Wednesday, August 25, 2010

ಕತೆಗಾರ ಕೇಶವ ಮಳಗಿ ಸಂದರ್ಶನ : ಭಾಗ ಒಂಭತ್ತು

ಅಕ್ಷರ ವ್ಯಾಮೋಹ ಮತ್ತು ಅಕ್ಷರ ವೈರಾಗ್ಯಗಳ ನಡುವಿನ ಒಂದು ಸಂತುಲಿತ ಮನಸ್ಥಿತಿಯನ್ನು ಬರಹಗಾರ ರೂಪಿಸಿಕೊಳ್ಳುವುದು ಹೇಗೆ? ಇದು ಎಲ್ಲಾ ಬರಹಗಾರರಲ್ಲಿಯೂ ಇರುತ್ತೋ ಇಲ್ವೊ ಗೊತ್ತಿಲ್ಲ, ನಿಮ್ಮ ಬರವಣಿಗೆಯಲ್ಲಂತೂ ಕಾಣಿಸಿದೆ.


ಎಲ್ಲಾ ಲೇಖಕರಿಗೂ ಇರಬಹುದೋ ಏನೋ ನನಗೊತ್ತಿಲ್ಲ. ಇದು ಈ ತರದ contradiction ಯಾಕೆ ಬರುತ್ತೆ ಅಂದ್ರೆ ನನಗೆ, ಈಗ ಈ ಸೂಕ್ಷ್ಮತೆ, ಸಾಹಿತ್ಯದ ಸೂಕ್ಷ್ಮತೆ ಅಂತೇನೂ ಅಲ್ಲ, ಅದು ಕಾರಣ ಇದಕ್ಕೆ. ಈಗ ನೋಡ್ರಿ ನಾನು ಕಳೆದ ವಾರ ಎಲ್ಲೋ ಒಂದು ಸಾಹಿತ್ಯ ಸಂವಾದಕ್ಕೆ ಹೋಗಿದ್ದಾಗ ಒಬ್ಬರು ನನಗೆ ಕೇಳಿದ್ರು. ನಿಮಗೆ ಸಾಹಿತ್ಯ ಸಿದ್ಧಾಂತ ಮುಖ್ಯನೊ ಜೀವನದ ಸಿದ್ಧಾಂತ ಮುಖ್ಯನೊ ಅಂತ ಅವರು ಕೇಳಿದ್ರು. ನನಗೆ ತಕ್ಷಣ ಉತ್ತರ ಹೇಳ್ಲಿಕ್ಕಾಗಲಿಲ್ಲ. ಈವಾಗ ನಾನು ಯೋಚನೆ ಮಾಡ್ತಾ ಇದೀನಿ. ನನಗೆ actually ಎರಡೂ ಬೇರೆ ಬೇರೆ ಅಲ್ವೇ ಅಲ್ಲ. ಈ ಸಾಹಿತ್ಯದ ಸಿದ್ಧಾಂತ ಮತ್ತು ಜೀವನದ ಸಿದ್ಧಾಂತ ಎರಡೂ ಬೇರೆ ಆಗಿಲ್ಲ. ಏನನ್ನ ನಾವು ಮಾತಾಡಬೇಕು ಅಂತ ಇದೀವೋ ಸಾಹಿತ್ಯದ ಮೂಲಕ ಅದು ಜೀವನ ಸಿದ್ಧಾಂತವೂ ಆಗಿದೆ. ಅಥವಾ ಎರಡೂ ಒಂದಕ್ಕೊಂದು ಅದು. ಅದರದ್ದು ಇದಕ್ಕಿದೆ, ಇದರದ್ದು ಅದಕ್ಕಿದೆ. ಆದ್ರೆ ಕೆಲವು ಸಲ ಏನಾಗುತ್ತಂದ್ರೆ, ಈ ಸಾಹಿತ್ಯ ಸಿದ್ಧಾಂತ ಅಂತ ನಾವು ಹೇಳ್ತಾ ಇದ್ದೀವಲ್ಲ, ಅಂದ್ರೆ ಈ ಹೊರಗಡೆಯಿಂದ ತಗೊಂಡು ಬಂದು ಹೇರತಾ ಇರುವಂಥ ಸಿದ್ಧಾಂತಗಳು ಅವು, ಅವು ಜೀವನದ ಸಿದ್ಧಾಂತ ಅಲ್ಲ. ಜೀವನದಿಂದ ಸಾಹಿತ್ಯ ರೂಪುಗೊಂಡಿದೆ. ಜೀವನವನ್ನು ನೋಡಿ ನಾವು ಸಾಹಿತ್ಯವನ್ನ ಬರಿದಿದೀವಿ ಮತ್ತು ಅದರಿಂದ ಸಾಹಿತ್ಯದ ಸಿದ್ಧಾಂತ ರೂಪುಗೊಂಡಿದೆ ಅಥವಾ ರಾಜಕೀಯ ಸಿದ್ಧಾಂತ ರೂಪುಗೊಂಡಿದೆ. ಮೊದಲು ಜೀವನ. ಆಮೇಲೆ ಉಳಿದಿದ್ದೆಲ್ಲ. ಸೊ, ಅದು ಬೇರೆ ಇದು ಬೇರೆ ಅಂತ ನಾನು ನೋಡಲ್ಲ.

ಆದ್ರೆ ಕೆಲವರಿಗೆ ಹೀಗೂ ಅನ್ನಿಸಬಹುದು. ಅಂದ್ರೆ ಸಾಹಿತ್ಯದಲ್ಲಿ ನಾನು ಹೇಳ್ತಾ ಇರೋದು ಬೇರೆ ಇದೆ, ಸಾಹಿತ್ಯದ ಆದರ್ಶಗಳು, ಸಾಹಿತ್ಯದ ಉದ್ದೇಶಗಳು ಬೇರೆ ಇದೆ, ಸೊ ಜೀವನವೇ ಬೇರೆ ಇದೆ, ಇದನ್ನ ನಾನು ಬಳಸಿಕೊಳ್ತ ಇದೀನಿ ಅಂತನ್ನೋ ನಿಲುವಿದು. ಸೊ, ಸಾಹಿತ್ಯ ನನಗೆ ಬೇಕಾಗಿರೋದನ್ನ ಪಡೆಯೋದಕ್ಕೆ ಒಂದು ಮಾರ್ಗ ಅಷ್ಟೆ ಅಂತ ತಿಳ್ಕೊಂಡಿರೋದ್ರಿಂದ ಈ ತರದ ಚರ್ಚೆ ಪದೇ ಪದೇ ನಮ್ಮ ಸಮಾಜದಲ್ಲಿ ಬರ್ತಾ ಇರುತ್ತೆ. ಆದ್ರೆ, ಎರಡೂ ಬೇರೆ ಬೇರೆ ಅಲ್ಲ ಅವು. 
ಈ contradiction ಯಾಕೆ ಬರಹಗಾರನಾಗಿ ನನಗೆ ಬರ್ತಾ ಇದೆ ಅಂದ್ರೆ, ನನಗೆ ಎರಡೂ ಬೇರೆಯಲ್ಲ. ಬಟ್ ನಾನು ಪ್ರತ್ಯೇಕವಾಗಿಲ್ಲ ಸಮಾಜದಿಂದ. ನಾನು ಸಮಾಜದ ಭಾಗವಾಗಿದೀನಿ. ಸೊ, ಹಾಗಿದ್ದಾಗ ಈ ಸಮಾಜದ ಸಾಹಿತ್ಯ ಒಂದಿದೆಯಲ್ಲ, ಅದ್ರ ಭಾಗಾನು ನಾನಾಗಿದೀನಿ. ಸಮಾಜದ ಭಾಗಾನೂ ಆಗಿದೀನಿ, ಸಮಾಜದಿಂದ ಸೃಷ್ಟಿಯಾಗೋ ಸಾಹಿತ್ಯದ ಭಾಗಾನೂ ಆಗಿದೀನಿ. ಈ ಸಮಾಜದಿಂದ ಸೃಷ್ಟಿಯಾಗ್ತಾ ಇರೋ ಸಾಹಿತ್ಯದ ಭಾಗ ಇದೆಯಲ್ಲ. ಸಾಹಿತ್ಯಿಕವಾಗಿ ಈಗ ನಾವು ತಲುಪಿರೋ ಒಂದು ಹಂತವನ್ನ ಗಮನಸಲ್ಲಿಟ್ಟುಕೊಂಡು ನೋಡಿದ್ರೆ, ನವೋದಯದಲ್ಲಿ ಇದ್ದ ಒಂದು ಭಾಷೆಯ ತಾಜಾತನ, ಅದರ ಅಗತ್ಯಗಳು ಏನಿತ್ತು, ಅದನ್ನ ಮೀರಿ ನಾವು ಯಾವ್ದೋ ಒಂದು ಹಂತದಲ್ಲಿದೀವಿ. ಈ ಹಂತದಲ್ಲಿ ನಮಗೆ ಬೇರೆ ಬೇರೆ ಪರಿಕರಗಳಿಂದ ಸೌಕರ್ಯಗಳು ಅಥವಾ ಪ್ರಯೋಜನಗಳಿವೆಯಲ್ಲ, ಅವೆಲ್ಲವನ್ನೂ ನಾವು ಯಾವುದೋ ಕಾರಣಕ್ಕಾಗಿ, ಅಂದ್ರೆ ಸಾಹಿತ್ಯದ ಕಾರಣಕ್ಕಾಗಿ ನಾವು ಬಳಸ್ಕೋತಾ ಇದ್ದಿದ್ರಿಂದ ಎಷ್ಟೋ ಸಲ ನನಗೆ ಅನಿಸುತ್ತೆ, ಜೀವನವೇ ಮುಖ್ಯವಿದೆ ಆದ್ರಿಂದ ಜೀವನ ನಾವು ನಡೆಸಿದ್ರೆ ಸಾಕು, ಸಾಹಿತ್ಯ ಬರೆಯೋ ಅಗತ್ಯ ಏನಿದೆ ಅಂತ.

ಬಟ್ at the same time, ನನ್ ಒಳ್ಗಡೆ ಒಂದು ರಾಜಕೀಯ ಪ್ರಜ್ಞೆ ಇದೆ. ಮತ್ತೆ ಒಂದು ಸೈದ್ಧಾಂತಿಕ ಪ್ರಜ್ಞೆನೂ ಇದೆ ನನಗೆ. ಒಂದು, ನನಗೆ ವ್ಯಕ್ತಿಯಾಗಿ ಒಂದು ವ್ಯಕ್ತಿ ವಿಶಿಷ್ಟವಾದ ಪ್ರಜ್ಞೆ ಇದೆ. ಅದು ನಾನು ನಾನಾಗೇ ನನಗೆ ಅಂತ ಸೃಷ್ಟಿ ಮಾಡಿಕೊಂಡಿರೋದಲ್ಲ ಅದು. ನಾನು ಸಮಾಜದ ಭಾಗವಾಗಿರೋದ್ರಿಂದ ನನಗದು ಬಂದಿದೆ. ಜನರ ಭಾಗವಾಗಿರೋದ್ರಿಂದ ನನಗೆ ಬಂದಿದೆ. ಸೊ ನನ್ನ ವಿಶಿಷ್ಟತೆ ಜೊತೆಗೆ ಅವರದೂ ಕೆಲವು ವಿಶಿಷ್ಟತೆಗಳಿವೆ. ಇವು ಅವ್ರಿಗೆ ಗೊತ್ತಿಲ್ಲ ಅಂತಿಲ್ಲ. ಗೊತ್ತಿಲ್ದೆ ಇರುವಂಥ ಜಗತ್ತಿನ ಭಾಗಗಳೂ ಇವೆ. ಸೊ, ಗೊತ್ತಿರೋವ್ರುನು ಇದಾರೆ ಗೊತ್ತಿಲ್ದೆ ಇರೋವ್ರುನು ಇದಾರೆ. ಈಗ ನಾನು ಕತೆ ಬರೀತಾ ಇರೋವಂಥ ಮಾಳವ್ವ ಆಗಬಹುದು, ನನ್ನ ಕತೆಯಲ್ಲಿ ಪಾತ್ರವಾಗಿರೋ ಮಾಳವ್ವನೂ ಆಗಬಹುದು, ಅಥವಾ ‘ಹೊಳೆಬದಿಯ ಬೆಳಗು’ ನಲ್ಲಿ ಬರೋವಂಥ ಬೋಲ್ಡಿಬಾಬಾನೆ ಆಗಿರಬಹುದು, ಅವನ್ಯಾವತ್ತಾದ್ರೂ ಈ ಕತೇನ ಓದ್ತಾನ ಅಂದ್ರೆ, ಇಲ್ಲ ಓದಲ್ಲ ಅವನು. ಆದ್ರೆ, ಅವನು ಕತೆ ಓದ್ತಾನೊ ಇಲ್ವೊ ಅಂತನ್ನೋದು ನನಗೆ ಮುಖ್ಯ ಅಲ್ಲ. ಈ ತರದ್ದೆ ಒಂದು ಯಾವ್ದೋ ಒಂದು ಕಾಲಘಟ್ಟದಲ್ಲಿ, ಎಲ್ಲೋ ಒಂದು ಕಡೆಗೆ, ಇಂಥಾ ಜನಗಳು ಜೀವನವನ್ನ ಮಾಡ್ತಾ ಇದ್ದಾಗ, ಇಂತಹ ಸಂಕಷ್ಟಗಳು ಅವರಿಗೆ ಬಂದ್ವು ಮತ್ತು ಇಂಥಾದ್ದೇ ಒಂದು ಸಾಧ್ಯತೆಯನ್ನ ಅವರು ಕಂಡ್ಕೊಂಡ್ರು ಆ ಕ್ಷಣದಲ್ಲಿ, - ಅದು permanent solution ಅಲ್ಲ ಅದು, ಅಲ್ಲಿರೋದ್ಯಾವ್ದೇ ಆಗ್ಲಿ. ಇದು ನನಗೆ ಗೊತ್ತಿದೆ. ಸೊ ಇದನ್ನ ನಾನು ಬರೀದೇ ಇದ್ರೆ ನಾನು ಸಮಾಜಕ್ಕೆ ನಾನು ಏನಾದ್ರು ಒಂದು, ಭಾಗವಾಗಿ ನಾನು ಕೊಡ್ಬೇಕಾದ್ದು ಇರುತ್ತಲ್ಲ, ನಾನು ಪಡೆದುಕೊಂಡಿರೋದರ ಭಾಗವಾಗಿ ನಾನು ಕೊಡೋವಂಥ ಭಾಗನೂ ಇರುತ್ತೆ. ಅದಕ್ಕೆ ಅನ್ಯಾಯ ಮಾಡ್ತಾ ಇದ್ದೀನಿ ಅನ್ನೋವಂಥ, ಅನ್ಯಾಯ ಅಂತ ನಾ ಹೇಳಲ್ಲ, ಬಟ್ ನಾನು ಕೊಡೋದು ನನ್ನ ಕರ್ತವ್ಯ ಅಂತ ತಿಳ್ಕೊಂಡು ನಾನು ಬರೀತಾ ಇದೀನಿ. ಹಾಗೆ ಬರೀಬೇಕಾದ್ರೆ, ಈ contradictionನು ಇದೆ. ಹೊರಗಡೆಗೆ ನನಗೆ.


ಯಾವ್ದಕ್ಕಾಗಿ ಬಳಸ್ತಾ ಇದಾರೆ ಇವ್ರು, ಸಾಹಿತ್ಯದ ಉದ್ದೇಶ ಏನಿದೆ. ಮತ್ತು ಜೀವನದ ಉದ್ದೇಶ ಏನಿದೆ, ಎಲ್ಲಾದಕ್ಕಿಂತ ಮುಖ್ಯವಾಗಿ. ಜೀವನದ ಉದ್ದೇಶ ನಾನು ದಿನ ಬೆಳಗಾಗೋದ್ರಲ್ಲಿ ಪ್ರಸಿದ್ಧನಾಗಬೇಕು ಅಂತನ್ನೋದು ಖಂಡಿತಾ ಅಲ್ಲ. ಹಾಗಿದ್ದಾಗ ಅದಕ್ಕೆ ಬೇರೆ ಕೆಲವು ಕ್ಷೇತ್ರಗಳಿವೆ. ಬಟ್ ಯಾವ್ದೇ ಕ್ಷೇತ್ರ, ಯಾವ್ದೇ ಇದ್ರುನು, ಯಕ್ಷಗಾನನ ತಗೊಂಡ್ರು ಅಲ್ಲಿ ಅವನ ಪರಿಶ್ರಮ ಇದೆ. ಮುವ್ವತ್ತು, ನಲವತ್ತು ಐವತ್ತು ವರ್ಷದ ಪರಿಶ್ರಮ ಇದೆ. ಬಟ್ ಆ ಪರಿಶ್ರಮಕ್ಕೆ ಬೆಲೆ ಇದ್ಯಾ ಇಲ್ವಾ ಅನ್ನೋದು ಅವರಿಗೆ ಮುಖ್ಯ ಅಲ್ಲ. ಅವ್ರು ಆ ಕ್ಷಣದಲ್ಲಿ ತಾವು ಏನು ನಂಬಿಕೊಂಡು ಬಂದಿದಾರೋ ಜೀವನದ ಮೌಲ್ಯ ಅಂತಾನೆ ತಿಳ್ಕೊಳ್ಳಿ ನೀವು ಅಥವಾ ಅವರ ಜೀವನದ ಅಗತ್ಯ ಅಂತ ತಿಳ್ಕೊಳ್ಳಿ, ಅವರಿಗೆ ದುಡ್ಡು ಸಿಕ್ತಾ ಇದ್ರೆ ಅನ್ನೊ ಅರ್ಥದಲ್ಲಿ ನಾನು ಹೇಳ್ತಾ ಇದೀನಿ. ಬಟ್ ಅದನ್ನ ಪ್ರತಿಕ್ಷಣನು ಅವ್ರು perform ಮಾಡ್ತಾ ಇರ‍್ಬೇಕಾಗ್ತದೆ. ಆದ್ರೆ ಸಾಹಿತ್ಯಕ್ಕೆ ಮಾತ್ರ ಯಾಕೆ ಆ ತರ ಆಗಲ್ಲ ಅಂತ ಯಾವತ್ತೂನು ನನ್ನ ತೀವ್ರವಾಗಿ ಕಾಡ್ತಾ ಇರುತ್ತೆ. ಇಲ್ಲಿ ನನಗೆ ಅನುಕೂಲ ಜಾಸ್ತಿ ಇದೆ, accessibility ಜಾಸ್ತಿ ಇದೆ. ಬೇರೆ ಯಾವ್ದೇ ಕಲೆಗೆ ಹೋಲಿಸಿದ್ರೆ. ಎಲ್ಲಾ ಕಲೆನಲ್ಲೂ ಇದೆ ರಾಜಕೀಯ. ಇಲ್ಲ ಅಂತ ನಾನು ಹೇಳಲ್ಲ. ಬಟ್ ಇವ್ರಿಗೆ ಜಾಸ್ತಿ ಇದೆ. ಸೊ ಅದು ಜಾಸ್ತಿ ಇದೆ ಅಂತನ್ನೋ ಒಂದು ಕಾರಣಕ್ಕೆ ನಾವು ಅದರ ನಿಜವಾದ ಉದ್ದೇಶ ಇದೆಯಲ್ಲ ಅದನ್ನ ಸ್ವಲ್ಪ ಆಚೆಗಿಟ್ಟು, ಉಳಿದಿದ್ದೇ ಪ್ರಧಾನ ಅಂತ ಕಾಣ್ತಾ ಇದ್ದಾಗ ಏನಾಗುತ್ತೆ ಅಂದ್ರೆ ನನಗೆ ಗೊಂದಲಗಳು ಜಾಸ್ತಿಯಾಗುತ್ತೆ. ನನಗೆ ಒಬ್ಬ ಲೇಖಕನಾಗಿ. ಸೊ ಆವಾಗ ಇದು ಎಲ್ಲೋ ಒಂದು ಪಾತ್ರವಾಗಿನೊ, ಅಭಿಪ್ರಾಯವಾಗಿನೊ ಹೊರಗಡೆ ಬರ್ತಾ ಇರುತ್ತೆ. ಬಟ್ ಹಾಗಿರಬಾರ್ದು ಅಂತನ್ನೋದೆ ನನಗೆ ಅನಿಸ್ತಾ ಇರುತ್ತೆ ಯಾವಾಗ್ಲು. ಯಾಕಂದ್ರೆ ಅದ್ರ ಉದ್ದೇಶ ಅದಿಲ್ಲ. ಜೀವನದ ಉದ್ದೇಶವಾಗ್ಲಿ ಸಾಹಿತ್ಯದ ಉದ್ದೇಶವಾಗ್ಲಿ ಬೇರೆ ಇದೆ. ಅದೇ ಮುಖ್ಯ ನನಗೆ.
(ಚಿತ್ರಗಳು ನ್ಯಾಶನಲ್ ಜಿಯಾಗ್ರಫಿ ಫೋಟೋ ಗ್ಯಾಲರಿಯಿಂದ Mr James L Stanfield ಮತ್ತು James P Blair ಅವರ ಕೃಪೆ.)

No comments: