Monday, February 6, 2012

ಒಂಟಿಹಕ್ಕಿಯ ಆತ್ಮಕತೆ

ಜಮೀಲ್ ಅಹಮ್ಮದ್‌ಗೆ ಈಗ ಭರ್ತಿ 78. ಸರಿ ಸುಮಾರು ಮೂರು ದಶಕಗಳ ಹಿಂದೆಯೇ ಬರೆದಿಟ್ಟಿದ್ದ ಈ ಪಠ್ಯವನ್ನು ನಡುವೆ ಒಮ್ಮೆ ಸಣ್ಣಕತೆಯನ್ನಾಗಿಸುವ ಪ್ರಯತ್ನ ಕೂಡ ನಡೆದಿತ್ತು. ಕೊನೆಗೂ ಹೆಂಡತಿಯ ಒತ್ತಾಸೆ, ಕತೆಗೆ ಸಿಕ್ಕ ಪ್ರೋತ್ಸಾಹ, ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಮಧುರ ದಿನಗಳ ಸ್ಮರಣೆಯ ತಂತುವಾಗಿಯೂ ಈ ದಂಪತಿಗಳಿಗೆ ಮುಖ್ಯವಾದ ಈ ಬರವಣಿಗೆ ಇದೀಗ ಒಂದು ಕಾದಂಬರಿಯಾಗಿ ನಮ್ಮೆದುರಿಗಿದೆ. The Wandering Falcon.

1933 ರಲ್ಲಿ ಜಲಂಧರ್‌ನಲ್ಲಿ ಹುಟ್ಟಿದ ಅಹಮ್ಮದ್ ಪಾಕಿಸ್ಥಾನದ ಗಡಿನಾಡಿನಲ್ಲಿ, ಮುಖ್ಯವಾಗಿ ಬಲೂಚಿಸ್ಥಾನದ ಪ್ರಾಂತ್ಯದಲ್ಲಿ ಸಿವಿಲ್ ಸರ್ವಿಸ್‌ನಲ್ಲಿದ್ದವರು. ಮುಂದೆ ಕಮೀಶನರ್ ಹುದ್ದೆಯಲ್ಲಿ ಇರಾನ್ ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದ ನಡುವಿನ ತುಣುಕು ಭೂಮಿಯಲ್ಲಿ, ಸ್ವಾತ್ ನಲ್ಲಿದ್ದಾಗಿನ (ಮುಂದೆ ಇದು ಪಾಕಿಸ್ಥಾನದೊಂದಿಗೆ ಸೇರಿಹೋಗುತ್ತದೆ) ಅನುಭವವನ್ನು ಇಲ್ಲಿ ದಾಖಲಿಸಿದ್ದಾರೆ. ಇಲ್ಲಿನ ನಿವಾಸಿಗಳು ವಲಸಿಗರಾದ ಬುಡಕಟ್ಟು ಜನಾಂಗದವರು. ತಮ್ಮ ಸಾವಿರಾರು ಒಂಟೆ, ಕುರಿಮಂದೆಯ ಹೊಟ್ಟೆಹೊರೆಯುವುದಕ್ಕಾಗಿಯೇ ಒಂದೆಡೆ ನಿಲ್ಲದೆ, ಹುಲ್ಲುಗಾವಲನ್ನು ಹುಡುಕಿಕೊಂಡು ಸಾಗುತ್ತಿದ್ದ, ಒಂದೆಡೆಯ ಹುಲ್ಲು ಪೂರ್ತಿಯಾಗಿ ಮೇದ ಬಳಿಕ ಅಲ್ಲಿಂದ ಇನ್ನೊಂದೆಡೆಗೆ ಹೋಗುವ ಅಲ್ಪಕಾಲಾವಧಿಯಲ್ಲೇ ಖರ್ಜೂರ ಮುಂತಾದ ಡ್ರೈಫ್ರುಟ್ಸ್ ಸಂಗ್ರಹಿಸಿಕೊಳ್ಳುತ್ತ, ಪ್ರಯಾಣದ ಹಾದಿಯಲ್ಲಿ ಸಿಕ್ಕ ಊರುಗಳಲ್ಲಿ ಉಣ್ಣೆಯ ಜೊತೆ ಅದನ್ನೆಲ್ಲ ಮಾರಿ ಅಷ್ಟಿಷ್ಟು ಹಣ ಸಂಪಾದಿಸಿ ಅದರಲ್ಲೇ ತಮ್ಮ ದೈನಂದಿನಕ್ಕೆ ಬೇಕಾದ ಆಹಾರಪದಾರ್ಥಗಳನ್ನು ಕೊಂಡುಕೊಳ್ಳುತ್ತ ತೀರ ಅನಿಶ್ಚಿತವೂ, ಬಡತನದ್ದೂ ಮತ್ತು ನೆಲೆ-ಬೆಲೆ ಎರಡೂ ಇಲ್ಲದ್ದೂ ಆಗಿದ್ದ ಬದುಕನ್ನು ಬದುಕುತ್ತ ಇದ್ದವರು ಇವರು. ಆದಾಗ್ಯೂ ಇವರು ತಮ್ಮದೇ ಆದ ಒಂದು ಸಂಸ್ಕೃತಿ, ನೇಮ-ನಿಯಮ, ಕಟ್ಟುನಿಟ್ಟುಗಳ ಸಾಮಾಜಿಕತೆ ಮತ್ತು ಸರ್ದಾರ್ ಕರ್ನಲ್‌ಗಳ ಒಂದು ಅಲಿಖಿತ ಆಡಳಿತದ ಕ್ರಮವನ್ನೂ ರೂಢಿಸಿಕೊಂಡಿದ್ದರು ಎನ್ನುವುದು ಕುತೂಹಲಕರವಾದ ಸಂಗತಿ. ಈ ಕುರಿತ ವಿವರ-ವಿವರವಾದ ಚಿತ್ರವನ್ನು ಜಮೀಲ್ ಅಹಮ್ಮದ್ ತುಂಬ ನವಿರಾದ ತಂತ್ರದೊಂದಿಗೆ ಕತೆಯ ನೇಯ್ಗೆಯಲ್ಲಿ ಕಟ್ಟಿಕೊಡುತ್ತಾರೆ.

ಈ ಜನರ ಬದುಕು ಕ್ರಮೇಣ nation statehoodಗಳ ಉಗಮದಿಂದಾಗಿ ಚಿಂದಿ ಉಡಾಯಿಸಲ್ಪಟ್ಟ ಒಂದು ಎಲ್ಲೂ ದಾಖಲಾಗದ ಮತ್ತು ಯಾವತ್ತೂ ಸಾಹಿತ್ಯ ಕ್ಷೇತ್ರಕ್ಕೆ ಹೊರತಾಗಿಯೇ ಉಳಿದು ಹೋದ ವಿದ್ಯಮಾನವನ್ನು, ಅದರ ವಿಲಕ್ಷಣವಾದ ಬಗೆಯನ್ನು ಇಲ್ಲಿ ಜಮೀಲ್ ಅಹಮ್ಮದ್ ಚಿತ್ರಿಸುತ್ತಾರೆ. ಆಚೆ ಅಫ್ಘಾನಿಸ್ಥಾನ ಮತ್ತು ಈಚೆ ಪಾಕಿಸ್ಥಾನ ಎಂದು ವಿಂಗಡಿಸಲ್ಪಡುವುದೇ ಈ ಜನಾಂಗಕ್ಕೆ ಸುಲಭಗ್ರಾಹ್ಯವಲ್ಲದ ಒಂದು ವಿಚಿತ್ರ! ಇನ್ನುಮುಂದೆ ಪ್ರಯಾಣಕ್ಕೆ ರಹದಾರಿ ಪತ್ರ ಬೇಕಾಗುತ್ತದೆ, ತಮ್ಮ ಗುರುತುಚೀಟಿ ಇರಬೇಕಾಗುತ್ತದೆ, ಲೆಕ್ಕ ಪಕ್ಕ ಇಡಬೇಕಾಗುತ್ತದೆ ಎನ್ನುವುದೆಲ್ಲ ಯಾವತ್ತೂ ವಿದ್ಯಾವಂತರಾಗಿರದ, ತಮ್ಮ ಗುರುತಿಗೆ ಚೀಟಿಯೊಂದರ ಅಗತ್ಯವೇ ಬೀಳದಿದ್ದ ಮತ್ತು ತಮ್ಮ ಒಂಟೆ-ಕುರಿಮಂದೆಯ ಲೆಕ್ಕವನ್ನಿಡುವ ಅಗತ್ಯ ಕಂಡುಕೇಳರಿಯದಿದ್ದ ಮುಗ್ಧಮಂದಿಗೆ ಅದರ ಗಂಭೀರ ಸ್ವರೂಪದಲ್ಲಿ ಯಾವತ್ತೂ ತಟ್ಟುವುದಿಲ್ಲ. ತಮ್ಮ ಸಾವಿರಾರು ಪ್ರಾಣಿಗಳು ನೀರು ಮತ್ತು ಮೇವು ಇಲ್ಲದೆ ಮರುಭೂಮಿಯಲ್ಲಿ ಸಾಯುವುದಂತೂ ಸಾಧ್ಯವಿಲ್ಲ. ಹಾಗಾಗಿ ಅವು ಎಲ್ಲಿವೆಯೋ ಅಲ್ಲಿಗೆ ಹೋಗುವುದು ಅಪರಾಧವಾದರೂ ಹೇಗಾಗುತ್ತದೆ! ಇನ್ನು ಎಲ್ಲಿಯೂ ತಮ್ಮದೆನ್ನುವ ಭೂಮಿಕಾಣಿಯಿಲ್ಲದ, ಗುರುತುಪತ್ರ ಇತ್ಯಾದಿ ಕೇಳಿಯೇ ಇರದ ಮಂದಿ ಪ್ರಯಾಣಕ್ಕೆ ರಹದಾರಿಯನ್ನು ಹೇಗೆ ಪಡೆದಾರು! ಎದೆಗೆ ಗುರಿಯಿಟ್ಟು ನಿಂತ ಬಂದೂಕುಧಾರಿ ಸೈನಿಕನೂ ಮನುಷ್ಯನಲ್ಲವೆ? ಹೆಣ್ಣೊಂದು ತನ್ನ ಕುರಿಮಂದೆಯ ದಾಹವನ್ನು ಇಂಗಿಸಲು ಮುಂದಾದಾಗ, ಅದೂ ತಲೆಯ ಮೇಲೆ ಪವಿತ್ರ ಕುರಾನ್ ಅನ್ನು ಹೊತ್ತು ಹೆಜ್ಜೆಯಿಡುವಾಗ, ಗುಂಡು ಹೊಡೆಯುವುದುಂಟೇ! ಮನುಷ್ಯತ್ವದಲ್ಲಿ ನಂಬುಗೆ.

ಹೆಣಗಳುರುಳುತ್ತವೆ, ಹೆಂಗಸರು, ಮಕ್ಕಳು, ಗಂಡಸರು, ಸಾವಿರಾರು ಒಂಟೆ-ಕುರಿ-ಕೋಳಿಗಳ ಮಾರಣಹೋಮವೇ ನಡೆದುಬಿಡುತ್ತದೆ. ಇಲ್ಲಿ ಸಾಯುವುದು ಬರೇ ಜೀವಗಳಲ್ಲ, ಒಂದು ಜೀವನಕ್ರಮ, ಒಂದು ಸಂಸ್ಕೃತಿ, ಒಂದು ಬದುಕು. ಸಾಯದೇ ಉಳಿದವರ ಬದುಕು ಮುಂದೆ ಏನಾಯಿತು, ಹೇಗೆ ಅವರುಗಳೆಲ್ಲ ತಮ್ಮ ತಮ್ಮ ಬದುಕನ್ನು ಈ ರಕ್ತಸಿಕ್ತ ಮರಳುಗಾಡಿನ ಉಸುಕಿನಲ್ಲಿ ಆಯ್ದು ಹೆಕ್ಕಿಕೊಂಡರು? ಕಾದಂಬರಿಯನ್ನು ಓದಿದರೆ ಅದರ ಹೊಳಹುಗಳೆಲ್ಲ ಸಿಗುತ್ತವೆ. ತಾಲಿಬಾನ್ ಉಗಮಕ್ಕೂ ಸ್ವಲ್ಪವೇ ಹಿಂದಿನ ಈ ವಿಲಕ್ಷಣ ಮತ್ತು ಹೃದಯ ವಿದ್ರಾವಕ ಕ್ರೌರ್ಯವನ್ನು ನಾವು ಕಾಣುವಂತಾದರೆ ಬಹುಷಃ ಯಾವತ್ತೂ ನಮ್ಮ ಗ್ರಹಿಕೆಗೆ ನಿಲುಕದೇ ಉಳಿಯುವ ಅದೆಷ್ಟೋ ಸಂಗತಿಗಳ ಪರಿಣಾಮವನ್ನು ಮಾತ್ರ ಕಂಡು ಪ್ರತಿಕ್ರಿಯಿಸುವ ನಮ್ಮ ಮನೋಭಾವವೂ ಬದಲಾಗುವ ಸಾಧ್ಯತೆಯಿದೆ. ಒಂದು ಒಳ್ಳೆಯ ಕೃತಿ ಮಾಡಬಹುದಾದ್ದು ಅದಕ್ಕಿಂತ ಹೆಚ್ಚೇನಿಲ್ಲ.

ಇದು ಕೃತಿಯ ಮಹತ್ವ ಮತ್ತು ಅದರ ರಿಲವನ್ಸ್ ಬಗ್ಗೆ ಸರಿ. ಆದರೆ ಕೃತಿಯ ಒಳಹೊಕ್ಕು ನೋಡುವಾಗ ಇದು ನಿಜಕ್ಕೂ ಕಾದಂಬರಿಯೇ, ಆತ್ಮಗತವೇ ಅಥವಾ ಕಥಾಸಂಕಲನವೇ ಅನಿಸಿದರೆ ಅಚ್ಚರಿಯೇನಿಲ್ಲ. ಜಮೀಲ್ ಅಹಮ್ಮದ್ ತಮ್ಮ ಬರವಣಿಗೆಯ format ಬಗ್ಗೆ ಏನೇನೂ ತಲೆಕೆಡಿಸಿಕೊಂಡಂತಿಲ್ಲ. ಇದೊಂದು ಬಗೆಯಲ್ಲಿ ನಮ್ಮ ಶಿವರಾಮ ಕಾರಂತರ ‘ತೋಡಿಕೊಳ್ಳುವ’ ಮತ್ತು ತೋಡಿಕೊಳ್ಳುವುದಷ್ಟೇ ಮುಖ್ಯವಾದ ಬಗೆಯ ಕೃತಿ. ಹಾಗಾಗಿ ಜಮೀಲ್ ಅಹಮ್ಮದ್ ನಮ್ಮೊಂದಿಗೆ ಅಲ್ಲಲ್ಲಿ ಈ ಎಲ್ಲ ವಿದ್ಯಮಾನಗಳ ಬಗ್ಗೆ ಪ್ರಬಂಧಕಾರನ ಧ್ವನಿಯಲ್ಲಿಯೂ ಮಾತನಾಡುತ್ತಾರೆ. ಬಿಡಿ ಬಿಡಿಯಾದ ಕತೆಗಳಂತೆಯೂ ಕಾಣುವ ಈ ಬರಹದ ಅಧ್ಯಾಯಗಳಲ್ಲಿ ಮತ್ತೆ ಮತ್ತೆ ಬೇಕಾಗಿಯೋ ಬೇಡವಾಗಿಯೋ ಬರುವ ತೋರ್ ಬಾಜ್ (ಕಪ್ಪು ಗಿಡುಗ) ಒಬ್ಬನೇ ಈ ಕಥಾನಕದ ಏಕಸೂತ್ರದ ಎಳೆ. ಹಾಗಾಗಿ ಇದು ಕಾದಂಬರಿ. ಇನ್ನು ನಡುವೆ ಒಂದೆಡೆ ಉತ್ತಮ ಪುರುಷದ ನಿರೂಪಣೆಯೂ ಇದೆ. ಇಲ್ಲಿ ತಂತ್ರಕ್ಕೆ ಅಂಥ ಮಹತ್ವವೇನಿಲ್ಲ. ಹಾಗೆಯೇ ಜಮೀಲ್ ಅಹಮ್ಮದ್ ಎಲ್ಲಿಯೂ ತನ್ನದು ಹೊಸಬಗೆಯ ಪ್ರಯೋಗವೆಂದೋ, ಇದೀಗ format ಗಳೇ ಅಪ್ರಸ್ತುತವಾಗಿಬಿಟ್ಟ ಯುಗವೊಂದರಲ್ಲಿರುವ ನಾವು ಇದು ಕಾದಂಬರಿಯೇ, ಕಥಾಸಂಕಲನವೇ, ನುಡಿಚಿತ್ರವೇ ಎಂಬಂಥ ಪ್ರಶ್ನೆಗಳೇ ಅಸಂಗತವೆಂದೋ ಸಮರ್ಥನೆಗಿಳಿಯುವುದಿಲ್ಲ. ಪ್ರಾಮಾಣಿಕವಾಗಿ ಈ ಕೃತಿ ರೂಪುಗೊಂಡ ಬಗೆಯನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಇಷ್ಟಿದ್ದೂ ಜಮೀಲ್ ವಿವರಗಳಲ್ಲಿ ಇಲ್ಲಿನ ಬದುಕನ್ನು ಕಟ್ಟಿಕೊಡುವ ಬಗೆ ಮೆಚ್ಚುಗೆಗೆ ಕಾರಣವಾಗುತ್ತದೆ. ಇದು, ಈ ಬಗೆಯ ಒಂದು ಬದುಕು, ಹೊರಜಗತ್ತಿಗೆ ತೀರ ಅಪರಿಚಿತವಾದದ್ದು. ಜೆ.ಎಂ.ಕೂಟ್ಜೆಯ Waiting for The Barbarians ಕಾದಂಬರಿಯನ್ನು ಬಿಟ್ಟರೆ ಮರುಭೂಮಿಯ ಕ್ಯಾರವಾನ್‌ಗಳ ಜೀವನಕ್ರಮ ಮತ್ತು ಸಮಸ್ಯೆಗಳನ್ನೇ ಇಷ್ಟೆಲ್ಲ ಸೂಕ್ಷ್ಮವಾದ ವಿವರಗಳಲ್ಲಿ ಹಿಡಿದಿಟ್ಟ ಕಾದಂಬರಿಗಳು ನನಗೆ ಕಂಡಿಲ್ಲ. ಹಾಗೆಯೇ ಕಾದಂಬರಿಯ ಮೊದಲ ಅಧ್ಯಾಯದಲ್ಲೇ ಊಹಿಸಲಸಾಧ್ಯವಾದ ಕ್ರೌರ್ಯವನ್ನು ತನ್ನ ಐದನೆಯ ವಯಸ್ಸಿನಲ್ಲೇ ಕಣ್ಣಾರೆ ಕಾಣುವ ಹುಡುಗ ಮುಂದೆ ಬೆಳೆದು ನಿಂತಾಗ ಏನಾಗಬಹುದು ಎಂಬುದನ್ನೂ ಕಾದಂಬರಿಯ ಕೊನೆಯ ಅಧ್ಯಾಯದಲ್ಲಿ ಕಾಣುತ್ತೇವೆ. ಇದು ಈ ಬರವಣಿಗೆಯನ್ನು ಏಕಸೂತ್ರದಲ್ಲಿ ಹಿಡಿದಿಟ್ಟ ಇನ್ನೊಂದು ಎಳೆ, ಪಾತ್ರವನ್ನು ಮೀರಿನಿಂತ ಬೆಳವಣಿಗೆಯ ಕತೆ.

ಅನಾಥನಾದ ಈ ಹುಡುಗನನ್ನು ಚಿಕ್ಕಂದಿನಲ್ಲಿ ಹಲವರು ಸಲಹುತ್ತಾರೆ. ಎರಡು ವರ್ಷಗಳ ಕಾಲ ಅಂದರೆ ಐದರಿಂದ ಏಳರ ವಯಸ್ಸಿನಲ್ಲಿ ತಂದೆಯಂತೆ ಸಲಹಿದ ಸುಬೇದಾರ್ ಘುಂಚಾ ಗುಲ್ ಕೊನೆಗೂ ತನ್ನ ಸಂಸಾರ ಜೀವನಕ್ಕೆ, ಊರಿಗೆ ಹಿಂದಿರುಗಬೇಕಾಗಿ ಬಂದಾಗ ಹುಡುಗನನ್ನು ಮುಲ್ಲಾ ಒಬ್ಬನಿಗೆ ವಹಿಸುತ್ತಾನೆ. ಆ ಸಂದರ್ಭದ ಚಿತ್ರವನ್ನು ಗಮನಿಸಿ:

The boy started to follow the mullah, but then turned around and looked back at Ghuncha Gul. As their eyes met, he gave a brave smile. `Goodbye, subedar,' he said. `May you have all the good fortune in your village.'

'God protect you,' responded Ghuncha Gul and noticed that the boy did not address him as `father' as he had always done. In less than an hour, the mullah left the fort with the boy walking beside him and the little puppy, who had been with his new owner less than a month, trotting behind.

The subedar stood in the shadows behind one of the embrasures and watched them until they disappeared from view. He was dismayed to see that the boy and the mullah seemed to be in good spirits. They were chattering continuously and not once did the boy look back, not even for a last glance at the fort where he had spent two years of his life. `Such is gratitude,' Ghuncha Gul thought. (page 64)

ಇಲ್ಲಿ ಕೆಲವೇ ದಿನಗಳ ಹಿಂದೆ ಹುಡುಗನ ಕೈ ಸೇರಿದ ನಾಯಿಮರಿಯ ಉಲ್ಲೇಖ ಗಮನಿಸಿ. ಈ ನಾಯಿಮರಿಯನ್ನು ಸುಬೇದಾರ್ ತನ್ನ ಮಗನಿಗೆಂದೇ ತರಿಸಿದ್ದು. ಹಾಗೆಯೇ, ಸುಬೇದಾರ್ ನಿಂತಿರುವುದು shadows ಎಂಬಲ್ಲಿ ಇರುವ ಧ್ವನಿಯನ್ನೂ ಗಮನಿಸಿ. ತಂದೆಯಂತೆ ಸಲಹಿದ ಸುಬೇದಾರ್, ಆಶ್ರಯ ನೀಡಿದ ಕೋಟೆ ಯಾವುದೂ ಹುಡುಗನಲ್ಲಿ ಸೆಳೆತಗಳನ್ನು ಹುಟ್ಟಿಸಿಯೇ ಇಲ್ಲ. ವಲಸೆ ಅವನ ರಕ್ತದಲ್ಲೇ ಇರುವಂತಿದೆ ಮಾತ್ರವಲ್ಲ, ಅದು ಸೂಕ್ಷ್ಮವಾದ ಸಂವೇದನೆಗಳನ್ನು ಮೆಟ್ಟಿನಿಲ್ಲಲು ಅವನಿಗೆ ಕಲಿಸಿದೆ ಕೂಡ. ಇಡೀ ಕಾದಂಬರಿಯ ಎಲ್ಲಾ ಬುಡಕಟ್ಟು ಪಾತ್ರಗಳೂ ಮನುಷ್ಯ ಸಂಬಂಧಗಳ ಬಗ್ಗೆ ಇಂಥದೇ ನಿಷ್ಠುರತೆಯನ್ನು ಅಲ್ಲಲ್ಲಿ ತೋರಿಸುತ್ತವೆ. ಅಂದ ಮಾತ್ರಕ್ಕೆ ನಾಗರಿಕ ಸಮಾಜದ ಸುಬೇದಾರ್ ಸೂಕ್ಷ್ಮ ಸಂವೇದಿ ಎಂಬ ಭೌದ್ಧಿಕ ಭ್ರಮೆಗೆ ಒಳಗಾಗಬೇಕಾದ ಅಗತ್ಯವೇನಿಲ್ಲ. ಹೆಂಡತಿಗೆ ಹೆದರಿ ಈ ದತ್ತು ಪುತ್ರನನ್ನು ಸುತಾರಾಂ ತನ್ನೂರಿಗೆ ಕರೆದೊಯ್ಯುವಂತಿಲ್ಲ ಎಂದೇ ಅವನು ಹುಡುಗನನ್ನು ಮುಲ್ಲಾನಿಗೆ ಪರಭಾರೆ ಮಾಡಿದ್ದರ ಬಗ್ಗೆಯೂ ನಾವು ಅಸೂಕ್ಷ್ಮರಾಗಬೇಕಾದ್ದಿಲ್ಲ. ಮುಖ್ಯವಾದದ್ದೇನೆಂದರೆ, ಜಮೀಲ್ ಅಹಮ್ಮದ್ ಇಂಥ ಸನ್ನಿವೇಶಗಳನ್ನು ಕಾದಂಬರಿಯ ಚೌಕಟ್ಟಿನಲ್ಲಿ ಅತ್ಯಂತ ಸಹಜವಾದ ಬಗೆಯಲ್ಲಿ ಸೇರಿಸುತ್ತ ಹೋಗುವ ಬಗೆ.

ಮುಂದೆ ಈ ಮುಲ್ಲಾಗೆ ಹುಚ್ಚು ಹಿಡಿದು ಅವನು ಒಬ್ಬ ಪುಟ್ಟ ಹುಡುಗನ ಹತ್ಯೆ ಮಾಡುತ್ತಾನೆ. ಸ್ವತಃ ಈ ಹುಡುಗನನ್ನೂ ಮರಕ್ಕೆ ಬಿಗಿದು ಕಟ್ಟಿರುತ್ತಾನೆ. ಹಳ್ಳಿಗರು ಬಂದು ಮುಲ್ಲಾನಿಂದ ಹುಡುಗನನ್ನು ಬಚಾವು ಮಾಡುತ್ತಾರೆ ಮತ್ತು ಸತ್ತ ಹುಡುಗನ ಹೆತ್ತವರು ಮುಲ್ಲಾನನ್ನು ಕೊಂದೇ ಬಿಡುತ್ತಾರೆ. ಈ ಸಂದರ್ಭದ ವಿವರ ಓದಿ:

The relations of the dead boy shot the man in their rage, though once they had done so, they felt terribly afraid. It was believed that madness signified closeness to God, and anyone harming a mad person was inviting His wrath. (page 68)

ಇಲ್ಲಿನ ನಂಬಿಕೆ ಮತ್ತು ವಿಚಾರ ಎರಡನ್ನೂ ಗಮನಿಸಿ. ಹುಚ್ಚು ಹಿಡಿದ ವ್ಯಕ್ತಿ ದೇವರಿಗೆ ಹತ್ತಿರದವನಾಗಿರುತ್ತಾನೆ ಮತ್ತು ಅಂಥವನ ಮೇಲೆ ನಡೆಸುವ ದೌರ್ಜನ್ಯ ದೈವದ ಅವಕೃಪೆಗೆ ತುತ್ತಾಗುತ್ತದೆ ಎನ್ನುವ ನಂಬುಗೆಯೇ ಎಷ್ಟು ಸೂಕ್ಷ್ಮವಾದದ್ದು ಎನ್ನುವುದನ್ನು ಗಮನಿಸಿದರೆ ಈ ಜನಾಂಗಗಳ ನಡೆ-ನುಡಿಗಳನ್ನು ನಿಯಂತ್ರಿಸುತ್ತಿದ್ದ ಕಾನೂನು-ಕಟ್ಟಳೆ ಯಾವುದೆಂಬ ಅರಿವು ಮತ್ತು ಅವು ಹೇಗೆ ಮಾನವೀಯ ನೆಲೆಯಿಂದ ಹುಟ್ಟಿದ್ದವೆಯೇ ಹೊರತು ಸರಕಾರೀ ಶಿಕ್ಷೆಯ ನೆಲೆಗೆ ಇನ್ನೂ ಹೊರಳಿಕೊಂಡಿರಲಿಲ್ಲ ಎನ್ನುವುದು ತಿಳಿಯುತ್ತದೆ. ಕಾದಂಬರಿಕಾರ ಇಂಥ ಸೂಕ್ಷ್ಮಗಳಿಂದಲೇ ಇಡೀ ಕೃತಿಯನ್ನು ತುಂಬುತ್ತ ಈ ಜನಾಂಗಗಳ ಜನಜೀವನವನ್ನು ಹಾಸುಹೊಕ್ಕಾಗುವಂತೆ ಚಿತ್ರಿಸುತ್ತ ಹೋಗುತ್ತಾನೆ.

ಇಡೀ ಕಾದಂಬರಿಯ ಅತ್ಯಂತ ಸೂಕ್ಷ್ಮ ಮತ್ತು ನವಿರಾದ ನಿರೂಪಣೆಯಿರುವುದೇ A Pound of Opium ಎಂಬ ಅಧ್ಯಾಯದಲ್ಲಿ. ನೂರು ರೂಪಾಯಿ ಮತ್ತು ಒಂದು ಪೌಂಡ್ ಅಫೀಮಿಗೆ ತನ್ನ ಅತ್ಯಂತ ಪ್ರೀತಿಯ ಮುದ್ದು ಮಗಳನ್ನು ಮಾರಿದ ತಂದೆಯ ಕತೆಯಿದು. ಹೌದು, ವಲಸೆಹಕ್ಕಿಗಳ ಬದುಕಿನಲ್ಲಿ ಅತ್ಯಂತ ದಾರುಣವಾದ ಬದುಕು ಹೆಮ್ಮಕ್ಕಳ್ಳದ್ದು ಮತ್ತು ಅತ್ಯಂತ ದುರ್ಭರವಾದ ಅವಧಿ ಅವರ ಯೌವನದ್ದು. ರಣಹದ್ದುಗಳು, ಗಿಡುಗ-ಗರುಡಗಳು ಈ ಹಕ್ಕಿಗಳ ರೆಕ್ಕೆಗಳನ್ನು ಕತ್ತರಿಸಿ ಎಸೆದು ಬದುಕನ್ನು ಚಿಂದಿಗೊಳಿಸುವುದು ಅತ್ಯಂತ ಸಹಜವಾದ ವಿದ್ಯಮಾನವೋ ಎಂಬಂತಿರುವಾಗ ಹೆಮ್ಮಕ್ಕಳ ಮಾರಾಟದಲ್ಲಿ ಸ್ವತಃ ಹೆಮ್ಮಕ್ಕಳೇ ಯಾವುದೇ ಕ್ರೌರ್ಯವನ್ನು ಕಾಣದಂತಿರುವುದು ಅಚ್ಚರಿಯೇನಲ್ಲ. ಹಾಗಾಗಿ ಇಲ್ಲಿ ಅಪ್ಪ ತನ್ನ ಮಗಳನ್ನು ಮಾರುವುದು ವಿಶೇಷವೇನಲ್ಲ. ಈ ಹೆಣ್ಣುಮಗುವಿನ ಹೆಸರು ಹುಲಿಗೆವ್ವ. ವಧು ಕಾಣಿಕೆ ಪಡೆದು ಮದುವೆಯ ಹೆಸರಿನಲ್ಲಿ ಮಾಡುವುದು ಕೂಡ ಸರಿಸುಮಾರು ಇದನ್ನೇ ಎಂಬುದು ಎಲ್ಲರಿಗೂ ಗೊತ್ತಿರುವುದೇ. ಆದರೆ, ಇಲ್ಲಿ ಆ ತಂದೆ ಮತ್ತೆ ಮನೆಗೆ ಮರಳುವುದಿಲ್ಲ. ಒಬ್ಬ ಪರ್ವತಾರೋಹಿ ಉತ್ಸಾಹಿಗಳಿಗೆ ಗೈಡ್ ಆಗಿದ್ದ ಈತ ಯೌವನದಲ್ಲಿ ಕೈತುಂಬ ಗಳಿಸಿ ಎದೆಯುಬ್ಬಿಸಿ, ತಲೆಯೆತ್ತಿ ನಡೆದವ. ಅವರಿವರಿಗೆ ತನ್ನಲ್ಲಿ ಅಳಿದುಳಿದುದನ್ನು ಹಂಚಿ ಮೆರೆದವ. ಆದರೆ ದೇಶ-ರಾಷ್ಟ್ರಗಳ ರಚನೆಯಾದದ್ದೇ ಪರ್ವತಾರೋಹಿಗಳ ಆಗಮನ ನಿರ್ಬಂಧಿತವಾಗುತ್ತದೆ. ಇವನ ಹೊಟ್ಟೆಗೆ ಗತಿಯಿಲ್ಲದ ಸ್ಥಿತಿ ಉದ್ಭವಿಸುತ್ತದೆ. ರಾಷ್ಟ್ರದ ಗೆಲುವು ಪರ್ವತದ ಗೆಲುವೆಂದೇ ನಂಬಿದ್ದ ಈ ಬಡಪಾಯಿಗೆ ಅದು ತನ್ನ ಸೋಲೆಂಬುದು ಅರಿವಿಗಿಳಿದಾಗ ತಡವಾಗಿತ್ತು. ಏನು ಮಾಡಬೇಕು ಆತ? ಅವನು ತಲೆಮರೆಸಿಕೊಂಡು ಅಸಹಾಯಕನಾಗಿ ಪರ್ವತದ ಕಲ್ಲಿನೆದುರು ಅಲವತ್ತುಕೊಳ್ಳುತ್ತ ಕಳೆಯುವ ನಿರರ್ಥಕ ಹಸಿವಿನ ದಿನಗಳ ನೋವು ಮತ್ತು ಏಕಾಂತದ ಚಿತ್ರ ಇಡೀ ಕಾದಂಬರಿಗೆ ಕಲಾತ್ಮಕ ಮೆರುಗು ನೀಡಿದೆ ಎಂದರೆ ಹೆಚ್ಚಲ್ಲ. ಕೊನೆಗೂ ಈತ ಮನೆಗೆ ಮರಳುತ್ತಾನೆ. ಹೆಂಡತಿ ತುಂಡು ಹೊಲದ ಸಹಿತ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿರುತ್ತಾಳೆ. ಆದರೆ ಅವಳು ಒಂಟಿಯಾಗಿರುತ್ತಾಳೆ. ಅವನ ಇಬ್ಬರೋ ಮೂವರೋ ಗಂಡು ಮಕ್ಕಳ ಪತ್ತೆಯೂ ಇಲ್ಲ. ಹುಲಿಗೆವ್ವ ಏನಾದಳೋ, ಕೇಳುವ ಬಾಯಿಯಿಲ್ಲ ಅವನಿಗೆ. ಆದರೆ ವಿಚಿತ್ರವೆಂದರೆ ಅವನ ಯಾವ ಗಂಡು ಮಕ್ಕಳ ಹೆಸರು ಕೂಡಾ ನೆನಪಾಗದ ಅವನಿಗೆ ಈ ಮಗಳು ಹುಲಿಗೆವ್ವ ಮಾತ್ರ ಅಚ್ಚಳಿಯದೇ ಕಾಡುತ್ತಿರುತ್ತಾಳೆ, ನೆನೆಯುವ ಹಕ್ಕು ಕೂಡಾ ಅವನು ಕಳೆದುಕೊಂಡಿದ್ದರೂ...

ಇಲ್ಲಿ ಗಮನಿಸಬೇಕಾದ್ದೆಂದರೆ, ಈ ಹೆಂಡತಿ ಕೇವಲ ಹೊಲಮನೆ ಮಾತ್ರ ನಿಭಾಯಿಸಿಕೊಂಡು ಹೋಗಿರುವುದಿಲ್ಲ. ಹೊಟ್ಟೆ ಬಟ್ಟೆ ಕಟ್ಟಿ, ಕಾಸು ಉಳಿಸಿ ಗಂಡ ಮಾರಿದ ಮಗಳನ್ನು ವಾಪಾಸು ಖರೀದಿಸುತ್ತಾಳೆ! ಅವಳ ಮದುವೆಯನ್ನೂ ಮಾಡುತ್ತಾಳೆ. ಆದರೇನು ಮಾಡೋಣ, ಅವಳ ನಸೀಬು ಮತ್ತೆ ಮತ್ತೆ ಮಾರಾಟವಾಗುವುದರಲ್ಲಿ, ಅಪಹರಿಸಲ್ಪಡುವುದರಲ್ಲಿ ಮತ್ತು ಮತ್ತೊಮ್ಮೆ ಬಿಕರಿಯಾಗುವುದರಲ್ಲೇ ಇದ್ದರೆ! ಇಲ್ಲಿನ ವಿಧಿ ವಿಪರೀತವನ್ನು, ಬದುಕಿನ ವೈರುಧ್ಯವನ್ನು ಮತ್ತೆ ಯಾರಾದರೂ ಶಬ್ದಗಳಲ್ಲಿ ವರ್ಣಿಸಬೇಕೆ?

ಇದೆಲ್ಲದರ ಒಟ್ಟು ಪರಿಣಾಮವೇನು? ಜನಾಂಗವೊಂದಲ್ಲ, ಮೂರು ಲಕ್ಷಕ್ಕೂ ಮೀರಿದ ಹಲವಾರು ಬುಡಕಟ್ಟುಗಳಿಗೆ ಸೇರಿದ ಮಂದಿ ತಮ್ಮ ಭಾಷೆಯನ್ನು, ಸಂಸ್ಕೃತಿಯನ್ನು, ನೇಮ-ನಿಯಮಗಳ ಪಾವಿತ್ರ್ಯವನ್ನು ಕಳೆದುಕೊಂಡ ಷಂಡತನದ ಅಪಮಾನದಡಿ ಏನಾಗಬಹುದು? ತಮ್ಮ ಹೆಂಡತಿ-ಮಗಳ ಅಪಹರಣ-ಅತ್ಯಾಚಾರ, ಜೀವನಾಧಾರವಾದ ಕುರಿಗಳ ಕಳ್ಳತನ, ಮಿಗಿಲಾಗಿ ಅತಿಕ್ರಮಣದ, ಕಳ್ಳತನದ, ಕೊಲೆಯ ಆರೋಪ, ಜೈಲು, ಗಲ್ಲು. ಅಳಿದುಳಿದವರಲ್ಲಿ ಉಳಿಯುವುದು ಶೌರ್ಯದ ವೀರ್ಯವಲ್ಲ. ಹೇಡಿತನದ, ಷಂಡತನದ ಜೀವಗಳ್ಳತನದ ಅಪಮಾನ.

Centuries of insult had created a trauma in these people. Very few had any pride left in themselves, their language or their culture. The next generation was being deliberately encouraged by their elders to, whenever possible, give up their identity and merge themselves into other ethnic groups. Of their children, few knew their own language - they were happy if they could learn Pushto with an accent, which would not betray them in Pathan society. (page 152)

ಇದೇ ತರದ ಇನ್ನೊಂದು ಸಂಸಾರದ ಕತೆಯಿದೆ ಇಲ್ಲಿ. ಅದು ಫತೇಹ್ ಮೊಹಮ್ಮದ್ ಎಂಬ ಮೌಲ್ವಿಯದ್ದು. ಈತನಿರುವ ಗಿರಿಧಾಮಕ್ಕೆ ವಿಹಾರಕ್ಕೆಂದೋ, ಅಪರೂಪದ ಪಕ್ಷಿಗಳ ಬೇಟೆಗೆಂದೋ ಬರುತ್ತಿದ್ದ ರಾಜಕುಟುಂಬದವರಿಗಾಗಿ ಮತ್ತು ವಿದೇಶೀ ರಾಯಭಾರಿಗಳಿಗಾಗಿ ಕೆಲವು ಕಟ್ಟಡಗಳು, ಜನರೇಟರ್ ಎಲ್ಲ ವ್ಯವಸ್ಥೆಯಾಗುತ್ತವೆ. ಹಾಗೆಯೇ ನಿರ್ಮಾಣವಾಗುವ ಮಸೀದಿಯಲ್ಲಿ ಈ ಮೌಲ್ವಿಯ ಬದಲಿಗೆ ಇನ್ಯಾರದೋ ನೇಮಕವಾಗುತ್ತದೆ. ಇದು ಒಂದು ರೀತಿಯಲ್ಲಿ ಮದುವೆ, ಮುಂಜಿ, ಅಪರಕರ್ಮಗಳನ್ನೇ ಅವಲಂಬಿಸಿ ಬದುಕು ಸವೆಸಿದ ಮೌಲ್ವಿಯ ನಿರೀಕ್ಷೆಯ ಮೇಲಾದ ಬಲುದೊಡ್ಡ ಹೊಡೆತ. ಆದರೂ ಅವನ ಜೀವನಕ್ರಮ ಮುಂದುವರೆಯುತ್ತದೆ. ಒಂದೊಂದು ದಿನ ಯಾವ ಕರೆಯೂ ಇಲ್ಲದೆ ಮೌಲ್ವಿ ಮನೆಯಲ್ಲೇ ಇರುವುದು ಗೊತ್ತಾದರೆ ಊರಿನ ಯಾರಾದರೂ ತಮ್ಮ ಮನೆಯ ಹಳಸಿದ್ದು-ಉಳಿಸಿದ್ದು ಇವರ ಮನೆಗೆ ಕಳುಹಿಸಿಕೊಡುತ್ತಾರೆ. ಎಂಟು ಹೆಮ್ಮಕ್ಕಳ ಕುಟುಂಬ ಅವನದ್ದು. ಹೆಚ್ಚು ಕಡಿಮೆ ವರ್ಷವೆಲ್ಲ ಹಸಿವಿಗೇ ಹೊಂದಿಕೊಂಡ ಈ ಕುಟುಂಬ ವಸಂತ ಋತುವಿನಲ್ಲಷ್ಟೇ ಸ್ವಲ್ಪ ಗೆಲುವಿನಿಂದಿರಲು ಸಾಧ್ಯವಾಗುತ್ತದೆ. ಅಂಥ ಒಂದು ದಿನ ಅಪ್ಪ ಕೊಂಚ ಗಳಿಕೆಯೊಂದಿಗೆ ಮರಳುವುದನ್ನೇ ಕಾಯುತ್ತ ಕುಳಿತ ಇಡೀ ಸಂಸಾರ ದೂರದಿಂದಲೇ ಅಪ್ಪನನ್ನು ಕಂಡು ಸಂಭ್ರಮಗೊಂಡರೂ ಅದನ್ನು ತೋರಿಸಿಕೊಳ್ಳಲು ಅಂಜಿ, ಆ ಸಂಭ್ರಮ ತಮ್ಮ ಬಡತನವನ್ನು, ದೈನೇಸಿತನವನ್ನು ಜಗಜ್ಜಾಹೀರು ಮಾಡುವುದೆಂಬ ಅರಿವಿನಿಂದ ಕಷ್ಟಪಟ್ಟು ತಡೆದುಕೊಂಡು, ಏನೂ ಆಗದವರಂತಿದ್ದು ಅಪ್ಪ ಮನೆಯೊಳಗೆ ಸೇರಿದ್ದೇ ಬಿಡುಗಡೆಗೊಂಡವರಂತೆ ಸಂಭ್ರಮಿಸುವ ಚಿತ್ರವೊಂದನ್ನು ಜಮೀಲ್ ಅಹಮ್ಮದ್ ನಮಗೆ ನೀಡುತ್ತಾರೆ. (ಪುಟ 159) ತಂದೆಯ ಸ್ಥಿತಿಯೂ ಹೆಚ್ಚು ಕಡಿಮೆ ಅದೇ. ಅವನಂತೂ ತನ್ನ ಹಿರಿಯ ಮಗಳಿಗೆ ಒಂದು ಗಂಡು ಗೊತ್ತು ಮಾಡಿಕೊಂಡೇ ಬಂದಿದ್ದಾನೆ. ವಧು ಕಾಣಿಕೆಯ ಮುಂಗಡ ಕೂಡ ಅವನ ಕೈ ಸೇರಿದೆ. ಹುಡುಗ ಯೋಗ್ಯ, ಸ್ವತಂತ್ರ ಮತ್ತು ದುಡಿಯುತ್ತಾನೆ. ಇನ್ನೇನು ಬೇಕು! ಆದರೆ ಅವನೂ ಸಂಯಮವನ್ನೇ ನಟಿಸುತ್ತಾನೆ. ಜನ ತಪ್ಪು ತಿಳಿಯಬಾರದಲ್ಲ, ಮೌಲ್ವಿಯನ್ನು!

ಈ ಹೆಣ್ಣುಮಗಳ ಕೈಹಿಡಿದ ಯೋಗ್ಯ ಮತ್ತು ದುಡಿಮೆಯ ಹಾದಿ ಕಂಡುಕೊಂಡ ಸ್ವತಂತ್ರ ಪುರುಷ ಒಬ್ಬ ಕರಡಿಯಾಡಿಸುವವನು. ಅದು ಅವನೇ ಸಾಹಸ ಮೆರೆದು ಹಿಡಿದ ಕರಡಿ. ಅವನ ಜೊತೆ ಈ ಚಂದದ ಅರಗಿಣಿಯಂಥ ಹುಡುಗಿ ಬಿಸಿಲು ಮಳೆಯೆನ್ನದೆ ಬೀದಿ ಬೀದಿ ಸುತ್ತಬೇಕಾದುದೇ ಅವಳಿಗೆ ಒಲಿದ ಭಾಗ್ಯ. ಅದಿರಲಿ, ಒಂದು ದಿನ ಅವಳಿಗೆ ತನ್ನ ಗಂಡನಿಗೆ ತನಗಿಂತ ಕರಡಿಯೇ ಹೆಚ್ಚು ಮುಖ್ಯವಾದದ್ದು ಎನ್ನುವುದು ಕೂಡ ತಿಳಿದು ಬಿಡುತ್ತದೆ. "ಬೇಕೆಂದರೆ ಇನ್ನೊಬ್ಬ ಹೆಂಡತಿ ನನಗೆ ಸಿಗುತ್ತಾಳೆ, ಇನ್ನೊಂದು ಕರಡಿ ಸಿಗಲಾರದು" ಎಂದು ಅವನೇ ಅವಳ ಮುಖಕ್ಕೆ ಹೊಡೆದ ಹಾಗೆ ಹೇಳುತ್ತಾನೆ! ಆವತ್ತಿನಿಂದ ಅವಳು ಮೊದಲು ಪರೋಕ್ಷವಾಗಿ ಆನಂತರ ನೇರವಾಗಿಯೇ ಕರಡಿಯೊಂದಿಗೆ ದ್ವೇಷ ಸಾಧನೆಗೆ ಇಳಿಯುತ್ತಾಳೆ. ಪರಿಣಾಮ ಕರಡಿಗೆ ಸಮಾನವಾದ ಸ್ಥಾನಮಾನ ಇವಳಿಗೆ ಸಿಗುತ್ತದೆ! ಅಂದರೆ, ಕರಡಿ ತಿಂದರೆ ಇವಳಿಗೆ ತಿಂಡಿ, ಇಲ್ಲದಿದ್ದರೆ ಉಪವಾಸ. ಕರಡಿ ಮಲಗಿದರೆ ಇವಳೂ ಮಲಗಬಹುದು, ಇಲ್ಲದಿದ್ದರೆ ರಾತ್ರಿಯಿಡೀ ನಿಲ್ಲಬೇಕು! ಕರಡಿಗೆ ಕೊರಡೆಯೇಟು ಬಿದ್ದರೆ ಅಷ್ಟೇ ಏಟು ಇವಳಿಗೆ, ಯಾಕೆಂದರೆ ಇವಳು ಕರಡಿಯ ಕೊರಡೆಗೆ ಮುಳ್ಳು ಸುತ್ತಿ ಮಜಾ ತೆಗೆದುಕೊಂಡವಳು!

ಹೊಂದಿಕೆಯಾಗದಿದ್ದರೆ ಇದ್ದೇ ಇದೆ ಡೈವೋರ್ಸ್ ಎನ್ನುವ ಆಧುನಿಕ ಹುಡುಗಿಯರ ಹಾಗೆಯೇ ಇವಳು ಅವನನ್ನು ಬಿಟ್ಟು ನೇರ ತವರಿಗೆ ಹಿಂದಿರುಗುತ್ತಾಳೆ. ಇದಾದರೆ ನಿಜಕ್ಕೂ ಆಧುನಿಕವೇ ಎನ್ನುವುದಾದರೆ ಹುಡುಗಿಯ ತವರುಮನೆ ಮತ್ತು ತವರೂರು ಅಷ್ಟೇ ಆಧುನಿಕವಾಗಿ ಇವಳನ್ನು ಸ್ವಾಗತಿಸುತ್ತದೆ. ಕುಲಗೆಟ್ಟವಳು, ಗಂಡನನ್ನು ಬಿಟ್ಟವಳು, ಓಡಿ ಬಂದವಳು ಮತ್ತು ಕೊನೆಗೆ ಯಾರಿಗೆ ಗೊತ್ತು, ಅವನೇ ಇವಳನ್ನು ಒದ್ದು ಹೊರಗೆ ಹಾಕಿರಬೇಕು, ಹಾದರದವಳು! - ಎಂಬೆಲ್ಲ ಬಿರುದಾವಳಿಗಳ ಸಹಿತ. ಹುಲಿಗೆವ್ವನಿಗಾದ ಗತಿಯೇ ಈ ಮುದ್ದು ಮಲ್ಲಿಗೆಗೂ ಆಗುವುದರೊಂದಿಗೆ ಕಾದಂಬರಿ ಮುಗಿಯುತ್ತದೆ. ಆದರಲ್ಲಿ ಒಂದು ತಮಾಷೆಯಿದೆ.

ಅದನ್ನು ನಾನಿಲ್ಲಿ ಹೇಳಬಾರದು. ಈ ಹುಡುಗಿಯನ್ನು ಮಾರಲು ತಂದಾತನಿಗೆ ಒಂದು ಸೂಕ್ಷ್ಮ. ಯಾರಾದರೂ ಈಕೆಯನ್ನು ಮದುವೆಯೇ ಆಗುವುದಾದರೆ ಅವನು ಕ್ರಯದಲ್ಲಿ ಸ್ವಲ್ಪ ಕಡಿಮೆ ಮಾಡಿಕೊಳ್ಳಲು ತಯಾರು! ಎಲ್ಲ ಸೂಕ್ಷ್ಮ ಸಂವೇದಿ ಮಂದಿ ಕೂಡ ಸ್ವಲ್ಪ ಮೂರ್ಖರಾಗಿರುತ್ತಾರೆ ಮತ್ತು ಅಂಥವರೇ ಮತ್ತೆ ಮತ್ತೆ ಮೂರ್ಖರೆನಿಸಿಕೊಳ್ಳಲು, ಮೂರ್ಖರಾಗಲು ಅತ್ಯಂತ ಅರ್ಹರಾಗಿ ಉಳಿಯುವವರು ಕೂಡಾ ಆಗಿರುತ್ತಾರೆ ಎನ್ನುವುದು ಲೋಕಕಂಡ ಜಾಣ ಮಂದಿಯೇ ಬಲ್ಲರು. ಕೊನೆಗೂ ಕಪ್ಪು ಗಿಡುಗನ ಮಡದಿಯಾಗುವ ಆಸೆಯಿಂದ ತನ್ನನ್ನು ಕಡಿಮೆ ಬೆಲೆಗೆ ಮಾರಲು ಮುಂದಾದವನಿಗೆ ಜೀವಮಾನದ ಕೃತಜ್ಞತೆಯನ್ನು ಹೇಳಿ ವಧುವಿನ ಸಂಭ್ರಮದಲ್ಲಿ ಹೊರಟ ಹುಡುಗಿಯ ಬದುಕಿನ ಕತೆ ಕಾದಂಬರಿಯ ಚೌಕಟ್ಟಿನಿಂದಾಚೆಗೇ ಉಳಿಯುತ್ತದೆ ಎನ್ನುವುದು ನಿಜವಾದರೂ ಇಲ್ಲಿ ಬದುಕು-ಭವಿಷ್ಯದ ಚೌಕಟ್ಟುಗಳೇ ಮುರಿ ಮುರಿದು ಬೀಳುತ್ತಿರಬೇಕಾದರೆ ಕತೆಗೆ ಯಾರ ಹಂಗು ಅಲ್ಲವೆ? ಯಾರಿಗೆ ಹೇಳೋಣ ಗೌರೀ ದುಃಖ!

ಹೆಮ್ಮಕ್ಕಳನ್ನು ಮಾರುವ ಒಂದು ಸಂತೆಯೇ ಇದೆ ಮತ್ತದು ಸೇರುವುದು ಗುರುವಾರಗಳಂದು! ಅಲ್ಲಿಯವರೆಗೆ ಅಂಥ ಹುಡುಗಿಯರ ವಸತಿ ಇತ್ಯಾದಿ ವ್ಯವಸ್ಥೆ ಮಾಡುವ ಒಂದು ಪುಟ್ಟ ಹೋಟೇಲಿನ ಮಾಣಿ ಈ ಹುಡುಗಿಯರನ್ನು ಉದ್ದೇಶಿಸಿ ಮಾತನಾಡುವಾಗಲೂ ಅವರನ್ನೆಲ್ಲ ಕರೆತಂದ ಗಂಡಸರನ್ನೇ ನೋಡುತ್ತ ಮಾತನಾಡುತ್ತಾನೆ. ಅದಕ್ಕೆ ಅವನದೇ ಕಾರಣ ಪರಂಪರೆಯಿದೆ.

There was pity in his voice as he offered them his help. Another two faces to add to the multitude in his memory, growing with the passage of each Thursday. Women, some little more than infants, some already on the threshold between middle and old age; some who laughed at their fate and others who never stopped crying. Some who appeared once and then vanished completely. Others came again and again, sold sometimes to one man and then to another. Three were those who had run away from their husbands or their fathers and those who were running away from life. His memory was only a sea of women's faces and his small body shook with tension every time he saw yet another face destined to be sold. Yet, it was strange that the women had always shown loathing and hatred towards him. He could feel it now, in the two women standing before him. (page 174)

ಮರೆಯಬೇಡಿ, ಈ ಉರಿವ ಕಣ್ಣುಗಳು ನಮ್ಮನ್ನೂ ನೋಡುತ್ತಿವೆ, ದ್ವೇಷದಂಥ ದ್ವೇಷದಿಂದ ಮತ್ತು ಮನೆಮಗಳ ನೋವಿನಂಥ ನೋವಿನಿಂದ.

1 comment:

ಅರವಿಂದ said...

ನರೇಂದ್ರ ಪೈ,
ಒಂದು ಉತ್ತಮ ಕೃತಿಯನ್ನ ಪರಿಚಯಿಸಿದ್ದಕ್ಕೆ ಧನ್ಯವಾದಗಳು....