Monday, December 13, 2010

ಕೆ.ಸತ್ಯನಾರಾಯಣರ ಹೊಸ ಕಥಾಸಂಕಲನ : ರಾಚನಿಕ ಮತ್ತು ನಿರಚನಾ ನೆಲೆಯ ಸಮಸ್ಯೆಗಳು

‘ನಕ್ಸಲ್ ವರಸೆ’ ನಮ್ಮ ಹಿರಿಯ ಕತೆಗಾರ ಕೆ. ಸತ್ಯನಾರಾಯಣರ ಹೊಸ ಕಥಾಸಂಕಲನ. ಎಂಟು ಹೊಸ ಮತ್ತು ಒಂದು ಹಳೆಯ ಕತೆಗಳಿರುವ ಈ ಸಂಕಲನ ಹಲವು ಕಾರಣಗಳಿಗಾಗಿ ಮಹತ್ವ ಪಡೆದಿದೆ.

ಮೊದಲನೆಯದಾಗಿ ಸಾಹಿತ್ಯವನ್ನು ಅದರ ಸೃಜನಶೀಲ ನೆಲೆಯಿಂದಲೂ ಅಸಾಹಿತ್ಯಿಕ ನೆಲೆಯಿಂದಲೂ ಒರೆಹಚ್ಚಿ ನೋಡಬಲ್ಲ ಸಾಹಿತಿ-ಚಿಂತಕ ಮತ್ತು ಸಾಮಾಜಿಕ ನೆಲೆಯ ಹೋರಾಟಗಳಲ್ಲಿ ಸರಿಸಮನಾಗಿ ತೊಡಗಿಕೊಂಡಿರುವ ಕೆ.ಫಣಿರಾಜ್ ಇಲ್ಲಿ ಕೆ.ಸತ್ಯನಾರಾಯಣರ ಸಾಹಿತ್ಯಿಕ ಕಾಳಜಿಗಳನ್ನೂ, ಬದುಕಿನ ಕುರಿತ ಅವರ ಕುತೂಹಲ ಮತ್ತು ತಾತ್ತ್ವಿಕ ನಿಲುವುಗಳನ್ನೂ ವಿಮರ್ಶಿಸಿ ಬರೆದಿರುವ ವಿಸ್ತೃತವಾದ ಮುನ್ನುಡಿ.

ಎರಡನೆಯದು, ಇಲ್ಲಿನ ಕಥೆಗಳು ಸುತ್ತಿಕ್ಕುವ ನಕ್ಸಲ್, ಕಮ್ಯುನಿಸಂ, ದೇವರು, ದಲಿತರು, ಶ್ರದ್ಧೆ ಮತ್ತು ನಂಬಿಕೆ, ರಾಜಕೀಯಗಳಂಥ ಹೊಸ ತಲೆಮಾರಿನ ಕತೆಗಾರರು ಮರೆತಂತಿರುವ; ಆದರೆ, ತಾತ್ತ್ವಿಕ ನಿಲುವೇ ಮಂಚೂಣಿಯಲ್ಲಿಲ್ಲದ - ಬದುಕು ಮತ್ತು ಸಾಮಾನ್ಯನ ದೈನಂದಿನಗಳೇ ಪ್ರಧಾನ ಕಾಳಜಿಯಾಗಿರುವ ವೈಶಿಷ್ಟ್ಯವನ್ನು ಹೊಂದಿರುವುದು.

ಮೂರನೆಯದು, ಇಲ್ಲಿನ ಹೆಚ್ಚಿನ ಕತೆಗಳು ಕೆ. ಸತ್ಯನಾರಾಯಣರ ಎಂದಿನ ಶೈಲಿ ಒಂದು ಹೊರಳುದಾರಿಯಲ್ಲಿರುವುದನ್ನು ಸ್ಪಷ್ಟಪಡಿಸುತ್ತಿರುವುದು.

ನಾಲ್ಕನೆಯದು ಮತ್ತು ಪ್ರಸ್ತುತ ಬರಹಕ್ಕೆ ಮುಖ್ಯ ಪ್ರೇರಣೆಯಾಗಿರುವುದು, ಸತ್ಯನಾರಾಯಣರ ಕತೆ - ಕಾದಂಬರಿಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸಲ್ಪಟ್ಟು ಜಿಜ್ಞಾಸೆಗೊಳಪಡುತ್ತಿರುವ, ಸಾಹಿತ್ಯವನ್ನು ರಾಚನಿಕವಾಗಿಯೂ ನಿರಚನಾ ಮಾಧ್ಯಮವಾಗಿಯೂ ಕಾಣುತ್ತ ಸೂಕ್ಷ್ಮಸಂವೇದಿ ಬರಹಗಾರನೊಬ್ಬ ಎದುರಿಸುವ ಬಿಕ್ಕಟ್ಟುಗಳನ್ನು ಕುರಿತೇ ಇಲ್ಲಿನ ಕೆಲವು ಕತೆಗಳು ಪ್ರೇರಿಸುತ್ತಿರುವ ಚಿಂತನಾಕ್ರಮ.

ಈ ಸಂಕಲನ ಮಹತ್ವದ್ದು ಎನ್ನಲು ಐದನೆಯ ಕಾರಣವೂ ಒಂದಿದೆ. ಇವತ್ತು ಚಿತ್ತಾಲ, ಅನಂತಮೂರ್ತಿಯವರಂಥ ಹಿರಿಯರು, ರಾಘವೇಂದ್ರ ಪಾಟೀಲ, ಜಯಂತ್ ಕಾಯ್ಕಿಣಿ, ವಿವೇಕ ಶಾನಭಾಗರಂಥ ಪ್ರಬುದ್ಧ ಕತೆಗಾರರು, ಪ್ರಹ್ಲಾದ ಅಗಸನಕಟ್ಟೆ, ಶ್ರೀಧರ ಬಳಗಾರ, ವಸುಧೇಂದ್ರ ಮೊದಲಾದ ನಿನ್ನೆ ಮೊನ್ನೆಯಷ್ಟೇ ಹೊಸ ತಲೆಮಾರಿನವರು ಎಂದು ಕರೆಸಿಕೊಳ್ಳುತ್ತಿದ್ದ ಸಮರ್ಥ ಕತೆಗಾರರು ಮತ್ತು ಮುವ್ವತ್ತರ ಆಸುಪಾಸಿನ ವಯೋಮಾನದ ಅದ್ಭುತ ಪ್ರತಿಭೆಯ ಹಲವು ಹೊಸ ಕತೆಗಾರರೂ ಏಕಕಾಲಕ್ಕೆ ಬರೆಯುತ್ತಿದ್ದಾರೆ. ಈ ಕಾಲಘಟ್ಟದಲ್ಲಿ ಕೆ.ಸತ್ಯನಾರಾಯಣರಂಥ ಕಳೆದ ಮೂರು ದಶಕಗಳಿಂದಲೂ ಬರೆಯುತ್ತ ಬಂದಿರುವ ಒಬ್ಬ ಕತೆಗಾರ ತೋರುತ್ತಿರುವ ಜೀವನಪ್ರೀತಿ, ಪ್ರಯೋಗಶೀಲತೆ ಮತ್ತು ಕಥನ ಕಲೆಯ ಕುರಿತಾದ ಜಿಜ್ಞಾಸೆ - ಮಹತ್ವದ್ದಾಗಿದೆ.

"ಎಷ್ಟೆಲ್ಲ ಕತೆ ಬರೆದರೂ ತಿಳಿಯುವುದೇ ಇಲ್ಲ. ಕತೆಯೆಂದು ನಾನು ಭಾಚಿಸಿ ಬರೆಯಲು ಕುಳಿತಾಗ, ಹಾಗೆ ಬರೆಯುತ್ತಾ ಹೋಗುವಾಗ ಹೊಳೆದದ್ದು, ನಡೆದದ್ದು ಎಲ್ಲವನ್ನೂ ಕತೆಯೊಳಗೆ ತರಬೇಕೋ ಬೇಡವೋ? ಹಾಗೆ ನಡೆದದ್ದು ಹೊಳೆದದ್ದನ್ನೆಲ್ಲ ಕತೆಯೊಳಗೆ ಸೇರಿಸುತ್ತಾ ಹೋದರೆ ಕತೆಯ ಕೇಂದ್ರದ ಗತಿ, ಧ್ವನಿ, ಸಾವಯವ ಶಿಲ್ಪದ ಗತಿ ಏನಾಗಬೇಡ? ರೂಪಕದ ಗುಣ ತೆಳುವಾಗುವುದಿಲ್ಲವೇ! ಈ ಪ್ರಶ್ನೆಗಳೆಲ್ಲಾ ಸರಿ. ಆದರೆ ಕತೆ ಬರೆಯುವಾಗಿನ ಸಮಯದಲ್ಲಿ ನಮಗೆ ಒದಗುವ ಘಟನೆಗಳು, ಎದುರಾಗುವ ವ್ಯಕ್ತಿಗಳೇಕೆ ಬರೆಯುತ್ತಿರುವ ಒಂದೇ ಒಂದು ಕತೆಯನ್ನು ಮನ್ನಿಸುತ್ತಾರೆ, ಹೇಳಿ? ಈ ಗೊಂದಲದಲ್ಲೇ ಕತೆಯೊಂದಕ್ಕೆ ಹೊಳಹು ಹಾಕುತ್ತಾ ಬರೆಯುತ್ತಿದ್ದ ಕಾಲಾವಧಿಯಲ್ಲಿ ನಡೆದದ್ದನ್ನು ನಿಮಗೆ ಒಪ್ಪಿಸಿಬಿಡುತ್ತೇನೆ. ಇದೆಲ್ಲ ಒಂದೇ ಕತೆಯೇ ಅಲ್ಲವೇ, ಒಂದೇ ಕತೆ ಮಾತ್ರವಾಗಬೇಕೆ ಎಂಬುದು ನಿಮ್ಮ ತೀರ್ಮಾನಕ್ಕೆ ಬಿಟ್ಟಿದ್ದು, ಈ ತೀರ್ಮಾನವನ್ನು ನಿಮಗೆ ಬಿಟ್ಟಿರುವುದರಿಂದಲೇ ಕತೆಗೆಂದು ಇಟ್ಟುಕೊಂಡಿದ್ದ ಶೀರ್ಷಿಕೆ ‘ಬಿಹಾರದ ಸಿಟ್ಟು ಮತ್ತು ಗುಂತೂರಿನ ಕಾರ’ವನ್ನು ಕೂಡ ಕೈಬಿಟ್ಟಿದ್ದೇನೆ. ಬನ್ನಿ, ನೋಡುವ, ಏನಾಗುತ್ತದೆ."
(‘ಇದೆಲ್ಲ ಒಂದೇ ಕತೆಯೇ?’ ಕತೆ ಆರಂಭವಾಗುವ ಪರಿ)

".....ನನ್ನ ಸ್ವಭಾವಕ್ಕೆ ಅನುಗುಣವಾಗಿ ಕತೆ ಕೇಳಿದ ತಕ್ಷಣವೇ ಬರೆದು ಅಚ್ಚಿಗೆ ಕಳಿಸಬೇಕಾಗಿತ್ತು. ಈ ಕತೆಯ ವಿಷಯದಲ್ಲಿ ಹಾಗಾಗಲಿಲ್ಲ. ಏಕೆಂದರೆ ಈ ಕತೆಯನ್ನು ಕೊನೆ ಮಾಡೋದು ಹೇಗೆ? ಕತೆಯ ಶಿಲ್ಪ, ಅಚ್ಚುಕಟ್ಟಿನ ಅನುಕೂಲಕ್ಕೆಂದು ಕತೆಗೊಂದು ಮುಕ್ತಾಯ ಕಲ್ಪಿಸಿದರೆ ಕತೆ ಮುಗಿದೇ ಇಲ್ಲ, ಕತೆ ಮುಗಿಯುವುದೇ ಬೇಡ ಎಂದು ಕಾದು ಕುಳಿತಿರುವ ಹಿರಿಯ ಜೀವಗಳ ಕತೆ ಏನಾಗಬೇಡ. ಅದೂ ಅಲ್ಲದೆ ಆ ಹಿರಿಯ ಜೀವಗಳು ಕತೆಗೆ ಬಯಸುವ ಮುಕ್ತಾಯವನ್ನು ಕತೆಯಲ್ಲಿ ಬರೆದುಬಿಡಬಹುದಾದರೂ ನಿಜ ಜೀವನದಲ್ಲಿ ಸಾಧ್ಯ ಮಾಡಿಕೊಡುವುದಾದರೂ ಹೇಗೆ?

.......

"ಕಥನ ಕಲೆಯ ಬಗ್ಗೆ ನಡೆಯುತ್ತಲೇ ಇರುವ ವಿಚಾರ ಸಂಕಿರಣಗಳಲ್ಲಿ ಸಿಕ್ಕಾಗಲೆಲ್ಲ ಮೊಪಾಸಾ, ಮಾಸ್ತಿ, ಮಾರ್ಕ್ವೆಜ್ ಅಂತವರ ಕತೆಗಳ ಬಗ್ಗೆಯೆಲ್ಲ ಚರ್ಚಿಸುತ್ತಲೇ ಇರುತ್ತೇವೆ. ಆದರೆ ಅದೇಕೋ ಅಪ್ಪಿ ತಪ್ಪಿ ಕೂಡ ಭಟ್ಟರೇ ಕಳಿಸಿದ್ದ ಬಾಲಗಣಪತಿಯವರ ಕತೆ ಬಗ್ಗೆ ಇಬ್ಬರೂ ಪ್ರಸ್ತಾಪಿಸಲು ಹೋಗುವುದೇ ಇಲ್ಲ, ನೋಡಿ."
( ‘ಭಟ್ಟರು ಕಳಿಸಿದ ಕತೆ’ಯ ಕೊನೆಯ ಭಾಗ)

ಈ ಸಂಕಲನ ಮಹತ್ವದ್ದು ಎನ್ನಲು ಐದನೆಯ ಕಾರಣವೂ ಒಂದಿದೆ. ಇವತ್ತು ಚಿತ್ತಾಲ, ಅನಂತಮೂರ್ತಿಯವರಂಥ ಹಿರಿಯರು, ರಾಘವೇಂದ್ರ ಪಾಟೀಲ, ಜಯಂತ್ ಕಾಯ್ಕಿಣಿ, ವಿವೇಕ ಶಾನಭಾಗರಂಥ ಪ್ರಬುದ್ಧ ಕತೆಗಾರರು, ಪ್ರಹ್ಲಾದ ಅಗಸನಕಟ್ಟೆ, ಶ್ರೀಧರ ಬಳಗಾರ, ವಸುಧೇಂದ್ರ ಮೊದಲಾದ ನಿನ್ನೆ ಮೊನ್ನೆಯಷ್ಟೇ ಹೊಸ ತಲೆಮಾರಿನವರು ಎಂದು ಕರೆಸಿಕೊಳ್ಳುತ್ತಿದ್ದ ಸಮರ್ಥ ಕತೆಗಾರರು ಮತ್ತು ಮುವ್ವತ್ತರ ಆಸುಪಾಸಿನ ವಯೋಮಾನದ ಅದ್ಭುತ ಪ್ರತಿಭೆಯ ಹಲವು ಹೊಸ ಕತೆಗಾರರೂ ಏಕಕಾಲಕ್ಕೆ ಬರೆಯುತ್ತಿದ್ದಾರೆ. ಈ ಕಾಲಘಟ್ಟದಲ್ಲಿ ಕೆ.ಸತ್ಯನಾರಾಯಣರಂಥ ಕಳೆದ ಮೂರು ದಶಕಗಳಿಂದಲೂ ಬರೆಯುತ್ತ ಬಂದಿರುವ ಒಬ್ಬ ಕತೆಗಾರ ತೋರುತ್ತಿರುವ ಜೀವನಪ್ರೀತಿ, ಪ್ರಯೋಗಶೀಲತೆ ಮತ್ತು ಕಥನ ಕಲೆಯ ಕುರಿತಾದ ಜಿಜ್ಞಾಸೆ - ಮಹತ್ವದ್ದಾಗಿದೆ.

‘ನಕ್ಸಲ್ ವರಸೆ’ ಕತೆಯ ಪ್ರಧಾನ ಗುಣ, ಒಂದು ಕಥಾನಕವಾಗಿ ಇದನ್ನೆಲ್ಲ ಹೇಳಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದನ್ನು ಅತ್ಯಂತ ಕುತೂಹಲಕರ ಕಥನವನ್ನಾಗಿಸಿರುವುದು. ನಕ್ಸಲ್ ಅಥವಾ ಅಂಥ ಯಾವುದೇ ಸಾಮಾಜಿಕ ಬದಲಾವಣೆಯನ್ನು ಬಯಸಿ ನಡೆಯುತ್ತಿರುವ ಕ್ರಾಂತಿಯ ಆಂತರಿಕ ಪಲ್ಲಟಗಳನ್ನು ಕಾಲ-ದೇಶ ಪರಿಮಿತಿಯಲ್ಲಾದರೂ (ಮುಖ್ಯವಾಗಿ ಆಂಧ್ರಕ್ಕೆ ಮತ್ತು ಎರಡು ತಲೆಮಾರಿಗೆ) ಗುರುತಿಸುವುದು, ಅದರ ಎಲ್ಲ ಆಯಾಮಗಳಲ್ಲಿ ಗುರುತಿಸುವುದು ಸುಲಭದ ಸವಾಲೇನೂ ಅಲ್ಲ. ಇದನ್ನು ಕೆ. ಸತ್ಯನಾರಾಯಣ ತಮ್ಮ ಕತೆ ‘ನಕ್ಸಲ್ ವರಸೆ’ಯಲ್ಲಿ ಅತ್ಯಂತ ಸಂಯಮದಿಂದ ಸಾಧಿಸಿದ್ದಾರೆ. ಸಾಧಾರಣವಾಗಿ ಸತ್ಯನಾರಾಯಣ ಅವರು ತಂತ್ರಕ್ಕೆ ಹೆಚ್ಚು ಮಹತ್ವವನ್ನು ನೀಡದವರಾದರೂ, ತಾಂತ್ರಿಕವಾಗಿ ಮಹತ್ವದ್ದೆನಿಸುವ ಜಾಣ್ಮೆಯೊಂದಿಗೆ ಇದನ್ನು ಅವರಿಲ್ಲಿ ನಿಭಾಯಿಸಿರುವುದು ಅವರೊಳಗಿನ ಕಥೆಗಾರ ಪ್ರಯೋಗಶೀಲತೆಯೊಂದಿಗೆ ಸಮಕಾಲೀನ ಕಥನ ಕೌಶಲಗಳಿಗೆ ಸದಾ ತೆರೆದುಕೊಂಡೇ ಇದ್ದಾನೆನ್ನುವುದಕ್ಕೆ ಸಾಕ್ಷಿಯಂತಿದೆ. ಈ ಸಂಕಲನದ ಪ್ರಮುಖ ವೈಶಿಷ್ಟ್ಯವೇ ಇದೆಂದರೂ ತಪ್ಪಾಗಲಾರದು.

ವಿ.ಎಸ್.ನೈಪಾಲರು ಕೊಂಡಪಲ್ಲಿ ಶ್ರೀನಿವಾಸಯ್ಯನ ಜೀವನವನ್ನು ಹಿನ್ನೆಲೆಯಾಗಿಟ್ಟುಕೊಂಡು ಬರೆದ ಕಾದಂಬರಿಯನ್ನು ನಾನು ಓದಿಲ್ಲ. ಆದರೂ ನೈಪಾಲ್ ಭಾರತದ ಬಗ್ಗೆ ಹೊಂದಿರುವ ನಿಲುವು ಮತ್ತು ಅನಿವಾಸಿಯಾಗಿರುವ ಅವರಿಗೆ ಭಾರತದ ಕುರಿತು ಇರುವ ಸ್ಥೂಲ ಗ್ರಹಿಕೆ ವಾಸ್ತವದಿಂದ ಬಹಳಷ್ಟು ದೂರವಾದದ್ದು ಎನ್ನುವ ಸಾಮಾನ್ಯ ಅಭಿಪ್ರಾಯದ ಬಗ್ಗೆ ಗೊತ್ತು. ಇಲ್ಲಿ ಈ ಕತೆ ವಿಭಿನ್ನ ಮನುಷ್ಯರು ಬದುಕನ್ನು ಮತ್ತು ತಮ್ಮ ಬದುಕಿನಲ್ಲಿ ಎದುರಾಗುವ ಮನುಷ್ಯರನ್ನು ತಮ್ಮ ತಮ್ಮ ಆದ್ಯತೆಗಳಿಗನುಗುಣವಾಗಿ ಗ್ರಹಿಸುವ ಒಂದು ವಿಧಾನವನ್ನು ಸೂಚ್ಯವಾಗಿ ಕಾಣಿಸುತ್ತ ಹೋಗಿದೆ. ಅದು ಸುಬ್ಬುನಾಯಿಡುವಿನಿಂದಲೇ ತೊಡಗುತ್ತದೆ. ಪ್ರಸನ್ನ ಚೌಧುರಿಯನ್ನು ಭೇಟಿಯಾಗುವ ಒಂದು ಸಹಜ ತುಡಿತವನ್ನು ಕೂಡ ತನ್ನ ಕಛೇರಿಯ ಮಂದಿಯೊಂದಿಗೆ ಸಮರ್ಥಿಸಿಕೊಳ್ಳುವುದು ಅಥವಾ ಅವರಿಗೂ ಅದು ಸಹಜವೆನ್ನಿಸುವಂತೆ ಮನವರಿಕೆ ಮಾಡುವುದು ಸ್ವತಃ ನಿರೂಪಕನಿಗೇ ಕಷ್ಟದ ಮತ್ತು ಮುಜುಗರದ ಕೆಲಸವಾಗಿ ಬಿಟ್ಟಿದೆ. ಹಾಗೆಯೇ ಸುಬ್ಬುನಾಯಿಡು ಎಸ್ ಸಿಗಳ ಕಾಲೇಜು-ಹಾಸ್ಟೆಲು ಮುಚ್ಚಿಸಿಬಿಟ್ಟರೆ ಇವರ ‘ಹಾವಳಿ’ ಮತ್ತು ಕಮ್ಯೂನಿಸ್ಟ್‌ರ ‘ಕಿತಾಪತಿ’ ನಿಲ್ಲುತ್ತದೆ ಎನ್ನುವ ಮಾತಿಗೆ ಪ್ರತಿಕ್ರಿಯಿಸುವುದು ಕೂಡಾ. ಇಲ್ಲಿ ನಿರೂಪಕ ಯಾವುದರ ಪರವಾಗಿಯೋ ಅಥವಾ ವಿರುದ್ಧವಾಗಿಯೋ ಇರುವುದರಿಂದ ಹುಟ್ಟುವ ಮುಜುಗರ, ಕಷ್ಟ ಅಲ್ಲ ಇದು. ನಿರೂಪಕ ಸದಾ ಕಾಲ ಒಂದು ಮಾತಿನ ಮರ್ಮವನ್ನು ಅರಸುತ್ತಾ ಹೊರಡುವ ಲಹರಿಯ ಮನೋಭಾವವನ್ನು ತೋರುವುದರ ಅರ್ಥವೇ ಒಂದು ಸಂಗತಿಗಿರುವ ಒಂದಕ್ಕಿಂತ ಹೆಚ್ಚಿನ ಮುಖಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವೇ ಆಗಿದೆ. ಇಡೀ ಕತೆ ಕೂಡಾ ಅಂಥ ಒಂದು openness ಹೊಂದಿರುವುದನ್ನು ಕಾಣುತ್ತೇವೆ. ಇದರಿಂದಾಗಿಯೇ ಈ ಕತೆ ನಕ್ಸಲ್ ಚಳುವಳಿಯ ವೈಫಲ್ಯದ ಕಡೆಗೇ ಹೆಚ್ಚು ಗಮನಕೊಡುತ್ತಿದೆ ಎನಿಸಬಹುದಾದ ಒಂದು ಆರೋಪದಿಂದ ಮುಕ್ತವಾಗುತ್ತದೆ ಕೂಡ. ಈ ರೀತಿಯ ಸೂಕ್ಷ್ಮ ವಿಷಯಗಳ ಬಗ್ಗೆ ಬರೆಯುವಾಗ ಕತೆಗಾರ ಸಂಯಮವನ್ನು ಕಾಪಾಡಿಕೊಂಡು ಬರುವುದು ಕಷ್ಟ. ಸ್ವತಃ ಬರಹಗಾರ ಬದುಕನ್ನು ನೋಡುವ ದೃಷ್ಟಿ ಮತ್ತು ಆತನ ಜೀವನದೃಷ್ಟಿ (ಸಾಮಾನ್ಯ ಬದುಕಿನಲ್ಲಿ (ಸಾಹಿತ್ಯಕ್ಕೇ ವಿಶಿಷ್ಟವಾಗಿ ಅಲ್ಲ) ಬರಹಗಾರನ ಆದ್ಯತೆಗಳು) ಎರಡರ ಪ್ರಾಮಾಣಿಕತೆಯನ್ನು ಒರೆಗೆ ಹಚ್ಚುವ ವಸ್ತುವಿದು. ಕತೆಯ ಪ್ರಾರಂಭದಲ್ಲೇ ಬರುವ ನೈಪಾಲ್ ಉಲ್ಲೇಖ, ಮುಂದೆ ನೈಪಾಲ್ ಈ ಸ್ಥಳಕ್ಕೆಲ್ಲ ಬಂದು ಸುತ್ತಾಡಿ ಗ್ರಹಿಸುವ ಪರಿ (ಸುಡು ಬಿಸಿಲು-ಧೂಳು, ಲಂಟಾನಾ ಜಿಗ್ಗಿನ ನಡುವೆ ಕಾಡಿನಲ್ಲಿ ಸುದೀರ್ಘ ನಡಿಗೆ ನೈಪಾಲ್ ಮನಸ್ಥಿತಿಯ ಮೇಲೆ ಮಾಡಿರಬಹುದಾದ ಪರಿಣಾಮ, ಆತನ ಸಿನಿಕತನವನ್ನು ಉತ್ತೇಜಿಸಿರಬಹುದಾದ ಸುಸ್ತು ಕಾರಣವಾಗಿ ಅನುಕಂಪ, ಅಸಹಾಯಕ ಅಥವಾ ವಿಷಾದದ ನೆಲೆಯಿಂದ ಇದನ್ನೆಲ್ಲ ಕಾಣಲಾರದೇ ಹೋದ - ಸೃಜನಶೀಲ ಸೃಷ್ಟಿಕ್ರಿಯೆಗೆ ಮಾರಕವಾದ ಮನಸ್ಥಿತಿಯೊಂದು ಉದ್ಭವಿಸಿರಬಹುದಾದ ವಿದ್ಯಮಾನವನ್ನು ಇಲ್ಲಿ ಅನುಮಾನಿಸಲಾಗಿದೆ ಎಂಬುದನ್ನು ಗಮನಿಸಬೇಕು) ಮತ್ತು ಅದಕ್ಕೂ ಮತ್ತು ಅದು ಹುಟ್ಟಿಸಿದ ಕಾದಂಬರಿಗೂ ಪ್ರಸನ್ನ ಚೌಧುರಿ ಸಹಿತ ಮಂದಿ ಪ್ರತಿಕ್ರಿಯಿಸುವ ಬಗೆ ಹಾಗೂ ಪ್ರಸ್ತುತ ಕತೆಯ (‘ನಕ್ಸಲ್ ವರಸೆ’)ಕಥಾನಕದ ನಿರೂಪಣಾ ತಂತ್ರ ಇವು ಒಂದಕ್ಕೊಂದು ಸಂಬಂಧ ಹೊಂದಿವೆ. ಅಂದರೆ, ಇದು ನಮ್ಮ ಗ್ರಹಿಕೆಯ ಕ್ರಮದ ಕುರಿತ ಕತೆ ಕೂಡ ಆಗಿರುವುದನ್ನು ಇಲ್ಲಿ ಗಮನಿಸುವುದು ಮುಖ್ಯವಾಗುತ್ತದೆ.

ಇಡೀ ಕತೆಯನ್ನು ಆವರಿಸಿಕೊಳ್ಳುವ ಪ್ರಸನ್ನ ಚೌಧರಿ ಒಂದು ವಿಲಕ್ಷಣದ್ದೆನ್ನಬಹುದಾದ, ವಿಕ್ಷಿಪ್ತವೆಂತಲೂ ಬ್ರಾಂಡ್ ಮಾಡಬಹುದಾದ ಆದರೆ ಸಾಕಷ್ಟು ಪ್ರಾಮಾಣಿಕವಾಗಿ ತನ್ನ ತಿಕ್ಕಲು ಅಥವಾ ಐಲುತನವನ್ನೆಲ್ಲ ಬಿಚ್ಚಿಟ್ಟ ಪಾತ್ರ. ಈ ಕಾರಣಕ್ಕೂ ಇಂಥ ಪಾತ್ರವನ್ನು ತನ್ನ ಗಾಂಭೀರ್ಯದ ಚೌಕಟ್ಟಿನೊಳಗೇ ಇರಿಸಿ ಕಟ್ಟುವುದು ಕಷ್ಟದ ಕೆಲಸ. ಅದನ್ನು ಕೆ.ಸತ್ಯನಾರಾಯಣರು ಅತ್ಯಂತ ಸಮರ್ಥವಾಗಿ ಮತ್ತು ಸಂಯಮದಿಂದ ನಿಭಾಯಿಸಿರುವುದು ಅಚ್ಚರಿಯನ್ನೂ ಮೆಚ್ಚುಗೆಯನ್ನೂ ಹುಟ್ಟಿಸುತ್ತದೆ. ಈ ಪಾತ್ರದ contraversy ಒಂದೆರಡಲ್ಲ. ಆದರೆ ಅವುಗಳಲ್ಲೇ ಒಂದು ಬಗೆಯ ಹೊಂದಾಣಿಕೆ ಕೂಡ ಇದೆ. ಇದು ಅಭ್ಯಾಸದಿಂದ ಮೈಗೂಡಿಸಿಕೊಂಡಿದ್ದಿರಬಹುದು ಅಥವಾ ತನ್ನದೇ ಬದುಕಿನ ಆತ್ಮನಿರೀಕ್ಷಣೆಯ ಕ್ಷಣಗಳಿಂದ ತಾನೇ ಪಲಾಯನ ಮಾಡಿರುವ ಅನ್ಯಮನಸ್ಕ indulgence ನಿಂದಲೂ ಸಿದ್ಧಿಸಿದ ನಿರ್ಲಿಪ್ತಿಯಿರಬಹುದು. ಅದು ಸಾಧ್ಯ ಮನುಷ್ಯನಿಗೆ ಅನ್ನುವುದಕ್ಕಿಂತ ಅದನ್ನು ಕತೆಯಲ್ಲಿ ಚಿತ್ರಿಸುವುದು ಕಷ್ಟ ಎನ್ನುವುದು ನಮ್ಮ ಗಮನಕ್ಕೆ ಮುಖ್ಯವೆನಿಸುವ ಸಂಗತಿ.

ಪ್ರಸನ್ನ ಚೌಧುರಿಯ gross ವ್ಯಕ್ತಿತ್ವವನ್ನು ಬಿಟ್ಟು ಆತನನ್ನು ದಿಗಂಬರ ವ್ಯಕ್ತಿ (ಕೆ.ಸತ್ಯನಾರಾಯಣರ ಲೇಖನ - ‘ಬರಹಗಾರನ ತಲ್ಲಣ, ಆತಂಕಗಳು’ ಗಮನಿಸಿ: ಶೂದ್ರ ಪ್ರಕಾಶನ.)ಯನ್ನಾಗಿ ನೋಡುವಾಗಲೂ ಆತನಲ್ಲಿರುವ ದುಗುಡ, ಆತಂಕ, ಬಹಿರಂಗದಲ್ಲಿ ಒಪ್ಪಿಕೊಳ್ಳಲಾಗದ ಆದರೆ ಸುಪ್ತ ಮನಸ್ಸು ಒಪ್ಪಿಕೊಂಡಿರುವ ಸೋಲಿನ ಸೂಕ್ಷ್ಮ ಅರಿವು ಹುಟ್ಟಿಸಿದ ಒಂದು ತರದ ಹತಾಶೆ ಎಲ್ಲವೂ ಮುಖ್ಯ. ಈ ಹತಾಶೆ ಹೊರಟೇ ಹೋದ ರೈಲಿನಲ್ಲಿ, ಕೊಂಡಪಲ್ಲಿಯ ಹೋಟೆಲ್ ರೂಮನ್ನು ತೋರಿಸಲು ಹೋಗಿ ಆದ ಮುಖಭಂಗವಲ್ಲದ ಮುಖಭಂಗದಂಥ ಪ್ರಸಂಗದಲ್ಲಿ, ರಾತ್ರಿ ನಿದ್ದೆಬರದೆ ಹೊರಬಂದು ನಿಂತಾಗ ಕಂಡಂತಾಗುವ ಕೊಂಡಪಲ್ಲಿ ಮತ್ತು ಭಾಸ್ಕರ ಇಬ್ಬರೂ ಕೈಕೈ ಹಿಡಿದು ನಕ್ಷತ್ರಗಳ ನಡುವೆ ಹೋಗುತ್ತಿರುವಂತೆ ಕಾಣುವ ಚಿತ್ತಭಿತ್ತಿಯಲ್ಲಿ, ಡೇನಿಯಲ್‍ರ ಪಾರ್ಥಿವ ಶರೀರದ ಮೂಲಕವೂ ಸ್ಫೂರ್ತಿಪಡೆಯಲೆತ್ನಿಸುವ ಹತಾಶ ಪ್ರಯತ್ನದಲ್ಲಿ ಕಣ್ಣಿಗೆ ಹೊಡೆಯುವುದಿಲ್ಲ, ಆತ್ಮಕ್ಕೆ ತಟ್ಟುತ್ತದೆ. ಮನುಷ್ಯನಿಗೆ ಭವಿಷ್ಯದಲ್ಲಿ ನಂಬಿಕೆಯಿರಬೇಕೇಕೆ ಎನ್ನುವ ಪ್ರಶ್ನೆಗೆ ಚೌಧುರಿ ಕೊಟ್ಟುಕೊಳ್ಳುವ ಉತ್ತರದಲ್ಲಿ ಕೂಡ ತತ್ವ, ಆದರ್ಶ, ಬದ್ಧತೆಗಳ ಪ್ರಶ್ನೆ ಎದ್ದು ಕಾಣುತ್ತದೆ ಎನ್ನುವ ದೃಷ್ಟಿಯಿಂದ ಇದು ಬಹಳ ಮುಖ್ಯ.

ಈ ಭವಿಷ್ಯವನ್ನು ಕಾಣುವ ಕ್ರಮದ ಬಗ್ಗೆ ಮತ್ತೆ ಉಲ್ಲೇಖ ಬರುವುದು ರೆಡ್ದಿಯ ರಕ್ತ ಅವನ ಹೆಂಡತಿಯ ರಕ್ತದೊಂದಿಗೆ ಸೇರಿ ಹೂವಿನ ರಾಶಿಯ ಕಡೆಗೆ ಹರಿಯುತ್ತಿರುವಾಗ. ‘ರಕ್ತ-ಹೆಂಡತಿ ಮತ್ತು ಹೂವು’ ಪದಗಳು ಕಟ್ಟಿಕೊಡುವ ಆರ್ದ್ರ ಚಿತ್ರ ಕೂಡ, ಆ ರೆಡ್ಡಿ ಎಂಥವನೇ ಇರಲಿ, ಕೊಂಚ ವಿಲಕ್ಷಣವಾಗಿದೆ, ಸಂದರ್ಭಕ್ಕೆ. ರಕ್ತ ಹೆಪ್ಪುಗಟ್ಟುವ ಮುನ್ನ ಅದರಲ್ಲಿ ಕಣ್ಣಿಟ್ಟು ಕಂಡರೆ ಭವಿಷ್ಯ ಕಾಣುತ್ತದೆ ಎನ್ನುವ ನಂಬಿಕೆ, ಹೆಪ್ಪುಗಟ್ಟಿದ ಮೇಲೆ ಕಾಣುವುದಿಲ್ಲ, ರೆಡ್ಡಿಯಂಥವರು ಇಲ್ಲದ ಒಂದು ನೆಮ್ಮದಿಯ ಜಗತ್ತು ಅಲ್ಲಿ ಮಾತ್ರ ಕಾಣಲು ಸಾಧ್ಯ, ಆದರೆ ರಕ್ತ ಹರಿಯುತ್ತಲೇ ಇರಬೇಕಾಗುತ್ತದೆ ಎನ್ನುವುದು - ಎಲ್ಲವೂ ತತ್ತ್ವನಿಷ್ಠವಾದ ನಂಬಿಕೆಯೇ ಅಲ್ಲವೆ. ಇಂಥ ನಂಬಿಕೆಗೆ ತತ್ತ್ವ ನೆಲೆಯನ್ನೊದಗಿಸುವ ವಸ್ತು, ಬರೇ ಮಾನವೀಯತೆಯಲ್ಲ. ಆದರೆ ಇಲ್ಲೇ ಇರುವ ‘ಅರಿವು’, ಮನುಷ್ಯನಿಗೆ ಕ್ರಮೇಣ ಎಲ್ಲದರಲ್ಲೂ ಆಸಕ್ತಿ ಕಳೆದುಹೋಗುತ್ತದೆ ಎನ್ನುವುದು; ಎಲ್ಲ ಇರುವಂತೆಯೇ ಸರಿಯಾಗಿಯೇ ಇದೆಯಲ್ಲ, ಇರಬೇಕಿರುವುದು ಹೀಗೆಯೇ ಅಲ್ಲವೆ ಎಂದೆಲ್ಲ ಅನಿಸುವುದು ಕೂಡ ಈ ಜಗತ್ತಿನ ನಿಯಮ ಎನ್ನುವ ಅರಿವು. ಇದು ಹೆಪ್ಪುಗಟ್ಟುವ ಪ್ರಕ್ರಿಯೆಗೇನೆ, ಅದಕ್ಕೆ ಮಾತ್ರವೇ ಸಂಬಂಧಿಸಿದ್ದಲ್ಲ ಮತ್ತೆ ಎನ್ನುವುದನ್ನು ಕೂಡ ಗಮನಿಸಬೇಕು. ಇದು ತತ್ತ್ವರಾಹಿತ್ಯದ ಸ್ಥಿತಿಯೊಂದು ಕೊಡುವ ಜಡ್ಡುತನವಲ್ಲವೆ! ಬರೇ ಮಾನವೀಯ ಅನುಕಂಪ, ಸಂವೇದನೆ ಮನುಷ್ಯನನ್ನು, ಅವನ ಕ್ರಿಯಾಶೀಲತೆಯನ್ನು ಕಾಪಿಟ್ಟೀತೆ? ಎಷ್ಟುಕಾಲ?

ಆದರೆ ಇದಕ್ಕೆ ಡೇನಿಯಲ್ ಸೂಚಿಸುವ ಪರಿಹಾರ ವಿಚಿತ್ರವಾಗಿದೆ ಮತ್ತು ಈ ಬಗೆಯ ಪರಿಹಾರ, ಭ್ರಮೆ-ಭ್ರಾಂತಿ-ಕನಸು-ನಾಟಕ-ದುಗುಡ ಎಲ್ಲವೂ ಸೇರಿಕೊಂಡ ಒಂದು ವ್ಯಕ್ತಿತ್ವದ ಮನಸ್ಥಿತಿಗೆ ತೀರಾ ಸಹಜವಾಗಿದೆ. ಮನುಷ್ಯ ನೂರೈವತ್ತು-ನೂರ ಎಪ್ಪತ್ತೈದು ವರ್ಷ ಬದುಕುವುದು ಸಾಧ್ಯವಾದರೆ ಮನುಷ್ಯನ ಸ್ಫೂರ್ತಿ, ಉತ್ಸಾಹ, hope ಇನ್ನೂ ದೀರ್ಘ ಕಾಲ ಉಳಿದು ಬರಬಹುದು, ಅದರಿಂದ ಕ್ರಾಂತಿ ಚಿರಂತನವಾಗಬಹುದು ಎಂಬ ಆಸೆ! ಈ ಆಸೆ ಆಗಲೇ ಸತ್ತು ಪೆಟ್ಟಿಗೆ ಸೇರಿಕೊಂಡವನೊಬ್ಬನಿಂದ ಪ್ರಕಟವಾಗುವುದು ಬಹುಸೂಕ್ತವಾಗಿದೆ.

"...He can get him abadoned by history but why should he get him abandoned in the realm of dreams and stars also..." ಎನ್ನುವಲ್ಲಿ contraversyನೂ ಇದೆ, ಸೋಲನ್ನು ಒಪ್ಪಿಕೊಂಡೂ ಆ ಸೋಲಿನಲ್ಲಿ ಸಾಧಿಸಿರುವುದರ ತೃಪ್ತಿಕೂಡ ಇರುವುದರ ಸೂಚನೆಯಿದೆ ಮತ್ತು ಅಷ್ಟೇ ಹುಂಬತನದ ಛಾಯೆಯೂ ಇದೆ ಎನ್ನುವುದು ಕತೆಯ ಆತ್ಮವಾಗಿದೆ. Still, ಇದನ್ನೆಲ್ಲ ಮೀರಿ ನಮ್ಮ ಅರಿವು, ಗ್ರಹಿಕೆಗಳನ್ನು ತಟ್ಟಾಡಿಸಬಹುದಾದ ಇನ್ನೇನೋ ಸತ್ಯ ಕೂಡ, ಇನ್ನೊಂದೇ ಮುಖ ಕೂಡ ಇದಕ್ಕೆಲ್ಲ ಇರಬಹುದೆನ್ನುವ ಒಂದು ಪ್ರಜ್ಞೆ ಕತೆಗಾರನಿಗಿದೆ. ಅದು ಶಾರದಾ ಪ್ರಸನ್ನರ ಪತ್ರದ ಹೊಳಹುಗಳಲ್ಲಿ ನಮಗೆ ನಿಚ್ಚಳವಾಗುತ್ತದೆ. ಡಾ|| ಯು.ಆರ್. ಅನಂತಮೂರ್ತಿಯವರು ಒಮ್ಮೆ ಕೆ.ಸತ್ಯನಾರಾಯಣರ ಬಗ್ಗೆ he is truth seeker to the core ಎಂದಿದ್ದರು. ಇಲ್ಲಿ ಮತ್ತೆ ಮತ್ತೆ ಅದು ನೆನಪಾಗುತ್ತದೆ.

ನನಗೆ ತುಂಬ ಇಷ್ಟವಾದ ಇನ್ನೊಂದು ಅಂಶದ ಬಗ್ಗೆ ಕೂಡ ಹೇಳಬೇಕು. ಅದು, ಕನಸು-ಭ್ರಮೆ-ಅತೀಂದ್ರಿಯ ಸಂಗತಿಗಳೆಲ್ಲ ಕೆ.ಸತ್ಯನಾರಾಯಣರ ಈಚಿನ ಕತೆಗಳಲ್ಲಿ ಹೊಸದಾಗಿ ಕಾಣಿಸಿಕೊಳ್ಳತೊಡಗಿರುವುದರ ಕುರಿತು. ಕೆ.ಸತ್ಯನಾರಾಯಣರ ಹಿಂದಿನ ಯಾವುದೇ ಕತೆಗಳಲ್ಲಿ ಇಂಥ ವಿವರಗಳನ್ನು ಏಕತ್ರ ಈ ಪರಿಯಲ್ಲಿ ಕಂಡ ನೆನಪಿಲ್ಲ. ಇಲ್ಲಿನ ‘ದೇವರು ಮತ್ತು ಮಾಧವ ಮೆನನ್’, ‘(ನನ್ನ ಕತೆಗೆ) ಇನ್ನೊಬ್ಬ ವೇಶ್ಯೆಯ ಪ್ರಶಸ್ತಿ’, ‘ಕಮ್ಯುನಿಸ್ಟ್ ರಾಮಭಟ್ಟರ ಜೋಯಿಸ ಪ್ರೀತಿ’, ‘ಮೊದಲ ಅ-ದಲಿತ ಕಥೆ’ ಕತೆಯಲ್ಲಿ ಕೂಡ ಈ ತರದ ವಿವರಗಳಿಗೆ ಕೆ.ಸತ್ಯನಾರಾಯಣರು ತೆರೆದುಕೊಂಡಿರುವುದನ್ನು ಗಮನಿಸಬಹುದು. ಬದುಕಿನಲ್ಲಿ ಭ್ರಮೆಯ ಹಾಗೆ ಕಾಣುವ ಸಂಗತಿಗಳು, ಭ್ರಾಂತಿಗಳು, ಕನಸು, ವಿವಶತೆ ಎಲ್ಲ ಇದ್ದೇ ಇವೆ. ಅತೀಂದ್ರಿಯವೆನಿಸುವ ಸಹಜಗಳು ಕೂಡ ಇವೆ. ಇವನ್ನೆಲ್ಲ ವೈಚಾರಿಕ-ಬೌದ್ಧಿಕ ನೆಲೆಗೆ ಕುಂದಾಗುತ್ತದೆ, ವಾಸ್ತವವಿದೂರ ವಿವರಗಳಾಗಿ ನಿಲ್ಲುತ್ತವೆ ಎನ್ನುವ ಮನೋಭಾವದಿಂದ ಕತೆಗಾರ ತನ್ನ ವೈಯಕ್ತಿಕ ತಾತ್ವಿಕತೆಯನ್ನೇ ಮುಂದಿಟ್ಟುಕೊಂಡು ದೂರವಿಡುವುದು ಅಹಂಕಾರವಾಗುವುದಿಲ್ಲವೇ. ಕಾರಂತರ ಕಾದಂಬರಿಗಳಲ್ಲಿ ಕೂಡ ಭೂತ-ಪ್ರೇತಗಳು, ಪ್ರಾಣಿಗಳು ಮಾತನಾಡುವುದಿದೆ! ಅಷ್ಟರ ಮಟ್ಟಿಗೆ ಕತೆ, ಕಥಾನಕವಾಗಿ ಎಲ್ಲ ಬಗೆಯ ಅಭಿವ್ಯಕ್ತಿ ತಂತ್ರಗಳಿಗೆ ತೆರೆದುಕೊಂಡಿದ್ದರೇ ಚಂದ. ಈ ನಿಟ್ಟಿನಿಂದಲೂ ಇಲ್ಲಿನ ಕತೆಗಳು ಕೆ.ಸತ್ಯನಾರಾಯಣರ ಕತೆಗಳಲ್ಲಿ ತಂತ್ರ ವಿಶೇಷವಾದ ಬಳಕೆಗೆ ಬರುತ್ತಿರುವುದನ್ನು ಕಾಣಿಸುತ್ತಿವೆ.

ಇದನ್ನೆಲ್ಲ ಈಗಲೂ ತಾಂತ್ರಿಕ ಜಾಣ್ಮೆಯ ಕುಸುರಿ ಕೆಲಸವೋ ಶಿಲ್ಪವೋ ಅಲ್ಲ ಎಂದು ವಾದಿಸಬಹುದು. ಕಥಾನಕ ಕತೆಗಾರನನ್ನು ತಟ್ಟಿದ್ದು, ತಲುಪಿದ್ದು ಹೀಗೆಯೇ ಇದ್ದರೂ ಇರಬಹುದು. ಆದರೆ ಸಾಹಿತ್ಯದ ವಿದ್ಯಾರ್ಥಿಯಾಗಿ ಈ ಬಗೆಯ ಕಟ್ಟಡವನ್ನು ತಾಂತ್ರಿಕ ಜಾಣ್ಮೆಯನ್ನಾಗಿಯೂ ಕಾಣಬಹುದು, ಕಾಣಬೇಕಾಗುತ್ತದೆ.

ಸಾಹಿತ್ಯ ನಮ್ಮ ಬದುಕನ್ನು ಅರಳಿಸುತ್ತಲೇ ಮತ್ತೆ ಮತ್ತೆ ಅದನ್ನ ಶ್ರೀಮಂತಗೊಳಿಸುತ್ತಲೇ ಇರಬಲ್ಲುದೆಂಬ ಕಾರಣಕ್ಕೇ ಅಲ್ಲವೆ ನಮಗೆ ಅದೆಂದರೆ ಇಷ್ಟೆಲ್ಲ ಪ್ರೀತಿ? ಆದರೆ ಎಲ್ಲ ಬರಹಗಳೂ ಹಾಗೆ ಇರುವುದಿಲ್ಲ ಎನ್ನುವುದರಿಂದ ಯಾವುದು ಒಳ್ಳೆಯದು, ಯಾವುದು ಸಾಧಾರಣ ಎಂಬುದೆಲ್ಲ ತೀರ್ಮಾನವಾಗುತ್ತದೆ.

ಕೆ.ಸತ್ಯನಾರಾಯಣರ ಎಲ್ಲಾ ಬರಹಗಳಲ್ಲೂ, ಒಮ್ಮೆ ಅನಂತಮೂರ್ತಿಯವಏ ಹೇಳಿದ ಹಾಗೆ, ಸತ್ಯದ ಶೋಧವೇ ನಡೆದಿರುತ್ತದೆ ಎನ್ನುವುದು ಒಂದು ಮುಖ್ಯ ಅಂಶ. ಇನ್ನೊಂದು, ಕೆ.ಸತ್ಯನಾರಾಯಣರ ಎಲ್ಲಾ ಬರಹದಲ್ಲೂ ಇರುವ, ಎದ್ದು ಕಾಣುವ ಪ್ರಾಮಾಣಿಕತೆ. ಇದು ಇಲ್ಲಿ ಬಹಳ ಮುಖ್ಯ. ಇವತ್ತು ಸಾಹಿತ್ಯ ಸೃಷ್ಟಿಯ ಹಂತದಲ್ಲಿ ಹೊಸ ಪೀಳಿಗೆಯನ್ನು ಅನೇಕ ವಿಧದಲ್ಲಿ ಕಾಡುತ್ತಿರುವ ತೊಡಕುಗಳಲ್ಲಿ ಇದು ಮಹತ್ವದ್ದೆಂದು ಕಾಣುತ್ತದೆ. ನೇರ ಅನುಭವಕ್ಕೆ ದಕ್ಕಿದ್ದನ್ನು ಮಾತ್ರ ಬರೆಯುವ, ಬರೆಯಬೇಕೆನ್ನುವ ಒತ್ತಡ ಒಂದು ಕಡೆ, ಬರಹಗಾರ ತನ್ನ cofort zone ಬಿಟ್ಟು ಚಾಚಿಕೊಳ್ಳಬೇಕು ಎನ್ನುವ ನಿರೀಕ್ಷೆ ಇನ್ನೊಂದು ಕಡೆ ಅವನನ್ನು ಕಾಡುತ್ತಿರುವಾಗಲೇ ಜಾಗತಿಕ ಮಟ್ಟದಲ್ಲಿ ಹೊಸ ತಲೆಮಾರು ಎತ್ತಿಕೊಳ್ಳುತ್ತಿರುವ ವಸ್ತು, ಪ್ರಸ್ತುತ ಪಡಿಸಲು ಬಳಸುತ್ತಿರುವ ತಂತ್ರ ಮತ್ತು ಅನುಭವಕ್ಕೆ ತೆರೆದುಕೊಳ್ಳುತ್ತಿರುವ ಪರಿ ಗಮನಾರ್ಹವಾಗಿದೆ. ಅಪ್ರಸ್ತುತವಾದರೂ ಇದನ್ನು ಕೊಂಚ ವಿವರವಾಗಿ ಗಮನಿಸಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ:

ಸಾಹಿತ್ಯ ಅಥವಾ ಫಿಕ್ಷನ್ ಎನ್ನುತ್ತೇವಲ್ಲ, ಕತೆ, ಕಾದಂಬರಿಯಂಥವು, ಅವು ಹಲವು ರೀತಿಗಳಲ್ಲಿ ಹುಟ್ಟುತ್ತವೆ. ಉದಾಹರಣೆಗೆ ನಾವು ಮಹಿಳಾ ಸಾಹಿತ್ಯ ಅಂತ ಸಾಧಾರಣ ಅರ್ಥದಲ್ಲಿ ಏನನ್ನು ಕರೆಯುತ್ತೇವೆಯೋ, (ಅದನ್ನು ಪುರುಷರೂ ಬರೆದಿದ್ದಾರೆ) ಅವುಗಳಲ್ಲಿ ಒಂದು ಭ್ರಮಾಧೀನ ಕಲ್ಪನೆ ಇರುತ್ತದೆ. ಸುಂದರ ಯುವಕ, ಆಕರ್ಷಕವಾಗಿ ಸೀರೆಯುಟ್ಟ ಯೌವನ ತುಂಬಿದ ಯುವತಿ, ಅವರ ಪ್ರೇಮ, ಅದಕ್ಕಿರುವ ಅಡ್ಡಿ ಆತಂಕಗಳು, ಸ್ಪರ್ಧೆ ಒಡ್ಡುವ ಇನ್ನೊಬ್ಬ ಹುಡುಗನೋ ಹುಡುಗಿಯೋ, ಸಂಪ್ರದಾಯಸ್ಥ ಕುಟುಂಬದ ಹಿನ್ನೆಲೆ, ಜಾತಿ, ಬಡತನ ಇತ್ಯಾದಿಗಳನ್ನೇ ಹಲವಾರು ಬಗೆಯಲ್ಲಿ ಊಹಿಸಿ ಆಕರ್ಷಕವಾಗಿ ಹೆಣೆದು ಸಿನಿಮೀಯ ಕತೆ ಬರೆದು ರಂಜಿಸುವುದು ಸಾಧ್ಯ. ನಮ್ಮ ಮೊದಲ ಓದು, ಸಾಹಿತ್ಯ ಎಂದು ನಂಬಿಕೊಂಡು, ಇದರದ್ದೇ ಆಗಿರುತ್ತದೆ. ಪತ್ತೇದಾರಿ, ಥ್ರಿಲ್ಲರ್ಸ್, ಮ್ಯಾಗಝೀನ್ ಕತೆ-ಕಾದಂಬರಿಗಳು ಎಲ್ಲ ಇದರ ಆಸುಪಾಸು, ಬೈಪ್ರಾಡಕ್ಟ್ಸ್.

ಇನ್ನೊಂದು ಸ್ತರದ್ದನ್ನು (ನವ್ಯ, ದಲಿತ, ನವ್ಯೋತ್ತರ ಎಲ್ಲ ಮರೆತುಬಿಟ್ಟು) ನಮ್ಮ ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ರಾಘವೇಂದ್ರ ಪಾಟೀಲರು ಬರೆಯುತ್ತಾರೆ. ವಾಸ್ತವ ಬದುಕಿನಿಂದಲೇ ಇವರು ಪ್ರತೀಕಗಳನ್ನು ಪಡೆಯುತ್ತಾರೆ, ಕತೆಯನ್ನಲ್ಲ. ಮತ್ತು ಸದ್ಯದ ಮಟ್ಟಿಗೆ ಇವರು ಪಡೆಯುವ ಪ್ರತೀಕಗಳಿಗೆ ‘ಆಯ್ದ’ ಎನ್ನುವ ಲೇಬಲ್‌ ಹಾಕಿ ನನ್ನ ತಿಳುವಳಿಕೆಯನ್ನು ಮುಂದುವರಿಸುತ್ತೇನೆ.. ಯಾಕೆ ಅವನ್ನೇ ಆಯ್ದರು ಎಂದರೆ ಇವರಿಗೆ ಇವರ ಕತೆಯ ಉದ್ದೇಶಕ್ಕೆ ಬೇಕಾಗಿದ್ದವು ಅವು, ಮತ್ತು ಅವು ಮಾತ್ರಾ ಎನ್ನುವ ಕಾರಣಕ್ಕೆ. ಹೀಗೆ ಆಯ್ದ ಪ್ರತೀಕಗಳನ್ನಿಟ್ಟುಕೊಂಡು ಇವರು ತಮ್ಮದೇ ಒಂದು ವಿಚಾರವನ್ನು ಹೇಳುತ್ತಾರೆ ಅಂತ ನಾನು ಹೇಳುತ್ತಿಲ್ಲ. ಇವರದೂ ಶೋಧವೇ, ಅದು ಪ್ರಾಮಾಣಿಕವಾದದ್ದೇ. ಆದರೆ, ಇವರು ತಾವು ಆಯುವ ಪ್ರತೀಕಗಳ ಬಗ್ಗೆ ವ್ಯಾಮೋಹವುಳ್ಳವರು ಮತ್ತು ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ, ಇವರು ತಮ್ಮ ಇಷ್ಟದ ಪ್ರತೀಕಗಳನ್ನು ಬಿಟ್ಟು ಬರೆದರೆ, ಬರೆಯುತ್ತ ಅವೇ ಶೋಧಗಳನ್ನು ತೊಡಗಿದರೆ ಏನಾಗಬಹುದೋ ಅದನ್ನು ಊಹಿಸಬೇಕಾಗುತ್ತದೆ. ಈ ಕತೆಗಾರರೂ ಅಂಥ ರಿಸ್ಕ್ ತೆಗೆದುಕೊಂಡಿರುವುದು ಅಲ್ಲಲ್ಲಿ ಕಾಣಿಸುತ್ತದೆ, ಇಲ್ಲವೆಂದಲ್ಲ. ಆದರೂ ಮೇಲ್ನೋಟಕ್ಕೆ ನಾನು ಹೇಳುತ್ತಿರುವುದು ಈ ಕತೆಗಾರರ ವಿವರಗಳ ಮೋಹವಾಗಿ ಕಾಣಿಸಬಹುದು. ಆದರೆ ನಾನು ಹೇಳುತ್ತಿರುವುದು ಅಷ್ಟನ್ನೇ ಅಲ್ಲ. ಇವರ ಕಥಾನಕಗಳಲ್ಲಿ ನಾವು ಮುಖಾಮುಖಿಯಾಗುವ ಪಾತ್ರಗಳ ವ್ಯಕ್ತಿತ್ವಕ್ಕೇ ಸಂಬಂಧಿಸಿ ಇದನ್ನು ನಾನು ಹೇಳುತ್ತಿರುವುದು. ಒಬ್ಬ ಉಪ್ಪನನ್ನೇ ತೆಗೆದುಕೊಳ್ಳಿ. ಈ ಉಪ್ಪ ನನ್ನೊಳಗೂ ಇರುವ ಒಬ್ಬ ಮುಗ್ಧ, ಪ್ರಾಮಾಣಿಕ, ಅಸಹಾಯಕ ಮತ್ತು ಮೂರ್ಖ ಕೂಡ. ನಾವು ಕಲಿತಿದ್ದೇನೆಂದರೆ ನಮ್ಮೊಳಗಿನ ಇವನನ್ನು ಇತರರು ಕಾಣದ ಹಾಗೆ, ಗುರುತಿಸದ ಹಾಗೆ ಮುಚ್ಚಿಡುವುದಕ್ಕೆ ಏನೇನು ಬೇಕೋ ಅದನ್ನು. ವಿವೇಕ್ ಶಾನಭಾಗ್ ಈ ಉಪ್ಪನನ್ನು ಕಟ್ಟಿಕೊಡುವಲ್ಲಿ, ಅವನನ್ನು ನಮಗೆ ನಮ್ಮ ಹೊರಗಿನ ಒಬ್ಬ ವ್ಯಕ್ತಿಯನ್ನಾಗಿಯೂ ನಮ್ಮೊಳಗಿನ ಚೇತನವನ್ನಾಗಿಯೂ ನಮಗೇ ಕಾಣಿಸುವಲ್ಲಿ ಅದ್ಭುತ ಕಲೆಗಾರ, ಅದರಲ್ಲಿ ಸಂಶಯವಿಲ್ಲ. ಆದರೆ ಅವರ ಕತೆಯ ಒಟ್ಟಾರೆ ಧ್ವನಿ, ಕತೆ ಎಲ್ಲವೂ ಇಷ್ಟವಾಗುವಾಗಲೂ ಇದು ಯೋಜಿತ ಸಂಯೋಜನೆ ಎನ್ನುವುದನ್ನು ಒಬ್ಬ ಓದುಗನಾಗಿ ಅಲ್ಲದಿದ್ದರೂ ಸಾಹಿತ್ಯದ ಒಬ್ಬ ವಿದ್ಯಾರ್ಥಿಯಾಗಿ ನಾನು ಗಮನಿಸಿಯೇ ಗಮನಿಸುತ್ತೇನೆ. ಆದರೆ ಓದುಗ ಹಾಗೆ ಗಮನಿಸುವುದನ್ನು ವಿವೇಕರಂಥ, ಜಯಂತರಂಥ, ಪಾಟೀಲರಂಥ ಕತೆಗಾರ ಬಯಸುವುದಿಲ್ಲ. ಸರೋಜಿನಿಯೋ, ಉಪ್ಪನೋ ನಮ್ಮನ್ನು ಕಲಕಬೇಕು ಎನ್ನುವುದೇ ಇಲ್ಲಿ ಗಮ್ಯವಾದಾಗ ವ್ಯಕ್ತಿತ್ವದ ಆಳವೇ ಒಂದು ಮುಖ್ಯ ಶೋಧವಾಗಿ, ಬದುಕೇ ಶೋಧವಾಗುವ ಪ್ರಕ್ರಿಯೆ ಅನಿವಾರ್ಯವಾಗಿ ಮೊಂಡಾಗುತ್ತದೆ, ವ್ಯಕ್ತಿ ಮತ್ತು ಬದುಕು ಬೇರೆ ಬೇರೆಯಲ್ಲ ಎನ್ನುವ ಅರಿವಿದ್ದೂ. ಆದರೆ ಹೀಗೆ ಉಪ್ಪ ನಮ್ಮನ್ನು ಕಲಕುವುದೇ ಒಂದು ಹೊಸ ಶೋಧವಲ್ಲ ಎನ್ನುವುದು ಹೇಗೆ? ಅವನು ನನ್ನೊಳಗಿರುವುದನ್ನು ಇದೆಲ್ಲ ನನಗೆ ತಿಳಿಸಿಕೊಟ್ಟಿಲ್ಲವೆ? ಅದು ನಿಜ. ಆದರೆ ಉಪ್ಪ ಒಂದು ಕತೆಯಷ್ಟೇ ಆಗಿದ್ದಾನೆಯೆ, ಅಲ್ಲಿಗೆ ಉಪ್ಪನ ಬದುಕಿನ ರಿಲೆವೆನ್ಸ್ ಮುಗಿಯಿತೆ - ಕತೆಗಾರನಿಗೂ ಮತ್ತು ಓದುಗನಿಗೂ ಎನ್ನುವ ಪ್ರಶ್ನೆಯೆದುರು ನಾವು ಸಾಮಾನ್ಯವಾಗಿ ನಿಲ್ಲುವುದಿಲ್ಲ. ಇನ್ನೊಂದು ಬಗೆಯ ಕತೆಗಳನ್ನು ಗಮನಿಸುವ.

ಈ ಬಗೆಯ ಕಥೆಗಳಲ್ಲಿ ಪ್ರಾಮಾಣಿಕತೆಯೇ ನಿಜವಾದ ಬಂಡವಾಳ ಅಂತ ನನಗನಿಸಿದೆ. ಬೇಕೆಂದೇ ಈ ಬಗೆಯವೇ ಆದರೂ ತೇಜಸ್ವಿಯವರ ಕತೆಗಳನ್ನು ಸದ್ಯದ ಮಟ್ಟಿಗೆ ಬಿಟ್ಟುಕೊಟ್ಟು ಈ ಅರಿಯುವ ಪ್ರಕ್ರಿಯೆಯನ್ನು ಹೊರಳುದಾರಿಯಲ್ಲಿ ಒಯ್ಯುತ್ತೇನೆ. ಸದ್ಯ ಕೆ.ಸತ್ಯನಾರಾಯಣರ ಕತೆಗಳ ಬಗ್ಗೆಯೇ ಬರೆಯುತ್ತಿರುವುದರಿಂದ ಇದನ್ನು ಹೆಚ್ಚು ವಿವರಿಸಬೇಕಿಲ್ಲ. ವೇಶ್ಯೆಯೊಬ್ಬಳ ಪ್ರಶಸ್ತಿ ಕತೆಯನ್ನೇ ತೆಗೆದುಕೊಂಡು ನೋಡಿದರೂ ಈ ಅಂಶ ಅತ್ಯಂತ ಸ್ಪಷ್ಟ. ಕೆ.ಸತ್ಯನಾರಾಯಣರಿಗೆ ಕತೆಯನ್ನು ಕತೆ ಬರೆಯುವ, ಸೃಜನಶೀಲ ಅಭಿವ್ಯಕ್ತಿಯ ರಚನಾತ್ಮಕ ಮಾನದಂಡಗಳಿಂದ ಅದ್ಭುತ-ಸುಂದರ ರಚನೆಗೊಳಿಸುವುದಕ್ಕಿಂತ ಅದರ (ಬದುಕಿನ)ಅಸಾಹಿತ್ಯಿಕ (ಮಾನದಂಡಗಳ) ಶೋಧ ಮುಖ್ಯ ಮತ್ತು ಆ ಶೋಧ ಪ್ರಾಮಾಣಿಕವಾಗಿ ನಡೆಯಬೇಕಾದ್ದು ಮುಖ್ಯ. ಹಾಗೆಯೇ, ಈ ಶೋಧ ಆಯ್ದ ವಿವರಗಳಲ್ಲಿ ನಡೆದರೆ ತಾನು ಎಲ್ಲಿ ಯಾವೊಂದು ಸತ್ಯದಿಂದ ದೂರವಾಗುತ್ತೇನೋ, ಪರ್ಯಾಯವಾದ ಯಾವೊಂದು ಸತ್ಯವನ್ನು ಕಳೆದುಕೊಂಡೇ ಬಿಡುತ್ತೇನೋ ಎಂಬ ಭಯ ಕೂಡ ಇದೆ ಕೆ.ಸತ್ಯನಾರಾಯಣರಿಗೆ. ಹಾಗಾಗಿ ಕೆ.ಸತ್ಯನಾರಾಯಣ ಕತೆ ಹೇಳುವಾಗ ಇದೆಲ್ಲ ಬೇಡ, ಅದು ಇಲ್ಲಿ ಅಗತ್ಯವಿಲ್ಲ ಎಂದು ವಿಪರೀತ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ಇದನ್ನು ನಾವು ಸತ್ಯನಾರಾಯಣರ ಕತೆಗಳು ಅತಿಯಾದ ವಾಚಾಳಿತನದಿಂದ ಬಳಲುತ್ತವೆ (ಇಂಥ ಒಂದು ಆರೋಪವನ್ನೆ ಅನಂತಮೂರ್ತಿಯವರು ಅಲ್ಲಗಳೆಯುತ್ತ ಬರೆದಿದ್ದು ಅದು ಕೆ.ಸತ್ಯನಾರಾಯಣರ ಹಿಂದಿನ ಒಂದು ಕೃತಿಯ ಬ್ಲರ್ಬ್‌ನಲ್ಲಿದೆ) ಎಂದು ಹೇಳಲು ಸಾಧ್ಯವಾದದ್ದು ನಾನು ಮೇಲೆ ಬರೆದ ಎರಡನೆಯ ಬಗೆಯ ಕತೆಗಾರರ ಕತೆಗಳು ಸೃಜಿಸಿದ ಮಾದರಿಯಿಂದಾಗಿಯೆ ಇರಬಹುದು. ಆದಾಗ್ಯೂ ಈ ಜಿಜ್ಞಾಸೆ ಅವರ ಬರಹದಲ್ಲಿ ಮತ್ತೆ ಮತ್ತೆ ಪ್ರಕಟವಾಗಿರುತ್ತಿರುವಾಗಲು, ಕೆ.ಸತ್ಯನಾರಾಯಣರು ಕೂಡಾ ಕತೆ ಬರೆಯುವ, ಕತೆಗಾರರಾಗಿ ಪ್ರಕಟವಾಗುವ ಹಾದಿಯಲ್ಲೇ ಇರುವವರು ಎನ್ನುವುದನ್ನು ನಾನು ಮರೆತಿಲ್ಲ. ಬೇರೆ ಕತೆಗಾರರು ಬದುಕನ್ನು ಕತೆಯಾಗಿಸುವ ಉತ್ಸಾಹದಲ್ಲಿ ಸತ್ಯನಾರಾಯಣರಲ್ಲಿರುವ ಆತ್ಮಶೋಧದ, ಜಿಜ್ಞಾಸೆಯ ಸಂವೇದನೆಗಳನ್ನು ಮರೆತಿದ್ದಾರೆಂದೂ ನಾನು ಭಾವಿಸಿಲ್ಲ. ಚರ್ಚೆಗೆ ಬೇಕಾಗಿ ಕೆಲವು presumptions ಇರಿಸಿಕೊಂಡಿದ್ದೇನಷ್ಟೆ.

ಡಾ|| ಯು.ಆರ್.ಅನಂತಮೂರ್ತಿಯವರು ವಿವರಿಸುವ Significant details ಮತ್ತು ಕತೆಗಾರಿಕೆಯ ಕಲೆಯನ್ನು ಕುರಿತೇ ಒಂದು ಸರದಲ್ಲಿ ಕುತೂಹಲಕ್ಕಾಗಿ ಶಂಕರ ಮೊಕಾಶಿ ಪುಣೇಕರ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕೇಶವ ಮಳಗಿ, ಪ್ರಹ್ಲಾದ ಅಗಸನಕಟ್ಟೆ - ಇವರ ಕಥನ ಶೈಲಿಯನ್ನು ನಿರ್ದಿಷ್ಟವಾಗಿ ಗಮನಿಸಬಹುದು. ಅನಂತಮೂರ್ತಿ-ಚಿತ್ತಾಲ-ಲಂಕೇಶ-ದೇಸಾಯಿ-ಪಾಟೀಲ ನಿರ್ಮಿಸಿದ ಒಂದು ವಿಶಿಷ್ಟವೂ ವಿಭಿನ್ನವೂ ಆದ ಪರಂಪರೆ; ದೇವನೂರು-ಜಯಂತ ಕಾಯ್ಕಿಣಿ-ವಿವೇಕ ಶಾನಭಾಗ-ಅಮರೇಶ-ಮೊಗಳ್ಳಿ--ಬಳಗಾರ-ಶ್ರೀರಾಮ್-ಇವರು ನಿರ್ಮಿಸಿದ ಒಂದು ಪರಂಪರೆ ಮತ್ತು ಇವತ್ತಿನ ಹೊಸ ತಲೆಮಾರಿನ ಲೇಖಕರು ಸೃಜಿಸುತ್ತಿರುವ ಸಾಹಿತ್ಯ - ವನ್ನು ಇನ್ನೊಂದು ಸ್ತರದಲ್ಲಿ ಸಮಗ್ರವಾಗಿ ಗ್ರಹಿಸಿ ಪುನರ್ ವ್ಯಾಖ್ಯಾನಿಸುವುದು ಸಾಧ್ಯ. ಹಾಗೆಯೇ Virginia Wolf, Katherine Mansfield, Katherine Anne Porter - ಈ ಮೂವರ ಕಥನಶೈಲಿಯನ್ನು ಕುರಿತೇ ಒಂದು ಅಧ್ಯಯನ ಕೂಡ ಕುತೂಹಲಕರ ಹೊಳಹುಗಳನ್ನು ನಮಗೆ ನೀಡುವುದು ಸಾಧ್ಯವಿದೆ.

ಕೆ.ಸತ್ಯನಾರಾಯಣರ ‘ಕಮ್ಯುನಿಸ್ಟ್ ರಾಮಭಟ್ಟರ ಜೋಯಿಸ ಪ್ರೀತಿ’ ಕತೆಗೆ ಬಂದರೂ ಇದೇ ಅಂಶ ಕಾಣುತ್ತದೆ. ಕತೆ ಸುರುವಾಗುವುದು ಎಲ್ಲಿ ಎನ್ನುವ ಸತ್ಯ ಗೊತ್ತಿದ್ದೂ ಆ ಕತೆಗೂ ಎರಡು ಪುಟಗಳ ಹಿಂದಿನಿಂದ ಕೆ.ಸತ್ಯನಾರಾಯಣರ ಕಥಾನಕ ತೊಡಗುತ್ತದೆ. ಇಲ್ಲಿ ನಮಗೆ ಕೆ.ಸತ್ಯನಾರಾಯಣರ ಕತೆಗಾರನಾಗುವ ಉತ್ಸಾಹಕ್ಕಿಂತಲೂ ಅವರಿಗೆ ಬದುಕು ಹೆಚ್ಚು ಮುಖ್ಯವಾದದ್ದು, ಬದುಕಿನ ಶೋಧ ಹೆಚ್ಚು ಮುಖ್ಯವಾದದ್ದು ಮತ್ತು ಅವರ ಶೋಧದ ಪ್ರಾಮಾಣಿಕತೆ ಕತೆಯ ಶಿಲ್ಪದ ಅಗತ್ಯಗಳನ್ನು, ಮಿತಿಗಳನ್ನು ಮೀರಿದ್ದು ಎನ್ನುವುದಕ್ಕೆ ಪುರಾವೆಗಳು ಸಿಗುತ್ತವೆ. ವಿಮರ್ಶಕರಿಗೆ ಇವು ಕೆ.ಸತ್ಯನಾರಾಯಣರ ಕೊರತೆಯಾಗಿ ಕಾಣುವುದು ಕೂಡ ಸಾಧ್ಯವಿದೆ. ಆದರೆ ವಿಮರ್ಶೆಯ ಮಾನದಂಡಕ್ಕೆ ಸರಿಯಾಗಿ ಬರೆಯಲಾದ ಕತೆಗಳಲ್ಲ ಇವು.

ನಮಗೆ ಕೆಲವು ಕತೆಗಾರರು ಗೊತ್ತು. ಇವರು ಒಂದು ಹಂತದಲ್ಲಿ ಬರೆಯುವುದನ್ನು ಬಿಟ್ಟು ಬಿಟ್ಟರು. ಇವರಿಗೆ ಇದ್ದಕ್ಕಿದ್ದ ಹಾಗೆ ಅದೆಲ್ಲ ಕೃತಕ, ಏನೋ ಅಲ್ಲಿಂದಿಷ್ಟು, ಇಲ್ಲಿಂದಿಷ್ಟು ತಂದು ಒಟ್ಟಿಗಿರಿಸಿ, ಜೋಡಿಸಿ, ಈ ಕೊಲಾಜ್ ಹೇಳುವ, ಕೊಡುವ ಸತ್ಯವೇನೆಂದು ಶೋಧಿಸುತ್ತ ಕತೆಕಟ್ಟಿ ಪಡುವ ಸುಖ, ಓದುವವನಿಗೆ ಕೊಡುತ್ತಿದ್ದೇವೆಂದು ತಾವು ನಂಬಿ ಪಡುವ ಸುಖ ಎಲ್ಲ ಖೊಟ್ಟಿ ಅನಿಸತೊಡಗಿ ಇವರು ಬರೆಯುವುದನ್ನು ಬಿಟ್ಟಿದ್ದಾರೆಯೇ ಹೊರತು ಇನ್ನೇನಲ್ಲ. ಇದನ್ನೆಲ್ಲ ಅವರಿಗೆ ಮಾತುಗಳಲ್ಲಿ ಹೇಳುವುದು ಕಷ್ಟವೆನಿಸಿದರೂ ಇದು ನಾವು ಕಂಡುಕೊಂಡ ಸತ್ಯವೇ. ಕೆ.ಸತ್ಯನಾರಾಯಣರ ವೇಶ್ಯೆಯ ಬಹುಮಾನದ ಕತೆ ಇಂಥ ಶೂನ್ಯಭಾವವೊಂದು ಪ್ರಾಮಾಣಿಕ ಕತೆಗಾರನನ್ನು ಕಾಡುವ ಕುರಿತಾಗಿಯೇ ಇದೆಯಾದ್ದರಿಂದ ಹೆಚ್ಚು ವಿವರಿಸದೇ ಇದೆಲ್ಲ ಎಲ್ಲರಿಗೂ ಅರ್ಥವಾಗುತ್ತದೆ. (ಇಂಥ ಇನ್ನೊಂದು ಕತೆ, ‘ಮಧುಗಿರಿ ರಾಮು ಮತ್ತು ಸಾಹಿತಿ ಮುದುಕಪ್ಪ’ ಕೂಡ ಇದೇ ಆಶಯವನ್ನು ಹೊಂದಿದ್ದು ಅದು ಕೆ. ಸತ್ಯನಾರಾಯಣರ ‘ಹಳೆಯ ಕಾಲದ ಹೊಸ ಕತೆ’ ಸಂಕಲನದಲ್ಲಿದೆ) ಇಂಥ ಶೂನ್ಯ ನಿಜಕ್ಕೂ ಹೆಚ್ಚಾಗಿ ಕಾಡುವುದು, ಕಾಡಬೇಕಿರುವುದು ಸಿಲೆಕ್ಟ್ ವಿವರಗಳಿಂದ ಸಿಲೆಕ್ಟ್ ಸ್ಟೋರಿಗಳಿಲ್ಲದ ನಿತ್ಯ ಬದುಕು ನಮಗೆ ಕಲಿಸುವ ಪಾಠಗಳನ್ನು, ದೈನಂದಿನ ಬದುಕಿನ ಯಾವುಯಾವುದೋ ವಿವರಗಳು ಎಲ್ಲೆಲ್ಲೋ ಮತ್ತು ಹೇಗೆ ಹೇಗೋ ನಮಗೆ ನೀಡಿದ ಸತ್ಯಗಳನ್ನು, ನಮ್ಮ ಮೌನದಲ್ಲಿ, ಏಕಾಂತದಲ್ಲಿ ನಾವು ನಡೆಸಿದ ಶೋಧಗಳು ನಮಗೆ ದಯಪಾಲಿಸಿದ್ದನ್ನು ಹೇಳಲು ಪ್ರಯತ್ನಿಸಿದ ಕತೆಗಾರರನ್ನು. ‘ಇದೆಲ್ಲ ಒಂದೇ ಕತೆಯೇ?’ ಎನ್ನುವ ಅನುಮಾನ ನಮ್ಮ ದೈನಂದಿನ ಬದುಕಿನದ್ದು, ಒಂದು ಸಣ್ಣಕತೆಯದ್ದಲ್ಲ.

ಬದುಕು ಒಂದು ನದಿಯಂತೆ ಇದ್ದರೆ ಅದರಲ್ಲಿ ಇಲ್ಲಿಂದ ಇಲ್ಲಿಯ ತನಕದ್ದು ಸೀತಾ ನದಿ, ಇನ್ನೊಂದು ಊರ ಸೆರಗಿನಲ್ಲಿ ಹರಿಯುವ ಅದೇ ನದಿಯ ಪಾತ್ರದ ಹೆಸರು ನೇತ್ರಾವತಿ. ಆದರೆ ಇದು ಆ ನದಿಗೆ ಗೊತ್ತಿಲ್ಲದಿರುವುದು ತಮಾಷೆ. ಹಾಗೆಯೇ ಕತೆಯೂ ಅಲ್ಲವೆ? ಬದುಕಿನ ಒಂದು ತುಂಡು ಕತೆಯಾಗುವುದು ನಮಗೆ, ಕತೆಗಾರರಿಗೆ ಮತ್ತು ಅದನ್ನು ಓದುವವರಿಗೆ. ಬದುಕಿಗೆ ಇಲ್ಲಿಂದ ಅಲ್ಲಿಯತನಕದ್ದು ಇಂಥಾ ಒಂದು ಕತೆ ಎನ್ನುವುದು ಗೊತ್ತೇ ಇರುವುದಿಲ್ಲ. ಮತ್ತು ಅದನ್ನು ನಾವು ಇರದೇ ಇದ್ದ ಕಲ್ಪನೆ, ಇನ್ನೆಲ್ಲಿಯದ್ದೋ, ಇನ್ಯಾರ ಬದುಕಿನದ್ದೋ ವಿವರ, ಘಟನೆಯೊಂದಿಗೆ ಬೆರೆಸಿ, ಹಾದಿಗೆಡಿಸಿ, ಮತ್ತೆ ಈ ಎಲ್ಲ ಸರ್ಕಸ್ಸಿನಲ್ಲೂ ಹೊಸ ಸತ್ಯದ ಹುಡುಕಾಟದಲ್ಲೂ ತೊಡಗಿರುತ್ತೇವಲ್ಲ. ಇದೆಲ್ಲ ಗೇಮ್. ಬದುಕು ಗೇಮ್ ಟ್ರುಥ್ ಎಂದಿದ್ದಾರಲ್ಲ ಕುಸುಮಾಕರ ದೇವರಗೆಣ್ಣುರ್, ಹಾಗೆ.

ಪ್ರಾಮಾಣಿಕತೆಯೇ ಸಹಜ ಕತೆಗಾರನ ಪ್ರಮುಖ ಲಕ್ಷಣವಾಗಿರುವುದರಿಂದಲೇ ಸಮಕಾಲೀನ ಕನ್ನಡ ಸಾಹಿತ್ಯ ಅಥವಾ ಸಣ್ಣ ಕತೆಗಳ ಜಾಯಮಾನ ಯಾವತ್ತೂ ಕೆ.ಸತ್ಯನಾರಾಯಣರ ಕತೆಗಳ ಒಂದು ಲಿಮಿಟ್ ಆಗುವುದೇ ಇಲ್ಲ ಮಾತ್ರವಲ್ಲ ಕಾಲದ ಎಲ್ಲ ಪರೀಕ್ಷೆಗಳನ್ನೂ ಈ ಕತೆಗಳು ಗೆಲ್ಲಬಲ್ಲ ಕಸು ಪಡೆಯುವುದು ಕೂಡ ಇದರಿಂದಲೇ ಅನಿಸುತ್ತದೆ.

‘ದೇವರು ಮತ್ತು ಮಾಧವ ಮೆನನ್’ ಕತೆ ತುಂಬ ಆಪ್ತ ವಿವರಗಳಲ್ಲಿ ತೆರೆದುಕೊಳ್ಳುವುದರಿಂದ ಎಲ್ಲೋ ಓದುಗ ತನ್ನನ್ನೇ ಮರೆತು ಕಥಾನಕದ ಲೋಕಕ್ಕೆ ಸೇರಿ ಹೋದರೂ ಆಶ್ಚರ್ಯವಿಲ್ಲ. ಈ ಕತೆ ನಮ್ಮ ಇಂದಿನ ವಿಸ್ಮೃತಿಯನ್ನೂ ಪ್ರಶ್ನಿಸುವುದರಿಂದ ಮತ್ತು ಅನೂಹ್ಯವಾದದ್ದು ಇದೆ, ಅದನ್ನು ಸರಳವಾದ ಮನಸ್ಸಿನಿಂದ ತಿಳಿಯಬೇಕಾಗಿದೆ ಎನ್ನುವಲ್ಲಿ ಕತೆ - (ಸಮಕಾಲೀನ ಸಣ್ಣಕತೆಗಳ ಮಾದರಿಯ ಜೊತೆಗಿಟ್ಟರೂ ಸುಂದರ ಶಿಲ್ಪದಿಂದ ಮತ್ತು ತನ್ನ ಮೊನಚಿನಿಂದ) ಕತೆಯಾಗಿಯೇ ಗೆದ್ದಿದೆ. ಅನಂತಮೂರ್ತಿಯವರು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ ಈ ಮಾತುಗಳನ್ನ ಗಮನಿಸಿ:

"ನಾನು ಇಲ್ರಿಲಿಜಸ್ಸೇ, ದೇವರನ್ನು ನಂಬೋದು ಕಷ್ಟ ನನಗೆ. ನಾನು ಒಬ್ಬ ಅನುಮಾನಿ. ಯಾವುದೋ ದೇವರೇ ಇಲ್ಲದ ಹೋದ ಆಧ್ಯಾತ್ಮ ಸಿಗೋದಾದರೆ ಅದನ್ನ ನಾನು ಖಂಡಿತಾ ಒಪ್ಕೋತೀನಿ. ಅದು ಬೌದ್ಧವೋ ಯಾವುದೋ. ಏನೋ ಒಂದು ಹುಡುಕಾಟ ನನ್ನ ಒಳಗೆ ಇದೆ. ಮೂರ್ತಿ ಪೂಜಕ ಆಗೋದು ಬಹಳ ಕಷ್ಟ ನನಗೆ. ನಂಬಿಕೆ ಬರೋಲ್ಲ. ಪರಮಹಂಸರನ್ನ ಓದಿದಾಗ ಅದನ್ನೂ ನಂಬೋ ಸ್ಥಿತಿಗೂ ಒಮ್ಮೊಮ್ಮೆ ಬರ್ತೀನಿ. ಹೀಗೆ ಗೊಂದಲದಲ್ಲಿರ್ತೀನಿ. ಆದರೆ ರಿಲಿಜಿಯಸ್ ಪೀಪಲ್ - ಅಂದರೆ ಪಯಸ್ ಆದವ್ರ ಬಗ್ಗೆ ಬಹಳ ಗೌರವ ಇದೆ..."

ಕೆ.ಸತ್ಯನಾರಾಯಣರ ‘ದೇವರು ಮತ್ತು ಮಾಧವ ಮೆನನ್’ ಕತೆಗೆ ಬರೆದಿದ್ದು ‘ಕಮ್ಯುನಿಸ್ಟ್ ರಾಮಭಟ್ಟರ ಜೋಯಿಸ ಪ್ರೀತಿ’ ಕತೆಗೂ ಹೊಂದುವಂತಿರುವುದು ಕೂಡ ಕುತೂಹಲಕರ. ಕತೆಯ ಬಗ್ಗೆ ಬರೆಯುವುದಕ್ಕಿಂತ ಅದರ ಹಿಂದಿರುವ ಮನಸ್ಸಿನ ಬಗ್ಗೆ ಬರೆಯುವುದು ಸೂಕ್ತ. ಯಾಕೆಂದರೆ ನನ್ನಂಥವರು, ದೇವರು, ಆಧ್ಯಾತ್ಮ, ಕೊನೆಗೆ ಏನೋ ಒಂದು, ನಮ್ಮ ಕೈಮೀರಿದ್ದು - ವಿಧಿ ಅನ್ನಬೇಕೆ, ದೈವಿಕ ಶಕ್ತಿ ಎನ್ನಬೇಕೆ ಅಥವಾ ಸಮುದಾಯದ ಪ್ರಾರ್ಥನೆ, ಆಸೆ, ಹಾರೈಕೆಗಳೆಲ್ಲ ಸೇರಿ ಒತ್ತಡ ಹಾಕಿದ್ದರಿಂದಲೇ ಘಟಿಸಿದ ವಿಚಿತ್ರ ಎನ್ನಬೇಕೆ ಅಥವಾ ವಿವೇಕ ಅಯ್ಯರ್ ಸಾವಿನ ಅನುಪಾತದ ಬಗ್ಗೆ ಹೇಳ್ತಾನಲ್ಲ ಅಂಥ ಒಂದು ಪ್ರಾಕೃತಿಕ ಸಂತುಲನ ಎನ್ನಬೇಕೆ ತಿಳಿಯದ ಒಂದರ ಬೆನ್ನು ಬಿದ್ದು ಪರಮಹಂಸ, ಓಶೋ, ಜಿಕೆ ಎಂದೆಲ್ಲ ಒಂದಷ್ಟು ವರ್ಷ ತಲೆಕೆಡಿಸಿಕೊಂಡವರೇ ಸರಿಸುಮಾರು ಎಲ್ಲರೂ. ಲೈಂಗಿಕತೆ ಪಾಪ ಎನ್ನುವ ಭಯವೇ ಇಂಥದ್ದಕ್ಕೆಲ್ಲ ನಾವು ಯೌವನದಲ್ಲೇ ತಲೆ ಹಾಕಲು ಕಾರಣವಿದ್ದಿರಲೂ ಬಹುದು ಮತ್ತೆ! ಹಾಗೆ ಆಧ್ಯಾತ್ಮ ಯಾವಯಾವುದೋ ಪಾತಳಿಯಲ್ಲಿ ನಮ್ಮ ವ್ಯಕ್ತಿತ್ವದ ಒಂದು ಭಾಗವೇ ಆಗಿರುತ್ತದೆ, ಕನಿಷ್ಠ ಭಾರತದ ಈ ಭಾಗದ ಮಟ್ಟಿಗಂತೂ ಇದು ಸತ್ಯವೇ. ಹಾಗಿದ್ದೂ ನನ್ನ ವಯಸ್ಸಿನಲ್ಲಿ ನಾನು ಕಂಡ ಬದುಕು ಮತ್ತು ನಿಮ್ಮ ವಯಸ್ಸಿನಲ್ಲಿ ನೀವು ಕಂಡ ಬದುಕು, ಅನುಭವಿಸಿದ್ದು, ಎಲ್ಲ ಒಂದು ಅಂತರ ನಿರ್ಮಿಸುತ್ತದೆ. ನಾವು ಕಂಡ ಹತ್ತಿರದವರ ಮತ್ತು ದೂರವಿದ್ದೂ ನಮಗೆ ಹತ್ತಿರದ್ದೆನಿಸುವ, ತೀರ ದೂರದವರ ಸಾವುಗಳು ಬಹಳ ವ್ಯತ್ಯಾಸವುಂಟು ಮಾಡುವ ಒಂದು ಸಂಗತಿಯಿದು. ಮತ್ತೆ ಮತ್ತೆ ಇದೆಲ್ಲ ಸಾವಿನ ಜೊತೆ ತಳುಕುಹಾಕಿಕೊಂಡೇ ಬರುವ ವಿಚಾರ. ಆದರೂ ಸ್ಮಶಾನ ವೈರಾಗ್ಯಕ್ಕೂ ಇದಕ್ಕೂ ವ್ಯತ್ಯಾಸವಿದೆ.

ಆದರೂ ಮೆನನ್ ತರದ ಮೇಲ್ವರ್ಗದ ಮಂದಿ ಬದುಕಿನ ಉದ್ದಕ್ಕೂ ಮೆದುಳಿನ ಮತ್ತು ಹಣದ ಸಖ್ಯದಲ್ಲಿ ವಿಚಿತ್ರ ಧೈರ್ಯ ಮತ್ತು ಜೀವನೋತ್ಸಾಹ ಹೊಂದಿ ಹಿಂದಕ್ಕಾಗಲೀ ತಮ್ಮೊಳಗಿನ ಜಗತ್ತಿಗಾಗಲೀ ಎಂದೂ ನೋಟ ಕೇಂದ್ರೀಕರಿಸಿ ಕೂರದವರು ಸಾವು ಹತ್ತಿರದಲ್ಲೇ ಸುಳಿದಂತೆ ಕಾಣಿಸಿಕೊಂಡ ಮೇಲೆಯೇ ಇಂಥ ದಿಢೀರ್ ಆಧ್ಯಾತ್ಮವಾದಿಗಳಾಗುವುದು ಒಂದು ಬಗೆಯ ಶೋಕಿ ಕೂಡ ಆಗಿ ಕಾಣುತ್ತದೆ ನನಗೆ - ಯಾಕೆಂದರೆ, (ಇದು ಮುಖ್ಯ) ನನ್ನಂಥ ಮೆದುಳಿನ ಮತ್ತು ಹಣದ ಬಲದಿಂದ ಅಂಥ ಒಂದು ಅಂತಸ್ತಿನ ಬದುಕು ಸಿಗದೇ ಹೋದವರಿಗೆ ದಿನವೂ ಅಂತರಂಗದ ಘಳಿಗೆಗಳಿರುತ್ತ ಅದು ನಮ್ಮ ಬದುಕಿನುದ್ದಕ್ಕೂ ಬಂದ ಸಂಗತಿಯಾಗಿರುತ್ತ, ಸಂಭವಿಸಿದ ಮತ್ತು ಸಂಭವಿಸದ ಸಾವುಗಳೆಲ್ಲ ನಮಗೆ ನಿತ್ಯವೂ ಮೆನನ್ ಕಂಡಿದ್ದನ್ನು ಕಾಣಿಸುತ್ತಿರುವಾಗ ಹೀಗನ್ನಿಸುವುದೆ ಹೊರತು ಇನ್ನೇನಲ್ಲ.

ಇದು ಮೆನನ್‌ಗೂ ನನಗೂ, ನನ್ನಂಥ ಸಾಮಾನ್ಯ ಮಧ್ಯಮವರ್ಗದ ಮಂದಿಗೂ ಇರುವ ವ್ಯತ್ಯಾಸ. ಹಾಗಾಗಿ ಮೆನನ್ ಮತ್ತು ಅವನ ಕತೆ ಎರಡೂ ನಾನು ಮೇಲೆ ಅಷ್ಟೆಲ್ಲ ಕೊರೆದ "ಯೋಜಿತ ಕತೆ" ಎಂದೇ ಅನಿಸುವುದೇ ಹೊರತು ಅದು ಕತೆಗಾರನ ಬದುಕಿನ ಉದ್ದಕ್ಕೂ ಕತೆಗಾರನನ್ನು ಕಾಡುತ್ತಿದ್ದ ಒಂದು ಶೋಧವಾಗಿದ್ದೂ ಪ್ರಾಮಾಣಿಕವಾಗುವುದಿಲ್ಲ. ಯಾಕೆಂದರೆ, (again) ಈ ಶೋಧಕ್ಕೆ ಕತೆಗಾರ ಇಲ್ಲಿ ಎಷ್ಟೇ ವಿವರಗಳ ಸಮರ್ಥನೆಯನ್ನು ಕೊಟ್ಟರೂ ಅದು ಕತೆಗಾರನ ಪ್ರಜ್ಞಾಪೂರ್ವಕ ಆಯ್ಕೆಯ ವಿವರಗಳೇ ಆಗಿರುತ್ತವೆ ಎನ್ನುವುದೊಂದು ಮತ್ತು ಹಾಗೆ ಪ್ರಜ್ಞಾಪೂರ್ವಕವಾಗಿ ಆಯದೇ ಇಂಥದ್ದನ್ನು ಬರೆಯುವುದು ಸಾಧ್ಯವೂ ಇಲ್ಲದಿರುವುದು ಇನ್ನೊಂದು! ಇದೊಂದು ರಚನೆಯ ಹಂತದ ಸಮಸ್ಯೆ. ಆದರೆ ಇದನ್ನೆಲ್ಲ ನಮಗೆ ಕಲಿಸಿಕೊಡುವ ಬದುಕು ಒಂದು ರಚನೆಯಲ್ಲದಿರುವುದರಿಂದ ಉದ್ಭವಿಸುವ ಸಮಸ್ಯೆ. ಇದು ಪ್ರತಿಯೊಬ್ಬ ಬರಹಗಾರನಿಗೂ ಗೊತ್ತು. ಹಾಗಾಗಿಯೇ ಇಲ್ಲಿ ಬಹುಷಃ ಮೊತ್ತ ಮೊದಲ ಬಾರಿಗೆ ಅಸಂಗತ ವಿವರಗಳಿಗೆ, ಕನಸುಗಳಿಗೆ ಕೆ.ಸತ್ಯನಾರಾಯಣ ಲಗ್ಗೆ ಇಟ್ಟಿದ್ದಾರೆ. ಮೆನನ್ ಕೈಯಲ್ಲಿ ಅನೇಕ ವಿಸ್ಮೃತಿಯ ಕೆಲಸಗಳನ್ನು ಮಾಡಿಸುತ್ತಾರೆ. ಅದೇ ಕೆ.ಸತ್ಯನಾರಾಯಣರು ತಮ್ಮ ‘ಕಮ್ಯುನಿಸ್ಟ್ ರಾಮಭಟ್ಟರ ಜೋಯಿಸ ಪ್ರೀತಿ’ ಕತೆಯಲ್ಲಿ ರಾಮಭಟ್ಟ ಲಂಗೋಟಿಯಲ್ಲಿ ರಣರಣ ಬಿಸಿಲಿನಲ್ಲಿ ಗುಡ್ಡದ ಮೇಲೆ ಕೂತು ವಿಮಾನದಲ್ಲಿ ಕೂತು ಬರುವ ಮಂದಿಯನ್ನು ಕಾಯುತ್ತಿರುವ ಬಗ್ಗೆ, ಅವರಲ್ಲಿ ಕೆಲವೇ ಮಂದಿ ಇವರನ್ನು ಮಾತನಾಡಿಸಿ ಊರೊಳಗೆ ಹೋಗುವ ಬಗ್ಗೆ, ಹೋದ ಎರಡು ಮೂರು ದಿನಕ್ಕೆ ಊರಿನಲ್ಲಿ ಮಗು ಹುಟ್ಟುವ ಬಗ್ಗೆ ಬರೆಯುವಾಗ ಇಂಥ ಕಾಲ್ಪನಿಕ ಅಸಂಗತವಾದದ ನೆರವು ಪಡೆಯುವುದಿಲ್ಲ ಎನ್ನುವುದನ್ನು ಗಮನಿಸಿ.

ಮೆನನ್‌ಗೂ ರಾಮಭಟ್ಟನಿಗೂ ಇರುವ ವ್ಯತ್ಯಾಸವಿದು. ಅಂದರೆ ರಾಮಭಟ್ಟನಿಗೆ ಸಂಸ್ಕಾರದಿಂದ ದಕ್ಕಿದ್ದು ನಮಗೆ ಹೌದು ಹೌದು ಅನಿಸುವಾಗಲೇ ಮೆನನ್‌ಗೆ ದಕ್ಕುವುದು ಅಸಹಜವೆನಿಸುತ್ತದೆ ಅಥವಾ ಹಾಗನಿಸುವ ಸಾಧ್ಯತೆಯೇ ಹೆಚ್ಚು. ಬಾವಿಯಲ್ಲಿ ಅವನು ಕಂಡಿದ್ದು, ತುಂಬ ಆಳವಾದ ಅರ್ಥ, ಆಯಾಮಗಳನ್ನು ಈ ಕತೆಯ ವ್ಯಾಪ್ತಿಯ ಆಚೆಗೂ ಕೊಡಬಲ್ಲ ಒಂದು ದರ್ಶನ ಹೌದಾದರೂ ಅದು ಮೆನನ್‌ನ ಪಾತ್ರಕ್ಕಿಂತ ಹೆಚ್ಚು ಕತೆಗಾರನೊಂದಿಗೆ ತಾದ್ಯಾತ್ಮ ಹೊಂದಿದ ಒಂದು ದರ್ಶನವಾಗಿಯೇ ನಿಲ್ಲುತ್ತದೆ. ದೀರ್ಘಕಾಲದ ಶೋಧ, ಚಿಂತನೆಗಳಿಗೆ ಮಾತ್ರ ದಕ್ಕುವ ಇಂಥ ಒಂದು ದರ್ಶನ ಮೆನನ್‌ಗೆ ಅಚಾನಕವಾಗಿ ಒದಗಬಾರದೆಂದಲ್ಲ. ಆದರೆ ಒದಗಿದ ಬಗೆ ಕನ್ವಿನ್ಸಿಂಗ್ ಆಗುವುದು ಆಗದಿರುವುದು ಎರಡೂ ಸಾಧ್ಯತೆಗಳಿರುತ್ತ ರಾಮಭಟ್ಟ ಮತ್ತು ಮೆನನ್ ಇಬ್ಬರಲ್ಲಿ ಈ ವ್ಯತ್ಯಾಸ ಮುಖ್ಯವಾಗುತ್ತದೆ. ರಾಮಭಟ್ಟನ ಶಿವರಾಮದೊಡ್ಡಪ್ಪನ ರೀತಿನೀತಿ ಸ್ವತಃ ರಾಮಭಟ್ಟರಿಗೇ ವಿಕಲ್ಪವಾಗಿ ಕಾಣಿಸಲಿಲ್ಲ. ಆದರೆ ಈ ಕತೆಯ ಮೆನನ್ ಹಾಗೆ ಕಾಣಿಸಬಹುದಾದ ಸಾಧ್ಯತೆಯೊಂದು ತೆರೆದೇ ಇರುವುದು ಸ್ವತಃ ಕೆ.ಸತ್ಯನಾರಾಯಣರ ಗಮನಕ್ಕೂ ಬಾರದೆ ಹೋದ ಸಂಗತಿಯಿರಲಾರದು.

ಅಲ್ಲದೆ ಸಣ್ಣಕತೆಯ ಮಿತಿಯೊಳಗೆ ಒಂದು ಇಡೀ ಬದುಕು ಹಂತಹಂತಗಳಲ್ಲಿ ನಮಗೆ ಪೆಟ್ಟು ಕೊಟ್ಟು ಕಣ್ತೆರೆಸುತ್ತ ಬರುವ, ಆಗಲೇ ಕಣ್ಣು ತೆರೆದರೆ ಮಾತ್ರ ಕಾಣಿಸಬಹುದಾದ ಮತ್ತು ಕಾಣಿಸಿಯೂ ಇನ್ನೊಬ್ಬರಿಗೆ ಹೇಳಲಾಗದ, ಹೇಳಿ ನಂಬಿಸಲಾಗದ, ನಮಗೇ ಇನ್ನೊಂದು ಮನಸ್ಥಿತಿಯಲ್ಲಿ ವಿಸ್ಮೃತಿಯೆನಿಸಿ ಬಿಡಬಹುದಾದ ವಿವರಗಳನ್ನಿಟ್ಟುಕೊಂಡು ಬರೆಯುವಾಗ ಎದುರಾಗುವ ಸಮಸ್ಯೆ ಕೂಡ ಹೌದು. ಹಾಗಾಗಿ ಮೆನನ್‌ನ ಮನಸ್ಥಿತಿಗೇ ಹೊಂದಿಕೊಳ್ಳುವ ಸ್ತರಕ್ಕೆ ತಲುಪದೇ ಇರುವ ಮಂದಿಗೆ ಈ ಕತೆಯ ಅಸಂಗತ ವಿವರಗಳು ಒಂದೋ ಇಷ್ಟವಾಗಬಹುದು ಅಥವಾ ತೀರ ಅಸಂಗತ ಎನಿಸಲೂ ಬಹುದು. ಇನ್ನೊಂದೆಂದರೆ ತೀರ ಮೇಲ್ಮಟ್ಟದಲ್ಲಿ ವಾಹ್ ಎನಿಸುವ ಕಲ್ಪನೆ ಎನಿಸಬಹುದು. ಈ ಹಂತದಲ್ಲಿ ಮತ್ತೆ ಕುಸುಮಾಕರರ ರೊಳ್ಳಿ (ನಿರಿಂದ್ರಿಯ) ಹೆಚ್ಚು ಪ್ರಾಮಾಣಿಕ ಪಾತ್ರ ಅನಿಸುತ್ತದೆ. ಪರದ ಕುರಿತ ಚಿಂತನೆ, ಯೋಚನೆ ಮನುಷ್ಯನ ಇಹದ ಬದುಕಿನ ಉದ್ದೇಶಗಳನ್ನು ಅಂದರೆ ಅವನ ನಡವಳಿಕೆ, ವರ್ತನೆ, ನೈತಿಕತೆ ಕುರಿತ ಉದ್ದೇಶಗಳನ್ನು ನಿಶ್ಚಯವಾಗಿಯೂ ಹೊಂದಿದೆ. ಅದನ್ನು ಸಾಧಿಸದ ಆಧ್ಯಾತ್ಮವಾಗಲೀ, ಪರಮಾರ್ಥದ ಚಿಂತನೆಯಾಗಲೀ ಸತ್ವವಿಲ್ಲದ್ದು ಎಂದೇ ಅನ್ನಿಸುತ್ತದೆ.

ಮುಖ್ಯ ಪ್ರಶ್ನೆಯೇ ಮೆನನ್‌ಗೆ ಈ ಒಂದು ದರ್ಶನ ಪಡೆಯುವುದಕ್ಕೆ ಬೇಕಾದ ಮಾನಸಿಕ ತಯಾರಿ ಇತ್ತೇ ಎನ್ನುವುದು. ಯಾಕೆಂದರೆ, ಇದೆಲ್ಲ ಬದುಕಿನುದ್ದಕ್ಕೂ ನಮ್ಮನ್ನು ಕಲಕುವ, ಕಾಡುವ, ಮೌನದಲ್ಲಿ, ಏಕಾಂತದಲ್ಲಿ ನಾವು ನಮ್ಮೊಳಗೆ ಕಂಡುಕೊಳ್ಳುವ ಸಂಗತಿಗಳಾದ್ದರಿಂದ ಮೆನನ್‌ಗೆ ಅಂಥ ಒಂದು ಅಂತರಂಗವನ್ನು ಶೋಧಿಸಿಕೊಳ್ಳುವ ದೃಷ್ಟಿಯಿತ್ತೇ ಎನ್ನುವುದು ಕತೆಯ ಚೌಕಟ್ಟಿನೊಳಗಿನ ಪಾತ್ರ ಚಿತ್ರಣದಿಂದಲೇ ಸ್ಫುಟಗೊಳ್ಳಬೇಕು. ಹೌದು-ಹೌದು ಅನಿಸುವ ವಿವರಗಳು ಕತೆಯಲ್ಲೇ ಸಿಗುತ್ತವೆ. ಅವನ ಬದುಕಿನ ವಿಧಾನದಲ್ಲಿ ಅಂಥ ಸ್ಪಂದನಾಶೀಲತೆ, ಸಂವೇದನಾಶೀಲತೆ ಮತ್ತು ಅಂತಃಕರಣ ಆತನಲ್ಲಿತ್ತು ಅನಿಸುತ್ತದೆ. ಅದೇನೇ ಇರಲಿ, ಅವನಲ್ಲಿ ತಯಾರಿ ಒಳಗೊಳಗೇ ಸುಪ್ತವಾಗಿ ಇತ್ತು ಎಂದೇ ಇಟ್ಟುಕೊಳ್ಳುವ. ಇಲ್ಲಿ ಅವನಿಗೆ ಅಂಥ ದರ್ಶನವೊಂದು ಒದಗಿತೇ ಎನ್ನುವುದು ಎರಡನೆಯ ಪ್ರಶ್ನೆ. ದರ್ಶನದೊಂದಿಗೇ ಮೆನನ್ ಪಾತ್ರ ಐಕ್ಯವಾಗುವುದರಿಂದ ಇಲ್ಲಿ ದರ್ಶನ ಮತ್ತು ದಾರ್ಶನಿಕ ಬೇರೆ ಬೇರೆ ಎನ್ನುವುದನ್ನು ಗಮನಿಸಬೇಕು. ಈ ಹೊಸ ದಾರ್ಶನಿಕ ಯಾರು? ನಿರೂಪಕ? ಈ ನಿರೂಪಕ ಯಾವ ನೆಲೆಯಿಂದ ನಮಗೆ ಈ ದರ್ಶನವನ್ನು ಕಾಣಿಸುತ್ತಿದ್ದಾನೆ ಹಾಗಾದರೆ? ಭ್ರಾಂತಿಯೊಂದರ ವಿವರಗಳಲ್ಲೆ ಅಥವಾ ಪ್ರತಿಮಾ ವಿಧಾನದ ನೆಲೆಯಲ್ಲೆ? ಭ್ರಾಂತಿಯ ನೆಲೆಗಟ್ಟಿನಲ್ಲೇ ಎಂದಾದಲ್ಲಿ ಕತೆಯ ಸೆಲೆಯೇ ಅರ್ಥಹೀನವಾಗಿ ಬಿಡುತ್ತದೆ. ಪ್ರತಿಮಾ ವಿಧಾನದ ದರ್ಶನ ಇದು ಎಂದು ಒಪ್ಪಿಕೊಂಡಲ್ಲಿ ಇದನ್ನು ತೀರ ಮನವೊಲಿಸುವ ಒಂದು ನೆಲೆಯೆಂದೇ ಹೇಳಬೇಕಾಗುತ್ತದೆ. ಪ್ರಜ್ಞೆಯ ಪಾತಳಿಯಲ್ಲೇ ಕತೆಯ ಹಂದರವನ್ನೂ ಕತೆಯ ಕೇಂದ್ರ ಪಾತ್ರವನ್ನೂ ಇರಿಸಿ, ಮುಂದೆ ಪರವನ್ನು ಇಹದ ಮುಖೇನವೇ ಸ್ಪರ್ಶಿಸಿದಂತೆ ಸವರಿ ಒಂದು ದರ್ಶನವನ್ನು ತನ್ನ ಒಡಲಿನೊಳಗಿನಿಂದಲೇ ಪಡೆಯಲು ಯತ್ನಿಸುವ ಎಲ್ಲ ಕತೆಗಳ ಸಮಸ್ಯೆ ಇದು. ಕಮ್ಯುನಿಸ್ಟ್ ರಾಮಭಟ್ಟನ ಕತೆ ಈ ಕತೆಯ ಜೊತೆಯಲ್ಲೇ ಇರುವಂತಾದದ್ದು ಕೇವಲ ಕಾಕತಾಳೀಯವಲ್ಲವೇನೋ ಅನಿಸಹತ್ತಿದೆ ನನಗೇ! ಇದಾದರೆ ಒಂದು ಹೊಸ ದರ್ಶನ!

ಆದರೂ ಇದೆಲ್ಲವನ್ನು ಓದುಗನ ಮನಸ್ಸಿನಲ್ಲಿ ಹುಟ್ಟಿಸಬಹುದಾದ್ದು ಸತ್ಯನಾರಾಯಣರ ಈ ಕತೆಗಳ ಒಂದಾನೊಂದು ಸಾಧ್ಯತೆಯೇ ಆಗಿದೆ! ಹಾಗಾಗಿ ಅದರ ಉದ್ದೇಶವೂ ಖಂಡಿತ ಈಡೇರಿದೆ!

ಸಂಕಲನದ ಸಬ್-ಸಬಾಲ್ಟ್ರನ್ ಕತೆ ಕೊನೆಯಲ್ಲಿ ಜೋಡಿಸಿದಂತೆ ಅನಿಸುವ ಒಂದು ವಿವರದ ಅಸಹಜತೆಯಿಂದಲೂ, ಅದು ಬೇಡ ಬೇಡವೆಂದರೂ ನೆನಪಿಸುವ ಡಾ||ಯು.ಆರ್.ಅನಂತಮೂರ್ತಿಯವರ ‘ನವಿಲುಗಳು’ ಕತೆಯ ನೆರಳಿನಿಂದಲೂ ಅಷ್ಟಾಗಿ ಮನಸ್ಸಿಗಿಳಿಯುವುದಿಲ್ಲ. ‘ಬೇಡ! ಬೇಡ! ಫೋರ್ಡ್ ಕಂಪನಿ ಕೆಲಸ’ ಸತ್ಯನಾರಾಯಣರ ಹಿಂದಿನ ಸಂಕಲನಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಕಥೆ, ಸಾತತ್ಯದ ನೆಲೆಯಿಂದ ಮತ್ತೆ ಇಲ್ಲಿಯೂ ಕಾಣಿಸಿಕೊಂಡಿದೆ.

(ಅಕ್ಷರ ಪ್ರಕಾಶನ, ಹೆಗ್ಗೋಡು. ಪುಟಗಳು 170, ಬೆಲೆ ನೂರಾ ಹದಿನೈದು ರೂಪಾಯಿ.)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ