Thursday, January 28, 2010

ಮನದಾಳದ ಬಿರುಕುಗಳ ಮಾತು...

ಇತ್ತೀಚೆಗೆ ಅಂಜುಂ ಹಸನ್‌ರ ಹೊಸ ಕಾದಂಬರಿ ‘ನೇತಿ ನೇತಿ’ (Neti, Neti - Not this, Not this) ಪ್ರಕಟವಾಗಿದೆ. ಮಾಧ್ಯಮಗಳಲ್ಲಿ ಆ ಕಾದಂಬರಿಯ ಕುರಿತ ಚರ್ಚೆ, ವಿಮರ್ಶೆ ಇತ್ಯಾದಿ ನಡೆಯುತ್ತಿದೆ. ಇವರ ಮೊದಲ ಕಾದಂಬರಿ Lunatic in my Head ಬಗ್ಗೆ ಬರೆದು ಆ ನಂತರ ಎರಡನೆಯ ಕಾದಂಬರಿಯನ್ನು ಗಮನಿಸುವುದು ಸೂಕ್ತ ಅನಿಸುತ್ತದೆ. ಹಾಗೆ ನೋಡಿದರೆ ಅಂಜುಂ ಹಸನ್ ಮೂಲಭೂತವಾಗಿ ಕವಯತ್ರಿ. ಇವರ ಕವನ ಸಂಕಲನ Street on the Hill (2006) ಮೂಲಕವೇ ಇವರು ಸಾರಸ್ವತ ಲೋಕದಲ್ಲಿ ಪ್ರಸಿದ್ಧಿಗೆ ಬಂದವರು ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ ಕವನಗಳನ್ನು ಸುಮ್ಮನೇ ಮೌನವಾಗಿ ಓದಿ ಅದು ನೀಡುವ ಅನುಭೂತಿಯನ್ನು ಅನುಭವಿಸುವುದೇ ಸರಿಯಾದ ಕ್ರಮ. ಕತೆ ಕಾದಂಬರಿಗಳ ಮಾತು ಬೇರೆ!

ಅಸ್ವಸ್ಥಗೊಳಿಸಬಲ್ಲ ತೀವ್ರವಾದ ಸಂವೇದನೆಗಳನ್ನು ಸ್ಪರ್ಶಿಸುವ ಈ ಕಾದಂಬರಿ ಆರಂಭದಿಂದ ಕೊನೆಯ ತನಕ ಹಾಯುವುದು ಬಿರುಕುಗಳ ಮೂಲಕ. ಭೂಕಂಪದ ಬಳಿಕ ಊರೆಲ್ಲ ಭೂಮಿಯನ್ನು ಸಿಗಿದಿಟ್ಟಂತೆ ಕಾಣುವಾಗ ಬಿರುಕು ಬಿಟ್ಟ ನೆಲದ ಮೇಲೆ ನಡೆಯುವ ಅನುಭವವಿದು. ಆದರೆ ಬಿರುಕುಗಳು ಇನ್ನೊಂದು ದಿಕ್ಕಿನಿಂದ ನಿರ್ದಿಷ್ಟ ಭೂಭಾಗವನ್ನು, ಮನುಷ್ಯರನ್ನು ಒಂದಾಗಿ ವಿಂಗಡಿಸುವ ಮೂಲಕ ಇನ್ನೇನನ್ನೊ ಜೋಡಿಸುತ್ತ ಇರುತ್ತವೆ ಎನ್ನುವುದು ಕೂಡಾ ಸುಳ್ಳಲ್ಲ! ಕಾದಂಬರಿ ಈ ಪ್ರಜ್ಞೆಯನ್ನು ದುಡಿಸಿಕೊಂಡಿದೆ. ಆದರೆ ಎಲ್ಲ ಪ್ರಯತ್ನಗಳಾಚೆ, ಎಲ್ಲ ವಿಘಟನೆಯ, ವಿಚ್ಛಿದ್ರದ ವಿಕೇಂದ್ರಿಕರಣ ಪ್ರಕ್ರಿಯೆಯ ಆಳದಲ್ಲಿ ಅಂತರ್ಗತವಾದ ಸಂತುಲನ ಒಂದಿದೆ, ಸಂಬಂಧದ ತಂತು ಒಂದಿದೆ, ಅಗಮ್ಯ-ಅಗೋಚರ ಭಾವವಲಯವೊಂದು ಅಲ್ಲಿಯೂ ಮಿಡಿಯುತ್ತಿರುತ್ತದೆ ಎನ್ನುವ ನಂಬುಗೆಯನ್ನು ಮೀರಿ ಕಣ್ಣಿಗೆ ಹೊಡೆದು ಕಾಣುವುದು ಸಂಘರ್ಷಗಳೇ, ವಿಮುಖತೆಯೇ. ಆದರೆ ಈ ವಿಘಟನೆ, ವಿಮುಖತೆ ಮತ್ತು ಸಂಘರ್ಷದ ಮೂಲಕ ನಾವು ಬದುಕನ್ನು ತಿಳಿಯುವುದು, ಮನುಷ್ಯನನ್ನು ಅರಿಯುವುದು, ಮನಸ್ಸನ್ನು ಅರ್ಥಮಾಡಿಕೊಳ್ಳುವುದು - ಕಾದಂಬರಿಯ ಓದಿನ ಮೂಲ ಆಶಯ. ಕೊನೆಗೂ ಎಲ್ಲ ವಿಮರ್ಶೆಯ ಆಚೆ, ಒಂದು ಸಾಹಿತ್ಯ ಕೃತಿ ನಮ್ಮ ಬದುಕಿಗೆ ಏನನ್ನು ಕೊಡುತ್ತಿದೆ, ನಮ್ಮ ಬದುಕನ್ನು ಅದು ಹೇಗೆ ಸಂಪನ್ನಗೊಳಿಸುತ್ತಿದೆ ಎನ್ನುವ ಅಂಶವಲ್ಲವೇ ಮುಖ್ಯ?

ಈ ವಿಘಟನೆ, ಘಟಸ್ಫೋಟ, ವಿಚ್ಛಿದ್ರ ಪ್ರಮುಖವಾಗಿ ಎರಡು ಸ್ತರದಲ್ಲಿ ನಡೆಯುತ್ತದೆ. ನಾವು ನಮ್ಮ ಬದುಕಿನ ದೈನಂದಿನವನ್ನೇ ಗಮನಿಸಿದರೆ ನಾವು ವಿಭಿನ್ನವಾದ ಜಗತ್ತುಗಳಲ್ಲಿ ಸಂಚರಿಸುತ್ತಾ ಇರುತ್ತೇವೆ. ನಮ್ಮ ಮನೆ, ತಾಯಿ, ತಂದೆ, ಒಡಹುಟ್ಟಿದವರು, ಹೆಂಡತಿ, ಮಕ್ಕಳು ಈ ಎಲ್ಲರಿಗೆ ಸೇರಿದ ಒಂದು ತಕ್ಷಣದ ಸಂಬಂಧಗಳ ಕುಟುಂಬ - ಈ ಜಗತ್ತುಗಳಲ್ಲಿ ಒಂದು. ಆದರೆ ಈ ಜಗತ್ತಿನ ಒಳಗೊಳಗೇ ಸಂಘರ್ಷಗಳಿರುತ್ತವೆ. ಅತ್ತೆ-ಸೊಸೆ, ಗಂಡ-ಹೆಂಡತಿ, ಮೈದುನ-ನಾದಿನಿ ಎಂದೆಲ್ಲ ಎಷ್ಟೋ ಕಡೆ ಹಳಸಿರುತ್ತದೆ. ಹೊಂದಾಣಿಕೆಯೇ ಹೊರೆಯಾಗಿ ಸಂಘರ್ಷ ನಿತ್ಯದ ಅನುಪಾತವೇ ಆಗಿಬಿಟ್ಟಿರುತ್ತದೆ. ಈ ಅನುಪಾತವನ್ನು ಯಾರ ಮನಸ್ಸು ಹೇಗೆ ಗ್ರಹಿಸುತ್ತದೆ, ಸ್ಪಂದಿಸುತ್ತದೆ ಎನ್ನುವುದು ಬೇರೆ ವಿಚಾರ.

ಉದ್ಯೋಗ, ವೃತ್ತಿ, ಹೊಟ್ಟೆಪಾಡು, ವ್ಯಾಪಾರಗಳಿಗೆ ಸಂಬಂಧಿಸಿದ ಇನ್ನೊಂದೇ ಜಗತ್ತು ನಮಗಿರುತ್ತದೆ. ಇಲ್ಲಿಯೂ ಸಹೋದ್ಯೋಗಿಗಳು, ಸ್ಪರ್ಧಿಗಳು, ಸಂಬಳ, ಇನ್‌ಕ್ರಿಮೆಂಟು, ಪ್ರಮೋಶನ್ನು ಇತ್ಯಾದಿ ಹೋಲಿಕೆಗಳು ತಂದೊಡ್ಡುವ ದ್ವೇಷ, ಅಸೂಯೆ, ಈರ್ಷ್ಯೆ, ಹಾವೇಣಿಯಾಟದ ಜಿದ್ದಾಟಗಳು ಉಂಟು ಮಾಡುವ ಗ್ರೂಪಿಸಂ, ಸಣ್ಣತನ ಇರುವಂಥದ್ದೇ. ಇವುಗಳನ್ನು ಮನಸ್ಸು-ಮನುಷ್ಯ ಹೇಗೆ ಸ್ವೀಕರಿಸುತ್ತಾನೆ, ಹೇಗೆ ಪ್ರತಿಸ್ಪಂದಿಸುತ್ತಾನೆ, ಹೇಗೆ ತನ್ನತನವನ್ನು ಕಾಪಾಡಿಕೊಳ್ಳುತ್ತಾನೆ ಎನ್ನುವಲ್ಲಿನ ಸಂಘರ್ಷ ಕೂಡಾ ಮಹತ್ವದ್ದೇ.

ಇನ್ನು ನಮ್ಮ ನಮ್ಮ ಹವ್ಯಾಸ, ಪ್ರವೃತ್ತಿ, ಸ್ವಂತದ ಖುಶಿಗೆ ಸಂಬಂಧಪಟ್ಟ ಒಂದು ಜಗತ್ತು ಕೂಡಾ ನಮಗಿರುತ್ತದೆ. ಅದು ಸಾಹಿತ್ಯ, ಸಂಗೀತ, ಚಿತ್ರಕಲೆ, ಕ್ರೀಡೆ, ನೃತ್ಯ, ನಾಟಕ, ಸಿನೆಮಾ, ಗಾರ್ಡನಿಂಗ್, ಅಡುಗೆ, ರಾಜಕೀಯ ಯಾವುದೇ ಆಗಿದ್ದರೂ ಇವತ್ತಿನ ಸ್ಪರ್ಧಾತ್ಮಕ ಜಗತ್ತಿನ ಎಲ್ಲಾ ಹುಳುಕುಗಳು ಅಲ್ಲಿಯೂ ಹರಿದಾಡುತ್ತಲೇ ಇರುತ್ತವೆ. ಪ್ರಶಸ್ತಿ, ಗೌರವ, ಮನ್ನಣೆ, ಸನ್ಮಾನ, ದುಡ್ಡು, ಪೋಷಣೆಗಳಿಗೆ ಸಂಬಂಧಪಟ್ಟಂತೆ ಕಾಲೆಳೆಯುವುದು, ಎತ್ತಿಕೂರಿಸುವುದು ಎಲ್ಲ ಇದ್ದೇ ಇರುತ್ತವೆ. ಇದು ಕಲೆ ಮತ್ತು ರಾಜಕೀಯ, ಕಲೆ ಮತ್ತು ಜಾತಿ/ಧರ್ಮ, ಕಲೆ ಮತ್ತು ಪ್ರಚಾರ, ಕಲೆ ಮತ್ತು ವಶೀಲಿ, ಕಲೆ ಮತ್ತು ನಿಮ್ಮ ನಿಮ್ಮ ಧಂ - ಧಾಂಧೂಂಗಳಿಗೆ ಸಂಬಂಧಪಟ್ಟಂತೆ ಹವ್ಯಾಸ, ಪ್ರವೃತ್ತಿಗಳು ಬೆಳಗಬೇಕಾದ ಅಥವಾ ಕೊಳೆಯ ಬೇಕಾದ ದಿನಗಳಾದ್ದರಿಂದ ಈ ಜಗತ್ತು ಕೂಡ ಒಡ್ಡುವ ಸಂಘರ್ಷಗಳಿಗೇನೂ ಕೊರತೆಯಿಲ್ಲ.

ಇವಲ್ಲದೆ ಇನ್ನೂ ಹಲವು ಬಗೆಯ ಜಗತ್ತುಗಳಿಗೆ ನಾವು ಆಗಾಗ ತೆರೆದುಕೊಳ್ಳುತ್ತೇವೆ ಅಥವಾ ಅವು ನಮ್ಮನ್ನ ಹೈಜಾಕ್ ಮಾಡುತ್ತಿರುತ್ತವೆ. ಇಂಟರ್ನೆಟ್, ಈಮೇಲ್, ಚಾಟಿಂಗ್, ಸೋಶಿಯಲ್ ನೆಟ್‌ವರ್ಕಿಂಗ್, ವೆಬ್‍ಸೈಟುಗಳದ್ದೇ ಒಂದು ಜಗತ್ತು. ಟೀವಿಯ ಧಾರಾವಾಹಿಗಳದ್ದೇ ಇನ್ನೊಂದು ಜಗತ್ತು , ಹೀಗೆ.

ಮುಖ್ಯವಾಗಿ ಗಮನಿಸಬೇಕಾದ್ದೆಂದರೆ, ಈ ವಿಭಿನ್ನ ಜಗತ್ತುಗಳಲ್ಲಿ ನಾವು ನಿತ್ಯವೂ ಮುಖಾಮುಖಿಯಾಗುವ ಜನರು, ಸನ್ನಿವೇಶಗಳು, ಸಮಸ್ಯೆ, ಸವಾಲುಗಳು ಆಯಾ ಜಗತ್ತಿನ ಸೀಮೆಯೊಳಗೇ ಒಡ್ಡುವ ಸಂಘರ್ಷ, ಭಿನ್ನಾಭಿಪ್ರಾಯ, ವಿಘಟನೆಗಳು ಒಂದು ಸ್ತರದ್ದಾದರೆ ಇನ್ನೊಂದು ಹೆಚ್ಚು ಸಂಕೀರ್ಣವಾದ, ಸಂಕ್ಲಿಷ್ಟವಾದ ಸ್ತರದ್ದು. ಈ ವಿಭಿನ್ನ ಜಗತ್ತುಗಳು ಕೂಡಾ ಕೆಲವೊಮ್ಮೆ ಎಲ್ಲೋ ಒಂದು ಕಡೆ ಒಂದರ ಜೊತೆ ಒಂದು ವ್ಯವಹರಿಸುವ, ಮುಖಮುಖಿಯಾಗುವ, ಕೊಟ್ಟು-ಪಡೆಯುವ ಸನ್ನಿವೇಶಗಳು ನಿರ್ಮಾಣವಾಗುತ್ತವಲ್ಲ. ಸ್ವಲ್ಪ ಸರಳೀಕೃತ ಉದಾಹರಣೆಗಳನ್ನು ಕೊಡುವುದಾದರೆ, ಆಫೀಸಿನಲ್ಲಿರುವಾಗ ಬರುವ ಹೆಂಡತಿಯ ಫೋನು ನಿಮ್ಮ ಗಮನಕ್ಕೆ ತರುವ ಕುಟುಂಬಕ್ಕೆ ಸಂಬಂಧಪಟ್ಟ ಯಾವುದೋ ಒಂದು ಗಂಭೀರ ಸಮಸ್ಯೆ. ಮನೆಯಲ್ಲಿ ಯಾವುದೋ ಸಾಂಸಾರಿಕ ಜಗತ್ತಿನ ವಿದ್ಯಮಾನದಲ್ಲಿ ಗರ್ಕರಾಗಿರುವಾಗ (ಅದು ದೇವರ ಪೂಜೆಯೋ, ಅಪ್ಪನ ಅಪರಕ್ರಿಯೆಯೋ, ಟಾಯ್ಲೆಟ್ ತೊಳೆಯುವುದೋ ಆಗಿರಬಹುದು!) ಬಂದು ಬಿಡುವ ಆಫೀಸ್ ಕೆಲಸಕ್ಕೆ ಸಂಬಂಧಪಟ್ಟ ವಿಚಾರದ ಚರ್ಚೆಗೆ ತೊಡಗುವ ಫೋನ್ ಕಾಲ್ ಅಥವಾ ಮನೆಬಾಗಿಲಿಗೇ ಬರುವ ಸಹೋದ್ಯೋಗಿ. ಆಫೀಸಿನಲ್ಲಿ ವಿಪರೀತ ಕೆಲಸದ ಒತ್ತಡದಲ್ಲಿರುವಾಗ ಇದ್ದಕ್ಕಿದ್ದಂತೆ ತೊಡಗುವ ಟೀವಿ ಸೀರಿಯಲ್ ಕುರಿತ ಅಥವಾ ಡಿಸ್ಕೊಂಟ್ ಸೇಲ್ ಕುರಿತ, ಎಲ್ಲೋ ಯಾರನ್ನೋ ಯಾರೋ ಇಟ್ಟುಕೊಂಡಿರುವುದರ ಕುರಿತ ಏರು ಧ್ವನಿಯ ಚರ್ಚೆ. ಮನೆಯಲ್ಲಿ ಏನೋ ರಾದ್ಧಾಂತ ನಡೆಯುತ್ತಿರುವಾಗ ಬರುವ ನೀವು ತುಂಬ ಗೌರವಿಸುವ ವ್ಯಕ್ತಿಯೊಬ್ಬರ ಫೋನು ಅಥವಾ ನಿಮ್ಮ ಪ್ರೇಯಸಿಯ ಫೋನು! ನಿಮ್ಮ ಕತೆ ಸ್ವೀಕೃತವಾಗಿರುವ ಬಗ್ಗೆ ಬರುವ ಸಂಪಾದಕರ ಪತ್ರ.

ಒಂದು ಜಗತ್ತಿನಿಂದ ಇನ್ನೊಂದು ಜಗತ್ತಿಗೆ ಮನಸ್ಸು ಶಿಫ್ಟ್ ಆಗುವುದು ಮತ್ತು ಆ ನಂತರ ನಿಮ್ಮ, ನೀವು ಮೊದಲಿದ್ದ ಜಗತ್ತಿಗೆ (ಅಥವಾ ಮೂಡ್‌ಗೆ ಮತ್ತೆ ವಾಪಾಸಾಗುವುದು - ಈ ಪ್ರಕ್ರಿಯೆಗಳನ್ನು ಸ್ವಲ್ಪ ಗಮನವಿಟ್ಟು ನೋಡಿದರೆ ಈ ಸಂಘರ್ಷಗಳ ಸೂಕ್ಷ್ಮ ಮತ್ತು ಅವು ತೀವ್ರಗೊಳಿಸುವ ವೈರುಧ್ಯಮಯ ಸಂವೇದನೆಗಳ ಒಂದು ವಿಶಿಷ್ಟ ಸಂಚಲನ ಇತ್ಯಾದಿಗಳು ಅರ್ಥವಾಗುತ್ತವೆ.

ಇವುಗಳ ಹೊರತಾದ ಸಂಘರ್ಷಗಳು ಹಲವು ಇವೆ ಮತ್ತು ಅವು ಇವೆಲ್ಲಕ್ಕಿಂತ ಹೆಚ್ಚು ತೀವ್ರತರವಾದವು ಕೂಡಾ ಆಗಿರುವುದು ಸಾಧ್ಯವಿದೆ. ಮನಸ್ಸಿನ ಒಂಟಿತನ, ಖಾಲಿತನದೊಂದಿಗೆ ನೀವು ವ್ಯಸ್ತರಾಗಿರುವ ಘಳಿಗೆಯನ್ನು ಇನ್ನೊಂದು ಜಗತ್ತಿನ ಸದ್ದು-ಗದ್ದಲ-ಚರ್ಚೆ-ಅಟ್ಟಹಾಸ ನಿಮ್ಮಿಂದ ಕಸಿದುಕೊಳ್ಳುವ ಸಂದರ್ಭಗಳು, ನಿಮ್ಮ ಇಚ್ಛೆಗೆ ವಿರುದ್ಧವಾಗಿ ಇನ್ನೊಬ್ಬರಿಗಾಗಿ ಮನಸ್ಸಿಲ್ಲದ ಕೆಲಸವನ್ನು ಮಾಡಬೇಕಾಗಿ ಬಂದ ಸನ್ನಿವೇಶಗಳು ಇತ್ಯಾದಿ ಇತ್ಯಾದಿ.

ಈ ಜಗತ್ತುಗಳಲ್ಲಿ ಆಂತರಿಕವಾಗಿಯೂ ಮತ್ತು ಈ ವಿಭಿನ್ನ ಜಗತ್ತುಗಳ ನಡುವೆಯೂ ಪರಸ್ಪರ ಯಾಕೆ ಸಂಘರ್ಷವೇ ಇರಬೇಕು, ಸೌಹಾರ್ದ, ಸಂತುಲನ, ಸಮರ್ಥ ಸಂಕಲನವೊಂದು ಯಾಕಿರಬಾರದು ಎಂದು ಕೇಳಬಹುದು. ಖಂಡಿತವಾಗಿಯೂ ಇರುತ್ತದೆ, ಇರುವುದು ಸಾಧ್ಯ ಮತ್ತು ಇರಬೇಕಾದುದೇ ಹಾಗಲ್ಲವೆ! ಆದರೆ ಸದ್ಯ ಮಾತನಾಡುತ್ತಿರುವುದು ಸಮಸ್ಯೆಯ ಬಗ್ಗೆ, ಸುಖದ ಬಗ್ಗೆ ಅಲ್ಲ ಅಷ್ಟೆ.

Lunatic in my Head ಕಾದಂಬರಿಯ ಕೇಂದ್ರವೇ ಸಮಸ್ಯೆ, ಸಂಘರ್ಷ, ವಿಕ್ಷಿಪ್ತ ಮತ್ತು ವಿಕಲ್ಪ. ಹಾಗಾಗಿಯೇ ಇದು ಓದುಗನನ್ನು ಅಸ್ವಸ್ಥಗೊಳಿಸಬಲ್ಲಷ್ಟು ನೇರವಾಗಿ ಅವನಿಗೆ ಅವನನ್ನು ಕಾಣಿಸಬಲ್ಲ ಕಸು ಹೊಂದಿದೆ ಮಾತ್ರವಲ್ಲ ಅದಕ್ಕೆ ಅಗತ್ಯವಾದ ಸಂವೇದನಾ ತಂತುಗಳನ್ನು, ಮೊನೆಗಳನ್ನು, ಮುಳ್ಳುಗಳನ್ನು ಹೊಂದಿದೆ. ಈ ಎಲ್ಲವುಗಳ ಮೂಲಕ ಓದುಗನನ್ನು, ಅವನ ಮನೋಲೋಕವನ್ನು ಹಾಯಿಸುವುದರ ಮೂಲಕವೇ ಅವನಿಗೆ ಅವನ ಸ್ವಾಸ್ಥ್ಯವನ್ನು , ದರ್ಶನವನ್ನು, ಬದುಕನ್ನು ಕಂಡುಕೊಳ್ಳಲು ಹಾದಿ ತೆರೆಯುವುದು ಈ ಕಾದಂಬರಿಯ ವೈಶಿಷ್ಟ್ಯ ಮತ್ತು ಹೆಚ್ಚುಗಾರಿಕೆ.

ಸುಮ್ಮನೇ ಇಲ್ಲಿ ಬರುವ ಪಾತ್ರಗಳನ್ನು ಮತ್ತು ಅವುಗಳ ಒಳಜಗತ್ತನ್ನು - ಹೊರಜಗತ್ತನ್ನು ಗಮನಿಸುತ್ತ ಹೋದರೇ ತೆರೆದುಕೊಳ್ಳುವ ವಿರಾಟ್ ದರ್ಶನ ಬೆಚ್ಚಿ ಬೀಳಿಸುವಂತಿದೆ. ಫಿರ್ದೌಸ್ ಅನ್ಸಾರಿ ಮಿಶನರಿ ನನ್‌ಗಳ ಕಾಲೇಜೊಂದರಲ್ಲಿ ಇಂಗ್ಲೀಷ್ ಉಪನ್ಯಾಸಕಿ. ಇವಳಿಗೆ ತಂದೆ-ತಾಯಿ ಇಲ್ಲ. ಅವರು ರೈಲು ಅಪಘಾತವೊಂದರಲ್ಲಿ ದುರಂತ ಮರಣವನ್ನಪ್ಪಿದ್ದಾರೆ. ಪ್ರಸ್ತುತ ಮುದುಕ ಅಜ್ಜ, ತಾಯಿಯ ತಂದೆಯೊಂದಿಗೆ ವಾಸ. ತೀರ ಸಂಪ್ರದಾಯವಾದಿಯಾದ ಈ ಹಣ್ಣುಹಣ್ಣು ಮುದುಕನಿಗೆ ಅವನದೇ ಆದ ಜಗತ್ತಿದೆ, ವ್ಯಾಪಾರ, ವ್ಯವಹಾರ, ಆಸ್ತಿ, ಗೆಳೆಯರು ಇತ್ಯಾದಿ ಎಲ್ಲ ಇವೆ. ಒಂದೇ ಸೂರಿನಡಿ ಇರುವ ಇವರ ಬದುಕಿನ ಸಂಯುಕ್ತ ಭಾಗ ತೀರ ಕಡಿಮೆ. ಒಬ್ಬರ ಬದುಕಿನಲ್ಲಿ, ಜಗತ್ತಿನಲ್ಲಿ ಇನ್ನೊಬ್ಬರು ಇಲ್ಲದ ಭಾಗವೇ ಹೆಚ್ಚು. ಇವರ ನಡುವಿನ ಸಂಬಂಧ ಅಜ್ಜ-ಮೊಮ್ಮಗಳದು - ಅಷ್ಟೆ ಮತ್ತು ಅಷ್ಟೇ. ಫಿರ್ದೌಸ್ ವಯಸ್ಸು ಮೀರುತ್ತಿದ್ದರೂ ಇನ್ನೂ ಮದುವೆಯಾಗಿಲ್ಲ. ಜೇನ್ ಆಸ್ಟಿನ್, ಹೆಮ್ಮಿಂಗ್ವೇ, ಎಂಫಿಲ್ ಈಕೆಯ ಔದ್ಯೋಗಿಕ ಅಗತ್ಯವಾಗಿರುವಂತೆಯೇ ಖಾಸಗಿ ಅಗತ್ಯ ಕೂಡಾ ಆಗಿರುವ ಲಕ್ಷಣಗಳಿವೆ. ಆದರೆ ಈ ಯಾವ ಪ್ರವೃತ್ತಿಯಲ್ಲೂ ಕಳೆದ ನಾಲ್ಕು ವರ್ಷಗಳಿಂದ ಯಾವುದೇ ‘ಹೊಸತು’ ಹುಟ್ಟಿದ್ದಿಲ್ಲ. ಕಾಲೇಜಿನಲ್ಲಿ staff roomನ ನಾನಾ ತರದ ಕ್ಷುಲ್ಲಕ-ಕ್ಷುದ್ರ ಜಗಳಗಳು, ಕಿರಿಕಿರಿಗಳು, ತಕರಾರುಗಳಲ್ಲಿ ಈಕೆಯ ಮನಶ್ಶಾಂತಿ ಕೆಡುತ್ತಿದೆ. ದೂರ ನಿಲ್ಲಲು ಪ್ರಯತ್ನಿಸಿದಷ್ಟೂ ಈ ನೀಚತನದ ಜಗತ್ತು ಇವಳನ್ನು ಸೆಳೆದುಕೊಳ್ಳುತ್ತಿದೆ. ಇಬೊಮ್ಚನ ಜೊತೆಗೆ ಸ್ನೇಹದಂಥ, ಪ್ರೇಮದಂಥ ಒಂದು ಗೊಂದಲಗೊಂಡ ಸಂಬಂಧ-ಸಂಪರ್ಕ ಈಕೆಗಿದ್ದರೂ ವಯಸ್ಸು, ಧರ್ಮ, ವಿದ್ಯೆ, ಉದ್ಯೋಗ, ಪ್ರವೃತ್ತಿ ಯಾವುದರಲ್ಲೂ ತಾಳ-ಮೇಳವಿಲ್ಲದ ಒಂದು ವಿಲಕ್ಷಣ ಸಂಬಂಧವದು. ವ್ಯಕ್ತಿತ್ವದ, ಒಳಗಿನ ಟೊಳ್ಳು-ಖಾಲಿತನಗಳಿಂದ ಪಾರಾಗಲು ಹೂಡಿದ ಪಲಾಯನಕ್ಕೆ ಸಿಕ್ಕ ಪ್ರತಿಫಲದಂತೆ ಒಬ್ಬರಿಗೊಬ್ಬರು ಸಿಕ್ಕಿದ ಅಸಂಗತ ಸಂಬಂಧ ಕೂಡ ಕೂಡಿಕೊಳ್ಳುವುದಕ್ಕಿಂತ ದೂರ ಸರಿಯುವುದರತ್ತ ಆಸಕ್ತಿ ಹೊಂದಿದಂತಿದೆ.

ಇಷ್ಟರೊಳಗೇ ಇರುವ ಸಂಘರ್ಷಗಳು ಈಗಾಗಲೇ ನಿಮ್ಮ ಅರಿವಿಗೆ ಬಂದಿರುತ್ತವೆ. ಕಾದಂಬರಿ ಇಂಥ ಇನ್ನಷ್ಟು ಮನೆಗಳನ್ನು ಹೊಕ್ಕು ಬರುತ್ತದೆ. ಮನೆಗಳ ಒಳಗಿನ ಮನಸ್ಸುಗಳು ಬೆಸೆದುಕೊಂಡಿರುವುದು ಕಾಣುವುದಿಲ್ಲ. ಎಲ್ಲೆಲ್ಲೂ ಬಿರುಕುಗಳಿವೆ, ಬಾಯ್ಬಿಟ್ಟು ಹಲ್ಲುಕಿರಿದು ವ್ಯಂಗ್ಯವಾಗಿ ನಕ್ಕು ಸ್ವಾಗತಿಸಲು. ಕಾದಂಬರಿಗೆ ತನ್ನ ಹರಹು, ವ್ಯಾಪ್ತಿ ಹಿಗ್ಗಿಸಿಕೊಳ್ಳುವ ತುರ್ತಿದೆ, ಮಹತ್ವಾಕಾಂಕ್ಷೆಯೂ ಇದೆ. ಹಾಗೆ ಅದು ತನ್ನ ಬಾಹುಗಳನ್ನು ಚಾಚಿಕೊಂಡು ವ್ಯಾಪಿಸಿಕೊಂಡು ಬೆಳೆಯುತ್ತದೆ. ಇಡೀ ಶಿಲ್ಲಾಂಗ್ ನಗರವನ್ನು ಅಲ್ಲಿನ ಮಳೆ, ಚಳಿ, ಹೂ ಬಿಸಿಲು, ಮೋಡ, ಗಾಳಿ, ನೆಲದ ಜಾರುವ ಪಾಚಿಗಳೊಂದಿಗೆ; ಅಲ್ಲಿನ ಗುಡ್ಡಗಾಡು, ಪೇಟೆ, ಬೀದಿ, ಸರ್ಕಲ್ಲುಗಳು, ಟ್ಯಾಕ್ಸಿಗಳೊಂದಿಗೆ; ಮುದುಕರು, ಗ್ರಹಸ್ಥರು, ಯುವಕರು, ಮಕ್ಕಳು, ಶಾಲೆ, ಕಾಲೇಜು, ಯೂನಿವರ್ಸಿಟಿ, ಟ್ಯೂಷನ್ನು, ಬೀದಿಬದಿಯ ಅಂಗಡಿ, ಹೋಟೇಲು, ಬ್ಯೂಟಿ ಪಾರ್ಲರು, ಬಿಸಿನೆಸ್ಸು, ಕೆರಿಯರ್ ಕುರಿತ ಚಿಂತೆಗಳೊಂದಿಗೆ; ರಾಕ್ ಮ್ಯೂಸಿಕ್, ಸಿಗರೇಟು, ಡ್ರಗ್ಸ್, ಹಫ್ತಾ, ಬೀದಿ ಜಗಳ, ಕೊಲೆಗಳೊಂದಿಗೆ; ಚರ್ಚು, ಮದುವೆ, ಹ್ಯಾಪನಿಂಗ್, ಸಂಶೋಧನೆ, ವಿರಕ್ತಿಗಳೊಂದಿಗೆ ಕಟ್ಟಿಕೊಡಲು ಅತ್ಯಂತ ಸಹಜ, ಸರಳ ಸುಂದರ ನೆಲೆಯಲ್ಲಿ ಪ್ರಯತ್ನಿಸುವ ಕಾದಂಬರಿ ಕೈಗೆತ್ತಿಕೊಂಡ ಕ್ಯಾನ್ವಾಸ್ ದೊಡ್ಡದು. ಈ ಎಲ್ಲ ವಿವರಗಳ ಆಚೆಗೂ ತನ್ನ ಜೀವಸೆಲೆಯೋ ಎಂಬಂತೆ ಅಪ್ಪಿಕೊಂಡ ವಸ್ತುಲೋಕದ, ಮನುಷ್ಯ ಜಗತ್ತಿನ, ಮನೋಲೋಕದ ವಿಚ್ಛಿದ್ರಕಾರಿ ಅಂಶಗಳ, fragmented element ಗಳೇ ತುಂಬಿರುವ ಒಂದು ಚದುರಿದ ಚಿತ್ರಗಳ ಛಾಯೆಯಿಂದ ಮುಕ್ತಗೊಂಡು ನಿಲ್ಲುವಲ್ಲಿ ಬಯಸಿಯೇ ಎಂಬಂತೆ ವಿಫಲವಾಗುವುದು ಸೂಕ್ಷ್ಮವಾದ ನೋಟಕ್ಕೆ ಅರ್ಹವಾಗಿದೆ. ಇದಕ್ಕೆ ಕಾರಣ ಇಲ್ಲಿ ನಾವು ಕಾಣುವ ಮನುಷ್ಯರ ಸ್ವಭಾವವೆ, ಸದ್ಯ ಅವರು ಸಿಕ್ಕಿ ಬಿದ್ದಿರುವ ವಿಲಕ್ಷಣ ಸನ್ನಿವೇಶವೆ, ಹೆಚ್ಚಿನ ಪಾತ್ರಗಳು ಆಡಿ ತೋರಿಸುವಂತೆ ಇದಕ್ಕೆ ಶಿಲ್ಲಾಂಗ್ ನಗರದ ಗುಣವೇ ಕಾರಣವೆ ಅಥವ ಸಾರ್ವತ್ರಿಕವಾಗಿರುವ ಈ ವಿಲಕ್ಷಣ ಅಸ್ವಸ್ಥ ಸ್ಥಿತಿ ಕೇವಲ ವಸ್ತು ಸ್ತಿತಿಯಷ್ಟೇ ಎಂದು ಸ್ವೀಕರಿಸಲ್ಪಡ ಬೇಕಾದ ಸಹಜವೆ!

ಅಮಾನ್‌ನ IAS ತಯಾರಿ, ವೈಫಲ್ಯ, ರಾಕ್ ಮ್ಯೂಸಿಕ್‌ನ ಹುಚ್ಚು, ಸಿಗರೇಟ್ ಸೇವನೆ, ಬೀದಿ ಜಗಳಗಳು, ಅವನ ವೈದ್ಯ ತಂದೆಯ ನಿರ್ಲಿಪ್ತಿ, ಟೀವಿ ಧಾರಾವಾಹಿಯ ಹುಚ್ಚು-ಮೈಕೈ ನೋವು ಮತ್ತು ಮಗನ ಭವಿಷ್ಯದ ಚಿಂತೆ ಹತ್ತಿಸಿಕೊಂಡ ತಾಯಿ, ಅವನ ಸ್ನೇಹಿತರ ಒಂದು ಪಟಾಲಂ, ಕಾನ್‌ಕಾರ್ಡೆಲ್ಲಳ ಪ್ರೀತಿಯನ್ನು ಗೆಲ್ಲುವ ಮೋಹ - ಇವೆಲ್ಲ ತುಂಬಿದ ಜಗತ್ತು ಕೂಡಾ ವೈರುಧ್ಯಗಳ ಮೂಟೆಯೇ. ಇವರ ಮನೆ ಕೂಡಾ ಹೆಸರಿಗೆ ಮನೆ. ಸಂಬಂಧಗಳು ಹೆಸರಿಗೆ ಸಂಬಂಧಗಳು. ಪ್ರತಿಯೊಬ್ಬರೂ ಇನ್ನೊಬ್ಬರೊಂದಿಗೆ ಜೊತೆಯಾಗಿ ಕೂತು ಕುಡಿಯುವುದನ್ನು, ತಿನ್ನುವುದನ್ನು ಕೂಡ ತಪ್ಪಿಸಿಕೊಳ್ಳುವ ಈ ಮೂವರ ನಡುವೆ ಸರಳವಾದ ಸಹಜವಾದ ಮುಖಾಮುಖಿಯೇ ಇಲ್ಲ.

ಫಿರ್ದೌಸ್, ಫ್ಲಾಸಿ, ಅಮಾನ್, ಸೋಫಿ, ನಿವೇದಿತಾ - ಮುಂತಾಗಿ ಇಲ್ಲಿ ಬರುವ ವೈರುಧ್ಯಗಳೇ ತುಂಬಿಕೊಂಡಂತಿರುವ ವಿಭಿನ್ನ ವಯೋಮಾನದ ಗಂಡು-ಹೆಣ್ಣು ಪಾತ್ರಗಳ ಆಳದ ಒಂಟಿತನ, ಖಾಲಿತನ ಹಲವು ಸಮಾನ ಎಳೆಗಳನ್ನು ಹೊಂದಿಯೂ ಸಮಾನವಲ್ಲದ್ದು. ಅವುಗಳ ಆಳದ ನೋವಿನ ರಾಗ-ತಾನ-ಪಲ್ಲವಿ ಬೇರೆ ಬೇರೆಯೇ. ಫಿರ್ದೌಸ್ ತಾನು ಇಬೊಮ್ಚನಲ್ಲಿ ಅದು ಸಿಗಲಾರದು ಎಂಬ ಅನುಮಾನಗಳಲ್ಲೇ ಹುಡುಕುತ್ತಿರುವುದು, ಖಾಲಿ ಗೋಡೆ, ಜಾಗಗಳ ಮನೆಯಲ್ಲಿ ವಾಸಿಸುವ ಖಾಲಿ ಮನದ ಫ್ಲಾಸಿ ಸ್ವತಃ ತಾನು ನಿವೇದಿತಾಳ ಸಮಸ್ಯೆಯನ್ನು ತನ್ನದಾಗಿಸಿಕೊಂಡು ನರಳುತ್ತಿರುವುದು, ಅಮಾನ್ ಮುಗ್ಧ ಕಾನ್‌ಕಾರ್ಡೆಲ್ಲಾಳ ಸಂಬಂಧದಲ್ಲಿ ಪಡೆಯಲೆತ್ನಿಸುತ್ತಿರುವುದು, ಹಿಪ್ನಾಟಿಸಂಗೆ ಒಳಗಾದವಳಂತಿರುವ ಕಾನ್‌ಕಾರ್ಡೆಲ್ಲಾ ತನ್ನ ಭ್ರಮಾತ್ಮಕ ಜಗತ್ತಿನ ಕ್ರಿಸ್ತ ಮತ್ತು ಕ್ರಿಶ್ಚಿಯಾನಿಟಿಯನ್ನಿಟ್ಟುಕೊಂಡು ಆಸರೆಗೆ ಏನನ್ನೋ ಹುಡುಕುತ್ತಿರುವ ಅತಂತ್ರಳಂತೆ ಕಾಣುತ್ತಿರುವಾಗಲೂ ಅವಳ ಈ ಅತಂತ್ರ ಸ್ಥಿತಿಗೆ, ಭ್ರಮೆಗೆ, ಹುಡುಕಾಟಕ್ಕೆ ಮೂಲವಾದ ಹುಡುಕಾಟ ಯಾವುದು ಎನ್ನುವ ಪ್ರಶ್ನೆ ನಮ್ಮನ್ನು ಕಾಡುವುದು, ಆರೇಳು ವರ್ಷದ ಪುಟ್ಟ ಸೋಫಿ ತನ್ನ ಬಗ್ಗೆ ತಾನೇ ಸುಳ್ಳು-ಸತ್ಯಗಳು ವಿಂಗಡಿಸಲಾಗದಂತೆ ಸೇರಿಕೊಂಡಿರುವ ಕತೆಗಳನ್ನು ಸೃಷ್ಟಿಸಿಕೊಂಡು ತನ್ನ ಶಾಲೆಯ ಮಿಸ್, ಇದೀಗ ನಿರುದ್ಯೋಗಿಯಾಗಿ ಕಳೆಗುಂದಿರುವ ತಂದೆ, ಗರ್ಭಿಣಿ-ಬಾಣಂತಿತನಗಳ ಮಧ್ಯೆ ಏಗಲಾರದೆ ಏಗುತ್ತಿರುವ ತಾಯಿ, ಮ್ಯಾನೀಟರ್ ಆಫ್ ಮಾಲ್ಗುಡಿಯ ದೈತ್ಯನಂತಿರುವ ಜಾಸನ್, ಮುದುಕಿ ಎಲ್ಸಾ - ಎಲ್ಲರಿಂದ ಪಡೆಯಲೆತ್ನಿಸುತ್ತಿರುವುದು, ಗಂಡನ ವಿವಾಹೇತರ ಸಂಬಂಧವನ್ನು ಒಂದರ್ಥದಲ್ಲಿ ‘ಬಳಸಿಕೊಂಡು’ ನಿವೇದಿತಾ ಪಡೆಯಲೆತ್ನಿಸುತ್ತಿರುವುದು - ಒಂದೇ ಅನಿಸುತ್ತಿರುವಾಗಲೂ ಅದು ಒಂದೇ ಅಲ್ಲದ ಸಂಕೀರ್ಣ ಆಯಾಮಗಳನ್ನು ಹೊಂದಿದೆ ಮತ್ತು ಕಾದಂಬರಿ ಅದನ್ನು ಸಮರ್ಥವಾಗಿಯೇ ಹಿಡಿದಿಟ್ಟಿದೆ.

ಮನುಷ್ಯನ ಈ ನಿರಂತರವಾದ ಹುಡುಕಾಟದ ಮೂಲ ಅವನ ಆಳದ ಖಾಲಿತನ, ಟೊಳ್ಳು ಮತ್ತು ಹಿಂಸೆಯಾಗಿ ಬಿಟ್ಟ ಒಂಟಿತನದಲ್ಲಿದೆ. ಹುಡುಕುತ್ತಿರುವುದು ಒಂದು ಹನಿ ಪ್ರೀತಿಯೇ ಇರಬಹುದು. ಆದರೆ ಮನಸ್ಸಿನ ಹಠಮಾರಿತನ, ಮೊಂಡು ಮತ್ತು ಸಿಕ್ಕಿದ್ದನ್ನು ಸ್ವೀಕರಿಸದೆ ಸಿಗಲಾರದ್ದಕ್ಕೆ ಹಂಬಲಿಸುವ ಹುಚ್ಚುಕೋಡಿತನದ ಅರಿವು ಲೇಖಕಿಗಿದೆ. ಮನುಷ್ಯನ ಬದುಕಿನ, ಅವನ ವಿಭಿನ್ನ ಜಗತ್ತುಗಳ, ವೈರುಧ್ಯಮಯ ಮನೋಭೂಮಿಕೆಯ ನಡುವಿನ ಎಲ್ಲ ಸಂಘರ್ಷಗಳ ಮೂಲ ಕೂಡಾ ಇದೇ ರೋಗದ ಆಸುಪಾಸಿನಲ್ಲೇ ಇದ್ದಿರಬಹುದಾದ ಸತ್ಯದ ಹೊಳಹನ್ನು ಕೂಡಾ ಕಾದಂಬರಿ ಹೊಂದಿದೆ. ಆದರೆ ಇದಂಮಿತ್ಥಂ ಎನ್ನುವ ಧ್ವನಿ ಕಾದಂಬರಿಯದಲ್ಲ. ಮೇಲ್ನೋಟಕ್ಕೆ ಕಾದಂಬರಿ ಸಂಘರ್ಷಗಳನ್ನು ಚಿತ್ರಿಸುವಲ್ಲಿ, ವಿಕ್ಷಿಪ್ತ ವಿಕಲ್ಪಗಳನ್ನು ಕಾಣಿಸುವಲ್ಲಿಯೇ ವ್ಯಸ್ತ. ಹೀಗಾಗಿ ಕಾದಂಬರಿ ಹೇಳುವುದನ್ನು ನೆಚ್ಚಿದರೆ ಸಾಕಾಗುವುದಿಲ್ಲ. ಅದು ಕಾಣಿಸುವುದರತ್ತ ಹೆಚ್ಚು ಎಚ್ಚರದ ತಂತ್ರಗಳನ್ನು ಬಳಸಿಕೊಳ್ಳುವ ನೈಪುಣ್ಯವನ್ನೂ ಮೆರೆಯುವುದರಿಂದ ಹೆಚ್ಚು ಸೂಕ್ಷ್ಮವಾದ ಓದನ್ನು ಬಯಸುತ್ತದೆ ಎನ್ನುವುದು ನಿಜವೇ. ಇದು ಕೆಲವು ಸಮಸ್ಯೆಗಳನ್ನು ಹೊಸದಾಗಿ ತೆರೆಯುತ್ತದೆ.

ಇಷ್ಟರಲ್ಲಿಯೇ ತಿಳಿಯುವಂತೆ ಕಾದಂಬರಿ ಎತ್ತಿಕೊಂಡಿರುವ ವಸ್ತು-ವಿಷಯ ಸವಾಲಿನದ್ದು. ಸರಳವಾದ ಸಂಕಥನದ ಒಂದು ಹಂದರದ ಮೂಲಕ ಇಲ್ಲಿನ ಹಳಹಳಿಕೆಗಳಾಗಲೀ, ತಲ್ಲಣಗಳಾಗಲೀ, ಅವು ಹುಟ್ಟಿಸುವ ಸಂಘರ್ಷಗಳ ಒಳಸುಳಿಗಳನ್ನಾಗಲೀ ಒಳಹೊಕ್ಕು ನೆಟ್ಟನೋಟದ ನಿಖರತೆಯಿಂದ ದಿಟ್ಟಿಸುವುದಾಗಲೀ ಸಾಧ್ಯವಿಲ್ಲ ಎನ್ನುವುದು ಯಾರಿಗಾದರೂ ಅರ್ಥವಾಗುತ್ತದೆ. ಹಾಗಾಗಿ ಇಲ್ಲಿ ಎಲ್ಲ ವಿವರ, ಕಥಾನಕ, ವಿದ್ಯಮಾನಗಳು-ಸನ್ನಿವೇಶಗಳು-ಘಟನೆಗಳನ್ನು ಮೀರಿದ ಒಂದು ಅನಿವಾರ್ಯ ಅಗತ್ಯ ಇಂಥ ಕಾದಂಬರಿಗಿದೆ. ಅದು ಭಾಷೆ. ಅಂಜುಂ ಹಸನ್ ಒಬ್ಬ ಕವಯತ್ರಿಯಾಗಿ ಭಾಷೆಯ ಲಯ, ಧ್ವನಿಶಕ್ತಿ ಮತ್ತು ಪ್ರತಿಮಾ ವಿಧಾನಗಳನ್ನು, ಅವುಗಳ ಸೂಕ್ಷ್ಮವನ್ನು ಬಲ್ಲವರು. ಹಾಗಾಗಿ ಅವರ ವಿಶಿಷ್ಟ ಮತ್ತು ಸಮೃದ್ಧವಾದ ಭಾಷೆ ಇಡೀ ಕಾದಂಬರಿಯನ್ನು ನಿರ್ವಹಿಸುವ ಗುರುತರವಾದ ಹೊಣೆಯನ್ನು ಇಲ್ಲಿ ಹೊರಬೇಕಾಗಿದೆ. ಅಂಜುಂ ಹಸನ್‌ರ ಭಾಷೆ ಮತ್ತು ಶಬ್ದಗಳ ಔಚಿತ್ಯಪೂರ್ಣ ಬಳಕೆಯಿಂದಾಗಿ ಅವರಿಗೆ ಅನೇಕ ಕಡೆಗಳಲ್ಲಿ ಭಾಷೆಯ ಮೂಲಕ ಹೇಳುವುದನ್ನು ಭಾಷೆಯ ಮಿತಿಯನ್ನು ಮೀರಿ ಕಾಣಿಸುವುದು ಸಾಧ್ಯವಾಗುವಂತೆ ಮಾಡಿದೆ. ಕಾದಂಬರಿಯನ್ನು ಓದಲು ತೊಡಗಿದಾಗ ಮೊತ್ತ ಮೊದಲು ನಮ್ಮನ್ನು ತಡೆ ಹಿಡಿದು ಸಾಗುವುದು ಇಲ್ಲಿನ ಭಾಷೆಯೇ.

ಕಾದಂಬರಿಯನ್ನು, ಅಲ್ಲಿನ ಕೆಲವು ವೈಶಿಷ್ಟ್ಯಗಳನ್ನು ನೇರವಾಗಿ ಗಮನಿಸುವುದಕ್ಕೆ ಮುನ್ನ ಚರ್ಚಿಸಬೇಕಾದ ಇನ್ನೊಂದು ಅಂಶವಿದೆ. ಈ ಕಾದಂಬರಿಯಲ್ಲಿ ಬರುವ ಫಿರ್ದೌಸ್ ಮತ್ತು ಅವಳ ಅಜ್ಜ ಸೇರಿದ ಪುಟ್ಟ ಕುಟುಂಬವಾಗಲಿ, ಅಮಾನ್ ಮತ್ತು ಅವನ ತಂದೆ ತಾಯಿಯರ ಕುಟುಂಬವಾಗಲಿ, ದಾಸ್ ದಂಪತಿಗಳು ಮತ್ತು ಸೋಫಿಯ ಕುಟುಂಬವಾಗಲಿ, ಎಲ್ಸಾ ಮತ್ತವಳ ಮಗ ಜಾಸನ್‌ರ ಕುಟುಂಬವಾಗಲಿ ಎಲ್ಲೂ ಪರಸ್ಪರ ಮುಖಾಮುಖಿಯಾಗುವ ಸಂದರ್ಭವಿಲ್ಲ. ಅಂಥ ಸನ್ನಿವೇಶಗಳೆ ಬರುವುದಿಲ್ಲವೆಂದಲ್ಲ, ಬಂದರೂ ಅವು ವಿಲಕ್ಷಣವಾದ ಬಗೆಯಲ್ಲಿ ತಪ್ಪುಗಂಟಾಗಿ ಬಿಡುತ್ತವೆ. ಉದಾಹರಣೆಗೆ ಇಂಗ್ಲೀಷ್ ಭಾಷೆಯಲ್ಲಿ ಸ್ವಲ್ಪ ಸಹಾಯ ಮಾಡುವಂತೆ ಪ್ರೊಫೆಸರ್ ದಾಸ್ ಬಳಿ ಫೋನಿನಲ್ಲಿ, ಪತ್ರದಲ್ಲಿ ಬೇಡಿಕೊಳ್ಳುವ ಅಮಾನ್ ಎಂದೂ ನೇರವಾಗಿ ಭೇಟಿಯಾಗುವುದೂ ಇಲ್ಲ, ದಾಸ್ ಅವನ ಬೇಡಿಕೆಯನ್ನು ಯಾವತ್ತೂ ಮನ್ನಿಸುವುದೂ ಇಲ್ಲ. ಹಾಗೆಯೇ, ಪ್ರೊಫೆಸರ್ ದಾಸ್ ಆಗಲಿ, ಮಿಸೆಸ್ ದಾಸ್ ಆಗಲಿ ತಮ್ಮ ನೆರೆಯವರೂ, ತಮ್ಮ ವಾಸದ ಮನೆಯ ಯಜಮಾನಿಯೂ ಆದ ಎಲ್ಸಾರನ್ನು ಭೇಟಿಯಾಗುವ ಸನ್ನಿವೇಶ ಹುಟ್ಟುವುದು ಎಲ್ಸಾ ಸತ್ತಾಗ. ಆಗಲೂ ಆ ಮನೆಯ ವಾರಸುದಾರ ಜಾಸನ್ ಹೊರಬರುವುದಿಲ್ಲ. ದಾಸ್ ಅಂತಿಮದರ್ಶನಕ್ಕೂ ಹೋಗುವುದಿಲ್ಲ. ಇನ್ನು ಫಿರ್ದೌಸ್ ಮತ್ತು ಅಮಾನ್ ಹಲವು ಬಾರಿ ಒಂದೇ ಬಾಡಿಗೆ ಕಾರಿನಲ್ಲಿ, ನಡೆದಾಡುತ್ತ ಬೀದಿಯಲ್ಲಿ ಮುಖಾಮುಖಿಯಾದರೂ ಈಕೆಯೇ ತಮ್ಮ ಗೆಳೆಯ ಇಬೊಮ್ಚನ ಪ್ರೇಯಸಿ ಎಂಬುದು ಅಮಾನ್‌ಗೆ ತಿಳಿಯುವ ಸಂದರ್ಭ ಬರುವುದಿಲ್ಲ. ಒಮ್ಮೆ ಒಂದೇ ಕಡೆ ಅಮಾನ್, ಸೋಫಿ ಮತ್ತು ಫಿರ್ದೌಸ್ ಸೇರಿದರೂ ಭೂಕಂಪದ ನೆಲೆಯಲ್ಲಿ ಚದುರುತ್ತಾರೆ. ಮುಂದೆ ನಾವು ಗಮನಿಸಲಿರುವ ಪುಟ 269ರಲ್ಲಿ ಇದನ್ನು ವಿವರಿಸುವ ಕೆಲವು ಸಾಲುಗಳಿಗೆ ಈ ನೆಲೆಯಲ್ಲಿ ವಿಶೇಷ ಮಹತ್ವವಿದೆ. ಶಿಲ್ಲಾಂಗ್‌ನ ಬೀದಿಯಲ್ಲಿ ಈ ಪಾತ್ರಗಳು ತಮಗೇ ತಿಳಿಯದ ಹಾಗೆ ಹಾದು ಹೋಗುವುದುಂಟು. ವ್ಯಾವಹಾರಿಕವಾಗಿ ಒಂದೆರಡು ಮಾತನಾಡುವುದುಂಟು. ವ್ಯಕ್ತಿ ಯಾರೆಂದು ತಿಳಿಯದೇ ಇದ್ದರೂ ಮನೆಕೆಲಸದವಳಿಂದ ಪರಸ್ಪರರ ಬಗ್ಗೆ ತಿಳಿದುಕೊಳ್ಳುವುದುಂಟು. ಆದರೆ ನೇರವಾದ ಮುಖಾಮುಖಿ ಇಲ್ಲವೇ ಇಲ್ಲ. ಒಂದೇ ಶಿಲ್ಲಾಂಗ್‌ನ ಹೆಚ್ಚು ಕಡಿಮೆ ದಿನವೂ ಭೇಟಿಯಾಗಬಹುದಾದ ಒಂದು ಅಂತರದಲ್ಲೇ ವಾಸಿಸುತ್ತಿರುವ ಈ ಕುಟುಂಬಗಳು ಫೋನಿನಲ್ಲಿ ಮಾತನಾಡಿಕೊಂಡರೂ ಪರಸ್ಪರರಿಗೆ ಅಮೂರ್ತ, ಅಗೋಚರ, ಅಪರಿಚಿತ ವ್ಯಕ್ತಿಗಳೇ ಆಗಿ ಉಳಿಯುವುದರ ಭೀಕರತೆಯನ್ನು ಗಮನಿಸಿ. ಇದು ಸೂಚಿಸುವ ವಿಘಟಿತ ಸಮಾಜ ವ್ಯವಸ್ಥೆಯನ್ನು ಗಮನಿಸಿ. ತನ್ನ ಸಹೋದ್ಯೋಗಿ ನಿವೇದಿತಾಳ ಪತಿ ಮತ್ತು ತಾನು ನಿಯಮಿತವಾಗಿ ಭೇಟಿ ನೀಡುವ, ವೈಯಕ್ತಿಕವಾಗಿ ತನಗೆ ನಿಕಟಳಾದ ಬ್ಯೂಟಿಪಾರ್ಲರಿನ ಶರೋನ್‌ಳ ಗೆಳೆಯ ನೀಲ್ ಒಬ್ಬನೇ ವ್ಯಕ್ತಿ ಎನ್ನುವುದು ಕೂಡಾ ಫಿರ್ದೌಸ್‌ಗೆ ಕೊನೆತನಕ ಗೊತ್ತಿಲ್ಲ! ಅಂದರೆ, ಈ ಕಾದಂಬರಿಯ ಪ್ರಮುಖ ಘಟಕಗಳಾದ ಸಂಸಾರಗಳಾಗಲೀ, ಆಯಾ ಸಂಸಾರದ ಪ್ರಮುಖ ಪಾತ್ರಗಳಾಗಲೀ ಮುಖಾಮುಖಿಯಾಗುವುದೇ ಇಲ್ಲ ಎನ್ನುವುದು ಬರೇ ಆಕಸ್ಮಿಕವಲ್ಲ. ಕಾದಂಬರಿಯ ಕಥಾನಕಕ್ಕೆ ಅಂಥ ಮುಖಾಮುಖಿಯ ಅಗತ್ಯ ಇಲ್ಲ ಎನ್ನುವುದು ಕೂಡಾ ಕೇವಲ ಆಕಸ್ಮಿಕವಲ್ಲ. ಇದು ಯೋಜಿತ ತಂತ್ರವೇ ಹೊರತು ಇನ್ನೇನಲ್ಲ. ಇದು ಸೂಕ್ಷ್ಮವಾಗಿ ಸೂಚಿಸುವ ನೆಲೆಯನ್ನು ನಾವು ಗ್ರಹಿಸಬಹುದು.

ನೇರವಾಗಿ ಕಾದಂಬರಿಗೆ ಬಂದರೆ ನಮಗೆ ಮತ್ತೆ ಮತ್ತೆ ಎದುರಾಗುವುದು ಜಗಳಗಳು, ಮನಸ್ತಾಪಗಳು, ಹೊಡೆದಾಟ ಮತ್ತು ವಿರಸ. ಇಷ್ಟೇ ಆಗಿದ್ದರೆ ಅದರಲ್ಲೇನು ವಿಶೇಷವಿರಲಿಲ್ಲ. ಈ ವಿದ್ಯಮಾನದ ಹಿಂದೆ-ಮುಂದಿನಲಿ ನಾವು ಗಮನಿಸಬೇಕಾದ್ದು ಇದೆ. ಬೇರೆ ಬೇರೆ ಓದಿಗೆ ಬೇರೆ ಬೇರೆ ಆಯಾಮಗಳು, ಅರ್ಥಗಳು ಗೋಚರಿಸಬಹುದೆಂಬ ಅರಿವಿಟ್ಟುಕೊಂಡೇ ನನ್ನ ಓದಿನ ಅನುಭವಕ್ಕೆ ದಕ್ಕಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಮತ್ತು ನಿಮ್ಮ ಓದು ನಿಮಗೆ ಕರುಣಿಸಬಹುದಾದ್ದನ್ನು ತಿಳಿದುಕೊಳ್ಳುವ ಆಸ್ಥೆಯನ್ನೂ ಇಟ್ಟುಕೊಂಡಿದ್ದೇನೆ.

ಪುಟ 35-36ರಲ್ಲಿ ಬರುವ ಸರಕ್ ಸಿಂಗ್‌ನ ಬೀದಿಬದಿಯ ತಿಂಡಿ ಅಂಗಡಿಯ ಎದುರು ನಡೆಯುವ ಜಗಳ. ಇಬ್ಬರು ಗೂಂಡಾಗಿರಿಯ ಪುಂಡರು ನಡೆಸುವ ಧೂರ್ತತನ, ಅತಿರೇಕದ ವರ್ತನೆ ಮತ್ತು ಅಮಾನ್ ಇದನ್ನು ಎದುರಿಸುವ ತಣ್ಣಗಿನ ರೀತಿಯ ಜೊತೆಜೊತೆಗೇ ಮುಂದಿನ ಕೆಲವೇ ಕ್ಷಣಗಳಲ್ಲಿ ಅವನು ತನ್ನ IAS ಪರೀಕ್ಷೆ, ಕಾನ್‌ಕಾರ್ಡೆಲ್ಲಾಳ ಮುದ್ದು ಮುಖ, ತನ್ನ ಅಭಿಮಾನದ ರಾಕ್ ಸಂಗೀತಕಾರ ರೋಜರ್ ವಾಟರ್ಸ್, ತಾಯಿಯ ಟೀವಿ ಧಾರಾವಾಹಿಯ ಗೋಳುಗಳು, ಗೆಳೆಯ ರಿಬೊರ್ - ಎಲ್ಲವುಗಳ ನಡುವೆ ಸಮಾನ ತಂತುವೇನಾದರೂ ಇದ್ದಿರಬಹುದೆ, ಇವೆಲ್ಲವನ್ನೂ ಸಂಧಿಸುವಂತೆ ಮಾಡಬಲ್ಲ ಎಳೆಯೆಲ್ಲಿಯಾದರೂ ಇರಬಹುದೆ ಎಂದು ಅನುಮಾನಿಸುತ್ತ ತನ್ನಲ್ಲೇ ತಾನು ಕಳೆದು ಹೋಗುವ ಬಗೆಯನ್ನು ಗಮನಿಸಿ. ಮುಂದೆ ಎಂದೋ ಅಮಾನ್‌ನ ತಂದೆ ಮುಂಡೈ ತನ್ನ ಕ್ಲಿನಿಕ್ಕಿಗೆ ನುಗ್ಗಿ ಹಫ್ತಾ ವಸೂಲಿಗೆ ಯತ್ನಿಸಿದ ಪುಂಡರನ್ನು ತಾನು ಪೌರುಷದಿಂದ ನಿಭಾಯಿಸಿದ್ದನ್ನು ಹೇಳುವಾಗಲೂ ಬೀದಿ ಜಗಳದ ಸಂದರ್ಭದಲ್ಲಿ ಅಮಾನ್‌ನ ತಣ್ಣಗಿನ ಪ್ರತಿಸ್ಪಂದನ ನಮಗೆ ಹೇಡಿತನವಾಗಿಯೇನೂ ಕಾಣುವುದಿಲ್ಲ ಎನ್ನುವುದಕ್ಕೆ ಬೇರೆಯೇ ಕಾರಣಗಳಿರಬಹುದು! ಆದರೆ ಎಳೆಗಳು ಇನ್ನೆಲ್ಲೊ ಜೋಡಿಸಲ್ಪಡುತ್ತವೆ, ಆದರೆ ಜೋಡಣೆಯ ದೇಶ-ಕಾಲ ಅಂತರ ಈ ವಿನ್ಯಾಸದ ಅರ್ಥಪರಂಪರೆಯಲ್ಲಿ ವಿಚಲನೆಯನ್ನುಂಟು ಮಾಡುತ್ತವೆ ಎನ್ನುವುದನ್ನು ಕೂಡಾ ಗಮನಿಸಬೇಕು.

ಪುಟ 40ರಲ್ಲಿ ಪುಟ್ಟ ಸೋಫಿಯ ಅನುಮಾನಗಳು, ಗೊಂದಲಗಳು ಬರುತ್ತವೆ. ಅರೆರೆ, ಗಂಡು ಮಗು ಬೇಕು ಅಂತ ಬಯಸೋದಕ್ಕೂ ಅದನ್ನೇ ಪಡೆಯೋದಕ್ಕೂ ಏನಾದರೂ ಸಂಬಂಧವಿರಬಹುದೆ ಎಂದು ಅಚ್ಚರಿಗೊಳ್ಳುವ ಸೋಫಿ ಕೆಲಸದಾಕೆ ಬೀನಾ ಮಾತನ್ನು ಪೂರ್ತಿಯಾಗಿ ನಂಬಲಾರಳು. ಅವಳಿಗೆ ಆ ಮಾತುಗಳಲ್ಲಿ ಲಾಜಿಕ್ ಕಾಣುತ್ತಿಲ್ಲ! ನಿನ್ನಪ್ಪ ಗಂಡೇ ಆಗುವುದು ಅಂತ ಹೇಳ್ತಿದ್ದರು ಕಣೇ ಎನ್ನುವ ಬೀನಾ ಮಾತುಗಳಲ್ಲಿ ಕತೆಯನ್ನು ವರದಿ ಮಾಡುವ ಭಾಷೆಯ ಛಾಯೆ ಇದೆ. ಬೀನಾ ಮಾತುಗಳಲ್ಲಿ ಸೋಫಿಗೆ ತಾನು ಓದಿದ ಕತೆಪುಸ್ತಕಗಳ ಸಂಭಾಷಣೆಯ ಹೊಳಹುಗಳು ಕಾಣುತ್ತವೆಯೇ ಹೊರತು ತನ್ನಪ್ಪ ಅಮ್ಮ ಯಾವತ್ತೂ ಹಾಗೆ ಇಡಿ ಇಡಿ ವಾಕ್ಯಗಳಲ್ಲಿ ಮಾತನಾಡುವುದೇ ಇಲ್ಲವಲ್ಲ ಅನಿಸುತ್ತಿದೆ. ಇಲ್ಲಿ ಮಗು ಸತ್ಯ ಮತ್ತು ಕಲ್ಪನೆಗಳ ಗಡಿಗಳನ್ನು ಗುರುತಿಸುವ ಬಗೆಯನ್ನು ಗಮನಿಸಬೇಕು. ಯಾಕೆಂದರೆ, ಸ್ವತಃ ಸೋಫಿ ಅಪ್ರತಿಮ ಕತೆಗಾರ್ತಿ! ಸತ್ಯ ಮತ್ತು ಕಲ್ಪನೆಯನ್ನು ಅಚ್ಚರಿ ಹುಟ್ಟಿಸುವಂತೆ ಕಲಸಿ ಕತೆ ಹೆಣೆಯಬಲ್ಲ ಈ ಪುಟ್ಟ ಪೋರಿ ಸಂದರ್ಭ ಬಂದಾಗ ಎಂಥೆಂಥ ಕತೆ ಕಟ್ಟುತ್ತಾಳೆಂದರೆ ಅವಳ ಆ ಕಥನಶಕ್ತಿಗೇ ನಾವು ಮೂಕ ಮುಗ್ಧರಾಗಬೇಕು, ಹೊರತು ಅವು ಸುಳ್ಳುಗಳೆನಿಸುವುದೇ ಇಲ್ಲ!

Sophie spoke of her parents in the third person when she was speaking to them about them. Often, in an absent minded sort of way, they referred to themselves in the third person as well (Page 43)

ಮಗುವಿನ ಜಗತ್ತು ಇದು ಎನ್ನುವುದನ್ನು ಮರೆಯುವಂತಿಲ್ಲ. ಆದರೆ ನಿರೂಪಕಿ ಮತ್ತು ಓದುಗನ ಜಗತ್ತಿನಲ್ಲಿ ಗಮನಿಸಲ್ಪಡುತ್ತಿರುವ ಸಂಗತಿ ಎಂಬುದೂ ಅಷ್ಟೇ (ಕಾದಂಬರಿಯ ಕಲ್ಪಿತ ವಾಸ್ತವ) ಸತ್ಯವಾದದ್ದು. ಮಕ್ಕಳ ಬಳಿ ನಾವೆಲ್ಲ ಮಾತನಾಡುವುದೇ ಹಾಗೆ. ಅದೊಂದು ಮುದ್ದು ರೀತಿ. ಮಲಯಾಳಂ ಕತೆ-ಕಾದಂಬರಿಗಳಲ್ಲಿ ಇಂಥವೇ ಮಾತುಗಳು ಬರುತ್ತವೆ, ಮುದ ನೀಡುತ್ತವೆ ಕೂಡ.

"ಪೊನ್ನುಕುಟ್ಟಿ ಪೇಟೆಗೆ ಹೊರಟಿದ್ದಾ ಅಂತ ಕೇಳುವುದು ಉಣ್ಣಿ" ಎಂದು ಪೊನ್ನುಕುಟ್ಟಿಯನ್ನು ಇಲ್ಲಿ ಕೇಳುತ್ತಿರುವುದು ಉಣ್ಣಿಯೇ! ಅದರಲ್ಲೊಂದು ಔನ್ಸ್ ಹೆಚ್ಚುವರಿ ಆತ್ಮೀಯತೆ ಇದೆ! "ನೀವೇನು ಪೇಟೆಗೆ ಹೊರಟಿದ್ದಾ" ಎನ್ನುವ ನೇರ ಪ್ರಶ್ನೆಯಲ್ಲಿ ಇಲ್ಲದ್ದು. ಆದರೆ ಇಲ್ಲಿ ಸೋಫಿ, ದಾಸ್ ದಂಪತಿಗಳ ನಡುವೆ ನಡೆಯುತ್ತಿರುವ ವಿದ್ಯಮಾನ ಈ ಮಕ್ಕಳ ಜಗತ್ತಿಗೆ ಸೇರಿದ ಆತ್ಮೀಯತೆ, ಮುದ್ದು ಎಲ್ಲವನ್ನೂ ದಾಟಿ ಇನ್ನೇನನ್ನೋ ಬೆಟ್ಟು ಮಾಡುವಂತಿರುವುದು ನಿಜ. ಪ್ರೊಫೆಸರ್ ದಾಸ್ ತನ್ನ ಕಾಲೇಜಿನ ಕ್ಷುಲ್ಲಕ ರಾಜಕೀಯ, ಕ್ಷುದ್ರ ಮನಸ್ಸುಗಳು, ನೀಚ ತನ, ಸಣ್ಣತನಗಳನ್ನೆಲ್ಲ ಸಹಿಸುವಷ್ಟೂ ಸಹಿಸಿ, ರೋಸಿ ಯಾವುದೋ ಜ್ವಾಲಾಮುಖಿಯ ಸ್ಫೋಟದ ಭರದಲ್ಲಿ ರಾಜೀನಾಮೆ ಎಸೆದು ಬಂದಿದ್ದಾನೆ. ಸದ್ಯ ನಿರುದ್ಯೋಗಿಯಾಗಿ ತನ್ನ ಸ್ಥಾನ-ಮಾನ-ಗೌರವ-ಪ್ರತಿಷ್ಠೆಗಳಿಗೆ ಎರವಾಗಿ ಕೈಯಲ್ಲಿ ಹಣವಿಲ್ಲದೇ ಕಳೆಗುಂದಿ ಹೋಗಿದ್ದಾನೆ. ಮೂಲೆಯಲ್ಲಿ ಕೂತು ಯಾವುಯಾವುದೋ ಇಂಗ್ಲೀಷ್ ಸಾಹಿತಿಗಳ ಪಠ್ಯದಿಂದ ಏನೇನೋ ಮಾತುಗಳನ್ನು ಉಚ್ಚರಿಸುತ್ತ ಹುಚ್ಚನಂತಾಗಿದ್ದಾನೆ. ಮಿಸೆಸ್ ದಾಸ್ ಬಾಣಂತಿ. ಎಷ್ಟೋ ಕಾಲದ ನಂತರ ಹಂಬಲಿಸಿ ಹುಟ್ಟಿದ ಮಗುವಿಗೆ ಎದೆಯಲ್ಲಿ ಹಾಲಿಲ್ಲ. ಬಾಡಿಗೆ ಮನೆಯ ಬಾಡಿಗೆ ಹಣ ಬಾಕಿಯಾಗಿದೆ. ಇಂಥ ದರಿದ್ರ ಸಮಯದಲ್ಲೇ ಸೋಫಿಗೆ ತಾನು ಸ್ವಂತದ ಮಗಳಲ್ಲ, ತನ್ನನ್ನು ದತ್ತು ತೆಗೆದುಕೊಂಡಿದ್ದು ಎನ್ನುವ ಗುಟ್ಟು ಗೊತ್ತಾಗಿ ಬಿಟ್ಟಿದೆ. ಇದೊಂದು ವಿಚಿತ್ರ-ವಿಲಕ್ಷಣ ಕೌಟುಂಬಿಕ ಸಂದರ್ಭ. ಪುಟ್ಟ ಸೋಫಿ ತೀರಾ ಅತಂತ್ರ ಮನಸ್ಸಿನ ಹುಡುಗಿಯಾಗುವತ್ತ ಎಡವುತ್ತಲೇ ಕೆಲವು ಹೆಜ್ಜೆ ಇಡುತ್ತಿದ್ದಾಳೆ. ಅವಳಲ್ಲಿ ಎಲ್ಲವೂ ವಿಚಿತ್ರ ತಲ್ಲಣಗಳನ್ನೆಬ್ಬಿಸುತ್ತಿದೆ. ಆದರೆ ಆ ಪುಟ್ಟ ಮಗುವಿನ ಮನೋಲೋಕದ ವಿದ್ಯಮಾನಗಳಿಗೆ ಭಾಷೆಯ ಸ್ಪರ್ಶವಿಲ್ಲ! ಹಾಗಾಗಿ ಇವೆಲ್ಲ ಅವಳ ಸುಪ್ತಮನಸ್ಸಿನ ವಿದ್ಯಮಾನಗಳಾಗಿಯೇ ಉಳಿದರೂ ಅವಳ ವರ್ತನೆಯಲ್ಲಿ, ಯೋಚನಾ ಲಹರಿಯಲ್ಲಿ, ಮಾತಿನಲ್ಲಿ ಅಭಿವ್ಯಕ್ತಿ ಪಡೆಯುವುದನ್ನು ನಿರೂಪಕಿ ನಮಗೆ ಭಾಷೆಯ ಮೂಲಕವೇ ದಾಟಿಸಬೇಕಲ್ಲ! ಇಲ್ಲೆಲ್ಲ ಸೋಫಿಯ ಒಂದೊಂದೂ ಮಾತು, ಕತೆ, ಕಲ್ಪನೆ, ನಡವಳಿಕೆ, ಅನಿರೀಕ್ಷಿತ-ಅನಪೇಕ್ಷಿತ ವರ್ತನೆಯ ಪರಿಣಾಮ, ಅದರ ಎಲ್ಲ ಸೂಕ್ಷ್ಮ, ಅದರ ಆಳದ ತಣ್ಣಗಿನ ಮೌನ, ವಿಲಕ್ಷಣತೆ, ಕಂಗಾಲುಗೊಳಿಸಬಲ್ಲ suddenness ಅಗತ್ಯವಾದ ತೀವ್ರತೆಯನ್ನು ಪಡೆದಿವೆ. ಸೋಫಿಯ ಸುಪ್ತಮನಸ್ಸಿನ ವಿಷಾದ, ಒಮ್ಮೆಗೇ ಅವಳ ಪ್ರೀತಿ-ಮಮತೆ-ವಾತ್ಸಲ್ಯ ಬಯಸುವ ಮನೋಗತದ ಅಭಿವ್ಯಕ್ತಿ ಪ್ರಕ್ರಿಯೆ, ಅವಳ ಆ ಪುಟ್ಟ ಮನಸ್ಸಿನ ಆಳದಲ್ಲೂ ಇದ್ದಕ್ಕಿದ್ದಂತೆ ಉದ್ಭವಗೊಂಡ ಹಳ್ಳ - ಇವುಗಳೊಂದಿಗೆ ಕಾದಂಬರಿ ನಮ್ಮನ್ನು ಭಾಷೆಯ ಸ್ತರದಲ್ಲೇ ತಟ್ಟುವ ರೀತಿ ವಿನೂತನವೂ ವಿಶಿಷ್ಟವೂ ಅದ್ಭುತವೂ ಅಗಿದೆ. ಇಲ್ಲಿ ಸೋಫಿಗೆ ಕೊನೆಗೂ ಅಷ್ಟಿಷ್ಟಾದರೂ ಆಸರೆಯಾಗಿ ನಿಲ್ಲುವುದು ಅವಳ ಕಲ್ಪನಾ ವಿಲಾಸ, ಕತೆ ಕಟ್ಟುವ, ಸುಳ್ಳುಗಳ ಲೋಕವೊಂದನ್ನು ತನಗಾಗಿ ತಾನು ನಿರ್ಮಿಸಿಕೊಳ್ಳಬಲ್ಲ ಅವಳ ಮನಸ್ಸಿನ ಒಳಸಾಮರ್ಥ್ಯವೇ ಎನ್ನುವುದು ಸ್ವ-ಕೇಂದ್ರಿತ ಮನುಷ್ಯ ಲೋಕದ, ವಸ್ತುಸ್ಥಿತಿಯ ಕ್ರೂರ ವ್ಯಂಗ್ಯದಂತಿದೆ.

ರಾಕ್ ಮ್ಯೂಸಿಕ್‌ನ ಹುಚ್ಚು ಹತ್ತಿಸಿಕೊಂಡಿರುವ ಅಮಾನ್ ಅದರ ಮೂಲಕವೇ ಬದುಕು - ಮನುಷ್ಯ ಸಂಬಂಧಗಳು ಮತ್ತು ಮನಸ್ಸುಗಳನ್ನು ಗ್ರಹಿಸುವ ಪ್ರಯತ್ನದಲ್ಲಿದ್ದಾನೆ. ಕವನಗಳಾಗಿ ಎಲ್ಲೋ ಹರಡಿ ಹೋದ ಅವನ ಮನೋಲೋಕದ ಅನುಭವಗಳು ಮತ್ತು ರೋಜರ್ ವಾಟರ್ಸ್‌ನ ಆಲ್ಬಂನಲ್ಲಿ ಬರುವ ಮನೋಲಹರಿಗಳಿಗೆ ವಿವರಿಸಲಾಗದ ಒಂದು ಸಂಬಂಧದ ತಂತು ಇರುವುದನ್ನು ಕಂಡುಕೊಂಡ ಮೇಲಂತೂ ಅಮಾನ್‌ ವಿಹ್ವಲನಾಗಿದ್ದಾನೆ. ಹುಚ್ಚಿನಂತೆಯೇ ಕಾಣುವ ಈ ಅಮಾನ್ ಮತ್ತು ವಾಟರ್ಸ್‌ನ ಅತೀಂದ್ರಿಯ ಲೋಕದ ಸಹೋದರ ಸಂಬಂಧ ಇಡೀ ಕಾದಂಬರಿಯ ವಿಘಟಿತ ಬಂಧದ ಚೌಕಟ್ಟಿನಲ್ಲಿ ವಿಶೇಷವಾದ ಹೊಳಪು ಪಡೆಯುವುದು ಗಮನಾರ್ಹ. ಪುಟ 60ರಲ್ಲಿ ಬರುವ ಮಾತುಗಳು:

He sat there feeling the gap in the wooden floorboards through his socks, trying to memorise his notes on the empiricists. It was marvellous - the logical progression of their thought: from John Locke who believed that all human experience was ultimately traceable to the body's sensations and the mind's reflectioins to David Hume who went further to say that the mind did not create any ideas of its own but only derived them from sense-impressions to George Berkeley who said if all experience is thus dependent on a perceiving mind, then objects must exist only when minds (either ours or God's) are perceiving them. And from there German idealists took over: Kant, Hegel, Schopenhauer. Aman was only concerned with memorising the salient features of their philosophy and making note of the links and breaks between them.

ಆದರೆ ಅಮಾನ್‌ಗೆ ಈ ಥಿಯರಿಗಳ ಮಿತಿಗಳು ಕಾಣಿಸುತ್ತಿವೆ. ಈ ಮನೋಲೋಕದ ಲಹರಿಗಳಿಗಾಗಲಿ, ಭಾಷೆಯಲ್ಲಿ ವಿವರಿಸಲ್ಪಡುವವರೆಗೆ ಅಮೂರ್ತವಾಗಿಯೇ ಉಳಿಯುವ ಎಲ್ಲ ಅನುಭವಗಳಿಗಾಗಲಿ, ಸಂವೇದನೆಗಳೆಂದು ನಾವು ಕರೆಯುವ ಭಾವವಲಯದ ವಿದ್ಯಮಾನಗಳಿಗಾಗಲಿ, ಒಟ್ಟಾರೆಯಾಗಿ ‘ಮನಸ್ಸಿನ ಮೇಲೆ ನಡೆಯುವ ಅದರೊಳಗಿನ ಆಂತರಿಕ ಮತ್ತು ಹೊರಗಿನ ಬಾಹ್ಯ ಪ್ರಭಾವ - ಪ್ರತಿಕ್ರಿಯೆಗಳಿಗೂ’ - ‘ದೇಶ-ಕಾಲ ಪರಿಮಿತಿಯಲ್ಲಿ ಇರುವ ಕಾರ್ಯ ಕಾರಣ ಸಂಬಂಧದ ಚರ್ಚೆಗೂ’ - ‘ತಾನು ಬದುಕುತ್ತಿರುವ ತತ್‌ಕ್ಷಣದ ಜಗತ್ತಿನ ವಾಸ್ತವ ವಿದ್ಯಮಾನಗಳಿಗೂ’ ತಥಾಕಥಿತ ಸಂಬಂಧವೇ ಇಲ್ಲ ಎಂದು ಪ್ರಸ್ತುತ IAS ಭವಿಷ್ಯದ ಆಕಾಂಕ್ಷಿಯಾಗಿ ನಿಂತವನಿಗೆ ಅನಿಸುತ್ತಿದೆ. ಅವನ ಸದ್ಯದ ವಾಸ್ತವ ಜಗತ್ತಿನ ಸಂಘರ್ಷಗಳೆಲ್ಲ ಸಂಗೀತ-ವೃತ್ತಿ-ಸ್ನೇಹಿತರು-ಅಪ್ಪ,ಅಮ್ಮ-ಪ್ರೇಮ - ಗಳ ಸುತ್ತ ಹೆಣೆದುಕೊಂಡಿವೆ. ಅಷ್ಟರ ಮಟ್ಟಿಗೆ ಅಮಾನ್‌ನ ಬದುಕು ಕೆರಿಯರ್, ಜೀವನದಲ್ಲಿ ಯಶಸ್ಸು ಎಂದು ನಮ್ಮ ಭೌತಿಕ ಜಗತ್ತು ಪರಿಗಣಿಸುವ ಹಣ-ಹೆಸರು-ಅಧಿಕಾರದಂಥ ಸಂಗತಿಗಳಿಗೆ ಬಂಧಿಸಲ್ಪಟ್ಟಿರುವುದು ನಿಜವೇ. ಆದರೆ ಅಮಾನ್‌ ಈ ಜಗತ್ತಿನ ತೀರ್ಮಾನಗಳು ಭಾಷೆಯಲ್ಲಿ ನಿಯತಿಗಳಾಗಿ ಪಡೆಯುವ ರೂಪಾಂತರಕ್ಕೆ ಬೆರಗಾಗುತ್ತಾನೆ. ತಾಯಿಯ ದೃಷ್ಟಿಯಲ್ಲಿ IAS ಪರೀಕ್ಷೆಯಲ್ಲಿ ವಿಫಲನಾಗುವುದೆಂದರೆ "ಎಲ್ಲ ಮುಗಿದಂತೆ" (finished). ಇಬೊಮ್ಚ ತನ್ನ ಬಗ್ಗೆ ಇಲ್ಲಸಲ್ಲದ ಪುಕಾರೆಬ್ಬಿಸಿದ ಪಾರ್ಥೊನನ್ನು "ಹೊಸಕಿ ಹಾಕಲು" (smash) ಬಯಸಿದ್ದಾನೆ. ಅದೇ ಪಾರ್ಥೊಗೆ ಹುಚ್ಚು ಹಿಡಿಯಲು ಕಾರಣ, ಅವನು ಪ್ರೀತಿಸಿದ ಹುಡುಗಿ ಅವನನ್ನು ತಿರಸ್ಕರಿಸಿದ್ದು (rejected). ಈ ವಿಧ್ವಂಸಕ ಕ್ರಿಯಾಪದಗಳ ಬಳಕೆಯಲ್ಲೇ ಅಡಕವಾಗಿರುವ, ಮನುಷ್ಯನ ಅಸ್ತಿತ್ವವನ್ನು ಕೂಡ ಅಳಿಸಿ ಹಾಕಬಲ್ಲ ಅದರ ಶಕ್ತಿಸಂಪನ್ನತೆಗೆ ಅಮಾನ್ ಅಚ್ಚರಿಯಿಂದ ಪ್ರತಿಕ್ರಿಯಿಸುತ್ತಾನೆ. (ಪುಟ 282)

ಇಲ್ಲಿಯೇ ಗಮನಿಸಬಹುದಾದ ಇನ್ನೊಂದು ವಿದ್ಯಮಾನ, ಶಿಲ್ಲಾಂಗ್‌ನಿಂದ ಹೊರ ಹೋಗುವುದೊಂದೇ ಭವಿಷ್ಯ ರೂಪಿಸಿಕೊಳ್ಳ ಬಹುದಾದ ಮಾರ್ಗ ಎನ್ನುವ ಗ್ರಹೀತ. ಇದು ಹೆಚ್ಚು ಕಡಿಮೆ ಎಲ್ಲರಲ್ಲೂ ಇರುವ ಗ್ರಹೀತವೇ. ಆದರೆ, ಅಮಾನ್, ದಾಸ್ ಮತ್ತು ಫಿರ್ದೌಸ್‌ಗೆ ಈ ಭ್ರಮೆಯಿಲ್ಲ. ರಿಬೊರ್ ಈ ಹೊರಗೆ ಹೋಗಿ ಭವಿಷ್ಯವನ್ನು ಪಡೆದುಕೊಳ್ಳುತ್ತೇವೆನ್ನುವವರ ಬಗ್ಗೆ, ಇಲ್ಲೇ ಇದ್ದು ಇದ್ದುದರಲ್ಲೆ ನೆಮ್ಮದಿಯನ್ನು ಕಂಡುಕೊಂಡವರ ಬಗ್ಗೆ, ಹೊರ ಹೋಗಿ ಅತಂತ್ರರಾದವರ ಬಗ್ಗೆ ಮತ್ತು ಆಗಲೋ ಈಗಲೋ ಮರಳಿ ಬಂದವರ ಹಳಹಳಿಕೆಗಳ ಬಗ್ಗೆ ಯೋಚಿಸಬಲ್ಲವನು. ಟ್ಯಾಕ್ಸಿ ಓಡಿಸಿಕೊಂಡು ಜೀವನ ನಡೆಸುತ್ತಿರುವ ಅವನು ಹೊರಗೆ ಹೋಗಿ ನೋಡಿದ್ದಾನೆ, ಒಳಗಿದ್ದೂ ನೋಡಿದ್ದಾನೆ. ಅವನ ಆಯ್ಕೆಯ ಬಗ್ಗೆ ಅವನಿಗೆ ಸ್ಪಷ್ಟವಾಗುವ ಕಾಲವಿನ್ನೂ ಬಂದಿಲ್ಲ. ಆದರೆ ಅಮಾನ್ ಶಿಲ್ಲಾಂಗ್‌ನಿಂದ ಹೊರ ಹೋಗುವ ಅವನ ತಂದೆ ತಾಯಿಯರ ನಿರ್ಧಾರಕ್ಕೆ ಬದ್ಧನಾಗುವ ಅನಿವಾರ್ಯತೆ ಒದಗಿದಾಗ ಅದು ಸರಿಯಲ್ಲ ಅಂದುಕೊಳ್ಳುವ ಮನಸ್ಸುಗಳಲ್ಲಿ ರಿಬೊರ್‌ನ ಮನಸ್ಸೂ ಒಂದು. ಈ ಕಾದಂಬರಿಯಲ್ಲಿ ನಾವು ಎದುರಾಗುವ ಅನೇಕಾನೇಕ ಸಂಘರ್ಷಗಳಲ್ಲಿ ಈ ಒಳಗೋ ಹೊರಗೋ ಎಂಬ ಸಂಘರ್ಷ ಕೂಡಾ ಒಂದು.

ಕಾದಂಬರಿಯಲ್ಲಿ ಹಲವು ಜಗಳಗಳಿವೆ. ಮತ್ತೆ ಮತ್ತೆ ಬರುವ ಮ್ಯಾಕ್ಸ್‌ನ ಬೀದಿ ಜಗಳಗಳಲ್ಲದೆಯೂ ಮನೆಯೊಳಗೇ ನಡೆಯುವ ದಾಸ್ ದಂಪತಿಗಳ ಜಗಳ, ಇಬೊಮ್ಚನಿಗೆ ಪಾರ್ಥೊ ಹಬ್ಬಿಸಿದ ಪುಕಾರುಗಳ ಬಗ್ಗೆ ಮೊತ್ತ ಮೊದಲು ಬೋಧಾ ಮೂಲಕ ತಿಳಿದು ಬಂದಾಗ ಹುಟ್ಟುವ ಆತಂಕದ ಸನ್ನಿವೇಶ, ನಿವೇದಿತಾ ಮತ್ತು ಫಿರ್ದೌಸ್ ನಡುವೆ ಸ್ಟಾಫ್‌ರೂಮಿನಲ್ಲೇ ನಡೆಯುವ ಕಾದಾಟ, ಅಮಾನ್ ಆಯೋಜಿಸಿದ ಹ್ಯಾಪನಿಂಗ್‌ನಲ್ಲಿ ಮೊದಲಿಗೆ ಬನ್‌ಶಾನ್ ಮತ್ತು ನಂತರ ಮ್ಯಾಕ್ಸ್ ಎಬ್ಬಿಸುವ ಗುಲ್ಲು ಇಂಥ ಕೆಲವು ಆತಂಕದ ಕ್ಷಣಗಳನ್ನು ತಂದೊಡ್ಡುತ್ತವೆ. ಇಂಥ ಕಡೆ ಹೆಚ್ಚಾಗಿ ನಿರೂಪಕನ ಪಾತ್ರ ಗೌಣವಾಗಿದ್ದು, ಸಂಭಾಷಣೆಯ ಮೂಲಕವೇ ಈ ಮಾತು-ಪ್ರತಿಮಾತುಗಳು, ಮೌನ-ಉತ್ತೇಜಕ ಟೀಕೆ, ಸ್ಫೋಟ - ಹೀಗೆ ಸಾಗುವ ಪ್ರಕ್ರಿಯೆಯದೇ ಪ್ರಧಾನ ಪಾತ್ರ. ಇಲ್ಲಿ ಈ ಜಗಳಗಳನ್ನು ಮೇಲ್ನೋಟಕ್ಕೆ ಅವು ಕಾಣುವ ಬಗೆಯನ್ನು ಮೀರಿದ ಒಂದು ಮಹತ್ವದ ಆಯಾಮದಿಂದ ಕಾಣುವ ಅಗತ್ಯವಿದೆ.

ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳು ಮಾತಿನ ಮೇಲೆ ನಿಲ್ಲುವಂಥವಲ್ಲ. ಅವು ಮಾತಿಗೆ ಮೀರಿದ್ದಾಗಿ, ಭಾವವಲಯಕ್ಕೆ ಸಂಬಂಧಪಟ್ಟ ಸಂಬಂಧಗಳು. ಆ ಕ್ಷಣದ ಮಾತಿಗೆ ಹೋಲಿಸಿದಲ್ಲಿ ಹೆಚ್ಚು ಕಾಲವ್ಯಾಪ್ತಿಯ ಹಿನ್ನೆಲೆಯಿರುವ ಸಂಬಂಧಗಳು, ಆ ಸಂಬಂಧವನ್ನು ರೂಪಿಸಿರುವ ಭಾವನೆಗಳು ಹೆಚ್ಚು ಮುಖ್ಯವಾಗಬೇಕು. ಆದರೆ ಮಾತಿನಲ್ಲಿ, ಕ್ರಿಯೆಯಲ್ಲಿ ವ್ಯಕ್ತವಾದದ್ದು ವ್ಯಕ್ತಿ, ಅವ್ಯಕ್ತವಾದುದು ಭೂತ ಎನ್ನುವುದು ನಮ್ಮ ಸಾಮಾನ್ಯ ತಿಳುವಳಿಕೆ. ಭಾವಜಗತ್ತು, ಅದರ ತೀವ್ರತೆ ಯಾವಾಗಲೂ ಅನುಭೂತಿಗೆ ಮಾತ್ರ ದಕ್ಕುವಂಥದ್ದು, ವಿವರಣೆಗೆ ದಕ್ಕುವುದಿಲ್ಲ. ಹೀಗಾಗಿ ಜಗಳದಲ್ಲಿ ಯಾವತ್ತೂ ಮಾತೇ ಮುಖ್ಯವಾಗುತ್ತದೆ, ಆ ಮಾತಿನ ತಕ್ಷಣದ ಭಾವವೇ ಮುಖ್ಯವಾಗುತ್ತದೆಯೇ ಹೊರತು ಸಂಬಂಧದ ಹಿನ್ನೆಲೆಯಲ್ಲಿರುವ ಆಳವಾದ ಭಾವಜಗತ್ತು ಅಲ್ಲ. ಈ ತತ್‌ಕ್ಷಣದ ಮಾತಿಗೆ ಕೂಡಾ ಒಂದು ಆಳವಾದ ಚರಿತ್ರೆ ಇರುತ್ತದೆ. ಅದು ಮನುಷ್ಯನ ಆಳದ ಸಂಘರ್ಷ, ಆಳದ ಒಂಟಿತನದ ಬೇಗುದಿ, ಶಿಲ್ಲಾಂಗ್‌ನಿಂದ ಹೊರಬೀಳಬೇಕೆಂಬ ಒಂದು ಒಳತುಡಿತ, ಮನುಷ್ಯ ಸಂಬಂಧಗಳು ಬಿಗಡಾಯಿಸುತ್ತಿರುವ ಒಂದು ಅನಪೇಕ್ಷಿತ ಬೆಳವಣಿಗೆಯ ಅಸ್ಪಷ್ಟ ಅರಿವು ಹುಟ್ಟಿಸುತ್ತಿರುವ ಅತಂತ್ರ ಮನಸ್ಥಿತಿ - ಈ ಎಲ್ಲವೂ ಕಾರಣ ತತ್‌ಕ್ಷಣದ ಮಾತಿನಲ್ಲಿರುವ ಅಗ್ನಿಸ್ಫೋಟಕ್ಕೆ. ಆದರೆ ವಿಪರ್ಯಾಸವೆಂದರೆ ನಮಗೆ ಯಾವತ್ತೂ ಈ ಅಗ್ನಿಸ್ಫೋಟಕ್ಕೆ ಇರುವ ಇಂಥ ನಿಜವಾದ ಕಾರಣಗಳು ಕಾಣುವುದಿಲ್ಲ ಮತ್ತು ಯಾವ ಕಾರಣಗಳು ನಿಜವಾಗಿಯೂ ಈ ತತ್‌ಕ್ಷಣದ ಮಾತಿಗೆ ಪ್ರೇರಣೆಯನ್ನೊದಗಿಸಿಲ್ಲವೋ ಅವು ಕಾಣುತ್ತಿರುತ್ತವೆ! ಇಲ್ಲಿಯೇ ಒಂದು ಸಂಘರ್ಷವಿದೆ, ವಿಘಟನೆಯಿದೆ, ವಿಲೋಮ ಘಟಿಸಿದೆ. ಮಿಸೆಸ್ ದಾಸ್‌ಗೆ ಪ್ರೊಫೆಸರ್ ದಾಸ್ ಮನಸ್ಥಿತಿಯ ಅರಿವು ಜಗಳದ ಕ್ಷಣಕ್ಕೆ ಕಾಣಿಸುವುದಿಲ್ಲ. ದಾಸ್‌ಗೂ ಮಿಸೆಸ್ ದಾಸ್‌ಳ ಸರಳ ಮನಸ್ಸಿನ ಆತಂಕದ ಸ್ಪರ್ಶ ಸಿಗುತ್ತಿಲ್ಲ. ನಿವೇದಿತಾಳ ಆತಂಕದ ನೈಜ ನೆಲೆ ಫಿರ್ದೌಸ್‌ಗೆ ತಿಳಿದೂ ಆಕೆ ನಿವೇದಿತಾಳ ಸದ್ಯದ ಮನಸ್ಥಿತಿ ಅದನ್ನು-ಸತ್ಯವನ್ನು ಕಾಣಬಲ್ಲುದೇ, ಅರಗಿಸಿಕೊಳ್ಳಬಲ್ಲುದೇ ಎಂದು ತರ್ಕಿಸುವುದಿಲ್ಲ ಮತ್ತು ಅದೇ ರೀತಿ ನಿವೇದಿತಾ ಸಂಪೂರ್ಣ ಕುರುಡುತನ ಪ್ರದರ್ಶಿಸುತ್ತಾಳೆ. ಇಬೊಮ್ಚನಿಗೆ ಪುಕಾರುಗಳಿಗೆ ತಾನು ಪ್ರತಿಸ್ಪಂದಿಸುವ ಅಗತ್ಯವಿಲ್ಲ, ಅದು ಪುಕಾರಷ್ಟೇ ಆಗಿರುವವರೆಗೆ ಎನ್ನುವ ಸರಳ ಸತ್ಯ ಕೂಡ ಕಾಣಿಸುವುದಿಲ್ಲ.

ಈ ಜಗಳದಂಥ, ಹೊಡೆದಾಟದಂಥ, ಅಪಮಾನಕಾರಿಯಾದ ಘಟನೆಗಳು ಕೊನೆಗೆ ಪುಟ್ಟ ಸೋಫಿಯ ಜಗತ್ತನ್ನು ಕೂಡಾ ಬಿಟ್ಟಿಲ್ಲ. ಎಲ್ಸಾ ಜೊತೆಗೆ ಒಂದು ಮದುವೆಗೆ ಹೋಗುವ ಪುಟ್ಟ ಸೋಫಿಗೆ ಅಲ್ಲಿ ಸಿಗುವುದು ಒಂದು ಸಂಭ್ರಮದ ವಾತಾವರಣ ಉಂಟುಮಾಡಬಹುದಾದ ಉತ್ಸಾಹ, ಸಂತಸ ಅಲ್ಲ. ದ್ವೇಷ, ಸಣ್ಣತನಗಳೇ ತುಂಬಿದ ಮನುಷ್ಯರಿಂದ ಅಪಮಾನ. ಟೀ ಮತ್ತು ಸ್ನ್ಯಾಕ್ಸ್ ಹಂಚುವ ಹುಡುಗಿಯರು ಸೋಫಿಯನ್ನು ನಿರ್ಲಕ್ಷಿಸುತ್ತಾರೆ, ಅವಳೆದುರು ಕಪ್-ಸ್ನ್ಯಾಕ್ಸ್ ಇಡದೇ ಅವಗಣಿಸಿ ಮುಂದಕ್ಕೆ ಹೋಗುತ್ತಾರೆ. ಎದುರಿನ ಸಾಲಿನ ಹುಡುಗಿಯರು ಸೋಫಿಯನ್ನು ನೋಡಿ ಕಿಸಕ್ಕನೆ ನಗುತ್ತಾರೆ. ಅಪಮಾನ, ನೋವಿನಿಂದ ಮುದುಡುವ ಪುಟ್ಟ ಸೋಫಿ ಒಂದು ಕ್ಷಣದ ಮಟ್ಟಿಗಾದರೂ ತಾನೂ ‘ಖಾಸಿ’ಯಾಗಿದ್ದರೆ ಈ ತಿರಸ್ಕಾರಕ್ಕೆ ಒಳಗಾಗುತ್ತಿರಲಿಲ್ಲವಲ್ಲ, ತಾನು ತಾಯಿಯ ಹೆತ್ತ ಮಗುವಾಗಿರದೇ ದತ್ತು ಮಗುವಾಗುವುದಕ್ಕಿಂತ ಅದೇ ಹೆಚ್ಚು ಉತ್ತಮವಿತ್ತು ಎಂದು ಭಾವಿಸಲು ಕಾರಣವಾಗುವ ಈ ದರಿದ್ರ ಸ್ಥಿತಿ ಮತ್ತು ನೀಚ ಮಂದಿಯ ಸಣ್ಣತನದ ಮೂಲ ಜನಾಂಗ ದ್ವೇಷ. ಆದರೆ, ಚಿಕ್ಕ ಮಕ್ಕಳ ಜಗತ್ತನ್ನು ಅದು ಪ್ರವೇಶಿಸುವುದು ಜನಾಂಗ ದ್ವೇಷದಂಥ ದೊಡ್ಡ ಮಟ್ಟದಲ್ಲಿ ಅಲ್ಲ. ಜನಾಂಗ ದ್ವೇಷವೆಂದರೇನೆಂದೇ ಅರಿಯದ ಮಕ್ಕಳೂ ಅದನ್ನು ಆಚರಿಸುವುದಕ್ಕೆ ಕಲಿತಿರುತ್ತಾರೆ. ಅಂದರೆ, ಮತ್ತೆ ಅದು ಮನೆಯೊಳಗಿನ, ಹೊರಗಿನ, ತಾವು ಅನುಸರಿಸುವ ವ್ಯಕ್ತಿತ್ವದೊಳಗಿನ ಬಿರುಕುಗಳಿಂದಲೇ ಉದ್ಭವಿಸುವ ಅಮಾನವೀಯತೆ, ಸಂವೇದನಾ ಶೂನ್ಯ ಮನಸ್ಕತೆ, ಕಾಠಿಣ್ಯ.

ಪುಟ 149-150ರಲ್ಲಿ ಫಿರ್ದೌಸ್ ತನ್ನ ತರಗತಿಯಲ್ಲಿ As you Like it ನ ಪಾಠ ಮಾಡುತ್ತಿರುವ ವಿವರಗಳ ಮೂಲಕ ‘ಹುಚ್ಚಿನ ಸ್ವಾತಂತ್ರ್ಯ’ದ ಕುರಿತ ಚರ್ಚೆಯನ್ನು ತರಲಾಗಿದೆ. ಇದ್ದುದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದ ಎನ್ನುವ ಗಾದೆಯಂತೆಯೇ ಈ ಹುಚ್ಚನನ್ನು ವಿರೋಧಿಸುವುದು ಕಷ್ಟ. ಒಪ್ಪಿಕೊಳ್ಳುವುದು ಕೂಡ ಕಷ್ಟವೇ. ಯಾಕೆಂದರೆ ಅವನು ಯಾವ ಸತ್ಯವನ್ನೂ ಅದು ಹೇಗಿದೆಯೋ ಹಾಗೆಯೇ ಹೇಳಬಲ್ಲಷ್ಟು ಸ್ವತಂತ್ರನಿದ್ದಾನೆ, ಹುಚ್ಚನಾಗಿರುವುದರಿಂದ. ಕೇಳುವುದಕ್ಕೆ, ಎದುರಿಸುವುದಕ್ಕೆ ಕಷ್ಟಕರವಾದದ್ದನ್ನೂ ಸರಳವಾಗಿ, ನೇರವಾಗಿ ಹೇಳಿಬಿಡಬಲ್ಲ. ಆದರೆ ನಮಗದು ಜೀರ್ಣವಾಗಬೇಕಲ್ಲ! ನಾವದನ್ನು ಸಾರ್ವಜನಿಕವಾಗಿ ಸಹಿಸಬೇಕಲ್ಲ ಮತ್ತೆ! ಹಾಗೆಂದು ವಿರೋಧಿಸಿದರೆ, ಅವನು ಹೇಳುತ್ತಿರುವುದು ನಮ್ಮನ್ನೇ ಸಂಬಂಧಿಸಿ ಎನ್ನುವುದನ್ನು ನಾವೇ ತೋರಿಸಿಕೊಟ್ಟಂತಾಗುವುದಿಲ್ಲವೆ?

ಸ್ಟಾಫ್‌ರೂಮಿನಲ್ಲಿ ನಿವೇದಿತಾ ಮತ್ತು ಫಿರ್ದೌಸ್ ನಡುವೆ ನಡೆಯುವ ಜಗಳದ ಕೊಂಚ ಮೊದಲು ಈ ಸನ್ನಿವೇಶವಿದೆ ಎನ್ನುವುದನ್ನು ಗಮನಿಸಿದರೆ ಕಾದಂಬರಿಯಲ್ಲಿ ತಂತ್ರ ನಿರ್ವಹಿಸುತ್ತಿರುವ ಪಾತ್ರದ ಅರಿವಾಗುತ್ತದೆ. ನಿವೇದಿತಾ ಮತ್ತು ಫಿರ್ದೌಸ್ ನಡುವೆ ರಣಾರಂಪ ಜಗಳವಾಗುವುದಕ್ಕೆ ಕಾರಣ ಫಿರ್ದೌಸ್ ತೆರೆದಿಟ್ಟ ಕಟು ಸತ್ಯದ ಅಜೀರ್ಣ! ನಿವೇದಿತಾ ಮುನ್ನುಗ್ಗಿ ಬಂದು ಫಿರ್ದೌಸ್‌ಳ ಮೂಗು ಕಚ್ಚಿ ಘಾಸಿಗೊಳಿಸುತ್ತಾಳೆ!

ಆಸ್ತಿ, ಅಧಿಕಾರ ಮತ್ತು ಹಣದ ದಾಹ ಮನುಷ್ಯನನ್ನು ಯಾವ ಮಟ್ಟದಲ್ಲಿ ವಿಕ್ಷಿಪ್ತಗೊಳಿಸ ಬಹುದೆನ್ನುವುದರ ಚಿತ್ರವೊಂದು ನಮಗೆ ಸಿಗುವುದು ಜಾಸನ್‌ನಲ್ಲಿ. ಈತ ಶ್ರೀಮಂತ ಮುದುಕಿ ಎಲ್ಸಾಳ ಒಬ್ಬನೇ ಮಗ. IAS ಅಧಿಕಾರಿ. (ಅಮಾನ್ ಕೂಡಾ IAS ಆಗಲು ಪ್ರಯತ್ನಿಸುತ್ತಿರುವುದನ್ನು ನೆನೆಯಬಹುದು.) ಈತ ಎಲ್ಸಾಳ ತಂಗಿಯೊಂದಿಗೆ ಸೇರಿ ಶೀಘ್ರವಾಗಿ ಹಣ ಮಾಡುವ ಉಪಾಯಗಳನ್ನು ಯೋಚಿಸುತ್ತಾನೆ. ಪುರಾತನವಾದ ಮನೆಯನ್ನು ಕೆಡಹಿ ಅದನ್ನು ಹಾಸ್ಟೇಲ್ ಆಗಿ ಪರಿವರ್ತಿಸಿದರೆ ಹಣದ ಹೊಳೆಯೇ ಹರಿಯುತ್ತದೆ ಎನ್ನುವುದು ಲೆಕ್ಕಾಚಾರ. ತಾನು ಬದುಕಿರುವ ವರೆಗೆ ಮನೆ ಕೆಡಹುವುದಕ್ಕೆ ಆಸ್ಪದ ಕೊಡುವುದಿಲ್ಲ ಎಂದು ಗಟ್ಟಿಯಾಗಿ ನಿಲ್ಲುವ ಎಲ್ಸಾ ಸಾಯುತ್ತಾಳೆ. ಸಾವಿನ ಹಿಂದೆ, ಚಿಕ್ಕಮ್ಮ-ಮಗನ ವ್ಯಾಪಾರೀ ಲೆಕ್ಕಾಚಾರದ ಹಿಂದೆ ಕುತಂತ್ರ, ಕುಟಿಲತೆಗಳಿರಬಹುದು, ಇಲ್ಲದಿರಬಹುದು. ಆದರೆ ಪುಟ್ಟ ಹುಡುಗಿ ಸೋಫಿಯ ಜೊತೆ ಈ ದೈತ್ಯ ಜಾಸನ್ ನಡೆದುಕೊಳ್ಳುವ ರೀತಿ, ಅದರಲ್ಲಿರುವ ತಣ್ಣಗಿನ ಕ್ರೌರ್ಯ, ಅಮಾನವೀಯತೆಗಳನ್ನು ಗಮನಿಸಿದರೆ, ಅವು ನೀಡುವ ಈತನ ವ್ಯಕ್ತಿತ್ವದ ಹೊಳಹುಗಳು ಭಯ ಹುಟ್ಟಿಸುವಂತಿರುವುದು ನಿಜ. ಅಂಜುಂ ಹಸನ್ ಅನೇಕ ಕಡೆ ಹೀಗೆ ಹೊಳಹುಗಳನ್ನಷ್ಟೇ ನೀಡಿ ಕಥಾನಕದ ಮುನ್ನಡೆಯನ್ನು ಸಾಧಿಸುವುದು ಹೊಸತೇನಲ್ಲ.

ಅಂಜುಂ ಹಸನ್ ಅವರ ಶೈಲಿಯಲ್ಲಿಯೇ ಒಂದು ಬಗೆಯ ಅನೂಹ್ಯ ಎಳೆಗಳನ್ನು ಅಲ್ಲಲ್ಲಿ ಬಿಟ್ಟು ಬಿಟ್ಟು ಮುನ್ನಡೆಯುವ ನಿರೂಪಣಾ ತಂತ್ರದ ಒಲವು ಎದ್ದು ಕಾಣುತ್ತದೆ. ಕೆಲವೊಂದು ಕಡೆ ‘ಬಿಟ್ಟ ಪದಗಳನ್ನು ತುಂಬಿರಿ’ ಎನ್ನುವುದು ಅವರ ಕ್ರಮ! ಇದರ ಅತ್ಯುತ್ತಮ ಉದಾಹರಣೆ ನಮಗೆ ಕಾದಂಬರಿಯ FEAR ಹೆಸರಿನ ಅಧ್ಯಾಯದಲ್ಲಿ ಸಿಗುತ್ತದೆ. ಈ ಅಧ್ಯಾಯದಲ್ಲಿ ಒಟ್ಟು ಮೂರು ಚಿತ್ರಗಳಿವೆ. ಮೂರೂ ಚಿತ್ರದಲ್ಲಿ ನಮಗೆದುರಾಗುವ ಅಷ್ಟೂ ಪಾತ್ರಗಳಲ್ಲಿ ಯಾವುದಕ್ಕೂ ಹೆಸರಿಲ್ಲ. ಮೊದಲ ಚಿತ್ರದಲ್ಲಿ ಒಂದು ದುರಂತದ ಸಾವು ಇದೆ. ಎರಡನೆಯ ಚಿತ್ರದಲ್ಲಿ ಒಂದು ಕೊಲೆ, ರಕ್ತಪಾತವಿದೆ. ಮೂರನೆಯ ಚಿತ್ರದಲ್ಲಿ ಕುತಂತ್ರದ ಕುಟಿಲ ಯೋಜನೆಯೊಂದು ಮೈತಾಳುತ್ತಿದೆ. ಆದರೆ ಯಾರಿವರೆಲ್ಲ! ಈ ಅಧ್ಯಾಯ ಇದೇ ಕಾದಂಬರಿಗೆ ಸಂಬಂಧ ಪಟ್ಟಿದ್ದೋ ಅಥವಾ ಇದ್ದಕ್ಕಿದ್ದಂತೆ ಮೇಲಿನಿಂದ ಉದುರಿ ಬಿದ್ದಂತೆ ನಡುವಿನಲ್ಲಿ ಸುರುವಾಗುವ ಈ ವಿವರಗಳೆಲ್ಲ ಬೇರೆಲ್ಲಿಯದೋ ಅನಿಸಬೇಕು, ಹಾಗೆ! ಇವರೆಲ್ಲ ಯಾರು, ಏನು, ಎತ್ತ ಎನ್ನುವ ತಥಾಕಥಿತ ಸಂಬಂಧದ ರೂಪುರೇಷೆಗಳನ್ನೇ ಬಿಟ್ಟುಕೊಡದೆ ನಾಟಕದ ಮಧ್ಯೆ ಬಂದು ಹೋದ ಅಸಂಗತ ದೃಶ್ಯವೊಂದರ ಪಾತ್ರಗಳಂತೆ ಕಾಣುತ್ತಿದ್ದಾರಲ್ಲ ಎಂದರೆ ಉತ್ತರಗಳಿಗಾಗಿ ನಾವು ಸಹನೆಯಿಂದ ಕಾಯಬೇಕಾಗುತ್ತದೆ. ಕಾದಂಬರಿಯ ಮುಂದಿನ ಪುಟಗಳಲ್ಲಿ ಸಿಗುವ ಸುದ್ದಿಗಳು, ಬೇರೆ ಬೇರೆ ತರದ ಬೆಳವಣಿಗೆಗಳು, ಯಾವುದರೊಂದಿಗೋ ಜೋಡಿಸಲ್ಪಡಲು ಕಾದಿರುವಂತೆ ಕಾಣುವ ಬಿಡಿಬಿಡಿಯಾದ ಎಳೆಗಳು ಕ್ರಮೇಣ ಹಿಂದಿನ ಈ ಭಯಾವಹ ಅಧ್ಯಾಯದೊಂದಿಗೆ ಬೆಸೆದುಕೊಳ್ಳುವುದು ಇಲ್ಲಿನ ತಾಂತ್ರಿಕ ಚೋದ್ಯ.

ಗಮನಿಸಬೇಕಾದ ಇನ್ನೊಂದು ವಿದ್ಯಮಾನ ಪುಟ 194 ರಲ್ಲಿ ತೊಡಗುತ್ತದೆ. ಲೈಬ್ರರಿಯಲ್ಲಿ, ಅಲ್ಲಿ ಇಲ್ಲಿ ಒಂದೆರಡು ಬಾರಿ ಈ ಮುದ್ದು ಮುಖದ ಗಂಭೀರ ಹುಡುಗಿ ಕಾನ್‌ಕಾರ್ಡೆಲ್ಲಾಳನ್ನು ಕಂಡಿದ್ದ ಅಮಾನ್ ಇಡೀ ಭೂಗೋಳವೇ ತಾವಿಬ್ಬರು ಆಗಾಗ ಮುಖಾಮುಖಿಯಾಗಬೇಕೆಂದೇ ಯಾವುದೋ ಮಾಯಕದ ತಂತ್ರವೊಂದನ್ನು ಹೂಡುತ್ತಿರಬಹುದೇ ಎನ್ನುವ ಬೆರಗಿನಿಂದಲೇ ಈಕೆಯ ಬಗ್ಗೆ ರಮ್ಯ ಭಾವನೆಗಳನ್ನು, ಕಲ್ಪನೆಗಳನ್ನು ಬೆಳೆಸಿಕೊಳ್ಳುತ್ತಾನೆ. ಅಂತೂ ಅವಳು ತನ್ನನ್ನು ಪರಿಗಣಿಸಬಹುದೆ, ತಾನವಳಿಗೆ ಯೋಗ್ಯನಿರಬಹುದೆ ಎಂಬೆಲ್ಲ ಮನಸ್ಸಿನಲ್ಲೇ ಮಂಡಿಗೆ ತಿನ್ನುವ ಹಂತಗಳೆಲ್ಲ ಮುಗಿದು ಕೊನೆಗೂ ಮಾತನಾಡುವ ಹಂತಕ್ಕೆ ತಲುಪುತ್ತಾನೆ. ಹಾಗೆ ಒಂದು ದಿನ ಇಬ್ಬರೂ ಕಾಫಿ ಕುಡಿಯುವ ನೆಪದಲ್ಲಿ ಮಾತುಕತೆಗೆ ಕೂತಾಗ ಕಾನ್‌ಕಾರ್ಡೆಲ್ಲ ವಿವರಿಸುವ ಒಂದು ವಿದ್ಯಮಾನ ಅತ್ಯಂತ ಸಜೀವವಾಗಿ ಮೂಡಿಬಂದಿದೆ ಮಾತ್ರವಲ್ಲ ಅದು ಓದುಗನನ್ನು ಸಮರ್ಥವಾಗಿ ಹಿಡಿದಿಡುವಂತಿದೆ. ಅಷ್ಟಾಗಿಯೂ ಓದುಗ ಕಾನ್‌ಕಾರ್ಡೆಲ್ಲಾಗೆ ಕವಿದ ಅದೇ illussionನಿಂದ ತಾನು ಹೊರನಿಂತು ನೋಡಬೇಕಾದ ಸವಾಲನ್ನು ಕೂಡ ಸ್ವಲ್ಪಮಟ್ಟಿಗೆ ಎದುರಿಸಬೇಕಾಗುತ್ತದೆ!

ಕಾನ್‌ಕಾರ್ಡೆಲ್ಲಾಳದ್ದು ತುಂಬ ಸಂಪ್ರದಾಯವಾದಿ ಧಾರ್ಮಿಕರ ಕುಟುಂಬ. ತಂದೆ, ಅಣ್ಣ ಎಲ್ಲರೂ ಚರ್ಚು, ಅದರ ಧಾರ್ಮಿಕ ಆಚಾರ-ವಿಚಾರ, ವಿಧಿ-ವಿಧಾನಗಳ ಕಟ್ಟಾ ಅನುಯಾಯಿಗಳೆನ್ನಬೇಕು. ಸಹೋದರನಂತೂ ಪಾದ್ರಿಯಾಗುವ ಉದ್ದೇಶ ಹೊಂದಿದ್ದಾನೆ. ಈ ಘಾಟು ಹೊಡೆಯುವ, ಉಸಿರುಗಟ್ಟಿಸುವ ಧಾರ್ಮಿಕ ವಾತಾವರಣವೇ ಕ್ರಮೇಣ ಕಾನ್‌ಕಾರ್ಡೆಲ್ಲಾಳ ಆಳದಲ್ಲಿ ಬೆಳೆಯುವ ಒಂದು ಬಗೆಯ ಪ್ರತಿರೋಧಕ್ಕೆ, ವೈರುಧ್ಯಕ್ಕೆ ಕಾರಣವಾಗುತ್ತದೆ. ಇವಳಿಗೆ ಬೈಬಲ್ ಸುಳ್ಳುಗಳ ಮೂಟೆಯಂತೆಯೂ, ಇಲ್ಲದ ಕ್ರಿಸ್ತ ತನ್ನ ಪ್ರಾರ್ಥನೆಯನ್ನು ಕೇಳಿಸಿಕೊಳ್ಳುವುದೆಂದರೆ ಬೊಗಳೆಯಂತೆಯೂ, ಅವನಿರುವುದೇ ಆದಲ್ಲಿ ತನ್ನ ಇದುವರೆಗಿನ ತಪ್ಪುಗಳಿಗೆಲ್ಲ ತನಗೇಕೆ ಶಿಕ್ಷೆಯಾಗಿಲ್ಲ ಎನ್ನುವ ತರ್ಕವೂ, ಚರ್ಚಿನ ಅಸಹ್ಯ ಹೆಂಗಸರ ಎಲ್ಲ ನೀಚತನದಾಚೆ ಅವರು ನಡೆಸುವ ನಿರಂತರ ಪ್ರಾರ್ಥನೆಯ ಸಾಚಾತನವಾದರೂ ಏನು ಎನ್ನುವ ಕಟುವಿಮರ್ಶೆಯ ಆಯಾಮವೂ ಕಾಣಿಸತೊಡಗುತ್ತದೆ. ಪ್ರಶ್ನೆಗಳು, ಅನುಮಾನಗಳು, ಅಪನಂಬುಗೆಗಳು ತುಂಬಿರುವಾಗಲೂ ಕ್ರಿಸ್ತನ ಪರಿಕಲ್ಪನೆ ತನಗೆ ಪವಿತ್ರ ಭಾವವನ್ನೂ ನೆಮ್ಮದಿಯನ್ನೂ ನೀಡುತ್ತಿದ್ದ ಅರಿವು ಈಕೆಗಿದೆ. ಹಾಗಾಗಿಯೇ ಅವಳಲ್ಲಿ ಗೊಂದಲವಿದೆ, ತೀರ್ಮಾನವಿಲ್ಲ. ಇಂಥ ಒದ್ದೆ ಮಣ್ಣಿನಂಥ ನೆಲದ ಮನಸ್ಥಿತಿಯಲ್ಲಿ ವಿಲಕ್ಷಣ ವಿದ್ಯಮಾನವೊಂದು ನಡೆಯುತ್ತದೆ.

ತಾಯಿ ತೀರಾ ಅಸೌಖ್ಯದಿಂದ ಆಸ್ಪತ್ರೆಯಲ್ಲಿರುವಾಗ ಈಕೆ ತಾಯಿಯ ಆರೋಗ್ಯ ಸುಧಾರಿಸುವಂತೆ ಬೇಡಿಕೊಳ್ಳುವುದಕ್ಕಲ್ಲದಿದ್ದರೂ ಚರ್ಚಿಗೆ ಹೋಗುತ್ತಾಳೆ. ಇಲ್ಲಿಯೇ ಇರುವ ವೈರುಧ್ಯವನ್ನು ಗಮನಿಸಬೇಕು. ಅಲ್ಲಿ ಅವಳು ಬನ್‌ಶಾನ್ ಎಂಬಾತನ ಉಪನ್ಯಾಸವನ್ನು ಕೇಳಿಸಿಕೊಳ್ಳುತ್ತಾಳೆ. ಬನ್‌ಶಾನ್ ಆವತ್ತು ಇವಳಿಗಾಗಿಯೇ ಅಲ್ಲಿ ಉಪನ್ಯಾಸ ನೀಡುತ್ತಿದ್ದಾನೆಯೇ, ಇವಳೊಂದಿಗೇ ವೈಯಕ್ತಿಕವಾಗಿ ಮಾತನಾಡುತ್ತಿದ್ದಾನೆಯೇ ಎಂಬಂತೆ ಮನುಷ್ಯನ ಆಳದ ಅನುಮಾನಗಳ ಬಗ್ಗೆ, ಧಾರ್ಮಿಕ ಗೊಂದಲಗಳ ಬಗ್ಗೆ ಮಾತನಾಡುತ್ತಾನೆ. ಕನಕದಾಸರು ಹಾಡಿಲ್ಲವೇ, ‘ಆರು ಬದುಕಿದರಯ್ಯ, ಹರಿ ನಿನ್ನ ನಂಬೀ|’ ಎಂದು? ದೇವರ ಕುರಿತ ಅನುಮಾನ, ಅಪನಂಬಿಕೆ, ಗೊಂದಲ ಎಲ್ಲವೂ ನಿಜವಾಗಿ ದೇವರನ್ನು ಅರಿಯಲು, ಅವನನ್ನು ಕಂಡುಕೊಳ್ಳಲು ಒಂದು ಮಾರ್ಗವಾಗಿದೆ. ನೀನು ನಿನ್ನ ಅನುಮಾನಗಳೊಂದಿಗೆ ಸತತ ನರಳುವುದು ಅನಿವಾರ್ಯ. ಯಾಕೆಂದರೆ, ನೀನೀಗ ಮಬ್ಬಿನಲ್ಲಿದ್ದೀಯ. ಮಸುಕಿದೀ ಮಬ್ಬಿನಿಂದ ಕೈ ಹಿಡಿದು ನಡೆಸೆನ್ನನು ಎಂದು ನೀನು ಆರ್ತನಾಗಿ ಮೊರೆಯಿಟ್ಟು ಕೇಳಿದರೆ ಮಾತ್ರ ನಿನಗೆ ಅವನ ಬೆಳಕು ಕಾಣಿಸತೊಡಗುತ್ತದೆ, ಕವಿದ ಮಬ್ಬು ಕರಗುತ್ತದೆ, ಹಾದಿ ಸುಗಮವಾಗುತ್ತದೆ, ಕಾಣಿಸತೊಡಗುತ್ತದೆ. ಹೊರತು, ನಿನ್ನ ಅನುಮಾನಗಳೇ ಸತ್ಯವೆಂದು ತಿಳಿದು ಮಿಥ್ಯೆಯೊಂದಿಗೆ ಸಖ್ಯ ಬೆಳೆಸಿ ಶಾಶ್ವತ ಕುರುಡನಾದೆಯೋ, ನಿನ್ನ ಕತೆ ಮುಗಿಯಿತೆಂದೇ ತಿಳಿ! ಹಾಗೆ ಮಾಡದೆ, ನಿನ್ನೆಲ್ಲ ಅನುಮಾನ, ಸಂಶಯ, ಅಪನಂಬುಗೆಗಳೊಂದಿಗೆ ನರಳುತ್ತ, ಅವನು ಕಾಣಿಸಿಕೊಂಡು ಕೈಹಿಡಿದೆತ್ತುವ ಕ್ಷಣಕ್ಕಾಗಿಯೇ ಕಾದಿರುವೆಯಾದರೆ, ನಿನ್ನ ಕಲ್ಯಾಣವಾಗುತ್ತದೆ, ಸಂಶಯವಿಲ್ಲ. ಹಾಗಾಗಿ, ನಂಬು, ನಂಬಿ ಕೆಟ್ಟವರಿಲ್ಲವೋ ಎನ್ನುವಂತೆ ನಂಬು!

ಎಷ್ಟು ಚೆನ್ನಾಗಿ ವಿವರಿಸುತ್ತಾನೆ ಈ ಬನ್‌ಶಾನ್ ಎಂದರೆ, ಎಲ್ಲ ಡಿಪ್ಲಾಮ್ಯಾಟ್ ಧರ್ಮಗುರುಗಳ ಅದೇ ಶೈಲಿಯಲ್ಲಿ ಕಾನ್‌ಕಾರ್ಡೆಲ್ಲಾಳನ್ನು ಒಂದು illusion ನಿಂದ ಪಾರಾಗಿಸಿ, ಪಾರಾಗಿಸುವ ಹಂತದಲ್ಲೇ ಅವಳ ಉದ್ಧಾರಕನ ಭಂಗಿಯನ್ನು ಅವಳ ಮನಸ್ಸಿನಲ್ಲೊತ್ತಿ, ಇನ್ನೊಂದೇ illusionಗೆ ಅವಳನ್ನು ತಲುಪಿಸುತ್ತಾನೆ. ಆತನ ಉಪನ್ಯಾಸಕ್ಕೆ ಈ ಪುಟ್ಟ ಹುಡುಗಿಯ ಗೊಂದಲಿತ ಮನಸ್ಸು ತಕ್ಷಣವೇ ಒಂದು ಅತಿರೇಕದ ಚಿತ್ತಭ್ರಮೆಯಿಂದ ಇನ್ನೊಂದು ಅತಿರೇಕದ ಚಿತ್ತಭ್ರಮೆಗೆ ಜಿಗಿಯಲು ಕಾತರದಿಂದ ಕಾದಿದ್ದಂತೆ ಶರಣಾಗುತ್ತದೆ. ಮತ್ತಿದನ್ನು ಕಾನ್‌ಕಾರ್ಡೆಲ್ಲ ತನ್ನ ದ್ವಿಜತ್ವ ಎಂದು ಹೇಳಿಕೊಳ್ಳುತ್ತಾಳೆ, ಪಿಂಕ್ ಪ್ಲಾಯ್ಡ್‌ನಂಥ ರಾಕ್ ಮ್ಯೂಸಿಕ್ ಪ್ರೇಮಿ ಅಮಾನ್ ಎದುರು.

ಈ ಹುಡುಗಿಯ ಎದುರು ಈಕೆಯ ಮುದ್ದುಮೊಗದ ಅಪೂರ್ವ ಸೌಂದರ್ಯದ ಕಳೆಯನ್ನೇ ಅವಳ ವ್ಯಕ್ತಿತ್ವದ ತೇಜಸ್ಸೆಂದು ಭ್ರಮಿಸಿ ಕೂತ ಅಮಾನ್‌ ಅದಾಗಲೇ ಸಾಕಷ್ಟು ಸಂಘರ್ಷಗಳ - ಮನೆ, ಮನ, IAS, ರಾಕ್ ಮ್ಯೂಸಿಕ್‌ಗಳ - ನಡುವೆ ಛಿದ್ರಗೊಂಡ ಹುಡುಗ. ಒಬ್ಬ ಕಚಡಾ ಮೂರ್ಖನಂತೆ ಈಕೆಯ ಬಳಿ ಪಿಂಕ್ ಪ್ಲಾಯ್ಡ್ ಬಗ್ಗೆ ಕೇಳುವ ಅಮಾನ್ ಆ ಸಂಜೆಯನ್ನು ವಿಷಣ್ಣ ಭಾವದಲ್ಲಿ ಅದ್ದಿತೆಗೆದ ಮನಸ್ಥಿತಿಯಲ್ಲಿ ತೊಳಲಾಡುತ್ತ ಕಳೆಯುತ್ತಾನೆ.

But the overall feeling was blurrred and sad. The overall feeling was one of futility, he thought as he walked out, and when he was passing the Presbyterian Church it occurred to him that one could write an entire Roger Waters style album on born-again Christians and TV evangelism - a sarcastic, angry, operatic album about religious hypocrisy. May be he could write to Waters about it. He'd discuss it with Ribor first. (Page 198)

ವಿಚಿತ್ರವೆಂದರೆ ಇದೇ ಕಾನ್‌ಕಾರ್ಡೆಲ್ಲ ಎಲ್ಲವನ್ನೂ ಬಾನ್‌ಶಾನ್ ಬಳಿ ಹೇಳಿಕೊಂಡು ಅಮಾನ್‌ನ ರೋಜರ್ ವಾಟರ್ಸ್ ಕುರಿತ, ಪಿಂಕ್ ಪ್ಲಾಯ್ಡ್ ಕುರಿತ ಅಭಿಮಾನವನ್ನು ಬಾನ್‌ಶಾನ್ ಸಾರ್ವಜನಿಕವಾಗಿ ಅದೂ ಅಮಾನ್‌ನ ಕನಸಿನ ಹ್ಯಾಪನಿಂಗ್‌ನಲ್ಲಿಯೇ ಅಪಹಾಸ್ಯ ಮಾಡಲು, ಕಾನ್‌ಕಾರ್ಡೆಲ್ಲಾ ಹೆಸರನ್ನು ಕೂಡ ಬಳಸಿಕೊಂಡು ಅಮಾನ್‌ನನ್ನು ಅಪಮಾನಗೊಳಿಸಲು ಕಾರಣಕರ್ತಳಾಗುತ್ತಾಳೆ. ಅಮಾನ್ ಆವತ್ತು ಬಾನ್‌ಶಾನ್ ಮತ್ತು ಕಾನ್‌ಕಾರ್ಡೆಲ್ಲಾರ ಈ ಕ್ರೌರ್ಯದಿಂದ ಕಂಗಾಲಾಗುತ್ತಾನೆ.

ಪುಟ 261 ರಲ್ಲಿ ಬೋಧಾ ವಿವರಿಸುವ ಗೆಳೆಯನೊಬ್ಬನ ಮನೆಯಲ್ಲಿ ಕಳೆದ ಒಂದು ಸಂಜೆಯ ಚಿತ್ರವಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ, ಮಬ್ಬು ಕವಿದ ಮೋಡಗಳ ಸಂಜೆ. ಸುಮ್ಮನೇ ಕೂತು ದೂರದ ಗಿರಿಶಿಖರಗಳ ಮಬ್ಬು ಮಬ್ಬು ಸಾಲಿನ ಅಸ್ಪಷ್ಟ ದಿಗಂತವನ್ನು ಕ್ಷಿತಿಜವನ್ನು ಕಾಣುತ್ತ, ಹಾಡು ಕೇಳುತ್ತ ಕಳೆದ ಈ ಸಂಜೆಯ ಕುಳಿತವರು ಕುಳಿತಲ್ಲೇ ಒಂದು ಜೀವಂತ ಕಲ್ಲಾದ ವಿಷಣ್ಣ ಭಾವದ ಮೂರ್ತ ಸ್ವರೂಪಿ ಸಂಜೆಯ ಚಿತ್ರ ಇಡೀ ಕಾದಂಬರಿಯ ಒಂದು ಸ್ತರದ ಮನಸ್ಥಿತಿಯನ್ನೇ ಬಿಂಬಿಸುವಂತಿದೆ ಎನಿಸಿದರೆ ಅಚ್ಚರಿಯಿಲ್ಲ. ಇಂತಹುದೇ ಇನ್ನೊಂದು ಪ್ರತಿಮಾ ಸೃಷ್ಟಿ ಪುಟ 269ರಲ್ಲಿ, ಭೂಕಂಪಾನಂತರದ ಭುವಿಯ ಬಿರುಕುಗಳ ಹಾದಿಯಲ್ಲಿ ಬಿದ್ದುಕೊಂಡಿರುವ ಶಿಲ್ಲಾಂಗ್ ನಗರದ ಚಿತ್ರದಲ್ಲಿಯೂ ಇದೆ.

And now they are moving away from each other and already these images are fading from their conscious minds, but the earthquake has done its work. While outwardly there are now more cracks than previously existed, more things out of line, more people hurt by falling objects, inwardly the earthquake has established an instant order. Firdaus, Aman and Sophie will never know it ; they will continue to act according to the imperativeness of what an earthquake revealed to them one afternoon in August in the early '90s.

ಮನುಷ್ಯ ತನ್ನ ಗ್ರಹಿಕೆಗೆ ತೆರೆದುಕೊಂಡೇ ಇರುವ ತನ್ನ ಸುತ್ತಮುತ್ತಲಿನ ಪ್ರಕೃತಿಯ ಮೌನ ಧ್ವನಿಯನ್ನು ಆಲಿಸುವ ಸಾಮರ್ಥ್ಯವನ್ನು ಕಳೆದುಕೊಂಡಿರುವುದು, ತನ್ನದೇ ಅಂತರಂಗದ ಧ್ವನಿಗೆ ಕಿವುಡಾಗಿರುವುದು ಮತ್ತು ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಂಡು ಜಡವಾಗಿರುವುದು ಹೊಸದೇನಲ್ಲ. ಅದೇ ಬಗೆಯ ಅಂತಃಸ್ಸತ್ವವುಳ್ಳ ಸೋಫಿಯ ಯೋಚನಾಲಹರಿಯನ್ನು ಗಮನಿಸಿ:

Adults didn't see things, Sophie realised. They didn't see anything except what was of immediate concern to them. (Page 276)

ಇದು ಕಾರಣ, ಕೊನೆಗೂ ಮನಸ್ಸಿನ ನೆಮ್ಮದಿಗೆ ಶಾಶ್ವತವಾದ ನೆಲೆಗಟ್ಟುಗಳು ಇಲ್ಲಿನ ಯಾರಿಗೂ ಸಿಗದೇ ಹೋಗಲು. ಒಂದು ಚಿತ್ತಭ್ರಮೆಯಿಂದ ಇನ್ನೊಂದಕ್ಕೆ ಜಿಗಿಯುವ ಕಾನ್‌ಕಾರ್ಡೆಲ್ಲಾ ತರವೇ ಅಮಾನ್ ಶಿಲ್ಲಾಂಗ್ ಬಿಟ್ಟು ಹೊರಹೋಗುವುದರಿಂದ ಎಲ್ಲವೂ ಸರಿ ಹೋಗುತ್ತದೆ ಎನ್ನುವ ತೀರ್ಮಾನವಿದೆ, ಇಬೊಮ್ಚನನ್ನು ಸ್ವೀಕರಿಸುವ ಫಿರ್ದೌಸಳ ನಿರ್ಧಾರವಿದೆ. ಯೂನಿವರ್ಸಿಟಿಯ ಕೆಲಸ ಕೊನೆಗೂ ವಶೀಲಿ ಮತ್ತು ಮುಂದೊತ್ತಿ ಹೋಗುವ ಏಂಜೆಲ್ ವಾರ್ ತರಹದ ಹೆಂಗಸರಿಂದಾಗಿ ಪ್ರೊಫೆಸರ್ ದಾಸ್‌ಗೆ ದಕ್ಕುವುದಿಲ್ಲ. ಹೈಸ್ಕೂಲ್ ಮಕ್ಕಳಿಗೆ ಕಲಿಸುತ್ತಿರುವ ದಾಸ್ ಕುಡಿಯತೊಡಗಿರುವುದರಲ್ಲಿಯೂ ಇಂಥ ಪಲಾಯನ ಸೂತ್ರವೇ ಇದೆ. ನಿವೇದಿತಾ ಕೂಡಾ ಶಿಲ್ಲಾಂಗ್‌ ಬಿಟ್ಟು ಹೊರಗೆ ಹೋಗಿ ಬದುಕನ್ನು ಅರಸುತ್ತಿದ್ದಾಳೆ. ಎಲ್ಲಿಯೂ ಸುಖ ಭುವಿಗೆ ಇಳಿದು ಬಂದಂತಿಲ್ಲ. ಎಲ್ಲರಿಗೂ ತಾತ್ಕಾಲಿಕವಾದ ಒಂದು ಸಂಗತಿ ಸಿಕ್ಕಿದೆ, ಬದಲಾವಣೆಯಾಗಿ, ಅಷ್ಟೆ. ಅದು ಮತ್ತೆ ಚಿತ್ತಕಲಕುವುದಕ್ಕೆ ತೊಡಗಿದಾಗ ಅಲ್ಲಿಂದ ಇನ್ನೊಂದಕ್ಕೆ ಜಿಗಿಯುವುದು ಇವರ ಅನಿವಾರ್ಯ ಕರ್ಮವೇ ಆಗಿದೆ. ತಮಾಷೆಯೆಂದರೆ, ಸೋಫಿ ಇದನ್ನು ಮೊದಲು ಕಂಡುಕೊಳ್ಳುವ ಪಾತ್ರ, ಇಡೀ ಕಾದಂಬರಿಯಲ್ಲಿ! ಸೋಫಿ ತನ್ನ ತಕ್ಷಣದ ವಾಸ್ತವ ಜಗತ್ತಿನಿಂದ ಭಿನ್ನವಾದ ಒಂದು ಕನಸಿನ, ಕಲ್ಪನೆಯ, ಕಥೆಯ ಜಗತ್ತನ್ನು ತನಗಾಗಿ ನಿರ್ಮಿಸಿಕೊಳ್ಳುತ್ತಾಳೆ. ತಾನು ಓದುತ್ತಿರುವ ಕತೆ ಕಾದಂಬರಿಗಳ ಪಾತ್ರವಾಗಿ ತನ್ನನ್ನು ತಾನು ಕಾಣತೊಡಗುತ್ತಾಳೆ ಮತ್ತು ಇದರಿಂದ ಅವಳು ತನ್ನ ಸುಪ್ತ ಮನಸ್ಸಿನ ಅಗತ್ಯವಾದ ಏನನ್ನೋ ಪಡೆಯಲು ಯತ್ನಿಸುತ್ತಾಳೆ. ಇಲ್ಲಿನ ಕಾನ್‌ಕಾರ್ಡೆಲ್ಲಾ, ಅಮಾನ್, ಫಿರ್ದೌಸ್, ನಿವೇದಿತಾ, ಪ್ರೊಫೆಸರ್ ದಾಸ್ ಎಲ್ಲರೂ ಮಾಡುತ್ತಿರುವುದು ಅದನ್ನೇ, ಸ್ವಲ್ಪ ವಿಭಿನ್ನ ಮಾರ್ಗದಲ್ಲಿ ಅಷ್ಟೆ.

ಶ್ರೀಮತಿ ಮುಂಡೈ ಕುರಿತ ಮಾತುಗಳನ್ನು ಗಮನಿಸಿ:
....even though her world consisted, essentially, of a series of difficulties. While some of her problems did get resolved one way or another, new ones inevitably added themselves to the corpus so that the universe of her troubles always remained constant in size.

ಬಹುಷಃ ಇದು ಆಕೆಗೂ, ಕಾದಂಬರಿಯ ಎಲ್ಲ ಪಾತ್ರಗಳಿಗೂ ಸಮಾನವಾಗಿ ಅನ್ವಯಿಸುವ, ಸಮಾನ ಅಗತ್ಯ-ಅನಿವಾರ್ಯವೇ ಆಗಿರಬಹುದಾದ ಒಂದು ಸ್ಥಿತಿ! ಇದರ ಹೊರತು ಅವರಿಗೆ ಅಸ್ತಿತ್ವವೇ ಇಲ್ಲವಾಗಬಹುದು, ಜೀವಿಸುತ್ತಿರುವುದಕ್ಕೆ ಅರ್ಥವೇ ಸಿಗದಿರಬಹುದು.

ಕಾದಂಬರಿಯ ಒಟ್ಟಾರೆ ಪರಿಣಾಮ ಕೂಡಾ ಸಂಕ್ಷೇಪಕ್ಕೆ, ಸಂಗ್ರಹಕ್ಕೆ ಸಿಗುವುದಲ್ಲ. ಈ ಕಾದಂಬರಿಯ ಹರಹು, ವ್ಯಾಪ್ತಿ ದೊಡ್ಡದು. ಅದು ಆಕೃತಿಯಲ್ಲಿ ಶಿಲ್ಪದಲ್ಲಿ ಅತಂತ್ರವಾಗಿ ಬರವಣಿಗೆಯ ನಿಯಂತ್ರಣದ ಕೈತಪ್ಪಿ ಹೋಗಿಲ್ಲ. ನೇಯ್ಗೆ, ತಂತ್ರಗಾರಿಕೆ ಮತ್ತು ಇಡೀ ಕಾದಂಬರಿಯ ಕ್ಯಾನ್ವಾಸ್ ಸಂಬದ್ಧ ರಚನೆಯೊಂದರ ಓದಿನ ಅನುಭವಕ್ಕೆ ಎರವಾಗಿಲ್ಲ. ಇದು ಬಹಳ ಮುಖ್ಯ ಯಾಕೆಂದರೆ ಸಾಮಾನ್ಯವಾಗಿ ಇಂಥ ತೀರ ಹೊಸದಾದ ಮತ್ತು ನಿರ್ವಹಣೆಗೆ ಕಷ್ಟ ಸಾಧ್ಯವಾದ ಸವಾಲಿಗೆ ಕೈಹಾಕಿದ ಕಾದಂಬರಿ, ಅದರಲ್ಲೂ ಮನೋಲೋಕದ ಎಲ್ಲೆ ಕಟ್ಟುಗಳನ್ನು ಗುರುತಿಸ ಹೊರಟ ಕಾದಂಬರಿ ಎಲ್ಲಿಗೂ ತಲುಪದೆ ಕೊನೆಯಾಗುವುದೇ ಹೆಚ್ಚು. ವಸ್ತುವನ್ನಾಗಲೀ, ಆಕೃತಿಯನ್ನಾಗಲೀ ನಿರ್ವಹಿಸಲಾಗದೇ ಕಥಾನಕ ಅತಂತ್ರ ಸ್ಥಿತಿಯೊಂದರಲ್ಲಿ ಸಿಕ್ಕಿ ಹಾಕಿಕೊಂಡಂತೆ ಮುಗಿಯುವುದು ಸಾಮಾನ್ಯ ಅನುಭವ. ಆದರೆ ಈ ಕಾದಂಬರಿಯ ಓದು ಅಂಥ ಅನುಭವವನ್ನು ನೀಡಿ ಕೈ ತೊಳೆದುಕೊಳ್ಳುವುದಿಲ್ಲ. ಬದಲಿಗೆ ಕೃತಕವಲ್ಲದ, ಬಿಡಿಯಾಗಿ ನೇಲುತ್ತಿರುವ ಎಳೆಗಳಿಗೆಲ್ಲ ಕಲಾತ್ಮಕ ನವಿರುತನದಲ್ಲೇ ಗೊಂಡೆಗಳನ್ನು ಹಾಕುವ ಒಂದು ಶಿಲ್ಪ ಇಲ್ಲಿದೆ. ಆದರೆ ಆ ಶಿಲ್ಪ ಆತುರದ ತೀರ್ಮಾನಗಳನ್ನು ಕೊಡುತ್ತಿಲ್ಲ ಅಥವಾ ಅಂಥ ಸಾಂತ್ವನಗಳಿಲ್ಲಿ ಲಭ್ಯವಿಲ್ಲ. ಫಿರ್ದೌಸ್ ಸ್ವತಃ ಜೇನ್ ಆಸ್ಟಿನ್ ಬಗ್ಗೆ ಹೇಳುವ ‘problems not always satisfactorily resolved' ಎಂಬ ಮಾತೇ ಈ ಕಾದಂಬರಿಯ ಕುರಿತೂ ಹೇಳುವುದು ಸಾಧ್ಯ. ಆದರೆ ಅದು ಮೇಲ್ಮಟ್ಟದ ಮಾತಾಗಿಯಷ್ಟೇ ಉಳಿಯುತ್ತದೆ. ಯಾಕೆಂದರೆ ಆಳದಲ್ಲಿ ಮನುಷ್ಯ ತತ್‌ಕ್ಷಣದ ಪರಿಹಾರಕ್ಕೆ, ನೆಮ್ಮದಿ ನೀಡುವುದೇ ಆದರೆ ಭ್ರಮೆಗೆ ಕೂಡಾ ಶರಣಾಗುವುದಕ್ಕೆ ಹಾತೊರೆಯುತ್ತಿರುತ್ತಾನೆ ಎಂಬುದು ಸತ್ಯ. ಕೆಲವರು ಮಾತ್ರವೇ ಶಾಶ್ವತವಾದ ನೆಮ್ಮದಿಯನ್ನು ಕೊಡಬಲ್ಲ ಶೈಲಿಯ ಬದುಕನ್ನು ಹುಡುಕಿಕೊಳ್ಳಬಲ್ಲರೇ ಹೊರತು ಸಾಮಾನ್ಯ ವರ್ಗ ಅಂಥ ಸಾಹಸ, ಸಹನೆ ಮತ್ತು ತ್ಯಾಗಕ್ಕೆ ಸಿದ್ಧವಿರುವುದಿಲ್ಲ. ಕನಿಷ್ಠ ತಮ್ಮೊಳಗಿನ ಖಾಲಿತನವನ್ನು, ಟೊಳ್ಳು ಭಾಗವನ್ನು, ಒಂಟಿತನವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬಲ್ಲ, ಅದನ್ನು ಅದರ ನಿರಂತರತೆಯೊಂದಿಗೇ ಸ್ವೀಕರಿಸಬಲ್ಲ ಗಟ್ಟಿತನ ಎಲ್ಲರಿಗೂ ಇರುವುದಿಲ್ಲ.

ಬದುಕು ಇರುವುದೇ, ಅದು ಸಹ್ಯವಾಗುವುದೇ ಹಾಗಲ್ಲವೆ? ಮನಸ್ಸು ಎಂದಾದರೂ satisfactorily resolve ಆಗುವುದೆ? ಅದು ಹಠಮಾರಿ ಕೂಸಿನಂತೆ, ಸದಾ ‘ಇರುವುದೆಲ್ಲವ ಬಿಟ್ಟು ಇರದುದರೆಡೇಗೆ ತುಡಿವುದೆ’ ಅದರ ನಿಯಮವಲ್ಲವೆ!
(ಈ ಕೃತಿ ಜುಬಾನ್/ಪೆಂಗ್ವಿನ್ ಜಂಟಿ ಪ್ರಕಟನೆ)

ಇದೇ ಕಾದಂಬರಿಯ ಕುರಿತು ತೆಹಲ್ಕಾ ವಾರಪತ್ರಿಕೆಯಲ್ಲಿ ಪ್ರಕಟವಾದ ವಿಮರ್ಶೆ ಇಲ್ಲಿ ಲಭ್ಯ:http://www.tehelka.com/story_main37.asp?filename=hub190108shillong.asp

ಬ್ಲಾಗ್‌ವೊಂದರಲ್ಲಿ ಇವರ ಎರಡೂ ಕಾದಂಬರಿಗಳ ಮೇಲಿನ ವಿಮರ್ಶೆ ಇಲ್ಲಿ ಲಭ್ಯ:http://jaiarjun.blogspot.com/2009/10/not-this-not-this-anjum-hasans-neti.html

ಅಂಜುಂ ಹಸನ್‌ರ ಕವನ ಸಂಕಲನ, Street on the Hill ಕುರಿತ ವಿಮರ್ಶೆ, ತೆಹಲ್ಕಾ ವಾರಪತ್ರಿಕೆಯಲ್ಲಿ ಪ್ರಕಟವಾದುದು, ಇಲ್ಲಿದೆ:http://www.tehelka.com/story_main41.asp?filename=hub100109hanging_death.asp

ದಿ ಹಿಂದೂ ಪತ್ರಿಕೆಯಲ್ಲಿ ಕಾಣಿಸಿಕೊಂಡ ಅಂಜುಂ ಹಸನ್ ಕುರಿತ ಲೇಖನದ ಕೊಂಡಿ:http://www.thehindu.com/lr/2008/01/06/stories/2008010650240500.htm

ದಿ ಹಿಂದೂ ಪತ್ರಿಕೆಯಲ್ಲಿ ಕಾಣಿಸಿಕೊಂಡ ಅಂಜುಂ ಹಸನ್‌ರ ಸಂದರ್ಶನ:http://www.thehindu.com/mp/2009/12/07/stories/2009120750910100.htm

ದಿ ಕ್ಯಾರವಾನ್ ಪತ್ರಿಕೆಯಲ್ಲಿ ಕಾಣಿಸಿಕೊಂಡ ಅಂಜುಂ ಹಸನ್‌ರ ಒಂದು ಲೇಖನವನ್ನು ಓದಲು ಇಲ್ಲಿ ಕ್ಲಿಕ್ಕಿಸಿ:http://www.caravanmagazine.in/book_review.asp
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ