Sunday, August 28, 2011

ತನ್ನ ಶಿಲುಬೆಯ ತಾನೇ...

ಎಲ್ಲ ಶ್ರೇಷ್ಠ ಲೇಖಕರು ಸಾಹಿತ್ಯದ ಪ್ರೇರಣೆಗಳ ಬಗ್ಗೆ ಮಾತನಾಡುವಾಗಲೆಲ್ಲ ಮನುಷ್ಯ ಎದುರಿಸುವ ಅಪಮಾನಗಳ ಬಗ್ಗೆ ಮಾತನಾಡಿದ್ದಾರೆ. ಅದು ಜಾತಿಯ ಹಿನ್ನೆಲೆಯಲ್ಲಿ, ಹೆತ್ತವರ ಆರ್ಥಿಕ, ಸಾಂಸಾರಿಕ, ಸಾಮಾಜಿಕ ಸ್ಥಾನಮಾನದ ಕುರಿತ, ದೈಹಿಕ ಊನಗಳ ಕುರಿತ ಅಪಮಾನವೋ ಇನ್ನೊಂದೋ. ಅದು ಅಮಾನವೀಯವೆಂಬುದಂತೂ ಖಚಿತ.

ಮನುಷ್ಯ ಜೀವಿ ಮೂಲಭೂತವಾಗಿ ತಾನು ಹುಟ್ಟುವಾಗ ಇದ್ದ ಪರಿಸರ ತನ್ನನ್ನು ಸ್ವೀಕರಿಸಬೇಕು, ನಿರಾಕರಿಸದೆ, ತಿರಸ್ಕರಿಸದೆ ಸಹಿಸಬೇಕೆಂದು ತೀವ್ರವಾಗಿ ಬಯಸುತ್ತದೆ. ಇದನ್ನು ಪುಟ್ಟ ಮಗು ತನ್ನ ತರಗತಿಯಲ್ಲಿ ಮೊದಲ ದಿನ, ಪ್ರಬುದ್ಧ ವ್ಯಕ್ತಿ ತನ್ನ ಕೆಲಸದ ಕಚೇರಿಯಲ್ಲಿ ನೌಕರಿಯ ಆರಂಭಿಕ ದಿನಗಳಲ್ಲಿ, ಮುಂದೆ ಸಮಾಜದಲ್ಲಿಯೂ ನಾವು ನೀವೆಲ್ಲ ಬಯಸುವ ಸ್ಥಿತಿ. ಕೊನೆಗೆ ಒಂದು ಸೋಶಿಯಲ್ ವೆಬ್‌ಸೈಟಿನಲ್ಲಿ, ತನ್ನ ಬ್ಲಾಗಿನ ವಿಷಯದಲ್ಲಿ ನಾವು ಇದನ್ನೇ ಬಯಸುತ್ತೇವೆ, ಮೌನವಾಗಿ ನಿಮ್ಮನ್ನು ಬೇಡುತ್ತೇವೆ.

Disgrace ಕಾದಂಬರಿಯ ಲ್ಯೂರಿಯನ್ನು ನೀವು ಒಪ್ಪುತ್ತೀರೋ ಬಿಡುತ್ತೀರೋ ಎಂಬ ಪ್ರಶ್ನೆ ಬೇರೆ. ಅದು ನಾವು ಈ ಬದುಕಿನಲ್ಲಿ ಒಪ್ಪಿಕೊಂಡ, ಆಚರಿಸುತ್ತಿರುವ ಮೌಲ್ಯಗಳನ್ನು ಅವಲಂಬಿಸಿದೆ. ಇನ್ನು ಕೆಲವೊಮ್ಮೆ ಇತರರು ಹೀಗಿರಬೇಕು, ನಾವು ಹಾಗೆಯೇ ಇರಬೇಕೆಂದೇನಿಲ್ಲ, (ನಿಜಕ್ಕೂ ಹೇಗಿದ್ದೇವೆಂಬುದು ನಿಮಗೆ ತಿಳಿಯದಿರುವ ತನಕ) ಎಂದು ಇರಿಸಿಕೊಂಡ ಮೌಲ್ಯಗಳನ್ನು ಅವಲಂಬಿಸಿದರೂ ಆಶ್ಚರ್ಯವಿಲ್ಲ. ಆದರೆ ಇಲ್ಲಿ ಲ್ಯೂರಿ ಎತ್ತುವ ಪ್ರಶ್ನೆಗಳಿಂದ ಮನುಷ್ಯಕುಲಕ್ಕೆ ಮುಕ್ತಿಯಿಲ್ಲ ಎಂಬುದಂತೂ ಖಂಡಿತ. ಇದನ್ನು ಆದಷ್ಟೂ ಸ್ಪಷ್ಟವಾಗಿ ಸರಳಗೊಳಿಸಿ ಹೇಳಲು ಪ್ರಯತ್ನಿಸುತ್ತೇನೆ.

ಆರಂಭದಲ್ಲಿ ಈ Coetzee ಮತ್ತದೇ ವಯಸ್ಸಾದ ಪ್ರೊಫೆಸರ್ ಮತ್ತು ಎಳೇ ಹುಡುಗಿಯ ನಡುವಿನ ಪ್ರೇಮವಲ್ಲದ ಪ್ರೇಮದಂಥ ಕಾಮ ಹಾಗೂ ಅದರ ಸುತ್ತ ಗಿರಕಿ ಹಾಕುವ ಮನಸ್ಸಿನ ತಲ್ಲಣಗಳ ಬಗ್ಗೆ ತೊಡಗಿದ್ದಾನಲ್ಲ ಅನಿಸುವಾಗಲೇ ಈ ಪ್ರೊಫೆಸರ್ ಲ್ಯೂರಿಯ ಮಗಳು ಲೂಸಿ ತನ್ನ ವಿಲಕ್ಷಣ ಸ್ಥಿತಿ, ಮತಿ, ಛಲ ಮತ್ತು ವಿವೇಕಗಳಿಂದ ತಲ್ಲಣಗಳನ್ನೆಬ್ಬಿಸುತ್ತಾಳೆ. ಈ ಲೂಸಿ ಬದುಕುತ್ತಿರುವುದು ನಗರದಿಂದ ದೂರದಲ್ಲಿರುವ ಒಂದು ಹಳ್ಳಿಯಲ್ಲಿ. ರೈತರು, ಗ್ರಾಮ್ಯ ಪರಿಸರದ ಕಷ್ಟಜೀವಿಗಳು, ಬದುಕು ಮತ್ತು ಸಹಜೀವಿಗಳ ಕುರಿತ ಅವರದೇ ಆದ ಲಾಜಿಕ್, ತತ್ವ, ಅವರು ನಂಬಿದ, ನಡೆಸುವ ಮೌಲ್ಯಗಳು, ಬೆಚ್ಚಿ ಬೀಳಿಸುವ ತಣ್ಣಗಿನ ಕ್ರೌರ್ಯ ಮತ್ತು ಸೌಮ್ಯ ಹೊರಮೈಯನ್ನು ತೋರಿಸುವ ಸಮಾಜ ಇಲ್ಲಿನದು. ಈ ಲೂಸಿ ಬದುಕುತ್ತಿರುವ ಸಮಾಜದ ಒಂದು ಚಿತ್ರ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿ ನಗರದಲ್ಲಿರುವ ಲ್ಯೂರಿಯ ಜಗತ್ತಿನೊಂದಿಗೆ ಎಷ್ಟು ಮಾತ್ರಕ್ಕೂ ತಾಳೆಯಾಗುವುದಿಲ್ಲ ಎನ್ನುವುದು ಮೊದಲಿಗೇ ನಮಗೆ ಮನಸ್ಸಿಗಿಳಿವ ಸತ್ಯ.

ಲ್ಯೂರಿ ಏನು ಮಾಡಿದ, ಏನು ಕಳೆದುಕೊಂಡ, ಏನನ್ನು ತೆತ್ತ ಮತ್ತು ಏನನ್ನು ಪಡೆದುಕೊಂಡ - ಎಲ್ಲವೂ ಮನುಷ್ಯ ಇದ್ದಕ್ಕಿದ್ದಂತೆ ಪೇಟೆಯಲ್ಲಿ ನಗ್ನವಾಗಿ ನಿಂತಂತಿದೆ. ಎಲ್ಲಾ ಬಿಟ್ಟವರು ಊರಿಗೆ ದೊಡ್ಡವರು ಎನ್ನುವಾಗ ನಾವು ಏನನ್ನು ಒಬ್ಬ ವ್ಯಕ್ತಿಯಲ್ಲಿ ಬೆರಳು ತೋರಿಸಿ ಸೂಚಿಸುತ್ತೇವೋ ಆ ಎಲ್ಲ ಬಿಟ್ಟ ವ್ಯಕ್ತಿ ಮತ್ತು ಎಲ್ಲವನ್ನೂ ಬಿಟ್ಟ ಬಾಹುಬಲಿ ಇಬ್ಬರಲ್ಲೂ ಸಾಮಾನ್ಯವಾದದ್ದು ಇರುವುದು ಸಾಧ್ಯವಿದೆ ಎಂಬುದು ಕಟುವಾದ ಸತ್ಯ. ಆ ಎಲ್ಲ ಬಿಟ್ಟವನು ತನ್ನೊಳಗನ್ನು ನೋಡಿಕೊಳ್ಳುವ ಸಾಧ್ಯತೆಯನ್ನುಳಿಸಿಕೊಂಡಿದ್ದರೆ ಎಂದು ಅಲ್ಲಿ ಸೇರಿಸಬೇಕು. Disgraceನ್ನು ಎದುರಿಸುವುದಕ್ಕೂ ಛಾತಿ ಬೇಕಾಗುತ್ತದೆ. ಆತ್ಮಹತ್ಯೆ ಅದು ಇಲ್ಲದವರ ಸುಲಭದ ಆಯ್ಕೆಯಾದರೆ ಆತ್ಮನಿರೀಕ್ಷಣೆ, ಯಾವ ಫಲವಿಲ್ಲದಿದ್ದರೂ, ಎದೆಗಾರರ ಆಯ್ಕೆಯಾಗುವುದು ಸಾಧ್ಯವಿದೆ. ಇಲ್ಲಿ ಪ್ರೊಫೆಸರ್ ಲ್ಯೂರಿಗೆ ಸಂತಸದ, ಉನ್ನತಿಯ, ಚೇತರಿಕೆಯ ಕ್ಷಣಗಳೇ ಇಲ್ಲ, ಎಲ್ಲವೂ Disgraceನಲ್ಲೇ ಕೊನೆಯಾಗುತ್ತಿದೆ. ಆದರೂ ಪತಿತನೆನಿಸಿಕೊಂಡ ಅವನಿಗೊಂದು ಅಮೂರ್ತವೂ ಅನೂಹ್ಯವೂ ಆದ ಗಮ್ಯವಿರುವಂತಿದೆ.

ಪೆದ್ರೂಸ್ ಮತ್ತೊಂದು ಧ್ರುವ. ಇದ್ದೆಲ್ಲಾ ಭೂಮಿ, ಎಳೆಯ ವಯಸ್ಸಿನ ಚಂದದ ಹೆಂಡತಿ, ಸಮಾಜದಲ್ಲಿ ಘನತೆ, ಸುಖ ಎಲ್ಲವನ್ನೂ ದಕ್ಕಿಸಿಕೊಳ್ಳಬಲ್ಲ ಒಳಮಾರ್ಗಗಳನ್ನು ಕಂಡುಕೊಂಡವನು ಅವನು. ಸ್ವಾರ್ಥಿ ಮತ್ತು ಅವಕಾಶವಾದಿಯಾಗಿದ್ದೂ ಅದರ ಬಗ್ಗೆ ಇತರರು ಸೊಲ್ಲೆತ್ತದಂತೆ ತನ್ನ ಸುತ್ತ ಸತ್ ಪ್ರಭಾವಳಿಯನ್ನು ಹರಡಿಕೊಂಡ ನಮ್ಮ ಕೆಲವು ಸಭ್ಯ ಜನನಾಯಕರು, ಮಠದ ಸ್ವಾಮಿ, ಸಂತರಂಥವನು! ಆದರೆ ಇವನು ತಳದಿಂದ ಮೇಲೇರಿದವನು, ಶ್ರಮಜೀವಿ ಕೂಡಾ ಹೌದು. ನಿಮ್ಮ ಗೌರವಕ್ಕೆ ಅಷ್ಟಿಷ್ಟು ಅರ್ಹನಾಗಲು ಬೇಕಾದ್ದೆಲ್ಲ ಇವನ ವ್ಯಕ್ತಿತ್ವದಲ್ಲೇ ಇದೆ, ಇದ್ದೇ ಇದೆ.

ಪ್ರೊಫೆಸರ್ ಲ್ಯೂರಿ, ಅವನ ಮಗಳು ಲೂಸಿ, ದೂರವಿರುವ ಈಕೆಯ ತಾಯಿ (ಲ್ಯೂರಿಯ ಒಂದು ಕಾಲದ ಹೆಂಡತಿ) ಒಂದು ವಿಘಟಿತ ಕುಟುಂಬ. ಇವರ ಲೈಂಗಿಕ ಸಾಹಸಗಳು, ಮಗಳ ಬದುಕಿನ ದುರಂತ, ಒಟ್ಟಾರೆಯಾಗಿ ಎದ್ದು ಕಾಣುವ ಅತಂತ್ರವಾದ ಒಂದು ಸ್ಥಿತಿಯ ಜೊತೆ ಪೆದ್ರೂಸ್ ತರದ ಅವಕಾಶವಾದಿ ಲೂಸಿಯ ಆಸ್ತಿಗಾಗಿ, ಅವಳ ದೇಹಸುಖಕ್ಕಾಗಿ ಚಾಚುವ ಕಬಂಧ ಬಾಹುಗಳು ಇನ್ನಷ್ಟು ವಿಸಂಗತಿಗಳಿಗೆ, ದುರಂತಗಳಿಗೆ, ಅಪಮಾನಗಳಿಗೆ ಕಾರಣವಾಗುತ್ತದೆ. ಆದರೆ ಅದೆಲ್ಲ ಕಥಾನಕದ ನೆಲೆಯಲ್ಲಿ ಉಳಿಯುವುದಿಲ್ಲ. ಈ ಎಲ್ಲವೂ ವೈಯಕ್ತಿಕವಾಗಿ ಪ್ರೊಫೆಸರ್ ಲ್ಯೂರಿಯ ವರ್ತಮಾನದೊಂದಿಗೆ ನಡೆಸುವ ಸಂಘರ್ಷ ಹೊಸ ಸತ್ಯಗಳನ್ನು ನಮಗೆ ಕಾಣಿಸಲು ಉದ್ಯುಕ್ತವಾಗಿರುವಂತಿದೆ. ನಾವು ಅವುಗಳಿಗೆ ತಯಾರಾಗಬೇಕಿದೆ ಅಷ್ಟೆ. ಮಗಳ ವಯಸ್ಸಿನ ವಿದ್ಯಾರ್ಥಿನಿಯನ್ನು ದೇಹಸುಖಕ್ಕಾಗಿ ಬಳಸಿಕೊಂಡ ಪ್ರೊಫೆಸರ್ ಲ್ಯೂರಿ ಮತ್ತು ಇದೇ ಪ್ರೊಫೆಸರ್ ಲ್ಯೂರಿಯ ಮಗಳ ದೇಹ, ಭೂಮಿಗಾಗಿ ಬಾಯ್ತೆರೆದು ಕೂತ ನಡುವಯಸ್ಸಿನ ಪೆದ್ರೂಸ್ ಒಂದೇ ಪಾತಳಿಯಲ್ಲಿ ನಿಂತಿದ್ದರೂ ಪ್ರೊಫೆಸರ್ ಲ್ಯೂರಿಗೆ ಪೆದ್ರೂಸ್ ಎಂದರೇ ಮೈಯುರಿಯುವುದು ತಮಾಷೆಯೋ, ವ್ಯಂಗ್ಯ ವಿಡಂಬನೆಯೋ ಅಲ್ಲ. ಅದು ಪ್ರೊಫೆಸರ್ ಲ್ಯೂರಿಯಲ್ಲಿ ಪಾಪಪ್ರಜ್ಞೆಯನ್ನು ಉದ್ದೀಪಿಸುತ್ತಿದೆ ಎಂದುಕೊಳ್ಳಬೇಕಿಲ್ಲ. ಇಲ್ಲಿ ಸಮಾನವಾದದ್ದು ಇರುವಂತೆಯೇ ಸಮಾನವಲ್ಲದ್ದು ಕೂಡ ಇದೆಯಲ್ಲವೆ! ತನ್ನ ಮಗಳ ಪ್ರಾಯದ ತನ್ನದೇ ವಿದ್ಯಾರ್ಥಿನಿಯ ‘ಶೀಲ’ ಹರಣ ಮಾಡುವ ಪ್ರೊಫೆಸರ್ ಲ್ಯೂರಿ ಮತ್ತು ತನ್ನ ಮಗಳನ್ನು ತನ್ನ ಸಾನ್ನಿಧ್ಯದಲ್ಲೇ group rape ಮಾಡಿದ, ಹಾಗೆ ಮಾಡಿಸಿದ ಖದೀಮರ ಬಗ್ಗೆ ಕುದಿಯುವ ಲ್ಯೂರಿ. ಈ ಸಂಕೀರ್ಣ ವಿದ್ಯಮಾನಗಳ ನಡುವೆಯೇ ಗ್ರಾಮ್ಯ ಜೀವನವನ್ನು, ಭೂಮಿಯನ್ನು ಆಶ್ರಯಿಸಿಕೊಂಡು, ಇಲ್ಲೇ ತನ್ನ ಬದುಕು ಬೇರಿಳಿಸಿದೆ ಎಂಬ ಹಠದಿಂದೆಂಬಂತೆ ಅಲ್ಲೇ ನೆಲೆಯೂರುವ ಸಂತ್ರಸ್ತ ಲೂಸಿ ಇದ್ದಾಳೆ. ಲೂಸಿಗೆ ಇದು ಬಿಟ್ಟರೆ ಬೇರೆ ಇಲ್ಲ ತನಗೆ ನೆಲೆ ಎಂಬ ನಿಶ್ಚಿತ ನಿರ್ಧಾರವಿದೆ. ಲ್ಯೂರಿಗೆ ಅಂಥ ಛಲವಿಲ್ಲ. ಅವನಿಗೆ ಹೋರಾಟ ಬೇಕಿಲ್ಲ. ಎಲ್ಲಿ ತಣ್ಣಗೆ, ತೆಪ್ಪಗೆ ನೆಮ್ಮದಿಯಿಂದ ಬದುಕುವುದು ಸಾಧ್ಯವೋ ಅಲ್ಲಿಗೆ ಅವನು shift ಆಗಬಲ್ಲ. ಒಂದು ಮೊಂಡುತನದಂತೆ ಇನ್ನೊಂದು ಪಲಾಯನದಂತೆ ಇದೇನೂ ಕಾಣಬೇಕಿಲ್ಲ ಎನ್ನುವುದು ಮುಖ್ಯ.

ಇಲ್ಲಿ ನಾಯಿಗಳಿವೆ. ಪರಿತ್ಯಕ್ತ ಮತ್ತು ಮುದಿಯಾಗಿ ಸಾಯಲೆಂದೇ ಇರುವ ನಾಯಿಗಳು. ಸಾಕಿದವರಿಗೆ ಅವು ಇನ್ನು ಬೇಡ ಅನಿಸಿಬಿಟ್ಟಿದೆ. ಆದರೆ ಅವರು ಕೊಲ್ಲರಾರರು. ಹಾಗಾಗಿ ಕೆಲವು ಕಾಲ ಸಾಕಿ ಸರದಿಯಲ್ಲಿ ಕೊಲ್ಲಲು ಒಂದು ವ್ಯವಸ್ಥೆ, ಸ್ವಯಂಸೇವಕ ನೆಲೆಯಲ್ಲಿ ನೀಡುವ ಸೇವೆ, ಕೊಲ್ಲುವ ಸೇವೆ ಅವರಿಗೆ ಬೇಕಿದೆ. ಈ ಪ್ರಾಣಿಗಳಿಗೊಂದು ಘನತೆಯ ಸಾವು ಮತ್ತು ಸಂಸ್ಕಾರ ಕೂಡ ದೊರಕಿಸಿಕೊಡುವುದು ಇವರ ಕೆಲಸ. ಬಹುಷಃ ಇನ್ನೂ ಇವುಗಳನ್ನು ಪೋಷಿಸಲಾರದ ಮನುಷ್ಯನ ನಿಷ್ಠೆಯಿಲ್ಲದ, ಬದ್ಧತೆಯಿಲ್ಲದ ಚರ್ಯೆಗೂ ಘನತೆಯೊದಗಿಸುತ್ತಿದ್ದಾರೆ ಇವರು! ಎಲ್ಲೋ ಈ ಪ್ರಾಣಿಗಳೊಂದಿಗೆ ಮುದಿಯಾಗಿ ನೋಡಿಕೊಳ್ಳುವವರಿಲ್ಲದ ಮನುಷ್ಯನಿಗೂ ಸಮಾನವಾದದ್ದು ಇರುವಂತೆ ಕಾಣಿಸುವುದಿಲ್ಲವೆ! ಪ್ರೊಫೆಸರ್ ಲ್ಯೂರಿ ಇಲ್ಲಿ ಸ್ವಯಂಸೇವಕನಾಗಿ ಸೇರಲು, ಹಾಗೆ ಮಗಳೊಂದಿಗೆ ಹಳ್ಳಿಯಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ.

ಹಾಗೆ ಶೀಲಗೆಡಿಸುವಂತೆ ಮಾಡಿ, ಲೂಟಿ ಮಾಡುವಂತೆ ಮಾಡಿ, ಭಯೋತ್ಪಾದನೆ ಮಾಡಿ ನಂತರ ರಕ್ಷಣೆಗಾಗಿ ತನ್ನನ್ನೇ ಮದುವೆಯಾಗು ಎನ್ನುವ, ಲೂಸಿಯ ಆಸ್ತಿಯನ್ನು ಲಪಟಾಯಿಸುವ ಸಂಚಿನ ಪೆದ್ರೂಸ್. ಒಂಟಿ ಹೆಣ್ಣು ಇಲ್ಲೇ ಬದುಕುವುದಾದರೆ ಹಾಗೂ ಮತ್ತೆ ಮತ್ತೆ ಬಲಾತ್ಕಾರ, ಲೂಟಿಗಳಿಂದ ಮುಕ್ತವಾಗಿ ಬದುಕಬೇಕೆಂದರೆ ಇಂಥ ಅಸಮ-ಅಸಹಜ ದಾಂಪತ್ಯವನ್ನು ಒಪ್ಪಿಕೊಳ್ಳುವುದೊಂದೇ ಉಳಿದಿರುವ ಆಯ್ಕೆ ಎನ್ನುವ ಪೆದ್ರೂಸ್‌ನ ನಿಲುವನ್ನು, ಅದರ ಅನಿವಾರ್ಯವನ್ನು ಒಪ್ಪಿಕೊಳ್ಳುವ ಲೂಸಿ. ತನ್ನದೇ ವಿದ್ಯಾರ್ಥಿನಿಯನ್ನು ರೇಪ್ ಮಾಡಿದ ಆರೋಪಕ್ಕೆ ಗುರಿಯಾಗಿ ಪತ್ರಿಕೆಗಳಲ್ಲಿ ಮಾನ ಮರ್ಯಾದೆ ಹರಾಜು ಹಾಕಿಸಿಕೊಂಡು ವಿಚಾರಣೆಯನ್ನೆದುರಿಸುತ್ತಿರುವ ಅಪ್ಪ ಲ್ಯೂರಿಗೆ ಲೂಸಿ ಜೀರ್ಣವಾಗುವುದಿಲ್ಲ. ಯಾಕೆ ಲೂಸಿ ಇಲ್ಲೇ ಉಳಿಯುವ ಹಠಕ್ಕೆ ಬಿದ್ದಿದ್ದಾಳೆ ಎನ್ನುವುದು ಅವನಿಗೆ ಅರ್ಥವಾಗುವುದಿಲ್ಲ. ಅವನನ್ನು ಸಂಪರ್ಕಿಸುವ ಹಳೆಯ ಹೆಂಡತಿಗೆ ತನ್ನದು ಬಲಾತ್ಕಾರವಾಗಿರಲಿಲ್ಲ, ಆ ಹುಡುಗಿಯನ್ನು ತಾನು ಕೂಡಿದ್ದು ನಿಜ ಎನ್ನುವ ಲ್ಯೂರಿಗೆ ಹೆಂಡತಿ ಒಂದು ಪ್ರಶ್ನೆ ಕೇಳುತ್ತಾಳೆ, ಅದೇನು ಎಳೆಯ ಹುಡುಗಿ ನಿನ್ನಂಥ ಮುದುಕನನ್ನು ಕೂಡಲು ಕಾತರಿಸುತ್ತಿದ್ದಳು ಎಂದುಕೊಂಡಿದ್ದೀಯಾ ನೀನು? ಎಂಬುದು ಪ್ರಶ್ನೆ. ಹಾಗಿದ್ದರೆ ಅಂಥ ಭ್ರಮೆಗಳಿಂದ ಬೇಗ ಹೊರಗೆ ಬಾ ಎನ್ನುವುದು ಅವಳ ಸಾಂತ್ವನ. ನಡುವೆ ಮಗಳಿಗೆ ಸಾಥ್ ನೀಡುವ, ನಾಯಿಗಳನ್ನು ಸಾಯಿಸುವ, ಸತ್ತ ನಾಯಿಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಂಡು ಚಿತಾಗಾರಕ್ಕೊಯ್ದು ಸಂಸ್ಕಾರ ಕೊಡಿಸುವ ಸಮಾಜಸೇವೆ. ಇಲ್ಲಿನ ಮುಖ್ಯಸ್ಥೆಯೊಬ್ಬಳನ್ನು ಅವಳು ದರಿದ್ರವಾಗಿ ಕಾಣುವ ನಡುವಯಸ್ಸಿನವಳಾಗಿದ್ದೂ ಕೂಡುವ, ಸುಖಿಸುವ ಈ ನಾಯಿಗಳನ್ನು ಸಾಯಿಸುವ ಸ್ವಯಂಸೇವಕನಾಗಿ ಬದಲಾಗಿರುವ ಪ್ರೊಫೆಸರ್ ಲ್ಯೂರಿ ಅಸಹ್ಯವನ್ನು ಮೀರುವ ನೆಲೆಗಳನ್ನು ನಾವು ಸ್ವಲ್ಪ ಸೂಕ್ಷ್ಮವಾಗಿ ಮತ್ತು ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ.

ಮಾನವ ಸಹಜ ಲೈಂಗಿಕ ಕಾಮನೆಯಿಂದ ಕಿರಿಯ ವಯಸ್ಸಿನ ಹುಡುಗಿ(ಮಗಳ ಸಮಾನ, ತನ್ನದೇ ವಿದ್ಯಾರ್ಥಿನಿ ಎಂಬ ವಿಶೇಷಣಗಳನ್ನೆಲ್ಲ ಬಿಟ್ಟು ನೋಡಲು ನಮಗೆ ಸಾಧ್ಯವಾದರೆ ಒಳ್ಳೆಯದು)ಯನ್ನು ಕೂಡಿದ್ದು (ಬಲಾತ್ಕಾರದಿಂದಲ್ಲ, ಒಲಿಸಿಕೊಂಡು) ಒಂದು ಅಪರಾಧ ಎನ್ನುವುದಾದರೆ human instinct ಒಂದು Crime ಎನ್ನಬೇಕೇ ಎನ್ನುವ ನೆಲೆಯಿಂದ ಪ್ರಶ್ನಿಸುವ ಲ್ಯೂರಿ ಒಂದು ಕತೆ ಹೇಳುತ್ತಾನೆ.

ಲ್ಯೂರಿ ಚಿಕ್ಕಂದಿನಲ್ಲಿ ತನ್ನ ಪಕ್ಕದ ಮನೆಯವನ ಒಂದು ನಾಯಿಯನ್ನು ಗಮನಿಸುತ್ತಿದ್ದ. ಆತ ನಾಯಿಯನ್ನೇನೊ ಪ್ರೀತಿಯಿಂದಲೇ ಚೆನ್ನಾಗಿಯೇ ಸಾಕುತ್ತಿದ್ದ. ಆದರೆ ಆ ನಾಯಿ ತನ್ನ ಲೈಂಗಿಕ ಉನ್ಮತ್ತಾವಸ್ಥೆಯಲ್ಲಿ ಹೆಣ್ಣು ನಾಯಿಗಾಗಿ ತಹತಹಿಸಿ ಊಳಿಡುವಾಗ ಮಾತ್ರ ಅದು ಅರ್ಥವಾದರೂ ಅದರ ಅಗತ್ಯವನ್ನು ಪೂರೈಸುವ ಯೋಚನೆ ಮಾಡದೆ, ಅದಕ್ಕಾಗಿ ಕಷ್ಟಪಡುವ ಮನಸ್ಸಿಲ್ಲದೆ ನಾಯಿಯನ್ನು ಛಾಟಿ ಏಟಿನಿಂದ ಶಿಕ್ಷಿಸುತ್ತಿದ್ದ. ಹಾಗೆ ಶಿಕ್ಷಿಸಿ ಶಿಕ್ಷಿಸಿ ಕೊನೆಕೊನೆಗೆ ನಾಯಿಗೆ ತನ್ನ ಅಭೀಪ್ಸೆಯೇ ತಪ್ಪಿರಬೇಕನಿಸತೊಡಗಿರಬೇಕು, ಅದು ತನ್ನ ಸಹಜ ಕಾಮನೆಯನ್ನೇ ದ್ವೇಷಿಸತೊಡಗಿತು! ಎಷ್ಟರಮಟ್ಟಿಗೆ ಎಂದರೆ, ತನಗೆ ತಡೆಯಲಾರದ ಕಾಮಾಕಾಂಕ್ಷೆಯಾದಾಗಲೆಲ್ಲ ತನ್ನನ್ನು ಶಿಕ್ಷಿಸು ಎನ್ನುವಂತೆ ಅದೇ ಯಜಮಾನನ ಬಳಿ ಬರತೊಡಗಿತು!

Human instinct ಎಂಬ ಕಾರಣಕ್ಕೇ ಅದನ್ನು uncontrolled ಆಗಿ ಇರಲು ಬಿಟ್ಟುಬಿಡಬೇಕು, ಸ್ವೇಚ್ಛಾಚಾರ ಸರಿಯಾದುದು ಎಂದೇನೂ ಹೇಳುತ್ತಿಲ್ಲ ಲ್ಯೂರಿ. ಮಗಳ ಮೇಲೆ ಗುಂಪೊಂದು ಸಾಮೂಹಿಕವಾಗಿ ಬಲಾತ್ಕಾರ ಮಾಡಿದ್ದನ್ನು ಒಪ್ಪಲಾರದ ಲ್ಯೂರಿ ವಯಸ್ಸು ಮೀರಿದ ಪೆದ್ರೂಸ್ ತನ್ನ ಮಗಳ ಕೈ ಹಿಡಿಯಲು ಬಯಸುವುದನ್ನೂ ಜೀರ್ಣಿಸಿಕೊಳ್ಳಲಾರ. ವಯಸ್ಸಾದವನು ಎಂಬ ಕಾರಣಕ್ಕೆ ಮಾತ್ರವಲ್ಲ ( ಆ ಕಾರಣಕ್ಕೂ ಹೌದು), ಆತನ ಮೂಲ ಉದ್ದೇಶ ಭೂಮಿಯನ್ನು ಒಳಹಾಕುವುದು, ಅದರಲ್ಲಿ ಪ್ರೀತಿಯಿಲ್ಲ ಎನ್ನುವುದು ಕೂಡ.

ಲ್ಯೂರಿಗೆ ಶಿಕ್ಷೆಯಾಗುತ್ತದೆ. ಅವನು ತನ್ನ ವೃದ್ಧಾಪ್ಯದ ಕೊನೆಯ ದಿನಗಳಲ್ಲಿ ಕೆಲಸವಿಲ್ಲದೆ, ಗಳಿಕೆಯ, ನಿವೃತ್ತಿಯ ಹಣವನ್ನು ಕೂಡ ಹಿಂದಕ್ಕೆ ಪಡೆಯಲಾರದೆ ಕಷ್ಟಕರವಾದ ದಿನಗಳ ಭವಿಷ್ಯಕ್ಕೆ ಸಜ್ಜಾಗಬೇಕಾಗುತ್ತದೆ. ಅವನಿಲ್ಲದಾಗ ಅವನ ಕ್ವಾರ್ಟರ್ಸಿನ ಬೀಗ ಮುರಿದು ಲೂಟಿಯಾಗುತ್ತದೆ. ಸ್ನೇಹಿತರು, ಪತ್ರಿಕೆಯವರು, ಆಸುಪಾಸಿನವರು ಅವನನ್ನು ತಪ್ಪಿಸಿಕೊಂಡು ತಿರುಗುತ್ತಾರೆ. ಅವನ ಮಾತಿಗೆ ನಿಲ್ಲಲು ಕೂಡ ಮನಸ್ಸಿಲ್ಲದೆ ಅವರು ಓಡುತ್ತಿರುವುದು ಅವನ ಗಮನಕ್ಕೆ ಬರುತ್ತದೆ. ತಾನು ಪರಿತ್ಯಕ್ತ ಮತ್ತು ಘೋರವಾದ ಏನನ್ನೋ ಮಾಡಿರಬೇಕು ಎಂಬ ಭಾವ, ಪತಿತಭಾವವನ್ನು ಈ ಎಲ್ಲರೂ ಅವನಲ್ಲಿ ತುಂಬಲು ಪ್ರಯತ್ನಿಸಿದರೂ ಲ್ಯೂರಿ ಅದರಿಂದ ಪಲಾಯನವನ್ನೇನೂ ಬಯಸುತ್ತಿಲ್ಲ. ಬದಲಿಗೆ ಅವನು ಅದನ್ನು ಮುಖಾಮುಖಿ ಎದುರಿಸಲು ಸಜ್ಜಾದವನಂತೆ, ಈ ಮುಖಾಮುಖಿಯೇ ಅವನಿಗೆ ತನ್ನ ಕೃತ್ಯ ನಿಜಕ್ಕೂ ಘೋರವೂ ಅಮಾನವೀಯವೂ ಆಗಿದ್ದರೆ ಅದನ್ನು ಕಂಡುಕೊಳ್ಳುವ ಅಥವಾ ತನ್ನೆದುರಿನ ಮನುಷ್ಯನ ನಿಲುವು ತಪ್ಪಾಗಿದ್ದರೆ ಅವನಿಗೆ ಅದನ್ನು ಕಂಡುಕೊಳ್ಳಲು ನೆರವಾಗುವ ಉದ್ದೇಶವಿರುವಂತಿದೆ. ಪಾಪವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಣುವುದು ಸಾಧ್ಯವಾದರೆ ಅದರ ಮಾನವೀಯ ಮುಖಗಳೂ, ರಾಕ್ಷಸೀ ಭಾವಗಳೂ ಒಡೆದು ಕಾಣಲು ಸಾಧ್ಯವಿದೆ ಎನ್ನುವ ಅದಮ್ಯ ವಿಶ್ವಾಸವೇ ಅವನನ್ನು ಮುನ್ನಡೆಸುತ್ತದೆ, ಕೆಲಸವಿಲ್ಲದೆ, ಗೌರವವಿಲ್ಲದೆ, ನೆಲೆಯಿಲ್ಲದೆ ಕುಸಿದು ಹೋಗಬೇಕಾದ ಪತಿತ ಘಳಿಗೆಗಳಲ್ಲಿ ಲ್ಯೂರಿ ನಡೆದುಕೊಳ್ಳುವ ರೀತಿ ಗಮನಾರ್ಹವಾಗಿದೆ, ಕನಿಷ್ಠ ಅದರ ಗಮ್ಯ ನಮಗೆ ತೋರಿಸಬಹುದಾದ ಜೀವನದರ್ಶನಕ್ಕಾಗಿಯಾದರೂ.

ಮತ್ತೆ ತಾನಾಗಿಯೇ ಲ್ಯೂರಿ ತನ್ನಿಂದ ಲೈಂಗಿಕ ಅನ್ಯಾಯಕ್ಕೊಳಗಾದ ಹುಡುಗಿಯ ತಂದೆ ಐಸ್ಸಾಕ್‌ನ ಕುಟುಂಬವನ್ನು ಹುಡುಕಿಕೊಂಡು ಹೋಗಿ ಭೇಟಿಯಾಗುತ್ತಾನೆ. ಅದು ಒಂದು ವಿಲಕ್ಷಣವಾದ ಭೇಟಿ. ಅದರ ತಾಂತ್ರಿಕ ನೇಯ್ಗೆ ಕೂಡ ಕುತೂಹಲಕರವಾಗಿದೆ. ಮೊದಲು ಐಸಾಕ್ ಮನೆಗೆ ಹೋದ ಲ್ಯೂರಿಗೆ ಅಲ್ಲಿ ಸಿಗುವುದು ಹುಡುಗಿಯ ತಂಗಿ. ಅವಳು ಅದಷ್ಟೇ ಯೌವನಕ್ಕೆ ಕಾಲಿರಿಸುತ್ತಿರುವ ಎಳೆ ತರುಣಿ. ಅವಳ ಅಕ್ಕನನ್ನೇ ಹೋಲುತ್ತಿದ್ದಾಳೆ. ಅವಳೊಂದಿಗೆ ಲ್ಯೂರಿ ಎಷ್ಟು ಸಹಜವಾಗಿ, ಸಭ್ಯನಾಗಿ ವರ್ತಿಸುತ್ತಾನೆಂದರೆ ಹುಡುಗಿ ಅವನಿಂದ ಪ್ರಭಾವಿತಳಾಗುತ್ತಾಳೆಂಬಷ್ಟು. ನಂತರ ಐಸಾಕನ ಶಾಲೆಗೇ ಹೋಗಿ ಅವನನ್ನು ಭೇಟಿಯಾಗಿ ಪುನಃ ಆತನ ಮನೆಗೆ ಅವನೊಂದಿಗೆ ಮರಳುವ ಲ್ಯೂರಿ ಬದಲಾದ ಹುಡುಗಿಯನ್ನೂ, ಅದಕ್ಕಿಂತ ಕಟುವಾದ ತಾಯಿಯನ್ನೂ ಎದುರಿಸಬೇಕಾಗುತ್ತದೆ. ಐಸಾಕ್ ಒಳಗೆ ಹೋಗಿ ಈತನೇ ತಮ್ಮ ಮಗಳ ಬದುಕು ಕೆಡಿಸಲು ಯತ್ನಿಸಿದವನು ಎಂದು ಪರಿಚಯಿಸಿದ ಫಲ. ಐಸಾಕನ ಹೆಂಡತಿಯಂತೂ ಅತಿಥಿಯನ್ನು ನಡೆಸಿಕೊಳ್ಳುವಂತೆ ಲ್ಯೂರಿಯನ್ನು ನಡೆಸಿಕೊಳ್ಳಲು ಕೂಡ ಸಿದ್ಧಳಿಲ್ಲ. ಲ್ಯೂರಿ ಅಲ್ಲಿಂದ ನಡುವೆಯೇ ಹೊರಬೀಳಬೇಕಾಗುತ್ತದೆ ಎಂಬುದು ನಿಜವೇ. ಆದರೆ ಆತ ತನ್ನ ಈ ಧಾರ್ಷ್ಟ್ಯದಿಂದ ಏನನ್ನೋ ಸಾಧಿಸಿದ್ದಾನೆಂಬುದು ಕೂಡ ಅಷ್ಟೇ ನಿಜ. ಅವರ ಎಳೆಯ ಮಗಳ ಜೊತೆ ಲೈಂಗಿಕವಾಗಿ ವ್ಯವಹರಿಸಿದ ತನ್ನ ನಾಚಿಕೆಗೇಡಿತನಕ್ಕೆ ಮುಖಾಮುಖಿಯಾಗಲು, ಅಪಮಾನವನ್ನು ಎದುರುಗೊಳ್ಳಲು, ಎಲ್ಲರೂ ಬಯಸಿದ ಕ್ಷಮೆ ಕೋರುವ ವಿದ್ಯುಕ್ತ ಪ್ರಕ್ರಿಯೆಯನ್ನು ಮಾತು-ಭಾವದ ಮುಖೇನ ‘ಮಾಡಿ’ ತೋರಿಸಲು (ವಾಸ್ತವವಾಗಿ ಲ್ಯೂರಿ ಕೇವಲ ಒಂದು human instinct ಗೆ ಬಲಿಯಾಗಿ, ಒಲಿದು ನಡೆದ ದೈಹಿಕ ಸಮಾಗಮದ ಬಗ್ಗೆ ಯಾವುದೇ ಪಾಪ-ಭಾವ ಇಟ್ಟುಕೊಂಡೇ ಇಲ್ಲ ಎಂಬುದಿಲ್ಲಿ ಮುಖ್ಯ) ಮುಂದಾಗುವುದು ಅದರ ಹಾಸ್ಯಾಸ್ಪದ ನೆಲೆಗಳನ್ನು ತೋರಿಸಬೇಕು. ಶಿಕ್ಷೆ ವಿಧಿಸಲು ಕಾತರರಾದ ಮಂದಿ, ಶಿಕ್ಷೆಯನ್ನು ನಿರ್ಧರಿಸಲು ಉತ್ಸುಕರಾದ ಮಂದಿ ಮತ್ತು ಅದನ್ನು ಪತಿತನೆಂದು ಪರಿಗಣಿಸಲ್ಪಟ್ಟ ವ್ಯಕ್ತಿಯೂ ಒಪ್ಪಿ ತಲೆತಗ್ಗಿಸಿ ಪಾಪಪ್ರಜ್ಞೆಯಿಂದ ಕುಗ್ಗಿ ಹೋಗುವುದನ್ನು ಕಾಣಬಯಸಿದ ಮಂದಿ all said and done ಒಂದು ಸೂಕ್ಷ್ಮ ಎಳೆಯನ್ನು ಗಮನಿಸುತ್ತಲೇ ಇಲ್ಲವೆಂಬುದು ಲ್ಯೂರಿಯ ಮೌನ ಅಳಲು. ಸಮಾಜ ವಿಧಿಸಿದ ಮತ್ತು ಮನುಷ್ಯ ಸಮಾಜದ ಮುಖೇನ ತನ್ನ ಮೇಲೆ ವಿಧಿಸಿಕೊಂಡ ಮೌಲ್ಯಗಳ ಹೊರೆಯನ್ನು, ಬಲೆಯನ್ನು, ಸೆರೆಯನ್ನು ಒಂದು ಕ್ಷಣ ನಿವಾರಿಸಿಕೊಂಡು ಕೇವಲ ಮನುಷ್ಯರಾಗಿ ಯೋಚಿಸಿದರೆ ಇದು ಗಂಡು ಹೆಣ್ಣು ಇಚ್ಚಾನುಸಾರ ಕೂಡಿದ್ದಕ್ಕಿಂತ ಹೆಚ್ಚಿನದೇನೂ ಆಗಿರಲಿಲ್ಲ ಎಂಬುದು ಆ ಅಳಲು. ಇದಕ್ಕೆ ಲೂಸಿಯ ನೆಲೆಯಿಂದ ಇನ್ನೊಂದೇ ಭಾಷ್ಯವಿದೆ ಎಂಬುದನ್ನು ಲ್ಯೂರಿಯನ್ನು ಮೀರಿ ಕಾದಂಬರಿ ತನ್ನ ಓದುಗನಿಗೆ ತೋರಿಸುತ್ತಿದೆ. ಹಾಗೆಯೇ ಲೈಂಗಿಕ ಪಿಪಾಸೆಗೆ ಬಳಸಲ್ಪಟ್ಟ ಹುಡುಗಿಯನ್ನೂ ಲ್ಯೂರಿ ಮತ್ತೆ ಮತ್ತೆ ಕಾಣಲು ಪ್ರಯತ್ನಿಸುವುದರಿಂದಾಗಿ ಅವಳು ಯಾವ ಹಾದಿ ಹಿಡಿದಳು, ಮುಂದಿನ ದಿನಗಳನ್ನು, ಭವಿಷ್ಯವನ್ನು ಏನು ಮಾಡಿಕೊಂಡಳು ಎನ್ನುವುದು ನಮಗೆ ತಿಳಿಯುತ್ತಿದೆ. ಹಾಗೆ ಅವಳ ನಿಟ್ಟಿನಿಂದಲೂ ಲ್ಯೂರಿಯ ಪಾಪವನ್ನು ನಾವು ಕಾಣಬಹುದಾಗಿದೆ. ಇವು ಎಲ್ಲ ನ್ಯಾಯಾಧೀಶ ಸ್ಥಾನದಿಂದ ಪರರನ್ನು ತೂಗಬಲ್ಲ ಪ್ರಜ್ಞಾವಂತ ಸಭ್ಯ ನಾಗರಿಕರ ನೆಲೆಗೆ ಭಿನ್ನವಾದ ಆಯಾಮಗಳು. ಈ ನ್ಯಾಯಾಧೀಶ ಸ್ಥಾನವನ್ನು ಬೇಕೆಂದಾಗ ಬೇಕಾದವರು ಏರಿ ತಮ್ಮ ಪಾಡಿಗೆ ತಾವು ತಮ್ಮ ಘನಂದಾರಿ ಕರ್ತವ್ಯವನ್ನು ನಿರ್ವಹಿಸುತ್ತಲೇ ಇರುತ್ತಾರೆ, ಇವತ್ತಿಗೂ ನಾವಿದನ್ನು ಎಲ್ಲಾ ಕಡೆ ಕಾಣುತ್ತಲೇ ಇದ್ದೇವೆ. ಆದರೆ ಹಾಗೆ ಎಂದಿಗೂ ಸತ್ಯವನ್ನು ಸಮೀಪಿಸಲಾರೆವು ಎಂಬುದು ವಾಸ್ತವ.

ಲೂಸಿ ಯಾವುದೇ ಕಾರಣಕ್ಕೆ ತನ್ನ ಹೊಲಮನೆಯನ್ನು ಬಿಟ್ಟು ದೂರ ಇನ್ನೆಲ್ಲಿಗೋ ಹೋಗಿ ನೆಮ್ಮದಿಯ ಬಾಳನ್ನು ನಡೆಸುವುದಕ್ಕೆ ಸಿದ್ಧಳಿಲ್ಲ. ಅವಳಿಗದು ಒಗ್ಗದ ವಿಚಾರ. ಅಲ್ಲೇ ಇರಬೇಕು, ತನ್ನ ಹೊಲ ತಾನೇ ನೋಡಿಕೊಳ್ಳಬೇಕು, ಕನಿಷ್ಠ ತನ್ನ ಮನೆಯಲ್ಲಿ ತನ್ನ ಮಾತೇ ಅಂತಿಮವಾಗಿರುವಷ್ಟು ಸ್ವಾತಂತ್ರ್ಯ ತನಗೆ ಬೇಕು, ತನ್ನ ಮನೆಯೊಳಗೆ ತನ್ನ ಅನುಮತಿಯಿಲ್ಲದೆ ಪೆದ್ರೂಸ್ ಕೂಡ ಬರುವಂತಿಲ್ಲ ಎನ್ನುವುದನ್ನು ಅವನು ಒಪ್ಪಿಕೊಳ್ಳಬೇಕು. ಅಂದರೆ ಅವನನ್ನು ಮದುವೆಯಾಗುವುದಕ್ಕೆ ಅವಳು ಸಿದ್ಧ! ಇದೊಂದು ನೆಲೆ, ನಿಲುವು. ಅದು, ಅದರ ಲಾಜಿಕ್, ಅರ್ಥಪೂರ್ಣತೆ ನಮಗೆ ಅರ್ಥವಾಗಲೇ ಬೇಕೆಂದಿಲ್ಲ. ನಾವದನ್ನು ಗೌರವಿಸಬೇಕು, ಅದು ಮುಖ್ಯ. ಹಾಗೆಂದಾಗ ಇಲ್ಲಿ ಲ್ಯೂರಿಯ ಸ್ವ-ಇಚ್ಛೆಯಿಂದ ಕೂಡಿದ್ದು ಎನ್ನುವ ವಾದ ಹೊಸ ಆಯಾಮವನ್ನು ಪಡೆದುಕೊಳ್ಳುತ್ತದೆ! ಯಾರ ಸ್ವ-ಇಚ್ಛೆ ಮತ್ತು ಯಾವಾಗಿನದ್ದು ಎನ್ನುವುದು ಆ ಪ್ರಶ್ನೆ. ಲೈಂಗಿಕವಾಗಿ ಇನ್ನೊಂದು ಜೀವವನ್ನು ಉದ್ದೀಪಿಸುವುದು, ಉದ್ರೇಕಿಸುವುದು ಮತ್ತು ಅಂಥ ಉನ್ಮಾದಿತ ಸ್ಥಿತಿಯನ್ನು ಬಳಸಿಕೊಳ್ಳುವುದು ನಡೆದಿದ್ದರೆ, ಎಲ್ಲ ಮುಗಿದ ವರ್ಷಗಳ ನಂತರವೂ ಆ ಎರಡೂ ಜೀವಗಳು ತಮ್ಮ ಆ ಅವಧಿಯ ಇಚ್ಛೆಯನ್ನು ಸ್ವ-ಇಚ್ಛೆ ಎಂದು ಒಪ್ಪಿಕೊಳ್ಳುವುದು ಸಾಧ್ಯವಾಯಿತೇ ಎಂಬುದು ಮುಖ್ಯವಾಗುತ್ತದೆ. ಹಾಗೆ ಸಾಧ್ಯವಾಗದೇ ಹೋದರೆ ಈ ಅರ್ಥಗಳು ಬೇರೆಯಾಗುತ್ತವೆ! ಆದರೆ ಈ ಯಾವುದಕ್ಕೂ ಮಾನದಂಡಗಳಿಲ್ಲ, ಸಾಕ್ಷಿಗಳಿಲ್ಲ, ಇಷ್ಟೇ, ಇದೇ ಎಂದು ನಿಖರವಾಗಿ ಹೇಳುವ ಮಾರ್ಗಗಳಿಲ್ಲ. ಮನುಷ್ಯನ ಮನಸ್ಸು ಈಗ ಒಂದು ತರ ಇನ್ನೊಮ್ಮೆ ಇನ್ನೊಂಥರ ಇರುವುದು ಸಹಜವೇ ಆಗಿರುತ್ತ ಎಲ್ಲ ಭಾವನೆಗಳೂ ಕ್ಷಣಭಂಗುರವಾಗಿರುವ ದುರದೃಷ್ಟವನ್ನು ಹೊತ್ತ ಆತ ಭ್ರಮೆ ಮತ್ತು ಭಾವನೆಗಳ ನಡುವಿನ ಗೆರೆಯನ್ನು ನಿಖರವಾಗಿ ಕೊರೆದಂತೆಲ್ಲ ಮೂರ್ಖನಾಗುತ್ತಿರುತ್ತಾನೆ. ಅವುಗಳನ್ನು ಒಂದೇ ಎಂದುಕೊಂಡಂತೆಲ್ಲ ಹಾಸ್ಯಾಸ್ಪದನೂ ಆಗುತ್ತಿರುತ್ತಾನೆ. ಇದನ್ನು ಅರ್ಥಮಾಡಿಕೊಂಡವರು ಮಾತ್ರ ಎಲ್ಲದರ ಆಚೆಯದನ್ನು ಕಾಣಬಲ್ಲರು ಮತ್ತು ಸಹಜವಾಗಿ ಸ್ಥಿತಿಯೊಂದಿಗೆ ವ್ಯವಹರಿಸಬಲ್ಲರು.

ಕಾದಂಬರಿ ನಮಗೆ ಮನುಷ್ಯನನ್ನಷ್ಟೇ ತೋರಿಸುತ್ತಿದೆ. ಪರಮ ನೀಚನೂ ಪರಮ ಶ್ರೇಷ್ಠನೂ ಆಗಬಲ್ಲ ಕೇವಲ ಸಾಧ್ಯತೆಯಂತಿರುವ ಮನುಷ್ಯನನ್ನು. ಒಳ್ಳೆಯ ಅಥವಾ ಕೆಟ್ಟ ಎಂಬ ಲೇಬಲ್‌ಗಳಿಲ್ಲದ ಮನುಷ್ಯನನ್ನು. ಹಾಗೆ ಇಲ್ಲಿನ ಎಲ್ಲಾ ಪಾತ್ರಗಳೂ ಸಂಭಾವಿತತನದಲ್ಲಿ ಹೇಗೆ ಸಮಾನವಾಗಿ ನಿಲ್ಲುತ್ತವೆಯೋ ಹಾಗೆಯೇ ಸಂತ್ರಸ್ತ ಭಾವದಲ್ಲೂ ಸಮಾನವಾಗಿಯೇ ನಿಲ್ಲುವುದು ಮನಸ್ಸಿನಲ್ಲಿ ಕಾಡುತ್ತ ಉಳಿಯುತ್ತದೆ.

"ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ?" ಅಲ್ಲಿಯೂ ಹುತ್ತಗಟ್ಟಿದ್ದು ವ್ಯಾಧನ ಪತಿತ ಭಾವವಲ್ಲವೆ ಮತ್ತೆ!!!

1 comment:

ಅರವಿಂದ said...

ಮನುಷ್ಯ ಸಂಬಂಧಗಳು ಅತ್ಯಂತ ನಿಗೂಢವೂ, ಸಂಕೀರ್ಣವೂ ಆದದ್ದು, ಹಾಗು ಆ ನಿಗೂಢತೆ ಸಂಕೀರ್ಣತೆ ನಾವು ಆ ಸಂಬಂದಗಳನ್ನ ಅರಿತಷ್ಟೂ ಹೆಚ್ಚುತ್ತ ಹೋಗುತ್ತೆ. ಅದೆಷ್ಟೇ ಸಂಕೀರ್ಣವಾಗುತ್ತಾ ಸಾಗಿದರೂ, ಸಾಹಿತಿ ಅದರೊಳಗಿಂದಲೇ ಪಡೆಯಬೇಕು, ಅಲ್ಲೇ ಜೀವಿಸಬೇಕು.
ಒಂದು ಉತ್ತಮ ಕೃತಿಯನ್ನ ಪರಿಚೆಯಿಸಿದ್ದಕ್ಕೆ ಧನ್ಯವಾದಗಳು