Wednesday, August 10, 2011

ಜೀವನದಲ್ಲಿ ಸಂತೋಷವಾಗಿರುವುದು ಮುಖ್ಯ....

ಒಂದು ನಿಟ್ಟಿನಿಂದ ನೋಡಿದರೆ ಪಮುಕ್‌ನ ಈ ಕಾದಂಬರಿ The Museum of Innocence ತೀವ್ರವಾದ ದರಿದ್ರ ಸಂತಾಪದ್ದು. ನಲವತ್ತು ಮೀರಿದ, ಒಂದು ಕಾಡುವ ಪ್ರೇಮ ಪ್ರಕರಣ ಬದುಕಿನಲ್ಲಿ ಉಳಿದು ಹೋದವರು ಇದನ್ನು ಓದದೇ ಇರುವುದೇ ಉಚಿತ ಎನಿಸುವಂಥದ್ದು! ಒಮ್ಮೊಮ್ಮೆ ಎಲ್ಲರೂ ಕೈ ಬಿಟ್ಟವನ ಸೋಗಿನಲ್ಲಿ ತೀರಾ ಒಂಟಿಯಾಗಿ ಬಿಡುತ್ತೇನೆ. ಅದರೆ ಅದೇನೂ ಲವ್ ಹರ್ಟ್ ಫೀಲ್ ಅಲ್ಲ. ಬದುಕಿನಲ್ಲಿ ಬಂದು ಹೋದ ಹತ್ತು ಹಲವು ಹೆಣ್ಣುಗಳು ಹೊರಟೇ ಹೋದ ಮೇಲೆ ಅವರಿಲ್ಲದೆ ಏಕಾಂಗಿಯಾದ ನನ್ನಲ್ಲಿ ಗತಿಗೋತ್ರವಿಲ್ಲದ ಹಾಗೆ ಉಳಿದು ಬಿಡುವ ಈ ಖಾಲಿತನದಲ್ಲಿ ಅನುಭವಿಸುವ ನೋವಲ್ಲ ಇದು. ಅದು ಯಾವುದೋ ಒಬ್ಬ ವ್ಯಕ್ತಿ ನನ್ನ ಜೊತೆಗಿಲ್ಲ, ಇನ್ನು ಇರುವುದು ಸಾಧ್ಯವೇ ಇಲ್ಲ ಎಂಬ ಭಾವ ಮೀಟುವ ನೋವು. ನಾನು ಅದರ ತೀವ್ರತೆಯ ಬಗ್ಗೆ ಹೇಳುತ್ತಿಲ್ಲ. ಬಹುಷಃ ಬದುಕಿನಲ್ಲಿ ಅತ್ಯಂತ ತೀವ್ರವಾದ ದರಿದ್ರ ಸಂತಾಪವೆಂದರೆ ಇದೇ. Absenceನ್ನು (ಗೈರನ್ನು) ಅನುಸಂಧಾನ ಮಾಡಿಕೊಂಡು ಸಹಿಸುವುದು, ನಿಶ್ಚಿತವಾಗಿ ಜೀವನದುದ್ದಕ್ಕೂ ಉಳಿದು ಬಿಡುವ ನೋವು ಇದು ಎಂದು ತಿಳಿದೇ ನಡೆಸುವ ಅನುಸಂಧಾನ. ಅಲ್ಲಿ ಇನ್ನೇನೂ ಆಸೆಯಿಲ್ಲ, ಇನ್ನೇನೂ ನಿರೀಕ್ಷೆಗಳಿಲ್ಲ. ಆದರೆ ಇಲ್ಲಿನದು ಅದಲ್ಲ. ಇದು ಏನಿದ್ದರೂ ಒಂಥರಾ ಪೋಸ್ಟ್ ಮಾರ್ಟೆಮ್. ಹಳೇಯ, ತಿಳಿದೇ ಇರುವ, ಮನಸ್ಸಿಗೆ ಅದಾಗಲೇ ಜೀರ್ಣವಾಗಿರುವ ಸ್ಥಿತಿಯ ನೆನವರಿಕೆ. ಇಲ್ಲೊಂದು ಸಮಾಧಾನವಿದೆ, ಅದನ್ನು ಹಾದು ಬಂದವನ ತಾಳ್ಮೆಯ ಧ್ವನಿಯಿದೆ. ಆದರೂ ನೋವು ನಿಟ್ಟುಸಿರಾಗಿ ಬದುಕಲ್ಪಟ್ಟ ದುರಂತ ಕೂಡ ಇಲ್ಲಿದೆ. ಅವನಿಗೆ ಎಲ್ಲ ಮುಗಿದ ಕತೆಯಿದಾದರೆ ನಮಗೆ ಅದನ್ನು ಹೊಸದಾಗಿ ಬದುಕುವ ಹಿಂಸೆ ಮತ್ತು ಆ ಅನುಭವವನ್ನು ನಮ್ಮದಾಗಿಸಿಕೊಳ್ಳುವ ಹುಚ್ಚಿನ ಸುಖ.

ಒಂದು ಕಡೆ ಮದುವೆ ನಿಶ್ಚಿತಾರ್ಥವಾಗಿರುವ ಹುಡುಗಿ. ಇನ್ನೊಂದು ಕಡೆ ಬಾಲ್ಯಸಖಿ, ಉತ್ಕಟ ಪ್ರೇಮದಿಂದ ತನ್ನನ್ನು ಮದುವೆಯಾಗಲಾರ ಎಂಬುದರ ಪ್ರಜ್ಞೆಯಿದ್ದೂ ತನ್ನನ್ನು ತಾನು ಅರ್ಪಿಸಿಕೊಂಡ ಚೆಲುವೆ. ಒಂದು ಕಡೆ ಸಭ್ಯ ನಾಗರಿಕ ಜಗತ್ತಿನ ಬದ್ಧತೆ, ಶಿಸ್ತು, ಮರ್ಯಾದೆಯ ಪ್ರಶ್ನೆ. ಇನ್ನೊಂದು ಕಡೆ ಎಂದೂ ಬಿಟ್ಟಿರಲಾರೆ ಇವಳನ್ನು ಎಂದು ಹಾತೊರೆದು ಸೆಳೆಯುತ್ತಿರುವ ಹೃದಯ! ಪ್ರೇಮಕ್ಕೆ ಬಿದ್ದವರೆಲ್ಲರೂ ಅದು ಸಿಗುವ ತನಕ ಒಂದು ಬಗೆಯ ತಹತಹದಲ್ಲಿರುತ್ತಾರೆ. ಅದು ಪ್ರೇಮ ಚಂದ್ರಮ ಕೈ ಗೆ ಸಿಗುವುದೇ ಎಂಬ ಅನಿಶ್ಚಿತತೆಯ ಹಪಹಪಿಕೆ. ಸಿಕ್ಕಿಯೇ ಬಿಟ್ಟರೆ ನೂರು ಹೊಸ ಬಗೆಯ ಚಿಂತೆ! ದಕ್ಕಿದವಳ ಮೇಲಿನ ಪ್ರೇಮ ಹೆಚ್ಚೋ ಕೈ ತಪ್ಪಿದವಳ ಮೇಲಿನ ಸೆಳೆತ ಹೆಚ್ಚೋ!

ಫುಸನ್ ಬೇಕು. ಹಠಕ್ಕೆ, ಚಟಕ್ಕೆ, ಈಗೋಗೆ, ಕೊನೆಗೆ ಪ್ರೇಮದ ಸಾಧನೆಗಾಗಿಯೂ ಅವಳು ಬೇಕು. ಬೇಕು ಅಷ್ಟೆ. ಸಿಗುತ್ತಿಲ್ಲ. ಅದಕ್ಕಾಗಿ ಅವಳು ಬೇಕೇ ಬೇಕು. ಹಾಗಾಗಿಯೇ ಈ `ಬೇಕು' ಇನ್ನಷ್ಟು ತೀವ್ರ. ಇದು ಪ್ರೇಮವೋ, ಪ್ರೇಮದ ಭ್ರಮೆಯೋ? ಅಥವಾ ಪ್ರೇಮವೇ ಒಂದು ಭ್ರಮೆಯೋ! ಪ್ರೇಮವೇ ಒಂದು ಭ್ರಮೆಯಿರಬಹುದೆಂಬ ಅರಿವು ಇಲ್ಲದ ಸ್ಥಿತಿಯಲ್ಲಿ ಮಾತ್ರಾ ಸಾಧ್ಯವಾಗುವ ಸಂಗತಿಗಳ ಕಾದಂಬರಿಯಿದು. ಪ್ರಜ್ಞೆ ಪ್ರಖರವಾಗಿರುವಲ್ಲಿ, ಭಾವ ಹಿಮ್ಮುಖವಾಗಿ ಬುದ್ಧಿ ಮಂಚೂಣಿಯಲ್ಲಿ ಕೆಲಸ ಮಾಡುತ್ತಿರುವಾಗ, ನಾನೆಂಬ ಅಭಿಮಾನ ಮುಖ್ಯವಾದಾಗ ಸಾಧ್ಯವಾಗದ ಪ್ರೇಮ ಮಾತ್ರ ಹುಚ್ಚು ಹೊಳೆಯಾಗಿ ಈ ರೀತಿ ಬೇರಾವುದರ ಎಗ್ಗೂ ಇಲ್ಲದೆ ಮುನ್ನುಗ್ಗಬಲ್ಲದು. ಆದರೆ ಇದಕ್ಕೂ ಒಂದು Timing ಎಂಬುದು ಇದೆ. ಅದು ಮುನ್ನುಗ್ಗುವಾಗಲೇ ಮುನ್ನುಗ್ಗ ಬೇಕಲ್ಲದೆ ಟ್ರೈನು ಹೊರಟು ಹೋದ ಮೇಲೆ ಸ್ಟೇಶನ್ನಿಗೆ ಬಂದಂತಾಗಬಾರದು! ಕೆಮಾಲ್ ಮಾಡುವ ತಪ್ಪು ಅದೆ.

ಕೆಮಾಲ್‌ ಕೂಡ ಇಲ್ಲಿ ಸಮಯದ ಬಗ್ಗೆ ಹೇಳುತ್ತಾನೆ. ಸಮಯ ಸಾಪೇಕ್ಷವಾದದ್ದು ಎಂಬುದು ನಿಜವಾದರೂ ಅರಿಸ್ಟಾಟಲನ ಒಂದು ತತ್ವವನ್ನು ಬದುಕಿನ ಸಂತಸದ ಘಳಿಗೆಗಳಿಗೆ ಅನ್ವಯಿಸುತ್ತ ಅವುಗಳನ್ನು ಚಿರಂತನವಾಗಿಸಬಹುದು ಹೇಗೆ ಎಂಬುದರ ವಿವರ ಇಲ್ಲಿದೆ. ಅದನ್ನು ಮುಂದೆ ವಿವರಿಸುತ್ತೇನೆ.

ಕೆಮಾಲ್ ಫುಸನ್‌ಗೆ ಉತ್ತರಿಸುವುದು ತಡವಾಗುತ್ತದೆ, ಇಲ್ಲಿ ಸಿಬಿಲ್‌ಗೆ ನಿಶ್ಚಿತಾರ್ಥ ಉಂಗುರ ತೊಡಿಸಿದಾಗಲೇ ಫುಸನ್ ಅನುಭವಿಸಿದ ಆಘಾತ ಬಹುಷಃ ಯಾರಿಗೂ ಗೊತ್ತಾಗುವುದಿಲ್ಲ. ಹಾಗೆ ನೋಡಿದರೆ ಫುಸನ್‌ಳ ಪಾತ್ರವೇ ಸ್ಕೆಚಿ. ಅವಳ ಬಗ್ಗೆ ನಮಗೆ ಏನೇನೂ ಗೊತ್ತಿಲ್ಲ ಎನ್ನಬೇಕು! ಕೆಮಾಲ್‌ಗಾದರೂ ಗೊತ್ತಿತ್ತೆ? ಹೌದು, ಪೂರ್ತಿಯಾಗಿ ಎನ್ನುತ್ತಾನವ. ಈ ಕೆಮಾಲ್‌ನ ಕತೆಯನ್ನು ಕೆಮಾಲ್‌ನ ಧ್ವನಿಯಲ್ಲೇ ಬರೆಯುವ ಪಮುಕ್‌ಗೂ ಫುಸನ್ ಅರ್ಥವಾಗಿದ್ದಳಂತೆ! ಅದನ್ನು ಕೆಮಾಲ್ ಖಾತ್ರಿ ಮಾಡಿಕೊಂಡೇ ಬೇರೊಬ್ಬ ತನ್ನ ಧ್ವನಿಯಲ್ಲಿ ಮಾತನಾಡುವುದಕ್ಕೆ, ಹಾಗೆ ತನ್ನ ಆತ್ಮಕಥೆಯನ್ನು ಹೇಳುವುದಕ್ಕೆ ಅನುಮತಿ ಕೊಡುತ್ತಾನೆ. ಹಾಗಾಗಿ ಇದನ್ನು ಕಾದಂಬರಿಯ ಒಂದು ಪಾತ್ರ ಅರ್ಹಾನ್ ಪಮುಕ್ ಬರೆದ ಕೆಮಾಲ್‌ನ ಆತ್ಮಕಥೆ, ಜೀವನ ಚರಿತ್ರೆಯಲ್ಲ.

ನಾವು ಯಾವುದನ್ನು ಮರೆಯಬೇಕು ಎಂದು ಬಯಸುತ್ತೇವೆಯೋ ಅದರ ಬಗ್ಗೆ ಮಾತನಾಡುವುದು, ಬರೆಯುವುದು ಇತ್ಯಾದಿ ಮಾಡಬಾರದು ಎಂಬುದು ನನ್ನ ಖಚಿತ ಅಭಿಪ್ರಾಯ. ಅದು ವ್ಯಕ್ತಿಗೆ ಸಂಬಂಧಿಸಿದ್ದರೆ ಆ ವ್ಯಕ್ತಿಯ ಹೆಸರನ್ನು ಕೂಡ avoid ಮಾಡಬೇಕು. ಆ ವ್ಯಕ್ತಿಯ ಬಗ್ಗೆ ಯೋಚಿಸದೇ ಇರಲು, ಆ ವ್ಯಕ್ತಿಯ ಬಗ್ಗೆ ಮಾತನಾಡದೇ ಇರುವುದು, ಬರೆಯದೇ ಇರುವುದು, ಜೊತೆಗೆ ಆ ವ್ಯಕ್ತಿಯ ನೆನಪು ತರುವ ಎಲ್ಲ ವಸ್ತುಗಳನ್ನೂ ಕಣ್ಣಿಗೆ ಬೀಳದಂತೆ ಮಾಡುವುದು ಮುಖ್ಯ. ಮನೆಯಲ್ಲಿ ಯಾರಾದರೂ ಸತ್ತರೆ ಮೊದಲು ಆ ವ್ಯಕ್ತಿಯ ಬಟ್ಟೆ, ಉಪಯೋಗಿಸುತ್ತಿದ್ದ ವಸ್ತುಗಳು ಎಲ್ಲವನ್ನೂ dispose ಮಾಡಿಬಿಡುವುದು ಒಳ್ಳೆಯದು. ಯಾಕೆಂದರೆ ನಾವೆಲ್ಲರೂ ಬದುಕಿರುವುದೇ ಸ್ಮೃತಿಗಳಲ್ಲಿ ಮತ್ತು ನೆನಪುಗಳಲ್ಲಿ. ದೈಹಿಕವಾಗಿ ನಾವು ಅಸ್ತಿತ್ವದಲ್ಲಿರುವುದು, ನಿಜವಾಗಿರುವುದು ಕೆಲವೇ ಕೆಲವು ಮಂದಿಗೆ. ಉಳಿದಂತೆ ಮೊಬೈಲ್‌ನಲ್ಲಿ ನಮ್ಮ ಧ್ವನಿ ಕೇಳಿ, ನಮ್ಮ ಈ ಮೇಲ್ ಇತ್ಯಾದಿ ಓದಿ ನಾವು ಇನ್ನೂ ಬದುಕಿದ್ದೇವೆಂದು ನಿಶ್ಚಿತವಾಗಿ ನಂಬಿರುವ ಮಂದಿಗೆಲ್ಲ ನಾವು ಬದುಕಿರುವುದು ಕೇವಲ ಅವರ ಸ್ಮೃತಿ ಮತ್ತು ನೆನಪಿನಲ್ಲಷ್ಟೇ. ಇಂಥ ಕೆಲವರು ಪರಸ್ಪರ ಒಮ್ಮೆಯೂ ನೋಡಿಲ್ಲದಿದ್ದರೂ ಅಚ್ಚರಿಯಿಲ್ಲ! ಹಾಗಾಗಿ ಸ್ಮೃತಿ ಮತ್ತು ನೆನಪುಗಳೇ ಪ್ರೀತಿಯ ಅಸ್ತಿತ್ವವನ್ನು ಕೊನೆಗೂ ದೃಢಪಡಿಸುವಂಥ ಸಂಗತಿಯೇ ಹೊರತು ದೇಹವಲ್ಲ, ಸಾನ್ನಿಧ್ಯವಲ್ಲ, ಸಾಂಗತ್ಯವಲ್ಲ, ಸಂಪರ್ಕ ಕೂಡ ಅಲ್ಲ! ಆದರೆ ಕೆಮಾಲ್‍ಗೆ ಮರೆಯುವುದು ಬೇಕಿಲ್ಲ. ಮರೆಯದೇ ಇರಲು ಏನೆಲ್ಲ ಮಾಡಬಹುದೋ ಅದನ್ನೇ ಅವನು ಮಾಡುತ್ತ ಹೋಗುತ್ತಾನೆ ಎನ್ನಲು ಇದನ್ನೆಲ್ಲ ಹೇಳಿದೆ. ಕೆಮಾಲ್‌ಗೆ ಇರುವುದು ಮರೆತೇನೆಂಬ ಭೀತಿಯಲ್ಲ, ನೆನಪುಗಳಲ್ಲಿ ಮರೆಯಬಾರದ ವ್ಯಕ್ತಿಯನ್ನು ಜೀವಂತಗೊಳಿಸಿಕೊಳ್ಳುವ ಪ್ರಯೋಗ ಅವನದು. ಯಾಕೆಂದರೆ ಅವನ ಬದುಕೇ ಆ ವ್ಯಕ್ತಿಯ ಮೇಲೆ ನಿಂತಿದೆ!

ಒಂದು ಕಡೆ ಫುಸನ್ ಹೇಳುತ್ತಾಳೆ, "ನಾವು ತುಂಬ ಪ್ರೀತಿಸುವ ವ್ಯಕ್ತಿಯನ್ನು ಕಳೆದುಕೊಂಡಾಗ, ಅವರು ಬದುಕಿರಲಿ, ಸತ್ತಿರಲಿ, ನಾವು ಅವರ ಆತ್ಮವನ್ನು Disturb ಮಾಡಬಾರದು. ಬದಲಿಗೆ, ಅವರನ್ನು ನೆನಪಿಸುವ ಯಾವುದಾದರೂ ವಸ್ತುವಿನಲ್ಲಿ ನಮ್ಮ ಶಾಂತಿಯನ್ನು ಕಂಡುಕೊಳ್ಳಬೇಕು, ಅದು ಯಾವುದೂ ಆದೀತು, ಒಂದು ಇಯರ್ ರಿಂಗ್ ಕೂಡ" !

ಸ್ಮೃತಿ ಮತ್ತು ನೆನಪುಗಳು ಸ್ವಲ್ಪ ಭಿನ್ನವಾದ ಸಂಗತಿಗಳು. ಸ್ಮೃತಿ ಹಿಂದಿನ ಜನ್ಮದ್ದೂ ಆಗಿರಬಹುದು. ಬೇಕಿದ್ದರೆ ಜೀನ್ಸ್ ಮೂಲಕ ಜನ್ಮತಃ ಬಂದಿರುವ ಮನಸ್ಸಿನ ಭಿತ್ತಿಯ ಮೇಲಿರುವ, ಕನಸು, ಕಲ್ಪನೆ, ಭ್ರಮೆಗಳಲ್ಲಿ ಅಕಸ್ಮಾತ್ತಾಗಿ ಕಂಡು ಬರುವ, ನಮಗೇ ಗೊತ್ತಿಲ್ಲದ, ಬಾಲ್ಯದಾರಭ್ಯ ಎಂದೂ ಕಂಡಿಲ್ಲದ, ಅನುಭವಿಸಿಲ್ಲದ, ಅರಿವಿಗೆ ಬಂದಿಲ್ಲದ ನೆನಪುಗಳು ಸ್ಮೃತಿ. ಇವು ತಿಳಿದೋ ತಿಳಿಯದೆಯೋ ನಮ್ಮನ್ನು ಪ್ರಭಾವಿಸುತ್ತ ಇರುತ್ತವೆ. ನೆನಪುಗಳು ಹೆಚ್ಚುಹೆಚ್ಚು ಈ ಬದುಕಿಗೆ, ಪಂಚೇಂದ್ರಿಯಗಳ ಅನುಭವಕ್ಕೆ, ಅರಿವಿಗೆ ನಿಲುಕಿರುವ ಸಂಗತಿಗಳು. ವ್ಯಕ್ತಿ ಪ್ರಜ್ಞೆಯಲ್ಲಿ ಇವೆರಡೂ ಇದ್ದೇ ಇರುತ್ತವೆ. ಇಲ್ಲವಾದಲ್ಲಿ ನಮಗೆ ಗೊತ್ತೇ ಇಲ್ಲದ ಕನಸುಗಳೆಲ್ಲ ಎಲ್ಲಿಂದಲೋ ಉದುರಿಬಿದ್ದಂತೆ ಕಾಣಿಸಿಕೊಳ್ಳುವ ಮನೋವಿಕಾರವನ್ನು ಗಾಭರಿಯಿಂದಲೇ ಕಾಣಬೇಕಾಗುತ್ತದೆ.

ಪಮುಕ್ ತನಗೆ ಬೇಕೇ ಬೇಕಾದ, ತಾನು ಬಿಟ್ಟಿರಲು ಸಾಧ್ಯವೇ ಇಲ್ಲದ ಫುಸನ್‌ಳನ್ನು ಕಟ್ಟಿಕೊಳ್ಳುವುದು ಸ್ಮೃತಿ ಮತ್ತು ನೆನಪುಗಳಲ್ಲಿ. ಅದಕ್ಕಾಗಿ ಅವನು ಅವಳು ಬಳಸಿದ ಹೇರ್ ಪಿನ್ನು, ಅವಳು ಮುಟ್ಟಿದ ಸ್ಕೇಲು, ಬಾಗಿಲಿನ ಹ್ಯಾಂಡಲು, ಒಮ್ಮೆ ಅವಳ ತುಟಿಗಳ ನಡುವೆ ಕೂತು ನಲುಗಿದ ಸಿಗರೇಟಿನ ಫಿಲ್ಟರು, ಡೈನಿಂಗ್ ಟೇಬಲಿನ ಮೇಲಿಟ್ಟ ಸಾಲ್ಟ್ ಶೇಕರ್ ಎಲ್ಲವನ್ನೂ ಸಂಗ್ರಹಿಸುತ್ತಾನೆ, ಒಂಥರಾ ಕದಿಯುವುದರ ಮೂಲಕ! ಕೊನೆಗೆ ಇದು ಎಲ್ಲಿಯ ತನಕ ಹೋಗುತ್ತದೆಂದರೆ, ಪ್ರತಿಯೊಬ್ಬರೂ ಒಮ್ಮೆಯಾದರೂ ತಳ್ಳಿ ತೆಗೆದಿರಬಹುದಾದ ಬಾಗಿಲಿನ ಹ್ಯಾಂಡಲ್ ಇರುತ್ತವಲ್ಲ, ಉದಾಹರಣೆಗೆ ನಿಮ್ಮ ಕಚೇರಿಯ ಟಾಯ್ಲೆಟ್ ಬಾಗಿಲಿನ ಹ್ಯಾಂಡಲ್, ನಿಮ್ಮ ಕಾಲೇಜಿನ ಲೈಬ್ರರಿಯ ಬಾಗಿಲಿನ ಹ್ಯಾಂಡಲ್, ನೀವು ನಿತ್ಯ ಪ್ರಯಾಣಿಸುವ ಬಸ್ಸಿನ ಫುಟ್‌ಬೋರ್ಡಿನ ಸೈಡ್ ರಾಡ್, ಈ ತರ, ಅದನ್ನು ನಿಮ್ಮ ಪ್ರೀತಿಯ ವ್ಯಕ್ತಿ ಕೂಡಾ ಒಂದಲ್ಲಾ ಒಂದು ಬಾರಿ ಕೈಯಲ್ಲಿ ಹಿಡಿದಿರಬಹುದಲ್ಲವೇ ಎಂಬ ಲೆಕ್ಕಾಚಾರ ಕೂಡ ಕೆಲಸ ಮಾಡುತ್ತದೆ! ಒಟ್ಟಾರೆಯಾಗಿ ಒಬ್ಬ ಹತಾಶ ಪ್ರೇಮಿಯ ದರಿದ್ರ ಸ್ಥಿತಿಯನ್ನು ಕಾದಂಬರಿ ಅದ್ಭುತವಾಗಿಯೇ ತೆರೆದು ತೋರಿಸುತ್ತಿದೆ. ಈ ಪ್ರೇಮಿಯ ಆಳದ ನೋವನ್ನು ಪ್ರೇಮಿಗಳಾದವರೆಲ್ಲರೂ ಅನುಭವಿಸಿಯೇ ಇರುತ್ತಾರೆ, ಒಂದಲ್ಲಾ ಒಂದು ಬಗೆಯಲ್ಲಿ. ಇಷ್ಟು ತೀವ್ರವಾಗಿ ಅದರ ಅಭಿವ್ಯಕ್ತಿಯನ್ನು ಎಲ್ಲ ಪ್ರೇಮಿಗಳೂ ಮಾಡಿರಲಿಕ್ಕಿಲ್ಲ ಅಷ್ಟೆ. ನಮ್ಮನ್ನು ಜನ ಹುಚ್ಚ ಎಂದು ಗುರುತಿಸುವುದು, ನಾವು ಹುಚ್ಚರೆಂದು ನಮಗೇ ತಿಳಿದಿದ್ದರೂ, ನಮಗೆ ಅಷ್ಟೇನೂ ಇಷ್ಟವಾಗುವುದಿಲ್ಲ. ಸಮಾಜ ನಮ್ಮನ್ನು ಒಪ್ಪಿಕೊಳ್ಳುವುದು ನಮಗೆ ಬಹಳ ಮುಖ್ಯವಾಗಿದೆ. ಅಂಥ ಮಿತಿಯೊಳಗಿನ ಹುಚ್ಚೇ ಇಲ್ಲಿನ ಕೆಮಾಲ್‌ದು ಕೂಡ. ಅವನಿಗೂ ತನ್ನದು ಹೊರಜಗತ್ತಿಗೆ ಹೇಗೆ ಕಾಣಿಸಬಹುದು ಎಂಬುದರ ಅರಿವಿದೆ. ಆದರೆ ಬೋದಿಲೇರ್ ಕೂಡ ಹೇಳಿದ್ದಾನಲ್ಲ, "ಪ್ರೇಮದಲ್ಲಿ ಒಂದು ಬಗೆಯ ಹಾಸ್ಯಾಸ್ಪದ ಗುಣ ಇದೆಯಲ್ಲವೇ? ಅದರಲ್ಲೂ ಪ್ರೇಮದಿಂದ ಹೊರಗಿರುವವರ ದೃಷ್ಟಿಯಲ್ಲಿ?" ಇಡೀ ಕಾದಂಬರಿಯನ್ನು ಓದುವಾಗ ಆಗಾಗ ಬೋದಿಲೇರ್ ಮತ್ತು ಆತನ ಪ್ರೇಯಸಿ ಜೀನ್ ದುವಲ್ ಕೂಡ ನೆನಪಾಗುತ್ತಿದ್ದರೆ ತಪ್ಪೇನಿಲ್ಲ, ಕೆಮಾಲ್‌ಗೆ ಅದರಿಂದ ನೋವಾಗುವುದಾದರೂ...

1975 ರಿಂದ ಸುಮಾರು 2007ರ ತನಕ ಚಾಚಿಕೊಂಡಿರುವ, ಕೆಲವೊಮ್ಮೆ ಬಾಲ್ಯದ ನೆನಪುಗಳಲ್ಲಿ 1969ಕ್ಕೂ ಸರಿಯುವ ಈ ಕಥಾನಕ ಪ್ರೇಮ, ನೆನಪು, ನಿರೀಕ್ಷೆ ಮತ್ತು ಅಶಾಂತ-ಅತೃಪ್ತ ಮನಸ್ಸಿನ ಹಪಹಪಿಕೆಗಳಲ್ಲಿ ಮುಳುಗೇಳುವ ವ್ಯಸನಿಯ ಇತಿಹಾಸವಾಗುವುದರ ಜೊತೆಜೊತೆಗೇ ಇಸ್ತಾಂಬುಲ್‌ನ ರಸ್ತೆಗಳು, ಸೇತುವೆಗಳು, ಗುಡ್ಡ ಬೆಟ್ಟಗಳು, ಚೌಕ-ಸರ್ಕಲ್ಲುಗಳು, ಜನಪದ - ಧಾರ್ಮಿಕ ಆಚರಣೆಗಳು, ಯುರೋಪಿಯನ್ ಪ್ರಭಾವವನ್ನು ಪ್ರದರ್ಶಿಸಲು ಮಂದಿ ಪಡುತ್ತಿರುವ ಬವಣೆಗಳು, ಅಮೆರಿಕನ್ ಆಗುವ ಹಂಬಲ ಜನಸಾಮಾನ್ಯರಲ್ಲಿ ಕುಡಿಯೊಡೆದು ಕ್ರಮೇಣ ಜಾಗತೀಕರಣಕ್ಕೆ ಸುಲಭವಶವಾಗುತ್ತಿರುವುದರ ಚಿಹ್ನೆಗಳು, ಇವೆಲ್ಲದರ ನಡುವೆಯೇ ದೇಶೀ ಆಗಿ ಉಳಿಯುವ ಕೆಲವರ ಪ್ರಯತ್ನ, ಹಂಬಲಗಳು, ಎರಡರ ಗೊಂದಲದ ನಡುವೆ ಹಾಸ್ಯಾಸ್ಪದರಾಗುತ್ತಿರುವ ಎಡಬಿಡಂಗಿಗಳು ಎಲ್ಲರನ್ನೂ, ಎಲ್ಲವನ್ನೂ ತನ್ನ ಪುಟಗಳಲ್ಲಿ ಗಮನಿಸುತ್ತ, ದಾಖಲಿಸುತ್ತ ಇದು ಬರೇ ಪ್ರೇಮ ಪ್ರಸಂಗವಲ್ಲ, ಒಂದು ಜಾಗತಿಕ ಪ್ರದೇಶದ ಚರಿತ್ರೆ ಕೂಡಾ ಹೌದು ಎನ್ನುವುದನ್ನು ಸ್ಫುಟಗೊಳಿಸುತ್ತ ಹೋಗುತ್ತದೆ. ಈ ಕೃತಿಯ ಬಗ್ಗೆ ಬಂದಿರುವ ಹೆಚ್ಚಿನ ವಿಮರ್ಶೆಗಳು ಕೂಡಾ ಕೆಮಾಲ್ - ಫುಸನ್ ಪ್ರೇಮಪ್ರಕರಣವನ್ನು ಬದಿಗೆ ಸರಿಸಿ ಈ ದಾಖಲಾತಿಯೇ ಇಡೀ ಕೃತಿಯ ತಿರುಳು ಎಂಬಂತೆ ಬಿಂಬಿಸಿವೆ. The Museum of Innocence ನ ನಿಜವಾದ ಮ್ಯೂಸಿಯಂ ಕೇವಲ ಫುಸನ್‌ನ ನೆನಪುಗಳನ್ನು ಮತ್ತು ತನ್ಮೂಲಕ ಇವರಿಬ್ಬರ ಪ್ರೇಮವನ್ನು ಅಮರಗೊಳಿಸುತ್ತಿಲ್ಲ. ಅದು ಕೇವಲ ದೇಶೀ ಸಂಗ್ರಹ ಕೂಡ ಅಲ್ಲ. ಅದು ಇಲ್ಲಿನ ಕೇಂದ್ರ ಪ್ರಜ್ಞೆಯಾಗಿರುವ Innocence (ಪ್ರಜ್ಞೆ ಮತ್ತು innocence!) ನ್ನು ಕುರಿತಿದ್ದಾಗಿದೆ.

ಸಮಕಾಲೀನ ಜಾಗತಿಕ ವಿದ್ಯಮಾನಗಳನ್ನು ಕಾದಂಬರಿ ತನ್ನಲ್ಲಿ ಅಡಕ ಮಾಡಿಕೊಂಡ ಬಗ್ಗೆ ಇಲ್ಲಿಯೇ ಸಂಕ್ಷಿಪ್ತವಾಗಿ ಗಮನಿಸಬಹುದು. ಈ ತರದ ವಿಭಿನ್ನ ಆಯಾಮವನ್ನು ತೆರೆದು ತೋರಿಸುವ ಮೂರು ವಿದ್ಯಮಾನಗಳನ್ನು ಕಾದಂಬರಿ ಸಾಕಷ್ಟು ವಿವರವಾಗಿ ಮತ್ತು ಸಹಜವಾಗಿಯೇ ತನ್ನ ಒಡಲಿನಲ್ಲಿ ಒಳಗೊಂಡು ಮೈತಾಳಿದೆ. ಇದೆಲ್ಲ ಸಾಗುವಾಗ ಇಸ್ತಾಂಬುಲ್‌ನ ರಾಜಕೀಯ ಆಂತರಿಕವಾಗಿ ಕುಲಗೆಟ್ಟಿತ್ತು, ಅತ್ತ ಎಡಪಂಥೀಯರೂ ಇತ್ತ ಬಲಪಂಥೀಯರೂ ಉಂಟುಮಾಡುತ್ತಿದ್ದ ಕ್ಷೋಭೆ ಒಂಥರಾ ಯುದ್ಧದ ವಾತಾವರಣವನ್ನು ನಿರ್ಮಿಸಿತ್ತು ಎನ್ನುವುದನ್ನು ಮರೆಯಬಾರದು. ಹಾಗೆಯೇ ಭ್ರಷ್ಟಾಚಾರ ಮತ್ತು ಲಂಚಗುಳಿತನ ಯಾವ ಮಟ್ಟಕ್ಕೆ ಮುಟ್ಟಿತ್ತೆಂಬುದರ ಚಿತ್ರ ಎಂಗೇಜ್‌ಮೆಂಟ್‌ ದಿನಕ್ಕೆ ಬೇಕಾಗುವ ವಿದೇಶೀ ಮದ್ಯವನ್ನು ಪಡೆಯುವ ವಿಭಿನ್ನ ಮಾರ್ಗಗಳ ಮಾಹಿತಿಯಲ್ಲಿಯೂ, ಫುಸನ್‌ಳ ಡ್ರೈವಿಂಗ್ ಲೈಸೆನ್ಸ್ ಮಾಡಿಸುವ ಸಂದರ್ಭದಲ್ಲೂ, ಪಾಸ್‌ಪೋರ್ಟ್ - ವೀಸಾ ಪಡೆಯುವ ಹಂತದ ವಿವರಗಳಲ್ಲೂ ಸಿಗುತ್ತದೆ. ಇವೆಲ್ಲ ಅಲ್ಲದೆ ಮೊದಲಿಗೆ ಮುಖ್ಯವಾಗುವುದು ಇಸ್ತಾಂಬುಲ್‍ನ ಸಿನಿಮಾ ಜಗತ್ತು. ಪ್ರೇಕ್ಷಕನ ಕಡೆಯಿಂದ, ಅವನ ಟೇಸ್ಟ್, ಅವನ ಯುರೋಪಿಯನ್ ಟೇಸ್ಟ್ ಮತ್ತು ದೇಶೀ ಟೇಸ್ಟ್‌ಗಳ ನಡುವೆಯಿರುವ ಕಂದರ, ಈ ಪ್ರೇಕ್ಷಕನ ವಿಚಿತ್ರ ಬಿಗುಮಾನ ಮತ್ತು ತೋರಿಕೆಯ ಚಟಗಳು ಇಲ್ಲಿ ಸೂಕ್ಷ್ಮವಾಗಿ ಕಾಣಲು ಸಿಗುತ್ತವೆ. ಆನಂತರ ನಟರು, ಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರಾದಿಯಾಗಿ ಬರಹಗಾರರ ತೆವಲು, ಆಸೆ, ಅಪೇಕ್ಷೆಗಳು ಹರಿಯುತ್ತಿರುವ ನಿಟ್ಟುಗಳು ಕೂಡಾ ಒಂದು ಬಗೆಯ ಆಂತರಿಕ ತಲ್ಲಣವನ್ನೇ ಸೂಚಿಸುವಂತಿವೆ. ಹಣ, ಕೀರ್ತಿ, ಯಶಸ್ಸುಗಳಾಚೆ ಅವರ ಮನೋಭೂಮಿಕೆ. ಚಿತ್ರ ತಯಾರಿ ನಿಂತಾಗ ತೆರೆದುಕೊಳ್ಳುವ ಅಡ್ಡಕಸುಬಿ ಹಾದಿಗಳು, ಹೆಣ್ಣು ನಟಿಯಾಗಿ ಮತ್ತು ಬೆಲೆವೆಣ್ಣಾಗಿ ಏನಾಗುತ್ತಾಳಿಲ್ಲಿ ಎಂಬಂಥ ಆತಂಕಗಳು, ಬ್ಲೂಫಿಲಂ ತಯಾರಿಯಲ್ಲೂ ಯುರೋಪನ್ನು ತನ್ನದೇ ಆದ ರೀತಿಯಲ್ಲಿ ಅನುಕರಿಸುವ ಹಾಸ್ಯಾಸ್ಪದ ಮಾದರಿ - ಹೀಗೆ ಚಿತ್ರರಂಗದ ಒಳಹೊರಗನ್ನು ತೋರಿಸುವ ಒಂದು ಒಳನೋಟ ಏನಿದೆ ಅದು ಸೂಕ್ಷ್ಮವಾಗಿ ಸೂಚಿಸುವುದು ತನ್ನತನವನ್ನು ಕಳೆದುಕೊಂಡು ಅನ್ಯವಾಗುವುದರಲ್ಲಿಯೇ ಇರುವ ಆಸಕ್ತಿ, ಅನಾರೋಗ್ಯಕರ ಪೈಪೋಟಿ ಮತ್ತು ಒಂದು ಜನಾಂಗ ತಿಳಿದೂ ತಿಳಿದೂ ಆವಾಹಿಸಿಕೊಳ್ಳುತ್ತಿರುವ ಸಾಂಸ್ಕೃತಿಕ ವಿಸ್ಮೃತಿಯನ್ನು. ಕರ್ನಾಟಕದಂಥ ಒಂದು ಪುಟ್ಟ ರಾಜ್ಯದ ಸಿನಿಮಾ ವಿದ್ಯಮಾನಗಳನ್ನು ನಾವೆಲ್ಲ ಬಹಳಷ್ಟು ಮಟ್ಟಿಗೆ ಪೂರ್ತಿಯಾಗಿ ಎಂಬಂತೆ ಅರಿತುಕೊಂಡೇ ಇರುವುದರಿಂದ ಈ ಯಾವತ್ತೂ ವಿವರಗಳು ನಮಗೆಲ್ಲ ಏನೂ ಹೊಸದು ಅನಿಸದೇ ಹೋದರೂ ಇಸ್ತಾಂಬುಲ್‌ನ ಯುರೋಪಿಯನ್ ಆಗಿಬಿಡುವ ಗೀಳು ಮತ್ತು ಇಡೀ ಜಗತ್ತನ್ನು ಆವರಿಸಿಕೊಳ್ಳಲು ಮುನ್ನುಗ್ಗುತ್ತಿದ್ದ ಜಾಗತೀಕರಣದ ಹಿನ್ನೆಲೆ ಈ ವಿವರಗಳಿಗೆ ಕಾದಂಬರಿಯ ಚೌಕಟ್ಟಿನಲ್ಲಿ ಮಹತ್ವ ನೀಡಿದೆ. ಅದೇ ರೀತಿ ದೇಶೀಯವಾಗಿ ತಯಾರಾದ ಮೊದಲ ಸಾಫ್ಟ್ ಡ್ರಿಂಕ್ಸ್‌ನ ಜಾಹೀರಾತಿಗೆ ಬಳಕೆಯಾಗುವ ವಿದೇಶೀ ಮಾಡೆಲ್ ಮತ್ತು ಆ ಸಾಫ್ಟ್ ಡ್ರಿಂಕ್ಸ್‌ಗೆ ಮುಂದೆ ಪೆಪ್ಸಿ-ಕೋಕ್‌ಗಳು ಒಡ್ಡುವ ಸವಾಲುಗಳು - ಈ ಕುರಿತೆಲ್ಲ ವಿವರಗಳು. ಕೊನೆಯದಾಗಿ ವಿಪರೀತ ಏರಿಕೆಯಾಗುವ ಬಡ್ದಿದರದ ಆಮಿಷಕ್ಕೆ ಬಿದ್ದು ಎಲ್ಲವನ್ನೂ ಕಳೆದುಕೊಂಡು ದಿವಾಳಿಯಾಗುವ ಜನಸಾಮಾನ್ಯರ ಒಂದು ಆರ್ಥಿಕ ಕುಸಿತದ ಚಿತ್ರ ಕೂಡಾ ಇಲ್ಲಿನ `ಕಾದಂಬರಿ ಪ್ರಪಂಚ' ಹಲವು ಆಯಾಮಗಳಿಂದ ಪರಿಪುಷ್ಟವಾಗುವಲ್ಲಿ ಮತ್ತು ಕಾದಂಬರಿ ಕೇವಲ ತೆಳುವಾದ ಪ್ರೇಮದ ಸಂಕಥನವಾಗುವುದರಿಂದ ಅದನ್ನು ಬಚಾವು ಮಾಡುವಲ್ಲಿಯೂ ಬಹುಮುಖ್ಯ ಪಾತ್ರವಹಿಸಿದೆ.


ಮತ್ತೆ ಇಲ್ಲಿ ಫುಸನ್ ಹೇಳಿದ ಮಾತುಗಳಿಂದಲೇ ಕೆಲವನ್ನು ಸ್ಪಷ್ಟಗೊಳಿಸುವುದು ಒಳ್ಳೆಯದು. ಮೊದಲೇ ಹೇಳಿದಂತೆ ಕೆಮಾಲ್ ತಾನು ಮದುವೆಯಾಗಲಿರುವ ಹುಡುಗಿಗೆ ಉಡುಗೊರೆ ನೀಡಲು ಎಂದು ಕೊಂಡುಕೊಂಡ ಜೆನ್ನಿಕಾಲನ್ ಬ್ಯಾಗ್ ಒರಿಜಿನಲ್ ಜೆನ್ನಿಕಾಲನ್ ಅಲ್ಲ, ಅದು ಒಂದು ಡ್ಯೂಪ್ಲಿಕೇಟ್ ಎಂಬುದನ್ನು ಥಟ್ಟನೇ ಗುರುತಿಸಿ ಬಿಡುವ ಸಿಬಿಲ್ ಅದನ್ನು ಹಿಂದಿರುಗಿಸಿ ಹಣ ಪಡೆಯುವಂತೆ ಕೆಮಾಲ್‌ಗೆ ಹೇಳುತ್ತಾಳೆ. ಬ್ಯಾಗ್ ಕೊಂಡುಕೊಂಡಲ್ಲಿಗೆ ಮತ್ತೆ ಕೆಮಾಲ್ ಹೋಗುವುದು, ಫುಸನ್‌ಳನ್ನು ಅಲ್ಲಿ ಮತ್ತೆ ಭೇಟಿಯಾಗುವುದು ಈ ಬ್ಯಾಗಿನಿಂದಾಗಿಯೇ. ಆದರೆ ಫುಸನ್ ಮುಂದೆ ಸಿಬಿಲ್‌ಗೆ ಒಂದು ಯುರೋಪಿಯನ್ ವಸ್ತು ಒರಿಜಿನಲ್ ಆಗಿರುವುದು ಮುಖ್ಯವಾಗುವುದು, ಅದರ ಕ್ವಾಲಿಟಿ, ಬಾಳಿಕೆ ಇತ್ಯಾದಿಗಳ ಹೊರತಾಗಿಯೂ, ಯಾಕಾಗಿ ಎಂದರೆ, ಯಾರಾದರೂ ತನ್ನ ಬಳಿ ಇರುವ ಬ್ಯಾಗ್ ಒರಿಜಿನಲ್ ಅಲ್ಲ ಎಂಬುದನ್ನು ಕಂಡುಹಿಡಿದು ಬಿಟ್ಟರೆ ಎಂಬ ಭೀತಿಯಿಂದ; ಡ್ಯುಪ್ಲಿಕೇಟ್ ಜೆನ್ನಿಕಾಲನ್ ಬ್ಯಾಗ್ ಹಿಡಿದ ಕಾರಣಕ್ಕೆ ತಾನು ಎಲ್ಲಿ ನಾಲ್ಕು ಮಂದಿಯೆದುರು ಚೀಪ್ ಆಗಿಬಿಡುತ್ತೇನೊ ಎಂಬ ಭಯದ ಕಾರಣಕ್ಕೆ ನಮಗೆ ಒರಿಜಿನಲ್ ಜೆನ್ನಿಕಾಲನ್ ಮುಖ್ಯವಾಗುತ್ತದೆಯೇ ಹೊರತು ಬ್ರಾಂಡ್‍ನಿಂದ ಮುಕ್ತವಾಗಿ ಅದರ ಉಪಯುಕ್ತತೆಯ ಬಗ್ಗೆ ಮಾತ್ರ ಯೋಚಿಸುವ ಮಂದಿಗಲ್ಲ ಎನ್ನುತ್ತಾಳೆ. ಇದು ಪಾಶ್ಚಾತ್ಯ ಅಂಧಾನುಕರಣೆಯ ಚಾಳಿಗೆ ಬಲಿಯಾದ, ಜಾಗತೀಕರಣದ ಬೆಳೆ ಬೆಳೆಯಲು ಇರುವ ಫಲವತ್ತಾದ ಹೊಲದಂಥ ಎಲ್ಲಾ ದೇಶಗಳಿಗೂ ಅನ್ವಯಿಸುವ ಮಾತೇ.

ಸಮಯ ಮತ್ತು ಕ್ಷಣಗಳು ಎಂದು ಕಾಲವನ್ನು ವಿಂಗಡಿಸಿಕೊಂಡು ಫಿಸಿಕ್ಸ್‌ನಲ್ಲಿ ಅರಿಸ್ಟಾಟಲ್ ಮಂಡಿಸುವ ಒಂದು ತತ್ವವನ್ನು ಇಲ್ಲಿ ಕೆಮಾಲ್ ವಿವರಿಸುತ್ತಾನೆ. ಕ್ಷಣಗಳು (Single Moments) ವರ್ತಮಾನವಿದ್ದಂತೆ. ಕ್ಷಣಗಳನ್ನು ಮತ್ತೆ ಸೀಳುವುದು ಸಾಧ್ಯವಿಲ್ಲ. ಆದರೆ ಸಮಯ ಎನ್ನುವುದು ಈ ಅವಿಭಾಜ್ಯ ಕ್ಷಣಗಳನ್ನು ಒಂದರ ಜೊತೆ ಇನ್ನೊಂದನ್ನು ಜೋಡಿಸುವ ತಂತುವಿದ್ದಂತೆ. ಹಾಗೆ ಒಂದು ವರ್ತಮಾನವನ್ನು ಇನ್ನೊಂದು ವರ್ತಮಾನದ ಕ್ಷಣದೊಂದಿಗೆ ಜೋಡಿಸುವ ತಂತು `ಸಮಯ'ವನ್ನು ಯಾರೂ ಮರೆತುಬಿಡಲಾರರು, ಮೂರ್ಖರು ಮತ್ತು ಪ್ರಮತ್ತರಾದವರನ್ನು ಬಿಟ್ಟರೆ. ಆದರೆ ನಾವೆಲ್ಲರೂ ಮಾಡುವಂತೆ ಸಮಯವನ್ನೇ ಮರೆತುಬಿಟ್ಟು ಸಂತೋಷದಿಂದಿರಲು ಪ್ರಯತ್ನಿಸುವುದು ಸಾಧ್ಯವಿದೆ. ಆದರೆ ಇದರ ಅರ್ಥ ನಾವು ಸಮಯ ತೋರಿಸುವ ಗಡಿಯಾರಗಳನ್ನು ಮತ್ತು ದಿನ, ವಾರ, ತಿಂಗಳು ವರ್ಷ ಇತ್ಯಾದಿಗಳನ್ನು ತೋರಿಸುವ ಕ್ಯಾಲೆಂಡರುಗಳನ್ನು ಮರೆತು ಇರುತ್ತೇವೆಂದಲ್ಲ. ಅವು ನಮಗೆ ನಮ್ಮ ಸಂಬಂಧಗಳನ್ನು - ಇತರರೊಂದಿಗೆ ಮತ್ತು ಸಮಾಜದೊಂದಿಗೆ - ನಿಭಾಯಿಸಲು ಸಹಾಯ ಮಾಡುತ್ತವೆ. ಹಾಗೆಯೇ ವಸ್ತುಗಳು. ಈ ವಸ್ತುಗಳು ಕ್ಷಣಗಳನ್ನು ತಮ್ಮೊಳಗೆ ಇಟ್ಟುಕೊಂಡಿವೆ ಮತ್ತು ಈ ವಸ್ತುಗಳು ಕೂಡ ಒಂದು ಕ್ಷಣವನ್ನು ಇನ್ನೊಂದು ಕ್ಷಣದೊಂದಿಗೆ ಜೋಡಿಸಲು ಸಹಾಯ ಮಾಡುತ್ತ ಹೋಗುವಂತಾದಲ್ಲಿ ನಾವು "ಸಮಯ"ವನ್ನು ಮತ್ತೆ ಅನುಭವಿಸಬಹುದು ಮತ್ತು ಆ ಮೂಲಕ ಆ ಸಮಯದ ಸಂತೋಷವನ್ನು ಕೂಡ ಚಿರಂತನವಾಗಿಸಬಹುದು! (ಈ ತರ ಪುನರುಜ್ಜೀವಿತ "ಸಮಯ" ಎಲ್ಲೋ ಕೊನೆಯಾಗಲೇ ಬೇಕಿದೆ ಮತ್ತು ಅದು ಸಾವನ್ನು ಸೂಚಿಸಲಿದೆ ಎನ್ನುವುದು ಸತ್ಯವಾದಾಗ್ಯೂ ಸಂತೋಷದ "ಸಮಯ" ವನ್ನು ಪುನರ್-ಸೃಷ್ಟಿಸಿಕೊಳ್ಳುವುದು ಉಚಿತವಾದದ್ದೇ ಎನ್ನುತ್ತಾನೆ ಕೆಮಾಲ್.)

ಈ ಹಿನ್ನೆಲೆಯೊಂದಿಗೇ, ಈಗ Innocence ಬಗ್ಗೆ ಸ್ವಲ್ಪ ಗಮನ ಹರಿಸಬಹುದು. ಸಾಮಾನ್ಯವಾಗಿ ವಸ್ತುಸಂಗ್ರಹಾಲಯದಲ್ಲಿ ನಾವೆಲ್ಲ ನಿರೀಕ್ಷಿಸುವುದು, ಸಂಗ್ರಹಿಸುವುದು ಅಪರೂಪದ ವಸ್ತುಗಳನ್ನು. ಆದರೆ ಇಲ್ಲಿ ಕೆಮಾಲ್ ತನ್ನ ಪ್ರೀತಿಯ ಫುಸನ್‌ಳ ಪ್ರೀತಿ, ದೇಹದ ಸುವಾಸನೆ, ಸ್ಪರ್ಶ, ಒಂದೊಂದೇ ಘಟನೆ (ಕ್ಷಣ)ಗಳ ನೆನಪುಗಳನ್ನು ಪುನರ್-ಸೃಷ್ಟಿಸಿಕೊಳ್ಳುವುದಕ್ಕಾಗಿಯೇ ಮಾಡಿದ ಸಂಗ್ರಹದಲ್ಲಿ ಇರುವುದೆಲ್ಲ ತೀರ ಸಾಮಾನ್ಯವಾದ ವಸ್ತುಗಳು. ಅವಳು ತುಟಿಯೊತ್ತಿ ಹೀರಿದ ಪಾನೀಯವಿನ್ನೂ ಅಷ್ಟು ಉಳಿದಿರುವ ಗ್ಲಾಸ್, ಅವಳ ಕೂದಲಿನ್ನೂ ಅಂಟಿಕೊಂಡಿರುವ ಹೇರ್‌ಪಿನ್ನು, ಅವಳ ತುಟಿಗಳ ನಡುವೆ ಕೂತು ಎಂಜಲನ್ನೂ ಸೋಕಿಸಿಕೊಂಡಿರಬಹುದಾದ 4,213 ಸಿಗರೇಟ್ ತುಂಡುಗಳು, ಸಾಲ್ಟ್ ಶೇಕ‍ರ್ಸ್ ಮತ್ತು ಇಂಥವೇ ದೈನಂದಿನವನ್ನು ತೋರಿಸುವ ವಸ್ತುಗಳು ಇಲ್ಲಿರುವಂಥವು. ಕೆಮಾಲ್ ಇಂಥ ಅನೇಕ ವಸ್ತುಸಂಗ್ರಹಾಲಯಗಳನ್ನು ಜಗತ್ತಿನಾದ್ಯಂತ ಗಮನಿಸುತ್ತಾನೆ. ಹೆಚ್ಚಿನವುಗಳಿಗೆ ಯಾರೂ ಭೇಟಿ ಕೊಡುವವರಿಲ್ಲದಿದ್ದರೂ ಕೆಮಾಲ್ ಅಂಥಲ್ಲಿಗೆ ಮತ್ತೆ ಮತ್ತೆ ಹೋಗುತ್ತಾನೆ. ಒಬ್ಬ ಮನುಷ್ಯನ ನೆನಪುಗಳು, ಸ್ಮೃತಿ ಎಲ್ಲ ಇರುವುದು ಇಂಥ ದೈನಂದಿನ ಮತ್ತು ಸಾಮಾನ್ಯ ವಸ್ತುಗಳಲ್ಲಿಯೇ ಹೊರತು ಅಪರೂಪಕ್ಕೆ ಬಳಸುವ ಬೆಲೆಬಾಳುವ ವಸ್ತುಗಳಲ್ಲಿ ಅಲ್ಲ. (ಫುಸನ್ ಪರ್ಲ್ ಇಯರ್ ರಿಂಗ್ಸ್ ತನಗೆ ಬೇಡ, ಅವು ತನ್ನವಲ್ಲ ಎನ್ನುವ ಪ್ರಕರಣ ಜ್ಞಾಪಿಸಿಕೊಳ್ಳಿ).

ಹಾಗೆಯೇ ಇಂಥ ವಸ್ತುಗಳಲ್ಲಿ ಒಬ್ಬ ವ್ಯಕ್ತಿಯನ್ನು, "ಸಮಯ"ವನ್ನು, ತನ್ಮೂಲಕ ಸಂತೋಷವನ್ನು ಪುನರ್-ಸೃಷ್ಟಿಸಿಕೊಳ್ಳಲು ಮನುಷ್ಯ Innocent ಕೂಡಾ ಆಗಿರಬೇಕಾಗುತ್ತದೆ. ಪ್ರಜ್ಞೆಯ ಮೂಲಕ, ಬುದ್ಧಿಯ ಮೂಲಕ ನೀವು ಈ ಭಾವಕೋಶವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಅಂಥವರಿಗೆ ಈ 4,213 ಸಿಗರೇಟು ತುಂಡುಗಳು ಕೇವಲ Disposable ಕಸ. ಆದರೆ ಕೆಮಾಲ್‌ ಈ ಪ್ರತಿತುಂಡಿನ ಹಿಂದಿರುವ ನೆನಪನ್ನು ಕಟ್ಟಿಕೊಳ್ಳಬಲ್ಲ. ಆ ತುಂಡುಗಳನ್ನು ಫುಸನ್ ಹೇಗೆ ಆರಿಸಿದಳು, ಆರಿಸುವಾಗ ಎಷ್ಟು ಒತ್ತಡ ಹಾಕಿದಳು, ತಿರುಚಿದಳೇ, ಸುಮ್ಮನೇ ಒತ್ತಿ ಆರಿಸಿದಳೇ, ಸುರಿಯುತ್ತಿರುವ ನಲ್ಲಿಯ ನೀರಿಗೆ ಹಿಡಿದು ಆರಿಸಿದಳೇ ಎಂಬುದನ್ನು ಹೇಳಬಲ್ಲ. ಅದರ ಬೆನ್ನಿಗೇ ಅವನಿಗೆ ಆ ಕ್ಷಣದ ಫುಸನ್‍ಳ ಮೂಡ್, ಆ ಸಂದರ್ಭ, ಆ ದಿನ ಎಲ್ಲವೂ ಮತ್ತೆ ಜೀವಂತವಾಗುತ್ತ ಹೋಗುತ್ತವೆ. ಅಂದರೆ ಅವನು ಫುಸನ್‌ಳನ್ನು ಹೀಗೆ ಜೀವಂತಗೊಳಿಸಿಕೊಳ್ಳಬಲ್ಲ, ಅವನ ಸಂತೋಷ - ಅದು ಯಾವತ್ತೂ ಫುಸನ್ ಆಗಿರುವುದರಿಂದ - ವನ್ನು ಮರಳಿ ಬದುಕಬಲ್ಲ! ಕೊನೆಗೂ ಜೀವನದಲ್ಲಿ ಸಂತೋಷವಾಗಿರುವುದು ಮುಖ್ಯ.

ಹಾಗಾಗಿ ಇದು Museum of Innocence. ಮತ್ತು ನಾವು ಪ್ರಬುದ್ಧರಾಗುತ್ತ ಅಥವಾ ಹಾಗೆಂದು ಭಾವಿಸುತ್ತ ಕಳೆದುಕೊಳ್ಳುವ ಈ Innocence ನಿಜಕ್ಕೂ ಕಳೆದುಕೊಳ್ಳ ಬೇಕಾದ ಸಂಗತಿಯೇ ಅಥವಾ ನಾವೆಲ್ಲ ಹಾಗೆಂದು ಬರಿದೇ ನಂಬಿದ್ದೇವೆಯೆ ಎಂಬ ಪ್ರಶ್ನೆಯನ್ನೂ ಈ ಕಾದಂಬರಿ ಸೂಕ್ಷ್ಮವಾಗಿ ಎತ್ತುತ್ತಿದೆ. ಹಣ, ಜಿದ್ದು, ಸ್ಪರ್ಧೆ, ಯಶಸ್ಸು, ಕೀರ್ತಿ, ಸಮಾಜದಲ್ಲಿ ಒಂದು ಸ್ಥಾನ, ಯಾವುದೂ ಕೆಮಾಲ್‍ಗೆ ಸಿದ್ಧಿಸುವುದಿಲ್ಲ ನಿಜ. ಒಂದು ಜಗತ್ತಿನ ಮಟ್ಟಿಗೆ ಅತ್ಯಂತ ಮೂರ್ಖ ಮತ್ತು ಒಂದು ಹೆಣ್ಣಿಗಾಗಿ (ಅದೂ ಒಬ್ಬ ಯಕಶ್ಚಿತ್ ಸೇಲ್ಸ್ ಗರ್ಲ್‌ಗಾಗಿ) ಅತ್ಯಂತ ಸುಖಮಯವೂ ಸಿರಿತನದ್ದೂ, ಶಿಸ್ತಿನದ್ದೂ (ಯುರೋಪಿಯನ್ ಸ್ಟಾಂಡರ್ಡ್ಸ್‌ನಲ್ಲೆ) ಆದ ಜೀವನವನ್ನು ಎಡಗಾಲಿನಿಂದ ಒದ್ದು ನಾಶವಾದ ದೇವದಾಸ ಈತ. ಸಿಬಿಲ್‌ನಂಥ ಹೆಣ್ಣಿಗೆ ಅನ್ಯಾಯ ಮಾಡಿದ ನೀಚ. ಎಂಟು ವರ್ಷ ಕಾಲ ವಿವಾಹಿತೆಯಾದ ತನ್ನ ಪ್ರೇಯಸಿಯನ್ನು ಅವಳ ಗಂಡ ಇನ್ನೂ ಜೀವಂತ ಇರುತ್ತ ಮತ್ತೆ ತನ್ನತ್ತ ಸೆಳೆದುಕೊಳ್ಳಲು ಪ್ರತಿನಿತ್ಯ ಎಂಬಂತೆ ಯತ್ನಿಸಿದ ಭಂಡ ಮತ್ತು ಲಂಪಟ. ಆದರೆ ಇನ್ನೊಂದು ಜಗತ್ತಿನ ಮಟ್ಟಿಗೆ ಅವನೊಬ್ಬ ಶ್ರೇಷ್ಠ ಪ್ರೇಮಿ. ಯಾವುದೇ ಕಾಲದ ಯಾವುದೇ ಹೆಣ್ಣು ಕೂಡ ತನಗಿಂಥ ಒಬ್ಬ ಪ್ರೇಮಿಯಿದ್ದಿದ್ದರೆ ಎಂದು ಹಂಬಲಿಸುವ ಮಟ್ಟದ ಅಮರಪ್ರೇಮಿ. ನಿಜವಾದ ಸಂವೇದನೆಗಳನ್ನು ಜೀವಂತವಾಗಿರಿಸಿಕೊಳ್ಳುವಲ್ಲಿ ಯಶಸ್ವಿಯಾದ ಶ್ರೇಷ್ಠ ಮಾನವತಾವಾದಿ. ಮನುಷ್ಯನನ್ನು, ಮಾನವೀಯ ಮೌಲ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಂಡ ನಿಜವಾದ ಜಾಣ. ದುರಂತವೆಂದರೆ ಈ ಎರಡೂ ಜಗತ್ತು ಗಳು ತೋರಿಕೆಗೆ ಹೊರತಾಗಿ ಎಂದೂ ಸಮನ್ವಯಗೊಳ್ಳುವುದಿಲ್ಲ! ಕಮಾಲ್‍ನನ್ನು ಒಪ್ಪಿಕೊಂಡವರೂ ತಾವು ಅವನಂತಾಗದಿರಲು ಬಯಸುತ್ತಾರೆ ಎಂಬುದು ಇದಕ್ಕೆ ಸಾಕ್ಷಿ. ಕೆಮಾಲ್‌ನ ಅತ್ಯಂತ ಆಪ್ತ ಸ್ನೇಹಿತ ಕೊನೆಗೂ ಪಮುಕ್‌ ಬಳಿ ಇಡುವ ಬೇಡಿಕೆಯನ್ನು ಗಮನಿಸಿದರೆ ಈ ಮಾತು ಹೆಚ್ಚು ಸ್ಪಷ್ಟವಾಗುತ್ತದೆ.

ಕೆಮಾಲ್, ಸರಿ, ಆರ್ಹಾನ್ ಪಮುಕ್‌ನ ಮುಖಾಂತರ ತನ್ನದೇ ಧ್ವನಿಯಲ್ಲಿ ಈ ಮ್ಯೂಸಿಯಂನ ಒಳಕ್ಕೆ ನಮ್ಮನ್ನು ಬರಮಾಡಿಕೊಂಡು ಒಂದೊಂದೇ ವಸ್ತು, ಅದರ ಒಡಲೊಳಗೆ ಅಡಗಿಕೂತ ಅದರ ಆತ್ಮದಂಥ ‘ಕ್ಷಣ’ವನ್ನು ನಮಗೆ ವಿವರಿಸುತ್ತಾನೆ. ಈ ಕ್ಷಣ ಮೊದಲೇ ಹೇಳಿದ್ದಂತೆ ಅವಿಭಾಜ್ಯ. ಹಾಗಾಗಿಯೇ ಅದು ಎಷ್ಟೂ ಹಿಗ್ಗುವ ಕುಗ್ಗುವ ಸಾಧ್ಯತೆಯನ್ನು ತನ್ನೊಳಗೇ ಉಳಿಸಿಕೊಂಡಿರುವ ಕಾಲಾತೀತ ವಸ್ತು! ಹಾಗಾಗಿ ನಮಗೆ ಕೆಮಾಲ್ ಒಂದೊಂದು ವಸ್ತುವಿನ ಸಾನ್ನಿಧ್ಯದಲ್ಲೂ ವಿವರವಾದ ಘಟನೆ, ಸನ್ನಿವೇಶ, ಅದರ ಸಂದರ್ಭ, ಅದರ ಹಿನ್ನೆಲೆ ಎಲ್ಲವನ್ನೂ ಹೇಳುತ್ತ ಹೋಗಬಲ್ಲ. ಮತ್ತು ಹೀಗೆ ಮಾಡುತ್ತ ಅವನು ಒಂದು ವಸ್ತುವಿನ ಅಂತರ್ಗತ ‘ಕ್ಷಣ’ದೊಂದಿಗೆ ಇನ್ನೊಂದು ವಸ್ತುವಿನ ಅಂತರ್ಗತ ‘ಕ್ಷಣ’ವನ್ನು ಜೋಡಿಸುತ್ತ, ಜೋಡಿಸುವ ಮುಖೇನ ಕ್ಷಣವನ್ನು ‘ಸಮಯ’ವನ್ನಾಗಿ ಪರಿವರ್ತಿಸುತ್ತ ಹೋದಂತೆ ನಮಗೆ ಫುಸನ್ ಮಾತ್ರವಲ್ಲ, 1975ರಿಂದ 2007ರ ವರೆಗಿನ ಇಸ್ತಾಂಬುಲ್ ಕೂಡ - ಅದರ ರಕ್ತ ಮಾಂಸಗಳೊಂದಿಗೆ ಜೀವಂತವಾಗುತ್ತ ಹೋಗುತ್ತದೆ, ಹೋಗಬೇಕು ಎಂಬುದು ಕಾದಂಬರಿಯ ಮಹತ್ವಾಕಾಂಕ್ಷಿ ಉದ್ದೇಶ. ಆದರೆ ಕಾದಂಬರಿಯ ಆತ್ಮಾನುಸಂಧಾನದ ಉದ್ದೇಶದಲ್ಲಿ ಈ ಅಜೆಂಡಾ ಇಲ್ಲ. ಅದು ಹೀಗೆ ಕ್ಷಣಗಳನ್ನು ಒಂದಕ್ಕೊಂದು ಜೋಡಿಸಿ ಸಮಯವಾಗಿಸುತ್ತ ಸೃಜಿಸುವ ರಂಗೋಲಿಯಲ್ಲಿ ಮನುಷ್ಯ ಸಂಬಂಧಗಳ ಹಿಂದಿನ ಸಂವೇದನೆಯನ್ನು ಮರಳಿ ಪಡೆಯುವುದೇ ಆಗಿದೆ. ಯಾಕೆಂದರೆ, ಜೀವನದಲ್ಲಿ ಸಂತೋಷವಾಗಿರುವುದೇ ಮುಖ್ಯವಾದ ಸಂಗತಿಯಾಗಿದೆ ಮತ್ತು ಸಂತೋಷ ಎನ್ನುವುದು ನಾವು ಪ್ರೀತಿಸುವ ಮಂದಿಯ ಜೊತೆಗಿರುವುದರಲ್ಲೇ ಇದೆ, ಇನ್ನೆಲ್ಲೂ ಇಲ್ಲ.

ಈಗ ಹಿಂದಿನ ಬರಹದಲ್ಲಿ ಬರೆದ ಬೇಲ್ಕಿ, ಕೆಮಾಲ್ ಮತ್ತು ಫುಸನ್ ಹಾಗೂ ಕೆಮಾಲ್‌ನ ಅಪ್ಪನ ಮೂರೂ ಕತೆಗಳನ್ನು ಈಗ ಮತ್ತೊಮ್ಮೆ ಓದಿ. ಅದು ಈ ಎರಡನೆಯ ಲೇಖನದ ಚೌಕಟ್ಟಿನಲ್ಲಿ ಹೇಗೆ ಮತ್ತು ಎಲ್ಲಿ ಹೊಂದಿಕೊಳ್ಳುವುದೋ ಅಲ್ಲಿ ಈ ಕಾದಂಬರಿ ನಮಗೆ ದಕ್ಕಬೇಕಿದೆ.

2 comments:

Anonymous said...

ಒಳ್ಳೆಯ ಪುಸ್ತಕದ ಬಗ್ಗೆ ತಿಳಿಸಿರುವಿರಿ, ಧನ್ಯವಾದಗಳು

meera said...

ಯಾವ ಕಾಲವಾಗಲಿ, ಯಾವ ದೇಶವಾಗಲೀ ನವರಸ ಭಾವಗಳು ಮನುಷ್ಯನನ್ನು ಕಾಡುವಾಗಿನ ಅನುಭವಗಳು ಎಲ್ಲರಲ್ಲೂ ಒಂದೇ ತೆರನಾಗಿರುತ್ತದೆ. ಅಭಿವ್ಯಕ್ತಿಸುವ ರೀತಿ ಮಾತ್ರ ಬೇರೆ ಬೇರೆ. ಉತ್ತಮ ಪುಸ್ತಕದ ಪರಿಚಯಕ್ಕಾಗಿ ಧನ್ಯವಾದಗಳು.