Sunday, September 4, 2011

ಸಾರಿಕೊಂದರೆ ಪಾಪವಿಲ್ಲ!

ತಂತ್ರವೇ ಪ್ರಧಾನವೆಂಬಂತೆ ತನ್ನ ಕಾದಂಬರಿಯನ್ನು ರೂಪಿಸಿದರೂ ತಂತ್ರಕ್ಕೆ ಮಿಗಿಲಾದ ಕಥನವನ್ನು ತೆರೆದಿಡುವ, ಸರಿ, ಕಥನವೇ ಆಕರ್ಷಕವಾಗಿರುತ್ತ ತಂತ್ರ ಮತ್ತೊಂದು ಅಂತೆಲ್ಲ ಯಾಕೆ ತಲೆಕೆಡಿಸಿಕೊಳ್ಳ ಬೇಕು ಅನ್ನುವಾಗಲೇ ಕಥಾನಕವನ್ನು ಮೀರಿ ನಿಲ್ಲುವ ದರ್ಶನವನ್ನು, ಕಾಣ್ಕೆಯನ್ನು ಕೊಡಬಲ್ಲ ಕೃತಿಕಾರ ಮಾರ್ಕ್ವೆಜ್ ಎಂಬುದು ಈಗ ಎಲ್ಲರಿಗೂ ಗೊತ್ತು. ಮಾರ್ಕ್ವೆಜ್‌ನ ಖ್ಯಾತ ಕಾದಂಬರಿ Chronicle of a Death Foretold ಕೂಡ ಅಷ್ಟೇ ಖ್ಯಾತ, ಎಲ್ಲರ ಮೆಚ್ಚಿನ ಕೃತಿ.

ಸ್ಯಾಂಟಿಗೊ ನಾಸರ್ ಸೋಮವಾರ ದಿನ ಕೊಲೆಯಾದ ಇಪ್ಪತ್ತೇಳು ವರ್ಷಗಳ ನಂತರ ಆ ದಿನ, ಅದರ ಹಿಂದಿನ ದಿನ ಅವನ ಜೊತೆ ಕಳೆದ ಕೊನೆಯ ಕ್ಷಣಗಳನ್ನು ನೆನೆಯುವ ಅವನ ತಾಯಿ, ಗೆಳತಿ, ಗೆಳೆಯರು, ಊರಿನ ಕೆಲವು ವ್ಯಾಪಾರಿಗಳು, ಕೊಲೆಗೆ ಕಾರಣವಾದ ಒಂದು ಮದುವೆ, ಅದರ ಮದುಮಗ ಬಯಾರ್ದೊ, ಮದುಮಗಳು ಎಂಜೆಲಾ ವಿಕಾರಿಯೊ, ಅವಳ ಅವಳಿ ಸಹೋದರರು - ಹೀಗೆ ಇಡೀ ಊರನ್ನೇ ಕ್ರಮಕ್ರಮೇಣವಾಗಿ ತನ್ನ ಪಾತ್ರವರ್ಗವನ್ನಾಗಿಸುತ್ತ ಕತೆ ಒಂದು ಕ್ರೂರ ವಿಪರ್ಯಾಸದತ್ತ ಬೇರೆ ಬೇರೆ ಕೋನಗಳಿಂದ ನಮ್ಮನ್ನು ಒಯ್ಯುತ್ತದೆ. ಕೇಂದ್ರ ಒಂದು ಕೊಲೆ. ಆದರೆ ಅದು ಕೌತುಕವಲ್ಲ, ಇಲ್ಲಿ ನಿಗೂಢತೆಯೇನಿಲ್ಲ, ಕಾದು ನೋಡುವುದಕ್ಕೇನೂ ಇಲ್ಲ. ಆದರೂ ಓದುಗ ಏನನ್ನೋ ಕಾಯುವಂತೆ, ಏನಾದರೂ ಬದಲಾಗಬಹುದು ಎಂಬ ಹಂಬಲದಿಂದ ತುಯ್ಯುವಂತೆ ಮಾಡುವ ಮಾಯಕತೆ ಈ ಕಾದಂಬರಿಯದು.

ಇಪ್ಪತ್ತೇಳು ವರ್ಷಗಳ ಹಿಂದೆ ನಡೆದ ಒಂದು ಕೊಲೆಯ ಬಗ್ಗೆ, ಅದೂ ಕೊಲ್ಲುತ್ತೇವೆ ಎಂದು ಊರಿಗೆಲ್ಲ ಸಾರಿ ಕೊಂದವರ ಕತೆಯನ್ನು ಈಗ ಹೇಳುವಾಗಲೂ ಅದನ್ನು ಓದುತ್ತಿರುವ ಓದುಗನನ್ನು ನಿಜಕ್ಕೂ ಕೊಲೆ ನಡೆಯುವುದೆ ಎಂಬ ಕೌತುಕದಲ್ಲಿ ನಿಲ್ಲಿಸಬಲ್ಲ ಮಾಯಕಶಕ್ತಿ ಇಲ್ಲಿನ ಬರಹಕ್ಕೆ ದಕ್ಕಿದೆ. ಈ ಮಾಯಕತೆ ಕೃತಿಗೆ ದಕ್ಕಿದ್ದಾದರೂ ಎಲ್ಲಿಂದ ಮತ್ತು ಯಾವುದರಿಂದ ಎಂಬುದು ಪ್ರತಿಯೊಬ್ಬ ಓದುಗನನ್ನೂ ಕುತೂಹಲಕರವಾಗಿ ಕಾಡದಿರದು. ಹೇಗೆ ಮಾರ್ಕ್ವೆಜ್ ಅದನ್ನು ದಕ್ಕಿಸುತ್ತಾನೆಂಬುದು ಈ ಬರವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಹೋದರೆ ತಿಳಿಯುತ್ತದೆ. ಒಂದು ಮನುಷ್ಯ ಸಹಜ ಆಸೆ. ಹೇಗೆ ನಡೆಯುತ್ತದೆ ಮತ್ತು ಹೇಳಿದ ಹಾಗೆಯೇ ಅದು ನಡೆಯುತ್ತದೆಯೇ ಎಂಬ ಕುತೂಹಲ ಎಂಬುದು ಸರಿಯೇ. ಇದಕ್ಕಿಂತ ಹೆಚ್ಚಿನದು ಇಲ್ಲಿನ ನಿರೂಪಣಾ ಕೌಶಲ. 


ಕೇಂದ್ರವನ್ನು ಹಾಗೆಯೇ ಬಿಟ್ಟು ಅದರ ಸುತ್ತಲೇ ಕತೆ ಹಲವಾರು ಸುತ್ತುಗಳನ್ನು ಹಾಕುತ್ತದೆ. ಅಂದರೆ ಕೇವಲ ತಂತ್ರ ಇದು ಎಂದು ಕೊಳ್ಳಬೇಡಿ. ಈ ತಂತ್ರದಲ್ಲಿ ಕೌತುಕದಿಂದ ನಮ್ಮನ್ನು ಸೆಳೆದಿಡುವ ಕಥಾನಕದ ಚಲನೆಯಿದೆ. ಕಥಾನಕದಲ್ಲಿ ಅಂಥ ಜೀವಕಳೆ, ಸೆಲೆ ಇದೆ. ಹಾಗೆಯೇ ಈ ಕೌತುಕ ಬಿಚ್ಚಿಕೊಳ್ಳುವ ಪರಿಯಲ್ಲಿ ಅನೇಕ ಒಳನೋಟಗಳ ನೇಯ್ಗೆಯೂ ಇದೆ. ಈ ನೇಯ್ಗೆ ಸುಲಭದ್ದಲ್ಲ. ಅಸಾಧಾರಣ ಪ್ರತಿಭೆಯ ಮತ್ತು ಎಚ್ಚರದ ಕುಸುರಿಕಲೆಯಲ್ಲಿ ನುರಿತ ಕತೆಗಾರನಿಗೆ ಮಾತ್ರ ಸಾಧ್ಯವಾಗಬಹುದಾದ ಕುಶಲ ಕಲೆಯಿದು, ನಾವಿಲ್ಲಿ ಕಾಣುವುದು. ಯಾಕೆಂದರೆ, ಈ ಸುತ್ತುಗಳು ಹಲವು ಲಯದಲ್ಲಿ ಜಿಗಿದು ಕೂತು ಸಾಗುವ ಸುತ್ತುಗಳು. ಉದಾಹರಣೆಗೆ, ಕೊಲೆಯಾದವನ ತಾಯಿ ಏನನ್ನೊ ನೆನಪಿಸಿಕೊಳ್ಳುವಾಗಲೇ ಅಲ್ಲಿ ಮಿಸ್ಸಿಂಗ್ ಆಗಿರಬಹುದಾದ ಅಥವಾ ಅಲ್ಲಿದ್ದುದರ ಇನ್ನೊಂದೇ ಮಗ್ಗುಲಿನ ನೋಟವಾಗಬಹುದಾದ ಇನ್ನೇನೋ ಒಂದು ತುಣುಕನ್ನ ಮನೆಗೆಲಸದಾಕೆ ಒದಗಿಸುತ್ತಾಳೆ. ಅಲ್ಲಿಯೇ ಕೂಡಲೇ ಒದಗಿಸುತ್ತಾಳೆಂದಲ್ಲ. ಅವಳ ಸುತ್ತು ಬಂದಾಗ ಒದಗಿಸಿದರೂ ಆಯಿತು, ಅಲ್ಲೇ ಒದಗಿಸಿದರೂ ಆಯಿತು, ನೇಯ್ಗೆಯ ಸಮರ್ಪಕತೆಯನ್ನು ಹೊಂದಿಕೊಂಡು ಅತ್ಯಂತ ಸಹಜವೆಂಬಂತೆ ನಡೆಯುವ ಕ್ರಿಯೆ ಇದು. ಹಾಗೆ ಇದು ಕೆಲವೊಮ್ಮೆ ಕಾದಂಬರಿಯ ಇನ್ಯಾವುದೋ ಹಂತದಲ್ಲಿ ಘಟಿಸಿ ಒಮ್ಮೆಗೇ ನಮ್ಮನ್ನು ತಾಯಿಯ ನೋಟವನ್ನು ಹೊರಳಿ-ಮರಳಿ ನೋಡುವಂತೆ, ಎರಡು ಸತ್ಯಗಳ ನಡುವಿನ ಸತ್ಯವನ್ನು ಪರಾಮರ್ಶಿಸುವಂತೆ ಮಾಡಬಹುದು! (ಸೆಪ್ಟೆಂಬರ್ 4,2011ರ ಪ್ರಜಾವಾಣಿ ಸಾಹಿತ್ಯ ಪುರವಣಿಯಲ್ಲಿ ‘ಕಲ್ಪಿತವಾಸ್ತವ’ ಲೇಖನದಲ್ಲಿ ಶ್ರೀ ಗಿರಡ್ದಿ ಗೋವಿಂದರಾಜು ಅವರು ಬರೆದ ‘ಅನೇಕಾಂತವಾದ’ ‘ಸ್ಯಾದ್ ವಾದ’ ಪರಿಕಲ್ಪನೆಗಳ ಬಗ್ಗೆ ದಯವಿಟ್ಟು ಓದಿ.) 


ಇದು ಬರಿಯ ತಂತ್ರದಾಟವಲ್ಲ. ಕಾಲ, ವ್ಯಕ್ತಿ ಮತ್ತು ಮನುಷ್ಯ ಸಂಬಂಧಗಳು ಸತ್ಯವನ್ನು ಕಾಣುವ, ಅಭಿವ್ಯಕ್ತಿಸುವ ಕ್ರಮಗಳು ಬೇರೆಯೇ ಆಗಿರುವುದು ಸಾಧ್ಯ. ಇಲ್ಲಿ ಏನಾಗುತ್ತಿದೆ ಎಂದರೆ, ಸತ್ತಿರುವ ಸ್ಯಾಂಟಿಗೋಗೆ ಮಾತ್ರ ತಿಳಿದಿರಬಹುದಾದ ಸತ್ಯವನ್ನು ಹೇಳಲು ಅವನೇ ಇಲ್ಲ. ಇನ್ನು ಸತ್ಯವನ್ನು ಹೇಳಬಹುದಾದ ಒಂದೇ ಒಂದು ಪಾತ್ರ ಎಂಜೆಲಾ ಹೇಳುತ್ತಿರುವುದರಲ್ಲಿ ವಿರೋಧಾಭಾಸವಿದೆ. ಇಲ್ಲೆಲ್ಲೊ ನಾವು ಹಾರ್ಪರ್ ಕಾಲಿನ್ಸ್ ನ To Kill a Mocking Bird ಕಾದಂಬರಿಯನ್ನು ನೆನೆಯುವಂತಾದರೆ ಆಶ್ಚರ್ಯವೇನಿಲ್ಲ. ಒಬ್ಬ ನೀಗ್ರೋ, ಬಿಳಿಯ ಹುಡುಗಿಯ ಮೇಲೆ ಅತ್ಯಾಚಾರ ನಡೆಸಿದ್ದಾಗಿ ದೂರು ಕೊಟ್ಟಿದ್ದು ಅದರ ವಿಚಾರಣೆ ನಡೆಯುತ್ತಿರುವಾಗಿನ ಉಭಯಸಂಕಟಗಳನ್ನು ನೆನೆಯಿರಿ. ಹಾಗೆಯೇ ಇಲ್ಲಿ ಎಲ್ಲಾ ಪಾತ್ರಗಳೂ ಒಂದು ಊಹೆಯ ನೆಲೆಯಲ್ಲಿ ಮಾತನಾಡಬೇಕಾದ ಅನಿವಾರ್ಯತೆ ಇದೆ. ಹಾಗೆ ನಾವು ಇನ್ನೊಬ್ಬ ವ್ಯಕ್ತಿಯ ಬಗ್ಗೆ ಮಾಡುವ ಊಹೆ ಆ ವ್ಯಕ್ತಿಯನ್ನು ತೋರಿಸುವುದಕ್ಕಿಂತ ಹೆಚ್ಚು ನಮ್ಮನ್ನೇ ತೋರಿಸುತ್ತಿರುತ್ತದೆಯೇ ಹೊರತು ಇನ್ನೇನಲ್ಲ! ಹಾಗೆಯೇ ಈ ಯಾವತ್ತೂ ಊಹೆಗಳು ಕೊನೆಗೂ ನಮಗೆ ಇದಂ ಇತ್ಥಂ ಎನ್ನಬಹುದಾದ ಏನನ್ನೂ ಕೊಡುವುದಿಲ್ಲ. ಊಹೆಗಳು ಇನ್ನಷ್ಟು ಊಹೆಗಳನ್ನಷ್ಟೇ ಹುಟ್ಟಿಸುತ್ತ ಸದಾ ನಮ್ಮನ್ನು ಕಾಡುತ್ತ ಉಳಿಯುತ್ತವೆ. ಆದರೆ ಈ ಕಾಟ ಕೆಲವೊಮ್ಮೆ ತುಂಬ ರಚನಾತ್ಮಕವಾಗಬಲ್ಲುದು. ಇದೇ ತಂತ್ರ J M Coetzee ಯ ‘ಮತ್ತೊಬ್ಬನ ಆತ್ಮಕಥಾನಕ’ ಮಾದರಿಯ Summertime ಕಾದಂಬರಿಯಲ್ಲೂ ಕಾಣುತ್ತೇವೆ. Coetzee ಬರೆಯುವ Coetzee ಕುರಿತ ಗ್ರಂಥದಲ್ಲಿ Coetzee ಯ ಬೇರೆ ಬೇರೆ ಕಾಲದ ಗೆಳೆಯರು ಒಡನಾಡಿಗಳು Coetzee ಬಗ್ಗೆ ತಮ್ಮ ಅನಿಸಿಕೆ, ವ್ಯಕ್ತಿಚಿತ್ರ ನೀಡುತ್ತಿದ್ದಾರೆ, ಮತ್ತು ಇದು ನಡೆಯುವಾಗ ಸ್ವತಃ Coetzee ಸತ್ತಿದ್ದಾನೆ! 


Investigating Megistrate ನ ಟಿಪ್ಪಣಿಗಳು, ಅವರಿವರ ಹೇಳಿಕೆಗಳು, ನಿರೂಪಕನೂ ಒಬ್ಬ insider ಆಗಿರುವುದರಿಂದ ಅವನು ಜೋಡಿಸಿಕೊಡಬಲ್ಲ ತುಂಡು ತುಂಡು ಚಿತ್ರಗಳು, ಅವನ ಸ್ವಂತದ ಕಲ್ಪನೆ, ಸಂಕಲನದ ಕ್ರಮ, ಊಹೆ ಎಲ್ಲ ಇದೆ ಇಲ್ಲಿ. ಪೋಲೀಸ್, ಮೇಯರ್, ಫಾದರ್, ಭಿಕ್ಷುಕ, ಮನೆಗೆಲಸದವಳು, ಅವಳ ಹರಯದ ಮಗಳು ಎಲ್ಲರೂ ಒಂದಲ್ಲಾ ಒಂದು ಬಗೆಯಲ್ಲಿ ಈ ಕೊಲೆಯನ್ನು ಮುಂಗಾಣುತ್ತಿದ್ದರೂ ಒಂದಲ್ಲಾ ಒಂದು ಬಗೆಯಲ್ಲಿ ತಿಳಿದೊ ತಿಳಿಯದೆಯೊ ಅದನ್ನು ಸಂಭವಿಸಲು ಬಿಡುವ ಬಗೆ ಕೂಡ ಕುತೂಹಲಕರವಾಗಿದೆ. ದೇಶದಲ್ಲಿ ಈಚೆಗೆ ಹುಯಿಲೆಬ್ಬಿಸಿದ Honer Killing ನೆನೆದುಕೊಳ್ಳಿ. ಇಲ್ಲಿ ನಡೆಯುವುದೂ ಯಥಾವತ್ ಅದೇ. 


ಹಾಗೆ ನೋಡಿದರೆ ಬಯಾರ್ದೊ ಅವಳನ್ನು ಪ್ರೀತಿಸಿದ್ದನೆ? ಅಪಾರ ಸಂಪತ್ತಿನ ಒಡೆಯ ಎಂಬುದನ್ನು ಒಡೆದು ಕಾಣುವಂತೆಯೇ ಅಬ್ಬರದಿಂದ ಬಂದಿಳಿದ ಈ ಮನುಷ್ಯ ಮದುವೆಯಾಗುವುದಕ್ಕೆ ಸರಿಯಾದ ಹುಡುಗಿಯನ್ನು ಅರಸುತ್ತಿದ್ದೇನೆ ಎಂದು ಹೇಳಿಕೊಂಡೇ, ಊರಿನಲ್ಲಿ ಒಂದು ಚಟುವಟಿಕೆಯ ಅಲೆಯೆಬ್ಬಿಸಿಯೇ ಕಾಲಿಟ್ಟವನು. ಅವಳು ಬೇಡ, ಇವಳು ಸರಿಯಿಲ್ಲ ಎನ್ನುತ್ತಿದ್ದವ ಮೊದಲ ನೋಟಕ್ಕೇ ಮರುಳಾದವನಂತೆ ಅಂಜೆಲಾ ಸೌಂದರ್ಯಕ್ಕೆ ಮಾರು ಹೋದವನು. ಅವಳಿಗೆ ಮನಸ್ಸಿರಲಿಲ್ಲ ಎಂದೇ ಇಟ್ಟುಕೊಂಡರೂ ಅವಳಿಗೆ ಬೇರೆ ಯಾರೊಂದಿಗೋ ಪ್ರೇಮವಿರಲಿಲ್ಲ. ಅವಳನ್ನು ಇನ್ಯಾರೊಂದಿಗೋ ಅಲ್ಲಿ ಇಲ್ಲಿ ಕಂಡವರಿಲ್ಲ. ಅಂಥವಳು ಮೊದಲ ರಾತ್ರಿಯೇ ಪರಿತ್ಯಕ್ತಳಾಗಿ ತವರಿಗೆ ಮರಳಿಸಲ್ಪಡಬೇಕಾದರೆ ಊರಿಗೆ ಊರೇ ಅಚ್ಚರಿಯಿಂದ ಸ್ತಬ್ಧವಾಯಿತು! ಅವಳು ಕನ್ಯೆಯಾಗಿರಲಿಲ್ಲವಂತೆ. ಮತ್ತವಳ ಅಣ್ಣಂದಿರು ಜುಟ್ಟು ಹಿಡಿದು ಕೇಳಿದರೆ ಅವಳು ಒಂದು ಹೆಸರು ಹೇಳಬೇಕೆ! ಸ್ಯಾಂಟಿಗೊ ನಾಸರ್ ಕಾರಣ ಎನ್ನುತ್ತಾಳಲ್ಲ, ಯಾರಾದರೂ ನಂಬುತ್ತಾರೆಯೇ ಇದನ್ನು! 


ಯಾರೂ ನಂಬಿದಂತಿಲ್ಲ, ನಿಜವೇ. ಆದರೆ ಇಪ್ಪತ್ತೇಳು ವರ್ಷಗಳ ನಂತರವೂ ಆವತ್ತು ತನ್ನ ಒಂದು ಮಾತಿಗೇ ಬಲಿಯಾದ ಸ್ಯಾಂಟಿಗೊ ಹೆಸರನ್ನು ಬಿಟ್ಟುಕೊಟ್ಟವಳಲ್ಲ ಅಂಜೆಲಾ. ಅಂಜೆಲಾ ಸುಳ್ಳಿಯೆ ಅಥವಾ ಸ್ಯಾಂಟಿಗೊ ಕಪಟ ಲಂಪಟನೆ? ಇಬ್ಬರೂ ಅಥವಾ ಇಬ್ಬರಲ್ಲಿ ಒಬ್ಬರು ಒಂದು ಭ್ರಮೆಗೆ ಒಳಗಾಗಿದ್ದರೆ? ಅಂಜೆಲಾ ಕನ್ಯತ್ವ ನಾಶವಾದುದಕ್ಕೆ ಸ್ಯಾಂಟಿಗೊ ಎಷ್ಟೆಲ್ಲ ಬಗೆಯಲ್ಲಿ ಕಾರಣನಿರಬಹುದೋ ಯಾರು ಬಲ್ಲರು! ವಿವರಗಳನ್ನು ನೀಡಿಲ್ಲ ಅಂಜೆಲಾ. ಇನ್ನು ಈ ಸ್ಯಾಂಟಿಗೊ ಸಾಯುವ ಕೊನೆಯ ಘಳಿಗೆಯ ವರೆಗೆ ತನಗೆ ಏನೂ ತಿಳಿದಿಲ್ಲ ಎಂಬಂತಿದ್ದನಲ್ಲ! ಸಾವಿನ ರೆಕ್ಕೆಗಳು ತನ್ನ ತಲೆಯ ಮೇಲೇ ಬಿಚ್ಚಿಕೊಂಡರೂ ಇರಲಿಕ್ಕಿಲ್ಲ ಗುರಿ ತಾನೇ ಎಂಬಂತಿದ್ದನಲ್ಲ, ಅವನೇ ಅದಾಗಿದ್ದರೆ ಅದು ಹೇಗೆ ಸಾಧ್ಯ! 


ಹೀಗೆ ಮದುವೆಯಾದ ಈ ಇವರಿಬ್ಬರ ಪ್ರೇಮವಾದರೂ ಎಂಥಾದ್ದು ಮತ್ತೆ! ಅವನು ಜಗತ್ತೇ ಮುಗಿದು ಹೋದಂತೆ, ಇನ್ನು ಸಾಯುವುದೊಂದೇ ಉಳಿದಿದೆ ಎಂಬಂತೆ ಕುಡಿತ, ನಿದ್ದೆ, ಅನ್ಯಮನಸ್ಕತೆಯಲ್ಲಿ ಕಳೆದು ಹದಗೆಡುತ್ತಿದ್ದರೆ ಇವಳು ಹತ್ತು ವರ್ಷಗಳ ಬಳಿಕ ಅವನಿಗೆ ಪತ್ರ ಬರೆಯತೊಡಗುತ್ತಾಳೆ. ಮೊದಲ ಪತ್ರ ಇಪ್ಪತ್ತು ಪುಟಗಳಷ್ಟು ದೀರ್ಘ. ಉತ್ತರವಿಲ್ಲ. ಆದರೆ ಮುಂದೆ ಹದಿನೇಳು ವರ್ಷ ಕಾಲ ಸತತವಾಗಿ ಬರೆಯುತ್ತ ಹೋಗುತ್ತಾಳೆ. ಯಾವುದಕ್ಕೂ ಉತ್ತರ ಬರುವುದಿಲ್ಲ. ಆಮೇಲೊಂದು ದಿನ ಕೈಯಲ್ಲಿ ಎರಡು ಸೂಟ್‌ಕೇಸ್ ಹೊತ್ತು ಅವನು ಇವಳ ಮನೆಬಾಗಿಲಿನಲ್ಲಿ ಪ್ರತ್ಯಕ್ಷ! ಒಂದರಲ್ಲಿ ಬಟ್ಟೆ ಬರೆ. ಇನ್ನೊಂದರಲ್ಲಿ ಒಪ್ಪವಾಗಿ ಜೋಡಿಸಲ್ಪಟ್ಟ ಸುಮಾರು ಎರಡು ಸಾವಿರ ಪತ್ರಗಳು. ಎಲ್ಲ ಇವಳು ಬರೆದವು, ನಿಜ, ಆದರೆ ಅವು ಒಂದನ್ನೂ ಅವನು ಒಡೆದು ಓದಿಲ್ಲ ಎನ್ನುವುದು ಇಲ್ಲಿನ ತಮಾಷೆ! 


ಕೆಲವೊಂದು ಸತ್ಯಗಳು ಗೊತ್ತಾಗುವ ಮುನ್ನವೇ ಸತ್ತು ಊಹೆಯಲ್ಲಿ ನಮ್ಮನ್ನು ಕಾಡುತ್ತುಳಿಯುತ್ತವೆ! ಏನೂ ಬರೆದಿಡದೇ ಜೀವ ತೆಗೆದುಕೊಂಡವರ, ಬದುಕನ್ನು ತಿಪ್ಪೆಗೆ ಎಸೆದುಬಿಟ್ಟವರ ಮೌನದಂತೆ! ಹೇಳಿ ಹೋಗು ಕಾರಣಾ.....ಎಂದು ನಮ್ಮ ಮನಸ್ಸು ಹಂಬಲಿಸಿ ನರಳುವಂತೆ. 


ಕೊಲೆಯಂಥಾ ಕೊಲೆ, ದಾರುಣವಾದದ್ದು ಆದರೂ ಸಂಭವಿಸಲೇ ಬೇಕಾದ್ದು ಎಂದು ಭಾವಿಸುವ ಸಂಪ್ರದಾಯವಾದಿ ಸನಾತನಿಗಳೂ, ‘ಗಂಡಸ್ಥನ’ದಲ್ಲಿ ವಿಶ್ವಾಸವುಳ್ಳ ಹೆಂಗಸರೂ ಇಲ್ಲಿದ್ದಾರೆ. ತನ್ನ ಮಗಳ ಮೇಲೆ ಕೈ ಹಾಕುವುದಕ್ಕೆ ಹದ್ದಿನಂತೆ ಕಾದು ಕೂತಿದ್ದಾನೆ ಎಂಬ ಸಕಾರಣ ದ್ವೇಷವುಳ್ಳ ಮನೆಗೆಲಸದ ವಿಕ್ಟೋರಿಯಾ ಆತನ ಸಾವು - ಕೊಲೆ ನಿರ್ವಿಘ್ನವಾಗಿ ನೆರವೇರಲು ನೆರವಾದಂತೆಯೇ ಮಗಳು ದಿವಿನಾ ಕೂಡಾ ಆಘಾತವಾಗುವಷ್ಟರ ಮಟ್ಟಿಗೆ ಕ್ರೂರವಾಗುತ್ತಾಳೆ. ಈ ಎಲ್ಲಕ್ಕಿಂತ ಭೀಕರವಾದ ಸತ್ಯ ಮತ್ತದನ್ನು ತಮಾಷೆಯಾಗಿಸಿಕೊಂಡ ಕ್ರೌರ್ಯವಿರುವುದು ಮದುಮಗಳಾದ ಎಂಜೆಲಾ ವಿಕಾರಿಯೊ ಬಳಿ. ತನ್ನ ಕೌಮಾರ್ಯಕ್ಕೆ ಭಂಗ ತಂದಾತ ಸ್ಯಾಂಟಿಗೊ ಎಂಬ ಆಕೆಯ ಮಾತೇ ಆನುಮಾನಾಸ್ಪದವಾದದ್ದು. ಅವರಿಬ್ಬರೂ ಜೊತೆಯಾಗಿದ್ದ, ಏಕಾಂತದಲ್ಲಿದ್ದ ಸಾಧ್ಯತೆಯೇ ಅಸಂಭವನೀಯವಾಗಿರುತ್ತ ನಿಜವೇ ಆಗಿದ್ದರೆ ಸ್ಯಾಂಟಿಗೊ ವರ್ತಿಸಬೇಕಿದ್ದ ರೀತಿ ಆತನ ಯಾವುದೇ ಚರ್ಯೆ ಇಲ್ಲದಿರುವುದು ಎದ್ದು ಕಾಣುತ್ತಿರುವಾಗ, ಇಂಥ ಕ್ರೌರ್ಯ ಯಾಕೆ ಎನ್ನುವ ಪ್ರಶ್ನೆ ಉಳಿದೇ ಉಳಿಯುತ್ತದೆ. ನಿರೂಪಕನೂ ಆಕೆ ಯಾರನ್ನೋ ಕಾಪಾಡಲು ಮತ್ತು ಸ್ಯಾಂಟಿಗೊನ ತಂಟೆಗೆ ಹೋಗುವ ಧೈರ್ಯ ತನ್ನ ಸಹೋದರರುಮಾಡಲಾರರು ಎಂಬ ವಿಶ್ವಾಸದಿಂದ ಎಂಜೆಲಾ ಹೇಳಿದ ಸುಳ್ಳದು ಎನ್ನುತ್ತಾನೆ. ಆದರೆ ಎಂಜೆಲಾ ಮಾತ್ರ ಇಪ್ಪತ್ತೇಳು ವರ್ಷಗಳ ನಂತರವೂ ಅದನ್ನು ಸುಳ್ಳೆಂದು ಒಪ್ಪುವುದಿಲ್ಲ. 


ಸಾಧ್ಯತೆಗಳು ಅತ್ತಲೂ ಇತ್ತಲೂ ತೆರೆದೇ ಇರುವಂತೆ ಸ್ಯಾಂಟಿಯೊನ ಕಚ್ಚೆ ಹರುಕತನಕ್ಕೆ ಅಲ್ಲಲ್ಲಿ ಕಾಣಿಸುವ ಲಕ್ಷಣಗಳು ಭೀತಿ ಹುಟ್ಟಿಸುತ್ತವೆ. ಒಬ್ಬ ಪಡ್ಡೆ ಹುಡುಗನಂತೆ ಉಡಾಫೆಯಿಂದ ನಡೆದುಕೊಳ್ಳುವ ಆತ ಇನ್ನೊಬ್ಬರ ಬದುಕು - ಭವಿಷ್ಯ ಕುರಿತ ಅಸಡ್ಡೆ ತೋರುವ ತನ್ನ ಕೊಬ್ಬಿಗೆ ಬಲಿಯಾದನೆ ಅಥವಾ ತನ್ನ ಸಾವಿಗೆ ಕಾರಣ ಕೂಡ ತಿಳಿದುಕೊಳ್ಳದೆ ಸತ್ತನೆ - ನಿಗೂಢ. ಇಂಥ ಇನ್ನಷ್ಟು ನಿಗೂಢಗಳೇ ಈ ಕಾದಂಬರಿಯನ್ನು ಶ್ರೇಷ್ಠಗೊಳಿಸಿವೆ. ಇಲ್ಲಿ ಮನುಷ್ಯ ವರ್ತನೆಯ ವಿಶಿಷ್ಠ ಉದಾಹರಣೆಗಳು ನಮ್ಮನ್ನು ಮುಖಾಮುಖಿ ನಿಂತು ಬೆಚ್ಚಿಬೀಳಿಸುತ್ತವೆ. ಕ್ರಿಯೆ ಅಗತ್ಯವಾದಾಗ, ಅನಿವಾರ್ಯವಾದಾಗ, ಕ್ರಿಯಾಹೀನನಾಗುವುದು ಮತ್ತು ಆ ಕ್ರಿಯೆ ಅನುಚಿತವೂ ಅಮಾನವೀಯವೂ ಆಗಿರುವಾಗಲೇ ಕರ್ತವ್ಯವೂ ಆಗಿ ಬಿಟ್ಟಾಗ ಹುಟ್ಟುವ ಕ್ರಿಯಾವಿಮುಖತೆಯೂ ಇಲ್ಲಿ ನಡೆಸುವ ಸಂಘರ್ಷ ಅಧ್ಯಯನಶೀಲ ವಸ್ತುವಾಗಿದೆ. ಕೊಲೆಗಡುಕ ಅವಳಿ ಸಹೋದರರ ಒಳ್ಳೆಯತನದ ಬಗ್ಗೆ ಇಡೀ ಊರಿಗೆ ಎಂಥಾ ವಿಶ್ವಾಸವಿತ್ತೆಂದರೆ ಅವರು ಕೊಲೆ ಮಾಡಿಯಾರೆಂದರೆ ಯಾರೂ ನಂಬುವುದಿಲ್ಲ. ಸ್ವಲ್ಪಮಟ್ಟಿಗಾದರೂ ಆ ವಿಚಾರದಲ್ಲಿ ಮುಂಜಾಗ್ರತೆ ವಹಿಸುವವರು, ಸ್ಯಾಂಟಿಗೊನನ್ನು ಕಾಪಾಡಬೇಕೆನ್ನುವವರು "ಯಾವುದಕ್ಕೂ ಇರಲಿ" ಮನೋಭಾವದವರೇ ಹೊರತು ಈ ಕೊಲೆ ನಿಜಕ್ಕೂ ಸಂಭವಿಸುತ್ತದೆ ಎನ್ನುವ ಬಗ್ಗೆ ಪೂರ್ತಿ ವಿಶ್ವಾಸವೂ ಅವರಲ್ಲಿ ಇಲ್ಲ ಮಾತ್ರವಲ್ಲ, ಅದು ನಡೆಯಲೇ ಬೇಕಾದ್ದಲ್ಲವೆ, ಅದನ್ನು ತಡೆಯುವುದು ಕೂಡ ತಪ್ಪಾಗಬಹುದೇನೋ ಅಲ್ಲವೆ, ಎಂಬ ದ್ವಂದ್ವ ಕೂಡ ಉಳ್ಳವರು. ಇದು ಕಿಂಕರ್ತವ್ಯಮೂಢಸ್ಥಿತಿ. ಇಂಥ ಅಪನಂಬುಗೆ ಸ್ವತಃ ಪೋಲೀಸು, ಮೇಯರ್, ಫಾದರ್‍ಗಳಲ್ಲೇ ಇತ್ತೆಂದರೆ ಊಹಿಸಬಹುದು. 


ಇನ್ನು ಈ ಅವಳಿ ಸಹೋದರರೇ ತಮ್ಮನ್ನು ಈ ದರಿದ್ರ ಮತ್ತು ಕ್ರೂರ ಕರ್ತವ್ಯದಿಂದ ಯಾರಾದರೂ ಹೇಗಾದರೂ ಮುಕ್ತರನ್ನಾಗಿಸಲಿ, ತಡೆಯಲಿ, ವಿಮುಖರನ್ನಾಗಿಸಲಿ ಎಂದು ಬಯಸಿದ್ದರೆ ಆಶ್ಚರ್ಯವಿಲ್ಲ. ಅವರ ವರ್ತನೆ ಹಾಗಿದೆ. ಒಬ್ಬ ಸೆಟೆದುಕೊಂಡಾಗ ಇನ್ನೊಬ್ಬ ಮುದುಡಿ ಒಳತೋಟಿಗೆ ಮಿಡುಕುತ್ತಾನೆ. ಇನ್ನೊಬ್ಬ ಕೊರಗುವಾಗ ಇವನು ಒರಟನಾಗಿ ಒಡ್ಡನಾಗುತ್ತಾನೆ. ಅವಳಿಗಳಲ್ಲೆ ದ್ವಂದ್ವ - ಗೊಂದಲ - ಹಿನ್ನೆಡೆ - ಮುನ್ನೆಡೆ ಇತ್ತೆಂಬುದು ನಿಜ. ಆದರೆ ಅದು ಅವಳಿತನದ್ದೇ ಸ್ವಭಾವವಾಗಿತ್ತೆನ್ನುತ್ತಾನೆ ನಿರೂಪಕ. ಬಹುಷಃ ಪ್ರತಿ ಮನುಷ್ಯನ ಮನಸ್ಸಿನಲ್ಲೂ ಇರುವ ಅವಳೀಭಾವವದು. 


ಈ ಕಾದಂಬರಿ ಓದುತ್ತಿದ್ದಾಗ ಇಲ್ಲೇ ಆಸುಪಾಸಿನ ಮೂವರು ಯುವಕರು ಈಜಾಡಲು ಹೋಗಿ ಕಡಲಿನ ಪಾಲಾಗಿದ್ದರು. ಕಣ್ಣೆದುರೇ ನಿತ್ಯ ಕಾಣುವ ಕಡಲು ಅರ್ಥವಾಗದೆ ಮೋಸ ಮಾಡಿಬಿಟ್ಟಿತ್ತು. ಮೂರುದಿನಗಳ ನಂತರ ಶನಿವಾರ ಅವರ ಅರೆಬರೆ ಕೊಳೆತ ದೇಹಗಳು ಅಂತೂ ಸಿಕ್ಕಿ ಆವತ್ತು ಅಂತ್ಯ ಸಂಸ್ಕಾರ. ನನ್ನ ಕಣ್ಣೆದುರೇ ಚಟುವಟಿಕೆಯಿಂದ ಪುಟಿಯುತ್ತ ಓಡಾಡುತ್ತಿದ್ದ ಒಬ್ಬ ಯುವಕನೂ ಅವರಲ್ಲಿದ್ದ. ಶುಕ್ರವಾರ ನಮ್ಮೆಲ್ಲರ ಜೊತೆ ಪ್ರೀತಿಯಿಂದ ಬೆರೆತು ಒಡನಾಡಿಕೊಂಡಿದ್ದ, ಕ್ಯಾನ್ಸರ್ ಇದ್ದರೂ ಸದಾ ತಮಾಷೆಯಿಂದ ಎಲ್ಲರನ್ನೂ ನಗಿಸುತ್ತಿದ್ದ ಡಾಕ್ಟರ್ ಆನಂದ ಮೆನನ್ ನಂಬಲಾಗದ ಹಾಗೆ ತೀರಿಕೊಂಡೇ ಬಿಟ್ಟರು. ಮನಸ್ಸು ಸೂತಕದ ಕಳೆಯಿಂದ, ಸಾವಿನ ಛಾಯೆಯಿಂದ ಕುಗ್ಗಿಕೊಂಡಿದ್ದಾಗ ಅಲ್ಲಿ ಸ್ಯಾಂಟಿಗೊನನ್ನು ಅವಳಿಗಳು ಕೊಚ್ಚಿ ಕೊಂದಿದ್ದರು. ಅವನು ರಕ್ತ ಸುರಿಯುತ್ತಿದ್ದರೂ ಯಾವಾಗಲೂ ಮಾಡುತ್ತಿದ್ದ ಹಾಗೆ, ಹೇಗೋ ಹಿತ್ತಲ ಬಾಗಿಲಿನಿಂದಲೇ ಮನೆ ಒಳಗೆ ಬಂದು, ಏನಾಯ್ತು ಮಗನೇ ಎಂದು ಹುಯಿಲಿಟ್ಟ ತಾಯಿಯ ಮಡಿಲಲ್ಲಿ ಕುಸಿದು ಬಿದ್ದು ಸತ್ತಿದ್ದ, ಕೊಂದೇ ಬಿಟ್ಟರಮ್ಮ ನನ್ನನ್ನು...ಎನ್ನುತ್ತ.

No comments: