Monday, May 24, 2010

ವ್ಯಕ್ತ ಮಧ್ಯದ ಅವ್ಯಕ್ತ

ಬೃಹದಾರಣ್ಯಕ ಉಪನಿಷತ್ತಿನ ಒಂದು ಕಥೆ. ಜನಕ ರಾಜ ಒಂದು ಯಜ್ಞ ಮುಗಿಸಿದ ನಂತರ ಒಂದು ಸಾವಿರ ಗೋವುಗಳನ್ನು - ಪ್ರತಿಯೊಂದು ಗೋವಿನ ಕೊಂಬುಗಳಿಗೆ ಹತ್ತು ಚಿನ್ನದ ನಾಣ್ಯಗಳನ್ನೂ ಕಟ್ಟಿಸಿ, ಬ್ರಾಹ್ಮಣರಲ್ಲಿ ವಿಜ್ಞಾಪನೆ ಮಾಡಿಕೊಳ್ಳುತ್ತಾನೆ, ತಮ್ಮಲ್ಲಿ ಬ್ರಹ್ಮಿಷ್ಠರಾದವರು ಈ ಗೋವುಗಳನ್ನು ಹೊಡೆದುಕೊಂಡು ಹೋಗಿ. ಯಾರಿಗೂ ಧೈರ್ಯವಾಗುವುದಿಲ್ಲ. ಆಗ ಯಾಜ್ಞವಲ್ಕ್ಯರು ತಮ್ಮ ಶಿಷ್ಯರಿಗೆ ಗೋವುಗಳನ್ನು ಆಶ್ರಮಕ್ಕೆ ಹೊಡೆದುಕೊಂಡು ಹೋಗಲು ಹೇಳುತ್ತಾರೆ. ಈ ಸಭೆಯಲ್ಲಿ ಗಾರ್ಗಿ ಎಂಬ ಬ್ರಹ್ಮಜ್ಞಾನಿಯೊಬ್ಬಳು ಈ ಯಾಜ್ಞವಲ್ಕ್ಯರನ್ನು ತಡೆಯುತ್ತಾಳೆ ಮಾತ್ರವಲ್ಲ ಅವರ ಬ್ರಹ್ಮಜ್ಞಾನವನ್ನು ಪರೀಕ್ಷೆಗೊಡ್ಡುತ್ತಾಳೆ. ಆ ಸಂದರ್ಭದಲ್ಲಿ ಬ್ರಹ್ಮವನ್ನು ವಿವರಿಸಲೇ ಬೇಕಾದ ಧರ್ಮಸಂಕಟಕ್ಕೆ ಸಿಲುಕಿದ ಯಾಜ್ಞವಲ್ಕ್ಯರು ಇದಕ್ಕಿಂತ ಹೆಚ್ಚು ಕೇಳಬಾರದು, ಕೇಳಿದರೆ ಅದನ್ನು ತಾವು ಸಭೆಯಲ್ಲಿ ಹೇಳಬಾರದು ಎಂಬ ತಾಕೀತಿನೊಂದಿಗೆಯೇ ಬ್ರಹ್ಮ ಯಾವುದು ಎಂದು ವಿವರಿಸುವುದಕ್ಕೆ ಈ ನೇತಿ-ನೇತಿ ವಿಧಾನವನ್ನು ಅನುಸರಿಸುತ್ತಾರೆ. ಅಂದರೆ ಯಾವುದೆಲ್ಲ ಬ್ರಹ್ಮ ಅಲ್ಲ ಎಂದು ಹೇಳುತ್ತಾ ಹೋಗುತ್ತಾರೆ. ಸ್ಥೂಲವಾಗಿ ಬ್ರಹ್ಮ ಆಕಾಶವಲ್ಲ, ಭೂಮಿಯೂ ಅಲ್ಲ; ನೀರು ಅಲ್ಲ, ಘನವೂ ಅಲ್ಲ; ಗಾಳಿಯೂ ಅಲ್ಲ, ನೀರವವೂ ಅಲ್ಲ; ಬೆಳಕೂ ಅಲ್ಲ, ಕತ್ತಲೆಯೂ ಅಲ್ಲ; ಶಬ್ದವೂ ಅಲ್ಲ, ನಿಶ್ಶಬ್ದವೂ ಅಲ್ಲ; ಆಕಾರವೂ ಅಲ್ಲ ನಿರಾಕಾರವೂ ಅಲ್ಲ; ಅದಲ್ಲ, ಇದೂ ಅಲ್ಲ ಮಾದರಿಯ ಉತ್ತರ! ಅಂಜುಂ ಹಸನ್‌ರ ಹೊಸ ಕಾದಂಬರಿಯ ಹೆಸರು ಇದು - ನೇತಿ ನೇತಿ (Not This, Not This).

ಮನುಷ್ಯನ ದುರಂತಗಳಿಗೆ ಅವನ ‘ನಗರ’ದ ದುರಂತಗಳು ಕಾರಣವೆ? ಒಬ್ಬ ಗೂಂಡಾ ತರದ ಮನುಷ್ಯ, ಸಿನಿಮಾದ ಭಾವಾತೀರೇಕದ ಸನ್ನಿವೇಶಗಳನ್ನು ನೋಡುತ್ತ ಅಳುವವನು, ವೃತ್ತಿಯ ನಿಷ್ಠುರ ಅಗತ್ಯಗಳಿಗೆ ಬೇಕಾಗಿ ಮನುಷ್ಯತ್ವವನ್ನು ಅಡವಿಟ್ಟು ಸಾಲ ವಸೂಲಿಗೆ ಇಳಿಯುವವನು ತನ್ನ ಪ್ರೇಯಸಿ ತನ್ನನ್ನು ಬಿಟ್ಟು ಹೋಗಬಹುದು ಎಂಬ ಭಯಕ್ಕೇ ಅವಳನ್ನು ಕೊಲೆ ಮಾಡುತ್ತಾನೆ. ಶಾಪಿಂಗ್ ಮಾಲ್ ಒಂದರಲ್ಲಿ ಮೈಮರೆತ ತಂದೆ ತಾಯಿಗಳ ಕೈ ಜಾರಿ ಮಗುವೊಂದು ಮೂರನೇ ಮಹಡಿಯಿಂದ ಬಿದ್ದು ಶವವಾಗುತ್ತದೆ. ತಮ್ಮ ತಮ್ಮ ಕನಸುಗಳ ಖರೀದಿಯಲ್ಲಿ ಮಗ್ನರಾದ ಮಂದಿ ಹೊರಳಿ ನೋಡುವಷ್ಟರಲ್ಲಿ ಮಾಲ್ ಮತ್ತೆ ವ್ಯಾಪಾರಕ್ಕೆ ಸಜ್ಜಾಗಿದೆ, ನೆಲದ ಮೇಲಿನ ರಕ್ತವನ್ನು ಮೋಪಿನಿಂದ ಒರೆಸುತ್ತಿರುವ ಸ್ಯಾನಿಟರಿ ವರ್ಕರ್ ಕಾಣಿಸುತ್ತಿದ್ದಾನೆ. ತೀರ ಬಡತನದಲ್ಲಿ ಮಕ್ಕಳನ್ನು ಓದಿಸಿ ಬೆಳೆಸಿ ಜೀವ ತೇಯ್ದ ವೃದ್ಧೆಯೊಬ್ಬಳು ತನ್ನ ಮಗ ವಿದೇಶದಿಂದ ತಂದ ಚಿನ್ನದ ಪುಟ್ಟ ಪರ್ವತದೆದುರು ಕೆಲಸವಿಲ್ಲದೇ ಹುಚ್ಚಾಗಿದ್ದಾಳೆ; ಅವನು ಚಿನ್ನ ತರುವುದನ್ನು ನಿಲ್ಲಿಸಿದಾಗ ಚಿನ್ನ ಚಿನ್ನ ಎನ್ನುತ್ತ ಅರೆನಗ್ನವಾಗಿ ಬೀದಿ ಸುತ್ತುತ್ತಾಳೆ. ಟ್ರಾಫಿಕ್ಕಿನ ಗೊಂದಲದಲ್ಲಿ ದೊಡ್ಡ ಕಾರಿನ ಧನಿ ಮತ್ತವನ ಡ್ರೈವಿಂಗ್ ಲೈಸೆನ್ಸ್ ಇಲ್ಲದ ಪುಟ್ಟ ಪಪ್ಪು - ಮಗ ಅಡ್ಡ ಬಂದ ಬಡ ಸಣಕಲ ರಿಕ್ಷಾವಾಲನಿಗೆ ತದಕುತ್ತಾರೆ ಮತ್ತು ಪೋಲೀಸರೆದುರು ಸುಳ್ಳು ಹೇಳಿ ಜೈಸಿಕೊಳ್ಳಲು ನೋಡುತ್ತಾರೆ. ನಗುವುದಕ್ಕೆ ಲಾಫಿಂಗ್ ಕ್ಲಬ್, ಉಸಿರಾಡುವುದನ್ನು ಕಲಿಸುವುದಕ್ಕೆ ಉಸಿರಾಟದ ಗುರು. ತನ್ನ ಮೊಮ್ಮಗನಿಗೆ ತಿಳಿಯದೇ ನಾನ್ ವೆಜ್ ತಿನ್ನಲು ಕೊಟ್ಟ ಬಾಡಿಗೆದಾರರ ಮೇಲೆ ಹರಿಹಾಯ್ವ ಸನಾತನಿ ಶುದ್ಧಾಚಾರಕ್ಕೆ ಹತ್ತು ಹಲವು ಬಗೆಯ ಶುದ್ಧೀಕರಣ ಶಾಸ್ತ್ರಕ್ಕೆ ಶರಣಾದರೆ, ಗುರುವಿನ ಜಯಂತ್ಯುತ್ಸವಕ್ಕೆ ಚೀಲದಲ್ಲಿ ಬಿಯರ್ ಬಾಟಲು ಇಟ್ಟುಕೊಂಡು ಬಂದಿದ್ದಲ್ಲದೆ ಅಲ್ಲಿ ಅದನ್ನು ಅಕಸ್ಮಾತ್ ಒಡೆದು ಅಶುದ್ಧ ಮಾಡಿದವಳಿಗೆ ದಂಡ ಹಾಕಿ ಅದನ್ನು ವಸೂಲಿ ಮಾಡಲು ಓಡಾಡುವ ಸನಾತನಿ ಇನ್ನೊಬ್ಬ. ದಿನವೂ ಕುಡಿದು ಬಂದು ತದಕುವ ಗಂಡನ ಕೈಯಲ್ಲಿ ಹೊಡೆತ ತಿನ್ನುವ ಕೂಲಿ ಹೆಂಗಸು, ಮದುವೆ ಮುಂಜಿಗಳಿಗೆ ರೇಷ್ಮೆ ಸೀರೆ-ಸೆಂಟುಗಳ ಸರಭರದಲ್ಲಿ ಸಂಭ್ರಮವನ್ನು ನಟಿಸುವ ಹೆಂಗಸರು, ಯಾವುದರಲ್ಲೋ ಸುಖವೆಂಬ ಮಾಯಾಮೃಗ ಕಣ್ಣಾಮುಜ್ಜಾಲೆಯಾಡುತ್ತ ಕಣ್ತಪ್ಪಿಸುತ್ತಿದೆ ಎಂಬ ಗೊಂದಲಕ್ಕೆ ಬಿದ್ದವನಂತೆ ಏನನ್ನೋ chase ಮಾಡುತ್ತ ಕೊನೆಗೊಮ್ಮೆ ಕತ್ತಲಲ್ಲಿ ಬತ್ತಲಾಗಿ ಏನನ್ನೂ ಕಾಣದೆ ಕಂಗಾಲಾಗಿ ನಿಂತವನಂತೆ ಕಾಣುವ ನಗರ....

ಸಂಗೀತದ ಬಗ್ಗೆ ನಡೆಯುವ ಒಂದು ಚರ್ಚೆಯಿದೆ ಇಲ್ಲಿ. ಬಹಳ ಹಿಂದೆ ಭಾಸ್ಕರ ಚಂದಾವರ್ಕರ್ ತಮ್ಮ ಭಾಷಣದಲ್ಲಿ ನಮ್ಮ M-Tv, F-Tv ಗಳು ಬಿತ್ತರಿಸುವ ಸಂಗೀತದ ಬಗ್ಗೆ ಸ್ವಾರಸ್ಯಕರವಾಗಿ ವಿವರಿಸಿದ್ದರು. ಅರೆಕ್ಷಣ ಕೂಡ ನಿಮ್ಮ ಮನೋಭಿತ್ತಿಯಲ್ಲಿ ಕೂರಲಾರದ, ನಿಲ್ಲಲಾರದ, ತೆರೆಯ ಮೇಲೆ ಕ್ಷಣಕ್ಷಣಕ್ಕೂ ಛಿದ್ರಗೊಳ್ಳುತ್ತಿರುವ ಚಿತ್ರಗಳು ಕಣ್ಣೆದುರು ಮಿಂಚಿ ಮರೆಯಾಗುತ್ತಿರುವಂತೆಯೇ ಕಿರುಚಿದಂತೆ, ಪರಚಿಕೊಂಡಂತೆ ಅರಚುವ, ಅಬ್ಬರದ ಶಬ್ದವನ್ನೇ ಸಂಗೀತ ಎಂದು ತಿಳಿದುಕೊಂಡ ಒಂದು ತಲೆಮಾರಿನ ಅಭಿರುಚಿಯ ಬಗ್ಗೆ ಹೇಳುತ್ತಲೇ ಅದು ಹೇಗೆ ಈ ಸಂಗೀತ ಬರೇ ಕೇಳುವ ವಸ್ತುವಾಗದೇ ನೋಡುವ ಮತ್ತು ಚಿತ್ರವಿಚಿತ್ರ ಚಮತ್ಕಾರದ ಸರಕಾಗಿ ನಮ್ಮ ಮನಸ್ಸನ್ನು ಏಕಾಗ್ರಗೊಳಿಸುವುದರ ಬದಲಿಗೆ ಛಿದ್ರಗೊಳಿಸುತ್ತ ಹೋಗುತ್ತದೆ ಎಂದು ಹೇಳಿದ್ದರು. ಶಬ್ದಕ್ಕಿರುವ ಮನೋವಿಚ್ಛಿದ್ರಕ ಶಕ್ತಿ ಮತ್ತು ನಾದಕ್ಕಿರುವ ಮಾನಸಿಕ ಸಂತುಲನವನ್ನು ಸಾಧಿಸಬಲ್ಲ ಅದ್ಭುತ ಶಕ್ತಿಯನ್ನು ಕುರಿತು ಆವತ್ತು ಅವರು ಮನಮುಟ್ಟುವಂತೆ ವಿವರಿಸಿದ್ದರು. ಇದೇ ಮಾದರಿಯ ಅವರ ವಿಚಾರಧಾರೆ ವೈದೇಹಿಯವರು ಸಂಗ್ರಹಿಸಿ ಅನುವಾದಿಸಿರುವ, ಅಕ್ಷರ ಪ್ರಕಾಶನದವರು ಪ್ರಕಟಿಸಿರುವ ‘ಸಂಗೀತ ಸಂವಾದ’ ಕೃತಿಯಲ್ಲೂ ಹೊರಹೊಮ್ಮಿರುವುದನ್ನು ಕಾಣುತ್ತೇವೆ. ಇಲ್ಲಿಯೂ ಈ ಪಾಶ್ಚಾತ್ಯ ಸಂಗೀತ ಚರ್ಚೆಯಲ್ಲಿರುವ ವಸ್ತು.

`I hate this kind of music', said Anu and they grimaced at each other in shared pain.

`Have you heard the lyrics of some of this shit? They practice on our rooftop so I'm forced to listen. It's all so stupidly violent - kill someone, hate women, drive the devil into your soul. It's like they would be embarrassed if anything they sang had even a touch of decency to it.' (page 107-108)

`What is this metal fetish about anyway?' asked Shiva. `Swami, you say, you're one of those hardcore types.'

`It just feels good, that's all,' said Swami, his voice suddenly awkward. `It's the only way to protest.'

`Against?' asked Shiva.

`I don't know, man. Against the idea that one shouldn't protest.'

`Who says you shouldn't?'

`Everybody mostly keeps quiet when they see stuff happening. Or......or they don't say what they really think. If you listen to metal you can say what you really think.'

`That's a load of shit,' said Shiva.
(Page 113-114)

ಶಬ್ದದ ಮೋಹ ಮತ್ತು ಗದ್ದಲದ ಅಭೀಪ್ಸೆ ತುಂಬಿದ ಸಂಸ್ಕೃತಿಯಿದೆನ್ನುತ್ತಾನೆ ಶಿವಾ. ದೇವಸ್ಥಾನದಲ್ಲಿ ಎಕಾಏಕಿ ಗಂಟೆ-ಜಾಗಟೆ-ಶಂಖದ ಗದ್ದಲವನ್ನು ಎಬ್ಬಿಸಬಲ್ಲ ಹೊಸ ಯಂತ್ರದ ಬಗ್ಗೆ ಹೇಳುತ್ತ ಇದು, ಈ ಸದ್ದಿನ ಅವಾಂತರದ ಬಗ್ಗೆ, ಅದರಲ್ಲೂ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅವಾಂತರದ ಬಗ್ಗೆ ಯಾರಿಗೂ ಏನೂ ಅನಿಸುತ್ತಿಲ್ಲವಲ್ಲ ಎನ್ನುತ್ತಾನೆ.

ನಗರ ಇದು ಬೆಂಗಳೂರು. ಬೆಂಗಳೂರು ನಗರ ಈ ಕಾದಂಬರಿಯ ನಾಯಕ. ಹಾಗೆ ಹೇಳಿದರೆ ಅದು ಪೂರ್ತಿ ನಿಜವೇನಲ್ಲ. ವಿಚಿತ್ರವೆಂದರೆ ಕನ್ನಡದಲ್ಲೇ ಬೆಂಗಳೂರು ನಾಯಕನಾಗಿರುವ ಒಂದೇ ಒಂದು ಕಾದಂಬರಿ ಇಲ್ಲ! (ಅಥವಾ ಇದೆಯೆ? ನನಗೆ ಗೊತ್ತಿಲ್ಲ!) ನಮ್ಮ ಸಮಕಾಲೀನ ಕಾದಂಬರಿಕಾರರಲ್ಲಿ ಬೆಂಗಳೂರಿಗೆ ತೀರ ಅನ್ಯರಾಗಿರುವವರು ಯಾರೂ ಇಲ್ಲ. ಹಾಗೆ ನೋಡಿದರೆ ಬೆಂಗಳೂರಿನಲ್ಲೇ ನೆಲೆಯಾದವರು ಕೂಡ ತೀರ ಬೆಂಗಳೂರಿನವರೇ ಅಲ್ಲ. ಕಾದಂಬರಿಗಳನ್ನು ಮರೆತು ನಮ್ಮ ಸಣ್ಣಕತೆಗಳನ್ನು ಗಮನಿಸಿದರೆ, ತೀರ ಈಚಿನ ಕೆಲವು ನಾಟಕಗಳನ್ನು ಗಮನಿಸಿದರೆ, ಅಲ್ಲಿ ಬೆಂಗಳೂರು ಮೆರೆಯುವುದು ಮತ್ತೆ ಮತ್ತೆ ಕಾಣಿಸುತ್ತದೆ, ಇಲ್ಲವೆಂದಲ್ಲ. ಆದರೆ ಕನ್ನಡ ಕಾದಂಬರಿಯೊಂದರ ಹೀರೋ ಆಗುವುದಕ್ಕೆ ಬೆಂಗಳೂರಿಗೆ ಇನ್ನೂ ಸಾಧ್ಯವಾದಂತಿಲ್ಲ. ಹಾಗೆ ನೋಡಿದರೆ ಅಂಜುಂ ಹಸನ್ ಬೆಂಗಳೂರಿನವರಲ್ಲ, ದೂರದ ಶಿಲ್ಲಾಂಗ್‌ನವರು. ಸುದೀರ್ಘ ಕಾಲ ಬೆಂಗಳೂರಿನಲ್ಲೇ ನೆಲೆನಿಂತವರು ಮತ್ತು ಅವರೇ ಹೇಳುವ ಪ್ರಕಾರ ಅವರು ಈ ನಗರವನ್ನು ದ್ವೇಷಿಸಿಯೂ ಪ್ರೀತಿಸುವ ಒಬ್ಬ ನಿರೂಪಕಿಯ ಮೂಲಕ ನೋಡಲು ಸಾಧ್ಯವಾಗದೇ ಹೋಗಿದ್ದ ಪಕ್ಷದಲ್ಲಿ ಇದನ್ನು ಬರೆಯುತ್ತಲೇ ಇರಲಿಲ್ಲ.

ಮತ್ತೆ ಬೆಂಗಳೂರಿಗೆ ಬರುವ ಮನಸ್ಸಿಲ್ಲ ಎನ್ನುವ ಅಂಕಲ್ ರಾಕ್ ಕೊಡುವ ಕಾರಣವನ್ನು ನೋಡಿ:
"Something about the feel of the place - it's not right. I didn't get the right vibe. No one really has the time to have a conversation. And whether you are from Shillong or Assam or Nagaland.....the whole damn Northeast - it's all the same to them. They can't handle us - our strange names, our strange languages, our strange accents. And if someone happens to actually sit down with you, buy you a drink, wants to listen to your stories, his damn phone will ring. After this happened a few times, I said to myself - Unlce Rock's not coming this way again......."

(Page 183)

ನಮ್ಮ ಕತೆಗಾರರಿಗೂ ಕಾದಂಬರಿಕಾರರಿಗೂ ತಮ್ಮ ಬಾಲ್ಯ, ತಮ್ಮ ಹಳ್ಳಿ, ತಮ್ಮ ಊರಿನ ಹತ್ತಿರದ ಪಟ್ಟಣವೇ ಕೊನೆಗೂ ಆಪ್ಯಾಯಮಾನವಾದ ಕಥನ ಕ್ಷೇತ್ರವಾಗಿರುವುದನ್ನು ಕಾಣುತ್ತೇವೆ. ಚಿತ್ತಾಲರ ಹನೇಹಳ್ಳಿ ಇರುವಂತೆಯೇ ಧಾರವಾಡ, ಹುಬ್ಬಳ್ಳಿ, ಕಾರವಾರ, ಶಿರಸಿ, ಕುಮಟಾ, ಬಳ್ಳಾರಿ, ಮಂಡ್ಯ, ಶಂಕರಿ ನದಿಯ ಮೇಲಿನ ದುರ್ಗಾಪುರ, ತೀರ್ಥಹಳ್ಳಿಯ ನವಿಲೆಸರ, ಮಂಡ್ಯ-ಮೈಸೂರು, ಮೇಲುಕೋಟೆ, ಶಿವಾಪುರ, ಮಾಲ್ಗುಡಿಗಳಿವೆ. ಈ ಗಡಿಯೊಳಗೆ ಮುಂಬಯಿ ಕಾರಂತರಿಂದ ಹಿಡಿದು ಚಿತ್ತಾಲರನ್ನು ಹಾದು ಜಯಂತರ ವರೆಗೆ ನುಸುಳಿಕೊಂಡು ಕನ್ನಡವನ್ನೇ ಕನ್ನಡಿಸುತ್ತಿರುವುದನ್ನು ಕೂಡಾ ಕಂಡಿದ್ದೇವೆ. ಎಂ.ಎಸ್.ಶ್ರೀರಾಮ, ಕುಂವೀ ಕಡೆಯಿಂದ ಅಷ್ಟಿಷ್ಟು ಸಿಕಂದರಾಬಾದ್, ಆಂಧ್ರ ಬಂದರೆ, ರಾಮಾನುಜನ್, ಎಸ್.ದಿವಾಕರರಿಂದ ಮದರಾಸು ಕೂಡಾ ಹೀಗೆ ಕನ್ನಡವಾಗಿದೆ. ಈ ಬಾಲ್ಯದ ಅಥವಾ ಹಳೆಯ ನೆನಪುಗಳಲ್ಲಿ ಅದ್ದಿ ತೆಗೆದಂತಿರುವ ಗಾಢವಾದ ನಂಟೊಂದಿರುವ ಊರೊಂದರ ತುರ್ತು ಅಷ್ಟು ಸರಳವಾದದ್ದಲ್ಲ ಅನಿಸುತ್ತದೆ. ಇಲ್ಲಿಯೂ ಈ ಕಾದಂಬರಿಯ ನಾಯಕಿಗೆ ಸ್ವಸ್ಥವಾಗಿ ಕೂತು ಧೇನಿಸುವುದಕ್ಕೆ ಅಗತ್ಯವೋ ಎಂಬಂತೆ ಅವಳದೇ ಆದ ಪುಟ್ಟ ಊರು ಶಿಲ್ಲಾಂಗ್ ಇದೆ! ಅವಳು ಬೆಂಗಳೂರನ್ನು ನೋಡುತ್ತಿರುವ ದೃಷ್ಟಿಯಲ್ಲಿ ಬರೇ ದ್ವೇಷದ ಆಳದಲ್ಲಿರುವ ಪ್ರೀತಿಯಷ್ಟೇ ಇಲ್ಲ, ಅದರಲ್ಲಿ ತನ್ನ ಪುಟ್ಟ ಶಿಲ್ಲಾಂಗ್ ಕೊಡುತ್ತಿದ್ದುದನ್ನು ಕೊಡಲಾರದ ಬಗ್ಗೆ ತೀವ್ರ ವ್ಯಥೆಯೂ, ತನ್ನ ಶಿಲ್ಲಾಂಗ್ ಕೊಡಲು ಸೋತದ್ದನ್ನು ಕೊಡುತ್ತಿರುವ ಔದಾರ್ಯದ ಕುರಿತ ವಿಲಕ್ಷಣ ಪ್ರೀತಿ-ಹೆಮ್ಮೆ ಬೆರೆದ ಕೃತಜ್ಞತೆಯೂ ಇವೆ.

ಆದರೆ ಇಲ್ಲಿನ ಪ್ರಮುಖ ಸಮಸ್ಯೆ ಎಂದರೆ ಈ ಬೆಂಗಳೂರಿಗೆ ತನ್ನದೇ ಎನ್ನಬಹುದಾದ, ಬೇರೆ ಯಾವುದೇ ಸಿಟಿಗೆ ಇಲ್ಲದ ವಿಶಿಷ್ಟವೂ, ಪಾರಂಪರಿಕವೂ, ನಿರ್ದಿಷ್ಟವೂ ಆದ ಒಂದು ಆತ್ಮವೆಂಬುದು ಇದೆಯೆ ಎಂಬುದೇ. ಇದ್ದರೆ ಅದನ್ನು ನಮ್ಮ ಕಾದಂಬರಿಕಾರರು ಹಿಡಿಯಬೇಕು, ಭಾಷೆಯಲ್ಲಿ ಹಿಡಿದುಕೊಡಬೇಕು ಎಂಬುದು ಇಲ್ಲಿನ ನಿಜವಾದ ಸವಾಲು. ಅದು, ಹಾಗೆ ಹಿಡಿದುಕೊಟ್ಟ ಆತ್ಮ ಈ ಬಹುಪಾಲು ‘ಹೊರಗಿನ’ ಮತ್ತು ‘ಒಳಗಿನ’ ಮಂದಿಗೂ ಅರೆರೆ ಹೌದಲ್ಲ ಎನಿಸುವ ಅಚ್ಚರಿಯಾಗಿಯೂ ಉಳಿದಿರಬೇಕಾಗುತ್ತದೆ. ಯಾಕೆಂದರೆ ಸೃಜನಶೀಲ ಬರವಣಿಗೆ ಯಾವತ್ತೂ ಕಾಣುವುದರ ಮೂಲಕ ಕಾಣದಿರುವುದನ್ನು ಕಾಣಿಸುತ್ತಿರಬೇಕೆನ್ನುತ್ತಾರಲ್ಲ ಜಯಂತ್ ಕಾಯ್ಕಿಣಿ, ಹಾಗಿರಬೇಕಾಗುತ್ತದೆ. ಜಗತ್ತಿನ ಯಾವುದೇ ಸಿಟಿಯ ಯಾವುದೇ ಓದುಗನಿಗೆ ಇದು ತನ್ನ ಸಿಟಿಯ ಆತ್ಮವೂ ಆಗಿರುವುದರ ಬಗ್ಗೆ ಬೆಚ್ಚಗೆ ಚುಚ್ಚಿ ಎಚ್ಚರ ಹೇಳುವಂತೆ ಅದು ಇರಬೇಕಾಗುತ್ತದೆ. ಇಷ್ಟರ ಮೇಲೆ ಅಂಜುಂ ಹಸನ್ ಈ ಆತ್ಮವನ್ನು ಶೋಧಿಸುತ್ತಿರುವುದು, ತೆರೆದಿಡುತ್ತಿರುವುದು ಇಂಗ್ಲೀಷಿನಲ್ಲಿ, ಕನ್ನಡದಲ್ಲಲ್ಲ ಎನ್ನುವುದೂ ಇಲ್ಲಿ ಮಹತ್ವದ ಸಂಗತಿಯೇ. ಯಾಕೆಂದರೆ, ಕೆಲವೊಂದನ್ನ ನಾವು ಹೇಳುವ ಕ್ರಮ ಅದನ್ನು ನಾವು ಯಾರಿಗೆ ಹೇಳುತ್ತಿದ್ದೇವೆ ಎನ್ನುವುದರ ಮೇಲೆ ನಿಂತಿರುತ್ತದೆಯಲ್ಲವೇ?

ಈ ಕಾದಂಬರಿಯ ಪ್ರಮುಖ ಒತ್ತು ಇರುವುದು ಇಪ್ಪತ್ತರಿಂದ ಮುವ್ವತ್ತರೊಳಗಿನ ಒಂದು ತಲೆಮಾರನ್ನು ಕುರಿತು ಕಥಾನಕವನ್ನು ಹೆಣೆಯುವಲ್ಲಿ. ಹಾಗಾಗಿ ಇಲ್ಲಿ ಪ್ರಮುಖವಾಗಿ ಬರುವ ಸೋಫಿ ಮತ್ತು ಅವಳ ‘ಗ್ಯಾಂಗ್’- ಪ್ರೇಮಿಯಂತೆ ವರ್ತಿಸುವ ಸ್ವಾಮಿ, ಗೂಂಡಾ ತರ ವರ್ತಿಸುವ ರಿಂಗೋ, ಬಹುಬೇಗ ಸಿನಿಕ್ ಆಗುವ ಲಕ್ಷಣಗಳಿದ್ದೂ ಸದ್ಯ ರೆಬೆಲ್ ಶೈಲಿಯಲ್ಲಿ ವ್ಯವಹರಿಸುವ ಶಿವಾ, ವಿಪರೀತ ವೇಗದಲ್ಲಿ ತನ್ನ ಕನಸನ್ನು ಅಟ್ಟಿಸಿಕೊಂಡು ಹೊರಟವಳಂತೆ ಕಾಣುವ ಅನು, ಮನುಷ್ಯ ಸಂಬಂಧಗಳನ್ನು ತನ್ನ ಗೊಂದಲಗಳಿಗನುಗುಣವಾಗಿ ಕಗ್ಗಂಟಾಗಿಸಿಕೊಂಡವಳಂತಿರುವ ಮಾಯಾ - ಯಾರೂ ಸ್ವಸ್ಥ ಎನಿಸುವುದಿಲ್ಲ. ಹಾಗೆ ಅನಿಸುವುದು ಕೂಡಾ ಬೇರೊಂದು ಮೂಲದ ಹಿನ್ನೆಲೆಯಿಂದ ಬಂದ ಕಣ್ಣು-ನೋಟಗಳಲ್ಲಿಯೇ ಎಂಬುದನ್ನು ಮರೆಯಬಾರದು. ಬೆಂಗಳೂರಿಗೆ ‘ಸಹಜ’ವೇ ಆಗಿರಬಹುದಾದ ಈ ಎಲ್ಲ ಮಂದಿ ಇನ್ಯಾರದೋ ಮೂಲದ ಹಿನ್ನೆಲೆಯಲ್ಲಿ ‘ಅಸಹಜ’ ಅನಿಸುತ್ತಿರುವಾಗಲೂ ಅವರವರಿಗೆ ಇದ್ದೇ ಇರುವ ಒಂದೊಂದು ನವಿಲೆಸರ, ಹನೇಹಳ್ಳಿ, ಮೂಡಿಗೆರೆ, ಸಾಧನಕೇರಿ ಅಥವಾ ಶಿಲ್ಲಾಂಗ್‌ನಲ್ಲಿ ‘ಸಹಜ’ಕ್ಕೆ ಸಲ್ಲುವವರೇ ಆಗಿರಬಹುದಲ್ಲವೆ, ನಮ್ಮ ನಿಮ್ಮಂತೆ!


ನಗರದ ಬದುಕು ಸಂಘರ್ಷದ್ದು ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಏಕಕಾಲಕ್ಕೆ ಹಳತು-ಹೊಸತು, ಹಣ-ಮೌಲ್ಯ, ಸದ್ದುಗದ್ದಲ-ಮೌನ, ವೇಗ ಮತ್ತು ನಿತ್ರಾಣ, ಸವಾಲಿಗೆ ಎದೆವೊಡ್ಡುವ ಕೆಚ್ಚು ಮತ್ತು ಸೋಲಿನ ಭಯ, ದೇವರು ಮತ್ತು ಪಬ್ಬು, ಸಂಗೀತ ಮತ್ತು ಕೊಲೆ, ಹೊಡೆದಾಟ ಮತ್ತು ಧ್ಯಾನದಂಥ ನೂರಾರು ವೈರುಧ್ಯಗಳು ಒಂದಾದ ಮೇಲೊಂದರಂತೆ ಅಲ್ಲ, ಒಟ್ಟೊಟ್ಟಿಗೇ ಮನಸ್ಸಿನ ಮೇಲೆ ಧಾಳಿಯಿಡುವ ಜೀವನ. ಹಳ್ಳಿಯೊಂದು ಇದಕ್ಕೆ ತೀರಾ ಭಿನ್ನ ಎಂದೇನೂ ಅಲ್ಲ. ನಗರದಲ್ಲಿ ಅಪವಾದಗಳಿಲ್ಲವೆಂತಲೂ ಅಲ್ಲ. ಆದರೆ ಬದುಕಿನ ಪ್ರಧಾನ ಲಕ್ಷಣವೇ ಈ ಸಂಘರ್ಷ ಮತ್ತು ಅವುಗಳೊಂದಿಗೆ ಅನಿವಾರ್ಯವಾಗಿ ಏಗುವುದು ಎಂದು ಅನಿಸತೊಡಗುವಾಗ ತೀರ ಹೊಂದಿಕೊಂಡಿರುತ್ತೇವೆ! ಮತ್ತು ಇದು ನೋಡು ಈ ನಿಮ್ಮ ನಗರದ ಆತ್ಮ ಎಂದು ಯಾರಾದರೂ ಹೇಳಿದರೆ ಅದರಲ್ಲೇನೂ ವಿಶೇಷವೆನಿಸುವುದೂ ಇರುವುದಿಲ್ಲ. ಇದನ್ನೆಲ್ಲ ಇಟ್ಟುಕೊಂಡೇ ಇದರಾಚೆಯದಕ್ಕೆ ಕೈಚಾಚುವುದು ಕಾದಂಬರಿಯ ಗಮ್ಯ.

ಉದಾಹರಣೆಗೆ ಕಥಾನಕದ ನಿರೂಪಕಿ-ನಾಯಕಿಯಾಗಿರುವ ಸೋಫಿಗೆ ತಾನು ಶಿಲ್ಲಾಂಗ್‌ನಲ್ಲಿ ಬಿಟ್ಟು ಬಂದ ತಂದೆ ದಾಸ್, ತಾಯಿ, ತಂಗಿ ಮುಕುಲಿಕಾ ಅಲ್ಲದೆ ಹೇಳಲಾಗದ ಕಾರಣಗಳಿಗೆ ಮನಸ್ಸಿನಲ್ಲಿ ನಿಂತುಬಿಟ್ಟಂತಿರುವ ರಿಬೋರ್ ಮುಂತಾದವರಿಗೆ ಸೇರಿದ ಒಂದು ಜಗತ್ತಿದೆ. ಈ ಜಗತ್ತು ತನ್ನದೇ ಆದ ರೀತಿಯಲ್ಲಿ ಆಗಾಗ ಬೆಂಗಳೂರಿನಲ್ಲೂ ಅವಳ ನೆಮ್ಮದಿ ಕೆಡಿಸುತ್ತಿದೆ. ಅವಳ ಆಫೀಸಿನಲ್ಲೂ ಸಮಸ್ಯೆಗಳಿವೆ. ಮಾಯಾ, ನವೋಮಿ, ಶಾಂತಿ ಇವರ ನಡುವಿನ ಸಂಬಂಧಗಳ ಗೊಂದಲ ಉದ್ಯೋಗದ ಭವಿಷ್ಯದ ವರೆಗೂ ಚಾಚುತ್ತದೆ. ಇನ್ನು ಅವಳ ಪ್ರೇಮಿಯಂತಿರುವ ಸ್ವಾಮಿ ಕೂಡಾ ಎಡಬಿಡಂಗಿಯ ತರ ಕಾಣಿಸುತ್ತಿದ್ದಾನೆ. ಅವನ ಕಾಲ್‍ಸೆಂಟರ್ ಉದ್ಯೋಗ, ಕಾರು-ಸೈಟಿನ ಕನಸು, ಸಾಲದ ಹಿಂದೆ ಓಡುವ ಹುನ್ನಾರ ಇತ್ಯಾದಿಗಳು ಸೋಫಿಯ, ಅವಳು ಕನಸುವ ಬದುಕಿಗೆ ತಾಳೆಯಾಗುತ್ತಿಲ್ಲ. ಸಾಲದಿದ್ದರೆ ಮನೆ ಬಾಡಿಗೆ ಕೊಟ್ಟಿರುವ ಭಟ್ ಮನೆಯವರದೇ ಒಂದು ತರಲೆ. ಅವರಿಗೆ ಸೋಫಿಯ ಸ್ವತಂತ್ರ ಮನೋವೃತ್ತಿಯ, ಖುಶಿ ಬಂದಂತೆ ಬದುಕುವ, ತನಗೆ ಇದೀಗ ಶಿಲ್ಲಾಂಗ್‌ನಿಂದ ಹೊರಗೆ ಬಂದಿದ್ದೇ ದಕ್ಕಿದ ಸ್ವಾತಂತ್ರ್ಯವನ್ನು ಪೂರ್ತಿಯಾಗಿ ಅನುಭವಿಸುವ ಉತ್ಸಾಹವುಳ್ಳ ಜೀವನ ಶೈಲಿಯ ಬಗ್ಗೆ ಅವ್ಯಕ್ತ ಭಯವಿದೆ. ಅವಳ ಸಿಗರೇಟು, ಬಿಯರ್ ಬಾಟಲುಗಳು, ಎಲ್ಲರಿಗೂ ಕಾಣಿಸುವಂತೆ ಒಣಹಾಕಿದ ಒಳಚಡ್ಡಿ, ಸತ್ಸಂಗಕ್ಕೆ ಬಿಯರ್ ಬಾಟಲುಗಳ ಸಮೇತ ಬಂದಿದ್ದೂ ಅಲ್ಲದೆ ಅಲ್ಲೇ ಅಜಾಗರೂಕತೆಯಿಂದ ಅವನ್ನು ಒಡೆದು ಹಾಕಿ ಗಲಾಟೆ ಎಬ್ಬಿಸಿದ್ದು ಇತ್ಯಾದಿಗಳಲ್ಲಿ ಒಂದನ್ನೂ ಸಹಿಸಲು ಸಾಧ್ಯವಿಲ್ಲ ಎನ್ನುವ ಚಿನ್ನಪ್ಪನಂಥ ಧಾರ್ಮಿಕ ವಕ್ತಾರರ ಒತ್ತಡ ಬೇರೆ ಭಟ್ ಮೇಲಿದೆ. ಸೋಫಿಯ ‘ಗ್ಯಾಂಗು’ ಕೂಡಾ ಇನ್ನಿಲ್ಲದ ಲಫಡಾಗಳಲ್ಲಿ ಬೇಕಿದ್ದೋ ಬೇಡವಿದ್ದೋ ಸಿಲುಕಿಕೊಳ್ಳುತ್ತಲೇ ಇರುತ್ತದೆ. ಇಷ್ಟರ ಮೇಲೆ ಶಿಲ್ಲಾಂಗ್‌ನಿಂದ ಬಂದ ಸೋಫಿ ಇಲ್ಲಿಯ ಬಹುತೇಕಕ್ಕೆ ಹೊಂದಿಕೊಂಡು, ತನ್ನನ್ನು ತಾನು ಹೊಂದಿಸಿಕೊಂಡು ಬದುಕಿನ ಸವಾಲನ್ನು ಉತ್ತರಿಸಬೇಕಿದೆ. ಎಲ್ಲವೂ ಸೃಷ್ಟಿಸುವ ಒತ್ತಡವನ್ನು ಅವಳು ಮೌನವಾಗಿ ಎದುರಿಸಿದರೂ ಕೆಲವೊಂದು ವಿಚಾರಗಳಲ್ಲಿ ಅವಳಿಗೆ ‘ಆಯ್ಕೆ’ಗಳೇ ಇರುವುದಿಲ್ಲ ಎನ್ನುವುದು ಗಮನಿಸಲೇ ಬೇಕಾದ ಸಂಗತಿ. ಇದು ‘ಹೊರಗಿನಿಂದ’ ಬಂದು ಸೆಟ್ಲ್ ಆಗಲು ಒದ್ದಾಡುತ್ತಿರುವವರಿಗೆ ಒಳಗಿನವರಿಗಿಂತ ಹೆಚ್ಚಾಗಿ ಇನ್ನುಳಿದ ‘ಹೊರಗಿ’ನವರಿಂದಲೇ ಎದುರಾಗುವ ಒತ್ತಡ ಎನ್ನಬೇಕು, ಕಾದಂಬರಿಯ ಮಟ್ಟಿಗಾದರೂ. ಇವನ್ನೆಲ್ಲ ಎದುರಿಸುತ್ತಲೇ ಬದುಕನ್ನು ರೂಪಿಸಿಕೊಳ್ಳುವುದು ಒಂದು ಕಾಲ-ದೇಶದ ಚೌಕಟ್ಟಿನೊಳಗೆ, ಅದರದೇ ವೇಗ-ಆವೇಗ-ಗಾತ್ರದಲ್ಲಿ ಕೂರಲು ಒಪ್ಪಿಕೊಳ್ಳದ ಸವಾಲಾಗಿ ಬಿಡುತ್ತದೆ. ಏನಾದರೂ ಮಾಡಬೇಕು ಎಂದು ಅಂದುಕೊಳ್ಳುತ್ತಿರುವಾಗಲೇ ದಿನಗಳು ಓಡುತ್ತವೆ, ಎಲ್ಲ ಬದಲಾಗಿ ಬಿಡುತ್ತದೆ! ಮನುಷ್ಯ out dated ಆಗುವುದು ಹೆಚ್ಚುತ್ತದೆ ಮತ್ತು ಈ ಆತಂಕ ಕೂಡಾ ಉಳಿದೆಲ್ಲದರ ಜೊತೆ ಸೇರಿಕೊಂಡು ಬೆದರಿಸತೊಡಗುತ್ತದೆ.

ಮನುಷ್ಯನ ದುರಂತಗಳಿಗೆ ಅವನ ನಗರದ ದುರಂತಗಳು ಕಾರಣವೆ ಎನ್ನುವಾಗ ಜಾಗತೀಕರಣ, ಅಭಿವೃದ್ಧಿ, ಆಧುನಿಕತೆ, ಅಮೆರಿಕಾ ಎಲ್ಲವೂ ಸೇರಿದೆ ಅದರಲ್ಲಿ.

ಕಾದಂಬರಿಯ ಉತ್ತರಾರ್ಧ ಈ ಬೆಂಗಳೂರಿನ ಚೌಕಟ್ಟಿನ ಹೊರಗೆ, ಶಿಲ್ಲಾಂಗ್‌ನಲ್ಲಿ ಕೇಂದ್ರೀಕೃತವಾಗಿದೆ. ಅದೇನೋ ಒಂಥರಾ ಸಮಾಧಾನ ಕೊಡುತ್ತದಪ್ಪ, ಯಾಕೋ! ಇದ್ದಕ್ಕಿದ್ದಂತೆ ಸೋಫಿಗೆ ‘ಅದು’ ಸ್ವಾಮಿಯಲ್ಲ, ರಿಬೋರ್ ಅನಿಸತೊಡಗುವುದು ಮತ್ತು ಈ ರಿಬೋರ್ ಪ್ರಶ್ನೆ ಹೆಚ್ಚು ಸಂಕೀರ್ಣವಾಗಿರುವುದು ಗಮನಿಸಬೇಕಾದ ಸಂಗತಿ. ಹಾಗೆ ನೋಡಿದರೆ ರಿಬೋರ್ ವಯಸ್ಸು, ವಿದ್ಯೆ, ಆಸಕ್ತಿ, ವೃತ್ತಿ, ಪ್ರವೃತ್ತಿ ಯಾವುದರಲ್ಲೂ ಸೋಫಿಗೆ ಸರಿ ಜೊತೆಯಲ್ಲ. ಮೇಲಾಗಿ ಶಿಲ್ಲಾಂಗಿಗೆ ಅವನು ಒಳಗಿನವನು ಮತ್ತು ಸೋಫಿ ಹೊರಗಿನವಳು! ಆದರೂ ಒಂದು ಬಗೆಯ ತುಡಿತ-ತಲ್ಲಣ ಅವಳಲ್ಲಿ ಜಾಗೃತವಾಗುವುದು ನಿಜ. ಇದನ್ನು ಸ್ವಲ್ಪ ಗಾಢವಾಗಿ ಅರ್ಥಮಾಡಿಕೊಳ್ಳಲು ಅಂಥದ್ದೇ ಮನಸ್ಥಿತಿ ಮತ್ತು ಪ್ರೀತಿ ಕೆಲವೊಮ್ಮೆ ವ್ಯರ್ಥ ಹಪಹಪಿಕೆಯಾಗಿ ಬಿಡುವುದರ ಅನುಭವ ಇರಬೇಕಾಗುತ್ತದೇನೊ!

ಪ್ರೊಫೆಸರ್ ದಾಸ್‌ಗೆ ತಾನು ಸಾಯುವ ಮೊದಲು, ರಿಟೈರ್ ಆಗುವ ಮೊದಲು ಕನಿಷ್ಠ ಒಂದು ವರ್ಷದ ಮಟ್ಟಿಗಾದರೂ ಯೂನಿವರ್ಸಿಟಿಯ ಪ್ರೊಫೆಸರ್ ಅನಿಸಿಕೊಳ್ಳಬೇಕೆಂಬ ಮಹದಾಸೆಯಿದೆ. ಅದು ಸಹಜವಾದದ್ದು ಯಾಕೆಂದರೆ ಅಂಥ ಒಂದು ಕನಸನ್ನು ಇನ್ನೇನು ಸಾಧ್ಯವಾಯಿತು ಅನಿಸುವ ಹಂತದಲ್ಲಿದ್ದಾಗ ಅವರಿಂದ ಕಿತ್ತುಕೊಳ್ಳಲಾಗಿದೆ. ಆ ನೋವು ಅವರನ್ನು ಇನ್ನೂ ಕಾಡುತ್ತಿದೆ. ಹೈಸ್ಕೂಲು ಮೇಷ್ಟ್ರಾಗಿ ಅವರಿಗೆ ಹೊಂದಿಕೊಳ್ಳುವುದು ಎಂದಿಗೂ ಸಾಧ್ಯವಾಗಿಲ್ಲ. ಔದ್ಯೋಗಿಕ ರಂಗದ ಈ ಸೋಲು ಅವರನ್ನು ಎಷ್ಟು ಅಲ್ಲಾಡಿಸಿಬಿಟ್ಟಿದೆ ಎಂದರೆ ಅಂದಿನಿಂದಲೂ ಪತ್ನಿಯನ್ನು, ಆ ಸುಮಾರಿಗೆ ಹುಟ್ಟಿದ ಎರಡನೆಯ ಮಗಳನ್ನು ಮತ್ತು ಸ್ವತಃ ತನ್ನನ್ನೇ ತಾನು ಅರೆಮನಸ್ಸಿನಿಂದ, ಅನ್ಯಮನಸ್ಕನಂತೆ, ಎಲ್ಲೋ ಕಳೆದು ಹೋದವನಂತೆ ಕಾಣುತ್ತ ಬಂದಿದ್ದಾರೆ ಅವರು. ಅದೀಗ ಒಂದು ಗಂಭೀರ ಸ್ವರೂಪ ಪಡೆದಿದ್ದು ತಾನೊಬ್ಬನೇ ಎಲ್ಲರನ್ನೂ, ಎಲ್ಲವನ್ನೂ ಬಿಟ್ಟು ಶಾಂತಿನಿಕೇತನಕ್ಕೆ ಹೋಗಿ ನೆಲೆಸುವ ನಿರ್ಧಾರಕ್ಕೆ ಬರುವಂತೆ ಮಾಡಿದೆ. ಆದರ್ಶದ ಚಿಪ್ಪಿನೊಳಗೆ ಸ್ವಾರ್ಥ ನುಸುಳಿ ತಾನೇ ಚಿಪ್ಪಾಗಿ ಎದ್ದು ನಿಲ್ಲುವುದು ಒಂದು ಸಂಕೀರ್ಣ ಪ್ರಕ್ರಿಯೆ, ಮನುಷ್ಯನ ಔದಾರ್ಯದ ದುರಂತಕ್ಕೆ ಸಂಬಂಧಿಸಿದ್ದು. ಅದೀಗ ಇಲ್ಲಿ ಸಂಭವಿಸಿದೆಯೆ?

ಮನುಷ್ಯ ತಾನು ಎಷ್ಟು ಸ್ವಾರ್ಥಿಯಾಗಿದ್ದೇನೆ ಎನ್ನುವುದನ್ನು ಕಂಡುಕೊಳ್ಳಲು ಸೋಲುತ್ತಾನೆ. ತಾನು ತನಗಾಗಿ ಮಾಡುತ್ತಿರುವುದನ್ನೂ ಬೇರೆಯವರಿಗಾಗಿ ಮಾಡುತ್ತಿರುವುದೆಂಬಂತೆ ತೋರಿಸುವಲ್ಲಿಯೇ ಆತ ಉತ್ಸುಕತೆ ತೋರಿಸುತ್ತಾನೆ. ಆದರೆ ತಾನು ಮಾಡುತ್ತಿರುವುದು ತನಗಾಗಿ ಎಂಬ ಸತ್ಯದಿಂದ ಸ್ವತಃ ತಾನೇ ಕಣ್ಣು ಮುಚ್ಚಿಕೊಳ್ಳುತ್ತಾನೆ. ಸೋಫಿಯ ತಂದೆ ತಾಯಿ ಇಬ್ಬರ ವರ್ತನೆಯೂ ನಮ್ಮಲ್ಲಿ ಮೂಡಿಸುವ ಭಾವ ಇದೇ. ತಾಯಿಗೂ ಸಹಜವಾಗಿಯೇ ತನ್ನ ಗಂಡನ ಈ ವಿಚಿತ್ರ ಅನ್ಯಮನಸ್ಕತೆ, ನಿರ್ಲಕ್ಷ್ಯ, ವರ್ಷಾನುಗಟ್ಟಲೆಯಿಂದ ಬದುಕು ಮುಗಿದವರ ತರ ಬದುಕುತ್ತಿರುವ ವಿಧಾನ ಸಾಕಷ್ಟು ಹೈರಾಣಾಗಿಸಿದೆ. ಸಾಲದಿದ್ದರೆ ವಯಸ್ಸಿಗೆ ಬಂದ ಇಬ್ಬರೂ ಹೆಣ್ಣುಮಕ್ಕಳು ಅವಳ ಮಾತು ಕೇಳುತ್ತಿಲ್ಲ. ಒಬ್ಬಳು ಮದುವೆಯಾಗುತ್ತಿಲ್ಲ, ಇನ್ನೊಬ್ಬಳು ತೀರಾ ಮುಂದುವರಿದು ಬಿಟ್ಟಿದ್ದಾಳೆ! ಹೆತ್ತವರ ವಿರೋಧ ಕಟ್ಟಿಕೊಂಡು ಈ ದಾಸ್ ಎಂಬ ಮನುಷ್ಯನಿಗಾಗಿ ಅವಳು ಎಲ್ಲಾ ಸಿರಿ ಸಂಪತ್ತು ಬಿಟ್ಟು, ಕೊನೆಗೆ ಊರು-ದೇಶವನ್ನೂ ಬಿಟ್ಟು ಈ ಶಿಲ್ಲಾಂಗ್‍ಗೆ ಬಂದಿದ್ದಳು. ಮಕ್ಕಳಿಗೆ ಒಂದು ಪಾರಂಪರಿಕ ಶಿಸ್ತು-ಸಂಸ್ಕಾರ ಕೊಡಲಾರದ ಕೊರಗು ಅವಳಿಗಿದ್ದೇ ಇತ್ತು. ಅದು ಈಚೆಗೆ ಹೆಚ್ಚಾಗಿದೆ. ದಾಸ್‌ಗೆ ಹೇಗೆ ಈಗ ಇದ್ದಕ್ಕಿದ್ದ ಹಾಗೆ ತಾನು ಇಪ್ಪತ್ತೈದು ವರ್ಷಗಳಿಗೂ ಹಿಂದೆ ಬಿಟ್ಟುಬಿಟ್ಟಿದ್ದ ಬಂಗಾಲಿಯ ಮೋಹ ಮರುಕಳಿಸಿ ಕಾಡತೊಡಗಿದೆಯೋ ಹಾಗೆಯೇ ಈಕೆಗೆ ಈಗ ತನ್ನವರ, ತನ್ನ ಹೆತ್ತವರ ಧರ್ಮ-ಕರ್ಮ ಸಂಯೋಗದ ನಿಲುವು-ನಿರ್ಧಾರ-ನಿಷ್ಠುರಗಳೆಲ್ಲ ಭಗವದ್ಗೀತೆಯ ಹಿನ್ನೆಲೆಯಲ್ಲಿ ಹೊಸ ಹೊಳಪಿನಲ್ಲಿ ಹೊಸ ಅರ್ಥದೊಂದಿಗೆ ಕಾಣಿಸತೊಡಗಿದೆ, ಅರ್ಥವಾಗತೊಡಗಿದೆ! ತನ್ನ ಸಾವಿನ ಸುದ್ದಿಯನ್ನು ಮಗಳಿಗೆ ತಲುಪಿಸುವ ಕಕ್ಕುಲಾತಿಯನ್ನು ತೋರಿಸಿದ ಅದೆಲ್ಲೋ ಕಂಡು ಕೇಳಿ ಅರಿಯದ ವಿದೇಶದಲ್ಲಿದ್ದ ತನ್ನ ತಾಯಿಯ ಕಳ್ಳು ಬಳ್ಳಿ ಸಂಬಂಧ ಇದೀಗ ಹೀಗೆ ಸಾವಿನ ನಂತರ ಇದ್ದಕ್ಕಿದ್ದಂತೆ ಚಿಗುರಿ ಕೊರಡು ಕೊನರಿಬಿಟ್ಟಿದೆ. ಅದೆಲ್ಲದರ ಹಿನ್ನೆಲೆಯಲ್ಲಿ ತಾನು ಇಷ್ಟೆಲ್ಲ ವರ್ಷ ಈ ದಾಸ್ ಜೊತೆ ಎದ್ದು ಬಿದ್ದು ತೇಕಿ ಜೀವ ತೇಯ್ದುದರ ಅರ್ಥಹೀನತೆಯೂ ಕಣ್ಣಿಗೆ ಕಟ್ಟತೊಡಗಿದೆ, ಅಗತ್ಯಕ್ಕಿಂತ ಸ್ವಲ್ಪ ಹೆಚ್ಚೇ. ಹಾಗಾಗಿ ಆಕೆಯೂ ತಾನೊಬ್ಬಳೇ ಬನಾರಸ್‌ಗೆ, ಎಲ್ಲರೂ ತಾವು ಸಾಯುವುದಕ್ಕಾಗಿಯೇ ಎಂಬಂತೆ ಆರಿಸಿಕೊಳ್ಳುವ ಬನಾರಸ್‌ಗೆ ಹೋಗಿ ನೆಲೆಯಾಗುವ ಹವಣಿಕೆಯಲ್ಲಿದ್ದಾಳೆ.

ಈ ಇಬ್ಬರ ನಡುವೆ ಇದ್ದೂ ಇಲ್ಲದಂತೆ ಸೋಫಿ ಇದ್ದಾಳೆ ಮತ್ತು ‘ಇದ್ದಾಗ ಇದ್ಧಾಂಗ’ ಇರುವ ಮುಕುಲಿಕಾ ಕೂಡ ಇದ್ದಾಳೆ. ಇವರಿಬ್ಬರಿಗೂ ಅವರವರದೇ ಆದ ಗಮ್ಯಗಳಿವೆ ಮತ್ತು ಇಬ್ಬರೂ ಉಳಿದಿಬ್ಬರಂತೆ ತಾವೂ ಇದುವರೆಗಿನ ತಮ್ಮ ಬದುಕಿನಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದ ಯಾವುಯಾವುದೋ ವಸ್ತುವಿನಿಂದ ಭ್ರಮನಿರಸನಗೊಂಡು ವಾಪಾಸ್ಸಾದವರೇ.

ಈ ನಾಲ್ವರ ವಯೋಮಾನ, ಜೀವನಾನುಭವ ಮತ್ತು ಬದುಕಿನ ಆದ್ಯತೆಗಳು ವಿಭಿನ್ನ. ಸೋಫಿ ಒಂದು ವರ್ಷದಷ್ಟು ಕಾಲ ಬೇರೆಯೇ ಜಗತ್ತು ಎನ್ನಬಹುದಾದ ( ಹೇಗೆ ಶಿಲ್ಲಾಂಗ್ out of India ಮತ್ತು ಬೆಂಗಳೂರಿನಲ್ಲಿ ಹೇಗೆ ತಾನು part of India ಎಂಬ ಭಾವವನ್ನು ಅನುಭವಿಸಿದೆ ಎಂದು ಸೋಫಿಯೇ ಒಂದೆಡೆ ಹೇಳಿಕೊಳ್ಳುತ್ತಾಳೆ) ಬೆಂಗಳೂರಿನಂಥ ನಗರದಲ್ಲಿದ್ದು ಬಂದವಳು. ಇಲ್ಲಿ ಕಾಲಮಾನಕ್ಕಿಂತಲೂ ಈ ಸೀಮೋಲ್ಲಂಘನದ ಪ್ರಕ್ರಿಯೆ ಹುಟ್ಟಿಸಿದ ತಲ್ಲಣ, ತಳಮಳ, ಸಂಘರ್ಷಗಳೊಂದಿಗೆ ಅವಳು ಸಾಧಿಸಿದ ಹೊಂದಾಣಿಕೆಗಳೇ ಮುಖ್ಯವಾದದ್ದು. ಮುಕುಲಿಕಾ ಕೂಡ ಊಹಾತೀತ ಉಲ್ಲಂಘನೆಯೊಂದರ ಅನುಭವದಿಂದ ಬದುಕಿನ ಕುರಿತ ದೃಷ್ಟಿಕೋನವನ್ನೇ ಬದಲಿಸಿಕೊಳ್ಳುವ ಸಂದರ್ಭ ಸೃಷ್ಟಿಯಾಗುತ್ತದೆ. ಹೀಗೆ ನಾಲ್ವರೂ ಒಂದು ಸಂಧಿಕಾಲದಲ್ಲಿ, ಸಂಕ್ರಮಣ ಘಟ್ಟದಲ್ಲಿ ನಿಂತು ‘ನೇತಿ, ನೇತಿ’ ಎಂಬ ಕಂಗಾಲಿನಲ್ಲಿ ಕಣ್ಣುಕಣ್ಣು ಬಿಡುವ ಸ್ಥಿತಿಯಿದೆಯಲ್ಲ, ಅದು ನಗರ ಪ್ರಜ್ಞೆಯ ಸಂಘರ್ಷಗಳು ಹುಟ್ಟಿಸುವ ತಲ್ಲಣಗಳಿಂದ ತೀರ ಭಿನ್ನವಾದುದಲ್ಲ ಎನ್ನುವಲ್ಲಿಯೇ ಶಿಲ್ಲಾಂಗ್ ಬೆಂಗಳೂರಿನೊಂದಿಗೆ ಅನುಸಂಧಾನಗೊಳ್ಳುತ್ತಿದೆ. ಹಾಗೆ ನೋಡಿದರೆ ಗೋಪಾಲ ಕೃಷ್ಣ ಅಡಿಗರು ಹೇಳಿದ ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನಾ’ ಎನ್ನುವ ಮಾತಿನಲ್ಲೂ ಇರುವ ಸತ್ಯ ಇದೇ. ಆದರೆ ಇಲ್ಲಿನ ಹಪಹಪಿಕೆಗಳು ಅಷ್ಟೇ ಅನಿಸುವುದಿಲ್ಲ ಎಂಬುದು ನಿಜ. ಬಹುಷಃ ನಮ್ಮ ತಲೆಮಾರಿನ ಹೊಸ ಹೊಸ ಅಸಂತೃಪ್ತಿಯ ಮೂಲಗಳು ಬರೇ ಇರದುದರೆಡೆಗೆ ತುಡಿಯುವ ಜೀವನ್ಮುಖಿ ಧೋರಣೆಯ ಚೌಕಟ್ಟಿಗೆ ಮೀರಿದವು ಅಂತ ಕಾಣುತ್ತದೆ.

ಶಿಲ್ಲಾಂಗ್‌ನಲ್ಲೊಬ್ಬಳು ಕಿಲ್ಲರ್ ಕ್ವೀನ್ ಇದ್ದಾಳೆ. ಅವಳು ತಾನೊಂದು ಗಾರ್ಡನ್ ಪಾರ್ಟಿ ಎರೇಂಜ್ ಮಾಡುತ್ತಿದ್ದೇನೆ, ನೀನು ಬಾ ಎಂದಾಗ ಸೋಫಿ ಮತ್ತದು ಎಲ್ಲಿ ಕೊನೆಯಾಗುತ್ತದೆ ಎಂದರೆ ಅದು ಕೊನೆಯ ಪುಟದಲ್ಲಿ ಕೊನೆಯಾಗುತ್ತದೆ ಎನ್ನುತ್ತಾಳೆ. ಹುಚ್ಚಿಯ ಮಾತಿದೆಂದು ಸೋಫಿ ತಳ್ಳಿ ಹಾಕುವುದಿಲ್ಲ. ಅದು ಕೊನೆಯಪುಟದಲ್ಲಿ ಕೊನೆಯಾಗುತ್ತದೆ ಎಂದ ಅವಳ ಮಾತೂ ಪೂರ್ತಿ ಸತ್ಯವಲ್ಲ, ಅದಕ್ಕೆ ಕೊನೆಯೆಲ್ಲಿದೆ, ಕೊನೆಯ ಪುಟದಲ್ಲೂ ಅದು ಹೊಸದೊಂದಕ್ಕೆ ಸುರುವಿಟ್ಟುಕೊಳ್ಳುವ ಧಾವಂತದಲ್ಲಿಯೇ ಇರುವುದಲ್ಲವೆ ಎಂದು ಧೇನಿಸುತ್ತಿದ್ದಾಳೆ ಸೋಫಿ. ಇದೇ ಕಿಲ್ಲರ್ ಕ್ವೀನ್ ಒಮ್ಮೆ ಬೀದಿಯಿಂದಲೇ ‘ಅಲ್ಲೇನು ಮಾಡ್ತಿದ್ದೀ ಹಾಗೆ ನಿತ್ಕೊಂಡು ನೋಡ್ತಾ?’ ಎಂದಿದ್ದೇ ಅದನ್ನು ತನ್ನ ಕ್ರಿಯಾಹೀನ ದಿನಗಳನ್ನು ಕುರಿತು ಆಡಿದ್ದೆಂದು ಸ್ವೀಕರಿಸಿದ ಸೋಫಿ ಶಿಲ್ಲಾಂಗ್ ಬಿಟ್ಟು ಹೊರಗೆ ಹೋಗುವುದಕ್ಕೆ ಪ್ರೇರಣೆ ಪಡೆಯುತ್ತಾಳೆ. ಆದರೆ ಈಗ ಅವಳಿಗೆ ಅರಿವಾಗಿದೆ. ಅವಳಿಗೆ ಅದು ಸ್ವಾಮಿಯೂ ಅಲ್ಲ, ರಿಬೋರ್ ಕೂಡ ಅಲ್ಲ; ಮೇಡಂ ಬವರಿಯೂ ಅಲ್ಲ ವಿವೇಕಾನಂದ ಸ್ವಾಮಿಯೂ ಅಲ್ಲ; ರಿಂಗೊಸಾರ್-ರುಕ್ಸಾನಾರೂ ಅಲ್ಲ ಶಿವಾ-ಅನೂ ಕೂಡ ಅಲ್ಲ ಎಂದೆಲ್ಲ ಅನಿಸತೊಡಗಿದೆ. ಈ ಅರಿವಿಗೆ ತಂದೆ - ತಾಯಿಯ ಒಂಟಿತನದ ಹೊಸ ಬಯಕೆಯ ತುಡಿತಗಳೂ ಕಾರಣವಾಗಿವೆ. ಮುಕುಲಿಕಾಳ ವಿಫಲ ಹೊಯ್ದಾಟಗಳ ಫಲಶ್ರುತಿಯೂ ಕಾರಣವಾಗಿದೆ. ಅಂಕಲ್ ರಾಕ್ ಮತ್ತು ಮ್ಯಾಕ್ಸ್ ತರದ ಮಂದಿಯ ಜಿದ್ದಾಜಿದ್ದಿ ಕೂಡ ಕಾರಣವಾಗಿದೆ.

ಹಾಗೆ ನೋಡಿದರೆ ಮತ್ತೆ ಮತ್ತೆ ಹಾಗೆ ಎಲ್ಲವನ್ನೂ ನಿಚ್ಛಳವಾಗಿಸಿಕೊಳ್ಳುವುದಕ್ಕೆ, ಆಗಿಸಿಕೊಂಡು ಕಾಣುವುದಕ್ಕೆ ಬೇಕಾದ ಒಂದು ಮನಸ್ಥಿತಿ, ಒಂದು ಸ್ವಸ್ಥಚಿತ್ತ, ವಿಕಲ್ಪರಹಿತ ದೃಷ್ಟಿ - ಗಳಿಗಾಗಿ ಎಲ್ಲರಿಗೂ ಒಂದು ಶಿಲ್ಲಾಂಗ್, ಒಂದು ಹನೇಹಳ್ಳಿ ಅಗತ್ಯವೆ ಎನ್ನುವ ಪ್ರಶ್ನೆಯಿದೆ. ಇದಕ್ಕಿಂತ ಮಹತ್ವದ್ದಾಗಿ, ಸೋಫಿ ನೇತಿ-ನೇತಿ ಎನ್ನುತ್ತಲೇ ಹೊಸದನ್ನು ಪ್ರಯತ್ನಿಸುವ, ಹೊಸದಕ್ಕೆ ತುಡಿಯುವ, ಮತ್ತೆ ಇನ್ನೇನನ್ನೋ ಕುರಿತು ಹೊರಡುವ ಉತ್ಸಾಹವನ್ನು ಕಳೆದುಕೊಂಡಿಲ್ಲ ಎನ್ನುವುದು ಕಾಣುತ್ತದೆ. ಮನುಷ್ಯನ ಹಂಬಲಗಳ ಅಲೆಗಳು ಈ ನೇತಿನೇತಿಯ ನಕಾರಾತ್ಮಕ ದಡವನ್ನು ಮುಟ್ಟಿಯೂ ಮತ್ತೆ ಮತ್ತೆ ಏಳುತ್ತಿವೆ, ಅವನ ಉತ್ಸಾಹದ ಕಡಲು ಉಕ್ಕುತ್ತಿವೆ, ಸಾಧಿಸುವ ಕೆಚ್ಚು ಅಬ್ಬರಿಸಿ ಮೊರೆಯುತ್ತಿದೆ. ‘ಮೊಳೆಯದಲೆಗಳ ಮೂಕ ಮರ್ಮರ’ ಮತ್ತೆ ‘ನೇತಿ’ಗೆ, ನಕಾರಾತ್ಮಕ ನೆಲೆಗೆ ಹಾಯುತ್ತಿಲ್ಲ, ಹಾಯದುಳಿಯಬಹುದು ಎಂಬ ಆಶಾವಾದವಿದೆ ಅವಳಲ್ಲಿ.

ಒಂದು ಹಂತದಲ್ಲಿ ದೇವರ ಧ್ಯಾನ-ಪ್ರಾರ್ಥನೆಯಲ್ಲಿ ತೊಡಗಿದ್ದ ತನ್ನ ತಾಯನ್ನು ಕಾಣುತ್ತಾ ಸೋಫಿ ಯೋಚಿಸುತ್ತಾಳೆ. ಈ ತಾಯಿ ಏನನ್ನು ಪ್ರಾರ್ಥಿಸುತ್ತಿರಬಹುದು! ದೇವರು, ಪ್ರೀತಿ, ಸಾವು ಯಾವುದರ ಕುರಿತೂ ಧೇನಿಸದ, ಬದಲಿಗೆ ಬದುಕಿನುದ್ದಕ್ಕೂ ದೈನಂದಿನಗಳಲ್ಲೇ ತನ್ನ ಭರವಸೆಗಳನ್ನು ನೆಟ್ಟ ಈ ತಾಯಿಗೆ ಯಾವುದೂ ಬಾಧಿಸಲಾರದೇನೊ. ಮನೆಯಲ್ಲಿ ಏನೇ ನಡೆದರೂ, ಸಂಸಾರದ ಎಲ್ಲಾ ದುರಂತಗಳಾಚೆಗೂ ಅವಳಿಗೆ ಬೆಳಗ್ಗೆ ಬ್ರೇಕ್‌ಫಾಸ್ಟ್ ಮಾಡುವುದಿದ್ದೇ ಇರುತ್ತದೆ, ಶಾಲೆಗೆ ಹೋಗುವುದಕ್ಕಿರುತ್ತದೆ, ಸಡಿಲವಾದ ಬಟನ್ನುಗಳನ್ನು ಬಿಗಿಗೊಳಿಸಿ ಹೊಲಿಗೆ ಹಾಕುವುದಕ್ಕಿರುತ್ತದೆ, ಅಂಗಡಿಯಿಂದ ತರಬೇಕಾದ ಸಾಮಾನಿನ ಪಟ್ಟಿ ತಯಾರು ಮಾಡವುದಿರುತ್ತದೆ, ಟೀವಿಯ ಸೀರಿಯಲ್‌ಗಳನ್ನು ತಪ್ಪದೇ ನೋಡುವುದು ಇರುತ್ತದೆ. ಯಾವ ದುರಂತವೂ ಅವಳ ಸುತ್ತ ಅವಳು ಕಟ್ಟಿಕೊಂಡ ಈ ಗೋಡೆಯನ್ನು ಒಡೆದು ಅವಳನ್ನು ತಟ್ಟಲಾರದೇನೊ. ಟೀ ಕಾಯಿಸುತ್ತಲೇ ಭಗವದ್ಗೀತೆಯನ್ನೂ ಓದುತ್ತ, ಒಂದೆರಡು ಭಜನೆಗಳನ್ನೂ ಹಾಡುತ್ತ ಇನ್ಯಾವುದರಲ್ಲೋ ಕಳೆದು ಹೋದಂತಿರುವ ಈಕೆಗೆ ಯಾವ ದುಃಖವೂ ಹೆಚ್ಚು ಬಾಧಿಸಲಾರದು, ಯಾವ ಸುಖವೂ ಹೆಚ್ಚು ಉತ್ಸುಕಗೊಳಿಸಲಾರದು.....

ಆದರಿದು ನೆಮ್ಮದಿಯಲ್ಲ. ಇದು ಸಾಧನೆಯಲ್ಲ ಎನ್ನುವುದು ಸೋಫಿಗೂ ಗೊತ್ತು. ಇದೆಲ್ಲವೂ ಒಂದು ಟೊಳ್ಳನ್ನು ಇನ್ನೊಂದರಿಂದ ಮುಚ್ಚಿದಂತೆ ಒಳಗಿನ ಟೊಳ್ಳು ಉಳಿದೆ ಇರುತ್ತದೆ. ಅದು ಬನಾರಸ್ ಆಗಿ, ಶಾಂತಿನಿಕೇತನವಾಗಿ ಹೊರಹೊಮ್ಮಿದಾಗಲೂ ಇನ್ನೊಂದು ಹೊಸ ಟೊಳ್ಳಿಗಾಗಿ ಹಂಬಲಿಸುತ್ತಿರುತ್ತದೆ.

ಚಿನ್ನದ ಮೇಲಿನ ಸುಪ್ತ ಮೋಹ ಕೆಲಸವಿಲ್ಲದೇ ಕೂತಾಗ ಹುಚ್ಚಿನ ರೂಪ ತಳೆದುದನ್ನು ಹೇಳುವ ಶಾಂತಿಯ ತಾಯಿಯ ಕತೆ ಗಮನಾರ್ಹವಾಗಿದೆ. ಈಕೆ ಮೈತುಂಬ ತನ್ನ ಚಿನ್ನವನ್ನೆಲ್ಲ ಹೇರಿಕೊಂಡೇ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಮಗ ದುಬೈಗೆ ಹೋಗಿದ್ದು, ಚಿನ್ನ ತರುವಂತಾಗಿದ್ದೇ ಈ ಹುಚ್ಚಿನ ಮೂಲವೆ? ಅದು ಆ ಬಡತನದಲ್ಲೇ ಬೆಳೆದು ಬಂದ ಕುಟುಂಬಕ್ಕೆ ಬೇಕಿದ್ದ ಬೆಳವಣಿಗೆಯೇ ಅಲ್ಲವೆ? ಹಾಗಿದ್ದರೆ ಜೀವಮಾನವಿಡೀ ಘಳಿಗೆ ಪುರುಸೊತ್ತಿಲ್ಲದೆ ದುಡಿದ ವ್ಯಕ್ತಿಗೆ ಇದ್ದಕ್ಕಿದ್ದಂತೆ ಗಳಿಸುವ ಅಗತ್ಯವೇ ಇಲ್ಲವಾಗಿದ್ದು, ಕೆಲಸ ಮಾಡವುದಕ್ಕಿಲ್ಲದೆ ಸುಮ್ಮನೆ ಕುಳಿತಿರುವಂತಾಗಿದ್ದು ಕಾರಣವೆ? ದುಡಿಮೆ ಅರ್ಥ ಕಳೆದುಕೊಂಡಿದ್ದು, ಬದುಕಿನುದ್ದಕ್ಕೂ ಜೀವ ತೇಯ್ದು ಗಳಿಸಿದ್ದು ಮಗ ಸುಲಭವಾಗಿ ತಂದ ಚಿನ್ನದ ಎದುರು ನಗಣ್ಯವಾಗಿಬಿಟ್ಟಿದ್ದರ ಹತಾಶೆಯೆ? ಪ್ರಶ್ನೆಗಳು ಉಳಿಯುತ್ತವೆ.

ತನ್ನ ನಿಜವಾದ ಹಿನ್ನೆಲೆಯನ್ನು ಮುಚ್ಚಿಟ್ಟು ಕಲ್ಪಿತ ಹಿನ್ನೆಲೆಯೊಂದನ್ನು ಫೋಟೋ ಆಲ್ಬಂ ಸಹಿತ ಹೇಳಿಕೊಳ್ಳುವ ಮಾಯಾ ಕುತೂಹಲ ಕೆರಳಿಸುತ್ತಾಳೆ. ರೇನ್ ಕೋಟ್ ಸಿನಿಮಾದ ಪಾತ್ರದಂತೆಯೇ ಟೊಳ್ಳಾದ ಘನಸ್ಥಿಕೆಯನ್ನು ಮೆರೆಯುವ ಮಾಯಾ ಯಾರಿಗೂ ಗುಟ್ಟು ಬಿಟ್ಟುಕೊಡುವುದಿಲ್ಲ. ಆದರೆ ಸೋಫಿಗೆ ನಿಜ ಹೇಳುತ್ತಾಳೆ. ಈ ಮಾಯಾ ತಂದೆ ಸೈನ್ಯದಲ್ಲಿ ಒಬ್ಬ ಬ್ರಿಗೇಡಿಯರ್. ತಾಯಿ ಒಬ್ಬ ಕ್ಯಾಪ್ಟನ್ನನ ಪ್ರೇಮದ ಬಲೆಗೆ ಬಿದ್ದಾಗ ಈತ ಕನಲುತ್ತಾನೆ. ಈತನ ಸಭ್ಯ-ಶಿಷ್ಟ-so called ಆಲ್ಬಂ ಫೋಟೋದಲ್ಲಿರುವಂಥ ಮುದ್ದಾದ ಗಂಡ-ಹೆಂಡತಿ-ಇಬ್ಬರು ಮಕ್ಕಳ ಸಂಸಾರದ ಸುಂದರ ಚಿತ್ರದಲ್ಲಿ ಬಿರುಕುಗಳು ಮೂಡುತ್ತವೆ. ಎಂಥ ರಕ್ತ ಸಿಕ್ತ ಬಿರುಕುಗಳು! ಎಂಥ ಅವಾಚ್ಯ ಮಾತುಗಳಿರಿದು ಇರಿದು ತರಿದ ಬಿರುಕುಗಳು! ಎಂಥೆಂಥ ಪರೋಕ್ಷ ಹಿಂಸೆಯ ಎದುರು ನಗುತ್ತ ಅನುಭವಿಸುವ ತಾಯಿ ಮತ್ತು ಸಾಕ್ಷಿಪ್ರಜ್ಞೆಯಾದ ಮಕ್ಕಳು ಕೂಡಿ ನಿರ್ಮಿಸಿದ ಬಿರುಕುಗಳು!

ಮಾಯಾ ಯಾಕೆ ತನ್ನ ತಂದೆ-ತಾಯಿ ಒಡಹುಟ್ಟುಗಳ ಬಗ್ಗೆ ಕತೆಕಟ್ಟಿ ಸುಖಿಸಬೇಕು? ಸಮಾಜ ಅದನ್ನು ಕಂಡು ಮಣೆ ಹಾಕುವುದೆಂಬ ನಂಬುಗೆಯೆ? ಸ್ವತಃ ತಾನೇ ತನ್ನನ್ನು, ತನ್ನ ಹಿನ್ನೆಲೆಯನ್ನು ಸ್ವೀಕರಿಸಲು ಅವಳು ಹೆದರುತ್ತಾಳೆಯೆ? ತಾನೇ ಕಟ್ಟಿಕೊಂಡ ಭ್ರಮಿತ ಜಗತ್ತಿನಲ್ಲೇ ಸುಖದ ಭ್ರಾಂತಿಯಲ್ಲೇ ಬದುಕುವುದರಲ್ಲಿ ಅವಳು ನೆಮ್ಮದಿಯನ್ನು ಕಂಡುಕೊಂಡಿದ್ದಾಳೆಯೆ? ಅಮೆರಿಕಕ್ಕೆ ಹಾರುವುದರ ಮೂಲಕ ತನ್ನ ತಂದೆ-ತಾಯಿ ಮತ್ತು ‘ಭೂತ’ ದಿಂದ ಒಮ್ಮೆಗೇ ಮುಕ್ತಳಾಗುವ ಈಕೆಯ ಕನಸು ಅಸಂಗತವೆನಿಸುವುದಿಲ್ಲವೆ? ಕೊನೆಗೂ ‘ಮನುಷ್ಯರಿಂದ ಓಡಿ ಹೋಗಬಹುದಲ್ಲದೆ ಮನಸ್ಸಿನಿಂದ ಓಡಿಹೋಗಲು’ ಸಾಧ್ಯವೆ? ಶನಿವಾರ ರಾತ್ರಿ ವಿಪರೀತ ಕುಡಿದು ಮಕ್ಕಳನ್ನು ಎದುರು ನಿಲ್ಲಿಸಿಕೊಂಡೇ ಹೆಂಡತಿಗೆ ಹಿಂಸೆ ಕೊಡುವ ಈತನ ಕ್ರೌರ್ಯ ಕೊನೆಗೂ ಈ ಮಕ್ಕಳಲ್ಲಿ ಉಳಿಸಿ ಬಿಟ್ಟಿದ್ದೇನನ್ನು? ಓದುತ್ತ ಉಸಿರು ಕಟ್ಟುತ್ತದೆ. ಇಂಥದ್ದರ ನೆರಳುಗಳು ಪಕ್ಕದಲ್ಲೇ ಹಾದು ಹೋದಂತಾಗಿ ಬೆಚ್ಚಿಬೀಳುತ್ತೇವೆ.

ಅನೂಗಿರುವ ಅಮೆರಿಕಾ ಅಥವಾ ಆಸ್ಟ್ರೇಲಿಯಾದ ಗೀಳು, ಸ್ವಾಮಿಯ ಕಾರು-ಸೈಟು-ಲೋನುಗಳ ಗೀಳು, ಭಟ್ ಮತ್ತು ಚಿನ್ನಪ್ಪನ ಧರ್ಮದ, ಶುದ್ಧೀಕರಣದ ಗೀಳುಗಳಲ್ಲಿ ಕೂಡ ಸಮಾನವಾದದ್ದು ಏನೋ ಇರುವಂತಿದೆಯಲ್ಲವೆ? ಮನುಷ್ಯನ ದುರಂತಗಳಿಗೆ ಅವನ ನಗರದ ದುರಂತಗಳೂ ಕಾರಣವೆ?

ಅಂಜುಂ ಹಸನ್ ಸಂದರ್ಶನ

ಬ್ಲಾಗ್ ಒಂದರಲ್ಲಿ ‘ನೇತಿ ನೇತಿ’ ಯ ಕುರಿತು ಓದಿ

ಡೆಕ್ಕನ್ ಹೆರಾಲ್ಡ್ ಪುಸ್ತಕ ಸಮೀಕ್ಷೆಯಲ್ಲಿ ‘ನೇತಿ ನೇತಿ’

Neti, Neti (not this, not this); Roli Books, Rs.295.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Monday, May 10, 2010

ಬದುಕು ಅತಂತ್ರ; ಕಥಾನಕಕ್ಕೆ ತಂತ್ರ

ಖ್ಯಾತ ಇಂಗ್ಲೀಷ್ ಕಾದಂಬರಿಕಾರ ಕಿರಣ್ ನಗರ್ಕರ್ ಒಮ್ಮೆ ತಾವು ಮತ್ತೆ ಮತ್ತೆ ಓದುವ ಅದ್ಭುತ ಕೃತಿಗಳಲ್ಲಿ ಈಗ ಬಹುತೇಕ ಮರವೆಯಾಗಿರುವ Junichiro Tanizakiಯ ಕಾದಂಬರಿ The Key ಕೂಡ ಒಂದು ಎಂದಿದ್ದರು. ಹಾಗೆ ನೋಡಿದರೆ ತನಗೆ ಈ ಪುಸ್ತಕ ರೆಕಮಂಡ್ ಮಾಡುವ ಪ್ರಕ್ರಿಯೆಯೇ ಒಗ್ಗುವುದಿಲ್ಲ ಎನ್ನುವ ನಗರ್ಕರ‍್ಗೆ ಅಷ್ಟೊಂದು ಹಿಡಿಸಿದ ಕಾದಂಬರಿಯಲ್ಲಿ ಏನಿದೆ ಅಂಥಾದ್ದು ಎನ್ನುವ ಕುತೂಹಲದಿಂದಲೇ ಓದಿದ್ದು ಇದನ್ನು.

ಇದೊಂದು ಡೈರಿ ಮೂಲಕ ತೆರೆದುಕೊಳ್ಳುವ ಕಾದಂಬರಿ. ಒಂದಲ್ಲ, ಎರಡು ಡೈರಿಗಳು, ಗಂಡನ ಮತ್ತು ಹೆಂಡತಿಯ ಡೈರಿಗಳು ಇಲ್ಲಿರುವುದು. ಪತ್ರ, ಆತ್ಮನಿವೇದನೆ ಮತ್ತು ಡೈರಿ - ಈ ಮೂರೂ ಬಗೆಯ ತಂತ್ರಗಳಿಗೆ ತಮ್ಮದೇ ಆದ ಸಾಧ್ಯತೆಗಳೂ ಮಿತಿಗಳೂ ಇವೆ. ಕೇಶವ ಮಳಗಿಯವರು ತಮ್ಮ ಒಂದು ಸಂದರ್ಶನದಲ್ಲಿ ಇದನ್ನು ವಿವರವಾಗಿಯೇ ಚರ್ಚಿಸಿದ್ದಾರೆ. (ಮುಂದೆ ಆ ಸಂದರ್ಶನದ ಪೂರ್ಣ ಪಠ್ಯವನ್ನೂ ಇಲ್ಲಿ ಓದಬಹುದು.) ಈ ಕಾರಣಗಳಿಗಾಗಿಯೇ ಭಾಗಶಃವಾಗಿ ಈ ತಂತ್ರವನ್ನು ಬಳಸಿಕೊಂಡು ಉಳಿದಂತೆ ನಿರೂಪಕನೇ ನಿರೂಪಣೆಯ ಹೊಣೆ ಹೊರುವ ತಂತ್ರವೇ ಬರಹಗಾರರಲ್ಲಿ ಹೆಚ್ಚು ಜನಪ್ರಿಯವಾದದ್ದು, ಸುಲಭವಾದದ್ದು. ಆದರೂ ಕೆಲವೊಮ್ಮೆ ತಾನು ಹೇಳಲಿರುವುದಕ್ಕೆ ಈ ತಂತ್ರವನ್ನು ಬಿಟ್ಟರೆ ಬೇರೆ ಮಾರ್ಗವೇ ಇಲ್ಲವೆನ್ನುವಂತಾಗುವ ಸಂದರ್ಭಗಳೂ ಇವೆ. ಸಾಂದರ್ಭಿಕವಾಗಿ ಇಲ್ಲಿ ಒಂದು ಉದಾಹರಣೆ ನೀಡುತ್ತೇನೆ.

ನಮ್ಮ ‘ನಡೆದಾಡುವ ಗ್ರಂಥ ಭಂಡಾರ’ ಎಸ್.ದಿವಾಕರ್ ತಮ್ಮ ಕಥೆಗಳ ಪ್ರಯೋಗಶೀಲತೆಗೆ ಹೆಸರಾದವರು. ಹಾಗೆ ನೋಡಿದರೆ ಇವರ ಒಂದೊಂದು ಕಥೆಗಳೂ ಒಂದೊಂದು ಪ್ರಯೋಗಗಳಂತಿವೆ ಎನ್ನಬೇಕು. ಹಾಗಾಗಿಯೇ ವೈದೇಹಿಯವರು ಇವರಿಗೆ ಪ್ರಯೋಗಗಳತ್ತ ಗಮನ ನೀಡುವುದನ್ನು ಕಡಿಮೆ ಮಾಡಬಾರದೆ ಎಂದೂ ಹೇಳಿದ್ದುಂಟು! (ಗಮನಿಸಿ: ‘ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ’ ಕಥಾಸಂಕಲನದ ಹಿನ್ನುಡಿಯಲ್ಲಿರುವ ವೈದೇಹಿಯವರ ಪತ್ರ). ಆದರೆ ಎಸ್.ದಿವಾಕರ್ ಅವರಿಗೆ ಕನ್ನಡದಲ್ಲಿ ಸಣ್ಣಕತೆ ಬರೆಯುತ್ತಿರುವವರು ಹೆಚ್ಚಿನ ಪ್ರಯೋಗಶೀಲತೆಯನ್ನು ತೋರಿಸುತ್ತಿಲ್ಲ ಎನ್ನುವ ಕೊರಗು. ಈಚೆಗೆ ಅವರು ಹೀಗೇ ಮಾತನಾಡುತ್ತ ಕೆಲವೊಂದು ಹೊಸಬಗೆಯ ಪ್ರಯೋಗಾತ್ಮಕ ತಂತ್ರಗಳನ್ನೇ ಹೇಳುತ್ತ ಹೋದರು. ಅವುಗಳನ್ನೆಲ್ಲ ಕೇಳುತ್ತ ಹೋದರೆ ಅರೆರೆ ಹೀಗೆಲ್ಲ ಕತೆ ಹೇಳಬಹುದಲ್ಲವೆ ಎಂದು ಅಚ್ಚರಿಯೂ, ಇವರು ಹೀಗೆ ಸುಖಾಸುಮ್ಮನೆ ಅವುಗಳನ್ನೆಲ್ಲ ಮುಚ್ಚುಮರೆ ಮಾಡದೆ ಪುಂಖಾನುಪುಂಖ ಹೇಳುತ್ತಿದ್ದಾರಲ್ಲ ಎಂಬ ಆಘಾತವೂ ಆಗುವುದು ಖಂಡಿತ! ಅವರು ಹೇಳಿದ ತಂತ್ರಗಳಲ್ಲಿ ಒಂದು ಹೀಗಿದೆ:

ಮೊದಲಿಗೆ 3-4 ಅಥವಾ 4-5 ಪುಟಗಳ ಒಂದು ಪುಟ್ಟ ಕಥಾನಕ. ನಂತರ ಟಿಪ್ಪಣಿಗಳು ಅಂತ ಒಂದೊಂದೇ ಪಾತ್ರದ ಪರಿಚಯ. ಈ ಟಿಪ್ಪಣಿಗಳು ಹೇಗಿರಬೇಕು ಅಂದರೆ, ಈ ಪಾತ್ರಗಳ ವ್ಯಕ್ತಿತ್ವದ ಪರಿಚಯ, ಅವುಗಳ ಹಿನ್ನೆಲೆ, ಕಥಾನಕದ ಬೇರೆ ಬೇರೆ ಪಾತ್ರಗಳೊಂದಿಗಿನ ಅಂತರ್-ಸಂಬಂಧ ಇತ್ಯಾದಿಗಳೆಲ್ಲ ಇಲ್ಲಿ ಗೊತ್ತಾಗ್ತ ಗೊತ್ತಾಗ್ತ ಮೊದಲು ಓದಿದ ಇಡೀ ಕಥಾನಕವೇ ಬೇರೆಯೇ ಆಗಿ ಕಾಣಿಸತೊಡಗಬೇಕು! ಹಾಗೆ ಇರಬೇಕು ಆ ಟಿಪ್ಪಣಿಗಳು! ಓದುಗ ಮತ್ತೆ ಮೊದಲಿನಿಂದ ಕತೆಯನ್ನು ಓದುವುದು (ಅರ್ಥವಾಗಬೇಕಾದರೆ) ಅನಿವಾರ್ಯವಾಗಬೇಕು!

ಹೇಗಿದೆ? ಇದು ತಂತ್ರ. ಯೋಚಿಸಿ ನೋಡಿ. ಅಷ್ಟೇನೂ ಸುಲಭವಲ್ಲ ಇದು. ಮತ್ತೆ ಎಲ್ಲ ಬಗೆಯ ಕಥೆಗಳಿಗೆ ಹೊಂದುವುದೂ ಇಲ್ಲ. ವ್ಯಕ್ತಿತ್ವದ ಪರಿಚಯವನ್ನೇ ಕೊಡದೆ ಅದರ ಸುಳಿವು ಕೂಡ ಸಿಗದ ಪಾತ್ರಗಳನ್ನು ಇಟ್ಟುಕೊಂಡು ಕಥಾನಕವನ್ನು ಕಟ್ಟಬೇಕು. ಪರಸ್ಪರ ಸಂಬಂಧಗಳನ್ನು define ಮಾಡದೆ ಅವುಗಳ ನಡುವಿನ ಕಥೆ ಸಾಗಬೇಕು. ಕೆಲವೊಂದು ಸಂದರ್ಭ, ಸನ್ನಿವೇಶಗಳ ಗುಟ್ಟು ಪೂರ್ತಿ ಬಿಟ್ಟುಕೊಡದ ಹಾಗೆ ಅಸ್ಪಷ್ಟವಾಗಿಯೇ ಉಳಿಸಿಕೊಂಡು ಮುಂದೆ ಹೋಗಬೇಕು! ಅಷ್ಟು ಮಾಡುವಾಗ ನಿಮಗೆ ಅಂದರೆ ಓದುಗನಿಗೆ ಏನಿದೆಲ್ಲ ಕಗ್ಗ, ಒಂದೂ ತಲೆ ಬುಡ ಅರ್ಥವಾಗುವುದಿಲ್ಲ ಎನಿಸದ ಹಾಗೆ ಅವನ ಕುತೂಹಲ ಹಿಡಿದಿಟ್ಟುಕೊಳ್ಳಬೇಕು. ಇಷ್ಟೆಲ್ಲ ಮಾಡಿಯೂ ಓದುಗನಿಗೆ ಅಪಾರ ಊಹಾಶಕ್ತಿ ಒಂದು ಇರುತ್ತಲ್ಲ, ಅವನು ಕೆಲವೊಂದನ್ನ ಬೇಡ ಬೇಡ ಎಂದರೂ ತಾನೇ guess ಮಾಡಿಕೊಂಡು ಕತೆಗೆ ಒಂದು ನೆಲ ಗಟ್ಟಿ ಮಾಡಿಕೊಂಡಿರುತ್ತಾನಲ್ಲ, ಅದೇನಾದರೂ ನಮ್ಮ ಗುಟ್ಟಿಗೆ ತೀರ ಹತ್ತಿರದಲ್ಲಿದೆಯೋ, ಅಲ್ಲಿಗೆ ಅಡಿ ಟಿಪ್ಪಣಿಗಳ ಕೆಲಸ ಅವನ ಊಹೆಯನ್ನು ನಿಕ್ಕಿಗೊಳಿಸುವುದಷ್ಟಕ್ಕೇ ಸೀಮಿತವಾಗಿ ಬಿಡುತ್ತದೆ, ಇನ್ನೇನಿಲ್ಲ. ಅವನೇಕೆ ಕತೆಯನ್ನು ಮತ್ತೊಮ್ಮೆ ಓದಬೇಕು! ಆದರೆ ತಂತ್ರದ ನಿರೀಕ್ಷೆ ಮರುಓದೇ. ಮರು ಓದಿನ ಅಗತ್ಯವೇ ಬೀಳದಿದ್ದರೆ ತಂತ್ರದ ನಿರ್ವಹಣೆಯಲ್ಲಿ ಸೋತಂತೆಯೇ ಮಾತ್ರವಲ್ಲ ದಿವಾಕರ್ ಕೊಟ್ಟ ಅದ್ಭುತವಾದ ಒಂದು ತಂತ್ರವನ್ನು ಹಾಳುಗೆಡವಿದ ದೌರ್ಭಾಗ್ಯ ಬೇರೆ!

ಇಲ್ಲಿ ಇನ್ನೂ ಒಂದು ಧರ್ಮಸಂಕಟವಿದೆ. ಈ ಬದುಕು ನಮಗೆ ಅನುಭವಗಳನ್ನಲ್ಲದೆ ಬೇರೇನನ್ನೂ ಕೊಡಲಾರದ್ದು ಎನ್ನುವುದಂತೂ ಎಲ್ಲರಿಗೂ ಗೊತ್ತೇ ಇದೆ. ಈ ಎಲ್ಲ ಅನುಭವಗಳು, ಅವು ಪಿಸುಗುಟ್ಟುವ ಪಾಠಗಳು, ಕಾಣಿಸುವ ತತ್ತ್ವಗಳು ಯಾಕೆ ಬೇಕು ನಮಗೆ ಈ ಪುಟ್ಟದಾದ, ನಶ್ವರವಾದ, ಅತಂತ್ರವೂ ಅನಿಶ್ಚಿತವೂ ಆದರೂ ನಿಶ್ಚಿತವಾಗಿಯೂ ಅಂತ್ಯವುಳ್ಳ ಜೀವನಕ್ಕೆ ಎಂಬ ಪ್ರಶ್ನೆ ಒತ್ತಟ್ಟಿಗಿರಲಿ. ಅದೆಲ್ಲ ಆಧ್ಯಾತ್ಮ ಇಲ್ಲಿ ಈಗ ಬೇಡ.

ಸಾಹಿತ್ಯದ ಓದು-ರಚನೆ ಎರಡೂ ನಮಗೆ ಬೇಕಾಗಿರುವುದು ಬದುಕನ್ನು ಅರಿಯುವುದಕ್ಕೇ ಹೊರತು ಇನ್ನೇತಕ್ಕೂ ಅಲ್ಲ. ಮನರಂಜನೆ, ಟೈಂ ಪಾಸ್ - ಗಳೆಲ್ಲ ಇವತ್ತಿನ ದಿನದ ಅಗತ್ಯಗಳಾಗಿ ಉಳಿದೇ ಇಲ್ಲ. ಇಪ್ಪತ್ತನಾಲ್ಕು ಗಂಟೆಯೂ ಮನರಂಜನೆ ಒದಗಿಸಬಲ್ಲ ಸಾವಿರಾರು ದಾರಿಗಳು, ಅನುಕೂಲಗಳು ಕಾಯುತ್ತಿರುವ, ನಾವಾಗಿಯೇ ಪಾಸ್ ಮಾಡಬೇಕಾದಷ್ಟು ಟೈಮೇ ಇಲ್ಲದ ದಿನಗಳಿವು. ಹಾಗಿರುತ್ತ ಬದುಕು ನಮಗೆ ನೀಡುವ ಸಾವಿರಾರು ಬಗೆಯ ಅನುಭವಗಳಿಂದ ಕಂಡುಕೊಳ್ಳಬಹುದಾದ, ಒಂದೇ ಕ್ಷಣದಲ್ಲಿ ಹಾಗೆ ಮಿಂಚಿ ಮರೆಯಾಗುವ ಒಂದು ಸತ್ಯ ದರ್ಶನ, ಒಂದು ಒಳನೋಟ, ಪ್ರಕೃತಿ-ಪರಿಸರ-ವಠಾರ ಹಿಡಿದಿಟ್ಟುಕೊಂಡ ಗುಟ್ಟು-ಸತ್ಯ-ಅಮೂರ್ತ-ಅನೂಹ್ಯ ವಿಚಾರ - ಕಾಣಿಸೀತೇ ಎಂಬ ಹಂಬಲದಲ್ಲಿ ಈ ಕಡೆಗೆ ಅನುಭವದ ವಿಶ್ಲೇಷಣೆಯನ್ನು ಸಾಹಿತ್ಯ-ಸೃಜನಶೀಲ ಬರವಣಿಗೆ ನೂಕುತ್ತದೆ. ಹಾಗೆ ನೂಕುವಾಗ ಕಲ್ಪನೆ, ಉತ್ಪ್ರೇಕ್ಷೆ, ಅಸಂಗತ ಬಣ್ಣಗಾರಿಕೆ, ನಾಟಕೀಯ ಚಲನೆ, ಮಾಯಾಜಾಲ, ಭಾವಲೋಕದ ಸಮ್ಮೋಹಿನಿ, ಮಾಂತ್ರಿಕ ಇಂದ್ರಜಾಲ, ಕನಸುಗಳ ರೆಕ್ಕೆ ಪುಕ್ಕ, ಅಲ್ಲಿಷ್ಟು ಇಲ್ಲಿಷ್ಟು ಕಾಲ-ದೇಶ-ವ್ಯಕ್ತಿ-ಸಂದರ್ಭದ ಅದಲುಬದಲಾವಣೆ - ಹೀಗೆ ಏನೇನೆಲ್ಲ ಮಾಡುತ್ತಾನೆ ಬರಹಗಾರ. ಹಾಗೆ ಏನೇನೆಲ್ಲ ಮಾಡಿ ಒಂದು ಅನುಭವವನ್ನ ಸಾವಿರ ಬಗೆಯಲ್ಲಿ, ಸಾವಿರ ಕಣ್ಣಿನಲ್ಲಿ, ಸಾವಿರ ಕೋನಗಳಿಂದ, ಸಾವಿರ ಆಯಾಮಗಳ ಮುಖೇನ ನೋಡುವುದನ್ನು, ಅರ್ಥೈಸುವುದನ್ನು, ಬರೆಯುವುದನ್ನು, ಓದುವುದನ್ನು ಸಾಧ್ಯವಾಗಿಸಿದ್ದು ಸಾಹಿತ್ಯ. ನಾಟಕ, ಯಕ್ಷಗಾನ, ಚಿತ್ರಕಲೆ, ಸಂಗೀತ ಇತ್ಯಾದಿಗಳೂ ಸ್ಥೂಲವಾಗಿ ಇದನ್ನೇ ಅಥವಾ ಇಂಥ ಉದ್ದೇಶದಿಂದಲೇ ಏನೇನನ್ನೋ ಪ್ರಯತ್ನಿಸುತ್ತವೆ.

ಹಾಗಿದ್ದರೆ ಒಂದು ಅನುಭವವನ್ನು ಹೇಳಬೇಕಾದ ‘ವಿಧಿ’ಯನ್ನು ಹೀಗೆಲ್ಲ ಬದಲಾಯಿಸಿದ್ದೇ ಆದರೆ, ಅದರ ಹೆಸರು ತಂತ್ರವೋ ಮಂತ್ರವೋ ಏನೇ ಇರಲಿ, ಅನುಭವದ ಮೂಲತತ್ತ್ವ ಇದರಿಂದಾಗಿಯೇ ಬದಲಾಗದೆ? ಬದಲಾದಲ್ಲಿ ಅದು ಮೂಲತತ್ತ್ವದ ವಿಕಲ್ಪವಾಗದೆ? ಒಂದು ತಂತ್ರದ ಹೆಸರಿನಲ್ಲಿ ಒಬ್ಬ ಕಲಾಕಾರ ಅದನ್ನು ತಿರುಚಬಹುದೆ? ಆ ಸ್ವಾತಂತ್ರ್ಯ ಅವನಿಗಿದೆಯೆ? ಅಥವಾ ತಂತ್ರವೆಂಬುದು ಎಷ್ಟರ ಮಟ್ಟಿಗೆ ಇದರಲ್ಲಿ ಮೂಗು ತೂರಿಸಬಹುದು-ಬಾರದು ಎಂಬ ನಿಯಮವೇನಾದರೂ ಇದೆಯೆ? ಇದ್ದರೆ ಹಾಗೊಂದು ನಿಯಮ ಇರುವುದೇ ಸರಿಯೆ ಅಥವಾ ಇರಬಾರದೆ? - ಇದೆಲ್ಲ ನಿಮ್ಮ ತಲೆತಿನ್ನಲು, ಅಷ್ಟೆ. ಪುರುಸೊತ್ತಿನಲ್ಲಿ ಯೋಚಿಸಿ, ನನಗೂ ಹೇಳಿ.

ಇಲ್ಲಿ ಪ್ರಯೋಗಿಸಿದ ತಂತ್ರ ಕೂಡಾ ಇಂಥ ಸಂದಿಗ್ಧಗಳಿಗೆ ನಮ್ಮನ್ನು ದೂಡುವಂಥಾದ್ದೇ.

ಇಲ್ಲಿ ಹೇಳಿದ ಡೈರಿಗಳು ಸಾಮಾನ್ಯ ಡೈರಿಗಳಲ್ಲ. ಗಂಡನ ಡೈರಿಯನ್ನು ಗಂಡ ತನ್ನ ಹೆಂಡತಿಯ ಬಗ್ಗೆ ಮತ್ತು ಹೆಂಡತಿಯ ಡೈರಿಯನ್ನು ಹೆಂಡತಿ ತನ್ನ ಗಂಡನ ಬಗ್ಗೆ ಬರೆಯುತ್ತ ಇದ್ದಾರೆ. ಇಬ್ಬರೂ ಅದನ್ನು ಕದ್ದು ಮುಚ್ಚಿ ಬರೆಯುತ್ತ ಇದ್ದರೂ ಪರಸ್ಪರರದ್ದನ್ನ ಪರಸ್ಪರರು ತಮ್ಮ ಅನುಪಸ್ಥಿತಿಯಲ್ಲಿ ಕದ್ದುಕೊಂಡೇ ಓದಲಿ ಎಂದು ಗುಟ್ಟಾಗಿ ಬಯಸುತ್ತಾರೆ. ಹಾಗೆ ಕದ್ದು ಓದಿದರೆ ಓದಿದ್ದು ತಮಗೆ ತಿಳಿಯಬೇಕೆಂದು ಟ್ರಿಕ್ಸ್ ಕೂಡಾ ಮಾಡುತ್ತಾರೆ. ತಾವಂತೂ ಓದಿಲ್ಲ, ಮುಟ್ಟಿದ್ದು ಮಾತ್ರ ಎಂದು ನಮ್ಮನ್ನು ಅವರವರ ಡೈರಿಯಲ್ಲಿ ಬರೆಯುವುದರ ಮೂಲಕ ನಂಬಿಸುತ್ತಾರೆ. ಮತ್ತೆ, ಅತ್ಯಂತ ಕುತೂಹಲಕರ ಸಂಗತಿ ಎಂದರೆ ಈ ಇಬ್ಬರ ಡೈರಿಯೂ ತಮ್ಮ ನಡುವಿನ ಲೈಂಗಿಕ ಸಾಹಸಗಳ ಕುರಿತಾಗಿಯೇ ಇವೆ ಮತ್ತು ಅದೇ ಕೇಂದ್ರದಲ್ಲಿರುವ ವಿದ್ಯಮಾನವೆಂಬಂತೆ ಅದರ ಸುತ್ತಲೇ ಸುತ್ತುತ್ತಿರುತ್ತವೆ!

ಹೀಗೆ ಗಂಡ ಹೆಂಡಿರ ಓದಬಾರದ ಡೈರಿಯನ್ನು, ಅದೂ ಓದಬಾರದ ಸಂಗತಿಗಳಿರುವ ಡೈರಿಯನ್ನು ಓದುತ್ತ ಪುಲಕಗೊಂಡು ನಂಬುವ ನಾವು ಕೂಡಾ ಇದೆಲ್ಲ ಡೈರಿ ಎಂಬ ಒಂದೇ ಕಾರಣಕ್ಕೆ ನಂಬಿ ಮೂರ್ಖರಾಗುವ ಅಗತ್ಯವಿಲ್ಲದಿದ್ದರೂ ನಂಬುತ್ತೇವೆ ಎನ್ನಿ. ಆದರೆ ಈ ಡೈರಿ ಬರೆಯುವ ಪ್ರಕ್ರಿಯೆ ಆರಂಭವಾಗುವುದೇ ಒಂದು scheme ತರ. ಆವಳು ಓದಬೇಕು, ಓದಿದ್ದು ತನಗೆ ತಿಳಿಯಬೇಕು ಎಂಬ ಅವನ ಹುನ್ನಾರವೇ ಅವಳದ್ದೂ ಕೂಡ. ಅಂದರೆ ಒಬ್ಬ ನಿರ್ದಿಷ್ಟ ಓದುಗನನ್ನು ಕುರಿತು ಮನಸ್ಸಿನಲ್ಲಿಟ್ಟುಕೊಂಡೇ ಬರೆದಿದ್ದು, ಬರೆಯುತ್ತಿರುವುದು ಇವರು. ಬರೆಯುತ್ತಿರುವುದು ಮಾತ್ರ ಡೈರಿಯ ರೂಪದಲ್ಲಿ, ಅಷ್ಟೆ. ನಮ್ಮ ಅನೇಕ ಬರಹಗಾರರು ತಾವು ಬರೆಯುವುದೇ ಆತ್ಮ ಸಂತೋಷಕ್ಕೆ ಎಂದು ಬೊಗಳೆ ಬಿಡುತ್ತಾರಲ್ಲ, ಹಾಗಿದೆ ಇದು. ಕನಿಷ್ಠ ಡೈರಿಯನ್ನಾದರೂ ಮಂದಿ ಆತ್ಮಸಂತೋಷಕ್ಕೆ ಬರೆಯುತ್ತಾರೆಂಬ ಬಗ್ಗೆಯೇ ಗ್ಯಾರಂಟಿ ಇಲ್ಲ, ಇನ್ನು ಪ್ರಕಟನೆ, ದುಡ್ಡು, ವಿಮರ್ಶೆ, ರೆಕಗ್ನಿಷನ್, ಪ್ರಶಸ್ತಿ ಎಂದೆಲ್ಲ ಎಡತಾಕುವ ಬರವಣಿಗೆಗೆಲ್ಲಿಯ ಆತ್ಮ ಸಂತೋಷವೋ!

ಇಲ್ಲಿರುವ ಇನ್ನೊಂದು ತಮಾಷೆ ನೋಡಿ. ನಾವು ಒಬ್ಬರಿಗೊಬ್ಬರು ಅರ್ಥವಾಗುವ, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ, ಒಬ್ಬರ ಜೊತೆ ಒಬ್ಬರು ಹಂಚಿಕೊಳ್ಳುವ ಪ್ರಕ್ರಿಯೆಗಳೆಲ್ಲ ಹೀಗೆ ನೇರ ಮಾರ್ಗಗಳನ್ನು ಬಿಟ್ಟು ಅಡ್ಡ ದಾರಿ ಹಿಡಿಯುವ ಒಂದು ಸನ್ನಿವೇಶ ಎಲ್ಲಿ ಮತ್ತು ಯಾಕೆ ಸೃಷ್ಟಿಯಾಗುತ್ತದೆ? ಅದೂ ಗಂಡ ಹೆಂಡಿರ ಅತ್ಯಂತ ನಿಕಟವಾದದ್ದು ಎನ್ನುವಂಥ ಒಂದು ಸಂಬಂಧದಲ್ಲಿ.

ಇನ್ನೊಂದು ವಿಚಾರ. ಡೈರಿಯನ್ನು ನಾವು ತಿಳಿದೋ ತಿಳಿಯದೆಯೋ ಒಬ್ಬ ಭಾವೀ ಓದುಗನನ್ನು ಮನಸ್ಸಿನಲ್ಲಿಟ್ಟುಕೊಂಡೇ ಬರೆಯುತ್ತೇವೆಯೆ? ಅದರಿಂದಾಗಿಯೇ ಅದರಲ್ಲಿ ಸುಳ್ಳುಗಳು, ಕಲ್ಪನೆಗಳು, ಆದರ್ಶಗಳು, ಆಗಬೇಕೆಂದು, ಹೇಳಬೇಕೆಂದು, ಇನ್ನೇನೋ ಎಂದು ಬಯಸಿದ್ದನ್ನೆಲ್ಲ ನಿಜಕ್ಕೂ ಆಗಿತ್ತೆಂದು, ಹೇಳಿದ್ದೇವೆಂದು, ಅದೇ ಸತ್ಯ ಎಂದು ಭ್ರಮಿಸುತ್ತೇವೆಯೆ? ವಾಸ್ತವ ಬದುಕಿನ ನಿಜಕ್ಕೂ ನಮ್ಮ ಡೈರಿಯ ನಿಜಕ್ಕೂ ಒಂದಳತೆಯ ಸುಳ್ಳಿನ ಪರದೆ ಇರುವುದು ನಿಜವಲ್ಲವೇ? ಅದೆಲ್ಲ ಹೋಗಲಿ ಎಂದರೆ ಮಾತನಾಡುವಾಗ ಕೂಡ ನಾವು ‘ನಾನು ಹಾಗೆ, ನಾನು ಹೀಗೆ’ ಎಂದು ಹೇಳಿಕೊಳ್ಳುವುದು ನಾವು ಏನಾಗಬೇಕೆಂದು ಬಯಸಿದ್ದೇವೋ ಬಯಸುತ್ತೇವೋ ಅದನ್ನೇ ಆರೋಪಿಸಿಕೊಳ್ಳುತ್ತಿರುವುದೇ ಹೊರತು ನಿಜಕ್ಕೂ ನಾವು ಆಗಿರುವುದನ್ನು ಹೇಳುತ್ತಿರುವುದಲ್ಲ ಎನ್ನುವುದು ಕೂಡಾ ನಿಜವಲ್ಲವೇ? ಇಲ್ಲದಿದ್ದರೆ ನಾನು ಏನು ಎಂಬುದನ್ನು ನಾನೇ ಯಾಕೆ ಹೇಳಬೇಕಾಗುತ್ತದೆ, ಅದು ನಿಮಗೇ ಕಾಣಿಸುತ್ತಿರಬೇಕಲ್ಲವೆ? ನಮಗೇ ನಾವು ಮಾಡಿಕೊಳ್ಳುವ ಮೋಸಗಳು ಕಡಿಮೆಯೇನಿಲ್ಲ ಅನಿಸುತ್ತದೆ.

ಭಾವವೊಂದು ಭಾಷೆಯಾಗುವ ಮತ್ತು ಬಿಳಿಯ ಹಾಳೆಯ ಮೇಲೆ ಲಿಪಿ ಪಡೆದು ದಾಖಲಾಗುವ ಹಂತದಲ್ಲಿ ಭಾವದ ಅನುಭೋಕ್ತನನ್ನು ಮೋಸ ಮಾಡುವುದು - ಅವನಿಗೇ ತಿಳಿಯದ ಹಾಗೆ - ಸಾಧ್ಯವಿದೆ. ಯಾಕೆಂದರೆ, ಭಾವ ಎಂಬುದು ಸಂಚಾರೀ ಭಾವ. ಸ್ಥಾಯೀ ಭಾವವೆಂಬುದು ಒಂದಿಲ್ಲ, ವಾಸ್ತವದ ಬದುಕಿನಲ್ಲಿ ಇಲ್ಲ. ಸಿನಿಮಾದಲ್ಲಿ, ಕಥೆಯಲ್ಲಿ ಅಷ್ಟು ಹೊತ್ತು ಒಂದನ್ನೇ ಹಿಡಿದಿಡಲು ಸಾಧ್ಯ ಮತ್ತು ಹಾಗಾಗಿ ಅಲ್ಲಿ ಸ್ಥಾಯೀ ಭಾವ ಇರಲು ಸಾಧ್ಯ. ಆದರೆ ಬದುಕೆಂಬ ವಿಶಾಲ ಕ್ಯಾನ್‌ವಾಸಿನಲ್ಲಿ ಅಂಥಾದ್ದು ಇಲ್ಲ. ನಮ್ಮ ಯಾವ ದುಃಖವೂ ಸದಾ ದುಃಖವಲ್ಲ, ಕನಿಷ್ಠ ಒಂದೇ ಸ್ತರದ ತೀವ್ರತೆಯುಳ್ಳ ದುಃಖವಲ್ಲ. ಇದೇ ಮಾತು ಎಲ್ಲಾ ಭಾವಗಳಿಗೂ ಸತ್ಯ. ಹಾಗಿರುತ್ತ ಭಾವ ಅನುಭವವಾಗಿದ್ದ ಕ್ಷಣದಲ್ಲೇ ಅದು ದಾಖಲಾಗದೆ, ದಾಖಲಾಗುವ ಕಾಲಕ್ಕೆ ಅನುಭೋಕ್ತನ ಭಾವ ಬೇರೆಯೇ ಆಗಿರುತ್ತ ಅವನು ದಾಖಲಿಸುವುದು ನೆನಪನ್ನು, ಭಾಷೆಯ ಲಯ-ಲಿಪಿಯ ಛಂದಸ್ಸು ಸೇರಿ "ಸುಳ್ಳಾ"ಗುವುದು ಅಥವಾ "ಸತ್ಯ"ವಾಗುವುದು ನಡೆಯಬೇಕಿರುವುದು ಅನಿವಾರ್ಯ. ಅದು ಕೊನೆಗೂ ಎಷ್ಟು ಸುಳ್ಳನ್ನು, ಎಷ್ಟು ಸತ್ಯವನ್ನು ತನ್ನೊಳಗೆ ಸೇರಿಸಿಕೊಂಡಿತು ಎನ್ನುವುದನ್ನು ಅಳೆದು ಕರಾರುವಾಕ್ಕಾಗಿ ಹೇಳಬಲ್ಲ ತಕ್ಕಡಿ ಸದ್ಯಕ್ಕಂತೂ ಇಲ್ಲ.
ಬಿ.ವಿ.ಕಾರಂತರ ‘ಇಲ್ಲಿರಲಾರೆ; ಅಲ್ಲಿಗೆ ಹೋಗಲಾರೆ’ ಓದುವಾಗ ಅವರು ನಾಟಕ ಯಶಸ್ವಿಯಾಗುವುದು, ಸೋಲುವುದು, ಭಾವ ಅನುಭವವಾಗುವುದು ಎಂದೆಲ್ಲ ಹೇಳುವುದು ಕಾಣಿಸುತ್ತದೆ. ನಾಟಕಕಾರನ ಡಯಲಾಗು ಮತ್ತು ಅದರ ಭಾವ ನಟನಲ್ಲಿ ಆವಾಹನೆಯಾಗಿ ಪ್ರೇಕ್ಷಕನ ಅನುಭವವಾಗುವ ಕುತೂಹಲಕರ ಮತ್ತು ಆತಂಕದ ಪ್ರಕ್ರಿಯೆ ಅದು. ನಿರ್ದೇಶಕನ ಸಂಕಟ. ಬರಹದಲ್ಲಿಯೂ ಅದೇ ನಡೆಯುತ್ತದೆ, ಸ್ವಲ್ಪ ಭಿನ್ನವಾಗಿ.

ಅವರು ಗಂಡ-ಹೆಂಡತಿಯಾಗಿ ದಶಕಗಟ್ಟಲೆ ಒಟ್ಟಿಗೇ ಬದುಕಿದವರು, ಮದುವೆಯ ವಯಸ್ಸಿಗೆ ಬಂದಿರುವ ಮಗಳಿದ್ದಾಳೆ ಅವರಿಗೆ, ಗಂಡನಿಗೆ ನಡುವಯಸ್ಸು, ಹೆಂಡತಿಗೆ ಇನ್ನೂ ಚಿಕ್ಕ ವಯಸ್ಸು. ಅಂದಮೇಲೆ ಅವರನ್ನು, ಅವರ ಪರಸ್ಪರ ಸಂಬಂಧವನ್ನು, ಒಬ್ಬರಿಗೆ ಗೊತ್ತೇ ಇಲ್ಲದ ಇನ್ನೊಬ್ಬರ ವ್ಯಕ್ತಿತ್ವದ ಯಾವುದೋ ಒಂದು ಭಾಗವನ್ನು ನಾವು ಕಂಡು ಬಿಟ್ಟೆವು, ಡೈರಿ ಓದುವುದರ ಮೂಲಕವೇ ಅದು ನಮಗೆ ಕಂಡುಬಿಟ್ಟಿತು ಅಂದುಕೊಳ್ಳಬೇಕಾದ ಕಾರಣವಿಲ್ಲ. ದಶಕಗಳ ಸಾಂಗತ್ಯ, ಸಾನ್ನಿಧ್ಯ, ಸಾಮೀಪ್ಯ, ಸಾಹಚರ್ಯ ಮನುಷ್ಯನನ್ನು ಮನುಷ್ಯನಿಗೆ ಅವನ/ಅವಳ ವ್ಯಕ್ತ - ಅವ್ಯಕ್ತಗಳ ಜೊತೆಜೊತೆಗೇ ಪರಿಚಯಿಸಿರುತ್ತದೆ. ಆದರೆ ಗ್ರಹಿಸಲು ಒಂದು ಮಟ್ಟದ ಸೂಕ್ಷ್ಮಜ್ಞತೆ ಬೇಕಾಗುತ್ತದೆ, ಅಷ್ಟೆ. ಡೈರಿ ಅದನ್ನು ಒದಗಿಸಬಲ್ಲ KEY ಅಲ್ಲ. ಅದು ಹಾದಿ ತಪ್ಪಿಸಬಲ್ಲ KEY ಕೂಡಾ ಆಗುವುದು ಸಾಧ್ಯವಿದೆ.

ಸೂಕ್ಷ್ಮವಾಗಿ ನೋಡಿ. ಇಲ್ಲಿ ಇಬ್ಬರ ನಡುವೆ ನಿಜಕ್ಕೂ ಪರಸ್ಪರರಿಗೆ ತಿಳಿಯದ್ದು ಇದೆಯೆ? ಪತ್ನಿಯ ಲೈಂಗಿಕ ತೃಷೆ ತನ್ನಿಂದ ಹಿಂಗಿಸಲಾರದ ಮಟ್ಟದ್ದು ಎಂಬ ಅವನ ಗ್ರಹಿಕೆ ಅವಳದ್ದೂ. ಅವಳಿಗೆ ಗೊತ್ತು, ಅವನ ವಯಸ್ಸು ತೀರ ಹೆಚ್ಚು, ಆರೋಗ್ಯ ಕೂಡ ಸರಿಯಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ತನಗವನು ಇಷ್ಟವಿಲ್ಲ. ಆದರೆ ಅವನೂ ಕೂಡ ತನ್ನ ಅರೆಕೊರೆಗೆ ತನ್ನ ಪತ್ನಿಯಲ್ಲೂ ಕಾರಣಗಳಿವೆ ಎಂದು ಸರಿಯಾಗಿಯೇ ಊಹಿಸಿದ್ದಾನೆ. ಅವಳು ತನ್ನನ್ನು ಸರಿಯಾಗಿ ಪ್ರಚೋದಿಸುತ್ತಿಲ್ಲ, ತಾನು ತನ್ನನ್ನು ಸಂಪೂರ್ಣವಾಗಿ ಅವಳಿಗೆ ಕೊಟ್ಟುಕೊಳ್ಳಲು ಸಾಧ್ಯವಾಗದಂತೆ ಅವಳೇ ಏನೋ ತಡೆಯೊಡ್ಡುತ್ತಿದ್ದಾಳೆ ಎನ್ನುವುದು ಅವನ ಗ್ರಹಿಕೆಗೆ ಬಂದಿದೆ ಮತ್ತು ಅವಳನ್ನೇ ಕೇಳಿದರೆ ಅದೂ ನಿಜ. ಯಾಕೆಂದರೆ ಅವಳಿಗೆ ಅವನೆಂದರೆ, ಅವನ ನಗ್ನತೆಯೆಂದರೆ, ಕೊನೆಗೆ ಕನ್ನಡಕವಿಲ್ಲದ ಅವನ ಮುಖವೆಂದರೇ ಅಸಹ್ಯವಿದೆ! ಹಾಗಾಗಿ ಅವನನ್ನು ಅವಳಿಗೆ ಬೇಕಿರುವ ಗಂಡಸಾಗಿಸಬಲ್ಲ ಸ್ತರಕ್ಕೆ ಏರಿಸಬಲ್ಲ ಅವನ ಆಧುನಿಕವೋ, ನವನವೀನವೋ ಆದ ಕಾಮಕೇಳಿಯ ಚೇಷ್ಠೆಗಳಿಗೆಲ್ಲ ಅವಳು ಸಹಕರಿಸುವುದಿಲ್ಲ. ಅವನ ಜೊತೆ ಅದೆಲ್ಲ ಸಾಧ್ಯವಾಗುತ್ತಿಲ್ಲ ಅವಳಿಗೆ. ಮತ್ತೆ ಅವಳೇನೂ ಸನಾತನೀ ಗೊಡ್ಡು, ಕಂದಾಚಾರದ, ಹಳೆಯ ಕಾಲದ ಹಳ್ಳಿ ಗುಗ್ಗು ಅಲ್ಲ. ಅಂಥವುಗಳಿಗೆ ಸಕಾರಾತ್ಮಕವಾಗಿಯೇ ಸ್ಪಂದಿಸಬಲ್ಲ, ಅಲ್ಲಿಯೂ ಶಯನೇಷು ವೇಶ್ಯಾ ಆಗಬಲ್ಲ ಅವಳ ಸಾಧ್ಯತೆಗೆ ಕುಂದಿಲ್ಲ. ಕುಂದಿಲ್ಲ ಎನ್ನುವ ಆಶ್ಚರ್ಯಕರ ವಿದ್ಯಮಾನ ಬೆಳಕಿಗೆ ಬರುವುದಕ್ಕೇ ಅವನೊಂದು ಪ್ರಯೋಗಕ್ಕೆ ಇಳಿಯುತ್ತಾನೆ. ಅಂದರೆ ಅವಳ ಈ ಸಾಧ್ಯತೆ ಮತ್ತು ಅದು ಸಾಧ್ಯವಾಗದಿರುವುದು ತನ್ನ ಜೊತೆಗೆ ಮಾತ್ರ, ಬೇರೊಬ್ಬನಲ್ಲಿ, ಅಥವಾ ಅವಳೇ ಒಲಿದವನಲ್ಲಿ ಅದು ಸಾಧ್ಯವಿದೆ ಎನ್ನುವುದು ಅವನಿಗೂ ಗೊತ್ತಿದೆ ಎನ್ನುವುದು ಸಾಬೀತಾಗುವುದಿಲ್ಲವೆ? ತನ್ನ ಗಂಡ ತನ್ನ ಈ ಮಿತಿ ಮತ್ತು ಸಾಧ್ಯತೆಯನ್ನು ಸರಿಯಾಗಿಯೇ ಅರಿತಿದ್ದಾನೆಂದು ಅನತಿಕಾಲದಲ್ಲೇ ಕಂಡುಕೊಳ್ಳುವ ಅವಳು ಅಂಥ ಒಂದು ವಿಶಿಷ್ಟ ಪ್ರಯೋಗಕ್ಕೆ ತನ್ನನ್ನೇ ತಾನು ಒಡ್ಡಿಕೊಳ್ಳಲು ತಯಾರಾಗುವುದು ಕೂಡ ಅವಳು ಗಂಡನನ್ನು ಸರಿಯಾಗಿಯೇ ಅರಿತಿರುವುದನ್ನು ತೋರಿಸುವುದಿಲ್ಲವೆ? ಸೊ, ಡೈರಿಯ ಉದ್ದೇಶ ಒಬ್ಬರಿಗೊಬ್ಬರು ಸ್ಪಷ್ಟವಾಗುವುದಲ್ಲ, ತಿಳಿದೋ ತಿಳಿಯದೆಯೋ ಕಾಲೆಳೆಯುವುದು ಅನಿಸುವುದಿಲ್ಲವೆ?

ಅವಳ ಅಗತ್ಯಗಳ, ಅವನ್ನು ಹಿಂಗಿಸಿಕೊಳ್ಳಬಲ್ಲ ಅವಳ ಸಾಮರ್ಥ್ಯದ, ಈ ಎಲ್ಲವನ್ನೂ ತನ್ನ ವ್ಯಕ್ತಿತ್ವದ ಚೌಕಟ್ಟಿನ ಒಳಗೇ ಸಮರ್ಥಿಸಿಕೊಳ್ಳಬಲ್ಲ ಅವಳ ನಿಲುವಿನಲ್ಲೇ ಈ ಧಮಕಿಯ ನೆರಳೆಲ್ಲವೂ ಹರಡಿದೆ. ಇನ್ನು ಅವನ ಕಡೆಯಿಂದ ನೋಡಿದರೆ, ಅವನ ಪ್ರಯೋಗದ ತರ್ಕವನ್ನು ನೋಡಿ. ತಾನು ತನ್ನ ಹೆಂಡತಿಯ ಹಾಸುಗೆಯ ಮೇಲೆ ಅವಳ ಗಂಡನಾಗಿರದೆ ಒಬ್ಬ ವಿಟನಾಗಿ (ಕೆಟ್ಟ ಅರ್ಥದಲ್ಲಿ ಅಲ್ಲ, ಶಯನೇಷು.... ಅರ್ಥದಲ್ಲೇ) ತನ್ನಲ್ಲಿ ಯಾವುದು ತನ್ನ ಪತ್ನಿಗೆ ಹಿಡಿಸಿಲ್ಲವೋ, ಅಸಹ್ಯವೋ ಅದೆಲ್ಲ ಇಲ್ಲದ ಒಬ್ಬ ಪರಪುರುಷ ತಾನಾಗಿ - ಅಂದರೆ ತನ್ನ ಪತ್ನಿಗೆ ಹಿಡಿಸಿಬಿಟ್ಟಿದ್ದಾನೆ ಅನಿಸಿದ ಒಬ್ಬ ಗಂಡಸೇ ತಾತ್ಕಾಲಿಕವಾಗಿ ತಾನಾಗಿ - ಪತ್ನಿಯ ಜೊತೆಗೆ ಪರಪುರುಷನ ಪರಕಾಯ ಪ್ರವೇಶದ ಮೂಲಕ ರಮಿಸುವ ಪ್ರಯೋಗ ಅದು! ಅಂದರೆ, ರತಿಸುಖದ ಪರಾಕಾಷ್ಠೆ ತನಗಾಗಿಯೂ ಅವನಿಗೆ ಬೇಕು, ಅದು ಅವನಿಗೆ ತನ್ನ ಪತ್ನಿಯಲ್ಲಿ ತಾನೇ ತಾನಾಗಿ ಸುಖಿಸಿದಾಗ ಸಿಗುತ್ತಿಲ್ಲ. ಹೆಂಡತಿಗಾಗಿಯೂ ಅದು ಅವನಿಗೆ ಬೇಕು, ಯಾಕೆಂದರೆ ಅದನ್ನು ಅವಳಿಗೆ ಕೊಡಲು ಇದುವರೆಗೂ ಅವನಿಗೆ ಅವನು ಅವನಾಗಿಯೇ ಸೇರುವಾಗ ಸಾಧ್ಯವಾಗಿಲ್ಲ. ಎರಡನ್ನೂ ಸಾಧಿಸಲು ಪ್ರಯೋಗ! ಇಬ್ಬರಿಗೂ ಏನು ನಡೆಯುತ್ತಿದೆ ಮತ್ತು ಯಾಕೆ ನಡೆಯುತ್ತಿದೆ ಎಂಬುದರ ಸ್ಪಷ್ಟ ಅರಿವಿದೆ. ಆದರೆ ಈ ಇಬ್ಬರೂ ಕಲ್ಪನೆಯಲ್ಲೇ ಆಗಲೊಲ್ಲದೇಕೆ, ತಾವು ಹೀಗೆ ಬಳಸಿಕೊಳ್ಳುತ್ತಿರುವ ಮೂರನೇ ವ್ಯಕ್ತಿಯ ನೆರಳಿನ ಬಗ್ಗೆ ಏನು ಯೋಚಿಸಿದ್ದಾರೆ? ಇಲ್ಲಿ ಸಂದಿಗ್ಧವಿದೆ. ಇದು ವ್ಯಕ್ತಿತ್ವದ ಸಂದಿಗ್ಧ ಮತ್ತು ಡೈರಿ ತೆರೆದಿಡಲಾರದ ಆಂತರಿಕ ಸಂದಿಗ್ಧ. ಡೈರಿ ಯಾಕೆ ತೆರೆದಿಡಲಾರದೆಂದರೆ, ಇದು ಬರೀ ಭಾಷೆಯಲ್ಲಿ ಬಗೆಹರಿಯುವ ಸಂದಿಗ್ಧವೇ ಅಲ್ಲ!
ಕಂಬಾರರ ‘ಸಿರಿಸಂಪಿಗೆ’ ಮತ್ತು ಕಾರ್ನಾಡರ ‘ನಾಗಮಂಡಲ’ ನೆನಪಾಗದೇ ಇರಲು ಸಾಧ್ಯವೆ!

ಇಲ್ಲಿ ಈ ಪ್ರಯೋಗವನ್ನು ಪ್ರಜ್ಞಾಪೂರ್ವಕವಾಗಿ ನಡೆಸುವ ವ್ಯಕ್ತಿ ಪತಿಯೇ. ಆದರೆ ಆತನದ್ದೇ ಆದ ಒಂದು ಸಂತುಲನ, ಇದೆಲ್ಲದರ ಮಿತಿ ಇತ್ಯಾದಿಗಳ ಪರಿಕಲ್ಪನೆ ಪ್ರಯೋಗಕ್ಕಿಳಿಯುವ ಮುನ್ನವೇ ಅವನಿಗಿತ್ತೆ ಎಂದರೆ ಹೌದೆಂದೇ ಅನಿಸುತ್ತದೆ. ಯಾಕೆಂದರೆ ಈ ಪತಿರಾಯ ಬಳಸಿಕೊಳ್ಳುತ್ತಿರುವ ವ್ಯಕ್ತಿಗೂ ಅಗತ್ಯವೆಷ್ಟೋ ಅಷ್ಟು ಇದರ ಸುಳಿವನ್ನು ಬಿಟ್ಟುಕೊಟ್ಟೇ ಇದನ್ನು ಆರಂಭಿಸಿದ್ದಾನೆ. ಮೊದಲಿಗೆ ತನ್ನ ಪತ್ನಿಯತ್ತ ಈ ಪಾತ್ರವನ್ನು ಸ್ವಲ್ಪಸ್ವಲ್ಪವೇ ದೂಡುವ, ದೂಡಿ ನೋಡುವ ಆಟವನ್ನು ಈತನೇ ಹೂಡುತ್ತಾನೆ. ನಂತರವಷ್ಟೇ ಅವನಿಗೆ ಗೊತ್ತಾಗುತ್ತದೆ, ಬಹುಷಃ ಅದರ ಅಗತ್ಯವೇ ಇಲ್ಲದಂತೆ ತನ್ನ ಪತ್ನಿಯೇ ಆ ಕಡೆ ಹೊರಟಿದ್ದಳು ಎನ್ನುವ ಸತ್ಯ. ಅದು ಪೂರ್ತಿ ನಿಜವಿರಲಾರದು ಮತ್ತೆ!

ಏನಿದ್ದರೂ ಈ ಮೂರನೇ ವ್ಯಕ್ತಿಗೆ ಈತನ ಪರಕಾಯ ಪ್ರವೇಶದ ಪ್ರಯೋಗದ ಸುಳಿವು ಹೆಚ್ಚೇನೂ ತಡವಾಗದೆ ಸಿಕ್ಕಿದೆ. ಒಂದಲ್ಲಾ ಒಂದು ದಿನ ಆತನೇ ನೇಪಥ್ಯದಿಂದ ನೇರ ರಂಗಕ್ಕೇ ಬಂದು, ಇನ್ನು ತನಗೆ ಈ ಡ್ಯೂಪ್ ಬೇಡ ಎಂದು ಘೋಷಿಸಿ ತಾನೇ ಇವನ ಪತ್ನಿಯೊಂದಿಗೆ ರಾಸಲೀಲೆಗಿಳಿದು ಬಿಟ್ಟರೆ ಎಂಬ ಒಂದು ಅತಿರೇಕದ ಸನ್ನಿವೇಶ ಸೃಷ್ಟಿಯಾಗಬಹುದೆನ್ನುವ ಕಲ್ಪನೆ ಅವನಲ್ಲಿದೆ. ಆದರೆ ಅಂಥ ಸಂದರ್ಭ ಹೂಬೇಹೂಬ್ ಎದುರಾಗಲಷ್ಟೇ ನೋಡಿಕೊಂಡರಾಯಿತು ಎನ್ನುವ ಉಡಾಫೆಯಲ್ಲ, ಸುಖದ ಹಪಹಪಿಕೆಯಡಿ ಕಾಣದಾದ ಸ್ಥಿತಿ ಅವನದ್ದು. ಅಲ್ಲಿಯವರೆಗೂ ತನ್ನ ಪ್ರಯೋಗವನ್ನು ಒಯ್ದೇ ಅದರ ಸುಖವನ್ನು ಅನುಭೋಗಿಸಬೇಕೆಂಬ ಲಾಲಸೆ ಅದು. ಯಯಾತಿಯ ಹಸಿವು!

ಆದರೆ ಅದೇ ಅವನಲ್ಲಿ ನಾಳೆ ದಿನ ತನ್ನ ಪತ್ನಿಯೇ ತನಗೆ ಈ ನಾಟಕದ ಪರಪುರುಷ ಬೇಡ, ನಿಜವಾದ ಪರಪುರುಷನೇ ಬೇಕು ಎಂದು ಹೊರಡುವ ಅತಿರೇಕ ಸೃಷ್ಟಿಯಾದರೆ ಎಂಬ ಬಗ್ಗೆ ಅಂಥ ತಯಾರಿ ಇರುವಂತೆ ಕಾಣುವುದಿಲ್ಲ. ತನ್ನ ಪತ್ನಿಯ ಅರೆಪ್ರಜ್ಞಾವಸ್ಥೆಯ ಸೋಗು ಕೂಡಾ ಒಂದು ಹಂತದ ಬಳಿಕ ಬರಿಯ ನಾಟಕವಷ್ಟೇ ಎನ್ನುವ ಅರಿವಿದ್ದೂ ಅವಳ ಸನಾತನವಾದ ಪಾರಂಪರಿಕ ಪತಿವ್ರತಾ ನಿಷ್ಠೆಯಲ್ಲಿ ಅವನಿಗೆ ಹೆಚ್ಚು ವಿಶ್ವಾಸವಿರುವಂತಿದೆ. ಆದರೆ ತಮಾಷೆ ಎಂದರೆ ಭಗ್ನಗೊಳ್ಳುವುದು ವಿಶ್ವಾಸವೇ ಹೊರತು ಅವನು ತೆಗೆದುಕೊಳ್ಳಲು ತಯಾರಿದ್ದ ರಿಸ್ಕ್ ಅಲ್ಲ!

ಇನ್ನೊಂದು ವಿಚಿತ್ರವೆಂದರೆ ತನ್ನ ಪತಿಯೇ ಇನ್ನೊಬ್ಬನಂತೆ ನಟಿಸುತ್ತ ತನ್ನ ಅರೆಪ್ರಜ್ಞಾವಸ್ಥೆಯಲ್ಲಿ ತನ್ನ ದೇಹದೊಂದಿಗೆ ಆಟವಾಡುವುದರ ಬಗ್ಗೆ, ತನ್ನನ್ನು ಭೋಗಿಸುತ್ತಿರುವುದರ ಬಗ್ಗೆ ಅಷ್ಟೇನೂ ಅನಜ್ಞಳಲ್ಲದ ಪತ್ನಿಗೂ ಪತಿ ಎಂತಿದ್ದರೂ ಪತಿಯೇ, ಪ್ರಿಯಕರ ಪ್ರಿಯಕರನೇ ಎಂಬುದು ಗೊತ್ತಿಲ್ಲವೆ? ಗೊತ್ತಿದೆ. ಆದರೂ ಯಾಕೆ ಅವಳು ತನಗೆ ಅಸಹ್ಯವೆನಿಸುತ್ತಿದ್ದ ಅದೇ ಪತಿಯ ಹೊಸ ನಾಟಕದಲ್ಲಿ ತಾನೊಂದು ಪಾತ್ರವಾಗುತ್ತಾಳೆ ಮತ್ತು ಪತಿ ಪತಿಯಾಗಿಯೇ ಬಂದಾಗ ತನಗೆ ಸಾಧ್ಯವಾಗದೇ ಹೋದ ಚೇಷ್ಠೆಗಳಿಗೆಲ್ಲ ಅವಕಾಶ ಕೊಟ್ಟು ಸಹಕರಿಸುತ್ತಾಳೆ, ಪತಿಯ ಪ್ರಯೋಗಕ್ಕೆ ತಾನು ಸ್ವ ಇಚ್ಛೆಯಿಂದ ಪ್ರಯೋಗಪಶುವಾಗುತ್ತಾಳೆ ಎಂದರೆ ಅವಳಿಗೆ ನಿಜವಾಗಿಯೂ ಪತಿಯ ಮೇಲೆ ಭಕ್ತಿ, ಪ್ರೀತಿ. ಪತಿಯ ನಿರೀಕ್ಷೆಗೆ ತಕ್ಕಂತೆ, ಅವನ ಸುಖಕ್ಕೆ ಬೇಕಾಗಿ, ಅವನಿಗೆ ಪತ್ನಿಯಾಗಿ ತಾನು ಸಲ್ಲಿಸ ಬೇಕಾದ, ನೀಡಬೇಕಾದ ಸುಖವನ್ನು ಅವನು ಹೇಗೆ ಬಯಸಿದರೆ ಹಾಗೆ ಸಲ್ಲಿಸಲು, ನೀಡಲು ತಾನು ಮಾಡುತ್ತಿರುವುದು ಅದು. ಪತಿವೃತಾ ಧರ್ಮದ ಯಥಾವತ್ ಪರಿಪಾಲನೆಯೇ ಹೊರತು ಇನ್ನೇನಲ್ಲ. ಹಾಗಂತ ಅವಳು ಬರೆದಿರುವುದು ಡೈರಿಯಲ್ಲಿ, ಮಗಳು ಪ್ರಶ್ನಿಸಿದಾಗ ಕೊಡುವ ಉತ್ತರವಾಗಿ. ಇಲ್ಲಿ ಎರಡು ಮುಖಗಳಿವೆ. ಒಂದು ತನ್ನನ್ನು ಕಟುವಾಗಿ ಪ್ರಶ್ನಿಸುತ್ತಿರುವ ಮಗಳೆದುರು ಸಮರ್ಥನೆಯಾಗಿ ಕೊಡುತ್ತಿರುವ ಉತ್ತರವಿದು. ಪ್ರಾಮಾಣಿಕತೆಯ ಪ್ರಶ್ನೆ ಎರಡನೆಯದ್ದು. ಮೊದಲಿಗೆ ತನ್ನುದ್ದಕ್ಕೂ ಬೆಳೆದು ನಿಂತ ಮಗಳೆದುರು ತನ್ನ ಗಂಡನೊಂದಿಗೇ ನಡೆಸುತ್ತಿರುವ ಲೈಂಗಿಕತೆಯ ವಿವರಗಳನ್ನು ಸಮರ್ಥಿಸಿಕೊಳ್ಳಬೇಕಾದ ತಾಯಿಯಾಗಿ ನಿಂತಾಗ ಬರುವ ಮಾತುಗಳವು. ನಂತರ ಡೈರಿಯಲ್ಲಿ ಅದನ್ನೇ ಬರೆದಾಗ ಅದರ ಉದ್ದೇಶ ಒಂದು ಗಂಡ ಓದಬೇಕು ಎನ್ನುವುದೇ. ಎರಡನೆಯದ್ದು ತನಗೇ ಅದು ಮೆಚ್ಚುಗೆಯಾಗಿದ್ದರ ಅಭಿವ್ಯಕ್ತಿಯಲ್ಲವೇ! ನಮ್ಮನ್ನೇ ಮೋಸ ಮಾಡುವ ನಮ್ಮದೇ ಸುಳ್ಳುಗಳೆಂದರೆ ಹೀಗಿರುತ್ತವೆ!

ಆದರೆ ಎಲ್ಲರನ್ನೂ ಮೂರ್ಖರನ್ನಾಗಿಸುವುದು ನಮ್ಮನ್ನೇ ನಾವು ಮೂರ್ಖರನ್ನಾಗಿಸಿಕೊಳ್ಳುವಷ್ಟು ಸುಲಭವಾಗಿರುವುದಿಲ್ಲ ಎನ್ನುವುದು ಎಂಥ ದುರಂತ ನೋಡಿ! ಈ ದಂಪತಿಗಳ ಚಟುವಟಿಕೆಗಳ ಶುಭಾಶುಭ ಫಲಾನುಭವಿಗಳು ಇನ್ನೂ ಇಬ್ಬರಿದ್ದಾರೆ! ಒಬ್ಬಳು ಇವರ, ಮದುವೆ ತಯಾರಾಗಿ ನಿಂತ ಮಗಳು. ಇನ್ನೊಬ್ಬ ಈ ಮಗಳ ಭಾವೀ ಪತಿ ಮತ್ತು ಪ್ರಯೋಗಪಶುವಾದ ಪರಪುರುಷ.

ಮಗಳಿಗೆ ಸತ್ಯ ಯಥಾವತ್ ಆಗಿಯೇ ಕಾಣಿಸುತ್ತಿದೆ. ತನ್ನ ಗಂಡನಾಗಬೇಕಿದ್ದ ಪುರುಷನೇ ತನ್ನ ತಾಯಿಯಲ್ಲಿ ಅನುರಕ್ತನೋ ಮೋಹಿತನೋ ಆಗಿರುವುದನ್ನು, ತಾಯಿ ಅದನ್ನು ಹಲವಾರು ಮುಖವಾಡಗಳ ಅಡಿಯಲ್ಲಿ (ಮುಗ್ಧತೆ, ಅರೆಪ್ರಜ್ಞಾವಸ್ಥೆ, ಪತಿವೃತಾ ಶಿರೋಮಣಿಯ ಸೋಗು ಇತ್ಯಾದಿ) ಮುಚ್ಚಿಟ್ಟುಕೊಂಡು ಸಮರ್ಥಿಸಿಕೊಳ್ಳುವುದನ್ನು, ತನ್ನ ತಂದೆಯೇ ಅವನ ಲೈಂಗಿಕ ಶಕ್ತಿಗೆದುರಾದ ಸವಾಲಿಗೆ ಉತ್ತರ ಕಂಡುಕೊಳ್ಳುವುದಕ್ಕೆ ಅವನನ್ನೇ ಅವನೊಡ್ದಿಕೊಂಡು ನಡೆಸುತ್ತಿರುವ ಪ್ರಯೋಗಗಳಲ್ಲಿ ತನ್ನ ಬದುಕು-ಭವಿಷ್ಯ ಛಿದ್ರವಾಗುತ್ತಿರುವುದನ್ನು - ಮತ್ತೆ ಮತ್ತೆ ಪರೀಕ್ಷಿಸಿ, ವಿವೇಚಿಸಿಯೇ ಅವಳು ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ವಸ್ತು ಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾಳೆ.

ಹಾಗೆ ಇಲ್ಲಿ ಇವರೂ ಪ್ರಯೋಗದೊಳಗಣ ಪ್ರಯೋಗಗಳಿಗೆ ಇಳಿಯುವುದುಂಟು! ಹಲವರ ಹಲವು schemeಗಳು, ಇನ್ನೊಬ್ಬರನ್ನು ಪ್ರಯೋಗ ಪಶುವನ್ನಾಗಿಸಿ ತಾವು ತಮ್ಮ ಸ್ವಾರ್ಥವನ್ನು, ಕಾಮನೆಗಳನ್ನು ಪೋಷಿಸಿಕೊಳ್ಳ ಬಯಸಿ ಹುಟ್ಟು ಹಾಕುವ ಮಿನಿ ಪ್ರಯೋಗಗಳು ಕೂಡಾ ಇಲ್ಲಿವೆ. ಈ ಇನ್ನೆರಡು ಪಾತ್ರಗಳ ಸ್ಪಂದನ, ಪ್ರತಿಕ್ರಿಯೆ, ಬದುಕು ಏನಾಗಬೇಕು ಈ ಎಲ್ಲದರ ನಡುವೆ? ಅದನ್ನು ಈ ಗಂಡ ಹೆಂಡಿರ ಡೈರಿ ಕಾಣಿಸುವುದೆಷ್ಟು, ನೀವೇ ಕಂಡುಕೊಳ್ಳಬೇಕಾದುದು ಎಷ್ಟು? ಕಾದಂಬರಿಯನ್ನು ನೀವೇ ಓದಲು ಅದು ಪ್ರೇರಣೆಯಾಗಲಿ.

ಆದರೆ ಕೊನೆಗೂ ಯಾರ ಯಾವ ಪ್ರಯೋಗದ ಬಲಿಪಶು ಯಾರು, ನಿಜವಾದ ಫಲಾನುಭವಿ ಯಾರು ಎಂಬ ಪ್ರಶ್ನೆಗಿಂತ ನಾವು ಬಹುವಾಗಿ ನಂಬಿ ನಿಂತ, ನಮ್ಮ ಸಾಂಸಾರಿಕ ವ್ಯವಸ್ಥೆ, ಸಮಾಜ - ಇವೆಲ್ಲ ನಿಂತಿರುವ ವ್ಯವಸ್ಥೆಯ ನೆಲೆಗಟ್ಟಾದ ಮನುಷ್ಯ ಸಂಬಂಧಗಳೇ ಪ್ರಶ್ನೆಗಳಂತೆ ಎದುರಾಗಿ ನಿಲ್ಲುವುದು ಇಲ್ಲಿನ ಜಿಜ್ಞಾಸೆಯಾಗಿದೆ. ಇದನ್ನು ದುರಂತ ಎಂದು ಹೇಳುತ್ತಿಲ್ಲ, ಹಾಗೆ ತಿಳಿಯಬೇಕಾಗಿಲ್ಲ. ಮನುಷ್ಯನ ಇತಿಹಾಸದಲ್ಲಿ ಸಭ್ಯತೆ, ನಾಗರೀಕತೆ, ನಿಷ್ಠೆ, ಸಂಯಮ, ನೀತಿ - ಇವುಗಳೆಲ್ಲ ಸಾಪೇಕ್ಷ ಸಿದ್ಧಾಂತಗಳಷ್ಟೇ, ಸಾರ್ವಕಾಲಿಕ ಸಿದ್ಧಾಂತಗಳೇನೂ ಅಲ್ಲ ಎಂಬುದನ್ನು ರಾಹುಲ ಸಾಂಕೃತ್ಯಾಯನರ ವೋಲ್ಗಾ-ಗಂಗಾದಿಂದ ತೊಡಗಿ ಇವತ್ತಿನ ದಿನ ನಮ್ಮ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವ ಗಂಡು ಹೆಣ್ಣು ಸಂಬಂಧದ ಬಿಕ್ಕಟ್ಟುಗಳ ವರೆಗೆ ಕಾಣುತ್ತಲೇ ಇದ್ಡೇವೆ! ಕೊನೆಗೂ ಮನುಷ್ಯ ಎಂಬುದು ಅತ್ಯಂತ ನೀಚನೂ ಪರಮ ಶ್ರೇಷ್ಠನೂ ಆಗಬಲ್ಲ ಒಂದು ಸಾಧ್ಯತೆ ಮಾತ್ರ ಎಂದ ಲಂಕೇಶ್ ಮಾತುಗಳು ಇಲ್ಲಿ ನೆನಪಾಗುತ್ತವೆ. ಕತೆಯನ್ನು ಹೇಳುವ ತಂತ್ರ ಕೂಡಾ ಕೆಲವೊಮ್ಮೆ ಇಂಥ ಸಾಧ್ಯತೆಗೆ ನಮ್ಮನ್ನು ಕೊಂಡೊಯ್ದು ನಿಲ್ಲಿಸುತ್ತದೆ, ಏನನ್ನೂ ಕೃತಿ ತಾನೇ ಇದಂಮಿತ್ಥಂ ಎಂದು ಹೇಳದೇನೇ ಮೌನವಾಗುತ್ತದೆ....
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ