Tuesday, December 20, 2011

ತುದಿಯೆಂಬೋ ತುದಿಯಿಲ್ಲ....!

ವರ್ತಮಾನದಲ್ಲಿ ಜೀವಿ ನಿಷ್ಪಾಪಿ ಎನ್ನುತ್ತಾರೆ ದಾರ್ಶನಿಕರು, ತತ್ವಜ್ಞಾನಿಗಳು. ವರ್ತಮಾನದ ಈ ತತ್‌ಕ್ಷಣದಲ್ಲಿ ಯಾರಿಗೂ ಪಾಪದ ಲೇಪವಿಲ್ಲ. ಪಾಪವೇನಿದ್ದರೂ ಅದು ಈ ಕ್ಷಣದ್ದಲ್ಲ, ಈ ಕ್ಷಣಕ್ಕೆ ಪಾಪದ ಸೂತಕವಿಲ್ಲ. ಈ ಕ್ಷಣದಲ್ಲಿ, "ಇಲ್ಲಿ ಮತ್ತು ಈಗ" ಸ್ಥಿರನಾಗು, ಅದೇ ಪರಮಶಾಂತಿಯ ತಾಣ ಎನ್ನುತ್ತಾರೆ, ಈಚೆಗೆ ನಮ್ಮ ನಿಮ್ಮ ಮನಶ್ಶಾಂತಿ-ನೆಮ್ಮದಿಗಳನ್ನು ಗುತ್ತಿಗೆ ವಹಿಸಿಕೊಂಡ ಆಧ್ಯಾತ್ಮಿಕ ಗುರುಗಳು. ತಮಾಷೆ ಎಂದರೆ ಇಪ್ಪತ್ತನಾಲ್ಕು ಗಂಟೆಯೂ ನಾವಿರುವುದೇ ವರ್ತಮಾನದಲ್ಲಿ. ಅದು ನಮಗೆ ಹೊರಲಾರದ ಹೊರೆ, ಬೋರು, ಸಂಕಟ! ನಮಗೆ ಅದು ಗೊತ್ತಿದೆ, ಅಲ್ಲಿ ಸುಮ್ಮನಿದ್ದರೆ ನೀರವ, ನಿಶ್ಚಲ, ನಿಶ್ಶಬ್ದದ ಕ್ರಿಯಾಶೂನ್ಯ-ಕ್ರಿಯಾಹೀನ ಘಳಿಗೆಯಲ್ಲಿ ಶಾಂತಿಯಲ್ಲದೇ ಇನ್ನೇನು ಇರಲು ಸಾಧ್ಯ! ನಮ್ಮ ನಮ್ಮ ಕ್ರಿಯಾಕರ್ಮದಲ್ಲಿ ತೊಡಗಿದ್ದೂ ವರ್ತಮಾನದಲ್ಲೇ ಇರುವುದು ಒಂದು ಥರ ಯಂತ್ರದಂತೆ, ಬದುಕಿಯೂ ಸತ್ತಂತೆ ಇರುತ್ತದೆ. ನೆನಪುಗಳು, ಭೂತ-ಭವಿಷ್ಯದ ನಂಟಿನ (ವ್ಯಕ್ತ ಮಧ್ಯ!) ಅಂಟು ಇಲ್ಲದೇ ಹೋದರೆ ಬದುಕಿನಲ್ಲಿ ಏನುಂಟು? ಹಾಗೆ ನಮಗೆಲ್ಲರಿಗೂ ಈ ಶಾಂತಿಗಿಂತ ಆಗಾಗ ಭೂತಕಾಲಕ್ಕೂ ಸಾಧ್ಯವಿರುವಷ್ಟೂ ಭವಿಷ್ಯತ್ ಕಾಲಕ್ಕೂ ಜೀಕಿ ಜೋಕಾಲಿಯಾಡುವುದೇ ಹೆಚ್ಚು ಇಷ್ಟವಾದದ್ದು. ವರ್ತಮಾನದಲ್ಲೇ ನೇಣು ಹಾಕಿಕೊಳ್ಳುವುದಾದರೆ ಕಥೆ ಕಾದಂಬರಿ ನಾಟಕ ಸಿನಿಮಾ ಎಲ್ಲ ಎಲ್ಲಿರುತ್ತಿತ್ತು! ಹಾಗೆ ಮತ್ತೊಮ್ಮೆ ಭೂತಕಾಲದ ಕತೆಯಲ್ಲಿ ವರ್ತಮಾನದ ಬೀಜಗಳನ್ನೋ ಭವಿಷ್ಯದ ಚಿಗುರುಗಳನ್ನೋ ತಡಕಾಡುವ ಮತ್ತೊಂದು ಕಾದಂಬರಿ, ಈ ಸಾಲಿನ ಮ್ಯಾನ್ ಬುಕರ್ ಪ್ರಶಸ್ತಿ ಬುಟ್ಟಿಗೆ ಹಾಕಿಕೊಂಡ ದ ಸೆನ್ಸ್ ಆಫ್ ಎನ್ ಎಂಡಿಂಗ್. ಇದನ್ನು ಬರೆದವರು ಲಂಡನ್ನಿನ ಜ್ಯೂಲಿಯಾನ ಬಾರ್ನೆಸ್.
ಇಲ್ಲಿ ಒಂದು ಸೀಮಿತ ನೆಲೆಯಿಂದ ‘ಕಾಲ’ವೇ ಹೀರೋ. ಭೂತಕಾಲವನ್ನು ವರ್ತಮಾನದಿಂದ ಅಥವಾ ಊಹಿಸಬಹುದಾದ ಒಂದು ಭವಿಷ್ಯದ ಕ್ಷಣದಿಂದ ನೋಡಿದರೆ ಅದು ಹೇಗೆ ಕಾಣುತ್ತದೆ ಎನ್ನುವುದು ಸಾಪೇಕ್ಷವಾದ ಒಂದು ಸಂಭವನೀಯತೆ. ಅದು ಖಚಿತವೋ ನಿರ್ದಿಷ್ಟವೋ ಅಲ್ಲ....ಇತ್ಯಾದಿ. ಇನ್ನೊಂದು ನೆಲೆಯಿಂದ (ಇದೂ ಸೀಮಿತ) ನೋಡಿದರೆ ಇದು ಆತ್ಮಹತ್ಯೆಯ ತಾತ್ವಿಕ ಆಯಾಮಗಳ ಗಂಭೀರವಾದ ಜಿಜ್ಞಾಸೆ. ಆತ್ಮಹತ್ಯೆ ಎಂದರೆ ಯಾರೋ ಹುಡುಗಿ ಕೈಕೊಟ್ಟಳೆಂದೋ, ಪಿಯುಸಿಯಲ್ಲಿ ಫೇಲ್ ಆಗಿದ್ದಕ್ಕೋ, ಕೊನೆಗೆ ಇಂಟರ್ನೆಟ್ ಹಾಕಿಸಲಿಲ್ಲ ಎಂದು, ಸೆಲ್ ಫೋನ್ ಕೊಡಿಸಲಿಲ್ಲ ಎಂದೆಲ್ಲ ಮಾಡಿಕೊಳ್ಳುವ ಆತ್ಮಹತ್ಯೆಯಲ್ಲ. ವೇದವ್ಯಾಸರ ಮಗ ಕೃಷ್ಣದ್ವೈಪಾಯನರ ಪಾಯೋಪವೇಶದ ಸನ್ನಿವೇಶ ನೆನಪಿಸಿಕೊಳ್ಳಿ. ನೀವು ಓದಿರದಿದ್ದರೆ ಭೈರಪ್ಪನವರ ಪರ್ವ ಕಾದಂಬರಿಯನ್ನು ಓದಿ, ಓದಿದ್ದರೆ ಮತ್ತೊಮ್ಮೆ ಇದಕ್ಕಾಗಿಯೇ ಓದಿ. ಅದು ಸಾಲದು. ಆಲ್ಬರ್ಟ್ ಕಮೂ ಬರೆದ ಆತ್ಮಹತ್ಯೆಯ ಕುರಿತ ಜಿಜ್ಞಾಸೆಯನ್ನು ಓದಿಕೊಳ್ಳಿ. (ರುಚಿಗೆ ತಕ್ಕಷ್ಟು ಎಂಬಂತೆ ಈ ಕುರಿತ ಕನ್ನಡ ಲೇಖನ ಕೇಶವ ಮಳಗಿಯವರು ಇತ್ತೀಚಿಗಷ್ಟೇ ಹೊರತಂದ ‘ಸಂಕಥನ’ ಕೃತಿಯಲ್ಲಿ ಸಿಗುತ್ತದೆ.) ಆತ್ಮಹತ್ಯೆ, ಕಾಲ ಎರಡನ್ನು ಬಿಟ್ಟರೆ ಈ ಕಾದಂಬರಿಯಲ್ಲಿ ಓದಿಸಿಕೊಂಡು ಹೋಗಲು ಬೇಕಾದ ಆಕರ್ಷಣೆಯನ್ನು ಚೆನ್ನಾಗಿ ನಿಭಾಯಿಸುವ ಸಸ್ಪೆನ್ಸ್ ಮತ್ತು ಹದವಾಗಿ ಕಾಮದ ಬಿಸಿ ಹಬೆಯಾಡುವಂಥ ಪ್ರೇಮದ ಕತೆಯೂ, ಅದರ ಅಮರತ್ವದ ಅಥವಾ ಕ್ಷಣಭಂಗುರತೆಯ ಚರ್ಚೆಯೂ ಇದೆ. ಈ ಕತೆ, ಕುತೂಹಲದ ಸಸ್ಪೆನ್ಸ್, ಪ್ರೇಮದ ತಲ್ಲಣ, ಅನಿಶ್ಚಿತತೆ, ಕೈತಪ್ಪಿ ಹೋದವಳ ಕುರಿತ ಬಿಟ್ಟೂಬಿಡದ ಮೋಹದ ಎಲ್ಲ ವಿಚಾರ ಬಿಟ್ಟು ಆತ್ಮಹತ್ಯೆ ಮತ್ತು ಕಾಲ ಎರಡರ ಬಗ್ಗೆ ಸ್ವಲ್ಪ ಕೊರೆಯುತ್ತೇನೆ, ಯಾಕೆಂದರೆ ನೀವು ಕಾದಂಬರಿ ಓದುವಾಗ ನಿಮಗೂ ಸ್ವಲ್ಪ ಮಜಾ ಉಳಿಸಬೇಕಲ್ಲ ಅಂತ ಅಷ್ಟೆ!


Time Present 

and Time Past
Are both perhaps
Present in
Time Future
And
Time Future
Contained in
Time Past.
-T S Eliot

ಈ ಮಾತನ್ನು ಹಿಂದೆಯೂ ಒಮ್ಮೆ ಎಲ್ಲಿಯೋ ಬರೆದಿದ್ದೇನೆ. ಆದರೂ ಮತ್ತೆ ಮತ್ತೆ , ‘ಕಾಲ’ ಕಾಲಕ್ಕೆ ಗಮನಿಸಬಹುದಾದ ಮಾತು. ದ ಸೆನ್ಸ್ ಆಫ್ ಎನ್ ಎಂಡಿಂಗ್ ಎನ್ನುವ ಹೆಸರೇ ನೋಡಿ. ಅದು ನಿಜವಾದ ಎಂಡಿಂಗೇನಲ್ಲ. ಒಂದು ನಿರ್ದಿಷ್ಟ ಕಾಲಘಟ್ಟದ ಭಾವನೆಯಿದು ಅಷ್ಟೆ. ಇವತ್ತು ಸಂಜೆ ಸಂಸ್ಥೆಯಿಂದ ನಿವೃತ್ತನಾಗಲಿರುವ ಒಬ್ಬ ಉದ್ಯೋಗಸ್ಥನ ಭಾವನೆಯದು. ಕ್ಯಾನ್ಸರ್‌ನಿಂದ ಬಳಲುತ್ತಿರುವ ವ್ಯಕ್ತಿ ಶಸ್ತ್ರಚಿಕಿತ್ಸೆಗೆ ತಯಾರಾಗುತ್ತ ಹೊಂದುವ ಭಾವವದು. ಅಥವಾ ಒಂದು ವಯಸ್ಸಿನ ಬಳಿಕ ಮುಸ್ಸಂಜೆ ಒಂಟಿಯಾಗಿ ಕುಳಿತ ಎಲ್ಲ ಮುದಿವಯಸ್ಸಿನವರಲ್ಲೂ ತೀವ್ರಗೊಳ್ಳುವ ಭಾವವಿದು. ಈ ಬಿಂದುವಿನಲ್ಲಿ ನಿಂತು ಹಿಂದಕ್ಕೆ ನೋಡುವುದು ಈ ಕಾದಂಬರಿಯ ಸ್ಥಾಯೀ ಭಾವ.  ಟಾಲ್‌ಸ್ಟಾಯ್ ಅವರ ಇವಾನ್ ಇಲಿಚ್ಯ ಇಲ್ಲಿ ನೆನಪಾಗುತ್ತಾನೆ. ಸಾಯುತ್ತೇನೆ ಅಥವಾ ಸಾಯುವುದೊಂದೇ ಇನ್ನುಳಿದಿರುವುದು, ಎದುರು ನೋಡಬಹುದಾದ್ದು ಎನ್ನುವುದು ಖಚಿತವಾದದ್ದೇ ತನ್ನ ಇಡೀ ಬದುಕನ್ನು ಮತ್ತೊಮ್ಮೆ ಬದುಕುವ ಅವಕಾಶ ಸಿಕ್ಕಿದ್ದಾದರೆ ಎಂದು ಯೋಚಿಸುವ ಇವಾನ್ ನಡೆಸುವುದು ಕೂಡಾ ತನ್ನದೇ ಬದುಕಿನ ಪೋಸ್ಟ್ ಮಾರ್ಟೆಮ್.  ಈ ಕಾದಂಬರಿ ತೊಡಗುವುದೆ I remember... ಎನ್ನುವ ಸೊಲ್ಲಿನಿಂದ. ಕೆಲವೇ ಸಾಲುಗಳಲ್ಲಿ ನಮಗೆ ಈ ಮಾತು ಎದುರಾಗುತ್ತದೆ:

This ... isn't something I actually saw, but what you end up remembering isn't always the same as what you have witnessed.

ನೆನಪುಗಳಲ್ಲಿ ಮತ್ತೆ ಪಡಿಮೂಡುವ ಚಿತ್ರ, ಚಿತ್ರವಾಗಿರದೇ ಕೇವಲ ಸದ್ದು ಅಥವಾ ನೆರಳಾಗಿದ್ದರೆ ಅದು ಅದರ ನೆನಪುಗಳಲ್ಲಿ ಎಷ್ಟು ಒರಿಜಿನಲ್ ಆಗಿ ಉಳಿದುಬರುವುದು ಸಾಧ್ಯ ಎಂಬ ಪ್ರಶ್ನೆಯೂ ಮತ್ತೆ ಸಾಪೇಕ್ಷವಾದದ್ದೇ!

William Hazlit ಬರೆದ ಒಂದು ಸುಂದರ ಮಾತು ಗಮನಿಸಿ:

"A sage philosopher, who was not a very wise man, said that he should like very well to be young again, if he could take his experiences along with him. Thus ingenious person did not seem to be aware, by the gravity of his remark, that the greate advantage of being young is to be without this weight of experience, which he would fain place upon the shoulders of youth, and which never comes too late with years."

ವಯಸ್ಸಾದವನೊಬ್ಬನ ಎಲ್ಲ ಪ್ರಬುದ್ಧತೆಯೊಂದಿಗೇ ಯೌವನಕ್ಕೆ ಮರಳುವ ಒಂದು ಅವಕಾಶವಿದ್ದರೆ...(ಆಹಾ ಯಯಾತಿಯೇ!) ಬಹುಷಃ ಮೇಲ್ನೋಟಕ್ಕೆ ಇರಲಿ ನಮಗೂ ಎನಿಸುವ ಸ್ಥಿತಿಯಿದು. ಆದರೆ ಆ ಪ್ರಬುದ್ಧತೆಯೇ ಯೌವನದ ಹುಚ್ಚಾಟಗಳಿಗೆ ಕಡಿವಾಣ ಹಾಕುವ ಬೇಡಿಯಂತಾದರೆ ಅಂಥ ಯೌವನ ಯಾರಿಗೆ ಬೇಕು, ಯಾತಕ್ಕಾದರೂ ಬೇಕು! ಹುಚ್ಚಾಟಗಳಿಲ್ಲದ್ದೂ ಒಂದು ಯೌವನವೆ! ಅಂಥ ತಪ್ಪುಗಳನ್ನೇ ಮಾಡದ ಒಂದು ಯೌವನವನ್ನು ಮುದಿತನದಲ್ಲಿ ಹೊರಳಿ ನೋಡುವ ಅಗತ್ಯವೂ ಇರುವುದಿಲ್ಲವಲ್ಲ!!

ಮನುಷ್ಯ ಅನುಭವಗಳ ಭಾರಕ್ಕೆ ಹೆದರುತ್ತಾನಂತೆ!, ಕಾರ್ನಾಡರ ಯಯಾತಿ ನಾಟಕದ ಪುರು ಹೇಳುವ ಮಾತಿದು, ಅಪ್ಪನ ‘ಅಕಾಲ’(!) ವೃದ್ಧಾಪ್ಯವನ್ನು ತಾನು ಸ್ವೀಕರಿಸಿ, ಅದೇ ಆಗ ಮದುವೆಯಾದ ತನ್ನ ಯೌವನವನ್ನು ಅಪ್ಪನಿಗೆ ಬಿಟ್ಟುಕೊಟ್ಟ ಮಗ!

ವೃದ್ಧಾಪ್ಯದಲ್ಲಿ ನಮ್ಮ ಎಲ್ಲ ವಿಷಾದ, ನೋವುಗಳಿಗೆ ಕಾರಣವಾಗುವ ಯೌವನದ ಒಂದು ದುಡುಕು, ರಭಸ, ಹುಚ್ಚು, ಪ್ರಯೋಗಶೀಲತೆ ಮತ್ತು ಸಾಹಸಮಯತೆ ಅದರ ಬೆಲೆ ದುಬಾರಿಯಾದರೂ ನಮಗೆ ಬೇಕು. ಈ ತಪ್ಪುಗಳು ಕೆಲವೊಮ್ಮೆ ಜೀವಬಲಿಯನ್ನೂ ಕೇಳುತ್ತವೆ! ಆತ್ಮಹತ್ಯೆಯಂಥ ಘಟನೆಗೆ ತಿಳಿದೋ ತಿಳಿಯದೆಯೋ ನಾವು ಕಾರಣರಾಗಿಬಿಡುತ್ತೇವೆ. ಪ್ರತಿಯೊಂದು ಆತ್ಮಹತ್ಯೆಯೂ ಒಂದು ಆಯಾಮದಿಂದ ಕೊಲೆ ಕೂಡಾ ಆಗಿರುತ್ತ, ಆ ಕೊಲೆಗಡುಕತನದ ಹೊಣೆ ಹಲವರ ಮೇಲೆ ಸೂತಕದ ಛಾಯೆಯನ್ನು ಬದುಕಿನುದ್ದಕ್ಕೂ ಚಾಚುವಾಗ, ಎಷ್ಟೋ ಬಾರಿ ಸತ್ತವರು ಒಮ್ಮೆಗೆ ಸತ್ತು ನೆನಪಿನಲ್ಲಿ ಅಮರರಾಗಿಬಿಡುತ್ತಾರೆ, ಬದುಕಿದವರು ದಿನವೂ ಸಾಯುತ್ತಿರಬೇಕಾಗುತ್ತದೆ ಅಥವಾ ಜೀವಂತವಾಗಿರುವಾಗಲೇ  ಪೋಸ್ಟ್‌ಮಾರ್ಟೆಂ ಎದುರಿಸುತ್ತ ಇರಬೇಕಾಗುತ್ತದೆ! ಇವರಿಗೆ ಕಾಲ ಒಂದು ಪರೀಕ್ಷೆ, ಆತ್ಮಹತ್ಯೆ ಒಂದು ಉತ್ತರವಿಲ್ಲದ ಪ್ರಶ್ನೆ.

ಈ ಕಾದಂಬರಿ ಮೊದಲಿಗೇ ತಾನು ಸಾಗಬಹುದಾದ ದಿಕ್ಕುಗಳ ಸೂಚನೆಗಳನ್ನೆಲ್ಲ ಬಿಟ್ಟುಕೊಡುತ್ತದಾದರೂ ಹಾಗೆ ಅದು ಬಿಟ್ಟುಕೊಟ್ಟಿತ್ತೆಂಬುದು ನಮಗೆ ತಿಳಿಯುವುದು ಮಾತ್ರ ಇಡೀ ಕಾದಂಬರಿಯನ್ನು ಓದಿ ಮುಗಿಸಿದ ಮೇಲೆಯೇ. ದಿನಚರಿಯ ಹಾಳೆಗಳು ಹೇಗೆ ಒಂದಿಷ್ಟನ್ನು ಹೇಳಿ ಬಹಳಷ್ಟನ್ನು ಹೇಳದೆಯೇ ನಮ್ಮನ್ನು ಹೊಂಚುಹಾಕಿ ದಣಿಸುತ್ತವೆಯೋ ಹಾಗೆಯೇ ನಿಗೂಢವಾಗಿಯೇ ಉಳಿಯುವ ಆತ್ಮಹತ್ಯೆ ಕೂಡಾ ನಮ್ಮನ್ನು ಕುಣಿಕೆ ಹಿಡಿದು ಕುಣಿಸುತ್ತಿರುತ್ತದೆ. ಹೇಳಿ ಹೋಗು ಕಾರಣಾ ಎಂದು ಸಿ.ಅಶ್ವಥ್ ಆರ್ತವಾಗಿ ಮೊರೆಯಿಡುತ್ತಿರುವಂತಿರುತ್ತದೆ ...

ಪ್ರಥಮ ಮಹಾಯುದ್ಧಕ್ಕೆ ಕಾರಣವಾದ ಸಂಗತಿಗಳೇನು ಎಂಬ ಬಗ್ಗೆ ಒಂದು ಚರಿತ್ರೆಯ ತರಗತಿಯಲ್ಲಿ ಸುರುವಾಗುವ ಚರ್ಚೆ ಇಂಥ ‘ಇದು’ ಕಾರಣ ಎಂದು ನಿರ್ದಿಷ್ಟಗೊಳಿಸುವ, ಮಿತಗೊಳಿಸುವ ಪ್ರಕ್ರಿಯೆಯೇ ಹಾದಿತಪ್ಪಿಸಬಲ್ಲ ಸಂಗತಿ ಎನ್ನುವತ್ತ ತಿರುಗುತ್ತದೆ. ‘ಇದು’ ಕಾರಣ ಎಂದು ಹೇಳುವಾಗಲೇ ನಾವು ಜವಾಬ್ದಾರಿಯನ್ನು ನಿಕ್ಕಿ ಗೊಳಿಸುತ್ತಿರುತ್ತೇವೆ, ನಮ್ಮದೇ ಕಾರಣಗಳಿಗಾಗಿ, ಅಂದರೆ ನಾವು ‘ಇದೇ’ ಕಾರಣ ಎಂದು ನಿಶ್ಚಯಿಸಿಬಿಟ್ಟಿದ್ದರಿಂದಾಗಿ. ಅಲ್ಲಿಗೆ, ವಸ್ತು ಸ್ಥಿತಿಯನ್ನು ಬಿಟ್ಟುಕೊಟ್ಟು ಚರಿತ್ರಕಾರ ನಮ್ಮ ಮುಂದಿರಿಸಿದ ಚರಿತ್ರೆಯ  ವ್ಯಾಖ್ಯಾನ (ಚರಿತ್ರೆಯೇ ಅಲ್ಲ, ಚರಿತ್ರಕಾರ ನಿರ್ಧರಿಸಿಕೊಟ್ಟ ಚರಿತ್ರೆಯ ವ್ಯಾಖ್ಯಾನ) ದ ಮೇಲೆ ನಮ್ಮ ಕಾರ್ಯಕಾರಣ ವ್ಯಾಖ್ಯಾನವು ನಿಂತಿರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಹಾಗಾಗಿ ಇಲ್ಲಿ ಅನಿವಾರ್ಯವಾಗಿ ಚರಿತ್ರಕಾರನ ಚರಿತ್ರೆಯನ್ನು  - ಅವನ ವ್ಯಾಖ್ಯಾನದ ಸ್ವರೂಪವನ್ನು ಅರಿಯುವುದಕ್ಕಾಗಿ - ತಿಳಿದುಕೊಳ್ಳಬೇಕಾಗುತ್ತದೆ! (ಪುಟ 12)

ಬೆಚ್ಚಿಬೀಳಬೇಡಿ. ಇದು ಸ್ಯಾಂಪಲ್ ಅಷ್ಟೆ.

ಹಾಗಾದರೆ, ಏನು ಈ ಚರಿತ್ರೆಯೆಂದರೆ? ನೆನಪುಗಳ ಅಸಮರ್ಪಕತೆಯು ದಾಖಲೆಗಳ ಕೊರತೆಯನ್ನು ಒಪ್ಪಿಕೊಂಡು ಒಂದು ನಿರ್ದಿಷ್ಟ ಆಕೃತಿಗೆ ತಲುಪಲು ಮಾಡುವ ಪ್ರಯತ್ನ! ಟಿಪ್ಪು ಮತಾಂಧ ಎನ್ನುವುದಕ್ಕೆ ಮತ್ತು ಆತ ಪರಧರ್ಮಸಹಿಷ್ಣುವಾಗಿದ್ದ ಎನ್ನುವುದಕ್ಕೆ ಅಥವಾ ಹಾಗೆಂದು ಸಾಧಿಸುವುದಕ್ಕೆ ಎರಡೂ ಪಂಗಡದವರಲ್ಲಿ ಸಾಕಷ್ಟು ಆಧಾರಗಳಿವೆ ಎಂದಾದಲ್ಲಿ ಯಾವುದೋ ಒಂದನ್ನೇ ಖಚಿತವಾಗಿ ನಿರ್ಧರಿಸುವುದಕ್ಕೆ ಬೇಕಾದಷ್ಟು ದಾಖಲೆಗಳಿಲ್ಲ ಎಂದಾಯಿತು. ಅವನ ಕಾಲದ ಸ್ಥಿತಿಯನ್ನು ನೆನಪುಗಳಲ್ಲಿ ಕಟ್ಟಿಕೊಡಬಲ್ಲ ಕೆಲವೇ ಹಣ್ಣುಹಣ್ಣು ಮುದುಕರ ನೆನಪುಗಳ ಮಿತಿ ಮತ್ತು ಅಸಮರ್ಪಕತೆಯನ್ನು ಈ ದಾಖಲೆಗಳ ಗೊಂದಲವನ್ನಿಟ್ಟುಕೊಂಡೇ ದಾಖಲಿಸುವುದು ಚರಿತ್ರೆ! Patrick Lagrange (ಮತ್ತೆ ಫ್ರೆಂಚ್) ಹೇಳಿದ ಅರ್ಥವಂತೆ ಇದು. (ಪುಟ 17)

ಇಲ್ಲಿ ಒಂದು ಚರ್ಚೆ ಇದೆ. ದಾಖಲೆಗಳೇ ಇಲ್ಲದಿದ್ದಾಗ್ಯೂ ಒಬ್ಬ ವ್ಯಕ್ತಿಯ ಕ್ರಿಯೆಯಿಂದ ಮನಸ್ಸಿನ ಸ್ತಿತಿಯನ್ನು ಖಚಿತವಾಗಿ ಊಹಿಸಿತೆಗೆಯಬಹುದಾದ್ದರಿಂದ ದಾಖಲೆಯೇ ಎಲ್ಲವೂ ಆಗಿರುವುದಿಲ್ಲ ಎನ್ನುವ ಹೊರಳುದಾರಿ. ಯಾವಾಗ, ಟಿಪ್ಪುವಿನ ಕತೆ ಬಿಡಿ. ಒಬ್ಬ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಬರೆದಿಟ್ಟ ಸೂಯಿಸೈಡ್ ನೋಟ್ ಹೆಚ್ಚೇನೂ ಹೇಳುವುದಿಲ್ಲ. ‘ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎನ್ನುವ ತರದ್ದು ಏನೋ ಒಂದು. ಆದರೆ ಜನ ಸುಮ್ಮನಿರುವುದಿಲ್ಲ. ಸುದ್ದಿಗಳು ಹಬ್ಬುತ್ತವೆ. ಲವ್ ಇತ್ತಂತೆ. ಗರ್ಭಿಣಿಯಾಗಿದ್ದಳಂತೆ ಇತ್ಯಾದಿ. ಅಂದರೆ ಕ್ರಿಯೆ ಏನೋ ಒಂದು ಮನಸ್ಥಿತಿಯನ್ನು ಊಹಿಸುವಲ್ಲಿ ವದಂತಿ ಮಾತ್ರವಲ್ಲ, ಖಚಿತವಾದ ಮಾಹಿತಿ ಕೂಡಾ ಸಹಾಯ ಮಾಡಿಯೇ ಮಾಡುತ್ತದೆ. ಹುಡುಗನ ತಂದೆ, ತಾಯಿ, ಸ್ನೇಹಿತರು, ಅವನ ಫೋನ್ ಕಾಲ್‍ಗಳ ದಾಖಲೆ, ಪತ್ರಗಳು, ದಿನಚರಿ, ಫೋಸ್ಟ್‌ಮಾರ್ಟೆಮ್ ರಿಪೋರ್ಟು ಇತ್ಯಾದಿ ಆತನ ಸಾವಿನ ಮತ್ತು ಅವನ ಚರಿತ್ರೆಯನ್ನು ಬರೆಯಲು ಬೇಕಾದ ಖಚಿತವಾದ ಮಾಹಿತಿಯನ್ನು ನೀಡುವುದು ಸಾಧ್ಯವಿದೆ. ಚರಿತ್ರಕಾರನನ್ನು ಅಥವಾ ಚರಿತ್ರೆಯನ್ನೇ ನಾವು ಕೀಳಂದಾಜು ಮಾಡಬಾರದು.

ಇಲ್ಲಿ ಏನಾಗುತ್ತದೆ ಎಂದರೆ ಒಬ್ಬ ಹದಿಹರಯದ ತರುಣ ತನ್ನಿಂದ ಒಬ್ಬಳು ಹದಿಹರಯದ ಹುಡುಗಿ ಗರ್ಭವತಿಯಾದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅವನು ಬರೆದಿಟ್ಟ ಎರಡು ಶಬ್ದ ‘sorry mum' ಎಂಬುದಷ್ಟೇ. ಹುಡುಗರು ತೀರ್ಮಾನಿಸುವ ತಾತ್ವಿಕ ನೆಲೆ ಕುತೂಹಲಕರವಿದೆ. ಹುಡುಗನ ಪ್ರಜ್ಞಾಪೂರ್ವಕ ನಿರ್ಧಾರದ ಹಿನ್ನೆಲೆ ಇದು: ಹುಡುಗಿ ಗರ್ಭ ತೆಗೆಸಲು ಒಪ್ಪುತ್ತಿಲ್ಲ, ಈ ವಯಸ್ಸಿನಲ್ಲಿ ಮದುವೆಯಾಗುವಂತೆಯೂ ಇಲ್ಲ. ತನ್ನಿಂದ ಈ ಜಗತ್ತಿಗೆ ಇನ್ನೊಂದು ಜೀವದ ಆಗಮನವಾಗುವಂತೆ ಮಾಡಿದ ತನ್ನ ತಪ್ಪಿಗೆ ಒಂದೋ ಮಗುವನ್ನು ಜಗತ್ತಿಗೆ ಬರದಂತೆ ತಡೆಯಬೇಕು, ಅದಾಗದಿದ್ದರೆ ತಾನು ಜಗತ್ತಿನಿಂದ ನಿರ್ಗಮಿಸಿ ಸಮತೋಲನವನ್ನು ಉಳಿಸಬೇಕು! ಮೊದಲನೆಯದು ಸಾಧ್ಯವಿಲ್ಲದ್ದರಿಂದ ಆತ್ಮಹತ್ಯೆಯೇ ಉಳಿದಿರುವ ದಾರಿ. ಲಾಜಿಕ್ ಪರ್‌ಫೆಕ್ಟ್.

ಈ ಆತ್ಮಹತ್ಯೆ ಇನ್ನೂ ಇಪ್ಪತ್ತರ ಒಳಗಿನ ವಯಸ್ಸಿನಲ್ಲಿ ಹುಡುಗರು ಕಲಿಯುತ್ತಿರುವಾಗ ನಡೆದರೆ, ಮುಂದೆ ಇನ್ನೊಂದು ಆತ್ಮಹತ್ಯೆ ಸರಿಸುಮಾರು ಇದರ extended version ಎಂಬಂತೆ ನಡೆಯುತ್ತದೆ. ಇಲ್ಲಿ ತನ್ನನ್ನು ತಾನು ಕೊಂದುಕೊಂಡವ ಬರೆದ ಸೂಯಿಸೈಡ್ ನೋಟ್‌ನಲ್ಲಿ ಸ್ವತಃ ತನ್ನ ಲಾಜಿಕ್ಕನ್ನು ಬದುಕಿರುವ ಮಂದಿಗೆ ಒದಗಿಸಿಯೇ ಸಾಯುತ್ತಾನೆ.

ಬದುಕು ಎನ್ನುವುದು ನಿನಗೆ ನೀನು ಕೇಳದೆಯೇ (application ಹಾಕದೆಯೇ) ಸಿಕ್ಕಿದ ಗಿಫ್ಟ್. ಹಾಗೆ ಬದುಕು ಸಿಕ್ಕಿಬಿಟ್ಟಿತು ಎಂದು ಅದನ್ನು ಬದುಕಬೇಕೆಂದೇನಿಲ್ಲ. ಅವನಿಗೆ ಒಂದು ತಾತ್ವಿಕ ಕರ್ತವ್ಯವಿದೆ. ಅಂದರೆ, ಅವನು ತನಗೆ ಬದುಕು ಯಾವ ಶರತ್ತು-ಸ್ಥಿತಿಗತಿಯಲ್ಲಿ ಕೊಡಲ್ಪಟ್ಟಿದೆ (ನೀವು ಒಬ್ಬ ದರಿದ್ರನ ಮನೆಯಲ್ಲಿ ಹುಟ್ಟಿದ್ದರೆ, ಹಲವು ಹೆಣ್ಣುಮಕ್ಕಳ ಜವಾಬ್ದಾರಿಯನ್ನು ಹೊರಬೇಕಾದ ಹಿರಿಯ ಗಂಡುಮಗನಾಗಿ ಕುಡುಕ ಬೇಜವಾಬ್ದಾರಿ ಅಪ್ಪನಿಗೆ ಹುಟ್ಟಿದ್ದರೆ, ಅತ್ಯಂತ ಕುರೂಪಿಯಾದ ಹೆಣ್ಣುಮಗಳಾಗಿ ಹುಟ್ಟಿದ್ದರೆ, ಅಂಗವಿಕಲನಾಗಿ ಹುಟ್ಟಿದ್ದರೆ ಇತ್ಯಾದಿ ಇತ್ಯಾದಿ) ಮತ್ತು ತನ್ನ ಬದುಕಿನ ರೂಪುರೇಷೆಗಳೇನು ಎನ್ನುವುದು (ಗುರಿ-ಧ್ಯೇಯ-ಉದ್ದೇಶ-ತೆರೆದಿರುವ ಮತ್ತು ಮುಚ್ಚಿರುವ ಸಾಧ್ಯತೆಗಳು ಇತ್ಯಾದಿ ಇತ್ಯಾದಿ. ನೋಡಿ, ನಮ್ಮ ಜಾತಿ, ದೇಶ, ಭಾಷೆ ಇತ್ಯಾದಿಗಳೇ ಸಾಕಷ್ಟನ್ನು ನಿರ್ಧರಿಸುತ್ತವಲ್ಲವೆ? ಅದನ್ನೇನು ನಾವು apply ಮಾಡಿ ಇದೇ ಬೇಕು ಅಂತ ಕೇಳಿರುತ್ತೇವಾ?) ಎಂಬುದನ್ನು ನಿಕಷಃಕ್ಕೊಡ್ಡಬೇಕು. ಇದು ಅವನ ಕರ್ತವ್ಯ. ಆಮೇಲೆ ಅವನಿಗೆ ಬೇಡಾ ಈ ಗಿಫ್ಟ್ ತನಗೆ ಅನಿಸಿದರೆ....ಎಸೆದು ಬಿಡುವುದು ಸರಿ. ತಾರ್ಕಿಕ ಚಿಂತನೆಯಿಂದ ಹುಟ್ಟಿದ ಒಂದು ನಿರ್ಧಾರವನ್ನು ಕಾರ್ಯಗತಗೊಳಿಸಬೇಕಾದುದು ನೈತಿಕ ಮತ್ತು ಮಾನವೀಯ ಕರ್ತವ್ಯವೇ ಆಗಿರುತ್ತದೆ. (ಪುಟ 48)

ಈಗ ಸ್ವಲ್ಪ ಬೇರೆ ವಿಷಯಕ್ಕೆ ಹೊರಳಿ ಇದನ್ನ ನೋಡಿ. ನಮ್ಮಲ್ಲಿ ಕನ್ಯಾದಾನ ಎಂದು ಮನೆಮಗಳನ್ನು ಮದುವೆ ಮಾಡಿಕೊಡುವುದಕ್ಕೆ ಹೇಳುತ್ತೇವೆ. ದಾನ ಕೊಟ್ಟ ಮೇಲೆ ಮುಗಿಯಿತು, ದಾನಿಗೆ ಅದರ ಮೇಲೆ ಯಾವ ಹಕ್ಕೂ ಇರುವುದಿಲ್ಲ. ಮದುಮಗನಿಗೆ ಅದು ದತ್ತ. ದಾನ ಸ್ವೀಕರಿಸಿದ ಮನುಷ್ಯ ಒಂದು ಹಂತದಲ್ಲಿ ಬೇಡಾ ಈ ದಾನ ತನಗೆ ಎಂದುಕೊಂಡರೆ ಅವನದನ್ನು ಎಸೆದುಬಿಡಬಹುದೆ? ಪರಭಾರೆ ಮಾಡಬಹುದೆ? ಅಥವಾ, ಅಂಥ ದಾನವಸ್ತುವಿಗೇ ಯೋಚಿಸಬಲ್ಲ ಮೆದುಳು ಇರುವುದರಿಂದ ಅದು ತನಗೆ ಬೇಕಾದ ನಿರ್ಧಾರ ಕೈಗೊಳ್ಳಬಹುದೆ? ಅಥವಾ ದಾನಕೊಟ್ಟ ಮನುಷ್ಯನೇ ಅದನ್ನು ಹಿಂದಕ್ಕೆ ಕೇಳುವುದೋ, ಕೊಂಡೊಯ್ಯುವುದೋ ಮಾಡಬಹುದೆ? ಅಥವಾ ಇನ್ಯಾರೋ ಒಬ್ಬ ಬಂದು ಈ ಪರಿತ್ಯಕ್ತ ದಾನವಸ್ತುವನ್ನು ಎತ್ತಿಕೊಂಡು ಹೋಗಬಹುದೆ? ಯಾರ್ಯಾರ ಅಧಿಕಾರ ಎಷ್ಟು, ನಿರ್ಧರಿಸುವ ಸಂಗತಿ ಯಾವುದು? ಲಾಜಿಕಲ್ ಫಿಲಾಸಫಿ ಏನು ಹೇಳುತ್ತದೆ?

ತಮಾಷೆ ಎಂದರೆ ಲಂಡನ್ನಿನ ಪತ್ರಿಕೆಗಳು ಇದನ್ನು ಮಾನಸಿಕ ಅಸಮತೋಲನದಿಂದ ಅರಳುವ ಮುನ್ನವೇ ಬಾಡಿದ ಹೂ ಎಂದು ಔಪಚಾರಿಕವಾಗಿ ವರ್ಣಿಸಿ ಸುದ್ದಿ ಮಾಡಿ ತೆಪ್ಪಗಾಗುತ್ತವೆ. ಎಲ್ಲಾ ಆತ್ಮಹತ್ಯೆಗೂ ಮಾನಸಿಕ ಅಸ್ವಾಸ್ಥ್ಯ, ಜೀವನದಲ್ಲಿ ಜುಗುಪ್ಸೆ, ಮಾನಸಿಕ ಖಿನ್ನತೆ, ಮಾನಸಿಕವಾಗಿ ನೊಂದು.....ಎಂಬ ಕಾರಣಗಳಿರುತ್ತವೆ. ಎಲ್ಲೋ ಒಂದು ಕಡೆ ಪ್ರತಿಯೊಬ್ಬ ಮನುಷ್ಯನೂ ಈ ಬದುಕು ಕೊನೆಗೂ ಕೊಡಬಹುದಾದ್ದು ಕೆಲವು ಅನುಭವಗಳನ್ನು ಮಾತ್ರ ಎಂಬುದನ್ನು ಕಂಡುಕೊಳ್ಳುತ್ತಾನೆ. ತುಂಬ ಹಚ್ಚಿಕೊಂಡವರ ಸಾವು ಸಂಭವಿಸುತ್ತದೆ. ಅಥವಾ ಅವರು ನಮ್ಮ ಸಂಗ-ಸಹವಾಸ-ಸಾನ್ನಿಧ್ಯ ತೊರೆದು ಹೊರಟು ಹೋಗಿಬಿಡುತ್ತಾರೆ. ಇದ್ದಕ್ಕಿದ್ದಂತೆ ಮಾರಣಾಂತಿಕ ಕಾಯಿಲೆ ಬರುತ್ತದೆ. ಇಲ್ಲ, ಇನ್ನೂ ಆಗಬೇಕಿರುವುದೆಲ್ಲ ಇರುವಾಗಲೇ ವಯಸ್ಸಾಗಿ ಬಿಡುತ್ತದೆ, ಎಲ್ಲರೂ ನಮ್ಮ ಅಸ್ತಿತ್ವವನ್ನೆ ಮರೆತು ಜಗತ್ತಿನಲ್ಲಿ ವ್ಯಸ್ತರಾದಂತೆ, ನಮ್ಮನ್ನು ಲೆಕ್ಕದಿಂದ ಬಿಟ್ಟೇಬಿಟ್ಟಂತೆ ಕಾಣತೊಡಗುತ್ತದೆ. ಇನ್ನೂ ಸರಿಯಾಗಿ ಬೆಳಕು ಮೂಡುವ ಮೊದಲೇ ಎದ್ದು, ನಿತ್ಯಕರ್ಮಗಳನ್ನೆಲ್ಲ ಯಾಂತ್ರಿಕವಾಗಿ ಮುಗಿಸಿ, ನಿನ್ನೆಗೂ ಇವತ್ತಿಗೂ ಏನೇನೂ ವ್ಯತ್ಯಾಸವಿಲ್ಲದಂತೆ ದಿನಾಂಕ, ವಾರ ಕೊನೆಗೆ ತಿಂಗಳು ಸಹ ಮರೆತುಹೋಗುವಂತೆ ಬದುಕುತ್ತ, ಅದೇ ಆಫೀಸು, ಅದೇ ಸಿಡುಕುಮೋರೆ ಬಾಸು, ಸಣ್ಣತನದ ಧೂರ್ತಮನಸ್ಸಿನ ಸಹೋದ್ಯೋಗಿಗಳು, ರಾಜಕೀಯ, ನಳ್ಳಿಯಲ್ಲಿ ನೀರಿಲ್ಲ, ಗ್ಯಾಸು ಸಿಗುತ್ತಿಲ್ಲ, ಪೆಟ್ರೋಲು ಕೈಗೆಟಕುತ್ತಿಲ್ಲ, ಸಿಟಿಬಸ್ಸಿನಲ್ಲಿ ದರಿದ್ರ ಬೆವರು-ಸಾರಾಯಿ-ಶೀತನೆಗಡಿಯವರ ಸಿಂಬಳ ಕೆಮ್ಮು ಸೆಕೆಯ ಜೊತೆ ಗುದ್ದಾಟ, ಸಂಜೆ ಮೈಯೆಲ್ಲ ಧೂಳು ಮೆತ್ತಿ ಬಂದರೆ ಕರೆಂಟಿಲ್ಲ, ಹೆಂಡತಿಯ ಮೋರೆ ನೋಡಿದ್ದೇ ಕೆಂಡಾಮಂಡಲ ಸಿಟ್ಟುಬರಿಸುವ ಸುಟ್ಟ ಉಪ್ಪಿಟ್ಟು.....ಏನು ಜೀವನ ಎಂದರೆ? ಇದಾ ಬದುಕು? ಇದಕ್ಕಾಗಿಯಾ ಇಷ್ಟೆಲ್ಲ ಮಾಡಿದ್ದು, ಮಾಡುತ್ತಿರೋದು ಎನಿಸುವ ಘಳಿಗೆಯೊಂದು ಬಂದೇ ಬರುತ್ತದೆ. ಬದುಕು ನಿರರ್ಥಕ, ಅರ್ಥಹೀನ ಎನಿಸಿಯೇ ಅನಿಸುತ್ತದೆ. ಆದರೆ ಆಲ್ಬರ್ಟ್ ಕಮೂ ಇಲ್ಲೇ ಇದರಡಿಯಲ್ಲೇ ರಂಗೋಲಿಯಡಿಯಲ್ಲಿ ತೂರಿಕೊಂಡಂತೆ ಸುಖದ, ಉಲ್ಲಾಸದ, ಸ್ಫೂರ್ತಿಯ ಸೆಲೆಯೂ ಅಡಗಿಕೊಂಡಿದೆ ಎನ್ನುತ್ತಾನೆ. ಕಷ್ಟದ ಪರಿಕಲ್ಪನೆಯೇ ಸುಖದ ಪರಿಕಲ್ಪನೆಗೂ ಕಾರಣವಾಗುವಂತೆ, ಬಿಡುಗಡೆಗೆ ತಹತಹಿಸುವ ಬಂಧನದಿಂದಲೇ ಮುಕ್ತಿಗೊಂದು ಸೌಂದರ್ಯವೂ ಪ್ರಾಪ್ತಿಯಾಗುವುದು ತಾನೆ? ಈ ಕಾರಣಕ್ಕಾಗಿಯೇ ಜೀವನದ ಬಹುಮುಖ್ಯ ತಾತ್ವಿಕ ಪ್ರಶ್ನೆ ಆತ್ಮಹತ್ಯೆಯೇ ಎನ್ನುತ್ತಾನೆ ಆತ. (ಕೇಶವ ಮಳಗಿಯವರು ಅನುವಾದಿಸಿದ ಅಲ್ಬರ್ಟ್ ಕಮೂನ ಲೇಖನ : ಅಸಂಗತ ವಾದ, ಪುಟ 15-19, ‘ಸಂಕಥನ’)

ಕಾದಂಬರಿ ಇಲ್ಲಿ ಮತ್ತೆ ನೆನಪುಗಳು ಮತ್ತು ಚರಿತ್ರೆಗೆ ಹಿಂದಿರುಗುತ್ತದೆ.
We live with such easy assumptions, don't we? For instance, that memory equals events plus time. But it's all much odder than this. Who was it said that memory is what we thought we'd forgotten? And it ought to be obvious to us that time doen't act as a fixative,rather as a solvent. But it's not convenient - it's not useful - to believe this; it doesn't help us get on with our lives; so we ignore it.
( ಪುಟ 63)
ಕಾಲ ಮತ್ತು ಬದುಕು ಸಾಗುತ್ತಲೇ ಇರುತ್ತದೆ. ಹಾಗೆ ಸಾಗುತ್ತಲೇ ಅವನು ಗಳಿಸುತ್ತಾನೆ ಮತ್ತು ಕಳೆದುಕೊಳ್ಳುತ್ತಾನೆ. ಹೀಗೆ ಹೇಳುವಾಗ ಹಣ ಎಂದುಕೊಳ್ಳಬೇಡಿ. ಸಂಬಂಧಗಳನ್ನು, ಅನುಭವಗಳನ್ನು, ನೋವುಗಳನ್ನು, ಸುಖವನ್ನು, ಜ್ಞಾನವನ್ನು - ಹೀಗೆ, ಗಳಿಸುವುದು ಕಳೆದುಕೊಳ್ಳುವುದು ಅನಿವಾರ್ಯ. ಆದರೆ ಒಂದು ಕುದುರೆ ರೇಸಿನಲ್ಲಿಯೋ ಜೂಜಿನಲ್ಲಿಯೋ ನೀವು ಹೆಚ್ಚೆಂದರೆ ನಿಮ್ಮ ಹೂಡಿಕೆಯನ್ನಷ್ಟೇ ಕಳೆದುಕೊಳ್ಳಬಹುದು, ಅದಕ್ಕಿಂತಲೂ ಹೆಚ್ಚನ್ನು ಕಳೆದುಕೊಳ್ಳುವುದಿಲ್ಲ. ಅಂದರೆ ಮೈನಸ್ ಗಳಿಕೆ ಎನ್ನುವುದೊಂದಿಲ್ಲ ಅಲ್ಲಿ. ಆದರೆ ಬದುಕಿನಲ್ಲಿ ಹಾಗಲ್ಲ. ಕಳೆದುಕೊಳ್ಳುವುದೇ ಇದ್ದಿದ್ದನ್ನು ಮೀರುವುದು ಸಾಧ್ಯವಿದೆ! ಬದುಕನ್ನು ಅಥವಾ ಬದುಕಿನಲ್ಲಿ ಹೀಗೆ ಗಳಿಸುವುದನ್ನು, ಕಳೆದುಕೊಳ್ಳುವುದನ್ನು ಕೇವಲ ನಾಲ್ಕು ಕ್ರಿಯಾತ್ಮಕ ಸಂಕೇತಗಳಲ್ಲಿ ಅಂದರೆ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರಗಳಲ್ಲಿ ಸೂಚಿಸುವುದು ಸಾಧ್ಯವೆ? ಅಥವಾ ಹಾಗೆ ಮಾಡುವುದರಿಂದ ನಾವು ತಲುಪಬೇಕಾದಲ್ಲಿಗೆ ತಲುಪದೇ ಹೋಗುವಂತಾದರೆ? ಯಾಕೆಂದರೆ ಮೇಲೆ ಹೇಳಿದ ಕೆಲವೇ ವೈಚಿತ್ರ್ಯಗಳನ್ನು ಅಥವಾ ವಿದ್ಯಮಾನಗಳನ್ನೇ ತೆಗೆದುಕೊಳ್ಳಿ, ಸಂಬಂಧಗಳು, ಜ್ಞಾನ, ಅನುಭವ, ಸುಖ - ಇವು ಒಂದೇ ಬಗೆಯ ಮಾನದಂಡಗಳಿಗೆ ಒಗ್ಗುವಂಥವೇ ಅಲ್ಲವಲ್ಲ. ಇವು ಒಂದೊಂದೂ ಬೇರೆ ಬೇರೆ ಜಾಯಮಾನದವು. ಸಂಖ್ಯೆಗಳಂತೆ ಇವುಗಳಲ್ಲಿ ಒಂದು ಸಾಮಾನ್ಯತೆ ಇಲ್ಲ. ಹಾಗಾಗಿ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರಗಳಲ್ಲಿ ಇವುಗಳ ಗಳಿಕೆ ಅಥವಾ ನಷ್ಟವನ್ನು ಸೂಚಿಸುವುದು ಎಷ್ಟರಮಟ್ಟಿಗೆ ಸರಿಯಾದೀತು ಎನ್ನುವ ಜಿಜ್ಞಾಸೆಯಿದೆ. ಆದರೆ ಬೇರೇನು ಪರ್ಯಾಯವಿದೆ ನಮಗೆ?

ಸಂಬಂಧಗಳ ವಿಚಾರಕ್ಕೆ ಬಂದರೆ ಮಗುವೊಂದು ಬರುವುದು ಸಂಕಲನ, ಜೀವವೊಂದು ಹೋಗುವುದು ವ್ಯವಕಲನ ಎನ್ನುವುದನ್ನು ಯಾರಾದರೂ ಒಪ್ಪಬಹುದು. ಆದರೆ ಒಂದು ಹೆಣ್ಣು ಮೊದಲು ಒಬ್ಬನಲ್ಲಿ ಪ್ರೇಮಾಂಕುರವಾಗಿ, ನಂತರ ಬೇರೊಬ್ಬನನ್ನು ಕೂಡಿ ಗರ್ಭವತಿಯಾಗುವುದಾದರೆ, ಪುರುಷ ಎನ್ನುವುದು ವೇರಿಯೇಬಲ್ ಅಥವಾ ಕಾನ್‌ಸ್ಟಂಟ್ ಆಗಿ ಒಂದು ಪ್ರಮೇಯ, ಸ್ತ್ರೀ ಎನ್ನುವುದು ವೇರಿಯೇಬಲ್ ಅಥವಾ ಕಾನ್‌ಸ್ಟಂಟ್ ಆಗಿ ಇನ್ನೊಂದು ಪ್ರಮೇಯ ಪ್ರಸ್ತಾಪಿಸುವುದು ಸಾಧ್ಯವಿದ್ದಲ್ಲಿ ಒಟ್ಟಾರೆ ಸಾಧ್ಯತೆಗಳು ಒಂಥರಾ ಮ್ಯಾಟ್ರಿಕ್ಸ್ ತರ ಇರುತ್ತವೆ. ಯಾಕೆಂದರೆ, ಒಬ್ಬ ಪುರುಷ ಕಾನ್‌ಸ್ಟಂಟ್ ಆಗಿಯೂ ಇನ್ನೊಬ್ಬ ವೇರಿಯೇಬಲ್ ಆಗಿಯೂ ಇರಬಹುದಾದಂತೆಯೇ ಸ್ತ್ರೀಯರೂ ಇರುವುದು ಸಾಧ್ಯವಿದೆ ಮತ್ತು ಇದು ಕೇವಲ ವ್ಯವಕಲನ ಸಂಕಲನಕ್ಕಷ್ಟೇ ಸೀಮಿತವಾಗದೆ ಗುಣಾಕಾರದ ಸಾಧ್ಯತೆಗೂ ತೆರೆದುಕೊಳ್ಳಬಹುದಾದ ಒಂದು ವಿದ್ಯಮಾನವಾಗಿದೆ!

ತಮಾಷೆಯೆಂದರೆ, ಸಂಬಂಧ ಎಂದರೆ ಬರೇ ಮಗುವಿನ ಹುಟ್ಟು ಮಾತ್ರವಲ್ಲವಲ್ಲ! ಹೆಣ್ಣು ಪ್ಲಸ್ ಗಂಡು ಅಂದರೆ ಒಂದು ಮಗು ಎನ್ನಬಹುದಾದಷ್ಟು ಸರಳವಲ್ಲ ಇದು. ಇದು ಒಂದು ಸರಪಳಿಯಂಥ ವಿದ್ಯಮಾನವಾಗಿದೆ ಮಾತ್ರವಲ್ಲ ಸಂಬಂಧ ಮಗುವನ್ನು ಮೀರಿದ್ದು ಕೂಡಾ. ಆದಾಗ್ಯೂ ಒಂದು ಕುಟುಂಬದಲ್ಲಿ ಒಂದು ಮಗುವಿನ ಆಗಮನ ಅಥವಾ ಒಬ್ಬ ವ್ಯಕ್ತಿಯ ಸಾವು ಎಂಬುದು ಸಂಬಂಧಗಳನ್ನು ಪುನರ್ವ್ಯಾಖ್ಯಾನಕ್ಕೊಡುವಷ್ಟು ಗಂಭೀರವಾದ ವಿದ್ಯಮಾನವೇ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಅದಕ್ಕೆ ಕಾರಣವಾದ ವ್ಯಕ್ತಿ ಅಥವಾ ಅದರ ಜವಾಬ್ದಾರಿ ಕೇಂದ್ರ ಕೂಡಾ ಗುರುತರವಾದದ್ದು. ಒಬ್ಬನ ಸಾವಿಗೆ ಕಾರಣವಾದ ಸಂಗತಿಗಳೇನು ಎನ್ನುವುದು ಬದುಕನ್ನು ಅಲ್ಲಾಡಿಸಬಲ್ಲಷ್ಟು ಗಂಭೀರವಾದ ಸಂಗತಿ. ಹಾಗೆಯೇ ಒಂದು ಮಗುವಿನ ಹುಟ್ಟು ಹಲವಾರು ಅನುಮಾನ, ನಿಗೂಢತೆಗೆ ಕಾರಣವಾಗುವಂತಾದಲ್ಲಿ ಅದು ಕೂಡಾ ಸಾಕಷ್ಟು ಗಂಭೀರ‍ವಾದ ಸಂಗತಿಯೇ. ಹಾಗೆ ಹುಟ್ಟುವ ಮಗುವಿನ ದೃಷ್ಟಿಯಿಂದಲಂತೂ ಅದು ಒಂದು ಮಗುವಿಗಷ್ಟೇ ಅಲ್ಲ, ಒಂದು ಸಮಸ್ಯೆಯ ಪರಂಪರೆಗೇ ಜನ್ಮ ನೀಡಿದಷ್ಟು ಗುರುತರವಾದದ್ದು. ಹಾಗೆಂದು ಸೂಯಿಸೈಡ್ ಮಾಡಿಕೊಳ್ಳುವುದು ಲಾಜಿಕಲ್ ಅನಿಸುತ್ತದೆಯೆ? ಕಡಖ್ ಮೂರ್ಖತನ ಎಂದು ತಳ್ಳಿಹಾಕುವಷ್ಟು ಇದು ಸರಳವೆ?

ಊಹಿಸಿ ನೋಡಿ, ಪರಾಶರ ಮುನಿ ಮತ್ಸಗಂಥಿಯನ್ನು ಮೋಹಿಸಿ ವ್ಯಾಸರ ಜನನಕ್ಕೆ ಕಾರಣವಾಗುತ್ತಾರೆ. ಅವಳು ಯೋಜನಗಂಥಿಯಾಗಿ ಶಂತನುವಿನ ಜೊತೆ ಕೂಡಿ ಭೀಷ್ಮನಿಗೆ ಪಟ್ಟ ತಪ್ಪಿಸಿ ಹುಟ್ಟಾ ಹೇತ್ಲಾಂಡಿಗಳಾದ ಮಕ್ಕಳ ಜನ್ಮಕ್ಕೆ ಕಾರಣಳಾಗುತ್ತಾಳೆ. ಈ ಭೀಷ್ಮನ ಹುಟ್ಟಿನ ಕತೆಯೂ ನಿಮಗೆ ಗೊತ್ತೇ ಇದೆ. ಹುಟ್ಟಿದ ಮಕ್ಕಳನ್ನೆಲ್ಲ ಅದರ ಅಪ್ಪನ ಎದುರೇ ನದಿಗೆ ಎಸೆಯುತ್ತಿದ್ದ ತಾಯಿ ಮತ್ತು ಅದನ್ನು ಹೆಂಡತಿಯ ಮೇಲಿನ ವ್ಯಾಮೋಹದಿಂದ ಸಹಿಸಿಕೊಂಡು ತೆಪ್ಪಗಿದ್ದ ಅಪ್ಪನ ಮಗ ಈತ. ಅಪ್ಪ ಹೆಂಡತಿಯ ಮೇಲಿನ ಮೋಹದಿಂದ ಸ್ವಲ್ಪ ಸುಧಾರಿಸಿಕ್ಕೊಂಡು ಇದನ್ನು ಎಸೆಯಬೇಡ ಎನ್ನುವ ಸ್ಥಿತಿಗೆ ಬಂದಾಗ ಉಳಿದುಕೊಂಡು ಬಿಟ್ಟ ಮಗು ಇದು, ಭೀಷ್ಮ. ತನ್ನಿಂದಲೇ ಅಪ್ಪನಿಗೆ ತಪ್ಪಿ ಹೋದ ಹೆಣ್ಣನ್ನು ತಾನೇ ತನ್ನ ತ್ಯಾಗದಿಂದ ದೊರಕಿಸಿಕೊಟ್ಟ ಮಗ ಕೂಡಾ ಹೌದು. ಯಯಾತಿಯ ಮಗ ಪುರುವಿನ ಕತೆಯನ್ನು ಇಲ್ಲಿ ಹೋಲಿಸಿ ನೋಡಿ. ಅಪ್ಪನಿಗೆ ಇನ್ನೂ ದೇಹದ ರುಚಿ ತೀರಿಲ್ಲ, ಯೌವನದ ಆಸೆ ಆರಿಲ್ಲ ಎಂದೇ ತನ್ನ ಯೌವನವನ್ನು ಕೊಟ್ಟು ಅಪ್ಪನ ವಾರ್ಧ್ಯಕ್ಯವನ್ನು ಸ್ವೀಕರಿಸಿದ ಪುರು ಮತ್ತು ಅಪ್ಪನಿಗೆ ಹೆಣ್ಣು ಬೇಕೆಂಬ ಕಾರಣಕ್ಕೆ ತಾನು ಆಜನ್ಮ ಬ್ರಹ್ಮಚಾರಿಯಾಗಿ ಉಳಿಯುವ ಭೀಷಣ ಪ್ರತಿಜ್ಞೆಯನ್ನು ಕೈಗೊಳ್ಳುವ ದೇವವ್ರತ. ಈ ಭೀಷ್ಮ ಮತ್ತು ಆ ವ್ಯಾಸ ಸೇರಿಕೊಂಡು ಏನೇನೆಲ್ಲ ಮಾಡಿ ಈ ವಂಶ ನಿಲ್ಲಿಸಲು ಮಾಡಿದ್ದೆಲ್ಲ ಮುಂದೆ ಏನೇನಕ್ಕೆ ಕಾರಣವಾಗುತ್ತದೆ ನೋಡಿ. ವಿದುರ, ಧೃತರಾಷ್ಟ್ರ ಮತ್ತು ಪಾಂಡು ಇದೇ ವೇದವ್ಯಾಸರ ತಳಿ. ಧೃತರಾಷ್ಟ್ರನ ನೂರುಮಂದಿ ಮಕ್ಕಳನ್ನು ಛಿದ್ರಗೊಂಡ ಗರ್ಭದ ಪಿಂಡವನ್ನು ನೂರು ಮಡಿಕೆಯೊಳಗೆ ಇಟ್ಟು ಪೋಷಿಸಿ ಉಳಿಸಿಕೊಟ್ಟವರೂ ಇದೇ ವೇದವ್ಯಾಸರು. ಪಾಂಡುವಿನ ಐದು ಮಕ್ಕಳು ಹೇಗೆ ಯಾರಿಗೆ ಹುಟ್ಟಿದರು ಎನ್ನುವುದೆಲ್ಲ ನಿಮಗೆ ತಿಳಿದೇ ಇದೆ. ಅವರು ಏನೇನು ಮಾಡಿಕೊಂಡು ಗುದ್ದಾಡಿ ಸತ್ತರೋ ಅದು ಹಾಳಾಗಲಿ. ಈ ವೇದವ್ಯಾಸರ ಒಬ್ಬನೇ ಮಗ ಏನಾದ ನೋಡಿ. ಬದುಕು ನಿರರ್ಥಕ, ಅರ್ಥಹೀನ ಅಥವಾ ಅದು ಕೊಡುವುದು ಇಷ್ಟೇ ಎಂದಾದರೆ ಅದನ್ನು ಪಡೆದುಕೊಂಡ ಮನುಷ್ಯ ಉಸಿರಾಡುವ ಮತ್ತು ತಿಂದು ಹೇತುಹಾಕುವ ಕರ್ಮಕ್ಕೆ ಬದ್ಧನಾಗಿ ಬದುಕಿಯೇ ಇರಬೇಕಾದ್ದಿಲ್ಲ ಎಂದು ಊಟ ತಿಂಡಿ ಬಿಟ್ಟು ಅಪ್ಪನೆದುರೇ ಸೂಯಿಸೈಡ್ ಮಾಡಿಕೊಂಡ. ಪುತ್ರಶೋಕ ನಿರಂತರ ಎನ್ನುವಂತೆ ವೇದವ್ಯಾಸರೂ ತೊಳಲಾಡಿದರು, ತೊಳಲಾಡಿ ತೊಳಲಾಡಿ ಏನನ್ನು ಕಂಡುಕೊಂಡರೋ ಗೊತ್ತಿಲ್ಲ. ಆದರೆ, ಕೃಷ್ಣದ್ವೈಪಾಯನರ ಪಾಯೋಪವೇಶದಲ್ಲಿ ಸ್ವತಃ ವೇದವ್ಯಾಸರಿಗೇನಾದರೂ ಸಂದೇಶವಿತ್ತೆ?! ಮತ್ತೆ ಆಲ್ಬರ್ಟ್ ಕಮೂ! ಇಲ್ಲಿ ನೆನಪಾಗುವ ಇನ್ನೊಂದು ಪುಸ್ತಕ ಲಕ್ಷ್ಮೀಶ ತೋಳ್ಪಾಡಿಯವರ ‘ಸಂಪಿಗೆ ಭಾಗವತ’!

ಇನ್ನು ಹೆಚ್ಚು ಹೇಳಿದರೆ ನಾನು ನೇರ ಕಾದಂಬರಿಯ ಕತೆಗೆ ಇಳಿಯಬಹುದು, ಅದು ಬೇಡ. ಕಾಲ ಮತ್ತು ಮನುಷ್ಯ ಸಂಬಂಧಗಳು ನಿರ್ಮಿಸುವ ಚರಿತ್ರೆ ಕಾಲಕ್ಕೆ ಬದ್ಧವಾದದ್ದೆ ಅಥವಾ ಕೇವಲ ಮನುಷ್ಯಸಂಬಂಧಗಳ ಕೂಡು-ಕಳೆಯುವಿಕೆಗೆ ಸಂಬಂಧಿಸಿದ್ದೆ ಅಥವಾ ಇವೆರಡೂ ಸೇರಿ ಇರುವಂಥದ್ದೆ ಎನ್ನುವ ವಿಚಾರದಲ್ಲಂತೂ ಯಾರಿಗೂ ಅನುಮಾನ ಉಳಿದಿರಲಾರದು. ಆದರೆ ಅದರ ಪರಿಕಲ್ಪನೆಯು ಮನುಷ್ಯನಿಂದ ಮನುಷ್ಯನಿಗೆ ಬದಲಾಗುತ್ತ ಹೋಗುವುದೇನೊ ಮತ್ತು ಹಾಗೆ ವ್ಯಕ್ತಿಯ ನಿಲುವು ಜೀವನ ಅಥವಾ ಬದುಕಿನ ಬಗ್ಗೆ ಭಿನ್ನವಾಗುವುದೇನೊ.
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ