Saturday, November 27, 2010

ಮದುವೆ ಆಯಿತೆ, ಡೈವೋರ್ಸ್ ಯಾವಾಗ?

ಈಚೆಗೆ ದಾಂಪತ್ಯದ ಕುರಿತಾಗಿಯೇ ಕೆಲವು ಕಾದಂಬರಿಗಳು ಒಂದರ ಹಿಂದೆ ಒಂದರಂತೆ ಬರುತ್ತಿರುವುದು ಕುತೂಹಲಕರವಾಗಿದೆ. ಎಸ್.ಎಲ್.ಭೈರಪ್ಪನವರ ಕವಲು, ಸತ್ಯನಾರಾಯಣರ ವಿಚ್ಛೇದನಾ ಪರಿಣಯ, ಗುರುಪ್ರಸಾದ್ ಕಾಗಿನೆಲೆಯವರ ಗುಣ ಎಲ್ಲದರ ಕೇಂದ್ರ ದಾಂಪತ್ಯವೇ ಆಗಿರುವಂತಿದೆ. ಇಲ್ಲಿ ನಾನು ಕೆ.ಸತ್ಯನಾರಾಯಣರ ‘ವಿಚ್ಛೇದನಾ ಪರಿಣಯ’ ಕುರಿತು ಕೆಲವು ಟಿಪ್ಪಣಿಗಳನ್ನು ದಾಖಲಿಸಿದ್ದೇನೆ.

ಈ ಕಾದಂಬರಿ ವಿನೂತನವಾದ ತಂತ್ರ, ನಿರೂಪಣಾ ವಿಧಾನ ಮತ್ತು ಶೈಲಿಯಿಂದಾಗಿ ಸಿದ್ಧ ಮಾದರಿಯ ಕಾದಂಬರಿಗಳಿಂದ ಭಿನ್ನವಾಗಿ ನಿಲ್ಲುತ್ತದೆ. ವರದಿ, ಅಧ್ಯಯನ, ವಿಡಂಬನೆ, ಕಾಲ್ಪನಿಕ ಜಗತ್ತಿನ ಕಟ್ಟುಕಥೆ, ವಾಸ್ತವಗಳೆಲ್ಲವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ಕಾದಂಬರಿಯನ್ನು ಕಟ್ಟುವ ಸಾಹಸವನ್ನು ಇಂಗ್ಲೀಷ್ ಕಾದಂಬರಿಕಾರರು ಕೈಗೊಂಡಂತೆ ಕನ್ನಡದಲ್ಲಿ ಯಾರೂ ಮಾಡಿದಂತಿಲ್ಲ. ಸತ್ಯನಾರಾಯಣರು ಇಲ್ಲಿ ಅದನ್ನು ಪ್ರಯತ್ನಿಸಿ ಹೊಸ ಬಗೆಯ ಬರವಣಿಗೆಗೆ ಒಂದು ನಾಂದಿಯಿಟ್ಟಿದ್ದಾರೆ. ಹಾಗೆ ನೋಡಿದರೆ ‘ಸನ್ನಿಧಾನ’ ಬರೆದಾಗಲೂ ಅಂಥ ಒಂದು ಹೊಸತನದ ಹೆಜ್ಜೆಯನ್ನು ಅವರು ಎತ್ತಿದ್ದರು. ಈಗ ಇನ್ನೊಂದು ಮಜಲಿನ ಬರವಣಿಗೆ ನಮಗಿಲ್ಲಿ ಕಾಣಸಿಗುತ್ತದೆ. ಇದರ ಹೊಸತನದಿಂದಾಗಿ ಮತ್ತು ಓದುಗನನ್ನು ವಿಭಿನ್ನ ನಿಟ್ಟಿನಿಂದ ಪ್ರವೇಶಿಸುವ ನಿರೂಪಣಾ ವಿಧಾನದಿಂದಾಗಿ ಈ ಕಾದಂಬರಿಯನ್ನು ಹಾಗೇ ಓದಿ ಅರ್ಥ ಮಾಡಿಕೊಂಡುಬಿಟ್ಟೆವು ಎಂದುಕೊಳ್ಳುವ ಹಾಗಿಲ್ಲ. ಓದಿದ ಬಳಿಕ ಈ ಬಗೆಯ ತಂತ್ರ, ಪ್ರಯೋಗಶೀಲತೆ, ಅದರ ಪರಿಣಾಮಕಾರತ್ವ, ಪ್ರಸ್ತುತತೆ ಇತ್ಯಾದಿಗಳ ಕುರಿತಂತೆ ಒಂದಷ್ಟು ಚರ್ಚೆ, ವಾದ ಸಾಧ್ಯವಾದಲ್ಲಿ ಇದು ನಮಗೆ ಹೆಚ್ಚು ಸ್ಪಷ್ಟವಾಗುತ್ತದೆ ಎನಿಸುತ್ತದೆ.

ವಸ್ತು:

ವಸ್ತುವಿನ ದೃಷ್ಟಿಯಿಂದ ರಾಜಧಾನಿಯಲ್ಲಿ ಶ್ರೀಮತಿಯರು, ಗೌರಿ, ಸನ್ನಿಧಾನ, ಕಾಲಜಿಂಕೆ ಮತ್ತು ರಾಮ-ಸೀತೆಯರ ಸಂಬಂಧದ ಸೂಕ್ಷ್ಮಗಳ ಕುರಿತಾಗಿಯೇ ಇರುವ ಅವರ ಆರಂಭಿಕ ಕತೆಗಳಲ್ಲೊಂದು, ‘ಸೀತೆ ಹೇಳಿದ ರಾಮನ ಗುರುತು’ ನೆನಪಾಗುವಂತೆ ಈ ಬರಹ ಕೂಡಾ ಸ್ತ್ರೀಮತವನ್ನುತ್ತರಿಸುವ ನಿಟ್ಟಿನಲ್ಲೇ ಇದೆ. ಹೆಣ್ಣು, ಅವಳ ಕನಸು, ಆಸೆ-ಆಕಾಂಕ್ಷೆಗಳು, ಸಿಟ್ಟು-ಸೆಡವುಗಳು, ವಾಂಛೆ ಮತ್ತು ಅದಕ್ಕೆ ಸಂವಾದಿಯಾಗಿ ಗಂಡಸಿನ ಧಾರ್ಷ್ಟ್ಯ, ನಿರ್ಲಕ್ಷ್ಯ ಮತ್ತು ತಿರಸ್ಕಾರ ಸಹಿತ ದಮನಿಸುವ ಪ್ರವೃತ್ತಿಗೆ ಮುಖಾಮುಖಿಯಾಗಿ ಅವಳು ತೆಗೆದುಕೊಳ್ಳುವ ಭಿನ್ನ ವಿಭಿನ್ನ ನಿಲುವುಗಳು, ಹೆಜ್ಜೆಗಳು ಸತ್ಯನಾರಾಯಣರನ್ನು ಮತ್ತೆ ಮತ್ತೆ ಕಾಡುತ್ತ ಬಂದಿರುವ ಒಂದು ಪ್ರಮುಖ ವಿದ್ಯಮಾನ. ಹಾಗೆಯೇ, ಮನುಷ್ಯ ಸಂಬಂಧದ ಶಿಖರಪ್ರಾಯ ಪ್ರಯೋಗದಂತಿರುವ ದಾಂಪತ್ಯ ಕೂಡಾ ಅವರನ್ನು ಕಾಡುತ್ತಲೇ ಉಳಿದ ವಸ್ತು. ‘ದಾಂಪತ್ಯಕ್ಕೊಂದು ಶೀಲ’ ಎಂಬ ಅವರ ಪ್ರಬಂಧ ಸಂಕಲನದಿಂದ ಹಿಡಿದು ಈ ಕಾದಂಬರಿಯ ವರೆಗೂ ಹೆಣ್ಣು ಮತ್ತು ದಾಂಪತ್ಯ ಎರಡೂ ಅವರನ್ನು ಕಾಡಿದೆ; ಗಾಂಧೀವಾದ, ಮಾರ್ಕ್ಸ್‌ವಾದ, ಮಾಸ್ತಿ - ವಿಶ್ವೇಶ್ವರಯ್ಯ ಪರಂಪರೆ, ಸಾಹಿತ್ಯ ವಿಮರ್ಶೆ, ಪ್ರವಾಸ ಮತ್ತು ಸಮಕಾಲೀನ ವಿದ್ಯಮಾನಗಳಿಗೆ ತಮ್ಮನ್ನು ತೆತ್ತುಕೊಳ್ಳುತ್ತಲೇ ಅವರ ಮನಸ್ಸು ಈ ಎರಡರ ಬಗ್ಗೆಯೂ ಮಿಡಿಯುತ್ತ ಉಳಿದಿದೆ, ಮಾನವ ಸಮಷ್ಟಿಯ ಸಮೃದ್ಧಿ ಮತ್ತು ಆರೋಗ್ಯಕರ ಸುಖದ, ಹಿತಚಿಂತನೆಯ ನೆಲೆಯಲ್ಲಿ.

ಹಾಗೆಯೇ ವಸ್ತುವಿನ ಸಂದರ್ಭದಲ್ಲಿಯೇ ಹೇಳಬೇಕಾದ ಇನ್ನೊಂದು ಮಾತು, ಒಂದು ಕತೆ ಒಂದೇ ಕತೆಯಲ್ಲ, ಅದು ಸೀರೀಸ್ ಆಫ್ ಸ್ಟೋರೀಸ್; ಯಾವುದೇ ಒಂದು ಕತೆ ಒಳಗೊಳ್ಳುವ ಪಾತ್ರವರ್ಗವೇನಿದೆ, ಅದು ಅವರು ಮಾತ್ರವೇ ಆಗಿರುವುದಿಲ್ಲ, ನಿಮ್ಮ ನಮ್ಮನ್ನೂ ಸೇರಿಕೊಂಡೇ ಅದು ಸಾಗುತ್ತಿದೆ, ಬೆಳೆಯುತ್ತಿದೆ ಎನ್ನುವಂಥ ಅವರ ಒಂದು ದೃಷ್ಟಿಕೋನ ಇಲ್ಲಿಯೂ ಕೆಲಸ ಮಾಡಿದೆ. ಸತ್ಯನಾರಾಯಣರು ‘ನಿಮ್ಮ’ ಮೊದಲ ಪ್ರೇಮದ ಕಥೆಯನ್ನು ಹೇಳಿದ್ದು ಈ ನಿಟ್ಟಿನಿಂದಲೇ. ‘ಇದೆಲ್ಲ ಒಂದೇ ಕತೆಯೇ’ ಎಂಬ ಅವರ ಅನುಮಾನ ಕೂಡ ಇದೇ ನಿಟ್ಟಿನದು. ಕತೆ ಓದಿ ಮುಗಿಸಿದ ಮೇಲೂ ಒಬ್ಬೊಬ್ಬ ಓದುಗನಲ್ಲೂ ಅದು ಬೇರೆ ಬೇರೆಯೇ ಕತೆಯಾಗಿ ಮರುಹುಟ್ಟು ಪಡೆಯುವಂಥದು, ಬೆಳೆಯುವಂಥದು ಎನ್ನುವುದು ಅವರ ನಿಲುವು.

‘ಮನುಷ್ಯ ಸಮಾಜವು ತನ್ನ ಉಳಿವು ಮತ್ತು ಪ್ರಗತಿಗಾಗಿ ತಾನೇ ಸೃಷ್ಟಿಸಿಕೊಂಡಿರುವ ವಿವಾಹ ಮತ್ತು ದಾಂಪತ್ಯವೆಂಬೆರಡು ಸಂಸ್ಥೆಗಳನ್ನು ನಮ್ಮ ಕಾಲಕ್ಕೆ ಪ್ರಸ್ತುತವಾಗುವಂತೆ ಶೋಧಿಸಲು ಬೇಕಾದ ಸಂದರ್ಭ ಮತ್ತು ಪರಿಪ್ರೇಕ್ಷ್ಯವನ್ನು ಆತ್ಮೀಯವಾಗಿಯೂ, ಪ್ರಾಮಾಣಿಕವಾಗಿಯೂ, ಭಾವತೀವ್ರವಾಗಿಯೂ ಸೃಷ್ಟಿಸುತ್ತಾ ಕಾದಂಬರಿ ಓದುವಾಗ ಪ್ರತಿಯೊಬ್ಬ ಓದುಗನೂ ತನ್ನ ಸ್ವಂತಕ್ಕಾಗಿ ಇನ್ನೊಂದು ಕಾದಂಬರಿಯನ್ನು ಪುನರ್ ಸೃಷ್ಟಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ’ ಎನ್ನುವ ಒಂದು ಟಿಪ್ಪಣಿ ಈ ಕಾದಂಬರಿಯ ಬ್ಲರ್ಬ್‌ನಲ್ಲಿದೆ. ಇದು ಒಂದು ಬಗೆಯ ವಸುದೈವ ಕುಟುಂಬಕಂ ಮನೋವೃತ್ತಿಯದೇ ವಿಸ್ತರಣೆ, ಸತ್ಯನಾರಾಯಣರ ಸಹಜ ಭಾವ.

ಇದನ್ನು ಸತ್ಯನಾರಾಯಣರು ಕೃತಿಯಲ್ಲಿ ಆಗಗೊಡುವ ಬಗೆಯನ್ನು ಗಮನಿಸಬಹುದು ಮತ್ತು ಅದರ ಸಾಧಕ ಬಾಧಕಗಳನ್ನು ಅರಿಯಲು ಪ್ರಯತ್ನಿಸಬಹುದು. ಇಲ್ಲಿಯೂ ಸತ್ಯನಾರಾಯಣರು ವಿಭಿನ್ನ ಪಾತಳಿಯಿಂದ ಒಂದೇ issueವನ್ನು ಮತ್ತೆ ಮತ್ತೆ ಬೇರೆ ಬೇರೆ ಕಥಾನಕಗಳ ಮೂಲಕ ಹೇಳುವ, ಕಾಣಿಸುವ ಒಂದು ನೇಯ್ಗೆಯನ್ನು ಹೆಣೆಯುತ್ತಾರೆ. ಅದಕ್ಕೆ ಅವರು ಬಳಸುವ ತಾಂತ್ರಿಕ ಜಾಣ್ಮೆ, ಕಲ್ಪನೆಯ ಭರಪೂರ ಉಪಯೋಗ ಮತ್ತು ಕಲಾತ್ಮಕತೆ ಏನೇ ಇರಲಿ. ಅವರ ವೈಚಾರಿಕ ಧೋರಣೆ ಇದು: ಒಂದು - ದಾಂಪತ್ಯ; ಅದರ ಮುಖಗಳಾದ ಪ್ರೇಮ ಮತ್ತು ಕಾಮ. ವಿವಾಹ ಎಂದರೆ ಕೇವಲ ಎರಡು ವ್ಯಕ್ತಿಗಳ ನಡುವಣ ಸಂಬಂಧ ಮಾತ್ರ ಅಲ್ಲ; ಅದೇನಿದ್ದರೂ ಮೇಲ್ನೋಟಕ್ಕೆ ಎರಡು, ಸೂಕ್ಷ್ಮವಾಗಿ ಗಮನಿಸಿದರೆ ನೂರಾರು ಕುಟುಂಬಗಳ ನಡುವೆ ತೆರೆದುಕೊಳ್ಳುವ ಸಾವಿರಾರು ಮನುಷ್ಯ ಸಂಬಂಧಗಳ matrix. ಹೀಗೆ ಅದು ಸಾಮಾಜಿಕ ವಿದ್ಯಮಾನ, ನಾವು ತಿಳಿದುಕೊಂಡಂತೆ ವೈಯಕ್ತಿಕ ವಿಷಯವೇ ಅಲ್ಲ. ಹೀಗಾಗಿ ಅದರ success or failure ಕೂಡಾ ವೈಯಕ್ತಿಕವಾಗಿ ಉಳಿಯುವಂಥಾದ್ದು, ಉಳಿಯಬಹುದಾದ್ದು ಅಲ್ಲ ಎಂಬುದನ್ನೇ ಸತ್ಯನಾರಾಯಣರು `n' number of instances ಗಳ ಮೂಲಕ ನಮಗೆ ಕಾಣಿಸುತ್ತಾ ಹೋಗುತ್ತಾರೆ. ಇದನ್ನು ಸತ್ಯನಾರಾಯಣರು ಖಚಿತವಾದ ನಿಲುವು ಮತ್ತು ಸ್ಪಷ್ಟ ಉದ್ದೇಶದಿಂದಲೇ ಮಾಡುವುದರಿಂದ ಇವರ ಕಾದಂಬರಿಗಳಲ್ಲಿ ಪಾತ್ರಗಳು, ಕಥಾನಕಗಳ ಇಡಿಕ್ಕಿರಿದಂತೆ ಕಂಡರೆ ಅಚ್ಚರಿಯಿಲ್ಲ.

-ಹೀಗೆ ವಸ್ತು ಮತ್ತು ವಿನ್ಯಾಸದಲ್ಲಿ ಈ ಕಾದಂಬರಿಯು ಕೂಡಾ ಸತ್ಯನಾರಾಯಣರ ಇದುವರೆಗಿನ ಕಾದಂಬರಿಗಳ ಮತ್ತು ಕೆಲವೊಂದು ಕತೆಗಳ ಜೊತೆ ಸಾತತ್ಯವನ್ನು ಹೊಂದಿದೆ.

ನಿರೂಪಣಾ ವಿಧಾನ ಮತ್ತು ತಂತ್ರ:

ಇಲ್ಲಿ ತೀರ ಹೊಸದು, ವಿಶಿಷ್ಟ ಅನುಭವಕ್ಕೆ ಕಾರಣವಾಗುವಂಥದ್ದು ಮತ್ತು ಚರ್ಚೆಗೆ ವಸ್ತುವಾಗುವುದು ಏನೆಂದರೆ, ಈ ಕಾದಂಬರಿಯ ನಿರೂಪಣಾ ವಿಧಾನ ಮತ್ತು ತಂತ್ರ. ಇದರಿಂದ ಕೃತಿಗಾದ ಲಾಭ ನಷ್ಟದ ಜೊತೆ ಜೊತೆಗೇ ಓದುಗನಿಗೆ ಅದು ಕೊಡುವ-ಬಿಡುವ ವಿಚಾರದ ಬಗ್ಗೆ ಸೂಕ್ತ ಚರ್ಚೆಯ ಅಗತ್ಯವಿದೆ.

ಮೊದಲನೆಯದಾಗಿ, ಒಂದು ಬಗೆಯ ಕಾಮಿಕ್ ಶೈಲಿ ಇದೆ ಇಲ್ಲಿ. ಆದರೆ ಅದು ತೇಜಸ್ವಿಯವರ ಕಾಮಿಕ್ ಶೈಲಿಯೂ ಅಲ್ಲ, ಶ್ರೀನಿವಾಸ ವೈದ್ಯರ ಕಾಮಿಕ್ ಶೈಲಿಯೂ ಅಲ್ಲ. ಪ್ರಸನ್ನರ ಇತ್ತೀಚಿನ ಕಾದಂಬರಿ ‘ಬಾಲಗೋಪಾಲ’ದ ಕೆಲವೊಂದು ಆಯ್ದ ಭಾಗಗಳಲ್ಲಿ ಇದೇ ಬಗೆಯ ಕಾಮಿಕ್ ಶೈಲಿಯ ಬಳಕೆಯಾದದ್ದು ಬಿಟ್ಟರೆ ಇಡೀ ಕಾದಂಬರಿ ಇದನ್ನು ಆಧರಿಸಿ ಹೆಣೆಯಲ್ಪಟ್ಟದ್ದು -ಕನ್ನಡದಲ್ಲಿ - ಇಲ್ಲವೆಂದೇ ಹೇಳಬಹುದೇನೊ. ಈ ಧಾಟಿ ಕೆಲವೊಂದು ಅನುಕೂಲಗಳನ್ನೂ ತೊಡಕುಗಳನ್ನೂ ನಿರೂಪಕನಿಗೆ ವಿಧಿಸುವಂಥಾದ್ದು. ತೇಜಸ್ವಿಯವರ ಜೀವನಶೈಲಿ ಮತ್ತು ಜೀವನದೃಷ್ಟಿಯಿಂದಾಗಿ ಅವರ ಕೃತಿಗಳು ತೊಡಕುಗಳಿಗೆ ತೊಡರಿಕೊಳ್ಳಲಿಲ್ಲ ಎನಿಸುವಾಗಲೇ ವೈದ್ಯರು ಎಲ್ಲವನ್ನೂ ತೀರ ಆತ್ಮೀಯ ಧಾಟಿಯಲ್ಲಿ, ಎದುರು ಕೂತು ಹಂಚಿಕೊಳ್ಳುವವನ ನೆಲೆಯಲ್ಲೇ ಕಥಾನಕವನ್ನು ತೊಡಗುವುದರಿಂದ ಇದರಿಂದ ಪಾರಾಗುತ್ತಿದ್ದಾರೆ ಅನಿಸುತ್ತದೆ. ಸತ್ಯನಾರಾಯಣರು ಆಯ್ದುಕೊಂಡ ತಂತ್ರ ಸದ್ಯದ ಕೃತಿಗೆ, ಇಡೀ ಕಾದಂಬರಿಯ ಚೌಕಟ್ಟಿಗೆ ಒಗ್ಗುವುದರಿಂದ ವಿಶೇಷವಾದ ತೊಡಕುಗಳಿಗೆ ಎದುರಾಗಿಲ್ಲವೇನೋ ಅನಿಸುತ್ತದೆ. ಅಂದರೆ ಇಲ್ಲಿ ಸನ್ನಿವೇಶಗಳ ನೆಲೆಯಲ್ಲಿ ಹೆಚ್ಚು ಏರಿಳಿತಗಳಿಲ್ಲ. Situation - ತುಂಬ ಸಾವಧಾನಿತ ನೆಲೆಗಟ್ಟಿನಲ್ಲಿ, ಭಾವಾವೇಶಗಳಿಗೆ ಕೆಲಸ ಕೊಡದೆ ಸಾಗುವುದು ಇದಕ್ಕೆ ಅನುಕೂಲಕರವಾಗಿದೆ. ಕಾಮಿಕ್ ನೆಲೆಯಿಂದ ಕೊಂಚ ಲಘುವಾಗಿಯೇ ಈ ಗಂಭೀರವಾದ ವಿದ್ಯಮಾನವನ್ನು ಕಾಣುತ್ತ ಹೋಗುವುದರಿಂದ ಒಟ್ಟು ಪರಿಣಾಮಕ್ಕೆ ಕುಂದುಂಟಾಗದೆಂಬ ಅವರ ನಿಲುವು ಸರಿಯಾಗಿಯೇ ಕೆಲಸ ಮಾಡಿದೆ ಅಂತಲೂ ಅನಿಸುತ್ತದೆ. ಮೈಕ್ ಮತ್ತು ಜೇನ್ ಪ್ರಕರಣವನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಒಂಥರಾ ಐಲಿನಂತೆ ಕಾಣುವ ಇವರ ವಿಶ್ವಪರ್ಯಟನೆಯ ಉದ್ದೇಶ, ತಮ್ಮ ದಾಂಪತ್ಯ ಅನುರೂಪವಾದದ್ದೇ ಅಲ್ಲವೇ ಎಂದು ಊರಲ್ಲಿದ್ದವರನ್ನೆಲ್ಲ ಕೇಳುತ್ತ ಹೋಗುವ ಚರ್ಯೆ - ಅದರ ಮೂಲಆಶಯದಲ್ಲಿ ವಿಶ್ವದ ಆಶೀರ್ವಾದವನ್ನು ಸೆಳೆದುಕೊಳ್ಳಬಲ್ಲ ಔದಾರ್ಯವನ್ನು ಬೇಡುವಂಥಾದ್ದಾಗಿರುವಾಗಲೂ ಅದರತ್ತ ನಕ್ಕುಬಿಡಬಹುದಾದ ಸಾಧ್ಯತೆಯನ್ನೂ ಉಳಿಸಿಕೊಂಡಿರುತ್ತದೆ. ಇಡೀ ಕಾದಂಬರಿಯ ಬಹಳಷ್ಟು ವಿದ್ಯಮಾನಗಳನ್ನು ಹೀಗೆಯೇ ವಿಶ್ಲೇಷಿಸುವುದು ಸಾಧ್ಯವಿದೆ.

ಎರಡನೆಯದಾಗಿ, ನಿರೂಪಣೆಯ ಮುಕ್ಕಾಲುಭಾಗ ನಿರೂಪಣೆಯಲ್ಲಿ ಕಾಣುವ ಒಂದು ಬಗೆಯ ನಿರ್ಭಾವದ, ತಟಸ್ಥ ನಿರೂಪಕನ ಮನೋಭಾವ. ಪ್ರಸ್ತುತ ಕಥಾನಕವನ್ನು, ವಿಚಾರವನ್ನು ತಾನು ಯಾರನ್ನೂ ಉದ್ದೇಶಿಸಿ ಹೇಳುತ್ತಿಲ್ಲ ಎನ್ನುವಂತೆ ನಿರೂಪಣೆ ತೊಡಗುತ್ತದೆ ಮತ್ತು ಹಾಗೆಯೇ ಸಾಗುತ್ತದೆ. ಇಲ್ಲಿ ಸತ್ಯನಾರಾಯಣರಾಗಲೀ, ನಿರೂಪಕನಾಗಲೀ ಕಥಾನಕವನ್ನು ‘ಹೇಳು’ತ್ತಿಲ್ಲ, ದಾಖಲಿಸುತ್ತಿರುವಂತಿದೆ. ಆದರೆ ದಾಖಲಿಸುತ್ತಲೇ ಏನನ್ನೋ ‘ಕಾಣಲು’ ಹೊರಟವನ, ‘ಕಾಣಲು’ ತವಕಿಸುವವನ ಧಾಟಿಯೂ ಇಲ್ಲಿಲ್ಲ. ಅಂದರೆ ಶೋಧದ ತುರ್ತು ಮತ್ತು ವಿನಯ ಎರಡೂ ಈ ಧಾಟಿಯಲ್ಲಿಲ್ಲ. ಅಷ್ಟರಮಟ್ಟಿಗೆ ಇದು ಸ್ವಗತ ಅಥವಾ ಮನೋಗತದ ನಿರೂಪಣೆಯೂ ಅಲ್ಲ. ಸ್ಥೂಲವಾಗಿ ಇದು presentation ಶೈಲಿಯ ನಿರೂಪಣೆ. ಹೇಳಲಿಕ್ಕಿರುವುದು ಇದೇ ಎನ್ನುವ ಸ್ಪಷ್ಟತೆಯೊಂದಿಗೆ ಅದನ್ನು ಹೀಗೆ ಹೇಳಿದರೆ ಹೇಗಿರುತ್ತದೆ ನೋಡುವಾ ಎನ್ನುವ ತಾಂತ್ರಿಕ ಮತ್ತು ಬೌದ್ಧಿಕ ಜಾಣ್ಮೆಯ presentation ಈ ಕೃತಿಯ ವೈಶಿಷ್ಟ್ಯ. ಆರಂಭದಲ್ಲಿ ಈ ಮಾರ್ಗದ ಬಗ್ಗೆ ಅದರ ನಾವೀನ್ಯವೇ ಕಾರಣವಿರಬಹುದಾಗಿ ಕೊಂಚ ಅಧೈರ್ಯವಿದ್ದುದರಿಂದಲೇ ಇದ್ದರೂ ಇರಬಹುದು, ಓದುಗನ ಬಗ್ಗೆ ಅಥವಾ reciever ಬಗ್ಗೆ ಒಂದು ಬಗೆಯ closed eyes ಇರುವಂತೆ ಅನುಭವವಾಗುತ್ತದೆ. ಪುಟ್ಟ ಪುಟ್ಟ ಅಧ್ಯಾಯಗಳು ಕೂಡಾ ಇಂಥ ಅನ್ನಿಸಿಕೆ, ಭಾವನೆ ಮೂಡಲು ಕಾರಣವಿರಬಹುದು.

ಮೂರನೆಯದಾಗಿ ಇಡೀ ಕೃತಿಯಲ್ಲಿ ತುಂಬಿರುವ presumptions. ಇಲ್ಲಿ ಸತ್ಯನಾರಾಯಣರು ಭಾರತ-ಅಮೆರಿಕ-ನೆದರ್‌ಲ್ಯಾಂಡ್‌ಗಳ ಉಲ್ಲೇಖ ತರುತ್ತಾರಾದರೂ ತಮ್ಮ ಕಥಾನಕಕ್ಕೆ ನಿರ್ಮಿಸಿಕೊಂಡ ಕೋದಂಡರಾಮಪುರ, ಅದರ ಗಡಿ, ಎಲ್ಲೆ, ಸಂಪರ್ಕ ಮಾಧ್ಯಮಗಳು ಎಲ್ಲ presumed ಜಗತ್ತಿಗೆ, ಅಂಥ ನಿಯಮಾವಳಿಗಳಿಗೆ ಸೇರಿವೆ. ದೀವಳಿಗೆಗೆ ತವರಿಗೆ ಬರುವ ಮಗಳು-ಅಳಿಯಂದಿರಿಗೆ ಕೋದಂಡರಾಮಪುರ (ಪುಟ್ಟ ಊರು - ರಾಜ್ಯ - ದೇಶ?) ದ ಪ್ರಸ್ತುತ ವಿದ್ಯಮಾನ ತಿಳಿಯದಿರಲೆಂದು ಎಲ್ಲರೂ ಬಯಸುವಲ್ಲಿ ಇರುವ ವಿರೋಧಾಭಾಸ ಗಮನಿಸಿ. ಕೃತಿ ಇಂಥ ವಿರೋಧಾಭಾಸಗಳನ್ನು presumably ನಿರಾಕರಿಸಿ ಮುಂದುವರಿಯುತ್ತದೆ ಎನ್ನುವ ಕಾರಣಕ್ಕೆ ಇದು ಮುಖ್ಯ. ಆ ಸಮಯಕ್ಕೆ ಕೋರ್ಟು ರಜೆ ಸಾರುತ್ತದೆ ಮತ್ತು ಎಲ್ಲವೂ ಸಾಂಗವಾಗಿ ಸಾಗುತ್ತದೆ. ಈ ಬಗೆಯ assumptions ಅಲ್ಲಲ್ಲಿ ನಮಗೆ ಕಾಣಲು ಸಿಗುತ್ತವೆ. ಇಲ್ಲಿ ಸರಕಾರದ ಪ್ರತಿಸ್ಪಂದನ - ಜನತೆಗೆ - ಯಾವಾಗಲೂ ಹೀಗೆ ಅಥವಾ ಹಾಗೆ ಎನ್ನುವ ಮಾದರಿಯಲ್ಲಿ ಇರುತ್ತದೆ. ಅದರಲ್ಲಿ ಬಿರುಕು-ಒಡಕು-ಸಂದಿಗ್ಧ-ಸಂಕೀರ್ಣತೆ ಸದ್ಯದ ಮಟ್ಟಿಗೆ ಇಲ್ಲ ಎಂದಿಟ್ಟುಕೊಳ್ಳಬೇಕಿದೆ, ಕಥಾನಕದ ಚಲನೆಯ ದೃಷ್ಟಿಯಿಂದ. ಜನಸಾಮಾನ್ಯರು, ಮಾಧ್ಯಮಗಳು, ಸಂಸ್ಥೆಗಳು ಸ್ವಲ್ಪಮಟ್ಟಿನ ವೈವಿಧ್ಯ, ವಿರೋಧಾಭಾಸ ತೋರಿದಂತೆ ಕಂಡರೂ ಪರಿಣಾಮದ ನಿಟ್ಟಿನಲ್ಲಿ ಅವುಗಳು ಕೂಡಾ ಒಂದು group activityಯಾಗಿ ವರ್ತಿಸುತ್ತವೆ. ಅಥವಾ ವರ್ತಿಸಿದವು ಎಂದು ನಮಗೆ ಹೇಳಲಾಗುತ್ತದೆ ಎನ್ನುವುದೇ ಹೆಚ್ಚು ಸರಿ. Take it or reject it, it is just what it is - ಕಥಾನಕದ ಧೋರಣೆ, ಕಥಾನಕದ ಅಗತ್ಯ. ಅಷ್ಟರಮಟ್ಟಿಗೆ ಕಥಾನಕ ಅವಲಂಬಿಸುವ ತಂತ್ರ ಒಂದು presumed ಜಗತ್ತಿದು. Mythical, Magical Realism ಮತ್ತು ಜಾನಪದ ಕತೆಗಳ ಒಂದು assumed reality ಇಲ್ಲಿಯೂ ಇದೆ. ಆದರೆ ಅದನ್ನು ಹೌದು ಮಾಡುವಲ್ಲಿನ, ಅದಕ್ಕೆ ಅಗತ್ಯವಾದ ಒಂದು ಆತ್ಮೀಯ ಧಾಟಿ missing ಅನಿಸುತ್ತಿರುತ್ತದೆ. ಸಾಧಾರಣವಾಗಿ justfy ಮಾಡುವ ಹವ್ಯಾಸದ ಮತ್ತು ಆ ಕಾರಣದಿಂದಲೋ ಆರಂಭಿಕ ಹಂತದಲ್ಲಿ ಕೊಂಚ ವಾಚಾಳಿ ಎನ್ನಿಸಿಕೊಂಡ ಸತ್ಯನಾರಾಯಣರು ಇಲ್ಲಿ ತೂಕ ಮಾಡಿ ಮಾತನಾಡುವ ಶೈಲಿಗೆ ಒಗ್ಗಿಕೊಂಡು ಅಚ್ಚರಿ ಹುಟ್ಟಿಸುತ್ತಾರೆ.

ನಾಲ್ಕನೆಯದಾಗಿ ಕೋರ್ಟಿನಲ್ಲಿ ನಟ-ನಟಿಯರ ‘ಕೇಸ್’ನಿರೂಪಣೆ, ಕೋರ್ಟು ರಜೆಯಲ್ಲಿರುವಾಗ ನಡೆಯುವ ರಂಗೋತ್ಸವ ನಿಜಕ್ಕೂ ಈ ಕಾದಂಬರಿಯ highlight. ಕಾದಂಬರಿ ನಿರೂಪಣೆಯ ತನ್ನ ಬಿಗುತನವನ್ನು ಕೊಂಚ ಸಡಿಲಿಸಿ ಓದುಗರತ್ತ ಮಂದಹಾಸ ಬೀರುವ ಮನೋಭಾವ ತೋರತೊಡಗುವುದು ಇಲ್ಲಿಂದ ಮುಂದೆಯೇ ಅನಿಸುತ್ತದೆ. ಈ ಪ್ರಕರಣಗಳು ವಾಡೆಯ ವಸ್ತುವಿಶೇಷಗಳ ‘ನಗರ (ಬೆಡ್ ರೂಂ) ಪ್ರದಕ್ಷಿಣೆ’ಗಿಂತ ಹೆಚ್ಚು ಜೀವಂತವಾಗಿ, ಪರಿಣಾಮಕಾರಿಯಾಗಿ ಮತ್ತು ಸಂಕೀರ್ಣವಾದ ಚಿತ್ರಗಳೊಂದಿಗೆ ಮೂಡಿಬಂದಿದೆ.

ಕಾದಂಬರಿಯಾಗಿ :

ಉಳಿದಂತೆ ಒಟ್ಟಾರೆಯಾಗಿ ಈ ಕಾದಂಬರಿಯ ಓದು ಏನನ್ನು ಕೊಡುತ್ತಿದೆ ಎಂದು ನೋಡಬೇಕು. ಜನಜೀವನ ಸರಳವಾಗಿ ಮನುಷ್ಯ ಸಂಬಂಧದಲ್ಲಿ, ಬದುಕಿನಲ್ಲಿ ರುಚಿ ಕಳೆದುಕೊಂಡು, ಅನ್ಯಮನಸ್ಕವಾಗಿರುವುದನ್ನು ತುಂಬ ಕಲಾತ್ಮಕ ಜಾಣ್ಮೆಯಿಂದ ನಿರೂಪಿಸುವ, ಸೂಕ್ಷ್ಮವಾದ ವಸ್ತುವನ್ನು ಭಾಷೆಯಲ್ಲಿ ನಿಜವಾಗಿಸುವ ತನ್ನ ಕಾವ್ಯಾತ್ಮಕ ಉದ್ದೇಶದಲ್ಲಿ ಕಾದಂಬರಿ ಸಂಪೂರ್ಣವಾಗಿ ಸಫಲವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದು ಇದೆಲ್ಲದರಿಂದ ಓದುಗರ ಮನಸ್ಸಿನ ಮೇಲೆ ಉಂಟು ಮಾಡುವ ಪರಿಣಾಮವೇನು ಎನ್ನುವುದು ಪ್ರಶ್ನೆ.

ಸತೀಶ-ಕೌಸಲ್ಯಾರು ಸಮಸ್ಯೆಗೆ ಭಾಷೆಗೆ ಚೌಕಟ್ಟು ನೀಡುತ್ತಾರೆ, ಅದನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಣುವಂತೆ ಮಾಡುತ್ತಾರೆ ಎನ್ನುವುದೇನೋ ಸರಿಯೇ. ಇಡೀ ಕಾದಂಬರಿಯ ತಂತ್ರ, ಅದುವರೆಗಿನ ಕಥಾನಕದ ಚಲನೆ, ಹರಹು ಎಲ್ಲವೂ ಈ ‘ಅರಿವು’ ತೆರೆದುಕೊಳ್ಳುವುದಕ್ಕೆ ತಕ್ಕುದಾದ ಒಂದು ಹಿನ್ನೆಲೆಯನ್ನು ಸೊಗಸಾಗಿ ನಿರ್ಮಿಸಿರುವುದು ಕಾದಂಬರಿಯ ಬಗ್ಗೆ ಮೆಚ್ಚುಗೆ ಮೂಡಲು ಕಾರಣವಾಗುತ್ತದೆ. ಆದಾಗ್ಯು, ಕಾದಂಬರಿ ಅಲ್ಲಲ್ಲಿ ಹೇಳಿಯೂ ಹೇಳದಂತೆ, ಕಾಣಿಸಿಯೂ ಕಾಣದಂತೆ ತೆರೆದಿಡುವ ಕೆಲವು modules ಏನಿವೆ, ಅವು ಮನುಷ್ಯ ಇದುವರೆಗೆ ಚಲಾವಣೆಗೆ, ಪ್ರಯೋಗಕ್ಕೆ ತರದೇ ಬಿಟ್ಟಂಥವುಗಳೇನಲ್ಲ. ನಾವಿವತ್ತು ಇರುವ ಸ್ಥಿತಿ ಬಹುಷಃ even after the modules being failed ಅನಿಸುತ್ತದೆ.

ಕಾದಂಬರಿ ತನ್ನ ಉದ್ದೇಶ ಸಾಧನೆಗೆ ಆಯ್ದುಕೊಂಡ ಅದೇ ಗಂಡು-ಹೆಣ್ಣು ಸಂಬಂಧದ, ದಾಂಪತ್ಯದ, ಪ್ರೇಮ-ಕಾಮದ ನವನವೀನ ಪ್ರಯೋಗಗಳ ಸಮಕಾಲೀನ ಮುಖಗಳನ್ನು ಪೂರ್ತಿಯಾಗಿ ಗಣನೆಗೆ ತೆಗೆದುಕೊಂಡಿಲ್ಲ ಎನ್ನುವುದನ್ನು ಕೂಡ ಇಲ್ಲಿ ಗಮನಿಸಬೇಕು. ಇಲ್ಲಿ ವೇಶ್ಯಾವಾಟಿಕೆ ಮತ್ತು ಅದು ಪೂರೈಸುವ ಕಾಮ ಚರ್ಚೆಗೆ ಬರುವುದಿಲ್ಲ. ಲಿವ್-ಇನ್ ಸಂಬಂಧಗಳು, ಸಲಿಂಗರತಿ (ಶಾಲಿನಿ-ಮಾಲಿನಿ ಪ್ರಕರಣ ಒಂದು ಅಪವಾದದ ಉಲ್ಲೇಖ ಅಷ್ಟೇ ಆಗಿ ನಿಲ್ಲುತ್ತದೆ), ಹಲವಾರು ಬಗೆಯ ಆಧುನಿಕ ಸವಲತ್ತುಗಳು ಪೂರೈಸಲು ತುದಿಗಾಲಲ್ಲಿ ನಿಂತಿರುವ ರೆಡಿಮೇಡ್ ಜೊತೆ, ರೆಡಿಮೇಡ್ ಪ್ರೇಮ, ರೆಡಿಮೇಡ್ ಸಲ್ಲಾಪಗಳು (ಚಾಟ್), ಮೌಕಿಕ ಕಾಮ (ಮಾತಿನ ಚಟ) ಇತ್ಯಾದಿ, ಪಬ್ಬು, ಕ್ಲಬ್ಬು, ಡಿಸ್ಕೊಥೆಕ್, ಸೋಶಿಯಲ್ ವೆಬ್ ಸೈಟುಗಳಲ್ಲಿ ಯುವ ಜನತೆ ಕಂಡುಕೊಳ್ಳುತ್ತಿರುವ ವಿಧಾನಗಳು ಮತ್ತು ಕೊನೆಗೂ ರುಚಿಗೆಟ್ಟು, ಚಿತ್ತಸ್ವಾಸ್ಥ್ಯವನ್ನೂ ಹದಗೆಡಿಸಿಕೊಂಡು ಬದುಕಿನಲ್ಲಿ ಅನ್ಯಮನಸ್ಕರಾಗುವುದನ್ನು ಕಾದಂಬರಿ ಗಮನಿಸುತ್ತಿಲ್ಲ - in essense ಅಲ್ಲ, in material details. ಕಾದಂಬರಿ ವಿಚ್ಛೇದನಾ ಪ್ರಸಂಗಗಳನ್ನು exhaustive ನೆಲೆಯಿಂದ ನೋಡುವ ಉದ್ದೇಶ ಹೊಂದಿರುವಂತೆ ಕಾಣುವುದರಿಂದ ಇಂಥ ನಿರೀಕ್ಷೆಗಳು ಹುಟ್ಟುತ್ತವೆ.

ಕಾದಂಬರಿ present ಮಾಡುವ ಕೆಲವೊಂದು modules ಗಳ ಬಗ್ಗೆಯೂ ನನಗೆ ಅನುಮಾನಗಳಿವೆ. ಕಾಮಿಕ್ ಶೈಲಿ ಇಂಥ ಅನುಮಾನ, ಜಿಜ್ಞಾಸೆಗಳಿಗೆ vigil - shield ಆಗಬಾರದು ಎಂಬ ಎಚ್ಚರದಿಂದ ಇದನ್ನು ಕಾಣಬೇಕು. 1. ವಾಡೆಯ ರಾಜವಂಶಸ್ಥರ ಮೊಲೆಯ ಪುರಾಣ, ಮುಟ್ಟಿನ ಪ್ರವರಗಳು ಅವರ ಗೋಳಾಟಗಳು ಕೊಂಚ ಅತಿರಂಜಿತ ಅನಿಸಿದರೂ ಅದೆಲ್ಲ ಕಾದಂಬರಿಯ ಚೌಕಟ್ಟಿನ ಒಳಗೇ ಇದೆ. ಆದರೆ ಝಾನ್ಸಿಬಾಯಿಯ ವೇಷದಲ್ಲಿ ವಾಡೆಯಿಂದ ಕುದುರೆಯೇರಿ ಹೊರಟವಳು administration ನಡೆಸಿ ಯುರೋಪಿಯನ್ ಸಾಹೇಬರ ವೇಷದಲ್ಲಿ ಮರಳುವುದು. 2. ನೆದರ್ ಲ್ಯಾಂಡ್ ಪ್ರಶ್ನೆಗಳು ಅಧ್ಯಾಯದ ಮೈಕ್ ಮತ್ತು ಜೇನ್‌ರ ದಾಂಪತ್ಯಕ್ಕೆ ಜಗತ್ತಿನ ಭಾಷ್ಯ(ಹರಕೆ-ಹಾರೈಕೆ) ಅಗತ್ಯ ಅನಿಸಿದ ಪ್ರಸಂಗ. 3. ಶಾಂತಾಬಾಯಿಯ ಮಕ್ಕಳು-ಮೊಮ್ಮಕ್ಕಳ ಜನ್ಮ ಮೂಲದ ವಿವರಗಳು. - ಈ ಎಲ್ಲ module ಗಳು ಇಲ್ಲಿ ಬದುಕಿನಲ್ಲಿ ಮನುಷ್ಯ ಕಳೆದುಕೊಂಡ ‘ರುಚಿ’ ಅಥವಾ ‘ರಸ’ ವನ್ನು ಮರಳಿ ಪಡೆಯುವುದಕ್ಕೆ ಸಂಯುಕ್ತವಾಗಿ (ಭಿನ್ನ ವಿಭಿನ್ನವಾಗಿ ಅಲ್ಲ)ದಾರಿಗಳು ತೆರೆದುಕೊಳ್ಳುವ ಬಗೆಯೋ-ಎಂಬಂತೆ ಕಂಡರೆ ತಪ್ಪೇನಿಲ್ಲ. ಆದರೆ ಇದು ಮಾನವಕುಲ ಸಾಗಬೇಕಾದ ಹೊಸನಿಟ್ಟಿನ ಹೊಳಹುಗಳನ್ನು ಕರುಣಿಸುವಷ್ಟು ಹೊಸತನದಿಂದಲೋ, ಕಾಣ್ಕೆಯಿಂದಲೋ ಸಶಕ್ತವಾಗಿವೆ ಅನಿಸುವುದಿಲ್ಲ.

ಹಿರಿಯ ಕಾದಂಬರಿಕಾರರೊಬ್ಬರ ಪ್ರಯೋಗಶೀಲ ಚೈತನ್ಯವನ್ನು ಅಪಾರ ಮೆಚ್ಚುಗೆಯಿಂದ ಕಂಡೂ ನಾನು ಈ ಕಾದಂಬರಿಯ ಉತ್ತಮೋತ್ತಮ ಅಂಶಗಳನ್ನು ಹೊಗಳುತ್ತ ಹೋಗುವ ದಾರಿಯನ್ನು ಬೇಕಂತಲೇ ಬಿಟ್ಟುಕೊಟ್ಟು ವಿಮರ್ಶಾತ್ಮಕವಾಗಿಯೇ ನೋಡುತ್ತ ಬಂದಿರುವ ಒಟ್ಟೂ ಉದ್ದೇಶ ಈ ಕೃತಿಯಿಂದ ಗರಿಷ್ಠ ಲಾಭ ಪಡೆದುಕೊಳ್ಳುವುದೇ ಹೊರತು ಇನ್ನೇನಲ್ಲ. ಕೃತಿಯೊಂದು ಚರ್ಚೆಗೆ ಒಳಪಡಲು ಅದು ವಿವಾದಾತ್ಮಕವೇ ಆಗಿರಬೇಕೆ ಎಂಬ ಅನುಮಾನ ಬರದ ಹಾಗೆ ಈ ಕೃತಿಯೂ ಚರ್ಚಿಸಲ್ಪಡಬೇಕು ಎನ್ನುವುದಷ್ಟೇ ಆಶಯ.

ವಸಂತ ಪ್ರಕಾಶನ, ಬೆಂಗಳೂರು. ಬೆಲೆ ರೂ.70. 126 ಪುಟಗಳು.

(ಶೀರ್ಷಿಕೆ ಕನ್ನಡಪ್ರಭ ಸಾಪ್ತಾಹಿಕದ ಒಂದು ಲೇಖನದ್ದು, ಲೇಖಕರ ಹೆಸರು ಮರೆತಿದೆ, ಕ್ಷಮೆಯಿರಲಿ!)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ