Sunday, February 7, 2010

ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಯಸುನಾರಿ ಕವಬಾಟ (೧೮೯೯-೧೯೭೨) ನೊಬೆಲ್ ಪ್ರಶಸ್ತಿ ವಿಜೇತ ಜಪಾನೀ ಕಾದಂಬರಿಕಾರ. ಈತನ ಕಾದಂಬರಿ ಸಾವಿರ ಪಕ್ಷಿಗಳು ಇದೀಗ ಕನ್ನಡಕ್ಕೆ ಅನುವಾದಗೊಂಡಿದೆ. ಅನುವಾದ ಮಾಡಿದವರು ಡಾ||ಟಿ.ಎನ್.ಕೃಷ್ಣರಾಜು. ವೃತ್ತಿಯಿಂದ ವೈದ್ಯರು. ೧೯೬೭ರಲ್ಲಿ ಪ್ರಜಾವಾಣಿಯ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕತೆಗಾರ. ದಕ್ಷಿಣ ಭಾರತದ ಗಾದೆ-ನುಡಿಕಟ್ಟುಗಳನ್ನಲ್ಲದೆ ಎ.ಕೆ.ರಾಮಾನುಜನ್ನರ ಕವಿತೆಗಳನ್ನು, ಕಿರುಕಾದಂಬರಿಯನ್ನು ಇಂಗ್ಲೀಷಿಗೆ ಅನುವಾದ ಮಾಡಿದವರು. ಇಂಗ್ಲೀಷಿನಲ್ಲಿ ಮೂರು ಪುಸ್ತಕಗಳನ್ನು, ಕನ್ನಡದಲ್ಲಿ ಒಂದು ಕಥಾಸಂಕಲನ (ಬೇತಾಳರಾಯ ಮತ್ತು ಇತರ ಕತೆಗಳು, ಸಾಕ್ಷಿ ಪ್ರಕಾಶನ) ಹಾಗೂ ಒಂದು ಕಾದಂಬರಿ (ಪಶ್ಚಿಮಾಯಣ - ಮನೋಹರ ಗ್ರಂಥಮಾಲಾ) ಪ್ರಕಟಿಸಿದವರು. ಕಾದಂಬರಿಯ ಸೊಗಸಾದ ಅನುವಾದಕ್ಕೆ ಇವರ ಪ್ರತಿಭೆಯ ಕೊಡುಗೆ ಗಮನಾರ್ಹ. ಇನ್ನು ಈ ಪುಟ್ಟ ಕಾದಂಬರಿಯನ್ನು ಗಮನಿಸಬಹುದು.

ಈ ಕಾದಂಬರಿಯ ಮೂಲ ನಿರೂಪಕ ಪ್ರಜ್ಞೆ ಕಿಕುಜಿ ಎನ್ನುವ ಯುವಕನದ್ದು. ಇವನ ತಂದೆಯ ಬದುಕಿನಲ್ಲಿ ನಾಲ್ಕು ಮಂದಿ ಹೆಂಗಸರು/ಹುಡುಗಿಯರು ಇದ್ದಾರೆ. ಕೈಹಿಡಿದ ಹೆಂಡತಿ ಮೊದಲನೆಯವಳು. ಇವಳು ತನ್ನ ಗಂಡನ ಬೇರೆ ಸಂಬಂಧಗಳ ಬಗ್ಗೆ ಪ್ರತಿಸ್ಪಂದಿಸುವ ರೀತಿ ಒಂದು ಬಗೆಯಲ್ಲಿ ವಿಶಿಷ್ಟವಾಗಿದೆ. ಅದನ್ನು just ignore ಎನ್ನುವ ನೆಲೆಯಲ್ಲಿ ಸ್ವೀಕರಿಸಿದಂತೆ, ಆ ಬಗ್ಗೆ ಮಾತನಾಡಲೊಲ್ಲದವಳಂತೆ ಕಾಣಿಸುವ ಈಕೆ ಅಷ್ಟು ನಿರ್ಲಿಪ್ತಳಿರಲಿಲ್ಲವೇನೋ ಎನ್ನುವ ಬಗ್ಗೆ ಮಗನಲ್ಲಿ ಸಂಶಯವಿದೆ. ಇರಲಿ. ಮೊಲೆಯ ಮೇಲೆ ಅಸಹ್ಯವಾದ ಕೆನ್ನೀಲಿ ಮಚ್ಚೆಯುಳ್ಳ, ಮಚ್ಚೆಯ ಮೇಲೆ ಕೂದಲುಳ್ಳ - ಆ ಕಾರಣದಿಂದಲೇ ಮದುವೆಯಾಗದೇ ಉಳಿದು ಹೋದ ಮತ್ತು ಬಹುಷಃ ಈ ಕಾರಣದಿಂದಲೇ ಇರಬಹುದು, ಮನಸ್ಸಿನಲ್ಲಿ ಒಳ್ಳೆಯದರ ಬಗ್ಗೆ ವಿಷ-ಅಸಹನೆ ತುಂಬಿದವಳಾದ ಚಿಕಕೊ ಕುರಿಮೋಟೋ ಎರಡನೆಯವಳು. ಇವಳೊಂದಿಗಿನ ಸಂಬಂಧ ಅಲ್ಪಾಯುವಿನದು. ಹಾಗಾಗಿಯೂ ಚಿಕಕೊಳನ್ನು ಅರಳಿಸದೆ ಬರೇ ಕೆರಳಿಸಿರುವಂಥದ್ದು ಕೂಡ. ತನ್ನ ಸ್ನೇಹಿತನ ಹೆಂಡತಿಯಾದ ಮಿಸೆಸ್ ಓಟಳೇ ಮೂರನೆಯವಳು. ಸ್ನೇಹಿತನ ನಿಧನಾನಂತರ ಮತ್ತು ಚಿಕಕೊ ಜೊತೆಗಿನ ಸಂಬಂಧದ ನಂತರ ಇವರ ಸಂಬಂಧ ಸುರುಹಚ್ಚಿಕೊಳ್ಳುತ್ತದೆ. ಈ ಹೆಂಗಸಿನ ಮಗಳು ಫುಮೀಕೋ ಜೊತೆ ಕೂಡಾ ಸಂಬಂಧ ಇತ್ತೆ, ಇದ್ದರೆ ಅದು ಯಾವ ನೆಲೆಯದ್ದು ಎನ್ನುವ ಬಗ್ಗೆ ಕಾದಂಬರಿ ಸ್ಪಷ್ಟವಾದ ಹೊಳಹುಗಳನ್ನು ನೀಡುವುದಿಲ್ಲವಾದರೂ ಅಂಥ ಒಂದರ ಊಹೆ ಮನಸ್ಸಿನಲ್ಲಿದ್ದರೆ ಅದೇನೂ ಕಾದಂಬರಿಯ ಆಶಯಕ್ಕೆ ಬಾಧಕವಲ್ಲ, ಪೂರಕವೆಂದೇ ತಿಳಿಯಲು ಅಡ್ದಿಯಿಲ್ಲ.

ಉರಿಯುತ್ತಿರುವ ಸೆಡವು ಮತ್ತು ವಿಷದ ಪ್ರತೀಕದಂತೆ ಕಾಣುವ ಚಿಕಕೊ ಇಡೀ ಕಾದಂಬರಿಯನ್ನು ಆವರಿಸುವ ಪಾತ್ರ. ಇವಳು ಕಿಕುಜಿಯನ್ನೂ ಆವರಿಸುತ್ತಾಳೆ. ಕಿಕುಜಿಯ ಬದುಕು, ಪ್ರೇಮ, ಪ್ರಣಯ, ಪರಿಣಯವನ್ನು ಕೊನೆಗೆ ಆತನ ಮನೆ-ಆಸ್ತಿಯನ್ನು ತನ್ನ ಹಿಡಿತದಲ್ಲಿರಿಸಿಕೊಳ್ಳಲು ಸತತವಾಗಿ ಯತ್ನಿಸುವ ಹಿತೈಷಿಯ ಸೋಗಿನ ಈ ಮಹಿಳೆ ಹಾಗಿರಲು ಅವಳದೇ ಆದ ಕಾರಣಗಳಿರಬಹುದು, ಹಿನ್ನೆಲೆಯಿರಬಹುದು, ಅವಳಿಗೂ ಬದುಕು ಅಷ್ಟರಮಟ್ಟಿಗೆ ಅನ್ಯಾಯವನ್ನು ಮಾಡಿರಬಹುದು ಎಂಬುದು ನಮ್ಮ ಮನಸ್ಸಿನಲ್ಲಿ ಮೂಡುವ ಈಕೆಯ ಒಟ್ಟಾರೆ ಚಿತ್ರದ ಚೌಕಟ್ಟಿನಲ್ಲಿಯೇ ಇರುವ ಅಂಶ.

ಸ್ವತಃ ಕಿಕುಜಿಯ ಅಮ್ಮ ತನ್ನ ಗಂಡನ ಬಗ್ಗೆ, ಚಿಕಕೊ, ಓಟ, ಓಟಳ ಮಗಳು ಮುಂತಾದ ಸವತಿಯರ ಬಗ್ಗೆ ಹೊಂದಿರುವ ತಣ್ಣನೆಯ ನಿಲುವು "ದಯವಿಟ್ಟು ನಿನ್ನ ವಿಷ ಹರಡಬೇಡ ಮಾರಾಯ್ತಿ" ಎಂದು ಅವಳು ಚಿಕಕೊ ಹತ್ತಿರ ಅಲವತ್ತುಕೊಳ್ಳುವ ರೀತಿ ಅವಳ ಬಗ್ಗೆ ಹೇಳುವಷ್ಟನ್ನೇ ಚಿಕಕೊ ಬಗ್ಗೆ ಕೂಡಾ ಹೇಳುತ್ತಿದೆ. ಹಾಗಾಗಿ ಇವರಿಬ್ಬರ ವ್ಯಕ್ತಿತ್ವ ಇಡೀ ಕಾದಂಬರಿಯ ಕಥಾನಕದ ಚಲನೆಗೆ ಒಂದು ಬಗೆಯ ಸ್ಥಾಯಿಯಾದ ಹಿನ್ನೆಲೆಯನ್ನು ಒದಗಿಸಿದೆ. ಒಂದು ವಿಶಿಷ್ಟ ಬಗೆಯಲ್ಲಿ ಕಿಕುಜಿ ಈ ಎರಡೂ ವ್ಯಕ್ತಿತ್ವಗಳನ್ನು ಪ್ರತಿನಿಧಿಸುತ್ತಿರುವಂತಿರುವುದು ಕೂಡಾ ಗಮನಾರ್ಹ.

ಮಿಸೆಸ್ ಓಟ ಮತ್ತು ಅವಳ ಮಗಳು ಫುಮೀಕೋ ಈ ಕಾದಂಬರಿಯಲ್ಲಿ ಮುಖ್ಯವಾಗುವ ಎರಡು ಪ್ರಮುಖ ಪಾತ್ರಗಳು. ಆದರೆ ಈ ಎರಡೂ ಪಾತ್ರಗಳು ಒಂದನ್ನು ಬಿಟ್ಟು ಇನ್ನೊಂದಿಲ್ಲ. ಮಾತ್ರವಲ್ಲ, ಈ ಎರಡೂ ಪಾತ್ರಗಳು ಕಾದಂಬರಿಯ ಇನ್ನುಳಿದ ಎಲ್ಲಾ ಪಾತ್ರಗಳೊಂದಿಗೆ ಬಿಟ್ಟು ಬಿಡಲಾರದ ಹಾಗೆ ಹೆಣಿಗೆ ಹಾಕಿಕೊಂಡಿರುವ ರೀತಿಯೇ ವಿಚಿತ್ರವಾಗಿದೆ. ಕಾದಂಬರಿಯ ಯಾವುದೇ ಪಾತ್ರವನ್ನು ಆರಿಸಿಕೊಂಡರೂ ಈ ಪಾತ್ರಗಳಿಗೆ ಆ ಪಾತ್ರದೊಂದಿಗೆ ಸಂಬಂಧ ಏರ್ಪಡಿಸುವ ಏನಾದರೂ ಒಂದು ತಂತು ಇದ್ದೇ ಇರುವುದನ್ನು ಕಾಣುತ್ತೇವೆ! ಹಾಗೆಯೇ, ಈ ಎರಡೂ ಪಾತ್ರಗಳಿಗೆ ಒಂದೆಡೆ ಚಿಕಕೊ ಒಂದು ಬಗೆಯ ಪರಿಪ್ರೇಕ್ಷ್ಯವನ್ನು ಒಡ್ಡಿದರೆ ಇನ್ನೊಂದೆಡೆ ಕಿಕುಜಿ ಮದುವೆಯಾಗಬಹುದಾದ ಸುಂದರ ಹುಡುಗಿ - ಸಾವಿರ ಕ್ರೌಂಚ ಪಕ್ಷಿಗಳ ಕಸೂತಿ ಹಾಕಿರುವ ಕರವಸ್ತ್ರದ ಹುಡುಗಿ - ಯುಕಿಕೊ ಇನಾಮುರ ಇನ್ನೊಂದೇ ಬಗೆಯ ಪರಿಪ್ರೇಕ್ಷ್ಯವನ್ನು ಒಡ್ಡುತ್ತಿದ್ದಾಳೆ. ಚಿಕಕೊ ಎಂಥ ಹೆಂಗಸೆಂಬುದು ನಮಗೆ ಗೊತ್ತು. ಆದರೆ ಯುಕಿಕೊ ಇನಾಮುರ ಮುಗ್ಧೆ, ಚೆಲುವೆ, ತರುಣಿ. ಚಿಕಕೊಳ ಮಾತಿನಿಂದ ಕಿಕುಜಿ ಜೊತೆ ಮದುವೆಯ ಆಸೆಯನ್ನು ಮನಸ್ಸಿನಲ್ಲಿ ಅದಷ್ಟೇ ಮೂಡಿಸಿಕೊಂಡಿರುವ, ಅದಕ್ಕಾಗಿ ಅವಳು ಕರೆದಾಗ ಬರುವ, ಸರಳತೆ,ವಿನಯದಿಂದ ಮನಸ್ಸಿನಲ್ಲಿ ನಿಲ್ಲುವ ಪಾತ್ರ. ಈ ಕಥಾನಕದ ಹಂದರದಲ್ಲಿ ಇದರಾಚೆ ಈ ಪಾತ್ರಕ್ಕೇನೂ ಕೆಲಸವಿಲ್ಲ. ಮಿಸೆಸ್ ಓಟ ಮತ್ತು ಫುಮೀಕೋ ಈ ಇಬ್ಬರ (ಚಿಕಕೊ ಮತ್ತು ಯುಕಿಕೊ) ನಡುವೆ ಇದ್ದಾರೆ. ಮತ್ತು ಈ ನಡುವಿನ ಸ್ಥಿತಿಯಲ್ಲಿ ತಮ್ಮದೇನೂ ತಪ್ಪಿಲ್ಲದೆಯೂ ಸಿಕ್ಕಿಹಾಕಿಕೊಂಡಂತಿರುವ ಅವರ ಅಪಾರವಾದ, ಕೊನೆಯಿಲ್ಲದ ನೋವು-ಸಂಕಟಗಳಿವೆ. ಅದರಿಂದ ಮುಕ್ತಿಯನ್ನು ಹುಡುಕುತ್ತಿರುವವರಂತೆ ಕಾಣುವ ಈ ಎರಡೂ ಪಾತ್ರಗಳು ನಮ್ಮನ್ನು ಬಹುಕಾಲ ಕಾಡುವ ಆಳ, ವ್ಯಕ್ತಿತ್ವ ಇರುವಂಥವು. ಈ ಇಬ್ಬರ ನಡುವೆ ಕಿಕುಜಿ ಅವನ ತಾಯಿಯ ಬಳುವಳಿಯಂತೆ ಕಾಣುವ ಅತೀವ ನಿರ್ಲಿಪ್ತಿಯಿಂದಲೂ, ಚಿಕಕೊಳ ಪ್ರಭಾವದಂತೆ ಕಾಣುವ ‘ಬಳಸಿಕೊಳ್ಳುವ’ ಕ್ರೌರ್ಯದಿಂದಲೂ ನಿಂತಿರುವುದು ವಿಚಿತ್ರ.

ಈಗ ತಂದೆಯಿಲ್ಲ, ಸತ್ತಿದ್ದಾನೆ. ತಾಯಿ ಕೂಡಾ ಇಲ್ಲ. ಇರುವುದೆಲ್ಲ ಅಪ್ಪನ ಹಳೆಯ ಪ್ರೇಯಸಿಯರು. ಮದುವೆಯ ಆಸೆಯ ಪ್ರತಿರೂಪದಂತಿರುವ ಯುಕಿಕೊ ಇನಾಮುರ. ಅಪ್ಪನ ಪ್ರೇಯಸಿಯರೊಂದಿಗೆ, ಆ ಪ್ರೇಯಸಿಯರಲ್ಲೊಬ್ಬಳ ಮಗಳೊಂದಿಗೆ ಮಗನೂ ಪ್ರಣಯಕ್ಕಿಳಿದರೆ ಅದು ಸರಳವಾಗಿ ಮಾನವ ಸಹಜ ಪ್ರಣಯ ಲಾಲಸೆಯೆ? ಅಥವಾ ಅದು ಪಾಪವೆ? ಅಪ್ಪನೇ ತಾಯಿ-ಮಗಳು ಇಬ್ಬರನ್ನೂ ಪ್ರೇಯಸಿಯರನ್ನಾಗಿ ಕಂಡಿದ್ದನೆ? ಮಗ ಅದೇ ತಾಯಿ-ಮಗಳನ್ನು ಬಯಸುವುದು, ಸಂಬಂಧ ಬೆಳೆಸುವುದು ನಡೆದರೆ ಅದು ಬೇರೆ ಬೇರೆ ಮನಸ್ಸುಗಳ ಮೇಲೆ ಹೇಗೆ ಪರಿಣಾಮವನ್ನುಂಟು ಮಾಡಬಹುದು? ಅದರಲ್ಲಿಯೂ ಮಗಳು ತನ್ನ ವಧುವಾಗಬಲ್ಲ ವಯಸ್ಸಿನ ಮನಸ್ಸಿನ ಹುಡುಗಿಯಾಗಿರುತ್ತ ಅವಳ ತಾಯಿಯೊಂದಿಗೆ ನಡೆಸುವ ಪ್ರಣಯ ಆ ಮಗಳಿಗೆ ಹೇಗೆ ಕಾಣಬಹುದು? ತಾಯಿ ಮಗಳಲ್ಲಿ ಸ್ಪರ್ಧೆಯಿರುತ್ತದೆಯೆ? ಅದು ದ್ವೇಷ-ರೋಷ-ಅಸಹ್ಯವೆಲ್ಲ ಆಗಿ ಅಭಿವ್ಯಕ್ತಿ ಪಡೆಯುವುದೆ? ಅಥವಾ ಎಲ್ಲವನ್ನೂ ಸಹನೆಯಿಂದ, ಅನುಕಂಪ ಅನುತಾಪದಿಂದ ಕಾಣಬಲ್ಲವಳೇ ಈ ಫುಮೀಕೊ?

ಪ್ರಾಣಿಗಳಲ್ಲಿ, ಪಕ್ಷಿಜಾತಿ (ಈ ಹೆಸರಿನ ಸಹೋದರ-ಸಹೋದರಿಯರ ಲೈಂಗಿಕತೆಯನ್ನು ಕುರಿತ ಮಾಸ್ತಿಯವರ ಒಂದು ಸಣ್ಣಕತೆಯಿದೆ) ಯಲ್ಲಿ ಸರಳವಾಗಿ ಸಹಜ ಪ್ರೇಮ-ಪ್ರಣಯವೆಂದು ಇದನ್ನು ಕಾಣುವ, ಸ್ವೀಕರಿಸುವ ನಮಗೆ - ಬುದ್ಧಿಯಿರುವ, ನಾಗರಿಕ ಸಂಹಿತೆಗಳಿರುವ, ಸಾಮಾಜಿಕ ಬದ್ಧತೆಗಳಿರುವ - ನಮಗೆ, ಮನುಷ್ಯರಿಗೆ ಮನುಷ್ಯರಲ್ಲೂ ಹಾಗೆಯೇ ಸ್ವೀಕರಿಸಬಹುದಾದ ಒಂದು ವಿದ್ಯಮಾನವಾಗಿ ಕಾಣಿಸಲು ಸಾಧ್ಯವಿದೆಯೆ? ಹಾಗೆ ಬದುಕನ್ನು ರೂಢಿಸಿಕೊಳ್ಳುವುದು ಸಾಧ್ಯವಿದೆಯೆ? ಅಸಾಧ್ಯವಾದಲ್ಲಿ ಎದ್ದೇಳುವ ಮಾನಸಿಕ ಸಂಘರ್ಷಗಳಿಗೆ ಕೊನೆಯುಂಟೆ? ಎದುರಿಸೀತೆ ಅದನ್ನು ಸೂಕ್ಷ್ಮ ಮನಸ್ಸು? ಸಂಘರ್ಷಗಳ ಮೂಲ ನೈತಿಕ ಪಾತಳಿಯಲ್ಲೂ, ಧಾರ್ಮಿಕ ಪಾತಳಿಯಲ್ಲೂ, ನಾಗರೀಕ ಸಮಾಜದ ಜನಜೀವನದ ಹಿತಾಹಿತಗಳ ಪಾತಳಿಯಲ್ಲೂ ಹರಡಿಕೊಂಡಿರುತ್ತ ಇಂಥಾದ್ದಕ್ಕೆ ಬೇಕಾಗಿಯೋ ಬೇಡವಾಗಿಯೋ ತುತ್ತಾದ ಒಂದು ಬದುಕು ಎದುರಿಸುವ ಪ್ರಶ್ನೆಗಳು ಹೇಗಿರುತ್ತವೆ? ಪ್ರಶ್ನೆಗಳೊಂದಿಗಿನ ಮುಖಾಮುಖಿ ಹೇಗಿರುತ್ತದೆ? ಆ ಬದುಕನ್ನು ಹೊರಬೇಕಾಗಿ ಬಂದ ಜೀವದ ಪ್ರತಿಸ್ಪಂದನ ಹೇಗಿರುತ್ತದೆ? ಉತ್ತರವಾಗಿ ನಮಗೆದುರಾಗಿರುವ ಪಾತ್ರ ಒಂದೇ, ಅದು ಫುಮೀಕೋ.

ಪುಟ್ಟಣ್ಣ ಕಣಗಾಲರ ‘ರಂಗನಾಯಕಿ’ ಸಿನಿಮಾ ನೆನಪಾಗುತ್ತದೆ! ನಮಗೆ ಇಂದ್ರನ ಪ್ರೇಯಸಿ ಊರ್ವಶಿಯನ್ನು ನಿರಾಕರಿಸುವ ಅರ್ಜುನನ ಮೇಲ್ಪಂಕ್ತಿಯಿದೆ, ಬಹುಷಃ. ಆದರೆ ಕಿಕುಜಿಯಲ್ಲಿ ದ್ವಂದ್ವವಿಲ್ಲ. ಅವನಿಗೆ ಈ ಯಾವತ್ತೂ ಹೆಣ್ಣುಗಳು ಟೀಲೋಟಗಳಂತೆ ಕಾಣುತ್ತಿದ್ದಾರೆಯೆ ಅನಿಸುತ್ತದೆ. ಅವುಗಳನ್ನು ಪ್ರೀತಿಗಾಗಿ, ವಾತ್ಸಲ್ಯಕ್ಕಾಗಿ, ಮಮತೆಗಾಗಿ, ಆಸರೆಗಾಗಿ, ಕಾಮಕ್ಕಾಗಿಯೂ ಅಗತ್ಯವಿದ್ದಾಗ ಬಳಸುವುದು ಮನುಷ್ಯ ಸಹಜವೆಂದಷ್ಟೇ ಆತ ಕಾಣುತ್ತಿದ್ದಾನೆ. ಅಂದ ಮಾತ್ರಕ್ಕೆ ಅದು ನೀಚತನದ ನಿಲುವೇನೂ ಆಗಿರಬೇಕಿಲ್ಲ. ಆದರೆ ಪ್ರಶ್ನೆಗಳನ್ನು ಎದುರಿಸುವ ಪಾತ್ರ ಅವನದಲ್ಲ ಇಲ್ಲಿ ಎನ್ನುವುದೇ ಸಮಸ್ಯೆ. ಓಟಳ ಮಗಳು ಫುಮೀಕೋ ಎದುರಿಗೇ ಓಟಳ ಲಿಪ್‌ಸ್ಟಿಕ್ಕಿನ ಕಲೆಯಿರುವ ಟೀಲೋಟಕ್ಕೆ ತುಟಿಯಿಟ್ಟು ಟೀ ಹೀರಬಲ್ಲ ಕಿಕುಜಿ ಸ್ವತಃ ಫುಮೀಕೋಳಲ್ಲಿ ಆ ಕ್ಷಣಕ್ಕೆ ಉಂಟು ಮಾಡುತ್ತಿರುವ ತಲ್ಲಣಗಳನ್ನು ಕಾಣಲಾರ. ಅದೇನಿದ್ದರೂ ಓದುಗನ ಹೊರೆ! ಸೆಳೆದುಕೊಂಡಾಗ ಪ್ರತಿಭಟಿಸದೇ ಒಪ್ಪಿಸಿಕೊಳ್ಳುವ ಫುಮೀಕೋ ಅದಷ್ಟರಿಂದಲೇ ಸ್ಪಷ್ಟಗೊಳ್ಳುವ ಹೆಣ್ಣಲ್ಲ. ಇಲ್ಲವಾದಲ್ಲಿ ಅದೇ ರಾತ್ರಿ ಅವಳು ಆ ಲೋಟವನ್ನು ಕಲ್ಲಿಗೆ ಬಡಿದು ಪುಡಿ ಮಾಡುವುದು ಯಾಕೆ? ಕಿಕುಜಿಯ ಜೊತೆಗಿನ ಸಂಬಂಧಕ್ಕೆ ಸತ್ತೇ ಹೋಗಿರುವ ‘ಅಮ್ಮ ಬಿಡುತ್ತಿಲ್ಲ’ ಎನ್ನುವ ಅವಳ ಮಾತುಗಳನ್ನು ನೋಡಿ. ಲೋಟ ಪುಡಿಗಟ್ಟಿದ್ದು ಭೂತದ ಸಂಕಟದಿಂದ ಪಾರಾಗುವುದಕ್ಕೇ ಇದ್ದೀತು. ಆದರೆ ಅವಳು ಶಾಶ್ವತವಾಗಿ ಕಣ್ಮರೆಯಾಗುವುದು ಯಾವುದರಿಂದ ಮುಕ್ತಿಯನ್ನೈದುವ ಉದ್ದೇಶದಿಂದ? ತಾನು ಕಿಕುಜಿಗೆ ಬರೆದ ಒಂದೇ ಒಂದು ಪತ್ರವನ್ನೂ ಅವನು ಓದುವ ಮೊದಲೇ ಅವಳು ಕೈಯಾರೆ ಹರಿದು ಕಿಸೆಗೆ ಸೇರಿಸುತ್ತಾಳೆ, ಅವನೆದುರೇ. ಕಿಕುಜಿಯ ಜೊತೆಗೆ ಸುದೀರ್ಘ ಸಂಬಂಧದ ಆಸೆಯಿತ್ತೆ ಅವಳಿಗೆ? ಅದಕ್ಕೆ ಅವಳ ತಾಯಿ, ಚಿಕಕೊ, ಯುಕಿಕೊ ಇನಾಮುರ ಕೊನೆಗೆ ಸ್ವತಃ ಕಿಕುಜಿಯ ಕಾಮ ತೊಡಕಾಯಿತೆ?

ಎಲ್ಲಾ ಮಾತು-ಮೌನ ಮೀರಿ ಫುಮೀಕೋಳ ಒದ್ದೆ ಕಂಗಳ ಮ್ಲಾನವದನ ಕಣ್ಮುಂದೆ ನಿಲ್ಲುತ್ತದೆ. ಅವಳಲ್ಲಿ ಏನೋ ಕಂಡ ಯಾತನೆ, ಏನನ್ನೋ ಕಾಣುವ ಯಾಚನೆ.

ಇಡೀ ಕಾದಂಬರಿಯಲ್ಲಿ ಒಂದು ಬಗೆಯ ಉಸಿರುಗಟ್ಟಿಸುವ ಸನ್ನಿವೇಶ, ಇನ್ನೊಬ್ಬರ ಕನಸಿನಲ್ಲಿ ಸಿಕ್ಕಿಹಾಕಿಕೊಂಡ ಪಾತ್ರಗಳೇ ಇವೆಲ್ಲಾ ಎನ್ನಿಸುವ ವಾತಾವರಣ ಇದೆ. ಯಾವ ಪಾತ್ರವೂ ಪೂರ್ತಿಯಾಗಿ ನಮ್ಮೆದುರು ಬಿಚ್ಚಿಕೊಳ್ಳುವುದಿಲ್ಲ, ಬರೇ ಹರಡಿಕೊಳ್ಳುತ್ತವೆ. ನಿಚ್ಚಳವಾಗುವುದಿಲ್ಲ, ಥೇಟ್ ನಮ್ಮ ನಿಮ್ಮ ಬದುಕಿನಲ್ಲಿ ನಡೆಯುವಂತೆಯೇ. ಈ ಪಾತ್ರಗಳನ್ನು, ಅವುಗಳ ಮಾತನ್ನು, ನಡೆಯನ್ನು ನಾವು ಸತತವಾಗಿ ಕಾದು ನೋಡಬೇಕಾಗುತ್ತದೆ ಮತ್ತು ಕಾದು ಕಾದು ಅರ್ಥ ಮಾಡಿಕೊಳ್ಳಲು ಹೆಣಗಬೇಕಾಗುತ್ತದೆ. ಆಗಲೂ ಅವು ‘ಅರ್ಥ’ದ ವ್ಯಾಪ್ತಿಗೆ ಸಿಕ್ಕುವ ಕಾದಂಬರಿಯ ಪಾತ್ರಗಳಾಗದೇ ಜೀವಂತಿಕೆಯಿಂದ ನಳನಳಿಸುವ ಬದುಕಿನ ಪಾತ್ರಗಳಾಗಿಯೇ ಉಳಿಯುವುದು ಸೋಜಿಗ. ಇಲ್ಲಿ ಮಾತಿನಲ್ಲಿ, ಕ್ರಿಯೆಯಲ್ಲಿ ಅಷ್ಟಿಷ್ಟು ಕಾಣಿಸಿಕೊಂಡೂ ‘ವ್ಯಕ್ತ ಮಧ್ಯ’ ಅಲ್ಪವಾಗಿ ಅವ್ಯಕ್ತ ಶೇಷವೇ ಮಹತ್ತಾಗಿ ಉಳಿಯುತ್ತದೆ. ಒಂದು ಬಗೆಯ ಅತೃಪ್ತಿಯನ್ನು ಹುಟ್ಟಿಸಿಯೂ ಅದರ ಕಿಚ್ಚಿನಲ್ಲೇ ಬೇಯುವ ತುರ್ತು ಹುಟ್ಟಿಸಬಲ್ಲ ಶಕ್ತಿಯಿರುವ ಶೈಲಿ ಇದು.

ಕರವಸ್ತ್ರದ ಮೇಲಿನ ಕಸೂತಿ ಚಿತ್ರದ ಸಾವಿರಾರು ಕ್ರೌಂಚ ಪಕ್ಷಿಗಳು ಇದ್ದಕ್ಕಿದ್ದಂತೆ ಅಲ್ಲಿಂದ ಪುರ್ರನೆ ಹಾರಿ ಕಣ್ಮರೆಯಾಗಬಲ್ಲ ಒಂದು ಕ್ಷಣಭಂಗುರವಾದ ಬದುಕು ಇಲ್ಲಿದೆ. ಭಾವನೆಗಳು, ಪ್ರೀತಿ, ಸಂಬಂಧ ಈ ತತ್ವಕ್ಕೆ ಬದ್ಧವಾದವುಗಳೇ ಎನ್ನುವುದು ಸತ್ಯ. ಆದರೆ ಹಾಗೆ ಚಿತ್ರದ ಪಕ್ಷಿ ಎಲ್ಲಿಗೂ ಹಾರಿ ಹೋಗುವುದೆಂದರೇನು! ಅವು ಬಂಧಿಗಳಲ್ಲವೆ, ಚಿತ್ರದಲ್ಲಿ ಕಾಣುವ ರೆಕ್ಕೆಯಿಂದಲೇ ಕಲಾಕಾರ ಅವುಗಳನ್ನು ಶಾಶ್ವತವಾಗಿ ಬಂಧಿಸಿಲ್ಲವೇ ಎಂದರೆ ಅದೂ ನಿಜವೇ. ಆದರೆ ಈ ನಿಜಕ್ಕೆ ಜೀವಸತ್ವವಿಲ್ಲ. ಸಿಕ್ಕಿಯೇ ಬಿಟ್ಟಿತು ಕೈಗೆ, ಯಾರದೇನು ಅಡ್ಡಿಯಿರಲು ಸಾಧ್ಯ ಎನಿಸುವ ನಿಖರತೆಯ ನಿರಾಳತೆಯಲ್ಲೂ ಕೈಗೆ ಸಿಕ್ಕಿದ್ದು ಬರಿಯ ಕಲ್ಪನೆ, ವಸ್ತುವಲ್ಲ ಎನ್ನುವ ಅಸಂಭವ-ಅಸಂಗತವನ್ನೂ ಬದುಕು ಜೊತೆಜೊತೆಯಾಗಿಯೇ ಮುಖಾಮುಖಿಯಾಗುತ್ತಿರುತ್ತದೆಯಲ್ಲವೆ?

ಒಂದು ಕಡೆ ಮಿಥ್ಯೆ, ಇನ್ನೊಂದು ಕಡೆ ಮಾಯೆ. ಒಮ್ಮೆ ಎಲ್ಲವೂ ಅನೂಹ್ಯ, ಅಮೂರ್ತ. ಇನ್ನೊಮ್ಮೆ ಎಲ್ಲವೂ ಸುಲಭ ಸಾಧ್ಯ, ಕೈವಶ! ಎರಡನ್ನೂ ಜೊತೆಜೊತೆಗಿಟ್ಟು ಸಾಧಿಸುವ ಈ ಕಾದಂಬರಿ ಮನಸ್ಸಿನ ಬುದ್ಧಿ-ಭಾವ ವಲಯದ ಅನೂಹ್ಯ ಮಜಲುಗಳನ್ನು ಸ್ಪರ್ಶಿಸುತ್ತದೆ ಮತ್ತು ಇದನ್ನು ತನ್ನ ತಂತ್ರದಿಂದಲೇ ಸಾಧಿಸಿದೆ ಎಂಬುದು ಗಮನಾರ್ಹ. ಹಾಗೆ ನೋಡಿದರೆ ಇಲ್ಲಿನ ಕಥಾನಕವೇ ಅಂಥ ವೈಶಿಷ್ಟ್ಯವನ್ನು ಹೊಂದಿತ್ತು ಅಂತೇನೂ ಅನಿಸುವುದಿಲ್ಲ. ಫುಮೀಕೋ ನಡೆದುಕೊಳ್ಳುವ ರೀತಿಯಲ್ಲಿ, ಅವಳ ಪಾತ್ರಚಿತ್ರಣದ ಅನನ್ಯ ಬಗೆಯಲ್ಲಿ, ನಿಧಾನ-ಮೌನ-ಮಾತು ಮತ್ತು ನಡೆ ಎಲ್ಲೆಲ್ಲೂ ಇದು ನಡೆದಿದೆ.

ಮಿಸೆಸ್ ಓಟ, ಯುಕಿಕೊ ಇನಾಮುರ, ಫುಮೀಕೋ ಜೊತೆ ಕಿಕುಜಿಯ ಭೇಟಿಗಳಿವೆ. ಮಾತುಗಳು, ಭೇಟಿಗಳ ನಡುವೆ ಧುತ್ತೆಂದು ಬಂದು ಬಿಡುವ ಚಿಕಕೊಳ ಭೀತಿ ಇದೆ. ಮಿಸೆಸ್ ಓಟ ಬಂದಾಗ ಫುಮೀಕೋ ಬರುವ ಭಯ ಬೇರೆ. ಅವೆಲ್ಲ ಏನೂ ಇಲ್ಲದಿದ್ದಾಗಲೂ ಆಡಬೇಕೆಂದು ಕೊಂಡಿದ್ದ, ಕೊನೆಗೂ ಆಡಲಾರದೇ ಉಳಿದು ಹೋದ ಒಂದು ಮಾತು, ಅದರ ಗೈರು ಹುಟ್ಟಿಸುವ ಮೌನದ ಭಾರ ಉಳಿಯುತ್ತದೆ ಓದುಗನ ಎದೆಯ ಮೇಲೆ. ಇಲ್ಲೆಲ್ಲ ಸತತವಾಗಿ ಹರಿದಾಡುತ್ತ ಸಾಗುವ ಓದುಗನ ಅನೂಹ್ಯವಾದದ್ದನ್ನು ಹಿಡಿಯುವ ವಿಫಲ ಯತ್ನದಲ್ಲೇ ಈ ಕಾದಂಬರಿಯ ಸಕಲ ತತ್ವಗಳೂ, ಯಶಸ್ಸೂ ಅಡಗಿದೆ. ಪ್ರಯತ್ನಿಸಿ ನೋಡಿ!

ತನ್ನ ಅಪ್ಪ ಸತ್ತ ಮೇಲೆ ತನ್ನ ತಾಯಿ ಯಾವನೊಂದಿಗೆ ಸೇರಿದಳೋ ಅವನೊಂದಿಗೇ ತಾನೂ ಸೇರಿದಂತಿದ್ದ ಫುಮೀಕೋ ಅಂಥವನ ಮಗನೊಂದಿಗೆ ಕೂಡಾ ಮಲಗಿದ ತನ್ನ ತಾಯಿಯ ಬಗ್ಗೆ ಮೊದಲು ಮತ್ತು ಸ್ವತಃ ತಾನೂ ಆತನೊಂದಿಗೇ ಮಲಗಿದ ಬಳಿಕ ಏನು ಯೋಚಿಸುತ್ತಾಳೆ? ತನ್ನ ಬಗ್ಗೆ ಏನನ್ನು ಯೋಚಿಸುತ್ತಾಳೆ? ಉಳಿದವರ ಬಗ್ಗೆ, ತನ್ನ ತಾಯಿಯ ಬಗ್ಗೆ, ಚಿಕಕೊ ಬಗ್ಗೆ, ಯುಕಿಕೊ ಬಗ್ಗೆ, ಕಿಕುಜಿಯ ತಂದೆಯ ಬಗ್ಗೆ ಮತ್ತು ಕಿಕುಜಿಯ ಬಗ್ಗೆ? ಏನಿದ್ದರೂ ಅದು ಬರೇ ದೇಹದ ಬಗ್ಗೆ, ಕಾಮದ ಬಗ್ಗೆ ಆಗಿರಲಾರದು, ಬಿಡಿ. ಅವಳ ಯೋಚನೆಯೆಲ್ಲವೂ ಕರವಸ್ತ್ರದ ಮೇಲಿನ ಕಸೂತಿಯಲ್ಲಿ ಬಂಧಿಗಳಾದ, ಇನ್ನೇನು ಹಾರಿ ಹೊರಟು ಹೋಗಲಿರುವ ಸಾವಿರಾರು ಕ್ರೌಂಚ ಪಕ್ಷಿಗಳ ಕುರಿತೇ ಆಗಿತ್ತೆ ಅನಿಸುತ್ತದೆ. ಬರೇ ಅನಿಸಿಕೆ ಅಷ್ಟೆ. ಯಾಕೆಂದರೆ ಈ ಪಕ್ಷಿಗಳು ಏನೆಲ್ಲವನ್ನು ಹೇಳುತ್ತಿವೆಯೋ ಯೋಚಿಸುವುದಿನ್ನೂ ಇದೆ....

ಮಹತ್ವದ ಕತೆಗಾರ, ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆಯವರು ಈ ಅನುವಾದಕ್ಕೆ ಬರೆದ ಮೌಲಿಕವಾದ ಮುನ್ನುಡಿ ಇಲ್ಲಿ ಲಭ್ಯವಿದೆ.
(ಅಂಕಿತ ಪ್ರಕಾಶನ)

No comments: