Saturday, July 31, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಭಾಗ ನಾಲ್ಕು

ಈಗ ನೀವು ಒಂದೇ ಕತೆಯಲ್ಲಿ ಈ ತರ ಬೇರೆ ಬೇರೆ ಬರುತ್ತೆ ಅಂತ ಹೇಳಿದ್ರಲ್ಲ, actually ನಾನು ಒಂದು ಕರ್ಮಠ ವೈದಿಕ ಸಂಸ್ಕೃತಿ ಇದ್ಯಲ್ಲ, ಅಲ್ಲಿಂದ ನಾನು ಬಂದಿದೀನಿ. ಸೊ, ಹಾಗಾಗಿ, ಸೌಭಾಗ್ಯವತಿಯನ್ನ ನಾನೇನು ಬೇರೆದಾಗಿ, ಪ್ರತ್ಯೇಕವಾಗಿ ಕಲ್ಪನೆ ಮಾಡ್ಬೇಕಾಗಿರ್ಲಿಲ್ಲ. ಅಲ್ಲಿನ ಯಾವುದೇ ಒಂದು ಕರ್ಮಠ ವಿಷಯವೇ ಇರಬಹುದು, ಮಾನವೀಯ ವಿಷಯವೇ ಇರಬಹುದು. ಅದು ಎಷ್ಟರಮಟ್ಟಿಗೆ ಇದೆ ಅಂದ್ರೆ, ಹುಟ್ಟಿ ಬೆಳೆದಿದ್ದೆಲ್ಲ ಒಂದು ವೈದಿಕರ ಮನೆತನದಲ್ಲೇ ಆಗಿರೋದ್ರಿಂದ, ಸಂಸ್ಕೃತ ನಾನು ಕಲ್ತಿದೀನಿ, ಅದರ ಎಲ್ಲ ಆಚರಣೆಗಳೆಲ್ಲ ನನಗ್ಗೊತ್ತು. ಹಾಗಾಗಿ ನನಗೆ ಅದು ಪ್ರತ್ಯೇಕ ಅನಿಸ್ತಿಲ್ಲ. even ಕಡಲತೆರೆಗೆ ದಂಡೆ ಕತೆಯಿದೆಯಲ್ಲ, ಅವನು ಕೂಡ ಇಲ್ಲಿಂದ ಬಂದವನೇ ಅವ್ನು. ಒಂದು ವೈದಿಕ ಪರಂಪರೆಯಿಂದ ಬಂದವನೇ ಅವನೂ. ಹಾಗಾಗಿಯೇ, ಒಂದು ತರದ extreme conflicts ಇವೆ ಅವ್ನಿಗೆ. ನೀವು ಡಿ.ಆರ್.ನಾಗರಾಜ್ ಅವ್ರ ಮಾತುಗಳನ್ನ quote ಮಾಡಿದೀರಲ್ಲ, ಅಂದ್ರೆ ಭಾವುಕ ಸಂಬಂಧಗಳ ಅಪೇಕ್ಷೆಯಿಂದ ಮನುಷ್ಯ ಬಂಡೇಳೋದು ಅಂತ. ಡಿಆರ್ ನನಗೆ ವೈಯಕ್ತಿಕವಾಗಿ ಹೇಳ್ತಾ ಇದ್ದಿದ್ರಿಂದ, ಆ ತರ, ಅದು - ಬಂಡಾಯದ ಉತ್ತರಾಧಿಕಾರಿ ಅನ್ನೋ ತರ - ಅವರು ಬರೆದಿದಾರದನ್ನ. ಬಟ್ ಅದನ್ನ ಹಂಗೇನೂ ತಗೊಬೇಕಾಗಿಲ್ಲ ನಾವು. ಈ ಬಂಡಾಯವೇ ಬೇರೆ. ಮತ್ತೆ ಅಲ್ಲಿ ಅವನ ಬಂಡಾಯ ಇದೆಯಲ್ಲ, ಮನುಷ್ಯ ಇನ್ನಷ್ಟು finer aspectಗೆ ಹೋದ್ರೆ ಅದೇ ಅವನ ಬಂಡಾಯ. ಅದು ಸಂಬಂಧವನ್ನ - ಸಂಬಂಧದ ತೀವ್ರತೆಗಾಗಿ, ಅಂತಾನೆ. ನಾವೆಷ್ಟೋ ಸಲ shift ಮಾಡ್ತೀವಿ ನಮ್ಮ ನಿಲುವುಗಳನ್ನ. ಸೊ, ಒಂದು ಕಡೆ ನಿರಾಕರಣೆ ಇರುತ್ತೆ. ನಿರಾಕರಣೆ ಅಂದ್ರೆ ಬಂಡಾಯದ ಇನ್ನೊಂದು ರೂಪ ಅಷ್ಟೇನೆ ಅದು.

ಆಮೇಲೆ ಬೆಳಿತಾ ಬೆಳಿತಾ ನಾನು ಈ ಬಳ್ಳಾರಿಯಲ್ಲಿ ಅಥವಾ even ಈ ಗುಲ್ಬರ್ಗಾ ಈ ಕಡೆಯೆಲ್ಲ ಇಲ್ಲೆಲ್ಲ ನನಗೆ ಮುಸ್ಲಿಂ friends ತುಂಬ ಜನ ಇದಾರೆ ಹೊರಗಡೆ. ನನ್ನ ಹೊರಗಡೆಯ ಜಗತ್ತಿದೆಯಲ್ಲ, ಅಲ್ಲಿ ಮುಸ್ಲಿಮ್ಸು ಮತ್ತು ಬ್ರಾಹ್ಮಣೇತರರೇ actually ಒಂದು ಜಗತ್ತಲ್ಲಿ. ಎಲ್ಲ ಅವರೇ actually. ಈಗ್ಲೂನು ನನಗೆ ಎಷ್ಟೋ ಜನ ಈ ತರದ ಸ್ನೇಹಿತರುಗಳಿದಾರೆ, ಫೋನ್ ಮಾಡ್ತಾ ಇರ್ತಾರೆ. ಆದರೆ ಅವರ ಜಗತ್ತು ನನ್ನ ಜಗತ್ತು ಬೇರೇನೆ ಇರುತ್ತೆ. ಆದ್ರೆ ಈಗ್ಲೂನು ಹಳೇದೆಲ್ಲ ನೆನಪಿಸಿಕೊಂಡು ಮುವತ್ತು ವರ್ಷದ ಹಿಂದಿಂದನ್ನ ನೆನಸ್ಕೋತ ಇರ್ತೀವಿ. ಸೊ, ಅದ್ಯಾವ್ದನ್ನು ನಾನು ಕೃತಕವಾಗಿ ಸೃಷ್ಟಿ ಮಾಡ್ಲಿಲ್ಲ. ನನಗೆ ಅಂತರ್ಗತವಾಗಿರುವ ಅನುಭವಗಳನ್ನ ಮಾತ್ರ ನಾನು ಬರೆಯೋಕ್ಕೆ ಪ್ರಯತ್ನ ಮಾಡಿದೀನಿ. ಸೊ, ಅಲ್ಲಿ ಹಶಂಬಿಯ ಜೀವನ ಇದೆಯಲ್ಲ, ಅದು ಸಂಪೂರ್ಣವಾಗಿ ನಾನು ನೋಡಿ, ಅನುಭವಿಸಿ ಅವರ ಮನೆಗಳಲ್ಲಿ ಊಟಮಾಡಿ, ಅಲ್ಲೆ ಮಲಗಿ ಇದ್ದು ಮಾಡಿದಂಥದ್ದು. ಈ ರಂಜಾನ್ ಬರುತ್ತೆ ನೋಡಿ, ಆವಾಗೆಲ್ಲ ನಾವೇನ್ ಮಾಡ್ತಿದ್ವಿ ಅಂದ್ರೆ, ಈಗ ನೆನಪಿಸಿಕೊಂಡ್ರೂ ಮೈ ಜುಂ ಅನ್ನುತ್ತೆ, ರಾತ್ರಿಯೆಲ್ಲ ನಾವು ಒಂದು ಮಸೀದಿಯಿಂದ ಇನ್ನೊಂದು ಮಸೀದಿಗೆ ಭೇಟಿ ಕೊಡ್ತಾ ಇರ್ತಿದ್ವಿ. ನಮಾಜ್ ಮಾಡ್ತಿರ್ತಾರೆ ಅಲ್ಲಿ, ಪ್ರತಿ ಮೂರು ಗಂಟೆಗೆ ಒಂದ್ಸಲ. ಇಡೀ ರಂಜಾನ್ periodನಲ್ಲಿ. ರಾತ್ರಿ ಒಂಭತ್ತಕ್ಕೊಂದು ನಮಾಜ್ ಮುಗಿದ್ಮೇಲೆ ಹನ್ನೆರಡು ಗಂಟೆಗೆ ಇನ್ನೊಂದು ನಮಾಜಾಗುತ್ತೆ. ಸೊ ಒಂದು ಮಸೀದಿಗೆ ಹೋಗೋದು, ಅಲ್ಲಿ ಎಲ್ಲ ಮುಗಿದ್ಮೇಲೆ ಇನ್ನೊಂದು ಮಸೀದಿಗೆ ಹೋಗೋದು. ಪುನಃ ಮೂರುಗಂಟೆಗೆ ಮಾಡ್ತಾರೆ. ಸೊ ಆ ತರದ್ದೇನೊ ಒಂದು ಖುಶಿ ಇರ್ತಾ ಇತ್ತು ಆವಾಗ. ಇಡೀ ರಾತ್ರಿ ಅವರು ನಮಾಜ್ ಮಾಡ್ತಾ ಕಳೀಬೇಕು, every three hoursಗೆ. ಸೊ ಒಬ್ರನ್ನ ನೇಮಿಸಿರ್ತಾರೆ, ಎಲ್ಲಾ ಕಡೆ ಇರಲ್ಲ ಆ ತರ, ಅವರೇನ್ಮಾಡ್ತಾರೆ ಅಂದ್ರೆ, ತೀನ್ ಬಜೇ ಉಠೋ ಅಂತ ಒಂದಿದನ್ನ, ಕಂಜಃರಾ, ಹೊಡ್ಕೊಂಡು ಹೋಗ್ತಾರೆ. next ನಮಾಜ್ ಟೈಮಿದೆ, ಎದ್ದು ಬಿಟ್ಟು ನಮಾಜ್ ಮಾಡಿ ಅಂತ. ಆಮೇಲೆ ಆರು ಗಂಟೆಗೆ ಇನ್ನೊಂದಿರುತ್ತೆ. ಸೊ, ಇಡೀ ದಿವ್ಸ ಮೂರು ಮೂರು ಗಂಟೆಗೊಂದು ನಮಾಜಿರುತ್ತೆ ರಂಜಾನ್‌ನಲ್ಲಿ. ಅದ್ರಲ್ಲೆಲ್ಲ ನಾನು, ನಮಾಜ್ ಮಾಡ್ತಿರಲಿಲ್ಲ, ಆದ್ರೆ ಏನೋ ಒಂದು ಖುಶಿ ಇರ್ತಿತ್ತು. ಮಸೀದಿಗೆ ಹೋಗ್ಬಿಟ್ಟು ನೂರಾರು ಜನ ಮಲಕ್ಕೊಂಡಿರೋರು ಅಲ್ಲೆಲ್ಲ. actually ನಿದ್ದೆ ಇರೋಲ್ಲ ಅಲ್ಲಿ. next ನಮಾಜ್ ನೋಡ್ಬೇಕನ್ನೊ tension ನನಗೆ. ಸೊ ಅಲ್ಲಿ ಪಾತ್ರಗಳಿವೆಯಲ್ಲ, ಅವು ನಾನು ನೋಡಿರೋವು ಮತ್ತು ನಾನು ಅವನ್ನ ಅಂತರ್ಗತ ಮಾಡ್ಕೊಂಡಿರೋವು. ಸೊ ಅಲ್ಲಿ ಅವೆಲ್ಲ ಮುಸ್ಲಿಂ ಕ್ಯಾರೆಕ್ಟರ‍್ಸೆ ಅಲ್ಲ ಅವು ನನ್ನ ಪ್ರಕಾರ. ಈಗ ದೊರೆಸಾನಿಯಲ್ಲಿ ಬರೋ ಜಾಲಿಬೆಂಚಿನ, she is not a different character from me. ನಮ್ಮ ಮನೆ ಹಿಂದ್ಗಡೆ ಎಷ್ಟು ದೊಡ್ಡ ಸ್ಲಂ ಅಂದ್ರೆ ಅದು, ಸುಮಾರು ಒಂದು ಸಾವಿರ ಗುಡಿಸಲುಗಳಿದ್ದ ಸ್ಲಮ್ ಇತ್ತು. ಮತ್ತು ಎಷ್ಟೊಂದು ನೊಟೋರಿಯಸ್ ಇತ್ತು ಅಂದ್ರೆ ಅದು, ಹೆಚ್ಚು ಕಮ್ಮಿ ಪ್ರತಿದಿವ್ಸ ಒಂದೊಂದು fighting ನೋಡ್ತಾ ಇದ್ದೆ. ಎಷ್ಟು severe fightings ಅಂದ್ರೆ ಅವು, ಎಷ್ಟೊ ಸಲ ಈ ಕೈಬೆರಳನ್ನೆಲ್ಲ ರಿಕ್ಷಾದಲ್ಲಿ ಹಾಕ್ಕೊಂಡು ಹೋಗೋವ್ರು. ಅವನ್ನ ರಿಕ್ಷಾದಲ್ಲಿ ಹಾಕ್ಕೊಂಡ್ಯಾಕೆ ಹೋಗೋದಂದ್ರೆ ಅಲ್ಲಿ ಪೋಲೀಸ್ ಕಂಪ್ಲೇಂಟ್ ಕೊಡ್ಬೇಕಂತ. ಅವುಗಳನ್ನೆಲ್ಲ ನೋಡಿದೀನಿ. ಅಂದ್ರೆ ಜಗಳ ಆದ ತಕ್ಷಣ ಚಾಕುಗಳನ್ನ ತಗೊಂಬಂದು ಹೊಡೆಯೋದು. ಸೊ ಈ ಯಾವ್ದನ್ನೂ ನಾನು ಊಹಿಸಿಕೊಂಡು ಬರೆದಿಲ್ಲ. ಮತ್ತು ನೋಡಿ ಬರೆದಿಲ್ಲ. ಅವು actually ನನ್ನ ಜೀವನದ ಭಾಗವೇ ಆಗಿರುವ ಸಂಗತಿಗಳು. ಅಂಥವನ್ನ ಮುಂದೆ ನಾನು ಕತೆಗಳನ್ನ ಬರಿಯೋ ಸಂದರ್ಭದಲ್ಲಿ ಅದನ್ನ ಬರೀ ಬೇಕಾದಾಗ ಯಾವಾಗ್ಲು ಅದು ಬೇರೇನೆ ಬರೀತಿದೀನಿ ಅಂತ ಅನಿಸಿಲ್ಲ ನನಗೆ ಯಾವತ್ತೂ. ಬರೀಬೇಕಾದ ಸಂದರ್ಭದಲ್ಲಿ ಅವರೇ ಅದು. ಯಾಕಂದ್ರೆ ನನ್ ಭಾಗವೇ ಆಗಿರೋವ್ರು ಅವ್ರು. ಹಾಗಿರೋದ್ರಿಂದ ಕಷ್ಟ ಆಗಿದೆ ಅಂತ ನನಗೆ ಅನ್ಸಿಲ್ಲ ಯಾವತ್ತು. 

even ಇಂದುಮುಖಿ character ಇದೆಯಲ್ಲ, ಈಗ್ಲುನು ಈ ಒಂದು elite classಗಳ ಸೂಕ್ಷ್ಮತೆ ಇರೊವಂಥ, ಒಂದು ಕಡೆಯಿಂದ ಭಾಳ extreme hypocrisy ಅಂತ ಅನಿಸ್ತಾ ಇರುತ್ತದು, ನೀವು ತುಂಬ sensitive ಆಗಿದ್ರೆ. ಬಟ್ ಅವ್ರಿಗೆ ಅದು ಜೀವನ ಆಗಿರುತ್ತೆ. ಅಂಥವರನ್ನ ಈಗ ಸುಮಾರು ವರ್ಷಗಳಿಂದ ಈ NGO ಸ್ನೇಹಿತರು, ಈ ತರದ್ದೆಲ್ಲ ನಾನು ನೋಡಿದೀನಿ. ನನಗೆ ಬಹಳ ಹಿಪಾಕ್ರಸಿ ಅನಿಸ್ತಿರುತ್ತೆ. ಆದ್ರೆ ಅವರಿಗೆ ಹಿಪೋಕ್ರಸಿ ಅಲ್ಲ ಅದು. ಅದೇ ಅವ್ರಿಗೆ ಜೀವನ. ಅವ್ರ ತುಡಿತ ಎಲ್ಲಿದೆ ಅಂದ್ರೆ, ಹಣ ಮತ್ತು ಕೀರ್ತಿ ಈ ತರದ್ದೆಲ್ಲವನ್ನು ಮೀರಿದ ಒಂದು ತುಡಿತ. ಅಂದ್ರೆ, ಅದಕ್ಕೆ ಒಂದು ಹಿಪೋಕ್ರಟಿಕ್ ನೆಲೆನೂ ಇದೆ, ಪ್ರಾಮಾಣಿಕ ನೆಲೆನೂ ಇದೆ. ಸೊ ಅಂಥವ್ರನ್ನ ತುಂಬ ಜನರನ್ನ ನೋಡಿದೀನಿ. ಬಟ್ ತಮ್ಮ ಜೀವನವನ್ನ ನಾಶ ಮಾಡಿಕೊಂಡಿರೋವ್ರನ್ನು ನೋಡಿದೀನಿ. ಡ್ರಗ್ ಎಡಿಕ್ಟ್‌ಗಳಾಗಿ....ಸ್ವಾತಂತ್ರ್ಯದ ಪರಮಾವಧಿ ಇದು. ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರ ಬೇರೆ ಬೇರೆ ಅದು, ಎರಡೂನು. ಅದರ ಮಧ್ಯೆ ಒಂದು ಬಹಳ ತೆಳುವಾದ ಗೆರೆಯಿರುತ್ತೆ. ಸೊ, ಗೊತ್ತಾಗದೇನೆ ಸ್ವೇಚ್ಛಾಚಾರದಲ್ಲಿ ಕೊನೆಯಾದ ಒಂದು generation, ಆ generation particularly, ಈ extreme left ಇರ್ತಾರೆ ನೋಡಿ, ಒಂದೊ ನಕ್ಸಲೈಟ್ ಆಗ್ತಾರವರು. ಇಲ್ಲಾಂದ್ರೆ ಈ ತರ ಒಂದು lumpen ಕ್ಯಾರೆಕ್ಟರ್ಸ್ ಅಂತ ನಾವು ಹೇಳ್ತೀವಿ. ಸಮಾಜ ಯಾವ್ದನ್ನೆಲ್ಲ ತಿರಸ್ಕಾರ ಮಾಡುತ್ತೋ, ಅದನ್ನೆಲ್ಲ ಬೇಕು ಅಂತ. ಡ್ರಗ್ ಎಡಿಕ್ಷನ್ ಒಂದು ಅದ್ರಲ್ಲಿ. ಸೊ, ಇದೇ ಬೇರೆ ಅಂತೇನೂ ಅನ್ಸಿಲ್ಲ ನನಗೆ.


ಈ ಪ್ರಶ್ನೆ ಡಿ.ಆರ್.ನಾಗರಾಜ್ ಅವರ ಅಬ್ಸರ್ವೇಶನ್ನಿನ ಮೇಲೆ. ‘ಕಡಲತೆರೆಗೆ ದಂಡೆ’ ಸಂಕಲನದ ಮುನ್ನುಡಿಯಲ್ಲಿ ಅವರು ಆಧ್ಯಾತ್ಮಿಕ ಅಗತ್ಯವಾಗಿ ಬಂಡಾಯ ಅನ್ನುವ ಹೆಸರಿನಲ್ಲಿ ಬರೀತಾ ಹೇಳ್ತಾರೆ, "ತತ್‌ಕ್ಷಣದ ಶೋಷಣೆಯ ಕಾರಣಗಳು ಇಲ್ಲದಾಗಲೂ ಮನಸ್ಸೊಂದು ಕ್ರಾಂತಿಕಾರಿಯಾಗಲು ಯಾಕೆ ಹಾತೊರೆಯುತ್ತದೆ? ಯಾಕೆ ಬಂಡಾಯವೇಳುತ್ತದೆ? ಸರಳವಾಗಿ ಹೇಳುವುದಾದರೆ, ಇನ್ನಷ್ಟು ತೀವ್ರವಾದ ಸಂಬಂಧಗಳ ಅಗತ್ಯಕ್ಕಾಗಿ." ಅಂತ. ನಿಮ್ಮ ‘ಮಾತು ಯಾತನೆಯ ದಿಡ್ಡಿ ಬಾಗಿಲು’ ಕತೆಯ ಪುಟ 175ರಲ್ಲಿ ಮಿಲಿಂದನಿಗೂ ಧನಂಜಯನಿಗೂ ನಡೆಯುವ ಸಂಭಾಷಣೆಯ ಹಿನ್ನೆಲೆಯಲ್ಲಿ ಇದನ್ನು ನೀವು ಹೇಗೆ ನೋಡ್ತೀರಿ?


ಅದು actually ವ್ಯಾಮೋಹ ಅಂತ ಬಳಸಿದಾರಲ್ಲ, ವ್ಯಾಮೋಹವೆ ಅದು. ಅದಕ್ಕೆ ಪ್ರೀತೀನೆ ಭಾಳ ದೊಡ್ಡ ಉದಾಹರಣೆ ನಮಗೆ. ಈಗ ಒಬ್ಬ ಒಂದು ಜಾತಿ, ಇನ್ನೊಬ್ಬಳು ಬೇರೆ ಜಾತಿ. ಅಥವಾ ಎಷ್ಟೋ ಸಲ ಜಾತಿ ಕೂಡ ಕಾರಣ ಆಗಿರಲ್ಲ. ಅದೇ ಜಾತಿಯವರೇನೆ ಇರ್ತಾರೆ. ಆದ್ರೂನು ವಿರೋಧ ಇರುತ್ತೆ. ಮತ್ತು ಇದು eternal conflict ಇದು. ಯಾವ್ದೇ ಕಾಲದಲ್ಲಿ ಇರುವಂಥ conflict. ಸೊ ಅದನ್ನ ಮೀರೋದಿದೆಯಲ್ಲ, ಅದೇ ಬಂಡಾಯ. ಅಂದರೆ, ನಿನಗೆ ಪ್ರಸ್ತುತವಾಗಿರುವ ಮೌಲ್ಯ ನನಗೆ ಪ್ರಸ್ತುತವಾಗಿಲ್ಲ ಅಂತ ಅದು. ಅಂದ್ರೆ ಅದಕ್ಕಿಂತಲೂ ಉದಾತ್ತವಾದ ಮೌಲ್ಯಕ್ಕೆ ನಾ ಹೋಗಲಿಕ್ಕೆ ಇಷ್ಟಪಡ್ತಿರ್ತೀನಿ. ಈ ಒಂದೇ ಜಾತಿಯಲ್ಲಿ, ಒಂದೇ ಪಂಗಡದವರಲ್ಲಿ ಕೂಡ ಒಂದು ತಲೆಮಾರು ಇನ್ನೊಂದು ತಲೆಮಾರನ್ನ ವಿರೋಧಿಸಿ ಮಾಡೋದಿದ್ಯಲ್ಲ, ಸೂಕ್ಷ್ಮವಾದ ರೀತಿಯ ಬಂಡಾಯ, ಅದನ್ನ ಸಹಿಸೋಕೆ ಆಗಲ್ಲ. ಪ್ರೀತಿಸಿದವರಿಗೆ ಏನಂದ್ರೆ ತಾನಿಷ್ಟ ಪಟ್ಟವರ ಜೊತೆ ಇರಬೇಕು ಅನ್ನೋದೆ. ಆ shift ಇದ್ಯಲ್ಲ, ಅದು ಯಾವುದಕ್ಕಿರುತ್ತೆ ಅಂದ್ರೆ ವ್ಯಾಮೋಹಕ್ಕಾಗೆ ಇರುತ್ತೆ ಅದು. ಮತ್ತು ಇನ್ನಷ್ಟು ತೀವ್ರಗೊಳಿಸಬೇಕು ಸಂಬಂಧ ಅನ್ನೋದಕ್ಕಾಗೆ ಇದೆ ಅದು. ನೀನು ಹೇಳಿರೋದನ್ನ ಬಿಟ್ಟು ಇನ್ನೊಂದು ನನಗೆ ತೀವ್ರವಾಗಿ ಕಾಡ್ತಾ ಇದ್ರೆ, ಅಲ್ಲಿ ನಾನು ಹೋಗೋಕೆ ಇಷ್ಟ ಪಡ್ತೀನಿ ಅನ್ನೋದಿದ್ಯಲ್ಲ, ಅದು ಬಹಳ ಸೂಕ್ಷ್ಮವಾಗಿರುತ್ತೆ ಆ ಬಂಡಾಯ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Tuesday, July 27, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಭಾಗ ಮೂರು


ನಿಮ್ಮ ಕತೆಗಳಲ್ಲಿ ಆತ್ಮನಿವೇದನೆಯ ತಂತ್ರ ಭಾಗಶಃ ಬಳಕೆಯಾಗುತ್ತಾ ಇರುತ್ತೆ, ಪೂರ್ಣವಾಗಿ ಆಗುವುದಿಲ್ಲ. ಇದಕ್ಕೇನು ಕಾರಣ? ವಿಭಿನ್ನ ಹಿನ್ನೆಲೆಯ ಪಾತ್ರಗಳನ್ನ, ಉದಾಹರಣೆಗೆ ವೈದಿಕ ಹಿನ್ನೆಲೆಯ ತುಂಗಭದ್ರಾ, ಮುಸ್ಲಿಂ ಹಿನ್ನೆಲೆಯ ಹಶಂಬಿ, ನಾಟಕದವರ ಮಾಳವ್ವ - ಪಾತ್ರಗಳನ್ನ ನಿರ್ವಹಿಸುವಾಗ ಇದು ಕಷ್ಟ ಅಗುವುದಿಲ್ಲವೆ?

ನಾನು ಕತೆಗಳನ್ನ ಬರೆಯೋಕೆ ಸುರು ಮಾಡಿದ ಒಂದು ಕಾಲಘಟ್ಟ ಇದ್ಯಲ್ಲ. 80ರ ಸುಮಾರಿಗೆ ಅಂದ್ರೆ ನವ್ಯ ಸಾಹಿತ್ಯದ ಪ್ರಭಾವ ಇದೆ ನೋಡಿ, ಉತ್ಕರ್ಷದಲ್ಲಿದ್ದ ಕಾಲ. ನವ್ಯ ಸಾಹಿತ್ಯದಲ್ಲಿ ನೋಡಿದ್ರೆ ನೀವು, ಅಲ್ಲಿ, ಆತ್ಮನಿರೂಪಣೆಯ ಅಭಿವ್ಯಕ್ತಿ ಅತ್ಯಂತ ಮಹತ್ವದ್ದಿದೆ. ನೀವು ಅತ್ಯಂತ successful ಅನ್ನುವ ಕತೆಗಳನ್ನ ತಗೊಂಡ್ರೆ, ‘ಕ್ಲಿಪ್ ಜಾಯಿಂಟ್’ ತಗೊಳಿ, ಅಥವಾ ‘ಕ್ಷಿತಿಜ’ ತಗೊಳಿ, actually ಅದೇನು ಅವಳೇ ಕತೆ ಹೇಳೊಲ್ಲ, ಬಟ್ ಎಷ್ಟರ ಮಟ್ಟಿಗೆ ತೀವ್ರತೆ ಇದೆ ಅಂದ್ರಲ್ಲಿ ಅವಳೇ ಹೇಳ್ತಿದ್ದಾಳೆ ಅಂತ ನಿಮಗನಿಸುತ್ತೆ. ಆಮೇಲೆ ಅವರ ಮೊದಲ ಕಾದಂಬರಿ ಇದ್ಯಲ್ಲ, ಶಾಂತಿನಾಥ ದೇಸಾಯಿಯವರದ್ದು, ಮುಕ್ತಿ ಕಾದಂಬರಿ, ಅದನ್ನ ತಗೊಂಡ್ರೆ, ಅಲ್ಲಿ ನಾನು ನಾನು ನಾನು ಅಂತಾನೆ ಇದೆ. ಅಥವಾ ಶಿಕಾರಿ ಇರಬಹುದು. ಸೊ, ಇದ್ರಲ್ಲಿ ಭಾಳ finest ಆದ ಈ ತಂತ್ರವನ್ನ ನೋಡ್ತೀರಿ ನೀವು.

ಆಮೇಲೆ, ಅಂದ್ರೆ ಅದೇ ಕಾಲಘಟ್ಟದಲ್ಲಿ ಅಥವಾ ಸ್ವಲ್ಪ ಆಮೇಲೆ, ಒಂದು ಐದು ಅಥವಾ ಹತ್ತು ವರ್ಷದ ಆಸುಪಾಸಿನಲ್ಲಿ ನೋಡಿದ್ರೆ, ಈ ಜನಪ್ರಿಯ ಶೈಲಿಯಾಗಿ ಅದನ್ನ ನಕಲು ಮಾಡೋವ್ರೂ ಇರ್ತಾರೆ ತುಂಬ ಜನ. ಜನಪ್ರಿಯ ಮಾಧ್ಯಮದಲ್ಲಿ ನಿಮಗೆ ತಕ್ಷಣ ಗೊತ್ತಾಗಿ ಬಿಡುತ್ತೆ. ಒಂದು ತಂತ್ರ ಭಾಳ ಯಶಸ್ವಿಯಾಗಿ appreciation ಸಿಕ್ಕ ತಕ್ಷಣ ಜನ ಏನ್ಮಾಡ್ತಾರೆ, ಅದನ್ನ ಸಿದ್ಧ ಮಾದರಿ ಅಂತ ಅದನ್ನ ಸ್ವೀಕರಿಸಿಬಿಟ್ಟು ಆ ತರ ಬರೆಯೋಕೆ ಸುರು ಮಾಡಿ ಬಿಡ್ತಾರೆ. ಸೊ, ನನಗೇನಾಗ್ತಾ ಇತ್ತು ಅಂದ್ರೆ, ಒಂದು ನೆಲೆಯಲ್ಲಿ ಇವೆಲ್ಲ ನಾನು ಬಹಳ ಇಷ್ಟಪಟ್ಟ ಕತೆಗಳು ಮತ್ತೆ ಭಾಳ ಆಕರ್ಷಣೆ ಇತ್ತು ನನಗೆ. ದೇಸಾಯಿನೆ ಇರಬಹುದು, ಅನಂತಮೂರ್ತಿನೆ ಇರಬಹುದು, ಆ ತರದ, ನವ್ಯ ಕಾಲದಲ್ಲಿ ಬಂದ ಆತ್ಮನಿರೂಪಣಾ ತಂತ್ರದಲ್ಲಿ. ಸೊ, ತಂತ್ರವಾಗಿ ಅತ್ಯಂತ ಫಲಕಾರಿಯಾಗಿದೆ ಅದು. ಬಟ್ ಆಮೇಲೆ ಈ ಕಡೆ ನೀವು ಆಗ ಇದ್ದ ಬಹಳ ಜನಪ್ರಿಯ ಮ್ಯಾಗಝೀನ್‌ಗಳಲ್ಲಿ popular writings ಇರುತ್ತೆ ನೋಡಿ, ಎಲ್ಲ ಆ ತರನೆ. ಅಲ್ಲಿಂದ ನೇರವಾಗಿ ಆ ತಂತ್ರವನ್ನ ಸ್ವೀಕಾರ ಮಾಡಿಬಿಟ್ಟು ಯಾವ್ದೊ ಒಂದು ಅತ್ಯಂತ ಕಳಪೆ ಕತೆಯನ್ನ, ನಾಯಿ ಅದರ ಆತ್ಮಕತೇನ್ನ ಹೇಳುತ್ತೆ - ಅತೀ ಅನ್ನೋವಷ್ಟು ಈ ತರದ್ದೆಲ್ಲ. ಸೊ, ಇದು, ಬಹಳ ಕ್ಲೀಷೆ ಅನಿಸ್ತಾ ಇತ್ತದು. ಸೊ, ಇದನ್ನ ನನ್ನ ಮನಸ್ಸು ಒಪ್ತಾ ಇರ್ಲಿಲ್ಲ.

even ನವ್ಯದ ತಂತ್ರ ಕೂಡ ಇದ್ಯಲ್ಲ, ಅದಕ್ಕೆ ಅದರದ್ದೇ ಆದ ಮಿತಿಗಳೂ ಇದ್ವು. ಆತ್ಮನಿರೂಪಣಾ ತಂತ್ರದ ಕತೆಯ ಒಂದು ಅತ್ಯಂತ ದೊಡ್ಡ ಮಿತಿ ಏನಿರುತ್ತೆ ಅಂದ್ರೆ, ನೀವು ‘ನಾನು’ ಅಂತ ಕತೆ ಹೇಳೋಕೆ ಸುರು ಮಾಡಿಬಿಟ್ಟಾಗ ನಿಮ್ಮಾಚೆ ಏನು ಒಂದು ಜಗತ್ತಿರುತ್ತೆ, ಅದು ಮಿಸ್ ಆಗುತ್ತೆ. ಈ ತಂತ್ರ ಇಟ್ಟುಕೊಂಡು ಒಂದು ಕತೆ ಹೇಳ್ಬೇಕಾದ್ರೆ, ಎಲ್ಲವನ್ನೂ ನೀವು ಅದೇ ಒಂದು ನೆಲೆಯಲ್ಲಿ ಸ್ವೀಕಾರ ಮಾಡ್ಬೇಕಾಗುತ್ತೆ. ಸೊ, ಅದ್ರಾಚೆ ಕೆಲವು ಸೂಕ್ಷ್ಮತೆಗಳು finer aspects ಇರುತ್ತಲ್ಲ, ಅದನ್ನ ಈ ‘ನಾನು’ ಗುರ್ತಿಸಕ್ಕಾಗಲ್ಲ. ಯಾಕಂದ್ರೆ ನಾನು ಒಂದು ಕನ್ನಡಕ ಹಾಕ್ಕೊಂಡು ಬಿಟ್ಟು ಆ ಚೌಕಟ್ಟಿನೊಳಗಿದನ್ನ ಮಾತ್ರಾ ನೋಡಿದ ಹಾಗೆ ಅದು. ಸೊ, ಹೀಗಾಗಿ ಅದಕ್ಕೆ ತುಂಬ ಲಿಮಿಟೇಶನ್ ಇತ್ತು. ಅದೊಂದು. ಆಮೇಲೆ ಈ ಜನಪ್ರಿಯ ಸಂಸ್ಕೃತಿ ಸೃಷ್ಟಿ ಮಾಡ್ತಿದ್ದ ಈ ‘ನಾನು’ ಕ್ಲೀಷೆ ಇದ್ಯಲ್ಲ, ಸೊ ಅದು ಭಾಳ ಕಿರಿಕಿರಿ ಮಾಡ್ತಾ ಇತ್ತು ನನಗೆ. ಸಿಕ್ಕಾಪಟ್ಟೆ ಓದ್ತಾ ಇದ್ದೆ ನಾನಾವಾಗ. even ಕಥಾಸಂಕಲನಗಳು, ಈ ತರದ ಕತೆಗಳನ್ನೇ ಹೇಳೋವಂಥ ಕಥಾಸಂಕಲನಗಳು. ಈ ನವ್ಯದ failure writers ಇದ್ದಾರೆ ನೋಡಿ, ತುಂಬ ಜನ ಇದ್ದಾರೆ ಅಂಥವರು. ಅಥವಾ ಅವರು successfulಎ ಇರಬಹುದು, ಬಟ್ ನನ್ ಪ್ರಕಾರ failure writers, ಅಷ್ಟೆ. ಭಾಳ ಜನಾ ಇದ್ದಾರೆ. ಅದ್ರ ಕ್ಲೀಷೆ ಇದ್ಯಲ್ಲ, ಕಿರಿಕಿರಿ ಮಾಡ್ತಾ ಇತ್ತು ನನಗೆ.

ಸೊ, ಒಂದು: ಅದರ ತಂತ್ರ ಆಕರ್ಷಕವಾಗಿದೆ, ಅದು ಒಂದು. ಬಟ್ at the same time, ಎಲ್ಲಾ ಕಡೆನೂ ನನಗೆ ಹೊಂದಲ್ಲ ಅದು. ಸೊ ಏನೋ ಒಂದು ಸಮಸ್ಯೆ ಇದೆ ಇಲ್ಲಿ. ನಿರೂಪಣೆಯಲ್ಲಿ. ಇದನ್ನ ಮೀರಿದ ಒಂದು ನಿರೂಪಣೆಯು ಕೂಡ ಇರಬೇಕಾದ ಒಂದು ಅಗತ್ಯ ಇದೆ ಇಲ್ಲಿ. ಇಲ್ಲದೇ ಇದ್ರೆ ನಾನು ಕನ್ನಡಕ ಹಾಕ್ಕೊಂಡು ನೋಡ್ದಾಗ ಅದಕ್ಕೆಷ್ಟು ಪವರ್ ಇದೆ ಅಷ್ಟು ಮಾತ್ರ ನನಗೆ ಕಾಣುತ್ತೆ, ಆಮೇಲಿನದ್ದು ನನಗೆ ಕಾಣಲ್ಲ. ಸೊ ಇಲ್ಲಿ ಬಹಳ ತಿಕ್ಕಾಟ ನಡೆದಿದೆ ಅಂತ ಈಗ ಯೋಚನೆ ಮಾಡಿದ್ರೆ ನನಗೆ ಅನಿಸುತ್ತೆ. ಸೊ, ಹೀಗಾಗಿ ಏನ್ಮಾಡ್ತಾ ಇದ್ದೆ ಅಂದ್ರೆ ನಾನು, ಪ್ರಜ್ಞಾಪೂರ್ವಕವಾಗಿ ಅದನ್ನ ಮೀರಬೇಕು ಅನ್ನೋ ಒತ್ತಡ ಇತ್ತು ನನಗೆ.

ಈ ತಂತ್ರವಾಗಿ ನವ್ಯರ ಕೆಲವು finer aspects ನನಗೆ ತುಂಬ ಹಿಡಿಸ್ತಾ ಇತ್ತು. ಸೊ, ಆದರೆ ನವ್ಯರ ಕಂಟೆಂಟ್ ನನಗಿಷ್ಟ ಆಗ್ತಾ ಇರ್ಲಿಲ್ಲ. ಯಾಕಂದ್ರೆ ಅದು ಇದ್ದಲ್ಲೇ ಇದ್ದು ಅಲ್ಲೇ ಕೊಳೆತು ಕೊಳೆತು ಇನ್ನೇನು ಹೊಸತೂ ಆಗ್ತಾ ಇರ್ಲಿಲ್ಲ ಅಲ್ಲಿ. ಮತ್ತು ಅವರು ಅಲ್ಲೇ ಕೊಳೆತು ಹೋಗ್ತಾ ಇದ್ರು ಅಷ್ಟೆ.

ಈಗ, ಒಂದು ಸಿದ್ಧ ಮಾದರಿಯ ಚೌಕಟ್ಟುಗಳು ಎಲ್ಲಾ ಕಾಲ್ದಲ್ಲುನು ಇರುತ್ತೆ. ನನ್ನ ಹೋರಾಟ ಏನಿತ್ತು ಅಂದ್ರೆ, ಅದನ್ನ ಮೀರಬೇಕು ಅಂತನ್ನೋದೆ. ಅದು ನನ್ನ ಒಂದು ಬೇರೆ ಟ್ರೆಂಡ್ ಸುರು ಮಾಡ್ಬೇಕು ಅನ್ನೊ ಬೌದ್ಧಿಕ ದುರಂಹಂಕಾರದಿಂದಲ್ಲ. ಅಲ್ಲಿದ್ದ ಅಪ್ರಾಮಾಣಿಕತೆ ಇತ್ತಲ್ಲ, ಬರವಣಿಗೆಯ ಅಪ್ರಾಮಾಣಿಕತೆ, ಅದು ನನಗೆ ಯಾವತ್ತೂ ಹಿಡಿಸೋದಿಲ್ಲ. ಬಂಡಾಯನೇ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದ್ರೆ ಇದು, ಈ ಬರವಣಿಗೆಯ ಅಪ್ರಾಮಾಣಿಕತೆ ಅಂತನ್ನೋದು ಯಾರಿಗೂ ಅರ್ಥ ಆಗುತ್ತೆ.

ಈ ಬಂಡಾಯದ ಒಂದು ಅತ್ಯಂತ ದೊಡ್ಡ ಶಬ್ದ ಇತ್ತಾವಾಗ, sound ಅಂತೀವಲ್ಲ. ಬಂಡಾಯದ writers, ಮುಖ್ಯವಾಗಿ ಆವತ್ತಿನ forefronts ನಲ್ಲಿದ್ದ writersನ್ನ ಇವತ್ತು actually ಯಾರೂ ಅವರನ್ನ writers ಅಂತ recognise ಕೂಡಾ ಮಾಡಲ್ಲ. ಬಟ್ ಆವತ್ತು ಎಲ್ಲಾ ಪತ್ರಿಕೆಗಳಲ್ಲಿ, ಎಲ್ಲಾ ಕಡೆಗಳಲ್ಲಿ ಅವರೇ ಮಂಚೂಣಿಯಲ್ಲಿದ್ದಿದ್ದು ಸತ್ಯ. ಮತ್ತು ಅದಕ್ಕೊಂದು ಚಳವಳಿಯ ಸ್ವರೂಪ ಇದ್ದಿದ್ದರಿಂದ ಅದು ಮುಖ್ಯ ಕೂಡ. ಅಂದ್ರೆ ಅವರು ಎಷ್ಟೋ ವರ್ಷಗಳ ಕಾಲ ಜಿಲ್ಲೆ ಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ನಿರಂತರವಾಗಿ ಕವಿಗೋಷ್ಠಿಗಳನ್ನ ನಡೆಸ್ತಾ ಇದ್ರು, ಸಾಹಿತ್ಯದ ಗೋಷ್ಠಿಗಳನ್ನ ನಡೆಸ್ತಾ ಇದ್ರು, ಅಥವಾ ಸಮ್ಮೇಳನಗಳನ್ನ ನಡೆಸ್ತಾ ಇದ್ರು. ಬಟ್ ಇಲ್ಲಿ irony ಏನಿತ್ತು ಅಂದ್ರೆ, ಸೈದ್ಧಾಂತಿಕವಾಗಿ ಅವ್ರ ಜೊತೆಗಿದ್ದೆ ನಾನು, ಯಾಕಂದ್ರೆ ಎಡಪಂಥೀಯ ಇದ್ರಲ್ಲಿ ನಾನು ಬೆಳೆದಿದ್ದರಿಂದ. ಮನುಷ್ಯರ ಬಗ್ಗೆ, ಜನರ ಬಗ್ಗೆ ನಾವು ಮಾತನಾಡಬೇಕು ಮತ್ತು ಅವರ ಬಗ್ಗೆನೆ ನಾವು ಬರೆಯಬೇಕು ಅನ್ನೋ ಬಗ್ಗೆ ಯಾವ ಲೇಖಕನಿಗೂ ಭಿನ್ನಾಭಿಪ್ರಾಯ ಇರಲ್ಲ. ಆದರೆ ಅಲ್ಲಿ ಅವರ ಅಪ್ರಾಮಾಣಿಕತೆ ಇದ್ಯಲ್ಲ, ಬರವಣಿಗೆಯ ಅಪ್ರಾಮಾಣಿಕತೆ ಇತ್ತಲ್ಲ, ಯಾವ ಜಾತಿಯಿಂದನೇ ಬಂದಿರ್ಲಿ, ಸೊ, ಆ ಅಪ್ರಾಮಾಣಿಕತೆ ನನಗೆ ಹಿಡಿಸ್ತಾ ಇರ್ಲಿಲ್ಲ.

ಈ ಗೊಂದಲಗಳನ್ನ ಬಗೆಹರಿಸಿಕೊಳ್ಳಬೇಕಂದ್ರೆ ಬಹುಷಃ ಈ ಎಲ್ಲವನ್ನು ಸೇರಿಸಿಕೊಂಡು ಎಲ್ಲವನ್ನು ಮೀರಿದ್ದು ಏನಾದ್ರು ಒಂದು ಇದೆಯಾ ಅಂತನ್ನೊ ತಾಕಲಾಟ ತುಂಬ ಇತ್ತು ನನಗೆ. ಯಾಕಂದ್ರೆ ನನ್ನ ಆರಂಭದ ಕತೆಗಳಲ್ಲಿ, ಈ ‘ಪತ್ರೋಳಿ’ ಕತೆ ನೋಡಿದ್ರೆ ಅದು ಕಾಣುತ್ತೆ ನಿಮ್ಗದು, ಎದ್ದು ಕಾಣುತ್ತೆ. ಅದರ pattern ಇದೆಯಲ್ಲ, ಬಂಡಾಯದವರ set patternನ್ನ attack ಮಾಡ್ಬೇಕು ಅಂತ ಆ ತರ ಬರ್ದಿದ್ದು ನಾನು. ಎಷ್ಟರ ಮಟ್ಟಿಗೆ success ಆಗಿದ್ದೀನಿ, ಅದೆಲ್ಲ ನನಗೊತ್ತಿಲ್ಲ. ಬಟ್ ಅದು ನನ್ನ ಉದ್ದೇಶ ಆಗಿತ್ತು. ಅಂದ್ರೆ, ಈಗ ಜೀವನದ ಸಿದ್ಧಾಂತವಾಗಿ ಬಂಡಾಯದ ಸಿದ್ಧಾಂತ ಹೆಚ್ಚು ಹತ್ತಿರದಲ್ಲಿದೆ ನನಗೆ, ಈಗ್ಲೂನು. ಬಂಡಾಯ ಅಂದ್ರೆ ಬಂಡಾಯ writers ಅಲ್ಲ. ಯಾವ್ದೇ ಒಬ್ಬ, ಈಗ ಅಲ್ಬರ್ಟ್ ಕಮೂ ನಾನು ತುಂಬ ಇಷ್ಟ ಪಡುವ ಒಬ್ಬ ಲೇಖಕ ಅವನು. ಅವ್ನು ಎಲ್ಲಾ extreme content ನ್ನೂ ಬರಿದ್ದಾನವ್ನು. even ಸಾರ್ತ್ರ್. ಸಾರ್ತ್ರ್ ಅಥವಾ ಕಮೂ ಅಥವಾ ಬೇರೆ ಯಾವ್ದೇ intellectuals, ಸೈದ್ಧಾಂತಿಕವಾಗಿ ನಾವು ಒಪ್ಕೊಂಡಿರೋವಂಥವರು, ನವ್ಯರು ಒಪ್ಕೊಂಡಿದ್ದರಲ್ಲ, ಅಂಥವರು. ಅವರು partial ಆಗಿ ಮಾತ್ರ ಅವರನ್ನ ನೋಡಿದ್ದಾರೆ. ಸೊ, ಅದ್ರಿಂದ ಅವರು ಬಹಳ damage ಮಾಡಿದ್ದಾರೆ, ಕನ್ನಡ ಸಾಹಿತ್ಯಕ್ಕೆ. ಈಗ ಅನಂತಮೂರ್ತಿಯವರ ಹಿಂದಿನ ಬರಹಗಳನ್ನ ನೋಡಿದ್ರೆ, ಅವರ ಸಂಸ್ಕೃತಿಯ ಬಗ್ಗೆ ಬರೆದ ಬರಹಗಳು, ‘ಪ್ರಜ್ಞೆ ಮತ್ತು ಪರಿಸರ’ದಲ್ಲಿ - ಅದು ಬಹಳ partial ಇದೆ ಅದು. ಅವ್ರಿಗೆಷ್ಟು ಬೇಕೊ ಅಷ್ಟನ್ನ ಮಾತ್ರ ತಗೊಂಬಿಟ್ಟು ಒಂದು ideology ಅನ್ನೊತರ ಅವ್ರದನ್ನ ಹೇಳಿದ್ರು. ಬಟ್ ಇವ್ರು ಬರೆಯೋವಾಗ್ಲೆನೆ ಅದಕ್ಕೆ ಮೀರಿ ಅವ್ರು ಆಲೋಚನೆ ಮಾಡ್ತಾ ಇದ್ರು ಅಲ್ಲಿ. ಸೊ, ನವ್ಯಕ್ಕೆ ಪ್ರೇರಣೆ ಅಂತ ಇವ್ರು ಹೇಳ್ತಾ ಇದ್ದಾರಲ್ಲ, ಇವರು ಪ್ರೇರಣೆ ಯಾರಿಂದ ಪಡೆದರೋ ಅವರು actually ಆ ತರ ಇರ್ಲಿಲ್ಲ. ಒಂದು ವಿಚಾರಾನ ಭಾಗಶಃ ತಗೊಂಡು ನೀವು ಅವರನ್ನ ಅಷ್ಟೇ ನೋಡಿದ್ರೆ, ಈ ಥರ ಆಗುತ್ತೆ. ಅಂದ್ರೆ ಈ ಎರಡನ್ನ ಸೇರಿಸಿ ನಾನು ಅಂದ್ರೆ, ನಿಜವಾದ ಜೀವನ ಸಿದ್ಧಾಂತ, ಅದನ್ನ ಬಂಡಾಯ ಅಂತ ಕರೀರಿ ಅಥವಾ ಮಾರ್ಕ್ಸಿಸಂ ಅಂತ ಕರೀರಿ ಅಥವಾ ಏನಾದ್ರು ಕರೀರಿ ನೀವು, ಮತ್ತೆ ನಿಜವಾದ ಕಲೆಯನ್ನ ಹೇಗೆ ಅದರ finer aspects ನಲ್ಲಿ ಅದನ್ನ ನಾವಿಡಬಹುದು ಅನ್ನೋದನ್ನ ಗಂಭೀರ ಜೀವನ ಸಿದ್ಧಾಂತ ಅಂತ ಅಲ್ಲ ಅದು, ಅದು ಕಲೆಯ ಸಿದ್ಧಾಂತ ಅದು, ಅಷ್ಟೆ. ಅವೆರಡನ್ನ ಸೇರಿಸಿ ಹೇಗೆ ಬರೀಬಹುದು ಅಂತ ಯೋಚನೆ ಮಾಡಿದಾಗ ಬಹುಷಃ ಈ ತರದ್ದೊಂದನ್ನ ನಾನು ಕಂಡ್ಕೊಂಡಿದ್ದೀನಿ ಅಂತ ಈಗ ಅನಿಸುತ್ತೆ. ಆಗ ಅದನ್ನು ಮೀರಬೇಕು ಅನ್ನೋದು ನನ್ನ conscious... effort ಅಂತ ಅಲ್ಲ, ಭಾಳ ಪ್ರಜ್ಞಾಪೂರ್ವಕವಾಗಿತ್ತು ಅದನ್ನ ಮೀರಬೇಕು ಅನ್ನೋದು. ಆದ್ರೆ ಇಂಥ ತಂತ್ರ ಸೃಷ್ಠಿ ಮಾಡಬೇಕು ಅಂತ ಅನ್ನೋದರ ಬಗ್ಗೆ ನಾನು ಅಂಥ conscious ಆಗಿಯೇನು ಇರ್ಲಿಲ್ಲ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Friday, July 23, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಭಾಗ ಎರಡು

ನಿಮ್ಮ ನೆಲೆಯ ಅನುಕಂಪವನ್ನು ಬಿಟ್ಟು ಸಮುದಾಯದ ನೆಲೆಯಲ್ಲಿ ಈ ಸಂವೇದನೆಯನ್ನು ಗಮನಿಸಿದ್ರೆ, ಬದಲಾಗ್ತಾ ಇರುವ ಪರಿಸ್ಥಿತಿಯಲ್ಲಿ ಸಮುದಾಯದ ಸಂವೇದನೆಯ ನೆಲೆಗಳು ಕೂಡ ಬದಲಾಗ್ತ ಇವೆ ಅನಿಸುವುದಿಲ್ಲವೆ?

ಈಗ ನೋಡಿ ಈ ಜಗತ್ತು ಹೇಗೆ ಕ್ಷಿಪ್ರಗತಿಯಲ್ಲಿ ಬದಲಾಗ್ತಾ ಇರುತ್ತೆ, ಅದಕ್ಕೆ ತಕ್ಕ ಹಾಗೆ ಆ ಜಗತ್ತಿಗೆ ತೆರೆದುಕೊಂಡಿರೋ ಎಲ್ರೂನು ಬದಲಾಗ್ತಾ ಇರ್ತಾರೆ. ಸೊ, ಈ shift ಅಲ್ಲಿನೂ ಆಗ್ತಾ ಇಲ್ವ ಅಂತ ನಿಮ್ಮ ಪ್ರಶ್ನೆ. ಖಂಡಿತ shift ಆಗ್ತಾನೆ ಇರುತ್ತೆ. ಬಟ್ ಯಾವ್ದೇ ಒಂದು ಸಮಾಜದ ಜವಾಬ್ದಾರಿ ಏನಿರುತ್ತೆ ಅಂದ್ರೆ, ಈಗ ಸೂಕ್ಷ್ಮತೆ ಇದೆಯಲ್ಲ, ಅದನ್ನ ಉಳಿಸ್ಕೊಂಡು ಬರಬೇಕಾಗುತ್ತೆ ಅನ್ನೋದು.


ಈಗ ಈ ಜಾಗತೀಕರಣಕ್ಕೆ ಒಂದೊಂದು ದೇಶ ಒಂದೊಂದು ತರ ತೆರೆದುಕೊಂಡಿದೆ. ಆ ತರದ್ದೆ ಒಂದು ವೈಚಾರಿಕ ನೆಲೆಯಲ್ಲಿ ಸೂಕ್ಷ್ಮವಾಗಿಲ್ದೆ ಇರೋವಂಥ ದೇಶವಾಗಿರೋದ್ರಿಂದ ಇದು, ಭಾರತ ದೇಶ, ಬದಲಾವಣೆಗೆ, ಹೊಸ ಟೆಕ್ನಾಲಜಿಗೆ ವಿವೇಚನೆ ಇಲ್ಲದೆ ತೆರೆದುಕೊಳ್ತಾ ಇದೆ. ಈಗ ಮೊಬೈಲ್ ಟೆಕ್ನಾಲಜಿನೆ ತಗೊಳ್ಳಿ. ನಾನು ಎಷ್ಟೊಂದು ಯೋಚ್ನೆ ಮಾಡಿದೀನಂದ್ರೆ, ಇದು actually ಒಂದು social securityಯನ್ನೆ ಹಾಳು ಮಾಡ್ತಾ ಇದೆ ಇದು. socially unproductive ಆದ, ಖಾಸಗಿಯಾಗಿನು unproductive ಆದ ಒಂದು ಅನಗತ್ಯ ಖರ್ಚನ್ನು, ಯಾವುದು ಅವನ ಜೀವನವನ್ನು ರೂಪಿಸಬಹುದಾಗಿತ್ತೊ ಆ ಖರ್ಚನ್ನು ಹೊರಿಸಿದೆ ಅವನ ಮೇಲೆ. social security ಅಂತ ನಾನು ಹೇಳ್ತಾ ಇದೀನಿ, ಅದನ್ನ ಕಳಕೊಳ್ತಾ ಇದ್ದಾನೆ ಅವನು. ಅದು ಯಾಕೆ ಹಾಗಾಗಿದೆ ಅಂತಂದ್ರೆ, ಒಂದು ದೇಶವಾಗಿ ನಾವು ಅತ್ಯಂತ ವಿಶಾಲವಾದ ನೆಲೆಯಲ್ಲಿ, ಅಂದ್ರೆ technologyಯನ್ನ ಹೇಗೆ ಬಳಸಬಹುದು ಅಂತ ನಾವು ವಿವೇಚನೆಯನ್ನ ಬಳಸ್ದೇ ಇದ್ದಿದ್ರಿಂದ, ಎಲ್ಲಾದಕ್ಕೂ ನಾವು ತೆರೆದುಕೊಂಡಿರೋದ್ರಿಂದ ಅದ್ರ side affectsಗಳನ್ನ ನಾವು ನೋಡ್ತಾ ಇದೀವಿ. ಒಪ್ಕೊಂಡಿರೋದ್ರಿಂದ ನಾವು ಪಡಕೊಳ್ತಾ ಇರೋ possitive sidesನೂ ಇರುತ್ತೆ ಯಾವಾಗ್ಲುನು. ಬಟ್, ಅದ್ರ ill affects ಇವೆಯಲ್ಲ, ಅವು ಯಾವನಿಗೆ ಏನೂ ಇಲ್ವೊ ಅವ್ನಿಗೆ ಆಗ್ತಿರುತ್ತೆ. ಸೊ, ಪಡ್ಕೊಳ್ಳೋದು ಯಾರು ಪಡ್ಕೋತಿದಾರಂದ್ರೆ, ಯಾರು ಬಲಾಢ್ಯರು ಅವ್ರು. ಅವ್ರು ಈ ಎಲ್ಲದರ ಗರಿಷ್ಠ ಲಾಭವನ್ನ ಪಡ್ಕೊಂಡು ಇನ್ನಷ್ಟು ಪ್ರಬಲರಾಗ್ಬಿಟ್ಟು ಅಂದ್ರೆ, survivalಗೆ ಇನ್ನಷ್ಟು fit ಆಗ್ತಿರ್ತಾರೆ ಮತ್ತು ಯಾರಿಗೆ ಏನೂ ಇಲ್ವಲ್ಲ, ಅವ್ನು ಇರೋದನ್ನೂ ಅದಕ್ಕಾಗಿ ಕಳ್ಕೋತಾ ಇರ್ತಾನೆ. ಅವ್ನಿಗೆ ಇದೆಲ್ಲ ಬೇಕೇ ಬೇಕಾದ್ದಲ್ಲ, actually. ಇದೊಂದು ಸಣ್ಣ ಉದಾಹರಣೆ ಅಷ್ಟೇನೆ ಇದು.

ಈಗ ಮೌಲ್ಯಗಳು ಯಾಕೆ shift ಆಗ್ತಾ ಇವೆ ಅಂತಂದ್ರೆ, ಈಗ ಸಂವಹನ ಮಾತಿನ ಮೂಲಕ ಮಾತ್ರ ಸಾಧ್ಯ ಆಗುತ್ತೆ, ಒಬ್ರು ಇನ್ನೊಬ್ರನ್ನ ಭೇಟಿಯಾಗೊ ಮೂಲಕ ಮಾತ್ರ ಸಾಧ್ಯ ಆಗುತ್ತೆ ಅಂತನ್ನೋದು ಒಂದು ಮೌಲ್ಯ ಅದು actually. ಮನುಷ್ಯ ಇನ್ನೊಬ್ಬ ಮನುಷ್ಯನ ಜೊತೆ ಮಾತಾಡೋದು. ಜಗಳಾನೆ ಇರಬಹುದು. ಅವನಿಗೆ ನಾನಿನ್ನ ಹೊಡೆದಾಕ್ತೀನಿ ಅನ್ನೋ ಜಗಳಾನೆ ಇರಬಹುದು. ಬಟ್ ಎಲ್ಲಾ ಕಾಲಕ್ಕೂ ಜಗಳಾನೆ ಇರುತ್ತೇನೊ ಗೊತ್ತಿಲ್ಲ ನಮಗೆ. ಅದೇನೆ ಇದ್ರೂನು ಆ ತರದ್ದೊಂದು ಸಂವಹನದ ಸಾಧ್ಯತೆಯನ್ನೆ ಕಡಿದು ಹಾಕ್ತಾ ಇದೆ ಇದು. ಬಟ್ ಅದೇ ಒಂದು ಸಮಾಜವಾಗಿ ಒಂದು ಗ್ರಾಮದ ಸಮಾಜನು ಇರಬಹುದು, ದೇಶದ ಸಮಾಜನು ಇರಬಹುದು, ಅದನ್ನ, ಆತರದ ಮೌಲ್ಯಗಳನ್ನ ಉಳಿಸ್ಕೋಬೇಕು ಅಂತ conscious effort ಮಾಡ್ತಾ ಇಲ್ಲ. ಅಂದ್ರೆ, ಅದ್ರ ಮೂಲಕ ಆ ಸಮಾಜ ನಂಬಿರೋ ಮೌಲ್ಯಗಳಿವೆಯಲ್ಲ ಅವನ್ನ ಕೂಡ ನಾಶ ಮಾಡ್ತಿದೆ ಅದು. ಅಂದ್ರೆ ಹೊರಗಡೆ ಅದ್ರ affect ಎಷ್ಟಿದೆಯೊ ಒಳಗಡೆಯಿಂದನೂ ಅಷ್ಟೇ affect ಇರುತ್ತೆ. ಅದು ವೈಯಕ್ತಿಕ ನೆಲೆಯಲ್ಲಿ ಪ್ರಾಮಾಣಿಕನಾಗಿಲ್ದೆ ಇದ್ರೆ, ನಿಷ್ಠನಾಗಿಲ್ದೆ ಇದ್ರೆ ಆತರದ ಮೂಲಕನೂ ಈ ಮೌಲ್ಯಗಳು currupt ಆಗ್ತಾ ಇರುತ್ತೆ. ಇದು ಬಹುಪಾಲು ಹೊರಗಡೆಯಿಂದಾನೆ, ಏನು ಸಮಾಜದ ಮೌಲ್ಯ ಅಂತ ಹೇಳ್ತೀವಲ್ಲ, ಅದು ಸಾಕಷ್ಟು ನಾಶ ಆಗ್ತಾ ಇದೆ. ಸೊ ಇದೇ ಕಾರಣ ಅದಕ್ಕೆ.


ಅನುಕಂಪ actually ಸಮುದಾಯದ್ದೆ ಅದು. no doubt about it. ಆದರೆ ಇಂಥಾವನ್ನ ಕಳಕೊಳ್ಳೋದಕ್ಕೆ ಈ ತರಹದ್ದೇನೇನೋ ಕಾರಣಗಳಿವೆ. ಅದನ್ನ ನಾವು ವ್ಯವಸ್ಥಿತವಾಗಿ ನಾಶ ಮಾಡ್ತ ಇದೀವಿ. ಈಗ ನೋಡ್ರಿ ಹಿಂದೆ ಯಾವ್ದಾದ್ರು ಒಂದು ಸಣ್ಣ ಸಂತೆಯಾದಾಗ, ಅಥವಾ ಜಾತ್ರೆಯಾದಾಗ, ಇದು ಬಹಳ ಕ್ಲೀಷೆ ನಾನು ಹೇಳ್ತಾ ಇರೋದು, ಆದ್ರೂ ಹೀಗೆ ಸುಮ್ನೆ ನೋಡಿ; ಇನ್ನೊಬ್ರ ಮನೆಗೆ ಹಬ್ಬಕ್ಕೆ ಹೋಗೋದು, ಈ ತರದ್ದೆಲ್ಲ ಇದ್ಯಲ್ಲ, ಈಗ ಏನೂ ಇಲ್ಲ ಈ ತರದ್ದು. ಅಂದ್ರೆ ಅವನ್ನ ನಾವು ವ್ಯವಸ್ಥಿತವಾಗಿ ನಾವೇ ಕೊಲ್ತಾ ಇದ್ದೀವಿ. ಈಗ ಆ ತರದ್ದೊಂದು ಕೊಡು-ಕೊಳುವ ಸಂಬಂಧ ನಾವು ಕಳಕೊಳ್ತಾ ಇದ್ದೀವಿ ಯಾಕಂದ್ರೆ ಹೊರಗಡೆ ನಮಗೆ ಇವನ್ನೆಲ್ಲ ಕಳಕೊಳ್ಳೋತರ ಮಾಡೋ ಬೇರೆ ಬೇರೆ ಏನೇನೊ ಅವಕಾಶಗಳು ಸಿಗ್ತಾ ಇವೆ. ಪತ್ರ ಬರೆಯೋದೆ ತಗೊಳ್ಳಿ. SMS ಕಳಿಸೋದು ಬಹಳ ಸುಲಭ ಇದೆ. ಸೊ, actually ಅದ್ರ ಬಗ್ಗೆನು ನಾನು ಬರ‍್ದಿದ್ದೀನಿ. ಅಂದ್ರೆ ಅದು ತಪ್ಪು ಅಂತ ನಾನು ಹೇಳ್ತಾ ಇಲ್ಲ. ಬಟ್ ಅದು ‘ಸಂಬಂಧ’ವನ್ನ ಮೀರಬಾರದು. ಆ technology ಅದೊಂದು replaement ಅಲ್ಲ, ಆಗಬಾರದು. SMS ಅನ್ನೋದು ಒಬ್ಬನ್ನ ಭೇಟಿಯಾಗೋದಕ್ಕೆ ಮಾತನಾಡೋದಕ್ಕೆ replacement ಆಗ್ಬಾರ್ದು. ಬಟ್ ವಿವೇಚನೆ ಇಲ್ದಿರೋ ಸಮಾಜಗಳು ಏನ್ಮಾಡ್ತವೆ ಅಂದ್ರೆ ಅವನ್ನ ಹೇಗಿರುತ್ತೋ ಹಾಗೆ ಸ್ವೀಕರಿಸಿಬಿಡುತ್ವೆ. ಕೊನೆಗೆ ಸೂಕ್ಷ್ಮವಾದ ಎಲ್ಲವನ್ನು ಕಳಕೊಂಡು ಬಿಟ್ಟು ನಾವು ಆ ತರ, ಸಂವೇದನಾ ಶೂನ್ಯ ಆಗಿಬಿಟ್ಟಿರ್ತೀವಿ. ಸೊ ಇಲ್ಲಿನು ಅದೇ ತರದ ಸಮಸ್ಯೆ ಇದೆ ಅಂತ ನನಗನಿಸುತ್ತೆ.
(ಫೋಟೋ: Mr. James P Blair, ಕೃಪೆ: ನ್ಯಾಶನಲ್ ಜಿಯಾಗ್ರಫಿ ಫೋಟೋ ಗ್ಯಾಲರಿ)

ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, July 18, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಭಾಗ ಒಂದು

ಕತೆಗಾರಿಕೆಯನ್ನು ಒಂದು ಕಲಾ ಮಾಧ್ಯಮವಾಗಿ ನೋಡುವಾಗಲೂ, ಅದು ಬದುಕನ್ನು, ಜೀವಂತ ಮನುಷ್ಯರನ್ನು ಕಟ್ಟಿಕೊಡಬೇಕು, ಅವರು ಬೆವರು, ಸ್ಪರ್ಶ, ವಾಸನೆ, ನೋಟವಾಗಿ ಓದುಗರಿಗೆ ಒದಗಿಬರಬೇಕು, ಒಂದು ಕಥಾನಕದ ಅಷ್ಟೂ ಪಾತ್ರಗಳನ್ನು ಅಕ್ಷರದಲ್ಲಿ ಮತ್ತೊಮ್ಮೆ ಜೀವಂತವಾಗಿಸಬೇಕು, ಅವರ ಬದುಕನ್ನು ಓದುಗ ತಲುಪಬೇಕು ಎನ್ನುವ ಆಳವಾದ ಮತ್ತು ಧೀಮಂತವಾದ ಉದ್ದೇಶವನ್ನಿಟ್ಟುಕೊಂಡು, ಅದುವರೆಗಿನ ಎಲ್ಲ ಸ್ಥಾಪಿತ, ಸಿದ್ಧ ಮಾದರಿಗಳಿಂದ ಹೊರಬಂದು ಕತೆ-ಕಾದಂಬರಿಗಳನ್ನು ಬರೆದ ಕತೆಗಾರ, ಕೇಶವ ಮಳಗಿ. ಸದ್ದು ಗದ್ದಲವಿಲ್ಲದೆ, ಸಾಹಿತಿ ಗಡಣದಿಂದ ಸ್ವಪ್ರಯತ್ನ ಸಾಧ್ಯವಿದ್ದಷ್ಟೂ ದೂರವಿದ್ದು ಓದುತ್ತ, ಬರೆಯುತ್ತ ಬಂದಿರುವ ಕೇಶವ ಮಳಗಿ ಇದುವರೆಗೆ ಬರೆದಿರುವುದು ಕಡಿಮೆ. ಆದರೆ ಬರೆದಿರುವುದನ್ನು ಓದದಿದ್ದರೆ ಸಾಹಿತ್ಯದ ಒಂದು ಪಾರ್ಶ್ವದಿಂದ ವಂಚಿತರಾದಂತೆಯೇ.


ಪ್ರಸ್ತುತ ಅವರು ಫ್ರೆಂಚ್ ಸಾಹಿತ್ಯ - ಸಿದ್ಧಾಂತದ ಅಧ್ಯಯನ ನಡೆಸುತ್ತಿದ್ದಾರೆ. ಸದ್ಯದಲ್ಲೇ ಈ ಅಧ್ಯಯನದ ಫಲಶ್ರುತಿಯಾಗಿ ಮಹತ್ವದ ಗ್ರಂಥವೊಂದನ್ನು ಕನ್ನಡಕ್ಕೆ ಕೊಡಲಿದ್ದಾರೆ. ಕೇಶವ ಮಳಗಿಯವರ ಕೃತಿಗಳ ಒಂದು ಪುಟ್ಟ ಪರಿಚಯ ಈ ಬ್ಲಾಗ್‌ನಲ್ಲಿ ಲಭ್ಯವಿದೆ. ‘ಸಂಚಯ’ ಪತ್ರಿಕೆ ಕೆಲವು ತಿಂಗಳ ಹಿಂದೆ ತನ್ನ ತಿಂಗಳ ಸಂವಾದ ಕಾರ್ಯಕ್ರಮದಲ್ಲಿ ಮಳಗಿಯವರೊಂದಿಗೆ ಸಂವಾದವನ್ನು ಏರ್ಪಡಿಸಿತ್ತು. ಕನ್ನಡದ ಸಾಹಿತ್ಯ ಸಾಂಸ್ಕೃತಿಕ ಪತ್ರಿಕೆಯೊಂದಕ್ಕಾಗಿ ಕಳೆದ ವರ್ಷ ನಡೆಸಿದ್ದ ಒಂದು ಸುದೀರ್ಘ ಸಂದರ್ಶನವನ್ನು ಕಂತುಗಳಲ್ಲಿ ಇಲ್ಲಿ ಕಾಣಿಸುವ ಉದ್ದೇಶವಿದೆ. ನನ್ನ ಪ್ರಶ್ನೆಗಳಿಗಿಂತ ಒಂದು ದಿನದ ಸೀಮಿತ ಅವಧಿಯಲ್ಲಿಯೂ ನನ್ನ ಪ್ರಶ್ನೆಗಳ ಆಸುಪಾಸಿನ ಸಂಕೀರ್ಣ ಚಿತ್ರವನ್ನು, ವಸ್ತುಸ್ಥಿತಿಯನ್ನು ಮಳಗಿಯವರು ತೆರೆದಿಟ್ಟ ರೀತಿಯೇ ಆಚ್ಚರಿ ಹುಟ್ಟಿಸುವಂಥಾದ್ದು. ಹಾಗಾಗಿ ಇದು ಪ್ರಶ್ನೆ- ಆ ಪ್ರಶ್ನೆಗೊಂದು ಉತ್ತರ ಮಾದರಿಯ ಸಂದರ್ಶನವಲ್ಲ. ಇಬ್ಬರು ಆತ್ಮೀಯ ಸ್ನೇಹಿತರು ಪುರುಸೊತ್ತಿನಲ್ಲಿ ಹೊಡೆದ ಹರಟೆಯ ಮಾದರಿಯದು - ಆದರೆ ಮಳಗಿಯವರ ವಿಚಾರಗಳಲ್ಲಿ ಲಘುತನವಿಲ್ಲ ಎನ್ನುವುದು ಹರಟೆ ಎಂದು ಇದನ್ನು ಕರೆಯುವುದಕ್ಕೆ ಅಪವಾದ. ಇದು ಪತ್ರಿಕೆಯಲ್ಲ, ಬ್ಲಾಗ್. ಹಾಗಾಗಿ ಮತ್ತು ನನ್ನ ಬ್ಲಾಗಿನ ಓದುಗರಿಗೆ ಅಕಾಡೆಮಿಕ್ ಸಂದರ್ಶನ ಕೊಡುವುದಕ್ಕಿಂತ ಇದೇ ಹೆಚ್ಚು ಅರ್ಥಪೂರ್ಣ - ಉಪಯುಕ್ತ ಅನಿಸಿದ್ದರಿಂದ ಉದ್ದೇಶಪೂರ್ವಕವಾಗಿಯೇ ಇದನ್ನು ಶಿಷ್ಟ ಮಾದರಿಗೆ ಪರಿವರ್ತಿಸಿಲ್ಲ. ಇಲ್ಲಿರುವುದು ಮಾತು-ಕತೆ!

೧. ಮಾರ್ಕ್ಸ್‌ವಾದದ ಪ್ರಭಾವ, ಇತಿಹಾಸ ಇಲ್ಲದವರ ಕುರಿತ ಆಕರ್ಷಣೆ ಮತ್ತು ಬಲಿಷ್ಠನಿಗಷ್ಟೇ ಬದುಕು ಎಂಬ ಪಶುದೃಷ್ಟಿಯ ಕುರಿತ ಆಕ್ರೋಶ - ಇದು ನಿಮ್ಮ ಬರಹದ ಒಟ್ಟು ಕಾಳಜಿ ಅಂತ ನನ್ನ ಗ್ರಹಿಕೆ. ಅನುಕಂಪದ ವಿವಿಧ ನೆಲೆಗಳ ಬಗ್ಗೆ ನೇರಳೆ ಮರದಲ್ಲಿ, ಮೊದಲ ಅಧ್ಯಾಯದಲ್ಲೆ ಎರಡು ಮನ ಕಲಕುವ ಚಿತ್ರಗಳಿವೆ. ಈ ಕುರಿತ ನಿಮ್ಮ ವಿಶೇಷವಾದ ಸ್ಪಂದನದ ಹಿನ್ನೆಲೆಯನ್ನು ವಿವರಿಸ್ತೀರ‍?

ಕತೆ ಬರೀಬೇಕಾದ್ರೆ ಒಂದು ಯೋಚನೆ ಇರುತ್ತಲ್ಲ, ಕತೆ ಬರೀಬೇಕಾದಾಗ ಮತ್ತೆ ಆ ಮೇಲಿನ ನನ್ನ ಕೆಲವು ನಂಬಿಕೆಗಳು ಇತ್ಯಾದಿ ಇದ್ದೇ ಇರುತ್ತಲ್ಲ, ಅದು ನನ್ನ ಮನಸ್ಸಿನಲ್ಲಿ ಮಾತ್ರ ಇರುತ್ತೆ. ಬರೆದಿದ್ದು ನಿಜ ಆಗಿರುತ್ತೆ; ಬಟ್ ಕೆಲವೆಲ್ಲ ನನ್ನ ಮನಸ್ಸಿನಲ್ಲಿ ಮಾತ್ರ ಇರುತ್ತೆ. ಹಾಗೆ ಬರೀದೇ ಇರೋದು ತುಂಬಾ ಇರುತ್ತೆ. ಬರಹ ಏನು ರೆಪ್ರೆಸೆಂಟ್ ಮಾಡ್ಬೋದು ಅಂದ್ರೆ, ಒಬ್ಬ ಮನುಷ್ಯನ ಸ್ವಭಾವದ ಧ್ವನಿಗಳನ್ನ ಮತ್ತು ಅರ್ಥಗಳನ್ನ ಗ್ರಹಿಸಿ ಹೊರಗಡೆ ತೋರಿಸುತ್ತೆ ಅಷ್ಟೆ ಅದು. ಆದ್ರೆ ಅದಕ್ಕಿಂತ ಜಾಸ್ತಿ ಇದೆ, ಹೇಳದೇ ಇರೋದು ತುಂಬ ಇರುತ್ತೆ ಅವನಿಗೆ. ಅನುಕಂಪದ ನೆಲೆಗಳು ಅಂದ್ರೆ ಇಲ್ಲಿ ಯಾರಿಗೆ ಬಲ ಇದೆ, ಅಂದ್ರೆ survival of the fittest ಎನ್ನುವ ಥಿಯರಿ ಇದೆಯಲ್ಲ, ಅದು ಪ್ರಾಣಿಗಳಲ್ಲಿ ಕೂಡ ಇರಲ್ಲ ಆ ತರ. ಆದ್ರೆ ದೌರ್ಭಾಗ್ಯ ಯಾವ ತರ ಇರುತ್ತೆ ಅಂತಂದ್ರೆ, ಮನುಷ್ಯ ಬಹಳ ಸೂಕ್ಷ್ಮಜೀವಿ ಅಂತ ತಿಳ್ಕೋತೀವಲ್ಲ, ಆದ್ರೆ, ಅಲ್ಲಿಗಿಂತಲು ಇಲ್ಲೇ ಜಾಸ್ತಿ ಅದು (survival of the fittest ಎನ್ನುವ ಥಿಯರಿ). ಯಾರಿಗೆ ಸಾಮರ್ಥ್ಯ ಇದೆ, ಯಾರು ಪ್ರಬಲರಾಗಿದ್ದಾರೆ ಮತ್ತು ಯಾರಿಗೆ ಬೇರೆ ಎಲ್ಲ ಅವಕಾಶಗಳು, ಅಧಿಕಾರ, ಜಾತಿ - ಈ ಎಲ್ಲವನ್ನು ಸೇರಿಸಿಕೊಂಡು ನಾನು ಹೇಳ್ತಾ ಇದೀನಿ, ಅದಿರೋವನು ಬದುಕಬಹುದು ಅನ್ನೋ ಒಂದು ನಿಲುವಿರುತ್ತೆ; ಮತ್ತು ಆತರದ್ದನ್ನ ನಾವು ಪ್ರತಿದಿವಸವೂ ಜೀವನದಲ್ಲಿ ಎದುರಿಸ್ತಾ ಇರ್ತೀವಲ್ಲ, ವ್ಯಕ್ತಿಗಳಾಗಿ-ಮನುಷ್ಯರಾಗಿ, ಒಬ್ಬ ಬರಹಗಾರನಾಗಿ ಮಾತ್ರ ಅಂತೇನಲ್ಲ, ಸೂಕ್ಷ್ಮವಾಗಿರುವವರು ಅಥವಾ ಕಲಾವಿದರು ಅವ್ರಿಗಿದು ಜಾಸ್ತಿ ಕಾಡ್ತಾ ಇರುತ್ತೆ. ಯಾಕಂದ್ರೆ, ಇದರ ಬಗ್ಗೆ ತುಂಬ ಯೋಚನೆ ಮಾಡಿರತಾರವ್ರು. ಹಾಗೆ ಈ ಅನುಕಂಪದ ನೆಲೆ ಒಂದು ಸ್ವಭಾವತಃ ಇರೋದು, ಆತರದ ವ್ಯಕ್ತಿಯೊಬ್ಬ ನನ್ನೊಳಗಿದ್ದಾನೆ. ಈ survival of the fittest ಥಿಯರಿ ಇದೆಯಲ್ಲ, ಅದು ಸಮಾಜ ಬದಲಾಗ್ತಾ ಇದ್ದ ಹಾಗೆ ಅದರ ವಿಕೃತರೂಪ ತುಂಬ ಜಾಸ್ತಿ ಇರುತ್ತೆ. ಈಗ ಇಡೀ ದೇಶವನ್ನ ಗಮನಿಸಿ ನೋಡಿದ್ರೂ ಒಂದು ಇಪ್ಪತ್ತು ವರ್ಷಗಳ ಹಿಂದೆ ಇದ್ದ ಮೌಲ್ಯಗಳು ಈಗ ನಮ್ಮಲ್ಲಿಲ್ಲ. ಸ್ನೇಹಾನೆ ಇರಬಹುದು, ಸೌಹಾರ್ದತೆ ಇರಬಹುದು, ಒಂದು ಕೌಟುಂಬಿಕ ಸಂಬಂಧ ಇರಬಹುದು, ಬೇರೆ ಬೇರೆ ಈ ತರದ್ದೆಲ್ಲ ಇರುತ್ತಲ್ಲ, ಅದು ಬೇರೆ ಬೇರೆ ಅವಕಾಶಗಳು, exposures ಸಿಗ್ತಾ ಹೋದ ಹಾಗೆ ಅವೆಲ್ಲ ಡೈಲ್ಯೂಟ್ ಆಗ್ತಾ ಹೋಗ್ತಾ ಇರುತ್ತೆ. ಬಟ್ ಮನುಷ್ಯನಿಗೆ ಮೂಲತಃ ಆ ತರದ್ದೊಂದು ಒಳಗಡೆಗೆ ಇದ್ದೇ ಇರುತ್ತೆ, ಯಾವಾಗ್ಲೂನು, ಬೇರೆಯವರಿಗೆ ತುಡಿಯೋದು ಮತ್ತು ಬೇರೆಯವರ ನೋವುಗಳನ್ನ ಅರ್ಥ ಮಾಡಿಕೊಳ್ಳೋದು, ಬೇರೆಯವರ ನೋವುಗಳಿಗೆ ತುಡಿಯುವುದು. ಅದು ಭಾಳಾ ಮುಖ್ಯ ಅದು. ಯಾಕಂದ್ರೆ, ನಾವೂ ಹಾಗೇ ಇರ್ತೀವಿ. ಈಗ ನನಗೆ ನೋವಾದಾಗ ಮಾತ್ರ ನಾನು ನೋವು ಪಟ್ಕೊಳ್ಳೋದಿದ್ಯಲ್ಲ, ಅದು ಒಬ್ಬ ಸಾಮಾನ್ಯ ಮನುಷ್ಯನ ಲಕ್ಷಣ. ಅದಲ್ಲ ನಾನು ಹೇಳ್ತಿರೋದು. ಕಲಾವಿದನೇ ಆಗ್ಬೇಕಾಗಿಲ್ಲ ಅದಕ್ಕೆ, ಆ ತರ ಸೂಕ್ಷ್ಮವಾಗಿ, ಮೌಲ್ಯಗಳನ್ನ ಒಂದು ವ್ರತದ ತರ ಮಾಡ್ಕೊಂಡು ಜೀವನ ಮಾಡ್ತಿರೋರು ತುಂಬ ಜನ ಇದ್ದಾರೆ. ಹಳ್ಳಿಗಳಲ್ಲಿ ಅಂತ ಹೇಳಲ್ಲ, ಯಾಕಂದ್ರೆ, ತುಂಬ ಕ್ಲೀಷೆಯಾಗಿ ಬಿಡುತ್ತೆ. ಮತ್ತೆ ಹಳ್ಳಿಗಳಲ್ಲು ನಗರದ ಜಗತ್ತಿನ ತರನೇ ಎಲ್ಲಾ ಇರುತ್ತೆ. ಕ್ರೌರ್ಯನು ಇರುತ್ತೆ, ಹಿಂಸೆನೂ ಇರುತ್ತೆ, ಒಳ್ಳೆತನನೂ ಇರುತ್ತೆ. infact, ಒಂದು ತುಡಿತ ಎಲ್ಲಾ ಕಡೆನು ಇರುತ್ತೆ.

ಒಂದೇನಂದ್ರೆ, ನನ್ನ ಬಾಲ್ಯದಲ್ಲಿ ನಾವು ಅಷ್ಟೇನೂ ಸ್ಥಿತಿವಂತರಾಗಿರ್ಲಿಲ್ಲ. actually ಬಡತನವೇ ಇತ್ತು ಅಂತ ಹೇಳಬಹುದು. ನಾನು ಬೆಳೆದಿದ್ದೆಲ್ಲ ತುಂಬ ಕಡುಬಡತನದಲ್ಲೆನೆ. ನಮ್ಮ ಕುಟುಂಬ ಆಸ್ತಿ ಗೀಸ್ತಿ ಎಲ್ಲ ಇದ್ರೂನು ಅದೇನೇನೋ ಆ ತರದ್ದೊಂದು ಸಮಸ್ಯೆಗೆ ಸಿಕ್ಕಾಕ್ಕೊಂಡಿತ್ತು. ಒಂದು ಅದು. but at the same time, ನಮ್ಮ ತಂದೆ freedom fighter ಆಗಿದ್ದರು; ಹಾಗಾಗಿ ಒಂದು ಉನ್ನತ ವಿಚಾರಗಳು ಮತ್ತು ಸಮಾಜಕ್ಕೇನಾದ್ರು ಒಳ್ಳೇದನ್ನು ಮಾಡ್ಬೇಕು ಇತ್ಯಾದಿ - ಈ ತರದ ವಿಚಾರಗಳು ಕೂಡಾ ಪ್ರಸ್ತಾಪ ಆಗ್ತಾ ಇರ್ತಿದ್ವು. ನಾವೆಲ್ಲ ಬಹಳ ಚಿಕ್ಕವರಾಗಿದ್ವು ಆಗ. ಆದ್ರುನು, ನೇರವಾಗಿ ಅಲ್ದೆ ಇದ್ರುನು ಅದರ ಪ್ರಭಾವ ಇತ್ತು. ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರ್ರು ಅಂತ ನನಗೆ ತುಂಬ ಹೆಮ್ಮೆ ಇತ್ತು. ಆಮೇಲೆ ನಾನು ಹೆಚ್ಚು ಕಮ್ಮಿ ಹೈಸ್ಕೂಲ್‌ಗೆ ಬರೋವಷ್ಟೊತ್ತಿಗೇನೆ ಈ ಎಡ ಪಂಥೀಯ ಚಳುವಳಿಯ ಪ್ರಾಬಲ್ಯ ತುಂಬ ಇತ್ತಾವಾಗ ಆ ಪ್ರದೇಶದಲ್ಲಿ. ಅಥವಾ ಎಲ್ಲಾ ಕಡೆಯಲ್ಲು ಇತ್ತು ಅನ್ಸುತ್ತೆ. ಸೊ, ಅದರ ಪ್ರಭಾವಾನೂ ಆಯ್ತು. ಆದ್ರೆ, ಒಂದು contradiction ಇತ್ತು ಅದ್ರಲ್ಲಿ. ಈಗ ನಾನು ಯೋಚನೆ ಮಾಡಿದ್ರೆ ನನಗೇ ಅನ್ಸುತ್ತೆ, ನಮ್ಮ ತಂದೆ ಭಾಳ ಮುಕ್ತ ಮನಸ್ಸಿನವರಾಗಿದ್ರು. ಆದ್ರೆ, ಒಂದು ಭಾಳ ಕಠೋರವಾದ ಸಾಂಪ್ರದಾಯಿಕತೆನೂ ಇತ್ತು ಮನೇಲಿ. ಸೊ, ಆ ಎರಡರ ಮಧ್ಯೆ ನನಗೆ ಸಂಘರ್ಷವಾಗ್ತಾ ಇತ್ತು. ಮುಕ್ತವಾಗಿ ಇರೋದು ಮತ್ತು ಇದಕ್ಕೆ - ಸಾಂಪ್ರದಾಯಕತೆಗೆ ಬದ್ಧರಾಗಿ ಜೀವನ ಮಾಡೋದು. ಮತ್ತದನ್ನ ಒಪ್ಕೊಳ್ಳೋದಿದ್ಯಲ್ಲ, ಕಷ್ಟವಾಗಿತ್ತು. ಅದು ಹೈಸ್ಕೂಲು ಅಥವಾ ಆ ತರದ್ದೊಂದು ವಯಸ್ಸು ಬಂದಾಗ ಬಹಳ contradiction ಸುರುವಾಗಿ ಬಿಡ್ತು ನನಗೆ. ಸುಮಾರು ವರ್ಷಗಳ ಕಾಲ ನಮ್ಮ ಮನೇಲಿ fight ನಡೀತಾ ಇತ್ತು. ಸೊ ಈ ತರದ್ದೊಂದು ಕಠೋರ ಸಾಂಪ್ರದಾಯಿಕತೆ ಇದ್ಯಲ್ಲ, ಅದ್ರಿಂದ ಮುಕ್ತನಾಗೋದಕ್ಕೆ ನನಗೆ ಹೊರಗಡೆ ಏನಾದರೊಂದು ಇದೆಯ ಅಂತ ನಾನು ಹುಡುಕ್ತಾ ಇದ್ದಾಗ ಎಡಪಂಥೀಯ ಚಳುವಳಿ ಮತ್ತು ಈ ತರದ್ದು, - ಇದು ಸಾಂಸ್ಕೃತಿಕ ವಾತಾವರಣವನ್ನು ಹುಡುಕಿಕೊಂಡು ಹೋಗೋ ತರ ಮಾಡ್ತು. ಸೊ ಆವಾಗ್ಲೆನೆ ನನಗೆ ಬೇರೆ ಬೇರೆ ಸಮುದಾಯ ಇರಬಹುದು, ಬೇರೆ ಬೇರೆ ವಿದ್ಯಾರ್ಥಿ ಸಂಘಟನೆಗಳು ಇರಬಹುದು, ಆಕರ್ಷಣೆ ಇತ್ತು. ಅಲ್ಲೆಲ್ಲಾ ಅವ್ರ ಜೊತೆಗೆ ಕೆಲಸ ಮಾಡ್ದಾಗ, ಅದೊಂದು ಬೇರೇನೆ ಜಗತ್ತಿದ್ಯಲ್ಲ, ಅಂದ್ರೆ ಅವ್ರ ಜೊತೆಗೆ ಸ್ಲಮ್ಸ್‌ಗೆಲ್ಲ ಹೋಗೋದು, ಅವ್ರ ಜೊತೆ ಊಟ ಮಾಡೋದು, ಅಲ್ಲೇ ಮಲಗೋದು. ಆಮೇಲೆ ಎಷ್ಟೋ ಕಡೆ ವೃತ್ತಿಯ ಕಾರಣದಿಂದಾಗಿ ಹೋದಾಗ, ಎಷ್ಟೋ ಹಳ್ಳಿಗಳಲ್ಲಿ ರಾತ್ರಿ ಉಳೀಬೇಕಾದ ಸಂದರ್ಭ ಬಂದಾಗ ಅವ್ರು ನಮ್ಮನ್ನ ಸ್ವೀಕರಿಸ್ತಾ ಇದ್ದ ರೀತಿ ಇದ್ಯಲ್ಲ, ಈಗ್ಲೂನು ಅಷ್ಟೆ, ಅದು ತೋರಿಕೆಯದ್ದಾಗಿರಲ್ಲ. ಇರುತ್ತೆ, ಸ್ವಲ್ಪ ತೋರಿಕೆನೂ ಇರುತ್ತೆ ಅದ್ರಲ್ಲಿ. ಕೃತಕತೆ ಸ್ವಲ್ಪ ಇರುತ್ತೆ, ಆದ್ರೆ ಅದನ್ನ ಮೀರಿ ಅವರದ್ದೊಂದು, ಅನುಕಂಪ ಅಂತ ಅಂತೀರಲ್ಲ, ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಸ್ಪಂದಿಸೋದಿದ್ಯಲ್ಲ, ಅದು, ಅದ್ರ ಪ್ರಮಾಣನೇ ಜಾಸ್ತಿ ಇರುತ್ತೆ. ಇದೆಲ್ಲ ಎಲ್ಲೋ ನನಗೇ ಗೊತ್ತಿಲ್ಲದೆ ಮನಸ್ಸಿನ ಮೇಲೆ ಪ್ರಭಾವ ಬೀರ್ತಾ ಇತ್ತು. ಇನ್ನೊಬ್ರಿಗೆ ನಾವು ಕೆಲಸ ಮಾಡಬೇಕು ಅನ್ನುವ ಭಾವ. ಇಡೀ ರಾತ್ರಿ ನಾವು wall writing ಮಾಡ್ತಾ ಇದ್ವಿ. ಆಮೇಲೆ, slums particularly, ಅವರ ಸಮಸ್ಯೆಗಳು ಏನೇ ಇರ‍್ಲಿ. end of the day ಅವರು ಸ್ಪಂದಿಸ್ತಾ ಇದ್ದ ರೀತಿ ಇದ್ಯಲ್ಲ, ಭಾಳ ಕಲಕ್ತಾ ಇತ್ತು ನಂಗೆ. Actually, ಭಾಳ emotional ಆಗಿದ್ದೆ ನಾನು ಆ ವಯಸ್ನಲ್ಲಿ. ಯಾವ ಥರಾ ಇದ್ದೆ ಅಂದ್ರೆ ಯಾರಾದ್ರು ಸ್ವಲ್ಪ ಕೈ ಹಿಡಕೊಂಡು ಮಾತನಾಡಿದ್ರು ಅಂದ್ರೆ ನನಗೆ ಕಣ್ಣಲ್ಲಿ ನೀರು ಬಂದ್ಬಿಡ್ತಾ ಇತ್ತು. ಅಷ್ಟು ಭಾವುಕನಾಗ್ಬಿಡ್ತಾ ಇದ್ದೆ.

ಅದ್ಕೆ ಒಂದು ಹೊರಗಡೆ ಈ ತಲ್ಲಣಗಳಿವೆಯಲ್ಲ, ಬಡತನ ಇತ್ಯಾದಿ, ಅದೊಂದು ಕಾರಣ ಆದ್ರೆ, ನಮ್ಮ ಕೌಟುಂಬಿಕ ಸ್ಥಿತಿನೂ ಹಾಗೇ ಇತ್ತು. ಸೊ, ಅದ್ರಿಂದ ಹೊರಗಡೆ ಬರೋದಕ್ಕೆ ನಾನು ಬಹಳಾ ಪ್ರಯತ್ನಪಡ್ತಾ ಇದ್ದೆ. ಸೊ, ಈ ನೇರಳೆ ಮರದ ಎರಡು ಘಟನೆಗಳಿವೆಯಲ್ಲ, ಅವು Actually, ಎರಡೂನು ನಿಜವಾದ ಘಟನೆಗಳೇ. ಈ ಎರಡ್ನೆ ಘಟನೆ particularly, ಹೇಳೋದಾದ್ರೆ, ಬರ್ದಿದ್ದೀನಿ ಅನ್ಸುತ್ತೆ, ನಂದೊಂದು ಸಣ್ಣ, ಒಂದು ಸಣ್ಣ ಪುಡಿ ಪತ್ರಿಕೆ ಇತ್ತು. ಆವಾಗ ಹೆಸರು ಮಾಡ್ಬೇಕು, ಬರೀಬೇಕು ಅನ್ಸೊ ಹದಿನೇಳು-ಹದಿನೆಂಟು ಹತ್ತೊಂಭತ್ತು ವರ್ಷ ಆವಾಗ. ಇವಳು, ತಾಯವ್ವ ಅಂತ ಆ ಹುಡ್ಗಿ ಹೆಸರು. ಚಿಕ್ಕ ಹುಡುಗಿ ಅವಳು. ಅವಳ್ನ ಎಲ್ಲೋ ಮಾರಿದ್ರು, ಅವಳ ಅಜ್ಜಿಗೆ ಕಣ್ಣು ಕಾಣಿಸತಾ ಇರ್ಲಿಲ್ಲ, ಎಲ್ಲ ವಾಸ್ತವ. ಬರೆದಿರೋದು ಮುಖ್ಯ ಅಲ್ಲ. ಬಟ್ ಅವಳು Actually ಆ ತರ ಪ್ರಶ್ನೆ ಕೇಳಿದ್ಲು ನನಗೆ. ನಾನು ಯಾವ್ದೊ ಒಂದು ಕೆಲಸಕ್ಕೆ ಬಳ್ಳಾರಿಯಿಂದ ಹೋಗ್ತಾ ಇದ್ದೆ, ಟ್ರೈನ್‌ನಲ್ಲಿ. ಅವಳೇನೋ ಬೇರೆ ಏನೋ ಮಾರ್ತಾ ಇದ್ಲು, ನೇರಳೆ ಹಣ್ಣು ಅನ್ನೋದು ಭಾಳ ಸಾಂಕೇತಿಕ ಅಷ್ಟೆ. ಆ ಇಡೀ ಪ್ರದೇಶದ ಎಲ್ಲ ಇದೆ ಅದ್ರಲ್ಲಿ, ಹುಳಿ-ಸಿಹಿ-ಒಗರು ಎಲ್ಲ ಇದೆ. ಸೊ, Actually ನನಗೆ ಇವತ್ತಿನವರೆಗು digest ಮಾಡ್ಕೊಳ್ಲಿಕ್ಕೆ ಆಗಿಲ್ಲ, ಅವಳು ಕೇಳಿರೋ ಪ್ರಶ್ನೆ. ಅಂದ್ರೆ, ನಾವು ಅವಳನ್ನ ಅಲ್ಲಿಂದ ಕರೆತಂದ ಮೇಲೆ ಏನೋ ದೊಡ್ಡ ಸಾಧನೆ ಮಾಡಿದೀವಿ, ಹಾಗೆಲ್ಲ ಅಂದ್ಕೋತೀವಲ್ಲ. ಆದ್ರೆ, ಅವಳ ಜೀವನದ ದುರಂತವನ್ನ ನಮಗೆ ತಪ್ಸಕ್ಕಾಗ್ದೆ ಇದ್ರೆ, ನಾವು ಬರಿ ಸಾಕ್ಷಿ ಪ್ರಜ್ಞೆಗಳಷ್ಟೇ ಆಗೋದಾದ್ರೆ ನಾವ್ಯಾಕೆ ಮಾಡ್ಬೇಕು ಆ ತರದ ಕೆಲಸ ಅಂತ ನನಗೆ ಭಾಳ ದಿವ್ಸ ಕಾಡ್ತಾ ಇತ್ತು ಅದು. ಅಂದ್ರೆ ನಾನು ಅಥವಾ ಒಟ್ಟಾರೆ ಯೂತ್ ಅಥವಾ ಆ ಮೇಲಿಂದು ವಿಚಾರಗಳು ಇವೆಲ್ಲ ಇದ್ಯಲ್ಲ, ಆ ಒಂದು ಭಿತ್ತಿಯಲ್ಲೇನೆ ಗ್ರಹಿಸ್ಕೊಂಡು ಹೋಗಿದೀನಿ ನಾನು ಜೀವನವನ್ನ. ನಾನು ಅದೇ ತರದ ಲಿಟ್ರೇಚರ್ ಓದೋದಿರಬಹುದು, ಬರೆಯೋದಿರಬಹುದು, ಅಂದ್ರೆ ಅಲ್ಲೇನು ಚೌಕಟ್ಟು ಹಾಕ್ಕೊಂಡು ನಾನು ಇಂಥದ್ದನ್ನೇ ಓದ್ಬೇಕು ಅಂದ್ಕೊಂಡು ಓದಿರಲ್ಲ. ಬಟ್ ಬಹುಪಾಲು ನೀವು ವಿಶ್ವದ ಒಂದು ಒಳ್ಳೆಯ ಕೃತಿಗಳು ಅಂತ ನಾವು ಓದತೀವಲ್ಲ, ಅಥವಾ ಯಾವ್ದೇ ಒಳ್ಳೇ ಬರಹಗಾರನ್ನ ಓದಿದ್ರೂನು, ಎಲ್ಲ ಇಂಥದ್ದರ ಬಗ್ಗೆನೆ ಮಾತಾಡ್ತಾರವರು. ಆ ಇದನ್ನ ಮೀರಿದ್ದೇನು ಮಾತಾಡಲ್ಲ. ಅದು ನನ್ನ ನಂಬಿಕೆಗಳನ್ನ ಇನ್ನಷ್ಟು ಬಲಪಡಿಸ್ತು.

ಈ ಬಲಾಢ್ಯರಿಗಷ್ಟೇ ಅಲ್ಲ, ಯಾರು ಅತ್ಯಂತ ಅಶಕ್ತರಾಗಿರ್ತಾರಲ್ಲ, ಅಂಥವರಿಗೆ ನಾವು ಜೀವನದ ಅವಕಾಶವನ್ನ ಒದಗಿಸಿಕೊಡ್ಬೇಕು ಅಂತ ಹೊರಗಡೆಗೆ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಹೇಳ್ತಾ ಇದೀವಿ, ಈಗ. ಈಗ ನೀವು ನೋಡೋದಾದ್ರೆ ಸರ್ಕಾರಗಳೆಲ್ಲ ಈಗ ಅಷ್ಟೊಂದು ಒಳ್ಳೆಯ ಕಾರ್ಯಕ್ರಮಗಳು ಮತ್ತು ಏನೇ ಇರ್ಲಿ, even ಈ ವಲಸೆಯ ಸಮಸ್ಯೆ ಇದೆಯಲ್ಲ, ಅದನ್ನ ಎಡ್ರೆಸ್ ಮಾಡ್ಬೇಕಂತನೆ ಈ ರೋಜ್‌ಗಾರ್ ಅಂತೇನೋ ಒಂದ್ಮಾಡಿದಾರೀಗ. Employment Guarantee Scheme ಅಂತ ಮಾಡಿದಾರೆ. ಅಂದ್ರೆ, ಉದ್ದೇಶ ಏನಿದೆ ಅಂದ್ರೆ, ಯಾರು ಅತ್ಯಂತ ನೋವಿನಲ್ಲಿದ್ದಾರಾ, ಯಾರಿಗೆ ಸಹಾಯದ ಅಗತ್ಯವಿದೆಯಾ ಅವರನ್ನ ಬಿಟ್ಟು ನಾವು ಜೀವನ ಮಾಡೋ ಹಾಗಿಲ್ಲ. ಸೇರಿಸಿಕೊಂಡೇ ನಾವು ಜೀವನ ಮಾಡಬೇಕಂತನ್ನೊ ಒಂದು ಪ್ರಜ್ಞಾಪೂರ್ವಕವಾದ ರಾಜಕೀಯ ಸಿದ್ಧಾಂತಗಳೇನು, ಅವುಗಳಲ್ಲಿ ಎಷ್ಟರಮಟ್ಟಿಗೆ ಸಕ್ಸಸ್ ಆಗಿದ್ದೀವಿ ಅನ್ನೋದು ಗೊತ್ತಿಲ್ಲ, ಆದ್ರೆ, ನನ್ನುದ್ದೇಶನು ಅದೇ ಇದೆ. ಬರೆ ಕಥೆ ಅಥವಾ ಬರಹದಲ್ಲಿ ಮಾತ್ರ ಅಲ್ಲ. ನಾವು ಬಲಾಢ್ಯರು ಅಥವಾ ಅಶಕ್ತರು ಎನ್ನುವ ಪ್ರಶ್ನೆನೆ ಇರಲ್ಲ actually. ಬಟ್, ನೀನು ಬಲಾಢ್ಯ ಆಗಿರೋದಕ್ಕೆ ನಿನಗೆ ಶಿಕ್ಷಣ contribute ಮಾಡಿರುತ್ತೆ. ಪಿಯರೆ ಬೋರ್ದಿ ಅಂತ ಒಬ್ಬ French Intellectual ಅವರು, ಮಾರ್ಕಿಸ್ಟ್ ಅವರು, ಅವರು ಇದರ ಬಗ್ಗೆ ಬಹಳ ವಿಸ್ತೃತವಾಗಿ ಬರೆದಿದ್ದಾರೆ. ಒಂದು ವರ್ಗವನ್ನ ನಾವು ಹೇಗೆ ವರ್ಗೀಕರಣ ಮಾಡ್ತೇವೆ ಮುಂತಾಗಿ. ಈ ಬಂಡವಾಳದ ವಿವಿಧ ರೂಪಗಳ ಬಗ್ಗೆ ಬರೀತ ಅವ್ರು ಈ cultural capital ಬಗ್ಗೆ ಹೇಳ್ತಾರೆ. ಅಂದ್ರೆ, ಈಗ ಒಂದು ಸಮಾಜದಲ್ಲಿ ಆರ್ಥಿಕ ಬಂಡವಾಳ ಇರುತ್ತೆ ಮತ್ತು ಸಾಮಾಜಿಕ ಬಂಡವಾಳ ಇರುತ್ತೆ. ಅದೇ ತರಾನೆ ಒಂದು ಸಾಂಸ್ಕೃತಿಕ ಬಂಡವಾಳ ಕೂಡಾ ಇರುತ್ತೆ. ಇದು ಮನುಷ್ಯನ ಮನಸ್ಸಿನಿಂದ ಬರುತ್ತೆ. ಇದು ನಾವು ಬಹಳ ನೇರವಾಗಿ ಹೇಳುವುದಾದ್ರೆ ಶಿಕ್ಷಣದ ಮೂಲಕ ನಾವು ಪಡ್ಕೋತೀವಿ ಇದನ್ನ. ಒಬ್ಬ ಇನ್ನೊಬ್ಬರ ಜೊತೆ ಹಂಚಿಕೊಳ್ಳೋದು, ಅವಕಾಶಗಳನ್ನ ಪಡಕೊಳ್ಳೋದು. ಬಟ್ ಇಲ್ಲಿ ಏನಾಗುತ್ತೆ ಅಂದ್ರೆ, ಈ ಬಂಡವಾಳಶಾಹಿ ವ್ಯವಸ್ಥೆ ಎಷ್ಟೊಂದು ವಿಕೃತವಾಗಿರುತ್ತೆ ಅಂತಂದ್ರೆ, ಕೆಲವರಿಗೆ ಮಾತ್ರ ಆ ತರದ ಅವಕಾಶಗಳನ್ನ ಒದಗಿಸಿಕೊಡುತ್ತೆ. ಸೊ, ಅದ್ರಿಂದ discreminate ಮಾಡ್ತಾನೆ ಇರುತ್ತೆ. ಅಂದ್ರೆ ಯಾರಂಚಿನಲ್ಲಿದ್ದಾರೊ ಅವರಿಗೆ ಅನ್ಯಾಯವಾಗೊ ತರ. ಈಗ ನಮ್ಮಲ್ಲಿ ಎಲ್ಲಾ ತರದ ಶಿಕ್ಷಣಗಳಿವೆ, ನಿಮ್ಮ ದಕ್ಷಿಣಕನ್ನಡ ಜಿಲ್ಲೆನಲ್ಲೇ ಜ್ಯುವೆಲ್ಲರಿ ಡಿಸೈನಿಂಗ್ ಕೋರ್ಸ್‌ಗಳಿರುತ್ವೆ. ಆದ್ರೆ ಅದು ಎಲ್ಲರಿಗೂ ಇದ್ಯೆ ಎನ್ನುವ ಪ್ರಶ್ನೆ ಇದೆ. ಅಥವಾ, ಆ ಭಾಗದಲ್ಲೆ ಇರುವ ಚಿನಿವಾರರಿಗೆ - ಅದ್ರದ್ದೊಂದು ದೊಡ್ಡ ಪರಂಪರೆನೇ ಇದೆ ಅವರಿಗೆ. ಅದಕ್ಕೆ ಯಾವ ತರ contributeಮಾಡುತ್ತೆ, ಅವ್ರನ್ನ ಹೇಗೆ ಮೇಲೆತ್ತುತ್ತೆ ಅದು ಎನ್ನುವಂಥ ಸಂಕೀರ್ಣವಾದ ಪ್ರಶ್ನೆಗಳನ್ನ ಅದು address ಮಾಡಲ್ಲ. ಬಟ್ ಲಾಭದ ದೃಷ್ಟಿ ಇರುವಂಥ ಶಿಕ್ಷಣ ಅಥವಾ ಅವು ಬಳಸೊ ಮೌಲ್ಯಗಳಿವೆಯಲ್ಲ, ಅದು ಜನರನ್ನ ಇನ್ನಷ್ಟು ಕ್ರೂರಿಗಳನ್ನಾಗಿ ಮಾಡ್ತಾ ಇದೆ. ಸೊ, ನನಗೆ ನಿಜವಾಗ್ಲೂನು ಬಹಳ ನೋವಾಗ್ರ ಇರುತ್ತೆ ಇದು.

ಈಗ ಸುಮ್ನೆ ಸಾಹಿತ್ಯದ ವಾತಾವರಣ ನೋಡೋದಾದ್ರೆ, ಅಥವಾ ಜಾಗತೀಕರಣದ ಫಲವಾಗಿ ನಮಗೆ ಸಿಕ್ಕಿದ ಯಾವುದೇ ಒಂದನ್ನ, ಇಂಟರ್ನೆಟ್ ಬಳಕೇನೆ ತಗೊಳ್ಳಿ. ಇಲ್ಲಿ ನೀವು ಬ್ಲಾಗ್ಸ್ ಅಥವಾ ಬೇರೆ ಬೇರೆ ತರದ ಅಭಿವ್ಯಕ್ತಿಗಳನ್ನ ನೋಡಿದ್ರೆ, ಅಲ್ಲಿ ಮುಕ್ತತೆ ಇದೆ, ನಿಜ. ಅಂದ್ರೆ ಅದು open ಆಗಿದೆ. ಆದ್ರೆ, ಎಷ್ಟು Discrimination ಇದೆ ಅಂದ್ರೆ ಇಲ್ಲಿ, ಈಗ ಕನ್ನಡದಲ್ಲಿ ಮಹತ್ವದ ಲೇಖಕರು ಯಾರು ಅಂತ ಯಾರಿಗಾದ್ರು ತಿಳ್ಕೋಬೇಕು ಅಂತ ಇದ್ರೆ, ಆ technology ಗೊತ್ತಿರೋವ್ರಿಗೆ ಅಂಥ ಕುತೂಹಲ ಇದ್ರೆ, impartial viewನ್ನ ಆ technology ಕೊಡಲ್ಲ ನಿಮಗೆ. technology ನಿಮ್ಮನ್ನ ಬಹಳ powerful ಮಾಡಿದೆ. ಸಮರ್ಥರನ್ನಾಗಿ ಮಾಡಿದೆ. ನಾನು ನನ್ನ ಬರಹಗಳನ್ನ ಹಾಕ್ಕೊಳ್ಳೋವಷ್ಟರ ಮಟ್ಟಿಗೆ powerful ಆಗಿದ್ದೀನಿ ನಾನು. ಆದ್ರೆ, ಈಗ ಯಾರೋ ಒಬ್ರಿಗೆ ಈ ಕನ್ನಡದ ಸಂಸ್ಕೃತಿಯಲ್ಲಿ, ಕನ್ನಡ ಸಾಹಿತ್ಯದಲ್ಲಿ ಯಾರು ಹೊಸದಾಗಿ ಯೋಚನೆ ಮಾಡ್ತಾರೆ, ಅಥವಾ ಯಾರು ಹೊಸದಾಗಿ ಬರೀತಾರೆ, ಅವರು ಯಾಕೆ ಅಷ್ಟೊಂದು ಮಹತ್ವವಾಗಿದ್ದಾರೆ ಅಂತ ನಾವು ನೋಡ್ಬೇಕಾದ್ರೆ, ಆ ತರದ ಮಾಹಿತಿ ಅಲ್ಲಿ ಸಿಗಲ್ಲ. ಸೊ, ಅದೇನ್ ಮಾಡ್ತಿದೆ ಅಂದ್ರೆ, writers ಮಧ್ಯೆ ಒಂದು gapನ್ನು ಕ್ರಿಯೇಟ್ ಮಾಡ್ತಾ ಇದೆ. ನಮ್ಮನ್ನ empower ಮಾಡ್ತಾ ಇಲ್ಲ ಅದು actually. ಸೊ, ಕೆಲವ್ರು ಮಾತ್ರ ಬಲಾಢ್ಯರ‍ಾಗಿ ಬೆಳೀತಾ ಇರ‍್ತಾರೆ. ಅಂದ್ರೆ, ಈ ಬಲಿಷ್ಟರಿಗಷ್ಟೆ ಬದುಕು ಅನ್ನುವ ಒಂದು ಥಿಯರಿ ಇದೆ ನೋಡಿ, ಅಲ್ಲಿ ಭಾಳ ಇದೆ ಅದು. ನಾನು ಎಲ್ಲಾ ಬ್ಲಾಗ್ಸ್‌ನ್ನೂ ಮುಕ್ತವಾಗಿ ನೋಡ್ತೀನಿ, ಎಲ್ಲಾ ಬ್ಲಾಗ್ಸ್‌ನು ನೋಡತಿರ್ತಿನಿ, ಓದತೀನಿ. ಕೆಲವೊಂದು ಅಭಿಪ್ರಾಯಗಳಿದ್ದಾಗ ಕೆಲವು ಸಲ ಬೇಸರ ಆಗುತ್ತೆ, ಕೆಲವ್ಸಲ ಚೆನ್ನಾಗಿ ಬರ‍್ದಿದ್ರೆ ಸಂತೋಷ ಆಗುತ್ತೆ, ಇವೆಲ್ಲ ಇರುತ್ತೆ. ಆದ್ರೆ, ನಾವು Discriminate ಮಾಡ್ತಾ ಇದೀವಲ್ಲ, ಅದಕ್ಕೆ ಬೇಸರ ಇದೆ. Accessibility ಇಲ್ದೇ ಇರೋವಂಥ ಬಹುದೊಡ್ಡ ಪ್ರಮಾಣದ ಲೇಖಕರಿದ್ದಾರೆ. ಮತ್ತು ಎಷ್ಟೋ ಜನರಿಗೆ, ಎಷ್ಟೋ ಕಡೆ ನಾನಿದನ್ನ ಹೇಳಿದೀನಿ ಮತ್ತು ನಾನಿದನ್ನ ನೋಡಿದ್ದೀನಿ, ಯಾವ್ದೊ ಒಂದು ಸಣ್ಣ ಮೂಲೆಯಲ್ಲಿ ಜೀವ್ನ ಮಾಡ್ತಾ ಇರೋ ಒಬ್ಬ ಚಿಕ್ಕ ಯಶೋರೂಪಿ ಲೇಖಕರಿರ‍್ತಾರಲ್ಲ, ಆಸಕ್ತಿ ಇರುತ್ತೆ, ಅವ್ರಿಗೆ ಬರೆಯೋಕೆ ಎಷ್ಟೋ ಸರ್ತಿ ಪೇಪರಿರೋಲ್ಲ. ನಾನು ಅದನ್ನ ಅನುಭವಿಸಿದ್ದೀನಿ. ಒಂದು white sheet ತಗೋಳೋಕೆ ನನ್ನತ್ರ ದುಡ್ಡಿರ‍್ತಾ ಇರ‍್ಲಿಲ್ಲ. ಸೊ, ಇಂಥ ಲೇಖಕರಿಗೆ ಈ technologyಯ ಬಲಾಢ್ಯತೆ ಇದ್ಯಲ್ಲ, ಏನ್ಮಾಡುತ್ತೆ ಅಂದ್ರೆ, ಅವನನ್ನ crush ಮಾಡುತ್ತೆ. ಸೊ, ಅವಕಾಶ ಇಲ್ಲ ಅವರಿಗೆ. ನಾನು ಇಷ್ಟು ಪ್ರಬಲವಾಗಿದೀನಿ, ನನಗಿಷ್ಟು contacts ಇವೆ, ನನ್ನದೇ network ಮಾಡ್ತೀನಿ, ಸೊ ಅದ್ರಿಂದ ನಾನು ಲೇಖಕನಾಗಿದ್ದೀನಿ. ಇಲ್ಲಿ, ಅನುಕಂಪ ಅನ್ನೋದಿದ್ಯಲ್ಲ, ಅದೇ ಬಹಳ ಮುಖ್ಯ ಅಂತ ನನಗನಿಸ್ತಿರುತ್ತೆ. I am not against technology or whatever you get from the cultural capital. ಅದ್ರಿಂದಾಗಿ ನನ್ನ ಈ ಮುಖ್ಯ ಒತ್ತಿದ್ಯಲ್ಲ, ಎಷ್ಟೇ disturbing ಆಗಿದ್ರೂನು, ನನಗೆ ಈವಾಗ್ಲುನು disturbing ಸಂಗತಿನೆ ಅದು, ಅವ್ಳು ಕೇಳಿರೊ ಪ್ರಶ್ನೆಗಳನ್ನ ನಾನಿವತ್ತಿಗೂ digest ಮಾಡ್ಕೊಂಡಿಲ್ಲ. ಬಟ್ ನಾನು ಅವಳ ಬಗ್ಗೆ ಅನುಕಂಪ ಸೂಚಿಸೋದನ್ನ ಬಿಟ್ರೆ, ಇನ್ನೇನು ಮಾಡ್ಲಿಕ್ಕೆ ನನಗೆ ಗೊತ್ತಿಲ್ಲ. ಬರೋಲ್ಲ ನನಗೆ, ಮಾಡಿಲ್ಲ. ಅದ್ರಿಂದಾಗು ಅವಳೆ ನನಗೆ ಮುಖ್ಯವಾಗಿ ಕಥಾನಾಯಕಿ ನನಗೆ ಅವಳು. ಅವಳು ನನ್ನನ್ನ ಕಾಡ್ತಾ ಇದ್ರುನು ಅವಳನ್ನ ತಿರಸ್ಕರಿಸಕ್ಕಾಗಲ್ಲ. ಅವಳಾತರ ಕೇಳ್ತಾ ಇದ್ದಾಗ್ಲೇನೆ ನನಗೆ ನಾನು ಮನುಷ್ಯನಾಗಕ್ಕೆ ಇನ್ನಷ್ಟು ಸಾಧ್ಯ ಇದೆ ಅಂತ ನಾನು ಅಂದ್ಕೊಂಡಿದೀನಿ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ