Wednesday, September 29, 2010

ದೇಶಕಾಲ, ನಾವು ಮತ್ತು ನಮ್ಮ ನಿಲುವಿನ ನೆಲೆಗಳು

J.M.Coetzeeಯ ಇನ್ನೊಂದು ಕಾದಂಬರಿ Dairy of Bad Year ಕೂಡ ಡೈರಿಯನ್ನು ತನ್ನ ನಿರೂಪಣಾ ತಂತ್ರವನ್ನಾಗಿ ಹೊಂದಿದೆ ಮಾತ್ರವಲ್ಲ ಕೆಲವೊಂದು ಬಗೆಯಲ್ಲಿ ಈ ಡೈರಿ ವಿಶಿಷ್ಟವಾಗಿದೆ. ಇಲ್ಲಿ ಡೈರಿಯ ಪ್ರತಿ ಹಾಳೆಯಲ್ಲೂ ಮೂರು ವಿಭಿನ್ನ ಭಾಗಗಳಿವೆ. ಮೊದಲ ಮತ್ತು ಇಡೀ ಕಾದಂಬರಿಯ ಮೂಲಭಾಗದಲ್ಲಿ ನಿರೂಪಕ ಬರೆಯುತ್ತಿರುವ ಅನಿಸಿಕೆಗಳಿವೆ. strong opinions ಎಂದು ಕರೆಯಲಾದ ಇವು ನಿರೂಪಕ ತನ್ನ ಸದ್ಯದ ವರ್ತಮಾನಕ್ಕೆ ಸ್ಪಂದಿಸಿ ಬರೆದ ಬರಹಗಳು. ಅಂದ ಮಾತ್ರಕ್ಕೆ ಇವೇನೂ ಕಾಲ ಕಾಲಕ್ಕೆ ಅವನಲ್ಲಿ ಮೂಡಿದ ಲಹರಿಯ ದಾಖಲಾತಿಯಲ್ಲ. ಮರೆಯುವ ಮುನ್ನ ಮರೆಯಬಾರದ ವಿಚಾರಗಳೆಂದು ಮಾಡಿಕೊಂಡ ಟೀಕೆ-ಟಿಪ್ಪಣಿಗಳೂ ಇವಲ್ಲ. ಇವು ಒಂದು ಮನಸ್ಸು ಸ್ವಸ್ಥ ಕೂತು ಧೇನಿಸಿದ ರೀತಿಯಲ್ಲಿ ಇರುವುದು ನಿಜವಾದರೂ ಈ ಧೇನಿಸುವಿಕೆ ಸದ್ಯವನ್ನು ಮೀರಿದ, ತನ್ನಷ್ಟಕ್ಕೆ ಸ್ವಸ್ಥ ಮತ್ತು ನಿಷ್ಕ್ರಿಯ ಕೂತ ವಯೋವೃದ್ಧನ ಮನನದಾಚೆಯ ಕ್ರಿಯಾಶೀಲ ಬದುಕನ್ನು ಕುರಿತದ್ದಕ್ಕೆ, ಭವಿಷ್ಯದ ಇನ್ನೊಂದಕ್ಕೆ ಜೋಡಿಸಲ್ಪಡುವಂತಿರುವ ಧೇನಿಸುವಿಕೆ. ಇದನ್ನು ಅರ್ಥಮಾಡಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದೇನೆ.

ದೇಶದ ಪರಿಕಲ್ಪನೆ, ದೇಶಪ್ರೇಮದ ಪರಿಕಲ್ಪನೆ, ಪ್ರಭುತ್ವ, ಯುದ್ಧ, ಶಾಂತಿ, ಧರ್ಮ, ಇಸ್ಲಾಂ, ಮೂಲಭೂತವಾದ, ಸಮಾಜವಾದಿ ಚಿಂತನೆ, ಕ್ರಾಂತಿಯ ಪರಿಕಲ್ಪನೆ, ಭಯೋತ್ಪಾದನೆ, ಪಾಪ-ನೀತಿ-ನೈತಿಕತೆ, ಹಣ, ಜಾಗತೀಕರಣ, ಮಾರುಕಟ್ಟೆ ಕೇಂದ್ರಿತ ಬದುಕು, ಭಾಷೆಯೂ ಸೇರಿದಂತೆ ಬದಲಾಗುತ್ತಿರುವ ಜೀವನ ಶೈಲಿ, ಸಂಗೀತ, ಹಕ್ಕಿಗಳು, ಚಿತ್ರಕಲೆ, ಫೋಟೋಗ್ರಫಿ, ಲೈಂಗಿಕತೆ, ಚಲನಚಿತ್ರ, ಸಾಹಿತ್ಯ-ಸಾಹಿತಿ, ಕಲೆ - ಹೀಗೆ ಇಲ್ಲಿನ ಚಿಂತನೆಗಳು ಬಹುಮುಖಿಯಾಗಿ ಹರಿಯುತ್ತವೆ.

ಈ ವಿಷಯ ಮಂಡನೆಯಲ್ಲಿ ಕ್ರಮಬದ್ಧತೆಯಿಲ್ಲ ಎನ್ನುವಾಗಲೂ ಒಂದು ನಿರ್ದಿಷ್ಟವಾದ ಕ್ರಮಬದ್ಧತೆ ಇದೆ ಮತ್ತು ಇವು ನಿರುದ್ದಿಶ್ಯ ಕರಡು ಬರಹಗಳ ಸಂಕಲನದಂತಿದೆ ಎನಿಸುವಾಗಲೂ ಒಂದು ಉದ್ದೇಶಿತ ನಿಯೋಜನೆ, ಸಂತುಲನ ಇದೆ. ಸ್ಪರ್ಧೆಯ ಬಗ್ಗೆ, ಸೆಕ್ಸ್ ಬಗ್ಗೆ, ದುಡ್ದಿನ ಬಗ್ಗೆ, ಮಾರ್ಕೆಟ್ ಮತ್ತು ಮನುಷ್ಯನ ಏಕಾಂತದ ಬಗ್ಗೆ ಬರೆಯುವಾಗಲೂ ಅವುಗಳಲ್ಲಿ ಸಮಾನವಾದದ್ದು ಇದೆ ಮತ್ತು ಇಲ್ಲ ಎನಿಸುವುದು ಸಾಧ್ಯ. ಹೀಗೆ ಹೇಳಿದರೆ ಏನೂ ಹೇಳಿದಂತಾಗಲಿಲ್ಲವೇನೊ. ತೇಜಸ್ವಿಯವರ ಮಾಯಾಲೋಕವನ್ನೋ, ಪರಿಸರದ ಕತೆಗಳು ಪುಸ್ತಕವನ್ನೋ ಓದುವಾಗ ಅಲ್ಲಿ ಏಕಸೂತ್ರದ ಕಥಾನಕವೊಂದು ಕ್ರಮೇಣ ಬೆಳೆದು ಯಾವುದೋ ಒಂದು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ ಅನಿಸುವುದಿಲ್ಲ. ಅವು ಹಾಗೆಯೇ ಬಿಡಿಬಿಡಿಯಾಗಿ ಉಳಿದು ಬಿಡಬಹುದು ಅಥವಾ ಸಂತುಲಿತ ಕಥಾಸ್ವರೂಪವೊಂದನ್ನು ಪಡೆದುಕೊಳ್ಳಲೂಬಹುದು. ಅದು ಅಷ್ಟು ಮುಖ್ಯವಲ್ಲ. ಆದರೆ ಮನುಷ್ಯನನ್ನು, ಅವನ ಬದುಕನ್ನು ಕುರಿತ ಯಾವುದೂ ತನ್ನದೇ ಆದ ಒಳನೋಟವನ್ನು, ಕಾಣ್ಕೆಯನ್ನು ಹೊಂದಿರದೇ ಇರಲು ಸಾಧ್ಯವಿಲ್ಲ, ಗಮನಿಸಿ ನೋಡಿದರೆ ಅದು ಒಂದು ದರ್ಶನವನ್ನು ಕರುಣಿಸದೇ ಇರುವುದಿಲ್ಲ ಎನ್ನುವ ದೃಷ್ಟಿಯಿಂದ ಎಲ್ಲವನ್ನೂ ಬಗೆದು ಬಗೆದು ನೋಡಿ ಏನೋ ಒಂದು ಭಾಷ್ಯ ಬರೆಯುವುದು ಸಾಧ್ಯವಿದೆ. ಅದು ಕೃತಿಕಾರನ ಉದ್ದೇಶವಾಗಿತ್ತೆ ಎಂಬುದಕ್ಕಿಂತ ಹೆಚ್ಚಾಗಿ ಭಾಷ್ಯಕಾರನ ಜಾಣ್ಮೆಯನ್ನು, ಪಾಂಡಿತ್ಯವನ್ನು ಪ್ರದರ್ಶಿಸುವುದಕ್ಕೇ ಸಹಾಯಕವಾಗುವುದು ಸಾಧ್ಯವಿದೆ. ಇಲ್ಲಿ ಓದುಗ ಹಾಗೇನೂ ತಿಣುಕಬೇಕಾಗಿಲ್ಲ ಎಂದು ಮೊದಲೇ ಹೇಳಿ ಬಿಡುವುದು ಉತ್ತಮವೆನಿಸುತ್ತದೆ. ಇಲ್ಲಿನ ಸಂತುಲನ, ಉದ್ದೇಶ, ಸಂಯೋಜನೆ ಈ ತರದ ಓದನ್ನು ಬೇಡುವುದೂ ಇಲ್ಲ.

ಕೆಲವೊಂದು ಸಂಗತಿಗಳು ಸರಳವಾಗಿ ನಾವು ದಿನನಿತ್ಯ ಅನುಭವಿಸುತ್ತ, ಪತ್ರಿಕೆಗಳಲ್ಲಿ ಓದುತ್ತ, ಕಾಣುತ್ತ ಇರುವಾಗ ಪಡೆಯದ ಒಂದು ಮಹತ್ವ, ಅರ್ಥ, ಅವು ಒಟ್ಟಾಗಿ ಕಾಣಿಸಿದಾಗ ಪಡೆಯುತ್ತವೆ. ಅದಕ್ಕಿಂತ ಕಾಲಕ್ರಮೇಣ ಅವು ನಮ್ಮ ದೈನಂದಿನ ಬದುಕಿನ ಮೇಲೆಯೇ ಉಂಟು ಮಾಡುವ ಪರಿಣಾಮವನ್ನು ಇದ್ದಕ್ಕಿದ್ದಂತೆ ಒಂದು ದಿನ ಥಟ್ಟನೆ ಗಮನಿಸಿದಾಗ ಅವು ಮೊದಲು ಕಾಣಿಸಿದಷ್ಟು ಅಥವಾ ನಾವು ಅಂದುಕೊಂಡಷ್ಟು ಸರಳವಾಗಿರದೇ ಇರುವುದು ನಮಗೆ ಕಾಣಿಸುತ್ತದೆ. ಹೀಗೆ ಏಕಕಾಲಕ್ಕೆ ಸರಳವೂ ಸಂಕೀರ್ಣವೂ ಆದ ಈ ವಿದ್ಯಮಾನಗಳನ್ನು ಗ್ರಹಿಸುವುದಕ್ಕೆ ಒಂದು ವಿಶಿಷ್ಟ ಮನಸ್ಥಿತಿ ಮತ್ತು ವಿವೇಚನೆಯ ಅಗತ್ಯವಿರುತ್ತದೆ. ತೀರ ಕಣ್ಣಿನ ಹತ್ತಿರ ಹಿಡಿದ ಒಂದು ವಸ್ತು ಹೇಗೆ ಅಸ್ಪಷ್ಟವಾಗಿ ಕಾಣಿಸುತ್ತದೋ ಹಾಗೆಯೇ ತೀರ ದೂರದ್ದು ವಿವರವಾಗಿ ಕಾಣಿಸುವುದಿಲ್ಲ. ಕಾಲ ಮತ್ತು ದೂರ (ದೇಶ) ಗಳ ಒಂದು ನಿರ್ದಿಷ್ಟ ಅಂತರ ನಮ್ಮ ಗ್ರಹಿಕೆಯ ಮೇಲೆ ಬೀರುವ ಪರಿಣಾಮ ವಿಶಿಷ್ಟವಾದದ್ದು ಮತ್ತು ಮಹತ್ವದ್ದು.

ಜಗತ್ತಿನ ಹಲವಾರು ಲೇಖಕರಿಂದ ಹೇಳಿಸಿ ಬರೆಸಲ್ಪಡುತ್ತಿರುವ, ಆಯಾ ಲೇಖಕರಿಗೆ ಇದು ಪ್ರಸ್ತುತ ಜಗತ್ತಿನ ಮಹತ್ವದ ವಿದ್ಯಮಾನ, ಸಮಸ್ಯೆ, ಸಂಗತಿ - ಅನಿಸಿದ್ದರ ಕುರಿತ ಅವರವರ ಅನ್ನಿಸಿಕೆಗಳ ಒಂದು ಪುಸ್ತಕಕ್ಕೆ ನಮ್ಮ ನಿರೂಪಕ ಬರೆಯುತ್ತಿರುವ ತುಂಡು ತುಂಡು ಅನಿಸಿಕೆಗಳು ಇವು. ಇವಕ್ಕೆ ಹಾಗೆ ಒಂದು ಉದ್ದೇಶವಂತೂ ಇದೆ. ಕಾದಂಬರಿಯ ಹಾಳೆಗಳಲ್ಲಿ ಹೀಗೆ ಇವು ಅಚಾನಕ ತುರುಕಲ್ಪಟ್ಟ ಲೇಖನಗಳಲ್ಲ. ಡೈರಿಯನ್ನು ತನ್ನ ತಾಂತ್ರಿಕ ಅವಶ್ಯಕತೆಯನ್ನಾಗಿ ಸ್ವೀಕರಿಸಿದ ಇಲ್ಲಿನ ನಿರೂಪಣಾ ತಂತ್ರ ಈ ಬರಹಗಳನ್ನು ಇದೇ ಕೃತಿಯ ಪ್ರತಿ ಹಾಳೆಯ ಉಳಿದ ಎರಡು ಭಾಗಗಳಿಗೆ ಸಂಬಂಧಿಸಿದಂತೆಯೇ ನಿರೂಪಿಸುತ್ತಿದೆ. ಹಾಗೆಯೂ ಈ ಭಾಗಕ್ಕೆ - ಮೂಲಭಾಗವೆಂದು ಹೇಳಬಹುದಾದ ಈ ಭಾಗಕ್ಕೆ - ಒಂದು ಗುರುತ್ವವಿದೆ. ಈ ಸಂಬಂಧ ಹೇಗಿದೆ ಎಂದರೆ ವಿಲಕ್ಷಣವಾಗಿದೆ. ಮುಂದೆ ಒಂದು ಕಡೆ ಕಾದಂಬರಿಯ ಇನ್ನೊಂದು ಪ್ರಮುಖ ಪಾತ್ರ ಅನ್ಯಾ ನಿರೂಪಕನ ಬಳಿ ಕೇಳುತ್ತಾಳೆ, ನಿನ್ನ ಪುಸ್ತಕದಲ್ಲಿ ನಾನಿದ್ದೇನೆಯೆ...ನನಗಲ್ಲಿ ಸ್ಥಾನವಿದೆಯೆ.... ನಿರೂಪಕ ಹೇಳುತ್ತಾನೆ, ಇದರಲ್ಲಿ ನೀನಿದ್ದೀ, ನೀನಿಲ್ಲದೆ ಮತ್ತೆ! ಹೇಗಿದ್ದೀ ಎಂದರೆ, ನೀನು ಅಲ್ಲಿ ಎಲ್ಲೋ ಒಂದು ಕಡೆ ಇಲ್ಲ. ಅದರ ಉದ್ದಗಲಕ್ಕೂ ನೀನೇ ಇದ್ದೀ....ಇದ್ದೀ ಎಂದರೆ ಇದ್ದಿ, ಇಲ್ಲಾ ಎಂದರೆ ಇಲ್ಲ! ಹೇಗೆಂದರೆ ದೇವರ ಹಾಗೆ!!

ಇದೇ ಮಾತನ್ನು ಇಲ್ಲಿನ ವಿಚಾರಗಳು, ಕಥಾನಕ ಮತ್ತು ಈ ಎಲ್ಲದರ ಒಟ್ಟಾರೆ ಉದ್ದೇಶಗಳ ಕುರಿತಂತೆಯೂ ಹೇಳಬೇಕಿದೆ. ಅನ್ಯಾ ನಿರೂಪಕನ ಮಾತನ್ನು ತಿಳಿದುಕೊಂಡಳೆ ಎನ್ನುವುದು ಓದುಗ ಇದನ್ನು ಕಂಡುಕೊಂಡನೆ ಎನ್ನುವಷ್ಟೇ ಮಹತ್ವದ್ದು, ನನಗೆ. ಇವತ್ತಿನ ಧಾವಂತದ ಬದುಕು, ನಿಂತು ಧೇನಿಸುವ ಅವಕಾಶವಿಲ್ಲದ ಓಟದ ಸ್ಥಿತಿಯಲ್ಲಿಯೇ ಮನನ-ಚಿಂತನ ನಡೆಯಬೇಕಾದ ಅರೆ-ಬರೆ ಮತ್ತು ತುಂಡುತುಂಡು ಓದುವಿಕೆ ಅನಿವಾರ್ಯವಾಗಿರುವ ಸ್ಥಿತಿಯಲ್ಲಿ ಇಂಥ ಕೃತಿಯಿಂದ ಹೆಚ್ಚನ್ನು ದಕ್ಕಿಸಿಕೊಳ್ಳುವುದು ಅಶಕ್ಯ ಎನ್ನುವ ಕಾರಣಕ್ಕೆ. ಇಲ್ಲಿನ ಆಹ್ಹಾ ಎನಿಸುವ ಒಳನೋಟಗಳು, ಮಿಂಚುಗಳು, ಜಾಣ್ಮೆಯ ನುಡಿಗಳು, ಹೊಸನಿಟ್ಟಿನಿಂದ ಅವೇ ದಿನನಿತ್ಯದ ಜಂಜಾಟಗಳನ್ನು ನೋಡಿದಾಗಲಷ್ಟೇ ಸಾಧ್ಯವಾಗುವ ಕಾಣ್ಕೆಗಳು ನಿಧಾನವಾದ Text Book ಓದಿನ ಓದುವ ಶೈಲಿಯನ್ನು ನಿರೀಕ್ಷಿಸುವಂತಿವೆ. ನಿಮಗೆ ಗೊತ್ತು, ಕಾವ್ಯಕ್ಕೆ ಇಂಥ ವ್ಯವಧಾನದ ಮತ್ತು ಸೂಕ್ಷ್ಮವಾದ ಓದು ಬೇಕು. ಹತ್ತೇ ಸಾಲಿನ ಒಂದು ಕವನ ಒಂದು ಕಾದಂಬರಿ ಓದಿ ಮುಗಿಸಲು ಬೇಕಾಗುವ ಕಾಲವನ್ನು ಕೇಳುವುದು ಕೂಡ ಅಸಹಜವಲ್ಲ. ಹಾಗೆಯೇ ಇದು. ಇದು ಕಾದಂಬರಿ ಎನ್ನುವುದನ್ನು ಗಮನದಲ್ಲಿಟ್ಟುಕೊಂಡರೆ ಕಾದಂಬರಿಯ ಓದಿನ ಶೈಲಿಗೆ ಇಲ್ಲಿನ ವೈಚಾರಿಕತೆ ಮನಸ್ಸಿನಿಂದ ಜಾರಿ/ಸೋರಿ ಹೋಗಬಹುದಾದ ಅಪಾಯವನ್ನು ಮೈಮೇಲೆಳೆದುಕೊಳ್ಳುತ್ತದೆ. ಇದೇ ಕಾದಂಬರಿಯ ಪ್ರತಿ ಹಾಳೆಯ ಎರಡು ಮತ್ತು ಮೂರನೆಯ ಭಾಗದ ಛಾಯೆ, ಪ್ರಭಾವ ಮತ್ತು ಸಾಂಗತ್ಯದಲ್ಲಿ ಈ ಮಾತು ಹೆಚ್ಚು ಸತ್ಯವಾಗುವುದು ಕೂಡಾ ಕೃತಿಯ ಮೂಲ ಭಾಗಕ್ಕೆ ಹಾನಿಕಾರಕವಾಗಿ ನಿಲ್ಲುತ್ತದೆ. ಈ ಮೂರೂ ಭಾಗಗಳು ಹೀಗೆ ಪ್ರತಿ ಪುಟದಲ್ಲೂ ಹಂಚಿಕೊಂಡು ಹೆಜ್ಜೆ ಹಾಕಬೇಕೆಂಬುದು ಕೃತಿಕಾರನ ಉದ್ದೇಶವೆಂಬುದು ಯಾರಿಗಾದರೂ ಅರ್ಥವಾಗುತ್ತದೆ. ಇದು ಒಂದು ವಿಲಕ್ಷಣ ಅನುಭವ! ಅನೇಕ ಬಗೆಯಲ್ಲಿ ಎರಡು ಮತ್ತು ಮೂರನೆಯ ಭಾಗ ಒಡ್ಡುವ ಆಮಿಷವನ್ನು ನಿಯಂತ್ರಿಸಿಕೊಂಡು, ಮೂಲಭಾಗ ಜಿಜ್ಞಾಸೆಯೇ ಪ್ರಧಾನವಾಗಿ ಒಡ್ಡುವ ಸವಾಲನ್ನು ಮಾನಸಿಕವಾಗಿ ಸ್ವೀಕರಿಸಿಕೊಂಡು ಮುಂದುವರಿಯುವುದು ಮನಸ್ಸಿಗೆ ಒಂದು ವಿಲಕ್ಷಣವಾದ ವ್ಯಾಯಾಮವನ್ನೇ ನೀಡುವುದೆಂದರೆ ಸುಳ್ಳಲ್ಲ! ಯಾಕೆಂದರೆ, ಎರಡು ಮತ್ತು ಮೂರನೆಯ ಭಾಗದಲ್ಲಿ ಮೂಲಭಾಗದ ಒಣ ಸಿದ್ಧಾಂತಗಳಿಗೆ ವಿರುದ್ಧವಾದ ಕಾಮ, ಪ್ರೇಮ, ಜಿದ್ದು, ವಯ್ಯಾರ, ಕುತಂತ್ರಗಳೆಲ್ಲ ಸೆಳೆಯುತ್ತಿರುತ್ತವೆ!

ಎರಡನೆಯ ಭಾಗ ಕೂಡ ಡೈರಿಯ ಪುಟಗಳಂತೆಯೇ ಇವೆ. ನಿರೂಪಕನದೇ ಬದುಕಿನ ಇನ್ನೊಂದು ಮಗ್ಗುಲನ್ನು ಇದು ತೆರೆದಿಡುತ್ತಿದೆ. ನಿರೂಪಕ ವಾಸಿಸುತ್ತಿರುವ ಫ್ಲ್ಯಾಟಿನಲ್ಲೇ ಕೊಂಚ ವಯಸ್ಸಾದವನೊಂದಿಗೆ (42) ವಾಸವಾಗಿರುವ ಅವನ ಗೆಳತಿ/ಹೆಂಡತಿ/ಸಹಾಯಕಿ ಆಗಿರಬಹುದಾದ ಅನ್ಯಾ (29) ಕುರಿತು 72ರ ಹರಯದಲ್ಲಿರುವ ನಿರೂಪಕ ಕಲ್ಪಿಸಿದ್ದು, ನಿರೀಕ್ಷಿಸಿದ್ದು, ಬಯಸಿದ್ದು, ಅಂದುಕೊಂಡಿದ್ದು, ಆಡಿದ್ದು, ಮಾಡಿದ್ದು ಎಲ್ಲವೂ ಇಲ್ಲಿದೆ. ಇದೂ ಒಂದು ಪಾರ್ಶ್ವವನ್ನು ಮಾತ್ರ ಹೇಳುತ್ತಿದೆ. ಅದು ನಿರೂಪಕನ ಭ್ರಾಂತಿ ಕೂಡ ಆಗಿರಬಹುದಾದ ಅಪಾಯವನ್ನು ಓದುಗ ಥಟ್ಟನೇ ಮನಗಾಣಬಲ್ಲ ಎಂದು ಮತ್ತೆ ಹೇಳಬೇಕಿಲ್ಲ! ಹಾಗಾಗಿಯೇ ಅನ್ಯಾ ಮಾತನಾಡುವ ಮೂರನೆಯ ಭಾಗ ಇನ್ನಿಲ್ಲದ ಆಕರ್ಷಣೆಯನ್ನೊಡ್ಡುತ್ತದೆ!! ಮೊದಲೇ ಹೇಳಿರುವಂತೆ ಮೂಲಭಾಗ ಒಂದು ಕೃತಿಗಾಗಿ ತಯಾರಾಗುತ್ತಿರುವ ಪ್ರಬಂಧವಾಗಿದ್ದು ಅದನ್ನು ನಿರೂಪಕನ ಹಸ್ತಪ್ರತಿ, ಧ್ವನಿಮುದ್ರಿತ ಟೇಪುಗಳಿಂದ ಟೈಪ್ ಮಾಡಿಕೊಡುವ ಕೆಲಸವನ್ನು ಇದೇ ಅನ್ಯಾ ವಹಿಸಿಕೊಳ್ಳುವುದರಿಂದ ಈ ಒಡನಾಟ ಕುತೂಹಲಕರವಾಗಿ ಮುಂದುವರಿಯುತ್ತದೆ.

ಮೂರನೆಯ ಭಾಗ ಈ ಅನ್ಯಾಳ ಮನೋಗತ. ಈಕೆಯ ಜೀವಂತಿಕೆ, ಜೀವನ ಪ್ರೀತಿ ಮತ್ತು ಜೀವನದೃಷ್ಟಿ ಅಚ್ಚರಿಯನ್ನುಂಟು ಮಾಡುವಂತಿವೆ. ಇದೇ ಇಡೀ ಕೃತಿಯ ಜೀವಂತಿಕೆ ಮತ್ತು ಅರ್ಥಪೂರ್ಣತೆಯ ಸೆಲೆ ಕೂಡ ಆಗಿರುವುದು ನಿಜ. ತನಗಾಗಿ ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟು ಬಂದ ತನ್ನ ಗೆಳೆಯ ಆಲನ್ ಮತ್ತು ಈ 72ರ ಲೇಖಕನ ನಡುವೆ ತನ್ನದೇ ಅದ ಒಂದು ಪುಟ್ಟ ಜಗತ್ತನ್ನು ಅದೇ ಆಗ ಕಂಡುಕೊಳ್ಳುತ್ತಿರುವ ಈ ಅಪ್ಪಟ ಹೆಣ್ಣುಮಗಳು ವಯ್ಯಾರಿ, ಹಠಮಾರಿ, ಮುಗ್ಧೆ ಮತ್ತು ಪ್ರೇಮದೇವತೆ; ಮತ್ತೆ, ಸರಳವಾದ ಮನಸ್ಸಿನವಳು. ಹಾಗಾಗಿಯೇ ಈ ಹುಡುಗಿ, (ಹಾಗೆಂದು ಕರೆಯಲು ಇಷ್ಟವಾಗುವಂತಿದ್ದಾಳೆ ಇವಳು!) ತನ್ನ ತರ್ಕ, ತತ್ವ, ಜಿಜ್ಞಾಸೆಗಳೊಂದಿಗೇ ಸೂಕ್ಷ್ಮ ಸಂವೇದನೆಗಳ ಭಾವಕೋಶದ ಪುಳಕ ಪಲ್ಲವಿಗಳನ್ನೂ ಇಲ್ಲಿ ತೆರೆದಿಡುತ್ತಾಳೆ. ಇಲ್ಲಿ ಮನುಷ್ಯನ ಅಲ್ಪತನ, ನೀಚತನಗಳೆರಡೂ ಲಘುವಾಗಿ ಕಾಣಿಸುವುದು ಸಾಧ್ಯವಾಗುವುದು ಹೀಗೆ. ಮನುಷ್ಯನ ಎಂದಿರುವುದರಿಂದ ಕಾದಂಬರಿಯ ಯಾವ ಪಾತ್ರಕ್ಕದರೂ ನೀವಿದನ್ನು ಅನ್ವಯಿಸಿಕೊಳ್ಳಬಹುದು.

ಬಟ್, ಇದೆಲ್ಲದರಾಚೆ, ಇಷ್ಟೆಲ್ಲ ಇರುವ ಈ ಕೃತಿಯಿಂದ ಒಟ್ಟಾರೆಯಾಗಿ ಏನು ಎನ್ನುವುದು ಪ್ರಶ್ನೆ. ಪ್ರಸ್ತುತ ಜಗತ್ತಿನ ಸಮಕಾಲೀನ ಆಗುಹೋಗುಗಳ ಕುರಿತ ಒಟ್ಟಾರೆ ಅಭಿಪ್ರಾಯ, ಅನ್ನಿಸಿಕೆಗಳು - ಒಬ್ಬ 72ರ ಹರಯದವನ ನೆಲೆಯಿಂದ ಎನ್ನುವ ಕಾರಣಕ್ಕೆ ಮಹತ್ವ ಪಡೆಯುತ್ತವೆ ಎನ್ನುವುದು ಅಷ್ಟು ಸರಿಯಲ್ಲ. ಈತನಿಗೆ ಭವಿಷ್ಯವಿಲ್ಲ, ಭೂತ ಮತ್ತು ವರ್ತಮಾನಗಳಷ್ಟೇ ಇರುವುದು ಸಾಧ್ಯ ಎನ್ನುವುದು ಸರಿಯಾದರೂ ಅದು ನಮ-ನಿಮಗೆ ಅನ್ವಯಿಸುವುದಿಲ್ಲ ಎನ್ನುವುದು ಹೇಗೆ! ಅಲ್ಲದೆ ಸರಳವಾಗಿ ಹೇಳುವುದಾದರೆ ಇವು ಸಾರ್ವತ್ರಿಕವಾಗಿ ನಮಗೂ ನಿಮಗೂ ಇರುವ ಅನಿಸಿಕೆಗಳಿಂದ ತೀರ ವಿಲಕ್ಷಣವಾಗೇನೂ ಇಲ್ಲ. ಯುದ್ಧ-ಶಾಂತಿ, ಜಾಗತೀಕರಣ - ಮಾರುಕಟ್ಟೆ ಕೇಂದ್ರಿತ ಜೀವನಶೈಲಿಯ ಹೇರುವಿಕೆಯಲ್ಲೇ ನಿರತವಾಗಿರುವ ಮಾಧ್ಯಮಗಳು, ಬಹುರಾಷ್ಟ್ರೀಯ ಕಂಪೆನಿಗಳು, ಧಾರ್ಮಿಕ/ರಾಜಕೀಯ ಶಕ್ತಿಯಾಗುವ ಕ್ರಾಂತಿಕಾರಕ ಹುನ್ನಾರಗಳಿರುವ ಭಯೋತ್ಪಾದನೆ, ಸ್ಪರ್ಧೆ ಮತ್ತು ಅದರ ಛಾಯೆಯಲ್ಲಿ ಬದಲಾಗುತ್ತಿರುವ ನಮ್ಮ ನಿಮ್ಮಂಥ ಸಾಮಾನ್ಯರ ನೈತಿಕ-ಸಂವೇದನಾತ್ಮಕ ನಿಲುವುಗಳು ಇತ್ಯಾದಿಗಳ ಬಗ್ಗೆ ನನಗೂ ನಿಮಗೂ ಅಂಥ ಭಿನ್ನವಾದ ನಿಲುವು ಇದ್ದಂತೆ ಕಾಣಿಸುವುದಿಲ್ಲ. ನಮನಮಗೆ ಅನುಕೂಲವಾದದ್ದರ ಬಗ್ಗೆ ನಾವು ನಾವು ವರ್ತಿಸುವ ರೀತಿಯಲ್ಲಿ ಎಷ್ಟೇ ಭಿನ್ನತೆ ಇದ್ದರೂ ನಮ್ಮ ನಮ್ಮ ಅಭಿಪ್ರಾಯಗಳು ಅವುಗಳಿಂದ ಕಳಚಿಕೊಂಡೇ ಇರುವುದು ಕೂಡ ನಿಜವಲ್ಲವೆ!!

ಆದರೆ ನಮ್ಮಲ್ಲಿ ಕೆಲವೇ ಕೆಲವರು ಇವನ್ನೆಲ್ಲ ಹೀಗೆ ಸಮಗ್ರವಾಗಿ ಮತ್ತು ಏಕಸೂತ್ರದಲ್ಲಿ ನೇಯ್ದು ಕಾಣಬಲ್ಲ ವಿವೇಚನೆ, ವ್ಯವಧಾನ, ಸಹನೆ ಮತ್ತು ದೃಷ್ಟಿ ಹೊಂದಿರುವುದು ಕೂಡ ನಿಜ. ಮಾತ್ರವಲ್ಲ ಪ್ರಜ್ಞಾಪೂರ್ವಕವಾಗಿ ಇದನ್ನು ಸದಾ ಎಚ್ಚರದಲ್ಲಿ ಗಮನಿಸುತ್ತ ಪ್ರಸ್ತುತಕ್ಕೆ ಸ್ಪಂದಿಸುವುದು ಕೂಡ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ನಮ್ಮ ನಮ್ಮದು ನಮ್ಮನಮಗೆ ದೊಡ್ಡದಾಗಿರುವಾಗ ಲೋಕದ ಚಿಂತೆ ನಮಗ್ಯಾತಕಯ್ಯಾ ಎನ್ನುವವರು ನಾವು, ಹೆಚ್ಚಿನವರು. ಆದರೆ ಚರ್ಚೆಗೆ ನಿಂತರೆ ಬಿಟ್ಟುಕೊಡುವವರಲ್ಲ ಬಿಡಿ, ಸಮಗ್ರ ಮಾಹಿತಿ ಇದ್ದರೂ ಇಲ್ಲದಿದ್ದರೂ! ಹಾಗೆ ನಾವು ನಮ್ಮ ನಮ್ಮ ನೆಲೆಯಿಂದ, ನಮ್ಮ ನಮ್ಮ ಸಂಸಾರ, ಜಾತಿ, ಪಂಗಡ, ಸಮಾಜ - ಹೀಗೆ ಹೆಚ್ಚು ಹೆಚ್ಚು ಸಣ್ಣ-ಸಂಕುಚಿತ ನೆಲೆಯಲ್ಲೇ ಪ್ರಸ್ತುತವನ್ನು, ವರ್ತಮಾನವನ್ನು, ಸದ್ಯವನ್ನು ಗ್ರಹಿಸುತ್ತಾ ಬದುಕುತ್ತೇವೆ. ಅದೇನೂ ತೀರಾ ಅಸಂಗತವೋ ಅಪ್ರಬುದ್ಧವೋ ಆದ ನೆಲೆಯೆಂದೇನೂ ಅಲ್ಲ. ನಾವು ಅಲ್ಲಿಯೂ ನಮ್ಮ ಸ್ವಾರ್ಥನಿಷ್ಠೆ, ಜಾತಿನಿಷ್ಠೆ, ಧರ್ಮನಿಷ್ಠೆಯನ್ನು ಮೀರಿ ವೈಯಕ್ತಿಕ ನೆಲೆಯ ಯೋಚನೆ, ನಿಲುವು ಹೊಂದಿರಲು ಸಾಧ್ಯವಿದೆ. ಆದರೆ ವಾಸ್ತವವಾಗಿ ಸಾಧ್ಯವಿಲ್ಲದ ಒಂದು ಮನೋಭೂಮಿಕೆಯೇ ಸಹಜವೆಂಬಂತಿದೆ ಅಷ್ಟೆ.

ಸಂಘರ್ಷಗಳ, ವೈರುಧ್ಯಗಳ, ಸಂಕೀರ್ಣವಾದ ಪ್ರಸ್ತುತ ವಿದ್ಯಮಾನಗಳಾಚೆ, ವೈಮನಸ್ಯಗಳಿಗೆ ಕಾರಣವಾಗಬಹುದಾದ ಸೂಕ್ಷ್ಮ ನೆಲೆಯ ಕೆಲವು ಪ್ರಶ್ನೆಗಳಾಚೆಗೂ ಇನ್ನೂ ಕೆಲವು ಸಂದಿಗ್ಧಗಳು, ಸಂಕಟಗಳು ನಮ್ಮ ದೈನಂದಿನ ಬದುಕನ್ನು, ಅದರ ಸುಸಂಗತ ನಿರ್ವಹಣೆಯನ್ನು ಕಂಗೆಡಿಸಿ ಕಾಡುತ್ತಲೇ ಇರುತ್ತವೆ. ಜನಾಂಗವೊಂದು (ಉದಾಹರಣೆಗೆ ಜರ್ಮನ್ ಜನಾಂಗವನ್ನಿಟ್ಟುಕೊಳ್ಳಿ) ಸದಾ ಕಾಲವೂ ಎದುರಿಸುವ ಮನುಕುಲದ "ಶಾಪ" ದ ಬಗ್ಗೆ ಯೋಚಿಸಿ. ಈ ದೇಹದ ಬೇರ್ಪಡಿಸಲಾಗದ ‘ನನ್ನ’ ಭಾಗಗಳನ್ನು ಮತ್ತು ಯಾವುದೇ ಕಿರಿಕಿರಿಯಿಲ್ಲದೆ ನಾವೇ ತ್ಯಜಿಸಲು ಸಿದ್ಧರಿರುವ ‘ನನ್ನ’ ಭಾಗ (ತಲೆಗೂದಲು, ಉಗುರು, ಹುಳುಕು ಹಲ್ಲು)ದ ವೈಚಿತ್ರ್ಯದ ಬಗ್ಗೆ ನಮ್ಮ ಹೆಣವನ್ನೂ ಇಟ್ಟುಕೊಂಡು ಯೋಚಿಸಿ. ಬದುಕಿನ ‘ಸ್ಪರ್ಧೆ’ಯ ಬಗ್ಗೆ, ಗಣಿತದ ಒಳಸುಳಿಗಳ ಬಗ್ಗೆ, ಸಂಭವನೀಯ ಸಂಭವನೀಯತೆಯ ಬಗ್ಗೆ, ಶಬ್ದ ಮತ್ತು ಸಂಗೀತದ ಬಗ್ಗೆ, ಭಾಷೆಯ ಬಗ್ಗೆ - ಮಾತೃಭಾಷೆ, ಆಡುಭಾಷೆ, ಕಲಿಕೆಯ ಭಾಷೆ ಇತ್ಯಾದಿ ಸಂಬಂಧಗಳಲ್ಲಿ ಯೋಚಿಸಿ. ಕನಸುಗಳ ಬಗ್ಗೆ, ಸಾಹಿತ್ಯ-ಸಾಹಿತ್ಯ-ಅದರ ಮೂಲಸೆಲೆಯ ಬಗ್ಗೆ ಮತ್ತು ಪ್ರಚಾರ-ಪ್ರಶಸ್ತಿ, ಜನಪ್ರಿಯತೆಯ ಹಿಂದೆ ಬಿದ್ದಿರುವ ಸಾಹಿತ್ಯ-ಸಾಹಿತಿಯ ಬಗ್ಗೆ ಯೋಚಿಸಿ. ನೀರು ಮತ್ತು ಬೆಂಕಿಯ (ಅಗ್ನಿ ಮತು ಮಳೆ!) ವೈರುಧ್ಯದ ಬಗ್ಗೆ ಯೋಚಿಸಿ...

ಇವನು ರಾಜಕೀಯದ ಬಗ್ಗೆ ಬರೆಯುವ ಬದಲು ಕತೆಯನ್ನು, ಏನಿಲ್ಲವೆಂದರೆ ಕ್ರಿಕೆಟ್ ಕುರಿತಾದರೂ ಬರೆಯಬಾರದೆ ಎಂದು ಇವನು ಹೇಳಿದ್ದನ್ನೆಲ್ಲ ಟೈಪ್ ಮಾಡುತ್ತ ಯೋಚಿಸುವ ಅನ್ಯಾಗೆ ಹಾಗೂ ಸ್ವತಃ ನಿರೂಪಕನಿಗೆ ಸಂವಾದಿಯಾಗಿ ಈ ಇಬ್ಬರೂ ತಮ್ಮ ಮನಸ್ಥಿತಿಯಿಂದಾಗಿಯೇ ಕಾಣಲಾರದ ಮಗ್ಗುಲಿನ ಬಗ್ಗೆ ಮಾತನಾಡುವವನು ಆಲನ್. ಆಲನ್ ಇವತ್ತಿಗೆ ಸಲ್ಲುವ ಮನುಷ್ಯ. ಅವನ ಸ್ಫೂರ್ತಿ ಹಣ. ನಿರೂಪಕನಂತೆಯೇ ಬುದ್ಧಿಯನ್ನೇ ಬಂಡವಾಳವನ್ನಾಗಿ ಬಳಸುವ ಈತ ಅದನ್ನು ಹಣವನ್ನಾಗಿ ಪರಿವರ್ತಿಸಲು ತೆಗೆದುಕೊಳ್ಳುವ ಸಮಯ (ಕಾಲ)ದ ಬಗ್ಗೆ ಸದಾ ಜಾಗೃತ. ಹಾಗಾಗಿ ಜಾಣ. ಸಹಜವಾಗಿಯೇ ‘ಕಾಲ’ನ ಬಗ್ಗೆ ಯೋಚಿಸಿದಷ್ಟು ‘ಕಾಲ’ದ ಬಗ್ಗೆ ತಲೆಕೆಡಿಸಿಕೊಳ್ಳದ ಮತ್ತು Time Value of Money ಬಗ್ಗೆ ಗೊತ್ತೇ ಇಲ್ಲದಂತಿರುವ ನಿರೂಪಕ ಇಲ್ಲಿ ಪೆದ್ದ. Outdated. ಬುಡಬಡಿಕೆ ದಾಸಯ್ಯ.

ಹುಟ್ಟಾ ಸಮಾಜವಾದಿಯೂ, ಆಫ್ರಿಕನ್ನನೂ ಆದ ನಿರೂಪಕನ ಸಮಕಾಲೀನಕ್ಕೆ ಸ್ಪಂದಿಸಬಲ್ಲ ಗಡಿಯಾರ USSR ಪತನಕ್ಕಿಂತಲೂ ಹಿಂದಿನ ಕಾಲಮಾನದಲ್ಲೇ ಎಲ್ಲೋ ನಿಂತುಹೋಗಿದೆ, ಅವನಿಗೆ ಸದ್ಯ ವರ್ತಮಾನವನ್ನಾಗಲೀ ಭವಿಷ್ಯತ್ ಕಾಲವನ್ನಾಗಲೀ ಕಾಣುವ ಕಣ್ಣುಗಳೇ ಇಲ್ಲ ಎಂಬುದು ಸ್ಥೂಲವಾಗಿ ಆಲನ್‌ನ ತರ್ಕ.

ಜಾಣತನ ತನ್ನ ಜೊತೆಗೆ ಸ್ವಾರ್ಥ ಮತ್ತು ಸಣ್ಣತನವನ್ನು ಮೈಗೂಡಿಸಿಕೊಂಡಿದ್ದಾಗ ಈ ಹಣದ ಹಿಂದೆ ಸ್ಪರ್ಧೆಯ ಓಟ ಹೂಡಿರುವ ಜಗತ್ತಿನಲ್ಲಿ ಯಶಸ್ಸು ಸುಲಭವಾಗುತ್ತದೆ. ಅದೇ ಜಾಣತನ ತನ್ನ ಜೊತೆಗೆ ಸ್ವಾರ್ಥ ಮತ್ತು ಸಣ್ಣತನಕ್ಕೆ ಬದಲಾಗಿ ಔದಾರ್ಯ ಮತ್ತು ಆದರ್ಶವನ್ನು ಮೈಗೂಡಿಸಿಕೊಂಡರೆ ಅವರು ಸ್ಪರ್ಧೆಗೆ ನಾಲಾಯಕ್ಕಾಗಿ ಪೆದ್ದರು, Unfit ಗಳು ಆಗಿ ಬಿಡುತ್ತಾರೆ ಎನ್ನುವ ತತ್ವಕ್ಕೆ ಅಪವಾದ Three Ediotsನಲ್ಲಿ ಮಾತ್ರ ಸಿಗುತ್ತದೆ ಎಂದುಕೊಳ್ಳಬೇಕಿಲ್ಲ! ಅವನಲ್ಲಿ Industry ಇದ್ದಲ್ಲಿ ಅಂಥ ವ್ಯಕ್ತಿ ಬಹುಷಃ ಗೆಲ್ಲುವುದು ಸಾಧ್ಯ, ಇರಲಿ. ಆಲನ್ ಆ ಬಗೆಯ ವ್ಯಕ್ತಿ ಕೂಡಾ ಅಲ್ಲ ಎನ್ನುವುದು ಇಲ್ಲಿ ಗಮನಿಸಬೇಕು. ಆಲನ್‌ನ ತರ್ಕ, ಜಾಣ್ಮೆ, ತಂತ್ರಗಾರಿಕೆಗಳ ಮೇಲಾಟದ ಜೊತೆಜೊತೆಗೇ ಅವನು ತನ್ನ ಹೆಣ್ಣು-ಹಣ ಮತ್ತು ನೆಲೆ (ನೆಲ ಅಲ್ಲ)ಗಳ ವಿಚಾರದಲ್ಲಿ ಸ್ವತಃ ತಲುಪಿರುವ ಸ್ತರ ಯಾವುದು ಎನ್ನುವ ಪ್ರಶ್ನೆ ಇಲ್ಲಿ ಮುಖ್ಯವಾಗಿದೆ.

ಇದು ಮೊದಲ ಪ್ರಶ್ನೆ. ಈ ಪ್ರಶ್ನೆಯ ಪ್ರಸ್ತುತತೆ ಎರಡನೆಯ ಪ್ರಶ್ನೆ.

ಮನುಷ್ಯ ಏನಾಗಿ ಬಿಟ್ಟ ಎನ್ನುವ ಪ್ರಶ್ನೆಯನ್ನು ಕಾದಂಬರಿಯ ಮೂಲಭಾಗದ ಎಲ್ಲ ಜಿಜ್ಞಾಸೆಗಳ ಹಿಂದೆ ಕೆಲಸ ಮಾಡಿರುವ ಮನಸ್ಸನ್ನು ಗಮನಿಸಿ, ಗ್ರಹಿಸಿ, ಅದಕ್ಕೆ ಅದರ ನೆಲೆಯಿಂದಲೇ ಸ್ಪಂದಿಸಿ ಕೇಳಿಕೊಳ್ಳಬೇಕಾಗಿದೆ. ಆದರೆ ಕಾದಂಬರಿಯ ಮೂಲಭಾಗ ಈ ನೆಲೆಯಲ್ಲಿ ಕೆಲಸ ಮಾಡುವುದಿಲ್ಲ, ಅದನ್ನು ಮುಂದೊಡ್ಡುವುದಿಲ್ಲ. ಅದೇನಿದ್ದರೂ ಓದುಗನ ಕರ್ಮ.

ಎರಡನೆಯ ಪ್ರಶ್ನೆ ಮೊದಲಿನದ್ದರ ಮುಂದುವರಿದ ಭಾಗವೇ ಹೊರತು ಇನ್ನೇನಲ್ಲ. ಆಲನ್ ತನ್ನ ಹೆಣ್ಣು-ಹಣ ಮತ್ತು ನೆಲೆ (ಜೀವನ ದೃಷ್ಟಿ, ಜೀವನದ ನಿಲುವು ಎನ್ನುವ ಅರ್ಥದಲ್ಲಿ) ಯ ಬಗ್ಗೆ ಕ್ರಮೇಣವಾಗಿಯೋ, ಹಂತಹಂತವಾಗಿಯೋ, ಸಮಕಾಲೀನಕ್ಕೆ ‘ಕಾಲಕ್ಕೆ ತಕ್ಕಂತೆ’ ಸ್ಪಂದಿಸುವುದರ ಮೂಲಕವೋ (ನಿರೂಪಕನ ನಿಂತು ಹೋದ ಗಡಿಯಾರವನ್ನು ಮನಸ್ಸಿನಲ್ಲಿಟ್ಟುಕೊಂಡು) ಸಾಧಿಸಿರುವ, ಏರಿರುವ ಅಥವಾ ಕುಸಿದು ಅಧಃಪತನಕ್ಕಿಳಿದಿರುವ ಒಂದು ಸದ್ಯದ ಸ್ತರ ಏನಿದೆ - ಅದರ ಒಳಿತು ಕೆಡುಕುಗಳ ಪ್ರಶ್ನೆಯನ್ನು ಈ fast moving ಜಗತ್ತಿನಲ್ಲಿ ಈಗಲೇ ನಿರ್ಧರಿಸುವುದು ಆತುರವಾದೀತೆಂಬ ಸೂಕ್ಷ್ಮ ಎಚ್ಚರದಲ್ಲೇ ನಿರ್ವಿಕಾರವಾಗುಳಿದು, ಈ ಸ್ತರ ಈತನ ತರ್ಕವನ್ನು ಅದರ ತರ್ಕಶುದ್ಧತೆಯನ್ನು ನಿರ್ಧರಿಸುವ ಅಂಶ ಎಂದು ನಾವು ತಿಳಿಯುತ್ತೇವೆಯೆ/ಒಪ್ಪುತ್ತೇವೆಯೆ? - ಎಂದು ಕೇಳಿಕೊಳ್ಳಬೇಕಿದೆ.

ಗಾಂಧಿಯ ‘ಗುರಿಯಷ್ಟೇ ಮಾರ್ಗವೂ ಒಳ್ಳೆಯದಾಗಿರಬೇಕೆಂಬ’ ನಿಯತ್ತಿನ ಹಿನ್ನೆಲೆಯಲ್ಲೇ ಇದನ್ನು ನೋಡಬೇಕೆಂದೇನೂ ಅಲ್ಲ. ಅಥವಾ ಗುರಿ ಭ್ರಷ್ಟವಾಗಿದ್ದ ಮಾತ್ರಕ್ಕೇ ಅದರ ಮಾರ್ಗವೂ ಭ್ರಷ್ಟವೇ ಆಗಿತ್ತೆಂಬುದು ಸ್ವಯಂಸಿದ್ಧ ಪ್ರಮೇಯವಲ್ಲ. ಆಲನ್ ಬಳಿಯೂ ತರ್ಕವಿದೆ. (ತರ್ಕ ಸುಳ್ಳು ಹೇಳುವವರ ಅಗತ್ಯ ಎನ್ನುತ್ತದೆ ಕಾರ್ನಾಡರ ನಾಟಕದ ಒಂದು ಪಾತ್ರ!) ನಾವು ತರ್ಕರಹಿತವಾಗಿ ಬರೇ ಈ ಪ್ರಶ್ನೆಗಳನ್ನು ಉತ್ತರಿಸುವ ಆತುರವಿಲ್ಲದೇನೆ ಗಮನಿಸಬಹುದು. ಆಲನ್ ಪ್ರಾಮಾಣಿಕವಾಗಿ ತಾನು ಅನ್ಯಾಯ ಮಾಡುತ್ತಿದ್ದೇನೆ ಎಂದು ತಿಳಿದುಕೊಂಡಿಲ್ಲ ಮತ್ತು ಹಾಗಾಗಿಯೇ ಸ್ವಸ್ಥವಾಗಿದ್ದ. ಯಾವಾಗ ಅನ್ಯಾ ಅದನ್ನು ಬೇರೆಯೇ ನೆಲೆಯಿಂದ ಪ್ರಶ್ನಿಸಿದಂತೆ ಅವನಿಗೆ ಭಾಸವಾಯಿತೋ ಆಗ ಅವನಲ್ಲಿ ಅಸ್ವಾಸ್ಥ್ಯದ ಪ್ರಥಮ ಚಿಹ್ನೆಗಳು ಕಾಣಿಸತೊಡಗಿವೆ. ಅಂದರೆ ಪ್ರಜ್ಞೆ ಕಾಡತೊಡಗುವವರೆಗೆ ಪಾಪಕ್ಕೆ ಪಾಪಭೀತಿಯಿಲ್ಲದ ಒಂದು ಆಧುನಿಕ ಸ್ಥಿತಿ ನಮ್ಮದು. ಕೊನೆಗೂ ಪೂರ್ಣಾರೋಗ್ಯದ ಕಡೆಗೆ ಹೆಜ್ಜೆಯಿಡುವುದು ಸಾಧ್ಯವಾಗುವುದು ಯಾರಿಗೆ ಎನ್ನುವುದನ್ನು ಕಾದಂಬರಿ ತೀರ ಸೂಚ್ಯವಾಗಿಸಿಯಷ್ಟೇ ಕಾಣಿಸಿದೆ.

ಇದು ಕೇವಲ ಇವತ್ತು ಬೇರೆ ಬೇರೆ ವಯೋಮಾನದವರಾಗಿರಬಹುದಾದ ನಾನು - ನೀವು, ಕೇವಲ ಇವತ್ತು, ಈಗ ಮಾತ್ರ ಎಂಬಂತೆ ಎದುರಿಸಿ, ಮುಖಾಮುಖಿಯಾಗಿ ಉತ್ತರಿಸಬೇಕಾದ ಈ ಕ್ಷಣದ ಪ್ರಶ್ನೆಯಲ್ಲವೇ ಅಲ್ಲ. ಇದು ನಿರಂತರವಾಗಿ ಮನುಷ್ಯ ತನ್ನ ಪ್ರಜ್ಞೆಯನ್ನು ವಿಸ್ತರಿಸಿಕೊಳ್ಳುತ್ತ ಬಂದ ದಿನದಿಂದಲೂ ಕೇಳಿಕೊಂಡ, ಮುಖಾಮುಖಿಯಾದ, ಎದುರಿಸಿದ ಪ್ರಶ್ನೆಯೇ. ಅವಜ್ಞೆ- ವಿಸ್ಮೃತಿ ಅವನನ್ನು ವಿವಶಗೊಳಿಸದಿರಲು ಇದನ್ನು ಮತ್ತೆ ಮತ್ತೆ ನೆನಪಿಸಬೇಕಾಗುತ್ತದೆ. ಇನ್ನೂ ಹತ್ತು-ಇಪ್ಪತ್ತು-ಐವತ್ತು ವರ್ಷಗಳಾಚೆಗೂ ಜಗತ್ತು ಈ ಪ್ರಶ್ನೆಯನ್ನು ಹೇಗೆ ಎದುರಿಸುತ್ತದೆ, ಹೇಗೆ ಮುಖಾಮುಖಿಯಾಗಿ ಏನು ಉತ್ತರ ನೀಡುತ್ತದೆ ಮತ್ತು ಹೇಗೆ ನಿರುಮ್ಮಳವಾಗಿ, ಸ್ವಸ್ಥವಾಗಿ - (ಆರೋಗ್ಯಕರವಾಗಿಯೋ ಅನಾರೋಗ್ಯಕರವಾಗಿಯೋ ಎಂದು ಹೇಳುವ ‘ಕಾಲ’ ಸಾಪೇಕ್ಷ ಸಂಭವನೀಯತೆ!!) ನಿಲ್ಲುವುದನ್ನು ರೂಢಿಸಿಕೊಳ್ಳುತ್ತದೆ ಎನ್ನುವುದನ್ನು ಕಲ್ಪನೆಯ ಎಟುಕಿಗೆ ನಿಲುಕಿಸಿಕೊಂಡು ಯೋಚಿಸಬೇಕಾದ ಪ್ರಶ್ನೆ ಕೂಡ ಎನ್ನುವುದು ಕಾದಂಬರಿಯ ಆಶಯವೂ ಗಟ್ಟಿತನವೂ ಆಗಿದೆ.

ಅನ್ಯಾ ಈ ಪ್ರಶ್ನೆಯನ್ನು ಉತ್ತರಿಸಿರುವ ಅತ್ಯಂತ ಸೂಕ್ಷ್ಮ ಮತ್ತು ಸಂಕ್ಲಿಷ್ಟವಾದ ಬಗೆಯನ್ನು ಕೂಡ ಬಗೆದು ನೋಡುವುದು ಅನಗತ್ಯ. ಯಾಕೆಂದರೆ ಅದು ಆಳದಲ್ಲಿ ವೇದ್ಯವಾದಾಗ ಹುಟ್ಟುವ ಅನುಭೂತಿ ವಿಶ್ಲೇಷಣೆಯಲ್ಲಿ ಕಳೆದು ಹೋಗುವ ಭಯವಿದೆ. ಹಾಗೆ ಇದು ತಾಂತ್ರಿಕವಾಗಿ ಮಾತ್ರವಲ್ಲ ಪ್ರಜ್ಞೆಯ ನೆಲೆಯಲ್ಲೂ ಒಂದು ಹೊಸ ಎತ್ತರವನ್ನು, ಸಂವೇದನೆಯನ್ನು, ಸ್ಪಂದನವನ್ನು ಸೃಜಿಸುವ ಕೃತಿಯಾಗಿದೆ.

No comments: