Tuesday, August 16, 2011

‘ಹೂವಿನ ಕೊಲ್ಲಿ’ಯ ಮಾಯಾಲೋಕ

ಅಬ್ದುಲ್ ರಶೀದ್‌ರ ಹೊಸ ಕಾದಂಬರಿ ‘ಹೂವಿನಕೊಲ್ಲಿ’ ಓದಿ ಮುಗಿಸಿದ ಮೇಲೆ ಅನಿಸಿದ್ದನ್ನು ಪುಟ್ಟದಾಗಿ ಹೇಳಿಬಿಡುವುದು ಸಾಧ್ಯವಿದೆ. ಸುದೀರ್ಘವಾಗಿ ಒಂದು ಕೃತಿಯ ಬಗ್ಗೆ ಹೇಳುವುದು, ಪಾಂಡಿತ್ಯಪೂರ್ಣವಾಗಿ ಅದನ್ನು ವಿಶ್ಲೇಷಿಸುವುದು ಎಲ್ಲ ವೇಸ್ಟ್. ಯಾವ ಓದುಗನೂ ಯಾರ ವಿಮರ್ಶೆಯನ್ನೂ ನೋಡಿಕೊಂಡು ಪುಸ್ತಕ ಕೊಳ್ಳುವುದು, ಓದುವುದು ಮಾಡುವುದಿಲ್ಲ. ಹೆಚ್ಚೆಂದರೆ ಓದುಗನ ಗಮನಕ್ಕೆ ಒಂದು ಕೃತಿ ಬಂದರೆ ಬಹಳಷ್ಟಾಯಿತು ಎನ್ನುವುದು ನಿಜ. ಆದರೆ ಬರಹಗಾರನಿಗೆ ತನ್ನ ಕೃತಿಯನ್ನು ಓದುಗ ಹೇಗೆ ಸ್ವೀಕರಿಸಬಹುದು, ಅದು ತನಗೆ ಬರೆಯುತ್ತಿರುವಾಗ ಕೊಟ್ಟ ಖುಶಿ, ಧನ್ಯತಾ ಭಾವ, ಕೃತಾರ್ಥಭಾವವನ್ನೆಲ್ಲ ಅವನಿಗೂ ಕೊಡಲು ಶಕ್ತವಾಗಿರಬಹುದೇ ಎನ್ನುವ ಸಾವಿರ ಕುತೂಹಲಗಳಿರುತ್ತವೆ. ಹಾಗೆಯೇ ನನ್ನಂಥ ಓದುಗನಿಗೆ ಒಂದು ಕೃತಿ ಪೂರ್ತಿಯಾಗಿ ದಕ್ಕುವುದು ಓದಿದ ಬಳಿಕ ಅದರ ಬಗ್ಗೆ ಯಾರ ಮುಲಾಜೂ ಇಲ್ಲದೆ ಸ್ವಲ್ಪ ಬರೆದಾಗಲೇ. ಹೊಸ ಬರಹಗಾರರಿಗೆ, ಅಂಥ ಉದ್ದೇಶವುಳ್ಳ ಓದುಗರಿಗೆ ವಿಮರ್ಶೆಯಲ್ಲಿ ಸ್ವಲ್ಪ ಆಸಕ್ತಿ ಇರುತ್ತದೆ ಎಂದು ನಾನು ನಂಬಿದ್ದೇನೆ. ಅದು ಹೊಸ ವಿಮರ್ಶೆಗೂ ಹಾದಿ ತೆರೆಯುವುದರಿಂದ ಇದೆಲ್ಲ ಚರ್ಚೆ ಸಾಹಿತ್ಯಿಕ ವಾತಾವರಣದಲ್ಲಿ ಅಗತ್ಯವೂ ಎನ್ನುವುದು ನಿಜ. ಹೀಗೆ ಕಾದಂಬರಿಯೊಂದರ ಬಗ್ಗೆ ಬರೆಯುತ್ತಿರುವುದಕ್ಕೆ ನನಗೇ ನಾನೊಂದು ಕಾರಣಕೊಟ್ಟುಕೊಂಡು ಬರೆಯುತ್ತಿದ್ದೇನೆ.

ಈಚೆಗೆ Orhan Pamuk ನ ಹೊಸ ಕೃತಿ ‘The Naive and Sentimental Novelist’ ಓದಿದೆ. ನಾನು ಹೇಳುತ್ತಿರುವುದಕ್ಕೆ ಸ್ವಲ್ಪ ತೂಕ ಬರಲಿ ಎಂದು ಅವನು ಹೇಳಿದ್ದನ್ನು ಬಳಸಿಕೊಳ್ಳುತ್ತೇನೆ. ಪಮುಕ್ ಹೇಳುವ naive novelist ಮತ್ತು reader, sentimental novelist ಮತ್ತು reader ಗಳನ್ನು ನಾವು ಸೀಮಿತ ಅರ್ಥದಲ್ಲಿ ಒಬ್ಬ ಒಪ್ಪಿಕೊಂಡ ಮತ್ತು ಪ್ರಶ್ನಿಸುವ ಓದುಗ/ಕಾದಂಬರಿಕಾರ ಎಂದು ಭಾವಿಸಿದರೆ ತಪ್ಪಾಗಲಾರದು.ಮುಗ್ಧವಾಗಿ ಬರಹಗಾರನ ಲೋಕವನ್ನು ಪ್ರವೇಶಿಸಿ ಅಲ್ಲಿಯದನ್ನು ಮನಸಾ ಒಪ್ಪಿಕೊಂಡು ರಸಾನುಭೂತಿಯಲ್ಲಿ ತೇಲಿಹೋಗುವ ಓದುಗ ಇರುವಂತೆಯೇ ಹಾಗೆ ತನ್ಮಯತೆಯಿಂದ ಬರೆಯಬಲ್ಲ ಕಾದಂಬರಿಕಾರನೂ ಇರುತ್ತಾನೆ. ಇವರಿಗೆ ತರ್ಕ ಮುಖ್ಯವಲ್ಲ. ಇದು ಸಂಭಾವ್ಯವೇ, ಸಂಬದ್ಧವೇ, ಸಮಕಾಲೀನವೇ ಎಂಬೆಲ್ಲ ಪ್ರಶ್ನೆಗಳು ಕೂಡ ಅಪ್ರಸ್ತುತ. ಒಪ್ಪಿಕೊಂಡಿದ್ದಾರೆ, ಅನುಭವಿಸುತ್ತಿದ್ದಾರೆ, ಅದರ ರಸ ಅವರಿಗೆ ದಕ್ಕಿಬಿಟ್ಟಿದೆ. ಅಷ್ಟೇ ಮುಖ್ಯವಾದದ್ದು. ಆದರೆ ಪ್ರಶ್ನಿಸುವ ಓದುಗ ಹಾಗಲ್ಲ. ಪ್ರಶ್ನಿಸಿಕೊಂಡೇ ಬರೆಯುವ ಬರಹಗಾರನೂ ಕೂಡ ಹಾಗಲ್ಲ. ಇವರು ಓದುಗನನ್ನು, ಕೆಲವೊಮ್ಮೆ ವಿಮರ್ಶಕನನ್ನೂ ಮನಸ್ಸಿನಲ್ಲಿಯೇ ಎದುರಿಸುತ್ತ ಬರೆಯುವ ‘ಜಾಣ’ ಬರಹಗಾರರು. ಇವರ ಓದುಗನೂ ಪ್ರತಿ ವಾಕ್ಯ, ಶಬ್ದ-ಗಳ ಔಚಿತ್ಯ, ಬಳಕೆ ತೆರೆದಿಡುವ ಅರ್ಥ ಸಾಧ್ಯಾಸಾಧ್ಯತೆಗಳು - ಹೀಗೆ ಸೀಳಿ ಸೀಳಿ ವಿವೇಚಿಸುವವರು. ಎರಡರ ತೀವ್ರತೆಯಲ್ಲೂ ಒಬ್ಬೊಬ್ಬರಿಗೂ ಅವರವರ ಭಿನ್ನತೆ ಇದ್ದೀತು, ಆದರೆ ಮೂಲ ಲಕ್ಷಣಗಳು ಸ್ಥೂಲವಾಗಿ ಹೀಗೆ. ಒಬ್ಬ ಉತ್ತಮ ಕಾದಂಬರಿಕಾರ ಅಥವಾ ಓದುಗ ಈ ಎರಡೂ ತುದಿಗಳಲ್ಲಿರದೆ ಎರಡರ ಸಂತುಲಿತ ಮಿಶ್ರಣವಾಗಿರುತ್ತಾನೆ ಎನ್ನುತ್ತಾನೆ ಪಮುಕ್. 

ಎರಡನೆಯದಾಗಿ, ಕಾದಂಬರಿಯಲ್ಲಿ ಕಾದಂಬರಿಯ ಕೇಂದ್ರ ಎಂಬುದು ಬಹುಮುಖ್ಯ ಅಂಶ ಎನ್ನುತ್ತಾನೆ ಪಮುಕ್. ಪಮುಕ್ ಹೇಳಿದ ಎಂಬ ಕಾರಣಕ್ಕೆ ನಾವಿದನ್ನು ಹೊಸದಾಗಿ ಕಂಡುಕೊಂಡವರಂತೆ ಓಹೋ ಎನ್ನಬೇಕಿಲ್ಲ ಅಲ್ಲವೆ! ಎಲ್ಲಿದೆ ಕಾದಂಬರಿಯ ಕೇಂದ್ರ, ಏನಿದರ ಅರ್ಥ, ಏನಿದರ ಉದ್ದೇಶ, ಇಡೀ ಕಲಾಕೃತಿ ಹೇಳಲು ಪ್ರಯತ್ನಿಸುತ್ತಿರುವುದಾದರೂ ಏನನ್ನು ಎಂಬುದನ್ನು ಓದುಗನ ಮನಸ್ಸು ತೀವ್ರವಾಗಿ ಹುಡುಕುತ್ತಿರುತ್ತದಂತೆ, ಕಾದಂಬರಿಯನ್ನು ಓದುವಾಗ.

ಪಮುಕ್ ತನ್ನ ಕೃತಿಯಲ್ಲಿ ನಮಗೆಲ್ಲ ಗೊತ್ತಿರುವ ಮತ್ತು ಗೊತ್ತಿಲ್ಲದ ಒಂದು ನೂರು ಸಂಗತಿಗಳನ್ನು ಹೇಳುತ್ತ ಹೋಗುತ್ತಾನೆ, ಕಾದಂಬರಿಕಾರನ ಮತ್ತು ಕಾದಂಬರಿಯ ಓದುಗನ ಬಗ್ಗೆ. ಅದೆಲ್ಲ ಇಲ್ಲಿ ಬೇಡ. ಆಸಕ್ತರು ಆ ಇಡೀ ಪುಸ್ತಕವನ್ನೇ ಓದಿಕೊಳ್ಳಬೇಕೆಂಬುದು ನನ್ನ ಮನದಾಸೆ.


ಇಲ್ಲಿ ಬೇಕಾದ ಇನ್ನೊಂದೇ ಅಂಶ, ನಾವೇಕೆ ಓದುತ್ತೇವೆ ಎನ್ನುವುದರ ಕುರಿತಾಗಿದೆ. ಪತ್ತೇದಾರಿ, ರೋಮಾನ್ಸ್, ಕೌತುಕಮಯ ವಿವರ-ತಿರುವು, ಆಘಾತ, ಅಚ್ಚರಿ, ಸಾಹಸ, ಅದ್ಭುತಗಳೇ ತುಂಬಿ ಮನರಂಜಿಸುವ ಕಾದಂಬರಿಗಳು ಮತ್ತು ಸಾಹಿತ್ಯಿಕ ಕಾದಂಬರಿಗಳು ಎಂದು ವಿಂಗಡಿಸಿಕೊಂಡು ಯಾಕೆ ಕೆಲವರು ಆ ಬಗೆಯ ಮತ್ತು ಕೆಲವರು ಈ ಬಗೆಯ ಕಾದಂಬರಿಗಳನ್ನೇ ಖಾಯಸು ಮಾಡುತ್ತಾರೆ ಎನ್ನುವ ಬಗ್ಗೆ ಪಮುಕ್ ಹೇಳುವ ಮಾತು ಕುತೂಹಲಕರವಾಗಿದೆ. ಮನೋರಂಜನೆಯೇ ಉದ್ದೇಶವಾಗುಳ್ಳ ಓದು ನಮಗೆ ಈ ಜಗತ್ತಿನಲ್ಲಿ ಎಲ್ಲವೂ ಸರಿಯಾಗಿ ನಡೀತಿದೆ, ಹೇಗಿರಬೇಕೋ ಹಾಗಿದೆ ಎನ್ನುವ ಭಾವನೆಯನ್ನೂ, ನೆಮ್ಮದಿ ಮತ್ತು ಸಮಾಧಾನವನ್ನೂ ನೀಡುವುದಂತೆ. ಮತ್ತೆ ಯಾಕೆ ನಾವು ಸಾಹಿತ್ಯಿಕ ಕಾದಂಬರಿಗಳು, ಮಹಾನ್ ಕಾದಂಬರಿಗಳು ಎನ್ನುತ್ತೇವಲ್ಲ, ಯಾವುದು ನಮಗೆ ಅಷ್ಟಿಷ್ಟು ಮಾರ್ಗದರ್ಶನ, ಅರಿವು-ಜ್ಞಾನವನ್ನೆಲ್ಲ ನೀಡಿ ಈ ಬದುಕಿಗೆ ಕೊಂಚ ಅರ್ಥವಂತಿಕೆಯನ್ನೂ, ನಾವು ಬದುಕುತ್ತಿರುವುದಕ್ಕೆ ಅರ್ಥವನ್ನೂ ನೀಡಬಹುದೆಂದು ನಂಬುತ್ತೇವೋ ಅದರತ್ತ ಯಾಕೆ ತಿರುಗುತ್ತೇವೆ ಎಂದರೆ, ನಾವು ಬದುಕುತ್ತಿರುವ ಈ ಜಗತ್ತಿನೊಂದಿಗೆ ಒಂದು ತಾದ್ಯಾತ್ಮವನ್ನು ಸಾಧಿಸುವಲ್ಲಿ ವಿಫಲರಾಗಿರುವುದರಿಂದಂತೆ! ಇದರ ಬಗ್ಗೆ ಸ್ವಲ್ಪ ಯೋಚಿಸಿ ಆಮೇಲೆ, ಇಲ್ಲಿಗೇ ಮರೆತು ಬಿಡಬೇಡಿ.

ಮೊನ್ನೆಮೊನ್ನೆಯಷ್ಟೇ ಅಬ್ದುಲ್ ರಶೀದರ "ಅಲೆಮಾರಿಯ ದಿನಚರಿ" ಓದಿ ಮುಗಿಸಿ ವಿಚಿತ್ರ ತಳಮಳ ತಲ್ಲಣ ಅನುಭವಿಸುತ್ತಲೇ ಈ ಮಾಂತ್ರಿಕ ಬರಹಗಾರನ ಬಗ್ಗೆ ಬರೆಯುತ್ತ ಕೂತಿದ್ದೆ. ನಿಮಗೆಲ್ಲ ಗೊತ್ತಿರುವಂತೆ ಇದು ಬಿಡಿಬಿಡಿಯಾದ ಅಂಕಣ ಬರಹಗಳ ಸಂಕಲನ. ಬದುಕಿನ ವಿಭಿನ್ನ ಅನುಭವಗಳ ಒಂದು ವಿಚಿತ್ರವಾದ mixture ಇಲ್ಲಿ ಸಿಗುವುದರಿಂದ ಓದುವುದಕ್ಕೆ ತುಂಬ ಇಷ್ಟವಾಗುವ ಪುಸ್ತಕ. ರಶೀದರ ಪ್ರಾಮಾಣಿಕತೆ, ಪ್ರೀತಿ ಮತ್ತು ಭಾಷೆ ಕೂಡ ಅಂಥ ಭಾವಕ್ಕೆ ಕಾರಣವೆನ್ನಿ. ಒಂದು ಕಡೆ ಲಂಕೇಶ್ ಬಗ್ಗೆ ಮತ್ತು ಮಾರ್ಕ್ವೆಜ್ ಬಗ್ಗೆ ಒಟ್ಟೊಟ್ಟಿಗೇ ಬರೆದ ಎರಡು ಲೇಖನಗಳಿವೆ ಈ ಪುಸ್ತಕದಲ್ಲಿ. ತುಂಬ ತುಂಬ ಹಿಂದೆ ವ್ಯಾಸರು ನನಗೆ ಈ ಪುಸ್ತಕ ತಪ್ಪದೇ ಓದಲು ಹೇಳಿದ್ದರು. ಇನ್ನೊಮ್ಮೆ ಜಯಂತ್ ಕಾಯ್ಕಿಣಿ ಕೂಡ ಓದಬೇಕು ಅನಿಸುವಂತೆ ಮಾಡುವ ಬರವಣಿಗೆ ಈ ಅಬ್ದುಲ್ ರಶೀದನದ್ದು ಎಂದು ಇವರ ಪುಸ್ತಕಗಳ ಬಗ್ಗೆ ಇನ್ನಿಲ್ಲದ ಕುತೂಹಲ ಮೂಡಿಸಿಬಿಟ್ಟಿದ್ದರು. ಈಗಲೂ ಕನ್ನಡದ ಅತ್ಯಂತ ಮಹತ್ವದ ಕಥಾಸಂಕಲನ "ಈ ತನಕದ ಕತೆಗಳು" ಎನ್ನುವುದರಲ್ಲಿ ಎರಡು ಮಾತಿಲ್ಲ. ಆಮೇಲೆ ಓದಿದ್ದು "ಮೈಸೂರ್ ಪೋಸ್ಟ್". ಈ ವರ್ಷ ಇದುವರೆಗೆ ಓದಿದ ಸುಮಾರು ಮುವ್ವತ್ತು ಪುಸ್ತಕಗಳಲ್ಲಿ ಇಷ್ಟವಾದ ಮೂರೋ ನಾಲ್ಕೋ ಕನ್ನಡ ಪುಸ್ತಕಗಳಲ್ಲಿ ಇದೂ ಒಂದು.

ಅಬ್ದುಲ್ ರಶೀದ್ ಲಂಕೇಶ್, ಮಾರ್ಕ್ವೆಜ್ ಬಗ್ಗೆ ಬರೆದಿದ್ದೆಲ್ಲ ಓದುತ್ತಿದ್ದರೆ ಬದುಕೇ ಹೊಸ ರೀತಿ ಕಾಣಿಸತೊಡಗುತ್ತದೆ. ಇದುವರೆಗೆ ಇವರೆಲ್ಲ ಬರೆದಿದ್ದು ಏನಿದೆ, ಅದೆಲ್ಲ ಬೇರೆಯೇ ಬೆಳಕಿನಲ್ಲಿ ಹೊಳೆಯತೊಡಗುತ್ತದೆ. ರಶೀದ್, ಲಂಕೇಶ್ ಮತ್ತು ಮಾರ್ಕ್ವೆಜ್ ಸಂಧಿಸುವ ಒಂದು ಬಿಂದು ಕೂಡ ನಮಗೆ ಹೊಳೆದಂತಾಗಿ ಬದುಕಿನ ನೋವು-ನಲಿವುಗಳು ಹೊಸ ಅಂತರದಲ್ಲಿ ನಿಂತು ಕಾಣಿಸಿಕೊಳ್ಳುತ್ತವೆ.

ಒಂಥರಾ ಖಡಕ್ ಗಂಡಸಿನ ತರ ಬದುಕಿದವರು ಈ ಮೂವರೂ. ಅಂಜುಬುರುಕು ಹೆಣ್ತನ ಇರಲಿಲ್ಲ ಅದರಲ್ಲಿ. ತೇಜಸ್ವಿಯವರನ್ನೂ ಸೇರಿಸಬೇಕು ಈ ಪಟ್ಟಿಗೆ. ಅದು ಒಂದು ದಿಟ್ಟತನ ಮತ್ತು ಮುನ್ನುಗ್ಗಬಲ್ಲ ಗಂಡೆದೆ. ಬದುಕನ್ನು ಸ್ವೀಕರಿಸಿದ ಮತ್ತು ಎದುರಿಸಿದ ಛಂದಸ್ಸು ಅದು. ಹಾಗಿದ್ದೂ ಅದರಲ್ಲಿ ಸಂವೇದನೆ, ಆರ್ದ್ರತೆ ಎಲ್ಲ ಇತ್ತು. ಹಾಗಾಗಿಯೇ ಒಬ್ಬ ಲಂಕೇಶ್, ತೇಜಸ್ವಿ ಸಾವಿರಾರು ಜನಕ್ಕೆ appealing ಆಗುವ ತರ ಬರೆಯಬಲ್ಲವರಾದರು. ಯಾಕೆಂದರೆ ತೆರೆದುಕೊಳ್ಳಬಲ್ಲ ಛಾತಿ ಇತ್ತು ಅವರಿಗೆ. ಅನುಭವಕ್ಕೆ ತೆರೆದುಕೊಳ್ಳಬಲ್ಲ ಛಾತಿ ಮತ್ತು ಅದನ್ನು ಅಕ್ಷರಕ್ಕೆ ಇಳಿಸಬಲ್ಲ ಛಾತಿ.ಮಾರ್ಕ್ವೆಜ್‌ರ ಪಾತ್ರಗಳಾಗಲೀ ಲಂಕೇಶರ ಪಾತ್ರಗಳಾಗಲೀ ಕುಂಯ್‌ಗುಡುವುದಿಲ್ಲ. ಕುಂಯ್‌ಗುಡುವ ಪಾತ್ರಗಳೆಲ್ಲ ಇನ್ನಿಲ್ಲದ ಅವಮಾನ, ತಿರಸ್ಕಾರಕ್ಕೆ ಒಳಗಾಗಿ ನಾಶವಾಗುವುದನ್ನೆ ಲಂಕೇಶರ ಆರಂಭದ ಸಂಕಲನಗಳು ತೋರಿಸುತ್ತಿರುವಂತಿದೆ. ಆಮೇಲೆ ಹಾಗಿಲ್ಲ. ‘ಇದ್ದಾಗ ಇದ್ಧಾಂಗ’ ಬದುಕುವುದೇ ಒಂಥರಾ ಆದರ್ಶವೆಂಬಂತೆ ಲಂಕೇಶರ ಪಾತ್ರಗಳು ಬೆಳೆದಿವೆ, ಕತೆಗಳಾಗಿವೆ. ಇದಕ್ಕೆಲ್ಲ ಅವರಿಗೆ ‘ಮುಸ್ಸಂಜೆಯ ಕಥಾ ಪ್ರಸಂಗ’ ದಲ್ಲಿ ಬರುವ ಶಿವಾಜಿ ತರದ ಪೈಲ್ವಾನರೇ ಸ್ಫೂರ್ತಿಯಿದ್ದರೂ ಇರಬಹುದು! ಮಾರ್ಕ್ವೆಜ್‌ರ ಪಾತ್ರಗಳೂ ಆ ತರವೇ ಇವೆ. ಅವು ಒಂಥರಾ ಗಟ್ಟಿಮುಟ್ಟಾದ ಆತ್ಮವಿಶ್ವಾಸ ತುಂಬಿದ, ಅದಮ್ಯ ಜೀವನಪ್ರೀತಿ ತುಂಬಿತುಳುಕುತ್ತಿರುವ ಪಾತ್ರಗಳು. ತೇಜಸ್ವಿಯ ಪಾತ್ರಗಳ ಬಗ್ಗೆ ಹೇಳಬೇಕಾದ್ದೇ ಇಲ್ಲ. ಆದರೆ ಏನೋ ಒಂದು, ಈ ಕ್ಷಣಕ್ಕೆ ನನಗೆ ಕಂಡ ಅಂಶವನ್ನೇ ಇಟ್ಟುಕೊಂಡು ಎಲ್ಲವನ್ನೂ ನೋಡುತ್ತಿದ್ದೇನೆ ಎನ್ನುವುದು ಗೊತ್ತು. ಲಂಕೇಶ್-ಮಾರ್ಕ್ವೆಜ್-ತೇಜಸ್ವಿ-ರಶೀದ್ ಎಂದರೇ ಇಷ್ಟು, ಅಥವಾ ಇದಿಷ್ಟೇ ಎನ್ನುವ ಭಾವನೆಯಿಂದ ಬರೆಯುತ್ತಿಲ್ಲ ಎನ್ನುವುದನ್ನು ಮರೆಯಬಾರದು. ಆದರೆ ಇದನ್ನೂ ಗಮನಿಸಬೇಕು.


ಎಲ್ಲವನ್ನೂ ಗಟ್ಟಿದನಿಯಲ್ಲಿ ಹೇಳುವಾಗ, ಇಲ್ಲ - ನೋವು, ಸಂಕಟ, ದುಃಖ, ಅಳಲು, ಮೂಕರೋದನ, ವೇದನೆ ಇರಲೇ ಇಲ್ಲ ಎಂಬಂತೆ ಮಾತನಾಡತೊಡಗಿದ ತಕ್ಷಣ ನಿಮಗೆ ಉಡಾಫೆ, ತಮಾಷೆ, ನನ್ನ ಬಗ್ಗೆಯೇ ನಾನು ಮಾಡಿಕೊಳ್ಳಬಹುದಾದ ಕುಶಾಲು ಎಲ್ಲ ಸಾಧ್ಯವಾಗುತ್ತದೆ ಅಥವಾ ಅನಿವಾರ್ಯವಾಗುತ್ತದೆ. ಅಥವಾ ಸಾಧ್ಯವೋ ಅನಿವಾರ್ಯವೋ ಆಗಲೇ ಬೇಕಾಗುತ್ತದೆ. ಈ ಮೂರು ಸಂಭವನೀಯತೆಗಳ ಸಂಕಲ್ಪ ಸಿದ್ಧಿಸಿದಾಗ ಇವರ ಸಾಹಿತ್ಯವೆಲ್ಲ ಬಂದುಬಿಟ್ಟ ಹಾಗಿದೆ! (ತೇಜಸ್ವಿ ತಮ್ಮ ಈ ಶೈಲಿಯ ಬಗ್ಗೆ ಒಂದು ಹೊರಳು ನೋಟ ಬೀರಿ ಇದರ ಮಿತಿಗಳ ಬಗ್ಗೆ ಯೋಚಿಸಿದ್ದಿದೆ, ಅದು "ವಿಮರ್ಶೆಯ ವಿಮರ್ಶೆ" ಕೃತಿಯಲ್ಲಿ ಓದಲು ಸಿಗುತ್ತದೆ.) ಈ ಅರಿವು ಕೂಡಾ ಅಂತಃಕರಣ ತಟ್ಟುತ್ತಿದೆ, ಅಬ್ದುಲ್ ರಶೀದ್ ಯಾರೋ ಅಲೆಮಾರಿ ದೊಂಬರಾಟದವರ ಕೂಸು ತಪ್ಪಿಸಿಕೊಂಡು ನಾಪತ್ತೆಯಾದದ್ದು ತಿಳಿದದ್ದೇ ಮಂಗಳೂರಿನ ಬೀದಿ ಬೀದಿ ಸುತ್ತುತ್ತಿದ್ದಾರೆ, ಎಲ್ಲಾದರೂ ಆ ಮಗು ಮತ್ತೆ ಸಿಗಬಹುದೇ ಎಂದು. ಇನ್ನೆಲ್ಲೋ ಯಾವತ್ತೋ ಇದನ್ನು ಓದುವ ವ್ಯಾಸರು ಅದೇ ಮಗುವಿಗಾಗಿ, ಅದನ್ನು ಕಳೆದುಕೊಂಡ ತಾಯ್ತಂದೆಯರಿಗಾಗಿ ಮಿಡಿಯುತ್ತಾರೆ. ಇದೆಲ್ಲ ಎಲ್ಲರ ಅಂತಃಕರಣವನ್ನು ತಲುಪುವುದೇ ಹೀಗೆ. ಅದಿಲ್ಲದೇ ಹೋದರೆ ಯಾವುದೂ ನಮ್ಮನ್ನು ತಲುಪಬೇಕಾದ ಹಾಗೆ ತಲುಪುವುದೇ ಇಲ್ಲ. ಬೊಗಸೆಯ ನಡುವಿನ ಬೆರಳ ಸಂದಿಗಳಲ್ಲಿ ಕಡಲ ನೀರು ಸೋರಿಹೋದ ಹಾಗೆ ಎಲ್ಲವೂ ಸೋರಿ ಹೋಗುತ್ತದೆ.
ಇಷ್ಟಾದ ಮೇಲೆ ನೇರ ‘ಹೂವಿನಕೊಲ್ಲಿ’ ಓದುವ ಮೊದಲು ಅದೂ ಇದೂ ಓದುತ್ತಾ ದಿನಕಳೆದೆ. ಮತ್ತೆ ನಿನ್ನೆಯಷ್ಟೇ ಇದನ್ನು ಓದಿ ಮುಗಿಸಿ ಕಾಯುತ್ತಿದ್ದ ಏನೋ ಕೊನೆಗೂ ಸಿಗಲೇ ಇಲ್ಲವಲ್ಲ ಎಂಬಂಥ ಭಾವದಲ್ಲಿ ಸುಮ್ಮನೇ ಮಲಗಿದೆ. ಇವತ್ತು ಮತ್ತೆ ಡೈರಿ ತೆರೆದು ಬರೆಯಲು ಕೂತರೆ ಕಾದಂಬರಿ ಇನ್ನಷ್ಟೇ ಸುರುವಾಗಬೇಕೇನೋ, ಬಹುಷಃ ರಶೀದ್ ಅದನ್ನೇ ಬರೆಯುತ್ತಿರಬೇಕೆನಿಸಿ ಅವರಿಗೇ ಮೆಸೇಜ್ ಮಾಡಿದೆ. "ಬಯ್ದದ್ದಾ ಹೊಗಳಿದ್ದಾ ಗೊತ್ತಾಗಲಿಲ್ಲ ಮಾರಾಯ" ಎಂದರು. ನನಗೂ ಅದು ಗೊತ್ತಾಗಿಲ್ಲ. ಡೈರಿಯಲ್ಲಿ ಬರೆದಿದ್ದನ್ನೆಲ್ಲ ಹಾಗೇ ಈಮೇಲ್ ಮಾಡುತ್ತೇನೆ ಎಂದು ಸುಮ್ಮನಾದೆ. ಡೈರಿಗೆ ಒಂದು ಹಿನ್ನೆಲೆ, ಆಡುತ್ತಿರುವ ಮಾತಿಗೆ ಗೊತ್ತಿರುವ ಅರ್ಥ ಎಲ್ಲ ಇರುತ್ತದೆ. ಈಮೇಲ್ ಮಾಡುವಾಗ ಇಡೀ ಡೈರಿ ಮಾಡುವುದಕ್ಕಂತೂ ಆಗುವುದಿಲ್ಲವಲ್ಲ! ಹಾಗಂತ ಒಂದಿಷ್ಟು ಟಿಪ್ಪಣಿ, ಅದೂ ಇದೂ ಬರೆದಿದ್ದೇನೆ. ಮುಂದಿನದ್ದನ್ನು ಸ್ವಸ್ಥವಾಗಿ ಮತ್ತು ನೇರವಾಗಿ ಅರ್ಥಮಾಡಿಕೊಳ್ಳಲು ಅದು ಸಹಕಾರಿಯಾಗುತ್ತದೆ ಎಂದೂ ನಂಬಿದ್ದೇನೆ. ಇದೆಲ್ಲ ಗ್ರಹಿಕೆಗಳು ನಮ್ಮನ್ನು ಬೆಳೆಸುವುದಕ್ಕಷ್ಟೇ ನೆರವಾಗುವಂತಿದ್ದರೆ ಒಳ್ಳೆಯದು. ಇಲ್ಲವಾದರೆ ನನಗೆ ಇನ್ನೊಬ್ಬರ ಪುಸ್ತಕದ ಬಗ್ಗೆ ಮಾತನಾಡುವುದಕ್ಕಾಗಲಿ, ಬರೆಯುವುದಕ್ಕಾಗಲೀ ಇರಬೇಕಾದ ಪ್ರೀತಿ-ಆಪ್ತಭಾವ ಕಳೆದುಕೊಂಡ ಅನುಭವವಾಗಿ ಮೌನವೇ ಲೇಸೆಂದು ಅನಿಸತೊಡಗುತ್ತದೆ......
ಕಾದಂಬರಿಯನ್ನು ಸುಮ್ಮನೇ ನಿರೀಕ್ಷೆಗಳಿಲ್ಲದೆ, ಅದರಲ್ಲೇನೋ ಅಡಗಿಕೊಂಡಿರುವಂಥದ್ದು ಇದ್ದೇ ಇರುತ್ತದೆ ಮತ್ತು ಅದು ನನ್ನಂಥ ನನಗೆ ಸಿಕ್ಕಿಯೇ ಸಿಗುತ್ತದೆ ಎಂಬಂಥ ಯಾವುದೇ ಭ್ರಮೆಗಳಿಗೆ ಸಿಕ್ಕಿ ಬೀಳದೆ ಓದಿ ಮುಗಿಸುವುದು ಸಾಧ್ಯವಿದೆ. ಅಷ್ಟೇ ಆದಲ್ಲಿ ಇದೊಂದು ಓದಲೇ ಬೇಕಾದ ಪುಸ್ತಕ ಎಂದು ಸುಮ್ಮನಾಗಬಹುದು. ಪರ್ಯಾಯ ತಲೆಹರಟೆ ಈ ಕೆಳಗಿನಂತೆ ಸಾಗುತ್ತದೆ...


ಅಬ್ದುಲ್ ರಶೀದರ ‘ಹೂವಿನಕೊಲ್ಲಿ’ ಕಾದಂಬರಿಯ ‘ಕೇಂದ್ರ’ ಯಾವುದು ಎಂಬ ಪ್ರಶ್ನೆಯಿದೆ. ಕೇಂದ್ರ ಹೂವಿನಕೊಲ್ಲಿಯೇ, ಅನುಮಾನವಿಲ್ಲ. ಆದರೆ ಹೂವಿನಕೊಲ್ಲಿಯ ಯಾವುದು, ಏನು ಎಂಬುದನ್ನು ಓದುಗನ ಮನಸ್ಸು ಹುಡುಕುತ್ತಲೇ ಇರುತ್ತದೆ ಎನ್ನುವುದು ಕೂಡ ನಿಜವೇ. ಹೂವಿನಕೊಲ್ಲಿಯ ಬದುಕನ್ನು, ಜೀವನಕ್ರಮವನ್ನು ಮತ್ತು ಅದರ ಇತಿಮಿತಿಗಳಲ್ಲೇ ಆ ಬದುಕಿನ ಏರಿಳಿತಗಳನ್ನು - ಚಿತ್ರಿಸುತ್ತ ಸಾಗುವ ಇಲ್ಲಿನ ನಿರೂಪಣೆ ಯಾವುದೋ ಕಥಾನಕದ ಎಳೆ ಇಟ್ಟುಕೊಂಡು ಏನೋ ಒಂದಿಷ್ಟು ಕೌತುಕದ ತಿರುವುಗಳು, ಏನೋ ಒಂದು ಮೇರುಘಟ್ಟ, ‘ಇದೇ ನಾನು ಹೇಳ ಹೊರಟಿದ್ದು’ಎಂಬ ಕುರುಹು ಅಥವಾ ಚಿತ್ತಾಲರು ಹೇಳುವಂತೆ ‘ನಾನು ಹೊಳೆಯಿಸಲು ಹೊರಟಿದ್ದು ಇದೇ’ ಎಂಬ ಧಾಟಿಯಾಗಲೀ, ನಿಲುವಾಗಲೀ ಇಲ್ಲಿ ಕಾಣಸಿಗುವುದಿಲ್ಲ. ಇಂಥ ನಿರೀಕ್ಷೆಗಳಿಗೆ ಈ ಕಾದಂಬರಿ ಬದ್ಧವಾಗಿ ಸಾಗುವುದಿಲ್ಲ. ಕಾದಂಬರಿಯ ಕೇಂದ್ರ ಎನ್ನುವಾಗ ಅದರ ಸರಳ ಅರ್ಥ ಏಕಸೂತ್ರದ ಕಥಾನಕ ಎಂದಾಗಲೀ, ಅದು ನೀಡುವ message ಎಂದಾಗಲೀ ತಿಳಿಯಬಾರದು. ಇಡೀ ಕೃತಿ ಏಕತ್ರವಾಗಿ ನಮ್ಮಲ್ಲಿ ಒಡಮೂಡಿಸುವ ಭಾವವೂ ಕೂಡ ಒಂದು ಕಾದಂಬರಿಯ ಕೇಂದ್ರವೇ. ಇಲ್ಲಿ ಅದು ಹೂವಿನಕೊಲ್ಲಿಯ ಬದುಕಿನ ಚಿತ್ರಗಳು, ವಿವಿಧ ಸಮಯ, ಸಂದರ್ಭ, ಸನ್ನಿವೇಶ ಮತ್ತು ಪ್ರಾಕೃತಿಕ ಹಿನ್ನೆಲೆಯ ಚಿತ್ರಗಳು. ಇಲ್ಲಿ ಬರುವ ಒಂದೆರಡು ಪಾತ್ರ, ಸನ್ನಿವೇಶಗಳ ಸಂದರ್ಭದಲ್ಲಿ ಇದನ್ನು ಸ್ವಲ್ಪ ಸ್ಫುಟವಾಗಿ ಗುರುತಿಸಲು ಪ್ರಯತ್ನಿಸಬಹುದೇನೊ.


ಒಂದು: ಉಸ್ಮಾನ್ ರೈಟರು, ಅವರ ಮಾತನಾಡುವ ಗಿಳಿ ಜುಲೈಕಾ ಮತ್ತು ಅವರ ಮೊದಲ ಹೆಂಡತಿಯ ಹುಚ್ಚು/ಸಾವು ಇತ್ಯಾದಿಗಳ ಕುರಿತಂತೆ ಇರುವ ಒಂದು ನಿಗೂಢತೆ ಕಾದಂಬರಿಯ ಉದ್ದಕ್ಕೂ ನಮ್ಮನ್ನು ಹಿಡಿದಿಡುತ್ತದೆ. ಉಸ್ಮಾನ್ ರೈಟರ ನಡೆ-ನೀತಿಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಇದು ಆಹ್ವಾನ ನೀಡುತ್ತಲೇ ಇರುತ್ತದೆ. ಕಾದಂಬರಿಯ ಕೊನೆಕೊನೆಯಲ್ಲಿ ಉಸ್ಮಾನ್ ರೈಟರ ಮೊದಲ ಹೆಂಡತಿಯೇ ಆಗಿರಬಹುದಾದ ಹುಚ್ಚಿಯೊಬ್ಬಳು ಹೀಗೆ ನಗ್ನವಾಗಿ ಊರು ಸುತ್ತುವ ಪ್ರಸ್ತಾಪವಿದೆ. ಈ ಜುಲೈಕಾ ಎಂಬ ಗಿಳಿಯ ಪ್ರಸಂಗವೂ ಈ ಮೊದಲ ಹೆಂಡತಿಯ ಬದುಕು ಎರಡೂ ಎಲ್ಲೋ ಒಂದಕ್ಕೊಂದು ರೂಪಕವಾದಂತಿದೆ.


ಎರಡು: ಮರಿಯಮ್ಮ-ಮೂಸಕಾಕ ಇಬ್ಬರ ಮರುವಿವಾಹದ ಮನೋ-ದೈಹಿಕ ಯಾತನೆಗಳಲ್ಲಿ ಹುದುಗಿಕೊಂಡಂತಿರುವ ವಿಚಾರಗಳು. ಕಾಯಿಲೆಹಿಡಿದು ಸಾಯುವ ಮೂಸಕಾಕನ ಮೊದಲ ಹೆಂಡತಿಯ ಅಪೇಕ್ಷೆಗಳು, ಆಕೆಯ ಸಾವಿನ ನಂತರದ ಆತನ ಮರುಮದುವೆ ಮೇಲೆ ಚಾಚಿಕೊಂಡ ಅದರ ಗಾಢ ನೆರಳು ಇವು ಒಂದು ಪಾತಳಿಯಲ್ಲಿದ್ದರೆ, ವಿಧವೆಯಾಗಿರುವ ಮರಿಯಮ್ಮನ ಮೇಲಿನ ಮಿಠಾಯಿಪಾಪನ ಲಾಲಸೆಗಳು, ಕೊನೆಗೂ ಆಕೆ ಕೈತಪ್ಪಿದ ಸಂಕಟದಲ್ಲಿ ಆತ ಮಾಡಿರಬಹುದಾದ ಮಾಟ-ಮಂತ್ರಗಳ ಭಯದ ಹಿನ್ನೆಲೆಯಲ್ಲೇ ಸೊರಗುವ ಮರಿಯಮ್ಮನ ಮರುವಿವಾಹದ ಸಂಭ್ರಮಗಳು ಇನ್ನೊಂದು ಪಾತಳಿಯಲ್ಲಿ ನಮ್ಮನ್ನು ಕಾಡುತ್ತದೆ. ಈ ಬದುಕಿನಲ್ಲಿ ಯಾರು ಯಾರಿಗೆ ಸೇರಬೇಕು, ನಿಷ್ಠರಾಗಿರಬೇಕು, ಎಲ್ಲಿಯವರೆಗೆ ಹಾಗೆ ನಿಷ್ಠರಾಗಿ ಉಳಿಯಬೇಕು, ದಕ್ಕದೇ ಹೋದವರು ಮತ್ತು ದಕ್ಕಿಯೂ ಪಡೆಯಲಾರದೆ ಹೋದವರು ಇವರೆಲ್ಲರ ನಿರಂತರ ಸಂಕಟಗಳ ಉತ್ತರದಾಯಿತ್ವ ಯಾರದ್ದು ಎಂಬೆಲ್ಲ ಪ್ರಶ್ನೆಗಳೆದುರು ಈ ನಾಲ್ಕು ಮಂದಿ ನಮ್ಮನ್ನು ನಿಲ್ಲಿಸುತ್ತಾರೆ.


ಮೂರು: ಉತ್ತರದಾಯಿತ್ವದ ಪ್ರಶ್ನೆ ಬಂದಾಗ ಇಲ್ಲೊಂದು ಮತಪ್ರಸಂಗದ ಪ್ರಕರಣವಿದ್ದು ಅದು ಮನಸೆಳೆಯುತ್ತದೆ. ಈ ಮತಪ್ರಸಂಗದ ದಿನ ನಿದ್ದೆಬುರುಕ ಮೊಲ್ಲಾಕನ ಬಳಿ ಕೇಳುವುದಕ್ಕೆಂದು ಹಲವರು ಹಲವು ಪ್ರಶ್ನೆಗಳೊಂದಿಗೆ ತಯಾರಾಗಿ ಕಾಯುತ್ತಿದ್ದರೆ ಆತ ಮಂಪರಿನಲ್ಲೇ ಸಾವಿರದ ಮುನ್ನೂರ ನಲವತ್ತು ವರ್ಷಗಳ ಹಿಂದೆ ಹೋಗಿ ಮದೀನಾ ತಲುಪಿರುತ್ತಾನೆ. ಯಾವುದೇ ಉತ್ತರದಾಯಿತ್ವವನ್ನು ಒಬ್ಬ ಮೊಲ್ಲಾಕನ ತಲೆಗೆ ಕಟ್ಟಬೇಡಿರೆನ್ನುವಂತೆ ಕನಸಿನಿಂದಲೇ ನೇರ ಎದ್ದು ಹೋದವನಂತೆ ನಿದ್ದೆಯಿಂದೆದ್ದು ಹೋಗುವ ಆತನ ಬೆನ್ನಿಗೇ ಮಿಠಾಯಿಪಾಪ ಸಾಹುಕಾರರಿಗೆ ಕೇಳುವ ಅರೆ ತಮಾಷೆಯಂತೆಯೂ ಅರೆ ಗಂಭೀರವಾಗಿಯೂ ಕಾಣುವ ಪ್ರಶ್ನಾವಳಿಗಳು ಹೂವಿನಕೊಲ್ಲಿಯಂಥ ಕಾಫಿ ತೋಟದ ಪರಿಕಲ್ಪನೆಗೆ ಭಾಷ್ಯ ಬರೆದಂತಿವೆ.


ನಾಲ್ಕು: ನಂಬಿಯಾರರ ಪುತ್ರ ಶೋಕ, ಕೂದಲು ತೆಗೆಯುವ ಕೆಲಸಕ್ಕೆ ನಿಂತ ಶಂಕರನ ಅಮ್ಮ ಕಾದಿಮಾ ಅಜ್ಜಿಯ ‘ಧರ್ಮ’ಸಂಕಟಗಳು, ಮೇರಿ ಟೀಚರರಿಂದಾಗಿ ನೆಂಟರಿಷ್ಟರಿಂದೆಲ್ಲ ದೂರವಾಗಿ ನೋವಿನಿಂದ ಅರಚುತ್ತಾ ಸಾವಿನೆಡೆಗೆ ಸಾಗುತ್ತಿರುವ ಅಪ್ಪಯ್ಯ ಗೌಡರು ಜೀವನದ ಇನ್ನೊಂದೇ ಮಗ್ಗುಲನ್ನು ತೆರೆದು ತೋರಿಸುತ್ತಿದ್ದಾರೆ. ನಂಬಿಯಾರರು, ಕಾದಿಮಾ ಅಜ್ಜಿ ಮತ್ತು ಅಪ್ಪಯ್ಯ ಗೌಡರು ಕಾದಂಬರಿಯಲ್ಲಿ ಸಾವಿನ ಮಗ್ಗುಲಲ್ಲಿ ನಿಂತ ಮುದಿವಯಸ್ಸಿನವರು, ಮಕ್ಕಳ ಆಶ್ರಯದಲ್ಲಿ ನೆಮ್ಮದಿಯಾಗಿ ಬದುಕಬೇಕಿದ್ದವರು. ಆದರೆ ಏನೇನೋ ಕಾರಣಗಳಿಂದ ಮುದಿವಯಸ್ಸಿನಲ್ಲಿ ಅತಂತ್ರರೂ, ಆಶ್ರಯ-ಆಸರೆ ಇಲ್ಲದವರೂ ಆದಂತಿದ್ದಾರೆ. ಕತೆ ಹೇಳುವ ಪಾತುಮ್ಮ ಮತ್ತು ಅವಳ ಮಗಳು ಬೆರಳು ಚೀಪುವ ನೆಬೀಸಾ, ತನ್ನ ಇನ್ನೊಬ್ಬ ಮಗ ಸರಿಯಾಗಿ ದಾರಿಗೆ ಬಾರದೇ ಉಂಡಾಡಿಯಾದನಲ್ಲಾ ಎಂದು ಕೊರಗುತ್ತಿರುವ ಉಸ್ಮಾನ್ ರೈಟರ ತಾಯಿ ಹಾಜಮ್ಮ ಇಲ್ಲಿ ಮೇಲೆ ಉಲ್ಲೇಖಿಸಿದ ಮೂವರ ನೆರಳಿನಂತಿದ್ದಾರೆ.


ಐದು :ಕುರಾನು ಕಲಿಸುವ ನಿದ್ದೆ ಅಮಲಿನ ಮೊಲ್ಲಾಕ ಒಂದು ಪ್ರತಿಮೆಯಂತಿದ್ದರೆ, ಮಸೀದಿಯ ದೊಡ್ಡ ಉಸ್ತಾದರ ಅಳಿಯ ಸಣ್ಣ ಉಸ್ತಾದರು ಮಾವ, ಹೆಂಡತಿ ಇಬ್ಬರನ್ನೂ ಅಡಕತ್ತರಿಯಲ್ಲಿ ಸಿಕ್ಕಿಸಬಲ್ಲ ಆಧುನಿಕ ಮನೋಭಾವದ ವ್ಯಕ್ತಿ. ತಣ್ಣಗೆ ಇನ್ನೊಂದು ಮದುವೆ ಮಾಡಿಕೊಂಡು ಮೆರೆಯುವ ಮೂಲಕ ತನ್ನ ರಸಿಕತೆ, ಜೀವನಪ್ರೀತಿ ಮತ್ತು ಬಂಡಾಯ - ಎಲ್ಲವನ್ನೂ ಪ್ರದರ್ಶಿಸುವ ಈ ಸಣ್ಣ ಉಸ್ತಾದರಂತೂ ಹಲವು ರೀತಿಯಲ್ಲಿ ಈ ಜೀವನ ಧರ್ಮಕ್ಕೆ ಇನ್ನೊಂದು ಪ್ರತಿಮೆಯಂತಿದ್ದಾರೆ. ಈ ಸಣ್ಣ ಉಸ್ತಾದರೇನೂ ಭಂಡ ವ್ಯಕ್ತಿತ್ವದವರಲ್ಲ. ಲಂಪಟರಲ್ಲ. ಆದರೆ ಮಸೀದಿಯ ಉಸ್ತಾದರಾಗಿ ಪಾಲಿಸಬೇಕಾದ ಕಟ್ಟುನಿಟ್ಟುಗಳ ಮಟ್ಟಿಗೆ ಅವರು ಅವರಿಗೆ ಸರಿಕಂಡ ಕೆಲವು ಮಾರ್ಪಾಟುಗಳನ್ನು ಧಾರಾಳವಾಗಿಯೇ ಮಾಡಿಕೊಂಡವರು. ಹಾಗೆಯೇ ಮೊದಲ ಹೆಂಡತಿಯಲ್ಲಿ ಅವರ ಪ್ರೇಮವೇನೂ ಕಡಿಮೆಯಾಗಿಲ್ಲ. ಅವಳಿಗೆ ತಮ್ಮ ರಸಿಕತೆಯು ಹೀಗೆ ಹಾಜಿರಾಳ ಬಣ್ಣ ಬಳಕುಗಳಿಗೆ ಮರುಳಾಗಿ ಶೃಂಗಾರ ಕಾವ್ಯಬರೆಯುವ ಮಟ್ಟಿಗೆ ಕವಲೊಡೆದಿರುವುದನ್ನು ಅವರು ತೆರೆದಿಡುವ ಬಗೆಯೇ ಹಾಗಿದೆ! ಆದರೂ ಎರಡನೆಯ ಎಳೆ ಹುಡುಗಿಯ ಮೈ ಬೇಕೆನಿಸುವುದು ಅವರಿಗೆ. ಆ ಬಗ್ಗೆ ಹಿಂಜರಿಕೆ, ಕಳ್ಳ ಮಾರ್ಗ ಏನಿಲ್ಲ. ರಾಜಮಾರ್ಗದಲ್ಲೇ ನಡೆಯಬಲ್ಲ ಉಸ್ತಾದರು ಇಲ್ಲೊಂದು ಪ್ರತೀಕವನ್ನೊದಗಿಸುತ್ತಿರುವುದು ನಿಜವೇ.


ಆದರೂ ಹೇಳಬೇಕಾದ ಮಾತೆಂದರೆ, ಬಾಲ್ಯದ ನೆನಪುಗಳ ದಾಖಲಾತಿಯೇ ಮುಖ್ಯವಾದಂತಿರುವ ಇಲ್ಲಿ ಕೆಲಸ ಮಾಡುವ ಪ್ರಜ್ಞೆ ಕೂಡಾ infant ಆಗಿಯೇ ಇದೆ. ಪ್ರೇಮ-ಕಾಮಗಳಾಗಲೀ, ದೊಡ್ಡವರ ಜಗತ್ತಿನ ಯಾವುದೇ ಗಹನವಾದ ಸಂಗತಿಗಳಾಗಲೀ ಇಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದೆ ಅಂಥ ವಿದ್ಯಮಾನಗಳೆಲ್ಲ ಒಂಥರಾ ಬಾಲಪ್ರಜ್ಞೆಯ ಊಹೆ-ಕಲ್ಪನೆಗಳ ತಥಾಕಥಿತ ಉಲ್ಲೇಖಗಳಷ್ಟೇ ಆಗಿ ಉಳಿಯುತ್ತವೆ. ಅಷ್ಟರ ಮಟ್ಟಿಗೆ ಅನೇಕ ಪಾತ್ರಗಳು ಸ್ಕೆಚೀ ಆಗಿಯೇ ಮನಸ್ಸಿನಲ್ಲುಳಿದು ಬಿಟ್ಟರೆ ಅದರ ಉದ್ದೇಶವೇನೋ ಬೇರೆ ಇದ್ದೀತು.


ಅದೇನಿದ್ದರೂ ಕಾದಂಬರಿ ತೆರೆದಿಡುವ ಅಥೆಂಟಿಕ್ ಜಗತ್ತು ತುಂಬ ಸುಂದರವಾಗಿ ಒಡಮೂಡಿದೆ. ಮೋಡ ಮುಸುಕಿದ ಅಥವಾ ಮಳೆ ಸುರಿಯುತ್ತಿರುವ ಕಾಫಿತೋಟ, ಗದ್ದೆ, ಇಬ್ಬನಿಯ ಹನಿಗಳಿಂದ ಪಾದಗಳನ್ನು ತೋಯಿಸುವ ಗದ್ದೆಯ ಹಾದಿ, ಪುಟ್ಟದಾಗಿ ತೆರೆದುಕೊಳ್ಳುವ ಸಿದ್ದಾಪುರ, ಸಂತೆ, ಎಲ್ಲವೂ ಹಾಕುವ ಮೋಡಿ ಗಾಢವೂ ಆಪ್ತವೂ ಆಗಿ ಮನಸ್ಸಲ್ಲಿ ನಿಲ್ಲುವಂತಿದೆ. ಇಡೀ ಕಾದಂಬರಿ ದೃಶ್ಯ ಸಂಯೋಜನೆಗೆ ನೀಡಿರುವ ಮಹತ್ವದಿಂದಾಗಿ ಕೆಲವೊಂದು ನೋಟಗಳಂತೂ ಚಿತ್ರವತ್ತಾಗಿ ಮನಸ್ಸಿನಲ್ಲಿ ಪಡಿಮೂಡಿ ನಿಲ್ಲುವಂತಿವೆ. ರಶೀದರು ತಮ್ಮ ಕಥಾಸಂಕಲನಗಳಲ್ಲಿ ಚಿತ್ರಿಸಿದ ಅದೇ ಕಾಫಿತೋಟದ ಚಿತ್ರಗಳು ಇಲ್ಲಿಯೂ ಕಣ್ಣಿಗೆ ಕಟ್ಟುತ್ತವೆ.

‘ಲೇಖಕರ ಮಾತು’ ಬರೆಯುತ್ತ ರಶೀದ್ "ಈ ಹೂವಿನಕೊಲ್ಲಿಯಲ್ಲಿ ಬರಬೇಕಿದ್ದ ಇಂತಹ ಇನ್ನೂ ನೂರಾರು ಕಥೆಗಳೂ, ಪ್ರಸಂಗಗಳೂ ನೆನಪಾಗಿ ಇದನ್ನು ಬರೆದು ಮುಗಿಸಬಾರದಿತ್ತು ಅಂತಲೂ ಅನಿಸುತ್ತದೆ" ಎನ್ನುತ್ತಾರೆ. ಹಾಗೆಯೇ "ಅಯ್ಯೋ ಇದನ್ನು ಮುಗಿಸಿರದಿದ್ದರೆ ಇನ್ನೂ ಅಲ್ಲೇ ಇರಬಹುದಿತ್ತಲ್ಲ ಎಂದು ನನಗಂತೂ ಈ ಹೊತ್ತಲ್ಲಿ ಅನಿಸುತ್ತಿದೆ" ಎಂದೂ ಹೇಳುತ್ತಾರೆ. ಆದರೆ ಕಾದಂಬರಿಯ ಓದುಗರಾಗಿ ನಾವು ಕೂಡಾ ಹಾಗೆ ಅಲ್ಲೇ ಇರಲು ಇಷ್ಟಪಟ್ಟರೂ ಹಾಗೆಲ್ಲ ಮಾಡಲಾಗುವುದಿಲ್ಲ! ಇಲ್ಲಿನ ಪಾತ್ರಗಳ ಜೊತೆಜೊತೆಗೇ "ಆಕಾಶವೂ, ಗಾಳಿಯೂ, ಬೆಳಕೂ ಎಲ್ಲವೂ ನನಗೆ ಯಾವುದೋ ಸಂಗೀತದಂತೆ ಅನಿಸಿದೆ" ಎನ್ನುವ ರಶೀದರಂತೆ ನಾವೂ ಬಾಲ್ಯದ ಸ್ಮೃತಿಗಳಲ್ಲಿ ಭಾವುಕರಾಗಿ ಕಳೆದು ಹೋಗದಿರಲು ಬಯಸಲು ಕಾರಣಗಳಿವೆ. ನಾವು naive reader ಗಳಾಗಿಯೇ ಇರಲು ಸಾಧ್ಯವಿಲ್ಲ. sentimental reader ಕೂಡಾ ಆಗಲು ಬಯಸುತ್ತೇವೆ. ಮತ್ತು ಕಾದಂಬರಿಕಾರರಾಗಿ ಅಬ್ದುಲ್ ರಶೀದ್ naive novelist ಆಗಿಯೇ ಉಳಿಯುವಂತಿಲ್ಲ. ಅವರು sentimental novelist ಆಗಿ ಕಾದಂಬರಿಯನ್ನು ನಿರ್ವಹಿಸಬೇಕೆಂದು ಬಯಸುತ್ತೇವೆ. ಇವರೆಲ್ಲ "ಕಾಲಪ್ರವಾಹದಲ್ಲಿ ಕಾಲಾಡಿಸಿಕೊಂಡು ಹೂವಿನಕೊಲ್ಲಿಯಲ್ಲಿ ಹೀಗೆಯೇ ಇರಲಿ, ನಾನು ಇದನ್ನು ಮುಗಿಸಿ ಕಾದಂಬರಿಕಾರನಾಗುತ್ತೇನೆ ಎಂದು ಮುಗಿಸಿಬಿಟ್ಟಿದ್ದೇನೆ" ಎನ್ನುವ ರಶೀದ್ ಬರೆದ ಈ ‘ಹೂವಿನಕೊಲ್ಲಿ’ ಕಾದಂಬರಿಯ format ಮತ್ತು ಕಾದಂಬರಿಕಾರನ Attitude ಎರಡನ್ನೂ ನಾವು ಭಿನ್ನವಾಗಿ ಗ್ರಹಿಸಬೇಕಾದ ಅಗತ್ಯವಿದೆ.


ತೇಜಸ್ವಿ ತಮ್ಮ ‘ವಿಮರ್ಶೆಯ ವಿಮರ್ಶೆ’ಪುಸ್ತಕದಲ್ಲಿ ಒಂದು ಮಾತು ಹೇಳುತ್ತಾರೆ. ಬಹುಷಃ ಇದು ಅವರು ಚಂದ್ರಶೇಖರ ನಂಗಲಿಯವರಿಗೆ ಬರೆದ ಪತ್ರದಲ್ಲಿ ಬರುತ್ತದೆ ಎಂದು ನೆನಪು. ‘ಬರೇ ಓದುವ ಖುಶಿಗಾಗಿಯೇ ನಾವು ಕೆಲವೊಂದು ಪುಸ್ತಕಗಳನ್ನು ಇಷ್ಟಪಡುವುದಿಲ್ಲವೇ....ಓದುತ್ತಾ ಖುಶಿಪಡುವ, ಅಯ್ಯೊ ಇದು ಮುಗಿದೇ ಹೋದರೆ ಇನ್ನೇನಪ್ಪಾ ಓದೋದು ಅಂದುಕೊಳ್ಳುವ ಪುಸ್ತಕಗಳಿಲ್ಲವೆ....’ ಎನ್ನುತ್ತ ಅಂಥ ಏನೋ ಒಂದು ಖುಶಿ ಕೊಡುವ ಬರಹಗಳ ಬಗ್ಗೆ, ಪುಸ್ತಕಗಳ ಬಗ್ಗೆ ಉಲ್ಲೇಖಿಸುತ್ತಾರೆ. ತೇಜಸ್ವಿಯವರ ಪರಿಸರದ ಕತೆಗಳು, ಕರ್ವಾಲೊ, ಅವರು ಅನುವಾದಿಸಿರುವ ಕೆನೆತ್ ಆಂಡರ್ಸನ್ ಸರಣಿಗಳು, ಅವರದೇ ಪ್ರಕಾಶನದ ಲಾರಾ ಇಂಗಲ್ಸ್ ವೈಲ್ಡರಳ ಸರಣಿ ಎಲ್ಲ ಇಂಥ ಪುಸ್ತಕಗಳೇ. ಮೈಯಲ್ಲಿ ಸೌಖ್ಯವಿಲ್ಲದೇ, ಏನನ್ನೂ ಓದಲಾಗದ , ಯಾವುದರಲ್ಲೂ ರುಚಿಯಿಲ್ಲದ ಸಮಯದಲ್ಲೂ ನಾನು ಇವುಗಳನ್ನು ಓದಬಲ್ಲೆ, ಓದುವ ಖುಶಿಗಾಗಿಯೇ, ರುಚಿ ಇದ್ದು ಓದಿದ್ದೇನೆ. ತೇಜಸ್ವಿಯವರ ‘ಮಾಯಾಲೋಕ -೧’ ಕೂಡಾ ಈ ತರದ ಬರವಣಿಗೆಯೇ. ಗಮನಿಸಬೇಕಾದ್ದೆಂದರೆ ಇಲ್ಲಿ ನಾವು ಒಂದು ಕೇಂದ್ರವನ್ನೋ, ಚಲನಶೀಲ ಕಥಾನಕದ ಬೆಳವಣಿಗೆಯನ್ನೋ ಅಷ್ಟಾಗಿ ಹುಡುಕುವ, ನೆಚ್ಚಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಹಾಗಾಗಿಯೂ ಈ ಮಾದರಿಯನ್ನು ನಾವು ಕಾದಂಬರಿ ಪ್ರಕಾರದಲ್ಲಿ ಪರಿಗಣಿಸುವುದೂ ಇಲ್ಲ. ‘ಕರ್ವಾಲೊ’ ಮಾತ್ರ ಈ ಮಾದರಿಯನ್ನೇ ಕಾದಂಬರಿ ಪ್ರಕಾರದಲ್ಲಿ ದುಡಿಸಿಕೊಂಡು ಯಶಸ್ವಿಯಾದ ಬರವಣಿಗೆಯಾಗಿ ನಿಲ್ಲುವುದು ಯಾಕೆಂದರೆ ಅದಕ್ಕೊಂದು ಕೇಂದ್ರ ಮತ್ತು ಚಲನಶೀಲ ಕಥಾನಕದ ನಡೆ ಎರಡೂ ಇರುವುದರಿಂದಲೇ. ‘ಮಾಯಾಲೋಕ’ದಲ್ಲಿ ಈ ಎರಡೂ ಇರಲೇ ಇಲ್ಲ. ಬಹುಷಃ ತೇಜಸ್ವಿಯವರು ಬದುಕಿದ್ದಿದ್ದರೆ ‘ಮಾಯಾಲೋಕ-೨’ ಅಥವಾ ೩ರಲ್ಲಿ ಅಂಥ ಒಂದು ಕೇಂದ್ರವನ್ನೂ ಕಥಾನಕದ ಹಂದರವನ್ನೂ ಇಡೀ ಸರಣಿಗೆ ದಕ್ಕಿಸಿಕೊಡುತ್ತಿದ್ದರೇನೊ. ದಾಸ್ತಾವಸ್ಕಿಯ ಜಗತ್ಪ್ರಸಿದ್ಧ ರಾಜಕೀಯ ಕಾದಂಬರಿ "ದ ಡೆವಿಲ್ಸ್" ಈ ರೀತಿಯಲ್ಲಿ ಎಲ್ಲೋ ಒಂದು ಕಡೆ ಅಕಸ್ಮಾತ್ತಾಗಿ ಕೇಂದ್ರ ಗ್ರಹಣ ಮಾಡಿದ ಪ್ರಸಂಗವನ್ನು ಪಮುಕ್ ತನ್ನ ಕೃತಿಯಲ್ಲಿ ವಿವರಿಸಿದ್ದಾನೆ ಕೂಡ. ತೇಜಸ್ವಿಯವರದೂ ಅಂಥ ಸಿದ್ಧಿಯನ್ನು ದಕ್ಕಿಸಬಲ್ಲ ಪ್ರತಿಭೆಯೇ ಎನ್ನುವುದರಲ್ಲಿ ಸಂಶಯವಿಲ್ಲ. ಸಾವು ಅಂಥ ಸಿದ್ಧಿಯ ಸಂಭವವನ್ನು ಕೊಂದಿತು.


ಮಾರ್ಕ್ವೆಜ್‌ನ ಶೈಲಿಯಲ್ಲಾಗಲೀ, ಲಂಕೇಶರ ‘ಮುಸ್ಸಂಜೆಯ ಕಥಾ ಪ್ರಸಂಗ’ದಲ್ಲಾಗಲೀ ಬರೆಯುತ್ತಿರುವುದು ಕಾದಂಬರಿ, ಅದಕ್ಕೊಂದು ಆತ್ಮ, ಕೇಂದ್ರ ಬೇಕೇ ಬೇಕು ಎಂಬ ಎಚ್ಚರ ಮತ್ತು ಎಲ್ಲ ಬಿಡಿ ಬಿಡಿ ಚಿತ್ರಗಳನ್ನೂ ಸೆಳೆದು ಏಕಸೂತ್ರದಲ್ಲಿ ಬಂಧಿಸಿ ನೇಯಬಲ್ಲ ಕೊಂಡಿಗಳ ಒಂದು ಸರಪಳಿ ಪೂರ್ತಿಯಾಗಿ missing ಆಗಿರುವುದಿಲ್ಲ ಎನ್ನುವುದನ್ನು ಗಮನಿಸಬೇಕು. ಸೂಕ್ಷ್ಮವಾಗಿ ಗಮನಿಸಿದರೆ ತೇಜಸ್ವಿಯವರ ‘ಚಿದಂಬರ ರಹಸ್ಯ’ ಕಾದಂಬರಿಯ ನಡೆ ಮತ್ತು ಅಂತ್ಯದ ಸಮೀಕರಣದಲ್ಲೂ ನಮಗೆ ಇಂಥ ದರ್ಶನವೇ ಲಭ್ಯವಾಗುತ್ತದೆ, ತೇಜಸ್ವಿಯವರು ಸ್ವತಃ ‘ಚಿದಂಬರ ರಹಸ್ಯ’ದ ಅಂತ್ಯಕ್ಕೆ ಅಂಥ ಬಣ್ಣವನ್ನೆಲ್ಲ ಕೊಡುವುದನ್ನು ಅಷ್ಟಾಗಿ ಇಷ್ಟಪಟ್ಟಿರಲಿಲ್ಲ ಎಂಬುದನ್ನೂ ಒಪ್ಪಿಕೊಂಡರೂ. ಇಲ್ಲೆಲ್ಲಾ ಏನಾಯಿತೆಂದರೆ, ಇವರ ಬರವಣಿಗೆಯ ಹರವು, ವ್ಯಾಪ್ತಿ - ಯಾವುದನ್ನು ನಾವು ಕ್ಯಾನ್ವಾಸ್ ಎನ್ನುತ್ತೇವೋ ಅದು ಹಿಗ್ಗುತ್ತಾ ಹೋಗುತ್ತದೆ ಮತ್ತು ಎಲ್ಲವನ್ನೂ ನುಂಗಿ ಜೀರ್ಣಿಸಿಕೊಳ್ಳಬಲ್ಲ ವಿಸ್ತಾರವನ್ನು ಪಡೆದುಕೊಂಡು ನಿಲ್ಲುತ್ತದೆ. ರಶೀದ್ ಬಳಸಿಕೊಂಡ format ಈ ಬಗೆಯದ್ದು ಮತ್ತು ಇದರ ಆಸುಪಾಸಿನದ್ದು. ಇದನ್ನೇ ವಿವೇಕ್ ಶಾನಭಾಗ ತಮ್ಮ ‘ಒಂದು ಬದಿ ಕಡಲು’ ಕಾದಂಬರಿಯಲ್ಲಿ ಮಾಡುತ್ತಾರೆ. ಆದರೆ ಅಲ್ಲಿ ಕಥಾನಕದ ಒಂದು ಎಳೆಯನ್ನು ಹಿಡಿದುಕೊಂಡೇ ಚಿತ್ರಗಳನ್ನು ಜೋಡಿಸುತ್ತ ಹೋಗುವುದರಿಂದ "ಒಟ್ಟಾರೆಯಾಗಿ ಬದುಕೇ" ಕೇಂದ್ರ ಎಂಬ ಒಂದು ಅಸಂಕಲ್ಪಿತವೆಂದೂ ಹೇಳಬಹುದಾದ ಕೇಂದ್ರದ ಕಡೆಗೆ ಬೊಟ್ಟು ಮಾಡಿ ಬಚಾವಾಗುತ್ತಾರೆ. ಸರಿ ಸುಮಾರು ಇದೇ ನೆಲೆಯಲ್ಲಿ ಹೂವಿನಕೊಲ್ಲಿಯ ಜನಜೀವನವೇ, ಜೀವನಕ್ರಮವೇ ಈ ಕೃತಿಯ ಕೇಂದ್ರ ಎನ್ನುವುದನ್ನು ಒಪ್ಪಿಕೊಂಡೂ ಈ ಜೀವನಕ್ರಮ, ಇದು ಪ್ರತಿನಿಧಿಸುವ ಜೀವನಮೌಲ್ಯ , ವಿಧಿಯೋ, ಅಜ್ಞಾನವೋ, ಮಾಟ ಮಂತ್ರಗಳೋ, ಮಾನವ ಸಹಜ ವಾಂಛೆಗಳೋ, ಸ್ವಯಂಕೃತ ತಪ್ಪು ಹೆಜ್ಜೆಗಳೋ ಇವರ ಬದುಕನ್ನು ಏನು ಮಾಡಿಬಿಟ್ಟವೋ ಅದು, ನಮಗೆ ನೀಡುವ ದರ್ಶನದ ಬಗ್ಗೆ, ಬದುಕಲು ಕಲಿಯುವ ಆಸೆಯಿಂದ ಓದುಗ ಓದುಗನಿಗೆ, ಇಲ್ಲೇನಾದರೂ ಸಿಕ್ಕೀತೇ ಎನ್ನುವ ಹಪಹಪಿಕೆಯಿಂದ ಒಂದು ಕಾಣ್ಕೆಗಾಗಿ ಹಂಬಲಿಸುವ ಓದುಗನಿಗೆ ಇದು ನೀಡುವ ದರ್ಶನ ಅಥವಾ ಕಾಣ್ಕೆಯ ಬಗ್ಗೆ ಕಾದಂಬರಿ ಆಸಕ್ತವಾಗಿಲ್ಲ.


ಈ Attitude ಕೂಡಾ ಗಮನಿಸಬೇಕಾದ್ದೇ. ಅಬ್ದುಲ್ ರಶೀದ್ ಈಚೆಗೆ ಬಹುವಾಗಿ ಬರೆದಿದ್ದು, ಬರೆಯುತ್ತಿರುವುದೆಲ್ಲ ಅಂಕಣವೇ. ‘ಅಲೆಮಾರಿಯ ದಿನಚರಿ’, ‘ಮೈಸೂರು ಪೋಸ್ಟ್’ ಮತ್ತು ಈಗ ‘ವಿಜಯಕರ್ನಾಟಕ’ದ ‘ಕಾಲುಚಕ್ರ’. ಹೀಗೆ ಕತೆ ಬರೆಯುತ್ತಿದ್ದ ‘ಹಾಲು ಕುಡಿದಾ ಹುಡುಗ’ ನ ಸ್ಮೃತಿ, ಅನುಭವ, ಕಥನಶಕ್ತಿ ಅಂಕಣಗಳಲ್ಲಿ ಬರತೊಡಗಿದ ಹಾಗೆ ವಿಸ್ತೃತ ಕ್ಯಾನ್ವಾಸಿನ ಬರವಣಿಗೆಯ ಮೇಲೆ ಧ್ಯಾನ ಕೇಂದ್ರೀಕರಿಸುವುದು ಕಷ್ಟವಾಗುತ್ತದೆ, ಸಹಜವಾಗಿಯೇ. ವಿವೇಕ್ ಶಾನಭಾಗ ಕಾದಂಬರಿ ಪ್ರಕಾರದ ಬರವಣಿಗೆಯ ಬಗ್ಗೆಯೇ ಹೇಳುತ್ತ, ದೀರ್ಘವಾದ ಬರವಣಿಗೆಯೊಂದನ್ನು ತಿದ್ದಲು, ಬಿಟ್ಟಲ್ಲಿಂದ ಮುಂದುವರಿಸಲು ಮತ್ತೆ ಮತ್ತೆ ಆ ಜಗತ್ತನ್ನು ಹೊಕ್ಕು ಅದರಲ್ಲಿ ತನ್ಮಯನಾಗಲು ಬಹಳ ಕಷ್ಟವಾಗುತ್ತದೆ ಎಂದಿದ್ದರು. ಬರವಣಿಗೆ ಪಾರ್ಟ್ ಟೈಂ ಆಗಿರುವ ಇಂದಿನ ತಲೆಮಾರಿನ ಅನೇಕರ ಸಮಸ್ಯೆಯಿದು.


ಕಾದಂಬರಿ ಎಂದರೆ ಏನು ಎಂದು ನಾವು ಕೇಳಿಕೊಂಡು ಸರಳವಾದ ಉತ್ತರಗಳನ್ನು ಕೊಟ್ಟುಕೊಳ್ಳುವುದಾದರೆ ಅದು ಒಂದು ಜಗತ್ತು, ಅದು ಒಂದು ಬದುಕು ಅಷ್ಟೆ. ಕಾರಂತರು 40-45 ಕಾದಂಬರಿಗಳಲ್ಲಿ ಇದನ್ನು ಸಾಧಿಸಿದರೇ ಹೊರತು ಅವರ ಒಂದು ‘ಸರಸಮ್ಮನ ಸಮಾಧಿ’ಯೋ ‘ಗೊಂಡಾರಣ್ಯ’ವೋ ಅದೊಂದನ್ನೇ ಅವರು ಬರೆದಿದ್ದು ಎಂದುಕೊಂಡು ಬಿಡಿಯಾಗಿ ಓದಿದರೆ ಆಹಾ ಎನ್ನುವಂಥದ್ದೇನಿಲ್ಲ ಅದರಲ್ಲಿ. ವಿವೇಕರ ‘ಒಂದು ಬದಿ ಕಡಲು’ ಕಾದಂಬರಿಯ ವಿಮರ್ಶೆಯ ಸಂದರ್ಭದಲ್ಲಿ ಜಿ.ಎಸ್.ಅಮೂರ ಎಂದು ನೆನಪು (ತಪ್ಪಾದರೆ ಕ್ಷಮೆಯಿರಲಿ), ಈ ಕಾದಂಬರಿಯ ನಂತರದಲ್ಲಿ ವಿವೇಕ್ ಬರೆಯಲಿರುವ ಇನ್ನಷ್ಟು ಕಾದಂಬರಿಗಳು ಈ ಕಾದಂಬರಿಯ ಸ್ಥಾನವನ್ನು ನಿಶ್ಚಯಿಸಲಿವೆ ಎಂಬರ್ಥದ ಮಾತನ್ನು ಆಡಿದ್ದರೆಂದು ಕೇಳಿದ್ದೆ. ಈ ಅರ್ಥದಲ್ಲೂ "ಹೂವಿನ ಕೊಲ್ಲಿ" ಒಂದು ಆರಂಭ ಮಾತ್ರ ಎಂದು ಅನಿಸುತ್ತದೆ. ರಶೀದರೇ "ಲೇಖಕರ ಮಾತು" ಬರೆಯುತ್ತ ಹೇಳಿದ, ಅನುಭವಿಸಿದ ನಾಸ್ಟಾಲ್ಜಿಯಾ ತರದ ಭಾವ ಓದುಗರದ್ದೂ ಆಗುವುದು ನಿಶ್ವಯವಗಿಯೂ ಒಂದು ಸಾಧನೆ. ಆದರೆ ಅದು ಸಾಧನೆಯಾದಂತೆಯೇ ಸವಾಲೂ ಕೂಡ ಆಗಿದೆ. ಮುನ್ನೆಡೆಸುವ, ಸೃಜನಶೀಲ ಸಾಮರ್ಥ್ಯದ ಸೀಮಾರೇಖೆಗಳನ್ನು ಮೀರಿ ಸಾಧಿಸುವ ಹೊಸ ಸವಾಲು ಅದು, ಲೇಖಕನಿಗೆ ತನ್ನದೇ ಕೃತಿ ಒಡ್ಡುವ ಸವಾಲು.

4 comments:

Kamalakar said...

You write so well. I liked this and many other postings here. Your notes on Pamuk made for good read too.

ನರೇಂದ್ರ ಪೈ said...

Highly honored sir. Success of a write up largely depends on the reader too. I am happy that you appreciate the notes. Thank you very much.

ಅರವಿಂದ said...

ಕೃತಿ ವಿಮರ್ಷೆಯ ಬಗೆಗೆ ಸಹಜ ಅನುಮಾನಗಳಿರುವೆಡೆ, ಯಾರೂ ವಿಮರ್ಶೆ ಓದಿ ಕೃತಿ ಕೊಳ್ಳುವುದಿಲ್ಲ ಎಂಬುದು ನನ್ನ ಮಟ್ಟಿಗೆ ತಪ್ಪು. ನನ್ನದೇ ಉದಾಹರಣೆಯನ್ನ ನೀಡುತ್ತೇನೆ. ಕೆಲವು so called ಪ್ರಸಿದ್ಧ ವಿಮರ್ಷಕರು ಮೆಚ್ಚಿದ ಕೃತಿಗಳನ್ನ(ಆಧುನಿಕ) ಓದಿ ಮುಂದೆ ಕನ್ನಡ ಸಾಹಿತ್ಯವನ್ನ ಓದುವುದನ್ನೇ ಬಿಟ್ಟುಬಿಡಬೇಕೆಂದಿದ್ದೆ. ಅವರು ಮತ್ತೂ ಈ ಬಾನುವಾರದ ಪತ್ರಿಕೆಯಲ್ಲಿ ಬರುವ Top 10 ಪುಸ್ತಕಗಳು(ಮತ್ತು ಅಲ್ಲೇ ಇರುವ ಪುಸ್ತಕ ಪರಿಚೆಯ) ಸೇರಿ ಕನ್ನಡದಲ್ಲಿ ಬರುತ್ತಿರುವುದು ಕೇವಲ ಇಂತವೇ ಕೃತಿಗಳು ಎಂದು ತೀರ್ಮಾನಿಸಿ ಬಿಟ್ಟಿದ್ದೆ. ಒಬ್ಬ ಪ್ರಾಮಾಣಿಕ ಓದುಗನಾಗಿ ಒಂದು ಪುಸ್ತಕವನ್ನ ತೆಗೆದು ಕೊಂಡಾಗ ಅದು ಏನನ್ನೂ ಹೇಳುತ್ತಿಲ್ಲ ಎಂದಾದರೆ ಅದರ ನೋವು ತಮಗೂ ತಿಳಿದಿರುತ್ತದೆ. ಆದ್ದರಿಂದ ಕಂಡೀತವಾಗಿಯು ತಮ್ಮ ಈ ಪುಸ್ತಕಗಳ ವಿಮರ್ಷೆ ಬೇಕು. ತಾವು ಇಲ್ಲಿ ಸೂಚಿಸಿದ ಎಷ್ಟೋ ಪುಸ್ತಕಗಳು ನಿಜಕ್ಕೂ ಅದ್ಬುತವಾಗಿದೆ ಹಾಗು ಅವುಗಳಿಂದ ಓದಿನ ಆನಂದವನ್ನು ನಾ ಪಡೆದವನಾಗಿದ್ದೇನೆ. ಹಾಗು ಒಂದು ವಿನಂತಿ, ಸಾದ್ಯವಾದರೆ ಕಾವ್ಯದ ಬಗ್ಗೆಯೂ ಬರೆಯಿರಿ. ಉತ್ತಮ ಕವನ ಸಂಕಲನಗಳ ಬಗ್ಗೆ ಬರೆಯಿರಿ.

ನರೇಂದ್ರ ಪೈ said...

ಆತ್ಮೀಯ ಅರವಿಂದ್,
ಕಾವ್ಯದ ಬಗ್ಗೆ `ಬರೆಯುವುದು' ಸರಿಯೇ ಎನ್ನುವ ಪ್ರಶ್ನೆಯಿದೆ. ನಾಚಿಕೆಯೊಂದಿಗೇ ಹೇಳಬೇಕೆಂದರೆ ನಾನು ಕಾವ್ಯ ಓದುವುದು ಕಡಿಮೆಯೇ. ಆದರೂ ಕೆಲವಾದರೂ ಉತ್ತಮ ಕಾವ್ಯವನ್ನು ಆಸ್ವಾದಿಸಿದ ಖುಶಿಯಿದೆ. ಪ್ರಸೂನ್ ಜೋಶಿಯ ಬಗ್ಗೆ ನನ್ನದೇ ಬ್ಲಾಗಿನಲ್ಲಿ ಒಂದು ಹಳೆಯ ಲೇಖನವಿದೆ, http://narendrapai.blogspot.com/2008/03/blog-post_15.html ಸಾಧ್ಯವಾದಲ್ಲಿ ಒಮ್ಮೆ ಕಣ್ಣುಹಾಯಿಸಿ. ಭಾಷೆ ಹೇಗೆ ಕ್ರಮೇಣ ಇವಾಲ್ವ್ ಆಯಿತು, ಅದು ಹೇಗೆ ಕ್ರಮೇಣ ಮನುಷ್ಯ ಹುಟ್ಟಿಸಿದ ಒಂದು ಬಗೆಯ ಶಬ್ದ ಉಚ್ಚಾರ, ಸದ್ದು ಹಲವರಿಗೆ ಸಮಾನ ಅರ್ಥ ಕೊಡುವ ಸಾಧ್ಯತೆಯನ್ನು ಮಾನವ ಜನಾಂಗ ಕಂಡುಕೊಂಡಿತು ಮತ್ತು ಅದೇ ಕಾಲಕ್ರಮೇಣ ಒಂದು ಸಶಕ್ತ ಸಂವಹನಾ ಮಾಧ್ಯಮವಾಗಿ ಅದು ರೂಪುಗೊಂಡಿತು ಎಂದೆಲ್ಲ ಈಚೆಗೆ ಒಂದು ಪುಸ್ತಕದಲ್ಲಿ ಓದಿದೆ. ಹೆಚ್ಚಿನಂಶ ಇತಾಲಿನೊ ಕೆಲ್ವಿನೊ ಬರೆದ ಲಿಟರರಿ ಮೆಶಿನ್ ಪುಸ್ತಕದಲ್ಲಿ ಎಂದು ನೆನಪು. ಆದರೆ ನಿಮಗೂ ತಿಳಿದಿರುವಂತೆ ಎಷ್ಟೋ ಸಂಗತಿಗಳು ಇವತ್ತಿಗೂ ಭಾಷೆಯಲ್ಲಿ ವ್ಯಕ್ತವಾಗುವ ಅಗತ್ಯವೇ ಇಲ್ಲದಂತಿವೆ ಮತ್ತು ಮನುಷ್ಯ ಜೀವನದ ಅತ್ಯಂತ ಸೂಕ್ಷ್ಮ ಮತ್ತು ಸಂವೇದನಾಶೀಲ ಕ್ಷಣಗಳೆಲ್ಲ ಈ ನೆಲೆಯಲ್ಲೇ ಇವೆ. ಅವು ಭಾಷೆಯಲ್ಲಿ ಬರತೊಡಗಿದರೆ ಅದರ sanctityಯೇ ಹೊರಟು ಹೋಗುತ್ತದೆ. ಕಾವ್ಯ ಇದನ್ನು ನಮಗೆ ಮಾತುಗಳಲ್ಲದ ಮಾತುಗಳಲ್ಲಿ ಹಿಡಿದು ಕೊಡುತ್ತದೆ. ಅದು ಅನುಭವಕ್ಕೆ, ಸಂವೇದನೆಗೆ ದಕ್ಕುತ್ತದೆಯೇ ಹೊರತು ಅರ್ಥದ ಜಗತ್ತಿಗೆ ತೆರೆದುಕೊಳ್ಳುವುದಿಲ್ಲ. ಒಳ್ಳೆಯ ಕವನದಲ್ಲಿ ಅರ್ಥ ಹುಡುಕುವುದಕ್ಕಿಂತ ಹೆಚ್ಚಿನ ಮೂರ್ಖತನ ಇರಲಿಕ್ಕಿಲ್ಲ. ಮತ್ತೆ, ಇದರ ಅರ್ಥವನ್ನೆಲ್ಲ ವಿಮರ್ಶೆ, ರಿವ್ಯೂ ಎಂದು ವಿವರಿಸತೊಡಗಿದರೆ ಶಬ್ದಸೂತಕವಾಗುವುದಿಲ್ಲವೇ? ನೀವು ಕಾವ್ಯ ಓದಿಕೊಂಡವರು, ಕವಿತೆ ಬರೆಯುತ್ತೀರಿ, ಹೇಳಬೇಕಿದನ್ನು ನನಗೆ.

ಈಚೆಗೆ ಜಯಂತ ಕಾಯ್ಕಿಣಿಯವರು ಪ್ರಜಾವಾಣಿಯ ಸಾಹಿತ್ಯ ಸಾಪ್ತಾಹಿಕದಲ್ಲಿ ಒಂದು ಲೇಖನ ಬರೆದಿದ್ದರು. ಮಾಯಾಸರೋವರ ಎನ್ನುವ ಹೆಸರಿನ ಈ ಲೇಖನವನ್ನು ನೀವು ಓದಿಯೇ ಇರುತ್ತೀರಿ. ಇಲ್ಲಿ ಜಯಂತ್ ಕೆಲವು imageries ಕೊಟ್ಟಿದ್ದಾರೆ, http://www.prajavani.net/web/include/story.php?news=3532&section=178&menuid=13 ಅವುಗಳನ್ನು ಗಮನಿಸಿ.

"ಜತೆಯಲ್ಲಿದ್ದವರೊಂದಿಗೆ ಮಾತನಾಡುತ್ತ ನಡೆಯುತ್ತಿರುವಾಗ ಒಬ್ಬನೇ ಮಾತನಾಡುತ್ತಿರುವ ಭ್ರಮೆಯಾಗಿ ನಿಂತು ಹೊರಳಿದರೆ, ಜತೆಯಲ್ಲಿದ್ದವರು ಅದ್ಯಾವಾಗಲೋ ಹಿಂದೆಯೇ ಇಲ್ಲೆಲ್ಲೋ ನಿರತರಾಗಿ ನಿಂತುಬಿಟ್ಟಿರುವುದು ಗಮನಕ್ಕೆ ಬಂದು, ವಿಚಿತ್ರ ಮೂರ್ಖ ಸಾಕ್ಷಾತ್ಕಾರದ ಕ್ಷಣವೊಂದು ಜರುಗಿಹೋಗುತ್ತದೆ. ಘನ ಗಂಭೀರವಾಗಿಯೇ ಆಡಿದ್ದ ಮಾತುಗಳು ಅತ್ಯಂತ ಭಂಗುರವಾದ ನಿರ್ವಾತದಲ್ಲಿ ಹಾಸ್ಯಾಸ್ಪದವಾಗಿ ಕಳೆದುಹೋದ ಆ ಹತ್ತಾರು ಹೆಜ್ಜೆಯ `ನಡೆ ನುಡಿ`ಯಲ್ಲಿ ನಾಟಕೀಯವಾದ, ಅಷ್ಟೇ ಸಹಜವಾದ ಸರಳಸತ್ಯವಿದೆ."

- ಈ ಅನುಭವ ನಮಗೂ ಆಗಿರುವಂಥದ್ದೇ. ಆದರೆ ಇದರಲ್ಲಿ "ಬಹುಶಃ ಬರವಣಿಗೆಯಲ್ಲಿರುವ ಲೇಖಕನೊಬ್ಬ ನೆಚ್ಚಿಕೊಳ್ಳುವ ಆವರಣವೂ ಇಷ್ಟೇ ಭಂಗುರವಾದದ್ದು." ಎಂಬ ಸತ್ಯವನ್ನು ಜಯಂತ ಕಂಡುಕೊಳ್ಳುತ್ತಾರೆ. ಇದು ಮಾತಿಗೆ ನಿಲುಕದ್ದು. ಇದನ್ನು ವಿವರಿಸಲು ಸಾಧ್ಯವಿಲ್ಲ. ವಿಚಿತ್ರವೆಂದರೆ ವಿವರಿಸದೇ ಇದು ನಿಮಗೆ ತಿಳಿಯುತ್ತದೆ, ನಾನು ಹೇಳಹೊರಟಿದ್ದರ ಹೊಳಹು ನಿಮಗೆ ಗೊತ್ತಾಗಿರುತ್ತದೆ. ಕಾವ್ಯ ಕೂಡ ಹೀಗೆಯೇ. ಇಷ್ಟರ ಮೇಲೆ ಅದನ್ನು ವಿವರಿಸುವುದು ಒಂಥರಾ ಗಾಳಿಯೊಂದಿಗೆ ಗುದ್ದಾಡಿದ ಹಾಗಿರುತ್ತದೆ.

ಹೀಗೆ ಹೇಳುವಾಗ ನಾನು ಬೇಂದ್ರೆ ಬಗ್ಗೆ ಅದ್ಭುತವಾಗಿ ಮಾತನಾಡುತ್ತಿದ್ದ ಕಿರಂ ಅಥವಾ ಅಂಥ ಕಾವ್ಯಾನುಸಂಧಾನ ಮಾಡುತ್ತಿದ್ದ ಪ್ರತಿಭೆಗಳನ್ನು ಅಲ್ಲಗಳೆಯುತ್ತಿಲ್ಲ. ಅವರು ಏನು ಮಾಡುತ್ತಿದ್ದರೆಂದರೆ ಪ್ರತಿಬಾರಿಯೂ ಹೊಸದೇ ಆದ ಆಯಾಮವೊಂದನ್ನು ತೆರೆಯುತ್ತ ಸ್ವಗತದಂತೆ ಕಾವ್ಯವನ್ನು ಸಭಿಕರೆದುರು ಆಸ್ವಾದಿಸುತ್ತಿದ್ದರೇ ಹೊರತು ತೀರ್ಮಾನದಂಥ ಮಾತುಗಳು, ಅರ್ಥಗಳು ಅಲ್ಲಿರುತ್ತಿರಲಿಲ್ಲ. ಅದಕ್ಕೆ ಸರಿಸಮನಾದ ಪ್ರತಿಭೆ ಅವರಲ್ಲಿತ್ತು. ನಾನು ಅಂಥವರೆದುರು ತೀರ ತೀರ ಸಣ್ಣ ಕಣದಂತಿದ್ದೇನೆ. ಕೀರಂ ತರ ನನಗೂ ಸಾಧ್ಯವಾದರೆ ಎಂಬ ಮಹತ್ವಾಕಾಂಕ್ಷೆ ಇದ್ದೇ ಇದೆ ಎನ್ನುವುದನ್ನು ಗುಟ್ಟಾಗಿ ನಿಮ್ಮಬಳಿ ಹೇಳಿಕೊಳ್ಳಬಹುದು ಅಷ್ಟೆ!