Tuesday, August 9, 2011

ಜೀವನದಲ್ಲಿ ಸಂತೋಷವಾಗಿರುವುದು ಮುಖ್ಯ....

ಪುಸ್ತಕದ ಪರಿಚಯ, ಓದಿಕೊಂಡ ಪುಸ್ತಕದ ಮೇಲೆ ಕೆಲವು ಟಿಪ್ಪಣಿಗಳು, ಆಮೇಲೆ ಘನವಾಗಿ ಹೇಳುವುದಾದರೆ ವಿಮರ್ಶೆ - ಏನೆಲ್ಲ ಹೆಸರಿನಲ್ಲಿ ಕರೆದುಕೊಂಡರೂ ಅದರ ಉದ್ದೇಶ ಕಥೆಯನ್ನು ಸಂಕ್ಷಿಪ್ತವಾಗಿ ಹೇಳುವುದಲ್ಲ. ಹಾಗೆ ಮಾಡುವುದು ಅಸಹ್ಯ ಮತ್ತು ಕೃತಿಕಾರನ, ಪ್ರಕಾಶಕನ ದೃಷ್ಟಿಯಿಂದ ನೋಡಿದರೆ ಅನ್ಯಾಯ. ಕೆಲವರಂತೂ ಈ ಪುಸ್ತಕ ಇಷ್ಟೇ ಎಂದು ತೀರ್ಮಾನಿಸಿಬಿಡಲು ಈ ಸಂಕ್ಷಿಪ್ತಗೊಳಿಸಿದ ಕಥೆ ಕಾರಣವಾಗುತ್ತದೆ.

ಐದುನೂರ ಮುವ್ವತ್ತು ಪುಟಗಳ, ಗಾತ್ರದಲ್ಲೂ ಬ್ರಹತ್ತಾಗಿರುವ ಆರ್ಹಾನ್ ಪಮುಕ್‌ನ ಹೊಸ ಕಾದಂಬರಿ The Museum of Innocence ನ ಮೊದಲ ತೊಂಭತ್ತು ಪುಟಗಳನ್ನಷ್ಟೇ ನಾನು ಓದಿಕೊಂಡಿದ್ದಾಗ ಈ ಟಿಪ್ಪಣಿಯನ್ನು ಮಾಡಿಕೊಂಡಿದ್ದೆ. ಹಾಗಾಗಿ ಈ ಕಥೆಯನ್ನು ನಿಮಗಿಲ್ಲಿ ಹೇಳುವುದರಿಂದ ನಾನು ಇಡೀ ಕೃತಿಯ ಬಗ್ಗೆ ಮಾತನಾಡಿದಂತೇನೂ ಆಗುವುದಿಲ್ಲ ಎಂಬ ಧೈರ್ಯದೊಂದಿಗೆ ಮುಂದುವರಿಯುತ್ತೇನೆ. ಓದಿನ ಈ ಹಂತದಲ್ಲೆ ನನ್ನನ್ನು ತೀವ್ರವಾಗಿ ಕಾಡಿದ ಒಂದು ಸಂಗತಿಯ ಬಗ್ಗೆ ಇಲ್ಲಿ ಬರೆಯಬೇಕೆನಿಸಿದೆ.

ತೀರ ಬಡಕುಟುಂಬಕ್ಕೆ ಸೇರಿದ ಒಬ್ಬ ಹುಡುಗಿ ತೀರಾ ಸಿರಿವಂತನಾದ ಒಬ್ಬ ಹುಡುಗನ ಜೊತೆ ಪ್ರೇಮಕ್ಕೆ ಬೀಳುತ್ತಾಳೆ. ತೀರ ಎಳವೆಯಲ್ಲೇ ಸುರುವಾದ ಈ ಪ್ರೇಮದಂಥ ಭಾವ ಮುಂದುವರಿದು ಮದುವೆಯ ಹಂತಕ್ಕೆ ಬಂದಾಗ ಕೆಲವು ಕೌಟುಂಬಿಕ ಸಮಸ್ಯೆಗಳು ಏಳುತ್ತವೆ. ಆದರೂ ಹೇಗೋ ಇವರಿಬ್ಬರನ್ನೂ ಪ್ಯಾರಿಸ್ಸಿಗೆ ಕಳುಹಿಸಿ ಅಲ್ಲಿ ಅವಿವಾಹಿತ ಜೋಡಿಯಾಗಿಯೇ ಜೊತೆಯಲ್ಲಿ ಇರುವಂತೆ ಏರ್ಪಾಟು ಮಾಡುವುದು ಸಾಧ್ಯವಾಗುತ್ತದೆ. ಆದರೆ ಅಲ್ಲಿ ಮೂರೇ ವರ್ಷಗಳಲ್ಲಿ ಡ್ರಗ್ಸ್ ಮತ್ತಿತರ ಚಟಗಳಿಗೆ ಬಲಿಯಾಗಿ ಹುಡುಗ ಸಾಯುತ್ತಾನೆ. ಹೇಗೋ ಪ್ಯಾರಿಸ್ಸಿನಲ್ಲೇ ಏನಾದರೂ ಮಾಡಿಕೊಂಡು ತನ್ನ ಹೊಟ್ಟೆಪಾಡು ನೋಡಿಕೊಂಡಿರುತ್ತಾಳೆ ಎಂದುಕೊಂಡ ಎಲ್ಲರ ನಿರೀಕ್ಷೆಯನ್ನೂ ಹುಸಿಗೊಳಿಸಿ ಹುಡುಗಿ ಮತ್ತೆ ಇಸ್ತಾಂಬುಲ್‌ಗೇ ವಾಪಾಸ್ಸಾಗುತ್ತಾಳೆ. ಅನೇಕ ಗಂಡಸರ ಜೊತೆ ಅರೆಕಾಲಿಕ ಪ್ರೇಮ, ಸಂಬಂಧ ಇತ್ಯಾದಿ ನಿಭಾಯಿಸುತ್ತಲೇ ವಯಸ್ಸಾಗುತ್ತದೆ, ದೇಹ ಹಂಬಲಿಸಿ ಬರುವ ಹಣವುಳ್ಳವರ ಆಸಕ್ತಿ ಕ್ರಮೇಣ ಕರಗಿ ಈಕೆ ಒಂಟಿಯಾಗುತ್ತಾಳೆ. ಬಡತನ, ಅಸಮತೋಲನದ ಪ್ರೇಮ, ಅದರ ಕಷ್ಟನಷ್ಟಗಳು ನಂತರದ ವ್ಯಭಿಚಾರ ಕೊನೆಗೆ ಮತ್ತದೇ ಬಡತನ - ಹೀಗೆ ನಲುಗಿದ ಈಕೆ ಕೊನೆಗೊಮ್ಮೆ ರೋಡ್ ಆಕ್ಸಿಡೆಂಟ್‌ನಲ್ಲಿ ಸಾಯುತ್ತಾಳೆ. ಸತ್ತು ಕಷ್ಟಗಳಿಂದ ಮುಕ್ತಳಾಗುತ್ತಾಳೆ ಎನ್ನಬೇಕು. ಈ ನತದೃಷ್ಟ ಹೆಣ್ಣುಮಗಳ ಹೆಸರು ಬೇಲ್ಕಿ.

ಕೆಮಾಲ್‌ನ ಅಪ್ಪ ಈ ಕೆಮಾಲ್‍ನ ಎಂಗೇಜ್‌ಮೆಂಟ್ ದಿನ ಹತ್ತಿರ ಹತ್ತಿರ ಬರುತ್ತಿದ್ದಂತೆ ಏನೋ ಒಂದು ಬಗೆಯ ಅಸ್ವಾಸ್ಥ್ಯವನ್ನು ಅನುಭವಿಸುತ್ತ ಒಳಗೊಳಗೇ ನವೆಯುತ್ತಿರುವುದನ್ನು ಗಮನಿಸುವ ಹೆಂಡತಿ, ಕೆಮಾಲ್‌ನ ಅಮ್ಮ ತುಂಬ ಸೂಕ್ಷ್ಮವಾಗಿ ಅದರ ಕಾರಣಗಳನ್ನು ತಡಕಾಡುತ್ತಾಳೆ, ತನ್ನಲ್ಲೇ. ಕುಟುಂಬದ ನಿಕಟವರ್ತಿಯಾಗಿದ್ದ ಮೇಲಿನ ಹೆಂಗಸಿನ ನಾಟಕೀಯ ಬದುಕು, ಸಾವು ಯಾವುದೂ ಅದಕ್ಕೆಲ್ಲ ಕಾರಣವಿದ್ದಿರಲಾರದು ಎಂಬುದು ಆಕೆಯ ಊಹೆ.

ಎಂಗೇಜ್‌ಮೆಂಟ್ ದಿನ ಹತ್ತಿರವಾಗುತ್ತಿದ್ದಂತೆಯೇ ಈ ಕೆಮಾಲ್‌ಗೆ ಒಂದು ಉಮೇದಿ ಬಂದು ತನ್ನ ಪತ್ನಿಯಾಗಲಿರುವ ಸಿಬಿಲ್‌ಗೆ ಒಂದು ಜೆನ್ನಿಕಾಲನ್ ಹ್ಯಾಂಡ್‌ಬ್ಯಾಗ್ ಉಡುಗೊರೆ ನೀಡುವ ಉದ್ದೇಶದಿಂದ ಒಂದು ಅಂಗಡಿ ಹೊಕ್ಕರೆ ಅಲ್ಲಿ ತನ್ನ ಬಾಲ್ಯಸಖಿ, ಸಂಬಂಧಿ, ಮತ್ತೀಗ ಬ್ಯೂಟಿಕ್ವೀನ್ ಕಾಂಪಿಟೀಶನ್‌ಗಳಲ್ಲೆಲ್ಲ ಭಾಗವಹಿಸುತ್ತಾಳೆ, ಹುಡುಗರ ಸ್ನೇಹ ಮಾಡುತ್ತಾಳೆ ಎಂಬೆಲ್ಲ ಆಪಾದನೆಗಳಿಂದ ಎಲ್ಲ ಗಂಡಸರ ಕೌತುಕವಾಗಿಬಿಟ್ಟ ಚಂದದ ಹುಡುಗಿ, ಫುಸನ್ ಸೇಲ್ಸ್‌ಗರ್ಲ್ ಆಗಿರುವುದನ್ನು ಕಂಡು ಚಕಿತನಾಗುತ್ತಾನೆ. ಈ ಭೇಟಿ ವಿಧಿಲಿಖಿತವೋ, ಬಯಸಿದ್ದೋ ಅಂತೂ ಮತ್ತೆ ಮತ್ತೆ ನಡೆದು ಸಂಬಂಧ ಮುಂದುವರಿದು ದೇಹಸಂಬಂಧವೂ, ಪ್ರೇಮವೂ ಅರಿವಿಗೇ ಬರದ ಹಾಗೆ ಗಾಢವಾಗಿ, ಸಹಜವಾಗಿ ಬೆಳೆಯತೊಡಗುತ್ತದೆ. ಕೆಮಾಲ್‌ಗೆ ಮೊದಮೊದಲು ಫುಸನ್ ಯಾವುದೇ ಮಾನಸಿಕ ದ್ವಂದ್ವ ಉಂಟುಮಾಡದಿದ್ದರೂ ಕ್ರಮೇಣ ಅಂಥ ಸಾಧ್ಯತೆಯೊಂದರ ಬೀಜಗಳು ಇಲ್ಲಿಯೇ ಕಾಣಲು ಸಿಗುತ್ತವೆ. ಮೇಲೆ ಹೇಳಿದ ರೋಡ್ ಆಕ್ಸಿಡೆಂಟ್ ದಿನವೇ ಪ್ರೇಮ ಮಾಡುತ್ತ ಫುಸನ್‌ಳ ಒಂದು ಕಿವಿಯ ರಿಂಗ್ ನೆಲದ ನೀಲಿ ಕಾರ್ಪೆಟ್ ಮೇಲೆ ಬಿದ್ದು ಕಳೆದು ಹೋಗುತ್ತದೆ. ಮರುದಿನ ಅದರ ಬಗ್ಗೆ ಕೇಳುವ ಫುಸನ್ ಬಳಿ ಅದಿಲ್ಲಿದೆ ಎನ್ನುತ್ತ ಕಿಸೆಗೆ ಕೈ ಹಾಕುವ ಕೆಮಾಲ್ ಗಾಭರಿಯಾಗುತ್ತಾನೆ. ಅಂದರೆ ಅದು ಅವನ ಕಿಸೆಯಲ್ಲಿಲ್ಲ. ನಂತರ ನಿನ್ನೆ ಹಾಕಿದ ಕೋಟ್‌ನ ಜೇಬಿನಲ್ಲಿ ಅದಿರಬೇಕು, ತಾನದನ್ನು ನಿನ್ನೆಯೇ ಎತ್ತಿಟ್ಟಿದ್ದೆ ಎನ್ನುತ್ತಾನಾದರೂ ಅದು ಎಲ್ಲಿಯೂ ಪತ್ತೆಯಾಗುವುದೇ ಇಲ್ಲ. ಫುಸನ್‌ಗೋ ಅದು ಜೀವದ ಜೀವ. ಯಾವುದೋ ಕಾರಣಕ್ಕೆ ಅದನ್ನು ಕಳೆದುಕೊಳ್ಳಲು ಸಿದ್ಧಳಿಲ್ಲದ ಫುಸನ್ ಆ ಇಯರ್‌ರಿಂಗ್‌ಗಾಗಿ ಕೆಮಾಲ್‌ನನ್ನು ಮತ್ತೆ ಮತ್ತೆ ಪೀಡಿಸುತ್ತಾಳೆ, ಹೇಗಾದರೂ ಅದನ್ನು ಹುಡುಕಿ ತಾ ಎಂದು ದುಂಬಾಲು ಬೀಳುತ್ತಾಳೆ.

ಇಷ್ಟಿರುತ್ತ ಒಂದು ದಿನ ಕೆಮಾಲ್‌ನ ಅಪ್ಪ ತಾವಿಬ್ಬರು ಮಾತ್ರಾ ಒಂದು ದಿನ ಹೊರಗೆ ಊಟಕ್ಕೆ ಹೋಗೋಣ, ಮದುವೆಯಾಗಲಿರುವ ನಿನಗೆ ಕೆಲವೊಂದು ವಿಷಯಗಳನ್ನು ಹೇಳಬೇಕಾಗಿದೆ ಎಂದು ಹೊರಗೆ ಕರೆದೊಯ್ಯುತ್ತಾನೆ. ನಾನು ನಿಮಗೆ ನಿಜಕ್ಕೂ ಹೇಳಬೇಕೆಂದಿರುವ ವಿಷಯ ಈ ಅಧ್ಯಾಯದ್ದು. ಇದು ಕೆಮಾಲ್‌ನ ಅಪ್ಪನ ಕಥೆ.

ಈ ಮನುಷ್ಯ ತುಂಬ ಗಂಭೀರನೂ ಸಭ್ಯನೂ ಆದ, ಗೌರವಾನ್ವಿತ ವ್ಯಕ್ತಿ. ಯಶಸ್ವಿಯಾದ ವ್ಯವಹಾರವನ್ನು ಸ್ಥಾಪಿಸಿ, ಬೆಳೆಸಿ, ಈಗ ತನ್ನಿಬ್ಬರು ಗಂಡು ಮಕ್ಕಳ ಸುಪರ್ದಿಗೆ ತನ್ನ ಬಿಸಿನೆಸ್ ಸಾಮ್ರಾಜ್ಯವನ್ನು ವಹಿಸಿ ವಿಶ್ರಾಂತ ಜೀವನವನ್ನು ಕಳೆಯುತ್ತಿರುವ ಒಬ್ಬ ಗಣ್ಯ ವ್ಯಕ್ತಿ ಕೂಡ. ಈತ ಸುಮಾರು ನಲವತ್ತೇಳರ ಪ್ರಾಯದವನಿರುವಾಗ ತನಗಿಂತ ಇಪ್ಪತ್ತೇಳು ವರ್ಷ ಕಿರಿಯ ‘ಬ್ಯೂಟಿಫುಲ್’ ಹುಡುಗಿಯೊಬ್ಬಳಲ್ಲಿ ಅನುರಕ್ತನಾಗುತ್ತಾನೆ. ಕಚೇರಿಯಲ್ಲಿ ತನ್ನ ಕೈಕೆಳಗೆ ದುಡಿಯುತ್ತಿದ್ದ ಆಕೆಗೆ ಮನೆ ಮಾಡಿಕೊಟ್ಟು,ಕೆಲಸದಿಂದ ಬಿಡಿಸಿ, ಮದುವೆಯಾಗುವ ಯೋಜನೆಯುಳ್ಳವರ ಮಾದರಿಯಲ್ಲೇ ಸಂಬಂಧ ಇಟ್ಟುಕೊಂಡಿರುತ್ತಾರೆ. ಆದರೆ ಅದೇ ಆಗ ಉಚ್ಛ್ರಾಯಕ್ಕೆ ಬರುತ್ತಿರುವ ಕಂಪೆನಿಯೊಂದರ ಮಾಲೀಕನಾಗಿ, ಒಬ್ಬ ಅಮೆರಿಕೆಯಲ್ಲಿ ಕಲಿಯುತ್ತಿರುವ ಮತ್ತು ಇನ್ನೊಬ್ಬ ಆಗಲೇ ಮದುವೆಯಾಗಿ ವ್ಯವಹಾರ ನೋಡಿಕೊಳ್ಳುತ್ತಿರುವ ಇಬ್ಬರು ಮಕ್ಕಳಿರುತ್ತ ಬದುಕಿನ ನಡುಘಟ್ಟದಲ್ಲಿ ಯಾವ ಒಂದು ನಿರ್ಧಾರಕ್ಕೂ ಬರಲಾಗದೆ ತೊಳಲಾಡುವ ಈತ ಆ ವೇಳೆಗೆ ಯಾವ ಕಾರಣಕ್ಕೂ ಅವಳನ್ನು ಬಿಟ್ಟಿರಲಾರದ, ಕಳೆದುಕೊಳ್ಳಲಾರದ ಸ್ಥಿತಿಯಲ್ಲಿರುತ್ತಾನೆ. ಅಂಥ ಸಮಯದಲ್ಲಿ ಈ ಹುಡುಗಿ ಒಂದೋ ನೀನು ತನ್ನನ್ನು ಮದುವೆಯಾಗು, ಇಲ್ಲವೇ ತನ್ನನ್ನು ಬಿಟ್ಟುಬಿಡು. ತಾನಂತೂ ಮದುವೆಯ ನಿರ್ಧಾರಕ್ಕೆ ಬರಲೇ ಬೇಕಿದೆ ಎನ್ನತೊಡಗುತ್ತಾಳೆ. ಮನೆಯಲ್ಲಿ ಇಂಜಿನಿಯರ್ ಹುಡುಗ ಒಬ್ಬನನ್ನು ಗೊತ್ತುಮಾಡಿದ್ದಾರೆ, ಇನ್ನೂ ಇನ್ನೂ ಮದುವೆಗೆ ಸಬೂಬು ಹೇಳುತ್ತ ತಪ್ಪಿಸಿಕೊಳ್ಳಲಾರೆ, ನೀನು ಬೇಗನೆ ನಿರ್ಧಾರಕ್ಕೆ ಬಾ ಎಂದು ಗಡುವು ಕೊಟ್ಟರೂ ಈತನ ತೊಳಲಾಟ ಮುಂದುವರಿಯುತ್ತದೆ. ತನ್ನ ಗಾಢವಾದ ಪ್ರೀತಿ ಮತ್ತು ಆಕೆ ಎಲ್ಲಿಗೂ ಹೋಗಲಾರಳು ತನ್ನನ್ನು ಬಿಟ್ಟು ಎಂಬ ಆಳದ ಆಸೆ ಎರಡೂ ಸುಳ್ಳೆನ್ನುವಂತೆ ಆಕೆ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತಾಳೆ. ಮುಂದೆ ಅವಳ ಮದುವೆ ಕೂಡ ನಡೆದು ಹೋದ ಸುದ್ದಿ ತಲುಪುತ್ತದೆ. ಅವಳನ್ನು ಸಂಪರ್ಕಿಸಲು ಮಾಡಿದ ಎಲ್ಲ "ಸಭ್ಯ - ನಾಗರಿಕ" ಪ್ರಯತ್ನಗಳೂ ವ್ಯರ್ಥವಾಗುತ್ತವೆ. ಅವಳು ಈತ ಕೊಡಿಸಿದ ಮನೆಯನ್ನೂ ಮಾರಿ ಅದೃಶ್ಯಳಾಗಿರುತ್ತಾಳೆ. ಆದರೂ ಹುಡುಕಿ ತೆಗೆಯುವುದಕ್ಕೆ ಇಳಿದಿದ್ದೇ ಆದಲ್ಲಿ ತಾನು ಏನೇನು ಮಾತು ಕೇಳಬೇಕದೀತು ಎಂಬ ಅರಿವಿರುವುದರಿಂದ ಆ ಭಯದಿಂದಲೂ ತಾನು ಸುಮ್ಮನುಳಿಯುವುದು ಅನಿವಾರ್ಯವೇ ಆಗಿತ್ತು ಎನ್ನುತ್ತಾನೆ.

ನಾಲ್ಕು ವರ್ಷಗಳ ನಂತರ ಈತ ಧ್ವನಿ ಬದಲಿಸಿ ಆಕೆಯ ತಾಯಿಗೆ ಫೋನ್ ಮಾಡಿ ತನ್ನಾಕೆ ಮತ್ತು ನಿಮ್ಮ ಮಗಳು ಸ್ನೇಹಿತರು, ತನ್ನಾಕೆ ಈಗ ಆಸ್ಪತ್ರೆಯಲ್ಲಿದ್ದು ನಿಮ್ಮ ಮಗಳನ್ನು ಕಾಣಬೇಕೆಂದು ಹಂಬಲಿಸುತ್ತಿದ್ದಾಳೆ, ಆಕೆ ಸಿಗಬಹುದೇ ಎಂದು ವಿಚಾರಿಸಿದಾಗಲಷ್ಟೇ ಸತ್ಯ ತಿಳಿಯುತ್ತದೆ.

ಆಕೆಯ ಮದುವೆ, ಇಂಜಿನಿಯರ್ ಗಂಡ ಎಲ್ಲವೂ ಸುಳ್ಳು, ಕಟ್ಟುಕಥೆ. ಆಕೆ ಕ್ಯಾನ್ಸರ್‌ನಿಂದ ಎಂದೋ ಸತ್ತು ಹೋಗಿದ್ದಾಳೆ. ಇದು ಸತ್ಯ. "ನನ್ನ ಮಗಳೆ! ಅಯ್ಯೊ, ಅವಳೇ ಇನ್ನಿಲ್ಲವಾಗಿಬಿಟ್ಟಳಲ್ಲ!" ಎಂದು ಬಿಕ್ಕುವ ತಾಯಿಯ ಉತ್ತರವಷ್ಟೇ ಅವನಿಗೆ ಸಿಗುತ್ತದೆ.

ಆಕೆ ಒಬ್ಬ ಅದ್ಭುತ ಹುಡುಗಿಯಾಗಿದ್ದಳು, ತೀರ ಅಪರೂಪದ ಹುಡುಗಿ, ಜಾಣೆ, ಪ್ರಬುದ್ಧೆ, ಪ್ರೇಮಮಯಿ, ತನಗಾಗಿ ಏನನ್ನೂ ಬಯಸದ ತ್ಯಾಗಶೀಲೆ; ಆದರೆ ಅಂಥವಳನ್ನು ಅವಳು ಬದುಕಿದ್ದಾಗ ತಾನು ಹೇಗೆ ನೋಡಿಕೊಳ್ಳಬೇಕಿತ್ತೋ ಹಾಗೆ ನೋಡಿಕೊಳ್ಳದೇ ಹೋದೆ. ಯಾರೂ ಮಾಡಬಾರದ ತಪ್ಪದು. ನಾವು ಹೆಣ್ಣನ್ನು ಯಾವಾಗ, ಹೇಗೆ, ಗೌರವಿಸಿ ಚೆನ್ನಾಗಿ ನೋಡಿಕೋ ಬೇಕೋ ಹಾಗೆ ಮಾಡಲು ವಿಫಲರಾಗಬಾರದು, ಇದನ್ನು ನಿನ್ನ ಜೀವನದಲ್ಲಿ ಯಾವತ್ತೂ ಮರೆಯಬೇಡ ಎನ್ನುತ್ತಾನೆ.

ಇಷ್ಟು ಹೇಳುತ್ತ, ಅವಳಿದ್ದಾಳೆಂದೇ ತಿಳಿದು ಅವಳಿಗೇ ಕೊಡುವುದಕ್ಕೆಂದು ಕೊಂಡುಕೊಂಡಿದ್ದ ಒಂದು ಜೊತೆ ಅತ್ಯಂತ ಬೆಲೆಬಾಳುವ ಪರ್ಲ್ ಇಯರ್‌ರಿಂಗನ್ನು ಕೆಮಾಲ್‌ಗೆ ಕೊಟ್ಟು, ಇದಿನ್ನು ನನ್ನ ಬಳಿ ಇರುವುದೇ ಅಪಾಯ. ಈ ವಿಚಾರಗಳೆಲ್ಲ ನಿನ್ನ ತಾಯಿಗೂ ತಿಳಿದಿಲ್ಲ. ನೀನಿದನ್ನು ಸಿಬಿಲ್‌ಗೆ ಕೊಡು. ಅವಳಿದನ್ನು ಸದಾ ತೊಡಲಿ. ಆಗ ನಿನಗೆ ಸದಾ ನನ್ನ ನೆನಪೂ, ನನ್ನ ಹಿತವಚನದ ನೆನಪೂ ಆಗುತ್ತಿರುತ್ತದೆ. ಆಗ ನೀನು ನನ್ನಂತೆ ಸಿಬಿಲ್‌ಗೆ ಸಿಗಬೇಕಾದ ಸ್ಥಾನ, ಮಾನ, ಪ್ರೀತಿ, ಮಹತ್ವ ಇತ್ಯಾದಿಗಳಿಂದ ವಂಚನೆಯಾಗದ ಹಾಗೆ ನಡೆದುಕೊಳ್ಳುವುದು ಸಾಧ್ಯವಾಗುತ್ತದೆ ಎಂದೆಲ್ಲ ಹೇಳುತ್ತ ಹೋಗುತ್ತಾನೆ.

ಒಂದು ನಿಟ್ಟಿನಿಂದ ನೋಡಿದರೆ ಅತ್ಯಂತ ಸಮಂಜಸವಾಗಿ ಮತ್ತು ಇನ್ನೊಂದು ನಿಟ್ಟಿನಿಂದ ನೋಡಿದರೆ ಅತ್ಯಂತ ಹಾಸ್ಯಾಸ್ಪದವಾಗಿ ಕೆಮಾಲ್ ಈ ಇಯರ್ ರಿಂಗ್ಸ್‌ನ ಬಾಕ್ಸನ್ನು ಫುಸನ್‌ಗೆ ಉಡುಗೊರೆಯಾಗಿ ನೀಡುತ್ತಾನೆ. ಅದನ್ನು ಅಷ್ಟೇ ಜಾಗ್ರತೆಯಾಗಿ ತೆರೆದು ನೋಡುವ ಫುಸನ್ ಹೇಳುವ ಮೊದಲ ಮತ್ತು ಅದೇ ಕೊನೆಯದೆಂಬಂಥ ಮಾತು, " ಇದು ನನ್ನ ಇಯರ್ ರಿಂಗ್ಸ್ ಅಲ್ಲ, ಇದು ನನಗೆ ಬೇಡ!"

ಇದಿಷ್ಟೂ ತುಂಬ ಗಹನವಾಗಿದೆ. ಇಲ್ಲಿ ನಾನು ಬರೆದುಕೊಂಡ ಎಲ್ಲ ತುಂಡುಗಳೂ ಮುಖ್ಯವಾದುವೇ. ಇಲ್ಲಿ ಹೇಳದೇ ಇರುವ ಕೆಲವು ಅಂಶಗಳು ಇವೆ. ಬಹುಷಃ ಕೆಮಾಲ್‌ನ ತಾಯಿಗೆ ಸಂಬಂಧಿಸಿದ ವಿಚಾರಗಳು, ಇರಲಿ. ಅಷ್ಟಾಗಿಯೂ ಇದು ಸರಳವಾದ episode ಅಲ್ಲ.

ಇಲ್ಲಿ ಫುಸನ್ ಕೆಮಾಲನ ಬದ್ಧತೆ, ತನ್ನ ಮತ್ತು ಅವನ ಸಂಬಂಧದ ವ್ಯಾಖ್ಯೆ ಇತ್ಯಾದಿ ಬಯಸಿ ಮುಂದೇನು ಎಂಬ ಬಗ್ಗೆ ಕೆಮಾಲ್ ಬಾಯಿಂದ ಸ್ಪಷ್ಟವಾದ ಮಾತುಗಳನ್ನು ಕೇಳಲು ಬಯಸುತ್ತಾ ಇದ್ದಾಳೆ. ಅವಳಿಗೆ ಬೇಕಾಗಿರುವುದು ಮುತ್ತಿನ ಬೆಂಡೋಲೆಗಳಲ್ಲ, ಬದಲಿಗೆ ತನ್ನವೇ ಬೆಂಡೋಲೆಗಳನ್ನು, ಅವುಗಳ ಜೊತೆ ತನಗಿರುವ ಬೆಸುಗೆಯನ್ನು ಗೌರವಿಸಿ ಎಷ್ಟೇ ಕಷ್ಟವಾದರೂ ಅದನ್ನು ಅರಸಿ ತರಬಲ್ಲ ಗಂಡಿನ ಪ್ರೀತಿ ಬೇಕಾಗಿದೆ ಅವಳಿಗೆ. ಈ ಮೂರೂ ತುಂಡುಗಳಲ್ಲಿ ಹೆಣ್ಣು victimise ಆಗುತ್ತಿದ್ದಾಳೆ. ಸುಖಕ್ಕೆ ಬೇಕು, ಬದ್ಧತೆಗೆ ಬೇಡ. ಆದರೂ ಅದರ ಹೆಸರು ವ್ಯಭಿಚಾರವಲ್ಲ, ಪ್ರೇಮ.

ಬೇಲ್ಕಿಯ ಕಥೆ, ಕೆಮಾಲ್‌ನ ಅಪ್ಪನ ಕಥೆ, ಕೆಮಾಲ್ ಮತ್ತು ಫುಸನ್ ಕಥೆ ಮೂರರಲ್ಲೂ ಸಮಾನವಾದದ್ದೇನೋ ಇದೆ ಎಂಬುದರಾಚೆ ಇದು ಬದುಕಿನಲ್ಲಿ ನಾವು ಸತ್ಯ ಅಂದುಕೊಂಡಿದ್ದು, ಸತ್ಯವಲ್ಲದ್ದು ಮತ್ತು ಭ್ರಮೆ ಅಂದುಕೊಂಡಿದ್ದು ಮತ್ತು ಭ್ರಮೆಯಲ್ಲದ್ದು, ಸುಳ್ಳು ಮತ್ತು ಭ್ರಮೆಗಳು ಸತ್ಯ ಕೂಡ ಆಗಿರಬಹುದಾದ್ದು ಎಲ್ಲ ನಮ್ಮನ್ನು ದಿಗ್ಭ್ರಮೆಗೊಳಿಸುವಂತೆ ಕಾಣಿಸುತ್ತದೆ. ಬದುಕಿನಲ್ಲಿ ನಾವು ಬಹಳಷ್ಟು ಸಂಗತಿಗಳನ್ನು ಸುಮ್ಮನೇ ಭಾವಿಸಿಕೊಂಡಿರುತ್ತೇವೆ. ಅವು ನಿಜವೂ ಆಗಿರುವುದಿಲ್ಲ, ವಾಸ್ತವವೂ ಆಗಿರುವುದಿಲ್ಲ. ವಾಸ್ತವ ಮತ್ತು ಸತ್ಯ ಎಂದು ನಾವೇ ಸಮರ್ಥಿಸಿಕೊಂಡಿರುತ್ತೇವಷ್ಟೆ.

The Museum of Innocence ನ ಮೊದಲ ತೊಂಭತ್ತು ಪುಟಗಳ ಓದನ್ನಷ್ಟೇ ನಿಮ್ಮೊಂದಿಗೆ ನಾನಿಲ್ಲಿ ಹಂಚಿಕೊಂಡಿರುವುದು. ಐದುನೂರ ಮುವ್ವತ್ತು ಪುಟಗಳ ಈ ಕಾದಂಬರಿಯ ಬಗ್ಗೆ ಮತ್ತೆ ಬರೆಯುವುದಿದೆ.

2 comments:

Anonymous said...

ಬಹಳ ದಿನಗಳ ಮೆಲೆ ಮತ್ತೆ ಬರೆದಿದ್ದೀರಿ, ಒಳ್ಳೆಯದನ್ನೆ ಬರೆದಿದ್ದಿರಿ. ಧನ್ಯವಾದ.
ಸದಾ ಹೊಸ ಓದಿನ ನಿರೀಕ್ಷೆಯಲ್ಲಿ,
ಚೇತನಾ ತೀರ್ಥಹಳ್ಳಿ

ನರೇಂದ್ರ ಪೈ said...

ಆತ್ಮೀಯ ಚೇತನಾ,
ನಿಮ್ಮ ಕಾಮೆಂಟ್ ಮತ್ತು ಪ್ರೋತ್ಸಾಹಕ್ಕಾಗಿ ಋಣಿ. ಈ ಕಾದಂಬರಿ ಗಹನವೂ ವಿಶಾಲ ವ್ಯಾಪ್ತಿಯದ್ದೂ ಆಗಿದ್ದು ಬಹುಷಃ ಒಮ್ಮೆಗೇ ಗ್ರಹಿಕೆಯ ತೆಕ್ಕೆಗೆ ಸಿಗುವುದು ಕೊಂಚ ಕಷ್ಟವಿದೆ. ಇದನ್ನು ಬರೆಯಲು ಪಮುಕ್‌ಗೆ ಎಂಟು ಒಂಭತ್ತು ವರ್ಷಗಳು ತಗುಲಿದ್ದವು ಎನ್ನುವುದನ್ನು ಗಮನಿಸಿದರೆ ಈ ಬರವಣಿಗೆಗೆ ಆತ ಸಾಕಷ್ಟು ಶ್ರಮ, ಸಮಯ ಮತ್ತು ಬರವಣಿಗೆಯೇತರ ಯೋಚನೆಯನ್ನು ವ್ಯಯಿಸಿರುವುದು ಸ್ಪಷ್ಟ. ಸಾಧ್ಯವಾದಲ್ಲಿ ಈ ಕಾದಂಬರಿಯನ್ನು ಓದಿ, ಅದು ಬಹುಷಃ ನಮ್ಮೆಲ್ಲರ ಬದುಕನ್ನೂ ಅಷ್ಟಿಷ್ಟು ಒಳಗೊಂಡಿದ್ದೆ ಇರುತ್ತದೆ. ಪಮುಕ್ ಈ ಕಾರಣಕ್ಕಾಗಿಯೇ ಎಲ್ಲರಿಗೂ ಮುಖ್ಯ ಮತ್ತು ಆಪ್ತ ಕೂಡ ಆಗಿಬಿಡುತ್ತಾನೆ!