Friday, February 12, 2010

ಎಂಥ ಚಂದದ ಬಳ್ಳಿ ಚೆಲ್ಲವರಿದಿಹುದಿಲ್ಲಿ!

ಸ. ಉಷಾ ಅವರ ಕಾದಂಬರಿ ‘ಕಸೂತಿ’. ಇದು ಎಂಥ ಚಂದದ ಬಳ್ಳಿ ಚೆಲ್ಲವರಿದಿಹುದಿಲ್ಲಿ| ಚೆಲುವನರಸುವ ಜಾಣ, ಬಂದು ನೋಡೂ...ಎನ್ನಬೇಕು ಅನಿಸುವಂತೆ ಮಾಡಿದ ಕಾದಂಬರಿ. ಇದೊಂದು ಸಂಬಂಧಗಳ ನವಿರಾದ ಭಾವವಲ್ಲರಿ. ಕಸೂತಿ ಹಾಕುವುದು ಅತೀವ ತಾಳ್ಮೆ, ಸಮಾಧಾನಗಳನ್ನು ಬೇಡುವ, ಸೂಕ್ಷ್ಮ ಕುಸುರಿಯ ಕಲಾಭಿಜ್ಞತೆ ಅಗತ್ಯವಿರುವ ಒಂದು ಪ್ರೀತಿಯ ನೇಯ್ಗೆ. ಇಲ್ಲಿ, ಈ ಕಾದಂಬರಿಯಲ್ಲಿ ನಾವು ಕಾಣುವ ಕಸೂತಿ ಮನುಷ್ಯ ಸಂಬಂಧಗಳದ್ದು. ತಾಳ್ಮೆ ಸಮಾಧಾನಗಳ ಕುಸುರಿಕಲೆಯಿಂದ ನೇಯ್ದ ಮನುಷ್ಯ ಸಂಬಂಧಗಳೇ ಪ್ರೀತಿಯ ಬಂಧದಿಂದ ಸೃಜಿಸುವ ಕಲಾಸೃಷ್ಟಿ ಹಲವು ಸುಂದರ ಬದುಕುಗಳನ್ನು ಕಟ್ಟಿಕೊಡುತ್ತದೆ. ಇದನ್ನು ಇಂಥ ಒಂದು ಕೃತಿಯನ್ನು ಕಟ್ಟಲು ಬೇಕಾದ ಎಲ್ಲ ಪ್ರಜ್ಞೆ, ಪ್ರೀತಿ ಮತ್ತು ಸಾವಧಾನ ಭಾವದಿಂದ ಸಾಧಿಸಿದ್ದಾರೆ ಉಷಾ. ‘ಈ ಕಸೂತಿಯನ್ನು ನಿನ್ನೆಯ ನೆನಪುಗಳಿಗೂ ನಾಳೆಯ ಕನಸುಗಳಿಗೂ ಅರ್ಪಿಸಿದ್ದೇನೆ’ ಎನ್ನುವ ಅವರ ನೆನಪುಗಳು ಇಲ್ಲಿ ರಂಗು ರಂಗಿನ ಕಸೂತಿಯಾಗಿ ಅರಳಿಕೊಳ್ಳುವ ವಿನ್ಯಾಸದ ಪರಿ ವಿಶಿಷ್ಟವಾದದ್ದು.

ಮೊದಲಿಗೆ ಅದು ಹಲವು ಮರೆಯಲಾರದ ಕೃತಿಗಳ ಸೊಗಡು ಸವಿಯಲ್ಲಿ ಅದ್ದಿ ತೆಗೆದ ರಸಪಾಕದ ಒಂದು ಅನುಭವವನ್ನು ನಮಗೆ ಕೊಡುವಂಥಾದ್ದು. ಲಾರಾ ಇಂಗಲ್ಸ್ ವೈಲ್ಡರಳ ಬಾಲ್ಯ-ಹರಯ-ಯೌವನದ ಸೊಗಸಿನ ಬಂಗಾರದ ದಿನಗಳನ್ನು ಮೆಲುಕು ಹಾಕುವ ಒಂಭತ್ತೂ ಪುಸ್ತಕಗಳ ಸರಣಿಯನ್ನು ಓದಿದವರಿಗೆ ಈ ಕೃತಿಯಲ್ಲೂ ಅವಕ್ಕೆ ಸಮನಾದ ಅನನ್ಯ ಅಪೂರ್ವ ಲೋಕದ ನೆನಪುಗಳ ಮೆಲುಕಾಗಿ ಕಾಡುವಷ್ಟು ಆಪ್ತವಾಗಿ ಇವು ಕಲಕುತ್ತವೆ. ಇನ್ನೊಮ್ಮೆ ತೆಲುಗಿನ ಅಪೂರ್ವ ಕೃತಿ ಶ್ರೀರಮಣರ ‘ಮಿಥುನ’(ಅನುವಾದ ವಸುಧೇಂದ್ರ, ಛಂದ ಪ್ರಕಾಶನ)ದ ರಮ್ಯ-ಸರಸ-ನವರಸ ಕಾವ್ಯದ ಸೊಗಸು-ಬಿನ್ನಾಣಗಳಾಗಿ ಮೈತಳೆಯುತ್ತವೆ. ಒಮ್ಮೆ ಶ್ರೀನಿವಾಸ ವೈದ್ಯರ ಲಘು ವೈನೋದಿಕ ಧಾಟಿಯ ಕೌಟುಂಬಿಕ ಚಿತ್ರಣದ ‘ರುಚಿಗೆ ಹುಳಿಯೊಗರಾಗಿ’ ತುಟಿಯಂಚಿನ ಕಿರುನಗೆಗೆ ಕಾರಣವಾಗುತ್ತಲೇ ಹೃದಯದ ತಂತಿಯನ್ನು ಮೀಟುವಂತಿದ್ದರೆ ಇನ್ನೊಮ್ಮೆ ಎಸ್.ಸುರೇಂದ್ರನಾಥರ ‘ಎನ್ನ ಭವದ ಕೇಡು’ ಕಾದಂಬರಿಯ ದಾವಣಗೆರೆ, ಹೋಟೆಲಿನ ಮನೆಯ ಪುಟ್ಟಪೋರಿಯರ ಬದುಕು ಕಣ್ಮುಂದೆ ಸುಳಿದಾಡಿ ಕಣ್ಣಿಗೆ ಕಟ್ಟುತ್ತದೆ. ಅಲ್ಲಿಂದ ಅದು ಸಹಜವಾಗಿಯೇ ರಾಘವೇಂದ್ರ ಪಾಟೀಲರ ಮಾಯಿಯ ಮುಖಗಳನ್ನು ಸ್ಮೃತಿಯಲ್ಲಿ ತುಂತುಂಬಿ ನಿಲ್ಲಿಸುತ್ತದೆ. ಕಾದಂಬರಿಯ ಕೊನೆಯ ಭಾಗ, ವಿದ್ಯಾಳ ಬದುಕು ಪಡೆಯುವ ತಿರುವು, ಜಯಾಳ ಬದುಕಿನ ಕತೆ ನಿಶ್ಚಯವಾಗಿಯೂ ಕೆ.ಸತ್ಯನಾರಾಯಣರ ‘ಗೌರಿ’ ಕಾದಂಬರಿಯನ್ನು ನೆನೆಯುವಂತೆ ಮಾಡುತ್ತದೆ.

ಎರಡನೆಯದಾಗಿ, ಕಾದಂಬರಿಯ ಓದಿಗೆ ಒಂದು ಲಾಲಿತ್ಯದ ಸ್ಪರ್ಶ, ನಸುನಗೆಯ ಹೂರಣ, ಎಲ್ಲೂ ಬೋರು ಹೊಡೆಸದ - ಓದಿಗೆ ತಡೆಯೊಡ್ಡದ ಚಲನಶೀಲ ಕಥಾನಕ - ಎದ್ದು ಕಾಣುವ ಪ್ರಭಾವಳಿ. ಹಾಗೆಯೇ ಅಲ್ಲಿ ಇಲ್ಲಿ ನುಸುಳಿ ಮರೆಯಾಗುವ ಉದಯನ-ವಾಸವದತ್ತೆ, ಕಾಳಿದಾಸ, ‘ಕುಮುದಿನಿ’, ಹಿಂದಿಯ ‘ನಿರ್ಮಲಾ’ ಕಾವ್ಯ- ಕಾದಂಬರೀ ಲೋಕ ಮನಸ್ಸಿಗೆ ಮುದನೀಡುತ್ತದೆ. ಅಷ್ಟಾಗಿಯೂ ಇದೊಂದು ಅಪ್ಪಟ ಸ್ತ್ರೀಲೋಕದ ಕಥನ. ಬಹುಷಃ ಹೆಣ್ಣಿನ ಬದುಕಿನ ಯಾವ ಹಂತವೂ, ಯಾವ ಅಂಶವೂ ಕಾದಂಬರಿಯ ಮಡಿಲಿನಿಂದ ಜಾರಿ ಹೊರಗೆ ಹೋಗಿಲ್ಲ. ಅವಳ ಇಡೀ ಬದುಕಿನ ಒಟ್ಟಂದವನ್ನು ಅದರ ಎಲ್ಲ ಆಯಾಮಗಳೂ ಒಳಗೊಳ್ಳುವಂತೆ ಉಷಾ ಅಪೂರ್ವ ಜಾಣತನದಿಂದಲೇ ಇಲ್ಲಿ ಕಂಡರಿಸಿದ್ದಾರೆ ಎನ್ನಬೇಕು.

ಮೂರನೆಯದಾಗಿ ಗಮನಿಸಬೇಕಾದ ಪ್ರಮುಖ ಅಂಶವೊಂದಿದೆ ಈ ಕಾದಂಬರಿಯಲ್ಲಿ. ಸಾಧಾರಣವಾಗಿ ಸ್ತ್ರೀಲೋಕ, ಸ್ತ್ರೀಮತ, ಸ್ತ್ರೀಪ್ರಧಾನ ಎಂದೆಲ್ಲ ಹೇಳಿದ ಕೂಡಲೇ ಅಲ್ಲಿ ಗಂಡಸರ ಬಗ್ಗೆ, ಅವರ ದಬ್ಬಾಳಿಕೆ, ಈಗೋ, ಪುರುಷಪ್ರಧಾನ ಸಮಾಜದ ನಿಲುವುಗಳು, ಶೋಷಣೆ ಇತ್ಯಾದಿಗಳೆಲ್ಲ ಇದ್ದೇ ಇರುತ್ತವೆ ಅನಿಸತೊಡಗುತ್ತದೆ. ಅಂಥ ಅನಿಸಿಕೆಗೆ ಕಾರಣವೇನೇ ಇರಲಿ, ಅಂಥದ್ದರ ಬಗ್ಗೆ ಇಂಥ ಕೃತಿಗಳು ಧ್ವನಿ ಎತ್ತುವುದೇ ಸ್ತ್ರೀಸಾಹಿತ್ಯದ ಒಂದು ಲಕ್ಷಣ ಎಂದು ಲಾಕ್ಷಣಿಕರೂ, ನಮ್ಮ ಅಕ್ಕ ತಂಗಿಯರೂ ನಂಬಿದಂತಿದೆ. ಆದರೆ ಈ ಕಾದಂಬರಿ ಸಹಜವಾಗಿ ಎಂಬಂತೆ, ಸರಳವಾದ ನೆಲೆಯಲ್ಲೇ ಅದನ್ನು ದಾಟಿ ಬಿಡುತ್ತದೆ. ಇಲ್ಲಿಯೂ ನೋವಿದೆ, ಅನಿವಾರ್ಯ ಅನ್ಯಾಯಗಳಿವೆ, ಸಿಟ್ಟು-ಸಿಡುಕು-ಶೋಷಣೆಗಳಿವೆ. "ದಬ್ಬಾಳಿಕೆ" ಎಂಬ ಧಾಂಧೂಂ ಶಬ್ದಗಳಿಂದಲೇ ಕಿವಿಗೆ ಅಪ್ಪಳಿಸದಿದ್ದರೇನಂತೆ, ಅಂಥದ್ದು ಹುಟ್ಟಿಸುವ ಕಣ್ಣೀರು, ಆ ಕಣ್ಣೀರು ಕಂಡವರ ಹನಿಗಣ್ಣುಗಳು ಇಲ್ಲಿದ್ದೇ ಇವೆ. ಆದರೆ ಅವೆಲ್ಲ ಸೂಕ್ಷ್ಮಾತಿಸೂಕ್ಷ್ಮ ವಿವರಗಳೆಡೆಯಲ್ಲಿ, ಕಂಡೂ ಕಾಣದಂತೆ, all in the game of life ಎಂಬಂತೆ, ಕಣ್ಣೀರ ಒಂದು ಹನಿ ಕಣ್ಣ ಬಟ್ಟಲಿಂದ ಜಾರಿ ಕೆನ್ನೆಗಿಳಿವ ಮುನ್ನವೇ ಕಪೋಲ ನೇವರಿಸುವ ಮಾತೃಹೃದಯದ ಮಡಿಲ ಪ್ರೀತಿಯಲ್ಲಿ ಕರಗಿ ಕಾಣದಂತಾಗುವ ಚಿತ್ರವೇ ನಿಮ್ಮನ್ನು ಪೊರೆಯುತ್ತದೆ. ಈ ಬಗೆಯ ಚಿತ್ರ ಒಬ್ಬ ಕಾದಂಬರಿಕಾರನಿಂದ ಹೇಗೆ ಸಾಧ್ಯವಾಗುತ್ತದೆ ಎನ್ನುವುದನ್ನು ಸ್ವಲ್ಪ ನೋಡಬಹುದು.

ಮುಖ್ಯವಾಗಿ ಇದು ಎರಡು ಕಾರಣಗಳಿಂದಾಗಿ ಸಾಧ್ಯವಾದ ಒಂದು ಬೆಳವಣಿಗೆ. ಒಂದು, ಕಾದಂಬರಿ ಬದುಕನ್ನು ಅದರ ಒಟ್ಟಂದದಲ್ಲಿ ಗಮನಿಸುವತ್ತ ಹೆಚ್ಚು ಗಮನ ನೀಡಿದೆ. ಬದುಕನ್ನು ಸಮಗ್ರವಾಗಿ ಗ್ರಹಿಸುವಾಗ ಹುಟ್ಟುವ ಒಂದು ಸಂತುಲಿತ ಜೀವನದೃಷ್ಟಿ ಇಲ್ಲಿದೆ. ಹಾಗೆ ಅದನ್ನು ಗ್ರಹಿಸಿ ಭಾಷೆಯಲ್ಲಿ ಕಟ್ಟಿಕೊಡುವಾಗ ಕಾದಂಬರಿಕಾರ್ತಿ ಬಳಸಿಕೊಂಡ ಶೈಲಿ-ತಂತ್ರ ಮತ್ತು ವಿಧಾನ ಸಿದ್ಧಮಾದರಿಯದಲ್ಲ. ಬದಲಿಗೆ, ಸಹಜ-ಸರಳ-ನೇರ ನಿರೂಪಣೆಗೆ ಹೆಚ್ಚಿದ ಅವರ ಮಹತ್ವ. ಇಲ್ಲಿರುವ ನಿರೂಪಣಾ ಪ್ರಕ್ರಿಯೆ ಇದನ್ನು ನಮಗೆ ಮನದಟ್ಟು ಮಾಡಿಕೊಡುತ್ತಿದೆ. ಹಾಗಾಗಿ ಇಲ್ಲಿ ಯಾವುದೇ ಸೀಮಿತ ಚೌಕಟ್ಟುಗಳ ಆಸರೆಯನ್ನು ಅವರು ಆಧರಿಸಿಕೊಂಡು ನಿಂತಿಲ್ಲ. ಅದು ಸ್ವತಂತ್ರವಾಗಿದೆ. ಹಾಗಾಗಿ ಬದುಕು ಒಡ್ಡುವ ಎಲ್ಲ ನೋವು, ಸಂಕಟ, ದುರಂತಗಳಿಗೆ ಅವರು ತಕ್ಷಣಕ್ಕೆ ಕಾಣುವ ಯಾರನ್ನೂ, ಏನನ್ನೂ ಹೊಣೆ ಎಂದು ಬೆಟ್ಟು ಮಾಡಿ ತೋರುವುದರತ್ತ ಹೆಚ್ಚಿನ ಆಸಕ್ತಿ ತೋರದೆ, ಅದನ್ನು ಬಂದಂತೆ ಸ್ವೀಕರಿಸುತ್ತ ಸಾಗುತ್ತಾರೆ. ಎರಡನೆಯದು ಮತ್ತು ಮಹತ್ವದ್ದು, ಈ ಕಾದಂಬರಿ ಬದುಕನ್ನು ಅದರ ಎಲ್ಲ ನೋವು-ನಲಿವಿನ ಜೊತೆಜೊತೆಗೇ ಸಂಭ್ರಮದಿಂದ ಕಾಣುತ್ತಿದೆ; ಬದುಕಲ್ಲಿ ಸಂಭ್ರಮವನ್ನು ಕಾಣುತ್ತಿದೆ ಮತ್ತು ಅದನ್ನು ಹೇಳುವಲ್ಲಿ ಸಂಭ್ರಮಿಸುತ್ತಾರೆ ಸ.ಉಷಾ. ಇದು ಈ ಕಾದಂಬರಿಯ ಒಂದು ಅಪೂರ್ವ ಗುಣ. ಯಾಕೆಂದರೆ, ಇದನ್ನು ಓದುವಾಗ ಓದುಗನೂ ಸಂಭ್ರಮಿಸುತ್ತಾನೆ. ಬದುಕನ್ನು ಹಾಗೆ ಸಂಭ್ರಮಿಸಲು ಕಲಿಯುತ್ತಾನೆ.

ನಾಲ್ಕನೆಯದಾಗಿ ಹೇಳಬೇಕಾದ ಮತ್ತೊಂದು ಮಹತ್ವದ ಅಂಶ, ಈ ಕಾದಂಬರಿಯಲ್ಲಿ ಒಂದಕ್ಕೊಂದು ಒಂದಕ್ಕೊಂದು ಬೆಸೆದುಕೊಂಡು, ಕೂಡಿಕೊಂಡು, ಹೊಂದಿಕೊಂಡು ವಿಸ್ತರಿಸುತ್ತ ಹೋಗುವ ಮನುಷ್ಯ ಸಂಬಂಧಗಳ ನೇಯ್ಗೆ, ಬಂಧ ಮತ್ತು ಸಂಬಂಧಗಳ ಕಸೂತಿ. ಕೆ.ಸತ್ಯನಾರಾಯಣರ ‘ಗೌರಿ’, ‘ಸನ್ನಿಧಾನ’ ಕಾದಂಬರಿಗಳನ್ನು ಗಮನಿಸಿದವರಿಗೆ ಈ ಮದುವೆಗಳು ಮನುಷ್ಯನ ಜಗತ್ತನ್ನು ವಿಸ್ತರಿಸುತ್ತ ಹೋಗುವ ಚೋದ್ಯ ಅಚ್ಚರಿಗೆ ಕಾರಣವಾದರೆ ಸ.ಉಷಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೆಣ್ಣು ಹೇಗೆ ಈ ಮನುಷ್ಯರೆಂಬ ಪ್ರತ್ಯಪ್ರತ್ಯೇಕ ರಂಗೋಲಿ ಚುಕ್ಕೆಗಳನ್ನು ಅನುಬಂಧದ ಬಣ್ಣದ ಹುಡಿಯಲ್ಲಿ ಪರಸ್ಪರ ಪರಸ್ಪರ ಜೋಡಿಸುತ್ತಾ ಅಚ್ಚುಕಟ್ಟಾದ ಜೀವನಚಿತ್ರವನ್ನೇ ಬಿಡಿಸಿಡಬಲ್ಲಳು ಎಂಬುದನ್ನು ಅಷ್ಟೇ ಅಚ್ಚುಕಟ್ಟಾದ ‘ಕಸೂತಿ’ಯಲ್ಲಿ ಮನಗಾಣಿಸುತ್ತಾರೆ. ಇದು ಇವತ್ತಿನ ಚದುರಿದ ಚಿತ್ರಗಳಂಥ ಸಂಸಾರ ಬಂಧದಲ್ಲಿ ಏಗುತ್ತಿರುವ ನಮಗೆ ಅಗತ್ಯವಾದ ಒಂದು ನೋಟ ನೀಡುವಂತಿರುವುದು ನಿಜ. ಇಲ್ಲಿ ಬರುವ ಸುಂದರವಾದ ಒಂದು ಪಾರಾ ಓದಿ:

"ಪನ್ನೇರಳೆ, ಜಾಜಿಕಲ್ಲು, ತಾವರೆ ಕೆರೆ, ಸುಂಕದ ಹಳ್ಳಿ, ತಿಮ್ಮನ ಹಳ್ಳಿ, ಒಳುಗುಂದ ಎಲ್ಲ ಮಲೆನಾಡಿನ ಸೆರಗಿನಂಥ, ಬಯಲುನಾಡ ಅಂಚಿನಂಥ ಒಂದು ಪ್ರದೇಶದಲ್ಲಿ ಒಂದು ಕೊಂಬೆಗೆ ಗೊಂಚಲು ಗೊಂಚಲಾಗಿ ಅಂಟಿಕೊಂಡ ಹಣ್ಣಿನಂಥ ಊರುಗಳು. ಒಂದೂರಿನ ಕೆರೆ ಕೋಡಿ ಬಿದ್ದರೆ ಇನ್ನೊಂದೂರಿನ ಕೆರೆ ತುಂಬುತ್ತೆ. ಒಂದೂರಿನ ಮಗಳು ಇನ್ನೊಂದೂರಿನಲ್ಲಿ ಎಲ್ಲರ ಮನೆಗೂ ಸೊಸೆಯೇ! ಒಂದೂರಿನ ಮಗ ಇನ್ನೊಂದೂರಿನ ಎಲ್ಲರ ಮನೆಯ ಚಿಕ್ಕಮಕ್ಕಳಿಗೂ ಭಾವಯ್ಯನೇ. ಕರು ಕೊಟ್ಟು ಮರಿ ತರುವ ಈ ಚಕ್ರವ್ಯೂಹದ ಸಂಬಂಧದಲ್ಲಿ ಮನೆ ಮಕ್ಕಳಿಗೆ ಯಾರನ್ನ ಚಿಕ್ಕಪ್ಪ ಅನ್ನಬೇಕೋ, ಯಾರನ್ನ ಮಾವ ಅನ್ನಬೇಕೋ ತಿಳಿಯುವುದಿಲ್ಲ. ಹೀಗಾಗಿ ಮದುವೆಯಂಥ ಅತ್ಯಂತ ಕ್ಲಿಷ್ಟವಾದ ಸಾಮಾಜಿಕ ಸೂತ್ರಗಳನ್ನು ಹೊಸ ಸಂಬಂಧಗಳನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಹಳೆಯ ಸಂಬಂಧಗಳನ್ನು ಅತ್ಯಂತ ಜಾಣತನದಿಂದ ಮರೆಯುತ್ತ ಕೂಡಿಸಬೇಕಾಗುತ್ತಿತ್ತು. ಮನುಷ್ಯರಿಗಿರಲಿ, ಆ ಊರುಗಳ ದೇವರುಗಳಿಗೆ ಸಹ ಇಂಥ ಕ್ಲಿಷ್ಟ ಸಂಬಂಧಗಳಿವೆ. ತಾವರೆಕೆರೆಯ ಲಕ್ಷುಂದೇವಿಗೆ ಪನ್ನೇರಳೆಯ ಅಮ್ಮನವರು ನಾದಿನಿಯಾಗಬೇಕಂತೆ, ಜಾಜಿಕಲ್ಲಿನ ಅಮ್ಮನವರು ತಂಗಿಯಾಗಬೇಕಂತೆ."
(ಪುಟ ೧೪-೧೫)

ಇಲ್ಲಿನ ಭಾಷೆ ತುಂಬ ಹದವಾಗಿ, ರಸವತ್ತಾಗಿ, ಅರ್ಥಪೂರ್ಣವಾಗಿ ಸೋಸಿ ತೆಗೆದ ಅಕ್ಕರಗಳ ಸಕ್ಕರೆಪಾಕದಂತಿದೆ. ಎಲ್ಲೂ ಅನಗತ್ಯ ಮಾತು-ವಿವರ ಇಲ್ಲ. ಕೊಂಚ ವಿವರ ವಿವರವಾಗಿ ವಿಸ್ತಾರಗೊಳ್ಳಬಹುದಿತ್ತೇನೋ ಅನಿಸಿದರೂ ಉಷಾರವರೇ ಹೇಳುತ್ತಾರೆ, ‘ಇವರು ಒಬ್ಬೊಬ್ಬರೂ ಒಂದೊಂದು ಕಾದಂಬರಿಯ ನಾಯಕಿಯರಾಗಬಲ್ಲ ಸ್ವಯಂಪ್ರಭೆಯರು’.

ಪರಂಪರೆಯ ಸತ್ವವನ್ನು ಹೀರಿ (೧೯೦೯-೧೯೫೪ರ ವರೆಗೆ ಚಾಚಿಕೊಳ್ಳುವ ಕಥಾನಕ ಇಂದಿಗೆ ಕೂಡಿಕೊಳ್ಳುತ್ತದೆ) ಸೊಗಡನ್ನು ಪುನರ್ ನಿರ್ಮಿಸಿ, ಬದುಕಿನ ಸಮಗ್ರತೆಗೆ ಒತ್ತುಕೊಟ್ಟು, ಮೌಲ್ಯಗಳ ಪರಿಮಳದೊಂದಿಗೇ ಆಧುನಿಕತೆಯ ಪಲುಕುಗಳನ್ನು ಹದವಾಗಿ ಬೆರೆಸಿ ಮೂರು ತಲೆಮಾರುಗಳ ಚಿತ್ರ ಕಟ್ಟಿಕೊಡುವ ಈ ಕಾದಂಬರಿ ಈಚೆಗೆ ಬಂದ ಒಂದು ಕ್ಲಾಸಿಕ್ ಕಾದಂಬರಿ. ಈ ಕಾದಂಬರಿಯ ಓದು ಚೇತೋಹಾರಿ. ಸ.ಉಷಾ ಮಾಡಿರುವುದು ನಿಜವಾದ ಸೌಂದರ್ಯ ಸೃಷ್ಟಿ.

ಬಿ.ದೇವರಾಜ್ ಅವರ ಕಲಾಕೃತಿ ಈ ಕಾದಂಬರಿಯ ಹೊದಿಕೆಯಲ್ಲಿದ್ದು ಅರ್ಥಗರ್ಭಿತವಾಗಿದೆ, ಅದು ಹಿಡಿದಿಟ್ಟುಕೊಂಡಿರುವ ಅರ್ಥವ್ಯಾಪ್ತಿಯ ಕುರಿತು ಬೆರಗು ಹುಟ್ಟಿಸುವಂತಿದೆ.
(ಅಭಿನವ ಪ್ರಕಾಶನ)

4 comments:

chetana said...

ನಮಸ್ತೇ ಸರ್,
ನಂಗೆ ನಿಮ್ಮ ಬ್ಲಾಗ್ ನೋಡಲು ಭಯ ಮತ್ತು ಬೇಸರ.
ಯಾಕೆ ಗೊತ್ತಾ?
ಎಷ್ಟೊಂದು ಓದಲೇಬೇಕಾದ ಚೆಂದದ ಪುಸ್ತಕಗಳಿವೆ! ಅವುಗಳ ಬಗ್ಗೆ ಗೊತ್ತೇ ಇಲ್ಲದೆ ಉಳಿದರೆ ನಿರಾಳ. ಮಾಹಿತಿ ಸಿಕ್ಕೂ ಓದು ಸಾಧ್ಯವಾಗ್ತಿಲ್ಲ ಅಂತಾಗಿಬಿಟ್ಟರೆ ಆ ಚಡಪಡಿಕೆ ಗೊತ್ತಿದ್ದವರಿಗೇನೆ ಗೊತ್ತು. ಒಳ್ಳೊಳ್ಳೆ ಪುಸ್ತಕಗಳನ್ನ ಹೆಕ್ಕಿ ಕೊಡ್ತಿರುವ ನಿಮಗೆ ಥ್ಯಾಂಕ್ಸ್.

ನಲ್ಮೆ,
ಚೇತನಾ ತೀರ್ಥಹಳ್ಳಿ

ನರೇಂದ್ರ ಪೈ said...

ಆತ್ಮೀಯ ಚೇತನಾ,
ವಂದನೆಗಳು. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.
ಈ ಬಾರಿಯ ಹಿಂದೂ ಪತ್ರಿಕೆಯ ಲಿಟರರಿ ರಿವ್ಯೂ ದಯವಿಟ್ಟು ಗಮನಿಸಿ. ಅಲ್ಲಿ ಒಂದು, ಓದು ಮತ್ತು ಪುಸ್ತಕಗಳನ್ನು ಆಯುವ ನಮ್ಮ ಪ್ರಕ್ರಿಯೆಯ ಕುರಿತ ಲೇಖನವಿದೆ. (Judging the Book by its Author - Kala Krishnan Ramesh.) ಹಾಗೆಯೇ ಅದೇ ಸಂಚಿಕೆಯಲ್ಲಿ J M Coetzee ಯ ಎರಡು ಪುಸ್ತಕಗಳ ಬಗ್ಗೆ ಬರೆದ ಒಂದು ಲೇಖನವೂ ಇದೆ. (In the twilight zone with Coetzee - Navtej Sarna) ದಯವಿಟ್ಟು ಈ ಎರಡೂ ಲೇಖನಗಳನ್ನು ಓದಿ, ಈ ಲೇಖನಗಳು ಓದುವುದು ಮತ್ತು ಒಳ್ಳೆಯ ಪುಸ್ತಕಗಳನ್ನು ಆಯುವುದು ಎರಡೂ ವಿಚಾರದ ಬಗ್ಗೆ ಚೆನ್ನಾಗಿ ವಿವರಿಸುತ್ತಿವೆ.

ನಿಮ್ಮ ಬರವಣಿಗೆ (ಕತೆ-ಕವನ) ಹೇಗೆ ಸಾಗಿದೆ?
ನಿಮ್ಮ
ನರೇಂದ್ರ.

Sum said...

BahaLa sogasagi vimarshe bareetiri... Neevu prastaapisiruva Laura Ingalls Wilder La ella pustakagaLoo, kannada mattu English nalli pade pade oduttiruttene... Neevu suggest madiruva itara pustakagaLannoo bega oda beku emba aase....

ನರೇಂದ್ರ ಪೈ said...

ಥ್ಯಾಂಕ್ಸ್ Sum ಅವರೇ. ನಿಮ್ಮ ಬ್ಲಾಗ್‌ಗಳನ್ನು ನೋಡಿದೆ, ನಿಜಕ್ಕೂ ಆಶ್ಚರ್ಯವಾಯಿತು! ಅಡುಗೆ, ಕ್ರಾಫ್ಟ್, ಫೋಟೋಗ್ರಫಿ, ಸಾಹಿತ್ಯ ಎಂದು ಎಷ್ಟೆಲ್ಲ ಕಡೆ ಗಮನಕೊಡುತ್ತ ಬದುಕನ್ನು ಸಂಪನ್ನಗೊಳಿಸಿಕೊಂಡಿದ್ದೀರಿ! ಹ್ಯಾಟ್ಸ್‌ಅಪ್, and, ಕೀಪಿಟಪ್!!
ಖಾಂಡೇಕರರ ಯಯಾತಿಯ ಬಗ್ಗೆ ನೀವು ಬರೆದಿದ್ದು ಓದಿ ಖುಶಿಯಾಯಿತು. ಇದನ್ನು ಕನ್ನಡಕ್ಕೆ ವಿ.ಎಂ.ಇನಾಂದಾರ್ ಅನುವಾದಿಸಿದ್ದಾರೆ.
ಲಾರಾ ಪುಸ್ತಕಗಳು ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಬಿ.ಜಿ.ಎಲ್.ಸ್ವಾಮಿಯವರ (ಇವರು ಡಿ.ವಿ.ಜಿ.ಯವರ ಮಗ) ಹಸುರು ಹೊನ್ನು ಓದಿ, ಈಗಾಗಲೇ ಓದಿರದಿದ್ದರೆ. ಹಾಗೆಯೇ, ಗಿರಿಮನೆ ಶ್ಯಾಮರಾವ್ ಅವರ ಕಾಫಿನಾಡಿನ ಕಿತ್ತಲೆ. ಇನ್ನು ತೇಜಸ್ವಿ ಬಗ್ಗೆ ಹೇಳಬೇಕಿಲ್ಲ, ಅಲ್ಲವೆ? ನಿಮ್ಮ ಹಕ್ಕಿಗೂಡಿನ ಕಥೆ, ನೀವು ಸೆರೆ ಹಿಡಿದ ಫೋಟೋಗಳು ಅವರ ನೆನಪನ್ನೇ ತರುತ್ತವೆ....
ಧನ್ಯವಾದಗಳು ನಿಮಗೆ, ನಿಮ್ಮ ಒಳ್ಳೆಯ ಮಾತುಗಳಿಗೆ..
ನಿಮ್ಮ
ನರೇಂದ್ರ