Sunday, August 15, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಭಾಗ ಏಳು

ಕನಸುಗಾರಿಕೆ ಮತ್ತು ಭಾವುಕತೆ ನಿಮ್ಮ ಕತೆಗಳ ಮೂಲದ್ರವ್ಯ ಎನ್ನುವ ಮಾತಿದ್ದರೂ ವಾಸ್ತವಕ್ಕೆ ಒತ್ತುಕೊಟ್ಟು ಬರೆಯುವ ನೀವು ಭಾವುಕಳಾದ ನಾಯಕಿಯೇ ಪ್ರಧಾನವಾಗಿರುವ - `ಯಾರೂ ಬಾಹೋರಿಲ್ಲ' ಭಾವವೇ ಪ್ರಧಾನವಾದಂಥ ಕೆಲವು ಪಾತ್ರಗಳನ್ನು ಸೃಜಿಸುವಾಗ ಕತೆ ಮತ್ತು ಪಾತ್ರಗಳ ಚಿತ್ರಣದಲ್ಲಿ ‘ರೊಮ್ಯಾಂಟಿಕ್ ಆದರ್ಶ’ ಮಾದರಿಯ ಗಂಡು-ಹೆಣ್ಣು ಮತ್ತು ಅಂಥ ಸನ್ನಿವೇಶಗಳನ್ನು ನಿರ್ಮಿಸ್ತೀರಿ. ಈ ಮಾದರಿಯಲ್ಲಿ ಒಂದು ಬಗೆಯ ಅವಾಸ್ತವಿಕತೆ ಇದೆ ಅನಿಸುವುದಿಲ್ಲವೆ? ಬಾರೋ ಗೀಜಗ ಕತೆಯಲ್ಲಿ ಈ ಬಗೆಯ ಕತೆ ಏರಿದ ಎತ್ತರವನ್ನು ಗಮನಿಸಿಯೂ ಕೇಳ್ತಾ ಇದ್ದೇನೆ. "ಮುಗ್ಧತೆ ಮತ್ತು ಭಾವುಕತೆ ಸಂಲಗ್ನಗೊಂಡ, ಹೊಸ ಸಂಬಂಧಗಳಿಗಾಗಿ ತೀವ್ರವಾಗಿ ಹಾತೊರೆವ ಕಾರಣಕ್ಕೆ ರಾಜಕೀಕರಣಗೊಳ್ಳುವ ಪ್ರಜ್ಞೆಯ ಅಭಿವ್ಯಕ್ತಿ" ಎಂದು ಬಹುಷಃ ಇದನ್ನು ಗುರುತಿಸಿರುವ ಡಿ.ಆರ್.ನಾಗರಾಜ್ ಅವರ ಮಾತಿನ ಹಿನ್ನೆಲೆಯನ್ನೂ ಇಟ್ಟುಕೊಂಡು ಇದರ ಬಗ್ಗೆ ನಿಮ್ಮ ಅನಿಸಿಕೆ ಏನು?


ಇಲ್ಲೇ ಇನ್ನೊಂದು ಪ್ರಶ್ನೆ ಕೂಡ ಇದೆ. ಅತ್ಯಂತ ವಾಸ್ತವಿಕ ನೆಲೆಯ ಬದುಕಿನ ಹೋರಾಟದಲ್ಲಿ ವ್ಯಸ್ತವಾಗಿರುವ ನಿಮ್ಮದೇ ಕತೆಗಳ ಇನ್ನು ಕೆಲವು ಹೆಣ್ಣುಗಳ ಜೊತೆ ಈ ಪಾತ್ರಗಳು ಹೇಗೆ ನಿಲ್ಲುತ್ತವೆ ಅನ್ನೋದು.

ರೊಮ್ಯಾಂಟಿಕ್ ಅಥವಾ ರೊಮ್ಯಾಂಟಿಸಂ ಆ ಕತೆಯ ಪರಿಸರ ಅಥವಾ ಅದರ ಒಂದು ಬಾಹ್ಯ ವಿನ್ಯಾಸ ಇದೆಯಲ್ಲ, ಅದ್ರಿಂದ ಅದು ನಿಮಗೆ ಹಾಗೆ ಅನಿಸಿರಬಹುದು. ಬಟ್ ನನಗೇನೂ ಅದು ರೊಮ್ಯಾಂಟಿಕ್ ಅಂತ ಅನಿಸಿಲ್ಲ. ಯಾಕಂದ್ರೆ ನೀವು ಹೇಳ್ತಾ ಇರುವ ಮೂರೂ ಕತೆಗಳೂ ನನ್ನ ಅನುಭವವೇ ಆಗಿರುವಂಥದ್ದು. ಆ ತರದ್ದೊಂದು ಅನುಭವವನ್ನು ಹೇಳಬೇಕಾದಾಗ ರೊಮ್ಯಾಂಟಿಸಂ ಅನೋದಕ್ಕಿಂತ ಒಂದು poetic element ಇರುತ್ತೆ ನೋಡಿ, ಆ ಮೇಲೆ ಎಷ್ಟೋ ಕಡೆಗೆ poetic justification ಅಂತ ಮಾತಾಡ್ತೀವಿ. ಆ ಹಿನ್ನೆಲೆಯಲ್ಲಿ ಬರೆದಿರೋ ಕತೆಗಳು. ವೈಯಕ್ತಿಕ ನೆಲೆಯಲ್ಲಿ ಹೇಳೋದಾದ್ರೆ ನನ್ನ ಅನುಭವವನ್ನ ಮೀರಿ ಬಂದಿರೋ ಕತೆಗಳಲ್ಲ ಅವು ಅನ್ನೋದು ಒಂದು. ಬಟ್ ಆ ಕತೆಯನ್ನು ಹೇಳೋದಕ್ಕೆ ನಾನು ಹಿಂದೆ ಬಳಸಿದಂಥ ತಂತ್ರಗಳು ಸಾಕಾಗಿಲ್ಲ ಅನ್ನೋ ಕಾರಣಕ್ಕಾಗಿ ಈ ಒಂದು extreme ಭಾವುಕ ಸನ್ನಿವೇಶವನ್ನ ನಾನು ಸೃಷ್ಟಿ ಮಾಡಿಕೊಂಡಿರಬಹುದು, ತಂತ್ರವಾಗಿ. ಆದರೆ ಬಾರೋ ಗೀಜಗ ಕತೆಯನ್ನ ನಾನು ಆ ಕೆಟಗರಿಯಲ್ಲಿ ಸೇರಿಸಲ್ಲ.ಈ ಎರಡು ಕತೆಗಳಲ್ಲಿರೊ extreme ಭಾವುಕತೆಯಲ್ಲಿ ತಮ್ಮ ಜೀವನವನ್ನ ಹೇಳಿಕೊಳ್ತಾ ಇರುವ ಕತೆಗಳಿವು. ಅದೇ ತರದ ಸನ್ನಿವೇಶ ಬೇರೆ ಕತೆಗಳಲ್ಲಿನೂ ಇವೆ. actually ಹಶಂಬಿಯ ಕತೆಯಲ್ಲಿನು ಇದೆ.ಆದರೆ ಬದುಕುತ್ತಾ ಇರುವ ಸನ್ನಿವೇಶ ಬೇರೆ ಇದೆ. ಆದ್ರೆ ಇಲ್ಲಿ ಕಟ್ಟೆ ಒಡೆದು ಹೋಗುವಂಥ ಭಾವುಕತೆ ಇದೆ. ಇಲ್ಲಿ ಕಾಣ್ತಾ ಇರೋದಕ್ಕೆ ಕಾರಣ ಅಂದ್ರೆ, ಆ ಹಿಂದೆ ಬಳಸಿರೋವಂಥ ಕಥಾ ತಂತ್ರಗಳು ಬಹುಷಃ, ತಂತ್ರವಾಗಿ ನಾನು ಈಗ ಹೇಳ್ತಾ ಇದೀನಿ, ನಾನು ಬರೀಬೇಕಾದಾಗ ಆ ತರ ಯೋಚ್ನೆ ಮಾಡಿರಲ್ಲ ನಾನು, ಅವು ಸರಿ ಹೋಗಲ್ಲ ಅನ್ನೋ ಕಾರಣಕ್ಕಾಗಿ ಬರೆದಿರಬಹುದು. ಆಮೇಲೆ ಎರಡನ್ನೂ ಹೇಗೆ match ಮಾಡ್ತೀನಿ ಅಂದ್ರೆ ಆ ಎರಡೂ ನನ್ನಲ್ಲೆ ಇವೆ, ನಾನು ಎಲ್ಲೂ manage ಮಾಡಿಲ್ಲ ಅವನ್ನ. ಸೊ ಆ ತರ extreme ಭಾವುಕ ಸನ್ನಿವೇಶನು ನಮ್ಮ ಬದುಕಲ್ಲಿ ಬಂದಿರುತ್ತೆ. ನಾವೆಷ್ಟೊ ಸಲ notice ಮಾಡಿರಲ್ಲ ಅವನ್ನ. ಸೊ, ಯಾವಾಗ ನಾವು notice ಮಾಡ್ತೀವಿ ಅಂದ್ರೆ, ನಾವು ಅದೇ ನಿಟ್ಟಿನಲ್ಲಿ ಯೋಚನೆ ಮಾಡ್ತಿರಬೇಕಾದ್ರೆ. ಅಂದ್ರೆ ಸಾಹಿತ್ಯ ಯಾಕೆ ನಮಗೆ ಬಹಳ ಮುಖ್ಯ ಆಗುತ್ತೆ ಅಂದ್ರೆ, ನಾವು ಬಹಳ ತಲೆ ಕೆಡಿಸಿಕೊಂಡು ಬಿಟ್ಟಿರ‍್ತೀವಿ. ಅದು ಬಿಟ್ರೆ ನಮಗೆ ಬೇರೆ ಏನೂ ಇಲ್ಲ ಅಂತ. ಸೊ, ಅದ್ಕೆ ನಮಗೆ ಎಷ್ಟೊ ವಿಷಯಗಳು ಭಾಳ important ಆಗಿ ಕಾಣುತ್ವೆ. ಬಟ್ ಬೇರೆ ಸಾಮಾನ್ಯ ಜನರಿಗೆ ಅವು important ಆಗಿ ಕಾಣಲ್ಲ. ಸೊ, ಅದು ಗಮನಿಸುವ ಸೂಕ್ಷ್ಮತೆ ಅದು, ಅಷ್ಟೇನೆ. ಅದ್ರಿಂದಾಗಿ ಹಾಗಿದೆ ಅಂತ ನಾನು ಅಂದ್ಕೊಂಡಿದೀನಿ.ಕಾದಂಬರಿಯ ಅನನ್ಯತೆಗೆ ನಿಮ್ಮ ನಿರೂಪಣಾ ಕ್ರಮ ಹೆಚ್ಚು ಹತ್ತಿರವಿದೆ ಎನ್ನುವ ಬಗ್ಗೆ ಅನೇಕ ವಿಮರ್ಶಕರ ನಿಲುವಿನ ಬಗ್ಗೆ ಗೊತ್ತು. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ನನ್ನದೊಂದು ಸ್ವಲ್ಪ ಬೇರೆ ತರ ನಿಲುವಿದೆ ಇಲ್ಲಿ. ವಿಮರ್ಶಕರು ಅಥವಾ ಆ ತರದ ಯಾವುದೇ ಒಂದು ಗ್ರಹಿಕೆ ಇರುವಂಥವರಿಗೆ ಆ ಗ್ರಹಿಕೆ ಬಂದಿರೋದು ನಮ್ಮಲ್ಲಿರೊ ಸಾಂಪ್ರದಾಯಿಕ ಮಾದರಿಗಳಿಂದ. ಸಣ್ಣಕತೆಗಳು ಅಂದ್ರೆ ಅದಕ್ಕೆ ಒಂದು ಮಾದರಿಯನ್ನ ನಾವು ಪ್ರಪೋಸ್ ಮಾಡ್ತಾ ಇದೀವಿ. ಕಾದಂಬರಿ ಅಂದ್ರೆ ಅದಕ್ಕೆ ಒಂದು ಮಾದರಿಯನ್ನ ಪ್ರಪೋಸ್ ಮಾಡ್ತೀವಿ. ಕಾದಂಬರಿ ಎಲ್ಲಿಂದ ಬಂದಿದೆಯೋ ಅಲ್ಲಿ, ಯುರೋಪಿನಿಂದಲೇ ಬಂದಿರೋದದು, ಅವರದ್ದು ಸಾಂಪ್ರದಾಯಿಕ ಮಾದರಿಯೊಂದಿದೆ ಮತ್ತು ಹೊಸದಾಗಿ ಪುನರ್ವ್ಯಾಖ್ಯಾನ ಮಾಡಿರೋ ಮಾದರಿಗಳು ಇವೆ. ಈ ಮಿಲನ್ ಕುಂದೇರಾ ಕಾದಂಬರಿಗಳನ್ನ ನೋಡಿದ್ರೆ ಕಾದಂಬರಿಗಳಿಗಿಂತ ಹೆಚ್ಚು ಕತೆ ತರ ಇದೆ ಅದು. ಆದ್ರೆ ಕಾದಂಬರಿ ರೂಪದಲ್ಲಿ ಪಬ್ಲಿಷ್ ಆಗಿವೆ. ಮಿಲನ್ ಕುಂದೇರಾನ ಯಾವ್ದೇ ಒಂದು ಕೃತಿನ ಗಮನಿಸಿದ್ರೂನು ಹಾಗೇ ಅನಿಸ್ತಿರುತ್ತೆ ನಮಗೆ. ಅಲ್ಲಿ ಪ್ರಶ್ನೆ ಏನಿದೆ ಅಂದ್ರೆ ಒಂದು ನಾವು ಯಾವ ಮಾದರಿಗಳನ್ನ ಫಿಕ್ಸ್ ಮಾಡಿದೇವೆ ಆ ಮಾದರಿಗಳ ಮೂಲಕ ನಾವು ಬರಹಗಳನ್ನ ಸ್ವೀಕಾರ ಮಾಡ್ತೀವಿ. ಅದು ನನ್ನ ಪ್ರಕಾರ ಅಷ್ಟೋಂದು ಸಮರ್ಪಕ ಅಲ್ಲ ಅನ್ಸುತ್ತೆ. ತಪ್ಪು ಅಂತ ನಾನು ಹೇಳಲ್ಲ. ಅಷ್ಟೊಂದು ಸಮರ್ಪಕವಾದ ಗ್ರಹಿಕೆ ಅಲ್ಲ ಅದು.

ಆಮೇಲೆ ನನಗೆ ಯಾವಾಗ್ಲುನು ನಾನು ಬಹಳಷ್ಟು conflictsಗಳನ್ನ ಎದುರಿಸ್ತಾ ಇರ್ತೀನಿ. ಈ ಬರೀಬೇಕಾದಾಗ. ಅದ್ಯಾಕಂದ್ರೆ ಕತೆ ಅಂದ ತಕ್ಷಣ ಬರೀಬೇಕಾದ್ರೆ ಒಂದು ಸಿದ್ಧ ಮಾದರಿ ಇದೆ ಈಗಾಗ್ಲೆ. ಅಂದ್ರೆ ಪ್ರಸ್ತುತ ಸಿದ್ಧ ಮಾದರಿಯ ಕಲ್ಪನೆಗಳ ಬಗ್ಗೆ ನಾನು ಮಾತಾಡ್ತಾ ಇದ್ದೇನೆ. ಸಿದ್ಧ ಮಾದರಿಗಳ ಬಗ್ಗೆ ಅಲ್ಲ. ನಾನು ಅದರ ಸಿದ್ಧ ಮಾದರಿಗಳ ಬಗ್ಗೇನೆ ನಾನು ಮಾತಾಡ್ತಾ ಇಲ್ಲ. ಬಂಡಾಯದ ಒಂದು ಮಾದರಿಯಿದೆ. ನವ್ಯದವರದ್ದೊಂದು ಮಾದರಿಯಿದೆ. ಇನ್ನು ಕೆಲವು ತರದ ಕೆಲವು ಟಿಪಿಕಲ್ ಮಾದರಿಗಳಿವೆ. ಕಥಾ ಸ್ಪರ್ಧೆಗಳಿಗೆ ಬರೆಯೋ ಮಾದರಿನೆ ಇದೆ. ಅದ್ರ ಬಗ್ಗೆ ನಾನು ಮಾತಾಡ್ತಾ ಇಲ್ಲ. ಈಗ ಕಲ್ಪಿತ ಸಿದ್ಧ ಮಾದರಿ ಏನಂದ್ರೆ ಕತೆ ಅಂದ್ರೆ ಇಷ್ಟು ಪುಟಗಳ ಒಳಗಡೆ ಇರಬೇಕಂತ ಅನ್ನೋದು ಒಂದು. ಈಗ ಅದ್ರ ಅನುಭವ ಇದೆಯಲ್ಲ, ಅಂದ್ರೆ ಓದಿನ ಅನುಭವ, ಓದಿದ ಮೇಲೆ ಈಗ ಒಂದು ಕೃತಿಯನ್ನ ಓದಿದ ಮೇಲೆ ಅದು ದಟ್ಟವಾಗಿ ಕೊಡುವ ಅನುಭವ ಇದ್ಯಲ್ಲ, ಅದು ಮುಖ್ಯ ಅಂತ ನನಗನಿಸುತ್ತೆ.

ಅಂದ್ರೆ ಈಗ ನಾವು ಹಿಂದೆ ಚರ್ಚೆ ಮಾಡ್ತಾ ಇದ್ವಿ ನೋಡಿ, ಪೊಯೆಟ್ರಿಗೆ ನಾವು ಆತರ ಮಾಡಬಹುದು. ಬಟ್ ಗದ್ಯ ಬರಹದಲ್ಲಿ ಇದು ಕತೆ ಅಥವಾ ಕಾದಂಬರಿ - ಈ ತರದ ಚರ್ಚೆನೆ ಬಹಳ ಅಪ್ರಸ್ತುತ ಅಂತ ಅನ್ಸುತ್ತೆ ನನಗೆ. ಯಾಕಂದ್ರೆ ನಾನು ಓದೊ ಬೇರೆ ಬೇರೆ ದೇಶಗಳ ಎಷ್ಟೋ ಲೇಖಕರಲ್ಲಿ ಕತೆಗಳು ಅಂತ ಪಬ್ಲಿಷ್ ಮಾಡಿರೋದೆ actually ನೂರು ಪುಟಗಳ ಮೇಲಿದೆ. ಈಗ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಬರೆಯೊ ಕತೆಗಳನ್ನ ನೋಡಿದ್ರೆ, ಸಿಂಗರ್ ಬರೆಯೋ ಕತೆಗಳನ್ನ ನೋಡಿದ್ರೆ ಅಥವಾ even ಎಷ್ಟೋ ಆಫ್ರಿಕನ್ writers ಬರೆಯೋ ಕತೆಗಳನ್ನ ನೋಡಿದ್ರೆ ನೀವು, ಅವ್ರದೆಲ್ಲ ನೂರು ಪೇಜ್ ಮೇಲೆನೆ ಇದಾವೆ. ಕತೆಗಳು ಅಂತ ಪಬ್ಲಿಷ್ ಮಾಡಿದಾರೆ. ಪಬ್ಲಿಷ್ ಮಾಡ್ಬೇಕಾದ್ರೆ ನಿಮಗೆ ಒಂದು convenient form ಬೇಕು. ಅಂದ್ರೆ ಅದು convenient form ಅಷ್ಟೆನೆ ಅದು.
(ಚಿತ್ರಕೃಪೆ :ಪ್ರಜಾವಾಣಿ ದೀಪಾವಳಿ ವಿಶೇಷಾಂಕ 2006 ಮತ್ತು 2008)

No comments: