂತದಲ್ಲಿ ಹೊಸ ಪೀಳಿಗೆಯನ್ನು ಅನೇಕ ವಿಧದಲ್ಲಿ ಕಾಡುತ್ತಿರುವ ತೊಡಕುಗಳಲ್ಲಿ ಇದು ಮಹತ್ವದ್ದೆಂದು ಕಾಣುತ್ತದೆ. ನೇರ ಅನುಭವಕ್ಕೆ ದಕ್ಕಿದ್ದನ್ನು ಮಾತ್ರ ಬರೆಯುವ, ಬರೆಯಬೇಕೆನ್ನುವ ಒತ್ತಡ ಒಂದು ಕಡೆ, ಬರಹಗಾರ ತನ್ನ cofort zone ಬಿಟ್ಟು ಚಾಚಿಕೊಳ್ಳಬೇಕು ಎನ್ನುವ ನಿರೀಕ್ಷೆ ಇನ್ನೊಂದು ಕಡೆ ಅವನನ್ನು ಕಾಡುತ್ತಿರುವಾಗಲೇ ಜಾಗತಿಕ ಮಟ್ಟದಲ್ಲಿ ಹೊಸ ತಲೆಮಾರು ಎತ್ತಿಕೊಳ್ಳುತ್ತಿರುವ ವಸ್ತು, ಪ್ರಸ್ತುತ ಪಡಿಸಲು ಬಳಸುತ್ತಿರುವ ತಂತ್ರ ಮತ್ತು ಅನುಭವಕ್ಕೆ ತೆರೆದುಕೊಳ್ಳುತ್ತಿರುವ ಪರಿ ಗಮನಾರ್ಹವಾಗಿದೆ. ಅಪ್ರಸ್ತುತವಾದರೂ ಇದನ್ನು ಕೊಂಚ ವಿವರವಾಗಿ ಗಮನಿಸಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ:

ಸಾಹಿತ್ಯ ಅಥವಾ ಫಿಕ್ಷನ್ ಎನ್ನುತ್ತೇವಲ್ಲ, ಕತೆ, ಕಾದಂಬರಿಯಂಥವು, ಅವು ಹಲವು ರೀತಿಗಳಲ್ಲಿ ಹುಟ್ಟುತ್ತವೆ. ಉದಾಹರಣೆಗೆ ನಾವು ಮಹಿಳಾ ಸಾಹಿತ್ಯ ಅಂತ ಸಾಧಾರಣ ಅರ್ಥದಲ್ಲಿ ಏನನ್ನು ಕರೆಯುತ್ತೇವೆಯೋ, (ಅದನ್ನು ಪುರುಷರೂ ಬರೆದಿದ್ದಾರೆ) ಅವುಗಳಲ್ಲಿ ಒಂದು ಭ್ರಮಾಧೀನ ಕಲ್ಪನೆ ಇರುತ್ತದೆ. ಸುಂದರ ಯುವಕ, ಆಕರ್ಷಕವಾಗಿ ಸೀರೆಯುಟ್ಟ ಯೌವನ ತುಂಬಿದ ಯುವತಿ, ಅವರ ಪ್ರೇಮ, ಅದಕ್ಕಿರುವ ಅಡ್ಡಿ ಆತಂಕಗಳು, ಸ್ಪರ್ಧೆ ಒಡ್ಡುವ ಇನ್ನೊಬ್ಬ ಹುಡುಗನೋ ಹುಡುಗಿಯೋ, ಸಂಪ್ರದಾಯಸ್ಥ ಕುಟುಂಬದ ಹಿನ್ನೆಲೆ, ಜಾತಿ, ಬಡತನ ಇತ್ಯಾದಿಗಳನ್ನೇ ಹಲವಾರು ಬಗೆಯಲ್ಲಿ ಊಹಿಸಿ ಆಕರ್ಷಕವಾಗಿ ಹೆಣೆದು ಸಿನಿಮೀಯ ಕತೆ ಬರೆದು ರಂಜಿಸುವುದು ಸಾಧ್ಯ. ನಮ್ಮ ಮೊದಲ ಓದು, ಸಾಹಿತ್ಯ ಎಂದು ನಂಬಿಕೊಂಡು, ಇದರದ್ದೇ ಆಗಿರುತ್ತದೆ. ಪತ್ತೇದಾರಿ, ಥ್ರಿಲ್ಲರ್ಸ್, ಮ್ಯಾಗಝೀನ್ ಕತೆ-ಕಾದಂಬರಿಗಳು ಎಲ್ಲ ಇದರ ಆಸುಪಾಸು, ಬೈಪ್ರಾಡಕ್ಟ್ಸ್.

ಇನ್ನೊಂದು ಸ್ತರದ್ದನ್ನು (ನವ್ಯ, ದಲಿತ, ನವ್ಯೋತ್ತರ ಎಲ್ಲ ಮರೆತುಬಿಟ್ಟು) ನಮ್ಮ ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ರಾಘವೇಂದ್ರ ಪಾಟೀಲರು ಬರೆಯುತ್ತಾರೆ. ವಾಸ್ತವ ಬದುಕಿನಿಂದಲೇ ಇವರು ಪ್ರತೀಕಗಳನ್ನು ಪಡೆಯುತ್ತಾರೆ, ಕತೆಯನ್ನಲ್ಲ. ಮತ್ತು ಸದ್ಯದ ಮಟ್ಟಿಗೆ ಇವರು ಪಡೆಯುವ ಪ್ರತೀಕಗಳಿಗೆ ‘ಆಯ್ದ’ ಎನ್ನುವ ಲೇಬಲ್‌ ಹಾಕಿ ನನ್ನ ತಿಳುವಳಿಕೆಯನ್ನು ಮುಂದುವರಿಸುತ್ತೇನೆ.. ಯಾಕೆ ಅವನ್ನೇ ಆಯ್ದರು ಎಂದರೆ ಇವರಿಗೆ ಇವರ ಕತೆಯ ಉದ್ದೇಶಕ್ಕೆ ಬೇಕಾಗಿದ್ದವು ಅವು, ಮತ್ತು ಅವು ಮಾತ್ರಾ ಎನ್ನುವ ಕಾರಣಕ್ಕೆ. ಹೀಗೆ ಆಯ್ದ ಪ್ರತೀಕಗಳನ್ನಿಟ್ಟುಕೊಂಡು ಇವರು ತಮ್ಮದೇ ಒಂದು ವಿಚಾರವನ್ನು ಹೇಳುತ್ತಾರೆ ಅಂತ ನಾನು ಹೇಳುತ್ತಿಲ್ಲ. ಇವರದೂ ಶೋಧವೇ, ಅದು ಪ್ರಾಮಾಣಿಕವಾದದ್ದೇ. ಆದರೆ, ಇವರು ತಾವು ಆಯುವ ಪ್ರತೀಕಗಳ ಬಗ್ಗೆ ವ್ಯಾಮೋಹವುಳ್ಳವರು ಮತ್ತು ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ, ಇವರು ತಮ್ಮ ಇಷ್ಟದ ಪ್ರತೀಕಗಳನ್ನು ಬಿಟ್ಟು ಬರೆದರೆ, ಬರೆಯುತ್ತ ಅವೇ ಶೋಧಗಳನ್ನು ತೊಡಗಿದರೆ ಏನಾಗಬಹುದೋ ಅದನ್ನು ಊಹಿಸಬೇಕಾಗುತ್ತದೆ. ಈ ಕತೆಗಾರರೂ ಅಂಥ ರಿಸ್ಕ್ ತೆಗೆದುಕೊಂಡಿರುವುದು ಅಲ್ಲಲ್ಲಿ ಕಾಣಿಸುತ್ತದೆ, ಇಲ್ಲವೆಂದಲ್ಲ. ಆದರೂ ಮೇಲ್ನೋಟಕ್ಕೆ ನಾನು ಹೇಳುತ್ತಿರುವುದು ಈ ಕತೆಗಾರರ ವಿವರಗಳ ಮೋಹವಾಗಿ ಕಾಣಿಸಬಹುದು. ಆದರೆ ನಾನು ಹೇಳುತ್ತಿರುವುದು ಅಷ್ಟನ್ನೇ ಅಲ್ಲ. ಇವರ ಕಥಾನಕಗಳಲ್ಲಿ ನಾವು ಮುಖಾಮುಖಿಯಾಗುವ ಪಾತ್ರಗಳ ವ್ಯಕ್ತಿತ್ವಕ್ಕೇ ಸಂಬಂಧಿಸಿ ಇದನ್ನು ನಾನು ಹೇಳುತ್ತಿರುವುದು. ಒಬ್ಬ ಉಪ್ಪನನ್ನೇ ತೆಗೆದುಕೊಳ್ಳಿ. ಈ ಉಪ್ಪ ನನ್ನೊಳಗೂ ಇರುವ ಒಬ್ಬ ಮುಗ್ಧ, ಪ್ರಾಮಾಣಿಕ, ಅಸಹಾಯಕ ಮತ್ತು ಮೂರ್ಖ ಕೂಡ. ನಾವು ಕಲಿತಿದ್ದೇನೆಂದರೆ ನಮ್ಮೊಳಗಿನ ಇವನನ್ನು ಇತರರು ಕಾಣದ ಹಾಗೆ, ಗುರುತಿಸದ ಹಾಗೆ ಮುಚ್ಚಿಡುವುದಕ್ಕೆ ಏನೇನು ಬೇಕೋ ಅದನ್ನು. ವಿವೇಕ್ ಶಾನಭಾಗ್ ಈ ಉಪ್ಪನನ್ನು ಕಟ್ಟಿಕೊಡುವಲ್ಲಿ, ಅವನನ್ನು ನಮಗೆ ನಮ್ಮ ಹೊರಗಿನ ಒಬ್ಬ ವ್ಯಕ್ತಿಯನ್ನಾಗಿಯೂ ನಮ್ಮೊಳಗಿನ ಚೇತನವನ್ನಾಗಿಯೂ ನಮಗೇ ಕಾಣಿಸುವಲ್ಲಿ ಅದ್ಭುತ ಕಲೆಗಾರ, ಅದರಲ್ಲಿ ಸಂಶಯವಿಲ್ಲ. ಆದರೆ ಅವರ ಕತೆಯ ಒಟ್ಟಾರೆ ಧ್ವನಿ, ಕತೆ ಎಲ್ಲವೂ ಇಷ್ಟವಾಗುವಾಗಲೂ ಇದು ಯೋಜಿತ ಸಂಯೋಜನೆ ಎನ್ನುವುದನ್ನು ಒಬ್ಬ ಓದುಗನಾಗಿ ಅಲ್ಲದಿದ್ದರೂ ಸಾಹಿತ್ಯದ ಒಬ್ಬ ವಿದ್ಯಾರ್ಥಿಯಾಗಿ ನಾನು ಗಮನಿಸಿಯೇ ಗಮನಿಸುತ್ತೇನೆ. ಆದರೆ ಓದುಗ ಹಾಗೆ ಗಮನಿಸುವುದನ್ನು ವಿವೇಕರಂಥ, ಜಯಂತರಂಥ, ಪಾಟೀಲರಂಥ ಕತೆಗಾರ ಬಯಸುವುದಿಲ್ಲ. ಸರೋಜಿನಿಯೋ, ಉಪ್ಪನೋ ನಮ್ಮನ್ನು ಕಲಕಬೇಕು ಎನ್ನುವುದೇ ಇಲ್ಲಿ ಗಮ್ಯವಾದಾಗ ವ್ಯಕ್ತಿತ್ವದ ಆಳವೇ ಒಂದು ಮುಖ್ಯ ಶೋಧವಾಗಿ, ಬದುಕೇ ಶೋಧವಾಗುವ ಪ್ರಕ್ರಿಯೆ ಅನಿವಾರ್ಯವಾಗಿ ಮೊಂಡಾಗುತ್ತದೆ, ವ್ಯಕ್ತಿ ಮತ್ತು ಬದುಕು ಬೇರೆ ಬೇರೆಯಲ್ಲ ಎನ್ನುವ ಅರಿವಿದ್ದೂ. ಆದರೆ ಹೀಗೆ ಉಪ್ಪ ನಮ್ಮನ್ನು ಕಲಕುವುದೇ ಒಂದು ಹೊಸ ಶೋಧವಲ್ಲ ಎನ್ನುವುದು ಹೇಗೆ? ಅವನು ನನ್ನೊಳಗಿರುವುದನ್ನು ಇದೆಲ್ಲ ನನಗೆ ತಿಳಿಸಿಕೊಟ್ಟಿಲ್ಲವೆ? ಅದು ನಿಜ. ಆದರೆ ಉಪ್ಪ ಒಂದು ಕತೆಯಷ್ಟೇ ಆಗಿದ್ದಾನೆಯೆ, ಅಲ್ಲಿಗೆ ಉಪ್ಪನ ಬದುಕಿನ ರಿಲೆವೆನ್ಸ್ ಮುಗಿಯಿತೆ - ಕತೆಗಾರನಿಗೂ ಮತ್ತು ಓದುಗನಿಗೂ ಎನ್ನುವ ಪ್ರಶ್ನೆಯೆದುರು ನಾವು ಸಾಮಾನ್ಯವಾಗಿ ನಿಲ್ಲುವುದಿಲ್ಲ. ಇನ್ನೊಂದು ಬಗೆಯ ಕತೆಗಳನ್ನು ಗಮನಿಸುವ.

ಈ ಬಗೆಯ ಕಥೆಗಳಲ್ಲಿ ಪ್ರಾಮಾಣಿಕತೆಯೇ ನಿಜವಾದ ಬಂಡವಾಳ ಅಂತ ನನಗನಿಸಿದೆ. ಬೇಕೆಂದೇ ಈ ಬಗೆಯವೇ ಆದರೂ ತೇಜಸ್ವಿಯವರ ಕತೆಗಳನ್ನು ಸದ್ಯದ ಮಟ್ಟಿಗೆ ಬಿಟ್ಟುಕೊಟ್ಟು ಈ ಅರಿಯುವ ಪ್ರಕ್ರಿಯೆಯನ್ನು ಹೊರಳುದಾರಿಯಲ್ಲಿ ಒಯ್ಯುತ್ತೇನೆ. ಸದ್ಯ ಕೆ.ಸತ್ಯನಾರಾಯಣರ ಕತೆಗಳ ಬಗ್ಗೆಯೇ ಬರೆಯುತ್ತಿರುವುದರಿಂದ ಇದನ್ನು ಹೆಚ್ಚು ವಿವರಿಸಬೇಕಿಲ್ಲ. ವೇಶ್ಯೆಯೊಬ್ಬಳ ಪ್ರಶಸ್ತಿ ಕತೆಯನ್ನೇ ತೆಗೆದುಕೊಂಡು ನೋಡಿದರೂ ಈ ಅಂಶ ಅತ್ಯಂತ ಸ್ಪಷ್ಟ. ಕೆ.ಸತ್ಯನಾರಾಯಣರಿಗೆ ಕತೆಯನ್ನು ಕತೆ ಬರೆಯುವ, ಸೃಜನಶೀಲ ಅಭಿವ್ಯಕ್ತಿಯ ರಚನಾತ್ಮಕ ಮಾನದಂಡಗಳಿಂದ ಅದ್ಭುತ-ಸುಂದರ ರಚನೆಗೊಳಿಸುವುದಕ್ಕಿಂತ ಅದರ (ಬದುಕಿನ)ಅಸಾಹಿತ್ಯಿಕ (ಮಾನದಂಡಗಳ) ಶೋಧ ಮುಖ್ಯ ಮತ್ತು ಆ ಶೋಧ ಪ್ರಾಮಾಣಿಕವಾಗಿ ನಡೆಯಬೇಕಾದ್ದು ಮುಖ್ಯ. ಹಾಗೆಯೇ, ಈ ಶೋಧ ಆಯ್ದ ವಿವರಗಳಲ್ಲಿ ನಡೆದರೆ ತಾನು ಎಲ್ಲಿ ಯಾವೊಂದು ಸತ್ಯದಿಂದ ದೂರವಾಗುತ್ತೇನೋ, ಪರ್ಯಾಯವಾದ ಯಾವೊಂದು ಸತ್ಯವನ್ನು ಕಳೆದುಕೊಂಡೇ ಬಿಡುತ್ತೇನೋ ಎಂಬ ಭಯ ಕೂಡ ಇದೆ ಕೆ.ಸತ್ಯನಾರಾಯಣರಿಗೆ. ಹಾಗಾಗಿ ಕೆ.ಸತ್ಯನಾರಾಯಣ ಕತೆ ಹೇಳುವಾಗ ಇದೆಲ್ಲ ಬೇಡ, ಅದು ಇಲ್ಲಿ ಅಗತ್ಯವಿಲ್ಲ ಎಂದು ವಿಪರೀತ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ಇದನ್ನು ನಾವು ಸತ್ಯನಾರಾಯಣರ ಕತೆಗಳು ಅತಿಯಾದ ವಾಚಾಳಿತನದಿಂದ ಬಳಲುತ್ತವೆ (ಇಂಥ ಒಂದು ಆರೋಪವನ್ನೆ ಅನಂತಮೂರ್ತಿಯವರು ಅಲ್ಲಗಳೆಯುತ್ತ ಬರೆದಿದ್ದು ಅದು ಕೆ.ಸತ್ಯನಾರಾಯಣರ ಹಿಂದಿನ ಒಂದು ಕೃತಿಯ ಬ್ಲರ್ಬ್‌ನಲ್ಲಿದೆ) ಎಂದು ಹೇಳಲು ಸಾಧ್ಯವಾದದ್ದು ನಾನು ಮೇಲೆ ಬರೆದ ಎರಡನೆಯ ಬಗೆಯ ಕತೆಗಾರರ ಕತೆಗಳು ಸೃಜಿಸಿದ ಮಾದರಿಯಿಂದಾಗಿಯೆ ಇರಬಹುದು. ಆದಾಗ್ಯೂ ಈ ಜಿಜ್ಞಾಸೆ ಅವರ ಬರಹದಲ್ಲಿ ಮತ್ತೆ ಮತ್ತೆ ಪ್ರಕಟವಾಗಿರುತ್ತಿರುವಾಗಲು, ಕೆ.ಸತ್ಯನಾರಾಯಣರು ಕೂಡಾ ಕತೆ ಬರೆಯುವ, ಕತೆಗಾರರಾಗಿ ಪ್ರಕಟವಾಗುವ ಹಾದಿಯಲ್ಲೇ ಇರುವವರು ಎನ್ನುವುದನ್ನು ನಾನು ಮರೆತಿಲ್ಲ. ಬೇರೆ ಕತೆಗಾರರು ಬದುಕನ್ನು ಕತೆಯಾಗಿಸುವ ಉತ್ಸಾಹದಲ್ಲಿ ಸತ್ಯನಾರಾಯಣರಲ್ಲಿರುವ ಆತ್ಮಶೋಧದ, ಜಿಜ್ಞಾಸೆಯ ಸಂವೇದನೆಗಳನ್ನು ಮರೆತಿದ್ದಾರೆಂದೂ ನಾನು ಭಾವಿಸಿಲ್ಲ. ಚರ್ಚೆಗೆ ಬೇಕಾಗಿ ಕೆಲವು presumptions ಇರಿಸಿಕೊಂಡಿದ್ದೇನಷ್ಟೆ.

ಡಾ|| ಯು.ಆರ್.ಅನಂತಮೂರ್ತಿಯವರು ವಿವರಿಸುವ Significant details ಮತ್ತು ಕತೆಗಾರಿಕೆಯ ಕಲೆಯನ್ನು ಕುರಿತೇ ಒಂದು ಸರದಲ್ಲಿ ಕುತೂಹಲಕ್ಕಾಗಿ ಶಂಕರ ಮೊಕಾಶಿ ಪುಣೇಕರ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕೇಶವ ಮಳಗಿ, ಪ್ರಹ್ಲಾದ ಅಗಸನಕಟ್ಟೆ - ಇವರ ಕಥನ ಶೈಲಿಯನ್ನು ನಿರ್ದಿಷ್ಟವಾಗಿ ಗಮನಿಸಬಹುದು. ಅನಂತಮೂರ್ತಿ-ಚಿತ್ತಾಲ-ಲಂಕೇಶ-ದೇಸಾಯಿ-ಪಾಟೀಲ ನಿರ್ಮಿಸಿದ ಒಂದು ವಿಶಿಷ್ಟವೂ ವಿಭಿನ್ನವೂ ಆದ ಪರಂಪರೆ; ದೇವನೂರು-ಜಯಂತ ಕಾಯ್ಕಿಣಿ-ವಿವೇಕ ಶಾನಭಾಗ-ಅಮರೇಶ-ಮೊಗಳ್ಳಿ--ಬಳಗಾರ-ಶ್ರೀರಾಮ್-ಇವರು ನಿರ್ಮಿಸಿದ ಒಂದು ಪರಂಪರೆ ಮತ್ತು ಇವತ್ತಿನ ಹೊಸ ತಲೆಮಾರಿನ ಲೇಖಕರು ಸೃಜಿಸುತ್ತಿರುವ ಸಾಹಿತ್ಯ - ವನ್ನು ಇನ್ನೊಂದು ಸ್ತರದಲ್ಲಿ ಸಮಗ್ರವಾಗಿ ಗ್ರಹಿಸಿ ಪುನರ್ ವ್ಯಾಖ್ಯಾನಿಸುವುದು ಸಾಧ್ಯ. ಹಾಗೆಯೇ Virginia Wolf, Katherine Mansfield, Katherine Anne Porter - ಈ ಮೂವರ ಕಥನಶೈಲಿಯನ್ನು ಕುರಿತೇ ಒಂದು ಅಧ್ಯಯನ ಕೂಡ ಕುತೂಹಲಕರ ಹೊಳಹುಗಳನ್ನು ನಮಗೆ ನೀಡುವುದು ಸಾಧ್ಯವಿದೆ.

ಕೆ.ಸತ್ಯನಾರಾಯಣರ ‘ಕಮ್ಯುನಿಸ್ಟ್ ರಾಮಭಟ್ಟರ ಜೋಯಿಸ ಪ್ರೀತಿ’ ಕತೆಗೆ ಬಂದರೂ ಇದೇ ಅಂಶ ಕಾಣುತ್ತದೆ. ಕತೆ ಸುರುವಾಗುವುದು ಎಲ್ಲಿ ಎನ್ನುವ ಸತ್ಯ ಗೊತ್ತಿದ್ದೂ ಆ ಕತೆಗೂ ಎರಡು ಪುಟಗಳ ಹಿಂದಿನಿಂದ ಕೆ.ಸತ್ಯನಾರಾಯಣರ ಕಥಾನಕ ತೊಡಗುತ್ತದೆ. ಇಲ್ಲಿ ನಮಗೆ ಕೆ.ಸತ್ಯನಾರಾಯಣರ ಕತೆಗಾರನಾಗುವ ಉತ್ಸಾಹಕ್ಕಿಂತಲೂ ಅವರಿಗೆ ಬದುಕು ಹೆಚ್ಚು ಮುಖ್ಯವಾದದ್ದು, ಬದುಕಿನ ಶೋಧ ಹೆಚ್ಚು ಮುಖ್ಯವಾದದ್ದು ಮತ್ತು ಅವರ ಶೋಧದ ಪ್ರಾಮಾಣಿಕತೆ ಕತೆಯ ಶಿಲ್ಪದ ಅಗತ್ಯಗಳನ್ನು, ಮಿತಿಗಳನ್ನು ಮೀರಿದ್ದು ಎನ್ನುವುದಕ್ಕೆ ಪುರಾವೆಗಳು ಸಿಗುತ್ತವೆ. ವಿಮರ್ಶಕರಿಗೆ ಇವು ಕೆ.ಸತ್ಯನಾರಾಯಣರ ಕೊರತೆಯಾಗಿ ಕಾಣುವುದು ಕೂಡ ಸಾಧ್ಯವಿದೆ. ಆದರೆ ವಿಮರ್ಶೆಯ ಮಾನದಂಡಕ್ಕೆ ಸರಿಯಾಗಿ ಬರೆಯಲಾದ ಕತೆಗಳಲ್ಲ ಇವು.

ನಮಗೆ ಕೆಲವು ಕತೆಗಾರರು ಗೊತ್ತು. ಇವರು ಒಂದು ಹಂತದಲ್ಲಿ ಬರೆಯುವುದನ್ನು ಬಿಟ್ಟು ಬಿಟ್ಟರು. ಇವರಿಗೆ ಇದ್ದಕ್ಕಿದ್ದ ಹಾಗೆ ಅದೆಲ್ಲ ಕೃತಕ, ಏನೋ ಅಲ್ಲಿಂದಿಷ್ಟು, ಇಲ್ಲಿಂದಿಷ್ಟು ತಂದು ಒಟ್ಟಿಗಿರಿಸಿ, ಜೋಡಿಸಿ, ಈ ಕೊಲಾಜ್ ಹೇಳುವ, ಕೊಡುವ ಸತ್ಯವೇನೆಂದು ಶೋಧಿಸುತ್ತ ಕತೆಕಟ್ಟಿ ಪಡುವ ಸುಖ, ಓದುವವನಿಗೆ ಕೊಡುತ್ತಿದ್ದೇವೆಂದು ತಾವು ನಂಬಿ ಪಡುವ ಸುಖ ಎಲ್ಲ ಖೊಟ್ಟಿ ಅನಿಸತೊಡಗಿ ಇವರು ಬರೆಯುವುದನ್ನು ಬಿಟ್ಟಿದ್ದಾರೆಯೇ ಹೊರತು ಇನ್ನೇನಲ್ಲ. ಇದನ್ನೆಲ್ಲ ಅವರಿಗೆ ಮಾತುಗಳಲ್ಲಿ ಹೇಳುವುದು ಕಷ್ಟವೆನಿಸಿದರೂ ಇದು ನಾವು ಕಂಡುಕೊಂಡ ಸತ್ಯವೇ. ಕೆ.ಸತ್ಯನಾರಾಯಣರ ವೇಶ್ಯೆಯ ಬಹುಮಾನದ ಕತೆ ಇಂಥ ಶೂನ್ಯಭಾವವೊಂದು ಪ್ರಾಮಾಣಿಕ ಕತೆಗಾರನನ್ನು ಕಾಡುವ ಕುರಿತಾಗಿಯೇ ಇದೆಯಾದ್ದರಿಂದ ಹೆಚ್ಚು ವಿವರಿಸದೇ ಇದೆಲ್ಲ ಎಲ್ಲರಿಗೂ ಅರ್ಥವಾಗುತ್ತದೆ. (ಇಂಥ ಇನ್ನೊಂದು ಕತೆ, ‘ಮಧುಗಿರಿ ರಾಮು ಮತ್ತು ಸಾಹಿತಿ ಮುದುಕಪ್ಪ’ ಕೂಡ ಇದೇ ಆಶಯವನ್ನು ಹೊಂದಿದ್ದು ಅದು ಕೆ. ಸತ್ಯನಾರಾಯಣರ ‘ಹಳೆಯ ಕಾಲದ ಹೊಸ ಕತೆ’ ಸಂಕಲನದಲ್ಲಿದೆ) ಇಂಥ ಶೂನ್ಯ ನಿಜಕ್ಕೂ ಹೆಚ್ಚಾಗಿ ಕಾಡುವುದು, ಕಾಡಬೇಕಿರುವುದು ಸಿಲೆಕ್ಟ್ ವಿವರಗಳಿಂದ ಸಿಲೆಕ್ಟ್ ಸ್ಟೋರಿಗಳಿಲ್ಲದ ನಿತ್ಯ ಬದುಕು ನಮಗೆ ಕಲಿಸುವ ಪಾಠಗಳನ್ನು, ದೈನಂದಿನ ಬದುಕಿನ ಯಾವುಯಾವುದೋ ವಿವರಗಳು ಎಲ್ಲೆಲ್ಲೋ ಮತ್ತು ಹೇಗೆ ಹೇಗೋ ನಮಗೆ ನೀಡಿದ ಸತ್ಯಗಳನ್ನು, ನಮ್ಮ ಮೌನದಲ್ಲಿ, ಏಕಾಂತದಲ್ಲಿ ನಾವು ನಡೆಸಿದ ಶೋಧಗಳು ನಮಗೆ ದಯಪಾಲಿಸಿದ್ದನ್ನು ಹೇಳಲು ಪ್ರಯತ್ನಿಸಿದ ಕತೆಗಾರರನ್ನು. ‘ಇದೆಲ್ಲ ಒಂದೇ ಕತೆಯೇ?’ ಎನ್ನುವ ಅನುಮಾನ ನಮ್ಮ ದೈನಂದಿನ ಬದುಕಿನದ್ದು, ಒಂದು ಸಣ್ಣಕತೆಯದ್ದಲ್ಲ.

ಬದುಕು ಒಂದು ನದಿಯಂತೆ ಇದ್ದರೆ ಅದರಲ್ಲಿ ಇಲ್ಲಿಂದ ಇಲ್ಲಿಯ ತನಕದ್ದು ಸೀತಾ ನದಿ, ಇನ್ನೊಂದು ಊರ ಸೆರಗಿನಲ್ಲಿ ಹರಿಯುವ ಅದೇ ನದಿಯ ಪಾತ್ರದ ಹೆಸರು ನೇತ್ರಾವತಿ. ಆದರೆ ಇದು ಆ ನದಿಗೆ ಗೊತ್ತಿಲ್ಲದಿರುವುದು ತಮಾಷೆ. ಹಾಗೆಯೇ ಕತೆಯೂ ಅಲ್ಲವೆ? ಬದುಕಿನ ಒಂದು ತುಂಡು ಕತೆಯಾಗುವುದು ನಮಗೆ, ಕತೆಗಾರರಿಗೆ ಮತ್ತು ಅದನ್ನು ಓದುವವರಿಗೆ. ಬದುಕಿಗೆ ಇಲ್ಲಿಂದ ಅಲ್ಲಿಯತನಕದ್ದು ಇಂಥಾ ಒಂದು ಕತೆ ಎನ್ನುವುದು ಗೊತ್ತೇ ಇರುವುದಿಲ್ಲ. ಮತ್ತು ಅದನ್ನು ನಾವು ಇರದೇ ಇದ್ದ ಕಲ್ಪನೆ, ಇನ್ನೆಲ್ಲಿಯದ್ದೋ, ಇನ್ಯಾರ ಬದುಕಿನದ್ದೋ ವಿವರ, ಘಟನೆಯೊಂದಿಗೆ ಬೆರೆಸಿ, ಹಾದಿಗೆಡಿಸಿ, ಮತ್ತೆ ಈ ಎಲ್ಲ ಸರ್ಕಸ್ಸಿನಲ್ಲೂ ಹೊಸ ಸತ್ಯದ ಹುಡುಕಾಟದಲ್ಲೂ ತೊಡಗಿರುತ್ತೇವಲ್ಲ. ಇದೆಲ್ಲ ಗೇಮ್. ಬದುಕು ಗೇಮ್ ಟ್ರುಥ್ ಎಂದಿದ್ದಾರಲ್ಲ ಕುಸುಮಾಕರ ದೇವರಗೆಣ್ಣುರ್, ಹಾಗೆ.

ಪ್ರಾಮಾಣಿಕತೆಯೇ ಸಹಜ ಕತೆಗಾರನ ಪ್ರಮುಖ ಲಕ್ಷಣವಾಗಿರುವುದರಿಂದಲೇ ಸಮಕಾಲೀನ ಕನ್ನಡ ಸಾಹಿತ್ಯ ಅಥವಾ ಸಣ್ಣ ಕತೆಗಳ ಜಾಯಮಾನ ಯಾವತ್ತೂ ಕೆ.ಸತ್ಯನಾರಾಯಣರ ಕತೆಗಳ ಒಂದು ಲಿಮಿಟ್ ಆಗುವುದೇ ಇಲ್ಲ ಮಾತ್ರವಲ್ಲ ಕಾಲದ ಎಲ್ಲ ಪರೀಕ್ಷೆಗಳನ್ನೂ ಈ ಕತೆಗಳು ಗೆಲ್ಲಬಲ್ಲ ಕಸು ಪಡೆಯುವುದು ಕೂಡ ಇದರಿಂದಲೇ ಅನಿಸುತ್ತದೆ.

‘ದೇವರು ಮತ್ತು ಮಾಧವ ಮೆನನ್’ ಕತೆ ತುಂಬ ಆಪ್ತ ವಿವರಗಳಲ್ಲಿ ತೆರೆದುಕೊಳ್ಳುವುದರಿಂದ ಎಲ್ಲೋ ಓದುಗ ತನ್ನನ್ನೇ ಮರೆತು ಕಥಾನಕದ ಲೋಕಕ್ಕೆ ಸೇರಿ ಹೋದರೂ ಆಶ್ಚರ್ಯವಿಲ್ಲ. ಈ ಕತೆ ನಮ್ಮ ಇಂದಿನ ವಿಸ್ಮೃತಿಯನ್ನೂ ಪ್ರಶ್ನಿಸುವುದರಿಂದ ಮತ್ತು ಅನೂಹ್ಯವಾದದ್ದು ಇದೆ, ಅದನ್ನು ಸರಳವಾದ ಮನಸ್ಸಿನಿಂದ ತಿಳಿಯಬೇಕಾಗಿದೆ ಎನ್ನುವಲ್ಲಿ ಕತೆ - (ಸಮಕಾಲೀನ ಸಣ್ಣಕತೆಗಳ ಮಾದರಿಯ ಜೊತೆಗಿಟ್ಟರೂ ಸುಂದರ ಶಿಲ್ಪದಿಂದ ಮತ್ತು ತನ್ನ ಮೊನಚಿನಿಂದ) ಕತೆಯಾಗಿಯೇ ಗೆದ್ದಿದೆ. ಅನಂತಮೂರ್ತಿಯವರು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ ಈ ಮಾತುಗಳನ್ನ ಗಮನಿಸಿ:

"ನಾನು ಇಲ್ರಿಲಿಜಸ್ಸೇ, ದೇವರನ್ನು ನಂಬೋದು ಕಷ್ಟ ನನಗೆ. ನಾನು ಒಬ್ಬ ಅನುಮಾನಿ. ಯಾವುದೋ ದೇವರೇ ಇಲ್ಲದ ಹೋದ ಆಧ್ಯಾತ್ಮ ಸಿಗೋದಾದರೆ ಅದನ್ನ ನಾನು ಖಂಡಿತಾ ಒಪ್ಕೋತೀನಿ. ಅದು ಬೌದ್ಧವೋ ಯಾವುದೋ. ಏನೋ ಒಂದು ಹುಡುಕಾಟ ನನ್ನ ಒಳಗೆ ಇದೆ. ಮೂರ್ತಿ ಪೂಜಕ ಆಗೋದು ಬಹಳ ಕಷ್ಟ ನನಗೆ. ನಂಬಿಕೆ ಬರೋಲ್ಲ. ಪರಮಹಂಸರನ್ನ ಓದಿದಾಗ ಅದನ್ನೂ ನಂಬೋ ಸ್ಥಿತಿಗೂ ಒಮ್ಮೊಮ್ಮೆ ಬರ್ತೀನಿ. ಹೀಗೆ ಗೊಂದಲದಲ್ಲಿರ್ತೀನಿ. ಆದರೆ ರಿಲಿಜಿಯಸ್ ಪೀಪಲ್ - ಅಂದರೆ ಪಯಸ್ ಆದವ್ರ ಬಗ್ಗೆ ಬಹಳ ಗೌರವ ಇದೆ..."

ಕೆ.ಸತ್ಯನಾರಾಯಣರ ‘ದೇವರು ಮತ್ತು ಮಾಧವ ಮೆನನ್’ ಕತೆಗೆ ಬರೆದಿದ್ದು ‘ಕಮ್ಯುನಿಸ್ಟ್ ರಾಮಭಟ್ಟರ ಜೋಯಿಸ ಪ್ರೀತಿ’ ಕತೆಗೂ ಹೊಂದುವಂತಿರುವುದು ಕೂಡ ಕುತೂಹಲಕರ. ಕತೆಯ ಬಗ್ಗೆ ಬರೆಯುವುದಕ್ಕಿಂತ ಅದರ ಹಿಂದಿರುವ ಮನಸ್ಸಿನ ಬಗ್ಗೆ ಬರೆಯುವುದು ಸೂಕ್ತ. ಯಾಕೆಂದರೆ ನನ್ನಂಥವರು, ದೇವರು, ಆಧ್ಯಾತ್ಮ, ಕೊನೆಗೆ ಏನೋ ಒಂದು, ನಮ್ಮ ಕೈಮೀರಿದ್ದು - ವಿಧಿ ಅನ್ನಬೇಕೆ, ದೈವಿಕ ಶಕ್ತಿ ಎನ್ನಬೇಕೆ ಅಥವಾ ಸಮುದಾಯದ ಪ್ರಾರ್ಥನೆ, ಆಸೆ, ಹಾರೈಕೆಗಳೆಲ್ಲ ಸೇರಿ ಒತ್ತಡ ಹಾಕಿದ್ದರಿಂದಲೇ ಘಟಿಸಿದ ವಿಚಿತ್ರ ಎನ್ನಬೇಕೆ ಅಥವಾ ವಿವೇಕ ಅಯ್ಯರ್ ಸಾವಿನ ಅನುಪಾತದ ಬಗ್ಗೆ ಹೇಳ್ತಾನಲ್ಲ ಅಂಥ ಒಂದು ಪ್ರಾಕೃತಿಕ ಸಂತುಲನ ಎನ್ನಬೇಕೆ ತಿಳಿಯದ ಒಂದರ ಬೆನ್ನು ಬಿದ್ದು ಪರಮಹಂಸ, ಓಶೋ, ಜಿಕೆ ಎಂದೆಲ್ಲ ಒಂದಷ್ಟು ವರ್ಷ ತಲೆಕೆಡಿಸಿಕೊಂಡವರೇ ಸರಿಸುಮಾರು ಎಲ್ಲರೂ. ಲೈಂಗಿಕತೆ ಪಾಪ ಎನ್ನುವ ಭಯವೇ ಇಂಥದ್ದಕ್ಕೆಲ್ಲ ನಾವು ಯೌವನದಲ್ಲೇ ತಲೆ ಹಾಕಲು ಕಾರಣವಿದ್ದಿರಲೂ ಬಹುದು ಮತ್ತೆ! ಹಾಗೆ ಆಧ್ಯಾತ್ಮ ಯಾವಯಾವುದೋ ಪಾತಳಿಯಲ್ಲಿ ನಮ್ಮ ವ್ಯಕ್ತಿತ್ವದ ಒಂದು ಭಾಗವೇ ಆಗಿರುತ್ತದೆ, ಕನಿಷ್ಠ ಭಾರತದ ಈ ಭಾಗದ ಮಟ್ಟಿಗಂತೂ ಇದು ಸತ್ಯವೇ. ಹಾಗಿದ್ದೂ ನನ್ನ ವಯಸ್ಸಿನಲ್ಲಿ ನಾನು ಕಂಡ ಬದುಕು ಮತ್ತು ನಿಮ್ಮ ವಯಸ್ಸಿನಲ್ಲಿ ನೀವು ಕಂಡ ಬದುಕು, ಅನುಭವಿಸಿದ್ದು, ಎಲ್ಲ ಒಂದು ಅಂತರ ನಿರ್ಮಿಸುತ್ತದೆ. ನಾವು ಕಂಡ ಹತ್ತಿರದವರ ಮತ್ತು ದೂರವಿದ್ದೂ ನಮಗೆ ಹತ್ತಿರದ್ದೆನಿಸುವ, ತೀರ ದೂರದವರ ಸಾವುಗಳು ಬಹಳ ವ್ಯತ್ಯಾಸವುಂಟು ಮಾಡುವ ಒಂದು ಸಂಗತಿಯಿದು. ಮತ್ತೆ ಮತ್ತೆ ಇದೆಲ್ಲ ಸಾವಿನ ಜೊತೆ ತಳುಕುಹಾಕಿಕೊಂಡೇ ಬರುವ ವಿಚಾರ. ಆದರೂ ಸ್ಮಶಾನ ವೈರಾಗ್ಯಕ್ಕೂ ಇದಕ್ಕೂ ವ್ಯತ್ಯಾಸವಿದೆ.

ಆದರೂ ಮೆನನ್ ತರದ ಮೇಲ್ವರ್ಗದ ಮಂದಿ ಬದುಕಿನ ಉದ್ದಕ್ಕೂ ಮೆದುಳಿನ ಮತ್ತು ಹಣದ ಸಖ್ಯದಲ್ಲಿ ವಿಚಿತ್ರ ಧೈರ್ಯ ಮತ್ತು ಜೀವನೋತ್ಸಾಹ ಹೊಂದಿ ಹಿಂದಕ್ಕಾಗಲೀ ತಮ್ಮೊಳಗಿನ ಜಗತ್ತಿಗಾಗಲೀ ಎಂದೂ ನೋಟ ಕೇಂದ್ರೀಕರಿಸಿ ಕೂರದವರು ಸಾವು ಹತ್ತಿರದಲ್ಲೇ ಸುಳಿದಂತೆ ಕಾಣಿಸಿಕೊಂಡ ಮೇಲೆಯೇ ಇಂಥ ದಿಢೀರ್ ಆಧ್ಯಾತ್ಮವಾದಿಗಳಾಗುವುದು ಒಂದು ಬಗೆಯ ಶೋಕಿ ಕೂಡ ಆಗಿ ಕಾಣುತ್ತದೆ ನನಗೆ - ಯಾಕೆಂದರೆ, (ಇದು ಮುಖ್ಯ) ನನ್ನಂಥ ಮೆದುಳಿನ ಮತ್ತು ಹಣದ ಬಲದಿಂದ ಅಂಥ ಒಂದು ಅಂತಸ್ತಿನ ಬದುಕು ಸಿಗದೇ ಹೋದವರಿಗೆ ದಿನವೂ ಅಂತರಂಗದ ಘಳಿಗೆಗಳಿರುತ್ತ ಅದು ನಮ್ಮ ಬದುಕಿನುದ್ದಕ್ಕೂ ಬಂದ ಸಂಗತಿಯಾಗಿರುತ್ತ, ಸಂಭವಿಸಿದ ಮತ್ತು ಸಂಭವಿಸದ ಸಾವುಗಳೆಲ್ಲ ನಮಗೆ ನಿತ್ಯವೂ ಮೆನನ್ ಕಂಡಿದ್ದನ್ನು ಕಾಣಿಸುತ್ತಿರುವಾಗ ಹೀಗನ್ನಿಸುವುದೆ ಹೊರತು ಇನ್ನೇನಲ್ಲ.

ಇದು ಮೆನನ್‌ಗೂ ನನಗೂ, ನನ್ನಂಥ ಸಾಮಾನ್ಯ ಮಧ್ಯಮವರ್ಗದ ಮಂದಿಗೂ ಇರುವ ವ್ಯತ್ಯಾಸ. ಹಾಗಾಗಿ ಮೆನನ್ ಮತ್ತು ಅವನ ಕತೆ ಎರಡೂ ನಾನು ಮೇಲೆ ಅಷ್ಟೆಲ್ಲ ಕೊರೆದ "ಯೋಜಿತ ಕತೆ" ಎಂದೇ ಅನಿಸುವುದೇ ಹೊರತು ಅದು ಕತೆಗಾರನ ಬದುಕಿನ ಉದ್ದಕ್ಕೂ ಕತೆಗಾರನನ್ನು ಕಾಡುತ್ತಿದ್ದ ಒಂದು ಶೋಧವಾಗಿದ್ದೂ ಪ್ರಾಮಾಣಿಕವಾಗುವುದಿಲ್ಲ. ಯಾಕೆಂದರೆ, (again) ಈ ಶೋಧಕ್ಕೆ ಕತೆಗಾರ ಇಲ್ಲಿ ಎಷ್ಟೇ ವಿವರಗಳ ಸಮರ್ಥನೆಯನ್ನು ಕೊಟ್ಟರೂ ಅದು ಕತೆಗಾರನ ಪ್ರಜ್ಞಾಪೂರ್ವಕ ಆಯ್ಕೆಯ ವಿವರಗಳೇ ಆಗಿರುತ್ತವೆ ಎನ್ನುವುದೊಂದು ಮತ್ತು ಹಾಗೆ ಪ್ರಜ್ಞಾಪೂರ್ವಕವಾಗಿ ಆಯದೇ ಇಂಥದ್ದನ್ನು ಬರೆಯುವುದು ಸಾಧ್ಯವೂ ಇಲ್ಲದಿರುವುದು ಇನ್ನೊಂದು! ಇದೊಂದು ರಚನೆಯ ಹಂತದ ಸಮಸ್ಯೆ. ಆದರೆ ಇದನ್ನೆಲ್ಲ ನಮಗೆ ಕಲಿಸಿಕೊಡುವ ಬದುಕು ಒಂದು ರಚನೆಯಲ್ಲದಿರುವುದರಿಂದ ಉದ್ಭವಿಸುವ ಸಮಸ್ಯೆ. ಇದು ಪ್ರತಿಯೊಬ್ಬ ಬರಹಗಾರನಿಗೂ ಗೊತ್ತು. ಹಾಗಾಗಿಯೇ ಇಲ್ಲಿ ಬಹುಷಃ ಮೊತ್ತ ಮೊದಲ ಬಾರಿಗೆ ಅಸಂಗತ ವಿವರಗಳಿಗೆ, ಕನಸುಗಳಿಗೆ ಕೆ.ಸತ್ಯನಾರಾಯಣ ಲಗ್ಗೆ ಇಟ್ಟಿದ್ದಾರೆ. ಮೆನನ್ ಕೈಯಲ್ಲಿ ಅನೇಕ ವಿಸ್ಮೃತಿಯ ಕೆಲಸಗಳನ್ನು ಮಾಡಿಸುತ್ತಾರೆ. ಅದೇ ಕೆ.ಸತ್ಯನಾರಾಯಣರು ತಮ್ಮ ‘ಕಮ್ಯುನಿಸ್ಟ್ ರಾಮಭಟ್ಟರ ಜೋಯಿಸ ಪ್ರೀತಿ’ ಕತೆಯಲ್ಲಿ ರಾಮಭಟ್ಟ ಲಂಗೋಟಿಯಲ್ಲಿ ರಣರಣ ಬಿಸಿಲಿನಲ್ಲಿ ಗುಡ್ಡದ ಮೇಲೆ ಕೂತು ವಿಮಾನದಲ್ಲಿ ಕೂತು ಬರುವ ಮಂದಿಯನ್ನು ಕಾಯುತ್ತಿರುವ ಬಗ್ಗೆ, ಅವರಲ್ಲಿ ಕೆಲವೇ ಮಂದಿ ಇವರನ್ನು ಮಾತನಾಡಿಸಿ ಊರೊಳಗೆ ಹೋಗುವ ಬಗ್ಗೆ, ಹೋದ ಎರಡು ಮೂರು ದಿನಕ್ಕೆ ಊರಿನಲ್ಲಿ ಮಗು ಹುಟ್ಟುವ ಬಗ್ಗೆ ಬರೆಯುವಾಗ ಇಂಥ ಕಾಲ್ಪನಿಕ ಅಸಂಗತವಾದದ ನೆರವು ಪಡೆಯುವುದಿಲ್ಲ ಎನ್ನುವುದನ್ನು ಗಮನಿಸಿ.

ಮೆನನ್‌ಗೂ ರಾಮಭಟ್ಟನಿಗೂ ಇರುವ ವ್ಯತ್ಯಾಸವಿದು. ಅಂದರೆ ರಾಮಭಟ್ಟನಿಗೆ ಸಂಸ್ಕಾರದಿಂದ ದಕ್ಕಿದ್ದು ನಮಗೆ ಹೌದು ಹೌದು ಅನಿಸುವಾಗಲೇ ಮೆನನ್‌ಗೆ ದಕ್ಕುವುದು ಅಸಹಜವೆನಿಸುತ್ತದೆ ಅಥವಾ ಹಾಗನಿಸುವ ಸಾಧ್ಯತೆಯೇ ಹೆಚ್ಚು. ಬಾವಿಯಲ್ಲಿ ಅವನು ಕಂಡಿದ್ದು, ತುಂಬ ಆಳವಾದ ಅರ್ಥ, ಆಯಾಮಗಳನ್ನು ಈ ಕತೆಯ ವ್ಯಾಪ್ತಿಯ ಆಚೆಗೂ ಕೊಡಬಲ್ಲ ಒಂದು ದರ್ಶನ ಹೌದಾದರೂ ಅದು ಮೆನನ್‌ನ ಪಾತ್ರಕ್ಕಿಂತ ಹೆಚ್ಚು ಕತೆಗಾರನೊಂದಿಗೆ ತಾದ್ಯಾತ್ಮ ಹೊಂದಿದ ಒಂದು ದರ್ಶನವಾಗಿಯೇ ನಿಲ್ಲುತ್ತದೆ. ದೀರ್ಘಕಾಲದ ಶೋಧ, ಚಿಂತನೆಗಳಿಗೆ ಮಾತ್ರ ದಕ್ಕುವ ಇಂಥ ಒಂದು ದರ್ಶನ ಮೆನನ್‌ಗೆ ಅಚಾನಕವಾಗಿ ಒದಗಬಾರದೆಂದಲ್ಲ. ಆದರೆ ಒದಗಿದ ಬಗೆ ಕನ್ವಿನ್ಸಿಂಗ್ ಆಗುವುದು ಆಗದಿರುವುದು ಎರಡೂ ಸಾಧ್ಯತೆಗಳಿರುತ್ತ ರಾಮಭಟ್ಟ ಮತ್ತು ಮೆನನ್ ಇಬ್ಬರಲ್ಲಿ ಈ ವ್ಯತ್ಯಾಸ ಮುಖ್ಯವಾಗುತ್ತದೆ. ರಾಮಭಟ್ಟನ ಶಿವರಾಮದೊಡ್ಡಪ್ಪನ ರೀತಿನೀತಿ ಸ್ವತಃ ರಾಮಭಟ್ಟರಿಗೇ ವಿಕಲ್ಪವಾಗಿ ಕಾಣಿಸಲಿಲ್ಲ. ಆದರೆ ಈ ಕತೆಯ ಮೆನನ್ ಹಾಗೆ ಕಾಣಿಸಬಹುದಾದ ಸಾಧ್ಯತೆಯೊಂದು ತೆರೆದೇ ಇರುವುದು ಸ್ವತಃ ಕೆ.ಸತ್ಯನಾರಾಯಣರ ಗಮನಕ್ಕೂ ಬಾರದೆ ಹೋದ ಸಂಗತಿಯಿರಲಾರದು.

ಅಲ್ಲದೆ ಸಣ್ಣಕತೆಯ ಮಿತಿಯೊಳಗೆ ಒಂದು ಇಡೀ ಬದುಕು ಹಂತಹಂತಗಳಲ್ಲಿ ನಮಗೆ ಪೆಟ್ಟು ಕೊಟ್ಟು ಕಣ್ತೆರೆಸುತ್ತ ಬರುವ, ಆಗಲೇ ಕಣ್ಣು ತೆರೆದರೆ ಮಾತ್ರ ಕಾಣಿಸಬಹುದಾದ ಮತ್ತು ಕಾಣಿಸಿಯೂ ಇನ್ನೊಬ್ಬರಿಗೆ ಹೇಳಲಾಗದ, ಹೇಳಿ ನಂಬಿಸಲಾಗದ, ನಮಗೇ ಇನ್ನೊಂದು ಮನಸ್ಥಿತಿಯಲ್ಲಿ ವಿಸ್ಮೃತಿಯೆನಿಸಿ ಬಿಡಬಹುದಾದ ವಿವರಗಳನ್ನಿಟ್ಟುಕೊಂಡು ಬರೆಯುವಾಗ ಎದುರಾಗುವ ಸಮಸ್ಯೆ ಕೂಡ ಹೌದು. ಹಾಗಾಗಿ ಮೆನನ್‌ನ ಮನಸ್ಥಿತಿಗೇ ಹೊಂದಿಕೊಳ್ಳುವ ಸ್ತರಕ್ಕೆ ತಲುಪದೇ ಇರುವ ಮಂದಿಗೆ ಈ ಕತೆಯ ಅಸಂಗತ ವಿವರಗಳು ಒಂದೋ ಇಷ್ಟವಾಗಬಹುದು ಅಥವಾ ತೀರ ಅಸಂಗತ ಎನಿಸಲೂ ಬಹುದು. ಇನ್ನೊಂದೆಂದರೆ ತೀರ ಮೇಲ್ಮಟ್ಟದಲ್ಲಿ ವಾಹ್ ಎನಿಸುವ ಕಲ್ಪನೆ ಎನಿಸಬಹುದು. ಈ ಹಂತದಲ್ಲಿ ಮತ್ತೆ ಕುಸುಮಾಕರರ ರೊಳ್ಳಿ (ನಿರಿಂದ್ರಿಯ) ಹೆಚ್ಚು ಪ್ರಾಮಾಣಿಕ ಪಾತ್ರ ಅನಿಸುತ್ತದೆ. ಪರದ ಕುರಿತ ಚಿಂತನೆ, ಯೋಚನೆ ಮನುಷ್ಯನ ಇಹದ ಬದುಕಿನ ಉದ್ದೇಶಗಳನ್ನು ಅಂದರೆ ಅವನ ನಡವಳಿಕೆ, ವರ್ತನೆ, ನೈತಿಕತೆ ಕುರಿತ ಉದ್ದೇಶಗಳನ್ನು ನಿಶ್ಚಯವಾಗಿಯೂ ಹೊಂದಿದೆ. ಅದನ್ನು ಸಾಧಿಸದ ಆಧ್ಯಾತ್ಮವಾಗಲೀ, ಪರಮಾರ್ಥದ ಚಿಂತನೆಯಾಗಲೀ ಸತ್ವವಿಲ್ಲದ್ದು ಎಂದೇ ಅನ್ನಿಸುತ್ತದೆ.

ಮುಖ್ಯ ಪ್ರಶ್ನೆಯೇ ಮೆನನ್‌ಗೆ ಈ ಒಂದು ದರ್ಶನ ಪಡೆಯುವುದಕ್ಕೆ ಬೇಕಾದ ಮಾನಸಿಕ ತಯಾರಿ ಇತ್ತೇ ಎನ್ನುವುದು. ಯಾಕೆಂದರೆ, ಇದೆಲ್ಲ ಬದುಕಿನುದ್ದಕ್ಕೂ ನಮ್ಮನ್ನು ಕಲಕುವ, ಕಾಡುವ, ಮೌನದಲ್ಲಿ, ಏಕಾಂತದಲ್ಲಿ ನಾವು ನಮ್ಮೊಳಗೆ ಕಂಡುಕೊಳ್ಳುವ ಸಂಗತಿಗಳಾದ್ದರಿಂದ ಮೆನನ್‌ಗೆ ಅಂಥ ಒಂದು ಅಂತರಂಗವನ್ನು ಶೋಧಿಸಿಕೊಳ್ಳುವ ದೃಷ್ಟಿಯಿತ್ತೇ ಎನ್ನುವುದು ಕತೆಯ ಚೌಕಟ್ಟಿನೊಳಗಿನ ಪಾತ್ರ ಚಿತ್ರಣದಿಂದಲೇ ಸ್ಫುಟಗೊಳ್ಳಬೇಕು. ಹೌದು-ಹೌದು ಅನಿಸುವ ವಿವರಗಳು ಕತೆಯಲ್ಲೇ ಸಿಗುತ್ತವೆ. ಅವನ ಬದುಕಿನ ವಿಧಾನದಲ್ಲಿ ಅಂಥ ಸ್ಪಂದನಾಶೀಲತೆ, ಸಂವೇದನಾಶೀಲತೆ ಮತ್ತು ಅಂತಃಕರಣ ಆತನಲ್ಲಿತ್ತು ಅನಿಸುತ್ತದೆ. ಅದೇನೇ ಇರಲಿ, ಅವನಲ್ಲಿ ತಯಾರಿ ಒಳಗೊಳಗೇ ಸುಪ್ತವಾಗಿ ಇತ್ತು ಎಂದೇ ಇಟ್ಟುಕೊಳ್ಳುವ. ಇಲ್ಲಿ ಅವನಿಗೆ ಅಂಥ ದರ್ಶನವೊಂದು ಒದಗಿತೇ ಎನ್ನುವುದು ಎರಡನೆಯ ಪ್ರಶ್ನೆ. ದರ್ಶನದೊಂದಿಗೇ ಮೆನನ್ ಪಾತ್ರ ಐಕ್ಯವಾಗುವುದರಿಂದ ಇಲ್ಲಿ ದರ್ಶನ ಮತ್ತು ದಾರ್ಶನಿಕ ಬೇರೆ ಬೇರೆ ಎನ್ನುವುದನ್ನು ಗಮನಿಸಬೇಕು. ಈ ಹೊಸ ದಾರ್ಶನಿಕ ಯಾರು? ನಿರೂಪಕ? ಈ ನಿರೂಪಕ ಯಾವ ನೆಲೆಯಿಂದ ನಮಗೆ ಈ ದರ್ಶನವನ್ನು ಕಾಣಿಸುತ್ತಿದ್ದಾನೆ ಹಾಗಾದರೆ? ಭ್ರಾಂತಿಯೊಂದರ ವಿವರಗಳಲ್ಲೆ ಅಥವಾ ಪ್ರತಿಮಾ ವಿಧಾನದ ನೆಲೆಯಲ್ಲೆ? ಭ್ರಾಂತಿಯ ನೆಲೆಗಟ್ಟಿನಲ್ಲೇ ಎಂದಾದಲ್ಲಿ ಕತೆಯ ಸೆಲೆಯೇ ಅರ್ಥಹೀನವಾಗಿ ಬಿಡುತ್ತದೆ. ಪ್ರತಿಮಾ ವಿಧಾನದ ದರ್ಶನ ಇದು ಎಂದು ಒಪ್ಪಿಕೊಂಡಲ್ಲಿ ಇದನ್ನು ತೀರ ಮನವೊಲಿಸುವ ಒಂದು ನೆಲೆಯೆಂದೇ ಹೇಳಬೇಕಾಗುತ್ತದೆ. ಪ್ರಜ್ಞೆಯ ಪಾತಳಿಯಲ್ಲೇ ಕತೆಯ ಹಂದರವನ್ನೂ ಕತೆಯ ಕೇಂದ್ರ ಪಾತ್ರವನ್ನೂ ಇರಿಸಿ, ಮುಂದೆ ಪರವನ್ನು ಇಹದ ಮುಖೇನವೇ ಸ್ಪರ್ಶಿಸಿದಂತೆ ಸವರಿ ಒಂದು ದರ್ಶನವನ್ನು ತನ್ನ ಒಡಲಿನೊಳಗಿನಿಂದಲೇ ಪಡೆಯಲು ಯತ್ನಿಸುವ ಎಲ್ಲ ಕತೆಗಳ ಸಮಸ್ಯೆ ಇದು. ಕಮ್ಯುನಿಸ್ಟ್ ರಾಮಭಟ್ಟನ ಕತೆ ಈ ಕತೆಯ ಜೊತೆಯಲ್ಲೇ ಇರುವಂತಾದದ್ದು ಕೇವಲ ಕಾಕತಾಳೀಯವಲ್ಲವೇನೋ ಅನಿಸಹತ್ತಿದೆ ನನಗೇ! ಇದಾದರೆ ಒಂದು ಹೊಸ ದರ್ಶನ!

ಆದರೂ ಇದೆಲ್ಲವನ್ನು ಓದುಗನ ಮನಸ್ಸಿನಲ್ಲಿ ಹುಟ್ಟಿಸಬಹುದಾದ್ದು ಸತ್ಯನಾರಾಯಣರ ಈ ಕತೆಗಳ ಒಂದಾನೊಂದು ಸಾಧ್ಯತೆಯೇ ಆಗಿದೆ! ಹಾಗಾಗಿ ಅದರ ಉದ್ದೇಶವೂ ಖಂಡಿತ ಈಡೇರಿದೆ!

ಸಂಕಲನದ ಸಬ್-ಸಬಾಲ್ಟ್ರನ್ ಕತೆ ಕೊನೆಯಲ್ಲಿ ಜೋಡಿಸಿದಂತೆ ಅನಿಸುವ ಒಂದು ವಿವರದ ಅಸಹಜತೆಯಿಂದಲೂ, ಅದು ಬೇಡ ಬೇಡವೆಂದರೂ ನೆನಪಿಸುವ ಡಾ||ಯು.ಆರ್.ಅನಂತಮೂರ್ತಿಯವರ ‘ನವಿಲುಗಳು’ ಕತೆಯ ನೆರಳಿನಿಂದಲೂ ಅಷ್ಟಾಗಿ ಮನಸ್ಸಿಗಿಳಿಯುವುದಿಲ್ಲ. ‘ಬೇಡ! ಬೇಡ! ಫೋರ್ಡ್ ಕಂಪನಿ ಕೆಲಸ’ ಸತ್ಯನಾರಾಯಣರ ಹಿಂದಿನ ಸಂಕಲನಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಕಥೆ, ಸಾತತ್ಯದ ನೆಲೆಯಿಂದ ಮತ್ತೆ ಇಲ್ಲಿಯೂ ಕಾಣಿಸಿಕೊಂಡಿದೆ.

(ಅಕ್ಷರ ಪ್ರಕಾಶನ, ಹೆಗ್ಗೋಡು. ಪುಟಗಳು 170, ಬೆಲೆ ನೂರಾ ಹದಿನೈದು ರೂಪಾಯಿ.)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Saturday, November 27, 2010

ಮದುವೆ ಆಯಿತೆ, ಡೈವೋರ್ಸ್ ಯಾವಾಗ?

ಈಚೆಗೆ ದಾಂಪತ್ಯದ ಕುರಿತಾಗಿಯೇ ಕೆಲವು ಕಾದಂಬರಿಗಳು ಒಂದರ ಹಿಂದೆ ಒಂದರಂತೆ ಬರುತ್ತಿರುವುದು ಕುತೂಹಲಕರವಾಗಿದೆ. ಎಸ್.ಎಲ್.ಭೈರಪ್ಪನವರ ಕವಲು, ಸತ್ಯನಾರಾಯಣರ ವಿಚ್ಛೇದನಾ ಪರಿಣಯ, ಗುರುಪ್ರಸಾದ್ ಕಾಗಿನೆಲೆಯವರ ಗುಣ ಎಲ್ಲದರ ಕೇಂದ್ರ ದಾಂಪತ್ಯವೇ ಆಗಿರುವಂತಿದೆ. ಇಲ್ಲಿ ನಾನು ಕೆ.ಸತ್ಯನಾರಾಯಣರ ‘ವಿಚ್ಛೇದನಾ ಪರಿಣಯ’ ಕುರಿತು ಕೆಲವು ಟಿಪ್ಪಣಿಗಳನ್ನು ದಾಖಲಿಸಿದ್ದೇನೆ.

ಈ ಕಾದಂಬರಿ ವಿನೂತನವಾದ ತಂತ್ರ, ನಿರೂಪಣಾ ವಿಧಾನ ಮತ್ತು ಶೈಲಿಯಿಂದಾಗಿ ಸಿದ್ಧ ಮಾದರಿಯ ಕಾದಂಬರಿಗಳಿಂದ ಭಿನ್ನವಾಗಿ ನಿಲ್ಲುತ್ತದೆ. ವರದಿ, ಅಧ್ಯಯನ, ವಿಡಂಬನೆ, ಕಾಲ್ಪನಿಕ ಜಗತ್ತಿನ ಕಟ್ಟುಕಥೆ, ವಾಸ್ತವಗಳೆಲ್ಲವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ಕಾದಂಬರಿಯನ್ನು ಕಟ್ಟುವ ಸಾಹಸವನ್ನು ಇಂಗ್ಲೀಷ್ ಕಾದಂಬರಿಕಾರರು ಕೈಗೊಂಡಂತೆ ಕನ್ನಡದಲ್ಲಿ ಯಾರೂ ಮಾಡಿದಂತಿಲ್ಲ. ಸತ್ಯನಾರಾಯಣರು ಇಲ್ಲಿ ಅದನ್ನು ಪ್ರಯತ್ನಿಸಿ ಹೊಸ ಬಗೆಯ ಬರವಣಿಗೆಗೆ ಒಂದು ನಾಂದಿಯಿಟ್ಟಿದ್ದಾರೆ. ಹಾಗೆ ನೋಡಿದರೆ ‘ಸನ್ನಿಧಾನ’ ಬರೆದಾಗಲೂ ಅಂಥ ಒಂದು ಹೊಸತನದ ಹೆಜ್ಜೆಯನ್ನು ಅವರು ಎತ್ತಿದ್ದರು. ಈಗ ಇನ್ನೊಂದು ಮಜಲಿನ ಬರವಣಿಗೆ ನಮಗಿಲ್ಲಿ ಕಾಣಸಿಗುತ್ತದೆ. ಇದರ ಹೊಸತನದಿಂದಾಗಿ ಮತ್ತು ಓದುಗನನ್ನು ವಿಭಿನ್ನ ನಿಟ್ಟಿನಿಂದ ಪ್ರವೇಶಿಸುವ ನಿರೂಪಣಾ ವಿಧಾನದಿಂದಾಗಿ ಈ ಕಾದಂಬರಿಯನ್ನು ಹಾಗೇ ಓದಿ ಅರ್ಥ ಮಾಡಿಕೊಂಡುಬಿಟ್ಟೆವು ಎಂದುಕೊಳ್ಳುವ ಹಾಗಿಲ್ಲ. ಓದಿದ ಬಳಿಕ ಈ ಬಗೆಯ ತಂತ್ರ, ಪ್ರಯೋಗಶೀಲತೆ, ಅದರ ಪರಿಣಾಮಕಾರತ್ವ, ಪ್ರಸ್ತುತತೆ ಇತ್ಯಾದಿಗಳ ಕುರಿತಂತೆ ಒಂದಷ್ಟು ಚರ್ಚೆ, ವಾದ ಸಾಧ್ಯವಾದಲ್ಲಿ ಇದು ನಮಗೆ ಹೆಚ್ಚು ಸ್ಪಷ್ಟವಾಗುತ್ತದೆ ಎನಿಸುತ್ತದೆ.

ವಸ್ತು:

ವಸ್ತುವಿನ ದೃಷ್ಟಿಯಿಂದ ರಾಜಧಾನಿಯಲ್ಲಿ ಶ್ರೀಮತಿಯರು, ಗೌರಿ, ಸನ್ನಿಧಾನ, ಕಾಲಜಿಂಕೆ ಮತ್ತು ರಾಮ-ಸೀತೆಯರ ಸಂಬಂಧದ ಸೂಕ್ಷ್ಮಗಳ ಕುರಿತಾಗಿಯೇ ಇರುವ ಅವರ ಆರಂಭಿಕ ಕತೆಗಳಲ್ಲೊಂದು, ‘ಸೀತೆ ಹೇಳಿದ ರಾಮನ ಗುರುತು’ ನೆನಪಾಗುವಂತೆ ಈ ಬರಹ ಕೂಡಾ ಸ್ತ್ರೀಮತವನ್ನುತ್ತರಿಸುವ ನಿಟ್ಟಿನಲ್ಲೇ ಇದೆ. ಹೆಣ್ಣು, ಅವಳ ಕನಸು, ಆಸೆ-ಆಕಾಂಕ್ಷೆಗಳು, ಸಿಟ್ಟು-ಸೆಡವುಗಳು, ವಾಂಛೆ ಮತ್ತು ಅದಕ್ಕೆ ಸಂವಾದಿಯಾಗಿ ಗಂಡಸಿನ ಧಾರ್ಷ್ಟ್ಯ, ನಿರ್ಲಕ್ಷ್ಯ ಮತ್ತು ತಿರಸ್ಕಾರ ಸಹಿತ ದಮನಿಸುವ ಪ್ರವೃತ್ತಿಗೆ ಮುಖಾಮುಖಿಯಾಗಿ ಅವಳು ತೆಗೆದುಕೊಳ್ಳುವ ಭಿನ್ನ ವಿಭಿನ್ನ ನಿಲುವುಗಳು, ಹೆಜ್ಜೆಗಳು ಸತ್ಯನಾರಾಯಣರನ್ನು ಮತ್ತೆ ಮತ್ತೆ ಕಾಡುತ್ತ ಬಂದಿರುವ ಒಂದು ಪ್ರಮುಖ ವಿದ್ಯಮಾನ. ಹಾಗೆಯೇ, ಮನುಷ್ಯ ಸಂಬಂಧದ ಶಿಖರಪ್ರಾಯ ಪ್ರಯೋಗದಂತಿರುವ ದಾಂಪತ್ಯ ಕೂಡಾ ಅವರನ್ನು ಕಾಡುತ್ತಲೇ ಉಳಿದ ವಸ್ತು. ‘ದಾಂಪತ್ಯಕ್ಕೊಂದು ಶೀಲ’ ಎಂಬ ಅವರ ಪ್ರಬಂಧ ಸಂಕಲನದಿಂದ ಹಿಡಿದು ಈ ಕಾದಂಬರಿಯ ವರೆಗೂ ಹೆಣ್ಣು ಮತ್ತು ದಾಂಪತ್ಯ ಎರಡೂ ಅವರನ್ನು ಕಾಡಿದೆ; ಗಾಂಧೀವಾದ, ಮಾರ್ಕ್ಸ್‌ವಾದ, ಮಾಸ್ತಿ - ವಿಶ್ವೇಶ್ವರಯ್ಯ ಪರಂಪರೆ, ಸಾಹಿತ್ಯ ವಿಮರ್ಶೆ, ಪ್ರವಾಸ ಮತ್ತು ಸಮಕಾಲೀನ ವಿದ್ಯಮಾನಗಳಿಗೆ ತಮ್ಮನ್ನು ತೆತ್ತುಕೊಳ್ಳುತ್ತಲೇ ಅವರ ಮನಸ್ಸು ಈ ಎರಡರ ಬಗ್ಗೆಯೂ ಮಿಡಿಯುತ್ತ ಉಳಿದಿದೆ, ಮಾನವ ಸಮಷ್ಟಿಯ ಸಮೃದ್ಧಿ ಮತ್ತು ಆರೋಗ್ಯಕರ ಸುಖದ, ಹಿತಚಿಂತನೆಯ ನೆಲೆಯಲ್ಲಿ.

ಹಾಗೆಯೇ ವಸ್ತುವಿನ ಸಂದರ್ಭದಲ್ಲಿಯೇ ಹೇಳಬೇಕಾದ ಇನ್ನೊಂದು ಮಾತು, ಒಂದು ಕತೆ ಒಂದೇ ಕತೆಯಲ್ಲ, ಅದು ಸೀರೀಸ್ ಆಫ್ ಸ್ಟೋರೀಸ್; ಯಾವುದೇ ಒಂದು ಕತೆ ಒಳಗೊಳ್ಳುವ ಪಾತ್ರವರ್ಗವೇನಿದೆ, ಅದು ಅವರು ಮಾತ್ರವೇ ಆಗಿರುವುದಿಲ್ಲ, ನಿಮ್ಮ ನಮ್ಮನ್ನೂ ಸೇರಿಕೊಂಡೇ ಅದು ಸಾಗುತ್ತಿದೆ, ಬೆಳೆಯುತ್ತಿದೆ ಎನ್ನುವಂಥ ಅವರ ಒಂದು ದೃಷ್ಟಿಕೋನ ಇಲ್ಲಿಯೂ ಕೆಲಸ ಮಾಡಿದೆ. ಸತ್ಯನಾರಾಯಣರು ‘ನಿಮ್ಮ’ ಮೊದಲ ಪ್ರೇಮದ ಕಥೆಯನ್ನು ಹೇಳಿದ್ದು ಈ ನಿಟ್ಟಿನಿಂದಲೇ. ‘ಇದೆಲ್ಲ ಒಂದೇ ಕತೆಯೇ’ ಎಂಬ ಅವರ ಅನುಮಾನ ಕೂಡ ಇದೇ ನಿಟ್ಟಿನದು. ಕತೆ ಓದಿ ಮುಗಿಸಿದ ಮೇಲೂ ಒಬ್ಬೊಬ್ಬ ಓದುಗನಲ್ಲೂ ಅದು ಬೇರೆ ಬೇರೆಯೇ ಕತೆಯಾಗಿ ಮರುಹುಟ್ಟು ಪಡೆಯುವಂಥದು, ಬೆಳೆಯುವಂಥದು ಎನ್ನುವುದು ಅವರ ನಿಲುವು.

‘ಮನುಷ್ಯ ಸಮಾಜವು ತನ್ನ ಉಳಿವು ಮತ್ತು ಪ್ರಗತಿಗಾಗಿ ತಾನೇ ಸೃಷ್ಟಿಸಿಕೊಂಡಿರುವ ವಿವಾಹ ಮತ್ತು ದಾಂಪತ್ಯವೆಂಬೆರಡು ಸಂಸ್ಥೆಗಳನ್ನು ನಮ್ಮ ಕಾಲಕ್ಕೆ ಪ್ರಸ್ತುತವಾಗುವಂತೆ ಶೋಧಿಸಲು ಬೇಕಾದ ಸಂದರ್ಭ ಮತ್ತು ಪರಿಪ್ರೇಕ್ಷ್ಯವನ್ನು ಆತ್ಮೀಯವಾಗಿಯೂ, ಪ್ರಾಮಾಣಿಕವಾಗಿಯೂ, ಭಾವತೀವ್ರವಾಗಿಯೂ ಸೃಷ್ಟಿಸುತ್ತಾ ಕಾದಂಬರಿ ಓದುವಾಗ ಪ್ರತಿಯೊಬ್ಬ ಓದುಗನೂ ತನ್ನ ಸ್ವಂತಕ್ಕಾಗಿ ಇನ್ನೊಂದು ಕಾದಂಬರಿಯನ್ನು ಪುನರ್ ಸೃಷ್ಟಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ’ ಎನ್ನುವ ಒಂದು ಟಿಪ್ಪಣಿ ಈ ಕಾದಂಬರಿಯ ಬ್ಲರ್ಬ್‌ನಲ್ಲಿದೆ. ಇದು ಒಂದು ಬಗೆಯ ವಸುದೈವ ಕುಟುಂಬಕಂ ಮನೋವೃತ್ತಿಯದೇ ವಿಸ್ತರಣೆ, ಸತ್ಯನಾರಾಯಣರ ಸಹಜ ಭಾವ.

ಇದನ್ನು ಸತ್ಯನಾರಾಯಣರು ಕೃತಿಯಲ್ಲಿ ಆಗಗೊಡುವ ಬಗೆಯನ್ನು ಗಮನಿಸಬಹುದು ಮತ್ತು ಅದರ ಸಾಧಕ ಬಾಧಕಗಳನ್ನು ಅರಿಯಲು ಪ್ರಯತ್ನಿಸಬಹುದು. ಇಲ್ಲಿಯೂ ಸತ್ಯನಾರಾಯಣರು ವಿಭಿನ್ನ ಪಾತಳಿಯಿಂದ ಒಂದೇ issueವನ್ನು ಮತ್ತೆ ಮತ್ತೆ ಬೇರೆ ಬೇರೆ ಕಥಾನಕಗಳ ಮೂಲಕ ಹೇಳುವ, ಕಾಣಿಸುವ ಒಂದು ನೇಯ್ಗೆಯನ್ನು ಹೆಣೆಯುತ್ತಾರೆ. ಅದಕ್ಕೆ ಅವರು ಬಳಸುವ ತಾಂತ್ರಿಕ ಜಾಣ್ಮೆ, ಕಲ್ಪನೆಯ ಭರಪೂರ ಉಪಯೋಗ ಮತ್ತು ಕಲಾತ್ಮಕತೆ ಏನೇ ಇರಲಿ. ಅವರ ವೈಚಾರಿಕ ಧೋರಣೆ ಇದು: ಒಂದು - ದಾಂಪತ್ಯ; ಅದರ ಮುಖಗಳಾದ ಪ್ರೇಮ ಮತ್ತು ಕಾಮ. ವಿವಾಹ ಎಂದರೆ ಕೇವಲ ಎರಡು ವ್ಯಕ್ತಿಗಳ ನಡುವಣ ಸಂಬಂಧ ಮಾತ್ರ ಅಲ್ಲ; ಅದೇನಿದ್ದರೂ ಮೇಲ್ನೋಟಕ್ಕೆ ಎರಡು, ಸೂಕ್ಷ್ಮವಾಗಿ ಗಮನಿಸಿದರೆ ನೂರಾರು ಕುಟುಂಬಗಳ ನಡುವೆ ತೆರೆದುಕೊಳ್ಳುವ ಸಾವಿರಾರು ಮನುಷ್ಯ ಸಂಬಂಧಗಳ matrix. ಹೀಗೆ ಅದು ಸಾಮಾಜಿಕ ವಿದ್ಯಮಾನ, ನಾವು ತಿಳಿದುಕೊಂಡಂತೆ ವೈಯಕ್ತಿಕ ವಿಷಯವೇ ಅಲ್ಲ. ಹೀಗಾಗಿ ಅದರ success or failure ಕೂಡಾ ವೈಯಕ್ತಿಕವಾಗಿ ಉಳಿಯುವಂಥಾದ್ದು, ಉಳಿಯಬಹುದಾದ್ದು ಅಲ್ಲ ಎಂಬುದನ್ನೇ ಸತ್ಯನಾರಾಯಣರು `n' number of instances ಗಳ ಮೂಲಕ ನಮಗೆ ಕಾಣಿಸುತ್ತಾ ಹೋಗುತ್ತಾರೆ. ಇದನ್ನು ಸತ್ಯನಾರಾಯಣರು ಖಚಿತವಾದ ನಿಲುವು ಮತ್ತು ಸ್ಪಷ್ಟ ಉದ್ದೇಶದಿಂದಲೇ ಮಾಡುವುದರಿಂದ ಇವರ ಕಾದಂಬರಿಗಳಲ್ಲಿ ಪಾತ್ರಗಳು, ಕಥಾನಕಗಳ ಇಡಿಕ್ಕಿರಿದಂತೆ ಕಂಡರೆ ಅಚ್ಚರಿಯಿಲ್ಲ.

-ಹೀಗೆ ವಸ್ತು ಮತ್ತು ವಿನ್ಯಾಸದಲ್ಲಿ ಈ ಕಾದಂಬರಿಯು ಕೂಡಾ ಸತ್ಯನಾರಾಯಣರ ಇದುವರೆಗಿನ ಕಾದಂಬರಿಗಳ ಮತ್ತು ಕೆಲವೊಂದು ಕತೆಗಳ ಜೊತೆ ಸಾತತ್ಯವನ್ನು ಹೊಂದಿದೆ.

ನಿರೂಪಣಾ ವಿಧಾನ ಮತ್ತು ತಂತ್ರ:

ಇಲ್ಲಿ ತೀರ ಹೊಸದು, ವಿಶಿಷ್ಟ ಅನುಭವಕ್ಕೆ ಕಾರಣವಾಗುವಂಥದ್ದು ಮತ್ತು ಚರ್ಚೆಗೆ ವಸ್ತುವಾಗುವುದು ಏನೆಂದರೆ, ಈ ಕಾದಂಬರಿಯ ನಿರೂಪಣಾ ವಿಧಾನ ಮತ್ತು ತಂತ್ರ. ಇದರಿಂದ ಕೃತಿಗಾದ ಲಾಭ ನಷ್ಟದ ಜೊತೆ ಜೊತೆಗೇ ಓದುಗನಿಗೆ ಅದು ಕೊಡುವ-ಬಿಡುವ ವಿಚಾರದ ಬಗ್ಗೆ ಸೂಕ್ತ ಚರ್ಚೆಯ ಅಗತ್ಯವಿದೆ.

ಮೊದಲನೆಯದಾಗಿ, ಒಂದು ಬಗೆಯ ಕಾಮಿಕ್ ಶೈಲಿ ಇದೆ ಇಲ್ಲಿ. ಆದರೆ ಅದು ತೇಜಸ್ವಿಯವರ ಕಾಮಿಕ್ ಶೈಲಿಯೂ ಅಲ್ಲ, ಶ್ರೀನಿವಾಸ ವೈದ್ಯರ ಕಾಮಿಕ್ ಶೈಲಿಯೂ ಅಲ್ಲ. ಪ್ರಸನ್ನರ ಇತ್ತೀಚಿನ ಕಾದಂಬರಿ ‘ಬಾಲಗೋಪಾಲ’ದ ಕೆಲವೊಂದು ಆಯ್ದ ಭಾಗಗಳಲ್ಲಿ ಇದೇ ಬಗೆಯ ಕಾಮಿಕ್ ಶೈಲಿಯ ಬಳಕೆಯಾದದ್ದು ಬಿಟ್ಟರೆ ಇಡೀ ಕಾದಂಬರಿ ಇದನ್ನು ಆಧರಿಸಿ ಹೆಣೆಯಲ್ಪಟ್ಟದ್ದು -ಕನ್ನಡದಲ್ಲಿ - ಇಲ್ಲವೆಂದೇ ಹೇಳಬಹುದೇನೊ. ಈ ಧಾಟಿ ಕೆಲವೊಂದು ಅನುಕೂಲಗಳನ್ನೂ ತೊಡಕುಗಳನ್ನೂ ನಿರೂಪಕನಿಗೆ ವಿಧಿಸುವಂಥಾದ್ದು. ತೇಜಸ್ವಿಯವರ ಜೀವನಶೈಲಿ ಮತ್ತು ಜೀವನದೃಷ್ಟಿಯಿಂದಾಗಿ ಅವರ ಕೃತಿಗಳು ತೊಡಕುಗಳಿಗೆ ತೊಡರಿಕೊಳ್ಳಲಿಲ್ಲ ಎನಿಸುವಾಗಲೇ ವೈದ್ಯರು ಎಲ್ಲವನ್ನೂ ತೀರ ಆತ್ಮೀಯ ಧಾಟಿಯಲ್ಲಿ, ಎದುರು ಕೂತು ಹಂಚಿಕೊಳ್ಳುವವನ ನೆಲೆಯಲ್ಲೇ ಕಥಾನಕವನ್ನು ತೊಡಗುವುದರಿಂದ ಇದರಿಂದ ಪಾರಾಗುತ್ತಿದ್ದಾರೆ ಅನಿಸುತ್ತದೆ. ಸತ್ಯನಾರಾಯಣರು ಆಯ್ದುಕೊಂಡ ತಂತ್ರ ಸದ್ಯದ ಕೃತಿಗೆ, ಇಡೀ ಕಾದಂಬರಿಯ ಚೌಕಟ್ಟಿಗೆ ಒಗ್ಗುವುದರಿಂದ ವಿಶೇಷವಾದ ತೊಡಕುಗಳಿಗೆ ಎದುರಾಗಿಲ್ಲವೇನೋ ಅನಿಸುತ್ತದೆ. ಅಂದರೆ ಇಲ್ಲಿ ಸನ್ನಿವೇಶಗಳ ನೆಲೆಯಲ್ಲಿ ಹೆಚ್ಚು ಏರಿಳಿತಗಳಿಲ್ಲ. Situation - ತುಂಬ ಸಾವಧಾನಿತ ನೆಲೆಗಟ್ಟಿನಲ್ಲಿ, ಭಾವಾವೇಶಗಳಿಗೆ ಕೆಲಸ ಕೊಡದೆ ಸಾಗುವುದು ಇದಕ್ಕೆ ಅನುಕೂಲಕರವಾಗಿದೆ. ಕಾಮಿಕ್ ನೆಲೆಯಿಂದ ಕೊಂಚ ಲಘುವಾಗಿಯೇ ಈ ಗಂಭೀರವಾದ ವಿದ್ಯಮಾನವನ್ನು ಕಾಣುತ್ತ ಹೋಗುವುದರಿಂದ ಒಟ್ಟು ಪರಿಣಾಮಕ್ಕೆ ಕುಂದುಂಟಾಗದೆಂಬ ಅವರ ನಿಲುವು ಸರಿಯಾಗಿಯೇ ಕೆಲಸ ಮಾಡಿದೆ ಅಂತಲೂ ಅನಿಸುತ್ತದೆ. ಮೈಕ್ ಮತ್ತು ಜೇನ್ ಪ್ರಕರಣವನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಒಂಥರಾ ಐಲಿನಂತೆ ಕಾಣುವ ಇವರ ವಿಶ್ವಪರ್ಯಟನೆಯ ಉದ್ದೇಶ, ತಮ್ಮ ದಾಂಪತ್ಯ ಅನುರೂಪವಾದದ್ದೇ ಅಲ್ಲವೇ ಎಂದು ಊರಲ್ಲಿದ್ದವರನ್ನೆಲ್ಲ ಕೇಳುತ್ತ ಹೋಗುವ ಚರ್ಯೆ - ಅದರ ಮೂಲಆಶಯದಲ್ಲಿ ವಿಶ್ವದ ಆಶೀರ್ವಾದವನ್ನು ಸೆಳೆದುಕೊಳ್ಳಬಲ್ಲ ಔದಾರ್ಯವನ್ನು ಬೇಡುವಂಥಾದ್ದಾಗಿರುವಾಗಲೂ ಅದರತ್ತ ನಕ್ಕುಬಿಡಬಹುದಾದ ಸಾಧ್ಯತೆಯನ್ನೂ ಉಳಿಸಿಕೊಂಡಿರುತ್ತದೆ. ಇಡೀ ಕಾದಂಬರಿಯ ಬಹಳಷ್ಟು ವಿದ್ಯಮಾನಗಳನ್ನು ಹೀಗೆಯೇ ವಿಶ್ಲೇಷಿಸುವುದು ಸಾಧ್ಯವಿದೆ.

ಎರಡನೆಯದಾಗಿ, ನಿರೂಪಣೆಯ ಮುಕ್ಕಾಲುಭಾಗ ನಿರೂಪಣೆಯಲ್ಲಿ ಕಾಣುವ ಒಂದು ಬಗೆಯ ನಿರ್ಭಾವದ, ತಟಸ್ಥ ನಿರೂಪಕನ ಮನೋಭಾವ. ಪ್ರಸ್ತುತ ಕಥಾನಕವನ್ನು, ವಿಚಾರವನ್ನು ತಾನು ಯಾರನ್ನೂ ಉದ್ದೇಶಿಸಿ ಹೇಳುತ್ತಿಲ್ಲ ಎನ್ನುವಂತೆ ನಿರೂಪಣೆ ತೊಡಗುತ್ತದೆ ಮತ್ತು ಹಾಗೆಯೇ ಸಾಗುತ್ತದೆ. ಇಲ್ಲಿ ಸತ್ಯನಾರಾಯಣರಾಗಲೀ, ನಿರೂಪಕನಾಗಲೀ ಕಥಾನಕವನ್ನು ‘ಹೇಳು’ತ್ತಿಲ್ಲ, ದಾಖಲಿಸುತ್ತಿರುವಂತಿದೆ. ಆದರೆ ದಾಖಲಿಸುತ್ತಲೇ ಏನನ್ನೋ ‘ಕಾಣಲು’ ಹೊರಟವನ, ‘ಕಾಣಲು’ ತವಕಿಸುವವನ ಧಾಟಿಯೂ ಇಲ್ಲಿಲ್ಲ. ಅಂದರೆ ಶೋಧದ ತುರ್ತು ಮತ್ತು ವಿನಯ ಎರಡೂ ಈ ಧಾಟಿಯಲ್ಲಿಲ್ಲ. ಅಷ್ಟರಮಟ್ಟಿಗೆ ಇದು ಸ್ವಗತ ಅಥವಾ ಮನೋಗತದ ನಿರೂಪಣೆಯೂ ಅಲ್ಲ. ಸ್ಥೂಲವಾಗಿ ಇದು presentation ಶೈಲಿಯ ನಿರೂಪಣೆ. ಹೇಳಲಿಕ್ಕಿರುವುದು ಇದೇ ಎನ್ನುವ ಸ್ಪಷ್ಟತೆಯೊಂದಿಗೆ ಅದನ್ನು ಹೀಗೆ ಹೇಳಿದರೆ ಹೇಗಿರುತ್ತದೆ ನೋಡುವಾ ಎನ್ನುವ ತಾಂತ್ರಿಕ ಮತ್ತು ಬೌದ್ಧಿಕ ಜಾಣ್ಮೆಯ presentation ಈ ಕೃತಿಯ ವೈಶಿಷ್ಟ್ಯ. ಆರಂಭದಲ್ಲಿ ಈ ಮಾರ್ಗದ ಬಗ್ಗೆ ಅದರ ನಾವೀನ್ಯವೇ ಕಾರಣವಿರಬಹುದಾಗಿ ಕೊಂಚ ಅಧೈರ್ಯವಿದ್ದುದರಿಂದಲೇ ಇದ್ದರೂ ಇರಬಹುದು, ಓದುಗನ ಬಗ್ಗೆ ಅಥವಾ reciever ಬಗ್ಗೆ ಒಂದು ಬಗೆಯ closed eyes ಇರುವಂತೆ ಅನುಭವವಾಗುತ್ತದೆ. ಪುಟ್ಟ ಪುಟ್ಟ ಅಧ್ಯಾಯಗಳು ಕೂಡಾ ಇಂಥ ಅನ್ನಿಸಿಕೆ, ಭಾವನೆ ಮೂಡಲು ಕಾರಣವಿರಬಹುದು.

ಮೂರನೆಯದಾಗಿ ಇಡೀ ಕೃತಿಯಲ್ಲಿ ತುಂಬಿರುವ presumptions. ಇಲ್ಲಿ ಸತ್ಯನಾರಾಯಣರು ಭಾರತ-ಅಮೆರಿಕ-ನೆದರ್‌ಲ್ಯಾಂಡ್‌ಗಳ ಉಲ್ಲೇಖ ತರುತ್ತಾರಾದರೂ ತಮ್ಮ ಕಥಾನಕಕ್ಕೆ ನಿರ್ಮಿಸಿಕೊಂಡ ಕೋದಂಡರಾಮಪುರ, ಅದರ ಗಡಿ, ಎಲ್ಲೆ, ಸಂಪರ್ಕ ಮಾಧ್ಯಮಗಳು ಎಲ್ಲ presumed ಜಗತ್ತಿಗೆ, ಅಂಥ ನಿಯಮಾವಳಿಗಳಿಗೆ ಸೇರಿವೆ. ದೀವಳಿಗೆಗೆ ತವರಿಗೆ ಬರುವ ಮಗಳು-ಅಳಿಯಂದಿರಿಗೆ ಕೋದಂಡರಾಮಪುರ (ಪುಟ್ಟ ಊರು - ರಾಜ್ಯ - ದೇಶ?) ದ ಪ್ರಸ್ತುತ ವಿದ್ಯಮಾನ ತಿಳಿಯದಿರಲೆಂದು ಎಲ್ಲರೂ ಬಯಸುವಲ್ಲಿ ಇರುವ ವಿರೋಧಾಭಾಸ ಗಮನಿಸಿ. ಕೃತಿ ಇಂಥ ವಿರೋಧಾಭಾಸಗಳನ್ನು presumably ನಿರಾಕರಿಸಿ ಮುಂದುವರಿಯುತ್ತದೆ ಎನ್ನುವ ಕಾರಣಕ್ಕೆ ಇದು ಮುಖ್ಯ. ಆ ಸಮಯಕ್ಕೆ ಕೋರ್ಟು ರಜೆ ಸಾರುತ್ತದೆ ಮತ್ತು ಎಲ್ಲವೂ ಸಾಂಗವಾಗಿ ಸಾಗುತ್ತದೆ. ಈ ಬಗೆಯ assumptions ಅಲ್ಲಲ್ಲಿ ನಮಗೆ ಕಾಣಲು ಸಿಗುತ್ತವೆ. ಇಲ್ಲಿ ಸರಕಾರದ ಪ್ರತಿಸ್ಪಂದನ - ಜನತೆಗೆ - ಯಾವಾಗಲೂ ಹೀಗೆ ಅಥವಾ ಹಾಗೆ ಎನ್ನುವ ಮಾದರಿಯಲ್ಲಿ ಇರುತ್ತದೆ. ಅದರಲ್ಲಿ ಬಿರುಕು-ಒಡಕು-ಸಂದಿಗ್ಧ-ಸಂಕೀರ್ಣತೆ ಸದ್ಯದ ಮಟ್ಟಿಗೆ ಇಲ್ಲ ಎಂದಿಟ್ಟುಕೊಳ್ಳಬೇಕಿದೆ, ಕಥಾನಕದ ಚಲನೆಯ ದೃಷ್ಟಿಯಿಂದ. ಜನಸಾಮಾನ್ಯರು, ಮಾಧ್ಯಮಗಳು, ಸಂಸ್ಥೆಗಳು ಸ್ವಲ್ಪಮಟ್ಟಿನ ವೈವಿಧ್ಯ, ವಿರೋಧಾಭಾಸ ತೋರಿದಂತೆ ಕಂಡರೂ ಪರಿಣಾಮದ ನಿಟ್ಟಿನಲ್ಲಿ ಅವುಗಳು ಕೂಡಾ ಒಂದು group activityಯಾಗಿ ವರ್ತಿಸುತ್ತವೆ. ಅಥವಾ ವರ್ತಿಸಿದವು ಎಂದು ನಮಗೆ ಹೇಳಲಾಗುತ್ತದೆ ಎನ್ನುವುದೇ ಹೆಚ್ಚು ಸರಿ. Take it or reject it, it is just what it is - ಕಥಾನಕದ ಧೋರಣೆ, ಕಥಾನಕದ ಅಗತ್ಯ. ಅಷ್ಟರಮಟ್ಟಿಗೆ ಕಥಾನಕ ಅವಲಂಬಿಸುವ ತಂತ್ರ ಒಂದು presumed ಜಗತ್ತಿದು. Mythical, Magical Realism ಮತ್ತು ಜಾನಪದ ಕತೆಗಳ ಒಂದು assumed reality ಇಲ್ಲಿಯೂ ಇದೆ. ಆದರೆ ಅದನ್ನು ಹೌದು ಮಾಡುವಲ್ಲಿನ, ಅದಕ್ಕೆ ಅಗತ್ಯವಾದ ಒಂದು ಆತ್ಮೀಯ ಧಾಟಿ missing ಅನಿಸುತ್ತಿರುತ್ತದೆ. ಸಾಧಾರಣವಾಗಿ justfy ಮಾಡುವ ಹವ್ಯಾಸದ ಮತ್ತು ಆ ಕಾರಣದಿಂದಲೋ ಆರಂಭಿಕ ಹಂತದಲ್ಲಿ ಕೊಂಚ ವಾಚಾಳಿ ಎನ್ನಿಸಿಕೊಂಡ ಸತ್ಯನಾರಾಯಣರು ಇಲ್ಲಿ ತೂಕ ಮಾಡಿ ಮಾತನಾಡುವ ಶೈಲಿಗೆ ಒಗ್ಗಿಕೊಂಡು ಅಚ್ಚರಿ ಹುಟ್ಟಿಸುತ್ತಾರೆ.

ನಾಲ್ಕನೆಯದಾಗಿ ಕೋರ್ಟಿನಲ್ಲಿ ನಟ-ನಟಿಯರ ‘ಕೇಸ್’ನಿರೂಪಣೆ, ಕೋರ್ಟು ರಜೆಯಲ್ಲಿರುವಾಗ ನಡೆಯುವ ರಂಗೋತ್ಸವ ನಿಜಕ್ಕೂ ಈ ಕಾದಂಬರಿಯ highlight. ಕಾದಂಬರಿ ನಿರೂಪಣೆಯ ತನ್ನ ಬಿಗುತನವನ್ನು ಕೊಂಚ ಸಡಿಲಿಸಿ ಓದುಗರತ್ತ ಮಂದಹಾಸ ಬೀರುವ ಮನೋಭಾವ ತೋರತೊಡಗುವುದು ಇಲ್ಲಿಂದ ಮುಂದೆಯೇ ಅನಿಸುತ್ತದೆ. ಈ ಪ್ರಕರಣಗಳು ವಾಡೆಯ ವಸ್ತುವಿಶೇಷಗಳ ‘ನಗರ (ಬೆಡ್ ರೂಂ) ಪ್ರದಕ್ಷಿಣೆ’ಗಿಂತ ಹೆಚ್ಚು ಜೀವಂತವಾಗಿ, ಪರಿಣಾಮಕಾರಿಯಾಗಿ ಮತ್ತು ಸಂಕೀರ್ಣವಾದ ಚಿತ್ರಗಳೊಂದಿಗೆ ಮೂಡಿಬಂದಿದೆ.

ಕಾದಂಬರಿಯಾಗಿ :

ಉಳಿದಂತೆ ಒಟ್ಟಾರೆಯಾಗಿ ಈ ಕಾದಂಬರಿಯ ಓದು ಏನನ್ನು ಕೊಡುತ್ತಿದೆ ಎಂದು ನೋಡಬೇಕು. ಜನಜೀವನ ಸರಳವಾಗಿ ಮನುಷ್ಯ ಸಂಬಂಧದಲ್ಲಿ, ಬದುಕಿನಲ್ಲಿ ರುಚಿ ಕಳೆದುಕೊಂಡು, ಅನ್ಯಮನಸ್ಕವಾಗಿರುವುದನ್ನು ತುಂಬ ಕಲಾತ್ಮಕ ಜಾಣ್ಮೆಯಿಂದ ನಿರೂಪಿಸುವ, ಸೂಕ್ಷ್ಮವಾದ ವಸ್ತುವನ್ನು ಭಾಷೆಯಲ್ಲಿ ನಿಜವಾಗಿಸುವ ತನ್ನ ಕಾವ್ಯಾತ್ಮಕ ಉದ್ದೇಶದಲ್ಲಿ ಕಾದಂಬರಿ ಸಂಪೂರ್ಣವಾಗಿ ಸಫಲವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಇದೆಲ್ಲದರಿಂದ ಓದುಗರ ಮನಸ್ಸಿನ ಮೇಲೆ ಉಂಟು ಮಾಡುವ ಪರಿಣಾಮವೇನು ಎನ್ನುವುದು ಪ್ರಶ್ನೆ.

ಸತೀಶ-ಕೌಸಲ್ಯಾರು ಸಮಸ್ಯೆಗೆ ಭಾಷೆಗೆ ಚೌಕಟ್ಟು ನೀಡುತ್ತಾರೆ, ಅದನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಣುವಂತೆ ಮಾಡುತ್ತಾರೆ ಎನ್ನುವುದೇನೋ ಸರಿಯೇ. ಇಡೀ ಕಾದಂಬರಿಯ ತಂತ್ರ, ಅದುವರೆಗಿನ ಕಥಾನಕದ ಚಲನೆ, ಹರಹು ಎಲ್ಲವೂ ಈ ‘ಅರಿವು’ ತೆರೆದುಕೊಳ್ಳುವುದಕ್ಕೆ ತಕ್ಕುದಾದ ಒಂದು ಹಿನ್ನೆಲೆಯನ್ನು ಸೊಗಸಾಗಿ ನಿರ್ಮಿಸಿರುವುದು ಕಾದಂಬರಿಯ ಬಗ್ಗೆ ಮೆಚ್ಚುಗೆ ಮೂಡಲು ಕಾರಣವಾಗುತ್ತದೆ. ಆದಾಗ್ಯು, ಕಾದಂಬರಿ ಅಲ್ಲಲ್ಲಿ ಹೇಳಿಯೂ ಹೇಳದಂತೆ, ಕಾಣಿಸಿಯೂ ಕಾಣದಂತೆ ತೆರೆದಿಡುವ ಕೆಲವು modules ಏನಿವೆ, ಅವು ಮನುಷ್ಯ ಇದುವರೆಗೆ ಚಲಾವಣೆಗೆ, ಪ್ರಯೋಗಕ್ಕೆ ತರದೇ ಬಿಟ್ಟಂಥವುಗಳೇನಲ್ಲ. ನಾವಿವತ್ತು ಇರುವ ಸ್ಥಿತಿ ಬಹುಷಃ even after the modules being failed ಅನಿಸುತ್ತದೆ.

ಕಾದಂಬರಿ ತನ್ನ ಉದ್ದೇಶ ಸಾಧನೆಗೆ ಆಯ್ದುಕೊಂಡ ಅದೇ ಗಂಡು-ಹೆಣ್ಣು ಸಂಬಂಧದ, ದಾಂಪತ್ಯದ, ಪ್ರೇಮ-ಕಾಮದ ನವನವೀನ ಪ್ರಯೋಗಗಳ ಸಮಕಾಲೀನ ಮುಖಗಳನ್ನು ಪೂರ್ತಿಯಾಗಿ ಗಣನೆಗೆ ತೆಗೆದುಕೊಂಡಿಲ್ಲ ಎನ್ನುವುದನ್ನು ಕೂಡ ಇಲ್ಲಿ ಗಮನಿಸಬೇಕು. ಇಲ್ಲಿ ವೇಶ್ಯಾವಾಟಿಕೆ ಮತ್ತು ಅದು ಪೂರೈಸುವ ಕಾಮ ಚರ್ಚೆಗೆ ಬರುವುದಿಲ್ಲ. ಲಿವ್-ಇನ್ ಸಂಬಂಧಗಳು, ಸಲಿಂಗರತಿ (ಶಾಲಿನಿ-ಮಾಲಿನಿ ಪ್ರಕರಣ ಒಂದು ಅಪವಾದದ ಉಲ್ಲೇಖ ಅಷ್ಟೇ ಆಗಿ ನಿಲ್ಲುತ್ತದೆ), ಹಲವಾರು ಬಗೆಯ ಆಧುನಿಕ ಸವಲತ್ತುಗಳು ಪೂರೈಸಲು ತುದಿಗಾಲಲ್ಲಿ ನಿಂತಿರುವ ರೆಡಿಮೇಡ್ ಜೊತೆ, ರೆಡಿಮೇಡ್ ಪ್ರೇಮ, ರೆಡಿಮೇಡ್ ಸಲ್ಲಾಪಗಳು (ಚಾಟ್), ಮೌಕಿಕ ಕಾಮ (ಮಾತಿನ ಚಟ) ಇತ್ಯಾದಿ, ಪಬ್ಬು, ಕ್ಲಬ್ಬು, ಡಿಸ್ಕೊಥೆಕ್, ಸೋಶಿಯಲ್ ವೆಬ್ ಸೈಟುಗಳಲ್ಲಿ ಯುವ ಜನತೆ ಕಂಡುಕೊಳ್ಳುತ್ತಿರುವ ವಿಧಾನಗಳು ಮತ್ತು ಕೊನೆಗೂ ರುಚಿಗೆಟ್ಟು, ಚಿತ್ತಸ್ವಾಸ್ಥ್ಯವನ್ನೂ ಹದಗೆಡಿಸಿಕೊಂಡು ಬದುಕಿನಲ್ಲಿ ಅನ್ಯಮನಸ್ಕರಾಗುವುದನ್ನು ಕಾದಂಬರಿ ಗಮನಿಸುತ್ತಿಲ್ಲ - in essense ಅಲ್ಲ, in material details. ಕಾದಂಬರಿ ವಿಚ್ಛೇದನಾ ಪ್ರಸಂಗಗಳನ್ನು exhaustive ನೆಲೆಯಿಂದ ನೋಡುವ ಉದ್ದೇಶ ಹೊಂದಿರುವಂತೆ ಕಾಣುವುದರಿಂದ ಇಂಥ ನಿರೀಕ್ಷೆಗಳು ಹುಟ್ಟುತ್ತವೆ.

ಕಾದಂಬರಿ present ಮಾಡುವ ಕೆಲವೊಂದು modules ಗಳ ಬಗ್ಗೆಯೂ ನನಗೆ ಅನುಮಾನಗಳಿವೆ. ಕಾಮಿಕ್ ಶೈಲಿ ಇಂಥ ಅನುಮಾನ, ಜಿಜ್ಞಾಸೆಗಳಿಗೆ vigil - shield ಆಗಬಾರದು ಎಂಬ ಎಚ್ಚರದಿಂದ ಇದನ್ನು ಕಾಣಬೇಕು. 1. ವಾಡೆಯ ರಾಜವಂಶಸ್ಥರ ಮೊಲೆಯ ಪುರಾಣ, ಮುಟ್ಟಿನ ಪ್ರವರಗಳು ಅವರ ಗೋಳಾಟಗಳು ಕೊಂಚ ಅತಿರಂಜಿತ ಅನಿಸಿದರೂ ಅದೆಲ್ಲ ಕಾದಂಬರಿಯ ಚೌಕಟ್ಟಿನ ಒಳಗೇ ಇದೆ. ಆದರೆ ಝಾನ್ಸಿಬಾಯಿಯ ವೇಷದಲ್ಲಿ ವಾಡೆಯಿಂದ ಕುದುರೆಯೇರಿ ಹೊರಟವಳು administration ನಡೆಸಿ ಯುರೋಪಿಯನ್ ಸಾಹೇಬರ ವೇಷದಲ್ಲಿ ಮರಳುವುದು. 2. ನೆದರ್ ಲ್ಯಾಂಡ್ ಪ್ರಶ್ನೆಗಳು ಅಧ್ಯಾಯದ ಮೈಕ್ ಮತ್ತು ಜೇನ್‌ರ ದಾಂಪತ್ಯಕ್ಕೆ ಜಗತ್ತಿನ ಭಾಷ್ಯ(ಹರಕೆ-ಹಾರೈಕೆ) ಅಗತ್ಯ ಅನಿಸಿದ ಪ್ರಸಂಗ. 3. ಶಾಂತಾಬಾಯಿಯ ಮಕ್ಕಳು-ಮೊಮ್ಮಕ್ಕಳ ಜನ್ಮ ಮೂಲದ ವಿವರಗಳು. - ಈ ಎಲ್ಲ module ಗಳು ಇಲ್ಲಿ ಬದುಕಿನಲ್ಲಿ ಮನುಷ್ಯ ಕಳೆದುಕೊಂಡ ‘ರುಚಿ’ ಅಥವಾ ‘ರಸ’ ವನ್ನು ಮರಳಿ ಪಡೆಯುವುದಕ್ಕೆ ಸಂಯುಕ್ತವಾಗಿ (ಭಿನ್ನ ವಿಭಿನ್ನವಾಗಿ ಅಲ್ಲ)ದಾರಿಗಳು ತೆರೆದುಕೊಳ್ಳುವ ಬಗೆಯೋ-ಎಂಬಂತೆ ಕಂಡರೆ ತಪ್ಪೇನಿಲ್ಲ. ಆದರೆ ಇದು ಮಾನವಕುಲ ಸಾಗಬೇಕಾದ ಹೊಸನಿಟ್ಟಿನ ಹೊಳಹುಗಳನ್ನು ಕರುಣಿಸುವಷ್ಟು ಹೊಸತನದಿಂದಲೋ, ಕಾಣ್ಕೆಯಿಂದಲೋ ಸಶಕ್ತವಾಗಿವೆ ಅನಿಸುವುದಿಲ್ಲ.

ಹಿರಿಯ ಕಾದಂಬರಿಕಾರರೊಬ್ಬರ ಪ್ರಯೋಗಶೀಲ ಚೈತನ್ಯವನ್ನು ಅಪಾರ ಮೆಚ್ಚುಗೆಯಿಂದ ಕಂಡೂ ನಾನು ಈ ಕಾದಂಬರಿಯ ಉತ್ತಮೋತ್ತಮ ಅಂಶಗಳನ್ನು ಹೊಗಳುತ್ತ ಹೋಗುವ ದಾರಿಯನ್ನು ಬೇಕಂತಲೇ ಬಿಟ್ಟುಕೊಟ್ಟು ವಿಮರ್ಶಾತ್ಮಕವಾಗಿಯೇ ನೋಡುತ್ತ ಬಂದಿರುವ ಒಟ್ಟೂ ಉದ್ದೇಶ ಈ ಕೃತಿಯಿಂದ ಗರಿಷ್ಠ ಲಾಭ ಪಡೆದುಕೊಳ್ಳುವುದೇ ಹೊರತು ಇನ್ನೇನಲ್ಲ. ಕೃತಿಯೊಂದು ಚರ್ಚೆಗೆ ಒಳಪಡಲು ಅದು ವಿವಾದಾತ್ಮಕವೇ ಆಗಿರಬೇಕೆ ಎಂಬ ಅನುಮಾನ ಬರದ ಹಾಗೆ ಈ ಕೃತಿಯೂ ಚರ್ಚಿಸಲ್ಪಡಬೇಕು ಎನ್ನುವುದಷ್ಟೇ ಆಶಯ.

ವಸಂತ ಪ್ರಕಾಶನ, ಬೆಂಗಳೂರು. ಬೆಲೆ ರೂ.70. 126 ಪುಟಗಳು.

(ಶೀರ್ಷಿಕೆ ಕನ್ನಡಪ್ರಭ ಸಾಪ್ತಾಹಿಕದ ಒಂದು ಲೇಖನದ್ದು, ಲೇಖಕರ ಹೆಸರು ಮರೆತಿದೆ, ಕ್ಷಮೆಯಿರಲಿ!)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, October 17, 2010

ಅಮ್ಮ ನಿನಗೆ ಗೊತ್ತೇನಮ್ಮ, ಎಂದೂ ನಿನಗೆ ಹೇಳಿದ್ದಿಲ್ಲ, ಕತ್ತಲೆಂದರೆ ನಾ ಕಂಗಾಲಮ್ಮ...

ನೊಬೆಲ್ ಬಹುಮಾನ (1993) ಪಡೆದ, The Bluest Eye, Beloved, Paradise ಮತ್ತು Love ಮುಂತಾದ ಕಾದಂಬರಿಗಳನ್ನು ಬರೆದ ಟೋನಿ ಮಾರಿಸನ್‌ಳ ಕಾದಂಬರಿ A Mercy. ಈ Mercy ನಮ್ಮ ಬದುಕಿನಲ್ಲಿ ಹಲವು ಬಗೆಯಲ್ಲಿ ಬಂದು ಹೋಗುವ ಭಾವ. ಅದರೆ ಇಲ್ಲಿನ Mercyಗೆ ಆಳವಾದ ಕಲಕುವ ಶಕ್ತಿಯೊಂದು ದಕ್ಕಿರುವುದು ಈ ಕಾದಂಬರಿಯ ಆಕರ್ಷಣೆ ಮತ್ತು ಶಕ್ತಿ.

ಬರೇ ಇನ್ನೊಬ್ಬರ ದಯೆಯನ್ನು, ಬೇರೆ ಇನ್ನೇನೂ ಇಲ್ಲದ ಕೇವಲ ದಯೆಯನ್ನು ಪಡೆದ ವ್ಯಕ್ತಿಯ ಶಾಶ್ವತವಾದ ‘ಕಳೆದುಕೊಂಡ’ ಭಾವದಂತೆಯೇ ವ್ಯಕ್ತಿಯ ಅನಾಥ ಪ್ರಜ್ಞೆ ಕೂಡ ಇನ್ನೊಬ್ಬರು ನೀಗಿಸಲಾರದ್ದು, ನಾವು ಒಪ್ಪಿದರೂ ಒಪ್ಪದಿದ್ದರೂ. ನಮ್ಮ ಬದುಕಿನಲ್ಲಿ ಮನಸ್ಸಿಗೆ ಸಂಬಂಧಿಸಿದ ಹಲವಾರು ನಿರೀಕ್ಷೆಗಳು ಎಂದೂ ಹೊರಗಿನಿಂದ, ಇನ್ನೊಬ್ಬರಿಂದ ಸಿಗಲಾರದ್ದು, ಬರಲಾರದ್ದು ಎನ್ನುವುದು ಅರಿವಿದ್ದರೂ ನಾವು ಅದನ್ನು ಹೊರಗಿನಿಂದಲೇ, ಇನ್ನೊಬ್ಬರಿಂದಲೇ ನಿರೀಕ್ಷಿಸುತ್ತೇವೆ ಎನ್ನುವುದು ಮಾತ್ರ ನಿಜವೇ. ಈ ಕಾದಂಬರಿಯ ಪ್ರಧಾನ ಪಾತ್ರಗಳೆಲ್ಲಾ ಹೆಣ್ಣುಗಳೇ ಮತ್ತು ಒಂದಲ್ಲಾ ಒಂದು ಅರ್ಥದಲ್ಲಿ ಅವರೆಲ್ಲರೂ ಅನಾಥರೇ. ಪ್ರಜ್ಞೆಯ ನೆಲೆಯಲ್ಲಿ ಕೆಲವರು ಅನಾಥರಾದರೆ ಬದುಕು-ಭವಿಷ್ಯದಂಥ ವಾಸ್ತವಿಕ ನೆಲೆಯಲ್ಲಿಯೂ ಅವರಲ್ಲಿ ಕೆಲವರು ಅನಾಥರು. ಅವರಿಗೆ ಇನ್ನೊಬ್ಬ ವ್ಯಕ್ತಿ ದಯಪಾಲಿಸಬಹುದಾದ್ದು ದಯೆಯನ್ನಷ್ಟೆ ಎನ್ನಬಹುದಾದರೂ ಆ ದಯೆಯಿಂದಲೂ ಅವರ ಬದುಕಿನ ವೃತ್ತ ಪೂರ್ಣವಾಗುವುದಿಲ್ಲ (Twin ಎಂಬ ಪಾತ್ರವೊಂದು ಎಲ್ಲರಿಂದ Sorrow ಎಂದು ಕರೆಯಿಸಿಕೊಂಡೂ ಕೊನೆಯಲ್ಲಿ ತನ್ನನ್ನು ತಾನೇ Complete ಎಂದು ಹೆಸರಿಸಿಕೊಳ್ಳುವುದನ್ನು ಇಲ್ಲಿ ನೆನೆಯುತ್ತೇನೆ.) ಎನ್ನುವುದು ಕೂಡ ಅಷ್ಟೇ ಸತ್ಯ. ಆದರೆ, ಈ ದಯೆಯನ್ನು ಕೊಡಲು ಸಿದ್ಧವಾಗುವುದಿದೆಯಲ್ಲ, ಯಾರಿಗೆ ಎನ್ನುವ ಪ್ರಶ್ನೆಯನ್ನು ಮೀರಿ ನಿಂತು ಅದು ನಮ್ಮನ್ನು, ನಿಮ್ಮನ್ನು ಇನ್ನಷ್ಟು ಮನುಷ್ಯರನ್ನಾಗಿಸುತ್ತದೆ ಎನ್ನುವುದೇ ಈ ಮತ್ತು ಇಂಥ ಕೃತಿಗಳ ಓದು ಹುಟ್ಟಿಸುವ ಕೃತಾರ್ಥ ಭಾವ. ಕಾದಂಬರಿ ಹೇಳುತ್ತಿರುವ Mercy ಇದಲ್ಲ, ಅದು ಬೇರೆಯೇ ಇದೆ. ಕಾದಂಬರಿ ನಮ್ಮಲ್ಲಿ ಉದ್ದೀಪಿಸುವ Mercy ಇದು.

ರೆಬೆಕ್ಕಾ, ಲಿನಾ, ಫ್ಲಾರೆನ್ಸ್, ಟ್ವಿನ್ (Sorrow ಮತ್ತು ಆಮೇಲಿನ Complete), ವಿಲ್ಲಾರ್ಡ್(ವಿಲ್ಲಿ)-ಸ್ಕಲ್ಲಿ ಮತ್ತು ಕೊನೆಗೆ ರೆಬೆಕ್ಕಾಳ ಗಂಡ ಜೇಕಬ್ ಕೂಡಾ ಈ ಅನಾಥಪ್ರಜ್ಞೆಯಿಂದ ಮುಕ್ತರಲ್ಲ. ಅದು ಕೇವಲ ಮುಂದೇನು ಎನ್ನುವ ಪ್ರಶ್ನೆಗೆ ಉತ್ತರವಿಲ್ಲದೇ ಹುಟ್ಟಿಕೊಳ್ಳುವ ಆತಂಕವಾಗಿ ಕೂಡ ಕಾಡಬಹುದಾದ ಒಂದು ಪ್ರಜ್ಞೆ. ಸಾಲು ಸಾಲಾಗಿ ಹುಟ್ಟಿದ ಎಲ್ಲ ಮಕ್ಕಳನ್ನು ಕಳೆದುಕೊಳ್ಳುವ ರೆಬೆಕ್ಕಾ- ಜೇಕಬ್ ಜೋಡಿ ತಮ್ಮ ಎಲ್ಲಾ ಹೊಲ-ಮನೆ-ಆಸ್ತಿ-ಸಂಪತ್ತುಗಳೆದುರು ಅನಾಥರೇ, ಅತಂತ್ರರೇ. ಆದರೆ ಇವರು ಬದುಕನ್ನು ಸಾಹಸದಿಂದ ಅದು ಬಂದ ಹಾಗೆ ಸ್ವೀಕರಿಸಿ ಬದುಕಿದವರು. ಇವರಿಗೆ ಇಮೇಜು, ಸ್ಟೇಟಸ್ಸು, ಪ್ರೆಸ್ಟೀಜುಗಳ ಹಂಗಿಲ್ಲ. ಆದರೆ ನಗರದಿಂದ ಕೆಲಸದ ಮೇಲೆ ಬರುವ ಬ್ಲಾಕ್‌ಸ್ಮಿತ್‌ನನ್ನು ನೋಡಿ. ಅವನಿಗೆ ಈ ಎಲ್ಲ ತೊಡಕುಗಳಿವೆ. ಅವನು ತನ್ನ ದೇಹ ಸುಖಕ್ಕೆ ಮಾತ್ರ ಬಳಸಿಕೊಳ್ಳುವ ಫ್ಲಾರೆನ್ಸ್‌ಳನ್ನು ‘ನೀನೊಬ್ಬಳು slave, ಹೊರಟು ಹೋಗು ಇಲ್ಲಿಂದ’ ಎಂದು ತುಚ್ಛೀಕರಿಸಿ ಮನೆಯಿಂದ ಹೊರಗೆ ಅಟ್ಟುತ್ತಾನೆ. ಫ್ಲಾರೆನ್ಸ್ ಅವನೊಂದಿಗಿನ ಸಂಬಂಧವನ್ನು ಪ್ರೇಮ ಅಂದುಕೊಂಡಿದ್ದರೆ ಅವನಿಗೆ ಅದು ಕೇವಲ ಅಂದಂದಿನ ಅಗತ್ಯದ ಕಾಮವಷ್ಟೇ. (ಹೆಣ್ಣು ತಾನು ಗಂಡಿನ ಪ್ರೇಮವನ್ನು ಪಡೆಯಲು ಕಾಮವನ್ನು ಕೊಡುತ್ತಾಳಂತೆ, ಅದೇ ಗಂಡು ತಾನು ಹೆಣ್ಣಿನಿಂದ ಕಾಮವನ್ನು ಪಡೆಯಲು ಪ್ರೇಮವನ್ನು ಕೊಡುತ್ತಾನಂತೆ!) ಉಳಿದಂತೆ ಅವನಿಗೆ ಈ ಸಂಬಂಧ ಇಮೇಜು, ಸ್ಟೇಟಸ್ಸು, ಪ್ರೆಸ್ಟೀಜುಗಳ ಪ್ರಶ್ನೆ. ಜೇಕಬ್‌ಗೆ ಈ ಸ್ಥಾನ-ಮಾನದ ಸೋಂಕು ತಗುಲುವುದೇ ಅವನ ವಿನಾಶಕ್ಕೆ ಕಾರಣವಾದಂತಿದೆ. ಮೂರನೆಯ ಮತ್ತು ವೈಭವದ ಮನೆಯೊಂದನ್ನು ಕಟ್ಟಿಕೊಳ್ಳುವ ಅವನ ಹುಚ್ಚಿಗೆ ಆರ್ಟೆಗಾ ತರ ತಾನೂ ದೊಡ್ಡಸ್ತಿಕೆಯ ಪ್ರದರ್ಶನಕ್ಕಿಳಿಯುವ, ಅವನ ‘ಜುಬ್ಲಿಯೊ’ ಹೆಸರಿನ ವಾಡೆಗೆ ಸರಿಸಮಾನವಾದ ಒಂದು ಮನೆಯನ್ನು ಕಟ್ಟಿಕೊಳ್ಳಬೇಕೆಂಬ ತೆವಲಿನ ಪಸೆಯಿದೆ. ಮೂರನೆಯ ಮನೆಯೊಂದರ ‘ಅಗತ್ಯ’ ನಮಗಿಲ್ಲ ಎಂದು ರೆಬೆಕ್ಕಾ ಅವನಿಗೆ ಹೇಳಿದಾಗ ಅವನು ‘ಅಗತ್ಯ’ಕ್ಕಾಗಿ ಅಲ್ಲ ನನ್ನ ಹೆಂಡತಿಯೇ, ನನಗೆ ‘ಬೇಕು’ ಎಂಬುದಕ್ಕಾಗಿ ಎನ್ನುವ ಉತ್ತರ ಕೊಡುತ್ತಾನೆ. ಮನುಷ್ಯ ತಾನು ಹೋಗುವಾಗ ತನ್ನ ಹಿಂದೆ ಏನನ್ನು ಬಿಟ್ಟು ಹೋಗುತ್ತಾನೆ ಎನ್ನುವುದರಿಂದಲೇ ಅವನು ಏನು ಎಂಬುದು ನಿರ್ಧರಿಸಲ್ಪಡುತ್ತದೆ ಎನ್ನುವ ಅವನ ತತ್ವಕ್ಕೆ ಎಷ್ಟೆಲ್ಲ ಬಗೆಯ ಭಾಷ್ಯಗಳು ಸಾಧ್ಯ!

ಕೃತಿಯ ಪ್ರಧಾನ ಕಾಳಜಿ ಈ ನಾಲ್ಕೈದು ಹೆಣ್ಣುಗಳ ಅಂತರಾತ್ಮದ ಏಕಾಕಿತನ, ತಲ್ಲಣ, ಆತಂಕಗಳನ್ನು ಕಾಣಿಸುವುದೇ. ಆದರೆ ಕಾದಂಬರಿಯ ನಿರೂಪಣೆ ಎಷ್ಟು ನವಿರಾಗಿದೆ ಎಂದರೆ ಅದನ್ನು ಕಾದಂಬರಿ ಎಲ್ಲೂ ‘ಹೇಳುತ್ತಿಲ್ಲ’ ಎನ್ನುವುದು ಗಮನಿಸಬೇಕಾದ ಅಂಶ. ಇಲ್ಲಿನ ವಿವರಗಳು, ಪಾತ್ರಗಳು, ಮಾತನಾಡುವ ಮತ್ತು ಮಾತನಾಡದ ಪಾತ್ರಗಳ ವ್ಯಕ್ತಿತ್ವ ಭಾಷೆಯಲ್ಲಿ ಮೈತಳೆದು ನಿಲ್ಲುವ ವಿಧಾನ - ಎಲ್ಲವೂ ಇದನ್ನು, ಕೃತಿಯ ಪ್ರಧಾನ ಎಳೆಯನ್ನು ಕಾಣಿಸುತ್ತವೆಯೇ ಹೊರತು ಎಲ್ಲಿಯೂ ಅದನ್ನು ಹೇಳುವ ವಾಚ್ಯಕ್ಕಿಳಿಯುವುದಿಲ್ಲ ಎನ್ನುವುದೇ ಕೃತಿಯ ನಿರೂಪಣೆಯ ಸೂಕ್ಷ್ಮ ಮತ್ತು ಸೌಂದರ್ಯ.

ಜೇಕಬ್, ರೆಬೆಕ್ಕಾ,ಲಿನಾ ಯಾವತ್ತೂ ತಮ್ಮ ಮನೋಗತವನ್ನು ತೆರೆದಿಡುವುದಿಲ್ಲ. ಫ್ಲಾರೆನ್ಸ್ ಆ ಕೆಲಸ ಮಾಡುವ ಎಂಟರ ಹುಡುಗಿ. ಅಂದರೆ ಅವಳ ಮನೋಗತಕ್ಕೆ ಅವಳದೇ ಆದ ವಯಸ್ಸಿನ, ಮುಗ್ಧತೆಯ, ಶಬ್ದಭಂಡಾರದ ಲಯವಿದೆ. ಫ್ಲಾರೆನ್ಸ್ ಮಾತನಾಡುತ್ತಿರುವುದು ಕೂಡಾ ನಮ್ಮೊಂದಿಗೆ ಅಲ್ಲ. ಅಥವಾ Sorrow ಅವಳದೇ ಛಾಯೆಯಾದ ಟ್ವಿನ್ ಜೊತೆ ಮಾತನಾಡುವ ಹಾಗೆ ಇಲ್ಲಿ ಫ್ಲಾರೆನ್ಸ್ ತನ್ನೊಂದಿಗೇ ಮಾತನಾಡಿಕೊಳ್ಳುತ್ತಿಲ್ಲ. ಅದು, ಸಾಲಕ್ಕೆ ಗುಲಾಮರನ್ನು ವಜಾ ಹಾಕಿಕೊಳ್ಳುವ ಒಂದು ವ್ಯವಹಾರದಲ್ಲಿ ‘ನನ್ನ ಬದಲಿಗೆ ಈ ಕಂದನನ್ನು ತೆಗೆದುಕೊಂಡು ಹೋಗಿ ಅಯ್ಯಾ’ ಎಂದು ಬೇಡಿಕೊಂಡು ತನ್ನನ್ನು ಪರಭಾರೆ ಮಾಡಿ ಪರಿತ್ಯಜಿಸಿದ ತನ್ನ ಸ್ವಂತ ತಾಯಿಯ ಬಳಿ. ಈ ಪುಟ್ಟ ಕಂದಮ್ಮ ಫ್ಲಾರೆನ್ಸ್ ತಾನು ಕಂಡಿದ್ದನ್ನು ಹೇಳುತ್ತಾ ಹೋಗುವುದಿಲ್ಲ ಎನ್ನುವುದನ್ನು ಕೂಡ ಗಮನಿಸಬೇಕು. ಈ ಮಾತುಗಳು ಒಂದು ಲಹರಿಯಂತಿವೆ, ಹೇಳುವುದರ ಮೂಲಕ ಹೇಳದಿರುವುದನ್ನೂ ಕಾಣಿಸಬಲ್ಲ ಕವನದಂತಿವೆ.

ಟೋನಿ ಮರಿಸನ್ ಬಳಸುವ ತಂತ್ರದಲ್ಲಿ ಎರಡು ವಿಶೇಷಗಳಿವೆ. ಒಂದು, ನಿರೂಪಣೆಯನ್ನು ಕುರಿತದ್ದು. ಯಾರು ಕತೆ ಹೇಳುತ್ತಿರುವವರು, ಯಾರಿಗೆ ಎನ್ನುವ ನೆಲೆಯದ್ದು. ಈಗಷ್ಟೇ ವಿವರಿಸಿದ ಫ್ಲಾರೆನ್ಸ್‌ಳ ಸ್ವಗತದ ಹೊಸತನ. ಇದರೊಂದಿಗೇ ಗಮನಿಸಬೇಕಾದ್ದು ಪುಟ್ಟದಾದ ಟ್ವಿನ್ ಅಥವಾ Sorrow ಎಂದು ಕರೆಯಲ್ಪಡುವ ದುರಾದೃಷ್ಟದ ಹೆಣ್ಣು ತೆರೆದಿಡುವ ಅತ್ತ ಸ್ವಗತವೂ ಅಲ್ಲದ ಇತ್ತ ಇನ್ನೊಬ್ಬನನ್ನು ಉದ್ದೇಶಿಸಿ ಆಡುತ್ತಿರುವುದೂ ಅಲ್ಲದ ಮಾತುಗಳ ಜಗತ್ತು. ಇನ್ನೊಂದು ಇಲ್ಲಿ ನಾವು ಕಾಣುವ ನಿರ್ಲಿಪ್ತ ನಿರೂಪಕನ ನಿರೂಪಣೆ. ಇದರಿಂದ ಏನಾಗುತ್ತದೆ ಎಂದರೆ ಕಾದಂಬರಿಗೆ ಬಾಲ್ಯದ ಮುಗ್ಧತೆ ಮತ್ತು ನಿರೂಪಕನ ಪ್ರಬುದ್ಧ ನೋಟ ಎರಡನ್ನೂ ಹೊಂದಿಸಿ ಇವುಗಳಲ್ಲಿ ಒಂದು ನೀಡಲಾರದ ಜಗತ್ತನ್ನು ಇನ್ನೊಂದು ಪೂರೈಸುವುದು ಸಾಧ್ಯವಾಗುತ್ತದೆ. ದೀಪಾ ಮೆಹ್ತಾರ Water ಸಿನಿಮಾ, ಗಿರೀಶ್ ಕಾಸರವಳ್ಳಿಯವರ ‘ಘಟಶ್ರಾದ್ಧ’ದಂಥ ಸಿನಿಮಾ ಭಾಷೆಯನ್ನು ಗಮನಿಸಿದರೆ ಇದು ಹೆಚ್ಚು ನೇರವಾಗಿ ಅರ್ಥವಾಗಬಹುದು. ಸಿನಿಮಾದಲ್ಲಿ ಈ ಪ್ರಧಾನ ಭೂಮಿಕೆಯಲ್ಲಿರುವ ಮಕ್ಕಳು ಕಾಣುವುದು - ಪ್ರತಿಕ್ರಿಯಿಸುವುದು ನಮಗೆ ಸಿಗುತ್ತಿರುವಾಗಲೇ ಕ್ಯಾಮೆರಾಮೆನ್ ತೋರಿಸುತ್ತಿರುವುದನ್ನು ನಾವು ನೇರವಾಗಿ ಗ್ರಹಿಸುತ್ತಿರುತ್ತೇವೆ, ಬಾಲ ಭಾಷೆಯ ನೋಟ-ಪ್ರತಿಕ್ರಿಯೆಯನ್ನೂ ಮೀರಿ, ನಿರ್ದೇಶಕ-ಪ್ರೇಕ್ಷಕ ಬಯಸಿಯೋ ಬಯಸದೆಯೋ ಇದು ಸಾಧ್ಯವಾಗುತ್ತಿರುತ್ತದೆ. ಹಾಗೆಯೇ ಇಲ್ಲಿ multi dimentional process, ಹಾಗೆ ಕರೆಯಬಹುದಾದರೆ, ಸಾಧ್ಯವಾಗುತ್ತದೆ. ಶ್ರೀಕೃಷ್ಣ ಆಲನಹಳ್ಳಿಯವರ ‘ಕಾಡು’ ಕಾದಂಬರಿಯ ಜೊತೆ ಜೊತೆಗೇ ವಿವೇಕ ಶಾನಭಾಗರ ‘ಕಾರಣ’ ಕತೆಯನ್ನು ತುಲನಾತ್ಮಕವಾಗಿ ನೋಡುವುದು ಇದನ್ನೇ ಇನ್ನಷ್ಟು ನಮಗೆ ಸ್ಪಷ್ಟಪಡಿಸುತ್ತದೆ. ಯಾಕೆಂದರೆ, ಕ್ಯಾಮೆರಾ ಬಾಲ್ಯದ ಮಿತಿಗಳನ್ನು (ನೋಡುವುದು ಮತ್ತು ಆ ವಯೋಮಾನಕ್ಕೆ ತಾನು ನೋಡಿದ್ದು ಏನೆಂದು ತಿಳಿಯುವುದು - ಇದನ್ನು ಕ್ಯಾಮೆರಾ ವಿಭಾಗಿಸಿ ತನ್ನ ಪ್ರೇಕ್ಷಕನಿಗೆ ತಲುಪಿಸುವುದು ಒಂದು ಮಿತಿಯಾಚೆ ಸಾಧ್ಯವಿದೆಯೆ?) ಬೇಕಾಗಿಯೂ ಬೇಡಾಗಿಯೂ ಮೀರಿ ಬಿಡುವ ಅಪಾಯ ಮತ್ತು ಸಾಧ್ಯತೆ ಎರಡೂ ಭಾಷೆಗೆ ಇಲ್ಲ.

ಎರಡನೆಯ ವಿಶೇಷ, ಟೋನಿ ಮಾರಿಸನ್ ‘ಕಾಲ’ವನ್ನು ನಿರ್ವಹಿಸುವ, ಬಳಸಿಕೊಳ್ಳುವ ಬಗೆ. ಈ ಕೃತಿಯ ಮೊದಲ ಅಧ್ಯಾಯ, ಅಲ್ಲಿ ಬರುವ ಪುಟ್ಟ ಫ್ಲಾರೆನ್ಸ್‌ಳ ಸ್ವಗತ ಅಥವಾ ‘ನಿನ್ನನ್ನೇ’ ಎಂಬಂತೆ ಉದ್ದೇಶಿಸಿ ಅವಳಾಡ ತೊಡಗುವ ಮಾತುಗಳಿಗೆ ಕೃತಿಯ ಕಟ್ಟಕೊನೆಯ ಅಧ್ಯಾಯದಲ್ಲಿ ಅವಳ ತಾಯಿ ಆಡುವ ನುಡಿಗಳ ಸಾಂಗತ್ಯವಿದೆ. ಅಲ್ಲಿಂದ ಇಲ್ಲಿಯ ತನಕ ಹರಿಯುವ ಒಂದು ಅದೃಶ್ಯ ತಂತುವಿದೆ; ಕಾಲ ಮತ್ತು ಕಥನ ಎರಡರ ದೃಷ್ಟಿಯಿಂದಲೂ ಅಂಥ ಸಂಬಂಧವಿದೆ. ಆದರೆ ಈ ಎರಡು ಅಧ್ಯಾಯಗಳ ನಡುವೆ ರೆಬೆಕ್ಕಾ, ಲಿನಾ, Sorrow ರಂಥ ಒಬ್ಬೊಬ್ಬರದೇ ಬದುಕು ವರ್ತಮಾನದಿಂದ ಭೂತಕ್ಕೆ ಹೊರಳುತ್ತ ಮತ್ತೆ ಭವಿಷ್ಯದ ಕಡೆ ಮುಖ ಮಾಡಿದಂತಿರುವ ಕಥಾನಕದ ಚಲನೆಗೆ ಮರಳುತ್ತ, ಹಾಗೆ ಮುಂದುವರಿಯುವ ಹಾದಿಯಲ್ಲೇ ಮತ್ತೆ ಭೂತಕ್ಕೆ ಜಾರುತ್ತ ಸಾಗುತ್ತದೆ. ಈ ಭೂತ - ಭವಿಷ್ಯಗಳೆರಡರಲ್ಲೂ ಇರುವ ಸಾಮ್ಯವೇ ಬಹುಷಃ ನಮ್ಮನ್ನು ಬೆಚ್ಚಿ ಬೀಳಿಸುವ ಸಂಗತಿಯಿರಬಹುದೆ?

Time Present 
and time Past
Are both perhaps
present in
time Future
And
time future contained 
in
time Past
- T S Eliot

ಇವರು ಗುಲಾಮರು, ಪರಿತ್ಯಕ್ತರು, ಬೀದಿಗೆ ಬಿದ್ದವರು. ಇವರ ಭೂತಕಾಲದಲ್ಲಿ ಸಹಜವಾಗಿಯೇ ದುರಂತ, ಸಂಘರ್ಷ, ನೋವು ಇದೆ. ಇವರ ಬಾಲ್ಯದಂಥ ಬಾಲ್ಯ ಕೂಡ ಅಪಮಾನ, ಅನಾಥಪ್ರಜ್ಞೆಯಿಂದ ಮುಕ್ತವಾದದ್ದಲ್ಲ. ಮತ್ತೆ ಈ ಬಗೆಯ ಬದುಕು ಮನುಷ್ಯನನ್ನು ವಯಸ್ಸಿಗಿಂತ ಮೊದಲು ಪ್ರಬುದ್ಧನನ್ನಾಗಿಸುವುದು ಕೂಡ. ಹಾಗಾಗಿಯೇ ಬಾಲ್ಯದಲ್ಲಿ ತಾರುಣ್ಯವನ್ನು, ತಾರುಣ್ಯದಲ್ಲಿ ಯೌವನವನ್ನು, ಯೌವನದಲ್ಲಿ ನಡುವಯಸ್ಸಿನ ಹೊರೆಯನ್ನು ಹೊತ್ತು ಬದುಕುವ ಅಭಿಶಾಪ ಇಂಥವರದು. ಹಾಗೆಯೇ ಇವರ ಭವಿಷ್ಯ ಕೂಡಾ ಅತಂತ್ರ, ಅನಿರ್ದಿಷ್ಟ ಮತ್ತು ಭದ್ರತೆಯಿಲ್ಲದ್ದು ಎನ್ನುವ ಸಂಗತಿ ನಮ್ಮನ್ನು ಕಾಡಿದಷ್ಟು ಬಹುಷಃ ಅವರನ್ನು ಕಾಡುವುದಿಲ್ಲ. ಯಾಕೆಂದರೆ ನಮ್ಮ ನಮ್ಮ ಮನೆಯ ನಮ್ಮ ನಮ್ಮ ರೂಮಿನಲ್ಲಿ ಫ್ಯಾನಿನ ಕೆಳಗೆ ಚಹ ಕುಡಿಯುತ್ತಲೋ, ಮುಸ್ಸಂಜೆ ಹೊತ್ತು ತಂಗಾಳಿಯ ಅಂಗಳದಲ್ಲೋ, ಹಿತ್ತಿಲಲ್ಲೊ, ಮನೆಯ ಟೆರೇಸಿನಲ್ಲೋ ಕೂತು ಬದುಕನ್ನು ಒಂದು ಸಾಹಿತ್ಯ ಕೃತಿಯ ಮುಖೇನ ಪಡೆದುಕೊಳ್ಳುತ್ತಿರುವ ನಮಗೆ ಇವರ ವರ್ತಮಾನ ಸ್ವಸ್ಥ-ನಿರಾಳವಿದ್ದಂತೆ ಕಾಣಿಸುವುದು ಕೂಡಾ ಆ ಬದುಕನ್ನು ಬದುಕುತ್ತಿರುವವರಿಗೆ ಅನಿಸುವ ಭಾವವಲ್ಲ. ಅವರಿಗೆ ಭೂತ-ವರ್ತಮಾನ-ಭವಿಷ್ಯದ ಪರಿಕಲ್ಪನೆಯಲ್ಲಿ ದಿನ ಸಾಗುತ್ತಿರುವುದಿಲ್ಲ. ಅತಂತ್ರ-ಅನಿರ್ದಿಷ್ಟ-ಅಭದ್ರ ಎಂಬುದು ಅವರ ದೈನಂದಿನ. ಹಾಗಾಗಿ ಕಳೆದು ಹೋದ ದಿನಗಳೇ ಸುಖದ್ದು, ಸದಾ. ನಮಗೆ ಮುಖ್ಯವಾಗಿ ಕಾಣುವುದು ಈ ಬಗೆಯ ಬದುಕಿನಲ್ಲೂ ಇರುವ ರುಚಿ, ಜೀವನ್ಮುಖಿ ಸೆಲೆ, Hope - ಎಂಬುದೇ. ಅದು ಅವರ ಬದುಕಿನಲ್ಲಿ ಇದ್ದಂತೆಯೂ ಇಲ್ಲದಂತೆಯೂ ಕಾಣುವಾಗಲೇ ನಮ್ಮ ಬದುಕಿಗೆ ಅದು ಏನೋ ಒಂದು ಸಾತತ್ಯವನ್ನು ಒದಗಿಸುತ್ತಿದೆ. ಯಾಕೆಂದರೆ, ಆತಂಕ, ಅನಾಥಪ್ರಜ್ಞೆ ಮತ್ತು ಅಭದ್ರತೆ ನಮ್ಮ ದೈನಂದಿನ ಕೂಡಾ, ಸೂಕ್ಷ್ಮವಾಗಿ ನೋಡಿದರೆ.

ನಾವೇನೂ ನಮ್ಮನ್ನು ಸರ್ವತಂತ್ರ ಸ್ವತಂತ್ರರು, ಈ ಮಾರಲ್ಪಡುವ - ಕೊಳ್ಳಲ್ಪಡುವ ನಾಗರಿಕತೆಯಿಂದ ಪಾರಾದವರು ಎಂದು ತಿಳಿದುಕೊಳ್ಳುವ ಅಗತ್ಯವಿಲ್ಲ. ಆ ಕಾಲದ ವರಸೆಗಳು ಬದಲಾಗಿ ಹೊಸ ನಯ-ನಾಜೂಕುಗಳು ಬಂದ ಮಾತ್ರಕ್ಕೆ ಮೂಲಸ್ವರೂಪ ಬದಲಾಗಿಬಿಡುವುದಿಲ್ಲ. ಇನ್ನು ಮನೋಲೋಕದ ಹಪಾಹಪಿಗಳು, ದೇಹ-ಮನಸ್ಸಿನ ಸಂಘರ್ಷಗಳು ಆಧುನಿಕ ಮನುಷ್ಯನನ್ನು ಹೈರಾಣಾಗಿಸಿದಷ್ಟು ಬೇರೆ ಇನ್ಯಾವ ಕಾಲದಲ್ಲೂ ಆಗಿರಲಿಕ್ಕಿಲ್ಲ ಎನ್ನುವುದಂತೂ ಎಲ್ಲರಿಗೂ ಗೊತ್ತು. ಇಡೀ ಕೃತಿಯ ಫ್ಲಾರೆನ್ಸ್, ಲಿನಾ, Sorrow ಅಥವಾ ರೆಬೆಕ್ಕಾ ಮೂರು ನಾಲ್ಕು ಶತಮಾನಗಳಷ್ಟು ಹಿಂದಿನ ಬೇರೆಯೇ ಕಾಲಮಾನದ ವ್ಯಕ್ತಿಗಳೆಂದೋ, ಗೊಡ್ಡು ಮೂಲವಾಸಿಗಳ ಮತ್ತು ನಾಗರಿಕ ಸಮಾಜದ ನಡುವಿನ ಸಂಘರ್ಷಗಳ ದೇಶ-ಕಾಲಕ್ಕೆ ಸೇರಿದ ವ್ಯಕ್ತಿಗಳೆಂದೋ ಅನಿಸುವುದೇ ಇಲ್ಲ. ಇವರೆಲ್ಲರೂ ಇವತ್ತು, ಈಗ ಮತ್ತು ನಮ್ಮನ್ನೇ ಸಂಬಂಧಿಸಿ ಮಾತನಾಡುತ್ತಿದ್ದಾರೆಂಬ ಬಗ್ಗೆ ಅನುಮಾನವಿಲ್ಲ. ಅದರಲ್ಲೂ ರೆಬೆಕ್ಕಾ ಮತ್ತು ಲಿನಾ ಎಷ್ಟೋ ಬಾರಿ ನಮ್ಮ ‘ಮರಳಿ ಮಣ್ಣಿಗೆ’ ಕಾದಂಬರಿಯ ಸರಸೋತಿ-ಪಾರೋತಿ ಜೋಡಿಯನ್ನು ನೆನೆಯುವಂತೆ ಮಾಡುತ್ತಾರೆ. ಅವರಂತೆಯೇ ಇವರೂ ಹೊಲದಲ್ಲಿ, ತೋಟದಲ್ಲಿ, ಅಡುಗೆಮನೆಯಲ್ಲಿ ಜೊತೆ ಜೊತೆಯಾಗಿ ಜೀವ ತೇಯುತ್ತಾರೆ. ಈ ನೋವು ನಮಗೆ ಅರ್ಥವಾಗಲು ಮುನ್ನೂರು ನಾನೂರು ವರ್ಷಗಳ ಹಿಂದಿನ ಆಫ್ರಿಕಾವನ್ನೋ, ಅಮೆರಿಕಾವನ್ನೊ ನೆನೆಯಬೇಕಾದ್ದಿಲ್ಲ. ವಲಸೆ ಬಂದವರ ಮತ್ತು ಮೂಲ ನಿವಾಸಿಗಳ ನಡುವಿನ ಹೋರಾಟ-ತಿಕ್ಕಾಟಗಳ, ಶೋಷಣೆ-ಅಮಾನವೀಯ ಘಟನಾವಳಿಗಳ ಹಿನ್ನೆಲೆಯೇ ಇದಕ್ಕೆ ಬೇಕಾಗಿಲ್ಲ.

ಇಲ್ಲಿನ ಕಥಾನಕವು ಏಕಕಾಲಕ್ಕೆ ಲಾರಾ ಇಂಗಲ್ಸ್ ವೈಲ್ಡರಳ ಪುಸ್ತಕಗಳ ಆಕರ್ಷಣೆಯನ್ನೂ, ಮಂದ್ರ ಸ್ಥಾಯಿಯಲ್ಲಿ ಕೃತಿಯುದ್ದಕ್ಕೂ ಚಾಚಿದಂತಿರುವ ಒಂದು ನೋವಿನ ಆಲಾಪವನ್ನೂ, ಮನುಷ್ಯ ಜಗತ್ತಿನಲ್ಲೇ ಸಹಜ ಎಂಬಂತೆ ಸ್ವೀಕೃತವಾಗಿದ್ದ ಮತ್ತು ಈಗಲೂ ಬದಲಾದ ನಾಗರಿಕ ವರಸೆಯ ನಯ ನಾಜೂಕುಗಳಲ್ಲಿ ಚಾಲ್ತಿಯಿರುವ ಮನುಷ್ಯ ಮನುಷ್ಯನನ್ನು ಮಾರುವ, ಕೊಳ್ಳುವ, ಮಾರಿಕೊಳ್ಳುವ, ಖರೀದಿಯಾಗುವ, ಬಿಕರಿಯಾಗುವ ಸನ್ನಿವೇಶಗಳ ಹಿಂದಿನ ಅದೇ ಮಾನವ ಹೃದಯದ ವಿಕಾರವನ್ನೂ ಕಣ್ಣೆದುರಿಗಿಡುತ್ತದೆ. ಇಲ್ಲಿ ಈ ವಿದ್ಯಮಾನದ ಕ್ರೌರ್ಯದ ಮುಖ ಅಷ್ಟು ವಿವರವಾಗಿ ಅಂದರೆ, ಅಲೆಕ್ಸ್ ಹೇಲಿಯ ರೂಟ್ಸ್‌ನಲ್ಲಿ ಬಂದಷ್ಟು ವಿವರವಾಗಿ ಬಂದಿಲ್ಲ. ಆದರೂ ಗಂಡನಾದವ ತನ್ನ ಕಣ್ಣೆದುರೇ ತನ್ನ ಹೆಂಡತಿ ‘ಸೇಲ್’ ಆಗುವುದನ್ನು, ತಾಯಿಯಾದವಳು ತನ್ನ ಕರುಳ ಕುಡಿ ಇನ್ಯಾರದೋ ಲೈಂಗಿಕ ಪಿಪಾಸೆಗೋ, ಹಳೆಯ ಕೈಸಾಲಕ್ಕೋ ಚುಕ್ತಾ ಲೆಕ್ಕವಾಗಿ ಸಂದು ಹೋಗುವುದನ್ನೋ ಸಹಜವೆಂದೇ ಸ್ವೀಕರಿಸಿ ಬದುಕುವ ಮನಸ್ಥಿತಿಯೊಂದನ್ನು ಸಾಧಿಸಿಕೊಳ್ಳಬೇಕಾಗುತ್ತಲ್ಲ, ಆ ಮನಸ್ಥಿತಿಯನ್ನು ನಮಗೆ ಸಶಕ್ತವಾಗಿಯೇ ಪರಿಚಯಿಸುತ್ತಿದೆ. ಹೀಗೆ ಮನುಷ್ಯನನ್ನೇ ಕೊಂಡುಕೊಳ್ಳುವ ಇನ್ನೊಬ್ಬ ಮನುಷ್ಯ ತನ್ನೆದುರು ಬಿಕರಿಗಿರುವ ವಸ್ತುವನ್ನು ಕೆಕ್ಕರಿಸಿ ನೋಡುವ ಬದಲು ಆ ಕಣ್ಣುಗಳಲ್ಲಿ ಅಷ್ಟಿಷ್ಟಾದರೂ ಮಾನವೀಯತೆಯ ರಕ್ತ ಕಂಡರೆ, ಅದೇ A Mercy!

ಇಲ್ಲಿ ಮಗುವೊಂದು ತನ್ನ ತಾಯಿಯ ಬಳಿ ದೂರಿದಂತೆ ಕಾಣುವ ಕಟುತ್ವವಿಲ್ಲದ, ದೂರಿನ ಲೇಪವಿಲ್ಲದ, ಅಳುಭಾವವೇ ತುಂಬಿರುವ ಮೊದ್ದು ಬಾಲ ಭಾಷೆಯಲ್ಲಿ ತನ್ನ ಅಳಲನ್ನು ತೋಡಿಕೊಳ್ಳುತ್ತಿದೆ ಮತ್ತು ಕೊನೆಯ ಪುಟದಲ್ಲಿ ಆ ತಾಯಿ ಈ ಎಲ್ಲೋ ಕಾಣದ ಕೇಳದ ದೇಶದಲ್ಲಿ ಮೌನವಾಗಿ ತನ್ನೊಂದಿಗೆ ಮಾತನಾಡುತ್ತಿರುವ ಆ ಕಂದಮ್ಮನ ಮಾತಿಗೆ ಮನಸ್ಸಿನಲ್ಲೇ ಉತ್ತರಿಸುತ್ತಿದೆ... ಹೃದಯಕ್ಕೆ ಮಾತ್ರ ತಲುಪುವ ಮಾತುಗಳು, ಹೃದಯವಂತರಿಗೆ ಮಾತ್ರ ತಲುಪುವ ಮಾತುಗಳು...

ಹಾಗೆ ನೋಡಿದರೆ ಬಹಳ ಸುದ್ದಿ ಮಾಡಿದ ಈ ಕಾದಂಬರಿಯಲ್ಲಿ ಹೊಸತು ಎಂದು ಹೇಳಬಹುದಾದ್ದು ಹೊಸತೇ ಅನಿಸುವ ಶೈಲಿ, ಭಾಷೆ, ನಿರೂಪಣಾ ವಿಧಾನ. ಭಾವನಾತ್ಮಕವಾಗಿ ಓದುಗನನ್ನು ತಟ್ಟುವುದು ಮತ್ತು ಅವನನ್ನು ಇನ್ನಷ್ಟು ಮನುಷ್ಯನನ್ನಾಗಿಸುವುದು ಸಾಹಿತ್ಯದ ಪರಮೋದ್ದೇಶ ಎಂದು ನಾವು ತಿಳಿಯುವ ಎಲ್ಲ ಸಂದರ್ಭಗಳಲ್ಲೂ ಅದ್ಭುತ ಎನ್ನಿಸುವ ಕಾದಂಬರಿ ಇದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಈ ಪುಟ್ಟ ಕಾದಂಬರಿಯನ್ನು ಅಲೆಕ್ಸ್ ಹೇಲಿಯ ‘ರೂಟ್ಸ್’ ಕಾದಂಬರಿಯ ಛಾಯೆ ಸೋಕದಂತೆ ಓದುವುದು ಸಾಧ್ಯವೇ ಎನ್ನುವುದು ನನ್ನನ್ನು ಕಾಡಿದೆ. ಆ ಹಿನ್ನೆಲೆಯಲ್ಲಿ ನೋಡಿದರೆ ಇದರಲ್ಲಿನ ಹೊಸತು ಎನಿಸುವ ಅಂಶಗಳು ಕಡಿಮೆ. ಅದರೂ ಇದೊಂದು ಓದಬೇಕಾದ ಕಾದಂಬರಿ ಎನ್ನುವುದರಲ್ಲಿ ಅನುಮಾನಗಳಿಲ್ಲ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, September 29, 2010

ದೇಶಕಾಲ, ನಾವು ಮತ್ತು ನಮ್ಮ ನಿಲುವಿನ ನೆಲೆಗಳು

J.M.Coetzeeಯ ಇನ್ನೊಂದು ಕಾದಂಬರಿ Dairy of Bad Year ಕೂಡ ಡೈರಿಯನ್ನು ತನ್ನ ನಿರೂಪಣಾ ತಂತ್ರವನ್ನಾಗಿ ಹೊಂದಿದೆ ಮಾತ್ರವಲ್ಲ ಕೆಲವೊಂದು ಬಗೆಯಲ್ಲಿ ಈ ಡೈರಿ ವಿಶಿಷ್ಟವಾಗಿದೆ. ಇಲ್ಲಿ ಡೈರಿಯ ಪ್ರತಿ ಹಾಳೆಯಲ್ಲೂ ಮೂರು ವಿಭಿನ್ನ ಭಾಗಗಳಿವೆ. ಮೊದಲ ಮತ್ತು ಇಡೀ ಕಾದಂಬರಿಯ ಮೂಲಭಾಗದಲ್ಲಿ ನಿರೂಪಕ ಬರೆಯುತ್ತಿರುವ ಅನಿಸಿಕೆಗಳಿವೆ. strong opinions ಎಂದು ಕರೆಯಲಾದ ಇವು ನಿರೂಪಕ ತನ್ನ ಸದ್ಯದ ವರ್ತಮಾನಕ್ಕೆ ಸ್ಪಂದಿಸಿ ಬರೆದ ಬರಹಗಳು. ಅಂದ ಮಾತ್ರಕ್ಕೆ ಇವೇನೂ ಕಾಲ ಕಾಲಕ್ಕೆ ಅವನಲ್ಲಿ ಮೂಡಿದ ಲಹರಿಯ ದಾಖಲಾತಿಯಲ್ಲ. ಮರೆಯುವ ಮುನ್ನ ಮರೆಯಬಾರದ ವಿಚಾರಗಳೆಂದು ಮಾಡಿಕೊಂಡ ಟೀಕೆ-ಟಿಪ್ಪಣಿಗಳೂ ಇವಲ್ಲ. ಇವು ಒಂದು ಮನಸ್ಸು ಸ್ವಸ್ಥ ಕೂತು ಧೇನಿಸಿದ ರೀತಿಯಲ್ಲಿ ಇರುವುದು ನಿಜವಾದರೂ ಈ ಧೇನಿಸುವಿಕೆ ಸದ್ಯವನ್ನು ಮೀರಿದ, ತನ್ನಷ್ಟಕ್ಕೆ ಸ್ವಸ್ಥ ಮತ್ತು ನಿಷ್ಕ್ರಿಯ ಕೂತ ವಯೋವೃದ್ಧನ ಮನನದಾಚೆಯ ಕ್ರಿಯಾಶೀಲ ಬದುಕನ್ನು ಕುರಿತದ್ದಕ್ಕೆ, ಭವಿಷ್ಯದ ಇನ್ನೊಂದಕ್ಕೆ ಜೋಡಿಸಲ್ಪಡುವಂತಿರುವ ಧೇನಿಸುವಿಕೆ. ಇದನ್ನು ಅರ್ಥಮಾಡಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದೇನೆ.

ದೇಶದ ಪರಿಕಲ್ಪನೆ, ದೇಶಪ್ರೇಮದ ಪರಿಕಲ್ಪನೆ, ಪ್ರಭುತ್ವ, ಯುದ್ಧ, ಶಾಂತಿ, ಧರ್ಮ, ಇಸ್ಲಾಂ, ಮೂಲಭೂತವಾದ, ಸಮಾಜವಾದಿ ಚಿಂತನೆ, ಕ್ರಾಂತಿಯ ಪರಿಕಲ್ಪನೆ, ಭಯೋತ್ಪಾದನೆ, ಪಾಪ-ನೀತಿ-ನೈತಿಕತೆ, ಹಣ, ಜಾಗತೀಕರಣ, ಮಾರುಕಟ್ಟೆ ಕೇಂದ್ರಿತ ಬದುಕು, ಭಾಷೆಯೂ ಸೇರಿದಂತೆ ಬದಲಾಗುತ್ತಿರುವ ಜೀವನ ಶೈಲಿ, ಸಂಗೀತ, ಹಕ್ಕಿಗಳು, ಚಿತ್ರಕಲೆ, ಫೋಟೋಗ್ರಫಿ, ಲೈಂಗಿಕತೆ, ಚಲನಚಿತ್ರ, ಸಾಹಿತ್ಯ-ಸಾಹಿತಿ, ಕಲೆ - ಹೀಗೆ ಇಲ್ಲಿನ ಚಿಂತನೆಗಳು ಬಹುಮುಖಿಯಾಗಿ ಹರಿಯುತ್ತವೆ.

ಈ ವಿಷಯ ಮಂಡನೆಯಲ್ಲಿ ಕ್ರಮಬದ್ಧತೆಯಿಲ್ಲ ಎನ್ನುವಾಗಲೂ ಒಂದು ನಿರ್ದಿಷ್ಟವಾದ ಕ್ರಮಬದ್ಧತೆ ಇದೆ ಮತ್ತು ಇವು ನಿರುದ್ದಿಶ್ಯ ಕರಡು ಬರಹಗಳ ಸಂಕಲನದಂತಿದೆ ಎನಿಸುವಾಗಲೂ ಒಂದು ಉದ್ದೇಶಿತ ನಿಯೋಜನೆ, ಸಂತುಲನ ಇದೆ. ಸ್ಪರ್ಧೆಯ ಬಗ್ಗೆ, ಸೆಕ್ಸ್ ಬಗ್ಗೆ, ದುಡ್ದಿನ ಬಗ್ಗೆ, ಮಾರ್ಕೆಟ್ ಮತ್ತು ಮನುಷ್ಯನ ಏಕಾಂತದ ಬಗ್ಗೆ ಬರೆಯುವಾಗಲೂ ಅವುಗಳಲ್ಲಿ ಸಮಾನವಾದದ್ದು ಇದೆ ಮತ್ತು ಇಲ್ಲ ಎನಿಸುವುದು ಸಾಧ್ಯ. ಹೀಗೆ ಹೇಳಿದರೆ ಏನೂ ಹೇಳಿದಂತಾಗಲಿಲ್ಲವೇನೊ. ತೇಜಸ್ವಿಯವರ ಮಾಯಾಲೋಕವನ್ನೋ, ಪರಿಸರದ ಕತೆಗಳು ಪುಸ್ತಕವನ್ನೋ ಓದುವಾಗ ಅಲ್ಲಿ ಏಕಸೂತ್ರದ ಕಥಾನಕವೊಂದು ಕ್ರಮೇಣ ಬೆಳೆದು ಯಾವುದೋ ಒಂದು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ ಅನಿಸುವುದಿಲ್ಲ. ಅವು ಹಾಗೆಯೇ ಬಿಡಿಬಿಡಿಯಾಗಿ ಉಳಿದು ಬಿಡಬಹುದು ಅಥವಾ ಸಂತುಲಿತ ಕಥಾಸ್ವರೂಪವೊಂದನ್ನು ಪಡೆದುಕೊಳ್ಳಲೂಬಹುದು. ಅದು ಅಷ್ಟು ಮುಖ್ಯವಲ್ಲ. ಆದರೆ ಮನುಷ್ಯನನ್ನು, ಅವನ ಬದುಕನ್ನು ಕುರಿತ ಯಾವುದೂ ತನ್ನದೇ ಆದ ಒಳನೋಟವನ್ನು, ಕಾಣ್ಕೆಯನ್ನು ಹೊಂದಿರದೇ ಇರಲು ಸಾಧ್ಯವಿಲ್ಲ, ಗಮನಿಸಿ ನೋಡಿದರೆ ಅದು ಒಂದು ದರ್ಶನವನ್ನು ಕರುಣಿಸದೇ ಇರುವುದಿಲ್ಲ ಎನ್ನುವ ದೃಷ್ಟಿಯಿಂದ ಎಲ್ಲವನ್ನೂ ಬಗೆದು ಬಗೆದು ನೋಡಿ ಏನೋ ಒಂದು ಭಾಷ್ಯ ಬರೆಯುವುದು ಸಾಧ್ಯವಿದೆ. ಅದು ಕೃತಿಕಾರನ ಉದ್ದೇಶವಾಗಿತ್ತೆ ಎಂಬುದಕ್ಕಿಂತ ಹೆಚ್ಚಾಗಿ ಭಾಷ್ಯಕಾರನ ಜಾಣ್ಮೆಯನ್ನು, ಪಾಂಡಿತ್ಯವನ್ನು ಪ್ರದರ್ಶಿಸುವುದಕ್ಕೇ ಸಹಾಯಕವಾಗುವುದು ಸಾಧ್ಯವಿದೆ. ಇಲ್ಲಿ ಓದುಗ ಹಾಗೇನೂ ತಿಣುಕಬೇಕಾಗಿಲ್ಲ ಎಂದು ಮೊದಲೇ ಹೇಳಿ ಬಿಡುವುದು ಉತ್ತಮವೆನಿಸುತ್ತದೆ. ಇಲ್ಲಿನ ಸಂತುಲನ, ಉದ್ದೇಶ, ಸಂಯೋಜನೆ ಈ ತರದ ಓದನ್ನು ಬೇಡುವುದೂ ಇಲ್ಲ.

ಕೆಲವೊಂದು ಸಂಗತಿಗಳು ಸರಳವಾಗಿ ನಾವು ದಿನನಿತ್ಯ ಅನುಭವಿಸುತ್ತ, ಪತ್ರಿಕೆಗಳಲ್ಲಿ ಓದುತ್ತ, ಕಾಣುತ್ತ ಇರುವಾಗ ಪಡೆಯದ ಒಂದು ಮಹತ್ವ, ಅರ್ಥ, ಅವು ಒಟ್ಟಾಗಿ ಕಾಣಿಸಿದಾಗ ಪಡೆಯುತ್ತವೆ. ಅದಕ್ಕಿಂತ ಕಾಲಕ್ರಮೇಣ ಅವು ನಮ್ಮ ದೈನಂದಿನ ಬದುಕಿನ ಮೇಲೆಯೇ ಉಂಟು ಮಾಡುವ ಪರಿಣಾಮವನ್ನು ಇದ್ದಕ್ಕಿದ್ದಂತೆ ಒಂದು ದಿನ ಥಟ್ಟನೆ ಗಮನಿಸಿದಾಗ ಅವು ಮೊದಲು ಕಾಣಿಸಿದಷ್ಟು ಅಥವಾ ನಾವು ಅಂದುಕೊಂಡಷ್ಟು ಸರಳವಾಗಿರದೇ ಇರುವುದು ನಮಗೆ ಕಾಣಿಸುತ್ತದೆ. ಹೀಗೆ ಏಕಕಾಲಕ್ಕೆ ಸರಳವೂ ಸಂಕೀರ್ಣವೂ ಆದ ಈ ವಿದ್ಯಮಾನಗಳನ್ನು ಗ್ರಹಿಸುವುದಕ್ಕೆ ಒಂದು ವಿಶಿಷ್ಟ ಮನಸ್ಥಿತಿ ಮತ್ತು ವಿವೇಚನೆಯ ಅಗತ್ಯವಿರುತ್ತದೆ. ತೀರ ಕಣ್ಣಿನ ಹತ್ತಿರ ಹಿಡಿದ ಒಂದು ವಸ್ತು ಹೇಗೆ ಅಸ್ಪಷ್ಟವಾಗಿ ಕಾಣಿಸುತ್ತದೋ ಹಾಗೆಯೇ ತೀರ ದೂರದ್ದು ವಿವರವಾಗಿ ಕಾಣಿಸುವುದಿಲ್ಲ. ಕಾಲ ಮತ್ತು ದೂರ (ದೇಶ) ಗಳ ಒಂದು ನಿರ್ದಿಷ್ಟ ಅಂತರ ನಮ್ಮ ಗ್ರಹಿಕೆಯ ಮೇಲೆ ಬೀರುವ ಪರಿಣಾಮ ವಿಶಿಷ್ಟವಾದದ್ದು ಮತ್ತು ಮಹತ್ವದ್ದು.

ಜಗತ್ತಿನ ಹಲವಾರು ಲೇಖಕರಿಂದ ಹೇಳಿಸಿ ಬರೆಸಲ್ಪಡುತ್ತಿರುವ, ಆಯಾ ಲೇಖಕರಿಗೆ ಇದು ಪ್ರಸ್ತುತ ಜಗತ್ತಿನ ಮಹತ್ವದ ವಿದ್ಯಮಾನ, ಸಮಸ್ಯೆ, ಸಂಗತಿ - ಅನಿಸಿದ್ದರ ಕುರಿತ ಅವರವರ ಅನ್ನಿಸಿಕೆಗಳ ಒಂದು ಪುಸ್ತಕಕ್ಕೆ ನಮ್ಮ ನಿರೂಪಕ ಬರೆಯುತ್ತಿರುವ ತುಂಡು ತುಂಡು ಅನಿಸಿಕೆಗಳು ಇವು. ಇವಕ್ಕೆ ಹಾಗೆ ಒಂದು ಉದ್ದೇಶವಂತೂ ಇದೆ. ಕಾದಂಬರಿಯ ಹಾಳೆಗಳಲ್ಲಿ ಹೀಗೆ ಇವು ಅಚಾನಕ ತುರುಕಲ್ಪಟ್ಟ ಲೇಖನಗಳಲ್ಲ. ಡೈರಿಯನ್ನು ತನ್ನ ತಾಂತ್ರಿಕ ಅವಶ್ಯಕತೆಯನ್ನಾಗಿ ಸ್ವೀಕರಿಸಿದ ಇಲ್ಲಿನ ನಿರೂಪಣಾ ತಂತ್ರ ಈ ಬರಹಗಳನ್ನು ಇದೇ ಕೃತಿಯ ಪ್ರತಿ ಹಾಳೆಯ ಉಳಿದ ಎರಡು ಭಾಗಗಳಿಗೆ ಸಂಬಂಧಿಸಿದಂತೆಯೇ ನಿರೂಪಿಸುತ್ತಿದೆ. ಹಾಗೆಯೂ ಈ ಭಾಗಕ್ಕೆ - ಮೂಲಭಾಗವೆಂದು ಹೇಳಬಹುದಾದ ಈ ಭಾಗಕ್ಕೆ - ಒಂದು ಗುರುತ್ವವಿದೆ. ಈ ಸಂಬಂಧ ಹೇಗಿದೆ ಎಂದರೆ ವಿಲಕ್ಷಣವಾಗಿದೆ. ಮುಂದೆ ಒಂದು ಕಡೆ ಕಾದಂಬರಿಯ ಇನ್ನೊಂದು ಪ್ರಮುಖ ಪಾತ್ರ ಅನ್ಯಾ ನಿರೂಪಕನ ಬಳಿ ಕೇಳುತ್ತಾಳೆ, ನಿನ್ನ ಪುಸ್ತಕದಲ್ಲಿ ನಾನಿದ್ದೇನೆಯೆ...ನನಗಲ್ಲಿ ಸ್ಥಾನವಿದೆಯೆ.... ನಿರೂಪಕ ಹೇಳುತ್ತಾನೆ, ಇದರಲ್ಲಿ ನೀನಿದ್ದೀ, ನೀನಿಲ್ಲದೆ ಮತ್ತೆ! ಹೇಗಿದ್ದೀ ಎಂದರೆ, ನೀನು ಅಲ್ಲಿ ಎಲ್ಲೋ ಒಂದು ಕಡೆ ಇಲ್ಲ. ಅದರ ಉದ್ದಗಲಕ್ಕೂ ನೀನೇ ಇದ್ದೀ....ಇದ್ದೀ ಎಂದರೆ ಇದ್ದಿ, ಇಲ್ಲಾ ಎಂದರೆ ಇಲ್ಲ! ಹೇಗೆಂದರೆ ದೇವರ ಹಾಗೆ!!

ಇದೇ ಮಾತನ್ನು ಇಲ್ಲಿನ ವಿಚಾರಗಳು, ಕಥಾನಕ ಮತ್ತು ಈ ಎಲ್ಲದರ ಒಟ್ಟಾರೆ ಉದ್ದೇಶಗಳ ಕುರಿತಂತೆಯೂ ಹೇಳಬೇಕಿದೆ. ಅನ್ಯಾ ನಿರೂಪಕನ ಮಾತನ್ನು ತಿಳಿದುಕೊಂಡಳೆ ಎನ್ನುವುದು ಓದುಗ ಇದನ್ನು ಕಂಡುಕೊಂಡನೆ ಎನ್ನುವಷ್ಟೇ ಮಹತ್ವದ್ದು, ನನಗೆ. ಇವತ್ತಿನ ಧಾವಂತದ ಬದುಕು, ನಿಂತು ಧೇನಿಸುವ ಅವಕಾಶವಿಲ್ಲದ ಓಟದ ಸ್ಥಿತಿಯಲ್ಲಿಯೇ ಮನನ-ಚಿಂತನ ನಡೆಯಬೇಕಾದ ಅರೆ-ಬರೆ ಮತ್ತು ತುಂಡುತುಂಡು ಓದುವಿಕೆ ಅನಿವಾರ್ಯವಾಗಿರುವ ಸ್ಥಿತಿಯಲ್ಲಿ ಇಂಥ ಕೃತಿಯಿಂದ ಹೆಚ್ಚನ್ನು ದಕ್ಕಿಸಿಕೊಳ್ಳುವುದು ಅಶಕ್ಯ ಎನ್ನುವ ಕಾರಣಕ್ಕೆ. ಇಲ್ಲಿನ ಆಹ್ಹಾ ಎನಿಸುವ ಒಳನೋಟಗಳು, ಮಿಂಚುಗಳು, ಜಾಣ್ಮೆಯ ನುಡಿಗಳು, ಹೊಸನಿಟ್ಟಿನಿಂದ ಅವೇ ದಿನನಿತ್ಯದ ಜಂಜಾಟಗಳನ್ನು ನೋಡಿದಾಗಲಷ್ಟೇ ಸಾಧ್ಯವಾಗುವ ಕಾಣ್ಕೆಗಳು ನಿಧಾನವಾದ Text Book ಓದಿನ ಓದುವ ಶೈಲಿಯನ್ನು ನಿರೀಕ್ಷಿಸುವಂತಿವೆ. ನಿಮಗೆ ಗೊತ್ತು, ಕಾವ್ಯಕ್ಕೆ ಇಂಥ ವ್ಯವಧಾನದ ಮತ್ತು ಸೂಕ್ಷ್ಮವಾದ ಓದು ಬೇಕು. ಹತ್ತೇ ಸಾಲಿನ ಒಂದು ಕವನ ಒಂದು ಕಾದಂಬರಿ ಓದಿ ಮುಗಿಸಲು ಬೇಕಾಗುವ ಕಾಲವನ್ನು ಕೇಳುವುದು ಕೂಡ ಅಸಹಜವಲ್ಲ. ಹಾಗೆಯೇ ಇದು. ಇದು ಕಾದಂಬರಿ ಎನ್ನುವುದನ್ನು ಗಮನದಲ್ಲಿಟ್ಟುಕೊಂಡರೆ ಕಾದಂಬರಿಯ ಓದಿನ ಶೈಲಿಗೆ ಇಲ್ಲಿನ ವೈಚಾರಿಕತೆ ಮನಸ್ಸಿನಿಂದ ಜಾರಿ/ಸೋರಿ ಹೋಗಬಹುದಾದ ಅಪಾಯವನ್ನು ಮೈಮೇಲೆಳೆದುಕೊಳ್ಳುತ್ತದೆ. ಇದೇ ಕಾದಂಬರಿಯ ಪ್ರತಿ ಹಾಳೆಯ ಎರಡು ಮತ್ತು ಮೂರನೆಯ ಭಾಗದ ಛಾಯೆ, ಪ್ರಭಾವ ಮತ್ತು ಸಾಂಗತ್ಯದಲ್ಲಿ ಈ ಮಾತು ಹೆಚ್ಚು ಸತ್ಯವಾಗುವುದು ಕೂಡಾ ಕೃತಿಯ ಮೂಲ ಭಾಗಕ್ಕೆ ಹಾನಿಕಾರಕವಾಗಿ ನಿಲ್ಲುತ್ತದೆ. ಈ ಮೂರೂ ಭಾಗಗಳು ಹೀಗೆ ಪ್ರತಿ ಪುಟದಲ್ಲೂ ಹಂಚಿಕೊಂಡು ಹೆಜ್ಜೆ ಹಾಕಬೇಕೆಂಬುದು ಕೃತಿಕಾರನ ಉದ್ದೇಶವೆಂಬುದು ಯಾರಿಗಾದರೂ ಅರ್ಥವಾಗುತ್ತದೆ. ಇದು ಒಂದು ವಿಲಕ್ಷಣ ಅನುಭವ! ಅನೇಕ ಬಗೆಯಲ್ಲಿ ಎರಡು ಮತ್ತು ಮೂರನೆಯ ಭಾಗ ಒಡ್ಡುವ ಆಮಿಷವನ್ನು ನಿಯಂತ್ರಿಸಿಕೊಂಡು, ಮೂಲಭಾಗ ಜಿಜ್ಞಾಸೆಯೇ ಪ್ರಧಾನವಾಗಿ ಒಡ್ಡುವ ಸವಾಲನ್ನು ಮಾನಸಿಕವಾಗಿ ಸ್ವೀಕರಿಸಿಕೊಂಡು ಮುಂದುವರಿಯುವುದು ಮನಸ್ಸಿಗೆ ಒಂದು ವಿಲಕ್ಷಣವಾದ ವ್ಯಾಯಾಮವನ್ನೇ ನೀಡುವುದೆಂದರೆ ಸುಳ್ಳಲ್ಲ! ಯಾಕೆಂದರೆ, ಎರಡು ಮತ್ತು ಮೂರನೆಯ ಭಾಗದಲ್ಲಿ ಮೂಲಭಾಗದ ಒಣ ಸಿದ್ಧಾಂತಗಳಿಗೆ ವಿರುದ್ಧವಾದ ಕಾಮ, ಪ್ರೇಮ, ಜಿದ್ದು, ವಯ್ಯಾರ, ಕುತಂತ್ರಗಳೆಲ್ಲ ಸೆಳೆಯುತ್ತಿರುತ್ತವೆ!

ಎರಡನೆಯ ಭಾಗ ಕೂಡ ಡೈರಿಯ ಪುಟಗಳಂತೆಯೇ ಇವೆ. ನಿರೂಪಕನದೇ ಬದುಕಿನ ಇನ್ನೊಂದು ಮಗ್ಗುಲನ್ನು ಇದು ತೆರೆದಿಡುತ್ತಿದೆ. ನಿರೂಪಕ ವಾಸಿಸುತ್ತಿರುವ ಫ್ಲ್ಯಾಟಿನಲ್ಲೇ ಕೊಂಚ ವಯಸ್ಸಾದವನೊಂದಿಗೆ (42) ವಾಸವಾಗಿರುವ ಅವನ ಗೆಳತಿ/ಹೆಂಡತಿ/ಸಹಾಯಕಿ ಆಗಿರಬಹುದಾದ ಅನ್ಯಾ (29) ಕುರಿತು 72ರ ಹರಯದಲ್ಲಿರುವ ನಿರೂಪಕ ಕಲ್ಪಿಸಿದ್ದು, ನಿರೀಕ್ಷಿಸಿದ್ದು, ಬಯಸಿದ್ದು, ಅಂದುಕೊಂಡಿದ್ದು, ಆಡಿದ್ದು, ಮಾಡಿದ್ದು ಎಲ್ಲವೂ ಇಲ್ಲಿದೆ. ಇದೂ ಒಂದು ಪಾರ್ಶ್ವವನ್ನು ಮಾತ್ರ ಹೇಳುತ್ತಿದೆ. ಅದು ನಿರೂಪಕನ ಭ್ರಾಂತಿ ಕೂಡ ಆಗಿರಬಹುದಾದ ಅಪಾಯವನ್ನು ಓದುಗ ಥಟ್ಟನೇ ಮನಗಾಣಬಲ್ಲ ಎಂದು ಮತ್ತೆ ಹೇಳಬೇಕಿಲ್ಲ! ಹಾಗಾಗಿಯೇ ಅನ್ಯಾ ಮಾತನಾಡುವ ಮೂರನೆಯ ಭಾಗ ಇನ್ನಿಲ್ಲದ ಆಕರ್ಷಣೆಯನ್ನೊಡ್ಡುತ್ತದೆ!! ಮೊದಲೇ ಹೇಳಿರುವಂತೆ ಮೂಲಭಾಗ ಒಂದು ಕೃತಿಗಾಗಿ ತಯಾರಾಗುತ್ತಿರುವ ಪ್ರಬಂಧವಾಗಿದ್ದು ಅದನ್ನು ನಿರೂಪಕನ ಹಸ್ತಪ್ರತಿ, ಧ್ವನಿಮುದ್ರಿತ ಟೇಪುಗಳಿಂದ ಟೈಪ್ ಮಾಡಿಕೊಡುವ ಕೆಲಸವನ್ನು ಇದೇ ಅನ್ಯಾ ವಹಿಸಿಕೊಳ್ಳುವುದರಿಂದ ಈ ಒಡನಾಟ ಕುತೂಹಲಕರವಾಗಿ ಮುಂದುವರಿಯುತ್ತದೆ.

ಮೂರನೆಯ ಭಾಗ ಈ ಅನ್ಯಾಳ ಮನೋಗತ. ಈಕೆಯ ಜೀವಂತಿಕೆ, ಜೀವನ ಪ್ರೀತಿ ಮತ್ತು ಜೀವನದೃಷ್ಟಿ ಅಚ್ಚರಿಯನ್ನುಂಟು ಮಾಡುವಂತಿವೆ. ಇದೇ ಇಡೀ ಕೃತಿಯ ಜೀವಂತಿಕೆ ಮತ್ತು ಅರ್ಥಪೂರ್ಣತೆಯ ಸೆಲೆ ಕೂಡ ಆಗಿರುವುದು ನಿಜ. ತನಗಾಗಿ ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟು ಬಂದ ತನ್ನ ಗೆಳೆಯ ಆಲನ್ ಮತ್ತು ಈ 72ರ ಲೇಖಕನ ನಡುವೆ ತನ್ನದೇ ಅದ ಒಂದು ಪುಟ್ಟ ಜಗತ್ತನ್ನು ಅದೇ ಆಗ ಕಂಡುಕೊಳ್ಳುತ್ತಿರುವ ಈ ಅಪ್ಪಟ ಹೆಣ್ಣುಮಗಳು ವಯ್ಯಾರಿ, ಹಠಮಾರಿ, ಮುಗ್ಧೆ ಮತ್ತು ಪ್ರೇಮದೇವತೆ; ಮತ್ತೆ, ಸರಳವಾದ ಮನಸ್ಸಿನವಳು. ಹಾಗಾಗಿಯೇ ಈ ಹುಡುಗಿ, (ಹಾಗೆಂದು ಕರೆಯಲು ಇಷ್ಟವಾಗುವಂತಿದ್ದಾಳೆ ಇವಳು!) ತನ್ನ ತರ್ಕ, ತತ್ವ, ಜಿಜ್ಞಾಸೆಗಳೊಂದಿಗೇ ಸೂಕ್ಷ್ಮ ಸಂವೇದನೆಗಳ ಭಾವಕೋಶದ ಪುಳಕ ಪಲ್ಲವಿಗಳನ್ನೂ ಇಲ್ಲಿ ತೆರೆದಿಡುತ್ತಾಳೆ. ಇಲ್ಲಿ ಮನುಷ್ಯನ ಅಲ್ಪತನ, ನೀಚತನಗಳೆರಡೂ ಲಘುವಾಗಿ ಕಾಣಿಸುವುದು ಸಾಧ್ಯವಾಗುವುದು ಹೀಗೆ. ಮನುಷ್ಯನ ಎಂದಿರುವುದರಿಂದ ಕಾದಂಬರಿಯ ಯಾವ ಪಾತ್ರಕ್ಕದರೂ ನೀವಿದನ್ನು ಅನ್ವಯಿಸಿಕೊಳ್ಳಬಹುದು.

ಬಟ್, ಇದೆಲ್ಲದರಾಚೆ, ಇಷ್ಟೆಲ್ಲ ಇರುವ ಈ ಕೃತಿಯಿಂದ ಒಟ್ಟಾರೆಯಾಗಿ ಏನು ಎನ್ನುವುದು ಪ್ರಶ್ನೆ. ಪ್ರಸ್ತುತ ಜಗತ್ತಿನ ಸಮಕಾಲೀನ ಆಗುಹೋಗುಗಳ ಕುರಿತ ಒಟ್ಟಾರೆ ಅಭಿಪ್ರಾಯ, ಅನ್ನಿಸಿಕೆಗಳು - ಒಬ್ಬ 72ರ ಹರಯದವನ ನೆಲೆಯಿಂದ ಎನ್ನುವ ಕಾರಣಕ್ಕೆ ಮಹತ್ವ ಪಡೆಯುತ್ತವೆ ಎನ್ನುವುದು ಅಷ್ಟು ಸರಿಯಲ್ಲ. ಈತನಿಗೆ ಭವಿಷ್ಯವಿಲ್ಲ, ಭೂತ ಮತ್ತು ವರ್ತಮಾನಗಳಷ್ಟೇ ಇರುವುದು ಸಾಧ್ಯ ಎನ್ನುವುದು ಸರಿಯಾದರೂ ಅದು ನಮ-ನಿಮಗೆ ಅನ್ವಯಿಸುವುದಿಲ್ಲ ಎನ್ನುವುದು ಹೇಗೆ! ಅಲ್ಲದೆ ಸರಳವಾಗಿ ಹೇಳುವುದಾದರೆ ಇವು ಸಾರ್ವತ್ರಿಕವಾಗಿ ನಮಗೂ ನಿಮಗೂ ಇರುವ ಅನಿಸಿಕೆಗಳಿಂದ ತೀರ ವಿಲಕ್ಷಣವಾಗೇನೂ ಇಲ್ಲ. ಯುದ್ಧ-ಶಾಂತಿ, ಜಾಗತೀಕರಣ - ಮಾರುಕಟ್ಟೆ ಕೇಂದ್ರಿತ ಜೀವನಶೈಲಿಯ ಹೇರುವಿಕೆಯಲ್ಲೇ ನಿರತವಾಗಿರುವ ಮಾಧ್ಯಮಗಳು, ಬಹುರಾಷ್ಟ್ರೀಯ ಕಂಪೆನಿಗಳು, ಧಾರ್ಮಿಕ/ರಾಜಕೀಯ ಶಕ್ತಿಯಾಗುವ ಕ್ರಾಂತಿಕಾರಕ ಹುನ್ನಾರಗಳಿರುವ ಭಯೋತ್ಪಾದನೆ, ಸ್ಪರ್ಧೆ ಮತ್ತು ಅದರ ಛಾಯೆಯಲ್ಲಿ ಬದಲಾಗುತ್ತಿರುವ ನಮ್ಮ ನಿಮ್ಮಂಥ ಸಾಮಾನ್ಯರ ನೈತಿಕ-ಸಂವೇದನಾತ್ಮಕ ನಿಲುವುಗಳು ಇತ್ಯಾದಿಗಳ ಬಗ್ಗೆ ನನಗೂ ನಿಮಗೂ ಅಂಥ ಭಿನ್ನವಾದ ನಿಲುವು ಇದ್ದಂತೆ ಕಾಣಿಸುವುದಿಲ್ಲ. ನಮನಮಗೆ ಅನುಕೂಲವಾದದ್ದರ ಬಗ್ಗೆ ನಾವು ನಾವು ವರ್ತಿಸುವ ರೀತಿಯಲ್ಲಿ ಎಷ್ಟೇ ಭಿನ್ನತೆ ಇದ್ದರೂ ನಮ್ಮ ನಮ್ಮ ಅಭಿಪ್ರಾಯಗಳು ಅವುಗಳಿಂದ ಕಳಚಿಕೊಂಡೇ ಇರುವುದು ಕೂಡ ನಿಜವಲ್ಲವೆ!!

ಆದರೆ ನಮ್ಮಲ್ಲಿ ಕೆಲವೇ ಕೆಲವರು ಇವನ್ನೆಲ್ಲ ಹೀಗೆ ಸಮಗ್ರವಾಗಿ ಮತ್ತು ಏಕಸೂತ್ರದಲ್ಲಿ ನೇಯ್ದು ಕಾಣಬಲ್ಲ ವಿವೇಚನೆ, ವ್ಯವಧಾನ, ಸಹನೆ ಮತ್ತು ದೃಷ್ಟಿ ಹೊಂದಿರುವುದು ಕೂಡ ನಿಜ. ಮಾತ್ರವಲ್ಲ ಪ್ರಜ್ಞಾಪೂರ್ವಕವಾಗಿ ಇದನ್ನು ಸದಾ ಎಚ್ಚರದಲ್ಲಿ ಗಮನಿಸುತ್ತ ಪ್ರಸ್ತುತಕ್ಕೆ ಸ್ಪಂದಿಸುವುದು ಕೂಡ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ನಮ್ಮ ನಮ್ಮದು ನಮ್ಮನಮಗೆ ದೊಡ್ಡದಾಗಿರುವಾಗ ಲೋಕದ ಚಿಂತೆ ನಮಗ್ಯಾತಕಯ್ಯಾ ಎನ್ನುವವರು ನಾವು, ಹೆಚ್ಚಿನವರು. ಆದರೆ ಚರ್ಚೆಗೆ ನಿಂತರೆ ಬಿಟ್ಟುಕೊಡುವವರಲ್ಲ ಬಿಡಿ, ಸಮಗ್ರ ಮಾಹಿತಿ ಇದ್ದರೂ ಇಲ್ಲದಿದ್ದರೂ! ಹಾಗೆ ನಾವು ನಮ್ಮ ನಮ್ಮ ನೆಲೆಯಿಂದ, ನಮ್ಮ ನಮ್ಮ ಸಂಸಾರ, ಜಾತಿ, ಪಂಗಡ, ಸಮಾಜ - ಹೀಗೆ ಹೆಚ್ಚು ಹೆಚ್ಚು ಸಣ್ಣ-ಸಂಕುಚಿತ ನೆಲೆಯಲ್ಲೇ ಪ್ರಸ್ತುತವನ್ನು, ವರ್ತಮಾನವನ್ನು, ಸದ್ಯವನ್ನು ಗ್ರಹಿಸುತ್ತಾ ಬದುಕುತ್ತೇವೆ. ಅದೇನೂ ತೀರಾ ಅಸಂಗತವೋ ಅಪ್ರಬುದ್ಧವೋ ಆದ ನೆಲೆಯೆಂದೇನೂ ಅಲ್ಲ. ನಾವು ಅಲ್ಲಿಯೂ ನಮ್ಮ ಸ್ವಾರ್ಥನಿಷ್ಠೆ, ಜಾತಿನಿಷ್ಠೆ, ಧರ್ಮನಿಷ್ಠೆಯನ್ನು ಮೀರಿ ವೈಯಕ್ತಿಕ ನೆಲೆಯ ಯೋಚನೆ, ನಿಲುವು ಹೊಂದಿರಲು ಸಾಧ್ಯವಿದೆ. ಆದರೆ ವಾಸ್ತವವಾಗಿ ಸಾಧ್ಯವಿಲ್ಲದ ಒಂದು ಮನೋಭೂಮಿಕೆಯೇ ಸಹಜವೆಂಬಂತಿದೆ ಅಷ್ಟೆ.

ಸಂಘರ್ಷಗಳ, ವೈರುಧ್ಯಗಳ, ಸಂಕೀರ್ಣವಾದ ಪ್ರಸ್ತುತ ವಿದ್ಯಮಾನಗಳಾಚೆ, ವೈಮನಸ್ಯಗಳಿಗೆ ಕಾರಣವಾಗಬಹುದಾದ ಸೂಕ್ಷ್ಮ ನೆಲೆಯ ಕೆಲವು ಪ್ರಶ್ನೆಗಳಾಚೆಗೂ ಇನ್ನೂ ಕೆಲವು ಸಂದಿಗ್ಧಗಳು, ಸಂಕಟಗಳು ನಮ್ಮ ದೈನಂದಿನ ಬದುಕನ್ನು, ಅದರ ಸುಸಂಗತ ನಿರ್ವಹಣೆಯನ್ನು ಕಂಗೆಡಿಸಿ ಕಾಡುತ್ತಲೇ ಇರುತ್ತವೆ. ಜನಾಂಗವೊಂದು (ಉದಾಹರಣೆಗೆ ಜರ್ಮನ್ ಜನಾಂಗವನ್ನಿಟ್ಟುಕೊಳ್ಳಿ) ಸದಾ ಕಾಲವೂ ಎದುರಿಸುವ ಮನುಕುಲದ "ಶಾಪ" ದ ಬಗ್ಗೆ ಯೋಚಿಸಿ. ಈ ದೇಹದ ಬೇರ್ಪಡಿಸಲಾಗದ ‘ನನ್ನ’ ಭಾಗಗಳನ್ನು ಮತ್ತು ಯಾವುದೇ ಕಿರಿಕಿರಿಯಿಲ್ಲದೆ ನಾವೇ ತ್ಯಜಿಸಲು ಸಿದ್ಧರಿರುವ ‘ನನ್ನ’ ಭಾಗ (ತಲೆಗೂದಲು, ಉಗುರು, ಹುಳುಕು ಹಲ್ಲು)ದ ವೈಚಿತ್ರ್ಯದ ಬಗ್ಗೆ ನಮ್ಮ ಹೆಣವನ್ನೂ ಇಟ್ಟುಕೊಂಡು ಯೋಚಿಸಿ. ಬದುಕಿನ ‘ಸ್ಪರ್ಧೆ’ಯ ಬಗ್ಗೆ, ಗಣಿತದ ಒಳಸುಳಿಗಳ ಬಗ್ಗೆ, ಸಂಭವನೀಯ ಸಂಭವನೀಯತೆಯ ಬಗ್ಗೆ, ಶಬ್ದ ಮತ್ತು ಸಂಗೀತದ ಬಗ್ಗೆ, ಭಾಷೆಯ ಬಗ್ಗೆ - ಮಾತೃಭಾಷೆ, ಆಡುಭಾಷೆ, ಕಲಿಕೆಯ ಭಾಷೆ ಇತ್ಯಾದಿ ಸಂಬಂಧಗಳಲ್ಲಿ ಯೋಚಿಸಿ. ಕನಸುಗಳ ಬಗ್ಗೆ, ಸಾಹಿತ್ಯ-ಸಾಹಿತ್ಯ-ಅದರ ಮೂಲಸೆಲೆಯ ಬಗ್ಗೆ ಮತ್ತು ಪ್ರಚಾರ-ಪ್ರಶಸ್ತಿ, ಜನಪ್ರಿಯತೆಯ ಹಿಂದೆ ಬಿದ್ದಿರುವ ಸಾಹಿತ್ಯ-ಸಾಹಿತಿಯ ಬಗ್ಗೆ ಯೋಚಿಸಿ. ನೀರು ಮತ್ತು ಬೆಂಕಿಯ (ಅಗ್ನಿ ಮತು ಮಳೆ!) ವೈರುಧ್ಯದ ಬಗ್ಗೆ ಯೋಚಿಸಿ...

ಇವನು ರಾಜಕೀಯದ ಬಗ್ಗೆ ಬರೆಯುವ ಬದಲು ಕತೆಯನ್ನು, ಏನಿಲ್ಲವೆಂದರೆ ಕ್ರಿಕೆಟ್ ಕುರಿತಾದರೂ ಬರೆಯಬಾರದೆ ಎಂದು ಇವನು ಹೇಳಿದ್ದನ್ನೆಲ್ಲ ಟೈಪ್ ಮಾಡುತ್ತ ಯೋಚಿಸುವ ಅನ್ಯಾಗೆ ಹಾಗೂ ಸ್ವತಃ ನಿರೂಪಕನಿಗೆ ಸಂವಾದಿಯಾಗಿ ಈ ಇಬ್ಬರೂ ತಮ್ಮ ಮನಸ್ಥಿತಿಯಿಂದಾಗಿಯೇ ಕಾಣಲಾರದ ಮಗ್ಗುಲಿನ ಬಗ್ಗೆ ಮಾತನಾಡುವವನು ಆಲನ್. ಆಲನ್ ಇವತ್ತಿಗೆ ಸಲ್ಲುವ ಮನುಷ್ಯ. ಅವನ ಸ್ಫೂರ್ತಿ ಹಣ. ನಿರೂಪಕನಂತೆಯೇ ಬುದ್ಧಿಯನ್ನೇ ಬಂಡವಾಳವನ್ನಾಗಿ ಬಳಸುವ ಈತ ಅದನ್ನು ಹಣವನ್ನಾಗಿ ಪರಿವರ್ತಿಸಲು ತೆಗೆದುಕೊಳ್ಳುವ ಸಮಯ (ಕಾಲ)ದ ಬಗ್ಗೆ ಸದಾ ಜಾಗೃತ. ಹಾಗಾಗಿ ಜಾಣ. ಸಹಜವಾಗಿಯೇ ‘ಕಾಲ’ನ ಬಗ್ಗೆ ಯೋಚಿಸಿದಷ್ಟು ‘ಕಾಲ’ದ ಬಗ್ಗೆ ತಲೆಕೆಡಿಸಿಕೊಳ್ಳದ ಮತ್ತು Time Value of Money ಬಗ್ಗೆ ಗೊತ್ತೇ ಇಲ್ಲದಂತಿರುವ ನಿರೂಪಕ ಇಲ್ಲಿ ಪೆದ್ದ. Outdated. ಬುಡಬಡಿಕೆ ದಾಸಯ್ಯ.

ಹುಟ್ಟಾ ಸಮಾಜವಾದಿಯೂ, ಆಫ್ರಿಕನ್ನನೂ ಆದ ನಿರೂಪಕನ ಸಮಕಾಲೀನಕ್ಕೆ ಸ್ಪಂದಿಸಬಲ್ಲ ಗಡಿಯಾರ USSR ಪತನಕ್ಕಿಂತಲೂ ಹಿಂದಿನ ಕಾಲಮಾನದಲ್ಲೇ ಎಲ್ಲೋ ನಿಂತುಹೋಗಿದೆ, ಅವನಿಗೆ ಸದ್ಯ ವರ್ತಮಾನವನ್ನಾಗಲೀ ಭವಿಷ್ಯತ್ ಕಾಲವನ್ನಾಗಲೀ ಕಾಣುವ ಕಣ್ಣುಗಳೇ ಇಲ್ಲ ಎಂಬುದು ಸ್ಥೂಲವಾಗಿ ಆಲನ್‌ನ ತರ್ಕ.

ಜಾಣತನ ತನ್ನ ಜೊತೆಗೆ ಸ್ವಾರ್ಥ ಮತ್ತು ಸಣ್ಣತನವನ್ನು ಮೈಗೂಡಿಸಿಕೊಂಡಿದ್ದಾಗ ಈ ಹಣದ ಹಿಂದೆ ಸ್ಪರ್ಧೆಯ ಓಟ ಹೂಡಿರುವ ಜಗತ್ತಿನಲ್ಲಿ ಯಶಸ್ಸು ಸುಲಭವಾಗುತ್ತದೆ. ಅದೇ ಜಾಣತನ ತನ್ನ ಜೊತೆಗೆ ಸ್ವಾರ್ಥ ಮತ್ತು ಸಣ್ಣತನಕ್ಕೆ ಬದಲಾಗಿ ಔದಾರ್ಯ ಮತ್ತು ಆದರ್ಶವನ್ನು ಮೈಗೂಡಿಸಿಕೊಂಡರೆ ಅವರು ಸ್ಪರ್ಧೆಗೆ ನಾಲಾಯಕ್ಕಾಗಿ ಪೆದ್ದರು, Unfit ಗಳು ಆಗಿ ಬಿಡುತ್ತಾರೆ ಎನ್ನುವ ತತ್ವಕ್ಕೆ ಅಪವಾದ Three Ediotsನಲ್ಲಿ ಮಾತ್ರ ಸಿಗುತ್ತದೆ ಎಂದುಕೊಳ್ಳಬೇಕಿಲ್ಲ! ಅವನಲ್ಲಿ Industry ಇದ್ದಲ್ಲಿ ಅಂಥ ವ್ಯಕ್ತಿ ಬಹುಷಃ ಗೆಲ್ಲುವುದು ಸಾಧ್ಯ, ಇರಲಿ. ಆಲನ್ ಆ ಬಗೆಯ ವ್ಯಕ್ತಿ ಕೂಡಾ ಅಲ್ಲ ಎನ್ನುವುದು ಇಲ್ಲಿ ಗಮನಿಸಬೇಕು. ಆಲನ್‌ನ ತರ್ಕ, ಜಾಣ್ಮೆ, ತಂತ್ರಗಾರಿಕೆಗಳ ಮೇಲಾಟದ ಜೊತೆಜೊತೆಗೇ ಅವನು ತನ್ನ ಹೆಣ್ಣು-ಹಣ ಮತ್ತು ನೆಲೆ (ನೆಲ ಅಲ್ಲ)ಗಳ ವಿಚಾರದಲ್ಲಿ ಸ್ವತಃ ತಲುಪಿರುವ ಸ್ತರ ಯಾವುದು ಎನ್ನುವ ಪ್ರಶ್ನೆ ಇಲ್ಲಿ ಮುಖ್ಯವಾಗಿದೆ.

ಇದು ಮೊದಲ ಪ್ರಶ್ನೆ. ಈ ಪ್ರಶ್ನೆಯ ಪ್ರಸ್ತುತತೆ ಎರಡನೆಯ ಪ್ರಶ್ನೆ.

ಮನುಷ್ಯ ಏನಾಗಿ ಬಿಟ್ಟ ಎನ್ನುವ ಪ್ರಶ್ನೆಯನ್ನು ಕಾದಂಬರಿಯ ಮೂಲಭಾಗದ ಎಲ್ಲ ಜಿಜ್ಞಾಸೆಗಳ ಹಿಂದೆ ಕೆಲಸ ಮಾಡಿರುವ ಮನಸ್ಸನ್ನು ಗಮನಿಸಿ, ಗ್ರಹಿಸಿ, ಅದಕ್ಕೆ ಅದರ ನೆಲೆಯಿಂದಲೇ ಸ್ಪಂದಿಸಿ ಕೇಳಿಕೊಳ್ಳಬೇಕಾಗಿದೆ. ಆದರೆ ಕಾದಂಬರಿಯ ಮೂಲಭಾಗ ಈ ನೆಲೆಯಲ್ಲಿ ಕೆಲಸ ಮಾಡುವುದಿಲ್ಲ, ಅದನ್ನು ಮುಂದೊಡ್ಡುವುದಿಲ್ಲ. ಅದೇನಿದ್ದರೂ ಓದುಗನ ಕರ್ಮ.

ಎರಡನೆಯ ಪ್ರಶ್ನೆ ಮೊದಲಿನದ್ದರ ಮುಂದುವರಿದ ಭಾಗವೇ ಹೊರತು ಇನ್ನೇನಲ್ಲ. ಆಲನ್ ತನ್ನ ಹೆಣ್ಣು-ಹಣ ಮತ್ತು ನೆಲೆ (ಜೀವನ ದೃಷ್ಟಿ, ಜೀವನದ ನಿಲುವು ಎನ್ನುವ ಅರ್ಥದಲ್ಲಿ) ಯ ಬಗ್ಗೆ ಕ್ರಮೇಣವಾಗಿಯೋ, ಹಂತಹಂತವಾಗಿಯೋ, ಸಮಕಾಲೀನಕ್ಕೆ ‘ಕಾಲಕ್ಕೆ ತಕ್ಕಂತೆ’ ಸ್ಪಂದಿಸುವುದರ ಮೂಲಕವೋ (ನಿರೂಪಕನ ನಿಂತು ಹೋದ ಗಡಿಯಾರವನ್ನು ಮನಸ್ಸಿನಲ್ಲಿಟ್ಟುಕೊಂಡು) ಸಾಧಿಸಿರುವ, ಏರಿರುವ ಅಥವಾ ಕುಸಿದು ಅಧಃಪತನಕ್ಕಿಳಿದಿರುವ ಒಂದು ಸದ್ಯದ ಸ್ತರ ಏನಿದೆ - ಅದರ ಒಳಿತು ಕೆಡುಕುಗಳ ಪ್ರಶ್ನೆಯನ್ನು ಈ fast moving ಜಗತ್ತಿನಲ್ಲಿ ಈಗಲೇ ನಿರ್ಧರಿಸುವುದು ಆತುರವಾದೀತೆಂಬ ಸೂಕ್ಷ್ಮ ಎಚ್ಚರದಲ್ಲೇ ನಿರ್ವಿಕಾರವಾಗುಳಿದು, ಈ ಸ್ತರ ಈತನ ತರ್ಕವನ್ನು ಅದರ ತರ್ಕಶುದ್ಧತೆಯನ್ನು ನಿರ್ಧರಿಸುವ ಅಂಶ ಎಂದು ನಾವು ತಿಳಿಯುತ್ತೇವೆಯೆ/ಒಪ್ಪುತ್ತೇವೆಯೆ? - ಎಂದು ಕೇಳಿಕೊಳ್ಳಬೇಕಿದೆ.

ಗಾಂಧಿಯ ‘ಗುರಿಯಷ್ಟೇ ಮಾರ್ಗವೂ ಒಳ್ಳೆಯದಾಗಿರಬೇಕೆಂಬ’ ನಿಯತ್ತಿನ ಹಿನ್ನೆಲೆಯಲ್ಲೇ ಇದನ್ನು ನೋಡಬೇಕೆಂದೇನೂ ಅಲ್ಲ. ಅಥವಾ ಗುರಿ ಭ್ರಷ್ಟವಾಗಿದ್ದ ಮಾತ್ರಕ್ಕೇ ಅದರ ಮಾರ್ಗವೂ ಭ್ರಷ್ಟವೇ ಆಗಿತ್ತೆಂಬುದು ಸ್ವಯಂಸಿದ್ಧ ಪ್ರಮೇಯವಲ್ಲ. ಆಲನ್ ಬಳಿಯೂ ತರ್ಕವಿದೆ. (ತರ್ಕ ಸುಳ್ಳು ಹೇಳುವವರ ಅಗತ್ಯ ಎನ್ನುತ್ತದೆ ಕಾರ್ನಾಡರ ನಾಟಕದ ಒಂದು ಪಾತ್ರ!) ನಾವು ತರ್ಕರಹಿತವಾಗಿ ಬರೇ ಈ ಪ್ರಶ್ನೆಗಳನ್ನು ಉತ್ತರಿಸುವ ಆತುರವಿಲ್ಲದೇನೆ ಗಮನಿಸಬಹುದು. ಆಲನ್ ಪ್ರಾಮಾಣಿಕವಾಗಿ ತಾನು ಅನ್ಯಾಯ ಮಾಡುತ್ತಿದ್ದೇನೆ ಎಂದು ತಿಳಿದುಕೊಂಡಿಲ್ಲ ಮತ್ತು ಹಾಗಾಗಿಯೇ ಸ್ವಸ್ಥವಾಗಿದ್ದ. ಯಾವಾಗ ಅನ್ಯಾ ಅದನ್ನು ಬೇರೆಯೇ ನೆಲೆಯಿಂದ ಪ್ರಶ್ನಿಸಿದಂತೆ ಅವನಿಗೆ ಭಾಸವಾಯಿತೋ ಆಗ ಅವನಲ್ಲಿ ಅಸ್ವಾಸ್ಥ್ಯದ ಪ್ರಥಮ ಚಿಹ್ನೆಗಳು ಕಾಣಿಸತೊಡಗಿವೆ. ಅಂದರೆ ಪ್ರಜ್ಞೆ ಕಾಡತೊಡಗುವವರೆಗೆ ಪಾಪಕ್ಕೆ ಪಾಪಭೀತಿಯಿಲ್ಲದ ಒಂದು ಆಧುನಿಕ ಸ್ಥಿತಿ ನಮ್ಮದು. ಕೊನೆಗೂ ಪೂರ್ಣಾರೋಗ್ಯದ ಕಡೆಗೆ ಹೆಜ್ಜೆಯಿಡುವುದು ಸಾಧ್ಯವಾಗುವುದು ಯಾರಿಗೆ ಎನ್ನುವುದನ್ನು ಕಾದಂಬರಿ ತೀರ ಸೂಚ್ಯವಾಗಿಸಿಯಷ್ಟೇ ಕಾಣಿಸಿದೆ.

ಇದು ಕೇವಲ ಇವತ್ತು ಬೇರೆ ಬೇರೆ ವಯೋಮಾನದವರಾಗಿರಬಹುದಾದ ನಾನು - ನೀವು, ಕೇವಲ ಇವತ್ತು, ಈಗ ಮಾತ್ರ ಎಂಬಂತೆ ಎದುರಿಸಿ, ಮುಖಾಮುಖಿಯಾಗಿ ಉತ್ತರಿಸಬೇಕಾದ ಈ ಕ್ಷಣದ ಪ್ರಶ್ನೆಯಲ್ಲವೇ ಅಲ್ಲ. ಇದು ನಿರಂತರವಾಗಿ ಮನುಷ್ಯ ತನ್ನ ಪ್ರಜ್ಞೆಯನ್ನು ವಿಸ್ತರಿಸಿಕೊಳ್ಳುತ್ತ ಬಂದ ದಿನದಿಂದಲೂ ಕೇಳಿಕೊಂಡ, ಮುಖಾಮುಖಿಯಾದ, ಎದುರಿಸಿದ ಪ್ರಶ್ನೆಯೇ. ಅವಜ್ಞೆ- ವಿಸ್ಮೃತಿ ಅವನನ್ನು ವಿವಶಗೊಳಿಸದಿರಲು ಇದನ್ನು ಮತ್ತೆ ಮತ್ತೆ ನೆನಪಿಸಬೇಕಾಗುತ್ತದೆ. ಇನ್ನೂ ಹತ್ತು-ಇಪ್ಪತ್ತು-ಐವತ್ತು ವರ್ಷಗಳಾಚೆಗೂ ಜಗತ್ತು ಈ ಪ್ರಶ್ನೆಯನ್ನು ಹೇಗೆ ಎದುರಿಸುತ್ತದೆ, ಹೇಗೆ ಮುಖಾಮುಖಿಯಾಗಿ ಏನು ಉತ್ತರ ನೀಡುತ್ತದೆ ಮತ್ತು ಹೇಗೆ ನಿರುಮ್ಮಳವಾಗಿ, ಸ್ವಸ್ಥವಾಗಿ - (ಆರೋಗ್ಯಕರವಾಗಿಯೋ ಅನಾರೋಗ್ಯಕರವಾಗಿಯೋ ಎಂದು ಹೇಳುವ ‘ಕಾಲ’ ಸಾಪೇಕ್ಷ ಸಂಭವನೀಯತೆ!!) ನಿಲ್ಲುವುದನ್ನು ರೂಢಿಸಿಕೊಳ್ಳುತ್ತದೆ ಎನ್ನುವುದನ್ನು ಕಲ್ಪನೆಯ ಎಟುಕಿಗೆ ನಿಲುಕಿಸಿಕೊಂಡು ಯೋಚಿಸಬೇಕಾದ ಪ್ರಶ್ನೆ ಕೂಡ ಎನ್ನುವುದು ಕಾದಂಬರಿಯ ಆಶಯವೂ ಗಟ್ಟಿತನವೂ ಆಗಿದೆ.

ಅನ್ಯಾ ಈ ಪ್ರಶ್ನೆಯನ್ನು ಉತ್ತರಿಸಿರುವ ಅತ್ಯಂತ ಸೂಕ್ಷ್ಮ ಮತ್ತು ಸಂಕ್ಲಿಷ್ಟವಾದ ಬಗೆಯನ್ನು ಕೂಡ ಬಗೆದು ನೋಡುವುದು ಅನಗತ್ಯ. ಯಾಕೆಂದರೆ ಅದು ಆಳದಲ್ಲಿ ವೇದ್ಯವಾದಾಗ ಹುಟ್ಟುವ ಅನುಭೂತಿ ವಿಶ್ಲೇಷಣೆಯಲ್ಲಿ ಕಳೆದು ಹೋಗುವ ಭಯವಿದೆ. ಹಾಗೆ ಇದು ತಾಂತ್ರಿಕವಾಗಿ ಮಾತ್ರವಲ್ಲ ಪ್ರಜ್ಞೆಯ ನೆಲೆಯಲ್ಲೂ ಒಂದು ಹೊಸ ಎತ್ತರವನ್ನು, ಸಂವೇದನೆಯನ್ನು, ಸ್ಪಂದನವನ್ನು ಸೃಜಿಸುವ ಕೃತಿಯಾಗಿದೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Monday, September 20, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಕೊನೆಯ ಕಂತು

ನಿಮ್ಮ ಕತೆಗಳಲ್ಲಿ ಪರಸ್ಪರ ಸಂವಾದಿಯಾಗಿ ಬರುವ ಪರಿಪ್ರೇಕ್ಷ್ಯಗಳ ಬಳಕೆ ಇರುತ್ತೆ. ಗುಳೆ ಮತ್ತು ತಾಯಿಯನ್ನ ಕಳೆದುಕೊಂಡ ನೋವು. ಕ್ರಾಂತಿ ಮತ್ತು ಆಧ್ಯಾತ್ಮ. ತಂದೆ-ಮಗ-ಪ್ರಿಯಕರ ಮೂರೂ ನೆಲೆಯಲ್ಲಿ ಕಂಡು ಬರುವ ಗಂಡು ಹೆಣ್ಣು ಸಂಬಂಧ ಈ ತರದ್ದು. ಇದರ ಹಿನ್ನೆಲೆ ಏನು?

ಅವು ಒಂದಕ್ಕೊಂದು ಒಂದಕ್ಕೊಂದು ಹೊಂದ್ಕೊಂಡಂಗೆ ಇವೆ ಅವು. ಬೇರೆ ಬೇರೆ ಅಲ್ಲ ಅವು. ತಂದೆಯಾಗೋದು, ಮಗ ಆಗೋದು ಅಥವಾ ಆಕೆಯ ಪ್ರಿಯಕರ ಆಗೋದು ಮೂರೂ ಚಾನ್ಸಸ್ ಇದೆ ಅಲ್ಲಿ. ಸೊ, ಯಾವುದು ಹೆಚ್ಚು domination ಇದೆ ಅದಾಗುತ್ತೆ. ಸೊ, ಈಗ ಗುಳೆಯಲ್ಲಿನು, ಆ ಕತೆ ಕಾನುಮನೆ ಬರೆಯೋದಿಕ್ಕೆ ನನ್ನ ಮನಸ್ಸಿನಲ್ಲಿದ್ದಿದ್ದೇನು ಅಂದ್ರೆ, ನಮ್ಮ ಕಡೆಯೆಲ್ಲ ಗುಳೆ ಎಲ್ಲರಿಗೂ ಗೊತ್ತಿರೋ ಸಮಸ್ಯೇನೆ ಅದು. ಈ early settlers ಇರ‍್ತಾರೆ ನೋಡಿ, ಅವರು ಅನುಭವಿಸುವ ಯಾತನೆಗಳಿದೆಯಲ್ಲ, ಅದು ಅವರಿಗ್ಮಾತ್ರ ಗೊತ್ತಿರುತ್ತೆ actually. ಅಲ್ಲೇ ಜೀವನ ಮಾಡೋದಿದ್ಯಲ್ಲ, ಅದು it is blend in itself. ಸಾಯೋದಷ್ಟೆ ಅಲ್ಲಿ, ಮತ್ತಿನ್ನೇನಿಲ್ಲ. ಸಾಯೋದು ಅಥವಾ ಬದುಕಿದ್ದಂಗೆ ಸಾಯೋದು. ಆ ತರದ್ದೊಂದು ಹೊಸತಾದ opportunity ಇಲ್ದೆ ಇರುವಂಥ ಜಗತ್ತದು. ಗುಳೆ ಅನ್ನೋದಿದ್ಯಲ್ಲ, ಅದು ಅವನಿಗೆ ಅವಕಾಶಗಳನ್ನ ತೆರೆಯೋವಂಥ ಜಗತ್ತದು. ಬಟ್ ಅದಕ್ಕಾಗಿ ಅವನು ಎಷ್ಟೊಂದು sacrifice ಮಾಡ್ಬೇಕಾಗುತ್ತೆ ಅಂದ್ರೆ, ಏನೇನೊ ಇದೆ, ಬಹಳ complex ವಿಷಯಗಳನ್ನ ಅವನು sacrifice ಮಾಡ್ಬೇಕಾಗುತ್ತೆ. food ಅನ್ನೋದು ಬಹಳ ಒಂದು ತೋರಿಕೆಯ - ಮೇಲ್ನೋಟಕ್ಕೆ ಕಾಣೋವಂಥದ್ದದು. ಬಟ್ ಅದರ ಬಗ್ಗೆನೆ ಮಾತಾಡ್ತಿರ‍್ತಾರೆ ಜನ. ಯಾಕಂದ್ರೆ ಉಳಿದಿದ್ದರ ಬಗ್ಗೆ ಮಾತಾಡಕ್ಕಾಗಲ್ಲ ಅವರಿಗೆ..... ಹೊರಗಡೆಗೆ ಬರಲ್ಲ, ಅಷ್ಟೊಂದು ಸಂಕೀರ್ಣವಾಗಿರುತ್ತದು. ಸೊ, ಇವ್ರಿದಾರಲ್ಲ particularly first generation, early settlers ಇದಾರಲ್ಲ, ಅವ್ರಿಗೆಷ್ಟೋ ಜನರಿಗೆ ಸೆಟ್ಲ್ ಆಗ್ಲಿಕ್ಕೇ ಆಗಲ್ಲ. ಅದ್ಕೇ ಅವರನ್ನ settlers ಅಂತಾನೆ ಕರೀತಾರವರನ್ನ. ಬರಿ ಇದೇ ಅಲ್ಲ, ವಿಶ್ವ ಮಟ್ಟದಲ್ಲಿ ಗುಳೆ ನೋಡಿದ್ರುನು ನೀವು, ಮೊದಲ ಜನರೇಶನ್ನವರು ಅನುಭವಿಸುವ ಯಾತನೆ ಇನ್ನು ಬೇರೆ ಯಾರೂ ಅನುಭವಿಸಿರೋಲ್ಲ. ಆಮೇಲ್ನವರಿಗೆ ಭಾಳ ಸುಖವಾಗಿರುತ್ತೆ ಅದರಿಂದ. ಯಾಕಂದ್ರೆ opportunity ಅದು, ಗುಳೆಯನ್ನೋದು. ಅಲ್ಲಿದ್ರೆ ಅವನಿಗೇನು ಇಲ್ಲ.

ಇವ್ರಿಗೇನು ಅಂದ್ರೆ, ಒಂದು - ಇದು ಆ ತರದ್ದೊಂದು ನೆಲದ ಸಂಕೀರ್ಣವಾದ ಸಂಬಂಧ ಇದೆ, ನೆಲದ ಜೊತೆ ಸಂಕೀರ್ಣ ಸಂಬಂಧ ಇರುತ್ತೆ. ಅದನ್ನ ಸುಮ್ನೆ ಬಿಟ್ಟು ಬರ‍್ಲಿಕ್ಕೆ ಆಗಲ್ಲ. ಅದನ್ನ ಯಾರು ಬಿಡಬಹುದು ಅಂದ್ರೆ, ಯಾರಿಗೊಂದು ಸಾಂಸ್ಕೃತಿಕ ನೆಲೆ ಇದೆಯಲ್ಲ, ಅಂದ್ರೆ ಶಿಕ್ಷಣ ಇರೋವ್ನು ಬಿಡ್ಬಹುದು. ಯಾಕಂದ್ರೆ ಶಿಕ್ಷಣನೇ ಅವನಿಗೆ ಆಸ್ತಿ. ಅಲ್ಲಿ convert ಮಾಡ್ಬಿಟ್ಟಿದೀವಿ ನಾವು. ನಮ್ಮ ಆಸ್ತಿಯನ್ನ ಶಿಕ್ಷಣಕ್ಕೆ convert ಮಾಡಿದೀವಿ ನಾವು. ಸೊ, ಅವನ ಶಿಕ್ಷಣ ಅವನು ಹಿಂಗೆ ಇಟ್ಟ ತಕ್ಷಣ ಅದು ಎಲ್ಲಿ ಬೇರು ಬಿಡುತ್ತೊ ಅಲ್ಲಿ ಅವನು ಜೀವನ ಮಾಡಬಹುದು, working place. ಬೆಂಗಳೂರೇ ಇರಬಹುದು, ಅಮೆರಿಕನೆ ಇರಬಹುದು. ಬಟ್ ಇವನಿಗೆ ಹಂಗಲ್ಲ ಅದು. very early settler ಇವ್ನು, ಈ ಕುಟುಂಬಕ್ಕೆ. ಅದಕ್ಕೆ ಅವ್ರಿಗೆ ಇಲ್ಲಿನು ಇರಕ್ಕಾಗಲ್ಲ ಅಲ್ಲಿನು ಇರಕ್ಕಾಗಲ್ಲ. ಅಲ್ಲಿ ಹೋದ್ರೆ ಏನೂ ಇಲ್ಲ ಅಂತ ಇಲ್ಲಿ ಬಂದ್ರೆ, ಇಲ್ಲಿ create ಮಾಡುವಂಥ ಒಂದು ಸಂಕೀರ್ಣತೆ ಇದೆಯಲ್ಲ, ಅದ್ರಿಂದಾಗಿ ಅವರು ಇನ್ನಷ್ಟು ತಲ್ಲಣಕ್ಕೆ ಒಳಗಾಗ್ತ ಇರ‍್ತಾರೆ. facilities ಪ್ರಶ್ನೆ ಇಲ್ಲ ಅವರಿಗೆ. ಸೊ, ಅದು ಅವರಿಗೆ ಅಲ್ಲೇ ಎಲ್ಲ ಸರಿಯಿದ್ದು ಬದುಕು ಸಾಧ್ಯ ಇದ್ದಿದ್ರೆ ಆಗ ಬರೋ ಪ್ರಶ್ನೆ. ಇಲ್ಲಿ ಅದಿಲ್ಲ.

ಅವ್ವಿಯ ಅಪ್ಪ ದುಡಿಮೆ ಹುಡುಕ್ಕೊಂಡು ಎಲ್ಲೋ ಹೋಗಿ ಅಕಸ್ಮಾತ್ ಸಾಯೋದಿದ್ಯಲ್ಲ, it is so common. ಕತೆಯಲ್ಲಿ ಬರುತ್ತೆ ಅಂತ ಅಲ್ಲ. ಎಷ್ಟು ಜನ ಸಾಯ್ತಾರಂದ್ರೆ ಪಾಪ, ಈ ಉತ್ತರ ಕರ್ನಾಟಕದಿಂದ ಹೋಗ್ತಾರಲ್ಲ, ಹೆಚ್ಚಿನವರು ಈ construction labour ಆಗಿಯೇ ಹೋಗ್ತಾರವ್ರು. ಅಲ್ಲಿ ನೂರು ಜನ ಹೋದ್ರೆ, ಒಂದು ಮೂರು ನಾಲ್ಕು ಜನ ಆದ್ರು ಸತ್ತಿರ‍್ತಾರೆ. ಆ ಇದ್ರಲ್ಲೆ ಬಿದ್ದು, ಇಲ್ಲ ಏನೊ ಒಂದಾಗಿ ಸತ್ತಿರ‍್ತಾರೆ. ಸೊ ಈ ತರ ಸುಮಾರು ನಡಿತಾನೇ ಇರುತ್ತೆ ಘಟನೆಗಳು. ಉತ್ತರ ಕರ್ನಾಟಕಕ್ಕೆ ನಾನು ಕೆಲಸ ಮಾಡೋಕ್ಕೆ ಹೋಗ್ತಾ ಇದ್ದಾಗ ನೋಡಿದ್ದೀನಿ. ಗುಲ್ಬರ್ಗಾ ಡಿಸ್ಟ್ರಿಕ್ಟನಲ್ಲಿ ಎಲ್ಲೆ ಹೋದ್ರೂನು ಇಂಥ ಕತೆ ಇದ್ದೇ ಇರುತ್ತೆ, ಯಾವ ಒಂದು ಹಳ್ಳಿಗೆ ಹೋದ್ರೂನು. ಆಮೇಲೆ ಕೆಲವು ಹಳ್ಳಿಗಳು full deserted ಆಗೇ ಇರುತ್ವೆ. ಯಾರಂದ್ರೆ ಫುಲ್ ಮುದುಕ್ರಿರ‍್ತಾರೆ. ಆಮೇಲೆ ಪೂರ್ತಿ ನಿಸ್ಸಹಾಯಕ ಮಕ್ಕಳಿರ‍್ತಾರೆ. ಮೂರ‍್ನಾಲ್ಕು ವರ್ಷದವರು. ಅವರನ್ನ ಜೊತೆಗೇ ಕರಕೊಂಡೋದ್ರೆ ಆಮೇಲೆ ಹೋದಲ್ಲಿ ಜೀವನ ಮಾಡೋಕ್ಕಾಗಲ್ಲ ಅವರಿಗೆ. ಅದಕ್ಕೇ ಬಿಟ್ಟು ಹೋಗ್ತಾರೆ. ಇಲ್ಲಿ ಏನಾಗಿದೆ ಅಂದ್ರೆ ಆ ತರ ಬಿಟ್ಟು ಹೋಗೋಕೆ ಯಾರೂ ಇಲ್ಲ ಇವನಿಗೆ. ಸೊ ಕರಕೊಂಬಂದಿದಾನೆ. ಬಂದು ಏನಾಯ್ತು....ಗೊತ್ತು ನಿಮಗೆ.

ಸೊ, ಒಂದು ಒಳ್ಳೆಯ ಸಮಾಜವನ್ನ ನಾವು ಕಟ್ಟೋಕೆ ಸಾಧ್ಯ ಇದ್ದಿದ್ದ್ರೆ, ಇಂಥ ಸರಿಪಡಿಸಲಿಕ್ಕಾಗದ ದುರಂತಗಳನ್ನ ತಡೀಬಹುದಾಗಿತ್ತು. ಈ ಗುಳೆ ನೋಡಿ, particularly rural ಗುಳೆ ಬಗ್ಗೆ ನಾನು ಮಾತಾಡ್ತ ಇದೀನಿ. opportunities ಗುಳೆ ಬಗ್ಗೆ ನಾನು ಮಾತಾಡ್ತ ಇಲ್ಲ. ನನ್ನಂಥವರು ಗುಳೆ ಹೋಗೋದು ನನಗೆ ಜಾಸ್ತಿ ದುಡ್ಡು ಬೇಕು ಅಂತ. ಸೊ, ಅವ್ರಿಗೇನಾದ್ರು ನಾವು ಒಂದು ಜೀವನವನ್ನ ರೂಪಿಸೊಕಾಗಿದ್ರೆ, ಈ ತರ ವೈಯಕ್ತಿಕ ನೆಲೆಯಲ್ಲಿ ನಡೆಯುವ ದುರಂತಗಳಿವೆಯಲ್ಲ, ಅವನ್ನ ತಪ್ಪಿಸಬಹುದಾಗಿತ್ತು ಅಂತ ನನ್ನ ಮನಸ್ಸಿನಲ್ಲಿತ್ತಾವಾಗ. ಆ ಕತೆ ಎಷ್ಟರಮಟ್ಟಿಗೆ success ಆಗಿದೆ ಅನ್ನೋದು ಬೇರೆ ವಿಷಯ.

ನಿಮ್ಮ ಎಲ್ಲಾ ಕತೆಗಳಲ್ಲೂ ಹರಿಯುವ ನೀರು, ನದಿ ಮತ್ತು ದಂಡೆ ಅಥವಾ ಬಂಡೆ, ಸ್ಥಾವರ - ಜಂಗಮದ ಒಂದು ಪ್ರತೀಕವಾಗಿ, ಪ್ರತಿಮೆಯಾಗಿ ನಿಲ್ಲುವ ಥರ ಚಿತ್ರಿಸಲ್ಪಟ್ಟಿದೆ. ‘ಬಾರೋ ಗೀಜಗ’ ಕತೆಯಲ್ಲಿ ಇದನ್ನ ನೀವು ಹಾಡು ಮತ್ತು ಬದುಕು, ಕಲೆ ಮತ್ತು ಕಲಾವಿದ ಎನ್ನುವ ನೆಲೆಗೆ ಕೂಡ ಕೊಂಡೊಯ್ದಿದ್ದೀರಿ. ಇದನ್ನ ಸ್ವಲ್ಪ ವಿವರಿಸಿ.

ಒಂದನ್ನ ಒಂದು ಕೂಡ್ಬೇಕು ಅನ್ನೋದೆ ಅಂತಿಮ ಉದ್ದೇಶವಾಗಿದೆ. ಹಾಡು ಬದುಕನ್ನ ಕೂಡ್ಬೇಕು ಅಥವಾ ಬದುಕು ಹಾಡನ್ನ ಕೂಡ್ಬೇಕು. ಅದೇ ತರ ನದಿ ದಂಡೆಯನ್ನ ಮುಟ್ಟೋದು ಮತ್ತೆ ವಾಪಸ್ ಬರ‍್ಬೇಕು, ಮತ್ತೆ ಮುಟ್ಟುತ್ತೆ, ಮತ್ತೆ ವಾಪಾಸ್ ಬರುತ್ತೆ. ಈಗ ನೀರಾದ್ರು ಅಷ್ಟೆ. ನೋಡೋವ್ರಿಗೆ ಹರೀತಾ ಇದೆ ಅದು actually. ಅದರಲ್ಲಿ ಒಂದು ನಿರಂತರತೆ ಇದೆ. ಕಾಲದ ನಿರಂತರ ಪ್ರವಾಹ, ಬಟ್ ಅಲ್ಲಿರೊ ಬಂಡೆ ಇದ್ಯಲ್ಲ, ಆ ಕ್ಷಣಕ್ಕೆ ಪಡೆದಿದ್ದು ಕೂಡ ಅಷ್ಟೇ ಸತ್ಯ ಅದು. ಅದಲ್ಲೆ ಇದ್ರುನು, ಅದರ, ಹರಿವ ನೀರಿನ ಸಾನ್ನಿಧ್ಯವನ್ನ ಪಡೀತಾ ಇದೆ ಅದು, ನಿರಂತರವಾಗಿ. ಅದಂದ್ರೆ, ಮುಂದಿನ ಕ್ಷಣಕ್ಕೆ ಬರೋ ನೀರು ಅದೇ ನೀರಾ ಅನ್ನೊ ಪ್ರಶ್ನೆಗೆ ಉತ್ತರ ಕೊಡ್ತಾ ಇಲ್ಲ ನಾನು. ಬಟ್ ಎರಡೂ ಸತತವಾಗಿದ್ರೆ ಮಾತ್ರ, ಅಂದ್ರೆ, ಒಂದಕ್ಕೆ ಅಂಚಿರುತ್ತೆ, ಇನ್ನೊಂದಕ್ಕೆ ಅಂಚಿರಲ್ಲ. ಬಟ್ ಅವೆರಡುನೂ ಮಧ್ಯೆ ಸೇರ‍್ತಾನೆ ಇರ‍್ಬೇಕಾಗುತ್ತೆ ಆವಾಗಾವಾಗ. ಅಂದಾಗ, ಈ ಸಂಘರ್ಷ ಇದೆಯಲ್ಲ, ಇದು, ಸೇರಲ್ಲ ಅನ್ನುವಂಥ ಸಂಘರ್ಷ ಅಲ್ಲ ಇದು. ಸೇರ‍್ತಾ ಇದ್ದಾಗ್ಲುನು conflict ಇರುತ್ತೆ. ಒಂದ್ಸಲ ಬಂದು ಹೊಡ್ದಾಗ ಜಾಸ್ತಿ ಇರುತ್ತೆ. ಇನ್ನೊಮ್ಮೆ ಕಡಿಮೆ ಇರುತ್ತೆ. ಒಂದ್ಸಲ ಬಂದ ಹಾಗೆ ಆಗ್ಬಿಟ್ಟು ಹಿಂದೆನೆ ಹೋಗುತ್ತೆ. ಈ ತರ ದಂಡೆ ಮತ್ತು ನೀರು ಅಥವಾ ಹಾಡು ಮತ್ತಿದನ್ನೆ, ಬದುಕನ್ನೆ ತಗೊಳ್ಳಿ ನೀವು. ಎರಡೂ ಒಂದೆನೆ actually. ನನ್ನಂಥ ಕಲಾವಿದರ ಜೀವನಕ್ಕೆ ಹೋಲಿಸ್ಕೊಂಡು ಹೇಳೋದಾದ್ರೆ, ಅವೆರಡರ ಸಂಘರ್ಷ ಹ್ಯಾಗಿರುತ್ತೆ ಅಂದ್ರೆ ಒಂದು ತಾದ್ಯಾತ್ಮವನ್ನು ಸಾಧಿಸೋದು. ಒಂದಿದ್ದುನು ಬೇರೆಯಾಗಿರುತ್ತೆ ಆವಾಗ actually. ಈ ಭಾವನೆ ಮತ್ತು ಭಾಷೆ ತರ. ಎರಡೂ ಬೇರೆ ಬೇರೆಯಲ್ಲ ಬಟ್ ಎರಡೂ ಬೇರೆನೆ. ಹಾಗದು. ಸೊ, ಅವೆರಡನ್ನೂ ಸಾಧಿಸೋದರ ಕಡೆಗೇನೆ ಸಾಹಿತ್ಯಾನು ಇರಬೇಕು ಮತ್ತು ಜೀವನಾನು ಇರಬೇಕು. ಹಂಗಂತ ನಾನು ಅಂದ್ಕೊಂಡಿದೇನೆ. ಸೊ, ಅದು ಬೇರೆ ಬೇರೆ ಬೇರೆ ಬೇರೆ ಕಡೆಗೆ ಬೇರೆ ಬೇರೆ ತರ ಬರ‍್ತಾ ಇರುತ್ತೆ. ಕಡಲತೆರೆಗೆ ದಂಡೆ ಅಂತ ಹೆಸರಿಟ್ಟಾಗ್ಲುನು ಇದೇ ಇತ್ತು ನನ್ನ ಮನಸ್ಸಲ್ಲಿ. ಬರೀತ ಬರೀತಾ ಎಲ್ಲೋ ಒಂದ್ಕಡೆಗೆ ಸ್ಪಷ್ಟವಾಗಿ ಬಂದಿರಬಹುದು ಅದು, ಅಕ್ಷರದ ರೂಪದಲ್ಲಿ. ಅದಕ್ಕೆ ಸಾಹಿತ್ಯದ ಬಗ್ಗೆ ಬೇರೆ ಬೇರೆ ಕಡೆ discussion ಬರೋದು ಈ ಕಾರಣಕ್ಕಾಗಿ. ಯಾಕಂದ್ರೆ ಎರಡು ಬೇರೆ ಬೇರೆ ಅಂತ ನಾನು ಯಾವತ್ತೂ ತಿಳಕೊಂಡಿಲ್ಲ. ಈಗ್ಲೂನು ತಿಳ್ಕೊಂಡಿಲ್ಲ. ಎರಡೂ ಒಂದೇ ಅದು. ಹಾಡಿನ ಮಾಧುರ್ಯ ಬೇರೆ ಅಲ್ಲ, ಬದುಕು ಬೇರೆಯಲ್ಲ. ಎರಡಕ್ಕೂ ಒಂದೇ ಇರುತ್ತೆ ಮಾಧುರ್ಯ. ಬಟ್ ಅದನ್ನ ಸಾಧಿಸೋ ಬಗೆಯಿದೆಯಲ್ಲ. ಒಬ್ಬ ಈಗ finest singer ಆಗ್ಬೇಕು, ಏರಿಳಿತಗಳಿರ‍್ಬೇಕು ಅಂತಾದ್ರೆ, ಅದಕ್ಕೊಂದು ಪರಿಶ್ರಮ ಇರುತ್ತಲ್ಲ. ಹಾಗೇನೆ ನಾವು ಈ ಜೀವನಾನ ಅರ್ಥ ಮಾಡ್ಕೊಳ್ಳೋಕೆ ಒಂದು ಪರಿಶ್ರಮ ಬೇಕಾಗುತ್ತೆ. ಪರಿಶ್ರಮ ಅಂದಾಗ ಸಂಘರ್ಷಗಳಿರುತ್ತೆ, ಬಿಕ್ಕಟ್ಟಿರುತ್ತೆ, ಬಿಟ್ಕೊಡೋದಿರುತ್ತೆ, ಪಡ್ಕೊಳ್ಳೋದಿರುತ್ತೆ. ಸೊ, ಇವೆಲ್ಲ ಸೇರಿ ಸೇರಿ ಸೇರಿನೆ ಏನಾದ್ರು ಒಂದು ಕೃತಿನೂ ಆಗೋಕೆ ಸಾಧ್ಯ ಇದೆ, ಜೀವನಾನು ಆಗೋಕೆ ಸಾಧ್ಯ ಇದೆ. ಇಲ್ದೆ ಇದ್ದಾಗ negative ಇರುತ್ತೆ ಬರಿ. ಅಥವಾ positive ಇರುತ್ತೆ. ಜೀವನ ಹಾಗಿರಲ್ಲ actually. ಅಲ್ಲಿ ಅವನು ಹಂಗೆ ಹೇಳ್ಬೇಕಾದ್ರುನು actually ಅವನ ಸಂಘರ್ಷ ಇರೋದು ಅದೇನೆ. ಅದನ್ನು ಹೇಳ್ತಾ ಇರೋ ಕಥಾಪಾತ್ರದ ಸಂಘರ್ಷ ಹಂಗೆ ಇದೆ. ಸೊ, ಅವನೇನನ್ನೊ ಅದ್ರಿಂದ ಪಡ್ಕೊಂಡ ಅಂದ್ರೆ ಗೊತ್ತಿಲ್ಲ ನನಗೆ. ಯಾಕಂದ್ರೆ ನಾನು ಇತ್ಯಾತ್ಮಕವಾಗಿ ಎಲ್ಲೂ conclude ಮಾಡಿಲ್ಲ ನನ್ನ ಕತೆಗಳನ್ನ. ಬಹಳ, ತೀವ್ರ ವಿಷಾದವಿದೆ actually ಅವನು ಹೋಗಬೇಕಾದ್ರೆ. ಅಂದ್ರೆ ಇಬ್ರಿಗೂ ತೀವ್ರ ವಿಷಾದವಿದೆ. ಬಟ್ ಹಂಗಂತ ಮತ್ತೆ ಇಬ್ರುನು ಭೇಟಿಯಾಗ್ತಾರ ಅಂತಾನೂ ಗೊತ್ತಿಲ್ಲ. ಆ ಕ್ಷಣಕ್ಕೆ ಎಷ್ಟೇ ವಿಷಾದ ಇದ್ರೂನು ಏನೋ ಒಂದು ಪಡ್ಕೊಂಡಿದಾರಲ್ಲ, ಸೊ ಅಲ್ಲಿಂದ ಮುಂದೋಗ್ತಾರೆ ಅವರು. ಅವನಿಗೆ ಎಷ್ಟೊಂದು ವಿಷಾದ ಇರುತ್ತೆ ಅಂದ್ರವನಿಗೆ ಅವನು ಅವಳಿಗೆ ವಿಷ್ ಮಾಡಬೇಕು ಅಂತ ಹೋಗ್ತಾನಲ್ಲ ಆವಾಗ almost ಕುಸಿಯೋತರ ಇರ‍್ತಾನವನು. ಆಮೇಲೇನೊ ನೆನಪಾಗಿ ಬಿಡುತ್ತೆ, ಇದ್ದಕ್ಕಿದ್ದಂತೆ ತಾಯಿ ಸತ್ತಿರೋದು ನೆನಪಾಗುತ್ತೆ. ಅಂದ್ರೆ, ಅವನು emotionally ಅಷ್ಟೊಂದು weak ಆಗ್ತಾ ಇದ್ದಾನೆ ಈ relations ಬಗ್ಗೆ ಅಂತ ಹೇಳೋದು ನನ್ನ ಉದ್ದೇಶ ಆಗಿತ್ತು. ಆದ್ರೆ ತಂತ್ರವಾಗಿ ಅಂಥಾದ್ದೊಂದನ್ನ ನಾನೇನೂ ಪ್ರಜ್ಞಾಪೂರ್ವಕವಾಗಿ ತಗೊಂಡ್ಬಂದಿಲ್ಲ ಅದನ್ನ. ಬಟ್ ಇದೆಲ್ಲ ಅವನಿಗೆ ನೆನಪುಗಳಲ್ಲಿ ಕಟ್ಟಿಕೊಟ್ಟಿದೆ. ಅಂದ್ರೆ ಇಲ್ಬಂದಾಗ, ಇವಳನ್ನ ನೋಡಿದಾಗ ಏನೇನೊ ಏನೇನೊ ಬಿಚ್ಕೊಡ್ತಾ ಇವೆ ಅವನಿಗೆ. ಭಯಾನಕವಾದದ್ದು ತುಂಬ ಇದೆ ಅದ್ರಲ್ಲಿ, ಅವನ ಜೀವನದಲ್ಲಿ. he has just over come it. ಸೊ, ಸ್ವಾರ್ಥ ಇಲ್ದೇ ಇರೋವಂಥ ಒಂದು ಸಂಬಂಧದಲ್ಲಿ ಕೊನೆಯಾಗಬಹುದಾ ಅನ್ನೋ ಹುಡುಕಾಟ ಇದೆ ಅಲ್ಲಿ. ಸೊ, ಇರಬಹುದೇನೊ ಎನ್ನೊ ವಿಷಾದದಿಂದ ಹೋಗ್ತಾನವನು ಅಷ್ಟೆ.
ಚಿತ್ರಕೃಪೆ :ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2008

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Wednesday, September 15, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಭಾಗ ಹದಿಮೂರು

ನಿಮ್ಮ ಊರ ಮಧ್ಯದ ಕಣ್ಣ ಕಾಡಿನೊಳಗೆ ಕತೆಯ ಹರಹು, ವ್ಯಾಪ್ತಿ ಒಂದು ಸಣ್ಣಕತೆಯ ವ್ಯಾಪ್ತಿಯನ್ನು ಮೀರಿದ್ದು ಅನಿಸುತ್ತೆ. ಅಲ್ಲಿ ನಿರೂಪಣೆಯನ್ನ ಸಂಕ್ಷಿಪ್ತಗೊಳಿಸಿದ ರೀತಿ ಇದೆಯಲ್ಲ ಅದು ಓದುಗನಲ್ಲಿ ಕಥಾನಕ ಹುಟ್ಟುಹಾಕುವ ಪ್ರಶ್ನೆಗಳನ್ನ ಬೆಳೆಯೋದಕ್ಕೆ ಬಿಡದ ಹಾಗೆ overlap ಆದ ಹಾಗಿವೆ. ಅದನ್ನ ಕಾದಂಬರಿಯಾಗಿಸುವ ಅಗತ್ಯ ಇತ್ತು ಅನಿಸಲಿಲ್ಲವ ನಿಮಗೆ?

ಇರಬಹುದೇನೊ. ಅದನ್ನು ಕಾದಂಬರಿ ಅಂತ ಯೋಚ್ನೆ ಮಾಡಿರ್ಲಿಲ್ಲ. ಆದ್ರೆ ಬರೀತಾ ಬರೀತಾ ಬಹಳ ದೊಡ್ಡದಾಗಿ ಬಿಡ್ತು ಅನ್ನೊ ಆತಂಕ ಇತ್ತು. ಆ ಕತೆ ಬರೆಯೋಕೆ ಕಾರಣ ಏನಂತಂದ್ರೆ ಒಂದು ಪತ್ರಿಕೆಯವರು ಕತೆ ಕೊಡಿ ಅಂತ ಕೇಳ್ತಾ ಇದ್ರು. ಈ ಪತ್ರಿಕೆಗಳ ಇತಿಮಿತಿ ಗೊತ್ತಲ್ಲ ನಿಮ್ಗೆ, ಅವುಗಳ ಒಂದು expectation ಇರುತ್ತಲ್ಲ. ಸೊ, ಭಾಳ ಜಾಸ್ತಿಯಾಗಿ ಬಿಡ್ತಿದು, ಬರೀತ ಬರೀತ. ನನ್ಗೆ ಅನಿಸಿತ್ತು, actually ಬಹಳ ಸಂಕೀರ್ಣವಾಗಿದೆ ಅದು. ಬಹಳ ದೊಡ್ಡದಾಗಿ ಬಿಡ್ತು ಅಂತನೂ ಇತ್ತು. ಆಮೇಲೆ ಎಲ್ಲೋ ಒಂದ್ಕಡೆ ಸ್ವಲ್ಪ ನಾಟಕೀಯತೆ ಜಾಸ್ತಿಯಾಯ್ತೇನೊ ಅಂತನೂ ಅನಿಸಿತ್ತು ಆವಾಗ. 1989 ಇರಬೇಕದು. ಸೊ, ನಾಟಕೀಯತೆ ತುಂಬ ಇದೆ ಅನಿಸ್ತು, ಅದನ್ನ ಇಷ್ಟಪಡಲ್ಲ ನಾನು. ಆಗ್ಲುನು ಇಷ್ಟಪಡ್ತಿರಲಿಲ್ಲ, ಈಗ್ಲುನು ಇಷ್ಟ ಪಡಲ್ಲ. ಯಾಕಂದ್ರೆ artificial ಆಗಿ ಏನೂ ಬರಬಾರ್ದು ನನ್ನ ಕೃತಿಯಲ್ಲಿ ಅಂತ ನನಗಿದೆ. actually ನನಗೆ ಮೀರಿದ್ದಾದ ಒಂದು experience ಆದ್ರುನು, ಆ ತರದ್ದೊಂದನ್ನು ನಾನು ಬರೀಬೇಕು ಅಂತ ಅಂದ್ಕೊಂಡಾಗ ಅದು ನನಗೆ ಅಂತರ್ಗತ ಆಗಿ ನನಗೇ ಕನ್ವಿನ್ಸ್ ಆಗೋವರೆಗೆ ನಾನದನ್ನ ಬರೆಯೋಕೆ ಹೋಗಲ್ಲ. ಎಲ್ಲಾ ಅನುಭವಗಳೂ ನನಗೇ ಆಗಿರೋದಲ್ಲ ಇದರಲ್ಲಿ. ಕೆಲವೆಲ್ಲ ನಾನು ನೋಡಿರೋವಂಥದ್ದು, ನನಗೇ ಆಗಿರೋವಂಥದ್ದಲ್ಲ. ಸೊ, ಇದು ಜಾಸ್ತಿ ಆಗ್ತಾ ಇದೆ ಅಂತಾನೂ ಇತ್ತು ಮತ್ತು ನಾಟಕೀಯತೆ ಜಾಸ್ತಿಯಾಯ್ತು ಅಂತ ಅನಿಸ್ತಾ ಇತ್ತು ನನಗೆ. ಹೆಂಗೋ ಒಂದು ಮುಗಿಸಿಕೊಡ್ಬೇಕು ಅಂತ ಮುಗಿಸಿ ಕೊಟ್ಟಾಗ್ಲುನು ಭಾಳ ದೊಡ್ಡದಾಯ್ತು ಅಂತ ಭಾಳ ರಗಳೆ ಮಾಡ್ತಾ ಇದ್ರು ಪತ್ರಿಕೆಯವ್ರುನು. ಕೊನೆಗೆ ಹಾಕಿದ್ರು, ಅದು ಬೇರೆ ಮಾತು.

 ಆಮೇಲೆ ಆವಾಗ ಮಾಡಬಹುದಾಗಿತ್ತೊ ಏನೊ ಕಾದಂಬರಿ, ಗೊತ್ತಿಲ್ಲ ನನಗೆ. ನನಗೆ ಅದು ಒಂದ್ಸಲ ಬರೆದ ಮೇಲೆ, ಸಾಮಾನ್ಯವಾಗಿ, ಅದೇನು ಪದವಿಟ್ಟೊಡೆ ಅಗ್ಗಳಿಕೆ ಅಂತ ಆತರ ಏನೂ ಇಲ್ಲ, ಬಟ್ ಅದನ್ನ ಮತ್ತೆ re-write ಮಾಡೋದಿಲ್ಲ. ಅದರ ಮೇಲೆ work ಮಾಡಕ್ಕೆ ಇಷ್ಟಪಡಲ್ಲ ಯಾಕಂದ್ರೆ ನನಗೆ irritate ಆಗ್ಬಿಡುತ್ತೆ. ಒಂದ್ಸಲ ಎಲ್ಲಾದು ಮುಗಿದಿದೆ ಅಂತನ್ಸೊವಾಗ. ಒಂದೊ ಎರಡೋ ಕತೆ ಬೇರೆ ಕಾರಣಕ್ಕೆ ಆ ತರ ಮಾಡಿರಬಹುದು. ಅಷ್ಟು ಬಿಟ್ರೆ, ಮತ್ತೆ ತಿದ್ದಿಲ್ಲ. ಇಲ್ದಿದ್ರೆ actually ಕಾದಂಬರಿ ಮಾಡಬಹುದಾಗಿತ್ತೋ ಏನೊ ಅದು. ಒತ್ತಡದಿಂದಾಗಿ.... ಅದೊಂದು limitation ಅದು.

ಸಿದ್ಧ ಮಾದರಿಯಲ್ಲಿನು ಬಹಳ ದೊಡ್ಡ ಕತೆ ಅದು. ಅವರು ನನಗೆ ಆಹ್ವಾನ ಮಾಡಿದ್ರು ಮತ್ತು ನನಗೆ ಪರಿಚಯ ಇದ್ರು ಅಂತ ಪಬ್ಲಿಷ್ ಮಾಡಿದ್ರದನ್ನ. ಇಲ್ದಿದ್ರೆ ಮಾಡಲ್ಲ ಅಂಥಾದ್ದು. ಯಾಕಂದ್ರೆ ಸಾಮಾನ್ಯವಾದ ಕತೆ ಅಂದ್ರೆ ಏನೋ ಒಂದು format ಇರುತ್ತಲ್ಲ. ಆಮೇಲಿದು unusual ಇದೆ. actually ಅವ್ರು ಓದಿದ್ಮೇಲೆ ಹೇಳಿದ್ರದನ್ನ. ‘ಏನಿಷ್ಟೊಂದು ಸೀರಿಯಸ್ಸಾಗಿ ಬರೀತೀರಲ್ಲ ನೀವು, ನಾನೇನೊ ಪೊಪುಲರ್ ಆಗಿ ಬರೀತೀರಂತ ಕೇಳಿದ್ದೆ.’ ಅಂತೆಲ್ಲ. ಅದು ನಾನು actually ಆರಂಭಿಕ ದಿನಗಳಲ್ಲಿ ಬರೆದಿದ್ದದು. ನಾಲ್ಕೈದು ಕತೆ ಪಬ್ಲಿಷ್ ಆಗಿತ್ತು ನಂದು ಅಷ್ಟೆ. ಅವರೇನು ಅಂದ್ರೆ ಮಾಮೂಲಿ ಜನಪ್ರಿಯ ಕತೆಗಳ ಹಂಗೆ ನಾನು ಬರೀಬಹುದು ಅಂದ್ಕೊಂಡು ಕೇಳಿದ್ರು. ಇದು ನೋಡಿದ್ರೆ ಅವ್ರಿಗೆ ಬಹಳ ಸೀರಿಯಸ್ಸಿದು, circulationಗೆ ಅಂಥಾ ಏನು ಹೆಲ್ಪ್ ಆಗಲ್ಲ ಅನ್ಸಿರಬೇಕು. ಲಿಮಿಟೇಶನ್ನದು ಅಷ್ಟೆ.

ಕೆಲವು ವಿಶಿಷ್ಟ ಪಾತ್ರಗಳ ಬಗ್ಗೆ ತುಂಬ ಕುತೂಹಲಕರ ಅನಿಸುತ್ತದೆ. ಮಾಳವ್ವನ ಪ್ರೇಮದ ಪರಿ, ದೊರೆಸಾನಿಯ ಪ್ರೇಮದ ವಿಶಿಷ್ಟತೆ ಮತ್ತು ಕಾಶೀಮ ಮತ್ತು ದಾವೂದನ ಮಧ್ಯೆ ಹಶಂಬಿ ನಿರ್ವಹಿಸುವ ಸಂತುಲನ. ವಿಲಕ್ಷಣವಾಗಿದ್ದೂ ಅಸಹಜ ಅನಿಸದ ಹಾಗೆ ಈ ಪಾತ್ರಗಳು ಮೂಡಿಬರುವುದರ ಹಿನ್ನೆಲೆ ಏನು?
ಇಂಥ ಕೆಲವು ನೈತಿಕ ಸಂಘರ್ಷಗಳನ್ನ ಎದುರಿಸಿದ charachters ನನಗೆ ಗೊತ್ತು. ಅದನ್ನ ಅನೈತಿಕತೆ ಅಂತ ಹೇಳೋಕೆ ನಾನು ಇಷ್ಟಪಡಲ್ಲ. ನೈತಿಕ ಸಂದಿಗ್ಧತೆ ಇರುತ್ತೆ. ಕೆಲವ್ರು ಬೇರೆ ಬೇರೆ ತರ ಅದನ್ನ pass ಮಾಡಿರ‍್ತಾರೆ. ಈ ಹಶಂಬಿ ಒಂಥರ pass ಮಾಡಿರಬಹುದು, ಇನ್ನೊಬ್ಳು ಇನ್ನೂಂಥರ ಅದನ್ನ pass ಮಾಡಿರಬಹುದು. ಈ ದೈಹಿಕ ಪರಿಶುದ್ಧತೆಯ ಪ್ರಶ್ನೆ ಬಂದಾಗ puritan concept ಬೇರೆ ಇರುತ್ತೆ. ದೊರೆಸಾನಿಗೆ ಅವಳ ಪ್ರೀತಿಯೇ ಪರಿಶುದ್ಧ ಅವಳಿಗೆ. ದೊರೆಸಾನಿಗೆ ಅವಳು ಏನೇ ಮಾಡಿದ್ರುನು ಗಿಚ್ಚಲುವಿನ ಪ್ರೀತಿಗೇ ಮಾಡಿರೋದು ಅವಳು, end of the day. ಅವನ್ನ ಅವಳು ಪ್ರೀತಿಸಿರೋದು ಯಾವ extreme ಅಂದ್ರೆ ಅದು, ನಾನು ನಿನಗೆ ಇಷ್ಟೊಂದು ಪರಿಶುದ್ಧವಾದ ಪ್ರೀತಿಯನ್ನ ಕೊಟ್ಟಿದೀನಿ, ಇಷ್ಟೆಲ್ಲಾ ನನ್ನ ಇತಿಮಿತಿಗಳ ಮಧ್ಯೆ, ಜಗತ್ತಿನ ಇತಿಮಿತಿಗಳ ಮಧ್ಯೆ, ಅದಕ್ಕೆ ಅಷ್ಟೊಂದು sacrifice ಮಾಡಿದೀನಿ ನಾನು; ನಿನಗೆ ಒಂದು ಸರಳವಾದ ನಿಷ್ಠೆಯನ್ನ ವಾಪಾಸ್ ತೋರ‍್ಸಕ್ಕಾಗ್ಲಿಲ್ಲ! - ಅನ್ನೊ ರೋಷದಲ್ಲಿ ಅವನ ಕೈ ಕಡಿಸ್ತಾಳವಳು. ಅದ್ರಲ್ಲೆ, ಅದೇ ಕತೆಯಲ್ಲೆ ಇದೆ ಅನ್ಸುತ್ತೆ ಅದು. ಎರಡನ್ನ ಹೇಳೋಕೆ ಇಷ್ಟಪಡ್ತಾಳವಳು. ಒಂದು, ನೀನು ನನ್ನ ಪರಾಧೀನನಾಗಿರ‍್ಬೇಕು ಮತ್ತು ನನ್ನ ಪ್ರೀತೀನ ಅರ್ಥ ಮಾಡ್ಕೋಬೇಕು, ನನ್ನ ಬಿಟ್ರೆ ನಿನಗೆ ಜೀವನ ಇಲ್ಲ ಅನ್ನೋದು ನಿನಗೆ ಗೊತ್ತಾಗ್ಬೇಕು. ಏಕಂದ್ರೆ ಅದೇ ತರಾನೆ ಬಂದಿರ‍್ತಾಳವಳು. ಎಲ್ಲರನ್ನೂ, ಅವಳ ಜಾತಿಯವರನ್ನ ಎದುರು ಹಾಕ್ಕೊಂಡು, ಇನ್ನೊಂದ್ಮಾಡಿ, ಇನ್ನೊಂದ್ಮಾಡಿ.

ಸೊ, ಈ ಹಶಂಬಿನೂ ಅಷ್ಟೆನೆ. actually, ನಾನು ಕತೆ ಬರೀಬೇಕಾದ್ರೆ, ಇದು ಸುಮ್ನೆ ನಾನು ನಿಮಗೆ ಹೇಳ್ತಾ ಇದೀನಿ. ಅವಳು ಕಳೆ ಕೀಳೋಕೆ ಅಂತ ಹೋಗ್ತಿರ‍್ತಾಳಲ್ಲ, ಅಲ್ಲೇನೋ ಒಂದು, ನಾನು ಬಹಳ ಸಾಂಕೇತಿಕವಾಗಿ ಬರ‍್ದಿದೀನಿ ಅದನ್ನ. ಅವಳು actually ಅನೈತಿಕಳಲ್ಲ. ಬಟ್ ಕೆಲವು ಸಲ ಈ ಸನ್ನಿವೇಶಗಳು ಹೇಗಿರ‍್ತಾವೆ ಅಂದ್ರೆ ಜೀವನದಲ್ಲಿ, ಅಂಥ ವರ್ಗದವರದ್ದು, sexual favoursನ್ನ ನೀವು ತೋರಿಸ್ದೇ ಇದ್ರೆ ಅವ್ರು survive ಆಗಕ್ಕಾಗಲ್ಲ. ಮತ್ತೆ ನಿಜ ಜೀವನದಲ್ಲಿ ಎದ್ದು ಬಂದ ತಕ್ಷಣ ಮರ‍್ತು ಬಿಡ್ತಾರೆ ಅದನ್ನ. ಅದು ಕೂಡ ಅವರ ಜೀವನ ಭಾಗವೇ ಆಗಿರುತ್ತೆ. ಆ ತರದವಳು ಅವಳು actually. ಕತೆಯಲ್ಲೆನೆ ಇದೆ ಅದು. ಆದ್ರೆ ಬಹಳ subtle ಆಗಿದೆ ಅದು, very subtle. ಅದು ಎಲ್ಲಿಯೂ ಗೊತ್ತಾಗಲ್ಲ. ಇವಳು ಎಲ್ಲೊ ಕಳೆ ಕೀಳೋಕೆ ಹೋದಾಗ ಆ ತರ ಆಗುತ್ತೆ. ಮಗಳಿಗೂ ಆತರ ಮಾಡೊಕ್ಕೆ ಬಂದಾಗ ಇವಳು ಕೆಲ್ಸ ಬಿಟ್ಬಿಟ್ಟು ಹತ್ತಿ ಹಿಂಜೋಕೆ ಸುರು ಮಾಡ್ತಾಳೆ ಆಮೇಲೆ. ಸೊ, ಇಲ್ಲಿ ಅವಳ ನಿಷ್ಠೆ ಇದೆಯಲ್ಲ, ಅಂದ್ರೆ ಅವಳ ಏಕನಿಷ್ಠೆ ಇರೋದು ಅವಳ ಗಂಡನಿಗೇನೆ. ಅಂದ್ರೆ ಅವಳು ಏನು ಪತಿವೃತೆ ಅಲ್ಲ ಅವಳು. ಬಟ್ ನಿಷ್ಠೆ ಇದೆ ಅವಳಿಗೆ. ನಿಷ್ಠೆ ಇರೋದ್ರಿಂದಾನೆ ಅವನಿಲ್ದೆ ಇರ್ಬೇಕಾದ್ರುನು ಯಾರ‍್ ಯಾರದ್ದೋ ಆಸರೆ ಹಿಡ್ಕೊಂಡು ಹೆಂಗೋ ಜೀವನ ಮಾಡ್ತಾ ಇರ‍್ತಾಳೆ. ಹಂಗೆ ಒಪ್ಕೊಂಡಿದಾರಷ್ಟೆ ಅವರು ಜೀವನವನ್ನ. ನನಗೆ ಅವನು ಇವತ್ತಿರ‍್ತಾನೆ, ನಾಳೆ ಇರಲ್ಲ, ಅದೆಲ್ಲ ಗೊತ್ತಿಲ್ಲ ನನಗೆ. ಬಟ್ ಬಂದಾಗ ನನ್ನ ಗಂಡ ಅವರು ಅಂತ ಜೀವನ ನಡೆಸ್ಕೊಂಡಿರ‍್ತಾರೆ. ಸೊ, ಆ ತರದ ಪಾತ್ರ ಅದು. ಕೊನೇಗೆ ಅವಳಿಗೆ ಯಾರೂ ಇಲ್ಲ ಅಂದಾಗ, ಅದು actually ನನ್ನ ಪ್ರಕಾರ, ಕತೆಗಾರನಾಗಿ, ಓದುಗರಿಗೆ ಹೆಂಗಾದ್ರು ಸ್ವೀಕರಿಸಲಿ ಅದನ್ನ, ಅದು, ದಾವುದನಿಗು ಇರುತ್ತೆ ಆ ತರ. actually ಇಬ್ಬರು ಪ್ರೇಮಿಗಳೇ ಅವರು. ಬಟ್ ಅದು ಎಷ್ಟರಮಟ್ಟಿಗೆ ಅವರಿಬ್ರ sacrifice ಇರುತ್ತೆ ಅಂದ್ರೆ, ಅವ್ರು ಕುಟುಂಬಕ್ಕೆ ಎಲ್ಲೂ ಧಕ್ಕೆ ಆಗದೆ ಇರೋ ತರ ಅಷ್ಟೊಂದು ನೈತಿಕತೆಯನ್ನ ಕಾಪಾಡಿಕೊಂಡು ಬಂದಿರ‍್ತಾರೆ. ಮತ್ತು ಹಂಗೆ ಇರ‍್ತಾರೆ ಅವರು actually ಜೀವನದಲ್ಲುನು. ಅದೆಷ್ಟೇ ಇದ್ರುನು ಹಂಗೆ ಇರ‍್ತಾರೆ. ಏನೂ ಇಲ್ಲ ಅಂದಾಗ, ಕೊನೆಗೆ ಅವನೇ ಹೇಳ್ತಾನೆ, ಯಾಕೆ ಸುಮ್ನೆ ಯೋಚನೆ ಮಾಡ್ತೀಯ, ನಾನಿದೀನಿ. ಅದರರ್ಥ ಅವ್ರು ದೈಹಿಕ ಸಂಪರ್ಕ ಬೆಳೆಸಿದ್ರು ಅಂತ ಅಲ್ಲ. ಸೊ, ಆ ತರದ್ದೇನೋ ಒಂದು fullfill ಆಗ್ದೇ ಇರೋವಂತ ಏನೋ ಒಂದು ಸಣ್ಣ ಶೂನ್ಯ ಇರುತ್ತಲ್ಲ ಒಳ್ಗೆ. ಅದನ್ನ ನಾನು fullfill ಮಾಡ್ತೀನಿ, ಯಾಕೆ ನೀನು ಸುಮ್ನೆ ಯೋಚ್ನೆ ಮಾಡ್ತೀಯ ಅನ್ನೊ ಆಶ್ವಾಸನೆಯನ್ನ ಕೊಡ್ತಾನೆ. ಈ ತರದ characters ಇದೆಯಲ್ಲ, particularly ಈ ತರದ ನೈತಿಕ ಸಂದಿಗ್ಧವನ್ನ ಎದುರಿಸ್ತಾ ಇರುವ characteres ನು ನನಗೆ ಗೊತ್ತಿದ್ದಾವೆ. ಮತ್ತು ಎಷ್ಟು ಚೆನ್ನಾಗಿ manage ಮಾಡ್ತಾರಂದ್ರೆ, ಈಗ್ಲುನು ನನಗೆ ಸ್ನೇಹಿತ್ರೆ ಅವ್ರು, ಅವ್ರೀಗ ಹಶಂಬಿನೆ ಆಗಿರ‍್ಬೇಕಾಗಿಲ್ಲ ಅವರು. ಸೊ, ಅಂಥವ್ರು ಒಂದು ಮೂರು ನಾಲ್ಕು ಜನ ನಂಗೆ ಗೊತ್ತಿದ್ದಾರೆ. ಎಷ್ಟು fine balance ಇದೆ ಅಂದ್ರೆ ಅವರಲ್ಲಿ, ಅವರ ನಿಷ್ಠೆ ಇದಕ್ಕೇನೆ. ಆದ್ರೆ ಏನೋ ಒಂದು ಜೀವನದ ಕಹಿ ಘಳಿಗೆ ಅಂತ ನಾನು ಹೇಳಲ್ಲ, ಒಂದು ಪ್ರಸಂಗದಲ್ಲಿ ಏನನ್ನೊ ಒಂದನ್ನ ಬಿಟ್ಕೊಡಬೇಕಾಗುತ್ತೆ, ಒಂದು ಪಡಕೊಳ್ಳೋಕೆ. ಸೊ, ಅದನ್ನ ಬಿಟ್ಕೊಟ್ಟಿದ್ದಾರೆ, ಪಡ್ಕೊಂಡಿದ್ದಾರೆ. ಈ ಕಡೆ ಬಂದ್ಬಿಟ್ಟಿದ್ದಾರವ್ರು. ಸೊ, ಯಾರಿಗೆ ಅದು ನಿಜವಾದ ನೈತಿಕ ಪ್ರಶ್ನೆ ಆಗಿರುತ್ತೆ ಅಂದ್ರೆ ನಾವು ಹಿಂಗಿರ‍್ಬೇಕು, ಹಂಗಿರ‍್ಬೇಕು ಅಂತೆಲ್ಲ ಹೇರ‍್ತಾರಲ್ಲ, ಅಂಥವ್ರಿಗೆ ಮಾತ್ರ ಅದು ಕಾಡುತ್ತೆ. ಇವ್ರಿಗೆ ಸಹಜ ಅದು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Saturday, September 11, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಭಾಗ ಹನ್ನೆರಡು

ಅನಂತಮೂರ್ತಿಯವರ ಅವಸ್ಥೆ ಕಾದಂಬರಿಯಲ್ಲಿ ಅಣ್ಣಾಜಿ ಮತ್ತು ಕೃಷ್ಣಪ್ಪನ ಮಧ್ಯೆ ಒಂದು ಪುಟ್ಟ ಚರ್ಚೆ ನಡೆಯುತ್ತೆ. ಕ್ಷುದ್ರ ದೈನಂದಿನ ಅಂತ ಆ ಬಗ್ಗೆ ಕೃಷ್ಣಪ್ಪನ ಒಂಥರಾ ತಿರಸ್ಕಾರದ ಮಾತು ಮತ್ತು ಅದರಲ್ಲೇ ನಿಜವಾದ ಜೀವನದ ಸೌಂದರ್ಯ ಇದೆ ಅನ್ನೋ ತರ ಅಣ್ಣಾಜಿಯ ವಾದ. ನಿಮ್ಮ ಕೆಲವು ಟಿಪ್ಪಣಿಗಳು, ಸಾಮಾನ್ಯ ಜನರ ದೈನಂದಿನಗಳೇ ರೂಪಕಗಳನ್ನು ಒದಗಿಸುತ್ತವೆ ಎನ್ನುವಂಥವು ಮತ್ತೆ ಕತೆಗಳಲ್ಲಿ ನೀವು ಚಿತ್ರಿಸುವ ಬದುಕು ಎರಡೂ ಅಣ್ಣಾಜಿಯ ನಿಲುವನ್ನೇ ಎತ್ತಿ ಹಿಡಿತವೆ. ಇದನ್ನ ಸ್ವಲ್ಪ ವಿವರಿಸಬಹುದ?

ಕತೆ ಬರೆಯೋದಕ್ಕೆ ಒಂದು ಸಿದ್ಧ ಮಾದರಿ ಇರುತ್ತೆ. ಬೇರೆ ಬೇರೆ ತರದ ಸಿದ್ಧ ಮಾದರಿಗಳು. ಅವು ನಮ್ಮ ಒಂದು ಸಾಹಿತ್ಯಿಕ ಆಶಯಗಳನ್ನ ಪ್ರತಿನಿಧಿಸ್ತಾ ಇಲ್ಲ. ಪ್ರಥಮವಾಗಿ ಸಾಹಿತಿಯಾಗಿ ನೀವು ಇದನ್ನು ನೋಡೋದಾದ್ರೆ. ಪ್ರತಿನಿಧಿಸ್ತಾ ಇಲ್ಲ ಅಂತ ನಾನು ಅಂದುಕೊಂಡಾಗ ಮತ್ತೆ ಬರಹಗಾರನಾಗಬೇಕು ಇಲ್ಲದಿದ್ದರೆ ಬೇರೆ ಪರ್ಯಾಯ ನನಗಿಲ್ಲ ಅಂದುಕೊಂಡಾಗ ಈ ಪ್ರಶ್ನೆ ಮುಖ್ಯವಾಗುತ್ತೆ. ಬರಹಗಾರನಾಗಬೇಕು ಇಲ್ಲದಿದ್ದರೆ ಬೇರೆ ನನಗೇನೂ ಗೊತ್ತಿಲ್ಲ ಅನ್ನೋದು ನನ್ನ decision ಇದೆ. ನಂದು ಅಥವ ಯಾವ್ದೇ ಒಬ್ಬ ಬರಹಗಾರನದ್ದು. ಆವಾಗ ಅವನು ಈ comfort zoneನ್ನು ಪ್ರತೀ ಕ್ಷಣಾನು break ಮಾಡ್ತಾನೆ ಇರಬೇಕಾಗುತ್ತೆ.

ಆಮೇಲೆ ನಾನು ಬೆಳೆದಿರೋದೆ ಬರೀ ಅಂತಲ್ಲೆ. ಸೊ, ಈಗ ಜನಾ ಮಾತನಾಡೋದಿರುತ್ತಲ್ಲ, ಎಷ್ಟೊಂದು ರೂಪಕಗಳಲ್ಲಿ ಆಕರ್ಷಕವಾಗಿ ಮಾತಾಡ್ತಿರ‍್ತಾರೆ ಈ ಜನಗಳು ಅಂದ್ರೆ, ಅವರವರ ಪ್ರಾದೇಶಿಕ ನುಡಿಕಟ್ಟಿನಲ್ಲಿ. ಉತ್ತರ ಕರ್ನಾಟಕದ ಕಡೆ ಹೋದ್ರೆ ಅವರ ಬಹುಪಾಲು ಮಾತುಕತೆ ಗಾದೆಗಳಲ್ಲಿರುತ್ತೆ. ಗಾದೆ ಅಥವಾ ಒಡಪುಗಳಲ್ಲಿರುತ್ತೆ. ಅಂದ್ರೆ, ಕ್ಷುಲ್ಲಕ, ನಾವೇನು ಕ್ಷುದ್ರ ಜಗತ್ತು ಅಂತ ಹೇಳ್ತೀವಲ್ಲ, ಅಂಥ ಜಗತ್ತಿನ ವ್ಯವಹಾರದಲ್ಲು ಕೂಡ ಭಾಷೆಯನ್ನು ಒಂದು ರೂಪಕವಾಗಿ ಅನ್ನೋ ತರ ಅವರು ಬಳಸ್ತಾ ಇರ‍್ತಾರೆ.

Actually ಒಂದು ಯಕ್ಷಗಾನದಲ್ಲಿ ಇರುವ ಜನ ಅಥವಾ ಕಲಾವಿದರು, ಮುಖ್ಯವಾಗಿ ನಿಮ್ಮ ತಾಳಮದ್ದಲೆಯಂಥ ಪ್ರಕಾರದಲ್ಲಿ ಹೇಗೆ reconstruct ಮಾಡ್ತಾರೆ ಪುರಾಣವನ್ನ, ಮಹಾಕಾವ್ಯವನ್ನ ಅಂದ್ರೆ, ಅವರ personal ದ್ವೇಷಗಳು, ಅಸೂಯೆಗಳು, ಅವೆಲ್ಲ ಏನೇ ಇದ್ರುನು ಅದು ವೈಯಕ್ತಿಕ ಮಟ್ಟದಲ್ಲಿ ಇದ್ದೇ ಇದೆ. at the same time, ಅದು ಈ ಕಲೆಗೆ response ಆಗಿ ವೈಯಕ್ತಿಕವನ್ನು ಮೀರಿದ ವಿಶ್ವಮಟ್ಟದಲ್ಲೂ ಇದೆ. ಅವರ ವೈಯಕ್ತಿಕ ದ್ವೇಷ, ಅಸೂಯೆಗಳನ್ನ ಅವನು ತೀರಿಸಿಕೊಳ್ಳೋ ವಿಧಾನ ಇದೆಯಲ್ಲ, ಈ ಪ್ರಸಂಗಕ್ಕೆ ಅನ್ವಯ ಮಾಡಿ ಹೇಳೋವಾಗ ಅವನು ವೈಯಕ್ತಿಕ ನೆಲೆಯನ್ನ ಮೀರಿ ಬಿಟ್ಟಿದ್ದಾನೆ ಅದನ್ನು ಹೇಳಿದಾಗ. ಅದನ್ನು ಹೇಳುವ ಒಂದು ಕ್ಷಣ ಇದೆಯಲ್ಲ, ಅದನ್ನ ವಿಶ್ವಮಟ್ಟಕ್ಕೇರಿಸ್ತಾ ಇದಾನವನು. ಆ ತರಾನೇ ಕೇಳ್ತಾನವನು. ಒಳಗಡೆ ಎಷ್ಟೇ ಈರ್ಷ್ಯೆ ಇದ್ರುನು, ಕೇಳಬೇಕಾದಾಗ ಆ ತರ ಕೇಳಲ್ಲ ಅವನು. ಅಷ್ಟೊಂದು ರೂಪಕವಾಗಿ ಅವನು ಕೇಳ್ತಾ ಇದ್ದಾನೆ.

ಸೊ, ಜನಸಾಮಾನ್ಯರು actually ಅದೇ ತರಾನೆ ಜೀವನ ಮಾಡ್ತಾ ಇರ‍್ತಾರೆ. ನಾವು ಅವರನ್ನ ಪ್ರತ್ಯೇಕವಾಗಿ ಗುರುತಿಸಬೇಕಾದ ಅಗತ್ಯವಿರಲ್ಲ. ಅದಕ್ಕೆ ನನ್ನ ಕತೆಗಳಲ್ಲಿ ಕಥಾನಕ ಮುಖ್ಯವಾಗಲ್ಲ. ಹೋದವಾರ ಒಂದು ಕಡೆ ಚರ್ಚೆಗೆ ಹೋದಾಗ ಒಬ್ಬರು ಕೇಳಿದ್ರು. ಕಥಾವಸ್ತುವಿರಲ್ಲವಲ್ಲ ನಿಮ್ಮ ಕತೆಗಳಲ್ಲಿ; ಮತ್ತು ಭಾಷೆ ಬೇರೆ ಕಥೆ ಬೇರೆ ಅನ್ನೋ ತರ ಇರುತ್ತೆ, ಅದು ಅಷ್ಟು ಚೆನ್ನಾಗಿಲ್ಲ ಅದು, ಅಷ್ಟು ಸರಿಯಲ್ಲ ಅದು ಅಂತ, ಅವ್ರುನು ಒಬ್ಬ ಕತೆಗಾರ್ರು ಹೇಳಿದ್ರು. ನಾ ಹೇಳ್ದೆ ಅವರಿಗೆ, ಘಟನೆಗಳು ಅಥವಾ ಸಂಗತಿಗಳು - ಅವೇ ಕತೆಗಳು ಅಂತ ನಾನು ತಿಳ್ಕೊಂಡಿಲ್ಲ. ಬೇರೆಯವ್ರು ತಿಳ್ಕೊಂಡಿರಬಹುದು. ಸೊ, ಅದರ ಮೂಲಕ ನನಗೆ ಏನು ಒಂದು ವ್ಯಕ್ತಿವಿಶಿಷ್ಟತೆ ಇದೆಯಲ್ಲ, again ಅದು ಬಂದಿರೋದು ಸಮಾಜದಿಂದ, ನಂದೇನೂ ಇಲ್ಲ. ನಂದು ಸ್ವಲ್ಪ ಪರಿಶ್ರಮ ಇದೆ, ಓದೋದು ಮತ್ತು ಅದರ ಬಗ್ಗೆ ಯೋಚನೆ ಮಾಡೋದು - ಇದು ನನ್ನ ಪರಿಶ್ರಮ. ಅವ್ರು ಕೊಟ್ಟಿರೋದಿದ್ಯಲ್ಲ, ಭಾಷೆ, ಹಾಗೆ ಭಾಷೇನೆ ಒಂದು ರೂಪಕ ಹಾಗೆ ನೋಡಿದ್ರೆ. ಭಾಷೆ ಮತ್ತು ಭಾವನೆಗೆ ಬಹಳ ತೆಳುವಾದ ಒಂದು ಗೆರೆಯಿದೆ, ಕೂದಲಷ್ಟು ತೆಳು. ಅವೆರಡೂ ಬೇರೆ ಬೇರೆನೆ ಅಲ್ಲ ಅನ್ನೊ ತರ ಇರುತ್ವೆ, ಬಟ್ ಬೇರೆ ಬೇರೆನೆ ಅವು. ಇನ್ನು ಎಷ್ಟೋ ಸಲ ಭಾಷೆಯ ಅಗತ್ಯಾನೆ ಇರೋಲ್ಲ. ಈಗ ಸಣ್ಣಮಳೆ ಬರ‍್ತಾ ಇದೆ ಅಂತ ಇಟ್ಕೊಳ್ಳಿ. ನಾವು ಇಲ್ಲಿ ಕಿಟಕಿ ಪಕ್ಕ ನಿಂತು ನೋಡ್ತಾ ಇದ್ರೆ..... ಅದ್ರಿಂದ ತೊಂದ್ರೆ ಅನುಭವಿಸ್ತಾ ಇರೋವನಿಗೆ ಅದು ಬೇರೆ ತರಾನೆ ಇರುತ್ತೆ ಅದು ಬಿಡಿ. ಸುಮ್ನೆ ನೋಡ್ತಾ ಇರೋವ್ನಿಗೆ ಅದು ಏನೇನೊ ನೆನಪಿಸ ಬಹುದು ಅವ್ನಿಗೆ, ನೆನಪುಗಳು ಎಲ್ಲೆಲ್ಲೊ ಲೀಡ್ ಮಾಡುತ್ತೆ. ಭಾವುಕವಾಗಿ, ಭಾವನೆ ಮೂಲಕ. ಸೊ, ಅದ್ರಿಂದ ಪಡೆಯೋ ಆನಂದ ಇದ್ಯಲ್ಲ ಅವ್ನಿಗೆ ಅದಕ್ಕೆ ಭಾಷೆಯ ಅಗತ್ಯ ಇಲ್ಲ. ಭಾಷೆ ಯಾವಾಗ ಅಗತ್ಯ ಬರುತ್ತಂದ್ರೆ, ಅದನ್ನ ಇನ್ನೊಬ್ನಿಗೆ communicate ಮಾಡ್ಬೇಕಂದಾಗ ಭಾಷೆಯ ಅಗತ್ಯ ಬರುತ್ತೆ. ಸೊ, ಇಲ್ಲಿ ಏನ್ಮಾಡ್ತಾರಂದ್ರೆ ಯಾವಾಗ್ಲುನು ರೂಪಕಗಳಲ್ಲಿ, ಸಾಮಾನ್ಯ ಜನರ ಬಗ್ಗೆ ನಾನು ಹೇಳೋದು ನಾನಿದನ್ನ.

ಸುಮ್ನೆ ಜಗಳ ಆಡ್ಬೇಕಾದ್ರುನು ತೀರಾ ಭಾವುಕವಾಗಿ ಕುಸಿದಾಗ ಜನ ಬಯ್ಯೋಕೆ ಸುರುಮಾಡ್ತಾರೆ. ಅಲ್ಲಿಯವರೆಗುನು ಜಗಳ ಯಾವ ತರದಲ್ಲಿರುತ್ತೆ ಅಂದ್ರೆ ಬಹಳ ರೂಪಕವಾಗಿರುತ್ತೆ. ನೀನು ಹಂಗ್ಮಾಡಿದಿ, ಹಿಂಗ್ಮಾಡಿದಿ... ಆತರದ್ದೇನೊ ಲಿಂಕ್ ಇರುತ್ತೆ. ಅದಕ್ಕೆ, ಆ ಲಿಂಕೇ ಏನಿದೆ, ಅದು accumulate ಮಾಡಿ ಜಗಳಕ್ಕೆ contribute ಮಾಡುತ್ತೆ. ಆ ಲಿಂಕೇ ನಿಜವಾದ ಜಗಳಕ್ಕೆ ಕಾರಣ ಅಲ್ಲ. ರೂಪಕಗಳೇ ಜಗಳಕ್ಕೆ ಕಾರಣವಾಗಿದೆ. ಸೊ, ಈ ಜನಜೀವನದ ಅತ್ಯಂತ ಕ್ಷುಲ್ಲಕ ಸಂಗತಿಗಳು, ವಿಚಾರಗಳು ಅಥವಾ ಜೀವನವೆ ಇದೆಯಲ್ಲ. ಅದು, ಸುಮ್ನೆ ನೀವದನ್ನ ಗಮನಿಸ್ತಾ ಹೋದಾಗ ಮಾತ್ರ ನಿಮಗನಿಸುತ್ತೆ. ನೀವದರ ಭಾಗವಾಗಿದ್ದಾಗ actually ನಿಮಗೆ ಹಾಗನಿಸಲ್ಲ. ಅದರ ಮಹತ್ವ ಯಾವಾಗ ಬರುತ್ತೆ ಅಂದ್ರೆ ಅದನ್ನ ನೀವು ರೆಕಾರ್ಡ್ ಮಾಡ್ಬೇಕಾದ್ರೆ ಅದನ್ನ ನೀವು ರೂಪಕವಾಗಿ ಗ್ರಹಿಸ್ತೀರಿ. ಅಂದ್ರೆ ಈಗ ‘ಹೊಳೆಬದಿಯ ಬೆಳಗು’ ಕತೆಯಲ್ಲಿನೆ ಇರಬಹುದು, ಅಥವಾ ‘ನೀಲಿ ಆಕಾಶದ ಹಣ್ಣು’ ಕತೆಯಲ್ಲಿನೆ ಇರಬಹುದು. even ಹಶಂಬಿ ಇದೆಯಲ್ಲ, ಅದನ್ನು ಆವಾಗ ನಾನು actually ಪ್ರಜ್ಞಾಪೂರ್ವಕವಾಗಿನೆ ಬರ‍್ದಿದೀನಿ. ಅದರ ದೈನಂದಿನ ಕ್ಷುಲ್ಲಕ ಎನ್ನಬಹುದಾದ ವಿವರಗಳಿವೆಯಲ್ಲ. ತಮ್ಮನಿಗೆ ಸ್ನಾನ ಮಾಡಿಸೋದು, ತಲೆ ಬಾಚೋದು ಇದೆಲ್ಲ ಇದ್ಯಲ್ಲ, ಇದು ಅವಳ ಜೀವನಕ್ಕೆ ಒಂದು ಅತ್ಯಂತ ಸಂಭ್ರಮವನ್ನ ಆ ಕ್ಷಣಕ್ಕೆ ತಂದ್ಕೊಡುತ್ತೆ. ಉಳಿದಿದ್ದೇನೂ ಇಲ್ಲ ಅವಳಿಗೆ, ಅದೇ ಜೀವನದ ಸಂತೋಷ. ಅವನನ್ನ ಹಾಗೆ ಚೇಸ್ ಮಾಡ್ಕೊಂಡು, ಅದು actually ಬಹಳ picturesque ಇದೆ ಅದು. ಅದನ್ನ ಹಂಗೇ imagine ಮಾಡಿ ನಾನದನ್ನ ಬರೆದಿದೀನಿ. ಅಂದ್ರೆ ಜನರ ಜೀವನದಲ್ಲೆನೆ ಎಲ್ಲಾ ಇರುತ್ತೆ actually. ಸೊ, ಅದನ್ನ ನೀವು ಪ್ರತ್ಯೇಕವಾಗಿ ನಿಮಗದರ ಅನುಭವ ಇಲ್ದೆ ನೀವದನ್ನ ರೂಢಿಸಿಕೊಳ್ಲಿಕ್ಕೆ ಹೋದಾಗ ಕಷ್ಟ ಆಗುತ್ತೆ. ಬಟ್ ನನಗೆ ಅದು ಯಾವತ್ತಿಗು ಕಷ್ಟ ಆಗಿಲ್ಲ ಯಾಕಂದ್ರೆ ಅವರ ಜೊತೆಗೇನೆ ನಾನು ಬೆಳೆದು ಬಂದಿದೀನಿ. ಆಮೇಲೆ ಬಹಳ ರೂಪಕಗಳಲ್ಲಿ ಮಾತಾಡ್ತಾರೆ ಜನ. ಮಾತಾಡ್ಬೇಕಾದ್ರೆ, ಸಾಮಾನ್ಯ ಜನ. ಈಗ ಬಸ್ಸುಗಳಲ್ಲಿ ಕುಳಿತಾಗ ಮಾತಾಡೋದು ನೋಡಿದ್ರೆ ನೀವು, ಸಾಮಾನ್ಯ ಜನ, ಕ್ಷುಲ್ಲಕ ವಿಷಯಗಳು ಏನೇ ಇರಬಹುದು. ಮತ್ತೆ ಏನೋ ಒಂದು almost enlightend buddhaನ ತರ ಮಾತಾಡ್ತ ಇರ‍್ತಾರೆ. ಸೊ, ಆವಾಗೆಲ್ಲ ನಮ್ಮಷ್ಟು ಶ್ರಮವೇ ಇಲ್ಲ ಅವರಿಗೆ, ಬೌದ್ಧಿಕವಾಗಿ. ಬಟ್ ಅವರ ಅನುಭವದಿಂದ ಅದೆಂಗೆ ಬಂದಿರ‍್ತದೆ ಅಂದ್ರೆ ಅವ್ನು ಎಲ್ಲನು ಒಂಥರ just passing comment ತರ ಮಾಡ್ತಾ ಇರ‍್ತಾನವ್ನು.

ಸೊ, ಅದನ್ನ ನೀವು ಸ್ವಲ್ಪ ಎಚ್ಚರದಿಂದ ನೋಡ್ಬಿಟ್ರೆ ಸಾಕು, ಅದು ಸಿಕ್ಬಿಡ್ತದೆ ನಿಮ್ಗೆ. ಅದನ್ನ ಹುಡ್ಕೊಂಡು ಹೋಗ್ಬೇಕಂತ ಏನಿಲ್ಲ. ಯಾವಾಗ ಹುಡಿಕ್ಕೊಂಡೋಗ್ಬೇಕಾಗುತ್ತಂದ್ರೆ, ಬರೀ ಅದನ್ನೆ ಒಂದು ಹಿಪೊಕ್ರಟಿಕ್ ನೆಲೆ ಇರುತ್ತೆ ನೋಡಿ, ಭಾಷೆಗೆ. ಬರೀ - ‘ಸೂಕ್ಷ್ಮತೆ’ - ಮಾತಾಡಿಬಿಟ್ರೆ ಆಗಲ್ಲ. ಅಲ್ಲಿ ಬರುತ್ತೆ. ಅವ್ನು ನಿನಗಿಂತ ಜಾಸ್ತಿ ಸೂಕ್ಷ್ಮಸಂವೇದಿಯಾಗಿಯೇ ಇದ್ದಾನೆ.

ಅಲ್ಲಿ ಬರುತ್ತೆ ನೋಡಿ, ಯಾವ್ದೊ ಒಂದು ಕತೆಯಲ್ಲಿ ಬರೋ ಆ ಬೋಲ್ಡಿಬಾಬಂಗು, ಆ ಇವ್ಳಿಗೂ ಮತ್ತು ಆ ಮುದುಕಿಗು ಸಂಬಂಧವೇ ಇಲ್ಲ. ಬಟ್ ಒಂದು ಹಂತದಲ್ಲಿ ಅವ್ನು ಚಾ ತಂದುಕೊಡೋದಿದ್ಯಲ್ಲ. ಅದು ವಾಸ್ತವಿಕ ನೆಲೆಯಲ್ಲಿ ಭಾಳ ಒಂದು ಡ್ರಾಬ್ ಅನ್ನೋ ತರ ನಡೀತಾ ಇರುತ್ತದು. ಸುಮ್ನೆ ನೀವದನ್ನ ನೋಡ್ದಾಗ, ಒಂದು ಟೀ ತಗೊಂಡು ಹೋಗಿ ಹಿಂಗ್ ಕೊಡೋದಿದ್ಯಲ್ಲ, ಅದು ನೋಡೋವ್ನಿಗೆ ಬರಿ ಡ್ರಾಬ್ ಅದು. ಏನಿಲ್ಲ ಅಲ್ಲಿ. ಬಟ್ ಅವನು ಕೋಡೋವ್ನಿಗೆ ಭಾವುಕ ನೆಲೆಯಲ್ಲೆ ಇದೆ ಅದು. ಸೊ, ಅದನ್ನ ನಾನು ಗ್ರಹಿಸ್ತೀನಿ. ಸೊ, ಅದನ್ನ ತಗೊಂಡು ಹೋಗಿ ಕೊಡ್ಬೇಕಾದ್ರೆ ಒಂದು emotional process ಇದೆ. ಕಣ್ಣಲ್ಲಿ ನೀರಿರುತ್ತೆ, ಅನ್ನೊವಂಥದ್ದೇನೊ, ಸನ್ನಿವೇಶಗಳು ಬೇರೆ ಏನೊ ಇರುತ್ತೆ. ಆದ್ರೆ ಅಲ್ಲಿ, ಆ ಕ್ಷಣ ಅವ್ನಿಗೆ ಗೊತ್ತಿರುತ್ತದು, ಅನುಭವಿಸ್ತಾ ಇದಾನವ್ನು. ಏನೋ ನಾವು ಕೆಲವು ಕತೆಗಳನ್ನೋದಿದಾಗ ನಮಗೆ ಹಂಗೆ ಆಗುತ್ತೆ. ತುಂಬ ಭಾವುಕವಾಗಿ distrub ಆಗಿ ಬಿಡ್ತೀವಿ. ತುಂಬ ಹೊತ್ತು ಬೇಕಾಗುತ್ತೆ ಸುಧಾರಿಸಿಕೊಳ್ಳೋಕೆ. ಸೊ, ಯಾಕಂದ್ರೆ ಅಷ್ಟೊಂದು powerful images ಮತ್ತು ರೂಪಕಗಳನ್ನವರು ಜೀವನದಿಂದನೆ ಪಡೆದಿದಾರೆ. ಮತ್ತು ಸೋಸಿರ‍್ತಾರೆ ಅದರಲ್ಲಿ.

ಹಂಗಂಗೆ ತಗೊಂಬಂದು ಬರೇ ಒಂದು ಸುಮ್ನೆ ಜನ ಮಾತಾಡೊ ತರನೆ ಹಾಗೇ ಬರೆದ್ರೆ ಅದರಲ್ಲಿ ವಿಶೇಷವಾದ್ದು ಏನಿರಲ್ಲ. ಏನಿರುತ್ತೆ, ಬರೆ ಅಲ್ಲಿರೋದನ್ನ ನೀನು ಬರೆದಿದೀಯ, reproduce ಮಾಡಿದೀಯ. ಬಟ್ ಕಲಾವಿದ ಆದವನಿಗೆ ಇನ್ನೂ ಒಂದು ಸಣ್ಣ ಜವಾಬ್ದಾರಿ ಇರುತ್ತೆ. ಗುರುತರ ಅಂತ ನಾನು ಹೇಳಲ್ಲ. ಆ ರೂಪಕವನ್ನು ಅವನು actually ಸೋಸಿರಬೇಕಾಗಿರುತ್ತೆ. ಅಲ್ಲೇನೊ ಒಂದಿದೆ. ಅದನ್ನು ಸೋಸಿಬಿಟ್ಟು ಅದನ್ನು ಕೊಟ್ಟಾಗ actually ಈ ತರ ಇತ್ತು. ಅದನ್ನ ಮಾಡ್ಬೇಕಾದಾಗ ಈ ತರ ಇರ‍್ಲಿಲ್ಲ. ಬಟ್ ಅವನ intention ಈ ತರ ಇದೆ. ಅವನು ಬೆಳಗ್ಗೆ ಬೆಳಗ್ಗೆನೆ ಆ ಒಂದು ಧಾವಂತದಲ್ಲಿ ಟೀ ತಗೊಂಡು ಅವರನ್ನೆಲ್ಲ ಎಲ್ಲಿದ್ದಾರೊ ಹುಡ್ಕೊಂಡು ಹೋಗಿ ಅದನ್ನ ಕೊಡ್ಬೇಕಾದ್ರೆ, ಕೊಡ್ಬೇಕಾದ ಕ್ರಿಯೆಯಲ್ಲಿ ನಿನಗಾತರ ಕಾಣ್ತಾ ಇಲ್ಲ. ಬಟ್ ನೀನದನ್ನ ಅದಿಷ್ಟನ್ನ ತಗೊಂಡ್ ಬಂದು ಅದನ್ನ ಈಕಡೆ ಇಟ್ಟು ನೋಡಿದ್ರೆ, ಗೊತ್ತಾಗುತ್ತೆ. ಎಷ್ಟು ಭಾವನೆ ಇತ್ತು ಅದರಲ್ಲಿ, ಎಷ್ಟು ಅವನು ಫೀಲ್ ಮಾಡಿದಾನೆ. ಎಷ್ಟು ಆತಂಕದಿಂದ ನೋಡಿದಾನೆ ಸನ್ನಿವೇಶವನ್ನ ಅನ್ನೋದು ನಮಗೆ ಗೊತ್ತಾಗುತ್ತೆ. ಸೊ, ಅದು ಬಹಳ ಮುಖ್ಯ ಅಂತ ನನಗನಿಸುತ್ತೆ. ಯಾಕಂದ್ರೆ, ಎಲ್ಲೋ ಒಂದ್ಕಡೆ ನಾನು ಬರ‍್ದಿದೀನಿ, ಈ ನಮ್ಮನೇಲಿ ನಮ್ಮಕ್ಕಂದಿರು ರಂಗೋಲಿ ಹಾಕೋರು. ಹಾಂ, ಈ ರಂಗೋಲಿ ಕಲ್ಲುಗಳನ್ನ ಮಾರ‍್ತಾರೆ ನಮ್ಕಡೆ. ಕಲ್ಲುಗಳು ಗುಡ್ಡಗಳಲ್ಲಿರುತ್ವೆ. ರಂಗೋಲಿ ಗುಡ್ಡಗಳೇ ಇರುತ್ವೆ ನಮ್ಕಡೆ. ಅಲ್ಲಿಂದ ಇಷ್ಟಿಷ್ಟು ಕಲ್ಲುಗಳನ್ನ ತಂದು ಮಾರ‍್ತಾರೆ. ನಮ್ಮಕ್ಕಂದಿರು ಏನ್ಮಾಡೋರಂದ್ರೆ ಅವನ್ನ ಒಂದು ಒರಳಲ್ಲಿ ಹಾಕಿ ಕುಟ್ಟೀಕುಟ್ಟೀಕುಟ್ಟಿ ಈ ಬಟ್ಟೆಯಲ್ಲಿ ಸೋಸೋವ್ರದನ್ನ. ಕೊನೇಗೆ ರಂಗೋಲಿಯಾಗುತ್ತೆ ಅದು. ಬಟ್ ಸುಮ್ನೆ ನೀವು raw ಆಗಿ ಅದನ್ನ ನೀವು ನೋಡಿದ್ರೆ ಏನಿಲ್ಲ ಅಲ್ಲಿ. ಕಲ್ಲಿಗೇನು ಬೆಲೆಯಿರಲ್ಲ. ರಂಗೋಲಿ ನೋಡಿದ್ರೆ ನೀವು, ರಂಗೋಲಿಗೆ ರೂಪಕಗಳ ಶಕ್ತಿಯಿದೆ. ಏನೆಲ್ಲ ಬಿಡಿಸ್ಬೋದು ನೀವು. ನಿಮ್ಮ imagination ನಲ್ಲಿ ಏನಿದೆ ಅಷ್ಟನ್ನು ಅದು ನಿಮ್ಮ ಎದ್ರುಗಡೆ ಪ್ರಸ್ತುತಪಡಿಸುತ್ತೆ. ಸೊ, ನಿಮ್ಮ ಮನಸ್ಸಿನಲ್ಲೇನಿದೆ, ಆ imaginationಅನ್ನು, ಅಷ್ಟುನು. ಅದನ್ನ ಬಿಡಿಸೋಕೆ ನಿಮಗೆ ರಂಗೋಲಿ ಬೇಕಾಗುತ್ತೆ. ಸೊ, ಭಾಷೆನೂ ಅಷ್ಟೆನೆ. actually ಭಾಷೇನೆ ಒಂದು ರೂಪಕ ಅಂತ ಯಾವಾಗ್ಲು ಅನಿಸ್ತಾ ಇರುತ್ತೆ ನನಗೆ.

ಸೊ ಇಷ್ಟೊಂದು ವಿವರಗಳು ಯಾಕೆ ಬರುತ್ತೆ, ಬೇಕಾಗಿತ್ತ ಇದು, ಇಪ್ಪತ್ತು ಪೇಜಿನಲ್ಲಿ ಬಂದಿದೆ ಅದು. ಹೆಚ್ಚಾಯ್ತಲ್ಲ ಅದು? ಬಟ್ ನನಗೆ ಅದೇ ಮುಖ್ಯ. ನಾನು ಈ ಒಂದೇ ಲೈನಿನಲ್ಲಿ ಹೇಳ್ಬೇಕಾದ್ರೆ ಆ ಕತೆ, ಕತೆಯಲ್ಲಿ ಈ ಹಶಂಬಿ ಮತ್ತು ಅವರೆಲ್ಲ ಉರೂಸಿಗೆ ಹೋಗಿ ವಾಪಾಸ್ ಬಂದ್ರು, ಆಮೇಲೆ ಅವರ ಜೀವನದಲ್ಲಿ ಒಂದಷ್ಟು ದುರಂತಗಳು ನಡೆದ್ವು. ಅಷ್ಟೆ ಕತೆ ಅದು. ಬಟ್ ಅಷ್ಟು - ನಲವತ್ತು ಪೇಜ್ ಯಾಕೆ ಬರೀಬೇಕಾಗಿತ್ತು ನಾನು? ಆದ್ರೆ ಅಷ್ಟೇ ಹೇಳೋದು ನನಗೆ ಬೇಕಾಗಿಲ್ಲ. ಸಂಗತಿಯನ್ನ ನಾನು ಹೇಳೋಕೆ ಇಷ್ಟ ಪಡಲ್ಲ. ಅದರ ಮಧ್ಯೆ ಅವರ ಜೀವನದಲ್ಲಿ ಏನೇನೇನೋ ಇದೆಯಲ್ಲ, ಅದೆಲ್ಲವನ್ನು ಅರ್ಥ ಮಾಡಿಕೊಳ್ಳೊಕೆ ಪ್ರಯತ್ನ ಪಟ್ಟಿದೀನಿ. ಈ ಕ್ಲೀಷೆಯ ಮಾದರಿಗಳು ಬೇಡ ಅಂತ ಈ ತರದ ಒಂದು ಮಾದರಿಯನ್ನ ಒಪ್ಕೊಂಡಿದೀನಿ.ಅವರ ದೈನಂದಿನದಲ್ಲೇ ಇರುತ್ತೆ ಸಂಭ್ರಮ ಆ ತರ. ಇನ್ನು ಈ ‘ನಕ್ಷತ್ರಯಾತ್ರಿಕರು’ ಇದೆಯಲ್ಲ. ನನಗೆ ಆ ವಯಸ್ಸಿನಲ್ಲಿ ಸಿನಿಮಾ ನಾಟಕ ನೋಡೋ ಸಿಕ್ಕಾಪಟ್ಟೆ ಹುಚ್ಚು. ಸಿನಿಮಾಗಳನ್ನ, ದಿನಕ್ಕೆರಡು ಸಿನಿಮಾ ನೋಡ್ತಾ ಇದ್ದಿದ್ದು ಇತ್ತು. ಮತ್ತು ಅಲ್ಲಿ, ನಾಟಕ ಕಂಪೆನಿಗಳು ತುಂಬಾ ಇವೆ. ಯಕ್ಷಗಾನದಲ್ಲು ಅಷ್ಟೆನೆ. ಗಂಟೆಗಟ್ಲೆ ಮೇಕಪ್ ಮಾಡ್ಕೊಳ್ತಾರೆ ನೋಡಿ. ಪ್ರತಿದಿವ್ಸ ಒಂಭತ್ತಕ್ಕೆ ಷೋ ಇದ್ರೆ, ಸಂಜೆ ಆರು ಏಳು ಗಂಟೆಗೆಲ್ಲ ಈ ಬಣ್ಣ ಹಚ್ಚಿಕೊಳ್ಳೋ ಕೆಲಸ ಸುರುಮಾಡ್ತಾರೆ. ನಾವು ದಿನಾ ಹೋಗಿ ಕೂತ್ಕೊಳ್ಳೋದಲ್ಲಿ ಸುಮ್ನೆ. ಅಂದ್ರೆ ನಾನೊಂದು imagination ಮಾಡ್ಕೊಂಡ್ರಿತಿದ್ನಲ್ಲ, ಅದ್ಕೇನಾದ್ರು ಸಿಗುತ್ತಾ ಅಂತ ನೋಡ್ತಾ ಇರೋದು. ಆಮೇಲೆ ಸ್ಟೇಜ್ ಮೇಲೆ ಬಂದ್ರೆ ಬೇರೆನೆ. ಅವೆಲ್ಲವು ಎಲ್ಲೋ ಭಾಳಾ ಕಾಡ್ತಾ ಇರೋ ರೂಪಕಗಳು ಅವು ನನಗೆ. ಅವ್ರ ಆ ಸಿದ್ಧತೆ ಇದೆಯಲ್ಲ, ಅದ್ರಲ್ಲಿ ಎಷ್ಟು ತಲ್ಲೀನತೆ ಮತ್ತು ಸಂಭ್ರಮ ಇರುತ್ತಂದ್ರೆ ಅವ್ರಿಗೆ.... stage performance ಇದೆಯಲ್ಲ, ಅದು ಆ ಕ್ಷಣಕ್ಕೆ ನಿರ್ಧಾರವಾಗೋದು, ಅವನ ಪ್ರತಿಭೆ. ಬಟ್ ಇದು ಇದೆಯಲ್ಲ, ಇದ್ರಲ್ಲೆ ಅವನ, ಯಕ್ಷಗಾನ ಕಲಾವಿದ್ರು ಕೆಲವ್ರು ಮೇಕಪ್ ಮಾಡ್ಕೊಳ್ಳೋದು ನಾನು ನೋಡಿದೀನಿ. ಏನೋ ಫಿಲ್ತಿ ಜೋಕ್ಸ್ ಹೊಡೀತಾ ಇರ‍್ತಾರೆ, ಬಯ್ಕೋತಾರೆ, ಇನ್ನೊಂದೇನೊ ಮಾಡ್ತಾ ಇರ‍್ತಾರೆ. ಅದು ಕ್ಷುಲ್ಲಕ ಜಗತ್ತೇ ಹೊರಗಡೆ ಕಾಣೋವಾಗ. ಬಟ್ ನನಗೆ ಆತರ ಕಾಣಲ್ಲ. ಯಾಕಂದ್ರೆ ಅವನ ಜೀವನ ಅಲ್ಲೆ ಇದೆ. ಹಾಗೆ ನನ್ನ ಕತೆಗಳಲ್ಲಿ ವಿವರಗಳು ಸ್ವಲ್ಪ ಜಾಸ್ತಿಯೆನಿಸಿ ಕಿರಿಕಿರಿಯಾದ್ರೆ, ಸ್ವಲ್ಪ patience ನಿಂದ ಓದ್ರಿ ಅಂತ ನಾನು ಹೇಳ್ಬೋದಷ್ಟೆ!ಚಿತ್ರಕೃಪೆ :ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2006 ಮತ್ತು 2008 ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, September 5, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಭಾಗ ಹನ್ನೊಂದು

ಅನುವಾದಗಳ ಬಗ್ಗೆ ನಿಮ್ಮ ಆಸಕ್ತಿ, ಪ್ರೇರಣೆ ಮತ್ತು ಅದರ ಅನುಭವ ಏನು?

ಅನುವಾದದ್ದೇ ಬೇರೆ ಒಂದು ಪ್ರಪಂಚ ಮತ್ತು ಬೇರೆಯೇ ಒಂದು ಶಿಸ್ತು ಅದು. ಅನುವಾದ, ನನ್ನ ಪ್ರಕಾರ ,ಯಾವ್ದೇ ಒಬ್ಬ ಲೇಖಕರಿಗೆ ಅದು ಒಂದು ಸಾಂಸ್ಕೃತಿಕ ಜವಾಬ್ದಾರಿ ಅಂತ ನಾನು ಅಂದ್ಕೊಂಡಿದೀನಿ. ಯಾವ್ದೇ ಒಂದು ಮಹತ್ವದ ಕೃತಿಯನ್ನ ಅನುವಾದ ಮಾಡೋದು, ನನ್ನ ಭಾಷೆಗೆ ತರೋದು ಒಂದು ಸಾಂಸ್ಕೃತಿಕವಾದ ಜವಾಬ್ದಾರಿ. ನಾನಾತರ ಅನುವಾದ ಮಾಡಿದೀನಿ ಅಂತ ಹೇಳ್ತಾ ಇಲ್ಲ, ಒಟ್ಟಾರೆಯಾಗಿ ಅನುವಾದದ ಬಗ್ಗೆ ಹೇಳ್ತಾ ಇದ್ದೇನೆ. ಒಬ್ಬ ತಿಳಿದ ಲೇಖಕನಿಗೆ ಅದು ಒಂದು ಸಾಂಸ್ಕೃತಿಕ ಜವಾಬ್ದಾರಿಯಿರುತ್ತೆ. ಸೊ ಅದನ್ನು ಅವನು ಇನ್ನೊಂದು ಕಡೆಗೆ ಹೇಳಬೇಕಾದ ಅಗತ್ಯ ಇರುತ್ತೆ ಅವನಿಗೆ. ಸೊ, ಅದ್ರಿಂದ ಎಲ್ಲಾ ಮುಖ್ಯ ಲೇಖಕರನ್ನುನು ಅನುವಾದ ಮಾಡ್ಬೇಕು, ಮತ್ತು ಮಾಡಿದಾರೆ ಹಿಂದಿನಿಂದ. ನಾವು ಗಮನಿಸಿದ್ರೆ, ಯಾರು ಸೀರಿಯಸ್ writers ಇರ‍್ತಾರೆ.

ಆದ್ರೆ ಯಾರೂ ಒಂದು ಅನುವಾದ ಮಾಡ್ಬೇಕಂದ್ರೆ ಸಾಮಾನ್ಯವಾಗಿ ಜನ ಇದ್ರಲ್ಲಿ time waste ಮಾಡೋದ್ಕಿಂತ ನೀನೇ ಬರಿಯಯ್ಯಾ ಅಂತಾನೆ ಹೇಳ್ತಾರೆ. ಯಾರು entertain ಮಾಡಲ್ಲ. ಬಟ್ ಬರಹವನ್ನ ಗಂಭೀರವಾಗಿ ಸ್ವೀಕರಿಸಿದವರು ಯಾವಾಗ್ಲುನು ಅನುವಾದವನ್ನ ತಮ್ಮ ಒಂದು ಜವಾಬ್ದಾರಿ ಅಂತ ತಿಳ್ಕೊಂಡಿರ‍್ತಾರೆ. ಯಾಕಂದ್ರೆ ನನಗೆ ಗೊತ್ತಿಲ್ದೆ ಇರುವಂತ ಜಗತ್ತಿನ ಅನೇಕ ಸಂಗತಿಗಳು ನಮ್ಮ ಸುತ್ತ್‌ಮುತ್ಲು ಇರ‍್ತವೆ. ಅದನ್ನ ನಾವು ಓದಿದಾಗ ಇನ್ನೊಬ್ರಿಗೆ ಹೇಳೋದು ಬಹಳ ಮುಖ್ಯವಾಗಿರುತ್ತೆ. ಸೊ, ಆ ದೃಷ್ಟಿಯಲ್ಲಿ ಅನುವಾದಗಳು ಬಹಳ ಮಹತ್ವದ್ದು ಅಂತ ನಾನು ಅಂದ್ಕೊಂಡಿದೀನಿ. actually ನಾನು ಏನೇನೊ ಅನುವಾದ ಮಾಡ್ಬೇಕು ಅಂತ ಅಂದ್ಕೊಂಡಿರ‍್ತೀನಿ ಎಷ್ಟೋ ಸಲ. ನನಗೆ ಕೆಲವು ಸಲ ಸಮಯದ ಅಭಾವ ಇರುತ್ತೆ, ನನ್ನ ವೈಯಕ್ತಿಕ ಒತ್ತಡಗಳು ಇತ್ಯಾದಿ ಎಲ್ಲ ಸೇರಿ ಮಾಡಕ್ಕಾಗಿಲ್ಲ ನನಗೆ. ಬಟ್ ಒಬ್ಬನು ಮಾಡ್ಬೇಕಾದಂಥ, ಖಂಡಿತಾ ಮಾಡ್ಬೇಕಾದಂಥ ಕೆಲಸ ಅದು.

 ಕೇಂದ್ರ ಸಂಸ್ಕೃತಿ ಇಲಾಖೆಯ ಫೆಲೊಶಿಪ್ ಬಗ್ಗೆ, ಆ ಕುರಿತ ಯೋಚನೆಗಳು, ಯೋಜನೆಗಳು ಏನಿವೆ?

ಎರಡು ವರ್ಷ ಫ್ರೆಂಚ್ ಸಾಹಿತ್ಯದ ಅಧ್ಯಯನ, ನಾನೇ ಆಯ್ಕೆ ಮಾಡ್ಕೊಂಡಿದ್ದು ವಿಷಯ. ಅದಕ್ಕೆ ಕಾರಣ ಏನಂದ್ರೆ ಎಷ್ಟೋ ಫ್ರೆಂಚ್ writers ನನ್ಮೇಲೆ ತುಂಬ influence ಮಾಡಿದಾರೆ. ಹಳಬ್ರು ಹೊಸಬ್ರು ಎಲ್ಲ ಸೇರಿ. ಯಾಕಂದ್ರೆ ಇಡೀ ಯೂರೋಪ್ ಅಥವಾ ಜಾಗತಿಕವಾಗಿ ನಾನು ಹೇಳ್ತಾ ಇದೇನೆ, ಯೂರೋಪ್ ಅಂತ ಹೇಳಲ್ಲ, ಒಂದು ಹೊಸ ವಿಚಾರಗಳ ಪ್ರಸ್ತಾವನೆಯ ಸಂದರ್ಭ ಇದ್ದರೆ, ಅದು ಸಾಮಾನ್ಯವಾಗಿ ಫ್ರೆಂಚ್‌ನಿಂದ ಬಂದಿದೆ. ಸುಮ್ನೆ ಅದರ history ಗಮನಿಸಿದ್ರೆ, linguistics ಬಗ್ಗೆ ಇರಬಹುದು, literary theories ಬಗ್ಗೆ ಇರಬಹುದು, ಈ ತರದ್ದೆಲ್ಲ ಅವ್ರಿಂದ ನಮಗೆ ಬಂದಿದೆ. ಹ್ಯಾಗೆ ಬಂದಿದೆಯೊ ನನಗೆ ಗೊತ್ತಿಲ್ಲ. ತುಂಬ ಯೋಚನೆ ಮಾಡಿದಾರೆ ಅವರು. ಯಾವುದೇ ಒಂದು structurlism ಬಗ್ಗೆ actually ಎಷ್ಟು ಚಿಂತನೆ ನಡೆಸಿದಾರೆ ಅಂದ್ರೆ ಆಶ್ಚರ್ಯ ಆಗುತ್ತೆ. ನಿರಚನವಾದ ಅಂತ ನಾವು ಮಾತಾಡ್ತ ಇದ್ವಿ. Deconstruction. structurlism, deconstruction ಎರಡೂ ಅವರ ಥಿಯರಿನೆ. ಅಂದ್ರೆ ಒಂದು ಕೃತಿಯನ್ನ ರಾಚನಿಕವಾಗಿ ನೋಡ್ಬೇಕು ಮತ್ತು ರಾಚನಿಕವಾಗಿ ಬರೆಯಬೇಕು ಅಂತ ಹೇಳಿದೋರು ಅವರೆ, ಅದನ್ನ ನಿರಚನೆ ಮಾಡ್ಬೇಕು ಮತ್ತು ನಿರಚನಾ ವಾದದ ಹಿನ್ನೆಲೆಯಲ್ಲಿ ನೋಡ್ಬೇಕು ಅಂತ ಹೇಳಿದೋರು ಅವರೆ. ಅಂದ್ರೆ ಅಲ್ಲಿಂದಲೇ ಬಂದಿರೋದು. ಅಂದ್ರೆ ಒಟ್ಟಾರೆ ಏನು ಹೇಳೋಕೆ ಇಷ್ಟ ಪಡ್ತೀನಿ ಅಂದ್ರೆ ಈ ಎಲ್ಲಾ ಕಾರಣದಿಂದಾನು ನನಗೆ ಫ್ರೆಂಚ್ ಸಾಹಿತ್ಯ ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿದೆ.

ಸೊ, ನಾನು ಎರಡು ತರದ ವರ್ಕನ್ನ ಮಾಡೋವ್ನಿದೀನಿ. ಅಂದ್ರೆ ಒಂದು, ಬೌದ್ಧಿಕವಾಗಿ ಅವರ ವಿಕಾಸ ಇದೆಯಲ್ಲ, ಫ್ರೆಂಚ್ ಕ್ರಾಂತಿಯ, 1850ರ ನಂತ್ರ ಇಲ್ಲಿಯವರೆಗು ಬೌದ್ಧಿಕ ನೆಲೆಯಲ್ಲಿ ಅವರ ಬೇರೆ ಬೇರೆ ಥಿಯರೀಸ್ ಇದೆಯಲ್ಲ, ಆ ಥಿಯರಿಸ್ಟ್‌ಗಳ important ಅನಿಸುವ ಒಂದು ಅಥವಾ ಎರಡು ಲೇಖನಗಳನ್ನ ನಾನು ಅನುವಾದ ಮಾಡ್ಬೇಕಂತ ಇದೀನಿ. ಅದ್ರಲ್ಲಿ ಅಬೆ ದುಬೈ ಅಂತ ಇಲ್ಲಿ ಒಬ್ಬರು, ಶ್ರೀರಂಗಪಟ್ಟಣದ ಹತ್ತಿರ, ಅಲ್ಲಿ ಸುಮಾರು ಇಪ್ಪತ್ತು ವರ್ಷ ಅವರು ಮಿಷನರಿಯಾಗಿದ್ರು. ಅವರು ಹಿಂದೂಯಿಸಂ ಬಗ್ಗೆ ಎಲ್ಲ ತುಂಬ ಬರ‍್ದಿದ್ದಾರೆ. ಅವ್ರಿಂದ ಶುರು ಮಾಡ್ಬೇಕು. ಅದರ ಜೊತೆಗೆ ಈಗಿನ contemporary literary theories, ಮಾರ್ಕ್ಸಿಸಂ ಈ ತರ ಏನೇನೊ ಇದೆಯಲ್ಲ, ಅದು ಒಂದು portion. ಇನ್ನೊಂದು creative writings. ಕತೆಗಳನ್ನ, ಮೊಪಾಸನಿಂದ ಹಿಡಿದು ಇಲ್ಲಿವರೆಗುನು, representing stories, ಎಷ್ಟಾಗುತ್ತೆ ಅಷ್ಟು ಕತೆಗಳನ್ನ ಅನುವಾದ ಮಾಡಬೇಕಂತ ನಾನಿದೀನಿ. ಹೀಗೆ ಎರಡು ನೆಲೆಯಲ್ಲಿ. ಒಂದು ಅವರ ವೈಚಾರಿಕ ವಿಕಾಸ ಹೇಗಾಗಿದೆ ಮತ್ತು ಅದರ ಪ್ರಭಾವ ಸಾಹಿತ್ಯದ ಮೇಲೆ ಒಟ್ಟಾರೆ ಜಾಗತಿಕವಾಗಿ ಹೇಗೆ ಆಗ್ತಾ ಇದೆ, ಹೇಗೆ ಆಗಿದೆ. ಇನ್ನೊಂದು, ಅವರ ಕತೆಗಳಲ್ಲಿ, ಕತೆಗಳನ್ನೆ ಪ್ರಧಾನವಾಗಿ ಯಾಕಂದ್ರೆ ಕನ್ನಡದಲ್ಲಿ ಮುಖ್ಯವಾಗಿ ಫ್ರೆಂಚ್ ಆರಂಭಿಕ ಕತೆಗಳಿವೆಯಲ್ಲ, ಮೊಪಾಸನಿಂದ ಹಿಡಿದು ಅವರದ್ದೊಂದು ಭಾಳ ಗಾಢವಾದ ಪ್ರಭಾವ ಇದೆ. ಅಂದ್ರೆ ಒಂದು structureನ್ನ ಒದಗಿಸಿಕೊಟ್ಟಿದ್ದಾರೆ. ಅದಕ್ಕೆ ನಾನು ಎಷ್ಟೊ ಜನ ಫ್ರೆಂಚ್ writers ಇದ್ದಾರೆ. ಕೆಲವು writers ಇದಾರಲ್ಲ, ಬೇಸಿಕ್ writers, ಮೊಪಾಸ best example. ಎಷ್ಟು ಜನ translate ಮಾಡಿದಾರಂದ್ರೆ ಅವರನ್ನ ಈಗ್ಲುನು ಯಾರೋ ಒಬ್ರು ರೆಗ್ಯುಲರ್ ಸಾಹಿತಿಯೇನು ಆಗಿರಲ್ಲ ಅವ್ರು, ಬಟ್ ಒಂದು ಹೆಸರು ಬರಬೇಕನ್ನೊ ಹುಚ್ಚಿದ್ರೆ, ಅವರೊಂದು ಮೊಪಾಸನ ಕತೆನ translate ಮಾಡಿ ಕಳಿಸ್ತಾರವ್ರು, ಮತ್ತೆ ಪಬ್ಲಿಷ್ ಆಗುತ್ತದು. ಅಷ್ಟೊಂದು ಪ್ರಭಾವ ಇದೆ. ಅದೂ ಯಾಕಂದ್ರೆ ಅಷ್ಟೊಂದು finer aspects ಇವೆ ಆ ಕತೆಯಲ್ಲಿ. ಒಬ್ನಿಗೇನೋ ಒಂದು expectation ಇರುತ್ತಲ್ಲ, ಸಣ್ಣಕತೆಯ ಪ್ರಕಾರದಿಂದ ಒಂದು expectation ಇದ್ರೆ, ಅದು ಮೊಪಾಸನ ಕತೆಗಳು ಬಹಳ ಚೆನ್ನಾಗಿ ನಿಮಗವನ್ನ fulfill ಮಾಡ್ತವೆ. ಸೊ, ಆ ತರ ಎಷ್ಟೋ ಲೇಖಕರಿದ್ದಾರೆ. ಸೊ, ಅವರದ್ದೊಂದು ಅನುವಾದ ಮಾಡ್ಬೇಕಂತ ಇದೀನಿ ನಾನು. ಇನ್ನೊಂದೆರಡು ವರ್ಷ. ಈಗ ಕೆಲವು ಮಾಡಿದೀನಿ actually. ಕಮೂದು ‘ರೆಬೆಲ್’ ಅಂತ ಕೆಲವೊಂದು ಪರಿಕಲ್ಪನೆ - ಬಂಡಾಯದ ಪರಿಕಲ್ಪನೆ ಇದ್ಯಲ್ಲ, ಅದನ್ನ ಮಾಡಿದೀನಿ. ಆ ಪುಸ್ತಕವನ್ನ ಏನ್ಮಾಡಿದೀನಿ ಅಂದ್ರೆ ನಾನು, ಯುರೋಪಿಯನ್ ಹಿಸ್ಟ್ರಿ ತುಂಬ ಇದೆ ಅದ್ರಲ್ಲಿ. ನಾನು ನಮ್ಮ ನೆಲಕ್ಕೆ ಯಾವ ಪ್ರತಿಮೆಗಳು ಹೊಂದುತ್ತೋ ಆ ಎಲ್ಲಾ ವಿಚಾರಗಳನ್ನ ಸಂಗ್ರಹವಾಗಿ ನಾನು translate ಮಾಡಿದೀನಿ. ಅದ್ರಲ್ಲಿ ತುಂಬ ಇದೆ, ಅವರದೇನೋ ಯುರೋಪಿಯನ್ ರೆಫರೆನ್ಸ್‌ಗಳು ಸಾಮಾನ್ಯ ಜನ ಓದ್ಬೇಕು ಅನ್ನೋದು ನನ್ನ ಉದ್ದೇಶ ಇದೆ.

ಇನ್ನೊಂದು ಕಡೆಯಿಂದ ನಾವು ನೋಡಿದ್ರೆ. ಸಾಮಾನ್ಯ ಜನ ಅಂದ್ರೆ ಯಾರು ಅಂತ ಕೇಳಿದ್ರೆ ಈಗ ಯಾರು ಸಾಹಿತ್ಯವನ್ನ ಆರಂಭದಲ್ಲಿ ಓದೋಕೆ ಇಷ್ಟ ಪಡ್ತಾರೆ ನೋಡಿ, ಅಥವಾ ಈ ಎಂಎ ವಿದ್ಯಾರ್ಥಿಗಳಾಗಬಹುದು, ಅವರಿಗೆ ಸಾಮಾನ್ಯವಾಗಿ ನಮ್ಮಲ್ಲಿ ವಿಮರ್ಶಾ ವಲಯದಲ್ಲಿ ಯಾವ ತರದ್ದೊಂದು ಪ್ರತೀತಿ ಇರುತ್ತೆ ಅಂದ್ರೆ ಹೆಸರುಗಳನ್ನ ಚೆಲ್ತಾ ಇರ‍್ತಾರೆ ಎಲ್ರೂ. Actually ಈಗ ಆ ತರ ಸನಿವೇಶ ಇಲ್ಲ ಆದ್ರೆ ಬರೇ ಹೆಸರು ಹೇಳ್ತಾ ಹೋದ್ರೆ ಏನಾಗುತ್ತೆ ಅಂದ್ರೆ, Accessibility ಇರಲ್ಲ ಎಷ್ಟೋ ಜನರಿಗೆ. ಅವ್ರೆಲ್ಲಿ ಸಿಗ್ತಾರೆ ಎಲ್ಲಿರ‍್ತಾರೋ ಗೊತ್ತಿರಲ್ಲ. ಈಗೇನು ಆ ತರದ ಸಮಸ್ಯೆ ಇಲ್ಲ. ಈಗ internetನಲ್ಲಿ ಹುಡುಕಿದ್ರೆ ಸಿಗುತ್ತೆ ನಿಮಗೆ. ಸ್ವಲ್ಪ ಆದ್ರು basic information ಸಿಗುತ್ತೆ. ಮುಂಚೆ ಎಲ್ಲ ನನಗೆ ಭಾಳ ಸಮಸ್ಯೆಯಾಗ್ತಿತ್ತು. ಹತ್ತು ಜನ ಇಂಗ್ಲಿಷ್ writers ಹೆಸರು ಹೇಳಿಬಿಟ್ರೆ, ಆ ಹತ್ತೂ ಜನರನ್ನು ಬರೆದುಕೊಂಡು ಹೋಗಿ ಓದ್ಬೇಕಾಗಿತ್ತು ನಾನು. ಎಲ್ಲ ಕಡೆ ಹುಡುಕ್ಬಿಟ್ಟು. ಸೊ, ಆ ತರದ್ದೇನಾದ್ರು ಸ್ವಲ್ಪ ಪ್ರಯೋಜನ ಆಗಬಹುದೇನೊ ಅನ್ನೊದೊಂದು ಕೂಡ ಗಮನದಲ್ಲಿದೆ ನನಗೆ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Monday, August 30, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಭಾಗ ಹತ್ತು

ಬರಹಗಾರನ ಕಂಫರ್ಟ್ ಜೋನ್‌ ಬಗ್ಗೆ ನಿಮಗೇನನ್ಸುತ್ತೆ. ಅದನ್ನ ಒಬ್ಬ ಲೇಖಕ ಮೀರೋದು ಅಂದ್ರೆ ಏನು, ಹೇಗೆ? 


ಯಾವಾಗ್ಲು ಒಬ್ಬ ನಿಜವಾದ ಕಲಾವಿದನಿಗೆ ಯಾವಾಗ್ಲುನು ಅವನು ಏನನ್ನು ಮಾಡಿದ್ದಾನೊ ಅದಕ್ಕೆ ಮೀರಿದ್ದನ್ನ ಮಾಡ್ಬೇಕು ಅನ್ನೋ ಒಳತುಡಿತ ಅವನಿಗಿರುತ್ತೆ. ಮತ್ತೆ ಅದರ ಬೌಂಡ್ರೀಸ್ ಎಲ್ಲಿರುತ್ತೆ ಅವ್ನಿಗೆ ಗೊತ್ತಿರಲ್ಲ. ಹಾಗೆ ಹುಡುಕ್ಕೊಂಡು ಹೋಗೋದೆ ಒಂದು ಕೆಲಸ ಆಗಿರುತ್ತೆ. ಸೊ ಹಾಗೆ ಒಂದು boundries draw ಮಾಡ್ಕೊಂಡಿದ್ರೆ ಅವ್ನು, next time ಅದನ್ನ cross ಮಾಡ್ತಾನವ್ನು. ಸೊ ನನ್ ಪ್ರಕಾರ ನಿಜವಾದ ಲೇಖಕರಿಗೆ comfort zone ಅಂತ ಏನಿರಲ್ಲ. ಹೀಗಾಗಿ ನೀವು ಯಾವುದೇ ಉತ್ತಮ ಅಥವಾ ಮಹತ್ವದ ಲೇಖಕರನ್ನ ನೋಡಿದ್ರೆ ಅವ್ರ ವಿಷಯ ವ್ಯಾಪ್ತಿ ಇರಬಹುದು ಅಥವಾ ಅವರು formsನ್ನ persue ಮಾಡಿರೋ ವಿಧಾನ ಇರಬಹುದು, ಅಲ್ಲಿ ಒಟ್ಟಾರೆ ಸಾಹಿತ್ಯವನ್ನ ಒಂದು structure ಆಗಿ persue ಮಾಡಿರೋ ವಿಧಾನದಲ್ಲಿ ಸಿಕ್ಕಾಪಟ್ಟೆ ವೈರುಧ್ಯಗಳು ನಮಗೆ ಕಾಣುತ್ತೆ. ವೈರುಧ್ಯ ಅಂತ ನಮಗೆ ಕಾಣ್ತಾ ಇರುತ್ತೆ, ಅಷ್ಟೆ. ಆದ್ರೆ ಅವರು comfort zoneನ್ನ ತಿರಸ್ಕಾರ ಮಾಡ್ಬಿಟ್ಟು ಬೇರೆ ಹುಡುಕ್ತಾ ಇರ‍್ತಾರವ್ರು. ಇದನ್ನೆ ಸ್ವಲ್ಪ ವಿಸ್ತರಣೆ ಮಾಡಿ ಹೇಳೋದಾದ್ರೆ, ಈಗ ನಾನು ಕತೆಗಳನ್ನ ಪ್ರಧಾನವಾಗಿ, ಬರ‍್ದಿದೀನಿ. ಕಾದಂಬರಿಗಳ ಬಗ್ಗೆ ನಾವು ಚರ್ಚೆ ಮಾಡಿದೀವಿ. ಬಟ್ ಅದನ್ನ ಮೀರಿ ನನಗೆ ಕೆಲವು ವಿಷಯಗಳನ್ನ ಹೇಳೋದಿತ್ತು ನನಗೆ, ಈಗ ಮುಂದೇನೂ ಹೇಳೋದಿದೆ. ಸೊ, ಎಷ್ಟೋ ವರ್ಷಗಳಿಂದ ಕತೆಯಲ್ಲಿ ಬರದೆ ಇರೋದನ್ನ ಎಲ್ಲೆಲ್ಲೊ ಬರೆದು ಬರೆದು ಬರೆದು ಒಗೆದಿದ್ದೆ ನಾನಾವಾಗ. ಸೊ, ‘ನೇರಳೆ ಮರ’ ಆ ಕಾರಣಕ್ಕಾಗಿ ನಾನು ಬರೀಬೇಕಾಯ್ತು. ಯಾಕಂದ್ರೆ ಅದಕ್ಕೆ ಒಂದು ಕಥಾನಕದ ಚೌಕಟ್ಟು ಅಥವಾ ಕತೆ ಹೇಳುವಂಥ ಸಂಗತಿಗಳು, ಘಟನೆಗಳು, ಹರಹು - ಅದೆಲ್ಲ ಏನಿಲ್ಲ. ಬಟ್ ಅಲ್ಲಿರೊ ಅನುಭವ ಬಹಳ ಮಹತ್ವದ್ದಾಗಿದೆ; ಅದು ಬಹಳ ಚಿಕ್ಕದಿದೆ. ಸೊ ಕತೇಲಿ ಹೊಂದಲ್ವಲ್ಲ ಏನ್ಮಾಡೋದು ಅಂತ ನಾನು ಕೆಲವು artificial ಕಥಾಪಾತ್ರಗಳನ್ನ ಸೃಷ್ಟಿ ಮಾಡಿ - ಹಂಗೆಲ್ಲ ನಾನು ಮಾಡೋದಿಲ್ಲ. ಕತೆಗೂ ಹೊಂದಲ್ಲ ಅದು ಇನ್ನೊಂದಕ್ಕೂ ಹೊಂದಲ್ಲ. ಸೊ, ಯಾವುದಕ್ಕೆ ಹೊಂದುತ್ತೆ ನೋಡೋಣ ಅಂತ ನಾ ಬರ‍್ದಿದೀನಿ.

ಸೊ, ಅದಕ್ಕಾಗೆ ಸಾಮಾನ್ಯವಾಗಿ ಏನ್ಮಾಡ್ತಾರೆ ಅಂದ್ರೆ ಈಗ ಸಿದ್ಧ ಮಾದರಿಯೊಳಗೆ, ಕೆಲವ್ರು ಏನ್ಮಾಡಬಹುದು ಅಂದ್ರೆ ಪ್ರಬಂಧ ಇದೆ, ಲಲಿತ ಪ್ರಬಂಧ ಇದೆ ಅಂದ್ಬಿಟ್ಟು ಲಲಿತ ಪ್ರಬಂಧವೊಂದಕ್ಕೆ suit ಆಗೋ ತರಾನೆ ಬರೀತಾರೆ. ಬಟ್ ನನಗೆ ಆ ತರ ಬರಿಯಕ್ಕಾಗಲ್ಲ. ಯಾಕಂದ್ರೆ ನನಗೆ so called ಲಲಿತ ಪ್ರಬಂಧಗಳ ಸಿದ್ಧ ಮಾದರಿಗಳ ಬಗ್ಗೆ ಒಪ್ಪಿಗೆಯಿಲ್ದೆ ಇರಬಹುದು, contradictions ಇರಬಹುದು. ಕೆಲವ್ರೆಲ್ಲ ಚೆನ್ನಾಗಿ ಬರೀತಾ ಇರಬಹುದು, ಅದು ಬೇರೆ ವಿಷಯ. ನನಗೆ ಸಿದ್ಧ ಮಾದರಿನ ಬಿಟ್ಟು ಬೇರೆ ಏನೋ ಒಂದು ಮಾಡ್ಬೇಕು ಅಂತನ್ಸುತ್ತೆ. ಸೊ ಹಾಗಾಗಿ ಅಲ್ಲಿಯೂ ನಾನೇನೊ ಪದಗಳನ್ನ ಗಮನದಲ್ಲಿಟ್ಟುಕೊಂಡು ಬರೆದಿಲ್ಲ. ಬಟ್ ಆದರುನು ಅವುಗಳ ಅನುಭವದ ವ್ಯಾಪ್ತಿ ಅಷ್ಟೆ ಇದೆ. ಇದಕ್ಕೆ ವಿಶಿಷ್ಟವಾಗಿದೆ ಅದು. ಕತೆಗಳಲ್ಲಿ ತಗೊಂಡು ಬರೋಕ್ಕೆ ಆಗದೆ ಇರೋವಷ್ಟು ವಿಶಿಷ್ಟವಾಗಿರೋದ್ರಿಂದ ಅದಕ್ಕೆ ರೂಪಕಗಳೆಂದು ಕರೆದೆ ನಾನು. ಅದನ್ನ ಬರೆದ್ಮೇಲೆ ಪಬ್ಲಿಷ್ ಮಾಡೋದಾದ್ರೆ ಓದೋವರಿಗೆ ಮಾತ್ರ ಬಹಳ ಪ್ರಾಬ್ಲೆಮ್ ಆಗಿ ಬಿಡುತ್ತೆ. ಏನಿದು, ಕತೆನಾ ಇದು, ಪ್ರಬಂಧನ ಇದು... ‘ನೀವು ತಲೆಕೆಡಿಸ್ಕೊಬೇಡಿ, ಇದು ರೂಪಕ ಅಂತ ಒಂದು ಹೊಸಾ ವಿಧಾನ ಇದು, ಸೊ ಇಲ್ಲಿ ಬರೇ ರೂಪಕಗಳೇ ಕಿಕ್ಕಿರಿದಿವೆ. ಅದ್ರಿಂದ ಇಲ್ಲಿ ಏನಾದ್ರು ನಿಮಗೆ ಸಿಗತಾ ಇದ್ರೆ ನನಗೆ ಸಂತೋಷ ಆಗುತ್ತ್ತೆ, ಸಿಕ್ಲಿಲ್ಲ ಅಂದ್ರೆ ಬಯ್ಕೊಳಿ ನನ್ನ ಪರವಾಗಿಲ್ಲ’ ಅಂತೀನಿ. ಬಟ್ ಅಲ್ಲೇನು ನಿಮಗೆ ಲಲಿತ ಪ್ರಬಂಧಗಳಿಗೆ ಬೇಕಾಗೊ ಚೌಕಟ್ಟು ಇಲ್ಲ ಅಲ್ಲಿ. ಕತೆ ಅಂತಂದ್ರೆ ಕತೆಗೆ ಬೇಕಾದಂಥ ಒಂದು structure ಇಲ್ಲ. ಕೆಲವು ಸಲ ಕೆಲವು ಕಡೆಗೆ poetry ಅಷ್ಟೆ abstract ಇದೆ, ಕೆಲವು ಬರಹಗಳು. ಬಟ್ ಅವು ನನಗನಿಸಿವೆ ಅವು ಮತ್ತು ಹಾಗೇನೆ ಹೇಳ್ಬಹುದದನ್ನ. ಅದ್ರಿಂದನೇ ಹಾಗೆ ನಾನು ಬರ‍್ದಿದೀನಿ. ಮತ್ತೆ comfort zone ಅಂತೇನೂ ಇರಲ್ಲ ಒಬ್ಬ ಲೇಖಕನಿಗೆ, ನಿಜವಾದ ಲೇಖಕನಿಗೆ. ಮತ್ತೆ ಹಂಗೇನಾದ್ರು ಅನಿಸ್ತಾ ಇದ್ರೆ ಅದು, ಅವನು ಒಬ್ಬ ಸಾಮಾನ್ಯ ಜನಪ್ರಿಯ ಲೇಖಕನಾಗಿ ತನ್ನ ಜೀವನವನ್ನ pathetic ಆಗಿ ಕೊನೆ ಮಾಡ್ಕೊತಾನೆ.


ಸರಿ ಈಗ ವೈಯಕ್ತಿಕ ನೆಲೆಯ ಕತೆಗಳನ್ನ ಬರೆಯೋನು ಅಥವಾ ರೊಮ್ಯಾಂಟಿಕ್ ಲವ್ ಸ್ಟೋರಿಗಳನ್ನ ಬರೆಯೋನು ಇದಾನೆ ಅಂತ ತಗೊಳ್ಳಿ. ಜನಪ್ರಿಯ ಪತ್ರಿಕೆಗಳಲ್ಲಿ ಬರೆಯೊ ಬಹುಪಾಲು writers ಹಂಗೆ ಇರ‍್ತಾರೆ. ಯಾವ್ದೇ ಜನಪ್ರಿಯ ಲೇಖಕರನ್ನು ತಗೊಂಡ್ರು ನೀವು, ಅವರು ತಮ್ಮ first ಕತೆಯನ್ನ ಇವತ್ತಿನವರೆಗೂ ಮೀರಿರಲ್ಲ ಅವರು. Artificial language use ಮಾಡಿ ಕೃತಕವಾದ ಪ್ರೇಮಕತೆಯನ್ನ ಬರೆಯೋ ಲೇಖಕರಿಗೆ ಅದೇ ಅವರ comfort zone. ಅದನ್ನ ಮೀರಿ ಅವನಿಗೆ ಬರೆಯೋಕ್ಕೆ ಸಾಧ್ಯವಾಗಲ್ಲ ಅಂತಂದ್ರೆ, as a writer he is failed. ಸೊ, ಅವ್ರಿಂದ ನಾವು expect ಮಾಡೋದಿದ್ಯಲ್ಲ, ಅದರ ಅಗತ್ಯ ಇಲ್ಲ. ಈಗ ವೈಯಕ್ತಿಕ ನೆಲೆಯಲ್ಲಿ ಆರಂಭಿಕ ಹಂತದಲ್ಲಿ ಬರೀತಾ ಇರೊ ಒಬ್ಬ ಕತೆಗಾರ ಇಪ್ಪತ್ತು ವರ್ಷಗಳಾದ ಮೇಲೂ ಅದನ್ನೆ ಬರೀತಾ ಇದಾನೆ ಅಂದ್ರೆ ಅವನು ಅದ್ರಲ್ಲೆ ಕೊನೆಯಾಗ್ತಾನೆ ಅಂತ ನಂಬಬಹುದು. ಅದೇ ನೀವು ಸಮಷ್ಠಿ ಪ್ರಜ್ಞೆ ಒಳಗೊಳ್ಳಬೇಕು ಅಂತ ಒಬ್ಬ ಕ್ರಿಯಾಶೀಲ, ಸೂಕ್ಷ್ಮ ಸಂವೇದನೆಗಳಿರೋ ಲೇಖಕನಿಗೆ ನಾವು ಹೇಳಬೇಕಾಗಿಲ್ಲ. ಅವನು ನೀವು ಹೇಳ್ದೇನೆ ಅವನು ತನ್ನ comfort zoneನ್ನ ಮೀರಿರ‍್ತಾನೆ, ಬರೆದಿರ‍್ತಾನೆ. ಮತ್ತು ಅದು ಅವನಿಗೆ ಕ್ಲೀಷೆ ಅನ್ಸಿದರೆ ಅದನ್ನ ಮೀರಿ ಇನ್ನೊಂದು ಬರೀತಾನೆ. 


Poetryಯಲ್ಲಿ ಕೆಲವು ಬಹಳ ಒಳ್ಳೆಯ ಉದಾಹರಣೆಗಳು ಸಿಗುತ್ತೆ ನಿಮ್ಗೆ. ಈಗ poetryಯಲ್ಲಿ ಶಿವಪ್ರಕಾಶ್ ತರದ poetsನ್ನ ನೋಡಿದ್ರೆ ನೀವು ಇದು ಗೊತ್ತಾಗುತ್ತೆ. ಅವರು ಬರೆದ ಎಲ್ಲಾ ಕವಿತೆಗಳನ್ನ ನೋಡಿ. ಕವಿತೆಗಳನ್ನ ಓದೋ ವಿಧಾನ ಬೇರೆ ಇರುತ್ತೆ ಅಂತ ಆ ತರ ಹೇಳ್ತಾ ಇದೇನೆ; ಅವರು ಬರೆದ ಎಲ್ಲಾ ಕವನಗಳು ಶ್ರೇಷ್ಠ ಆಗಿಲ್ದೆ ಇರಬಹುದು. ಬಟ್ ಅವ್ರು ಪ್ರಾಯೋಗಿಕವಾಗಿ, ಒಟ್ಟಾರೆ ಅವರ ಎರಡು ಮೂರು ಸಂಕಲನಗಳನ್ನ ನೀವು ನೋಡಿದ್ರೆ, ಎಷ್ಟು ಮಹತ್ವವಾದ ವಿಚಾರಗಳನ್ನು ಇವರು ಚಿಂತನೆ ಮಾಡಿದಾರೆ, ಬೇರೆ ಎಲ್ಲರಿಗಿಂತಲೂ ಇವರು ಭಿನ್ನವಾಗಿ ಬರೀತಾ ಇದಾರಲ್ಲ ಅಂತನ್ಸುತ್ತೆ. ಕೆಲವು ಸಲ ತಿರುಮಲೇಶರ ಬಗ್ಗೆನು ಆ ತರ ನನಗನಿಸುತ್ತೆ. ಅಂದ್ರೆ ಅವರು conscious ಆಗಿ ಹುಡುಕ್ಕೊಂಡು ಹೋಗಿ, ಯಾವ್ಯ್ದಾವ್ದೋ ವಿಷಯಗಳನ್ನು ಓದಿ, ನೋಡಿ,Encyclopedia ಎಲ್ಲ ಓದಿ ಒಂದು ಕವಿತೆ ಬರೀತಾರವ್ರು. ಅಂದ್ರೆ definately comfort zoneನಲ್ಲಿದೀನಿ ಅಂತ ತಿಳ್ಕೊಳ್ಳದೆ ಇರೋದ್ರಿಂದಾನೆ ಅದು ಸಾಧ್ಯವಾಗೋದದು.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ