Monday, August 22, 2011

ಸೌಂದರ್ಯ ಮತ್ತು ವೇದನೆ

ಯಸುನಾರಿ ಕವಾಬಾಟನ ಸಾವಿರ ಪಕ್ಷಿಗಳು ಕಾದಂಬರಿಯ ಬಗ್ಗೆ ಈ ಹಿಂದೆ ಬರೆದಿದ್ದೆ. ಈ ಕಾದಂಬರಿಯ ಹೆಸರು Beauty and Sadness. ಕವಾಬಾಟನ ನಿರೂಪಣಾ ಚಾತುರ್ಯ, ತಂತ್ರದ ಚುರುಕುತನ ಮತ್ತು ಔಚಿತ್ಯದ ಬಗ್ಗೆ ಇಲ್ಲಿ ಮತ್ತೆ ಕೊರೆಯದೆ ನೇರವಾಗಿ ಈ ಕಾದಂಬರಿಯ ಕಥಾನಕ ಮನುಷ್ಯ ಸ್ವಭಾವ ಮತ್ತು ಮನುಷ್ಯ ಸಂಬಂಧಗಳ ಮೇಲೆ ಚೆಲ್ಲುವ ಬೆಳಕಿನತ್ತ ಗಮನ ಹರಿಸಿ ಮಾಡಿಕೊಂಡ ಟಿಪ್ಪಣಿಯನ್ನು ಮಾತ್ರ ಇಲ್ಲಿ ಕಾಣಿಸುತ್ತೇನೆ. ಇದರೊಂದಿಗೆ J.M.Coetzee ಯ ಕಾದಂಬರಿ Disgrace ಮತ್ತು ಮಿಲನ್ ಕುಂದೇರಾನ The Farewell Waltz ಕಾದಂಬರಿಯನ್ನೂ ನೀವು ಓದಿದ್ದರೆ ಒಟ್ಟಾರೆಯಾಗಿ ಮೂರೂ ಕಾದಂಬರಿಗಳು ನಮ್ಮೆದುರು ತೆರೆದಿಡುವ ಒಂದು ವಿನ್ಯಾಸವನ್ನು ಒಮ್ಮೆಗೇ ಮನಸ್ಸಿಗೆ ತಂದುಕೊಂಡು ಮಜಾ ಅನುಭವಿಸಬಹುದು. ನಾನು ಆಕಸ್ಮಿಕವಾಗಿ ಈ ಕಾದಂಬರಿಗಳನ್ನು ಒಂದರ ಹಿಂದೆ ಒಂದರಂತೆ ಓದಿದ್ದರಿಂದ ನನಗೆ ಅಂಥ ಒಂದು ವಿಶಿಷ್ಟ ಅನುಭವ ಸಿಕ್ಕಿತೆನ್ನಬೇಕು. ಅದನ್ನು ಇನ್ನೊಮ್ಮೆ ವಿವರಿಸುತ್ತೇನೆ.

ಕಾದಂಬರಿಯ ಕಥಾನಕವನ್ನು ತೀರ ಸರಳಗೊಳಿಸಿ ಹೇಳುವುದಾದರೆ ಪ್ರೇಮದ ನಾಟಕವಾಡಿ ಬಸುರು ಮಾಡಿ ಕೈಕೊಟ್ಟ ಒಬ್ಬನ ಮೇಲೆ ಹಾಗೆ ಬಲಿಪಶುವಾದ ಅವಿವಾಹಿತ ತಾಯಿಯ ಶಿಷ್ಯೆಯೊಬ್ಬಳು ಸೇಡು ತೀರಿಸಿಕೊಳ್ಳುವ ವಿಲಕ್ಷಣ ಬಗೆಯೇ ಇಲ್ಲಿನ ಕಥಾನಕ. ಆದರೆ ಕಾದಂಬರಿ ಅಷ್ಟು ಸರಳವಾಗಿಲ್ಲ.

ಹಾಗೆ ಹದಿನೈದು ಹದಿನಾರರಲ್ಲೇ ತಾಯಿಯಾದವಳು ಯುತುಕೊ. ಆಗ ಮುವ್ವತ್ತು ದಾಟಿದ್ದ ಅವಳ ಪ್ರಿಯಕರ ಓಕೈಗೆ ಈ ಕಾದಂಬರಿಯ ನಿರೂಪಣೆ ತೊಡಗುವ ಕಾಲಕ್ಕೆ ಐವತ್ತು ದಾಟಿದೆ, ಪ್ರಾಯಕ್ಕೆ ಬಂದಿರುವ ಇಬ್ಬರು ಮಕ್ಕಳು, ಕೈಹಿಡಿದ ಹೆಂಡತಿ ಎಲ್ಲ ಇದ್ದಾರೆ. ಆತನೀಗ ಪ್ರಸಿದ್ಧ ಕಾದಂಬರಿಕಾರ ಬೇರೆ. ಈ ಪ್ರಿಯಕರ ಓಕೈ ಆಡಿದ್ದು ನಾಟಕವೆ? ನಾಟಕವೇ ಆಗಿದ್ದರೆ ಆತ ಈ ಇಪ್ಪತ್ತು ವರ್ಷಗಳ ನಂತರವೂ ಯುತುಕೊಳ ಸಾನ್ನಿಧ್ಯ, ಸಾಂಗತ್ಯಕ್ಕೆ ಹಾತೊರೆಯುವುದೇಕೆ? ಒಬ್ಬ ಕಾದಂಬರಿಕಾರನೂ ಆಗಿರುವ ಓಕೈ ತನ್ನ - ಯುತುಕೊ ಸಂಬಂಧವನ್ನೇ ಕಾದಂಬರಿಯನ್ನಾಗಿ ಬರೆಯುತ್ತಾನೇಕೆ? ಸ್ವತಃ ಯುತುಕೊ ಯಾವತ್ತೂ ತನ್ನ ಮತ್ತು ಓಕೈ ಸಂಬಂಧದ ಬಗ್ಗೆ ಲಘುವಾಗಿ ಯೋಚಿಸುವುದಿಲ್ಲ. ಅವಳಿಗೆ ಓಕೈ ಬಗ್ಗೆ ಅಗೌರವವಿಲ್ಲ ನಿಜ. ಆದರೆ ಅವನ ಸ್ತ್ರೀವ್ಯಾಮೋಹದ ಬಗ್ಗೆ ಅಷ್ಟೇನೂ ವಿಶ್ವಾಸವಿಟ್ಟವಳಂತೆ ಕಾಣುವುದಿಲ್ಲ ಕೂಡ! ಒಂದು ಮಾತಿದೆ, ಹೆಣ್ಣು ತಾನು ಗಂಡಿನ ಪ್ರೀತಿಯನ್ನು ಪಡೆಯುವುದಕ್ಕಾಗಿ ಅವನ ಕಾಮತೃಷೆಯನ್ನು ತಣಿಸಲು ತಯಾರಾಗುತ್ತಾಳಂತೆ. ಅದೇ ಗಂಡು ತಾನು ಹೆಣ್ಣಿನಿಂದ ತನ್ನ ಕಾಮದ ಹಸಿವನ್ನು ಹಿಂಗಿಸಿಕೊಳ್ಳುವುದಕ್ಕಾಗಿ ಪ್ರೇಮವನ್ನು ತೋರಿಸುತ್ತಾನಂತೆ! ಯುತುಕೊ ಈ ಮಾತನ್ನು ಅನುಭವದಿಂದ ಕಂಡುಕೊಂಡವಳಂತೆ ಇರುವುದು ನಿಜವೇ.

ಓಕೈಯ ಮನಸ್ಥಿತಿಯ ಬಗ್ಗೆ ನೋಡುವುದಾದರೆ, ತನ್ನ ಕಾದಂಬರಿಯಲ್ಲಿ ಅವನು ಹದಿನಾರರ ಅಪ್ರಾಪ್ತ ವಯಸ್ಕಳನ್ನು ಲೈಂಗಿಕವಾಗಿ ಅನುಭವಿಸಿದ್ದು ಒಂದು ‘ಯೋಜಿತ’ ತಂತ್ರದ ಕ್ರಿಯೆಯಾಗಿತ್ತೋ ಎಂಬ ಮಟ್ಟಿಗೆ ಕಾದಂಬರಿಯ ನಿರೂಪಕ ಆ ಬಗ್ಗೆ ಹೇಳಿಕೊಳ್ಳುವುದನ್ನು ತೀವ್ರ ಮುಜುಗರ, ಹಿಂಸೆಯೊಂದಿಗೆ ಗಮನಿಸುವ ಯುತುಕೊಗೆ ಓಕೈ ಮಾಡಿದ್ದು ತಥಾಕಥಿತ ಅದೇ ಲಂಪಟತನ ಅಲ್ಲ ಎನ್ನುವ ಬಗ್ಗೆ ಪ್ರಾಮಾಣಿಕವಾದ ವಿಶ್ವಾಸವಿದೆ. ಹೀಗೆ ತನ್ನ ಕಾದಂಬರಿಯಲ್ಲಿ ನಿರೂಪಕನ ಮೂಲಕ ಹೇಳಿಕೊಳ್ಳುತ್ತ ಓಕೈ ತನ್ನನ್ನು ತಾನು ಕಂಡುಕೊಂಡಿರುವುದು ಏನನ್ನು ಸೂಚಿಸುತ್ತದೆ? ತನ್ನನ್ನು ತಾನು ಕ್ರೂರವಾಗಿ, ವ್ಯಂಗ್ಯವಾಗಿ ಮತ್ತು ವಕ್ರವಾಗಿ ಕಂಡಿರಿಸಿಕೊಂಡ ಬರಹಗಾರನೊಬ್ಬ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಗಳನ್ನು ಕಂಡುಕೊಂಡಿರುತ್ತಾನೆಂದು ಒಪ್ಪುವುದಾದರೆ, ಆ ನಂತರ ಅವನು ಹೊಸವರ್ಷದ ಮುನ್ನಾದಿನ ಯುತುಕೊ ಸಾನ್ನಿಧ್ಯದಲ್ಲಿ ದೇವಾಲಯದ ಘಂಟೆಗಳ ಕಿಂಕಿಣಿ ನಾದವನ್ನೊಮ್ಮೆ ಕೇಳಬೇಕೆಂಬ ಅಪೇಕ್ಷೆಗೆ ಪಕ್ಕಾಗುವುದು ಮತ್ತು ಅದಕ್ಕಾಗಿ ಪ್ರಯತ್ನಿಸುವುದು ಯಾವ ಮನಸ್ಥಿತಿಯನ್ನು ಸೂಚಿಸುತ್ತದೆ? ಕುತೂಹಲಕರವೆಂದರೆ ಯುತುಕೊ ಸ್ವತಃ ಓಕೈಯ ಈ ಅಪೇಕ್ಷೆಗೆ ಸ್ಪಂದಿಸುವುದಿಲ್ಲ ಎನ್ನುವುದು. ಓಕೈಯನ್ನು ಮತ್ತೆ ಎಂದೂ ಏಕಾಂತದಲ್ಲಿ ಭೇಟಿಯಾಗದಂತೆ ತಮ್ಮಿಬ್ಬರ ಸಂದರ್ಶನವನ್ನು ಏರ್ಪಾಟು ಮಾಡಿಕೊಳ್ಳುವ ಯುತುಕೊ ಉದ್ದೇಶಪೂರ್ವಕವಾಗಿ ಓಕೈಯ ಎದುರು ತನ್ನ ಚಿತ್ರಕಲಾ ಶಿಷ್ಯೆ, ಸಹವರ್ತಿ, ಪ್ರೇಮಿ, ಅಭಿಮಾನಿ ಎಲ್ಲವೂ ಆಗಿರುವ ಕೂಕೆಯನ್ನು ಮುಂದೊಡ್ಡುವುದೇಕೆ?

ಈ ಕೂಕೆ ಅಪ್ರತಿಮ ಸುಂದರಿ. ತೀರಾ ಎಳೆಯ ಪ್ರಾಯದ ಕೂಕೆಯ ಕಣ್ಣುಗಳು, ಕಣ್ಣಿನ ರೆಪ್ಪೆ, ನಾಸಿಕ, ತುಟಿ, ನವಿರಾಗಿ ನಲುಗುವ ನಳಿದೋಳುಗಳು - ಹೀಗೆ ಸಕಲಾಂಗದ ವಿವರ ವರ್ಣನೆಯಿದೆ ಇಲ್ಲಿ. ಓಕೈ ಅವಳ ಮಾರ್ದವಭರಿತ ನಿರ್ಮಲ ಸೌಂದರ್ಯಕ್ಕೆ ಶರಣಾಗುವುದರಲ್ಲಿ ಯಾವ ಆಚ್ಚರಿಯೂ ಇಲ್ಲ. ಆದರೆ ಯುತುಕೊ ತನ್ನನ್ನು ತಾನು ಸಂರಕ್ಷಿಸಿಕೊಳ್ಳುವ ಭರದಲ್ಲಿ ತಾನೇನು ಮಾಡುತ್ತಿದ್ದೇನೆಂಬ ಬಗ್ಗೆ ಸಂಪೂರ್ಣವಾಗಿ ಮುಗ್ಧಳಾಗಿದ್ದಳೆ? ಯುತುಕೊಗೆ ಕೊನೆಗೂ ಓಕೈ ತನ್ನನ್ನು , ತನ್ನ ಮಗುವನ್ನು ಕೈಬಿಟ್ಟ ಭಾವನೆ, ನೋವಿನ ಕೀವೇ ಉಳಿದಿತ್ತೆ ಮನಸ್ಸು ಹೃದಯಗಳಲ್ಲಿ ಎಂಬುದು ಊಹೆಗೇ ಬಿಟ್ಟ ಸಂಗತಿಯಾಗಿ ಉಳಿಯುತ್ತದೆ ಇಲ್ಲಿ. ಹದಿನಾರರಲ್ಲೆ ಗರ್ಭಿಣಿಯಾದ ಯುತುಕೊ ಮತ್ತು ಅವಳ ತಾಯಿ ಏನೇ ಪ್ರ್ರಯತ್ನ ಮಾಡಿದರೂ ಮಗು ಉಳಿಯುವುದಿಲ್ಲ ಮತ್ತು ಯುತುಕೊ ಆ ಆಘಾತವನ್ನು ಎದುರಿಸಲಾರದೆ, ಸಹಿಸಲಾರದೆ ಕೆಲವು ಕಾಲ ಮಾನಸಿಕ ರೋಗಿಯಾಗಿ ನರಳಬೇಕಾಗುತ್ತದೆ, ಆಸ್ಪತ್ರೆಯಲ್ಲಿ. ಆ ಅವಧಿಯಲ್ಲಿ ಯುತುಕೊಳ ತಾಯಿಯೇ ಓಕೈಯನ್ನು ಸಪ್ರಯತ್ನ ದೂರವಿಡುತ್ತಾಳೆ ಮಾತ್ರವಲ್ಲ ಅವನಿಂದ ಕಣ್ಮರೆಯಾಗಿರುವ ಉದ್ದೇಶದಿಂದಲೇ ಆ ಊರನ್ನು ಬಿಟ್ಟು ಹೋಗುತ್ತಾಳೆ, ಮಗಳೊಂದಿಗೆ.

ಈಗ ಬಹುಷಃ ಓಕೈ ಮತ್ತು ಯುತುಕೊ ಒಂದಾಗದಿರಲು ಕಾರಣ ಯುತುಕೊಳ ತಾಯಿಯೇ ಹೊರತು ಓಕೈ ನಿಷ್ಪಾಪಿ ಎಂಬ ಭಾವನೆ ನಮ್ಮಲ್ಲಿ ಬಂದರೆ ಅದು ಕೂಡ ಸರಿಯಲ್ಲ.

ಯುತುಕೊ ತಮ್ಮ ಚಿತ್ರಕಲೆಯ ಬಗ್ಗೆ, ತಾನು ರಚಿಸಿದ ತನ್ನ ತಾಯಿಯ ಚಿತ್ರ ವಾಸ್ತವವಾಗಿ ಆತ್ಮರತಿಯಲ್ಲಿ ತಾನು ಬಿಡಿಸಿದ ತನ್ನದೇ ಚಿತ್ರವಲ್ಲವೆ ಎಂದು ಪರಾಮರ್ಶೆ ಮಾಡಿಕೊಳ್ಳುವಲ್ಲಿ ಮುಂತಾಗಿ ತೋರಿಸುವ ವಿಶ್ಲೇಷಣಾ ಮನೋಭಾವವನ್ನು ತಪ್ಪಿಯೂ ತನ್ನ ಮತ್ತು ಓಕೈಯ ಸಂಬಂಧದ ಬಗ್ಗೆ ಹರಿಯಗೊಡುವುದಿಲ್ಲ ಎನ್ನುವುದು ಕೊಂಚ ವಿಚಿತ್ರವಾಗಿಯೇ ಇದೆ. ನೇರವಾಗಿ ಅಥವಾ ಪರೋಕ್ಷವಾಗಿ ಈ ಯುತುಕೊ ಮತ್ತು ಕೊಕೆ ಎಂಬ ಇಬ್ಬರು ಸ್ತ್ರೀಯರ ನಡುವಿನ ಸಂಬಂಧ ಯಾವ ಬಗೆಯದು ಎಂಬ ಬಗ್ಗೆ ಕೂಡ ಇಲ್ಲಿ ಚರ್ಚೆ ನಡೆಯುತ್ತದೆ! ಮಗುವಿನ ಚಿತ್ರಗಳನ್ನು ಮತ್ತೆ ಮತ್ತೆ ಬಿಡಿಸುವ ಚಟಕ್ಕೆ ಬಿದ್ದವಳಾದರೂ ಅದು ತನ್ನ ಹುಟ್ಟುವ ಮೊದಲೇ ಸತ್ತಿದ್ದ, ತಾನೆಂದೂ ನೋಡಲಾಗದೇ ಹೋದ (ಆ ಬಗ್ಗೆ ಅವಳಲ್ಲಿ ಮಡುಗಟ್ಟಿದ ನೋವಿದೆ) ಮಗುವಿನ ರೂಪು, ಚಹರೆಗಳನ್ನು ಕಲ್ಪನೆಯಲ್ಲಿ ಹಿಡಿಯುವ, ತಡಕಾಡುವ ತನ್ನ ವ್ಯರ್ಥ ಪ್ರಯತ್ನವೆಂಬುದರ ಅರಿವು ಸಹ ಅವಳಿಗಿದೆ. ಆದರೂ ತಮ್ಮ ಪ್ರೇಮವನ್ನು ಸಂಶಯಿಸದೇ ಇರುವುದರಾಚೆ ಓಕೈಯ ಬಗ್ಗೆ, ತನ್ನದೇ ಮನಸ್ಸು ಆತನ ಬಗ್ಗೆ ಹೊಂದಿರುವ ಒಲವಿನಾಚೆಯ ಭಾವದ ಬಗ್ಗೆ ಸ್ವಗತದಲ್ಲಾಗಲೀ, ಕೊಕೆಯ ಜೊತೆ ಪ್ರಕಟವಾಗಿಯಾಗಲಿ ಚಕಾರವಿಲ್ಲ. ಯುತುಕೊಳ ಆತ್ಮಗತ ಮೌನವೇದನೆಯನ್ನು ಈ ಮೌನಸಾಧನೆ ಹಿಡಿದಿಡಲು ಬಯಸಿದೆಯೆ?

ಆಗಲೇ ಮದುವೆಯಾಗಿ ಇಬ್ಬರು ಮಕ್ಕಳೂ ಇರುವ ಓಕೈ ಆಗಿದ್ದು ಆಗಿ ಹೋಯಿತು, ಆ ಬಗ್ಗೆ ಇನ್ನೇನೂ ಇಲ್ಲ ಯೋಚಿಸಲು ಎಂಬ ಮನೋಭಾವ ಹೊಂದಿದವನಂತೆ ಕಂಡರೂ ಆತನಲ್ಲಿ ಸೂಕ್ಷ್ಮ ಪಾಪಪ್ರಜ್ಞೆ ಇದ್ದೇ ಇದೆ. ತಾನು ಬರೆದ ಕಾದಂಬರಿ ಅದರ ಸತ್ಯ-ಮಿಥ್ಯ ಬಲ್ಲವನಾಗಿ ಅವನಿಗೆ ಅವನನ್ನೇ ತೋರಿಸಿರುವ ಸಾಧ್ಯತೆ ಇದ್ದೇ ಇದೆ. ಹಾಗೆಯೇ ಅದು ಅವನ ಸಿರಿವಂತಿಕೆಯ ಮೂಲಧನವಾಗಿರುವ ಅರಿವು ಅವನ ಇಡೀ ಕುಟುಂಬಕ್ಕಿದೆ. ಒಬ್ಬ ಹೊಟ್ಟೆಕಿಚ್ಚಿನ ಹೆಂಗಸಾಗಿ ಬಿಂಬಿಸಲ್ಪಟ್ಟಿರುವ ಓಕೈಯ ಹೆಂಡತಿಯೇ ಪ್ರತಿಬಾರಿ ಮುದ್ರಿತ ಪ್ರತಿಗಳ ಮೇಲೆ Copy Right ಸೀಲು ಒತ್ತುವ ಕೆಲಸ ಮಾಡುವುದನ್ನು ಅದರ ಸಾಂಕೇತಿಕ, ಭಾವಾತ್ಮಕ ಮತ್ತು ಆರ್ಥಿಕ ಎಲ್ಲ ನೆಲೆಗಳಲ್ಲಿ ಕಾಣಬಲ್ಲ ಓಕೈಯ ಮಗನಿಗೆ ಸ್ವತಃ ತನ್ನ ಶಿಕ್ಷಣದ ವೆಚ್ಚ ಕೂಡಾ ಅದೇ ಕಾದಂಬರಿಯ ಗಳಿಕೆಗೆ ಋಣಿಯಾಗಿದೆ ಎಂಬುದು ಸೂಕ್ಷ್ಮವಾದ ನೋವಿನ ವಿದ್ಯಮಾನ, ವಾಸ್ತವ ಮತ್ತು ಸ್ವೀಕೃತವಾದ ಸತ್ಯವಾಗಿದೆ. ಹಾಗೆಯೇ, ಈ ಎಲ್ಲರಿಗೂ ಕಾದಂಬರಿ ಕೇವಲ ಕಾಲ್ಪನಿಕವಲ್ಲ, ಓಕೈಯ ಜೀವನದ ವಾಸ್ತವವನ್ನು ಕುರಿತಿದೆ ಎಂಬುದರ ಸ್ಪಷ್ಟ ಅರಿವೂ ಇದೆ. ಹಾಗಾಗಿಯೇ ಅದೃಶ್ಯವಾಗಿಯೂ ಯುತುಕೊ ಈ ಎಲ್ಲರ ಭಯ ಕೂಡಾ! ಅದು ದ್ವೇಷ, ಈರ್ಷ್ಯೆ, ಜಿದ್ದು ಇತ್ಯಾದಿ ಎಂಬಂತೆ ಮೇಲ್ನೋಟಕ್ಕೆ ಕಂಡರೂ ಆಳದಲ್ಲಿ ಅದು ಭಯ. ಕಾರಣ ಯುತುಕೊಳ ತಣ್ಣಗಿನ ಜೀವನಯಾಪನೆ.

ಕೂಕೆಗೆ ಓಕೈಯ ಮುಖಾಮುಖಿ ಕಾದಂಬರಿಯ ನಿರ್ಣಾಯಕ ತಿರುವಿಗೆ ಕಾರಣವಾಗುತ್ತದೆ. ಈ ಭೇಟಿಯಾಗಲು ಕಾರಣವೇ ಇಪ್ಪತ್ತು ವರ್ಷಗಳಷ್ಟು ಅಂತರದ ನಂತರ ಪತ್ರಿಕೆಯೊಂದರಲ್ಲಿ ಯುತುಕೊ ಮತ್ತು ಅವಳ ಚಿತ್ರಕಲಾ ಸಾಧನೆಯ ಬಗ್ಗೆ ಬಂದ ಸಚಿತ್ರ ವರದಿ/ಲೇಖನ ಕಂಡು ಉತ್ತೇಜಿತನಾಗಿ ಹೊಸವರ್ಷದ ಮುನ್ನಾರಾತ್ರಿ ಯುತುಕೊ ಜೊತೆ ಕೂತು ದೇವಾಲಯದ ಘಂಟೆಗಳ ಕಿಂಕಿಣಿ ನಾದವನ್ನು ಕೇಳಬೇಕು, ಹಾಗೆ ಕೇಳುವುದೇ ತನ್ನ ಆತ್ಮಶಾಂತಿಗಿರುವ, ಉಳಿದಿರುವ ಒಂದೇ ಒಂದು ದಾರಿ ಎಂಬಂತೆ ಅವಳ ಊರಿಗೆ ಹೊರಡುವ ಓಕೈಯೇ ಹೊರತು ಇನ್ಯಾರೂ ಅಲ್ಲವೆಂಬಂತೆ ಕಂಡರೂ ಹಾಗಿರಲಾರದು ಅನಿಸುತ್ತದೆ! ಇಲ್ಲಿನ ವಿಚಿತ್ರವನ್ನು ಗಮನಿಸಿ. ತಾನು ಸ್ವತಃ ವಿವಾಹಿತನಾಗಿ, ಮಕ್ಕಳೊಂದಿಗನೂ ಆಗಿರುವ ಓಕೈಗೆ ಈಗ ಯುತುಕೊ ಬಗ್ಗೆ ತಿಳಿದಿದ್ದೇ ಹಳೆಯ ಪ್ರೇಮವೆಲ್ಲ ಮತ್ತೊಮ್ಮೆ ಮೇಲ್ಮುಖವಾಗಿ ಉಕ್ಕಿಬಂದಂತಿದೆ. ಈ ಉತ್ಸಾಹದಲ್ಲಿ ಆತ ಮತ್ತೊಮ್ಮೆ ಯುತುಕೊ ಬದುಕು, ಭವಿಷ್ಯದ ಬಗ್ಗೆ ಅಷ್ಟಾಗಿ ಯೋಚಿಸದೇ ಮುಂದಡಿಯಿಡುತ್ತಿದ್ದಾನೆ! ಹೀಗೆ ತನ್ನ ಹಳೆಯ ಪ್ರೇಮದ ಭಾವಾತಿರೇಕಕ್ಕೆ ಮರು ಜೀವ ನೀಡುವ ಅವನ ಪ್ರೇಮದ ಸ್ವಾರ್ಥ ಅನಿವಾರ್ಯವಾಗಿ ದುಬಾರಿಯಾಗುತ್ತದೆ. ಅದಕ್ಕೆ ಕೊಕೆ ರಂಗಪ್ರವೇಶ ಮಾಡಬೇಕಾಗಿ ಬರುವುದು ಕಾದಂಬರಿಯ ಒಂದು ತಾಂತ್ರಿಕ ಅಗತ್ಯ ಕೂಡಾ. ಅಷ್ಟೇನೂ ಉತ್ಸುಕಳಾಗಿಲ್ಲದ ಕೂಕೆಯನ್ನು ರಂಗಕ್ಕೆ ದೂಡುವುದು ಒಂದರ್ಥದಲ್ಲಿ ಸ್ವತಃ ಯುತುಕೊ ಎಂಬುದನ್ನು ಗಮನಿಸಿದರೆ ಆಕೆಯಲ್ಲೂ ಕ್ರೌರ್ಯದ ಬೀಜಗಳಿದ್ದವೇ ಅನಿಸದಿರದು. ಯಾಕೆಂದರೆ, ಓಕೈಯಿಂದ ಬಚಾವಾಗಲು ಅಥವಾ ಓಕೈಗೆ ಒಂದು ಪಾಠ ಕಲಿಸಲು ಅವಳು ಕೊಕೆಯಂಥ ಎಳೆಯ ಹುಡುಗಿಯನ್ನು ಬಳಸಿಕೊಳ್ಳುತ್ತಿಲ್ಲವೆ? ಹಾಗೆ ಬಳಸಿಕೊಳ್ಳುವಾಗ ಸ್ವತಃ ಬದುಕು ಕೆಡಿಸಿಕೊಂಡ ಯುತುಕೊ ತಾನೀಗ ಕೂಕೆಯ ಬದುಕು-ಭವಿಷ್ಯ ಕೆಡಿಸುತ್ತಿದ್ದೇನೆಯೇ ಎಂಬ ಆತ್ಮನಿರೀಕ್ಷಣೆಯನ್ನೇಕೆ ಮಾಡಿಕೊಳ್ಳುವುದಿಲ್ಲ!

ಇತಿಹಾಸದಲ್ಲಿ , ಗತಕಾಲದ ಚರಿತ್ರೆಯಲ್ಲಿ ವಿಶೇಷ ಆಸಕ್ತನಾದ ಓಕೈಯ ಮಗ ಒಂದು ಹಳೆಯ ಸಮಾಧಿಯನ್ನು ಅಗೆದಾಗ ಸಿಕ್ಕಿದ ದೊರೆಮಗಳ ಶವಪೆಟ್ಟಿಗೆಯ ಕತೆ ಹೇಳುತ್ತಾನೆ. ಅಪ್ಪ ಅದನ್ನು ಕತೆ ಅಥವಾ ಕಾದಂಬರಿಯಾಗಿ ಬರೆಯಬೇಕು ಎಂಬ ಅವನ ಹಂಬಲ ಅರ್ಥಪೂರ್ಣವಾಗಿದೆ. ಅದು ಯುತುಕೊ ಮೇಲಿನ ಕಾದಂಬರಿಗಿಂತ ಖ್ಯಾತವಾದಲ್ಲಿ ಬಹುಷಃ ಹೆಚ್ಚು ಸಂತೋಷಪಡುವವನು ಅವನೇ ಆಗಿರುತ್ತಿದ್ದನೇನೊ. ಆದರೆ ಓಕೈಗೆ ಅದರಲ್ಲಿ ಅಂಥ ಆಸಕ್ತಿಯೇನಿಲ್ಲ. ಸಮಾಧಿಯಿಂದ ಹೊರ ತೆಗೆದ ಆಕೆಯ ಅಸ್ಥಿಪಂಜರ ಬಲವಾಗಿ ಆತು ಹಿಡಿದಿದ್ದ ಗಾಜಿನ ಮೇಲಿರುವ ಆಕೆಯ ಪ್ರಿಯಕರನ ಚಿತ್ರ ಎಲ್ಲರ ಕಣ್ಣಿಗೂ ಬಿದ್ದ ಒಂದೇ ದಿನದಲ್ಲಿ ಆವಿಯಾಗಿ ಬರಿಯ ಗಾಜು ಉಳಿದುಬಿಟ್ಟ ಅಚ್ಚರಿಯನ್ನು ಅದೇ ಅವಳ ಮನೋಭಿಲಾಷೆ ಕೂಡ ಆಗಿತ್ತೇ ಎಂಬ ಹೊಳಹಿನಲ್ಲಿ ಗಮನಿಸುವ ಓಕೈ ಅದನ್ನು ಕತೆ - ಕಾದಂಬರಿಯನ್ನಾಗಿಸುವ ಆಸಕ್ತಿಯನ್ನೇನೂ ತೋರಿಸುವುದಿಲ್ಲ. ಆದರೆ ಮಗ ಮಾತ್ರ ಮತ್ತೊಮ್ಮೆ ಅದೇ ಸಮಾಧಿಯನ್ನು ನೋಡುವ ಆಸೆಯಿಂದ ವಿಮಾನವನ್ನೇರಿ ಹೊರಟು ಹೋಗುತ್ತಾನೆ. ಅಲ್ಲಿ ಅವನನ್ನು ಜೇಡದಂತೆ ಹಿಡಿಯಲು ಕೊಕೆ ಕಾದಿರುತ್ತಾಳೆ!

ಕೊಕೆ ತುಂಬ ವಿಲಕ್ಷಣವಾದ, ಅರ್ಥ ಮಾಡಿಕೊಳ್ಳಲು ಕಷ್ಟಕರವಾದ ಸಂಕೀರ್ಣ ಪಾತ್ರ. ಈಕೆ abstract ಚಿತ್ರಗಳ ಬಗ್ಗೆ ಚರ್ಚಿಸುತ್ತಲೇ ಯುತುಕೊ ಬಳಿ ತನ್ನ ನಗ್ನ ಚಿತ್ರ ಬಿಡಿಸುವಂತೆ ದುಂಬಾಲು ಬಿದ್ದು ಕೇಳಿಕೊಳ್ಳುತ್ತಾಳೆ. ಇವರಿಬ್ಬರೂ ಸಲಿಂಗರತಿಯ ಸಂಬಂಧ ಹೊಂದಿದ್ದಾರೆಯೇ ಎಂಬ ಅನುಮಾನ ಬರುವಂತೆ ಯುತುಕೊ ಜೊತೆ ಅತಿಯಾಗಿ ವರ್ತಿಸುವ ಕೊಕೆ ಓಕೈ ಜೊತೆಗೆ ರತಿಸುಖದ ಪರಾಕಾಷ್ಠೆಯಲ್ಲಿ "ಯುತುಕೊ! ಯುತುಕೊ! " ಎಂದು ಮುಲುಗುವುದು ಕುತೂಹಲಕರವಾಗಿದೆ. ಅಥವಾ ಇದು ಕೇವಲ ಓಕೈಗೆ ಶಾಕ್ ನೀಡುವ ತಂತ್ರವಿರಬಹುದೆ? ಅಂಥ ತಂತ್ರಗಾರ ಹೆಣ್ಣು ಕೊಕೆ ಎನ್ನುವುದರಲ್ಲಿ ಅನುಮಾನವಿಲ್ಲ! ಯುತುಕೊಗೆ ಓಕೈ ಮಾಡಿದ ಅನ್ಯಾಯದ ವಿರುದ್ಧ ತಾನು ಸೇಡು ತೀರಿಸಿಕೊಳ್ಳುತ್ತೇನೆ ಎನ್ನುತ್ತಲೇ ಓಕೈ-ಯುತುಕೊರ ಪ್ರೇಮದ ಬಗ್ಗೆ ತನಗೆ ಈರ್ಷ್ಯೆ ಇದೆ ಎನ್ನುತ್ತಾಳೆ. ದ್ವೇಷದಿಂದಲೇ ತಾನು ಓಕೈಯ ಶೀಲಗೆಡಿಸಿದೆ ಎನ್ನುವ ಕೊಕೆ ಓಕೈಯ ಮಗನೊಂದಿಗೆ ಪ್ರೇಮಸಲ್ಲಾಪ, ವಿಹಾರಗಳಿಗಾಗಿ ಸ್ವತಃ ಯುತುಕೊ ನಿಷ್ಠುರ ಕಟ್ಟಿಕೊಂಡೂ ಹಿಂತೆಗೆಯದೆ ಮುಂದುವರಿಯುತ್ತಾಳೆ. ಅವಳಿಗೆ ಅವಳ ಗುರಿ ನಿಖರವಿದೆ, ನಿರ್ಧಾರ ನಿಶ್ಚಲವಾಗಿದೆ. ಅಪ್ಪ ಓಕೈಗೆ ತನ್ನ ಎಡ ಮೊಲೆಯನ್ನು ಮುಟ್ಟಬಾರದೆಂದು ವಿಧಿಸುವ ಕೊಕೆ ಮಗನಿಗೆ ಬಲ ಮೊಲೆಯನ್ನು ಮುಟ್ಟಲು ಬಿಡುವುದಿಲ್ಲ! ಇಬ್ಬರನ್ನೂ ಶೀಲಗೆಡಿಸುವ ಸೇಡಿನ ಮಾತುಗಳನ್ನು ಯುತುಕೊ ಎದುರಿಗೇ ಆಡುವ ಕೊಕೆ ತಾನು ಗಂಡಸರನ್ನು ದ್ವೇಷಿಸುವುದಾಗಿಯೂ ಯುತುಕೊಗಾಗಿ ತಾನು ಏನು ಬೇಕಾದರೂ ಮಾಡುವೆನೆಂದೂ, ಯುತುಕೊ ತನ್ನನ್ನು ಎಂದಿಗೂ ತೊರೆಯಬಾರದೆಂದೂ ಬೇಡಿಕೊಳ್ಳುತ್ತ ಹೇಳುತ್ತಾಳೆ. ಇಷ್ಟಾಗಿಯೂ ಒಂದು ನಿಶ್ಚಿತ ಉದ್ದೇಶವುಳ್ಳ ಕಾಮದಾಟಕ್ಕಿಳಿದ ಈಕೆ ತಾನು ಯಾರದೂ ಶೀಲಗೆಡಿಸಿಲ್ಲ ಎಂದೇ ಬಲಿಯಾದ ಗಂಡಿನೆದುರು ಎದೆಸೆಟೆಸಿ ಹೇಳಬಲ್ಲ ಪಾವಿತ್ರ್ಯವನ್ನು ಮನಸಾ ಕಾಪಾಡಿಕೊಂಡ ಹೆಣ್ಣಾಗಿಯೇ ಉಳಿಯುತ್ತಾಳೆಂಬುದು ಗಮನಾರ್ಹ. ಅವಳ ನಿಷ್ಠೆ, ಪಾವಿತ್ರ್ಯ ಈ ದ್ವೇಷದಿಂದ, ದೇಹ ಸಂಸರ್ಗದಿಂದ ನಲುಗಲಾರದ್ದು. ಅದನ್ನು ಮೀರಿದ್ದು. ಉರಿದು ಬೆಳಗುವಂಥಾದ್ದು ಎಂಬ ಅಚಲ ಬಲದ್ದು. ಎಲ್ಲೋ ಒಂದು ಕಡೆ ಈ ಕೊಕೆ ಇನ್ಯಾರೂ ಅಲ್ಲ, ಯುತುಕೊ ಕಳೆದುಕೊಂಡ, ಸತ್ತಿದೆ ಎನ್ನಲಾದ ಅವಳದೇ ಮಗು ಎನಿಸಿಬಿಟ್ಟರೆ ಅಚ್ಚರಿಪಡುವಂಥದ್ದೇನಿಲ್ಲ ಅಲ್ಲವೆ!!

ಅಖಂಡವಲ್ಲದ ಪ್ರೇಮ, ಬಸಿರು, ವಂಚನೆ, ದ್ವೇಷ, ಕಾಮ, ಕೊಲೆ - ಎಲ್ಲವೂ ಇರುವ ಈ ಕಾದಂಬರಿ ಮುಖ್ಯವಾಗಿ ಯುತುಕೊ ಮತ್ತು ಕೊಕೆ ಕೇಂದ್ರಿತ. ಒಂದು ಅರ್ಥದಲ್ಲಿ ಯುತುಕೊ (Sadness) ಮತ್ತು ಕೊಕೆ (Beauty) ಇಬ್ಬರಲ್ಲ, ಒಬ್ಬರೇ. ಇಬ್ಬರೂ ಸ್ತ್ರೀಯರು, ಚಿತ್ರಕಾರರು ಮತ್ತು ವಿಲಕ್ಷಣವಾಗಿ ಗಂಡಿನಿಂದ ದೂರಾಗಿ ಒಂಟಿಯಾಗಿರುವವರು. ಒಂದೇ ವ್ಯಕ್ತಿತ್ವದ ಎರಡು ಟಿಸಿಲಿನಂತಿದ್ದಾರೆ ಇವರು.

1961ರಲ್ಲಿ ಬಂದ ಈ ಕಾದಂಬರಿ ಮನುಷ್ಯನ ಸಹಜ ತುಡಿತ - ಹಪಹಪಿಕೆಗಳಾದ ಕಾಮ, ಪ್ರೇಮ, ದ್ವೇಷ ಎಲ್ಲವನ್ನೂ ಎಳೆ ಎಳೆಯಾಗಿ ತೆರೆದಿಡುತ್ತ ಸಾಗುತ್ತದೆ. Cosmic Balancing Judgement ಅಲ್ಲದ ಆದರೆ presumably ಅದೇ ಇರಬಹುದೆಂಬಂತೆ ಕಾಣಿಸಲು ಪ್ರಯತ್ನಿಸುವ ಕಾದಂಬರಿ ಈ ಬಗೆಯ balancing ನ್ಯಾಯದ ಮೂಲಕವೂ ಓದುಗನ ಹಂಬಲಗಳನ್ನು ಖುಷಿಪಡಿಸುವುದೇನೂ ಇಲ್ಲ. ಅದು ನಮ್ಮನ್ನು ಒಂದು ವಿಷಣ್ಣ ಭಾವದೊಂದಿಗೆ ನಡು ನೀರಿನಲ್ಲಿ ಕೈಬಿಟ್ಟಂತೆ ಬಿಟ್ಟು ಬಿಡುತ್ತದೆ. ಷೇಕ್ಸ್‌ಪಿಯರನ ಮ್ಯಾಕ್‌ಬೆತ್ ತರ, ಕುರಾಸೊವಾನ RAN ತರ ಮನುಷ್ಯನ Hight ಮತ್ತು Low ಕಾಣಿಸುವುದರೊಂದಿಗೆ ಮೌನವಾಗುತ್ತದೆ.

ಇಂಥ ಒಂದು ಜೀವನಾನುಭವದ ವಿಶಿಷ್ಟ ಕವಲಿನಂತೆಯೇ ಇರುವ Coetzeeಯ Disgrace ಮತ್ತು ಮಿಲನ್ ಕುಂದೇರಾನ ಕಾದಂಬರಿ The Farewell Waltz ಬಗ್ಗೆ ಇನ್ನೆಂದಾದರೂ ಕೊರೆಯುತ್ತೇನೆ ಎಂಬ ಧಮಕಿ ಹಾಕುತ್ತ ಈ ಕಾದಂಬರಿಯ ಒಂದು ಕೋಟೇಬಲ್ ಕೋಟನ್ನು ತೊಡಿಸಿ ಮುಗಿಸುತ್ತೇನೆ...

"ಸಮಯ ಎಲ್ಲರಿಗೂ ಒಂದೇ ತೆರನಾಗಿ ಚಲಿಸುತ್ತಿರುತ್ತದೆ; ಆದರೆ ಎಲ್ಲರೂ ಒಂದೇ ತೆರನಾಗಿ ಸಮಯದೊಂದಿಗೆ ಚಲಿಸುತ್ತಿರುವುದಿಲ್ಲ. ಕೆಲವರಿಗೆ ಕೆಲವು ಸಲ ಸಮಯ ತೀರ ವೇಗವಾಗಿ ಕೆಲವು ಸಲ ತೀರ ನಿಧಾನವಾಗಿ ಚಲಿಸಿದಂತಾಗುತ್ತದೆ, ಗಡಿಯಾರ ಏಕಪ್ರಕಾರವಾಗಿ ನಡೆಯುತ್ತಿದ್ದರೂ. ಮನುಷ್ಯನ ಕಾಲ ಹಾಗೇನೂ ನಡೆಯುವುದಿಲ್ಲ... "


ಆಸಕ್ತರು ಇದೇ ಕಾದಂಬರಿಯ ಮೇಲಿನ ಇನ್ನೆರಡು ಟಿಪ್ಪಣಿಗಳಿಗಾಗಿ ಈ ಯುಆರ್‌ಎಲ್ ಬಳಸಬಹುದು:
ಇನ್ನೊಂದು ನೋಟ
ಮತ್ತೊಂದು ನೋಟ

3 comments:

sush said...

ಚೆನ್ನಾಗಿದೆ ಬ್ಲಾಗ್. ಇಂದಿಬ್ಲೋಗ್ಗೆರ್ ನಲ್ಲಿ ನಿಮಗೆ ಸ್ವಾಗತ.

sush said...

Seems like I have made errors in typing kannada. Anyway, I am also from baliga family of Mangalore. nice to see amchis on Indiblogger and nice blog too.

ನರೇಂದ್ರ ಪೈ said...

Thank you very much. Yesterday I just lost in your blog! Its fantastic...