Friday, September 16, 2011

ಚೇತನಾ ತೀರ್ಥಹಳ್ಳಿಯವರ ‘ಗುಟ್ಟು ಬಚ್ಚಿಡಲು ಬರುವುದಿಲ್ಲ’ 45 ಕವಿತೆಗಳು

ಕವಿತೆಯಿಂದ ಏನನ್ನು ನಿರೀಕ್ಷಿಸುತ್ತೇವೆ ಎಂಬ ಸಂಗತಿಯೇ ನಮ್ಮ ಪ್ರತಿಕ್ರಿಯೆಯನ್ನು, ಪ್ರತಿಸ್ಪಂದನವನ್ನು ನಿರ್ಧರಿಸುತ್ತದೆ. ಭಾವ - ಅನುಭಾವವಾಗುವುದು ಕಾವ್ಯ ಎಂಬರ್ಥದ ಮಾತನ್ನು ಜಯಂತ ಕಾಯ್ಕಿಣಿ ಹೇಳಿದ್ದರು. ಕಿ.ರಂ.ನಾಗರಾಜ್ ‘ತಾಜಾತನವೇ ಅತ್ಯುತ್ತಮ ಕಾವ್ಯದ ಮೂಲಭೂತ ಲಕ್ಷಣ. ಭಾಷೆ ಮತ್ತು ಸಂವೇದನೆ ಈ ಎರಡರಲ್ಲೂ ತಾಜಾತನ ಇರಬೇಕು ಮತ್ತು ಈ ಎರಡೂ ಸಂಗಮಿಸುವ ಬಿಂದುವೇ ಕಾವ್ಯದ ತಾಜಾತನವನ್ನು ನಿರ್ಧರಿಸುತ್ತದೆ’ ಎಂದಿದ್ದಾರೆ. (ಆಸಕ್ತರು ದಯವಿಟ್ಟು ಸಂಚಯ ಸಾಹಿತ್ಯ ಸಾಂಸ್ಕೃತಿಕ ಪತ್ರಿಕೆಯ ೮೯ನೆಯ ಕಿ.ರಂ. ನೆನಪಿನ ಸಂಚಿಕೆ ಗಮನಿಸಿ.)
ಯಾವುದೇ ಸೃಜನಶೀಲ ಸಾಹಿತ್ಯ ಭಾಷೆಗೆ ಋಣಿಯಾಗಿದ್ದುಕೊಂಡೇ ಭಾವವನ್ನು ಭಾಷೆಯಲ್ಲಿ ಪುನರ್ ಸೃಷ್ಟಿಸುತ್ತ ಇರುತ್ತದೆ. ಈ ‘ಭಾವ’ ಎಂಬುದು ಬುದ್ಧಿಗೆ ಹೊರತಾದುದಲ್ಲ. ಪೂರ್ತಿಯಾಗಿ ತರ್ಕ, ವಾದ, ಚರ್ಚೆಯ ನೆಲೆ ಹಿಡಿದಾಗ ಬುದ್ಧಿ ಎದ್ದುಕಂಡರೆ, ತೀರಾ ಭಾವುಕ ನೆಲೆ ಹಿಡಿದಾಗ ಭಾವದ ಅಂಶವೇ ಹೆಚ್ಚಾಗುತ್ತದೆ ಎನ್ನುವುದನ್ನು ಬಿಟ್ಟರೆ ಸೃಜನಶೀಲ ಸಾಹಿತ್ಯ ಭಾಷೆ ಮತ್ತು ಭಾವದ ನಡುವಿನ ಕೊಡು-ಕೊಳ್ಳುವಿಕೆ ಎನ್ನುವಾಗ ಭಾವದಲ್ಲಿ ಭಾವುಕ ಮತ್ತು ಬೌದ್ಧಿಕ ಎರಡೂ ಅಂಶಗಳು ಸೇರಿವೆ ಎಂದೇ ತಿಳಿಯಬಹುದು. ಭಾವಕ್ಕೆ ಭಾಷೆಯ ಅಥವಾ ಶಬ್ದಗಳ ಹಂಗಿಲ್ಲ. ಭಾಷೆ ಇಲ್ಲದಿದ್ದರೂ ಭಾವವಿದ್ದೇ ಇರುತ್ತದೆ. ಹಾಗಾಗಿ ಭಾಷೆ ಒಂದು ಹೊರಗಿನ (external) ಆಕರ. ಭಾವವನ್ನು ಗುರುತಿಸುವುದು ಸಂವೇದನೆಯ ಮೂಲಕ. ಸೂಕ್ಷ್ಮಸಂವೇದಿಯಾಗಿದ್ದಷ್ಟೂ ಮನುಷ್ಯ ಭಾವದ ತಂತು ಹಿಡಿದು ನಡೆಯುತ್ತಾನೆ ಮತ್ತು ಸಹಜವಾಗಿಯೇ ಅವನ ಭಾಷೆ ಹೆಚ್ಚು ಸೂಕ್ಷ್ಮ ಮತ್ತು ಹೃದ್ಯವಾಗುತ್ತದೆ. ಒರಟನಾದ ಹಾಗೆ, ಜಡ್ಡುಗಟ್ಟಿದ ಹಾಗೆ, ಯಾವುದಕ್ಕೂ ರೋಮಾಂಚನಗೊಳ್ಳದ, ವಿಸ್ಮಯಪಡದ, ನಿಜವಾದ ಖುಶಿಯನ್ನು ಕೂಡ ಪಡಲಾರದ, ಅನುಭವಿಸಲಾರದ ಸ್ಥಿತಿಗೆ ತಲುಪಿದ ಹಾಗೆ ಭಾಷೆಯೂ ಕೆಟ್ಟು ಹೋಗುತ್ತದೆ. ಅದು ಬರೇ ಸದ್ದು ಹುಟ್ಟಿಸುವ, ಶಬ್ದ ಮಾಲಿನ್ಯವುಂಟು ಮಾಡುವ ಮಾಧ್ಯಮವಾಗುತ್ತದೆ. ಆದರೂ ಇಲ್ಲಿಯೇ ಗಮನಿಸಬೇಕಾದ ಮಾತೆಂದರೆ, ಕೇವಲ ಭಾಷೆಯ ನೈಪುಣ್ಯತೆಯೊಂದೇ ಯಾರನ್ನೂ ಕವಿಯಾಗಿಸಲಾರದು ಎಂಬುದು.  ಭಾಷೆ ಎಂದರೆ ನಾವೆಲ್ಲ ಮೇಲ್ಪದರದಲ್ಲಿ ಅಂದುಕೊಳ್ಳುವ ಹಾಗೆ ಕನ್ನಡ-ಇಂಗ್ಲೀಷ್-ಹಿಂದಿ-ತಮಿಳು ಅಲ್ಲ. ಮಾತು ಬಾರದ ಒಂದು ಪ್ರಾಣಿಗೂ ತನ್ನದೇ ಆದ ಭಾಷೆ ಇದೆ. ಸಸ್ಯಗಳಿಗಿದೆ. ಮಾತು ಬಾರದವರಿಗಿದೆ. ಮಗುವಿಗೆ, ನಾಲಗೆ ಬಿದ್ದು ಹೋದ ಮುದುಕರಿಗೆ ಇದೆ ಭಾಷೆ. ಆಮೇಲೆ, ಸಂಗೀತಕ್ಕೆ, ಸ್ವರ, ನಾದ, ಲಯಗಳಿಗೆ ಒಂದು ಧ್ವನಿಯಿದೆ, ಶಕ್ತಿಯಿದೆ. ಮನಸ್ಸಿನ ಮೇಲೆ ನಿರ್ದಿಷ್ಟ ಪರಿಣಾಮವನ್ನುಂಟು ಮಾಡಬಲ್ಲ ಶಕ್ತಿಯಿರುವ ಪ್ರತಿಯೊಂದಕ್ಕೂ ಭಾಷೆ ಇದ್ದಿರಲೇ ಬೇಕು. ಹಾಗೆಯೇ, ಬಿಸಿಲಿಗೆ, ಬಣ್ಣಕೆ, ತಂಪಿಗೆ, ವಾಸನೆಗೆ ಕೂಡ ಸಂವಹನದ ಒಂದು ನೆಲೆ ಇದ್ದೇ ಇರುವುದರಿಂದ ಪ್ರಕೃತಿಗೇ ಒಂದು ಭಾಷೆಯಿದೆ. ಇಷ್ಟರ ಮೇಲೆ, ನಮ್ಮ ನಮ್ಮ ಬಾಲ್ಯ, ನಾವು ಪಡೆದ ಶಿಕ್ಷಣ, ನಮ್ಮ ಒಟ್ಟಾರೆ ಓದು, ನಮ್ಮ ಬದುಕಿನ ಹಲವಾರು ಅನುಭವಗಳು, ನೇರ ಮತ್ತು ಪರೋಕ್ಷವಾಗಿ, ತಿಳಿದ ಮತ್ತು ನಮಗೆ ತಿಳಿಯದ (ವಿವರಿಸಿ ಸಮರ್ಥಿಸಿಕೊಳ್ಳಲಾಗದ) ಮೂಲಗಳಿಂದ ಪ್ರತಿಯೊಬ್ಬ ವ್ಯಕ್ತಿಯೂ ವಿಶಿಷ್ಟವಾಗಿ ತನ್ನಲ್ಲೇ ಕೂಡಿಟ್ಟುಕೊಂಡ ಒಂದು ಸ್ಮೃತಿ ಇದೆಯಲ್ಲ, ಅದಕ್ಕೂ ಒಂದು ಭಾಷೆಯಿದೆ, ಇದು ನಾವು ನಮ್ಮ ಒಳಗನ್ನು ಮತ್ತು ನಮ್ಮ ಹೊರಗನ್ನು ಅನುವಾದ ಮಾಡಿಕೊಳ್ಳುವ ಭಾಷೆಯಾಗಿರುತ್ತದೆ. 


ಅತ್ಯುತ್ತಮ ಬರಹಗಾರ ಈ ಭಾವ ಮತ್ತು ಭಾಷೆಯ ಹಲವು ಮುಖಗಳ ಬಗ್ಗೆ ಬರೇ ತಿಳುವಳಿಕೆ ಮಾತ್ರ ಹೊಂದಿರುವುದಿಲ್ಲ (ತಿಳುವಳಿಕೆಯ ನೆಲೆಯೇ ಅಮುಖ್ಯ, ಅನೇಕ ಬಾರಿ ಅತ್ಯುತ್ತಮ ಬರಹಗಾರನಿಗೆ ತನಗೆ ತಿಳಿದಿರುವುದು ಇದೇ ಎನ್ನುವ ಪರಿಕಲ್ಪನೆಯಿರುವುದಿಲ್ಲ, ಇದ್ದ ಮಾತ್ರಕ್ಕೆ ಅವನು ಅತ್ಯುತ್ತಮ ಬರಹಗಾರನಾಗಿರಲೇ ಬೇಕಾಗಿಲ್ಲ - ನಾನಿಲ್ಲವೆ ಹಾಗೆ!) ಬದಲಿಗೆ ಅವನಿಗೆ ಅದು ಅನುಭವವಾಗಿರುತ್ತದೆ, ರಕ್ತಗತವಾಗಿರುತ್ತದೆ ಮತ್ತು ಹಾಗೆ ಆತ ತನ್ನ ಸೃಜನಶೀಲ ಬರವಣಿಗೆಯಲ್ಲಿ ಇದನ್ನೆಲ್ಲ ದುಡಿಸಿಕೊಂಡು ಬರೆಯುತ್ತಿರುತ್ತಾನೆ, ತಿಳಿದೋ ತಿಳಿಯದೆಯೊ. ಅಂಥ ಬರವಣಿಗೆಯಲ್ಲಿ ‘ಕಾಣಿಸುತ್ತಿರುವುದರ ಬಗ್ಗೆ ಹೇಳುವಾಗಲೇ ಕಾಣಿಸದಿರುವುದನ್ನು ತೋರಿಸುವ’ ಕಸು ಇರುತ್ತದೆ. 


"People believe there's lot of violence in the North-East. When I write I cannot convey images of bloodshed and bullet wounds. Instead I write about the stillness of land, the changing landscape due to war and strife."
 -Mamang Dai 
(a poetess from Arunachal Pradesh) 

ಚೇತನಾ ತೀರ್ಥಹಳ್ಳಿಯವರ ಕವನ ಸಂಕಲನ ಎದುರಿಗಿಟ್ಟುಕೊಂಡು ಇದನ್ನೆಲ್ಲ ಧೇನಿಸಲು ಕಾರಣವಿದೆ. ಚೇತನಾರ ಕಾವ್ಯ ಭಾಷೆಯನ್ನು ಮೆರೆಯುತ್ತ, ಭಾವವನ್ನು ಮೀಟುತ್ತ ನಮ್ಮನ್ನು ಯಾವ ಹೊಸ ಹೊಳಹು, ಮಿಂಚು, ಕಲ್ಪನೆ, ಅರಿವುಗಳ ಮುಖಾಮುಖಿಗೆ ಪ್ರಯತ್ನಿಸುತ್ತದೆ ಮತ್ತು ಅದರಲ್ಲಿ ಎಷ್ಟು ಯಶಸ್ವಿಯಾಗುತ್ತದೆ ಎಂಬುದೇ ಕವಿತೆಯನ್ನು ಓದುವ ಮತ್ತು ಆ ಬಗ್ಗೆ ಬರೆಯುವ ಸಂದರ್ಭದಲ್ಲಿ ನನ್ನೆದುರಿಗಿರುವ ನಿರೀಕ್ಷೆಯಾಗಿತ್ತು ಎಂಬುದನ್ನು ಮೊದಲೇ ಹೇಳಿಬಿಡಬೇಕು. ಕವಿತೆ, ಕಾವ್ಯ ನೀಡುವ ಅನುಭೂತಿ ಅನೇಕ ಬಾರಿ ತೀರಾ ವಿಶಿಷ್ಟವಾದದ್ದು. ಯಾವ ಚಿತ್ರ, ಕಲ್ಪನೆ, ಪ್ರತಿಮೆ, ಶಬ್ದ ನನ್ನಲ್ಲಿ, ನನ್ನ ಮನೋಭಿತ್ತಿಯಲ್ಲಿ, ಸುಪ್ತ ಚಿತ್ತ ಭಿತ್ತಿಯಲ್ಲಿ ಥಟ್ಟನೆ ಮೂಡಿಸಿಬಿಡುವುದೋ, ಆ ಭಾವವೇನಿದೆ, ಅದನ್ನು ‘ಕವಿಭಾವ ಪ್ರತಿಮಾ ಪುನರ್-ಸೃಷ್ಟಿ’ ಎಂದು ಕರೆಯುವುದಾದರೆ - ಅದು ಎಲ್ಲರಿಗೂ ಒಂದೇ ಆಗಿರಬೇಕಾಗಿಲ್ಲ. ಇದಕ್ಕೆ ಕಾರಣ ಮೇಲೆ ನಾನು ವಿವರಿಸಿದ ನನ್ನ ವ್ಯಕ್ತಿ ವಿಶಿಷ್ಟ ಛಂದಸ್ಸು, ನನ್ನ ಅನುವಾದದ ಭಾಷೆ ಮತ್ತು ಕವಿಯ ವ್ಯಕ್ತಿ ವಿಶಿಷ್ಟ ಛಂದಸ್ಸು ಮತ್ತು ಸಂವಹನದ ಭಾಷೆ ಒಂದೇ ಬಿಂದುವಿನಲ್ಲಿ ಸಂಧಿಸಬೇಕಾದ ನಿಯಮವೇನಿಲ್ಲ ಎನ್ನುವುದೇ.

ಉದಾಹರಣೆಗೆ ಜಯಂತರ ಸುಂದರಿಯರ ಮುಡಿಗೆ ಕವನ ಗಮನಿಸಿ. ಇದು ಲೈವ್ ಬ್ಯಾಂಡ್ ನಿಷೇಧಿಸಲ್ಪಟ್ಟ ಸಂದರ್ಭದಲ್ಲಿ ದಿಕ್ಕುತಪ್ಪಿದಂತಾದ ಹೆಣ್ಣುಮಕ್ಕಳ ಕುರಿತು ಬರೆದ ಕವನ. ಇದರಲ್ಲಿ ನೈಟ್ ಬಸ್ಸಿನಿಂದಿಳಿದ ಸ್ವಪ್ನವಂತನಿದ್ದಾನೆ, ಶಹರದ ಬಾರುಗಳಿಂದ ಉಚ್ಛಾಟಿಸಲ್ಪಟ್ಟು ಎಲ್ಲೆಲ್ಲೊ ಸೇರಿಕೊಂಡು ಬೇವಿನಕಡ್ಡಿಯಿಂದ ಹಲ್ಲುಜ್ಜುತ್ತ ಕೂತ ಸುರಾಸುಂದರಿಯರಿದ್ದಾರೆ. ಹಾಗೆಯೇ ತುಸುವೇ ದೂರ ನಿಂತ ಒಂದು ಬಿಳೀ ಅಂಬಾಸಿಡರ್ ಕಾರಿನಲ್ಲಿ ಕೂತ ಹತ್ತು ಧಡಿಯರಿದ್ದಾರೆ. ಆ ಕಾರಿನ ಒಂದು ಚಿತ್ರವನ್ನು ಮಾತ್ರ ನಾನು ಗಮನಿಸುತ್ತೇನೆ.

ಕಾರಿನೊಳಗೆ ಫೈಬರ್‍ಗ್ಲಾಸ್ ಗಣಪತಿಯೂ ಇದ್ದಾನೆ 
ಅವನಿಗೊಂದು ಚಕ್‍ಪಕಾಚಕ್ ಚಕಚಕ ಪಕಾ ಚಕ್ 
ಪುಟಾಣಿ ಕೆಂಪು ಬಲ್ಬುಗಳ ದೇದೀಪ್ಯಮಾಲೆ 
ಡೀಸಲ್ ಎಂಜಿನ್ ಶುರು ಮಾಡಿದರೆ 
ಇಡೀ ಭೂಮಂಡಲದ ಜತೆಗೆ ಊದಿನ ಕಡ್ಡಿಯ ನಡುವೆ 
ಅವನೂ ಕಂಪಿಸುತಾನೆ 

ಇದನ್ನು ಓದಿದಾಗ ನನಗೆ ಮನಸ್ಸಿನಲ್ಲಿ ಮೂಡುವ ಚಿತ್ರ ಬೇರೆಯೇ. ತೀರ ಹತ್ತಿಪ್ಪತ್ತು ವರ್ಷಗಳ ಹಿಂದೆ ನಾನು ಅಡಿಟ್ ಎಂದು ಯಾವುಯಾವುದೋ ಊರಿಗೆ ಹೊತ್ತಲ್ಲದ ಹೊತ್ತಲ್ಲಿ ಹೊರಡುತ್ತಿದ್ದೆ. ಮೂರೂವರೆ ಮೂರೂಮುಕ್ಕಾಲು ಗಂಟೆ ರಾತ್ರಿ ನಮ್ಮೂರಿನ ಮೇಲೆ ಹಾಯುವ ಪೇಪರ್ ಕಾರಿಗೆ ಕೈ ಅಡ್ಡ ಹಾಕಿ, ಹೇಗೋ ಮಂಗಳೂರು ಸೇರಿಕೊಂಡು, ಅಲ್ಲಿಂದ ಹತ್ತುಗಂಟೆಯ ಒಳಗೆ ಕುಶಾಲನಗರವೋ, ಇನ್ನೊಂದೋ ಸೇರಬೇಕಾಗುತ್ತಿತ್ತು. ಕೆಲವೊಮ್ಮೆ ತೀರ ಜನ ಹೆಚ್ಚಿ ಹೇಗೆ ಹೇಗೋ ಕೂತು ಸಾಗುವಾಗೆಲ್ಲ ಇಡೀ ಜಗತ್ತಿನ ಗಡಿಬಿಡಿಗೆ ವ್ಯತಿರಿಕ್ತವಾಗಿ ಇರುತ್ತಿದ್ದ ಚಿತ್ರ ಈ ಫೈಬರ‍್ಗ್ಲಾಸ್ ಗಣಪತಿ, ಅವನೆದುರು ಹಚ್ಚಿಟ್ಟ ಅಗರಬತ್ತಿ ಮತ್ತು ಅದೇ ಚಕಾಪಕ್ ದೇದೀಪ್ಯಮಾಲೆ!

ಈಗ ಹೇಳಿ, ಕವನದಲ್ಲಿ ಅದೆಲ್ಲ ಎಲ್ಲಿದೆ!

ಈ ಕವನ ಓದಿ:

ಕತ್ತಲು ತೆಕ್ಕೆಯಲ್ಲಿಟ್ಟುಕೊಂಡ ಬೆಳಗಂಥ ಹೊತ್ತಲಿ 
ಕನಸು ಹರಿದು..... 
ಬಿಗಿಯಾಗಿ ಮುಚ್ಚಿದ ಕಂಗಳೊಳಗೇ 
ಬಿಕ್ಕಳಿಸಿ ಮೈ-ಮನ ಮುರುಟಿವೆ..... 
..................... 
ಮೆಟ್ಟಿಲುಗಳ ಮೇಲೆ ಸೊಂಟದ ಮೇಲೆ ಕೈಯಿಟ್ಟುಕೊಂಡು 
ವಾಸ್ತವವಿನ್ನೂ ಸಹನೆಯಿಂದ ಕಾಯುತ್ತಲೇ ಇದೆ..... 

ನೀವು ಏಳುವ ಇಚ್ಛೆಯಿಲ್ಲದೆ ಸವಿಗನಸಿನ ನಿದ್ದೆಯಲ್ಲಿ ಹಿತವಾಗಿ ನರಳುತ್ತಿರುವಾಗಲೇ ನಿಮ್ಮನ್ನು ಯಾರೋ ತುರ್ತಾಗಿ ಬಾಗಿಲಾಚೆ ಕಾಯುತ್ತಿದ್ದಾರೆ ಅನಿಸಬೇಕು...ಎಂಥ ದರಿದ್ರ ಸ್ಥಿತಿ! ಆದರೆ ಈ ಕವನ ಅದನ್ನು ಹೇಳುತ್ತಿಲ್ಲ!

ಚೇತನಾರ ಬರವಣಿಗೆಯ ತಾಜಾತನದ ಗುಟ್ಟು, ಇವರು ಈ ಭಾವವನ್ನು ಮೊತ್ತಮೊದಲಿಗೆ ದಾಖಲಿಸಿದ್ದು ತಮಗಾಗಿಯೇ ಆಗಿತ್ತು ಎನ್ನುವುದು. ಇಲ್ಲಿನ ಹೆಚ್ಚಿನ ಕವನಗಳಿಗೆ ಕವನಗಳಾಗಿ ಮೆಚ್ಚಿಸಿಕೊಳ್ಳುವ ಸುಪ್ತ ಕಾತರ, ಆಸೆ ಇದ್ದರೂ ಪ್ರಾಥಮಿಕವಾಗಿ ಇವು ತನ್ನ ನೋವು, ನಿರಾಸೆ, ಅಸಮಾಧಾನ ಮತ್ತು ಸಿಟ್ಟನ್ನು ಭಾಷೆಯಲ್ಲಿ ಕರಗಿಸುವ, ಹಿಡಿಯುವ, ದಾಖಲಿಸುವ, ಕಣ್ಣಲ್ಲಿ ಕಣ್ಣಿಟ್ಟು ಕಾಣುವ ಮತ್ತು ಹಾಗೆ ‘ತನ್ನದೇ’ ಆದ ಒಂದರ ಜೊತೆ (ಅದು ದಿನಚರಿಯೇ ಇರಬಹುದು) ಹಂಚಿಕೊಂಡು ಸಮಾಧಾನ ಪಡೆಯುವ ತುರ್ತಿನಿಂದ ಹುಟ್ಟಿದವು. ಒಂದು ಸ್ತರದ ಮಟ್ಟಿಗೆ ಪ್ರೇಕ್ಷಕ ಪ್ರೇರಿತ, ಪ್ರೇಕ್ಷಕ ಕೇಂದ್ರಿತ ಅಲ್ಲದ ಭಾವಲಹರಿ ಇದು. ಹಾಗಾಗಿ ತಾಜಾ.

ಭಾಷೆಗೆ ಒಂದು ಶಕ್ತಿಯೂ ಮತ್ತು ಅದೇ ಅದರ ಮಿತಿಯೂ ಆದ ದ್ವಿಭಾವವಿದೆ. ಭಾಷೆ ನಮ್ಮನ್ನು ಮೋಸಗೊಳಿಸುವುದಿಲ್ಲವೆ ಎನ್ನುವುದು ಪ್ರಶ್ನೆ. ಯಾವ ಭಾಷೆಯೂ ಭಾವವನ್ನು ಅದರ ತೀವ್ರತೆಯನ್ನು ಅಳೆಯಲಾರದು. ಅದು ಕೇವಲ ಅಭಿವ್ಯಕ್ತಿ ಮಾಧ್ಯಮ. ಅಭಿವ್ಯಕ್ತಿಯ ಉದ್ದೇಶ ಸಂವಹನ. ಅದು ದುಡಿಸಿಕೊಳ್ಳುವುದು ಸಾಧಾರಣವಾಗಿ ಅದಾಗಲೇ ಬಳಕೆಯಲ್ಲಿರುವ ಶಬ್ದ, ಪ್ರತಿಮೆ, ನುಡಿಕಟ್ಟು, ಸಂಪ್ರದಾಯಗಳನ್ನೇ. ಇವು ತಾನು ಹೇಳಬಯಸಿದ್ದನ್ನು ಹೇಳಲು, ಹೇಳಬಯಸಿದ್ದನ್ನೇ ಕ್ವಚಿತ್ತಾಗಿ ಹೇಳಲು ಎಷ್ಟರಮಟ್ಟಿಗೆ ಉಪಯೋಗಕ್ಕೆ ಬರುತ್ತವೆ ಎಂಬುದನ್ನು ಕವಿಯೇ ನಿರ್ಧರಿಸಬೇಕು. ಯಾಕೆಂದರೆ, ಭಾವವನ್ನು ನಾವು ಹಾಗೆ ಭಾಷೆಯಲ್ಲಿ ಹಾಯ್ದಿರುವುದಿಲ್ಲ. ತನ್ನ ಬದುಕಿನ ಪ್ರತಿಯೊಂದನ್ನೂ ತಾನು ಬರೆಯಲಿರುವ ಕವಿತೆ, ಕತೆಗೆ ಹೇಗೆ ಸಹಾಯಕವಾದೀತೆಂದು ಯೋಚಿಸುತ್ತಿರುವ ಮತ್ತು ಸಾಹಿತಿಯಾಗುವ ಮಹತ್ವಾಕಾಂಕ್ಷೆಯೇ ಮನುಷ್ಯನಾಗುವ ಆಸೆಗಿಂತ ಬಲಗೊಂಡ ಕರಪ್ಟ್ ಪ್ರಚಾರಪ್ರಿಯರಲ್ಲಿ ಮಾತ್ರ ಹಾಗಾಗುತ್ತದೆ. ಇದು ಬರಹಗಾರನ ಪ್ರಾರಂಭಿಕ ಅಪಾಯಗಳಲ್ಲಿ ಒಂದು. ಹಾಗೆ ಅನುಭವ, ಭಾವ, ಸಂವೇದನೆ ಉದ್ದೇಶರಾಹಿತ್ಯವಾಗಿ ನಮ್ಮ ಬದುಕನ್ನು ಹಾಯ್ದರೆ, ಅದಕ್ಕೆ ಭಾಷೆಯ ಹಂಗೇ ಇದ್ದಿರುವುದಿಲ್ಲ. ಮುಂದೆ, ಒಂದು ಅಂತರ ನಿರ್ಮಾಣವಾದ ಬಳಿಕ ಮನಸ್ಸು ಅದನ್ನು ತನಗಾಗಿಯೇ ಭಾಷೆಯಲ್ಲಿ ಗ್ರಹಿಸುವ ಕಾಲಕ್ಕೆ ಭಾವ ಭಾಷೆಯ ಹಂಗಿಗೆ ಬಿದ್ದುಬಿಡುತ್ತದೆ. ಇಲ್ಲಿ ಕಲೆ, ಪ್ರತಿಭೆ ಕೆಲಸ ಮಾಡುತ್ತದೆ ಮತ್ತು ಅದು ನಾನು ಮೊದಲು ವಿವರಿಸಿದ ಛಂದಸ್ಸು-ಅನುವಾದದ ಭಾಷೆಯ ಪ್ರಖರತೆಯನ್ನು ಅವಲಂಬಿಸಿಕೊಂಡು ಏನೋ ಒಂದನ್ನು ಸೃಷ್ಟಿಸುತ್ತದೆ. ಹಾಗಾಗಿ ಚಿತ್ತಾಲರು ಬರೆಯುವಂತೆ ಲಂಕೇಶರು, ಅಥವಾ ಲಂಕೇಶ್ ಬರೆಯುವಂತೆ ಶಿವರಾಮ ಕಾರಂತರು ಬರೆಯುವುದು ಸಾಧ್ಯವೇ ಇಲ್ಲ ಎನ್ನುವುದು ಸಿದ್ಧವಾಗುತ್ತದೆ. ಯಾವ ಬರಹಗಾರನೂ ಇನ್ಯಾರೋ ಆಗಲಾರ, ತಾನೇ ತಾನಾಗಬೇಕಾಗುತ್ತದೆ. 

ಭಾಷೆಗೆ ರಂಜಿಸುವ, ವ್ಯಂಗ್ಯದಿಂದ ಕೊಂಕುವ, exaggerate ಮಾಡುವ ಮತ್ತು ಆ ಮೂಲಕ ವಿಚಿತ್ರ ಸಾಂತ್ವನವನ್ನು ನೀಡುವ ಶಕ್ತಿಯೂ ಇದೆ, ಮಿತಿಯೂ ಇದೆ. ಶಕ್ತಿ ಮತ್ತು ದೌರ್ಬಲ್ಯ ಭಾಷೆಯನ್ನು ಅವಲಂಬಿಸಿದ, ದುಡಿಸಿಕೊಳ್ಳುವ ಕವಿಯ ಅನಿವಾರ್ಯ ಸಂಗಾತಿಗಳು. ಚೇತನಾರಿಗೆ ಇದರ ಅರಿವು ಚೆನ್ನಾಗಿದೆ.

‘ಅಂವ’ ನ ಮೇಲಿನ ಮುನಿಸಿಗೆಲ್ಲ 
ಬಣ್ಣ ಕಟ್ಟಿ ನೇತು ಹಾಕಿದೇನೆ 
ಇದು, ‘ಗಂಡು ದ್ವೇಷದ ಸಿದ್ಧ ಮಾದರಿ’ 
ಎಂದು ಹಲವರು ಹುಯಿಲಿಟ್ಟಿದ್ದಾರೆ 
(ಸಿದ್ಧ ಮಾದರಿಯಿಂದ ಹೊರಗೆ ಕವನದಿಂದ) 

 - ಇಲ್ಲಿ ‘ಬಣ್ಣಕಟ್ಟಿ’ ಎಂಬ ಪ್ರಯೋಗ ಗಮನಿಸಿ. ಇದು ಬಟ್ಟೆ ಒಗೆದು ಒಣ ಹಾಕಿದ ಚಿತ್ರವನ್ನು ಮನಸ್ಸಿನಲ್ಲಿ ಮೂಡಿಸುವಾಗಲೇ ಕೊಳೆ ತೊಳೆದು ತೆಗೆಯುವ ಪ್ರತಿಮೆಯನ್ನು ಕೊಟ್ಟರೆ ಇಲ್ಲಿ ಬಣ್ಣಕಟ್ಟಿ ಎನ್ನುವ ಮಾತು ಬಂದು, ತೋರಣಕಟ್ಟಿದ ಚಿತ್ರಕ್ಕೆ ಮೂಲ ಚಿತ್ರವನ್ನು Shift ಮಾಡುವ ಪ್ರಯತ್ನ ಮಾಡುವಂತಿದೆ.

ಕೊಡಲಿಯ ಕಾವಿಗೆ ಕೊರಡಿನದೇ ಹಿಡಿಕೆ - 
(ಅದೇ ಕವನದಿಂದ) 

ವಾಹ್ ಎನಿಸುವ ಸಾಲಿದು. ಕೊಡಲಿಯ ಕಾವು ಮುಂದೆ ಒಡಲ ನೋವಿನ ಜೊತೆ ಸಂವಾದಿಯಾಗಿ ಮುಂದುವರಿಯುತ್ತದೆ ಇಲ್ಲಿ. ಹಾಗೆಯೇ ಕೊರಡು ಎನ್ನುವ ಶಬ್ದ ಮನಸ್ಸಿನಲ್ಲಿ ಮೂಡಿಸುವ ಚಿತ್ರಗಳನ್ನು ಗಮನಿಸಿ. ಕೊರಡು ಇಲ್ಲಿ ಹಿಡಿಕೆ, ಅಂದರೆ grip! ಒಡಲಿನ ನೋವಿಗೆ ಸಂವಾದಿಯಾದ ಕೊಡಲಿನ ಕಾವಿಗೆ controlling ಆಗಿ ಇಲ್ಲಿರುವುದು ಕೊರಡು ಮತ್ತು ಕೊರಡೇ ಇಲ್ಲಿ ಹಿಡಿಕೆ. ಈ ಕೊರಡು ಕೊನರುವುದೇ?

ತಪ್ಪೇನಲ್ಲ 
ಬದುಕು ಕಸಿದವರ ಬಂಡವಾಳವನ್ನೆ 
ಬದುಕು ಕಟ್ಟಲು ದುಡಿಸಿಕೊಂಡಿದೇನೆ 
ಅಸಲಿಗೇನೋ ಮೋಸವೇ 
ಬಡ್ಡಿ ಎಣಿಸುತಿದ್ದೇನೆ.... 
(ಅದೇ ಕವನದಿಂದ) 

 ಭಾಷೆಯ ಚಮತ್ಕಾರ ಮತ್ತು ಹರಿತವಾದ ಭಾವ ಇಲ್ಲಿ ಉದ್ದೇಶಿತ ‘ಪಂಚ್’ ನೀಡುವುದರಲ್ಲಿ ಅನುಮಾನವಿಲ್ಲ. ಆದರೆ ಈ ಪಂಚ್‍ನಲ್ಲೇ ಅಸಲಿ ನೋವು ವಿಕ್ಸ್ ವೆಪೋರಬ್ ಹಚ್ಚಿಕೊಂಡವರ ತಲೆಶೂಲೆಯಂತೆ ಮರವೆಯಾಗುವುದಿಲ್ಲವೆ, ತತ್‍ಕ್ಷಣಕ್ಕೆ. ನೋವು ಹಿಂದೊತ್ತಿ ಭಾಷೆಯ ಚಮಕ್ ಮುಂದೊತ್ತಿದಂತಾಗದೇ? ಇದು ಚೇತನಾರ ಅದ್ಭುತವಾದ ಭಾಷಾ ಸಾಮರ್ಥ್ಯ ಅವರಿಗೇ ಒಡ್ಡುವ ಆಮಿಷ ಮತ್ತು ಸವಾಲು.

ಅವರೆಲ್ಲರ - 
ಒಳಬೇನೆಯ ಗರತಿಯರೆಲ್ಲರ 
ಬಯಕೆ ಬೀಜಗಳನ್ನು ಹೊತ್ತುಕೊಂಡಿದೇನೆ 
ಕಳ್ಳಕಾಡಿನಲ್ಲಿ ಉತ್ತು 
ಸುಖದುಸಿರು ಬೆಳೆಯಬೇಕಿದೆ 
(ಜೋಗತಿ ಹಾಡು ಕವನದಿಂದ) 

ಚೇತನಾರಿಗೆ ಭಾಷೆ ಒಲಿದಿದೆ ಎಂಬುದನ್ನು ಶ್ರುತಪಡಿಸುವ ಇನ್ನಷ್ಟು ಸಾಲುಗಳು, ಚುಟುಕುಗಳು ಈ ಸಂಕಲನದ ಉದ್ದಕ್ಕೂ ನಮಗೆ ಸಿಗುತ್ತವೆ. ನಿರ್ದಿಷ್ಟವಾಗಿ ಮಿಂಚುಹುಳು, ಮದರಂಗಿ, ಗಡಿಯಾರ, ಚೌಕಟ್ಟು, ಸೂರ್ಯ ಮುಂತಾದ ಗುಚ್ಛಗಳು. ಭಾಷೆ ಸುಖಾಸುಮ್ಮನೆ ಒಲಿಯುವುದಿಲ್ಲ. ಚೇತನಾರ ಭಾವಶುದ್ಧಿ, ಸಂವೇದನಾಶೀಲ ಮನಸ್ಸು ಇದಕ್ಕೆ ಕಾರಣ ಎನ್ನುವಾಗಲೇ ಭಾವಕ್ಕೆ ಭಾಷೆಯಲ್ಲಿ ಪ್ರಾಮಾಣಿಕವಾಗಿ ಉಳಿಯಬೇಕೆನ್ನುವ ಅವರ ಎಚ್ಚರ, ಅರಿವು ಮತ್ತು ಕಾಳಜಿ ಕೂಡ ಕಾರಣವಾಗಿದೆ.

ನನ್ನಾತ್ಮರತಿಗೆ ಒಸರಿಬಂದ 
ಅಕ್ಷರಗಳ ಸ್ರಾವ 
ಒಡಲುಗಟ್ಟಿದೆಯಿಲ್ಲಿ 
ಕವಿತೆಗಳ ಹಾಗೆ 
(ಕವಿತೆಗಳ ಜೊತೆಗೆ) 

ಎನ್ನುವಲ್ಲಿ ಆತ್ಮರತಿಯ ಅಪಾಯ ಮತ್ತು ಭಾಷೆ ಮೋಸ ಮಾಡಬಹುದಾದ ಮಾಧ್ಯಮ ಎಂಬುದರ ಅರಿವು ಸ್ಪಷ್ಟವಿದೆ. 

ವಿಷಾದದ ಋತುಮಾನ ಮತ್ತೆ ಬಂದಿದೆ... 
ಕವಿಗಳ ಸೆಮಿನಾರು ನಡೆಯುತ್ತಿದೆ, 
ಯಾರದೋ ಕರುಳ ನೋವನ್ನ ಮೆಚ್ಚುತ್ತಿದ್ದಾರೆ 
ಅದರ ಸಾಲು ಸಾಲು ಹಿಂಡಿ ಸವಿಯುತ್ತಿದ್ದಾರೆ 
(ವಿಷಾದದ ಋತುಮಾನ) 

ಇಲ್ಲಿಯೇ ಈ ಕವನಗಳು ವ್ಯಕ್ತಿತ್ವದ ‘ನಿಜ’ದ ಶೋಧವನ್ನೂ ನಡೆಸುತ್ತಿವೆ. ಇದು ಆತ್ಮರತಿಯಾಗದೆ, ಕನ್ನಡಿಯ ಪ್ರತಿಬಿಂಬವನ್ನೂ ಅನುಮಾನಿಸುವ ತೀವ್ರತೆಯಲ್ಲಿ ಸಾಗುವ ಅಂತಃಶ್ಶೋಧ.

ನಾನಂಬಿಕೊಂಡ ನನ್ನ ಸುಳ್ಳುಗಳು 
ನಾನಪ್ಪಿಕೊಂಡ ನನ್ನ ಶತ್ರುಗಳು 
ನಾ ಕೊಂದ ನನ್ನ ಇಷ್ಟಗಳು 
ನನ್ನದಲ್ಲದ ನನ್ನ ಕಥೆಗಳು.... 
(ತಪ್ಪೊಪ್ಪಿಗೆ) 

ನಂಬಿಕೆ ಮತ್ತು ವಾಸ್ತವ; ಸುಳ್ಳು, ನಾಟಕ ಮತ್ತು ಆತ್ಮಸಾಕ್ಷಿಯ ನಡುವಿನ ಸಂಘರ್ಷದ ಸುತ್ತ ಕೆಲವು ಕವನಗಳಿದ್ದು ಇವು ಭಾಷೆ-ಭಾವದ ನಡುವಿನ ಇತಿಮಿತಿಯನ್ನೂ ಶಕ್ತಿಯನ್ನೂ ಕವಿಗೆ ಅತ್ಯಂತ ನಿಖರವಾಗಿ ತೋರಿಸಿಕೊಡಬಲ್ಲ ಸಾಧ್ಯತೆಯಿರುವುದರಿಂದಲೇ ಮುಖ್ಯವಾಗುತ್ತವೆ.

‘ಸುಳ್ಳು, ನಾಟಕದ ಹೊರೆ 
ಎಷ್ಟೆಂದು ಹೊತ್ತು ನವೆಯುತ್ತೀ?’ 
ಆತ್ಮಸಾಕ್ಷಿಯ ಮಾತು.... 
(ಅದೇ ಕವನದಿಂದ)

‘ಬಣ್ಣಗಳ ಸುಳಿಯಲ್ಲಿ’ ಕವನ ಇಡಿಯಾಗಿ ಈ ಸತ್ಯಶೋಧದ ಕಡೆಗೇ ತೀವ್ರವಾಗಿ ಚಾಚಿಕೊಳ್ಳುತ್ತದೆ.

ಗೊಂದಲಕ್ಕೆ ಬಿದ್ದಿದ್ದಳು, 
ಕನ್ನಡಿಯಲ್ಲಿನ ಬಿಂಬ 
ತನ್ನ ಮುಖವೋ? ಮುಖವಾಡವೋ? 
ಸ್ವಂತಿಕೆ ಮರೆತು ಕುಂತವಳಿಗೆ ಆತಂಕ.... 

ಇಲ್ಲಿ ಸ್ವಂತ, ಕುಂತ, ಆತಂಕ ಶಬ್ದ ಪ್ರಯೋಗದಲ್ಲಿ ಒಂದು ಲಯವಿದೆ, ನಿಜ. ಆದರೆ ಲಯ ಮುಖ್ಯವೋ ಭಾವ ಮುಖ್ಯವೋ ಎನ್ನುವ ಪ್ರಶ್ನೆ ಮತ್ತು ಭಾವವನ್ನು ಮುಂದೊತ್ತುವ ಮಾತಿಗೆ ಬದಲಿಯಾಗಿ ಲಯವನ್ನು ಮೆಟ್ಟಿಕೊಂಡರೆ ಎನ್ನುವ ಅನುಮಾನ ಎರಡೂ ಕಾಡುತ್ತದೆ. ದೊಡ್ಡ ಸಂಗತಿಯೆಂದೇನೂ ಅಲ್ಲ, ಆದರೆ ಇಲ್ಲಿ ಸಣ್ಣ ಅಪಾಯವಿದೆ ಕವಿಗೆ. ಹಾಗಾಗಿ ಇದನ್ನು ಮೀರಿ ಬರುವ ರಚನೆಗಳು ಮುಖ್ಯವಾಗುತ್ತವೆ. ಕನ್ನಡಿಯ ಬಿಂಬವನ್ನು ಅನುಮಾನಿಸಬಲ್ಲ ಆಳವನ್ನು ಮುಟ್ಟಬಲ್ಲ ಕವಿ ‘ಸಿಡಿಲಾಗಲು ಕಾದಿದ್ದೇನೆ’ ಕವನದಲ್ಲಿ ಅದೇ ಕನ್ನಡಿಯ ಬಿಂಬದ ಪ್ರತೀಕವನ್ನು ಬಳಸಿಕೊಳ್ಳುವ ನೆಲೆ ಗಮನಿಸಿ.

ರಣಚೋರಳೆನ್ನಬೇಡಿ 
ತಮ್ಮ ಕಣ್ಣುರಿಗೆ ತಾವೇ 
ಬೂದಿಯಾಗುವಂತೆ 
ಕನ್ನಡಿಗಳನ್ನಿರಿಸಿದ್ದೇನೆ 
ಅವರವರ ‘ನಿಜ’ ಬಿಂಬ 
ಕಂಡವರು ಸುಟ್ಟು ಇಲ್ಲವಾಗುತ್ತಿದ್ದಾರೆ.... 

ಇಲ್ಲಿ ಉರಿಯುವ ಕಣ್ಣುಗಳ ಪ್ರತಿಫಲನದಿಂದ ಎನ್ನುವಾಗಲೂ ಉರಿಗಣ್ಣುಗಳ ದ್ವೇಷ ಸಿಡಿಲಾಗಲು ಕಾದವಳ ಕಣ್ಣುಗಳಲ್ಲೂ ಇರುವುದರ ಸೂಚನೆಯಿದೆ. ಆದರೆ ಅವರವರ ಕಣ್ಣುರಿಗೇ ಅವರು ಸುಟ್ಟು ಬೂದಿಯಾಗಬೇಕೆನ್ನುವ ನಿಲುವಿದೆ. ಕನ್ನಡಿ ಆ ನಿಜದ ಬಿಂಬವನ್ನು ಅವರ ಮುಖಕ್ಕೆ ಎತ್ತಿಹಿಡಿಯುತ್ತಿದೆ. ಒಳಗಿನ ಉರಿ ಮತ್ತು ಹೊರಗಿನ ಉರಿ ಎರಡೂ ಅವರನ್ನು ಭಸ್ಮವಾಗಿಸುತ್ತಿದೆ.

ಅಪ್ಪನ ಮುಖ, ನನ್ನೂರ ತಿರುವುಗಳು, ಹುಟ್ಟಿಬರಬೇಡಿರೋ ಮತ್ತೆ... ಕವನಗಳು ತಮ್ಮ ವಿಶಿಷ್ಟತೆಯಿಂದಾಗಿ ಗಮನ ಸೆಳೆದರೆ ಪ್ರೇಮ, ವಿರಹ, ನೋವು, ಅನ್ಯಾಯಗಳನ್ನು ಮೌನವಾಗಿ ಮುಖಾಮುಖಿಯಾಗುವ ಕವನಗಳೂ, ಸದ್ಯಕ್ಕೆ ಸ್ಪಂದಿಸಿ ಬರೆದ ಕವನಗಳೂ, ವರ್ತಮಾನದ ತುರ್ತನ್ನು ಬರೆದ ಕವನಗಳೂ ಸಂಕಲನದ ಗುರುತ್ವವನ್ನು ಹೆಚ್ಚಿಸಿವೆ. ಒಳ್ಳೆ ಹುಡುಗ ಶಾಹಿದ್, ಕುರುಡು ಪಾಠದ ಮಂದಿ - ಇಂಥ ನೆಲೆಯಿಂದ ಬಂದ ಕವನಗಳು. ಇಡೀ ಸಂಕಲನದಲ್ಲಿ ಭಾಷೆಯ ನೆಲೆಯಿಂದ ಮೀರಿ ನಿಂತು ಭಾವದ ನೆಲೆಗೆ ಜಿಗಿದು ಗಮನ ಸೆಳೆಯುವಂತೆ ಮನಸ್ಸಿನಲ್ಲಿ ನೆಲೆಯಾಗುವ ಚೇತನಾರ ಕಾವ್ಯಶಕ್ತಿ ಕಾಣುವುದು ಅವರ ಚುಟುಕುಗಳಲ್ಲಿಯೇ. ಆದರೆ ಈ ಬಗೆಯ ಕಿರು ಕವನಗಳ ಗುಚ್ಛದಲ್ಲಿ ಅವರ ಭಾಷೆಯ ಸಿದ್ಧಿ, ಬುದ್ಧಿ-ಭಾವದ ಎಳೆ ಹಿಡಿದು ಇನ್ನಷ್ಟು ದೂರ ಸಾಗದೆ, ಸಾರ್ಥಕ ಪ್ರತಿಮೆಗಳ ಒಂದು ಪರಿಪೂರ್ಣ ಕಾಯದ ಶಿಲ್ಪವನ್ನು ಕಟೆದು ನಿಲ್ಲಿಸದೆ ಅಲ್ಪತೃಪ್ತಿಯಲ್ಲಿ ಬರೀ ಮುಖಭಾವವನ್ನೋ, ಅಂಗಾಂಗ ಮುದ್ರೆಗಳನ್ನೋ ಕಾಣಿಸುವ ಚುಟುಕುಗಳಾಗಿ ಮುಗಿದು ಬಿಡುತ್ತವೆ. ಭಾವ ಅನುಭಾವವಾಗಿ ಈ ಸೊಲ್ಲುಗಳು ಒಂದು ನಿರ್ದಿಷ್ಟ ದೂರದ ಸಹಪ್ರಯಾಣದ ಸುಖವನ್ನು ಓದುಗನಿಗೆ ಕಲ್ಪಿಸದೇ ಮಿಂಚಿ ಮಾಯವಾಗುವುದೇ ಸರಿಯೆಂಬಂತೆ ಮೂಡಿ ಮರೆಯಾಗುತ್ತವೆ. ಆದರೆ ಕಾವ್ಯ ಹೀಗಿದ್ದರೇ ಚೆನ್ನ ಎನ್ನುವುದು ಕೂಡ ಒಂದು ಸಾಪೇಕ್ಷ ಕಲ್ಪನೆ, ನಿರೀಕ್ಷೆ ಅಷ್ಟೆ. ಹೆಚ್ಚು ಹೇಳಿದರೆ ಅಹಂಕಾರವಾಗಿ ಬಿಡುತ್ತದೆ. ಅದು ಹೇಗಿದೆಯೋ ಹಾಗೆಯೇ ಅದನ್ನು ನೋಡಿ, ಓದಿ, ಆಸ್ವಾದಿಸಿ ಖುಶಿ ಪಡುವುದು ಹೆಚ್ಚು ಸರಿಯೇನೊ. ಹಾಗಾಗಿಯೇ ಕವನಗಳ ಬಗ್ಗೆ ಮಾತನಾಡುವುದರಿಂದ ಶಬ್ದಸೂತಕವಾಗುತ್ತದೆ ಎಂದು ಮೌನವಹಿಸುವುದೇ ಸರಿಯೆನ್ನಿಸುತ್ತದೆ. ನನಗಿಷ್ಟವಾದ ಚೇತನಾರ ಒಂದು ಕವನದೊಂದಿಗೆ ಈ ಬರಹವನ್ನು ಮುಗಿಸುವುದು ಸೂಕ್ತ.

ನೀರಿಲ್ಲದ ಬಾವಿ 
ಯೆದುರು 
ಖಾಲಿ ಕೊಡದ ನಾನು 
ಎದೆ ಬಗೆದು ತೋಡಿದರೂ 
ಕಣ್ಣು ಹನಿಯದು..... 
................. 
.............. 
.................. 
ಹಾಳು ಮೌನದ ಬಯಲಲ್ಲಿ 
ಒಂಟಿ ಪಾಪಾಸುಕಳ್ಳಿ- 
ಯ ಹಾಗೆ ನಿಂತಿರುವೆ. 
ಅದಕ್ಕೇ... 
ಮಾತಿಗೆ ನೆವವಿಲ್ಲ, 
ಪ್ರೀತಿಗೆ ಜನವಿಲ್ಲ!
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ

Sunday, September 4, 2011

ಸಾರಿಕೊಂದರೆ ಪಾಪವಿಲ್ಲ!

ತಂತ್ರವೇ ಪ್ರಧಾನವೆಂಬಂತೆ ತನ್ನ ಕಾದಂಬರಿಯನ್ನು ರೂಪಿಸಿದರೂ ತಂತ್ರಕ್ಕೆ ಮಿಗಿಲಾದ ಕಥನವನ್ನು ತೆರೆದಿಡುವ, ಸರಿ, ಕಥನವೇ ಆಕರ್ಷಕವಾಗಿರುತ್ತ ತಂತ್ರ ಮತ್ತೊಂದು ಅಂತೆಲ್ಲ ಯಾಕೆ ತಲೆಕೆಡಿಸಿಕೊಳ್ಳ ಬೇಕು ಅನ್ನುವಾಗಲೇ ಕಥಾನಕವನ್ನು ಮೀರಿ ನಿಲ್ಲುವ ದರ್ಶನವನ್ನು, ಕಾಣ್ಕೆಯನ್ನು ಕೊಡಬಲ್ಲ ಕೃತಿಕಾರ ಮಾರ್ಕ್ವೆಜ್ ಎಂಬುದು ಈಗ ಎಲ್ಲರಿಗೂ ಗೊತ್ತು. ಮಾರ್ಕ್ವೆಜ್‌ನ ಖ್ಯಾತ ಕಾದಂಬರಿ Chronicle of a Death Foretold ಕೂಡ ಅಷ್ಟೇ ಖ್ಯಾತ, ಎಲ್ಲರ ಮೆಚ್ಚಿನ ಕೃತಿ.

ಸ್ಯಾಂಟಿಗೊ ನಾಸರ್ ಸೋಮವಾರ ದಿನ ಕೊಲೆಯಾದ ಇಪ್ಪತ್ತೇಳು ವರ್ಷಗಳ ನಂತರ ಆ ದಿನ, ಅದರ ಹಿಂದಿನ ದಿನ ಅವನ ಜೊತೆ ಕಳೆದ ಕೊನೆಯ ಕ್ಷಣಗಳನ್ನು ನೆನೆಯುವ ಅವನ ತಾಯಿ, ಗೆಳತಿ, ಗೆಳೆಯರು, ಊರಿನ ಕೆಲವು ವ್ಯಾಪಾರಿಗಳು, ಕೊಲೆಗೆ ಕಾರಣವಾದ ಒಂದು ಮದುವೆ, ಅದರ ಮದುಮಗ ಬಯಾರ್ದೊ, ಮದುಮಗಳು ಎಂಜೆಲಾ ವಿಕಾರಿಯೊ, ಅವಳ ಅವಳಿ ಸಹೋದರರು - ಹೀಗೆ ಇಡೀ ಊರನ್ನೇ ಕ್ರಮಕ್ರಮೇಣವಾಗಿ ತನ್ನ ಪಾತ್ರವರ್ಗವನ್ನಾಗಿಸುತ್ತ ಕತೆ ಒಂದು ಕ್ರೂರ ವಿಪರ್ಯಾಸದತ್ತ ಬೇರೆ ಬೇರೆ ಕೋನಗಳಿಂದ ನಮ್ಮನ್ನು ಒಯ್ಯುತ್ತದೆ. ಕೇಂದ್ರ ಒಂದು ಕೊಲೆ. ಆದರೆ ಅದು ಕೌತುಕವಲ್ಲ, ಇಲ್ಲಿ ನಿಗೂಢತೆಯೇನಿಲ್ಲ, ಕಾದು ನೋಡುವುದಕ್ಕೇನೂ ಇಲ್ಲ. ಆದರೂ ಓದುಗ ಏನನ್ನೋ ಕಾಯುವಂತೆ, ಏನಾದರೂ ಬದಲಾಗಬಹುದು ಎಂಬ ಹಂಬಲದಿಂದ ತುಯ್ಯುವಂತೆ ಮಾಡುವ ಮಾಯಕತೆ ಈ ಕಾದಂಬರಿಯದು.

ಇಪ್ಪತ್ತೇಳು ವರ್ಷಗಳ ಹಿಂದೆ ನಡೆದ ಒಂದು ಕೊಲೆಯ ಬಗ್ಗೆ, ಅದೂ ಕೊಲ್ಲುತ್ತೇವೆ ಎಂದು ಊರಿಗೆಲ್ಲ ಸಾರಿ ಕೊಂದವರ ಕತೆಯನ್ನು ಈಗ ಹೇಳುವಾಗಲೂ ಅದನ್ನು ಓದುತ್ತಿರುವ ಓದುಗನನ್ನು ನಿಜಕ್ಕೂ ಕೊಲೆ ನಡೆಯುವುದೆ ಎಂಬ ಕೌತುಕದಲ್ಲಿ ನಿಲ್ಲಿಸಬಲ್ಲ ಮಾಯಕಶಕ್ತಿ ಇಲ್ಲಿನ ಬರಹಕ್ಕೆ ದಕ್ಕಿದೆ. ಈ ಮಾಯಕತೆ ಕೃತಿಗೆ ದಕ್ಕಿದ್ದಾದರೂ ಎಲ್ಲಿಂದ ಮತ್ತು ಯಾವುದರಿಂದ ಎಂಬುದು ಪ್ರತಿಯೊಬ್ಬ ಓದುಗನನ್ನೂ ಕುತೂಹಲಕರವಾಗಿ ಕಾಡದಿರದು. ಹೇಗೆ ಮಾರ್ಕ್ವೆಜ್ ಅದನ್ನು ದಕ್ಕಿಸುತ್ತಾನೆಂಬುದು ಈ ಬರವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಹೋದರೆ ತಿಳಿಯುತ್ತದೆ. ಒಂದು ಮನುಷ್ಯ ಸಹಜ ಆಸೆ. ಹೇಗೆ ನಡೆಯುತ್ತದೆ ಮತ್ತು ಹೇಳಿದ ಹಾಗೆಯೇ ಅದು ನಡೆಯುತ್ತದೆಯೇ ಎಂಬ ಕುತೂಹಲ ಎಂಬುದು ಸರಿಯೇ. ಇದಕ್ಕಿಂತ ಹೆಚ್ಚಿನದು ಇಲ್ಲಿನ ನಿರೂಪಣಾ ಕೌಶಲ. 


ಕೇಂದ್ರವನ್ನು ಹಾಗೆಯೇ ಬಿಟ್ಟು ಅದರ ಸುತ್ತಲೇ ಕತೆ ಹಲವಾರು ಸುತ್ತುಗಳನ್ನು ಹಾಕುತ್ತದೆ. ಅಂದರೆ ಕೇವಲ ತಂತ್ರ ಇದು ಎಂದು ಕೊಳ್ಳಬೇಡಿ. ಈ ತಂತ್ರದಲ್ಲಿ ಕೌತುಕದಿಂದ ನಮ್ಮನ್ನು ಸೆಳೆದಿಡುವ ಕಥಾನಕದ ಚಲನೆಯಿದೆ. ಕಥಾನಕದಲ್ಲಿ ಅಂಥ ಜೀವಕಳೆ, ಸೆಲೆ ಇದೆ. ಹಾಗೆಯೇ ಈ ಕೌತುಕ ಬಿಚ್ಚಿಕೊಳ್ಳುವ ಪರಿಯಲ್ಲಿ ಅನೇಕ ಒಳನೋಟಗಳ ನೇಯ್ಗೆಯೂ ಇದೆ. ಈ ನೇಯ್ಗೆ ಸುಲಭದ್ದಲ್ಲ. ಅಸಾಧಾರಣ ಪ್ರತಿಭೆಯ ಮತ್ತು ಎಚ್ಚರದ ಕುಸುರಿಕಲೆಯಲ್ಲಿ ನುರಿತ ಕತೆಗಾರನಿಗೆ ಮಾತ್ರ ಸಾಧ್ಯವಾಗಬಹುದಾದ ಕುಶಲ ಕಲೆಯಿದು, ನಾವಿಲ್ಲಿ ಕಾಣುವುದು. ಯಾಕೆಂದರೆ, ಈ ಸುತ್ತುಗಳು ಹಲವು ಲಯದಲ್ಲಿ ಜಿಗಿದು ಕೂತು ಸಾಗುವ ಸುತ್ತುಗಳು. ಉದಾಹರಣೆಗೆ, ಕೊಲೆಯಾದವನ ತಾಯಿ ಏನನ್ನೊ ನೆನಪಿಸಿಕೊಳ್ಳುವಾಗಲೇ ಅಲ್ಲಿ ಮಿಸ್ಸಿಂಗ್ ಆಗಿರಬಹುದಾದ ಅಥವಾ ಅಲ್ಲಿದ್ದುದರ ಇನ್ನೊಂದೇ ಮಗ್ಗುಲಿನ ನೋಟವಾಗಬಹುದಾದ ಇನ್ನೇನೋ ಒಂದು ತುಣುಕನ್ನ ಮನೆಗೆಲಸದಾಕೆ ಒದಗಿಸುತ್ತಾಳೆ. ಅಲ್ಲಿಯೇ ಕೂಡಲೇ ಒದಗಿಸುತ್ತಾಳೆಂದಲ್ಲ. ಅವಳ ಸುತ್ತು ಬಂದಾಗ ಒದಗಿಸಿದರೂ ಆಯಿತು, ಅಲ್ಲೇ ಒದಗಿಸಿದರೂ ಆಯಿತು, ನೇಯ್ಗೆಯ ಸಮರ್ಪಕತೆಯನ್ನು ಹೊಂದಿಕೊಂಡು ಅತ್ಯಂತ ಸಹಜವೆಂಬಂತೆ ನಡೆಯುವ ಕ್ರಿಯೆ ಇದು. ಹಾಗೆ ಇದು ಕೆಲವೊಮ್ಮೆ ಕಾದಂಬರಿಯ ಇನ್ಯಾವುದೋ ಹಂತದಲ್ಲಿ ಘಟಿಸಿ ಒಮ್ಮೆಗೇ ನಮ್ಮನ್ನು ತಾಯಿಯ ನೋಟವನ್ನು ಹೊರಳಿ-ಮರಳಿ ನೋಡುವಂತೆ, ಎರಡು ಸತ್ಯಗಳ ನಡುವಿನ ಸತ್ಯವನ್ನು ಪರಾಮರ್ಶಿಸುವಂತೆ ಮಾಡಬಹುದು! (ಸೆಪ್ಟೆಂಬರ್ 4,2011ರ ಪ್ರಜಾವಾಣಿ ಸಾಹಿತ್ಯ ಪುರವಣಿಯಲ್ಲಿ ‘ಕಲ್ಪಿತವಾಸ್ತವ’ ಲೇಖನದಲ್ಲಿ ಶ್ರೀ ಗಿರಡ್ದಿ ಗೋವಿಂದರಾಜು ಅವರು ಬರೆದ ‘ಅನೇಕಾಂತವಾದ’ ‘ಸ್ಯಾದ್ ವಾದ’ ಪರಿಕಲ್ಪನೆಗಳ ಬಗ್ಗೆ ದಯವಿಟ್ಟು ಓದಿ.) 


ಇದು ಬರಿಯ ತಂತ್ರದಾಟವಲ್ಲ. ಕಾಲ, ವ್ಯಕ್ತಿ ಮತ್ತು ಮನುಷ್ಯ ಸಂಬಂಧಗಳು ಸತ್ಯವನ್ನು ಕಾಣುವ, ಅಭಿವ್ಯಕ್ತಿಸುವ ಕ್ರಮಗಳು ಬೇರೆಯೇ ಆಗಿರುವುದು ಸಾಧ್ಯ. ಇಲ್ಲಿ ಏನಾಗುತ್ತಿದೆ ಎಂದರೆ, ಸತ್ತಿರುವ ಸ್ಯಾಂಟಿಗೋಗೆ ಮಾತ್ರ ತಿಳಿದಿರಬಹುದಾದ ಸತ್ಯವನ್ನು ಹೇಳಲು ಅವನೇ ಇಲ್ಲ. ಇನ್ನು ಸತ್ಯವನ್ನು ಹೇಳಬಹುದಾದ ಒಂದೇ ಒಂದು ಪಾತ್ರ ಎಂಜೆಲಾ ಹೇಳುತ್ತಿರುವುದರಲ್ಲಿ ವಿರೋಧಾಭಾಸವಿದೆ. ಇಲ್ಲೆಲ್ಲೊ ನಾವು ಹಾರ್ಪರ್ ಕಾಲಿನ್ಸ್ ನ To Kill a Mocking Bird ಕಾದಂಬರಿಯನ್ನು ನೆನೆಯುವಂತಾದರೆ ಆಶ್ಚರ್ಯವೇನಿಲ್ಲ. ಒಬ್ಬ ನೀಗ್ರೋ, ಬಿಳಿಯ ಹುಡುಗಿಯ ಮೇಲೆ ಅತ್ಯಾಚಾರ ನಡೆಸಿದ್ದಾಗಿ ದೂರು ಕೊಟ್ಟಿದ್ದು ಅದರ ವಿಚಾರಣೆ ನಡೆಯುತ್ತಿರುವಾಗಿನ ಉಭಯಸಂಕಟಗಳನ್ನು ನೆನೆಯಿರಿ. ಹಾಗೆಯೇ ಇಲ್ಲಿ ಎಲ್ಲಾ ಪಾತ್ರಗಳೂ ಒಂದು ಊಹೆಯ ನೆಲೆಯಲ್ಲಿ ಮಾತನಾಡಬೇಕಾದ ಅನಿವಾರ್ಯತೆ ಇದೆ. ಹಾಗೆ ನಾವು ಇನ್ನೊಬ್ಬ ವ್ಯಕ್ತಿಯ ಬಗ್ಗೆ ಮಾಡುವ ಊಹೆ ಆ ವ್ಯಕ್ತಿಯನ್ನು ತೋರಿಸುವುದಕ್ಕಿಂತ ಹೆಚ್ಚು ನಮ್ಮನ್ನೇ ತೋರಿಸುತ್ತಿರುತ್ತದೆಯೇ ಹೊರತು ಇನ್ನೇನಲ್ಲ! ಹಾಗೆಯೇ ಈ ಯಾವತ್ತೂ ಊಹೆಗಳು ಕೊನೆಗೂ ನಮಗೆ ಇದಂ ಇತ್ಥಂ ಎನ್ನಬಹುದಾದ ಏನನ್ನೂ ಕೊಡುವುದಿಲ್ಲ. ಊಹೆಗಳು ಇನ್ನಷ್ಟು ಊಹೆಗಳನ್ನಷ್ಟೇ ಹುಟ್ಟಿಸುತ್ತ ಸದಾ ನಮ್ಮನ್ನು ಕಾಡುತ್ತ ಉಳಿಯುತ್ತವೆ. ಆದರೆ ಈ ಕಾಟ ಕೆಲವೊಮ್ಮೆ ತುಂಬ ರಚನಾತ್ಮಕವಾಗಬಲ್ಲುದು. ಇದೇ ತಂತ್ರ J M Coetzee ಯ ‘ಮತ್ತೊಬ್ಬನ ಆತ್ಮಕಥಾನಕ’ ಮಾದರಿಯ Summertime ಕಾದಂಬರಿಯಲ್ಲೂ ಕಾಣುತ್ತೇವೆ. Coetzee ಬರೆಯುವ Coetzee ಕುರಿತ ಗ್ರಂಥದಲ್ಲಿ Coetzee ಯ ಬೇರೆ ಬೇರೆ ಕಾಲದ ಗೆಳೆಯರು ಒಡನಾಡಿಗಳು Coetzee ಬಗ್ಗೆ ತಮ್ಮ ಅನಿಸಿಕೆ, ವ್ಯಕ್ತಿಚಿತ್ರ ನೀಡುತ್ತಿದ್ದಾರೆ, ಮತ್ತು ಇದು ನಡೆಯುವಾಗ ಸ್ವತಃ Coetzee ಸತ್ತಿದ್ದಾನೆ! 


Investigating Megistrate ನ ಟಿಪ್ಪಣಿಗಳು, ಅವರಿವರ ಹೇಳಿಕೆಗಳು, ನಿರೂಪಕನೂ ಒಬ್ಬ insider ಆಗಿರುವುದರಿಂದ ಅವನು ಜೋಡಿಸಿಕೊಡಬಲ್ಲ ತುಂಡು ತುಂಡು ಚಿತ್ರಗಳು, ಅವನ ಸ್ವಂತದ ಕಲ್ಪನೆ, ಸಂಕಲನದ ಕ್ರಮ, ಊಹೆ ಎಲ್ಲ ಇದೆ ಇಲ್ಲಿ. ಪೋಲೀಸ್, ಮೇಯರ್, ಫಾದರ್, ಭಿಕ್ಷುಕ, ಮನೆಗೆಲಸದವಳು, ಅವಳ ಹರಯದ ಮಗಳು ಎಲ್ಲರೂ ಒಂದಲ್ಲಾ ಒಂದು ಬಗೆಯಲ್ಲಿ ಈ ಕೊಲೆಯನ್ನು ಮುಂಗಾಣುತ್ತಿದ್ದರೂ ಒಂದಲ್ಲಾ ಒಂದು ಬಗೆಯಲ್ಲಿ ತಿಳಿದೊ ತಿಳಿಯದೆಯೊ ಅದನ್ನು ಸಂಭವಿಸಲು ಬಿಡುವ ಬಗೆ ಕೂಡ ಕುತೂಹಲಕರವಾಗಿದೆ. ದೇಶದಲ್ಲಿ ಈಚೆಗೆ ಹುಯಿಲೆಬ್ಬಿಸಿದ Honer Killing ನೆನೆದುಕೊಳ್ಳಿ. ಇಲ್ಲಿ ನಡೆಯುವುದೂ ಯಥಾವತ್ ಅದೇ. 


ಹಾಗೆ ನೋಡಿದರೆ ಬಯಾರ್ದೊ ಅವಳನ್ನು ಪ್ರೀತಿಸಿದ್ದನೆ? ಅಪಾರ ಸಂಪತ್ತಿನ ಒಡೆಯ ಎಂಬುದನ್ನು ಒಡೆದು ಕಾಣುವಂತೆಯೇ ಅಬ್ಬರದಿಂದ ಬಂದಿಳಿದ ಈ ಮನುಷ್ಯ ಮದುವೆಯಾಗುವುದಕ್ಕೆ ಸರಿಯಾದ ಹುಡುಗಿಯನ್ನು ಅರಸುತ್ತಿದ್ದೇನೆ ಎಂದು ಹೇಳಿಕೊಂಡೇ, ಊರಿನಲ್ಲಿ ಒಂದು ಚಟುವಟಿಕೆಯ ಅಲೆಯೆಬ್ಬಿಸಿಯೇ ಕಾಲಿಟ್ಟವನು. ಅವಳು ಬೇಡ, ಇವಳು ಸರಿಯಿಲ್ಲ ಎನ್ನುತ್ತಿದ್ದವ ಮೊದಲ ನೋಟಕ್ಕೇ ಮರುಳಾದವನಂತೆ ಅಂಜೆಲಾ ಸೌಂದರ್ಯಕ್ಕೆ ಮಾರು ಹೋದವನು. ಅವಳಿಗೆ ಮನಸ್ಸಿರಲಿಲ್ಲ ಎಂದೇ ಇಟ್ಟುಕೊಂಡರೂ ಅವಳಿಗೆ ಬೇರೆ ಯಾರೊಂದಿಗೋ ಪ್ರೇಮವಿರಲಿಲ್ಲ. ಅವಳನ್ನು ಇನ್ಯಾರೊಂದಿಗೋ ಅಲ್ಲಿ ಇಲ್ಲಿ ಕಂಡವರಿಲ್ಲ. ಅಂಥವಳು ಮೊದಲ ರಾತ್ರಿಯೇ ಪರಿತ್ಯಕ್ತಳಾಗಿ ತವರಿಗೆ ಮರಳಿಸಲ್ಪಡಬೇಕಾದರೆ ಊರಿಗೆ ಊರೇ ಅಚ್ಚರಿಯಿಂದ ಸ್ತಬ್ಧವಾಯಿತು! ಅವಳು ಕನ್ಯೆಯಾಗಿರಲಿಲ್ಲವಂತೆ. ಮತ್ತವಳ ಅಣ್ಣಂದಿರು ಜುಟ್ಟು ಹಿಡಿದು ಕೇಳಿದರೆ ಅವಳು ಒಂದು ಹೆಸರು ಹೇಳಬೇಕೆ! ಸ್ಯಾಂಟಿಗೊ ನಾಸರ್ ಕಾರಣ ಎನ್ನುತ್ತಾಳಲ್ಲ, ಯಾರಾದರೂ ನಂಬುತ್ತಾರೆಯೇ ಇದನ್ನು! 


ಯಾರೂ ನಂಬಿದಂತಿಲ್ಲ, ನಿಜವೇ. ಆದರೆ ಇಪ್ಪತ್ತೇಳು ವರ್ಷಗಳ ನಂತರವೂ ಆವತ್ತು ತನ್ನ ಒಂದು ಮಾತಿಗೇ ಬಲಿಯಾದ ಸ್ಯಾಂಟಿಗೊ ಹೆಸರನ್ನು ಬಿಟ್ಟುಕೊಟ್ಟವಳಲ್ಲ ಅಂಜೆಲಾ. ಅಂಜೆಲಾ ಸುಳ್ಳಿಯೆ ಅಥವಾ ಸ್ಯಾಂಟಿಗೊ ಕಪಟ ಲಂಪಟನೆ? ಇಬ್ಬರೂ ಅಥವಾ ಇಬ್ಬರಲ್ಲಿ ಒಬ್ಬರು ಒಂದು ಭ್ರಮೆಗೆ ಒಳಗಾಗಿದ್ದರೆ? ಅಂಜೆಲಾ ಕನ್ಯತ್ವ ನಾಶವಾದುದಕ್ಕೆ ಸ್ಯಾಂಟಿಗೊ ಎಷ್ಟೆಲ್ಲ ಬಗೆಯಲ್ಲಿ ಕಾರಣನಿರಬಹುದೋ ಯಾರು ಬಲ್ಲರು! ವಿವರಗಳನ್ನು ನೀಡಿಲ್ಲ ಅಂಜೆಲಾ. ಇನ್ನು ಈ ಸ್ಯಾಂಟಿಗೊ ಸಾಯುವ ಕೊನೆಯ ಘಳಿಗೆಯ ವರೆಗೆ ತನಗೆ ಏನೂ ತಿಳಿದಿಲ್ಲ ಎಂಬಂತಿದ್ದನಲ್ಲ! ಸಾವಿನ ರೆಕ್ಕೆಗಳು ತನ್ನ ತಲೆಯ ಮೇಲೇ ಬಿಚ್ಚಿಕೊಂಡರೂ ಇರಲಿಕ್ಕಿಲ್ಲ ಗುರಿ ತಾನೇ ಎಂಬಂತಿದ್ದನಲ್ಲ, ಅವನೇ ಅದಾಗಿದ್ದರೆ ಅದು ಹೇಗೆ ಸಾಧ್ಯ! 


ಹೀಗೆ ಮದುವೆಯಾದ ಈ ಇವರಿಬ್ಬರ ಪ್ರೇಮವಾದರೂ ಎಂಥಾದ್ದು ಮತ್ತೆ! ಅವನು ಜಗತ್ತೇ ಮುಗಿದು ಹೋದಂತೆ, ಇನ್ನು ಸಾಯುವುದೊಂದೇ ಉಳಿದಿದೆ ಎಂಬಂತೆ ಕುಡಿತ, ನಿದ್ದೆ, ಅನ್ಯಮನಸ್ಕತೆಯಲ್ಲಿ ಕಳೆದು ಹದಗೆಡುತ್ತಿದ್ದರೆ ಇವಳು ಹತ್ತು ವರ್ಷಗಳ ಬಳಿಕ ಅವನಿಗೆ ಪತ್ರ ಬರೆಯತೊಡಗುತ್ತಾಳೆ. ಮೊದಲ ಪತ್ರ ಇಪ್ಪತ್ತು ಪುಟಗಳಷ್ಟು ದೀರ್ಘ. ಉತ್ತರವಿಲ್ಲ. ಆದರೆ ಮುಂದೆ ಹದಿನೇಳು ವರ್ಷ ಕಾಲ ಸತತವಾಗಿ ಬರೆಯುತ್ತ ಹೋಗುತ್ತಾಳೆ. ಯಾವುದಕ್ಕೂ ಉತ್ತರ ಬರುವುದಿಲ್ಲ. ಆಮೇಲೊಂದು ದಿನ ಕೈಯಲ್ಲಿ ಎರಡು ಸೂಟ್‌ಕೇಸ್ ಹೊತ್ತು ಅವನು ಇವಳ ಮನೆಬಾಗಿಲಿನಲ್ಲಿ ಪ್ರತ್ಯಕ್ಷ! ಒಂದರಲ್ಲಿ ಬಟ್ಟೆ ಬರೆ. ಇನ್ನೊಂದರಲ್ಲಿ ಒಪ್ಪವಾಗಿ ಜೋಡಿಸಲ್ಪಟ್ಟ ಸುಮಾರು ಎರಡು ಸಾವಿರ ಪತ್ರಗಳು. ಎಲ್ಲ ಇವಳು ಬರೆದವು, ನಿಜ, ಆದರೆ ಅವು ಒಂದನ್ನೂ ಅವನು ಒಡೆದು ಓದಿಲ್ಲ ಎನ್ನುವುದು ಇಲ್ಲಿನ ತಮಾಷೆ! 


ಕೆಲವೊಂದು ಸತ್ಯಗಳು ಗೊತ್ತಾಗುವ ಮುನ್ನವೇ ಸತ್ತು ಊಹೆಯಲ್ಲಿ ನಮ್ಮನ್ನು ಕಾಡುತ್ತುಳಿಯುತ್ತವೆ! ಏನೂ ಬರೆದಿಡದೇ ಜೀವ ತೆಗೆದುಕೊಂಡವರ, ಬದುಕನ್ನು ತಿಪ್ಪೆಗೆ ಎಸೆದುಬಿಟ್ಟವರ ಮೌನದಂತೆ! ಹೇಳಿ ಹೋಗು ಕಾರಣಾ.....ಎಂದು ನಮ್ಮ ಮನಸ್ಸು ಹಂಬಲಿಸಿ ನರಳುವಂತೆ. 


ಕೊಲೆಯಂಥಾ ಕೊಲೆ, ದಾರುಣವಾದದ್ದು ಆದರೂ ಸಂಭವಿಸಲೇ ಬೇಕಾದ್ದು ಎಂದು ಭಾವಿಸುವ ಸಂಪ್ರದಾಯವಾದಿ ಸನಾತನಿಗಳೂ, ‘ಗಂಡಸ್ಥನ’ದಲ್ಲಿ ವಿಶ್ವಾಸವುಳ್ಳ ಹೆಂಗಸರೂ ಇಲ್ಲಿದ್ದಾರೆ. ತನ್ನ ಮಗಳ ಮೇಲೆ ಕೈ ಹಾಕುವುದಕ್ಕೆ ಹದ್ದಿನಂತೆ ಕಾದು ಕೂತಿದ್ದಾನೆ ಎಂಬ ಸಕಾರಣ ದ್ವೇಷವುಳ್ಳ ಮನೆಗೆಲಸದ ವಿಕ್ಟೋರಿಯಾ ಆತನ ಸಾವು - ಕೊಲೆ ನಿರ್ವಿಘ್ನವಾಗಿ ನೆರವೇರಲು ನೆರವಾದಂತೆಯೇ ಮಗಳು ದಿವಿನಾ ಕೂಡಾ ಆಘಾತವಾಗುವಷ್ಟರ ಮಟ್ಟಿಗೆ ಕ್ರೂರವಾಗುತ್ತಾಳೆ. ಈ ಎಲ್ಲಕ್ಕಿಂತ ಭೀಕರವಾದ ಸತ್ಯ ಮತ್ತದನ್ನು ತಮಾಷೆಯಾಗಿಸಿಕೊಂಡ ಕ್ರೌರ್ಯವಿರುವುದು ಮದುಮಗಳಾದ ಎಂಜೆಲಾ ವಿಕಾರಿಯೊ ಬಳಿ. ತನ್ನ ಕೌಮಾರ್ಯಕ್ಕೆ ಭಂಗ ತಂದಾತ ಸ್ಯಾಂಟಿಗೊ ಎಂಬ ಆಕೆಯ ಮಾತೇ ಆನುಮಾನಾಸ್ಪದವಾದದ್ದು. ಅವರಿಬ್ಬರೂ ಜೊತೆಯಾಗಿದ್ದ, ಏಕಾಂತದಲ್ಲಿದ್ದ ಸಾಧ್ಯತೆಯೇ ಅಸಂಭವನೀಯವಾಗಿರುತ್ತ ನಿಜವೇ ಆಗಿದ್ದರೆ ಸ್ಯಾಂಟಿಗೊ ವರ್ತಿಸಬೇಕಿದ್ದ ರೀತಿ ಆತನ ಯಾವುದೇ ಚರ್ಯೆ ಇಲ್ಲದಿರುವುದು ಎದ್ದು ಕಾಣುತ್ತಿರುವಾಗ, ಇಂಥ ಕ್ರೌರ್ಯ ಯಾಕೆ ಎನ್ನುವ ಪ್ರಶ್ನೆ ಉಳಿದೇ ಉಳಿಯುತ್ತದೆ. ನಿರೂಪಕನೂ ಆಕೆ ಯಾರನ್ನೋ ಕಾಪಾಡಲು ಮತ್ತು ಸ್ಯಾಂಟಿಗೊನ ತಂಟೆಗೆ ಹೋಗುವ ಧೈರ್ಯ ತನ್ನ ಸಹೋದರರುಮಾಡಲಾರರು ಎಂಬ ವಿಶ್ವಾಸದಿಂದ ಎಂಜೆಲಾ ಹೇಳಿದ ಸುಳ್ಳದು ಎನ್ನುತ್ತಾನೆ. ಆದರೆ ಎಂಜೆಲಾ ಮಾತ್ರ ಇಪ್ಪತ್ತೇಳು ವರ್ಷಗಳ ನಂತರವೂ ಅದನ್ನು ಸುಳ್ಳೆಂದು ಒಪ್ಪುವುದಿಲ್ಲ. 


ಸಾಧ್ಯತೆಗಳು ಅತ್ತಲೂ ಇತ್ತಲೂ ತೆರೆದೇ ಇರುವಂತೆ ಸ್ಯಾಂಟಿಯೊನ ಕಚ್ಚೆ ಹರುಕತನಕ್ಕೆ ಅಲ್ಲಲ್ಲಿ ಕಾಣಿಸುವ ಲಕ್ಷಣಗಳು ಭೀತಿ ಹುಟ್ಟಿಸುತ್ತವೆ. ಒಬ್ಬ ಪಡ್ಡೆ ಹುಡುಗನಂತೆ ಉಡಾಫೆಯಿಂದ ನಡೆದುಕೊಳ್ಳುವ ಆತ ಇನ್ನೊಬ್ಬರ ಬದುಕು - ಭವಿಷ್ಯ ಕುರಿತ ಅಸಡ್ಡೆ ತೋರುವ ತನ್ನ ಕೊಬ್ಬಿಗೆ ಬಲಿಯಾದನೆ ಅಥವಾ ತನ್ನ ಸಾವಿಗೆ ಕಾರಣ ಕೂಡ ತಿಳಿದುಕೊಳ್ಳದೆ ಸತ್ತನೆ - ನಿಗೂಢ. ಇಂಥ ಇನ್ನಷ್ಟು ನಿಗೂಢಗಳೇ ಈ ಕಾದಂಬರಿಯನ್ನು ಶ್ರೇಷ್ಠಗೊಳಿಸಿವೆ. ಇಲ್ಲಿ ಮನುಷ್ಯ ವರ್ತನೆಯ ವಿಶಿಷ್ಠ ಉದಾಹರಣೆಗಳು ನಮ್ಮನ್ನು ಮುಖಾಮುಖಿ ನಿಂತು ಬೆಚ್ಚಿಬೀಳಿಸುತ್ತವೆ. ಕ್ರಿಯೆ ಅಗತ್ಯವಾದಾಗ, ಅನಿವಾರ್ಯವಾದಾಗ, ಕ್ರಿಯಾಹೀನನಾಗುವುದು ಮತ್ತು ಆ ಕ್ರಿಯೆ ಅನುಚಿತವೂ ಅಮಾನವೀಯವೂ ಆಗಿರುವಾಗಲೇ ಕರ್ತವ್ಯವೂ ಆಗಿ ಬಿಟ್ಟಾಗ ಹುಟ್ಟುವ ಕ್ರಿಯಾವಿಮುಖತೆಯೂ ಇಲ್ಲಿ ನಡೆಸುವ ಸಂಘರ್ಷ ಅಧ್ಯಯನಶೀಲ ವಸ್ತುವಾಗಿದೆ. ಕೊಲೆಗಡುಕ ಅವಳಿ ಸಹೋದರರ ಒಳ್ಳೆಯತನದ ಬಗ್ಗೆ ಇಡೀ ಊರಿಗೆ ಎಂಥಾ ವಿಶ್ವಾಸವಿತ್ತೆಂದರೆ ಅವರು ಕೊಲೆ ಮಾಡಿಯಾರೆಂದರೆ ಯಾರೂ ನಂಬುವುದಿಲ್ಲ. ಸ್ವಲ್ಪಮಟ್ಟಿಗಾದರೂ ಆ ವಿಚಾರದಲ್ಲಿ ಮುಂಜಾಗ್ರತೆ ವಹಿಸುವವರು, ಸ್ಯಾಂಟಿಗೊನನ್ನು ಕಾಪಾಡಬೇಕೆನ್ನುವವರು "ಯಾವುದಕ್ಕೂ ಇರಲಿ" ಮನೋಭಾವದವರೇ ಹೊರತು ಈ ಕೊಲೆ ನಿಜಕ್ಕೂ ಸಂಭವಿಸುತ್ತದೆ ಎನ್ನುವ ಬಗ್ಗೆ ಪೂರ್ತಿ ವಿಶ್ವಾಸವೂ ಅವರಲ್ಲಿ ಇಲ್ಲ ಮಾತ್ರವಲ್ಲ, ಅದು ನಡೆಯಲೇ ಬೇಕಾದ್ದಲ್ಲವೆ, ಅದನ್ನು ತಡೆಯುವುದು ಕೂಡ ತಪ್ಪಾಗಬಹುದೇನೋ ಅಲ್ಲವೆ, ಎಂಬ ದ್ವಂದ್ವ ಕೂಡ ಉಳ್ಳವರು. ಇದು ಕಿಂಕರ್ತವ್ಯಮೂಢಸ್ಥಿತಿ. ಇಂಥ ಅಪನಂಬುಗೆ ಸ್ವತಃ ಪೋಲೀಸು, ಮೇಯರ್, ಫಾದರ್‍ಗಳಲ್ಲೇ ಇತ್ತೆಂದರೆ ಊಹಿಸಬಹುದು. 


ಇನ್ನು ಈ ಅವಳಿ ಸಹೋದರರೇ ತಮ್ಮನ್ನು ಈ ದರಿದ್ರ ಮತ್ತು ಕ್ರೂರ ಕರ್ತವ್ಯದಿಂದ ಯಾರಾದರೂ ಹೇಗಾದರೂ ಮುಕ್ತರನ್ನಾಗಿಸಲಿ, ತಡೆಯಲಿ, ವಿಮುಖರನ್ನಾಗಿಸಲಿ ಎಂದು ಬಯಸಿದ್ದರೆ ಆಶ್ಚರ್ಯವಿಲ್ಲ. ಅವರ ವರ್ತನೆ ಹಾಗಿದೆ. ಒಬ್ಬ ಸೆಟೆದುಕೊಂಡಾಗ ಇನ್ನೊಬ್ಬ ಮುದುಡಿ ಒಳತೋಟಿಗೆ ಮಿಡುಕುತ್ತಾನೆ. ಇನ್ನೊಬ್ಬ ಕೊರಗುವಾಗ ಇವನು ಒರಟನಾಗಿ ಒಡ್ಡನಾಗುತ್ತಾನೆ. ಅವಳಿಗಳಲ್ಲೆ ದ್ವಂದ್ವ - ಗೊಂದಲ - ಹಿನ್ನೆಡೆ - ಮುನ್ನೆಡೆ ಇತ್ತೆಂಬುದು ನಿಜ. ಆದರೆ ಅದು ಅವಳಿತನದ್ದೇ ಸ್ವಭಾವವಾಗಿತ್ತೆನ್ನುತ್ತಾನೆ ನಿರೂಪಕ. ಬಹುಷಃ ಪ್ರತಿ ಮನುಷ್ಯನ ಮನಸ್ಸಿನಲ್ಲೂ ಇರುವ ಅವಳೀಭಾವವದು. 


ಈ ಕಾದಂಬರಿ ಓದುತ್ತಿದ್ದಾಗ ಇಲ್ಲೇ ಆಸುಪಾಸಿನ ಮೂವರು ಯುವಕರು ಈಜಾಡಲು ಹೋಗಿ ಕಡಲಿನ ಪಾಲಾಗಿದ್ದರು. ಕಣ್ಣೆದುರೇ ನಿತ್ಯ ಕಾಣುವ ಕಡಲು ಅರ್ಥವಾಗದೆ ಮೋಸ ಮಾಡಿಬಿಟ್ಟಿತ್ತು. ಮೂರುದಿನಗಳ ನಂತರ ಶನಿವಾರ ಅವರ ಅರೆಬರೆ ಕೊಳೆತ ದೇಹಗಳು ಅಂತೂ ಸಿಕ್ಕಿ ಆವತ್ತು ಅಂತ್ಯ ಸಂಸ್ಕಾರ. ನನ್ನ ಕಣ್ಣೆದುರೇ ಚಟುವಟಿಕೆಯಿಂದ ಪುಟಿಯುತ್ತ ಓಡಾಡುತ್ತಿದ್ದ ಒಬ್ಬ ಯುವಕನೂ ಅವರಲ್ಲಿದ್ದ. ಶುಕ್ರವಾರ ನಮ್ಮೆಲ್ಲರ ಜೊತೆ ಪ್ರೀತಿಯಿಂದ ಬೆರೆತು ಒಡನಾಡಿಕೊಂಡಿದ್ದ, ಕ್ಯಾನ್ಸರ್ ಇದ್ದರೂ ಸದಾ ತಮಾಷೆಯಿಂದ ಎಲ್ಲರನ್ನೂ ನಗಿಸುತ್ತಿದ್ದ ಡಾಕ್ಟರ್ ಆನಂದ ಮೆನನ್ ನಂಬಲಾಗದ ಹಾಗೆ ತೀರಿಕೊಂಡೇ ಬಿಟ್ಟರು. ಮನಸ್ಸು ಸೂತಕದ ಕಳೆಯಿಂದ, ಸಾವಿನ ಛಾಯೆಯಿಂದ ಕುಗ್ಗಿಕೊಂಡಿದ್ದಾಗ ಅಲ್ಲಿ ಸ್ಯಾಂಟಿಗೊನನ್ನು ಅವಳಿಗಳು ಕೊಚ್ಚಿ ಕೊಂದಿದ್ದರು. ಅವನು ರಕ್ತ ಸುರಿಯುತ್ತಿದ್ದರೂ ಯಾವಾಗಲೂ ಮಾಡುತ್ತಿದ್ದ ಹಾಗೆ, ಹೇಗೋ ಹಿತ್ತಲ ಬಾಗಿಲಿನಿಂದಲೇ ಮನೆ ಒಳಗೆ ಬಂದು, ಏನಾಯ್ತು ಮಗನೇ ಎಂದು ಹುಯಿಲಿಟ್ಟ ತಾಯಿಯ ಮಡಿಲಲ್ಲಿ ಕುಸಿದು ಬಿದ್ದು ಸತ್ತಿದ್ದ, ಕೊಂದೇ ಬಿಟ್ಟರಮ್ಮ ನನ್ನನ್ನು...ಎನ್ನುತ್ತ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ