Saturday, April 17, 2010

ಅಳಿದ ಮೇಲೆ


ಒಬ್ಬ ಬರಹಗಾರ ತಾನು ಅಳಿದ ಮೇಲೆ ತನ್ನ ಬಗ್ಗೆ ತನ್ನ ಆಯ್ಕೆಯ ಕೆಲವು ವಿಶಿಷ್ಟ ವ್ಯಕ್ತಿಗಳು ಹೇಗೆ ಯೋಚಿಸಿಯಾರು ಎಂಬುದನ್ನು ಬದುಕಿರುವಾಗಲೇ ಪರಿಕಲ್ಪಿಸಿ ಒಂದು ಕಥಾನಕವನ್ನು ರಚಿಸಿದರೆ ಹೇಗಿರುತ್ತದೆ?

J M Coetzee ಯ Summertime ಕೃತಿ ಇದನ್ನು ಪ್ರಯತ್ನಿಸುತ್ತದೆ. ವಿನ್ಸೆಂಟ್ ಎಂಬಾತ ಈ ವಿಶಿಷ್ಟ ಮತ್ತು ಆಯ್ದ ಕೆಲವೇ ವ್ಯಕ್ತಿಗಳ ಸಂದರ್ಶನದ ಮೂಲಕ ಈ ಕೃತಿಯನ್ನು ಕಟ್ಟುತ್ತಿದ್ದಾನೆ. ಈ ವ್ಯಕ್ತಿಗಳ ಆಯ್ಕೆ ಮೇಲ್ನೋಟಕ್ಕೆ ವಿನ್ಸೆಂಟನದ್ದು ಎಂದು ಕಂಡರೂ ಕೃತಿಕಾರ Coetzee ಯದೇ ಆಯ್ಕೆ ಇದು ಮತ್ತು ಈ ಕೃತಿ ಕೂಡಾ Coetzee ಎಂಬ ನೊಬೆಲ್ ವಿಜೇತ ಸಾಹಿತಿಯ ಕುರಿತೇ ಆಗಿದೆ ಎಂಬುದನ್ನು ಮರೆಯುವಂತಿಲ್ಲ. ಆದರೆ ಕೃತಿಕಾರ Coetzee ಮತ್ತು ಕೃತಿಯ ಕೇಂದ್ರ ಪಾತ್ರವಾದ Coetzee ನಡುವೆ ಹಲವಾರು ಸಮಾನ ಅಂಶಗಳಿರುವಂತೆಯೇ ಸಾಕಷ್ಟು ವೈರುಧ್ಯಗಳೂ ಇರುವುದರಿಂದ ಇದು ಆತ್ಮಕಥಾನಕ ಶೈಲಿಯ ಕಾದಂಬರಿ!

ಮೂಲತಃ ಈ ಆಯ್ಕೆಯೇ ಮುಖ್ಯವಾದ ಅಂಶ. ಇವರೇ ಯಾಕೆ, ವ್ಯಕ್ತಿಗಳೇ ಯಾಕೆ, ಈ ಐದು ಮಂದಿಯ ವೈಶಿಷ್ಟ್ಯವಾದರೂ ಏನು, ಇವರ ಗ್ರಹಿಕೆಗಳೇ Coetzee ಆಗಿರಬೇಕೆಂಬ ನಿಯಮವೇನಿದೆ? - ಈ ಎಲ್ಲ ಪ್ರಶ್ನೆಗಳಿವೆ. ಸ್ವಲ್ಪ ಮಟ್ಟಿಗೆ ಸೋಫಿ ಜೊತೆಗಿನ ಸಂಭಾಷಣೆಯಲ್ಲಿ ಈ ವಿಚಾರ ಚರ್ಚೆಗೆ ಬರುತ್ತದೆ. ಆದರೂ ಸಮಜಾಯಿಸಿಗಳನ್ನು ಮೀರಿ ಈ ನಿಲುವು ಅಷ್ಟೇನೂ ಸ್ಪಷ್ಟವಾಗುವುದಿಲ್ಲ.

1971/72 ರಿಂದ 1977ರ ವರೆಗಿನ ಅವಧಿಯಲ್ಲಿ Coetzeeಯ ಬದುಕಿನಲ್ಲಿ Coetzee ಪ್ರಕಾರ ಮುಖ್ಯರಾದವರನ್ನು ವಿನ್ಸೆಂಟ್ ಆರಿಸಿದ್ದಾನೆ, ಆರಿಸಿ ಆರಿಸಿ ಅವರ ಸಂಖ್ಯೆಯನ್ನು ಐದಕ್ಕೆ ಇಳಿಸಿದ್ದಾನೆ. Coetzeeಯ ಡೈರಿ, ಅವನು ಮಾಡಿಕೊಂಡ ಟಿಪ್ಪಣಿಗಳು, ಬರೆದ ಪತ್ರಗಳು ಎಲ್ಲವನ್ನೂ ಗಮನಿಸಿ ಮಾಡಿದ ಆಯ್ಕೆ ಇದು. ಅದೇ ಈ ಡೈರಿ, ಟಿಪ್ಪಣಿಗಳು, ಪತ್ರ ಮತ್ತು ಸ್ವತಃ Coetzeeಯ ಕೃತಿಗಳು ಆತನನ್ನು ಏನೆಂದು ತೋರಿಸಿಕೊಡುವುದಿಲ್ಲವೆ, ಯಾರೋ ಐದು ಮಂದಿ ಈತನ ಬಗ್ಗೆ ತಮತಮಗೆ ಅನಿಸಿದ್ದನ್ನು ಹೇಳುವುದಕ್ಕಿಂತ ಅದೇ ಹೆಚ್ಚು ಸಮಂಜಸವಾದ ಹಾದಿಯಲ್ಲವೆ ಎಂದರೆ ಅದಕ್ಕೆ ವಿನ್ಸೆಂಟ್ ಬಹಳ ಕುತೂಹಲಕಾರಿಯಾದ ಉತ್ತರ ಕೊಡುತ್ತಾನೆ. Coetzee ಸ್ವತಃ ಒಬ್ಬ ಲೇಖಕನಾಗಿರುವುದರಿಂದ ಆತ ಕಲ್ಪನೆ-ವಾಸ್ತವಗಳನ್ನು ಮಿಶ್ರ ಮಾಡಿಯೇ ಅದೆಲ್ಲವನ್ನೂ ಬರೆದಿರುವ ಸಾಧ್ಯತೆ ಹೆಚ್ಚು. ಹಾಗಾಗಿ ಅದು ಅಥೆಂಟಿಕ್ ಸಾಕ್ಷ್ಯವಾಗಲಾರದು! ಹಾಗೆ ನೋಡಿದರೆ Coetzee ಬಗ್ಗೆ ತಮಗೆ ಅನಿಸಿದ್ದನ್ನು ಹೇಳುವ ವ್ಯಕ್ತಿಗಳು ಪೂರ್ವಾಗ್ರಹ, ಕಲ್ಪನೆ, ಸ್ವಂತದ ಇತಿಮಿತಿಗಳಿಂದ ಮುಕ್ತರೆ? ಎಲ್ಲರೂ ಒಂದು ಹಂತದ ಮಟ್ಟಿಗೆ ಕಲ್ಪನೆ-ವಾಸ್ತವಗಳ ಮಿಶ್ರಣ ಮಾಡುವವರೇ ಅಲ್ಲವೆ? ಇದನ್ನು ವಿನ್ಸೆಂಟ್ ಒಪ್ಪಿಕೊಂಡರೂ Coetzeeಯ ಸ್ವ-ನಿರೂಪಣೆಯನ್ನು ಬೇಕೆಂದೇ ಆಯ್ದುಕೊಳ್ಳುವುದಿಲ್ಲ. ಇದು ಕೃತಿಕಾರ Coetzeeಯ ತಂತ್ರ ಎನ್ನುವುದನ್ನು ಮರೆಯದಿರೋಣ.

ಇಲ್ಲಿ, ವಿನ್ಸೆಂಟ್‌ನ ಆಯ್ಕೆ, ಆದ್ಯತೆ Coetzeeಯ ಸ್ವ-ನಿರೂಪಣೆಯಲ್ಲ, ಇತರರ ನಿರೂಪಣೆ ಮತ್ತು ಆ ಮುಖೇನ Coetzeeಯನ್ನು ಅರ್ಥಮಾಡಿಕೊಳ್ಳುವುದು ಎನ್ನುವಲ್ಲಿಯೂ ಸ್ವತಃ ವಿನ್ಸೆಂಟ್ Coetzeeಯ ಡೈರಿ, ಟಿಪ್ಪಣಿಗಳು, ಪತ್ರಗಳು ಮತ್ತು ಕೃತಿಗಳನ್ನು ಸೂಕ್ಷ್ಮವಾಗಿ ಗಮನಿಸಿಕೊಂಡೇ ಹೊರಟಿದ್ದಾನೆ ಎನ್ನುವುದನ್ನೂ ನೆನಪಿಡಬೇಕು. ವಿನ್ಸೆಂಟ್‌ಗೆ ಈ ಸಂದರ್ಶನ ಆ ಎಲ್ಲಾ ಅಧ್ಯಯನಗಳ ನಂತರದ ಒಂದು ಹಂತದ ಶೋಧ. ಆದರೆ ಓದುಗರು ಅಷ್ಟೆಲ್ಲ ಮಾಹಿತಿಯುಳ್ಳವರಲ್ಲ! ಹಾಗಾಗಿ ಈ ಕೃತಿಯ ಮುಖೇನವೇ ನಾವು ಮುಖಾಮುಖಿಯಾಗಲಿಕ್ಕಿರುವ Coetzee ಏನಿದ್ದಾನೆ, ಆತ, ಆತನ ಚಿತ್ರ ಈ ವಿನ್ಸೆಂಟ್ ಎಂಬಾತನಿಂದ (ಪರೋಕ್ಷವಾಗಿ ಕೃತಿಕಾರ Coetzee ಯಿಂದ) ನಿಯಂತ್ರಿತ, ಕೃತಿ ನಿಯಂತ್ರಿತ ಮತ್ತು ಕೃತಿಯ ಎಲ್ಲಾ ಪಾತ್ರಗಳು ಮತ್ತು ಸನ್ನಿವೇಶಗಳು ಸ್ವತಃ ಕೃತಿಕಾರನಾದ Coetzee ನಿಯಂತ್ರಿತವೇ ಆಗಿರುವುದರಿಂದ Coetzee ನಿಯಂತ್ರಿತ. ಕರ್ತಾರನೇ ಕರ್ತೃನೂ ಆಗಿರುವ ಕತೆಯಿದು!

Coetzee ಬಗ್ಗೆ ನಡೆಯುತ್ತಿರುವ ಈ ವ್ಯಕ್ತಿತ್ವದ ಅಧ್ಯಯನ, ಶೋಧ ಎಲ್ಲವೂ ಆತ ಸತ್ತ ನಂತರ ನಡೆಯುತ್ತಿರುವ ಪ್ರಕ್ರಿಯೆಗಳಾದಾಗ್ಯೂ ಯಾರೊಬ್ಬರೂ ಸತ್ತವನ ಬಗ್ಗೆ ಆಡುವ ಸಾಮಾನ್ಯವಾದ ಒಂದು ರೂಢಿಗತ-ಸ್ಥಾಪಿತ ನೆಲೆಯಲ್ಲಿ ಮಾತನಾಡುತ್ತಿಲ್ಲ ಎನ್ನುವುದು ಕೂಡಾ ಗಮನಿಸಬೇಕಾದ ಇನ್ನೊಂದು ಅಂಶ. ಸೋಫಿ ಅದನ್ನು ಸ್ಪಷ್ಟವಾಗಿ ಹೇಳುತ್ತಾಳೆ. ಅದ್ರಿನಾ ನಿಷ್ಠುರವಾದ ತನ್ನ ಧಾಟಿಯಿಂದಲೇ ಈ ಭಾವನೆಯನ್ನು ಸಾಧಿಸುತ್ತಾಳೆ. ಜೂಲಿಯಾಳಲ್ಲಿ ಮಾತ್ರ ಒಂದಿಷ್ಟು ಸತ್ತವನ ಕುರಿತು ಮಾತನಾಡುತ್ತಿದ್ದೇನೆಂಬ ಭಾವ ಇರುವಂತಿದೆ. ಇನ್ನು ಮಾರ್ಟಿನ್ ಬಗ್ಗೆ ಕೂಡಾ ಇಂಥ ಮಾತನ್ನು ಹೇಳಬಹುದಾದರೂ ಈ ಕೃತಿಯಲ್ಲಿ ಬರುವ ಸಂದರ್ಶಿತರಲ್ಲಿ ಏಕೈಕ ಗಂಡು ಪಾತ್ರ ಈತನದ್ದಾಗಿರುವುದರಿಂದ ಈ ಬಗೆಯ ಸಂಬಂಧದಲ್ಲಿ ಆ ಅಂಶ ಅಷ್ಟು ಮುಖ್ಯವಾಗುವುದಿಲ್ಲ.

ಹಾಗೆಯೇ ಈ ಸಂದರ್ಶನಗಳ re-arrangement ಕೂಡಾ ಈ ಕೃತಿಯ ಒಂದು ತಾಂತ್ರಿಕ ವಿಶೇಷ. ಇಲ್ಲಿ ನಾವು ಮೊದಲಿಗೆ ಜೂಲಿಯಾ, ನಂತರ ಮಾರ್ಗೋಟ್, ಅದ್ರಿನಾ - ಹೀಗೆ Coetzee ಯ ಜಗತ್ತನ್ನು ಹೊಗುತ್ತೇವೆ. ಆದರೆ ವಿನ್ಸೆಂಟ್ ಸಂದರ್ಶನ ನಡೆಸಿದ ಕ್ರಮಾಂಕ ಇದಲ್ಲ. ಅವನು ಸಂದರ್ಶಿಸಿದ್ದು ಮಾರ್ಟಿನ್, ಮಾರ್ಗೋಟ್, ಅದ್ರಿನಾ, ಜ್ಯೂಲಿಯಾ ನಂತರ ಸೋಫಿ - ಈ ಕ್ರಮದಲ್ಲಿ. ಅಂದರೆ ಒಂದೋ ಈ ಕ್ರಮಾಂಕ ಇಲ್ಲಿ Coetzeeಯನ್ನು ಅರಿಯುವಲ್ಲಿ ಅಷ್ಟು ಮುಖ್ಯವಲ್ಲ. ಅಥವಾ, ನಾವು ನಮ್ಮ ಈ ಅರಿಯುವ ಆರಂಭವನ್ನು ಬೇರೆ ಬೇರೆ ವ್ಯಕ್ತಿಗಳ ಮೂಲಕ ಮಾಡಿದರೆ, ಬೇರೆ ಬೇರೆ ಕ್ರಮಾಂಕದಲ್ಲಿ ಮಾಡಿದರೆ ನಮಗೆ ಸಿಗುವ Coetzee ಬೇರೆ ಬೇರೆಯಾಗಿರುತ್ತಾನೆ!

ಟೇಬಲ್ ಕ್ಯಾಲೆಂಡರ್‌ನ ತುಂಡು ತುಂಡು ಹಾಳೆಗಳಲ್ಲಿ (ಕಾರ್ಡ್ಸ್) ಅಲ್ಲಲ್ಲಿ ಬರೇ ಕಾಟು ಹಾಕಿ, ಖಾಲಿ ಬಿಟ್ಟು ಬರೆದ ನಬ್‌ಕೋವನ ಕೊನೆಯ ಕಾದಂಬರಿ The Original of Laura ಬಗ್ಗೆ ಇಂಥ ಮಾತುಗಳನ್ನ ಹೇಳಲಾಗುತ್ತಿದೆ. ನಬ್‌ಕೋವನ ಈ ಹಾಳೆಗಳನ್ನು ಕಾರ್ಡ್ಸ್ ತರ ಬೇರೆ ಬೇರೆ ಕ್ರಮಾಂಕದಲ್ಲಿ ಮರು ಜೋಡಿಸಿ ಓದಿದರೆ ನಮಗೆ ಬೇರೆಯೇ ಅನುಭವವಾಗುವುದಂತೆ! ಅಂತೆಯೇ ಈ ಕೃತಿಯ ಪುಟಗಳಲ್ಲಿ ನಬ್‌ಕೋವ್ ಕೈಬರಹದಲ್ಲಿಯೇ ಇರುವ ಈ ಬಿಡಿ ಹಾಳೆಗಳನ್ನು ಕತ್ತರಿಸಿ ತೆಗೆಯಲು ಸುಲಭವಾಗುವಂತೆ perforated ಫೋಟೋಗಳಾಗಿ ಮುದ್ರಿಸಲಾಗಿದೆ! ಅದೇ ಪುಟದ ಕೆಳಭಾಗದಲ್ಲಿ ಅವುಗಳ ಮುದ್ರಿತ ಪಠ್ಯವಿದೆ. ಇಲ್ಲಿಯೂ, Coetzeeಯ ಡೈರಿ, ಟಿಪ್ಪಣಿಗಳು, ಪತ್ರ - ಇತ್ಯಾದಿಗಳನ್ನು ಓದಿಲ್ಲದ ನಾವು ಮೊದಲಬಾರಿಗೆ ಆತನನ್ನು ಅರಿಯಲು ಇಲ್ಲಿನ ಕ್ರಮಾಂಕ ತಪ್ಪಿಸಿ ಬೇರೆ ಬೇರೆ ವ್ಯಕ್ತಿಗಳ ಮೂಲಕ ತೊಡಗಬಹುದು! ಆಗ ಪ್ರತಿಬಾರಿ ನಮಗೆ ಸಿಗುವ Coetzee ಬೇರೆಯೇ ಆಗಿ ಕಾಣಿಸುವುದಾದರೆ ಅದು ಕೂಡಾ ಒಂದು ದರ್ಶನವಾದೀತು!

ಈ ಎಲ್ಲ ತಂತ್ರ, ಜಾಣ್ಮೆಗಳನ್ನು ಮೀರಿ ಬದುಕಿರುವ ಒಬ್ಬ ವ್ಯಕ್ತಿ ಸತ್ತ ನಂತರ ತನ್ನನ್ನು ಕುರಿತು ಕೆಲವೇ ನಿರ್ದಿಷ್ಟ ವ್ಯಕ್ತಿಗಳು ಮೂರನೆಯವರಿಗೆ ಕಟ್ಟಿಕೊಡುವ ಚಿತ್ರಗಳನ್ನು ಅವರಿಂದ ಹೊರಬರಿಸಿ (ಸತ್ತಿದ್ದಾನೆಂಬ ನಿರ್ಭಿಡೆಯಲ್ಲಿ) ಅದನ್ನು ತಾನೇ ನೋಡುವುದು - ಬರೆಯುವುದು ಸರಳವಲ್ಲ. ಗೊತ್ತಿರುವುದನ್ನೆಲ್ಲ ಹೇಳಬೇಕೆಂದಿಲ್ಲ, ವಿಷಯ ಮರೆಮಾಚಬಹುದು, ತಿರುಚಬಹುದು, ತಮ್ಮ ಘನತೆಗೆ ಕುಂದಾಗದಂತೆ ಕೆಲವನ್ನು ಕಲ್ಪಿಸಿ ಹೇಳಬಹುದು ಇತ್ಯಾದಿ ಸಮಸ್ಯೆಗಳೆಲ್ಲ ಇದ್ದೆ ಇವೆ. ಬರೆಯುತ್ತಿರುವ ಬರಹಗಾರ ಇದನ್ನೆಲ್ಲ ಕಲ್ಪಿಸಿಕೊಂಡೇ ಸತ್ಯವನ್ನು ಕಾಣಲು ತವಕಿಸಬೇಕಾಗುತ್ತದೆ. ಭಾಷೆ, ಭಾವುಕತೆ, ಮೋಹ, ನಗ್ನನಾಗುವ ಭಯ ಒಂದಿಷ್ಟು ಕಾಡಿದರೂ ಸತ್ಯ ಕತ್ತಲೆಯ ಹಾದಿ, ನಡೆದಷ್ಟೂ ದೂರ. ಎಷ್ಟೆಂದರೂ ನನ್ನ ಕುರಿತಾಗಿ ಇನ್ನೊಬ್ಬ ವ್ಯಕ್ತಿಯಲ್ಲಿರುವ perceptions ನ್ನು, ನನ್ನ ಕುರಿತ ಇನ್ನೊಬ್ಬನ conceptionsನ್ನು ನಾನೇ ಬರೆಯುವುದು - ‘ನನ್ನ’ percetions ಮತ್ತು conception ಗಳಿಂದ ಪ್ರೇರಿತನಾಗದೇ ಉಳಿದು ಇದನ್ನು ಮಾಡುವುದು ಸಾಧ್ಯವೆ? ಮೊದಲು ಗಮನಿಸಿದ ಲೇಖಕನೊಬ್ಬನ ಸಹಜ ಗುಣವೆನ್ನಲಾದ ಕಲ್ಪನೆ-ವಾಸ್ತವಗಳ ಕಲಸು ಮೇಲೋಗರ ಮಾಡುವ ಅಪಾಯ ಇಲ್ಲಿಯೂ ಸಂಭವನೀಯವೇ ಅಲ್ಲವೆ? ನನ್ನದೇ ಡೈರಿಯಲ್ಲಿ ಬರೆಯುವಾಗ ಕೂಡಾ ಭಾಷೆಯ ಲಯ, ಭಾವದ ಓಘ, ಸ್ವ-ಮೋಹ ಎಷ್ಟರ ಮಟ್ಟಿಗೆ ‘ಕಾಣುವ’ ದೃಷ್ಟಿಯನ್ನು, ‘ಹೇಳುವ’ ಮನಸ್ಸನ್ನು ವಿಕಲ್ಪಗೊಳಿಸಿರುವುದಿಲ್ಲ? ನಾವೇ ಸ್ವತಃ ಅದನ್ನು ಗುರುತಿಸುವುದಕ್ಕೆ ಕೂಡಾ ದೇಶ-ಕಾಲಗಳ ಅಂತರ ಬೇಕಾಗುತ್ತದೆ. ಹಾಗಿರುತ್ತ ಈ ಕೃತಿ ಸಾಧಿಸಿದ ಒಂದು ಸತ್ಯ ನಿಷ್ಠುರತೆ ಬೆರಗು ಹುಟ್ಟಿಸುತ್ತದೆ.

ಆದರೆ ಮೊದಲೇ ಹೇಳಿದಂತೆ ಇದೇನೂ ಆತ್ಮಕಥಾನಕವಲ್ಲ. ನೊಬೆಲ್ ಪ್ರಶಸ್ತಿ ವಿಜೇತ J.M.Cooetze ಗೂ ಕಾದಂಬರಿಯ Coetzeeಗೂ ಸಾಕಷ್ಟು ಸಾಮ್ಯವಿರುತ್ತ ಮೂಲಭೂತ ವ್ಯತ್ಯಾಸಗಳೂ ಇವೆ. ಅಷ್ಟರಮಟ್ಟಿಗೆ ಇದೊಂದು ಕಾಲ್ಪನಿಕ ಕಾದಂಬರಿಯೆಂದೆ ತಿಳಿಯಬಹುದು. ಅಲ್ಲದೆ ಐವರ ಸಂದರ್ಶನ ಮತ್ತು ಸ್ವತಃ Coetzee ಯ ಕೆಲವು ಟಿಪ್ಪಣೆಗಳ ಮುಖೇನ ನಾವು ಮುಖಾಮುಖಿಯಾಗುತ್ತಿರುವ ವ್ಯಕ್ತಿತ್ವ ಕೂಡಾ ಯಾವುದೇ ರೀತಿಯಲ್ಲಿ ಅಸಾಮಾನ್ಯವಾದದ್ದಲ್ಲ, ಮಹತ್ವದ್ದಲ್ಲ. ಸಮಾಜದಿಂದ ದೂರವೇ ಉಳಿದವನಂತೆ ಕಾಣುವ, ಮುನ್ನುಗ್ಗಿ ಅವಕಾಶಗಳನ್ನು ದೋಚಿಕೊಳ್ಳಬಲ್ಲ ರಕ್ತಗುಣವಿಲ್ಲದ, ಕನಿಷ್ಠ ಒಲಿದು ಬಂದ ಹೆಣ್ಣನ್ನಾದರೂ ಮರುಳು ಮಾಡಿ ಉದ್ದೀಪಿಸಬಲ್ಲ ಪುರುಷಸತ್ವವಿಲ್ಲದ, ಸ್ವಕೇಂದ್ರಿತನೋ ಅನಿಸುವಂಥ ಒಬ್ಬ ವ್ಯಕ್ತಿಯನ್ನು ಕೊನೆಗೂ ನಾವು ಪರಿಚಯಿಸಿಕೊಳ್ಳುತ್ತಿರುವುದು, ಅರಿಯಲು ಹೆಣಗುತ್ತಿರುವುದು ಎನ್ನುವುದು ನಿಜ. ಈತನ ಬಗ್ಗೆ ಮಾತನಾಡುತ್ತಿರುವ ಯಾರೂ ಈತನ ಆರಾಧಕರಂತೂ ಅಲ್ಲ. ಒಂದಲ್ಲ ಒಂದು ಘಟ್ಟದಲ್ಲಿ ‘ಓಹ್ ಈತನ ಅವತಾರವೇ!’ ಎಂದು ಗುಟ್ಟಿನಲ್ಲಾದರೂ ಗೊಣಗಿದವರೇ ಮತ್ತು ಅದನ್ನು ಇಲ್ಲೀಗ ಹೇಳಿಕೊಂಡವರೇ! ಆದರೆ ಇದನ್ನೆಲ್ಲ ಗೌಣವಾಗಿಸಿಬಿಡುವಂಥದ್ದೇನೋ ಆತನ ವ್ಯಕ್ತಿತ್ವದಲ್ಲಿದೆ!

ಈ ಐದೂ ಪಾತ್ರಗಳು Coetzee ಬಗ್ಗೆ ಹೇಳುತ್ತ ಹೇಳುತ್ತ ತಮ್ಮನ್ನು ತಾವು ಅನಾವರಣಗೊಳಿಸಿಕೊಳ್ಳುತ್ತ ಹೋಗುತ್ತಾರೆ. ಸ್ವತಃ ಅವರೇ ಈ ವಿವರಣೆಗಳಲ್ಲಿ ತಮ್ಮನ್ನು ತಾವು ಕಂಡುಕೊಳ್ಳುವುದಿಲ್ಲವಾದರೂ ನಮಗೆ ಅದಾಗಲೇ ಅಳಿದಿರುವ Coetzee - ಆತನ ಬಗ್ಗೆ ಮಾತನಾಡುತ್ತಿರುವ ಈ ಮಹನೀಯರು ಮತ್ತು ಅದನ್ನು ದಾಖಲಿಸುತ್ತಿರುವ ವಿನ್ಸೆಂಟ್ - ಈ ಮೂವರ ತ್ರಿಕೋನವೊಂದು ಕೊಡುವ ಚಿತ್ರ, ಅದು ನಮ್ಮ ಮನಸ್ಸಿನ ಮೇಲೆ ಉಂಟು ಮಾಡುವ ಪರಿಣಾಮ ಗಮನಾರ್ಹವಾಗಿದೆ. ನಮಗೆ Coetzee ಬಗ್ಗೆ ಅದೂ ಇದೂ ಅನಿಸತೊಡಗಿದಂತೆಯೇ ಈ ಮಾತುಗಾರರ ಕುರಿತೂ ಅನಿಸತೊಡಗುತ್ತದೆ. ಬಹುಷಃ ಐದೂ ಮಂದಿಯ ಮಾತುಗಾರಿಕೆ ಮುಗಿದಾಗ ನಮಗೆ ಆರನೆಯವರಾಗಿ ಹೇಳುವುದು ಸಾಕಷ್ಟಿರುತ್ತದೆ! ಆ ಹೊತ್ತಿಗೆ ನಮಗೆ Coetzee ಅರ್ಥವಾಗಿರುವುದಕ್ಕೂ ಈ ಐವರ ಅರ್ಥಗಾರಿಕೆಗೂ ಇರುವ ಅಂತರ ಒಡೆದು ಕಂಡಿರುತ್ತದೆ. ಸ್ವತಃ ನಮ್ಮ ಅರ್ಥಮಾಡಿಕೊಳ್ಳುವ ವಿಧಿ ವಿಧಾನದ ಇತಿಮಿತಿಗಳನ್ನು ಮೀರಿ ಈ ಭಾವ ಕಾಡತೊಡಗುತ್ತದೆ. ಈ ಮಾತು ಸ್ವತಃ Coetzee ವ್ಯಕ್ತಿತ್ವಕ್ಕಾದರೂ ಸರಿ, ಇನ್ನುಳಿದ ಐವರ ವ್ಯಕ್ತಿತ್ವಕ್ಕಾದರೂ ಸರಿ, ಅನ್ವಯಿಸುತ್ತದೆ.

ಬರವಣಿಗೆ-ಬರಹಗಾರನ ‘ಅಮರತ್ವ’ದ ಆಸೆಯ ಬಗ್ಗೆ, ಆತ ಒಬ್ಬ ಸಾಮಾನ್ಯ ಮನುಷ್ಯನಂತಿರದೇ ಹೇಗೆ ಮತ್ತು ಯಾಕೆ ಭಿನ್ನ ಎಂಬುದನ್ನು ಬಿಂಬಿಸುವುದಕ್ಕೆ ಹೆಣಗುವ ಪ್ರಸ್ತುತ ಸಂದರ್ಶಕ ವಿನ್ಸೆಂಟನ ಉಮೇದಿಯನ್ನೂ ಪೂರ್ವಾಗ್ರಹವನ್ನೂ ಕೃತಿ ಲೇವಡಿಯಿಂದಲೇ ಕಾಣುವುದು ವಿಶೇಷ. ಹಾಗೆಯೇ ನಮ್ಮ ನೆನಪುಗಳು, ಅನುಭವ ಮತ್ತು ಅನುಭವದ ಗ್ರಹಿಕೆಗಳು, ನಮ್ಮ ಪ್ರಜ್ಞೆ ಮತ್ತು ಇವುಗಳಿಂದ ಸೋಸಿ ಬರುವ ನಮ್ಮ ಮಾತು, ಮಾತಿಗೆ ಅಗತ್ಯವಾದ ಭಾಷೆ - ಈ ಹಂತಗಳಲ್ಲಿ ಬದುಕು, ವ್ಯಕ್ತಿ ಮತ್ತು ಮನಸ್ಸು ದಾಖಲಾಗುವ ಪ್ರಕ್ರಿಯೆಯಲ್ಲಿ ನಡೆಯುವ ವಂಚನೆ, ಸೋಗಲಾಡಿತನ ಮತ್ತು ನಾಟಕೀಯತೆಗಳನ್ನು ಕೃತಿ ಸೂಕ್ಷ್ಮವಾಗಿ ಹಿಡಿದಿಟ್ಟಿದೆ. ‘ಅಯ್ಯೋ, ನಾನಿದನ್ನೆಲ್ಲ ಹೇಳಿದೆನೆ, ಇಲ್ಲ, ಇದನ್ನು ನಾನು ಹೇಳಿಯೇ ಇರಲಿಲ್ಲ, ನಾನು ಹೇಳಿದ್ದಕ್ಕೆ ಆ ಅರ್ಥ ನೀಡಿದ್ದು ನೀನು, ನನ್ನ ಅರ್ಥ ಅದಲ್ಲ’ ಬಗೆಯ ನಿರಾಕರಣೆ, ನುಣುಚಿಕೊಳ್ಳುವಿಕೆಯ ಮಾದರಿಗಳು ಇಲ್ಲಿ ಸಂದರ್ಶಕನಿಗೆ ಸಂದರ್ಶಿತರಿಂದ ಎದುರಾಗುವುದಿದೆ. ನಮ್ಮ ಮಾತು - ಮನಸ್ಸಿನ ಅಂತರ ಒಡೆದು ಕಾಣುವ ಈ ಹಂತ ಕುತೂಹಲಕರ.

ವ್ಯಕ್ತಿಯೊಬ್ಬನನ್ನು ಕುರಿತು ಅರಿಯಲು ಹೊರಟು ಆತನ ಬಗ್ಗೆ ಮಾತನಾಡುವವರನ್ನು ಅರಿಯುವ ಹೊತ್ತಿಗೇ ಇಲ್ಲೊಂದು ಅಪೂರ್ವ ಮಾನವ ಸಂಬಂಧಗಳ ಸಂಕೀರ್ಣ ಹಂದರವಿರುವುದನ್ನೂ ಗಮನಿಸುತ್ತೇವೆ. ಉದಾಹರಣೆಗೆ ಅದ್ರಿನಾಳನ್ನು ಗಮನಿಸಿ. Coetzee ತನ್ನನ್ನು ಬಯಸಿದ ಎಂಬ ಬಗ್ಗೆ ಇವಳಿಗೆ ಸುಪ್ತ ಹೆಮ್ಮೆ. ಅವನ ಬಗ್ಗೆ ಅಸಹ್ಯ. ತನ್ನ ಮಗಳನ್ನೇ ಅವನು ಬಯಸಿದ್ದು ಮತ್ತು ಅವಳು ತನ್ನ ಪ್ರತಿರೂಪ ಎಂಬ ಕಾರಣಕ್ಕೇ ತನ್ನನ್ನು ಬಯಸಿರಬೇಕು, ಇನ್ನೇನಲ್ಲ ಎಂಬ ಅರ್ಥ ಕಾಣಿಸಿದಾಗ ಅಸೂಯೆ, ಈರ್ಷ್ಯೆ. ಮಗಳನ್ನು ರಕ್ಷಿಸುವ ಅತಿ ಕಾಳಜಿ ಹುಟ್ಟುಹಾಕುವ ಅನಗತ್ಯ ಅಡಚಣೆಗಳು. ಕಾಕತಾಳೀಯವಾಗಿ ಅವಳೆದುರು ಅಬ್ಬೆಪ್ಯಾರಿಯಂತಾಗುವ Coetzee ನಮ್ಮಲ್ಲಿ ಹುಟ್ಟಿಸುವ ಒಂದು ವಿಶಿಷ್ಟ ಬಗೆಯ ಪ್ರಜ್ಞೆ. ಅದ್ರಿನಾ ತನಗೇ ತಿಳಿಯದ ಹಾಗೆ Coetzee ಬದುಕನ್ನು ಮಾತ್ರವಲ್ಲ, ತನ್ನ ಬದುಕನ್ನೂ, ಮಗಳು ರೆಜಿನಾ ಮೇರಿಯ ಬದುಕನ್ನೂ ಅನಗತ್ಯ ಹಸ್ತಕ್ಷೇಪದಿಂದ ನಿಯಂತ್ರಿಸಲು ಹೋಗಿ ಇನ್ನೇನೋ ಮಾಡುತ್ತಾಳೆ. ಇಲ್ಲಿ ಸ್ವತಃ ಆಕೆಯ ಗಂಡನ ಸಾವಿನ ವ್ಯಥೆ-ಕಥೆ ಮನಕಲಕುವಂತಿದೆ ಮಾತ್ರವಲ್ಲ ಕೆಲವು ಹೊಸದೇ ಒಳನೋಟಗಳನ್ನು ಕಾಣಿಸುವಷ್ಟು ಸಶಕ್ತವಾಗಿದೆ.

ಹಾಗೆಯೇ ಸೋಫಿ ಆಡುವ ಕೆಲವು ಮಾತುಗಳು. ಯಾವುದೇ ಮನುಷ್ಯನ ಬಗ್ಗೆ ಆತ ಇರುವಾಗ ಮತ್ತು ಸತ್ತ ನಂತರ ನಾವು ಆಡುವ ಮಾತುಗಳು ಬೇರೆ ಬೇರೆಯಾಗಿರುತ್ತವೆಯೆ, ಇಲ್ಲವೆ, ಇದ್ದರೆ ಯಾಕೆ ಮತ್ತು ಅದು ಸರಿಯೆ ಎಂಬೆಲ್ಲ ಪ್ರಶ್ನೆಗಳನ್ನು ಈಕೆ ಎತ್ತುತ್ತಾಳೆ. ಈ ಪ್ರಶ್ನೆಗಳು ಪ್ರಸ್ತುತ Coetzee ಬಗ್ಗೆ ಆಡುತ್ತಿರುವ ಮಾತುಗಳಿಗೂ ಅನ್ವಯಿಸುತ್ತ ಇಡೀ ವ್ಯಾಖ್ಯಾನಕ್ಕೆ ಹೊಸ ಅರ್ಥವೊಂದು ತೆರೆದುಕೊಳ್ಳುತ್ತದೆ.

ಸಂದರ್ಶಿತರಲ್ಲಿರುವ ಏಕೈಕ ಸಂಬಂಧಿ ಮತ್ತು ಬಾಲ್ಯದ ನಂಟಿರುವ ಮಾರ್ಗೊಟ್ ವಿಚಾರಗಳಂತೂ ಗಂಡು-ಹೆಣ್ಣು ಸಂಬಂಧದ ಅವಲಂಬನೆ, ಮಾನವೀಯ ಸಂಬಂಧದ ಭಾವುಕತೆ ಮತ್ತು ಈ ಬದುಕಿನ ಈಸಿ-ಜೈಸುವ ಅನಿವಾರ್ಯ ಸವಾಲುಗಳು - ಮೂರನ್ನೂ ಏಕಕಾಲಕ್ಕೆ ನಿಕಷಃಕ್ಕೊಡ್ಡುತ್ತಿವೆ.

An author in search of himself ಎಂಬ ಹೆಸರಿನ ತಮ್ಮ ಲೇಖನದಲ್ಲಿ (The Hindu Literary Review, November 1, 2009) ಜೈ ಅರ್ಜುನ್ ಸಿಂಗ್ ‘Summertime is a meditation on the possibilities and limitations of literature’ ಎನ್ನುತ್ತಾರೆ.

‘.................it’s a book of ideas, full of reflections not only about the relationship between an artist's life and his work , but also about the functions, possibilities and limitations of literature itself. Summertime is a meditation on how difficult - ultimately impossile - it is to satisfactorily transfer the complexities of human experiences into words on a page."

ಅಂಜುಂ ಹಸನ್ ಬರೆದ ಲೇಖನ - Cracking the Frozen Sea - J M Coetzee ಯ ಮೂರು ಕಾದಂಬರಿ ಮಾದರಿಯ ಆತ್ಮಕಥನಗಳ (Boyhood, Youth ಮತ್ತು Summertime) ಕುರಿತು ಸಮಗ್ರವಾಗಿ ನಡೆಸುವ ವಿಶ್ಲೇಷಣೆಯಾದರೂ Summertimeನ ಹಿನ್ನೆಲೆಯಲ್ಲೇ ನಡೆದ ಒಂದು ಅಧ್ಯಯನ. ಲೇಖನದ ಆರಂಭದಲ್ಲೇ ಅಂಜುಂಹಸನ್ ಎತ್ತಿಕೊಂಡ ವಿಚಾರ ಮೂಲತಃ Youth ನಲ್ಲಿ ತೊಡಗಿದ J M Coetzee ಯ ಮೂಲಭೂತ ಜಿಜ್ಞಾಸೆಯ ಕುರಿತದ್ದು.

"Do you really believe that books give meaning to our lives, John Coetzee asks his lover Julia in Summertime. 'A book should be an axe to chop open the frozen sea inside us' says Julia, paraphrasing Franz Kafka.

"The question Summertime asks but does not answer is : what if it is the novelist's heart that is the frozen sea? Is it possible then to still hold to Kafka's view about the power of fiction?" (The Caravan - January 2010)

ಸಾಹಿತಿ, ಅವನ ಸ್ಮೃತಿ, ಅನುಭವ, ನೆನಪುಗಳು, ಕನಸುಗಳು ಮತ್ತು ವ್ಯಕ್ತಿತ್ವ - ಎಲ್ಲವೂ ಸೇರಿದ ಅವನ ಅಭಿವ್ಯಕ್ತಿ ಭಾಷೆಯಲ್ಲಿ ಆಕೃತಿ ಪಡೆಯುವ ಪ್ರಕ್ರಿಯೆಯನ್ನು ಸತ್ಯದ ಶೋಧವೆಂದೋ, ಪರಮಾವಧಿ ಪ್ರಾಮಾಣಿಕವಾಗಿ ತನ್ನನ್ನು ತಾನು ಕಂಡುಕೊಳ್ಳುವ ಹಾದಿಯಾಗಿಯೋ, ತನ್ನ ಸತ್ಯಕ್ಕೆ ತಾನು ಬದ್ಧನಾಗುವ ಪ್ರಾಮಾಣಿಕ ನಿಲುವು ಎಂದೋ ತಿಳಿಯುವುದಾದರೆ ಈ ಪರಮಾವಧಿ ಪ್ರಾಮಾಣಿಕತೆಯ "ಟ್ರಿಕ್ಸ್" ಬಗ್ಗೆಯೇ Coetzeeಯಲ್ಲಿ ಅನುಮಾನಗಳಿವೆ. ಇಂಥ ಸ್ವ-ವಿಮರ್ಶೆ, ಸ್ವ-ಭಾವದ ಜಿಜ್ಞಾಸೆ, ಬರವಣಿಗೆಯ ಮಿತಿ ಮತ್ತು ಭ್ರಮನಿರಸನಗಳ ಕುರಿತ ಮಂಥನಗಳು ವಿಪುಲವಾಗಿರುವ ಕಾದಂಬರಿ Summertime ಗಿಂತ Youth ಎಂದೇ ಹೇಳಬೇಕು. ಆ ಕಾದಂಬರಿಯನ್ನು ಮತ್ತೊಮ್ಮೆ ವಿವರವಾಗಿ ಗಮನಿಸಬಹುದು. Summertime ಬರಹಗಾರನ ಬರವಣಿಗೆಯ ಆರಂಭದ ದಿನಗಳ ಕುರಿತಾಗಿಲ್ಲದಿರುವುದು ಕೂಡ ಇಲ್ಲಿ ಸಾಹಿತ್ಯ - ಭಾಷೆ - ಬರವಣಿಗೆಗಳ ಜಿಜ್ಞಾಸೆ ಅಷ್ಟಾಗಿ ಇಲ್ಲದಿರಲು ಕಾರಣವಿದ್ದೀತು. ಅಲ್ಲದೆ ಇಲ್ಲಿ Boyhood ಅಥವಾ Youth ಮಾದರಿಯ ಸ್ವ-ನಿರೂಪಕನಿಲ್ಲ. ಕಾದಂಬರಿಕಾರ ಅಳಿದ ಮೇಲೆ ನಡೆಯುವ ವಿಮರ್ಶೆಯಿದು ಕೃತಿಗಳ ವಿಮರ್ಶೆಯಲ್ಲ; ಸಂಬಂಧಗಳ, ವ್ಯಕ್ತಿತ್ವದ ವಿಮರ್ಶೆ.

ಕುತೂಹಲಕರವೆಂದರೆ ಈ ಎಲ್ಲ ಮಾತುಗಾರರು - ಒಬ್ಬನನ್ನು ಹೊರತು ಪಡಿಸಿ - ಹೆಣ್ಣುಗಳೇ ಆಗಿರುವುದು ಮತ್ತು ವಿಭಿನ್ನ ಪಾತಳಿಯಲ್ಲಿ ಗಂಡು-ಹೆಣ್ಣು ಸಂಬಂಧದ ಸೀಮಾರೇಖೆಗಳನ್ನು ಪ್ರಶ್ನಿಸುವ ಸಂಬಂಧಗಳೇ ಆಗಿರುವುದು. ಅದು ವಿವಾಹೇತರ ಸಂಬಂಧವಾಗಿ, ವಿಧವೆಯೊಂದಿಗಿನ ಸಂಬಂಧವಾಗಿ, ವಾವೆಯಲ್ಲಿ ಸಹೋದರಿಯಾಗಬೇಕಾದವಳ ತುಮುಲಗಳಲ್ಲಿ, ಸಹೋದ್ಯೋಗಿಯಲ್ಲಿ - ಹೀಗೆಲ್ಲ ನಡೆದಿದೆ.

ಕೊನೆಯದಾಗಿ ಅದ್ರಿನಾ ಆಡುವ ಒಂದು ಮಾತನ್ನು ಸ್ವಲ್ಪ ಗಮನಿಸಿ ಈ ಬರಹವನ್ನು ಮುಗಿಸಬಹುದು.

"To my mind, talent for words is not enough if you want to be a great writer. You have also to be a great man. And he was not a great man"

ಈ ಮಾತು ತುಂಬ ಅರ್ಥಪೂರ್ಣವಾದದ್ದು, ಮಹತ್ವದ್ದು. ಹಿಂದೊಮ್ಮೆ ನಮ್ಮ ಹಿರಿಯ ಕತೆ-ಕಾದಂಬರಿಕಾರ, ಪ್ರಬಂಧಕಾರ ಮತ್ತು ವಿಮರ್ಶಕ ಕೆ.ಸತ್ಯನಾರಾಯಣರ ಬಳಿ ನಮ್ಮ ಕನ್ನಡದ ಹೊಸ ತಲೆಮಾರಿನ ಬರಹಗಾರರನ್ನು ಕುರಿತು ನಾನು ಉತ್ಸಾಹದಿಂದ ಮಾತನಾಡುತ್ತಿರುವಾಗ ಅವರು ಸುಮಾರಾಗಿ ಈ ಅರ್ಥದಲ್ಲಿ ಹೇಳಿದ್ದರು, " ಅಲ್ಲ ಪೈ, ಚೆನ್ನಾಗಿ ಬರೆಯುವುದು ಬೇರೆ, ಬರೆದಿದ್ದು ಚೆನ್ನಾಗಿರುವುದು ಬೇರೆ. ಚೆನ್ನಾಗಿ ಬರೆಯುವುದು, ಅದೇನೂ ಒಂದು ದೊಡ್ಡ ಸಾಧನೆಯಲ್ಲ. ಸಾಧಾರಣವಾಗಿ ಯಾರೂ ಅದನ್ನು practice ಮಾಡಬಹುದು. ಆದರೆ ಅವರೇನು ಬರೀತಾರೆ, ಅದರಿಂದ ಏನಾಗುತ್ತೆ, ಹೊಸತೇನು ಕೊಡ್ತಿದ್ದಾರೆ ಅನ್ನೋದು ಮುಖ್ಯ ಅಲ್ವ?"

ಈಚೆಗೆ ಜಯಂತ್ ಕಾಯ್ಕಿಣಿ ಇದೇ ತರಹದ ಮಾತನ್ನು ಸ್ವಲ್ಪ ಭಿನ್ನವಾಗಿ ಹೇಳಿದರು. ಕನ್ನಡದ ಒಬ್ಬ ಅತ್ಯುತ್ತಮ ಕತೆಗಾರ್ತಿಯ ಹಳೆಯ ಕತೆಗಳನ್ನು ನಾವಿಬ್ಬರೂ ಮೆಲುಕು ಹಾಕುತ್ತಿದ್ದಾಗ "ಅವಳ ಕತೆಗಳಲ್ಲಿ ಅವಳದ್ದೊಂದು mind ಇರತಾ ಇತ್ತು ಮಾರಾಯ. mind ಅಂದ್ರೆ intellect, brain ಅಂತೆಲ್ಲ ಅಲ್ಲ. ಕತೆಯಲ್ಲಿ ಕತೆಗಾರನ ಒಂದು mind - ಅದರ ಅಸ್ತಿತ್ವ ಕಂಡೂ ಕಾಣದ ಹಾಗಿರುತ್ತೆ, ಅದು. ಅದನ್ನ ನಾನು ಕುತೂಹಲದಿಂದ ಕಾಣ್ತಾ ಇರ್ತೇನೆ. ಅವನು ಕತೆ ಹೇಳೋವಾಗ್ಲೆ, ಹೇಳ್ತಿರೋವಾಗ್ಲೆ ಆ ಕತೆಯನ್ನ ಅವನು ಕಾಣ್ತಾ ಇರ್ತಾನಲ್ಲ, ಅದು...ಅದು ಸಿಗ್ತಿತ್ತು ಅವಳ ಕತೆಗಳಲ್ಲಿ. ಆಗ ಅದೆಲ್ಲ ಅಷ್ಟಾಗಿ ಗಮನಿಸಿರಲಿಲ್ಲ...ಹೌದು,Highly talented.... ಅದ್ಕೇ ನನಗೆ ಬರೀಬೇಕಾದ್ರೆ ಇದ್ರಲ್ಲೇನೋ ಇದೆ....something more than...ಆದ್ರೆ ಅದೇನು ಅಂತ ಹೇಳೋಕಾಗ್ತಿಲ್ಲ...ಬರೀಬೇಕಾದ್ರೆ ಈ ಕತೆಗಳಿಗೆ ನ್ಯಾಯ ಒದಗಿಸ್ತಾ ಇದ್ದೇನಾ ಅಂತ ಅನುಮಾನ ಆಗಿತ್ತು ನಂಗೆ...." ಎಂಬ ಅರ್ಥದ ಮಾತುಗಳು.

ಜಯಂತರ ಕತೆಗಳನ್ನೇ ಸೂಕ್ಷ್ಮವಾಗಿ ಗಮನಿಸಿದರೂ ಇದು ನಮ್ಮ ಅರಿವಿಗೆ ಬರುತ್ತದೆ. ಜಯಂತ್ ಸೃಷ್ಟಿಸುವ ಎಷ್ಟೋ ಪಾತ್ರಗಳು ಇವತ್ತಿನ ‘ಏನ್ಮಾಡ್ - ದುಡ್ಮಾಡ್ ’ ದಿನಗಳಲ್ಲಿ ಹಾದಿ ಬೀದಿಗಳಲ್ಲಿ ನಮಗೆ ಮುಖಾಮುಖಿಯಾಗುವ ಪಾತ್ರಗಳೆ? ವಾಸ್ತವದಲ್ಲಿ ಅಂಥ ಪಾತ್ರಗಳಿರಲು ಸಾಧ್ಯವೆ? ಇಲ್ಲವೇ ಇಲ್ಲ. ಜಯಂತರ ಒಟ್ಟಾರೆ ಕತೆಗಳಲ್ಲಿ ನಾವು ಕಾಣುವ ‘ಸಾಮಾನ್ಯ ಮನುಷ್ಯ’ ವಾಸ್ತವ ಜಗತ್ತಿನ ಸಾಮಾನ್ಯ ಮನುಷ್ಯನಿಂದ ತೀರ ಬೇರೆಯೇ ಇದ್ದಾನೆ. ಕನ್ನಡದ ಪ್ರತಿಯೊಬ್ಬ ಲೇಖಕ ಸೃಷ್ಟಿಸಿರುವ ‘ಸಾಮಾನ್ಯ ಮನುಷ್ಯ’ನ ಪರಿಕಲ್ಪನೆಯನ್ನು ಇದೇ ರೀತಿ ಅಧ್ಯಯನಕ್ಕೆ ಒಡ್ದಿದರೆ ಅಚ್ಚರಿಯ ಸಂಗತಿಗಳು ನಮ್ಮ ಗಮನಕ್ಕೆ ಬರುತ್ತವೆ ಎನ್ನುವುದು ಬೇರೆ ಮಾತು. ಅಂದರೆ, ಜಯಂತರ ಕಥಾಲೋಕ ಒಂದು ಆದರ್ಶಮಯ, ರಮ್ಯ, ಕಾಲ್ಪನಿಕ ಜಗತ್ತನ್ನು ನಮಗೆ ಕಟ್ಟಿಕೊಡುತ್ತಿದೆಯೆ? ಅದೇ ವಾಸ್ತವ ಎನ್ನುವ ತತ್ಕಾಲೀನ ಭ್ರಮೆಯೊಂದನ್ನು ಹುಟ್ಟಿಸುತ್ತಿದೆಯೆ? ಜಯಂತ್ ಹಾಗಾದರೆ ಇಷ್ಟು ಕಾಲ ನಮ್ಮನ್ನೆಲ್ಲ ‘ಮಂಗ’ ಮಾಡುತ್ತ ಬಂದಿದ್ದಾರೆಯೆ ಎಂದು ಕೇಳಿಕೊಳ್ಳಬಹುದು.

‘ಸತ್ ’ಎಂಬುದರಲ್ಲಿ ಪೂರ್ತಿಯಾಗಿ ನಂಬುಗೆ ಕಳೆದುಕೊಂಡ, ಭಾವಕೋಶಗಳು ಸಂಪೂರ್ಣ ಭ್ರಷ್ಟಗೊಂಡ, ಬಾಪುಕುಟಿಯಂಥ ಅಪ್ಪಟ ವಾಸ್ತವ ಜಗತ್ತಿನ ವಿವರಗಳಿಂದಲೇ ಕೂಡಿರುವ ಪುಸ್ತಕಗಳನ್ನು ಓದದ-ನಂಬದ ಮಂದಿ ಮಾತ್ರ ಹೀಗೆ ಯೋಚಿಸಬಲ್ಲರು. ‘ಮನುಷ್ಯರನ್ನು ನಂಬಬಹುದು’(ರಮೇಶ್ ಭಟ್ ಅವರ ಕಥಾಸಂಕಲನದ ಹೆಸರು) ಎಂಬ ಬಗ್ಗೆ ಅನುಮಾನಗಳಿರುವ ನಮ್ಮಂಥವರಿಗೆ ಕೊಂಚ ಅತಿಯಾಗಿ ಹೇಳುತ್ತಿದ್ದಾನೆ ಅನಿಸಬಹುದಾದ ಮಾತುಗಳನ್ನು ಹೀಗೆ ಪ್ರಶ್ನಿಸುವುದರ ಮೂಲಕ ನಾನು ಬಗೆಹರಿಸಿಕೊಳ್ಳುತ್ತೇನೆ. ಒಬ್ಬ ಸೃಜನಶೀಲ ಬರಹಗಾರನಾದವನಿಗೆ, ಲೇಖಕನಾದವನಿಗೆ ಮನುಷ್ಯನ ಇವಿಲ್ ಕುರಿತು ಇರುವ ಅನುಮಾನಗಳ ಜೊತೆಜೊತೆಗೇ ಆತನ ಆಳದ ‘ಸತ್ ’ ಬಗ್ಗೆ ಕೂಡಾ ವಿಶ್ವಾಸ ಇಲ್ಲದೇ ಹೋದರೆ ಆತ ಲೇಖಕನಾಗಿ ಸಮಾಜಕ್ಕೆ ಏನನ್ನು ತಾನೇ ಕೊಡಲು ಸಾಧ್ಯ?

ಲೇಖಕನ ವ್ಯಕ್ತಿತ್ವ ಮುಖ್ಯವಾಗುವುದು ಇಲ್ಲಿಯೇ. ಒಬ್ಬ ವ್ಯಕ್ತಿಯಾಗಿ ಜಯಂತ್ ಯಾವತ್ತೂ ಸರಳವಾದ, ಮುಗ್ಧವಾದ ಪ್ರೀತಿಯಿಂದ ಎಲ್ಲರನ್ನೂ ಕಾಣುತ್ತ ಬಂದಿದ್ದಾರೆ. ಅವರು ವೈರದ-ಕಹಿಯ ಅಕೌಂಟು - ಲೆಕ್ಕ ಇಟ್ಟುಕೊಂಡವರಲ್ಲ. ಅವರ ಈ ಗುಣದಿಂದಲೇ ಅವರ ಬಗ್ಗೆ ಸಣ್ಣತನ ತೋರುತ್ತಿದ್ದ ಎಷ್ಟೋ ಮಂದಿ ದಂಗಾಗಿ ಮೌನವಾಗಿರುವುದು ಸುಳ್ಳಲ್ಲ. ಇವತ್ತು ಜಯಂತ್ ಕರ್ನಾಟಕದ ಲಕ್ಷಾಂತರ ಮಂದಿಯ ಹೃದಯ ಗೆದ್ದಿದ್ದರೆ ಅದರಲ್ಲಿ ಅವರ ವ್ಯಕ್ತಿತ್ವದ ಪಾಲು ದೊಡ್ಡದಿದೆ. ಜಗತ್ತಿನಲ್ಲಿ ಅತ್ಯಂತ ಸುಂದರವಾದದ್ದು ಹಾದಿಯಲ್ಲಿ ಎದುರಾಗುವ ಅಪರಿಚಿತನ ಮುಖದಲ್ಲೂ ಅರಳುವ ಒಂದು ನಗು ಎಂದ ಜಯಂತ್ ಮನಸ್ಸು ಆ ನಗುವಿನಷ್ಟೇ ಸರಳವಾದದ್ದು. ಇಲ್ಲದೇ ಹೋದರೆ ಈ ರೀತಿ ಜನರ ಪ್ರೀತಿ ಗಳಿಸುವುದು ಒಬ್ಬ ಬರಹಗಾರನಾಗಿ, ಕಷ್ಟ. ಒಬ್ಬ ಸಚಿನ್ ತೆಂಡುಲ್ಕರ್, ಒಬ್ಬ ರಾಜ್‌ಕುಮಾರ್, ಒಬ್ಬ ಅಮಿತಾಬ್, ಒಬ್ಬ ಮೈಕಲ್ ಜಾಕ್ಸನ್, ಒಬ್ಬ ಡಯಾನಾ ಅದನ್ನು ಗಳಿಸಿದರೆ ಅದು ಅಂಥ ಅಚ್ಚರಿಯ ಸಂಗತಿಯಲ್ಲ. ಬರಹಗಾರನಿಗೆ ಅಂಥ ಸೌಭಾಗ್ಯವಿಲ್ಲ. ಅದು ಸಿಕ್ಕಿದರೆ ಅದು ಆತನ ವ್ಯಕ್ತಿತ್ವದಿಂದ ಸಿಗಬೇಕು. ಅದು ವ್ಯಕ್ತಿಯ ಅಂತರಾತ್ಮನಿಂದ ಸಮಷ್ಟಿಯ ಪರಮಾತ್ಮನೆಡೆಗೆ ಹರಿಯುವುದು ಅವನ ಅಭಿವ್ಯಕ್ತಿ ಮಾಧ್ಯಮ - ಭಾಷೆಯಿಂದ ಸಾಧ್ಯವಾಗಬೇಕು. ಅದು ಸಾಧ್ಯವಾಗದಿದ್ದರೆ ಎಷ್ಟೇ ಮಧು ಮಧುರವಾದ ಶಬ್ದಗಳನ್ನು ಹೆಕ್ಕಿ, ಆಯ್ದು, ಕೂಡಿಸಿ ಬರೆದರೂ ಕ್ಲಿಕ್ ಆಗುವುದಿಲ್ಲ. ನಾವು ಸಾಮಾನ್ಯ ಜನರಿಗೇನು ಅರ್ಥವಾಗುತ್ತದೆ ಎನ್ನುತ್ತೇವೆ, ಹಗುರವಾಗಿ, ಅಹಂಕಾರದಿಂದ. ಆದರೆ ಜನರ ತಲೆಗೆ ಅಷ್ಟು ಬೇಗ ತಲುಪದ್ದು ಹೃದಯಕ್ಕೆ ನೇರವಾಗಿ ತಲುಪುತ್ತದೆ, ಅದನ್ನು ಕಾಣುವುದು ಸರಳವಿಲ್ಲ ಅಷ್ಟೆ.

ಅದ್ರಿನಾ Coetzee ಬಗ್ಗೆ ಅವನಿಗೆ ಅಂಥ ವ್ಯಕ್ತಿತ್ವ ಇರಲಿಲ್ಲ, ಹಾಗಾಗಿ ಆತ ‘ಅಂಥಾ’ ಲೇಖಕ ಆಗಿರಲು ಸಾಧ್ಯವಿಲ್ಲ ಎಂದು Coetzee ಯ ಯಾವುದೇ ಕೃತಿಗಳನ್ನು ಓದದೆಯೇ, ಕೆಲವೇ ಕಾಲದ ಸೀಮಿತವಾದ ಸಂಪರ್ಕದ ಆಧಾರದ ಮೇಲೆಯೇ, ವೈಯಕ್ತಿಕ ಕಾರಣಗಳಿಂದ ಪ್ರಭಾವಿತಳಾಗಿ ಕೊಡುವ ತೀರ್ಮಾನವನ್ನು ಎಲ್ಲರೂ ಒಪ್ಪಬೇಕಾಗಿಲ್ಲ. ಅದ್ರಿನಾ ಬಗ್ಗೆಯೇ ಕೆಲವೊಂದು ನಿಲುವುಗಳಿಗೆ ಬರುವುದು ಸಾಧ್ಯವಿದೆ. ಆದರೆ ಅಂಥ ನಿಲುವು ಕೂಡಾ ಅರಿವಿಗಿಂತ ಅರಿತಿರದ ಸಂಗತಿಗಳೇ ಹೆಚ್ಚಿರುತ್ತ ತೆಗೆದುಕೊಳ್ಳುವ ಆತುರದ ನಿಲುವೇ ಆಗಿರುವುದು ನಿಶ್ಚಯ. ಹಾಗಾಗಿ ಇದಂಮಿತ್ಥಂ ಎಂದು ಹೇಳಲಾಗದ ಒಂದು ಸ್ಥಿತಿ ಇದೆ. ಬಹುಷಃ ನಾವೆಲ್ಲರೂ ಇತರರ ಬಗ್ಗೆ ಮಾತ್ರವಲ್ಲ, ನಮ್ಮ ನಮ್ಮ ಬಗ್ಗೆಯೂ ಇರುವ ಬಗೆ ಕೂಡಾ ಇದೇ ಆಗಿದೆ!
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ