Friday, August 12, 2011

ನನ್ನ ಕೇಜಿ....

ಮುಂದೆ ಏನ್ಮಾಡಬೇಕೂಂತ ಇದೀರ್ರೀ?
ಏನಿಲ್ಲ ಸಾರ್, ಏನಾದ್ರೂ ಜಾಬ್ ಹುಡ್ಕೋದು...
ಸುಮ್ನೆ ನಾನ್ ಹೇಳಿದ್ ಹಾಗೆ ಮಾಡ್ರಿ. ಸೀದ ಯೂನಿವರ್ಸಿಟಿಗೆ ಹೋಗಿ ಅಪ್ಲಿಕೇಶನ್ ತನ್ನಿ. ಇಂಗ್ಲೀಷ್‌ನಲ್ಲಿ ಎಂಎ ಮಾಡಿ...ಕನ್ನಡವೇ ಆಗ್ಬೋದಿತ್ತು, ಬೇಡ. ಇಂಗ್ಲೀಷ್ ತಗೊಳ್ಳಿ, ಆಗುತ್ತೆ ನಿಮ್ಗೆ. ಜಾಬ್ ಬಗ್ಗೆ ತಲೆಬಿಸಿ ಮಾಡ್ಬೇಡಿ. ತಿಂಗಳಾ ತಿಂಗಳಾ ನಾನು ಖರ್ಚಿಗೆ ಕಳಿಸ್ತೇನೆ, ದುಡ್ಡಿಗೆ ಏನಾದ್ರು ತೊಂದರೆ ಇದ್ರೆ ನಂಗೆ ಹೇಳಿ...
ಇಲ್ಲ ಸಾರ್, ಅದೆಲ್ಲ ಆಗಲ್ಲ...
ಯಾಕ್ ಆಗಲ್ಲರೀ...
ಅದು...ಫ್ಯಾಮಿಲಿ ಪ್ರಾಬ್ಲೆಂ ಸಾರ್..
ಸುಟ್ಟ್ ಹಾಕ್ರಿ ನಿಮ್ ಫ್ಯಾಮೀಲಿನ....

ಅದು ಕೆ.ಜಿ.ನಾರಾಯಣ ರಾವ್....ನನ್ನ ಕನ್ನಡ ಲೆಕ್ಚರರ್. ಇಸವಿ 1989. ಕೆಲವೇ ದಿನಗಳ ಹಿಂದೆ ಕಾಲೇಜಿನಲ್ಲಿ ಕಾಲೇಜಿನ ವಿರುದ್ಧವೇ ನಡೆದ ಮೊದಲ ಸ್ಟ್ರೈಕಿನ ಲೀಡರ್ ಅದು ಹೇಗೋ ನಾನೆ ಎಂದು ಎಲ್ಲರೂ ತಿಳಿದುಕೊಳ್ಳುವಂತಾಗಿತ್ತು. ಇದೇ ಕೆ.ಜಿ.ಗೆ ನನ್ನ ಗೆಳೆಯರು ಧಿಕ್ಕಾರ ಹಾಕಿದ್ದರು. ನಮ್ಮ ಬೀಳ್ಕೊಡುವ ದಿನದ ಕಾಲೇಜ್ ಡೇ ಕಾರ್ಯಕ್ರಮಕ್ಕೆ ಯಾವುದೋ ಕಮಿಟಿಗೆ ಕೆ.ಜಿ. Co ordinator. ನಾನು ಅದರ ಸದಸ್ಯ. ನಾನು ಯಾವುದೇ ಕೆಲಸಕ್ಕೆ ಹೋಗಿರಲಿಲ್ಲ. ಸಭೆಯಲ್ಲೇ ಕೆ.ಜಿ. ಹಿಂದೆ ಕೂತಿದ್ದ ನನ್ನತ್ತ ಕಿರುಚಿದ್ದರು..."ಎಲ್ ಸತ್ತೋಗಿದ್ರೀ ರೀ ನೀವು!"

ಅದು ಕೆ.ಜಿ.

ಕಾಲೇಜಿನ ಮ್ಯಾಗಝೀನ್ ತಯಾರಾಗುತ್ತಿತ್ತು. ನನ್ನ ಫೋಟೋ ಕೊಡಬೇಕಿತ್ತು ನಾನು. ಕೊಡಲಿಲ್ಲ. ಕೆ.ಜಿ. ಹೇಳಿ ಕಳುಹಿಸಿದ್ದರು.
ನನಗವೆಲ್ಲ ಬೇಡ ಸರ್.
ನಿಮಗೆ ಬೇಡ ಕಣ್ರಿ, ಗೊತ್ತು ನನಗೆ. ನಮಗೆ ಬೇಕಲ್ಲ!

ನಾನು ತಗೊಂಡಿದ್ದು Commerce. ಅದು ಹೇಗೋ ನನಗೆ ಕನ್ನಡ, ಇಂಗ್ಲೀಷಿನಲ್ಲಿ ಎಂಭತ್ತರಷ್ಟು ಅಂಕಗಳು ಬರುತ್ತಿದ್ದವು. ಅಕೌಂಟ್ಸ್, ಕಾಮರ್ಸ್‌ನಲ್ಲಿ ಅಷ್ಟಕ್ಕಷ್ಟೇ. ಫೈನಲ್ ಇಯರ್‌ನಲ್ಲಿ ಭಾಷೆ ಕಲಿಯುವುದಕ್ಕಿರಲಿಲ್ಲ. ಆದರೆ ಈ ಕೆ.ಜಿ. ನನ್ನನ್ನು ಇದ್ದ ಬಿದ್ದ ಸಾಹಿತ್ಯ ಸ್ಪರ್ಧೆಗಳಿಗೆಲ್ಲ ಕಳುಹಿಸಿದ್ದರು, ಎಲ್ಲಾ ಸಾಹಿತ್ಯದ ಶಿಬಿರಗಳಿಗೆ ದೂಡಿದ್ದರು. ಎಲ್ಲಾ ಕಡೆ ನಾನು ಫಸ್ಟ್ ಪ್ರೈಜ್ ಹೊಡೆದಿದ್ದೆ. ಸಂತೋಷ ಪಟ್ಟಿದ್ದು ಕೆ.ಜಿ. ನಾನಲ್ಲ. ನನಗೆ ಕ್ಲಾಸ್ ಹೈಯೆಸ್ಟ್ ಆಗುವುದು, ಕೆಲಸ ಗಿಟ್ಟಿಸುವುದು ಎಲ್ಲ ಮುಖ್ಯವಾಗಿತ್ತು. ಆಗಲೇ ಅಪ್ಪ ಸತ್ತಿದ್ದ ಬೇರೆ. ಮನೆಯಲ್ಲಿ ಕಾಲೇಜಿನ ತನಕ ಬಂದವ ನಾನೊಬ್ಬನೆ. ಉಳಿದವರೆಲ್ಲರೂ SSLC. ಆ ಎಲ್ಲರೂ ಕಾಯುತ್ತಿದ್ದರು ನನ್ನ ಡಿಗ್ರಿ ಒಂದು ಮುಗಿದರೆ ಸಾಕಪ್ಪಾ ಎಂದು. ಇನ್ನೂ ಕಲಿಯುತ್ತೇನೆ ಎನ್ನುವುದು ಮಹಾಸ್ವಾರ್ಥದಂತೆ ಕಾಣುವುದು ಸಾಧ್ಯವಿತ್ತು..... ಆದರೆ ನಾನು ಮಾತು ಕೇಳಲಿಲ್ಲ ಎಂದು ಕೆ.ಜಿ. ಸಿಟ್ಟು ಮಾಡಿಕೊಂಡಿದ್ದರು.

ಮೊನ್ನೆ ಮೊನ್ನೆ ಅಖಿಲ ಭಾರತ ವಿಚಾರ ಸಂಕಿರಣವೊಂದನ್ನು ಬ್ರಹ್ಮಾವರದಲ್ಲಿ ಕೆ.ಜಿಯೇ ಯೋಜಿಸಿ ರೂಪಿಸಿದ್ದಾಗ ಎದುರು ನಿಂತು ಕೇಳಿದೆ, ಸಾರ್ ನನ್ನ ನೆನಪು ಇದ್ಯಾ ನಿಮಗೆ?
ಹೇ...ನಿನ್ ನೆನ್ಪು ಇಲ್ದೇ ಇರುತ್ತೇನಾ...
ಹೇಳಿ ನೋಡುವಾ, ನನ್ನ ಹೆಸರೇನು
ಊಂ......ಹೇ..ಹೆಸರು ನೆನಪಾಗ್ತಿಲ್ಲ ಕಣೊ...ನಿನ್ ನೆನಪಿದೆ ನಂಗೆ..ನೆನಪಿದೆ....

Educative value ಇಲ್ಲದ ಕಲೆ ಹಾದರ ಎಂದು ಬಿಟ್ಟಿದ್ದ
ರು ಕೆ.ಜಿ. ಕೆ.ಜಿ. ನಮ್ಮ ಪಾಲಿನ ಅಡಿಗ,ಲಂಕೇಶ್, ಅನಂತ ಮೂರ್ತಿ, ತೇಜಸ್ವಿ, ಕಂಬಾರ, ಬಿ.ವಿ.ಕಾರಂತ ಎಲ್ಲವೂ ಆಗಿದ್ದರು. ಸಾಹಿತ್ಯದಲ್ಲಿ ರುಚಿ ಹತ್ತಿಸಿದ್ದೇ ಕೆ.ಜಿ. ಎಷ್ಟೆಲ್ಲ ಗೊತ್ತಿತ್ತು ಕೆ.ಜಿ.ಗೆ! ಆದರೆ ಪುಣ್ಯಾತ್ಮ ಏನೂ ಬರೆದಿಲ್ಲವೇಕೆ ಎನ್ನುವುದು ಅರ್ಥವಾಗುತ್ತಿರಲಿಲ್ಲ! ಕೆ.ಜಿ.ಯ ಆಸಕ್ತಿ ನಾಟಕ ಮಾಡಿಸುವುದರಲ್ಲಿ. ಆನಂದ ತೀರ್ಥ (ಮಧ್ವಾಚಾರ್ಯರ ಜೀವನ ಕುರಿತ ನಾಟಕ), ಸದ್ದು ವಿಚಾರಣೆ ನಡೆಯುತ್ತಿದೆ, ಮೀಡಿಯ, ಸಿರಿಸಂಪಿಗೆ, ವಾರ್ಡ್ ನಂಬರ್ ಸಿಕ್ಸ್, ಯಯಾತಿ.....

ಶೇಕ್ಸ್‌ಪಿಯರ್ ಕುರಿತು ಒಂದು ಅದ್ಭುತ ಸಂಕಿರಣ ನಮ್ಮ ಕಾಲೇಜಿನಲ್ಲೇ ಎಷ್ಟು ಅಚ್ಚುಕಟ್ಟಾಗಿ ನಡೆಯಿತೆಂದರೆ ಅದರಲ್ಲಿ ಟಿ.ಪಿ.ಅಶೋಕ, ಓ.ಎಲ್.ನಾಗಭೂಷಣ ಸ್ವಾಮಿ ಮತ್ತೂ ಕೆಲವರು ಅದ್ಭುತವಾದ ಉಪನ್ಯಾಸ ಕೊಟ್ಟಿದ್ದು ಮಾತ್ರವಲ್ಲ,ಶೇಕ್ಸ್‌ಪಿಯರನ ಗ್ಲೋಬ್ ರಂಗಮಂದಿರದ ಸ್ಪಷ್ಟ ಕಲ್ಪನೆ ಮೂಡವಂಥ ಸ್ಲೈಡ್ ಶೋ, ಅಕಿರಾ ಕುರಾಸೋವಾನ ಮ್ಯಾಕ್‌ಬೆತ್ ಕುರಿತ ಸಿನಿಮಾ Thorne of Blood ನ ಪ್ರದರ್ಶನ ಎಲ್ಲವೂ ಸೇರಿತ್ತು. ಒಂದು ದಿನದ ಕಾರ್ಯಕ್ರಮ. ನಾನು ಅದರ ವರದಿ ಆಗಿನ ಮುಂಗಾರು ದಿನಪತ್ರಿಕೆಗೆ ಕಳಿಸಿದ್ದೆ. ಒಂದು ಮಾತು ಹೇಳಿದ್ದರೆ ಕೆಲವು ಫೋಟೋಸ್ ಕೊಡ್ತಿದ್ದೆನಲ್ರಿ ಎಂದು ಕೆ.ಜಿ. ಬೇಜಾರು ಮಾಡಿಕೊಂಡಿದ್ದರು....

ಆತ ಈತ ಅಂತೆಲ್ಲ ಬಳಸ್ಬೇಡ್ರಿ, ಅಷ್ಟು ಒಳ್ಳೆ ಶಬ್ದ ಅಲ್ಲ ಅದು. ಲಂಕೇಶ್ ಯೂಸ್ ಮಾಡ್ತಾರೆ, ಅವ್ರಿಗೆ ಆ ಧಾರ್ಷ್ಟ್ಯ ಇದೆ. ನಿಮ್ಗೆ ಬೇಡ ಅದು....

ಬಿ.ವಿ.ಕಾರಂತರ ವಿಭಾ ಪ್ರಕರಣ ಆಗಷ್ಟೇ ಮಹಾಗುಲ್ಲಾಗಿ ಒಮ್ಮೆಗೆ ತಣ್ಣಗಾಗಿತ್ತು. ಹೆಗ್ಗೋಡಿನಲ್ಲಿ ಕೆ.ಜಿ.ಗೆ ಕಾರಂತರು ಸಿಕ್ಕಿದ್ದರು. ಹಾಗೆ ನಮಗೆ ಕಾರಂತರ ಬಗ್ಗೆ ಫಸ್ಟ್ ಹ್ಯಾಂಡ್ ಇನ್‌ಫಾರ್ಮೆಶನ್ ಗೊತ್ತಾಗುವುದು ಸಾಧ್ಯವಾಗಿತ್ತು. ಉಡುಪಿಯಲ್ಲಿ ಅದೇ ವರ್ಷ ನಾಟಕಗಳಲ್ಲಿ ಸಮಕಾಲೀನತೆ ಎಂಬ ಹೆಸರಿನಲ್ಲಿ ದೊಡ್ಡ ವಿಚಾರಸಂಕಿರಣ. ಲಂಕೇಶ್, ಕಾರ್ನಾಡ್, ಪ್ರಸನ್ನ, ವೈಕುಂಠರಾಜು, ಸುಬ್ಬಣ್ಣ, ಕಂಬಾರ ಎಲ್ಲರನ್ನು ಪ್ರತ್ಯಕ್ಷ ಕಾಣುವ ಸೌಭಾಗ್ಯ ನಮಗೆ! ಕೆ.ಜಿ. ನಮ್ಮಲ್ಲಿ ದೀಪ ಹೊತ್ತಿಸದೇ ಇದ್ದಿದ್ದರೆ ನಾವೆಲ್ಲಿ ಉಡುಪಿ ತನಕ ಹೋಗಿ ಕತ್ತಲಾದರೂ ಹೆದರದೆ ಎಲ್ಲ ಕಾರ್ಯಕ್ರಮ ನೋಡಿ, ಕೇಳಿ ಬೆಳೆಯುತ್ತಿದ್ದೆವು! ಒಬ್ಬ ನಿಜವಾದ ಗುರು ಏನು ಮಾಡಬಹುದೋ ಅದನ್ನು ಕೆ.ಜಿ. ಯಾರಿಗೂ ಗೊತ್ತಿಲ್ಲದೆ ಮಾಡುತ್ತ ಇದ್ದರು. ಹೊರಗಿನವರಿಗೆ ಅವರು ಇದನ್ನೆಲ್ಲ ಸಾಧಿಸಿದ್ದು ಗೊತ್ತೇ ಆಗುತ್ತಿರಲಿಲ್ಲ. ಏನೋ ನಾಟಕ ಮಾಡಿಕೊಂಡು, ಬೀಡ ತಿನ್ನುತ್ತ, ಕ್ಲಾಸಿನಲ್ಲಿ ಪಾಠ ಒಂದು ಬಿಟ್ಟು ಉಳಿದ ಎಲ್ಲಾ ವಿಷಯದ ಬಗ್ಗೆ ಮಾತನಾಡುತ್ತ ಹೊತ್ತು ಕಳೆಯುವ ಲೆಕ್ಚರರ್ ಆಗಿ ಕಂಡಿದ್ದರೆ ಆಶ್ಚರ್ಯವೇನೂ ಇಲ್ಲ!

ಮೊನ್ನೆ ಮೊನ್ನೆ ಮಂಗಳೂರಿಗೆ ವ್ಯಾಲ್ಯೂಯೇಶನ್ನಿಗೆ ಬಂದಾಗ ಭೇಟಿಯಾಗಿದ್ದೆವಲ್ಲ. "ನನ್ನ ಮಗ ಮಾಡಿದ ಕಣೊ,ಇಂಗ್ಲೀಷ್‌ನಲ್ಲೆ ಎಂಎ ಮಾಡಿ ಈಗ ಪಿಎಚ್‌ಡಿ ಮಾಡಕ್ಕೆ ಅಂತ ಹೋಗಿದಾನೆ. ಒಂದ್ ವರ್ಷ ಇಲ್ಲೆ ಎಂಜಿಎಂಲ್ಲಿದ್ದ. ಆಯ್ತು ಮಾರಾಯ, ನಮ್ದೆಲ್ಲ, ಎಲ್ಲ ಒಟ್ಟಿಗೇ ರಿಟೈರ್ ಆಗ್ತ ಇದೀವಿ ಇನ್ನೊಂದು ಎರಡು ವರ್ಷಕ್ಕೆಲ್ಲ. ಬಾ ಮಾರಾಯ ಒಂದ್ಸಲ ಮನೆಗೆ. ಮನೆ ಗೊತ್ತಲ್ಲ ನಿಂಗೆ. ರಿಟೈರ್ ಆದ್ಮೇಲೆ ಊರಿಗೇ ಹೋಗ್ತಿನಿ ಮಾರಾಯ, ನಮಗೆಲ್ಲ ಆಗಾದಿಲ್ಲ ಇಲ್ಲಿ, ಊರೇ ಸರಿ ನಂಗೆ....ಅದ್ಕೂ ಮೊದ್ಲು ಒಂದ್ಸಲನಾರು ಬಾ...."

ಆ ಮೊಬೈಲ್ ನಂಬರು ಆಗಾಗ ಕಣ್ಣೆದುರು ಬರುತ್ತಿದ್ದರೂ ನಾನು ಕಾಲ್ ಮಾಡಿರಲಿಲ್ಲ. ನನ್ನ ಕೆ.ಜಿ. ಹಚ್ಚಿದ ದೀಪ ನನ್ನಿಂದ ಬರೆಯಿಸಿದ್ದನ್ನು ಕೆ.ಜಿ.ಗೇ ತೋರಿಸಿರಲಿಲ್ಲ. ಪಟ್ಟಾಭಿ ಜೊತೆ ಸಿಗರೇಟೆಳೆಯುತ್ತ ನಿಂತಿದ್ದಾಗ ಅವರು ಹೇಳಿದ್ದರು, ಅಲ್ಲಿ ಇಲ್ಲಿ ಬರೆಯುತ್ತಾರೆ....ಹೌದ! ನಂಗೇ ಗೊತ್ತಿಲ್ಲ! ಆಗೆಲ್ಲ ಬರೀತಿರಲಿಲ್ಲ ಅಲ್ವಾನ ನೀನು ಎಂದಿದ್ದರು ಕೆ.ಜಿ. ಎರಡು ಪುಸ್ತಕ ಉಂಟು ಸಾರ್ ಕಳಿಸ್ತೇನೆ ನಿಮಗೆ ಎಂದಿದ್ದೆ. ಮತ್ತೆ ಯಾವತ್ತಿನಂತೆ ಕಳಿಸದೇ ಸುಮ್ಮನಾಗಿದ್ದೆ.

ಎಲ್ಲ ನೆನಪಾಗುತ್ತಿದೆ ಈಗ. ಕೆ.ಜಿ. ಇದ್ದಾಗ ಇದ್ಧಾಂಗ ಬದುಕಿದವರು. ಯಾರಿಗೂ ಕೇರ್ ಮಾಡದೆ ಮುನ್ನುಗ್ಗಿ ಕೆಲಸ ಮಾಡಿದವರು. ಪರಿಪೂರ್ಣವಾಗಿ ಬದುಕಿದವರು. ಆ ಬಗ್ಗೆ ನನಗೇ ಸಮಾಧಾನವಿದೆ. ಆದರೆ ಆ ಸುಂದರ ನಗುವಿನ ತೆರೆದ ಮನಸ್ಸಿನ ದಿಲ್‌ದಾರ್ ಮನುಷ್ಯ, ನನಗಿಂತ ಹತ್ತು ಹದಿನೈದು ವರ್ಷವಷ್ಟೇ ಹೆಚ್ಚು ವಯಸ್ಸಿನ ಸ್ಫೂರ್ತಿ ಹೀಗೆ ಇಷ್ಟು ಬೇಗ ಹೊರಟು ಹೋಗಿದ್ದು ಸರಿಯೆ?
ಈ ಸಾವು ನ್ಯಾಯವೇ...
http://www.gulfkannadiga.com/news-48568.html

1 comment:

ಅರವಿಂದ said...

ಆಪ್ತ ಬರವಣಿಗೆ.... ಶಿಕ್ಷಕ ಎಂದರೆ ಹೇಗಿರಬೇಕು ಎಂದು ತೋರಿದ ರೀತಿ ಇದೆ.... ಧನ್ಯವಾದಗಳು..